ದ ಎಕನಾಮಿಕ್ಸ್ ಟೈಮ್ಸ್
ಫಿನಾನ್ಶಿಯಲ್ ಎಕ್ಸ್ ಪ್ರೆಸ್
ದ ವೀಕ್
ದ ಟ್ರಿಬ್ಯೂನ್
ದ ವೈರ್
ಎನ್‍ಡಿಟಿವಿನ್ಯಾಶನಲ್ ಹೆರಾಲ್ಡ್
ಬ್ಲೂಂಬರ್ಗ್ ನ್ಯೂಸ್
2018 ಜನವರಿಯಿಂದ ಈ ವರೆಗೆ ಗುಜರಾತ್‍ನ ಅಹ್ಮದಾಬಾದ್ ನ್ಯಾಯಾಲಯವೊಂದರಲ್ಲೇ ಮಾನನಷ್ಟ ಮೊಕದ್ದಮೆಯನ್ನು ಜಡಿಸಿಕೊಂಡ ಪತ್ರಿಕೆಗಳಿವು. ಕೇಸು ಹಾಕಿದ್ದು ಅನಿಲ್ ಅಂಬಾನಿಯ ರಿಲಯನ್ಸ್ ಸಂಸ್ಥೆಗಳು. ಈ ಕೇಸುಗಳಿಗೆ ಕಾರಣ ಒಂದೇ- ರಫೇಲ್ ಒಪ್ಪಂದ. ಇತ್ತೀಚೆಗಷ್ಟೇ ದ ವೈರ್ ಪತ್ರಿಕೆಯ ಮೇಲೆ 6 ಸಾವಿರ ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆಯನ್ನು ಹೂಡಲಾಗಿದೆ. 2018 ಆಗಸ್ಟ್ 23ರಂದು ದ ವೈರ್ ಪತ್ರಿಕೆಯು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ನಡೆಸಿದ ಸಂವಾದದ ವೀಡಿಯೋವೊಂದನ್ನು Rafael Deal: Understanding the controvercy ಎಂಬ ಹೆಸರಲ್ಲಿ ತನ್ನ ವೆಬ್‍ಸೈಟ್‍ನಲ್ಲಿ ಪ್ರಸಾರ ಮಾಡಿತ್ತು. ಹಾಗಂತ, ದ ವೈರ್ ಎಂಬುದು ಪ್ರಜಾವಾಣಿ, ವಿಜಯ ಕರ್ನಾಟಕ, ವಾರ್ತಾಭಾರತಿಯಂತೆ ಕಾಗದದಲ್ಲಿ ಪ್ರಕಟವಾಗುವ ಪತ್ರಿಕೆಯಲ್ಲ. ಅದೊಂದು ವೆಬ್ ಪೋರ್ಟಲ್. ಇಂಟರ್ ನೇಟ್ ಮಾಧ್ಯಮ. ಅದನ್ನು ಓದಬೇಕಾದರೆ ನಿಮ್ಮಲ್ಲಿ ಇಂಟರ್ ನೆಟ್ ಸಂಪರ್ಕವಿರುವ ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಇರಲೇಬೇಕು. ಇಂಟರ್ ನೆಟ್ ಮಾಧ್ಯಮ ಕ್ಷೇತ್ರದಲ್ಲಿ ದ ವೈರ್‍ಗೆ ಬಹುದೊಡ್ಡ ಗೌರವವಿದೆ. ನ್ಯಾಯಪರ ಪತ್ರಿಕೋದ್ಯಮವನ್ನು ನೆಚ್ಚಿಕೊಂಡವರು ಹುಟ್ಟುಹಾಕಿದ ಮಾಧ್ಯಮ ಎಂದು ಅದು ಗುರುತಿಸಿಕೊಳ್ಳುತ್ತಿದೆ. ಮಾಧ್ಯಮ ರಂಗದ ಹಲವರನ್ನು ಬಿಜೆಪಿ ಖರೀದಿಸಿಕೊಂಡಿದೆ ಎಂಬ ಆರೋಪಗಳ ನಡುವೆ ಕೈ-ಬಾಯಿ ಶುದ್ಧವಾಗಿಟ್ಟುಕೊಂಡಿರುವ ಪತ್ರಿಕೆಯಾಗಿ ದ ವೈರ್ ವಿಶ್ವಾಸಕ್ಕೆ ಪಾತ್ರವಾಗಿದೆ. ಬಹುಶಃ,
