Wednesday, December 30, 2015

ರೇಪ್ ಕಲ್ಚರ್ ಮನಸ್ಥಿತಿಗೆ ಕನ್ನಡಿ ಹಿಡಿದ ವಿದ್ಯಾ ದಿನಕರ್

ಪ್ರಭಾ ಬೆಳವಂಗಲ
ಚೇತನಾ ತೀರ್ಥಹಳ್ಳಿ
ವಿದ್ಯಾ ದಿನಕರ್
      ಅತ್ಯಾಚಾರ, ನಿಂದನೆ, ಅಪಹಾಸ್ಯ, ಕೊಲೆ ಬೆದರಿಕೆಗಳೆಲ್ಲ ಹೆಣ್ಣನ್ನೇ ಯಾಕೆ ಹುಡುಕಿಕೊಂಡು ಬರುತ್ತವೆ? ಹೆಣ್ಣು ಎಂಬುದೇ ಇದಕ್ಕೆ ಕಾರಣವೇ ಅಥವಾ ಅದೊಂದು ಮನಸ್ಥಿತಿಯೇ ಅಲ್ಲ ಹೆಣ್ಣಿನ ಬಗೆಗಿರುವ ಕೀಳರಿಮೆಯೇ? ‘ಪ್ರಭಾ ಬೆಳವಂಗಲ ಅವರ ಜುಟ್ಟು ಹಿಡಿದು ಅತ್ಯಾಚಾರ ನಡೆಸಬೇಕು..' ಎಂದು ವಿ.ಆರ್. ಭಟ್ ಎಂಬವ 2014ರಲ್ಲಿ ಫೇಸ್‍ಬುಕ್‍ನಲ್ಲಿ ಪ್ರತಿಕ್ರಿಯಿಸಿದ್ದ. ಆ ಬಗ್ಗೆ ಪ್ರಭಾ ಕೇಸನ್ನೂ ದಾಖಲಿಸಿದ್ದರು. ಹಾಗಂತ, ಪ್ರಭಾರು ತನ್ನ ಫೇಸ್‍ಬುಕ್ ಪುಟದಲ್ಲಿ ಬರೆದ ಬರಹದಲ್ಲಿ, ಓರ್ವ ವ್ಯಕ್ತಿ ಆ ಮಟ್ಟದಲ್ಲಿ ಉದ್ರಿಕ್ತಗೊಳ್ಳುವುದಕ್ಕೆ ಪೂರಕವಾದದ್ದು ಏನೂ ಇರಲಿಲ್ಲ. ಪುರೋಹಿತಶಾಹಿಯ ವಿರುದ್ಧ ಅವರು ಮಾತೆತ್ತಿದ್ದರು. ಪುರೋಹಿತಶಾಹಿಯನ್ನು ಅನುತ್ಪಾದಕ ಅಂದಿದ್ದರು. ಶಾಲಾ ಕಾಲೇಜುಗಳ ಶಂಕುಸ್ಥಾಪನೆಗೆ, ಆಸ್ಪತ್ರೆಗಳ ಉದ್ಘಾಟನೆಗೆ ಪುರೋಹಿತ ಶಾಹಿಯನ್ನು ಆಶ್ರಯಿಸುತ್ತಿರುವ ಸಮಾಜದ ಮನಸ್ಥಿತಿಯನ್ನು ಅವರು ಪ್ರಶ್ನಿಸಿದ್ದರು. ಕ್ಷಿಪಣಿಗಳನ್ನು ಉಡಾಯಿಸುವ ಮೊದಲು, ಮಂತ್ರಿಗಳು ಕುರ್ಚಿ ಏರುವ ಮೊದಲು, ಪ್ರಾಜೆಕ್ಟುಗಳನ್ನು ಆರಂಭಿಸುವ ಮೊದಲು.. ಹೀಗೆ ಪ್ರತಿಯೊಂದೂ ಪೂಜಾ-ಕೈಂಕರ್ಯಗಳ ಮೂಲಕ ನೆರವೇರುತ್ತಿರುವುದಕ್ಕೆ ತಮ್ಮ ಆಕ್ಷೇಪವನ್ನು ವ್ಯಕ್ತ ಪಡಿಸಿದ್ದರು. ಅವರು ಬಳಸಿದ ಪದಗಳು ಸಭ್ಯತೆಯ ಮೇರೆಯನ್ನು ವಿೂರಿರಲಿಲ್ಲ. ಓದುಗರನ್ನು ರೊಚ್ಚಿಗೆಬ್ಬಿಸುವ ಧಾಟಿಯಲ್ಲೂ ಇರಲಿಲ್ಲ. ಹಾಗಂತ, ಪುರೋಹಿತಶಾಹಿಯನ್ನು ತರಾಟೆಗೆತ್ತಿಕೊಳ್ಳುವ ಬರಹ ಪ್ರಕಟವಾದದ್ದು ಅದು ಮೊದಲ ಬಾರಿಯೇನೂ ಅಲ್ಲ. ಪ್ರಗತಿಪರ ಪುರುಷ ಬರಹಗಾರರು ಪ್ರಭಾರಿಗಿಂತ ಹೆಚ್ಚು ತೀಕ್ಷ್ಣವಾಗಿ ಮತ್ತು ಕಠಿಣ ಪದಗಳಲ್ಲಿ ಅದಕ್ಕಿಂತ ಹಿಂದೆಯೂ ಆ ಬಳಿಕವೂ ಪುರೋಹಿತಶಾಹಿಯನ್ನು ಟೀಕಿಸಿದ್ದಾರೆ. ಲೇಖನಗಳನ್ನು ಬರೆದಿದ್ದಾರೆ. ಕಾದಂಬರಿಗಳಲ್ಲಿ ಪಾತ್ರವಾಗಿಸಿದ್ದಾರೆ. ಆದರೆ ಅವರಾರ ವಿರುದ್ಧವೂ ಕಾಣಿಸಿಕೊಳ್ಳದ ‘ಉದ್ರಿಕ್ತತೆ’ಯೊಂದು ಪ್ರಭಾರ ವಿರುದ್ಧ ಕಾಣಿಸಿಕೊಂಡಿರುವುದಕ್ಕೆ ‘ಹೆಣ್ಣು' ಎಂಬ ಲಿಂಗಾಧಾರಿತ ವರ್ಗೀಕರಣದ ಹೊರತು ಇನ್ನಾವ ಕಾರಣಗಳು ಕಾಣಿಸುತ್ತಿವೆ? ‘ಪುರೋಹಿತಶಾಹಿ ವ್ಯವಸ್ಥೆ ಗಂಡಿನದ್ದು, ಅದನ್ನು ನಿಯಂತ್ರಿಸಬೇಕಾದದ್ದು ಗಂಡು, ಅದರ ಬಗ್ಗೆ ಮಾತಾಡಬೇಕಾದದ್ದು ಗಂಡು, ಟೀಕೆ-ಟಿಪ್ಪಣಿಗಳ ಅವಕಾಶ ಇರುವುದೂ ಗಂಡಿಗೇ’ ಎಂಬ ‘ಹಮ್ಮೇ’ ಇದರ ಹಿಂದಿರುವಂತೆ ತೋರುತ್ತಿದೆ. ಗಂಡಿನ ಭಾಷೆಯಲ್ಲಿ ಮತ್ತು ಗಂಡು ಎತ್ತಿಕೊಳ್ಳುವ ವಿಷಯದಲ್ಲಿ ಹೆಣ್ಣು ಮಾತಾಡಬಾರದು ಎಂಬ ದರ್ಪ ಇದರಲ್ಲಿ ಎದ್ದು ಕಾಣುತ್ತಿದೆ. ಈ ವಿಷಯದಲ್ಲಿ ಪ್ರಭಾ ಒಂಟಿಯಲ್ಲ. ಚೇತನಾ ಮತ್ತು ವಿದ್ಯಾ ದಿನಕರ್‍ರ ಮೇಲೆ ನಡೆದಿರುವ ವಾಗ್ದಾಳಿ, ಬೆದರಿಕೆ, ಅತ್ಯಾಚಾರದ ಮಾತುಗಳೆಲ್ಲ ಈ ಮನಸ್ಥಿತಿಯ ಪ್ರಾಬಲ್ಯವನ್ನೇ ಪ್ರತಿಬಿಂಬಿಸುತ್ತದೆ. ಗೋಮಾಂಸವನ್ನು ಆಹಾರ ಕ್ರಮವಾಗಿ ಬೆಂಬಲಿಸಿದ್ದು ಚೇತನಾ ಮಾತ್ರ ಅಲ್ಲ, ರಾಜ್ಯದಲ್ಲಿ ಅಸಂಖ್ಯ ಮಂದಿ ಮಾಂಸಾಹಾರದ ಪರವಾಗಿ ಮಾತಾಡಿದ್ದಾರೆ. ಗೋಮಾಂಸ ಸೇವನೆಯ ಹೆಸರಲ್ಲಿ ನಡೆಯುತ್ತಿರುವ ದಾಳಿಯನ್ನು ಖಂಡಿಸಿದ್ದಾರೆ. ಬೆಂಗಳೂರಿನಲ್ಲಂತೂ ಮಾಂಸಾಹಾರವನ್ನು ಬಹಿರಂಗವಾಗಿ ಸೇವಿಸುವ ಕಾರ್ಯಕ್ರಮಗಳೂ ನಡೆದಿವೆ. ಆದರೆ ಚೇತನಾರನ್ನು ಈ ಗುಂಪಿನಿಂದ ವಿಂಗಡಿಸಿ, ಒಂಟಿಯಾಗಿಸಿ ನಿಂದನೆ, ಕೊಲೆ ಬೆದರಿಕೆಗಳಿಗೆ ಈಡಾಗಿಸಿದ್ದು ಯಾಕೆ? ಬೆಂಗಳೂರಿನ ಹನುಮಂತ ನಗರ ಪೊಲೀಸು ಠಾಣೆಯಲ್ಲಿ ಮಧುಸೂದನ ಗೌಡ ಎಂಬವನ ಮೇಲೆ ಚೇತನಾ ದೂರು ದಾಖಲಿಸುವಾಗ ಚೇತನಾರ ಭಾಷೆಯಲ್ಲೇ ಮಾತಾಡಿದ ಮತ್ತು ಅವರಂತೆಯೇ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪುರುಷರು ಯಾವ ಬೆದರಿಕೆಗೂ ಈಡಾಗದೇ ಉಳಿದರಲ್ಲ, ಏನಿದರ ಅರ್ಥ? ಪ್ರತಿಕ್ರಿಯೆಗಳು ಸೆಲೆಕ್ಟಿವ್ ಆಗುತ್ತಿ ವೆಯೇ? ಲಿಂಗಾಧಾರಿತವಾಗುತ್ತಿವೆಯೇ? ಹೆಣ್ಣಿನ ಕ್ಷೇತ್ರ ಇದಲ್ಲ ಎಂದು ದಬ್ಬುವ ಪ್ರಯತ್ನಗಳು ನಡೆಯುತ್ತಿವೆಯೇ?
         ಇತ್ತೀಚೆಗೆ ಲಂಡನ್ನಿನ ದಿ ಇಂಡಿಪೆಂಡೆಂಟ್ ಪತ್ರಿಕೆಯಲ್ಲಿ ರೇಪ್ ಕಲ್ಚರ್ (ಅತ್ಯಾಚಾರದ ಸಂಸ್ಕೃತಿ)ನ ಬಗ್ಗೆ ಲಾರಿ ಫೆನ್ನಿಯವರು ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದರು.
      1970ರಲ್ಲಿ ಮೊಟ್ಟಮೊದಲು ಚಾಲ್ತಿಗೆ ಬಂದ ‘ರೇಪ್ ಕಲ್ಚರ್' ಎಂಬ ಪದ ಆ ಬಳಿಕ ಅಸಂಖ್ಯ ಬಾರಿ ಬಳಕೆಯಾಗಿದೆ. ಹಾಗಂತ, ಅತ್ಯಾಚಾರ ಎಂಬುದು ಹಾಯ್, ಹಲೋ, ಹೇಗಿದ್ದಿ, ಏನ್ ಸಮಾಚಾರ.. ಎಂದು ಮುಂತಾಗಿ ಹೇಳುವಷ್ಟು ಸಾಮಾನ್ಯ ಪದವಲ್ಲವಲ್ಲ. ಅದೊಂದು ಮನಸ್ಥಿತಿಯ ಪ್ರತೀಕ. ಹೆಣ್ಣನ್ನು ಮಣಿಸುವುದಕ್ಕೆ, ಆಕೆಯಲ್ಲಿ ಭೀತಿಯನ್ನು ತುಂಬುವುದಕ್ಕೆ ಪುರುಷ ಪ್ರಧಾನ ಸಮಾಜ ಬಳಸಬಹುದಾದ ಪರಿಣಾಮಕಾರಿ ಪದ. ಹೆಣ್ಣನ್ನು ಮಣಿಸಬಲ್ಲೆ ಎಂಬ ಅಹಂ ಆ ಪದಪ್ರಯೋಗದ ಹಿಂದಿರುತ್ತದೆ. ಹೆಣ್ಣಿಗೆ ಆಕೆಯ ದುರ್ಬಲತೆಯನ್ನು ಮತ್ತು ದ್ವಿತೀಯ ದರ್ಜೆಯನ್ನು ಸೂಚಿಸುವುದಕ್ಕೂ ಈ ಪದ ಪ್ರಯೋಗವಾಗುತ್ತಿದೆ. ಹೆಣ್ಣು ಎಲ್ಲಿ ನಿಲ್ಲಬೇಕು, ಹೇಗೆ ಮಾತಾಡಬೇಕು, ಯಾಕೆ ಮಾತಾಡಬೇಕು, ಯಾವ ವಿಷಯದಲ್ಲಿ ಮಾತಾಡಬೇಕು, ಎಷ್ಟು ಮಾತಾಡಬೇಕು ಎಂಬುದನ್ನೆಲ್ಲ ಈ ಮನಸ್ಥಿತಿ ಪಟ್ಟಿ ಮಾಡಿರುತ್ತದೆ. ಅದನ್ನು ಉಲ್ಲಂಘಿಸುವವರನ್ನು ಈ ಮನಸ್ಥಿತಿ ಪ್ರತಿಭಟಿಸುತ್ತದೆ. ಪುರುಷ ಅಹಮ್ಮಿನ ‘ಪ್ರತಿಮೆ’ಗಳ ಮೂಲಕ ತಿವಿಯುತ್ತದೆ. ಅತ್ಯಾಚಾರದ ಪದ ಪ್ರಯೋಗವು ಇಂಥ ಮನಸ್ಥಿತಿಯಲ್ಲಿ ಸಾಮಾನ್ಯವಾಗಿರುತ್ತದೆ. ಈ ಬಗ್ಗೆ ಪಾಶ್ಚಾತ್ಯ ರಾಷ್ಟ್ರ ಗಳಲ್ಲಿ ಹಲವಾರು ಅಧ್ಯಯನಗಳು ನಡೆದಿವೆ. ಲಾರಿ ಫೆನ್ನಿ, ಜೆನ್ನಿಫರ್ ಪ್ರೋಝ್‍ನರ್, ಎಮಿಲಿ ಮೆ ಮುಂತಾದವರು ಇಂಥವುಗಳ ಅಧ್ಯಯನ ನಡೆಸಿದ್ದಾರೆ. ಆನ್‍ಲೈನ್ ನಲ್ಲಿ ಅತ್ಯಾಚಾರ, ನಿಂದನೆ, ಕೊಲೆ ಬೆದರಿಕೆ ಒಡ್ಡುವವರನ್ನು ಪರಾಮರ್ಶೆಗೆ ಒಳಪಡಿಸಿದ್ದಾರೆ. ಅನಿತಾ ಸರ್ಕೀಸಿಯನ್ ಎಂಬ ಮಹಿಳಾ ವಾದಿಯ ವಿರುದ್ಧ ಅಂತರ್ಜಾಲದಲ್ಲಿ ಪ್ರಕಟವಾದ ಎಲ್ಲ ನಿಂದನಾತ್ಮಕ ಪ್ರತಿಕ್ರಿಯೆಗಳನ್ನೂ ಹಾಗೆಯೇ ಪ್ರಕಟಿಸಿದ್ದಾರೆ. ಅದು ಅಂತರ್ಜಾಲದಲ್ಲಿ ತೀವ್ರ ಸಂಚಲನೆಯನ್ನು ಸೃಷ್ಟಿಸಿತ್ತು. ಅತ್ಯಾಚಾರ ಮತ್ತು ಕೊಲೆ ಬೆದರಿಕೆ ಹಾಕಿದವರ ವಿರುದ್ಧ ಸಾಮಾಜಿಕವಾಗಿ ಆಕ್ರೋಶಗಳು ವ್ಯಕ್ತವಾಗಿದ್ದುವು. ಬ್ರಿಟನ್ನಿನ ತನಿಖಾ ಸಂಸ್ಥೆ ಎಫ್.ಬಿ.ಐ. ಆ ಕುರಿತಂತೆ ತನಿಖೆಯನ್ನೂ ನಡೆಸಿತ್ತು. ನಿಜವಾಗಿ, ಇಂಥ ರೇಪ್ ಕಲ್ಚರ್ ಅನ್ನು ಇಂಗ್ಲೆಂಡಿಗೋ ಅಮೇರಿಕಕ್ಕೋ ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಅದು ದೇಶ ಮತ್ತು ಕಾಲವನ್ನೂ ವಿೂರಿದ ಒಂದು ಕ್ರೂರ ಮನಸ್ಥಿತಿ. 'ರೇಪ್ಸ್ ಇನ್ ಬೋಸ್ನಿಯಾ: ಎ ಮುಸ್ಲಿಮ್ ಸ್ಕೂಲ್ ಗರ್ಲ್ಸ್ ಅಕೌಂಟ್'' ಎಂಬ ಶೀರ್ಷಿಕೆಯಲ್ಲಿ ದಿ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು 1992 ಡಿಸೆಂಬರ್ 27ರಂದು ಬೋಸ್ನಿಯಾದಲ್ಲಿ ಅತ್ಯಾಚಾರಕ್ಕೊಳಗಾದ ಜಾಸ್ನಾ ಎಂಬ ಯುವತಿಯ ಸಂದರ್ಶನವನ್ನು ಪ್ರಕಟಿಸಿತ್ತು. ಗುಜರಾತ್ ಹತ್ಯಾಕಾಂಡ, ಮುಝಫ್ಫರ್ ನಗರ್ ಗಲಭೆ ಅಥವಾ ಇಂಥ ಇನ್ನಿತರ ಸಂದರ್ಭಗಳಲ್ಲಿ ನಾವು ಈ ಮನಸ್ಥಿತಿಯ ರೌದ್ರಾವತಾರವನ್ನು ನೋಡಿದ್ದೇವೆ. ದಂಗೆಯ ಸಂದರ್ಭದಲ್ಲಿ ಸಾಮೂಹಿಕವಾಗಿ ಕಾಣಿಸಿಕೊಳ್ಳುವ ಈ ಮನಸ್ಥಿತಿ ಸಹಜ ವಾತಾವರಣದಲ್ಲಿ ಬೇರೆಯದೇ ರೂಪದಲ್ಲಿ ಪ್ರತ್ಯಕ್ಷಗೊಳ್ಳುತ್ತದೆ. ವಿದ್ಯಾ ದಿನಕರ್‍ರನ್ನು ಬೆನ್ನಟ್ಟಿಕೊಂಡು ಬಂದಿರುವುದು ಈ ಬಗೆಯದೇ ಮನಸ್ಥಿತಿ. ಇಲ್ಲದಿದ್ದರೆ ದಿಲ್‍ವಾಲೆ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ಅವರು ದೂರು ನೀಡಿದುದನ್ನು ಅಪರಾಧವಾಗಿ ಯಾಕೆ ಕಾಣಬೇಕು? ಓರ್ವ ಸಾಮಾನ್ಯ ನಾಗರಿಕ ಮಾಡಬಹುದಾದ ಕೆಲಸವನ್ನಷ್ಟೇ ಅವರು ಮಾಡಿದ್ದಾರೆ. ಕಾನೂನನ್ನು ಗೌರವಿಸುವ ಮತ್ತು ಅದರ ಉಲ್ಲಂಘಕರನ್ನು ತಡೆಯುವ ಹಕ್ಕು ವಿದ್ಯಾ ಎಂದಲ್ಲ ಪ್ರತಿಯೊಬ್ಬರ ಮೇಲೂ ಇದೆ. ವಿದ್ಯಾ ಆ ಹಕ್ಕನ್ನು ಚಲಾಯಿಸಿದ್ದಾರೆ. ಇದರ ಹೊರತಾಗಿ ‘ದಿಲ್‍ವಾಲೆ'ಗೆ ಅಡ್ಡಿಪಡಿಸಿದವರ ವಿರುದ್ಧವಾಗಲಿ, ಅದರ ಹಿಂದಿರಬಹುದಾದ ಶಕ್ತಿಗಳ ವಿರುದ್ಧವಾಗಲಿ ಅವರು ವೈಯಕ್ತಿಕ ಪ್ರತೀಕಾರಕ್ಕೆ ಇಳಿದಿಲ್ಲ. ಅವರನ್ನು ಆನ್‍ಲೈನ್‍ನಲ್ಲಿ ನಿಂದಿಸಿಲ್ಲ. ಜೀವ ಬೆದರಿಕೆ ಹಾಕಿಲ್ಲ. ಮಾನಹಾನಿಕರ ಹೇಳಿಕೆಯನ್ನು ಕೊಟ್ಟಿಲ್ಲ. ಹಾಗಿದ್ದರೂ, ಅವರ ವಿರುದ್ಧ ಅತ್ಯಾಚಾರದ ಬೆದರಿಕೆಗಳೇಕೆ ಬಂದುವು? ವಿದ್ಯಾರು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯನ್ನು ಕಟ್ಟಿಕೊಂಡು ಕಳೆದ ಕೆಲವು ವರ್ಷಗಳಿಂದ ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಎಲ್ಲರಿಗೂ ಬೇಕಾದವರಾಗಿದ್ದಾರೆ. ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ (MSEZ) ಯಡಿಯೂರಪ್ಪ ಸರಕಾರವು ಕರಾವಳಿಯ ಸಾವಿರಾರು ಎಕರೆ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲು ಹೊರಟಾಗ ‘ಕೃಷಿ ಭೂಮಿ ಸಂರಕ್ಷÀಣಾ ಸಮಿತಿ’ಯನ್ನು ರಚಿಸಿಕೊಂಡು ಹೋರಾಟದ ಕಣಕ್ಕಿಳಿದವರು ವಿದ್ಯಾ. ಅವರು ವಿಶೇಷ ಆರ್ಥಿಕ ವಲಯಕ್ಕೆ ಸೇರ್ಪಡೆಗೊಳ್ಳುವ ಕೃಷಿ ಭೂಮಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಮನೆಮನೆಗಳಿಗೆ ಭೇಟಿ ನೀಡಿದರು. ಬಜಪೆ, ಪೆರ್ಮುದೆ, ಕಳವಾರು, ಎಕ್ಕಾರು, ಶಿಬರೂರು, ಕುತ್ತೆತ್ತೂರು ಮುಂತಾದ ಪ್ರದೇಶಗಳು ಇವತ್ತು ಭೂಸ್ವಾಧೀನದಿಂದ ತಪ್ಪಿಸಿಕೊಂಡು ಉಳಿದಿದ್ದರೆ ಅದರಲ್ಲಿ ವಿದ್ಯಾರ ಪಾತ್ರ ಬಹಳ ದೊಡ್ಡದು. ಗ್ರೆಗರಿ ಪತ್ರಾವೋ ಎಂಬ ಕೃಷಿಕನನ್ನು ಜಿಲ್ಲಾಧಿಕಾರಿ ಕಚೇರಿ ಮುಂದೆ ತಂದು ನಿಲ್ಲಿಸಿದ್ದು ಇವರ ಛಲಗಾರಿಕೆಯೇ. ಒಂದು ಹಂತದ ವರೆಗೆ ಗ್ರೆಗರಿ ಇಡೀ ಭೂಸ್ವಾಧೀನ ವಿರೋಧಿ ಹೋರಾಟದ ಐಕಾನ್ ಆಗಿ ಮೂಡಿ ಬಂದಿದ್ದರು. ಅವರು ತಮ್ಮ ಮನೆಯ ದನ-ಕರುಗಳು, ಪಾತ್ರೆ-ಪಿಂಗಾಣಿಗಳ ಸಮೇತ ಪ್ರತಿಭಟನೆಗೆ ಇಳಿದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದರು. ತನ್ನ ಭೂಮಿಯನ್ನು ಸ್ವಾಧೀನಪಡಿಸದಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಹೂಡಿದ್ದರು. ಈ ಎಲ್ಲದರ ಹಿಂದೆ ವಿದ್ಯಾರ ‘ಕೃಷಿಭೂಮಿ ಸಂರಕ್ಷಣಾ ಸಮಿತಿ’ಯ ಬಹುದೊಡ್ಡ ಪಾತ್ರ ಇದೆ. ‘ಪೇಜಾವರ ಸ್ವಾವಿೂಜಿಗಳನ್ನು ಬಳಸಿಕೊಂಡು ಯಡಿಯೂರಪ್ಪ ಸರಕಾರವನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿಸಬಹುದು’ ಎಂದು ಆಲೋಚಿಸಿ ಈ ಹೋರಾಟದಲ್ಲಿ ಪೇಜಾವರರು ಸೇರಿಕೊಳ್ಳುವಂತೆ ನೋಡಿಕೊಂಡರು. ಆ ಮೂಲಕ ಭೂಸ್ವಾಧೀನ ವಿರೋಧಿ ಹೋರಾಟಕ್ಕೆ ಹೊಸ ಖದರು, ದಿಕ್ಕನ್ನು ಕೊಟ್ಟರು. ಒಂದು ರೀತಿಯಲ್ಲಿ, ಇದು ಅತ್ಯಂತ ಬುದ್ಧಿವಂತಿಕೆಯ ಹೆಜ್ಜೆಯಾಗಿತ್ತು. ಯಡಿಯೂರಪ್ಪ ಸರಕಾರವನ್ನು ಅದರ ದಾಳದಿಂದಲೇ ಮಣಿಸುವ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿತು. ಭೂಸ್ವಾಧೀನದ ಪಟ್ಟಿಯಿಂದ 2035 ಎಕರೆ ಪ್ರದೇಶವನ್ನು ಹೊರಗಿಟ್ಟು ಸರಕಾರ ಆದೇಶವನ್ನು ಹೊರಡಿಸಿತು. ಅಷ್ಟಕ್ಕೂ, ವಿದ್ಯಾರಿಗೆ ‘ಅತ್ಯಾಚಾರ'ದ ಬೆದರಿಕೆ ಹಾಕಿದವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಕರಾವಳಿ ಪ್ರದೇಶದ ಮಂದಿಗೆ ಅದರಲ್ಲೂ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಳ್ಳಬೇಕಿದ್ದ ಸಾವಿರಾರು ಎಕರೆ ಪ್ರದೇಶದ ಮಂದಿಗೆ ಇದು ಚೆನ್ನಾಗಿ ಗೊತ್ತು. ಈ ಪ್ರದೇಶ ಒಂದೊಮ್ಮೆ ‘ವಿಶೇಷ ಆರ್ಥಿಕ ವಲಯ’ದೊಳಗೆ ಸೇರ್ಪಡೆಗೊಂಡದ್ದೇ ಆಗಿದ್ದಿದ್ದರೆ ಹಲವಾರು ದೈವಸ್ಥಾನಗಳು, ಮಸೀದಿ, ಚರ್ಚ್, ದೇಗುಲಗಳು ಅಸ್ತಿತ್ವ ಕಳಕೊಳ್ಳುತ್ತಿದ್ದುವು. ಈ ಕಾರಣದಿಂದಲಾದರೂ ವಿದ್ಯಾರನ್ನು ‘ದಿಲ್‍ವಾಲೆ' ವಿರೋಧಿಗಳು ಸಹಿಸಿಕೊಳ್ಳಬಹುದಾಗಿತ್ತು ಅಥವಾ ತಮ್ಮ ಪ್ರತಿಭಟನೆಯನ್ನು ಸಭ್ಯ ರೀತಿಯಲ್ಲಿ ವ್ಯಕ್ತಪಡಿಸಬಹುದಾಗಿತ್ತು. ಆದರೆ ನಾಗರಿಕ ಸಮಾಜ ಬಯಸುವ ಸಭ್ಯತೆಯ ಸರ್ವ ಮೇರೆಯನ್ನೂ ಈ ಮಂದಿ ವಿೂರಿದ್ದಾರೆ. ವಿದ್ಯಾರ ವಿರುದ್ಧ ಅತ್ಯಂತ ಅನಾಗರಿಕ ಭಾಷೆಯನ್ನು ಬಳಸಿದ್ದಾರೆ. ಅಂದಹಾಗೆ, ವಿದ್ಯಾರ ಜಾಗದಲ್ಲಿ ಓರ್ವ ದಿನಕರ್ ಇರುತ್ತಿದ್ದರೆ ಈ ಮಟ್ಟದ ವಾಗ್ದಾಳಿ ನಡೆಯುತ್ತಿತ್ತೇ? ನಿಂದನೆ, ಮಾನಹಾನಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿತ್ತೇ? ಅತ್ಯಾಚಾರದ ಬೆದರಿಕೆಯನ್ನು ಒಡ್ಡಲಾಗುತ್ತಿತ್ತೆ ? ಆದ್ದರಿಂದಲೇ,      
       ಈ ರೇಪ್ ಕಲ್ಚರ್ ಮನಸ್ಥಿತಿಯನ್ನು ಖಂಡಿಸಬೇಕಾಗಿದೆ. ವಿದ್ಯಾರನ್ನು ಬೆಂಬಲಿಸಬೇಕಾಗಿದೆ.

Friday, December 25, 2015

ಸೈಕಿಯರ ಇಮೇಲ್ ಮತ್ತು ಸಂಪಾದಕರ ಮೌನ

       ‘ಇಂಡಿಯಾ ಟಿ.ವಿ. ಟುಡೆ’ಯ ಸಂಪಾದಕರಾದ ರಾಜ್‍ದೀಪ್ ಸರ್ದೇಸ್ಯಾ, ‘ಎನ್‍ಡಿಟಿವಿ’ಯ ಸೋನಿಯಾ ಸಿಂಗ್ ಮತ್ತು ಬರ್ಖಾದತ್, ‘ದಿ ಇಂಡಿಯನ್ ಎಕ್ಸ್ ಪ್ರೆಸ್’ನ ಉಣ್ಣಿ ರಾಜನ್ ಶಂಕರ್, ‘ಹಿಂದೂಸ್ತಾನ್ ಟೈಮ್ಸ್’ನ ಸಂಜಯ್ ನಾರಾಯಣ್ ಮತ್ತು ‘ಮಿಂಟ್’ ಪತ್ರಿಕೆಯ ಸುಕುಮಾರ್‍ರಿಗೆ ಪತ್ರಕರ್ತರಾದ ಅರ್ನಾಬ್ ಸೈಕಿಯ ಮತ್ತಿತರರು ಇತ್ತೀಚೆಗೆ ಇಮೇಲ್ ಒಂದನ್ನು ಕಳುಹಿಸಿದರು. ನಿರ್ದಿಷ್ಟ ಸುದ್ದಿ ಪ್ರಕಟಣೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೋರಿ ಕಳುಹಿಸಲಾದ ಇಮೇಲ್ ಅದು. ‘ಮಿಂಟ್’ನ ಸುಕುಮಾರ್‍ರನ್ನು ಬಿಟ್ಟರೆ ಉಳಿದಂತೆ ಯಾರೂ ಕನಿಷ್ಠ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಲಿಲ್ಲ. ಸುಕುಮಾರ್ ಅಂತೂ ‘ಹೌದು ಸುದ್ದಿ ಮಿಸ್ಸಾಗಿದೆ’ ಎಂದಷ್ಟೇ ಹೇಳಿಬಿಟ್ಟರು. ಅಷ್ಟಕ್ಕೂ, ಆ ಸುದ್ದಿಯ ಹಿಂದೆ ಒಂದು ಸ್ವಾರಸ್ಯವಿದೆ-
      1993 ಮಾರ್ಚ್. ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದುವಲ್ಲದೇ ಅಪಾರ ಸಾವು ನೋವುಗಳು ಸಂಭವಿಸಿದುವು. ಇಡೀ ಘಟನೆಯ ಹಿಂದೆ ದಾವೂದ್ ಇಬ್ರಾಹೀಮ್‍ನ ಕೈವಾಡವಿದೆಯೆಂದು ಹೇಳಲಾಯಿತು. ಪಾಕಿಸ್ತಾನದ ಕೈವಾಡವನ್ನು ಶಂಕಿಸಿ ಪತ್ರಿಕೆಗಳಲ್ಲಿ ದಿನೇ ದಿನೇ ಸುದ್ದಿಗಳು ಪ್ರಕಟವಾದುವು. ಅಲ್ಲದೇ, ಈ ಸ್ಫೋಟದಲ್ಲಿ ಭಾಗಿಯಾದವರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದು, ಅವರಿಗೆ ಪಾಕ್ ಆಶ್ರಯ  ಒದಗಿಸಿದೆಯೆಂಬ ಮಾತುಗಳು ಬಲವಾಗಿಯೇ ಕೇಳಿಬಂದವು. ಪಾಕಿಸ್ತಾನ ಮತ್ತು ದಾವೂದ್‍ನ ವಿರುದ್ಧ ಒಂದು ಬಗೆಯ ಅಕ್ರೋಶ, ಅಸಹನೆಯು ದೇಶದೆಲ್ಲೆಡೆ ಗಟ್ಟಿಗೊಳ್ಳುತ್ತಿರುವ ಆ ಹೊತ್ತಿನಲ್ಲಿಯೇ- 1993 ಆಗಸ್ಟ್ 17ರಂದು - ಮುಂಬೈಯ ದಿ ಡೈಲಿ ಪತ್ರಿಕೆಯು ದಂಗುಬಡಿಸುವ ಸುದ್ದಿಯೊಂದನ್ನು ಪ್ರಕಟಿಸಿತು. ಸುದ್ದಿಯು ಭಾರತದ ಪ್ರಸಿದ್ಧ ಟೆಕ್ಸ್ ಟೈಲ್ಸ್ ಕಂಪೆನಿಯಾದ ಬಾಂಬೆ ಡೈಯಿಂಗ್‍ನ ಮಾಲಿಕ ನುಸ್ಲಿ ವಾಡಿಯರಿಗೆ ಸಂಬಂಧಿಸಿದ್ದು. ವಿಶೇಷ ಏನೆಂದರೆ, ಅವರು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಮೊಮ್ಮಗರಾಗಿದ್ದರು. ಸುದ್ದಿ ಹೀಗಿದೆ:
     “ನುಸ್ಲಿ ವಾಡಿಯಾ ಪಾಕಿಸ್ತಾನದ ಗೂಢಚರರಾಗಿದ್ದು ದಾವೂದ್ ಇಬ್ರಾಹೀಮ್‍ನೊಂದಿಗೆ ಸಂಬಂಧ ಹೊಂದಿದ್ದಾರೆ. ಮಾದಕ ವಸ್ತು ಗಳ ಕಳ್ಳಸಾಗಾಣಿಕೆಯಲ್ಲಿ ಅವರು ಭಾಗಿಯಾಗಿದ್ದಾರೆ. ನೇಪಾಲದ ಬ್ಯಾಂಕೊಂದರ ಮೂಲಕ ಕಪ್ಪು ಹಣವನ್ನು ಬಿಳಿಗೊಳಿಸುವ ದೇಶದ್ರೋಹಿ ಕೃತ್ಯದಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ ಪಾಕ್ ತಾರೆ ಅನಿತಾ ಅಯ್ಯೂಬ್‍ರ ಜತೆಗೆ ಅವರಿಗೆ ನಂಟಿದೆ..”
     ‘ದಿ ಡೈಲಿ’ಯಲ್ಲಿ ಪ್ರಕಟವಾದ ಈ ಸುದ್ದಿಯು ಮರುದಿನ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಬಾಂಬ್ ಸ್ಫೋಟದಷ್ಟೇ ಜೋರಾಗಿ ಸದ್ದು ಮಾಡಿತು. ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟದಿಂದ ಹಿಡಿದು ಕೊನೆಪುಟದ ವರೆಗೆ ವಿವಿಧ ಶಂಕಿತ ಮತ್ತು ಕಲ್ಪಿತ ಸುದ್ದಿಗಳು ಪ್ರಕಟವಾದುವು. ಬಾಂಬ್ ಸ್ಫೋಟದ 5 ತಿಂಗಳ ಬಳಿಕ ಸ್ಫೋಟಗೊಂಡ ಸುದ್ದಿ ಇದಾಗಿರುವುದರಿಂದ ಮಾಧ್ಯಮ ಕ್ಷೇತ್ರ ಮಾತ್ರವಲ್ಲ, ಜನರು ಕೂಡ ವಾಡಿಯಾರನ್ನು ದೇಶದ್ರೋಹಿಯಂತೆ ಕಾಣತೊಡಗಿದರು. ವೈರಿಗಳೊಂದಿಗೆ ಕಳ್ಳ ವ್ಯವಹಾರ ಇಟ್ಟುಕೊಂಡವ ಎಂಬ ಹಣೆಪಟ್ಟಿಯೊಂದು ಅವರನ್ನು ಹಿಂಬಾಲಿಸತೊಡಗಿತು. ಇದರಿಂದ ತೀವ್ರವಾಗಿ ನೊಂದುಕೊಂಡ ನುಸ್ಲಿ ವಾಡಿಯಾರು ದಿ ಡೈಲಿ ಪತ್ರಿಕೆಯ ಸಂಪಾದಕ ರಾಜೀವ್ ಕೆ. ಬಜಾಜ್, ನಿರ್ವಾಹಕ ಸಂಪಾದಕ ಫಿರೋಜ್ ದಸ್ತರ್, ಪ್ರಕಾಶಕ ಮೋಹನ್ ನಾಯಕ್‍ರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಆದರೆ, ಇದಾಗಿ 7 ವರ್ಷಗಳ ಬಳಿಕ 2000ದಲ್ಲಿ ಈ ಮೊಕದ್ದಮೆಯನ್ನು ಕೋರ್ಟು ವಜಾಗೊಳಿಸಿತು. ವಿಚಾರಣೆಯ ವೇಳೆ ನುಸ್ಲಿ ವಾಡಿಯಾ ಹಾಜರಾಗಲಿಲ್ಲವೆಂಬುದನ್ನು ಕೋರ್ಟು ಇದಕ್ಕೆ ಸಮರ್ಥನೆಯಾಗಿ ಕೊಟ್ಟಿತು. ನಿಜವಾಗಿ, ಇಡೀ ಪ್ರಕರಣ ಇಲ್ಲಿಗೇ ಮುಗಿದು ಬಿಡಬೇಕಿತ್ತು. ಆದರೆ ಮೊನ್ನೆ, 2015 ನವಂಬರ್‍ನಲ್ಲಿ ಮುಂಬೈ ಹೈಕೋರ್ಟ್ ಆ ತೀರ್ಪನ್ನೇ ರದ್ದುಗೊಳಿಸಿತಲ್ಲದೇ ಪ್ರಕರಣವನ್ನು ಮತ್ತೆ ಮರು ವಿಚಾರಣೆಗೆ ಎತ್ತಿಕೊಂಡಿತು. ಮಾತ್ರವಲ್ಲ, ಒಂದು ವರ್ಷದೊಳಗೆ ತೀರ್ಪು ಬರಬೇಕೆಂಬ ಗಡುವನ್ನೂ ವಿಧಿಸಿತು. ನಿಜವಾಗಿ, ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಗುವುದೇ ಈ ಬೆಳವಣಿಗೆಯ ನಂತರ. ಪ್ರಕರಣವನ್ನು ಮರು ವಿಚಾರಣೆಗೆ ಕೋರ್ಟ್ ಎತ್ತಿಕೊಂಡ ಬಳಿಕ ದಿ ಡೈಲಿಯ ಅಂದಿನ ಸಂಪಾದಕ ರಾಜೀವ್ ಕೆ. ಬಜಾಜ್ ರು  ಹೈಕೋರ್ಟ್‍ಗೆ ಅಫಿದವಿತನ್ನು ಸಲ್ಲಿಸಿದರು. ಆ ಅಫಿದವಿತ್‍ನಲ್ಲಿ ಆ ಸುದ್ದಿ ಪ್ರಕಟಣೆಯ ಹಿಂದಿನ ಕಾರಣಗಳು, ಒತ್ತಡಗಳು ಮತ್ತು ದೊಡ್ಡವರ ರಹಸ್ಯ ವ್ಯವಹಾರಗಳನ್ನು ಕೋರ್ಟ್‍ನ ಮುಂದಿಟ್ಟರು. ಆ ಕಾಲದಲ್ಲಿ ಧೀರೂಭಾಯಿ ಅಂಬಾನಿ ಮತ್ತು ನುಸ್ಲಿ ವಾಡಿಯಾರ ನಡುವೆ ತೀವ್ರ ಸ್ಪರ್ಧೆಯಿತ್ತು. ಭಾರತದ ಪ್ರಮುಖ ಕಾರ್ಪೋರೇಟ್ ದೊರೆಗಳಾಗಿದ್ದ ಇವರಿಬ್ಬರೂ ಪರಸ್ಪರರನ್ನು ಮಣಿಸುವುದಕ್ಕಾಗಿ ತಂತ್ರಗಳನ್ನು ಹೆಣೆಯುತ್ತಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸುವುದು ಇವರಿಬ್ಬರ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬಾನಿಯವರ ರಿಲಯನ್ಸ್ ಕಂಪೆನಿಯು ದಿ ಡೈಲಿ ಪತ್ರಿಕೆಯ ಮಾಲಿಕ ಕಮಲ್ ಮೊರಾರ್ಕರನ್ನು ಸಂಪರ್ಕಿಸಿತು. ವ್ಯವಹಾರ ಕುದುರಿಸಿತು. ಅದರ ಭಾಗವಾಗಿಯೇ ನುಸ್ಲಿ ವಾಡಿಯರ ವಿರುದ್ಧದ ಈ ಸುದ್ದಿ (ಪಾವತಿ ಸುದ್ದಿ) ಪ್ರಕಟವಾಯಿತು. ಈ ಸುದ್ದಿ ಪ್ರಕಟಣೆಯಿಂದ ಅಂಬಾನಿ ಎಷ್ಟು ಖುಷಿಗೊಂಡರೆಂದರೆ ಸಂಪಾದಕರಾದ ರಾಜೀವ್ ಕೆ. ಬಜಾಜ್‍ರನ್ನು ತನ್ನಲ್ಲಿಗೆ ಕರೆಸಿ ಕೊಂಡು ಅಭಿನಂದಿಸಿದರು...’ ಮುಂತಾದ ದಂಗುಬಡಿಸುವ ಸುದ್ದಿಗಳು ಮೊನ್ನೆ ಬಜಾಜ್ ಸಲ್ಲಿಸಿದ ಅಫಿದವಿತ್‍ನಲ್ಲಿದೆ. ವಿಶೇಷ ಏನೆಂದರೆ, ಈ ಅಫಿದವಿತ್‍ನ ಬಗ್ಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯನ್ನು ಬಿಟ್ಟರೆ ಉಳಿದಂತೆ ಇನ್ನಾವ ಪ್ರಮುಖ ಪತ್ರಿಕೆಗಳೂ ಸುದ್ದಿಯನ್ನೇ ಪ್ರಕಟಿಸಲಿಲ್ಲ. ಆದರೂ, Rajiv K Bajaj, affidavit in Bombay HC reviws memories of famous corporate battles of Nusli Wadia (ನುಸ್ಲಿ ವಾಡಿಯಾರ ಪ್ರಸಿದ್ಧ ಕಾರ್ಪೋರೇಟ್ ಸಂಘರ್ಷವನ್ನು ನೆನಪಿಸಿದ ಬಜಾಜ್‍ರ ಅಫಿದವಿತ್) ಎಂಬ ಶೀರ್ಷಿಕೆಯಲ್ಲಿ ನವಂಬರ್ 23ರಂದು ಎಕನಾಮಿಕ್ಸ್ ಟೈಮ್ಸ್ ಪ್ರಕಟಿಸಿದ ಸುದ್ದಿಯಂತೂ ಮುಂಬೈ ಆವೃತ್ತಿಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೇ ಆ ಬಳಿಕ ಈ ಸುದ್ದಿಯ ವಿಶ್ಲೇಷಣೆಯಾಗಲಿ, ಫಾಲೋವಪ್ ಸುದ್ದಿಯಾಗಲಿ ಏನೂ ಪ್ರಕಟವಾಗಲಿಲ್ಲ. ಉಳಿದ ಪತ್ರಿಕೆ ಮತ್ತು ಚಾನೆಲ್‍ಗಳ ಅವಸ್ಥೆಯಂತೂ ತೀರಾ ಗಂಭೀರ. ಅವೆಲ್ಲ ಇಂಥದ್ದೊಂದು ಅಫಿದವಿತ್ ಸಲ್ಲಿಕೆಯಾಗಲಿಲ್ಲವೇನೋ ಎಂಬಂತೆ ವರ್ತಿಸಿದುವು. ಪ್ರಮುಖ ಚಾನೆಲ್‍ಗಳು ಮತ್ತು ಪತ್ರಿಕೆಗಳ ವೆಬ್‍ಸೈಟ್‍ಗಳಲ್ಲಿ ಈ ಬಗ್ಗೆ ಯಾವ ವಿವರವೂ ಇಲ್ಲ. ನಿಜವಾಗಿ, ಭ್ರಷ್ಟಾಚಾರದ ವಿರುದ್ಧ ಜನಧ್ರುವೀಕರಣದಲ್ಲಿ ದೊಡ್ಡದೊಂದು ಪಾತ್ರವನ್ನು ನಿರ್ವಹಿಸಿದ್ದೇ ಮಾಧ್ಯಮಗಳು. ಅಣ್ಣಾ ಹಜಾರೆಯವರ ಲೋಕಪಾಲ್ ಚಳವಳಿ ‘ಜನರ ಚಳವಳಿಯಾದದ್ದು’ ಮಾಧ್ಯಮ ಕೃಪೆಯಿಂದಲೇ. ಅದಾಗ್ಯೂ 2010ರಲ್ಲಿ ಜೋರಾಗಿ ಕೇಳಿ ಬಂದ ಪಾವತಿ ಸುದ್ದಿ(Paid News)ಯು ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್‍ರು ಮಾಧ್ಯಮಗಳಿಗೆ ಹಣ ನೀಡಿ ತಮ್ಮ ಪರವಾದ ಅಭಿವೃದ್ಧಿ ವರದಿಗಳು ಬರುವಂತೆ ನೋಡಿಕೊಂಡಿದ್ದರು ಎಂಬ ಆರೋಪವೂ  ಬಂದಿತ್ತು. 2009ರಿಂದ 13ರ ನಡುವೆ ರಾಜಕಾರಣಿಗಳಿಗೆ ಸಂಬಂಧಿಸಿ ಸುಮಾರು 1,400 ಪಾವತಿ ಸುದ್ದಿಗಳು ಪ್ರಕಟವಾಗಿವೆ ಎಂಬ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿವೆ. ಜಿಂದಾಲ್ ಕಂಪೆನಿಯು ಈ ಹಿಂದೆ ಝೀ ನ್ಯೂಸ್‍ನ ವಿರುದ್ಧ ಬ್ಲ್ಯಾಕ್‍ಮೇಲ್ ಆರೋಪವನ್ನು ಹೊರಿಸಿತ್ತು. ಮಾತ್ರವಲ್ಲ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಪರಾಂಜಯ್ ಗುಹಾ ತಾಕುರ್ತಾ ಮತ್ತು ಶ್ರೀನಿವಾಸ್ ರೆಡ್ಡಿ ನೇತೃತ್ವದಲ್ಲಿ 2009 ಜೂನ್ 9ರಂದು ಪಾವತಿ ಸುದ್ದಿಯ ಕುರಿತಂತೆ ಉಪಸಮಿತಿಯನ್ನು ರಚಿಸಿತ್ತು. 2010 ಜುಲೈಯಲ್ಲಿ ಈ ಸಮಿತಿಯು ತನ್ನ ವರದಿಯನ್ನು ಪ್ರೆಸ್ ಕೌನ್ಸಿಲ್‍ಗೆ ಸಲ್ಲಿಸಿದ್ದು ಮತ್ತು ಆ ಬಗ್ಗೆ ಮಾಧ್ಯಮ ಪ್ರಮುಖರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಎಲ್ಲವೂ ನಡೆದಿತ್ತು. ಇಷ್ಟಿದ್ದೂ, ರಾಜೀವ್ ಬಜಾಜ್‍ರ ಅಫಿದವಿತ್‍ನ ಬಗ್ಗೆ ಮಾಧ್ಯಮಗಳೇಕೆ ಈ ಮಟ್ಟದಲ್ಲಿ ಮೌನವಹಿಸಿದುವು? ಭ್ರಷ್ಟಾಚಾರದ ಬಗ್ಗೆ ಅದರಲ್ಲೂ ಮಾಧ್ಯಮ ಭ್ರಷ್ಟಾಚಾರದ (ಪಾವತಿ ಸುದ್ದಿ) ಬಗ್ಗೆ ಏರು ದನಿಯಲ್ಲಿ ಮಾತಾಡಿದ ಮಾಧ್ಯಮಗಳೆಲ್ಲ ಈ ಅಫಿದವಿತ್‍ಗೆ ಒಂದು ಸುದ್ದಿಯಾಗುವ ಅರ್ಹತೆಯನ್ನು ನೀಡಲಿಲ್ಲವೇಕೆ? ಅಫಿದವಿತ್‍ನಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂಬುದನ್ನು ವಿಶ್ಲೇಷಿಸುವುದಕ್ಕಾದರೂ ಸುದ್ದಿ ಪ್ರಕಟಣೆ ಅಗತ್ಯವಾಗಿತ್ತಲ್ಲವೇ? ಎಕನಾಮಿಕ್ಸ್ ಟೈಮ್ಸ್ ಅನ್ನು (ಮುಂಬೈ ಆವೃತ್ತಿ) ಹೊರತು ಪಡಿಸಿದಂತೆ ಉಳಿದೆಲ್ಲಾ ಪತ್ರಿಕೆ-ಚಾನೆಲ್‍ಗಳು ಮೌನಕ್ಕೆ ಜಾರಿದ್ದು ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ?
    ಅರ್ನಾಬ್ ಸೈಕಿಯಾ ಮತ್ತಿತರ ಪತ್ರಕರ್ತರ ಅನುಮಾನ ಇದುವೇ ಆಗಿತ್ತು. ಆದ್ದರಿಂದಲೇ ಸ್ಪಷ್ಟೀಕರಣ ಕೋರಿ ಮಾಧ್ಯಮ ಕ್ಷೇತ್ರದ ಪ್ರಮುಖರಿಗೆ ಅವರು ಇಮೇಲ್ ಮಾಡಿದ್ದರು. ಹಾಗಂತ,
      ಇವತ್ತಿರುವುದು 1993ರ ಅಂಬಾನಿಯಲ್ಲವಲ್ಲ. 1993ರಲ್ಲಿ ಪತ್ರಿಕೆಗಳ ಮುಖಪುಟದಿಂದ ಕೊನೆಪುಟದ ತನಕ ಆವರಿಸಿಕೊಳ್ಳುವಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದ ಸುದ್ದಿಯೊಂದು ಇವತ್ತು ಸುದ್ದಿಯಾಗುವ ಮಹತ್ವವನ್ನೇ ಪಡಕೊಳ್ಳುವುದಿಲ್ಲ ಎಂದರೆ ಅದಕ್ಕೆ ಕಾರಣ ಅಂಬಾನಿ ಸಾಮ್ರಾಜ್ಯ. ಧೀರೂಭಾಯಿ ಅಂಬಾನಿಯವರ ಸಾಮ್ರಾಜ್ಯ ಇವತ್ತು ಮಕ್ಕಳಾದ ಅನಿಲ್ ಮತ್ತು ಮುಖೇಶ್‍ರಲ್ಲಿ ವಿಭಜನೆಗೊಂಡಿದೆ. ಈ ವಿಭಜನೆಯಿಂದ ಅವರ ಉದ್ಯಮಕ್ಕೆ ಲಾಭವಾಗಿದೆಯೋ ಇಲ್ಲವೋ ಆದರೆ ಮಾಧ್ಯಮ ಕ್ಷೇತ್ರಕ್ಕಂತೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಇವತ್ತು ‘ಮೋದಿ ಇಲ್ಲವೇ ಸೋನಿಯಾರ ವಿರುದ್ಧ ಬರೆಯ ಬಹುದು, ಆದರೆ ಅಂಬಾನಿಗಳ ವಿರುದ್ಧ ಸಾಧ್ಯವಿಲ್ಲ’ ಎಂಬೊಂದು ವಾತಾವರಣ ಪ್ರಮುಖ ಮಾಧ್ಯಮಗಳ ಮಟ್ಟಿಗೆ ಸತ್ಯವಾಗುತ್ತಿದೆ. ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಇವತ್ತು ಮಾಧ್ಯಮ ಕ್ಷೇತ್ರವನ್ನು ಬಹುತೇಕ ಆಳುತ್ತಿದ್ದಾರೆ. ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL) ಸಂಸ್ಥೆಯು ‘ನೆಟ್‍ವರ್ಕ್ 18’ ಎಂಬ ಮಾಧ್ಯಮ ಸಮೂಹ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಈಟಿ.ವಿ.ಯ ನಿಯಂತ್ರಣವೂ ಅದರದೇ. ಎನ್‍ಡಿಟಿವಿಯೂ ಅದರ ಪಾಲಾಗಿದೆ. ಅನಿಲ್ ಒಡೆತನದ ಅನಿಲ್ ಧೀರೂಭಾಯಿ ಅಂಬಾನಿ ಸಂಸ್ಥೆಯು ಹಿಂದೂಸ್ತಾನ್ ಟೈಮ್ಸ್ ಮತ್ತು ಮಿಂಟ್ ಪತ್ರಿಕೆಗಳ ನಿಯಂತ್ರಣವನ್ನು ಹೊಂದಿದೆ.
ಜೊತೆಗೆ ಟಿ.ವಿ. ಟುಡೇ ಗುಂಪಿನ ಒಡೆತನವೂ ಅದರದ್ದೇ. ಹೀಗಿರುತ್ತಾ, ರಾಜೀವ್ ಬಜಾಜ್‍ರ ಅಫಿದವಿತ್ ಸುದ್ದಿಯಾಗುವುದಾದರೂ ಹೇಗೆ? ನಿಜವಾಗಿ, ನಾವಿಲ್ಲಿ ಆತಂಕ ಪಡಬೇಕಾದುದು ಒಂದು ಅಫಿದವಿತ್‍ನ ಬಗ್ಗೆ ಅಲ್ಲ. ಮಾಧ್ಯಮ ಕ್ಷೇತ್ರದ ಮೇಲೆ ಕಾರ್ಪೋರೇಟ್ ದೊರೆಗಳು ಪಡೆಯುವ ಪ್ರಾಬಲ್ಯ ಮತ್ತು ಅದರಿಂದಾಗಿ ಎದುರಾಗುವ ಅಪಾಯಗಳ ಬಗ್ಗೆ. ಅಂಬಾನಿ ಗುಂಪಿನ ಸುದ್ದಿಯನ್ನು ಅಡಗಿಸಿಟ್ಟ ಮಾಧ್ಯಮಗಳು ನಾಳೆ ಇನ್ನೊಬ್ಬ ಕಾರ್ಪೋರೇಟ್‍ನ ಸುದ್ದಿಯನ್ನೂ ಅಡಗಿಸಬಹುದು. ಇಂಥ ಸ್ಥಿತಿಯಲ್ಲಿ ಮಾಧ್ಯಮಗಳು ಎಷ್ಟು ಪರಿಣಾಮ ಕಾರಿ? ಕಾರ್ಪೋರೇಟ್ ಒಡೆತನಕ್ಕೆ ಮಾಧ್ಯಮ ಕ್ಷೇತ್ರ ಸಿಲುಕುವುದರಿಂದ ಆಗುವ ಪರಿಣಾಮಗಳು ಏನೇನು? ಹೀಗಿರುತ್ತಾ ಮಾಧ್ಯಮ ರಂಗವು ಪ್ರಜಾತಂತ್ರಕ್ಕೆ ಕಾವಲು ನಿಲ್ಲಬಹುದೇ ಅಥವಾ ತನಿಖಾ ಬರಹ, ಸುದ್ದಿ ವಿಶ್ಲೇಷಣೆ, ಸತ್ಯದ ಹುಡುಕಾಟಗಳೆಲ್ಲ ಮಾಧ್ಯಮ ಕ್ಷೇತ್ರಕ್ಕೆ ವಿದಾಯ ಹೇಳಬಹುದೇ ಅಥವಾ ಅಧಿಕ ಮನರಂಜನೆ ಮತ್ತು ಸ್ವಲ್ಪ ನ್ಯೂಸ್ ಎಂಬಲ್ಲಿಗೆ ಮಾಧ್ಯಮ ಕ್ಷೇತ್ರ ಬಂದು ಮುಟ್ಟಬಹುದೇ?
        ಕಾರ್ಪೋರೇಟ್ ಒಲವಿನ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವ ಈ ಹೊತ್ತಿನಲ್ಲಿ ಇಂಥ ಅನುಮಾನಗಳು ಇನ್ನಷ್ಟು ಬಲ ಪಡೆಯುತ್ತವೆ.  

