Tuesday, May 29, 2012

ಖಾಸಗಿತನಕ್ಕೆ ಕ್ಯಾಮರ ಇಡುವುದು ಯಾವ ಬಗೆಯ ಜರ್ನಲಿಸಮ್ ?

ಮೊಹನಿಶ್ ಮಿಶ್ರ
ಶಲಭ್ ಶ್ರೀವಾಸ್ತವ
ಸುಧೀಂದ್ರ
ಅಮಿತ್ ಯಾದವ್
ಅಭಿನವ್ ಬಾಲಿ
    ಈ ಐವರು ಐಪಿಎಲ್ ಕ್ರಿಕೆಟಿಗರು ಸ್ಪಾಟ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದಾರೆಂದು ಇಂಡಿಯಾ ಟಿ.ವಿ. ಚಾನೆಲ್ 2012 ಮೇ 15ರಂದು ಸುದ್ದಿ ಸ್ಫೋಟಿಸಿದಾಗ ಸ್ಟಿಂಗ್ ಆಪರೇಶನ್ (ಕುಟುಕು ಕಾರ್ಯಾಚರಣೆ) ಮತ್ತೊಮ್ಮೆ ಚರ್ಚೆಗೊಳಗಾಯಿತು. ಅದರ ನೈತಿಕತೆಯ ಬಗ್ಗೆ ಪ್ರಶ್ನೆ ಎದ್ದಿತು. ಅಪರಾಧದ ಹಿನ್ನೆಲೆ ಇಲ್ಲದ ಅಥವಾ ಫಿಕ್ಸಿಂಗ್ ನಲ್ಲಿ ಭಾಗಿಯಾದ ಯಾವೊಂದು ಆರೋಪವೂ ಇಲ್ಲದ ವ್ಯಕ್ತಿಗಳ ಬಳಿಗೆ ಏನೇನೋ ಸೋಗು ಹಾಕಿಕೊಂಡು, ಯಾವ್ಯಾವುದೋ ಆಮಿಷಗಳನ್ನು ಒಡ್ಡಿ, ಅವರ ಪ್ರತಿಕ್ರಿಯೆಗಳನ್ನು ಹಿಡನ್ ಕ್ಯಾಮರಾದಲ್ಲಿ ಚಿತ್ರೀಕರಿಸುವುದು ಎಷ್ಟು ಸರಿ? ಇದು ವಂಚನೆಯಲ್ವೆ, ಸ್ಟಿಂಗ್ ಜರ್ನಲಿಝಮ್ (ಕುಟುಕು ಪತ್ರಿಕೋದ್ಯಮ) ಮತ್ತು ಇನ್ವೆಸ್ಟಿಗೇಶನ್ ಜರ್ನಲಿಸಮ್ ನ (ತನಿಖಾ ಪತ್ರಿಕೋದ್ಯಮ) ನಡುವೆ ಇರುವ ವ್ಯತ್ಯಾಸದ ಬಗ್ಗೆ ಮಾಧ್ಯಮದ ಮಂದಿಯೇಕೆ ಮಾತಾಡುತ್ತಿಲ್ಲ.. ಎಂದೆಲ್ಲಾ ಪ್ರಶ್ನಿಸಲಾಯಿತು. ಇದಕ್ಕೆ ಪೂರಕವಾಗಿ, ‘ತಮ್ಮ ಮಾತುಗಳನ್ನು ಇಂಡಿಯಾ ಟಿ.ವಿ. ತಿರುಚಿ ಪ್ರಸಾರ ಮಾಡಿದೆ' ಎಂದು ಐವರು ಕ್ರಿಕೆಟಿಗರೂ ದೂರಿಕೊಂಡರು.
      ಇಷ್ಟಕ್ಕೂ, ಸ್ಟಿಂಗ್ ಆಪರೇಶನ್ ಎಂಬುದು ಕಣ್ಣು ಮುಚ್ಚಿ ಸಮರ್ಥಿಸುವಷ್ಟು ಪಾವನವಾದುದೇ? ನೈತಿಕ, ಸಾಮಾಜಿಕ ಪ್ರಶ್ನೆಗಳಿಗೆ ಅದು ಕಾರಣವಾಗಿಲ್ಲವೇ?
ರಾಬರ್ಟ್ ರೆಡ್ ಫೋರ್ಡ್  ಮತ್ತು ಪೌಲ್ ನ್ಯೂಮನ್ ರು  ಒಟ್ಟು ಸೇರಿ `ದಿ ಸ್ಟಿಂಗ್' ಎಂಬ ಸಿನಿಮಾವನ್ನು 1973ರಲ್ಲಿ ಬಿಡುಗಡೆಗೊಳಿಸಿದ ಬಳಿಕ ಸ್ಟಿಂಗ್ ಆಪರೇಶನ್ ಎಂಬ ಪದ ಬಳಕೆ ಬಂತಾದರೂ ಭಾರತದಲ್ಲಿ ಅದು ದೊಡ್ಡ ಮಟ್ಟದಲ್ಲಿ ಪ್ರಯೋಗಕ್ಕೆ ಒಳಗಾದದ್ದು ತೆಹಲ್ಕಾದ ಮೂಲಕ. ರಕ್ಷಣಾ ಇಲಾಖೆಯಲ್ಲಿರುವ ಭ್ರಷ್ಟಾಚಾರವನ್ನು ಬಯಲಿಗೆಳೆಯುವುದಕ್ಕಾಗಿ 2೦೦1ರಲ್ಲಿ `ಆಪರೇಶನ್ ವೆಸ್ಟ್ ಎಂಡ್' ಎಂಬ ಹೆಸರಲ್ಲಿ ತೆಹಲ್ಕಾ ಸ್ಟಿಂಗ್ ಆಪರೇಶನ್ ನಡೆಸಿತು. ಲಂಡನ್ನಿನ ಶಸ್ತ್ರಾಸ್ತ್ರ ಕಂಪೆನಿಯ ದಲ್ಲಾಳಿಗಳ ಸೋಗಿನಲ್ಲಿ ರಕ್ಷಣಾ ಅಧಿಕಾರಿಗಳು, ರಾಜಕಾರಣಿಗಳನ್ನು ತೆಹಲ್ಕಾದ ಪತ್ರಕರ್ತರು ಸಂಪರ್ಕಿಸಿದರು. ದುಡ್ಡಿಗಾಗಿ ಬಾಯಿ ಬಿಡುವ ಅಧಿಕಾರಿಗಳನ್ನು, ಬಂಗಾರು ಲಕ್ಷ್ಣಣ್ ರಂಥ  ರಾಜಕಾರಣಿಗಳನ್ನು ತೆಹಲ್ಕಾದ ಹಿಡನ್ ಕ್ಯಾಮರಾ ಚಿತ್ರೀಕರಿಸಿತು. ಒಂದು ರೀತಿಯಲ್ಲಿ ಭಾರತದ ರಾಜಕಾರಣವನ್ನೇ, ರಕ್ಷಣಾ ಇಲಾಖೆಯ ಬದ್ಧತೆಯನ್ನೇ ಪ್ರಶ್ನಿಸಿದ, ಅಲ್ಲಾಡಿಸಿದ ಪ್ರಕರಣ ಅದು.
    ಆದರೆ,
    ತೆಹಲ್ಕಾ ಈ ಕಾರ್ಯಾಚರಣೆಯಲ್ಲಿ ವೇಶ್ಯೆಯರನ್ನು ಬಳಸಿತ್ತು. ಮದ್ಯವನ್ನು ಉಪಯೋಗಿಸಿತ್ತು. ವೇಶ್ಯೆಯರೊಂದಿಗೆ ರಕ್ಷಣಾ ಅಧಿಕಾರಿಗಳು ಸರಸವಾಡಿದ್ದನ್ನು, ಆ ಸಂದರ್ಭದಲ್ಲಿ ಅವರು ಆಡಿದ ಮಾತುಗಳನ್ನು ಹಿಡನ್ ಕ್ಯಾಮರಾದಲ್ಲಿ ತೆಹಲ್ಕಾ ಚಿತ್ರೀಕರಿಸಿತ್ತು. ಮದ್ಯದ ಅಮಲಿನಲ್ಲಿ ಅಧಿಕಾರಿಗಳು ಹೇಳಬಾರದ್ದನ್ನೆಲ್ಲಾ ಹೇಳಿದರು. ಆದ್ದರಿಂದಲೇ ಗುಪ್ತಚರ ವಿಭಾಗದ (ಜಶ) ಮಾಜಿ ಮುಖ್ಯಸ್ಥರಾಗಿದ್ದ ಎಂ.ಕೆ. ನಾರಾಯಣನ್ ರು ಈ ಕಾರ್ಯಾಚರಣೆಯ ನೈತಿಕತೆಯನ್ನು ಪ್ರಶ್ನಿಸಿ ಮಾರ್ಚ್ 26. 2001ರಲ್ಲಿ ಏಶಿಯನ್ ಏಜ್ ಪತ್ರಿಕೆಯಲ್ಲಿ ಲೇಖನ ಬರೆದಿದ್ದರು. ಇದಕ್ಕಿಂತ 5 ದಿನಗಳ ಮೊದಲು ಸರಕಾರದ ಹೆಚ್ಚುವರಿ ಕಾರ್ಯದರ್ಶಿ ರಾಮನ್ ರು ಕೂಡ ಕಾರ್ಯಾಚರಣೆಯ ವಿಧಾನವನ್ನು ಖಂಡಿಸಿ ಲೇಖನ ಬರೆದಿದ್ದರು.
     ಪ್ರಕರಣ ಇದೊಂದೇ ಅಲ್ಲ
  2005ರಲ್ಲಿ ಇದೇ ಇಂಡಿಯಾ ಟಿ.ವಿ., ಹೊಟೇಲ್ ಕೊಠಡಿಯಲ್ಲಿ ಬಾಲಿವುಡ್ ನಟ ಶಕ್ತಿ ಕಪೂರ್ ಗೆ ಪಾರ್ಟಿಯೊಂದನ್ನು ಏರ್ಪಡಿಸಿತ್ತು. ನಟನಿಗೆ ಏನೆಲ್ಲ ಬೇಕೋ ಅವೆಲ್ಲವನ್ನೂ ಕೊಟ್ಟು, ವಿಸ್ಕಿ ಕುಡಿಸಿ ಬಾಲಿವುಡ್ ನಲ್ಲಿ  ನಟಿಯರನ್ನು ಹೇಗೆ ದುರ್ಬಳಕೆ ಮಾಡಲಾಗುತ್ತದೆ ಎಂದು ಹೇಳಿಸಿತು. ಐಶ್ವರ್ಯ ರೈಯ ಹೆಸರನ್ನೂ ಆತ ಹೇಳಿದ. ಎಲ್ಲವನ್ನೂ ಹಿಡನ್ ಕ್ಯಾಮರಾದಲ್ಲಿ ಚಿತ್ರೀಕರಿಸಿದ ಇಂಡಿಯಾ ಟಿ.ವಿ., ಆ ಬಳಿಕ ಅದನ್ನು ಪ್ರಸಾರ ಮಾಡಿತು. ಸದ್ಯ NDTV ಇಮ್ಯಾಜಿನ್ ಥರದ ಮನರಂಜನಾತ್ಮಕ ಚಾನೆಲ್ ಗಳು  ಹಿಡನ್ ಕ್ಯಾಮರಾದೊಂದಿಗೆ ಲವರ್ಸ್ ಗಳ ಸುತ್ತ ಸುತ್ತುತ್ತಿವೆ. ಇಬ್ಬರು ಲವರ್ಸ್ ಗಳನ್ನು   ಆಯ್ಕೆ ಮಾಡಿ, ಅವರಲ್ಲಿ ಯಾರ ಲವ್ ಸಾಚಾ, ಯಾರು ಮೋಸ ಮಾಡುತ್ತಾರೆ ಎಂಬುದನ್ನೆಲ್ಲಾ ಚಿತ್ರೀಕರಿಸಿ ಪ್ರಸಾರ ಮಾಡುತ್ತಿವೆ.
ನೀವೇ ಹೇಳಿ, ಓರ್ವ ವ್ಯಕ್ತಿಯ ಖಾಸಗಿ ಬದುಕಿಗೆ ಕ್ಯಾಮರಾ ಇಡುವುದು ಜರ್ನಲಿಸಮ್ಮಾ? ಪ್ರತಿಯೊಬ್ಬರಿಗೂ ಅವರವರದೇ ಆದ ಬದುಕಿದೆ, ಖಾಸಗಿತನವಿದೆ. ಅವರಿಗೆ ವಿಸ್ಕಿ ಕೊಟ್ಟೋ ಇನ್ನಾವುದಾದರೂ ಆಮಿಷವನ್ನು ಒಡ್ಡಿಯೋ ಅವರ ದೌರ್ಬಲ್ಯವನ್ನು ಚಿತ್ರೀಕರಿಸುವುದು ನ್ಯಾಯ ಸಮ್ಮತವಾ? ಇಂಥ ಕಾರ್ಯಾಚರಣೆಗಳನ್ನು ಪ್ರಾಮಾಣಿಕ ಅಂತ ಹೇಗೆ ಹೇಳುವುದು? ಸ್ಟಿಂಗ್ ಆಪರೇಶನ್ ಗಿಳಿದ ಚಾನೆಲ್ ಗೆ  ಅದರದ್ದೇ ಆದ ದುರುದ್ದೇಶ, ಹಿಡನ್ ಅಜೆಂಡಾಗಳೂ ಇರಬಾರದೆಂದಿಯೇ? ತನಗಾಗದ ವ್ಯಕ್ತಿಗಳ ಮಾನವನ್ನು ಸಾರ್ವಜನಿಕವಾಗಿ ಹರಾಜು ಹಾಕುವ ಉದ್ದೇಶದಿಂದ ಇಂಥ ಕಾರ್ಯಾಚರಣೆಗಳು ನಡೆಯಲಾರವು ಅನ್ನುವುದಕ್ಕೆ ಏನಿದೆ ಪುರಾವೆ? ಇಷ್ಟಕ್ಕೂ ಟಿ.ವಿ.ಯಲ್ಲಿ ಏನೆಲ್ಲ ಪ್ರಸಾರವಾಗಿರುತ್ತದೋ ಅದು ಮಾತ್ರ ವೀಕ್ಷಕರಿಗೆ ಗೊತ್ತಿರುತ್ತದೆ. ಆದರೆ ಆ ಕಾರ್ಯಾಚರಣೆಗೆ ಯಾವೆಲ್ಲ ವಿಧಾನಗಳನ್ನು ಅಳವಡಿಸಲಾಗಿದೆ ಎಂಬುದನ್ನು ಯಾವ ಚಾನೆಲ್ ಗಳೂ  ಸಂಪೂರ್ಣವಾಗಿ ಹೇಳಿಕೊಳ್ಳುವುದೇ ಇಲ್ಲ. ಆದ್ದರಿಂದ ತೆಹಲ್ಕಾದ ಸ್ಟಿಂಗ್ ಆಪರೇಶನ್ ಆಗಲಿ ಅಥವಾ ಇಂಡಿಯಾ ಟಿ.ವಿ. ಸಹಿತ ಇನ್ಯಾವುದರ ಕಾರ್ಯಾಚರಣೆಯೇ ಆಗಲಿ, ಅವು ಕಾರ್ಯಾಚರಣೆಯ ಬಗ್ಗೆ ಏನು ಹೇಳಿವೆಯೋ ಅದರಾಚೆಗೂ ಸಾಕಷ್ಟು ಸಂಗತಿಗಳಿರಬಹುದಲ್ಲವೇ? ಸಾರ್ವಜನಿಕರಿಗೆ ಹೇಳದೇ ಮುಚ್ಚಿಟ್ಟ ಅಂಶಗಳಿರಬಾರದೇ? ಹೀಗಿರುವಾಗ ಸ್ಟಿಂಗ್ ಆಪರೇಶನನ್ನು ಸಾರಾಸಗಟು ಸಮರ್ಥಿಸಿಕೊಳ್ಳುವುದು ಯಾಕೆ ಸರಿ ಅನ್ನಿಸಿಕೊಳ್ಳಬೇಕು? ಅಂದಹಾಗೆ, ಕಾರ್ಯಾಚರಣೆಯ ಹೆಸರಲ್ಲಿ ಲಂಚ ಕೊಡಬಹುದೇ? ವಿಸ್ಕಿ ಕುಡಿಸಬಹುದೇ? ವೇಶ್ಯೆಯರನ್ನು ಒದಗಿಸಬಹುದೇ? ಸುಳ್ಳು ಹೇಳಬಹುದೇ? ಆರೋಪವೇ ಇಲ್ಲದ ವ್ಯಕ್ತಿಗಳನ್ನು ಸ್ಟಿಂಗ್ ಆಪರೇಶನ್ ಗಾಗಿ  ಬಳಸಿಕೊಳ್ಳಬಹುದೇ?
   ಇಸ್ಲಾವಿೂ ಇತಿಹಾಸದಲ್ಲಿ ಒಂದು ಘಟನೆ ನಡೆದಿದೆ
ಪ್ರಧಾನಿ ಉಮರ್ ರು(ರ) ರಾತ್ರಿ ಗಸ್ತು ತಿರುಗುತ್ತಿದ್ದರು. ಆಗ ಒಂದು ಮನೆಯಿಂದ ಹಾಡು ಕೇಳಿಸುತ್ತದೆ. ಉಮರ್ರು ಒಂದಷ್ಟು ಆಸಕ್ತಿಯಿಂದ ಹಾಡನ್ನು ಆಲಿಸುತ್ತಾರೆ. ಹಾಡಿನಲ್ಲಿ ಮಾದಕತೆ, `ಮತ್ತು' ಇರುತ್ತದೆ. ಉಮರ್ ರು ಹಾಡುಗಾರನನ್ನು ಮತ್ತು ಅಲ್ಲಿನ ಸನ್ನಿವೇಶವನ್ನು ನೋಡುವುದಕ್ಕಾಗಿ ಮನೆಗೆ ತಾಗಿಕೊಂಡಿರುವ ಮರವನ್ನು ಹತ್ತಿ ಮನೆಯೊಳಗೆ ಇಣುಕುತ್ತಾರೆ. ಓರ್ವ ಹಾಡುತ್ತಿದ್ದ. ಎದುರಲ್ಲಿ ಮದ್ಯ ಇತ್ತು. ಹೆಣ್ಣೂ ಇದ್ದಳು. ಉಮರ್ ರಿಗೆ   ವಿಪರೀತ ಸಿಟ್ಟು ಬರುತ್ತದೆ. `ಉಮರ್ ಜೀವಂತ ಇರುವಾಗಲೇ ಇಂಥ ಅಪರಾಧ ಎಸಗಲಿಕ್ಕೆ ನಿನಗೆ ಧೈರ್ಯ ಬಂತಾದರೂ ಹೇಗೆ? ನಿನ್ನನ್ನು ಶಿಕ್ಷಿಸದೇ ಬಿಡಲಾರೆ' ಎಂದು ಮರದಿಂದಲೇ ಗುಡುಗುತ್ತಾರೆ.
   ಆ ವ್ಯಕ್ತಿ ಹೇಳುತ್ತಾರೆ,
  ನನ್ನ ನಾಯಕರೇ, ನಾನು ಮಾಡಿರುವುದು ಒಂದು ಅಪರಾಧ. ಆದರೆ, ನೀವು ಅದಕ್ಕಿಂತಲೂ ಹೆಚ್ಚು ಅಪರಾಧ ಮಾಡಿದ್ದೀರಿ. ಇನ್ನೊಬ್ಬರ ಮನೆಯೊಳಗೆ ಇಣುಕುವುದನ್ನು ಅಲ್ಲಾಹನು (ಸೃಷ್ಟಿಕರ್ತನು) ನಿಷೇಧಿಸಿದ್ದಾಗ್ಯೂ ನೀವು ನನ್ನ ಖಾಸಗಿತನಕ್ಕೆ ಭಂಗ ತಂದಿದ್ದೀರಿ, ಇಣುಕಿದ್ದೀರಿ. ಅನುಮತಿ ಇಲ್ಲದೇ ಯಾವ ಮನೆಯೊಳಗೂ ಪ್ರವೇಶಿಸಬಾರದು ಎಂದು ಅಲ್ಲಾಹನು ಆದೇಶಿಸಿದ್ದಾನೆ. ಆದರೆ ನೀವು ನನ್ನ ಅನುಮತಿ ಇಲ್ಲದೆಯೇ ನನ್ನ ಮನೆಯ ಮರಕ್ಕೆ ಹತ್ತಿದ್ದೀರಿ. ಒಂದು ರೀತಿಯಲ್ಲಿ ಮನೆಯೊಳಗೇ ಪ್ರವೇಶಿಸಿದ್ದೀರಿ. ಹಾಗೆಯೇ ಯಾರದೇ ತಪ್ಪುಗಳನ್ನು ಹುಡುಕುತ್ತಾ ಹೋಗಬೇಡಿ' ಎಂದು ಅಲ್ಲಾಹನು ಹೇಳಿದ್ದಾನೆ. ಆದರೆ ನೀವು ಅದನ್ನೇ ಮುರಿದಿದ್ದೀರಿ. ಆದ್ದರಿಂದ ನೀವೇ ಹೇಳಿ, ಯಾರು ಹೆಚ್ಚು ತಪ್ಪು ಮಾಡಿದವರು?
     ಉಮರ್ (ರ) ಆ ವ್ಯಕ್ತಿಯಲ್ಲಿ ಕ್ಷಮೆ ಯಾಚಿಸುತ್ತಾರಲ್ಲದೇ ಆತನ ಮೇಲೆ ಯಾವ ಕ್ರಮವನ್ನೂ ಕೈಗೊಳ್ಳದೇ ಹಿಂತಿರುಗುತ್ತಾರೆ.
  ನಿಜವಾಗಿ, ದುರುದ್ದೇಶಕ್ಕೆ ಬಳಕೆಯಾಗುವ ಸಾಧ್ಯತೆ ಇದ್ದುದರಿಂದಲೇ ಸ್ಟಿಂಗ್ ಆಪರೇಶನನ್ನು ಅಮೇರಿಕದಲ್ಲಿ ನಿಷೇಧಿಸಲಾಗಿದೆ. ತನಿಖಾ ಸಂಸ್ಥೆ FBI ಗೆ (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್)ಗೆ  ಅಲ್ಲಿ ಸ್ಟಿಂಗ್ ಆಪರೇಶನ್ ನಡೆಸುವ ಅನುಮತಿ ಇದೆಯಾದರೂ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ.
  1. ವ್ಯಕ್ತಿಯೋರ್ವನ ಮೇಲೆ ಈಗಾಗಲೇ ಕ್ರಿಮಿನಲ್ ಆರೋಪಗಳಿದ್ದು, ಆತ ಈಗಲೂ ಅದನ್ನು ಮುಂದುವರಿಸುತ್ತಿದ್ದಾನೆಂದಾದರೆ ಹೆಚ್ಚುವರಿ ಪುರಾವೆಯನ್ನು ಸಂಗ್ರಹಿಸುವ ದೃಷ್ಟಿಯಿಂದ ಕುಟುಕು ಕಾರ್ಯಾಚರಣೆ ಕೈಗೊಳ್ಳಬಹುದು.
  2. ಆದರೆ ಕಾರ್ಯಾಚರಣೆಗಿಂತ ಮೊದಲು ಅಟಾರ್ನಿ ಜನರಲ್ ಅಥವಾ ಕೋರ್ಟಿನಿಂದ ಅನುಮತಿ ಪಡೆಯಬೇಕು. ಇಲ್ಲದಿದ್ದರೆ ಅದು ಅಪರಾಧವಾಗಿ ಪರಿಗಣಿಸಲ್ಪಡುತ್ತದೆ.
  3. ಒಂದು ಕಾರ್ಯಾಚರಣೆಯ ಸಂದರ್ಭದಲ್ಲಿ ಚಿತ್ರಿಸಲಾದ ದೃಶ್ಯಗಳನ್ನು ಎಡಿಟ್ ಮಾಡಲಾಗಿದೆ ಎಂದಾದರೆ ಇಡೀ ಕಾರ್ಯಾಚರಣೆಯನ್ನು ಅನೂರ್ಜಿತಗೊಳಿಸಲಾಗುವುದು.
   ಆದರೆ, ನಮ್ಮಲ್ಲಿ ಇಂಥ ನಿರ್ಬಂಧಗಳಾದರೂ ಎಲ್ಲಿವೆ? ಸ್ಟಿಂಗ್ ಜರ್ನಲಿಸಮ್ ಗೂ  ಇನ್ವೆಸ್ಟಿಗೇಶನ್ ಜರ್ನಲಿಸಮ್ ಗೂ ವ್ಯತ್ಯಾಸ ಗೊತ್ತಿರುವ ಎಷ್ಟು ಪತ್ರಕರ್ತರು ನಮ್ಮಲ್ಲಿದ್ದಾರೆ? ನಿರ್ದಿಷ್ಟ ಆರೋಪವೊಂದರ ಕುರಿತು ತನಿಖೆ ಮಾಡುವುದಕ್ಕೂ, ಯಾವೊಂದು ಆರೋಪ ಇಲ್ಲದೆಯೂ  ಕಿಸೆಯಲ್ಲಿ ಕ್ಯಾಮರಾ ಇಟ್ಟು ವಿವಿಧ ಆಮಿಷಗಳನ್ನು ಒಡ್ಡಿ ವ್ಯಕ್ತಿಯನ್ನು ಸಿಲುಕಿಸುವುದಕ್ಕೂ ನಡುವೆ ಅಂತರ ಇರುವುದನ್ನು ಟಿ.ವಿ. ಮಾಧ್ಯಮವೇಕೆ ಗುರುತಿಸುತ್ತಿಲ್ಲ? IPL ಫಿಕ್ಸಿಂಗ್ ನಲ್ಲಿ  ಕಾಣಿಸಿಕೊಂಡ ಐವರು ಕ್ರಿಕೆಟಿಗರಿಗೂ ಭ್ರಷ್ಟಾಚಾರದ ಪೂರ್ವ ದಾಖಲೆ ಇರಲಿಲ್ಲ ಎಂದು ಇಂಡಿಯಾ ಟಿ.ವಿ. ಚಾನೆಲ್ ನ ಸಂಪಾದಕ ರಜತ್ ಶರ್ಮಾ ಹೇಳಿದ್ದಾರೆ. ಸಂಪರ್ಕಿಸಿದ 10 ಕ್ರಿಕೆಟಿಗರಲ್ಲಿ ಐವರು ಕ್ರಿಕೆಟಿಗರು ಫಿಕ್ಸಿಂಗ್ ನಲ್ಲಿ ಭಾಗಿಯಾಗಲು  ನಿರಾಕರಿಸಿರುವುದಾಗಿಯೂ ಅವರು ಹೇಳಿದ್ದಾರೆ. ಒಂದು ವೇಳೆ ಇವರು ಸಂಪರ್ಕಿಸಿದ 10 ಮಂದಿಯೂ ನಿರಾಕರಿಸುತ್ತಿದ್ದರೆ ಕಾರ್ಯಾಚರಣೆಯ ಗತಿ ಏನಾಗುತ್ತಿತ್ತು?
   ತಮ್ಮ ವೀಕ್ಷಕರ ಸಂಖ್ಯೆಯನ್ನು ಹೆಚ್ಚುಗೊಳಿಸುವುದಕ್ಕೆ ಮತ್ತು ಓದುಗ ವಲಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಟಿ.ವಿ. ಚಾನೆಲ್ ಗಳು  ಮತ್ತು ಪತ್ರಿಕೆಗಳು ಯಾವ ಮಟ್ಟಕ್ಕೆ ಇಳಿಯಲೂ ಹೇಸದ ಕಾಲ ಇದು. ಪ್ರತಿಗಳು ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆಯೆಂದಾದರೆ ಯಾರ ತೇಜೋವಧೆಗೂ ಸಿದ್ಧವಾಗುವ ಪತ್ರಿಕೆಗಳು ನಮ್ಮ ಮಧ್ಯೆ ಇವೆ. ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದಕ್ಕಾಗಿ ಯಾರ ಬಚ್ಚಲ ಮನೆಗೂ ಕ್ಯಾಮರಾ ಇಡುವ ಚಾನೆಲ್ ಗಳೂ ಇವೆ. ಇವರ ಮಧ್ಯೆ ಜನರ ಖಾಸಗಿತನ, ಮಾನ, ಸ್ಥಾನಗಳು ಉಳಿಯಬೇಕಾದರೆ ಏನು ಮಾಡಬೇಕು? ಪೆನ್ನಿಗೆ, ಕ್ಯಾಮರಾಕ್ಕೆ ನೈತಿಕತೆ, ಪ್ರಾಮಾಣಿಕತೆಯನ್ನು ತುಂಬಿಸುವುದು ಹೇಗೆ, ಯಾರು?
     ಈ ಕುರಿತಂತೆ ಮಾಧ್ಯಮಗಳೇಕೆ ಗಂಭೀರ ಚರ್ಚೆ ನಡೆಸಬಾರದು?

