Tuesday, October 19, 2021

ಪವಿತ್ರ ಕುರ್‌ಆನ್: ಸಂದೇಹದ ಸುತ್ತ...




 1. ಝೈದ್ ಬಿನ್ ಸಾಬಿತ್

2. ಅಬ್ದುಲ್ಲಾ  ಬಿನ್ ಝುಬೈರ್

3. ಸಈದ್ ಬಿನ್ ಆಸ್

4. ಅಬ್ದರ‍್ರಹ್ಮಾನ್ ಬಿನ್ ಹಾರಿಸ್

ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೆ. ಈ ಮೇಲಿನ ಹೆಸರುಗಳು ನನ್ನ ಅಧ್ಯಯನ ಪಟ್ಟಿಯಲ್ಲೂ ಇತ್ತು. ಇದಕ್ಕೆ ಒಂದು ಕಾರಣವೂ  ಇದೆ-

ಹಿರಿಯ ಸಾಹಿತಿಯೊಬ್ಬರು ಪವಿತ್ರ ಕುರ್‌ಆನಿನ ಕ್ರೋಢೀಕರಣದ ಕುರಿತಂತೆ ಕೆಲವು ಪ್ರಶ್ನೆಗಳನ್ನು ಈ ಹಿಂದೆ ಎತ್ತಿದ್ದರು-
‘ಕುರ್‌ಆನನ್ನು ಕ್ರೋಢೀಕರಿಸಿದ್ದು ಮೂರನೇ ಖಲೀಫ ಉಸ್ಮಾನ್ ಬಿನ್ ಅಫ್ಫಾನ್(ರ)ರ ಕಾಲದಲ್ಲಿ. ಇವರಿಗಿಂತ ಮೊದಲು ಅಬೂಬಕರ್ (ರ) ಮತ್ತು ಉಮರ್ ಬಿನ್ ಖತ್ತಾಬ್(ರ)ರು ಆಡಳಿತ ನಡೆಸಿದ್ದರು. ಇವರಿಬ್ಬರ ಒಂದು ದಶಕದ ಆಡಳಿತಾವಧಿಯ ಬಳಿಕ ಖಲೀಫರಾಗಿ  ಉಸ್ಮಾನ್ ಬಿನ್ ಅಫ್ಫಾನ್ ಆಯ್ಕೆಯಾದರು. ಈ ಮೇಲಿನ ನಾಲ್ಕು ಮಂದಿಯ ಸಮಿತಿಯನ್ನು ರಚಿಸಿದ್ದೇ  ಇವರು. ಪ್ರವಾದಿ ನಿಧನರಾಗುವಾಗ ಕುರ್‌ಆನ್ ಪುಸ್ತಕ ರೂಪ ದಲ್ಲಿ ಇರಲಿಲ್ಲ. ಆ ಬಳಿಕ 10 ವರ್ಷಕ್ಕಿಂತಲೂ ದೀರ್ಘ ಸಮಯ ಸರಿದು ಹೋದ ನಂತರ  ಉಸ್ಮಾನ್(ರ) ಅದನ್ನು ಕ್ರೋಢೀಕರಿಸಿದರು. ಹೀಗಿರುವಾಗ, ಕುರ್‌ಆನಿನ ಅಥೆಂಟಿಸಿಟಿ ಏನು? ಪ್ರವಾದಿಯವರಿಗೆ ಕುರ್‌ಆನ್ ಒಮ್ಮೆಲೇ  ಅವತೀರ್ಣವಾಗಿಲ್ಲದೇ ಇರುವಾಗ ಮತ್ತು ಅವರ ಕಾಲದಲ್ಲಿ ಅದು ಪುಸ್ತಕ ರೂಪದಲ್ಲಿ ಕ್ರೋಢೀಕರಣಗೊಂಡಿಲ್ಲದೇ ಇರುವಾಗ ಅದು  ಯಾವ ನ್ಯೂನ್ಯತೆಯೂ ಇಲ್ಲದೇ ಸಂಗ್ರಹಗೊಂಡಿದೆ ಎಂದು ಹೇಗೆ ಹೇಳುತ್ತೀರಿ? ಪ್ರವಾದಿ ಮುಹಮ್ಮದ್‌ರಿಗೆ 23 ವರ್ಷಗಳಲ್ಲಿ  ಬಿಡಿಬಿಡಿಯಾಗಿ ಅವತೀರ್ಣಗೊಂಡ ಕುರ್‌ಆನನ್ನು ಯಾವುದರಲ್ಲಿ ಬರೆದಿಡಲಾಗಿತ್ತು ಮತ್ತು ಅವರ ಕಾಲಾನಂತರದ 10 ವರ್ಷಗಳ ತನಕ  ಅವು ಕಾಲಕ್ಷೇಪಕ್ಕೆ ಒಳಗಾಗಿಲ್ಲವೆಂದು ಖಚಿತಪಡಿಸಿಕೊಳ್ಳುವುದು ಹೇಗೆ? ಭಾವನಾತ್ಮಕ ಪರಿಧಿಯಿಂದ ಹೊರಬಂದು ತಾರ್ಕಿಕ ನೆಲೆಯಲ್ಲಿ  ಇವಕ್ಕೆ ಉತ್ತರಗಳು ಏನೇನು’ ಎಂಬೆಲ್ಲಾ ಸಂದೇಹ-ಪ್ರಶ್ನೆಗಳು ಅವರದ್ದಾಗಿದ್ದುವು. ಹಾಗಂತ,

ಅವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಬೇಕಿಲ್ಲ.

ಇಸ್ಲಾಮೀ ಇತಿಹಾಸ ಎಲ್ಲವನ್ನೂ ದಾಖಲಿಸಿಟ್ಟಿದೆ. ಆರಂಭದಲ್ಲಿ ಉಲ್ಲೇಖಿಸಲಾಗಿರುವ ನಾಲ್ಕು ಹೆಸರುಗಳನ್ನು ಖಲೀಫಾ ಉಸ್ಮಾನ್‌ರು  ಆಯ್ಕೆ ಮಾಡಿದ್ದಾರೆಂಬುದು ನಿಜ. ಆದರೆ, ಈ ನಾಲ್ಕು ಮಂದಿಯನ್ನು ಕುರ್‌ಆನ್ ಕ್ರೋಢೀಕರಣಕ್ಕಾಗಿ ಅವರು ಆಯ್ಕೆ ಮಾಡಿದ್ದರು  ಎಂಬುದು ಮಾತ್ರ ನಿಜವಲ್ಲ. ಈ ನಾಲ್ಕು ಮಂದಿಯ ಸಮಿತಿಯನ್ನು ಖಲೀಫಾ ಉಸ್ಮಾನ್ ರಚಿಸಿದ್ದು ಕುರ್‌ಆನ್ ಕ್ರೋಢೀಕರಣಕ್ಕಾಗಿ  ಅಲ್ಲ, ಅದಾಗಲೇ ಕ್ರೋಢೀಕರಣಗೊಂಡಿರುವ ಕುರ್‌ಆನಿನ ಪ್ರತಿಗಳನ್ನು ರಚಿಸುವುದಕ್ಕೆ. ಹಾಗಿದ್ದರೆ ಆ ಮೊದಲೇ ಕುರ್‌ಆನ್‌ನ  ಕ್ರೋಢೀಕರಣ ನಡೆದಿರುವುದು ಯಾವಾಗ? ಅಂದಹಾಗೆ,

ಈ ಮೇಲಿನ ನಾಲ್ಕು ಮಂದಿಯ ಸಮಿತಿಯು ಪವಿತ್ರ ಕುರ್‌ಆನಿನ ಒಟ್ಟು 7 ಪ್ರತಿಗಳನ್ನು ರಚಿಸಿದರು. ಪ್ರವಾದಿ(ಸ) ಪತ್ನಿ ಹಫ್ಸಾರ  ಬಳಿಯಿದ್ದ ಕುರ್‌ಆನ್ ಪ್ರತಿಯನ್ನು ಪಡೆದುಕೊಂಡು ಅದರಿಂದ ಈ 7 ಪ್ರತಿಗಳನ್ನು ಅವರು ರಚಿಸಿದರು. ಆದರೆ ಬರಬರುತ್ತಾ ಈ  ಮಾಹಿತಿ ಹೇಗೆ ತಿರುಚಲ್ಪಟ್ಟಿತೆಂದರೆ, ಪ್ರತಿಗಳನ್ನು ರಚಿಸಿದ ಮಂದಿಯೇ ಕುರ್‌ಆನನ್ನು ಕ್ರೋಢೀಕರಿಸಿದವರು ಎಂದು ಪ್ರಚಾರವಾಯಿತು.  ನಿಜವಾಗಿ, ಪವಿತ್ರ ಕುರ್‌ಆನನ್ನು ಖಲೀಫಾ ಉಸ್ಮಾನ್‌ರ ಕಾಲದಲ್ಲಿ ಕ್ರೋಢೀಕರಿಸಿದ್ದಲ್ಲ. ಈ ಮೇಲಿನ ನಾಲ್ಕು ಪ್ರವಾದಿ ಅನುಯಾಯಿಗಳು  ಅದರ ರೂವಾರಿಗಳೂ ಅಲ್ಲ.

ಪವಿತ್ರ ಕುರ್‌ಆನ್ ಅವತೀರ್ಣವಾದ ಕೂಡಲೇ ಪ್ರವಾದಿ ಮುಹಮ್ಮದ್(ಸ)ರು ಪುರುಷ ಸಂಗಾತಿಗಳನ್ನು ಕರೆದು ಓದಿ ಕೇಳಿಸುತ್ತಿದ್ದರು.  ಬಳಿಕ ಮಹಿಳೆಯರನ್ನೂ ಕರೆದು ಕೇಳಿಸುತ್ತಿದ್ದರು. ಇಷ್ಟೇ ಅಲ್ಲ, ಯಾರಿಗೆ ಬರಹ ಗೊತ್ತಿದೆಯೋ ಅವರೊಂದಿಗೆ ಆ ವಚನಗಳನ್ನು ಬರೆ ದಿಡುವಂತೆಯೂ ಸೂಚಿಸುತ್ತಿದ್ದರು. ಬರೆದಾದ ಬಳಿಕ ಅವರಿಂದ ಓದಿ ಕೇಳಿಸಿಕೊಳ್ಳುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರು. ಅವರಲ್ಲಿ ಅ ನೇಕರು ಆ ವಚನಗಳನ್ನು ಕಂಠಪಾಠ ಮಾಡುತ್ತಿದ್ದರು. ಪ್ರವಾದಿಯವರಿಂದ ಕುರ್‌ಆನನ್ನು ಆಲಿಸಿ ಅದನ್ನು ಯಥಾರೂಪದಲ್ಲಿ ಆ  ಕ್ಷಣದಲ್ಲೇ  ಸುಮಾರು 44 ಅನುಯಾಯಿಗಳು ದಾಖಲಿಸಿಟ್ಟಿದ್ದಾರೆ ಎಂಬ ವರದಿಯೂ ಇದೆ. ಇವರಲ್ಲಿ ಅಬ್ದುಲ್ಲಾ ಬಿನ್ ಮಸ್‌ಊದ್,  ಸಾಲಿಮ್ ಮೌಲಾ ಅಬೀ ಹುದೈಫಾ, ಮುಆದ್ ಬಿನ್ ಜಬಲ್, ಉಬಯ್ಯ್ ಬಿನ್ ಕಅಬ್, ಸಈದ್ ಬಿನ್ ಆಸ್, ಅಬ್ದರ‍್ರಹ್ಮಾನ್ ಬಿನ್  ಹಾರಿಸ್ ಮುಂತಾದವರು ಪ್ರಮುಖರಾಗಿದ್ದಾರೆ. ಮಾತ್ರವಲ್ಲ, ತಾವೇ ನೇಮಿಸಿ ಬರೆಸಿದವರ ಬರಹವನ್ನು ಪ್ರವಾದಿ ತನ್ನ ಕೋಣೆಯಲ್ಲಿ  ಕಾಪಿಡುತ್ತಿದ್ದರು. ಇದರ ಜೊತೆಗೇ ಇನ್ನೊಂದು ಬಹುಮುಖ ಅಂಶವೂ ಇದೆ.

ಅದು ಕಂಠಪಾಠ.

ಪ್ರವಾದಿಯವರ ಜೀವಿತಾವಧಿಯಲ್ಲಿಯೇ ಕುರ್‌ಆನನ್ನು ಕಂಠ ಪಾಠ ಮಾಡಿರುವವರ ಸಂಖ್ಯೆ 100ಕ್ಕಿಂತಲೂ ಅಧಿಕ ಇತ್ತು. ಒಂದುಕಡೆ,  ಪವಿತ್ರ ಕುರ್‌ಆನಿನ ಲಿಖಿತ ರೂಪ ಇದ್ದರೆ ಇನ್ನೊಂದೆಡೆ ಅದನ್ನು ಕಂಠಪಾಠ ಮಾಡಿದವರೂ ಇದ್ದರು. ಬರಬರುತ್ತಾ ಅನುಯಾಯಿಗಳ  ಸಂಖ್ಯೆ ಹೆಚ್ಚುತ್ತಾ ಹೋದಾಗ ಆವರೆಗೆ ಅವತೀರ್ಣವಾದ ಕುರ್‌ಆನನ್ನು ಆ ಹೊಸ ಅನುಯಾಯಿಗಳಿಗೆ ತಲುಪಿಸುವ ಸವಾಲೂ  ಎದುರಾಯಿತು. ಪ್ರವಾದಿ ಅದಕ್ಕಾಗಿ ತನ್ನ ನಂಬಿಗಸ್ಥ ಅನುಯಾಯಿಗಳ ತಂಡವನ್ನು ರಚಿಸಿದರು. ಆ ಹೊಸ ಅನುಯಾಯಿಗಳಿಗೆ  ಕುರ್‌ಆನನ್ನು ಓದಿ ಹೇಳುವ ಮತ್ತು ಕಂಠಪಾಠ ಮಾಡಿಸುವ ಹೊಣೆಗಾರಿಕೆಯನ್ನು ಈ ತಂಡಕ್ಕೆ ವಹಿಸಿಕೊಟ್ಟರು. ಈ ಪರಂಪರೆ ಎಷ್ಟು  ಅದ್ಭುತವಾಗಿ ಮುಂದುವರಿದುಕೊಂಡು ಬಂದಿದೆ ಎಂದರೆ, ಇವತ್ತಿಗೂ ಕುರ್‌ಆನನ್ನು ಕಂಠಪಾಠ ಮಾಡಿದವರ ಸಂಖ್ಯೆ ಲಕ್ಷಾಂತರ  ಸಂಖ್ಯೆಯಲ್ಲಿದೆ. ಕಂಠಪಾಠ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಲಕ್ಷಾಂತರ ಇದೆ. ಒಂದುವೇಳೆ, 

ಇವತ್ತು ಪವಿತ್ರ ಕುರ್‌ಆನಿನ ಮುದ್ರಣ  ಪ್ರತಿಯನ್ನು ಯಾವುದೇ ಒಂದು ಸರ್ಕಾರ ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡರೂ ಕುರ್‌ಆನಿನ ಪಠಣ ನಿಲ್ಲುವುದಿಲ್ಲ.  ಯಾಕೆಂದರೆ, ಕುರ್‌ಆನ್ ಮುಸ್ಲಿಮರ ಮೆದುಳಿನಲ್ಲಿದೆ. ಸಂಪೂರ್ಣ ಕುರ್‌ಆನನ್ನು ಕಂಠಪಾಠ ಮಾಡಿದವರ ಸಂಖ್ಯೆ ಸಣ್ಣದಾದರೂ  ಕುರ್‌ಆನ್ ಕಂಠಪಾಠವೇ ಇಲ್ಲದ ಮುಸ್ಲಿಮ್ ಇರುವುದಕ್ಕೆ ಸಾಧ್ಯವೇ ಇಲ್ಲ. ಐದು ಬಾರಿಯ ನಮಾಝï‌ನಲ್ಲಿ ಪ್ರತಿನಿತ್ಯವೂ ಕುರ್‌ಆನಿನ  ಸಣ್ಣ ಸೂಕ್ತವನ್ನಾದರೂ ಅವರು ಓದಿಯೇ ತೀರು ತ್ತಾರೆ. ಒಂದುರೀತಿಯಲ್ಲಿ, ಜಗತ್ತಿನಲ್ಲಿ ಸುಮಾರು 200 ಕೋಟಿ ಮುಸ್ಲಿಮರಿದ್ದು, ಅವರೆಲ್ಲರೂ ಕುರ್‌ಆನನ್ನು ಕಂಠಪಾಠ ಮಾಡಿದವರೇ ಆಗಿದ್ದಾರೆ. ಒಬ್ಬರಿಗೆ ಮೂರೋ ನಾಲ್ಕೋ ಅಧ್ಯಾಯ ಕಂಠ ಪಾಠವಿದ್ದರೆ, ಇ ನ್ನೊಬ್ಬರಿಗೆ ಇನ್ನೊಂದಿಷ್ಟು ಹೆಚ್ಚು ಅಧ್ಯಾಯಗಳು ಕಂಠಪಾಠವಿರುತ್ತದೆ. ತಮಗೆ ಗೊತ್ತಿರುವ ಸೂಕ್ತಗಳನ್ನೋ ಅಧ್ಯಾಯಗಳನ್ನೋ ಅವರು  ನಮಾಝï‌ನಲ್ಲಿ ಪಠಿಸುತ್ತಾರೆ. ಜಗತ್ತಿನ ಇನ್ನಾವ ಧರ್ಮಗ್ರಂಥಕ್ಕೂ ಇಂಥದ್ದೊಂದು  ಅನುಯಾಯಿಗಳು ಇರುವುದಕ್ಕೆ ಸಾಧ್ಯವಿಲ್ಲ.  ಧರ್ಮಗ್ರಂಥವನ್ನೇ ಕಂಠಪಾಠ ಮಾಡುತ್ತಾ ದಿನದಲ್ಲಿ ಕನಿಷ್ಠ 17 ಬಾರಿಯಾದರೂ ಅದನ್ನು ಉರ ಹೊಡೆಯುತ್ತಾ ಬದುಕುವ  ಮುಸ್ಲಿಮರು ಜಗತ್ತಿನ ಇತರೆಲ್ಲ ಧರ್ಮಾನು ಯಾಯಿಗಳಿಗಿಂತ ಖಂಡಿತ ಭಿನ್ನರಾಗಿದ್ದಾರೆ. ಅಂದಹಾಗೆ,

ಈ ಕಂಠಪಾಠ ಮಾಡಿರುವ ಅನುಯಾಯಿಗಳ ಹೊರತಾಗಿಯೂ ಪವಿತ್ರ ಕುರ್‌ಆನನ್ನು ಗ್ರಂಥ ರೂಪದಲ್ಲಿ ಕ್ರೋಢೀಕರಣ ಮಾಡ ಬೇಕಾದ ಅನಿವಾರ್ಯತೆ ಪ್ರವಾದಿ ನಿಧನದ ಎರಡು ವರ್ಷಗಳ ಬಳಿಕ ಎದುರಾಯಿತು.

ಹಿಜರಿ ಶಕೆ 10ರಲ್ಲಿ ಪ್ರವಾದಿ(ಸ) ನಿಧನರಾದರು. ಆ ಬಳಿಕ ಅಬೂಬಕರ್ ಸಿದ್ದೀಕ್ ಖಲೀಫರಾಗಿ ಆಯ್ಕೆಯಾದರು. ಹಿಜರೆ ಶಕೆ 12ರಲ್ಲಿ  ಯುದ್ಧವೊಂದು ನಡೆಯಿತು. ಯಮಾಮ ಯುದ್ಧ ಎಂದು ಗುರುತಿಸಿಕೊಂಡಿರುವ ಈ ಕಾಳಗದಲ್ಲಿ ಕುರ್‌ಆನ್ ಕಂಠ ಪಾಠ ಮಾಡಿರುವ  ಸುಮಾರು 70ರಷ್ಟು ಮಂದಿ ಸಾವಿಗೀಡಾದರು. ಇದು ಖಲೀಫ ಅಬೂಬಕರ್‌ರನ್ನು ತೀವ್ರ ಚಿಂತೆಗೀಡು ಮಾಡಿತು. ಅವರು ಉಮರ್  ಬಿನ್ ಖತ್ತಾಬ್‌ರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಮಾಲೋಚನೆಯ ಬಳಿಕ ಪ್ರವಾದಿಯವರ ಇನ್ನಷ್ಟು ಪ್ರಮುಖ ಅನುಯಾಯಿಗಳೊಂದಿಗೂ ಸಮಾಲೋಚನೆ ನಡೆಸಲಾಯಿತು. ಅದರಂತೆ ಪವಿತ್ರ ಕುರ್‌ಆನನ್ನು ಗ್ರಂಥರೂಪದಲ್ಲಿ ತರಬೇಕೆಂಬ ವಿಷಯದಲ್ಲಿ  ಒಮ್ಮತಕ್ಕೆ ಬರಲಾಯಿತು. ಮಾತ್ರವಲ್ಲ, ಅದಕ್ಕಾಗಿ ಕುರ್‌ಆನ್ ಕಂಠಪಾಠ ಮಾಡಿರುವ ಮತ್ತು ಬರಹ ರೂಪಕ್ಕೆ ತಂದಿರುವವರ  ಸಮಿತಿಯೊಂದನ್ನೂ ರಚಿಸಲಾಯಿತು. ಈ ಸಮಿತಿಯ ನೇತೃತ್ವವನ್ನು ಝೈದ್ ಬಿನ್ ಸಾಬಿತ್‌ರಿಗೆ ವಹಿಸಿ ಕೊಡಲಾಯಿತು. ಇವರಂತೂ  ಪವಿತ್ರ ಕುರ್‌ಆನನ್ನು ಪ್ರವಾದಿಯವರಿಂದ ನೇರವಾಗಿ ಕೇಳಿ ಬರೆದಿಡುತ್ತಿದ್ದವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಹೀಗೆ ಪವಿತ್ರ ಕುರ್‌ಆನಿನ  ಬರಹ ರೂಪವನ್ನು ಸಂಗ್ರಹಿಸುವ ಪ್ರಯತ್ನ ಪ್ರಾರಂಭವಾಯಿತು. ಪ್ರವಾದಿ ಕಾಲದಲ್ಲಿ ಚರ್ಮ, ಎಲುಬು, ಖರ್ಜೂರದ ಎಲೆ, ಮರದ  ಹಲಗೆ ಇತ್ಯಾದಿಗಳಲ್ಲಿ ಕುರ್‌ಆನನ್ನು ದಾಖಲಿಸಿ ಇಡಲಾಗುತ್ತಿತ್ತು. ಕಂಠಪಾಠ ಮಾಡಿದವರೂ ಸಮಿತಿಯ ಮುಂದೆ ಹಾಜರಾದರು. ಹೀಗೆ  ಬರಹ ಮತ್ತು ಕಂಠಪಾಠ- ಎರಡನ್ನೂ ಜೊತೆಯಿಟ್ಟು ತಾಳೆ ಮಾಡಿಕೊಂಡು ಕುರ್‌ಆನನ್ನು ಎರಡು ಭಾಗಗಳಲ್ಲಿ ಕ್ರೋಢೀಕರಿಸ ಲಾಯಿತು. ಖಲೀಫ ಅಬೂಬಕರ್‌ರ ಕಾಲದಲ್ಲೇ  ನಡೆದ ಕ್ರೋಢೀಕರಣ ಇದು. ಆದರೆ,

ಖಲೀಫಾ ಉಸ್ಮಾನ್‌ರ ಕಾಲದಲ್ಲಿ ಹೊಸದೊಂದು ಸವಾಲು ಎದುರಾಯಿತು. ಆ ಕಾಲದಲ್ಲಿ ಮಕ್ಕಾ-ಮದೀನಾಗಳ ಆಚೆ ಬಹುದೂರದವರೆಗೆ ಇಸ್ಲಾಮ್ ಹರಡಿಕೊಂಡಿತು. ಹೀಗೆ ಹೊಸದಾಗಿ ಇಸ್ಲಾಮ್‌ಗೆ ಆಕರ್ಷಿತರಾದವರು ಅವರಿವರಿಂದ ಕೇಳಿ ಕುರ್‌ಆನನ್ನು ಅಭ್ಯಾಸ  ಮಾಡುತ್ತಿದ್ದರು. ಗ್ರಂಥ ರೂಪದ ಕುರ್‌ಆನ್ ಚಾಲ್ತಿಯಲ್ಲಿ ಇಲ್ಲದೇ ಇದ್ದುದರಿಂದ ಈ ಹೊಸ ಮುಸ್ಲಿಮರ ಕುರ್‌ಆನ್ ಓದಿನಲ್ಲಿ ತಪ್ಪುಗಳಾಗುತ್ತಿದ್ದುವು. ಈ ವಿಷಯವನ್ನು ಪ್ರವಾದಿ ಅನುಯಾಯಿ ಹುದೈಫ ಬಿನ್ ಯಮಾನ್ ಎಂಬವರು ಖಲೀಫಾ ಉಸ್ಮಾನ್‌ರಿಗೆ  ವಿವರಿಸಿದರು. ಗ್ರಂಥ ರೂಪದಲ್ಲಿರುವ ಕುರ್‌ಆನನ್ನು ಬೇರೆ ಬೇರೆ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗೆ  ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದರು. ಇದು ಖಲೀಫರಿಗೂ ಸರಿ ಎನಿಸಿತು. ಅದರಂತೆ ಅದಾಗಲೇ  ಕ್ರೋಢೀಕರಣಗೊಂಡಿರುವ ಕುರ್‌ಆನ್‌ನ ಪ್ರತಿಗಳನ್ನು ತಯಾರಿಸು ವುದಕ್ಕೆ ಖಲೀಫರು ಈ ಮೇಲೆ ಆರಂಭದಲ್ಲಿ ಉಲ್ಲೇಖಿಸಲಾದ  ನಾಲ್ವರ ತಂಡವನ್ನು ರಚಿಸಿದರು. ಇದು ಇತಿಹಾಸ. ಅಂದಹಾಗೆ,
ಪವಿತ್ರ ಕುರ್‌ಆನ್‌ನ ಬಗ್ಗೆ ಪ್ರವಾದಿ(ಸ) ಅತ್ಯಂತ ಜಾಗರೂಕರಾಗಿದ್ದರು. ಪ್ರತಿ ರಮಝಾನ್‌ನಲ್ಲಿ ಆವರೆಗೆ ಅವತೀರ್ಣವಾಗಿರುವ  ಕುರ್‌ಆನಿನ ಸೂಕ್ತಗಳನ್ನು ಕ್ರಮಾನುಸಾರ ಪಠಿಸುತ್ತಿದ್ದರು. ಸದ್ಯದ ಅಗತ್ಯ ಏನೆಂದರೆ,

ಇಸ್ಲಾಮ್‌ನ ಕುರಿತೋ ಕುರ್‌ಆನ್‌ನ ಕುರಿತೋ ವ್ಯಕ್ತವಾಗುವ ಸಂದೇಹಗಳನ್ನು ಅಪರಾಧವಾಗಿ ಕಾಣದೇ ಇತಿಹಾಸವನ್ನು ಅಧ್ಯ ಯನ  ನಡೆಸಿ ಉತ್ತರಿಸುವ ಪ್ರಯತ್ನವನ್ನು ನಾವು ನಡೆಸಬೇಕು. ಇಸ್ಲಾಮ್‌ಗೆ ಸಂಬಂಧಿಸಿ ಯಾವುದೂ ರಹಸ್ಯವಾಗಿಲ್ಲ. ಕುರ್‌ಆನಿನ  ಮೂಲವಾಗಲಿ, ಕ್ರೋಢೀಕರಣವಾಗಲಿ, ಅದರಲ್ಲಿ ವ್ಯಕ್ತವಾಗುವ ಜಿಹಾದ್, ಕಾಫಿರ್, ತಲಾಕ್, ಏಕದೇವ, ಬಹುದೇವ, ಸ್ವರ್ಗ, ನರಕ,  ಪರಲೋಕ ವಿಚಾರಣೆ, ಆಹಾರ, ನ್ಯಾಯ ವಿತರಣೆ... ಏನೇ ಆಗಲಿ, ಎಲ್ಲಕ್ಕೂ ಸ್ಪಷ್ಟ ವಿವರಣೆಯಿದೆ. ವ್ಯಾಖ್ಯಾನವಿದೆ.

