Tuesday, October 30, 2012

ಅವರ ಆ 8 ಗಂಟೆ ವಿಳಂಬದಲ್ಲಿ ಹತ್ತಾರು ಅರ್ಥಗಳಿದ್ದುವೇ?

ಇಮ್ರಾನ್ ಖಾನ್‍
      ಲಿವಿಂಗ್ ಅಂಡರ್ ಡ್ರೋನ್ಸ್ (ಡ್ರೋನ್‍ಗಳಡಿಯಲ್ಲಿ ಬದುಕು) ಎಂಬ ಡಾಕ್ಯುಮೆಂಟರಿಯನ್ನು ವೀಕ್ಷಿಸಿದರೆ ಅಥವಾ ಸ್ಟಾನ್‍ ಫೋರ್ಡ್  ಯುನಿವರ್ಸಿಟಿ ಮತ್ತು ನ್ಯೂಯಾರ್ಕ್ ಯುನಿವರ್ಸಿಟಿಗಳು ಜಂಟಿಯಾಗಿ ನಡೆಸಿದ ಅಧ್ಯಯನದ ವರದಿಯನ್ನು ಓದಿದರೆ  ಪಾಕಿಸ್ತಾನದ ಮಲಾಲ ಯೂಸುಫ್‍ಝಾಯಿ ಪ್ರಕರಣದ ಬಗ್ಗೆ ಖಂಡಿತ ಅನುಮಾನಗಳು ಮೂಡುತ್ತವೆ.
       ಲಿವಿಂಗ್ ಅಂಡರ್ ಡ್ರೋನ್ಸ್ ಎಂಬ ಹೆಸರಿನ ಡಾಕ್ಯುಮೆಂಟರಿ ಮತ್ತು 165 ಪುಟಗಳ ಅಧ್ಯಯನ ವರದಿಯು ಕಳೆದ 2012 ಸೆಪ್ಟೆಂಬರ್‍ನಲ್ಲಿ ಅಮೇರಿಕದಲ್ಲಿ ಬಿಡುಗಡೆಯಾಗಿತ್ತು. ಮೇಲಿನೆರಡು ಯುನಿವರ್ಸಿಟಿಗಳ ವಿದ್ಯಾರ್ಥಿಗಳು ಒಂದು ವರ್ಷದ ಕಾಲ ಮಲಾಲಳ ಸ್ವಾತ್ ಕಣಿವೆ ಸಹಿತ ಪಾಕಿಸ್ತಾನದ ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ನಡೆಸಿದ ಅಧ್ಯಯನದ ವರದಿಯದು. ಅಮೇರಿಕದ ಡ್ರೋನ್ ದಾಳಿಯಿಂದ ಬದುಕುಳಿದ 130ಕ್ಕಿಂತಲೂ ಅಧಿಕ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ಆ ವರದಿಯಲ್ಲಿ ಹತ್ತಾರು ಕಣ್ಣೀರ ಕತೆಗಳಿವೆ. ಡ್ರೋನ್ ಕ್ಷಿಪಣಿಯ ಸದ್ದು ಕೇಳಿಸುತ್ತಲೇ ಜನರೆಲ್ಲ ಮನೆ, ಹಟ್ಟಿ, ಟಾಯ್ಲೆಟ್ಟು... ಹೀಗೆ ಸಿಕ್ಕ ಸಿಕ್ಕಲ್ಲಿ ನುಸುಳಿಕೊಳ್ಳುತ್ತಾರೆ. ಅಂತ್ಯಸಂಸ್ಕಾರ ನಡೆಸಲೂ ಭಯ. ಅದರಲ್ಲಿ ಭಾಗವಹಿಸಲೂ ಭೀತಿ. ಯಾಕೆಂದರೆ ಎಷ್ಟೋ ಬಾರಿ ಅಂತ್ಯ ಸಂಸ್ಕಾರಕ್ಕೆ ಸೇರಿದವರ ಮೇಲೆಯೇ ಡ್ರೋನ್(ಮಾನವ ರಹಿತ ಕ್ಷಿಪಣಿ)ಗಳು ಎರಗಿವೆ. ಮದುವೆ ನಡೆಸುವಂತಿಲ್ಲ. ಊರ ಪ್ರಮುಖರು ಸಭೆ ಸೇರುವಂತಿಲ್ಲ. ಯಾವ ಸಂದರ್ಭದಲ್ಲೂ ಡ್ರೋನ್ ಎರಗಬಹುದು. ಅಸಂಖ್ಯ ಮಂದಿ ನಿದ್ದೆ ಬಾರದ ಸಮಸ್ಯೆಯಿಂದ (insomnia) ಬಳಲುತ್ತಿದ್ದಾರೆ. ಕಳೆದ ಎಂಟು ವರ್ಷಗಳಿಂದ ಜಾರಿ
ಯಲ್ಲಿರುವ ಡ್ರೋನ್ ದಾಳಿಯಿಂದಾಗಿ ದೈಹಿಕ, ಮಾನಸಿಕ ಕಾಯಿಲೆಗಳಿಗೆ ತುತ್ತಾದವರ ಸಂಖ್ಯೆ ದೊಡ್ಡದಿದೆ. ಅಂದ ಹಾಗೆ, ಯಾವುದಾದರೊಂದು ಸಭೆಗೋ ಅಂತ್ಯ ಸಂಸ್ಕಾರಕ್ಕೋ ಮದುವೆ ಕಾರ್ಯಕ್ರಮಕ್ಕೋ ಡ್ರೋನ್ ದಾಳಿಯಾದರೆ ಅರ್ಧ ತಾಸಿನ  ತನಕ ಯಾರೂ ಹತ್ತಿರ ಧಾವಿಸುವುದೇ ಇಲ್ಲ. ಯಾಕೆಂದರೆ ಮುಂದಿನ ಅರ್ಧ ತಾಸಿನೊಳಗೆ ಇನ್ನೊಂದು ದಾಳಿಯಾಗುವ ಸಾಧ್ಯತೆಯಿರುತ್ತದೆ. ಬುಶ್‍ರ ಆಡಳಿತಾವಧಿಯಲ್ಲಿ 43 ದಿನಗಳಿಗೊಮ್ಮೆ ಡ್ರೋನ್‍ನ ದಾಳಿಯಾಗುತ್ತಿದ್ದರೆ ಒಬಾಮರ ಆಡಳಿತದಲ್ಲಿ ದಿನಕ್ಕೊಂದು ಡ್ರೋನ್ ಸಿಡಿಯುತ್ತಲೇ ಇದೆ..’
       ಇಷ್ಟಕ್ಕೂ, ಪಾಕ್, ಬ್ರಿಟನ್ ಮತ್ತು ಅಮೇರಿಕಗಳಲ್ಲಿ ಇವತ್ತು ಡ್ರೋನ್ ಒಂದು ಚರ್ಚಾ ವಿಷಯವಾಗಿದ್ದರೆ ಅದಕ್ಕೆ ಮಲಾಲ ಖಂಡಿತ ಕಾರಣ ಅಲ್ಲ..
