Wednesday, December 12, 2018

ದ ವೈರ್, ದ ಟ್ರಿಬ್ಯೂನ್, ದ ಸಿಟಿಝನ್ ಮತ್ತು ಮಾನನಷ್ಟ



ದ ಎಕನಾಮಿಕ್ಸ್ ಟೈಮ್ಸ್
ಫಿನಾನ್ಶಿಯಲ್ ಎಕ್ಸ್ ಪ್ರೆಸ್
ದ ವೀಕ್
ದ ಟ್ರಿಬ್ಯೂನ್
ದ ವೈರ್
ಎನ್‍ಡಿಟಿವಿನ್ಯಾಶನಲ್ ಹೆರಾಲ್ಡ್
ಬ್ಲೂಂಬರ್ಗ್ ನ್ಯೂಸ್
2018 ಜನವರಿಯಿಂದ ಈ ವರೆಗೆ ಗುಜರಾತ್‍ನ ಅಹ್ಮದಾಬಾದ್ ನ್ಯಾಯಾಲಯವೊಂದರಲ್ಲೇ  ಮಾನನಷ್ಟ ಮೊಕದ್ದಮೆಯನ್ನು ಜಡಿಸಿಕೊಂಡ  ಪತ್ರಿಕೆಗಳಿವು. ಕೇಸು ಹಾಕಿದ್ದು ಅನಿಲ್ ಅಂಬಾನಿಯ ರಿಲಯನ್ಸ್ ಸಂಸ್ಥೆಗಳು. ಈ ಕೇಸುಗಳಿಗೆ ಕಾರಣ ಒಂದೇ- ರಫೇಲ್ ಒಪ್ಪಂದ.  ಇತ್ತೀಚೆಗಷ್ಟೇ ದ ವೈರ್ ಪತ್ರಿಕೆಯ ಮೇಲೆ 6 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. 2018 ಆಗಸ್ಟ್  23ರಂದು ದ ವೈರ್ ಪತ್ರಿಕೆಯು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ನಡೆಸಿದ ಸಂವಾದದ ವೀಡಿಯೋವೊಂದನ್ನು Rafael Deal:  Understanding the controvercy  ಎಂಬ ಹೆಸರಲ್ಲಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಸಾರ ಮಾಡಿತ್ತು. ಹಾಗಂತ, ದ ವೈರ್  ಎಂಬುದು ಪ್ರಜಾವಾಣಿ, ವಿಜಯ ಕರ್ನಾಟಕ, ವಾರ್ತಾಭಾರತಿಯಂತೆ ಕಾಗದದಲ್ಲಿ ಪ್ರಕಟವಾಗುವ ಪತ್ರಿಕೆಯಲ್ಲ. ಅದೊಂದು ವೆಬ್  ಪೋರ್ಟಲ್. ಇಂಟರ್ ನೇಟ್ ಮಾಧ್ಯಮ. ಅದನ್ನು ಓದಬೇಕಾದರೆ ನಿಮ್ಮಲ್ಲಿ ಇಂಟರ್ ನೆಟ್ ಸಂಪರ್ಕವಿರುವ ಕಂಪ್ಯೂಟರ್ ಅಥವಾ ಸ್ಮಾರ್ಟ್  ಫೋನ್ ಇರಲೇಬೇಕು. ಇಂಟರ್ ನೆಟ್ ಮಾಧ್ಯಮ ಕ್ಷೇತ್ರದಲ್ಲಿ ದ ವೈರ್‍ಗೆ ಬಹುದೊಡ್ಡ ಗೌರವವಿದೆ. ನ್ಯಾಯಪರ ಪತ್ರಿಕೋದ್ಯಮವನ್ನು  ನೆಚ್ಚಿಕೊಂಡವರು ಹುಟ್ಟುಹಾಕಿದ ಮಾಧ್ಯಮ ಎಂದು ಅದು ಗುರುತಿಸಿಕೊಳ್ಳುತ್ತಿದೆ. ಮಾಧ್ಯಮ ರಂಗದ ಹಲವರನ್ನು ಬಿಜೆಪಿ ಖರೀದಿಸಿಕೊಂಡಿದೆ ಎಂಬ ಆರೋಪಗಳ ನಡುವೆ ಕೈ-ಬಾಯಿ ಶುದ್ಧವಾಗಿಟ್ಟುಕೊಂಡಿರುವ ಪತ್ರಿಕೆಯಾಗಿ ದ ವೈರ್ ವಿಶ್ವಾಸಕ್ಕೆ ಪಾತ್ರವಾಗಿದೆ.  ಬಹುಶಃ,

ಇಂಥ ಶುದ್ಧ ಪತ್ರಿಕೋದ್ಯಮವನ್ನು ನಡೆಸಿಕೊಂಡಿರುವುದಕ್ಕೋ ಏನೋ ಅದು ಸದ್ಯ ಮೈಮೇಲೆಳೆದುಕೊಂಡಿರುವ ಕೇಸುಗಳನ್ನು  ನೋಡಿದರೆ ಅಚ್ಚರಿಯಾಗಬಹುದು. ಅನಿಲ್ ಅಂಬಾನಿಯರಂತೆಯೇ ಅದಾನಿ ಕೂಡ ದ ವೈರ್ ನ ಮೇಲೆ ಮೂರು ಕ್ರಿಮಿನಲ್ ಮತ್ತು  ಮೂರು ಸಿವಿಲ್ ಕೇಸುಗಳನ್ನೊಳಗೊಂಡಂತೆ 300 ಕೋಟಿ ರೂಪಾಯಿ ಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಬಿಜೆಪಿಯ  ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಮಗ ಒಂದು ಕ್ರಿಮಿನಲ್ ಮತ್ತು ಒಂದು ಸಿವಿಲ್ ಕೇಸುಗಳನ್ನು ದಾಖಲಿಸಿದ್ದು 100 ಕೋಟಿ ರೂಪಾಯಿ  ಮಾನನಷ್ಟ ಪರಿಹಾರವನ್ನು ಕೋರಿದ್ದಾರೆ. ಬಿಜೆಪಿಯ ಸಂಸದ ರಾಜೀವ್ ಚಂದ್ರಶೇಖರ್ ರಿಂದ 40 ಕೋಟಿ ರೂಪಾಯಿ ಮತ್ತು ಶ್ರೀ ಶ್ರೀ  ರವಿಶಂಕರ್ ರಿಂದ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಯನ್ನೂ ದ ವೈರ್ ಎದುರಿಸುತ್ತಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ  ಸಂವಾದದ ವೀಡಿಯೋವನ್ನು ಪ್ರಸಾರ ಮಾಡಿದುದಕ್ಕಾಗಿ ರಿಲಯನ್ಸ್ ಸಂಸ್ಥೆಯು ದ ವೈರ್‍ ನ  ಸ್ಥಾಪಕ ಸಂಪಾದಕ ಮಂಗಳಂ ಶ್ರೀನಿವಾಸನ್  ವೇಣು, ಚರ್ಚೆಯಲ್ಲಿ ಭಾಗವಹಿಸಿರುವ ರಕ್ಷಣಾ ತಜ್ಞ ಅಜಯ್ ಶುಕ್ಲ ಮತ್ತು ವಿಶ್ಲೇಷಕ ಹಾಪಿಮೋನ್ ಜಾಕಬ್ ಇವರ ಮೇಲೆ ಕೇಸು  ದಾಖಲಿಸಿದೆ. ಹಾಗಂತ,
ಈ ಪ್ರಕ್ರಿಯೆ ತೀರಾ ಸರಳ ಅಲ್ಲ.
