Wednesday, February 24, 2016

  ಯಾವುದು ರಾಷ್ಟ್ರೀಯತೆ, ಯಾವುದು ರಾಷ್ಟ್ರದ್ರೋಹ?

     ಜರ್ಮನಿಯ ಪ್ರಸಿದ್ಧ ಇತಿಹಾಸಕಾರ ಆಲ್ಫ್ರೆಡ್ ರೊಸೆನ್‍ಬರ್ಗ್ ಅವರು ತನ್ನ, ‘ಫ್ಯಾಸಿಸಂ ಆ್ಯಸ್ ಎ ಮಾಸ್ ಮೂವ್‍ಮೆಂಟ್’ (Fascism As a Mass Movement) ಎಂಬ ಕೃತಿಯಲ್ಲಿ ‘ಗೂಂಡಾ ರಾಷ್ಟ್ರೀಯತೆ’ಯ ಕೆಲವು ಲಕ್ಷಣಗಳನ್ನು ದಾಖಲಿಸಿದ್ದಾರೆ. ಆ ಲಕ್ಷಣಗಳೆಲ್ಲ ಬಿಜೆಪಿ ಇವತ್ತು ಪ್ರಸ್ತುತಪಡಿಸುತ್ತಿರುವ ‘ರಾಷ್ಟ್ರೀಯತೆ’ಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಫ್ಝಲ್‍ಗುರು ಮತ್ತು ಯಾಕೂಬ್ ಮೇಮನ್ ಇಬ್ಬರೂ ಈ ದೇಶದ ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಭಿನ್ನ ಬಗೆಯ ಚರ್ಚೆಯನ್ನು ಹುಟ್ಟು ಹಾಕಿದವರು. ಅಫ್ಝಲ್ ಗುರು ಮತ್ತು ಯಾಕೂಬ್ ಮೇಮನ್‍ಗೆ ವಿಧಿಸಲಾದ ಮರಣ ದಂಡನೆಯ ಶಿಕ್ಷೆಯನ್ನು ಪ್ರಶ್ನಿಸಿರುವವರಲ್ಲಿ ಅವರ ಪರವಾಗಿ ವಾದಿಸಿರುವ ವಕೀಲರು ಮಾತ್ರ ಇರುವುದಲ್ಲ. ಈ ದೇಶದ ಹಲವಾರು ಪ್ರಸಿದ್ಧ ನ್ಯಾಯವಾದಿಗಳು ಆ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ. ಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಯಾಕೂಬ್ ಮೇಮನ್‍ನ ಬಗೆಗಂತೂ ಸರ್ವೋಚ್ಚ ನ್ಯಾಯಾಲಯವೇ ಗೊಂದಲದಲ್ಲಿತ್ತು ಎಂಬುದಕ್ಕೆ ರಾತ್ರಿ 3 ಗಂಟೆಗೆ ವಿಶೇಷ ಕಲಾಪ ನಡೆಸಿದ್ದೇ ಸಾಕ್ಷಿ. ಹೀಗಿರುತ್ತಾ, ಈ ಇಬ್ಬರ ಕುರಿತಾಗಿ ಸಭೆ ಏರ್ಪಡಿಸುವವರನ್ನು ಮತ್ತು ಅದರಲ್ಲಿ ಭಾಗವಹಿಸುವವರನ್ನು ‘ದೇಶದ್ರೋಹಿ’ಗಳು ಎಂದು ಕರೆಯುವುದು ಯಾವ ಬಗೆಯ ರಾಷ್ಟ್ರೀಯತೆ? ಈ ರಾಷ್ಟ್ರೀಯತೆಯನ್ನು ಪರಿಚಯಿಸಿದವರು ಯಾರು- ಸಂವಿಧಾನವೇ, ನ್ಯಾಯಾಲಯವೇ ಅಥವಾ ಬಲಪಂಥೀಯರೇ? ಹಾಗಂತ, ವಿಶ್ವವಿದ್ಯಾನಿಲಯಗಳೆಂದರೆ, ಕಿರಾಣಿ ಅಂಗಡಿಗಳಂತೆ ಅಲ್ಲವಲ್ಲ. ಮುಕ್ತ ಚರ್ಚೆಯೇ ವಿಶ್ವವಿದ್ಯಾನಿಲಯಗಳ ವಿಶೇಷತೆ. ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕಂತೂ (JNU) ಈ ಕುರಿತಂತೆ ದೊಡ್ಡ ಇತಿಹಾಸವಿದೆ. ಅಲ್ಲಿ ಪ್ರಮುಖ ಪತ್ರಕರ್ತರು, ಅನುವಾದಕರು, ಬರಹಗಾರರು, ಸಾಮಾಜಿಕ ಹೋರಾಟಗಾರರು, ಪ್ರೊಫೆಸರ್‍ಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ರಾಜಕಾರಣಿಗಳು, ಉದ್ಯಮಿಗಳು, ವೈಸ್ ಚಾನ್ಸೆಲರ್‍ಗಳೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು ಉಪನ್ಯಾಸ ಕೊಡುತ್ತಿರುತ್ತಾರೆ. ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸುತ್ತಾರೆ. ವಿಜ್ಞಾನ ವಿಭಾಗದಲ್ಲಿ ಕಲಿಯುವ ವಿದ್ಯಾರ್ಥಿಗಳು ಕೂಡ ಸಮಾಜಶಾಸ್ತ್ರ ವಿಭಾಗದಲ್ಲಿ ಕುಳಿತು ಚರ್ಚೆಯಲ್ಲಿ ಭಾಗ ವಹಿಸುವಷ್ಟು ಇಲ್ಲಿನ ವಾದ-ತರ್ಕಗಳು ಆಸಕ್ತಿಕರವಾಗಿರುತ್ತವೆ. ವಿದ್ಯಾರ್ಥಿಗಳ ಆಲೋಚನಾ ಮಟ್ಟವನ್ನು ವಿಸ್ತಾರಗೊಳಿಸುವ ಈ ಬಗೆಯ ಚರ್ಚೆಗಳಿಂದಾಗಿಯೇ JNU ಎಮರ್ಜೆನ್ಸಿಯ ಸಂದರ್ಭದಲ್ಲೂ ಸುದ್ದಿ ಮಾಡಿದೆ. ‘ತಾನಾಶಾಹಿ ನಹೀ ಚಲೇಗಿ’ ಎಂಬ ಘೋಷಣೆಯೊಂದಿಗೆ ಇಲ್ಲಿನ ವಿದ್ಯಾರ್ಥಿಗಳು ಈ ಹಿಂದೆ ಪ್ರತಿಭಟಿಸಿದ್ದರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಹೇರಲಾಗಿದ್ದ MISA ಕಾಯ್ದೆಯನ್ನು ವಿರೋಧಿಸಿ ಇಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಆ ಸಂದರ್ಭದಲ್ಲಿ ವಿದ್ಯಾರ್ಥಿ ನಾಯಕನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇರಾನ್‍ನ ಶಾ  ಆಡಳಿತದ ವಿರುದ್ಧ, ಫೆಲೆಸ್ತೀನನ್ನು ಇಸ್ರೇಲ್‍ಗೆ ಮಾರಾಟ ಮಾಡುವ ರೀತಿಯಲ್ಲಿದ್ದ ಕ್ಯಾಂಪ್ ಡೇವಿಡ್ ಒಪ್ಪಂದದ ವಿರುದ್ಧ JNU ಪ್ರತಿಭಟಿಸಿತ್ತು. ಪೋಲ್‍ಪಾಟ್‍ನ ಜನಾಂಗ ಹತ್ಯೆಯಿಂದಾಗಿ ಸಂಪೂರ್ಣ ವಿವಶವಾಗಿದ್ದ ಕೊಲಂಬಿಯಾಕ್ಕೆ ಆಹಾರ ಧಾನ್ಯಗಳನ್ನು ಕಳುಹಿಸಿಕೊಡುವಂತೆಯೂ ಇಲ್ಲಿ ಪ್ರತಿಭಟನೆಗಳು ನಡೆದಿದ್ದುವು. ಈ ಪ್ರಕ್ರಿಯೆ ಈಗಲೂ ಮುಂದುವರಿಯುತ್ತಿದೆ. ಒಂದು ವಿಶ್ವ ವಿದ್ಯಾನಿಲಯವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಮೇಲೆ ಈ ಮಟ್ಟದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತದೆಂದರೆ ಅದು ಅಲ್ಲಿನ ವಿದ್ಯಾರ್ಥಿಗಳ ಪ್ರಬುದ್ಧತೆಗೆ ಸಾಕ್ಷಿ. ತುರ್ತುಸ್ಥಿತಿಯ ಸಂದರ್ಭದಲ್ಲಿ ಇಂದಿರಾಗಾಂಧಿಯವರು ಈ ಬೆಳವಣಿಗೆಯನ್ನು ಅಪಾಯಕಾರಿಯೆಂದು ಘೋಷಿಸಿದ್ದರು. ಇದೀಗ ನರೇಂದ್ರ ಮೋದಿಯವರು ತುರ್ತುಸ್ಥಿತಿಯನ್ನು ಘೋಷಿಸದೆಯೇ ಇಂದಿರಾ ಗಾಂಧಿಯವರನ್ನು ಅನುಸರಿಸುತ್ತಿದ್ದಾರೆ. ಮೊದಲು ಹೈದರಾಬಾದ್ ವಿಶ್ವವಿದ್ಯಾನಿಲಯವನ್ನು ಈ ಅಘೋಷಿತ ತುರ್ತುಸ್ಥಿತಿಗೆ ಆಯ್ಕೆ ಮಾಡಲಾಯಿತು. ಯಾಕೂಬ್ ಮೇಮನ್‍ನ ಬಗ್ಗೆ ಸಭೆ ಏರ್ಪಡಿಸಿದ ಅಂಬೇಡ್ಕರ್ ಸ್ಟೂಡೆಂಟ್ ಯೂನಿಯನ್ (ASU) ಅನ್ನು ABVPಯು ದೇಶದ್ರೋಹಿಯೆಂದು ಗುರುತಿಸಿತು. ಬಳಿಕ ಬಿಜೆಪಿ ಸಂಸದ ಬಂಡಾರು ದತ್ತಾತ್ರೇಯ ಅವರು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಗೆ ದೂರು ನೀಡಿದರು. ಬಳಿಕ ಉಪಕುಲಪತಿಯವರು ಕ್ರಮ ಕೈಗೊಂಡರು. JNU ಎರಡನೇ ಆಯ್ಕೆ. ಅಫ್ಝಲ್ ಗುರುವಿನ ವಿಷಯದಲ್ಲಿ ಏರ್ಪಡಿಸಲಾದ ಸಭೆಯನ್ನು ABVP ದೇಶದ್ರೋಹಿಯಾಗಿ ಚಿತ್ರಿಸಿತು. BJP ಸಂಸದ ಮಹೇಶ್ ಗಿರಿ ದೂರು ಕೊಟ್ಟರು. ಉಪಕುಲಪತಿಗಳು ಕ್ರಮ ಕೈಗೊಂಡರು. ಎರಡರಲ್ಲೂ ಸಮಾನತೆಯಿದೆ. ಅದೇನೆಂದರೆ, ದೇಶದ್ರೋಹವನ್ನು ತೀರ್ಮಾನಿಸುವುದು ABVP ಅಥವಾ ಬಿಜೆಪಿ.
