Monday, November 26, 2012

ಇರ್ಶಾದ್ ಅಲಿಯ ಪತ್ರವೂ ನಾಪತ್ತೆಯಾಗುವ ಮೌಲ್ವಿಯೋ

2008. ದೆಹಲಿಯ ಬಟ್ಲಾ ಹೌಸ್‍ನಲ್ಲಿ ದೆಹಲಿ ಪೊಲೀಸ್ ಇಲಾಖೆಯ ವಿಶೇಷ ದಳದಿಂದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆ ನಡೆಯುತ್ತದೆ. ಇಬ್ಬರು ಶಂಕಿತ ಯುವಕರು ಮತ್ತು ಓರ್ವ ಪೊಲೀಸಧಿಕಾರಿ ಕಾರ್ಯಾಚರಣೆಯಲ್ಲಿ ಸಾವಿಗೀಡಾಗುತ್ತಾರೆ. ಸಾವಿಗೀಡಾದವರಲ್ಲಿ ದೆಹಲಿಯ ಜಾಮಿಯ ವಿಶ್ವವಿದ್ಯಾಲಯದ ವಿದ್ಯಾರ್ಥಿಯೂ ಇದ್ದ. ಆ ಕಾರ್ಯಾಚರಣೆಯ ಬಗ್ಗೆ ಅನೇಕರು ಅನುಮಾನ ವ್ಯಕ್ತಪಡಿಸುತ್ತಾರೆ. ಅದೊಂದು ನಕಲಿ ಕಾರ್ಯಾಚರಣೆಯೆಂದು ದಿಗ್ವಿಜಯ್ ಸಿಂಗ್ ಆರೋಪಿಸುತ್ತಾರೆ. ಜಾಮಿಯಾ ವಿಶ್ವವಿದ್ಯಾಲಯದಲ್ಲೂ ಈ ಕುರಿತಂತೆ ಸಾಕಷ್ಟು ಚರ್ಚೆ, ಸಮಾಲೋಚನೆಗಳು ನಡೆಯುತ್ತವೆ. ಈ ಮಧ್ಯೆ ಪೊಲೀಸ್ ಮೂಲಗಳ ಹೆಸರನ್ನಿಟ್ಟುಕೊಂಡು ಮುಸ್ಲಿಮ್ ಉಗ್ರವಾದದ ಕತೆಗಳು ದಿನಂಪ್ರತಿ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತವೆ. ದೆಹಲಿಯ ಆಸುಪಾಸಿನಿಂದ ಮುಸ್ಲಿಮ್ ಯುವಕರನ್ನು ಬಂಧಿಸಿರುವ ಬಗ್ಗೆ, ಅವರಿಗೂ ಪಾಕ್ ಮೂಲದ ಹುಜಿಯೋ ಲಷ್ಕರೋ, ಜೈಶೋ ಅಥವಾ ಇನ್ನಾವುದಾದರೂ ಉಗ್ರವಾದಿ ಸಂಘಟನೆಗಳಿಗೂ ಇರುವ ಸಂಬಂಧದ ಬಗ್ಗೆ ವರದಿಗಳು ಬರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಜಾಮಿಯಾ ಉಪಾಧ್ಯಾಯರ ಏಕತಾ ಸಂಘ(Jamia Teachers Solidarity Association - JTSA)ವನ್ನು ಸ್ಥಾಪಿಸಲಾಗುತ್ತದಲ್ಲದೇ ಭಯೋತ್ಪಾದನೆಯ ಆರೋಪದಲ್ಲಿ ಬಂಧನಕ್ಕೀಡಾಗುತ್ತಿರುವವರ ಬಗ್ಗೆ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗುತ್ತದೆ.
  ಜಸ್ಟಿಸ್ ರಾಜಿಂದರ್ ಸಾಚಾರ್
  ಅರುಂಧತಿ ರಾಯ್
  ಜವಾಹರ್ ರೋಜಾ
  ಮನೀಶ್ ಸೇಥಿ..
ಮುಂತಾದ 8 ಮಂದಿ ಪ್ರಭಾವಿಗಳ ತಂಡ 4 ವರ್ಷಗಳ ಕಾಲ ಸಮೀಕ್ಷೆ ನಡೆಸಿ 2012 ಸೆ. 18ರಂದು ದೆಹಲಿಯಲ್ಲಿ ವರದಿಯನ್ನು ಬಿಡುಗಡೆಗೊಳಿಸುತ್ತದೆ. 'Framed, Damned, Acquitted - 'Dossiers of a Very Special Cell ' ಎಂಬ 200 ಪುಟಗಳ ಈ ವರದಿಯನ್ನು ಬಿಡುಗಡೆಗೊಳಿಸುತ್ತಾ ಅರುಂಧತಿ ರಾಯ್ ಹೀಗೆ ಹೇಳುತ್ತಾರೆ:
  ಬಾಬರೀ ಮಸೀದಿಯ ಬೀಗವನ್ನು ತೆರೆದ ಈ ದೇಶದ ವ್ಯವಸ್ಥೆಯು ಆ ಬಳಿಕ ಭಾರತದ ಮಾರುಕಟ್ಟೆಯನ್ನು ವಿದೇಶಿ ಕಂಪೆನಿಗಳಿಗೆ ಮುಕ್ತವಾಗಿಸಿಬಿಟ್ಟಿತು. ಮಾತ್ರವಲ್ಲ, ಅಮೇರಿಕ ಮತ್ತು ಇಸ್ರೇಲ್‍ನ ಜೊತೆ ಆಪ್ತ ಸಂಬಂಧವನ್ನೂ ಬೆಳೆಸಿಕೊಂಡಿತು. ನಿಜವಾಗಿ ಈ ದೇಶವನ್ನು ಮಿಲಿಟರೀಕರಣಗೊಳಿಸುವುದಕ್ಕಾಗಿ ಇಲ್ಲಿನ ವ್ಯವಸ್ಥೆಯು ಇಸ್ಲಾಮಿಕ್ ಟೆರರಿಸಮ್ ಮತ್ತು ಮಾವೋಯಿಸ್ಟ್ ಟೆರರಿಸಮ್ ಎಂಬ ಗುಮ್ಮವನ್ನು ಸೃಷ್ಟಿಸಿದೆ..’
  ಹಾಗಂತ, ಅರುಂಧತಿ ರಾಯ್‍ರ ಆರೋಪವನ್ನು ಅಲ್ಲಗಳೆಯುವುದಾದರೂ ಹೇಗೆ?
ಉಪಾಧ್ಯಾಯರ ಸಂಘ (JTSA) ಬಿಡುಗಡೆಗೊಳಿಸಿದ 200 ಪುಟಗಳ ವರದಿಯಲ್ಲಿ, ಭಯೋತ್ಪಾದನೆಯ ಆರೋಪ ಹೊತ್ತು ಕೆಲವಾರು ವರ್ಷಗಳನ್ನು ಜೈಲಲ್ಲಿ ಕಳೆದು ನಿರಪರಾಧಿಯೆಂದು ಬಿಡುಗಡೆಗೊಂಡ 16 ಮುಸ್ಲಿಮ್ ಯುವಕರ ದಾರುಣ ವಿವರಗಳಿವೆ. 14 ವರ್ಷಗಳ ಕಾಲ ತಿಹಾರ್ ಜೈಲಲ್ಲಿದ್ದು, ಬಳಿಕ ಅಮಾಯಕನೆಂದು ಬಿಡುಗಡೆಗೊಂಡ ಅಮೀರ್ ಅಲಿ, 5 ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡ ಇರ್ಷಾದ್ ಅಲಿ.. ಸಹಿತ ಎಲ್ಲರದ್ದೂ ಒಂದೊಂದು ಕತೆ-ವ್ಯಥೆ. ಇರ್ಷಾದ್ ಅಲಿಯಂತೂ ದೆಹಲಿಯ ವಿಶೇಷ ಪೊಲೀಸ್ ದಳಕ್ಕೆ ಮಾಹಿತಿದಾರನಾಗಿದ್ದವ. ಆದರೆ ಪೊಲೀಸರು ವಹಿಸಿದ ಕೆಲಸವೊಂದನ್ನು ನಿರ್ವಹಿಸಲು ಒಪ್ಪದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಭಯೋತ್ಪಾದನೆಯ ಆರೋಪದಲ್ಲಿ ಆತನನ್ನು 2006ರಲ್ಲಿ ಬಂಧಿಸಿ ತಿಹಾರ್ ಜೈಲಿನಲ್ಲಿಟ್ಟಿದ್ದರು. ಆತ ಅಲ್ಲಿಂದಲೇ ಪ್ರಧಾನಿ ಮನ್ ಮೋಹನ್ ಸಿಂಗ್‍ರಿಗೆ ಪತ್ರ ಬರೆದಿದ್ದ. ಆ ಪತ್ರದ ವಿವರಣೆಯೂ JTSA  ವರದಿಯಲ್ಲಿದೆ.
‘..ಭಯೋತ್ಪಾದಕರ ಕುರಿತಂತೆ ದೆಹಲಿ ಪೆÇಲೀಸರು ಏನೇನು  ಹೇಳುತ್ತಿರುತ್ತಾರೋ ಅವೆಲ್ಲ ಸತ್ಯವಲ್ಲ. ನಿಜವಾಗಿ ಭಯೋತ್ಪಾದಕರನ್ನು ಸೃಷ್ಟಿಸುವುದು ಪೊಲೀಸರೇ. ಭಡ್ತಿಗೆ ಮತ್ತು ಪುರಸ್ಕಾರಕ್ಕಾಗಿ ಅವರೇ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ. ಇಸ್ಲಾಮಿನ ಬಗ್ಗೆ ಒಂದಷ್ಟು ತಿಳಿದುಕೊಂಡ ಯುವಕರನ್ನು ಪೊಲೀಸರು ತಮ್ಮ ಮಾಹಿತಿದಾರರನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಾರಲ್ಲದೇ ಅವರಿಗೆ ಇಸ್ಲಾಮೀ  ಚಿಹ್ನೆಯಾದ ಗಡ್ಡ ಮತ್ತು ಡ್ರೆಸ್ ತೊಡುವಂತೆ ಆದೇಶಿಸುತ್ತಾರೆ. ಅದಕ್ಕಾಗಿ ದುಡ್ಡೂ ಕೊಡುತ್ತಾರೆ. ಮಾತ್ರವಲ್ಲ, ಮೌಲ್ವಿ ಎಂಬ ಗುರುತನ್ನು ಹಚ್ಚಿ ಬಾಡಿಗೆ ಮನೆಗಳಲ್ಲಿ ಇರಿಸುತ್ತಾರೆ. ಈ ನಕಲಿ ಮೌಲ್ವಿಗಳು ನಮಾಝ್‍ಗಾಗಿ ಮಸೀದಿಗೆ ಹೋಗುವುದು, ಭಾರೀ ಆಧ್ಯಾತ್ಮಿಕತೆಯನ್ನು ಪ್ರದರ್ಶಿಸುವುದೆಲ್ಲ ನಡೆಯುತ್ತಿರುತ್ತದೆ. ಕ್ರಮೇಣ ಸುತ್ತಮುತ್ತಲ ಜನರ ಸ್ನೇಹ ಬೆಳೆಸುತ್ತಾರೆ. ಇಸ್ಲಾಮಿಗೆ ತ್ಯಾಗ ಮನೋಭಾವದ ಯುವಕರ ಅಗತ್ಯ ಎಷ್ಟಿದೆ ಎಂಬುದನ್ನು ಮುಸ್ಲಿಮರ ಕರುಣಾಜನಕ ಕತೆಗಳನ್ನು ಹೇಳುತ್ತಾ ಮನವರಿಕೆ ಮಾಡಿಸುತ್ತಾರೆ. ಯುವಕರು ಆತನ ಮಾತಿಗೆ ಮರುಳಾಗಿರುವರೆಂದು ಖಚಿತವಾದ ಬಳಿಕ ಆತ ತಾನು ಲಷ್ಕರೋ, ಹುಜಿಯೋ ಅಥವಾ ಇನ್ನಾವುದೋ ಸಂಘಟನೆಯ ಕಮಾಂಡರ್ ಎಂದು ಪರಿಚಯಿಸಿಕೊಳ್ಳುತ್ತಾನೆ. ಭಯೋ ತ್ಪಾದನೆಯ ಯೋಜನೆಗಳನ್ನು ಯುವಕರ ಜೊತೆ ಸೇರಿಕೊಂಡು ರೂಪಿಸುತ್ತಾನೆ. ಬಳಿಕ ಪೊಲೀಸರೇ ನೀಡುವ ಕೆಲವೊಂದು ಶಸ್ತ್ರಾಸ್ತ್ರಗಳನ್ನು ಗುಂಪಿಗೆ ವಿತರಿಸುತ್ತಾನೆ. ಸಣ್ಣ ಮಟ್ಟಿನ ತರಬೇತಿಯನ್ನೂ ನೀಡುತ್ತಾನೆ. ಆ ಬಳಿಕ ಆ ಯುವಕರ ಪ್ರತಿ ಚಲನ ವಲನಗಳನ್ನೂ ಪೊಲೀಸರಿಗೆ ಒಪ್ಪಿಸುತ್ತಿರುತ್ತಾನೆ. ಅಂತಿಮವಾಗಿ ಉಗ್ರ ಕೃತ್ಯಕ್ಕೆ ಅವರನ್ನು ಕಳುಹಿಸಿ, ಅದರ ಮಾಹಿತಿಯನ್ನು ಪೊಲೀಸರಿಗೆ ನೀಡಿ ಪೊಲೀಸರು ಬಂಧಿಸುವಂತೆ ನೋಡಿಕೊಳ್ಳುತ್ತಾನೆ. ಮಾತ್ರವಲ್ಲ, ಆತ ಅಲ್ಲಿಂದ ನಾಪತ್ತೆಯಾಗಿ ಇನ್ನೊಂದು ಪ್ರದೇಶಕ್ಕೆ ಹೋಗುತ್ತಾನಲ್ಲದೇ, ಪೊಲೀಸರ ನಿರ್ದೇಶನದಂತೆ ಬೇರೊಂದು ಕಾರ್ಯಾಚರಣೆಯಲ್ಲಿ ತೊಡಗುತ್ತಾನೆ..'
  ಇರ್ಷಾದ್ ಅಲಿ ಬರೆದಿರುವ ಈ ಪತ್ರ ಇನ್ನೂ ದೀರ್ಘವಿದೆ. ಭದ್ರತಾ ಸಂಸ್ಥೆಗಳು ದೇಶವನ್ನು ರಕ್ಷಿಸುತ್ತಿಲ್ಲ, ಬದಲು ಅಭದ್ರತೆಗೆ ತಳ್ಳುತ್ತಿವೆ, ಆದ್ದರಿಂದ ಈ ಕುರಿತಂತೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಪ್ರಧಾನಿ ಮನಮೋಹನ್ ಸಿಂಗ್‍ರಿಗೆ ಬರೆದ ಪತ್ರದಲ್ಲಿ ಆತ ಮನವಿ ಮಾಡಿಕೊಂಡಿದ್ದಾನೆ.
ಇರ್ಷಾದ್ ಅಲಿ
  ಅಂದಹಾಗೆ, ಭಯೋತ್ಪಾದನಾ ಯೋಜನೆಯನ್ನು ಬೇಧಿಸಿದ್ದಾಗಿ ಹೇಳಿಕೊಳ್ಳುವ ಪೊಲೀಸರು, 'ಪ್ರಮುಖ ರೂವಾರಿ ಮೌಲ್ವಿ ನಾಪತ್ತೆ' ಎಂದು ಘೋಷಿಸುವುದಿದೆ. 3 ವರ್ಷಗಳ ಹಿಂದೆ ದೆಹಲಿ ಪೊಲೀಸರು ಮಂಗಳೂರು ಸುತ್ತಮುತ್ತ ದಾಳಿ ನಡೆಸಿ ಮೊರ್ನಾಲ್ಕು ಮಂದಿಯನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದಾಗಲೂ, 'ಮೌಲ್ವಿ ನಾಪತ್ತೆಯಾಗಿರುವುದನ್ನು' ಮಾಧ್ಯಮಗಳಲ್ಲಿ ತೇಲಿಸಿ ಬಿಟ್ಟಿದ್ದರು. ಬಹುಶಃ ಇರ್ಷಾದ್ ಅಲಿಯ ಪತ್ರ ಒಂದಷ್ಟು ನಂಬಿಕೆಗೆ ಅರ್ಹ ಅನ್ನಿಸುವುದು ಈ ಕಾರಣದಿಂದಲೇ. ನಿಜವಾಗಿ, ಭಯೋತ್ಪಾದನೆಯ ಆರೋಪ ಹೊತ್ತುಕೊಂಡು ಬಂಧನಕ್ಕೀಡಾಗುವುದಕ್ಕೂ ಕಳ್ಳತನದ ಆರೋಪಕ್ಕೂ ತುಂಬಾ ವ್ಯತ್ಯಾಸ ಇದೆ. ಭಯೋತ್ಪಾದನೆಯ ಕುರಿತಂತೆ ಮಾಧ್ಯಮಗಳು ಈ ದೇಶದಲ್ಲಿ ಎಂಥ ಅಪಾಯಕಾರಿ ವಾತಾವರಣವನ್ನು ನಿರ್ಮಿಸಿ ಬಿಟ್ಟಿವೆಯೆಂದರೆ, ಆರೋಪಗಳ ಬಗ್ಗೆ ಅನುಮಾನಿಸುವುದಕ್ಕೂ ಭಯಪಡುವಷ್ಟು. ಬಂಧಿತ ಯುವಕರ ಅಮಾಯಕತೆಯ ಬಗ್ಗೆ ಯಾರಾದರೂ ಮಾತಾಡಿಬಿಟ್ಟರೆ ಭಯೋತ್ಪಾದಕರ ಬೆಂಬಲಿಗರು ಎಂಬ ಹಣೆಪಟ್ಟಿಯನ್ನು ಅವು ಹಚ್ಚಿ ಬಿಡುತ್ತವೆ. ಆದ್ದರಿಂದಲೇ, ಕಸಬ್‍ನನ್ನು ಗಲ್ಲಿಗೇರಿಸಿದ ಸುದ್ದಿಯ ಪಕ್ಕದಲ್ಲೇ, 'ಅಫ್ಝಲ್ ಗುರು ಯಾವಾಗ?' ಎಂಬ ಶೀರ್ಷಿಕೆಯಲ್ಲಿ ಕೆಲವು ಕನ್ನಡ ಪತ್ರಿಕೆಗಳು ಸುದ್ದಿ ಪ್ರಕಟಿಸಿರುವುದು. ಇವೆರಡೂ ಭಿನ್ನ ಪ್ರಕರಣಗಳು ಎಂಬುದು ಗೊತ್ತಿದ್ದೂ ಅವು ಸುದ್ದಿಯನ್ನು ಭಾವುಕಗೊಳಿಸಿದುವು. ಇರ್ಷಾದ್ ಅಲಿಯಂತೆ ಅಫ್ಝಲ್ ಗುರುವೂ ಪೊಲೀಸ್ ಮಾಹಿತಿದಾರನಾಗಿದ್ದ. ಪಾರ್ಲಿಮೆಂಟ್ ದಾಳಿಯಲ್ಲಿ ಆತನ ಪಾತ್ರದ ಬಗ್ಗೆ, ಅದರ ಹಿಂದಿರಬಹುದಾದ ರಾಜಕೀಯ ಕೈವಾಡದ ಬಗ್ಗೆ ಅರುಂಧತಿ ರಾಯ್ ಸಹಿತ ಕೆಲವಾರು ಮಂದಿ ಅನೇಕ ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ಸುಪ್ರೀಮ್ ಕೋರ್ಟು ಕೂಡಾ, 'ಈ ದೇಶದ ನಾಗರಿಕರ ಭಾವನೆಗಳನ್ನು ಪರಿಗಣಿಸಿ ಅಫ್ಝಲ್ ಗುರುವಿಗೆ ಗಲ್ಲು ವಿಧಿಸುತ್ತಿದ್ದೇವೆ' ಎಂದು ಹೇಳಿದೆಯೇ ಹೊರತು, ಪೂರ್ಣ ಸಾಕ್ಷ್ಯಗಳ ಆಧಾರದಲ್ಲಿ ಅಲ್ಲ. ಅಂದಹಾಗೆ, ಹೀಗೆಂದ ಮಾತ್ರಕ್ಕೇ, ಅಫ್ಝಲ್ ಗುರು ನಿರಪರಾಧಿಯೆಂದೋ ಆತನಿಗೆ ಗಲ್ಲು ವಿಧಿಸಬಾರದೆಂದೋ ಹೇಳುತ್ತಿಲ್ಲ. ಅದನ್ನು ಸುಪ್ರೀಮ್ ಕೋರ್ಟು ಈಗಾಗಲೇ ತೀರ್ಮಾನಿಸಿಬಿಟ್ಟಿದೆ. ಆದರೆ ಆತನನ್ನು ಮುಸ್ಲಿಮರ ಪ್ರತಿನಿಧಿಯೆಂಬಂತೆ ಬಿಂಬಿಸಿ ಮುಸ್ಲಿಮರನ್ನು ಪರೋಕ್ಷವಾಗಿ ಭಯೋತ್ಪಾದಕರೆಂದು ಛೇಡಿಸುವ ಯತ್ನವನ್ನು ಪತ್ರಿಕೆಗಳು ಮಾಡಿದ್ದಿಲ್ಲವೇ? ಕಸಬ್‍ನನ್ನು ಗಲ್ಲಿಗೇರಿಸಿದ ಲಾಭವನ್ನು ಕಾಂಗ್ರೆಸ್ ಪಕ್ಷ  ಪಡೆದುಕೊಳ್ಳದಿರಲಿ ಎಂಬ ಉದ್ದೇಶದಿಂದ ಕಸಬ್‍ನ ಜೊತೆಗೇ ಅಫ್ಝಲ್‍ನ ಗಲ್ಲು ಸುದ್ದಿಯನ್ನು ಅವು ತೇಲಿಸಿ ಬಿಟ್ಟಿವೆ ಎಂದು ಅನ್ನಿಸುವುದಿಲ್ಲವೇ? ಇಷ್ಟಕ್ಕೂ, ಕಸಬ್‍ನನ್ನು ಮುಂದಿಟ್ಟುಕೊಂಡು ಅಫ್ಝಲ್ ಯಾವಾಗ ಎಂದು ಕೇಳಿದ ಇವೇ ಪತ್ರಿಕೆಗಳು ಗುಜರಾತ್‍ನ ಮಾಯಾ ಕೊಡ್ನಾನಿಯನ್ನು ಎದುರಿಟ್ಟುಕೊಂಡು ಮೋದಿ ಯಾವಾಗ ಎಂದು ಕೇಳಿಲ್ಲವಲ್ಲ, ಯಾಕೆ? ಸಾಧ್ವಿ ಪ್ರಜ್ಞಾ ಸಿಂಗ್‍ಳನ್ನು ಮುಂದಿಟ್ಟು, ತೊಗಾಡಿಯಾ ಯಾವಾಗ ಎಂದು ಕೇಳಬಹುದಿತ್ತಲ್ಲವೇ? ನಾಗರಾಜ್ ಜಂಬಗಿಯ ಬಂಧನದ ಸುದ್ದಿಯೊಂದಿಗೆ ಮುತಾಲಿಕ್ ಯಾವಾಗ ಎಂದು ಪ್ರಶ್ನಿಸುವ ಅವಕಾಶವೂ ಇತ್ತಲ್ಲವೇ? ಮನುಷ್ಯರನ್ನು ಬಾಂಬಿಟ್ಟು ಕೊಲ್ಲುವುದು ಮಾತ್ರ ಭಯೋತ್ಪಾದನೆ, ಉಳಿದಂತೆ ಪೆಟ್ರೋಲ್ ಸುರಿದೋ ತಲವಾರಿನಿಂದ ಇರಿದೋ ಸಾಮೂಹಿಕವಾಗಿ ಕೊಲ್ಲುವುದೆಲ್ಲ ದೇಶಪ್ರೇಮಿ ಕೃತ್ಯಗಳು ಎಂದು ಇವು ಭಾವಿಸಿವೆಯೇ?
  ಬಹುಶಃ,
1. ಸುಪ್ರೀಮ್ ಕೋರ್ಟು ಯಾರನ್ನು ಅಮಾಯಕರೆಂದು ಹೇಳಿ ಬಿಡುಗಡೆಗೊಳಿಸಿದೆಯೋ ಅವರಿಗೆ ಸೂಕ್ತ ಪರಿಹಾರವನ್ನು ಕೊಡಬೇಕು.
2. ಸರಕಾರ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು.
3. ಅಮಾಯಕರ ವಿರುದ್ಧ ವಿವಿಧ ಕತೆಗಳನ್ನು ಹೆಣೆದು ಭಯೋತ್ಪಾದಕರಾಗಿಸಿದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಮತ್ತು ಸಿಬಿಐ ಅಥವಾ ಸಿಐಡಿಯಿಂದ ತನಿಖೆ ನಡೆಸಬೇಕು.
4. ಹೀಗೆ ತಪ್ಪಾಗಿ ಜೈಲಲ್ಲಿರುವವರನ್ನು ಪತ್ತೆ ಹಚ್ಚುವುದಕ್ಕಾಗಿ ರಾಷ್ಟ್ರೀಯ ತನಿಖಾ ಆಯೋಗದ ರಚನೆಯಾಗಬೇಕು..
  ಎಂದು ಮುಂತಾಗಿ 8 ಬೇಡಿಕೆಗಳನ್ನು ಮುಂದಿಟ್ಟ JTSA ಯ ಬೇಡಿಕೆಗಳಿಗೆ ಬಹುಶಃ ಈ ಮನಸ್ಥಿತಿಯಿಂದಾಗಿಯೇ ಪತ್ರಿಕೆಗಳಲ್ಲಿ ಪ್ರಚಾರ ಸಿಗದಿದ್ದುದು. ಇಲ್ಲದಿದ್ದರೆ, ಸಾಚಾರ್, ರಾಯ್, ರೋಜಾ ರಂಥ ಪ್ರಮುಖರಿದ್ದೂ,  'Framed, Damned, Acquitted - 'Dossiers of a Very Special Cell ' ಎಂಬ ಸಮೀಕ್ಷಾ ವರದಿಯು ಸುದ್ದಿಯಾಗಲಿಲ್ಲ ಅಂದರೆ ಏನರ್ಥ?
  1996ರಲ್ಲಿ ದೆಹಲಿಯ ಲಜ್‍ಪತ್ ನಗರದಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿ ಮುಹಮ್ಮದ್ ಅಲಿ ಭಟ್ ಮತ್ತು ಮಿರ್ಝಾ ನಿಸಾರ್ ಹುಸೈನ್‍ರಿಗೆ ಕೆಳಕೋರ್ಟು ನೀಡಿದ್ದ ಮರಣ ದಂಡನೆಯನ್ನು ರದ್ದುಪಡಿಸಿ ಅವರನ್ನು ಅಮಾಯಕರೆಂದು ದೆಹಲಿ ಹೈಕೋರ್ಟು  ಬಿಡುಗಡೆಗೊಳಿಸಿದ ಸುದ್ದಿಯನ್ನು (ದಿ ಹಿಂದೂ 2012, ನವೆಂಬರ್ 23) ಓದುತ್ತಾ ಇವೆಲ್ಲ ನೆನಪಾಯಿತು. ಅಷ್ಟಕ್ಕೂ ಈ ಪ್ರಕರಣವನ್ನು ನಿರ್ವಹಿಸಿದ್ದೂ ದೆಹಲಿ ಪೊಲೀಸರೇ.

Tuesday, November 20, 2012

ಚೆಗುವೆರಾರನ್ನು ಓದುತ್ತಾ ಮೌದೂದಿಯವರ ಬಗ್ಗೆ ಬರೆಯಬೇಕೆನಿಸಿತು..