ಬೆಂಗಳೂರಿನಲ್ಲೊ , ಚೆನ್ನೈ, ಮುಂಬೈನಲ್ಲೋ  ಕೇಂದ್ರ ಕಚೇರಿಯನ್ನು ಹೊಂದಿರುವ ಪತ್ರಿಕೆಯೊಂದರ ಮೇಲೆ ದೂರದ ಅಹ್ಮದಾಬಾದ್‍ನಲ್ಲಿ  ಕೇಸು ದಾಖಲಿಸುವುದೆಂದರೆ ಅದನ್ನು ಎದುರಿಸುವುದು ಸುಲಭ ಅಲ್ಲ. ಅಹ್ಮದಾಬಾದ್‍ನ ನ್ಯಾಯಾಲಯಕ್ಕೆ ಹಾಜರಾಗುವುದೆಂದರೆ, ಅದಕ್ಕೆ  ಒಂದು ದಿನ ಮೊದಲೇ ತಯಾರಾಗಬೇಕು. ಸಮಯ ಉಳಿತಾಯದ ದೃಷ್ಟಿಯಿಂದ ವಿಮಾನ ಪ್ರಯಾಣ ಉತ್ತಮವಾದರೂ ಖರ್ಚು  ವೆಚ್ಚದ ದೃಷ್ಟಿಯಿಂದ ದುಬಾರಿ. ಯಾವುದೇ ಕೇಸು ಒಂದೆರಡು ಹಾಜರಾತಿಯಲ್ಲಿ ಮುಗಿಯುವುದಿಲ್ಲ. ಅದೊಂದು ದೀರ್ಘ ಕತೆ. ಈ ಕತೆ  ಮುಗಿಯುವಾಗ ವಕೀಲರ ಜೇಬು ತುಂಬಿರುತ್ತದೆ. ಫಿರ್ಯಾದು ದಾರ ಬಸವಳಿದಿರುತ್ತಾನೆ. ಪತ್ರಿಕೆಗೆ ಸಂಬಂಧಿಸಿ ಹೇಳುವು ದಾದರೆ ಕೇಸು  ಗೆದ್ದರೂ ಸಂತಸ ಪಡುವ ಸ್ಥಿತಿಯಲ್ಲಿ ಪತ್ರಿಕೆ ಇರುವುದಿಲ್ಲ. ಅದಾಗಲೇ ವಿಚಾರಣೆ, ಪ್ರಯಾಣ, ಖರ್ಚು-ವೆಚ್ಚದ ಹೆಸರಲ್ಲಿ ಪತ್ರಿಕೆ ಸೋಲನ್ನು  ಒಪ್ಪಿಕೊಂಡಿರುತ್ತದೆ. ಇನ್ನು,
ಕೇಸು ದಾಖಲಾಗುವಾಗ ಒಂದು ಪತ್ರಿಕೆಯಲ್ಲಿದ್ದ ಪತ್ರಕರ್ತ ಕೇಸು ಮುಗಿಯುವಾಗ ಇನ್ನೊಂದು ಪತ್ರಿಕೆಯಲ್ಲಿ  ಕೆಲಸ ಮಾಡುತ್ತಿರುವುದೂ ಇದೆ. ಇದು ಆತ/ಕೆ/ಯ ಪಾಲಿಗೆ ತೀರಾ ಜಟಿಲ ಸಮಸ್ಯೆ. ಆದ್ದರಿಂದ, ಹೀಗೆಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಸರಕಾರಕ್ಕೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಇಷ್ಟವಾಗುವ ಸುದ್ದಿ, ವಿಶ್ಲೇಷಣೆಗಳನ್ನು ಮಾಡಿ ಆರಾಮವಾಗಿರುವುದು  ಒಳ್ಳೆಯದಲ್ಲವೇ ಎಂದು ಓರ್ವ ಪತ್ರಕರ್ತ ಮತ್ತು ಒಂದು ಪತ್ರಿಕೆ ಆಲೋಚಿಸಿದರೆ ಅದನ್ನು ಅಸಾಮಾನ್ಯ ಎಂದು ತಳ್ಳಿ ಹಾಕಲಾಗದು.  ಅಂದಹಾಗೆ,
ಅನಿಲ್ ಅಂಬಾನಿಯವರ ರಿಲಯನ್ಸ್ ಸಂಸ್ಥೆಯು ಪತ್ರಿಕೆ ಗಳ ಮೇಲೆ ಮಾತ್ರ ಕೇಸು ದಾಖಲಿಸಿರುವುದಲ್ಲ. ರಾಜಕಾರಣಿಗಳ ಮೇಲೂ  ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಒಂದು ಕಡೆ, The Week ಪತ್ರಿಕೆಯ ಪ್ರಕಾಶಕ ಜಾಕಬ್ ಮ್ಯಾಥ್ಯೂ, ಸಂಪಾದಕ ಫಿಲಿಪ್  ಮ್ಯಾಥ್ಯೂ, ವರದಿಗಾರ ನಚಿಕೇತ್ ಕೌಶಿಕ್‍ರ ಮೇಲೆ ಕೇಸು ದಾಖಲಿಸುವಾಗ, ಇನ್ನೊಂದು ಕಡೆ- ಕಾಂಗ್ರೆಸ್‍ನ ಸಂಜಯ್ ನಿರುಪಮ್ ಅವರ  ಮೇಲೆ 5 ಸಾವಿರ ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್  ಸಿಂಗ್, ಕಾಂಗ್ರೆಸ್‍ನ ವಕ್ತಾರ ಪ್ರಿಯಾಂಕ್ ಚತುರ್ವೇದಿ, ಸುನಿಲ್ ಕುಮಾರ್ ಜಾಕ್ಕರ್, ಉಮ್ಮನ್ ಚಾಂಡಿ ಸೇರಿದಂತೆ 8 ಮಂದಿ  ರಾಜಕಾರಣಿಗಳನ್ನು ಅಹ್ಮದಾಬಾದ್ ನ್ಯಾಯಾಲಯದ ಕಟಕಟೆಯಲ್ಲಿ ತಂದು ನಿಲ್ಲಿಸಿದೆ. ನಿಜವಾಗಿ,