ಅಧ್ಯಯನ ನಡೆಸಬೇಕು ಅಷ್ಟೇ.

Thursday, September 23, 2021

ದೋಹಾದ ಎಸಿ ರೂಮಿನ ತಾಲಿಬಾನ್ ಮತ್ತು 1996ರ ತಾಲಿಬಾನ್: ಒಂದು ಮುಖಾಮುಖಿ





ಒಐಸಿ ಪ್ರಧಾನ ಕಾರ್ಯದರ್ಶಿ

ಖತಾರ್‌ನ ವಿದೇಶಾಂಗ ಸಚಿವ

ಖ್ಯಾತ ಅರಬ್ ಬರಹಗಾರ ಫಹ್ಮೀ ಹುವೈದಿ

ಅಫಘಾನಿಸ್ತಾನದ ತಾಲಿಬಾನ್ ಸರ್ಕಾರವು 2001ರಲ್ಲಿ ಬಾಮಿಯಾನ್‌ನಲ್ಲಿರುವ ಬೌದ್ಧ ಸ್ತೂಪಗಳನ್ನು ಸ್ಫೋಟಕ ಬಳಸಿ ಧ್ವಂಸಗೊಳಿಸಿದ  ಬಳಿಕ ಜಾಗತಿಕವಾಗಿ ಉಂಟಾದ ತಲ್ಲಣ ಅಂತಿಂಥದ್ದಲ್ಲ. ಬಾಮಿಯಾನ್‌ನ ಬೌದ್ಧ ಸ್ತೂಪಗಳು ಜಾಗತಿಕವಾಗಿಯೇ ಬಹು  ಪ್ರಸಿದ್ಧವಾಗಿತ್ತು. 1996ರಲ್ಲಿ ಅಫಘಾನ್‌ನಲ್ಲಿ ಆಡಳಿತಕ್ಕೆ ಬಂದ ತಾಲಿಬಾನ್‌ನ ಬಗ್ಗೆ ಏನೇ ಆರೋಪಗಳಿದ್ದರೂ ಅದು ಈ ವಿಶ್ವಪ್ರಸಿದ್ಧ  ಬೌದ್ಧ ಸ್ತೂಪಗಳನ್ನು ಧರಾಶಾಹಿಗೊಳಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದ್ದರಿಂದಲೇ,

ಈ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ತಾಲಿಬಾನ್ ಸರ್ಕಾರಕ್ಕೆ ಅಂದು ಮಾನ್ಯತೆ ಕೊಟ್ಟಿದ್ದ ರಾಷ್ಟ್ರಗಳು ಮೂರೇ ಮೂರು-  ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ. ಜಗತ್ತಿನ ಒಟ್ಟು ಸುಮಾರು 300ರಷ್ಟು ರಾಷ್ಟ್ರಗಳ ಪೈಕಿ ತಾಲಿ ಬಾನ್ ಮೇಲೆ  ನಂಬಿಕೆಯಿರಿಸಿದ್ದ ಈ ಮೂರೇ ಮೂರು ರಾಷ್ಟ್ರಗಳೂ ಬೌದ್ಧ ಸ್ತೂಪದ ಧ್ವಂಸವನ್ನು ಕಂಡು ಹೌಹಾರಿದುವು. ವಿಶ್ವಸಂಸ್ಥೆಯಂತೂ  ತೀವ್ರ  ವಿರೋಧ ವ್ಯಕ್ತಪಡಿಸಿತು ಮತ್ತು ಈ ವಿಷಯದಲ್ಲಿ ತಾಲಿಬಾನ್ ಜೊತೆ ಮಾತಾಡುವಂತೆ ಇಸ್ಲಾ ಮಿಕ್ ರಾಷ್ಟ್ರಗಳ ಒಕ್ಕೂಟದೊಂದಿಗೆ  (ಒಐಸಿ) ಮನವಿ ಮಾಡಿಕೊಂಡಿತು. ಆ ಮನವಿಯ ಬಳಿಕ ರಚಿತವಾದ ಮೂವರು ಸದಸ್ಯರ ತಂಡದ ಹೆಸರನ್ನೇ ಆರಂಭದಲ್ಲಿ  ಉಲ್ಲೇಖಿಸಿರುವುದು. ಈ ಮೂವರು ತಾಲಿಬಾನ್ ನಾಯಕರನ್ನು ಭೇಟಿಯಾದರು ಮತ್ತು ಆ ಮಾತುಕತೆಯ ಬಳಿಕ ಫಹ್ಮೀ ಹುವೈದಿಯ  ಅಭಿಪ್ರಾಯವನ್ನು ಪತ್ರಕರ್ತರೋರ್ವರು ಹೀಗೆ ಹಂಚಿಕೊಂಡಿದ್ದರು,“ತಾಲಿಬಾನ್ ಎಂಬುದು ಒಂದು ವಿಚಿತ್ರ ಜನಸಮೂಹ. 50ಕ್ಕಿಂತಲೂ ಅಧಿಕ ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟವಾದ ಒಐಸಿಯ ಪ್ರತಿನಿಧಿಗಳು ನಾವಾಗಿದ್ದರೂ ನಮ್ಮ ಮಾತಿಗೆ ಕಿವಿಗೊಡುವ ಮನಸ್ಥಿತಿ ಅವರದ್ದಲ್ಲ. ನಮ್ಮ ಮಾತಿನ ಬಳಿಕವೂ ಅವರ ಅಭಿಪ್ರಾಯದಲ್ಲಿ  ಬದಲಾವಣೆ ಆಗಿಲ್ಲ. ಜಗತ್ತು ಹೇಗೆ ಮತ್ತು ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಕಲ್ಪನೆಯೇ ಇಲ್ಲದ ತಂಡ ಅದು” ಎಂದು  ಹೇಳಿದ್ದರು.

ಫಹ್ಮೀ ಹುವೈದಿ ಹೀಗೆ ಹೇಳಿ 20 ವರ್ಷಗಳೇ ಕಳೆದಿವೆ. 2001ರ ಕೊನೆಯಲ್ಲಿ ಅಧಿಕಾರ ಕಳಕೊಂಡ ತಾಲಿಬಾನ್, ಮೊನ್ನೆ ಮೊನ್ನೆ ಮತ್ತೆ  ಅಫಘಾನ್‌ನಲ್ಲಿ ಅಧಿಕಾರಕ್ಕೆ ಬಂದಿದೆ. ಮಾತ್ರವಲ್ಲ, ಮೊದಲ ಪತ್ರಿಕಾಗೋಷ್ಠಿಯನ್ನೂ ನಡೆಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ತಾಲಿಬಾನ್  ವಕ್ತಾರ ಝಬೀಉಲ್ಲಾ ಮುಜಾ ಹಿದ್ ಹೇಳಿದ ಮಾತುಗಳು ಆ ನಂತರ ಸಾಕಷ್ಟು ಚರ್ಚೆಗೂ ಒಳಗಾಗಿವೆ- `ಹೆಣ್ಣು ಮಕ್ಕಳ ಶಿಕ್ಷಣಕ್ಕೆ  ನಮ್ಮ ವಿರೋಧವಿಲ್ಲ, ವಿಶ್ವದ ಇತರ ರಾಷ್ಟ್ರಗಳೊಂದಿಗೆ ನಾವು ಸಂಬಂಧ ಸ್ಥಾಪಿಸುತ್ತೇವೆ, ನಮ್ಮ ನೆಲವನ್ನು ಉಗ್ರ ಚಟುವಟಿಕೆಗಳಿಗೆ  ಬಳಸಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ಕೊಡಲ್ಲ, 2001ರ ತಾಲಿಬಾನ್‌ಗೂ 2021ರ ತಾಲಿಬಾನ್‌ಗೂ ನಡುವೆ ಐಡಿಯಾಲಜಿ ಮತ್ತು  ನಂಬಿಕೆಗೆ ಸಂಬಂಧಿಸಿ ಯಾವ ಬದಲಾವಣೆ ಆಗದಿದ್ದರೂ ಬೌದ್ಧಿಕವಾಗಿ ಮತ್ತು ವೈಚಾರಿಕವಾಗಿ ನಾವು ಬೆಳೆದಿದ್ದೇವೆ ಮತ್ತು ನಮ್ಮದು  ಈಗ ಹೆಚ್ಚು ಅನುಭವಿ ತಂಡ' ಎಂದೂ ಹೇಳಿದ್ದರು. ಇದನ್ನು ಪುಷ್ಠೀಕರಿಸುವಂತೆ,

ಫ್ರಾನ್ಸ್ ನ  ಎಎಫ್‌ಸಿ ಮಾಧ್ಯಮ ಸಂಸ್ಥೆಯು ಒಂದು ವರದಿ ಯನ್ನೂ ಪ್ರಕಟಿಸಿತ್ತು. ಅಫಘಾನನ್ನು ತಾಲಿಬಾನ್ ವಶಪಡಿಸಿಕೊಂಡ ಎರಡು  ದಿನಗಳ ಬಳಿಕ ಅಲ್ಲಿನ ಪ್ರಮುಖ ನಗರವಾದ ಹೆರಾತ್ ನಲ್ಲಿ ಶಾಲೆಗಳು ಈ ಹಿಂದಿನಂತೆ  ತೆರೆದುಕೊಂಡಿವೆ ಮತ್ತು ಹಿಜಾಬ್‌ಧಾರಿ  ಹೆಣ್ಮಕ್ಕಳು ಎಂದಿನಂತೆ ಶಾಲೆಗೆ ಹೋಗುತ್ತಿದ್ದಾರೆ ಎಂದು ಆ ವರದಿ ಹೇಳಿತ್ತು. ಅಲ್ಲದೇ, ಅಫಘಾನಿಸ್ತಾನವು ತಾಲಿಬಾನ್ ವಶವಾದ  ಸಂದರ್ಭದಲ್ಲಿ ಅಫಘಾನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ನಾಗರಿಕರೂ ಸೇರಿದಂತೆ ಸುಮಾರು  150ರಷ್ಟು ಭಾರತೀಯರು ಸಿಲುಕಿಕೊಂಡಿದ್ದರು. ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಾಮಾನ್ಯವಾಗಿ ವಿಶೇಷ ಗೌರವ ಸಿಗುತ್ತದೆ.  ವಿಮಾನ ನಿಲ್ದಾಣಕ್ಕಾಗಲಿ ಅಥವಾ ಇತರ ಪ್ರದೇಶಗಳಿಗಾಗಲಿ ತೆರಳುವಾಗ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹಸಿರು  ವಲಯದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವ ಅವಕಾಶವೂ ಇರುತ್ತದೆ. ಆದರೆ ರಾಯ ಭಾರ ಕಚೇರಿಯಲ್ಲಿ ಸಿಲುಕಿಕೊಂಡ  ಭಾರತೀಯರಿಗೆ ಹಸಿರು ವಲಯದ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ಲಭ್ಯವಾಗದೇ ಹೋದಾಗ ಅವರು ತಾಲಿಬಾನ್  ನೆರವು ಯಾಚಿ ಸಿದರು ಮತ್ತು ತಾಲಿಬಾನ್ ಅವರನ್ನು ಪೂರ್ಣ ಕಾವಲಿನೊಂದಿಗೆ ವಿಮಾನ ನಿಲ್ದಾಣಕ್ಕೆ ತಲುಪಿಸಿ ಸುರಕ್ಷಿತವಾಗಿ ಭಾರತಕ್ಕೆ  ಕಳುಹಿಸಿಕೊಟ್ಟಿತು ಎಂದು ಆ ತಂಡದಲ್ಲಿದ್ದ ಮಾಧ್ಯಮ ಪ್ರತಿನಿಧಿಯೇ ಹೇಳಿದ್ದರು. ಒಂದು ರೀತಿಯಲ್ಲಿ,

1996ರ ತಾಲಿಬಾನ್ ಮತ್ತು 2021ರ ತಾಲಿಬಾನ್ ನಡುವೆ ಮಾತು ಮತ್ತು ವರ್ತನೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಭಾಷೆ ನಾಗರಿಕವಾಗಿದೆ.  20 ವರ್ಷಗಳಲ್ಲಿ ಸಾಕಷ್ಟು ಪಾಠ ಕಲಿತಂತೆ ಆಡುತ್ತಿದೆ. ವೇಷ ಭೂಷಣಗಳಲ್ಲಿ ಬದಲಾವಣೆ ಕಾಣಿಸದಿದ್ದರೂ ಮಾತುಗಳಲ್ಲಿ ಅನುಭವ  ವ್ಯಕ್ತವಾಗುತ್ತಿದೆ. ಆದ್ದರಿಂದಲೋ ಏನೋ, 1996ರಲ್ಲಿ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಟ್ಟಿರದ ಇರಾನ್, ರಷ್ಯಾ ಮತ್ತು  ಚೀನಾಗಳು ಈಗಾಗಲೇ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಟ್ಟಿವೆ. ಚೀನಾವಂತೂ ಒಂದು ಹೆಜ್ಜೆ ಮುಂದೆ ಹೋಗಿ ತಾಲಿಬಾನ್  ನಾಯಕರೊಂದಿಗೆ ಅಧಿಕೃತ ಮಾತುಕತೆಯನ್ನೂ ನಡೆಸಿದೆ. ನಿಜವಾಗಿ,

1996ರಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದದ್ದೇ  ಸಿವಿಲ್ ವಾರ್ ಮೂಲಕ. ಅಫಘಾನ್ ಸಂಘರ್ಷಕ್ಕೆ ಬಲುದೊಡ್ಡ  ಇತಿಹಾಸವೇ ಇದೆ. 

1978 ಎಪ್ರಿಲ್‌ನಲ್ಲಿ ಅಫಘಾನ್ ಅಧ್ಯಕ್ಷ ಸರ್ದಾರ್ ಮುಹಮ್ಮದ್ ದಾವೂದ್‌ರ ಹತ್ಯೆ ನಡೆಯುತ್ತದೆ. ಅಫಘಾನಿಸ್ತಾನದ  ಗಡಿಯನ್ನು ಹಿಂದಿನ ಸೋವಿಯತ್ ಯೂನಿ ಯನ್, ಪಾಕಿಸ್ತಾನ ಮತ್ತು ಇರಾನ್‌ಗಳು ಹಂಚಿಕೊಳ್ಳುತ್ತಿವೆ. 1978 ರಲ್ಲಿ ಅಧಿಕಾರಕ್ಕೆ ಬಂದ  ದಾವೂದ್‌ರು ನಿಧಾನಕ್ಕೆ ಸೋವಿಯತ್ ಯೂನಿಯನ್‌ನೊಂದಿಗೆ ಸಂಬಂಧವನ್ನು ಕೆಡಿಸಿಕೊಳ್ಳುತ್ತಾರೆ. ಸೋವಿಯತ್ ಯೂನಿಯನ್ ನೊಂದಿಗೆ ಅಫಘಾನ್ ಗಡಿ ಹಂಚಿಕೊಳ್ಳುತ್ತಿರುವುದರಿಂದ ಮತ್ತು ಆ ಕಾಲದಲ್ಲಿ ಸೋವಿಯತ್ ಯೂನಿಯನ್ ಜಗತ್ತಿನ ಸೂಪರ್  ಪವರ್ ಆಗಿದ್ದುದರಿಂದ ಸಹಜವಾಗಿ ಅಫಘಾನ್‌ನಲ್ಲೂ ಕಮ್ಯುನಿಸ್ಟ್ ಸರ್ಕಾರಗಳೇ ಅಧಿಕಾರ ದಲ್ಲಿರುತ್ತಿದ್ದುವು. ಆದರೆ ದಾವೂದ್‌ರು ಅಫಘಾನ್ ಕಮ್ಯುನಿಸ್ಟರ ವಿರುದ್ಧ ಅಭಿಯಾನ ಕೈಗೊಳ್ಳುತ್ತಾರೆ. ಅಫಘನ್ನಿನ ಕಮ್ಯುನಿಸ್ಟ್ ಪಕ್ಷದಲ್ಲಿ ಎರಡ್ಮೂರು ಗುಂಪುಗಳಿದ್ದುದೂ ಇದಕ್ಕೆ  ಕಾರಣ. ಇವರೂ ಕಮ್ಯುನಿಸ್ಟ್ ಪಕ್ಷದ ನಾಯಕರೇ ಆಗಿದ್ದರು. ಅವರ ಈ ನಡೆ ಅವರ ಹತ್ಯೆಗೆ ಕಾರಣವಾಯಿತಲ್ಲದೇ, ಆ ಬಳಿಕ ಅಫಘಾನ್ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ನೂರ್ ಮುಹಮ್ಮದ್ ತಾರಕಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆ ನಂತರ,

 1978  ಡಿಸೆಂಬರ್‌ನಲ್ಲಿ ಇವರು ಸೋವಿಯತ್ ಯೂನಿಯನ್ ನೊಂದಿಗೆ 20 ವರ್ಷಗಳ `ಗೆಳೆತನದ ಒಪ್ಪಂದ'ಕ್ಕೆ ಸಹಿ ಹಾಕುತ್ತಾರೆ.  ಇದರಿಂದಾಗಿ ಸೋವಿಯತ್ ಯೂನಿಯನ್ ದೊಡ್ಡ ಸಂಖ್ಯೆಯಲ್ಲಿ ತನ್ನ ಸೇನೆಯನ್ನು ಅಫಘಾನ್‌ನಲ್ಲಿ ನೆಲೆಗೊಳಿಸುತ್ತದೆ. ತಾರಕಿ ಒಂದು  ರೀತಿಯಲ್ಲಿ ಸರ್ವಾಧಿಕಾರಿಯಾಗಿ ಮಾರ್ಪಡುತ್ತಾರೆ ಮತ್ತು 1979 ಸೆಪ್ಟೆಂಬರ್‌ಲ್ಲಿ ಅವರ ಹತ್ಯೆಯೂ ನಡೆಯುತ್ತದೆ. ಇದಾಗಿ ಮೂರು  ತಿಂಗಳ ಬಳಿಕ ಅಫಘಾನಿಸ್ತಾನವನ್ನು ಸೋವಿಯತ್ ಯೂನಿಯನ್ ವಶಪಡಿಸಿಕೊಳ್ಳುತ್ತದೆ. ಈ ಅತಿಕ್ರಮಣವನ್ನು ಅಫಘಾನಿನ  ಇಸ್ಲಾಮಿಸ್ಟರು ತೀವ್ರವಾಗಿ ವಿರೋಧಿಸುತ್ತಾರೆ. ಇದೇ ಸಂದರ್ಭದಲ್ಲಿ ಇರಾನ್‌ನಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಪದಚ್ಯುತಗೊಳಿಸಿದ  ಇಸ್ಲಾಮಿಸ್ಟರು, ಅಮೇರಿಕದ ಪರೋಕ್ಷ ಆಡಳಿತವನ್ನು ಕೊನೆಗೊಳಿಸುತ್ತಾರೆ. ಒಂದು ಕಡೆ ಅಮೇರಿಕ ಇರಾನನ್ನು ಕಳಕೊಳ್ಳುವಾಗ ಇನ್ನೊಂದೆಡೆ ಅದರ ಬದ್ಧ ಎದುರಾಳಿಯಾಗಿದ್ದ ಸೋವಿಯತ್ ಯೂನಿಯನ್ ಅಫಘಾನನ್ನು ಪಡೆದುಕೊಳ್ಳುತ್ತದೆ. ಶೀತಲ ಸಮರದ ಆ  ಕಾಲದಲ್ಲಿ ಅಮೇರಿಕ ಈ ಬೆಳವಣಿಗೆಯನ್ನು ಸಹಜವಾಗಿ ಸ್ವೀಕರಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ರಷ್ಯಾದ ಮೇಲೆ ದಿಗ್ಬಂಧನ  ವಿಧಿಸುತ್ತದೆ ಮತ್ತು 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುತ್ತದೆ. 1981ರಲ್ಲಿ ಅಮೇರಿಕದ ಅಧ್ಯಕ್ಷರಾಗಿ  ರೊನಾಲ್ಡ್ ರೇಗನ್ ಅಧಿಕಾರಕ್ಕೆ ಬರುವುದರೊಂದಿಗೆ ತನ್ನ ವಿದೇಶ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಲ್ಲದೇ, ಸೋವಿಯತ್  ಯೂನಿಯನ್‌ನ ಅಫಘಾನ್ ಅತಿಕ್ರಮಣವನ್ನು ವಿರೋಧಿಸುತ್ತಿದ್ದ ಮುಜಾಹಿದೀನ್‌ಗಳಿಗೆ ಶಸ್ತ್ರಾಸ್ತ್ರ ಸಹಿತ ಸರ್ವ ಬೆಂಬಲವನ್ನು  ಒದಗಿಸುತ್ತಾರೆ. ಮಾತ್ರವಲ್ಲ, 

ಇವರನ್ನು ಸ್ವಾತಂತ್ರ‍್ಯ ಹೋರಾಟಗಾರರು ಎಂದು ಅಮೆರಿಕ ಕರೆಯುತ್ತದೆ. 1989ರಲ್ಲಿ ಉಜ್ಬೆಕಿಸ್ತಾನ್,  ತಜಕಿಸ್ತಾನ್ ಸಹಿತ ಹಲವು ರಾಷ್ಟ್ರಗಳಾಗಿ ಸೋವಿಯತ್ ಯೂನಿಯನ್ ವಿಭಜನೆಗೊಂಡು ಭಾರೀ ಆಂತರಿಕ ಬಿಕ್ಕಟ್ಟಿಗೆ ತುತ್ತಾಯಿತಲ್ಲದೇ, ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರು ಅಫಘಾನ್ ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಾರೆ. ಬಳಿಕ ಡಾ|  ನಜೀಬುಲ್ಲಾ ಅಧ್ಯಕ್ಷರಾಗುತ್ತಾರೆ. ಇವರೂ ಕಮ್ಯುನಿಸ್ಟ್ ವಿಚಾರಧಾರೆಯ ವ್ಯಕ್ತಿ. ಅಮೇರಿಕ ಒದಗಿಸಿದ್ದ ಶಸ್ತ್ರಾಸ್ತ್ರಗಳ ರುಚಿ ಹತ್ತಿದ್ದ ಮುಜಾಹಿದೀನ್‌ಗಳು ನಜೀಬುಲ್ಲಾ ಸರ್ಕಾರದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತಾರೆ. ತಾಜಿಕ್, ಉಝ್ಬೆಕ್ ಮುಂತಾದ ಬುಡಕಟ್ಟುಗಳು  ಒಟ್ಟು ಸೇರಿಕೊಂಡು ಒಂದು ತಂಡವಾಗಿ ಹೋರಾಟ ನಿರತರಾಗುತ್ತಾರೆ ಮತ್ತು 1992ರಲ್ಲಿ ಅಧ್ಯಕ್ಷ ಡಾ| ನಜೀಬುಲ್ಲಾರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ಅಫಘಾನನ್ನು ವಶಪಡಿಸಿಕೊಳ್ಳುತ್ತಾರೆ. ಹಾಗೆಯೇ, ಬುರ್ಹಾನುದ್ದೀನ್ ರಬ್ಬಾನಿ ಹೊಸ ಅಧ್ಯಕ್ಷರಾಗಿ  ಆಯ್ಕೆಯಾಗುತ್ತಾರೆ. ಆದರೆ, 

ಈ ಗುಂಪಿನಲ್ಲಿ ಪಶ್ತೂನ್ ಬುಡಕಟ್ಟುಗಳ ಗುಂಪಾದ ತಾಲಿಬಾನ್ ಸೇರಿಕೊಂಡಿರಲಿಲ್ಲ. ಅದು ಬುರ್ಹಾನುದ್ದೀನ್ ರಬ್ಬಾನಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ನಿರತವಾಗುತ್ತದೆ. ಈ ಸಂದರ್ಭದಲ್ಲಿ ಕರೀಮ್ ಖಲೀಲಿ, ಅಬ್ದುಲ್ ರಶೀದ್  ದೋಸ್ತುಮ್, ಅಬ್ದುಲ್ಲಾ ಅಬ್ದುಲ್ಲಾ, ಬುರ್ಹಾನುದ್ದೀನ್ ರಬ್ಬಾನಿ, ಅಹ್ಮದ್ ಶಾ ಮಸೂದ್, ಅಮ್ರುಲ್ಲಾ  ಸಲೇಹ್ ಮುಂತಾದ ವಿವಿಧ  ಬುಡಕಟ್ಟುಗಳ ನಾಯಕರು ಒಟ್ಟು ಸೇರಿ ತಾಲಿಬಾನ್ ವಿರುದ್ಧ ಹೋರಾಡಲು `ಉತ್ತರದ ಒಕ್ಕೂಟ' ಎಂಬ ಗುಂಪನ್ನು ರಚಿಸುತ್ತಾರೆ.  ಆದರೆ, ಈ ಗುಂಪು 1996ರಲ್ಲಿ ತಾಲಿಬಾನ್ ವಿರುದ್ಧ ಸೋಲನುಭವಿಸುತ್ತದೆ ಮತ್ತು ಮಾಜಿ ಅಧ್ಯಕ್ಷ ಡಾ| ನಜೀಬುಲ್ಲಾರನ್ನು ಈ ತಾಲಿಬಾನ್ ಬಹಿರಂಗವಾಗಿ ನೇಣಿಗೆ ಹಾಕುತ್ತದೆ. ನಿಜವಾಗಿ,

1996ರಲ್ಲಿ ಸಂಘರ್ಷದ ಮೂಲಕ ತಾಲಿಬಾನ್ ಅಫಘಾನನ್ನು ವಶಪಡಿಸಿಕೊಂಡಿದ್ದರೆ, ಈ ಬಾರಿ ಅಂಥ ಯಾವ ಸಿವಿಲ್ ವಾರನ್ನು  ನಡೆಸದೆಯೇ ವಶಪಡಿಸಿಕೊಂಡಿದೆ. 1996ರಲ್ಲಿ ತಾಲಿಬಾನ್ ಈ ಜಗತ್ತಿಗೆ ಹೊಸತು. ತಾಲಿಬಾನ್‌ಗೂ ಈ ಜಗತ್ತು ಹೊಸತು. ಕೇವಲ  ಬುಡಕಟ್ಟು ಜನಾಂಗವಷ್ಟೇ ಆಗಿದ್ದ ತಾಲಿಬಾನ್‌ಗೆ, ಹೊರ ಜಗತ್ತಿನ ಪರಿಚಯವೂ ಇರಲಿಲ್ಲ. ಸಂಪರ್ಕವೂ ಇರಲಿಲ್ಲ. ಆದರೆ 2021ರ  ತಾಲಿಬಾನ್ ಹಾಗಲ್ಲ. ಖತಾರ್‌ನ ದೋಹಾದಲ್ಲಿ ಅದಕ್ಕೆ ಅಧಿಕೃತ ಕಚೇರಿ ಇದೆ. ಅಮೇರಿಕನ್ ಸರ್ಕಾರದೊಂದಿಗೆ ಹಲವು ಸುತ್ತಿನ ಶಾಂತಿ  ಮಾತುಕತೆಗಳನ್ನು ನಡೆಸಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಂಪರ್ಕವಿದೆ. ಅಮೇರಿಕದ ಜೊತೆ 2020ರಲ್ಲಿ ನಡೆದ ಒಪ್ಪಂದದ ಪ್ರಕಾರವೇ 2021 ಮೇ 1 ರಂದು ಅಮೆರಿಕದ ಸೇನಾ ಹಿಂತೆಗೆತ ಮತ್ತು ಪರೋಕ್ಷ ಅಧಿಕಾರ ಹಸ್ತಾಂತರ ನಡೆದಿದೆ. 1996ರಲ್ಲಿ ಅದಕ್ಕೆ ರಾಜಕೀಯ ಮಾತಾಡಲು ಬರುತ್ತಿರಲಿಲ್ಲ. ಬಂದೂಕಿನ ಮತ್ತು ಬಂಡಾಯದ ಭಾಷೆ ಮಾತ್ರವೇ ಅದರದ್ದಾಗಿತ್ತು. ನಾಗರಿಕ  ಸಮಾಜದ ಭಾಷೆ ಅದಕ್ಕೆ ಅಪರಿಚಿತವಾಗಿತ್ತು. ಇವತ್ತು ದೋಹಾದ ಎಸಿ ರೂಮಲ್ಲಿ ಕೂತು ಅದು ಸಂವಾದ ನಡೆಸುವ ಹಂತಕ್ಕೆ ತಲುಪಿದೆ.  ಒಂದು ರೀತಿಯಲ್ಲಿ, ಕಳೆದ ಎರಡು ದಶಕಗಳಲ್ಲಿ ತಾಲಿಬಾನ್‌ನಲ್ಲಿ ಕಂಡುಬಂದಿರುವ ಬದಲಾವಣೆಗಳು ಇವು. ಹಾಗಂತ,

ಅಶ್ರಫ್ ಘನಿ ಸರ್ಕಾರ ಅಫಘಾನ್‌ನಲ್ಲಿ ಅಸ್ತಿತ್ವ ಉಳಿಸಿಕೊಂಡಿ ದ್ದದ್ದೇ  ಅಮೇರಿಕದ ಬೆಂಬಲದಿಂದ. ಅವರ ಬಗ್ಗೆ ಅಫಘಾನ್ ನಾಗರಿಕರಲ್ಲಿ  ವಿಶ್ವಾಸ ಇದ್ದಿರಲಿಲ್ಲ. ಸುಮಾರು ಮೂರುವರೆ ಲಕ್ಷದಷ್ಟಿದ್ದ ಅಫಘಾನ್ ಸೈನಿಕರು ವೇತನವಿಲ್ಲದೇ, ತಮಗೊದಗಿಸಿರುವ ಬಂದೂಕನ್ನೇ  ಮಾರಿ ಜೀವನ ನಡೆಸುತ್ತಿದ್ದರು ಎಂಬ ವರದಿಯಿದೆ. ಭ್ರಷ್ಟಾಚಾರದ ಆರೋಪವೂ ಘನಿ ಸರ್ಕಾರದ ಮೇಲಿದೆ. ಅಮೇರಿಕದ ಸೇನೆ  ಇರುವವರೆಗೆ ಮಾತ್ರ ಅಶ್ರಫ್ ಘನಿ ಅಧಿಕಾರದಲ್ಲಿರುತ್ತಾರೆ ಎಂಬುದು ತಾಲಿಬಾನ್‌ಗೂ ಗೊತ್ತಿತ್ತು. ತನ್ನ ಸೇನಾ ವಿಮಾನ ತಜ್ಞರನ್ನು ಮತ್ತು  ಪೈಲಟ್‌ಗಳನ್ನು 2021 ಮೇ 1ರಂದು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಅಮೇರಿಕ ಸೇನಾ ವಾಪಸಾತಿ ಪ್ರಾರಂಭಿಸುತ್ತದ್ದಂತೆಯೇ ತಾಲಿಬಾನ್ ವಿಜಯವನ್ನು ಆಚರಿಸಿತು. ಅಫಘಾನನ್ನು ವಶಪಡಿಸಿಕೊಳ್ಳದಂತೆ ತಾಲಿಬಾನನ್ನು ತಡೆದಿದ್ದುದೇ ಅಮೇರಿಕದ ಯುದ್ಧ ವಿಮಾನಗಳು ಉದುರಿಸುವ ಬಾಂಬ್‌ಗಳು. ಇದೀಗ ಪೈಲಟ್‌ಗಳನ್ನೇ ಅಮೇರಿಕ ಹಿಂತೆಗೆದುಕೊಳ್ಳುವ ಮೂಲಕ ತಾಲಿಬಾನ್‌ಗೆ ಪರೋಕ್ಷ  ಸಹಾಯ ಮಾಡಿತ್ತು. ಇದೇ ವೇಳೆ ಅಫಘಾನ್ ಪೈಲಟ್‌ಗಳನ್ನು ಗುರಿ ಮಾಡಿದ ತಾಲಿಬಾನ್, 7 ಮಂದಿಯನ್ನು ಹತ್ಯೆ ಮಾಡಿತು. ಹೀಗೆ  ಯುದ್ಧ ವಿಮಾನಗಳು ವಿಮಾನ ನಿಲ್ದಾಣದಲ್ಲೇ  ಉಳಿದುಕೊಳ್ಳುವುದರೊಂದಿಗೆ ಅಫಘಾನ್ ಸೇನೆಯ ಕೈಕಟ್ಟಿ ಹಾಕಿದಂತಾಯಿತು. ಅಲ್ಲದೇ,  ಬದುಕು ನಡೆಸುವುದೇ ದುಸ್ತರವಾಗಿದ್ದ ಅಫಘಾನ್ ಸೈನಿಕರಲ್ಲಿ ಹೋರಾಡುವ ಛಲವೂ ಇರಲಿಲ್ಲ. ಆದ್ದರಿಂದಲೇ, ತಾಲಿಬಾನ್‌ಗೆ ಯಾವ  ಪ್ರತಿರೋಧವೂ ಎದುರಾಗಲಿಲ್ಲ. ಸದ್ಯ,

ಜಗತ್ತು ತಾಲಿಬಾನ್‌ನತ್ತ ಅರ್ಧ ಕುತೂಹಲ ಮತ್ತು ಅರ್ಧ ಭಯದಿಂದ ನೋಡುತ್ತಿದೆ. ಭಯ ಯಾಕೆಂದರೆ, 1996ರಿಂದ 2001ರ ನಡುವೆ  ಅದು ಮಾಡಿದ ಅನಾಹುತಕಾರಿ ಆಡಳಿತ. ಕುತೂಹಲಕ್ಕೂ ಕಾರಣ ಇದೆ. ಮೊನ್ನೆ ಮೊನ್ನೆ ಅದು ನಡೆಸಿದ ಪತ್ರಿಕಾಗೋಷ್ಠಿಯೇ ಈ  ಕುತೂಹಲಕ್ಕೆ ಕಾರಣ. ಈಗಿನದು ಪಶ್ತೂನ್‌ಗಳ ಸರ್ಕಾರ ಅಲ್ಲ, ವಿವಿಧ ಬುಡಕಟ್ಟುಗಳನ್ನು ಸೇರಿಸಿ ಕೊಂಡು ಸರ್ಕಾರ ರಚಿಸುತ್ತೇವೆ  ಎಂದೂ ಅದು ಹೇಳಿದೆ. ಈ ಹಿಂದೆ ತಾಲಿಬಾನ್‌ಗೆ ಅಫಘಾನಿಸ್ತಾನದ ಹೊರಗೆ ಅಧಿಕೃತ ಮುಖ ಇರಲಿಲ್ಲ. ಇವತ್ತು ದೋಹಾದಲ್ಲಿ ಅದಕ್ಕೆ  ಅಧಿಕೃತ ಕಚೇರಿ ಇದೆ. ಆದರೂ ಜಗತ್ತಿನ ಮುಂದಿರುವುದು 1996ರಿಂದ 2001ರ ವರೆಗಿನ ಕರಾಳ ಅನುಭವಗಳು. ಆದ್ದರಿಂದ, ಅದನ್ನು  ಸುಳ್ಳು ಮಾಡುವ ಅವಕಾಶವೊಂದು ತಾಲಿಬಾನ್‌ಗೆ ಇದೀಗ ದಕ್ಕಿದೆ.

ಅಮೇರಿಕ ಸಹಿತ ಜಗತ್ತಿನ ವಿವಿಧ ಬಲಾಢ್ಯ ಪ್ರಜಾತಂತ್ರ ರಾಷ್ಟ್ರಗಳೇ  ಪರೋಕ್ಷವಾಗಿ ಅಥವಾ ಅಧಿಕೃತ ಒಳ ಒಪ್ಪಂದದ ಮೂಲಕ ಅದಕ್ಕೆ ಅಧಿಕಾರ ಹಸ್ತಾಂತರ ಮಾಡಿರುವುದರಿಂದ ಹೊಸ ತಾಲಿಬಾನ್‌ನ  ಬಗ್ಗೆ ನಿರೀಕ್ಷೆ ತಪ್ಪಲ್ಲ. ಕಾದು ನೋಡೋಣ.

Wednesday, August 25, 2021

ಒಂದು ಸಂವಾದ ಮತ್ತು ಕಾಫಿರ್, ಜಿಹಾದ್ ಇತ್ಯಾದಿಗಳು




ಈ ಸಂವಾದವನ್ನು ಓದಿ

‘ಸನಾತನ ಧರ್ಮದ ಕೃತಿಗಳನ್ನು ಕೊಳ್ಳಲು ಹೆಸರು ಕೇಳಿದ್ದೀರಿ. ಋಗ್ವೇದ ಪುಸ್ತಕದ ಹೆಸರೇ ಋಗ್ವೇದವೆಂದು. ಇನ್ನು ಉಪನಿಷತ್ತುಗಳು  ನೂರಾ ಎಂಟು ಇವೆ. ಅವುಗಳಲ್ಲಿ ಹದಿಮೂರು ಉಪನಿಷತ್ತುಗಳು ದಶೋಪನಿಷತ್ ಎಂದು ಪ್ರಸಿದ್ಧವಾಗಿದೆ. ಇವು ಮುಖ್ಯ ಉಪ ನಿಷತ್ತುಗಳು. ಈಶಾವ್ಯಾಸ, ಮಾಂಡೂಕ್ಯ, ಮುಂಡಕ, ಬೃಹದಾರಣ್ಯಕ, ಕೇನ, ಕಠ, ತೃತ್ತರೀಯ, ಐತ್ತರೇಯ, ಛಾಂದೋಗ್ಯ, ಪ್ರಶ್ನ... ಇಷ್ಟನ್ನು ಓದಿ. ರಾಮಕೃಷ್ಣಾಶ್ರಮದ ಪ್ರಕಟಣೆಗಳು ಚೆನ್ನಾಗಿವೆ. ಇನ್ನು,

ಹಿಂದುತ್ವದ ಕೆಲವು ಸಂಘಟನೆಗಳೂ ಪ್ರಕಟಿಸಿವೆ. ಆದರೆ ನಾನು ಅದನ್ನು ಶಿಫಾರಸು ಮಾಡುವುದಿಲ್ಲ. ಅಲ್ಲಿ ವಿವರಣೆಯಲ್ಲಿ ಅವರ  ರಾಜಕೀಯ ನಿಲುವುಗಳ ಛಾಯೆ ಬಂದು ಬಿಡುತ್ತದೆ. ಆದರೆ, ರಾಮಕೃಷ್ಣಾಶ್ರಮದ ಪ್ರಕಟಣೆಗಳು ವಾಸ್ತವಿಕವಾಗಿ ಏನಾಗಿವೆಯೋ ಅವೇ  ಇವೆ. ಸನಾತನ ಧರ್ಮದ ತಾತ್ವಿಕತೆಯು ಅರಿವಿಗೆ ಬರಬೇಕಾದರೆ ಇದನ್ನು ಓದಬೇಕು. ಹಿಂದೂ   ಗಳನ್ನು ಅಟ್ಯಾಕ್ ಮಾಡಲು  ಮೆಟೀರಿಯಲ್ ಬೇಕು ಎಂಬ ಉz್ದÉÃಶದಿಂದ ಓದುವುದಿದ್ದರೆ ಇವು ಆಗುವುದಿಲ್ಲ. ಆಗ ನೀವು ಮನುಸ್ಮÈತಿಯ ಕೆಲವು ಭಾಗಗಳನ್ನು ಓದಿ  ಮತ್ತು ಪುರಾಣ ಗಳನ್ನು ಓದಿ. ಅದರಲ್ಲಿ ಹಿಂದೂಗಳನ್ನು ಟೀಕಿಸುವುದಕ್ಕೆ ಬೇಕಾದಷ್ಟು ವಿಷಯ ಸಿಗುತ್ತದೆ.

ನೀವು ಋಗ್ವೇದವನ್ನು ಓದುವುದಾದರೆ, ವೇದದ ನಾಲ್ಕು ಭಾಗಗಳ ಅರಿವಿರಬೇಕು. ಮೊದಲ ಭಾಗ ಸಂಹಿತೆ- ದೇವರ ಸ್ತುತಿ. ಎರಡ ನೆಯ ಭಾಗ ಬ್ರಾಹ್ಮಣವು- ಕ್ರಿಯಾವಿಧಿ. ಮೂರನೆಯ ಭಾಗ- ಅರಣ್ಯಕವು ಪ್ರಕೃತಿಯ ನಿಗೂಢಗಳ ವಿವರ ಮತ್ತು ಕ್ರಿಯೆಯು ಪ್ರಕೃತಿಯ  ಮೇಲೆ ಬೀರುವ ಪರಿಣಾಮಗಳ ವಿವರಗಳನ್ನು ಒಳಗೊಂಡಿದೆ. ಹಾಗಂತ,

ಓದುವಾಗ ವೇದ-ಅಭ್ಯಾಸದ ಸೂತ್ರಗಳ ಅರಿವಿದ್ದರೆ ಅನುಕೂಲತೆ ಜಾಸ್ತಿ. ಉದಾಹರಣೆಗೆ, ಬಾದರಾಯಣರ ಸೂತ್ರವಿದೆ. ನಾರಾಯಣ  ಗುರುಗಳ ಸೂತ್ರವಿದೆ. ಗೌಡಪಾದರ ಕಾರಿಕೆಗಳಿವೆ. ಇವುಗಳ ಅರಿವಿಲ್ಲದೇ ಓದಿದರೆ ಮೆಟಾಫರ್‌ಗಳು ಅರ್ಥವಾಗು ವುದಿಲ್ಲ.  ಉದಾಹರಣೆಗೆ- ವಿಶ್ವಸೃಷ್ಟಿಯ ಬಗೆ ಋಗ್ವೇದವು, ‘ಸಭೂಮಿನ್ ವಿಶ್ವತೋವೃತ್ವ ಅತ್ಯತ್ತಿಷ್ಟ ದಶಾಂಗುಲಂ...’ ಎಂದಾಗ ಏನೆಂದು ಅರ್ಥ  ಆಗುವುದಿಲ್ಲ. ಆದರೆ, ವಿಶ್ವವು ಒಂದು ಯಜ್ಞಕುಂಡದ ಮಾದರಿಯಲ್ಲಿದ್ದರೆ ಆಗ ವಿಶ್ವಸೃಷ್ಟಿ ಹೀಗೀಗೆ ಆಗಿದೆ ಎಂಬುದು ಅದರ ವಿವರ  ಎಂದು ಗೊತ್ತಾಗುತ್ತದೆ. ಸೂತ್ರಗಳು ಗೊತ್ತಿದ್ದಾಗ ಇದು ಸುಲಭವಾಗಿ ಅರ್ಥವಾಗುತ್ತದೆ. ಸಾಧ್ಯ ಇದ್ದರೆ ಓದುವ ಮೊದಲು ಒಂದೆರಡು  ದಿನವಾದರೂ ಬಲ್ಲವರ ಮಾರ್ಗದರ್ಶನ ಪಡೆದು ನಂತರ ಓದುವುದು ಒಳಿತು...’ ಅಷ್ಟಕ್ಕೂ,

ಈ ಮೇಲಿನ ಬರಹ ಶಿಕ್ಷಕ ಮತ್ತು ಸಾಹಿತಿ ಅರವಿಂದ ಚೊಕ್ಕಾಡಿಯವರದು. ಫೇಸ್‌ಬುಕ್‌ನಲ್ಲಿ ಅವರು ಈ ಬರಹವನ್ನು ಹಂಚಿಕೊಂಡಿದ್ದರು. ಇದಕ್ಕೆ ಮೂಲ  ಕಾರಣ ಶಮೀರಾ ಜಹಾನ್ ಅವರ ಪ್ರಶ್ನೆ. ಸನಾತನ ಧರ್ಮದ ಕೃತಿಗಳನ್ನು ಎಲ್ಲಿಂದ ಪಡೆಯಬಹುದು ಎಂಬ ಅವರ ಪ್ರಶ್ನೆಗೆ  ಉತ್ತರವಾಗಿ ಚೊಕ್ಕಾಡಿಯವರು ಈ ಅಭಿಪ್ರಾಯವನ್ನು ಹಂಚಿಕೊಂಡರು. ಅಷ್ಟೇ ಅಲ್ಲ,

ಚೊಕ್ಕಾಡಿಯವರು ಈ ಅಭಿಪ್ರಾಯವನ್ನು ಹಂಚಿಕೊಳ್ಳುವಾಗ ಅಫಘಾನಿಸ್ತಾನ ನಿಗಿನಿಗಿ ಕುದಿಯುತ್ತಿತ್ತು. ಅಮೇರಿಕನ್ ಪಡೆಗಳು  ಅದಾಗಲೇ ಅಫಘಾನ್‌ಗೆ ಗುಡ್‌ಬೈ ಹೇಳಿತ್ತು ಮತ್ತು ಅಫಘಾನ್ ಸೇನೆ ಮತ್ತು ತಾಲಿಬಾನ್ ನಡುವೆ ತೀವ್ರ ಕಾಳಗ ನಡೆಯುತ್ತಿತ್ತು. ಪು ಲಿಟ್ಝರ್ ಪ್ರಶಸ್ತಿ ವಿಜೇತ ಭಾರತದ ಖ್ಯಾತ ಫೋಟೋ ಜರ್ನಲಿಸ್ಟ್ ದಾನಿಶ್ ಸಿದ್ದೀಕಿ ತಾಲಿಬಾನ್ ಗುಂಡೇಟಿಗೆ ಬಲಿಯಾದದ್ದು ಈ  ಬರಹದ ಮೂರ್ನಾಲ್ಕು ದಿನಗಳ ಬಳಿಕ. ಅಂದಹಾಗೆ, ಈ ಸಂಗತಿಯನ್ನು ಇಲ್ಲಿ ಉಲ್ಲೇಖಿಸುವುದಕ್ಕೂ ಒಂದು ಕಾರಣ ಇದೆ.

ದಶಕಗಳ ಬಳಿಕ ತಾಲಿಬಾನ್ ಅಫಘಾನಿಸ್ತಾನದಲ್ಲಿ ಮತ್ತೆ ಮುನ್ನೆಲೆಗೆ ಬರುವುದರೊಂದಿಗೆ ಮುಸ್ಲಿಮರತ್ತ ಪ್ರಶ್ನೆಗಳ ಕೂರುಂಬು ಗಳನ್ನು  ಎಸೆಯುವ ಪ್ರಕ್ರಿಯೆಯೂ ಪ್ರಾರಂಭವಾಗಿದೆ. ತಾಲಿಬಾನ್ ಬಗ್ಗೆ ನೀವು ಏನು ಹೇಳುತ್ತೀರಿ, ಖಂಡಿಸುತ್ತೀರಾ? ಅವರು ಮಹಿಳಾ ಶಿಕ್ಷಣದ  ವಿರೋಧಿ, ಪ್ರಜಾತಂತ್ರದ ವಿರೋಧಿ, ಜಿಹಾದಿ ಗಳು... ಎಂದೆಲ್ಲಾ ಪಾಠ ಮಾಡುತ್ತಿದೆ. ತಮಾಷೆ ಏನೆಂದರೆ,
ತಾಲಿಬಾನ್ ಎಂಬ ನಾಲ್ಕಕ್ಷರಕ್ಕೆ ಹೋಲಿಸಿದರೆ ಸಿದ್ದೀಖಿ ಎಂಬ ಮೂರಕ್ಷರ ಭಾರತೀಯರ ಪಾಲಿಗೆ ಬಹುತೇಕ ಅಪರಿಚಿತ.  ಭಾರತೀಯರ ನಡುವೆಯಿದ್ದೂ ಪುಲಿಟ್ಝರ್ ಪ್ರಶಸ್ತಿ ಪಡೆದೂ ಮತ್ತು ಅಸಂಖ್ಯ ಮನಮುಟ್ಟುವ ಫೋಟೋ ಕ್ಲಿಕ್ಕಿಸಿಯೂ ಸಿದ್ದೀಖಿ  ಭಾರತೀಯರಿಗೆ ಯಾಕೆ ಅಪರಿಚಿತ ಎಂದರೆ, ಅವರು ತಾಲಿಬಾನ್ ಅಲ್ಲ. ತಾಲಿಬಾನ್ ಈ ದೇಶದಲ್ಲಿ ಚಿರಪರಿಚಿತವಾಗಿರುವುದೂ ಅದರ  ಅನಾಹುತಕಾರಿ ಕೃತ್ಯಗಳಿಗಾಗಿ ಮಾತ್ರ ಅಲ್ಲ, ಅದನ್ನು ಎತ್ತಿಕೊಂಡು ಈ ದೇಶದ ಮುಸ್ಲಿಮರನ್ನು ಮತ್ತು ಕುರ್‌ಆನನ್ನು ತಿವಿಯುವುದಕ್ಕೆ  ಬಳಸಿಕೊಂಡ ಕಾರಣಕ್ಕಾಗಿ. ತಾಲಿಬಾನ್  ಎಂಬುದು ಈ ಹಿಂದೆ ಈ ದೇಶದ ಒಂದು ವರ್ಗದ ಗಾಳದ ತುದಿಯ ಎರೆಹುಳವಾಗಿತ್ತು. ಈ  ಎರೆಹುಳ ಈ ದೇಶದ್ದಲ್ಲ ಎಂಬುದು ಗಾಳಕ್ಕೆ ಸಿಕ್ಕಿಸಿಕೊಂಡವರಿಗೆ ಚೆನ್ನಾಗಿ ಗೊತ್ತಿತ್ತು.  ಅವರ ವೇಷ ಭೂಷಣ, ಭಾಷೆ, ವಿಚಾರಧಾರೆ,  ಕೋವಿ, ಹೋರಾಟದ ಹಿನ್ನೆಲೆ... ಇತ್ಯಾದಿಗಳನ್ನು ಕಣ್ಣಾರೆ ಕಂಡಿರದ ಮತ್ತು ಅವರೊಂದಿಗೆ ಮಾತಾಡಿರದ ಮಂದಿ ಅವರು ಪವಿತ್ರ  ಕುರ್‌ಆನಿನ ಯಥಾವತ್ ಪ್ರಾಡಕ್ಟು  ಎಂದು ಈ ದೇಶದಲ್ಲಿ ಗಾಳದ ತುದಿಗೆ ಸಿಲುಕಿಸಿ ಪರಿಚರಿಸತೊಡಗಿದರು. ಅವರು ಏನೆಲ್ಲಾ  ಮಾಡಿದರೋ ಅವನ್ನೆಲ್ಲ ಕುರ್‌ಆನ್‌ಗೆ ಜೋಡಿಸಿದರು. ಇಲ್ಲಿಯ ಮುಸ್ಲಿಮರ ಪ್ರತಿಕ್ರಿಯೆಯನ್ನು ಬಯಸಿದರು. 2001ರ ಅವಳಿ ಗೋಪುರದ ಘಟನೆಯ ಬಳಿಕ ತಲೆಗೊಂದು ಪೇಟ, ಜುಬ್ಬಾ-ಪೈಜಾಮ ಮತ್ತು ಮೈಯಿಡೀ ಬುರ್ಖಾ ಧರಿಸಿದವರ ಚಿತ್ರಗಳು ನಿಧಾನಕ್ಕೆ ಈ  ದೇಶದ ಟಿ.ವಿ. ಮತ್ತು ಮುದ್ರಣ ಮಾಧ್ಯಮಗಳಿಂದ ನಿಧಾನಕ್ಕೆ ಕಣ್ಮರೆಯಾದರೂ ಅವರನ್ನು ಗಾಳಕ್ಕೆ ಸಿಲುಕಿಸಿ ಸುತ್ತಾಡಿದವರು ಎತ್ತಿದ ಪ್ರಶ್ನೆಗಳು  ಆಗಾಗ ಮುನ್ನೆಲೆಗೆ ಬರುತ್ತಲೇ ಇದ್ದುವು. ಕುರ್‌ಆನ್ ಹಿಂದೂಗಳನ್ನು ಕಾಫಿರ್ ಅನ್ನುತ್ತದೆ, ಮುಸ್ಲಿಮೇತರರನ್ನು ಕಂಡಕಂಡಲ್ಲಿ ವಧಿಸಲು  ಕರೆ ಕೊಡುತ್ತದೆ, ಮುಸ್ಲಿಮೇತರರ ವಿರುದ್ಧ ಜಿಹಾದ್ ಘೋಷಿಸುತ್ತದೆ, ಮತಾಂತರಕ್ಕೆ ಪ್ರೇರಣೆ ಕೊಡುತ್ತದೆ.. ಇತ್ಯಾದಿಗಳು ತಾಲಿಬಾನ್  ಕಣ್ಮರೆಯಾದ ಬಳಿಕವೂ ಸಮಾಜದಲ್ಲಿ ಉಳಿದುಕೊಂಡಿವೆ. ಇದೀಗ ತಾಲಿಬಾನ್ ಮತ್ತೆ ರಂಗಪ್ರವೇಶಿಸಿರುವುದರಿಂದ ಮುಂದಿನ ದಿನಗಳಲ್ಲಿ  ಭುಜದಲ್ಲಿ ಕೋವಿ ಹಿಡಿದ, ಜುಬ್ಬಾ-ಕುರ್ತಾ, ಪೇಟಧಾರಿ ವ್ಯಕ್ತಿಗಳ ಚಿತ್ರ ಮಾಧ್ಯಮಗಳಲ್ಲಿ ತುಂಬಿ ತುಳುಕಬಹುದು ಮತ್ತು ಇವರ ಬಗ್ಗೆ  ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಯನ್ನು ಮುಸ್ಲಿಮರತ್ತ ಎಸೆಯಬಹುದು. ಅಲ್ಲದೇ, ಪವಿತ್ರ ಕುರ್‌ಆನಿನ 2:191, 4:56, 89, 101, 5:51,  8:65, 9:5 ಮತ್ತು ಇಂತಹ ಇನ್ನಿತರ ವಚನಗಳನ್ನು ತೇಲಿಬಿಟ್ಟು ಮುಸ್ಲಿಮರ ಕ್ರೂರತನಕ್ಕೆ ಪುರಾವೆಗಳಾಗಿ ಮಂಡಿಸಬಹುದು.  ಆದ್ದರಿಂದಲೇ,
ಚೊಕ್ಕಾಡಿಯವರ ಅಭಿಪ್ರಾಯ ಮುಖ್ಯವಾಗುತ್ತದೆ.

