Saturday, January 23, 2021

ಪಾಕಿಸ್ತಾನ್ ಝಿಂದಾಬಾದ್' ಯಾರ ಅಗತ್ಯ?ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದು ಕಾನೂನು ವಿರೋಧಿಯೇ ಎಂಬ ಪ್ರಶ್ನೆಯು ಇನ್ನೆರಡು ಉಪ ಪ್ರಶ್ನೆಗಳಿಗೂ ಜನ್ಮ ನೀಡುತ್ತದೆ.
1. ಅಂಥದ್ದೊಂದು ಘೋಷಣೆಯ ಅಗತ್ಯ ಏನಿದೆ?
2. ಬರೇ ಕಾನೂನಿನ ದೃಷ್ಟಿಯಿಂದ ಮಾತ್ರ ಇದನ್ನು ನೋಡುವುದು ಸರಿಯೇ?
ಇಲ್ಲಿ ಮುಖ್ಯ ಪ್ರಶ್ನೆಗಿಂತ ಉಪ ಪ್ರಶ್ನೆಗಳೇ ಹೆಚ್ಚಿನ ವ್ಯಾಖ್ಯಾನವನ್ನೂ ಬಯಸುತ್ತವೆ.
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗುವುದರ ಅಗತ್ಯ ಏನಿದೆ ಎಂಬ ಪ್ರಶ್ನೆಯ ಜೊತೆಜೊತೆಗೇ, ನಿಜಕ್ಕೂ ಇಂಥದ್ದೊಂದು ಘೋಷಣೆಯನ್ನು ಈ ದೇಶದಲ್ಲಿ ಕೂಗಲಾಗುತ್ತಿದೆಯೇ ಎಂಬ ಪ್ರಶ್ನೆಯೂ ಅಷ್ಟೇ ಮುಖ್ಯವಾಗುತ್ತದೆ. ಇದಕ್ಕೆ ಕಾರಣವೂ ಇದೆ.
ಕನ್ಹಯ್ಯ ಕುಮಾರ್ ರಾಷ್ಟ್ರೀಯ ವ್ಯಕ್ತಿತ್ವವಾದದ್ದೇ ಇಂಥ ಪ್ರಕರಣದಲ್ಲಿ. ಪಾರ್ಲಿಮೆಂಟ್ ದಾಳಿಯ ಅಪರಾಧದಲ್ಲಿ ನೇಣು ಶಿಕ್ಷೆಗೀಡಾದ ಅಫ್ಝಲ್ ಗುರುವಿಗೆ ಸಂಬಂಧಿಸಿ ಜೆನ್‌ಯುವಿನಲ್ಲಿ ಫೆ. 9, 2016ರಂದು ಸಭೆ ನಡೆಸಲಾಗಿತ್ತು. ಅದರಲ್ಲಿ ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಭಟ್ಟಾಚಾರ್ಯ ಸೇರಿದಂತೆ ಹಲವು ವಿದ್ಯಾರ್ಥಿ ನಾಯಕರು ಭಾಗವಹಿಸಿದ್ದರು. ಆ ಸಭೆಯಲ್ಲಿ ದೇಶದ್ರೋಹಿ ಘೋಷಣೆಯನ್ನು ಕೂಗಿದ್ದಾರೆ ಎಂದು ಕನ್ಹಯ್ಯ ಕುಮಾರ್, ಉಮರ್ ಖಾಲಿದ್, ಅನಿರ್ಬನ್ ಸಹಿತ ಹಲವು ವಿದ್ಯಾರ್ಥಿಗಳ ಮೇಲೆ ಆರೋಪವನ್ನು ಹೊರಿಸಲಾಯಿತು. ಆಗ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗಿತ್ತಷ್ಟೇ. ಅದೇ ಆರೋಪದಲ್ಲಿ ಫೆ. 12, 2016ರಂದು ಕನ್ಹಯ್ಯರ ಬಂಧನವೂ ನಡೆಯಿತು. ಫೆ. 24ರಂದು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯರ ಬಂಧನವೂ ನಡೆಯಿತು. ಆ ಬಂಧನದ ಸಮಯದಲ್ಲಿ ಓರ್ವ ನ್ಯಾಯವಾದಿ ಕನ್ಹಯ್ಯರ ಮೇಲೆ ಹಲ್ಲೆ ನಡೆಸಿದ್ದರು. ಕನ್ಹಯ್ಯ ಪದೇ ಪದೇ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದರು. ತನ್ನ ಘೋಷಣೆಯನ್ನು ಉದ್ದೇಶಪೂರ್ವಕವಾಗಿ ತಿರುಚಲಾಗಿದೆ ಎಂದು ಹೇಳಿದರು. ಉಮರ್ ಖಾಲಿದ್‌ರನ್ನೂ ದೃಶ್ಯ ಮಾಧ್ಯಮಗಳು ಬೆನ್ನಟ್ಟಿದುವು. ಅವರು ಪಾಕಿಸ್ತಾನಕ್ಕೆ ಭೇಟಿ ಕೊಟ್ಟಿರುವುದಾಗಿಯೂ ಹೇಳಿದುವು. ಅಸಲಿಗೆ ಅವರಲ್ಲಿ ಪಾಸ್‌ಪೋರ್ಟೇ ಇರಲಿಲ್ಲ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರದ ಪರ ಸುದ್ದಿಯನ್ನು ನೀಡುವುದಕ್ಕೆ ಮತ್ತು ಎಡಪಂಥೀಯ ವಿಚಾರಧಾರೆಯನ್ನು ಮತ್ತು ಕಾಂಗ್ರೆಸ್ ಪಕ್ಷವನ್ನು ಹಣಿಯುವುದಕ್ಕೆ ಆಂಗ್ಲ ಮತ್ತು ಹಿಂದಿ ದೃಶ್ಯ ಮಾಧ್ಯಮಗಳು ಜಿದ್ದಿಗೆ ಬಿದ್ದಂತೆ ವರ್ತಿಸುತ್ತಿದ್ದ ಕಾಲ ಅದು. ಮಾರ್ಚ್ 3, 2016ರಂದು ಕನ್ಹಯ್ಯ ಜಾಮೀನಿನ ಮೇಲೆ ಹೊರಬಂದರೆ, ಫೆ. 17ರಂದು ಉಮರ್ ಮತ್ತು ಅನಿರ್ಬನ್ ಕೂಡ ಜೈಲಿನಿಂದ ಹೊರಬಂದರು. 2019ರಲ್ಲಿ ದೆಹಲಿ ಪೊಲೀಸರು 1200ರಷ್ಟು ಪುಟಗಳ ಚಾರ್ಜ್ ಶೀಟನ್ನು ನ್ಯಾಯಾಲಯದ ಮುಂದೆ ಸಲ್ಲಿಸಿದರು. 2020 ಫೆಬ್ರವರಿಯಲ್ಲಿ ದೆಹಲಿ ಸರಕಾರವು ಈ ದೇಶದ್ರೋಹಿ ಪ್ರಕರಣದ ವಿಚಾರಣೆಯನ್ನು ಮುಂದುವರಿಸುವುದಕ್ಕೆ ಅನುಮತಿಯನ್ನೂ ನೀಡಿತು. ಫೆ. 9, 2016ರ ಬಳಿಕದ ಈ ಸುಮಾರು 5 ವರ್ಷಗಳಲ್ಲಿ ನಡೆದಿರುವ ಬೆಳವಣಿಗೆ ಇಷ್ಟೇ. ಆದರೆ,
