Tuesday, November 13, 2012

ಅವರು ಪ್ರಾರ್ಥಿಸಬೇಕೆಂದು ಬಯಸುತ್ತೇವಲ್ಲ, ಅದಕ್ಕೆ ಅರ್ಹರಾಗಿದ್ದೇವಾ?

ಸಂಜೆಯಾದ ಕೂಡಲೇ ಆ ಬಾಲಕ ಬಾಗಿಲಿಗೆ ಬರುತ್ತಾನೆ. ಅಪ್ಪ ಬರುವ ಹೊತ್ತು. ಇವತ್ತು ಅಪ್ಪನೊಂದಿಗೆ ಚೆಂಡಾಟ ಆಡಬೇಕು. ಅಪ್ಪನ ಮಡಿಲಲ್ಲಿ ಕೂತು, ಜೇಬಿಗೆ ಕೈ ಹಾಕಿ, ಚಾಕಲೇಟು ಕೇಳಬೇಕು. ಎಷ್ಟು ದಿನ ಆಯ್ತು ಅಪ್ಪ ನಂಗೆ ಚಾಕಲೇಟು ಕೊಡಿಸದೇ? ಯಾವಾಗಲೂ ಅಮ್ಮನೇ ಕೊಡೋದು. ಇವತ್ತು ಅಪ್ಪನ ಕೈ ಹಿಡಿದು ನಡೆಯುತ್ತಾ ಅಂಗಡಿ ತನಕ ಹೋಗಿ ಚಾಕಲೇಟು ಖರೀದಿಸಿಯೇ ಬರಬೇಕು. ಬೇಡ, ಹೋಗುವಾಗ ಮಾತ್ರ ನಡೆಯುವುದು. ಬರುವಾಗ ಅಪ್ಪನೇ  ನನ್ನನ್ನು ಎತ್ತಿಕೊಳ್ಳಲಿ. ಎಷ್ಟು ದಿನದಿಂದ ನಾನು ಒಮ್ಮೆ ಅಪ್ಪ ಎತ್ತಿಕೊಳ್ಳಲಿ ಅಂತ ಕಾಯ್ತಾ ಇದ್ದೇನೆ? ಆದರೆ ಎತ್ತಿಕೊಳ್ಳುತ್ತಾರಾ? ನನ್ನ ಮಗೂ ಅಂತ ಮುತ್ತಿಕ್ಕುತ್ತಾರಾ? ಈ ಬಾರಿ ಚಾಕಲೇಟು ಬಾಯಲ್ಲಿಟ್ಟು ಅಪ್ಪನ ತೋಳಲ್ಲಿ ಖುಷಿ ಪಡುತ್ತಾ ಬರಬೇಕು. ನನ್ನ ಪಕ್ಕದ ಮನೆಯ ವಿಲ್ಫ್ರೆಡ್ ನನ್ನು  ಅವನ ಅಪ್ಪ ಎಷ್ಟೊಂದು ಮುದ್ದಿಸ್ತಾರೆ? ಎಲ್ಲಿಗೆ ಹೋಗುವಾಗಲೂ  ವಿಲ್ಫ್ರೆಡ್ ನನ್ನು ಕರಕೊಂಡೇ ಹೋಗುವುದು. ನಿನ್ನೆ ವಿಲ್ಫ್ರೆಡ್ ಮತ್ತು ಅವನ ಅಪ್ಪ ಜೊತೆಯಾಗಿ ಓಡುತ್ತಾ ಇದ್ರು. ಅವನ ಅಪ್ಪ ತುಂಬಾ ಒಳ್ಳೆಯವರು. ಅಪ್ಪ ಬರಲಿ, ಇವತ್ತು ಏನು ಹೇಳಿದ್ರೂ ನಾನು ಬಿಡುವುದೇ ಇಲ್ಲ. ಅವರು ನನ್ನೊಂದಿಗೆ ಆಡಲೇಬೇಕು. ಅಂಗಡಿಗೆ ಕರಕೊಂಡು ಹೋಗಲೇಬೇಕು..
     ಅಪ್ಪ ಬರುವುದು ಕಾಣಿಸುತ್ತದೆ..
