Monday, November 5, 2012

ಸೌದಿ, ವೆನೆಜುವೇಲ, ಇರಾಕ್ ಗಳಿದ್ದರೂ ಅವರೆಲ್ಲಾ ಅಮೆರಿಕವನ್ನೇ ದ್ವೇಷಿಸುವುದೇಕೆ?



   ಒಂದು ಶೇಕಡಾ ಜನರಿಂದ
   ಒಂದು ಶೇಕಡಾ ಜನರಿಗೋಸ್ಕರ
   ಒಂದು ಶೇಕಡಾ ಜನರ ಸರಕಾರ..
       ಹಾಗಂತ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯನ್ನು ಖ್ಯಾತ ಆರ್ಥಿಕ ತಜ್ಞ ಜೋಸೆಫ್ ಸ್ಟಿಗ್ಲಿಜ್ ರು  ವಾರಗಳ ಹಿಂದೆ  ವಿಶ್ಲೇಷಿಸಿದ್ದರು. ಇದಕ್ಕೆ ಕಾರಣವೂ ಇದೆ..
       ಮಿಟ್ ರೋಮ್ನಿ ಮತ್ತು ಒಬಾಮರ ಮಧ್ಯೆ ನಡೆಯುತ್ತಿರುವ ಅಧ್ಯಕ್ಷೀಯ ಚುನಾವಣೆಗೆ 2.5 ಬಿಲಿಯನ್ ಡಾಲರ್ ಖರ್ಚು ತಗಲಬಹುದೆಂಬುದು ಖಚಿತವಾಗಿದೆ. ಈ ಮೊತ್ತವನ್ನು ಒಬಾಮ ಮತ್ತು ರೋಮ್ನಿಯ ಮಧ್ಯೆ ಸಮಾನವಾಗಿ ವಿಂಗಡಿಸಿದರೆ 1.25 ಬಿಲಿಯನ್ ಡಾಲರ್ ಆಗುತ್ತದೆ. ಒಂದು ವೇಳೆ ಮುಂದಿನ 4 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಮಿಟ್ ರೋಮ್ನಿ ಆಯ್ಕೆಯಾದರೆಂದೇ ಇಟ್ಟುಕೊಳ್ಳೋಣ. ಅವರು ಈ ಮೊತ್ತವನ್ನು ಮರಳಿ ಪಡಕೊಳ್ಳಬೇಕಾದರೆ ಪ್ರತಿದಿನ 8,50,000 ಡಾಲರ್ ಗಳಿಸಬೇಕಾಗುತ್ತದೆ ಅಥವಾ ತನಗೆ ದುಡ್ಡು ನೀಡಿದ ಕಂಪೆನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳ ಪರವಾಗಿ ಅಗಾಗ ನಿಲುವುಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅಮೆರಿಕದಲ್ಲಿ ಯುದ್ಧ ಟ್ಯಾಂಕ್ ಗಳನ್ನು ತಯಾರಿಸುವ ಜನರಲ್ ಡೈನಾಮಿಕ್ಸ್ ಎಂಬ ಬೃಹತ್ ಸಂಸ್ಥೆಯಿದೆ. ಅಮೆರಿಕದ ವಿವಿಧ ಪಾರ್ಲಿಮೆಂಟ್ ಸದಸ್ಯರು 2001ರಿಂದ 5.3 ಮಿಲಿಯನ್ ಡಾಲರ್ ಮೊತ್ತವನ್ನು ಈ ಸಂಸ್ಥೆಯಿಂದ ಪಡೆದಿದ್ದಾರೆ ಎಂದು ಸೆಂಟರ್ ಫಾರ್ ಪಬ್ಲಿಕ್ ಇಂಟೆಗ್ರಿಟಿ(CPI)ಯ ತನಿಖೆಯಿಂದ ಬಹಿರಂಗವಾಗಿತ್ತು. ಇಷ್ಟಕ್ಕೂ ಅಫಘಾನ್ ಮತ್ತು ಇರಾಕ್ ಮೇಲಿನ ಅಮೆರಿಕದ ದಾಳಿಗೆ ಈ ವರೆಗೆ 2.6ರಿಂದ 4 ಟ್ರಿಲಿಯನ್ ಡಾಲರ್ ಗಳಷ್ಟು ಖರ್ಚಾಗಿವೆ ಎಂಬುದು ಎಲ್ಲರಿಗೂ ಗೊತ್ತು. ಹಾಗೆಯೇ, ಸದ್ಯ ಅಮೆರಿಕ 16 ಟ್ರಿಲಿಯನ್ ಡಾಲರ್ ಗಳಷ್ಟು ಸಾಲದಲ್ಲೂ ಇದೆ. ನೀವೇ ಹೇಳಿ, ಅಮೆರಿಕ ಇಂಥದ್ದೊಂದು ದಾಳಿಗೆ ಮುಂದಾಗಬೇಕಾದ ಅನಿವಾರ್ಯತೆ ಇತ್ತೆ? ಇರಾಕ್ ನ  ಮೇಲೆ ಅಮೆರಿಕ ದಾಳಿ ಮಾಡದೇ ಇರುತ್ತಿದ್ದರೆ, ಇರಾಕೇನೂ ಅಮೇರಿಕದ ಮೇಲೆ ದಾಳಿ ಮಾಡುತ್ತಿರಲಿಲ್ಲವಲ್ಲ. ಹೀಗಿರುವಾಗ, ತನ್ನ ದೇಶವನ್ನು ಸಾಲದಲ್ಲಿ ಮುಳುಗಿಸಬಹುದಾದ ದಾಳಿಯೊಂದಕ್ಕೆ ಅಮೆರಿಕ ಮುಂದಾದದ್ದೇಕೆ? ನಿಜವಾಗಿ, ಶಸ್ತ್ರಾಸ್ತ್ರ ಕಂಪೆನಿಗಳು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಅಮೆರಿಕದ ನೀತಿ-ನಿರೂಪಣೆಯ ಮೇಲೆ ಬಲವಾದ ಪ್ರಭಾವ ಬೀರುತ್ತಿವೆ ಎಂಬುದು ಸಾಬೀತಾಗುವುದೇ ಇಲ್ಲ್ಲಿ.
      ನೋಬೆಲ್ ಪ್ರಶಸ್ತಿ ವಿಜೇತ ಜೋಸೆಫ್ ಸ್ಟಿಗ್ಲೆಡ್ಜ್ ರ , ‘ದಿ ಟ್ರಿಲಿಯನ್ ಡಾಲರ್ ವಾರ್’ ಎಂಬ ಕೃತಿಯನ್ನು ಓದಿದರೆ, ಯುದ್ಧವೆಂಬ ವ್ಯಾಪಾರದ ಧಾರಾಳ ವಿವರಗಳು ಸಿಗುತ್ತವೆ. 2008ರಲ್ಲಿ ಬಿಡುಗಡೆಯಾದ ಈ ಕೃತಿಯಲ್ಲಿ ಅಫಘಾನ್ ಮೇಲಿನ ದಾಳಿಯಲ್ಲಿ ಭಾಗಿಯಾದ ಅಮೆರಿಕನ್ ಸೈನಿಕರಿಗೆ ಅಪಾರ ಪ್ರಮಾಣದ ದುಡ್ಡು ನೀಡಲಾದ ಬಗ್ಗೆ ವಿವರಗಳಿವೆ. ಬದುಕಿನಾದ್ಯಂತ ಆರಾಮವಾಗಿ ಜೀವಿಸುವುದಕ್ಕೆ ಸಾಕಾಗುವಷ್ಟು ಮೊತ್ತವನ್ನು ಅವರೆಲ್ಲರಿಗೆ ನೀಡಲಾಗಿದೆ ಎನ್ನುತ್ತದೆ ಈ  ಕೃತಿ. ಇಷ್ಟೇ ಅಲ್ಲ,
    1. ಗೋಲ್ಡನ್ ಸ್ಯಾಚೆಸ್
    2. ಜೆ.ಪಿ. ಮಾರ್ಗನ್ ಚೇಸ್
    3. ಸಿಟಿ ಗ್ರೂಪ್
    4. ಯು.ಬಿ.ಎಸ್. ಬ್ಯಾಂಕ್
    5. ಮಾರ್ಗನ್ ಸ್ಟಾನ್ಲಿ
    6. ಜನರಲ್ ಎಲೆಕ್ಟ್ರಿಕ್..