Tuesday, May 22, 2012

ಮೀಸಲಾತಿ ಕೇಳುತ್ತಾರಲ್ಲ, ಇವರ ಅರ್ಹತೆಯಾದರೂ ಏನು?

         ದೈನಿಕ್ ಜಾಗರಣ್ ಪತ್ರಿಕೆಯ ಹಿರಿಯ ವರದಿಗಾರ ಜರ್ನೈಲ್ ಸಿಂಗ್ ರು  2009 ಎಪ್ರಿಲ್ ನಲ್ಲಿ  ಗೃಹಸಚಿವ ಚಿದಂಬರಮ್   ಮೇಲೆ ಶೂ ಎಸೆದಾಗ, ದೇಶದಾದ್ಯಂತದ ಮಾಧ್ಯಮಗಳು 1984ರ ಸಿಕ್ಖ್ ಹತ್ಯಾಕಾಂಡವನ್ನು ಮತ್ತೊಮ್ಮೆ ಚರ್ಚೆಗೆ ಎತ್ತಿಕೊಂಡವು..
         ಪ್ರಕರಣ ಇದೊಂದೇ ಅಲ್ಲ, 1984 ಅಕ್ಟೋಬರ್ 30ರಂದು ಕಾವಲುಗಾರ ಸತ್ವಂತ್ ಸಿಂಗ್ ನ  ಗುಂಡಿಗೆ ಇಂದಿರಾ ಗಾಂಧಿ ಬಲಿಯಾದ ಬಳಿಕ 3 ದಿನಗಳ ಕಾಲ ದೆಹಲಿಯಲ್ಲಿ ಸಿಕ್ಖರನ್ನು ಹುಡುಕಿ ಹುಡುಕಿ ಕೊಲ್ಲಲಾಯಿತು. ಕಾನ್ಪುರ, ಬೊಕಾರೋಗಳಲ್ಲಿ ಸಿಕ್ಖರ ಮಾರಣಹೋಮ ನಡೆಯಿತು. ಇದಕ್ಕಿಂತ 5 ತಿಂಗಳ ಮೊದಲು ಜೂನ್ 6ರಂದು ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣಮಂದಿರದ ಮೇಲೆ ಇಂದಿರಾ ಗಾಂಧಿಯವರ ಆದೇಶದ ಮೇರೆಗೆ ಕಮಾಂಡೋ ದಾಳಿ ನಡೆಯಿತು. ಪಂಜಾಬ್ ನ  ಪ್ರತ್ಯೇಕತೆಗಾಗಿ ಸಶಸ್ತ್ರ ದಾಳಿ ನಡೆಸುತ್ತಿದ್ದ ಖಲಿಸ್ತಾನ್ ಪಡೆಯ ಬಿಂದ್ರನ್ ವಾಲೆಯನ್ನು ಮಂದಿರದೊಳಗೇ ಗುಂಡಿಕ್ಕಿ ಕೊಲ್ಲಲಾಯಿತು.. ಆದರೆ ಸಿಕ್ಖರು ಬಿಂದ್ರನ್ ವಾಲೆಯ ಸಾವನ್ನು ಓರ್ವ ಟೆರರಿಸ್ಟ್ ನ  ಸಾವು ಎಂದು ವ್ಯಾಖ್ಯಾನಿಸಿ ಸುಮ್ಮನಾಗಲಿಲ್ಲ. ಜನರನ್ನು ಗುಂಡಿಟ್ಟು ಕೊಂದು, ಪೋಲೀಸರಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸ್ವರ್ಣಮಂದಿರದಲ್ಲಿ ಅವಿತು ಕೊಳ್ಳುವ ಅಪರಾಧಿಯನ್ನು ಇಂದಿರಾ ಹತ್ಯೆ ನಡೆಸಿದ್ದಾರೆ ಅನ್ನಲಿಲ್ಲ. ಒಂದು ತಿಂಗಳ ಮೊದಲೇ ದಾಳಿಯ ಸೂಚನೆಯನ್ನು ಸರಕಾರ ಕೊಟ್ಟಿರುವುದರಿಂದ ಬಿಂದ್ರನ್ ವಾಲೆ ಸ್ವರ್ಣಮಂದಿರದಿಂದ ಹೋರಬರ ಬೇಕಿತ್ತು, ತನ್ನ ಭಯೋತ್ಪಾದನಾ ಕೃತ್ಯಗಳಿಗೆ ಮಂದಿರವನ್ನು ಆತ ಅಡ್ಡೆಯಾಗಿ ಬಳಸಿಕೊಂಡದ್ದು ತಪ್ಪು ಎಂದು ವ್ಯಾಖ್ಯಾನಿಸುತ್ತಾ ಅವರು ಸುಮ್ಮನೆ ಕೂರಲಿಲ್ಲ. ಬದಲು,
        ಜಾಗತಿಕವಾಗಿ ಅಪಾರ ಖ್ಯಾತಿ, ಮನ್ನಣೆ ಪಡಕೊಂಡಿರುವ ಹಿರಿಯ ಪತ್ರಕರ್ತ ಖುಷ್ವಂತ್ ಸಿಂಗ್ ರು  ದಾಳಿಯನ್ನು ಖಂಡಿಸಿ ಸರಕಾರ ತನಗೆ ನೀಡಿದ್ದ ಪರಮೊನ್ನತ ಪ್ರಶಸ್ತಿಯನ್ನು ಹಿಂತಿರುಗಿಸಿದರು. ಆಂಧ್ರಪ್ರದೇಶದಲ್ಲಿ I A S  ಅಧಿಕಾರಿಯಾಗಿದ್ದ ಗುರುತೇಜ್ ಸಿಂಗ್, I P S ಅಧಿಕಾರಿಯಾಗಿದ್ದ ಸಿಮ್ರನ್ಜಿತ್ ಸಿಂಗ್ ಮಾನ್ ರು  ದಾಳಿಯನ್ನು ಪ್ರತಿಭಟಿಸಿ ಹುದ್ದೆ ತ್ಯಜಿಸಿದರು. ಬಾಂಗ್ಲಾದೇಶ ರಚನೆಗೆ ಕಾರಣವಾದ 1971ರ ಭಾರತ-ಪಾಕ್ ಯುದ್ಧದ ಹೀರೋ ಜಸ್ಜೀತ್ ಸಿಂಗ್ ಅರೋರ ಬಹಿರಂಗವಾಗಿಯೇ ಸರಕಾರವನ್ನು ತರಾಟೆಗೆ ತೆಗೆದು ಕೊಂಡರು. ಇಷ್ಟಕ್ಕೂ ಬಿಂದ್ರನ್ ವಾಲೆ ನಿರಪರಾಧಿಯೇನೂ ಆಗಿರಲಿಲ್ಲ. ತನ್ನ ಭಯೋತ್ಪಾದನಾ ಕೃತ್ಯಗಳಗೆ ಅಡ್ಡೆಯಾಗಿ ಸ್ವರ್ಣಮಂದಿರವನ್ನು ಬಳಸಿಕೊಂಡಿದ್ದ. ಅಲ್ಲಿ ಶಸ್ತ್ರಾಸ್ತ್ರಗಳನ್ನು ಪೇರಿಸಿಟ್ಟಿದ್ದ. ಆದರೂ ಸಿಕ್ಖರು ಸ್ವರ್ಣಮಂದಿರದ ಮೇಲಿನ ಕಮಾಂಡೋ ದಾಳಿಯನ್ನು ಸಹಿಸಲಿಲ್ಲ. ಮಾತ್ರವಲ್ಲ, 5 ತಿಂಗಳ ಬಳಿಕ ನಡೆದ ಸಿಕ್ಖ್ ಹತ್ಯಾಕಾಂಡವನ್ನು ಅವರೆಷ್ಟು ಪ್ರಬಲವಾಗಿ ಪ್ರತಿಭಟಿಸಿದರೆಂದರೆ, 2009ರ ಲೋಕಸಭಾ ಚುನಾವಣೆಯಲ್ಲಿ ಸಜ್ಜನ್ ಕುಮಾರ್ ಮತ್ತು ಜಗದೀಶ್ ಟೈಟ್ಲರ್ ಗೆ  ಕಾಂಗ್ರೆಸ್ ಟಿಕೆಟ್ ಕೊಡದಂತೆ ತಡೆಯಲು ಯಶಸ್ವಿಯಾದರು. ಸಿಕ್ಖ್ ಗಲಭೆಯಲ್ಲಿ ಪಾತ್ರವಿದೆ ಎಂಬ ಆರೋಪವಷ್ಟೇ ಅವರ ಮೇಲಿದ್ದದ್ದು. ಒಂದು ರೀತಿಯಲ್ಲಿ ಕಳೆದ 28 ವರ್ಷಗಳಿಂದ ಸಿಕ್ಖರು ಹತ್ಯಾಕಾಂಡವನ್ನು ಒಂದು ಇಶ್ಯೂ ಆಗಿ ಜೀವಂತವಿಟ್ಟುಕೊಂಡಿದ್ದಾರೆ. ಸರಕಾರದಿಂದ ಪರಿಹಾರ ಪಡಕೊಳ್ಳಲು ಯಶಸ್ವಿಯಾಗಿದ್ದಾರೆ. ಪ್ರಧಾನಿ ಮನವೋಹನ್ ಸಿಂಗ್ ರೆ ಬಹಿರಂಗವಾಗಿ ಸಿಕ್ಖರ ಕ್ಷಮೆ ಯಾಚಿಸಿದ್ದಾರೆ.
ಆದರೆ
       1992ರಲ್ಲಿ ಉರುಳಿದ ಬಾಬರಿ ಮಸೀದಿಯನ್ನು, 2002ರಲ್ಲಾದ ಗುಜರಾತ್ ಹತ್ಯಾಕಾಂಡವನ್ನು, ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಯುವಕರ ಬಂಧನವನ್ನು ಪ್ರತಿಭಟಿಸುವುದಕ್ಕೆ, ಆ ಇಶ್ಯೂವನ್ನು ಚರ್ಚಾ ವಿಷಯವಾಗಿ ಉಳಿಸಿಕೊಳ್ಳುವುದಕ್ಕೆ ಮುಸ್ಲಿಮರಿಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಬಾಬರಿ ಧ್ವಂಸವನ್ನು ಖಂಡಿಸಿ ಎಷ್ಟು ಮುಸ್ಲಿಮ್ ಸಂಸದರು ಸಂಸತ್ತಿಗೆ ರಾಜೀನಾಮೆ ಕೊಟ್ಟಿದ್ದಾರೆ? ಗುಜರಾತ್ ನರಮೇಧವನ್ನು ಪ್ರತಿಭಟಿಸಿ ತಮ್ಮ ಸರಕಾರಿ ಹುದ್ದೆಯನ್ನು ತ್ಯಜಿಸಿದ ಎಷ್ಟು ಮುಸ್ಲಿಮರಿದ್ದಾರೆ? ಮುಸ್ಲಿಮರಲ್ಲಿ ವಿಶ್ವಾಸವನ್ನು ತುಂಬುವುದಕ್ಕಾಗಿ ಅಹ್ಮದಾಬಾದ್, ಗೋಧ್ರಾ, ನರೋಡಾ ಪಾಟಿಯಾ.. ಮುಂತಾದ ನಗರಗಳಲ್ಲಿ ಎಷ್ಟು ಮುಸ್ಲಿಮ್ ಸಂಸದರು, ಶಾಸಕರು, ಅಧಿಕಾರಿಗಳು ಪೆರೇಡ್ ನಡೆಸಿದ್ದಾರೆ? ಭಯೋತ್ಪಾದನೆಯ ನೆಪದಲ್ಲಿ ಬಂಧನಕ್ಕೀಡಾಗುತ್ತಿರುವ ಮುಸ್ಲಿಮ್ ಯುವಕರ ಬಗ್ಗೆ, ಅದರ ಹಿಂದಿರುವ ಪೂರ್ವಗ್ರಹ, ಷಡ್ಯಂತ್ರಗಳ ಬಗ್ಗೆ ನಮ್ಮ ಸಂಸದರು ಮಾತಾಡಿದ್ದನ್ನು ಎಲ್ಲಾದರೂ ಕೇಳಿದ್ದೇವಾ?
ಕರ್ನಾಟಕ
ಮಹಾರಾಷ್ಟ್ರ
ಗುಜರಾತ್
ಮಧ್ಯಪ್ರದೇಶ
ರಾಜಸ್ಥಾನ
ಒರಿಸ್ಸಾ
       ಮುಸ್ಲಿಮ್ ಜನಸಂಖ್ಯೆ ಅತ್ಯಂತ ಹೆಚ್ಚಿರುವ ಮತ್ತು ಭೌಗೋಳಿಕ ವಾಗಿಯೂ ವಿಸ್ತಾರವಾಗಿರುವ ಈ 6 ರಾಜ್ಯಗಳಿಂದ ಕಳೆದ 2009ರ ಲೋಕಸಭಾ ಚುನಾವಣೆಯಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಅಭ್ಯರ್ಥಿ ಪಾರ್ಲಿಮೆಂಟ್ ಗೆ  ಆಯ್ಕೆಯಾಗಿಲ್ಲ. 2004ರಲ್ಲಿ 34 ಮಂದಿ ಮುಸ್ಲಿಮ್ ಎಂ.ಪಿ.ಗಳು ಪಾರ್ಲಿಮೆಂಟ್ ಪ್ರವೇಶಿಸಿದ್ದರೆ, ಈ ಬಾರಿ ಬರೇ 28 ಮಂದಿಯಷ್ಟೇ ಇದ್ದಾರೆ. ಈ ದೇಶವನ್ನು ದೀರ್ಘ ಕಾಲ ಆಳಿದ ಕಾಂಗ್ರೆಸ್ ಪಕ್ಷದವರು ಅವರಲ್ಲಿ ಕೇವಲ 12 ಮಂದಿ. ನಿಜವಾಗಿ ಈ ದೇಶದಲ್ಲಿರುವ ಮುಸ್ಲಿಮ್ ಜನಸಂಖ್ಯೆಯನ್ನು ನೋಡಿದರೆ  72 ಮಂದಿಯಾದರೂ ಪಾರ್ಲಿಮೆಂಟ್ ಪ್ರವೇಶಿಸಬೇಕಿತ್ತು. ಯಾಕೆ ಇದು ಸಾಧ್ಯವಾಗುತ್ತಿಲ್ಲ? ಈ ವೈಫಲ್ಯಕ್ಕೆ ಯಾರನ್ನು ದೂರಬೇಕು?  ಕಳೆದ ಲೋಕಸಭಾ ಚುನಾವಣೆಯಲ್ಲಿ 780 ಮಂದಿ ಮುಸ್ಲಿಮ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದ್ದರಿಂದ ಅಭ್ಯರ್ಥಿಗಳ ಕೊರತೆ, ರಾಜಕೀಯ ನಿರಾಸಕ್ತಿ ಅವರ ಸೋಲಿಗೆ ಕಾರಣ ಖಂಡಿತ ಅಲ್ಲ. ಹಾಗಾದರೆ ಇನ್ನಾವುದು? ಮುಸ್ಲಿಮ್ ಅಭ್ಯರ್ಥಿಗೇ ಓಟು ಹಾಕಬೇಕು ಎಂದು ಕನಿಷ್ಠ  ಮುಸ್ಲಿಮರಿಗಾದರೂ ಅನಿಸುವುದಕ್ಕೆ ಪೂರಕವಾಗಿ ಈ ಅಭ್ಯರ್ಥಿಗಳಲ್ಲಿ ಏನೇನು ಅರ್ಹತೆಗಳಿರಬೇಕು? ಅವರಿಂದ ಮುಸ್ಲಿಮ್ ಸಮಾಜ ನಿರೀಕ್ಷಿಸುವುದೇನು? ಈಗಾಗಲೇ ಪಾರ್ಲಿಮೆಂಟನ್ನೋ ವಿಧಾನಸಭೆ ಯನ್ನೋ ಪ್ರವೇಶಿಸಿದ ಎಷ್ಟು ಎಂ.ಪಿ.,  ಎಂ.ಎಲ್.ಎ.ಗಳು ಈ ನಿರೀಕ್ಷೆಗಳನ್ನು ಪೂರ್ತಿಗೊಳಿಸಿದ್ದಾರೆ? ಮುಸ್ಲಿಮ್ ಎಂ.ಪಿ.ಗೂ ಮುಸ್ಲಿಮೇತರ ಎಂ.ಪಿ.ಗೂ ಕಾರ್ಯನಿರ್ವಹಣೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲವೆಂದಾದರೆ; ಆರ್ಥಿಕವಾಗಿ, ಶೈಕ್ಷಣಿಕವಾಗಿ ದಲಿತರಿಗಿಂತಲೂ ಕೆಳಮಟ್ಟದಲ್ಲಿರುವ ಮುಸ್ಲಿಮ್ ಸಮಾಜದ ಬಗ್ಗೆ ವಿಶೇಷ ಕಾಳಜಿಯನ್ನು ಅವರು ತೋರುವುದಿಲ್ಲವೆಂದಾದರೆ ಮತ್ತೇಕೆ ಮುಸ್ಲಿಮ್ ಅಭ್ಯರ್ಥಿಯ ಪರ ಮುಸ್ಲಿಮರು ವಿಶೇಷ ಆಸಕ್ತಿಯನ್ನು ತೋರಬೇಕು?