ಇಂಥ ಶುದ್ಧ ಪತ್ರಿಕೋದ್ಯಮವನ್ನು ನಡೆಸಿಕೊಂಡಿರುವುದಕ್ಕೋ ಏನೋ ಅದು ಸದ್ಯ ಮೈಮೇಲೆಳೆದುಕೊಂಡಿರುವ ಕೇಸುಗಳನ್ನು ನೋಡಿದರೆ ಅಚ್ಚರಿಯಾಗಬಹುದು. ಅನಿಲ್ ಅಂಬಾನಿಯರಂತೆಯೇ ಅದಾನಿ ಕೂಡ ದ ವೈರ್ ನ ಮೇಲೆ ಮೂರು ಕ್ರಿಮಿನಲ್ ಮತ್ತು ಮೂರು ಸಿವಿಲ್ ಕೇಸುಗಳನ್ನೊಳಗೊಂಡಂತೆ 300 ಕೋಟಿ ರೂಪಾಯಿ ಗಳ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದಾರೆ. ಬಿಜೆಪಿಯ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಮಗ ಒಂದು ಕ್ರಿಮಿನಲ್ ಮತ್ತು ಒಂದು ಸಿವಿಲ್ ಕೇಸುಗಳನ್ನು ದಾಖಲಿಸಿದ್ದು 100 ಕೋಟಿ ರೂಪಾಯಿ ಮಾನನಷ್ಟ ಪರಿಹಾರವನ್ನು ಕೋರಿದ್ದಾರೆ. ಬಿಜೆಪಿಯ ಸಂಸದ ರಾಜೀವ್ ಚಂದ್ರಶೇಖರ್ ರಿಂದ 40 ಕೋಟಿ ರೂಪಾಯಿ ಮತ್ತು ಶ್ರೀ ಶ್ರೀ ರವಿಶಂಕರ್ ರಿಂದ 10 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಯನ್ನೂ ದ ವೈರ್ ಎದುರಿಸುತ್ತಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಸಂವಾದದ ವೀಡಿಯೋವನ್ನು ಪ್ರಸಾರ ಮಾಡಿದುದಕ್ಕಾಗಿ ರಿಲಯನ್ಸ್ ಸಂಸ್ಥೆಯು ದ ವೈರ್ ನ ಸ್ಥಾಪಕ ಸಂಪಾದಕ ಮಂಗಳಂ ಶ್ರೀನಿವಾಸನ್ ವೇಣು, ಚರ್ಚೆಯಲ್ಲಿ ಭಾಗವಹಿಸಿರುವ ರಕ್ಷಣಾ ತಜ್ಞ ಅಜಯ್ ಶುಕ್ಲ ಮತ್ತು ವಿಶ್ಲೇಷಕ ಹಾಪಿಮೋನ್ ಜಾಕಬ್ ಇವರ ಮೇಲೆ ಕೇಸು ದಾಖಲಿಸಿದೆ. ಹಾಗಂತ,
ಈ ಪ್ರಕ್ರಿಯೆ ತೀರಾ ಸರಳ ಅಲ್ಲ.
ಬೆಂಗಳೂರಿನಲ್ಲೊ , ಚೆನ್ನೈ, ಮುಂಬೈನಲ್ಲೋ ಕೇಂದ್ರ ಕಚೇರಿಯನ್ನು ಹೊಂದಿರುವ ಪತ್ರಿಕೆಯೊಂದರ ಮೇಲೆ ದೂರದ ಅಹ್ಮದಾಬಾದ್‍ನಲ್ಲಿ ಕೇಸು ದಾಖಲಿಸುವುದೆಂದರೆ ಅದನ್ನು ಎದುರಿಸುವುದು ಸುಲಭ ಅಲ್ಲ. ಅಹ್ಮದಾಬಾದ್‍ನ ನ್ಯಾಯಾಲಯಕ್ಕೆ ಹಾಜರಾಗುವುದೆಂದರೆ, ಅದಕ್ಕೆ ಒಂದು ದಿನ ಮೊದಲೇ ತಯಾರಾಗಬೇಕು. ಸಮಯ ಉಳಿತಾಯದ ದೃಷ್ಟಿಯಿಂದ ವಿಮಾನ ಪ್ರಯಾಣ ಉತ್ತಮವಾದರೂ ಖರ್ಚು ವೆಚ್ಚದ ದೃಷ್ಟಿಯಿಂದ ದುಬಾರಿ. ಯಾವುದೇ ಕೇಸು ಒಂದೆರಡು ಹಾಜರಾತಿಯಲ್ಲಿ ಮುಗಿಯುವುದಿಲ್ಲ. ಅದೊಂದು ದೀರ್ಘ ಕತೆ. ಈ ಕತೆ ಮುಗಿಯುವಾಗ ವಕೀಲರ ಜೇಬು ತುಂಬಿರುತ್ತದೆ. ಫಿರ್ಯಾದು ದಾರ ಬಸವಳಿದಿರುತ್ತಾನೆ. ಪತ್ರಿಕೆಗೆ ಸಂಬಂಧಿಸಿ ಹೇಳುವು ದಾದರೆ ಕೇಸು ಗೆದ್ದರೂ ಸಂತಸ ಪಡುವ ಸ್ಥಿತಿಯಲ್ಲಿ ಪತ್ರಿಕೆ ಇರುವುದಿಲ್ಲ. ಅದಾಗಲೇ ವಿಚಾರಣೆ, ಪ್ರಯಾಣ, ಖರ್ಚು-ವೆಚ್ಚದ ಹೆಸರಲ್ಲಿ ಪತ್ರಿಕೆ ಸೋಲನ್ನು ಒಪ್ಪಿಕೊಂಡಿರುತ್ತದೆ. ಇನ್ನು,
ಕೇಸು ದಾಖಲಾಗುವಾಗ ಒಂದು ಪತ್ರಿಕೆಯಲ್ಲಿದ್ದ ಪತ್ರಕರ್ತ ಕೇಸು ಮುಗಿಯುವಾಗ ಇನ್ನೊಂದು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದೂ ಇದೆ. ಇದು ಆತ/ಕೆ/ಯ ಪಾಲಿಗೆ ತೀರಾ ಜಟಿಲ ಸಮಸ್ಯೆ. ಆದ್ದರಿಂದ, ಹೀಗೆಲ್ಲ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಸರಕಾರಕ್ಕೆ ಮತ್ತು ಕಾರ್ಪೋರೇಟ್ ಸಂಸ್ಥೆಗಳಿಗೆ ಇಷ್ಟವಾಗುವ ಸುದ್ದಿ, ವಿಶ್ಲೇಷಣೆಗಳನ್ನು ಮಾಡಿ ಆರಾಮವಾಗಿರುವುದು ಒಳ್ಳೆಯದಲ್ಲವೇ ಎಂದು ಓರ್ವ ಪತ್ರಕರ್ತ ಮತ್ತು ಒಂದು ಪತ್ರಿಕೆ ಆಲೋಚಿಸಿದರೆ ಅದನ್ನು ಅಸಾಮಾನ್ಯ ಎಂದು ತಳ್ಳಿ ಹಾಕಲಾಗದು. ಅಂದಹಾಗೆ,
ಅನಿಲ್ ಅಂಬಾನಿಯವರ ರಿಲಯನ್ಸ್ ಸಂಸ್ಥೆಯು ಪತ್ರಿಕೆ ಗಳ ಮೇಲೆ ಮಾತ್ರ ಕೇಸು ದಾಖಲಿಸಿರುವುದಲ್ಲ. ರಾಜಕಾರಣಿಗಳ ಮೇಲೂ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಒಂದು ಕಡೆ, The Week ಪತ್ರಿಕೆಯ ಪ್ರಕಾಶಕ ಜಾಕಬ್ ಮ್ಯಾಥ್ಯೂ, ಸಂಪಾದಕ ಫಿಲಿಪ್ ಮ್ಯಾಥ್ಯೂ, ವರದಿಗಾರ ನಚಿಕೇತ್ ಕೌಶಿಕ್‍ರ ಮೇಲೆ ಕೇಸು ದಾಖಲಿಸುವಾಗ, ಇನ್ನೊಂದು ಕಡೆ- ಕಾಂಗ್ರೆಸ್‍ನ ಸಂಜಯ್ ನಿರುಪಮ್ ಅವರ ಮೇಲೆ 5 ಸಾವಿರ ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ. ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್, ಕಾಂಗ್ರೆಸ್‍ನ ವಕ್ತಾರ ಪ್ರಿಯಾಂಕ್ ಚತುರ್ವೇದಿ, ಸುನಿಲ್ ಕುಮಾರ್ ಜಾಕ್ಕರ್, ಉಮ್ಮನ್ ಚಾಂಡಿ ಸೇರಿದಂತೆ 8 ಮಂದಿ ರಾಜಕಾರಣಿಗಳನ್ನು ಅಹ್ಮದಾಬಾದ್ ನ್ಯಾಯಾಲಯದ ಕಟಕಟೆಯಲ್ಲಿ ತಂದು ನಿಲ್ಲಿಸಿದೆ. ನಿಜವಾಗಿ,
ರಿಲಯನ್ಸ್ ಸಂಸ್ಥೆಯ ವತಿಯಿಂದ ಮಾಡಲಾದ ಒಂದು ವ್ಯವಸ್ಥಿತ ತಂತ್ರದ ಭಾಗ ಈ ಕೇಸು. ರಫೇಲ್‍ನ ವಿಷಯದಲ್ಲಿ ರಿಲಯನ್ಸ್ ಅನ್ನು ಯಾರು ಉಲ್ಲೇಖಿಸುತ್ತಾರೋ ಅವರಿಗೆ ಕೇಸು ಕಾದಿದೆ ಎಂಬ ಸಂದೇಶವನ್ನು ರವಾನಿಸುವ ಜಾಣತನ ಇದರ ಹಿಂದೆ ಕೆಲಸ ಮಾಡಿದೆ ಎಂಬುದು ನಿಸ್ಸಂಶಯ. ಯಾವಾಗ ಪತ್ರಿಕೆಗಳ ವಿರುದ್ಧ ಸಾವಿರಾರು ಕೋಟಿ ರೂಪಾಯಿಗಳ ಕೇಸು ದಾಖಲಾಗತೊಡಗುತ್ತದೋ ಪತ್ರಕರ್ತ ಮತ್ತು ಪತ್ರಿಕೆಗೆ ಭಯ ಪ್ರಾರಂಭವಾಗುತ್ತದೆ. ಯಾವುದೇ ಮಾಹಿತಿಯನ್ನೂ ಪ್ರಕಟಿಸುವ ಬಗ್ಗೆ ಹಿಂದೆ-ಮುಂದೆ ನೋಡಬೇಕಾಗುತ್ತದೆ. ನಮಗ್ಯಾಕೆ ರಿಸ್ಕ್ ಎಂಬ ಮನೋಭಾವ ಬೆಳೆದು ಬಿಡುತ್ತದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿ ಮಾಧ್ಯಮಗಳಲ್ಲಿ ತನಿಖಾ ಬರಹಗಳು ಕಾಣಿಸಿಕೊಳ್ಳದೇ ಇರುವುದಕ್ಕೆ ರಿಲಯನ್ಸ್ ಸಂಸ್ಥೆಯ ಈ ‘ಮಾನನಷ್ಟ ಕೇಸುಗಳು’ ಒಂದು ಪಾತ್ರವನ್ನು ನಿರ್ವಹಿಸಿರಬಹುದು ಎಂಬ ಸಂಶಯಕ್ಕೆ ಆಧಾರವೂ ಇದುವೇ. ರಫೇಲ್‍ನ ಬಗ್ಗೆ ಚರ್ಚೆ ಮಾಡುವ ಯಾರೇ ಆಗಲಿ, ಡಸಾಲ್ಟ್ ಮತ್ತು ರಿಲಯನ್ಸ್ ಸಂಸ್ಥೆಗಳ ಪಾಲುದಾರಿಕೆಯ ಬಗ್ಗೆ ಮಾತಾಡಲೇಬೇಕಾಗುತ್ತದೆ. ಇಡೀ ಒಪ್ಪಂದ ಪ್ರಶ್ನಾರ್ಹವಾಗಿರುವುದೇ ಈ ಪಾಲುದಾರಿಕೆಯಿಂದಾಗಿ. ಆದರೆ
ಈ ಪಾಲುದಾರಿಕೆಯನ್ನು ಕೆದಕಬೇಕೆಂದರೆ ರಿಲಯನ್ಸ್‍ಗೆ ಮುಖಾ ಮುಖಿಯಾಗಲೇಬೇಕು. ತನ್ನಲ್ಲಿರುವ ಮಾಹಿತಿಯನ್ನು ಮುಂದಿಟ್ಟು ಕೊಂಡು ಪತ್ರಕರ್ತ ವಿಶ್ಲೇಷಣೆ ನಡೆಸಲೇಬೇಕು. ಅಂತಹ ಸಂದರ್ಭ ದಲ್ಲಿ ಆತ ರಿಲಯನ್ಸನ್ನು ಪ್ರಶ್ನಿಸಬೇಕಾಗಬಹುದು. ಒಪ್ಪಂದದ ಸಮಯ, ಸಂದರ್ಭ, ಒಕ್ಕಣೆಗಳನ್ನು ಅನುಮಾನಿಸಿ ಮಾತಾಡಬೇಕಾಗಬಹುದು. ಒಟ್ಟು ಬೆಳವಣಿಗೆಯ ಬಗ್ಗೆ ತನ್ನದೇ ಅಭಿಪ್ರಾಯಗಳನ್ನು ಮಂಡಿಸಬೇಕಾಗಿ ಬರಬಹುದು. ಆದರೆ, ಹಾಗೆ ಮಾಡಿದರೆ ಕೇಸು ಹಾಕುತ್ತೇನೆ ಎಂದು ರಿಲಯನ್ಸ್ ಸಂಸ್ಥೆ ಬೆತ್ತ ಹಿಡಿದು ನಿಂತಿರುವಾಗ ಒಂದು ಪತ್ರಿಕೆ ಮತ್ತು ಪತ್ರಕರ್ತ ಎರಡೆರಡು ಬಾರಿ ಯೋಚಿಸುತ್ತಾನೆ. ಒಂದು ರೀತಿಯಲ್ಲಿ,
ಬೋಫೋರ್ಸ್, ಶವಪೆಟ್ಟಿಗೆ, 2ಜಿ ಸ್ಪೆಕ್ಟ್ರಂ ಇತ್ಯಾದಿ ಹಗರಣಗಳ ಬಗ್ಗೆ ಈ ದೇಶದ ಮಾಧ್ಯಮಗಳು ನಡೆಸಿರುವ ಚರ್ಚೆ ಮತ್ತು ಬರೆದಿರುವ ಬರಹಗಳಿಗೆ ಹೋಲಿಸಿದರೆ ರಫೇಲ್‍ನ ಬಗ್ಗೆ ಏನನ್ನೂ ಬರೆದಿಲ್ಲ ಎಂದೇ ಹೇಳಬಹುದು. ಇದಕ್ಕೆ, ಮಾಧ್ಯಮಗಳ ಮೋದಿ ಪ್ರೇಮ ಒಂದು ಕಾರಣವಾಗಿದ್ದರೆ, ಇನ್ನೊಂದು ಬಲವಾದ ಕಾರಣ- ರಿಲಯನ್ಸ್ ನ ಮಾನನಷ್ಟ ಮೊಕದ್ದಮೆ ಎಂದೇ ಅನಿಸುತ್ತದೆ. ಮಾತ್ರವಲ್ಲ, ಪರದೆಯ ಹಿಂದೆ ನಿಂತು ಬಿಜೆಪಿಯೇ ಈ ಕೆಲಸ ಮಾಡಿಸುತ್ತಿದೆಯೇ ಎಂಬ ಅನುಮಾನವೂ ಇದೆ. ಅಹ್ಮದಾಬಾದ್ ನ್ಯಾಯಾಲಯದಲ್ಲಿ ರಿಲಯನ್ಸ್ ದಾಖಲಿಸಿರುವ 28 ಕೇಸುಗಳೂ ರಫೇಲ್‍ಗೆ ಸಂಬಂಧಿಸಿದವು. ಒಂದುವೇಳೆ, ಬೋಫೋರ್ಸ್ ಹಗರಣದ ವೇಳೆ ಮಾಧ್ಯಮಗಳ ಮೇಲೆ ಇಂಥದ್ದೊಂದು ತೂಗುಗತ್ತಿ ನೇತಾಡಿರುತ್ತಿದ್ದರೆ ಏನಾಗುತ್ತಿತ್ತು? ತನಿಖಾ ಬರಹ ಪ್ರಕಟಿಸುವ ಧೈರ್ಯವನ್ನು ಯಾವ ಪತ್ರಿಕೆ ತೋರುತ್ತಿತ್ತು? ತನಿಖಾ ಬರಹ, ಸುದ್ದಿ ವಿಶ್ಲೇಷಣೆಗಳಲ್ಲಿ ಯಾವ ಬಗೆಯ ಜಾಗ್ರತೆಯನ್ನು ಪಾಲಿಸಲಾಗುತ್ತಿತ್ತು?
21ನೇ ಶತಮಾನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಬಹುದೊಡ್ಡ ಬದಲಾವಣೆ ಏನೆಂದರೆ, ಕಾರ್ಪೋರೇಟ್ ಸಂಸ್ಥೆಗಳು ಮಾಧ್ಯಮ ಕ್ಷೇತ್ರವನ್ನು ಒಂದೋ ಕೊಂಡುಕೊಂಡಿರುವುದು ಇಲ್ಲವೇ ಕಾನೂನಿನ ಮೂಲಕ ಬೆದರಿಕೆ ಒಡ್ಡುತ್ತಿರುವುದು. ನಿಜವಾಗಿ, ಕಾರ್ಪೋರೇಟ್ ಸಂಸ್ಥೆಯೊಂದರಿಂದ ಖರೀದಿಗೊಳಗಾಗಿರುವ ಮಾಧ್ಯಮ ಸಂಸ್ಥೆಯು ಇನ್ನೊಂದು ಕಾರ್ಪೋರೇಟ್ ಸಂಸ್ಥೆಯ ವಿರುದ್ಧ ಬರೆಯುವುದಕ್ಕೆ ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಆ ಕಂಪೆನಿಗಳ ನಡುವೆ ಸ್ಪರ್ಧೆಯಿದ್ದರೆ ಮಾತ್ರ ಒಂದು ಸಂಸ್ಥೆ ನಡೆಸುತ್ತಿರುವ ಪತ್ರಿಕೆ ಇನ್ನೊಂದು ಸಂಸ್ಥೆಯ ಒಳಸುಳಿಗಳನ್ನು ಬಿಚ್ಚಿಡಬಲ್ಲುದು. ದೇಶದಲ್ಲಿರುವ ಮಾಧ್ಯಮ ಸಂಸ್ಥೆಗಳನ್ನೇ ಪರಿಶೀಲಿಸಿ. ಮುಖ್ಯವಾಹಿನಿಯ ಹೆಚ್ಚಿನ ಮಾಧ್ಯಮ ಸಂಸ್ಥೆಗಳು ಯಾವುದಾದರೊಂದು ಕಾರ್ಪೋರೇಟ್ ಕುಲದ ಒಡೆತನದಲ್ಲಿಯೋ ಮುಲಾಜಿನಲ್ಲಿಯೋ ಇರುವುದು ಗೊತ್ತಾಗುತ್ತದೆ. ಮಾತ್ರವಲ್ಲ, ನಿರ್ದಿಷ್ಟ ರಾಜಕೀಯ ಪಕ್ಷದ ವಕ್ತಾರಿಕೆ ನಡೆಸುವಷ್ಟು ಶರಣಾಗತಿಯ ಮನಸ್ಥಿತಿಯೂ ಇದೆ. ಇಂಥ ಸ್ಥಿತಿಯಲ್ಲಿ,
ಪತ್ರಕರ್ತನೋರ್ವ ಕಾರ್ಪೋರೇಟ್ ಸಂಸ್ಥೆಯ ವಿರುದ್ಧ ಮಾತಾಡುವುದು ಸುಲಭ ಅಲ್ಲ. ನ್ಯಾಶನಲ್ ಹೆರಾಲ್ಡ್ ಪತ್ರಿಕೆಯ ಸಂಪಾದಕ ಝಫರ್ ಅಗಾ ಮತ್ತು ಪತ್ರಕರ್ತ ವಿಶ್ವದೀಪಕ್‍ರು 5000 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆಯನ್ನು ಇವತ್ತು ಎದುರಿಸುತ್ತಿದ್ದರೆ ಅದಕ್ಕೆ ರಫೇಲ್ ಒಪ್ಪಂದದ ಬಗ್ಗೆ ಅವರು ಪತ್ರಿಕೆಯಲ್ಲಿ ವ್ಯಕ್ತ ಪಡಿಸಿರುವ ಅಭಿಪ್ರಾಯಗಳೇ ಕಾರಣ. ದ ಸಿಟಿಝನ್ ವೆಬ್‍ಸೈಟ್‍ನ ಸಂಪಾದಕಿ ಸೀಮಾ ಮುಸ್ತಫಾ 7 ಸಾವಿರ ಕೋಟಿ ರೂ., ಡಿಎನ್‍ಎ ಪತ್ರಿಕೆಯ ಅತೀಕ್ ಶೇಖ್ 2000 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆಯನ್ನು ಎದುರಿಸುತ್ತಿದ್ದಾರೆ. ಎನ್‍ಡಿಟಿವಿಯ ಸ್ಥಾಪಕ ಪ್ರಣಯ್ ರಾಯ್, ದ ಟ್ರಿಬ್ಯೂನ್‍ನ ಸಂಪಾದಕ ರಾಜೇಶ್ ರಾಮಚಂದ್ರನ್, ಫಿನಾನ್ಶಿಯಲ್ ಟೈಮ್ಸ್ ನ ಮುಂಬೈ ವರದಿಗಾರ ಸಿಮನ್ ಚುಂಡಿಯಂಥ ಹಲವು ಪತ್ರಕರ್ತರು ರಿಲಯನ್ಸ್ ದಾಖಲಿಸಿರುವ ಕೋಟಿಗಟ್ಟಲೆ ಮಾನನಷ್ಟು ಮೊಕದ್ದಮೆ ಯನ್ನು ಎದುರಿಸುತ್ತಿದ್ದಾರೆ. ನಿಜ,
ಬರೆಯುವುದು ಅಷ್ಟು ಸುಲಭ ಅಲ್ಲ.