Monday, October 8, 2012

ಅಧಿಕಾರ ಸಿಗುವುದಾದರೆ ಇವರು ಕಸಬ್ ಗೂ ಸ್ಮಾರಕ ಕಟ್ಟಲಾರರೆ?

ಬಿಂದ್ರನ್‍ವಾಲೆ
ಕುಲ್ ದೀಪ್ ಸಿಂಗ್ ಬ್ರಾರ್‍
        1984 ಜೂನ್ 5ರಂದು ಭಾರತೀಯ ಸೇನೆಯು ಆಪರೇಶನ್ ಬ್ಲೂಸ್ಟಾರ್ (Operation Blue Star) ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುತ್ತದೆ. ಪ್ರತ್ಯೇಕತಾವಾದಿಗಳ ಹಿಡಿತದಿಂದ ಸಿಕ್ಖರ ಪವಿತ್ರ ಕ್ಷೇತ್ರ ಸ್ವರ್ಣ ಮಂದಿರವನ್ನು ಬಿಡುಗಡೆಗೊಳಿಸುವುದು ಕಾರ್ಯಾಚರಣೆಯ ಉದ್ದೇಶವೆಂದು ಪ್ರಧಾನಿ ಇಂದಿರಾ ಗಾಂಧಿ ಘೋಷಿಸುತ್ತಾರೆ. ಜನರಲ್ ಎ.ಎಸ್. ವೈದ್ಯ ಮತ್ತು ಲೆಫ್ಟಿನೆಂಟ್ ಜನರಲ್ ಕುಲ್ ದೀಪ್ ಸಿಂಗ್ ಬ್ರಾರ್‍ರ ನೇತೃತ್ವದಲ್ಲಿ ನೂರಾರು ಯೋಧರು ಕಾರ್ಯಾಚರಣೆಗಿಳಿಯುತ್ತಾರೆ. ಜರ್ನೈಲ್ ಸಿಂಗ್ ಬಿಂದ್ರನ್‍ವಾಲೆ ಮತ್ತು ನಿವೃತ್ತ ಮೇಜರ್ ಜನರಲ್ ಶಾಹೆಬ್ ಸಿಂಗ್‍ರ ನೇತೃತ್ವದಲ್ಲಿ ಸ್ವರ್ಣ ಮಂದಿರದೊಳಗೆ ಅಡಗಿ ಕೂತಿದ್ದ ಪ್ರತ್ಯೇಕತಾವಾದಿಗಳು, ಸೇನೆಗೆ ತೀವ್ರ ಪ್ರತಿರೋಧ ಒಡ್ಡುತ್ತಾರೆ. ಟ್ಯಾಂಕ್, ಹೆಲಿಕಾಪ್ಟರ್, ಶಸ್ತ್ರಾಸ್ತ್ರ ವಾಹನಗಳು, ಆರ್ಟಿಲರಿಗಳನ್ನು ಕಾರ್ಯಾಚರಣೆಯ ವೇಳೆ ಸೇನೆ ಬಳಸಿಕೊಂಡರೆ, ಪ್ರತ್ಯೇಕತಾವಾದಿಗಳು ಮೆಶಿನ್ ಗನ್, ಕ್ಷಿಪಣಿಗಳು, ರಾಕೆಟ್ ಲಾಂಚರುಗಳನ್ನು ಬಳಸುತ್ತಾರೆ. ಒಂದು ರೀತಿಯಲ್ಲಿ ಸ್ವರ್ಣ ಮಂದಿರದೊಳಗೆ ಯುದ್ಧವೇ ನಡೆಯುತ್ತದೆ. ಜೂನ್ 3ರಿಂದ 36 ಗಂಟೆಗಳ ಕಾಲ ಇಡೀ ಪಂಜಾಬ್‍ನಲ್ಲೇ ಕಫ್ರ್ಯೂ ವಿಧಿಸಲಾಗಿದ್ದರೂ ಸಂಚಾರ, ವ್ಯಾಪಾರ-ವಹಿವಾಟುಗಳನ್ನು ನಿಷೇಧಿಸಲಾಗಿದ್ದರೂ ವಿದ್ಯುತ್ ಕಡಿತಗೊಳಿಸಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಸಿಕ್ಖರು ಚೌಕ್ ಮೆಹ್ತಾದಲ್ಲಿ, ಹರಿಕ್ ಪಟನ್‍ನಲ್ಲಿ ನೆರೆಯುತ್ತಾರೆ. ಈ ಮಧ್ಯೆ ಸ್ವರ್ಣ ಮಂದಿರದ ಆಸುಪಾಸಿನ ಹೊಟೆಲ್‍ಗಳಲ್ಲಿ ಉಳಕೊಂಡಿದ್ದ ಎಲ್ಲ ಪತ್ರಕರ್ತರನ್ನೂ ಜೂನ್ 5ರ ಬೆಳಿಗ್ಗೆ 5 ಗಂಟೆಗೆ ಮಿಲಿಟರಿ ವಾಹನದಲ್ಲಿ ಹರ್ಯಾಣಕ್ಕೆ ಸಾಗಿಸಿ ಅಲ್ಲಿ ಬಂಧಿಸಿಡಲಾಗುತ್ತದೆ. ಮಾಧ್ಯಮಗಳನ್ನು ಸಂಪೂರ್ಣ ಸೆನ್ಸಾರ್‍ಶಿಪ್‍ಗೆ ಒಳಪಡಿಸಲಾಗುತ್ತದೆ. ಹೀಗೆ ಹೊರ ಜಗತ್ತಿನಿಂದ ಪಂಜಾಬನ್ನು ಸಂಪೂರ್ಣ ಪ್ರತ್ಯೇಕಿಸಿ ನಡೆಸಲಾದ ಆ ಕಾರ್ಯಾಚರಣೆ ಜೂನ್ 7ರಂದು ಕೊನೆಗೊಳ್ಳುವಾಗ 700ರಷ್ಟು ಯೋಧರೇ ಸಾವಿಗೀಡಾಗಿರುತ್ತಾರೆ. ಬಿಂದ್ರನ್‍ವಾಲೆ, ಶಾಹೆಬ್ ಸಿಂಗ್ ಸಹಿತ 400ರಷ್ಟು ಉಗ್ರವಾದಿಗಳು ಹತ್ಯೆಗೊಳಗಾಗುತ್ತಾರೆ. ಇಷ್ಟಕ್ಕೂ ಸಾವಿಗೀಡಾದ ಸಿಕ್ಖರ ನಿಖರ ಸಂಖ್ಯೆ ಎಷ್ಟು, ಎಷ್ಟು ಮಂದಿ ಗಾಯ ಗೊಂಡರು, ಆ ಕಾರ್ಯಾಚರಣೆ ಹೇಗಿತ್ತು ಎಂಬುದನ್ನೆಲ್ಲಾ ಹೇಳುವುದಕ್ಕೆ ಅಲ್ಲಿ ಅಸೋಸಿಯೇಟೆಡ್ ಪ್ರೆಸ್‍ನ (AP) ವರದಿಗಾರ ಬ್ರಹ್ಮ ಚಲ್ಲಾನಿಯ ಹೊರತು ಇನ್ನಾರೂ ಇದ್ದರಲ್ಲವೇ? ಮಿಲಿಟರಿಯ ಕಣ್ತಪ್ಪಿಸಿ ಅವರು ಮಾಡಿದ ಅಷ್ಟಿಷ್ಟು ವರದಿಯನ್ನು ಮುಂದೆ ನ್ಯೂಯಾರ್ಕ್ ಟೈಮ್ಸ್, ದಿ ಟೈಮ್ಸ್ ಆಫ್ ಲಂಡನ್, ದಿ ಗಾರ್ಡಿಯನ್ ಪತ್ರಿಕೆಗಳೆಲ್ಲಾ ಮುಖಪುಟದಲ್ಲಿ ಪ್ರಕಟಿಸುತ್ತವೆ. ಶವಸಂಸ್ಕಾರ ಮಾಡಿದವರ ಪ್ರಕಾರ, ಒಟ್ಟು 3,300 ಮಂದಿ ಆ ಕಾರ್ಯಾಚರಣೆಯಲ್ಲಿ ಸಾವಿಗೀಡಾಗಿದ್ದಾರೆ. ಇಂದಿರಾ ಗಾಂಧಿಯವರ ಕುರಿತಂತೆ ಪುಸ್ತಕ ಬರೆದಿರುವ ಮಾರ್ಕ್ ಟುಲಿಯ ಪ್ರಕಾರ ಸತ್ತವರ ಸಂಖ್ಯೆ 2,093. ಆದರೂ,