         ಎರಡು ತಿಂಗಳ ಹಿಂದೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜಾಮಾ ಮಸೀದಿಯ ಅಬ್ದುಲ್ಲಾ ಬುಖಾರಿಯವರು ಸಮಾಜವಾದಿ ಪಕ್ಷದ ಪರ ಪ್ರಚಾರ ನಡೆಸಿದ್ದರು. ಆ ಪಕ್ಷದಲ್ಲಿ ಮುಸ್ಲಿಮರಿಗೆ ಹಿತವಿದೆ ಎಂಬಂತೆ ಹೇಳಿಕೆಗಳನ್ನು ಕೊಟ್ಟಿದ್ದರು. ಆಗ ಅವರ ಅಳಿಯ ಉಮರ್ ಅಲಿ ಖಾನ್ ಗೆ  ಸಮಾಜವಾದಿ ಪಕ್ಷವು ಸಹರಾನ್ಪುರದ ಬೆಹೆತ್ ನಲ್ಲಿ ಟಿಕೆಟ್ ನೀಡಿತ್ತು. ಆದರೆ ಚುನಾವಣೆಯಲ್ಲಿ ಅಲಿ ಖಾನ್ ಸೋತದ್ದಷ್ಟೇ ಅಲ್ಲ, ಇಡುಗಂಟನ್ನೇ ಕಳಕೊಂಡರು. ಇದಾಗಿ ಎರಡು ತಿಂಗಳ ಬಳಿಕ ಎಪ್ರಿಲ್ ನಲ್ಲಿ, ಇದೇ ಬುಖಾರಿ ಸಮಾಜವಾದಿ ಪಕ್ಷವನ್ನು ದೂರಿದರು. ಪಕ್ಷವು ಮುಸ್ಲಿಮರಿಗೆ ಸೂಕ್ತ ಪ್ರಾತಿನಿಧ್ಯ ನೀಡುತ್ತಿಲ್ಲ ಅಂದರು.
     ಆದರೆ ಅವರ ಸಿಟ್ಟಿಗೆ ನಿಜವಾದ ಕಾರಣ ಅದಾಗಿರಲಿಲ್ಲ ಎಂಬುದು ಆ ಬಳಿಕ ಬಹಿರಂಗವಾಯಿತು. ಬುಖಾರಿಯವರಿಗೆ ತನ್ನ ಸಹೋದರನನ್ನು ರಾಜ್ಯ ಸಭೆಗೆ ಕಳುಹಿಸುವ ಆಸೆ ಇತ್ತು. ತನ್ನ ಅಳಿಯನನ್ನು ವಿಧಾನ ಪರಿಷತ್ ಗೆ  ಕಳುಹಿಸಿ ಅಖಿಲೇಷ್ ಮಂತ್ರಿಮಂಡಲದಲ್ಲಿ ಸ್ಥಾನ ದೊರಕಿಸುವ ಬಯಕೆ ಇತ್ತು. ಆದರೆ ಅವೆರಡೂ ಕೈಗೂಡುವ ಸಾಧ್ಯತೆ ಕ್ಷೀಣಿಸಿದಾಗ ಅವರು ಸಕಲ ಮುಸ್ಲಿಮರ ವಕ್ತಾರರಂತೆ ಹೇಳಿಕೆ ಕೊಟ್ಟರು.
        ನಿಜವಾಗಿ ಇದು ಒಂಟಿ ಘಟನೆಯೇನೂ ಅಲ್ಲ. ಗೆದ್ದು ವಿಧಾನ ಸಭೆಗೋ, ಲೋಕಸಭೆಗೋ ಪ್ರವೇಶಿಸುವ ಮುಸ್ಲಿಮ್ ವ್ಯಕ್ತಿಯೊಬ್ಬ ಮುಸ್ಲಿಮರ ಏಳಿಗೆಗಾಗಿ ಏನೇನೂ ಮಾಡದಿದ್ದರೂ, ಮುಂದಿನ ಬಾರಿ ಪಕ್ಷ ಟಿಕೆಟು ನಿರಾಕರಿಸಿದರೆ ಅದನ್ನು, ‘ಮುಸ್ಲಿಮರಿಗೆ ಮಾಡುವ ಅನ್ಯಾಯ' ಎಂದು ವ್ಯಾಖ್ಯಾನಿಸುವುದಿದೆ. ತನಗೆ ಮಂತ್ರಿಸ್ಥಾನ ಸಿಗದಿದ್ದರೆ, `ಮಂತ್ರಿಮಂಡಲದಲ್ಲಿ ಮುಸ್ಲಿಮರಿಗೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ' ಅನ್ನುವುದಿದೆ. ಒಂದು ರೀತಿಯಲ್ಲಿ ತಮ್ಮ ತಮ್ಮ ಸ್ವಾರ್ಥವನ್ನೇ ಮುಸ್ಲಿಮ್ ಪ್ರಾತಿನಿಧ್ಯವನ್ನಾಗಿ, ತಮಗೆ ಸಿಗದ ಅವಕಾಶವನ್ನು ಮುಸ್ಲಿಮ್ ಸಮಾಜಕ್ಕೆ ಸಿಗದ ಅವಕಾಶವನ್ನಾಗಿ ಬಿಂಬಿಸಿ ಮುಸ್ಲಿಮ್ ಸಮಾಜವನ್ನು ವಂಚಿಸಿದವರೇ ಹೆಚ್ಚಿದ್ದಾರೆ. ಹೀಗಿರುವಾಗ, ಮುಸ್ಲಿಮರು, ಮುಸ್ಲಿಮ್ ಅಭ್ಯರ್ಥಿಯ ಬಗ್ಗೆ ಆಸಕ್ತಿ ತಾಳಬೇಕಾದರೂ ಯಾಕೆ? ಅವರು ಪಾರ್ಲಿಮೆಂಟನ್ನೋ ಅಸೆಂಬ್ಲಿಯನ್ನೋ ಪ್ರವೇಶಿಸುವುದರಿಂದ ಮುಸ್ಲಿಮರ ಅಭಿವೃದ್ಧಿಯನ್ನು, ಅವರ ಮೇಲಿನ ಅನ್ಯಾಯವನ್ನು ಪ್ರತಿಭಟಿಸುವಲ್ಲಿ, ಅವರ ಧ್ವನಿಯಾಗುವಲ್ಲಿ ಯಾವ ವ್ಯತ್ಯಾಸವೂ ಆಗುತ್ತಿಲ್ಲವೆಂದಾದರೆ, ಅವರನ್ನೇ ಮುಸ್ಲಿಮರೇಕೆ ಆಯ್ಕೆ ಮಾಡಬೇಕು? ಗುಜರಾತ್ ಹತ್ಯಾಕಾಂಡವನ್ನು ಪ್ರತಿಭಟಿಸಿ ಗುಜರಾತ್ ನ  I A S  ಅಧಿಕಾರಿ ಹರ್ಷಮಂದರ್ ತನ್ನ ಹುದ್ದೆಗೇ ರಾಜೀನಾಮೆ ಕೊಟ್ಟರು. ಮೋದಿ  ಸರಕಾರದ ಕಿರುಕುಳ, ಹಿಂಸೆಗಳನ್ನು ಸಹಿಸುತ್ತಾ, ವ್ಯವಸ್ಥೆ ಹೊರಿಸಿದ ಹತ್ತಾರು ಸುಳ್ಳು ಕೇಸುಗಳನ್ನು ಎದುರಿಸುತ್ತಾ ಗುಜರಾತ್ ಹತ್ಯಾಕಾಂಡದ ಬಲಿಪಶುಗಳಿಗಾಗಿ ಜೀವ ಬೆದರಿಕೆಯ ಮಧ್ಯೆಯೂ ಹೋರಾಡುತ್ತಿರುವುದು ತೀಸ್ತಾ ಸೆಟಲ್ವಾಡ್. ಸಂಘಪರಿವಾರದ ಭಯೋತ್ಪಾದನೆಯನ್ನು ಬಹಿರಂಗ ವೇದಿಕೆಗಳಲ್ಲಿ, ಪತ್ರಿಕಾಗೋಷ್ಠಿಗಳಲ್ಲಿ ಪ್ರಸ್ತಾಪಿಸಿ, ಮುಸ್ಲಿಮ್ ಯುವಕರ ಬಂಧನ ಸತ್ರವನ್ನು ಖಂಡಿಸಿ ಧೈರ್ಯದಿಂದ ಹೇಳಿಕೆ ಕೊಡುತ್ತಿರುವುದು ಅರ್ಜುನ್ ಸಿಂಗ್. ಇವರೆಲ್ಲ ಮುಸ್ಲಿಮರೇನೂ ಅಲ್ಲ. ಆದರೆ ಇವರ ಧ್ವನಿ, ಕರ್ತೃತ್ವ ಶಕ್ತಿ, ದಮನಿತರ ಬಗೆಗಿನ ಸಹಾನುಭೂತಿ ಓರ್ವ ಮುಸ್ಲಿಮ್ ಸಂಸದರಲ್ಲೋ ಶಾಸಕರಲ್ಲೋ ಅಧಿಕಾರಿಯಲ್ಲೋ ಕಾಣುತ್ತಿಲ್ಲ. ಅಂದಹಾಗೆ ಬಾಬರಿ ಧ್ವಂಸವನ್ನು ಖಂಡಿಸಿ ಎಷ್ಟು ಮಂದಿ ಮುಸ್ಲಿಮ್ ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು? ಕಾಂಗ್ರೆಸ್ ಪಕ್ಷದ ದ್ರೋಹವನ್ನು ಕನಿಷ್ಠ ಬಹಿರಂಗವಾಗಿ ಖಂಡಿಸುವುದಕ್ಕಾದರೂ ಇವರಲ್ಲಿ ಯಾರಿಗೆಲ್ಲ ಸಾಧ್ಯವಾಯಿತು? ಮಾತಾಡಲೇಬೇಕಾದ ಸಂದರ್ಭದಲ್ಲೂ ಮೌನ ವಹಿಸುವ ಪ್ರತಿನಿಧಿಗಳಿಂದ ಸಮುದಾಯಕ್ಕೆ ಆಗುವ ಲಾಭವಾದರೂ ಏನು? 15% ಇರುವ ಮುಸ್ಲಿಮರನ್ನು ಸಂತುಷ್ಟಗೊಳಿಸುವುದರಿಂದ ಏನೇನೂ ಲಾಭ ಇಲ್ಲದ, ಒಂದೊಮ್ಮೆ ಓಟಿಗೂ ನಿಂತರೂ ಬರೇ ಮುಸ್ಲಿಮರ ಓಟಿನಿಂದ ಗೆದ್ದು ಬರಲು ಸಾಧ್ಯವೂ ಇಲ್ಲವೆಂಬ ಸತ್ಯಾಂಶ ಗೊತ್ತಿದ್ದೂ ಓರ್ವ ಸಂಜೀವ್ ಭಟ್, ಹರ್ಷಮಂದರ್, ತೀಸ್ತಾ ಸೆಟಲ್ವಾಡ್ ರು  ಅನ್ಯಾಯದ ವಿರುದ್ಧ ಧೈರ್ಯದ ನಿಲುವು ತೆಗೆದುಕೊಳ್ಳುತ್ತಾರೆಂದಾದರೆ, ಅಂಥ ಉದಾಹರಣೆಗಳೇಕೆ ಮುಸ್ಲಿಮರಲ್ಲಿ ಕಾಣಿಸುತ್ತಿಲ್ಲ? ಖುಶ್ವಂತ್ ಸಿಂಗ್, ಸಿಮ್ರನ್ಜಿತ್ ಸಿಂಗ್ ಮಾನ್, ಗುರುತೇಜ್ ಸಿಂಗ್..ರಂಥವರೇಕೆ ನಮ್ಮಲ್ಲಿಲ್ಲ? ವಿಧಾನಸಭೆಗಳಲ್ಲಿ, ಪಾರ್ಲಿಮೆಂಟ್ ಮತ್ತು ವಿಧಾನ ಸಭೆಗಳಲ್ಲಿ ಮುಸ್ಲಿಮ್ ಪ್ರಾತಿನಿಧ್ಯ ಕಡಿಮೆಯಾಗುತ್ತಿರುವುದರಿಂದ (ಕರ್ನಾಟಕದಲ್ಲಿಪ್ರಸಕ್ತ  ಕೇವಲ 8 ಮುಸ್ಲಿಮ್ ಶಾಸಕರಿದ್ದಾರೆ)  ಅಲ್ಲೂ ಮುಸ್ಲಿಮರಿಗೆ ಮೀಸಲಾತಿ ಸಿಗಬೇಕೆಂಬ ವಾದಗಳು ಪಾರ್ಲಿಮೆಂಟ್ ಗೆ  60 ವರ್ಷವಾದ ಈ ಸಂದರ್ಭದಲ್ಲಿ ಕೇಳಿ ಬರುತ್ತಿರುವಾಗ, ಅಂಥ ಮೀಸಲಾತಿಯಿಂದ ಸಮುದಾಯಕ್ಕೆ ಯಾವ ಲಾಭವಿದೆ ಎಂಬ ಪ್ರಶ್ನೆಯೂ ಪ್ರಸ್ತುತವಾಗಬೇಕು. ಸ್ವಾರ್ಥಿಗಳು ಮೀಸಲಾತಿಯನ್ನು ದುರುಪಯೋಗಿಸದಂತೆ ತಡೆಯದಿದ್ದರೆ ಆ ಮೀಸಲಾತಿಯಿಂದ ಸಮುದಾಯಕ್ಕೆ ಯಾವ ಪ್ರಯೋಜನವೂ ಇಲ್ಲ.
ಸ್ವರ್ಣ ಮಂದಿರದಂತೆ ಭಯೋತ್ಪಾದಕರು ಅಡಗಿರದ, ಶಸ್ತ್ರಾಸ್ತ್ರಗಳಿಲ್ಲದ ಬಾಬರಿಯನ್ನು ಉರುಳಿಸಿದವರು ಇವತ್ತು ಅದಕ್ಕಾಗಿ ಹೆಮ್ಮೆ ಪಡುತ್ತಿದ್ದಾರೆ. ಉರುಳಿ 20 ವರ್ಷಗಳಾದರೂ ಪ್ರಾಥಮಿಕ ಹಂತದಿಂದ ತನಿಖೆ ಇನ್ನೂ ಮೇಲೆ ಬಂದಿಲ್ಲ. ಕಳೆದ 20 ವರ್ಷಗಳಲ್ಲಿ ಪಾರ್ಲಿಮೆಂಟ್ ಪ್ರವೇಶಿಸಿದ ಮುಸ್ಲಿಮ್ ಸಂಸದರು ಒಂದುಗೂಡಿ ಇದನ್ನು ಒಂದು ಇಶ್ಯೂ ಆಗಿ ಪರಿಗಣಿಸುತ್ತಿದ್ದರೆ ಈ ಪರಿಸ್ಥಿತಿ ಬರುವ ಸಾಧ್ಯತೆ ಇತ್ತೇ?