ಸೈಯದ್ ಮೌದೂದಿ
1925. ಅವಿಭಜಿತ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆಗಳು ಸ್ಫೋಟಗೊಂಡಿದ್ದುವು. ‘ಭಾರತದಿಂದ ಮುಸ್ಲಿಮರನ್ನು ಓಡಿಸಬೇಕು, ಮಕ್ಕಾದ ಕಅಬಾಲಯದಲ್ಲಿ ಭಗವಾಧ್ವಜವನ್ನು ಹಾರಿಸಬೇಕೆಂಬ..’ ಘೋಷಣೆಯನ್ನು ಕೆಲವು ಹಿಂದೂ ಸಂಘಟನೆಗಳು ಕೂಗತೊಡಗಿದ್ದುವು. ಮುಸ್ಲಿಮರ ವಿರುದ್ಧ ಹೋರಾಡುವುದಕ್ಕಾಗಿ ಹಿಂದೂ ಮಹಿಳೆಯರೂ ಆಯುಧ ಎತ್ತಿ ಕೊಳ್ಳಬೇಕೆಂದು ಪಂಡಿತ್ ಮದನ್ ಮೋಹನ್ ಮಾಲವೀಯ, ಲಾಲಾ ಲಜಪತ್ ರಾಯ್, ಸ್ವಾಮಿ ಶ್ರದ್ಧಾನಂದ ಮೊದಲಾದವರು ಬಹಿರಂಗವಾಗಿಯೇ ಕರೆಕೊಟ್ಟರು. ಈ ಸಂದರ್ಭದಲ್ಲೇ ಪ್ರವಾದಿಯವರನ್ನು(ಸ) ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವ, ‘ರಂಗೀಲಾ ರಸೂಲ್’ ಎಂಬ ಕೃತಿಯೊಂದು ಹೊರಬಂತು. ರಾಜಗೋಪಾಲ್ ಎಂಬ ಪುಸ್ತಕ ವ್ಯಾಪಾರಿ ಪ್ರಕಟಿಸಿದ್ದ ಆ ಕೃತಿಯನ್ನು ಬರೆದಿರುವುದು, ಹಿಂದೂ ಮಹಾ ಸಭಾದ ನಾಯಕ ಮತ್ತು ಶುದ್ಧಿ ಚಳವಳಿಯ ರೂವಾರಿಯಾಗಿದ್ದ ಸ್ವಾಮಿ ಶ್ರದ್ಧಾನಂದರು ಎಂಬೊಂದು ಅನುಮಾನ ಎಲ್ಲೆಡೆ ಹರಡಿಕೊಂಡಿತು. ಮುಸ್ಲಿಮರು ಪ್ರತಿಭಟಿಸಿದರು. ಪ್ರಕಾಶಕರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದರು. ಆದರೆ ಕೆಳ ನ್ಯಾಯಾಲಯ ಪ್ರಕಾಶಕರನ್ನು ದೋಷಿ ಎಂದು ಕರೆದರೂ ಲಾಹೋರ್ ಹೈಕೋರ್ಟು ನಿರ್ದೋಷಿ ಎಂದಿತು. ಮತ್ತೆ ಪ್ರತಿಭಟನೆಗಳಾದುವು. ಇಂಥ ಹೊತ್ತಲ್ಲೇ ಅಬ್ದುರ್ರಶೀದ್ ಎಂಬೋರ್ವ ವ್ಯಕ್ತಿ ಸ್ವಾಮಿ ಶ್ರದ್ಧಾನಂದರನ್ನು 1926 ಫೆಬ್ರವರಿಯಲ್ಲಿ ಹತ್ಯೆ ಮಾಡಿದ. ಇದು, ಮುಸ್ಲಿಮರ ವಿರುದ್ಧ ದ್ವೇಷದ ಅಭಿಯಾನ ಕೈಗೊಂಡವರನ್ನು ಮಾತ್ರವಲ್ಲ, ತಟಸ್ಥ ನಿಲುವಿನವರನ್ನು ಕೂಡ ಒಂದು ಹಂತದವರೆಗೆ ಕೆರಳಿಸಿಬಿಟ್ಟಿತು. ಜಿಹಾದ್‍ನ ಔಚಿತ್ಯವನ್ನೇ ಅವರು ಪ್ರಶ್ನಿಸತೊಡಗಿದರು. ‘ಇಸ್ಲಾಮ್ ಖಡ್ಗದಿಂದ ಹರಡಿದೆ, ಅದರಲ್ಲಿ ಸಹನೆಗೆ ಜಾಗವಿಲ್ಲ, ಕಾಫಿರರನ್ನು ಕೊಂದವರೆಲ್ಲಾ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಕುರ್‍ಆನಿನಲ್ಲಿ ಇದೆ..’ ಎಂದೆಲ್ಲಾ ಹಿಂದೂ ಮಹಾ ಸಭಾದ ನಾಯಕರಷ್ಟೇ ಅಲ್ಲ, ಕೆಲವು ಕಾಂಗ್ರೆಸ್ ಮುಂದಾಳುಗಳೂ ಹೇಳತೊಡಗಿದರು. ವಿಷಾದ ಏನೆಂದರೆ, ಈ ಎಲ್ಲ ಆರೋಪಗಳಿಗೆ ಪವಿತ್ರ ಕುರ್‍ಆನಿನ ಆಧಾರದಲ್ಲಿ ಪರಿಣಾಮಕಾರಿಯಾಗಿ ಉತ್ತರಿಸುವ ಕೃತಿಯೊಂದು ಮುಸ್ಲಿಮರ ಬಳಿ ಇದ್ದಿರಲಿಲ್ಲ ಎಂಬುದು. ದೆಹಲಿಯ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝಿನ ಬಳಿಕ ಮೌಲಾನಾ ಮುಹಮ್ಮದಲಿ ಜೌಹರ್‍ರು ಈ ಕೊರತೆಯ ಬಗ್ಗೆ ಮಾತಾಡಿದರು. ಇಸ್ಲಾಮಿನ ಜಿಹಾದ್‍ನ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳನ್ನು ನೀಗಿಸಿ, ವಾಸ್ತವವನ್ನು ಹೇಳಬಲ್ಲ ಕೃತಿಯೊಂದನ್ನು ಯಾರಾದರೂ ರಚಿಸಬಲ್ಲಿರಾ ಎಂದವರು ಸೇರಿದವರೊಂದಿಗೆ ಭಾವುಕರಾಗಿ ಪ್ರಶ್ನಿಸಿದರು. ಆ ಸಭೆಯಲ್ಲಿದ್ದ ಯುವಕನೊಬ್ಬ ಅದನ್ನು ಅಂದೇ ಸವಾಲಾಗಿ ಸ್ವೀಕರಿಸಿದ. ಜಿಹಾದ್‍ಗೆ ಸಂಬಂಧಿಸಿ ಉರ್ದು, ಅರಬಿ, ಇಂಗ್ಲಿಷ್ ಭಾಷೆಯಲ್ಲಿರುವ ಸಾಕಷ್ಟು ಗ್ರಂಥಗಳ ಅಧ್ಯಯನ ನಡೆಸಿದ. ಕೊನೆಗೆ ‘ಇಸ್ಲಾಮಿನಲ್ಲಿ ಜಿಹಾದ್’ ಎಂಬ ಜಗದ್ವಿಖ್ಯಾತ ಗ್ರಂಥವನ್ನು ರಚಿಸಿದ. ಆಗ ಆ ಯುವಕನಿಗೆ ಕೇವಲ 24 ವರ್ಷ.
ಅವರೇ ಸೈಯದ್ ಅಬುಲ್ ಆಲಾ ಮೌದೂದಿ..
1. ಕುರ್‍ಆನ್ ವ್ಯಾಖ್ಯಾನ (ತಫ್ಹೀಮುಲ್ ಕುರ್‍ಆನ್)
2. ಇಸ್ಲಾಮ್ ಧರ್ಮ
3. ಇಸ್ಲಾಮೀ  ಜೀವನ ವ್ಯವಸ್ಥೆ
4. ಇಸ್ಲಾಮಿನ ರಾಜಕೀಯ ಸಿದ್ಧಾಂತ
5. ಇಸ್ಲಾಮೀ  ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು
6. ಇಸ್ಲಾಮ್ ಮತ್ತು ಆಧುನಿಕ ಆರ್ಥಿಕ ಸಿದ್ಧಾಂತಗಳು
7. ಬಡ್ಡಿ
8. ಇಸ್ಲಾಮ್ ಮತ್ತು ಸಾಮಾಜಿಕ ನ್ಯಾಯ
9. ಆಧುನಿಕ ಯುಗದ ಪಂಥಾಹ್ವಾನ ಮತ್ತು ಯುವಕರು
10. ಪರ್ದಾ..
..ಹೀಗೆ 200ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದಿರುವ ಮೌದೂದಿಯವರನ್ನು ಈ ಸಮಾಜ ಆರಂಭದಲ್ಲಿ ನೋಡಿದ್ದು ಅನುಮಾನಗಳಿಂದಲೇ. ಅದಕ್ಕೆ ಕಾರಣವೂ ಇದೆ..
     ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸಿದ ಯಾರನ್ನೇ ಆಗಲಿ, ಸಮಾಜ ಹೂ-ಹಾರ ಹಾಕಿ ಸ್ವಾಗತಿಸಿದ್ದು ಇತಿಹಾಸದಲ್ಲಿ  ಎಂದೂ ನಡೆದಿಲ್ಲ.  ಮುಸ್ಲಿಮ್ ಸಮುದಾಯದ ಗುಲಾಮ ಮನಸ್ಥಿತಿಯನ್ನು ಮೌದೂದಿಯವರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರು. ‘ಮುಸ್ಲಿಮ್’ ಆಗುವುದಕ್ಕೆ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿರುವುದು ಮಾನದಂಡ ಅಲ್ಲ ಎಂದು ಮೊತ್ತಮೊದಲು ಘೋಷಿಸಿದ್ದು ಮೌದೂದಿಯೇ. ಇಸ್ಲಾಮನ್ನು ಬರೇ ‘ಮಸೀದಿಯ’ ಧರ್ಮವಾಗಿ ಪರಿಗಣಿಸಿದ್ದ ಮತ್ತು ಬದುಕಿಗೂ ಇಸ್ಲಾಮ್‍ಗೂ ಯಾವ ಸಂಬಂಧವನ್ನೂ ಜೋಡಿಸಿಲ್ಲದ ಮುಸ್ಲಿಮ್ ಸಮುದಾಯದ ಮೇಲೆ ಅವರ ಈ ಮಾತು ತೀವ್ರ ಪರಿಣಾಮವನ್ನು ಬೀರಿತು. ಇಸ್ಲಾಮ್ ಅಂದರೆ, ಸಂಪ್ರದಾಯ ಅಲ್ಲ, ಸಮಗ್ರ ಜೀವನ ಪದ್ಧತಿ ಎಂದವರು ಸಾರಿದರು. ಬ್ರಿಟಿಷರ ಆಡಳಿತದಲ್ಲಿ ಆಂಗ್ಲ ಸಂಸ್ಕ್ರಿತಿಯಿಂದ ಪ್ರಭಾವಿತವಾಗಿದ್ದ ಮುಸ್ಲಿಮರ ಮಟ್ಟಿಗಂತೂ ಮೌದೂದಿಯವರ ಮಾತು ಇಸ್ಲಾಮ್ ವಿರೋಧಿಯಂತೆ ತೋರಿತು. ನಿಜವಾಗಿ, ಅಂದಿನ ಮುಸ್ಲಿಮ್ ಬುದ್ಧಿಜೀವಿಗಳು ಇಸ್ಲಾಮೀ  ಸಿದ್ಧಾಂತವನ್ನು ಕಾಲಬಾಹಿರ ಎಂದೇ ಪರಿಗಣಿಸಿದ್ದರು. ತಮ್ಮ ಸಂಸ್ಕ್ರಿತಿ, ಆಚಾರಗಳು, ವಿವಾಹ, ತಲಾಕ್, ಪರ್ದಾ ಮುಂತಾದುವುಗಳ ಕುರಿತಾಗಿ ಮಾತಾಡುವುದು ಗೌರವಕ್ಕೆ ಕುಂದು ಎಂದು ಅವರು ಭಾವಿಸಿದ್ದರು. ಆದ್ದರಿಂದಲೇ, ಇಂಗ್ಲಿಷ್ ಭಾಷೆ, ಆಂಗ್ಲರ ಉಡುಪು, ಸ್ತ್ರೀ-ಪುರುಷರ ಮುಕ್ತ ಮಿಲನ, ಮಿಶ್ರ ಸಂಸ್ಕ್ರಿತಿ, ಮದ್ಯಪಾನಗಳನ್ನೆಲ್ಲಾ ಸಾಮಾಜಿಕ ಅಗತ್ಯ ಎಂದವರು ಪ್ರತಿಪಾದಿಸತೊಡಗಿದ್ದರು. ಶಿರ್ಕ್ ಮತ್ತು ಬಿದ್‍ಅತ್‍ಗಳ ಕುರಿತಂತೆ ಸ್ಪಷ್ಟ ತಿಳುವಳಿಕೆಯೂ ಸಮಾಜದಲ್ಲಿರಲಿಲ್ಲ. ಅಷ್ಟಕ್ಕೂ, ಇವೆಲ್ಲ ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮುಸ್ಲಿಮರ ಬಳಿ ಇದ್ದದ್ದಾದರೂ ಏನು? ಇಸ್ಲಾಮ್‍ನ ಕುರಿತಂತೆ ವಿವಿಧ ರೂಪದಲ್ಲಿ ನಡೆಯುತ್ತಿದ್ದ ಅಪಪ್ರಚಾರಗಳಿಗೆ ಉತ್ತರ ಕೊಡಲು ಅವರ ಬಳಿ ಯಾವ ಕೃತಿಗಳಿತ್ತು? ಆಗಿನ ಪರಿಸ್ಥಿತಿಯನ್ನು ಎದುರಿಟ್ಟುಕೊಂಡು ಇಸ್ಲಾಮೀ  ಪಾರಿಭಾಷಿಕಗಳಿಗೆ ಹೊಸ ಅರ್ಥಗಳನ್ನು ಕೊಡುವ ಕೃತಿಗಳಾಗಲಿ, ಬರಹಗಾರರಾಗಲಿ ಇಲ್ಲದಿರುವಾಗ ಸಮುದಾಯ ಕೀಳರಿಮೆಯಿಂದಲ್ಲದೆ ಇನ್ನಾವ ರೀತಿಯಲ್ಲಿ ಬದುಕಬೇಕಿತ್ತು?
    ಆದ್ದರಿಂದಲೇ ಮೌದೂದಿ ಲೇಖನಿ ಎತ್ತಿದರು..
