Tuesday, September 25, 2012

ಆ ಸಿನಿಮಾವನ್ನು ವೀಕ್ಷಿಸಿದ ಬಳಿಕ ಅವರ ಬಗ್ಗೆ ಬರೆಯಬೇಕೆನಿಸಿತು..

ಅರಬ್ ಮರುಭೂಮಿ. ಕಲ್ಬ್ ಅನ್ನುವ ಬುಡಕಟ್ಟಿಗೆ ಸೇರಿದ ಒಂದು ತಂಡವು ಯಾತ್ರೆಯಲ್ಲಿತ್ತು. ಒಂದು ಕಡೆ ಹಠಾತ್ತಾಗಿ ಆ ತಂಡದ ಮೇಲೆ ದಾಳಿಯಾಗುತ್ತದೆ. ಯಾತ್ರಾ ತಂಡ ಗಲಿಬಿಲಿಗೊಳ್ಳುತ್ತದೆ. ಸರಕುಗಳು, ಮಕ್ಕಳು, ಒಂಟೆ.. ಎಲ್ಲವೂ ಚೆಲ್ಲಾಪಿಲ್ಲಿಯಾಗುತ್ತದೆ. ದರೋಡೆಕೋರರು ಸರಕುಗಳ ಜೊತೆ ಮಕ್ಕಳನ್ನೂ ಅಪಹರಿಸಿಕೊಂಡು ಹೋಗುತ್ತಾರೆ. ಇಷ್ಟಕ್ಕೂ, 6ನೇ ಶತಮಾನದಲ್ಲಿ ಮಾರಾಟವಾಗುತ್ತಿದ್ದುದು ಸರಕುಗಳಷ್ಟೇ ಅಲ್ಲವಲ್ಲ. ಬಟಾಟೆ, ಟೊಮೆಟೊ, ಗೋಧಿ, ಖರ್ಜೂರದಂತೆ ಮನುಷ್ಯರೂ ಸರಕೇ ಆಗಿದ್ದರಲ್ಲವೇ? ಸಂತೆಯಲ್ಲಿ ಇತರ ಸರಕುಗಳಂತೆ ಮನುಷ್ಯರನ್ನೂ ಮಾರಾಟಕ್ಕಿಡುವುದು, ಚೌಕಾಶಿ ಮಾಡುವುದೆಲ್ಲ ನಡೆಯುತ್ತಿತ್ತಲ್ಲವೇ? ಆಫ್ರಿಕಾದ ಎಷ್ಟು ಕಪ್ಪು ಮನುಷ್ಯರು ಈ ಗೋಲದ ಸುತ್ತ ಮಾರಾಟವಾಗಿಲ್ಲ? ಉಳ್ಳವರ ಖರೀದಿಗೆ ಒಳಗಾಗಿ ಬದುಕಿಡೀ ಗುಲಾಮರಂತೆ ಜೀವನ ಸಾಗಿಸಿದವರು ಎಷ್ಟಿಲ್ಲ? ಹಾಗೆ ದರೋಡೆಕೋರರಿಂದ ಅಪಹೃತಗೊಂಡ ಬಾಲಕರಲ್ಲಿ 8 ವರ್ಷದ ಝೈದ್ ಎಂಬ ಹುಡುಗನೂ ಇದ್ದ. ದರೋಡೆಕೋರರು ಉಕಾಝ್ ಎಂಬ ಪೇಟೆಯ ಸಂತೆಯಲ್ಲಿ ಝೈದ್‍ನನ್ನು ಮಾರಾಟಕ್ಕಿಡುತ್ತಾರೆ. ಹಕೀಮ್ ಅನ್ನುವ ವ್ಯಕ್ತಿಗೆ ಬಾಲಕ ಝೈದ್ ಯಾಕೋ ಇಷ್ಟವಾಗುತ್ತಾರೆ. ಝೈದನ್ನು ಖರೀದಿಸಿ ತನ್ನ ಸೋದರತ್ತೆ ಖದೀಜರಿಗೆ ಹಕೀಮ್ ಕೊಟ್ಟು