Tuesday, December 1, 2015

ಎಲ್‍ಕೆಜಿ ಬಸ್‍ನಿಂದ ಕಂಪೆನಿ ಬಸ್‍ನವರೆಗೆ..

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್
ಇನ್ಫೋಸಿಸ್
ವಿಪ್ರೊ
ಹೆಚ್‍ಸಿಎಲ್ ಟೆಕ್ನಾಲಜೀಸ್
ಟೆಕ್ ಮಹೀಂದ್ರಾ
ಎಸ್ಸಾರ್ ಗ್ರೂಪ್
        ಮುಂತಾದ ಪ್ರಮುಖ ಕಂಪೆನಿಗಳಲ್ಲಿರುವ ಉದ್ಯೋಗಾವಕಾಶಗಳು, ವರ್ಷಂಪ್ರತಿ ಇವು ಪಡೆಯುತ್ತಿರುವ ನಿವ್ವಳ ಲಾಭ ಮತ್ತು ತಮ್ಮಲ್ಲಿನ ಉದ್ಯೋಗಿಗಳಿಗೆ ಈ ಕಂಪೆನಿಗಳು ಕೊಡುತ್ತಿರುವ ವೇತನ.. ಮುಂತಾದುವುಗಳನ್ನು ಲೆಕ್ಕ ಹಾಕಿಕೊಂಡು, ಆ ಉದ್ಯೋಗಿಗಳಲ್ಲಿ ಓರ್ವನಾ/ಳಾಗುವ ಕನಸಿನೊಂದಿಗೆ ಕಲಿಯುತ್ತಿರುವ ಮಗುವಿಗೂ ಈ ಸಮಾಜಕ್ಕೂ ಯಾವ ಬಗೆಯ ಸಂಬಂಧ ಇರಬಹುದು ಅಥವಾ ಬರೇ ಅದಾನಿ, ಬಜಾಜ್, ಆದಿತ್ಯ ಬಿರ್ಲಾ, ಅಂಬಾನಿ, ಎಬಿಸಿ ಗ್ರೂಪ್.. ಇತ್ಯಾದಿಗಳಲ್ಲಿ ಉದ್ಯೋಗಿ ಯಾಗುವುದನ್ನೇ ಗುರಿಯಾಗಿಟ್ಟುಕೊಂಡ ವಿದ್ಯಾರ್ಜನೆಯಿಂದ ಸಮಾಜ ಏನನ್ನು ನಿರೀಕ್ಷಿಸಬಹುದು? ಶಿಕ್ಷಣದ ಗುರಿ ಉದ್ಯೋಗವಷ್ಟೇ ಅಲ್ಲ, ಆಗಬಾರದು ಕೂಡ. ಸಮಾಜದ ಭಾವನೆಗಳಿಗೆ ಸ್ಪಂದಿಸುವ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ವಿಶಾಲ ಗುಣವನ್ನೂ ಅದು ಹೊಂದಿರಬೇಕು. ಒಂದೆಡೆ, ಅಸಹಿಷ್ಣುತೆಯ ವಾತಾವರಣ ಬಲ ಪಡೆಯುತ್ತಿದೆ. ಇಲ್ಲಿ ಇರಬೇಕಾದವರನ್ನು ಮತ್ತು ದೇಶ ಬಿಟ್ಟು ಹೋಗಬೇಕಾದವರನ್ನು ಪಟ್ಟಿ ಮಾಡಲಾಗುತ್ತಿದೆ. ಇನ್ನೊಂದೆಡೆ, ಈ ಬೆಳವಣಿಗೆಯ ಯಾವ ಹಂಗೂ ಇಲ್ಲದೇ ಭ್ರಷ್ಟಾಚಾರ, ಅತ್ಯಾಚಾರ, ದರೋಡೆಗಳು ಸರಾಗವಾಗಿ ನೆರವೇರುತ್ತಿವೆ. ಬಡತನ, ವೃದ್ಧಾಶ್ರಮ, ರೋಗ-ರುಜಿನಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿವೆ. ಹಾಗಂತ, ಒಂದು ಶಾಲೆಗೆ ಅಥವಾ ಕಾಲೇಜಿಗೆ ನೇರವಾಗಿ ಇವುಗಳೊಂದಿಗೆ ಸಂಬಂಧ ಇಲ್ಲದೇ ಇರಬಹುದು. ಸರಕಾರ ನಿಗದಿಪಡಿಸಿದ ಪಠ್ಯಗಳನ್ನು ತಾವು ಕಲಿಸುತ್ತಿದ್ದೇವೆ ಎಂದು ಅವು ಸಮರ್ಥಿಸಿಕೊಳ್ಳಬಹುದು. ವಿದ್ಯಾರ್ಥಿಯೋರ್ವ ಅತೀ ಹೆಚ್ಚು ಅಂಕ ಪಡೆದು ತೇರ್ಗಡೆಯಾಗುವುದನ್ನೇ ಹೆತ್ತವರು ಬಯಸುತ್ತಾರೆ ಎಂದೂ ಹೇಳಬಹುದು. ಇವೆಲ್ಲ ನಿಜವೇ. ಆದರೆ, ಇದು ಕಲಿಕೆಯ ಸರಿಯಾದ ವಿಧಾನವೇ? ಪಠ್ಯ ಮತ್ತು ರಾಂಕ್ ಗಳಾಚೆಗೆ ಒಂದು ಮಗುವನ್ನು ಎಳೆದು ತರಬೇಕಾದ ಅಗತ್ಯ ಇಲ್ಲವೇ? ಪಠ್ಯಗಳ ಹೊರಗೊಂದು ವಿಶಾಲ ಜಗತ್ತಿದೆ. ಆ ಜಗತ್ತಿನಲ್ಲಿ ಪಠ್ಯಗಳು ಹೇಳದ ಹಸಿವು ಇದೆ, ಕಣ್ಣೀರು ಇದೆ, ಮೋಜು ಇದೆ. ಸಹಿಷ್ಣುತೆಯೂ ಅಸಹಿಷ್ಣುತೆಯೂ ಇದೆ. ನೈತಿಕವೂ ಅನೈತಿಕವೂ ಆದ ಬೆರಗಿನ ಲೋಕವಿದೆ. ಸಾಹಿತ್ಯ ಕೃತಿಗಳಿವೆ. ಬದುಕನ್ನೇ ಅಲುಗಾಡಿಸುವ ಕತೆ-ಕಾದಂಬರಿಗಳಿವೆ.. ಇವುಗಳನ್ನೆಲ್ಲಾ ಗಮನಿಸುವ ಮತ್ತು ಸೂಕ್ಷ್ಮವಾಗಿ ಅವಲೋಕಿಸುವ ಸಂದರ್ಭವನ್ನು ನಮ್ಮ ಕ್ಲಾಸ್ ರೂಂಗಳು ಎಷ್ಟರ ಮಟ್ಟಿಗೆ ಒದಗಿಸುತ್ತಿವೆ? ಈ ಕುರಿತಂತೆ ಏನೆಲ್ಲ ಕಾರ್ಯಕ್ರಮಗಳನ್ನು ನಮ್ಮ ಶಾಲಾ-ಕಾಲೇಜುಗಳು ಇವತ್ತು ಹಮ್ಮಿಕೊಳ್ಳುತ್ತಿವೆ? ಸಮಾಜದ ಅಭಿವೃದ್ಧಿಯ ಬಗ್ಗೆ ಒಂದು ಮಗು ಮಾತಾಡಬೇಕಾದರೆ ಸಾಮಾಜಿಕ ಬದುಕನ್ನು ಅದು ಕಂಡಿರಬೇಕು ಅಥವಾ ಅನುಭವಿಸಿರಬೇಕು. ಹಾಗಂತ, ಹಸಿವನ್ನೇ ಕಾಣದ ವ್ಯಕ್ತಿ ಹಸಿವಿನ ಅಂತರಾತ್ಮದ ಬಗ್ಗೆ ಮಾತಾಡಲಾರ ಎಂದೇನಿಲ್ಲ. ಒಂದೊಮ್ಮೆ, ಹಸಿವನ್ನೇ ಉಂಡು ಬೆಳೆದವನಿಗಿಂತಲೂ ಚೆನ್ನಾಗಿ ಮತ್ತು ಆದ್ರ್ರವಾಗಿ ಮಾತಾಡಲೂ ಆ ವ್ಯಕ್ತಿಯಿಂದ ಸಾಧ್ಯವಾಗ ಬಹುದು. ಅದು ಹೇಗೆಂದರೆ, ಪಠ್ಯಗಳಾಚೆಗೆ ಬಂದು ಸಮಾಜವನ್ನು ನೋಡುವುದರಿಂದ ಮತ್ತು ಅನುಭವಿಸುವುದರಿಂದ. ಆದರೆ, ಇವತ್ತು ರಾಂಕ್ ಮತ್ತು ಉದ್ಯೋಗ ಆಧಾರಿತ ಶಿಕ್ಷಣ ಕ್ರಮಗಳಿಂದಾಗಿ ಬಹುತೇಕ ಎರಡು ಪ್ರಪಂಚಗಳೇ ನಿರ್ಮಾಣವಾದಂತೆ ಕಾಣುತ್ತಿದೆ. ಒಂದು ಗುಂಪು ಸಮಾಜದ ಆಗು-ಹೋಗುಗಳಿಂದ ಸಂಪೂರ್ಣ ದೂರವಿದ್ದುಕೊಂಡು ಬದುಕುತ್ತಿರುವಾಗ ಇನ್ನೊಂದು ಗುಂಪು ಸಮಾಜದ ನೆಮ್ಮದಿಯನ್ನು ಕೆಡಿಸುವಲ್ಲಿ ತೊಡಗಿಸಿಕೊಂಡಿದೆ. ಒಂದು ಗುಂಪಿನ ಎಲ್‍ಕೆಜಿ ಆರಂಭವಾಗುವುದೇ ಶಾಲಾ ಬಸ್‍ನ ಮೂಲಕ. ಕಲಿಕೆಯು ಕೊನೆಗೊಂಡ ಬಳಿಕ ಬದುಕು ಇನ್ನೊಂದು ಬಸ್‍ಗೆ ಬದಲಾಗುತ್ತದೆ. ಅದು ಕಂಪೆನಿಯ ಬಸ್. ದುಬಾರಿ ಫೀಸು, ಹೈಫೈ ಎನ್ನಬಹುದಾದ ಕ್ಯಾಂಪಸ್ಸು, ಕಾಲೇಜು, ಕಲಿಕಾ ಸೌಲಭ್ಯಗಳು.. ಇತ್ಯಾದಿಗಳನ್ನು ಹೊಂದಿರುವ ಶಿಕ್ಷಣ ಸಂಸ್ಥೆಗಳಿಂದ ವಿದ್ಯಾರ್ಥಿಯೋರ್ವ ಹೊರಬರುವಾಗ ದುಡ್ಡಿನ ದೊಡ್ಡದೊಂದು ಮೂಟೆಯನ್ನೇ ಅಲ್ಲಿಗೆ ಕೊಟ್ಟಿರುತ್ತಾನೆ/ಳೆ. ಆತ ಅಲ್ಲಿಂದ ಹೊರ ಬರುವುದೇ ಆ ಮೂಟೆಯನ್ನು ಮರಳಿ ಸಮಾಜದಿಂದ ಪಡೆಯಲಿಕ್ಕಾಗಿ. ಆತ ಸಾಲ ಮಾಡಿರಬಹುದು. ಮನೆ ಅಡವು ಇಟ್ಟಿರಬಹುದು ಅಥವಾ ಕಾಲೇಜಿನ ಬೇಡಿಕೆಯನ್ನು ಪೂರೈಸಲು ಇನ್ನೇನೋ ಮಾಡಿರಬಹುದು. ಅದನ್ನು ಸರಿದೂಗಿಸಬೇಕಾದರೆ ಸಮಾಜದಿಂದ ಕಿತ್ತುಕೊಳ್ಳಲೇಬೇಕು. ತ್ಯಾಗ, ಸೇವೆ ಮುಂತಾದ ಮಾನವೀಯ ಪದಗಳು ಸಂಘರ್ಷಕ್ಕೆ ಒಳಗಾಗುವುದೇ ಇಲ್ಲಿ. ಶಿಕ್ಷಣವನ್ನು ಈ ಸಂಘರ್ಷದಿಂದ ಹೊರ ತಂದು ಸುಲಭಗೊಳಿಸಲು ಏನೇನು ಮಾಡಬಹುದು? ಹಾಗಂತ, ಇಲ್ಲಿನ ಸಮಸ್ಯೆಯನ್ನು ಇಷ್ಟಕ್ಕೇ ಸೀಮಿತಗೊಳಿಸಿ ಅಥವಾ ಈ ಮಟ್ಟಕ್ಕೆ ಸರಳಗೊಳಿಸಿ ವ್ಯಾಖ್ಯಾನಿಸುವುದೂ ತಪ್ಪು. ಸಾಮಾಜಿಕ ಕಳಕಳಿ ಎಂಬುದಕ್ಕೆ ಭಿನ್ನ ಮುಖ ಇದೆ. ವೈದ್ಯನಾದವನಲ್ಲಿ ತ್ಯಾಗ ಮತ್ತು ಜನಸೇವೆಯ ಗುಣ ಇರಬೇಕು ಎಂದು ಒಂದು ಕಡೆ ವಾದಿಸುವಾಗ ಇನ್ನೊಂದು ಕಡೆ, ಆ ತ್ಯಾಗ ಮತ್ತು ಸೇವಾ ಮನೋಭಾವವನ್ನು ಆತ/ಕೆಯಲ್ಲಿ ಬೆಳೆಸಲು ಕಲಿಕಾ ಹಂತದಲ್ಲಿ ಏನೇನು ಪ್ರಯತ್ನಗಳಾಗಿವೆ ಎಂಬುದನ್ನೂ ನೋಡಬೇಕಾಗುತ್ತದೆ. ಇವತ್ತಿನ ಕಲಿಕಾ ನೀತಿ ಎಷ್ಟು ಸ್ವರಕ್ಷಣಾ ರೀತಿಯಲ್ಲಿದೆಯೆಂದರೆ, ಪರೀಕ್ಷೆಯಲ್ಲಿ ಗೆಲ್ಲುವುದನ್ನೇ ಪ್ರಮುಖ ಗುರಿಯಾಗಿಸಲಾಗಿದೆ. ಪಠ್ಯೇತರ ಚಟುವಟಿಕೆಗಳೆಂಬುದು ತೀರಾ ತೀರಾ ನಗಣ್ಯವಾಗುತ್ತಾ ಬರುತ್ತಿದೆ. ಮಕ್ಕಳಲ್ಲಿ ಸೇವಾ ಮನೋಭಾವ ಬೆಳೆಯಬೇಕೆಂದರೆ NSSನಂತಹ ಪ್ರಾಯೋಗಿಕ ಚಟುವಟಿಕೆಗಳಲ್ಲಿ ಮಕ್ಕಳನ್ನು ಪಾಲುಗೊಳಿಸಬೇಕು. ಸಮಾಜದ ಬದುಕನ್ನು ಹತ್ತಿರದಿಂದ ಕಂಡು, ಅನುಭವಿಸಿ ಸಮಾಜದೊಂದಿಗೆ ಸೇರಿ ಬದುಕುವಂತಹ ವಾತಾವರಣ ನಿರ್ಮಾಣವಾಗಬೇಕು. ರೋಗಿಗಳೊಂದಿಗೆ ಸಂವಾದ ನಡೆಸುವಂತಹ ವಾತಾವರಣ ಬೆಳೆಯಬೇಕು. ವೃದ್ಧಾಶ್ರಮಕ್ಕೆ ಭೇಟಿ, ಆಸ್ಪತ್ರೆ ಭೇಟಿ, ಕೊಳೆಗೇರಿ ಪ್ರಯಾಣ.. ಸಹಿತ ಪಠ್ಯೇತರ ಜಗತ್ತನ್ನು ದರ್ಶಿಸುವ ಸಂದರ್ಭಗಳನ್ನು ಮಕ್ಕಳಿಗೆ ನಿರ್ಮಿಸಿಕೊಡಬೇಕು. ಸರಳ ಜೀವನ ಕ್ರಮವನ್ನು ಪರಿಚಯಿಸಬೇಕು. ದುರಂತ ಏನೆಂದರೆ, ಪಠ್ಯಕ್ಕಿಂತ ಹೊರತಾದ ವಿಷಯಗಳಲ್ಲಿ ಮಕ್ಕಳನ್ನು ತೊಡಗಿಸಲು ಸಮಯವೇ ಸಿಗದಷ್ಟು ಪಠ್ಯಗಳು ಭಾರವಾಗಿ ಬಿಟ್ಟಿವೆ. ವರ್ಷ ಮುಗಿಯುವಾಗ ಪಠ್ಯಗಳನ್ನೇ ಮುಗಿಸಲು ಸಾಧ್ಯವಾಗುತ್ತಿಲ್ಲ ಎಂಬ ದೂರು ಬರುತ್ತಿದೆ. ಅಲ್ಲದೇ ಒಮ್ಮೆ ಸಿಲೆಬಸ್ ಅನ್ನು ಪಾಠ ಮಾಡಿ ಮುಗಿಸಿದರೂ ಮರು ಅವಲೋಕನಕ್ಕೆ ಸಮಯ ವಿೂಸಲಿಡಲೇಬೇಕಾದ ಮತ್ತು ಹೆಚ್ಚು ಅಂಕ ಪಡೆಯುವುದಕ್ಕೆ ಶ್ರಮಿಸಲೇ ಬೇಕಾದ ಒತ್ತಡ ಆಡಳಿತ ಮಂಡಳಿ ಹಾಗೂ ಹೆತ್ತವರ ಕಡೆಯಿಂದ ಸದಾ ಬರುತ್ತದೆ. ಇದರ ಅಡ್ಡ ಪರಿಣಾಮಕ್ಕೆ ಗುರಿಯಾಗುವುದು ನೇರವಾಗಿ ಮಕ್ಕಳು. ಅವು ಪ್ರಾಯೋಗಿಕ ಅನುಭವ ರಹಿತ ಕಲಿಕೆಯೊಂದಿಗೆ ಸಮಾಜಕ್ಕೆ ಹಿಂತಿರುಗುತ್ತವೆ. ಹಾಗೆ ಹಿಂತಿರುಗಿದ ಮಗುವಿನಲ್ಲಿ ನಾವು ತ್ಯಾಗ, ಸೇವಾಗುಣ, ಸಾಮಾಜಿಕ ಕಳಕಳಿ.. ಮುಂತಾದ ಭಾರವನ್ನು ಹೊರಿಸಿದರೆ ಅದನ್ನು ಆ ಮಗು ತಾಳಿಕೊಳ್ಳುವುದು ಹೇಗೆ? ‘ನನ್ನ ಮಗುವಿಗೆ ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳೂ ಮುಖ್ಯ, ಆದ್ದರಿಂದ ನನ್ನ ಮಗುವನ್ನು ಸಮಾಜದ ಮಗುವಿಗೆ ಬೆಳೆಸಬೇಕು’ ಎಂದು ಶಾಲಾ ಶಿಕ್ಷಕರೊಂದಿಗೆ ಹೇಳುವ ಪ್ರಯತ್ನವನ್ನು ಎಷ್ಟು ಹೆತ್ತವರು ಇವತ್ತು ಮಾಡಬಲ್ಲರು? ಗ್ರಾವಿೂಣ ಸೇವೆ ಮಾಡಲು ವೈದ್ಯರು ಒಪ್ಪುತ್ತಿಲ್ಲ ಎಂದು ಸರಕಾರ ಒಂದು ಕಡೆ ಆರೋಪಿಸುತ್ತಿದೆ. ಸರಕಾರ ಹೇಳಿದ ದಂಡ ಪಾವತಿಸಿ ವೈದ್ಯರು ಸರಕಾರದ ಹಂಗಿನಿಂದ ಹೊರಬರಲು ಮುಂದಾಗುತ್ತಿದ್ದಾರೆ ಎಂಬ ಆರೋಪವೂ ಸರಕಾರದ್ದೇ. ನಿಜವಾಗಿ, ಇದರಲ್ಲಿ ವೈದ್ಯರಷ್ಟೇ ಆರೋಪಿಗಳಲ್ಲ. ನಮ್ಮ ಕಲಿಕೆಯೂ ಒಂದು ಆರೋಪಿ. ನಾವು ಕಲಿಸಿದ್ದೇ ವೇತನದ ಆಧಾರದಲ್ಲಿ. ಸಮಾಜದ ಅಭಿವೃದ್ಧಿ, ಸಾಮಾಜಿಕ ಕಳಕಳಿ, ಜನಸೇವೆ ಮುಂತಾದ ಪದಗಳನ್ನೇ ಕಲಿಕಾ ಹಂತದಲ್ಲಿ ಕಳಚಿಟ್ಟು, ಬರೇ ಉದ್ಯೋಗಾಧಾರಿತ ಶಿಕ್ಷಣಕ್ಕೆ ಒತ್ತುಕೊಟ್ಟರೆ ಆ ವಿದ್ಯಾರ್ಥಿ ಯಾಕೆ ಗ್ರಾವಿೂಣ ಸೇವೆ ಮಾಡುತ್ತಾನೆ? ಸೇವೆ ಎಂಬ ಪದಕ್ಕೆ ಮಹತ್ವ ಬರುವುದು ಸೇವೆಯ ನಿಜ ರುಚಿಯನ್ನು ಅನುಭವಿಸಿದಾಗ ಅಥವಾ ಅಂಥವುಗಳಿಂದ ಪ್ರೇರಣೆ ಪಡೆದಾಗ. ಕಲಿಕಾ ಹಂತದಲ್ಲಿ ಇಂಥ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳಲು ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾದಾಗ ಮಾತ್ರ ಇಂಥ ಆರೋಪಗಳು ಗಂಭೀರ ಅನ್ನಿಸಿಕೊಳ್ಳುತ್ತವೆ.
      ನಿಜವಾಗಿ, ಶಾಲಾ ಕೊಠಡಿಯೊಳಗೆ ಮಕ್ಕಳು ಕಲಿಯುತ್ತಿರುವಾಗ ಹೊರಗೆ ನೂರಾರು ಬಗೆಯ ಗೊಂದಲಗಳು ಸದ್ದು ಮಾಡುತ್ತಿರುತ್ತವೆ. ಅವು ಅಸಹಿಷ್ಣುತೆ ಇರಬಹುದು, ಹಸಿವು ಇರಬಹುದು, ಆಹಾರ ಕ್ರಮ ಇರಬಹುದು ಅಥವಾ ಇನ್ನಿತರ ಹತ್ತಾರು ಸಾಮಾಜಿಕ ವಿಷಯಗಳು ಇರಬಹುದು. ಪಠ್ಯಗಳ ಮಧ್ಯೆ ಇಂಥ ವಿಷಯಗಳನ್ನು ಎತ್ತಿಕೊಂಡು ಮಕ್ಕಳ ಮಧ್ಯೆ ಚರ್ಚೆಯನ್ನು ಹಮ್ಮಿಕೊಂಡರೆ ಮಕ್ಕಳಿಗೆ ಸಮಾಜದ ತುಡಿತಗಳು ಗೊತ್ತಾಗಬಹುದು. ಹೆಣ್ಣು ಶಿಶು ಹತ್ಯೆಯು ಸಾಮಾಜಿಕ ವಿಷಯ ಆಗಿರುವ ಹೊತ್ತಿನಲ್ಲಿ ಅದನ್ನು ಮಕ್ಕಳ ಇಶ್ಶೂ ಆಗಿಸುವ ಶಾಲಾ ಕೊಠಡಿಗಳು ತಯಾರಾಗಬೇಕು. ಅತ್ಯಾಚಾರ ಸಹಜವೆಂಬಂತಹ ವಾತಾವರಣ ಉಂಟಾಗುವಾಗ, ಧರ್ಮದ ಕಾರಣಕ್ಕಾಗಿ ಹಿಂಸೆ ಭುಗಿಲೇಳುವಾಗ, ವೃದ್ಧರನ್ನು ಅನಾಥಾಲಯಕ್ಕೆ ಅಟ್ಟುವಾಗ, ಹಸಿವಿನಿಂದಾಗಿ ಸಾವು ಸಂಭವಿಸುವಾಗ.. ಹೀಗೆ ಸಮಾಜದ ಸಮಸ್ಯೆ ಮತ್ತು ಸಂಕಷ್ಟಗಳು ಶಾಲಾ ಕೊಠಡಿಯೊಳಗಿನ ಸಮಸ್ಯೆಗಳೂ ಆದಾಗ ಮಕ್ಕಳೊಳಗೆ ಒಂದು ಬಗೆಯ ಪ್ರಜ್ಞಾವಂತಿಕೆ ಬೆಳೆಯಬಹುದು. ತನಗೂ ಅವುಗಳಿಗೂ ಸಂಬಂಧ ಇದೆ ಎಂಬ ಮನೋಭಾವ ಉಂಟಾಗಬಹುದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ದೊಡ್ಡ ಮಟ್ಟದಲ್ಲಿ ಯುವ ಸಮೂಹ ಬೀದಿಗಿಳಿದಿತ್ತು. ಹಲವಾರು ಕ್ರಾಂತಿಗಳ ಹಿಂದೆ ಯುವ ಸಮೂಹದ ಪಾತ್ರ ಅನನ್ಯವಾಗಿರುವುದೂ ಎಲ್ಲರಿಗೂ ಗೊತ್ತಿದೆ. ಶಾಲೆ ಎಂದರೆ ಕಲಿಕೆಯಷ್ಟೇ ಅಲ್ಲ, ಅದು ನಾಯಕತ್ವವನ್ನೂ ಬೆಳೆಸಬೇಕು. ಸಾಮಾಜಿಕ ಕಳಕಳಿಯನ್ನೂ ಉಂಟು ಮಾಡಬೇಕು. ತ್ಯಾಗ, ಸಹಿಷ್ಣುತೆಯನ್ನೂ ವಿದ್ಯಾರ್ಥಿಗಳಲ್ಲಿ ಹುಟ್ಟಿಸಬೇಕು. ಕ್ಯಾಂಪಸ್‍ನಿಂದ ಹೊರಬರುವ ವಿದ್ಯಾರ್ಥಿಯಿಂದ ಸರ್ಟಿಫಿಕೇಟನ್ನಷ್ಟೇ ಸಮಾಜ ನಿರೀಕ್ಷಿಸುವುದಲ್ಲ. ಓರ್ವ ಸಾಮಾಜಿಕ ಕಳಕಳಿಯುಳ್ಳ ವ್ಯಕ್ತಿಯನ್ನೂ ನಿರೀಕ್ಷಿಸುತ್ತದೆ. ಇವತ್ತಿನ ದಿನಗಳಲ್ಲಂತೂ ಇಂಥ ನಿರೀಕ್ಷೆಗೆ ಸಾಕಷ್ಟು ಮಹತ್ವವಿದೆ. ಒಂದು ಕಡೆ ನೈತಿಕ ಪತನ ಮತ್ತು ಮತ್ತೊಂದು ಕಡೆ ಅಸಹಿಷ್ಣುತೆಯ ವಾತಾವರಣದ ಮಧ್ಯೆ ಸರ್ಟಿಫಿಕೇಟ್ ಹಿಡಿದ ಮಕ್ಕಳು ಕ್ಯಾಂಪಸ್‍ನಿಂದ ಸಮಾಜಕ್ಕೆ ಇಳಿದು ಬರುತ್ತಿದ್ದಾರೆ. ಅವರು ಈ ಎಲ್ಲವುಗಳ ವಿರುದ್ಧ ಹೋರಾಟಕ್ಕೆ ನಾಯಕತ್ವವನ್ನು ನೀಡಬೇಕೆಂದು ಸಮಾಜ ಖಂಡಿತ ಬಯಸುತ್ತದೆ. ಇದು ಸಾಧ್ಯವಾಗಬೇಕಾದರೆ ಕಲಿಕೆಯನ್ನು ಸಮಾಜಮುಖಿ ಗೊಳಿಸಬೇಕು. ಅಂಬಾನಿ, ಅದಾನಿ, ಇನ್ಫೋಸಿಸ್, ವಿಪ್ರೊ ಗಳಾಚೆಗೆ ಇರುವ ಸಾಮಾನ್ಯ ಜನರೊಂದಿಗೆ ಸಂಬಂಧ ಇಟ್ಟುಕೊಳ್ಳುವ ಮತ್ತು ಆ ಜನರಿಗೆ ಸ್ಪಂದಿಸುವ ಮನೋಭಾವವನ್ನು ಕಲಿಕೆಯೊಂದಿಗೆ ಜೋಡಿಸಬೇಕು. ಸರ್ಟಿಫಿಕೇಟ್ ಪಡೆದ ಮಗು ಎಸ್ಸಾರ್‍ಗೆ ಹೋದರೂ ಆ್ಯಪಲ್‍ಗೆ ಸೇರಿದರೂ ಸಮಾಜಮುಖಿಯಾಗುವಂತೆ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಪಾಲುದಾರನಾಗುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ,
      ಎಲ್‍ಕೆಜಿಯ ಬಸ್‍ನಿಂದ ಕಂಪೆನಿ ಬಸ್‍ಗೆ ಸ್ಥಾನಾಂತರವಾದನು/ಳು ಎಂಬಲ್ಲಿಗೆ ಒಂದು ಮಗುವಿನ ಬದುಕು ಕೊನೆಗೊಳ್ಳಬಹುದು.


Wednesday, November 25, 2015

ಆಲಿಸುವವರೇ, ಆಲೋಚಿಸಲು ಪ್ರಾರಂಭಿಸಿ..

   ಕವಿಮಿತ್ರ ಜಲೀಲ್ ಮುಕ್ರಿಯವರು ಕಳೆದವಾರ ವಾಟ್ಸಪ್‍ನಲ್ಲಿ ಒಂದು ಕವನವನ್ನು ಕಳುಹಿಸಿಕೊಟ್ಟಿದ್ದರು;
 
    'ನಮ್ಮವನನ್ನು ಪೊಲೀಸರು ಬಂಧಿಸಿದರೆ
    ಅವನು ನಿರಪರಾಧಿ, ನಾವೆಲ್ಲ ವಕೀಲರು
    ಅನ್ಯನನ್ನು ಪೊಲೀಸರು ಬಂಧಿಸಿದರೆ
    ಅವನು ಅಪರಾಧಿ, ನಾವೆಲ್ಲ ನ್ಯಾಯಾಧೀಶರು..'

       ನಮ್ಮೊಳಗಿನ ಇಬ್ಬಂದಿನಕ್ಕೆ ಕನ್ನಡಿ ಹಿಡಿಯುವ ನಾಲ್ಕು ಸಾಲುಗಳಿವು. ಕೋಮು ಸಂಘರ್ಷ ಎಂಬ ಪದಕ್ಕೂ ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸಕ್ಕೂ ನಡುವೆ ಇರುವ ಸಂಬಂಧವನ್ನು ಟಿಪ್ಪು ಜಯಂತಿ ಮತ್ತೊಮ್ಮೆ ತಾಜಾಗೊಳಿಸಿದೆ. ಇಂಥ ಸಂಘರ್ಷಗಳು ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಏನು ಕಾರಣ? ಧರ್ಮವೇ, ರಾಜಕೀಯವೇ ಅಥವಾ ಟಿಪ್ಪುವಿನಂತಹ ಐತಿಹಾಸಿಕ ವ್ಯಕ್ತಿತ್ವಗಳೇ? 1947ರ ಭಾರತ ಈಗಿನದಲ್ಲ. ಅಭೂತಪೂರ್ವವೆನ್ನಬಹುದಾದ ಅನೇಕಾರು ಬದಲಾವಣೆಗಳನ್ನು ಈ ದೇಶ ಕಂಡಿದೆ. ಕೃಷಿ ಕ್ರಾಂತಿ, ಕೈಗಾರಿಕಾ ಕ್ರಾಂತಿ, ಅಕ್ಷರ ಕ್ರಾಂತಿ, ಸಂವಹನ ಕ್ರಾಂತಿ, ಕಂಪ್ಯೂಟರ್ ಕ್ರಾಂತಿ, ಮಾಧ್ಯಮ ಕ್ರಾಂತಿ.. ಸಹಿತ ಹಳೆ ತಲೆಮಾರು ಅಚ್ಚರಿಪಡುವಂತಹ ಪಲ್ಲಟಗಳು ನಡೆದಿವೆ. 1947ರ ಆಸುಪಾಸಿನಲ್ಲಿದ್ದದ್ದು ಒಂದು- ರೇಡಿಯೋವಾದರೆ, ಇನ್ನೊಂದು ದೂರದರ್ಶನ. ಇವೆರಡನ್ನು ಬಿಟ್ಟರೆ ಜನರಿಗೆ ಮಾಹಿತಿಯನ್ನು ಕೊಡುತ್ತಿದ್ದುದು ಬಹುತೇಕ ನಗರ ಪ್ರದೇಶದ ಮಂದಿಗೆ ದಕ್ಕುತ್ತಿದ್ದ ಕೆಲವೇ ಕೆಲವು ಪತ್ರಿಕೆಗಳು. ಆವತ್ತೂ ಕೋಮು ಸಂಘರ್ಷಗಳಿದ್ದುವು. ನೂರಾರು ಟಿ.ವಿ. ಚಾನೆಲ್‍ಗಳು ಮತ್ತು ಸಾವಿರಾರು ಪತ್ರಿಕೆಗಳಿರುವ ಇವತ್ತೂ ಕೋಮು ಸಂಘರ್ಷಗಳಿವೆ. ಹಾಗಂತ, ಇವುಗಳ ಸಂಖ್ಯೆಯಲ್ಲಿ, ಅವನ್ನು ಕಾರ್ಯರೂಪಕ್ಕೆ ತರುವ ವಿಧಾನಗಳಲ್ಲಿ ಮತ್ತು ಸಾವು-ನೋವುಗಳ ಅಂಕಿ-ಸಂಖ್ಯೆಗಳಲ್ಲಿ ವ್ಯತ್ಯಾಸ ಇರಬಹುದು. ಆದರೂ ಈ ಮನುಷ್ಯ ವಿರೋಧಿ ಮತ್ತು ಧರ್ಮವಿರೋಧಿ ಪಿಡುಗೊಂದು ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ ಪ್ರಾಬಲ್ಯ ಪಡೆಯುತ್ತಿರುವುದು ಯಾಕೆ? ಜನರು ಅಕ್ಷರಸ್ಥರಾದಂತೆಲ್ಲ ಅಜ್ಞಾನ ಕೊನೆಗೊಳ್ಳುತ್ತಾ ಹೋಗುತ್ತದೆ ಎಂಬುದು ಸಾಮಾನ್ಯ ವಾದ. ಅನಕ್ಷರಸ್ಥರಲ್ಲಿ ಕೆಲವು ಸಹಜ ದೌರ್ಬಲ್ಯಗಳಿರುತ್ತವೆ. ಅವರು ಪುಸ್ತಕವನ್ನು ಓದಲಾರರು. ಸಾಹಿತ್ಯವನ್ನು ಅನುಭವಿಸಲಾರರು. ಎಲ್ಲಕ್ಕಿಂತ ಮಿಗಿಲಾಗಿ ತನ್ನ ಧರ್ಮಗ್ರಂಥ ಏನು ಹೇಳುತ್ತದೆ ಎಂಬುದನ್ನು ಓದಿ ತಿಳಿದುಕೊಳ್ಳುವುದು ಅವರಿಂದ ಸಾಧ್ಯವಿಲ್ಲ. ಕಲ್ಬುರ್ಗಿಯನ್ನೋ ಭೈರಪ್ಪ, ಅನಂತಮೂರ್ತಿಯವರನ್ನೋ, ಕುವೆಂಪು, ಬೇಂದ್ರೆ, ಕಾರಂತರನ್ನೋ ಅಥವಾ ಇನ್ನಿತರ ಯಾರನ್ನೇ ಆಗಲಿ ಓದಿ ತಿಳಿಯಲು ಅವಕಾಶವಿರುವುದಿಲ್ಲ. ಇಂಥವರು ಇನ್ನಾರೋ ಹೇಳಿದ ಮಾತನ್ನು ನಂಬಬೇಕಾಗುತ್ತದೆ. ಕುರ್‍ಆನಿನಲ್ಲಿ ಹಾಗಿದೆ, ಭಗವದ್ಗೀತೆಯಲ್ಲಿ ಹೀಗಿದೆ, ಯಂಗ್ ಇಂಡಿಯಾದಲ್ಲಿ ಗಾಂಧೀಜಿ ಹಾಗೆ ಬರೆದಿದ್ದಾರೆ.. ಎಂದೆಲ್ಲಾ ಯಾರೋ ಹೇಳಿದುದನ್ನು ನಿಜ ಎಂದು ನಂಬಬೇಕಾದ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ. ಸ್ವಾತಂತ್ರ್ಯಾನಂತರದ ಎರಡ್ಮೂರು ದಶಕಗಳಲ್ಲಿ ನಡೆದ ಕೋಮು ಸಂಘರ್ಷಕ್ಕೆ ನಾವು ಈ ಅನಕ್ಷರತೆಯನ್ನೇ ಕಾರಣವಾಗಿ ಇಟ್ಟು ನೋಡಿದರೂ ಪ್ರಶ್ನೆಗಳು ಹಾಗೆಯೇ ಉಳಿಯುತ್ತವೆ. ಮಾತ್ರವಲ್ಲ, ಈ ಪ್ರಶ್ನೆಗಳು ಎಷ್ಟು ಗಂಭೀರವಾದುದೆಂದರೆ, ಕೋಮು ಸಂಘರ್ಷಕ್ಕೆ ಅಕ್ಷರ-ಅನಕ್ಷರದಲ್ಲಿ ಕಾರಣ ಹುಡುಕುವುದನ್ನೇ ಅಜ್ಞಾನ ಎಂದು ಸಾರುವಷ್ಟು ಪ್ರಮಾಣದಲ್ಲಿರುತ್ತದೆ. ಈ ದೇಶ ಹೆಚ್ಚೆಚ್ಚು ಅಕ್ಷರಸ್ಥ ಆದಂತೆಯೇ ಕೋಮು ಸಂಘರ್ಷದ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಾ ಹೋದುವು. ಅಷ್ಟೇ ಅಲ್ಲ, ಈ ಸಂಘರ್ಷದ ವ್ಯಾಪ್ತಿಯೂ ವಿಸ್ತರಿಸುತ್ತಾ ಹೋದುವು. ತೀರಾ ತೀರಾ ಹಳ್ಳಿ ಪ್ರದೇಶಗಳಲ್ಲೂ ಕೋಮು ಉದ್ವಿಘ್ನ ವಾತಾವರಣ ನಿರ್ಮಾಣವಾದದ್ದೇ ಹಳ್ಳಿಗಳು ಅಕ್ಷರಸ್ಥವಾದ ಬಳಿಕ. ಆದ್ದರಿಂದಲೇ ಕೋಮು ಸಂಘರ್ಷಕ್ಕೆ ಕಾರಣಗಳನ್ನು ಅನಕ್ಷರಸ್ಥತೆಗಿಂತ ಹೊರತಾದುದರಲ್ಲಿ ಹುಡುಕಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕಾರಣಗಳನ್ನು ಹುಡುಕ ಹೊರಟರೆ ಎರಡೇ ಎರಡು ಸಂಗತಿಗಳು ನಮ್ಮ ಎದುರು ನಿಲ್ಲುತ್ತವೆ. ಒಂದೋ ಧರ್ಮ ಇಲ್ಲವೇ ರಾಜಕೀಯ. ದುರಂತ ಏನೆಂದರೆ, ಜನರು ಹೆಚ್ಚೆಚ್ಚು ಅಕ್ಷರಸ್ಥರಾದಂತೆಲ್ಲ ಅದರ ಸಂಪೂರ್ಣ ಲಾಭ ಪಡೆದದ್ದು ಧರ್ಮವಲ್ಲ, ರಾಜಕೀಯ. ಕೋಮು ಸಂಘರ್ಷ ಎಂದು ನಾವು ಇವತ್ತು ಯಾವುದನ್ನೆಲ್ಲ ಗುರುತಿಸುತ್ತೇವೋ ಅವುಗಳಲ್ಲಿ ಪಾಲುಗೊಂಡವರು ಧರ್ಮಾನುಯಾಯಿಗಳು ಮತ್ತು ಅಕ್ಷರಸ್ಥರೂ ಆಗಿರಬಹುದು. ಆದರೆ ಅವರಲ್ಲಿ ಧರ್ಮಗ್ರಂಥವನ್ನು ಸಂಪೂರ್ಣ ಓದಿರುವವರು ತೀರಾ ಕಡಿಮೆ. ಹಾಗಂತ, ನಿರ್ದಿಷ್ಟ ಧರ್ಮಗಳ ಗುರುತುಗಳು ಬಾಹ್ಯನೋಟಕ್ಕೆ ಅವರಲ್ಲಿ ಗೋಚರವಾಗಬಹುದು. ಗಡ್ಡ, ಟೊಪ್ಪಿ, ನಾಮ, ಅಲ್ಲಾಹು ಅಕ್ಬರ್, ಜೈ ಶ್ರೀರಾಮ್.. ಮುಂತಾದ ಘೋಷಣೆಗಳನ್ನು ಅವರು ಮೊಳಗಿಸುತ್ತಿರಬಹುದು. ಆದರೆ ತಮ್ಮ ಅಕ್ಷರ ಜ್ಞಾನವನ್ನು ಧರ್ಮಗ್ರಂಥಗಳ ಅಧ್ಯಯನಕ್ಕೆ ಅವರು ಬಳಸಿಕೊಂಡಿರುವುದು ತೀರಾ ಅಪರೂಪ. ಕಾನೂರು ಸುಬ್ಬಮ್ಮ ಹೆಗ್ಗಡತಿಯಲ್ಲಿ ಕುವೆಂಪು ಹೀಗೆ ಬರೆದಿದ್ದಾರೆ ಎಂದು ಹೇಳಿದರೆ ಆ ಕಾದಂಬರಿಯನ್ನು ಓದಿ ಅದನ್ನು ದೃಢಪಡಿಸಲು ಮುಂದಾಗುವ ವ್ಯಕ್ತಿ, ಮಂದಿರದಲ್ಲೋ ಮಸೀದಿಯಲ್ಲೋ ತಾನು ಉರ ಹೊಡೆಯುವ ಪದಗಳನ್ನು ಧರ್ಮಗ್ರಂಥದಲ್ಲಿ ಹುಡುಕುವ ಉಮೇದು ತೋರುವುದಿಲ್ಲ. ಭೈರಪ್ಪನವರು ‘ಆವರಣ’ದಲ್ಲೋ ‘ದಾಟು’ವಿನಲ್ಲೋ ಏನು ಹೇಳಿದ್ದಾರೆ ಎಂಬುದನ್ನು ಕುತೂಹಲದಿಂದ ಹುಡುಕುವ ವ್ಯಕ್ತಿಗಳಲ್ಲಿ ಹಿಂದುವೂ ಇರಬಹುದು, ಮುಸ್ಲಿಮನೂ ಇರಬಹುದು. ಅಲ್ಲದೇ, ಅವರು ತಂತಮ್ಮ ಧರ್ಮಗಳನ್ನು ಕರ್ಮಠರಾಗಿ ಅನುಸರಿಸುತ್ತಿರಲೂ ಬಹುದು. ಆದರೆ, ‘ಆವರಣ’ದಲ್ಲಿರುವ ಕುತೂಹಲ ಅವರಿಗೆ ಧರ್ಮಗ್ರಂಥದಲ್ಲಿ ಇರುವುದಿಲ್ಲ. ಅವರು ಧರ್ಮಗ್ರಂಥಗಳ ಬಗ್ಗೆ ಇನ್ನಾರೋ ಹೇಳಿದುದನ್ನು ಅಥವಾ ಕೇಳಿದುದನ್ನೇ ಸ್ವೀಕರಿಸಿಕೊಂಡು ಬಹುತೇಕ ಬಾರಿ ಅದನ್ನೇ ಪರಮ ಸತ್ಯ ಎಂದು ನಂಬಿಕೊಂಡೇ ಬದುಕುತ್ತಾರೆ. ಬಹುಶಃ ಅಕ್ಷರಸ್ಥರ ಇಂಥ ದೌರ್ಬಲ್ಯಗಳೇ ಕೋಮು ಸಂಘರ್ಷಗಳಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಅಷ್ಟಕ್ಕೂ,
        ಧರ್ಮಗ್ರಂಥವನ್ನು ಓದಿ ತಿಳಿದುಕೊಳ್ಳುವುದಕ್ಕೂ ಯಾರೋ ಹೇಳಿದುದನ್ನು ನಂಬಿ ಬದುಕುವುದಕ್ಕೂ ವ್ಯತ್ಯಾಸ ಇದೆ. ಬೊಳುವಾರು ಮುಹಮ್ಮದ್ ಕುಂಞಯವರ ‘ಓದಿರಿ’ ಕಾದಂಬರಿಯನ್ನು ಓದಿ ತಿಳಿಯುವುದಕ್ಕೂ ಆ ಕಾದಂಬರಿಯ ಬಗ್ಗೆ ಯಾರೋ ಹೇಳಿದುದನ್ನು ಕೇಳಿ ತನ್ನೊಳಗೆ ಅಭಿಪ್ರಾಯ ರೂಪಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಭಾರತೀಯ ಅಕ್ಷರಸ್ಥನ ದೊಡ್ಡ ಸಮಸ್ಯೆಯೇನೆಂದರೆ, ಧರ್ಮಗ್ರಂಥಗಳ ಕುರಿತಂತೆ ಓದುವುದನ್ನು ಹೊರತುಪಡಿಸಿ ಉಳಿದೆಲ್ಲ ವದಂತಿಗಳನ್ನು ಅಕ್ಷರಶಃ ನಂಬುವುದು. ಇಸ್ಲಾಮ್ ಹಾಗೆ, ಹೀಗೆ ಎಂದು ಯಾರಾದರೂ ಭಾಷಣ ಮಾಡಿದರೆ ಅಥವಾ ಬರೆದರೆ ಅದನ್ನು ದೃಢಪಡಿಸಿಕೊಳ್ಳುವ ಬದಲು ‘ಆಗಿರಬಹುದು’ ಎಂದು ಅಂದುಕೊಳ್ಳುವುದು. ಭಗವದ್ಗೀತೆಗೂ ಇದೇ ಮಾತನ್ನು ಅನ್ವಯಿಸಬಹುದು. ಮುಸ್ಲಿಮರೆಂದರೆ ಅಷ್ಟು ಕೆಟ್ಟವರು, ಹಿಂದೂಗಳೆಂದರೆ ಇಷ್ಟು ಕೆಟ್ಟವರು, ಮುಸ್ಲಿಮರ ಆಹಾರ ಕ್ರಮ ಹಿಂದೂ ವಿರೋಧಿ, ಅವರ ವೇಷ ಹಿಂದೂ ವಿರೋಧಿ, ಅವರ ನೋಟ ವಿರೋಧಿ, ಸಹವಾಸ ವಿರೋಧಿ, ಅವರ ಅಸ್ತಿತ್ವ ಹಿಂದೂ ವಿರೋಧಿ.. ಹೀಗೆ ಹೇಳುತ್ತಾ ಹೋಗುವುದು ಮತ್ತು ಅದನ್ನು ದೃಢಪಡಿಸುವುದಕ್ಕೆ ಯಾವ್ಯಾವುದೋ ಉದಾಹರಣೆಗಳನ್ನು ಕೊಡುವುದು. ಹಾಗಂತ, ಇಂಥ ಉದಾಹರಣೆಗಳಿಗೂ ಇಸ್ಲಾಮ್ ಧರ್ಮಕ್ಕೂ ಏನು ಸಂಬಂಧವಿದೆ, ಧರ್ಮಗ್ರಂಥದ ಭಾಗವೇ ಈ ಉದಾಹರಣೆ ಎಂದು ಪರಿಶೀಲಿಸುವುದಕ್ಕೆ ಬಹುತೇಕ ಯಾರೂ ಹೋಗುವುದೇ ಇಲ್ಲ. ನಿಜವಾಗಿ, ಸಂಘರ್ಷವನ್ನು ಹುಟ್ಟು ಹಾಕುವುದಕ್ಕೆ ಇಲ್ಲಿಯ ವರೆಗೆ ನೆರವಾಗಿರುವುದು ಇಂಥ ಸಂಗತಿಗಳೇ. ಬರೇ ಆಲಿಸುವವರನ್ನು ಆಟವಾಡಿಸುವುದು ಕಷ್ಟವೇನೂ ಅಲ್ಲ. ಮಸೀದಿಯ ಬಾಗಿಲಲ್ಲಿ ಹಂದಿಯ ತಲೆಯನ್ನು ಹಾಕಲಾಗಿದೆ ಅಥವಾ ಮಂದಿರದ ಬಾಗಿಲಲ್ಲಿ ದನದ ತಲೆಯನ್ನು ಎಸೆಯಲಾಗಿದೆ ಎಂಬ ಸುದ್ದಿಯನ್ನು ಆಲಿಸಿದ ತಕ್ಷಣ ವ್ಯಕ್ತಿ ನಿಂತಲ್ಲಿಯೇ ಉದ್ರಿಕ್ತನಾಗುತ್ತಾನೆ. ಹಾಗಂತ, ಆತ ಹಂದಿಯ ಅಥವಾ ದನದ ತಲೆಯನ್ನು ಮಸೀದಿ-ಮಂದಿರಗಳ ಬಾಗಿಲಲ್ಲಿ ಸ್ವತಃ ನೋಡಿರುವುದೂ ಇಲ್ಲ ಅಥವಾ ಅಂಥ ಸುದ್ದಿಗಳನ್ನು ಆಲಿಸಿದ ತಕ್ಷಣ ಏನು ಮಾಡಬೇಕು ಮತ್ತು ಯಾವ ಪ್ರತಿಕ್ರಿಯೆಯನ್ನು ತೋರಬೇಕು, ಉದ್ರಿಕ್ತಗೊಳ್ಳುವುದು ಅದಕ್ಕೆ ಉತ್ತರವೇ ಎಂಬುದನ್ನು ಧರ್ಮಗ್ರಂಥಗಳ ಆಧಾರದಲ್ಲಿ ಮನನ ಮಾಡಿಕೊಂಡಿರುವುದೂ ಇಲ್ಲ. ಇದು ಆಡಿಸುವವರಿಗೆ ಚೆನ್ನಾಗಿ ಗೊತ್ತು. ಆದ್ದರಿಂದಲೇ ಇವರು ವೇದಿಕೆಯೇರಿ ಅದ್ಭುತ ಡಯಲಾಗ್‍ಗಳನ್ನು ಹೊಡೆಯುತ್ತಾರೆ. ಮಂದಿರದ ಮೇಲಾದ ಅಪವಿತ್ರತೆಯ ಬಗ್ಗೆ ಭಾವನಾತ್ಮಕವಾಗಿ ವಾದ ಮಂಡಿಸುತ್ತಾರೆ. ಗೋವುಗಳ ಬಗ್ಗೆ, ಜನಸಂಖ್ಯೆಯ ಬಗ್ಗೆ, ಮತಾಂತರದ ಬಗ್ಗೆ, ಭಯೋತ್ಪಾದನೆಯ ಬಗ್ಗೆ, ಆಹಾರ-ಉಡುಪು.. ಎಲ್ಲವುಗಳ ಬಗ್ಗೆಯೂ ಅತ್ಯಂತ ಉದ್ರಿಕ್ತವಾಗಿ ಮಾತಾಡುತ್ತಾರೆ. ವೇದಿಕೆಯ ಕೆಳಗಂತೂ ಈ ಮಾತುಗಳು ವಿಪರೀತ ಮಟ್ಟದಲ್ಲಿರುತ್ತವೆ. ಒಂದು ವೇಳೆ, ‘ಇಂಥ ಮಾತುಗಳೆಲ್ಲ ನಿಜವೇ, ದನದ ತಲೆ ಮಂದಿರದ ಬಾಗಿಲಲ್ಲಿ ಕಾಣಿಸಿಕೊಂಡರೆ ಮುಸ್ಲಿಮ್ ಏರಿಯಾಗಳಿಗೆ ಕೊಳ್ಳಿಯಿಡಬೇಕೆಂದು ಹಿಂದೂ ಧರ್ಮ ಆದೇಶಿಸುತ್ತದೆಯೇ..’ ಎಂದು ಆಲಿಸುವವರು ಆಲೋಚಿಸಲು ತೊಡಗಿದರೆಂದಿಟ್ಟುಕೊಳ್ಳಿ. ಅಥವಾ ದನದ ತಲೆ ಮಸೀದಿಯ ವಠಾರದಲ್ಲಿ ಕಾಣಿಸಿಕೊಂಡುದುದಕ್ಕೆ ಏನು ಪ್ರತಿಕ್ರಿಯೆ ವ್ಯಕ್ತಪಡಿಸಬೇಕು ಎಂಬುದಾಗಿ ಧರ್ಮಗ್ರಂಥಗಳ ಹಿನ್ನೆಲೆ ಮತ್ತು ಐತಿಹಾಸಿಕ ಪುರಾವೆಗಳ ಆಧಾರದಲ್ಲಿ ಪರಿಶೀಲಿಸುತ್ತಾರೆಂದಿಟ್ಟುಕೊಳ್ಳಿ. ಪರಿಣಾಮ ಏನಿರಬಹುದು? ಮಂದಿರದಲ್ಲಿ ದನದ ತಲೆ ಕಂಡುಬಂದರೆ ಅದಕ್ಕೆ ಮುಸ್ಲಿಮರೇ ಕಾರಣರಾಗಬೇಕೆಂದೇನೂ ಇಲ್ಲವಲ್ಲ. ಹಾಗೆಯೇ ಮಸೀದಿಯಲ್ಲಿ ಕಂಡುಬಂದ ಹಂದಿ ತಲೆಗೆ ಹಿಂದೂಗಳೇ ಕಾರಣ ರಾಗಬೇಕೆಂದೇನೂ ಇಲ್ಲ. ಇವೆರಡೇ ಅಲ್ಲ, ವೇದಿಕೆಯೇರಿಯೋ ಗುಪ್ತ ಸಭೆ ನಡೆಸಿಯೋ ಹೇಳುವ ಪ್ರತಿ ಉದ್ರಿಕ್ತ ವಿಚಾರಗಳ ಹಿಂದಿನ ಅಸಲಿಯತ್ತನ್ನು ಆಲಿಸುವವರು ಕೆದಕುತ್ತಾ ಹೋಗತೊಡಗಿದರೆ, ಆಡಿಸುವವರು ಬೆತ್ತಲುಗೊಳ್ಳುತ್ತಲೇ ಹೋಗಬೇಕಾಗುತ್ತದೆ. ಅಷ್ಟಕ್ಕೂ, ಹಾಗೆ ಅವರ ಮಾತುಗಳನ್ನು ಆಲಿಸುವಾಗ ಆಲಿಸುವವ ಗುಂಡಿ ಬಿದ್ದ ರಸ್ತೆಯಲ್ಲಿ ಹಲವು ಕಿಲೋವಿೂಟರ್ ನಡೆದು ಆ ಸಭೆಗೆ ಬಂದಿರುತ್ತಾನೆ/ಳೆ. ನಳ್ಳಿಯಲ್ಲಿ ವಾರಕ್ಕೆರಡು ಬಾರಿ ನೀರೂ ಉಳಿದ ದಿನಗಳಲ್ಲಿ ಬರೇ ವಾಯುವೂ ಬರುತ್ತಿರುವುದಕ್ಕೆ ತೀವ್ರ ನೊಂದಿರುತ್ತಾನೆ. ರೇಶನ್ ಕಾರ್ಡ್‍ಗಾಗಿ ಸರತಿ ಸಾಲು ನಿಂತೂ ನಿಂತೂ ಸುಸ್ತಾಗಿರುತ್ತಾನೆ. ಪದವಿ ಸರ್ಟಿಫಿಕೇಟ್ ಇದ್ದೂ ವರ್ಷಗಳಿಂದ ನಿರುದ್ಯೋಗಿಯಾಗಿರುತ್ತಾನೆ. ಬೆಲೆಯೇರಿಕೆಯ ಬಿಸಿಯಿಂದ ಕಂಗಾಲಾಗಿರುತ್ತಾನೆ. ಹಾಸಿಗೆ ಸೇರಿರುವ ಹೆತ್ತವರು, ಮದುವೆಗೆ ನಿಂತಿರುವ ಸಹೋದರಿಯರು, ದುಬಾರಿಯಾಗಿರುವ ಶಿಕ್ಷಣ, ಆಹಾರ ವಸ್ತುಗಳು.. ಎಲ್ಲದರಿಂದಲೂ ಸಂತ್ರಸ್ತನಾಗಿರುತ್ತಾನೆ/ಳೆ. ಒಂದು ವೇಳೆ, ಉದ್ರಿಕ್ತ ಮಾತುಗಾರರನ್ನು ಈ ಆಲಿಸುವವರು ತಿರುಗಿ ಪ್ರಶ್ನಿಸಿದರೆ ಏನಾದೀತು? ಪ್ರಾಣಿಗಳ ತಲೆ, ಮಂದಿರ-ಮಸೀದಿ, ಜನಸಂಖ್ಯೆ, ಮತಾಂತರಗಳಿಂದ ಭಾವುಕ ಗೊಳಿಸುವವನಲ್ಲಿ, ತಮ್ಮೂರಿನ ರಸ್ತೆ, ನೀರು, ನಿರುದ್ಯೋಗ, ಬಡತನಗಳ ಬಗ್ಗೆ ಮಾತಾಡಿ ಎಂದು ಸೂಚಿಸಿದರೆ ಹೇಗಾದೀತು? ಆಲಿಸುವವ ಇಷ್ಟು ಮಾಡಿದರೆ ಸಾಕು ಆಡಿಸುವವರ ಆವೇಶ ಇಳಿಯತೊಡಗುತ್ತವೆ ಮಾತ್ರವಲ್ಲ ಸಮಾಜದ  ಅಚ್ಚೇ ದಿನಗಳು ಆರಂಭವಾಗತೊಡಗುತ್ತವೆ. ಆದ್ದರಿಂದ, ಆಲಿಸುವವರು ಆಲೋಚಿಸಲು ಪ್ರಾರಂಭಿಸಲಿ. ಜೊತೆಗೇ,
        ಜಲೀಲ್ ಮುಕ್ರಿಯವರ ಮೇಲಿನ ನಾಲ್ಕು ಸಾಲುಗಳು ನಾಲ್ಕು ದಿಕ್ಕುಗಳಿಗೂ ಹರಡಲಿ.

Tuesday, November 17, 2015

ಸರಕಾರಿ ಕಾರ್ಯಕ್ರಮವನ್ನು ಬೀದಿಗೆ ತರುವ ಅಗತ್ಯ ಏನಿತ್ತು ಹೇಳಿ?

ಮಸೀದಿ ಮಿನಾರದಲ್ಲಿ
ಗೂಡು ಕಟ್ಟಿದ ಪಾರಿವಾಳ
ಮಂದಿರದಲ್ಲಿ ಧಾನ್ಯ ಕಾಳು
ಹೆಕ್ಕಿ ತಿನ್ನುತ್ತಿತ್ತು.

ಮುಸ್ಲಿಮರು ತಿಂದು ಬಿಸಾಡಿದ
ಮಾಂಸದ ಎಲುಬನ್ನು ತಿಂದ ಬೆಕ್ಕು
ದೇಗುಲ ಪುರೋಹಿತರು ಕೊಟ್ಟ
ಹಾಲನ್ನು ಕುಡಿಯುತ್ತಿತ್ತು.

ಮಂದಿರದ ಮಹಡಿಯಲ್ಲಿ
ಗೂಡು ಕಟ್ಟಿದ ಗುಬ್ಬಚ್ಚಿ
ಮಸೀದಿಯ ಬಾವಿಯ
ನೀರು ಕುಡಿಯುತ್ತಿತ್ತು.

ಆದರೆ ಇವುಗಳಿಗೆ ಪರಸ್ಪರ
ಸಂಬಂಧ ಇಲ್ಲವೆಂಬಂತೆ
ಮಸೀದಿ-ಮಂದಿರಗಳ ಹೆಸರಲ್ಲಿ
ಕಚ್ಚಾಡುತ್ತಿದ್ದಾನೆ ಮನುಜ
ಪ್ರಾಣಿ-ಪಕ್ಷಿಗಳಿಗಿಲ್ಲದ
ಕೋಮು ಬಣ್ಣವ ಕೊಟ್ಟವರಾರು
ಈ ಮನುಜ ಕುಲಕ್ಕೆ
       ವಾಟ್ಸಪ್‍ನಲ್ಲಿ ಓದಿದ ಹೃದ್ಯ ಸಾಲುಗಳಿವು. ಟಿಪ್ಪು ಸುಲ್ತಾನ್ ಜಯಂತಿಯ ದಿನದಿಂದ ರಾಜ್ಯ ಒಂದು ಬಗೆಯ ಆತಂಕದಲ್ಲಿದೆ. ಸಾವು-ನೋವುಗಳಾಗಿವೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಂತೂ ತೀರಾ ಕಂಗೆಟ್ಟು ಹೋಗಿವೆ. ‘ಅಂಬೇಡ್ಕರ್ ಮತ್ತು ಕನಕ ಜಯಂತಿಗೆ ಒಂದೊಂದು ದಿನ ರಜೆಯಾದರೆ ಟಿಪ್ಪು ಜಯಂತಿಗೆ ಒಂದು ವಾರ ಸರಕಾರಿ ರಜೆ’ ಎಂದು ಜನರು ಹಾಸ್ಯವನ್ನೋ ಅಸಹನೆಯನ್ನೋ ವ್ಯಕ್ತಪಡಿಸುವಷ್ಟು ಜಿಲ್ಲೆ ಹಿಂಸಾಪೀಡಿತವಾಗಿದೆ. ನೇತ್ರಾವತಿ ನದಿ ತಿರುವು ಯೋಜನೆಯನ್ನು ಪ್ರತಿಭಟಿಸಿ  ಸ್ವಾವಿೂಜಿಗಳು, ಮುಸ್ಲಿಮ್ ಧರ್ಮಗುರುಗಳು ಮತ್ತು ಕ್ರೈಸ್ತ ಗುರುಗಳು ಒಟ್ಟಾಗಿ ಕೈಕೈ ಹಿಡಿದು ನಿಂತ ಎರಡ್ಮೂರು ವಾರಗಳೊಳಗೆ ಇಂಥದ್ದೊಂದು ದಿಢೀರ್ ವಿಭಜನೆ ಸಾಧ್ಯವಾದದ್ದು ಹೇಗೆ? ನೇತ್ರಾವತಿ ಯೋಜನೆಯನ್ನು ಖಂಡಿಸಿ ನಡೆಸಲಾದ ಪ್ರತಿಭಟನೆಯಲ್ಲಿ ಸಂಘಪರಿವಾರದವರೂ ಇದ್ದರು. ಮುಸ್ಲಿಮ್ ಸಂಘಟನೆಗಳೂ ಇದ್ದುವು. ಕೇಸರಿ ಶಾಲು ಧರಿಸಿದ ವ್ಯಕ್ತಿಯ ಬಳಿ ಬಿಳಿ ಟೊಪ್ಪಿ ಧರಿಸಿದ ವ್ಯಕ್ತಿ ಕುಳಿತ ದೃಶ್ಯವನ್ನು ಹೆಕ್ಕಿ ಅನೇಕ ಮಂದಿ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡೂ ಇದ್ದರು. ಸೌಹಾರ್ದತೆ, ಅನ್ಯೋನ್ಯತೆಯ ಆ ದೃಶ್ಯಗಳೆಲ್ಲ ಇಷ್ಟು ಬೇಗ ಮಸುಕಾದದ್ದು ಹೇಗೆ ಮತ್ತು ಯಾಕೆ? ನಿಜವಾಗಿ, ಈ ಪ್ರತಿಭಟನೆ, ಹಿಂಸೆಗಳ ಹಿಂದೆ ಇರುವುದು ಹಿಂದೂ ಪ್ರೇಮವೋ, ಟಿಪ್ಪು ವಿರೋಧವೋ, ಟಿಪ್ಪು ಪ್ರೇಮವೋ ಅಥವಾ ಹಿಡನ್ ಅಜೆಂಡಾಗಳೋ? ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದ್ದು ಸರಕಾರ. ಹಾಗಂತ, ಟಿಪ್ಪು ಜಯಂತಿಯನ್ನು ಆಚರಿಸಲೇಬೇಕು ಎಂದು ಮುಸ್ಲಿಮ್ ಸಮಾಜ ಒತ್ತಾಯಿಸಿರುವುದೋ ಅದಕ್ಕಾಗಿ ಪ್ರತಿಭಟನೆ ನಡೆಸಿರು ವುದೋ ಎಲ್ಲೂ ನಡೆದಿಲ್ಲ. ಅದಕ್ಕೆ ಮುಖ್ಯ ಕಾರಣ, ಆತ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ ರಾಜನೇನೂ ಅಲ್ಲ ಎಂಬುದು. ಆತ ಒಂದು ಸಮಾಜದ ಪ್ರತಿನಿಧಿ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಸರ್ವರನ್ನೂ ಒಳಗೊಂಡ ಒಂದು ಸಮಾಜವನ್ನು ಆತ ಆಳಿದ್ದಾನೆ. ಹೀಗಿರುವಾಗ, ಈ ಜಯಂತಿಯ ಆಚರಣೆ ಹೇಗಿರಬೇಕಿತ್ತು? ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಾಗಿ ಘೋಷಿಸಿದಾಗ ಸಮಾಜ ಹೇಗೆ ಪ್ರತಿಕ್ರಿಯಿಸಬೇಕಿತ್ತು? ದುರಂತ ಏನೆಂದರೆ, ತೀರಾ ಸರಕಾರಿ ಕಾರ್ಯಕ್ರಮವಾಗಿ ಮುಗಿಯಬೇಕಾದ ಒಂದು ಆಚರಣೆಗೆ ಹಿಂದೂ ಮತ್ತು ಮುಸ್ಲಿಮರು ಧರ್ಮದ ಬಣ್ಣ ಬಳಿದರು. ಹಿಂದೂಗಳ ಒಂದು ಗುಂಪು ಟಿಪ್ಪು ಜಯಂತಿಯನ್ನು ವಿರೋಧಿಸಿದಾಗ ಮುಸ್ಲಿಮರು ಟಿಪ್ಪು ಆಚರಣೆಯಲ್ಲಿ ವಿಶೇಷ ಆಸಕ್ತಿಯನ್ನು ತೋರಿಸಿದರು. ಟಿಪ್ಪು ವ್ಯಕ್ತಿತ್ವವನ್ನು ವೈಭವೀಕರಿಸಿದರು. ಅತಿರಂಜಿತ ಕತೆಗಳೂ ಹುಟ್ಟಿ ಕೊಂಡವು. ನಿಜವಾಗಿ, ಸರಕಾರಕ್ಕೆ ಟಿಪ್ಪುವಿನ ಮೇಲೆ ಗೌರವ ಇದ್ದಿದ್ದೇ ಆಗಿದ್ದರೆ ಅದು ಜಯಂತಿ ಆಚರಣೆಯ ಹೊಣೆಯನ್ನು ರಾಜ್ಯ ಅಲ್ಪಸಂಖ್ಯಾತ ಇಲಾಖೆಗೆ ವಹಿಸಿಬಿಡುವ ಬದಲು ಸ್ವಯಂ ತಾನೇ ವಹಿಸಿಕೊಳ್ಳಬೇಕಿತ್ತು. ಅಷ್ಟಕ್ಕೂ, ಸರಕಾರ ಎಡವಿತೆಂದೇ ಇಟ್ಟುಕೊಳ್ಳೋಣ. ಆ ತಪ್ಪನ್ನು ಮುಂದುವರಿಸುವ ಅಗತ್ಯ ಮುಸ್ಲಿಮ ರಿಗೇನಿತ್ತು? ತೀರಾ ಸರಕಾರಿ ಕಾರ್ಯಕ್ರಮವನ್ನು ಮುಸ್ಲಿಮರ ಕಾರ್ಯಕ್ರಮವಾಗಿ ಪ್ರತ್ಯೇಕವಾಗಿ ಆಚರಿಸುವ ಅಗತ್ಯವೇನಿತ್ತು? ಟಿಪ್ಪು ಸುಲ್ತಾನ್ ಹೋರಾಡಿದ್ದು ಬ್ರಿಟಿಷರ ವಿರುದ್ಧ. ಸಾಮ್ರಾಜ್ಯ ವಿಸ್ತರಣೆಗಾಗಿಯೋ ಅಥವಾ ಅಧಿಕಾರದ ಉಳಿವಿಗಾಗಿಯೋ ಆತ ಹಿಂದೂ, ಮುಸ್ಲಿಮ್, ಕ್ರೈಸ್ತ ಸಹಿತ ಎಲ್ಲರ ಮೇಲೂ ಕ್ರಮ ಕೈಗೊಂಡಿದ್ದಾನೆ. ಆ ಕ್ರಮ ಧರ್ಮಾತೀತವಾಗಿತ್ತು. ಮುಸ್ಲಿಮರ ಮೊಹರಂ ಮೆರವಣಿಗೆ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನೂ ಆತ ನಿಷೇಧಿಸಿದ್ದ. ಓರ್ವ ರಾಜನೆಂಬ ನೆಲೆಯಲ್ಲಿ ಆತ ತನ್ನ ಇತಿ-ಮಿತಿಯೊಳಗೆ ಕೆಲಸ ಮಾಡಿದ್ದಾನೆ. ಇವು ಮತ್ತು ಇಂಥ ಇನ್ನಿತರ ಸಂಗತಿಗಳನ್ನು ಸಮಾಜದ ಮುಂದಿಡುವುದಕ್ಕೆ ಮುಸ್ಲಿಮರು ಪ್ರತ್ಯೇಕ ಸಭೆಗಳನ್ನು ಆಯೋಜಿಸಬೇಕಿತ್ತೇ? ಟಿಪ್ಪು ಸುಲ್ತಾನನ ವಿರುದ್ಧ ಕೇಳಿ ಬರುತ್ತಿರುವ ಆರೋಪಗಳಿಗೆ ಸೂಕ್ತ ಉತ್ತರ ಕೊಡಬೇಕಾದ ಕರ್ತವ್ಯ ಸರಕಾರದ್ದು. ಯಾಕೆಂದರೆ, ಜಯಂತಿ ಘೋಷಣೆ ಮಾಡಿದ್ದು ಸರಕಾರವೇ ಹೊರತು ಮೌಲ್ವಿಗಳೂ ಅಲ್ಲ, ಮುಸ್ಲಿಮರ ಧಾರ್ಮಿಕ ಕೇಂದ್ರಗಳೂ ಅಲ್ಲ. ಆದ್ದರಿಂದ, ಸರಕಾರ ಆರೋಪಗಳಿಗೆ ಸೂಕ್ತ ಪ್ರತಿ ಉತ್ತರಗಳನ್ನು ಕೊಟ್ಟು ತನ್ನನ್ನು ಸಮರ್ಥಿಸಿಕೊಳ್ಳಬೇಕಿತ್ತು. ಒಂದು ವೇಳೆ ಟಿಪ್ಪು ಕುರಿತಾದ ಚರ್ಚೆಯು ಸರಕಾರ ಮತ್ತು ಸಂಘ ಪರಿವಾರ ಎಂದು ಎರಡಾಗಿ ವಿಭಜನೆಗೊಳ್ಳುತ್ತಿದ್ದರೆ ಒಟ್ಟು ವಾತಾವರಣ ಹೇಗಿರುತ್ತಿತ್ತು? ನಿಜವಾಗಿ, ಈ ಇಡೀ ಜಯಂತಿಯಲ್ಲಿ ಮುಸ್ಲಿಮರು ಪಾಲುಗೊಳ್ಳಲೇ ಬೇಕೆಂಬುದು ಸಂಘಪರಿವಾರದ ಬಯಕೆ. ಯಾಕೆಂದರೆ, ಈ ಜಯಂತಿಯನ್ನು ಸರಕಾರ v/s ಸಂಘಪರಿವಾರ ಎಂದು ವಿಭಜಿಸುವುದರಿಂದ ಲಾಭ ಕಡಿಮೆ. ಜನರೂ ಆಸಕ್ತಿ ತೋರುವುದಿಲ್ಲ. ಅಲ್ಲದೇ, ಈ ವಿಷಯವನ್ನು ಹೆಚ್ಚು ದಿನ ಚಾಲ್ತಿಯಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯವೂ ಇಲ್ಲ. ಅದು ಬಿಟ್ಟು ಮುಸ್ಲಿಮರು ಈ ಆಚರಣೆಯಲ್ಲಿ ವಿಶೇಷ ಆಸಕ್ತಿಯಿಂದ ಭಾಗಿಯಾದರೆ ಮತ್ತು ಮೆರವಣಿಗೆ ಹಾಗೂ ಕಾರ್ಯಕ್ರಮಗಳನ್ನು ಪ್ರತ್ಯೇಕವಾಗಿ ಆಯೋಜಿಸಿದರೆ, ಅದರಿಂದ ಇಡೀ ಜಯಂತಿಯ ಬಣ್ಣವನ್ನೇ ಬದಲಾಯಿಸಬಹುದು. ಆ ಬಳಿಕ ಸರಕಾರ v/s ಸಂಘಪರಿವಾರ ಎಂಬುದು ಸಂಘಪರಿವಾರ v/s ಮುಸ್ಲಿಮರು ಎಂಬುದಾಗಿ ವಿಭಜನೆಗೊಳಗಾಗುತ್ತದೆ. ಹಾಗೇನಾದರೂ ಆಗಿಬಿಟ್ಟರೆ, ಆ ಬಳಿಕ ರಾಜ್ಯದಾದ್ಯಂತ ಟಿಪ್ಪುವಿನ ನೆಪದಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಪ್ರತಿಭಟನೆ ಕೈಗೊಳ್ಳಬಹುದು. ಹಿಂದೂಗಳನ್ನು ಭಾವನಾತ್ಮಕವಾಗಿ ಕಾಡಬಹುದು. ದೇವಸ್ಥಾನವನ್ನು ಧ್ವಂಸಗೊಳಿಸಿದ, ಮತಾಂತರ ಮಾಡಿದ ವ್ಯಕ್ತಿಯನ್ನು ಮುಸ್ಲಿಮರಿಗಾಗಿ ಸರಕಾರ ಓಲೈಕೆ ಮಾಡುತ್ತಿದೆ ಎಂದು ವ್ಯಾಖ್ಯಾನಿಸಬಹುದು. ಬೀದಿಗಿಳಿದಿರುವ ಮುಸ್ಲಿಮರನ್ನು ಮತ್ತು ಅವರ ವಿಪರೀತ ಪ್ರೀತಿಯನ್ನು ಅದಕ್ಕೆ ಪೂರಕವಾಗಿ ಬೊಟ್ಟು ಮಾಡಬಹುದು. ಬಹುಶಃ, ಒಂದು ಹಂತದ ವರೆಗೆ ಸಂಘಪರಿವಾರದ ಈ ಉದ್ದೇಶ ಖಂಡಿತ ಈಡೇರಿದೆ. ಬಿಹಾರದ ಚುನಾವಣೆಯಲ್ಲಿ ಬಿಜೆಪಿಗಾದ ಪರಾಜಯವನ್ನು ರಾಜ್ಯದ ಮಾಧ್ಯಮಗಳು ಚರ್ಚಿಸದಂತೆ ನೋಡಿಕೊಳ್ಳುವಲ್ಲಿಯೂ ಅದು ಯಶಸ್ವಿಯಾಗಿದೆ.
      ಅಷ್ಟಕ್ಕೂ, 200 ವರ್ಷಗಳ ಹಿಂದೆ ಹುಟ್ಟಿ ಮರೆಯಾದ ಓರ್ವ ರಾಜನ ಹೆಸರಲ್ಲಿ ಒಂದು ಸಮಾಜ ಕಿತ್ತಾಡಿಕೊಳ್ಳುತ್ತದೆಂದರೆ ಅದಕ್ಕೆ ಏನೆನ್ನಬೇಕು? ಟಿಪ್ಪು ಸುಲ್ತಾನ್ 200 ವರ್ಷಗಳ ಹಿಂದೆ ಯಾವ ತಪ್ಪುಗಳನ್ನು ಮಾಡಿದ್ದನೋ ಅದಕ್ಕಾಗಿ ಶಿಕ್ಷೆ ಕೊಡುವುದು ಇವತ್ತು ಸಾಧ್ಯವಿಲ್ಲ. ಆತ 200 ವರ್ಷಗಳ ಹಿಂದೆ ಏನೆಲ್ಲ ಒಳಿತು ಮಾಡಿದ್ದನೋ ಅದನ್ನು ಗೌರವಿಸಿ ಇವತ್ತು ಹೂ ಮಾಲೆ ಹಾಕುವುದಕ್ಕೂ ಸಾಧ್ಯವಿಲ್ಲ. ‘ಕನಿಷ್ಠ ಇದುವೇ ಅಂತಿಮ ಸತ್ಯ’ ಎಂದು ಯಾವ ರಾಜನ ಕುರಿತೂ ಹೇಳುವಂತಿಲ್ಲ ಎಂಬುದು ಆತನನ್ನು ವೈಭವೀಕರಿಸುತ್ತಿರುವವರಿಗೂ ತುಚ್ಛೀಕರಿಸುತ್ತಿರುವವರಿಗೂ ಖಂಡಿತ ಗೊತ್ತು. ಇಷ್ಟಿದ್ದೂ ಸಮಾಜದ ವಿಭಜನೆಗೆ ಓರ್ವ ರಾಜನನ್ನು ನೆಪ ಮಾಡಿಕೊಳ್ಳುತ್ತಾರೆಂದಾದರೆ ಆ ವಿಭಜಕರಲ್ಲಿ ಸ್ವಾರ್ಥ ಉದ್ದೇಶಗಳಿವೆ ಎಂಬುದು ಸ್ಪಷ್ಟ. ಟಿಪ್ಪುವಿನ ಹೆಸರಲ್ಲಿ ಅಲ್ಲಲ್ಲಿ ಇರಿತಕ್ಕೊಳಗಾದವರಿಗೆ ಮತ್ತು ಮೃತಪಟ್ಟವರಿಗೆ ಇದು ಗೊತ್ತಿದೆಯೋ ಇಲ್ಲವೋ ಆದರೆ ಇರಿಯಲು ಕತ್ತಿ ಕೊಟ್ಟವರಿಗೆ ಮತ್ತು ಪ್ರಚೋದನಕಾರಿ ಭಾಷಣಗಳನ್ನು ಬಿಗಿಯುವವರಿಗೆ ಇದು ಖಂಡಿತ ಗೊತ್ತು. ಇಲ್ಲಿ ಟಿಪ್ಪು ಒಂದು ನೆಪ ಮಾತ್ರ. ನಾಳೆ ಶಿವಾಜಿಯೂ ಇದಕ್ಕೆ ಬಳಕೆಯಾಗಬಹುದು. ಅಬ್ದುಲ್ ಕಲಾಮ್‍ರು, ಮುಹಮ್ಮದ್ ಅಲಿ, ಸಾವರ್ಕರ್ ಎಲ್ಲರನ್ನೂ ಇದಕ್ಕೆ ಬಳಸಿಕೊಳ್ಳಬಹುದು. ಅಂದಹಾಗೆ, ಈ ರಾಜ್ಯದ ಅನೇಕ ಕಡೆ ಈಗಾಗಲೇ ಬಡಪಾಯಿ ಮೈದಾನಗಳು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿವೆ. ಕ್ರಿಕೆಟ್ ತಂಡಗಳು ಹಿಂದೂ-ಮುಸ್ಲಿಮ್ ಆಗಿವೆ. ಶಾಲೆಗಳೊಳಗೂ ಇಂಥ ವಿಭಜನೆಗಳು ನಡೆಯುತ್ತಿವೆ. ಮಾರುಕಟ್ಟೆಯಲ್ಲಿ, ಬಸ್ ನಿಲ್ದಾಣಗಳಲ್ಲಿ, ಶಾಲಾ ಕ್ಯಾಂಪಸ್‍ಗಳಲ್ಲಿ.. ಯಾರು ಯಾರೊಂದಿಗೆ ಮಾತಾಡಬೇಕು ಎಂಬುದು ಅಲಿಖಿತವಾಗಿ ನಿರ್ಧಾರವಾಗಿಬಿಟ್ಟಿದೆ. ಹಿಂದೂ ಅಂದರೆ ನಾಮ, ಕೇಸರಿ ಬಟ್ಟೆ, ಮತ್ತು ಕೈಗೆ ಕೇಸರಿ ರಿಬ್ಬನ್ ತೊಟ್ಟವ ಎಂಬ ವಾತಾವರಣ ಸೃಷ್ಟಿಯಾಗಿರುವಂತೆಯೇ ಮುಸ್ಲಿಮ್ ಅಂದರೆ ಟೊಪ್ಪಿ, ಗಡ್ಡ, ಪೈಜಾಮ ಧರಿಸಿರುವವ ಎಂಬ ಭಾವನೆಯು ವ್ಯಾಪಕವಾಗುತ್ತಿದೆ. ಈ ವೇಶದಲ್ಲಿ ಹಿಂದೂ ಅಥವಾ ಮುಸ್ಲಿಮ್ ಕಾಣಿಸಿಕೊಂಡರೆ ಆತ ನಿಷ್ಠಾವಂತ ಎಂದೂ ಭಾವಿಸಲಾಗುತ್ತದೆ. ಅಂಥವರನ್ನು ತುಸು ಭಯದಿಂದ ನೋಡಬೇಕಾಗುತ್ತದೆ. ಯುವಕ ಮತ್ತು ಯುವತಿ ಕಾಲೇಜಿನ ಸಹಪಾಠಿಗಳಾದರೂ ಅವರನ್ನು ಕಂಡ ಕೂಡಲೇ ಇವರ ಮಾತು ಅಚಾನಕ್ಕಾಗಿ ನಿಂತು ಹೋಗುತ್ತದೆ. ಅಕ್ಕಪಕ್ಕದ ಮನೆಯವರಾಗಿದ್ದರೂ ಬಸ್ಸಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಳ್ಳುವುದಕ್ಕೆ ಭಯ ಆಗುತ್ತದೆ. ಎಲ್ಲಿ ಹಲ್ಲೆ ನಡೆಯುತ್ತದೋ ಎಂಬ ಭೀತಿಯಿಂದ ಪರಸ್ಪರ ಪರಿಚಯ ಇದ್ದರೂ ಗೆಳೆಯರಾಗಿದ್ದರೂ ಸಹಪಾಠಿಗಳಾಗಿದ್ದರೂ ಅಪರಿಚಿತರಂತೆ ಮತ್ತು ಪರಮ ವೈರಿಗಳಂತೆ ಬಿಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಒದಗಿ ಬರುತ್ತದೆ. ನಿಜವಾಗಿ, ಕೇಸರಿ ಬಟ್ಟೆ, ರಿಬ್ಬನ್, ನಾಮ ಹಾಕಿದವರನ್ನು ಅಥವಾ ಟೊಪ್ಪಿ, ಗಡ್ಡ, ಪೈಜಾಮ ಧರಿಸಿದವರನ್ನು ಕಂಡು ಹೆಣ್ಣು-ಗಂಡು ಹೆದರಬಾರದಿತ್ತು. ಸಮಾಜ ಅಂತಹವರನ್ನು ಆತಂಕದಿಂದ ನೋಡಬಾರದಿತ್ತು. ಯಾಕೆಂದರೆ, ಒಂದು ಹಂತದವರೆಗೆ ಅದು ಧರ್ಮವೊಂದರ ಸಂಕೇತ. ಧರ್ಮ ಅಪಾಯಕಾರಿಯಲ್ಲ ಎಂದಾದರೆ ಆ ಚಿಹ್ನೆ ಮತ್ತು ಅದನ್ನು ಧರಿಸಿದವರು ಅಪಾಯಕಾರಿಗಳಾಗಲು ಸಾಧ್ಯವೇ ಇಲ್ಲ. ಅವರು ಸಮಾಜದ ಭರವಸೆಗಳಾಗಬೇಕೇ ಹೊರತು ಬೆದರಿಕೆಯಲ್ಲ. ಅವರನ್ನು ಕಾಣುವಾಗ ಹೆಣ್ಣು-ಗಂಡು, ಗೆಳೆಯ-ಗೆಳತಿ, ಸಹೋದರ-ಸಹೋದರಿ ಎಲ್ಲರಲ್ಲೂ ನೆಮ್ಮದಿಯ ಭಾವ ಉಂಟಾಗಬೇಕು. ಅವರು ತಮ್ಮ ರಕ್ಷಕರು ಎಂಬ ವಾತಾವರಣ ಬೆಳೆಯಬೇಕು. ಆದರೆ ಹಾಗಾಗುತ್ತಿಲ್ಲ ಎಂಬುದೇ ಅವರು ನಿಜ ಧರ್ಮವನ್ನು ಪ್ರತಿನಿಧಿಸುತ್ತಿಲ್ಲ ಎಂಬುದಕ್ಕೆ ಸ್ಪಷ್ಟ ಪುರಾವೆ. ಇಂಥವರನ್ನು ಗುರುತಿಸಿ ಸಮಾಜ ತರಾಟೆಗೆತ್ತಿಕೊಳ್ಳದಿದ್ದರೆ ಟಿಪ್ಪು ಎಂದಲ್ಲ ನಾಳೆ ಬದನೆಕಾಯಿ, ಈರುಳ್ಳಿ, ಲಿಂಬೆಹಣ್ಣು, ಬಂಗುಡೆ ಮೀನು ಎಲ್ಲವೂ  ಸಮಾಜವನ್ನು ವಿಭಜಿಸಬಹುದು.
    ಕವನದ  ಸಾಲುಗಳೇಕೋ ಮತ್ತೆ ಮತ್ತೆ ಕಾಡುತ್ತಿವೆ..