ಪರ್ದಾದ ಬಗ್ಗೆ ಅಪಹಾಸ್ಯದ ಮಾತುಗಳು ಚಾಲ್ತಿಯಲ್ಲಿದ್ದಾಗಲೇ ‘ಪರ್ದಾ’ ಎಂಬ ಕೃತಿ ರಚಿಸಿದರು. ಆಗ ಅವರಿಗೆ 34 ವರ್ಷ. `ಇಸ್ಲಾಮ್ ಧರ್ಮ' ಎಂಬ ಬಹು ಅಮೂಲ್ಯ ಕೃತಿ ರಚಿಸಿದರು. ಅವರ ಜೀವಿತ ಕಾಲದಲ್ಲಿಯೇ ಈ ಕೃತಿ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿತು. ‘ಪಾಶ್ಚಿಮಾತ್ಯ ಸಂಸ್ಕøತಿಯ ಕಲ್ಪನೆಗಳು ಮತ್ತು ಪ್ರಭಾವಗಳ ಕುರಿತಂತೆ ವಿಮರ್ಶಾತ್ಮಕ’ ಅಧ್ಯಯನ ನಡೆಸಿದರು. ‘ಇಸ್ಲಾಮ್ ಮತ್ತು ಅಜ್ಞಾನ’, ‘ಇಸ್ಲಾಮಿನ ನೈತಿಕ ದೃಷ್ಟಿಕೋನ.. ಎಂಬೆಲ್ಲಾ ಕೃತಿಗಳನ್ನು ರಚಿಸಿ ಸಮಾಜದ ಮುಂದಿಟ್ಟರು. ನಿಜವಾಗಿ, ತನ್ನ 11ರ ಹರೆಯದಲ್ಲೇ, ‘ಆಧುನಿಕ ಮಹಿಳೆ’ ಎಂಬ ಅರಬಿ ಕೃತಿಯನ್ನು ಅವರು ಉರ್ದು ಭಾಷೆಗೆ ಅನುವಾದಿಸಿದ್ದರು. 15ರ ಹರೆಯದಲ್ಲೇ ‘ಅಲ್ ಮದೀನ’ ಎಂಬ ಪತ್ರಿಕೆಯ ಉಪಸಂಪಾದಕರಾಗಿ ಆಯ್ಕೆಯಾಗಿದ್ದರು. 1903 ಸೆ. 25ರಂದು ಔರಂಗಾಬಾದ್‍ನಲ್ಲಿ ಹುಟ್ಟಿದ್ದ ಮೌದೂದಿಯವರು ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಬೆಳೆದರು. ಅವರ ತಂದೆ ಅಹ್ಮದ್ ಹಸನ್‍ರು ಅವರನ್ನು ಬೆಳೆಸಿದ್ದೂ ಹಾಗೆಯೇ. ಒಮ್ಮೆ ಸೇವಕನ ಮಗನಿಗೆ ಅವರು ಹೊಡೆದಾಗ, ಆ ಸೇವಕನ ಮಗನಲ್ಲಿ ಮಗನಿಗೆ ಹೊಡೆಯುವಂತೆ ಅವರ ಅಪ್ಪ ಆದೇಶಿಸಿದ್ದರು. ಈ ಮಟ್ಟದ ತರಬೇತಿಯೇ ಸಮಾಜದ ತಪ್ಪುಗಳನ್ನು ಪ್ರಶ್ನಿಸುವುದಕ್ಕೆ ಅವರನ್ನು ಪ್ರಚೋದಿಸಿರಬೇಕು. ಇಸ್ಲಾಮಿನ ಬಗ್ಗೆ ಆಳ ಅಧ್ಯಯನ ನಡೆಸಿದ್ದ ಅವರಿಗೆ ಪ್ರಸಕ್ತ ಸಮಸ್ಯೆಗಳ ಬಗ್ಗೆ ನಿಖರವಾಗಿ ಮಾತಾಡುವ ಸಾಮರ್ಥ್ಯವೂ  ಇತ್ತು. ಅವರು ಯುವಕರಾಗಿದ್ದ ಸಂದರ್ಭದಲ್ಲಿ ಲೌಡ್ ಸ್ಪೀಕರ್‍ನ ಬಗ್ಗೆ ಮುಸ್ಲಿಮ್ ಸಮಾಜದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಲೌಡ್ ಸ್ಪೀಕರ್ ಅಳವಡಿಸುವುದು ಇಸ್ಲಾಮಿನಲ್ಲಿ ನಿಷಿದ್ಧ ಎಂದು ವಿದ್ವಾಂಸರು ಫತ್ವ ಹೊರಡಿಸಿದ್ದರು. ಆದರೆ ಯುವಕ ಮೌದೂದಿ ಅದನ್ನು ಖಂಡಿಸಿದರು. ಅವರು ಹೀಗೆಂದರು,
    ‘ಎತ್ತಿನ ಬಂಡಿಯಲ್ಲಿ ಸಂಚರಿಸುವವನಿಗೆ ಮೋಟಾರು ವಾಹನದಲ್ಲಿ ಸಂಚರಿಸುವವನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ರೇಡಿಯೋದ ಬಲದಿಂದ ಒಂದು ಸೆಕೆಂಡಿನಲ್ಲಿ ಮಿಥ್ಯದ ಧ್ವನಿಯನ್ನು ಭೂಮಿಯ ಎಲ್ಲ ಮೂಲೆಗಳಿಗೂ ತಲುಪಿಸಿ ಕೋಟಿಗಟ್ಟಲೆ ಜನರ ಹೃದಯಗಳನ್ನು ಕೇವಲ ಮಾತಿನ ಮೋಡಿಯಿಂದ ಜಯಿಸುವವರ ವಿರುದ್ಧ, ಒಂದು ಸಭೆಯಲ್ಲಿ ಸೇರಿರುವ ಎಲ್ಲರಿಗೂ ಸತ್ಯದ ಧ್ವನಿಯನ್ನು ತಲುಪಿಸಲಿಕ್ಕೆ ಕೂಡ ಹಿಂಜರಿಯುವವರು ಹೇಗೆ ತಾನೆ ಜಯಗಳಿಸಿಯಾರು? ಇವತ್ತು ಇಸ್ಲಾಮಿನ ವಿರುದ್ಧದ ಪ್ರಚಾರವು ಎಲ್ಲ ಮಾಧ್ಯಮ ಬಲವನ್ನೂ ಉಪಯೋಗಿಸಿ ಮುಂದೆ ಸಾಗುತ್ತಿದೆ. ಹೀಗಿರುವಾಗ, ಅವನ್ನು ಉಪಯೋಗಿಸದೇ ಅವುಗಳ ವಿರುದ್ಧ ಹೋರಾಡಲು ಸಾಧ್ಯವೇ? ಒಂದು ವೇಳೆ ಪ್ರವಾದಿಯವರ(ಸ) ಕಾಲದಲ್ಲಿ ಈ ಉಪಕರಣ ಇರುತ್ತಿದ್ದರೆ ಅವರು(ಸ) ಕಂದಕ ತೋಡುವ ಇರಾನಿ ಕ್ರಮವನ್ನು ಸ್ವೀಕರಿಸಿದಂತೆ, ನಮಾಝ್, ಅದಾನ್ ಮತ್ತು ಖುತ್ಬಾಗಳಿಗೆ ಖಂಡಿತವಾಗಿಯೂ ಲೌಡ್ ಸ್ಪೀಕರನ್ನು ಬಳಸುತ್ತಿದ್ದರು..’ ಎಂದರು. ಮೌದೂದಿಯವರ ವಾದ ಎಷ್ಟು ಬಲವಾಗಿತ್ತೆಂದರೆ, ಬಳಿಕ ಆ ಫತ್ವಾವನ್ನೇ ವಿದ್ವಾಂಸರು ಹಿಂತೆಗೆದುಕೊಂಡರು.
     ಆದರೆ
ಚೆಗುವೆರಾ
 ಕೇವಲ ಕೃತಿಗಳನ್ನು ರಚಿಸುವುದರಿಂದಲೇ ಒಂದು ಸಮುದಾಯದ ಸುಧಾರಣೆ, ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದು ಮೌದೂದಿಯವರ ನಂಬಿಕೆಯಾಗಿತ್ತು. ಆದ್ದರಿಂದಲೇ, ‘ಒಂದು ಉತ್ತಮ ಸಂಘಟನೆಯ ಅಗತ್ಯ’ ಎಂಬ ಲೇಖನವನ್ನು 1941 ಎಪ್ರಿಲ್‍ನಲ್ಲಿ ತನ್ನ, ‘ತರ್ಜುಮಾನುಲ್ ಕುರ್‍ಆನ್’ ಎಂಬ ಪತ್ರಿಕೆಯಲ್ಲಿ ಬರೆದರು. 3500 ಪುಟಗಳ ಅರಬಿ ಗ್ರಂಥವೊಂದನ್ನು ಉರ್ದುವಿಗೆ ಅನುವಾದಿಸಿದ್ದಕ್ಕಾಗಿ ಸಿಕ್ಕ 5 ಸಾವಿರ ರೂಪಾಯಿಗಳಿಂದ ಅವರು ಈ ಪತ್ರಿಕೆಯನ್ನು ಆರಂಭಿಸಿದ್ದರು. ಮೌದೂದಿಯವರ ಆಲೋಚನೆಗಳು, ದೂರಗಾಮಿ ನಿಲುವುಗಳೆಲ್ಲ ಅಕ್ಷರ ರೂಪದಲ್ಲಿ ಪ್ರಕಟವಾಗುತ್ತಿದ್ದುದು ಈ ಪತ್ರಿಕೆಯಲ್ಲೇ. ಹಾಗೆ, 1941 ಅಗಸ್ಟ್ 26ರಂದು, ಜಮಾಅತೆ ಇಸ್ಲಾಮೀ  ಎಂಬ ಸಂಘಟನೆಯನ್ನು ಇತರ 75 ಮಂದಿಯ ಜೊತೆಗೂಡಿ ಅವರು ಸ್ಥಾಪಿಸಿದರು. ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಮಾನವನ ಆಮೂಲಾಗ್ರ ಸುಧಾರಣೆಯನ್ನು ಗುರಿಯಿರಿಸಿಕೊಂಡು ಹುಟ್ಟಿಕೊಂಡ ಈ ಸಂಘಟನೆ ಸಹಜವಾಗಿಯೇ ಸಮಾಜವನ್ನು ಆಕರ್ಷಿಸಿತು. ವಿರೋಧಿಗಳನ್ನೂ ಸೃಷ್ಟಿಸಿಕೊಂಡಿತು. ಈ ಮಧ್ಯೆ ದೇಶದ ವಿಭಜನೆಯಾದಾಗ, ಅವರು ವಾಸಿಸುತ್ತಿದ್ದ ಲಾಹೋರ್ ಪಾಕಿಸ್ತಾನದ ಭಾಗವಾಯಿತು. ಭಾರತದಲ್ಲೇ ಉಳಿದುಕೊಂಡ ಸಂಘಟನೆಯ ಕಾರ್ಯಕರ್ತರು. ಜಮಾಅತೆ ಇಸ್ಲಾಮೀ  ಹಿಂದ್ ಎಂಬ ಹೆಸರಲ್ಲಿ ಗುರುತಿಸಿಕೊಂಡರು. ಮೌದೂದಿಯವರ ಕ್ರಾಂತಿಕಾರಿ ಆಲೋಚನೆಗಳು ಪಾಕ್ ಪ್ರಭುತ್ವವನ್ನು ಯಾವ ಮಟ್ಟದಲ್ಲಿ ಕಾಡಿತ್ತೆಂದರೆ, ಅವರನ್ನು 3 ಬಾರಿ ಜೈಲಿಗಟ್ಟಲಾಯಿತು. ಒಂದು ಬಾರಿ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಆದರೆ ಜಾಗತಿಕ ಒತ್ತಡದ ಪರಿಣಾಮದಿಂದಾಗಿ ಶಿಕ್ಷೆ ಜಾರಿಗೊಳಿಸಲಾಗಲಿಲ್ಲ. ಒಂದು ರೀತಿಯಲ್ಲಿ ಮೌದೂದಿಯವರ ಆಲೋಚನೆಗಳು ಈ ಉಪ ಭೂಖಂಡವನ್ನು ದಾಟಿ ಜಾಗತಿಕವಾಗಿಯೇ ಜನಪ್ರಿಯವಾಗತೊಡಗಿತು. ಬಡ್ಡಿರಹಿತ ಆರ್ಥಿಕ ವ್ಯವಸ್ಥೆಯು ಇವತ್ತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದರೆ, ಅದರಲ್ಲಿ ಮೌದೂದಿಯವರ ವಿಚಾರಗಳಿಗೆ ದೊಡ್ಡ ಪಾತ್ರವಿದೆ. ಅರಬ್ ಕ್ರಾಂತಿಯ ಹಿಂದೆ ಮೌದೂದಿಯವರ ಆಲೋಚನೆಗಳಿಗೆ ಪ್ರಮುಖ ಸ್ಥಾನವಿದೆ. ಮೌಲ್ಯಾಧಾರಿತ ರಾಜಕೀಯ, ಕೆಡುಕು ರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂಬುದನ್ನು ಆಧುನಿಕ ಭಾಷೆಯಲ್ಲಿ ಹೇಳಿಕೊಟ್ಟದ್ದೇ ಮೌದೂದಿ. ನಿಜವಾಗಿ, ಇವತ್ತು ಈಜಿಪ್ಟನ್ನು ಆಳುತ್ತಿರುವ ಮುರ್ಸಿಯವರ ಮುಸ್ಲಿಮ್ ಬ್ರದರ್‍ಹುಡ್, ಟ್ಯುನೀಶಿಯಾದ ರಾಶಿದುಲ್ ಗನೂಶಿಯವರ ಅನ್ನಹ್ದ್‍ನಂಥ ಪಕ್ಷಗಳ ಜನಪ್ರಿಯತೆಯಲ್ಲಿ ಮೌದೂದಿಯವರಿಗೂ ಪಾಲಿದೆ. ಬಂಡವಾಳಶಾಹಿಗಳನ್ನು ಮತ್ತು ಸರ್ವಾಧಿಕಾರಿಗಳನ್ನು ಶಾಂತಿಯುತ ವಿಧಾನದ ಮೂಲಕ ಸೋಲಿಸುವುದಕ್ಕೆ ಅವರ ವಿಚಾರಗಳಿಗೆ ಇವತ್ತು ಸಾಧ್ಯವಾಗಿದೆ. ಜಾಗತಿಕವಾಗಿಯೇ ಕೌಟುಂಬಿಕ ವ್ಯವಸ್ಥೆ, ಆರ್ಥಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಹೊತ್ತಿನಲ್ಲಿಯೇ, ‘ಕುರ್‍ಆನ್’ ಮತ್ತು ಹದೀಸ್‍ನ ಆಧಾರದಲ್ಲಿ ಮೌದೂದಿಯವರು ಪರಿಚಯಪಡಿಸಿದ ಇಸ್ಲಾಮ್, ಇವತ್ತು ಪರ್ಯಾಯ ಆಯ್ಕೆಯಾಗಿ ಎದ್ದು ಕಾಣುತ್ತಿದೆ. ಈಗಾಗಲೇ ಸಾವಿಗೀಡಾಗಿರುವ ಸಮಾಜ ವಾದ ಮತ್ತು ಸಾವಿನ ಕದ ತಟ್ಟುತ್ತಿರುವ ಬಂಡವಾಳಶಾಹಿತ್ವದ ಮಧ್ಯೆ ಮುರ್ಸಿ, ಗನೂಶಿ, ತುರ್ಕಿಯ ಉರ್ದುಗಾನ್‍ರೆಲ್ಲ ಭರವಸೆ ಹುಟ್ಟಿಸುತ್ತಿದ್ದಾರೆ. ಆದ್ದರಿಂದಲೇ 1979 ಸೆ. 22ರಂದು ನಿಧನರಾದ ಮೌದೂದಿಯವರು ಮತ್ತೆ ಮತ್ತೆ ಪ್ರಸ್ತುತವಾಗುತ್ತಲೂ ಇದ್ದಾರೆ.