ಬಿಡುತ್ತಾರೆ. ಅಂದಹಾಗೆ, ಗುಲಾಮರ ಸ್ಥಾನಮಾನ, ಹಕ್ಕು, ಸ್ವಾತಂತ್ರ್ಯಗಳೆಲ್ಲ ಏನು, ಎಷ್ಟು ಎಂಬುದು ಈ ಜಗತ್ತಿನ ಎಲ್ಲರಿಗೂ ಗೊತ್ತು. ಸ್ವಾತಂತ್ರ್ಯ ಅನ್ನುವ ಪದ ಮತ್ತು ಅದು ಕೊಡುವ ಅನುಭೂತಿ ಅವರ ಪಾಲಿಗೆ ಶಾಶ್ವತವಾಗಿ ನಿಷೇಧಕ್ಕೆ ಒಳಪಟ್ಟಿರುತ್ತದೆ. ಅವರಿಗೆ ಯಾವ ಹಕ್ಕೂ ಇರುವುದಿಲ್ಲ. ಗೌರವವೂ ಇರುವುದಿಲ್ಲ. ಒಡೆಯ ಏನು ಹೇಳುತ್ತಾನೋ ಅವನ್ನು ಮಾಡುತ್ತಾ ಹಾಕಿದ ಊಟ, ಕೊಟ್ಟ ಏಟನ್ನು ಮನಸಾರೆ ಸಹಿಸುತ್ತಾ ಬದುಕಬೇಕು. ಗುಲಾಮ ಆದ ಮೇಲೆ ಕುಟುಂಬ ಸಂಬಂಧ ಕಡಿದಿರುತ್ತದೆ. ತನ್ನ ಹೆತ್ತವರು ಯಾರು ಎಂಬುದು ಮಕ್ಕಳಿಗೆ ಗೊತ್ತೂ ಇರುವುದಿಲ್ಲ. ಗೊತ್ತಿದ್ದರೂ ಒಡೆಯ ಅನುಮತಿಸಿದರೆ ಮಾತ್ರ ಬಿಡುಗಡೆ ಸಿಗುತ್ತದೆ. ಹಾಗಂತ, ಗುಲಾಮ ಪದ್ಧತಿಯು ಮನುಷ್ಯತ್ವಕ್ಕೆ ವಿರೋಧ ಎಂದು ತೀರ್ಪು ನೀಡುವುದಕ್ಕೆ, ಆವತ್ತಿನ ನಾಗರಿಕತೆ ಅಷ್ಟು ಬೆಳೆದಿದ್ದರಲ್ಲವೇ?
             ಖದೀಜರ ಸೇವೆ ಮಾಡುತ್ತಾ ಬಾಲಕ ಝೈದ್ ಬೆಳೆಯುತ್ತಾನೆ. ಈ ಮಧ್ಯೆ 40ರ ಹರೆಯದ ಖದೀಜ ಮತ್ತು 25ರ ಮುಹಮ್ಮದ್‍ರ ಮಧ್ಯೆ ವಿವಾಹವಾಗುತ್ತದೆ. ಮುಹಮ್ಮದ್‍ರಿಗೆ ಬಾಲಕ ತುಂಬಾ ಇಷ್ಟವಾಗುತ್ತಾನೆ. ಗುಲಾಮ ಎಂಬ ಅಂತರ ಇಟ್ಟುಕೊಳ್ಳದೇ ಝೈದ್‍ನೊಂದಿಗೆ ಮುಹಮ್ಮದ್ ಬೆರೆಯುತ್ತಾರೆ. ತಂದೆ ಮತ್ತು ಮಗನಂಥ  ನಿರ್ಮಲ ಸಂಬಂಧವೊಂದು ಅವರ ಮಧ್ಯೆ ಏರ್ಪಡುತ್ತದೆ. ಮುಹಮ್ಮದ್ ಮತ್ತು ಖದೀಜರ ಗುಣಗಳು ಝೈದ್‍ನ ಮೇಲೆ ಎಷ್ಟಂಶ ಪ್ರಭಾವ ಬೀರುತ್ತದೆಂದರೆ, ಪರಿಸರದ ಮಂದಿ ಝೈದ್‍ನ ಗುಣನಡತೆಯನ್ನು ಕಂಡು ಬಾಯಿಗೆ ಬೆರಳಿಡುತ್ತಾರೆ. ಹೀಗಿರುತ್ತಾ ಝೈದ್‍ಗೆ 16 ವರ್ಷ ತುಂಬುತ್ತದೆ. ಹಜ್ಜ್ ನ ಕಾಲ. ಬೇರೆ ಬೇರೆ ಪ್ರದೇಶಗಳಿಂದ ಮಕ್ಕಾಕ್ಕೆ ಜನರು ಹಜ್ಜ್ ನಿರ್ವಹಣೆಗಾಗಿ ಬರುತ್ತಾರೆ. ಕಲ್ಬ್ ಬುಡಕಟ್ಟಿನಿಂದಲೂ ಕೆಲವರು ಹಜ್ಜ್ ಗೆ ಬರುತ್ತಾರೆ. ಅವರಿಗೆ ಝೈದ್ ಸಿಗುತ್ತಾರೆ. ಝೈದ್‍ನ ತಂದೆ ಹಾರಿಸ್ ಮತ್ತು ಚಿಕ್ಕಪ್ಪ ಕಅಬ್‍ರಿಗೆ ಝೈದ್‍ರ ಬಗ್ಗೆ ಸುದ್ದಿ ಮುಟ್ಟಿಸುತ್ತಾರೆ. ತಕ್ಷಣ ಅವರಿಬ್ಬರೂ ಮಕ್ಕಾಕ್ಕೆ ಓಡಿ ಬರುತ್ತಾರೆ. ಮುಹಮ್ಮದ್‍ರನ್ನು ಸಂಪರ್ಕಿಸುತ್ತಾರೆ...
         ನನ್ನ ಮಗನನ್ನು ನನಗೆ ಮರಳಿಸುವುದಾದರೆ ನೀವು ಕೇಳಿದಷ್ಟು ಪರಿಹಾರ ಧನವನ್ನು ನೀಡುತ್ತೇನೆ ಅನ್ನುತ್ತಾರೆ ತಂದೆ. ಮುಹಮ್ಮದ್ ಅವರನ್ನು ಕುಳ್ಳಿರಿಸಿ ಸತ್ಕರಿಸುತ್ತಾರೆ.
         ನಿಮ್ಮ ಪರಿಹಾರ ಧನ ನನಗೆ ಬೇಕಿಲ್ಲ. ಝೈದ್ ನಿಮ್ಮ ಜೊತೆ ಬರುವುದಾದರೆ ಮನಸಾರೆ ಕಳುಹಿಸಿ ಕೊಡುವೆ. ಆತನಿಗೆ ನಿಮ್ಮ ಜೊತೆ ಬರುವ ಸರ್ವ ಸ್ವಾತಂತ್ರ್ಯವೂ ಇದೆ ಅನ್ನುತ್ತಾರೆ ಮುಹಮ್ಮದ್. ಝೈದ್ ಬರುತ್ತಾನೆ. ತನ್ನ ತಂದೆ ಮತ್ತು ಚಿಕ್ಕಪ್ಪರನ್ನು ಗುರುತಿಸುತ್ತಾನೆ. ಅವರ ಬೇಡಿಕೆಯನ್ನು ಮುಹಮ್ಮದ್‍ರು ಝೈದ್‍ನ ಮುಂದಿಡುತ್ತಾರೆ. ಝೈದ್‍ನ ಮುಖ ಸಣ್ಣದಾಗುತ್ತದೆ. ಆತ ಒಮ್ಮೆ ತನ್ನ ಒಡೆಯ ಮುಹಮ್ಮದ್‍ರನ್ನು ಮತ್ತು ಇನ್ನೊಮ್ಮೆ ತನ್ನ ತಂದೆಯ ಮುಖವನ್ನು ನೋಡುತ್ತಾನೆ.