Tuesday, May 15, 2012

ಗಂಗಮ್ಮ, ನೀಲಮ್ಮ, ಪಣಿಯಮ್ಮ ಮತ್ತು ಪಾನಮತ್ತ ಚಾಲಕ

             ಮೇ 12ರಂದು ಮೈಸೂರಲ್ಲಿ ನಡೆದ ಅಪಘಾತದ ವಿವರ ಹೀಗಿದೆ.
   ‘ಹೆಚ್.ಡಿ. ಕೋಟೆಯ ಹೈಲಿಗೆ ಗ್ರಾಮದಲ್ಲಿ ಆಲ್ಟೋ ಕಾರೊಂದಕ್ಕೆ ಐವರು ಯುವತಿಯರು ಬಲಿಯಾಗಿದ್ದಾರೆ. ಗಾರ್ಮೆಂಟ್ಸ್ ನಲ್ಲಿ ಕಾರ್ಮಿಕರಾಗಿರುವ ಈ ಯುವತಿಯರು ಮುಂಜಾನೆ ಫೂಟ್ ಪಾತಲ್ಲಿ  ವಾಹನಕ್ಕಾಗಿ ಕಾಯುತ್ತಿದ್ದಾಗ, ಆಲ್ಟೋ ಅವರ ಮೇಲೆ ಚಲಿಸಿದೆ. ಚಾಲಕ ಪಾನಮತ್ತನಾಗಿದ್ದು ಪರಾರಿಯಾಗಿದ್ದಾನೆ. ಕಾರಿನಲ್ಲಿ ಮದ್ಯದ ಬಾಟಲುಗಳು, ಪ್ಲಾಸ್ಟಿಕ್ ಲೋಟಗಳು ಪತ್ತೆಯಾಗಿವೆ..’
     ಸಾವು ಅನ್ನುವ ಎರಡಕ್ಷರಕ್ಕೆ ಸಿಗುವ ತಕ್ಷಣದ ಪ್ರತಿಕ್ರಿಯೆಗಳು ಕಣ್ಣೀರು, ಆಕ್ರಂದನ ಮತ್ತು ಮೌನ ಮಾತ್ರ. ಒಂದು ವೇಳೆ ಸಾವಿಗೀಡಾದವರು ಕೂಲಿ ಕಾರ್ಮಿಕರಾಗಿದ್ದರೆ, ರೇಶನ್ ಅಂಗಡಿಯ ಮುಂದೆ ಚಿಮಿಣಿ ಎಣ್ಣೆಗೋ, ಮೂರು ಕೆ.ಜಿ. ರಿಯಾಯಿತಿ ಅಕ್ಕಿಗೋ ಸಾಲುಗಟ್ಟಿ ನಿಲ್ಲುವವರಾಗಿದ್ದರೆ ಇಲ್ಲವೇ ಪೇಟೆಯ ಮಂದಿಯಂತೆ ನೀಟಾಗಿ ಬಟ್ಟೆ ತೊಡಲು, ಮಾತಾಡಲು ಬಾರದವರಾಗಿದ್ದರೆ ಅವರು ಮಾಧ್ಯಮಗಳಲ್ಲಿ ಒಂದು ದಿನಕ್ಕಿಂತ ಹೆಚ್ಚು ಸುದ್ದಿಯೇ ಆಗುವುದಿಲ್ಲ. ಅಪಘಾತಕ್ಕೆ ಕಾರಣ ಮದ್ಯ ಸೇವನೆ ಆಗಿದ್ದರೂ ಮಾಧ್ಯಮಗಳಲ್ಲಿ ಮದ್ಯ ಚರ್ಚೆಗೆ ಒಳಗಾಗುವುದಿಲ್ಲ. ಬೆಲೆ ಏರಿಕೆಯನ್ನು ಖಂಡಿಸಿ ಬಡಪಾಯಿಗಳು ಒಂದು ದಿನ ಮುಷ್ಕರ ನಡೆಸಿದರೆ ದೇಶಕ್ಕೆ ಎಷ್ಟು ನಷ್ಟ ಆಗುತ್ತದೆಂದು ಗುಣಾಕಾರ-ಭಾಗಾಕಾರ ಮಾಡುವವರಿಗೆ, ವರ್ಷದಲ್ಲಿ ಮದ್ಯಪಾನದಿಂದ ಎಷ್ಟು ಅಪಘಾತಗಳು ಸಂಭವಿಸುತ್ತವೆ ಅನ್ನುವುದನ್ನು ಅಷ್ಟೇ ಉತ್ಸಾಹದಿಂದ ಬರೆಯಲೂ ಬರುವುದಿಲ್ಲ. ಇನ್ನು, ಗಂಗಮ್ಮ, ನೀಲಮ್ಮ, ಪಣಿಯಮ್ಮ.. ಮುಂತಾದ ಹೆಸರುಗಳು ಸುಷ್ಮಾ, ಸೋನಿಯಾ, ವಸುಂದರಾ.. ಎಂಬಷ್ಟು ಚಂದದವುಗಳೂ ಅಲ್ಲವಲ್ಲ. ಅಂಥ ‘ಪುರಾತನ’ ಶೈಲಿಯ ಹೆಸರನ್ನು ಬರೆದು ಬಾಯಿ, ಪೆನ್ನು, ಕಾಗದವನ್ನು ಯಾಕೆ ಅವರು `ಗಲೀಜು’ ಮಾಡಿಕೊಳ್ಳಬೇಕು?
    ನಮ್ಮಲ್ಲಿ ಕೆಲವು ವಿಚಿತ್ರಗಳಿವೆ. ವಿಮಾನವೊಂದು ಅಪಘಾತಕ್ಕೀಡಾದರೆ ಅದರ ಕಾರಣಗಳನ್ನು ಪತ್ತೆ ಹಚ್ಚುವುದಕ್ಕೆ ಆಯೋಗದ ರಚನೆಯಾಗುತ್ತದೆ. ತಪ್ಪುಗಳನ್ನು ಕಂಡು ಹುಡುಕಿ ಮುಂದೆ ಅಂಥ ಪ್ರಮಾದ ಆಗದಂತೆ ಜಾಗ್ರತೆ ವಹಿಸಲಾಗುತ್ತದೆ. ಮಳೆಗಾಲ ಬಂತೆಂದರೆ ಸರಕಾರ ಚಿಕೂನ್ ಗುನ್ಯಾ, ಮಲೇರಿಯಾ, ಡೆಂಗ್ಯುನ ಬಗ್ಗೆ ಎಚ್ಚರಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ಮನೆ ಮನೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸುವ ವ್ಯವಸ್ಥೆ ಮಾಡುತ್ತದೆ. ಗೆರಟೆ, ಟೈರು, ಸಿಯಾಳ ಸಿಪ್ಪೆಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸಾರ್ವಜನಿಕರಿಗೆ ಕರೆ ಕೊಡುತ್ತದೆ. ಅಂದರೆ ಮಲೇರಿಯಾಕ್ಕೋ ಚಿಕೂನ್ ಗುನ್ಯಾಕ್ಕೋ ತುತ್ತಾಗಿ ಸಾವಿಗೀಡಾದವರಿಗೆ ಶೋಕ ವ್ಯಕ್ತಪಡಿಸುವುದನ್ನಷ್ಟೇ ಸರಕಾರ ಮಾಡುವುದಲ್ಲ. ರೋಗಕ್ಕೆ ಕಾರಣವಾಗುವ ಸೊಳ್ಳೆಗಳಿಗೆ ಮತ್ತು ಅದು ಉತ್ಪಾದನೆಯಾಗುವಂಥ ಸ್ಥಳ ಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಿ ಮೂಲ ರೋಗಾಣುವನ್ನೇ ನಿರ್ಮೂಲನಗೊಳಿಸುವ ಪ್ರಯತ್ನಕ್ಕಿಳಿಯುತ್ತದೆ. ದುರಂತ ಏನೆಂದರೆ, ಮದ್ಯಕ್ಕೆ ಸಂಬಂಧಿಸಿ ಸರಕಾರದ ಕ್ರಮ ಈ ಮಟ್ಟದಲ್ಲಿರುವುದಿಲ್ಲ. ಪಾನ ಮತ್ತ ಚಾಲಕನೊಬ್ಬ ತನ್ನ ವಾಹನವನ್ನು ಪಾದಚಾರಿಗಳ ಮೇಲೆ ಚಲಾಯಿಸಿದರೆ ಸರಕಾರ ಸಾವಿಗೀಡಾದವರಿಗೆ ಪರಿಹಾರ ನೀಡುತ್ತದೆಯೇ ಹೊರತು ಅಪಘಾತಕ್ಕೆ ಮೂಲ ಕಾರಣವಾದ ಮದ್ಯದ ನಿರ್ಮೂಲನಕ್ಕೆ ಮುಂದಾಗುವುದೇ ಇಲ್ಲ. ಒಂದು ವೇಳೆ ನಮ್ಮ ವ್ಯವಸ್ಥೆಗೆ ಮದ್ಯ ದುರಂತದ ಬಗ್ಗೆ ಪ್ರಾಮಾಣಿಕ ಕಾಳಜಿ ಇರುತ್ತಿದ್ದರೆ ಚಾಲಕನಿಗಲ್ಲ, ಮದ್ಯಕ್ಕೆ ಶಿಕ್ಷೆ ಕೊಡಬೇಕಿತ್ತು. ಎಲ್ಲಾ ಬಗೆಯ ಮದ್ಯಕ್ಕೂ ನಿಷೇಧ ವಿಧಿಸುವ ಮೂಲಕ ಕ್ರಾಂತಿಕಾರಿ ಕ್ರಮವನ್ನು ಕೈಗೊಳ್ಳಬೇಕಿತ್ತು..
     ನಿಜವಾಗಿ ಗಂಗಮ್ಮ, ನೀಲಮ್ಮ, ಗೀತಮ್ಮ..ರಂಥವರ ಅಮೂಲ್ಯ ಓಟನ್ನು ಪಡಕೊಂಡು ವಿಧಾನ ಸೌಧಕ್ಕೋ ಸಂಸತ್ತಿಗೋ ಪ್ರವೇಶಿಸುವ ಮಂದಿ, ಬಳಿಕ ಓಡಾಡುವುದು ವಿಮಾನಗಳಲ್ಲಿ. ಒಂದು ವೇಳೆ ಅವರು ರಸ್ತೆಗಿಳಿದರೂ ಹಿಂದೆ ಮತ್ತು ಮುಂದೆ ಕಾವಲು ವಾಹನಗಳಿರುತ್ತವೆ. ಅವರ ವಾಹನದ ಸನಿಹಕ್ಕೂ ಇತರ ವಾಹನಗಳನ್ನು ಸುಳಿಯದಂತೆ ತಡೆಯಲಾಗುತ್ತದೆ. ಹೀಗಿರುವಾಗ ಪಾನಮತ್ತ ಚಾಲಕನೊಬ್ಬ ಅವರಿಗೆ ಢಿಕ್ಕಿಯಾಗುವ ಸಾಧ್ಯತೆಯೇ ಇರುವುದಿಲ್ಲ. ಒಂದು ವೇಳೆ ಇವೆಲ್ಲ ಇದ್ದೂ ಈ ದೇಶದ ರಾಷ್ಟ್ರಪತಿಯ ವಾಹನಕ್ಕೋ ಪ್ರಧಾನಿ ಅಥವಾ ಮುಖ್ಯಮಂತ್ರಿಯ ವಾಹನಕ್ಕೋ ಪಾನ ಮತ್ತ ಚಾಲಕರಿಂದ ಆಗಾಗ ಢಿಕ್ಕಿಯಾದ ಮತ್ತು ಅವರು ಅಪಾಯದಲ್ಲಿ ಸಿಲುಕಿಕೊಂಡ ಪ್ರಕರಣಗಳು ನಡೆದುವು ಎಂದಿಟ್ಟುಕೊಳ್ಳಿ. ಸರಕಾರದ ಪ್ರತಿಕ್ರಿಯೆ ಹೇಗಿದ್ದೀತು? ಕೇವಲ ಪಾನಮತ್ತ ಚಾಲಕನನ್ನಷ್ಟೇ ದಂಡಿಸಿ, ಪ್ರಕರಣವನ್ನು ಅದು ಮುಚ್ಚಿಬಿಡುತ್ತಿತ್ತೇ? ಮದ್ಯಪಾನದ ಬಗ್ಗೆ, ಅದರಿಂದುಂಟಾಗುವ ದುಷ್ಪರಿಣಾಮಗಳ ಬಗ್ಗೆ ದೇಶದಾದ್ಯಂತ ಗಂಭೀರ ಚರ್ಚೆಗೆ ಸರಕಾರ ಕರೆ ಕೊಡುತ್ತಿರಲಿಲ್ಲವೇ? ‘ನಮ್ಮ ನಾಯಕರನ್ನು ಉಳಿಸಿಕೊಳ್ಳುವುದಕ್ಕಾಗಿ ಮದ್ಯವನ್ನು ನಿಷೇಧಿಸುವುದಕ್ಕೂ ಸಿದ್ಧ’ ಅನ್ನುವ ಹೇಳಿಕೆಗಳನ್ನು ರಾಜಕಾರಣಿಗಳು ಕೊಡುವ ಸಾಧ್ಯತೆ ಇರಲಿಲ್ಲವೇ?
ಮದ್ಯಪಾನದಿಂದಾಗಿ ಆಗುವ ಸಾವುಗಳನ್ನು ಸಾಮಾನ್ಯ ಸಾವುಗಳ ಪಟ್ಟಿಗೆ ಸೇರಿಸಿ ಸುಮ್ಮನಾಗುವುದು ಸಾವಿಗೀಡಾದವರಿಗೆ ನಾವು ಬಗೆಯುವ ಬಹುದೊಡ್ಡ ದ್ರೋಹ. ನಿಜವಾಗಿ ಆ ಸಾವು ಹೃದಯಾಘಾತದಂಥಲ್ಲ. ವ್ಯವಸ್ಥೆ ಮನಸ್ಸು ಮಾಡಿದರೆ ಇಂಥ ಸಾವನ್ನು ತಪ್ಪಿಸಬಹುದು. ಗಂಗಮ್ಮ, ನೀಲಮ್ಮರಂಥವರಲ್ಲಿ ನಮ್ಮ ಅಬಕಾರಿ ಮಂತ್ರಿಗಳು, ಮುಖ್ಯಮಂತ್ರಿಗಳು, ಪ್ರಧಾನಮಂತ್ರಿಗಳೆಲ್ಲಾ ತಮ್ಮ ತಂಗಿ, ತಾಯಿ, ಅಕ್ಕರನ್ನು ಕಾಣುವಾಗ ಅದು ಸಾಧ್ಯವಾಗುತ್ತದೆ. ಸೋನಿಯಾ, ಸುಷ್ಮಾ, ಬೃಂದಾರನ್ನು ತಿಂಗಳುಗಟ್ಟಲೆ ಮುಖಪುಟದಲ್ಲಿಟ್ಟು ಹೊತ್ತೊಯ್ಯುವ ಪತ್ರಿಕೆಗಳು, ಅವರಂಥ ಖದರು ಮತ್ತು ಚೆಲುವು ಇಲ್ಲದ ಬಡಪಾಯಿ ‘ಅಮ್ಮ’ಂದಿರನ್ನು ಆ ಜಾಗದಲ್ಲಿಟ್ಟು ಚರ್ಚಿಸಿದಾಗಲೂ ಇದು ಸಾಧ್ಯವಾಗುತ್ತದೆ. ಯಡಿಯೂರಪ್ಪ ಬಾಯಿ ಆಕಳಿಸಿದ್ದನ್ನೂ ಬ್ರೇಕಿಂಗ್ ನ್ಯೂಸ್ ಮಾಡುವ ಚಾನೆಲ್ ಗಳಿಗೆ ‘ನೀಲಮ್ಮ’ರ ಸಾವು ಮತ್ತು ಅದಕ್ಕಿರುವ ಕಾರಣಗಳು ಮಹತ್ವದ್ದಾಗಿ ಬಿಟ್ಟಾಗಲೂ ಇದು ಸಾಧ್ಯವಾಗುತ್ತದೆ. ಆದ್ದರಿಂದ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಕೆಲಸವನ್ನು ಕನಿಷ್ಠ ಮಾಧ್ಯಮಗಳಾದರೂ ಮಾಡಲಿ. ಮದ್ಯ ಮುಕ್ತ ಭಾರತದ ನಿರ್ಮಾಣಕ್ಕೆ ಮಾಧ್ಯಮಗಳ ನೇತೃತ್ವದಲ್ಲಿ ಚಳವಳಿ ನಡೆಯಲಿ. ಹಾಗಾದರೆ ಮೈಸೂರಿನ ರಸ್ತೆಯಲ್ಲಿ ಬೋರಲಾಗಿ ಬಿದ್ದ ನೀಲಮ್ಮರಂಥವರ ಸಾವಿಗೆ ನಿಜವಾದ ಶೋಕ ಸಲ್ಲಿಸಿದಂತಾಗುತ್ತದೆ.

