Tuesday, October 19, 2021

ಪವಿತ್ರ ಕುರ್‌ಆನ್: ಸಂದೇಹದ ಸುತ್ತ...
 1. ಝೈದ್ ಬಿನ್ ಸಾಬಿತ್

2. ಅಬ್ದುಲ್ಲಾ  ಬಿನ್ ಝುಬೈರ್

3. ಸಈದ್ ಬಿನ್ ಆಸ್

4. ಅಬ್ದರ‍್ರಹ್ಮಾನ್ ಬಿನ್ ಹಾರಿಸ್

ಇತಿಹಾಸವನ್ನು ಅಧ್ಯಯನ ಮಾಡುತ್ತಿದ್ದೆ. ಈ ಮೇಲಿನ ಹೆಸರುಗಳು ನನ್ನ ಅಧ್ಯಯನ ಪಟ್ಟಿಯಲ್ಲೂ ಇತ್ತು. ಇದಕ್ಕೆ ಒಂದು ಕಾರಣವೂ  ಇದೆ-

ಹಿರಿಯ ಸಾಹಿತಿಯೊಬ್ಬರು ಪವಿತ್ರ ಕುರ್‌ಆನಿನ ಕ್ರೋಢೀಕರಣದ ಕುರಿತಂತೆ ಕೆಲವು ಪ್ರಶ್ನೆಗಳನ್ನು ಈ ಹಿಂದೆ ಎತ್ತಿದ್ದರು-
‘ಕುರ್‌ಆನನ್ನು ಕ್ರೋಢೀಕರಿಸಿದ್ದು ಮೂರನೇ ಖಲೀಫ ಉಸ್ಮಾನ್ ಬಿನ್ ಅಫ್ಫಾನ್(ರ)ರ ಕಾಲದಲ್ಲಿ. ಇವರಿಗಿಂತ ಮೊದಲು ಅಬೂಬಕರ್ (ರ) ಮತ್ತು ಉಮರ್ ಬಿನ್ ಖತ್ತಾಬ್(ರ)ರು ಆಡಳಿತ ನಡೆಸಿದ್ದರು. ಇವರಿಬ್ಬರ ಒಂದು ದಶಕದ ಆಡಳಿತಾವಧಿಯ ಬಳಿಕ ಖಲೀಫರಾಗಿ  ಉಸ್ಮಾನ್ ಬಿನ್ ಅಫ್ಫಾನ್ ಆಯ್ಕೆಯಾದರು. ಈ ಮೇಲಿನ ನಾಲ್ಕು ಮಂದಿಯ ಸಮಿತಿಯನ್ನು ರಚಿಸಿದ್ದೇ  ಇವರು. ಪ್ರವಾದಿ ನಿಧನರಾಗುವಾಗ ಕುರ್‌ಆನ್ ಪುಸ್ತಕ ರೂಪ ದಲ್ಲಿ ಇರಲಿಲ್ಲ. ಆ ಬಳಿಕ 10 ವರ್ಷಕ್ಕಿಂತಲೂ ದೀರ್ಘ ಸಮಯ ಸರಿದು ಹೋದ ನಂತರ  ಉಸ್ಮಾನ್(ರ) ಅದನ್ನು ಕ್ರೋಢೀಕರಿಸಿದರು. ಹೀಗಿರುವಾಗ, ಕುರ್‌ಆನಿನ ಅಥೆಂಟಿಸಿಟಿ ಏನು? ಪ್ರವಾದಿಯವರಿಗೆ ಕುರ್‌ಆನ್ ಒಮ್ಮೆಲೇ  ಅವತೀರ್ಣವಾಗಿಲ್ಲದೇ ಇರುವಾಗ ಮತ್ತು ಅವರ ಕಾಲದಲ್ಲಿ ಅದು ಪುಸ್ತಕ ರೂಪದಲ್ಲಿ ಕ್ರೋಢೀಕರಣಗೊಂಡಿಲ್ಲದೇ ಇರುವಾಗ ಅದು  ಯಾವ ನ್ಯೂನ್ಯತೆಯೂ ಇಲ್ಲದೇ ಸಂಗ್ರಹಗೊಂಡಿದೆ ಎಂದು ಹೇಗೆ ಹೇಳುತ್ತೀರಿ? ಪ್ರವಾದಿ ಮುಹಮ್ಮದ್‌ರಿಗೆ 23 ವರ್ಷಗಳಲ್ಲಿ  ಬಿಡಿಬಿಡಿಯಾಗಿ ಅವತೀರ್ಣಗೊಂಡ ಕುರ್‌ಆನನ್ನು ಯಾವುದರಲ್ಲಿ ಬರೆದಿಡಲಾಗಿತ್ತು ಮತ್ತು ಅವರ ಕಾಲಾನಂತರದ 10 ವರ್ಷಗಳ ತನಕ  ಅವು ಕಾಲಕ್ಷೇಪಕ್ಕೆ ಒಳಗಾಗಿಲ್ಲವೆಂದು ಖಚಿತಪಡಿಸಿಕೊಳ್ಳುವುದು ಹೇಗೆ? ಭಾವನಾತ್ಮಕ ಪರಿಧಿಯಿಂದ ಹೊರಬಂದು ತಾರ್ಕಿಕ ನೆಲೆಯಲ್ಲಿ  ಇವಕ್ಕೆ ಉತ್ತರಗಳು ಏನೇನು’ ಎಂಬೆಲ್ಲಾ ಸಂದೇಹ-ಪ್ರಶ್ನೆಗಳು ಅವರದ್ದಾಗಿದ್ದುವು. ಹಾಗಂತ,

ಅವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಬೇಕಿಲ್ಲ.

ಇಸ್ಲಾಮೀ ಇತಿಹಾಸ ಎಲ್ಲವನ್ನೂ ದಾಖಲಿಸಿಟ್ಟಿದೆ. ಆರಂಭದಲ್ಲಿ ಉಲ್ಲೇಖಿಸಲಾಗಿರುವ ನಾಲ್ಕು ಹೆಸರುಗಳನ್ನು ಖಲೀಫಾ ಉಸ್ಮಾನ್‌ರು  ಆಯ್ಕೆ ಮಾಡಿದ್ದಾರೆಂಬುದು ನಿಜ. ಆದರೆ, ಈ ನಾಲ್ಕು ಮಂದಿಯನ್ನು ಕುರ್‌ಆನ್ ಕ್ರೋಢೀಕರಣಕ್ಕಾಗಿ ಅವರು ಆಯ್ಕೆ ಮಾಡಿದ್ದರು  ಎಂಬುದು ಮಾತ್ರ ನಿಜವಲ್ಲ. ಈ ನಾಲ್ಕು ಮಂದಿಯ ಸಮಿತಿಯನ್ನು ಖಲೀಫಾ ಉಸ್ಮಾನ್ ರಚಿಸಿದ್ದು ಕುರ್‌ಆನ್ ಕ್ರೋಢೀಕರಣಕ್ಕಾಗಿ  ಅಲ್ಲ, ಅದಾಗಲೇ ಕ್ರೋಢೀಕರಣಗೊಂಡಿರುವ ಕುರ್‌ಆನಿನ ಪ್ರತಿಗಳನ್ನು ರಚಿಸುವುದಕ್ಕೆ. ಹಾಗಿದ್ದರೆ ಆ ಮೊದಲೇ ಕುರ್‌ಆನ್‌ನ  ಕ್ರೋಢೀಕರಣ ನಡೆದಿರುವುದು ಯಾವಾಗ? ಅಂದಹಾಗೆ,

ಈ ಮೇಲಿನ ನಾಲ್ಕು ಮಂದಿಯ ಸಮಿತಿಯು ಪವಿತ್ರ ಕುರ್‌ಆನಿನ ಒಟ್ಟು 7 ಪ್ರತಿಗಳನ್ನು ರಚಿಸಿದರು. ಪ್ರವಾದಿ(ಸ) ಪತ್ನಿ ಹಫ್ಸಾರ  ಬಳಿಯಿದ್ದ ಕುರ್‌ಆನ್ ಪ್ರತಿಯನ್ನು ಪಡೆದುಕೊಂಡು ಅದರಿಂದ ಈ 7 ಪ್ರತಿಗಳನ್ನು ಅವರು ರಚಿಸಿದರು. ಆದರೆ ಬರಬರುತ್ತಾ ಈ  ಮಾಹಿತಿ ಹೇಗೆ ತಿರುಚಲ್ಪಟ್ಟಿತೆಂದರೆ, ಪ್ರತಿಗಳನ್ನು ರಚಿಸಿದ ಮಂದಿಯೇ ಕುರ್‌ಆನನ್ನು ಕ್ರೋಢೀಕರಿಸಿದವರು ಎಂದು ಪ್ರಚಾರವಾಯಿತು.  ನಿಜವಾಗಿ, ಪವಿತ್ರ ಕುರ್‌ಆನನ್ನು ಖಲೀಫಾ ಉಸ್ಮಾನ್‌ರ ಕಾಲದಲ್ಲಿ ಕ್ರೋಢೀಕರಿಸಿದ್ದಲ್ಲ. ಈ ಮೇಲಿನ ನಾಲ್ಕು ಪ್ರವಾದಿ ಅನುಯಾಯಿಗಳು  ಅದರ ರೂವಾರಿಗಳೂ ಅಲ್ಲ.