ಬಾಲಕ ಓಡುತ್ತಾನೆ. ಅಪಾರ ಖುಷಿ. ಅಪ್ಪನ ಕೈ ಹಿಡಿಯುತ್ತಾನೆ. ಷರಟು ಹಿಡಿದು ಅಪ್ಪ, ಅಪ್ಪ ಅನ್ನುತ್ತಾನೆ. ಅಪ್ಪನಾದರೋ ವಿಪ ರೀತ ಬ್ಯುಝಿ. ಕೈ ಹಿಡಿದ ಮಗನನ್ನು ಎತ್ತಿ ಅಪ್ಪಿಕೊಳ್ಳುವುದಕ್ಕೆ, ಮುದ್ದಿಸುವುದಕ್ಕೆ, ನನ್ನ ಮುದ್ದೂ.. ಎಂದು ಲಲ್ಲೆಗರೆಯುವುದಕ್ಕೆ ಬಿಡುವೇ ಇಲ್ಲ. ತಲೆಯ ತುಂಬಾ ಕಚೇರಿಯನ್ನೇ ತುಂಬಿಕೊಂಡು ಬಂದಿರುವ ಆತ ಕೈ ಹಿಡಿದ ಮಗನನ್ನು ಎಳೆದುಕೊಂಡೇ ಸರ ಸರನೇ ಮನೆಗೆ ಬರುತ್ತಾನೆ. ಬ್ಯಾಗ್ ತೆಗೆದಿಡುವುದು, ಬಟ್ಟೆ ಕಳಚುವುದು, ಪತ್ನಿ ಕೊಟ್ಟ ನೀರು ಕುಡಿಯುವುದು.. ಇವೆಲ್ಲ ಯಾಂತ್ರಿಕವಾಗಿ ನಡೆಯುತ್ತದೆ. ಈ ಮಧ್ಯೆ ಮಗ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾನೆ. ಆತ ಬಾಗಿಲಲ್ಲಿ ನಿಂತು ಏನೇನೆಲ್ಲಾ ಅಂದುಕೊಂಡಿದ್ದನೋ ಅವೆಲ್ಲವನ್ನೂ ಜಾರಿ ಮಾಡುವಂತೆ ಅಪ್ಪನನ್ನು ವಿನಂತಿಸುತ್ತಾನೆ. ಕೈ ಹಿಡಿದು ಜಗ್ಗುತ್ತಾನೆ. ಆದರೆ ಅಪ್ಪ ನಿರಾಕರಿಸುತ್ತಾನೆ. 'ನಾಳೆ ಆಡುವ ಮಗು' ಅನ್ನುತ್ತಾನೆ. ಹಾಗೆ ಸಾವಿರಾರು ನಾಳೆಗಳು ಕಳೆದು ಹೋಗುತ್ತವೆ. ಪ್ರತಿ ನಾಳೆಯೂ ಅಪ್ಪ ಬ್ಯುಝಿಯೇ. ಕೊನೆಗೆ ಮಗು ಅಪ್ಪನನ್ನು ಕಾಯುವುದನ್ನೇ ನಿಲ್ಲಿಸುತ್ತದೆ..
     ಈಗ ಅಪ್ಪನಿಗೆ ನಿವೃತ್ತಿಯಾಗಿದೆ. ಮಗ ದುಡಿಯುತ್ತಿದ್ದಾನೆ..
'ಒಮ್ಮೆ ಬಂದು ಹೋಗು ಮಗೂ' ಅಂತ ಆ ಅಪ್ಪ ವಿನಂತಿಸುವುದು ಅದು ಎಷ್ಟನೇ ಸಲವೋ, ಆದರೆ ಮಗ ಬರುವುದೇ ಇಲ್ಲ. ತುಂಬಾ ಬ್ಯುಝಿ ಇದ್ದೇನೆ ಅಪ್ಪ ಅನ್ನುತ್ತಾನೆ. ಪ್ರತಿದಿನ ಗೇಟಿನ ಸದ್ದು ಕೇಳುವಾಗಲೂ ಅಪ್ಪನಲ್ಲೊಂದು ಆಸೆ. ಮಗ ಬಂದಿರಬಹುದೇ ಅಂತ ಆಸೆಗಣ್ಣಿನಿಂದ ಬಾಗಿಲಿಗೆ ಬರುತ್ತಾರೆ. ನಡೆಯಲೂ ಆಗುತ್ತಿಲ್ಲ. ಕೋಲಿಗೆ ದೇಹದ ಭಾರವನ್ನು ಹಾಕಿ ತುಸು ಹೊತ್ತು ಗೇಟನ್ನೇ ವೀಕ್ಷಿಸುತ್ತಾರೆ. ಕಣ್ಣಲ್ಲಿ ಹನಿ ಕಣ್ಣೀರು. ಮಗನ ಬ್ಯುಝಿ ಒಮ್ಮೆ ಮುಗಿಯಲಿ ಅಂತ ಪ್ರಾರ್ಥಿಸುತ್ತಾರೆ. ಕಾದು ಕಾದು ದಣಿವಾದಾಗ ಒಳ ಹೋಗುತ್ತಾರೆ. ಮತ್ತೆ ಗೇಟು ಸದ್ದಾಗುತ್ತದೆ. ಮತ್ತದೇ ಆಸೆಗಣ್ಣು. ಕೋಲು ಹಿಡಿದ ಜೀವ ಮತ್ತೆ ಬಾಗಿಲಿಗೆ ಬರುತ್ತದೆ. ಮುಚ್ಚಿದ ಗೇಟನ್ನು ನೋಡುವಾಗ ಕಣ್ಣು ಹನಿಗೂಡುತ್ತದೆ. ದೀರ್ಘ ನಿಟ್ಟುಸಿರು. ಜತೆಗೇ ತಾನು ಸಾಗಿ ಬಂದ ದಾರಿಯನ್ನೊಮ್ಮೆ ಅವಲೋಕಿಸಿಕೊಳ್ಳುತ್ತದೆ. ಬ್ಯುಝಿ ಲೈಫು, ಆಟ ಆಡುವಂತೆ ಮಗನ ದುಂಬಾಲು, ಪ್ರತಿದಿನವೂ ನಾಳೆ ಎಂದು ಮುಂದೂಡುತ್ತಿದ್ದುದು.. ಎಲ್ಲವೂ ಒಂದೊಂದಾಗಿ ಕಣ್ಣೆದುರಿಗೆ ಬರುತ್ತದೆ. ಕೊನೆಗೆ ಆ ಅಪ್ಪ ಹೇಳುತ್ತಾನೆ,
ನನ್ನ ಮಗ ನನ್ನಂತೆಯೇ ಆಗಿದ್ದಾನೆ..
      My boy was just like me
Cats in the cradele  ಎಂಬ ಕವನವೊಂದರ ಕಾಲ್ಪನಿಕ ವಿವರ ಇದು. ಖ್ಯಾತ ಗಾಯಕ ಹ್ಯಾರಿ ಚಾಪಿನ್ ರ , ವೆರೈಟೀಸ್ ಆಂಡ್ ಬಲ್ಡೆರ್ ಡಾಶ್  (Verities and balderdash) ಎಂಬ ಹಾಡಿನ ಆಲ್ಬಮ್ ಒಂದು 1974ರಲ್ಲಿ ಬಿಡುಗಡೆಯಾಗಿತ್ತು. ಅದರಲ್ಲಿ ಕ್ಯಾಟ್ಸ್ ಇನ್ ದ ಕ್ರಾಡಲ್ ಕೂಡ ಒಂದು. ವಿಶೇಷ ಏನೆಂದರೆ, ಮೂಲ ಕವನವನ್ನು ರಚಿಸಿದ್ದೇ ಹ್ಯಾರಿಯ ಪತ್ನಿ ಸ್ಯಾಂಡಿ. ಆಕೆಯ ವಿಚ್ಛೇದಿತ ಪತಿ ಜೇಮ್ಸ್ ಕ್ಯಾಶ್ ಮೋರ್  ಮತ್ತು ನ್ಯೂಯಾರ್ಕ್ ಸಿಟಿಯ ಪ್ರತಿನಿಧಿ(ರಾಜಕಾರಣಿ)ಯಾಗಿದ್ದ ಆತನ ತಂದೆಯ ನಡುವೆ ಇದ್ದ ಸಂಬಂಧವೇ ಈ ಕವನಕ್ಕೆ ಪ್ರಚೋದನೆಯಾಗಿತ್ತು. ಇಷ್ಟಕ್ಕೂ ಕ್ಯಾಟ್ಸ್ ಇನ್ ದ ಕ್ರಾಡಲನ್ನು ಇಲ್ಲಿ ನೆನಪಿಸಿಕೊಳ್ಳುವುದಕ್ಕೆ ಕಾರಣ ಇದೆ.
    ಅಮೇರಿಕದ ಅಧ್ಯಕ್ಷರಾಗಿ ಪುನರಾಯ್ಕೆಯಾದ ಸಂಭ್ರಮದಲ್ಲಿ ಕಳೆದ ವಾರ ಬರಾಕ್ ಒಬಾಮ ಉದ್ದದ ಭಾಷಣ ಮಾಡಿದ್ದರು. ಅಧ್ಯಕ್ಷ  ಆದಾಗಿನಿಂದ ಈ ವರೆಗೆ ಮಕ್ಕಳಾದ ಮಲಿಯಾ ಮತ್ತು ಸಸಾರ ಜೊತೆ ಪ್ರತಿ ಸಾರಿ ಶಿಕ್ಷಕರ ಸಭೆಗೆ ಹಾಜರಾದದ್ದು, ಮಗಳು ಮಲಿಯಾಳ ಜೊತೆ ಕೂತು ಹಾರಿ ಪಾಟರ್ ಸರಣಿಯ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದು.. ಎಲ್ಲವನ್ನೂ ಅವರು ಭಾಷಣದಲ್ಲಿ ನೆನಪಿಸಿಕೊಂಡಿದ್ದರು.