2008ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮರಿಗಾಗಿ ಈ ಎಲ್ಲ ಹಣಕಾಸು ಮತ್ತು ಕಾರ್ಪೋರೇಟ್ ಸಂಸ್ಥೆಗಳು ಮಿಲಿಯನ್ ಡಾಲರ್ ಗಳನ್ನು ಖರ್ಚು ಮಾಡಿದ್ದುವು. ಈ ಹಿಂದೆ ನ್ಯೂಯಾರ್ಕ್ ಫೆಡರಲ್ ರಿಸರ್ವ್ ಬ್ಯಾಂಕಿನ ಮುಖ್ಯಸ್ಥರಾಗಿದ್ದ ಟಿಮ್ ಗೈತನರ್  ರನ್ನು ತನ್ನ ಖಜಾನೆಯ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳುವ ಮೂಲಕ ಹಣಕಾಸು ಸಂಸ್ಥೆಗಳ ಋಣವನ್ನು ಒಬಾಮ ಬಳಿಕ ತೀರಿಸಿದರು. ಇನ್ನೋರ್ವ ಬ್ಯಾಂಕ್ ಮುಖ್ಯಸ್ಥ ಲಾರೆನ್ಸ್ ಸಮ್ಮರ್ಸ್ ರನ್ನು ತನ್ನ ಪ್ರಮುಖ ಆರ್ಥಿಕ ಸಲಹೆಗಾರರನ್ನಾಗಿ ಅವರು ನೇಮಿಸಿಕೊಂಡರು. ಒಂದು ರೀತಿಯಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂಬುದು ಅಲ್ಲಿನ ಬೃಹತ್ ಉದ್ಯಮಿಗಳ, ಹಣಕಾಸು ಸಂಸ್ಥೆಗಳ ಮತ್ತು ಶಸ್ತ್ರಾಸ್ತ್ರ ಕಂಪೆನಿಗಳ ಚುನಾವಣೆಯೂ ಆಗಿದೆ. ಅವು ತಮ್ಮ ಭವಿಷ್ಯದ ಬಜೆಟ್ಟನ್ನು ನಿರ್ಧರಿಸುವುದೇ ಈ ಚುನಾವಣೆಯಲ್ಲಿ. ನಾವು ಇಲ್ಲಿ ಭೂಮಿಗೆ, ಚಿನ್ನಕ್ಕೆ, ಶೇರ್ ಗೆ  ಬಂಡವಾಳ ಹೂಡುವಂತೆ ಇವು ಅಭ್ಯರ್ಥಿಗಳ ಮೇಲೆ ಬಂಡವಾಳ ಹೂಡುತ್ತವೆ. ಬಳಿಕ ಬಂಡವಾಳ ಹಿಂತಿರುಗಿಸುವಂತೆ ಅಭ್ಯರ್ಥಿಯ ಮೇಲೆ ವಿವಿಧ ಬಗೆಯ ಒತ್ತಡಗಳನ್ನು ಹೇರತೊಡಗುತ್ತವೆ. ಇಲ್ಲದಿದ್ದರೆ, ವಿದೇಶಿ ನೇರ ಹೂಡಿಕೆಗೆ ಒಪ್ಪಿಕೊಳ್ಳುವಂತೆ ಭಾರತದ ಮೇಲೆ ಒತ್ತಡ ಹೇರುವುದಕ್ಕೆ ಅಮೆರಿಕಕ್ಕೆ ಏನಿತ್ತು ದರ್ದು? ವಾಲ್ಮಾರ್ಟ್ ನಂಥ ಪ್ರಭಾವಿ ಕಂಪೆನಿಗಳನ್ನು ಭಾರತದ ಚಿಲ್ಲರೆ ಮಾರಾಟ ವಲಯದ ಮೇಲೆ ಹೇರಲು ಒಬಾಮರಿಗೆ ಅಂಥ ಆಸಕ್ತಿಯೇನು?