        ಇಲ್ಲ, ನಾನು ನಿಮ್ಮನ್ನು (ಮುಹಮ್ಮದ್) ಬಿಟ್ಟು ಇನ್ನಾರ ಜೊತೆಯೂ ಇರಲಾರೆ.
         ಅಪ್ಪ: ಗುಲಾಮತನಕ್ಕಿಂತ ಸ್ವಾತಂತ್ರ್ಯ ಮೇಲಲ್ಲವೇ ಮಗು?
        ಜೈದ್: ಇಲ್ಲಪ್ಪ. ಅವರು ನನ್ನ ಒಡೆಯರಲ್ಲ, ತಂದೆ. ಅವರಲ್ಲಿ ಕಂಡಿರುವ ಗುಣಗಳನ್ನು ನಾನು ಜಗತ್ತಿನ ಇನ್ನಾರಲ್ಲೂ ಕಂಡಿಲ್ಲ. ಈ ಲೋಕದಲ್ಲಿ ಅವರನ್ನು ಬಿಟ್ಟು ಇನ್ನಾರ ಜೊತೆಯೂ ನಾನು ಇರಲಾರೆ.
       ಆದರೂ, ಇದೇ ಮುಹಮ್ಮದ್‍ರನ್ನು(ಸ) ಸಲಿಂಗ ಕಾಮಿ, ಮಕ್ಕಳ ಪೀಡಕ.. ಎಂದು ಇನ್ನೊಸೆನ್ಸ್ ಆಫ್  ಮುಸ್ಲಿಮ್ಸ್ (ಮುಸ್ಲಿಮರ ಮುಗ್ಧತನ) ಎಂಬ ತನ್ನ ಸಿನಿಮಾದಲ್ಲಿ ಸ್ಯಾಮ್ ಬೇಸಿಲಿ ಚಿತ್ರಿಸುತ್ತಾರಲ್ಲ, ಏನೆನ್ನಬೇಕು?
1. ಖದೀಜ - ಪ್ರಾಯ 40, ವಿಧವೆ
2. ಸೌಧ - ಪ್ರಾಯ 50, ವಿಧವೆ
3. ಝೈನಬ್ - ಪ್ರಾಯ 50, ವಿಧವೆ
4. ಉಮ್ಮುಹಬೀಬ - ಪ್ರಾಯ 36, ವಿಧವೆ
5. ಮೈಮೂನ - ಪ್ರಾಯ 27, ವಿಧವೆ
6. ಉಮ್ಮು ಸಲ್ಮಾ - ಪ್ರಾಯ 29, ವಿಧವೆ
7. ಹಫ್ಸಾ  - ಪ್ರಾಯ 21, ವಿಧವೆ
8. ಜುವೈರಿಯಾ - ಪ್ರಾಯ 20, ವಿಧವೆ
9. ಝೈನಬ್ - ಪ್ರಾಯ 38, ವಿಚ್ಛೇದಿತೆ
10. ಆಯಿಶಾ- ಕನ್ಯೆ
11. ಸಫಿಯ್ಯ- ಗುಲಾಮತನದಿಂದ ವಿಮೋಚನೆಗೊಂಡ ಮಹಿಳೆ
...ಹೀಗೆ ಹನ್ನೊಂದು ಮಂದಿಯನ್ನು ಮದುವೆಯಾದ ಪ್ರವಾದಿಯವರನ್ನು(ಸ) ಎದುರಿಟ್ಟುಕೊಂಡು, ಅದಕ್ಕೆ ವಿಚಿತ್ರ ಮತ್ತು ಕೀಳುಮಟ್ಟದ ವ್ಯಾಖ್ಯಾನವನ್ನು ಕೊಡುವ ಎಷ್ಟು ಮಂದಿಗೆ, 6ನೇ ಶತಮಾನದ ಸಾಮಾಜಿಕ ಪರಿಸ್ಥಿತಿಯ ಅರಿವಿದೆ? ಬುಡಕಟ್ಟುಗಳು ಮತ್ತು ಅವುಗಳೊಳಗಿನ ಜಗಳಗಳ ಬಗ್ಗೆ ಗೊತ್ತಿದೆ? ಕೇವಲ ಕೆಕ್ಕರಿಸಿ ನೋಡಿದ್ದಕ್ಕೆ, ಬೈಗುಳಕ್ಕೆ, ಸಾಲದ ವಿಷಯದಲ್ಲಿ, ಗುಲಾಮರ ಕುರಿತಂತೆ ವರ್ಷಗಟ್ಟಲೆ ಈ ಬುಡಕಟ್ಟುಗಳ ಮಧ್ಯೆ ಯುದ್ಧವಾಗುತ್ತಿತ್ತು ಎಂಬುದನ್ನು ಟೀಕಾಕಾರರು ಒಮ್ಮೆಯಾದರೂ ಉಲ್ಲೇಖಿಸುವುದಿದೆಯೇ? ನಿಜವಾಗಿ, ಪ್ರವಾದಿಯವರು(ಸ) 11 ಮಂದಿ ಪತ್ನಿಯರನ್ನು ಹೊಂದಲು ಕಾರಣವೇ ಈ ಬುಡಕಟ್ಟುಗಳು. ಅವರೊಳಗಿನ ಜನಾಂಗೀಯ ಮೇಲ್ಮೆಗಳು. ಖದೀಜ, ಅಸದ್ ಬುಡಕಟ್ಟಿಗೆ ಸೇರಿದ್ದರೆ, ಉಮ್ಮು ಸಲ್ಮಾ, ಮಕ್ಝೂಮ್ ಬುಡಕಟ್ಟಿಗೆ ಸೇರಿದ್ದರು. ಸಫಿಯ್ಯರದ್ದು ನಝೀರ್ ಬುಡಕಟ್ಟು. ಸೌಧ, ಆಮಿರ್ ಬುಡ ಕಟ್ಟಿನವರಾದರೆ, ಉಮ್ಮು ಹಬೀಬ, ಶಮ್ಸ್ ಬುಡಕಟ್ಟಿನವರಾಗಿದ್ದರು. ಹೀಗೆ ಪ್ರವಾದಿಯವರ ಎಲ್ಲ ಪತ್ನಿಯರೂ ಭಿನ್ನ ಭಿನ್ನ ಬುಡಕಟ್ಟಿಗೆ ಸೇರಿದ್ದರು. ಆದರೆ, ಯಾವಾಗ ಪ್ರವಾದಿಯವರೊಂದಿಗೆ ಈ ಬುಡಕಟ್ಟುಗಳು ವೈವಾಹಿಕ ಸಂಬಂಧವನ್ನು ಬೆಳೆಸಿಕೊಂಡಿತೋ ಅಂದಿನಿಂದಲೇ ಅವುಗಳ ಮಧ್ಯೆ ಜನಾಂಗೀಯ ಮೇಲ್ಮೆಗಳು ಸಡಿಲವಾಗತೊಡಗಿದುವು. ಪ್ರವಾದಿಯವರ ಪತ್ನಿಯರು ಒಟ್ಟಾಗಿರುವಂತೆ ಈ ಬುಡಕಟ್ಟುಗಳೂ ಜೊತೆಯಾಗಿ ಬಾಳುವುದಕ್ಕೆ ಸಿದ್ಧವಾದುವು. ಇವುಗಳ ಜೊತೆಗೇ, ಪವಿತ್ರ ಕುರ್‍ಆನಿನ ವಚನಗಳ ಮೂಲಕ ಶ್ರೇಣೀಕೃತ ಸಾಮಾಜಿಕ ಪರಿಕಲ್ಪನೆಗೆ ಪ್ರವಾದಿ ಮುಹಮ್ಮದ್‍ರು(ಸ) ಪ್ರಹಾರ ಕೊಡುತ್ತಲೇ ಇದ್ದರು. ಅವರು 11 ಮದುವೆಯಾದುದರ ದೊಡ್ಡ ಲಾಭ ಏನೆಂದರೆ, ಬುಡಕಟ್ಟುಗಳಲ್ಲಿ ಹಂಚಿಹೋಗಿದ್ದ ಮನುಷ್ಯರೆಲ್ಲ ಬುಡುಕಟ್ಟು ತೊರೆದು ಮನುಷ್ಯರಾದದ್ದು. ಕರಿಯ, ಬಿಳಿಯ, ಕಂದು ಬಣ್ಣದವ, ಅರಬಿ, ಅರಬೇತರ, ಧನಿಕ, ಬಡವ, ಕ್ಷೌರಿಕ, ಕಮ್ಮಾರ, ರೈತ, ವ್ಯಾಪಾರಿ.. ಎಲ್ಲರೂ ಒಂದೇ ಸಭೆಯಲ್ಲಿ, ಒಂದೇ ವೇದಿಕೆಯಲ್ಲಿ, ಒಟ್ಟಿಗೇ ಕಲೆತು, ಬೆರೆಯುವಂತಾದದ್ದು. ಭುಜಕ್ಕೆ ಭುಜ ತಾಗಿಸಿ, ನಮಾಝ್‍ಗೆ ನಿಲ್ಲುವಂತಾದದ್ದು. ಒಂದು ಕಾಲದಲ್ಲಿ ಅಸ್ಪೃಶ್ಯರಾಗಿದ್ದ ನೀಗ್ರೋ ಬಿಲಾಲ್, ಪ್ರಪ್ರಥಮ ಅದಾನ್ (ಬಾಂಗ್) ಕೊಡುವಷ್ಟು ಎತ್ತರದ ಮನುಷ್ಯರಾದದ್ದು. ಅಂದಹಾಗೆ, ಪ್ರವಾದಿಯವರ ಪತ್ನಿಯರ ಸಂಖ್ಯೆಯನ್ನು ಲೆಕ್ಕ ಹಾಕುವ ಮಂದಿಯೆಲ್ಲಾ, ಮದುವೆಯ ಸಂದರ್ಭದಲ್ಲಿ ಆ ಪತ್ನಿಯರ ಪ್ರಾಯವೆಷ್ಟಾಗಿತ್ತು ಎಂಬುದನ್ನು ಹೇಳುತ್ತಾರಾ? ಹನ್ನೊಂದು ಮಹಿಳೆಯರೂ ಟೀನ್ ಏಜ್‍ನವರೇ ಆಗಿರಬಹುದು ಎಂದು ಓದುಗರು ನಂಬುವಷ್ಟು ರಸವತ್ತಾಗಿ ಮುಹಮ್ಮದ್‍ರ(ಸ) ಬಹು ಪತ್ನಿತ್ವವನ್ನು ವಿವರಿಸುವವರು ಎಷ್ಟು ಮಂದಿಯಿಲ್ಲ? ಪ್ರವಾದಿಯವರು(ಸ) ಮದುವೆಯಾದದ್ದು ಮಾತ್ರವಲ್ಲ, ಅವರು ಪತ್ನಿಯರೊಂದಿಗೆ ಹೇಗೆ ನಡಕೊಂಡಿದ್ದರು ಅನ್ನುವುದೂ ಐತಿಹಾಸಿಕವಾಗಿ ದಾಖಲಾಗಿದೆ. ಅವರನ್ನು ವಿಮರ್ಶಿಸುವವರೆಲ್ಲ ಯಾಕೆ ಆ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಕನ್ಯೆಯಾಗಿದ್ದ ಆಯಿಶಾರಿಂದ(ರ) ಹಿಡಿದು 50ರ ಹರೆಯದ ಸೌಧಾರ ವರೆಗೆ ಎಲ್ಲರೂ ಪ್ರವಾದಿಯವರ ಬಗ್ಗೆ ಮಾತಾಡಿದ್ದಾರೆ. ಅವರೆಲ್ಲ ಪ್ರವಾದಿಯವರ ಬಗ್ಗೆ ಒಂದೇ ಒಂದು ಟೀಕೆಯ ನುಡಿಯನ್ನಾದರೂ ಹೊರಡಿಸದಿರುವುದಕ್ಕೆ ಕಾರಣವೇನು? ಪ್ರವಾದಿಯವರನ್ನು ಆಯಿಶಾ ಎಷ್ಟು ಪ್ರೀತಿಸುತ್ತಿದ್ದರೋ ಅಷ್ಟೇ ಪ್ರಮಾಣದಲ್ಲಿ ಸೌಧಾರೂ ಪ್ರೀತಿಸುತ್ತಿದ್ದರು. ಪ್ರವಾದಿಯವರೂ ಅಷ್ಟೇ, ಆಯಿಷಾರಷ್ಟೇ ಝೈನಬ್‍ರನ್ನೂ ಪ್ರೀತಿಸುತ್ತಿದ್ದರು..