ಅಮ್ಮಾ ಕ್ಷಮಿಸು..ನಾನು ತಪ್ಪು ಮಾಡಿಬಿಟ್ಟೆ..

    ‘ಓ ನಾದಾಪುರ ಊರಿನವರೇ, ನಿಮ್ಮಲ್ಲಾರೂ ಗಂಡಸರಿಲ್ಲವಾ? ಇಷ್ಟೊಂದು ಕ್ರೂರವಾಗಿ ಪತ್ನಿಯನ್ನು ಪೀಡಿಸಿದವ, ವರದಕ್ಷಿಣೆಗಾಗಿ ಆಕೆಯನ್ನೇ ಬಲಿ ಪಡೆದವ ನಿಮ್ಮ ಮಧ್ಯೆಯೇ ಎದೆ ಸೆಟೆದು ನಡೆಯುತ್ತಾನಲ್ಲಾ, ನಿಮಗೆ ನಾಚಿಕೆಯಾಗುವುದಿಲ್ಲವೇ? ಫೈಝಲ್ ಅನ್ನುವ ಆ ಕ್ರೂರಿಯನ್ನು ನೋಡುವಾಗ ನಿಮಗೇನೂ ಅನಿಸುವುದಿಲ್ಲವೇ? ನಿಮ್ಮ ಮೌನಕ್ಕೆ ಧಿಕ್ಕಾರವಿರಲಿ..’
      ಏಷ್ಯಾನೆಟ್ ಟಿ.ವಿ. ಚಾನೆಲ್ ನ  ‘ಕಂಡದ್ದು ಕೇಳಿದ್ದು’ ಕಾರ್ಯಕ್ರಮದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ‘ವಲಯ’ದ ಝಫರಿಯ ಎಂಬ ಹೆಣ್ಣು ಮಗಳ ಹೃದಯ ವಿದ್ರಾವಕ ಕತೆ ಇತ್ತೀಚೆಗೆ ಪ್ರಸಾರವಾಗದೇ ಇರುತ್ತಿದ್ದರೆ, ಝಫರಿಯ ಹೊರ ಜಗತ್ತಿಗೆ ಅಪರಿಚಿತವಾಗಿಯೇ ಉಳಿಯುತ್ತಿದ್ದಳೇನೋ. ಆ ಕಾರ್ಯಕ್ರಮವನ್ನು ವೀಕ್ಷಿಸಿದ ಸಾವಿರಾರು ಮಂದಿಯ ಕಣ್ಣುಗಳು ಒದ್ದೆಯಾದುವು. ಬಿಕ್ಕಿ ಬಿಕ್ಕಿ ಅತ್ತರು. 2007 ಡಿಸೆಂಬರ್ 3ರಂದು ಮದುವೆಯಾದ ಬಳಿಕ ಝಫರಿಯಳ ಬದುಕಿನ ಪ್ರತಿ ಪುಟದಲ್ಲೂ ಇದ್ದದ್ದು ಬರೀ ವಿಷಾದಗಳೇ. ಯುವಕನೊಬ್ಬ ಫೇಸ್ ಬುಕ್ ನಲ್ಲಿ  ಝಫರಿಯಳ ಪೋಟೋ ಹಾಕಿ, ಮೇಲಿನಂತೆ ಕಮೆಂಟು ಬರೆದ. ನೂರಾರು ಪ್ರತಿಕ್ರಿಯೆಗಳು ಫೇಸ್ ಬುಕ್ಕನ್ನಿಡೀ ತುಂಬಿಕೊಂಡವು. ಆಕ್ರೋಶ, ಸಿಟ್ಟು, ಕಣ್ಣೀರುಗಳೇ ತುಂಬಿಕೊಂಡಿರುವ ಅಸಂಖ್ಯ ಪತ್ರಗಳು..
       ಮುಂದಿನದನ್ನು ಝಫರಿಯಳ ಮಾತಿನಲ್ಲೇ ಕೇಳಿ..
7 ಹೆಣ್ಣು, 3 ಗಂಡು ಮಕ್ಕಳಿರುವ ದೊಡ್ಡದೊಂದು ಮನೆಗೆ ನಾನು ಸೊಸೆಯಾಗಿ ಹೋದೆ. ಎಲ್ಲರಂತೆ ನನ್ನಲ್ಲೂ ಒಂದಷ್ಟು ಕನಸುಗಳಿದ್ದುವು. ಗಂಡನನ್ನು ಅಪಾರವಾಗಿ ಪ್ರೀತಿಸಬೇಕು, ಮನೆಯವರನ್ನೆಲ್ಲ ಒಂದು ಕುಟುಂಬವಾಗಿ, ವಿಶ್ವಾಸದಿಂದ ನಡೆಸಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ. 35 ಪವನ್ ಚಿನ್ನ, 1 ಲಕ್ಷ ರೂಪಾಯಿ, ಒಂದು ರಾಡೋ ವಾಚು ವರದಕ್ಷಿಣೆಯಾಗಿ ಪಡಕೊಂಡಿದ್ದ ಗಂಡ ಫೈಸಲ್, ತನ್ನನ್ನು ಪ್ರೀತಿಸುತ್ತಾನೆ ಎಂದು ನಂಬಿದ್ದೆ. ಆದರೆ ನನ್ನೆಲ್ಲ ನಿರೀಕ್ಷೆಗಳು ಹುಸಿಯಾದುವು. ನನ್ನ 7 ಮಂದಿ ನಾದಿನಿಯರಲ್ಲಿ ಜಸೀರ ಮತ್ತು ನೂರ್ ಜಹಾನ್ ತಮ್ಮ ಗಂಡಂದಿರನ್ನು ಬಿಟ್ಟು ಬಂದವರು. ಮನೆಯ ಆಡಳಿತವೆಲ್ಲ ಅವರದೇ ಕೈಯಲ್ಲಿತ್ತು. ನಾನು ಆ ಮನೆಗೆ ಕಾಲಿಟ್ಟು ಒಂದು ವಾರ ತುಂಬುವ ಮೊದಲೇ ಕೆಲಸದಾಳುವನ್ನು ಕೈಬಿಟ್ಟರು. ಆಕೆಯ ಉಡುಪನ್ನು ನನಗೆ ತೊಡಿಸಿದರು. ಶೌಚಾಲಯದಿಂದ ಹಿಡಿದು ಜಗಲಿಯ ವರೆಗೆ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದುದು ನಾನೊಬ್ಬಳೇ. ಹಾಗೆ ಕೆಲಸ ಮುಗಿಯಿತೆಂದು ಸುಮ್ಮನೆ ಕೂರುವಂತಿಲ್ಲ. ಮನೆಯ ಹೊರಗಿನ ಕೆಲಸಕ್ಕೆ ನನ್ನನ್ನು ಹಚ್ಚುತ್ತಿದ್ದರು. ನನಗೆ ಅಪಾರ ನೋವು ಕೊಡುತ್ತಿದ್ದುದು ಯಾವುದೆಂದರೆ, ನಾನು ಹೀಗೆ ಕೆಲಸದಾಳುವಿನಂತೆ ದುಡಿಯುವಾಗ ಅವರೆಲ್ಲಾ ಕಾಲು ಚಾಚಿ ಟಿ.ವಿ. ನೋಡುತ್ತಲೋ ತಮಾಷೆ ಆಡುತ್ತಲೋ ದಿನ ಕಳೆಯುತ್ತಿದ್ದರು. ಆದರೆ ನನ್ನ ಮನೆಯವರಲ್ಲಿ ನಾನು ಇದನ್ನು ಹೇಳಿಯೇ ಇರಲಿಲ್ಲ. ಅಪ್ಪ ಬರುವಾಗ ನಾನು ಕೆಲವೊಮ್ಮೆ ಹಟ್ಟಿಯಲ್ಲಿರುತ್ತಿದ್ದೆ. ಕೆಲವೊಮ್ಮೆ ಕಟ್ಟಿಗೆಯ ರಾಶಿಯಲ್ಲೋ ಅಡುಗೆ ಕೋಣೆಯಲ್ಲೋ ಇರುತ್ತಿದ್ದೆ. ಅಪ್ಪನಿಗೆ ನೋವಾಗಬಾರದಲ್ಲ, ಕೈ, ಕಾಲು, ಮುಖವನ್ನು ಬಕಬಕನೆ ತೊಳೆದು ಓಡೋಡಿ ಬರುತ್ತಿದ್ದೆ. ಅಪ್ಪನೆದುರು ಬಲವಂತದಿಂದ ನಗುತ್ತಿದ್ದೆ.
ಒಂದು ದಿನ ಅಪ್ಪ ಮನೆಗೆ ದಿಢೀರನೆ ಬಂದಿದ್ದರು. ನನ್ನ ತಲೆಯಲ್ಲಿ ಬ್ಯಾಂಡೇಜು ಇತ್ತು. ‘ಏನಾಯ್ತು ಮಗಳೇ?' ಅಂತ ಅಪ್ಪ ಅಪಾರ ನೋವಿನಿಂದ ಕೇಳಿದರು. ಹತ್ತಿರ ಕೂರಿಸಿ ತಲೆ ನೇವರಿಸಿದರು. ಮೆಟ್ಟಲಿನಿಂದ ಇಳಿಯುವಾಗ ಬಿದ್ದು ಬಿಟ್ಟೆ ಅಂದೆ. ಅಪ್ಪನಿಗೆ ತುಸು ಅನುಮಾನ ಕಾಡಿರಬೇಕು. ಎರಡೆರಡು ಬಾರಿ ಪ್ರಶ್ನಿಸಿ ದೃಢಪಡಿಸಿಕೊಂಡರು. ಅಪ್ಪ ಹೋದ ಮೇಲೆ ಶೌಚಾಲಯಕ್ಕೆ ತೆರಳಿ ಧಾರಾಳ ಕಣ್ಣೀರಿಳಿಸಿದೆ. ಯಾಕೆಂದರೆ ನಾನು ಬಿದ್ದಿರಲಿಲ್ಲ. ನನ್ನ ನಾದಿನಿ ಜಸೀರ ತೆಂಗಿನ ಕಾಯಿಯಿಂದ ನನ್ನ ತಲೆಗೆ ಹೊಡೆದಿದ್ದಳು. ದಿನ ಕಳೆದಂತೆ ಅತ್ತೆ ಮತ್ತು ನಾದಿನಿಯವರ ಹಿಂಸೆಯಲ್ಲಿ ಹೆಚ್ಚಳವಾಗುತ್ತಲೇ ಹೋಯಿತು. ಗಂಡನಲ್ಲಿ ಮನದ ಭಾವನೆಗಳನ್ನು ಹೇಳುವ ಅಂದರೆ, ಆತ ಬರುವುದೇ ತಡ ರಾತ್ರಿಯಲ್ಲಿ. ನಾನು ರೂಮಿಗೆ ಹೋದರೆ ನಾದಿನಿಯರು ಕದ್ದು ನೋಡುತ್ತಿದ್ದರು. ಸ್ನಾನ ಮಾಡಲು ಬಚ್ಚಲು ಕೋಣೆಗೆ ಹೋದರೆ, ಗೇಟ್ವಾಲನ್ನು ಕಟ್ಟಿ ನೀರು ಬರದಂತೆ ನೋಡಿ ಕೊಳ್ಳುತ್ತಿದ್ದರು. ‘ನಿನ್ನ ಮನೆಯವರು ಪುಡಿಗಾಸನ್ನು ಕೊಟ್ಟು ನಮ್ಮ ಫೈಸಲ್ ಗೆ ನಿನ್ನನ್ನು ಕಟ್ಟಿದ್ದಾರೆ. ಪಕ್ಕದ ಮನೆಗೆ ಬಂದ ಹೆಣ್ಣು ಮಗಳು ನಿನಗಿಂತಲೂ ಹೆಚ್ಚು ವರದಕ್ಷಿಣೆ ತಂದಿರುವಳೆಂದು’ ಅತ್ತೆ ಮತ್ತು ನಾದಿನಿ ಸಂದರ್ಭ ಸಿಕ್ಕಾಗಲೆಲ್ಲಾ ಹೇಳುತ್ತಿದ್ದರು. ಆಗೆಲ್ಲಾ ನಾನು ಏನೊಂದೂ ಮಾತಾಡುತ್ತಿರಲಿಲ್ಲ. ಯಾಕೆಂದರೆ, ನನ್ನಪ್ಪ ಅಷ್ಟು ಕೊಟ್ಟದ್ದೇ ಸಾಲ ಮಾಡಿ. ಅದಿನ್ನೂ ಸಂದಾಯವಾಗಿಲ್ಲ. ಇಷ್ಟಕ್ಕೂ ನನ್ನ ಕುತ್ತಿಗೆ, ಸೊಂಟ, ಕಿವಿಗೆ ಹಾಕಿದ್ದ 35 ಪವನು ಬಂಗಾರವನ್ನು ಮದುವೆಯಾದ ಒಂದು ವಾರದಲ್ಲೇ ಗಂಡ ಪಡಕೊಂಡಿದ್ದ. ಆ ಬಳಿಕ ಅದರ ಬಗ್ಗೆ ನಾನು ಒಮ್ಮೆಯೂ ಪ್ರಶ್ನಿಸಿಲ್ಲ. ಫೈಸಲ್ ಹೇಳಿಯೂ ಇಲ್ಲ. ಹೀಗಿರುವಾಗಲೇ ಒಂದು ದಿನ ಫೈಸಲ್ ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ. ಗಲ್ಫ್ ಗೆ  ಹೋಗುವುದಕ್ಕಾಗಿ ವೀಸಾಕ್ಕೆ ದುಡ್ಡಿನ ಅಗತ್ಯವಿದೆ ಎಂದು ಸಮರ್ಥಿಸಿದ. ನನ್ನ ಕಣ್ಣು ಒದ್ದೆಯಾಗುತ್ತಿತ್ತು. ಅಪ್ಪನಲ್ಲಿ ಹೇಳುವುದಾದರೂ ಹೇಗೆ? ಮದುವೆಗೆ ಇನ್ನೊಬ್ಬಳು ತಂಗಿಯೂ ಇದ್ದಾಳೆ. ಅಪ್ಪನಿಗೆ ಹೊರೆಯಾಗುತ್ತಿದ್ದೆನೇನೋ ಅನ್ನುವ ನೋವು ನನ್ನನ್ನು ದಿನೇ ದಿನೇ ಸಾಯಿಸುತ್ತಿತ್ತು. ದಿನ ಕಳೆದಂತೆ ಗಂಡನ ಒತ್ತಾಯವು ಬೆದರಿಕೆಯಾಗಿ, ಬಳಿಕ ಹೊಡೆತವಾಗಿ ಮಾರ್ಪಟ್ಟಿತು. ಎಲ್ಲವನ್ನೂ ಅವುಡುಗಚ್ಚಿ ಸಹಿಸಿದೆ..