ಈ ಇಡೀ ಗದ್ದಲದಿಂದ ಅತ್ಯಂತ ಹೆಚ್ಚು ಲಾಭ ಮಾಡಿಕೊಂಡಿರುವುದು ಬಿಜೆಪಿ. ದೇಶದ್ರೋಹಿ ಘೋಷಣೆಯನ್ನು ಇವರೆಲ್ಲ ಕೂಗಿದ್ದಾರೋ ಇಲ್ಲವೋ ಎಂಬುದು ಇನ್ನೂ ನಿರ್ಣಯವಾಗಿಲ್ಲ. ಕನ್ಹಯ್ಯ ಆಗಲಿ, ಉಮರ್, ಅನಿರ್ಬನ್ ಆಗಲಿ ಈ ಆರೋಪವನ್ನು ಒಪ್ಪುತ್ತಲೂ ಇಲ್ಲ. ಆ ಸಭೆಯ ವೀಡಿಯೊವನ್ನು ಪೂರ್ಣವಾಗಿ ತಿರುಚಲಾಗಿದೆ ಎಂಬ ಆರೋಪ ಆವತ್ತಿನಿಂದ ಇವತ್ತಿನವರೆಗೂ ಹಾಗೆಯೇ ಉಳಿದುಕೊಂಡಿದೆ. ಆದರೆ,
ಜೆಎನ್‌ಯುವನ್ನು ದೇಶದ್ರೋಹಿಗಳ ಅಡ್ಡೆ ಎಂದು ಹೇಳುವುದಕ್ಕೆ, ಅದನ್ನು ಗುರಿಯಾಗಿಸಿಕೊಂಡು ದೇಶಪ್ರೇಮದ ಡಯಲಾಗ್‌ಗಳನ್ನು ದೇಶದಾದ್ಯಂತ ಬಿತ್ತುವುದಕ್ಕೆ ಬಿಜೆಪಿಗೆ ಸಾಧ್ಯವಾಗಿದೆ. ನಿಧಾನವಾಗಿ ಜೆಎನ್‌ಯುವಿನ ಮೇಲೆ ಎಂಥ ಕಪ್ಪು ಮಸಿ ಅಂಟಿಕೊಂಡಿತೆಂದರೆ, ಅಲ್ಲಿನ ವಿದ್ಯಾರ್ಥಿಗಳ ಮೇಲೆ ಜನವರಿ 5, 2020ರಂದು ಆಯುಧಧಾರಿಗಳಿಂದ ಮಾರಣಾಂತಿಕ ಹಲ್ಲೆಯೂ ನಡೆಯಿತು. ಮೈಯಿಡೀ ಗಾಯ ಮಾಡಿಕೊಂಡ ವಿದ್ಯಾರ್ಥಿ ನಾಯಕಿ ಐಶೆ ಘೋಷ್ ಮತ್ತಿತರ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಜಾಗತಿಕ ಗಮನ ಸೆಳೆದರು. ದಾಳಿಕೋರರು ಬಲಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರಾಗಿದ್ದರು ಎಂಬುದನ್ನು ಸಾಬೀತುಪಡಿಸುವ ಹಲವು ಸಾಕ್ಷ್ಯಗಳು ಸಿಕ್ಕವು. ಅದು ಸಿಎಎ, ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಗಳಾಗುತ್ತಿದ್ದ ಸಮಯವೂ ಹೌದು. ನಿಜವಾಗಿ,
ದೇಶದ್ರೋಹದ ಆರೋಪವನ್ನು ಹೊರಿಸುವುದರಿಂದ ಇತರೆಲ್ಲ ಆರೋಪಗಳಿಗಿಂತ ಹೆಚ್ಚಿನ ರಾಜಕೀಯ ಮತ್ತು ಸಾಂಸ್ಕೃತಿಕ ಲಾಭವನ್ನು ಪಡೆದುಕೊಳ್ಳಬಹುದು ಎಂಬುದನ್ನು ಸಾಬೀತುಪಡಿಸಿದ ಪ್ರಕರಣ ಇದು. ಈ ಆರೋಪ ಸಾಬೀತುಗೊಳ್ಳುತ್ತದೋ ಬಿಡುತ್ತದೋ ಎಂಬುದು ಅಮುಖ್ಯ. ಆರೋಪವೇ ಮುಖ್ಯ. ಆರೋಪ ಹೊರಿಸಲಾದ ಸಮಯದಲ್ಲಿ ಉಂಟಾಗುವ ಗದ್ದಲವು ಬರೇ ಕಾನೂನಾತ್ಮಕವಾದುವಾಗಿರುವುದಿಲ್ಲ. ಅದಕ್ಕೆ ರಾಜಕೀಯ ಆಯಾಮ ಇರುತ್ತದೆ. ಸಾಂಸ್ಕೃತಿಕ ಮತ್ತು ಧ್ರುವೀಕರಣ ರಾಜಕಾರಣದಲ್ಲಿ ನಂಬಿಕೆಯನ್ನಿಟ್ಟ ಪಕ್ಷಕ್ಕೆ ಹುಲಸಾದ ಬೆಳೆಯನ್ನು ಕೊಯ್ಯಲು ಆ ಆರೋಪವೊಂದೇ ಸಾಕಾಗುತ್ತದೆ. ಅಂದಹಾಗೆ,
ಇಂಥ  ರಾಜಕಾರಣದಲ್ಲಿ ನಂಬಿಕೆಯಿಟ್ಟವರಿಗೆ ಎದುರು ಭಾಗದಲ್ಲಿ ದೇಶದ್ರೋಹಿಗಳ ಒಂದು ಗುಂಪು ಬೇಕೇ ಬೇಕಾಗುತ್ತದೆ. ತಾವು ದೇಶಪ್ರೇಮಿಗಳಾಗುವುದೇ ಆ ಎದುರು ಭಾಗದಲ್ಲಿರುವ ದೇಶದ್ರೋಹಿಗಳನ್ನು ತೋರಿಸಿ. ಭ್ರಷ್ಟಾಚಾರ, ಅತ್ಯಾಚಾರ, ವಂಚನೆ ಇತ್ಯಾದಿ ಆರೋಪಗಳನ್ನು ಹೊರಿಸಿ ಸಮಾಜದ ಗಮನ ಸೆಳೆಯುವುದು ಎಷ್ಟು ಕಷ್ಟವೋ ದೇಶದ್ರೋಹದ ಆರೋಪ ಹೊರಿಸಿ ಸಮಾಜವನ್ನು ಸೆಳೆಯುವುದು ಅಷ್ಟೇ ಸುಲಭ. ಇವನ್ನು ಸಾಬೀತು ಪಡಿಸುವುದಕ್ಕೆ ಇನ್ನೆರಡು ಪ್ರಕರಣಗಳನ್ನು ಉದಾಹರಿಸಬಹುದು-
2020 ನವೆಂಬರ್ 7ರಂದು ಅಸ್ಸಾಮ್ ಬಿಜೆಪಿ ಶಾಸಕ ಮತ್ತು ಪ್ರಮುಖ ನಾಯಕ ಹಿಮಾಂಶು ಬಿಸ್ವ ಶರ್ಮ ಒಂದು ಟ್ವೀಟ್ ಮಾಡುತ್ತಾರೆ. ಅಸ್ಸಾಮ್‌ನ ಪ್ರಮುಖ ವಿರೋಧ ಪಕ್ಷವಾದ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)ನ ಅಧ್ಯಕ್ಷ ಮೌಲಾನಾ ಬದ್ರುದ್ದೀನ್ ಅಜ್ಮಲ್‌ಗೆ ಸಂಬಂಧಿಸಿದ ಟ್ವೀಟ್ ಅದು. 2020 ನವೆಂಬರ್ 7 ರಂದು ಅಸ್ಸಾಮ್‌ನ ಸಿಲ್‌ಚಾರ್ ವಿಮಾನ ನಿಲ್ದಾಣಕ್ಕೆ ಅವರು ಆಗಮಿಸುತ್ತಾರೆ ಮತ್ತು ಜೊತೆಗೆ ಶಾಸಕ ಅಝೀಝï ಖಾನ್ ಕೂಡ ಇರುತ್ತಾರೆ. ಇವರನ್ನು ಸ್ವಾಗತಿಸುವುದಕ್ಕಾಗಿ ಹೊರಗಡೆ ಸೇರಿದ್ದ ಪಕ್ಷದ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆ ಎಂದು ಹಿಮಾಂಶು ಬಿಸ್ವ ಶರ್ಮ ಟ್ವೀಟ್ ಮಾಡುತ್ತಾರೆ. ಆ ಬಳಿಕ ಅಂಥದ್ದೇ  ಟ್ವೀಟನ್ನು ಬಿಜೆಪಿಯ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವೀಯ, ಅಸ್ಸಾಮ್‌ನ ಶಾಸಕರಾದ ರಾಜ್‌ದೀಪ್ ರಾಯ್ ಮತ್ತು ಅಶೋಕ್ ಸಿಂಘಾಲ್ ಕೂಡ ಮಾಡುತ್ತಾರೆ. ರಾಷ್ಟ್ರೀಯ ಆಂಗ್ಲ ಮತ್ತು ಹಿಂದಿ ದೃಶ್ಯಮಾಧ್ಯಮಗಳು ಭಾರೀ ಮಹತ್ವ ಕೊಟ್ಟು ಆ ವೀಡಿಯೋವನ್ನು ಮತ್ತು ಸುದ್ದಿಯನ್ನು ಹಂಚಿಕೊಳ್ಳುತ್ತವೆ. ಈ ಗದ್ದಲದ ನಡುವೆ AIUDF  ಪತ್ರಿಕಾಗೋಷ್ಠಿಯನ್ನು ಕರೆದು ನಿಜ ಏನೆಂದು ಹೇಳುತ್ತದೆ. ಫ್ಯಾಕ್ಟ್ ಚೆಕ್ ವಿವರಗಳೂ ಹೊರಬೀಳುತ್ತವೆ. ಅಸಲಿ ಸಂಗತಿ ಏನೆಂದರೆ,
ಮೌಲಾನಾ ಅಜ್ಮಲ್‌ರನ್ನು ಸ್ವಾಗತಿಸಲು ವಿಮಾನ ನಿಲ್ದಾಣದಲ್ಲಿ ಸೇರಿದ್ದ ಜನರು ಅಜ್ಮಲ್‌ರಿಗೆ ಝಿಂದಾಬಾದ್ ಎಂದು ಕೂಗಿದಂತೆಯೇ ಅಝೀಝï ಖಾನ್ ಝಿಂದಾಬಾದ್ ಎಂದೂ ಕೂಗಿದ್ದರು. ಈ ಅಝೀಝï ಖಾನ್ ಝಿಂದಾಬಾದ್ ಎಂಬ ಕೂಗನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಹೇಳಲಾಗಿದೆ. ಈ ಕಾರಣದಿಂದಲೇ ಆ ಬಳಿಕ ಹಿಮಾಂಶು ಬಿಸ್ವ ಶರ್ಮ ಅವರ ಮೇಲೆ ವಿವಿಧ ಸಮುದಾಯದ ಮೇಲೆ ಸಂಘರ್ಷ ಹುಟ್ಟು ಹಾಕಲು ಪ್ರಚೋದಿ ಸಿದ ಕೇಸು ದಾಖಲಿಸಿರುವುದಾಗಿ ನವೆಂಬರ್ 11ರಂದು ಪಿಟಿಐ ಮಾಡಿರುವ ವರದಿಯನ್ನು ದಿ ವೈರ್ ಸುದ್ದಿ ಜಾಲತಾಣ ಉಲ್ಲೇಖಿಸಿತ್ತು. ವಿಶೇಷ ಏನೆಂದರೆ, ಹಿಮಾಂಶು ಬಿಸ್ವ ಅವರು ನವೆಂಬರ್ 7ರಂದು ಮಾಡಿದ ಟ್ವೀಟ್‌ನಲ್ಲಿಯ ವಿಷಯಗಳು-
This throughly exposes @ INC India which is encouraging such forces by forging an alliance. We shall fight them tooth and nail. Jai Hind.
ಈ ಟ್ವೀಟ್‌ನಲ್ಲಿ ಕಾಂಗ್ರೆಸನ್ನು ಎಳೆದು ತಂದಿರುವುದೇಕೆ ಎಂಬ ಪ್ರಶ್ನೆ ಸಹಜವಾಗಿ ಕಾಡುತ್ತದೆ. ಯಾಕೆಂದರೆ, 2021ರಲ್ಲಿ ನಡೆಯಲಿರುವ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಎಐಯುಡಿಎಫ್ ಮತ್ತು ಕಮ್ಯುನಿಸ್ಟ್ ಪಕ್ಷಗಳೊಂದಿಗೆ ಕಾಂಗ್ರೆಸ್ ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿ ಎಲ್ಲಿ ಸವಾಲಾಗುತ್ತೋ ಎಂಬ ಭೀತಿ ಹಿಮಾಂಶುರದ್ದು.
ಇದೀಗ, ಈ ಹಿನ್ನೆಲೆಯಲ್ಲಿ ಆ ಇಡೀ ಪ್ರಕರಣವನ್ನೊಮ್ಮೆ ಪುನಃ ಅವಲೋಕಿಸಿ ನೋಡಿ. ಆ ಆರೋಪದ ಹಿನ್ನೆಲೆ ನಿಮಗೆ ಸುಲಭದಲ್ಲಿ ಮನವರಿಕೆಯಾಗಬಹುದು.
ಇನ್ನೊಂದು ಪ್ರಕರಣವನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಉತ್ತರ ಪ್ರದೇಶದ ಲಕ್ನೋದಲ್ಲಿ 2019 ಡಿಸೆಂಬರ್ 13ರಂದು ಎನ್‌ಆರ್‌ಸಿ, ಸಿಎಎ ವಿರೋಧಿ ಪ್ರತಿಭಟನೆ ನಡೆಯಿತು. ಇದಕ್ಕೆ ನೇತೃತ್ವ ನೀಡಿದವರು ಓವೈಸಿ ಪಕ್ಷದ ಮುಖಂಡ ಕಾಶಿಫ್ ಅಹ್ಮದ್ ಎಂಬವರು. ಈ ಸಭೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿದೆ ಎಂಬುದಾಗಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಲವೀಯ ಡಿಸೆಂಬರ್ 28ರಂದು ಟ್ವೀಟ್ ಮಾಡಿದ್ದರು. ಅಲ್ಬ್ ನ್ಯೂಸ್ ಆ ಕಾರ್ಯಕ್ರಮದ ವೀಡಿಯೋವನ್ನು ನಿಕಷಕ್ಕೆ ಒಡ್ಡಿತು ಮತ್ತು ಅದರ ಫಲಿತಾಂಶವನ್ನು ದ ವೈರ್ ಸುದ್ದಿ ಜಾಲತಾಣ ಕೂಡ ಪ್ರಕಟಿಸಿತು. ಆ ಸಭೆಯಲ್ಲಿ ಕಾಶಿಫ್ ಸಾಬ್ ಝಿಂದಾಬಾದ್, ಹಿಂದೂಸ್ತಾನ್ ಝಿಂದಾಬಾದ್, ಅಕ್ಬರ್ ಓವೈಸಿ ಝಿಂದಾಬಾದ್ ಎಂದು ಕೂಗಲಾಗಿದೆಯೇ ಹೊರತು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಲಾಗಿಲ್ಲ ಎಂದು ಅದು ಹೇಳಿತು. ಮಾತ್ರವಲ್ಲ, ಉತ್ತರ ಪ್ರದೇಶದ ಪೊಲೀಸರು ಕೂಡ ದೇಶದ್ರೋಹದ ಕೇಸನ್ನು ಕೈಬಿಟ್ಟು ಶಾಂತಿ ಕದಡಿದ ಪ್ರಕರಣವನ್ನಷ್ಟೇ ದಾಖಲಿಸಿದರು. ಆದರೆ, ಅಮಿತ್ ಮಾಲವೀಯ ಅವರ ಟ್ವೀಟ್ ನಿಂದ ಏನನ್ನು ಪಡೆದುಕೊಳ್ಳಬೇಕೋ ಅವೆಲ್ಲವನ್ನೂ ಪಡೆದುಕೊಳ್ಳ ಬೇಕಾದವರು ಪಡೆದುಕೊಂಡರು.
