Friday, December 25, 2015

ಸೈಕಿಯರ ಇಮೇಲ್ ಮತ್ತು ಸಂಪಾದಕರ ಮೌನ

       ‘ಇಂಡಿಯಾ ಟಿ.ವಿ. ಟುಡೆ’ಯ ಸಂಪಾದಕರಾದ ರಾಜ್‍ದೀಪ್ ಸರ್ದೇಸ್ಯಾ, ‘ಎನ್‍ಡಿಟಿವಿ’ಯ ಸೋನಿಯಾ ಸಿಂಗ್ ಮತ್ತು ಬರ್ಖಾದತ್, ‘ದಿ ಇಂಡಿಯನ್ ಎಕ್ಸ್ ಪ್ರೆಸ್’ನ ಉಣ್ಣಿ ರಾಜನ್ ಶಂಕರ್, ‘ಹಿಂದೂಸ್ತಾನ್ ಟೈಮ್ಸ್’ನ ಸಂಜಯ್ ನಾರಾಯಣ್ ಮತ್ತು ‘ಮಿಂಟ್’ ಪತ್ರಿಕೆಯ ಸುಕುಮಾರ್‍ರಿಗೆ ಪತ್ರಕರ್ತರಾದ ಅರ್ನಾಬ್ ಸೈಕಿಯ ಮತ್ತಿತರರು ಇತ್ತೀಚೆಗೆ ಇಮೇಲ್ ಒಂದನ್ನು ಕಳುಹಿಸಿದರು. ನಿರ್ದಿಷ್ಟ ಸುದ್ದಿ ಪ್ರಕಟಣೆಗೆ ಸಂಬಂಧಿಸಿದಂತೆ ಸ್ಪಷ್ಟೀಕರಣ ಕೋರಿ ಕಳುಹಿಸಲಾದ ಇಮೇಲ್ ಅದು. ‘ಮಿಂಟ್’ನ ಸುಕುಮಾರ್‍ರನ್ನು ಬಿಟ್ಟರೆ ಉಳಿದಂತೆ ಯಾರೂ ಕನಿಷ್ಠ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಲಿಲ್ಲ. ಸುಕುಮಾರ್ ಅಂತೂ ‘ಹೌದು ಸುದ್ದಿ ಮಿಸ್ಸಾಗಿದೆ’ ಎಂದಷ್ಟೇ ಹೇಳಿಬಿಟ್ಟರು. ಅಷ್ಟಕ್ಕೂ, ಆ ಸುದ್ದಿಯ ಹಿಂದೆ ಒಂದು ಸ್ವಾರಸ್ಯವಿದೆ-
      1993 ಮಾರ್ಚ್. ಮುಂಬೈಯಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದುವಲ್ಲದೇ ಅಪಾರ ಸಾವು ನೋವುಗಳು ಸಂಭವಿಸಿದುವು. ಇಡೀ ಘಟನೆಯ ಹಿಂದೆ ದಾವೂದ್ ಇಬ್ರಾಹೀಮ್‍ನ ಕೈವಾಡವಿದೆಯೆಂದು ಹೇಳಲಾಯಿತು. ಪಾಕಿಸ್ತಾನದ ಕೈವಾಡವನ್ನು ಶಂಕಿಸಿ ಪತ್ರಿಕೆಗಳಲ್ಲಿ ದಿನೇ ದಿನೇ ಸುದ್ದಿಗಳು ಪ್ರಕಟವಾದುವು. ಅಲ್ಲದೇ, ಈ ಸ್ಫೋಟದಲ್ಲಿ ಭಾಗಿಯಾದವರು ಪಾಕಿಸ್ತಾನಕ್ಕೆ ಪಲಾಯನ ಮಾಡಿದ್ದು, ಅವರಿಗೆ ಪಾಕ್ ಆಶ್ರಯ  ಒದಗಿಸಿದೆಯೆಂಬ ಮಾತುಗಳು ಬಲವಾಗಿಯೇ ಕೇಳಿಬಂದವು. ಪಾಕಿಸ್ತಾನ ಮತ್ತು ದಾವೂದ್‍ನ ವಿರುದ್ಧ ಒಂದು ಬಗೆಯ ಅಕ್ರೋಶ, ಅಸಹನೆಯು ದೇಶದೆಲ್ಲೆಡೆ ಗಟ್ಟಿಗೊಳ್ಳುತ್ತಿರುವ ಆ ಹೊತ್ತಿನಲ್ಲಿಯೇ- 1993 ಆಗಸ್ಟ್ 17ರಂದು - ಮುಂಬೈಯ ದಿ ಡೈಲಿ ಪತ್ರಿಕೆಯು ದಂಗುಬಡಿಸುವ ಸುದ್ದಿಯೊಂದನ್ನು ಪ್ರಕಟಿಸಿತು. ಸುದ್ದಿಯು ಭಾರತದ ಪ್ರಸಿದ್ಧ ಟೆಕ್ಸ್ ಟೈಲ್ಸ್ ಕಂಪೆನಿಯಾದ ಬಾಂಬೆ ಡೈಯಿಂಗ್‍ನ ಮಾಲಿಕ ನುಸ್ಲಿ ವಾಡಿಯರಿಗೆ ಸಂಬಂಧಿಸಿದ್ದು. ವಿಶೇಷ ಏನೆಂದರೆ, ಅವರು ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾರ ಮೊಮ್ಮಗರಾಗಿದ್ದರು. ಸುದ್ದಿ ಹೀಗಿದೆ:
     “ನುಸ್ಲಿ ವಾಡಿಯಾ ಪಾಕಿಸ್ತಾನದ ಗೂಢಚರರಾಗಿದ್ದು ದಾವೂದ್ ಇಬ್ರಾಹೀಮ್‍ನೊಂದಿಗೆ ಸಂಬಂಧ ಹೊಂದಿದ್ದಾರೆ. ಮಾದಕ ವಸ್ತು ಗಳ ಕಳ್ಳಸಾಗಾಣಿಕೆಯಲ್ಲಿ ಅವರು ಭಾಗಿಯಾಗಿದ್ದಾರೆ. ನೇಪಾಲದ ಬ್ಯಾಂಕೊಂದರ ಮೂಲಕ ಕಪ್ಪು ಹಣವನ್ನು ಬಿಳಿಗೊಳಿಸುವ ದೇಶದ್ರೋಹಿ ಕೃತ್ಯದಲ್ಲೂ ಅವರು ಭಾಗಿಯಾಗಿದ್ದಾರೆ. ಅಲ್ಲದೇ ಪಾಕ್ ತಾರೆ ಅನಿತಾ ಅಯ್ಯೂಬ್‍ರ ಜತೆಗೆ ಅವರಿಗೆ ನಂಟಿದೆ..”