ರಿಲಯನ್ಸ್ ಸಂಸ್ಥೆಯ ವತಿಯಿಂದ ಮಾಡಲಾದ ಒಂದು ವ್ಯವಸ್ಥಿತ ತಂತ್ರದ ಭಾಗ ಈ ಕೇಸು. ರಫೇಲ್‍ನ ವಿಷಯದಲ್ಲಿ ರಿಲಯನ್ಸ್ ಅನ್ನು  ಯಾರು ಉಲ್ಲೇಖಿಸುತ್ತಾರೋ ಅವರಿಗೆ ಕೇಸು ಕಾದಿದೆ ಎಂಬ ಸಂದೇಶವನ್ನು ರವಾನಿಸುವ ಜಾಣತನ ಇದರ ಹಿಂದೆ ಕೆಲಸ ಮಾಡಿದೆ  ಎಂಬುದು ನಿಸ್ಸಂಶಯ. ಯಾವಾಗ ಪತ್ರಿಕೆಗಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಕೇಸು ದಾಖಲಾಗತೊಡಗುತ್ತದೋ ಪತ್ರಕರ್ತ  ಮತ್ತು ಪತ್ರಿಕೆಗೆ ಭಯ ಪ್ರಾರಂಭವಾಗುತ್ತದೆ. ಯಾವುದೇ ಮಾಹಿತಿಯನ್ನೂ ಪ್ರಕಟಿಸುವ ಬಗ್ಗೆ ಹಿಂದೆ-ಮುಂದೆ ನೋಡಬೇಕಾಗುತ್ತದೆ.  ನಮಗ್ಯಾಕೆ ರಿಸ್ಕ್ ಎಂಬ ಮನೋಭಾವ ಬೆಳೆದು ಬಿಡುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ತನಿಖಾ ಬರಹಗಳು  ಕಾಣಿಸಿಕೊಳ್ಳದೇ ಇರುವುದಕ್ಕೆ ರಿಲಯನ್ಸ್ ಸಂಸ್ಥೆಯ ಈ ‘ಮಾನನಷ್ಟ ಕೇಸುಗಳು’ ಒಂದು ಪಾತ್ರವನ್ನು ನಿರ್ವಹಿಸಿರಬಹುದು ಎಂಬ ಸಂಶಯಕ್ಕೆ ಆಧಾರವೂ ಇದುವೇ. ರಫೇಲ್‍ನ ಬಗ್ಗೆ ಚರ್ಚೆ ಮಾಡುವ ಯಾರೇ ಆಗಲಿ, ಡಸಾಲ್ಟ್ ಮತ್ತು ರಿಲಯನ್ಸ್ ಸಂಸ್ಥೆಗಳ ಪಾಲುದಾರಿಕೆಯ ಬಗ್ಗೆ ಮಾತಾಡಲೇಬೇಕಾಗುತ್ತದೆ. ಇಡೀ ಒಪ್ಪಂದ ಪ್ರಶ್ನಾರ್ಹವಾಗಿರುವುದೇ ಈ ಪಾಲುದಾರಿಕೆಯಿಂದಾಗಿ. ಆದರೆ
ಈ  ಪಾಲುದಾರಿಕೆಯನ್ನು ಕೆದಕಬೇಕೆಂದರೆ ರಿಲಯನ್ಸ್‍ಗೆ ಮುಖಾ ಮುಖಿಯಾಗಲೇಬೇಕು. ತನ್ನಲ್ಲಿರುವ ಮಾಹಿತಿಯನ್ನು ಮುಂದಿಟ್ಟು ಕೊಂಡು  ಪತ್ರಕರ್ತ ವಿಶ್ಲೇಷಣೆ ನಡೆಸಲೇಬೇಕು. ಅಂತಹ ಸಂದರ್ಭ ದಲ್ಲಿ ಆತ ರಿಲಯನ್ಸನ್ನು ಪ್ರಶ್ನಿಸಬೇಕಾಗಬಹುದು. ಒಪ್ಪಂದದ ಸಮಯ, ಸಂದರ್ಭ, ಒಕ್ಕಣೆಗಳನ್ನು ಅನುಮಾನಿಸಿ ಮಾತಾಡಬೇಕಾಗಬಹುದು. ಒಟ್ಟು ಬೆಳವಣಿಗೆಯ ಬಗ್ಗೆ ತನ್ನದೇ ಅಭಿಪ್ರಾಯಗಳನ್ನು ಮಂಡಿಸಬೇಕಾಗಿ  ಬರಬಹುದು. ಆದರೆ, ಹಾಗೆ ಮಾಡಿದರೆ ಕೇಸು ಹಾಕುತ್ತೇನೆ ಎಂದು ರಿಲಯನ್ಸ್ ಸಂಸ್ಥೆ ಬೆತ್ತ ಹಿಡಿದು ನಿಂತಿರುವಾಗ ಒಂದು ಪತ್ರಿಕೆ ಮತ್ತು  ಪತ್ರಕರ್ತ ಎರಡೆರಡು ಬಾರಿ ಯೋಚಿಸುತ್ತಾನೆ. ಒಂದು ರೀತಿಯಲ್ಲಿ,
ಬೋಫೋರ್ಸ್, ಶವಪೆಟ್ಟಿಗೆ, 2ಜಿ ಸ್ಪೆಕ್ಟ್ರಂ ಇತ್ಯಾದಿ ಹಗರಣಗಳ ಬಗ್ಗೆ ಈ ದೇಶದ ಮಾಧ್ಯಮಗಳು ನಡೆಸಿರುವ ಚರ್ಚೆ ಮತ್ತು ಬರೆದಿರುವ  ಬರಹಗಳಿಗೆ ಹೋಲಿಸಿದರೆ ರಫೇಲ್‍ನ ಬಗ್ಗೆ ಏನನ್ನೂ ಬರೆದಿಲ್ಲ ಎಂದೇ ಹೇಳಬಹುದು. ಇದಕ್ಕೆ, ಮಾಧ್ಯಮಗಳ ಮೋದಿ ಪ್ರೇಮ ಒಂದು  ಕಾರಣವಾಗಿದ್ದರೆ, ಇನ್ನೊಂದು ಬಲವಾದ ಕಾರಣ- ರಿಲಯನ್ಸ್ ನ ಮಾನನಷ್ಟ ಮೊಕದ್ದಮೆ ಎಂದೇ ಅನಿಸುತ್ತದೆ. ಮಾತ್ರವಲ್ಲ, ಪರದೆಯ  ಹಿಂದೆ ನಿಂತು ಬಿಜೆಪಿಯೇ ಈ ಕೆಲಸ ಮಾಡಿಸುತ್ತಿದೆಯೇ ಎಂಬ ಅನುಮಾನವೂ ಇದೆ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ರಿಲಯನ್ಸ್  ದಾಖಲಿಸಿರುವ 28 ಕೇಸುಗಳೂ ರಫೇಲ್‍ಗೆ ಸಂಬಂಧಿಸಿದವು. ಒಂದುವೇಳೆ, ಬೋಫೋರ್ಸ್ ಹಗರಣದ ವೇಳೆ ಮಾಧ್ಯಮಗಳ ಮೇಲೆ ಇಂಥದ್ದೊಂದು  ತೂಗುಗತ್ತಿ ನೇತಾಡಿರುತ್ತಿದ್ದರೆ ಏನಾಗುತ್ತಿತ್ತು? ತನಿಖಾ ಬರಹ ಪ್ರಕಟಿಸುವ ಧೈರ್ಯವನ್ನು ಯಾವ ಪತ್ರಿಕೆ ತೋರುತ್ತಿತ್ತು? ತನಿಖಾ  ಬರಹ, ಸುದ್ದಿ ವಿಶ್ಲೇಷಣೆಗಳಲ್ಲಿ ಯಾವ ಬಗೆಯ ಜಾಗ್ರತೆಯನ್ನು ಪಾಲಿಸಲಾಗುತ್ತಿತ್ತು?
21ನೇ ಶತಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಬಹುದೊಡ್ಡ ಬದಲಾವಣೆ ಏನೆಂದರೆ, ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ  ಕ್ಷೇತ್ರವನ್ನು ಒಂದೋ ಕೊಂಡುಕೊಂಡಿರುವುದು ಇಲ್ಲವೇ ಕಾನೂನಿನ ಮೂಲಕ ಬೆದರಿಕೆ ಒಡ್ಡುತ್ತಿರುವುದು. ನಿಜವಾಗಿ, ಕಾರ್ಪೋರೇಟ್ ಸಂಸ್ಥೆಯೊಂದರಿಂದ ಖರೀದಿಗೊಳಗಾಗಿರುವ ಮಾಧ್ಯಮ ಸಂಸ್ಥೆಯು ಇನ್ನೊಂದು ಕಾರ್ಪೋರೇಟ್ ಸಂಸ್ಥೆಯ ವಿರುದ್ಧ ಬರೆಯುವುದಕ್ಕೆ ಸಾಧ್ಯವಿಲ್ಲ.  ಮಾರುಕಟ್ಟೆಯಲ್ಲಿ ಆ ಕಂಪೆನಿಗಳ ನಡುವೆ ಸ್ಪರ್ಧೆಯಿದ್ದರೆ ಮಾತ್ರ ಒಂದು ಸಂಸ್ಥೆ ನಡೆಸುತ್ತಿರುವ ಪತ್ರಿಕೆ ಇನ್ನೊಂದು ಸಂಸ್ಥೆಯ ಒಳಸುಳಿಗಳನ್ನು ಬಿಚ್ಚಿಡಬಲ್ಲುದು. ದೇಶದಲ್ಲಿರುವ ಮಾಧ್ಯಮ ಸಂಸ್ಥೆಗಳನ್ನೇ ಪರಿಶೀಲಿಸಿ. ಮುಖ್ಯವಾಹಿನಿಯ ಹೆಚ್ಚಿನ ಮಾಧ್ಯಮ ಸಂಸ್ಥೆಗಳು  ಯಾವುದಾದರೊಂದು ಕಾರ್ಪೋರೇಟ್ ಕುಲದ ಒಡೆತನದಲ್ಲಿಯೋ ಮುಲಾಜಿನಲ್ಲಿಯೋ ಇರುವುದು ಗೊತ್ತಾಗುತ್ತದೆ. ಮಾತ್ರವಲ್ಲ, ನಿರ್ದಿಷ್ಟ  ರಾಜಕೀಯ ಪಕ್ಷದ ವಕ್ತಾರಿಕೆ ನಡೆಸುವಷ್ಟು ಶರಣಾಗತಿಯ ಮನಸ್ಥಿತಿಯೂ ಇದೆ. ಇಂಥ ಸ್ಥಿತಿಯಲ್ಲಿ,
ಪತ್ರಕರ್ತನೋರ್ವ ಕಾರ್ಪೋರೇಟ್  ಸಂಸ್ಥೆಯ ವಿರುದ್ಧ ಮಾತಾಡುವುದು ಸುಲಭ ಅಲ್ಲ. ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಸಂಪಾದಕ ಝಫರ್ ಅಗಾ ಮತ್ತು ಪತ್ರಕರ್ತ ವಿಶ್ವದೀಪಕ್‍ರು 5000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಇವತ್ತು ಎದುರಿಸುತ್ತಿದ್ದರೆ ಅದಕ್ಕೆ ರಫೇಲ್ ಒಪ್ಪಂದದ ಬಗ್ಗೆ ಅವರು  ಪತ್ರಿಕೆಯಲ್ಲಿ ವ್ಯಕ್ತ ಪಡಿಸಿರುವ ಅಭಿಪ್ರಾಯಗಳೇ ಕಾರಣ. ದ ಸಿಟಿಝನ್ ವೆಬ್‍ಸೈಟ್‍ನ ಸಂಪಾದಕಿ ಸೀಮಾ ಮುಸ್ತಫಾ 7 ಸಾವಿರ ಕೋಟಿ  ರೂ., ಡಿಎನ್‍ಎ ಪತ್ರಿಕೆಯ ಅತೀಕ್ ಶೇಖ್ 2000 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಎನ್‍ಡಿಟಿವಿಯ  ಸ್ಥಾಪಕ ಪ್ರಣಯ್ ರಾಯ್, ದ ಟ್ರಿಬ್ಯೂನ್‍ನ ಸಂಪಾದಕ ರಾಜೇಶ್ ರಾಮಚಂದ್ರನ್, ಫಿನಾನ್ಶಿಯಲ್ ಟೈಮ್ಸ್ ನ ಮುಂಬೈ ವರದಿಗಾರ ಸಿಮನ್  ಚುಂಡಿಯಂಥ ಹಲವು ಪತ್ರಕರ್ತರು ರಿಲಯನ್ಸ್ ದಾಖಲಿಸಿರುವ ಕೋಟಿಗಟ್ಟಲೆ ಮಾನನಷ್ಟು ಮೊಕದ್ದಮೆ ಯನ್ನು ಎದುರಿಸುತ್ತಿದ್ದಾರೆ. ನಿಜ,
ಬರೆಯುವುದು ಅಷ್ಟು ಸುಲಭ ಅಲ್ಲ.

Thursday, December 6, 2018

ನಾಲ್ಕೂವರೆ ವರ್ಷಗಳ ಹಿಂದಿನ ಆ ವಾಕ್ಯವೂ ಜುಮ್ಲಾವೇ?



 “BJP believes that political stability, progress and peace in the region are essential for South Asia’s growth and development. The Congress-led UPA [United Progressive Alliance] has failed to establish enduring friendly and cooperative relations with India’s neighbours. India’s relations with traditional allies have turned cold. India and its neighbours have drifted apart. The absence of statecraft has never been felt so acutely as today.”

 2014ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಒಂದು ಭಾಗ ಇದು.
`ಮನ್‍ಮೋಹನ್ ಸಿಂಗ್ ಸರಕಾರದ ಅವಧಿಯಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ಹಳಸಿದೆ. ಎಷ್ಟೆಂದರೆ- ಈ ಹಿಂದೆಂದೂ ಸಂಬಂಧ ಇಷ್ಟು ತಳಮಟ್ಟಕ್ಕೆ ಹೋಗಿರಲಿಲ್ಲ. `ಬಿಜೆಪಿ ಈ ಬಗೆಯ ವಾತಾವರಣವನ್ನು ಬಯಸುವುದಿಲ್ಲ. ದಕ್ಷಿಣ ಏಶ್ಯಾವು ಅಭಿವೃದ್ಧಿ ಹೊಂದಬೇಕಾದರೆ, ಈ ಪ್ರದೇಶದಲ್ಲಿ ಶಾಂತಿ, ರಾಜಕೀಯ ಸ್ಥಿರತೆ ಇರಬೇಕಾದುದು ಬಹುಮುಖ್ಯ ಎಂಬುದಾಗಿ ಬಿಜೆಪಿ ಭಾವಿಸುತ್ತದೆ ಎಂದು ಇದನ್ನು ಅನುವಾದಿಸಬಹುದು.
ನೇಪಾಳ
ಚೀನಾ
ಭೂತಾನ್
ಮಾಲ್ದೀವ್ಸ್
ಶ್ರೀಲಂಕಾ
ಪಾಕಿಸ್ತಾನ್
ಬಾಂಗ್ಲಾ
ಅಫಘಾನಿಸ್ತಾನ್
ಬಿಜೆಪಿಯ ಪ್ರಣಾಳಿಕೆಗೆ ನಾಲ್ಕೂವರೆ  ವರ್ಷಗಳು ತುಂಬುತ್ತಿರುವ ಈ ಹೊತ್ತಿನಲ್ಲಿ ಆ ಪ್ರಣಾಳಿಕೆಯ ಉದ್ದೇಶ ಎಷ್ಟಂಶ ಈಡೇರಿದೆ? ಪ್ರಧಾನಿ ನರೇಂದ್ರ ಮೋದಿಯವರ ಆರಂಭ ಅದ್ಭುತವಾಗಿತ್ತು. ಭಾರತದ ಇನ್ಯಾವ ಪ್ರಧಾನಿಗಳೂ ಅಯೋಜಿಸಿರದ ವಿಶಿಷ್ಟ ಪ್ರಮಾಣ ವಚನ ಕಾರ್ಯಕ್ರಮವನ್ನು ಅವರು ಏರ್ಪಡಿಸಿದರು. ಸಾರ್ಕ್ ರಾಷ್ಟ್ರಗಳ ಅಧ್ಯಕ್ಷರನ್ನು ತನ್ನ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನಿಸುವ ಮೂಲಕ ಹೊಸತೊಂದು ಕ್ರಮವನ್ನು ಹುಟ್ಟು ಹಾಕಿದರು. ಜಪಾನ್ ಭೇಟಿಯಲ್ಲಿದ್ದ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರನ್ನು ಬಿಟ್ಟರೆ ಉಳಿದವರೆಲ್ಲ ಆ ಆಹ್ವಾನವನ್ನು ಸ್ವೀಕರಿಸಿದರು. ಪಾಕ್ ಪ್ರಧಾನಿ ನವಾಝ್ ಶರೀಫ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾದರು. ಆ ಬಳಿಕ ನಾಲ್ಕೂವರೆ ವರ್ಷಗಳು ಉರುಳಿ ಹೋಗಿವೆ. ಬಿಜೆಪಿಯ ಅಧ್ಯಕ್ಷರಾಗಿದ್ದ ರಾಜನಾಥ್ ಸಿಂಗ್ ಅವರು 2013ರಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. `ಚೀನಾ ಬಿಡಿ, ಪುಟ್ಟ ಮಾಲ್ದೀವ್ಸ್ ಅನ್ನು ನಿಭಾಯಿಸಲೂ ಭಾರತಕ್ಕೆ ಸಾಧ್ಯವಾಗುತ್ತಿಲ್ಲ' ಎಂದು ದೂರಿದ್ದರು. ಈಗ ಅವರ ಅಭಿಪ್ರಾಯ ಏನಿರಬಹುದು? ಈಗ ಭಾರತ ಮತ್ತು ಮಾಲ್ದೀವ್ಸ್‍ಗಳ ನಡುವಿನ ಸಂಬಂಧ ಎಷ್ಟು ದುರ್ಬಲ ಆಗಿದೆಯೆಂದರೆ, ಮಾಲ್ದೀವ್ಸ್ ಬಹುತೇಕ ಚೀನಾದ ವಸಾಹತಿನಂತಾಗಿ ಬಿಟ್ಟಿದೆ. ಬಂದರು ಅಭಿವೃದ್ಧಿಯಲ್ಲಿ ಭಾರತದ ಹೂಡಿಕೆಯನ್ನು ರದ್ದು ಪಡಿಸುವಷ್ಟರ ಮಟ್ಟಿಗೆ ಸಂಬಂಧ ಹಳಸಿ ಹೋಗಿದೆ. 2016ರಲ್ಲಿ ಮಾಲ್ದೀವ್ಸ್ ಅಧ್ಯಕ್ಷ ಯಮೀನ್ ಅಬ್ದುಲ್ ಗಯ್ಯೂಂ ಭಾರತಕ್ಕೆ ಭೇಟಿ ಕೊಟ್ಟದ್ದು ಮತ್ತು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮಾಲ್ದೀವ್ಸ್‍ಗೆ ಭೇಟಿ ಕೊಟ್ಟದ್ದು ನಡೆಯಿತಾದರೂ ಅದೊಂದು ಪ್ರವಾಸ ಎಂಬುದಕ್ಕಿಂತ ಹೆಚ್ಚಿಗೇನೂ ಮಹತ್ವ ಪಡೆಯದಾಯಿತು.