     ಅಫಘಾನ್ ಅತಿಕ್ರಮಣದ 11ನೇ ವರ್ಷಾಚಾರಣೆಯ ಪ್ರಯುಕ್ತ ನ್ಯೂಯಾರ್ಕಿನಲ್ಲಿ ತಿಂಗಳ ಹಿಂದೆ ಪ್ರತಿಭಟನೆಯೊಂದು ನಡೆದಿತ್ತು. ಕಳೆದ ವರ್ಷ ಅಮೆರಿಕದಾದ್ಯಂತ ಹಬ್ಬಿಕೊಂಡಿದ್ದ ಅಕ್ಯುಪೈ ವಾಲ್ ಸ್ಟ್ರೀಟ್  ಎಂಬ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಕೆವಿನ್ ಝೀಸ್ ಈ ಪ್ರತಿಭಟನೆಯಲ್ಲಿ ಭಾಷಣ ಮಾಡಿದ್ದ. ಇರಾಕ್, ಅಫಘಾನ್ ವಿಯೆಟ್ನಾಮ್.. ಮುಂತಾದೆಡೆ ಯುದ್ಧಗಳಲ್ಲಿ ಭಾಗವಹಿಸಿದ ಮಾಜಿ ಸೈನಿಕರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಯುದ್ಧ ಹೇಗೆ ಲಾಭಕರವಾಗಿದೆ ಎಂಬುದನ್ನು ಝೀಸ್ ಸಭೆಯಲ್ಲಿ ವಿವರಿಸಿದ. ಯೋಧರೇ ಅಚ್ಚರಿಗೆ ಒಳಗಾಗುವಷ್ಟು ಮಾಹಿತಿಗಳನ್ನು ಮುಂದಿಟ್ಟ. ನಿಜವಾಗಿ, ಅಮೆರಿಕದ ಅವಳಿ ಕಟ್ಟಡ ಉರುಳಿದಾಗ ಸಾವಿಗೀಡಾದದ್ದು 3 ಸಾವಿರ ಮಂದಿ. ಆದರೆ ಅದರ ಹೆಸರಲ್ಲಿ ಅಮೆರಿಕ ಕೈಗೊಂಡ ಕಾರ್ಯಾಚರಣೆಯಿಂದ 6 ಸಾವಿರ ಸೈನಿಕರು ಈಗಾಗಲೇ ಸಾವಿಗೀಡಾಗಿದ್ದಾರೆ. ಪ್ರತಿ 24 ಗಂಟೆಗಳಿಗೊಮ್ಮೆ ಓರ್ವ ಸೈನಿಕನಾದರೂ ಆತ್ಮಹತ್ಯೆಗೆ ಯತ್ನಿಸುತ್ತಿದ್ದಾನೆ. 2003ರಿಂದ 2008ರ ವರೆಗೆ ಕೇವಲ ಇರಾಕ್ ಒಂದರಲ್ಲಿಯೇ 6,50,000 ಸಾವಿರ ಮಂದಿ ಸಾವಿಗೀಡಾಗಿದ್ದಾರೆ. 