Tuesday, November 27, 2018

ಬ್ರಿಟನಿ, ಸುಡಾನಿ ಮತ್ತು ಪೈಗಂಬರ್


    
 ವಾರಗಳ ಹಿಂದೆ ನಾನು ಇನ್ನಿಬ್ಬರು ಗೆಳೆಯರ ಜೊತೆ ಮಾತುಕತೆಯಲ್ಲಿ ತೊಡಗಿದ್ದೆ. ಮಕ್ಕಳ ಶಿಕ್ಷಣ ನಮ್ಮ ಮಾತುಕತೆಯ ಮುಖ್ಯ  ವಿಷಯವಾಗಿತ್ತು. ಸ್ಥಳೀಯವಾಗಿ ಇರುವ ಶಾಲೆಗಳಲ್ಲಿ ಯಾವುದು ಉತ್ತಮ, ಯಾವುದು ಮಧ್ಯಮ, ಯಾವುದು ಅಧಮ ಎಂಬುದೆಲ್ಲ  ಮಾತಿನ ನಡುವೆ ಬಂದು ಹೋಗುತ್ತಿತ್ತು. ಒಂದು ಸಂದರ್ಭದಲ್ಲಿ ಓರ್ವ ಗೆಳೆಯ- ಆ ಶಾಲೆಗಳ ಮಧ್ಯೆ ಸುಡಾನಿ ಹಾಗೂ ಬ್ರಿಟನಿನಷ್ಟು  ವ್ಯತ್ಯಾಸ ಇದೆ ಎಂದು ಹೇಳಿದ. ತಕ್ಷಣ ಇನ್ನೋರ್ವ ಗೆಳೆಯ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ. ನಿನ್ನ ಉದಾಹರಣೆ ಜನಾಂಗೀಯವಾದದಿಂದ  ಕೂಡಿದೆ ಎಂದು ಮುಲಾಜಿ ಲ್ಲದೇ ಹೇಳಿದ. ಸುಡಾನಿ ಕಪ್ಪು. ಬ್ರಿಟನಿ ಬಿಳಿ. ವ್ಯತ್ಯಾಸವನ್ನು ಹೇಳುವುದಕ್ಕೆ ಮೈ ಚರ್ಮವನ್ನು  ಉದಾಹರಣೆಯಾಗಿ ಕೊಡುವುದು ಜನಾಂಗೀಯ ನಿಂದನೆಯಾಗುತ್ತದೆ ಎಂಬುದು ಆತನ ಆಕ್ಷೇಪ. ಗೆಳೆಯ ಕ್ಷಮೆ ಯಾಚಿಸಿದ ಮತ್ತು  ಸುಡಾನಿ ಮತ್ತು ಬ್ರಿಟನಿ ಎಂಬುದರ ಬದಲು ಹಗಲು ಮತ್ತು ರಾತ್ರಿಯಷ್ಟೇ ವ್ಯತ್ಯಾಸ ಇದೆ ಎಂದು ಸರಿಪಡಿಸಿದ. ಅಂದಹಾಗೆ,
ಸುಡಾನಿ ಮತ್ತು ಬ್ರಿಟನಿ ಎಂಬ ಹೋಲಿಕೆಯಲ್ಲಿ ಬಾಹ್ಯನೋಟಕ್ಕೆ ಅಂತಹ ಆಕ್ಷೇಪಾರ್ಹವಾದುದೇನೂ ಇಲ್ಲ. ಕಪ್ಪನ್ನು ಕಪ್ಪು ಎನ್ನದೇ ಬಿಳಿ  ಅನ್ನಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲೂ ಇರಬಹುದು. ಬಿಳುಪನ್ನು ಬಿಳಿ ಅನ್ನದೇ ಇನ್ನೇನನ್ನಬೇಕು ಎಂಬ ಪ್ರಶ್ನೆಯೂ ನಿಮ್ಮಲ್ಲಿದ್ದೀತು.  ನಿಜವಾಗಿ, ಕಪ್ಪನ್ನು ಕಪ್ಪು ಅನ್ನುವುದಕ್ಕೂ ಜನಾಂಗೀಯ ಗುರುತಾಗಿರುವ ಕಪ್ಪನ್ನು ಕಪ್ಪಾಗಿ ಉದಾಹರಿಸುವುದಕ್ಕೂ ವ್ಯತ್ಯಾಸ ಇದೆ. ಜಗಳ  ಮಾಡುತ್ತಿರುವ ಇಬ್ಬರು ವ್ಯಕ್ತಿಗಳು ಪರಸ್ಪರ ಬೈಯುವುದಕ್ಕೂ ಓರ್ವ ಇನ್ನೋರ್ವನನ್ನು ‘ನೀನು ದಲಿತ’ ಎಂದು ಉಲ್ಲೇಖಿಸಿ ಬೈಯುವುದಕ್ಕೂ  ವ್ಯತ್ಯಾಸ ಇದೆ. ದಲಿತ ಅನ್ನುವ ಪದ ಜನಾಂಗೀಯವಾದುದು. ಆ ಗುರುತನ್ನು ಎತ್ತಿ ಹೇಳಿ ಬೈಯುವು ದೆಂದರೆ ನೀನು ‘ಅಧಮ  ಕುಲದವನು’ ಎಂದು ಸಾರಿದಂತೆ. ಇದು ಮನುಷ್ಯನಿಗೆ ಮಾಡುವ ಬಲುದೊಡ್ಡ ಅವಮಾನ. ಮನುಷ್ಯ ಹುಟ್ಟಿನಿಂದ ಉತ್ತಮ ಮತ್ತು  ಅಧಮನಾಗಲು ಸಾಧ್ಯವಿಲ್ಲ. ಹುಟ್ಟು ವಾಗ ಎಲ್ಲರೂ ಉತ್ತಮರೇ. ಮೈಬಣ್ಣ, ಭಾಷೆ, ಆಕಾರ, ಗಾತ್ರ, ಕೆಲಸ ಇತ್ಯಾದಿಗಳು ಯಾರನ್ನೂ  ಉತ್ತಮರೋ ಅಧಮರೋ ಆಗಿ ಮಾರ್ಪಡಿಸಲು ಸಾಧ್ಯವೂ ಇಲ್ಲ.
ದಲಿತರು, ಬುಡಕಟ್ಟು ಜನರು ಮತ್ತು ಆದಿವಾಸಿಗಳು ನಗರ ಪ್ರದೇಶದ ಜನರಿಗೆ ಹೋಲಿಸಿದರೆ ಬಣ್ಣ, ಆಕಾರದಲ್ಲಿ ಭಿನ್ನ. ಈ ವ್ಯತ್ಯಾಸ ಸಹಜವಾದುದು. ಆದರೆ ಈ ಸಹಜ ಗುರುತನ್ನೇ ಜನಾಂಗೀಯ ಗುರುತಾಗಿಸಿ ಅಸಹಜಗೊಳಿಸಿದಾಗ ಉತ್ತಮ ಮತ್ತು ಅಧಮ ಎಂಬ ವಿಭಜನೆ ನಡೆಯುತ್ತದೆ. ಗೆಳೆಯ ಉಲ್ಲೇಖಿಸಿದ ಬ್ರಿಟನಿ-ಸುಡಾನಿ ಉದಾಹರಣೆಯಲ್ಲಿ ಬ್ರಿಟನಿ ಉತ್ತಮರ ಸಂಕೇತವಾಗಿತ್ತು. ಸುಡಾನಿ ಎಂಬುದು  ಅಧಮರ ಸಂಕೇತವಾಗಿತ್ತು. ಯಾಕೆ ಸುಡಾನಿ ಅಧಮರ ಸಂಕೇತವಾಗಬೇಕು? ಬ್ರಿಟನಿ ಯಾಕೆ ಉತ್ತಮರ ಸಂಕೇತವಾಗಬೇಕು? ಗೆಳೆಯ  ಪ್ರಶ್ನಿಸಿದ್ದು ಈ ಬಗೆಯ ವಿಭಜನೆಯನ್ನೇ. ನಿಜವಾಗಿ, ಈ ಪ್ರಶ್ನೆ ಈ ಜಗತ್ತಿಗೆ ಪ್ರವಾದಿ ಮುಹಮ್ಮದ್‍ರ ಬಹುದೊಡ್ಡ ಕೊಡುಗೆಯೂ ಹೌದು.
1. ಧಾರ್ಮಿಕ ಸ್ವಾತಂತ್ರ್ಯ
2. ಜನಾಂಗೀಯ ಅಥವಾ ಜಾತಿ ಸಮಾನತೆ
3. ಶಿಕ್ಷಣ
4. ಮಹಿಳಾ ಹಕ್ಕು
5. ನ್ಯಾಯ
ನಿಜವಾಗಿ, ಓರ್ವ ವ್ಯಕ್ತಿಯ ಯಶಸ್ಸು ಮತ್ತು ಅಪ ಯಶಸ್ಸನ್ನು ಈ ಮೇಲಿನ 5 ವಿಷಯಗಳು ನಿರ್ಧರಿಸುತ್ತವೆ. ಈ ವಿಷಯಗಳನ್ನು ವ್ಯಕ್ತಿಗಳು  ಹೇಗೆ ನಿರ್ವಹಿಸಿದ್ದಾರೆ ಮತ್ತು ಯಾವ ಧೋರಣೆ ತಾಳಿದ್ದಾರೆ ಎಂಬುದನ್ನು ಅವಲಂಬಿಸಿ ಅವರು ಯಶಸ್ವಿಯೋ ವಿಫಲರೋ ಎಂಬುದನ್ನು  ನಿರ್ಧರಿಸ ಲಾಗುತ್ತದೆ. ಪೈಗಂಬರ್ ಯಶಸ್ವಿ ಸುಧಾರಕರಾಗಿ ನಮ್ಮೆದುರು ನಿಲ್ಲುವುದು ಇಲ್ಲೇ.  ಅವರು ಈ 5 ವಿಷಯಗಳನ್ನು ಸವಾ ಲಾಗಿ  ಸ್ವೀಕರಿಸಿದರು ಮತ್ತು ಸಮಾಜ ಅವರನ್ನು ಅಪ್ಪಿಕೊಳ್ಳುವಂತಹ ಸುಧಾರಣೆಯನ್ನು ತಂದರು. ಎಲ್ಲಿಯ ವರೆಗೆಂದರೆ,
ಪರಮ ವಿರೋಧಿಗಳಾಗಿ ಗುರುತಿಸಿಕೊಂಡಿದ್ದ ಮತ್ತು ಅವ ರೊಂದಿಗೆ ದೀರ್ಘಕಾಲ ವಿರೋಧದೊಂದಿಗೇ ಬದುಕಿದ್ದ ಇಕ್ರಿಮಾ ಮತ್ತು ಸುಹೈಲ್ ಎಂಬ ಉನ್ನತ ನಾಯಕರೂ ಪೈಗಂಬರ್‍ರನ್ನು ಒಪ್ಪಿಕೊಂಡರು. ಹಾಗೆ ಒಪ್ಪಿಕೊಳ್ಳುವುದಕ್ಕಿಂತ ಮೊದಲು ಅವರು ಪೈಗಂಬರ್‍ರನ್ನು  ಆಮೂಲಾಗ್ರವಾಗಿ ಪರಿಶೀಲಿಸಿದ್ದರು. ಅವರ ಧೋರಣೆ ಮತ್ತು ಕಾರ್ಯಕ್ರಮಗಳನ್ನು ಈ ಇಬ್ಬರು ನಾಯಕ ರಂತೆಯೇ ಮಕ್ಕಾ ಮತ್ತು ಮದಿ ೀನಾದ ಜನರು ಅತೀವ ಉಮೇದಿನಿಂದ ವೀಕ್ಷಿಸುತ್ತಿದ್ದರು. ಮನುಷ್ಯರು ವಸ್ತುಗಳಂತೆ ಸಂತೆಯಲ್ಲಿ ಮಾರಾಟವಾಗುವ ಸಂದರ್ಭದಲ್ಲಿ,  ಮರ್ಯಾದಾ ಹತ್ಯೆ ಮತ್ತು ಹೆಣ್ಣು ಶಿಶು ಹತ್ಯೆಗಳು ಸಹಜವಾಗಿರುವ ಸನ್ನಿವೇಶ ದಲ್ಲಿ, ಜನಾಂಗೀಯ ಕಲಹಗಳನ್ನು ಬ ದುಕಾಗಿಸಿಕೊಂಡಿರುವ ದಿನಗಳಲ್ಲಿ ಈ ಪೈಗಂಬರ್ ಏನು ಸುಧಾರಣೆ ಮಾಡುವರು ಅನ್ನುವುದು ಜನರ ಕುತೂಹಲವಾಗಿರುವುದರಲ್ಲಿ ಅಚ್ಚರಿ  ಏನಿಲ್ಲ. ಆ ಕುತೂಹಲಕ್ಕೆ ಪ್ರವಾದಿ ನೀಡಿದ ಉತ್ತರ ಅಮೋಘವಾಗಿತ್ತು.
ಅಬಿಸೀನಿಯಾದ ಬಿಲಾಲ್ ಮತ್ತು ಪರ್ಶಿಯಾದ ಸಲ್ಮಾನುಲ್ ಫಾರಿಸಿಯವರನ್ನು ಪೈಗಂಬರ್ ಅಪ್ಪಿಕೊಂಡರು. ಆಫ್ರಿಕಾ ಮೂಲದ ಗುಲಾಮ  ಬಿಲಾಲ್‍ರನ್ನು ಅಪ್ಪಿಕೊಳ್ಳುವುದು ಬಿಡಿ, ಮಾತಾಡಿಸುವುದೂ 7ನೇ ಶತಮಾನದಲ್ಲಿ ಸಾಧ್ಯವಿರಲಿಲ್ಲ. ಅಷ್ಟಕ್ಕೂ,
1960ರ ವರೆಗೆ ಅಮೇರಿಕನ್ ಸಮಾಜದಲ್ಲೇ ಜನಾಂಗೀಯ ವಿಭಜನೆ ತೀವ್ರವಾಗಿಯೇ ಇತ್ತು. ಜಾಗತಿಕ ಸಂತೆಯಲ್ಲಿ ಮಾರಾಟ ಕ್ಕಿದ್ದುದು  ಆಫ್ರಿಕನ್ ಮೂಲದ ಕರಿವರ್ಣೀಯರೇ ಆಗಿದ್ದರು. ಅರಬನಿಗೆ ಅರಬೇತರರಿಗಿಂತ ಯಾವ ಮೇಲ್ಮೆಯೂ ಇಲ್ಲ ಮತ್ತು ಕರಿಯನಿಗೆ ಬಿಳಿಯ ನಿಗಿಂತ ಯಾವ ಮೇಲ್ಮೆಯೂ ಇಲ್ಲ ಎಂದು ಪೈಗಂಬರ್ ಸಾರಿದ್ದು ಮಾತ್ರವಲ್ಲ, ಜಗತ್ತಿನ ಎಲ್ಲ ಮೂಲೆಗಳಿಗೂ ಈ ಸಂದೇಶವನ್ನು ಸಾರುವಂತೆ ತನ್ನ ಸಂಗಾತಿಗಳ ಮೇಲೆ ಒತ್ತಡ ಹೇರಿದರು. 7ನೇ ಶತಮಾನದಲ್ಲಿ ಈ ಬಗೆಯ ನಡೆ-ನುಡಿ ವಿಶೇಷವಾಗಿತ್ತು. ಅವರು ಮಹಿಳೆಯರ ಬಗ್ಗೆ ತಾಳಿದ ನಿಲುವುಗಳಂತೂ ಅವಿಸ್ಮರಣೀಯ. ಅವರು ಮಹಿಳೆಯನ್ನು bold, outspoken, intellectual,  autonomous ಆಗಿ ಪರಿವರ್ತಿಸುವಲ್ಲಿ ದೊಡ್ಡದೊಂದು ಪಾತ್ರವನ್ನು ನಿರ್ವಹಿಸಿದರು. ವೈವಾಹಿಕ ಮಾತು ಕತೆಯಲ್ಲಿ ಹೆಣ್ಣಿಗೆ ವಧುವಿನ  ಪಾತ್ರದ ಹೊರತು ಇನ್ನಾವ ಹಕ್ಕುಗಳೂ ಇಲ್ಲ ಎಂದು ನಂಬಿಕೊಂಡಿದ್ದ ಸಮಾಜಕ್ಕೆ ಹೆಣ್ಣನ್ನು ಬರೇ ವಧುವಿನ ಪಾತ್ರದಿಂದ ಹೊರತಂದದ್ದು  ಪೈಗಂಬರರೇ. ಮದುವೆ ಮಾತುಕತೆಗಿಂತ ಮೊದಲು ಹೆಣ್ಣಿನ ಸಮ್ಮತಿ ಅಗತ್ಯ ಮತ್ತು ಅದು ಅವಳ ಹಕ್ಕು ಎಂಬುದಾಗಿ ಅವರು ಸಾರಿದಾಗ  7ನೇ ಶತಮಾನ ಅದನ್ನು ಸಹಜವಾಗಿ ಸ್ವೀಕರಿಸಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಆವರೆಗೆ ಮಹಿಳಾ ಹಕ್ಕು ಅನ್ನುವುದು ಮನೆಯಿಂದ ಮನೆಗೆ  ಬೇರೆ ಬೇರೆಯದ್ದಾಗಿತ್ತು. ಯಾವ ಮನೆಯಲ್ಲಿ ಯಾವ ಪುರುಷ ಯಾವ ಹಕ್ಕು ಅನುಮತಿಸುತ್ತಾನೋ ಅದುವೇ ಆ ಮಹಿಳೆಯ ಹಕ್ಕು. ಆತ  ಹೆಣ್ಣು ಶಿಶುವಿಗೆ ಬದುಕುವ ಹಕ್ಕು ನೀಡಿದರೆ ಅದು ಆ ಮಗುವಿನ ಹಕ್ಕು. ಇಲ್ಲದಿದ್ದರೆ ಇಲ್ಲ. ಓರ್ವ ಹೆಣ್ಣು ಯಾರನ್ನು ಮದುವೆಯಾಗಬೇಕು ಎಂಬುದು ಅಪ್ಪನ ತೀರ್ಮಾನವನ್ನು ಅವಲಂಬಿಸಿತ್ತು. ಆಕೆ ವಧು ಮಾತ್ರ. ಪೈಗಂಬರರು 7ನೇ ಶತಮಾನದ ಈ ಅರಬ್ ಸಂಸ್ಕೃತಿಯಲ್ಲಿ ಸುಧಾರಣೆಯನ್ನು ತಂದರು. ಯಾರನ್ನು ವಿವಾಹವಾಗಬೇಕು ಮತ್ತು ಆಗಬಾರದು ಎಂಬುದನ್ನು ತೀರ್ಮಾನಿಸುವ ಹಕ್ಕು  ವಧುವಿನದ್ದು ಎಂದು ಸಾರಿದರು. ಹೆತ್ತವರ ಆಸ್ತಿಯಲ್ಲಿ ಮಹಿಳೆಗೂ ಹಕ್ಕಿದೆ ಎಂದರು. ಎಲ್ಲಿಯವರೆಗೆಂದರೆ,
ಆಕೆಯ ಒಪ್ಪಿಗೆ ಇಲ್ಲದೇ ಆ ಆಸ್ತಿಯನ್ನು ಆಕೆಯ ಗಂಡನೂ ಅನುಭವಿಸುವಂತಿಲ್ಲ ಎಂದು ಸಾರಿದರು. ಆಕೆಗೆ ವಿಚ್ಛೇದನದ ಹಕ್ಕನ್ನು  ದೊರಕಿಸಿಕೊಟ್ಟರು. ಹೆಣ್ಣು ಮಗುವನ್ನು ಸ್ವರ್ಗದ ಬಾಗಿಲು ಎಂದು ಕರೆದರು. ಒಂದು ರೀತಿಯಲ್ಲಿ, ಹೆಣ್ಣು ಎಂಬುದು ಗಂಡಿನ ಗುಲಾಮ  ಜೀವಿ ಮತ್ತು ವಸ್ತುರೂಪದ ಉತ್ಪನ್ನ ಎಂಬಲ್ಲಿಂದ ಹೆಣ್ಣು ಪ್ರತ್ಯೇಕ ವ್ಯಕ್ತಿತ್ವವಿರುವ ಗಂಡಿನಂಥದ್ದೇ  ಒಂದು ಜೀವಿ ಎಂಬುದಾಗಿ ಸಾರಲು  ಅವರಿಂದ ಸಾಧ್ಯವಾಯಿತು. ಅಂದಹಾಗೆ, 7ನೇ ಶತಮಾನದಲ್ಲಿ ನಡೆದ ಸುಧಾರಣೆ ಇದು ಎಂಬುದು ಇಲ್ಲಿ ಬಹುಮುಖ್ಯ ಅಂಶ. ಆ  ಕಾಲದಲ್ಲಿ ಹೀಗೆ ಸಾರುವುದು ಸುಲಭವಾಗಿರಲಿಲ್ಲ. ಹೆಣ್ಣಿಗೆ ಹಕ್ಕಿಲ್ಲ ಎಂದು ಬಲ ವಾಗಿ ನಂಬಿರುವ ಸಮಾಜದಲ್ಲಿ ಹೆಣ್ಣನ್ನು ಗಂಡಿನಿಂದ  ಪ್ರತ್ಯೇಕ ಗೊಳಿಸಿ, ಆಕೆಗೆ ವ್ಯಕ್ತಿತ್ವವೊಂದನ್ನು ನೀಡಿ, ಹೆಣ್ಣಿನ ಪಾದದಡಿ ಸ್ವರ್ಗವಿದೆ ಎಂಬ ವಿಶೇಷ ಗೌರವವನ್ನು ಕೊಟ್ಟು ಗಂಡಿಗಿಂತ ಎತ್ತರದ  ಸ್ಥಾನದಲ್ಲಿ ನಿಲ್ಲಿಸುವುದು ಸವಾಲಿನ ಕೆಲಸವಾಗಿತ್ತು.
ಗ್ರೀಕ್, ಪರ್ಶಿಯನ್, ರೋಮನ್ ನಾಗರಿಕತೆಗಳು ಮತ್ತು 7ರಿಂದ 8ನೇ ಶತಮಾನದೊಳಗಿನ ಇಸ್ಲಾಮೀ ನಾಗರಿಕತೆಯನ್ನು ಪರಿಶೀಲಿಸಿದರೆ  ಇಸ್ಲಾಮೀ ನಾಗರಿಕತೆ ವಿಶಿಷ್ಟವಾಗಿ ನಿಲ್ಲುತ್ತದೆ. ಜಗತ್ತಿನಲ್ಲಿ ಲಿಖಿತ ಸಂವಿಧಾನ ಮೊಟ್ಟಮೊದಲು ಜಾರಿಯಾದದ್ದು ಮದೀನಾದಲ್ಲಿ. ಆ ಸಂವಿಧಾನ  ಎಷ್ಟು ಸೆಕ್ಯುಲರ್ ಆಗಿತ್ತೆಂದರೆ, ಇವತ್ತಿನ ಸೆಕ್ಯುಲರ್ ರಾಷ್ಟ್ರಗಳೂ ಸೆಕ್ಯುಲರ್ ಮನಸ್ಸುಗಳೂ ಅಚ್ಚರಿಪಟ್ಟಾವು. ಅವುಗಳಲ್ಲಿ ನಾಲ್ಕು  ಹೀಗಿವೆ.
1. ನಾವೆಲ್ಲ ಒಂದೇ ಸಮುದಾಯ.
2. ಮುಸ್ಲಿಮರಿಗೆ ಅವರ ಧರ್ಮ, ಯಹೂದಿಯರಿಗೆ ಅವರ ಧರ್ಮ
3. ಯಾರಾದರೂ ಮದೀನಾದ ಮೇಲೆ ಆಕ್ರಮಣ ನಡೆಸಿದರೆ ನಾವೆಲ್ಲ ಒಟ್ಟಾಗಿ ಹೋರಾಡುವೆವು.
4. ಓರ್ವ ಯಹೂದಿ ವ್ಯಕ್ತಿ ಮುಸ್ಲಿಮನನ್ನು ಆಕ್ರಮಿಸಿದರೆ  ಅದಕ್ಕೆ ಯಹೂದಿ ಸಮುದಾಯ ಹೊಣೆಯಾಗುವುದಿಲ್ಲ. ಆಕ್ರಮಿಸಿ ದವನೇ  ಹೊಣೆ.
ಇದು 7ನೇ ಶತಮಾನದಲ್ಲಿ ರಚಿಸಲಾದ ಸಂವಿಧಾನ. ಮದೀನಾದ ಯಹೂದಿ ಸಮುದಾಯ ಜೊತೆ ಸೇರಿ ರಚಿಸಲಾದ ಈ ಸಂವಿಧಾನದ  ಒಟ್ಟು ಅಂಶಗಳನ್ನು ಪರಿಶೀಲಿಸಿದರೆ ಪೈಗಂಬರ್ ರನ್ನು ತಾತ್ವಿಕವಾಗಿ ವಿರೋಧಿಸುವವರೂ ಮರು ಅವಲೋಕನಕ್ಕೆ ಇಳಿದಾರು. ಆ ಕಾಲದಲ್ಲಿ  ಇಸ್ಲಾಮಿನ ನಿಜವಾಹಕರು ಪೈಗಂಬರರೇ. ಇಸ್ಲಾಮಿನ ಬಗ್ಗೆ ಅತ್ಯಂತ ಹೆಚ್ಚು ಗೊತ್ತಿರುವವರೂ ಅವರೇ. ಆದರೆ ಈ ಕಾಲದ ಕೆಲವು  ರಾಷ್ಟ್ರಗಳಿಗೂ ರಚಿಸಲು ಸಾಧ್ಯವಿಲ್ಲದ ಮತ್ತು ರಚಿಸಿದರೂ ಪ್ರಾಯೋಗಿಕವಾಗಿ ಜಾರಿಗೊಳಿಸಲು ಯಶಸ್ವಿಯಾಗದ ಸಂವಿಧಾನವನ್ನು ಅವರು  ಆ ಕಾಲದಲ್ಲಿ ರಚಿಸಿದರು. ಮಾತ್ರವಲ್ಲ, ಪ್ರಾಯೋಗಿಕವಾಗಿ ಅನುಷ್ಠಾನಕ್ಕೂ ತಂದರು. ಪೈಗಂಬರರಿಂದ ಮದೀನಾದ ಮಂದಿ ಎಷ್ಟು ಪ್ರಭಾವಿತರಾದರೆಂದರೆ, ಮಕ್ಕಾದಿಂದ ವಲಸೆ ಬಂದ ಅವರ ಅನುಯಾಯಿಗಳನ್ನು ತಮ್ಮ ಸಹೋದರರು ಎಂದು ಕರೆದರು. ತಮ್ಮ ಆಸ್ತಿ,  ವ್ಯಾಪಾರ, ಮನೆ ಎಲ್ಲದರಲ್ಲೂ ಪಾಲು ನೀಡಿದರು. ಮದೀನಾದವರ ಈ ಗುಣವನ್ನು ಮೆಚ್ಚಿಕೊಂಡ ಪ್ರವಾದಿಯವರು ಅವರನ್ನು  ನೆರವಾಗುವವರು (ಅನ್ಸಾರರು) ಎಂದು ಹೊಗಳಿದರು. 21ನೇ ಶತಮಾನದ ಅತ್ಯಂತ ಮುಂದುವರಿದ ಈ ಕಾಲದಲ್ಲೂ ವಲಸಿಗರನ್ನು  ಸ್ವೀಕರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ವಲಸಿಗರನ್ನು ತಡೆಯಲೆಂದು ಅಮೇರಿಕವು ಮೆಕ್ಸಿಕೋದ ಗಡಿಯಲ್ಲಿ ಗೋಡೆ ಕಟ್ಟುತ್ತಿದೆ. ಹಲವು ರಾಷ್ಟ್ರಗಳು ಗಡಿ ಮುಚ್ಚಿ ಕೂತಿವೆ. ಭಾರತ, ಅರಬ್-ಯುರೋಪಿಯನ್  ರಾಷ್ಟ್ರಗಳೆಲ್ಲವೂ ವಲಸಿಗರನ್ನು ಅಕ್ರಮಿಗಳೆಂದು ಹೆಸರಿಸಿ ಗಡಿಯಿಂದಲೇ ಆಚೆ ತಳ್ಳುತ್ತಿದೆ. ವಲಸಿಗರು ತಮ್ಮ ಆಹಾರ, ಉದ್ಯೋಗ, ನೆಮ್ಮದಿಗೆ  ಭಂಗ ತರುವರೆಂಬ ಭಯ ವಲಸಿಗರಲ್ಲದವರಲ್ಲಿ ಕಾಣಿಸಿಕೊಳ್ಳುತ್ತಿದೆ. 7ನೇ ಶತಮಾನದ ಪೈಗಂಬರ್ ಭಿನ್ನವಾಗಿ ಕಾಣಿಸುವುದು ಇಂಥ  ಕಾರಣಗಳಿಗಾಗಿಯೇ.
ಪೈಗಂಬರ್ ರು ಇಸ್ಲಾಮಿನ ಅತಿದೊಡ್ಡ ಶ್ರದ್ಧಾಳುವಾಗಿದ್ದರು. ಅವರಷ್ಟು ನಮಾಝ ನಿರ್ವಹಿಸಿದವರು, ಉಪವಾಸ ಆಚರಿಸಿ ದವರು,  ಪ್ರಾರ್ಥಿಸಿದವರು ಇನ್ನಾರೂ ಇಲ್ಲ. ಕುರ್‍ಆನ್ ಅವತೀರ್ಣ ಗೊಂಡದ್ದೂ ಅವರಿಗೇ. ಅದೇ ಪೈಗಂಬರ್ ನಜ್ರಾನ್‍ನಿಂದ ಬಂದ ಕ್ರೈಸ್ತ ನಿಯೋಗವೊಂದಕ್ಕೆ ಮದೀನಾದ ಮಸ್ಜಿದುನ್ನಬಿಯಲ್ಲಿ ಪ್ರಾರ್ಥಿಸಲು ಅವಕಾಶವನ್ನು ಮಾಡಿಕೊಟ್ಟರು. ಧರ್ಮದಲ್ಲಿ ಬಲಾತ್ಕಾರವಿಲ್ಲ (2:256)  ಎಂದು ಸಾರಿದುದಷ್ಟೇ ಅಲ್ಲ, ಇತರರ ಆರಾಧ್ಯರನ್ನು ತೆಗಳಬಾರದು (6:108) ಎಂದೂ ಕಲಿಸಿದರು. ಅವರು ಯುದ್ಧದಲ್ಲಿ ಭಾಗಿಯಾಗಿದ್ದಾರೆ  ಎಂಬುದು ನಿಜ. ಅವರಿದ್ದುದು 7ನೇ ಶತಮಾನದಲ್ಲಿ. ಆ ಶತಮಾನಕ್ಕೆ ಶಾಂತಿಯ ಪರಿಚಯವಿದ್ದುದು ಬಹಳ ಕಡಿಮೆ. ಆದರೂ ಅವರೆಂದೂ ಧಾರ್ಮಿಕ ಸ್ವಾತಂತ್ರ್ಯ  ಮತ್ತು ಸ್ವರಕ್ಷಣೆಯ ಕಾರಣಕ್ಕಲ್ಲದೇ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡಿಲ್ಲ. ಈ ಎರಡು ವಿಷಯಗಳಿಗೆ ಅಡ್ಡಿಪಡಿಸದವರನ್ನು ಅವರು ಮುಟ್ಟಿಯೂ  ಇಲ್ಲ. ಯುದ್ಧದ ಸಂದರ್ಭದಲ್ಲೂ ವೃದ್ಧರು, ಸಾಧು-ಸನ್ಯಾಸಿಗಳು, ಮಹಿಳೆಯರು ಮತ್ತು ಮಕ್ಕಳಿಗೆ ಯಾವ ತೊಂದರೆಯೂ ಆಗಬಾರ  ದೆಂದು ಅವರು ಆದೇಶಿಸಿದ್ದರು. ಯುದ್ಧದಲ್ಲಿ ಸೆರೆ ಸಿಕ್ಕ ಕೈದಿಗಳನ್ನು ಅವರು ಅತಿಥಿಗಳಂತೆ ಗೌರವಿಸಿದರು. ಗೆದ್ದವರು ಏನನ್ನು ಉಣ್ಣು ತ್ತಾರೋ ಮತ್ತು ಉಡುತ್ತಾರೋ ಅವನ್ನೇ ಕೈದಿಗಳಿಗೂ ನೀಡಬೇಕೆಂದು ಅವರು ಸಾರಿದರು. ಅಷ್ಟಕ್ಕೂ,
ಬಡ್ಡಿ, ಮದ್ಯ, ಜೂಜು, ಲಂಚ, ವೇಶ್ಯಾವಾಟಿಕೆ ಇತ್ಯಾದಿಗಳ ವರಮಾನವಿಲ್ಲದೇ ಆಡಳಿತ ನಡೆಸಲು ಸಾಧ್ಯವಿಲ್ಲವೆಂದು ನಂಬಿರುವ ಇವತ್ತಿನ  ಸರಕಾರಗಳಿಗೆ ಭಿನ್ನವಾಗಿ ಇವೆಲ್ಲಕ್ಕೂ ನಿಷೇಧ ಹೇರಿಯೂ ಯಶಸ್ವಿ ಆಡಳಿತ ನಡೆಸಲು ಸಾಧ್ಯ ಎಂಬುದನ್ನು ಅವರು ಸಾಧಿಸಿ ತೋರಿಸಿದರು.  ಮದ್ಯದ ಆದಾಯವಿಲ್ಲದೇ ಮತ್ತು ಬಡ್ಡಿಯ ವ್ಯವಸ್ಥೆಯಿಲ್ಲದೇ ಕಲ್ಯಾಣ ರಾಷ್ಟ್ರದ ಕನಸು ಕಂಡರು. ಅದಕ್ಕೆ ಭದ್ರ ಅಡಿಗಲ್ಲು ಹಾಕಿದರು.  ಅನಕ್ಷರಸ್ಥರಿಗೆ ಅಕ್ಷರ ಕಲಿಸುವುದನ್ನೇ ಕೈದಿಗಳಿಗೆ ಶಿಕ್ಷೆಯಾಗಿ ಘೋಷಿಸಿದರು. ಇತಿಹಾಸದಲ್ಲಿ ಕೈದಿಗಳಿಗೆ ಈ ಬಗೆಯ ಶಿಕ್ಷೆಯನ್ನು ವಿಧಿಸಿದವರು ಅವರೊಬ್ಬರೇ. ಆದ್ದರಿಂದಲೇ, ಅವರೋರ್ವ ಸುಧಾರಕ. ಸಮಗ್ರ ಸುಧಾರಕ. ಅಂದಹಾಗೆ,
ಬ್ರಿಟನಿ-ಸುಡಾನಿ ಮಾತಿಗೆ ಸಿಟ್ಟಾದ ಗೆಳೆಯನೂ ಇವರ ಅನುಯಾಯಿಯೇ. ಏ ಕೆ ಕುಕ್ಕಿಲ

No comments:

Post a Comment