     ನೇಪಾಳ ಮತ್ತು ಶ್ರೀಲಂಕಾಗಳು ಭಾರತದ ಪಾಲಿಗೆ ಅತಿ ಮಹತ್ವದ ಎರಡು ನೆರೆ ರಾಷ್ಟ್ರಗಳು. ಇನ್ನೊಂದು ಭೂತಾನ್. ಈ ಮೂರೂ ರಾಷ್ಟ್ರಗಳ ಮೇಲೆ ಪ್ರಾಬಲ್ಯ ಸ್ಥಾಪಿಸಲು ಭಾರತ ಮತ್ತು ಚೀನಾ ಬಹು ಹಿಂದಿನಿಂದಲೂ ಶ್ರಮ ನಡೆಸುತ್ತಲೇ ಬಂದಿದೆ. 1980ರಲ್ಲಿ ಭಾರತದ ಶಾಂತಿ ಪಾಲನಾ ಪಡೆಯನ್ನು ರಾಜೀವ್ ಗಾಂಧಿಯವರು ಲಂಕಾಕ್ಕೆ ಕಳುಹಿಸಿದುದಕ್ಕೆ ಈ ಪೈಪೋಟಿಯೇ ಕಾರಣ. ಎಲ್‍ಟಿಟಿಇಯ ನೆಪದಲ್ಲಿ ಚೀನಾದ ಸೇನೆಯು ಶ್ರೀಲಂಕಾವನ್ನು ಪ್ರವೇಶಿಸಿದರೆ, ಅದರಿಂದ ಲಂಕಾವು ಭಾರತಕ್ಕೆ ಇನ್ನೊಂದು ಮಗ್ಗುಲು ಮುಳ್ಳಾಗಿ ಕಾಡಲಿದೆ ಎಂಬ ಭಯ ರಾಜೀವ್‍ರನ್ನು ಕಾಡಿತ್ತು. ಮನ್‍ಮೋಹನ್ ಸಿಂಗ್ ಅವಧಿಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಎನ್ನಬಹುದಾದ ಸಂಬಂಧ ಇತ್ತಾದರೂ ಮೋದಿಯವರ ಅವಧಿಯಲ್ಲಿ ಆ ಸಂಬಂಧವೂ ಹಳಸಿದೆ. ಕಳೆದ ಚುನಾವಣೆಯ ಬಳಿಕವಂತೂ ಶ್ರೀಲಂಕಾದಲ್ಲಿ ಚೀನಾ ಪರ ವಾತಾವರಣವಿದೆ. ಅಲ್ಲಿನ ಅಧ್ಯಕ್ಷ ಸಿರಿಸೇನಾ ಅವರ ಚೀನಾಪ್ರೇಮ ಬಹುತೇಕ ಬಹಿರಂಗವಾಗಿಯೇ ಇದೆ. ಕಳೆದ ಚುನಾವಣೆಯಲ್ಲಿ ಭಾರತದ ಗುಪ್ತಚರ ಏಜೆನ್ಸಿಯ (RAW) ವಿರುದ್ಧ ಚೀನಾ ಆಕ್ಷೇಪ ವ್ಯಕ್ತಪಡಿಸಿತ್ತು ಎಂದು ವರದಿಯಾಗಿತ್ತು. ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿದ ಆರೋಪವನ್ನು ಅದು ಹೊರಿಸಿತ್ತಲ್ಲದೇ RAWದ ಕಚೇರಿಯನ್ನು ತೆರವುಗೊಳಿಸುವಂತೆ ಅದರ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು ಎಂಬ ವರದಿಗಳಿದ್ದುವು. 2015ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಶ್ರೀಲಂಕಾಕ್ಕೆ ಭೇಟಿ ನೀಡಿದ್ದರೂ ಮತ್ತು ಅಧ್ಯಕ್ಷ ಸಿರಿಸೇನಾ ಭಾರತವನ್ನು ಸಂದರ್ಶಿಸಿದ್ದರೂ ಶ್ರೀಲಂಕಾದಲ್ಲಿ ಚೀನಾದ ಬಹುಕೋಟಿ ಹೂಡಿಕೆಯನ್ನು ತಪ್ಪಿಸಲು ಈ ಇಬ್ಬರಿಗೂ ಸಾಧ್ಯವಾಗಿಲ್ಲ. ವಲಯದ ಸ್ಥಿರತೆಯ ದೃಷ್ಟಿಯಿಂದ ಭಾರತಕ್ಕೆ ಶ್ರೀಲಂಕಾ ಅತಿ ಮುಖ್ಯ ದೇಶ. 2013ರಲ್ಲಿ ಬಿಜೆಪಿ ಬಿಡುಗಡೆಗೊಳಿಸಿದ ಪ್ರಣಾಳಿಕೆಯೂ ಇದನ್ನೇ ಹೇಳುತ್ತದೆ. ಆದರೆ,

    ನಾಲ್ಕೂವರೆ ವರ್ಷ ಗಳು ಕಳೆದ ಬಳಿಕವೂ ಮೋದಿಯವರಿಂದ ವಿಶೇಷವಾದುದೇನನ್ನೂ ಮಾಡಲು ಸಾಧ್ಯವಾಗಿಲ್ಲವೆಂದರೆ ಏನೆನ್ನಬೇಕು? ಮೋದಿಯವರು ಭೇಟಿ ನೀಡಿ ಸಾಧಿಸಲಾಗದ್ದನ್ನು ಚೀನಾವು ಭೇಟಿ ನೀಡದೆಯೇ ಮತ್ತು ಬಹಿರಂಗ ಹೇಳಿಕೆಗಳನ್ನು ಕೊಡದೆಯೇ ಸಾಧಿಸುತ್ತಿದೆ. ಇದನ್ನು ನೇಪಾಳಕ್ಕೆ ಸಂಬಂಧಿಸಿಯೂ ಹೇಳಬಹುದಾಗಿದೆ. ಭಾರತ ಮತ್ತು ಚೀನಾಕ್ಕೆ ಹೋಲಿಸಿ ನೋಡುವುದಾದರೆ ಎಲ್ಲ ರೀತಿಯಲ್ಲೂ ನೇಪಾಳಕ್ಕೆ ಅಚ್ಚು-ಮೆಚ್ಚಿನ ರಾಷ್ಟ್ರವಾಗಬೇಕಾದದ್ದು