ನಿಜ ಏನೆಂದರೆ,
ಪಾಕಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆಂದು ಯಾರ ಮೇಲಾದರೂ ಆರೋಪ ಹೊರಿಸುವುದರಲ್ಲಿ ಒಂದು ಥ್ರಿಲ್ ಇದೆ. ಇದು ಓರ್ವರನ್ನು ಭ್ರಷ್ಟಾಚಾರಿ ಎಂದು ಆರೋಪಿಸಿ ದಂತಲ್ಲ. ಆದ್ದರಿಂದಲೇ, ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೂ ಇದೇ ಆರೋಪವನ್ನು ಬಿಜೆಪಿ ಹೊರಿಸಿದ್ದು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಶಂತ್ ಕುಮಾರ್ ಗೌತಂ ಅವರು ನವೆಂಬರ್ 29, 2020ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತುಗಳನ್ನು ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿತ್ತು. ರೈತ ಪ್ರತಿಭಟನೆಯಲ್ಲಿ ಪಾಕಿಸ್ತಾನ್ ಝಿಂದಾಬಾದ್, ಖಾಲಿಸ್ತಾನ್ ಝಿಂದಾಬಾದ್ ಎಂಬ ಘೋಷಣೆ ಕೂಗಲಾಗಿದೆ ಎಂದವರು ಆರೋಪಿಸಿದ್ದರು. ಹಾಗಂತ, ನಿಜಕ್ಕೂ ಹಾಗೆ ರೈತರು ಘೋಷಿಸಿದ್ದಾರೆಯೇ, ಅದಕ್ಕೆ ಏನು ಪುರಾವೆಗಳಿವೆ ಮತ್ತು ಅವು ಎಷ್ಟು ದೋಷರಹಿತ ಎಂಬ ಪ್ರಶ್ನೆಗಳಿಗೆಲ್ಲ ಉತ್ತರ ತಕ್ಷಣಕ್ಕೆ ಲಭ್ಯವಾಗುವುದಕ್ಕೆ ಸಾಧ್ಯವಿಲ್ಲ. ಈ ಸತ್ಯ ಆರೋಪ ಹೊರಿಸುವವರಿಗೆ ಚೆನ್ನಾಗಿ ಗೊತ್ತು. ಆರೋಪಿತರು ಆ ಕ್ಷಣ ದಂಗಾಗುತ್ತಾರೆ. ನಾಲ್ಕೂ ಕಡೆಯಿಂದ ತೂರಿ ಬರುವ ಪ್ರಶ್ನೆಗಳಿಗೆ ನಿರಾಕರಣೆಯ ಉತ್ತರ ನೀಡಿ ನೀಡಿ ಸುಸ್ತಾಗುತ್ತಾರೆ ಮತ್ತು ಇಂಥ ನಿರಾಕರಣೆಯ ಉತ್ತರವನ್ನು ಅವರು ನೀಡುತ್ತಿರಬೇಕು ಎಂಬುದು ಆರೋಪ ಹೊರಿಸುವವರ ಉದ್ದೇಶವೂ ಆಗಿರುತ್ತದೆ. ಮುಂದೊಂದು ದಿನ ಆ ಆರೋಪ ತಪ್ಪೆಂದು ಸಾಬೀತಾದರೂ ಅದು ಸಾಸಿವೆಯಷ್ಟು ಸದ್ದು ಮಾಡುವುದಕ್ಕೂ ಸಮರ್ಥವಿರುವುದಿಲ್ಲ.
ಅಷ್ಟಕ್ಕೂ,
ಪಾಕಿಸ್ತಾನ್ ಝಿಂದಾಬಾದ್ ಎಂಬುದು ಶ್ರೀಲಂಕಾ ಝಿಂದಾ ಬಾದ್ ಎಂದು ಕೂಗಿದಷ್ಟೇ ಸಹಜವಾದುದು ಮತ್ತು ಸಮಾನ ಸ್ಥಾನಮಾನವುಳ್ಳದ್ದು ಎಂದು ವಾದಿಸುವುದನ್ನು ಒಪ್ಪಲಾಗದು. ಪಾಕ್ ಮತ್ತು ಭಾರತದ ನಡುವಿನ ಸಂಬಂಧ ಸಹಜವಾಗಿಲ್ಲದೇ ಇರುವಾಗ ಮತ್ತು ಈ ಎರಡು ರಾಷ್ಟ್ರಗಳ ನಡುವೆ ನಾಲ್ಕನೇ ಯುದ್ಧ ಯಾವ ಸಂದರ್ಭದಲ್ಲೂ ಘಟಿಸಬಹುದು ಎಂಬ ವಾತಾವರಣ ಸಣ್ಣ ಪ್ರಮಾಣದಲ್ಲಾದರೂ ಇರುವಾಗ ಪಾಕ್ ಝಿಂದಾಬಾದ್ ಮತ್ತು ಲಂಕಾ ಝಿಂದಾಬಾದ್ ಘೋಷಣೆಗಳನ್ನು ಏಕಪ್ರಕಾರವಾಗಿ ಪರಿಗಣಿಸಲು ಅಸಾಧ್ಯ. ಕಾನೂನಿನ ಪ್ರಕಾರ ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದು ನೇರವಾಗಿ ತಪ್ಪಲ್ಲದೇ ಇರಬಹುದು. ಆದರೆ, ಎರಡೂ ದೇಶಗಳ ನಡುವಿನ ಸಂಬಂಧ ಮತ್ತು ಅದು ಹುಟ್ಟು ಹಾಕಿರುವ ಪರಿಣಾಮಗಳು ಕಾನೂನಿನ ಹೊರತಾದ ಜಿಜ್ಞಾಸೆಗೂ ಕಾರಣವಾಗುತ್ತದೆ. ಅಂದಹಾಗೆ,
ಪಾಕಿಸ್ತಾನ್ ಝಿಂದಾಬಾದ್ ಎಂದು ಹೇಳುವುದರಿಂದ ಭಾರತೀಯರಿಗೆ ದಕ್ಕುವುದು ಏನೂ ಇಲ್ಲ. ಈ ಸತ್ಯ ಭಾರತೀಯರಿಗೆ ಗೊತ್ತಿರುತ್ತದೆ, ಗೊತ್ತಿರಬೇಕು. ಆದರೆ, ಪಾಕಿಸ್ತಾನ್ ಝಿಂದಾಬಾದ್ ಕೂಗಿದ್ದಾರೆಂದು ಆರೋಪ ಹೊರಿಸುವುದರಿಂದ ಏನೆಲ್ಲ ದಕ್ಕುತ್ತದೆ ಎಂಬುದಂತೂ ಹೊರಿಸುವವರಿಗೆ ಚೆನ್ನಾಗಿಯೇ ಗೊತ್ತಿದೆ. ಅಷ್ಟಕ್ಕೂ,
ದ.ಕ. ಜಿಲ್ಲೆಯಲ್ಲಿ ಎಸ್‌ಡಿಪಿಐ ಬೆಂಬಲಿಗರು ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿದ್ದಾರೆಂಬ ಆರೋಪ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಇವೆಲ್ಲ ನೆನಪಾಯಿತು.

