|
ಸೈಯದ್ ಮೌದೂದಿ |
1925. ಅವಿಭಜಿತ ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಘರ್ಷಣೆಗಳು ಸ್ಫೋಟಗೊಂಡಿದ್ದುವು. ‘ಭಾರತದಿಂದ ಮುಸ್ಲಿಮರನ್ನು ಓಡಿಸಬೇಕು, ಮಕ್ಕಾದ ಕಅಬಾಲಯದಲ್ಲಿ ಭಗವಾಧ್ವಜವನ್ನು ಹಾರಿಸಬೇಕೆಂಬ..’ ಘೋಷಣೆಯನ್ನು ಕೆಲವು ಹಿಂದೂ ಸಂಘಟನೆಗಳು ಕೂಗತೊಡಗಿದ್ದುವು. ಮುಸ್ಲಿಮರ ವಿರುದ್ಧ ಹೋರಾಡುವುದಕ್ಕಾಗಿ ಹಿಂದೂ ಮಹಿಳೆಯರೂ ಆಯುಧ ಎತ್ತಿ ಕೊಳ್ಳಬೇಕೆಂದು ಪಂಡಿತ್ ಮದನ್ ಮೋಹನ್ ಮಾಲವೀಯ, ಲಾಲಾ ಲಜಪತ್ ರಾಯ್, ಸ್ವಾಮಿ ಶ್ರದ್ಧಾನಂದ ಮೊದಲಾದವರು ಬಹಿರಂಗವಾಗಿಯೇ ಕರೆಕೊಟ್ಟರು. ಈ ಸಂದರ್ಭದಲ್ಲೇ ಪ್ರವಾದಿಯವರನ್ನು(ಸ) ಅತ್ಯಂತ ಕೀಳು ಮಟ್ಟದಲ್ಲಿ ನಿಂದಿಸುವ, ‘ರಂಗೀಲಾ ರಸೂಲ್’ ಎಂಬ ಕೃತಿಯೊಂದು ಹೊರಬಂತು. ರಾಜಗೋಪಾಲ್ ಎಂಬ ಪುಸ್ತಕ ವ್ಯಾಪಾರಿ ಪ್ರಕಟಿಸಿದ್ದ ಆ ಕೃತಿಯನ್ನು ಬರೆದಿರುವುದು, ಹಿಂದೂ ಮಹಾ ಸಭಾದ ನಾಯಕ ಮತ್ತು ಶುದ್ಧಿ ಚಳವಳಿಯ ರೂವಾರಿಯಾಗಿದ್ದ ಸ್ವಾಮಿ ಶ್ರದ್ಧಾನಂದರು ಎಂಬೊಂದು ಅನುಮಾನ ಎಲ್ಲೆಡೆ ಹರಡಿಕೊಂಡಿತು. ಮುಸ್ಲಿಮರು ಪ್ರತಿಭಟಿಸಿದರು. ಪ್ರಕಾಶಕರ ವಿರುದ್ಧ ಕೋರ್ಟಿನಲ್ಲಿ ದಾವೆ ಹೂಡಿದರು. ಆದರೆ ಕೆಳ ನ್ಯಾಯಾಲಯ ಪ್ರಕಾಶಕರನ್ನು ದೋಷಿ ಎಂದು ಕರೆದರೂ ಲಾಹೋರ್ ಹೈಕೋರ್ಟು ನಿರ್ದೋಷಿ ಎಂದಿತು. ಮತ್ತೆ ಪ್ರತಿಭಟನೆಗಳಾದುವು. ಇಂಥ ಹೊತ್ತಲ್ಲೇ ಅಬ್ದುರ್ರಶೀದ್ ಎಂಬೋರ್ವ ವ್ಯಕ್ತಿ ಸ್ವಾಮಿ ಶ್ರದ್ಧಾನಂದರನ್ನು 1926 ಫೆಬ್ರವರಿಯಲ್ಲಿ ಹತ್ಯೆ ಮಾಡಿದ. ಇದು, ಮುಸ್ಲಿಮರ ವಿರುದ್ಧ ದ್ವೇಷದ ಅಭಿಯಾನ ಕೈಗೊಂಡವರನ್ನು ಮಾತ್ರವಲ್ಲ, ತಟಸ್ಥ ನಿಲುವಿನವರನ್ನು ಕೂಡ ಒಂದು ಹಂತದವರೆಗೆ ಕೆರಳಿಸಿಬಿಟ್ಟಿತು. ಜಿಹಾದ್‍ನ ಔಚಿತ್ಯವನ್ನೇ ಅವರು ಪ್ರಶ್ನಿಸತೊಡಗಿದರು. ‘ಇಸ್ಲಾಮ್ ಖಡ್ಗದಿಂದ ಹರಡಿದೆ, ಅದರಲ್ಲಿ ಸಹನೆಗೆ ಜಾಗವಿಲ್ಲ, ಕಾಫಿರರನ್ನು ಕೊಂದವರೆಲ್ಲಾ ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಕುರ್‍ಆನಿನಲ್ಲಿ ಇದೆ..’ ಎಂದೆಲ್ಲಾ ಹಿಂದೂ ಮಹಾ ಸಭಾದ ನಾಯಕರಷ್ಟೇ ಅಲ್ಲ, ಕೆಲವು ಕಾಂಗ್ರೆಸ್ ಮುಂದಾಳುಗಳೂ ಹೇಳತೊಡಗಿದರು. ವಿಷಾದ ಏನೆಂದರೆ, ಈ ಎಲ್ಲ ಆರೋಪಗಳಿಗೆ ಪವಿತ್ರ ಕುರ್‍ಆನಿನ ಆಧಾರದಲ್ಲಿ ಪರಿಣಾಮಕಾರಿಯಾಗಿ ಉತ್ತರಿಸುವ ಕೃತಿಯೊಂದು ಮುಸ್ಲಿಮರ ಬಳಿ ಇದ್ದಿರಲಿಲ್ಲ ಎಂಬುದು. ದೆಹಲಿಯ ಜಾಮಿಯಾ ಮಸೀದಿಯಲ್ಲಿ ಶುಕ್ರವಾರದ ಜುಮಾ ನಮಾಝಿನ ಬಳಿಕ ಮೌಲಾನಾ ಮುಹಮ್ಮದಲಿ ಜೌಹರ್‍ರು ಈ ಕೊರತೆಯ ಬಗ್ಗೆ ಮಾತಾಡಿದರು. ಇಸ್ಲಾಮಿನ ಜಿಹಾದ್‍ನ ಕುರಿತಂತೆ ಇರುವ ತಪ್ಪು ಅಭಿಪ್ರಾಯಗಳನ್ನು ನೀಗಿಸಿ, ವಾಸ್ತವವನ್ನು ಹೇಳಬಲ್ಲ ಕೃತಿಯೊಂದನ್ನು ಯಾರಾದರೂ ರಚಿಸಬಲ್ಲಿರಾ ಎಂದವರು ಸೇರಿದವರೊಂದಿಗೆ ಭಾವುಕರಾಗಿ ಪ್ರಶ್ನಿಸಿದರು. ಆ ಸಭೆಯಲ್ಲಿದ್ದ ಯುವಕನೊಬ್ಬ ಅದನ್ನು ಅಂದೇ ಸವಾಲಾಗಿ ಸ್ವೀಕರಿಸಿದ. ಜಿಹಾದ್‍ಗೆ ಸಂಬಂಧಿಸಿ ಉರ್ದು, ಅರಬಿ, ಇಂಗ್ಲಿಷ್ ಭಾಷೆಯಲ್ಲಿರುವ ಸಾಕಷ್ಟು ಗ್ರಂಥಗಳ ಅಧ್ಯಯನ ನಡೆಸಿದ. ಕೊನೆಗೆ ‘ಇಸ್ಲಾಮಿನಲ್ಲಿ ಜಿಹಾದ್’ ಎಂಬ ಜಗದ್ವಿಖ್ಯಾತ ಗ್ರಂಥವನ್ನು ರಚಿಸಿದ. ಆಗ ಆ ಯುವಕನಿಗೆ ಕೇವಲ 24 ವರ್ಷ.
ಅವರೇ ಸೈಯದ್ ಅಬುಲ್ ಆಲಾ ಮೌದೂದಿ..