ಭಾರತವೇ. ಭಾರತೀಯ ಸಂಸ್ಕೃತಿ ನೇಪಾಳದಲ್ಲೂ ಇದೆ. ಹಿಂದೂಗಳೇ ಅಧಿಕವಿರುವ ರಾಷ್ಟ್ರ ನೇಪಾಳ. ಧಾರಾಳ ದೇವಾಲಯಗಳು ಇರುವುದೂ ನೇಪಾಳದಲ್ಲೇ. ಆದರೆ, ರಾಜಾಳ್ವಿಕೆ ಪತನಗೊಂಡ ಬಳಿಕದ ನೇಪಾಳವು ಭಾರತ ಸ್ನೇಹಿಯಾಗಿ ಉಳಿದಿಲ್ಲ. 2014ರಲ್ಲಿ ಮೋದಿಯವರು ನೇಪಾಳಕ್ಕೆ ಭೇಟಿ ನೀಡಿದಾಗ ಅದಕ್ಕೆ ಹಲವು ಅರ್ಥಗಳನ್ನು ಕಲ್ಪಿಸಲಾಗಿತ್ತು. ಪರಸ್ಪರ ಸಂಬಂಧ ಸುಧಾರಣೆಯಲ್ಲಿ ಮಹತ್ವದ ಹೆಜ್ಜೆ ಎಂದು ಭೇಟಿಯನ್ನು ಕೊಂಡಾಡಲಾಗಿತ್ತು. ಆದರೆ ಆ ಬಳಿಕ ಪರಿಸ್ಥಿತಿ ಎಷ್ಟು ಕೆಟ್ಟಿತೆಂದರೆ, ಮನ್‍ಮೋಹನ್ ಸಿಂಗ್ ಸರಕಾರವೇ ಇದಕ್ಕಿಂತ ಉತ್ತಮ ಎಂದು ಹೇಳುವಂತಾಯಿತು. ಮುಖ್ಯವಾಗಿ,

    ಸಂವಿಧಾನ ರಚನೆಯ ವಿಷಯದಲ್ಲಿ ನೇಪಾಳದಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳಲ್ಲಿ ಭಾರತ ಪರೋಕ್ಷವಾಗಿ ಮಧ್ಯ ಪ್ರವೇಶಿಸಿದುದು ಸಂಬಂಧ ಸುಧಾರಣೆಗೆ ಬಹುದೊಡ್ಡ ತೊಡಕಾಗಿ ಪರಿಣಮಿಸಿತು ಎಂದೇ ಹೇಳಬೇಕು. ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ತಾಗಿಕೊಂಡಿರುವ ನೇಪಾಳದ ಭಾಗಗಳಲ್ಲಿ ಮಧೇಸಿ ಮತ್ತು ತಾರು ಎಂಬ ಸಮುದಾಯಗಳು ವಾಸಿಸುತ್ತಿದ್ದು ಹೊಸ ಸಂವಿಧಾನದ ಬಗ್ಗೆ ಈ ಸಮುದಾಯಕ್ಕೆ ತಕರಾರುಗಳಿದ್ದುವು. ಈ ದಾರಿಯಾಗಿ ಭಾರತದಿಂದ ಸರಕುಗಳು ನೇಪಾಳಕ್ಕೆ ರಸ್ತೆ ಮೂಲಕ ಸಾಗಾಟವಾಗುತ್ತಿದ್ದು, ಮಧೇಸಿಗಳು ಈ ದಾರಿಯನ್ನು ಮುಚ್ಚಿದರು. ಹೀಗೆ ನೇಪಾಳದಲ್ಲಿ ದಿಢೀರ್ ಆಹಾರ ವಸ್ತುಗಳ ಕೊರತೆ ಉಂಟಾಯಿತು. ಮಧೇಸಿಗಳನ್ನು ಮುಂದಿಟ್ಟುಕೊಂಡು ಭಾರತವೇ ಹೆಣೆದ ತಂತ್ರ ಇದು ಎಂಬುದು ನೇಪಾಳದ ಅನುಮಾನ. ಅದು ಈ ತಂತ್ರಕ್ಕೆ ಪ್ರತಿ ತಂತ್ರ ಹೆಣೆಯಿತು. ಚೀನಾದಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವ ಹೊಸ ದಾರಿಯನ್ನು ಕಂಡುಕೊಂಡಿತು. ಮಾತ್ರವಲ್ಲ, ಭಾರತದ ವಿರುದ್ಧ ವಿಶ್ವಸಂಸ್ಥೆಗೂ ದೂರು ನೀಡಿತು. ನಿಜವಾಗಿ, ನೇಪಾಳದ ಸಂವಿಧಾನ ವಿವಾದವನ್ನು ಭಾರತ ಮಧೇಸಿಗಳ ಕಣ್ಣಲ್ಲಿ ನೋಡಿದುದು ಬಹುದೊಡ್ಡ ತಪ್ಪಾಗಿತ್ತು. ಮಧೇಸಿಯೇ ನೇಪಾಳದ ಒಂದು ಭಾಗವೇ ಹೊರತು ಮಧೇಸಿಯೇ ನೇಪಾಳವಲ್ಲ. ಇದರ ಜೊತೆಗೆ ಭೂತಾನ್, ಪಾಕಿಸ್ತಾನ್ ಮತ್ತು ಚೀನಾಗಳನ್ನು ತೆಗೆದುಕೊಂಡರೆ, ಮೋದಿ ಸರಕಾರದ ವಿದೇಶಾಂಗ ನೀತಿ ಎಷ್ಟು ನಿರಾಶಜನಕವಾದುದು ಎಂಬುದು ಸ್ಪಷ್ಟವಾಗುತ್ತದೆ. ಅಷ್ಟಕ್ಕೂ,