Saturday, January 9, 2021

ಕಡಲ ‘ಮೀನುಗಳು' ಮಾತಾಡಿದುವು, ಮನಸ್ಸು ಆರ್ದ್ರಗೊಂಡಿತು..


 ಏ.ಕೆ. ಕುಕ್ಕಿಲ
ಆ 5 ಮಂದಿ ಮೀನುಗಾರರು ಕಚೇರಿಗೆ ಬಂದಿದ್ದರು. ಕೂರಿಸಿ ಮಾತಾಡಿಸಿದೆ. ಮಂಗಳೂರಿನ ಕಡಲಲ್ಲಿ ಮುಳುಗಿದ ಶ್ರೀರಕ್ಷಾ  ಪರ್ಸಿನ್ ಬೋಟ್‍ನಿಂದ ಪವಾಡಸದೃಶವಾಗಿ ಪಾರಾಗಿ ಬಂದ 19 ಮಂದಿಯಲ್ಲಿ ಈ ಯುವಕರೂ ಇದ್ದರು ಅಥವಾ ಆ 19 ಮಂದಿ  ಬದುಕಿ ಉಳಿದುದರಲ್ಲಿ ಈ 5 ಮಂದಿಯ ಪಾತ್ರ ಬಹಳ ದೊಡ್ಡದು. ಆಳ ಮೀನುಗಾರಿಕೆಗೆ ತೆರಳುವ ಪರ್ಸಿನ್ ಬೋಟ್‍ಗೆ ಸಣ್ಣ  ಬೋಟನ್ನೂ ಕಟ್ಟಲಾಗಿರುತ್ತದೆ. ಇದಕ್ಕೆ ಡಿಂಗಿ ಬೋಟ್ ಎಂದು ಹೆಸರು. ಪರ್ಸಿನ್ ಬೋಟು ಅವಘಡಕ್ಕೆ ಈಡಾದರೆ ಆಪತ್ಕಾಲಕ್ಕೆ  ಇರಲಿ ಎಂಬ ಉದ್ದೇಶದಿಂದ ಈ ಬೋಟನ್ನು ಜೊತೆಗೊಯ್ಯಲಾಗುತ್ತದೆ. ಶ್ರೀರಕ್ಷಾ ಬೋಟು ದಿಢೀರ್ ಆಗಿ ಕವುಚಿ ಬೀಳುವ  ಸೂಚನೆ ನೀಡಿದಾಗ ಅದರಲ್ಲಿದ್ದ ಈ 25ರಷ್ಟು ಮೀನುಗಾರರಿಗೆ ಕಡಲಿಗೆ ಧುಮುಕದೇ ಬೇರೆ ದಾರಿಯಿರಲಿಲ್ಲ. ಅರ್ಧರಾತ್ರಿ. ಒಬ್ಬನನ್ನು ಮತ್ತೊಬ್ಬ ಗುರುತಿಸಲಾಗದ ಮತ್ತು ಪತ್ತೆಹಚ್ಚಲಾಗದಂಥ ಸ್ಥಿತಿ. ಅಲ್ಲದೇ ತೀವ್ರ ಚಳಿ. ಕಡಲಿನ ಯಾವುದೋ ಒಂದು ಮಧ್ಯಭಾಗ.

ಪರ್ಸಿನ್ ಬೋಟು ನಿಧಾನಕ್ಕೆ ಮುಳುಗಲು ಪ್ರಾರಂಭಿಸಿದಾಗ ಅದರ ಜೊತೆಗೇ ಆ ಡಿಂಗಿ ಬೋಟೂ ಮುಳುಗಲು ಪ್ರಾರಂಭಿಸಿತು.  ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ಗೆ ಹಗ್ಗದಿಂದ ಕಟ್ಟಿರುವ ಕಾರಣ ಇದು ಸಹಜವೂ ಆಗಿತ್ತು. ಸುಮಾರು 18 ಟನ್ ಮೀನನ್ನು  ತುಂಬಿಸಿಕೊಂಡಿರುವ ಬೋಟೊಂದು ನಿಧಾನಕ್ಕೆ ಕವುಚಿ ಬೀಳಲು ತೊಡಗುವುದು ಮತ್ತು ಅದರ ಜೊತೆಗೇ ಆಪತ್ಕಾಲದ ಬೋಟೂ  ಮುಳುಗುತ್ತಿರುವುದನ್ನು ಕಡಲಿಗೆ ಬಿದ್ದ ಹೆಚ್ಚಿನ ಮೀನುಗಾರರು ಹೊಲಬರಿಯದೇ ನೋಡುತ್ತಿದ್ದಾಗ ಈ 5 ಮಂದಿ ಯುವಕರು  ಅಸಾಧಾರಣ ಧೈರ್ಯ ತೋರಿ ಮುಳುಗುತ್ತಿದ್ದ ಪರ್ಸಿನ್ ಬೋಟ್‍ನಿಂದ ಕತ್ತಿಯನ್ನು ತಂದು ಹಗ್ಗ ಕತ್ತರಿಸತೊಡಗಿದರು. ಬಹುಶಃ  ಪರ್ಸಿನ್ ಬೋಟು ಕವುಚಿ ಬೀಳದೇ ಇರುತ್ತಿದ್ದರೆ ಈ ಹಗ್ಗ ಕತ್ತರಿಸುವುದಕ್ಕೂ ಸಮಯವೇ ಸಿಗುತ್ತಿರಲಿಲ್ಲವೇನೋ?
ಒಬ್ಬನ ನಂತರ ಒಬ್ಬ ಹೀಗೆ ಹಗ್ಗ ಕತ್ತರಿಸಿ ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ನಿಂದ ಬೇರ್ಪಡಿಸುವ ಸಾಹಸಕ್ಕೆ ಧುಮುಕಿದರು.  ಹಾಗೆ ಬೇರ್ಪಡಿಸಿದ ಪರಿಣಾಮ ನೀರಲ್ಲಿದ್ದ 19 ಮಂದಿ ಈ ಬೋಟನ್ನು ಸೇರಿಕೊಂಡು ಬದುಕಿ ಬಂದರು. ವಿಷಾದ ಏನೆಂದರೆ,  

ಹಿಂದಿನ ದಿನ ಮುಂಜಾನೆ 3 ಗಂಟೆಗೆ ಎರಡು ಪರೋಟ ತಿಂದು ಅವರು ಈ ಪರ್ಸಿನ್ ಬೋಟನ್ನು ಹತ್ತಿದ್ದರು. ಯಥೇಚ್ಛವಾಗಿ  ಸಿಕ್ಕ ಮೀನುಗಳ ನಡುವೆ ಇವರಿಗೆ ಊಟ ಮಾಡುವುದಕ್ಕೂ ಸಮಯ ಸಿಕ್ಕಿರಲಿಲ್ಲ. ನಿಜವಾಗಿ,

ಆ ದಿನ ಮೀನಿನ ಹಬ್ಬವೇ ಆಗಿತ್ತು. ಇವರು ಹರಡಿದ್ದ ಬಲೆಯಲ್ಲಿ ಮೀನುಗಳು ಭಾರೀ ಸಂಖ್ಯೆಯಲ್ಲಿ ಬಿದ್ದಿತಲ್ಲದೇ ಬೇರೆ ಎರಡು  ಬೋಟುಗಳ ಮಂದಿ ಬಲೆ ಎಳೆಯಲು ನೆರವಾಗುವಷ್ಟು ಮೀನು ಯಥೇಚ್ಛವಾಗಿ ಸಿಕ್ಕಿತ್ತು ಮತ್ತು ಆ ಬೋಟುಗಳಿಗೆ ಧಾರಾಳ ಮೀನನ್ನೂ ಕೊಟ್ಟು ಕಳುಹಿಸಿದ್ದರು. ಆ ಬೋಟುಗಳು ಹೋದ ಬಳಿಕ ಇವರಿದ್ದ ಬೋಟು ಮುಳುಗಲು ಪ್ರಾರಂಭಿಸಿತ್ತು.

ಇವೆಲ್ಲ ಅವರೊಂದಿಗೆ ಮಾತನಾಡುತ್ತಾ ಅಲ್ಲಲ್ಲಿ ಸಿಕ್ಕ ಮಾಹಿತಿಗಳೇ ಹೊರತು ಅವರ ನಿಜ ಉದ್ದೇಶ ಈ ಮಾಹಿತಿಯನ್ನು ಹಂಚಿ ಕೊಳ್ಳುವುದಲ್ಲ ಎಂಬುದು ಅವರ ಮುಖಭಾವಗಳೇ ಹೇಳುತ್ತಿತ್ತು. ಅವರ ಪ್ರತಿ ಮಾತಿನಲ್ಲೂ ಕಳಕೊಂಡ ಗೆಳೆಯರ ಬಗೆಗಿನ  ಸಂಕಟಗಳ ಜೊತೆಜೊತೆಗೇ ತಾವೆಷ್ಟು ಅಪಾಯಕಾರಿ ಸ್ಥಿತಿಯಲ್ಲಿ ದುಡಿಯುತ್ತಿದ್ದೇವೆ ಎಂಬುದು ವ್ಯಕ್ತವಾಗುತ್ತಿತ್ತು. ಮೀನುಗಾರರ  ಪಾಲಿಗೆ ಕಡಲು ಇನ್ನೊಂದು ಮನೆ. ಮೀನಿನ ಜೊತೆ ಸದಾ ಸಂವಾದ ಅವರ ದಿನನಿತ್ಯದ ಬದುಕು. ಕಡಲಿನಲ್ಲೇ  ಅವರು ರಾತ್ರಿಯ ನ್ನು ಕಳೆಯುತ್ತಾರೆ. ಹಗಲನ್ನೂ ಕಳೆಯುತ್ತಾರೆ. ಅಲ್ಲೇ ಊಟ ಮಾಡುತ್ತಾರೆ. ನಿದ್ದೆ ಮಾಡುತ್ತಾರೆ. ತಮಾಷೆ, ನಗು, ಈ ಹಿಂದಿನವರ  ಸಾಹಸಗಾಥೆಗಳ ವರ್ಣನೆ, ಈಗಿನ ಅಪಾಯ... ಎಲ್ಲವುಗಳೂ ಅಲ್ಲಿ ಚರ್ಚೆಯಾಗುತ್ತಿರುತ್ತವೆ. ಮದುವೆಯಾಗದವರ ಮಾತು-ಕತೆಗಳ  ಸ್ವರೂಪ ಒಂದು ರೀತಿಯಾದರೆ, ಮದುವೆಯಾಗಿ ಮಕ್ಕಳು-ಸಂಸಾರ ಎಂಬವುಗಳನ್ನು ಜೊತೆಗೆ ಕಟ್ಟಿಕೊಂಡವರ ಮಾತು-ಕತೆಗಳು  ಇನ್ನೊಂದು ರೀತಿ. ಶಾಲಾ ಫೀಸು, ಆರೋಗ್ಯ, ಮನೆ ನಿರ್ವಹಣೆ, ಮನೆ ಬಾಡಿಗೆ ಇತ್ಯಾದಿಗಳೆಲ್ಲವೂ ಇವರ ಮಾತುಕತೆಗಳ ಮುಖ್ಯ  ಭಾಗವೂ ಆಗಿರುತ್ತದೆ. ಹಾಗಂತ,

ಕಡಲನ್ನೇ ಮನೆಯಾಗಿಸಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಸಹಜ ಮನೆಯಲ್ಲಿರುವ ಯಾವ ಜೀವನ ಭದ್ರತೆಯೂ  ಇರುವುದಿಲ್ಲ. ಕಡಲಿನ ಹೊರಗಡೆ ಇರುವ ಮನೆ ಯಲ್ಲಿ ಸಾಮಾನ್ಯ ಅಪಾಯವನ್ನು ಎದುರಿಸುವುದಕ್ಕೆ ತಕ್ಕಮಟ್ಟಿನ ಏ ರ್ಪಾಡುಗಳಾದರೂ ಇರುತ್ತವೆ. ಬೆಂಕಿ ಹೊತ್ತಿಕೊಂಡು ಜೀವಕ್ಕೆ ಅಪಾಯ ಎದುರಾಗುವಂತಿದ್ದರೆ ಏನಿಲ್ಲವೆಂದರೂ ಬೆಂಕಿ ನಂದಿಸುವು  ದಕ್ಕೆ ನೀರು ಇರುತ್ತದೆ. ತಲೆನೋವು, ಶೀತ, ಗ್ಯಾಸ್ಟ್ರಿಕ್ ಇತ್ಯಾದಿ ಗಳನ್ನು ಎದುರಿಸುವುದಕ್ಕೆ ಮೊದಲೇ ಔಷಧಿಗಳನ್ನು ತಂದಿಡಲಾಗುತ್ತದೆ. ಮನೆಮದ್ದುಗಳಿಗೆ ಬೇಕಾದ ಬೇರೆ ಬೇರೆ ಔಷಧೀಯ ವಸ್ತುಗಳನ್ನೂ ಮನೆಯಲ್ಲಿ ತಂದಿಡುವುದಿದೆ. ಇವೆಲ್ಲ ಮುಂಜಾಗರೂ  ಕತಾ ಕ್ರಮಗಳು. ಏನಾದರೂ ಅಪಾಯ ಸಂಭವಿಸಿ ಬಿಟ್ಟರೆ ಅಥವಾ ತುರ್ತು ಸಂದರ್ಭ ಸೃಷ್ಟಿಯಾದರೆ ಎಂಬ ಮುನ್ನೆಚ್ಚರಿಕೆಯೇ  ಇವು ಮನೆಯಲ್ಲಿರುವುದಕ್ಕೆ ಕಾರಣ. ದುರಂತ ಏನೆಂದರೆ,