1.8 ಮಿಲಿಯನ್ ಇರಾಕಿಗಳು ದೇಶ ಬಿಟ್ಟು ವಲಸೆ ಹೋಗಿದ್ದಾರೆ. ತಮ್ಮ ದೇಶದಲ್ಲಿಯೇ ಅತಂತ್ರರಾದವರ ಸಂಖ್ಯೆ 1.6 ಮಿಲಿಯನ್ (ದಿ ಹಿಂದು , ಅಕ್ಟೋಬರ್ 25, 2012). ಆದರೆ, ಇಷ್ಟೆಲ್ಲಾ ಮಾಹಿತಿಗಳು ಕಣ್ಣ ಮುಂದಿದ್ದರೂ ಒಬಾಮ ಮತ್ತು ರೋಮ್ನಿ ಮಧ್ಯೆ ನಡೆದ ಚರ್ಚೆಗಳಲ್ಲಿ ಇವುಗಳ ಪ್ರಸ್ತಾಪವೇ ಆಗಿಲ್ಲವೇಕೆ? ಒಬಾಮ ಮತ್ತು ರೋಮ್ನಿಯ ಮಧ್ಯೆ 3 ಸುತ್ತಿನ ಬಹಿರಂಗ ಚರ್ಚೆ ಈಗಾಗಲೇ ಮುಗಿದಿದೆ. ಅಂತಿಮವಾಗಿ ಈ ಚರ್ಚೆಯಲ್ಲಿ ಗೆದ್ದದ್ದು ಒಬಾಮ ಎಂಬ ತೀರ್ಮಾನಕ್ಕೂ ಬರಲಾಗಿದೆ. ಆದರೆ, ಈ ಚರ್ಚೆಯಲ್ಲಿ ಅಫಘಾನ್ ಮತ್ತು ಇರಾಕ್ ಮೇಲಿನ ದಾಳಿಗಾದ ಖರ್ಚಿನ ಕುರಿತು ಇಬ್ಬರೂ ಚಕಾರವೆತ್ತಲೇ ಇಲ್ಲ. ಸೇನೆಗೆ ಇನ್ನಷ್ಟು ಹಣ ಮೀಸಲಿಡುವ ಬಗ್ಗೆ ರೋಮ್ನಿ ಹೇಳಿಕೊಂಡರಲ್ಲದೇ, ಡ್ರೋನನ್ನೂ ಸಮರ್ಥಿಸಿಕೊಂಡರು. ಆದರೆ ಅತಿಕ್ರಮಣದಲ್ಲಿ ಸಾವಿಗೀಡಾದ ಇರಾಕ್, ಅಫಘಾನಿಯರ ಬಗ್ಗೆ ಅವರು ಅಪ್ಪಿತಪ್ಪಿಯೂ ಉಲ್ಲೇಖಿಸಲಿಲ್ಲ. ಅದು ಬಿಡಿ, ಅಣು ವಿದ್ಯುತ್ ನ  ಬಗ್ಗೆ ಒಬಾಮ ಒಂದೇ ಒಂದು ಬಾರಿಯಾದರೂ ಮಾತಾಡಲಿಲ್ಲ. ಅದು ಸುರಕ್ಷಿತ ವಿದ್ಯುತ್ ಎಂದೂ ಹೇಳಲಿಲ್ಲ. ಅವರು ವಾಯು, ಸೋಲಾರ್ ಮತ್ತು ಬಯೋ ವಿದ್ಯುತ್ ನ  ಬಗ್ಗೆಯಷ್ಟೇ ಚರ್ಚೆಯಲ್ಲಿ ಉಲ್ಲೇಖಿಸಿದ್ದರು. ಅಣು ವಿದ್ಯುತ್ ಒಪ್ಪಂದಕ್ಕೆ ಸಹಿ ಹಾಕುವಂತೆ ಭಾರತದ ಮೇಲೆ ಒತ್ತಡ ಹೇರಿ ಯಶಸ್ವಿಯಾದ ಮತ್ತು ಜೈತಾಪುರ್ (ಫ್ರಾನ್ಸ್ ಪ್ರಾಯೋಜಕತ್ವ) ಸಹಿತ ದೇಶದ ವಿವಿಧ ಭಾಗಗಳಲ್ಲಿ ಅಣು ಸ್ಥಾವರಗಳನ್ನು ನಿರ್ಮಿಸಲು ಉತ್ತೇಜನ ಕೊಟ್ಟ ಇದೇ ಅಮೆರಿಕಕ್ಕೆ ಅಣು ವಿದ್ಯುತ್ ಅಪಥ್ಯವಾದುದೇಕೆ? ರೋಮ್ನಿ ಅಣು ವಿದ್ಯುತ್ ನ  