        ಇಷ್ಟಿದ್ದೂ, ಪ್ರವಾದಿ ಮುಹಮ್ಮದ್‍ರನ್ನು ಹೆಣ್ಣುಬಾಕ ಅಂತ ಸ್ಯಾಮ್ ಬಾಸಿಲಿ ತನ್ನ ಇನ್ನೋಸೆನ್ಸ್‍ನಲ್ಲಿ ಹೇಳುತ್ತಾರಲ್ಲ..
       ಅಂದಹಾಗೆ, ಬಡ್ಡಿಮುಕ್ತ, ಮದ್ಯಮುಕ್ತ, ವರದಕ್ಷಿಣೆ ರಹಿತ, ನ್ಯಾಯಪರ ವ್ಯವಸ್ಥೆಯೊಂದನ್ನು ಕಲ್ಪಿಸಿಕೊಳ್ಳಿ. ಕಳೆದ 64 ವರ್ಷಗಳಿಂದ ಈ ದೇಶದಲ್ಲಿ ಈ ಬಗ್ಗೆ ಪ್ರಯತ್ನಗಳಾಗುತ್ತಿದ್ದರೂ, ಸಾಧ್ಯವಾಗಿಲ್ಲ. ಬೇಸಿಲಿಯ ಅಮೇರಿಕದಲ್ಲಿ, ರುಶ್ದಿಯ ಬ್ರಿಟನ್‍ನಲ್ಲಿ, ಜಿಲ್ಲ್ಯಾಂಡ್ಸ್ ಪೋಸ್ಟನ್‍ನ ಡೆನ್ಮಾರ್ಕ್‍ನಲ್ಲಿ, ಸರ್ಕೋಝಿಯ ಫ್ರಾನ್ಸ್ ನಲ್ಲಿ ಅಥವಾ  ಪ್ರವಾದಿಯವರನ್ನು ಟೀಕಿಸುವ ಜಗತ್ತಿನ ಇನ್ನಾವುದೇ ರಾಷ್ಟ್ರದಲ್ಲೂ ಇದು ಸಾಧ್ಯವಾಗಿಲ್ಲ. ಆದ್ದರಿಂದಲೇ ಕೇವಲ 23 ವರ್ಷಗಳೊಳಗೆ ಪವಿತ್ರ ಕುರ್‍ಆನ್ ಮತ್ತು ತನ್ನ ಮಾದರಿಯೋಗ್ಯ ಬದುಕಿನ ಮೂಲಕ ಇಂಥದ್ದೊಂದು ಸಮಾಜವನ್ನು ಯಶಸ್ವಿಯಾಗಿ ಕಟ್ಟಿದ ಮುಹಮ್ಮದ್(ಸ) ಶ್ರೇಷ್ಠರು ಅನ್ನಿಸುವುದು. ತನ್ನದೇ ಆದ ಒಂದೇ ಒಂದು ಪೋಟೋ ಇಲ್ಲದೆಯೂ ಜಾಗತಿಕವಾಗಿ ಅವರು ಕೋಟ್ಯಂತರ ಅನುಯಾಯಿಗಳನ್ನು ಪಡಕೊಂಡರಲ್ಲ, ಅದಕ್ಕೆ ಏನೆನ್ನಬೇಕು? ಅದೇನು ಇನ್ನೊಸೆನ್ಸಾ? ಈ ಅನುಯಾಯಿಗಳೆಲ್ಲ ವೈಚಾರಿಕವಾಗಿ ಬೆಳೆದಿಲ್ಲ ಅನ್ನುವುದಾ? ಅಲ್ಲ, ಈ ಜಗತ್ತಿನಲ್ಲಿ ನೂರರಷ್ಟೂ ಬೆಂಬಲಿಗರಿಲ್ಲದ, ತಮ್ಮ ಕೃತಿಯಿಂದಲೋ ನಾಟಕ, ಸಿನಿಮಾ, ಟೀಕೆಗಳಿಂದಲೋ ಒಂದು ಸಣ್ಣ ಹಳ್ಳಿಯಲ್ಲೂ ಕ್ರಾಂತಿಯನ್ನು ತರಲಾಗದ ಇವರದ್ದು, ವೈಚಾರಿಕ ದಿವಾಳಿತನ ಅನ್ನುವುದಾ? ಇನ್ನೋಸೆನ್ಸ್ (ಮುಗ್ಧತನ) ಯಾರದು, ಯಾವುದು?
      'ಇನ್ನೊಸೆನ್ಸ್ ಆಫ್  ಮುಸ್ಲಿಮ್ಸ್' ಎಂಬ ಸಿನಿಮಾದ ತುಣುಕನ್ನು ವೀಕ್ಷಿಸಿದ ಮೇಲೆ ಆ ಸಿನಿಮಾದ ಬಗ್ಗೆ ಬರೆಯುವುದಕ್ಕಿಂತ ಪ್ರವಾದಿ ಮುಹಮ್ಮದ್‍ರ(ಸ) ಬಗ್ಗೆ ಬರೆಯುವುದೇ ಹೆಚ್ಚು ಸೂಕ್ತ ಅನಿಸಿತು..

1 comment:

  1. > ತನ್ನದೇ ಆದ ಒಂದೇ ಒಂದು ಪೋಟೋ ಇಲ್ಲದೆಯೂ ಜಾಗತಿಕವಾಗಿ ಅವರು
    > ಕೋಟ್ಯಂತರ ಅನುಯಾಯಿಗಳನ್ನು ಪಡಕೊಂಡರಲ್ಲ, ಅದಕ್ಕೆ ಏನೆನ್ನಬೇಕು?
    ಖಂಡಿತಾ ಅದು ಅವರ ಶ್ರೇಷ್ಠತೆಯನ್ನು ತಿಳಿಸುತ್ತದೆ. ವ್ಯಕ್ತಿಯೊಬ್ಬ ಕಾಲವಾದ ಶತಮಾನಗಳ ನಂತರವೂ ಲಕ್ಷಾಂತರ ಜನ ಆತನನ್ನು ಅನುಸರಿಸುತ್ತಾರೆಂದರೆ, ಆ ವ್ಯಕ್ತಿಯ ಶ್ರೇಷ್ಠತೆಗೆ ಮತ್ಯಾವ ಸಾಕ್ಷಿ ಬೇಕು?

    ಆದರೆ, ಪ್ರವಾದಿಯವರ ಮತವನ್ನನುಸರಿಸುವ ರಾಷ್ಟ್ರಗಳಾವುವೂ ಜಗತ್ತಿಗೆ ಮಾದರಿ ರಾಷ್ಟ್ರಗಳೆನಿಸಲು ಆಗದಿರುವುದು ನಮ್ಮ ಮುಂದಿರುವ ವಾಸ್ತವ.

    ReplyDelete