          ಸಾವಿಗೀಡಾದ ಯೋಧರ ಬದಲು, ಪ್ರತ್ಯೇಕತಾವಾದಿಗಳ ಸ್ಮಾರಕಕ್ಕೆ ಶಿರೋಮಣಿ ಗುರುದ್ವಾರ್ ಪ್ರಬಂದಕ್ ಸಮಿತಿಯ (SGPC) ಮುಖ್ಯಸ್ಥ ಅವತಾರ್ ಸಿಂಗ್ ಮಕ್ಕರ್ 2012 ಮೇ 20ರಂದು ಅಡಿಗಲ್ಲು ಹಾಕುತ್ತಾರಲ್ಲ, ಬಿಂದ್ರನ್‍ವಾಲೆ ಸಾವಿಗೀಡಾದ ಸ್ಥಳದಲ್ಲೇ ಸ್ಮಾರಕ ನಿರ್ಮಾಣದ ಘೋಷಣೆ ಮಾಡುತ್ತಾರಲ್ಲ, ಪಂಜಾಬ್‍ನ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‍ರ ಸರಕಾರದೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರದ ಸುಖ ಅನುಭವಿಸುತ್ತಿರುವ ಬಿಜೆಪಿಯೇಕೆ ಈ ಬಗ್ಗೆ ಈ ವರೆಗೆ ಮಾತಾಡಿಲ್ಲ? ಅಖಂಡ ಭಾರತ, ದೇಶಭಕ್ತಿ, ಮಾತೃಭೂಮಿ.. ಎಂದೆಲ್ಲಾ ಗಂಟೆಗಟ್ಟಲೆ ಭಾವಪರವಶವಾಗಿ ಮಾತಾಡುವ ಬಿಜೆಪಿ ನಾಯಕರೆಲ್ಲಾ ತುಟಿ ಬಿಚ್ಚುತ್ತಿಲ್ಲವೇಕೆ? ಅಧಿಕಾರದ ಎದುರು ಯೋಧರ ಸಾವೂ ನಗಣ್ಯವಾಯಿತೇ? ಒಂದು ವೇಳೆ ಸ್ಮಾರಕ ರಚನೆಯ ವಿರುದ್ಧ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್‍ರ ಮೇಲೆ ಬಿಜೆಪಿ ಒತ್ತಡ ಹಾಕುತ್ತಿದ್ದರೆ, ಅವರು ಸ್ಮಾರಕ ರಚನೆಯನ್ನು ತಡೆ ಹಿಡಿಯುವುದಕ್ಕೆ ಸಾಧ್ಯವಿತ್ತಲ್ಲವೇ? ಇಷ್ಟಕ್ಕೂ, ಪ್ರತ್ಯೇಕ ಕಾಶ್ಮೀರಕ್ಕಾಗಿ ಹೋರಾಡಿ ಮಡಿದ ಪ್ರತ್ಯೇಕತಾವಾದಿಗಳ ಸ್ಮಾರಕಕ್ಕಾಗಿ ಮೀರ್‍ವೈಝ್ ಉಮ್ಮರ್ ಫಾರೂಖೋ, ಅಲೀಷಾ ಗೀಲಾನಿಯೋ ಅಥವಾ ಇನ್ನಾರೋ ಕಾಶ್ಮೀರದ ಹಝ್ರತ್ ಬಾಲ್ ಮಸೀದಿ ಬಿಡಿ, ಅಲ್ಲಿನ ಯಾರದಾದರೂ ಖಾಸಗಿ ಭೂಮಿಯಲ್ಲಿ ಅಡಿಗಲ್ಲು ಹಾಕುತ್ತಿದ್ದರೂ ಬಿಜೆಪಿಯ ನಿಲುವು ಹೀಗೆಯೇ ಇರುತ್ತಿತ್ತೇ? ಅಡಿಗಲ್ಲು ಹಾಕಿದ ದೇಶದ್ರೋಹಿಗಳನ್ನು ಬಂಧಿಸಿ ಎಂದು ಅದು ಕರೆ ಕೊಡುತ್ತಿರಲಿಲ್ಲವೇ? ಬಿಜೆಪಿಯ ತೀರಾ ಗ್ರಾಮ ಮಟ್ಟದ ನಾಯಕನೂ, ಕಾಶ್ಮೀರದಲ್ಲಿ ಸಾವಿಗೀಡಾಗುತ್ತಿರುವ ಯೋಧರ ಬಗ್ಗೆ, ಅದರಿಂದಾಗಿ ಅನಾಥರಾಗಿರುವ ಅವರ ಪತ್ನಿ, ಮಕ್ಕಳ ಬಗ್ಗೆ, ಪ್ರತ್ಯೇಕತಾವಾದಿಗಳ ಕ್ರೌರ್ಯದ ಬಗ್ಗೆ... ಮನ ಕಲಕುವ ವಿವರಣೆಯೊಂದಿಗೆ ಭಾಷಣ ಮಾಡುತ್ತಿರಲಿಲ್ಲವೇ?