     ‘ದಿ ಡೈಲಿ’ಯಲ್ಲಿ ಪ್ರಕಟವಾದ ಈ ಸುದ್ದಿಯು ಮರುದಿನ ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಬಾಂಬ್ ಸ್ಫೋಟದಷ್ಟೇ ಜೋರಾಗಿ ಸದ್ದು ಮಾಡಿತು. ಬಹುತೇಕ ಎಲ್ಲ ಪತ್ರಿಕೆಗಳ ಮುಖಪುಟದಿಂದ ಹಿಡಿದು ಕೊನೆಪುಟದ ವರೆಗೆ ವಿವಿಧ ಶಂಕಿತ ಮತ್ತು ಕಲ್ಪಿತ ಸುದ್ದಿಗಳು ಪ್ರಕಟವಾದುವು. ಬಾಂಬ್ ಸ್ಫೋಟದ 5 ತಿಂಗಳ ಬಳಿಕ ಸ್ಫೋಟಗೊಂಡ ಸುದ್ದಿ ಇದಾಗಿರುವುದರಿಂದ ಮಾಧ್ಯಮ ಕ್ಷೇತ್ರ ಮಾತ್ರವಲ್ಲ, ಜನರು ಕೂಡ ವಾಡಿಯಾರನ್ನು ದೇಶದ್ರೋಹಿಯಂತೆ ಕಾಣತೊಡಗಿದರು. ವೈರಿಗಳೊಂದಿಗೆ ಕಳ್ಳ ವ್ಯವಹಾರ ಇಟ್ಟುಕೊಂಡವ ಎಂಬ ಹಣೆಪಟ್ಟಿಯೊಂದು ಅವರನ್ನು ಹಿಂಬಾಲಿಸತೊಡಗಿತು. ಇದರಿಂದ ತೀವ್ರವಾಗಿ ನೊಂದುಕೊಂಡ ನುಸ್ಲಿ ವಾಡಿಯಾರು ದಿ ಡೈಲಿ ಪತ್ರಿಕೆಯ ಸಂಪಾದಕ ರಾಜೀವ್ ಕೆ. ಬಜಾಜ್, ನಿರ್ವಾಹಕ ಸಂಪಾದಕ ಫಿರೋಜ್ ದಸ್ತರ್, ಪ್ರಕಾಶಕ ಮೋಹನ್ ನಾಯಕ್‍ರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಆದರೆ, ಇದಾಗಿ 7 ವರ್ಷಗಳ ಬಳಿಕ 2000ದಲ್ಲಿ ಈ ಮೊಕದ್ದಮೆಯನ್ನು ಕೋರ್ಟು ವಜಾಗೊಳಿಸಿತು. ವಿಚಾರಣೆಯ ವೇಳೆ ನುಸ್ಲಿ ವಾಡಿಯಾ ಹಾಜರಾಗಲಿಲ್ಲವೆಂಬುದನ್ನು ಕೋರ್ಟು ಇದಕ್ಕೆ ಸಮರ್ಥನೆಯಾಗಿ ಕೊಟ್ಟಿತು. ನಿಜವಾಗಿ, ಇಡೀ ಪ್ರಕರಣ ಇಲ್ಲಿಗೇ ಮುಗಿದು ಬಿಡಬೇಕಿತ್ತು. ಆದರೆ ಮೊನ್ನೆ, 2015 ನವಂಬರ್‍ನಲ್ಲಿ ಮುಂಬೈ ಹೈಕೋರ್ಟ್ ಆ ತೀರ್ಪನ್ನೇ ರದ್ದುಗೊಳಿಸಿತಲ್ಲದೇ ಪ್ರಕರಣವನ್ನು ಮತ್ತೆ ಮರು ವಿಚಾರಣೆಗೆ ಎತ್ತಿಕೊಂಡಿತು. ಮಾತ್ರವಲ್ಲ, ಒಂದು ವರ್ಷದೊಳಗೆ ತೀರ್ಪು ಬರಬೇಕೆಂಬ ಗಡುವನ್ನೂ ವಿಧಿಸಿತು. ನಿಜವಾಗಿ, ಈ ಪ್ರಕರಣಕ್ಕೆ ಮಹತ್ವದ ತಿರುವು ಸಿಗುವುದೇ ಈ ಬೆಳವಣಿಗೆಯ ನಂತರ. ಪ್ರಕರಣವನ್ನು ಮರು ವಿಚಾರಣೆಗೆ ಕೋರ್ಟ್ ಎತ್ತಿಕೊಂಡ ಬಳಿಕ ದಿ ಡೈಲಿಯ ಅಂದಿನ ಸಂಪಾದಕ ರಾಜೀವ್ ಕೆ. ಬಜಾಜ್ ರು  ಹೈಕೋರ್ಟ್‍ಗೆ ಅಫಿದವಿತನ್ನು ಸಲ್ಲಿಸಿದರು. ಆ ಅಫಿದವಿತ್‍ನಲ್ಲಿ ಆ ಸುದ್ದಿ ಪ್ರಕಟಣೆಯ ಹಿಂದಿನ ಕಾರಣಗಳು, ಒತ್ತಡಗಳು ಮತ್ತು ದೊಡ್ಡವರ ರಹಸ್ಯ ವ್ಯವಹಾರಗಳನ್ನು ಕೋರ್ಟ್‍ನ ಮುಂದಿಟ್ಟರು. ಆ ಕಾಲದಲ್ಲಿ ಧೀರೂಭಾಯಿ ಅಂಬಾನಿ ಮತ್ತು ನುಸ್ಲಿ ವಾಡಿಯಾರ ನಡುವೆ ತೀವ್ರ ಸ್ಪರ್ಧೆಯಿತ್ತು. ಭಾರತದ ಪ್ರಮುಖ ಕಾರ್ಪೋರೇಟ್ ದೊರೆಗಳಾಗಿದ್ದ ಇವರಿಬ್ಬರೂ ಪರಸ್ಪರರನ್ನು ಮಣಿಸುವುದಕ್ಕಾಗಿ ತಂತ್ರಗಳನ್ನು ಹೆಣೆಯುತ್ತಿದ್ದರು. ಭಾರತೀಯ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸ್ಥಾಪಿಸುವುದು ಇವರಿಬ್ಬರ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಅಂಬಾನಿಯವರ ರಿಲಯನ್ಸ್ ಕಂಪೆನಿಯು ದಿ ಡೈಲಿ ಪತ್ರಿಕೆಯ ಮಾಲಿಕ ಕಮಲ್ ಮೊರಾರ್ಕರನ್ನು ಸಂಪರ್ಕಿಸಿತು. ವ್ಯವಹಾರ ಕುದುರಿಸಿತು. ಅದರ ಭಾಗವಾಗಿಯೇ ನುಸ್ಲಿ ವಾಡಿಯರ ವಿರುದ್ಧದ ಈ ಸುದ್ದಿ (ಪಾವತಿ ಸುದ್ದಿ) ಪ್ರಕಟವಾಯಿತು. ಈ ಸುದ್ದಿ ಪ್ರಕಟಣೆಯಿಂದ ಅಂಬಾನಿ ಎಷ್ಟು ಖುಷಿಗೊಂಡರೆಂದರೆ ಸಂಪಾದಕರಾದ ರಾಜೀವ್ ಕೆ. ಬಜಾಜ್‍ರನ್ನು ತನ್ನಲ್ಲಿಗೆ ಕರೆಸಿ ಕೊಂಡು ಅಭಿನಂದಿಸಿದರು...’ ಮುಂತಾದ ದಂಗುಬಡಿಸುವ ಸುದ್ದಿಗಳು ಮೊನ್ನೆ ಬಜಾಜ್ ಸಲ್ಲಿಸಿದ ಅಫಿದವಿತ್‍ನಲ್ಲಿದೆ. ವಿಶೇಷ ಏನೆಂದರೆ, ಈ ಅಫಿದವಿತ್‍ನ ಬಗ್ಗೆ ಎಕನಾಮಿಕ್ಸ್ ಟೈಮ್ಸ್ ಪತ್ರಿಕೆಯನ್ನು ಬಿಟ್ಟರೆ ಉಳಿದಂತೆ ಇನ್ನಾವ ಪ್ರಮುಖ ಪತ್ರಿಕೆಗಳೂ ಸುದ್ದಿಯನ್ನೇ ಪ್ರಕಟಿಸಲಿಲ್ಲ. ಆದರೂ, Rajiv K Bajaj, affidavit in Bombay HC reviws memories of famous corporate battles of Nusli Wadia (ನುಸ್ಲಿ ವಾಡಿಯಾರ ಪ್ರಸಿದ್ಧ ಕಾರ್ಪೋರೇಟ್ ಸಂಘರ್ಷವನ್ನು ನೆನಪಿಸಿದ ಬಜಾಜ್‍ರ ಅಫಿದವಿತ್) ಎಂಬ ಶೀರ್ಷಿಕೆಯಲ್ಲಿ ನವಂಬರ್ 23ರಂದು ಎಕನಾಮಿಕ್ಸ್ ಟೈಮ್ಸ್ ಪ್ರಕಟಿಸಿದ ಸುದ್ದಿಯಂತೂ ಮುಂಬೈ ಆವೃತ್ತಿಗೆ ಮಾತ್ರ ಸೀಮಿತವಾಗಿತ್ತು. ಅಲ್ಲದೇ ಆ ಬಳಿಕ ಈ ಸುದ್ದಿಯ ವಿಶ್ಲೇಷಣೆಯಾಗಲಿ, ಫಾಲೋವಪ್ ಸುದ್ದಿಯಾಗಲಿ ಏನೂ ಪ್ರಕಟವಾಗಲಿಲ್ಲ. ಉಳಿದ ಪತ್ರಿಕೆ ಮತ್ತು ಚಾನೆಲ್‍ಗಳ ಅವಸ್ಥೆಯಂತೂ ತೀರಾ ಗಂಭೀರ. ಅವೆಲ್ಲ ಇಂಥದ್ದೊಂದು ಅಫಿದವಿತ್ ಸಲ್ಲಿಕೆಯಾಗಲಿಲ್ಲವೇನೋ ಎಂಬಂತೆ ವರ್ತಿಸಿದುವು. ಪ್ರಮುಖ ಚಾನೆಲ್‍ಗಳು ಮತ್ತು ಪತ್ರಿಕೆಗಳ ವೆಬ್‍ಸೈಟ್‍ಗಳಲ್ಲಿ ಈ ಬಗ್ಗೆ ಯಾವ ವಿವರವೂ ಇಲ್ಲ. ನಿಜವಾಗಿ, ಭ್ರಷ್ಟಾಚಾರದ ವಿರುದ್ಧ ಜನಧ್ರುವೀಕರಣದಲ್ಲಿ ದೊಡ್ಡದೊಂದು ಪಾತ್ರವನ್ನು ನಿರ್ವಹಿಸಿದ್ದೇ ಮಾಧ್ಯಮಗಳು. ಅಣ್ಣಾ ಹಜಾರೆಯವರ ಲೋಕಪಾಲ್ ಚಳವಳಿ ‘ಜನರ ಚಳವಳಿಯಾದದ್ದು’ ಮಾಧ್ಯಮ ಕೃಪೆಯಿಂದಲೇ. ಅದಾಗ್ಯೂ 2010ರಲ್ಲಿ ಜೋರಾಗಿ ಕೇಳಿ ಬಂದ ಪಾವತಿ ಸುದ್ದಿ(Paid News)ಯು ಮಾಧ್ಯಮಗಳ ವಿಶ್ವಾಸಾರ್ಹತೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿತ್ತು. ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವಾಣ್‍ರು ಮಾಧ್ಯಮಗಳಿಗೆ ಹಣ ನೀಡಿ ತಮ್ಮ ಪರವಾದ ಅಭಿವೃದ್ಧಿ ವರದಿಗಳು ಬರುವಂತೆ ನೋಡಿಕೊಂಡಿದ್ದರು ಎಂಬ ಆರೋಪವೂ  ಬಂದಿತ್ತು. 