1 ನೂರ್ ಖಾನ್
ಮಲಾಲ
2 ಇಮ್ರಾನ್ ಖಾನ್
        ನೂರ್ ಖಾನ್ ಎಂಬ ಪಾಕ್‍ನ 27ರ ಯುವಕ ಕಳೆದವಾರ ಬ್ರಿಟನ್ನಿನ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ. 2011ರ  ಮಾರ್ಚ್ ನಲ್ಲಿ ಈತನ ತಂದೆ ಮಾಲಿಕ್ ದಾವೂದ್‍ರು ಪೂರ್ವ ವಜೇರಿಸ್ತಾನದಲ್ಲಿ ಬುಡಕಟ್ಟು ಪ್ರಮುಖರ ನಭೆ ನಡೆಸುತ್ತಿದ್ದರು. ಆಗ ಆ ಸಭೆಯ ಮೇಲೆ ಡ್ರೋನ್ ಎರಗುತ್ತದಲ್ಲದೇ ಮಾಲಿಕ್‍ರ ಸಹಿತ ಐವತ್ತು ಮಂದಿ ಬುಡಕಟ್ಟು ಪ್ರಮುಖರನ್ನು ಹತ್ಯೆ ಮಾಡುತ್ತದೆ. ತನ್ನ ತಂದೆ ಟೆರರಿಸ್ಟ್ ಆಗಿರಲಿಲ್ಲ, ತಾಲಿಬಾನೂ ಆಗಿರಲಿಲ್ಲ. ಆದರೆ ಈ ಸಭೆಯ ಬಗ್ಗೆ ಬ್ರಿಟನ್ನಿನ ಗುಪ್ತಚರ ಅಧಿಕಾರಿಗಳು  ಅಮೇರಿಕನ್ ಅಧಿಕಾರಿಗಳಿಗೆ ಸುಳ್ಳು ಮಾಹಿತಿಯನ್ನು ರವಾನಿಸಿದ್ದರಿಂದಲೇ ಡ್ರೋನ್ ದಾಳಿಯಾಗಿದೆ. ಆದ್ದರಿಂದ ತಪ್ಪಿತಸ್ಥರನ್ನು ಶಿಕ್ಷಿಸಬೇಕು ಎಂದಾತ ಆಗ್ರಹಿಸಿದ್ದಾನೆ. ಇದಕ್ಕಿಂತ ಒಂದು ವಾರದ ಮೊದಲು, 2012 ಅಕ್ಟೋಬರ್ 11ರಂದು ತಹ್ರೀಕೆ ಇನ್ಸಾಫ್ ಪಾರ್ಟಿಯ ನಾಯಕ ಮತ್ತು ಕ್ರಿಕೆಟಿಗ ಇಮ್ರಾನ್ ಖಾನ್‍ರು ಪಾಕ್‍ನಲ್ಲಿ ಬೃಹತ್ ಜಾಥಾ ಸಂಘಟಿಸಿದ್ದರು. ಇಸ್ಲಾಮಾಬಾದ್‍ನಿಂದ ಡ್ರೋನ್‍ಪೀಡಿತ ವಝೀರಿಸ್ತಾನದ ಕೊಟಕೈ  ಪ್ರದೇಶಕ್ಕೆ ಹಮ್ಮಿಕೊಂಡ ಈ ಮೂರು ದಿನಗಳ ಜಾಥಾದ ಉದ್ದೇಶ ಡ್ರೋನ್‍ನ ಬಗ್ಗೆ ಜಾಗತಿಕ ಗಮನ ಸೆಳೆಯುವುದಾಗಿತ್ತು. ಡ್ರೋನ್ ದಾಳಿಯನ್ನು ರದ್ದುಪಡಿಸಬೇಕೆಂದು ಕೋರಿ ಇಸ್ಲಾಮಾಬಾದ್‍ನಲ್ಲಿರುವ ಅಮೇರಿಕನ್ ರಾಯಭಾರಿ ರಿಚರ್ಡ್ ಹಾಗ್‍ಲ್ಯಾಂಡ್‍ಗೆ ಸಲ್ಲಿಸಲಾದ ಮನವಿಗೆ ಖ್ಯಾತ ಅಮೇರಿಕನ್ ಬರಹಗಾರ ಅಲಿಸ್ ಲೂಕರ್, ಸಿನಿಮಾ ನಿರ್ದೇಶಕರುಗಳಾದ ಒಲಿವರ್ ಸ್ಟೋನ್ ಮತ್ತು ಡ್ಯಾನಿ ಗ್ಲೋವರ್ ಸಹಿ ಹಾಕಿದ್ದರು.  