1. ಕುರ್‍ಆನ್ ವ್ಯಾಖ್ಯಾನ (ತಫ್ಹೀಮುಲ್ ಕುರ್‍ಆನ್)
2. ಇಸ್ಲಾಮ್ ಧರ್ಮ
3. ಇಸ್ಲಾಮೀ ಜೀವನ ವ್ಯವಸ್ಥೆ
4. ಇಸ್ಲಾಮಿನ ರಾಜಕೀಯ ಸಿದ್ಧಾಂತ
5. ಇಸ್ಲಾಮೀ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳು
6. ಇಸ್ಲಾಮ್ ಮತ್ತು ಆಧುನಿಕ ಆರ್ಥಿಕ ಸಿದ್ಧಾಂತಗಳು
7. ಬಡ್ಡಿ
8. ಇಸ್ಲಾಮ್ ಮತ್ತು ಸಾಮಾಜಿಕ ನ್ಯಾಯ
9. ಆಧುನಿಕ ಯುಗದ ಪಂಥಾಹ್ವಾನ ಮತ್ತು ಯುವಕರು
10. ಪರ್ದಾ..
..ಹೀಗೆ 200ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದಿರುವ ಮೌದೂದಿಯವರನ್ನು ಈ ಸಮಾಜ ಆರಂಭದಲ್ಲಿ ನೋಡಿದ್ದು ಅನುಮಾನಗಳಿಂದಲೇ. ಅದಕ್ಕೆ ಕಾರಣವೂ ಇದೆ..
ಸಮಾಜದ ಕಟ್ಟುಪಾಡುಗಳನ್ನು ಪ್ರಶ್ನಿಸಿದ ಯಾರನ್ನೇ ಆಗಲಿ, ಸಮಾಜ ಹೂ-ಹಾರ ಹಾಕಿ ಸ್ವಾಗತಿಸಿದ್ದು ಇತಿಹಾಸದಲ್ಲಿ ಎಂದೂ ನಡೆದಿಲ್ಲ. ಮುಸ್ಲಿಮ್ ಸಮುದಾಯದ ಗುಲಾಮ ಮನಸ್ಥಿತಿಯನ್ನು ಮೌದೂದಿಯವರು ಗಟ್ಟಿ ಧ್ವನಿಯಲ್ಲಿ ಪ್ರಶ್ನಿಸಿದರು. ‘ಮುಸ್ಲಿಮ್’ ಆಗುವುದಕ್ಕೆ ಮುಸ್ಲಿಮ್ ಕುಟುಂಬದಲ್ಲಿ ಹುಟ್ಟಿರುವುದು ಮಾನದಂಡ ಅಲ್ಲ ಎಂದು ಮೊತ್ತಮೊದಲು ಘೋಷಿಸಿದ್ದು ಮೌದೂದಿಯೇ. ಇಸ್ಲಾಮನ್ನು ಬರೇ ‘ಮಸೀದಿಯ’ ಧರ್ಮವಾಗಿ ಪರಿಗಣಿಸಿದ್ದ ಮತ್ತು ಬದುಕಿಗೂ ಇಸ್ಲಾಮ್‍ಗೂ ಯಾವ ಸಂಬಂಧವನ್ನೂ ಜೋಡಿಸಿಲ್ಲದ ಮುಸ್ಲಿಮ್ ಸಮುದಾಯದ ಮೇಲೆ ಅವರ ಈ ಮಾತು ತೀವ್ರ ಪರಿಣಾಮವನ್ನು ಬೀರಿತು. ಇಸ್ಲಾಮ್ ಅಂದರೆ, ಸಂಪ್ರದಾಯ ಅಲ್ಲ, ಸಮಗ್ರ ಜೀವನ ಪದ್ಧತಿ ಎಂದವರು ಸಾರಿದರು. ಬ್ರಿಟಿಷರ ಆಡಳಿತದಲ್ಲಿ ಆಂಗ್ಲ ಸಂಸ್ಕ್ರಿತಿಯಿಂದ ಪ್ರಭಾವಿತವಾಗಿದ್ದ ಮುಸ್ಲಿಮರ ಮಟ್ಟಿಗಂತೂ ಮೌದೂದಿಯವರ ಮಾತು ಇಸ್ಲಾಮ್ ವಿರೋಧಿಯಂತೆ ತೋರಿತು. ನಿಜವಾಗಿ, ಅಂದಿನ ಮುಸ್ಲಿಮ್ ಬುದ್ಧಿಜೀವಿಗಳು ಇಸ್ಲಾಮೀ ಸಿದ್ಧಾಂತವನ್ನು ಕಾಲಬಾಹಿರ ಎಂದೇ ಪರಿಗಣಿಸಿದ್ದರು. ತಮ್ಮ ಸಂಸ್ಕ್ರಿತಿ, ಆಚಾರಗಳು, ವಿವಾಹ, ತಲಾಕ್, ಪರ್ದಾ ಮುಂತಾದುವುಗಳ ಕುರಿತಾಗಿ ಮಾತಾಡುವುದು ಗೌರವಕ್ಕೆ ಕುಂದು ಎಂದು ಅವರು ಭಾವಿಸಿದ್ದರು. ಆದ್ದರಿಂದಲೇ, ಇಂಗ್ಲಿಷ್ ಭಾಷೆ, ಆಂಗ್ಲರ ಉಡುಪು, ಸ್ತ್ರೀ-ಪುರುಷರ ಮುಕ್ತ ಮಿಲನ, ಮಿಶ್ರ ಸಂಸ್ಕ್ರಿತಿ, ಮದ್ಯಪಾನಗಳನ್ನೆಲ್ಲಾ ಸಾಮಾಜಿಕ ಅಗತ್ಯ ಎಂದವರು ಪ್ರತಿಪಾದಿಸತೊಡಗಿದ್ದರು. ಶಿರ್ಕ್ ಮತ್ತು ಬಿದ್‍ಅತ್‍ಗಳ ಕುರಿತಂತೆ ಸ್ಪಷ್ಟ ತಿಳುವಳಿಕೆಯೂ ಸಮಾಜದಲ್ಲಿರಲಿಲ್ಲ. ಅಷ್ಟಕ್ಕೂ, ಇವೆಲ್ಲ ತಪ್ಪು ಎಂದು ತಿಳಿದುಕೊಳ್ಳುವುದಕ್ಕೆ ಮುಸ್ಲಿಮರ ಬಳಿ ಇದ್ದದ್ದಾದರೂ ಏನು? ಇಸ್ಲಾಮ್‍ನ ಕುರಿತಂತೆ ವಿವಿಧ ರೂಪದಲ್ಲಿ ನಡೆಯುತ್ತಿದ್ದ ಅಪಪ್ರಚಾರಗಳಿಗೆ ಉತ್ತರ ಕೊಡಲು ಅವರ ಬಳಿ ಯಾವ ಕೃತಿಗಳಿತ್ತು? ಆಗಿನ ಪರಿಸ್ಥಿತಿಯನ್ನು ಎದುರಿಟ್ಟುಕೊಂಡು ಇಸ್ಲಾಮೀ ಪಾರಿಭಾಷಿಕಗಳಿಗೆ ಹೊಸ ಅರ್ಥಗಳನ್ನು ಕೊಡುವ ಕೃತಿಗಳಾಗಲಿ, ಬರಹಗಾರರಾಗಲಿ ಇಲ್ಲದಿರುವಾಗ ಸಮುದಾಯ ಕೀಳರಿಮೆಯಿಂದಲ್ಲದೆ ಇನ್ನಾವ ರೀತಿಯಲ್ಲಿ ಬದುಕಬೇಕಿತ್ತು?
ಆದ್ದರಿಂದಲೇ ಮೌದೂದಿ ಲೇಖನಿ ಎತ್ತಿದರು..