     ಕೆಲಸದ ಒತ್ತಡದಿಂದಲೋ ಏನೋ, ಆಗಾಗ ಕಾಡುತ್ತಿದ್ದ ಸೊಂಟ ನೋವು ವಿಪರೀತವಾಯಿತು. ಎರಡು ದಿನಗಳ ರಜೆಯ ಅನುಮತಿಯನ್ನು ಪಡೆದು ತವರು ಮನೆಗೆ ಬಂದೆ. ಮರಳುವಾಗ, ‘ದುಡ್ಡು ಪಡಕೊಂಡೇ ಬರಬೇಕು’ ಅನ್ನುವ ತಾಕೀತಿನೊಂದಿಗೆ ಗಂಡ ಕಳುಹಿಸಿಕೊಟ್ಟಿದ್ದ. ಮನೆಗೆ ಬಂದ ದಿನ ನನಗೆ ಮುಟ್ಟಾಯಿತು. ಮುಟ್ಟಿನ ಸಂದರ್ಭದಲ್ಲಿ ವಾಂತಿ, ಅಸಾಧ್ಯ ಹೊಟ್ಟೆ ನೋವು ನನಗೆ ಮಾಮೂಲು. ಆದ್ದರಿಂದ ಎರಡು ದಿನಗಳ ಬದಲು 5 ದಿನ ಕಳೆದು ಅಪ್ಪನೊಂದಿಗೆ ಗಂಡನ ಮನೆಗೆ ಮರಳಿದೆ. ಆ ರಾತ್ರಿ ನನ್ನ ಬದುಕಿನ ಕರಾಳ ರಾತ್ರಿಯಾಗಿತ್ತು. ನಾನು ತಲೆ ನೋವಿನಿಂದಾಗಿ ಮನೆಯ ಮಾಳಿಗೆಯ ಮಂಚದಲ್ಲಿ ಮಲಗಿದ್ದೆ. ಜಸೀರ, ನೂರ್ ಜಹಾನ್ ಮತ್ತು ಫೈಸಲ್ ನ  ತಮ್ಮ ಸಿರಾಜ್ ರು  ನನ್ನ ಬಳಿ ಬಂದರು. ‘ದುಡ್ಡು ತರದೇ ಇಲ್ಲಿ ಆರಾಮವಾಗಿ ಮಲಗಿರುವೆಯಾ ಪಿಶಾಚಿ’ ಎಂದು ನಿಂದಿಸಿ ಮಂಚದಿಂದ ನನ್ನನ್ನು ಎತ್ತಿ ಕೆಳಗೆ ಹಾಕಿದರು. ಫೈಸಲ್ ಅಲ್ಲೇ ಇದ್ದ. ‘ಪ್ಲೀಸ್, ಹಾಗೆ ಮಾಡ್ಬೇಡಿ ಅಂತ ಅವರಿಗೆ ಹೇಳಿ.. ನಾನು ಕೆಳಗೆ ಚಾಪೆ ಹಾಕಿ ಬೇಕಾದ್ರೂ ಮಲಗುತ್ತೇನೆ.. ಪ್ಲೀಸ್..’ ಎಂದು ನಾನು ಫೈಸಲ್ ರಲ್ಲಿ  ಗೋಗರೆದೆ. ಅವರು ಮಾತಾಡಲಿಲ್ಲ. ನನ್ನ ಎದೆ ಢವಗುಟ್ಟುತ್ತಿತ್ತು. ರಾತ್ರಿ ಬೇರೆ. ಅವರು ಮೂವರು ಸೇರಿಕೊಂಡು ನನ್ನ ಕಾಲುಗಳನ್ನು ಹಿಡಿದು ಮೆಟ್ಟಿಲುಗಳಲ್ಲಿ ಕೆಳಗೆ ದರದರನೆ ಎಳೆದುಕೊಂಡು ಹೋದರು. ಪ್ರತಿ ಮೆಟ್ಟಿಲಿಗೂ ನನ್ನ ತಲೆ ಹೊಡೆಯುತ್ತಿತ್ತು. ಆಘಾತದಿಂದ ಪ್ರಜ್ಞೆ ಕಳಕೊಂಡಂತಿದ್ದ ನನ್ನನ್ನು ಮೆಟ್ಟಿಲುಗಳ ಕೆಳಗೆ ಓಣಿಯಂತಿರುವ ಜಾಗದಲ್ಲಿ ಬಿಟ್ಟು ಅವರು ತಮ್ಮ ಕೋಣೆ ಸೇರಿಕೊಂಡರು. ಆ ದಿನ ಪೂರ್ತಿ ನಾನು ಮಲಗಿದ್ದು ಅಲ್ಲೇ. ಅದೊಂದು ದಿನ ಮಾತ್ರವಲ್ಲ, ಮುಂದಿನ ಒಂದು ವಾರಗಳ ಕಾಲ ನನ್ನ ಕೋಣೆ ಅದೇ ಓಣಿಯಾಗಿತ್ತು. ಅಡುಗೆ ಕೋಣೆಗೆ ಪ್ರವೇಶವಿಲ್ಲ. ಊಟ ಮಾಡುವಂತಿಲ್ಲ. ನೀರು ಕುಡಿಯುವುದಕ್ಕೂ ಬಿಡುತ್ತಿರಲಿಲ್ಲ. ಹಸಿವಿನಿಂದಾಗಿ ಏನಾದ್ರೂ ತಿನ್ನೋಣವೆಂದು ಅಡುಗೆ ಕೋಣೆಗೆ ಹೋದರೆ ‘ಕಳ್ಳಿ’ ಎಂದು ನಿಂದಿಸಿ ಬಲವಂತದಿಂದ ಹೊರಗೆ ದಬ್ಬುತ್ತಿದ್ದರು. ನಾನು ಒಂಟಿಯಾದೆ. ಅಪ್ಪನಿಗೆ ತಿಳಿಸೋಣವೆಂದರೆ ಗಲ್ಫಲ್ಲಿದ್ದರು. ಮಾಡಿದ ಸಾಲವನ್ನು ತೀರಿಸಬೇಕಲ್ಲವೇ? ಈ ಮಧ್ಯೆ ನನ್ನ ತಲೆಯೊಳಗೆ ಏನೋ ಆದಂತೆ ಅನಿಸುತ್ತಿತ್ತು. ಇಷ್ಟಕ್ಕೂ ನನ್ನ ಮೇಲೆ ನಾದಿನಿಯರು ಮಾಡಿದ ಹಲ್ಲೆ, ಹಿಂಸೆಯ ಬಗ್ಗೆ ನನ್ನ ಗಂಡ ಒಂದು ಮಾತೂ ಆಡಲಿಲ್ಲ. ಕನಿಷ್ಠ ನನ್ನನ್ನು ಸಾಂತ್ವನ ಪಡಿಸಲೂ ಇಲ್ಲ. ತಲೆಯೊಳಗಿನ ನೋವು ಅಸಾಧ್ಯ ಅನ್ನಿಸಿದಾಗ, ವೈದ್ಯರ ಬಳಿಗೆ ಕರಕೊಂಡು ಹೋಗಿ ಅಂತ ಫೈಸಲ್ ನಲ್ಲಿ ವಿನಂತಿಸಿದೆ. ಆತ ಕೇಳಲಿಲ್ಲ. ಈ ಮಧ್ಯೆ ಮಹರ್ ನ  ಸಂಕೇತವಾಗಿ ನನ್ನ ಕುತ್ತಿಗೆಯಲ್ಲಿದ್ದ ಸರವನ್ನು ಗಂಡ ತೆಗೆದುಕೊಂಡು ಹೋದ. ಯಾಕೆ ಎಂದು ನಾನು ಪ್ರಶ್ನಿಸಲಿಲ್ಲ. ಬಹುಶಃ ನನ್ನನ್ನು ವೈದ್ಯರ ಬಳಿಗೆ ಕರಕೊಂಡು ಹೋಗುವುದಕ್ಕಾಗಿರಬಹುದು ಅಂದುಕೊಂಡೆ. ಆದರೆ ಆತ ಮರಳಿದ್ದು ರಿಕ್ಷಾ ತುಂಬಾ ಸಾಮಾನುಗಳೊಂದಿಗೆ. ಆ ದಿನ ಮನೆಯವರೆಲ್ಲಾ ಬಿರಿಯಾನಿ ಮಾಡಿ ಹೊಟ್ಟೆ ತುಂಬಾ ಉಂಡರು. ಉಣ್ಣಲಿ. ಆದರೆ ನನಗಾದ ಸಂಕಟ ಏನೆಂದರೆ, ಒಂದೇ ಒಂದು ತುತ್ತು ಬಿರಿಯಾನಿಯನ್ನೂ ಅವರು ನನಗೆ ಕೊಡಲಿಲ್ಲ..
          ಮದುವೆಯಾಗಿ ಎರಡೂವರೆ ವರ್ಷವಾಗಿದ್ದರೂ ನನಗೆ ಮಕ್ಕಳಾಗಿರಲಿಲ್ಲ. ಮಕ್ಕಳಾಗುವುದಕ್ಕೆ ಮನಸ್ಸಿಗೆ ತೃಪ್ತಿ ಇರಬೇಕಲ್ಲವೇ? ಮಕ್ಕಳಾಗದ ನೆಪವನ್ನು ಮುಂದಿಟ್ಟು ಅತ್ತೆ ಮತ್ತು ನಾದಿನಿಯರು ನನಗೆ ಬಿಳಿ ಹುಡಿಯೊಂದನ್ನು ತಿನ್ನಿಸಿದರು. ಆ ಬಳಿಕ ನನ್ನ ವರ್ತನೆಯಲ್ಲೂ ಬದಲಾವಣೆಯಾಯಿತು. ತಲೆಗೆ ಬಿದ್ದ ಏಟು ಮತ್ತು ಈ ಬಿಳಿ ಹುಡಿಯ ಪ್ರಭಾವವೋ ಏನೋ, ಕೆಲವೊಮ್ಮೆ ಕಿರುಚುತ್ತಿದ್ದೆ, ಕೂಗುತ್ತಿದ್ದೆ. ಯಾಕೆ ಹೀಗೆ ಎಂದು ನನಗೇ ಗೊತ್ತಾಗುತ್ತಿರಲಿಲ್ಲ. ನನ್ನ ಈ ವಿಚಿತ್ರ ವರ್ತನೆಯನ್ನು ನೆಪವಾಗಿಟ್ಟುಕೊಂಡು ಹುಚ್ಚಿಯ ಪಟ್ಟ ಕಟ್ಟಿ 2010 ಎಪ್ರಿಲ್ 25ರಂದು ಗಂಡನ ಮನೆಯವರು ನನ್ನನ್ನು ತವರು ಮನೆಗೆ ಸೇರಿಸಿದರು. ವಿಷಯ ತಿಳಿದು ಅಪ್ಪ ಗಲ್ಫ್ ನಿಂದ  ಓಡೋಡಿ ಬಂದರು. ನನ್ನನ್ನು ನೋಡಿ ಕಣ್ಣೀರಿಳಿಸಿದರು. ನನ್ನ ಕಣ್ಣ ಗುಡ್ಡೆ ಒಳ ಸೇರಿದ್ದುವು. ತುಂಬಿದ್ದ ಕಪೋಲಗಳಲ್ಲಿ ಗುಳಿ ಬಿದ್ದಿದ್ದುವು. ನನಗೆ ಮದ್ದು ಮಾಡುವುದಕ್ಕಾಗಿ ಅಪ್ಪ ಆಸ್ಪತ್ರೆಯಿಂದ ಆಸ್ಪತ್ರೆಗೆ ಓಡಾಡಿದರು. ತಲೆಗೆ ಏಟಾಗಿರುವುದು ಸ್ಕ್ಯಾನಿಂಗ್ ನಲ್ಲಿ ದೃಢಪಟ್ಟಿತು. ಸೈಕ್ರಿಯಾಟಿಸ್ಟ್ ಗೆ  ತೋರಿಸಿದರು. ಹೀಗಿರುವಾಗಲೇ ನನ್ನ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟೊಂದು ಬಂತು. ನನ್ನ ಗಂಡ ಕಳುಹಿಸಿದ ತಲಾಕ್ ಪತ್ರವಾಗಿತ್ತದು. ನನಗೆ ಹುಚ್ಚಿಯ ಪಟ್ಟ ಕಟ್ಟಿ ಆತ ನನ್ನಿಂದ ಬಿಡುಗಡೆ ಹೊಂದಿದ್ದ. ಕೆಲ ದಿನಗಳಲ್ಲೇ ಆತ ಇನ್ನೊಂದು ಮದುವೆಯಾಗಿರುವ ಸುದ್ದಿಯೂ ಸಿಕ್ಕಿತು. ನಾನು ಆಘಾತಗೊಳ್ಳಲಿಲ್ಲ. ಯಾಕೆಂದರೆ ನನ್ನ ಮೆದುಳು ಅದಾಗಲೇ ಆಘಾತಕ್ಕೆ ಒಳಗಾಗಿತ್ತು. ಈ ಆಘಾತದಿಂದ ಚೇತರಿಸುವ ಯಾವ ಸಾಧ್ಯತೆಯೂ ಇರಲಿಲ್ಲ. ಆದರೂ.. ಮನುಷ್ಯರು ಇಷ್ಟು ಕ್ರೂರಿಗಳಾಗುವುದಾದರೂ ಹೇಗೆ? ಹೆಣ್ಣಾಗಿ ನನ್ನ ಕಣ್ಣೀರು, ನೋವು, ಸಂಕಟವನ್ನು ಆ ಮನೆಯ ಹೆಣ್ಣು ಮಕ್ಕಳಿಗೆ ಅರ್ಥ ಮಾಡಿಕೊಳ್ಳಲು ಯಾಕೆ ಸಾಧ್ಯವಾಗಲಿಲ್ಲ? ನಾನು ಮಾಡಿದ ತಪ್ಪಾದರೂ ಏನು? ನನ್ನ ಮೇಲಾಗುತ್ತಿದ್ದ ದೌರ್ಜನ್ಯವನ್ನು ಹೆತ್ತವರಿಗೆ ತಿಳಿಸದೇ ಇದ್ದುದೇ? ಗಂಡ ಇವತ್ತಲ್ಲದಿದ್ದರೆ ನಾಳೆ ಸುಧಾರಿಸಿಯಾನು ಎಂದು ಆಸೆ ಪಟ್ಟದ್ದೆ? ಅಪ್ಪ ಅನುಮಾನದಿಂದ ಪ್ರಶ್ನಿಸಿದಾಗಲೂ ಸುಳ್ಳು ಹೇಳಿ ತಪ್ಪಿಸಿಕೊಂಡದ್ದೆ?
        ಅಮ್ಮಾ, ನನ್ನನ್ನು ಕ್ಷಮಿಸು. ನಿಮ್ಮಲ್ಲಿ ಹೇಳದೆ ನಾನು ತಪ್ಪು ಮಾಡಿಬಿಟ್ಟೆ.. ನನ್ನ ತಂಗಿಗೆ ಇಂಥ ಸಂಕಷ್ಟ ಬಾರದಂತೆ ನೋಡಿಕೊ.. ನನ್ನನ್ನು ಮರೆತು ಬಿಡು..
      ತನಗಾದ ಗಾಯವು ಉಲ್ಬಣಗೊಂಡು 2012 ಫೆ. 27ರಂದು ತೀರಿ ಹೋದ ಝಫರಿಯ, ಅದಕ್ಕಿಂತ ಕೆಲವು ತಿಂಗಳುಗಳ ಮೊದಲೇ ತನ್ನೆಲ್ಲಾ ಸಂಗತಿಗಳನ್ನು ತಾಯಿ ಆಯಿಷಾರಲ್ಲಿ ಹೀಗೆ ಹೇಳಿಕೊಂಡಿದ್ದಳು. ಆಯಿಷಾ ಅವೆಲ್ಲವನ್ನೂ ಹೇಳುತ್ತಾ ಗದ್ಗದಿತರಾಗುತ್ತಾರೆ. ಬಿಕ್ಕಳಿಸುತ್ತಾರೆ. ಅವರು ಕಣ್ಣು ಒದ್ದೆಯಾಗುತ್ತದೆ. ಸದ್ಯ ಫೈಸಲ್ ಗೆ  ಶಿಕ್ಷೆಯಾಗಬೇಕೆಂದು ಝಫರಿಯಳ ತಂದೆ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಹಾಗಿದ್ದರೂ ಅವರನ್ನು ಶೂನ್ಯವೊಂದು ಕಾಡುತ್ತಲೇ ಇದೆ. ಏನಿದ್ದರೂ ಝಫರಿ ಮರಳಿ ಬರುವುದಿಲ್ಲವಲ್ಲ..

Tuesday, May 1, 2012

ಬುರ್ಖಾ,ನಕಾಬ್,ಸ್ಕಾರ್ಫ್ ಮತ್ತು ಪತ್ರಕರ್ತರು

 ಬುರ್ಖಾ,  ಹಿಜಾಬ್, ಪರ್ದಾ, ಐಸ್ಕಾರ್ಫ್ , ನಕಾಬ್, ಸ್ಕಾರ್ಫ್.. ಮುಂತಾದ ಪದಗಳ ಬಗ್ಗೆ ಪತ್ರಕರ್ತರಲ್ಲಿ ಎಷ್ಟರ ಮಟ್ಟಿಗೆ ಅಜ್ಞಾನ ಇದೆಯೆಂದರೆ, ಐಸ್ಕಾರ್ಫನ್ನೇ (ಮುಖಪರದೆ) ಬುರ್ಖಾ ಎಂದು ನಂಬುವಷ್ಟು. ಮುಖಪರದೆಯನ್ನು ಎಲ್ಲಾದರೂ ನಿಷೇಧಿಸಿಬಿಟ್ಟರೆ, ಬುರ್ಖಾವನ್ನೇ ನಿಷೇಧಿಸಲಾಗಿದೆ ಎಂದು ಬರೆಯುವಷ್ಟು. ಕಳೆದವಾರ ಮಂಗಳೂರಿನ ಎಲೋಶಿಯಸ್ ಕಾಲೇಜಿನಲ್ಲಿ ಬುರ್ಖಾ ಸುದ್ದಿಗೊಳಗಾಯಿತು. ಕಾಲೇಜಿನ ನೀತಿ-ನಿಯಮ ಕೈಪಿಡಿಯ 10ನೇ ಪುಟದಲ್ಲಿ, ‘ಗರ್ಲ್ಸ್  ಆರ್ ನೋಟ್ ಎಕ್ಸಪೆಕ್ಟೆಡ್ ಟು ವಿಯರ್ ಬುರ್ಖಾ ಇನ್ ದ ಕ್ಲಾಸ್ ರೂಮ್ಸ್  ಎಂಡ್ ಇನ್ ದ ಎಕ್ಸಾಮಿನೇಶನ್ ಹಾಲ್ಸ್ ’ (ಪರೀಕ್ಷಾ ಕೊಠಡಿ ಮತ್ತು ತರಗತಿಯೊಳಗೆ ವಿದ್ಯಾರ್ಥಿನಿಯರು  ಬುರ್ಖಾ ಧರಿಸಬಾರದು) ಎಂದಿತ್ತು. ಪೋಷಕರು ಪ್ರತಿಭಟನೆಗೆ ಸಜ್ಜಾಗುತ್ತಿರುವುದನ್ನು ಅರಿತುಕೊಂಡ ಕಾಲೇಜು ಆಡಳಿತ ಮಂಡಳಿ, ‘ನಾವು ಮುಖಪರದೆಯನ್ನಷ್ಟೇ ನಿಷೇಧಿಸಿದ್ದೇವೆ, ಬುರ್ಖಾವನ್ನಲ್ಲ’ ಅಂದುಬಿಟ್ಟಿತು. ದುರಂತ ಏನೆಂದರೆ, ಕೆಲವು ಪತ್ರಿಕೆಗಳು ಮರುದಿನ ಈ ಸ್ಪಷ್ಟೀಕರಣವನ್ನು ಪ್ರಕಟಿಸಿದ್ದೂ, ‘ಬುರ್ಖಾವನ್ನು ನಿಷೇಧಿಸಲಾಗಿದೆ’ ಎಂದೇ.
ಹಿಜಾಬ್ ಅಂದರೆ ದೇಹ ಮುಚ್ಚುವ ಉಡುಪು  ಎಂದರ್ಥ. ಕನ್ನಡದಲ್ಲಿ ಸಾಮಾನ್ಯವಾಗಿ ಬುರ್ಖಾ ಎಂಬ ಪದವನ್ನು ಹಿಜಾಬ್ ಗೆ  ಪರ್ಯಾಯವಾಗಿ ಬಳಸಲಾಗುತ್ತದೆ. ಸ್ಕಾರ್ಫ್ ಅಂದರೆ ಶಿರವಸ್ತ್ರ ಎಂದರ್ಥ. ನಕಾಬ್ ಅಥವಾ ಐಸ್ಕಾರ್ಫಗೆ ಮುಖಪರದೆ ಎಂದು ಹೆಸರು. ಇಷ್ಟಕ್ಕೂ ಇವೇನೂ ತಲೆಗೆ ಹತ್ತದ ಭಾರೀ ಕಠಿಣ ಪದಗಳೋ, ರನ್ನ, ಪಂಪರ ಕಾವ್ಯ ಭಾಷೆಗಳೋ ಅಲ್ಲ. ನ್ಯೂಟನ್ನನ ಅಯಸ್ಕಾಂತೀಯ ನಿಯಮವನ್ನು ಪಟಪಟನೆ ಹೇಳುವ. ಡಾರ್ವಿನ್ ನ್ನನ ವಿಕಾಸವಾದ, ಸ್ಟಾಲಿನ್ನನ ಕಾರ್ಮಿಕ  ಸಿದ್ಧಾಂತದ ಬಗ್ಗೆ ಆಳ ಅರಿವುಳ್ಳ ಮಾತ್ರವಲ್ಲ, ಅವನ್ನು ಅಧ್ಯಯನ ನಡೆಸುವುದಕ್ಕೂ ಪುರುಸೊತ್ತಿರುವ ಮಾಧ್ಯಮ ಮಿತ್ರರಿಗೆ, ಮುಸ್ಲಿಮರಿಗೆ ಸಂಬಂಧಿಸಿದ ನಾಲ್ಕೈದು ಪದಗಳ ಬಗ್ಗೆ ಏನೇನೂ ಗೊತ್ತಿಲ್ಲ ಅಂದರೆ ಏನರ್ಥ? ಅಂಡಮಾನಿನ ಲ್ಲಿರುವ ಆದಿಮಾನವರ ಆಚಾರ, ಸಂಸ್ಕøತಿ, ಉಡುಪು , ಆಹಾರಗಳ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ನಮ್ಮ ಪತ್ರಕರ್ತರಿಗೆ ಬಿಡುವು, ಉಮೇದು ಇರುತ್ತದೆ. ಕೊರಗ ಸಮುದಾಯದ ಬಗ್ಗೆ, ಅವರ ಆರಾಧ್ಯರ ಕುರಿತಂತೆ ಪತ್ರಕರ್ತರಲ್ಲಿ ಕುತೂಹಲ ಇರುತ್ತದೆ. ತುಳುವರ ಮುಟ್ಟಾಳೆ, ದಲಿತರ ಭೂತ, ಬ್ರಾಹ್ಮಣರ ಪೂಜಾ ಪದ್ಧತಿಯ ವಿಚಾರವಾಗಿ, ಪುಟಗಟ್ಟಲೆ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಂಡಿರುವ ಧಾರಾಳ ಸಂಖ್ಯೆಯ ಪತ್ರಕರ್ತರು ನಮ್ಮಲ್ಲಿದ್ದಾರೆ. ಇವೆಲ್ಲ ತಪ್ಪು  ಎಂದಲ್ಲ. ಆದರೆ ಈ ದೇಶದಲ್ಲಿ 8-9 ಶತಮಾನಗಳಿಂದ ಬದುಕುತ್ತಿರುವ, ದೇಶದ ಜನಸಂಖ್ಯೆಯಲ್ಲಿ ದೊಡ್ಡದೊಂದು ಪಾಲನ್ನು ಹೊಂದಿರುವ ಜನಸಮುದಾಯದ ಕುರಿತಂತೆ ಮಾಧ್ಯಮ ಮಿತ್ರರಲ್ಲಿ ಈ ಮಟ್ಟಿನ ನಿರ್ಲಕ್ಷ್ಯವೇಕೆ? ಯಾವುದೇ ಒಂದು ವಿಷಯದ ಬಗ್ಗೆ ವರದಿ ಮಾಡುವಾಗ, ವರದಿಯಲ್ಲಿರುವುದಕ್ಕಿಂತ ಹೆಚ್ಚು ವರದಿಗಾರನಿಗೆ ಗೊತ್ತಿರಬೇಕು, ಗೊತ್ತಿರುತ್ತದೆ. ಮುಸ್ಲಿಮರು ಈದ್ ನಮಾಝ್ ಮಾಡಿದರು’ ಅಂತ ಬರೆಯುವಾಗ ಕನಿಷ್ಠ ಈದ್ ಅಂದರೇನು ಅನ್ನುವುದಾದರೂ ಗೊತ್ತಿರಬೇಕಾಗುತ್ತದೆ. ದುರಂತ ಏನೆಂದರೆ, ಬುರ್ಖಾದ ಬಗ್ಗೆ ಬರೆಯುವ ನಮ್ಮಲ್ಲಿನ ಹೆಚ್ಚಿನ ಪತ್ರಕರ್ತರಿಗೆ ಬುರ್ಖಾ ಮತ್ತು ನಕಾಬ್ ನ  ವ್ಯತ್ಯಾಸವೇ ಗೊತ್ತಿರುವುದಿಲ್ಲ. ಸ್ಕಾರ್ಫ್ ಮತ್ತು ಹಿಜಾಬನ್ನು ಒಂದೇ ಎಂದು ತಿಳಿದುಕೊಂಡ ಧಾರಾಳ ವರದಿಗಾರರು ನಮ್ಮಲ್ಲಿದ್ದಾರೆ. ಇದನ್ನು ಅಜ್ಞಾನ  ಅಂದರಷ್ಟೇ ಸಾಕೇ? ಇದು ವರದಿಗಾರಿಕೆಗೆ ಮಾಡುವ ಅನ್ಯಾಯ, ಅಗೌರವವಲ್ಲವೇ?
       ನಿಜವಾಗಿ, ಪತ್ರಕರ್ತರಲ್ಲಿ ಇರುವಷ್ಟು ಕುತೂಹಲ, ಅಧ್ಯಯನ ಪ್ರವೃತ್ತಿ ಇನ್ನಾರಲ್ಲೂ ಇರುವುದಿಲ್ಲ. ಪತ್ರಿಕಾ ವೃತ್ತಿ ಹೆಜ್ಜೆ ಹೆಜ್ಜೆಗೂ ಸವಾಲನ್ನು ಒಡ್ಡುವಂಥದ್ದು. ಆದರೆ ಟೆಲಿವಿಷನ್ ಮಾಧ್ಯಮದ ಪೈಪೋಟಿಯಿಂದಾಗಿ ಪತ್ರಕರ್ತರಲ್ಲಿ ಅಧ್ಯಯನಕ್ಕಿಂತ ಹೆಚ್ಚು ತುರ್ತು  ಕಾಣಿಸುತ್ತಿದೆ. ಸುದ್ದಿಯ ಹಿನ್ನೆಲೆ-ಮುನ್ನೆಲೆ, ಆಳ-ಅಗಲವನ್ನು ವಿಶ್ಲೇಷಿಸುವ ಸಹನೆ ಬಹುತೇಕ ಯಾವ ಪತ್ರಕರ್ತರಲ್ಲೂ ಕಾಣಿಸುತ್ತಿಲ್ಲ. ಗಾಂಧೀಜಿ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಅವರ ಜೀವನ ಚರಿತ್ರೆಯನ್ನು ಮತ್ತು ಇನ್ನಿತರ ಮಾಹಿತಿಕೋಶಗಳನ್ನು ಪತ್ರಕರ್ತರು ಅಧ್ಯಯನ ಮಾಡುತ್ತಾರೆ. ನೆಹರೂರ ಬದುಕನ್ನು, ಕುವೆಂಪು , ಕಾರಂತ, ಬೇಂದ್ರೆಯವರ ಸಾಹಿತ್ಯಿಕ ಸೊಬಗನ್ನು ತಿಳಿದುಕೊಳ್ಳುವುದಕ್ಕೆ, ಅವರವರ ಸಾಹಿತ್ಯವನ್ನೋ ಜೀವನ ಗ್ರಂಥವನ್ನೋ ಓದುವುದಿದೆ. ಅದು ಬಿಟ್ಟು ಗಾಂಧೀಜಿ ಏನು ಎಂದು, ನೆಹರೂ ಹೇಗೆ ಎಂದು ಯಾರಲ್ಲೋ ಕೇಳಿ, ಅದನ್ನೇ ಪರಿಪೂರ್ಣ  ಸತ್ಯ ಎಂದು ಬರೆಯುವ ಸಾಹಸವನ್ನು ಯಾವ ಪತ್ರಕರ್ತನೂ ಮಾಡಲಾರ. ಅನಂತ ಮೂರ್ತಿಯವರ ‘ಸಂಸ್ಕಾರ’ ಕಾದಂಬರಿಯನ್ನು ಸ್ವಯಂ ಓದದೇ ಅದನ್ನು ಓದಿರುವೆ ಎಂದು ಹೇಳುವ ಯಾವುದೋ ವ್ಯಕ್ತಿಯ ಅಭಿಪ್ರಾಯವನ್ನು ತನ್ನ ಅಭಿಪ್ರಾಯದಂತೆ ಖಚಿತವಾಗಿ ಯಾವ ಪತ್ರಕರ್ತನೂ ಬರೆಯಲಾರ. ಯಾಕೆಂದರೆ ಅದು ಆತ್ಮವಂಚನೆ, ಓದುಗರಿಗೆ ಮಾಡುವ ದ್ರೋಹ. ವಿಷಾದ ಏನೆಂದರೆ, ಮುಸ್ಲಿಮರಿಗೆ ಸಂಬಂಧಿಸಿ ಬಹುತೇಕ ಪತ್ರಕರ್ತರು ಈ ತಪ್ಪುಗಳನ್ನೇ ಮಾಡುತ್ತಿದ್ದಾರೆ. ಇಸ್ಲಾಮ್ ಅಂದರೆ ಏನು, ಪವಿತ್ರ ಕುರ್ಆನಿನಲ್ಲಿ ಏನಿದೆ, ಮುಸ್ಲಿಮರ ಮದುವೆ, ತಲಾಕ್, ಜಿಹಾದ್.. ಎಂಬುದರ ಕುರಿತಂತೆಲ್ಲಾ ಅವರು ಬರೆಯುವುದು ಕುರ್ಆನನ್ನು ಓದಿಯಲ್ಲ. ಓದಿರುವೆ ಅನ್ನುವ ಯಾರನ್ನೋ, ಯಾರ ಲೇಖನವನ್ನೋ ಅಥವಾ ಮುಸ್ಲಿಮ್ ಹೆಸರಿಟ್ಟುಕೊಂಡ ಮತ್ತು ಅದರಂತೆ ಬದುಕನ್ನು ರೂಪಿಸಿಕೊಂಡಿರದ ಯಾವನನ್ನೋ ನೋಡಿಕೊಂಡು. ಇದನ್ನು ಏನೆಂದು ಕರೆಯಬೇಕು? ದೌರ್ಬಲ್ಯ, ಅಜಾಗರೂಕತೆ, ಅರಿವಿನ ಕೊರತೆ.. ಎಂಬೆಲ್ಲಾ ಪದಗಳನ್ನು ಬಳಸಿ ಸಮಾಧಾನ ಪಡುವುದು  ಆ ಪದಗಳಿಗೆ ಮಾಡುವ ಅವಮಾನವಾಗದೇ?
      ಶಾಂತಿ, ಸಹಬಾಳ್ವೆ, ಪರಸ್ಪರ ವಿಶ್ವಾಸದ ಸಮಾಜವೊಂದನ್ನು ಕಟ್ಟುವಲ್ಲಿ ಮಾಧ್ಯಮದ ಮಂದಿಯ ಪಾತ್ರ ಬಹಳ ಗುರುತರವಾದದ್ದು. ಅವರ ಅಜ್ಞಾನ  ಇಲ್ಲವೇ ನಿರ್ಲಕ್ಷ್ಯವು ಒಂದು ಇಡೀ ಸಮಾಜದ ಅಸ್ವಾಸ್ಥ್ಯಕ್ಕೆ ಕಾರಣವಾಗಬಹುದು. ಆದ್ದರಿಂದ ಮಾಧ್ಯಮದ ಮಂದಿ ಬಳಸುವ ಪ್ರತಿ ಪದವೂ ಅತ್ಯಂತ ಪ್ರಬುದ್ಧವಾಗಿರಬೇಕು. ಸತ್ಯ ಮತ್ತು ನೇರವಂತಿಕೆಯಿಂದ ಕೂಡಿರಬೇಕು. ಇಲ್ಲದಿದ್ದರೆ ನಕಾಬ್ ನಿಷೇಧವು  ಬುರ್ಖಾ ನಿಷೇಧವಾಗಿ ಸುದ್ದಿಗೀಡಾಗುವ ಅಪಾಯ ಸೃಷ್ಟಿಯಾಗುತ್ತದೆ.

ಶಿಸ್ತಿನ ಹೆಸರಲ್ಲಿ ಮಗುವಿನ ಸ್ವಾತಂತ್ರ್ಯವನ್ನೇ ಕಸಿಯಬಾರದಲ್ಲ..