ಅಮೇರಿಕದ ಮಾಜಿ ಸೇನಾ ಜನರಲ್ ಅನ್ನಿ  ರೈಟ್ ರು   ಇಮ್ರಾನ್‍ರ ಜಾಥಾಕ್ಕೆ ಬೆಂಬಲ ಸಾರಿದರು. ಹತ್ತು ಸಾವಿರಕ್ಕಿಂತಲೂ ಹೆಚ್ಚು ಮಂದಿ ಜಾಥಾದಲ್ಲಿ ಪಾಲ್ಗೊಳ್ಳುವುದನ್ನು ಕಂಡು ಪಾಕ್ ಆಡಳಿತ ತಬ್ಬಿಬ್ಬಾಯಿತು. ವಝೀರಿಸ್ತಾನಕ್ಕೆ ಪ್ರವೇಶಿಸಲು ಅವಕಾಶ ಕೊಡಲಾರೆ ಅಂದಿತು. ಅದಕ್ಕೆ ಕಾರಣವೂ ಇದೆ. ಅಮೇರಿಕವು ಏಕಾಏಕಿ  ಪಾಕಿಸ್ತಾನಕ್ಕೆ ಪ್ರವೇಶಿಸಿ ಡ್ರೋನ್ ದಾಳಿ ಪ್ರಾರಂಭಿಸಿದ್ದಲ್ಲ. ಡ್ರೋನ್ ದಾಳಿ ನಡೆಸಲು ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟದ್ದೇ ಪಾಕಿಸ್ತಾನ. ಅಮೇರಿಕ ಕೊಡುವ ದೊಡ್ಡ ಪ್ರಮಾಣದ ಬಾಡಿಗೆ ಮೊತ್ತದ ಮೇಲಷ್ಟೇ ಕಣ್ಣಿಟ್ಟಿದ್ದ ಪಾಕಿಸ್ತಾನ, 2004ರಿಂದ 2011 ನವೆಂಬರ್ ವರೆಗೆ ಶಮ್ಸ್ ವಿಮಾನ ನಿಲ್ದಾಣದ ಬಗ್ಗೆ ಮಾತೇ ಆಡಿರಲಿಲ್ಲ. ಆದರೆ 2011 ನವೆಂಬರ್‍ನಲ್ಲಿ ಶಮ್ಸ್ ನಿಂದ ಅಮೇರಿಕ ಹಾರಿಸಿದ ಡ್ರೋನ್ ಕ್ಷಿಪಣಿಗೆ ಸಲಾಲ ಎಂಬ ಪ್ರದೇಶದಲ್ಲಿ ಕಾರ್ಯಾಚರಣೆಯಲ್ಲಿದ್ದ ಪಾಕ್‍ನ 24 ಸೈನಿಕರು ಬಲಿಯಾದಾಗ ಎರಡು ತಿಂಗಳುಗಳ ಕಾಲ ಪಾಕ್ ಸರಕಾರ ಶಮ್ಸ್ ಅನ್ನು ಮುಚ್ಚಿಬಿಟ್ಟಿತು. ಇದಕ್ಕೆ ಅಮೇರಿಕದ ವಿರುದ್ಧ  ಪಾಕ್ ಜನತೆಯ ವ್ಯಾಪಕ ಆಕ್ರೋಶವೂ ಕಾರಣವಾಗಿತ್ತು. ಆದರೆ ಯಾವಾಗ ಜನರ ಆಕ್ರೋಶ ತಣ್ಣಗಾಯಿತೋ 2012 ಜನವರಿ 10ರಂದು ಪಾಕ್ ಮತ್ತೆ ತನ್ನ ಶಮ್ಸ್ ವಿಮಾನ ನಿಲ್ದಾಣವನ್ನು ಅಮೇರಿಕಕ್ಕೆ ಬಿಟ್ಟುಕೊಟ್ಟಿತು. ಅಂದಹಾಗೆ, ಪಾಕ್ ಸೈನಿಕರನ್ನು ಗುರುತಿಸುವುದಕ್ಕೂ ಡ್ರೋನ್‍ಗೆ ಸಾಧ್ಯವಾಗುವುದಿಲ್ಲವೆಂದ ಮೇಲೆ ಉಗ್ರರನ್ನು ಗುರುತಿಸುವುದಕ್ಕೆ ಸಾಧ್ಯವಾಗುವುದಾದರೂ ಹೇಗೆ? ಸೈನಿಕರ ಮೇಲೆಯೇ ಎರಗುವ ಡ್ರೋನ್, ಇನ್ನು ನಾಗರಿಕರ ಮೇಲೆ ಎರಗದೆಂದು ಹೇಗೆ ಹೇಳುವುದು? ನಿಜವಾಗಿ ಡ್ರೋನ್ ದಾಳಿಯನ್ನು ಮಾನವ ವಿರೋಧಿ ಎಂದು ಬೊಟ್ಟು ಮಾಡುತ್ತಿರುವುದು ಪಾಕ್ ಜನತೆಯಷ್ಟೇ ಅಲ್ಲ, 2009 ಎಪ್ರಿಲ್ 9ರಂದು ಫಾದರ್ ಲೂವಿಸ್ ವಿಟಲ್, ಕಾತಿ ಕೆಲ್ಲಿ, ಸ್ಟೀಫನ್ ಕೆಲ್ಲಿ, ಈವ್ ಟೋಟ್ಸ್.. ಮುಂತಾದ ಪ್ರಭಾವಿಗಳು ಡ್ರೋನ್ ದಾಳಿಯನ್ನು ರದ್ದುಪಡಿಸ ಬೇಕೆಂದು ಒತ್ತಾಯಿಸಿ ಅಮೇರಿಕದ ಕ್ರೀಚ್ ವಿಮಾನ ನಿಲ್ದಾಣದ ಬಳಿ ಪ್ರತಿಭಟಿಸಿದ್ದರು. ಬಂಧನಕ್ಕೂ ಒಳಗಾಗಿದ್ದರು. ಡ್ರೋನ್‍ನ ಮೂಲಕ ನಾಗರಿಕರ ಹತ್ಯೆಯಾಗುತ್ತಿರುವುದಕ್ಕೆ 2009 ಜೂನ್ 3ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು (UNHRC) ಅಮೇರಿಕವನ್ನು ಖಂಡಿಸಿತು. UNHRCಯ ತನಿಖಾ ತಂಡದ ಮುಖ್ಯಸ್ಥ ಫಿಲಿಪ್ ಆಲ್‍ಸ್ಟನ್‍ರು 2009 ಅಕ್ಟೋಬರ್ 27ರಂದು ಡ್ರೋನ್ ದಾಳಿಯನ್ನು ಮನುಷ್ಯ ವಿರೋಧಿ ಅಂದರು. ಒಂದು ರೀತಿಯಲ್ಲಿ ಡ್ರೋನ್‍ನ ವಿರುದ್ಧ ವ್ಯಾಪಕವಾಗುತ್ತಿರುವ ಪ್ರತಿಭಟನೆಯನ್ನು ಪರಿಗಣಿಸಿಯೇ 2009-10ರಲ್ಲಿ ಅಮೇರಿಕವು ಡ್ರೋನ್‍ನ ಉದ್ದವನ್ನು 21 ಇಂಚಿಗೆ ತಗ್ಗಿಸಿದ್ದು ಮತ್ತು ಭಾರವನ್ನು 16 ಕೆ.ಜಿ.ಗೆ ಇಳಿಸಿದ್ದು. ಅಂದಹಾಗೆ, ಭಾರ ಮತ್ತು ಉದ್ದವನ್ನು ತಗ್ಗಿಸಿದ ಕೂಡಲೇ ಡ್ರೋನ್‍ಗೆ ನಾಗರಿಕರು ಮತ್ತು 'ಉಗ್ರ'ವಾದಿಗಳ ಗುರುತು ಸಿಗುತ್ತದೆಂದೇನೂ ಅಲ್ಲವಲ್ಲ. ಮಲಾಲಳ ಪ್ರಕರಣಕ್ಕಿಂತ ಮೊದಲು ಮತ್ತು ಆ ಬಳಿಕವೂ  ವಾಯುವ್ಯ ಪಾಕ್‍ನ ಮೇಲೆ ಡ್ರೋನ್ ಎರಗಿವೆ. ಹಾಗಂತ, ಮಲಾಲಳಿಗೆ ಗುಂಡು ಹಾರಿಸಿದವರ ವಿರುದ್ಧ ಮಾತಾಡಿದಂತೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾದವರ ಪರ ಮಾಧ್ಯಮಗಳು ಮಾತಾಡಿವೆಯೇ? ಒಬಾಮ, ಹಿಲರಿ ಕ್ಲಿಂಟನ್, ಬ್ರಿಟನ್ನಿನ ಕ್ಯಾಮರೂನ್, ಮಡೋನ್ನಾ.. ಎಲ್ಲರಿಗೂ ಮಲಾಲ ಗೊತ್ತು. ಬ್ರಿಟನ್ನಿನ ರಾಣಿ ಎಲಿಜಬೆತ್‍ಗೂ ಗೊತ್ತು. ಆದರೆ ಡ್ರೋನ್‍ಗೆ ಸಿಲುಕಿ ಸಾವಿಗೀಡಾಗುತ್ತಿರುವ ‘ಮಲಾಲಗಳು’ ಯಾರಿಗೆಲ್ಲ ಗೊತ್ತಿವೆ? ಅವರ ಪ್ರಾಯ, ಕಲಿಯುತ್ತಿರುವ ಶಾಲೆ, ಅವರಲ್ಲಿರುವ ಪ್ರತಿಭೆಗಳನ್ನು ಇವರಲ್ಲಿ ಒಬ್ಬರಾದರೂ ಉಲ್ಲೇಖಿಸಿಲ್ಲವಲ್ಲ, ಯಾಕೆ?