   ಇಷ್ಟಕ್ಕೂ, ಸಮಾಜವಾದದ ಜಾರಿಗಾಗಿ ಗೆರಿಲ್ಲಾ ಮಾದರಿಯಲ್ಲಿ ಹೋರಾಡುತ್ತಾ 1967 ಅಕ್ಟೋಬರ್ 9ರಂದು ಬೊಲಿವಿಯಾದಲ್ಲಿ ಹತ್ಯೆಗೀಡಾದ ಅರ್ನೆಸ್ಟೋ ಚೆಗುವೆರಾರ `ವಿಫಲ ಹೋರಾಟ’ದ ಬಗ್ಗೆ ಪತ್ರಿಕೆಗಳಲ್ಲಿ ವಾರಗಳ ಹಿಂದೆ ಲೇಖನಗಳನ್ನು ಓದುತ್ತಿದ್ದಾಗ, ‘ಸಫಲ ಹೋರಾಟ’ದ ಸೈಯದ್ ಮೌದೂದಿಯವರ ಬಗ್ಗೆ ಬರೆಯಬೇಕೆನಿಸಿತು.

Tuesday, November 13, 2012

ಅವರು ಪ್ರಾರ್ಥಿಸಬೇಕೆಂದು ಬಯಸುತ್ತೇವಲ್ಲ, ಅದಕ್ಕೆ ಅರ್ಹರಾಗಿದ್ದೇವಾ?

ಸಂಜೆಯಾದ ಕೂಡಲೇ ಆ ಬಾಲಕ ಬಾಗಿಲಿಗೆ ಬರುತ್ತಾನೆ. ಅಪ್ಪ ಬರುವ ಹೊತ್ತು. ಇವತ್ತು ಅಪ್ಪನೊಂದಿಗೆ ಚೆಂಡಾಟ ಆಡಬೇಕು. ಅಪ್ಪನ ಮಡಿಲಲ್ಲಿ ಕೂತು, ಜೇಬಿಗೆ ಕೈ ಹಾಕಿ, ಚಾಕಲೇಟು ಕೇಳಬೇಕು. ಎಷ್ಟು ದಿನ ಆಯ್ತು ಅಪ್ಪ ನಂಗೆ ಚಾಕಲೇಟು ಕೊಡಿಸದೇ? ಯಾವಾಗಲೂ ಅಮ್ಮನೇ ಕೊಡೋದು. ಇವತ್ತು ಅಪ್ಪನ ಕೈ ಹಿಡಿದು ನಡೆಯುತ್ತಾ ಅಂಗಡಿ ತನಕ ಹೋಗಿ ಚಾಕಲೇಟು ಖರೀದಿಸಿಯೇ ಬರಬೇಕು. ಬೇಡ, ಹೋಗುವಾಗ ಮಾತ್ರ ನಡೆಯುವುದು. ಬರುವಾಗ ಅಪ್ಪನೇ  ನನ್ನನ್ನು ಎತ್ತಿಕೊಳ್ಳಲಿ. ಎಷ್ಟು ದಿನದಿಂದ ನಾನು ಒಮ್ಮೆ ಅಪ್ಪ ಎತ್ತಿಕೊಳ್ಳಲಿ ಅಂತ ಕಾಯ್ತಾ ಇದ್ದೇನೆ? ಆದರೆ ಎತ್ತಿಕೊಳ್ಳುತ್ತಾರಾ? ನನ್ನ ಮಗೂ ಅಂತ ಮುತ್ತಿಕ್ಕುತ್ತಾರಾ? ಈ ಬಾರಿ ಚಾಕಲೇಟು ಬಾಯಲ್ಲಿಟ್ಟು ಅಪ್ಪನ ತೋಳಲ್ಲಿ ಖುಷಿ ಪಡುತ್ತಾ ಬರಬೇಕು. ನನ್ನ ಪಕ್ಕದ ಮನೆಯ ವಿಲ್ಫ್ರೆಡ್ ನನ್ನು  ಅವನ ಅಪ್ಪ ಎಷ್ಟೊಂದು ಮುದ್ದಿಸ್ತಾರೆ? ಎಲ್ಲಿಗೆ ಹೋಗುವಾಗಲೂ  ವಿಲ್ಫ್ರೆಡ್ ನನ್ನು ಕರಕೊಂಡೇ ಹೋಗುವುದು. ನಿನ್ನೆ ವಿಲ್ಫ್ರೆಡ್ ಮತ್ತು ಅವನ ಅಪ್ಪ ಜೊತೆಯಾಗಿ ಓಡುತ್ತಾ ಇದ್ರು. ಅವನ ಅಪ್ಪ ತುಂಬಾ ಒಳ್ಳೆಯವರು. ಅಪ್ಪ ಬರಲಿ, ಇವತ್ತು ಏನು ಹೇಳಿದ್ರೂ ನಾನು ಬಿಡುವುದೇ ಇಲ್ಲ. ಅವರು ನನ್ನೊಂದಿಗೆ ಆಡಲೇಬೇಕು. ಅಂಗಡಿಗೆ ಕರಕೊಂಡು ಹೋಗಲೇಬೇಕು..
     ಅಪ್ಪ ಬರುವುದು ಕಾಣಿಸುತ್ತದೆ..
ಬಾಲಕ ಓಡುತ್ತಾನೆ. ಅಪಾರ ಖುಷಿ. ಅಪ್ಪನ ಕೈ ಹಿಡಿಯುತ್ತಾನೆ. ಷರಟು ಹಿಡಿದು ಅಪ್ಪ, ಅಪ್ಪ ಅನ್ನುತ್ತಾನೆ. ಅಪ್ಪನಾದರೋ ವಿಪ ರೀತ ಬ್ಯುಝಿ. ಕೈ ಹಿಡಿದ ಮಗನನ್ನು ಎತ್ತಿ ಅಪ್ಪಿಕೊಳ್ಳುವುದಕ್ಕೆ, ಮುದ್ದಿಸುವುದಕ್ಕೆ, ನನ್ನ ಮುದ್ದೂ.. ಎಂದು ಲಲ್ಲೆಗರೆಯುವುದಕ್ಕೆ ಬಿಡುವೇ ಇಲ್ಲ. ತಲೆಯ ತುಂಬಾ ಕಚೇರಿಯನ್ನೇ ತುಂಬಿಕೊಂಡು ಬಂದಿರುವ ಆತ ಕೈ ಹಿಡಿದ ಮಗನನ್ನು ಎಳೆದುಕೊಂಡೇ ಸರ ಸರನೇ ಮನೆಗೆ ಬರುತ್ತಾನೆ. ಬ್ಯಾಗ್ ತೆಗೆದಿಡುವುದು, ಬಟ್ಟೆ ಕಳಚುವುದು, ಪತ್ನಿ ಕೊಟ್ಟ ನೀರು ಕುಡಿಯುವುದು.. ಇವೆಲ್ಲ ಯಾಂತ್ರಿಕವಾಗಿ ನಡೆಯುತ್ತದೆ. ಈ ಮಧ್ಯೆ ಮಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಆತ ಬಾಗಿಲಲ್ಲಿ ನಿಂತು ಏನೇನೆಲ್ಲಾ ಅಂದುಕೊಂಡಿದ್ದನೋ ಅವೆಲ್ಲವನ್ನೂ ಜಾರಿ ಮಾಡುವಂತೆ ಅಪ್ಪನನ್ನು ವಿನಂತಿಸುತ್ತಾನೆ. ಕೈ ಹಿಡಿದು ಜಗ್ಗುತ್ತಾನೆ. ಆದರೆ ಅಪ್ಪ ನಿರಾಕರಿಸುತ್ತಾನೆ. 'ನಾಳೆ ಆಡುವ ಮಗು' ಅನ್ನುತ್ತಾನೆ. ಹಾಗೆ ಸಾವಿರಾರು ನಾಳೆಗಳು ಕಳೆದು ಹೋಗುತ್ತವೆ. ಪ್ರತಿ ನಾಳೆಯೂ ಅಪ್ಪ ಬ್ಯುಝಿಯೇ. ಕೊನೆಗೆ ಮಗು ಅಪ್ಪನನ್ನು ಕಾಯುವುದನ್ನೇ ನಿಲ್ಲಿಸುತ್ತದೆ..
     ಈಗ ಅಪ್ಪನಿಗೆ ನಿವೃತ್ತಿಯಾಗಿದೆ. ಮಗ ದುಡಿಯುತ್ತಿದ್ದಾನೆ..
'ಒಮ್ಮೆ ಬಂದು ಹೋಗು ಮಗೂ' ಅಂತ ಆ ಅಪ್ಪ ವಿನಂತಿಸುವುದು ಅದು ಎಷ್ಟನೇ ಸಲವೋ, ಆದರೆ ಮಗ ಬರುವುದೇ ಇಲ್ಲ. ತುಂಬಾ ಬ್ಯುಝಿ ಇದ್ದೇನೆ ಅಪ್ಪ ಅನ್ನುತ್ತಾನೆ. ಪ್ರತಿದಿನ ಗೇಟಿನ ಸದ್ದು ಕೇಳುವಾಗಲೂ ಅಪ್ಪನಲ್ಲೊಂದು ಆಸೆ. ಮಗ ಬಂದಿರಬಹುದೇ ಅಂತ ಆಸೆಗಣ್ಣಿನಿಂದ ಬಾಗಿಲಿಗೆ ಬರುತ್ತಾರೆ. ನಡೆಯಲೂ ಆಗುತ್ತಿಲ್ಲ. ಕೋಲಿಗೆ ದೇಹದ ಭಾರವನ್ನು ಹಾಕಿ ತುಸು ಹೊತ್ತು ಗೇಟನ್ನೇ ವೀಕ್ಷಿಸುತ್ತಾರೆ. ಕಣ್ಣಲ್ಲಿ ಹನಿ ಕಣ್ಣೀರು. ಮಗನ ಬ್ಯುಝಿ ಒಮ್ಮೆ ಮುಗಿಯಲಿ ಅಂತ ಪ್ರಾರ್ಥಿಸುತ್ತಾರೆ. ಕಾದು ಕಾದು ದಣಿವಾದಾಗ ಒಳ ಹೋಗುತ್ತಾರೆ. ಮತ್ತೆ ಗೇಟು ಸದ್ದಾಗುತ್ತದೆ. ಮತ್ತದೇ ಆಸೆಗಣ್ಣು. ಕೋಲು ಹಿಡಿದ ಜೀವ ಮತ್ತೆ ಬಾಗಿಲಿಗೆ ಬರುತ್ತದೆ. ಮುಚ್ಚಿದ ಗೇಟನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ದೀರ್ಘ ನಿಟ್ಟುಸಿರು. ಜತೆಗೇ ತಾನು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಿಕೊಳ್ಳುತ್ತದೆ. ಬ್ಯುಝಿ ಲೈಫು, ಆಟ ಆಡುವಂತೆ ಮಗನ ದುಂಬಾಲು, ಪ್ರತಿದಿನವೂ ನಾಳೆ ಎಂದು ಮುಂದೂಡುತ್ತಿದ್ದುದು.. ಎಲ್ಲವೂ ಒಂದೊಂದಾಗಿ ಕಣ್ಣೆದುರಿಗೆ ಬರುತ್ತದೆ. ಕೊನೆಗೆ ಆ ಅಪ್ಪ ಹೇಳುತ್ತಾನೆ,
ನನ್ನ ಮಗ ನನ್ನಂತೆಯೇ ಆಗಿದ್ದಾನೆ..
      My boy was just like me
Cats in the cradele  ಎಂಬ ಕವನವೊಂದರ ಕಾಲ್ಪನಿಕ ವಿವರ ಇದು. ಖ್ಯಾತ ಗಾಯಕ ಹ್ಯಾರಿ ಚಾಪಿನ್ ರ , ವೆರೈಟೀಸ್ ಆಂಡ್ ಬಲ್ಡೆರ್ ಡಾಶ್  (Verities and balderdash) ಎಂಬ ಹಾಡಿನ ಆಲ್ಬಮ್ ಒಂದು 1974ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಕ್ಯಾಟ್ಸ್ ಇನ್ ದ ಕ್ರಾಡಲ್ ಕೂಡ ಒಂದು. ವಿಶೇಷ ಏನೆಂದರೆ, ಮೂಲ ಕವನವನ್ನು ರಚಿಸಿದ್ದೇ ಹ್ಯಾರಿಯ ಪತ್ನಿ ಸ್ಯಾಂಡಿ. ಆಕೆಯ ವಿಚ್ಛೇದಿತ ಪತಿ ಜೇಮ್ಸ್ ಕ್ಯಾಶ್ ಮೋರ್  ಮತ್ತು ನ್ಯೂಯಾರ್ಕ್ ಸಿಟಿಯ ಪ್ರತಿನಿಧಿ(ರಾಜಕಾರಣಿ)ಯಾಗಿದ್ದ ಆತನ ತಂದೆಯ ನಡುವೆ ಇದ್ದ ಸಂಬಂಧವೇ ಈ ಕವನಕ್ಕೆ ಪ್ರಚೋದನೆಯಾಗಿತ್ತು. ಇಷ್ಟಕ್ಕೂ ಕ್ಯಾಟ್ಸ್ ಇನ್ ದ ಕ್ರಾಡಲನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
    ಅಮೇರಿಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಸಂಭ್ರಮದಲ್ಲಿ ಕಳೆದ ವಾರ ಬರಾಕ್ ಒಬಾಮ ಉದ್ದದ ಭಾಷಣ ಮಾಡಿದ್ದರು. ಅಧ್ಯಕ್ಷ  ಆದಾಗಿನಿಂದ ಈ ವರೆಗೆ ಮಕ್ಕಳಾದ ಮಲಿಯಾ ಮತ್ತು ಸಸಾರ ಜೊತೆ ಪ್ರತಿ ಸಾರಿ ಶಿಕ್ಷಕರ ಸಭೆಗೆ ಹಾಜರಾದದ್ದು, ಮಗಳು ಮಲಿಯಾಳ ಜೊತೆ ಕೂತು ಹಾರಿ ಪಾಟರ್ ಸರಣಿಯ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದು.. ಎಲ್ಲವನ್ನೂ ಅವರು ಭಾಷಣದಲ್ಲಿ ನೆನಪಿಸಿಕೊಂಡಿದ್ದರು.