ಪವಿತ್ರ ಕುರ್‌ಆನ್ ಅವತೀರ್ಣವಾದ ಕೂಡಲೇ ಪ್ರವಾದಿ ಮುಹಮ್ಮದ್(ಸ)ರು ಪುರುಷ ಸಂಗಾತಿಗಳನ್ನು ಕರೆದು ಓದಿ ಕೇಳಿಸುತ್ತಿದ್ದರು.  ಬಳಿಕ ಮಹಿಳೆಯರನ್ನೂ ಕರೆದು ಕೇಳಿಸುತ್ತಿದ್ದರು. ಇಷ್ಟೇ ಅಲ್ಲ, ಯಾರಿಗೆ ಬರಹ ಗೊತ್ತಿದೆಯೋ ಅವರೊಂದಿಗೆ ಆ ವಚನಗಳನ್ನು ಬರೆ ದಿಡುವಂತೆಯೂ ಸೂಚಿಸುತ್ತಿದ್ದರು. ಬರೆದಾದ ಬಳಿಕ ಅವರಿಂದ ಓದಿ ಕೇಳಿಸಿಕೊಳ್ಳುತ್ತಿದ್ದರು. ತಪ್ಪಿದ್ದರೆ ತಿದ್ದುತ್ತಿದ್ದರು. ಅವರಲ್ಲಿ ಅ ನೇಕರು ಆ ವಚನಗಳನ್ನು ಕಂಠಪಾಠ ಮಾಡುತ್ತಿದ್ದರು. ಪ್ರವಾದಿಯವರಿಂದ ಕುರ್‌ಆನನ್ನು ಆಲಿಸಿ ಅದನ್ನು ಯಥಾರೂಪದಲ್ಲಿ ಆ  ಕ್ಷಣದಲ್ಲೇ  ಸುಮಾರು 44 ಅನುಯಾಯಿಗಳು ದಾಖಲಿಸಿಟ್ಟಿದ್ದಾರೆ ಎಂಬ ವರದಿಯೂ ಇದೆ. ಇವರಲ್ಲಿ ಅಬ್ದುಲ್ಲಾ ಬಿನ್ ಮಸ್‌ಊದ್,  ಸಾಲಿಮ್ ಮೌಲಾ ಅಬೀ ಹುದೈಫಾ, ಮುಆದ್ ಬಿನ್ ಜಬಲ್, ಉಬಯ್ಯ್ ಬಿನ್ ಕಅಬ್, ಸಈದ್ ಬಿನ್ ಆಸ್, ಅಬ್ದರ‍್ರಹ್ಮಾನ್ ಬಿನ್  ಹಾರಿಸ್ ಮುಂತಾದವರು ಪ್ರಮುಖರಾಗಿದ್ದಾರೆ. ಮಾತ್ರವಲ್ಲ, ತಾವೇ ನೇಮಿಸಿ ಬರೆಸಿದವರ ಬರಹವನ್ನು ಪ್ರವಾದಿ ತನ್ನ ಕೋಣೆಯಲ್ಲಿ  ಕಾಪಿಡುತ್ತಿದ್ದರು. ಇದರ ಜೊತೆಗೇ ಇನ್ನೊಂದು ಬಹುಮುಖ ಅಂಶವೂ ಇದೆ.

ಅದು ಕಂಠಪಾಠ.