ಪರ್ದಾದ ಬಗ್ಗೆ ಅಪಹಾಸ್ಯದ ಮಾತುಗಳು ಚಾಲ್ತಿಯಲ್ಲಿದ್ದಾಗಲೇ ‘ಪರ್ದಾ’ ಎಂಬ ಕೃತಿ ರಚಿಸಿದರು. ಆಗ ಅವರಿಗೆ 34 ವರ್ಷ. `ಇಸ್ಲಾಮ್ ಧರ್ಮ' ಎಂಬ ಬಹು ಅಮೂಲ್ಯ ಕೃತಿ ರಚಿಸಿದರು. ಅವರ ಜೀವಿತ ಕಾಲದಲ್ಲಿಯೇ ಈ ಕೃತಿ ಜಗತ್ತಿನ 40ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಗೊಂಡಿತು. ‘ಪಾಶ್ಚಿಮಾತ್ಯ ಸಂಸ್ಕøತಿಯ ಕಲ್ಪನೆಗಳು ಮತ್ತು ಪ್ರಭಾವಗಳ ಕುರಿತಂತೆ ವಿಮರ್ಶಾತ್ಮಕ’ ಅಧ್ಯಯನ ನಡೆಸಿದರು. ‘ಇಸ್ಲಾಮ್ ಮತ್ತು ಅಜ್ಞಾನ’, ‘ಇಸ್ಲಾಮಿನ ನೈತಿಕ ದೃಷ್ಟಿಕೋನ.. ಎಂಬೆಲ್ಲಾ ಕೃತಿಗಳನ್ನು ರಚಿಸಿ ಸಮಾಜದ ಮುಂದಿಟ್ಟರು. ನಿಜವಾಗಿ, ತನ್ನ 11ರ ಹರೆಯದಲ್ಲೇ, ‘ಆಧುನಿಕ ಮಹಿಳೆ’ ಎಂಬ ಅರಬಿ ಕೃತಿಯನ್ನು ಅವರು ಉರ್ದು ಭಾಷೆಗೆ ಅನುವಾದಿಸಿದ್ದರು. 15ರ ಹರೆಯದಲ್ಲೇ ‘ಅಲ್ ಮದೀನ’ ಎಂಬ ಪತ್ರಿಕೆಯ ಉಪಸಂಪಾದಕರಾಗಿ ಆಯ್ಕೆಯಾಗಿದ್ದರು. 1903 ಸೆ. 25ರಂದು ಔರಂಗಾಬಾದ್‍ನಲ್ಲಿ ಹುಟ್ಟಿದ್ದ ಮೌದೂದಿಯವರು ಪ್ರತಿಯೊಂದನ್ನೂ ಪ್ರಶ್ನಿಸುತ್ತಾ ಬೆಳೆದರು. ಅವರ ತಂದೆ ಅಹ್ಮದ್ ಹಸನ್‍ರು ಅವರನ್ನು ಬೆಳೆಸಿದ್ದೂ ಹಾಗೆಯೇ. ಒಮ್ಮೆ ಸೇವಕನ ಮಗನಿಗೆ ಅವರು ಹೊಡೆದಾಗ, ಆ ಸೇವಕನ ಮಗನಲ್ಲಿ ಮಗನಿಗೆ ಹೊಡೆಯುವಂತೆ ಅವರ ಅಪ್ಪ ಆದೇಶಿಸಿದ್ದರು. ಈ ಮಟ್ಟದ ತರಬೇತಿಯೇ ಸಮಾಜದ ತಪ್ಪುಗಳನ್ನು ಪ್ರಶ್ನಿಸುವುದಕ್ಕೆ ಅವರನ್ನು ಪ್ರಚೋದಿಸಿರಬೇಕು. ಇಸ್ಲಾಮಿನ ಬಗ್ಗೆ ಆಳ ಅಧ್ಯಯನ ನಡೆಸಿದ್ದ ಅವರಿಗೆ ಪ್ರಸಕ್ತ ಸಮಸ್ಯೆಗಳ ಬಗ್ಗೆ ನಿಖರವಾಗಿ ಮಾತಾಡುವ ಸಾಮರ್ಥ್ಯವೂ ಇತ್ತು. ಅವರು ಯುವಕರಾಗಿದ್ದ ಸಂದರ್ಭದಲ್ಲಿ ಲೌಡ್ ಸ್ಪೀಕರ್‍ನ ಬಗ್ಗೆ ಮುಸ್ಲಿಮ್ ಸಮಾಜದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗಿತ್ತು. ಲೌಡ್ ಸ್ಪೀಕರ್ ಅಳವಡಿಸುವುದು ಇಸ್ಲಾಮಿನಲ್ಲಿ ನಿಷಿದ್ಧ ಎಂದು ವಿದ್ವಾಂಸರು ಫತ್ವ ಹೊರಡಿಸಿದ್ದರು. ಆದರೆ ಯುವಕ ಮೌದೂದಿ ಅದನ್ನು ಖಂಡಿಸಿದರು. ಅವರು ಹೀಗೆಂದರು,