     ಅಂದಹಾಗೆ, ನಮ್ಮ ಪರಿಸ್ಥಿತಿಯಾದರೂ ಹೇಗಿದೆ? ಒಟ್ಟಿಗೆ ಓದುವುದು ಬಿಡಿ, ಪತ್ನಿ-ಮಕ್ಕಳ ಜೊತೆಗೆ ಕೂತು ಊಟ ಎಷ್ಟು ಸಮಯವಾಯಿತು? ಮಕ್ಕಳನ್ನು ಪ್ರೀತಿಯಿಂದ ಮಾತಾಡಿಸಲು, ಅವರೊಂದಿಗೆ ಅವರಂತಾಗಲು ನಮ್ಮಲ್ಲಿ ಎಷ್ಟು ಮಂದಿಗೆ ಪುರುಸೊತ್ತಿದೆ? ಬೆಳಗ್ಗೆದ್ದು ಬ್ರಶ್ ಮಾಡುವ ಅಪ್ಪ ಬಳಿಕ ಕಚೇರಿಗೆ ಹೋಗುವ ತಯಾರಿಯಲ್ಲಿ ತೊಡಗುತ್ತಾನೆ. ಕಾಲ್ ಮಾಡುವುದು ಅಥವಾ ಸ್ವೀಕರಿಸುವುದು, ಮೆಸೇಜ್ ಮಾಡುವುದು, ಟಿ.ವಿ. ವೀಕ್ಷಿಸುವುದು.. ಮುಂತಾದುವುಗಳಲ್ಲಿ ಬ್ಯುಝಿಯಾಗುತ್ತಾನೆ. ಬಟ್ಟೆಗೆ ಇಸ್ತ್ರಿ ಹಾಕಲಾಗಿದೆಯೋ ಎಂದು ಪರೀಕ್ಷಿಸಿ, ಇಲ್ಲದಿದ್ದರೆ ಪತ್ನಿಯ ಮೇಲೆ ಸಿಟ್ಟಾಗುತ್ತಾನೆ. ಹಾಗಂತ ಇಸ್ತ್ರಿ ಹಾಕುವಷ್ಟು ಆತನಲ್ಲಿ ಬಿಡುವು ಇಲ್ಲ ಎಂದಲ್ಲ. ಇಸ್ತ್ರಿ ಹಾಕುವ, ಅಡುಗೆ ಮಾಡುವ, ಮಕ್ಕಳನ್ನು ಶಾಲೆಗೆ ಸಿದ್ಧಪಡಿ ಸುವ, ಹೋಮ್ ವರ್ಕ್  ಮಾಡಿಸುವ, ಮಗುವಿನ  ‘ಒಂದೆರಡನ್ನು’ ತೆಗೆದು ಶುಚಿಗೊಳಿಸುವ, ಬಟ್ಟೆ ಒಗೆಯುವ, ನೆಲ ಗುಡಿ ಸುವ.. ಎಲ್ಲವನ್ನೂ ಪತ್ನಿಯ ‘ಕೆಲಸದ ಪಟ್ಟಿಗೆ’ ಸೇರಿಸಿದ ಎಷ್ಟು ಅಪ್ಪಂದಿರಿಲ್ಲ ನಮ್ಮಲ್ಲಿ? ಮಕ್ಕಳು ಯಾಕೆ ತಾಯಿಯನ್ನೇ ಹಚ್ಚಿಕೊಳ್ಳುತ್ತವೆ ಎಂದು ಅನೇಕರು ಪ್ರಶ್ನಿಸುವುದಿದೆ. ಯಾಕೆಂದರೆ, ಮಕ್ಕಳ ಪಾಲಿಗೆ ತಾಯಿ ಯಾವಾಗಲೂ ತಾಯಿಯೇ ಆಗಿರುತ್ತಾಳೆ. ಇಷ್ಟು ಕೆಲಸಗಳಲ್ಲಿ ಮಾತ್ರ ನಾನು ತಾಯಿ, ಉಳಿದಂತೆ ತಾಯಿಯ ಪಾತ್ರ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ತಾಯಿ ಹೇಳುವುದೇ ಇಲ್ಲ. ಆದರೆ ಅಪ್ಪ ಇಂಥ ಷರತ್ತುಗಳೊಂದಿಗೇ ಬದುಕುವುದು. ಆತ ಮಕ್ಕಳ ಪಾಲಿಗೆ ಯಾವಾಗಲೂ 'ಅಪ್ಪ' ಆಗಿರುವುದೇ ಇಲ್ಲ. ಕೆಲವೊಮ್ಮೆ ಯಜಮಾನ, ಕೆಲವೊಮ್ಮೆ ಅಂತರ ಕಾಯ್ದುಕೊಳ್ಳುವವ, ಕೆಲವೊಮ್ಮೆ ಜವಾಬ್ದಾರಿಯಿಂದ ನುಣುಚಿಕೊಳ್ಳುವವ.. ಹೀಗೆ ವಿವಿಧ ಪಾತ್ರಗಳೊಂದಿಗೆ ಅವನು ಬದುಕುತ್ತಿರುತ್ತಾನೆ. ಅಂದಹಾಗೆ, ಬೆಳಗ್ಗೆದ್ದು ಬ್ರಶ್ ಮಾಡುತ್ತಿರುವ ಅಪ್ಪ ಅಲ್ಲೇ ಇರುವ ಮಗನಿಗೋ ಮಗಳಿಗೋ ಬ್ರಶ್ ಮಾಡಿಸುವಂತೆ ಪತ್ನಿಗೆ ಆದೇಶಿಸುತ್ತಾನೆಯೇ ಹೊರತು ಸ್ವಯಂ ಮಾಡುವುದಿದೆಯೇ? ಮಗು ‘ಎರಡು’ ಮಾಡಿದರೆ ಬೇಗ ಶುಚಿಗೊಳಿಸುವಂತೆ ಪತ್ನಿಗೆ ಆದೇಶಿಸುವುದಲ್ಲದೆ ಸ್ವಯಂ ಶುಚಿಗೊಳಿಸುವ ಅಪ್ಪಂದಿರು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಪತ್ನಿ ಅಡುಗೆ ಮನೆಯಲ್ಲಿ ಬ್ಯುಝಿಯಾಗಿದ್ದರೂ ಮಕ್ಕಳನ್ನು ಸ್ನಾನ ಮಾಡಿಸುವುದಕ್ಕೆ ನಾವು ಮುಂದಾಗುತ್ತೇವಾ?
     ನಿಜವಾಗಿ, ಸ್ನಾನ ಮಾಡಿಸುವುದು, ಶುಚಿಗೊಳಿಸುವುದು, ಶಾಲೆಗೆ ಸಿದ್ಧಪಡಿಸುವುದೆಲ್ಲ ಬರೇ ಕೆಲಸಗಳಲ್ಲ. ಅವು ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸ, ಆತ್ಮೀಯತೆಗಳನ್ನು ಬೆಳೆಸುವ ಕೊಂಡಿಯೂ ಹೌದು. ಮಗುವಿಗೆ ಸ್ನಾನ ಮಾಡಿಸುವಾಗ ಅಲ್ಲಿ ಮಾತುಕತೆಗಳು ನಡೆಯುತ್ತವೆ. ಮಗು ತನ್ನ ಕಾಲಿಗೋ ಕೈಗೋ ಆದ ಗಾಯವನ್ನು ಅಪ್ಪನೊಂದಿಗೆ ಹೇಳಿಕೊಳ್ಳುತ್ತದೆ. ನಿನ್ನೆ ಯಾವ ಆಟ ಆಡಿದ್ದೆ, ಹೇಗೆ ಬಿದ್ದೆ, ಎಷ್ಟು ಕೂಗಿದೆ.. ಎಂದೆಲ್ಲಾ ಹೇಳುತ್ತಾ ಅದು ಅಪ್ಪನನ್ನು ಮಾತಾಡಿಸುತ್ತದೆ. ಆಗ ಅಪ್ಪ ಮಗುವಾಗುತ್ತಾನೆ. ಅಪ್ಪ ಕಣ್ಣಿಗೆ ಸೋಪು ಹಾಕಿದರೆಂದು ಮಗು ತಾಯಿಯಲ್ಲಿ ದೂರು ಹೇಳುತ್ತದೆ. ಅಪ್ಪ ಮತ್ತು ಮಗುವಿನ ಮಧ್ಯೆ ತಾಯಿ ರಾಜಿ ಮಾಡಿಸುತ್ತಾಳೆ. ಅಲ್ಲೊಂದು ಪ್ರೀತಿಯ, ತಮಾಷೆಯ ವಾತಾವರಣ ಸೃಷ್ಟಿಯಾಗುತ್ತದೆ. ಮಗನದ್ದೋ ಮಗಳದ್ದೋ ಸಮವಸ್ತ್ರಕ್ಕೆ ಇಸ್ತ್ರಿ ಹಾಕುವಾಗ, ಶೂಸ್ ಗೆ  ಪಾಲಿಶ್ ಹಾಕುವಾಗ, ಸಾಕ್ಸು ಧರಿಸುವಾಗಲೆಲ್ಲ ಮಗು ಮತ್ತು ಅಪ್ಪನ ಮಧ್ಯೆ ಸಂಭಾಷಣೆ ನಡೆದೇ ನಡೆಯುತ್ತದೆ. ಶಾಲಾ ವ್ಯಾನ್ ನಲ್ಲಿ  ತನ್ನ ಶೂಸ್ ಗೆ  ಸಹಪಾಠಿ ತುಳಿದದ್ದು, ಆಡುವಾಗ ಬಿದ್ದು ಸಮವಸ್ತ್ರದಲ್ಲಿ ಕೊಳೆಯಾದದ್ದು, ಟೀಚರು ಜೋರು ಮಾಡಿದ್ದು.. ಎಲ್ಲವನ್ನೂ  ಮಗು ಅಪ್ಪನೊಂದಿಗೆ ಹೇಳುತ್ತದೆ. ಆದರೆ ಸ್ನಾನ ಮಾಡಿಸುವುದು, ಶಾಲೆಗೆ ಸಿದ್ಧಪಡಿಸುವುದನ್ನು ಪತ್ನಿಯ ಕೆಲಸವಾಗಿ ಪರಿಗಣಿಸುವ ಪತಿಗೆ ಇವೆಲ್ಲದರ ಅನುಭವ ಆಗುವುದೇ ಇಲ್ಲ.
     ಇಷ್ಟಕ್ಕೂ, ಮಕ್ಕಳೊಂದಿಗೆ ಆಡುವುದಕ್ಕೆ, ಅವರೊಂದಿಗೆ ಚಿತ್ರ ಬಿಡಿಸುವುದಕ್ಕೆ, ಅವರು ಸೀರಿಯಸ್ ಆಗಿ ಹೇಳುವ 'ಸಿಲ್ಲಿ' ಮಾತುಗಳನ್ನು ಆಲಿಸುವುದಕ್ಕೆ ಆಸಕ್ತಿಯನ್ನೇ ತೋರಿಸದೆ, ಅವರು ಕೇಳಿದುದನ್ನೆಲ್ಲ ಖರೀದಿಸಿ ಕೊಟ್ಟು, ಅದನ್ನೇ ಪ್ರೀತಿ ಎಂದು ನಂಬಿರುವ ಅಪ್ಪಂದಿರು ನಮ್ಮ ನಡುವೆ ಎಷ್ಟಿಲ್ಲ ಹೇಳಿ? ಮಕ್ಕಳ ಮನಸ್ಸು ತೀರಾ ಸೂಕ್ಷ್ಮ ವಾದುದು. ದೊಡ್ಡವರು ಏನು ಮಾಡುತ್ತಾರೋ ಅವನ್ನೇ ಅವೂ ಮಾಡಲು ಪ್ರಯತ್ನಿಸುತ್ತವೆ. ಇಂಥ ಸಂದರ್ಭಗಳಲ್ಲೆಲ್ಲಾ ಅಪ್ಪನಿಗೆ ಸಿಟ್ಟು ಬರುವುದೇ ಹೆಚ್ಚು. ನಿಜವಾಗಿ, 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಅನ್ನುವ ಸಂದೇಶವೊಂದು ಯಾವಾಗಲೂ ಅಪ್ಪನಿಂದ ಮಕ್ಕಳಿಗೆ ರವಾನೆಯಾಗುತ್ತಿರಬೇಕು. ಹಾಗಂತ, ಮಗುವಿಗೆ ನಾಲ್ಕು ಬಾರಿಸಿ, 'ನಾನು ಪ್ರೀತಿಸುತ್ತೇನೆ ಮಗೂ' ಅನ್ನುವುದಲ್ಲವಲ್ಲ. ನಮ್ಮ ಭಾಷೆ, ಮಾತು, ವರ್ತನೆಗಳೇ ಮಗುವಿಗೆ ಅಂಥದ್ದೊಂದು ಸಂದೇಶವನ್ನು ಕೊಡುತ್ತಿರಬೇಕು. ಮಕ್ಕಳೊಂದಿಗೆ ಹಾಡುವುದು, ಅವರನ್ನು ಹೆಚ್ಚು ಆಲಿಸುವುದು, ಸುಮ್ಮನೆ ಸಿಟ್ಟು ಬರಿಸುವುದೆಲ್ಲ ಮಾಡುತ್ತಿರಬೇಕು. ಅಂದಹಾಗೆ, ಪ್ರವಾದಿ ಮುಹಮ್ಮದ್ ರು (ಸ) ತಮ್ಮ ಬ್ಯುಝಿ ಕಾರ್ಯಕ್ರಮ ಪಟ್ಟಿಯ ಮಧ್ಯೆಯೂ ಮಗಳು ಫಾತಿಮಾರನ್ನು ಎತ್ತಿಕೊಳ್ಳುತ್ತಿದ್ದರು, ಮುತ್ತಿಕ್ಕುತ್ತಿದ್ದರು, ಆಸನದಲ್ಲಿ ಕುಳ್ಳಿರಿಸುತ್ತಿದ್ದರು ಎಂದು ಮಾತ್ರವಲ್ಲ, ಮೊಮ್ಮಕ್ಕಳಾದ ಹಸನ್-ಹುಸೈನ್ ರನ್ನು ಬೆನ್ನಿನಲ್ಲಿ ಕೂರಿಸಿ ಆಟವಾಡಿಸಿದ್ದರೆಂಬುದೆಲ್ಲ ಬರೇ ಓದಿಗಷ್ಟೇ ಯಾಕೆ ಸೀಮಿತವಾಗಬೇಕು?