2009ರಿಂದ 13ರ ನಡುವೆ ರಾಜಕಾರಣಿಗಳಿಗೆ ಸಂಬಂಧಿಸಿ ಸುಮಾರು 1,400 ಪಾವತಿ ಸುದ್ದಿಗಳು ಪ್ರಕಟವಾಗಿವೆ ಎಂಬ ದೂರುಗಳು ಚುನಾವಣಾ ಆಯೋಗಕ್ಕೆ ಬಂದಿವೆ. ಜಿಂದಾಲ್ ಕಂಪೆನಿಯು ಈ ಹಿಂದೆ ಝೀ ನ್ಯೂಸ್‍ನ ವಿರುದ್ಧ ಬ್ಲ್ಯಾಕ್‍ಮೇಲ್ ಆರೋಪವನ್ನು ಹೊರಿಸಿತ್ತು. ಮಾತ್ರವಲ್ಲ, ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಪರಾಂಜಯ್ ಗುಹಾ ತಾಕುರ್ತಾ ಮತ್ತು ಶ್ರೀನಿವಾಸ್ ರೆಡ್ಡಿ ನೇತೃತ್ವದಲ್ಲಿ 2009 ಜೂನ್ 9ರಂದು ಪಾವತಿ ಸುದ್ದಿಯ ಕುರಿತಂತೆ ಉಪಸಮಿತಿಯನ್ನು ರಚಿಸಿತ್ತು. 2010 ಜುಲೈಯಲ್ಲಿ ಈ ಸಮಿತಿಯು ತನ್ನ ವರದಿಯನ್ನು ಪ್ರೆಸ್ ಕೌನ್ಸಿಲ್‍ಗೆ ಸಲ್ಲಿಸಿದ್ದು ಮತ್ತು ಆ ಬಗ್ಗೆ ಮಾಧ್ಯಮ ಪ್ರಮುಖರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು ಎಲ್ಲವೂ ನಡೆದಿತ್ತು. ಇಷ್ಟಿದ್ದೂ, ರಾಜೀವ್ ಬಜಾಜ್‍ರ ಅಫಿದವಿತ್‍ನ ಬಗ್ಗೆ ಮಾಧ್ಯಮಗಳೇಕೆ ಈ ಮಟ್ಟದಲ್ಲಿ ಮೌನವಹಿಸಿದುವು? ಭ್ರಷ್ಟಾಚಾರದ ಬಗ್ಗೆ ಅದರಲ್ಲೂ ಮಾಧ್ಯಮ ಭ್ರಷ್ಟಾಚಾರದ (ಪಾವತಿ ಸುದ್ದಿ) ಬಗ್ಗೆ ಏರು ದನಿಯಲ್ಲಿ ಮಾತಾಡಿದ ಮಾಧ್ಯಮಗಳೆಲ್ಲ ಈ ಅಫಿದವಿತ್‍ಗೆ ಒಂದು ಸುದ್ದಿಯಾಗುವ ಅರ್ಹತೆಯನ್ನು ನೀಡಲಿಲ್ಲವೇಕೆ? ಅಫಿದವಿತ್‍ನಲ್ಲಿ ಕಾಳೆಷ್ಟು ಜೊಳ್ಳೆಷ್ಟು ಎಂಬುದನ್ನು ವಿಶ್ಲೇಷಿಸುವುದಕ್ಕಾದರೂ ಸುದ್ದಿ ಪ್ರಕಟಣೆ ಅಗತ್ಯವಾಗಿತ್ತಲ್ಲವೇ? ಎಕನಾಮಿಕ್ಸ್ ಟೈಮ್ಸ್ ಅನ್ನು (ಮುಂಬೈ ಆವೃತ್ತಿ) ಹೊರತು ಪಡಿಸಿದಂತೆ ಉಳಿದೆಲ್ಲಾ ಪತ್ರಿಕೆ-ಚಾನೆಲ್‍ಗಳು ಮೌನಕ್ಕೆ ಜಾರಿದ್ದು ಕಾಕತಾಳಿಯವೋ ಅಥವಾ ಉದ್ದೇಶಪೂರ್ವಕವೋ?