‘ಎತ್ತಿನ ಬಂಡಿಯಲ್ಲಿ ಸಂಚರಿಸುವವನಿಗೆ ಮೋಟಾರು ವಾಹನದಲ್ಲಿ ಸಂಚರಿಸುವವನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ. ರೇಡಿಯೋದ ಬಲದಿಂದ ಒಂದು ಸೆಕೆಂಡಿನಲ್ಲಿ ಮಿಥ್ಯದ ಧ್ವನಿಯನ್ನು ಭೂಮಿಯ ಎಲ್ಲ ಮೂಲೆಗಳಿಗೂ ತಲುಪಿಸಿ ಕೋಟಿಗಟ್ಟಲೆ ಜನರ ಹೃದಯಗಳನ್ನು ಕೇವಲ ಮಾತಿನ ಮೋಡಿಯಿಂದ ಜಯಿಸುವವರ ವಿರುದ್ಧ, ಒಂದು ಸಭೆಯಲ್ಲಿ ಸೇರಿರುವ ಎಲ್ಲರಿಗೂ ಸತ್ಯದ ಧ್ವನಿಯನ್ನು ತಲುಪಿಸಲಿಕ್ಕೆ ಕೂಡ ಹಿಂಜರಿಯುವವರು ಹೇಗೆ ತಾನೆ ಜಯಗಳಿಸಿಯಾರು? ಇವತ್ತು ಇಸ್ಲಾಮಿನ ವಿರುದ್ಧದ ಪ್ರಚಾರವು ಎಲ್ಲ ಮಾಧ್ಯಮ ಬಲವನ್ನೂ ಉಪಯೋಗಿಸಿ ಮುಂದೆ ಸಾಗುತ್ತಿದೆ. ಹೀಗಿರುವಾಗ, ಅವನ್ನು ಉಪಯೋಗಿಸದೇ ಅವುಗಳ ವಿರುದ್ಧ ಹೋರಾಡಲು ಸಾಧ್ಯವೇ? ಒಂದು ವೇಳೆ ಪ್ರವಾದಿಯವರ(ಸ) ಕಾಲದಲ್ಲಿ ಈ ಉಪಕರಣ ಇರುತ್ತಿದ್ದರೆ ಅವರು(ಸ) ಕಂದಕ ತೋಡುವ ಇರಾನಿ ಕ್ರಮವನ್ನು ಸ್ವೀಕರಿಸಿದಂತೆ, ನಮಾಝ್, ಅದಾನ್ ಮತ್ತು ಖುತ್ಬಾಗಳಿಗೆ ಖಂಡಿತವಾಗಿಯೂ ಲೌಡ್ ಸ್ಪೀಕರನ್ನು ಬಳಸುತ್ತಿದ್ದರು..’ ಎಂದರು. ಮೌದೂದಿಯವರ ವಾದ ಎಷ್ಟು ಬಲವಾಗಿತ್ತೆಂದರೆ, ಬಳಿಕ ಆ ಫತ್ವಾವನ್ನೇ ವಿದ್ವಾಂಸರು ಹಿಂತೆಗೆದುಕೊಂಡರು.
ಆದರೆ
|
ಚೆಗುವೆರಾ |
ಕೇವಲ ಕೃತಿಗಳನ್ನು ರಚಿಸುವುದರಿಂದಲೇ ಒಂದು ಸಮುದಾಯದ ಸುಧಾರಣೆ, ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದು ಮೌದೂದಿಯವರ ನಂಬಿಕೆಯಾಗಿತ್ತು. ಆದ್ದರಿಂದಲೇ, ‘ಒಂದು ಉತ್ತಮ ಸಂಘಟನೆಯ ಅಗತ್ಯ’ ಎಂಬ ಲೇಖನವನ್ನು 1941 ಎಪ್ರಿಲ್‍ನಲ್ಲಿ ತನ್ನ, ‘ತರ್ಜುಮಾನುಲ್ ಕುರ್‍ಆನ್’ ಎಂಬ ಪತ್ರಿಕೆಯಲ್ಲಿ ಬರೆದರು. 3500 ಪುಟಗಳ ಅರಬಿ ಗ್ರಂಥವೊಂದನ್ನು ಉರ್ದುವಿಗೆ ಅನುವಾದಿಸಿದ್ದಕ್ಕಾಗಿ ಸಿಕ್ಕ 5 ಸಾವಿರ ರೂಪಾಯಿಗಳಿಂದ ಅವರು ಈ ಪತ್ರಿಕೆಯನ್ನು ಆರಂಭಿಸಿದ್ದರು. ಮೌದೂದಿಯವರ ಆಲೋಚನೆಗಳು, ದೂರಗಾಮಿ ನಿಲುವುಗಳೆಲ್ಲ ಅಕ್ಷರ ರೂಪದಲ್ಲಿ ಪ್ರಕಟವಾಗುತ್ತಿದ್ದುದು ಈ ಪತ್ರಿಕೆಯಲ್ಲೇ. ಹಾಗೆ, 1941 ಅಗಸ್ಟ್ 26ರಂದು, ಜಮಾಅತೆ ಇಸ್ಲಾಮೀ ಎಂಬ ಸಂಘಟನೆಯನ್ನು ಇತರ 75 ಮಂದಿಯ ಜೊತೆಗೂಡಿ ಅವರು ಸ್ಥಾಪಿಸಿದರು. ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಆಧಾರದಲ್ಲಿ ಮಾನವನ ಆಮೂಲಾಗ್ರ ಸುಧಾರಣೆಯನ್ನು ಗುರಿಯಿರಿಸಿಕೊಂಡು ಹುಟ್ಟಿಕೊಂಡ ಈ ಸಂಘಟನೆ ಸಹಜವಾಗಿಯೇ ಸಮಾಜವನ್ನು ಆಕರ್ಷಿಸಿತು. ವಿರೋಧಿಗಳನ್ನೂ ಸೃಷ್ಟಿಸಿಕೊಂಡಿತು. ಈ ಮಧ್ಯೆ ದೇಶದ ವಿಭಜನೆಯಾದಾಗ, ಅವರು ವಾಸಿಸುತ್ತಿದ್ದ ಲಾಹೋರ್ ಪಾಕಿಸ್ತಾನದ ಭಾಗವಾಯಿತು. ಭಾರತದಲ್ಲೇ ಉಳಿದುಕೊಂಡ ಸಂಘಟನೆಯ ಕಾರ್ಯಕರ್ತರು. ಜಮಾಅತೆ ಇಸ್ಲಾಮೀ ಹಿಂದ್ ಎಂಬ ಹೆಸರಲ್ಲಿ ಗುರುತಿಸಿಕೊಂಡರು. ಮೌದೂದಿಯವರ ಕ್ರಾಂತಿಕಾರಿ ಆಲೋಚನೆಗಳು ಪಾಕ್ ಪ್ರಭುತ್ವವನ್ನು ಯಾವ ಮಟ್ಟದಲ್ಲಿ ಕಾಡಿತ್ತೆಂದರೆ, ಅವರನ್ನು 3 ಬಾರಿ ಜೈಲಿಗಟ್ಟಲಾಯಿತು. ಒಂದು ಬಾರಿ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು. ಆದರೆ ಜಾಗತಿಕ ಒತ್ತಡದ ಪರಿಣಾಮದಿಂದಾಗಿ ಶಿಕ್ಷೆ ಜಾರಿಗೊಳಿಸಲಾಗಲಿಲ್ಲ. ಒಂದು ರೀತಿಯಲ್ಲಿ ಮೌದೂದಿಯವರ ಆಲೋಚನೆಗಳು ಈ ಉಪ ಭೂಖಂಡವನ್ನು ದಾಟಿ ಜಾಗತಿಕವಾಗಿಯೇ ಜನಪ್ರಿಯವಾಗತೊಡಗಿತು. ಬಡ್ಡಿರಹಿತ ಆರ್ಥಿಕ ವ್ಯವಸ್ಥೆಯು ಇವತ್ತು ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಲ್ಲಿದ್ದರೆ, ಅದರಲ್ಲಿ ಮೌದೂದಿಯವರ ವಿಚಾರಗಳಿಗೆ ದೊಡ್ಡ ಪಾತ್ರವಿದೆ. ಅರಬ್ ಕ್ರಾಂತಿಯ ಹಿಂದೆ ಮೌದೂದಿಯವರ ಆಲೋಚನೆಗಳಿಗೆ ಪ್ರಮುಖ ಸ್ಥಾನವಿದೆ. ಮೌಲ್ಯಾಧಾರಿತ ರಾಜಕೀಯ, ಕೆಡುಕು ರಹಿತ ಸಾಮಾಜಿಕ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಹೇಗೆ ಜಾರಿಗೆ ತರಬಹುದು ಎಂಬುದನ್ನು ಆಧುನಿಕ ಭಾಷೆಯಲ್ಲಿ ಹೇಳಿಕೊಟ್ಟದ್ದೇ ಮೌದೂದಿ. ನಿಜವಾಗಿ, ಇವತ್ತು ಈಜಿಪ್ಟನ್ನು ಆಳುತ್ತಿರುವ ಮುರ್ಸಿಯವರ ಮುಸ್ಲಿಮ್ ಬ್ರದರ್‍ಹುಡ್, ಟ್ಯುನೀಶಿಯಾದ ರಾಶಿದುಲ್ ಗನೂಶಿಯವರ ಅನ್ನಹ್ದ್‍ನಂಥ ಪಕ್ಷಗಳ ಜನಪ್ರಿಯತೆಯಲ್ಲಿ ಮೌದೂದಿಯವರಿಗೂ ಪಾಲಿದೆ. ಬಂಡವಾಳಶಾಹಿಗಳನ್ನು ಮತ್ತು ಸರ್ವಾಧಿಕಾರಿಗಳನ್ನು ಶಾಂತಿಯುತ ವಿಧಾನದ ಮೂಲಕ ಸೋಲಿಸುವುದಕ್ಕೆ ಅವರ ವಿಚಾರಗಳಿಗೆ ಇವತ್ತು ಸಾಧ್ಯವಾಗಿದೆ. ಜಾಗತಿಕವಾಗಿಯೇ ಕೌಟುಂಬಿಕ ವ್ಯವಸ್ಥೆ, ಆರ್ಥಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆಗಳು ತೀವ್ರ ಬಿಕ್ಕಟ್ಟಿನಲ್ಲಿರುವ ಈ ಹೊತ್ತಿನಲ್ಲಿಯೇ, ‘ಕುರ್‍ಆನ್’ ಮತ್ತು ಹದೀಸ್‍ನ ಆಧಾರದಲ್ಲಿ ಮೌದೂದಿಯವರು ಪರಿಚಯಪಡಿಸಿದ ಇಸ್ಲಾಮ್, ಇವತ್ತು ಪರ್ಯಾಯ ಆಯ್ಕೆಯಾಗಿ ಎದ್ದು ಕಾಣುತ್ತಿದೆ. ಈಗಾಗಲೇ ಸಾವಿಗೀಡಾಗಿರುವ ಸಮಾಜ ವಾದ ಮತ್ತು ಸಾವಿನ ಕದ ತಟ್ಟುತ್ತಿರುವ ಬಂಡವಾಳಶಾಹಿತ್ವದ ಮಧ್ಯೆ ಮುರ್ಸಿ, ಗನೂಶಿ, ತುರ್ಕಿಯ ಉರ್ದುಗಾನ್‍ರೆಲ್ಲ ಭರವಸೆ ಹುಟ್ಟಿಸುತ್ತಿದ್ದಾರೆ. ಆದ್ದರಿಂದಲೇ 1979 ಸೆ. 22ರಂದು ನಿಧನರಾದ ಮೌದೂದಿಯವರು ಮತ್ತೆ ಮತ್ತೆ ಪ್ರಸ್ತುತವಾಗುತ್ತಲೂ ಇದ್ದಾರೆ.
ಇಷ್ಟಕ್ಕೂ, ಸಮಾಜವಾದದ ಜಾರಿಗಾಗಿ ಗೆರಿಲ್ಲಾ ಮಾದರಿಯಲ್ಲಿ ಹೋರಾಡುತ್ತಾ 1967 ಅಕ್ಟೋಬರ್ 9ರಂದು ಬೊಲಿವಿಯಾದಲ್ಲಿ ಹತ್ಯೆಗೀಡಾದ ಅರ್ನೆಸ್ಟೋ ಚೆಗುವೆರಾರ `ವಿಫಲ ಹೋರಾಟ’ದ ಬಗ್ಗೆ ಪತ್ರಿಕೆಗಳಲ್ಲಿ ವಾರಗಳ ಹಿಂದೆ ಲೇಖನಗಳನ್ನು ಓದುತ್ತಿದ್ದಾಗ, ‘ಸಫಲ ಹೋರಾಟ’ದ ಸೈಯದ್ ಮೌದೂದಿಯವರ ಬಗ್ಗೆ ಬರೆಯಬೇಕೆನಿಸಿತು.
No comments:
Post a Comment