ಬಗ್ಗೆ ಒಮ್ಮೆ ಉಲ್ಲೇಖಿಸಿದರೂ ಅದಕ್ಕೆ ಒತ್ತು ಕೊಡಲಿಲ್ಲ. ಇವೆಲ್ಲ ಏನು? ಒಳಗೊಂದು ಹೊರಗೊಂದು ನೀತಿಯೇ ಅಲ್ಲವೇ? ಮಲಾಲಳ ಪ್ರಕರಣದ ಕುರಿತಂತೆ ಇವತ್ತು ಪಾಕ್ ನಲ್ಲಿ ವ್ಯಕ್ತವಾಗುತ್ತಿರುವ ಸರಣಿ ಅನುಮಾನಗಳಿಗೆ ಅಮೆರಿಕನ್ ಮಾಧ್ಯಮಗಳು ಸಿಟ್ಟಾಗಿವೆ. ಪಾಕ್ ಮತ್ತು ಅಫಘಾನ್ ಗೆ  ಅಮೆರಿಕದ ವಿಶೇಷ ರಾಯಭಾರಿಯಾಗಿ ಈ ಹಿಂದೆ ನೇಮಕವಾಗಿದ್ದ ರಿಚರ್ಡ್ ಹಾಲ್ ಬ್ರೂಕ್ ರೊಂದಿಗೆ ಮಲಾಲ ಮತ್ತು ಆಕೆಯ ತಂದೆ ಝೈದುದ್ದೀನ್ ರು  ಇರುವ ಫೋಟೋ ಇಂಟರ್ನೆಟಲ್ಲಿ  ಇತ್ತೀಚೆಗೆ ಕಾಣಿಸಿಕೊಂಡಿತ್ತು. ಇದನ್ನು ಪೋಸ್ಟ್ ಮಾಡಿದ್ದು, ಪಾಕ್ ಜಮಾಅತೆ ಇಸ್ಲಾಮಿಯ ಮಾಜಿ ಅಧ್ಯಕ್ಷ ಖಾಝಿ ಹುಸೈನ್ ರ  ಮಗಳು ಸಮಿಯ. ಪ್ರಕರಣದ ಕುರಿತಂತೆ ಭಿನ್ನ ಚರ್ಚೆಗೆ ಈ ಫೋಟೋ ಪ್ರಚೋದನೆ ನೀಡುತ್ತದೆಂದು ಅಮೆರಿಕನ್ ಮಾಧ್ಯಮಗಳು ಸಿಟ್ಟು ವ್ಯಕ್ತಪಡಿಸಿದ್ದುವು. ‘ಮಲಾಲಳ ಮೇಲೆ ಪಾಯಿಂಟ್ ಬ್ಲ್ಯಾಂಕ್ ರೇಂಜ್ ನಿಂದ  ದಾಳಿ ಮಾಡಲಾಗಿದ್ದು, ಗುಂಡು ಮೆದುಳಿಗೆ ಹಾನಿ ಮಾಡದೇ ಕೇವಲ ತಲೆ ಮತ್ತು ಕತ್ತಿನ ಸುತ್ತ ಹರಿದಾಡುತ್ತಿದೆ, ಇಂಥ ಚಾಣಾಕ್ಷ ದಾಳಿಯನ್ನು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಏಯಿಂದ ಮಾತ್ರ ಮಾಡಲು ಸಾಧ್ಯ, ತಾಲಿಬಾನ್ ಗೆ  ಇಂಥ ದಾಳಿ ಮಾಡುವ ಸಾಮರ್ಥ್ಯ  ಇಲ್ಲ...’ ಎಂಬೆಲ್ಲ ವ್ಯಾಖ್ಯಾನಗಳು ಪಾಕ್ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಅಮೆರಿಕನ್ ಅಧಿಕಾರಿಗಳಲ್ಲ್ಲಿ ಅಸಹನೆ ಉಂಟುಮಾಡಿದೆ. ಅಂದ ಹಾಗೆ, ಅಮೆರಿಕದ ಕುರಿತಂತೆ ಈ ಬಗೆಯ ಅನುಮಾನಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾದರೂ ಯಾರು? ಹಾಗಂತ ಅಮೆರಿಕವನ್ನು ದ್ವೇಷಿಸುತ್ತಿರುವುದು ಪಾಕ್ ಒಂದೇ ಅಲ್ಲ, ಪಾಕ್ ನಂಥ ಅನೇಕಾರು ರಾಷ್ಟ್ರಗಳ ಕೋಟ್ಯಂತರ ಮಂದಿ ಇವತ್ತು ಅಮೆರಿಕವನ್ನು ದ್ವೇಷಿಸುತ್ತಿದ್ದಾರಲ್ಲ, ಯಾಕಾಗಿ? ಅಮೆರಿಕ ಏನು ಮಾಡಿದರೂ, ಯಾವ ಹೇಳಿಕೆಯನ್ನು ಕೊಟ್ಟರೂ ಅನುಮಾನಿಸುವ ವಾತಾವರಣ ನಿರ್ಮಾಣವಾದ್ದೇಕೆ? ಹೇಗೆ? ಇಷ್ಟಕ್ಕೂ ಜಗತ್ತಿನ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲಿರುವುದು ಅಮೆರಿಕ ಒಂದೇ ಅಲ್ಲವಲ್ಲ. ಆದರೆ ಅವಾವುದನ್ನೂ ದ್ವೇಷಿಸದೆ ಕೇವಲ ಅಮೆರಿಕವನ್ನಷ್ಟೇ ಜನರು ದ್ವೇಷಿಸುತ್ತಾರೆಂದರೆ ಆ ದ್ವೇಷಕ್ಕೆ ಅಮೆರಿಕದ ಶ್ರೀಮಂತಿಕೆ ಕಾರಣ ಅಲ್ಲ ಎಂಬುದೂ ಸ್ಪಷ್ಟವಲ್ಲವೇ? ಒಂದು ವೇಳೆ ಶ್ರೀಮಂತಿಕೆಯೇ ಕಾರಣವೆಂದಾಗಿದ್ದರೆ ಧಾರಾಳ ತೈಲ ಸಂಪತ್ತು ಇರುವ ಸೌದಿಯನ್ನೋ, ವೆನೆಝುವೇಲವನ್ನೋ, ಇರಾಕನ್ನೋ ಜನರು ದ್ವೇಷಿಸಬೇಕಿತ್ತಲ್ಲವೇ?
     ಆದರೂ, ಮುಂದಿನ ತಿಂಗಳು ಹೊಸ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಒಬಾಮರೋ, ರೋಮ್ನಿಯೋರೋ ಹೀಗೆಲ್ಲಾ ಆತ್ಮಾವಲೋಕನ ನಡೆಸುತ್ತಾರೆಂಬ ನಿರೀಕ್ಷೆ ಯಾರಲ್ಲೂ ಇಲ್ಲ..


No comments:

Post a Comment