ಪ್ರವಾದಿಯವರ ಜೀವಿತಾವಧಿಯಲ್ಲಿಯೇ ಕುರ್‌ಆನನ್ನು ಕಂಠ ಪಾಠ ಮಾಡಿರುವವರ ಸಂಖ್ಯೆ 100ಕ್ಕಿಂತಲೂ ಅಧಿಕ ಇತ್ತು. ಒಂದುಕಡೆ,  ಪವಿತ್ರ ಕುರ್‌ಆನಿನ ಲಿಖಿತ ರೂಪ ಇದ್ದರೆ ಇನ್ನೊಂದೆಡೆ ಅದನ್ನು ಕಂಠಪಾಠ ಮಾಡಿದವರೂ ಇದ್ದರು. ಬರಬರುತ್ತಾ ಅನುಯಾಯಿಗಳ  ಸಂಖ್ಯೆ ಹೆಚ್ಚುತ್ತಾ ಹೋದಾಗ ಆವರೆಗೆ ಅವತೀರ್ಣವಾದ ಕುರ್‌ಆನನ್ನು ಆ ಹೊಸ ಅನುಯಾಯಿಗಳಿಗೆ ತಲುಪಿಸುವ ಸವಾಲೂ  ಎದುರಾಯಿತು. ಪ್ರವಾದಿ ಅದಕ್ಕಾಗಿ ತನ್ನ ನಂಬಿಗಸ್ಥ ಅನುಯಾಯಿಗಳ ತಂಡವನ್ನು ರಚಿಸಿದರು. ಆ ಹೊಸ ಅನುಯಾಯಿಗಳಿಗೆ  ಕುರ್‌ಆನನ್ನು ಓದಿ ಹೇಳುವ ಮತ್ತು ಕಂಠಪಾಠ ಮಾಡಿಸುವ ಹೊಣೆಗಾರಿಕೆಯನ್ನು ಈ ತಂಡಕ್ಕೆ ವಹಿಸಿಕೊಟ್ಟರು. ಈ ಪರಂಪರೆ ಎಷ್ಟು  ಅದ್ಭುತವಾಗಿ ಮುಂದುವರಿದುಕೊಂಡು ಬಂದಿದೆ ಎಂದರೆ, ಇವತ್ತಿಗೂ ಕುರ್‌ಆನನ್ನು ಕಂಠಪಾಠ ಮಾಡಿದವರ ಸಂಖ್ಯೆ ಲಕ್ಷಾಂತರ  ಸಂಖ್ಯೆಯಲ್ಲಿದೆ. ಕಂಠಪಾಠ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೂ ಲಕ್ಷಾಂತರ ಇದೆ. ಒಂದುವೇಳೆ, 

