Thursday, September 23, 2021

ದೋಹಾದ ಎಸಿ ರೂಮಿನ ತಾಲಿಬಾನ್ ಮತ್ತು 1996ರ ತಾಲಿಬಾನ್: ಒಂದು ಮುಖಾಮುಖಿ





ಒಐಸಿ ಪ್ರಧಾನ ಕಾರ್ಯದರ್ಶಿ

ಖತಾರ್‌ನ ವಿದೇಶಾಂಗ ಸಚಿವ

ಖ್ಯಾತ ಅರಬ್ ಬರಹಗಾರ ಫಹ್ಮೀ ಹುವೈದಿ

ಅಫಘಾನಿಸ್ತಾನದ ತಾಲಿಬಾನ್ ಸರ್ಕಾರವು 2001ರಲ್ಲಿ ಬಾಮಿಯಾನ್‌ನಲ್ಲಿರುವ ಬೌದ್ಧ ಸ್ತೂಪಗಳನ್ನು ಸ್ಫೋಟಕ ಬಳಸಿ ಧ್ವಂಸಗೊಳಿಸಿದ  ಬಳಿಕ ಜಾಗತಿಕವಾಗಿ ಉಂಟಾದ ತಲ್ಲಣ ಅಂತಿಂಥದ್ದಲ್ಲ. ಬಾಮಿಯಾನ್‌ನ ಬೌದ್ಧ ಸ್ತೂಪಗಳು ಜಾಗತಿಕವಾಗಿಯೇ ಬಹು  ಪ್ರಸಿದ್ಧವಾಗಿತ್ತು. 1996ರಲ್ಲಿ ಅಫಘಾನ್‌ನಲ್ಲಿ ಆಡಳಿತಕ್ಕೆ ಬಂದ ತಾಲಿಬಾನ್‌ನ ಬಗ್ಗೆ ಏನೇ ಆರೋಪಗಳಿದ್ದರೂ ಅದು ಈ ವಿಶ್ವಪ್ರಸಿದ್ಧ  ಬೌದ್ಧ ಸ್ತೂಪಗಳನ್ನು ಧರಾಶಾಹಿಗೊಳಿಸುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದ್ದರಿಂದಲೇ,

ಈ ಕೃತ್ಯಕ್ಕೆ ಭಾರೀ ವಿರೋಧ ವ್ಯಕ್ತವಾಯಿತು. ತಾಲಿಬಾನ್ ಸರ್ಕಾರಕ್ಕೆ ಅಂದು ಮಾನ್ಯತೆ ಕೊಟ್ಟಿದ್ದ ರಾಷ್ಟ್ರಗಳು ಮೂರೇ ಮೂರು-  ಪಾಕಿಸ್ತಾನ, ಸೌದಿ ಅರೇಬಿಯಾ ಮತ್ತು ಯುಎಇ. ಜಗತ್ತಿನ ಒಟ್ಟು ಸುಮಾರು 300ರಷ್ಟು ರಾಷ್ಟ್ರಗಳ ಪೈಕಿ ತಾಲಿ ಬಾನ್ ಮೇಲೆ  ನಂಬಿಕೆಯಿರಿಸಿದ್ದ ಈ ಮೂರೇ ಮೂರು ರಾಷ್ಟ್ರಗಳೂ ಬೌದ್ಧ ಸ್ತೂಪದ ಧ್ವಂಸವನ್ನು ಕಂಡು ಹೌಹಾರಿದುವು. ವಿಶ್ವಸಂಸ್ಥೆಯಂತೂ  ತೀವ್ರ  ವಿರೋಧ ವ್ಯಕ್ತಪಡಿಸಿತು ಮತ್ತು ಈ ವಿಷಯದಲ್ಲಿ ತಾಲಿಬಾನ್ ಜೊತೆ ಮಾತಾಡುವಂತೆ ಇಸ್ಲಾ ಮಿಕ್ ರಾಷ್ಟ್ರಗಳ ಒಕ್ಕೂಟದೊಂದಿಗೆ  (ಒಐಸಿ) ಮನವಿ ಮಾಡಿಕೊಂಡಿತು. ಆ ಮನವಿಯ ಬಳಿಕ ರಚಿತವಾದ ಮೂವರು ಸದಸ್ಯರ ತಂಡದ ಹೆಸರನ್ನೇ ಆರಂಭದಲ್ಲಿ  ಉಲ್ಲೇಖಿಸಿರುವುದು. ಈ ಮೂವರು ತಾಲಿಬಾನ್ ನಾಯಕರನ್ನು ಭೇಟಿಯಾದರು ಮತ್ತು ಆ ಮಾತುಕತೆಯ ಬಳಿಕ ಫಹ್ಮೀ ಹುವೈದಿಯ  ಅಭಿಪ್ರಾಯವನ್ನು ಪತ್ರಕರ್ತರೋರ್ವರು ಹೀಗೆ ಹಂಚಿಕೊಂಡಿದ್ದರು,“ತಾಲಿಬಾನ್ ಎಂಬುದು ಒಂದು ವಿಚಿತ್ರ ಜನಸಮೂಹ. 50ಕ್ಕಿಂತಲೂ ಅಧಿಕ ಮುಸ್ಲಿಮ್ ರಾಷ್ಟ್ರಗಳ ಒಕ್ಕೂಟವಾದ ಒಐಸಿಯ ಪ್ರತಿನಿಧಿಗಳು ನಾವಾಗಿದ್ದರೂ ನಮ್ಮ ಮಾತಿಗೆ ಕಿವಿಗೊಡುವ ಮನಸ್ಥಿತಿ ಅವರದ್ದಲ್ಲ. ನಮ್ಮ ಮಾತಿನ ಬಳಿಕವೂ ಅವರ ಅಭಿಪ್ರಾಯದಲ್ಲಿ  ಬದಲಾವಣೆ ಆಗಿಲ್ಲ. ಜಗತ್ತು ಹೇಗೆ ಮತ್ತು ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬ ಬಗ್ಗೆ ಕಲ್ಪನೆಯೇ ಇಲ್ಲದ ತಂಡ ಅದು” ಎಂದು  ಹೇಳಿದ್ದರು.