‘ಸನಾತನ ಧರ್ಮದ ಕೃತಿಗಳನ್ನು ಓದುವಾಗ ವೇದ ಅಭ್ಯಾಸದ ಸೂಕ್ತಗಳ ಅರಿವಿರಬೇಕು ಎಂಬುದಾಗಿ ಅವರು ಹೇಳಿದ್ದಾರೆ. ಇವುಗಳ  ಅರಿವಿಲ್ಲದೆ ಓದಿದರೆ ಮೆಟಾಫರ್‌ಗಳು ಅರ್ಥವಾಗಲಾರದು. ಆದ್ದರಿಂದ, ಸಾಧ್ಯವಾದರೆ ಓದುವ ಮೊದಲು ಒಂದೆರಡು ದಿನವಾದರೂ  ಬಲ್ಲವರ ಮಾರ್ಗದರ್ಶನ ಪಡೆಯುವುದು ಉತ್ತಮ’ ಎಂದೂ ಹೇಳಿದ್ದಾರೆ. ನಿಜವಾಗಿ,

ಸನಾತನ ಧರ್ಮದ ಕೃತಿಗಳನ್ನು ಅಧ್ಯಯನ ನಡೆಸುವಾಗ ಮಾತ್ರ ಈ ಎಚ್ಚರಿಕೆ ಇರಬೇಕಾದುದಲ್ಲ. ಯಾವುದೇ ಧರ್ಮದ ಗ್ರಂಥಗಳ  ಅಧ್ಯಯನ ನಡೆಸುವಾಗಲೂ ಈ ಎಚ್ಚರಿಕೆ ಸದಾ ಜೊತೆಗಿರಬೇಕು. ಒಂದು ಉದಾಹರಣೆ ಕೊಡುತ್ತೇನೆ- ಪವಿತ್ರ ಕುರ್‌ಆನಿನಲ್ಲಿ ಕಾಫಿರ್,  ಕುಫ್ರ್ ಮತ್ತು ಶಿರ್ಕ್ ಎಂಬ ಪದಗಳು ಅನೇಕ ಕಡೆ ಪ್ರಯೋಗವಾಗಿವೆ. ಕಾಫಿರರನ್ನು ಕಂಡಕಂಡಲ್ಲಿ ವಧಿಸಿರಿ.. ಎಂಬುದು ಕೂಡಾ  ಇದರಲ್ಲಿ ಒಂದು. ಅಂದಹಾಗೆ, ಕುಫ್ರ್ ಪದದ ಅರ್ಥ ಏಕಪ್ರಕಾರವಲ್ಲ. ಸಂದರ್ಭಾನುಸಾರ ಅದು ಬೇರೆ ಬೇರೆ ಅರ್ಥದಲ್ಲಿ ಕುರ್‌ಆನಿನಲ್ಲಿ  ಬಳಕೆಯಾಗಿದೆ. ನಿರಾಕರಣೆ, ಆಜ್ನೊಲ್ಲಂಘನೆ, ಕೃತಘ್ನತೆ, ಅವಗಣನೆ, ಸತ್ಯವನ್ನು ಮರೆಮಾಚುವುದು, ಅಧರ್ಮ ಎಂಬೆಲ್ಲಾ ಅರ್ಥಗಳಲ್ಲಿ  ಪವಿತ್ರ ಕುರ್‌ಆನ್ ಈ ಪದವನ್ನು ಪ್ರಯೋಗಿಸಿದೆ. ಪ್ರವಾದಿ ಮುಹಮ್ಮದರ(ಸ) ಪ್ರಸಿದ್ಧ ಮಾತೊಂದಿದೆ,

ಉದ್ದೇಶಪೂರ್ವಕವಾಗಿ ನಮಾಜ್  ತೊರೆಯುವ ಮುಸ್ಲಿಮನು ಕುಫ್ರ್ ಎಸಗಿದನು ಅಥವಾ ಕಾಫಿರ್ ಆದನು.
ಪವಿತ್ರ ಕುರ್‌ಆನಿನಲ್ಲಿ ಒಂದು ವಚನ ಹೀಗಿದೆ,

‘ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಕಾಫಿರರು’ (5: 44).

ಈ ಮೇಲಿನ ಎರಡೂ ವಚನಗಳಲ್ಲಿ ಕಾಫಿರ್ ಎಂದು ಕರೆದಿರುವುದು ಮುಸ್ಲಿಮರನ್ನು. ಅಲ್ಲದೇ, ರೈತರನ್ನು ಕೂಡ ಪವಿತ್ರ ಕುರ್‌ಆನ್  ಕಾಫಿರ್ (57: 20) ಎಂದು ಕರೆದಿದೆ. ಇಲ್ಲಿ ಕಾಫಿರ್ ಎಂದರೆ ಮರೆಮಾಚುವವರು ಎಂದರ್ಥ. ರೈತರು ಬೀಜವನ್ನು ಗದ್ದೆಯಲ್ಲಿ ಬಿತ್ತುವ  ಮೂಲಕ ಬೀಜವನ್ನು ಅಡಗಿಸುತ್ತಾರೆ ಎಂಬ ಕಾವ್ಯಾತ್ಮಕ ಪದಪ್ರಯೋಗವನ್ನು ಕುರ್‌ಆನ್ ಬಳಸಿದೆ. ಇಲ್ಲಿ ಇನ್ನೊಂದು ಅಂಶವನ್ನೂ  ಹೇಳಲೇಬೇಕು.

ಕಾಫಿರ್ ಎಂಬುದು ಬೈಗುಳ ಅಲ್ಲ. ಯುದ್ಧಕ್ಕೆ ಕರೆಕೊಡುವ ಪದವೂ ಅಲ್ಲ ಅಥವಾ ಕಾಫಿರ್ ಎಂದರೆ ಹಿಂದೂಗಳು ಎಂದೂ ಅಲ್ಲ.  ಕಾಫಿರ್‌ಗೆ ನಾಸ್ತಿಕ ಎಂಬುದು ಸಂವಾದಿ ಪದ ಆಗಬಹುದೇ ಹೊರತು ಹಿಂದೂ, ಕ್ರೈಸ್ತ, ಯಹೂದಿ ಅಲ್ಲ. ಅಲ್ಲದೇ, ಪವಿತ್ರ ಕುರ್‌ಆನಿನಲ್ಲಿ  ಕಾಫಿರರ ವಿರುದ್ಧ ಯುದ್ಧ ಸಾರಿರುವುದಕ್ಕೆ ಅವರು ಕಾಫಿರರು ಅಥವಾ ಇಸ್ಲಾಮನ್ನು ಒಪ್ಪದವರು ಎಂಬುದೂ ಕಾರಣ ಆಗಿರಲಿಲ್ಲ. ಮಕ್ಕಾ  ಮತ್ತು ಮದೀನದಲ್ಲಿ ಇಸ್ಲಾಮನ್ನು ಒಪ್ಪದ ಯಹೂದಿಯರು ಮತ್ತು ಕ್ರೈಸ್ತರು ಸಾಕಷ್ಟು ಮಂದಿ ಇದ್ದರು. ಯಹೂದಿಯೋರ್ವರ  ಶವಯಾತ್ರೆ ನಡೆಯುವಾಗ ಪ್ರವಾದಿ ಮುಹಮ್ಮದ್(ಸ)ರು ಎದ್ದು ನಿಂತ ಘಟನೆ ಎಲ್ಲರಿಗೂ ಗೊತ್ತು. ಕಾಫಿರರ ವಿರುದ್ಧದ ಹೋರಾಟಕ್ಕೆ  ಧರ್ಮಾತೀತವಾದ ಕಾರಣಗಳಿವೆ. ಇಸ್ಲಾಮಿನ ವಿರುದ್ಧ ಸಂಚು, ಶತ್ರುಗಳೊಂದಿಗೆ ಸೇರಿ ಮಾಡಿರುವ ಕುತಂತ್ರ, ಬಂಡಾಯ ಪ್ರಚೋದನೆ  ಮುಂತಾದ ಅಂದಿನ ಕಾಲದ ಕಾರಣಗಳ ಹಿನ್ನೆಲೆಯ ಆಧಾರದಲ್ಲೇ  ಇವನ್ನೆಲ್ಲಾ  ಪರಿಶೀಲಿಸಬೇಕು. ಇಸ್ಲಾಮಿನ ಕಡ್ಡಾಯ ಕರ್ಮವಾದ  ಝಕಾತ್ (ಕಡ್ಡಾಯ ದಾನ)ನ್ನು ನೀಡಲು ಒಪ್ಪದ ಮುಸ್ಲಿಮರ ವಿರುದ್ಧವೇ ಪ್ರಥಮ ಖಲೀಫರಾದ ಅಬೂಬಕರ್‌ರು ಯುದ್ಧ  ಘೋಷಿಸಿದರು ಎಂಬುದು ಇಲ್ಲಿ ಗಮನಾರ್ಹ. ಅಂದಹಾಗೆ,

ತಾಲಿಬಾನನ್ನು ಎರೆಹುಳದಂತೆ ಗಾಳಕ್ಕೆ ಸಿಲುಕಿಸಿ ಪ್ರದರ್ಶಿಸುವವರ ಮುಖ್ಯ ಸಮಸ್ಯೆಯೇನೆಂದರೆ, ಉದ್ದೇಶ ಶುದ್ಧಿಯದ್ದು. ಮುಸ್ಲಿಮರ  ಮೇಲೆ ಮುಗಿ ಬೀಳಬೇಕು ಮತ್ತು ಅವರನ್ನು ಹಿಂದೂ ವಿರೋಧಿಗಳಾಗಿ ಬಿಂಬಿಸಬೇಕು ಎಂಬುದೇ ಮುಖ್ಯ ವಾದಾಗ, ಪವಿತ್ರ ಕುರ್‌ಆ ನ್ ವಚನಗಳನ್ನು ಬಾಣಗಳಾಗಿ ಪರಿವರ್ತಿಸಿಕೊಳ್ಳುವುದಕ್ಕೇ ಅವರು ಆದ್ಯತೆ ನೀಡಬೇಕಾಗುತ್ತದೆ. ಈ ವಚನಗಳು  ಬಾಣಗಳಂತಾಗಬೇಕಾದರೆ ಆ ವಚನಗಳ ಹಿಂದು ಮುಂದನ್ನು ಮತ್ತು ಅದರ ಹಿನ್ನೆಲೆಯ ಇತಿಹಾಸವನ್ನು ಕತ್ತರಿಸಿ ಬರೇ ಶಬ್ದಾರ್ಥವನ್ನೇ  ಎತ್ತಿ ಹೇಳಬೇಕಾಗುತ್ತದೆ. ಪವಿತ್ರ ಕುರ್‌ಆನನ್ನು ಅರ್ಥ ಮಾಡುವುದಕ್ಕೆ ಅನುಸರಿಸಲೇಬೇಕಾದ ವಿಧಾನವನ್ನು ಅನುಸರಿಸದೇ ಎರ‍್ರಾಬರ‍್ರಿ  ಅರ್ಥಗಳನ್ನು ಮತ್ತು ವ್ಯಾಖ್ಯಾನಗಳನ್ನು ನೀಡಬೇಕಾಗುತ್ತದೆ. ಅದನ್ನೇ ಅವರೆಲ್ಲ ಮಾಡುತ್ತಿದ್ದಾರೆ. ನಿಜವಾಗಿ,

ಯಾವುದೇ ಧಾರ್ಮಿಕ ಗ್ರಂಥದ ವಚನಗಳನ್ನು ಬರೇ ಶಬ್ದಾರ್ಥದಲ್ಲೇ Ã ಹಿಡಿದಿಡಲು ಸಾಧ್ಯವಿಲ್ಲ. ಅದಕ್ಕೆ ಹಿನ್ನೆಲೆ-ಮುನ್ನೆಲೆ ಇರುತ್ತದೆ.  ಪ್ರವಾದಿ ಮುಹಮ್ಮದರನ್ನು(ಸ) ಹೊರಗಿಟ್ಟು ಪವಿತ್ರ ಕುರ್‌ಆನನ್ನು ಅರ್ಥೈಸಲು ಸಾಧ್ಯವೇ ಇಲ್ಲ. ಅವರೇ ಅದರ ವ್ಯಾಖ್ಯಾನ. ಅರವಿಂದ  ಚೊಕ್ಕಾಡಿಯವರ ಅಭಿಪ್ರಾಯದಲ್ಲಿ ವ್ಯಕ್ತವಾಗುವುದೂ ಇದುವೇ. ಅಂದಹಾಗೆ,

ಸಿದ್ದೀಖಿಗೆ ಈ ದೇಶದ ಮುಸ್ಲಿಮರು ಸಂತಾಪ ಸೂಚಿಸಿದ್ದಾರೆಯೇ ಹೊರತು ಗುಂಡಿಕ್ಕಿದ ತಾಲಿಬಾನ್‌ಗಲ್ಲ. ತಾಲಿಬಾನ್‌ನ ಕೋವಿಯನ್ನು  ಇಸ್ಲಾಮಿನ ಪವಿತ್ರ ಆಯುಧ ಎಂದು ಭಾರತೀಯ ಮುಸ್ಲಿಮರು ಭಾವಿಸಿರುತ್ತಿದ್ದರೆ ಕೋವಿಗೆ ಗೌರವ ಸಲ್ಲಬೇಕಿತ್ತು, ಸಿದ್ದೀಕಿಗಲ್ಲ..

Monday, July 19, 2021

ಇದು ಅಮಾನವೀಯ, ದಯವಿಟ್ಟು ಪರಿಶೀಲಿಸಿ



 

1. ಇರ್ಫಾನ್

2. ಇಲ್ಯಾಸ್

ದೆಹಲಿ ಗಲಭೆಯ ಆರೋಪದಲ್ಲಿ ಸುಮಾರು ಒಂದೂವರೆ ವರ್ಷ ಜೈಲಲ್ಲಿ ಕಳೆದು ಕಳೆದವಾರ ಜಾಮೀನಿನ ಮೇಲೆ ಹೊರಬಂದ  ಮುಹಮ್ಮದ್ ಆಸಿಫ್ ತನ್ಹ, ನತಾಶಾ ನರ್ವಾಲ್ ಮತ್ತು ದೇವಾಂಗನಾ ಕಲಿಟಾ ಎಂಬ ವಿದ್ಯಾರ್ಥಿ ಹೋರಾಟಗಾರರ ಜೊತೆಜೊತೆಗೇ  ಬಿಡುಗಡೆಗೊಂಡವರು ಈ ಇಲ್ಯಾಸ್ ಮತ್ತು ಇರ್ಫಾನ್. ಆದರೆ ಇವರಿಬ್ಬರು ಈ ಮೇಲಿನ ವಿದ್ಯಾರ್ಥಿ ಹೋರಾಟಗಾರರಷ್ಟು  ಭಾಗ್ಯವಂತರಲ್ಲ. ಜೈಲಲ್ಲಿ ಬರೋಬ್ಬರಿ 9 ವರ್ಷಗಳನ್ನು ಕಳೆದ ಬಳಿಕ ಇವರು ಬಿಡುಗಡೆಗೊಂಡಿದ್ದಾರೆ. 2013 ಆಗಸ್ಟ್ 31ರಂದು  ಮಹಾರಾಷ್ಟ್ರದ ನಾಂದೇಡ್‍ನಿಂದ ಮಹಾರಾಷ್ಟ್ರ ಉಗ್ರ ನಿಗ್ರಹ ದಳವು (ATS) ಇವರಿಬ್ಬರನ್ನು ಬಂಧಿಸಿತ್ತು. ಇವರ ಜೊತೆಗೇ ಇನ್ನೂ  ಮೂರು ಮಂದಿಯನ್ನೂ ಬಂಧಿಸಲಾಗಿತ್ತು. ರಾಜಕಾರಣಿಗಳು, ಪತ್ರಕರ್ತರು ಮತ್ತು ಪೆÇಲೀಸ್ ಅಧಿಕಾರಿಗಳನ್ನು ಹತ್ಯೆಗೈಯಲು ಪಾಕ್  ಮೂಲದ ಲಷ್ಕರೆ ತ್ವಯಿಬ ನಡೆಸಿರುವ ಸಂಚಿನಲ್ಲಿ ಇವರು ಭಾಗಿಯಾಗಿದ್ದಾರೆ ಎಂಬುದು ಆರೋಪ. ಇಲ್ಯಾಸ್ ಹಣ್ಣುಹಂಪಲು ವ್ಯಾ ಪಾರಿಯಾಗಿದ್ದರೆ ಇರ್ಫಾನ್ ಬ್ಯಾಟರಿ ಅಂಗಡಿಯನ್ನು ಹೊಂದಿದ್ದ. 2019ರಲ್ಲಿ ಬಾಂಬೆ ಹೈಕೋರ್ಟ್ ಇರ್ಫಾನ್‍ಗೆ ಜಾಮೀನು  ನೀಡಿತ್ತಾದರೂ ಅದನ್ನು NIA  ಸುಪ್ರೀಮ್ ಕೋರ್ಟ್‍ನಲ್ಲಿ ಪ್ರಶ್ನಿಸಿತ್ತು ಮತ್ತು ಆ ಜಾಮೀನಿಗೆ ಸುಪ್ರೀಮ್ ಕೋರ್ಟು ತಡೆ ವಿಧಿಸಿತ್ತು.  ಹೀಗೆ ನಾಲ್ಕು ತಿಂಗಳು ಜಾಮೀನಿನ ಮೇಲೆ ಹೊರಗಿದ್ದ ಇರ್ಫಾನ್, 2019 ಡಿಸೆಂಬರ್ 4ರಂದು ಪುನಃ ಜೈಲಿಗೆ ಹೋಗಿದ್ದ. ಇವರಿಬ್ಬರ  ಮೇಲೂ UAPA  ಅಡಿಯಲ್ಲಿ ಕೇಸು ದಾಖಲಾಗಿತ್ತು. ಕಳೆದವಾರ ವಿಶೇಷ ನ್ಯಾಯಾಲಯವು ಎಲ್ಲ ಆರೋಪಗಳಿಂದಲೂ ಇವರನ್ನು  ಮುಕ್ತಗೊಳಿಸಿದೆ. ಈ ಬಿಡುಗಡೆಯ ಒಂದುವಾರದ ಬಳಿಕ ಮುಹಮ್ಮದ್ ಹಬೀಬ್ ಎಂಬ 36 ವರ್ಷದ ವ್ಯಕ್ತಿ ಯನ್ನು NIA   (ರಾಷ್ಟ್ರೀಯ ತನಿಖಾ ಆಯೋಗ) ಕೋರ್ಟು ಬಿಡುಗಡೆಗೊಳಿಸಿದೆ. ಆದರೆ ಹೀಗೆ ಬಿಡುಗಡೆಗೊಳ್ಳುವ ಮೊದಲು ಈ ಹಬೀಬ್ 5  ವರ್ಷಗಳನ್ನು ಜೈಲಲ್ಲಿ ಕಳೆದಿದ್ದಾನೆ. ಈತನ ಮೇಲೂ ಲಷ್ಕರೆ ತ್ವಯ್ಯಿಬಾದ ಜೊತೆ ಸಹಕರಿಸಿದ ಆರೋಪವಿದೆ. UAPA  ಕಾಯ್ದೆಯಡಿಯಲ್ಲಿ  ಈತನ ಮೇಲೂ ಪ್ರಕರಣ ದಾಖ ಲಿಸಲಾಗಿತ್ತು. ಈತನನ್ನು ಬಂಧಿಸಿದ್ದು 2017ರಲ್ಲಿ. ಈ ಬಂಧನಕ್ಕೆ ಕಾರಣ 2005ರಲ್ಲಿ ಬೆಂಗಳೂರಿನ  ಭಾರತೀಯ ವಿಜ್ಞಾನ ಭವನದಲ್ಲಿ ನಡೆದ ಶೂಟೌಟ್. ಈ ಶೂಟೌಟ್‍ನಲ್ಲಿ ಓರ್ವರು ಸಾವಿಗೀಡಾಗಿ ಹಲವರು ಗಾಯಗೊಂಡಿದ್ದರು. ತ್ರಿ ಪುರಾದವನಾದ ಮತ್ತು ಗ್ಯಾರೇಜ್ ಮೆಕಾನಕ್ ವೃತ್ತಿಯಲ್ಲಿದ್ದ ಈತನ ಬಂಧನದ ಕಾರಣವೂ ಕುತೂಹಲಕಾರಿಯಾಗಿದೆ. ಬೆಂಗಳೂರು  ಪ್ರಕರಣದ ಮುಖ್ಯ ಆರೋಪಿಯೆಂದು ಹೆಸರಿಸಲಾದ ಸಲಾಹುದ್ದೀನ್‍ನನ್ನು 2008ರಲ್ಲಿ ಲಕ್ನೋದಲ್ಲಿ ಬಂಧಿಸಲಾಯಿತು. ಅಂದರೆ,  ಬೆಂಗಳೂರು ಶೂಟೌಟ್‍ನ 3 ವರ್ಷಗಳ ಬಳಿಕ. ಈತ ನೀಡಿದ ಹೇಳಿಕೆಯ ಆಧಾರದಲ್ಲಿ 2017ರಲ್ಲಿ ಈ ಹಬೀಬ್‍ನನ್ನು ಬಂ ಧಿಸಲಾಯಿತು. ಅಂದರೆ, ಸಲಾಹುದ್ದೀನ್ ಬಂಧನದ 9 ವರ್ಷಗಳ ಬಳಿಕ ಮತ್ತು ಬೆಂಗಳೂರು ಶೂಟೌಟ್‍ನ 12 ವರ್ಷಗಳ ಬಳಿಕ.  ಅಷ್ಟಕ್ಕೂ,

ಕಳೆದ ಎರಡು ವಾರಗಳಲ್ಲಿ ನಡೆದ ಬೆಳವಣಿಗೆಗಳಿವು. ಅಂದಹಾಗೆ,

ಯಾವುದೇ ಪ್ರಕರಣದ ತನಿಖೆಗೂ ಇಷ್ಟು ದೀರ್ಘ ಸಮಯದ ಅಗತ್ಯ ಇದೆಯೇ? ಒಂದುವೇಳೆ, ಪ್ರಕರಣದಲ್ಲಿ ಅಂತಾರಾಷ್ಟ್ರೀಯ  ಶಕ್ತಿಗಳು ಭಾಗಿಯಾಗಿವೆ ಎಂದೇ ಇಟ್ಟುಕೊಂಡರೂ ಶಂಕಿತರನ್ನು ವರ್ಷಗಳ ಕಾಲ ಅತ್ತ ವಿಚಾರಣೆಯೂ ಇಲ್ಲದೇ ಇತ್ತ ಜಾಮೀನೂ  ನೀಡದೇ ಜೈಲಲ್ಲಿ ಕೊಳೆಯಿಸುವುದೇಕೆ? ಹೀಗೆ ಕೊಳೆಯಿಸಲೇ ಬೇಕು ಎಂಬ ಉz್ದÉೀಶದಿಂದಲೇ ಈ UAPA  ಕಾಯ್ದೆಯನ್ನು  ರಚಿಸಲಾಯಿತೇ? 1969ರಲ್ಲಿ ಮೊದಲ ಬಾರಿ ಜಾರಿಗೆ ಬಂದ UAPA  ಕಾಯ್ದೆಯು ಆ ಬಳಿಕ 1972, 84, 2004, 2008, 12 ಮತ್ತು  2019ರಲ್ಲಿ ತಿದ್ದುಪಡಿಗೆ ಒಳಗಾಗುತ್ತಾ ಬಂದುದು ಯಾಕಾಗಿ, ಮಾನವೀಯವಾಗುವುದಕ್ಕೋ ಅಥವಾ ಇನ್ನಷ್ಟು ಕ್ರೂರಿ ಎನಿಸಿಕೊಳ್ಳುವುದಕ್ಕೋ? ಟಾಡಾ ಮತ್ತು ಪೆÇೀಟಾ ಗಳನ್ನು ರದ್ದುಪಡಿಸುವಾಗ ಅದರಲ್ಲಿರುವ ಅಮಾನವೀಯ ಸೆಕ್ಷನ್‍ಗಳನ್ನೆಲ್ಲಾ UAPA ಯಲ್ಲಿ  ತುರುಕಲಾಯಿತು ಎಂಬ ಆರೋಪಕ್ಕೆ ಏನುತ್ತರ ಇದೆ? ಭಯೋತ್ಪಾದನೆಯಂಥ ದೇಶವಿರೋಧಿ ಕ್ರೌರ್ಯಗಳನ್ನು ಎದುರಿಸುವುದಕ್ಕಾಗಿ  ಮತ್ತು ಅದರಲ್ಲಿರಬಹುದಾದ ಅಂತಾರಾಷ್ಟ್ರೀಯ ಸಂಚುಗಳನ್ನು ಮಟ್ಟ ಹಾಕುವುದಕ್ಕಾಗಿ ರೂಪ ಪಡೆದ UಂPಂಯು ಇವತ್ತು  ಪ್ರಯೋಗವಾಗುತ್ತಿರುವುದಾದರೂ ಯಾರ ಮೇಲೆ? UAPA ಯ ಅಡಿಯಲ್ಲಿ ಇವತ್ತು ಯಾರನ್ನೆಲ್ಲ ಬಂಧಿಸಲಾಗುತ್ತಿದೆಯೋ ಅವರೆಲ್ಲ ಈ  ಕಾಯ್ದೆಯಡಿಯಲ್ಲಿ ಬಂಧನಕ್ಕೆ ಅರ್ಹರು ಎಂದು ಪ್ರಾಮಾಣಿಕವಾಗಿ ಹೇಳಲು ಯಾರಿಗೆಲ್ಲ ಸಾಧ್ಯ? ಪತ್ರಕರ್ತ ಸಿದ್ದೀಕ್ ಕಾಪ್ಪನ್,  ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಸಫೂರಾ ಝರ್ಗರ್, ದೇವಾಂಗನಾ, ನತಾಶಾ, ಆಸಿಫ್... ಇವರೆಲ್ಲ ನಿಜಕ್ಕೂ UAPA ಗೆ  ಅರ್ಹರೇ? ನಿಜವಾಗಿ,

UAPA  ಹೊರತಾದ ಸಾಮಾನ್ಯ ಕಾಯ್ದೆಗಳಲ್ಲಿ, ಓರ್ವರ ಬಂಧನದ 60ರಿಂದ 90 ದಿನಗಳ ಒಳಗೆ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸ ಲ್ಲಿಸಬೇಕು. ಹಾಗೆ ಚಾರ್ಜ್‍ಶೀಟ್ ಸಲ್ಲಿಸಲು ಪೊಲೀಸರು ವಿಫಲವಾದರೆ ವ್ಯಕ್ತಿಗೆ ಕೋರ್ಟು ಜಾಮೀನು ನೀಡುತ್ತದೆ. ಆದರೆ UAPA   ಕಾಯ್ದೆಯಲ್ಲಿ ಇದು ಸಾಧ್ಯವೇ ಇಲ್ಲ. ಈ ಕಾಯ್ದೆಯು ಪೊಲೀಸರಿಗೆ ಅಪರಿಮಿತ ಕಾಲಾವಕಾಶವನ್ನು ನೀಡುತ್ತದೆ. ಚಾರ್ಜ್‍ಶೀಟ್ ಸಲ್ಲಿಕೆಗೆ  6 ತಿಂಗಳ ಅವಧಿ ಇದೆ. ಈ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದರೆ ಜಾಮೀನು ಸಿಗುವುದು ತೀರಾ ಕಷ್ಟಕರ. ಆದ್ದರಿಂದಲೇ,

ವಿದ್ಯಾರ್ಥಿ ಹೋರಾಟಗಾರರಿಗೆ ಹೈಕೋರ್ಟು ನೀಡಿರುವ ಜಾಮೀನನ್ನು ಪೆÇಲೀಸರು ಸುಪ್ರೀಮ್ ಕೋರ್ಟಿನಲ್ಲಿ ಪ್ರಶ್ನಿಸಿದ್ದು. ಒಂದು  ವರ್ಷಕ್ಕಿಂತಲೂ ಅಧಿಕ ಸಮಯದಿಂದ ಜಾಮೀನಿಲ್ಲದೇ ಜೈಲಲ್ಲಿದ್ದವರ ಬಗ್ಗೆ ಪೆÇಲೀಸರು ಇಷ್ಟು ಧೈರ್ಯದಿಂದ ಸುಪ್ರೀಮ್ ಕೋರ್ಟಿನ  ಬಾಗಿಲು ತಟ್ಟಲು- ಆರೋಪಿಗಳ ಮೇಲೆ UAPA  ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುವುದೇ ಕಾರಣ. ಈ ಕಾಯ್ದೆಯ ಸೆಕ್ಷನ್ 43ಆ (5)ರ ಪ್ರಕಾರ, ಆರೋಪಿಗಳಿಗೆ ಜಾಮೀನು ನಿರಾಕರಿಸುವುದಕ್ಕೆ ನಿಖರ ಪುರಾವೆಗಳ ಅಗತ್ಯ ಇರುವುದಿಲ್ಲ. ಮೇಲ್ನೋಟಕ್ಕೆ ಆರೋಪ ನಿಜ  ಎಂದು ಅನಿಸಿದರೆ ಸಾಕಾಗುತ್ತದೆ. ಪೊಲೀಸರು ಹೊರಿಸುವ ಆರೋಪವು ನಿಜ ಎಂದು ಅನಿಸಿದರೆ ಅಂಥ ಪ್ರಕರಣದ ಆರೋಪಿಗಳಿಗೆ  ಜಾಮೀನು ನಿರಾಕರಿಸಬಹುದು. ಈ ಬಗ್ಗೆ ಈಗಾಗಲೇ ಅನೇಕ ಕಾನೂನು ತಜ್ಞರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಅಲ್ಲದೇ, UAPA ಯು  ಜಿಲ್ಲಾಧಿಕಾರಿ, ಅಸಿಸ್ಟೆಂಟ್ ಕಮಿಶನರ್ ಮುಂತಾದವರಿಗೆ ಅಪರಿಮಿತ ಅಧಿಕಾರವನ್ನು ನೀಡುತ್ತದೆ. ಸಿದ್ದೀಕ್ ಕಾಪ್ಪನ್ ಮೇಲೆ ಆರೋಪವ ನ್ನುಹೆಣೆದಿರುವುದು ಅಸಿಸ್ಟೆಂಟ್ ಕಮಿಶನರ್. ಅಂದಹಾಗೆ,

ನ್ಯಾಯಾಧೀಶರಿಗೂ ಜಿಲ್ಲಾಧಿಕಾರಿ ಮತ್ತು ಅಸಿಸ್ಟೆಂಟ್ ಕಮಿಶನರ್‍ಗೂ ಸಾಕಷ್ಟು ವ್ಯತ್ಯಾಸ ಇದೆಯಲ್ಲವೇ? ನ್ಯಾಯಾಧೀಶರಂತೆ ಇತರರು  ರಾಜಕೀಯ ಪ್ರಭಾವದಿಂದ ಮುಕ್ತರಾಗಿರುವುದಿಲ್ಲ. ಜಿಲ್ಲಾಧಿಕಾರಿಗಳನ್ನಾಗಲಿ, ಇತರರನ್ನಾಗಲಿ ಪ್ರಭುತ್ವವೇ ಒಂದು ಹಂತದ ವರೆಗೆ  ನಿಭಾಯಿಸುತ್ತದೆ. ವರ್ಗಾವಣೆಯನ್ನೋ ಪುರಸ್ಕಾರ ವನ್ನೋ ನೀಡುತ್ತಲೂ ಇರುತ್ತದೆ. ಆದ್ದರಿಂದ,

ಇವರ ಕೈಯಲ್ಲಿ ಯಾವುದೇ ಕಾಯ್ದೆಯು ದುರುಪಯೋಗಕ್ಕೆ ಒಳಗಾಗುವುದನ್ನು ನಿರಾಕರಿಸುವ ಹಾಗಿಲ್ಲ. ಸಿಪಿಎಂ ಪಕ್ಷದ ಬಿನೋಯ್  ವಿಶ್ವಂ ಅವರು 2020ರಲ್ಲಿ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಗೃಹ ಇಲಾಖೆಯ ರಾಜ್ಯ ಕಾರ್ಯದರ್ಶಿ ಜಿ. ಕೃಷ್ಣಾ ರೆಡ್ಡಿ  ನೀಡಿದ ಉತ್ತರವೂ ಇದನ್ನೇ ಸೂಚಿಸುತ್ತದೆ. ಅವರ ಪ್ರಕಾರ, 2016ರಿಂದ 2019ರ ನಡುವೆ ದಾಖಲಾದ ಪ್ರಕರಣಗಳ ಪೈಕಿ 2.2%  ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿದೆ. ಹಾಗೆಯೇ ಚಾರ್ಜ್‍ಶೀಟ್ ಸಲ್ಲಿಕೆಯ ಪ್ರಮಾಣ ಕೂಡ 25%ಕ್ಕಿಂತಲೂ ಕಡಿಮೆ. 2016ರಲ್ಲಿ  232 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ ಯಾಗಿದ್ದರೆ, 2017ರಲ್ಲಿ 272, 2018ರಲ್ಲಿ 317 ಪ್ರಕರಣಗಳಲ್ಲಿ ಚಾರ್ಜ್‍ಶೀಟ್ ಸಲ್ಲಿಕೆಯಾಗಿದೆ.  ಹಾಗೆಯೇ 2015ಕ್ಕೆ ಹೋಲಿಸಿದರೆ, 2019ರಲ್ಲಿ UAPA  ಅಡಿಯಲ್ಲಿ ಬಂಧಿತರಾದವರ ಸಂಖ್ಯೆ 72%ಕ್ಕಿಂತಲೂ ಅಧಿಕ. ಈ ವಿವರ  ನೀಡಿರುವುದೂ ಕೃಷ್ಣಾ ರೆಡ್ಡಿಯವರೇ. UAPA  ಅಡಿ 2019ರಲ್ಲಿ ದಾಖಲಾದ 1226 ಪ್ರಕರಣಗಳಿಗೆ ಸಂಬಂಧಿಸಿ 1948 ಮಂದಿಯನ್ನು  ಬಂಧಿಸಲಾಗಿದೆ. 2015ರಿಂದ 2018ರ ನಡುವೆ 897, 922, 901 ಮತ್ತು 1182 ಪ್ರಕರಣಗಳು ದಾಖಲಾಗಿದ್ದು, 1,128, 999, 1,554  ಮತ್ತು 1,421 ಮಂದಿಯನ್ನು ಬಂಧಿಸಲಾಗಿದೆ. 2019ರಲ್ಲಿ UಂPಂ ಅಡಿಯಲ್ಲಿ ಅತೀ ಹೆಚ್ಚು ಪ್ರಕರಣ ದಾಖಲಾದದ್ದು ಮಣಿಪುರದಲ್ಲಿ-  306. ಆದರೆ ಅತೀಹೆಚ್ಚು ಬಂಧನವಾದದ್ದು ಉತ್ತರ ಪ್ರದೇಶದಲ್ಲಿ- 498 ಮಂದಿ. ತಮಿಳ್ನಾಡಿನಲ್ಲಿ 270 ಪ್ರಕರಣ, ಜಮ್ಮು ಮತ್ತು  ಕಾಶ್ಮೀರದಲ್ಲಿ 235 ಪ್ರಕರಣ, ಝಾರ್ಖಂಡ್‍ನಲ್ಲಿ 105 ಮತ್ತು ಅಸ್ಸಾಮ್‍ನಲ್ಲಿ 27 ಪ್ರಕರಣಗಳು 2019ರಲ್ಲಿ ದಾಖಲಾಗಿವೆ. ಹಾಗೆಯೇ,  2014ರಿಂದ 18ರ ನಡುವೆ ದಾಖಲಾದ ಪ್ರಕರಣಗಳ ಪೈಕಿ 50% ಪ್ರಕರಣಗಳೂ ಸಾಬೀತಾಗಿಲ್ಲ. ಅಲ್ಲದೇ,

UAPA ಯು ರಾಜಕೀಯವಾಗಿ ದುರುಪಯೋಗಕ್ಕೀಡಾಗಬಹುದು ಎಂಬ ಆರೋಪಕ್ಕೆ ಇನ್ನೂ ಒಂದು ಪುರಾವೆ ಇದೆ.

2017ರಲ್ಲಿ ಯೋಗಿ ಆದಿತ್ಯನಾಥ್ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದ ನಂತರ UAPA  ಪ್ರಕರಣಗಳಲ್ಲಿ ಭಾರೀ ಏರಿಕೆಯಾಗಿದೆ. ಉತ್ತರ  ಪ್ರದೇಶದಲ್ಲಿ 2016ರಲ್ಲಿ ಬರೇ 10 ಪ್ರಕರಣಗಳು ದಾಖ ಲಾಗಿದ್ದರೆ, 2017ರಲ್ಲಿ 109 ಮತ್ತು 2018ರಲ್ಲಿ 107 ಪ್ರಕರಣಗಳು ದಾಖಲಾಗಿವೆ.  ಇನ್ನೊಂದು ಸಂಗತಿಯನ್ನೂ ಇಲ್ಲಿ ಉಲ್ಲೇಖಿ ಬಹುದು. 2018ರಲ್ಲಿ ಒಟ್ಟು 317 ಚಾರ್ಜ್‍ಶೀಟ್ ಸಲ್ಲಿಕೆಯಾಗಿದ್ದು, ಇದಕ್ಕಾಗಿ ಪೊಲೀಸರು ಒಂದರಿಂದ 2 ವರ್ಷಗಳ ಅವಧಿಯನ್ನು ತೆಗೆದುಕೊಂಡಿದ್ದಾರೆ. ಅದರಲ್ಲೂ 10 ಪ್ರಕರಣಗಳಲ್ಲಿ 2 ವರ್ಷ ಕ್ಕಿಂತಲೂ ಅಧಿಕ  ಸಮಯವನ್ನು ತೆಗೆದುಕೊಂಡಿದ್ದಾರೆ. ಹಾಗಂತ, ಚಾರ್ಜ್‍ಶೀಟ್ ಸಲ್ಲಿಸದೇ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಈ  ಕಾಯ್ದೆಯಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಮನವಿ ಮಾಡಿಕೊಳ್ಳುವಂತಿಲ್ಲ ಎಂಬಂಶವೂ ಗಮನಾರ್ಹ. ಅಷ್ಟಕ್ಕೂ,

UAPAಯನ್ನು ರಚಿಸುವಾಗ ಯಾವ ಉದ್ದೇಶ ಇತ್ತೋ ಮತ್ತು ಆಗ ದೇಶದಲ್ಲಿ ಯಾವ ಪರಿಸ್ಥಿತಿ ಇತ್ತೋ ಆ ಉದ್ದೇಶ ಮತ್ತು  ಪರಿಸ್ಥಿತಿಗಳೆರಡೂ ಇವತ್ತಿನ ದಿನಗಳಲ್ಲಿ ಬದಲಾಗಿವೆ. ಭಯೋತ್ಪಾದನೆಯಂಥ ಅಂತಾರಾಷ್ಟ್ರೀಯ ದೇಶದ್ರೋಹಿ ಸಂಚು ಗಳನ್ನು ಮಟ್ಟ  ಹಾಕುವುದಕ್ಕೆಂದು ರಚಿಸಲಾದ ಕಠಿಣ ಕಾಯ್ದೆಯು ಬರಬರುತ್ತಾ ಅಮಾನವೀಯ ಸ್ವರೂಪವನ್ನು ಪಡಕೊಂಡಿತಲ್ಲದೇ, ಪ್ರಭುತ್ವ ವಿರೋಧಿ  ಧ್ವನಿಗಳನ್ನು ಅಡಗಿಸುವ ಉದ್ದೇಶದಿಂದಲೇ ದುರುಪಯೋಗಕ್ಕೂ ಈಡಾಗತೊಡಗಿತು. ಭಿನ್ನ ಧ್ವನಿಗಳನ್ನು ಗಲಭೆಯೆಂದು ಬಿಂಬಿಸಿ ಅದಕ್ಕೆ  ದೇಶವಿರೋಧಿ ಚಿತ್ರಕತೆಯನ್ನು ಹೆಣೆದು ವರ್ಷಗಟ್ಟಲೆ ಆ ಧ್ವನಿಗಳನ್ನು ಜೈಲಲ್ಲಿಟ್ಟು ಮಣಿಸುವುದಕ್ಕೆ ಈ ಕಾಯ್ದೆಯನ್ನು ಬಳಸಲಾಯಿತು.  ಜಾಮೀನಿಗೆ ಸಂಬಂಧಿಸಿ ಇರುವ ಕಠಿಣ ನಿಬಂಧನೆಗಳು ಪ್ರಭುತ್ವಕ್ಕೆ ವರದಾನವಾಯಿತು. ಸಿಎಎ ವಿರೋಧಿ ಪ್ರತಿಭಟನೆಯನ್ನೇ ದೆಹಲಿ  ಗಲಭೆಯೊಂದಿಗೆ ಜೋಡಿಸಿ ವಿದ್ಯಾರ್ಥಿ ಹೋರಾಟಗಾರರನ್ನು ಜೈಲಿಗಟ್ಟಿರುವುದು ಇದಕ್ಕಿರುವ ಹಲವು ಪುರಾವೆಗಳಲ್ಲಿ ಒಂದು ಮಾತ್ರ.  ಉಮರ್ ಖಾಲಿದ್ ಇನ್ನೂ ಜೈಲಲ್ಲಿದ್ದಾರೆ. ಇನ್ನು, ಹೀಗೆ ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಜೈಲು ಸೇರಿ ಐದೋ ಹತ್ತೋ  ವರ್ಷಗಳ ಬಳಿಕ ಬಿಡುಗಡೆಯಾಗಿ

ಬಂದವರ ಅನುಭವಗಳಂತೂ ಕರುಣಾಜನಕ. ಎಲ್ಲವನ್ನೂ ಕಳಕೊಂಡು ಬೀದಿಗೆ ಬಿದ್ದ ಸ್ಥಿತಿ ಅವರದು. ಒಂದುಕಡೆ ಅಮೂಲ್ಯ  ವರ್ಷಗಳನ್ನು ಕಳಕೊಂಡಿದ್ದರೆ ಇನ್ನೊಂದು ಕಡೆ ತನ್ನದು ಎನ್ನುವ ವ್ಯಾಪಾರವನ್ನೂ ಗೆಳೆಯರನ್ನೂ ನೆರೆಕರೆಯವರನ್ನೂ ಅವರು  ಕಳಕೊಂಡಿರುತ್ತಾರೆ. ತನ್ನ ಮನೆಯವರನ್ನು ಬಿಟ್ಟರೆ ಉಳಿದವರೆಲ್ಲರೂ ಇವರನ್ನು ಹತ್ತಿರ ಬಿಟ್ಟುಕೊಳ್ಳುವುದಕ್ಕೆ ಅನುಮಾನಿಸುವ ಪರಿಸ್ಥಿತಿ  ಎದುರಾಗುತ್ತದೆ. ಇಲ್ಯಾಸ್, ಇರ್ಫಾನ್, ಹಬೀಬ್- ಇವರೆಲ್ಲ ಮಾಧ್ಯಮದವರೊಂದಿಗೆ ಹಂಚಿಕೊಂಡ ಅನುಭವ ಹೃದಯಬೇಧಕ.

UAPA ಕಾಯ್ದೆ ಅಗತ್ಯವೋ ಅಲ್ಲವೋ, ಆದರೆ ಅಮಾಯಕರನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸುವ ಅದರ ಸೆಕ್ಷನ್‍ಗಳು  ಖಂಡಿತ ಅಮಾನವೀಯ, ಕ್ರೂರ.

Friday, June 25, 2021

ಹೆಚ್‌ಆರ್‌ಎಸ್, ವಿಖಾಯ, ಸಹಾಯ್, ಪಿಎಫ್‌ಐ: ಹಾಗಂತ, ಆಶಾವಾದ ತಪ್ಪಲ್ಲವಲ್ಲ..


ವಾರದ ಅಂಕಣ 


ಹೆಚ್.ಆರ್.ಎಸ್.

ವಿಖಾಯ
ಸಹಾಯ್
ಎಸ್.ಕೆ.ಎಸ್.ಎಂ.
ಪಿ.ಎಫ್.ಐ.
ಹಿದಾಯ ಫೌಂಡೇಶನ್
ಎ.ಐ.ಎಂ.ಡಿ.ಎಫ್.

ಮುಂತಾದ ರಾಜ್ಯವ್ಯಾಪಿ ಸಂಘಟನೆಗಳು ಮತ್ತು ವೆಲ್‌ನೆಸ್ ಹೆಲ್ಪ್ ಲೈನ್ , ಹೋಪ್ ಫೌಂಡೇಶನ್, ಟೀಮ್ ಬಿ ಹ್ಯೂಮನ್‌ನಂತಹ ಜಿಲ್ಲಾ  ಮತ್ತು ಇತರ ಸ್ಥಳೀಯ ಸೇವಾ ಸಂಸ್ಥೆಗಳು ಒಂದೇ ಪ್ಲಾಟ್ ಫಾರ್ಮ್ನಡಿ  ಸೇವಾ ಚಟುವಟಿಕೆಯನ್ನು ನಿರ್ವಹಿಸಲು ತೀರ್ಮಾನಿಸಿದರೆ  ಏನಾಗಬಹುದು? ಇಂಥ ತೀರ್ಮಾನಕ್ಕೆ ಇರುವ ಅಡೆತಡೆ ಗಳೇನು? ಯಾರಿಂದಾಗಿ ಮತ್ತು ಯಾವುದರಿಂದಾಗಿ ಇದು ಸಾಧ್ಯವಾಗುತ್ತಿಲ್ಲ?  ಕುರ್‌ಆನೇ, ಹದೀಸೇ? ಧಾರ್ಮಿಕ ಮುಖಂಡರೇ, ಮಸೀದಿ ಹೊಣೆಗಾರರೇ, ವ್ಯಕ್ತಿಗಳ ವೈಯಕ್ತಿಕ ಇಷ್ಟಾನಿಷ್ಟಗಳೇ? ಅಥವಾ ಆ  ಕುರಿತಾಗಿ ಆಲೋಚನೆಯನ್ನೇ ಮಾಡದಿರುವುದೇ? ಹಾಗಂತ,

ಮೇಲೆ ಉಲ್ಲೇಖಿಸಿರುವ ಸಂಘಟನೆಗಳು ಮಾತ್ರ ಸಮಾಜ ಸೇವೆಯಲ್ಲಿ ನಿರತವಾಗಿರುವುದಲ್ಲ. ಕೊರೋನಾ ಮೊದಲ ಮತ್ತು ದ್ವಿತೀಯ  ಅಲೆಯಲ್ಲಿ ಪರ್ಯಾಯ ಸರಕಾರವೆಂಬಂತೆ  ಯುದ್ಧೋಪಾದಿಯಲ್ಲಿ ರಾಜ್ಯಾದ್ಯಂತ ಇನ್ನಿತರ ಸಂಸ್ಥೆಗಳೂ ಸೇವಾ ನಿರತವಾಗಿವೆ ಮತ್ತು  ಸ್ಥಳೀಯವಾಗಿ ಮುಸ್ಲಿಮರ ನೂರಾರು ಸಂಘಟನೆಗಳು ಹಾಗೂ ಸೇವಾ ಸಂಸ್ಥೆಗಳು ಸದ್ದಿಲ್ಲದೇ ಸೇವೆ ಮಾಡುತ್ತಿವೆ. ಬಹುತೇಕ ಪ್ರತಿ  ಮಸೀದಿ ಕೇಂದ್ರಿತವಾಗಿ ಸೇವಾ ಚಟುವಟಿಕೆಗಳು ನಡೆಯುತ್ತಿವೆ. ಮಸೀದಿ ವ್ಯಾಪ್ತಿಗೆ ಒಳಪಡುವ ಮನೆಗಳ ಯೋಗಕ್ಷೇಮ ವಿಚಾರಿಸುವ  ಸಿದ್ಧತೆಗಳಾಗಿವೆ. ಆಹಾರದ ಕಿಟ್‌ಗಳನ್ನು ವಿತ ರಣೆ ಮಾಡಲಾಗುತ್ತಿದೆ. ಮಸೀದಿಗಳಿಗೆ ನಿರ್ವಹಿಸಲು ಸಾಧ್ಯ ವಾಗದ ಸಂದರ್ಭದಲ್ಲಿ  ಉಳಿದ ಸೇವಾ ಸಂಸ್ಥೆಗಳನ್ನು ವೈಯ ಕ್ತಿಕ ನೆಲೆಯಲ್ಲಿ ಸಂಪರ್ಕಿಸುವ ವಾತಾವರಣವಿದೆ. ರಾಜ್ಯಮಟ್ಟದಲ್ಲಿ ಇಂಥ ಸ್ಥಳೀಯ ಸೇವಾ  ಸಂಸ್ಥೆಗಳು ಅಸಂಖ್ಯ ಇರಬಹುದು.
ವರ್ಷವೊಂದಕ್ಕೆ ಅವುಗಳ ಬಜೆಟ್ಟು ಎಷ್ಟಿದೆಯೋ? ಕಾರ್ಯವ್ಯಾಪ್ತಿ ಏನೋ? ಸೇವಾ ನಿರತರ ಸಂಖ್ಯೆ ಎಷ್ಟೋ? ಅವರ ಅನುಭವ ಗಳು  ಏನೇನೋ? ಅಷ್ಟಕ್ಕೂ,

ಮುಸ್ಲಿಮ್ ಸಮುದಾಯದಲ್ಲಿ ಸಕ್ರಿಯವಾಗಿರುವ ರಾಜ್ಯ ಮತ್ತು ಸ್ಥಳೀಯ ಮಟ್ಟದ ಸೇವಾಸಂಸ್ಥೆಗಳು ಕೊರೋನಾ ಕಾಲದಲ್ಲಿ ಮಾತ್ರ  ಹುಟ್ಟಿಕೊಂಡ ಅಣಬೆಗಳಲ್ಲ. ಕೊರೋನಾ ದಾಳಿ ಯಿಡುವುದಕ್ಕಿಂತ ಮೊದಲೇ ಅವು ಇಲ್ಲಿ ಸಕ್ರಿಯವಾಗಿವೆ. ಬಹುಶಃ ಇಸ್ಲಾಮ್ ಭಾರತಕ್ಕೆ  ಆಗಮಿಸಿದ ತರುವಾಯದ ಬೆಳವಣಿಗೆಗಳಿವು. ಆಗ ಸಂಘಟಿತ ಸೇವಾ ಚಟುವಟಿಕೆ ನಡೆದಿಲ್ಲದೇ ಇರಬಹುದು. ವೈಯಕ್ತಿಕ ನೆಲೆಯ  ಸೇವಾ ಚಟುವಟಿಕೆಯೇ ಅಂದು ಈ ದೇಶದ ಜನರ ಮನ ಗೆದ್ದಿರಬಹುದು. ಮುಟ್ಟಿಸಿಕೊಳ್ಳಬಾರದ ಮನುಷ್ಯ ರೆಂದೋ ಮೇಲು ಜಾತಿ  ಸಿದ್ಧಪಡಿಸಿರುವ ನಾಗರಿಕ ಮೀಮಾಂಸೆಯ ಚೌಕಟ್ಟಿನೊಳಗೆ ಸೇರಿಕೊಳ್ಳಲು ಅನರ್ಹರಾದವರೆಂದೋ, ಭಾಷೆ, ಸಂಸ್ಕೃತಿ, ಉದ್ಯೋಗ,  ಮೈಬಣ್ಣ, ಜೀವನ ಕ್ರಮ, ಆಹಾರ ಪದ್ಧತಿ, ಆರಾಧನಾ ರೀತಿ.. ಇತ್ಯಾದಿ ಇತ್ಯಾದಿಗಳ ಕಾರಣಕ್ಕಾಗಿ ಉಳ್ಳವರಿಂದ ತಿರಸ್ಕೃತರಾಗಿ  ಬದುಕುವವರೆಂದೋ ಗುರುತಿಸಿಕೊಂಡವರನ್ನು ಈ ಅಲ್ಪಸಂಖ್ಯೆಯ ಮುಸ್ಲಿಮರು ಸಂತೈಸಿರಬಹುದು, ಮುಟ್ಟಿರಬಹುದು. ಅವರ ಜೊತೆ  ಸಂವಾದ ನಡೆಸಿರಬಹುದು. ನಿಜವಾಗಿ,

ಹೊಟ್ಟೆ ತುಂಬುವುದು ಎಷ್ಟು ಅಗತ್ಯವೋ ಹೊಟ್ಟೆ ತುಂಬಿದ ಮೇಲೆ ಅರಿಷಡ್ವರ್ಗಗಳು ಎಚ್ಚರಗೊಳ್ಳುವುದೂ ಅಷ್ಟೇ ನಿಜ. ಹೊಟ್ಟೆಯ  ಹಸಿವು ಮನುಷ್ಯನನ್ನು ಬೇಡುವಂತೆಯೂ ಮಾಡಬಲ್ಲದು. ತುಚ್ಚ ಮಾತುಗಳನ್ನೂ ಸಹಿಸಿಕೊಳ್ಳುವಂತೆಯೂ ಒತ್ತಾಯಿಸಬಹುದು. ಸಕಲ  ಅವಮಾನಗಳನ್ನೂ ಸಹಿಸಿಕೊಳ್ಳುವುದಕ್ಕೆ ಹಸಿವಿಗೆ ಸಾಧ್ಯವಿದೆ. ಈ ದೇಶದಲ್ಲಿ ಬಹುದೊಡ್ಡ ವರ್ಗವೊಂದು ಮುಟ್ಟಿಸಿಕೊಳ್ಳಬಾರದ  ನಿಯಮಕ್ಕೆ ಶರಣಾಗಿ ಬದುಕಿದ್ದರೆ ಅದರ ಹಿಂದೆ ಆರ್ಥಿಕ ಕಾರಣ ಇದೆ. ನಿತ್ಯ ದುಡಿದುಣ್ಣುವ ಮನುಷ್ಯರಿಗೆ ಹೊಟ್ಟೆಯ ಹಸಿವು  ಮುಟ್ಟಿಸಿಕೊಳ್ಳುವ ಹಕ್ಕಿಗಿಂತ ದೊಡ್ಡದು. ಮುಟ್ಟಿಸಿಕೊಳ್ಳದೇ ಇರುವ ನಿಯಮಕ್ಕೆ ಶರಣಾಗಿ ಬದುಕುವುದರಿಂದ ಹೊಟ್ಟೆಯ ಹಸಿವು ತಣಿ  ಯುತ್ತದೆ ಎಂದಾದರೆ ಸಾಮಾನ್ಯರ ಆದ್ಯತಾ ಪಟ್ಟಿಯಲ್ಲಿ ಹೊಟ್ಟೆಯ ಹಸಿವಿಗೆ ಮೊದಲ ಸ್ಥಾನ ಸಿಗುವುದು ಸಹಜ. ಇಸ್ಲಾಮ್‌ನಲ್ಲಿ ಈ  ಬಗೆಯ ವರ್ಗೀಕರಣ ಇಲ್ಲದೇ ಇರುವುದರಿಂದ ಮುಸ್ಲಿಮ ರೆಡೆಗಿನ ಅವರ ಆಕರ್ಷಣೆಯಲ್ಲಿ ವಿಶೇಷ ಏನಿಲ್ಲ. ಅಲ್ಲದೇ,

ಮರ್ದಿತರಿಗೂ ದೇವನಿಗೂ ನಡುವೆ ಪರದೆಯೇ ಇರುವುದಿಲ್ಲ, ದೇವನು ಮರ್ದಿತರಿಗೆ ಅಷ್ಟು ಹತ್ತಿರವಾಗಿರುತ್ತಾನೆ.. ಎಂಬ 
ಸೈದ್ಧಾಂತಿಕ  ಖಚಿತತೆಯೂ ಮುಸ್ಲಿಮರ ಜೊತೆ ಇದೆ. ಈ ದೇಶದಲ್ಲಿ ಇಸ್ಲಾಮ್ ಜನಪ್ರಿಯಗೊಳ್ಳುವುದರಲ್ಲಿ ಮುಸ್ಲಿಮರ ಈ ಸೇವಾಗಣಕ್ಕೆ ಬಹುದೊಡ್ಡ  ಪಾತ್ರವಿದೆ. ಇಸ್ಲಾಮನ್ನು ಖಡ್ಗಕ್ಕೆ ಸಿಲುಕಿಸಿ ಮೆರವಣಿಗೆ ನಡೆಸುತ್ತಿರುವವರು ಈ ಸತ್ಯವನ್ನು ಉದ್ದೇಶಪೂರ್ವಕವಾಗಿ ಮರೆಮಾಚುತ್ತಾರೆ.  ಇಸ್ಲಾಮ್ ಈ ದೇಶಕ್ಕೆ ಆಗಮಿಸಿದ ಆರಂಭ ಕಾಲದಿಂದ ನಾಲ್ಕೈದು  ಶತಮಾನಗಳ ಐತಿಹಾಸಿಕ ಬೆಳವಣಿಗೆಯನ್ನು ಪೂರ್ವಗ್ರಹ  ರಹಿತರಾಗಿ ಅಧ್ಯಯನ ನಡೆಸುವ ಯಾರಿಗೇ ಆಗಲಿ, ಕೆಲವು ಸತ್ಯಗಳು ಮನವರಿಕೆಯಾಗುತ್ತವೆ. ಇಸ್ಲಾಮ್ ಈ ದೇಶಕ್ಕೆ ಆಗಮಿಸುವ  ಮೊದಲೇ ಈ ದೇಶದಲ್ಲಿ ಅಸ್ಪೃಶ್ಯತೆ ಇತ್ತು, ಆರಾಧನಾ ವೈವಿಧ್ಯತೆಗಳಿದ್ದುವು. ಬುಡಕಟ್ಟಿನ ವಿಶಿಷ್ಟ ಆಹಾರ, ಆರಾಧನಾ ಶೈಲಿಯಿದ್ದುವು.  ಬಡತನ ಇತ್ತು. ಇಸ್ಲಾಮ್ ಪಸರಿಸಿರುವುದೇ ಈ ಅಸ್ಪೃಶ್ಯರು, ಬಡವರು ಮತ್ತು ತಳಸಮುದಾಯದವರ ಮಧ್ಯೆ. ಜಮೀನ್ದಾರರಿಗೆ ಮತ್ತು  ಮೇಲ್ವರ್ಗಕ್ಕೆ ಹಸಿವು ಸಮಸ್ಯೆಯೇ ಅಲ್ಲದಿರುವುದರಿಂದ ಮತ್ತು ಅಸ್ಪೃಶ್ಯತೆ, ಬಡತನಗಳೇ ಅವರ ಯಶಸ್ಸಿನ ಮೂಲವಾಗಿರುವುದರಿಂದ  ಅವು ಉಳಿಯಬೇಕಾದುದು ಮತ್ತು ಅವನ್ನು ಉಳಿಸಬೇಕಾದುದು ಅವರ ಅನಿವಾರ್ಯತೆಯಾಗಿತ್ತು. ಖಡ್ಗದ ಕತೆಗಳು ಹುಟ್ಟಿಕೊಂಡದ್ದು ಆ  ಬಳಿಕ. ಸಮಾನತೆಯ ಪರಿಕಲ್ಪನೆಗೆ ಬಲ ಬಂದದ್ದು ಮತ್ತು ಅಸ್ಪೃಶ್ಯತೆಯನ್ನು ಪ್ರಶ್ನಿಸುವ ಛಲ ಹುಟ್ಟಿಕೊಂಡದ್ದರ ಹಿಂದೆಯೂ ಇಸ್ಲಾಮ್  ಇದೆ. ಹಾಗಂತ,

ಮುಸ್ಲಿಮ್ ದೊರೆಗಳು ಖಡ್ಗವನ್ನು ಬಳಸಿಯೇ ಇಲ್ಲ ಎಂದಲ್ಲ. ಈ ದೇಶದ ಇತರೆಲ್ಲ ರಾಜಂದಿರು ತಂತಮ್ಮ ರಾಜಕೀಯ ಉದ್ದೇಶಕ್ಕೆ  ಹೇಗೆ ಖಡ್ಗ ಬಳಸಿದ್ದರೋ ಹಾಗೆಯೇ ಇವರೂ ಬಳಸಿದ್ದಾರೆ. ಆ ಸಂದರ್ಭದಲ್ಲಿ ಅನ್ಯಾಯಗಳಾಗಿರಬಹುದು. ಯುದ್ಧನೀತಿಯನ್ನೂ  ಉಲ್ಲಂಘಿಸಿರಬಹುದು. ಅವು ರಾಜಂದಿರ ರಾಜಕೀಯವೇ ಹೊರತು ಧರ್ಮದ ವಿಸ್ತಾರಕ್ಕೆ ಅವುಗಳ ಕೊಡುಗೆ ಶೂನ್ಯ ಅನ್ನುವಷ್ಟು  ಕಡಿಮೆ. ಯಾವುದೇ ಮುಸ್ಲಿಮ್ ರಾಜನ ಹಿಸ್ಟರಿಯನ್ನು ಅಧ್ಯಯನ ನಡೆಸಿ. ಆ ರಾಜನ ಮಂತ್ರಿಗಳಲ್ಲಿ, ಸೇನಾ ಪಡೆಯಲ್ಲಿ, ಪರಿಚಾರಕರಲ್ಲಿ,  ಗವರ್ನರ್‌ಗಳಲ್ಲಿ, ಆಡಳಿತ ವರ್ಗದಲ್ಲಿ.. ಹೀಗೆ ಎಲ್ಲದರಲ್ಲೂ ಮುಸ್ಲಿಮೇತರ ಸಂಖ್ಯೆಯೇ ಹೆಚ್ಚು. ಹೆಚ್ಚು ಅನ್ನುವುದಕ್ಕಿಂತ ಅತ್ಯಧಿಕ ಎಂದೇ  ಹೇಳಬಹುದು. ಯಾವುದೇ ರಾಜ ಸ್ಥಳೀಯರನ್ನು ಮತ್ತು ಅವರ ಜನಸಂಖ್ಯೆಯನ್ನು ಖಂಡಿತ ಪರಿಗಣಿಸುತ್ತಾನೆ. ಅವರ ಮೇಲೆ ದಬ್ಬಾಳಿಕೆ  ನಡೆಸಬೇಕಾದರೆ, ತನ್ನ ಸಮುದಾಯದವರ ಸಂಖ್ಯೆ ಅಧಿಕ ಇರಬೇಕಾಗುತ್ತದೆ. ಇಲ್ಲದಿದ್ದರೆ ಬೆಂಕಿಯೊಂದಿಗೆ ಆಟ ಆಡಲು ಮುಂದಾದಂತೆ.  ಈ ರಿಸ್ಕ್ ಗೆ   ಅಧಿಕಾರ ಹಪಾಹಪಿಯ ರಾಜಂದಿರು ಮುಂದಾಗುವುದು ಸಾಧ್ಯವೇ ಇಲ್ಲ ಅನ್ನುವಷ್ಟು ಕಡಿಮೆ. ಈ ದೇಶದಲ್ಲಿ ಎಲ್ಲೂ  ಅಂಥದ್ದೊಂದು ಪರಿಸ್ಥಿತಿ ಇರಲೇ ಇಲ್ಲ. ಕೇವಲ ಇಸ್ಲಾಮನ್ನು ವಿಸ್ತರಿಸುವುದೇ ಮುಸ್ಲಿಮ್ ದೊರೆಗಳ ಗುರಿ ಆಗಿರುತ್ತಿದ್ದರೆ ಮತ್ತು ಅವರ  ಖಡ್ಗಗಳೇ ಇಸ್ಲಾಮನ್ನು ಇಲ್ಲಿ ಪಸರಿಸಿರುವುದಾಗಿದ್ದರೆ ಮುಸ್ಲಿಮರ ಈಗಿನ ಅನುಪಾತ ಈ ಮಟ್ಟದಲ್ಲಿರುವುದಕ್ಕೆ ಸಾಧ್ಯವೂ ಇರಲಿಲ್ಲ.  ಅಂದಹಾಗೆ,

ಸರ್ವರನ್ನೂ ಸಮಾನವಾಗಿ ಕಾಣುವ ಮತ್ತು ಇತರ ಹಲವು ಮಾನವೀಯ ನಿಯಮಗಳು ಇಸ್ಲಾಮನ್ನು ಈ ದೇಶದ ತಳಸಮುದಾಯದ  ನಡುವೆ ಜನಪ್ರಿಯಗೊಳಿಸಿತು. ಇಸ್ಲಾಮ್‌ನ ಸೇವಾ ಚಟುವಟಿಕೆಗೆ ಇದರಲ್ಲಿ ಬಹುಮುಖ್ಯ ಪಾತ್ರ ಇದೆ. ಇವತ್ತಿನ ದಿನಗಳಲ್ಲಂತೂ ಈ  ಸೇವಾ ಚಟು ವಟಿಕೆ ಎಷ್ಟು ಬೃಹತ್ ಪ್ರಮಾಣದಲ್ಲಿ ನಡೆಯುತ್ತಿದೆಯೆಂದರೆ, ಈ ಸಂಸ್ಥೆಗಳ ಒಟ್ಟು ಬಜೆಟ್ ರಾಜ್ಯ ಸರಕಾರದ ಬಜೆಟ್‌ನ  10-20% ದಷ್ಟಿರುವ ಸಾಧ್ಯತೆ ಇದೆ. ಅಷ್ಟಕ್ಕೂ,

ಕೊರೋನಾದ ಈ ಕಾಲದಲ್ಲಿ ಮಾತ್ರ ಅಲ್ಲ, ಕೊರೋನಾ ರಹಿತ ದಿನಗಳಲ್ಲೂ ರಾಜ್ಯಮಟ್ಟದ ವಿವಿಧ ಸಂಘ ಸಂಸ್ಥೆಗಳು ಮತ್ತು ಸ್ಥಳೀಯ  ಸೇವಾ ತಂಡಗಳು ಆರೋಗ್ಯ, ಶಿಕ್ಷಣ, ಆರ್ಥಿಕ ಕ್ಷೇತ್ರಗಳಲ್ಲಿ ಸೇವಾ ನಿರತವಾಗಿವೆ. ಸೇವೆಗೆಂದೇ ಇವು ತಂತಮ್ಮ ಸಾಮರ್ಥ್ಯಾನುಸಾರ  ವಾರ್ಷಿಕ ಬಜೆಟ್ ತಯಾರಿಸುತ್ತವೆ. ಅದಕ್ಕಾಗಿ ವಿವಿಧ ವ್ಯಕ್ತಿಗಳನ್ನು ಸಂಪರ್ಕಿಸುತ್ತವೆ. ಇವುಗಳಲ್ಲಿ ಡಯಾಲಿಸಿಸನ್ನೇ ಗುರಿಯಾಗಿಸಿಕೊಂಡು  ಕೆಲಸ ಮಾಡುವ ತಂಡಗಳಿವೆ. ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳಿಗೆ ಮಾಸಿಕ ನೆರವು ನೀಡುವ ಸಂಸ್ಥೆಗಳಿವೆ. ಆರೋಗ್ಯ  ಸಂಬಂಧಿ  ಸಮಸ್ಯೆಗಳಿಂದ ಬಳಲುವವರಿಗೆ ಔಷಧಿಗಳನ್ನು ವಿತರಿಸುವವರಿದ್ದಾರೆ. ಮನೆ ನಿರ್ಮಿಸಿಕೊಡುವ ಸಂಸ್ಥೆಗಳಿವೆ. ಶಿಕ್ಷಣಕ್ಕಾಗಿ  ನೆರವಾಗುವ ಗುಂಪುಗಳಿವೆ. ಬಡ ಹೆಣ್ಣು ಮಕ್ಕಳ ಮದುವೆಗಾಗಿ ನೆರವಾಗುವ, ಸಾಮೂಹಿಕ ಮದುವೆಯನ್ನು ಏರ್ಪಡಿಸುವ, ಸ್ವ  ಉದ್ಯೋಗಕ್ಕಾಗಿ ಹಣಕಾಸಿನ ಸಹಾಯ ಮಾಡುವ.. ಇಂಥ ವೈವಿಧ್ಯಮಯ ಚಟುವಟಿಕೆಯಲ್ಲಿ ಇವೆಲ್ಲ ತೊಡಗಿಸಿಕೊಂಡಿವೆ. ಝಕಾತ್‌ನ  ಹಣವನ್ನು ಸಮಾಜ ಕಲ್ಯಾಣ ಕೆಲಸಗಳಿಗಾಗಿ ಬಳಸುವ ಸಂಸ್ಥೆಗಳಿವೆ. ಈ ಕೊರೋನಾ ಕಾಲದಲ್ಲೂ ನೀವಿದನ್ನು ನೋಡಿರಬಹುದು.  ಅತ್ಯಧಿಕ ಸೇವಾನಿರತ ವಾಗಿರುವುದು ಮುಸ್ಲಿಮ್ ಸೇವಾ ಸಂಸ್ಥೆಗಳೇ. ಕೇವಲ ತುಮಕೂರು ಜಿಲ್ಲೆಯೊಂದರಲ್ಲೇ  ಮೊದಲ ಮತ್ತು ಈ  ಎರಡನೇ ಕೊರೋನಾ ಅಲೆಯಲ್ಲಿ ಈವರೆಗೆ 1000ಕ್ಕಿಂತಲೂ ಅಧಿಕ ಮೃತದೇಹಗಳನ್ನು ತಾಜುದ್ದೀನ್ ಶರೀಫ್ ಎಂಬವರ ನೇತೃತ್ವದಲ್ಲಿ  ದಫನ ಮಾಡಿರುವುದು ಇದಕ್ಕೊಂದು ಪುರಾವೆ. ಈ ಸೇವೆಯಲ್ಲಿ ಹಿಂದೂ ಮುಸ್ಲಿಮ್ ಎಂಬ ವಿಭಜನೆಯೂ ನಡೆದಿಲ್ಲ. ಕೊರೋನಾ  ಮೊದಲ ಅಲೆಯಲ್ಲಂತೂ ಕಾರ್ಮಿಕರ, ಬಡವರ, ದುರ್ಬಲರ ಮತ್ತು ಮಧ್ಯಮ ವರ್ಗದವರ ಹಸಿವನ್ನು ತಣಿಸಿದ್ದೇ  ಮುಸ್ಲಿಮ್ ಸೇವಾ  ಸಂಸ್ಥೆಗಳು. ಅವು ಮನೆಮನೆಗೆ ಕಿಟ್‌ಗಳನ್ನು ತಲುಪಿಸಿದುವು. ಸೇವೆಯಲ್ಲಿ ಪರಸ್ಪರ ಸ್ಪರ್ಧಿಸುವಂತೆ ನಿರತವಾದುವು. ಈ ಎರಡನೇ  ಅಲೆಯಲ್ಲೂ ಅವು ಮೊದಲ ಅಲೆಯಷ್ಟೇ  ಸ್ಫೂರ್ತಿಯಿಂದ ಸೇವೆಯಲ್ಲಿ ತೊಡಗಿಸಿ ಕೊಂಡಿವೆ.

ಆದ್ದರಿಂದಲೇ, ಒಂದು ನಿರುಪದ್ರವಿ ಪ್ರಶ್ನೆಯನ್ನೂ ಕೇಳಬೇಕೆನಿಸುತ್ತದೆ-

ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಸೇವಾ ನಿರತ ವಾಗಿರುವ ಎಲ್ಲ ಮುಸ್ಲಿಮ್ ಸೇವಾ ಸಂಸ್ಥೆಗಳು ಒಂದೇ ವೇದಿಕೆಯನ್ನು  ನಿರ್ಮಿಸಿಕೊಂಡರೆ ಏನಾದೀತು? ಅದರಿಂದ ಯಾವ ಬದಲಾವಣೆ ಉಂಟಾದೀತು? ಚದುರಿದಂತೆ ಸೇವೆಯಲ್ಲಿ ತೊಡಗಿಸಿಕೊಂಡವರು  ಒಂದೇ ವೇದಿಕೆಯಲ್ಲಿ ಸೇರಿ ಕೊಂಡು ತಂತಮ್ಮ ಅನುಭವ ಹಂಚಿಕೊಂಡಾಗ ಸಿಗುವ ಫಲಿತಾಂಶ ಏನಿದ್ದೀತು? ಒಂದು ಗ್ರಾಮವನ್ನೋ  ಅಥವಾ ಒಂದು ಹಳ್ಳಿಯನ್ನೋ ದತ್ತು ಪಡೆದುಕೊಂಡು ಮಾದರಿ ಗ್ರಾಮವಾಗಿ ಬದಲಿಸುವ ಪ್ರಯತ್ನ ನಡೆದರೆ ಹೇಗೆ? ವಿವಿಧ ಸಂಘ- ಸಂಸ್ಥೆಗಳ ಹೊಣೆಗಾರರ ಸಮಿತಿಯನ್ನು ರಚಿಸಿ, ಅದಕ್ಕೆ ಆ ಗ್ರಾಮದ ಮೇಲ್ನೋಟ ವಹಿಸಿ ಕೊಟ್ಟರೆ ಹೇಗೆ? ಅವುಗಳ ಸರ್ವಾಂಗೀಣ  ಅಭಿವೃದ್ಧಿಯ ಪಾಲನ್ನು ಎಲ್ಲ ಸಂಘಟನೆಗಳೂ ಹಂಚಿಕೊಳ್ಳುವAತಹ ಸೌಹಾರ್ದ ವಾತಾವರಣ ನಿರ್ಮಿಸಿದರೆ ಹೇಗೆ? ಎಲ್ಲ ಸಂಘಟ ನೆಗಳೂ ತಂತಮ್ಮ ಐಡೆಂಟಿಟಿಯನ್ನು ಉಳಿಸಿಕೊಂಡೇ ಒಂದೇ ವೇದಿಕೆಯನ್ನು ರಚಿಸಿಕೊಳ್ಳುವುದು ಮತ್ತು ಸೇವಾ ಚಟುವಟಿಕೆ ಯನ್ನು  ವರ್ಗೀಕರಿಸಿಕೊಳ್ಳುವುದು- ಈಗಿನ ಚದುರಿದ ರೀತಿಯ ಸೇವಾ ಚಟುವಟಿಕೆಗಿಂತ ಉತ್ತಮವಲ್ಲವೇ ಅಥವಾ ಈ ಚಟುವಟಿಕೆ ಯನ್ನು ಇನ್ನಷ್ಟು ಪರಿಣಾಮ ಕಾರಿಯಾಗಿಸಲು ಇದು ಶಕ್ತವಲ್ಲವೇ?

ಇತರರಿಗಾಗಿ ಮರುಗುವ ಬಹುದೊಡ್ಡ ಮನಸ್ಸು ಮುಸ್ಲಿಮರದ್ದು. ಅದನ್ನು ಅವರೊಳಗೆ ಇಳಿಸಿರುವುದು ಇಸ್ಲಾಮ್. ಈ ಇಸ್ಲಾಮನ್ನು ಈ  ದೇಶದ ಜನರಿಗೆ ಚೆನ್ನಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಮತ್ತು ಈ ದೇಶದಲ್ಲಿರುವ ಸುಳ್ಳುಗಳಿಗೆ ಏಟು ಕೊಡಲು ಈ  ಮರು ಗುವ ಮನಸ್ಸಿನಿಂದ ಖಂಡಿತ ಸಾಧ್ಯವಿದೆ. ಮುಸ್ಲಿಮ್ ಸಮುದಾಯದ ಕೊರೋನಾ ಕಾಲದ ಕಾರ್ಯ ಚಟುವಟಿಕೆ ಗಳೇ ಇದಕ್ಕೆ  ಅತ್ಯುತ್ತಮ ಸಾಕ್ಷಿ. ತಬ್ಲೀಗಿ ವೈರಸನ್ನು ಸೃಷ್ಟಿ ಮಾಡಿಯೂ ಸುಳ್ಳುಗಾರರು ಯಶಸ್ವಿಯಾಗಲಿಲ್ಲ. ಈ ಎರಡನೇ ಅಲೆಯಲ್ಲಂತೂ ಮುಸ್ಲಿಮ್  ದ್ವೇಷಿ ಮನಸ್ಸುಗಳು ತಬ್ಲೀಗಿ ವೈರಸ್‌ನಂಥಹದ್ದನ್ನು ಸೃಷ್ಟಿ ಮಾಡುವುದಕ್ಕೇ ಭಯಪಟ್ಟವು. ತೇಜಸ್ವಿ ಸೂರ್ಯ ಅದಕ್ಕಾಗಿ ಪ್ರಯತ್ನಿಸಿದರೂ  ಅಂತಿಮವಾಗಿ ಅವರು ಹೇಗೆ ಒಂಟಿಯಾದರು ಮತ್ತು ಸಮಾಜ ಹೇಗೆ ಮುಸ್ಲಿಮರ ಬೆಂಬಲಕ್ಕೆ ನಿಂತಿತು ಎಂಬುದು ಗಮನಾರ್ಹ.  ನಿಜವಾಗಿ,

ಇಸ್ಲಾಮನ್ನು ಖಡ್ಗದ ಮೊನೆಗೆ ಸಿಲುಕಿಸಿರುವುದರ ಹಿಂದೆಯೂ ತಬ್ಲೀಗಿ ವೈರಸ್‌ನಂಥ ಮನಸ್ಥಿತಿಯೇ ಕೆಲಸ ಮಾಡಿದೆ. ವೈರಸನ್ನು  ತಬ್ಲೀಗಿನೊಂದಿಗೆ ಸೇರಿಸಿದಂತೆಯೇ ಅವರು ಇಸ್ಲಾಮನ್ನು ಖಡ್ಗದೊಂದಿಗೆ ಜೋಡಿಸಿದರು. ಆದರೆ ತಬ್ಲೀಗಿ ವೈರಸನ್ನು ಮುಸ್ಲಿಮರು  ಸಕಾರಾತ್ಮಕ ಪ್ರತಿಕ್ರಿ ಯೆಯ ಮೂಲಕ ವಿಫಲಗೊಳಿಸಿದರು. ಎಷ್ಟರ ವರೆಗೆಂದರೆ, ಎರಡನೇ ಅಲೆಯಲ್ಲಿ ಅಂಥದ್ದೊಂದು  ಪ್ರಚಾರಕ್ಕೇ  ಅವರು ಭಯಪಡುವಷ್ಟು. ಸುಳ್ಳಿಗೆ ಮತ್ತು ದ್ವೇಷಕ್ಕೆ ಪ್ರತಿಯಾಗಿ ಸತ್ಯ ಹಾಗೂ ಪ್ರೇಮದ ಭಾಷೆಯಲ್ಲಿ ಪ್ರತಿಕ್ರಿಯಿಸಿದರೆ ಸಿಗುವ ಫಲಿತಾಂಶ  ಇದು. ಖಡ್ಗದ ವಿಷಯವೂ ಇಷ್ಟೇ. ಅದೂ ಸೋಲುತ್ತದೆ. ಒಂದುವೇಳೆ, ಮುಸ್ಲಿಮ್ ಸಮುದಾಯದ ಸೇವಾ ಚಟುವಟಿಕೆಗಳು ಒಂದೇ  ವೇದಿಕೆಯಡಿ ಬಂದರೆ ಮತ್ತು ಸಂಘಟಿತ ರೂಪದಲ್ಲಿ ವ್ಯವಸ್ಥಿತವಾಗಿ, ಹೊಣೆಗಾರಿಕೆಗಳ ವರ್ಗೀಕರಣದೊಂದಿಗೆ ಅವು ಕಾರ್ಯ ಪ್ರವೃತ್ತರಾದರೆ ಕ್ರಾಂತಿ ಕಾರಿ ಬದಲಾವಣೆ ಸಾಧ್ಯವಾಗಬಹುದೇನೋ? ಹಾಗಂತ,

ಆಶಾವಾದ ತಪ್ಪಲ್ಲವಲ್ಲ.

Thursday, May 27, 2021

ಗೊತ್ತಿದ್ದೂ ಮತ್ತೇಕೆ ರಿಝ್ವಿ ಅರ್ಜಿ ಹಾಕಿದರು?




1. ವಸೀಮ್ ರಿಝ್ವಿ
2. ಸಂಗೀತಾ ಶ್ರೀವಾಸ್ತವ
3. ಕರ್ನಾಟಕ ವಕ್ಫ್ ಬೋರ್ಡ್
4. ನ್ಯಾಯಾಲಯಗಳು
ಕಳೆದವಾರ ಇವು ನಾಲ್ಕೂ ಒಂದೇ ಕಾರಣಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಚರ್ಚೆಗೆ ಒಳಗಾದುವು. ಚರ್ಚೆಯ ಕೇಂದ್ರ ಬಿಂದು ಇಸ್ಲಾಮ್,  ಮುಸ್ಲಿಮ್, ಆಝಾನ್, ಮಸೀದಿ, ಲೌಡ್ ಸ್ಪೀಕರ್ ಇತ್ಯಾದಿಗಳು. ಒಟ್ಟಿನಲ್ಲಿ ಮುಸ್ಲಿಮರು ಎಂದು ಸರಳೀಕರಿಸಿ ಹೇಳಬಹುದು. ಪವಿತ್ರ  ಕುರ್‌ಆನಿನ ಒಟ್ಟು ಸೂಕ್ತಗಳಿಂದ 26 ಸೂಕ್ತಗಳನ್ನು ಕಿತ್ತು ಹಾಕಬೇಕೆಂಬುದು ವಸೀಮ್ ರಿಝ್ವಿಯ ಆಗ್ರಹ. ಹಾಗಂತ, ಅವರು ಮಾರ್ಚ್  12, 2021ರಂದು ಸುಪ್ರೀಮ್ ಕೋರ್ಟಿಗೆ ಮನವಿ ಸಲ್ಲಿಸಿದ್ದರು. ಈ ಸೂಕ್ತಗಳು ಹಿಂಸೆಗೆ ಪ್ರಚೋದನೆ ನೀಡುತ್ತಿವೆ ಮತ್ತು ಇವು ಮೂಲ  ಕುರ್‌ಆನ್‌ನ ಭಾಗವಲ್ಲ ಎಂಬುದು ಅವರ ವಾದ. ಇದನ್ನು ನಂತರದ ಖಲೀಫರು ತಮ್ಮ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಸೇ ರ್ಪಡೆಗೊಳಿಸಿದ್ದಾರೆ ಎಂದೂ ಅವರು ವಾದಿಸಿದ್ದಾರೆ.
ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಬೋರ್ಡ್ ನಲ್ಲಿ  ದಶಕಗಳ ಕಾಲ ಅಧ್ಯಕ್ಷರಾಗಿದ್ದು, ಕಳೆದ ವರ್ಷವಷ್ಟೇ ಹೊರಬಿದ್ದವರು ಈ  ರಿಝ್ವಿ. ಇವರ ರಾಜಕೀಯ ಜೀವನ ಆರಂಭವಾದದ್ದು ಸಮಾಜವಾದಿ ಪಕ್ಷದ ಮೂಲಕ. ಲಕ್ನೋ ಕಾರ್ಪೊರೇಟರ್ ಆಗಿ ಇವರು  ಸಮಾಜವಾದಿ ಪಕ್ಷದಿಂದ 2000ದಲ್ಲಿ ಆಯ್ಕೆಯಾದರು. ಆ ಬಳಿಕ ಶಿಯಾ ನಾಯಕ ಕಲ್ಬೆ ಜವ್ವಾದ್‌ರ ಜೊತೆ ಭಿನ್ನಾಭಿ ಪ್ರಾಯ  ಉಂಟಾಯಿತು. ರಿಝ್ವಿಯ ಮೇಲೆ ಭ್ರಷ್ಟಾಚಾರದ ಆರೋಪವೂ ಕೇಳಿಬಂತು. ಈ ಎಲ್ಲ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷವು 2012ರಲ್ಲಿ  ಇವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಛಾಟನೆ ಮಾಡಿತು. ಆಗಿನಿಂದ ಅವರು ಬಿಜೆಪಿಗೆ ಹತ್ತಿರವಾದರು. ಬಿಜೆಪಿಯ  ನಿಲುವುಗಳನ್ನು ಬಹಿರಂಗವಾಗಿ ಸಮರ್ಥಿಸತೊಡಗಿದರು. 2018ರಲ್ಲಿ ರಾಮ್ ಕಿ ಜನ್ಮಭೂಮಿ ಎಂಬ ಸಿನಿಮಾವನ್ನು ನಿರ್ಮಿಸಿದರು  ಮತ್ತು ಸ್ವತಃ ಚಿತ್ರಕಥೆ ಬರೆದರು. ಬಾಬರಿ ಮಸೀದಿ ಇದ್ದ ಜಾಗದಲ್ಲೇ  ಬೃಹತ್ ರಾಮಮಂದಿರ ನಿರ್ಮಾಣಕ್ಕೆ ಶಿಯಾ ವಕ್ಫ್ ಬೋರ್ಡ್ ನ   ಬೆಂಬಲ ಸಾರಿದರು. ಉತ್ತರ ಪ್ರದೇಶ ಸರಕಾರ ನಿರ್ಮಿಸಲು ಹೊರಟಿರುವ ಶ್ರೀರಾಮನ ಬೃಹತ್ ಪುತ್ಥಳಿಗೆ ಬೆಳ್ಳಿಯ 10 ಬಾಣಗಳನ್ನು  ನೀಡುವುದಾಗಿ ಘೋಷಿಸಿದರು. ಆರಾಧನಾ ಸ್ಥಳಗಳಿಗೆ ಸಂಬಂಧಿಸಿ 1991ರ ಕಾಯ್ದೆಯನ್ನು ತಿದ್ದು ಪಡಿಗೊಳಿಸಬೇಕು ಮತ್ತು ಮಂದಿರ  ಕೆಡವಿ ಕಟ್ಟಲಾದ ಮಸೀದಿ ಗಳನ್ನು ಸರಕಾರ ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು. ಮಾತ್ರವಲ್ಲ, ಮಂದಿರ ಕೆಡವಿ ಯಾವೆಲ್ಲ ಮಸೀದಿ ಕಟ್ಟಲಾಗಿದೆ ಎಂಬ ಪಟ್ಟಿಯನ್ನೂ ನೀಡಿದರು. ತ್ರಿವಳಿ ತಲಾಕ್ ನೀಡಿದವರಿಗೆ ಈಗಿನ 3 ವರ್ಷಗಳ ಬದಲು 10 ವರ್ಷ ಜೈಲು  ಶಿಕ್ಷೆ ವಿಧಿಸಬೇಕು, ಮದ್ರಸಗಳನ್ನು ಐಎಸ್‌ಐ ನಿಯಂತ್ರಿಸುತ್ತಿದ್ದು, ಅವು ಗಳನ್ನು ಮುಚ್ಚಬೇಕು ಎಂದೂ ಆಗ್ರಹಿಸಿದರು.
ಒಂದುರೀತಿಯಲ್ಲಿ ಕಳೆದ ಒಂದು ದಶಕದಲ್ಲಿ ಅವರಾಡಿರುವ ಮಾತು ಮತ್ತು ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಆದಿತ್ಯನಾಥ್‌ಗೆ  ಬರೆದಿರುವ ಪತ್ರಗಳು ಮತ್ತು ಅವರ ಆಗ್ರಹಗಳು ಎಲ್ಲವನ್ನೂ ಪರಿಶೀಲಿಸಿದರೆ, ಸುಪ್ರೀಮ್‌ಗೆ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಅಚ್ಚರಿ ಪಡುವಂಥದ್ದೇನೂ ಇಲ್ಲ. ಆದರೆ ಆ ಬಳಿಕದ ಬೆಳವಣಿಗೆಗಳನ್ನು ಪರಿಗಣಿಸುವಾಗ ಅಚ್ಚರಿ ಪಡಲೇಬೇಕಾದ ಅರ್ಜಿ ಇದು ಎಂದು ಅ ನಿಸುತ್ತಿದೆ.
ಸುಪ್ರೀಮ್‌ಗೆ ರಿಝ್ವಿ ಸಲ್ಲಿಸಿದ ಅರ್ಜಿಯ ಒಂದು ವಾರದ ಬಳಿಕ ಇನ್ನೆರಡು ಬೆಳವಣಿಗೆಗಳೂ ನಡೆದುವು.
1. ಅಲಹಾಬಾದ್‌ನ ಕೇಂದ್ರ ವಿವಿಯ ಉಪಕುಲಪತಿ ಸಂಗೀತಾ ಶ್ರೀವಾಸ್ತವ ಎಂಬವರು ಅಲ್ಲಿನ ಜಿಲ್ಲಾಧಿಕಾರಿಗೆ ಬರೆದಿರುವ ಪತ್ರ.
ತನ್ನ ಮನೆಯ ಪಕ್ಕದ ಮಸೀದಿಯಿಂದ ಕೇಳಿ ಬರುವ ಮುಂಜಾನೆಯ ಆಝಾನ್ ತನ್ನ ನಿದ್ದೆಗೆ ಭಂಗ ತರುತ್ತಿದೆ, ಆ ಆಝಾನ್‌ನ ಬಳಿಕ  ತನಗೆ ನಿದ್ದೆ  ಬರುತ್ತಿಲ್ಲ. ಇದು ತನ್ನ ಕೆಲಸದ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದವರು ದೂರಿಕೊಂಡರು ಮತ್ತು ಆ  ಆಝಾನನ್ನು ಲೌಡ್‌ಸ್ಪೀಕರ್‌ನಲ್ಲಿ ಕೊಡದಂತೆ ತಡೆಯಬೇಕೆಂದು ಆಗ್ರಹಿಸಿದರು.
2. ಇದರ ಜೊತೆಜೊತೆಗೇ ರಾಜ್ಯ ವಕ್ಫ್ ಬೋರ್ಡ್ ಕೂಡ ಮಸೀದಿಗಳಲ್ಲಿ ಬಳಸಲಾಗುವ ಲೌಡ್ ಸ್ಪೀಕರನ್ನು ಗುರಿಯಾಗಿಸಿ  ಸುತ್ತೋಲೆಯನ್ನು ಹೊರಡಿಸಿತು. ಆ ಸುತ್ತೋಲೆಯ ಒಟ್ಟು ಸಾರಾಂಶ ಏನೆಂದರೆ, ಮಸೀದಿಯ ಲೌಡ್ ಸ್ಪೀಕರ್‌ನ ಬಳಕೆಯನ್ನು  ತಗ್ಗಿಸುವುದು. ಅಂದಹಾಗೆ,
ಈ ಎಲ್ಲ ಬೆಳವಣಿಗೆಗಳೂ ಬಾಹ್ಯನೋಟಕ್ಕೆ ಬಿಡಿ ಬಿಡಿ ಘಟನೆಗಳಾಗಿ ಕಂಡರೂ ಭವಿಷ್ಯದಲ್ಲಿ ಇವೆಲ್ಲವೂ ಒಂದೇ ದಾರದಲ್ಲಿ ಪೋಣಿಸಿದ  ಮಣಿಗಳಾಗಿ ಮಾರ್ಪಡುವ ಸಾಧ್ಯತೆ ಖಂಡಿತ ಇದೆ. ರಿಝ್ವಿಯ ಅರ್ಜಿಯ ಬಗ್ಗೆ ಶಿಯಾಗಳಾಗಲಿ, ಸುನ್ನಿಗಳಾಗಲಿ ಅಥವಾ  ಬಿಜೆಪಿಯಾಗಲಿ ಸದ್ಯ ಯಾವ ಆಸಕ್ತಿಯನ್ನೂ ತಾಳಿಲ್ಲ. ಶಿಯಾಗಳೂ, ಸುನ್ನಿಗಳೂ ಒಟ್ಟಾಗಿ ರಿಝ್ವಿಯನ್ನು ವಿರೋಧಿಸಿವೆ. ಬಿಜೆಪಿ ಕೂಡಾ  ರಿಝ್ವಿಗೆ ತನ್ನ ಬೆಂಬಲ ಇಲ್ಲ ಎಂದು ಸಾರಿದೆ. ಆದರೆ, ಬಿಜೆಪಿಯ ಈ ನಿಲುವನ್ನೇ ನಂಬಿಕೊಂಡು  ರಿಝ್ವಿ ಒಂಟಿಯಾದ ಎಂದು  ಹೇಳಲಾಗದು. ಒಂದುವೇಳೆ,
ಸುಪ್ರೀಮ್ ಕೋರ್ಟು ರಿಝ್ವಿಯ ಅರ್ಜಿಯನ್ನು ತಳ್ಳಿ ಹಾಕಿದರೂ ಅದನ್ನು ಸಾರ್ವಜನಿಕವಾಗಿ ಜೀವಂತ ಇಟ್ಟುಕೊಳ್ಳುವ ಕಲೆ ಬಿಜೆಪಿಗೆ  ಚೆನ್ನಾಗಿಯೇ ಸಿದ್ದಿಸಿದೆ. ರಾಮಮಂದಿರ, ತಲಾಕ್, 370ನೇ ವಿಧಿ ಇತ್ಯಾದಿ ಅಕ್ರಮಣಕಾರಿ ಇಶ್ಶೂಗಳು ಇದೀಗ ಮುಗಿದಿರುವುದರಿಂದ  ಬಿಜೆಪಿಗೆ ಭಾವನಾತ್ಮಕ ಇಶ್ಶೂನ ಅಗತ್ಯವಂತೂ ಇದ್ದೇ  ಇದೆ. ಕೊರೋನಾ ಭಯ ಸಂಪೂರ್ಣ ತೊಲಗಿದ ಬಳಿಕ ಇನ್ನೊಮ್ಮೆ ಸಿಎಎ, ಎ ನ್‌ಆರ್‌ಸಿ ಮತ್ತು ಎನ್‌ಪಿಆರ್ ಚರ್ಚೆಯನ್ನು ಸಾರ್ವಜನಿಕವಾಗಿ ಜೀವಂತವಿಡುವ ಪ್ರಯತ್ನ ನಡೆಯಬಹುದು. ಮುಂದಿನ ಚುನವಾಣೆಯ  ವರೆಗೆ ಅದನ್ನು ಎಳೆಯುವುದರಿಂದ ಪ್ರಯೋಜನವಿದೆಯೆಂದು ಗೊತ್ತಾದರೆ, ಹಾಗೆಯೂ ಮಾಡಬಹುದು. ಅಲ್ಲದೇ, ಆರ್ಥಿಕ ಸ್ಥಿತಿ ಸಂ ಪೂರ್ಣ ತಳ ಹಿಡಿದಿರುವುದರಿಂದ ಸಿಎಎ, ಎನ್‌ಆರ್‌ಸಿಯನ್ನೋ ಅಥವಾ ಸಮಾನ ನಾಗರಿಕ ಸಂಹಿತೆ, ಬಹುಪತ್ನಿತ್ವ ಮತ್ತು  ಬುರ್ಖಾಗಳಂತಹ ವಿಷಯಗಳನ್ನೋ ಚರ್ಚೆಯ ಮುನ್ನೆಲೆಗೆ ತರಲೇಬೇಕಾದ ಒತ್ತಡವೂ ಕೇಂದ್ರದ
ಮೇಲಿದೆ. ಈ ತಂತ್ರ ಫಲ ನೀಡುವವರೆಗೆ ಅಥವಾ ಇದು ಇತ್ಯರ್ಥವಾಗುವ ವರೆಗೆ ಮುಸ್ಲಿಮರಿಗೆ ಸಂಬಂಧಿಸಿ ಬೇರೆ ವಿಷಯ ಗಳನ್ನು  ಚರ್ಚಾರ್ಹಗೊಳಿಸುವ ಅಗತ್ಯ ಬರಲಾರದು. ಆದರೆ,
ಮೇಲಿನ ಇಶ್ಶೂಗಳು ಜನರ ಮೇಲೆ ಪ್ರಭಾವ ಬೀರದೇ ಹೋದರೆ ರಿಝ್ವಿ ಎತ್ತಿರುವ ಪ್ರಶ್ನೆಯನ್ನು ಸಾರ್ವಜನಿಕ ಚರ್ಚೆಗೆ ತರುವ  ಸಾಧ್ಯತೆಯಂತೂ ಖಂಡಿತ ಇದೆ. ಭಯೋತ್ಪಾದನೆ ಮತ್ತು ಹಿಂಸೆಯನ್ನು ಚರ್ಚೆಗೆ ತಂದು ಆ ಮೂಲಕ ರಿಝ್ವಿ ಎತ್ತಿರುವ ಪ್ರಶ್ನೆಗೆ ಜೀವ  ತುಂಬುವ ಪ್ರಯತ್ನ ನಡೆಯಬಹುದು. ಇದರಲ್ಲಿ ಇನ್ನೊಂದು ಲಾಭವೂ ಇದೆ. ಕುರ್‌ಆನಿನ 26 ಸೂಕ್ತಗಳನ್ನು ರದ್ದುಪಡಿಸುವುದಕ್ಕೆ  ನ್ಯಾಯಾಲಯಗಳು ಮುಂದಾಗುವುದಕ್ಕೆ ಸಾಧ್ಯ ವಿಲ್ಲ. ಯಾಕೆಂದರೆ, ಧಾರ್ಮಿಕ ಗ್ರಂಥಗಳ ಯಾವುದೇ ಭಾಗ ವನ್ನು ಕಿತ್ತು ಹಾಕುವ  ಅಥವಾ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ನ್ಯಾಯಾಲಯಗಳು ವಹಿಸಿಕೊಳ್ಳಲಾರವು. ಅಲ್ಲದೇ, ಬಹುಧರ್ಮೀಯ ದೇಶದಲ್ಲಿ  ಧಾರ್ಮಿಕ ಗ್ರಂಥಗಳು ಹಲವಾರು ಇವೆ. ಅವುಗಳ ಮೇಲೆಯೂ ಇಂಥದ್ದೇ  ಆರೋಪ ಹೊರಿಸಿ ಕೋರ್ಟ್ ಗೆ  ಹೋಗುವ ಪ್ರಕ್ರಿಯೆ  ಪ್ರಾರಂಭವಾದರೆ, ಇದು ಇನ್ನಷ್ಟು ಜಟಿಲ ಸಮಸ್ಯೆಗೂ ಕಾರಣವಾಗಬಹುದು. ಇದು ಅರ್ಜಿದಾರ ರಿಝ್ವಿಗೂ ಗೊತ್ತು ಮತ್ತು ತನ್ನ  ಆಗ್ರಹವು ಸುಪ್ರೀಮ್ ಕೋರ್ಟಲ್ಲಿ  ನಿಲ್ಲಲಾರದು ಎಂದು ಗೊತ್ತಿದ್ದೇ  ಅವರು ಅರ್ಜಿ ಸಲ್ಲಿಸಿರುವ ಸಾಧ್ಯತೆಯೂ ಇದೆ. ಆದ್ದರಿಂದಲೇ,
ಆ ಅರ್ಜಿಯ ಉದ್ದೇಶ ಶುದ್ಧಿಯ ಬಗ್ಗೆ ತೀವ್ರ ಸಂದೇಹ ಮೂಡುತ್ತದೆ. ನಿರ್ದಿಷ್ಟ ಪಕ್ಷದ ಭವಿಷ್ಯದ ರಾಜಕೀಯಕ್ಕೆ ನೆರವಾಗುವ ಉದ್ದೇಶದಿಂದಲೇ ಅವರು ಇಂಥದ್ದೊಂದು ಅರ್ಜಿಯನ್ನು ಸಲ್ಲಿಸಿದರೇ? ಅವರ ಅರ್ಜಿಯ ಹಿಂದೆ ಸಂಚು ಅಡಗಿದೆಯೇ? ಆ ಸಂಚು  ಹೆಣೆದವರು ಯಾರು? ಅವರಿಗೆ ಯಾರೊಂದಿಗೆಲ್ಲ ಸಂಬಂಧ ಇದೆ? ಇವೆಲ್ಲ ಅಪ್ರಸ್ತುತ ಪ್ರಶ್ನೆಗಳಲ್ಲ. ಹಾಗಂತ,
ಆಝಾನ್‌ನ ಬಗ್ಗೆ ಸಂಗೀತಾ ಶ್ರೀವಾಸ್ತವ ಅವರ ದೂರು ಮತ್ತು ರಾಜ್ಯ ವಕ್ಫ್ ಬೋರ್ಡ್ ಹೊರಡಿಸಿರುವ ಸುತ್ತೋಲೆಗಳು ಒಂದೇ  ಸಮಯದಲ್ಲೇ  ಆಗಿರುವುದಕ್ಕೆ ಬೇರೆ ಅರ್ಥಗಳಿಲ್ಲದೇ ಇರಬಹುದು. ಅವು ಕಾಕತಾಳೀಯವೇ ಆಗಿರಬಹುದು. ಆದರೂ ಆಝಾನನ್ನು  ಮುಂದೊಂದು  ದಿನ ಮುಸ್ಲಿಮ್ ಹಿಂಸೆಯ ಪಟ್ಟಿಗೆ ಸೇರಿಸಿ, ಮಸೀದಿಗಳನ್ನು ಸಾರ್ವಜನಿಕ ತೊಂದರೆ ಪ್ರದೇಶಗಳೆಂದು ಪ್ರಚಾರ  ಮಾಡುವುದಕ್ಕೆ ಪೂರಕವಾಗಿ ಬಳಸಿಕೊಳ್ಳಬಹುದು. ಅಲ್ಲದೇ, ವಿವಿಧ ಸಂದರ್ಭಗಳಲ್ಲಿ ವಿವಿಧ ನ್ಯಾಯಾಲಯಗಳು ನೀಡಿರುವ ತೀ ರ್ಪುಗಳನ್ನು ಉಲ್ಲೇಖಿಸಿ ಮುಸ್ಲಿಮರನ್ನು ತಿವಿಯುವುದಕ್ಕೂ ಬಳಸಿಕೊಳ್ಳಬಹುದು. 
ಆಝಾನ್‌ಗೆ ಲೌಡ್ ಸ್ಪೀಕರ್ ಬಳಸಬಾರದು ಎಂದು  2020 ಮೇ 15ರಂದು ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿತ್ತು. ಲೌಡ್ ಸ್ಪೀಕರ್ ಬಳಸಿ ಗಾಝಿ ಪುರದ ಮಸೀದಿಗಳಲ್ಲಿ  ಕೊಡಲಾಗುವ ಆಝಾನ್‌ಗೆ ಜಿಲ್ಲಾಡಳಿತ ನಿಷೇಧ ಹೇರಿದೆ, ಇದನ್ನು ತೆರವುಗೊಳಿಸಬೇಕೆಂದು ಕೋರಿ ಗಾಝಿಪುರದ ಬಿಎಸ್‌ಪಿ ಸಂಸದ  ಅಫ್ಝಲ್ ಅನ್ಸಾರಿ ನೀಡಿದ ಅರ್ಜಿಗೆ ಸಂಬಂಧಿಸಿ ನ್ಯಾಯಾಧೀಶರಾದ ಶಶಿಕಾಂತ್ ಗುಪ್ತಾ ಮತ್ತು ಅಜಿತ್ ಕುಮಾರ್ ಅವರನ್ನೊಳಗೊಂಡ  ಪೀಠ ಈ ಆದೇಶ ನೀಡಿತ್ತು. ಕರ್ನಾಟಕ ಹೈಕೋರ್ಟ್ ಕೂಡ 2021 ಜನವರಿ 12ರಂದು ಇಂಥದ್ದೇ ಆದೇಶವನ್ನು ಹೊರಡಿಸಿತ್ತು. ಗಿರೀಶ್ ಭಾರದ್ವಾಜ್ ಎಂಬವರು ಸಲ್ಲಿಸಿದ ಸಾರ್ವಜನಿಕ ಹಿತಾ ಸಕ್ತಿ. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿದ್ದ ಮುಖ್ಯ ನ್ಯಾಯಾಧೀಶ  ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಾಧೀಶ ಸಚಿನ್ ಶಂಕರ್ ಮಗದುಂ ಅವರಿದ್ದ ಪೀಠವು, ಮಸೀದಿ, ಮಂದಿರ, ಚರ್ಚ್,  ಗುರುದ್ವಾರ ಮುಂತಾದ ಪ್ರದೇಶಗಳಿಂದಾಗುವ ಶಬ್ದ ಮಾಲಿನ್ಯದ ಬಗ್ಗೆ ಸುಪ್ರೀಮ್ ತೀರ್ಪು ಜಾರಿಗೊಳಿಸುವಂತೆ ಸರ್ಕಾರಕ್ಕೆ ಆದೇಶ  ನೀಡಿತ್ತು. 2017 ಆಗಸ್ಟ್ 16ರಂದು ಮದ್ರಾಸ್ ಹೈಕೋರ್ಟ್ ಕೂಡ ಆಝಾನ್‌ನ ಬಗ್ಗೆ ವಿಶೇಷವಾಗಿ ಎತ್ತಿ ಹೇಳಿ ತೀರ್ಪು ನೀಡಿತ್ತು.  ಕೋಯಂಬತ್ತೂರು ಪೊಲ್ಲಾಚಿಯ ಐಕ್ಯ ಜಮಾಅತ್‌ನ ಅಧ್ಯಕ್ಷ ಶಾನವಾಝï ಖಾನ್ ಅವರ ಅರ್ಜಿಯ ಮೇಲೆ ಮುಖ್ಯ ನ್ಯಾಯಾಧೀಶೆ  ಇಂದಿರಾ ಬ್ಯಾನರ್ಜಿ ಮತ್ತು ಸುಂದರ್ ಅವರಿದ್ದ ಪೀಠ ವಿಚಾರಣೆ ನಡೆಸಿತ್ತಲ್ಲದೆ, ಮಸೀದಿಯ ಆಝಾನ್ ಶಬ್ದವು ಸುಪ್ರೀಮ್ ನಿಯಮಕ್ಕೆ  ಅಧೀನವಾಗಬೇಕು ಎಂದು ಆದೇಶಿಸಿತ್ತು. ಪೊಲ್ಲಾಚಿಯ ಮಸೀದಿಗಳ ಲೌಡ್ ಸ್ಪೀಕರ್ ಬಳಕೆಯ ವಿರುದ್ಧ ಜಿಲ್ಲಾಡಳಿತ ಕೈಗೊಂಡ  ಕ್ರಮವನ್ನು ಪ್ರಶ್ನಿಸಿ ಶಾನವಾಝï ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟಕ್ಕೂ,
ಸದ್ಯ ತೀರ್ಪುಗಳಾಗಿ ಮಾತ್ರ ಉಳಿದುಕೊಂಡಿರುವ ಮತ್ತು ಪ್ರಾಯೋಗಿಕವಾಗಿ ಇನ್ನೂ ಜಾರಿಯಾಗದ ಇವುಗಳು ಮುಂದೆಯೂ  ಹೀಗೆಯೇ ಇರಲಿವೆ ಎಂದು ಹೇಳುವಂತಿಲ್ಲ. ಸಂಗೀತಾರ ಮನವಿ ಮತ್ತು ವಕ್ಫ್ ಬೋರ್ಡ್ನ ಸುತ್ತೋಲೆಯು ಮಸೀದಿ ಲೌಡ್  ಸ್ಪೀಕರ್‌ಗೆ ಭವಿಷ್ಯದಲ್ಲಿ ಕಾದಿರುವ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜದ ಅತಿದೊಡ್ಡ ಚರ್ಚಾ  ವಿಷಯ ವಾಗಿ ಮಸೀದಿ ಲೌಡ್ ಸ್ಪೀಕರ್‌ಗಳು ಮಾರ್ಪಡುವುದಕ್ಕೂ ಅವಕಾಶ ಇದೆ. ನಿದ್ದೆಗೆಟ್ಟವರು ಮತ್ತು ಕೆಡದವರೆಲ್ಲ ಜೊತೆ  ಸೇರಿಕೊಂಡು ಮಸೀದಿಯನ್ನೇ ಆ ಬಳಿಕ ಗುರಿ ಮಾಡಬಹುದು. ಲೌಡ್ ಸ್ಪೀಕರ್‌ಗಳನ್ನು ಕಿತ್ತು ಹಾಕುವ ಪ್ರಯತ್ನ ನಡೆಯಬಹುದು  ಮತ್ತು ಅದರ ಕಾರಣದಿಂದ ಕೋಮು ಘರ್ಷಣೆ ಗಳೂ ಉಂಟಾಗಬಹುದು. ಒಂದು ಚುನಾವಣೆಯನ್ನು ಗೆಲ್ಲುವುದಕ್ಕೆ ಇಂಥವು ಧಾರಾಳ  ಸಾಕು. ಆದ್ದರಿಂದ,
ಈಗಲೇ ಮಸೀದಿ ಆಡಳಿತ ಸಮಿತಿಗಳು ಎಚ್ಚರಿಕೆ ವಹಿಸುವುದು ಒಳಿತು. ಆಝಾನ್‌ಗೆ ಹೊರತಾದ ಇತರೆಲ್ಲ ಕಾರ್ಯಕ್ರಮಗಳನ್ನು  ಮಸೀದಿಯ ಒಳಗಡೆಗೆ ಸೀಮಿತಗೊಳಿಸುವ ಹಾಗೂ ಕೇವಲ ಆಝಾನನ್ನು ಮತ್ತು ಇತರ ಅನಿವಾರ್ಯ ಬೆಳವಣಿಗೆಯನ್ನು ಮಾತ್ರ  ಲೌಡ್ ಸ್ಪೀಕರ್‌ನಲ್ಲಿ ಕೇಳಿಸುವ ಬಗ್ಗೆ ಈಗಿಂದೀಗಲೇ ನಿರ್ಧಾರ ತೆಗೆದುಕೊಳ್ಳಬೇಕು. ಮಸೀದಿಗಳನ್ನು ನಾಗರಿಕ ಸ್ನೇಹಿಯಾಗಿಸುವುದು  ಮುಸ್ಲಿಮರ ಹೊಣೆಗಾರಿಕೆ. ಅಂದಹಾಗೆ,
ಮುಂಜಾನೆ 3 ನಿಮಿಷಗಳ ವರೆಗೆ ಲೌಡ್‌ಸ್ಪೀಕರ್‌ನಿಂದ ಕೇಳಿಬರುವ ಆಝಾನ್- ನಾಗರಿಕರ ನಿದ್ದೆಯನ್ನು ಕೆಡಿಸಬಲ್ಲಷ್ಟು ಅಪಾಯಕಾರಿ  ಎಂದು ಬಹುಧರ್ಮೀಯ ಭಾರತದಲ್ಲಿ ದೂರುವವರ ಸಂಖ್ಯೆ ಅತ್ಯಲ್ಪದಲ್ಲಿ ಅತ್ಯಲ್ಪವಷ್ಟೇ ಇರಬಹುದು. ಯಾಕೆಂದರೆ, ಈ ದೇಶದುದ್ದಕ್ಕೂ  ನಡೆಯುವ ಜಾತ್ರೆ, ನೇಮ, ಯಕ್ಷಗಾನ, ಉತ್ಸವ, ಅಯ್ಯಪ್ಪ ಸ್ಮರಣೆ ಇತ್ಯಾದಿಗಳು ಲೌಡ್ ಸ್ಪೀಕರನ್ನೇ ಆಶ್ರಯಿಸಿಕೊಂಡಿವೆ ಮತ್ತು ಅವು  ಮಧ್ಯರಾತ್ರಿಯ ನಿದ್ದೆಯನ್ನೂ ಮುಂಜಾನೆಯ ನಿದ್ದೆಯನ್ನೂ ಕೆಲವೊಮ್ಮೆ ಇಡೀ ದಿನ ನಿದ್ದೆಯನ್ನೂ ಕಸಿದುಕೊಳ್ಳುತ್ತಿವೆ. ಹಾಗಂತ, ಈ ಬಗ್ಗೆ  ಯಾರೂ ದೂರುವುದಿಲ್ಲ. ಒಂದು ನಾಗರಿಕ ಸಮಾಜದಲ್ಲಿ ಇವೆಲ್ಲ ಸಹಜ ಮತ್ತು ಸಹನೀಯ. ಆದರೆ, 
ರಾಜಕೀಯಕ್ಕೆ ಎಂಥ ಶಕ್ತಿಯಿದೆ ಯೆಂದರೆ, ಅದು ಸಹನೀಯವನ್ನೇ ಅಸಹನೀಯವನ್ನಾಗಿ ಮಾರ್ಪಡಿಸಬಲ್ಲುದು.