        ಆಪರೇಶನ್ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿ, ನಿವೃತ್ತಿಯಾಗಿ ಇದೀಗ ಮುಂಬೈಯಲ್ಲಿ ಬಿಗು ಭದ್ರತೆಯೊಂದಿಗೆ ವಾಸವಾಗಿರುವ ಕೆ.ಎಸ್. ಬ್ರಾರ್‍ರ ಮೇಲೆ ಮೊನ್ನೆ ಸೆ. 30ರಂದು ಲಂಡನ್ನಿನ ಆಕ್ಸ್‍ಫರ್ಡ್ ರಸ್ತೆಯಲ್ಲಿ ದಾಳಿ ನಡೆಯಿತು. ನಿಜವಾಗಿ, ಸ್ಮಾರಕ ರಚನೆ ಸುದ್ದಿಗೊಳಗಾದದ್ದೇ ಆ ಬಳಿಕ.
       1980ರ ಬಳಿಕ ಪಂಜಾಬ್‍ನಲ್ಲಿ ತಲೆ ಎತ್ತಿದ ಪ್ರತ್ಯೇಕತಾವಾದಕ್ಕೂ ಬಿಂದ್ರನ್ ವಾಲೆಗೂ ನಿಕಟ ಸಂಬಂಧ ಇದೆ. ಮಾತ್ರವಲ್ಲ, ಬಿಂದ್ರನ್ ವಾಲೆಯನ್ನು ಮತ್ತು ಆ ಮುಖಾಂತರ ಪ್ರತ್ಯೇಕತಾವಾದವನ್ನು ವಿರೋಧಿಸುವುದಕ್ಕೆ ಬಿಜೆಪಿಗೆ ಅದಕ್ಕಿಂತಲೂ ಹೆಚ್ಚು ಕಾರಣಗಳಿವೆ. ಸಿಕ್ಖರ ಧಾರ್ಮಿಕ ಗುಂಪಾದ ದಮ್‍ದಾಮಿ ತಕ್ಸಲ್‍ನ 14ನೇ ಮುಖಂಡನಾಗಿದ್ದ ಬಿಂದ್ರನ್‍ವಾಲೆ, ಸಿಕ್ಖರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡಿದ. ಮದ್ಯ ವರ್ಜಿಸುವಂತೆ, ಅನೈತಿಕತೆಯಲ್ಲಿ ಪಾಲುಗೊಳ್ಳದಂತೆ ಕರೆಕೊಟ್ಟ. ಸಿಕ್ಖ್ ಯುವಕರು ಕೂದಲು ಕತ್ತರಿಸದಂತೆ ಮತ್ತು ಗಡ್ಡ ಬಿಡುವಂತೆ ಜಾಗೃತಿ ಮೂಡಿಸತೊಡಗಿದ. ಸಿಕ್ಖರು, ಬೌದ್ಧರು, ಜೈನರಂಥ ಅಲ್ಪಸಂಖ್ಯಾತ ವಿಭಾಗಗಳನ್ನು ಹಿಂದೂ ಧರ್ಮದಲ್ಲಿ ಸೇರಿಸುವ ಸಂವಿಧಾನದ 25ನೇ ಪರಿಚ್ಛೇದವನ್ನು ಬಲವಾಗಿ ಖಂಡಿಸಿದ. ಎಲ್ಲ ಹಿಂದೂಗಳು ಪಂಜಾಬ್ ಬಿಟ್ಟು ತೆರಳಬೇಕು ಎಂದು 1983 ನವೆಂಬರ್ 17ರಂದು ಆಗ್ರಹಿಸಿದ. ಅಲ್ಲದೇ ಪಂಜಾಬಿನಲ್ಲಿರುವ ಹಿಂದೂ ಶಾಲೆಗಳಲ್ಲಿ ಪಂಜಾಬ್ ಭಾಷೆಯನ್ನು ಹೇರುವಂತೆ 1980ರಲ್ಲಿ ಅಭಿಯಾನ ನಡೆಯುತ್ತಿತ್ತು. ಪಂಜಾಬ್ ನಲ್ಲಿ ಜನಪ್ರಿಯವಾಗಿದ್ದ ಹಿಂದ್ ಸಮಾಚಾರ್ ಪತ್ರಿಕೆಯ ಸಂಪಾದಕ ಜಗತ್ ನಾರಾಯಣ್‍ರು ಪಂಜಾಬಿ ಹೇರಿಕೆಯ ವಿರುದ್ಧ ಬರೆದರಲ್ಲದೆ, ಜನಗಣತಿಯ ವೇಳೆ ಎಲ್ಲ ಹಿಂದೂಗಳೂ ತಮ್ಮ ತಾಯಿ ಭಾಷೆಯಾಗಿ ಪಂಜಾಬಿಯ ಬದಲು ಹಿಂದಿಯನ್ನು ದಾಖಲಿಸುವಂತೆ ಕರೆಕೊಟ್ಟರು. ಅಷ್ಟೇ ಅಲ್ಲ, ಆನಂದ್‍ಪುರ್ ಸಾಹಿಬ್ ನಿರ್ಣಯವನ್ನೂ ಖಂಡಿಸಿದರು. ನಿಜವಾಗಿ, ಆನಂದ್‍ಪುರ್ ಸಾಹಿಬ್ ನಿರ್ಣಯವನ್ನು ಅಕಾಲಿ ದಳವು ತನ್ನ ರಾಜಕೀಯ ಲಾಭಕ್ಕಾಗಿಯೇ ತಯಾರಿಸಿತ್ತು. ಅಕಾಲಿದಳದೊಂದಿಗೆ ಬಿಂದ್ರನ್‍ವಾಲೆ ಕೈ ಜೋಡಿಸಿ ನಿರ್ಣಯದ ಜಾರಿಗಾಗಿ ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದ್ದರು. ಹಾಗಂತ ಈ ನಿರ್ಣಯ ಕೈಗೊಳ್ಳುವುದಕ್ಕೂ ಒಂದು ಕಾರಣ ಇದೆ. ಪಂಜಾಬ್‍ನಲ್ಲಿ 1966ರಲ್ಲಿ ಅಕಾಲಿದಳವು ಅಧಿಕಾರಕ್ಕೆ ಬರುತ್ತದೆ. ಆದರೆ 1971ರ ಲೋಕಸಭಾ ಚುನಾವಣೆಯಲ್ಲಿ ಅದರ ಜನಪ್ರಿಯತೆ ಎಷ್ಟು ಕೆಳಮಟ್ಟ ಕ್ಕಿಳಿಯುತ್ತದೆಂದರೆ ಒಟ್ಟು 13 ಲೋಕಸಭಾ ಸ್ಥಾನಗಳಲ್ಲಿ 1 ಸ್ಥಾನವನ್ನಷ್ಟೇ ಪಡೆಯುತ್ತದೆ. 1972 ಮಾರ್ಚ್‍ನಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ 117ರಲ್ಲಿ 24 ಸ್ಥಾನಗಳನ್ನಷ್ಟೇ ಪಡೆಯಲು ಅದು ಶಕ್ತವಾಗುತ್ತದೆ. ಈ ಹಿನ್ನೆಲೆಯಲ್ಲಿ ಅಕಾಲಿದಳವು ಸಭೆ ಸೇರುತ್ತದಲ್ಲದೇ 1972 ಡಿ. 11ರಂದು 12 ಮಂದಿಯ ಉಪಸಮಿತಿಯನ್ನು ರಚಿಸಿ ಸೋಲಿನ ಕುರಿತಂತೆ ಅವಲೋಕಿಸಲು ಮತ್ತು ಮುಂದಿನ ಕಾರ್ಯಯೋಜನೆಯ ಬಗ್ಗೆ ಮಾರ್ಗಸೂಚಿಯನ್ನು ತಯಾರಿಸಲು ಸಮಿತಿಯೊಂದಿಗೆ ಕೇಳಿ ಕೊಳ್ಳುತ್ತದೆ. ಹಾಗೆ, 1975ರಲ್ಲಿ ಆನಂದ್‍ಪುರ್ ಸಾಹಿಬ್ ನಿರ್ಣಯ ಮಂಡನೆಯಾಗುತ್ತದೆ. ಒಂದು ರೀತಿಯಲ್ಲಿ ಪಂಜಾಬಿ ಭಾಷಿಕರನ್ನೆಲ್ಲ ಒಂದೆಡೆ ಸೇರಿಸುವ, ಹರ್ಯಾಣವನ್ನು ಪಂಜಾಬ್‍ನಲ್ಲಿ ಲೀನಗೊಳಿಸುವ.. ಮುಂತಾದ 12 ಅಂಶಗಳನ್ನು ಒಳಗೊಂಡ ಠರಾವು, ಪ್ರತ್ಯೇಕತಾ ವಾದಕ್ಕೆ ಇಂಬು ನೀಡುತ್ತದೆ ಎಂಬ ಆರೋಪಕ್ಕೊಳಗಾಗುತ್ತದೆ. ಆದ್ದರಿಂದಲೇ ಈ ಠರಾವನ್ನು ವಿರೋಧಿಸಿದ ಹಿಂದ್ ಸಮಾಚಾರ್‍ನ ಸಂಪಾದಕರನ್ನು 1981 ಸೆ. 