ಕಡಲನ್ನೇ ಮನೆ ಮಾಡಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಅಪಾಯಕಾರಿ ಸಂದರ್ಭವನ್ನು ಎದುರಿಸುವುದಕ್ಕೆ ಯಾವ  ಸೌಲಭ್ಯಗಳೂ ಇಲ್ಲ. ಈ ಯುವಕರನ್ನೇ ಎತ್ತಿಕೊಳ್ಳಿ. ಪರ್ಸಿನ್ ಬೋಟು ಕವುಚಿ ಬೀಳುವ ಬದಲು ಸಹಜ ಮುಳುಗಡೆಗೆ  ಒಳಗಾಗಿರುತ್ತಿದ್ದರೆ ಆ ಡಿಂಗಿ ಬೋಟನ್ನು ಬೇರ್ಪಡಿಸುವುದು ಸುಲಭವಿತ್ತೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂಥದ್ದಲ್ಲ. ಲೈಫ್ ಜಾಕೆಟ್  ಎಂಬುದು ಇಂಥ ಸಂದರ್ಭಗಳಲ್ಲಿ ಮೀನುಗಾರರ ಜೀವವನ್ನು ಉಳಿಸಬಲ್ಲದು. ಕಡಲಿನ ಆಳ-ಅಗಲ ತಿಳಿಯದ ಮತ್ತು ನಾವು ಎ ಲ್ಲಿದ್ದೇವೆಂದೇ ಗೊತ್ತಾಗದಂಥ ಕಾಳ ರಾತ್ರಿಯಲ್ಲಿ ಅವಘಡ ಸಂಭವಿಸುವುದನ್ನು ಊಹಿಸಿಕೊಳ್ಳುವಾಗಲೇ ಭಯವಾಗುತ್ತದೆ. ಇಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿಗೆ  ಧುಮುಕುವುದೆಂದರೆ, ಸಾವನ್ನು ಆರಿಸಿಕೊಂಡಂತೆ. ಅಪಾಯಕಾರಿ ಸನ್ನಿವೇಶದ ನಡುವೆಯೂ ಈ ಯುವಕರು ಸ್ಥಿಮಿತ ಕಳಕೊಳ್ಳದೇ  ಇರುತ್ತಿದ್ದರೆ ಈ 19 ಮಂದಿಯ ಸ್ಥಿತಿ ಏನಾಗಿರುತ್ತಿತ್ತೋ ಏನೋ? ಅಷ್ಟಕ್ಕೂ,

ಕಡಲು ಮಾತ್ರ ಇವರ ಪಾಲಿಗೆ ಅಸುರಕ್ಷಿತ ಮನೆಯಲ್ಲ. ಬೋಟು ತುಂಬಾ ಟನ್ನುಗಟ್ಟಲೆ ಮೀನು ತಂದು ತೀರಕ್ಕೆ ತಲುಪಿದ  ಬಳಿಕವೂ ಇವರ ಬದುಕು ಅಸುರಕ್ಷಿತವೇ. ಒಂದು ರೀತಿಯಲ್ಲಿ ಇವರೆಲ್ಲ ಅಸುರಕ್ಷಿತ ಕಾರ್ಮಿಕರು. ಹೊಟ್ಟೆಯ ಹಸಿವೇ ಇವರನ್ನು  ಈ ಅಸುರಕ್ಷಿತ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಮಾಡಿದೆ. ಒಂದು ಕಾಳರಾತ್ರಿಯಲ್ಲಿ ಹೊಟ್ಟೆಗೇನನ್ನೋ ತುಂಬಿಸಿ ಕೊಂಡು ತೀರ  ಬಿಡುವ ಇಂಥ ಛಲಗಾರ ಮೀನುಗಾರರು ಕಡಲ ಮಧ್ಯೆ ರಾತ್ರಿ-ಹಗಲನ್ನು ಕಳೆದು ತೀರಕ್ಕೆ ಬಂದರೆ, ಜುಜುಬಿ ಅನ್ನುವ ವೇತನವಷ್ಟೇ  ಸಿಗುತ್ತದೆ. ಅವರ ಸಾಹಸ, ಸಮಯ, ಕೆಲಸ ಮತ್ತು ಅಪಾಯಕಾರಿ ಸನ್ನಿವೇಶಕ್ಕೆ ಹೋಲಿಸಿದರೆ ಇವರು ಪಡೆಯುವ ವೇತನ ಬಹಳ  ಚಿಕ್ಕದು. ಇದರ ಜೊತೆಗೇ ಇವರು ತಮ್ಮ ಆರೋಗ್ಯವನ್ನೂ ಕೆಡಿಸಿಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು  ತೆಗೆದು ಕೆಲಸ ಮಾಡುವುದಕ್ಕೆ ಇದು ಸೂಟು-ಬೂಟಿನ ಉದ್ಯೋಗ ಅಲ್ಲವಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇಲ್ಲದಿದ್ದರೆ ಈ ಮೀನುಗಳು ಸಮುದ್ರಕ್ಕೆ ಇಳಿಯುವ ಸಾಧ್ಯತೆಯೂ ಇಲ್ಲ.

ನನ್ನೆದುರು ಕುಳಿತು ಮಾತಿಗೆ ನಿಂತ ಈ ಮೀನುಗಳನ್ನು ಆಲಿಸುತ್ತಾ ಹೋದಂತೆ ಮೂರು ಪ್ರಮುಖ ಅಂಶಗಳು ಗೋಚರಿಸಿದುವು.

1. ತಮ್ಮವರನ್ನು ಕಳಕೊಂಡ ದುಃಖಭಾವ

2. ಜೀವನ ಅಭದ್ರತೆ

3. ಅಸಂಘಟಿತ ಕಾರ್ಮಿಕರಲ್ಲಿರುವ ಸಹಜ ತಲ್ಲಣಗಳು

ಈ ಯುವಕರ ಸಾಹಸವನ್ನು ಮೆಚ್ಚಿಕೊಳ್ಳುವ ಮತ್ತು ಸನ್ಮಾನ ಮಾಡುವುದರ ಜೊತೆಜೊತೆಗೇ ಇವರ ಮಾತುಗಳ ಆಳದಲ್ಲಿರುವ  ಶೂನ್ಯ ಸ್ಥಿತಿಯನ್ನೂ ತುಂಬಬೇಕಾದ ಅಗತ್ಯ ಇದೆ. ಬಗೆಬಗೆಯ ಮೀನುಗಳ ರುಚಿಯನ್ನು ಸವಿದು ಅನುಭವವಿರುವ ಹೆಚ್ಚಿನವರಿಗೆ  ಈ ಮೀನುಗಳ ಹಿಂದಿನ ಕರುಣ ಕತೆ ಗೊತ್ತಿರುವುದಿಲ್ಲ. ಮೀನು ಗಳಲ್ಲಿ ಯಾವ ವಿಧದ ಜಾತಿ, ಪ್ರಬೇಧಗಳಿವೆ, ಇವುಗಳಲ್ಲಿ ಬರೇ  ಮುಳ್ಳು ಹೆಚ್ಚಿರುವ ಮೀನುಗಳಾವುವು, ಮಾಂಸವೇ ಹೆಚ್ಚಿರುವ ಮೀನುಗಳು ಯಾವುವು, ಇವುಗಳಲ್ಲಿ ಸ್ವಾದಭರಿತ ಯಾವುವು, ಭಿನ್ನ  ರುಚಿ ಯಾವುದಕ್ಕಿದೆ, ಯಾವ ಮೀನು ಎಷ್ಟು ಮೊಟ್ಟೆ ಯಿಡುತ್ತವೆ, ಯಾವ ಮೀನಿಗೆ ಎಷ್ಟು ಜಾಡೆ ಹಲ್ಲಿದೆ, ಯಾವ ಮೀನು ಫ್ರೈಗೆ  ಹೆಚ್ಚು ಸೂಕ್ತ, ಪಲ್ಯಕ್ಕೆ ಸಹಜವಾಗಿ ಹೊಂದುವ ಮೀನು ಯಾವುದು, ಮೀನಿನಲ್ಲಿರುವ ವಿಟಮಿನ್‍ಗಳು ಯಾವುವು, ಮಕ್ಕಳಿಗೆ ಯಾವ  ಮೀನನ್ನು ಕೊಡಬೇಕು, ಗರ್ಭಿಣಿಯರು ಯಾವ ಮೀನನ್ನು ತಿನ್ನಬಾರದು, ನಂಜು ಏರಿಸುವ ಮೀನು ಯಾವುದು.. ಇತ್ಯಾದಿಗಳ  ಬಗ್ಗೆ ನಮ್ಮಲ್ಲಿರುವಷ್ಟು ಮಾಹಿತಿ ಅನೇಕ ಬಾರಿ ಈ ಮೀನುಗಳನ್ನು ಕಡಲಾಳದಿಂದ ಹಿಡಿದು ತರುವ ಬಡ ಮೀನುಗಾರರ ಬಗ್ಗೆ  ಇರುವುದಿಲ್ಲ. ಹಾಗಂತ,