ಫಹ್ಮೀ ಹುವೈದಿ ಹೀಗೆ ಹೇಳಿ 20 ವರ್ಷಗಳೇ ಕಳೆದಿವೆ. 2001ರ ಕೊನೆಯಲ್ಲಿ ಅಧಿಕಾರ ಕಳಕೊಂಡ ತಾಲಿಬಾನ್, ಮೊನ್ನೆ ಮೊನ್ನೆ ಮತ್ತೆ  ಅಫಘಾನ್‌ನಲ್ಲಿ ಅಧಿಕಾರಕ್ಕೆ ಬಂದಿದೆ. ಮಾತ್ರವಲ್ಲ, ಮೊದಲ ಪತ್ರಿಕಾಗೋಷ್ಠಿಯನ್ನೂ ನಡೆಸಿದೆ. ಈ ಪತ್ರಿಕಾಗೋಷ್ಠಿಯಲ್ಲಿ ತಾಲಿಬಾನ್  ವಕ್ತಾರ ಝಬೀಉಲ್ಲಾ ಮುಜಾ ಹಿದ್ ಹೇಳಿದ ಮಾತುಗಳು ಆ ನಂತರ ಸಾಕಷ್ಟು ಚರ್ಚೆಗೂ ಒಳಗಾಗಿವೆ- `ಹೆಣ್ಣು ಮಕ್ಕಳ ಶಿಕ್ಷಣಕ್ಕೆ  ನಮ್ಮ ವಿರೋಧವಿಲ್ಲ, ವಿಶ್ವದ ಇತರ ರಾಷ್ಟ್ರಗಳೊಂದಿಗೆ ನಾವು ಸಂಬಂಧ ಸ್ಥಾಪಿಸುತ್ತೇವೆ, ನಮ್ಮ ನೆಲವನ್ನು ಉಗ್ರ ಚಟುವಟಿಕೆಗಳಿಗೆ  ಬಳಸಿಕೊಳ್ಳುವುದಕ್ಕೆ ಯಾರಿಗೂ ಅವಕಾಶ ಕೊಡಲ್ಲ, 2001ರ ತಾಲಿಬಾನ್‌ಗೂ 2021ರ ತಾಲಿಬಾನ್‌ಗೂ ನಡುವೆ ಐಡಿಯಾಲಜಿ ಮತ್ತು  ನಂಬಿಕೆಗೆ ಸಂಬಂಧಿಸಿ ಯಾವ ಬದಲಾವಣೆ ಆಗದಿದ್ದರೂ ಬೌದ್ಧಿಕವಾಗಿ ಮತ್ತು ವೈಚಾರಿಕವಾಗಿ ನಾವು ಬೆಳೆದಿದ್ದೇವೆ ಮತ್ತು ನಮ್ಮದು  ಈಗ ಹೆಚ್ಚು ಅನುಭವಿ ತಂಡ' ಎಂದೂ ಹೇಳಿದ್ದರು. ಇದನ್ನು ಪುಷ್ಠೀಕರಿಸುವಂತೆ,