9ರಂದು ಹತ್ಯೆ ಮಾಡಲಾಗುತ್ತದೆ. ಬಿಂದ್ರನ್‍ವಾಲೆಯ ಆದೇಶದಂತೆ ತಾನು ನಾರಾಯಣ್‍ರನ್ನು ಕೊಂದಿದ್ದೇನೆ ಎಂದು ಬಂಧಿತ ಆರೋಪಿ ನಚಾತರ್ ಸಿಂಗ್ ಹೇಳಿದರೂ ದೇಶದ ಗೃಹಮಂತ್ರಿಯಾಗಿದ್ದ ಗ್ಯಾನಿ ಜೈಲ್ ಸಿಂಗ್‍ರ ಕೃಪೆಯಿಂದ ಬಿಂದ್ರನ್‍ವಾಲೆ ಬಚಾವಾಗುತ್ತಾನೆ. ಹೀಗಿದ್ದೂ,
ಬಿಂದ್ರನ್‍ವಾಲೆ ಮತ್ತು ಆತನ ಪ್ರತ್ಯೇಕತಾವಾದಿ ಬೆಂಬಲಿಗರ ಸ್ಮಾರಕದ ಬಗ್ಗೆ ಬಿಜೆಪಿ ಮೌನವಾಗಿರುವುದೇಕೆ? ದೇಶವೇ ಮುಖ್ಯ, ಉಳಿದೆಲ್ಲವೂ ಅಮುಖ್ಯ ಎಂಬ ಸ್ಲೋಗನ್ನನ್ನು ಅವಕಾಶ ಸಿಕ್ಕಾಗಲೆಲ್ಲಾ ಉದುರಿಸುವ ಬಿಜೆಪಿಯೇಕೆ ದೇಶಕ್ಕಿಂತ ಅಧಿಕಾರವನ್ನೇ ಆಯ್ಕೆ ಮಾಡಿಕೊಂಡಿದೆ? ಹೀಗಿರುತ್ತಾ, ಒಂದು ವೇಳೆ ಅಧಿಕಾರ ಸಿಗುವುದಾದರೆ ಬಿಂದ್ರನ್‍ವಾಲೆ ಬಿಡಿ, ಕಸಬ್‍ಗೂ ಸ್ಮಾರಕ ರಚಿಸುವುದಕ್ಕೆ ಅದು ಮುಂದಾಗಲಾರದೆಂದು ಹೇಳಲು ಸಾಧ್ಯವೇ?
        ನಿಜವಾಗಿ, ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಪಾಲುಗೊಂಡ 6 ಮಂದಿ ಕಮಾಂಡರ್‍ಗಳಲ್ಲಿ ಬ್ರಾರ್ ಸೇರಿದಂತೆ ನಾಲ್ವರೂ ಸಿಕ್ಖರೇ. ಆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಎಲ್ಲರೂ ಸಿಕ್ಖರ ಒಂದು ಗುಂಪಿನ ತೀವ್ರ ವಿರೋಧಕ್ಕೆ ಗುರಿಯಾಗುತ್ತಾರೆ. ಸೇನೆಯಲ್ಲೂ ಒಂದು ಹಂತದ ಬಂಡಾಯ ಏರ್ಪಡುತ್ತದೆ. ಹಲವಾರು ಮಂದಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ಕೊಡುತ್ತಾರೆ. ಸರಕಾರ ನೀಡಿದ ಪದಕಗಳನ್ನು ಹಿಂತಿರುಗಿಸುತ್ತಾರೆ. ಪ್ರತ್ಯೇಕತಾವಾದಕ್ಕೆ ಬೆಂಬಲ ನೀಡುತ್ತಿದ್ದ ಬಿಂದ್ರನ್ ವಾಲೆಯ ದಮ್‍ದಾಮಿ ತಕ್ಸಲ್, ಅಮರ್‍ಜಿತ್ ಕೌರ್ ಸ್ಥಾಪಿಸಿದ ಬಬ್ಬರ್ ಖಾಲ್ಸಾ, ದಲ್‍ಖಾಲ್ಸಾಗಳ ಹಿಟ್‍ಲಿಸ್ಟ್‍ನಲ್ಲಿ ಇವರೆಲ್ಲರ ಹೆಸರು ಸೇರ್ಪಡೆಯಾಗುತ್ತದೆ. ಈ ಮಧ್ಯೆ ಬ್ಲೂಸ್ಟಾರ್ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಇನ್ನೋರ್ವ ಜನರಲ್ ಎ.