 ಕಚೇರಿ, ಪ್ರಾಜೆಕ್ಟು, ಅದು-ಇದು ಮುಂತಾದುವುಗಳೆಲ್ಲ ಇದ್ದದ್ದೇ. ಅದರ ಜೊತೆಗೇ ಮಕ್ಕಳ ಬಾಲ್ಯವನ್ನು ಅನುಭವಿಸಲು, ಮಕ್ಕಳೊಂದಿಗೆ ಮಕ್ಕಳಾಗಿ, ಅವರಿಗೆ ಸೂಕ್ತ ಸಂದೇಶಗಳನ್ನು ರವಾನಿಸುತ್ತಿರಲು ನಮಗೆ ಸಾಧ್ಯವೂ ಆಗಬೇಕು. ಯಾಕೆಂದರೆ, ಬಾಲ್ಯ ಕಾಲ ಮತ್ತೆ ಮತ್ತೆ ಬರುವುದಿಲ್ಲವಲ್ಲ. ಮಸೀದಿಗೆ ಹೋಗುವಾಗ ಮಕ್ಕಳನ್ನು ಕರಕೊಂಡು ಹೋಗುವುದರಿಂದ, ಅಂಗಡಿಗೆ ಹೋಗುವಾಗ ಜೊತೆಗೊಯ್ದು, ಅಲ್ಲಿಯ ವ್ಯವಹಾರಗಳನ್ನು ವೀಕ್ಷಿಸುವುದಕ್ಕೆ ಅವಕಾಶ ಒದಗಿಸುವುದರಿಂದ ಮಗು ಅನೇಕಾರು ಸಂಗತಿಗಳನ್ನು ಕಲಿಯುತ್ತದೆ. ನಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಇವೆಲ್ಲವನ್ನೂ ಮಾಡುವ ಅಂತ ತೀರ್ಮಾನಿಸುವುದಕ್ಕೆ ಬಾಲ್ಯವೇನು ನಿಂತಲ್ಲೇ ನಿಂತಿರುತ್ತದಾ? ಅಷ್ಟಕ್ಕೂ, 'ಬಾಲ್ಯದಲ್ಲಿ ನಮ್ಮ ಮೇಲೆ ಹೆತ್ತವರು  ಕರುಣೆ ತೋರಿದಂತೆ, ಈ ಮುಪ್ಪಿನಲ್ಲಿ ಅವರ ಮೇಲೆ ಕರುಣೆ ತೋರು' ಎಂದು ನಮ್ಮ ಮಕ್ಕಳು ನಮಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದು (ಪವಿತ್ರ ಕುರ್ಆನ್: 17: 24) ಬಯಸುವ ನಾವು, ಅದಕ್ಕೆ ಅರ್ಹರೂ ಆಗಿರಬೇಕಲ್ಲವೇ? ನಾವು ಬಾಲ್ಯದಲ್ಲಿ ಅವರನ್ನು ಪ್ರೀತಿಸದೇ, ಮುದ್ದಿಸದೇ, ಆಡಿಸದೇ ಇದ್ದರೆ ಅವರು ನಮ್ಮ ಪರವಾಗಿ ಹೀಗೆ ಪ್ರಾರ್ಥಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ?
      ಆಡಳಿತದ ಬ್ಯುಝಿಯ ಮಧ್ಯೆಯೂ ಶಿಕ್ಷಕರ ಸಭೆಗೆ ಹಾಜರಾಗುವ, ಮಕ್ಕಳ ಜೊತೆ ಪುಸ್ತಕ ಓದುವ ಒಬಾಮರನ್ನು ನೋಡುತ್ತಾ ಇವೆಲ್ಲ ನೆನಪಾಯಿತು.

Monday, November 5, 2012

ಸೌದಿ, ವೆನೆಜುವೇಲ, ಇರಾಕ್ ಗಳಿದ್ದರೂ ಅವರೆಲ್ಲಾ ಅಮೆರಿಕವನ್ನೇ ದ್ವೇಷಿಸುವುದೇಕೆ?   ಒಂದು ಶೇಕಡಾ ಜನರಿಂದ
   ಒಂದು ಶೇಕಡಾ ಜನರಿಗೋಸ್ಕರ
   ಒಂದು ಶೇಕಡಾ ಜನರ ಸರಕಾರ..
       ಹಾಗಂತ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಖ್ಯಾತ ಆರ್ಥಿಕ ತಜ್ಞ ಜೋಸೆಫ್ ಸ್ಟಿಗ್ಲಿಜ್ ರು  ವಾರಗಳ ಹಿಂದೆ  ವಿಶ್ಲೇಷಿಸಿದ್ದರು. ಇದಕ್ಕೆ ಕಾರಣವೂ ಇದೆ..
       ಮಿಟ್ ರೋಮ್ನಿ ಮತ್ತು ಒಬಾಮರ ಮಧ್ಯೆ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ 2.5 ಬಿಲಿಯನ್ ಡಾಲರ್ ಖರ್ಚು ತಗಲಬಹುದೆಂಬುದು ಖಚಿತವಾಗಿದೆ. ಈ ಮೊತ್ತವನ್ನು ಒಬಾಮ ಮತ್ತು ರೋಮ್ನಿಯ ಮಧ್ಯೆ ಸಮಾನವಾಗಿ ವಿಂಗಡಿಸಿದರೆ 1.25 ಬಿಲಿಯನ್ ಡಾಲರ್ ಆಗುತ್ತದೆ. ಒಂದು ವೇಳೆ ಮುಂದಿನ 4 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮಿಟ್ ರೋಮ್ನಿ ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ. ಅವರು ಈ ಮೊತ್ತವನ್ನು ಮರಳಿ ಪಡಕೊಳ್ಳಬೇಕಾದರೆ ಪ್ರತಿದಿನ 8,50,000 ಡಾಲರ್ ಗಳಿಸಬೇಕಾಗುತ್ತದೆ ಅಥವಾ ತನಗೆ ದುಡ್ಡು ನೀಡಿದ ಕಂಪೆನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಅಗಾಗ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಮೆರಿಕದಲ್ಲಿ ಯುದ್ಧ ಟ್ಯಾಂಕ್ ಗಳನ್ನು ತಯಾರಿಸುವ ಜನರಲ್ ಡೈನಾಮಿಕ್ಸ್ ಎಂಬ ಬೃಹತ್ ಸಂಸ್ಥೆಯಿದೆ. ಅಮೆರಿಕದ ವಿವಿಧ ಪಾರ್ಲಿಮೆಂಟ್ ಸದಸ್ಯರು 2001ರಿಂದ 5.3 ಮಿಲಿಯನ್ ಡಾಲರ್ ಮೊತ್ತವನ್ನು ಈ ಸಂಸ್ಥೆಯಿಂದ ಪಡೆದಿದ್ದಾರೆ ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟೆಗ್ರಿಟಿ(CPI)ಯ ತನಿಖೆಯಿಂದ ಬಹಿರಂಗವಾಗಿತ್ತು. ಇಷ್ಟಕ್ಕೂ ಅಫಘಾನ್ ಮತ್ತು ಇರಾಕ್ ಮೇಲಿನ ಅಮೆರಿಕದ ದಾಳಿಗೆ ಈ ವರೆಗೆ 2.6ರಿಂದ 4 ಟ್ರಿಲಿಯನ್ ಡಾಲರ್ ಗಳಷ್ಟು ಖರ್ಚಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ, ಸದ್ಯ ಅಮೆರಿಕ 16 ಟ್ರಿಲಿಯನ್ ಡಾಲರ್ ಗಳಷ್ಟು ಸಾಲದಲ್ಲೂ ಇದೆ. ನೀವೇ ಹೇಳಿ, ಅಮೆರಿಕ ಇಂಥದ್ದೊಂದು ದಾಳಿಗೆ ಮುಂದಾಗಬೇಕಾದ ಅನಿವಾರ್ಯತೆ ಇತ್ತೆ? ಇರಾಕ್ ನ  ಮೇಲೆ ಅಮೆರಿಕ ದಾಳಿ ಮಾಡದೇ ಇರುತ್ತಿದ್ದರೆ, ಇರಾಕೇನೂ ಅಮೇರಿಕದ ಮೇಲೆ ದಾಳಿ ಮಾಡುತ್ತಿರಲಿಲ್ಲವಲ್ಲ. ಹೀಗಿರುವಾಗ, ತನ್ನ ದೇಶವನ್ನು ಸಾಲದಲ್ಲಿ ಮುಳುಗಿಸಬಹುದಾದ ದಾಳಿಯೊಂದಕ್ಕೆ ಅಮೆರಿಕ ಮುಂದಾದದ್ದೇಕೆ? ನಿಜವಾಗಿ, ಶಸ್ತ್ರಾಸ್ತ್ರ ಕಂಪೆನಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಅಮೆರಿಕದ ನೀತಿ-ನಿರೂಪಣೆಯ ಮೇಲೆ ಬಲವಾದ ಪ್ರಭಾವ ಬೀರುತ್ತಿವೆ ಎಂಬುದು ಸಾಬೀತಾಗುವುದೇ ಇಲ್ಲ್ಲಿ.
      ನೋಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲೆಡ್ಜ್ ರ , ‘ದಿ ಟ್ರಿಲಿಯನ್ ಡಾಲರ್ ವಾರ್’ ಎಂಬ ಕೃತಿಯನ್ನು ಓದಿದರೆ, ಯುದ್ಧವೆಂಬ ವ್ಯಾಪಾರದ ಧಾರಾಳ ವಿವರಗಳು ಸಿಗುತ್ತವೆ. 2008ರಲ್ಲಿ ಬಿಡುಗಡೆಯಾದ ಈ ಕೃತಿಯಲ್ಲಿ ಅಫಘಾನ್ ಮೇಲಿನ ದಾಳಿಯಲ್ಲಿ ಭಾಗಿಯಾದ ಅಮೆರಿಕನ್ ಸೈನಿಕರಿಗೆ ಅಪಾರ ಪ್ರಮಾಣದ ದುಡ್ಡು ನೀಡಲಾದ ಬಗ್ಗೆ ವಿವರಗಳಿವೆ. ಬದುಕಿನಾದ್ಯಂತ ಆರಾಮವಾಗಿ ಜೀವಿಸುವುದಕ್ಕೆ ಸಾಕಾಗುವಷ್ಟು ಮೊತ್ತವನ್ನು ಅವರೆಲ್ಲರಿಗೆ ನೀಡಲಾಗಿದೆ ಎನ್ನುತ್ತದೆ ಈ  ಕೃತಿ. ಇಷ್ಟೇ ಅಲ್ಲ,
    1. ಗೋಲ್ಡನ್ ಸ್ಯಾಚೆಸ್
    2. ಜೆ.ಪಿ. ಮಾರ್ಗನ್ ಚೇಸ್
    3. ಸಿಟಿ ಗ್ರೂಪ್
    4. ಯು.ಬಿ.ಎಸ್. ಬ್ಯಾಂಕ್
    5. ಮಾರ್ಗನ್ ಸ್ಟಾನ್ಲಿ
    6. ಜನರಲ್ ಎಲೆಕ್ಟ್ರಿಕ್..
2008ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮರಿಗಾಗಿ ಈ ಎಲ್ಲ ಹಣಕಾಸು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದುವು. ಈ ಹಿಂದೆ ನ್ಯೂಯಾರ್ಕ್ ಫೆಡರಲ್ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಟಿಮ್ ಗೈತನರ್  ರನ್ನು ತನ್ನ ಖಜಾನೆಯ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುವ ಮೂಲಕ ಹಣಕಾಸು ಸಂಸ್ಥೆಗಳ ಋಣವನ್ನು ಒಬಾಮ ಬಳಿಕ ತೀರಿಸಿದರು. ಇನ್ನೋರ್ವ ಬ್ಯಾಂಕ್ ಮುಖ್ಯಸ್ಥ ಲಾರೆನ್ಸ್ ಸಮ್ಮರ್ಸ್ ರನ್ನು ತನ್ನ ಪ್ರಮುಖ ಆರ್ಥಿಕ ಸಲಹೆಗಾರರನ್ನಾಗಿ ಅವರು ನೇಮಿಸಿಕೊಂಡರು. ಒಂದು ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂಬುದು ಅಲ್ಲಿನ ಬೃಹತ್ ಉದ್ಯಮಿಗಳ, ಹಣಕಾಸು ಸಂಸ್ಥೆಗಳ ಮತ್ತು ಶಸ್ತ್ರಾಸ್ತ್ರ ಕಂಪೆನಿಗಳ ಚುನಾವಣೆಯೂ ಆಗಿದೆ. ಅವು ತಮ್ಮ ಭವಿಷ್ಯದ ಬಜೆಟ್ಟನ್ನು ನಿರ್ಧರಿಸುವುದೇ ಈ ಚುನಾವಣೆಯಲ್ಲಿ. ನಾವು ಇಲ್ಲಿ ಭೂಮಿಗೆ, ಚಿನ್ನಕ್ಕೆ, ಶೇರ್ ಗೆ  ಬಂಡವಾಳ ಹೂಡುವಂತೆ ಇವು ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡುತ್ತವೆ. ಬಳಿಕ ಬಂಡವಾಳ ಹಿಂತಿರುಗಿಸುವಂತೆ ಅಭ್ಯರ್ಥಿಯ ಮೇಲೆ ವಿವಿಧ ಬಗೆಯ ಒತ್ತಡಗಳನ್ನು ಹೇರತೊಡಗುತ್ತವೆ. ಇಲ್ಲದಿದ್ದರೆ, ವಿದೇಶಿ ನೇರ ಹೂಡಿಕೆಗೆ ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಅಮೆರಿಕಕ್ಕೆ ಏನಿತ್ತು ದರ್ದು? ವಾಲ್ಮಾರ್ಟ್ ನಂಥ ಪ್ರಭಾವಿ ಕಂಪೆನಿಗಳನ್ನು ಭಾರತದ ಚಿಲ್ಲರೆ ಮಾರಾಟ ವಲಯದ ಮೇಲೆ ಹೇರಲು ಒಬಾಮರಿಗೆ ಅಂಥ ಆಸಕ್ತಿಯೇನು?