ಫ್ರಾನ್ಸ್ ನ  ಎಎಫ್‌ಸಿ ಮಾಧ್ಯಮ ಸಂಸ್ಥೆಯು ಒಂದು ವರದಿ ಯನ್ನೂ ಪ್ರಕಟಿಸಿತ್ತು. ಅಫಘಾನನ್ನು ತಾಲಿಬಾನ್ ವಶಪಡಿಸಿಕೊಂಡ ಎರಡು  ದಿನಗಳ ಬಳಿಕ ಅಲ್ಲಿನ ಪ್ರಮುಖ ನಗರವಾದ ಹೆರಾತ್ ನಲ್ಲಿ ಶಾಲೆಗಳು ಈ ಹಿಂದಿನಂತೆ  ತೆರೆದುಕೊಂಡಿವೆ ಮತ್ತು ಹಿಜಾಬ್‌ಧಾರಿ  ಹೆಣ್ಮಕ್ಕಳು ಎಂದಿನಂತೆ ಶಾಲೆಗೆ ಹೋಗುತ್ತಿದ್ದಾರೆ ಎಂದು ಆ ವರದಿ ಹೇಳಿತ್ತು. ಅಲ್ಲದೇ, ಅಫಘಾನಿಸ್ತಾನವು ತಾಲಿಬಾನ್ ವಶವಾದ  ಸಂದರ್ಭದಲ್ಲಿ ಅಫಘಾನ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ನಾಗರಿಕರೂ ಸೇರಿದಂತೆ ಸುಮಾರು  150ರಷ್ಟು ಭಾರತೀಯರು ಸಿಲುಕಿಕೊಂಡಿದ್ದರು. ರಾಯಭಾರ ಕಚೇರಿಯ ಅಧಿಕಾರಿಗಳಿಗೆ ಸಾಮಾನ್ಯವಾಗಿ ವಿಶೇಷ ಗೌರವ ಸಿಗುತ್ತದೆ.  ವಿಮಾನ ನಿಲ್ದಾಣಕ್ಕಾಗಲಿ ಅಥವಾ ಇತರ ಪ್ರದೇಶಗಳಿಗಾಗಲಿ ತೆರಳುವಾಗ ವಿಶೇಷ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಹಸಿರು  ವಲಯದ ಮೂಲಕ ವಿಮಾನ ನಿಲ್ದಾಣಕ್ಕೆ ಹೋಗುವ ಅವಕಾಶವೂ ಇರುತ್ತದೆ. ಆದರೆ ರಾಯ ಭಾರ ಕಚೇರಿಯಲ್ಲಿ ಸಿಲುಕಿಕೊಂಡ  ಭಾರತೀಯರಿಗೆ ಹಸಿರು ವಲಯದ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ಲಭ್ಯವಾಗದೇ ಹೋದಾಗ ಅವರು ತಾಲಿಬಾನ್  ನೆರವು ಯಾಚಿ ಸಿದರು ಮತ್ತು ತಾಲಿಬಾನ್ ಅವರನ್ನು ಪೂರ್ಣ ಕಾವಲಿನೊಂದಿಗೆ ವಿಮಾನ ನಿಲ್ದಾಣಕ್ಕೆ ತಲುಪಿಸಿ ಸುರಕ್ಷಿತವಾಗಿ ಭಾರತಕ್ಕೆ  ಕಳುಹಿಸಿಕೊಟ್ಟಿತು ಎಂದು ಆ ತಂಡದಲ್ಲಿದ್ದ ಮಾಧ್ಯಮ ಪ್ರತಿನಿಧಿಯೇ ಹೇಳಿದ್ದರು. ಒಂದು ರೀತಿಯಲ್ಲಿ,

1996ರ ತಾಲಿಬಾನ್ ಮತ್ತು 2021ರ ತಾಲಿಬಾನ್ ನಡುವೆ ಮಾತು ಮತ್ತು ವರ್ತನೆಯಲ್ಲಿ ವ್ಯತ್ಯಾಸ ಕಾಣುತ್ತಿದೆ. ಭಾಷೆ ನಾಗರಿಕವಾಗಿದೆ.  20 ವರ್ಷಗಳಲ್ಲಿ ಸಾಕಷ್ಟು ಪಾಠ ಕಲಿತಂತೆ ಆಡುತ್ತಿದೆ. ವೇಷ ಭೂಷಣಗಳಲ್ಲಿ ಬದಲಾವಣೆ ಕಾಣಿಸದಿದ್ದರೂ ಮಾತುಗಳಲ್ಲಿ ಅನುಭವ  ವ್ಯಕ್ತವಾಗುತ್ತಿದೆ. ಆದ್ದರಿಂದಲೋ ಏನೋ, 1996ರಲ್ಲಿ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಟ್ಟಿರದ ಇರಾನ್, ರಷ್ಯಾ ಮತ್ತು  ಚೀನಾಗಳು ಈಗಾಗಲೇ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಕೊಟ್ಟಿವೆ. ಚೀನಾವಂತೂ ಒಂದು ಹೆಜ್ಜೆ ಮುಂದೆ ಹೋಗಿ ತಾಲಿಬಾನ್  ನಾಯಕರೊಂದಿಗೆ ಅಧಿಕೃತ ಮಾತುಕತೆಯನ್ನೂ ನಡೆಸಿದೆ. ನಿಜವಾಗಿ,

1996ರಲ್ಲಿ ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದದ್ದೇ  ಸಿವಿಲ್ ವಾರ್ ಮೂಲಕ. ಅಫಘಾನ್ ಸಂಘರ್ಷಕ್ಕೆ ಬಲುದೊಡ್ಡ  ಇತಿಹಾಸವೇ ಇದೆ. 