Tuesday, November 10, 2015

ಟಿಪ್ಪು ಯಾರ ವಿರೋಧಿ?

ಪೂರ್ಣಯ್ಯ
ಲಾಲಾ ಮುಹ್ತಾಬ್ ರಾಯ್
ಹರಿಸಿಂಗ್
ನರಸಿಂಹ ರಾವ್
ಶ್ರೀನಿವಾಸ್ ರಾವ್
ಅಪ್ಪಾಜಿ ರಾವ್
ಶ್ರೀಪತಿ ರಾವ್
     ಟಿಪ್ಪು ಸುಲ್ತಾನನು ಮತಾಂಧ, ಕ್ರೂರಿ, ಮತಾಂತರಿ.. ಇತ್ಯಾದಿ ಇತ್ಯಾದಿಗಳೆಲ್ಲ ಆಗಿರುತ್ತಿದ್ದರೆ ಇವರೆಲ್ಲ ತಮ್ಮ ಮೂಲ ಹಿಂದೂ ಗುರುತು ಮತ್ತು ನಂಬಿಕೆಗಳೊಂದಿಗೆ ಆತನ ಬಳಿ ಉನ್ನತ ಸ್ಥಾನದಲ್ಲಿರಲು ಸಾಧ್ಯವಿತ್ತೇ? ದಿವಾನ್ ಕೃಷ್ಣ ರಾವ್ - ವಿತ್ತ ಮಂತ್ರಿ. ಪೂರ್ಣಯ್ಯ- ಕಂದಾಯ ಮಂತ್ರಿ. ಲಾಲಾ ಮುಹ್ತಾಬ್- ಟಿಪ್ಪೂವಿನ ಆಪ್ತ ಕಾರ್ಯದರ್ಶಿ. ರಾಮ್ ರಾವ್ ಮತ್ತು ಶಿವಾಜಿ - ಅಶ್ವ ದಳದ ದಂಡನಾಯಕರು. ಶ್ರೀನಿವಾಸ ರಾವ್, ಮೂಲಚಂದ್  ಮತ್ತು ಅಪ್ಪಾಜಿ ರಾವ್‍ರು ಟಿಪ್ಪುವಿನ ವಿಶೇಷ ರಾಯಭಾರಿಗಳು. ಟಿಪ್ಪುವಿನ ಆಡಳಿತದಲ್ಲಿ ಹಿಂದೂಗಳು ಬಹುಸಂಖ್ಯೆಯಲ್ಲಿ ಅಧಿಕಾರಿಗಳಾಗಿರುವುದನ್ನು ಆತನ ಇತಿಹಾಸವನ್ನು ವಿವರಿಸುವ ಒಂದಕ್ಕಿಂತ ಹೆಚ್ಚು ಕೃತಿಗಳು ಹೀಗೆ ಹೆಸರುಗಳ ಸಮೇತ ಸ್ಪಷ್ಟಪಡಿಸುತ್ತದೆ. ಅಲ್ಲದೇ, ಇದನ್ನು ಆತನ ವಿರೋಧಿಗಳೂ ನಿರಾಕರಿಸುತ್ತಿಲ್ಲ. ಏನು ಹೇಳಬೇಕು ಇದಕ್ಕೆ? ಇವೆಲ್ಲ ಮತಾಂಧ ರಾಜನೊಬ್ಬನ ಎಡವಟ್ಟುಗಳೋ ಅಥವಾ ಆತನಿಗೆ ಮತಾಂಧತೆಯ ಹಣೆಪಟ್ಟಿ ಹಚ್ಚಿದವರ ವೈರುಧ್ಯಗಳೋ? 1791ರಲ್ಲಿ ರಘುನಾಥ್ ರಾವ್ ನೇತೃತ್ವದ ಮರಾಠ ದಾಳಿಕೋರರು ಶೃಂಗೇರಿಯ ಶಾರದಾ ಮಂದಿರಕ್ಕೆ ಹಾನಿ ಮಾಡಿದರು. ಸ್ವರ್ಣ ಪಲ್ಲಕ್ಕಿಯನ್ನು ಹೊತ್ತೊಯ್ದರು. ಶಾರದಾ ದೇವಿಯ ಮೂರ್ತಿಯನ್ನು ಗರ್ಭಗುಡಿಯಿಂದೆತ್ತಿ ಹೊರಗೆಸೆದರು. ಮಂದಿರದ ಮುಖ್ಯ ಗುರುಗಳಾದ ಶ್ರೀ ಶಂಕರಾಚಾರ್ಯರು ದಕ್ಷಿಣ ಕನ್ನಡದ ಕಾರ್ಕಳದಲ್ಲಿ ಆಶ್ರಯ ಪಡೆದರು. ಇಂಥ ಸನ್ನಿವೇಶದಲ್ಲಿ ವಿಗ್ರಹ ಭಂಜಕ ರಾಜನೊಬ್ಬನ ಪ್ರತಿಕ್ರಿಯೆ ಹೇಗಿರುತ್ತಿತ್ತು ಮತ್ತು ಹೇಗಿರಬೇಕಿತ್ತು? ಟಿಪ್ಪು ಹೇಗೆ ಪ್ರತಿಕ್ರಿಯಿಸಿದ? ಆತ ಶಾರದಾ ಮೂರ್ತಿಯನ್ನು ಪುನಃ ಪ್ರತಿಷ್ಠಾಪಿಸಿದನಲ್ಲದೇ ಮೂರ್ತಿಗೆ ಹೊದಿಸಲು ಬೆಲೆಬಾಳುವ ವಸ್ತ್ರ ಮತ್ತು ಶಂಕರಾಚಾರ್ಯರಿಗೆ ಒಂದು ಜೋಡಿ ಶಾಲುಗಳನ್ನು ರವಾನಿಸಿದ. ಮಂದಿರದ ಮೇಲೆ ಮುಂದೆ ನಡೆಯಬಹುದಾದ ಸಂಭಾವ್ಯ ದಾಳಿಯನ್ನು ತಡೆಯುವುದಕ್ಕಾಗಿ ಸೇನೆಯ ಒಂದು ತುಕಡಿಯನ್ನು ಕಾವಲು ನಿಲ್ಲಿಸಿದ. ಆ ಸಂದರ್ಭದಲ್ಲಿ ಶ್ರೀ ಶಂಕರಾಚಾರ್ಯರಿಗೆ ಟಿಪ್ಪು ಬರೆದ ಪತ್ರವನ್ನು ಮೈಸೂರಿನ ಪುರಾತತ್ವ ಇಲಾಖೆಯ ನಿರ್ದೇಶಕ ರಾದ ರಾವ್ ಬಹಾದ್ದೂರ್ ನರಸಿಂಹಾಚಾರ್ಯರು 1916ರಲ್ಲಿ ಶಾರದಾ ಮಂದಿರದಲ್ಲಿ ಪತ್ತೆ ಹಚ್ಚಿದರು. ಅಷ್ಟಕ್ಕೂ, ಟಿಪ್ಪುವಿಗೂ ಹಿಂದೂ ಮಂದಿರಕ್ಕೂ ನಡುವಿನ ಸಂಬಂಧ ಕೇವಲ ಶಾರದಾ ಮಠಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ನಂಜನಗೂಡು ತಾಲೂಕಿನ ಲಕ್ಷ್ಮಿಕಾಂತ್ ಮಂದಿರ ಮತ್ತು ಶ್ರೀ ಕಣ್ವೇಶ್ವರ ಮಂದಿರ, ಮೇಲುಕೋಟೆಯ ನಾರಾಯಣ ಸ್ವಾಮಿ ಮಂದಿರ, ಶ್ರೀರಂಗಪಟ್ಟಣದ ಶ್ರೀ ರಂಗನಾಥ ಮಂದಿರಕ್ಕೂ ಆತ ಸಂದರ್ಭಾನುಸಾರ ನೆರವು ನೀಡಿದ್ದಾನೆ, ಉಡುಗೊರೆಗಳನ್ನು ಕಳುಹಿಸಿಕೊಟ್ಟಿದ್ದಾನೆ. ಕೇರಳದ ಮಲಬಾರನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಯೋಧರು ಅಲ್ಲಿನ ಮಂದಿರವೊಂದಕ್ಕೆ ಹಾನಿ ಮಾಡಿದರು. ಟಿಪ್ಪು ಆ ಯೋಧರನ್ನು ಶಿಕ್ಷಿಸಿದ. ಮಂದಿರವನ್ನು ದುರಸ್ತಿಗೊಳಿಸಿದ. 1780 ರಲ್ಲಿ ಟಿಪ್ಪುವಿನ ತಂದೆ ಹೈದರಲಿಯು ಕಾಂಜಿವರಂನಲ್ಲಿ ಮಂದಿರವೊಂದಕ್ಕೆ ಅಡಿಪಾಯ ಹಾಕಿದ್ದ. 1791ರಲ್ಲಿ ಅಲ್ಲಿಗೆ ಭೇಟಿ ನೀಡಿದ ಟಿಪ್ಪು ಆ ಮಂದಿರವನ್ನು ಪೂರ್ಣಗೊಳಿಸುವುದಕ್ಕಾಗಿ ವ್ಯವಸ್ಥೆ ಮಾಡಿದ. ಅಂದಹಾಗೆ, ಕಲ್ಲಿಕೋಟೆಯ ವೆಂಕಟೇಶ್ವರ ಮಂದಿರಕ್ಕೆ 195 ಹೆಕ್ಟೇರು ಜವಿೂನು ಕೊಟ್ಟದ್ದು ಟಿಪ್ಪುವೇ. ಪೊನ್ನಾನಿಯ ಗುರುವಾಯೂರ್ ಮಂದಿರಕ್ಕೆ 504 ಹೆಕ್ಟೇರು ಜವಿೂನು, ಮಾನೂರು ಮಂದಿರಕ್ಕೆ 73 ಹೆಕ್ಟೇರು, ನಂಬೂದಿರಿ ಪಾಡ್ ಮಂದಿರಕ್ಕೆ 135 ಹೆಕ್ಟೇರು ಜವಿೂನು.. ಮಂಜೂರು ಮಾಡಿರುವುದೂ ಟಿಪ್ಪುವೇ. ಇವೆಲ್ಲ ಟಿಪ್ಪು ವಿರೋಧಿಗಳಿಗೆ ಗೊತ್ತಿಲ್ಲ ಎಂದಲ್ಲ. ಅವರು ಉದ್ದೇಶ ಪೂರ್ವಕವಾಗಿ ಈ ಸತ್ಯವನ್ನು ಅಡಗಿಸುತ್ತಿದ್ದಾರೆ. ಒಂದು ವೇಳೆ, ಟಿಪ್ಪು ದೇಗುಲ ಭಂಜಕನೇ ಆಗಿರುತ್ತಿದ್ದರೆ ಇವತ್ತು ನಮ್ಮ ನಡುವೆ ಇರುವ ಐತಿಹಾಸಿಕ ಮತ್ತು ಪುರಾತನ ದೇಗುಲಗಳ ಪರಿಸ್ಥಿತಿ ಹೇಗಿರುತ್ತಿತ್ತು? ಶ್ರೀರಂಗಪಟ್ಟಣದಲ್ಲಿ ಶ್ರೀ ರಂಗನಾಥನ ದೇಗುಲ ಅಸ್ತಿತ್ವದಲ್ಲಿ ಇರುತ್ತಿತ್ತೇ? ಮೇಲುಕೋಟೆಯಲ್ಲಿ ಚೆಲುವರಾಯ ದೇಗುಲ, ಬೇಲೂರು-ಹಳೆಬೀಡು ಏನಾಗಿರುತ್ತಿತ್ತು? ತನ್ನ ಅರಮನೆಯ ಕೇವಲ ನೂರು ಗಜಗಳ ಅಂತರದಲ್ಲಿದ್ದ ನರಸಿಂಹ ಮತ್ತು ಗಂಗಾಧರ ಮಂದಿರಗಳ ಪರಿಸ್ಥಿತಿ ಏನಾಗಿರುತ್ತಿತ್ತು? ಅಲ್ಲಿಂದ ನಿತ್ಯವೂ ಕೇಳಿ ಬರುತ್ತಿರುವ ಘಂಟೆಯ ನಿನಾದಕ್ಕೆ ಆತ ಏನೆಂದು ಪ್ರತಿಕ್ರಿಯಿಸಬೇಕಿತ್ತು? ಅಷ್ಟಕ್ಕೂ, ಟಿಪ್ಪುವನ್ನು ಹಿಂದೂ ವಿರೋಧಿ, ಮತಾಂಧ.. ಎಂದೆಲ್ಲಾ ಟೀಕಿಸುತ್ತಿರುವವರು ತಮ್ಮ ವಾದಕ್ಕೆ ಆಧಾರವಾಗಿ ನೆಚ್ಚಿಕೊಂಡಿರುವುದಾದರೂ ಯಾರನ್ನು? ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್ ಮುಂತಾದವರನ್ನೇ ಅಲ್ಲವೇ? ಇವರೆಲ್ಲ ಯಾರು? ಇವರ ಹಿನ್ನೆಲೆಯೇನು? ಇವರು ತಮ್ಮ ಗ್ರಂಥದಲ್ಲಿ ಟಿಪ್ಪುವನ್ನು ಮತಾಂಧನಾಗಿ ಚಿತ್ರಿಸಿರುವುದು ನಿಜ. ಆದರೆ, ಇವರಿಗೂ ಬ್ರಿಟಿಷರಿಗೂ ನಡುವೆ ಇರುವ ಸಂಬಂಧವನ್ನೇಕೆ ಯಾರೂ ವಿಶ್ಲೇಷಿಸುತ್ತಿಲ್ಲ? ಭಾರತದಲ್ಲಿ ಬ್ರಿಟಿಷರನ್ನು ಮೊತ್ತಮೊದಲು ಅತ್ಯಂತ ಪ್ರಬಲವಾಗಿ ತನ್ನ ಜೀವನದ ಕೊನೆಯ ತನಕ ಎದುರಿಸಿದವನು ಟಿಪ್ಪು. ಆಂಗ್ಲರಿಗೆ ಸಹಾಯ ಮಾಡದಂತೆ ಮರಾಠರು ಮತ್ತು ನಿಝಾಮರಿಗೆ ತಾನು ಅಧಿಕಾರಕ್ಕೇರಿದ ಕೂಡಲೇ ಪತ್ರ ಬರೆದ. ಕಾಶ್ಮೀರ, ಜೋಧ್‍ಪುರ, ಜೈಪುರ ಮತ್ತು ನೇಪಾಳ ಇತ್ಯಾದಿ ಪ್ರದೇಶಗಳಲ್ಲಿದ್ದ ಹಿಂದೂ ರಾಜರೊಂದಿಗೂ ಆಂಗ್ಲ ವಿರೋಧಿ ಹೋರಾಟದಲ್ಲಿ ಒಗ್ಗೂಡುವಂತೆ ವಿನಂತಿಸಿದ್ದ. ಬ್ರಿಟಿಷರ ವಿರೋಧಿಯಾಗಿದ್ದ ಫ್ರೆಂಚರೊಂದಿಗೆ ಸಹಾಯ ಯಾಚಿಸಿದ್ದ. ಟರ್ಕಿಯ ಸುಲ್ತಾನರಿಂದ ನೆರವು ಕೋರಿದ್ದ. ಇರಾನ್ ಮತ್ತು ಅಫಘಾನಿಸ್ತಾನಗಳಿಗೆ ರಾಯಭಾರಿಗಳನ್ನು ಕಳುಹಿಸಿದ್ದ. ಆದರೆ ಆಂಗ್ಲರ ಸಾಮಂತರಂತಿದ್ದ ಟರ್ಕಿಯ ಸುಲ್ತಾನರು ನೆರವು ನೀಡಲು ನಿರಾಕರಿಸಿದ್ದಷ್ಟೇ ಅಲ್ಲ, ಆಂಗ್ಲರೊಂದಿಗೆ ರಾಜಿ ಮಾಡಿಕೊಂಡು ಫ್ರೆಂಚರಿಂದ ದೂರ ನಿಲ್ಲುವಂತೆ ಸೂಚಿಸಿದರು. ಅಂದಹಾಗೆ, ದೇಶದ ಸುಮಾರು 540 ಪ್ರಾಂತ್ಯಗಳ ರಾಜರುಗಳು ಬ್ರಿಟಿಷರ ಕೈಗೊಂಬೆಗಳಾಗಿ ಕಪ್ಪ ಒಪ್ಪಿಸುತ್ತಿದ್ದ ಸಂದರ್ಭದಲ್ಲಿ ಟಿಪ್ಪು ಇಂಥದ್ದೊಂದು ಪ್ರತಿರೋಧವನ್ನು ಹುಟ್ಟುಹಾಕಿದ್ದ ಅನ್ನುವುದನ್ನೊಮ್ಮೆ ಕಲ್ಪಿಸಿಕೊಳ್ಳಿ? ಟಿಪ್ಪು ಸಾವಿಗೀಡಾದ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧಾರಂಭಕ್ಕಿಂತ ಮೊದಲು ಬ್ರಿಟಿಷರು ಒಂದು ಸಂಧಾನದ ನಾಟಕ ನಡೆಸಿದ್ದರು. ಕರಾರು ಪತ್ರದ ಕರಡು ಪ್ರತಿಯನ್ನು ಟಿಪ್ಪುವಿಗೆ ಕಳುಹಿಸಿಕೊಟ್ಟು ಈ ಒಪ್ಪಂದಕ್ಕೆ ಒಪ್ಪಿದರೆ ಯುದ್ಧ ಇಲ್ಲ ಎಂದು ತಿಳಿಸಿದ್ದರು. ಅದರಲ್ಲಿ, ‘ಟಿಪ್ಪು ತನ್ನ ಸೇನೆಯಲ್ಲಿರುವ ಫ್ರೆಂಚ್ ಯೋಧರು ಮತ್ತು ನೌಕರರನ್ನು ಉಚ್ಛಾಟಿಸಬೇಕು’ ಎಂಬುದೂ ಸೇರಿತ್ತು. ಅಲ್ಲದೇ, ಟಿಪ್ಪುವಿನ ಆಪ್ತ ಮಿತ್ರರೂ ಇದೇ ಸಲಹೆಯನ್ನು ನೀಡಿದ್ದರು. ಆದರೆ ಟಿಪ್ಪು ಒಪ್ಪಿಕೊಳ್ಳಲಿಲ್ಲ. ಹೀಗೆ ತಮ್ಮ ಶರತ್ತನ್ನು ಒಪ್ಪಿಕೊಳ್ಳದಿದ್ದುದನ್ನೇ ನೆಪ ಮಾಡಿಕೊಂಡು ಬ್ರಿಟಿಷರು ಟಿಪ್ಪುವಿನ ವಿರುದ್ಧ ಯುದ್ಧ ಸಾರಿ ಅಂತಿಮವಾಗಿ ಹತ್ಯೆಗೈದರು. ಒಂದು ರೀತಿಯಲ್ಲಿ, ಅಧಿಕಾರ ವಹಿಸಿದಂದಿನಿಂದ ಮರಣವಪ್ಪುವ ವರೆಗೆ ಟಿಪ್ಪು ಬ್ರಿಟಿಷ್ ವಿರೋಧಿಯಾಗಿಯೇ ಬದುಕಿದ. ಈ ದಾರಿಯಲ್ಲಿ ತನ್ನಿಬ್ಬರು ಮಕ್ಕಳನ್ನು ಒತ್ತೆಯಿಟ್ಟ. ವೆಲ್ಲಿಕ್ಸ್, ಕಿರ್ಕ್ ಪ್ಯಾಟ್ರಿಕ್, ಲಿಯೋನ್ ಬೋರಿಂಗ್‍ರ ಗ್ರಂಥವನ್ನು ಎತ್ತಿಕೊಂಡು ಟಿಪ್ಪುವನ್ನು ಮತಾಂಧ ಎಂದು ಕರೆಯುವವರಿಗೆ ಈ ಇತಿಹಾಸ ಗೊತ್ತಿಲ್ಲವೇ? ಬ್ರಿಟಿಷರನ್ನು ವೈರಿಯೆಂದು ಪರಿಗಣಿಸಿದ ಮತ್ತು ಜೀವನಪೂರ್ತಿ ಆ ವೈರಿಯನ್ನು ಎದುರಿಸಿದ ವ್ಯಕ್ತಿಯ ಇತಿಹಾಸವನ್ನು ತಿಳಿಯುವುದಕ್ಕೆ ಆ ವೈರಿ ರಾಷ್ಟ್ರದ ಮಂದಿ ಬರೆದ ಗ್ರಂಥಗಳೇ ಆಧಾರವಾಗಬೇಕೇ? ಜಗತ್ತಿನಲ್ಲಿ ಟಿಪ್ಪುವಿನ ಹೊರತು ಇನ್ನಾರ ಇತಿಹಾಸವನ್ನು ನಾವು ಈ ರೀತಿಯಲ್ಲಿ ಅಭ್ಯಸಿಸಿದ್ದೇವೆ? ನಿಜವಾಗಿ, ಟಿಪ್ಪುವಿನ ಇತಿಹಾಸವನ್ನು ಬ್ರಿಟಿಷರು ಹೇಳುವುದೇ ಒಂದು ಪರಮ ಜೋಕು. ಸದ್ಯ ಈ ದೇಶದಲ್ಲಿ ಈ ಜೋಕನ್ನೇ ಪರಮ ಸತ್ಯ ಎಂದು ಒಂದು ಗುಂಪು ಪ್ರಚಾರ ಮಾಡುತ್ತಿದೆ. ಈ ಪ್ರಚಾರದ ಅಬ್ಬರ ಎಷ್ಟು ಜೋರಾಗಿದೆಯೆಂದರೆ ಆತ ತನ್ನ ಆಡಳಿತಾವಧಿಯಲ್ಲಿ ಬರೇ ಮಸೀದಿಗಳನ್ನು ಕಟ್ಟಿ, ಮತಾಂತರ ಕೇಂದ್ರಗಳನ್ನು ತೆರೆದಿದ್ದನೇನೋ ಎಂದೇ ಭಾವಿಸಬೇಕಾಗುತ್ತದೆ. ಅಷ್ಟಕ್ಕೂ, ಆತ ಕಟ್ಟಿರುವ ಮಸೀದಿಗಳಾದರೂ ಎಷ್ಟಿವೆ ಮತ್ತು ಎಲ್ಲಿವೆ? ಕೊಡಗು ನಗರವೊಂದರಲ್ಲೇ ಆತ 70 ಸಾವಿರ ಹಿಂದೂಗಳನ್ನು ಮತಾಂತರಿಸಿದ್ದಾನೆ ಎಂದು ಆರೋಪಿಸುವಾಗ, ಆ ಕಾಲದಲ್ಲಿ ಕೊಡಗು ನಗರ ಬಿಡಿ ಇಡೀ ಕೊಡಗಿನಲ್ಲಿಯೇ 25 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯಿರುವುದಕ್ಕೆ ಸಾಧ್ಯವಿರಲಿಲ್ಲ ಎಂಬುದನ್ನೇಕೆ ಇವರು ಅಡಗಿಸುತ್ತಿದ್ದಾರೆ? ಹೈದರಲಿಯ ಕಾಲದಲ್ಲಿಯೇ ಕೊಡಗು ಶ್ರೀರಂಗಪಟ್ಟಣದ ವಶವಾಗಿತ್ತು. ಮಾತ್ರವಲ್ಲ, ವಾರ್ಷಿಕ 2 ಸಾವಿರ ಕಪ್ಪ ಕಾಣಿಕೆ ನೀಡಬೇಕೆಂಬ ಶರತ್ತಿನ ಮೇರೆಗೆ ಕೊಡಗನ್ನು ಅಲ್ಲಿನ ರಾಜನಿಗೇ ಆತ ವಹಿಸಿಕೊಟ್ಟಿದ್ದ. ಆ ಬಳಿಕ ಕೊಡಗು ಶ್ರೀರಂಗಪಟ್ಟಣದ ಅಧೀನದಲ್ಲಿಯೇ ಮುಂದುವರಿಯಿತು. ಆದರೆ ಕೊಡಗಿನಲ್ಲಿ ಆಗಾಗ ಬಂಡಾಯ ಏಳುತ್ತಲೇ ಇತ್ತು. 1784ರಲ್ಲಿ ಮನ್‍ಮಿತ್ ರಾಯ್‍ನ ನೇತೃತ್ವದಲ್ಲಿ ಕೊಡಗಿನ ಜನರು ಮತ್ತೊಮ್ಮೆ ಟಿಪ್ಪುವಿನ ವಿರುದ್ಧ ದಂಗೆಯೆದ್ದರು. ಅವನಿಗೆ ರಂಗಾನಾಯರ್ ಎಂಬ ಪ್ರಮುಖನ ಬೆಂಬಲವೂ ಇತ್ತು. ಆಗ ಟಿಪ್ಪು ಕೊಡಗಿನ ಮೇಲೆ ಯುದ್ಧ ಸಾರಿದ ಹಾಗೂ ರಾಯ್ ಮತ್ತು ನಾಯರ್‍ನ ಸಹಿತ ಸಾವಿರಾರು ಮಂದಿಯನ್ನು ಬಂಧಿಸಿ ಶ್ರೀರಂಗಪಟ್ಟಣಕ್ಕೆ ರವಾನಿಸಿದ. ಪದೇ ಪದೇ ಏಳುತ್ತಿದ್ದ ದಂಗೆಯನ್ನು ದಮನಿಸುವುದಕ್ಕೆ ರಾಜನೊಬ್ಬ ಕೈಗೊಂಡ ಕ್ರಮ ಇದಾಗಿತ್ತೇ ಹೊರತು ಇದನ್ನೇ ಬಲಾತ್ಕಾರದ ಮತಾಂತರ ಎಂದು ಸಾರಿ ಬಿಡುವುದು ಇತಿಹಾಸಕ್ಕೆ ಮಾಡುವ ಅಪಚಾರವಾಗುತ್ತದೆ. ಇದೇ ರೀತಿಯಲ್ಲಿ ಆತ ಕ್ರೈಸ್ತರ ವಿರುದ್ಧವೂ ಕ್ರಮ ಕೈಗೊಂಡಿದ್ದ. 1782ರ ಎರಡನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಮಂಗಳೂರಿನ ಕ್ರೈಸ್ತರು ಗುಪ್ತವಾಗಿ ಆಂಗ್ಲರಿಗೆ ನೆರವಾಗಿದ್ದರು. ಬಿಜನೂರನ್ನು ವಶಪಡಿಸುವುದಕ್ಕೆ ಕರ್ನಲ್ ಮ್ಯಾಥ್ಯೂಸ್‍ನಿಗೆ ಸಹಕರಿಸಿದ್ದರು. ಪಶ್ಚಿಮ ಕರಾವಳಿಯಿಂದ ಅನೇಕ ಕ್ರೈಸ್ತರು ಪಲಾಯನಗೈದು ಬ್ರಿಟಿಷರೊಡನೆ ಸೇರಿ ಕೊಂಡಿದ್ದರು. ಮಂಗಳೂರಿನ ಮೇಲೆ ಜನರಲ್ ಕ್ಯಾಂಬೆಲ್ ಆಕ್ರಮಣ ನಡೆಸಿದ ಸಂದರ್ಭದಲ್ಲಿ ಬ್ರಿಟಿಷರಿಗೆ ಒಂದು ಸಾವಿರ ಮೂಟೆ ಅಕ್ಕಿಯನ್ನು ಕ್ರೈಸ್ತರು ಸರಬರಾಜು ಮಾಡಿದ್ದರು. ಕ್ರೈಸ್ತರನ್ನು ಟಿಪ್ಪು ಶಿಕ್ಷಿಸಿದ್ದು ಈ ದ್ರೋಹಕ್ಕಾಗಿ. ಈ ಷಡ್ಯಂತ್ರದಲ್ಲಿ ಭಾಗಿಯಾದ ಹೆಚ್ಚಿನವರನ್ನು ಕೊಚ್ಚಿನ್, ಗೋವಾ, ಶ್ರೀರಂಗ ಪಟ್ಟಣಗಳಿಗೆ ಗಡೀಪಾರು ಮಾಡಲಾಯಿತು. ಅಷ್ಟಕ್ಕೂ, ತನ್ನ ಅಧೀನದಲ್ಲಿರುವ ಪ್ರಜೆಗಳು ವೈರಿಯನ್ನು ಬೆಂಬಲಿಸಿದರೆ ಯಾವ ರಾಜ ತಾನೇ ಅದನ್ನು ಸಹಿಸಬಲ್ಲ? ಹಾಗಂತ, ಕ್ರೈಸ್ತ ಕೈದಿಗಳಿಗೆ ಆರಾಧನಾ ಕರ್ಮಗಳನ್ನು ನೆರವೇರಿಸಲು ಪಾದ್ರಿಗಳನ್ನು ಕಳುಹಿಸಿಕೊಡುವಂತೆ ಗೋವಾದ ವೈಸ್‍ರಾಯ್‍ಗೆ ಪತ್ರ ಬರೆದಿದ್ದೂ ಟಿಪ್ಪುವೇ. ಹಾನಿಗೀಡಾಗಿದ್ದ ಚರ್ಚ್‍ಗಳನ್ನು ದುರಸ್ತಿ ಪಡಿಸಿದ್ದೂ ಆತನೇ. ಕೊಡಗು ಮತ್ತು ಕರಾವಳಿ ಪ್ರದೇಶದಲ್ಲಿ ದಲಿತ, ಕೊರಗ ಮುಂತಾದ ಹಿಂದುಳಿದ ಜಾತಿಯ ಮಹಿಳೆಯರಿಗೆ ಸೊಂಟದಿಂದ ಮೇಲೆ ಬಟ್ಟೆ ಧರಿಸುವುದಕ್ಕೆ ಸಾಮಾಜಿಕವಾಗಿ ಒಂದು ಬಗೆಯ ಬಹಿಷ್ಕಾರವಿತ್ತು. ಜನಾಂಗೀಯ ಪಕ್ಷಪಾತ ಮತ್ತು ಅಸ್ಪೃಶ್ಯತೆಗಳು ದೊಡ್ಡ ಮಟ್ಟದಲ್ಲಿ ಆಚರಣೆಯಲ್ಲಿದ್ದುವು. ಮೇಲ್ವರ್ಗದ ಎದುರು ಕೆಳವರ್ಗದವರು ಸಂಪೂರ್ಣ ಬಟ್ಟೆ ಧರಿಸುವುದನ್ನು ಅಗೌರವ ಎಂದೇ ಪರಿಗಣಿಸಲಾಗುತ್ತಿತ್ತು. ಈ ಅನಾಗರಿಕ ಪದ್ಧತಿಯನ್ನು ನಿಷೇಧಿಸಿದವನೇ ಟಿಪ್ಪು. ಟಿಪ್ಪುವಿನ ಆಗಮನದ ಬಳಿಕವೇ ಈ ಭಾಗದ ದಮನಿತ ಮಹಿಳೆಯರು ರವಿಕೆ ತೊಡಲು ಆರಂಭಿಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ. ಟಿಪ್ಪು ಕ್ರೈಸ್ತರನ್ನೋ ಕೊಡವರನ್ನೋ ಅವರ ಧರ್ಮದ ಕಾರಣಕ್ಕಾಗಿ ಬಂಧಿಸಿಲ್ಲ ಅಥವಾ ಗಡೀಪಾರುಗೊಳಿಸಿಲ್ಲ ಎಂಬುದು ಆ ಇಡೀ ಬೆಳವಣಿಗೆಯ ಹಿನ್ನೆಲೆಯನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಅಂದಹಾಗೆ, ಭಾರತದ ಮೇಲೆ ಯುದ್ಧ ಸಾರಿದ ಪಾಕಿಸ್ತಾನವನ್ನು ಭಾರತೀಯರು ಬೆಂಬಲಿಸಿದರೆ, ಅವರನ್ನು ಇಲ್ಲಿನ ಸರಕಾರ ಏನೆಂದು ಪರಿಗಣಿಸಬಹುದು? ಹೇಗೆ ನಡೆಸಿಕೊಳ್ಳಬಹುದು? ಅಲ್ಲದೆ,ಈ ಮಣ್ಣಿಗೆ ತೀರ ಹೊಚ್ಚ ಹೊಸತಾದ ಸುಧಾರಣಾ ಕ್ರಮಗಳನ್ನೂ ಟಿಪ್ಪು ಕೈಗೊಂಡಿದ್ದ . ರೇಷ್ಮೆ ಬೆಳೆಯನ್ನು ಈ ಮಣ್ಣಿಗೆ ಮೊಟ್ಟಮೊದಲು ಪರಿಚಯಿಸಿದ್ದು ಆತನೇ. ಕೋಲಾರದಲ್ಲಿ ಮತ್ತು ಇನ್ನಿತರ ಕಡೆ ಲಕ್ಷಾಂತರ ಮಂದಿ ಇವತ್ತು ಅದನ್ನು ಆಶ್ರಯಿಸಿದ್ದಾರೆ. ಜಮೀನ್ದಾರರಿಂದ ಭೂಮಿಯನ್ನು ಕಿತ್ತು ಬಡ ದಲಿತ, ದುರ್ಬಲರಾದ ರೈತರಿಗೆ ಕೊಟ್ಟದ್ದೂ ಟಿಪ್ಪುವೇ. ಈ  ಮಣ್ಣಿನ  ಮಟ್ಟಿಗೆ ಅದು ಮೊತ್ತ ಮೊದಲ ಭೂ ಸುಧಾರಣೆಯಾಗಿತ್ತು. ಆ ಬಳಿಕ ಇದೇ ಭೂ ಸುಧಾರಣೆಯನ್ನು ನಾಲ್ವಡಿ ಕೃಷ್ಣರಾಜ ಅರಸರು ಮತ್ತು ಆ ಬಳಿಕ ದೇವರಾಜ ಅರಸರು  ಮುಂದುವರಿಸಿದರು. ಕನ್ನಂಬಾಡಿ ಅಣೆಕಟ್ಟಿಗೆ 1794 ರಲ್ಲಿ ಶಂಕುಸ್ಥಾಪನೆ ನಡೆಸಿದ್ದೂ ಆತನೇ. ಪಾಳು ಬಿದ್ದ ಭೂಮಿಯನ್ನು  ಕೃಷಿ ಮಾಡಲು ಬಿಟ್ಟು ಕೊಡುತ್ತಿದ್ದ ಟಿಪ್ಪು, ಬಡ್ಡಿ ರಹಿತವಾಗಿ ಕೃಷಿಕರಿಗೆ  ಸಾಲ ನೀಡುತ್ತಿದ್ದ. ಆತ ಮಧ್ಯ, ಜೂಜು,ವೇಶ್ಯಾವಾಟಿಕೆಯನ್ನು ನಿಷೇಧಿಸಿದ್ದ. ಆದರೆ ಟಿಪ್ಪುವನ್ನು ಮತಾಂಧ, ಕ್ರೂರಿ ಎಂದೆಲ್ಲ ಕರೆಯುವವರು  ಆತನ ಈ ಯಾವ ಸುಧಾರಣಾ ನೀತಿಯನ್ನು ಪ್ರಸ್ತಾಪಿಸುತ್ತಲೇ ಇಲ್ಲ. ಹಾಗಂತ,
      ಟಿಪ್ಪು ಸುಲ್ತಾನ್‍ನನ್ನು ನಾವು ಓರ್ವ ರಾಜನಾಗಿ ನೋಡಬೇಕೇ ಹೊರತು ಹಿಂದೂವಾಗಿಯೋ ಮುಸ್ಲಿಮನಾಗಿಯೋ ಖಂಡಿತ ಅಲ್ಲ. ಆತನನ್ನು ಮುಸ್ಲಿಮ್ ರಾಜ ಎಂದು ವರ್ಗೀಕರಿಸಬೇಕಾದ ಅಗತ್ಯವೂ ಇಲ್ಲ. ಇತರೆಲ್ಲ ರಾಜರುಗಳಲ್ಲಿರುವ ದೌರ್ಬಲ್ಯಗಳು ಆತನಲ್ಲಿಯೂ ಇದ್ದುವು. ಮೂರು ಮದುವೆಯಾಗಿದ್ದ. ಅರಮನೆಯಲ್ಲಿ ನೂರಾರು ಸೇವಕರಿದ್ದರು. ಆತನಲ್ಲಿ ಮಿತಿವಿೂರಿದ ಮೃದು ಧೋರಣೆಯಿತ್ತು ಮತ್ತು ಅಗತ್ಯಕ್ಕಿಂತ ಹೆಚ್ಚು ತನ್ನವರ ಮೇಲೆ ನಂಬಿಕೆ ಇರಿಸುತ್ತಿದ್ದ. ಸೇನಾ ವ್ಯೂಹ ರಚನೆಯಲ್ಲಿ ಸಾಕಷ್ಟು ದೌರ್ಬಲ್ಯಗಳಿದ್ದುವು. ಕೆಡುಕುಗಳನ್ನು ನಿಷೇಧಿಸುವಲ್ಲೂ ಜಾಣತನದ ಕೊರತೆಯಿತ್ತು. ಆತನ ವಿರುದ್ಧ ಪದೇ ಪದೇ ಬಂಡಾಯದ ಧ್ವನಿ ಏಳುತ್ತಿದ್ದುದು, ಒಳಸಂಚುಗಳು ನಡೆಯುತ್ತಿದ್ದುದು ಮತ್ತು ಆ ಒಳಸಂಚಿನಿಂದಾಗಿಯೇ ಆತ ಪರಾಜಿತನಾದದ್ದು ಎಲ್ಲವೂ ಇವನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ. ಬಹುಶಃ, ಟಿಪ್ಪು ಸುಲ್ತಾನನನ್ನು ವೈಭವೀಕರಿಸುವವರು ಮತ್ತು ತೀರಾ ಮತಾಂಧನಂತೆ ಚಿತ್ರೀಕರಿಸುವವರಿಬ್ಬರೂ ಟಿಪ್ಪುವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ವಿಫಲರಾಗಿದ್ದಾರೆಂದೇ ಹೇಳ ಬೇಕಾಗುತ್ತದೆ. ಅಷ್ಟಕ್ಕೂ,
          ಟಿಪ್ಪು ಜಯಂತಿಯನ್ನು ಸ್ವತಃ ರಾಜ್ಯ ಸರಕಾರವೇ ಆಚರಿಸುವ ಬದಲು ಅದನ್ನು ಅಲ್ಪಸಂಖ್ಯಾತ ಇಲಾಖೆಗೆ ವಹಿಸಿಕೊಟ್ಟಿದೆಯಲ್ಲ, ಏನಿದರ ಅರ್ಥ? ಟಿಪ್ಪು ಅಲ್ಪಸಂಖ್ಯಾತರ ರಾಜನೇ?