     ಒಟ್ಟು ಡ್ರೋನ್ ದಾಳಿ     -    349
     ಒಬಾಮರ ಅವಧಿಯಲ್ಲಿ ಆದ ದಾಳಿ     -    297
     ಬುಶ್‍ರ ಅವಧಿಯಲ್ಲಿ     -    52
     ಸಾವಿಗೀಡಾದ ನಾಗರಿಕರು  -    884
     ಮಕ್ಕಳು  -    176
     ಒಟ್ಟು ಗಾಯಗೊಂಡವರು     -    1389
         2004ರಿಂದ 2012 ಅಕ್ಟೋಬರ್ 10ರ ವರೆಗೆ ಪಾಕ್‍ನಲ್ಲಿ ನಡೆದ ಡ್ರೋನ್ ಕಾರ್ಯಾಚರಣೆಯ ವಿವರವಿದು. ನೀವೇ ಹೇಳಿ, ಸಾವಿಗೀಡಾದ 176 ಮಕ್ಕಳಲ್ಲಿ ಒಂದೇ ಒಂದು ಮಗು ಮಲಾಲಳಂತೆ ಸುದ್ದಿಗೀಡಾಗಿದೆಯೇ? ಎಷ್ಟು ಮಂದಿ ಬರಹಗಾರರು ಈ ಮಕ್ಕಳನ್ನು ಎದುರಿಟ್ಟುಕೊಂಡು ಲೇಖನ ಬರೆದಿದ್ದಾರೆ? ಮಲಾಲಳನ್ನು ಎತ್ತಿಕೊಂಡು ತಾಲಿಬಾನ್‍ಗಳನ್ನು ದೂಷಿಸಿದಂತೆ ಈ ಮಕ್ಕಳನ್ನು ಎತ್ತಿಕೊಂಡು ಅಮೇರಿಕವನ್ನು ಮತ್ತು ಅದರ ಯುದ್ಧ ನೀತಿಯನ್ನು ಎಷ್ಟು ಮಂದಿ ಪ್ರಶ್ನಿಸಿದ್ದಾರೆ? ಹತ್ಯೆ ನಡೆಸಿದ್ದು ತಾಲಿಬಾನ್ ಎಂದಾದರೆ ಅದು ಕ್ರೂರ ಅನ್ನಿಸುವುದು ಮತ್ತು ಅಮೇರಿಕ ಎಂದಾದರೆ ಅದು ಭಯೋತ್ಪಾದನಾ ವಿರೋಧಿ ಹೋರಾಟ ಅನ್ನಿಸುವುದೆಲ್ಲ ಯಾಕೆ? ನಿಜವಾಗಿ, ಮಲಾಲ ಪ್ರಕರಣದ ಬಗ್ಗೆ ಅನುಮಾನ ಮೂಡುವುದೇ ಇಲ್ಲಿ. ಆಕೆಯ ಮೇಲಾದ ದಾಳಿಯನ್ನು ಒಬಾಮರ ಮೇಲೋ ರಾಣಿ ಎಲಿಜಬೆತ್‍ರ ಮೇಲೋ ಆದ ದಾಳಿಯಂತೆ ಮಾಧ್ಯಮಗಳು ಬಿಂಬಿಸಿರುವುದರ ಹಿಂದೆ ಅಸಹಜ ಉದ್ದೇಶವೇನೂ ಇಲ್ಲ ಅನ್ನುತ್ತೀರಾ? ಅಮೇರಿಕದ ಯುದ್ಧ ನೀತಿಯನ್ನು ಬೆಂಬಲಿಸುವವರೆಲ್ಲ ಮಲಾಲಳಿಗಾಗಿ ಕಣ್ಣೀರಿಳಿಸಿದ್ದು, ತೀರಾ ಪ್ರಾದೇಶಿಕ ಟಿ.