ಎಸ್. ವೈದ್ಯರನ್ನು 1986ರಲ್ಲಿ ಹರ್‍ಜಿಂದರ್ ಸಿಂಗ್ ಜಿಂಟಾ ಮತ್ತು ಸುಖ್‍ದೇವ್ ಸಿಂಗ್ ಸುಖಾ ಎಂಬಿಬ್ಬರು ಪುಣೆಯಲ್ಲಿ ಹತ್ಯೆ ಮಾಡುತ್ತಾರೆ. ಅವರಿಬ್ಬರಿಗೂ ಮರಣ ದಂಡನೆ ಶಿಕ್ಷೆ ವಿಧಿಸಲಾಗುತ್ತದಲ್ಲದೇ 1992 ಅಕ್ಟೋಬರ್ 7ರಂದು ಶಿಕ್ಷೆಯನ್ನು ಜಾರಿಗೊಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಕಾರ್ಯಾಚರಣೆಯಲ್ಲಿ ಯಾರೆಲ್ಲ ಭಾಗವಹಿಸಿದ್ದರೋ ಅವರೆಲ್ಲ ಜೀವ ಭಯದಿಂದ ಬದುಕುವಂಥ ಸ್ಥಿತಿಯೊಂದು ಈ ದೇಶದಲ್ಲಿ ನಿರ್ಮಾಣವಾಗಿ ಬಿಡುತ್ತದೆ. ಲಂಡನ್‍ನಲ್ಲಿದ್ದ ಬ್ರಾರ್‍ರ ಚಿಕ್ಕಪ್ಪ, ಬ್ರಾರ್‍ರೊಂದಿಗೆ ಮಾತನ್ನೇ ಬಿಟ್ಟು ಬಿಡುತ್ತಾರೆ. ನಮ್ಮ ಪವಿತ್ರ ಕ್ಷೇತ್ರದ ಮೇಲೆ ಕಾರ್ಯಾಚರಣೆ ಮಾಡಿದ ನಿನ್ನೊಂದಿಗೆ ನನ್ನ ಸಂಬಂಧ ಮುರಿದಿದೆ ಅನ್ನುತ್ತಾರೆ. ಆವರೆಗೆ ಬಹುತೇಕ ನಾಸ್ತಿಕರಂತಿದ್ದ ಚಿಕ್ಕಪ್ಪ, ಈ ಕಾರ್ಯಾಚರಣೆಯ ಬಳಿಕ ಪಕ್ಕಾ ಆಸ್ತಿಕರಾಗಿ ಬದಲಾಗುತ್ತಾರೆ. ಪಬ್‍ಗೆ ಹೋಗುತ್ತಿದ್ದ, ಧೂಮಪಾನ ಮಾಡುತ್ತಿದ್ದ ಅವರು ಬ್ಲೂಸ್ಟಾರ್‍ನ ಬಳಿಕ ಉದ್ದ ಕೂದಲು ಬೆಳೆಸುತ್ತಾರಲ್ಲದೇ ಗಡ್ಡ ಬಿಡುತ್ತಾರೆ. ಖಾಲಿಸ್ತಾನ್ ಪರ ನಡೆಯುತ್ತಿದ್ದ ಸಭೆಗಳಲ್ಲಿ ಭಾಗವಹಿಸತೊಡಗುತ್ತಾರೆ. ಅಂದಹಾಗೆ 1990ರಲ್ಲಿ, 'ಆಪರೇಶನ್ ಬ್ಲೂಸ್ಟಾರ್: ದ ಟ್ರೂ ಸ್ಟೋರಿ' ಎಂಬ ಕೃತಿ ಯನ್ನು ಬ್ರಾರ್ ಬರೆಯದೇ ಇರುತ್ತಿದ್ದರೆ, ಅವರೇಕೆ ಆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು ಮತ್ತು ಬಿಂದ್ರನ್‍ವಾಲೆ ಏನಾಗಿದ್ದ ಎಂಬುದು ಜಗತ್ತಿಗೆ ಗೊತ್ತೂ ಆಗುತ್ತಿರಲಿಲ್ಲ. ಅಷ್ಟಕ್ಕೂ,