Tuesday, October 27, 2015

ಇಂಥ ಸ್ಥಿತಿಯಲ್ಲಿ ಚರ್ಚೆಗೊಳಗಾಗಬೇಕಾದ್ದು ಗೋವೋ ಅಲ್ಲ ಹೆಣ್ಣೋ?

      ಅವರು ಆಲಿಸುತ್ತಿದ್ದರು, ಆತ ಹೇಳುತ್ತಿದ್ದ..      “ನನಗೋರ್ವ ಮಗಳಿದ್ದಳು. ನನ್ನ ಪತ್ನಿ ಆ ಮಗುವನ್ನು ಬೆಳೆಸಿದ್ದೇ ನೆರೆಕರೆ ಮತ್ತು ಸಮಾಜದಿಂದ ಅಡಗಿಸಿ. ಆಕೆ ಆ ಮಗುವನ್ನು ತುಂಬಾ ಪ್ರೀತಿಸುತ್ತಿದ್ದಳು. ‘ಹೆಣ್ಣು ಮಗು ಕುಲಕ್ಕೆ ಕಳಂಕ’ ಎಂದು ನಂಬಿದ್ದ ಸಮಾಜದಲ್ಲಿ ಹೆಣ್ಣು ಮಗುವನ್ನು ಹೆರುವುದು ಮತ್ತು ಬೆಳೆಸುವುದು ಸಣ್ಣ ಸಾಹಸ ಆಗಿರಲಿಲ್ಲ. ನನ್ನ ಪತ್ನಿ ಆ ಸಾಹಸಕ್ಕೆ ಕೈ ಹಾಕಿದ್ದಳು. ಪರಿಸರದ ಕುಹಕವನ್ನು ಸಹಿಸಿಕೊಂಡು ಮಗುವನ್ನು ಪ್ರೀತಿಸಿದ್ದಳು. ಹೆಣ್ಣು ಮಗುವನ್ನು ಹುಟ್ಟಿದ ಕೂಡಲೇ ಹೂಳುವ ಸಂಪ್ರದಾಯವೊಂದು ನಮ್ಮ ಸಮಾಜದಲ್ಲಿತ್ತಲ್ಲವೇ? ಅದಕ್ಕೆ ಕಾರಣವೂ ಇತ್ತು. ಒಂದು: ಬಡತನ. ಉಣ್ಣುವವರ ಸಂಖ್ಯೆಯನ್ನು ಕಡಿಮೆಗೊಳಿಸಲೇಬೇಕಿತ್ತು. ಎರಡನೆಯದಾಗಿ, ಬುಡಕಟ್ಟು ಜನಾಂಗಗಳಾದ ನಮ್ಮ ನಡುವೆ ಸದಾ ಯುದ್ಧದಂತಹ ಘರ್ಷಣೆಗಳು ನಡೆಯುತ್ತಿದ್ದವು. ಆದ್ದರಿಂದ ಗಂಡು ಮಕ್ಕಳ ಅಗತ್ಯ ಧಾರಾಳವಿತ್ತು. ಮೂರನೆಯದಾಗಿ, ಹೀಗೆ ನಡೆಯುವ ಯುದ್ಧಗಳಲ್ಲಿ ಸೋಲುವ ಗುಂಪಿನ ಸಂಪತ್ತುಗಳನ್ನಷ್ಟೇ ದೋಚುತ್ತಿದ್ದುದಲ್ಲ, ಅವರ ಹೆಣ್ಣು ಮಕ್ಕಳು ಮತ್ತು ಮಹಿಳೆಯರನ್ನೂ ಸೆರೆ ಹಿಡಿದು ದಾಸಿಯರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಇದು ನಮ್ಮ ಪಾಲಿಗೆ ಸಹಿಸಲಸಾಧ್ಯ ಅವಮಾನವಾಗಿತ್ತು. ನಾನಾದರೋ ವ್ಯಾಪಾರದ ಉದ್ದೇಶದಿಂದ ತಿಂಗಳುಗಟ್ಟಲೆ ಪರ ಊರಿಗೆ ಹೋಗುತ್ತಿದ್ದೆ. ಹೀಗೆ ಒಂದು ದಿನ ಮರಳಿ ಬಂದಾಗ ಪರಿಸರದಿಂದ ಕುಹಕದ ಮಾತುಗಳು ಕೇಳಿ ಬಂದುವು. ನನ್ನ ಮನೆಯಲ್ಲಿ ಹೆಣ್ಣು ಮಗು ಬೆಳೆಯುತ್ತಿರುವುದನ್ನು ಬೊಟ್ಟು ಮಾಡಿ ನಿಂದಿಸಲಾಯಿತು. ತಮಾಷೆ ಮಾಡಲಾಯಿತು. ಕೊನೆಗೆ ಹೆಣ್ಣಿನ ಅಪ್ಪ ಎಂಬ ಕಳಂಕದಿಂದ ಶಾಶ್ವತವಾಗಿ ಮುಕ್ತಿ ಪಡೆಯಬೇಕೆಂದು ನಾನು ನಿರ್ಧರಿಸಿದೆ. ಒಂದು ದಿನ ನನ್ನ ಮಗುವನ್ನು ಪೇಟೆಗೆ ಕರೆದುಕೊಂಡು ಹೋಗುವುದಾಗಿ ಪತ್ನಿಯೊಂದಿಗೆ ಹೇಳಿದೆ. ಆಕೆ ಮಗುವಿಗೆ ಬಟ್ಟೆ ತೊಡಿಸಿದಳು. ಮಗುವಂತೂ ತುಂಬಾ ಖುಷಿಯಿಂದ ನನ್ನೊಂದಿಗೆ ಹೊರಟು ನಿಂತಿತು. ಅಪ್ಪನೊಂದಿಗೆ ಮೊದಲ ಬಾರಿ ಪೇಟೆ ನೋಡುವ ಧಾವಂತವೊಂದು ಮಗುವಿನ ಮುಖದಲ್ಲಿತ್ತು. ನಾನು ಮಗುವಿನ ಕೈ ಹಿಡಿದುಕೊಂಡು ಹೊರಟೆ. ಜೊತೆಗೇ ಕೈಯಲ್ಲೊಂದು ಗುದ್ದಲಿಯನ್ನೂ ಹಿಡಿದುಕೊಂಡೆ. ತಲುಪಿದ್ದಾದರೋ ಒಂದು ಬೋರು ಗುಡ್ಡೆಗೆ. ಮಗುವಿಗಂತೂ ನನ್ನ ಜೊತೆ ಅತ್ಯಂತ ಹೃದ್ಯ ಒಡನಾಟವಿತ್ತು. ನನ್ನನ್ನು ಮಗು ತೀವ್ರವಾಗಿ ಹಚ್ಚಿಕೊಂಡಿತ್ತು. ಆದ್ದರಿಂದಲೇ, ಮಗು ದಾರಿಯುದ್ದಕ್ಕೂ ನನ್ನೊಂದಿಗೆ ಮಾತಾಡುತ್ತಲೇ ಸಾಗಿತ್ತು. ನಾನು ಗುಡ್ಡಕ್ಕೆ ತಲುಪಿದ್ದೇ ತಡ, ಗುಂಡಿ ತೋಡಲು ಪ್ರಾರಂಭಿಸಿದೆ. ಮಗು ಆಗಾಗ ನನ್ನ ಉದ್ದೇಶದ ಬಗ್ಗೆ ಪ್ರಶ್ನಿಸುತ್ತಿತ್ತು. ನನ್ನ ಬಟ್ಟೆಯ ಮೇಲೆ ಬೀಳುತ್ತಿದ್ದ ಮಣ್ಣನ್ನು ಕೈಯಾರೆ ಸರಿಸುತ್ತಿತ್ತು. ಕೊನೆಗೆ ನಾನು ಗುಂಡಿ ಅಗೆಯುವುದನ್ನು ನಿಲ್ಲಿಸಿ ಮಗುವನ್ನು ಗುಂಡಿಯೊಳಕ್ಕೆ ಎಸೆದೆ. ಅದನ್ನು ನಿರೀಕ್ಷಿಸದಿದ್ದ ಮಗು ಅಪ್ಪಾ.. ಅಪ್ಪಾ.. ಎಂದು ಕೂಗಾಡಿತು. ನಾನು ಒಂದು ಭಾರ ಕಲ್ಲನ್ನು ಎತ್ತಿ ಮಗುವಿನ ಮೇಲೆ ಹಾಕಿದೆ..”   
      ಆಲಿಸುತ್ತಿದ್ದ ಪ್ರವಾದಿ ಮುಹಮ್ಮದ್‍ರ ಕಣ್ಣಾಲಿಗಳು ತುಂಬಿಕೊಂಡಿದ್ದವು. ಮಗುವನ್ನು ಸ್ಮರಿಸಿ ಅವರು ದುಃಖಿಸಿದರು. 'ಹೆಣ್ಣು ಮಗುವನ್ನು ಸಾಕಿ, ಸಂಸ್ಕಾರಯುತವಾಗಿ ಬೆಳೆಸುವ ಹೆತ್ತವರಿಗೆ ಸ್ವರ್ಗವಿದೆ' ಎಂಬ ಆಶ್ವಾಸನೆ ಕೊಟ್ಟರು. 'ಯಾರಾದರೂ ಹೆಣ್ಣು ಮಗುವನ್ನು ಕೊಂದರೆ, ಪುನರುತ್ಥಾನ ದಿನದಂದು ಆ ಮಗುವಿನಲ್ಲೇ ‘ನಿನ್ನನ್ನು ಯಾವ ಕಾರಣಕ್ಕಾಗಿ ಕೊಲ್ಲಲಾಯಿತು ಮಗು' (ಪವಿತ್ರ ಕುರ್‍ಆನ್ 81:9) ಎಂದು ಪ್ರಶ್ನಿಸಿ ದುಷ್ಟ ಹೆತ್ತವರನ್ನು ಶಿಕ್ಷಿಸಲಾಗುತ್ತದೆ' ಎಂದು ಸಮಾಜವನ್ನು ಎಚ್ಚರಿಸಿದರು. ತಾಯಿಯ ಪಾದದಡಿ ಸ್ವರ್ಗವಿದೆ ಎಂದರು. ಎಷ್ಟೇ ದೊಡ್ಡ ಧರ್ಮಭಕ್ತನಾದರೂ ತಾಯಿಯ ವಿರೋಧ ಕಟ್ಟಿ ಕೊಂಡಿದ್ದರೆ ಸ್ವರ್ಗ ಪ್ರವೇಶಿಸಲಾರ ಎಂದು ಉಪದೇಶಿಸಿ ಸಮಾಜದಲ್ಲಿ ಹೆಣ್ಣಿನ ಸ್ಥಾನವನ್ನು ಉನ್ನತ ಗೊಳಿಸಿದರು. ಹೆಣ್ಣಿಗೆ ಆಸ್ತಿಯಲ್ಲಿ ಪಾಲು (ಪವಿತ್ರ ಕುರ್‍ಆನ್ 4: 11-12) ನೀಡಿದರು. ವಿವಾಹ ಧನವನ್ನು ನೀಡಿ ಹೆಣ್ಣನ್ನು ವರಿಸಬೇಕೆಂದು (ಪವಿತ್ರ ಕುರ್‍ಆನ್ 4:4) ಗಂಡಿಗೆ ಆದೇಶಿಸಿದರು. ಮುಟ್ಟು ಅಮಂಗಲವಲ್ಲ, ಪ್ರಕೃತಿ ಸಹಜ ಕ್ರಿಯೆ ಎಂದು ಸಾರಿದರು. ದುರಂತ ಏನೆಂದರೆ, ಇವತ್ತು ಹೆಣ್ಣು ಸಂತಾನವನ್ನು ಎಷ್ಟು ನಾಜೂಕಾಗಿ ಹತ್ಯೆ ಮಾಡಲಾಗುತ್ತಿದೆಯೆಂದರೆ, ಇಂಥದ್ದೊಂದು ಭಾವುಕ ಘಟನೆ ಹುಟ್ಟಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡಲಾಗುತ್ತಿಲ್ಲ. ಮಗು ಮಾತಾಡುವುದಕ್ಕಿಂತ ಮೊದಲೇ, ಹೊಟ್ಟೆಯಲ್ಲೇ ತಣ್ಣಗೇ ಸಾಯಿಸಿ ಬಿಡುವ ತಂತ್ರಜ್ಞಾನವು ನಮ್ಮಲ್ಲಿದೆ. ಇತ್ತೀಚೆಗೆ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ 2011ರ ಜನಗಣತಿಯ ವಿವರಗಳು ಹೇಳುವುದು ಇದನ್ನೇ. ಆದರೆ ಇಲ್ಲಿ ಚರ್ಚೆ ನಡೆದದ್ದೇ ಬೇರೆ. ಜನಗಣತಿಯ ವಿವರವನ್ನು ಇಲ್ಲಿನ ಕೆಲವು ಮಾಧ್ಯಮಗಳು ಮತ್ತು ಬಲಪಂಥೀಯ ವಿಚಾರಧಾರೆಯ ಪಕ್ಷ -ಪರಿವಾರಗಳು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದುವು. ಹಿಂದೂಗಳ ಜನಸಂಖ್ಯೆ ಕುಸಿಯುತ್ತಿದೆಯೆಂದೂ ಅಲ್ಪಸಂಖ್ಯಾತರ ಜನಸಂಖ್ಯೆಯಲ್ಲಿ ಏರುಗತಿ ಕಾಣುತ್ತಿದೆಯೆಂದೂ ಹೇಳಲಾಯಿತಲ್ಲದೇ ಅಲ್ಪಸಂಖ್ಯಾತ ಎಂಬ ಪದದೊಳಗೆ ಬರುವ ಜೈನ, ಬೌದ್ಧ, ಕ್ರೈಸ್ತ, ಫಾರ್ಸಿ ಸಹಿತ ಎಲ್ಲ ಗುಂಪುಗಳನ್ನೂ ಕಡೆಗಣಿಸಿ ಅಲ್ಪಸಂಖ್ಯಾತವೆಂದರೆ ‘ಮುಸ್ಲಿಮ್' ಎಂದು ವ್ಯಾಖ್ಯಾನಿಸಿ ಭಯ ಹುಟ್ಟಿಸಲಾಯಿತು. ನಿಜವಾಗಿ 2001ರಿಂದ 2011ರ ವರೆಗಿನ 10 ವರ್ಷಗಳಲ್ಲಿ ಮುಸ್ಲಿಮರ ಜನಸಂಖ್ಯಾ ಬೆಳವಣಿಗೆಯ ದರ 5% ಕುಸಿತ ಕಂಡಿದ್ದರೆ ಹಿಂದೂಗಳ ಜನಸಂಖ್ಯಾ ಬೆಳವಣಿಗೆ 3%ವಷ್ಟೇ ಕುಸಿತ ಕಂಡಿದೆ. ಈ ಸತ್ಯ ಎಲ್ಲೂ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ. ಅಷ್ಟಕ್ಕೂ, ಜನಗಣತಿ ಎಂಬುದು ಹಿಂದೂಗಳೆಷ್ಟು ಮುಸ್ಲಿಮರೆಷ್ಟು ಎಂಬುದನ್ನು ಲೆಕ್ಕ ಹಾಕುವುದಕ್ಕಾಗಿ ಮಾಡುವ ಕಸರತ್ತಲ್ಲ. ಅದು ಒಂದು ಜನತೆ ಮತ್ತು ಸಮಾಜಕ್ಕೆ ಸಂಬಂಧಿಸಿ ಲಕ್ಷಾಂತರ ಕಾರ್ಯಕರ್ತರು ಹತ್ತಾರು ವಿವರಗಳನ್ನು ಕಲೆ ಹಾಕುವ ದಾಖಲೆ ಪತ್ರ. ಈ ದಾಖಲೆ ಪತ್ರ ಹಿಂದೂ-ಮುಸ್ಲಿಮರ ಜನಸಂಖ್ಯೆಯ ವಿವರವನ್ನಷ್ಟೇ ನೀಡುವುದಲ್ಲ. ಕುಸಿಯುತ್ತಿರುವ ಲಿಂಗಾನುಪಾತದ ಭೀಕರ ಚಿತ್ರಣವನ್ನೂ ದೇಶದ ಮುಂದಿಟ್ಟಿದೆ. ಆದರೂ, ಜನಸಂಖ್ಯೆಯ ಹೆಸರಲ್ಲಿ ಮುಸ್ಲಿಮರನ್ನು ಟೀಕಿಸಿದ ಯಾವ ಬಲಪಂಥೀಯ ಪಕ್ಷಗಳೂ ಕುಸಿಯುತ್ತಿರುವ ಹೆಣ್ಣು ಶಿಶುಗಳ ಅನುಪಾತದ ಬಗ್ಗೆ ಏನನ್ನೂ ಹೇಳದಿರುವುದಕ್ಕೆ ಏನೆನ್ನಬೇಕು? ದಲಿತರು ಮತ್ತು ಆದಿವಾಸಿಗಳನ್ನು ಹೊರತುಪಡಿಸಿದ ಹಿಂದೂ ಸಮುದಾಯದಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ತೀವ್ರ ಕುಸಿತ ಆಗುತ್ತಿದೆಯೆಂದು ಜನಗಣತಿ ವಿವರಗಳು ಬಹಿರಂಗಪಡಿಸಿದುವು. ವಿಶೇಷ ಏನೆಂದರೆ, ಆರ್ಥಿಕವಾಗಿ ಅತ್ಯಂತ ಮುಂದುವರಿದ ಪಂಜಾಬ್ ಮತ್ತು ಹರ್ಯಾಣಗಳು ಅತೀ ಕಡಿಮೆ ಲಿಂಗಾನುಪಾತ ದಾಖಲಿಸಿದುವು. 2011ರ ಜನಗಣತಿ ವರದಿಯಲ್ಲಿ ದೇಶದ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 940 ಮಹಿಳೆಯರಾದರೆ, ಹರ್ಯಾಣದಲ್ಲಿ ಇದು 1000 ಪುರುಷರಿಗೆ 830 ಮಹಿಳೆಯರು. ಪಂಜಾಬ್‍ನಲ್ಲಂತೂ 846 ಮಹಿಳೆಯರು. 2001ರಲ್ಲಿ ದೇಶದಲ್ಲಿ ಒಟ್ಟು ಲಿಂಗಾನುಪಾತ ದರ 1000 ಪುರುಷರಿಗೆ 933 ಮಹಿಳೆಯರಿದ್ದರು. ಒಂದು ವೇಳೆ, ಮುಸ್ಲಿಮರನ್ನು ಮಾತ್ರ ಇಲ್ಲಿ ಪ್ರತ್ಯೇಕಿಸಿ ನೋಡುವುದಾದರೆ 2001ರಲ್ಲಿ 1000 ಮುಸ್ಲಿಮ್ ಪುರುಷರಿಗೆ 936 ಮಹಿಳೆಯರಿದ್ದರು. ಇದೇ ಸಂದರ್ಭದಲ್ಲಿ ಹಿಂದೂ ಮಹಿಳೆಯರ ಅನುಪಾತ 931. 2011ರಲ್ಲಿ ಮುಸ್ಲಿಮರಲ್ಲಿ ಲಿಂಗಾನುಪಾತ ದರ 1000 ಪುರುಷರಿಗೆ 951 ಮಹಿಳೆಯರಾದರೆ ಹಿಂದೂಗಳಲ್ಲಿ ಇದು 939. ಹಾಗಂತ, ಇಡೀ ದೇಶದಲ್ಲಿ 6 ವರ್ಷಕ್ಕಿಂತ ಕೆಳಗಿನ ಮಕ್ಕಳ ಬಗ್ಗೆ ಹೇಳುವುದಾದರೆ, 2001ರಲ್ಲಿ 1000 ಗಂಡು ಮಕ್ಕಳಿಗೆ 927 ಹೆಣ್ಣು ಮಕ್ಕಳಿದ್ದರೆ 2011ರಲ್ಲಿ ಅದು 914ಕ್ಕೆ ಕುಸಿದಿದೆ. ಅಷ್ಟಕ್ಕೂ, 2001ರಿಂದ 2011ರ ಮಧ್ಯೆ ಈ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೇಂದ್ರಿತ ಬೆಳವಣಿಗೆಗಳು ನಡೆದಿವೆ. ಮೊಬೈಲ್‍ನಲ್ಲಿ, ವಾಹನಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳಾಗಿವೆ. ಶೈಕ್ಷಣಿಕವಾಗಿಯೂ ದೇಶ ಬೆಳೆದಿದೆ. ತಂತ್ರಜ್ಞಾನದ ಬಳಕೆಯಲ್ಲಿ ಸಾಕಷ್ಟು ಏರುಗತಿ ಕಂಡುಬಂದಿದೆ. 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಗೆದ್ದದ್ದೂ ಭಾರತವೇ. ಅಲ್ಲದೇ 1961ರಲ್ಲಿಯೇ ವರದಕ್ಷಿಣೆ ವಿರೋಧಿ ಕಾಯ್ದೆಯನ್ನು ಈ ದೇಶದಲ್ಲಿ ಜಾರಿಗೊಳಿಸಲಾಗಿದೆ. 1994ರಲ್ಲಿ ಲಿಂಗಪತ್ತೆ ಪರೀಕ್ಷೆಯನ್ನು ನಿಷೇಧಿಸಲಾಗಿದೆ. ಅಲ್ಟ್ರಾ ಸೋನೋಗ್ರಾಫಿ ಯಂತ್ರಗಳು ಕಡ್ಡಾಯವಾಗಿ ನೋಂದಣಿಗೊಳ್ಳ ಬೇಕೆಂದು ಕಾನೂನು ರೂಪಿಸಲಾಗಿದೆ. ಇಷ್ಟೆಲ್ಲಾ ಇದ್ದೂ ಹೆಣ್ಣು ಶಿಶುವನ್ನು ಪ್ರೀತಿಸದಂಥ ಮನಸ್ಥಿತಿಯೊಂದು ಇಲ್ಲಿ ಉಳಿದುಕೊಂಡಿರುವುದಕ್ಕೆ ಕಾರಣಗಳೇನು? ಅದರಲ್ಲೂ ಆರ್ಥಿಕವಾಗಿ ಮುಂದುವರಿದ ರಾಜ್ಯಗಳಲ್ಲೇ ಹೆಣ್ಣು ಶಿಶು ಕಣ್ಮರೆಯಾಗುತ್ತಿರುವುದನ್ನು ಏನೆಂದು ವಿಶ್ಲೇಷಿಸಬಹುದು? ಹೆಣ್ಣು-ಗಂಡು ಅನುಪಾತನದಲ್ಲಿ ಬೌದ್ಧ, ಜೈನ, ಕ್ರೈಸ್ತ, ಇಸ್ಲಾಮ್, ದಲಿತ, ಆದಿವಾಸಿಗಳಲ್ಲಿ ಇರುವ ಸಮತೋಲನವು ಹಿಂದೂ ಸಮುದಾಯದಲ್ಲಿ ಇಲ್ಲ ಎಂಬುದನ್ನು ಜನಗಣತಿ ವರದಿಯೇ ಹೇಳಿರುವಾಗ, ಆ ಬಗ್ಗೆ ಅದರ ವಕ್ತಾರರು ಮಾತಾಡುತ್ತಿಲ್ಲವೇಕೆ? ಹರ್ಯಾಣ, ರಾಜಸ್ತಾನ, ಪಂಜಾಬ್, ಗುಜರಾತ್, ಉತ್ತರ ಪ್ರದೇಶದಂಥ ರಾಜ್ಯಗಳ ಕೆಲವೊಂದು ಗ್ರಾಮಗಳಲ್ಲಿ ವರ್ಷಗಳಿಂದ ಹೆಣ್ಣು ಮಕ್ಕಳೇ ಜನಿಸಿಲ್ಲ ಎಂದು ಹೇಳುವಷ್ಟು ಅಪರೂಪವಾಗಿ ಹೆಣ್ಣು ಶಿಶುಗಳು ನೋಂದಣಿಯಾಗಿವೆ ಎಂದು ಹೇಳಿರುವ ವರದಿಯನ್ನು ಎತ್ತಿಕೊಂಡು ಅವು ಚರ್ಚಿಸಿಲ್ಲವೇಕೆ? ಆಸ್ತಿಯಲ್ಲಿ ಪಾಲು ಕೊಡಬೇಕಾದೀತೆಂದೋ ವರದಕ್ಷಿಣೆ ನೀಡಬೇಕಾದೀತೆಂದೋ ಭಯಪಟ್ಟು ಮಾಡಲಾಗುವ ಈ ಹತ್ಯಾ ಸರಣಿಯ ವಿರುದ್ಧ ಜಾಗೃತಿ ಮೂಡಿಸುವ ಪ್ರಯತ್ನಗಳು ಈ ವರೆಗೂ ನಡೆದಿಲ್ಲವೇಕೆ? ಈ ಹತ್ಯೆಗಿರುವ ಸಾಂಸ್ಕೃತಿಕ, ಸೈದ್ಧಾಂತಿಕ ಹಿನ್ನೆಲೆಗಳನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಿಲ್ಲವೇಕೆ?
      ಜನಗಣತಿ ವರದಿಯನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ ಚರ್ಚೆಗೊಳಪಡಿಸಿರುವುದರ ಹಿಂದೆ ಲಿಂಗಾನುಪಾತ ಕುಸಿತವು ಚರ್ಚೆಗೊಳಗಾಗದಂತೆ ತಡೆಯುವ ಹುನ್ನಾರವೊಂದು ಇದ್ದಂತೆ ತೋರುತ್ತಿದೆ. ಹೆಣ್ಣು ಶಿಶು ಹತ್ಯೆಯ ಕುರಿತಂತೆ ಗಂಭೀರ ಚರ್ಚೆಯೊಂದಕ್ಕೆ ದೇಶ ತೆರೆದುಕೊಂಡದ್ದೇ ಆದರೆ ಅದು ಪಡಕೊಳ್ಳುವ ತಿರುವು ಹಲವು ರೀತಿಯದ್ದು. ಆ ಚರ್ಚೆ ಕೇವಲ ಅಂಕಿ-ಸಂಖ್ಯೆಗಳಲ್ಲಿ ಕಳೆದು ಹೋಗುವುದಕ್ಕೆ ಸಾಧ್ಯವಿರಲಿಲ್ಲ. ಮನುಸ್ಮೃತಿಯಿಂದ ಹಿಡಿದು ಸತಿಪದ್ಧತಿಯ ವರೆಗೆ ಅಥವಾ ಪುರಾತನ ಇತಿಹಾಸದ ಮಹಿಳಾ ಶೋಷಣೆಯಿಂದ ಹಿಡಿದು ದೇವದಾಸಿ ಪದ್ಧತಿಯ ವರೆಗೆ ಪ್ರತಿಯೊಂದೂ ವಿಶ್ಲೇಷಣೆಗೆ ಒಳಪಡುವ ಸಾಧ್ಯತೆ ಇತ್ತು. ಹಾಗೊಂದು ವೇಳೆ ಚರ್ಚೆ ಆಗಿದ್ದೇ ಆದಲ್ಲಿ ಜನಗಣತಿ ವರದಿಯನ್ನು ಬಿಡುಗಡೆ ಗೊಳಿಸಿದ ಪಕ್ಷಕ್ಕೆ ಅದರಿಂದ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಯಾವ ಲಾಭವೂ ಇರಲಿಲ್ಲ. ನಿಜವಾಗಿ, ಜನಗಣತಿ ವರದಿಯನ್ನು ಬಿಡುಗಡೆಗೊಳಿಸುವುದರ ಹಿಂದೆ ಇದ್ದ ಉದ್ದೇಶವೇ ಹಿಂದೂ-ಮುಸ್ಲಿಮ್ ಜನಸಂಖ್ಯೆ ಚರ್ಚೆಗೊಳ್ಳಬೇಕೆಂಬುದು. ಮುಸ್ಲಿಮರ ಜನಸಂಖ್ಯೆ ಏರುಗತಿಯಲ್ಲಿದೆ ಎಂಬ ಸುದ್ದಿಯನ್ನು ಹಬ್ಬಿಸಿ ಧಾರ್ಮಿಕ ಧ್ರುವೀಕರಣ ನಡೆಸಬೇಕೆಂಬುದು. ಅಷ್ಟಕ್ಕೂ,
       ಹೆಣ್ಣು ಮಕ್ಕಳನ್ನು ಪ್ರೀತಿಸದ ಮತ್ತು ಅವರನ್ನು ಹೊಟ್ಟೆಯಲ್ಲೇ ಸಾಯಿಸುವ ಅಪಾಯಕಾರಿ ಮನಸ್ಥಿತಿಯು ವ್ಯಾಪಕವಾಗಿರುವ ದೇಶವೊಂದರಲ್ಲಿ ಚರ್ಚೆಗೊಳಗಾಗಬೇಕಾದದ್ದು ಗೋವುಗಳೋ, ಹೆಣ್ಣು ಮಕ್ಕಳೋ? 1000 ಗಂಡು ಮಕ್ಕಳಿಗೆ 830 ಹೆಣ್ಣು ಮಕ್ಕಳನ್ನು ಹೊಂದಿರುವ ರಾಜ್ಯವು ಯಾವ ವಿಷಯಕ್ಕಾಗಿ ಸುದ್ದಿಗೊಳಗಾಗಬೇಕು, ದಲಿತರ ಹತ್ಯೆಗೋ ಅಥವಾ ಹೆಣ್ಣು ಶಿಶು ಹತ್ಯೆ ವಿರೋಧಿ ಚಳವಳಿಗೋ? 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶಕ್ಕೆ ಯಾವುದರ ತುರ್ತು ಅಗತ್ಯ ಇದೆ, ಗೋವೋ, ಹೆಣ್ಣೋ?
       ಕಣ್ಣೀರಾದ ಪ್ರವಾದಿ ನೆನಪಾಗುತ್ತಾರೆ..