1978 ಎಪ್ರಿಲ್‌ನಲ್ಲಿ ಅಫಘಾನ್ ಅಧ್ಯಕ್ಷ ಸರ್ದಾರ್ ಮುಹಮ್ಮದ್ ದಾವೂದ್‌ರ ಹತ್ಯೆ ನಡೆಯುತ್ತದೆ. ಅಫಘಾನಿಸ್ತಾನದ  ಗಡಿಯನ್ನು ಹಿಂದಿನ ಸೋವಿಯತ್ ಯೂನಿ ಯನ್, ಪಾಕಿಸ್ತಾನ ಮತ್ತು ಇರಾನ್‌ಗಳು ಹಂಚಿಕೊಳ್ಳುತ್ತಿವೆ. 1978 ರಲ್ಲಿ ಅಧಿಕಾರಕ್ಕೆ ಬಂದ  ದಾವೂದ್‌ರು ನಿಧಾನಕ್ಕೆ ಸೋವಿಯತ್ ಯೂನಿಯನ್‌ನೊಂದಿಗೆ ಸಂಬಂಧವನ್ನು ಕೆಡಿಸಿಕೊಳ್ಳುತ್ತಾರೆ. ಸೋವಿಯತ್ ಯೂನಿಯನ್ ನೊಂದಿಗೆ ಅಫಘಾನ್ ಗಡಿ ಹಂಚಿಕೊಳ್ಳುತ್ತಿರುವುದರಿಂದ ಮತ್ತು ಆ ಕಾಲದಲ್ಲಿ ಸೋವಿಯತ್ ಯೂನಿಯನ್ ಜಗತ್ತಿನ ಸೂಪರ್  ಪವರ್ ಆಗಿದ್ದುದರಿಂದ ಸಹಜವಾಗಿ ಅಫಘಾನ್‌ನಲ್ಲೂ ಕಮ್ಯುನಿಸ್ಟ್ ಸರ್ಕಾರಗಳೇ ಅಧಿಕಾರ ದಲ್ಲಿರುತ್ತಿದ್ದುವು. ಆದರೆ ದಾವೂದ್‌ರು ಅಫಘಾನ್ ಕಮ್ಯುನಿಸ್ಟರ ವಿರುದ್ಧ ಅಭಿಯಾನ ಕೈಗೊಳ್ಳುತ್ತಾರೆ. ಅಫಘನ್ನಿನ ಕಮ್ಯುನಿಸ್ಟ್ ಪಕ್ಷದಲ್ಲಿ ಎರಡ್ಮೂರು ಗುಂಪುಗಳಿದ್ದುದೂ ಇದಕ್ಕೆ  ಕಾರಣ. ಇವರೂ ಕಮ್ಯುನಿಸ್ಟ್ ಪಕ್ಷದ ನಾಯಕರೇ ಆಗಿದ್ದರು. ಅವರ ಈ ನಡೆ ಅವರ ಹತ್ಯೆಗೆ ಕಾರಣವಾಯಿತಲ್ಲದೇ, ಆ ಬಳಿಕ ಅಫಘಾನ್ ಕಮ್ಯುನಿಸ್ಟ್ ಪಕ್ಷದ ಅಧ್ಯಕ್ಷ ನೂರ್ ಮುಹಮ್ಮದ್ ತಾರಕಿ ಹೊಸ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಆ ನಂತರ,

 1978  ಡಿಸೆಂಬರ್‌ನಲ್ಲಿ ಇವರು ಸೋವಿಯತ್ ಯೂನಿಯನ್ ನೊಂದಿಗೆ 20 ವರ್ಷಗಳ `ಗೆಳೆತನದ ಒಪ್ಪಂದ'ಕ್ಕೆ ಸಹಿ ಹಾಕುತ್ತಾರೆ.  ಇದರಿಂದಾಗಿ ಸೋವಿಯತ್ ಯೂನಿಯನ್ ದೊಡ್ಡ ಸಂಖ್ಯೆಯಲ್ಲಿ ತನ್ನ ಸೇನೆಯನ್ನು ಅಫಘಾನ್‌ನಲ್ಲಿ ನೆಲೆಗೊಳಿಸುತ್ತದೆ. ತಾರಕಿ ಒಂದು  ರೀತಿಯಲ್ಲಿ ಸರ್ವಾಧಿಕಾರಿಯಾಗಿ ಮಾರ್ಪಡುತ್ತಾರೆ ಮತ್ತು 1979 ಸೆಪ್ಟೆಂಬರ್‌ಲ್ಲಿ ಅವರ ಹತ್ಯೆಯೂ ನಡೆಯುತ್ತದೆ. ಇದಾಗಿ ಮೂರು  ತಿಂಗಳ ಬಳಿಕ ಅಫಘಾನಿಸ್ತಾನವನ್ನು ಸೋವಿಯತ್ ಯೂನಿಯನ್ ವಶಪಡಿಸಿಕೊಳ್ಳುತ್ತದೆ. ಈ ಅತಿಕ್ರಮಣವನ್ನು ಅಫಘಾನಿನ  ಇಸ್ಲಾಮಿಸ್ಟರು ತೀವ್ರವಾಗಿ ವಿರೋಧಿಸುತ್ತಾರೆ. ಇದೇ ಸಂದರ್ಭದಲ್ಲಿ ಇರಾನ್‌ನಲ್ಲಿ ಆಡಳಿತ ನಡೆಸುತ್ತಿದ್ದ ರಾಜನನ್ನು ಪದಚ್ಯುತಗೊಳಿಸಿದ  ಇಸ್ಲಾಮಿಸ್ಟರು, ಅಮೇರಿಕದ ಪರೋಕ್ಷ ಆಡಳಿತವನ್ನು ಕೊನೆಗೊಳಿಸುತ್ತಾರೆ. ಒಂದು ಕಡೆ ಅಮೇರಿಕ ಇರಾನನ್ನು ಕಳಕೊಳ್ಳುವಾಗ ಇನ್ನೊಂದೆಡೆ ಅದರ ಬದ್ಧ ಎದುರಾಳಿಯಾಗಿದ್ದ ಸೋವಿಯತ್ ಯೂನಿಯನ್ ಅಫಘಾನನ್ನು ಪಡೆದುಕೊಳ್ಳುತ್ತದೆ. ಶೀತಲ ಸಮರದ ಆ  ಕಾಲದಲ್ಲಿ ಅಮೇರಿಕ ಈ ಬೆಳವಣಿಗೆಯನ್ನು ಸಹಜವಾಗಿ ಸ್ವೀಕರಿಸುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ರಷ್ಯಾದ ಮೇಲೆ ದಿಗ್ಬಂಧನ  ವಿಧಿಸುತ್ತದೆ ಮತ್ತು 1980ರಲ್ಲಿ ಮಾಸ್ಕೋದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಹಿಷ್ಕರಿಸುತ್ತದೆ. 1981ರಲ್ಲಿ ಅಮೇರಿಕದ ಅಧ್ಯಕ್ಷರಾಗಿ  ರೊನಾಲ್ಡ್ ರೇಗನ್ ಅಧಿಕಾರಕ್ಕೆ ಬರುವುದರೊಂದಿಗೆ ತನ್ನ ವಿದೇಶ ನೀತಿಯಲ್ಲಿ ಬದಲಾವಣೆ ಮಾಡಿಕೊಳ್ಳುತ್ತಾರಲ್ಲದೇ, ಸೋವಿಯತ್  ಯೂನಿಯನ್‌ನ ಅಫಘಾನ್ ಅತಿಕ್ರಮಣವನ್ನು ವಿರೋಧಿಸುತ್ತಿದ್ದ ಮುಜಾಹಿದೀನ್‌ಗಳಿಗೆ ಶಸ್ತ್ರಾಸ್ತ್ರ ಸಹಿತ ಸರ್ವ ಬೆಂಬಲವನ್ನು  ಒದಗಿಸುತ್ತಾರೆ. ಮಾತ್ರವಲ್ಲ, 

ಇವರನ್ನು ಸ್ವಾತಂತ್ರ‍್ಯ ಹೋರಾಟಗಾರರು ಎಂದು ಅಮೆರಿಕ ಕರೆಯುತ್ತದೆ. 1989ರಲ್ಲಿ ಉಜ್ಬೆಕಿಸ್ತಾನ್,  ತಜಕಿಸ್ತಾನ್ ಸಹಿತ ಹಲವು ರಾಷ್ಟ್ರಗಳಾಗಿ ಸೋವಿಯತ್ ಯೂನಿಯನ್ ವಿಭಜನೆಗೊಂಡು ಭಾರೀ ಆಂತರಿಕ ಬಿಕ್ಕಟ್ಟಿಗೆ ತುತ್ತಾಯಿತಲ್ಲದೇ, ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರು ಅಫಘಾನ್ ನಿಂದ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳುತ್ತಾರೆ. ಬಳಿಕ ಡಾ|  ನಜೀಬುಲ್ಲಾ ಅಧ್ಯಕ್ಷರಾಗುತ್ತಾರೆ. ಇವರೂ ಕಮ್ಯುನಿಸ್ಟ್ ವಿಚಾರಧಾರೆಯ ವ್ಯಕ್ತಿ. ಅಮೇರಿಕ ಒದಗಿಸಿದ್ದ ಶಸ್ತ್ರಾಸ್ತ್ರಗಳ ರುಚಿ ಹತ್ತಿದ್ದ ಮುಜಾಹಿದೀನ್‌ಗಳು ನಜೀಬುಲ್ಲಾ ಸರ್ಕಾರದ ವಿರುದ್ಧ ಹೋರಾಟವನ್ನು ಮುಂದುವರಿಸುತ್ತಾರೆ. ತಾಜಿಕ್, ಉಝ್ಬೆಕ್ ಮುಂತಾದ ಬುಡಕಟ್ಟುಗಳು  ಒಟ್ಟು ಸೇರಿಕೊಂಡು ಒಂದು ತಂಡವಾಗಿ ಹೋರಾಟ ನಿರತರಾಗುತ್ತಾರೆ ಮತ್ತು 1992ರಲ್ಲಿ ಅಧ್ಯಕ್ಷ ಡಾ| ನಜೀಬುಲ್ಲಾರನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿ ಅಫಘಾನನ್ನು ವಶಪಡಿಸಿಕೊಳ್ಳುತ್ತಾರೆ. ಹಾಗೆಯೇ, ಬುರ್ಹಾನುದ್ದೀನ್ ರಬ್ಬಾನಿ ಹೊಸ ಅಧ್ಯಕ್ಷರಾಗಿ  ಆಯ್ಕೆಯಾಗುತ್ತಾರೆ. ಆದರೆ, 