  1950-60ರ ದಶಕದಲ್ಲಿ ಪ್ರತ್ಯೇಕ ತಮಿಳು ರಾಷ್ಟ್ರದ ಕೂಗು ಎದ್ದಿತ್ತು. ಡಿ.ಎಂ.ಕೆ. ತನ್ನ ಅಜೆಂಡಾದಲ್ಲಿ ಅದನ್ನು ಸೇರಿಸಿಯೂ ಇತ್ತು. ಮಾತ್ರವಲ್ಲ, ಮುಖ್ಯಮಂತ್ರಿ ಅಣ್ಣಾದುರೈಯವರು ಪ್ರತ್ಯೇಕ ತಮಿಳು ರಾಷ್ಟ್ರದ ಪರ ದೆಹಲಿಯಲ್ಲಿ ಮಾತಾಡಿದ್ದರು. ಅದರ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆಯೂ ವ್ಯಕ್ತವಾಯಿತು. ಆದರೆ ಪ್ರಧಾನಿ ನೆಹರೂ ಅವರು ಅಣ್ಣಾದುರೈ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ‘ಅವರ ವಾಕ್ ಸ್ವಾತಂತ್ರ್ಯವನ್ನು ಗೌರವಿಸೋಣ’ ಎಂದಷ್ಟೇ ಹೇಳಿದ್ದರು. 1960ರಲ್ಲಿ ಡಿ.ಎಂ.ಕೆ. ಪಕ್ಷವು ತನ್ನ ಅಜೆಂಡಾದಿಂದ ಪ್ರತ್ಯೇಕ ರಾಷ್ಟ್ರದ ಬೇಡಿಕೆಯನ್ನೇ ಕಿತ್ತು ಹಾಕಿತು. ವಿಯೆಟ್ನಾಂ ವಿರುದ್ಧ ಅಮೇರಿಕವು ಸಾರಿದ ಯುದ್ಧವು ಅಮೇರಿಕದಲ್ಲಿ ಪರ-ವಿರೋಧಿಗಳನ್ನು ಹುಟ್ಟು ಹಾಕಿತ್ತು. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಅಮೇರಿಕದ ಧ್ವಜವನ್ನೇ ಸುಟ್ಟು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದರು. 2003ರಲ್ಲಂತೂ ಅಮೇರಿಕದಲ್ಲಿ ತೀವ್ರ ಪ್ರತಿಭಟನೆ ಗಳು ಕಾಣಿಸಿಕೊಂಡವು. ಬರ್ಕ್‍ಲಿಯಿಂದ ಬ್ರೋನ್‍ವರೆಗೆ ‘ಇರಾಕ್ ಯುದ್ಧ ವಿರೋಧಿ’ ಪ್ರತಿಭಟನೆಗಳು ಕಾಣಿಸಿಕೊಂಡವು. ಆದರೆ ಈ ಯಾವ ಪ್ರಕರಣದಲ್ಲೂ ಯಾರ ಮೇಲೂ ಅಮೇರಿಕ ದೇಶದ್ರೋಹಿ ಪ್ರಕರಣವನ್ನು ದಾಖಲಿಸಲಿಲ್ಲ. ಅಷ್ಟಕ್ಕೂ, ದೇಶದ್ರೋಹದ ಮಾನದಂಡ ಏನೆಲ್ಲ? ಯಾವ ಕಾರಣಕ್ಕಾಗಿ ಓರ್ವನನ್ನು, ಒಂದು ಗುಂಪನ್ನು, ಒಂದು ಸಂಘಟನೆಯನ್ನು ದೇಶದ್ರೋಹಿಯೆಂದು ಕರೆಯಬಹುದು? ಪಾಕಿಸ್ತಾನ್ ಜಿಂದಾಬಾದ್ ಎಂದು ಕರೆಯುವುದು ದೇಶದ್ರೋಹವಾಗುತ್ತದೆಂದಾದರೆ, ಗಣರಾಜ್ಯವನ್ನು ‘ಕರಾಳ ದಿನ’ವನ್ನಾಗಿ ಆಚರಿಸುವುದಕ್ಕೆ ಏನೆಂದು ಹೆಸರು? ಭಾರತೀಯ ಸಂವಿಧಾನದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರನ್ನು ಏನೆಂದು ಕರೆಯಬೇಕು? ಗಾಂಧೀಜಿಯವರ ಹತ್ಯೆಗೆ ಸಿಹಿ ಹಂಚುವುದು ಯಾವ ಕೆಟಗರಿಯಲ್ಲಿ ಬರುತ್ತದೆ? ನಾಥೂರಾಂ ಗೋಡ್ಸೆಯನ್ನು ಮಹಾನ್ ದೇಶಭಕ್ತನೆಂದು ಕರೆದು ಆತನ ಪುತ್ಥಳಿ ಯನ್ನು ಸ್ಥಾಪಿಸುವುದಾಗಿ ಘೋಷಿಸಿರುವುದಕ್ಕೆ ABVP ಮತ್ತು BJPಯ ನಿಲುವೇನು? ಅಖಿಲ ಭಾರತ ಹಿಂದೂ ಮಹಾಸಭಾವು ಇವೆಲ್ಲವನ್ನು ಮಾಡಿದ್ದರೂ ಮತ್ತು ಮತ್ತೆ ಮತ್ತೆ ಮಾಡುತ್ತಿದ್ದರೂ ABVPಯ ಗುಪ್ತಚರರು ಯಾಕೆ ಈ ಬಗ್ಗೆ ಬಂಡಾರು ದತ್ತಾತ್ರೇಯರಿಗೋ ಮಹೇಶ್ ಗಿರಿಗೋ ದೂರು ಕೊಟ್ಟಿಲ್ಲ? ರಾಜನಾಥ್ ಸಿಂಗ್‍ರವರು ಯಾಕೆ ಇದರ ಹಿಂದೆ ವಿದೇಶಿ ಶಕ್ತಿಗಳ ಕೈವಾಡವನ್ನು ಶಂಕಿಸಿಲ್ಲ? ಸಾಕ್ಷಿ ಮಹಾರಾಜ್, ಪ್ರಾಚಿ, ಕಿರಣ್ ರಿಜುಜು, ಸ್ಮೃತಿ ಇರಾನಿ, ಒ.ಪಿ. ಶರ್ಮಾ ಮತ್ತಿತರರು ಯಾಕೆ ಈ ಬಗ್ಗೆ ಒಂದೂ ಮಾತಾಡಿಲ್ಲ? ದೇಶಪ್ರೇಮವೆಂಬುದು ಇಷ್ಟೊಂದು ವೈರುಧ್ಯಗಳ ಹೆಸರೇ? ಅದರಲ್ಲೂ ವಿಧಗಳಿವೆಯೇ? ನಿಜವಾಗಿ, ಪಾಕ್‍ನ ಪರವೋ ಬಾಂಗ್ಲಾ, ಲಂಕಾ, ಅಮೇರಿಕದ ಪರವೋ ಘೋಷಣೆ ಕೂಗುವುದರಿಂದ ಆಗುವಂಥದ್ದೇನೂ ಇಲ್ಲ. ಅಂಥ ಘೋಷಣೆಗಳಿಂದ ಈ ದೇಶದಲ್ಲಿ ಹಿಂಸಾಚಾರ ಆಗುವುದೂ ಇಲ್ಲ. ಹಾಗಂತ ನಾನದನ್ನು ಸಮರ್ಥಿಸುತ್ತಿಲ್ಲ. ಈ ದೇಶದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಬೇಕಾದ ಯಾವ ಅಗತ್ಯವೂ ಯಾರಿಗೂ ಇಲ್ಲ. ಆದರೆ, ಈ ಘೋಷಣೆ ಬೀರುವ ಪರಿಣಾಮವು ‘ದಲಿತರನ್ನು ನಾಯಿಗಳು’ ಅನ್ನುವುದಕ್ಕಿಂತಲೂ ದೊಡ್ಡದೇ? ಹತ್ಯಾಕಾಂಡಕ್ಕೆ ನೇತೃತ್ವ ಕೊಡುವುದಕ್ಕಿಂತಲೂ ದೊಡ್ಡದೇ? ಗುಜರಾತ್‍ನಲ್ಲಿ ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಹತ್ಯೆಗೈಯಲಾದ ಕೃತ್ಯವು ಪಾಕಿಸ್ತಾನ್ ಜಿಂದಾಬಾದ್‍ನ ಎದುರು ತೃಣ ಸಮಾನವೇ? ಮುಝಫ್ಫರ್ ನಗರ್ ಹತ್ಯಾಕಾಂಡವನ್ನು ‘ಪಾಕಿಸ್ತಾನ್ ಜಿಂದಾಬಾದ್’ನೆದುರು ಮುಖಾಮುಖಿಯಾಗಿಸಿದರೆ, ಹತ್ಯಾಕಾಂಡ ಹಗುರವೂ ಜಿಂದಾಬಾದ್ ಭಾರವೂ ಆಗಿಬಿಡುವುದೇ? ದಾದ್ರಿಯಲ್ಲಿ ಥಳಿಸಿ ಕೊಲ್ಲಲಾಯಿತಲ್ಲ, ಹರ್ಯಾಣದಲ್ಲಿ ದಲಿತರನ್ನು ಬೆಂಕಿ ಕೊಟ್ಟು ಸುಟ್ಟು ಹಾಕಲಾಯಿತಲ್ಲ, ಇನ್ನೆಲ್ಲೋ ದೇವಸ್ಥಾನ ಪ್ರವೇಶಿಸಿದುದಕ್ಕಾಗಿ ಹತ್ಯೆ ನಡೆಸಲಾಯಿತಲ್ಲ.. ಇವೆಲ್ಲ ‘ಪಾಕಿಸ್ತಾನ್ ಜಿಂದಾಬಾದ್’ನ ಮುಂದೆ ಜುಜುಬಿಯೇ? ಅಲ್ಲ ಎಂದಾದರೆ, ಇವರನ್ನೇಕೆ ನ್ಯಾಯಾಲಯದ ಆವರಣದಲ್ಲಿ ಥಳಿಸಲಾಗಿಲ್ಲ? ದೇಶದ್ರೋಹದ ಪ್ರಕರಣವನ್ನು ದಾಖಲಿಸಲಾಗಿಲ್ಲ? ರಾಜನಾಥ್ ಸಿಂಗ್‍ರಿಂದ ಹಿಡಿದು ಅಮಿತ್ ಶಾರ ವರೆಗೆ ಯಾಕೆ ಯಾರೂ ಇವರನ್ನು ದೇಶದ್ರೋಹಿಗಳೆಂದು ಕರೆದಿಲ್ಲ?
  ನಿಜವಾಗಿ, ವೇಮುಲ, ಕನ್ಹಯ್ಯ ಅಥವಾ ಅಲಹಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ ರಿಚಾ ಸಿಂಗ್ ಮುಂತಾದವರೆಲ್ಲ ಹಿಂದುಳಿದ ವರ್ಗದಿಂದ ಬಂದವರು. ಅವರ ಭಾಷೆ, ಆಹಾರ, ಆಲೋಚನೆ, ಮಾತುಗಾರಿಕೆ ಯಾವುವೂ ಇವತ್ತು ರಾಷ್ಟ್ರೀಯತೆಯ ಡಂಗುರ ಬಾರಿಸುವವರಿಗೆ ಜೀರ್ಣವಾಗುವಂಥದ್ದಲ್ಲ. ಯಾಕೆಂದರೆ, ಈ ಸ್ವಘೋಷಿತ ರಾಷ್ಟ್ರ ಪ್ರೇಮಿಗಳ ರಾಷ್ಟ್ರೀಯತೆ ನಿಂತಿರುವುದೇ ವೇಮುಲನಂಥವರ ಸಂಕಟಗಳ ಮೇಲೆ. ಕನ್ಹಯ್ಯ, ವೇಮುಲ, ರಿಚಾರು ಪ್ರತಿನಿಧಿಸುವ ಸಮುದಾಯದ ಮಂದಿ ತಲೆತಲಾಂತರಗಳಿಂದ ಇವರಿಂದ ಅವಮಾನ ಅನುಭವಿಸಿದ್ದಾರೆ. ಅಸಮಾನತೆಯ ನೋವನ್ನು ಉಂಡಿದ್ದಾರೆ. ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮನುಷ್ಯರೆಂಬ ಪರಿಗಣನೆಗೂ ಒಳಗಾಗದೇ ಜೀತದಾಳುಗಳಂತೆ ಹೊಲಗಳಲ್ಲಿ ದುಡಿದಿದ್ದಾರೆ. ಕನ್ಹಯ್ಯ ಮತ್ತು ವೇಮುಲರ ಮಾತುಗಳಲ್ಲಿ ಕಾಣಿಸುವ ಆಕ್ರೋಶದ ಹಿಂದೆ ಈ ಕಾರಣಗಳನ್ನೂ ಹುಡುಕಬೇಕಾಗಿದೆ. ಆದರೆ ರಾಷ್ಟ್ರೀಯತೆ, ರಾಷ್ಟ್ರ ಪ್ರೇಮ, ರಾಷ್ಟ್ರದ್ರೋಹ ಎಂದೆಲ್ಲಾ ಹೇಳುವ ಮಂದಿಗೆ ಈ ದಮನಿತರ ಭಾಷೆ ಕರ್ಕಶವಾಗಿ ಕೇಳಿಸುತ್ತಿದೆ. ಅವರ ಆಲೋಚನೆಗಳು ದೇಶದ್ರೋಹಿಯಂತೆ ಗೋಚರಿಸುತ್ತದೆ. ತಮ್ಮ ಹಿಂಸಾತ್ಮಕ ಇತಿಹಾಸ ವನ್ನು ಅವರು ತೆರೆಯುತ್ತಿರುವರೆಂಬ ಭಯ ಆಗುತ್ತಿದೆ. ಆದ್ದರಿಂದಲೇ, ‘ಸಕಲ ರೋಗ ನಿವಾರಕ’ವಾಗಿ ಅವರು ರಾಷ್ಟ್ರೀಯತೆ ಎಂಬ ಅಸ್ತ್ರವನ್ನು ಎತ್ತಿಕೊಂಡಿದ್ದಾರೆ. ರಾಷ್ಟ್ರೀಯತೆಯು ಎಲ್ಲ ಜಾತಿ, ಜನಾಂಗ, ಭಾಷೆ, ಧರ್ಮಕ್ಕಿಂತ ಮೇಲು ಎಂದು ಹೇಳುತ್ತಿದ್ದಾರೆ. ಜಾತಿ-ಜನಾಂಗದ ಹೆಸರಲ್ಲಿ ಇವತ್ತು ಆಗುತ್ತಿರುವ ಅನ್ಯಾಯವನ್ನು ಪ್ರಶ್ನಿಸುವುದು ಮತ್ತು ಪೂರ್ವ ಇತಿಹಾಸದ ಬರ್ಬರತೆಗಳನ್ನು ನೆನಪಿಸುವುದು ರಾಷ್ಟ್ರೀಯತೆಗೆ ವಿರುದ್ಧ ಎಂದು ನಂಬಿಸುತ್ತಿದ್ದಾರೆ. ಅಷ್ಟಕ್ಕೂ, ಈ ರಾಷ್ಟ್ರೀಯತೆಯು ಭಾರತೀಯ ಸಂವಿಧಾನದಿಂದ ಆಯ್ದುಕೊಂಡದ್ದಲ್ಲ. ಈ ರಾಷ್ಟ್ರೀಯತೆಯ ಚೌಕಟ್ಟಿಗೆ ಸಂವಿಧಾನ ಮಾರ್ಗದರ್ಶಿಯೂ ಅಲ್ಲ. ಈ ರಾಷ್ಟ್ರೀಯತೆಯು ಹೊರಗೆ ತೀರಾ ಸಾಧುವಾಗಿ ಕಂಡರೂ ಒಳಗೆ ಒಂದೇ ಧರ್ಮ, ಒಂದೇ ಸಂಸ್ಕೃತಿ, ಒಂದೇ ಆಹಾರ ಕ್ರಮ, ಒಂದೇ ಭಾಷೆ.. ಮುಂತಾದ ಭೂಯಿಷ್ಟ ವಿಷಯಗಳಿಂದ ತುಂಬಿಕೊಂಡಿದೆ. ಆದ್ದರಿಂದಲೇ, ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವಾಗ ಕೆರಳುವ ಈ ರಾಷ್ಟ್ರೀಯತೆ, ‘ಏಕ್ ಧಕ್ಕಾ ಔರ್ ದೋ’ ಎಂದು ಹೇಳುವಾಗ ಸಂಭ್ರಮಿಸುತ್ತದೆ. ಸಂವಿಧಾನ ದಿನವನ್ನು ಕರಾಳ ದಿನವಾಗಿ ಆಚರಿಸುವಾಗ ಈ ರಾಷ್ಟ್ರೀಯತೆಗೆ ಮಾತೇ ಬರುವುದಿಲ್ಲ. ಕೊಂದವರು ಮತ್ತು ಕೊಲೆಗೀಡಾಗುವವರ ಧರ್ಮವನ್ನು ನೋಡಿ ಈ ರಾಷ್ಟ್ರೀಯತೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತದೆ. ಅಂದಹಾಗೆ, ಹೈದರಾಬಾದ್ ಮತ್ತು JNU ಪ್ರಕರಣದಿಂದ ಆಗಿರುವ ಒಂದೇ ಒಂದು ಲಾಭ ಎಂದರೆ, ಈ ತಥಾಕಥಿತ ರಾಷ್ಟ್ರೀಯವಾದಿಗಳ ರಾಷ್ಟ್ರೀಯತೆಯು ಎಷ್ಟು ಬೋಗಸ್ ಎಂಬುದು ಬಹಿರಂಗವಾದದ್ದು. ಈ ರಾಷ್ಟ್ರೀಯತೆಯು ಸಂಪೂರ್ಣವಾಗಿ ಭ್ರಮೆ, ಭಾವನೆ ಮತ್ತು ಪ್ರತಿಶತಃ ನೂರರಷ್ಟು ಜನಾಂಗೀಯತೆಯಿಂದ ತುಂಬಿರುವಂಥದ್ದು. ಇದು ವಾಸ್ತವಕ್ಕೆ ಮುಖಾಮುಖಿಯಾಗದ ಬರೇ ಒಂದು ಆವೇಶ. ಈ ರಾಷ್ಟ್ರೀಯತೆಯ ಎದುರು ವೇಮುಲ ಮತ್ತು ಕನ್ಹಯ್ಯ ರಾಷ್ಟ್ರ ದ್ರೋಹಿಗಳಾಗದೇ ಇರುವುದಕ್ಕೆ ಸಾಧ್ಯವೇ ಇರಲಿಲ್ಲ. ಬಹುಶಃ,
  ಖ್ಯಾತ ಪತ್ರಕರ್ತ ರಾಜ್‍ದೀಪ್ ಸರ್ದೇಸಾೈಯವರು ‘ನಾನೂ ದೇಶದ್ರೋಹಿ’ ಎಂದಿರುವುದು ಈ ಗೂಂಡಾ ರಾಷ್ಟ್ರೀಯತೆಗೆ ಚೆನ್ನಾಗಿಯೇ ಒಪ್ಪುತ್ತದೆ.



Wednesday, February 17, 2016

 ಸುದ್ದಿಯ ಮಧ್ಯೆ ‘ಶುರತ್ ಹಾಡಿನ್’ಗಳನ್ನು ಹೇಗೆ ಪತ್ತೆ ಹಚ್ಚುವಿರಿ?