Tuesday, October 20, 2015

ಪ್ರಭುತ್ವದ ವರ್ತನೆ, ಸಾಹಿತಿಗಳ ಪ್ರತಿಭಟನೆ ಮತ್ತು ಟೀಕೆ

ಮಂಗಲೇಶ್ ದರ್ಬಾಲ್
ರಾಜೇಶ್ ಜೋಶಿ
ವರ್ಯಮ್ ಸಿಂಗ್ ಸಂಧು
ಜಸ್ವಿಂದರ್
      ಇವರಿಗೆಲ್ಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿರುವುದು ಯಾರ ಅವಧಿಯಲ್ಲಿ? ನಯನತಾರ ಸೆಹಗಲ್-ನೆಹರೂರ ಮೊಮ್ಮಗಳು, ಅಶೋಕ್ ವಾಜಪೇಯಿ- ಕಾಂಗ್ರೆಸ್ ಏಜೆಂಟ್, ಚಂಪಾ- ಎಡಪಂಥೀಯವಾದಿ, ರಹಮತ್ ತರೀಕೆರೆ- ಪ್ರಗತಿ ಪರ, ಮತ್ತೊಬ್ಬರು- ಮೋದಿ ವಿರೋಧಿ.. ಹೀಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮರಳಿಸುತ್ತಿರುವ ಸಾಹಿತಿಗಳನ್ನು ಪಟ್ಟಿ ಮಾಡಿ ಟೀಕಿಸುತ್ತಿರುವ ಮಂದಿ ಹೇಳುತ್ತಿರುವುದೆಲ್ಲ ನಿಜವೇ? ಈಗಾಗಲೇ ಪ್ರಶಸ್ತಿ ಮರಳಿಸಿರುವ ಸುಮಾರು ನೂರರಷ್ಟು ಸಾಹಿತಿಗಳಲ್ಲಿ ಯಾರೊಬ್ಬರಿಗೂ ನೈತಿಕತೆಯೇ ಇಲ್ಲವೇ? ಸಾರಾ ಜೋಸೆಫ್, ಸಚ್ಚಿದಾನಾಂದನ್, ಉದಯ ಪ್ರಕಾಶ್, ಕುಂವೀ.. ಎಲ್ಲರೂ ಕಾಂಗ್ರೆಸ್ಸಿಗರೇ ಅಥವಾ ಎಡಪಂಥೀಯರೇ? ಪ್ರಶಸ್ತಿ ವಾಪಸು ನಿರ್ಧಾರವನ್ನು ಸಲ್ಮಾನ್ ರುಶ್ದಿ ಬೆಂಬಲಿಸಿದ್ದಾರಲ್ಲ, ಅವರು ಯಾರ ಏಜೆಂಟ್? ‘ಭಾರತ ತಾಲಿಬಾನೀಕರಣಗೊಳ್ಳುತ್ತಿದೆ’ ಎಂದು ಮೋದಿ ಸರಕಾರದ ಧೋರಣೆಯನ್ನು ತಸ್ಲೀಮಾ ನಸ್ರೀನ್ ಟೀಕಿಸಿರುವುದು ಯಾರ ಪ್ರಚೋದನೆಯಿಂದ? ಎಲ್ಲದಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ಮೇಲಿನ ಅಸೂಯೆಯೇ ಕಾರಣವೇ ಅಥವಾ ಇನ್ನಿತರ ಗಂಭೀರ ಕಾರಣಗಳೇನಾದರೂ ಇವೆಯೇ? ಹಾಗಂತ, ನರೇಂದ್ರ ಮೋದಿಯವರು ಪ್ರಧಾನಿಯಾಗುವುದಕ್ಕಿಂತ ಮೊದಲು ಈ ದೇಶದಲ್ಲಿ ಅಹಿತಕರ ಘಟನೆಗಳೇ ನಡೆದಿಲ್ಲ ಎಂದು ಯಾರೂ ಹೇಳುತ್ತಿಲ್ಲ. 1919ರ ಜಲಿಯನ್‍ವಾಲಾ ಬಾಗ್‍ನಿಂದ 2015ರ ದಾದ್ರಿಯ ಅಖ್ಲಾಕ್‍ನ ವರೆಗೆ, 1984 ಸಿಕ್ಖ್ ಹತ್ಯಾಕಾಂಡದಿಂದ ಹಿಡಿದು 2002ರ ಗುಜರಾತ್ ಹತ್ಯಾಕಾಂಡದ ವರೆಗೆ ಈ ದೇಶದಲ್ಲಿ ಕ್ರೌರ್ಯಗಳು ಧಾರಾಳ ನಡೆದಿವೆ. ಇವನ್ನು ಖಂಡಿಸಿ ಆಯಾ ಸಂದರ್ಭಗಳಲ್ಲಿ ಪ್ರತಿಭಟನೆಗಳೂ ವ್ಯಕ್ತವಾಗಿವೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡವನ್ನು ಖಂಡಿಸಿ ಗಾಂಧೀಜಿಯವರು ತಮಗೆ ದೊರಕಿದ್ದ ಕೈಸರ್ ಎ ಹಿಂದ್ ಮತ್ತು ಇನ್ನೆರಡು ಪ್ರಶಸ್ತಿಗಳನ್ನು ಬ್ರಿಟಿಷ್ ಸರಕಾರಕ್ಕೆ ಮರಳಿಸಿದ್ದರು. ರವೀಂದ್ರನಾಥ್ ಟಾಗೂರರು ನೈಟ್‍ಹುಡ್ ಪದವಿಯನ್ನೇ ವಾಪಸು ಕೊಟ್ಟಿದ್ದರು. ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಶಿವರಾಮ ಕಾರಂತರು ತಮಗೆ ಸಂದಿರುವ ಪ್ರಶಸ್ತಿಯನ್ನು ಮರಳಿಸಿದ್ದರು. ಇಂದಿರಾ ಗಾಂಧಿಯವರ ಸ್ವರ್ಣ ಮಂದಿರ ಕಾರ್ಯಾಚರಣೆಯನ್ನು (ಆಪರೇಶನ್ ಬ್ಲೂ ಸ್ಟಾರ್) ಪ್ರತಿಭಟಿಸಿ 1984ರಲ್ಲಿ ಖುಷ್ವಂತ್ ಸಿಂಗ್‍ರು ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದರು. ಇದಾಗಿ ಸುಮಾರು 3 ದಶಕಗಳ ಬಳಿಕ ಇದೀಗ ಸಾಹಿತಿಗಳು ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಿಳಿದಿದ್ದಾರೆ. ಇಲ್ಲಿ ಗಮನಾರ್ಹ ಅಂಶವೊಂದಿದೆ. ಅಹಿತಕರ ಘಟನೆಗಳಿಗೆ ಪ್ರಭುತ್ವವು ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದಕ್ಕೆ ಯಾವಾಗಲೂ ಮಹತ್ವ ಇರುತ್ತದೆ. ಬಿಜೆಪಿಯ ಸಂಸದರಾದ ಯೋಗಿ ಆದಿತ್ಯನಾಥ್, ಸಾಕ್ಷಿ ಮಹಾರಾಜ್, ಗಿರಿರಾಜ್ ಸಿಂಗ್, ನಿರಂಜನ್ ಜ್ಯೋತಿ,ಸಂಗೀತ್ ಸೋಮ್..  ಮುಂತಾದವರ ಮಾತುಗಳು ಹೇಗಿವೆ? ದಾದ್ರಿ ಘಟನೆಯ ಬಗ್ಗೆ ಬಿಜೆಪಿಯ ಸಂಸದರು ಮತ್ತು ಶಾಸಕರ ಪ್ರತಿಕ್ರಿಯೆಗಳು ಹೇಗಿದ್ದುವು? ಅಹಿತಕರ ಘಟನೆಗಳು ನಡೆಯುವುದು ಬೇರೆ, ಅದನ್ನು ಸಮರ್ಥಿಸುವಂಥ ಪ್ರತಿಕ್ರಿಯೆಗಳನ್ನು ಕೊಡುವುದು ಬೇರೆ. ಬಿಜೆಪಿಗೂ ಇತರ ಆಡಳಿತ ಪಕ್ಷಗಳಿಗೂ ನಡುವೆ ಇರುವ ದೊಡ್ಡ ವ್ಯತ್ಯಾಸ ಇದು. ಆದ್ದರಿಂದಲೇ, ‘ಇತರ ಪಕ್ಷಗಳ ಆಡಳಿತದ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದಿಲ್ಲವೇ, ಆವಾಗೇಕೆ ಈ ರೀತಿಯಲ್ಲಿ ಪ್ರಶಸ್ತಿಯನ್ನು ಹಿಂತಿರುಗಿಸಿಲ್ಲ’ ಎಂಬ ಪ್ರಶ್ನೆಗೆ, ‘ಆ ಸಂದರ್ಭದಲ್ಲಿ ಆಡಳಿತ ಪಕ್ಷ ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಹೇಗಿದ್ದುವು..’ ಎಂಬ ಮರು ಪ್ರಶ್ನೆಯೂ ಅಷ್ಟೇ ತೀವ್ರತೆಯಿಂದ ಕೇಳಬೇಕಾಗುತ್ತದೆ. ಯೋಗ, ಮಾಂಸಾಹಾರ, ದಾದ್ರಿ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿ ಬಿಜೆಪಿಯಿಂದ ವ್ಯಕ್ತವಾಗಿರುವ ಪ್ರತಿಕ್ರಿಯೆಗಳು ಎಷ್ಟು ಪ್ರಚೋದನಾತ್ಮಕವಾಗಿವೆಯೆಂದರೆ, ಆಡಳಿತ ಪಕ್ಷವಾಗಿ ಗುರುತಿಸಿಕೊಳ್ಳುವುದಕ್ಕೆ ಅದು ಅನರ್ಹ ಎಂದು ಸಾರುವಷ್ಟು. ತನ್ನ ನಿಲುವನ್ನು ಒಪ್ಪದವರನ್ನು ಪಾಕಿಸ್ತಾನಕ್ಕೋ ಅರಬಿ ಸಮುದ್ರಕ್ಕೋ ಕಳುಹಿಸುವ ಮಾತನ್ನು ಅದರ ಸಂಸದರೇ ವ್ಯಕ್ತಪಡಿಸುತ್ತಿದ್ದಾರೆ. ಆಡಳಿತ ಪಕ್ಷವೊಂದು ನಿರ್ದಿಷ್ಟ ಧರ್ಮದ ಅಥವಾ ನಿರ್ದಿಷ್ಟ ಸಿದ್ಧಾಂತದ ಪರವಾಗಿಯಷ್ಟೇ ಮಾತಾಡುವಾಗ, ಅದರ ಅಪಾಯವನ್ನು ಸಾಹಿತ್ಯ ವಲಯ ಗುರುತಿಸಿ, ಪ್ರತಿಭಟಿಸುವುದು ಯಾಕೆ ತಪ್ಪಾಗಬೇಕು? ಸಿಕ್ಖ್ ಹತ್ಯಾಕಾಂಡ, ತುರ್ತು ಪರಿಸ್ಥಿತಿ, ಭಾಗಲ್ಪುರ, ಮುಂಬೈ ಗಲಭೆಗಳ ಸಂದರ್ಭದಲ್ಲಿ ಸಾಹಿತಿಗಳು ಈ ರೀತಿಯಾಗಿ ಪ್ರಶಸ್ತಿ ಹಿಂತಿರುಗಿಸಿಲ್ಲ ಎಂಬುದು, ಈಗ ಹಿಂತಿರುಗಿಸಬಾರದು ಎಂಬುದಕ್ಕೆ ಮಾನದಂಡ ಆಗುತ್ತದೆಯೇ ಮತ್ತು ಆಗಬೇಕೇ? ಈ ಹಿಂದೆ ಮಾಡಿಲ್ಲದ ಯಾವುದನ್ನೂ ಇನ್ನು ಮುಂದೆಯೂ ಮಾಡಬಾರದೇ? ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸ್ವಚ್ಛ ಭಾರತ ಅಭಿಯಾನ ಮಾಡಿಲ್ಲ ಎಂಬ ಕಾರಣಕ್ಕಾಗಿ ನರೇಂದ್ರ ಮೋದಿಯವರನ್ನು ಟೀಕಿಸಬಹುದೇ? ಮೋದಿಯವರು ವಿದೇಶ ಪ್ರಯಾಣ ಮಾಡಿದಷ್ಟು ವಾಜಪೇಯಿಯವರು ಮಾಡಿಲ್ಲ ಎಂಬುದು ಟೀಕೆಗೆ ಅರ್ಹ ವಿಷಯವೇ? ಮೋದಿಯವರ ಮನ್‍ಕೀ ಬಾತನ್ನು ಈ ಮಾನದಂಡದ ಆಧಾರದಲ್ಲಿ ವಿಶ್ಲೇಷಿಸುವುದಾದರೆ ಏನೆಂದು ಕರೆಯಬೇಕು? ವಾಜಪೇಯಿಯವರು ಮಾಡದೇ ಇರುವುದನ್ನು ಮೋದಿಯವರೇಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರೆ ಹೇಗಾದೀತು? ಸಾಹಿತಿಗಳು ಈ ಸಮಾಜದ ಭಾಗ ಎಂದು ನಾವು ಒಪ್ಪುವುದಾದರೆ, ಈ ಸಮಾಜದ ತಲ್ಲಣಗಳಿಗೆ ಅವರು ಧ್ವನಿಯಾಗಬಾರದು ಎಂದು ವಾದಿಸುವುದು ಇಬ್ಬಂದಿತನವಾಗುತ್ತದೆ. ಸಮಾಜದ ಆಗು-ಹೋಗುಗಳ ಬಗ್ಗೆ ಜನಸಾಮಾನ್ಯರಿಗಿಂತ ಮುಂಚಿತವಾಗಿ ಅರಿತುಕೊಳ್ಳುವ ಸಾಮರ್ಥ್ಯ ಸಾಹಿತ್ಯ ವಲಯಕ್ಕಿದೆ. ಕಳೆದು ಒಂದು ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಸಾಗುತ್ತಿರುವ ದಿಕ್ಕನ್ನು ಪರಿಶೀಲಿಸಿದರೆ, ಸಾಹಿತ್ಯ ವಲಯದಿಂದ ವ್ಯಕ್ತವಾಗಿರುವ ಸಿಟ್ಟು ಆತುರದ್ದು ಎಂದು ಅನ್ನಿಸುತ್ತಿಲ್ಲ. ಪಕ್ಷಪಾತಿಯಾಗಿಯೂ ಕಾಣಿಸುತ್ತಿಲ್ಲ. ನಿರ್ದಿಷ್ಟ ಅಜೆಂಡಾವೊಂದನ್ನು ಆತುರಾತುರವಾಗಿ ಜಾರಿಗೊಳಿಸುವ ತುರ್ತೊಂದು ಈ ಸರಕಾರದಲ್ಲಿ ಕಾಣಿಸುತ್ತಿದೆ. ಈ ಅಜೆಂಡಾ ಎಷ್ಟು ಸಂವಿಧಾನಬದ್ಧ ಮತ್ತು ದೇಶದ ವೈವಿಧ್ಯತೆಗೆ ಎಷ್ಟು ಪೂರಕ ಎಂಬ ಪ್ರಶ್ನೆ ಹಲವಾರು ಬಾರಿ ಎದ್ದಿದೆ. ದಾದ್ರಿ ಪ್ರಕರಣಕ್ಕೆ ಈ ಸರಕಾರದ ಸಂಸದರು ವ್ಯಕ್ತಪಡಿಸಿದ ಪ್ರತಿಕ್ರಿಯೆಗಳು ಈ ಪ್ರಶ್ನೆಯನ್ನು ಇನ್ನಷ್ಟು ಬಲಗೊಳಿಸಿದೆ. ಅಷ್ಟಕ್ಕೂ, ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆಯಷ್ಟೇ ಸಾಹಿತಿಗಳ ಪ್ರಶಸ್ತಿ ವಾಪಸಾತಿಗೆ ಕಾರಣ ಎಂದು ಯಾವ ಸಾಹಿತಿಯೂ ಹೇಳಿಲ್ಲ. ಸಾಹಿತಿಗಳ ಜೀವದಷ್ಟೇ ಸಾಹಿತ್ಯದ ಓದುಗರು ಮತ್ತು ಓದುಗರಲ್ಲದ ಜನಸಾಮಾನ್ಯರ ಜೀವವೂ ಅಷ್ಟೇ ಮುಖ್ಯ. ಆದ್ದರಿಂದಲೇ ಸಾಹಿತಿಗಳು ದಾದ್ರಿ ಘಟನೆ ಮತ್ತು ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣವನ್ನು ಪ್ರಶಸ್ತಿ ವಾಪಸಿಗೆ ಕಾರಣವಾಗಿ ಮುಂದಿಟ್ಟಿದ್ದಾರೆ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಹಿಂದಿನ ಹಿಂಸಾಕೃತ್ಯಗಳನ್ನು ಎತ್ತಿ ತೋರಿಸಿ ಸಾಹಿತಿಗಳ ನೈತಿಕ ಮಟ್ಟವನ್ನು ಪ್ರಶ್ನಿಸುತ್ತಿದ್ದಾರೆ. ಹಾಗಂತ, ಈ ಹಿಂದಿನ ಸರಕಾರದ ಮಂತ್ರಿಗಳು ಅಂಥ ಕೃತ್ಯಗಳನ್ನು ಸಮರ್ಥಿಸುವ ಧಾಟಿಯಲ್ಲಿ ಮಾತಾಡಿದ್ದರೆ ಎಂಬ ಬಹುಮುಖ್ಯ ಪ್ರಶ್ನೆಯನ್ನು ಅವರು ಜಾಣತನದಿಂದ ಅಡಗಿಸುತ್ತಿದ್ದಾರೆ. ಅಂದಹಾಗೆ,
        1968ರಲ್ಲಿ ಮೆಕ್ಸಿಕೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.
        1968 ಅಕ್ಟೋಬರ್ 16ರಂದು ಬೆಳಿಗ್ಗೆ ಅಮೇರಿಕದ ಕರಿವರ್ಣದ ಓಟಗಾರ ಟೋಮಿ ಸ್ಮಿತ್‍ರು 200 ವಿೂಟರ್ ಓಟವನ್ನು 19.83 ಸೆಕೆಂಡ್‍ಗಳಲ್ಲಿ ಕ್ರಮಿಸಿ ವಿಶ್ವದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಬಿಳಿಯ ಓಟಗಾರ ಪೀಟರ್ ನಾರ್ಮನ್ ದ್ವಿತೀಯ ಮತ್ತು ಅಮೇರಿಕದ ಇನ್ನೋರ್ವ ಕರಿವರ್ಣದ ಓಟಗಾರ ಜಾನ್ ಕಾರ್ಲೋಸ್ ತೃತೀಯ ಸ್ಥಾನ ಪಡೆದರು. ಬಳಿಕ ಪ್ರಶಸ್ತಿ ಪಡೆಯುವ ವೇಳೆ ಟೋಮಿ ಸ್ಮಿತ್ ಮತ್ತು ಜಾನ್ ಕಾರ್ಲೋಸ್‍ರು ಕಪ್ಪು ಗ್ಲೌಸ್ ಧರಿಸಿದ್ದ ಕೈಯನ್ನು ಎತ್ತಿ ಹಿಡಿದರು. ಮಾತ್ರವಲ್ಲ, ಪದಕ ವಿತರಣೆಯ ಸಂದರ್ಭದಲ್ಲಿ ರಾಷ್ಟ್ರಪತಾಕೆಯನ್ನು ನೋಡುವ ಬದಲು ನೆಲದತ್ತ ದೃಷ್ಟಿ ನೆಟ್ಟರು. ಒಲಿಂಪಿಕ್ಸ್ ಇತಿಹಾಸದಲ್ಲಿ 'ಬ್ಲ್ಯಾಕ್ ಪವರ್ ಸೆಲ್ಯೂಟ್' ಎಂದೇ ಪ್ರಸಿದ್ಧವಾದ ಘಟನೆ ಇದು. ಪದಕ ಪಡೆಯಲು ಬರುವಾಗ ಅವರಿಬ್ಬರೂ ಶೂ ಕಳಚಿ ಕೇವಲ ಕಪ್ಪು ಸಾಕ್ಸ್ ನಲ್ಲಿ ವೇದಿಕೆಯೇರಿದ್ದರು. ಅಮೇರಿಕದ ಕರಿವರ್ಣೀಯರ ಬಡತನವನ್ನು ಜಗತ್ತಿಗೆ ತಿಳಿಸುವುದಕ್ಕಾಗಿ ಅವರು ಆ ರೀತಿ ವರ್ತಿಸಿದ್ದರು. ಕರಿವರ್ಣೀಯರ ಸ್ವಾಭಿಮಾನದ ಸಂಕೇತವಾಗಿ ತನ್ನ ಕುತ್ತಿಗೆಗೆ ಟೋಮಿ ಸ್ಮಿತ್ ಕಪ್ಪು ಪಟ್ಟಿಯನ್ನು ಧರಿಸಿದ್ದರೆ, ಕಾರ್ಲೋಸ್‍ರಂತೂ ಕರಿವರ್ಣದ ಕಾರ್ಮಿಕರಿಗೆ ನೈತಿಕ ಬೆಂಬಲ ಸಾರುವುದಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ಖಂಡಿಸುವುದಕ್ಕಾಗಿ ತನ್ನ ಟ್ರ್ಯಾಕ್ ಸ್ಯೂಟ್‍ನ ಝಿಪ್ ಹಾಕದೇ ವೇದಿಕೆಯೇರಿದ್ದರು. ನಾರ್ಮನ್‍ರು ಆಸ್ಟ್ರೇಲಿಯಾ ಸರಕಾರದ ಬಿಳಿಯ ಪರ ಧೋರಣೆಯನ್ನು ಖಂಡಿಸುವ ವ್ಯಕ್ತಿಯಾಗಿದ್ದರು. ಆದ್ದರಿಂದ ಆ ಮೂವರು ಅಥ್ಲೀಟ್‍ಗಳೂ ಮಾನವ ಹಕ್ಕನ್ನು ಪ್ರತಿಪಾದಿಸುವ ಬ್ಯಾಡ್ಜ್ ಅನ್ನು ತಮ್ಮ ಉಡುಪಿನಲ್ಲಿ ಧರಿಸಿಕೊಂಡಿದ್ದರು. ವಿಶೇಷ ಏನೆಂದರೆ, ಸ್ಮಿತ್ ಮತ್ತು ಕಾರ್ಲೋಸ್‍ರು ಒಲಿಂಪಿಕ್ಸ್ ಗಾಗಿ ಅಮೇರಿಕದಿಂದ ಹೊರಡುವಾಗಲೇ ಕರಿವರ್ಣೀಯರ ವಿರುದ್ಧದ ದೌರ್ಜನ್ಯವನ್ನು ಖಂಡಿಸುವುಕ್ಕಾಗಿ ಒಲಿಂಪಿಕ್ಸ್ ವೇದಿಕೆಯನ್ನು ಬಳಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಪ್ಪು ಗ್ಲೌಸ್ ಧರಿಸಿ ಕೈ ಎತ್ತಬೇಕೆಂದು ತೀರ್ಮಾನಿಸಿದ್ದರು. ಆದರೆ ಕಾರ್ಲೋಸ್‍ರು ಗ್ಲೌಸ್ ಕೊಂಡೊಯ್ಯಲು ಮರೆತರು. ಆದ್ದರಿಂದ ಸ್ಮಿತ್‍ರ ಎಡಗೈಯ ಗ್ಲೌಸ್ ಅನ್ನು ಕಾರ್ಲೋಸ್‍ರು ಧರಿಸಿ ಎಡಗೈ ಎತ್ತುವಾಗ ಸ್ಮಿತ್ ಬಲಗೈ ಎತ್ತಿದರು. ಆ ಇಡೀ ಘಟನೆ ಮರುದಿನ ಜಾಗತಿಕ ಸುದ್ದಿಯಾಯಿತು. ಮಾಧ್ಯಮಗಳ ಮುಖಪುಟದಲ್ಲಿ ಆ ಪದಕ ಪ್ರಧಾನ ಸಮಾರಂಭ ವಿಸ್ತೃತ ಸುದ್ದಿ ಸಹಿತ ಪ್ರಕಟವಾಯಿತು. ಕರಿವರ್ಣೀಯರು ಸಾಂಪ್ರದಾಯಿಕವಾಗಿ ಮಾಡುವ ಸೆಲ್ಯೂಟನ್ನು ಪದಕ ಸ್ವೀಕರಿಸುವ ಸಂದರ್ಭದಲ್ಲಿ ಮಾಡಿದುದಕ್ಕಾಗಿ ಈ ಇಬ್ಬರನ್ನು ಪ್ರೇಕ್ಷಕರು ಗೇಲಿ ಮಾಡಿದರು. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮತಿಯ (IOC) ಅಧ್ಯಕ್ಷ ಅವೇರಿ ಬುಂಡೇಜ್‍ರು ಈ ಇಬ್ಬರ ವರ್ತನೆಯನ್ನು ರಾಜಕೀಯ ಪ್ರೇರಿತ ಎಂದು ಖಂಡಿಸಿದರು. ಅಮೇರಿಕವು ಕೂಡಲೇ ಒಲಿಂಪಿಕ್ಸ್ ತಂಡದಿಂದ ಅವರನ್ನು ಕಿತ್ತು ಹಾಕಬೇಕೆಂದು ಆಗ್ರಹಿಸಿದರು. ಅಮೇರಿಕ ಒಪ್ಪಿಕೊಳ್ಳದಿದ್ದಾಗ ಇಡೀ ಅಥ್ಲೀಟ್ ತಂಡವನ್ನೇ ನಿಷೇಧಿಸುವುದಾಗಿ ಬೆದರಿಸಿದರು. ಕೊನೆಗೆ ಅವರಿಬ್ಬರನ್ನೂ ಅಮೇರಿಕನ್ ಅಥ್ಲೀಟ್ ತಂಡದಿಂದ ಹೊರಹಾಕಲಾಯಿತು. ಅಮೇರಿಕದಲ್ಲಂತೂ ಅವರ ವಿರುದ್ಧ ತೀವ್ರ ಟೀಕೆ-ನಿಂದನೆಗಳು ವ್ಯಕ್ತವಾದುವು. Time ಮ್ಯಾಗಸಿನ್ ಕೂಡ ಇವರಿಬ್ಬರನ್ನು ಖಳನಾಯಕರಂತೆ ಚಿತ್ರಿಸಿತು. ಅವರ ಕುಟುಂಬಕ್ಕೆ ಕೊಲೆ ಬೆದರಿಕೆಯ ಕರೆಗಳು ಬಂದುವು. ಹೀಗೆ ಕರಿವರ್ಣೀಯರ ಮೇಲಿನ ದೌರ್ಜನ್ಯ ಪ್ರಶ್ನಿಸಿದ್ದಕ್ಕಾಗಿ ಮತ್ತು ಸಮಾನ ಮಾನವ ಹಕ್ಕುಗಳನ್ನು ಪ್ರತಿಪಾದಿಸಿದ್ದಕ್ಕಾಗಿ ಅವರಿಬ್ಬರಿಗೆ ಅಘೋಷಿತ ಬಹಿಷ್ಕಾರವನ್ನು ಹೇರಲಾಯಿತು. ಆಸ್ಟ್ರೇಲಿಯಾದ ನಾರ್ಮನ್ ಅಂತೂ ಕೇವಲ ಬ್ಯಾಡ್ಜ್ ಧರಿಸಿದ್ದಕ್ಕಾಗಿ ಆಸ್ಟ್ರೇಲಿಯನ್ ಆಡಳಿತದಿಂದ ತೀವ್ರ ಅವಕೃಪೆಗೆ ಒಳಗಾದರು. 1972 ಒಲಿಂಪಿಕ್ಸ್ ಗಾಗಿ ನಡೆಸಲಾದ ಆಯ್ಕೆ ಪರೀಕ್ಷೆಗಳಲ್ಲಿ 13 ಬಾರಿ ತೇರ್ಗಡೆಯಾದರೂ ಅವರನ್ನು ಕಡೆಗಣಿಸಲಾಯಿತು. ತನ್ನ ಸೈಲೆಂಟ್ ಗೆಸ್ಚರ್ ಎಂಬ ಜೀವನ ಚರಿತ್ರೆಯಲ್ಲಿ ಟೋಮಿ ಸ್ಮಿತ್‍ರು ಆ ದಿನಗಳ ತಲ್ಲಣಗಳನ್ನು ಬಿಡಿಬಿಡಿಯಾಗಿ ತೆರೆದಿಟ್ಟಿದ್ದಾರೆ. ರಾಜಕೀಯ ಕ್ರೌರ್ಯವನ್ನು ಓರ್ವ ಆಟಗಾರ ಪ್ರಶ್ನಿಸಿದರೆ ಆಗಬಹುದಾದ ಅನಾಹುತಗಳ ಚಿತ್ರಣವನ್ನು ಅವರ ಜೀವನ ಚರಿತ್ರೆ ನಮ್ಮ ಮುಂದಿಡುತ್ತದೆ. ಹಾಗಂತ, ಆ ಘಟನೆಯನ್ನು ನಾವು ಅಮೇರಿಕಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಭಾರತದ ಇಂದಿನ ಸ್ಥಿತಿಯೂ ಇದುವೇ. ಕ್ರೀಡಾಪಟುಗಳು ಕ್ರೀಡೆಯ ಬಗ್ಗೆ ಮಾತ್ರ ಮಾತಾಡಬೇಕು, ಸಾಹಿತಿಗಳು ಸಾಹಿತ್ಯ ಬಗ್ಗೆ, ನ್ಯಾಯವಾದಿಗಳು ನ್ಯಾಯದ ಬಗ್ಗೆ, ಮುಸ್ಲಿಮರು ಮುಸ್ಲಿಮರ ಬಗ್ಗೆ, ಬಿಜೆಪಿಗರು ಮೋದಿಯ ಬಗ್ಗೆ.. ಮಾತ್ರ ಮಾತಾಡಬೇಕೆಂದು ಬಿಜೆಪಿ ಮತ್ತು ಅದರ ಬೆಂಬಲಿಗರು ಇವತ್ತು ಬಯಸುತ್ತಿದ್ದಾರೆ. ಆದ್ದರಿಂದಲೇ ಪ್ರಶಸ್ತಿ ವಾಪಸಾತಿಯು ರಾಜಕೀಯ ಪ್ರೇರಿತ ಎಂದು ಟೀಕಿಸುತ್ತಿದ್ದಾರೆ. ಅಲ್ಲದೇ, ಪ್ರಶಸ್ತಿ ಮರಳಿಸಿದ ಸಾಹಿತಿಗಳು ಬಿಜೆಪಿಯ ವಿರೋಧಿಗಳು ಎಂಬ ಹಸಿ ಸುಳ್ಳನ್ನು ಹರಡುತ್ತಿದ್ದಾರೆ. ಅಷ್ಟಕ್ಕೂ,
      ಸಾಹಿತ್ಯ ಪ್ರಶಸ್ತಿಯನ್ನು ಹಿಂತಿರುಗಿಸಿದ ಮಂಗಲೇಶ್ ದರ್ಬಾಲ್, ರಾಜೇಶ್ ಜೋಷಿ, ವರ್ಯಮ್ ಸಿಂಗ್ ಸಂಧು ಮತ್ತು ಜಸ್ವಿಂದರ್‍ರು ವಾಜಪೇಯಿ ಮತ್ತು ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಪಡೆದಿದ್ದರು ಎಂಬ ಸತ್ಯವನ್ನು ಈ ಮಂದಿ ಎಲ್ಲೂ ಉಲ್ಲೇಖಿಸುತ್ತಲೇ ಇಲ್ಲ..

Tuesday, October 13, 2015

ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲ...

ಮೂರು ಆಯ್ಕೆಗಳಿವೆ
     1. ಒಂದು ಗ್ರಾಮದಲ್ಲಿ 300ರಷ್ಟು ಗೋವುಗಳಿವೆಯೆಂದಾದರೆ ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದರ ಆಸುಪಾಸಿನಲ್ಲಿ ಎತ್ತುಗಳೂ ಇರಬೇಕಾಗುತ್ತದೆ. ಇವುಗಳಲ್ಲಿ ಹಾಲು ಕೊಡದ (ಗೊಡ್ಡು) ಹಸುಗಳು ಮತ್ತು ಮುದಿ ಎತ್ತುಗಳೂ ಇರಬಹುದು. ಗೋವೇನೂ ಜೀವನಪೂರ್ತಿ ಹಾಲು ಕೊಡುವುದಿಲ್ಲವಲ್ಲ. ಎತ್ತುಗಳೂ ಅಷ್ಟೇ, ಜೀವನಪೂರ್ತಿ ದುಡಿಯುವುದಿಲ್ಲ. ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಸುಮಾರು 10 ವರ್ಷಗಳ ತನಕ ಗೋವು ಬದುಕಿರುತ್ತದೆ ಎಂದು ಅಂಕಿ-ಅಂಶಗಳು ಹೇಳುತ್ತವೆ. ಹೀಗೆ ಸೃಷ್ಟಿಯಾಗುವ ಮುದಿ ಆಕಳು ಮತ್ತು ಎತ್ತುಗಳ ಸಂಖ್ಯೆಗೆ ತಕ್ಕಂತೆ ಗೋಶಾಲೆಗಳ ನಿರ್ಮಾಣವಾಗಬೇಕು. ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಇಂಥ ಗೋಶಾಲೆಗಳು ಧಾರಾಳ ಸಂಖ್ಯೆಯಲ್ಲಿ ತಲೆ ಎತ್ತಬೇಕು. ಅವುಗಳಿಗೆ ಹುಲ್ಲು, ಹಿಂಡಿ, ನೀರು ಮತ್ತಿತರ ಸಕಲ ಸೌಲಭ್ಯಗಳೂ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಅವುಗಳೆಲ್ಲವೂ ಮುದಿ ಪ್ರಾಯಕ್ಕೆ ತಲುಪಿರುವುದರಿಂದಾಗಿ ಆರೋಗ್ಯ ಸಮಸ್ಯೆಯೂ ಆಗಾಗ ಕಾಡುತ್ತಿರಬಹುದು. ಸೂಕ್ತ ವೈದ್ಯರು ಗಳನ್ನು ತಪಾಸಣೆಗಾಗಿ ನೇಮಿಸಬೇಕು. ಅವುಗಳ ಯೋಗಕ್ಷೇಮ ನೋಡಿಕೊಳ್ಳುವುದಕ್ಕಾಗಿ ಕೆಲಸಗಾರರ ನೇಮಕವಾಗಬೇಕು. ಸಹಜ ಸಾವಿಗೆ ಒಳಗಾಗುವ ಹಸು-ಎತ್ತುಗಳ ದಫನ ಕ್ರಿಯೆಗೆ ವ್ಯವಸ್ಥೆಯಾಗಬೇಕು. ಮಾತ್ರವಲ್ಲ, ಈ ಎಲ್ಲವನ್ನೂ ನಿಭಾಯಿಸುವುದಕ್ಕಾಗಿ ದೊಡ್ಡ ಮಟ್ಟದ ಹಣಕಾಸಿನ ಏರ್ಪಾಟೂ ಆಗಬೇಕು. ಅಲ್ಲದೇ, ಇವೆಲ್ಲದರ ಹೊರತಾಗಿಯೂ ಗೋ ಶಾಲೆಯ ಪೋಷಕರು ಯಾವ ಆದಾಯವನ್ನು ಬಯಸಬಾರದು.
    2.  ಗೋವನ್ನು ಪವಿತ್ರವೆಂದು ಸಾರಬೇಕಲ್ಲದೇ ಅದನ್ನು ಆಹಾರವಾಗಿ ಬಳಕೆ ಮಾಡುವುದನ್ನು ಖಂಡಿಸಬೇಕು. ಅದು ಭಾವನಾತ್ಮಕ ಪ್ರಾಣಿಯಾಗಬೇಕು. ಕಸಾಯಿಖಾನೆಗಳನ್ನು ಮುಚ್ಚುವಂತೆ ಆಗ್ರಹಿಸಬೇಕು. ಮುದಿ ಆಕಳು ಮತ್ತು ಎತ್ತನ್ನು ಕಸಾಯಿಖಾನೆಗೆ ಮಾರದಂತೆ ರೈತರನ್ನು ಬೆದರಿಸಬೇಕು. ಇದರ ಹೊರತಾಗಿಯೂ ಯಾರಾದರೂ ಗೋಮಾಂಸ ಸೇವಿಸಿದರೆ ಅಥವಾ ಮುದಿ ಎತ್ತು-ಗೋವಿನ ಮಾರಾಟ-ಸಾಗಾಟದಲ್ಲಿ ತೊಡಗಿದರೆ ಅವರನ್ನು ಥಳಿಸಬೇಕು. ಮಾತ್ರವಲ್ಲ, ಆ ಥಳಿತವನ್ನು ಗೋರಕ್ಷಣೆಯ ಹೆಸರಲ್ಲಿ ಸಮರ್ಥಿಸಿಕೊಳ್ಳಬೇಕು. ಹಾಗಂತ, ಮುದಿ ಎತ್ತು ಮತ್ತು ಗೋವುಗಳ ಬಗ್ಗೆ ಹಾಗೂ ಅವುಗಳ ಸಾಕಾಣಿಕೆಯ ಬಗ್ಗೆ   ಥಳಿಸಿದವರು ಮಾತಾಡಬೇಕಿಲ್ಲ. ಅವುಗಳನ್ನು ಅವರು ಖರೀದಿಸಬೇಕಿಲ್ಲ. ಅವುಗಳಿಂದ ರೈತನಿಗೆ ಆಗುವ ಆರ್ಥಿಕ ಹೊರೆಯ ಬಗ್ಗೆ ಅವರು ಉತ್ತರಿಸಬೇಕಿಲ್ಲ. ಬೀದಿಯಲ್ಲಿ ತಿರುಗಾಡುತ್ತಲೋ ಪ್ಲಾಸ್ಟಿಕ್ಕೋ ಇನ್ನೇನನ್ನೋ ತಿನ್ನುತ್ತಲೋ ಸರಿಯಾದ ಆರೈಕೆಯೂ ಇಲ್ಲದೇ ಅವು ಸಾವಿಗೀಡಾದರೆ ಅವರು ಅದರ ಹೊಣೆಗಾರರೂ ಆಗಬೇಕಿಲ್ಲ. 
     3.  ರೈತರ ಗದ್ದೆಯ ಪಕ್ಕವೇ ಕಸಾಯಿಖಾನೆಯನ್ನು ನಿರ್ಮಿಸುವುದು. ಸರಕಾರದ ಪರವಾನಿಗೆಯನ್ನು ಪಡೆದು ತಮ್ಮ ಮುದಿ ಎತ್ತು-ಗೋವುಗಳನ್ನು ರೈತರೇ ವಧಿಸುವಂತೆ ನೋಡಿಕೊಳ್ಳುವುದು. ಯಾವುದೇ ಕಾನೂನುಬಾಹಿರ ವಧೆ ನಡೆಯದಂತೆ ಜಾಗರೂಕತೆ ಪಾಲಿಸುವುದು.
     ಈ ಮೂರು ಆಯ್ಕೆಗಳಲ್ಲಿ ಆಯ್ಕೆ ಸಂಖ್ಯೆ 1 ಅತ್ಯಂತ ತುಟ್ಟಿಯಾದುದು. ತಾಲೂಕಿಗೊಂದು ಗೋಶಾಲೆಗಳೂ ಇಲ್ಲದ ಇಂದಿನ ದಿನಗಳಲ್ಲಿ ಪ್ರತಿ ತಾಲೂಕುಗಳಲ್ಲಿ ಹತ್ತಾರು ಗೋಶಾಲೆಗಳನ್ನು ತೆರೆಯುವುದು ಮತ್ತು ದೊಡ್ಡ ಮಟ್ಟದ ಖರ್ಚು-ವೆಚ್ಚಗಳನ್ನು ನಿಭಾಯಿಸುವುದು ಸುಲಭದ ಮಾತಲ್ಲ. ಇವತ್ತಿನ ಸ್ಥಿತಿ ಹೇಗಿದೆಯೆಂದರೆ, ಅಲ್ಲೊಂದು ಇಲ್ಲೊಂದು ಇರುವ ಗೋಶಾಲೆಗಳೇ ಸರಿಯಾಗಿ ಉಸಿರಾಡುತ್ತಿಲ್ಲ. ಆದ್ದರಿಂದ ಇವುಗಳಿಗೆ ಇನ್ನಷ್ಟು ಸಂಖ್ಯೆಯಲ್ಲಿ ಗೋಶಾಲೆಗಳು ಸೇರ್ಪಡೆಯಾದರೆ, ಗೋಶಾಲೆಗಳೇ ಸುದ್ದಿಯಾದಾವು. ಇನ್ನು, ಆಯ್ಕೆ 3ರಲ್ಲೂ ಒಂದು ಪ್ರಮುಖ ಸಮಸ್ಯೆ ಇದೆ. ಅದರಲ್ಲಿ ‘ವಧೆ’ ನಡೆಯುತ್ತದೆ. ವಧಿಸುವುದು ರೈತನೇ ಆದರೂ ಎತ್ತು ಮತ್ತು ಗೋವು ವಧೆಗೆ ಒಳಗಾಗುವುದರಿಂದ ಈ ಆಯ್ಕೆಯೂ ಸೂಕ್ತವಲ್ಲ. ಹೀಗಿರುವಾಗ ಅತ್ಯಂತ ಸುಲಭ ಮತ್ತು ರಿಸ್ಕ್ ರಹಿತ ಆಯ್ಕೆಯೆಂದರೆ ಸಂಖ್ಯೆ  2. ಈ ಆಯ್ಕೆಯಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತದೆ. ಸಾರ್ವಜನಿಕವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅವಕಾಶವಿರುತ್ತದೆ. ಭಾವನೆಗಳ ಹೆಸರಲ್ಲಿ ಸಮಾಜವನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ. ಮುಖ್ಯವಾಗಿ ಸಮಾಜವನ್ನು ಗೋಮಾಂಸ ಭಕ್ಷಕರು ಮತ್ತು ರಕ್ಷಕರು ಎಂದು ಪ್ರತ್ಯೇಕಿಸುವುದಕ್ಕೆ ಅವಕಾಶ ಲಭಿಸುತ್ತದೆ. ಗೋಶಾಲೆಯನ್ನು ನಿರ್ಮಿಸುವುದೋ, ಮುದಿ ಗೋವು-ಎತ್ತುಗಳನ್ನು ರೈತರಿಂದ ಖರೀದಿಸುವುದೋ, ಗೋಶಾಲೆಗಳ ನಿರ್ವಹಣೆಗೆ ಅಗತ್ಯ ವ್ಯವಸ್ಥೆ ಗಳನ್ನು ಏರ್ಪಾಡು ಮಾಡುವುದೋ.. ಯಾವುದರ ಹೊಣೆಯನ್ನೂ ವಹಿಸಿಕೊಳ್ಳದೆಯೇ ಗೋರಕ್ಷಕರಾಗಿ ಮತ್ತು ಆ ಮೂಲಕ ಧಾರ್ಮಿಕ ಕರ್ತವ್ಯವೊಂದನ್ನು ನಿಭಾಯಿಸಿದವರಾಗಿ ಗುರುತಿಸಿ ಕೊಳ್ಳುವುದಕ್ಕೂ ಸಂದರ್ಭ ಒದಗುತ್ತದೆ. ಉತ್ತರ ಪ್ರದೇಶದ ಅಖ್ಲಾಕ್‍ನನ್ನು ಕೊಂದದ್ದು ಈ ಆಯ್ಕೆ ಸಂಖ್ಯೆ 2ರ ಆಧಾರದಲ್ಲೇ. ದೇಶದಲ್ಲಿ ನಡೆಯುತ್ತಿರುವ ಗೋ ಸಂಬಂಧಿ ಹೇಳಿಕೆ, ಘೋಷಣೆ, ದಾಳಿ, ಥಳಿತಗಳೆಲ್ಲ ಈ 2ನ್ನೇ ಆಧಾರವಾಗಿ ನೆಚ್ಚಿಕೊಂಡಿದೆ. ನಿಜವಾಗಿ, ಗೋವುಗಳು ವಧಾ ಗೃಹಕ್ಕೆ ತಲುಪಬಾರದು ಎಂದಾದರೆ, ಆಯ್ಕೆ ಸಂಖ್ಯೆ 1ನ್ನು ಎತ್ತಿಕೊಳ್ಳಬೇಕಾಗಿದೆ. ಅದರಲ್ಲಿ ಗೋವಿನ ಮಾಲಕರಿಗೆ ಭದ್ರತೆಯಿದೆ. ಮುದಿ ಗೋವುಗಳನ್ನು ಖರೀದಿಸುವ ವ್ಯವಸ್ಥೆಯೊಂದು ಜಾರಿಯಲ್ಲಿರುವಾಗ ಗೋವಿನ ಮಾಲಕ ಕಸಾಯಿಗಳತ್ತ ನೋಡಬೇಕಾದ ಅಗತ್ಯ ಇರುವುದಿಲ್ಲ. ಹೈನುದ್ಯಮ ನಡೆಸುತ್ತಿರುವ ವ್ಯಕ್ತಿಯೋರ್ವ ತನ್ನ ಹಟ್ಟಿಯಲ್ಲಿರುವ ಗಂಡು ಕರುವನ್ನು ಕಸಾಯಿಗಳಿಗೆ ಮಾರುವ ಬದಲಾಗಿ ಅದನ್ನು ಗೋರಕ್ಷಕರಿಗೆ ಮಾರುವ ಭರವಸೆಯೊಂದಿಗೆ ಸಾಕಬಲ್ಲ. ಹೀಗಾದಾಗ ಕಸಾಯಿಖಾನೆಗಳು ಪರವಾನಿಗೆ ಇದ್ದರೂ `ಮಾಲು’ ಇಲ್ಲದೇ ಭಣಗುಟ್ಟುವ ಸಂದರ್ಭ ಎದುರಾಗ ಬಹುದು. ಸಾರ್ವಜನಿಕರು ಕಸಾಯಿಖಾನೆಗಳಿಗಿಂತ ಗೋರಕ್ಷಕರನ್ನು ಮೆಚ್ಚಿಕೊಳ್ಳುವುದಕ್ಕೂ ಕಾರಣವಾಗಬಹುದು. ಆದರೆ, ಸದ್ಯದ ಗೋರಕ್ಷಣಾ ಚಳವಳಿ ಎಷ್ಟು ಅಪ್ರಾಯೋಗಿಕವಾಗಿದೆಯೆಂದರೆ, ಅದು ಮಾಲಕ ಸ್ನೇಹಿಯೂ ಅಲ್ಲ, ಗೋ ಸ್ನೇಹಿಯೂ ಅಲ್ಲ. ಅದು ಇವೆರಡರ ಹೊರತಾದ ಇನ್ನಾ ವುದೋ ಗುರಿಯನ್ನು ಹೊಂದಿರುವಂತೆ ಕಾಣಿಸುತ್ತಿದೆ. ಗಾಂಧಿ ಪೀಸ್ ಫೌಂಡೇಶನ್‍ನ ಸ್ಟಪನ್ ಜೋಶಿ ತನ್ನ Why is the cow a political animal? (ಗೋವು ಏಕೆ ರಾಜಕೀಯ ಪ್ರಾಣಿ) ಎಂಬ ತಮ್ಮ ದೀರ್ಘ ಬರಹದಲ್ಲಿ ಹೇಳಿಕೊಂಡಿರುವಂತೆ, ‘ಧರ್ಮಕ್ಕೂ ಇವತ್ತಿನ ಗೋ ಚಳವಳಿಗೂ ಸಂಬಂಧ ಇಲ್ಲವೇ ಇಲ್ಲ. ಇವತ್ತಿನ ಗೋ ಚಳವಳಿ ಸಂಪೂರ್ಣ ರಾಜಕೀಯ ಪ್ರೇರಿತ. ಅದರ ಮುಂದೆ ಒಂದು ಅಜೆಂಡಾ ಇದೆ. ಆ ಅಜೆಂಡಾ ರಾಜಕೀಯ ಅಧಿಕಾರವನ್ನು ಪಡೆಯುವ ಆಕಾಂಕ್ಷೆಯದ್ದು...’
    ನಿಜವಾಗಿ, ಅಖ್ಲಾಕ್‍ನನ್ನು ಮಾಂಸದ ತುಂಡಿಗಾಗಿ ಕೊಂದಿಲ್ಲ. ಗೋಮಾಂಸ ಸೇವನೆಗೆ ನಿಷೇಧವೇ ಇಲ್ಲದ ರಾಜ್ಯದಲ್ಲಿ ಓರ್ವನ ಮನೆಯಲ್ಲಿ ಗೋಮಾಂಸವಿರುವುದಕ್ಕಾಗಿ ದಾಳಿ ನಡೆಯುತ್ತದೆ ಅನ್ನುವುದನ್ನು ಹೇಗೆ ಒಪ್ಪಲು ಸಾಧ್ಯ? ಗೋಹತ್ಯಾ ನಿಷೇಧಕ್ಕಾಗಿ ಒತ್ತಾಯಿಸುತ್ತಿರುವ ಮತ್ತು ಅಖ್ಲಾಕ್‍ನ ಹತ್ಯೆಯನ್ನು ಗೋವಿನ ಹೆಸರಲ್ಲಿ ಭಾಗಶಃ ಸಮರ್ಥಿಸಿರುವ ಸಂಗೀತ್ ಸೋಮ್ ಎಂಬ ಬಿಜೆಪಿಯ ಶಾಸಕ ಸ್ವತಃ ಅಲ್ ದುವಾ ಎಂಬ ಗೋಮಾಂಸ ರಫ್ತು ಕಾರ್ಖಾನೆಯ ನಿರ್ದೇಶಕರಾಗಿದ್ದಾರೆ ಎಂಬುದನ್ನು ಇದರ ಜೊತೆಗಿಟ್ಟು ನೋಡಿದರೆ ಇದು ಇನ್ನೂ ಹೆಚ್ಚು ಸ್ಪಷ್ಟಗೊಳ್ಳುತ್ತದೆ. ಮೈಸೂರ್ ಪಾಕ್‍ನಲ್ಲಿ ಮೈಸೂರು ಇಲ್ಲದಿರುವಂತೆಯೇ ಅಥವಾ ಕಲ್ಲಂಗಡಿ ಹಣ್ಣುಗಳಲ್ಲಿ ಕಲ್ಲುಗಳಿಲ್ಲದಿರುವಂತೆಯೇ ಗೋರಕ್ಷಣಾ ಚಳವಳಿಗಳಲ್ಲಿ ಗೋವುಗಳಿಲ್ಲ. ಅವು ಗೋವುಗಳಿಗಾಗಿ ನಡೆಯುತ್ತಿರುವ ಹೋರಾಟಗಳೂ ಅಲ್ಲ. ಗೋಶಾಲೆಗಳನ್ನು ನಿರ್ಮಿಸದೆಯೇ, ಮುದಿ ಗೋವುಗಳನ್ನು ಖರೀದಿಸುವುದಕ್ಕೆ ವ್ಯವಸ್ಥಿತವಾದ ನೀಲ ನಕಾಶೆಯನ್ನು ರಚಿಸದೆಯೇ, ಪ್ರತಿ ಹಳ್ಳಿ, ಗ್ರಾಮ, ಪಟ್ಟಣಗಳಲ್ಲಿ ಗೋ ಸರ್ವೇ ನಡೆಸದೆಯೇ ಮತ್ತು ಗೋ ಮಾಲಕಸ್ನೇಹಿ ಯೋಜನೆಯೊಂದನ್ನು ಸಮಾಜದ ಮುಂದಿಡದೆಯೇ ಗೋ ಹತ್ಯೆಯನ್ನು ನಿಷೇಧಿಸಿ ಎಂದು ಆಗ್ರಹಿಸಿದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಹೇಗೆ? ಅಖ್ಲಾಕ್‍ನನ್ನು ಹತ್ಯೆ ನಡೆಸುವುದಕ್ಕಿಂತ ಮೊದಲು ವಾಟ್ಸಪ್‍ನಲ್ಲಿ ದಾದ್ರಿಯ ಆಸುಪಾಸಿನಲ್ಲಿ ವೀಡಿಯೋವೊಂದು ಪ್ರಸಾರವಾಗಿತ್ತು. ವ್ಯಕ್ತಿಯೋರ್ವ ಗೋಹತ್ಯೆ ನಡೆಸುತ್ತಿರುವ ವೀಡಿಯೋ ಅದು. ವಂದನಾ ರಾಣಾ ಎಂಬ ಯುವತಿ (ಅಖ್ಲಾಕ್‍ನನ್ನು ಹತ್ಯೆಗೈದ ಆರೋಪಿ ವಿಶಾಲ್ ರಾಣಾನ ಸಹೋದರಿ ಈಕೆ. ಇವರಿಬ್ಬರೂ ಸ್ಥಳೀಯ ಬಿಜೆಪಿ ಕಾರ್ಯಕರ್ತ ಸಂಜಯ್ ರಾಣಾನ ಮಕ್ಕಳು) ಇದನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾಳೆ. ಮುಝಫ್ಫರ್ ನಗರ್ ಕೋಮು ಹಿಂಸಾಚಾರಕ್ಕಿಂತಲೂ ಮೊದಲು ಇಂಥದ್ದೇ ವೀಡಿಯೋ ವಾಟ್ಸಾಪ್‍ನಲ್ಲಿ ಪ್ರಸಾರವಾಗಿತ್ತು. ಗುಂಪೊಂದು ಇಬ್ಬರು ಯುವಕರನ್ನು ಥಳಿಸಿ ಕೊಲ್ಲುವ ವೀಡಿಯೋ. ಅದನ್ನು ಬಿಜೆಪಿಯ ಶಾಸಕರೇ ಸಾಮಾಜಿಕ ಜಾಲತಾಣಕ್ಕೆ ಅಪ್‍ಲೋಡ್ ಮಾಡಿದ್ದರು. ಈ ಎರಡೂ ಹಿಂಸಾ ಪ್ರಕರಣಗಳಲ್ಲಿ ಬಿಜೆಪಿ ಒಂದಲ್ಲ ಒಂದು ರೀತಿಯಲ್ಲಿ ಭಾಗಿಯಾಗಿದೆ. ಹಾಗಾದರೆ ಅಂಥದ್ದೊಂದು ವೀಡಿಯೋ ಹುಟ್ಟಿಕೊಂಡದ್ದು ಹೇಗೆ? ಅದನ್ನು ಚಿತ್ರೀಕರಿಸಿದ್ದು ಎಲ್ಲಿ ಮತ್ತು ಯಾರು? ಒಂದು ವೀಡಿಯೋಕ್ಕೆ ಪ್ರಚೋದನೆಗೊಳ್ಳುವಂತಹ ಕಾರ್ಯಕರ್ತ ಪಡೆಯನ್ನು ತಯಾರಿಸಲು ಎಷ್ಟು ಸಮಯ ತಗಲಿದೆ? ಅಂಥದ್ದೊಂದು ತರಬೇತಿಯನ್ನು ಯಾರು ಕೊಟ್ಟಿದ್ದಾರೆ? ಯಾವಾಗ ಮತ್ತು ಎಷ್ಟು ಸಮಯದಿಂದ ಇಂಥ ತರಬೇತಿಗಳು ನಡೆಯುತ್ತಿವೆ? ಸಣ್ಣದೊಂದು ವೀಡಿಯೋಗೆ ಇದ್ದಕ್ಕಿದ್ದಂತೆ ಕಾನೂನು, ನ್ಯಾಯ, ಸತ್ಯ, ಮನುಷ್ಯತ್ವ.. ಮುಂತಾದ ಮೌಲ್ಯಗಳನ್ನೆಲ್ಲ ನಿರ್ಲಕ್ಷಿಸಿ ಕೊಲೆಗೆ ಸಿದ್ಧವಾಗುವ ಗುಂಪೊಂದನ್ನು ಸೇರಿಸಲು ಸಾಧ್ಯವೇ? ಅದರ ಹಿಂದೆ ತಕ್ಷಣದ ಪ್ರಚೋದನೆಯ ಹೊರತಾದ ಇನ್ನಾವುದೂ ಇಲ್ಲವೇ? ಅಖ್ಲಾಕ್‍ನ ಹತ್ಯೆಗೆ ನಿಜವಾಗಿಯೂ ಕಾರಣವಾಗಿರುವುದು ಗೋವೋ ಅಥವಾ ರಾಜಕೀಯವೋ? ಅಂದಹಾಗೆ, ಗೋವುಗಳ ರಕ್ಷಣೆಗೆ ಯಾವೊಂದು ಯೋಜನೆಯನ್ನೂ ರೂಪಿಸದೆಯೇ ಅಖ್ಲಾಕ್‍ನನ್ನೋ ಇನ್ನಾರನ್ನೋ ಕೊಲ್ಲುವುದು ಗೋವುಗಳ ರಕ್ಷಣೆಯಲ್ಲಿ ಪರಿಣಾಮವನ್ನು ಬೀರಬಹುದೇ? ನಿಜವಾಗಿ, ಗೋವಿನ ಹೆಸರಲ್ಲಿ ನಡೆಯುವ ಪ್ರತಿ ಹಲ್ಲೆ ಮತ್ತು ಹತ್ಯೆಯಲ್ಲೂ ಸಮಾಜದಲ್ಲೊಂದು ಧ್ರುವೀಕರಣ ನಡೆಯುತ್ತದೆ. ಹಿಂದೂ-ಮುಸ್ಲಿಮರ ನಡುವೆ ಅನುಮಾನಗಳ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ. ಯಾವಾಗ ಕೋಮು ಸಂಘರ್ಷ ನಡೆಯುತ್ತದೋ ಎಂಬ ಭೀತಿಯೊಂದು ಸಮಾಜವನ್ನು ಕಾಡತೊಡಗುತ್ತದೆ. ಇದರ ಜೊತೆ ಜೊತೆಗೇ ಬಿಜೆಪಿಗೆ ಬೀಳುವ ಓಟಿನ ಅನುಪಾತದಲ್ಲಿ ವೃದ್ಧಿಯಾಗುತ್ತಲೂ ಇರುತ್ತದೆ. ಹಾಗಂತ, ಈ ಥಳಿತ, ಹತ್ಯೆಯ ಹೊರತಾಗಿ ಗೋವುಗಳ ರಕ್ಷಣೆಗಾಗಿ ಬಿಜೆಪಿಯಿಂದ ಯಾವುದಾದರೂ ದೀರ್ಘಾವಧಿ ಕಾರ್ಯಯೋಜನೆ ರಚನೆಗೊಂಡದ್ದು ಈ ವರೆಗೂ ನಡೆದಿಲ್ಲ. ರಾಜಕೀಯವಾಗಿ ಸದಾ ಸುದ್ದಿಯಲ್ಲಿರುವುದಕ್ಕೆ ಅದು ಗೋವನ್ನು ಒಂದು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವಂತೆ ಅನ್ನಿಸುತ್ತದೆ. ಅಷ್ಟಕ್ಕೂ,
    ಅಖ್ಲಾಕ್‍ನ ಹತ್ಯೆಗೆ ಕಾರಣವಾದ ವೀಡಿಯೋದ ಮೂಲವನ್ನು ಪತ್ತೆ ಹಚ್ಚುವ ಬದಲು ಫ್ರೀಜರ್‍ನಲ್ಲಿದ್ದ ಮಾಂಸವನ್ನು ಫಾರೆನ್ಸಿಕ್ ಪರೀಕ್ಷೆಗೆ ಒಪ್ಪಿಸಿದ ಅಖಿಲೇಶ್ ಯಾದವ್‍ರನ್ನು ಏನೆಂದು ಕರೆಯಬೇಕು?

Wednesday, September 23, 2015

ಸಸ್ಯಾಹಾರ ಮಾತ್ರ ಸರಿ ಅನ್ನುವ ವಾದ ಎಲ್ಲಿಯವರೆಗೆ?