ಈ ಗುಂಪಿನಲ್ಲಿ ಪಶ್ತೂನ್ ಬುಡಕಟ್ಟುಗಳ ಗುಂಪಾದ ತಾಲಿಬಾನ್ ಸೇರಿಕೊಂಡಿರಲಿಲ್ಲ. ಅದು ಬುರ್ಹಾನುದ್ದೀನ್ ರಬ್ಬಾನಿ ಸರ್ಕಾರದ ವಿರುದ್ಧ ಹೋರಾಟದಲ್ಲಿ ನಿರತವಾಗುತ್ತದೆ. ಈ ಸಂದರ್ಭದಲ್ಲಿ ಕರೀಮ್ ಖಲೀಲಿ, ಅಬ್ದುಲ್ ರಶೀದ್  ದೋಸ್ತುಮ್, ಅಬ್ದುಲ್ಲಾ ಅಬ್ದುಲ್ಲಾ, ಬುರ್ಹಾನುದ್ದೀನ್ ರಬ್ಬಾನಿ, ಅಹ್ಮದ್ ಶಾ ಮಸೂದ್, ಅಮ್ರುಲ್ಲಾ  ಸಲೇಹ್ ಮುಂತಾದ ವಿವಿಧ  ಬುಡಕಟ್ಟುಗಳ ನಾಯಕರು ಒಟ್ಟು ಸೇರಿ ತಾಲಿಬಾನ್ ವಿರುದ್ಧ ಹೋರಾಡಲು `ಉತ್ತರದ ಒಕ್ಕೂಟ' ಎಂಬ ಗುಂಪನ್ನು ರಚಿಸುತ್ತಾರೆ.  ಆದರೆ, ಈ ಗುಂಪು 1996ರಲ್ಲಿ ತಾಲಿಬಾನ್ ವಿರುದ್ಧ ಸೋಲನುಭವಿಸುತ್ತದೆ ಮತ್ತು ಮಾಜಿ ಅಧ್ಯಕ್ಷ ಡಾ| ನಜೀಬುಲ್ಲಾರನ್ನು ಈ ತಾಲಿಬಾನ್ ಬಹಿರಂಗವಾಗಿ ನೇಣಿಗೆ ಹಾಕುತ್ತದೆ. ನಿಜವಾಗಿ,

