ಏ.ಕೆ. ಕುಕ್ಕಿಲ
ಆ 5 ಮಂದಿ ಮೀನುಗಾರರು ಕಚೇರಿಗೆ ಬಂದಿದ್ದರು. ಕೂರಿಸಿ ಮಾತಾಡಿಸಿದೆ. ಮಂಗಳೂರಿನ ಕಡಲಲ್ಲಿ ಮುಳುಗಿದ ಶ್ರೀರಕ್ಷಾ ಪರ್ಸಿನ್ ಬೋಟ್‍ನಿಂದ ಪವಾಡಸದೃಶವಾಗಿ ಪಾರಾಗಿ ಬಂದ 19 ಮಂದಿಯಲ್ಲಿ ಈ ಯುವಕರೂ ಇದ್ದರು ಅಥವಾ ಆ 19 ಮಂದಿ ಬದುಕಿ ಉಳಿದುದರಲ್ಲಿ ಈ 5 ಮಂದಿಯ ಪಾತ್ರ ಬಹಳ ದೊಡ್ಡದು. ಆಳ ಮೀನುಗಾರಿಕೆಗೆ ತೆರಳುವ ಪರ್ಸಿನ್ ಬೋಟ್‍ಗೆ ಸಣ್ಣ ಬೋಟನ್ನೂ ಕಟ್ಟಲಾಗಿರುತ್ತದೆ. ಇದಕ್ಕೆ ಡಿಂಗಿ ಬೋಟ್ ಎಂದು ಹೆಸರು. ಪರ್ಸಿನ್ ಬೋಟು ಅವಘಡಕ್ಕೆ ಈಡಾದರೆ ಆಪತ್ಕಾಲಕ್ಕೆ ಇರಲಿ ಎಂಬ ಉದ್ದೇಶದಿಂದ ಈ ಬೋಟನ್ನು ಜೊತೆಗೊಯ್ಯಲಾಗುತ್ತದೆ. ಶ್ರೀರಕ್ಷಾ ಬೋಟು ದಿಢೀರ್ ಆಗಿ ಕವುಚಿ ಬೀಳುವ ಸೂಚನೆ ನೀಡಿದಾಗ ಅದರಲ್ಲಿದ್ದ ಈ 25ರಷ್ಟು ಮೀನುಗಾರರಿಗೆ ಕಡಲಿಗೆ ಧುಮುಕದೇ ಬೇರೆ ದಾರಿಯಿರಲಿಲ್ಲ. ಅರ್ಧರಾತ್ರಿ. ಒಬ್ಬನನ್ನು ಮತ್ತೊಬ್ಬ ಗುರುತಿಸಲಾಗದ ಮತ್ತು ಪತ್ತೆಹಚ್ಚಲಾಗದಂಥ ಸ್ಥಿತಿ. ಅಲ್ಲದೇ ತೀವ್ರ ಚಳಿ. ಕಡಲಿನ ಯಾವುದೋ ಒಂದು ಮಧ್ಯಭಾಗ.
ಪರ್ಸಿನ್ ಬೋಟು ನಿಧಾನಕ್ಕೆ ಮುಳುಗಲು ಪ್ರಾರಂಭಿಸಿದಾಗ ಅದರ ಜೊತೆಗೇ ಆ ಡಿಂಗಿ ಬೋಟೂ ಮುಳುಗಲು ಪ್ರಾರಂಭಿಸಿತು. ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ಗೆ ಹಗ್ಗದಿಂದ ಕಟ್ಟಿರುವ ಕಾರಣ ಇದು ಸಹಜವೂ ಆಗಿತ್ತು. ಸುಮಾರು 18 ಟನ್ ಮೀನನ್ನು ತುಂಬಿಸಿಕೊಂಡಿರುವ ಬೋಟೊಂದು ನಿಧಾನಕ್ಕೆ ಕವುಚಿ ಬೀಳಲು ತೊಡಗುವುದು ಮತ್ತು ಅದರ ಜೊತೆಗೇ ಆಪತ್ಕಾಲದ ಬೋಟೂ ಮುಳುಗುತ್ತಿರುವುದನ್ನು ಕಡಲಿಗೆ ಬಿದ್ದ ಹೆಚ್ಚಿನ ಮೀನುಗಾರರು ಹೊಲಬರಿಯದೇ ನೋಡುತ್ತಿದ್ದಾಗ ಈ 5 ಮಂದಿ ಯುವಕರು ಅಸಾಧಾರಣ ಧೈರ್ಯ ತೋರಿ ಮುಳುಗುತ್ತಿದ್ದ ಪರ್ಸಿನ್ ಬೋಟ್‍ನಿಂದ ಕತ್ತಿಯನ್ನು ತಂದು ಹಗ್ಗ ಕತ್ತರಿಸತೊಡಗಿದರು. ಬಹುಶಃ ಪರ್ಸಿನ್ ಬೋಟು ಕವುಚಿ ಬೀಳದೇ ಇರುತ್ತಿದ್ದರೆ ಈ ಹಗ್ಗ ಕತ್ತರಿಸುವುದಕ್ಕೂ ಸಮಯವೇ ಸಿಗುತ್ತಿರಲಿಲ್ಲವೇನೋ?