ಮಕ್ಕಳ ಬಗ್ಗೆ, ಅವರನ್ನು ಯಾವ ರೀತಿ ಬೆಳಸಬೇಕು ಎಂಬ ಬಗ್ಗೆ, ಅವರೊಂದಿಗೆ ಹೆತ್ತವರು ವರ್ತಿಸಬೇಕಾದ ವಿಧಾನದ ಕುರಿತಂತೆ ಅಸಂಖ್ಯ ಬರಹಗಳು ಪ್ರಕಟವಾಗಿವೆ. ಪುಸ್ತಕಗಳಿವೆ. ಬೆಳೆದು ದೊಡ್ಡವರಾದ ಮಕ್ಕಳಿಗಿಂತ ಹೆಚ್ಚು ಸಮಸ್ಯೆಯನ್ನು ಕೊಡುವುದು ಪುಟ್ಟ ಮಕ್ಕಳು. ಪಿಯುಸಿಯಲ್ಲೋ ಡಿಗ್ರಿಯಲ್ಲೋ ಓದುತ್ತಿರುವ ಮಕ್ಕಳಿಗೆ ಅದು ಮಾಡಬೇಡ, ಇದು ಸರಿಯಲ್ಲ, ಹಾಗೆ ಮಾತಾಡಬಾರದು, ಅವೆಲ್ಲ ಕೆಟ್ಟದು.. ಎಂದು ಮುಂತಾಗಿ ಉಪದೇಶಿಸುವ ಅಗತ್ಯ ಕಂಡುಬರುವುದು ಕಡಿಮೆ. ಬೇಕು ಮತ್ತು ಬೇಡಗಳನ್ನು ಒಂದು ಹಂತದ ವರೆಗೆ ನಿರ್ಧರಿಸುವ ಸಾಮರ್ಥ್ಯ  ಅವರಲ್ಲಿರುತ್ತದೆ. ಆದರೆ ಪುಟ್ಟ ಮಕ್ಕಳು ಹಾಗಲ್ಲ. ಆದ್ದರಿಂದಲೇ ಹೆತ್ತವರು ಅವರನ್ನು ಹೆಜ್ಜೆ ಹೆಜ್ಜೆಗೂ ತಿದ್ದುವ, ತಿಳಿ ಹೇಳುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಈ ಕಾರಣದಿಂದಲೋ ಏನೋ ಯುರೋಪ್ ನಲ್ಲಿ  ಒಂದು ಕತೆ ಪ್ರಚಲಿತದಲ್ಲಿದೆ.
    ಸ್ಕೂಲಿಗೆ ಬಂದ ಜಾನ್ ನಲ್ಲಿ ಟೀಚರ್ ಪ್ರಶ್ನಿಸುತ್ತಾಳೆ,
    ವಾಟ್ ಈಸ್ ಯುವರ್ ನೇಮ್? (ನಿನ್ನ ಹೆಸರೇನು ಪುಟ್ಟ?)
    ಮಗು ಉತ್ತರಿಸುತ್ತದೆ,
    ಡೋಂಟ್ ಜಾನ್
ಅಂಥದ್ದೊಂದು ಹೆಸರನ್ನು ಟೀಚರ್ ಕೇಳಿದ್ದು ಅದೇ ಮೊದಲು. ನಿಜವಾಗಿ ಯುರೋಪಿಯನ್ ರಾಷ್ಟ್ರಗಳಲ್ಲಿ ಮಕ್ಕಳಿಗೆ ಹೆಸರಿಡುವುದಕ್ಕೆ ನಿರ್ದಿಷ್ಟ  ನಿಯಮಗಳೇನೂ ಇಲ್ಲ. ತಾವು ಹನಿಮೂನ್ ಗೆ  ಹೋದ ಸ್ಥಳದ ಹೆಸರನ್ನೇ ಮಗುವಿಗೆ ಇಡುವ ಹೆತ್ತವರು ಅಲ್ಲಿ ಧಾರಾಳ ಇದ್ದಾರೆ. ರಾಬರ್ಟ್ ಗೆ  ಗಂಡು ಮಗು ಹುಟ್ಟಿದರೆ ರಾಬರ್ಟ್ಸನ್ ಅಂತ ಹೆಸರಿಡುತ್ತಾರೆ. ಪೀಟರ್ ನ  ಮಗು ಪೀಟರ್ಸನ್ ಆಗುತ್ತದೆ. ರಿಚರ್ಡ್ ನ  ಮಗ ರಿಚರ್ಡ್ಸನ್   ಆಗುತ್ತಾನೆ.. ಇಂಥದ್ದನ್ನೆಲ್ಲ ಬಲ್ಲ ಆ ಟೀಚರ್ ಗೆ  ಡೋಂಟ್ ಜಾನ್ ಅನ್ನುವ ಹೆಸರು ಅಪರೂಪದ್ದು ಮಾತ್ರವಲ್ಲ ತುಸು ಕುತೂಹಲದ್ದೂ ಆಗಿ ಕಾಣಿಸುತ್ತದೆ. ಆದ್ದರಿಂದಲೇ ಆಕೆ ಡೋಂಟ್ ಜಾನ್ ಹೆಸರಿನ ಹಿನ್ನೆಲೆಯನ್ನು ತಿಳಿದುಕೊಳ್ಳಲು ಮುಂದಾಗುತ್ತಾಳೆ. ಅಂತಿಮವಾಗಿ ಆಕೆಗೆ ಗೊತ್ತಾದ ಮಾಹಿತಿ ಇಷ್ಟು..
          ಮಗುವಿನ ನಿಜವಾದ ಹೆಸರು ಜಾನ್. ಆದರೆ ಜಾನ್ ನ  ಮನೆಯಲ್ಲಿ ವಿಪರೀತ ಸ್ಟ್ರಿಕ್ಟು. ಅದು ಮಾಡಬೇಡ, ಇದು ಮುಟ್ಟಬೇಡ, ಹಾಗೆ ಆಡಬೇಡ, ತಿರುಗಬೇಡ, ನಡೆಯಬೇಡ.. ಹೀಗೆ ಬೇಡ(ಡೋಂಟ್)ಗಳ ದೊಡ್ಡದೊಂದು ಪಟ್ಟಿಯನ್ನೇ ಹೆತ್ತವರು ಜಾನ್ ನ  ಮೇಲೆ ಹೇರಿರುತ್ತಾರೆ. ಹಾಗಂತ ಹೆತ್ತವರಿಗೆ ಜಾನ್ ನ  ಮೇಲೆ ಪ್ರೀತಿ ಇಲ್ಲ ಎಂದಲ್ಲ. ಗಂಡಾಗಿಯೂ ಹೆಣ್ಣಾಗಿಯೂ ಇರುವುದು ಒಂದೇ ಮಗು. ಆದ್ದರಿಂದ ವಿಪರೀತ ಮುದ್ದು, ಕಾಳಜಿ. ಅಂಗಡಿಯಿಂದ ಆಟಿಕೆಗಳನ್ನು ಖರೀದಿಸಿ ತಂದು ಜಾನ್ ನ  ಕೈಗಿಡುವ ಹೆತ್ತವರು, ಅದನ್ನು ಹೇಗೆ ಬಳಸಬೇಕು ಎಂದೂ ಹೇಳಿಕೊಡುತ್ತಾರೆ. ಆದರೆ ಎಷ್ಟಾದರೂ ಜಾನ್ ಮಗುವಲ್ಲವೇ? ಅಪ್ಪ ಹೇಳಿದಂತೆ ಒ0ದೈದು ನಿಮಿಷ ಆಡುವ ಜಾನ್, ಬಳಿಕ ಅದನ್ನು ಕಳಚಲು ಪ್ರಾರಂಭಿಸುತ್ತಾನೆ. ಅಪ್ಪ ಡೋಂಟ್ ಜಾನ್ ಅನ್ನುತ್ತಾನೆ. ಅಂಗಳಕ್ಕಿಳಿದು ಮಣ್ಣಲ್ಲಿ ಆಡುವ ಅಂದರೆ ಆಗಲೂ ಡೋಂಟ್ ಜಾನ್. ಅಪ್ಪ ತಂದಿಟ್ಟ ಪುಸ್ತಕವನ್ನು ಬಿಡಿಸಲು ಪ್ರಾರಂಭಿಸಿದರೂ ಡೋಂಟ್ ಜಾನ್. ಗ್ಲಾಸಲ್ಲಿರುವ ನೀರನ್ನು ನೆಲಕ್ಕೆ ಚೆಲ್ಲಿದಾಗ, ತಿಂಡಿಯನ್ನು ಬಿಸಾಕಿದಾಗ, ಗೋಡೆಯಲ್ಲಿ ಗೀಚಿದಾಗ, ಬಾಯಿಗೆ ನೀರು ಹಾಕಿ ಉಗುಳಿದಾಗ.. ಎಲ್ಲ ಸಂದರ್ಭಗಳಲ್ಲೂ ಹೆತ್ತವರು ‘ಬೇಡ’, ‘ಡೋಂಟ್' ಪದವನ್ನೇ ಉಚ್ಚರಿಸುತ್ತಿರುತ್ತಾರೆ. ಒಂದು ರೀತಿಯಲ್ಲಿ ಜಾನ್ ಗೆ  ಡೋಂಟ್ ಅನ್ನುವ ಪದ ಎಷ್ಟು ಪರಿಚಿತ ಆಗಿಬಿಟ್ಟಿರುತ್ತದೆಂದರೆ ಮಿಚೆಲ್ ಜಾನ್ಸನ್ ಅನ್ನುವ ತನ್ನ ಹೆಸರನ್ನೇ ಮರೆತಿರುತ್ತಾನೆ.
    ಮಕ್ಕಳನ್ನು ಬೆಳೆಸುವುದು ಇಂದಿನ ಸಮಾಜದಲ್ಲಿ ದೊಡ್ಡ ಸವಾಲು. ಪೈಪೋಟಿಯ, ಜಿದ್ದಿನ, ಸ್ಪರ್ಧೆಯ ಜಗತ್ತಿಗೆ ಮಕ್ಕಳನ್ನು ತಯಾರು ಗೊಳಿಸುವ ಗುರುತರ ಜವಾಬ್ದಾರಿ ಹೆತ್ತವರ ಮೇಲಿದೆ. ಆದರೆ ಎಷ್ಟು ಹೆತ್ತವರಿಗೆ ಅಂಥದ್ದೊಂದು ಪ್ರಜ್ಞೆಯಿದೆ? ಮಗುವಿನಲ್ಲಿ ಹೆಚ್ಚೆಚ್ಚು ಸಕಾರಾತ್ಮಕ ನಿಲುವನ್ನು ತುಂಬಲು ಎಷ್ಟು ಹೆತ್ತವರು ಪ್ರಯತ್ನಿಸುತ್ತಾರೆ? ಮಗು ವಸ್ತುವನ್ನು ಮುಟ್ಟಿದರೂ ತಪ್ಪು , ಮುಟ್ಟದಿದ್ದರೂ ತಪ್ಪು  ಅನ್ನುವ ಶೈಲಿಯಲ್ಲೇ ಮಾತಾಡುವ ನಾವು;  ಅದು ಸರಿ, ಹಾಗೆ ಮಾಡು, ಶಭಾಷ್.. ಎಂಬೆಲ್ಲಾ ಪದಗಳನ್ನು ತೀರಾ ಅಪರೂಪವಾಗಿ ಬಳಸುತ್ತಿಲ್ಲವೇ? ಒತ್ತಾಯಕ್ಕೆ ಮಣಿದೋ, ಸ್ವಇಚ್ಛೆಯಿಂದಲೋ ಪೇಟೆಯಿಂದ ಆಟಿಕೆಯೊಂದನ್ನು ಖರೀದಿಸಿ ಮಗುವಿನ ಕೈಗಿಡುವ ನಾವು, ಆ ಆಟಿಕೆಯನ್ನು ಇಷ್ಟ ಬಂದಂತೆ ಬಳಸುವ ಸ್ವಾತಂತ್ರ್ಯವನ್ನು ಮಗುವಿಗೆ ಕೊಡುತ್ತೇವಾ? ಕೈಗಿಡುವ ವೊದಲೇ ಕೆಲವು ‘ಬೇಡ’ಗಳ ಪಟ್ಟಿಯನ್ನು ಮಗುವಿನ ಮೇಲೆ ಹೊರಿಸುವುದಿಲ್ಲವೇ? ನಾವು ಹೇಳಿದಂತೆ ಆಡದಿದ್ದರೆ ಮಗುವನ್ನು ಗದರಿಸುವುದಿಲ್ಲವೇ? ಆಟಿಕೆಯನ್ನು ಮುರಿದು ಕಿವಿ ಹಿಂಡಿಸಿಕೊಳ್ಳುವ, ಬೆನ್ನಿಗೆ ಏಟು ಪಡಕೊಳ್ಳುವ ಎಷ್ಟು ಮಕ್ಕಳಿಲ್ಲ ನಮ್ಮ ಮಧ್ಯೆ? ನಿಜವಾಗಿ ಆಟಿಕೆಗಳನ್ನು ಖರೀದಿಸುವುದೇ ಮಕ್ಕಳಿಗೆಂದು. ಹೀಗಿದ್ದೂ ಅದನ್ನು ತಮ್ಮಿಷ್ಟದಂತೆ ಬಳಸುವ ಸ್ವಾತಂತ್ರ್ಯವನ್ನು ಮಕ್ಕಳಿಗೆ ಕೊಟ್ಟರೇನು ತಪ್ಪು ?
      ನಿಜವಾಗಿ ಮಕ್ಕಳ ಮನಸು ದೊಡ್ಡವರಂತೆ ಅಲ್ಲ. ದೊಡ್ಡವರ ಗುಣಾಕಾರ-ಭಾಗಾಕಾರವನ್ನು ಅರ್ಥ  ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಮಕ್ಕಳಲ್ಲಿರುವುದು ತುಸು ಕುತೂಹಲ, ತಂಟೆ , ಸಂಶೋಧನಾತ್ಮಕ ಮನಸು. ಆಟಿಕೆಯನ್ನು ಪಡಕೊಳ್ಳುವ ಮಗು ಆರಂಭದಲ್ಲಿ ಹೆತ್ತವರು ಹೇಳಿದಂತೆಯೇ ಉಪಯೋಗಿಸುತ್ತದೆ. ಆ ಬಳಿಕ ಕುತೂಹಲದಿಂದ ತಿರುಗ ಮುರುಗ ಮಾಡಿ, ಅದರ ಗಾಲಿಯನ್ನೋ ಇನ್ನೇನನ್ನೋ ಕಿತ್ತು, ಏನನ್ನೋ ಹುಡುಕುತ್ತದೆ. ಆದರೆ ದುಡ್ಡು ಕೊಟ್ಟಿರುವ ಹೆತ್ತವರಿಗೆ ಅದರ ಕುತೂಹಲ, ಅನ್ವೇಷಕ ಗುಣವನ್ನು ಅರಿತುಕೊಳ್ಳುವುದಕ್ಕೆ ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಒಂದು ರೀತಿಯಲ್ಲಿ ಆಟಿಕೆಯನ್ನು ಜೋಪಾನವಾಗಿ ಉಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವ ನಾವು, ಹಾಗೆ ಮಾಡುವ ಮೂಲಕ ಮಗುವಿನ ಅನ್ವೇಷಕ ಗುಣವನ್ನು, ಸ್ವತಂತ್ರ ವ್ಯಕ್ತಿತ್ವವನ್ನು ನಾಶಪಡಿಸುತ್ತಿದ್ದೇವೆ ಅನ್ನುವುದನ್ನು ತಿಳಿದಿರುವುದೂ ಇಲ್ಲ. ಆಟಿಕೆಯನ್ನು ಮುರಿದು ಪೆಟ್ಟು ತಿಂದ ಮಗು, ಮುಂದೆ ಆಟಿಕೆಯನ್ನು ಮುರಿಯುವುದಕ್ಕೆ ಹಿಂಜರಿಯಬಹುದು  ನಿಜ. ಆದರೆ ಪೆಟ್ಟು ಅನ್ನುವ ಭಯವು ಮಗುವಿನ ‘ಕುತೂಹಲ’ ಅನ್ನುವ ಅಮೂಲ್ಯ ಗುಣವನ್ನೂ ನಾಶಪಡಿಸುವುದಿಲ್ಲವೇ? ಮಗು ಆಟಿಕೆ ಕಾರಿನ ಗಾಲಿಯನ್ನು, ಸ್ಟೇರಿಂಗನ್ನು ಅಥವಾ ಇನ್ನಾವುದನ್ನೋ ಕಿತ್ತು ಹಾಕಿದ ಮಾತ್ರಕ್ಕೇ ಅವೆಲ್ಲ ಹಾಳಾಯಿತು ಎಂದೇಕೆ ನಾವು ತೀರ್ಮಾನಿಸಬೇಕು? ಆ ಮೂಲಕ ಮಗು ಅಮೂಲ್ಯವಾದ ಸಂಗತಿಗಳನ್ನು ಕಂಡುಕೊಂಡಿದೆ ಎಂದೇಕೆ ಆಲೋಚಿಸಬಾರದು? ಆಟಿಕೆ ಮಗುವಿನದು, ಅದು ಹೇಗೆ ಬೇಕಾದರೂ ಬಳಸಲಿ.. ಅನ್ನುವ ಉದಾರ ನಿಲುವು ಮಗುವಿನಲ್ಲಿ ಆತ್ಮವಿಶ್ವಾಸವನ್ನು ತುಂಬುವುದಕ್ಕೆ ಅವಕಾಶ ಇದೆ. ಯಾವುದೇ ವಿಷಯದಲ್ಲೂ ಮುನ್ನುಗ್ಗಿ ಮಾತಾಡಲು, ಸ್ವತಂತ್ರವಾಗಿ ಆಲೋಚಿಸಲು, ತುಸು ಧೈರ್ಯದ ನಿಲುವುಗಳನ್ನು ಕೈಗೊಳ್ಳಲು ಇಂಥ ನಿಲುವು ಭವಿಷ್ಯದಲ್ಲಿ ನೆರವಾಗಬಲ್ಲದು. ಜೋಪಾನದ ಹೆಸರಲ್ಲಿ ಹೆಜ್ಜೆ ಹೆಜ್ಜೆಗೂ ನಿಯಂತ್ರಣವನ್ನು ಹೇರತೊಡಗಿದರೆ ಮತ್ತೆ ಆ ಮಗು ಮಗುವಾಗಿರುವುದಿಲ್ಲ. ಅದು ಹೆತ್ತವರ ಪಡಿಯಚ್ಚು ಆಗಿಬಿಡುತ್ತದೆ. ಪ್ರತಿಯೊಂದಕ್ಕೂ ಹೆತ್ತವರನ್ನೋ ಇನ್ನಾರನ್ನೋ ಅವಲಂಬಿಸುವ, ನಾಯಕತ್ವ ಗುಣವನ್ನು ಹೊಂದಿಲ್ಲದ, ನಕಾರಾತ್ಮಕವಾಗಿಯೇ ಆಲೋಚಿಸುವ ವ್ಯಕ್ತಿತ್ವವಾಗಿ ಮಾರ್ಪಡುತ್ತದೆ. .
       ಗುಡ್ ಗರ್ಲ್  ಮತ್ತು ಬ್ಯಾಡ್ ಬಾಯ್ ಎಂಬ ಪದಗಳನ್ನು ನಾವು ಮಕ್ಕಳ ಮೇಲೆ ಪ್ರಯೋಗಿಸುವಾಗ ಅದು ಬೀರುವ ಪರಿಣಾಮವನ್ನು ಕೆಲವೊಮ್ಮೆ ಗಂಭೀರವಾಗಿ ಪರಿಗಣಿಸಿರುವುದಿಲ್ಲ. ಉತ್ತಮ ಹುಡುಗಿ ಅಂದಾಗ ಅರಳುವ ಮಗುವಿನ ಮುಖ, ಕೆಟ್ಟ ಹುಡುಗಿ ಅಂದಾಗ ಅರಳುವುದಿಲ್ಲ. ಒಂದು ವೇಳೆ ಕೆಟ್ಟ ಹುಡುಗಿ ಅನ್ನುವ ಪದವನ್ನು ನಾವು ಪದೇ ಪದೇ ಬಳಸತೊಡಗಿದರೆ ಮಗು ಯಾವ ಮನಸ್ಥಿತಿಯೊಂದಿಗೆ ಬೆಳೆಯಬಹುದೆಂದು ಯೋಚಿಸಿ. ಹಾಗಂತ ತಪ್ಪನ್ನು ತಿದ್ದಬಾರದು ಎಂದಲ್ಲ. ಇಷ್ಟಕ್ಕೂ, ನಾವು ಯಾವುದನ್ನು ತಪ್ಪು , ಕೆಟ್ಟದು ಎಂದು ಹೇಳಿರುತ್ತೇವೋ, ಅವು ನಿಜವಾಗಿಯೂ ಕೆಟ್ಟದೇ ಆಗಿರುತ್ತದಾ? ಮಣ್ಣಿನಲ್ಲಿ ಆಡುವುದನ್ನು ಕೆಟ್ಟದು ಎಂದು ಎಷ್ಟು ಹೆತ್ತವರು ಮಕ್ಕಳಿಗೆ ಕಲಿಸಿ ಕೊಡುತ್ತಿಲ್ಲ? ಮಳೆ ನೀರಿನಲ್ಲಿ ಆಡುವುದಕ್ಕೆ ಎಷ್ಟು ಮಕ್ಕಳಿಗೆ ಸ್ವಾತಂತ್ರ್ಯ ಇರುತ್ತದೆ? ಶಿಸ್ತಿನ ನೆಪದಲ್ಲಿ ಮಕ್ಕಳನ್ನು ಬೆಕ್ಕಿನಂತೆ, ಮನೆಯಲ್ಲಿ ಇದ್ದಾರೋ ಇಲ್ಲವೋ ಅನ್ನುವಷ್ಟು ಮೌನವಾಗಿ ಬೆಳೆಸುವವರು ನಮ್ಮಲ್ಲಿ ಎಷ್ಟು ಮಂದಿಯಿಲ್ಲ? ಮನೆಗೆ ಅತಿಥಿಗಳು ಬಂದರೆ ‘ಶಿಸ್ತು’ ಅನ್ನುವ ಅಪಾಯಕಾರಿ ಅಸ್ತ್ರವೊಂದನ್ನು ಸಾಕಷ್ಟು ಹೆತ್ತವರು ಒರೆಯಿಂದ ಹೊರತೆಗೆಯುವುದಿದೆ. ಮಕ್ಕಳು ಮೌನವಾಗಿರಬೇಕು, ಅತಿಥಿಗಳ ಮುಂದೆ ಸುಮ್ಮನೆ ಅಡ್ಡಾಡಬಾರದು.. ಎಂಬೆಲ್ಲಾ `ಬಾರದು'ಗಳನ್ನು ಮಕ್ಕಳ ಮೇಲೆ ಹೇರುವುದಿದೆ. ಅತಿಥಿಗಳಿಗೆ ಇಟ್ಟ ತಟ್ಟೆಯಿಂದ ತಿಂಡಿಯನ್ನು ತೆಗೆದು ಮಕ್ಕಳು ಬಾಯಿಗೆ ಹಾಕಿದರೆ ಅವಮಾನವಾದಂತೆ ಕುದಿಯುವ ಹೆತ್ತವರು ಎಷ್ಟಿಲ್ಲ ನಮ್ಮ ನಡುವೆ?
ಸಿಟ್ಟಿನಿಂದ ಎರಡೇಟು ಬಿಗಿಯುವುದೂ ಇದೆಯಲ್ಲವೇ? ನಿಜವಾಗಿ, ಅತಿಥಿಗಳಿಗೆ ಕೊಟ್ಟ ಅದೇ ತಿಂಡಿಯನ್ನು ಅಡುಗೆ ಕೋಣೆಯಲ್ಲಿ ಕೊಟ್ಟರೆ ಮಗು ತಿನ್ನುವುದಿಲ್ಲ. ಯಾಕೆಂದರೆ ಮಗುವಿಗೆ ಆಸಕ್ತಿ ಇರುವುದು ತಿಂಡಿಯ ಮೇಲಲ್ಲ, ಅತಿಥಿಗಳ ಮೇಲೆ. ಅವರ ಗಮನವನ್ನು ಸೆಳೆಯುವುದು ಅದರ ಉದ್ದೇಶ. ಮನೆಗೆ ಬಂದ ಅತಿಥಿಗಳು ಒಂದು ವೇಳೆ ಮಕ್ಕಳ ಬಗ್ಗೆ ಆಸಕ್ತಿಯನ್ನೇ ತೋರದಿದ್ದರೆ, ಮಾತಾಡಿಸದಿದ್ದರೆ ಮಕ್ಕಳು ಕಿರಿಕಿರಿ ಮಾಡುವುದಿದೆ. ಬೊಬ್ಬೆ ಹೊಡೆದೋ ಅತಿಥಿಗಳ ಜೊತೆ ಮಾತಾಡುವ ತಂದೆಯನ್ನೋ ತಾಯಿಯನ್ನೋ ಎಳೆದಾಡಿಯೋ ಗಮನ ಸೆಳೆಯಲು ಪ್ರಯತ್ನಿಸುವುದಿದೆ. ಆದರೆ ಅನೇಕ ಬಾರಿ ನಮಗೆ ಅವುಗಳನ್ನು ಅರ್ಥೈಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ‘ಮಗುವಿಗೆ ಭಾರೀ ಹಠ’ ಅಂದುಬಿಟ್ಟು, ನಾಲ್ಕು ಬಿಗಿದು ಸುಮ್ಮನಾಗಿಸುತ್ತೇವೆ.
ನಮ್ಮ ಸಿಟ್ಟನ್ನು, ಒತ್ತಡವನ್ನು, ಅವಿವೇಕವನ್ನು.. ಮಕ್ಕಳ ಮೇಲೆ ಪ್ರಯೋಗಿಸುವುದು ಸುಲಭ. ಯಾಕೆಂದರೆ ನಮ್ಮನ್ನು ಎದುರಿಸುವ ಸಾಮರ್ಥ್ಯ  ಮಕ್ಕಳಲ್ಲಿಲ್ಲವಲ್ಲ. ನಮ್ಮ ಆಲೋಚನೆಯನ್ನು ತಪ್ಪು  ಎಂದು ಹೇಳುವಷ್ಟು ಅವುಗಳ ಮೆದುಳು ಬೆಳೆದಿರುವುದೂ ಇಲ್ಲ. ನಾವು ಕೊಟ್ಟ ಪೆಟ್ಟನ್ನು ತಿಂದು, ಅದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಕಣ್ಣೀರಿಳಿಸಿ ಅವು ಸುಮ್ಮನಾಗುತ್ತವೆ. ಬಳಿಕ ಮುಟ್ಟಬೇಡ ಅಂದರೆ ಮುಟ್ಟುವುದಿಲ್ಲ. ತಿನ್ನಬೇಡ ಅಂದರೆ ತಿನ್ನುವುದಿಲ್ಲ. ಆಡಬೇಡ ಅಂದರೆ ಆಡುವುದಿಲ್ಲ.. ಆದರೆ ಹೀಗೆ ‘ಬೇಡ’ಗಳನ್ನು ನಮ್ಮಿಷ್ಟದಂತೆ ನಾವು ಹೇರುತ್ತಾ ಹೋದರೆ ಮಗು ನಿಷೇಧಾತ್ಮಕ ನಿಲುವಿನೊಂದಿಗೆ ಬೆಳೆಯುತ್ತಾ ಹೋಗುತ್ತದೆ ಎಂಬ ಪ್ರಜ್ಞೆ ಮಕ್ಕಳ ಜೊತೆ ರಜೆಯ ಮಜವನ್ನು ಅನುಭವಿಸುತ್ತಿರುವ ಎಲ್ಲ ಹೆತ್ತವರಲ್ಲೂ ಇರಬೇಕು.ಆದ್ದರಿಂದ ಮಗು  ಮಗುವಾಗಿಯೇ ಬೆಳೆಯಲಿ. ಶಿಸ್ತು, ನಿಯಂತ್ರಣ, ಜೋಪಾನ.. ಎಂಬೆಲ್ಲಾ ಹೊರಗಿನ ಒತ್ತಡಗಳು ಅವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರದಿರಲಿ..