Tuesday, September 25, 2012

ಆ ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರ ಬಗ್ಗೆ ಬರೆಯಬೇಕೆನಿಸಿತು..

ಅರಬ್ ಮರುಭೂಮಿ. ಕಲ್ಬ್ ಅನ್ನುವ ಬುಡಕಟ್ಟಿಗೆ ಸೇರಿದ ಒಂದು ತಂಡವು ಯಾತ್ರೆಯಲ್ಲಿತ್ತು. ಒಂದು ಕಡೆ ಹಠಾತ್ತಾಗಿ ಆ ತಂಡದ ಮೇಲೆ ದಾಳಿಯಾಗುತ್ತದೆ. ಯಾತ್ರಾ ತಂಡ ಗಲಿಬಿಲಿಗೊಳ್ಳುತ್ತದೆ. ಸರಕುಗಳು, ಮಕ್ಕಳು, ಒಂಟೆ.. ಎಲ್ಲವೂ ಚೆಲ್ಲಾಪಿಲ್ಲಿಯಾಗುತ್ತದೆ. ದರೋಡೆಕೋರರು ಸರಕುಗಳ ಜೊತೆ ಮಕ್ಕಳನ್ನೂ ಅಪಹರಿಸಿಕೊಂಡು ಹೋಗುತ್ತಾರೆ. ಇಷ್ಟಕ್ಕೂ, 6ನೇ ಶತಮಾನದಲ್ಲಿ ಮಾರಾಟವಾಗುತ್ತಿದ್ದುದು ಸರಕುಗಳಷ್ಟೇ ಅಲ್ಲವಲ್ಲ. ಬಟಾಟೆ, ಟೊಮೆಟೊ, ಗೋಧಿ, ಖರ್ಜೂರದಂತೆ ಮನುಷ್ಯರೂ ಸರಕೇ ಆಗಿದ್ದರಲ್ಲವೇ? ಸಂತೆಯಲ್ಲಿ ಇತರ ಸರಕುಗಳಂತೆ ಮನುಷ್ಯರನ್ನೂ ಮಾರಾಟಕ್ಕಿಡುವುದು, ಚೌಕಾಶಿ ಮಾಡುವುದೆಲ್ಲ ನಡೆಯುತ್ತಿತ್ತಲ್ಲವೇ? ಆಫ್ರಿಕಾದ ಎಷ್ಟು ಕಪ್ಪು ಮನುಷ್ಯರು ಈ ಗೋಲದ ಸುತ್ತ ಮಾರಾಟವಾಗಿಲ್ಲ? ಉಳ್ಳವರ ಖರೀದಿಗೆ ಒಳಗಾಗಿ ಬದುಕಿಡೀ ಗುಲಾಮರಂತೆ ಜೀವನ ಸಾಗಿಸಿದವರು ಎಷ್ಟಿಲ್ಲ? ಹಾಗೆ ದರೋಡೆಕೋರರಿಂದ ಅಪಹೃತಗೊಂಡ ಬಾಲಕರಲ್ಲಿ 8 ವರ್ಷದ ಝೈದ್ ಎಂಬ ಹುಡುಗನೂ ಇದ್ದ. ದರೋಡೆಕೋರರು ಉಕಾಝ್ ಎಂಬ ಪೇಟೆಯ ಸಂತೆಯಲ್ಲಿ ಝೈದ್‍ನನ್ನು ಮಾರಾಟಕ್ಕಿಡುತ್ತಾರೆ. ಹಕೀಮ್ ಅನ್ನುವ ವ್ಯಕ್ತಿಗೆ ಬಾಲಕ ಝೈದ್ ಯಾಕೋ ಇಷ್ಟವಾಗುತ್ತಾರೆ. ಝೈದನ್ನು ಖರೀದಿಸಿ ತನ್ನ ಸೋದರತ್ತೆ ಖದೀಜರಿಗೆ ಹಕೀಮ್ ಕೊಟ್ಟು ಬಿಡುತ್ತಾರೆ. ಅಂದಹಾಗೆ, ಗುಲಾಮರ ಸ್ಥಾನಮಾನ, ಹಕ್ಕು, ಸ್ವಾತಂತ್ರ್ಯಗಳೆಲ್ಲ ಏನು, ಎಷ್ಟು ಎಂಬುದು ಈ ಜಗತ್ತಿನ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯ ಅನ್ನುವ ಪದ ಮತ್ತು ಅದು ಕೊಡುವ ಅನುಭೂತಿ ಅವರ ಪಾಲಿಗೆ ಶಾಶ್ವತವಾಗಿ ನಿಷೇಧಕ್ಕೆ ಒಳಪಟ್ಟಿರುತ್ತದೆ. ಅವರಿಗೆ ಯಾವ ಹಕ್ಕೂ ಇರುವುದಿಲ್ಲ. ಗೌರವವೂ ಇರುವುದಿಲ್ಲ. ಒಡೆಯ ಏನು ಹೇಳುತ್ತಾನೋ ಅವನ್ನು ಮಾಡುತ್ತಾ ಹಾಕಿದ ಊಟ, ಕೊಟ್ಟ ಏಟನ್ನು ಮನಸಾರೆ ಸಹಿಸುತ್ತಾ ಬದುಕಬೇಕು. ಗುಲಾಮ ಆದ ಮೇಲೆ ಕುಟುಂಬ ಸಂಬಂಧ ಕಡಿದಿರುತ್ತದೆ. ತನ್ನ ಹೆತ್ತವರು ಯಾರು ಎಂಬುದು ಮಕ್ಕಳಿಗೆ ಗೊತ್ತೂ ಇರುವುದಿಲ್ಲ. ಗೊತ್ತಿದ್ದರೂ ಒಡೆಯ ಅನುಮತಿಸಿದರೆ ಮಾತ್ರ ಬಿಡುಗಡೆ ಸಿಗುತ್ತದೆ. ಹಾಗಂತ, ಗುಲಾಮ ಪದ್ಧತಿಯು ಮನುಷ್ಯತ್ವಕ್ಕೆ ವಿರೋಧ ಎಂದು ತೀರ್ಪು ನೀಡುವುದಕ್ಕೆ, ಆವತ್ತಿನ ನಾಗರಿಕತೆ ಅಷ್ಟು ಬೆಳೆದಿದ್ದರಲ್ಲವೇ?
             ಖದೀಜರ ಸೇವೆ ಮಾಡುತ್ತಾ ಬಾಲಕ ಝೈದ್ ಬೆಳೆಯುತ್ತಾನೆ. ಈ ಮಧ್ಯೆ 40ರ ಹರೆಯದ ಖದೀಜ ಮತ್ತು 25ರ ಮುಹಮ್ಮದ್‍ರ ಮಧ್ಯೆ ವಿವಾಹವಾಗುತ್ತದೆ. ಮುಹಮ್ಮದ್‍ರಿಗೆ ಬಾಲಕ ತುಂಬಾ ಇಷ್ಟವಾಗುತ್ತಾನೆ. ಗುಲಾಮ ಎಂಬ ಅಂತರ ಇಟ್ಟುಕೊಳ್ಳದೇ ಝೈದ್‍ನೊಂದಿಗೆ ಮುಹಮ್ಮದ್ ಬೆರೆಯುತ್ತಾರೆ. ತಂದೆ ಮತ್ತು ಮಗನಂಥ  ನಿರ್ಮಲ ಸಂಬಂಧವೊಂದು ಅವರ ಮಧ್ಯೆ ಏರ್ಪಡುತ್ತದೆ. ಮುಹಮ್ಮದ್ ಮತ್ತು ಖದೀಜರ ಗುಣಗಳು ಝೈದ್‍ನ ಮೇಲೆ ಎಷ್ಟಂಶ ಪ್ರಭಾವ ಬೀರುತ್ತದೆಂದರೆ, ಪರಿಸರದ ಮಂದಿ ಝೈದ್‍ನ ಗುಣನಡತೆಯನ್ನು ಕಂಡು ಬಾಯಿಗೆ ಬೆರಳಿಡುತ್ತಾರೆ. ಹೀಗಿರುತ್ತಾ ಝೈದ್‍ಗೆ 16 ವರ್ಷ ತುಂಬುತ್ತದೆ. ಹಜ್ಜ್ ನ ಕಾಲ. ಬೇರೆ ಬೇರೆ ಪ್ರದೇಶಗಳಿಂದ ಮಕ್ಕಾಕ್ಕೆ ಜನರು ಹಜ್ಜ್ ನಿರ್ವಹಣೆಗಾಗಿ ಬರುತ್ತಾರೆ. ಕಲ್ಬ್ ಬುಡಕಟ್ಟಿನಿಂದಲೂ ಕೆಲವರು ಹಜ್ಜ್ ಗೆ ಬರುತ್ತಾರೆ. ಅವರಿಗೆ ಝೈದ್ ಸಿಗುತ್ತಾರೆ. ಝೈದ್‍ನ ತಂದೆ ಹಾರಿಸ್ ಮತ್ತು ಚಿಕ್ಕಪ್ಪ ಕಅಬ್‍ರಿಗೆ ಝೈದ್‍ರ ಬಗ್ಗೆ ಸುದ್ದಿ ಮುಟ್ಟಿಸುತ್ತಾರೆ. ತಕ್ಷಣ ಅವರಿಬ್ಬರೂ ಮಕ್ಕಾಕ್ಕೆ ಓಡಿ ಬರುತ್ತಾರೆ. ಮುಹಮ್ಮದ್‍ರನ್ನು ಸಂಪರ್ಕಿಸುತ್ತಾರೆ...
         ನನ್ನ ಮಗನನ್ನು ನನಗೆ ಮರಳಿಸುವುದಾದರೆ ನೀವು ಕೇಳಿದಷ್ಟು ಪರಿಹಾರ ಧನವನ್ನು ನೀಡುತ್ತೇನೆ ಅನ್ನುತ್ತಾರೆ ತಂದೆ. ಮುಹಮ್ಮದ್ ಅವರನ್ನು ಕುಳ್ಳಿರಿಸಿ ಸತ್ಕರಿಸುತ್ತಾರೆ.
         ನಿಮ್ಮ ಪರಿಹಾರ ಧನ ನನಗೆ ಬೇಕಿಲ್ಲ. ಝೈದ್ ನಿಮ್ಮ ಜೊತೆ ಬರುವುದಾದರೆ ಮನಸಾರೆ ಕಳುಹಿಸಿ ಕೊಡುವೆ. ಆತನಿಗೆ ನಿಮ್ಮ ಜೊತೆ ಬರುವ ಸರ್ವ ಸ್ವಾತಂತ್ರ್ಯವೂ ಇದೆ ಅನ್ನುತ್ತಾರೆ ಮುಹಮ್ಮದ್. ಝೈದ್ ಬರುತ್ತಾನೆ. ತನ್ನ ತಂದೆ ಮತ್ತು ಚಿಕ್ಕಪ್ಪರನ್ನು ಗುರುತಿಸುತ್ತಾನೆ. ಅವರ ಬೇಡಿಕೆಯನ್ನು ಮುಹಮ್ಮದ್‍ರು ಝೈದ್‍ನ ಮುಂದಿಡುತ್ತಾರೆ. ಝೈದ್‍ನ ಮುಖ ಸಣ್ಣದಾಗುತ್ತದೆ. ಆತ ಒಮ್ಮೆ ತನ್ನ ಒಡೆಯ ಮುಹಮ್ಮದ್‍ರನ್ನು ಮತ್ತು ಇನ್ನೊಮ್ಮೆ ತನ್ನ ತಂದೆಯ ಮುಖವನ್ನು ನೋಡುತ್ತಾನೆ.
        ಇಲ್ಲ, ನಾನು ನಿಮ್ಮನ್ನು (ಮುಹಮ್ಮದ್) ಬಿಟ್ಟು ಇನ್ನಾರ ಜೊತೆಯೂ ಇರಲಾರೆ.
         ಅಪ್ಪ: ಗುಲಾಮತನಕ್ಕಿಂತ ಸ್ವಾತಂತ್ರ್ಯ ಮೇಲಲ್ಲವೇ ಮಗು?
        ಜೈದ್: ಇಲ್ಲಪ್ಪ. ಅವರು ನನ್ನ ಒಡೆಯರಲ್ಲ, ತಂದೆ. ಅವರಲ್ಲಿ ಕಂಡಿರುವ ಗುಣಗಳನ್ನು ನಾನು ಜಗತ್ತಿನ ಇನ್ನಾರಲ್ಲೂ ಕಂಡಿಲ್ಲ. ಈ ಲೋಕದಲ್ಲಿ ಅವರನ್ನು ಬಿಟ್ಟು ಇನ್ನಾರ ಜೊತೆಯೂ ನಾನು ಇರಲಾರೆ.
       ಆದರೂ, ಇದೇ ಮುಹಮ್ಮದ್‍ರನ್ನು(ಸ) ಸಲಿಂಗ ಕಾಮಿ, ಮಕ್ಕಳ ಪೀಡಕ.. ಎಂದು ಇನ್ನೊಸೆನ್ಸ್ ಆಫ್  ಮುಸ್ಲಿಮ್ಸ್ (ಮುಸ್ಲಿಮರ ಮುಗ್ಧತನ) ಎಂಬ ತನ್ನ ಸಿನಿಮಾದಲ್ಲಿ ಸ್ಯಾಮ್ ಬೇಸಿಲಿ ಚಿತ್ರಿಸುತ್ತಾರಲ್ಲ, ಏನೆನ್ನಬೇಕು?