1996ರಲ್ಲಿ ಸಂಘರ್ಷದ ಮೂಲಕ ತಾಲಿಬಾನ್ ಅಫಘಾನನ್ನು ವಶಪಡಿಸಿಕೊಂಡಿದ್ದರೆ, ಈ ಬಾರಿ ಅಂಥ ಯಾವ ಸಿವಿಲ್ ವಾರನ್ನು  ನಡೆಸದೆಯೇ ವಶಪಡಿಸಿಕೊಂಡಿದೆ. 1996ರಲ್ಲಿ ತಾಲಿಬಾನ್ ಈ ಜಗತ್ತಿಗೆ ಹೊಸತು. ತಾಲಿಬಾನ್‌ಗೂ ಈ ಜಗತ್ತು ಹೊಸತು. ಕೇವಲ  ಬುಡಕಟ್ಟು ಜನಾಂಗವಷ್ಟೇ ಆಗಿದ್ದ ತಾಲಿಬಾನ್‌ಗೆ, ಹೊರ ಜಗತ್ತಿನ ಪರಿಚಯವೂ ಇರಲಿಲ್ಲ. ಸಂಪರ್ಕವೂ ಇರಲಿಲ್ಲ. ಆದರೆ 2021ರ  ತಾಲಿಬಾನ್ ಹಾಗಲ್ಲ. ಖತಾರ್‌ನ ದೋಹಾದಲ್ಲಿ ಅದಕ್ಕೆ ಅಧಿಕೃತ ಕಚೇರಿ ಇದೆ. ಅಮೇರಿಕನ್ ಸರ್ಕಾರದೊಂದಿಗೆ ಹಲವು ಸುತ್ತಿನ ಶಾಂತಿ  ಮಾತುಕತೆಗಳನ್ನು ನಡೆಸಿದೆ. ಜಗತ್ತಿನ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಸಂಪರ್ಕವಿದೆ. ಅಮೇರಿಕದ ಜೊತೆ 2020ರಲ್ಲಿ ನಡೆದ ಒಪ್ಪಂದದ ಪ್ರಕಾರವೇ 2021 ಮೇ 1 ರಂದು ಅಮೆರಿಕದ ಸೇನಾ ಹಿಂತೆಗೆತ ಮತ್ತು ಪರೋಕ್ಷ ಅಧಿಕಾರ ಹಸ್ತಾಂತರ ನಡೆದಿದೆ. 1996ರಲ್ಲಿ ಅದಕ್ಕೆ ರಾಜಕೀಯ ಮಾತಾಡಲು ಬರುತ್ತಿರಲಿಲ್ಲ. ಬಂದೂಕಿನ ಮತ್ತು ಬಂಡಾಯದ ಭಾಷೆ ಮಾತ್ರವೇ ಅದರದ್ದಾಗಿತ್ತು. ನಾಗರಿಕ  ಸಮಾಜದ ಭಾಷೆ ಅದಕ್ಕೆ ಅಪರಿಚಿತವಾಗಿತ್ತು. ಇವತ್ತು ದೋಹಾದ ಎಸಿ ರೂಮಲ್ಲಿ ಕೂತು ಅದು ಸಂವಾದ ನಡೆಸುವ ಹಂತಕ್ಕೆ ತಲುಪಿದೆ.  ಒಂದು ರೀತಿಯಲ್ಲಿ, ಕಳೆದ ಎರಡು ದಶಕಗಳಲ್ಲಿ ತಾಲಿಬಾನ್‌ನಲ್ಲಿ ಕಂಡುಬಂದಿರುವ ಬದಲಾವಣೆಗಳು ಇವು. ಹಾಗಂತ,

ಅಶ್ರಫ್ ಘನಿ ಸರ್ಕಾರ ಅಫಘಾನ್‌ನಲ್ಲಿ ಅಸ್ತಿತ್ವ ಉಳಿಸಿಕೊಂಡಿ ದ್ದದ್ದೇ  ಅಮೇರಿಕದ ಬೆಂಬಲದಿಂದ. ಅವರ ಬಗ್ಗೆ ಅಫಘಾನ್ ನಾಗರಿಕರಲ್ಲಿ  ವಿಶ್ವಾಸ ಇದ್ದಿರಲಿಲ್ಲ. ಸುಮಾರು ಮೂರುವರೆ ಲಕ್ಷದಷ್ಟಿದ್ದ ಅಫಘಾನ್ ಸೈನಿಕರು ವೇತನವಿಲ್ಲದೇ, ತಮಗೊದಗಿಸಿರುವ ಬಂದೂಕನ್ನೇ  ಮಾರಿ ಜೀವನ ನಡೆಸುತ್ತಿದ್ದರು ಎಂಬ ವರದಿಯಿದೆ. ಭ್ರಷ್ಟಾಚಾರದ ಆರೋಪವೂ ಘನಿ ಸರ್ಕಾರದ ಮೇಲಿದೆ. ಅಮೇರಿಕದ ಸೇನೆ  ಇರುವವರೆಗೆ ಮಾತ್ರ ಅಶ್ರಫ್ ಘನಿ ಅಧಿಕಾರದಲ್ಲಿರುತ್ತಾರೆ ಎಂಬುದು ತಾಲಿಬಾನ್‌ಗೂ ಗೊತ್ತಿತ್ತು. ತನ್ನ ಸೇನಾ ವಿಮಾನ ತಜ್ಞರನ್ನು ಮತ್ತು  ಪೈಲಟ್‌ಗಳನ್ನು 2021 ಮೇ 1ರಂದು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಅಮೇರಿಕ ಸೇನಾ ವಾಪಸಾತಿ ಪ್ರಾರಂಭಿಸುತ್ತದ್ದಂತೆಯೇ ತಾಲಿಬಾನ್ ವಿಜಯವನ್ನು ಆಚರಿಸಿತು. ಅಫಘಾನನ್ನು ವಶಪಡಿಸಿಕೊಳ್ಳದಂತೆ ತಾಲಿಬಾನನ್ನು ತಡೆದಿದ್ದುದೇ ಅಮೇರಿಕದ ಯುದ್ಧ ವಿಮಾನಗಳು ಉದುರಿಸುವ ಬಾಂಬ್‌ಗಳು. ಇದೀಗ ಪೈಲಟ್‌ಗಳನ್ನೇ ಅಮೇರಿಕ ಹಿಂತೆಗೆದುಕೊಳ್ಳುವ ಮೂಲಕ ತಾಲಿಬಾನ್‌ಗೆ ಪರೋಕ್ಷ  ಸಹಾಯ ಮಾಡಿತ್ತು. ಇದೇ ವೇಳೆ ಅಫಘಾನ್ ಪೈಲಟ್‌ಗಳನ್ನು ಗುರಿ ಮಾಡಿದ ತಾಲಿಬಾನ್, 7 ಮಂದಿಯನ್ನು ಹತ್ಯೆ ಮಾಡಿತು. ಹೀಗೆ  ಯುದ್ಧ ವಿಮಾನಗಳು ವಿಮಾನ ನಿಲ್ದಾಣದಲ್ಲೇ  ಉಳಿದುಕೊಳ್ಳುವುದರೊಂದಿಗೆ ಅಫಘಾನ್ ಸೇನೆಯ ಕೈಕಟ್ಟಿ ಹಾಕಿದಂತಾಯಿತು. ಅಲ್ಲದೇ,  ಬದುಕು ನಡೆಸುವುದೇ ದುಸ್ತರವಾಗಿದ್ದ ಅಫಘಾನ್ ಸೈನಿಕರಲ್ಲಿ ಹೋರಾಡುವ ಛಲವೂ ಇರಲಿಲ್ಲ. ಆದ್ದರಿಂದಲೇ, ತಾಲಿಬಾನ್‌ಗೆ ಯಾವ  ಪ್ರತಿರೋಧವೂ ಎದುರಾಗಲಿಲ್ಲ. ಸದ್ಯ,

ಜಗತ್ತು ತಾಲಿಬಾನ್‌ನತ್ತ ಅರ್ಧ ಕುತೂಹಲ ಮತ್ತು ಅರ್ಧ ಭಯದಿಂದ ನೋಡುತ್ತಿದೆ. ಭಯ ಯಾಕೆಂದರೆ, 1996ರಿಂದ 2001ರ ನಡುವೆ  ಅದು ಮಾಡಿದ ಅನಾಹುತಕಾರಿ ಆಡಳಿತ. ಕುತೂಹಲಕ್ಕೂ ಕಾರಣ ಇದೆ. ಮೊನ್ನೆ ಮೊನ್ನೆ ಅದು ನಡೆಸಿದ ಪತ್ರಿಕಾಗೋಷ್ಠಿಯೇ ಈ  ಕುತೂಹಲಕ್ಕೆ ಕಾರಣ. ಈಗಿನದು ಪಶ್ತೂನ್‌ಗಳ ಸರ್ಕಾರ ಅಲ್ಲ, ವಿವಿಧ ಬುಡಕಟ್ಟುಗಳನ್ನು ಸೇರಿಸಿ ಕೊಂಡು ಸರ್ಕಾರ ರಚಿಸುತ್ತೇವೆ  ಎಂದೂ ಅದು ಹೇಳಿದೆ. ಈ ಹಿಂದೆ ತಾಲಿಬಾನ್‌ಗೆ ಅಫಘಾನಿಸ್ತಾನದ ಹೊರಗೆ ಅಧಿಕೃತ ಮುಖ ಇರಲಿಲ್ಲ. ಇವತ್ತು ದೋಹಾದಲ್ಲಿ ಅದಕ್ಕೆ  ಅಧಿಕೃತ ಕಚೇರಿ ಇದೆ. ಆದರೂ ಜಗತ್ತಿನ ಮುಂದಿರುವುದು 1996ರಿಂದ 2001ರ ವರೆಗಿನ ಕರಾಳ ಅನುಭವಗಳು. ಆದ್ದರಿಂದ, ಅದನ್ನು  ಸುಳ್ಳು ಮಾಡುವ ಅವಕಾಶವೊಂದು ತಾಲಿಬಾನ್‌ಗೆ ಇದೀಗ ದಕ್ಕಿದೆ.

ಅಮೇರಿಕ ಸಹಿತ ಜಗತ್ತಿನ ವಿವಿಧ ಬಲಾಢ್ಯ ಪ್ರಜಾತಂತ್ರ ರಾಷ್ಟ್ರಗಳೇ  ಪರೋಕ್ಷವಾಗಿ ಅಥವಾ ಅಧಿಕೃತ ಒಳ ಒಪ್ಪಂದದ ಮೂಲಕ ಅದಕ್ಕೆ ಅಧಿಕಾರ ಹಸ್ತಾಂತರ ಮಾಡಿರುವುದರಿಂದ ಹೊಸ ತಾಲಿಬಾನ್‌ನ  ಬಗ್ಗೆ ನಿರೀಕ್ಷೆ ತಪ್ಪಲ್ಲ. ಕಾದು ನೋಡೋಣ.

No comments:

Post a Comment