     ಅಂದಹಾಗೆ, ನಮ್ಮ ಪರಿಸ್ಥಿತಿಯಾದರೂ ಹೇಗಿದೆ? ಒಟ್ಟಿಗೆ ಓದುವುದು ಬಿಡಿ, ಪತ್ನಿ-ಮಕ್ಕಳ ಜೊತೆಗೆ ಕೂತು ಊಟ ಎಷ್ಟು ಸಮಯವಾಯಿತು? ಮಕ್ಕಳನ್ನು ಪ್ರೀತಿಯಿಂದ ಮಾತಾಡಿಸಲು, ಅವರೊಂದಿಗೆ ಅವರಂತಾಗಲು ನಮ್ಮಲ್ಲಿ ಎಷ್ಟು ಮಂದಿಗೆ ಪುರುಸೊತ್ತಿದೆ? ಬೆಳಗ್ಗೆದ್ದು ಬ್ರಶ್ ಮಾಡುವ ಅಪ್ಪ ಬಳಿಕ ಕಚೇರಿಗೆ ಹೋಗುವ ತಯಾರಿಯಲ್ಲಿ ತೊಡಗುತ್ತಾನೆ. ಕಾಲ್ ಮಾಡುವುದು ಅಥವಾ ಸ್ವೀಕರಿಸುವುದು, ಮೆಸೇಜ್ ಮಾಡುವುದು, ಟಿ.ವಿ. ವೀಕ್ಷಿಸುವುದು.. ಮುಂತಾದುವುಗಳಲ್ಲಿ ಬ್ಯುಝಿಯಾಗುತ್ತಾನೆ. ಬಟ್ಟೆಗೆ ಇಸ್ತ್ರಿ ಹಾಕಲಾಗಿದೆಯೋ ಎಂದು ಪರೀಕ್ಷಿಸಿ, ಇಲ್ಲದಿದ್ದರೆ ಪತ್ನಿಯ ಮೇಲೆ ಸಿಟ್ಟಾಗುತ್ತಾನೆ. ಹಾಗಂತ ಇಸ್ತ್ರಿ ಹಾಕುವಷ್ಟು ಆತನಲ್ಲಿ ಬಿಡುವು ಇಲ್ಲ ಎಂದಲ್ಲ. ಇಸ್ತ್ರಿ ಹಾಕುವ, ಅಡುಗೆ ಮಾಡುವ, ಮಕ್ಕಳನ್ನು ಶಾಲೆಗೆ ಸಿದ್ಧಪಡಿ ಸುವ, ಹೋಮ್ ವರ್ಕ್  ಮಾಡಿಸುವ, ಮಗುವಿನ  ‘ಒಂದೆರಡನ್ನು’ ತೆಗೆದು ಶುಚಿಗೊಳಿಸುವ, ಬಟ್ಟೆ ಒಗೆಯುವ, ನೆಲ ಗುಡಿ ಸುವ.. ಎಲ್ಲವನ್ನೂ ಪತ್ನಿಯ ‘ಕೆಲಸದ ಪಟ್ಟಿಗೆ’ ಸೇರಿಸಿದ ಎಷ್ಟು ಅಪ್ಪಂದಿರಿಲ್ಲ ನಮ್ಮಲ್ಲಿ? ಮಕ್ಕಳು ಯಾಕೆ ತಾಯಿಯನ್ನೇ ಹಚ್ಚಿಕೊಳ್ಳುತ್ತವೆ ಎಂದು ಅನೇಕರು ಪ್ರಶ್ನಿಸುವುದಿದೆ. ಯಾಕೆಂದರೆ, ಮಕ್ಕಳ ಪಾಲಿಗೆ ತಾಯಿ ಯಾವಾಗಲೂ ತಾಯಿಯೇ ಆಗಿರುತ್ತಾಳೆ. ಇಷ್ಟು ಕೆಲಸಗಳಲ್ಲಿ ಮಾತ್ರ ನಾನು ತಾಯಿ, ಉಳಿದಂತೆ ತಾಯಿಯ ಪಾತ್ರ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ತಾಯಿ ಹೇಳುವುದೇ ಇಲ್ಲ. ಆದರೆ ಅಪ್ಪ ಇಂಥ ಷರತ್ತುಗಳೊಂದಿಗೇ ಬದುಕುವುದು. ಆತ ಮಕ್ಕಳ ಪಾಲಿಗೆ ಯಾವಾಗಲೂ 'ಅಪ್ಪ' ಆಗಿರುವುದೇ ಇಲ್ಲ. ಕೆಲವೊಮ್ಮೆ ಯಜಮಾನ, ಕೆಲವೊಮ್ಮೆ ಅಂತರ ಕಾಯ್ದುಕೊಳ್ಳುವವ, ಕೆಲವೊಮ್ಮೆ ಜವಾಬ್ದಾರಿಯಿಂದ ನುಣುಚಿಕೊಳ್ಳುವವ.. ಹೀಗೆ ವಿವಿಧ ಪಾತ್ರಗಳೊಂದಿಗೆ ಅವನು ಬದುಕುತ್ತಿರುತ್ತಾನೆ. ಅಂದಹಾಗೆ, ಬೆಳಗ್ಗೆದ್ದು ಬ್ರಶ್ ಮಾಡುತ್ತಿರುವ ಅಪ್ಪ ಅಲ್ಲೇ ಇರುವ ಮಗನಿಗೋ ಮಗಳಿಗೋ ಬ್ರಶ್ ಮಾಡಿಸುವಂತೆ ಪತ್ನಿಗೆ ಆದೇಶಿಸುತ್ತಾನೆಯೇ ಹೊರತು ಸ್ವಯಂ ಮಾಡುವುದಿದೆಯೇ? ಮಗು ‘ಎರಡು’ ಮಾಡಿದರೆ ಬೇಗ ಶುಚಿಗೊಳಿಸುವಂತೆ ಪತ್ನಿಗೆ ಆದೇಶಿಸುವುದಲ್ಲದೆ ಸ್ವಯಂ ಶುಚಿಗೊಳಿಸುವ ಅಪ್ಪಂದಿರು ನಮ್ಮಲ್ಲಿ ಎಷ್ಟು ಮಂದಿಯಿದ್ದಾರೆ? ಪತ್ನಿ ಅಡುಗೆ ಮನೆಯಲ್ಲಿ ಬ್ಯುಝಿಯಾಗಿದ್ದರೂ ಮಕ್ಕಳನ್ನು ಸ್ನಾನ ಮಾಡಿಸುವುದಕ್ಕೆ ನಾವು ಮುಂದಾಗುತ್ತೇವಾ?
     ನಿಜವಾಗಿ, ಸ್ನಾನ ಮಾಡಿಸುವುದು, ಶುಚಿಗೊಳಿಸುವುದು, ಶಾಲೆಗೆ ಸಿದ್ಧಪಡಿಸುವುದೆಲ್ಲ ಬರೇ ಕೆಲಸಗಳಲ್ಲ. ಅವು ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸ, ಆತ್ಮೀಯತೆಗಳನ್ನು ಬೆಳೆಸುವ ಕೊಂಡಿಯೂ ಹೌದು. ಮಗುವಿಗೆ ಸ್ನಾನ ಮಾಡಿಸುವಾಗ ಅಲ್ಲಿ ಮಾತುಕತೆಗಳು ನಡೆಯುತ್ತವೆ. ಮಗು ತನ್ನ ಕಾಲಿಗೋ ಕೈಗೋ ಆದ ಗಾಯವನ್ನು ಅಪ್ಪನೊಂದಿಗೆ ಹೇಳಿಕೊಳ್ಳುತ್ತದೆ. ನಿನ್ನೆ ಯಾವ ಆಟ ಆಡಿದ್ದೆ, ಹೇಗೆ ಬಿದ್ದೆ, ಎಷ್ಟು ಕೂಗಿದೆ.. ಎಂದೆಲ್ಲಾ ಹೇಳುತ್ತಾ ಅದು ಅಪ್ಪನನ್ನು ಮಾತಾಡಿಸುತ್ತದೆ. ಆಗ ಅಪ್ಪ ಮಗುವಾಗುತ್ತಾನೆ. ಅಪ್ಪ ಕಣ್ಣಿಗೆ ಸೋಪು ಹಾಕಿದರೆಂದು ಮಗು ತಾಯಿಯಲ್ಲಿ ದೂರು ಹೇಳುತ್ತದೆ. ಅಪ್ಪ ಮತ್ತು ಮಗುವಿನ ಮಧ್ಯೆ ತಾಯಿ ರಾಜಿ ಮಾಡಿಸುತ್ತಾಳೆ. ಅಲ್ಲೊಂದು ಪ್ರೀತಿಯ, ತಮಾಷೆಯ ವಾತಾವರಣ ಸೃಷ್ಟಿಯಾಗುತ್ತದೆ. ಮಗನದ್ದೋ ಮಗಳದ್ದೋ ಸಮವಸ್ತ್ರಕ್ಕೆ ಇಸ್ತ್ರಿ ಹಾಕುವಾಗ, ಶೂಸ್ ಗೆ  ಪಾಲಿಶ್ ಹಾಕುವಾಗ, ಸಾಕ್ಸು