1. ಖದೀಜ - ಪ್ರಾಯ 40, ವಿಧವೆ
2. ಸೌಧ - ಪ್ರಾಯ 50, ವಿಧವೆ
3. ಝೈನಬ್ - ಪ್ರಾಯ 50, ವಿಧವೆ
4. ಉಮ್ಮುಹಬೀಬ - ಪ್ರಾಯ 36, ವಿಧವೆ
5. ಮೈಮೂನ - ಪ್ರಾಯ 27, ವಿಧವೆ
6. ಉಮ್ಮು ಸಲ್ಮಾ - ಪ್ರಾಯ 29, ವಿಧವೆ
7. ಹಫ್ಸಾ  - ಪ್ರಾಯ 21, ವಿಧವೆ
8. ಜುವೈರಿಯಾ - ಪ್ರಾಯ 20, ವಿಧವೆ
9. ಝೈನಬ್ - ಪ್ರಾಯ 38, ವಿಚ್ಛೇದಿತೆ
10. ಆಯಿಶಾ- ಕನ್ಯೆ
11. ಸಫಿಯ್ಯ- ಗುಲಾಮತನದಿಂದ ವಿಮೋಚನೆಗೊಂಡ ಮಹಿಳೆ
...ಹೀಗೆ ಹನ್ನೊಂದು ಮಂದಿಯನ್ನು ಮದುವೆಯಾದ ಪ್ರವಾದಿಯವರನ್ನು(ಸ) ಎದುರಿಟ್ಟುಕೊಂಡು, ಅದಕ್ಕೆ ವಿಚಿತ್ರ ಮತ್ತು ಕೀಳುಮಟ್ಟದ ವ್ಯಾಖ್ಯಾನವನ್ನು ಕೊಡುವ ಎಷ್ಟು ಮಂದಿಗೆ, 6ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಅರಿವಿದೆ? ಬುಡಕಟ್ಟುಗಳು ಮತ್ತು ಅವುಗಳೊಳಗಿನ ಜಗಳಗಳ ಬಗ್ಗೆ ಗೊತ್ತಿದೆ? ಕೇವಲ ಕೆಕ್ಕರಿಸಿ ನೋಡಿದ್ದಕ್ಕೆ, ಬೈಗುಳಕ್ಕೆ, ಸಾಲದ ವಿಷಯದಲ್ಲಿ, ಗುಲಾಮರ ಕುರಿತಂತೆ ವರ್ಷಗಟ್ಟಲೆ ಈ ಬುಡಕಟ್ಟುಗಳ ಮಧ್ಯೆ ಯುದ್ಧವಾಗುತ್ತಿತ್ತು ಎಂಬುದನ್ನು ಟೀಕಾಕಾರರು ಒಮ್ಮೆಯಾದರೂ ಉಲ್ಲೇಖಿಸುವುದಿದೆಯೇ? ನಿಜವಾಗಿ, ಪ್ರವಾದಿಯವರು(ಸ) 11 ಮಂದಿ ಪತ್ನಿಯರನ್ನು ಹೊಂದಲು ಕಾರಣವೇ ಈ ಬುಡಕಟ್ಟುಗಳು. ಅವರೊಳಗಿನ ಜನಾಂಗೀಯ ಮೇಲ್ಮೆಗಳು. ಖದೀಜ, ಅಸದ್ ಬುಡಕಟ್ಟಿಗೆ ಸೇರಿದ್ದರೆ, ಉಮ್ಮು ಸಲ್ಮಾ, ಮಕ್ಝೂಮ್ ಬುಡಕಟ್ಟಿಗೆ ಸೇರಿದ್ದರು. ಸಫಿಯ್ಯರದ್ದು ನಝೀರ್ ಬುಡಕಟ್ಟು. ಸೌಧ, ಆಮಿರ್ ಬುಡ ಕಟ್ಟಿನವರಾದರೆ, ಉಮ್ಮು ಹಬೀಬ, ಶಮ್ಸ್ ಬುಡಕಟ್ಟಿನವರಾಗಿದ್ದರು. ಹೀಗೆ ಪ್ರವಾದಿಯವರ ಎಲ್ಲ ಪತ್ನಿಯರೂ ಭಿನ್ನ ಭಿನ್ನ ಬುಡಕಟ್ಟಿಗೆ ಸೇರಿದ್ದರು. ಆದರೆ, ಯಾವಾಗ ಪ್ರವಾದಿಯವರೊಂದಿಗೆ ಈ ಬುಡಕಟ್ಟುಗಳು ವೈವಾಹಿಕ ಸಂಬಂಧವನ್ನು ಬೆಳೆಸಿಕೊಂಡಿತೋ ಅಂದಿನಿಂದಲೇ ಅವುಗಳ ಮಧ್ಯೆ ಜನಾಂಗೀಯ ಮೇಲ್ಮೆಗಳು ಸಡಿಲವಾಗತೊಡಗಿದುವು. ಪ್ರವಾದಿಯವರ ಪತ್ನಿಯರು ಒಟ್ಟಾಗಿರುವಂತೆ ಈ ಬುಡಕಟ್ಟುಗಳೂ ಜೊತೆಯಾಗಿ ಬಾಳುವುದಕ್ಕೆ ಸಿದ್ಧವಾದುವು. ಇವುಗಳ ಜೊತೆಗೇ, ಪವಿತ್ರ ಕುರ್‍ಆನಿನ ವಚನಗಳ ಮೂಲಕ ಶ್ರೇಣೀಕೃತ ಸಾಮಾಜಿಕ ಪರಿಕಲ್ಪನೆಗೆ ಪ್ರವಾದಿ ಮುಹಮ್ಮದ್‍ರು(ಸ) ಪ್ರಹಾರ ಕೊಡುತ್ತಲೇ ಇದ್ದರು. ಅವರು 11 ಮದುವೆಯಾದುದರ ದೊಡ್ಡ ಲಾಭ ಏನೆಂದರೆ, ಬುಡಕಟ್ಟುಗಳಲ್ಲಿ ಹಂಚಿಹೋಗಿದ್ದ ಮನುಷ್ಯರೆಲ್ಲ ಬುಡುಕಟ್ಟು ತೊರೆದು ಮನುಷ್ಯರಾದದ್ದು. ಕರಿಯ, ಬಿಳಿಯ, ಕಂದು ಬಣ್ಣದವ, ಅರಬಿ, ಅರಬೇತರ, ಧನಿಕ, ಬಡವ, ಕ್ಷೌರಿಕ, ಕಮ್ಮಾರ, ರೈತ, ವ್ಯಾಪಾರಿ.. ಎಲ್ಲರೂ ಒಂದೇ ಸಭೆಯಲ್ಲಿ, ಒಂದೇ ವೇದಿಕೆಯಲ್ಲಿ, ಒಟ್ಟಿಗೇ ಕಲೆತು, ಬೆರೆಯುವಂತಾದದ್ದು. ಭುಜಕ್ಕೆ ಭುಜ ತಾಗಿಸಿ, ನಮಾಝ್‍ಗೆ ನಿಲ್ಲುವಂತಾದದ್ದು. ಒಂದು ಕಾಲದಲ್ಲಿ ಅಸ್ಪೃಶ್ಯರಾಗಿದ್ದ ನೀಗ್ರೋ ಬಿಲಾಲ್, ಪ್ರಪ್ರಥಮ ಅದಾನ್ (ಬಾಂಗ್) ಕೊಡುವಷ್ಟು ಎತ್ತರದ ಮನುಷ್ಯರಾದದ್ದು. ಅಂದಹಾಗೆ, ಪ್ರವಾದಿಯವರ ಪತ್ನಿಯರ ಸಂಖ್ಯೆಯನ್ನು ಲೆಕ್ಕ ಹಾಕುವ ಮಂದಿಯೆಲ್ಲಾ, ಮದುವೆಯ ಸಂದರ್ಭದಲ್ಲಿ ಆ ಪತ್ನಿಯರ ಪ್ರಾಯವೆಷ್ಟಾಗಿತ್ತು ಎಂಬುದನ್ನು ಹೇಳುತ್ತಾರಾ? ಹನ್ನೊಂದು ಮಹಿಳೆಯರೂ ಟೀನ್ ಏಜ್‍ನವರೇ ಆಗಿರಬಹುದು ಎಂದು ಓದುಗರು ನಂಬುವಷ್ಟು ರಸವತ್ತಾಗಿ ಮುಹಮ್ಮದ್‍ರ(ಸ) ಬಹು ಪತ್ನಿತ್ವವನ್ನು ವಿವರಿಸುವವರು ಎಷ್ಟು ಮಂದಿಯಿಲ್ಲ? ಪ್ರವಾದಿಯವರು(ಸ) ಮದುವೆಯಾದದ್ದು ಮಾತ್ರವಲ್ಲ, ಅವರು ಪತ್ನಿಯರೊಂದಿಗೆ ಹೇಗೆ ನಡಕೊಂಡಿದ್ದರು ಅನ್ನುವುದೂ ಐತಿಹಾಸಿಕವಾಗಿ ದಾಖಲಾಗಿದೆ. ಅವರನ್ನು ವಿಮರ್ಶಿಸುವವರೆಲ್ಲ ಯಾಕೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಕನ್ಯೆಯಾಗಿದ್ದ ಆಯಿಶಾರಿಂದ(ರ) ಹಿಡಿದು 50ರ ಹರೆಯದ ಸೌಧಾರ ವರೆಗೆ ಎಲ್ಲರೂ ಪ್ರವಾದಿಯವರ ಬಗ್ಗೆ ಮಾತಾಡಿದ್ದಾರೆ. ಅವರೆಲ್ಲ ಪ್ರವಾದಿಯವರ ಬಗ್ಗೆ ಒಂದೇ ಒಂದು ಟೀಕೆಯ ನುಡಿಯನ್ನಾದರೂ ಹೊರಡಿಸದಿರುವುದಕ್ಕೆ ಕಾರಣವೇನು? ಪ್ರವಾದಿಯವರನ್ನು ಆಯಿಶಾ ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಪ್ರಮಾಣದಲ್ಲಿ ಸೌಧಾರೂ ಪ್ರೀತಿಸುತ್ತಿದ್ದರು. ಪ್ರವಾದಿಯವರೂ ಅಷ್ಟೇ, ಆಯಿಷಾರಷ್ಟೇ ಝೈನಬ್‍ರನ್ನೂ ಪ್ರೀತಿಸುತ್ತಿದ್ದರು..
        ಇಷ್ಟಿದ್ದೂ, ಪ್ರವಾದಿ ಮುಹಮ್ಮದ್‍ರನ್ನು ಹೆಣ್ಣುಬಾಕ ಅಂತ ಸ್ಯಾಮ್ ಬಾಸಿಲಿ ತನ್ನ ಇನ್ನೋಸೆನ್ಸ್‍ನಲ್ಲಿ ಹೇಳುತ್ತಾರಲ್ಲ..
       ಅಂದಹಾಗೆ, ಬಡ್ಡಿಮುಕ್ತ, ಮದ್ಯಮುಕ್ತ, ವರದಕ್ಷಿಣೆ ರಹಿತ, ನ್ಯಾಯಪರ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಳ್ಳಿ. ಕಳೆದ 64 ವರ್ಷಗಳಿಂದ ಈ ದೇಶದಲ್ಲಿ ಈ ಬಗ್ಗೆ ಪ್ರಯತ್ನಗಳಾಗುತ್ತಿದ್ದರೂ, ಸಾಧ್ಯವಾಗಿಲ್ಲ. ಬೇಸಿಲಿಯ ಅಮೇರಿಕದಲ್ಲಿ, ರುಶ್ದಿಯ ಬ್ರಿಟನ್‍ನಲ್ಲಿ, ಜಿಲ್ಲ್ಯಾಂಡ್ಸ್ ಪೋಸ್ಟನ್‍ನ ಡೆನ್ಮಾರ್ಕ್‍ನಲ್ಲಿ, ಸರ್ಕೋಝಿಯ ಫ್ರಾನ್ಸ್ ನಲ್ಲಿ ಅಥವಾ  ಪ್ರವಾದಿಯವರನ್ನು ಟೀಕಿಸುವ ಜಗತ್ತಿನ ಇನ್ನಾವುದೇ ರಾಷ್ಟ್ರದಲ್ಲೂ ಇದು ಸಾಧ್ಯವಾಗಿಲ್ಲ. ಆದ್ದರಿಂದಲೇ ಕೇವಲ 23 ವರ್ಷಗಳೊಳಗೆ ಪವಿತ್ರ ಕುರ್‍ಆನ್ ಮತ್ತು ತನ್ನ ಮಾದರಿಯೋಗ್ಯ ಬದುಕಿನ ಮೂಲಕ ಇಂಥದ್ದೊಂದು ಸಮಾಜವನ್ನು ಯಶಸ್ವಿಯಾಗಿ ಕಟ್ಟಿದ ಮುಹಮ್ಮದ್(ಸ) ಶ್ರೇಷ್ಠರು ಅನ್ನಿಸುವುದು. ತನ್ನದೇ ಆದ ಒಂದೇ ಒಂದು ಪೋಟೋ ಇಲ್ಲದೆಯೂ ಜಾಗತಿಕವಾಗಿ ಅವರು ಕೋಟ್ಯಂತರ ಅನುಯಾಯಿಗಳನ್ನು ಪಡಕೊಂಡರಲ್ಲ, ಅದಕ್ಕೆ ಏನೆನ್ನಬೇಕು? ಅದೇನು ಇನ್ನೊಸೆನ್ಸಾ? ಈ ಅನುಯಾಯಿಗಳೆಲ್ಲ ವೈಚಾರಿಕವಾಗಿ ಬೆಳೆದಿಲ್ಲ ಅನ್ನುವುದಾ? ಅಲ್ಲ, ಈ ಜಗತ್ತಿನಲ್ಲಿ ನೂರರಷ್ಟೂ ಬೆಂಬಲಿಗರಿಲ್ಲದ, ತಮ್ಮ ಕೃತಿಯಿಂದಲೋ ನಾಟಕ, ಸಿನಿಮಾ, ಟೀಕೆಗಳಿಂದಲೋ ಒಂದು ಸಣ್ಣ ಹಳ್ಳಿಯಲ್ಲೂ ಕ್ರಾಂತಿಯನ್ನು ತರಲಾಗದ ಇವರದ್ದು, ವೈಚಾರಿಕ ದಿವಾಳಿತನ ಅನ್ನುವುದಾ? ಇನ್ನೋಸೆನ್ಸ್ (ಮುಗ್ಧತನ) ಯಾರದು, ಯಾವುದು?
      'ಇನ್ನೊಸೆನ್ಸ್ ಆಫ್  ಮುಸ್ಲಿಮ್ಸ್' ಎಂಬ ಸಿನಿಮಾದ ತುಣುಕನ್ನು ವೀಕ್ಷಿಸಿದ ಮೇಲೆ ಆ ಸಿನಿಮಾದ ಬಗ್ಗೆ ಬರೆಯುವುದಕ್ಕಿಂತ ಪ್ರವಾದಿ ಮುಹಮ್ಮದ್‍ರ(ಸ) ಬಗ್ಗೆ ಬರೆಯುವುದೇ ಹೆಚ್ಚು ಸೂಕ್ತ ಅನಿಸಿತು..

Tuesday, September 18, 2012

ಅಂಥ ಜಪಾನ್ ಗೇ ಬೇಡವಾಗಿರುವಾಗ, ಅನುಮಾನಿಸುವುದರಲ್ಲಿ ತಪ್ಪೇನಿದೆ?

‘ಅಬ್ಲೇಝ್, ದಿ ಸ್ಟೋರಿ ಆಫ್ ದಿ ಹೀರೋಸ್ ಆಂಡ್  ವಿಕ್ಟಿಮ್ಸ್ ಆಫ್ ದಿ ಚೆರ್ನೊಬಿಲ್’ ಎಂಬ ಕೃತಿ ಅಥವಾ ‘ಚರ್ನೋಬಿಲ್: ದಿ ಹಿಡನ್ ಲೆಗೆಸಿ’ ಎಂಬ ಕೃತಿಯನ್ನು ಭಾಗಶಃ ಓದಿದವರು ಕೂಡ, ತಮಿಳುನಾಡಿನ ಕುಡಂಕುಳಂನಲ್ಲಿ ಇನ್ನೂ ಕಾರ್ಯಾಚರಿಸದ ಅಣುಸ್ಥಾವರವನ್ನು ಬಿಡಿ, ಈ ದೇಶದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಎಲ್ಲ ಅಣುಸ್ಥಾವರಗಳನ್ನೂ ಮುಚ್ಚುವಂತೆ ಪ್ರತಿಭಟಿಸಿಯಾರು ..
      1986 ಎಪ್ರಿಲ್ 24ರಂದು ರಷ್ಯಾದ ಚರ್ನೋಬಿಲ್‍ನಲ್ಲಿ ನಡೆದ ಅಣು ಅವಘಡದ 25 ವರ್ಷಗಳ ಬಳಿಕ 2011ರ ಮಾರ್ಚ್‍ ನಲ್ಲಿ  ಜಪಾನ್‍ನ ಫುಕುಶಿಮಾದಲ್ಲಿ ಅಣು ಅವಘಡ ನಡೆಯುತ್ತದೆ. ಚರ್ನೋಬಿಲ್‍ನಲ್ಲಿ 93 ಸಾವಿರ ಮಂದಿ ಸಾವಿಗೀಡಾಗುತ್ತಾರೆ. 4 ಲಕ್ಷಕ್ಕಿಂತ ಅಧಿಕ ಮಂದಿ ಸ್ಥಳಾಂತರಗೊಳ್ಳುತ್ತಾರೆ. ಅವಘಡ ನಡೆದ ಕೂಡಲೇ ರಷ್ಯನ್ ಸರಕಾರ ಮಾಡಿದ ಮೊಟ್ಟ ಮೊದಲ ಕೆಲಸ ಏನೆಂದರೆ, ಸುದ್ದಿಯನ್ನು ಗುಟ್ಟಾಗಿಡುವುದು. ಅಣುಸ್ಥಾವರದಲ್ಲಿ ಸ್ಫೋಟ ಉಂಟಾಗಿದೆ ಎಂಬ ಸುದ್ದಿ ತಿಳಿದ ತಕ್ಷಣ ಸೇನೆ ಓಡೋಡಿ ಬರುತ್ತದೆ. ಕನಿಷ್ಠ  ಮಟ್ಟದ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳದೇ ಕರ್ನಲ್ ಯುರೊಶಕ್ ನೇರ ರಿಯಾಕ್ಟರ್ ಬಳಿಗೆ ಹೋಗುತ್ತಾರೆ. ವಿಕಿರಣವು ತಮ್ಮ ದೇಹದ ಮೇಲೆ ಯಾವ ಬಗೆಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಸೈನಿಕರಿಗೂ ಸರಿಯಾದ ತಿಳುವಳಿಕೆ ಇರುವುದಿಲ್ಲ. ಅಷ್ಟೇ ಅಲ್ಲ, ಅಣುಸ್ಥಾವರದಲ್ಲಾದ ಬೆಂಕಿಯನ್ನು ಅಗ್ನಿ ಶಾಮಕ ದಳದ ಸಿಬಂದಿ ಶಾರ್ಟ್ ಸರ್ಕ್ಯೂಟ್ ಎಂದೇ ನಂಬಿರುತ್ತಾರೆ. ಪರಸ್ಪರ ಜೋಕ್ ಮಾಡುತ್ತಾ ರಿಯಾಕ್ಟರ್‍ಗೆ ತಗುಲಿದ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಾರೆ. ಅಗ್ನಿಶಾಮಕ ದಳದ ಮುಖ್ಯಸ್ಥ ವ್ಲಾದಿಮೀರ್ ಪ್ರಾವಿಕ್‍ರಂತೂ ಖುದ್ದು ಅಲ್ಲೇ ನಿಂತು ಜೊತೆಗಾರರಿಗೆ ನಿರ್ದೇಶನ ನೀಡುತ್ತಾರೆ. ಆದ್ದರಿಂದಲೇ ಅಣು ಅವಘಡ ನಡೆದು 13 ದಿನಗಳೊಳಗೇ ವಿಕಿರಣದ ಪ್ರಭಾವದಿಂದಾಗಿ ಅವರು ಸಾವಿಗೀಡಾಗುತ್ತಾರೆ. ರಕ್ಷಣಾತ್ಮಕ ಉಡುಪು ಧರಿಸದೆಯೇ ರಿಯಾಕ್ಟರುಗಳಿಗೆ ನೀರು ಹರಿಸುತ್ತಾ ಬೆಳಗ್ಗಿನವರೆಗೆ ಅಣುಸ್ಥಾವರದಲ್ಲೇ ಉಳಿದ ಮುಖ್ಯ ಎಂಜಿನಿಯರ್ ಅಕಿಮೋವ್, 3 ವಾರಗಳೊಳಗೇ ಕೊನೆಯುಸಿರೆಳೆಯುತ್ತಾರೆ..
       ಒಂದು ವೇಳೆ, ಚರ್ನೋಬಿಲ್‍ನಿಂದ ಸಾವಿರ ಕಿಲೋಮೀಟರ್ ದೂರದ ಸ್ವೀಡನ್ನಿನ ಫೋರ್ಸ್  ಮಾರ್ಕ್ ಅಣುಸ್ಥಾವರವು ಅವಘಡದ ವಾಸನೆಯನ್ನು ಹಿಡಿಯದೇ ಇರುತ್ತಿದ್ದರೆ, ರಶ್ಯವು ಅಣು ಅವಘಡವನ್ನು ಒಪ್ಪಿಕೊಳ್ಳುವ ಸಾಧ್ಯತೆಯೇ ಇರಲಿಲ್ಲ..
          ಆಗ ಅಮೇರಿಕಕ್ಕೂ ರಶ್ಯಕ್ಕೂ ತೀವ್ರತರದ ಪೈಪೋಟಿಯಿತ್ತು. ಈ ಅವಘಡದ ಸುದ್ದಿ ಅಮೇರಿಕಕ್ಕೆ ತಲುಪಿಬಿಟ್ಟರೆ ತನಗೆ ಮುಖಭಂಗವಾಗುತ್ತದೆ ಎಂದೇ ರಶ್ಯ ಅಂದುಕೊಂಡಿತ್ತು. ಆದ್ದರಿಂದಲೇ ಚರ್ನೋಬಿಲ್‍ಗೆ ಹೋಗಿ ಪೋಟೋ ತೆಗೆಯುವುದಕ್ಕೋ ಶೂಟಿಂಗ್ ಮಾಡುವುದಕ್ಕೋ ಅದು ಅನುಮತಿಯನ್ನೇ ನೀಡಲಿಲ್ಲ. ಅದು ಜನರನ್ನು ಹೇಗೆ ಸ್ಥಳಾಂತರಿಸಿತು, ಯಾವ ರೀತಿಯಲ್ಲಿ ಜನರ ಮೇಲೆ ರೇಡಿಯೇಶನ್ ಬಾಧಿಸಿತು ಎಂಬ ಮಾಹಿತಿಯನ್ನು ರಶ್ಯ ಬಿಟ್ಟು ಕೊಡಲೂ ಇಲ್ಲ. ಇಷ್ಟಕ್ಕೂ, ಚರ್ನೋಬಿಲ್ ಅವಘಡದ ಸಂತ್ರಸ್ತರನ್ನು ಎಷ್ಟು ಮಂದಿಗೆ ಭೇಟಿಯಾಗಲು ಸಾಧ್ಯವಾಗಿದೆ?  ಕೆಲವೊಂದು ಪೋಟೋಗಳು, ವೀಡಿಯೋಗಳು ಯೂಟ್ಯೂಬ್‍ನಲ್ಲಿ ಸಿಗಬಹುದಾದರೂ ರಶ್ಯದ ಅಧಿಕಾರಿಗಳು ಕಿತ್ತು ಕೊಂಡ ಕ್ಯಾಮರಾಗಳು, ವೀಡಿಯೋಗಳ ಲೆಕ್ಕ ಎಷ್ಟು ಮಂದಿಯಲ್ಲಿದೆ? ಮಸಿಯಂತೆ ಕಪ್ಪಾದವರು, ಕಣ್ಣು ಗುಳಿ ಬಿದ್ದವರು, ಅಂಗವಿಕಲಗೊಂಡವರು.. ಇವರೆಲ್ಲರ ಮಾಹಿತಿಯನ್ನು ರಶ್ಯ ತಡೆದಿರಿಸಿಲ್ಲವೇ? ರಶ್ಯ ಎಂದಷ್ಟೇ ಅಲ್ಲ, 2011ರ ಫುಕುಶಿಮಾ ಅವಘಡದ ಸಂದರ್ಭದಲ್ಲೂ ಜಪಾನ್ ಒಂದು ಬಗೆಯ ಮುಚ್ಚುಮರೆಯೊಂದಿಗೇ ವರ್ತಿಸಿತು. ಫುಕುಶಿಮಾದಿಂದ 350 ಕಿಲೋಮೀಟರ್ ದೂರ ಇರುವ ಟೋಕಿಯೋದ ವರೆಗೆ ವಿಕಿರಣ ಬಾಧಿಸಲಿದೆ ಎಂಬುದು ಗೊತ್ತಿದ್ದೂ ಅದನ್ನು ಬಹಿರಂಗಪಡಿಸಲಿಲ್ಲ. (ಇಂಟರ್ ನ್ಯಾಶನಲ್ ಹೆರಾಲ್ಡ್ ಟ್ರಿಬ್ಯೂನ್, 2012 ಫೆ. 29) ನಿಜವಾಗಿ, ಯಾವ ರಾಷ್ಟ್ರವೂ ಅಣು ಅವಘಡವನ್ನು ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದೇ ಇಲ್ಲ. 1987 ಮೇ 4ರಂದು ತಮಿಳುನಾಡಿನ ಕಲ್ಪಕ್ಕಮ್ ಅಣುಸ್ಥಾವರದಲ್ಲಿ ಅವಘಡವಾಗಿ 2 ವರ್ಷ ಸ್ಥಾವರವನ್ನೇ ಮುಚ್ಚಲಾಯಿತು. 1989 ಸೆ. 10ರಂದು ಮಹಾರಾಷ್ಟ್ರದ ತಾರಾಪುರ್ ಅಣುಸ್ಥಾವರದಲ್ಲಿ ರೇಡಿಯೇಶನ್ ಸೋರಿಕೆಯಾಯಿತಲ್ಲದೇ ಅದನ್ನು ಸರಿಪಡಿಸಲು ಒಂದು ವರ್ಷ ತಗುಲಿತು. 1992 ಮೇ 13ರಂದು ಮತ್ತೆ ತಾರಾಪುರ್ ಸ್ಥಾವರದಲ್ಲಿ ರೇಡಿಯೇಶನ್ ಸೋರಿಕೆಯಾಯಿತು. ಉತ್ತರ ಪ್ರದೇಶದ ಬುಲಂಧ್‍ಶೇರ್‍ನಲ್ಲಿರುವ ನರೋರಾ ಅಣುಸ್ಥಾವರದಲ್ಲಿ 1993, ಮಾರ್ಚ್ 31ರಂದು ರೇಡಿಯೇಶನ್ ಸೋರಿಕೆಯಾಗಿ ಕಲುಷಿತ ನೀರು ರಾಣಾ ಪ್ರತಾಪ್ ನದಿಗೆ ಹರಿದು ವಿವಾದ ಸೃಷ್ಟಿಯಾಯಿತು. ಅಷ್ಟಕ್ಕೂ, 1986ರ ಚರ್ನೋಬಿಲ್ ಅವಘಡಕ್ಕೂ 2011ರ ಫುಕುಶಿಮಾ ಅವಘಡಕ್ಕೂ ನಡುವೆ 25 ವರ್ಷಗಳ ಅಂತರವಿದೆ. ತಂತ್ರಜ್ಞಾನದಲ್ಲಿ ಮುಂದಿದ್ದೂ ಚರ್ನೋಬಿಲ್ ದುರಂತವನ್ನು ಕಂಡಿದ್ದೂ ಫುಕುಶಿಮಾ ಅವಘಡವನ್ನು ತಡೆಯಲು ಜಪಾನ್‍ಗೆ ಸಾಧ್ಯವಾಗಲಿಲ್ಲವೇಕೆ?  ಚರ್ನೋಬಿಲ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿ ವಿಕಿರಣ ಸೋರಿಕೆಯಾಗಿದ್ದರೆ, ಭೂಕಂಪ ಉಂಟಾಗಿ ಸುನಾಮಿ ಅಲೆಗಳು ಎದ್ದು ಫುಕುಶಿಮಾ ಅಣುಸ್ಥಾವರಕ್ಕೆ ಹಾನಿಯಾಗಿತ್ತು. ಇದು ನೀಡುವ ಸೂಚನೆಯೇನು? ಪ್ರಾಕೃತಿಕ ಮತ್ತು ತಾಂತ್ರಿಕ ಎರಡೂ ಕಾರಣಗಳಿಂದಲೂ ಅಣು ಅವಘಡಗಳಾಗಬಹುದು ಎಂಬುದನ್ನೇ ಅಲ್ಲವೇ? ಫುಕುಶಿಮಾದಲ್ಲಿ ಅಣು ಸ್ಥಾವರ ಸ್ಥಾಪಿಸುವಾಗ ಜಪಾನ್‍ನ ಮುಂದೆ ಚರ್ನೋಬಿಲ್ ದುರಂತದ ವಿವರಗಳು ಮಾತ್ರ ಇದ್ದುವು. ಅಂಥದ್ದು ಮತ್ತೆ ಘಟಿಸದಿರಲು ಏನೆಲ್ಲಾ ಮುಂಜಾಗರೂಕತೆಯನ್ನು ಮಾಡಿಕೊಳ್ಳಬೇಕೋ ಅವನ್ನೆಲ್ಲಾ ಅದು ಮಾಡಿಸಿ ಕೊಂಡಿತ್ತು. ಆದರೆ ಭೂಕಂಪ ಮತ್ತು ಸುನಾಮಿಯಿಂದ ಜಗತ್ತಿನ ಯಾವ ಅಣು ಸ್ಥಾವರದಲ್ಲೂ ಅವಘಡ ಆಗಿರಲಿಲ್ಲವಲ್ಲ. ಆದ್ದರಿಂದಲೇ ಅದು ಆ ಬಗ್ಗೆ ನಿರ್ಲಕ್ಷ್ಯ ವಹಿಸಿತು. ಹೀಗಿರುವಾಗ ಸಮುದ್ರ ಬದಿಯಲ್ಲೇ ಇರುವ ತಮಿಳುನಾಡಿನ ಕುಡಂಕುಳಂ ಅಣುಸ್ಥಾವರದ ಸುರಕ್ಷಿತತೆಯ ಬಗ್ಗೆ ಅನುಮಾನಿಸುವುದನ್ನು ಹೇಗೆ ತಪ್ಪೂಂತ ಹೇಳುವುದು?  ಕುಡಂಕುಳಂನ ಅಣುಸ್ಥಾವರವು ಸುನಾಮಿ, ಭೂಕಂಪ, ಮತ್ತಿತರ ಆಘಾತಗಳನ್ನು ತಡೆದು ಕೊಳ್ಳುವಂತೆ ಸ್ಥಾಪಿಸಲಾಗಿದೆ ಎಂದೇ ಒಪ್ಪಿಕೊಳ್ಳೋಣ. ಆದರೆ ಎಂಥ ಭೂಕಂಪವನ್ನು? ಅದರ ಮಿತಿಯೇನು? ಸುನಾಮಿ ಎಂಬ ಪದವನ್ನು, ಅದು ಉಂಟು ಮಾಡುವ ಅನಾಹುತವನ್ನು ಜಗತ್ತಿನ ಕೋಟ್ಯಂತರ ಮಂದಿ ತಿಳಿದದ್ದೇ ಎರಡು ವರ್ಷಗಳ ಹಿಂದೆ. ಆ ವರೆಗೆ ಅಂಥದ್ದೊಂದು ಕಲ್ಪನೆಯೇ ಸಮಾಜದಲ್ಲಿ ಬಹುತೇಕ ಇದ್ದಿರಲಿಲ್ಲ. ಹೀಗಿರುವಾಗ ಸಮುದ್ರವು ನಾವು ನಿರೀಕ್ಷಿಸದೇ ಇರುವ ರೂಪದಲ್ಲಿ ದಿಢೀರ್ ಆಗಿ ಉನ್ಮಾದಗೊಂಡರೆ ಆಗ ಕುಡಂಕುಳಂನ ಗತಿಯೇನಾದೀತು?
       ಕುಡಂಕುಳಂನಲ್ಲಿ ರಶ್ಯದ ಸಹಕಾರದೊಂದಿಗೆ 2002ರಲ್ಲೇ ಅಣು ಸ್ಥಾವರ ನಿರ್ಮಾಣದ ಬಗ್ಗೆ ಚಟುವಟಿಕೆಗಳು ಪ್ರಾರಂಭವಾಗಿದ್ದರೂ ಅದರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳಾದದ್ದು ಫುಕುಶಿಮಾ ಅಣು ಅವಘಡದ ನಂತರವೇ. ಹಾಗಂತ ಎಲ್ಲರೂ ಅಣುಸ್ಥಾವರವನ್ನು ವಿರೋಧಿಸುತ್ತಿದ್ದಾರೆ ಎಂದೂ ಅಲ್ಲ..
        “..ರಾಜಸ್ತಾನದ ರಾವತ್‍ಬಾಟ್‍ನಲ್ಲಿರುವ ಅಣು ಸ್ಥಾವರದ ತೀರಾ ಸಮೀಪ 1994ರಿಂದ 99ರ ವರೆಗೆ  ನಾನು ವಾಸ  ಮಾಡಿದ್ದೇನೆ. ರಾವತ್‍ಬಾಟ್ ಅಣು ಸ್ಥಾವರವು ಅಲ್ಲಿನ ಚಂಬಲ್ ನದಿಯ ದಂಡೆಯಲ್ಲಿದೆ. ನಾನು ಗರ್ಭಿಣಿಯಾಗಿದ್ದಾಗಲೂ ಆ ಬಳಿಕವೂ ಅದೇ ಚಂಬಲ್ ನದಿಯಿಂದ ಸರಬರಾಜು ಮಾಡುವ ನಳ್ಳಿ ನೀರನ್ನು ಉಪಯೋಗಿಸಿದ್ದೇನೆ. ನಿಮಗೆ ಗೊತ್ತಿರಲಿ, ಅಣುಸ್ಥಾವರವನ್ನು ತಂಪು ಮಾಡಲು ಉಪಯೋಗಿಸುವ ನೀರನ್ನು ಬಳಿಕ ಅದೇ ನದಿಗೆ ಪಂಪ್ ಮಾಡಲಾಗುತ್ತದೆ. ನಾನು ನೀರನ್ನು ಉಪಯೋಗಿಸುವಾಗ ಬಿಸಿ ಮಾಡಿದ್ದೂ ಕಡಿಮೆ. ಆದರೆ ಈ ವರೆಗೆ ನನಗೇನೂ ಆಗಿಲ್ಲ. ನನ್ನ ವಿನಂತಿ ಏನೆಂದರೆ, ತಂತ್ರಜ್ಞಾನದಲ್ಲಿ ನಂಬಿಕೆ ಇಡಿ. ಇದೇ ಅಣುಸ್ಥಾವರದಲ್ಲಿ ಅನೇಕಾರು ಅಧಿಕಾರಿಗಳು, ಇನ್ನಿತರರು ಕೆಲಸ ಮಾಡುತ್ತಿಲ್ಲವೇ? ಇದರ ಆಸು-ಪಾಸಿನಲ್ಲೇ ಅವರ ಕುಟುಂಬ ವಾಸಿಸುತ್ತಿಲ್ಲವೇ? ವಿಕಿರಣಕ್ಕೆ ಮೊತ್ತಮೊದಲು ತುತ್ತಾಗ ಬೇಕಾದ ಅವರಿಗೇಕೆ ಈ ಬಗ್ಗೆ ಆತಂಕವಿಲ್ಲ.. ಎಂದೆಲ್ಲಾ 2012 ಮಾರ್ಚ್ 11ರ ದಿ ಹಿಂದೂ ದೈನಿಕದಲ್ಲಿ ಸೂಸಾನ್ ಡೇವಿಸ್ ಅನ್ನುವ ಪತ್ರಕರ್ತೆ ಪ್ರಶ್ನಿಸುತ್ತಾ ಹೋಗುತ್ತಾರೆ. ಚೆನ್ನೈ ಅಥವಾ ದೇಶದ ಇನ್ನಾವುದೇ ಬೃಹತ್ ನಗರಗಳಲ್ಲಿ ವಾಸಿಸುವುದಕ್ಕಿಂತ ಕುಡಂಕುಳಂ, ಕಲ್ಪಕ್ಕಮ್‍ನಂಥ ಅಣುಸ್ಥಾವರಗಳ ಪಕ್ಕ ಬದುಕುವುದೇ ಹೆಚ್ಚು ಉತ್ತಮ ಎಂದು ವಿಜ್ಞಾನಿ ರಾಹುಲ್ ಸಿದ್ಧಾರ್ಥನ್ (ದಿ ಹಿಂದೂ, 2012 ಸೆ. 14) ಬರೆಯುತ್ತಾರೆ.
ಆದರೆ..
ಅಣುಸ್ಥಾವರಗಳಿಗೆ ಇರುವುದು ಇದೊಂದೇ ಮುಖ ಅಲ್ಲವಲ್ಲ. ಜರ್ಮನಿಯ ಬೇಕರ್ ಮತ್ತು ಹಾಯೆಲ್‍ರ ತಂಡ 2007ರಲ್ಲಿ ಬ್ರಿಟನ್, ಕೆನಡ, ಫ್ರಾನ್ಸ್, ಅಮೇರಿಕ, ಜರ್ಮನಿ, ಜಪಾನ್, ಸ್ಪೈನ್.. ಮುಂತಾದ ರಾಷ್ಟ್ರಗಳಲ್ಲಿರುವ ಅಣುಸ್ಥಾವರಗಳ ಸುತ್ತ ಅಧ್ಯಯನ ನಡೆಸುತ್ತದೆ. ಅಣುಸ್ಥಾವರಗಳ ಪಕ್ಕ ಬದುಕುತ್ತಿರುವ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಹೆಚ್ಚಿರುವುದೂ ಪತ್ತೆಯಾಗುತ್ತದೆ. 2008ರಲ್ಲಿ ಸ್ಪಿಕ್ಸ್ ಮತ್ತು ತಂಡ ಜರ್ಮನಿಯ 16 ಅಣುಸ್ಥಾವರಗಳ ಸುತ್ತ ಬದುಕುತ್ತಿರುವವರನ್ನು ಕೇಂದ್ರೀಕರಿಸಿ ನಡೆಸಿದ ಅಧ್ಯಯನದಲ್ಲೂ ಮಕ್ಕಳಲ್ಲಿ ರಕ್ತದ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ಒಂದು ರೀತಿಯಲ್ಲಿ ಅಣುಸ್ಥಾವರದ ಪರ ಮತ್ತು ವಿರುದ್ಧ ಮಾತಾಡುವ ಪ್ರತಿಯೊಬ್ಬರಲ್ಲೂ ಇಂಥ ಪರ ಮತ್ತು ವಿರುದ್ಧವಾದ ತರ್ಕಗಳು ಇದ್ದೇ ಇವೆ. ಅಷ್ಟಕ್ಕೂ, ಅಣುಸ್ಥಾವರಗಳು ಅತ್ಯಂತ ಸುರಕ್ಷಿತ ಮತ್ತು ನೂರು ಶೇಕಡಾ ನಿರಪಯಕಾರಿ ಎಂದಾಗಿದ್ದರೆ 2040ರೊಳಗೆ ಅಣು ವಿದ್ಯುತ್‍ನಿಂದ ಸಂಪೂರ್ಣ ಮುಕ್ತವಾಗುವ ಘೋಷಣೆಯನ್ನು ಜಪಾನ್ ಮಾಡಿದ್ದೇಕೆ? (ದಿ ಹಿಂದೂ 2012 ಸೆ. 15) ವಿದ್ಯುತ್‍ಗಾಗಿ ಜಪಾನ್ ಆಶ್ರಯಿಸಿರುವುದೇ ಅಣು ಸ್ಥಾವರಗಳನ್ನು. ಜಗತ್ತಿನ 3ನೇ ಅತಿದೊಡ್ಡ ಅಣುವಿದ್ಯುತ್ ರಾಷ್ಟ್ರವಾಗಿರುವ ಜಪಾನ್‍ಗೇ ಅಣುಸ್ಥಾವರಗಳು ಬೇಡವಾಗಿದ್ದರೆ ಮತ್ತೇಕೆ ಕುಡಂಕುಳಂನಲ್ಲಿ, ಮಹಾ ರಾಷ್ಟ್ರದ ಜೈತಾಪುರದಲ್ಲಿ ಸರಕಾರ ಹಠಕ್ಕೆ ಬಿದ್ದಂತೆ ವರ್ತಿಸುತ್ತಿದೆ? ಕಲ್ಲಿದ್ದಲು, ಗಾಳಿ ಅಥವಾ ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸುವುದು ವೆಚ್ಚದಾಯಕ ಎಂಬುದು, ಅಪಾಯಕಾರಿ ಅಣುಸ್ಥಾವರಗಳ ಸ್ಥಾಪನೆಗೆ ಪರವಾನಿಗೆ ಆಗುತ್ತದೆಯೇ? ಅಂದಹಾಗೆ ತಂತ್ರಜ್ಞಾನದಲ್ಲಿ ಮುಂದಿರುವ ಜರ್ಮನಿ, ಅಮೇರಿಕ, ಜಪಾನ್‍ಗಳಂಥ ರಾಷ್ಟ್ರಗಳೇ ಅಣುಸ್ಥಾವರಗಳ ಬಗ್ಗೆ ಹಿಂಜರಿಕೆ ವ್ಯಕ್ತಪಡಿಸುತ್ತಿರುವಾಗ ನಮ್ಮ ರಾಜಕಾರಣಿಗಳೇಕೆ ಇಷ್ಟೊಂದು ಆತುರದಲ್ಲಿದ್ದಾರೆ?
      ಇವತ್ತು ಚೆನ್ನೈನ ಕುಡಂಕುಳಂ ಸಮುದ್ರದಲ್ಲಿ , ಮರಳಿನಲ್ಲಿ   ಅರ್ಧ ಮುಳುಗಿ ಪ್ರತಿಭಟಿಸುತ್ತಿರುವ ಸ್ಥಳೀಯರು ಎತ್ತುತ್ತಿರುವುದೂ ಇಂಥ ಅನುಮಾನಗಳನ್ನೇ.

Monday, September 10, 2012

ATS ನಲ್ಲಿ ಇರುವವರೇನು ಹುರಿಗಡಲೆ ಮಾರಾಟಗಾರರಾ?


ಅಸಿಮಾನಂದ
ರಾಜಸ್ತಾನದ ಭಯೋತ್ಪಾದನಾ ವಿರೋಧಿ ದಳದ ಪೊಲೀಸರು (ATS) 2010 ನವೆಂಬರ್ 19ರಂದು ಉತ್ತರಖಂಡದ ಹರಿದ್ವಾರದಲ್ಲಿರುವ ಆಶ್ರಮದಿಂದ ಸ್ವಾಮಿ ಅಸೀಮಾನಂದನನ್ನು ಬಂಧಿಸದೇ ಇರುತ್ತಿದ್ದರೆ ಆ 39 ಮಂದಿ ಯುವಕರು ಈಗಲೂ ಜೈಲಲ್ಲೇ ಇರಬೇಕಾಗಿತ್ತು..