       2015 ಡಿ. 29ರಂದು, ‘ಇಸ್ರೇಲಿಗರನ್ನು ತಡೆಯಿರಿ’ (Stop Israels) ಎಂಬ ಹೆಸರಿನಲ್ಲಿ ಫೇಸ್‍ಬುಕ್ ಖಾತೆಯೊಂದು (Account) ಪ್ರತ್ಯಕ್ಷವಾಯಿತು. ‘ಅಲ್‍ಅಖ್ಸಾಕ್ಕೆ ಬೆದರಿಕೆ ಒಡ್ಡಿರುವ ಝಿಯೋನಿಸ್ಟ್ ವೈರಿಗಳ ವಿರುದ್ಧ ಪ್ರತೀಕಾರ ತೀರಿಸೋಣ. ಎಲ್ಲ ಯಹೂದಿಗಳೂ ನಾಶವಾಗಲಿ’ (Death to all the Jews) ಎಂಬ ಬರಹವೂ ಅದರಲ್ಲಿ ಕಾಣಿಸಿಕೊಂಡಿತು. ‘ಝಿಯೋನಿಸ್ಟರು ಫೆಲೆಸ್ತೀನಿಯರ ಭೂಮಿಯನ್ನು ಇಂಚಿಂಚಾಗಿ ನುಂಗುತ್ತಿದ್ದಾರೆ. ಆದರೂ ಜಗತ್ತು ಮೌನವಾಗಿದೆ. ನಾವು ಅವರನ್ನು ನಮಗೆ ಸಾಧ್ಯವಿರುವ ಯಾವುದೇ ಮಾರ್ಗದ ಮೂಲಕವಾದರೂ ತಡೆಯುವೆವು..’ ಎಂಬ ಬರಹ ಮತ್ತು ಇದನ್ನು ಸಮರ್ಥಿಸುವ ನಕಾಶೆಯೂ ಪ್ರಕಟವಾಯಿತು. ಆ ನಕಾಶೆ ಎಷ್ಟು ಪ್ರಚೋದನಾತ್ಮಕವಾಗಿತ್ತೆಂದರೆ, ಫೆಲೆಸ್ತೀನಿಯರು ಹಂತಹಂತವಾಗಿ ತಮ್ಮ ಭೂಮಿ ಕಳಕೊಳ್ಳುತ್ತಿರುವುದನ್ನು ಅದು ಚಿತ್ರ ಸಮೇತ ತೋರಿಸುತ್ತಿತ್ತು. ಇಷ್ಟೇ ಅಲ್ಲ, ಓರ್ವ ಫೆಲೆಸ್ತೀನಿ ಯುವತಿ ಇಸ್ರೇಲಿ ಯೋಧನ ಎದುರು ಕೈಯೆತ್ತಿ ನಿಂತಿದ್ದಳು. ಆತ ಬಂದೂಕು ಹಿಡಿದಿದ್ದ. ಆತನ ಸುತ್ತ ಹಲವಾರು ಯೋಧರು ಮುಗುಳು ನಗೆಯೊಂದಿಗೆ ಸೇರಿಕೊಂಡಿದ್ದರು. ಈ ಚಿತ್ರದ ಕೆಳಗಡೆ ಹೀಗೆ ಬರೆದಿತ್ತು:
ನಿತ್ಸಾನಾ ದರ್ಶನ್ ಲಿಂಡರ್
     ‘ಇವತ್ತು ಝಿಯೋನಿಸ್ಟ್ ಯೋಧರು ಈ ಹಿಂದೆಂದಿಗಿಂತಲೂ ಹೆಚ್ಚಾಗಿ ಫೆಲೆಸ್ತೀನಿ ಮಕ್ಕಳ ಮೇಲೆ ಹಿಂಸೆ ಎಸಗುತ್ತಿದ್ದಾರೆ. ಈ ಮಕ್ಕಳ ರಕ್ತವೇ ಮುಂದೊಂದು ದಿನ ಝಿಯೋನಿಸ್ಟ್ ಆಕ್ರಮಣಕಾರರನ್ನು ಧ್ವಂಸಗೊಳಿಸಲಿದೆ...’ ಇನ್ನೊಂದು ಚಿತ್ರವಂತೂ ಭಯಾನಕವಾದುದು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಓರ್ವ ಫೆಲೆ ಸ್ತೀನಿ ಮಗುವನ್ನು ಭಕ್ಷಿಸುವಂಥ ಚಿತ್ರ. ಆ ಫೇಸ್‍ಬುಕ್ ಪುಟ ಎಲ್ಲ ರೀತಿಯಲ್ಲೂ ಪ್ರಚೋದನಕಾರಿಯಾಗಿತ್ತು. ಅಷ್ಟಕ್ಕೂ, ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಇರುವ ವಿವಾದವೇನೇ ಇರಲಿ, ಓರ್ವ ಪ್ರಧಾನಿಯನ್ನು ನರ ಭಕ್ಷಕನಂತೆ ಚಿತ್ರಿಸುವುದು ಅಸಹ್ಯವಾದುದು. ನಾಗರಿಕ ಸಮಾಜ ಅಂಥದ್ದನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಮಾತ್ರವಲ್ಲ, ಅದರಿಂದ ಫೆಲೆಸ್ತೀನಿ ಪ್ರತಿರೋಧ ಚಳವಳಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಕ್ಕೂ ಅವಕಾಶವಿದೆ. ಫೆಲೆಸ್ತೀನಿಯರು ಅನಾಗರಿಕರು ಮತ್ತು ವಿರೋಧಿಗಳನ್ನು ಗೌರವಿಸಲು ತಿಳಿಯದವರು ಎಂಬ ಸಂದೇಶ ರವಾನೆಯಾಗುತ್ತದೆ. ಹೀಗಿರುತ್ತಾ ಈ ಫೇಸ್‍ಬುಕ್ ಖಾತೆಯ ವಿರುದ್ಧ ಡಿ. 31ರಂದು ಫೇಸ್‍ಬುಕ್ ಆಡಳಿತ ವರ್ಗಕ್ಕೆ ದೂರು ಹೋಯಿತು. ಮಾತ್ರವಲ್ಲ, ಫೇಸ್‍ಬುಕ್ ಆಡಳಿತ ಮಂಡಳಿಯು ಆ ಖಾತೆಯನ್ನು ತನ್ನ ಪುಟದಿಂದ ಕಿತ್ತು ಹಾಕಿತು. ವಿಷಯ ಇಲ್ಲಿಗೇ ಮುಗಿಯುವುದಿಲ್ಲ. ಮೂರ್ನಾಲ್ಕು ದಿವಸಗಳ ಬಳಿಕ ವಿಕಿಲೀಕ್ಸ್ ಸ್ಫೋಟಕ ಸುದ್ದಿಯೊಂದನ್ನು ಬಹಿರಂಗಪಡಿಸಿತು. ಆ ಫೇಸ್‍ಬುಕ್ ಖಾತೆಯನ್ನು ಪ್ರಾರಂಭಿಸಿದ್ದು ಫೆಲೆಸ್ತೀನಿಯರಲ್ಲ ಎಂದು ಅದು ಪುರಾವೆ ಸಮೇತ ಜಗತ್ತಿನ ಮುಂದಿರಿಸಿತು. ಆ ಖಾತೆಯನ್ನು ಪ್ರಾರಂಭಿಸಿದ್ದು ಶುರತ್ ಹಾಡಿನ್ ಎಂಬ ಇಸ್ರೇಲ್‍ನ ಸರಕಾರೇತರ ಸಂಸ್ಥೆ. ಅದಕ್ಕೂ ಇಸ್ರೇಲ್‍ನ ಗುಪ್ತಚರ ಸಂಸ್ಥೆ ಮೊಸಾದ್‍ಗೂ ಸಂಬಂಧ ಇದೆ ಎಂದು ಅದು ಹೇಳಿಕೊಂಡಿತು. ತನ್ನ ಹೇಳಿಕೆಗೆ ಪುರಾವೆಯಾಗಿ ಶುರತ್ ಹಾಡಿನ್‍ನ ನಿರ್ದೇಶಕಿ ನಿತ್ಸಾನಾ ದರ್ಶನ್ ಲಿಂಡರ್ ಅವರು ಅಮೇರಿಕನ್ ರಾಜತಾಂತ್ರಿಕ ಅಧಿಕಾರಿ ಚೆಲ್ಸಿಯಾ ಮ್ಯಾನ್ನಿಂಗ್ ಜೊತೆ ನಡೆಸಿದ ಖಾಸಗಿ ಮಾತುಕತೆಯ ಮಾಹಿತಿಯನ್ನು ಬಿಡುಗಡೆಗೊಳಿಸಿತು. ಈ ಮಾಹಿತಿ ಬಹಿರಂಗವಾದದ್ದೇ ತಡ ಶುರತ್ ಹಾಡಿನ್ ವಿಕಿಲೀಕ್ಸ್ ನ ಮಾಹಿತಿಯನ್ನು ಒಪ್ಪಿಕೊಂಡಿತು. Stop Israels ಫೇಸ್‍ಬುಕ್ ಖಾತೆಯನ್ನು ಆರಂಭಿಸಿದ್ದು ಮತ್ತು ಬಳಿಕ ಫೇಸ್‍ಬುಕ್ ಆಡಳಿತ ವರ್ಗಕ್ಕೆ ದೂರು ಕೊಟ್ಟದ್ದು ಎರಡೂ ತಾನೇ ಎಂದಿತು. ಮೊಸಾದ್‍ನ ನಿರ್ದೇಶನದಂತೆ ಇವೆಲ್ಲವನ್ನೂ ನಿರ್ವಹಿಸಿದ್ದಾಗಿ ಅದು ಒಪ್ಪಿಕೊಂಡಿತು. ಆದರೆ ಇದೇ ಸಂದರ್ಭದಲ್ಲಿ ಅದು ತನ್ನ ಈ ಕ್ರಮವನ್ನೂ ಸಮರ್ಥಿಸಿಕೊಂಡಿತು. ತಾನು Stop Israels ಎಂಬ ಖಾತೆಯ ಜೊತೆಗೇ Stop Pelestinians ಎಂಬ ಫೇಸ್‍ಬುಕ್ ಖಾತೆಯನ್ನೂ ತೆರೆದಿದ್ದೇನೆ ಎಂದೂ ಅದು ಹೇಳಿಕೊಂಡಿತು. ಮಾತ್ರವಲ್ಲ ಎರಡಕ್ಕೂ ಸಮಾನ ವಿಷಯಗಳನ್ನು Post  ಮಾಡಿದ್ದೇನೆ ಹಾಗೂ ಎರಡರ ವಿರುದ್ಧವೂ ಫೇಸ್‍ಬುಕ್ ಆಡಳಿತ ಮಂಡಳಿಗೆ ಡಿ. 31ರಂದೇ ದೂರು ಕೊಟ್ಟಿದ್ದೇನೆ ಎಂದೂ ಹೇಳಿತು. ಫೇಸ್‍ಬುಕ್ ನಿಷ್ಪಕ್ಷ ಪಾತಿಯೋ ಪಕ್ಷಪಾತಿಯೋ ಎಂಬುದನ್ನು ಪತ್ತೆಹಚ್ಚುವುದಕ್ಕಾಗಿ ಈ ವಿಧಾನವನ್ನು ಬಳಸಿರುವುದಾಗಿಯೂ ಅದು ವ್ಯಾಖ್ಯಾನಿಸಿತು. ಮಾತ್ರವಲ್ಲ, ಈ ಪರೀಕ್ಷೆಯಲ್ಲಿ ಫೇಸ್‍ಬುಕ್ ಪಕ್ಷಪಾತಿಯೆಂದು ಸಾಬೀತಾಗಿರುವುದಾಗಿ ಅದು ವಾದಿಸಿತು. ತಾನು ಎರಡರ ಬಗ್ಗೆ ದೂರು ಕೊಟ್ಟರೂ ಫೇಸ್‍ಬುಕ್ ಆಡಳಿತ ಮಂಡಳಿಯು Stop Pelestinians ಖಾತೆಯನ್ನು ಮಾತ್ರ ಸ್ತಂಭನಗೊಳಿಸಿದೆ ಎಂದೂ ಅದು ಆರೋಪಿಸಿತು. ನಿಜವಾಗಿ, ಈ ವಾದ ಕೂಡ ಸುಳ್ಳಾಗಿತ್ತು. Stop Pelestinians ಖಾತೆಯನ್ನು ಸ್ತಂಭನಗೊಳಿಸಿದ ದಿನಗಳೊಳಗೇ Stop Israels ಖಾತೆಯನ್ನೂ ಫೇಸ್‍ಬುಕ್ ಆಡಳಿತ ಮಂಡಳಿಯು ರದ್ದುಪಡಿಸಿತ್ತು. ವಿಶೇಷ ಏನೆಂದರೆ, Stop Israels ಮತ್ತು Stop Pelestinians ಎಂಬೆರಡು ಖಾತೆಗಳನ್ನು ಪ್ರಾರಂಭಿಸಿದ್ದು ತಾನೇ ಎಂದು ಶುರತ್ ಹಾಡಿನ್ ಒಪ್ಪಿಕೊಂಡದ್ದೇ ವಿಕಿಲೀಕ್ಸ್ ಸತ್ಯ ಸುದ್ದಿ ಸ್ಫೋಟಿಸಿದ ಬಳಿಕ. ನಿಜವಾಗಿ, ಈ ವಿಷಯದಲ್ಲಿ ಮೊಸಾದ್ ಅತ್ಯಂತ ಜಾಣತನದಿಂದ ಕಾರ್ಯವೆಸಗಿತ್ತು. ಫೆಲೆಸ್ತೀನಿಯರನ್ನು ಜನಾಂಗ ವಿರೋಧಿಗಳು, ಯಹೂದಿಯರ ಸರ್ವನಾಶವನ್ನು ಬಯಸುವವರು ಎಂಬೆಲ್ಲಾ ಭಾವನೆಯನ್ನು ಜಾಗತಿಕವಾಗಿ ಬಿತ್ತುವ ಉದ್ದೇಶವೊಂದು Stop Israels ಖಾತೆ ಆರಂಭಿಸುವುದರ ಹಿಂದೆ ಇತ್ತು. ಆದ್ದರಿಂದಲೇ ಖಾತೆ ಆರಂಭಿಸಿದವರ ವಿಳಾಸವನ್ನು ಅದು ಬಚ್ಚಿಟ್ಟಿತ್ತು. ಯಾರಾದರೂ ಆ ಖಾತೆಯನ್ನು ನೋಡಿದ ತಕ್ಷಣ ಆ ಖಾತೆಯನ್ನು ಫೆಲೆಸ್ತೀನಿಯರೇ ಪ್ರಾರಂಭಿಸಿದ್ದಾರೆ ಎಂದು ನಂಬುವಂಥ ಬರಹಗಳನ್ನು ಅದರಲ್ಲಿ ಅದು ತುಂಬಿಸಿತ್ತು. ಇದರ ಜೊತೆಗೇ ಅಗತ್ಯ ಬಂದಾಗ ಸಮರ್ಥಿಸಿಕೊಳ್ಳುವುದಕ್ಕಾಗಿ ಇರಲಿ ಎಂದು Stop Pelestinians ಎಂಬ ಖಾತೆಯನ್ನೂ ತೆರೆದುಕೊಂಡಿತ್ತು. ಅಂದಹಾಗೆ, ಎರಡೂ ಖಾತೆಗಳಲ್ಲಿ ಪ್ರಕಟವಾದ ವಿಷಯಗಳು ಸಮಾನವಾಗಿ ಇರಲಿಲ್ಲ. Stop Israels ಪುಟದಲ್ಲಿ ಕಾಣಿಸಿಕೊಂಡ ಬರಹಗಳು ಅತ್ಯಂತ ಪ್ರಚೋದನಕಾರಿಯಾಗಿದ್ದರೆ, Stop Pelestinians ನಲ್ಲಿ ಅದರ ತೀವ್ರತೆ ಕಡಿಮೆಯಿತ್ತು. ಅಷ್ಟಕ್ಕೂ, ಮಾಧ್ಯಮ ಕ್ಷೇತ್ರದಲ್ಲಿ ಇಂಥ ಶುರತ್ ಹಾಡಿನ್‍ಗಳ ಸಂಖ್ಯೆ ಎಷ್ಟಿರಬಹುದು? ಅವರು ಎಷ್ಟು ಫೇಸ್‍ಬುಕ್ ಖಾತೆಗಳನ್ನು, ಮಾಧ್ಯಮ ಸಂಸ್ಥೆಗಳನ್ನು ನಿಯಂತ್ರಿಸುತ್ತಿರಬಹುದು? ನಾವು ಪ್ರತಿನಿತ್ಯ ಓದುತ್ತಿರುವ ಸುದ್ದಿಗಳಲ್ಲಿ ಶುರತ್ ಹಾಡಿನ್ ಪ್ರಣೀತ ಸುದ್ದಿಗಳ ಸಂಖ್ಯೆಯ ಪ್ರಮಾಣ ಎಷ್ಟು?
  2016 ಜ. 4ರಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯಲ್ಲಿ 'Headmaster beaten, Banned from Madrasa for asking pupil to sing National Anthem' (ರಾಷ್ಟ್ರಗೀತೆ ಹಾಡುವಂತೆ ಕೇಳಿಕೊಂಡದ್ದಕ್ಕಾಗಿ ಮದ್ರಸ ಮುಖ್ಯೋಪಾಧ್ಯಾಯರನ್ನು ಥಳಿಸಿ ಅವರನ್ನು ಮನೆಗಟ್ಟಲಾಯಿತು) ಎಂಬ ಶೀರ್ಷಿಕೆಯಲ್ಲಿ ಸುದ್ದಿಯೊಂದು ಪ್ರಕಟವಾಯಿತು. ಕೊಲ್ಕತ್ತಾದ ಪ್ರಮುಖ ಮದ್ರಸದಲ್ಲಿ ಈ ಘಟನೆ ನಡೆದಿರುವುದಾಗಿ ಅದು ಬರೆಯಿತು. ಗಣರಾಜ್ಯ ದಿನದಂದು ರಾಷ್ಟ್ರಗೀತೆಯನ್ನು ಹಾಡಲು ಮಕ್ಕಳನ್ನು ತರಬೇತುಗೊಳಿಸಿದ ಕಾರಣಕ್ಕಾಗಿ ಅಕ್ತರ್ ಎಂಬ ಈ ಮುಖ್ಯೋಪಾಧ್ಯಾಯರನ್ನು ತೀವ್ರವಾಗಿ ಥಳಿಸಲಾಗಿದೆ ಎಂದು ಸುದ್ದಿ ಪ್ರಕಟಿಸಿತು. ಈ ಸುದ್ದಿಯನ್ನು ಎತ್ತಿಕೊಂಡು ಚಾನೆಲ್‍ಗಳು '# National Anthem Insulted' ಎಂಬ ಶೀರ್ಷಿಕೆಯೊಂದಿಗೆ ಚರ್ಚೆ ನಡೆಸಿದುವು. ಈ ಬಗ್ಗೆ ಹಿಂದಿ, ಇಂಗ್ಲಿಷ್ ದೈನಿಕಗಳಲ್ಲಿ ಲೇಖನಗಳು ಪ್ರಕಟವಾದುವು. ಹೀಗಿರುತ್ತಾ, ಈ ಸುದ್ದಿಯ ಸತ್ಯಾಸತ್ಯತೆಯನ್ನು ಹುಡುಕಿಕೊಂಡು ‘ನ್ಯೂಸ್ ಲ್ಯಾಂಡ್ರಿ’ ಎಂಬ ಮಾಧ್ಯಮ ನಿಗಾ ವೆಬ್‍ಸೈಟ್‍ನ ಅರ್ನಾಬ್ ಸೈಕಿಯ ಎಂಬ ಪತ್ರಕರ್ತರು  ಕೊಲ್ಕತ್ತಾದ ಆ ಮದ್ರಸಕ್ಕೆ ಭೇಟಿ ನೀಡಿದರು. ಅದು ಸರಕಾರಿ ಅಂಗೀಕೃತ ಮದ್ರಸ. ಈ ಮದ್ರಸದಲ್ಲಿ 7 ಮಂದಿ ಹಿಂದೂ ಅಧ್ಯಾಪಕರೂ ಇದ್ದಾರೆ. ಫಿರ್‍ದೌಸ್ ಬೇಗಂ ಮತ್ತು ಸುದಿಪ್ತೋ ಕುಮಾರ್ ಮಂಡಲ್ ಎಂಬಿಬ್ಬರು ಶಿಕ್ಷಕರನ್ನು ಸೈಕಿಯಾ ಭೇಟಿಯಾದರು. ಬೇಗಂ ಅವರು ಆ ಮದ್ರಸದ ಮುಖ್ಯ ಶಿಕ್ಷಕಿಯಾದರೆ ಸುದಿಪ್ತೊ ಅವರು ಕಳೆದ 10 ವರ್ಷಗಳಿಂದ ಆ ಮದ್ರಸದಲ್ಲಿ ಅಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಅವರಿಬ್ಬರೂ ಆ ಸುದ್ದಿಯನ್ನು ಅಪ್ಪಟ ಸುಳ್ಳೆಂದು ವಿವರಿಸಿದರು. ಪ್ರತಿದಿನ ಬೆಳಿಗ್ಗೆ ಆ ಮದ್ರಸದಲ್ಲಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ. ಮದ್ರಸದ ಡೈರಿಯಲ್ಲಿ ಅದು ನಿತ್ಯ ದಾಖಲಾಗುತ್ತಲೂ ಇದೆ. ಅಕ್ತರ್ ಅಧ್ಯಾಪಕರಾಗಿ ಆ ಮದ್ರಸಕ್ಕೆ ಬರುವುದಕ್ಕಿಂತ ಮೊದಲೇ ರಾಷ್ಟ್ರಗೀತೆ ಹಾಡುವುದು ಅಲ್ಲಿ ರೂಢಿಯಾಗಿತ್ತು. ಹಾಗಂತ, ಅಕ್ತರ್‍ನ ಮೇಲೆ ಹಲ್ಲೆ ನಡೆದಿದ್ದು ನಿಜ. ಆದರೆ ಅದು ಪತ್ರಿಕೆಗಳು ಹೇಳಿದಂತೆ ಶಿಕ್ಷಕರು ಮತ್ತು ಸ್ಥಳೀಯರು ಸೇರಿ ನಡೆಸಿದ ಹಲ್ಲೆ ಅಲ್ಲ. ಮತ್ತೂ ಹೇಳಬೇಕೆಂದರೆ, ರಾಷ್ಟ್ರಗೀತೆಗೂ ಅದಕ್ಕೂ ಸಂಬಂಧವೇ ಇರಲಿಲ್ಲ. ಆ ಘಟನೆ ನಡೆದದ್ದು 2015 ಮಾರ್ಚ್ 26ರಂದು. ಅಖ್ತರ್ ಗೂ ಮದ್ರಸ ವಿದ್ಯಾರ್ಥಿಗಳ ಹೆತ್ತವರಿಗೂ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಸ್ಥಳೀಯರ ಸಾಂಪ್ರದಾಯಿಕ ನಿಲುವುಗಳ ಬಗ್ಗೆ ಆ ಅಧ್ಯಾಪಕ ಪ್ರಚೋದನಕಾರಿ ಶೈಲಿಯಲ್ಲಿ ಟೀಕಿಸುತ್ತಿದ್ದುದು ಜಗಳಕ್ಕೆ ಕಾರಣವಾಗಿತ್ತು. ಜಗಳ ಸಣ್ಣ ಮಟ್ಟದ ಹೊೈಕೈ ಆಗಿತ್ತೇ ಹೊರತು ತೀವ್ರ ರೀತಿಯ ಹಲ್ಲೆ ಆಗಿಯೇ ಇರಲಿಲ್ಲ. ಹೆತ್ತವರಿಂದ ಅಕ್ತರ್‍ರನ್ನು ಬಿಡಿಸಿದ್ದೇ ಇತರ  ಶಿಕ್ಷಕರು. ಅಲ್ಲದೇ 2015 ಮಾರ್ಚ್ 26ರ ಬಳಿಕ ಅಕ್ತರ್ ಆ ಮದ್ರಸಕ್ಕೆ ಬಂದೇ ಇಲ್ಲ. ಹೀಗಿರುತ್ತಾ, 2016 ಜನವರಿಯಲ್ಲಿ ಆತನ ಮೇಲೆ ಹಲ್ಲೆ ನಡೆಯುವುದು ಹೇಗೆ? ಸುಮಾರು 10 ತಿಂಗಳ ಹಿಂದೆ ನಡೆದ ಶಿಕ್ಷಕ ಮತ್ತು ಹೆತ್ತವರ ನಡುವಿನ ಜಗಳವು ಜನವರಿ 4ರಂದು ‘ರಾಷ್ಟ್ರಗೀತೆ’ಯ ಸುದ್ದಿಯಾಗಿ ಪ್ರಕಟಗೊಂಡದ್ದು ಹೇಗೆ? 10 ತಿಂಗಳಿನಿಂದ ಮದ್ರಸಕ್ಕೇ ತಲೆ ಹಾಕದ ವ್ಯಕ್ತಿ ಹೇಗೆ ಆ ಬಗೆಯಲ್ಲಿ ಸುದ್ದಿಗೀಡಾದ? ಸಾಮಾನ್ಯ ಹಲ್ಲೆ ಪ್ರಕರಣಕ್ಕೆ ಈ ರೀತಿಯ ವಿಕೃತ ವ್ಯಾಖ್ಯಾನವನ್ನು ಕರುಣಿಸಿದ್ದು ಯಾರು ಮತ್ತು  ಯಾಕೆ? ಅವರ ಉದ್ದೇಶವೇನು? ಅರ್ನಾಬ್ ಸೈಕಿಯಾ ಚುರುಕಾದರು. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‍ನ ವರದಿಗಾರ ಅರೂಚ್ ಚಂದ್‍ರಲ್ಲಿ ಸ್ಪಷ್ಟೀಕರಣ ಕೇಳಿದರು. ಆದರೆ ಅವರು ನುಣುಚಿಕೊಂಡರು. ಈ ಸುದ್ದಿಯನ್ನು ಮಸಾಲೆ ದೋಸೆಯಂತೆ ಹಂಚಿಕೊಂಡ ಇತರ ಪತ್ರಿಕಾ ಮಾಧ್ಯಮಗಳೂ ಕನಿಷ್ಠ ಸ್ಪಷ್ಟೀಕರಣ ಕೊಡುವುದಕ್ಕೂ ಮುಂದೆ ಬರಲಿಲ್ಲ.
  ಹಾಗಂತ, ಮಾಧ್ಯಮ ಜಗತ್ತು ಸಂಪೂರ್ಣ ನಂಬಲನರ್ಹ ಎಂದು ಖಂಡಿತ ಹೇಳುತ್ತಿಲ್ಲ. ಸತ್ಯ ಸುದ್ದಿಗಳ ಜೊತೆಗೇ ಇಂಥ ಶುರತ್ ಹಾಡಿನ್‍ಗಳು, ‘ರಾಷ್ಟ್ರಗೀತೆ’ಗಳು ನುಸುಳಿಕೊಳ್ಳುವುದರ ಕುರಿತಂತೆ ಎಚ್ಚರಿಕೆಯಿಂದಿರಬೇಕು ಎಂದಷ್ಟೇ ಹೇಳುತ್ತಿದ್ದೇನೆ. ಮಾಧ್ಯಮಗಳು ಕೊಡುವ ಎಲ್ಲವೂ ಸುದ್ದಿಗಳಲ್ಲ, ಸುದ್ದಿಗಳಲ್ಲಿ ಎಲ್ಲವೂ ಸತ್ಯವೂ ಅಲ್ಲ. ಆದರೆ ಸುದ್ದಿ ಸುಳ್ಳು ಎಂದು ಗೊತ್ತಾಗುವವರೆಗೆ ಸುದ್ದಿಯನ್ನು ಸತ್ಯ ಎಂದೇ ಒಪ್ಪಿಕೊಳ್ಳಬೇಕಾದ ಅನಿವಾರ್ಯತೆಯೊಂದು ಎಲ್ಲರ ಮುಂದೆಯೂ ಇದೆ. ಅಷ್ಟಕ್ಕೂ, ಶುರತ್ ಹಾಡಿನ್‍ನಂಥ ಗುಂಪುಗಳು ಈ ಜಗತ್ತಿನಲ್ಲಿ ಎಷ್ಟೋ ಇರಬಹುದು. ಪ್ರತಿನಿತ್ಯ ಅವು ಸುದ್ದಿಗಳನ್ನು ಸೃಷ್ಟಿಸುತ್ತಾ, ಹಂಚುತ್ತಾ ಅಂದ ನೋಡುತ್ತಿರಬಹುದು. ಸಿರಿಯ, ಫೆಲೆಸ್ತೀನ್, ಇರಾಕ್, ಈಜಿಪ್ಟ್, ಪಾಕಿಸ್ತಾನ, ಸುಡಾನ್, ಆಫ್ರಿಕಾ, ಇರಾನ್, ಇಸ್ರೇಲ್, ಅಮೇರಿಕ, ಉತ್ತರ ಕೊರಿಯ, ಚೀನಾ, ಬಾಂಗ್ಲಾ, ಭಾರತ.. ಸಹಿತ ಜಗತ್ತಿನ ರಾಷ್ಟ್ರಗಳ ಬಗ್ಗೆ ನಾವು ಈಗಾಗಲೇ ಓದಿರುವ ಸುದ್ದಿಗಳಲ್ಲಿ ಇಂಥ ‘ಶುರತ್ ಹಾಡಿನ್’ಗಳು ತಯಾರಿಸಿದ ಕೃತಕ ಸುದ್ದಿಗಳೂ ಸೇರಿರಬಹುದು. ವಾದಕ್ಕಾಗಿಯೋ ಸಮರ್ಥನೆಗಾಗಿಯೋ ನಾವು ಅವನ್ನು ಬಳಸಿಕೊಂಡಿರಲೂಬಹುದು. ಆದ್ದರಿಂದಲೇ ಸುದ್ದಿಗಳ ಮೇಲೆ ಅನುಮಾನದ ಒಂದು ಕಣ್ಣನ್ನಿಟ್ಟೇ ಓದಬೇಕಾಗಿದೆ. ಸುದ್ದಿಗಳಿಗೆ ಒಂದು ಮಿತಿ ಇದೆ. ಸುದ್ದಿ ಬರೆಯುವವನೂ ಮನುಷ್ಯ. ಅದನ್ನು ಹಂಚುವವನೂ ಮನುಷ್ಯ. ಆದ್ದರಿಂದ,
       ಆ ಮನುಷ್ಯರಲ್ಲಿ ನಿತ್ಸಾನಾ ದರ್ಶನ್ ಲಿಂಡರ್‍ನಂಥವರನ್ನು ಪತ್ತೆ ಹಚ್ಚುವುದು ಸುಲಭವಲ್ಲ.

Thursday, February 11, 2016

 ಮಗೂ, ನೀನು ಹೆಣ್ಣೋ ಗಂಡೋ?

        ಬ್ರಿಟಿಷ್ ಪ್ರೆಗ್ನೆನೆನ್ಸಿ ಅಡ್ವೈಸರಿ ಸರ್ವಿಸಸ್ (BPAS)ನ ಮುಖ್ಯಸ್ಥೆ ಆ್ಯನ್ ಫರ್ದಿಯವರು 2013 ಸೆಪ್ಟೆಂಬರ್‍ನಲ್ಲಿ ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಿದ್ದರು. ಗರ್ಭಿಣಿ ಮಹಿಳೆಗೆ ತನ್ನ ಮಗುವಿನ ಲಿಂಗವನ್ನು ನಿರ್ಧರಿಸುವ ಸ್ವಾತಂತ್ರ್ಯ ಇರಬೇಕು ಎಂಬುದು ಅವರ ವಾದವಾಗಿತ್ತು. ತಾನು ಹೆರಬೇಕಾದುದು ಗಂಡು ಮಗುವನ್ನೋ ಅಲ್ಲ ಹೆಣ್ಣು ಮಗುವನ್ನೋ ಎಂಬುದನ್ನು ನಿರ್ಣಯಿಸುವ ಸ್ವಾತಂತ್ರ್ಯವನ್ನು ಗರ್ಭಿಣಿಗೆ ನೀಡಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದ್ದರು. ಹೆಣ್ಣು ಮಗುವನ್ನು ಬಯಸುವ ಮಹಿಳೆಯೋರ್ವರಿಗೆ ಗಂಡು ಮಗುವಾದರೆ, ಅದು ಆಕೆಯ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಇದರಿಂದ ಆಕೆಯನ್ನು ಪತಿ ತಿರಸ್ಕರಿಸಬಹುದು. ಪತಿ ಮನೆಯವರಿಂದ ನಿರ್ಲಕ್ಷ್ಯಕ್ಕೆ ಒಳಗಾಗಬಹುದು. ಮನೆಯಿಂದ ಹೊರದಬ್ಬಲೂ ಬಹುದು. ತನ್ನ ಪ್ರೀತಿ-ಪಾತ್ರರನ್ನು ಆಕೆ ಕಳಕೊಳ್ಳಬೇಕಾದೀತು. ಅಲ್ಲದೇ, ಸ್ವತಃ ಜಿಗುಪ್ಸೆ ತಾಳುವ ಅಥವಾ ಪೋಷಕಾಹಾರಗಳನ್ನು ಸೇವಿಸದೆಯೇ ಭ್ರೂಣದ ಮೇಲೆ ಹಗೆ ಸಾಧಿಸುವ ಸಂದರ್ಭಗಳೂ ಎದುರಾಗಬಹುದು. ಆದ್ದರಿಂದ ಇಷ್ಟದ ಮಗುವನ್ನು ಹೊಂದುವ ಮತ್ತು ಇಷ್ಟವಿಲ್ಲದ ಭ್ರೂಣವನ್ನು ಗರ್ಭಪಾತದ ಮೂಲಕ ತೊರೆಯುವ ಸ್ವಾತಂತ್ರ್ಯವನ್ನು ಹೆಣ್ಣಿಗೆ ಮರಳಿಸಬೇಕು ಎಂದವರು ಆಗ್ರಹಿಸಿದ್ದರು. ಅಷ್ಟಕ್ಕೂ, ಕೇಂದ್ರ ಸಚಿವೆ ಮೇನಕಾ ಗಾಂಧಿಯವರ ವಾದ ಈ ರೀತಿಯದ್ದಲ್ಲ. ಅವರು ಗರ್ಭಪಾತವನ್ನು ಬೆಂಬಲಿಸಿಲ್ಲ. ಗರ್ಭಿಣಿಯು ತನ್ನಿಷ್ಟದ ಮಗುವನ್ನು ಹೊಂದುವುದರ ಪರ ಅವರು ಮಾತಾಡಿಲ್ಲ. ಆದ್ದರಿಂದಲೇ, ಭ್ರೂಣಲಿಂಗ ಪತ್ತೆ ಪರೀಕ್ಷೆಯ ಬಗ್ಗೆ ಅವರು ವ್ಯಕ್ತಪಡಿಸಿರುವ ಅಭಿಪ್ರಾಯ ಚರ್ಚೆಗರ್ಹವಾದುದು. ಅದು ತಕ್ಷಣಕ್ಕೆ ತಿರಸ್ಕರಿಸಿ ಬಿಡುವಷ್ಟು ಅಥವಾ ಪುರಸ್ಕರಿಸಿ ಬಿಡುವಷ್ಟು ಸರಳವಲ್ಲ. ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸಿ ಈ ದೇಶದಲ್ಲಿ ಜಾರಿಗೊಳಿಸಲಾದ ಕಾನೂನಿಗೆ 20 ವರ್ಷಗಳೇ ಸಂದಿವೆ. 1994ರಲ್ಲಿ ಈ ಕಾನೂನನ್ನು ಜಾರಿಗೊಳಿಸುವ ಮೊದಲು ಈ ದೇಶವು ಭ್ರೂಣಲಿಂಗ ಪತ್ತೆ ಪರೀಕ್ಷೆಗೆ ಮುಕ್ತವಾಗಿತ್ತು. ಮುಖ್ಯವಾಗಿ, ಅಲ್ಟ್ರಾ ಸೋನೋಗ್ರಫಿ ತಂತ್ರಜ್ಞಾನವು 1990ರಲ್ಲಿ ಈ ದೇಶದಲ್ಲಿ ದೊಡ್ಡದೊಂದು ಸಂಚಲನವನ್ನೇ ಸೃಷ್ಟಿಸಿತ್ತು. ಭ್ರೂಣಲಿಂಗ ಪತ್ತೆ ಪರೀಕ್ಷೆ ಮತ್ತು ಗರ್ಭಪಾತವು ವ್ಯಾಪಕ ಪ್ರಮಾಣದಲ್ಲಿ ನಡೆಯಿತು. ಆದ್ದರಿಂದಲೇ, 1994ರಲ್ಲಿ ಭ್ರೂಣಲಿಂಗ ಪತ್ತೆ ಪರೀಕ್ಷೆಯನ್ನು ನಿಷೇಧಿಸಿ ಕಾನೂನನ್ನೇ ಜಾರಿಗೊಳಿಸಲಾಯಿತು. ಇದೀಗ ಆ ಕಾನೂನಿಗೆ ಎರಡು ದಶಕಗಳಾದುವು. ಈ ಎರಡು ದಶಕಗಳಲ್ಲಿ ಆಗಿರುವ ಬದಲಾವಣೆಗಳೇನು? ಸಮಾಜದ ಧೋರಣೆಯಲ್ಲಿ ಏನೆಲ್ಲ ಪರಿವರ್ತನೆಗಳಾಗಿವೆ? ಈ ಪರಿವರ್ತನೆಯಲ್ಲಿ ಈ ಕಾನೂನಿನ ಪಾತ್ರವೇನು? ಹಾಗೆಯೇ, ಶಿಕ್ಷಣ ಮತ್ತು ಲಿಂಗ ಸಂಬಂಧಿ ಜಾಗೃತಿ ಕಾರ್ಯಕ್ರಮಗಳ ಪ್ರಭಾವ ಏನು? ಕಾನೂನು ಒಂದು ಸಮಾಜವನ್ನು ತಿದ್ದಬಲ್ಲುದೇ? ಹೌದು ಎಂದಾದರೆ ಎಷ್ಟರ ವರೆಗೆ? ಗಂಡು ಮಗುವಿನ ನಿರೀಕ್ಷೆ ಯಲ್ಲಿ 9 ತಿಂಗಳನ್ನು ಕಳೆದಿರುವ ಕುಟುಂಬವೊಂದಕ್ಕೆ ಹೆಣ್ಣು ಮಗುವನ್ನು ಕೊಟ್ಟರೆ ಆ ಕುಟುಂಬ ಆ ಮಗುವನ್ನು ಹೇಗೆ ಸ್ವೀಕರಿಸಬಹುದು? ಯಾವ ರೀತಿಯ ಪಾಲನೆ-ಪೋಷಣೆ ಆ ಮಗುವಿಗೆ ಲಭ್ಯವಾಗಬಹುದು? ಆ ತಾಯಿಯ ಪರಿಸ್ಥಿತಿ ಹೇಗಿರ ಬಹುದು? ಹೀಗಿರುತ್ತಾ, ಹುಟ್ಟಲಿರುವ ಮಗುವಿನ ಲಿಂಗವನ್ನು ಪ್ರಸವಪೂರ್ವದಲ್ಲೇ ಕುಟುಂಬಕ್ಕೆ ತಿಳಿಸುವುದು ಅಥವಾ ಕಡ್ಡಾಯವಾಗಿ ದಾಖಲಿಸುವುದು ಯಾಕೆ ಮೂರ್ಖತನ ಅನ್ನಿಸಿಕೊಳ್ಳಬೇಕು?
  ಹಾಗಂತ, ಭಾರತ, ಚೀನಾ, ನೇಪಾಳಗಳಲ್ಲಿ ಗಂಡು ಮಗುವಿನ ಮೇಲೆ ವಿಪರೀತ ಪ್ರೀತಿಯಿದೆ ಎಂಬುದನ್ನು ತಿರಸ್ಕರಿಸಬೇಕಿಲ್ಲ. ಅದೇ ವೇಳೆ, ಗಲ್ಫ್ ರಾಷ್ಟ್ರಗಳಲ್ಲಿ ಲಿಂಗಪತ್ತೆ ಪರೀಕ್ಷೆಯು ತೀರಾ ಸಾಮಾನ್ಯವಾಗಿದೆ. ಅಲ್ಲಿ ಭ್ರೂಣದ ಲಿಂಗವನ್ನು ಬಹಿರಂಗಪಡಿಸುವುದು ಅಪರಾಧವೇ ಅಲ್ಲ. ಪ್ರಸವಪೂರ್ವದಲ್ಲೇ ಪ್ರತಿ ಗರ್ಭಿಣಿಗೂ ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬುದು ಮೊದಲೇ ಗೊತ್ತಿರುತ್ತದೆ. ಗರ್ಭಧರಿಸಿ 7 ವಾರಗಳಲ್ಲೇ ಭ್ರೂಣದ ಲಿಂಗವನ್ನು ಪತ್ತೆ ಹಚ್ಚುವ ತಂತ್ರಜ್ಞಾನವನ್ನು ದುಬೈ, ಶಾರ್ಜಾ, ಅಬೂಧಾಬಿ ಮತ್ತು ಅಲ್‍ಐನ್‍ಗಳು 2010ರಲ್ಲಿ ಅಳವಡಿಸಿಕೊಂಡಿತ್ತು. ಗರ್ಭಿಣಿಯಿಂದ ಒಂದು ಹನಿ ರಕ್ತವನ್ನು ಪಡೆದು ಈ ಪತ್ತೆ ಕಾರ್ಯವನ್ನು ನಡೆಸಲಾಗುವುದು ಎಂದು ಅದು ಘೋಷಿಸಿತ್ತು. ಆ ಸಂದರ್ಭದಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ನಡೆದ ಚರ್ಚೆ ತೀರಾ ಸ್ವಾರಸ್ಯಕರವಾಗಿತ್ತು. ಚರ್ಚೆ ನಡೆದಿದ್ದು ಭ್ರೂಣಹತ್ಯೆಯ ಸುತ್ತ ಆಗಿರಲಿಲ್ಲ. ಈ ತಂತ್ರಜ್ಞಾನವು ಎಷ್ಟು ನಂಬಲರ್ಹ ಮತ್ತು ಭೂಣದ ಲಿಂಗದ ಪತ್ತೆ ಕಾರ್ಯ ಎಷ್ಟು ನಿಖರ ಎಂಬುದಾಗಿ ಹೆಚ್ಚಿನ ಮಂದಿ ಅನುಮಾನ ವ್ಯಕ್ತಪಡಿಸಿದ್ದರು. ಯಾಕೆಂದರೆ, ಹೆಣ್ಣು ಮತ್ತು ಗಂಡನ್ನು ಸಮಾನವಾಗಿ ಸ್ವೀಕರಿಸುವ ವಾತಾವರಣವೊಂದು ಗಲ್ಫ್ ರಾಷ್ಟ್ರಗಳಲ್ಲಿದೆ. ಹಾಗಂತ, ಅದು ಕಾನೂನಿನ ಭಯದಿಂದ ಹುಟ್ಟಿ ಕೊಂಡದ್ದಲ್ಲ. ಹೆಣ್ಣು ಮಗುವನ್ನು ಕೊಂದವರನ್ನು ನಾಳೆ ದೇವನು ಪರಲೋಕದಲ್ಲಿ ಪ್ರಶ್ನಿಸಿ ಕಠಿಣ ಶಿಕ್ಷೆಗೊಳಪಡಿಸುತ್ತಾನೆ (81: 8-9) ಎಂಬ ಪವಿತ್ರ ಕುರ್‍ಆನಿನ ಘೋಷಣೆ ಹಾಗೂ ಹೆಣ್ಣು ಮಕ್ಕಳನ್ನು ಪೋಷಿಸಿ ಬೆಳೆಸಿ ಸಂಸ್ಕಾರ ಕಲಿಸಿದ ಹೆತ್ತವರಿಗೆ ಸ್ವರ್ಗ ಇದೆ ಎಂದ ಪ್ರವಾದಿಯವರ(ಸ) ಉಪದೇಶಗಳು ಅದರ ಹಿಂದಿದೆ. ನಿಜವಾಗಿ, ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬುದನ್ನು ಪ್ರಸವಪೂರ್ವದಲ್ಲೇ ಹೇಳಿ ಬಿಡುವುದನ್ನು ನಾವು ಬರೇ ನಕಾರಾತ್ಮಕ ದೃಷ್ಟಿಕೋನದಿಂದಲೇ ವ್ಯಾಖ್ಯಾನಿಸಬೇಕಿಲ್ಲ. ಮಗು ದೇವದತ್ತವಾದದು, ಅದೊಂದು ಉಡುಗೊರೆ ಎಂಬ ನಂಬಿಕೆ ಬಹುತೇಕ ಪ್ರತಿಯೋರ್ವರಲ್ಲೂ ಇರುತ್ತದೆ. ಪತ್ನಿ ಗರ್ಭಿಣಿಯಾದ ಕೂಡಲೇ ಪತಿಯ ದಿನಚರಿಗಳೇ ಬದಲಾಗಿ ಬಿಡುತ್ತದೆ. ಆಕೆ ವಿಶೇಷ ಆದರಕ್ಕೆ ಪಾತ್ರವಾಗುತ್ತಾಳೆ. ಅತ್ತೆಗೆ ಇಷ್ಟವಾಗದ ಸೊಸೆ ಕೂಡ ಗರ್ಭಿಣಿಯಾದ ಕೂಡಲೇ ಇಷ್ಟವಾಗುವುದಿದೆ. ಮನೆಯಲ್ಲಿ ಒಂದು ಬಗೆಯ ನಿರೀಕ್ಷೆಯನ್ನು ಆಕೆ ಹುಟ್ಟಿಸಿರುತ್ತಾಳೆ. ಮಗುವಿನ ಬಗ್ಗೆ ಪತಿ ಮತ್ತು ಪತ್ನಿ ವಿವಿಧ ಬಗೆಯ ಕನಸುಗಳನ್ನು ಕಾಣತೊಡಗುತ್ತಾರೆ. ತಮ್ಮ ಗೆಳೆಯರ, ನೆರೆಯವರ ಅಥವಾ ಕುಟುಂಬಸ್ಥರ ಮಕ್ಕಳನ್ನು ಕಲ್ಪಿಸುತ್ತಾ ತನಗೆ ಬರಲಿರುವ ಮಗುವನ್ನು ಹೇಗೆ ಬೆಳೆಸಬೇಕು, ಯಾವ ಬಗೆಯ ಶಿಕ್ಷಣವನ್ನು ನೀಡಬೇಕು, ಎಷ್ಟು ಸಮಯವನ್ನು ಮಗುವಿನೊಂದಿಗೆ ಕಳೆಯಬೇಕು ಎಂಬೆಲ್ಲ ಕನಸುಗಳನ್ನು ಕಾಣುತ್ತಿರುತ್ತಾರೆ. ಅತ್ತೆಗೂ ಅವರದ್ದೇ ಆದ ಕನಸುಗಳಿರುತ್ತವೆ. ಅದು ಆ ಮನೆಯ ಮೊದಲ ಮಗು ಎಂದಾದರೆ ಮನೆಯಲ್ಲಿರುವ ಸಡಗರವೇ ಬೇರೆ. ಅತ್ತೆ ಮತ್ತು ಮಾವ ಎಲ್ಲೇ ಹೋದರೂ ಸೊಸೆಗೆ ಏನನ್ನಾದರೂ ತಂದೇ ತರುತ್ತಾರೆ. ಭ್ರೂಣದ ಬೆಳವಣಿಗೆಗೆ ತಮ್ಮದೇ ಆದ ಗಿಡಮೂಲಿಕೆಗಳನ್ನೋ ಸೊಪ್ಪು ತರಕಾರಿಗಳನ್ನೋ ತರುತ್ತಾರೆ. ಪದಾರ್ಥ ಮಾಡಿ ನೀಡುತ್ತಾರೆ. ತವರು ಮನೆಯಲ್ಲೂ ಒಂದು ಬಗೆಯ ಸಡಗರ ಇರುತ್ತದೆ. ಗರ್ಭಿಣಿಯ ಹೊಟ್ಟೆಯ ಆಕಾರವನ್ನು ನೋಡಿ ಕಣಿ ಹೇಳುವುದೂ ಇದೆ. ಮುಂದೆ ಬರುವ ಮಗು ಗಂಡೇ ಆಗಿರುತ್ತದೆ ಎಂದು ಹೊಟ್ಟೆ ನೀವಿ ಕೆಲವರು ಅಂದಾಜಿಸುವುದಿದೆ. ಇಂಥ ಕಣಿಗಳ ಆಧಾರದಲ್ಲಿ ಹುಟ್ಟಲಿರುವ ಮಗುವಿಗೆ ಮನದಲ್ಲೇ ಪತಿ-ಪತ್ನಿ ಕುಲಾವಿ ಹೊಲಿಯುತ್ತಾರೆ. ಹೆಣ್ಣಾದರೆ ಇದು, ಗಂಡಾದರೆ ಇದು ಎಂದು ತಮ್ಮಿಷ್ಟದ ಹೆಸರನ್ನು ಹುಡುಕಿ ಇಟ್ಟಿರುತ್ತಾರೆ. ನಿಜವಾಗಿ, ಖಚಿತತೆ ಇಲ್ಲದೇ ಮನದಲ್ಲೇ ಮಂಡಿಗೆ ಸವಿಯುವ ರೀತಿಯ ವರ್ತನೆಗಳಿವು. ಒಂದು ವೇಳೆ, ಈ ಗರ್ಭದ ಅವಧಿಯಲ್ಲೇ ಮಗುವಿನ ಲಿಂಗ ಗೊತ್ತಾಗುವುದಾದರೆ ಇಲ್ಲಿಯ ವರ್ತನೆಗಳಲ್ಲೆಲ್ಲ ನಿಖರತೆ ಮತ್ತು ಖಚಿತತೆ ಇರಲಾರದೇ? ಹುಟ್ಟಲಿರುವ ಮಗು ಹೆಣ್ಣು ಎಂದು ಗೊತ್ತಾಗಿರುವ ಕುಟುಂಬದ ವರ್ತನೆಗೂ ಅದು ಗೊತ್ತಿಲ್ಲದ ಕುಟುಂಬದ ವರ್ತನೆಗೂ ನಡುವೆ ಸಾಕಷ್ಟು ವ್ಯತ್ಯಾಸ ಇದ್ದೇ ಇರುತ್ತದೆ. ಹುಟ್ಟಲಿರುವ ಮಗು ಹೆಣ್ಣೋ ಗಂಡೋ ಎಂಬುದು ಖಚಿತವಾಗಿ ಗೊತ್ತಿರುವ ಕುಟುಂಬಕ್ಕೆ ಮಗುವನ್ನು ಸ್ವೀಕರಿಸುವುದಕ್ಕೆ ಸಾಕಷ್ಟು ಸಮಯ ಲಭ್ಯವಾಗಿರುತ್ತದೆ. ಹೆಣ್ಣು ಮಗು ಎಂದು ಖಚಿತವಾಗಿ ಗೊತ್ತಿರುವುದರಿಂದ ಪತಿ-ಪತ್ನಿ-ಕುಟುಂಬ ಗೊಂದಲದಲ್ಲಿರುವುದಿಲ್ಲ. ಗರ್ಭಿಣಿಯಲ್ಲಿ ಹೆಣ್ಣು ಮಗುವಿಗೆ ಪೂರಕವಾದ ಆಲೋಚನೆಗಳು, ಅದನ್ನು ಬೆಳೆಸುವ ವಿಧಾನಗಳು ಮತ್ತು ಇನ್ನಿತರ ಹೆಣ್ಣು ಸಂಬಂಧಿ ಚಿಂತನೆಗಳು ನಡೆಯುತ್ತಿರುತ್ತವೆ. ತಾಯಿಯ ಚಟುವಟಿಕೆಗಳು ಭ್ರೂಣದ ಮೇಲೆ ಪ್ರಭಾವ ಬೀರುವುದರಿಂದಲೂ ಭ್ರೂಣದ ಲಿಂಗಮೊದಲೇ ಗೊತ್ತಾಗುವುದಕ್ಕೆ ಮಹತ್ವವಿದೆ. ಗರ್ಭಿಣಿ ಮಹಿಳೆಗೂ ಭ್ರೂಣಕ್ಕೂ ನಡುವೆ ಒಂದು ಬಗೆಯ ಅನುಸಂಧಾನ ಸಹಜವಾದುದು. ಪ್ರಸವಕ್ಕಿಂತ ಸುಮಾರು 4 ತಿಂಗಳ ಮೊದಲೇ ಭ್ರೂಣಾವಸ್ಥೆಯಲ್ಲಿರುವ ಮಗು ಎಚ್ಚರದಿಂದ ತಾಯಿಯ ಚಟುವಟಿಕೆಯನ್ನು ಆಲಿಸುತ್ತಿರುತ್ತದೆ. ಆಕೆಯ ಮಾತು, ಗುನುಗುನಿಸುವ ಹಾಡು, ಬೇಸರ, ಒತ್ತಡ ಎಲ್ಲವೂ ಒಂದು ಹಂತದವರೆಗೆ ಗರ್ಭದೊಳಗಿರುವ ಮಗುವಿನ ಮೇಲೂ ಪರಿಣಾಮ ಬೀರುತ್ತಿರುತ್ತದೆ. ಇಂಥ ಸ್ಥಿತಿಯಲ್ಲಿ, ಭ್ರೂಣದ ಬಗ್ಗೆ ತಾಯಿಗೆ ಖಚಿತವಾಗಿ ಗೊತ್ತಿರುವುದು ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗಬಹುದು. ಮಗುವನ್ನು ಸ್ವಾಗತಿಸುವುದಕ್ಕೆ ಮಾತ್ರವಲ್ಲ, ಬೆಳೆಸುವ ಮತ್ತು ಉತ್ತಮ ನಾಗರಿಕಳಾಗಿಸುವ ವಿಷಯದಲ್ಲೂ ಸಿದ್ಧತೆಗೆ ಸಾಕಷ್ಟು ಸಮಯ ಸಿಗಬಹುದು. ಹುಟ್ಟಿದ ಬಳಿಕವೇ ಮಗು ಹೆಣ್ಣು ಅಥವಾ ಗಂಡು ಎಂದು ಗೊತ್ತಾಗುವುದರಲ್ಲಿ ಈ ಪೂರ್ವ ಸಿದ್ಧತೆಗಿರುವ ಅವಕಾಶಗಳೇ ತಪ್ಪಿ ಹೋಗುತ್ತವೆ. ಅಷ್ಟಕ್ಕೂ,
  ಲಿಂಗಪತ್ತೆ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದು ಮತ್ತು ಭ್ರೂಣದ ಲಿಂಗವನ್ನು ಮೊದಲೇ ಬಹಿರಂಗಪಡಿಸುವುದರಿಂದ ನಕಾರಾತ್ಮಕ ಪರಿಣಾಗಳೇನೂ ಆಗಲ್ಲ ಎಂದು ಹೇಳುತ್ತಿಲ್ಲ. ಹೆಣ್ಣಿನ ಬಗ್ಗೆ ಈ ದೇಶದಲ್ಲಿ ದ್ವಿತೀಯ ದರ್ಜೆಯ ಇಮೇಜು ಇದೆ. ತಾತ್ಸಾರತೆಯೂ ಇದೆ. ತಂದೆ-ತಾಯಿಯನ್ನು ಕೊನೆಯ ವರೆಗೂ ನೋಡುವವ ಎಂಬ ಹಣೆಪಟ್ಟಿಯೊಂದನ್ನು ಗಂಡಿಗೆ ಈ ಸಮಾಜ ಅಂಟಿಸಿರುವುದರಿಂದ ಮತ್ತು ಹೆಣ್ಣು ಹೇಗೂ ಮನೆ ಬಿಟ್ಟು ಹೋಗುವವಳು ಎಂಬ ಭಾವನೆ ಬಲವಾಗಿರುವುದರಿಂದ ಗಂಡು ಮಗು ‘ಚಿನ್ನ’ವಾಗಿದೆ. ಹೆಣ್ಣು ಮಗು ಬೆಳ್ಳಿಯೋ ಹಿತ್ತಾಳೆಯೋ ಅಥವಾ ಕೆಲವು ಕುಟುಂಬಗಳಿಗೆ ಕಬ್ಬಿಣವೋ ಆಗಿದೆ. ಆದರೂ ಈ ಆಧುನಿಕ ಕಾಲದಲ್ಲಿ ಈ ಒಟ್ಟು ವಿಷಯಗಳ ಮೇಲೆ ಮರು ಅವಲೋಕನವೊಂದು ನಡೆಯುವುದು ಅಪರಾಧವೇನೂ ಅಲ್ಲವಲ್ಲ. 20 ವರ್ಷಗಳ ಹಿಂದಿನ ಕೌಟುಂಬಿಕ ಪದ್ಧತಿಯು ಇವತ್ತಿನದ್ದಲ್ಲ. ಅವಿಭಕ್ತ ಕುಟುಂಬವು ವಿಭಕ್ತವಾಗಿ ಇವತ್ತು ಅಣು ಕುಟುಂಬಗಳಾಗಿ ಮಾರ್ಪಟ್ಟಿವೆ. ಮಕ್ಕಳ ಬಗ್ಗೆ ಲೆಕ್ಕಾಚಾರಗಳು ಶುರುವಾಗಿವೆ. ಮನೆ ತುಂಬ ಮಕ್ಕಳು ಎಂಬ ಮಾತು ಹಳತಾಗಿದೆ. ಒಂದೋ ಎರಡೋ ಮಕ್ಕಳನ್ನು ಹೊಂದಲು ತೀರ್ಮಾನಿಸಿ ಅದಕ್ಕಾಗಿ ಮಾನಸಿಕ ಮತ್ತು ಆರ್ಥಿಕ ಸಿದ್ಧತೆ ನಡೆಸುವ ದಂಪತಿಗಳು ಹೆಚ್ಚಾಗುತ್ತಿದ್ದಾರೆ. ಹಳ್ಳಿಗಳು ಖಾಲಿಯಾಗುತ್ತಾ, ಪಟ್ಟಣಗಳು ಗಿಜಿ ಗುಡುತ್ತಾ ಸಾಗುತ್ತಿವೆ. ಆದ್ದರಿಂದ 1994ರಲ್ಲಿ ಲಿಂಗಪತ್ತೆ ಪರೀಕ್ಷೆಯ ವಿರುದ್ಧ ನಿರ್ಬಂಧ ಹೇರಲು ಏನೆಲ್ಲ ಕಾರಣಗಳಿದ್ದುವೋ ಆ ಎಲ್ಲ ಕಾರಣಗಳು ಈಗಲೂ ಇವೆ ಎಂದು ಹೇಳುವುದು ಅಜ್ಞಾನವಾಗುತ್ತದೆ. ಹೆಣ್ಣು ಮಗುವನ್ನು ಕಳಂಕ ಎಂದು ಬಲವಾಗಿ ನಂಬಿದ್ದವರ ನಿಲುವಿನಲ್ಲೂ ಇವತ್ತು ಸಾಕಷ್ಟು ಪರಿವರ್ತನೆಯಾಗಿದೆ. ಹೆಣ್ಣು ಮಗುವನ್ನು ಅಸಂತೃಪ್ತಿಯಿಂದಲಾದರೂ ಸ್ವೀಕರಿಸಿಕೊಳ್ಳುವಷ್ಟು ಅವರನ್ನು ಪರಿಸ್ಥಿತಿ

ಬದಲಾಯಿಸಿದೆ. ಹಾಗಾಗಿ, ಲಿಂಗಪತ್ತೆ ಪರೀಕ್ಷೆಯನ್ನು ನೇರಾತಿನೇರ ‘ಭ್ರೂಣಹತ್ಯೆ ಪರೀಕ್ಷೆ’ ಎಂದು ಹೇಳಬೇಕಿಲ್ಲ. ಮರು ಅವಲೋಕನಕ್ಕೆ ಒಳಪಡಿಸಲೇ ಬಾರದಷ್ಟು ಇದು ಅಸಂಬದ್ಧವೂ ಅಲ್ಲ. ಅಂದಹಾಗೆ, 100 ಗಂಡು ಮಕ್ಕಳಿಗೆ 100 ಹೆಣ್ಣು ಮಕ್ಕಳು ಎಲ್ಲ ಕೇರಿಗಳಲ್ಲೂ ಇರಲೇಬೇಕು ಎಂಬುದು ಎಲ್ಲಿಯ ನಿಯಮ? ಇದು ವೈಜ್ಞಾನಿಕವೇ ಅಥವಾ ಸಮಾನತೆಯ ಹೆಸರಲ್ಲಿ ಕೃತಕವಾಗಿ ರೂಪಿತವಾದದ್ದೇ? ದಕ್ಷಿಣ ಕನ್ನಡ, ಉಡುಪಿ ಮತ್ತಿತರ ಜಿಲ್ಲೆಗಳಲ್ಲಿ ಪುರುಷರಿಗಿಂತ ಹೆಚ್ಚು ಮಹಿಳೆಯರಿದ್ದಾರೆ. ಇಲ್ಲೇನು ಗಂಡು ಭ್ರೂಣದ ಹತ್ಯೆ ನಡೆದಿದೆಯೇ? ಹೆಣ್ಣು-ಗಂಡಿನ ಅನುಪಾತ ಎಲ್ಲ ಊರು, ಪ್ರದೇಶ, ಜಿಲ್ಲೆ, ರಾಜ್ಯ, ದೇಶಗಳಲ್ಲಿ ನೂರಕ್ಕೆ ನೂರು ಇರಬೇಕೆಂದು ಬಯಸುವುದು ಪ್ರಾಕೃತಿಕವಾಗಿ ಸರಿಯೇ? ಪ್ರಕೃತಿ ಸಮತೋಲನವೆಂದರೆ ಪ್ರತಿ ಪ್ರದೇಶದಲ್ಲೂ ಹೆಣ್ಣು-ಗಂಡಿನ ಪ್ರಮಾಣ ಸರಿ ಸಮಾನವೆಂದೇ? ಅಂದಹಾಗೆ,
            ಭ್ರೂಣ ಹೊತ್ತವರು ಭ್ರೂಣದ ಲಿಂಗವನ್ನು ಪ್ರಸವಪೂರ್ವದಲ್ಲೇ ತಿಳಿದುಕೊಳ್ಳುವುದರ ಸುತ್ತ ಚರ್ಚೆಗಳು ನಡೆಯಲಿ.