ಒಬ್ಬನ ನಂತರ ಒಬ್ಬ ಹೀಗೆ ಹಗ್ಗ ಕತ್ತರಿಸಿ ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ನಿಂದ ಬೇರ್ಪಡಿಸುವ ಸಾಹಸಕ್ಕೆ ಧುಮುಕಿದರು. ಹಾಗೆ ಬೇರ್ಪಡಿಸಿದ ಪರಿಣಾಮ ನೀರಲ್ಲಿದ್ದ 19 ಮಂದಿ ಈ ಬೋಟನ್ನು ಸೇರಿಕೊಂಡು ಬದುಕಿ ಬಂದರು. ವಿಷಾದ ಏನೆಂದರೆ,
ಒಬ್ಬನ ನಂತರ ಒಬ್ಬ ಹೀಗೆ ಹಗ್ಗ ಕತ್ತರಿಸಿ ಡಿಂಗಿ ಬೋಟನ್ನು ಪರ್ಸಿನ್ ಬೋಟ್‍ನಿಂದ ಬೇರ್ಪಡಿಸುವ ಸಾಹಸಕ್ಕೆ ಧುಮುಕಿದರು. ಹಾಗೆ ಬೇರ್ಪಡಿಸಿದ ಪರಿಣಾಮ ನೀರಲ್ಲಿದ್ದ 19 ಮಂದಿ ಈ ಬೋಟನ್ನು ಸೇರಿಕೊಂಡು ಬದುಕಿ ಬಂದರು. ವಿಷಾದ ಏನೆಂದರೆ,
ಹಿಂದಿನ ದಿನ ಮುಂಜಾನೆ 3 ಗಂಟೆಗೆ ಎರಡು ಪರೋಟ ತಿಂದು ಅವರು ಈ ಪರ್ಸಿನ್ ಬೋಟನ್ನು ಹತ್ತಿದ್ದರು. ಯಥೇಚ್ಛವಾಗಿ ಸಿಕ್ಕ ಮೀನುಗಳ ನಡುವೆ ಇವರಿಗೆ ಊಟ ಮಾಡುವುದಕ್ಕೂ ಸಮಯ ಸಿಕ್ಕಿರಲಿಲ್ಲ. ನಿಜವಾಗಿ,
ಆ ದಿನ ಮೀನಿನ ಹಬ್ಬವೇ ಆಗಿತ್ತು. ಇವರು ಹರಡಿದ್ದ ಬಲೆಯಲ್ಲಿ ಮೀನುಗಳು ಭಾರೀ ಸಂಖ್ಯೆಯಲ್ಲಿ ಬಿದ್ದಿತಲ್ಲದೇ ಬೇರೆ ಎರಡು ಬೋಟುಗಳ ಮಂದಿ ಬಲೆ ಎಳೆಯಲು ನೆರವಾಗುವಷ್ಟು ಮೀನು ಯಥೇಚ್ಛವಾಗಿ ಸಿಕ್ಕಿತ್ತು ಮತ್ತು ಆ ಬೋಟುಗಳಿಗೆ ಧಾರಾಳ ಮೀನನ್ನೂ ಕೊಟ್ಟು ಕಳುಹಿಸಿದ್ದರು. ಆ ಬೋಟುಗಳು ಹೋದ ಬಳಿಕ ಇವರಿದ್ದ ಬೋಟು ಮುಳುಗಲು ಪ್ರಾರಂಭಿಸಿತ್ತು.