            2006 ಸೆ. 8ರಂದು ಮಾಲೆಗಾಂವ್‍ನ ಮಸೀದಿಯೊಂದರ ಕಬರ ಸ್ಥಾನದಲ್ಲಿ 3 ಪ್ರಬಲ ಬಾಂಬ್ ಸ್ಫೋಟಗಳು ನಡೆಯುತ್ತವೆ. 37 ಮಂದಿ ಸಾವಿಗೀಡಾಗುತ್ತಾರಲ್ಲದೇ, 100ಕ್ಕಿಂತಲೂ ಅಧಿಕ ಮಂದಿ ಗಾಯಗೊಳ್ಳುತ್ತಾರೆ. ಮಹಾರಾಷ್ಟ್ರದ ಪೊಲೀಸರು (ATS) ತನಿಖೆ ಕೈಗೆತ್ತಿಕೊಳ್ಳುತ್ತಾರೆ. ಬಾಂಬ್ ಸ್ಫೋಟಗೊಂಡದ್ದು ಮುಸ್ಲಿಮರ ಸ್ಮಶಾನದಲ್ಲಾದರೂ ಅದರ ಹಿಂದಿರುವುದೂ ಮುಸ್ಲಿಮ್ ಉಗ್ರವಾದಿಗಳೇ ಅನ್ನುತ್ತವೆ ಮಾಧ್ಯಮಗಳು. ಅದಕ್ಕೆ ಪೂರಕವೆಂಬಂತೆ ಮುಸ್ಲಿಮ್ ಯುವಕರ ಬಂಧನವೂ ಪ್ರಾರಂಭವಾಗುತ್ತದೆ. ಡಾ| ಫಾರೂಖ್ ಮಕ್ದೂಮಿ, ಡಾ| ಸಲ್ಮಾನ್ ಫಾರ್ಸಿ.. ಮುಂತಾದ ಹತ್ತಾರು ಯುವಕರು ಜೈಲು ಸೇರುತ್ತಾರೆ. ಈ ಮಧ್ಯೆ ತನಿಖೆಯ ಹೊಣೆಗಾರಿಕೆ ATS ನಿಂದ ಸಿಬಿಐಗೆ ಹೋಗುತ್ತದೆ. ಹೀಗಿರುವಾಗಲೇ 2007ರಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಮಧ್ಯೆ ಸಂಪರ್ಕದ ಕೊಂಡಿಯಂತಿದ್ದ ಸಂಜೋತಾ ರೈಲು ಎಕ್ಸ್ ಪ್ರೆಸ್‍ನಲ್ಲಿ ಬಾಂಬ್ ಸ್ಫೋಟವಾಗುತ್ತದೆ. 68 ಮಂದಿ ಸಾವಿಗೀಡಾಗುತ್ತಾರೆ. ಅದರ ಆರೋಪವನ್ನೂ ಮುಸ್ಲಿಮರ ಮೇಲೆಯೇ ಹೊರಿಸಲಾಗುತ್ತದೆ. 2007 ಮೇ 18ರಂದು (ಶುಕ್ರವಾರ) ಹೈದರಾಬಾದ್‍ನ ಮಕ್ಕಾ ಮಸೀದಿಯಲ್ಲಿ ಬಾಂಬ್ ಸ್ಫೋಟವಾಗಿ 14 ಮಂದಿ ಸಾವಿಗೀಡಾಗುತ್ತಾರೆ. ಈ ಎಲ್ಲ ಸಂದರ್ಭಗಳಲ್ಲಿ ಮಾಧ್ಯಮಗಳು ಹರ್ಕತುಲ್ ಮುಜಾಹಿದೀನ್, ಹುಜಿ, ಲಷ್ಕರೆ ತ್ವಯ್ಯಿಬಗಳ ಹೆಸರನ್ನು ತೇಲಿಬಿಡುತ್ತವೆ. ಮಾತ್ರವಲ್ಲ, ಪೊಲೀಸರೂ ಇವನ್ನು ಬಹಿರಂಗವಾಗಿಯೇ ಸಮರ್ಥಿಸ ತೊಡಗುತ್ತಾರೆ. ಆದ್ದರಿಂದಲೇ, ಈ ಭಯೋತ್ಪಾದಕ ಸಂಘಟನೆಗಳ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ಎಷ್ಟರ ಮಟ್ಟಿನ ಭೀತಿ ಹರಡಿತ್ತೆಂದರೆ, ಸ್ಫೋಟದ ಆರೋಪದಲ್ಲಿ ಬಂಧನಕ್ಕೊಳಗಾಗುತ್ತಿದ್ದ ಮುಸ್ಲಿಮ್ ಯುವಕರ ಕುಟುಂಬಿಕರೊಂದಿಗೆ ಮಾತಾಡಲೂ ಹೆದರುವಷ್ಟು. ಇಂಥ ಸ್ಥಿತಿಯಲ್ಲಿ, ಆ ಯುವಕರ ಪರವಾಗಿ ಒಂದು ಪ್ರತಿಭಟನೆ ನಡೆಸುವುದು, ಅಧಿಕಾರಿಗಳನ್ನು ಭೇಟಿಯಾಗುವುದಕ್ಕೆಲ್ಲಾ ಧೈರ್ಯವಾದರೂ ಎಲ್ಲಿರುತ್ತದೆ?  ಸಂತ್ರಸ್ತ ಕುಟುಂಬಗಳ ಕಣ್ಣೀರಿಗೆ ಪಕ್ಕದ ಮನೆಯವರು ಸ್ಪಂದಿಸುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಮಾಧ್ಯಮಗಳು ಸೃಷ್ಟಿಸಿ ಬಿಡುತ್ತವೆ. ನಿಜವಾಗಿ, ಹರ್ಕತ್, ಹುಜಿ, ಲಷ್ಕರ್‍ಗಳನ್ನು ಈ ದೇಶದ ಇತರೆಲ್ಲರಿಗಿಂತ ಹೆಚ್ಚು ಭೀತಿಯಿಂದ ನೋಡಿದ್ದು ಮುಸ್ಲಿಮ್ ಸಮುದಾಯವೇ. ಯಾಕೆಂದರೆ, ಅವುಗಳ ಹೆಸರಲ್ಲಿ ಮುಸ್ಲಿಮ್ ಯುವಕರೇ ಜೈಲಿಗೆ ಹೋಗುತ್ತಿದ್ದರಲ್ಲ. ಇಂಥ ಹೊತ್ತಲ್ಲೇ ಮಹಾರಾಷ್ಟ್ರದ ಮಾಲೆಗಾಂವ್ ಮತ್ತು ಮೊಡಸಾಗಳಲ್ಲಿ 2008ರಲ್ಲಿ ಮತ್ತೆ ಬಾಂಬ್ ಸ್ಫೋಟ ಸಂಭವಿಸುತ್ತದೆ. ಆದರೆ ಈ ಬಾರಿ ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳದ (ATS) ನೇತೃತ್ವವನ್ನು ಹೇಮಂತ್ ಕರ್ಕರೆ ವಹಿಸಿಕೊಳ್ಳುತ್ತಾರೆ. ಆ ಬಳಿಕವೇ `ಹಿಂದೂ ಭಯೋತ್ಪಾದನೆ' ಸಾರ್ವಜನಿಕ ಚರ್ಚೆಗೆ ಒಳಗಾದದ್ದು. ಪುರೋಹಿತ್, ಸಾಧ್ವಿ, ದಯಾನಂದ.. ಮುಂತಾದವರ ಬಂಧನವಾಗಿ ಭಯೋತ್ಪಾದನೆಯ ಹೊಸ ಸಾಧ್ಯತೆಗಳು ತೆರೆದುಕೊಂಡದ್ದು..
        ಒಂದು ವೇಳೆ, ದೆಹಲಿಯ ತೀಸ್ ಹಝಾರಿಯಲ್ಲಿರುವ ಮೆಟ್ರೊ ಪಾಲಿಟನ್ ನ್ಯಾಯಾಲಯದ ನ್ಯಾಯಾಧೀಶ ದೀಪಕ್ ದಬಾಸ್‍ರ ಮುಂದೆ 2010 ಡಿ. 18ರಂದು ಅಸೀಮಾನಂದ ತಪ್ಪೊಪ್ಪಿಕೊಳ್ಳದೇ ಇರುತ್ತಿದ್ದರೆ, ಬಂಧಿತ ಮುಸ್ಲಿಮ್ ಯುವಕರ ಪಾಡಾದರೂ ಏನಾಗುತ್ತಿತ್ತು?
          ವಿಭೂತಿ ಭೂಷಣ್ ಸರ್ಕಾರ್ ಎಂಬ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿರುವ ಅಸೀಮಾನಂದ, ಫಿಸಿಕ್ಸ್ ನಲ್ಲಿ ಪದವೀಧರ. ಬುರ್ದ್ವಾನ್ ವಿಶ್ವವಿದ್ಯಾಲಯದಿಂದ ಉನ್ನತ ಪದವಿಯನ್ನೂ ಪಡೆದವ. ವಿದ್ಯಾರ್ಥಿಯಾಗಿದ್ದಾಗಲೇ ಆರೆಸ್ಸೆಸ್‍ನೊಂದಿಗೆ ಗುರುತಿಸಿಕೊಂಡಿದ್ದ ಈತ, 1977ರಲ್ಲಿ ಅದರ ಪೂರ್ಣಕಾಲಿಕ (Ful  time) ಕಾರ್ಯಕರ್ತನಾಗಿ ನೇಮಕಗೊಂಡ. ವನವಾಸಿ ಕಲ್ಯಾಣ ಆಶ್ರಮ್ (VKA) ಎಂಬ ವಿಭಾಗದ ಹೊಣೆ ವಹಿಸಿಕೊಂಡು 1988ರಲ್ಲಿ ಆತ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಕ್ಕೆ ಹೋದ. ಅಲ್ಲಿನ ಆದಿವಾಸಿಗಳ ಮಧ್ಯೆ ಹಿಂದುತ್ವದ ಪ್ರಚಾರದಲ್ಲಿ ತೊಡಗಿದ. ಆದಿವಾಸಿಗಳು ಮಂಗನನ್ನು ದೇವನೆಂದು ಪೂಜಿಸುತ್ತಿದ್ದುದನ್ನು ಕಂಡು, ಗುಡಿಸಲಿನಂಥ ಸಣ್ಣ ಸಣ್ಣ ದೇಗುಲಗಳನ್ನು ಸ್ಥಾಪಿಸಿ, ಅದರೊಳಗೆ ಹನುಮಾನ್ ವಿಗ್ರಹಗಳನ್ನು ಸ್ಥಾಪಿಸಿದ. 1993ರಲ್ಲಿ ಝಾರ್ಖಂಡ್‍ಗೆ ಮರಳಿದ ಆತ 95ರಲ್ಲಿ ಗುಜರಾತ್‍ನ ದಾಂಗ್ಸ್ ಜಿಲ್ಲೆಯನ್ನು ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡ. ರಾಮಾಯಣದ ಕಥಾಪಾತ್ರದಲ್ಲಿ ಬರುವ `ಶಬರಿ'ಗಾಗಿ ದಾಂಗ್ಸ್ ನ ಬೆಟ್ಟದಲ್ಲಿ ಶಬರಿ ದೇಗುಲವನ್ನು ಕಟ್ಟಿ ದಾಂಗ್ಸ್ ನ ಆದಿವಾಸಿಗಳ ನಡುವೆ ಕೆಲಸ ಮಾಡುತ್ತಿದ್ದ ಕ್ರೈಸ್ತ ಸಂಘಟನೆಗಳಿಂದ ಆದಿವಾಸಿಗಳನ್ನು ಪ್ರತ್ಯೇಕಗೊಳಿಸಿದ. (ಮಾಲಿನಿ ಚಟರ್ಜಿ - ಇಂಡಿಯನ್ ಎಕ್ಸ್ ಪ್ರೆಸ್) 2006ರಲ್ಲಿ ಆರೆಸ್ಸೆಸ್ ಇಲ್ಲಿ ಶಬರಿ ಕುಂಭವನ್ನೂ ಏರ್ಪಡಿಸಿತ್ತು. ಆದರೆ 2010 ನವೆಂಬರ್ 19ರಂದು ರಾಜಸ್ತಾನ್ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ನಿಬ್ಬೆರಗಾಗಿ ಹೋಗಿದ್ದರು. ಅಜ್ಮೀರ್ ದರ್ಗಾ, ಮಕ್ಕಾ ಮಸೀದಿ, ಮಾಲೆಗಾಂವ್, ಸಂಜೋತಾ.. ಈ ಎಲ್ಲ ಭಯೋತ್ಪಾದನಾ ಕೃತ್ಯಗಳ ಹಿಂದೆ ಈತನ ಕೈವಾಡವಿದೆ ಅನ್ನುವುದು ದೃಢಪಟ್ಟ ಕೂಡಲೇ ATS  ತನಿಖೆಯನ್ನು ಚುರುಕುಗೊಳಿಸಿತು. ಆದ್ದರಿಂದಲೇ ಅಸೀಮಾನಂದನನ್ನು ಮಕ್ಕಾ ಮಸೀದಿ ಸ್ಫೋಟದ ಕುರಿತಂತೆ ವಿಚಾರಣೆಗಾಗಿ ಆಂಧ್ರ ಪ್ರದೇಶಕ್ಕೆ ಕರೆತರಲಾಯಿತಲ್ಲದೆ ಅಲ್ಲಿನ ಚಂಚಲಗುಡ ಜೈಲಿನಲ್ಲಿರಿಸಲಾಯಿತು. ವಿಶೇಷ ಏನೆಂದರೆ, ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ ಬಂಧಿತನಾಗಿದ್ದ ಅಬ್ದುಲ್ ಕಲೀಮ್‍ನನ್ನು ಇರಿಸಲಾಗಿದ್ದ ಕೋಣೆಯಲ್ಲೇ ಅಸೀಮಾನಂದನನ್ನು ಇರಿಸಲಾಯಿತು. ಅವರಿಬ್ಬರ ನಡುವೆ ಮಾತುಕತೆಗಳೂ ನಡೆದುವು. ಈ ಕಾರಣದಿಂದಲೇ, 2010 ಡಿ. 16ರಂದು ನ್ಯಾಯಾಧೀಶ ದೀಪಕ್ ದಬಾಸ್‍ರ ಮುಂದೆ ಸ್ವಯಂಪ್ರೇರಿತವಾಗಿ ತಪ್ಪೊಪ್ಪಿಗೆ ಹೇಳಿಕೆ ನೀಡಲು ಅಸೀಮಾನಂದ ಅನುಮತಿ ಕೋರುತ್ತಾನೆ. ಮಾಡದ ತಪ್ಪಿಗಾಗಿ ಕಲೀಮ್‍ನಂಥ ಯುವಕರು ಜೈಲಲ್ಲಿ ಕೊಳೆಯುತ್ತಿರುವುದನ್ನು ನೋಡಿ ತಾನು ಈ ನಿರ್ಧಾರಕ್ಕೆ ಬರಬೇಕಾಯಿತು ಅನ್ನುತ್ತಾನೆ. ಆದರೆ ದೀಪಕ್ ದಬಾಸ್ ಒಪ್ಪಿಕೊಳ್ಳುವುದಿಲ್ಲ. ನೀನು ಪೊಲೀಸರ ಒತ್ತಡಕ್ಕೆ ಒಳಗಾಗಿ ಇಂಥ ತೀರ್ಮಾನಕ್ಕೆ ಬಂದಿರುವ ಸಾಧ್ಯತೆ ಇದೆ. ಆದ್ದರಿಂದ ಎರಡು ದಿನಗಳ ಸಮಯ ಕೊಡುತ್ತೇನೆ ಅನ್ನುತ್ತಾರೆ. ಆದರೆ ಡಿ. 18ರಂದು ಮತ್ತೆ ತಪ್ಪೊಪ್ಪಿಗೆ ಹೇಳಿಕೆಗೆ ಅನುಮತಿ ಕೋರಿದ ಆತ, ಆ ಬಳಿಕ ದೀರ್ಘ 5 ಗಂಟೆಗಳ ಕಾಲ ತನ್ನ ಭಯೋತ್ಪಾದನಾ ಕೃತ್ಯಗಳನ್ನು ಎಳೆ ಎಳೆಯಾಗಿ ನ್ಯಾಯಾಧೀಶರ ಮುಂದೆ ಬಿಡಿಸಿಡುತ್ತಾನೆ. ಮಾತ್ರವಲ್ಲ, ಭಾರತದ ರಾಷ್ಟ್ರಪತಿ ಮತ್ತು ಪಾಕ್ ಅಧ್ಯಕ್ಷರಿಗೆ ತಲುಪಿಸಬೇಕೆಂದು ಹೇಳಿ ಒಂದು ಪ್ರತ್ಯೇಕ ತಪ್ಪೊಪ್ಪಿಗೆ ಪತ್ರವನ್ನು ಬರೆದು ಡಿ. 20ರಂದು ತನ್ನ ಸಹೋದರನಿಗೆ ಕಳುಹಿಸಿಕೊಡುತ್ತಾನೆ. ಆದರೆ ಆತ ಅದನ್ನು ಅವರಿಬ್ಬರಿಗೆ ತಲುಪಿಸದಿದ್ದರೂ 2011ರ ಜನವರಿಯಲ್ಲಿ ಆ ಪತ್ರವನ್ನು ತೆಹಲ್ಕಾ ಮತ್ತು ಸಿಎನ್‍ಎನ್-ಐಬಿಎನ್‍ಗಳು ಯಥಾರೂಪದಲ್ಲಿ ಪ್ರಕಟಿಸುತ್ತವೆ. ಈ ತಪ್ಪೊಪ್ಪಿಗೆಯ ಬಳಿಕವೇ ಮಕ್ಕಾ ಮತ್ತು ಮಾಲೆಗಾಂವ್ ಸ್ಫೋಟದ ಆರೋಪದಲ್ಲಿ ಬಂಧಿತರಾಗಿ ಜೈಲಲ್ಲಿದ್ದ 39 ಮುಸ್ಲಿಮ್ ಯುವಕರು ಬಿಡುಗಡೆಗೊಂಡದ್ದು. ಇದರ ಅರ್ಥವೇನು? ನಿಜವಾದ ಅಪರಾಧಿ ಸಿಗುವವರೆಗೆ ಬಂಧಿತರೆಲ್ಲ ಅಪರಾಧಿಗಳೇ ಆಗಿರುತ್ತಾರೆ ಎಂದೇ ಅಲ್ಲವೇ? ಒಂದು ವೇಳೆ ಅಸೀಮಾನಂದನ ಬಂಧವಾಗದಿರುತ್ತಿದ್ದರೆ ಈಗಲೂ ಆ ಯುವಕರೆಲ್ಲಾ ಜೈಲಲ್ಲಿರಬೇಕಿತ್ತಲ್ಲವೇ? ಇದು ಯಾವ ಮಾದರಿಯ ತನಿಖೆ? ಮಾಲೆಗಾಂವ್‍ನ ನೆಪದಲ್ಲಿ ಬಂಧನಕ್ಕೊಳಗಾದ ಮುಸ್ಲಿಮ್ ಯುವಕರು 5 ವರ್ಷಗಳ ಬಳಿಕ ಬಿಡುಗಡೆಗೊಂಡರು. ಮಕ್ಕಾ ಸ್ಫೋಟದ ಆರೋಪಿಗಳು 4 ವರ್ಷಗಳ ನಂತರ. ತನಿಖಾಧಿಕಾರಿಗಳಿಗೆ ನಿರಪರಾಧಿಯನ್ನು ಗುರುತಿಸುವುದಕ್ಕೆ ಇಷ್ಟು ವರ್ಷಗಳು ಬೇಕಾಗುತ್ತವೆಯೇ? ಇಷ್ಟಕ್ಕೂATS ನಲ್ಲಿ ಅಥವಾ ರಾಷ್ಟ್ರೀಯ ಸಂಶೋಧನಾ ತಂಡ (NIA) ಅಥವಾ ಭಯೋತ್ಪಾದನೆಯನ್ನು ತನಿಖಿಸುವ ಇನ್ನಾವುದೇ ಸಂಸ್ಥೆಯಲ್ಲಿರುವುದು ಮೀನು, ತರಕಾರಿ, ಹುರಿಗಡಲೆ ಮಾರುವ ವ್ಯಕ್ತಿಗಳೇನೂ ಅಲ್ಲವಲ್ಲ. ಅದರಲ್ಲಿರುವವರಿಗೆ ಆ ಕ್ಷೇತ್ರದಲ್ಲಿ ವಿಶೇಷ ತರಬೇತಿ ಸಿಕ್ಕಿರುತ್ತದೆ. ಅಪರಾಧಿ ಮತ್ತು ಅಮಾಯಕರನ್ನು ಮುಖ ಚಹರೆಯಿಂದಲೇ ಪತ್ತೆ ಹಚ್ಚುವಷ್ಟು ಅವರು ಪರಿಣತರೂ ಆಗಿರುತ್ತಾರೆ. ಇಷ್ಟಿದ್ದೂ 4-5 ವರ್ಷಗಳ ಕಾಲ ಆ ಯುವಕರನ್ನು ಜೈಲಲ್ಲಿಟ್ಟದ್ದೇಕೆ? ಅಸಿಮಾನಂದನ ತಪ್ಪೊಪ್ಪಿಗೆಯ ವರೆಗೆ ಅವರ ಬಿಡುಗಡೆಗೆ ಕಾದದ್ದೇಕೆ? ನಿಜವಾದ ಅಪರಾಧಿ ಸಿಗದಿದ್ದರೆ ಇವರನ್ನೇ ಫಿಕ್ಸ್ ಮಾಡುವುದಕ್ಕಾ?
         ಆದ್ದರಿಂದಲೇ, ಭಯೋತ್ಪಾದನೆಯ ಆರೋಪದಲ್ಲಿ ರಾಜ್ಯದಲ್ಲಿ ಬಂಧನಕ್ಕೊಳಗಾದ ಯುವಕರ ಬಗ್ಗೆ, ಅವರನ್ನು ನ್ಯಾಯಯುತವಾಗಿ ನಡೆಸಿಕೊಳ್ಳುವ ಬಗ್ಗೆ ಆತಂಕ ಮೂಡುವುದು. ಆದರೂ..
ತೀಸ್ತಾ ಸೆಟಲ್ವಾಡ್
ಹರ್ಷ್ ಮಂದರ್
ಸಂಜೀವ್ ಭಟ್
ಮುಕುಲ್ ಸಿನ್ಹಾ
ಪ್ರಶಾಂತ್ ಭೂಷಣ್
ರಾಹುಲ್ ಶರ್ಮಾ..
..ಮುಂತಾದವರೆಲ್ಲ ತಮ್ಮ ಪಾಡಿಗೇ ತಾವಿರುತ್ತಿದ್ದರೆ ಗುಜರಾತ್ ಹತ್ಯಾಕಾಂಡದ ರೂವಾರಿಗಳಾದ ಕೊಡ್ನಾನಿಗೆ, ಬಾಬು ಭಜರಂಗಿಗೆ, ಪತ್ನಿ ಮುಸ್ಲಿಮ್ ಆಗಿದ್ದೂ ಹತ್ಯಾಕಾಂಡದಲ್ಲಿ ಭಾಗಿಯಾದ ಸುರೇಶ್ ಚಾಹ್ರನಿಗೆ ಶಿಕ್ಷೆಯಾಗುವುದು ಸಾಧ್ಯವಿತ್ತೇ? ಹತ್ಯಾಕಾಂಡದಲ್ಲಿ ಗುಜರಾತ್ ಸರಕಾರದ ಪಾತ್ರವನ್ನು ಖಂಡಿಸಿ ಸರಕಾರಿ ಹುದ್ದೆಯನ್ನು ತೊರೆದವರು ಇವರಲ್ಲಿದ್ದಾರೆ. ವಿವಿಧ ಕೇಸುಗಳನ್ನು ಜಡಿಸಿಕೊಂಡವರಿದ್ದಾರೆ. ಜೀವ ಬೆದರಿಕೆಗಳಿಗೆ ಒಳಗಾದವರಿದ್ದಾರೆ. ಅಂದಹಾಗೆ, ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ, ಅವರ ನೋವುಗಳನ್ನು ಧರ್ಮದ ಆಧಾರದಲ್ಲಿ ವಿಂಗಡಿಸುವುದನ್ನು ಪ್ರಬಲವಾಗಿ ಖಂಡಿಸುವ ದೊಡ್ಡದೊಂದು ಮನುಷ್ಯ ಪ್ರೇಮಿ ಗುಂಪು ಈ ದೇಶದಲ್ಲಿದೆ ಎನ್ನುವುದಕ್ಕೆ ಪುರಾವೆಯಲ್ಲವೆ ಇವರೆಲ್ಲ? ನಿಜವಾಗಿ, ಸತ್ಯಕ್ಕೆ ದೊಡ್ಡ ಅಪಾಯ ಇದ್ದದ್ದೇ ಗುಜರಾತ್‍ನಲ್ಲಿ. ಆದರೆ ಈ ದೇಶದಲ್ಲಿ ಈವರೆಗೆ ನಡೆದ ಹತ್ಯಾಕಾಂಡಗಳಿಗೆ ಹೋಲಿಸಿದರೆ ಹೆಚ್ಚು ನ್ಯಾಯ ಸಿಕ್ಕಿರುವುದೂ ಗುಜರಾತ್‍ನಲ್ಲೇ! ಇದೇನನ್ನು ಸೂಚಿಸುತ್ತದೆ?  ಅಧಿಕಾರದಲ್ಲಿ ಯಾರೇ ಇರಲಿ, ಹೋರಾಟವನ್ನು ನಿರಂತರ ಜಾರಿಯಲ್ಲಿರಿಸಿದರೆ, ವಿಚಾರಗೋಷ್ಠಿಗಳು, ಟಿ.ವಿ. ಚಾನೆಲ್‍ಗಳು, ಪತ್ರಿಕೆ, ಫೇಸ್‍ಬುಕ್, ಟ್ವೀಟರ್.. ಮುಂತಾದ ಎಲ್ಲ ಮಾಧ್ಯಮಗಳ ಮೂಲಕ ಅನ್ಯಾಯವನ್ನು ಸದಾ ಜೀವಂತದಲ್ಲಿರಿಸಿದರೆ, ಗೆಲುವು ಸಾಧ್ಯ ಎಂಬುದನ್ನಲ್ಲವೇ?  ಈ ದೇಶದಲ್ಲಿ ನಡೆದ ಹತ್ಯಾಕಾಂಡಗಳಲ್ಲಿ ಗುಜರಾತ್ ಹತ್ಯಾಕಾಂಡವು ಚರ್ಚೆಗೆ, ಮಾಧ್ಯಮ ಸುದ್ದಿಗೆ ಒಳಗಾದಷ್ಟು ಇನ್ನಾವುದೂ ಆಗಿಲ್ಲ. ಕಳೆದ 10 ವರ್ಷಗಳಲ್ಲಿ ಗುಜರಾತ್ ನಿರಂತರ ಸುದ್ದಿಯಲ್ಲಿದ್ದರೆ, ಅದಕ್ಕೆ ಜೈನ ಧರ್ಮೀಯರಾದ ಮಲ್ಲಿಕಾ ಸಾರಾಭಾಯಿ , ಸಿಕ್ಖರಾದ ಹರ್ಷ್ ಮಂದರ್, ಕ್ರೈಸ್ತರಾದ ಸೆಟಲ್ವಾಡ್, ಬ್ರಾಹ್ಮಣರಾದ ಸಂಜೀವ್ ಭಟ್.. ಕಾರಣರೆಂಬುದನ್ನು ಯಾರಿಗೆ ತಾನೇ ಅಲ್ಲಗಳೆಯಲು ಸಾಧ್ಯ? ಹೀಗಿರುವಾಗ ವ್ಯವಸ್ಥೆಯನ್ನು ದೂರುತ್ತಾ ಸಿನಿಕರಾಗುವುದಕ್ಕಿಂತ ನಮ್ಮ ನಡುವೆ ಇರುವ ಇಂಥ ಮನುಷ್ಯ ಪ್ರೇಮಿಗಳನ್ನು ಜೊತೆಗಿಟ್ಟುಕೊಂಡು ಅನ್ಯಾಯದ ವಿರುದ್ಧ ಹೋರಾಟಕ್ಕೆ ಮುಂದಾದರೆ, ಮನುಷ್ಯ ವಿರೋಧಿಗಳು ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವಾ? ಇವತ್ತು ಗುಜರಾತ್‍ನಲ್ಲಿ ಇದು ಸಾಧ್ಯವಾಗಿದೆ. ಹೀಗಿರುವಾಗ ಉಳಿದೆಡೆಯೇಕೆ ಇದು ಅಸಾಧ್ಯವಾಗಬೇಕು?
        ಅಂದಹಾಗೆ, ನರೋಡಾ-ಪಾಟಿಯಾ ಹತ್ಯಾಕಾಂಡದ ಅಪರಾಧಿಗಳನ್ನು ಬೆಂಬಲಿಸಿ ಗುಜರಾತ್‍ನ ಕರ್ನಾವತಿಯಲ್ಲಿ  ಸೆ. 1ರಂದು 300 ಮಂದಿ ಸಾಧುಗಳೊಂದಿಗೆ ವಿಹಿಂಪದ ತೊಗಾಡಿಯಾ ಮೌನ ಪ್ರತಿಭಟನೆ ನಡೆಸಿದಂತೆ (ದಿ ಹಿಂದೂ, ಸೆ. 2, 2012) ಕಸಬ್‍ನನ್ನೋ ದಾವೂದ್‍ನನ್ನೋ ಬೆಂಬಲಿಸಿ ಈ ದೇಶದ ಮುಸ್ಲಿಮ್ ಸಂಘಟನೆಯೊಂದು ಪ್ರತಿಭಟನೆ ಹಮ್ಮಿಕೊಂಡಿದ್ದರೆ ಏನಾಗುತ್ತಿತ್ತು? ಶಂಕಿತ ಉಗ್ರರ ಹಿಟ್‍ಲಿಸ್ಟ್ ನಲ್ಲಿದ್ದೇವೆಂದು ಹೇಳಿಕೊಳ್ಳುತ್ತಾ ಹುತಾತ್ಮರಂತೆ ತಿರುಗುತ್ತಿರುವವರ ಪ್ರತಿಕ್ರಿಯೆಗಳು ಹೇಗಿರುತ್ತಿತ್ತು?

Monday, September 3, 2012

ಸಮಾನತೆ ಅನ್ನುತ್ತಾರಲ್ಲ,ಮತ್ತೇಕೆ ಮೇರಿ ಟೀ ತಯಾರಿಸಬೇಕು?

ಘಟನೆ-1
        ‘ಭಾರತೀಯ ಟೆನಿಸ್‍ನ ಪ್ರಮುಖ ಆಟಗಾರರೋರ್ವರನ್ನು ತೃಪ್ತಿ ಪಡಿಸುವುದಕ್ಕಾಗಿ ನನ್ನನ್ನು ಒಂದು ವಸ್ತುವಿನಂತೆ ಬಳಕೆ ಮಾಡಿಕೊಂಡಿರುವುದು ನನ್ನಲ್ಲಿ ತೀವ್ರ ದುಃಖವನ್ನು ತರಿಸಿದೆ. ಇಪ್ಪತ್ತೊಂದನೇ ಶತಮಾನದಲ್ಲಿ ಜೀವಿಸುತ್ತಿರುವ ಹೆಣ್ಣು ಮಗಳನ್ನು ಈ ರೀತಿ ನಡೆಸಿಕೊಳ್ಳುವುದು ಅತ್ಯಂತ ಅವಮಾನಕರ. ಎರಡು ಬಾರಿ ಗ್ರ್ಯಾಂಡ್ ಸ್ಲಾಮ್ ಟೆನಿಸ್ ಪ್ರಶಸ್ತಿ ಗೆದ್ದ ಮತ್ತು ಭಾರತದ ನಂಬರ್ ವನ್ ಮಹಿಳಾ ಟೆನಿಸ್ ಆಟಗಾರ್ತಿಯಾದ ಓರ್ವಳನ್ನು, ಮುನಿಸಿಕೊಂಡಿರುವ ಆಟಗಾರನೋರ್ವನನ್ನು ಆಕರ್ಷಿಸುವುದಕ್ಕಾಗಿ ಬಳಕೆ ಮಾಡುವುದಕ್ಕೆ ಏನೆನ್ನಬೇಕು? ಇದು ಪುರುಷ ಮೇಲ್ಮೆಯಲ್ಲವೇ? ಭಾರತೀಯ ಟೆನಿಸ್ ಫೆಡರೇಶನ್ ಕೈಗೊಂಡ ಈ ತೀರ್ಮಾನ ಮಹಿಳಾ ಕುಲವನ್ನು ಅವಮಾನಿಸುವಂಥದ್ದು..
       ಲಿಯಾಂಡರ್ ಪೇಸ್‍ನೊಂದಿಗೆ ಆಡುವುದಾಗಿ ಸಾನಿಯಾ ಮಿರ್ಝಾ ಬರೆದು ಕೊಡಬೇಕೆಂದು ಪೇಸ್‍ರ ತಂದೆ ಡಾ| ವೇಸ್ ಪೇಸ್ ಟಿ.ವಿ. ಸಂದರ್ಶನದಲ್ಲಿ ಹೇಳುವುದನ್ನು ನಾನು ವೀಕ್ಷಿಸಿದೆ. ನಾನು ಹೇಳುವುದಿಷ್ಟೆ:
     ನನ್ನ ಬದ್ಧತೆ ಯಾವತ್ತೂ ನನ್ನ ದೇಶಕ್ಕಾಗಿದೆ. ಈ ದೇಶಕ್ಕಾಗಿ ಲಿಯಾಂಡರ್, ಭೂಪತಿ, ವಿಷ್ಣು, ಸೋಮ್‍ದೇವ್ ಅಥವಾ ದೇಶಕ್ಕೆ ಉತ್ತಮವೆಂದು ವ್ಯಕ್ತವಾಗುವ ಯಾವ ಟೆನಿಸ್ ಆಟಗಾರರೇ ಆಗಲಿ, ಅವರ ಜೋಡಿಯಾಗಿ ಆಡಲು ನಾನು ತಯಾರು. ಈ ವಿಷಯದಲ್ಲಿ ನನ್ನ ಬಗ್ಗೆ ಯಾವ ಅನುಮಾನವೂ ಬೇಡ. ಒಂದು ವೇಳೆ ಜೊತೆಗಾರರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನನಗೇ ವಹಿಸಿಕೊಟ್ಟರೂ, ಈ ದೇಶಕ್ಕೆ ಒಂದು ಪದಕ ದಕ್ಕುವ ಗುರಿಯನ್ನಲ್ಲದೇ ಇನ್ನಾವುದನ್ನೂ ನಾನು ಆಯ್ಕೆಗೆ ಮಾನದಂಡವಾಗಿ ಪರಿಗಣಿಸಲಾರೆ.’
                                                                                                                                   ಸಾನಿಯಾ ಮಿರ್ಝಾ
                                                             ಅಖಿಲ ಭಾರತ ಟೆನಿಸ್ ಅಸೋಸಿಯೇಶನ್‍ಗೆ 2012 ಜುಲೈಯಲ್ಲಿ ಬರೆದ ಪತ್ರ
           ಘಟನೆ-2
          2001ರಲ್ಲಿ ನಾಗಾಲ್ಯಾಂಡಿನ ಬಡ ಹೆಣ್ಣು ಮಗಳು ಮೇರಿಕೋಮ್ ವಿಶ್ವ ಮಹಿಳಾ ಬಾಕ್ಸಿಂಗ್ ಅಂಗಣಕ್ಕೆ ಇಳಿಯುತ್ತಾಳೆ. ಸೋಲುತ್ತಾಳೆ. ಮುಂದಿನ ವರ್ಷ ವಿಶ್ವ ಬಾಕ್ಸಿಂಗ್ ಕಿರೀಟವನ್ನು ಧರಿಸುತ್ತಾಳೆ. ಮದುವೆಯಾಗುತ್ತದೆ. ಅವಳಿ ಮಕ್ಕಳ ತಾಯಿಯಾಗುತ್ತಾಳೆ. 2010ರಲ್ಲಿ ಮತ್ತೆ ಬಾಕ್ಸಿಂಗ್ ಅಂಗಣಕ್ಕೆ ಪ್ರವೇಶಿಸುತ್ತಾಳೆ. ಗೆಲ್ಲುತ್ತಾಳೆ. ಎರಡು ಬಾರಿ ವಿಶ್ವ ಬಾಕ್ಸಿಂಗ್ ಪ್ರಶಸ್ತಿಯನ್ನು ಗೆದ್ದ ಅಪರೂಪದ ಸಾಧನೆ ಮಾಡುತ್ತಾಳೆ. ಒಂದು ರೀತಿಯಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಅಥವಾ ರೋಜರ್ ಫೆಡರರ್, ರಫೆಲ್ ನಡಾಲ್, ಬ್ಯಾನ್ ಬೋರ್ಗ್‍ ರು  ಗ್ರ್ಯಾಂಡ್ ಸ್ಲಾಮ್ ಗೆದ್ದಷ್ಟು ತೂಕದ ಗೆಲುವು ಇದು. ಮೊನ್ನೆ ಲಂಡನ್‍ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಇದೇ ಮೇರಿ ಕೋಮ್ ಬೆಳ್ಳಿ ಪದಕ ಪಡೆಯುತ್ತಾಳೆ. ಆದರೆ, ಒಲಿಂಪಿಕ್ಸ್ ನಲ್ಲೋ ಅಥವಾ ಇನ್ನಾವುದಾದರೂ ಕ್ರೀಡೆಯಲ್ಲೋ ಭಾಗವಹಿಸುವುದಕ್ಕಾಗಿ ತಯಾರಿ ನಡೆಸಲು ಪಾಟಿಯಾಲದಲ್ಲಿರುವ ತರಬೇತಿ ಶಿಬಿರಕ್ಕೆ ಕೋಮ್ ಬರುವಾಗ ಆಕೆಯ ಜೊತೆ ಪರ್ಸನಲ್ ಸೆಕ್ರಟರಿ ಇರುವುದಿಲ್ಲ, ವಾಹನ ಇರುವುದಿಲ್ಲ. ಪಾಟಿಯಾಲದಲ್ಲಿ ಒಂಟಿ ಕೋಣೆಯ ಕೊಠಡಿಯಲ್ಲಿ ವಾಸ. ತಾನೇ ಸ್ಟೌ ಉರಿಸಿ, ಮೀನು ಕಾಯಿಸಿ, ಊಟ ತಯಾರಿಸಬೇಕು. ಮಾತ್ರವಲ್ಲ, ಪಾಟಿಯಾಲಕ್ಕೆ ಬರುವ ಅತಿಥಿಗಳಿಗೆ ಟೀ ತಯಾರಿಸಿ ಕೊಡುವ ಜವಾಬ್ದಾರಿಯೂ ಅವರ ಮೇಲೆ ಬೀಳುವುದಿದೆ. ಅತಿಥಿಗಳ ಪಾತ್ರೆ ತೊಳೆಯಬೇಕಾಗಿ ಬಂದದ್ದೂ ಇದೆ..
       ಘಟನೆ- 3
        ಕಳೆದ ಏಶ್ಯನ್ ಗೇಮ್ಸ್ ನಲ್ಲಿ ಪಿಂಕಿ ಪ್ರಮಾಣಿಕ್ ಅನ್ನುವ ಹೆಣ್ಣು ಮಗಳು ಚಿನ್ನದ ಪದಕ ಗೆಲ್ಲುತ್ತಾಳೆ. ದೇಶದಾದ್ಯಂತ ಪಿಂಕಿ ಹೆಸರು ಪ್ರಸಿದ್ಧವಾಗುತ್ತದೆ. ಆದರೆ ಕಳೆದ 3 ತಿಂಗಳ ಹಿಂದೆ ಆಕೆಯ ಮೇಲೆ ಬಲಾತ್ಕಾರದ ಆರೋಪ ಹೊರಿಸಲಾಗುತ್ತದೆ. ಆಕೆಯೊಂದಿಗೆ ಹಲವು ಸಮಯದಿಂದ ವಾಸವಿದ್ದ ಗೆಳತಿಯೊಬ್ಬಳು, ಪಿಂಕಿ ಹೆಣ್ಣಲ್ಲ ಗಂಡು ಎಂದು ಆರೋಪಿಸುತ್ತಾಳೆ. ಆರೋಪ ಬಂದ ತಕ್ಷಣ ಪೊಲೀಸರು ಪಿಂಕಿಯನ್ನು ಬಂಧಿಸುತ್ತಾರೆ. ಆಕೆಯ ಎರಡು ತೋಳುಗಳನ್ನು ಗಟ್ಟಿಯಾಗಿ ಹಿಡಿದು ಪುರುಷ ಪೊಲೀಸರು ವ್ಯಾನ್‍ಗೆ ತಳ್ಳುವ ದೃಶ್ಯವನ್ನು ಮಾಧ್ಯಮಗಳು ಪ್ರಕಟಿಸುತ್ತವೆ. ಕೋರ್ಟು ಜೈಲಿಗೆ ಹಾಕುತ್ತದೆ. ನಿಜವಾಗಿ, ಪಿಂಕಿಯ ಮೇಲೆ ಹೊರಿಸಲಾದದ್ದು ಬರೇ ಆರೋಪ ಮಾತ್ರ. ಆ ಆರೋಪದ ಬಗ್ಗೆ, ಆರೋಪ ಹೊರಿಸಿದವಳ ಬಗ್ಗೆ ಸಣ್ಣದೊಂದು ತನಿಖೆಯನ್ನೂ ನಡೆಸದೆ ಪೊಲೀಸರು ಬಂಧಿಸುವುದು, ಜೈಲಿಗಟ್ಟುವುದು ಎಲ್ಲ ನಡೆಯುತ್ತದೆ. ತಿಂಗಳ ಕಾಲ ಪಿಂಕಿ ಜೈಲಲ್ಲಿರುತ್ತಾಳೆ. ಭಾರತದ ಅಪರಾಧ ಸಂಹಿತೆಯ ಪ್ರಕಾರ, ಗಂಡು ಮಾತ್ರ ಅತ್ಯಾಚಾರ ನಡೆಸಬಲ್ಲ. ಆದರೆ ಪೊಲೀಸರು ಪಿಂಕಿ ವಿರುದ್ಧ ಅತ್ಯಾಚಾರದ ದೋಷಾ ರೋಪಪಟ್ಟಿ ಸಲ್ಲಿಸುತ್ತಾರೆ. ಮಾಧ್ಯಮಗಳು `ಪಿಂಕಿ ಅತ್ಯಾಚಾರಿ' ಅನ್ನುವ ಶೀರ್ಷಿಕೆಯಲ್ಲಿ ಸುದ್ದಿಗಳನ್ನು ಧಾರಾಳ ಪ್ರಕಟಿಸುತ್ತವೆ. ಆಕೆಯನ್ನು ನಗ್ನ ಗೊಳಿಸಿ ಲಿಂಗಪತ್ತೆ ಪರೀಕ್ಷೆ ಮಾಡಲಾಗುತ್ತದೆ. ಆ ಇಡೀ ದೃಶ್ಯ ಯೂಟ್ಯೂಬ್‍ನಲ್ಲಿ ಹರಿದಾಡುತ್ತದೆ..
            ಇವೆಲ್ಲವೂ ನಡೆದದ್ದು ಕಳೆದೆರಡು ತಿಂಗಳುಗಳಲ್ಲಿ..
        ಸಾನಿಯಾ ಮಿರ್ಜಾ ಪಾಕಿಸ್ತಾನದ ಕ್ರಿಕೆಟಿಗ ಶುಹೈಬ್ ಮಲಿಕ್‍ನನ್ನು ವಿವಾಹವಾದಾಗ, ಆಕೆಯನ್ನು ದೇಶದ್ರೋಹಿ ಎಂದು ಬಾಳಾಠಾಕ್ರೆ ಘೋಷಿಸಿದ್ದರು. 100 ಕೋಟಿ ಭಾರತೀಯರಲ್ಲಿ ಸಾನಿಯಾಗೆ ಒಬ್ಬನೇ ಒಬ್ಬ ಗಂಡು ಸಿಗಲಿಲ್ಲವೇ ಎಂದು ಪ್ರಶ್ನಿಸಿ, ಟಿ.ವಿ. ಕ್ಯಾಮರಾಗಳಿಗೆ ಪೋಸು ಕೊಟ್ಟವರಿದ್ದರು. ಪತ್ರಿಕೆಗಳಲ್ಲಿ ಅಂಕಣ ಬರೆದವರಿದ್ದರು. ಆದರೆ ಅವರಾರೂ ಸಾನಿಯಾಳ ಈ ಪತ್ರದ ಬಗ್ಗೆ ಏನಾದರೂ ಬರೆದದ್ದು ಈ ವರೆಗೂ ಕಾಣಿಸಿಲ್ಲ. ಆ ಪತ್ರವನ್ನು ಎದುರಿಟ್ಟುಕೊಂಡು ತಮ್ಮನ್ನು ತಿದ್ದಿಕೊಳ್ಳುವ ಒಂದು ವಾಕ್ಯದ ಹೇಳಿಕೆಯನ್ನೂ ಅವರು ಹೊರಡಿಸಿಲ್ಲ. ಯಾಕೆ ಹೀಗೆ? ಲಂಡನ್ ಒಲಿಂಪಿಕ್ಸ್ ನಲ್ಲಿ ಲಿಯಾಂಡರ್ ಪೇಸ್‍ಗೆ ಜೋಡಿಯಾಗಿ ಮಹೇಶ್ ಭೂಪತಿ ಆಡಬೇಕಿತ್ತು. ಆದರೆ ಭೂಪತಿ ಒಪ್ಪಲಿಲ್ಲ. ಇದರಿಂದ ಸಿಟ್ಟಾದ ಲಿಯಾಂಡರ್ ಪೇಸ್‍ರನ್ನು ಸಮಾಧಾನಿಸುವುದಕ್ಕಾಗಿ ಭೂಪತಿ ಜೊತೆ ಮಿಕ್ಸ್ ಡ್ ಡಬಲ್ಸ್ ನಲ್ಲಿ ಆಡಬೇಕಿದ್ದ ಸಾನಿಯಾಳನ್ನು ಪೇಸ್‍ಗೆ ಜೋಡಿಯಾಗಿ ಟೆನಿಸ್ ಸಂಸ್ಥೆ ಆಯ್ಕೆ ಮಾಡಿತು. ಆದರೆ ಆ ಕುರಿತಂತೆ ಒಂದು ಸಣ್ಣ ಸೂಚನೆಯನ್ನೂ ಸಾನಿಯಾಳಿಗೆ ಟೆನಿಸ್ ಸಂಸ್ಥೆ ನೀಡಿಯೇ ಇರಲಿಲ್ಲ. ಇಷ್ಟಕ್ಕೂ ಸಾನಿಯಾಳ ಜಾಗದಲ್ಲಿ ಇನ್ನಾರೋ ಪುರುಷ ಇರುತ್ತಿದ್ದರೆ ಇಂಥದ್ದೊಂದು ಧೈರ್ಯಕ್ಕೆ ಟೆನಿಸ್ ಸಂಸ್ಥೆ ಮುಂದಾಗುತ್ತಿತ್ತೇ? ನಿನ್ನ ಆಯ್ಕೆಯೇನು ಎಂದು ಭೂಪತಿಯೊಂದಿಗೆ ಕೇಳಿದಂತೆ, ಸಾನಿಯಾಳೊಂದಿಗೂ ಟೆನಿಸ್ ಸಂಸ್ಥೆ ಕೇಳಬೇಕಿತ್ತಲ್ಲವೇ? ದೇಶದಲ್ಲಿ ಮಹಿಳಾ ಟೆನಿಸ್ ಆಟಗಾರ್ತಿಯರಲ್ಲಿ ಗ್ರ್ಯಾಂಡ್‍ಸ್ಲ್ಯಾಮ್ ಗೆದ್ದಿರುವುದು ಸಾನಿಯಾ ಒಬ್ಬಳೇ. ಭೂಪತಿಯ ಸ್ಥಾನಮಾನ ಕೂಡ ಅದುವೇ. ಆದರೆ ಭೂಪತಿಗೆ ಇರುವ ಅದೇ ಸ್ಥಾನ-ನಿಯಮಗಳೆಲ್ಲ ಸಾನಿಯಾಳ ವಿಷಯದಲ್ಲಿ ಇಲ್ಲವಾದುದೇಕೆ? ಹೆಣ್ಣು ಎಷ್ಟೇ ಸಾಧನೆ ಮಾಡಿದರೂ ಆಕೆ ಪುರುಷನಿಗೆ ಸಮಾನ ಅಲ್ಲ ಎಂದಲ್ಲವೇ ಇದರರ್ಥ? ಇದೊಂದೇ ಅಲ್ಲ..
         ಸಾನಿಯಾ ಟೆನಿಸ್ ಸಂಸ್ಥೆಗೆ ಪತ್ರ ಬರೆಯುವಾಗ, ಪೇಸ್, ಬೋಪಣ್ಣ ಮತ್ತು ಭೂಪತಿ ಪರಸ್ಪರ ಜಗಳವಾಡುತ್ತಿದ್ದರು. ಅಂಥ ಹೊತ್ತಲ್ಲಿ ದೇಶದ ಬಗ್ಗೆ, ದೇಶಕ್ಕೆ ಒಂದು ಪದಕ ತರುವ ಬಗ್ಗೆ ಮಾತಾಡಿದ್ದು ಆಕೆಯೊಬ್ಬಳೇ. ದೇಶಕ್ಕಾಗಿ ಯಾರ ಜೋಡಿಯಾಗಿ ಆಡಲೂ ಸಿದ್ಧ ಅಂದದ್ದೂ ಆಕೆಯೇ. ಆದರೆ ಆಕೆಯನ್ನು ದೇಶದ್ರೋಹಿಯಾಗಿಸಿದರಲ್ಲ, ಅವರಿಗೇಕೆ ಇದು ಕಾಣಿಸಲಿಲ್ಲ? ಓರ್ವ ಪಾಕಿಸ್ತಾನಿ ಪ್ರಜೆಯನ್ನು ಮದುವೆಯಾದ ಭಾರತೀಯಳಿಗೆ ಇರುವ ದೇಶಪ್ರೇಮದಷ್ಟೂ, ಈ ದೇಶದಲ್ಲೇ ಇರುವ, ಈ ದೇಶದ ನೀರನ್ನೇ ಕುಡಿಯುವ, ಇಲ್ಲೇ ತಂಗುವ ಆಟಗಾರರಿಗೆ ಇಲ್ಲವಲ್ಲ ಎಂದು ಪೇಸ್, ಭೂಪತಿಯನ್ನು ಎತ್ತಿಕೊಂಡು ಬರೆಯಲು ಯಾಕೆ ಅವರಾರೂ ಮುಂದಾಗಲಿಲ್ಲ?
            ಅಷ್ಟಕ್ಕೂ, ಇವು ಸಾನಿಯಾಳ ದೇಶಪ್ರೇಮವನ್ನು ಸಾಬೀತುಪಡಿಸುವುದಕ್ಕೆ ಮಂಡಿಸುವ ಪುರಾವೆಗಳೇನೂ ಅಲ್ಲ..
        ಸಾನಿಯಾ ಆಗಲಿ, ಮೇರಿಕೋಮ್, ಪಿಂಕಿ ಪ್ರಮಾಣಿಕ್ ಯಾರೇ ಆಗಲಿ, ಮಹಿಳೆ ಮಹಿಳೆಯೇ. ಸಾಧನೆ ಏನೇ ಆಗಿದ್ದರೂ ಪುರುಷನ ಎದುರು ಮಹಿಳೆಯ ತೂಕ ಒಂದಷ್ಟು ಕಡಿಮೆ ಎಂದಲ್ಲವೇ ಕ್ರೀಡಾ ಸಂಸ್ಥೆಗಳು ಈ ಮೂಲಕ ಸಾರುತ್ತಿರುವುದು? ನಿಜವಾಗಿ ಮೇರಿಕೋಮ್‍ರ ಸಾಧನೆ ಈ ದೇಶದ ಎಲ್ಲ ಸಾಧಕರಿಗಿಂತ ಮೇಲ್ಮಟ್ಟದ್ದು. ಆದರೂ ಆಕೆ ಅತಿಥಿಗಳ ಪಾತ್ರೆ ತೊಳೆಯಬೇಕು. ಟೀ ತಯಾರಿಸಿ ಕೊಡಬೇಕು. ಅದೇ ಜಾಗದಲ್ಲಿ ಬಾಕ್ಸರ್ ಸುಶೀಲ್ ಕುಮಾರ್‍ರನ್ನೋ ವಿಜೇಂದರ್ ಸಿಂಗ್‍ರನ್ನೋ ಕಲ್ಪಿಸಿಕೊಳ್ಳಿ. ಕ್ರಿಕೆಟಿಗ ಧೋನಿಯನ್ನು ಯಾವ ತನಿಖೆಯನ್ನೂ ನಡೆಸದೆ ಅನಾಮತ್ತಾಗಿ ಎತ್ತಿಕೊಂಡು ಹೋಗುವುದನ್ನು ಊಹಿಸಿ ನೋಡಿ. ಇಷ್ಟಕ್ಕೂ ಮೈಮುಚ್ಚುವ ಉಡುಪು ಧರಿಸುವುದನ್ನು ಅಸಮಾನತೆಯಾಗಿ ಕಾಣುವವರು ಇವತ್ತು ಎಷ್ಟು ಮಂದಿಯಿಲ್ಲ? ಅದು ಹೆಣ್ಣನ್ನು ಎರಡನೇ ದರ್ಜೆಯವಳಾಗಿ ವಿಂಗಡಿಸುತ್ತದೆ ಅನ್ನುವವರ ಪಟ್ಟಿಯೇನು ಸಣ್ಣದೇ? ಆದರೆ ಹೆಣ್ಣಿಗೆ ಕಡಿಮೆ ಬಟ್ಟೆ ತೊಡಿಸಿ, ಅದನ್ನು ಸಮಾನತೆಯ ಸಂಕೇತವಾಗಿ ಬಿಂಬಿಸಿ, ಬಳಿಕ ಪುರುಷನನ್ನು ತೃಪ್ತಿಪಡಿಸುವುದಕ್ಕಾಗಿ, ಆತನ ಎಂಜಲನ್ನು ತೊಳೆಯುವುದಕ್ಕಾಗಿ ಅವಳನ್ನು ಬಳಸಲಾಗುತ್ತದಲ್ಲ, ಯಾಕೆ ಅದು ಎರಡನೇ ದರ್ಜೆ ಅನ್ನಿಸಿಕೊಳ್ಳುತ್ತಿಲ್ಲ? ಪರ್ದಾ ಧರಿಸುವುದು ಅಸಮಾನತೆಯೆಂದಾದರೆ ಗಂಡಿನಷ್ಟೇ ಸಾಧನೆ ಮಾಡಿಯೂ ಸ್ಥಾನ-ಮಾನದಲ್ಲಿ ಹೆಣ್ಣನ್ನು ದ್ವಿತೀಯ ದರ್ಜೆಯವಳಾಗಿ ನೋಡಿಕೊಳ್ಳುವುದೇಕೆ ಸಹಜ ಅನ್ನಿಸಿಕೊಳ್ಳುತ್ತದೆ? ನಿಜವಾಗಿ, ಮೈಮುಚ್ಚುವ ಉಡುಪು ಧರಿಸುವ ಮುಸ್ಲಿಮ್ ಹೆಣ್ಣು ಮಗಳು ಸ್ಥಾನ-ಮಾನದಲ್ಲಿ ಯಾವತ್ತೂ ಗಂಡಿನಷ್ಟೇ ಸಮಾನ. ಆದ್ದರಿಂದಲೇ ಅವರನ್ನು ಪತಿ-ಪತ್ನಿ ಅನ್ನುವುದರ ಬದಲು ಜೋಡಿಗಳು ಎಂದು ಪವಿತ್ರ ಕುರ್‍ಆನ್ (37:36, 4:1) ಪ್ರತಿಪಾದಿಸಿರುವುದು. ಆದರೆ ಆಧುನಿಕವೆಂದು ಹೇಳಲಾಗುವ ಈ ಜಗತ್ತಿನಲ್ಲಿ, ಹೆಣ್ಣು ಯಾವ ಉಡುಪು ಧರಿಸಬೇಕೆಂದು ಹೇಳುವುದೇ ಪುರುಷರು. ಅವಳು ಹೇಗೆ ನಡೆಯಬೇಕು, ಮಾತಾಡಬೇಕು, ಕುಣಿಯ ಬೇಕೆಂದು ವಿವರಿಸುವುದೂ ಅವರೇ. ಕೊನೆಗೆ ಪುರುಷರ ದಾಳವಾಗಿಸಿಯೋ ಪಾತ್ರೆ ತೊಳೆಯಿಸಿಯೋ ಜಾಣತನ ಮೆರೆಯುವುದೂ ಅವರೇ. ಆದರೆ ಅಸಮಾನತೆ ಎಂಬುದು ಮೈಮುಚ್ಚುವ ಉಡುಪಿನಲ್ಲಿದೆ ಎಂದು ಬಲವಾಗಿ ನಂಬಿರುವವರಿಗೆ ಇದು ತಪ್ಪು ಅಂತ ಅನ್ನಿಸುತ್ತಲೇ ಇಲ್ಲ. ಯಾಕೆಂದರೆ ಅವರೆಲ್ಲ ಕಡಿಮೆ ಬಟ್ಟೆ ಧರಿಸಿ ಆಧುನಿಕರು ಅನ್ನಿಸಿಕೊಂಡಿದ್ದಾರಲ್ಲ..