    ಪಾಕ್‍ನೊಂದಿಗೆ ಉತ್ತಮ ಸಂಬಂಧ ಬೆಳೆಸುವುದಕ್ಕೆ ನರೇಂದ್ರ ಮೋದಿಯವರಿಗೆ ಇರುವಷ್ಟು ಅವಕಾಶ ಮನ್‍ಮೋಹನ್ ಸಿಂಗ್‍ರಿಗೆ ಇದ್ದಿರಲಿಲ್ಲ. ಪಾಕ್‍ನ ವಿಷಯ ದಲ್ಲಿ ಮನ್‍ಮೋಹನ್ ಸಿಂಗ್‍ರ ಧೋರಣೆಯನ್ನು ಲವ್ ಲೆಟರ್ ಧೋರಣೆ ಎಂದು ಮೋದಿಯವರು ಲೇವಡಿ ಮಾಡಿದ್ದರು. ಪಾಕ್‍ಗೆ ಕಟು ಭಾಷೆ ಮಾತ್ರ ಅರ್ಥವಾಗುತ್ತದೆ ಎಂಬುದು ಮೋದಿ ಮತ್ತು ಅವರ ಪಕ್ಷದ ನಿಲುವಾಗಿತ್ತು. ಮೋದಿಯವರ ಪ್ರತಿಜ್ಞಾ ಸ್ವೀಕಾರದ ಸಮಯದಲ್ಲಿ ನವಾಝ್ ಶರೀಫ್‍ರು ಉಪಸ್ಥಿತರಿದ್ದುದು ಮತ್ತು ಮೋದಿಯವರು ಪಾಕ್‍ಗೆ ದಿಢೀರ್ ಭೇಟಿ ಕೊಟ್ಟದ್ದು ಏನೋ ಬದಲಾವಣೆಯಾಗುತ್ತದೆ ಎಂಬ ನಿರೀಕ್ಷೆಗೆ ಇಂಬು ನೀಡಿತ್ತು. ಆದರೆ,

    ಅದರಾಚೆಗೆ ಯಾವ ಸ್ವಾಗತಾರ್ಹ ಬೆಳವಣಿಗೆಯೂ ನಡೆದಿಲ್ಲ. ಕಾಶ್ಮೀರವಂತೂ ಉರಿಯುತ್ತಿದೆ. ಪ್ರತ್ಯೇಕತಾವಾದ ಅತ್ಯಂತ ಚರಮಸೀಮೆಗೆ ಮುಟ್ಟಿದ್ದ 80-90ರ ದಶಕದ ಸ್ಥಿತಿಗೆ ಮತ್ತೆ ಕಾಶ್ಮೀರ ಮರಳಿ ಮುಖ ಮಾಡಿ ನಿಂತಿದೆ. ನವಾಝ್ ಶರೀಫ್ ಹೋಗಿ ಇಮ್ರಾನ್ ಖಾನ್ ಬಂದರೂ ಭಾರತದ ನಿಲುವು ಬದಲಾಗಿಲ್ಲ. ಬಹುಶಃ ಸಂಬಂಧ ಸುಧಾರಣೆಗೆ ಒತ್ತು ನೀಡುವುದಕ್ಕಿಂತ ಹಳಸು ವುದಕ್ಕೆ ಒತ್ತು ನೀಡುವುದೇ ರಾಜಕೀಯವಾಗಿ ಹೆಚ್ಚು ಲಾಭದಾಯಕ ಎಂದು ಬಿಜೆಪಿ ತೀರ್ಮಾನಿಸಿದೆಯೇನೋ ಎಂದನಿಸುತ್ತದೆ. ಇನ್ನಾರು ತಿಂಗಳುಗಳಲ್ಲಿ ಪಾರ್ಲಿಮೆಂಟ್ ಚುನಾವಣೆ ನಡೆಯಲಿದೆ. ಈ ಚುನಾವಣೆಗೆ ಶತ್ರು ಪಾಕಿಸ್ತಾನದ ಅಗತ್ಯವಿದೆಯೇ ಹೊರತು ಮಿತ್ರ ಪಾಕಿಸ್ತಾನದ್ದಲ್ಲ. ಕಳೆದ ಚುನಾವಣೆಯಲ್ಲಿ ಪಾಕಿಸ್ತಾನವೂ ಒಂದು ಇಶ್ಯೂ ಆಗಿತ್ತು ಬಿಜೆಪಿಗೆ. ಪಾಕಿಸ್ತಾನದೊಂದಿಗೆ ಮಾತು ಕತೆ ನಡೆಸುವ ಮೂಲಕ ಆ ಅವಕಾಶವನ್ನು ಕಳೆದುಕೊಳ್ಳಲು ಬಿಜೆಪಿ ಸಿದ್ಧವಾಗಲಾರದು. ಇಮ್ರಾನ್ ಖಾನ್ ಮಾತುಕತೆಗೆ ಮತ್ತೆ ಮತ್ತೆ ಆಹ್ವಾನ ನೀಡುತ್ತಿದ್ದರೂ ಮೋದಿಯವರು ಅದನ್ನು ನಿರಾಕರಿಸುತ್ತಿರುವುದಕ್ಕೆ ರಾಷ್ಟ್ರೀಯ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಕಾರಣವಾಗಿದೆಯೆಂದು ಅನಿಸುತ್ತದೆ. ಕಳೆದ 6 ದಶಕಗಳಿಂದ ಭಾರತ ಮತ್ತು ಪಾಕ್‍ಗಳು ಬಂದೂಕಿನಿಂದ ಮಾತಾಡುತ್ತಲೇ ಇವೆ. ಆದರೆ ಫಲ ಶೂನ್ಯ. ಆದ್ದರಿಂದ ಮಾತುಕತೆಯ ಹೊರತು ಭಾರತ-ಪಾಕ್‍ಗಳ ನಡುವಿನ ಸಮಸ್ಯೆ ಬಗೆಹರಿಯಲಾರದು. ಇಮ್ರಾನ್ ಖಾನ್ ಮಾತಿನ ಮೇಜಿಗೆ ಹೊಸಬ. ಈ ಹಿಂದಿನವರ ಕೃತ್ಯಕ್ಕೆ ಅವರು ಹೊಣೆಗಾರನೂ ಅಲ್ಲ. ಈ ಹಿನ್ನೆಲೆಯಲ್ಲಿ ಅವರ ಮಾತು ಕತೆಯ ಆಹ್ವಾನಕ್ಕೆ ಅರ್ಥ ಇದೆ. ಒಂದು ವೇಳೆ, ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಇರುತ್ತಿದ್ದರೆ ಇಮ್ರಾನ್ ಖಾನ್‍ರ ಆಹ್ವಾನವನ್ನು ಮೋದಿಯವರು ಖಂಡಿತ ಸ್ವೀಕರಿಸುತ್ತಿದ್ದರು. ಒಂದು ರೀತಿಯಲ್ಲಿ,

The absence of statecraft has never been felt so acutely as today ಎಂಬ ಬಿಜೆಪಿಯ 2014ರ ಪ್ರಣಾಳಿಕೆಯು ಇವತ್ತಿಗೆ ಬಹಳ ಚೆನ್ನಾಗಿಯೇ ಒಪ್ಪುತ್ತಿದೆ.