ಧರಿಸುವಾಗಲೆಲ್ಲ ಮಗು ಮತ್ತು ಅಪ್ಪನ ಮಧ್ಯೆ ಸಂಭಾಷಣೆ ನಡೆದೇ ನಡೆಯುತ್ತದೆ. ಶಾಲಾ ವ್ಯಾನ್ ನಲ್ಲಿ  ತನ್ನ ಶೂಸ್ ಗೆ  ಸಹಪಾಠಿ ತುಳಿದದ್ದು, ಆಡುವಾಗ ಬಿದ್ದು ಸಮವಸ್ತ್ರದಲ್ಲಿ ಕೊಳೆಯಾದದ್ದು, ಟೀಚರು ಜೋರು ಮಾಡಿದ್ದು.. ಎಲ್ಲವನ್ನೂ  ಮಗು ಅಪ್ಪನೊಂದಿಗೆ ಹೇಳುತ್ತದೆ. ಆದರೆ ಸ್ನಾನ ಮಾಡಿಸುವುದು, ಶಾಲೆಗೆ ಸಿದ್ಧಪಡಿಸುವುದನ್ನು ಪತ್ನಿಯ ಕೆಲಸವಾಗಿ ಪರಿಗಣಿಸುವ ಪತಿಗೆ ಇವೆಲ್ಲದರ ಅನುಭವ ಆಗುವುದೇ ಇಲ್ಲ.
     ಇಷ್ಟಕ್ಕೂ, ಮಕ್ಕಳೊಂದಿಗೆ ಆಡುವುದಕ್ಕೆ, ಅವರೊಂದಿಗೆ ಚಿತ್ರ ಬಿಡಿಸುವುದಕ್ಕೆ, ಅವರು ಸೀರಿಯಸ್ ಆಗಿ ಹೇಳುವ 'ಸಿಲ್ಲಿ' ಮಾತುಗಳನ್ನು ಆಲಿಸುವುದಕ್ಕೆ ಆಸಕ್ತಿಯನ್ನೇ ತೋರಿಸದೆ, ಅವರು ಕೇಳಿದುದನ್ನೆಲ್ಲ ಖರೀದಿಸಿ ಕೊಟ್ಟು, ಅದನ್ನೇ ಪ್ರೀತಿ ಎಂದು ನಂಬಿರುವ ಅಪ್ಪಂದಿರು ನಮ್ಮ ನಡುವೆ ಎಷ್ಟಿಲ್ಲ ಹೇಳಿ? ಮಕ್ಕಳ ಮನಸ್ಸು ತೀರಾ ಸೂಕ್ಷ್ಮ ವಾದುದು. ದೊಡ್ಡವರು ಏನು ಮಾಡುತ್ತಾರೋ ಅವನ್ನೇ ಅವೂ ಮಾಡಲು ಪ್ರಯತ್ನಿಸುತ್ತವೆ. ಇಂಥ ಸಂದರ್ಭಗಳಲ್ಲೆಲ್ಲಾ ಅಪ್ಪನಿಗೆ ಸಿಟ್ಟು ಬರುವುದೇ ಹೆಚ್ಚು. ನಿಜವಾಗಿ, 'ನಾನು ನಿನ್ನನ್ನು ಪ್ರೀತಿಸುತ್ತೇನೆ' ಅನ್ನುವ ಸಂದೇಶವೊಂದು ಯಾವಾಗಲೂ ಅಪ್ಪನಿಂದ ಮಕ್ಕಳಿಗೆ ರವಾನೆಯಾಗುತ್ತಿರಬೇಕು. ಹಾಗಂತ, ಮಗುವಿಗೆ ನಾಲ್ಕು ಬಾರಿಸಿ, 'ನಾನು ಪ್ರೀತಿಸುತ್ತೇನೆ ಮಗೂ' ಅನ್ನುವುದಲ್ಲವಲ್ಲ. ನಮ್ಮ ಭಾಷೆ, ಮಾತು, ವರ್ತನೆಗಳೇ ಮಗುವಿಗೆ ಅಂಥದ್ದೊಂದು ಸಂದೇಶವನ್ನು ಕೊಡುತ್ತಿರಬೇಕು. ಮಕ್ಕಳೊಂದಿಗೆ ಹಾಡುವುದು, ಅವರನ್ನು ಹೆಚ್ಚು ಆಲಿಸುವುದು, ಸುಮ್ಮನೆ ಸಿಟ್ಟು ಬರಿಸುವುದೆಲ್ಲ ಮಾಡುತ್ತಿರಬೇಕು. ಅಂದಹಾಗೆ, ಪ್ರವಾದಿ ಮುಹಮ್ಮದ್ ರು (ಸ) ತಮ್ಮ ಬ್ಯುಝಿ ಕಾರ್ಯಕ್ರಮ ಪಟ್ಟಿಯ ಮಧ್ಯೆಯೂ ಮಗಳು ಫಾತಿಮಾರನ್ನು ಎತ್ತಿಕೊಳ್ಳುತ್ತಿದ್ದರು, ಮುತ್ತಿಕ್ಕುತ್ತಿದ್ದರು, ಆಸನದಲ್ಲಿ ಕುಳ್ಳಿರಿಸುತ್ತಿದ್ದರು ಎಂದು ಮಾತ್ರವಲ್ಲ, ಮೊಮ್ಮಕ್ಕಳಾದ ಹಸನ್-ಹುಸೈನ್ ರನ್ನು ಬೆನ್ನಿನಲ್ಲಿ ಕೂರಿಸಿ ಆಟವಾಡಿಸಿದ್ದರೆಂಬುದೆಲ್ಲ ಬರೇ ಓದಿಗಷ್ಟೇ ಯಾಕೆ ಸೀಮಿತವಾಗಬೇಕು?
 ಕಚೇರಿ, ಪ್ರಾಜೆಕ್ಟು, ಅದು-ಇದು ಮುಂತಾದುವುಗಳೆಲ್ಲ ಇದ್ದದ್ದೇ. ಅದರ ಜೊತೆಗೇ ಮಕ್ಕಳ ಬಾಲ್ಯವನ್ನು ಅನುಭವಿಸಲು, ಮಕ್ಕಳೊಂದಿಗೆ ಮಕ್ಕಳಾಗಿ, ಅವರಿಗೆ ಸೂಕ್ತ ಸಂದೇಶಗಳನ್ನು ರವಾನಿಸುತ್ತಿರಲು ನಮಗೆ ಸಾಧ್ಯವೂ ಆಗಬೇಕು. ಯಾಕೆಂದರೆ, ಬಾಲ್ಯ ಕಾಲ ಮತ್ತೆ ಮತ್ತೆ ಬರುವುದಿಲ್ಲವಲ್ಲ. ಮಸೀದಿಗೆ ಹೋಗುವಾಗ ಮಕ್ಕಳನ್ನು ಕರಕೊಂಡು ಹೋಗುವುದರಿಂದ, ಅಂಗಡಿಗೆ ಹೋಗುವಾಗ ಜೊತೆಗೊಯ್ದು, ಅಲ್ಲಿಯ ವ್ಯವಹಾರಗಳನ್ನು ವೀಕ್ಷಿಸುವುದಕ್ಕೆ ಅವಕಾಶ ಒದಗಿಸುವುದರಿಂದ ಮಗು ಅನೇಕಾರು ಸಂಗತಿಗಳನ್ನು ಕಲಿಯುತ್ತದೆ. ನಮ್ಮ ಕೆಲಸಗಳೆಲ್ಲ ಮುಗಿದ ಮೇಲೆ ಇವೆಲ್ಲವನ್ನೂ ಮಾಡುವ ಅಂತ ತೀರ್ಮಾನಿಸುವುದಕ್ಕೆ ಬಾಲ್ಯವೇನು ನಿಂತಲ್ಲೇ ನಿಂತಿರುತ್ತದಾ? ಅಷ್ಟಕ್ಕೂ, 'ಬಾಲ್ಯದಲ್ಲಿ ನಮ್ಮ ಮೇಲೆ ಹೆತ್ತವರು  ಕರುಣೆ ತೋರಿದಂತೆ, ಈ ಮುಪ್ಪಿನಲ್ಲಿ ಅವರ ಮೇಲೆ ಕರುಣೆ ತೋರು' ಎಂದು ನಮ್ಮ ಮಕ್ಕಳು ನಮಗಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕೆಂದು (ಪವಿತ್ರ ಕುರ್ಆನ್: 17: 24) ಬಯಸುವ ನಾವು, ಅದಕ್ಕೆ ಅರ್ಹರೂ ಆಗಿರಬೇಕಲ್ಲವೇ? ನಾವು ಬಾಲ್ಯದಲ್ಲಿ ಅವರನ್ನು ಪ್ರೀತಿಸದೇ, ಮುದ್ದಿಸದೇ, ಆಡಿಸದೇ ಇದ್ದರೆ ಅವರು ನಮ್ಮ ಪರವಾಗಿ ಹೀಗೆ ಪ್ರಾರ್ಥಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ?