         1992 ಮಾರ್ಚ್ 20ರಂದು ಆನಂದ್‍ಪುರ್ ಸಾಹಿಬ್‍ನಲ್ಲಿ ನಡೆದ ಸಭೆಯಲ್ಲಿ ಪ್ರತ್ಯೇಕ ಖಲಿಸ್ತಾನ್ ರಾಷ್ಟ್ರದ  ಬಾವುಟ ಹಾರಿಸಿದ್ದ ದಲ್ ಖಾಲ್ಸಾಕ್ಕೂ ಬಿಂದ್ರನ್‍ವಾಲೆಗೂ ಆಪ್ತ ಸಂಬಂಧ ಇತ್ತು ಎಂಬುದು ಬಿಜೆಪಿಗೆ ಗೊತ್ತಿಲ್ಲವೇ? 2003 ಜೂನ್ 5ರಂದು ಇದೇ ಬಿಂದ್ರನ್‍ವಾಲೆಗೆ ಶಿರೋಮಣಿ ಗುರುದ್ವಾರ್ ಪ್ರಬಂದಕ್ ಸಮಿತಿ (SGPC)ಯ ಮುಖ್ಯಸ್ಥರಾದ ಜೋಗಿಂದರ್ ಸಿಂಗ್ ವೇದಾಂತಿ ಹುತಾತ್ಮ ಪಟ್ಟ ಕಟ್ಟಿದ್ದು, ಬಿಂದ್ರನ್‍ವಾಲೆಯ ಮಗ ಇಶಾರ್ ಸಿಂಗ್‍ನನ್ನು ಅಖಾಲ್ ತಖ್ತ್‍ಗೆ ಕರೆಸಿ ಹುತಾತ್ಮ ಪದವಿ ಪ್ರದಾನ ಮಾಡಿದ್ದನ್ನೆಲ್ಲಾ (ಟೈಮ್ಸ್ ಆಫ್ ಇಂಡಿಯಾ 2003 ಜೂನ್ 6) ಬಿಜೆಪಿಯೇಕೆ ಪ್ರಶ್ನಿಸಿಲ್ಲ? ಅಧಿಕಾರಕ್ಕಾಗಿ ಅದು ದೇಶನಿಷ್ಠೆಯೊಂದಿಗೂ ರಾಜಿ ಮಾಡಿಕೊಳ್ಳುವಷ್ಟು ಕೆಳಮಟ್ಟಕ್ಕೆ ಇಳಿದು ಬಿಟ್ಟಿದೆಯೇ? ಕಾರ್ಗಿಲ್ ದಿನಾಚರಣೆ ಬಂದಾಗಲೆಲ್ಲಾ ಬಿಜೆಪಿ ಪರ ಪತ್ರಕರ್ತರು, ಅಂಕಣಗಾರರೆಲ್ಲಾ ಯೋಧರನ್ನು ಪ್ರಶಂಸಿಸಿ, ಅವರ ಪ್ರಾಣ ತ್ಯಾಗವನ್ನು ಕೊಂಡಾಡಿ ಪತ್ರಿಕೆಗಳ ತುಂಬಾ ಬರೆಯುತ್ತಾರೆ. ಅಸ್ಸಾಮ್‍ನಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನವನ್ನು ಖಂಡಿಸಿ ಮುಂಬೈಯಲ್ಲಿ ತಿಂಗಳ ಹಿಂದೆ ನಡೆದ ಪ್ರತಿಭಟನೆಯಲ್ಲಿ ಯೋಧರ ಸ್ಮಾರಕಕ್ಕೆ ಹಾನಿ ಮಾಡಿದ್ದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವುದಕ್ಕೂ ಆ ಮೂಲಕ ಯೋಧರ ಬಗ್ಗೆ ತಮಗಿರುವ ಅಪಾರ ಗೌರವವನ್ನು ವ್ಯಕ್ತಪಡಿಸುವುದಕ್ಕೂ ಕೆಲವು ಬಿಜೆಪಿ ಪ್ರೇಮಿಗಳು ಬಳಸಿಕೊಂಡಿದ್ದರು. ಆದರೆ ಆ ದೇಶ ಪ್ರೇಮ ಪಂಜಾಬ್‍ನಲ್ಲೇಕೆ ಕಾಣಿಸುತ್ತಿಲ್ಲ? ಬಿಜೆಪಿಯ ದೇಶಭಕ್ತರಲ್ಲಿ ಈ ಬಗೆಯ ದ್ವಂದ್ವವೇಕೆ?
      ಹಾಗಂತ, ಬ್ಲೂಸ್ಟಾರ್ ಕಾರ್ಯಾಚರಣೆಯನ್ನೋ ಅದಕ್ಕೆ ಆದೇಶ ನೀಡಿದ ಇಂದಿರಾ ಗಾಂಧಿಯನ್ನೋ ಸಮರ್ಥಿಸುವುದು ಈ ಲೇಖನದ ಉದ್ದೇಶ ಖಂಡಿತ ಅಲ್ಲ.


No comments:

Post a Comment