ಇವತ್ತು ಪವಿತ್ರ ಕುರ್‌ಆನಿನ ಮುದ್ರಣ  ಪ್ರತಿಯನ್ನು ಯಾವುದೇ ಒಂದು ಸರ್ಕಾರ ಸಂಪೂರ್ಣವಾಗಿ ಮುಟ್ಟುಗೋಲು ಹಾಕಿಕೊಂಡರೂ ಕುರ್‌ಆನಿನ ಪಠಣ ನಿಲ್ಲುವುದಿಲ್ಲ.  ಯಾಕೆಂದರೆ, ಕುರ್‌ಆನ್ ಮುಸ್ಲಿಮರ ಮೆದುಳಿನಲ್ಲಿದೆ. ಸಂಪೂರ್ಣ ಕುರ್‌ಆನನ್ನು ಕಂಠಪಾಠ ಮಾಡಿದವರ ಸಂಖ್ಯೆ ಸಣ್ಣದಾದರೂ  ಕುರ್‌ಆನ್ ಕಂಠಪಾಠವೇ ಇಲ್ಲದ ಮುಸ್ಲಿಮ್ ಇರುವುದಕ್ಕೆ ಸಾಧ್ಯವೇ ಇಲ್ಲ. ಐದು ಬಾರಿಯ ನಮಾಝï‌ನಲ್ಲಿ ಪ್ರತಿನಿತ್ಯವೂ ಕುರ್‌ಆನಿನ  ಸಣ್ಣ ಸೂಕ್ತವನ್ನಾದರೂ ಅವರು ಓದಿಯೇ ತೀರು ತ್ತಾರೆ. ಒಂದುರೀತಿಯಲ್ಲಿ, ಜಗತ್ತಿನಲ್ಲಿ ಸುಮಾರು 200 ಕೋಟಿ ಮುಸ್ಲಿಮರಿದ್ದು, ಅವರೆಲ್ಲರೂ ಕುರ್‌ಆನನ್ನು ಕಂಠಪಾಠ ಮಾಡಿದವರೇ ಆಗಿದ್ದಾರೆ. ಒಬ್ಬರಿಗೆ ಮೂರೋ ನಾಲ್ಕೋ ಅಧ್ಯಾಯ ಕಂಠ ಪಾಠವಿದ್ದರೆ, ಇ ನ್ನೊಬ್ಬರಿಗೆ ಇನ್ನೊಂದಿಷ್ಟು ಹೆಚ್ಚು ಅಧ್ಯಾಯಗಳು ಕಂಠಪಾಠವಿರುತ್ತದೆ. ತಮಗೆ ಗೊತ್ತಿರುವ ಸೂಕ್ತಗಳನ್ನೋ ಅಧ್ಯಾಯಗಳನ್ನೋ ಅವರು  ನಮಾಝï‌ನಲ್ಲಿ ಪಠಿಸುತ್ತಾರೆ. ಜಗತ್ತಿನ ಇನ್ನಾವ ಧರ್ಮಗ್ರಂಥಕ್ಕೂ ಇಂಥದ್ದೊಂದು  ಅನುಯಾಯಿಗಳು ಇರುವುದಕ್ಕೆ ಸಾಧ್ಯವಿಲ್ಲ.  ಧರ್ಮಗ್ರಂಥವನ್ನೇ ಕಂಠಪಾಠ ಮಾಡುತ್ತಾ ದಿನದಲ್ಲಿ ಕನಿಷ್ಠ 17 ಬಾರಿಯಾದರೂ ಅದನ್ನು ಉರ ಹೊಡೆಯುತ್ತಾ ಬದುಕುವ  ಮುಸ್ಲಿಮರು ಜಗತ್ತಿನ ಇತರೆಲ್ಲ ಧರ್ಮಾನು ಯಾಯಿಗಳಿಗಿಂತ ಖಂಡಿತ ಭಿನ್ನರಾಗಿದ್ದಾರೆ. ಅಂದಹಾಗೆ,

ಈ ಕಂಠಪಾಠ ಮಾಡಿರುವ ಅನುಯಾಯಿಗಳ ಹೊರತಾಗಿಯೂ ಪವಿತ್ರ ಕುರ್‌ಆನನ್ನು ಗ್ರಂಥ ರೂಪದಲ್ಲಿ ಕ್ರೋಢೀಕರಣ ಮಾಡ ಬೇಕಾದ ಅನಿವಾರ್ಯತೆ ಪ್ರವಾದಿ ನಿಧನದ ಎರಡು ವರ್ಷಗಳ ಬಳಿಕ ಎದುರಾಯಿತು.