      ಆಡಳಿತದ ಬ್ಯುಝಿಯ ಮಧ್ಯೆಯೂ ಶಿಕ್ಷಕರ ಸಭೆಗೆ ಹಾಜರಾಗುವ, ಮಕ್ಕಳ ಜೊತೆ ಪುಸ್ತಕ ಓದುವ ಒಬಾಮರನ್ನು ನೋಡುತ್ತಾ ಇವೆಲ್ಲ ನೆನಪಾಯಿತು.

1 comment:

  1. ಮಾನ್ಯರೆ,
    ತಾವು ಉದಾಹರಿಸಿದ ಕ್ಯಾಟ್ಸ್ ಇನ್ ದ ಕ್ರಾಡಲ್ ನ ಕಾಲ್ಪನಿಕ ಕಥೆ ಅದು ಕಾಲ್ಪನಿಕವಾದರೂ ಇಂದಿನ ಬ್ಯೂಸಿ ಲೋಕದ ವಸ್ತುಸ್ಥಿತಿಯನ್ನು ಓದಗರ ಮುಂದಿಡುತ್ತಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರ ಆಗಿಲ್ಲದಿದ್ದರೂ ಇದಕ್ಕಿಂತ ಹೊರತಾಗೇನಿಲ್ಲ. ತಾಲೂಕು ಜಿಲ್ಲಾ ಮಟ್ಟದಲ್ಲಿ ಇಂತಹ ಪರಿಸ್ಥಿತಿಯನ್ನು ನಾವು ಸಧ್ಯಕ್ಕೆ ಕಾಣುತ್ತಿದ್ದೇವೆ. ಆದರೆ ದೊಡ್ಡ ದೊಡ್ಡ ಸಿಟಿಗಳ ಪರಿಸ್ಥಿತಿ ತೀರ ಭಿನ್ನವಾಗಿದ್ದು ಬೆಳಗಿನ ಜಾವ ನಾಲ್ಕಕ್ಕೆ ಮನೆ ಬಿಟ್ಟ ಅಪ್ಪಂದಿರು ಮತ್ತೆ ಮನೆ ಸೇರುವುದು ರಾತ್ರಿ ೧೨ಕ್ಕೆ ಅಷ್ಟರ ವರೆಗೆ ಮಕ್ಕಳು ಅಪ್ಪನ ನಿರೀಕ್ಷೆಯಲ್ಲೇ ದಿನಕಳೆದು ರಾತ್ರಿಯ ಸಿಹಿ ನಿದ್ರೆಯಲ್ಲಿ ಜಾರಿರುತ್ತಾರೆ. ಭಾನುವಾರಕ್ಕೊಮ್ಮೆ ಮನೆಯಲ್ಲಿರುವ ತಂದೆಯನ್ನು ಕಂಡ ಮಕ್ಕಳು ತನ್ನ ತಾಯಿಯನ್ನು ಈ ಅಂಕಲ್ ಏಕೆ ರಜೆದಿನ ನಮ್ಮ ಮನೆಗೆ ಬರುತ್ತಾರೆ ಎಂದು ಕೇಳುವ ಜೋಕೊಂದು ಈ ಸಂದರ್ಭದಲ್ಲಿ ನನ್ನ ನೆನಪಿಗೆ ಬರುತ್ತಿದೆ.
    ಮಕ್ಕಳನು ಪ್ರೀತಿಯಿಂದ ಮಾತನಾಡಿಸುವುದಿರಲಿ. ಅವರನ್ನು ಕಣ್ಣು ತುಂಬ ನೋಡುವ ಭಾಗ್ಯವು ನಮ್ಮ ಬಹುತೇಕ ತಂದೆಗಳಿಗೆ ಇಲ್ಲ ಎನ್ನುವುದು ಮಾತ್ರ ವಾಸ್ತವ ಸಂಗತಿ.

    ReplyDelete