    “ನಿಷೇಧಿಸುವುದು ಅಭಿವೃದ್ಧಿಯ ಲಕ್ಷಣವಲ್ಲ, ಅದು ಅಸಹಾಯಕತೆ ಮತ್ತು ದಮನಕಾರಿ ಪ್ರವೃತ್ತಿಯ ಲಕ್ಷಣ. ಆಂತರಿಕ ಗೊಂದಲವನ್ನು ಸೃಷ್ಟಿಸಿ ಆ ಮೂಲಕ ಸಮಸ್ಯೆಗಳಿಂದ ಪಾರಾಗುವುದರ ಸೂಚನೆಯಿದು. ಅಡಾಲ್ಫ್ ಹಿಟ್ಲರನು ತನ್ನನ್ನು ಶುದ್ಧ ಆರ್ಯನ್ ಎಂದು ಘೋಷಿಸಿದ್ದ ಮತ್ತು ಸ್ವಸ್ತಿಕ್ ಅನ್ನು ತನ್ನ ಚಿಹ್ನೆಯಾಗಿ ಆರಿಸಿಕೊಂಡಿದ್ದ. ಆದರೆ ಮಿಲಿಯಾಂತರ ಮಂದಿಯನ್ನೂ ಕೊಂದ. ತನ್ನ ನಾಝಿ ಪಕ್ಷವನ್ನು (NSS) ಹೊರತುಪಡಿಸಿ ಉಳಿದೆಲ್ಲ ಪಕ್ಷಗಳನ್ನೂ ನಿಷೇಧಿಸಿದ. ಬಿಜೆಪಿ ಅದೇ ಹಾದಿಯಲ್ಲಿ ಚಲಿಸುತ್ತಿದೆಯೇ? ಇಲ್ಲ, ಭಾರತದಲ್ಲಿ ಇದು ಯಶಸ್ವಿಯಾಗದು. ಆಹಾರವು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಏನನ್ನು ಸೇವಿಸಬೇಕು ಮತ್ತು ಏನನ್ನು ಸೇವಿಸಬಾರದು ಎಂಬುದನ್ನು ಜನರೇ ತೀರ್ಮಾನಿಸಲಿ.." ಎಂದು ಸತ್ಯಮ್ ಎಂಬವರು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಪತ್ರ ಬರೆದರೆ,
    "ದೈಹಿಕ ಆರೋಗ್ಯ ಮಾತ್ರವಲ್ಲ, ಪರಿಸರದ ಆರೋಗ್ಯದ ದೃಷ್ಟಿಯಿಂದಲೂ ಮಾಂಸಾಹಾರ ಸೇವನೆಯು ಉತ್ತಮವಲ್ಲ ಎಂದು ವಿಜ್ಞಾನಿಗಳೇ ಹೇಳುತ್ತಾರೆ. ಅತ್ಯಂತ ಹೆಚ್ಚು ಮಾಂಸ ಬಳಸುವ ರಾಷ್ಟ್ರವಾದ ಅಮೇರಿಕದ ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಮತ್ತು ಅಮೇರಿಕನ್ ಕ್ಯಾನ್ಸರ್ ಸೊಸೈಟಿಗಳು ಮಾಂಸಾಹಾರದ ವಿರುದ್ಧ ಮಾತಾಡಿವೆ. ಮಾಂಸಾಹಾರವು ಕ್ಯಾನ್ಸರ್, ಜನನ ಸಂಬಂಧಿ ರೋಗಗಳು, ಹೃದಯ ಕಾಯಿಲೆ, ರಕ್ತನಾಳಗಳಲ್ಲಿ ತಡೆ, ಮೆದುಳು ಮತ್ತು ಮಾಂಸಖಂಡಗಳ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹಿಂದೂ ಧರ್ಮವು ಇದನ್ನು ಆರೋಗ್ಯಕ್ಕೆ ಉತ್ತಮವಲ್ಲ ಎಂದು ಕರೆದು ‘ತಾಮಸ’ ಪಟ್ಟಿಯಲ್ಲಿಟ್ಟಿದೆ. ಮಾಂಸಾಹಾರದಿಂದ ವಾತಾವರಣದ ಮೇಲೆಯೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ.." ಎಂದು ಸಂಜಯ್ ಎಂಬವರು ಬರೆದರು. "ಈ ನಿಷೇಧವನ್ನು ನಾವು ಆರೋಗ್ಯದ ದೃಷ್ಟಿಯಿಂದ ನೋಡುವುದಾದರೆ, ಮೊದಲು ನಿಷೇಧಕ್ಕೆ ಒಳಗಾಗಬೇಕಾದದ್ದು ಧೂಮಪಾನವಲ್ಲವೇ? ಯಾಕೆ ಅದನ್ನು ಈ ವರೆಗೂ ನಿಷೇಧಿಸಿಲ್ಲ? ಸಾಮಾನ್ಯವಾಗಿ ಕೊಬ್ಬಿನಂಶವುಳ್ಳ ಯಾವುದೇ ಆಹಾರವು ರಕ್ತನಾಳಗಳ ತಡೆಗೆ (Block) ಕಾರಣವಾಗುತ್ತದೆ. ಅದಕ್ಕೆ ಮಾಂಸವೇ ಆಗಬೇಕಿಲ್ಲ. ಎಣ್ಣೆ, ಬೆಣ್ಣೆಗಳೂ ರಕ್ತನಾಳಗಳ ತಡೆಗೆ ಕಾರಣವಾಗಬಲ್ಲುದು. ಇದಕ್ಕೆ ಆಹಾರ ಕ್ರಮಗಳಲ್ಲಿ ಪಥ್ಯವನ್ನು ಅಳವಡಿಸಿಕೊಳ್ಳಬೇಕೇ ಹೊರತು ನಿಷೇಧವನ್ನಲ್ಲ. ಆಹಾರಗಳ ಮೇಲೆ ನಿಷೇಧ ವಿಧಿಸದೆಯೇ ನಾವಿದನ್ನು ಜಾರಿಗೊಳಿಸಬೇಕು.." ಎಂದು ವೈಶಾಕ್ ಎಂಬವರು ಇದಕ್ಕೆ ಪ್ರತಿಕ್ರಿಯಿಸಿದರು. ಒಂದು ರೀತಿಯಲ್ಲಿ, ಆಂಗ್ಲ ಪತ್ರಿಕೆಗಳ ಇಂಟರ್‍ನೆಟ್ ಆವೃತ್ತಿಯ ತುಂಬ ಓದುಗರ ಇಂತಹ ನೂರಾರು ಪತ್ರಗಳಿವೆ. ಜೈನರ ‘ಪರ್ಯೂಷಣ್’ ಹಬ್ಬದ ಪ್ರಯುಕ್ತ ಮಹಾರಾಷ್ಟ್ರ, ಚತ್ತೀಸ್‍ಗಢ, ಹರ್ಯಾಣ, ಮಧ್ಯಪ್ರದೇಶ, ಗುಜರಾತ್ ಮುಂತಾದ ರಾಜ್ಯಗಳ ಬಿಜೆಪಿ ಸರಕಾರಗಳು ಮಾಂಸಾಹಾರದ ವಿರುದ್ಧ ವಿಧಿಸಿದ ನಿಷೇಧ ಕ್ರಮವನ್ನು ಇಲ್ಲಿ ಪ್ರಶ್ನಿಸಲಾಗಿದೆ. ಪರ-ವಿರುದ್ಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಾಗಿದೆ. ಭಾರತದಿಂದ ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುವ ಅತಿ ದೊಡ್ಡ ಕಸಾಯಿ ಕಂಪೆನಿಯಾದ ಅಲ್ ಕಬೀರ್‍ನ ಮಾಲಿಕರು ಜೈನರಾಗಿದ್ದಾರೆ ಎಂದು ಅಭಿಪ್ರಾಯಪಟ್ಟವರಿದ್ದಾರೆ. ಭಾರತದ ಜನಸಂಖ್ಯೆಯಲ್ಲಿ ಶೇ. 0.36ರಷ್ಟಿರುವ ಜೈನರಿಗೆ ಸರಕಾರಗಳು ಇಷ್ಟರ ಮಟ್ಟಿಗೆ ಸ್ಪಂದಿಸುವುದಾದರೆ ಶೇ. 14ರಷ್ಟಿರುವ ಮುಸ್ಲಿಮರಿಗೆ ಸ್ಪಂದಿಸದೇ ಇರುವುದಕ್ಕೆ ಕಾರಣಗಳೇ ಇಲ್ಲ ಎಂದು ವಾದಿಸಿದವರಿದ್ದಾರೆ. ಮುಸ್ಲಿಮರ ಉಪವಾಸದ 30 ದಿನಗಳಲ್ಲಿ ಮುಸ್ಲಿಮ್ ಬಾಹುಳ್ಯದ ಪ್ರದೇಶಗಳಲ್ಲಿ ಬಿಯರ್, ವೈನ್, ಡಾನ್ಸ್ ಬಾರ್‍ಗಳನ್ನು ನಿಷೇಧಿಸಬೇಕೆಂದು ಮುಸ್ಲಿಮ್ ಯುವ ಮೋರ್ಚಾದ ಅಧ್ಯಕ್ಷ ಹುದೈಫಾ ಎಲೆಕ್ಟ್ರಿಕ್‍ವಾಲಾ ಎಂಬವರು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದನ್ನು ಬೆಂಬಲಿಸಿದವರಿದ್ದಾರೆ. 2014ರ ಚುನಾವಣಾ ಅಭಿಯಾನದ ವೇಳೆ ನರೇಂದ್ರ ಮೋದಿಯು ಘೋಷಿಸಿದ Minimum Government Maximum Governance (ಕನಿಷ್ಠ ಸರಕಾರ ಗರಿಷ್ಠ ಆಡಳಿತ) ಎಂಬ ಸ್ಲೋಗನ್ ಇವತ್ತು Maximum Government Minimum sence  (ಗರಿಷ್ಠ ಸರಕಾರ ಕನಿಷ್ಠ ಪ್ರಜ್ಞೆ) ಆಗಿ ಬದಲಾಗಿದೆ ಎಂದು ಚುಚ್ಚಿದವರಿದ್ದಾರೆ. ನಿಷೇಧಗಳಿಗೆ ನಿಷೇಧ ವಿಧಿಸಿ ಎಂದು ಆಗ್ರಹಿಸಿದವರಿದ್ದಾರೆ. ಅಷ್ಟಕ್ಕೂ,
    ಕಾಂಗ್ರೆಸ್‍ನ ಜಾತ್ಯತೀತತೆಯನ್ನು ಸ್ಯೂಡೋ ಸೆಕ್ಯುಲರಿಸಂ (ನಕಲಿ ಜಾತ್ಯತೀತತೆ) ಎಂದು ಹಂಗಿಸಿದ್ದ ಬಿಜೆಪಿ ಇದೀಗ ಸ್ಯೂಡೋ ರಿಲೀಜಿಯಾಸಿಟಿ (ನಕಲಿ ಧಾರ್ಮಿಕತೆ)ಯನ್ನು ಪ್ರದರ್ಶಿಸುತ್ತಿರುವುದೇಕೆ? 2009 ಎಪ್ರಿಲ್ 20ರಂದು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮನ್‍ಮೋಹನ್ ಸಿಂಗ್ ಸರಕಾರದ ಜಾತ್ಯತೀತ ಸಿದ್ಧಾಂತವನ್ನು ‘ಸ್ಯೂಡೋ ಸೆಕ್ಯುಲರಿಸಂ’ ಎಂದು ಅಂದಿನ ಪ್ರಧಾನಿ ಅಭ್ಯರ್ಥಿಯಾಗಿದ್ದ ಅಡ್ವಾಣಿಯವರು ಟೀಕಿಸಿದ್ದರು. ಬಿಜೆಪಿ ಆ ಪದವನ್ನು ಆ ಬಳಿಕ ನೂರಾರು ಬಾರಿ ಬಳಸಿದೆ. ಅಂತೋನಿ ಎಲಿಂಜಿಮಿತ್ತಮ್ ಎಂಬವರು ತಮ್ಮ ‘ಫಿಲಾಸಫಿ ಏಂಡ್ ಆ್ಯಕ್ಷನ್ ಆಫ್ ದ ಆರೆಸ್ಸೆಸ್ ಫಾರ್ ದ ಹಿಂದ್ ಸ್ವರಾಜ್’ ಎಂಬ ಕೃತಿಯಲ್ಲಿ ಈ ಪದವನ್ನು ಮೊತ್ತಮೊದಲು ಬಳಸಿದ್ದರೂ ಅದನ್ನು ಜನಪ್ರಿಯಗೊಳಿಸಿದ್ದು ಅಡ್ವಾಣಿ. Our  issue is what is genuine  Secularism and pseudo  Secularism. What  we have said is that the Congress practices pseudo Secularism .. (ಅಸಲಿ ಮತ್ತು ನಕಲಿ ಜಾತ್ಯತೀತತೆಯೇ ನಮ್ಮ ನಡುವಿನ ಚರ್ಚಾ ವಿಷಯ. ಕಾಂಗ್ರೆಸ್ ಇವತ್ತು ಏನನ್ನು ಪಾಲಿಸುತ್ತಿದೆಯೋ ಅದು ನಕಲಿ ಜಾತ್ಯತೀತತೆ ಎಂದೇ ನಾವು ಹೇಳುತ್ತೇವೆ) ಎಂದಿದ್ದ ಅಡ್ವಾಣಿಯವರು ಇವತ್ತು ಬಿಜೆಪಿ ಸರಕಾರಗಳ ಧಾರ್ಮಿಕತೆಗೆ ಏನೆನ್ನುತ್ತಾರೆ? ಇದು ನಕಲಿ ಧಾರ್ಮಿಕತನವಲ್ಲವೇ? ಆಹಾರ ಪದ್ಧತಿಯೆಂಬುದು ತೀರಾ ಸಂಕೀರ್ಣವಾದುದು. ಸಾಮಾಜಿಕ, ಆರ್ಥಿಕ, ಭೌಗೋಳಿಕ, ಸಾಂಸ್ಕ್ರಿತಿಕ ಕಾರಣಗಳನ್ನು ಅದು ಒಳಗೊಂಡಿದೆ. ಭೂಮಿಯ ಮುಕ್ಕಾಲು ಭಾಗವೂ ನೀರಿನಿಂದ ಕೂಡಿದೆ ಎಂಬುದು ಸಸ್ಯಾಹಾರವನ್ನು ಪವಿತ್ರ ಎಂದು ಪ್ರತಿಪಾದಿಸುವವರಿಗೆ ಗೊತ್ತಿಲ್ಲದ್ದೇನಲ್ಲ. ಈ ಮುಕ್ಕಾಲು ಭಾಗದಲ್ಲಿ ಅರಬ್ ರಾಷ್ಟ್ರಗಳು ಮರಳಿನಿಂದ ಸುತ್ತುವರಿದಿವೆ. ಯುರೋಪ್ ಖಂಡವನ್ನು ಹಿಮ ಆವರಿಸಿದ್ದರೆ, ಆಫ್ರಿಕಾ ಖಂಡವನ್ನು ಅರಣ್ಯವು ನುಂಗಿದೆ. ಹೀಗೆ ಮರಳು, ಹಿಮ, ಕಾಡು ಮತ್ತು ನೀರುಗಳಿಂದ ಹೊರತಾದ ಈ ತುಂಡು ಭೂಮಿಯಲ್ಲಿ ಕೃಷಿ ಯೋಗ್ಯ ಭೂಮಿ ಎಷ್ಟಿರಬಹುದು ಎಂಬುದನ್ನು ವಿವರಿಸಬೇಕಿಲ್ಲ. ಅದರ ಪ್ರಮಾಣ ತೀರಾ ತೀರಾ ಕಡಿಮೆ. ಇಷ್ಟೊಂದು ಕಡಿಮೆ ಪ್ರದೇಶದಲ್ಲಿ ಬೆಳೆಯುವ ತರಕಾರಿಗಳೋ ಹಣ್ಣು ಹಂಪಲುಗಳೋ ಅಥವಾ ಇನ್ನಿತರ ಸಸ್ಯ ಪ್ರಭೇದಗಳೋ ಭೂಮಿಯ ಸಕಲ ಮನುಷ್ಯರ ಹೊಟ್ಟೆ ತುಂಬಿಸಲು ಸಾಕಾಗಬಲ್ಲುದೇ? ಭೂಮಿಯ 600 ಕೋಟಿಗಿಂತಲೂ ಅಧಿಕ ಮಂದಿಯ ಆಹಾರದ ಬೇಡಿಕೆಯನ್ನು ಪೂರೈಸಲು ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾಗಿರುವ ಕೃಷಿ ಭೂಮಿಗಳು ಸಮರ್ಥವೇ? ಮಾಂಸಾಹಾರವೇ ಸರಿ ಎಂದು ವಾದಿಸುವವರು ಉತ್ತರಿಸಬೇಕಾದ ಪ್ರಶ್ನೆಯಿದು. ‘ಭೂಮಿಯಲ್ಲಿರುವ ಒಟ್ಟು ಸಸ್ಯ ಪ್ರಬೇಧಗಳು 3,50,000 ಎಂದು ಹೇಳಲಾಗುತ್ತಿದ್ದು ಇವುಗಳಲ್ಲಿ ಮನುಷ್ಯರು ತಿನ್ನಲು ಯೋಗ್ಯವಾದ ಸಸ್ಯ ಪ್ರಬೇಧಗಳು 80,000 ಮಾತ್ರ. ಇವುಗಳಲ್ಲಿ 150 ಪ್ರಬೇಧಗಳನ್ನು ಮಾತ್ರ ಕೃಷಿಯ ರೂಪದಲ್ಲಿ ಬೆಳೆಯಲಾಗುತ್ತದೆ. ಈ 150 ಪ್ರಬೇಧಗಳಲ್ಲಿ 30 ಪ್ರಬೇಧಗಳು ಮಾತ್ರ 95% ಮನುಷ್ಯರಿಗೆ ಬೇಕಾದ ಕ್ಯಾಲೋರಿ ಮತ್ತು ಪ್ರೊಟೀನ್‍ಗಳನ್ನು ಉತ್ಪಾದಿಸುತ್ತದೆ’ (ಮಾಹಿತಿ: ನೀಲಾ ಕೆ.) ಎಂಬ ಅಭಿಪ್ರಾಯವಿದೆ. ಆಹಾರವನ್ನು ಪವಿತ್ರ ಮತ್ತು ಅಪವಿತ್ರತೆಯ ತಟ್ಟೆಯಲ್ಲಿಟ್ಟು ನೋಡುವವರು ಯಾಕೆ ಇಂಥ ಅಂಕಿ ಅಂಶಗಳ ಬಗ್ಗೆ ಮಾತೇ ಆಡುತ್ತಿಲ್ಲ? ಒಂದು ವೇಳೆ, ಸಸ್ಯಾಹಾರವು ಪವಿತ್ರವೇ ಆಗಿರುತ್ತಿದ್ದರೆ ಮತ್ತು ಪ್ರಾಕೃತಿಕವಾಗಿ ಅದು ಮಾತ್ರ ಸರಿ ಆಗಿರುತ್ತಿದ್ದರೆ ಭೂಮಿಯ ಸಕಲ ಮನುಷ್ಯರಿಗೂ ವಿಫುಲವಾಗಿ ಅದು ಲಭ್ಯವಾಗುವಂತಹ ವಾತಾವರಣ ಇರಬೇಕಿತ್ತಲ್ಲ? ಧರ್ಮವೊಂದು ಸಸ್ಯಾಹಾರವನ್ನು ಮಾತ್ರ ಆಹಾರ ಕ್ರಮವಾಗಿ ಆದೇಶಿಸಿರುತ್ತಿದ್ದರೆ ಆ ಸಸ್ಯಾಹಾರವು ಸ್ಥಳ, ಕಾಲ, ವಾತಾವರಣಗಳಾಚೆಗೆ ಎಲ್ಲೆಡೆಯೂ ಲಭ್ಯವಾಗಬೇಕಿತ್ತು. ಅರಬ್‍ನಲ್ಲೂ, ಆಫ್ರಿಕಾದಲ್ಲೂ, ಆಸ್ಟ್ರೇಲಿಯಾದಲ್ಲೂ, ಯುರೋಪ್ ಖಂಡಗಳಲ್ಲೂ ವಿಫುಲವಾಗಿ ಅದು ಬೆಳೆಯಬೇಕಿತ್ತು ಅಥವಾ ಸಿಗಬೇಕಿತ್ತು. ಧರ್ಮಕ್ಕೆ ನಿರ್ದಿಷ್ಟ ದೇಶ, ವಾತಾವರಣ, ಕಾಲ ಎಂಬ ಸೀಮಿತತೆಯೇನೂ ಇಲ್ಲವಲ್ಲ. ಜೈನ ಅಥವಾ ಹಿಂದೂ ಧರ್ಮೀಯನೋರ್ವ ಅರಬ್ ಖಂಡದ ಯಾವುದೋ ಒಂದು ಮೂಲೆಯಲ್ಲಿ ವಾಸಿಸಬಹುದಲ್ಲವೇ? ಅಲ್ಲೂ ಆತ/ಕೆ/ನಿಗೆ ಸಸ್ಯಾಹಾರ ವಿಫುಲವಾಗಿ ಲಭ್ಯವಾಗಬೇಕಲ್ಲವೇ? ಆದರೆ ಸಸ್ಯಾಹಾರದ ಮಟ್ಟಿಗೆ ಇಂಥದ್ದೊಂದು ವಾತಾವರಣ ಎಲ್ಲೂ ಇಲ್ಲ. ಜಗತ್ತಿನ ಹೆಚ್ಚಿನ ರಾಷ್ಟ್ರಗಳು ಮಾಂಸಾಹಾರವನ್ನೇ ನೆಚ್ಚಿಕೊಂಡಿವೆ. ಸಸ್ಯಾಹಾರ ಅಲಭ್ಯವಾಗಿರುವ ಪ್ರದೇಶಗಳು ಇವೆ.ಅನೇಕ ಕಡೆ ಸಾಮಾನ್ಯ ಮಂದಿ ಸಸ್ಯಾಹಾರವನ್ನು ಖರೀದಿಸದಷ್ಟೂ ಅದು ತುಟ್ಟಿಯಾಗಿದೆ.  ಹೀಗಿದ್ದೂ, ಮಾಂಸಾಹಾರವನ್ನು ಅಧಾರ್ಮಿಕದಂತೆ ಮತ್ತು ಸಸ್ಯಾಹಾರವನ್ನು ಧಾರ್ಮಿಕದಂತೆ ಬಿಜೆಪಿ ವಿಭಜಿಸಿದ್ದು ಯಾಕಾಗಿ? ಇದು ಯಾವ ಬಗೆಯ ಧಾರ್ಮಿಕತೆ? ಮಾಂಸಾಹಾರವನ್ನು ಅಧಾರ್ಮಿಕವಾಗಿ ಕಾಣುವುದು ಒಂದು ರೀತಿಯಲ್ಲಿ ಹಿಂದೂ ಅಥವಾ ಜೈನ ಧರ್ಮವನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿದಂತೆ. ಅದರಾಚೆಗೆ ಬೆಳೆಯುವ ಸಾಮರ್ಥ್ಯ ಈ ಧರ್ಮಗಳಿಗೆ ಇಲ್ಲ ಎಂದು ಒಪ್ಪಿಕೊಂಡಂತೆ. ನಿಜವಾಗಿ, ಇದು ಧರ್ಮಗಳಿಗೆ ಮಾಡುವ ಅವಮಾನ. ಧರ್ಮ ಯಾವುದಾದರೊಂದು ಪ್ರದೇಶಕ್ಕೆ ಸೀಮಿತಗೊಳ್ಳಬೇಕಾದ ವಿಷಯವಲ್ಲ. ಅದು ಸ್ಥಾವರವಲ್ಲ, ಜಂಗಮ. ಸಸ್ಯಾಹಾರ ಮಾತ್ರ ಸರಿ ಎಂದು ವಾದಿಸುವುದು ಧರ್ಮದ ಈ ಜಂಗಮ ಸ್ವರೂಪವನ್ನೇ ನಿರಾಕರಿಸಿದಂತಾಗುತ್ತದೆ. ಬಹುಶಃ, ಮಾಂಸಾಹಾರ ನಿಷೇಧದ ವಿರುದ್ಧ ಬಿಜೆಪಿ ಬೆಂಬಲಿಗರಿಂದಲೇ ವಿರೋಧ ವ್ಯಕ್ತವಾಗಿರುವುದರ ಹಿಂದೆ ಈ ಸತ್ಯದ ಅರಿವೂ ಕಾರಣವಾಗಿರಬಹುದು. ಹಿಂದೂ ಧರ್ಮವನ್ನು ಜೀವನ ವ್ಯವಸ್ಥೆ ಎಂದು ಈ ಹಿಂದೆ ಸುಪ್ರೀಮ್ ಕೋರ್ಟು ವ್ಯಾಖ್ಯಾನಿಸಿತ್ತು. ಆ ವ್ಯಾಖ್ಯಾನವನ್ನು ಇದೇ ಬಿಜೆಪಿ ಮತ್ತು ಸಂಘಪರಿವಾರಗಳು ದೇಶದಾದ್ಯಂತ ಆಗಾಗ ಹೇಳಿಕೊಳ್ಳುತ್ತಿವೆ. ಜೀವನ ವ್ಯವಸ್ಥೆಯೊಂದು ಅರಬ್‍ನಾಡಿನಲ್ಲಿದ್ದರೂ ಯುರೋಪ್ ಖಂಡದಲ್ಲಿದ್ದರೂ ಆಫ್ರಿಕಾದ ಇನ್ನಾವುದೋ ನಾಡಿನಲ್ಲಿದ್ದರೂ ಪಾಲನೆಗೆ ಯೋಗ್ಯ ಇರಬೇಕಲ್ಲವೇ? ಬರೇ ಸಸ್ಯಾಹಾರವನ್ನೇ ನೆಚ್ಚಿಕೊಂಡು ಈ ಎಲ್ಲ ರಾಷ್ಟ್ರಗಳಲ್ಲಿ ಹಿಂದೂ ಧರ್ಮದಂತೆ ಬದುಕಲು ಸಾಧ್ಯವೇ? ‘ಜೀವನ ವ್ಯವಸ್ಥೆ’ ಎಂಬ ಪದಕ್ಕೆ ‘ಸಕಲ ವಾತಾವರಣ, ಭೂಪ್ರದೇಶಗಳಲ್ಲೂ ಪಾಲಿಸಲು ಯೋಗ್ಯವಾದುದು’ ಎಂಬ ಅರ್ಥ ಇದೆಯೆಂದಾದರೆ ಆ ವಿಶಾಲಾರ್ಥವನ್ನು ಸಂಕುಚಿತಗೊಳಿಸುತ್ತಿರುವುದು ಯಾರು? ಅವರ ಉದ್ದೇಶವೇನು? ಭಾರತದ ಭೂಪ್ರದೇಶದಿಂದ ಹೊರಗೆ ಅಸ್ತಿತ್ವದಲ್ಲಿರಲು ಅಪರ್ಯಾಪ್ತ ಎಂದು ಪರೋಕ್ಷವಾಗಿ ಅವರು ಹಿಂದೂ ಧರ್ಮವನ್ನು ವ್ಯಾಖ್ಯಾನಿಸುತ್ತಿರುವುದು ಏಕೆ? ಮಾಂಸಾಹಾರವನ್ನು ಅಪವಿತ್ರ ಎಂದು ವ್ಯಾಖ್ಯಾನಿಸುವವರು ಒಂದು ರೀತಿಯಲ್ಲಿ ಹಿಂದೂ ಧರ್ಮದ ಯೋಗ್ಯತೆಯನ್ನೇ ಪ್ರಶ್ನಿಸುತ್ತಿದ್ದಾರೆ. ಭಾರತ ಉಪ ಭೂಖಂಡದ ಹೊರಗೆ ಹಿಂದೂ ಧರ್ಮದ ಪಾಲನೆ ಹೇಗೆ ಎಂಬ ಬಹುಮುಖ್ಯ ಪ್ರಶ್ನೆಯನ್ನು ಅವರು ಅಡಗಿಸುತ್ತಿದ್ದಾರೆ. ಹಿಂದೂ ಧರ್ಮವಾಗಲಿ, ಜೈನ ಧರ್ಮವಾಗಲಿ ಅವು ಯಾವುದಾದರೊಂದು ದೇಶಕ್ಕೆ ಸೀಮಿತಗೊಳ್ಳಬೇಕಾದ ಧರ್ಮಗಳು ಅಲ್ಲವೇ ಅಲ್ಲ. ಜಗತ್ತಿನಾದ್ಯಂತ ಹಬ್ಬುವುದಕ್ಕೆ ಮತ್ತು ಪಾಲನೆಗೆ ಅವುಗಳಿಗೆ ಸ್ವಾತಂತ್ರ್ಯ ಇದೆ. ಇದು ಸಾಧ್ಯವಾಗಬೇಕಾದರೆ ಆಹಾರದ ಕುರಿತಂತೆ ಇರುವ ‘ಸುಳ್ಳು'ಗಳಿಗೆ ನಿಷೇಧ ಬೀಳಬೇಕಾಗುತ್ತದೆ. ಸದ್ಯ ಭಾರತದಲ್ಲಿ ಬಿಜೆಪಿಯು ಈ ಸುಳ್ಳುಗಳ ನೇತೃತ್ವವನ್ನು ವಹಿಸಿಕೊಂಡಿದೆ. ಜೈನರ ಪರ್ಯೂಷಣ್‍ನ ನೆಪದಲ್ಲಿ ಸುಳ್ಳನ್ನು ವಿಜೃಂಭಿಸುವುದಕ್ಕೆ ಅದು ದಾರಿಯನ್ನು ಕಂಡುಕೊಂಡಿದೆ. ನಿಜವಾಗಿ, ಆಹಾರದಲ್ಲಿ ಪವಿತ್ರ ಅಥವಾ ಅಪವಿತ್ರ ಎಂದಿರುವುದಕ್ಕೆ ಸಾಧ್ಯವೇ ಇಲ್ಲ. ಮಾಂಸಾಹಾರವಾಗಲಿ ಸಸ್ಯಾಹಾರವಾಗಲಿ ಕೇವಲ ಆಹಾರ ಕ್ರಮಗಳು ಮಾತ್ರ. ಅದಕ್ಕೆ ಭಾವನಾತ್ಮಕತೆ ಯನ್ನೋ ಪವಿತ್ರತೆಯನ್ನೋ ಒದಗಿಸಿದ್ದು ಈ ದೇಶದ ರಾಜಕೀಯ. ತಮ್ಮ ಆಡಳಿತಾತ್ಮಕ ವೈಫಲ್ಯಗಳನ್ನು ಮುಚ್ಚಿಡುವುದಕ್ಕೆ ಅಥವಾ ರಾಜಕೀಯವಾಗಿ ಬೆಳೆಯುವುದಕ್ಕೆ ಇಂಥ ಇಶ್ಯೂಗಳನ್ನು ರಾಜಕೀಯ ದುರುಪಯೋಗಿಸುತ್ತಲೇ ಬಂದಿದೆ. ಕೆಲವು ನಿಷೇಧಗಳು, ಕೆಲವು ನಿಯಂತ್ರಣಗಳು ಮತ್ತು ಕೆಲವು ವಿವಾದಾತ್ಮಕ ಹೇಳಿಕೆಗಳೇ ಸಾಧನೆಯಾಗಿರುವ ನರೇಂದ್ರ ಮೋದಿ ಸರಕಾರದ ಮಟ್ಟಿಗೆ ಜೈನರ ಪರ್ಯೂಷಣ್ ಒಂದು ಇಶ್ಯೂ ಆಗಬೇಕಾದ ಅಗತ್ಯ ಖಂಡಿತ ಇದೆ. ಆದರೆ ಜೈನ ಧರ್ಮೀಯರಿಗೆ ಅದರ ಅಗತ್ಯವಿದೆಯೇ? ಹಿಂದೂ ಧರ್ಮೀಯರು ಅದನ್ನು ಬಯಸುತ್ತಿದ್ದಾರೆಯೇ? ಅಂದಹಾಗೆ,
     ಕಾಂಗ್ರೆಸ್‍ನ ಜಾತ್ಯತೀತತೆಯನ್ನು ಸ್ಯೂಡೋ ಸೆಕ್ಯುಲರಿಸಂ ಎಂದಿದ್ದ ಅಡ್ವಾಣಿಯವರು ಈಗೇನೆನ್ನುತ್ತಾರೋ?

Thursday, September 3, 2015

ಹರೆಯದ ಆಕರ್ಷಣೆಗೆ ಕುಸಿದುಹೋಗುವಷ್ಟು ದುರ್ಬಲವೇ ಹಿಂದೂ ಸಂಸ್ಕ್ರಿತಿ?