ಹಿಜರಿ ಶಕೆ 10ರಲ್ಲಿ ಪ್ರವಾದಿ(ಸ) ನಿಧನರಾದರು. ಆ ಬಳಿಕ ಅಬೂಬಕರ್ ಸಿದ್ದೀಕ್ ಖಲೀಫರಾಗಿ ಆಯ್ಕೆಯಾದರು. ಹಿಜರೆ ಶಕೆ 12ರಲ್ಲಿ  ಯುದ್ಧವೊಂದು ನಡೆಯಿತು. ಯಮಾಮ ಯುದ್ಧ ಎಂದು ಗುರುತಿಸಿಕೊಂಡಿರುವ ಈ ಕಾಳಗದಲ್ಲಿ ಕುರ್‌ಆನ್ ಕಂಠ ಪಾಠ ಮಾಡಿರುವ  ಸುಮಾರು 70ರಷ್ಟು ಮಂದಿ ಸಾವಿಗೀಡಾದರು. ಇದು ಖಲೀಫ ಅಬೂಬಕರ್‌ರನ್ನು ತೀವ್ರ ಚಿಂತೆಗೀಡು ಮಾಡಿತು. ಅವರು ಉಮರ್  ಬಿನ್ ಖತ್ತಾಬ್‌ರೊಂದಿಗೆ ಸಮಾಲೋಚನೆ ನಡೆಸಿದರು. ಈ ಸಮಾಲೋಚನೆಯ ಬಳಿಕ ಪ್ರವಾದಿಯವರ ಇನ್ನಷ್ಟು ಪ್ರಮುಖ ಅನುಯಾಯಿಗಳೊಂದಿಗೂ ಸಮಾಲೋಚನೆ ನಡೆಸಲಾಯಿತು. ಅದರಂತೆ ಪವಿತ್ರ ಕುರ್‌ಆನನ್ನು ಗ್ರಂಥರೂಪದಲ್ಲಿ ತರಬೇಕೆಂಬ ವಿಷಯದಲ್ಲಿ  ಒಮ್ಮತಕ್ಕೆ ಬರಲಾಯಿತು. ಮಾತ್ರವಲ್ಲ, ಅದಕ್ಕಾಗಿ ಕುರ್‌ಆನ್ ಕಂಠಪಾಠ ಮಾಡಿರುವ ಮತ್ತು ಬರಹ ರೂಪಕ್ಕೆ ತಂದಿರುವವರ  ಸಮಿತಿಯೊಂದನ್ನೂ ರಚಿಸಲಾಯಿತು. ಈ ಸಮಿತಿಯ ನೇತೃತ್ವವನ್ನು ಝೈದ್ ಬಿನ್ ಸಾಬಿತ್‌ರಿಗೆ ವಹಿಸಿ ಕೊಡಲಾಯಿತು. ಇವರಂತೂ  ಪವಿತ್ರ ಕುರ್‌ಆನನ್ನು ಪ್ರವಾದಿಯವರಿಂದ ನೇರವಾಗಿ ಕೇಳಿ ಬರೆದಿಡುತ್ತಿದ್ದವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಹೀಗೆ ಪವಿತ್ರ ಕುರ್‌ಆನಿನ  ಬರಹ ರೂಪವನ್ನು ಸಂಗ್ರಹಿಸುವ ಪ್ರಯತ್ನ ಪ್ರಾರಂಭವಾಯಿತು. ಪ್ರವಾದಿ ಕಾಲದಲ್ಲಿ ಚರ್ಮ, ಎಲುಬು, ಖರ್ಜೂರದ ಎಲೆ, ಮರದ  ಹಲಗೆ ಇತ್ಯಾದಿಗಳಲ್ಲಿ ಕುರ್‌ಆನನ್ನು ದಾಖಲಿಸಿ ಇಡಲಾಗುತ್ತಿತ್ತು. ಕಂಠಪಾಠ ಮಾಡಿದವರೂ ಸಮಿತಿಯ ಮುಂದೆ ಹಾಜರಾದರು. ಹೀಗೆ  ಬರಹ ಮತ್ತು ಕಂಠಪಾಠ- ಎರಡನ್ನೂ ಜೊತೆಯಿಟ್ಟು ತಾಳೆ ಮಾಡಿಕೊಂಡು ಕುರ್‌ಆನನ್ನು ಎರಡು ಭಾಗಗಳಲ್ಲಿ ಕ್ರೋಢೀಕರಿಸ ಲಾಯಿತು. ಖಲೀಫ ಅಬೂಬಕರ್‌ರ ಕಾಲದಲ್ಲೇ  ನಡೆದ ಕ್ರೋಢೀಕರಣ ಇದು. ಆದರೆ,

ಖಲೀಫಾ ಉಸ್ಮಾನ್‌ರ ಕಾಲದಲ್ಲಿ ಹೊಸದೊಂದು ಸವಾಲು ಎದುರಾಯಿತು. ಆ ಕಾಲದಲ್ಲಿ ಮಕ್ಕಾ-ಮದೀನಾಗಳ ಆಚೆ ಬಹುದೂರದವರೆಗೆ ಇಸ್ಲಾಮ್ ಹರಡಿಕೊಂಡಿತು. ಹೀಗೆ ಹೊಸದಾಗಿ ಇಸ್ಲಾಮ್‌ಗೆ ಆಕರ್ಷಿತರಾದವರು ಅವರಿವರಿಂದ ಕೇಳಿ ಕುರ್‌ಆನನ್ನು ಅಭ್ಯಾಸ  ಮಾಡುತ್ತಿದ್ದರು. ಗ್ರಂಥ ರೂಪದ ಕುರ್‌ಆನ್ ಚಾಲ್ತಿಯಲ್ಲಿ ಇಲ್ಲದೇ ಇದ್ದುದರಿಂದ ಈ ಹೊಸ ಮುಸ್ಲಿಮರ ಕುರ್‌ಆನ್ ಓದಿನಲ್ಲಿ ತಪ್ಪುಗಳಾಗುತ್ತಿದ್ದುವು. ಈ ವಿಷಯವನ್ನು ಪ್ರವಾದಿ ಅನುಯಾಯಿ ಹುದೈಫ ಬಿನ್ ಯಮಾನ್ ಎಂಬವರು ಖಲೀಫಾ ಉಸ್ಮಾನ್‌ರಿಗೆ  ವಿವರಿಸಿದರು. ಗ್ರಂಥ ರೂಪದಲ್ಲಿರುವ ಕುರ್‌ಆನನ್ನು ಬೇರೆ ಬೇರೆ ಪ್ರದೇಶಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದರೆ ಈ ಸಮಸ್ಯೆಗೆ  ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯನ್ನೂ ಅವರು ವ್ಯಕ್ತಪಡಿಸಿದರು. ಇದು ಖಲೀಫರಿಗೂ ಸರಿ ಎನಿಸಿತು. ಅದರಂತೆ ಅದಾಗಲೇ  ಕ್ರೋಢೀಕರಣಗೊಂಡಿರುವ ಕುರ್‌ಆನ್‌ನ ಪ್ರತಿಗಳನ್ನು ತಯಾರಿಸು ವುದಕ್ಕೆ ಖಲೀಫರು ಈ ಮೇಲೆ ಆರಂಭದಲ್ಲಿ ಉಲ್ಲೇಖಿಸಲಾದ  ನಾಲ್ವರ ತಂಡವನ್ನು ರಚಿಸಿದರು. ಇದು ಇತಿಹಾಸ. ಅಂದಹಾಗೆ,
ಪವಿತ್ರ ಕುರ್‌ಆನ್‌ನ ಬಗ್ಗೆ ಪ್ರವಾದಿ(ಸ) ಅತ್ಯಂತ ಜಾಗರೂಕರಾಗಿದ್ದರು. ಪ್ರತಿ ರಮಝಾನ್‌ನಲ್ಲಿ ಆವರೆಗೆ ಅವತೀರ್ಣವಾಗಿರುವ  ಕುರ್‌ಆನಿನ ಸೂಕ್ತಗಳನ್ನು ಕ್ರಮಾನುಸಾರ ಪಠಿಸುತ್ತಿದ್ದರು. ಸದ್ಯದ ಅಗತ್ಯ ಏನೆಂದರೆ,

ಇಸ್ಲಾಮ್‌ನ ಕುರಿತೋ ಕುರ್‌ಆನ್‌ನ ಕುರಿತೋ ವ್ಯಕ್ತವಾಗುವ ಸಂದೇಹಗಳನ್ನು ಅಪರಾಧವಾಗಿ ಕಾಣದೇ ಇತಿಹಾಸವನ್ನು ಅಧ್ಯ ಯನ  ನಡೆಸಿ ಉತ್ತರಿಸುವ ಪ್ರಯತ್ನವನ್ನು ನಾವು ನಡೆಸಬೇಕು. ಇಸ್ಲಾಮ್‌ಗೆ ಸಂಬಂಧಿಸಿ ಯಾವುದೂ ರಹಸ್ಯವಾಗಿಲ್ಲ. ಕುರ್‌ಆನಿನ  ಮೂಲವಾಗಲಿ, ಕ್ರೋಢೀಕರಣವಾಗಲಿ, ಅದರಲ್ಲಿ ವ್ಯಕ್ತವಾಗುವ ಜಿಹಾದ್, ಕಾಫಿರ್, ತಲಾಕ್, ಏಕದೇವ, ಬಹುದೇವ, ಸ್ವರ್ಗ, ನರಕ,  ಪರಲೋಕ ವಿಚಾರಣೆ, ಆಹಾರ, ನ್ಯಾಯ ವಿತರಣೆ... ಏನೇ ಆಗಲಿ, ಎಲ್ಲಕ್ಕೂ ಸ್ಪಷ್ಟ ವಿವರಣೆಯಿದೆ. ವ್ಯಾಖ್ಯಾನವಿದೆ.

ಅಧ್ಯಯನ ನಡೆಸಬೇಕು ಅಷ್ಟೇ.

No comments:

Post a Comment