ವಿ. ಚಾನೆಲ್‍ಗಳೂ ಬ್ರೇಕಿಂಗ್ ನ್ಯೂಸ್ ಆಗಿಸುವಷ್ಟು, ಫಾಲೋ ಅಪ್ ನ್ಯೂಸ್ ಬಿತ್ತರಿಸುವಷ್ಟು ಮಲಾಲಳ ಪ್ರಕರಣಕ್ಕೆ ಮಹತ್ವ ದೊರಕಿದ್ದರಲ್ಲಿ ಬರೇ ಮಾಧ್ಯಮ ಧರ್ಮವಷ್ಟೇ  ಕಾಣಿಸುತ್ತದಾ? ತಾಲಿಬಾನ್ ಪ್ರಾಬಲ್ಯವಿರುವ ಪ್ರದೇಶದಲ್ಲಿ ತಾಲಿಬಾನ್ ನಿಲುವನ್ನು ಪ್ರಶ್ನಿಸುತ್ತಿರುವ ಹೆಣ್ಣು ಮಗಳ ಮೇಲೆ ದಾಳಿಯಾಗುವುದರಿಂದ ನಷ್ಟವಾಗುವುದು ತಾಲಿಬಾನ್‍ಗೇ ಹೊರತು ಅಮೇರಿಕಕ್ಕೆ ಖಂಡಿತ ಅಲ್ಲ. ಅಮೇರಿಕ ಈಗಾಗಲೇ ಅಫಘಾನ್ ಮತ್ತು ಪಾಕ್‍ಗಳಲ್ಲಿ ಸೈನಿಕ ಕಾರ್ಯಾಚರಣೆಯನ್ನು ಬಹುತೇಕ ನಿಲ್ಲಿಸಿ ಬಿಟ್ಟಿದೆ. ಅಫಘಾನ್ ಮತ್ತು ಇರಾಕ್‍ಗಳಲ್ಲಿ 6 ಸಾವಿರ ಸೈನಿಕರನ್ನು ಕಳಕೊಂಡಿರುವ ಅಮೇರಿಕಕ್ಕೆ (ದಿ ಹಿಂದೂ 2012 ಅಕ್ಟೋಬರ್ 25, ಪಿ. ಸಾಯಿನಾಥ್) ತಾಲಿಬಾನನ್ನು ಬಂದೂಕಿನಿಂದ ಎದುರಿಸಲು ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿ ಬಿಟ್ಟಿದೆ. ಅಲ್ಲದೇ, ಅಮೇರಿಕನ್ ಸೇನೆಯಲ್ಲಿ ಪ್ರತಿದಿನ ಒಬ್ಬ ಸೈನಿಕನಾದರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ (ದಿ ಹಿಂದೂ 2012 ಅಕ್ಟೋಬರ್ 25). ಹೀಗಿರುವಾಗ ಕುಳಿತಲ್ಲಿಂದಲೇ ಹಾರಿಸಲಾಗುವ ಡ್ರೋನ್‍ನ ಹೊರತು ಅಮೇರಿಕದ ಬಳಿ ಬೇರೆ ಆಯ್ಕೆಗಳೇ ಇಲ್ಲ. ಆದರೆ ಡ್ರೋನ್‍ಗೆ ಜಾಗತಿಕವಾಗಿ ಬೆಂಬಲಿಗರ ಬದಲು ವಿರೋಧಿಗಳೇ ಹೆಚ್ಚುತ್ತಿದ್ದಾರೆ. 2010 ಜೂನ್ 2ರಂದು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗವು ಬಿಡುಗಡೆಗೊಳಿಸಿದ (ಪಿಲಿಪ್ ಆಲ್‍ಸ್ಟನ್‍ರ ನೇತೃತ್ವದಲ್ಲಿ ತಯಾರಿಸಲಾದ) ವರದಿಯಲ್ಲಿ ಡ್ರೋನ್ ಕಾರ್ಯಾಚರಣೆಯ ಔಚಿತ್ಯವನ್ನೇ ಪ್ರಶ್ನಿಸಲಾಗಿತ್ತು. ಇದೇ ಆಯೋಗದ ಮುಖ್ಯಸ್ಥ ನವಿ ಪಿಲ್ಲೆ 2012 ಜೂನ್ 7ರಂದು ಪಾಕಿಸ್ತಾನಕ್ಕೆ 4 ದಿನಗಳ ಭೇಟಿ ನೀಡಿದರಲ್ಲದೇ ಡ್ರೋನ್ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದಿದ್ದರು. ಇದಾಗಿ ನಾಲ್ಕು ತಿಂಗಳೊಳಗೆ, ಅಕ್ಟೋಬರ್ 11ರಂದು ಡ್ರೋನ್ ವಿರುದ್ಧ  ಇಮ್ರಾನ್ ಖಾನ್‍ರು ಬೃಹತ್ ರಾಲಿ ಸಂಘಟಿಸಿದರು. ಬ್ರಿಟನ್ ಮತ್ತು ಅಮೇರಿಕದ ಸಾಕಷ್ಟು ಬರಹಗಾರರು ಇಮ್ರಾನ್‍ರನ್ನು ಬೆಂಬಲಿಸಿದರು. ಪಾಕಿಸ್ತಾನದ ಜನತೆ ಡ್ರೋನ್‍ನ ವಿರುದ್ಧ ಒಂದಾಗುವ ಸೂಚನೆಗಳು ಕಾಣಿಸತೊಡಗಿದುವು.. ಅಮೇರಿಕದ ಡ್ರೋನ್‍ಗೆ ತನ್ನ ನೆಲವನ್ನು ಕೊಟ್ಟು ಜನರ ಮಧ್ಯೆ ಖಳನಾಗಿ ಗುರುತಿಸಿಕೊಂಡಿರುವ ಪಾಕ್ ಸರಕಾರಕ್ಕೆ ಇಮ್ರಾನ್ ಖಾನ್‍ರನ್ನು ತಡೆಯುವುದು ಅಗತ್ಯವಾಗಿತ್ತು. ಅಷ್ಟೇ ಅಲ್ಲ, ಡ್ರೋನ್‍ನ ಬಗ್ಗೆ ಮೃದು ನಿಲುವು ತಾಳುವಂಥ ಇಶ್ಶೂವೊಂದನ್ನು ಜನರಿಗೆ ಒದಗಿಸುವ ಅನಿವಾರ್ಯತೆಯೂ ಅದಕ್ಕಿತ್ತು. ಬಹುಶಃ ಮಲಾಲಳ ಪ್ರಕರಣವು ಪಾಕ್ ಆಡಳಿತದ ಎಲ್ಲ ಸಂಕಟವನ್ನೂ ಪರಿಹರಿಸಿಬಿಟ್ಟಿತು.
       ಮಲಾಲಳ ಮೇಲೆ ಅಕ್ಟೋಬರ್ 9ರಂದು ಆದ ದಾಳಿಗೆ 8 ಗಂಟೆಗಳಷ್ಟು ವಿಳಂಬವಾಗಿ ಪ್ರತಿಕ್ರಿಯಿಸಿದ ಇಮ್ರಾನ್ ಖಾನ್‍ರನ್ನು ಮಾಧ್ಯಮಗಳು ತೀವ್ರವಾಗಿ ಟೀಕಿಸಿದ್ದುವು. ಆದರೆ ಆ ವಿಳಂಬಕ್ಕೆ ಅರ್ಥವಿದೆಯೆಂದು ಈಗ ಅನ್ನಿಸುತ್ತದಲ್ಲವೇ?

No comments:

Post a Comment