ಮಂಗಳೂರಿನಲ್ಲಿ  ಕಳೆದವಾರ ನಡೆದ ಅನೈತಿಕ ಗೂಂಡಾಗಿರಿ
  ಇದನ್ನು ಸಂಸ್ಕ್ರಿತಿಯ ರಕ್ಷಣೆ ಎನ್ನಬೇಕೋ ಅಥವಾ ಸಾಂಸ್ಕ್ರಿತಿಕ ಕಾಪಟ್ಯತನ ಎನ್ನಬೇಕೋ?
  1996ರಲ್ಲಿ ‘ವಿಚಾರ್ ವಿೂಮಾಂಸ' ಎಂಬ ಹಿಂದಿ ಪತ್ರಿಕೆಯು ಖ್ಯಾತ ಚಿತ್ರಕಾರ ಎಂ.ಎಫ್. ಹುಸೇನ್‍ರ ಕುರಿತಂತೆ, ‘ಈತ ಚಿತ್ರಕಾರನೋ ಅಥವಾ ಕಸಾಯಿಯೋ’ ಎಂಬ ಅರ್ಥ ಬರುವ ಶೀರ್ಷಿಕೆಯಲ್ಲಿ ಲೇಖನವೊಂದನ್ನು ಪ್ರಕಟಿಸಿತು. 1975ರಲ್ಲಿ ಹುಸೇನ್‍ರು ರಚಿಸಿದ್ದ ಚಿತ್ರಗಳು ಆ ಲೇಖನದಲ್ಲಿದ್ದುವು. ಎಲ್ಲವೂ ಹಿಂದೂ ದೇವತೆಗಳನ್ನು ನಗ್ನವಾಗಿ ತೋರಿಸುವ ಚಿತ್ರಗಳೇ. ಈ ಲೇಖನದ ಬಳಿಕ ಅವರ ಚಿತ್ರಗಳ (ಪೇಂಟಿಂಗ್) ಮೇಲೆ ದಾಳಿ ನಡೆಯಿತು. ಅವರಿಗೆ ‘ಹಿಂದೂ ವಿರೋಧಿ' ಎಂಬ ಹಣೆಪಟ್ಟಿಯನ್ನು ಕಟ್ಟಲಾಯಿತು. ದೇಶದ ಸುಮಾರು 8 ಕಡೆಗಳಲ್ಲಿ ಅವರ ಮೇಲೆ ಮೊಕದ್ದಮೆ ಹೂಡಲಾಯಿತು. ತಲೆ ಮರೆಸಿಕೊಂಡು ಓಡಾಡಬೇಕಾದ ಸ್ಥಿತಿಗೆ ತಲುಪಿದ ಹುಸೇನ್, ಕೊನೆಗೆ ಸ್ವ ಇಚ್ಛೆಯಿಂದ ದೇಶಾಂತರ ಹೊರಟು ಹೋದರು. 2005 ಮಾರ್ಚ್ 13ರಂದು ಉಡುಪಿ ಜಿಲ್ಲೆಯ ಆದಿ ಉಡುಪಿ ಎಂಬಲ್ಲಿ ಜಾನುವಾರು ವ್ಯಾಪಾರಿಗಳಾದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗ ಇಬ್ಬರನ್ನು ಬೆತ್ತಲೆಗೊಳಿಸಿ, ಮೈದಾನದಲ್ಲಿ ಪೆರೇಡ್ ನಡೆಸಲಾಯಿತು. ಬಹುಶಃ, ಕರಾವಳಿ ಭಾಗದಲ್ಲಿ ಗೋವನ್ನು ‘ಪವಿತ್ರ' ಮತ್ತು ಭಾವುಕ ಗೊಳಿಸುವ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು ಇಲ್ಲಿಂದಲೇ ಎಂದು ಹೇಳಬಹುದು. ಕರಾವಳಿ ಜಿಲ್ಲೆಗಳಲ್ಲಿ ಗೋವಿನ ಹೆಸರಲ್ಲಿ ಹಲ್ಲೆ, ದರೋಡೆ, ಹತ್ಯೆಗಳೆಲ್ಲ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡದ್ದು ಈ ಘಟನೆಯ ಬಳಿಕವೇ. ಹಾಗಂತ, ಅವರಿಬ್ಬರು ಗೋ ಕಳ್ಳ ಸಾಗಾಟಗಾರರೇನೂ ಆಗಿರಲಿಲ್ಲ. ಪರಂಪರಾಗತ ವ್ಯಾಪಾರವನ್ನಷ್ಟೇ ಅವರು ನಡೆಸಿಕೊಂಡು ಬರುತ್ತಿದ್ದರು. ಒಂದು ವೇಳೆ, ಇವರು ನಡೆಸಿದ ವ್ಯಾಪಾರದಲ್ಲಿ ಎಷ್ಟು ಗೋವುಗಳು ಕಸಾಯಿಖಾನೆಗೆ ಹೋಗಿವೆ ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದರೆ ಬೆತ್ತಲೆಕೋರರನ್ನೇ ಬೆತ್ತಲೆ ಮಾಡಬೇಕಾದಂತಹ ಸತ್ಯಗಳು ಹೊರಬೀಳುತ್ತಿದ್ದುವು. ಆದರೆ, ಬೆತ್ತಲೆಕೋರರನ್ನು ಪುಣ್ಯಕೋಟಿಗಳಾಗಿಯೂ ಇವರಿಬ್ಬರನ್ನು ಹೆಬ್ಬುಲಿಗಳಂತೆಯೂ ಪ್ರಚಾರ ಮಾಡಲಾಯಿತು. ಹೀಗೆ ಗೋರಕ್ಷಣಾ ಚಳವಳಿಗೆ ಅಭೂತಪೂರ್ವ ಆರಂಭವನ್ನು ಒದಗಿಸಲಾಯಿತು. 2009 ಜನವರಿ 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಅಮ್ನೇಶಿಯಾ ಎಂಬ ಹೆಸರಿನ ಪಬ್‍ನ ಮೇಲೆ ದಾಳಿ ನಡೆಯಿತು. ಸಂಘಪರಿವಾರದ ಕಾರ್ಯಕರ್ತರು ಇದರ ನೇತೃತ್ವ ವಹಿಸಿದ್ದರು. ಈ ದಾಳಿಯಲ್ಲಿ ಹೆಣ್ಣು-ಗಂಡು ಎಂಬ ಬೇಧವಿಲ್ಲದೆ ಹಿಗ್ಗಾ-ಮುಗ್ಗಾ ಥಳಿಸಲಾಯಿತು. ಮಾತ್ರವಲ್ಲ, ಆ ಥಳಿತವನ್ನು ನೈತಿಕತೆಯ ಹೆಸರಲ್ಲಿ ಸಾರ್ವಜನಿಕವಾಗಿಯೇ ಸಮರ್ಥಿಸುವಂಥ ಪ್ರಯತ್ನಗಳು ನಡೆದುವು. ಈ ದಾಳಿಯ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಅವರನ್ನು ಆರತಿ ಎತ್ತಿ ಸ್ವಾಗತಿಸುವಂತಹ ಪ್ರಕ್ರಿಯೆಗಳು ಕಾಣಿಸಿದುವು. ಒಂದು ರೀತಿಯಲ್ಲಿ, ಪುಣ್ಯ ಕೋಟಿಯಿಂದ ಸಮಾಜದ ಗಮನವನ್ನು ಹೆಣ್ಣು-ಗಂಡಿನ ಮೇಲೆ ತಿರುಗುವಂತೆ ಮಾಡಿದ ಅಥವಾ ಯೋಜನಾಬದ್ಧವಾಗಿ ಹಾಗೆ ಮಾಡಲಾದ ಘಟನೆ ಇದು. ಲವ್ ಜಿಹಾದ್ ಭಾರೀ ಸದ್ದು ಮಾಡತೊಡಗಿದ್ದು ಈ ಘಟನೆಯ ಬಳಿಕವೇ. ಹಾಜಬ್ಬ-ಹಸನಬ್ಬರನ್ನು ಬೆತ್ತಲೆಗೊಳಿಸುವ ಮೂಲಕ ಗೋವನ್ನು ಪವಿತ್ರಗೊಳಿಸುವಲ್ಲಿ ಯಶಸ್ವಿಯಾದ ಸಂಘಪರಿವಾರವು ಪಬ್ ದಾಳಿ ಮೂಲಕ ‘ಹಿಂದೂ ಸಂಸ್ಕ್ರಿತಿಯ’ ಚರ್ಚೆಯನ್ನು ಹುಟ್ಟು ಹಾಕಿತು. ಹಿಂದೂ ಯುವತಿ, ಮುಸ್ಲಿಮ್ ಯುವಕನೊಂದಿಗೆ ಮಾತಾಡುವುದು ಅಥವಾ ಸ್ನೇಹಿತೆಯಾಗುವುದು ಸಂಸ್ಕøತಿ ವಿರೋಧಿ ಎಂದು ದೊಡ್ಡ ದನಿಯಲ್ಲೇ ಪ್ರಚಾರ ಮಾಡಲಾಯಿತು. ಅಂಥವರಿಗೆ ಥಳಿಸುವುದನ್ನು ಸಂಸ್ಕ್ರಿತಿಯ ರಕ್ಷಣೆ ಎಂದು ಸಮರ್ಥಿಸಿಕೊಳ್ಳಲಾಯಿತು. ಪ್ರತಿ ಥಳಿತಕ್ಕೂ ಭಾವುಕ ಕತೆಯೊಂದನ್ನು ಹೆಣೆಯುವುದು ಮತ್ತು ಅದರ ಆಧಾರದಲ್ಲಿ ಸಮಾಜವೇ ಥಳಿತವನ್ನು ಸಮರ್ಥಿಸುವಂತಹ ಸನ್ನಿವೇಶವನ್ನು ನಿರ್ಮಾಣ ಮಾಡುವುದು ಆ ಬಳಿಕ ನಡೆಯತೊಡಗಿತು. 2012 ಜುಲೈ 28ರಂದು ಮಂಗಳೂರಿನಲ್ಲಿ ನಡೆದ ಹೋಮ್‍ಸ್ಟೇ ದಾಳಿಯು ರಾಷ್ಟ್ರೀಯವಾಗಿಯಷ್ಟೇ ಅಲ್ಲ, ಅಂತಾರಾಷ್ಟ್ರೀಯವಾಗಿಯೂ ಸುದ್ದಿಗೀಡಾಯಿತು. 7 ಮಂದಿ ಯುವಕರು ಮತ್ತು 5 ಮಂದಿ ಯುವತಿಯರು ಸೇರಿ ಬರ್ತ್‍ಡೇ ಪಾರ್ಟಿ ನಡೆಸುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಮಂದಿ ದಾಳಿ ನಡೆಸಿದ್ದರು. ಬಳಿಕ ಬಂಧಿತ ದಾಳಿಕೋರರನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಇಡೀ ಘಟನೆಗೆ ಸುಳ್ಳು ಕತೆಯೊಂದನ್ನು ಹೆಣೆದರು. ಅದನ್ನು ಗಾಂಜಾ ಪಾರ್ಟಿ, ಅನೈತಿಕತೆಯ ಪಾರ್ಟಿ ಎಂದೆಲ್ಲಾ ಕರೆದು ಸಮಾಜದ ಅನುಕಂಪವನ್ನು ಪಡೆಯಲು ಯತ್ನಿಸಿದರು. ಇದೀಗ ಮಂಗಳೂರಿನಲ್ಲಿ ಮತ್ತೋರ್ವ ಯುವಕ ಬೆತ್ತಲಾಗಿದ್ದಾನೆ. ಈ ಬೆತ್ತಲೆಗೂ ಸುಳ್ಳು ಚಿತ್ರಕತೆಯೊಂದನ್ನು ರಚಿಸಲಾಗಿದೆ. ಅದನ್ನು  ಯುವತಿಯ ಬಾಯಲ್ಲಿ ಬಲವಂತದಿಂದ ಹೇಳಿಸಲಾಗಿದೆ. ಅಷ್ಟಕ್ಕೂ,
  ಸಂಸ್ಕ್ರಿತಿ ಅಂದರೇನು? ಹಿಂದು ಹೆಣ್ಣು ಮಗಳೊಬ್ಬಳು ಮುಸ್ಲಿಮ್ ಯುವಕನೊಂದಿಗೆ ಮಾತಾಡಿದ ಅಥವಾ ಗೆಳೆತನದಲ್ಲಿ ಏರ್ಪಟ್ಟ ಮಾತ್ರಕ್ಕೇ ಹರಿದುಹೋಗುವಷ್ಟು ತೆಳುವಾದುದೇ ಈ ಸಂಸ್ಕ್ರಿತಿ? ಹಿಂದೂ ಧರ್ಮಕ್ಕೆ ಪುರಾತನ ಇತಿಹಾಸವಿದೆಯೆಂದು ಈ ದಾಳಿಕೋರರೇ ಹೇಳುತ್ತಾರೆ. ಸಿಂಧೂ ನದಿಯ ನಾಗರಿಕತೆಯೊಂದಿಗೆ ಹಿಂದೂ ಧರ್ಮವನ್ನು ತಳಕು ಹಾಕುತ್ತಾ ನೋಡುವ ಪರಿಪಾಠ ಈ ದೇಶದಲ್ಲಿದೆ. ಯೋಗ ಈ ದೇಶದ್ದೇ ಕೊಡುಗೆ, ಆಯುರ್ವೇದ ಇಲ್ಲಿಯೇ ಹುಟ್ಟು ಪಡೆದಿದೆ ಎಂದೂ ಹೇಳಲಾಗುತ್ತದೆ. ಇವತ್ತಿನ ಪ್ರನಾಳ ಶಿಶು ಸಂಶೋಧನೆಯು ಹಿಂದೂ ಇತಿಹಾಸದಲ್ಲಿ ಎಂದೋ ಪ್ರಾಯೋಗಿಕವಾಗಿ ಸಾಬೀತುಗೊಂಡಿದೆ ಎಂದು ಸಂಘ ಪರಿವಾರವು ಹೆಮ್ಮೆ ಪಡುತ್ತದೆ. ಒಂದು ರೀತಿಯಲ್ಲಿ, ಹಿಂದೂ ಇತಿಹಾಸದ ಬಗ್ಗೆ ಈ ಮಂದಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ನೋಡಿದರೆ ಗೆಳೆತನ, ಪ್ರೇಮ ಪ್ರಕರಣ ಅಥವಾ ಮಾತುಕತೆಗಳಿಂದ ಕಳೆದು ಹೋಗಬಹುದಾದಷ್ಟು ಜುಜುಬಿ ಸಂಸ್ಕ್ರಿತಿ ಹಿಂದೂ ಧರ್ಮದ್ದಲ್ಲ ಎಂದು ಯಾರೇ ಆಗಲಿ ಹೇಳಿಯಾರು. ಇಷ್ಟಿದ್ದೂ, ಸಂಸ್ಕ್ರಿತಿಯ ಹೆಸರಲ್ಲಿ ಸಂಘಪರಿವಾರ ದಾಳಿ ಮಾಡುತ್ತಿರುವುದನ್ನು ಏನೆಂದು ಪರಿಗಣಿಸಬೇಕು? ಸುಮಾರು 80%ದಷ್ಟು ಹಿಂದೂಗಳೇ ಇರುವ ದೇಶವೊಂದರಲ್ಲಿ ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ ಬೆಳೆಸಿದರೆ ಸಂಸ್ಕ್ರಿತಿಯ ಬಗ್ಗೆ ಭಯ ಪಡಬೇಕಾದದ್ದು ಯಾರು? ಅಸ್ತಿತ್ವದ ಭಯ ಎದುರಾಗಬೇಕಾದದ್ದು ಯಾರಿಗೆ? 14% ಜನಸಂಖ್ಯೆಯಿರುವ ಮತ್ತು ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಸಮುದಾಯಕ್ಕಲ್ಲದೇ, ರಾಜಕೀಯವಾಗಿಯೂ ಆರ್ಥಿಕವಾಗಿಯೂ ಶೈಕ್ಷಣಿಕವಾಗಿಯೂ ಬಲಾಢ್ಯವಾಗಿರುವ ಸಮುದಾಯಕ್ಕೆ ಭಯ ಎದುರಾಗುತ್ತದೆಯೇ? ಈ ದೇಶವನ್ನು ಇವತ್ತು ಆಳುತ್ತಿರುವುದೇ ಸಂಘಪರಿವಾರ ಬೆಂಬಲಿತ ಬಿಜೆಪಿ ಪಕ್ಷ. ಒಂದು ವೇಳೆ ಬಿಜೆಪಿಯ ಹೊರತಾದ ಕಾಂಗ್ರೆಸ್, ಜೆಡಿಎಸ್, ಶಿವಸೇನೆ, ತೃಣ ಮೂಲಗಳು ಅಧಿಕಾರಕ್ಕೆ ಬಂದರೂ ಅವೇನೂ ಮುಸ್ಲಿಮರೇ ಪ್ರಾಬಲ್ಯ ಪಡೆದಿರುವ ಪಕ್ಷಗಳಲ್ಲವಲ್ಲ. ಪ್ರಾಬಲ್ಯ ಬಿಡಿ, ಕನಿಷ್ಠ, ಸಚಿವ ಸಂಪುಟದಲ್ಲಿ ಒಂದೆರಡು ಸ್ಥಾನಗಳನ್ನು ಪಡೆದುಕೊಳ್ಳುವುದಕ್ಕೂ ತಿಣಕಾಡಬೇಕಾದಷ್ಟು ಜುಜುಬಿ ಪ್ರಭಾವವಷ್ಟೇ ಮುಸ್ಲಿಮರದ್ದಾಗಿದೆ. ಈ ಪಕ್ಷಗಳಲ್ಲಿ ಇರುವವರಲ್ಲಿ ಹೆಚ್ಚಿನವರು ಹಿಂದೂ ಧರ್ಮವನ್ನು ಪಾಲಿಸುವ ಮತ್ತು ಅದರ ಸಂಸ್ಕ್ರಿತಿಯ ಮೇಲೆ ಅಭಿಮಾನ ಪಡುವ ಹಿಂದೂಗಳೇ. ಹೀಗಿದ್ದೂ ಮುಸ್ಲಿಮರಿಂದ ಹಿಂದೂ ಸಂಸ್ಕ್ರಿತಿಗೆ ಅಪಾಯವಿದೆಯೆಂದು ಪ್ರಚಾರ ಮಾಡುವುದು ಎಷ್ಟು ನಿಜ? ವ್ಯವಸ್ಥೆಯ ಯಾವುದೇ ಕ್ಷೇತ್ರದಲ್ಲಿ ಭೂತಗನ್ನಡಿ ಹಿಡಿದರೂ ಕಾಣಿಸದ ಮಂದಿಯಿಂದ ವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲೂ ತುಂಬಿ ತುಳುಕುತ್ತಿರುವ ಮಂದಿಗೆ ಅಪಾಯ ಎದುರಾಗುವುದೆಂದರೇನು? ಹಾಗೆ ವಾದಿಸುವುದಕ್ಕೆ ಇರುವ ಆಧಾರಗಳೇನು? ಹರೆಯದ ಯುವಕ-ಯುವತಿಯರ ನಡುವೆ ಉಂಟಾಗಬಹುದಾದ ಪ್ರಾಯ ಸಹಜ ಪ್ರೇಮಕ್ಕೋ ಗೆಳೆತನಕ್ಕೋ ಈ ಸಂಸ್ಕ್ರಿತಿಯನ್ನೇ ಅಳಿಸಿಬಿಡಬಹುದಾದಷ್ಟು ಸಾಮರ್ಥ್ಯ ಇದೆಯೇ? ಹೀಗೆ ಪ್ರೇಮ ಪ್ರಕರಣಗಳು ಒಂದು ಸಂಸ್ಕ್ರಿತಿಯನ್ನೇ ನಾಶ ಮಾಡಿದ ಉದಾಹರಣೆಗಳು ಎಲ್ಲಿವೆ? ಯಾವ ಸಂಸ್ಕ್ರಿತಿಯು ಹೀಗೆ ಹರೆಯದ ಯುವಕ-ಯುವತಿಯರ ಪ್ರಾಯ ಸಹಜ ಆಕರ್ಷಣೆಯಿಂದ ನಾಶವಾಗಿದೆ? ಸಂಸ್ಕ್ರಿತಿ ನಾಶದ ಬಗ್ಗೆ ಭಯ ಬಿತ್ತುವವರು ಯಾಕೆ ಈ ಬಗ್ಗೆ ಯಾವ ಅಂಕಿ ಅಂಶಗಳನ್ನೂ ನೀಡುತ್ತಿಲ್ಲ? ನಿಜವಾಗಿ, ಇಲ್ಲಿ ಅಸ್ತಿತ್ವದ ಮತ್ತು ಸಂಸ್ಕ್ರಿತಿ ನಾಶದ ಭಯ ಎದುರಾಗಬೇಕಾದದ್ದು ಜುಜುಬಿ 14%ದಷ್ಟಿರುವ ಮುಸ್ಲಿಮರಿಗೆ.  ಅವರ ಭಾಷೆ, ಅವರ ಉಡುಪು, ಅವರ ಆಹಾರ, ಅವರ ಮನೆ, ಮದುವೆ, ಶೈಕ್ಷಣಿಕ ಆಲೋಚನೆಗಳು, ಕೌಟುಂಬಿಕ ರೀತಿ-ನೀತಿಗಳು, ಹಣಕಾಸು ವಹಿವಾಟುಗಳು.. ಎಲ್ಲವೂ ಇವತ್ತು ಭಾರತೀಯ ಸಂಸ್ಕ್ರಿತಿಯಿಂದ ಧಾರಾಳ ಪ್ರಭಾವಿತವಾಗಿವೆ. ತಲಾಕ್, ಬಹುಪತ್ನಿತ್ವ, ಮಹಿಳೆಯ ಆಸ್ತಿಯ ಹಕ್ಕು, ಜಿಹಾದ್, ವಧುದಕ್ಷಿಣೆ, ಬಡ್ಡಿರಹಿತ ಹಣಕಾಸು ವ್ಯವಹಾರ.. ಮುಂತಾದುವುಗಳನ್ನು ನಿಜವಾದ ಅರ್ಥದಲ್ಲಿ ಪ್ರತಿನಿಧಿಸಲು ಅವರು ಇನ್ನೂ ಶಕ್ತರಾಗಿಲ್ಲ. ಇವುಗಳ ಬಗ್ಗೆ ಅರ್ಥಕ್ಕಿಂತ ಹೆಚ್ಚು ಅಪಾರ್ಥವೇ ಸಮಾಜದಲ್ಲಿ ತುಂಬಿಕೊಂಡಿದೆ. ಇಸ್ಲಾಮನ್ನು ಪ್ರತಿನಿಧಿಸುವುದಕ್ಕಿಂತ ಭಾರತೀಯ ಸಂಸ್ಕ್ರಿತಿಯನ್ನು ಪ್ರತಿನಿಧಿಸುವ ಮುಸ್ಲಿಮರೇ ಈ ದೇಶದಲ್ಲಿ ಹೆಚ್ಚಿದ್ದಾರೆ. ಇಷ್ಟಿದ್ದೂ, ಸಂಘಪರಿವಾರವು ಹಿಂದೂ ಸಂಸ್ಕ್ರಿತಿಗೆ ಮುಸ್ಲಿಮರಿಂದ ಅಪಾಯವಿದೆಯೆಂದು ಪ್ರಚಾರ ಮಾಡುತ್ತಿರುವುದೇಕೆ? ಸ್ವತಃ ತನ್ನ ಸಂಸ್ಕ್ರಿತಿಯನ್ನೇ ಸರಿಯಾಗಿ ಪಾಲಿಸದ ಸಮುದಾಯವೊಂದು ಇತರ ಸಂಸ್ಕ್ರಿತಿಗೆ ಅಪಾಯಕಾರಿಯಾಗುವುದು ಹೇಗೆ, ಯಾವ ಅರ್ಥದಲ್ಲಿ?
  ಹಾಗಂತ, ಸಂಘಪರಿವಾರ ಇವತ್ತು ಧರ್ಮರಕ್ಷಣೆಯ ಹೆಸರಲ್ಲಿ ಏನೆಲ್ಲ ಕ್ರೌರ್ಯಗಳನ್ನು ಎಸಗುತ್ತಿವೆಯೋ ಅವಕ್ಕೂ ಹಿಂದೂ ಧರ್ಮಕ್ಕೂ ಬಹುತೇಕ ಯಾವ ಸಂಬಂಧವೂ ಇಲ್ಲ. ಹಿಂದೂ ಧರ್ಮ ಅಸ್ತಿತ್ವದ ಭಯವನ್ನು ಎದುರಿಸುತ್ತಲೂ ಇಲ್ಲ, ಅದರ ಸಂಸ್ಕ್ರಿತಿ ಅಪಾಯದ ಅಂಚಿನಲ್ಲೂ ಇಲ್ಲ. ಇದು ಬೆತ್ತಲೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಒಂದೊಮ್ಮೆ ಗೊತ್ತಿಲ್ಲದಿದ್ದರೂ ಆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವವರಿಗೆ ಖಂಡಿತ ಗೊತ್ತು. ಈ ದೇಶದಲ್ಲಿ ಎಲ್ಲೆಲ್ಲ ಕೋಮು ಗಲಭೆಯಾಗಿದೆಯೋ ಅಲ್ಲೆಲ್ಲಾ ರಾಜಕೀಯವಾಗಿ ಬಿಜೆಪಿಗೆ ಲಾಭವಾಗಿದೆ. ಪ್ರತಿ ಬೆತ್ತಲೆಯಿಂದಲೂ ಬಿಜೆಪಿಯ ಕೆಲವು ಸಾವಿರ ಓಟುಗಳು ವೃದ್ಧಿಯಾಗುತ್ತವೆ. ‘ಗೋಸಾಗಾಟದ' ಮೇಲಿನ ಹಲ್ಲೆಗೂ ಈ ಓಟು ವೃದ್ಧಿಸುವ ಸಾಮರ್ಥ್ಯವಿದೆ. ಇದರರ್ಥ, ಸಾಮಾನ್ಯ ಜನರು ಕ್ರೌರ್ಯವನ್ನು ಬೆಂಬಲಿಸುತ್ತಾರೆ ಎಂದಲ್ಲ. ಪ್ರತಿ ‘ಬೆತ್ತಲೆ' ನಡೆದಾಗಲೂ ಆ ಬೆತ್ತಲೆಯನ್ನು ಅನಿ ವಾರ್ಯವೆಂದೂ ಅದುವೇ ಸೂಕ್ತವಾದ ಶಿಕ್ಷೆಯೆಂದೂ ನಂಬಿಸುವಂಥ ಸುಳ್ಳು ಕತೆಯನ್ನು ಬೆತ್ತಲೆಕೋರರು ತೇಲಿಸಿ ಬಿಡುತ್ತಾರೆ. ಹಿಂದೂ ಸಂಸ್ಕ್ರಿತಿ, ಜನಸಂಖ್ಯೆ, ಗೋ ಸಂತತಿಗಳು ತೀವ್ರ ಮಟ್ಟದಲ್ಲಿ ಕುಸಿಯುತ್ತಿರುವ ಬಗ್ಗೆ ಭಾವನಾತ್ಮಕ ಸನ್ನಿವೇಶವನ್ನು ನಿರ್ಮಾಣ ಮಾಡುತ್ತಾರೆ. ಹೆಣ್ಣನ್ನೂ, ಗೋವನ್ನೂ ಅಳಿಯುತ್ತಿರುವ ಪ್ರಬೇಧಗಳಂತೆಯೋ ಷಡ್ಯಂತ್ರಕ್ಕೆ ಬಲಿಯಾಗುತ್ತಿರುವ ಸಂಕೇತಗಳಂತೆಯೋ ಬಿಂಬಿಸಲಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದೂ ಹೆಣ್ಣು-ಮುಸ್ಲಿಮ್ ಗಂಡು ವಿವಾಹವಾದ ಮತ್ತು ಮತಾಂತರಗೊಂಡ ಎಲ್ಲಿಯದೋ ಮತ್ತು ಎಂದಿನದೋ ಘಟನೆಯನ್ನು ಈಗ ಮತ್ತು ಇವತ್ತು ನಡೆದ ಘಟನೆಯಂತೆ ವಿವರಿಸಲಾಗುತ್ತದೆ. ಮುಸ್ಲಿಮರ ತಲಾಕ್, ಬಹುಪತ್ನಿತ್ವ, ಜಿಹಾದ್‍ನ ವಿಕೃತ ರೂಪವನ್ನು ಜನರು ಮುಂದಿಡಲಾಗುತ್ತದೆ. ಹೀಗೆ ಧರ್ಮ, ಸಂಸ್ಕ್ರಿತಿ, ಹೆಣ್ಣು, ಗೋವು..ಗಳೆಲ್ಲ ಭಾವುಕವಾಗುತ್ತಾ ಹೋಗುತ್ತದೆ. ಜೊತೆಗೇ ‘ಬೆತ್ತಲೆಗಳು' ಧಾರ್ಮಿಕ ಅಗತ್ಯವಾಗಿ ನಿಧಾನಕ್ಕೆ ಬೆಂಬಲ ಗಿಟ್ಟಿಸಿಕೊಳ್ಳುತ್ತಾ ಹೋಗುತ್ತದೆ. ಇದಕ್ಕಾಗಿಯೇ,
    ಮಂಗಳೂರಿನಲ್ಲಿ ಹಾಡುಹಗಲೇ, ಸಾರ್ವಜನಿಕರೆದುರೇ, ಕವಿೂಷ ನರ್ ಕಚೇರಿಯ ತೀರಾ ಹತ್ತಿರದಲ್ಲೇ ‘ಬೆತ್ತಲೆ' ಶಿಕ್ಷೆ ಜಾರಿಯಾಗಿದೆ. 

Thursday, August 27, 2015

ಕುರ್‍ಆನ್, ಬೈಬಲ್, ಗೀತೆ, ಗಾಂಧಿ ಮತ್ತು ಮಾವೋವಾದಿ..

ಜೋಳಿ ಚಿರಯತ್
      “ನನ್ನ ಕಂಪ್ಯೂಟರನ್ನು ಅವರು ತೆರೆದರು. ನಾನು ನಿಂತೇ ಇದ್ದೆ. ತೆರೆದ ಕೂಡಲೇ ಕಂಪ್ಯೂಟರ್ ಡೆಸ್ಕ್ ಟಾಪ್(Desktop)ನಲ್ಲಿ
ನನ್ನ ಹೆಸರಿನಲ್ಲಿದ್ದ ಫೋಲ್ಡರ್ ಕಾಣಿಸಿತು. ಅವರ ಮುಖದಲ್ಲಿ ಒಂದು ಬಗೆಯ ಕುತೂಹಲ. ಕ್ಲಿಕ್ ಮಾಡಿದರು.Oppose the worship of the books (ಪುಸ್ತಕ ಪೂಜೆಗೆ ವಿರೋಧ) ಎಂಬ ಶೀರ್ಷಿಕೆಯಲ್ಲಿ ಮಾವೋ ಬರೆದಿರುವ ಲೇಖನ ಅವರ ಕಣ್ಣಿಗೆ ಬಿತ್ತು. ತೆರೆದರು. ನನ್ನತ್ತ ವ್ಯಂಗ್ಯಭರಿತವಾಗಿ ದೃಷ್ಟಿ ಹಾಯಿಸಿದರು. ಏನನ್ನೋ ಪತ್ತೆ ಹಚ್ಚಿದ ಉತ್ಸಾಹದೊಂದಿಗೆ ಅವರು ಪ್ರಶ್ನಿಸಿದರು -
   ‘ಮಾವೋವಾದಿಯಲ್ಲ ಎಂದಲ್ಲವೇ ನೀವು ಈ ವರೆಗೆ ನಮ್ಮೊಂದಿಗೆ ವಾದಿಸಿದ್ದು? ಹಾಗಾದರೆ ಇದೇನು?'
   ನಾನು ಮರು ಪ್ರಶ್ನಿಸಿದೆ, ‘ಏನು?' ಅವರೂ ಬಿಡಲಿಲ್ಲ - ‘ನೀವೇ ಹೇಳಿ?’ ನಾನು ಹೇಳಿದೆ, ‘ಒಂದು ಲೇಖನ’. ಅವರು ಮುಂದುವರಿಸಿದರು, ‘ನೀವಿದನ್ನು ಯಾಕೆ ಓದುತ್ತೀರಿ?’ ನಾನಂದೆ, ‘ಯಾಕೆ, ಓದಬಾರದೇ? ಮಾವೋನ ಕೃತಿಗಳನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಅಲ್ಲದೇ ಇಂಟರ್‍ನೆಟ್‍ನಲ್ಲಿ ಈ ಲೇಖನ ಎಲ್ಲರಿಗೂ ಲಭ್ಯವಿದೆ. ಇದು ಎಂದಲ್ಲ, ಮಾವೋನ ಧಾರಾಳ ಪುಸ್ತಕಗಳನ್ನು ಇಂಟರ್‍ನೆಟ್‍ನಲ್ಲಿ ಓದಬಹುದು. ಹೀಗಿರುವಾಗ..!’ ನನ್ನ ಈ ಪ್ರಶ್ನೆಗೆ ಅವರು ನೇರ ಉತ್ತರವನ್ನು ನೀಡಲಿಲ್ಲ. ಅದರ ಬದಲು, ‘ನೀವೇಕೆ ಇವೆಲ್ಲವನ್ನೂ ಓದುತ್ತೀರಿ? ಅಲ್ಲದೇ ನೀವು ದಲಿತರ ಸಮಸ್ಯೆಗಳು ಮತ್ತು ಆದಿವಾಸಿಗಳ ಹೋರಾಟಗಳನ್ನು ಬೆಂಬಲಿಸುತ್ತಿದ್ದೀರಿ. ಅವರಿಗೆ ಬೆಂಬಲವಾಗಿ ಚಳವಳಿಯಲ್ಲಿ ಭಾಗವಹಿಸುತ್ತೀರಿ. ಮಾತಾಡುತ್ತೀರಿ. ಇವೆಲ್ಲ ಏನು..’ ಎಂದು ಪ್ರಶ್ನಿಸಿದರು. ಅವರ ಈ ಪ್ರಶ್ನೆಯಲ್ಲಿಯೇ ದಲಿತರು, ಆದಿವಾಸಿಗಳ ಹಕ್ಕುಗಳಿಗಾಗಿ ದನಿಯೆತ್ತುವುದು ಮಾವೋ ವಾದ ಎಂಬ ಸೂಚನೆ ಇತ್ತು. ನನಗದು ಹಿಡಿಸಲಿಲ್ಲ. ಆದಿವಾಸಿಗಳು ದಲಿತರು ಅಥವಾ ಮರ್ದಿತ ಜನಸಮೂಹದ ಹಕ್ಕುಗಳಿಗಾಗಿ ಹೋರಾಡುವುದು ಯಾಕೆ ಮಾವೋವಾದ ಆಗಬೇಕು? ಮನುಷ್ಯರ ಸಂಕಟಗಳನ್ನೂ ನಾವೇಕೆ ಎಡ-ಬಲ, ಆ ವಾದ- ಈ ವಾದ ಎಂದು ವಿಭಜಿಸಬೇಕು? ಈ ವಾದಗಳ ಹೊರತಾಗಿ ಚಳವಳಿಗಳನ್ನು ಕಟ್ಟಲಾಗದೇ, ನೋಡಬಾರದೇ.. ಎಂದೆಲ್ಲಾ ತೋಚಿತು. ನಾನು ಪ್ರತಿಭಟನಾ ದನಿಯಲ್ಲಿ ಹೇಳಿದೆ,
    ಬೀದಿಗಿಳಿದು ಸದಾ ಹೋರಾಟ ನಿರತರಾಗಬೇಕೆಂದು ಮನುಷ್ಯರಾರೂ ಬಯಸುವುದಿಲ್ಲ. ಅದರಲ್ಲಿ ಒಂದು ಬಗೆಯ ರಿಸ್ಕ್ ಇದೆ. ಜೀವ ಭಯ, ಬಂಧನ ಭೀತಿಗಳಿರುತ್ತವೆ. ಆರಾಮ ಜೀವಿಯಾದ ಮನುಷ್ಯ ಇವೆಲ್ಲವನ್ನು ಬರಿದೇ ಬಯಸುತ್ತಾನೆಂದು ಹೇಳುವುದು ತಪ್ಪಾಗುತ್ತದೆ. ಆದ್ದರಿಂದ ಮನುಷ್ಯ ಬೀದಿಗಿಳಿಯುತ್ತಾನೆಂದಾದರೆ ಅದೇಕೆಂದು ನೀವೇಕೆ ಆಲೋಚಿಸುತ್ತಿಲ್ಲ? ಹೋರಾಟಗಾರರಲ್ಲಿ ಪ್ರಶ್ನಿಸುವುದಕ್ಕಿಂತ ಹೋರಾಟಗಳೇಕೆ ರೂಪ ತಾಳುತ್ತವೆ ಎಂದೂ ಆಲೋಚಿಸಬಹುದಲ್ಲವೇ? ಸಮಯವನ್ನು ಕೊಲ್ಲುವುದಕ್ಕಾಗಿ ನಾನು ಹೋರಾಟ ನಿರತಳಾಗಿರುವೆನೆಂಬುದು ನಿಮ್ಮ ಅಭಿಪ್ರಾಯವೇ? ನಾನು ಹೋರಾಡುತ್ತಿರುವುದು ಜನರ ಹಕ್ಕುಗಳಿಗಾಗಿ. ಅದರಲ್ಲಿ ಮಾವೋವಾದವನ್ನೋ ಇನ್ನೇನನ್ನೋ ಹುಡುಕುವುದು ನಿಮ್ಮ ಸಮಸ್ಯೆ. ನಾನು ಅವರ ಹಕ್ಕುಗಳ ಪರ ಯಾವತ್ತೂ ನಿಲ್ಲುವೆ. ನೀವು ನನ್ನನ್ನು ಹೇಗೆ ನೋಡಿದರೂ ಸರಿ. ನೀವು ದಲಿತರು - ಆದಿವಾಸಿಗಳು ಎಂದು ಹೇಳದಿರಲ್ಲ, ಅವರು ಎಲ್ಲ ಕಾಲಗಳಲ್ಲೂ ಅದೇ ಸ್ಥಿತಿಯಲ್ಲಿ ಯಾಕಿದ್ದಾರೆ ಎಂದು ಆಲೋಚಿಸಿದ್ದೀರಾ? ಸ್ವಾತಂತ್ರ್ಯ ಸಿಕ್ಕಿ 68 ವರ್ಷಗಳಾದರೂ ಅವರ ಸ್ಥಿತಿಯಲ್ಲಿ ಸುಧಾರಣೆಯಾಗದೇ ಇರುವುದು ಯಾತಕ್ಕಾಗಿ? ಹೀಗಿರುವಾಗ ಸಮಾಜಕ್ಕೆ ಹೊಣೆಗಾರಿಕೆಗಳಿಲ್ಲವೇ? ಆ ಹೊಣೆಗಾರಿಕೆಯ ಪ್ರಜ್ಞೆಯಿಂದ ಮಾತಾಡುವುದು ಮಾವೋವಾದವೇ... ?’
     2015 ಜನವರಿ 29ರಂದು 6 ಮಂದಿ ಪೊಲೀಸರ ತಂಡ ತನ್ನ ಮನೆಯ ಮೇಲೆ ನಡೆಸಿದ ದಿಢೀರ್ ದಾಳಿ, ಪರಿಶೀಲನೆ, ಪ್ರಶ್ನಾವಳಿಗಳ ಅನುಭವಗಳನ್ನು ಮಾನವ ಹಕ್ಕು ಹೋರಾಟಗಾರ್ತಿ ಜೋಳಿ ಚಿರಯತ್ ಹೀಗೆ ಹೇಳುತ್ತಾ ಹೋಗುತ್ತಾರೆ..
    ಜನವರಿ 29ರಂದು ಸಂಜೆ ಹೊರಗೆ ಹೋಗಿದ್ದ ನಾನು ಮರಳಿ ಬರುವಾಗ ಮನೆಯ ಎದುರು ಪೊಲೀಸರಿದ್ದರು. ಅವರಲ್ಲಿ ಓರ್ವರು ಮಹಿಳಾ ಪೇದೆ. ‘ಮನೆ ಪರಿಶೀಲನೆ ನಡೆಸಬೇಕಿದೆ’ ಎಂದರು. ನಾನು ಒಮ್ಮೆ ಅವಾಕ್ಕಾದೆ. ಪರಿಶೀಲನೆ ನಡೆಸುವಂಥದ್ದು ಮನೆಯೊಳಗೆ ಏನಿದೆ ಅಂದುಕೊಂಡೆ. ಆದರೂ ‘ಸರ್ಚ್ ವಾರಂಟ್ ಇದೆಯಾ’ ಎಂದು ಪ್ರಶ್ನಿಸಿದೆ. ‘ಓಹ್, ಇದು ಮೇಲಿನವರ ನಿರ್ದೇಶನ’ ಎಂದು ಹೇಳುತ್ತಾ ನನ್ನ ಹಿಂದೆಯೇ ಅವರು ಮನೆಯೊಳಗೆ ಸೇರಿಕೊಂಡರು. ಮನೆಯಂತೂ ಅಸ್ತವ್ಯಸ್ತವಾಗಿತ್ತು. ಒಂದಷ್ಟು ಮುಜುಗರವೂ ಆಯಿತು. ಕುಳಿತುಕೊಳ್ಳಿ ಎಂದು ನಾನು ಹೇಳುತ್ತಿರುವಂತೆಯೇ, ‘ಮ್ಯಾಡಂ ನಿಮ್ಮ ಮೊಬೈಲ್ ಒಮ್ಮೆ ಕೊಡಿ’ ಎಂದು ನನ್ನ ಕೈಯಲ್ಲಿದ್ದ ಮೊಬೈಲನ್ನು ಪಡೆದುಕೊಂಡರು. ನನ್ನೊಳಗಿನ ಗೊಂದಲದಿಂದಾಗಿ ಪ್ರತಿಭಟಿಸುವ ಪ್ರಜ್ಞೆಯೂ ಕ್ಷಣ ಸ್ಥಗಿತಗೊಂಡಿತ್ತು. ನಿಜವಾಗಿ, ಅದು ನನ್ನ ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಡೆಸಿದ ನೇರ ದಾಳಿ. ‘ಯಾಕೆ ಪೋನ್ ಪಡೆದುಕೊಂಡಿರಿ' ಎಂದು ಪ್ರಶ್ನಿಸಿದೆ. ‘ನೋಡಲು' ಎಂಬ ಸಾಮಾನ್ಯ ಉತ್ತರ. ‘ಅದು ನನ್ನ ವೈಯಕ್ತಿಕ ಪೋನ್. ನಿಮ್ಮ ಕ್ರಮ ಸಾಧುವೇ..’ ಎಂದು ಮರು ಪ್ರಶ್ನಿಸಿದೆ. ಉತ್ತರವಿಲ್ಲ. ಅದರ ಬದಲು ಮೊಬೈಲ್ ಪರಿಶೀಲನೆಯಲ್ಲಿ ಅವರು ಮಗ್ನರಾದರು. ಹೊರಹೋದ ಮತ್ತು ಒಳಬಂದ ಕರೆಗಳನ್ನು ಪರಿಶೀಲಿಸತೊಡಗಿದರು. ನನ್ನ ಕಾಂಟಾಕ್ಟ್ಸ್ ಗಳನ್ನು ತಪಾಸಿಸಿದರು. ಕೆಲವು ನಂಬರ್ ಮತ್ತು ಹೆಸರುಗಳನ್ನು ಬರೆದು ಕೊಂಡರು. ನನ್ನೊಳಗೆ ಸಂಘರ್ಷವೊಂದು ನಡೆಯುತ್ತಿತ್ತು. ನನ್ನ ಬಗ್ಗೆ ಇಂಟೆಲಿಜೆನ್ಸ್ ವಿಭಾಗವು ಏನೆಂದು ವರದಿ ಕೊಟ್ಟಿರಬಹುದು? ದೇಶದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದಿರಬಹುದೇ? ಮಾವೋವಾದಿ, ಉಗ್ರವಾದಿ.. ಏನಿರಬಹುದು? ಆ ವರದಿಯ ಆಧಾರದಲ್ಲೇ ಈ ಪರಿಶೀಲನೆ ನಡೆಯುತ್ತಿರಬಹುದಲ್ಲವೇ?
     ಓರ್ವ ನನ್ನನ್ನು ಎವೆಯಿಕ್ಕದೇ ನೋಡುತ್ತಿದ್ದ. ಬಹುಶಃ ಆ ತಂಡದ ಮನಃಶಾಸ್ತ್ರಜ್ಞನಿರಬೇಕು. ನನ್ನಲ್ಲಾಗುವ ಭಾವನೆಗಳ ಏರಿಳಿತಗಳನ್ನು ಓದುವ ಪ್ರಯತ್ನ ನಡೆಸುತ್ತಿರಬಹುದು. ನಾನೂ ಆತನನ್ನು ಅದೇ ರೀತಿಯಲ್ಲಿ ನೋಡಿದೆ. ಇದರ ಮಧ್ಯೆಯೇ ಅವರು, ‘ನಿಮಗೆ ಎಷ್ಟು ಮಾವೋವಾದಿಗಳ ಪರಿಚಯ ಇದೆ’ ಎಂದು ಪ್ರಶ್ನಿಸಿದರು. ನನಗೆ ನಗು ಬಂತು. ‘ಯಾರೂ ಕೂಡ ಈ ವರೆಗೆ ನಾನು ಮಾವೋವಾದಿ ಎಂದು ಹೇಳಿಕೊಂಡು ತಮ್ಮನ್ನು ಪರಿಚಯ ಮಾಡಿಕೊಂಡಿಲ್ಲ. ಹಾಗೆಯೇ, ಬಿಜೆಪಿಯೋ ಮಾವೋವಾದಿಯೋ ಕಾಂಗ್ರೆಸ್ಸೋ ಕಮ್ಯುನಿಸ್ಟೋ ಎಂದು ನೋಡಿ ಕೊಂಡು ನಾನು ಗೆಳೆತನವನ್ನೂ ಬೆಳೆಸಿಲ್ಲ. ನನ್ನ ಸಂಪರ್ಕಕ್ಕೆ ಸಿಕ್ಕವರೆಲ್ಲ ಮನುಷ್ಯರು..’ ಎಂದೆ. ಮಾವೋವಾದಿಗಳನ್ನು ಸಂಪರ್ಕಿಸುವುದಕ್ಕಾಗಿಯೇ ವಿೂಸಲಾಗಿರುವ ಮೊಬೈಲ್ ಇದೆಯಾ ಎಂದು ತುಸು ಕುಚೋದ್ಯದಿಂದಲೇ ಪ್ರಶ್ನಿಸಿದರು. ನನ್ನಲ್ಲಿ ಇನ್ನೊಂದು ಮೊಬೈಲ್ ಇತ್ತು. ಅದನ್ನೂ ಕೊಟ್ಟೆ. ಅದರಿಂದಲೂ ಕೆಲವು ನಂಬರ್‍ಗಳನ್ನು ಬರೆದಿಟ್ಟುಕೊಂಡರು. ‘ನಿಮಗೇಕೆ ವೈಫೈ, ಕಂಪ್ಯೂ ಟರ್, ಪ್ರಿಂಟರ್’ ಎಂದೆಲ್ಲಾ ಪ್ರಶ್ನಿಸಿದರು. ಅಸಂಬದ್ಧ ಪ್ರಶ್ನೆ. ಒಂದು ನಗರವೇ ವೈಫೈ ಆಗಲು ತೀರ್ಮಾನಿಸಿರುವಾಗ ನಿಮಗೇಕೆ ವೈಫೈ ಎಂದು ಪ್ರಶ್ನಿಸುವುದಕ್ಕೆ ಏನರ್ಥವಿದೆ? ಪ್ರಿಂಟರ್‍ನ ಬಗ್ಗೆಯೂ ಅನುಮಾನ. ಈ ಮಧ್ಯೆ ನನ್ನ ಫೇಸ್‍ಬುಕ್ ತೆರೆಯುವಂತೆ ಕೇಳಿಕೊಂಡರು. ನನ್ನ ಜಿ ಮೇಲ್ ಅನ್ನು ತೆರೆದರು. ನನ್ನ ಮೊಬೈಲ್, ಕಂಪ್ಯೂಟರ್, ಜಿ ಮೇಲ್, ಫೇಸ್‍ಬುಕ್ ಸಹಿತ ಎಲ್ಲವೂ ಒಂದೊಂದಾಗಿ ಅವರ ಪಾಲಾಗತೊಡಗಿದುವು. ನಾನು ನಿಂತುಕೊಂಡೇ ಇದ್ದುದನ್ನು ನೋಡಿ ಅವರಲ್ಲೊಬ್ಬ ‘ಕುಳಿತುಕೊಳ್ಳಿ' ಎಂದು ಕುರ್ಚಿಯನ್ನು ತೋರಿಸಿದ. ನನ್ನ ಮನೆಯೊಳಗೇ ನಾನು ಅತಿಥಿ. ನನ್ನ ಮನೆ, ನನ್ನ ಈಮೇಲ್, ನನ್ನ ಮೊಬೈಲು, ನನ್ನ, ನನ್ನ.. ಎಲ್ಲವೂ ಅನ್ಯರ ಪಾಲಾದ ಅನುಭವ. ವೈಯಕ್ತಿಕ ಸ್ವಾತಂತ್ರ್ಯ ಅಂದರೇನು? ಖಾಕಿದಾರಿಗಳು ಪ್ರಶ್ನಿಸಿದರೆ ಮುಗಿಯುವ ಈ ಸ್ವಾತಂತ್ರ್ಯಕ್ಕಾಗಿ ಯಾಕೆ ಹೆಮ್ಮೆ ಪಡಬೇಕು? ಟ್ಯೂಶನ್‍ಗೆ ತೆರಳುವಾಗ, ‘ನಾನು ತುಸು ತಡವಾಗಿ ಬರುವೆ' ಎಂದು ಮಗ ಹೇಳಿದ್ದ. ಅವನಾದರೂ ಬಂದು ಕಾಲಿಂಗ್ ಬೆಲ್ ಒತ್ತಬಾರದೇ ಎಂದು ಆಸೆಪಟ್ಟೆ. ಮನೆಯೊಳಗಿನ ವಾತಾವರಣವು ನನ್ನನ್ನು ಕಟ್ಟಿ ಹಾಕಿದಂತಿತ್ತು. ಈ ಮಧ್ಯೆ ಪುಸ್ತಕಗಳಿರುವ ಕಪಾಟನ್ನು ಪರಿಶೀಲಿಸಲು ಓರ್ವರು ಪ್ರಾರಂಭಿಸಿದರು. ಅವರಿಗೆ ಬೇಕಾದ ಪುಸ್ತಕಗಳು ಸಿಕ್ಕದ್ದರಿಂದಲೋ ಏನೋ ಬೇರೆಲ್ಲಾದರೂ ಪುಸ್ತಕಗಳು ಇವೆಯಾ ಎಂದು ಪ್ರಶ್ನಿಸಿದರು. ನನ್ನ ಬೆಡ್‍ರೂಮ್‍ನಲ್ಲಿರುವ ಪುಟ್ಟ ಕಪಾಟನ್ನು ತೋರಿಸಿದೆ. ಬೆಡ್‍ರೂಮ್ ಎಷ್ಟು ಅಸ್ತವ್ಯಸ್ತವಾಗಿತ್ತು ಎಂದರೆ, ನನಗೇ ಅದರೊಳಗೆ ಹೋಗಲು ಮುಜುಗರವಾಯಿತು. ಇದರ ನಡುವೆಯೇ ನನ್ನ ಮೊಬೈಲ್ ವಿವರಗಳನ್ನು ಪರಿಶೀಲಿಸುವ ಮತ್ತು ಪ್ರಶ್ನಿಸುವ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಎಂದೋ ಬಂದ ಸಂದೇಶವನ್ನು ಎತ್ತಿಕೊಂಡು ನನ್ನಲ್ಲಿ ಪ್ರಶ್ನೆಗಳನ್ನು ಕೇಳುತ್ತಿದ್ದರು. ಒಂದು ವಿೂಟಿಂಗ್ ನಡೆಯುವ ಬಗ್ಗೆ ಬಂದಿರುವ ಎಸ್.ಎಂ.ಎಸ್. ಅನ್ನು ತೋರಿಸಿ ಆ ಸಭೆಯ ಅಜೆಂಡ ಏನಾಗಿತ್ತು ಎಂದು ಪ್ರಶ್ನಿಸಿದರು. ನಿಜವಾಗಿ, ಆ ಸಭೆಗೆ ನಾನು ಹೋಗಿಯೇ ಇರಲಿಲ್ಲ. ಈ ಮಧ್ಯೆ ನನ್ನ ಬೆಡ್‍ರೂಮ್‍ನಿಂದ ನೋಟೀಸ್‍ಗಳು, ಕಾಗದಗಳು ಹೊರಗೆ ಬರುತ್ತಿದ್ದುವು. ಮಹಿಳಾ ಪೇದೆ ಅವನ್ನೆಲ್ಲಾ ತರುವುದು ಮತ್ತು ಅದನ್ನು ಪರಿಶೀಲಿಸಿ ವಿಭಜಿಸುವುದು ನಡೆಯುತ್ತಲೇ ಇತ್ತು. ನಿಜವಾಗಿ, ಆ ನೋಟೀಸುಗಳಲ್ಲಿ ಏನಿವೆ ಎಂಬುದು ನನಗೂ ಗೊತ್ತಿರಲಿಲ್ಲ. ನಾನು ಕಾರ್ಯಕ್ರಮಗಳಿಗೆ ಹೋದಾಗ ಸಿಕ್ಕ ನೋಟೀಸ್‍ಗಳು ಅವು. ಹೀಗಿರುವಾಗಲೇ ಮಾರ್ಕ್ಸಿಸ್ಟ್ ಸಿದ್ಧಾಂತದ ಪರಿಚಯ (Introduction of Marrkxist Philosophy) ಎಂಬ ಪುಸ್ತಕವನ್ನು ಕಪಾಟಿನಿಂದ ಹೊರತಂದು ನನ್ನ ಎದುರಿಗಿಟ್ಟರು. ‘ಹಾಗಾದರೆ ನೀವು ಇದನ್ನೆಲ್ಲ ಓದುತ್ತೀರಲ್ಲವೇ..' ಎಂದು ವ್ಯಂಗ್ಯಭರಿತವಾಗಿಯೇ ಕೇಳಿದರು. ನಾನು ನಕ್ಕೆ. ನನ್ನ ಕಪಾಟಿನಲ್ಲಿರುವ ಜಲಾಲುದ್ದೀನ್ ರೂಮಿಯವರ ಪುಸ್ತಕವನ್ನು ತೋರಿಸಿ, ‘ಸರ್, ನಾನು ಅದನ್ನೂ ಓದುವೆ' ಎಂದೆ.ಮಾರ್ಕ್ಸಿಸ್ಟ್ ಪುಸ್ತಕವನ್ನು ಕಾಲೇಜಿನಲ್ಲೂ ಓದಿಸಲಾಗುತ್ತದಲ್ಲವೇ? ಅದನ್ನು ನಿಷೇಧಿಸಿರುವಿರಾ ಎಂದು ಮತ್ತೂ ಕೇಳಿದೆ. ಅವರು ಉತ್ತರಿಸಲಿಲ್ಲ. ಅದರ ಬದಲು ಅವರು ಇನ್ನೊಂದು ಕಂಪ್ಯೂಟರ್‍ನತ್ತ ಗಮನ ಹರಿಸಿದರು. ಅದು ಮಗನದ್ದು. ಅದರ ಪಾಸ್‍ವರ್ಡ್ ಕೇಳಿದರು. ಗವರ್ನ್‍ಮೆಂಟ್ ಎಂಬ ಪಾಸ್‍ವರ್ಡ್ ಅನ್ನು ಕೇಳಿ ಅಚ್ಚರಿಪಟ್ಟರು. ‘ಮಗನೂ ಮಾವೋವಾದಿಯೇ’ ಎಂದು ಕೇಳಿದರು. ಜೊತೆಗೇ ಮನೆಯ ಬಾಗಿಲು, ಕಿಟಕಿ, ಅಡುಗೆ ಕೋಣೆ ಸಹಿತ ಎಲ್ಲದರ ಲೆಕ್ಕವನ್ನೂ ಬರೆದಿಟ್ಟುಕೊಂಡರು. ನಕ್ಷೆ ರಚಿಸಿದರು. ಕೊನೆಗೆ ಮನೆಯಿಂದ ಹೊರಡುವಾಗ ನನ್ನತ್ತ ತಿರುಗಿ, ‘ನೀವು ಮಾವೋವಾದಿ ಅಲ್ಲ ತಾನೇ..' ಎಂದು ಈ ಹಿಂದೆ ಕೇಳಿದ್ದನ್ನೇ ಮತ್ತೊಮ್ಮೆ ಕೇಳಿದರು. ನಾನು ನನ್ನ ಕಪಾಟಿನಲ್ಲಿರುವ ಪುಸ್ತಕಗಳ ಕಡೆಗೆ ತೋರಿಸಿ, ‘ಇದರಲ್ಲಿ ಕುರ್‍ಆನ್, ಬೈಬಲ್, ಗೀತೆ, ಗಾಂಧಿ, ಸೂಫಿಸಂ.. ಎಲ್ಲವೂ ಇದೆ. ಆದರೆ ಇದರಲ್ಲಿ ಏನಾದರೂ ಒಂದು ಆಗಿರುವೆಯಾ ಎಂದು ನೀವು ಪ್ರಶ್ನಿಸಿಲ್ಲವೇಕೆ? ಪ್ರಜಾತಂತ್ರದಲ್ಲಿ ಎಲ್ಲರಿಗೂ ಎಲ್ಲವನ್ನೂ ಓದುವ ಸ್ವಾತಂತ್ರ್ಯ ಇರಬೇಕಾಗಿದೆ. ಅದನ್ನೇಕೆ ನೀವು ಅಪರಾಧವಾಗಿ ಕಾಣುತ್ತೀರಿ..’ ಎಂದೆ. ನಕ್ಕರು. ಅವರನ್ನೇ ತುಸು ದೂರದ ವರೆಗೆ ಹಿಂಬಾಲಿಸಿದೆ. ‘ಇನ್ನೊಮ್ಮೆ ಬರುವಾಗ ಮೊದಲೇ ತಿಳಿಸಿ ಬನ್ನಿ’ ಅಂದೆ. ‘ಯಾಕೆ, ದಾಖಲೆ ಗಳನ್ನು ಬೇರೆಡೆಗೆ ಸಾಗಿಸಲಿಕ್ಕಾ’ ಎಂದು ಪ್ರಶ್ನಿಸಿದರು. ‘ಅಲ್ಲ, ಮನೆಯನ್ನು ಓರಣವಾಗಿಟ್ಟು ಸ್ವಾಗತಿಸುವುದಕ್ಕೆ..’ ಎಂದೆ..."
       ಭಾರತೀಯ ಚಲನಚಿತ್ರ ಮಂಡಳಿಯ (FTII) ಅಧ್ಯಕ್ಷರನ್ನಾಗಿ ಗಜೇಂದ್ರ ಚೌಹಾಣ್‍ರ ನೇಮಕವನ್ನು ವಿರೋಧಿಸಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳನ್ನು ಕಳೆದ ವಾರ  ಮಧ್ಯರಾತ್ರಿ ಬಂಧಿಸಿ ಕಠಿಣ ಕೇಸು ದಾಖಲಿಸಲಾದ ಘಟನೆಯನ್ನು ನೋಡುತ್ತಾ ಜೋಳಿ ಚಿರಯತ್ ಯಾಕೋ ನೆನಪಾದರು.