     ಅಫಘಾನ್ ಅತಿಕ್ರಮಣದ 11ನೇ ವರ್ಷಾಚಾರಣೆಯ ಪ್ರಯುಕ್ತ ನ್ಯೂಯಾರ್ಕಿನಲ್ಲಿ ತಿಂಗಳ ಹಿಂದೆ ಪ್ರತಿಭಟನೆಯೊಂದು ನಡೆದಿತ್ತು. ಕಳೆದ ವರ್ಷ ಅಮೆರಿಕದಾದ್ಯಂತ ಹಬ್ಬಿಕೊಂಡಿದ್ದ ಅಕ್ಯುಪೈ ವಾಲ್ ಸ್ಟ್ರೀಟ್  ಎಂಬ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆವಿನ್ ಝೀಸ್ ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ. ಇರಾಕ್, ಅಫಘಾನ್ ವಿಯೆಟ್ನಾಮ್.. ಮುಂತಾದೆಡೆ ಯುದ್ಧಗಳಲ್ಲಿ ಭಾಗವಹಿಸಿದ ಮಾಜಿ ಸೈನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯುದ್ಧ ಹೇಗೆ ಲಾಭಕರವಾಗಿದೆ ಎಂಬುದನ್ನು ಝೀಸ್ ಸಭೆಯಲ್ಲಿ ವಿವರಿಸಿದ. ಯೋಧರೇ ಅಚ್ಚರಿಗೆ ಒಳಗಾಗುವಷ್ಟು ಮಾಹಿತಿಗಳನ್ನು ಮುಂದಿಟ್ಟ. ನಿಜವಾಗಿ, ಅಮೆರಿಕದ ಅವಳಿ ಕಟ್ಟಡ ಉರುಳಿದಾಗ ಸಾವಿಗೀಡಾದದ್ದು 3 ಸಾವಿರ ಮಂದಿ. ಆದರೆ ಅದರ ಹೆಸರಲ್ಲಿ ಅಮೆರಿಕ ಕೈಗೊಂಡ ಕಾರ್ಯಾಚರಣೆಯಿಂದ 6 ಸಾವಿರ ಸೈನಿಕರು ಈಗಾಗಲೇ ಸಾವಿಗೀಡಾಗಿದ್ದಾರೆ. ಪ್ರತಿ 24 ಗಂಟೆಗಳಿಗೊಮ್ಮೆ ಓರ್ವ ಸೈನಿಕನಾದರೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ. 2003ರಿಂದ 2008ರ ವರೆಗೆ ಕೇವಲ ಇರಾಕ್ ಒಂದರಲ್ಲಿಯೇ 6,50,000 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. 1.8 ಮಿಲಿಯನ್ ಇರಾಕಿಗಳು ದೇಶ ಬಿಟ್ಟು ವಲಸೆ ಹೋಗಿದ್ದಾರೆ. ತಮ್ಮ ದೇಶದಲ್ಲಿಯೇ ಅತಂತ್ರರಾದವರ ಸಂಖ್ಯೆ 1.6 ಮಿಲಿಯನ್ (ದಿ ಹಿಂದು , ಅಕ್ಟೋಬರ್ 25, 2012). ಆದರೆ, ಇಷ್ಟೆಲ್ಲಾ ಮಾಹಿತಿಗಳು ಕಣ್ಣ ಮುಂದಿದ್ದರೂ ಒಬಾಮ ಮತ್ತು ರೋಮ್ನಿ ಮಧ್ಯೆ ನಡೆದ ಚರ್ಚೆಗಳಲ್ಲಿ ಇವುಗಳ ಪ್ರಸ್ತಾಪವೇ ಆಗಿಲ್ಲವೇಕೆ? ಒಬಾಮ ಮತ್ತು ರೋಮ್ನಿಯ ಮಧ್ಯೆ 3 ಸುತ್ತಿನ ಬಹಿರಂಗ ಚರ್ಚೆ ಈಗಾಗಲೇ ಮುಗಿದಿದೆ. ಅಂತಿಮವಾಗಿ ಈ ಚರ್ಚೆಯಲ್ಲಿ ಗೆದ್ದದ್ದು ಒಬಾಮ ಎಂಬ ತೀರ್ಮಾನಕ್ಕೂ ಬರಲಾಗಿದೆ. ಆದರೆ, ಈ ಚರ್ಚೆಯಲ್ಲಿ ಅಫಘಾನ್ ಮತ್ತು ಇರಾಕ್ ಮೇಲಿನ ದಾಳಿಗಾದ ಖರ್ಚಿನ ಕುರಿತು ಇಬ್ಬರೂ ಚಕಾರವೆತ್ತಲೇ ಇಲ್ಲ. ಸೇನೆಗೆ ಇನ್ನಷ್ಟು ಹಣ ಮೀಸಲಿಡುವ ಬಗ್ಗೆ ರೋಮ್ನಿ ಹೇಳಿಕೊಂಡರಲ್ಲದೇ, ಡ್ರೋನನ್ನೂ ಸಮರ್ಥಿಸಿಕೊಂಡರು. ಆದರೆ ಅತಿಕ್ರಮಣದಲ್ಲಿ ಸಾವಿಗೀಡಾದ ಇರಾಕ್, ಅಫಘಾನಿಯರ ಬಗ್ಗೆ ಅವರು ಅಪ್ಪಿತಪ್ಪಿಯೂ ಉಲ್ಲೇಖಿಸಲಿಲ್ಲ. ಅದು ಬಿಡಿ, ಅಣು ವಿದ್ಯುತ್ ನ  ಬಗ್ಗೆ ಒಬಾಮ ಒಂದೇ ಒಂದು ಬಾರಿಯಾದರೂ ಮಾತಾಡಲಿಲ್ಲ. ಅದು ಸುರಕ್ಷಿತ ವಿದ್ಯುತ್ ಎಂದೂ ಹೇಳಲಿಲ್ಲ. ಅವರು ವಾಯು, ಸೋಲಾರ್ ಮತ್ತು ಬಯೋ ವಿದ್ಯುತ್ ನ  ಬಗ್ಗೆಯಷ್ಟೇ ಚರ್ಚೆಯಲ್ಲಿ ಉಲ್ಲೇಖಿಸಿದ್ದರು. ಅಣು ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತದ ಮೇಲೆ ಒತ್ತಡ ಹೇರಿ ಯಶಸ್ವಿಯಾದ ಮತ್ತು ಜೈತಾಪುರ್ (ಫ್ರಾನ್ಸ್ ಪ್ರಾಯೋಜಕತ್ವ) ಸಹಿತ ದೇಶದ ವಿವಿಧ ಭಾಗಗಳಲ್ಲಿ ಅಣು ಸ್ಥಾವರಗಳನ್ನು ನಿರ್ಮಿಸಲು ಉತ್ತೇಜನ ಕೊಟ್ಟ ಇದೇ ಅಮೆರಿಕಕ್ಕೆ ಅಣು ವಿದ್ಯುತ್ ಅಪಥ್ಯವಾದುದೇಕೆ? ರೋಮ್ನಿ ಅಣು ವಿದ್ಯುತ್ ನ  ಬಗ್ಗೆ ಒಮ್ಮೆ ಉಲ್ಲೇಖಿಸಿದರೂ ಅದಕ್ಕೆ ಒತ್ತು ಕೊಡಲಿಲ್ಲ. ಇವೆಲ್ಲ ಏನು? ಒಳಗೊಂದು ಹೊರಗೊಂದು ನೀತಿಯೇ ಅಲ್ಲವೇ? ಮಲಾಲಳ ಪ್ರಕರಣದ ಕುರಿತಂತೆ ಇವತ್ತು ಪಾಕ್ ನಲ್ಲಿ ವ್ಯಕ್ತವಾಗುತ್ತಿರುವ ಸರಣಿ ಅನುಮಾನಗಳಿಗೆ ಅಮೆರಿಕನ್ ಮಾಧ್ಯಮಗಳು ಸಿಟ್ಟಾಗಿವೆ. ಪಾಕ್ ಮತ್ತು ಅಫಘಾನ್ ಗೆ  ಅಮೆರಿಕದ ವಿಶೇಷ ರಾಯಭಾರಿಯಾಗಿ ಈ ಹಿಂದೆ ನೇಮಕವಾಗಿದ್ದ ರಿಚರ್ಡ್ ಹಾಲ್ ಬ್ರೂಕ್ ರೊಂದಿಗೆ ಮಲಾಲ ಮತ್ತು ಆಕೆಯ ತಂದೆ ಝೈದುದ್ದೀನ್ ರು  ಇರುವ ಫೋಟೋ ಇಂಟರ್ನೆಟಲ್ಲಿ  ಇತ್ತೀಚೆಗೆ ಕಾಣಿಸಿಕೊಂಡಿತ್ತು. ಇದನ್ನು ಪೋಸ್ಟ್ ಮಾಡಿದ್ದು, ಪಾಕ್ ಜಮಾಅತೆ ಇಸ್ಲಾಮಿಯ ಮಾಜಿ ಅಧ್ಯಕ್ಷ ಖಾಝಿ ಹುಸೈನ್ ರ  ಮಗಳು ಸಮಿಯ. ಪ್ರಕರಣದ ಕುರಿತಂತೆ ಭಿನ್ನ ಚರ್ಚೆಗೆ ಈ ಫೋಟೋ ಪ್ರಚೋದನೆ ನೀಡುತ್ತದೆಂದು ಅಮೆರಿಕನ್ ಮಾಧ್ಯಮಗಳು ಸಿಟ್ಟು ವ್ಯಕ್ತಪಡಿಸಿದ್ದುವು. ‘ಮಲಾಲಳ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಿಂದ  ದಾಳಿ ಮಾಡಲಾಗಿದ್ದು, ಗುಂಡು ಮೆದುಳಿಗೆ ಹಾನಿ ಮಾಡದೇ ಕೇವಲ ತಲೆ ಮತ್ತು ಕತ್ತಿನ ಸುತ್ತ ಹರಿದಾಡುತ್ತಿದೆ, ಇಂಥ ಚಾಣಾಕ್ಷ ದಾಳಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಏಯಿಂದ ಮಾತ್ರ ಮಾಡಲು ಸಾಧ್ಯ, ತಾಲಿಬಾನ್ ಗೆ  ಇಂಥ ದಾಳಿ ಮಾಡುವ ಸಾಮರ್ಥ್ಯ  ಇಲ್ಲ...’ ಎಂಬೆಲ್ಲ ವ್ಯಾಖ್ಯಾನಗಳು ಪಾಕ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಅಮೆರಿಕನ್ ಅಧಿಕಾರಿಗಳಲ್ಲ್ಲಿ ಅಸಹನೆ ಉಂಟುಮಾಡಿದೆ. ಅಂದ ಹಾಗೆ, ಅಮೆರಿಕದ ಕುರಿತಂತೆ ಈ ಬಗೆಯ ಅನುಮಾನಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾದರೂ ಯಾರು? ಹಾಗಂತ ಅಮೆರಿಕವನ್ನು ದ್ವೇಷಿಸುತ್ತಿರುವುದು ಪಾಕ್ ಒಂದೇ ಅಲ್ಲ, ಪಾಕ್ ನಂಥ ಅನೇಕಾರು ರಾಷ್ಟ್ರಗಳ ಕೋಟ್ಯಂತರ ಮಂದಿ ಇವತ್ತು ಅಮೆರಿಕವನ್ನು ದ್ವೇಷಿಸುತ್ತಿದ್ದಾರಲ್ಲ, ಯಾಕಾಗಿ? ಅಮೆರಿಕ ಏನು ಮಾಡಿದರೂ, ಯಾವ ಹೇಳಿಕೆಯನ್ನು ಕೊಟ್ಟರೂ ಅನುಮಾನಿಸುವ ವಾತಾವರಣ ನಿರ್ಮಾಣವಾದ್ದೇಕೆ? ಹೇಗೆ? ಇಷ್ಟಕ್ಕೂ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರುವುದು ಅಮೆರಿಕ ಒಂದೇ ಅಲ್ಲವಲ್ಲ. ಆದರೆ ಅವಾವುದನ್ನೂ ದ್ವೇಷಿಸದೆ ಕೇವಲ ಅಮೆರಿಕವನ್ನಷ್ಟೇ ಜನರು ದ್ವೇಷಿಸುತ್ತಾರೆಂದರೆ ಆ ದ್ವೇಷಕ್ಕೆ ಅಮೆರಿಕದ ಶ್ರೀಮಂತಿಕೆ ಕಾರಣ ಅಲ್ಲ ಎಂಬುದೂ ಸ್ಪಷ್ಟವಲ್ಲವೇ? ಒಂದು ವೇಳೆ ಶ್ರೀಮಂತಿಕೆಯೇ ಕಾರಣವೆಂದಾಗಿದ್ದರೆ ಧಾರಾಳ ತೈಲ ಸಂಪತ್ತು ಇರುವ ಸೌದಿಯನ್ನೋ, ವೆನೆಝುವೇಲವನ್ನೋ, ಇರಾಕನ್ನೋ ಜನರು ದ್ವೇಷಿಸಬೇಕಿತ್ತಲ್ಲವೇ?
     ಆದರೂ, ಮುಂದಿನ ತಿಂಗಳು ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಒಬಾಮರೋ, ರೋಮ್ನಿಯೋರೋ ಹೀಗೆಲ್ಲಾ ಆತ್ಮಾವಲೋಕನ ನಡೆಸುತ್ತಾರೆಂಬ ನಿರೀಕ್ಷೆ ಯಾರಲ್ಲೂ ಇಲ್ಲ..