ಮೀನುಗಳಷ್ಟೇ ಮೀನುಗಾರರ ಬಗ್ಗೆಯೂ ಮಾಹಿತಿ ಇದ್ದರೆ ಮಾತ್ರ ಅವರು ಪರಿಪೂರ್ಣರು ಎಂದೂ ಅಲ್ಲ. ಇದೊಂದು ಸಹಜ  ಸ್ಥಿತಿ. ನಾವೊಂದು ಮನೆ ಕಟ್ಟುವಾಗ ಅಥವಾ ಕಟ್ಟಿದ ಮನೆಯಲ್ಲಿ ಬಾಡಿಗೆದಾರರಾಗಿ ವಾಸ ಮಾಡಲು ಹೊರಟಾಗ, ಆ ಮನೆಗೆ ಕಲ್ಲು  ಕೆತ್ತಿದವರು, ಸಿಮೆಂಟ್ ತಯಾರಿಸಿದ ಕಾರ್ಮಿಕರು, ಗಾರೆ ಕೆಲಸ ಮಾಡಿದವರು, ಕಾಂಕ್ರೀಟು ಕೆಲಸ ಮಾಡಿದವರು, ಜಲ್ಲಿ ಕಲ್ಲು  ಕಾರ್ಮಿಕರು ಮುಂತಾದವರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ನಮಗೆ ಹೆಚ್ಚೆಂದರೆ ಮನೆ  ಮಾಲಿಕ ಗೊತ್ತಿರುತ್ತಾನೆ. ಅಥವಾ ಮನೆ ಕಟ್ಟಲು ಹೊರಟೆವೆಂದರೆ ನಕಾಶೆ ತಯಾರಿಸಿದವ, ಇಂಜಿನಿ ಯರ್, ಕಾಂಟ್ರಾಕ್ಟರ್  ಮುಂತಾದವರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಮೀನುಗಾರರ ಬಗ್ಗೆಯೂ ಕಡಲಿನ ಹೊರಗಡೆಯಿರುವ ಜನರ ಸ್ಥಿತಿ ಇದುವೇ.  ಆದರೆ,

ಅಪಘಾತವೋ ಅನಾಹುತವೋ ಸಂಭವಿಸಿದಾಗ ಈ ಮೇಲು ಮೇಲಿನ ಪರದೆ ಸರಿದು ಪರದೆಯ ಆಚೆಗಿರುವ ಜನರ ದ ರ್ಶನವಾಗುತ್ತದೆ. ಕಟ್ಟಡ ಉರುಳಿದಾಗ ಅದರ ಅಡಿಯಲ್ಲಿ ಸಿಲುಕಿಕೊಂಡ ಅಸಹಾಯಕ ಕಾರ್ಮಿಕ ನಮ್ಮ ಹೃದಯವನ್ನು ಕಲಕುತ್ತಾನೆ.  ಅವರ ಕುಟುಂಬ, ಮಕ್ಕಳು, ಬಡತನ ಇತ್ಯಾದಿಗಳು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಕಟ್ಟಡದ ಮಾಲಿಕ  ಸಾರ್ವಜನಿಕ ಪರೀಕ್ಷೆಗೆ ಒಳ ಗಾಗುತ್ತಾನೆ. ಜನರ ಹೃದಯ ತಟ್ಟುವ ಕಾರ್ಮಿಕನಂತೆಯೇ ಆ ಸಂದರ್ಭದಲ್ಲಿ ಮಾಲಿಕನೂ  ತಟ್ಟಬೇಕಾದರೆ ಆತನ ವಿಶೇಷ ಸ್ಪಂದನೆ ಬೇಕಾಗುತ್ತದೆ. ಕಾರ್ಮಿಕರನ್ನು ಆತ ಆವರೆಗೆ ನಡೆಸಿಕೊಂಡ ರೀತಿ  ಮೆಚ್ಚುವಂತಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮಾಲಿಕ ಖಳನಾಗುತ್ತಾನೆ. ಕಾರ್ಮಿಕ ಹೀರೋ ಆಗುತ್ತಾನೆ... 

ಈ ಮೀನುಗಾರ ಯುವಕರ ಜೊತೆ ಮಾತನಾಡುತ್ತಾ ಹೋದಾಗ ನನ್ನೊಳಗನ್ನು ಹೀಗೆಲ್ಲ ಕಾಡಿದುವು. ಇವರಿಗೆ ಈಗ ಬೇಕಿರುವುದು  ಸನ್ಮಾನ ಅಲ್ಲ. ಮೆಚ್ಚುಗೆಯ ಜೊತೆಜೊತೆಗೇ ಇವರ ವೃತ್ತಿಗೊಂದು ಭದ್ರತೆ. ಇನ್ನೂ ಬೆಳಕು ಮೂಡುವ ಮೊದಲೇ ಮೀನು ಬೇಟೆಯ  ಬೋಟಿಗಿಳಿಯುವಾಗ ಕನಿಷ್ಠ ಲೈಫ್ ಜಾಕೆಟ್ ಎಂಬ ಆಪತ್ಕಾಲೀನ ವ್ಯವಸ್ಥೆ. ಮೀನು ತಂದು ತೀರದಲ್ಲಿಳಿದಾಗ ಗೌರವ ಮತ್ತು ವೃತ್ತಿಗೆ  ತಕ್ಕ ವೇತನ. ಇಷ್ಟು ಅಪಾಯಕಾರಿ ಕೆಲಸ ಮಾಡಿಯೂ ಒಂದು ದಿನ ದುಡಿಯ ದಿದ್ದರೆ ಅನ್ನವಿಲ್ಲ ಎಂಬ ಅಭದ್ರತೆಯಿಂದ ಮುಕ್ತಿ.  ಅನಾರೋಗ್ಯ, ಮಕ್ಕಳ ಶಾಲಾ ಫೀಸು ಮುಂತಾದ ಸಂದರ್ಭಗಳಲ್ಲಿ ಕಾಡುವ ಅಸಹಾಯಕತೆಯಿಂದ ಮುಕ್ತಿ. ಮೀನುಗಾರರಿಗೆ  ಜೀವನ ಭದ್ರತೆಗೆ ಪೂರಕವಾದ ಯೋಜನೆ.

ಬೃಹತ್ ಬೋಟಿನ ಮಾಲಿಕರು ಮನಸ್ಸು ಮಾಡಿದರೆ ಮತ್ತು ಜಿಲ್ಲಾ
ಧಿಕಾರಿಯವರು ಮುತುವರ್ಜಿ ತೋರಿದರೆ ಇದು ಖಂಡಿತ  ಅಸಾಧ್ಯ ಅಲ್ಲ.

ನನ್ನೆದುರು ಕುಳಿತ ಕಡಲ ಮೀನುಗಳಾದ ಶರಾಫತ್, ನಿಝಾಮ್, ಶಿಹಾಬ್, ಇಜಾಝï ಮತ್ತು ರುಬಾನ್‍ರಿಗೆ ಅಭಿನಂದನೆಗಳು.