    ಅರ್ನಾಬ್ ಸೈಕಿಯಾ ಮತ್ತಿತರ ಪತ್ರಕರ್ತರ ಅನುಮಾನ ಇದುವೇ ಆಗಿತ್ತು. ಆದ್ದರಿಂದಲೇ ಸ್ಪಷ್ಟೀಕರಣ ಕೋರಿ ಮಾಧ್ಯಮ ಕ್ಷೇತ್ರದ ಪ್ರಮುಖರಿಗೆ ಅವರು ಇಮೇಲ್ ಮಾಡಿದ್ದರು. ಹಾಗಂತ,
      ಇವತ್ತಿರುವುದು 1993ರ ಅಂಬಾನಿಯಲ್ಲವಲ್ಲ. 1993ರಲ್ಲಿ ಪತ್ರಿಕೆಗಳ ಮುಖಪುಟದಿಂದ ಕೊನೆಪುಟದ ತನಕ ಆವರಿಸಿಕೊಳ್ಳುವಷ್ಟು ಪ್ರಾಮುಖ್ಯತೆಯನ್ನು ಪಡೆದಿದ್ದ ಸುದ್ದಿಯೊಂದು ಇವತ್ತು ಸುದ್ದಿಯಾಗುವ ಮಹತ್ವವನ್ನೇ ಪಡಕೊಳ್ಳುವುದಿಲ್ಲ ಎಂದರೆ ಅದಕ್ಕೆ ಕಾರಣ ಅಂಬಾನಿ ಸಾಮ್ರಾಜ್ಯ. ಧೀರೂಭಾಯಿ ಅಂಬಾನಿಯವರ ಸಾಮ್ರಾಜ್ಯ ಇವತ್ತು ಮಕ್ಕಳಾದ ಅನಿಲ್ ಮತ್ತು ಮುಖೇಶ್‍ರಲ್ಲಿ ವಿಭಜನೆಗೊಂಡಿದೆ. ಈ ವಿಭಜನೆಯಿಂದ ಅವರ ಉದ್ಯಮಕ್ಕೆ ಲಾಭವಾಗಿದೆಯೋ ಇಲ್ಲವೋ ಆದರೆ ಮಾಧ್ಯಮ ಕ್ಷೇತ್ರಕ್ಕಂತೂ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಇವತ್ತು ‘ಮೋದಿ ಇಲ್ಲವೇ ಸೋನಿಯಾರ ವಿರುದ್ಧ ಬರೆಯ ಬಹುದು, ಆದರೆ ಅಂಬಾನಿಗಳ ವಿರುದ್ಧ ಸಾಧ್ಯವಿಲ್ಲ’ ಎಂಬೊಂದು ವಾತಾವರಣ ಪ್ರಮುಖ ಮಾಧ್ಯಮಗಳ ಮಟ್ಟಿಗೆ ಸತ್ಯವಾಗುತ್ತಿದೆ. ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಇವತ್ತು ಮಾಧ್ಯಮ ಕ್ಷೇತ್ರವನ್ನು ಬಹುತೇಕ ಆಳುತ್ತಿದ್ದಾರೆ. ಮುಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(RIL) ಸಂಸ್ಥೆಯು ‘ನೆಟ್‍ವರ್ಕ್ 18’ ಎಂಬ ಮಾಧ್ಯಮ ಸಮೂಹ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಈಟಿ.ವಿ.ಯ ನಿಯಂತ್ರಣವೂ ಅದರದೇ. ಎನ್‍ಡಿಟಿವಿಯೂ ಅದರ ಪಾಲಾಗಿದೆ. ಅನಿಲ್ ಒಡೆತನದ ಅನಿಲ್ ಧೀರೂಭಾಯಿ ಅಂಬಾನಿ ಸಂಸ್ಥೆಯು ಹಿಂದೂಸ್ತಾನ್ ಟೈಮ್ಸ್ ಮತ್ತು ಮಿಂಟ್ ಪತ್ರಿಕೆಗಳ ನಿಯಂತ್ರಣವನ್ನು ಹೊಂದಿದೆ.
ಜೊತೆಗೆ ಟಿ.ವಿ. ಟುಡೇ ಗುಂಪಿನ ಒಡೆತನವೂ ಅದರದ್ದೇ. ಹೀಗಿರುತ್ತಾ, ರಾಜೀವ್ ಬಜಾಜ್‍ರ ಅಫಿದವಿತ್ ಸುದ್ದಿಯಾಗುವುದಾದರೂ ಹೇಗೆ? ನಿಜವಾಗಿ, ನಾವಿಲ್ಲಿ ಆತಂಕ ಪಡಬೇಕಾದುದು ಒಂದು ಅಫಿದವಿತ್‍ನ ಬಗ್ಗೆ ಅಲ್ಲ. ಮಾಧ್ಯಮ ಕ್ಷೇತ್ರದ ಮೇಲೆ ಕಾರ್ಪೋರೇಟ್ ದೊರೆಗಳು ಪಡೆಯುವ ಪ್ರಾಬಲ್ಯ ಮತ್ತು ಅದರಿಂದಾಗಿ ಎದುರಾಗುವ ಅಪಾಯಗಳ ಬಗ್ಗೆ. ಅಂಬಾನಿ ಗುಂಪಿನ ಸುದ್ದಿಯನ್ನು ಅಡಗಿಸಿಟ್ಟ ಮಾಧ್ಯಮಗಳು ನಾಳೆ ಇನ್ನೊಬ್ಬ ಕಾರ್ಪೋರೇಟ್‍ನ ಸುದ್ದಿಯನ್ನೂ ಅಡಗಿಸಬಹುದು. ಇಂಥ ಸ್ಥಿತಿಯಲ್ಲಿ ಮಾಧ್ಯಮಗಳು ಎಷ್ಟು ಪರಿಣಾಮ ಕಾರಿ? ಕಾರ್ಪೋರೇಟ್ ಒಡೆತನಕ್ಕೆ ಮಾಧ್ಯಮ ಕ್ಷೇತ್ರ ಸಿಲುಕುವುದರಿಂದ ಆಗುವ ಪರಿಣಾಮಗಳು ಏನೇನು? ಹೀಗಿರುತ್ತಾ ಮಾಧ್ಯಮ ರಂಗವು ಪ್ರಜಾತಂತ್ರಕ್ಕೆ ಕಾವಲು ನಿಲ್ಲಬಹುದೇ ಅಥವಾ ತನಿಖಾ ಬರಹ, ಸುದ್ದಿ ವಿಶ್ಲೇಷಣೆ, ಸತ್ಯದ ಹುಡುಕಾಟಗಳೆಲ್ಲ ಮಾಧ್ಯಮ ಕ್ಷೇತ್ರಕ್ಕೆ ವಿದಾಯ ಹೇಳಬಹುದೇ ಅಥವಾ ಅಧಿಕ ಮನರಂಜನೆ ಮತ್ತು ಸ್ವಲ್ಪ ನ್ಯೂಸ್ ಎಂಬಲ್ಲಿಗೆ ಮಾಧ್ಯಮ ಕ್ಷೇತ್ರ ಬಂದು ಮುಟ್ಟಬಹುದೇ?
        ಕಾರ್ಪೋರೇಟ್ ಒಲವಿನ ನರೇಂದ್ರ ಮೋದಿಯವರು ಪ್ರಧಾನಿಯಾಗಿರುವ ಈ ಹೊತ್ತಿನಲ್ಲಿ ಇಂಥ ಅನುಮಾನಗಳು ಇನ್ನಷ್ಟು ಬಲ ಪಡೆಯುತ್ತವೆ.  

No comments:

Post a Comment