Thursday, March 25, 2021

ಗಲ್ಫ್ ನಿಂದ ಊರಿಗೆ ಬಂದ ಅವರಿಗೆ ಪತ್ನಿ ಅರ್ಥವಾದಳು



ಸಣ್ಣ ಜಗಳ
ಪುಟ್ಟ ಭಿನ್ನಾಭಿಪ್ರಾಯ
ಅವಳು ಬೆಳಗ್ಗಿನ ಉಪಾಹಾರವನ್ನು ಪತಿಗೆ ಬಡಿಸಿಟ್ಟು ತಾನು ಸೇವಿಸದೆಯೇ ಕಚೇರಿಗೆ ತೆರಳಿದಳು. ಮೊಬೈಲನ್ನು ಮನೆಯಲ್ಲೇ   ಬಿಟ್ಟು ಬಂದಿರುವುದು ಕಚೇರಿಗೆ ತಲುಪಿದ ಬಳಿಕ ಗೊತ್ತಾಯಿತು. ಛೆ ಎಂದು ಸುಮ್ಮನಾದಳು.
ಒಂದರ್ಧ ಗಂಟೆ ಕಳೆಯಿತು.
ಅಟೆಂಡರ್‌ನ ಕರೆಯನ್ನು ಅನುಸರಿಸಿ ಅವಳು ಕಚೇರಿಯಿಂದ ಹೊರಬಂದಳು. ನೋಡಿದರೆ ಪತಿ. ಆತ ಟಿಫಿನ್ ಬಾಕ್ಸನ್ನೂ  ಮೊಬೈಲನ್ನೂ ಆಕೆಯ ಕೈಗಿತ್ತ. ಬಳಿಕ ಪುಟ್ಟ ನಗುವನ್ನು ಚೆಲ್ಲಿ ಹೊರಟು ಹೋದ. ನೀವು ಉಪಾಹಾರ ಸೇವಿಸಿದಿರಾ... ಎಂಬ ಪ್ರಶ್ನೆ  ಅವಳ ಗಂಟಲಲ್ಲೇ  ಉಳಿಯಿತು.
ಉಪಾಹಾರ ಸೇವಿಸಿದ ಬಳಿಕ ಅವಳು ಮೊಬೈಲನ್ನು ಕೈಗೆತ್ತಿ ಕೊಂಡಳು. ಅವರಿಗೆ ಸಾರಿ ಅನ್ನಬೇಕು. ವಾಟ್ಸಪ್ ತೆರೆದಳು.
ಪತಿಯ ಸಂದೇಶ ಸ್ವಾಗತಿಸಿತು.
‘ನೀನು ಬಡಿಸಿಟ್ಟ ಉಪಾಹಾರ ಸೇವಿಸಬೇಕೆಂದಿದ್ದೆ. ಆದರೆ ನಿನ್ನ ನೆನಪಾಯಿತು. ಹಾಗೆಯೇ ಮುಚ್ಚಿಟ್ಟು ಬಂದಿದ್ದೇನೆ.  ಸ್ಸಾರಿ...’
ಅವಳ ಕೆನ್ನೆ ಒದ್ದೆಯಾಯಿತು.
+ + +
ವರ್ಷಗಳ ಹಿಂದೆ ನಾನೇ ಬರೆದಿರುವ ಈ ಮೇಲಿನ ಕತೆಯನ್ನು ಇಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣವೊಂದಿದೆ-
ಇತ್ತೀಚೆಗೆ ಮದುವೆ ಕಾರ್ಯಕ್ರಮಕ್ಕೆಂದು ಹೊರಟಿದ್ದೆ. ದಾರಿಯಲ್ಲಿ ಗೆಳೆಯನನ್ನು ಕಾಯುತ್ತಾ ಬಳಿಕ ಹತ್ತಿರದ ಅಂಗಡಿ ಯಲ್ಲಿ ಕುಳಿತೆ  ಮತ್ತು ಅಂಗಡಿಯ ವ್ಯಕ್ತಿಯನ್ನು ಮಾತಿಗೆಳೆದೆ. ಅದು ಒಂದು ದೊಡ್ಡ ಕತೆ.
ಗಲ್ಫ್ ನಲ್ಲಿ   ಹಲವು ವರ್ಷಗಳ ಕಾಲ ದುಡಿದೂ ದುಡಿದೂ ಸುಸ್ತಾಗಿ ಊರಿಗೆ ಬಂದು ನೆಮ್ಮದಿಯಿಲ್ಲದೇ ಕಳೆದು ಹೋದ  ವೃತ್ತಾಂತವನ್ನು ಅಂಗಡಿಯ ವ್ಯಕ್ತಿ ಎದುರಿಟ್ಟರು. ಅಂಗಡಿ ಅವರದ್ದಲ್ಲ. ಮಾಲಿಕ ಬೇರೆ. ಅವರು ಸಂಬಳಕ್ಕಾಗಿ ದುಡಿಯುತ್ತಿದ್ದಾರೆ.  ಗಲ್ಫ್ ನಲ್ಲಿದ್ದ ಕಾಲ ಮತ್ತು ಆ ಕಾಲದ ಕಾರು-ಬಾರನ್ನು ಸ್ಮರಿಸುವಾಗ ಅವರು ಭಾವುಕರಾದರು.
ನಾಲ್ಕೈದು  ಅಣ್ಣ-ತಮ್ಮಂದಿರು ಇರುವ ತುಂಬು ಕುಟುಂಬ ಅವರದು. 50ರ ಆಸು-ಪಾಸಿನ ಪ್ರಾಯ. ಗಲ್ಫಲ್ಲಿದ್ದ ವೇಳೆ ಮನೆ  ನಿರ್ವಹಣೆಯೆಲ್ಲ ಅಣ್ಣ-ತಮ್ಮಂದಿರದ್ದೇ. ಊರಿನಲ್ಲಿ ಏನಾದರೂ ಮಾಡಿಡಬೇಕು, ಭವಿಷ್ಯಕ್ಕಾಗಿ ಏನಾದರೂ ಹೂಡಿಕೆ ಮಾಡಬೇಕು  ಎಂಬ ಯೋಚನೆಯಿಂದ ದುಡಿದದ್ದನ್ನು ಊರಿಗೆ ಕಳುಹಿಸುತ್ತಾ ಕನಸು ಕಂಡದ್ದೂ ಆಯಿತು. ಅಣ್ಣ-ತಮ್ಮಂದಿರು ಬೇರೆ ಬೇರೆ ಮನೆ  ಮಾಡಿಕೊಂಡು ಅಣು ಕುಟುಂಬವಾಗುವುದಕ್ಕಿಂತ ಒಂದೇ ಮನೆಯಲ್ಲಿದ್ದು ಅವಿಭಕ್ತ ಕುಟುಂಬವಾಗುವುದು ಅವರ ಆಸೆಯಾಗಿತ್ತು.  ಪತ್ನಿ ಏನಾದರೂ ಸಮಸ್ಯೆ, ಸಂಕಟ ಹೇಳಿಕೊಂಡರೂ ಕಿವಿಗೆ ಹಾಕಿಕೊಂಡದ್ದು ಕಡಿಮೆ. ಬೇರೆ ಮನೆ ಮಾಡುವುದರಿಂದ  ಸಂಬಂಧಗಳು ಹಾಳಾಗುತ್ತವೆ ಎಂಬ ಖಚಿತ ಅಭಿಪ್ರಾಯ ಅವರದ್ದಾದರೆ, ಪತ್ನಿಯ ಅಭಿಪ್ರಾಯ ಬೇರೆಯದೇ. ಅಣ್ಣ-ತಮ್ಮಂದಿರಿಗೆ  ಮದುವೆಯೂ ಆಯಿತು. ಒಂದೇ ಮನೆ. ಸೊಸೆಯಂದಿರ ಸಂಖ್ಯೆಯೂ ಹೆಚ್ಚಾಯಿತು. ಆದರೂ ಬೇರೆ ಮನೆ ಮಾಡುವ ಬಗ್ಗೆ  ಅವರು ಆಲೋಚಿಸಲಿಲ್ಲ. ಅಂಥ ಆಲೋಚನೆಯೇ ಕೆಟ್ಟದು ಎಂಬ ಭಾವ ಅವರದ್ದು. ಮನೆಯಲ್ಲಿ ಅಭಿಪ್ರಾಯ ಬೇಧಗಳು  ಉಂಟಾಗುವುದು, ಮಕ್ಕಳ ವಿಷಯದಲ್ಲಿ ಆಗುವ ನೋವು-ಸಂಕಟಗಳನ್ನು ಪತ್ನಿ ಹೇಳಿಕೊಳ್ಳುತ್ತಿದ್ದರೂ ಅವೆಲ್ಲವನ್ನೂ ನಿರ್ಲಕ್ಷಿಸಿದ್ದೇ   ಹೆಚ್ಚು. ದೊಡ್ಡ ಕುಟುಂಬ ಅಂದಮೇಲೆ ಇಂಥದ್ದೆಲ್ಲ ಸಾಮಾನ್ಯ ಎಂಬ ಭಾವ.
ಕೊನೆಗೂ ಊರಿಗೆ ಮರಳಲೇಬೇಕಾದ ಅನಿವಾರ್ಯತೆ ಎದುರಾಯಿತು.
ಪತ್ನಿಯ ಮಾತನ್ನೂ ಆಲಿಸಬೇಕಿತ್ತು ಎಂದು ಅವರಿಗೆ ಅನಿ ಸಿದ್ದು ಊರಿಗೆ ಬಂದ ಬಳಿಕ. ಅಣ್ಣ-ತಮ್ಮಂದಿರೇನೋ ಉದ್ಯೋಗ,  ಬದುಕು-ಭಾವ ಅಂತ ಅವರವರ ಪ್ರಪಂಚದಲ್ಲಿ ಇದ್ದರು. ನಮ್ಮದೇ ಆದ ಮನೆಯೊಂದಿರಲಿ ಎಂಬ ಪತ್ನಿಯ ಆಸೆಗೆ  ತಣ್ಣೀರೆರಚಿಕೊಂಡೇ ಬಂದ ಅವರಿಗೆ ಮೊದಲ ಬಾರಿ ಆ ಬಗ್ಗೆ ಪಶ್ಚಾತ್ತಾಪವಾಯಿತು. ಊರಲ್ಲಿ ತನ್ನದು ಅನ್ನುವ ಏನೂ ಇಲ್ಲ...
ಅಷ್ಟಕ್ಕೂ,
ಅವರಲ್ಲಿ ಹೇಳಿಕೊಳ್ಳುವುದಕ್ಕೆ ಇನ್ನಷ್ಟು ಸಂಗತಿಗಳಿದ್ದುವು. ನಿಜವಾಗಿ,
ಪತಿ ಮತ್ತು ಪತ್ನಿಯ ನಡುವೆ ವಿರಸ ಮೂಡುವುದಕ್ಕೆ ನಿರ್ದಿಷ್ಟ ಕಾರಣಗಳೇ ಬೇಕಾಗಿಲ್ಲ. ಬಾಹ್ಯನೋಟಕ್ಕೆ ತೃಣಸಮಾನ ಎಂದು  ಕಾಣುವ ಸಂಗತಿಯೇ ಪತ್ನಿಗೋ ಅಥವಾ ಪತಿಗೋ ಪರ್ವತದಂಥ ಕಾರಣ ಆಗಿ ಪರಿವರ್ತಿತವಾಗಬಹುದು. ಸಂಜೆ ಕಚೇರಿಯಿಂದ  ಮನೆಗೆ ಬಂದಾಗ ಪತ್ನಿ ಸ್ವಾಗತಿಸಲಿಲ್ಲವೆಂದೋ ಉಪಚಾರ ಮಾಡಿಲ್ಲವೆಂದೋ ಮುನಿಸಿಕೊಳ್ಳುವ ಪತಿಯಂದಿರಿದ್ದಾರೆ. ಪತ್ನಿಯೇ ಏಕೆ  ಉಪಚರಿಸಬೇಕು, ಪತ್ನಿ ಕಚೇರಿಯಿಂದ ಸಂಜೆ ಮನೆಗೆ ಬಂದಾಗ ಪತಿ ಉಪಚರಿಸುತ್ತಾರಾ, ಸ್ವಾಗತಿಸುತ್ತಾರಾ ಎಂಬ ಪ್ರಶ್ನೆ  ಆಕೆಯಲ್ಲೂ ಇರಬಹುದು. ಇವು ಎರಡರಲ್ಲಿ ಒಂದು ಗಂಭೀರ ಮತ್ತು ಇನ್ನೊಂದು ಗೌಣ ಎಂಬಂತಾಗಬೇಕಿಲ್ಲ. ಎರಡು ಪ್ರಶ್ನೆಗಳಿಗೂ ಮಹತ್ವವಿದೆ ಮತ್ತು ಎರಡನ್ನೂ ಅತ್ಯಂತ ನಾಜೂಕಿನಿಂದ ನಿಭಾಯಿಸುವ ಕಲೆ ಪತಿ ಮತ್ತು ಪತ್ನಿ ಇಬ್ಬರಿಗೂ  ಗೊತ್ತಿರಬೇಕು. ತಾನು ಹೊರಗಿನಿಂದ ಮನೆಗೆ ಬಂದಾಗ ತನ್ನನ್ನು ಸ್ವಾಗತಿಸುವುದು, ಉಪಚರಿಸುವುದು, ನೀರೋ ಇನ್ನೇನನ್ನೋ  ತಂದು ಕೊಡುವುದು ಪತ್ನಿಯ ಕಡ್ಡಾಯ ಕರ್ತವ್ಯ ಎಂದು ನಂಬಿರುವ ಪತಿಯಂದಿರಿದ್ದಾರೆ. ಮಾತ್ರವಲ್ಲ, ಅದನ್ನು ತಮ್ಮ ಕಡ್ಡಾಯ  ಕರ್ತವ್ಯ ಎಂದು ನಂಬಿರುವ ಪತ್ನಿಯಂದಿರೂ  ಇದ್ದಾರೆ. ಅದೇವೇಳೆ, ಪತ್ನಿಯನ್ನು ಹಾಗೆ ಸ್ವಾಗತಿಸುವುದು, ಉಪಚರಿಸುವುದು  ಪತಿಯ ವ್ಯಕ್ತಿತ್ವಕ್ಕೆ ಕುಂದು ಎಂದು ಭಾವಿಸುವ ಪುರುಷರಿದ್ದಾರೆ. ಸೇವೆ ಮಾಡಿಸಿಕೊಳ್ಳಬೇಕಾದವರು ಪುರುಷರು ಮತ್ತು  ಮಾಡಬೇಕಾದವರು ಮಹಿಳೆಯರು ಎಂಬ ಅಲಿಖಿತ ನಿಯಮ ಸಾಮಾಜಿಕವಾಗಿ ಇದೆ. ಇಲ್ಲಿ ಇನ್ನೂ ಒಂದು ನಾಜೂಕಿನ ನಡೆಯೂ  ಇದೆ. ದುಡಿದು ಸಂಜೆ ಮನೆಗೆ ಬರುವ ಪತಿಗೆ ನೀರು ತಂದು ಕೊಡುವುದು, ಬಾಗಿಲಲ್ಲಿ ನಿಂತು ಸ್ವಾಗತಿಸುವುದೆಲ್ಲ ಪರಸ್ಪರ ಪ್ರೀತಿ,  ಒಲುಮೆಯನ್ನು ವಿನಿಮಯ ಮಾಡಿಕೊಳ್ಳುವ ಸಂದರ್ಭವಾಗಿ ಪರಿಗಣಿಸುವ ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾರೆ. ಅದು ಹೆಣ್ಣಿನ  ಕರ್ತವ್ಯ ಎಂದು ಬಗೆಯದ ಗಂಡೂ ಮತ್ತು ಹಾಗೆ ಮಾಡುವುದರಿಂದ ಪರಸ್ಪರರ ನಡುವಿನ ಸಂಬಂಧಕ್ಕೆ ಬಲ ಬರುತ್ತದೆ ಎಂದು  ನಂಬುವ ಹೆಣ್ಣೂ ಇದ್ದಾರೆ. ಅಷ್ಟಕ್ಕೂ,
ದಾಂಪತ್ಯ ಬದುಕು ತರ್ಕದ ಮೇಲೆ ನಿಂತಿಲ್ಲ. ಅದು ಪರಸ್ಪರರ ನಡುವಿನ ತಿಳುವಳಿಕೆಯ ಮೇಲೆ ನಿಂತಿದೆ. ತಾನು ಮನೆ  ಪ್ರವೇಶಿಸುವಾಗ ಸ್ವಾಗತಿಸಿದ್ದೀಯಾ, ನೀರು ತಂದು ಕೊಟ್ಟು ಪ್ರೀತಿಸಿದ್ದೀಯಾ ಎಂಬ ಪತಿಯ ಪ್ರಶ್ನೆಗೆ ಎದುರಾಗಿ, ನೀನು ಹಾಗೆ  ಎಂದಾದರೂ ಮಾಡಿದ್ದೀಯಾ ಎಂದು ಪ್ರತಿ ಪ್ರಶ್ನೆ ಮಾಡುವ ಹಕ್ಕು ಪತ್ನಿಗೆ ಇದೆ ಮತ್ತು ಪತಿ-ಪತ್ನಿ ಇಬ್ಬರೂ ಜೋಡಿಗಳು ಎಂಬ  ವ್ಯಾಖ್ಯಾನಕ್ಕೆ ಇಂಥ ಪ್ರಶ್ನೆಗಳು ತಕ್ಕುದಾಗಿಯೂ ಇವೆ. ಜೋಡಿಗಳಲ್ಲಿ ಜವಾಬ್ದಾರಿ ಇಬ್ಬರಿಗೂ ಇದೆ. ಆದರೆ, ಇಂಥ ಸಂಗತಿಗಳೆಲ್ಲ  ತರ್ಕವನ್ನೇ ಅವಲಂಬಿಸಿಕೊಂಡಿಲ್ಲ. ಇವು ತರ್ಕಗಳಾಚೆಗಿನ ಸಂಗತಿಗಳು. ಹೃದಯ ಬೆಸೆಯುವ ಸಂದರ್ಭಗಳು. ಅವನ್ನು  ತರ್ಕಗಳಾಚೆಗೆ ಕೊಂಡೊಯ್ಯಬೇಕು. ಪತಿ ಬಂದಾಗ ಪತ್ನಿ ಎದುರುಗೊಳ್ಳುವುದು ಅಥವಾ ಪತ್ನಿಯನ್ನು ಮನೆಗೆ ಸ್ವಾಗತಿಸುವುದು  ಇತ್ಯಾದಿಗಳೆಲ್ಲ ಬಾಹ್ಯನೋಟಕ್ಕೆ ಸಣ್ಣ ಸಂಗತಿಗಳಾದರೂ ಆಂತರಿಕವಾಗಿ ಪ್ರೀತಿ ಉಕ್ಕಿಸುವ ಬಹುದೊಡ್ಡ ಸನ್ನಿವೇಶಗಳು. ಇವು  ತರ್ಕಗಳಾಚೆಗೆ ನಡೆಯುತ್ತಿರಬೇಕಾದ ಸಂಗತಿಗಳು. ವಿಷಾದ ಏನೆಂದರೆ,
ದಾಂಪತ್ಯ ಸಂಬಂಧವನ್ನು ಗಟ್ಟಿಗೊಳಿಸುವುದಕ್ಕೆ ಮತ್ತು ಊರ್ಜಿತದಲ್ಲಿಡುವುದಕ್ಕೆ ಹೆಣ್ಣು ಬಹಳವೇ ಪಾಡು ಪಡುತ್ತಾಳೆ. ಹೆಣ್ಣಿಗೆ  ಹೋಲಿಸಿದರೆ, ಗಂಡಿನ ಪಾಡು ಕಡಿಮೆ. ಆರಂಭದಲ್ಲಿ ಉಲ್ಲೇಖಿಸಲಾದ ವ್ಯಕ್ತಿಗೆ ಸಂಬಂಧಿಸಿಯೂ ಇದು ಅನ್ವಯ. ಅವಿಭಕ್ತ  ಕುಟುಂಬದ ಸಂಕಟಗಳನ್ನು ಅವರು ಗಲ್ಫಲ್ಲಿದ್ದಾಗ ಪತ್ನಿ ಹೇಳುತ್ತಿರಲಿಲ್ಲ ಎಂದಲ್ಲ. ಆದರೆ, ಆ ಮಾತುಗಳನ್ನು ಪತ್ನಿಯೋರ್ವಳ  ಮಹತ್ವಾಕಾಂಕ್ಷೆಯ ರೂಪದಲ್ಲಿ ಅವರು ಕಂಡಿದ್ದರೇ ಹೊರತು ಅದನ್ನೊಂದು ಗಂಭೀರ ಸಂಗತಿಯಾಗಿ ಎತ್ತಿಕೊಂಡಿರಲೇ ಇಲ್ಲ.  ಅಣ್ಣ-ತಮ್ಮಂದಿರಲ್ಲೇ  ಸಹಮತಕ್ಕೆ ಬರಲು ಸಾಧ್ಯವಾಗದ ಅಸಂಖ್ಯ ವಿಷಯಗಳಿರುವಾಗ ರಕ್ತ ಸಂಬಂಧಿಗಳಲ್ಲದ ಸೊಸೆಯಂದಿರ  ನಡುವೆ ಭಿನ್ನಾಭಿಪ್ರಾಯ ಬರುವುದನ್ನು ನಿರಾಕರಿಸಲಾಗದು ಅಥವಾ ನಿರ್ಲಕ್ಷಿಸಬಾರದು ಎಂಬ ರೀತಿಯಲ್ಲಿ ಅವರು  ಆಲೋಚಿಸಿಯೂ ಇರಲಿಲ್ಲ. ಸಾಮಾನ್ಯವಾಗಿ,
ಪುರುಷರು ಬೆಳಿಗ್ಗೆ ಮನೆಯಿಂದ ಹೊರ ಹೋದರೆ ಮತ್ತೆ ಮನೆ ಮುಟ್ಟುವುದು ಸಂಜೆಯೋ ರಾತ್ರಿಯೋ ಆದಾಗ. ಆದರೆ  ಮಹಿಳೆಯರು 24 ಗಂಟೆಯೂ ಮನೆಯೊಳಗೆಯೇ ಇರುತ್ತಾರೆ. ಆದ್ದರಿಂದ, ಮನಸ್ತಾಪದ ಸಂಗತಿಗಳು ಮಹಿಳೆಯರ ನಡುವೆ  ಹೆಚ್ಚಿರುವುದಕ್ಕೆ ಅವಕಾಶ ಇದೆ. ಪುರುಷರು ಇದನ್ನು ನಿರ್ಲಕ್ಷಿಸಿದಾಗ ಕ್ರಮೇಣ ಅದು ಅವರ ನೆಮ್ಮದಿಯನ್ನೂ ಕೆಡಿಸುತ್ತದೆ. ಪತ್ನಿ  ತೀರಾ ಸಣ್ಣ ಸಂಗತಿಗೂ ಪತಿಯೊಂದಿಗೆ ಕೋಪಿಸಿಕೊಳ್ಳುತ್ತಾಳೆ. ಜಗಳ ಕಾಯುತ್ತಾಳೆ. ಮಕ್ಕಳ ಮೇಲೆ ರೇಗಾಡತೊಡಗುತ್ತಾಳೆ. ಹೆಚ್ಚಿನ  ಸಮಯ ಮನೆಯಿಂದ ಹೊರಗಿರುವ ಅಥವಾ ವಿದೇಶ ದಲ್ಲಿರುವ ಪುರುಷರಿಗೆ ಅದರ ತೀವ್ರತೆ ಅರ್ಥವಾಗುವುದಿಲ್ಲ. ಅಲ್ಲದೇ,  ಅವಿಭಕ್ತ ಕುಟುಂಬದ ಪರಂಪರೆಯನ್ನು ಕಾಯ್ದುಕೊಳ್ಳು ವುದು ತನ್ನ ಜವಾಬ್ದಾರಿ ಎಂಬ ಭಾವವೂ ಅಲ್ಲಿ ಕೆಲಸ ಮಾಡುತ್ತಿರುತ್ತದೆ.  ಎಲ್ಲಿ ತನ್ನನ್ನು ಕುಟುಂಬಿಕರು ಆಡಿಕೊಳ್ಳುತ್ತಾರೋ ಎಂಬ ಭಯವೂ ಇಂಥ ಸಂದರ್ಭವನ್ನು ಬಿಗಡಾಯಿಸುವಂತೆ ಮಾಡುತ್ತದೆ.  ಆದರೆ,
ಇದರಿಂದಾಗಿ ಆಗುವ ಹಾನಿ ಅಪಾರವಾದುದು. ದಾಂಪತ್ಯ ಸಂಬAಧವು ಸದಾ ಮುಚ್ಚಿದ ಕೆಂಡದAತೆ ನಿಗಿ ನಿಗಿ ಅನ್ನುತ್ತಿರು ತ್ತದೆ.  ಪತಿಯ ತೀರಾ ಪ್ರೇಮದ ಮಾತೂ ಇರಿಯುವ ಮಾತಾಗಿ ಪತ್ನಿಗೆ ಕೇಳಿಸಬಹುದು. ಸದಾ ನೆಮ್ಮದಿ ಕಳೆದುಕೊಂಡು ಬದು ಕುತ್ತಾ  ತನ್ನ ಆರೋಗ್ಯವನ್ನೇ ಆಕೆ ಕೆಡಿಸುತ್ತಿರಬಹುದು. ಮನೆ ಯಲ್ಲಿ ನೆಮ್ಮದಿಯೇ ಹೊರಟು ಹೋಗಿರಬಹುದು. ಬಳಿಕ ವೈದ್ಯರಿಗೆ ಹಣ  ಕೊಡುವ ಪ್ರಕ್ರಿಯೆಗೆ ಅದು ದಾರಿ ತೆರೆಯಬಹುದು. ಹಾಗಂತ,
ಅಣು ಕುಟುಂಬದಲ್ಲೂ ಪತಿ-ಪತ್ನಿ ನಡುವೆ ಸಂಬಂಧ ಬಿಗಡಾಯಿಸುವುದಿಲ್ಲವೇ ಎಂಬ ಪ್ರಶ್ನೆ ಇರಬಹುದು. ಬಿಗಡಾಯಿಸುತ್ತದೆ.  ಆದರೆ, ಅದು ಆರಂಭದಲ್ಲಿ ಉಲ್ಲೇಖಿಸಲಾದ ಗಲ್ಫ್ ವ್ಯಕ್ತಿಗೆ ಸಂಬಂಧಿಸಿದ ರೂಪದಲ್ಲಿರುವುದಿಲ್ಲ. ಇಲ್ಲಿನ ಮುನಿಸು, ಕೋಪ-ತಾ ಪಗಳು ಜಾಣ್ಮೆಯ ಒಂದು ಸ್ಸಾರಿಯಿಂದ, ಒಂದು ಚುಂಬನದಿಂದ ಅಥವಾ ಅಪ್ಪುಗೆಯಿಂದ ಕಳೆದು ಹೋಗುವಂಥದ್ದು.
ಆರಂಭದ ಕತೆ ಅದನ್ನೇ ಹೇಳುತ್ತದೆ.