Thursday, February 4, 2016

  ಉಗ್ರರು ನಿಜಕ್ಕೂ ಯಾರು?

        1. ಜಗತ್ತು ಆಪತ್ತಿನಲ್ಲಿದೆ.
  2. ಶಾಂತಿಯುತ ಹೋರಾಟಗಳಿಂದ ಬದಲಾವಣೆ ಅಸಾಧ್ಯ.
  3. ಆದ್ದರಿಂದ ಕಾನೂನು ಬಾಹಿರ ಮಾರ್ಗ ಸಮ್ಮತಾರ್ಹ.
  4. ಈ ಮಾರ್ಗದಲ್ಲಿ ದೇಹತ್ಯಾಗವು ಗೌರವಾರ್ಹ.
  5. ಈ ಬಗೆಯ ಸಂಘಟಿತ ಪ್ರಯತ್ನಗಳಿಂದ ಆದರ್ಶ ರಾಷ್ಟ್ರದ (ರಾಮರಾಜ್ಯ) ಕಲ್ಪನೆ ಸಾಧ್ಯ..
  ಭಯೋತ್ಪಾದಕರ ಮೇಲೆ ನಡೆದಿರುವ ನೂರಾರು ಸಂಶೋಧನೆಗಳ ಫಲಿತಾಂಶಗಳನ್ನು ಒಂದೆಡೆ ಕೂಡಿಸಿ ನೋಡಿದರೆ ಭಯೋತ್ಪಾದಕರಿಂದ ಬಹುತೇಕ ಈ ಮೇಲಿನ ಉತ್ತರಗಳೇ
ಸಿಗುತ್ತವೆ. ಜರ್ಮನಿಯ ಬಾಡೆರ್-ಮೈನ್‍ಹಾಫ್, ಉಗಾಂಡದ ಲಾರ್ಡ್ ರೆಸಿಸ್ಟೆನ್ಸ್ ಆರ್ಮಿ, ಎಲ್.ಟಿ.ಟಿ.ಇ., ಐಸಿಸ್ ಮುಂತಾದ ಉಗ್ರ ಸಂಘಟನೆಗಳ ಮೇಲೆ ನಡೆಸಿದ ಅಧ್ಯಯನಗಳು ಬಹುತೇಕ ಕೊಟ್ಟಿರುವುದು ಈ ಮೇಲಿನ ಫಲಿತಾಂಶಗಳನ್ನೇ. ಓರ್ವ ಭಯೋತ್ಪಾದಕನ ಮೇಲೆ ಅಥವಾ ಭಯೋತ್ಪಾದಕ ಸಂಘಟನೆಗಳಲ್ಲಿ ಸೇರ್ಪಡೆಗೊಳ್ಳುವವನ ಮೇಲೆ 16 ರೀತಿಯ ವಿಚಾರಗಳು ಪ್ರಭಾವ ಬೀರಿರುತ್ತವೆ ಎಂದು ಹೇಳಲಾಗುತ್ತದೆ. ಅದರಲ್ಲಿ ಸಿನಿಮಾಗಳೂ ಸೇರಿವೆ. ಉಗ್ರಗಾಮಿ ಮನಸ್ಥಿತಿಗೆ ನಿರ್ದಿಷ್ಟ ಧರ್ಮ, ಜಾತಿ, ಭಾಷೆ, ಗ್ರಂಥಗಳ ಹಂಗೇನೂ ಇಲ್ಲ. ಸೊಮಾಲಿಯಾದಲ್ಲಿ 27% ಮಂದಿ ಆರ್ಥಿಕ ಕಾರಣಗಳಿಗಾಗಿ ‘ಅಲ್ ಶಬಾಬ್’ಗೆ ಸೇರ್ಪಡೆಗೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. 13% ಮಂದಿಯನ್ನು ಬಲವಂತದಿಂದ ಸೇರ್ಪಡೆಗೊಳಿಸಲಾಗುತ್ತಿದೆ ಎಂದೂ ವರದಿಗಳು ಹೇಳುತ್ತವೆ. ಬಡತನ, ಆಡಳಿತ ವೈಫಲ್ಯ, ದೌರ್ಜನ್ಯ, ದಬ್ಬಾಳಿಕೆಗಳೂ ‘ಉಗ್ರರನ್ನು ಉತ್ಪಾದಿಸು’ವಲ್ಲಿ ಪಾತ್ರ ವಹಿಸುತ್ತಿವೆ. ಇಂಟರ್‍ನೆಟ್‍ನ ಈ ಕಾಲದಲ್ಲಿ ಹಿಂಸಾತ್ಮಕ ವೀಡಿಯೋಗಳನ್ನು ವೀಕ್ಷಿಸುವುದು ಕಷ್ಟಕರವೇನೂ ಅಲ್ಲ. ಫೇಸ್‍ಬುಕ್, ಟ್ವೀಟರ್, ಯೂಟ್ಯೂಬ್‍ಗಳು ಜನರಿಗೆ ಅಪರಿಮಿತ ಅವಕಾಶಗಳನ್ನು ತೆರೆದಿಟ್ಟಿವೆ. ಪದೇ ಪದೇ ಹಿಂಸಾತ್ಮಕ ವೀಡಿಯೋಗಳನ್ನು ವೀಕ್ಷಿಸಿದ ವ್ಯಕ್ತಿಯೊಬ್ಬನಲ್ಲಿ ಅದು ಚಿತ್ತ ಚಾಂಚಲ್ಯಕ್ಕೆ ಕಾರಣವಾಗಬಹುದು. ಪಾಶ್ಚಾತ್ಯ ರಾಷ್ಟ್ರಗಳು ತೃತೀಯ ಜಗತ್ತಿನ ಮೇಲೆ ನಿರಂತರ ದಬ್ಬಾಳಿಕೆ ನಡೆಸುತ್ತಿವೆ ಎಂಬ ಸುದ್ದಿಗಳನ್ನು ಪದೇ ಪದೇ ಓದುವ ವ್ಯಕ್ತಿಯೋರ್ವನಲ್ಲಿ, ಕ್ರಮೇಣ ‘ಪಾಶ್ಚಾತ್ಯ’ ಎಂಬ ಪದವೇ ಆಕ್ರೋಶಕ್ಕೆ ಕಾರಣವಾಗಬಹುದು. ಪಾಶ್ಚಾತ್ಯರಿಂದ ಬರುವ ಯಾವುದೇ ವಸ್ತುವಿನಲ್ಲೂ ಸಂಚು ಕಾಣಿಸಬಹುದು. ಮಾನ್ಸಾಂಟೊ ಆಗಲಿ, ಅಣು ಸ್ಥಾವರಗಳಾಗಲಿ, ವಿಶೇಷ ವಿತ್ತ ವಲಯಗಳಾಗಲಿ, ಸಾಂಸ್ಕೃತಿಕ ಆಮದುಗಳಾಗಲಿ, ಉಡುಪು, ಭಾಷೆ, ಆಹಾರ, ಔಷಧ, ಆವಿಷ್ಕಾರ.. ಏನೇ ಆಗಲಿ ಎಲ್ಲವೂ ಅನುಮಾನಿತವಾಗಬಹುದು. ಅದೊಂದು ರೀತಿಯ ಮಾನಸಿಕತೆ. ಪಾಕಿಸ್ತಾನದ ಬಗ್ಗೆ ಈ ದೇಶದ ಒಂದು ಗುಂಪಿನಲ್ಲಿ ಅಂಥದ್ದೊಂದು ಮಾನಸಿಕತೆಯಿದೆ. ಆ ದೇಶದ ಮೇಲಿನ ನಕಾರಾತ್ಮಕ ಭಾವನೆಯು ಆ ಗುಂಪಿನಲ್ಲಿ ಯಾವ ಮಟ್ಟಕ್ಕೆ ಬೆಳೆದಿದೆಯೆಂದರೆ, ಪಾಕ್‍ನ ಮೇಲಾಗುವ ಪ್ರತಿ ಹೊಡೆತಕ್ಕೂ ಅದು ಸಂಭ್ರಮ ಪಡುತ್ತದೆ. ಭ್ರಷ್ಟಾಚಾರದಲ್ಲಿ ಪಾಕ್‍ನ ಸ್ಥಾನ ಭಾರತಕ್ಕಿಂತ ಮೇಲಿದ್ದರೆ, ಪಾಕಿಸ್ತಾನವು ಕ್ರಿಕೆಟ್‍ನಲ್ಲೋ  ಹಾಕಿಯಲ್ಲೋ  ದುರ್ಬಲ ಬಾಂಗ್ಲಾ, ನೇಪಾಳ, ಅಫಘಾನಿಸ್ತಾನಗಳ ಎದುರು ಸೋತರೆ, ಪಾಕ್‍ನಲ್ಲಿ ಪ್ರವಾಹ ಬಂದರೆ, ಬಾಂಬ್ ಸ್ಫೋಟಿಸಿದರೆ, ರಾಜಕೀಯ ಅರಾಜಕತೆ ಉಂಟಾದರೆ.. ಹೀಗೆ ಎಲ್ಲವನ್ನೂ ಸಂತಸದಿಂದ ಸ್ವೀಕರಿಸುವ ಗುಂಪಿದು. ಕಳೆದವಾರ ಪಾಕಿಸ್ತಾನದಲ್ಲಿ ವಿರಾಟ್ ಕೊಹ್ಲಿಯ ಅಭಿಮಾನಿಯೊಬ್ಬ ತನ್ನ ಮನೆಯ ಮೇಲೆ ಖುಷಿಯಿಂದ ಭಾರತದ ಧ್ವಜ ಹಾರಿಸಿರುವುದಕ್ಕೆ ಬಂಧನಕ್ಕೀಡಾದುದು ಮತ್ತು 10 ವರ್ಷಗಳ ಶಿಕ್ಷಾ ಭೀತಿಯನ್ನು ಎದುರಿಸುತ್ತಿರುವುದರಲ್ಲಿ ಇದೇ ಮಾನಸಿಕತೆಯನ್ನು ಗುರುತಿಸಬಹುದು. ಒಂದು ವೇಳೆ, ಆತ ಚೀನಾದ್ದೋ  ಸೌದಿಯದ್ದೋ  ಧ್ವಜವನ್ನು ಹಾರಿಸಿರುತ್ತಿದ್ದರೆ ಅದಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಹಾಗಂತ, ಪಾಕ್ ಕ್ರಿಕೆಟ್‍ಗೆ ಮುಹಮ್ಮದ್ ಆಮಿರ್ ಮರಳಿದ ಖುಷಿಯಲ್ಲಿ ಭಾರತೀಯನೊಬ್ಬ ಇಲ್ಲಿ ಪಾಕ್ ಧ್ವಜ ಹಾರಿಸಿರುತ್ತಿದ್ದರೆ ಇಲ್ಲಿನ ವಾತಾವರಣ ಹೇಗಿರುತ್ತಿತ್ತು? ಎಷ್ಟು ಪ್ರತಿಭಟನೆಗಳು ನಡೆಯುತ್ತಿದ್ದುವು? ಎಷ್ಟು ಕೇಸುಗಳನ್ನು ಜಡಿಯಲಾಗುತ್ತಿತ್ತು? ಅದೇ ವೇಳೆ, ನೇಪಾಳದ್ದೋ  ಶ್ರೀಲಂಕಾದ್ದೋ  ಧ್ವಜವನ್ನು ಇಲ್ಲಿ ಹಾರಿಸಿರುತ್ತಿದರೆ ಅದು ಸುದ್ದಿಯೇ ಆಗಲಾರದು. ಈ ದೇಶದಲ್ಲಿ ಎಷ್ಟೋ ದರೋಡೆಗಳು ಸಿನಿಮಾಗಳ ಪ್ರಭಾವದಿಂದ ಆಗಿವೆ. ಕೊಲೆ ಕೃತ್ಯಗಳು, ಸಂಚುಗಳು, ಪ್ರೇಮ ಪ್ರಕರಣಗಳಿಗೆ ಸಿನಿಮಾಗಳನ್ನು ಪ್ರೇರಕವಾಗಿ ಬಳಸಲಾಗಿದೆ. ನಮ್ಮಲ್ಲಿ ನಡೆಯುವ ಕೋಮು ಗಲಭೆಗಳನ್ನೇ ಎತ್ತಿಕೊಳ್ಳಿ. ಒಂದೇ ಧರ್ಮದ ಇಬ್ಬರ ನಡುವಿನ ಜಗಳ ಕೋಮುಗಲಭೆಯಾಗಿ ಮಾರ್ಪಡುವುದಿಲ್ಲ. ಅದೇ ವೇಳೆ, ಅದೇ ವಿಷಯದ ಮೇಲೆ ಹಿಂದೂ-ಮುಸ್ಲಿಮನ ನಡುವೆ ಜಗಳ ನಡೆದರೆ ಅದು ಆ ಇಬ್ಬರನ್ನು ದಾಟಿ ಎರಡು ಸಮುದಾಯದ ಪ್ರತಿಷ್ಠೆಯಾಗಿ ಮಾರ್ಪಡುತ್ತದೆ. ಅಲ್ಲಲ್ಲಿ ಇರಿತಗಳು, ಕಫ್ರ್ಯೂಗಳಿಗೆ ಕಾರಣವಾಗುತ್ತದೆ. ಒಂದು ವೇಳೆ, ಹಿಂದೂ-ಮುಸ್ಲಿಮರ ಬದಲು ಮುಸ್ಲಿಮ್-ಕ್ರೈಸ್ತ ಅಥವಾ ಹಿಂದೂ-ಕ್ರೈಸ್ತರ ನಡುವೆ ಇದೇ ವಿಷಯದ ಮೇಲೆ ಜಗಳ ನಡೆದರೆ ಅದು ಕೋಮುಗಲಭೆಯಾಗಿ ಮಾರ್ಪಡುವ ಸಾಧ್ಯತೆ ಬಹಳ ಕಡಿಮೆ. ಯಾಕೆಂದರೆ, ಇದೊಂದು ಮಾನಸಿಕತೆ. ಆ ಮಾನಸಿಕತೆ ನಕಾರಾತ್ಮಕವಾದುದು. ಮುಸ್ಲಿಮರೆಂದರೆ ಹಾಗೆ, ಹೀಗೆ, ಆಕ್ರಮಣಕೋರರು, ದೇಗುಲ ಭಂಜಕರು, ಹೆಣ್ಣನ್ನು ಪಠಾಯಿಸುವವರು, ಗೋಮಾಂಸ ಭಕ್ಷಕರು, ಉಗ್ರರು, ಕರ್ಮಠರು, ಹಿಂದೂ ವಿರೋಧಿಗಳು.. ಎಂಬಿತ್ಯಾದಿಯಾಗಿ ಅಚ್ಚೊತ್ತಲು ನಿರಂತರವಾಗಿ ಇಲ್ಲಿ ಶ್ರಮಿಸಲಾಗುತ್ತಿದೆ ಮತ್ತು ಅದು ಪ್ರಗತಿಯಲ್ಲಿದೆ. ಹಲವಾರು ದಶಕಗಳಿಂದ ನಡೆಯುತ್ತಿರುವ ಈ ಪ್ರಚಾರಗಳು ಕ್ರಮೇಣ ಸಮಾಜದ ಮೇಲೆ ಪರಿಣಾಮ ಬೀರತೊಡಗಿದೆ. ಆಲಿಸಿದ್ದನ್ನೇ ಮತ್ತೆ ಮತ್ತೆ ಆಲಿಸಿದಾಗ ಮೆದುಳು ಮೃದುವಾಗುತ್ತದೆ. ಇಂಥ ಪ್ರಚಾರಗಳನ್ನು ಸಮರ್ಥಿಸುವುದಕ್ಕಾಗಿ ಪ್ರಚಾರಕರು ತಾಜಾ ಪ್ರಕರಣಗಳನ್ನೂ ಉತ್ಪಾದಿಸುತ್ತಿರುತ್ತಾರೆ. ಯಾವುದೇ ಸಾಮಾನ್ಯ ಘಟನೆಯನ್ನು ಲವ್ ಜಿಹಾದ್ ಆಗಿಯೋ ಗೋಮಾಂಸವಾಗಿಯೋ ಮತಾಂತರವೆಂದೋ ತಿರುಚಿ ವ್ಯಾಖ್ಯಾನಿಸುತ್ತಾರೆ. ಅದಾಗಲೇ ನಿರಂತರ ನಕಾರಾತ್ಮಕ ಪ್ರಚಾರದಿಂದ ಚಾಂಚಲ್ಯಕ್ಕೊಳಗಾಗುವ ಮೆದುಳು ಇವುಗಳಿಂದ ನಿಧಾನಕ್ಕೆ ಪ್ರಭಾವಿತಗೊಳ್ಳತೊಡಗುತ್ತದೆ. ಕೊನೆಗೆ ಅದರ ಉಗ್ರ ಬೆಂಬಲಿಗರಾಗಿಸಿಯೂ ಬಿಡುತ್ತದೆ. ರೋಹಿತ್ ವೇಮುಲ ಪ್ರಕರಣ ಇವತ್ತು ದಲಿತ ಮತ್ತು ಬಲಿತವಾಗಿ ಇಬ್ಭಾಗವಾಗಿರುವುದಕ್ಕೂ ಇಂಥದ್ದೊಂದು ಹಿನ್ನೆಲೆಯಿದೆ. ದಲಿತರು ಶತಮಾನಗಳಿಂದ ಬಲಿತರ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾರೆ. ಆ ದಬ್ಬಾಳಿಕೆಯ ವಿಧಾನ ಯಾವ ರೀತಿಯದ್ದಾಗಿತ್ತೆಂದರೆ, ಅವರಿಗೆ ಮನುಷ್ಯರ ಐಡೆಂಟಿಟಿಯೇ ಇರಲಿಲ್ಲ. ಮಾನವ ಹಕ್ಕುಗಳ ಸಕಲ ಪರಿಧಿಗಳಿಂದಲೂ ಅವರನ್ನು ಹೊರಗಿಡಲಾಯಿತು. ಅವರ ಮೇಲೆ ಬಲಿತ ದಬ್ಬಾಳಿಕೆಯ ಸಾವಿರಾರು ಕತೆಗಳು ಜನಪದೀಯವಾಗಿಯೂ ಪಾಡ್ದನಗಳು ಮತ್ತಿತರ ರೂಪದಲ್ಲಿಯೂ ಇವತ್ತು ಜೀವಂತವಾಗಿವೆ. ಆದ್ದರಿಂದಲೇ ಈ ‘ಬಲಿತ’ ಸಮಾಜದ ಆಧುನಿಕ ಪೀಳಿಗೆಯು ತಮ್ಮ ಪೂರ್ವಜರ ದಬ್ಬಾಳಿಕೆಯನ್ನು ಮುಂದುವರಿಸದಿದ್ದರೂ ಅಥವಾ ಅದನ್ನು ಅಮಾನವೀಯ ಎಂದು ಪರಿಗಣಿಸುತ್ತಿದ್ದರೂ ಅವರನ್ನು ಸಂಶಯ ದೃಷ್ಟಿಯಿಂದಲೇ ನೋಡುವಂತಹ ಸ್ಥಿತಿಯೊಂದು ಈಗಲೂ ಇದೆ. ಒಂದು ವೇಳೆ ವರ್ಣಾಶ್ರಮ ಪದ್ಧತಿ ಈ ದೇಶದಲ್ಲಿ ಅಸ್ತಿತ್ವದಲ್ಲಿ ಇರದೇ ಇರುತ್ತಿದ್ದರೆ ವೇಮುಲ ಪ್ರಕರಣ ಓರ್ವ ವಿದ್ಯಾರ್ಥಿಯ ಆತ್ಮಹತ್ಯೆಯಾಗಿ ಗುರುತಿಗೀಡಾಗುತ್ತಿತ್ತೇ ಹೊರತು ದಲಿತರು ಮತ್ತು ಮೇಲ್ವರ್ಗವಾಗಿ ವಿಭಜನೆಗೊಳ್ಳುತ್ತಿರಲಿಲ್ಲ.
  ಅಮೇರಿಕದ ಶಾಂತಿಗಾಗಿ ಸಂಸ್ಥೆ ಎಂಬ ತಂಡವು 2010ರಲ್ಲಿ ಒಂದು ಅಧ್ಯಯನ ಕೈಗೊಂಡಿತ್ತು. ಅಲ್ ಕಾಯಿದಾಕ್ಕೆ ಆಕರ್ಷಿತರಾದ 2032 ಯುವಕರ ಮೇಲೆ ನಡೆಸಿದ ಅಧ್ಯಯನವಿದು ಎಂದೂ ಅದು ಹೇಳಿಕೊಂಡಿತ್ತು. ಆ ಅಧ್ಯಯನದ ಫಲಿತಾಂಶ ಏನೆಂದರೆ, ಅಲ್ ಕಾಯಿದಾದೊಂದಿಗೆ ಆ ಯುವಕರು ಗುರುತಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ‘ಗುರುತಿಸಿಕೊಳ್ಳುವ ಚಪಲ’ವಾಗಿತ್ತು. ತಮ್ಮನ್ನು ಎಲ್ಲರೂ ಗುರುತಿಸಬೇಕು, ತಾವು ಪರಿಚಿತ ವ್ಯಕ್ತಿತ್ವವಾಗಬೇಕು ಎಂಬ ಹಂಬಲ ಅವರನ್ನು ಅಲ್‍ಕಾಯಿದಾದೆಡೆಗೆ ಆಕರ್ಷಿತಗೊಳಿಸಿತ್ತು. ನಿಜವಾಗಿ, ಉಗ್ರರಿಗೆ ನಾವು ಇವತ್ತು ಕೊಡುತ್ತಿರುವ ‘ಮತಾಂಧ’ ಎಂಬ ಸಾಮಾನ್ಯ ವ್ಯಾಖ್ಯಾನವೇ ಅಂತಿಮವಲ್ಲ ಎಂಬುದನ್ನು ಸಮರ್ಥಿಸುವ ಅಧ್ಯಯನ ಇದು. ಓರ್ವ ವ್ಯಕ್ತಿ ಉಗ್ರನಾಗುವುದಕ್ಕೆ ಧರ್ಮಾತೀತವಾದ ಹಲವಾರು ಕಾರಣಗಳಿವೆ. ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ, ಪ್ರಾದೇಶಿಕ ಮತ್ತಿತರ ಸಂಗತಿಗಳು ಇವುಗಳಲ್ಲಿ ಮುಖ್ಯವಾದುವು. ದಲಿತರಲ್ಲಿ ಒಂದಷ್ಟು ಮಂದಿ ಇವತ್ತು ಸಂಘಪರಿವಾರದೊಂದಿಗೆ ಸೇರಿ ಕೊಂಡಿರುವುದರ ಹಿಂದೆ ಕೆಲಸ ಮಾಡಿರುವುದೂ ಇವೇ ಕಾರಣಗಳು. ಗುರುತುಹೀನರಾದ ದಲಿತ ಯುವಕರಿಗೆ ಐಡೆಂಟಿಟಿ ಕ್ರೈಸಿಸ್ ಎದುರಾಗುವುದು ಸಹಜ. ಸಮಾಜ ತಮ್ಮನ್ನು ಗುರುತಿಸಬೇಕು ಎಂಬ ಅವರ ಬಯಕೆ ಅಸಾಧುವೂ ಅಲ್ಲ. ಈ ಸಂದರ್ಭವನ್ನು ಸಂಘಪರಿವಾರ ಚೆನ್ನಾಗಿ ದುರುಪಯೋಗಪಡಿಸಿಕೊಂಡಿತು ಮತ್ತು ಈಗಲೂ ದುರುಪಯೋಗಿಸುತ್ತಿದೆ. ಅದು ಅವರೊಳಗೆ ಮುಸ್ಲಿಮ್ ವಿರೋಧಿ ಚಿಂತನೆಗಳನ್ನು ತುಂಬಿಸಿತು. ಅವರಿಗೆ ಸಣ್ಣ ಪುಟ್ಟ ಸ್ಥಾನಮಾನಗಳನ್ನು ಕೊಟ್ಟಿತು. ಸಾಮಾಜಿಕ ಐಡೆಂಟಿಟಿಗಾಗಿ ಹಂಬಲಿಸುತ್ತಿದ್ದ ದಲಿತ ಯುವಕರನ್ನು ಸಂಘಪರಿವಾರದ ಈ ಧೋರಣೆ ಆಕರ್ಷಿಸಿತು. ಸಂಘ ಪರಿವಾರದ ಮುಸ್ಲಿಮ್ ವಿರೋಧಿ ನಿಲುವುಗಳು ಇವರ ಮೇಲೆ ಹೆಚ್ಚೆಚ್ಟು ಪ್ರಭಾವ ಬೀರತೊಡಗಿದಂತೆಯೇ ಇವರ ಗೌರವಗಳೂ ಹೆಚ್ಚಾದುವು. ಇವರು ದಿನೇ ದಿನೇ ನಿರ್ದಿಷ್ಟ ಚಿಂತನೆಗಳ (ಉಗ್ರ) ದಾಸರಾಗತೊಡಗಿದರು. ಇವರ ಲ್ಲೊಂದು ಬಗೆಯ ಹೀರೋಯಿಸಂ ಬೆಳೆಯತೊಡಗಿತು. ಹಿಂದೂಗಳ ಮೇಲೆ ಮುಸ್ಲಿಮರು ಎಸಗಿರುವ ಕ್ರೌರ್ಯದ ಕತೆಗಳನ್ನು (ಸಂಘಪರಿವಾರ ಹೇಳಿಕೊಟ್ಟದ್ದು) ಇವರು ತಮ್ಮ ಗೆಳೆಯರಲ್ಲಿ ಹೇಳುವುದು ಮತ್ತು ಅವರು ಅಚ್ಚರಿಯಿಂದ ಆಲಿಸುವುದೆಲ್ಲ ಇವರಿಗೆ ವಿಚಿತ್ರ ಸುಖ ಕೊಡತೊಡಗಿತು. (ಇಸ್ಲಾಮಿನ ಮೇಲೆ ಪಾಶ್ಚಾತ್ಯರು ಎಸಗುತ್ತಿರುವ ಷಡ್ಯಂತ್ರಗಳ ಹೊಸ ಹೊಸ ಕತೆಗಳನ್ನು ಹೇಳುವ ಕೆಲವು ಯುವಕರಲ್ಲೂ ಇದೇ ಹೀರೋಯಿಸಂನ ತಹತಹಿಕೆ ಇದೆ.) ಸಂದರ್ಭ ಸಿಕ್ಕಾಗಲೆಲ್ಲ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡೇ ಇವರನ್ನು ಸಂಘಪರಿವಾರ ಕ್ರಮೇಣ ಉಗ್ರಗಾಮಿ ಕೃತ್ಯಗಳಿಗೆ ಬಳಸಿಕೊಳ್ಳತೊಡಗಿತು. ನಿಜವಾಗಿ ‘ಉಗ್ರಗಾಮಿ’ ಮನಸ್ಥಿತಿಯೆಂಬುದು ಐಸಿಸ್, ಅಲ್‍ಕಾಯ್ದಾಗಳಿಗೆ ಸೇರ್ಪಡೆಗೊಳ್ಳುವವರಲ್ಲಿ ಮಾತ್ರ ನಾವು ಹುಡುಕಬೇಕಾದುದಲ್ಲ. ಆ ಮನಃಸ್ಥಿತಿ ಎಲ್ಲೆಡೆಯಿದೆ. ಪಾಶ್ಚಾತ್ಯ ದಬ್ಬಾಳಿಕೆಯನ್ನು ತೋರಿಸಿ ಒಂದು ಕಡೆ ಉಗ್ರಗಾಮಿಗಳನ್ನು ಹುಟ್ಟು ಹಾಕಲಾಗುತ್ತಿದ್ದರೆ ಇನ್ನೊಂದು ಕಡೆ ಮೊಗಲರನ್ನು, ಗೋವನ್ನು, ಮಸೀದಿಗಳನ್ನು ತೋರಿಸಿ ಉಗ್ರಗಾಮಿಗಳನ್ನು ಉತ್ಪಾದಿಸಲಾಗುತ್ತಿದೆ. ವಿಷಾದ ಏನೆಂದರೆ, ಒಂದನ್ನು ಅಪಾಯಕಾರಿಯೆಂದೂ ಮತ್ತು ಇನ್ನೊಂದನ್ನು ದೇಶಪ್ರೇಮಿ ಎಂದೂ ನಾವು ವಿಭಜಿಸಿರುವುದು. ನಿಜವಾಗಿ ‘ಉಗ್ರಗಾಮಿ’ಗೆ ನಿರ್ದಿಷ್ಟ ಧರ್ಮ, ಭಾಷೆ, ವೇಷ-ಭೂಷಣಗಳ ಕಟ್ಟುಪಾಡುಗಳೇನೂ ಇಲ್ಲ. ಗಡ್ಡ ಇದ್ದವನೂ ಉಗ್ರನಾಗಬಲ್ಲ. ನಾಮ ಹಾಕಿದವನೂ ಆಗಬಲ್ಲ. ಆ ಮನಃಸ್ಥಿತಿ ಸಂದರ್ಭವನ್ನಷ್ಟೇ ಕಾಯುತ್ತಿರುತ್ತದೆ. ನಿಜವಾಗಿ, ಕೋಮುಗಲಭೆಯನ್ನು ಬಯಸುವ ಉಗ್ರಗಾಮಿಗಳಷ್ಟೇ ಐಸಿಸ್ ಅನ್ನು ಆರಾಧನಾಭಾವದಿಂದ ಕಾಣುವ ಉಗ್ರಗಾಮಿಗಳೂ ಅಪಾಯಕಾರಿ.
  ನೀವು ಒಪ್ಪಿ-ಬಿಡಿ.