ಇವೆಲ್ಲ ಅವರೊಂದಿಗೆ ಮಾತನಾಡುತ್ತಾ ಅಲ್ಲಲ್ಲಿ ಸಿಕ್ಕ ಮಾಹಿತಿಗಳೇ ಹೊರತು ಅವರ ನಿಜ ಉದ್ದೇಶ ಈ ಮಾಹಿತಿಯನ್ನು ಹಂಚಿ ಕೊಳ್ಳುವುದಲ್ಲ ಎಂಬುದು ಅವರ ಮುಖಭಾವಗಳೇ ಹೇಳುತ್ತಿತ್ತು. ಅವರ ಪ್ರತಿ ಮಾತಿನಲ್ಲೂ ಕಳಕೊಂಡ ಗೆಳೆಯರ ಬಗೆಗಿನ ಸಂಕಟಗಳ ಜೊತೆಜೊತೆಗೇ ತಾವೆಷ್ಟು ಅಪಾಯಕಾರಿ ಸ್ಥಿತಿಯಲ್ಲಿ ದುಡಿಯುತ್ತಿದ್ದೇವೆ ಎಂಬುದು ವ್ಯಕ್ತವಾಗುತ್ತಿತ್ತು. ಮೀನುಗಾರರ ಪಾಲಿಗೆ ಕಡಲು ಇನ್ನೊಂದು ಮನೆ. ಮೀನಿನ ಜೊತೆ ಸದಾ ಸಂವಾದ ಅವರ ದಿನನಿತ್ಯದ ಬದುಕು. ಕಡಲಿನಲ್ಲೇ ಅವರು ರಾತ್ರಿಯ ನ್ನು ಕಳೆಯುತ್ತಾರೆ. ಹಗಲನ್ನೂ ಕಳೆಯುತ್ತಾರೆ. ಅಲ್ಲೇ ಊಟ ಮಾಡುತ್ತಾರೆ. ನಿದ್ದೆ ಮಾಡುತ್ತಾರೆ. ತಮಾಷೆ, ನಗು, ಈ ಹಿಂದಿನವರ ಸಾಹಸಗಾಥೆಗಳ ವರ್ಣನೆ, ಈಗಿನ ಅಪಾಯ... ಎಲ್ಲವುಗಳೂ ಅಲ್ಲಿ ಚರ್ಚೆಯಾಗುತ್ತಿರುತ್ತವೆ. ಮದುವೆಯಾಗದವರ ಮಾತು-ಕತೆಗಳ ಸ್ವರೂಪ ಒಂದು ರೀತಿಯಾದರೆ, ಮದುವೆಯಾಗಿ ಮಕ್ಕಳು-ಸಂಸಾರ ಎಂಬವುಗಳನ್ನು ಜೊತೆಗೆ ಕಟ್ಟಿಕೊಂಡವರ ಮಾತು-ಕತೆಗಳು ಇನ್ನೊಂದು ರೀತಿ. ಶಾಲಾ ಫೀಸು, ಆರೋಗ್ಯ, ಮನೆ ನಿರ್ವಹಣೆ, ಮನೆ ಬಾಡಿಗೆ ಇತ್ಯಾದಿಗಳೆಲ್ಲವೂ ಇವರ ಮಾತುಕತೆಗಳ ಮುಖ್ಯ ಭಾಗವೂ ಆಗಿರುತ್ತದೆ. ಹಾಗಂತ,
ಕಡಲನ್ನೇ ಮನೆಯಾಗಿಸಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಸಹಜ ಮನೆಯಲ್ಲಿರುವ ಯಾವ ಜೀವನ ಭದ್ರತೆಯೂ ಇರುವುದಿಲ್ಲ. ಕಡಲಿನ ಹೊರಗಡೆ ಇರುವ ಮನೆ ಯಲ್ಲಿ ಸಾಮಾನ್ಯ ಅಪಾಯವನ್ನು ಎದುರಿಸುವುದಕ್ಕೆ ತಕ್ಕಮಟ್ಟಿನ ಏ ರ್ಪಾಡುಗಳಾದರೂ ಇರುತ್ತವೆ. ಬೆಂಕಿ ಹೊತ್ತಿಕೊಂಡು ಜೀವಕ್ಕೆ ಅಪಾಯ ಎದುರಾಗುವಂತಿದ್ದರೆ ಏನಿಲ್ಲವೆಂದರೂ ಬೆಂಕಿ ನಂದಿಸುವು ದಕ್ಕೆ ನೀರು ಇರುತ್ತದೆ. ತಲೆನೋವು, ಶೀತ, ಗ್ಯಾಸ್ಟ್ರಿಕ್ ಇತ್ಯಾದಿ ಗಳನ್ನು ಎದುರಿಸುವುದಕ್ಕೆ ಮೊದಲೇ ಔಷಧಿಗಳನ್ನು ತಂದಿಡಲಾಗುತ್ತದೆ. ಮನೆಮದ್ದುಗಳಿಗೆ ಬೇಕಾದ ಬೇರೆ ಬೇರೆ ಔಷಧೀಯ ವಸ್ತುಗಳನ್ನೂ ಮನೆಯಲ್ಲಿ ತಂದಿಡುವುದಿದೆ. ಇವೆಲ್ಲ ಮುಂಜಾಗರೂ ಕತಾ ಕ್ರಮಗಳು. ಏನಾದರೂ ಅಪಾಯ ಸಂಭವಿಸಿ ಬಿಟ್ಟರೆ ಅಥವಾ ತುರ್ತು ಸಂದರ್ಭ ಸೃಷ್ಟಿಯಾದರೆ ಎಂಬ ಮುನ್ನೆಚ್ಚರಿಕೆಯೇ ಇವು ಮನೆಯಲ್ಲಿರುವುದಕ್ಕೆ ಕಾರಣ. ದುರಂತ ಏನೆಂದರೆ,
ಕಡಲನ್ನೇ ಮನೆ ಮಾಡಿಕೊಂಡಿರುವ ಈ ಮೀನುಗಾರರಲ್ಲಿ ಹೆಚ್ಚಿನವರಿಗೆ ಅಪಾಯಕಾರಿ ಸಂದರ್ಭವನ್ನು ಎದುರಿಸುವುದಕ್ಕೆ ಯಾವ ಸೌಲಭ್ಯಗಳೂ ಇಲ್ಲ. ಈ ಯುವಕರನ್ನೇ ಎತ್ತಿಕೊಳ್ಳಿ. ಪರ್ಸಿನ್ ಬೋಟು ಕವುಚಿ ಬೀಳುವ ಬದಲು ಸಹಜ ಮುಳುಗಡೆಗೆ ಒಳಗಾಗಿರುತ್ತಿದ್ದರೆ ಆ ಡಿಂಗಿ ಬೋಟನ್ನು ಬೇರ್ಪಡಿಸುವುದು ಸುಲಭವಿತ್ತೇ ಎಂಬ ಪ್ರಶ್ನೆ ನಿರ್ಲಕ್ಷಿಸುವಂಥದ್ದಲ್ಲ. ಲೈಫ್ ಜಾಕೆಟ್ ಎಂಬುದು ಇಂಥ ಸಂದರ್ಭಗಳಲ್ಲಿ ಮೀನುಗಾರರ ಜೀವವನ್ನು ಉಳಿಸಬಲ್ಲದು. ಕಡಲಿನ ಆಳ-ಅಗಲ ತಿಳಿಯದ ಮತ್ತು ನಾವು ಎ ಲ್ಲಿದ್ದೇವೆಂದೇ ಗೊತ್ತಾಗದಂಥ ಕಾಳ ರಾತ್ರಿಯಲ್ಲಿ ಅವಘಡ ಸಂಭವಿಸುವುದನ್ನು ಊಹಿಸಿಕೊಳ್ಳುವಾಗಲೇ ಭಯವಾಗುತ್ತದೆ. ಇಂಥ ಸಂದರ್ಭದಲ್ಲಿ ಲೈಫ್ ಜಾಕೆಟ್ ಇಲ್ಲದೇ ನೀರಿಗೆ ಧುಮುಕುವುದೆಂದರೆ, ಸಾವನ್ನು ಆರಿಸಿಕೊಂಡಂತೆ. ಅಪಾಯಕಾರಿ ಸನ್ನಿವೇಶದ ನಡುವೆಯೂ ಈ ಯುವಕರು ಸ್ಥಿಮಿತ ಕಳಕೊಳ್ಳದೇ ಇರುತ್ತಿದ್ದರೆ ಈ 19 ಮಂದಿಯ ಸ್ಥಿತಿ ಏನಾಗಿರುತ್ತಿತ್ತೋ ಏನೋ? ಅಷ್ಟಕ್ಕೂ,
ಕಡಲು ಮಾತ್ರ ಇವರ ಪಾಲಿಗೆ ಅಸುರಕ್ಷಿತ ಮನೆಯಲ್ಲ. ಬೋಟು ತುಂಬಾ ಟನ್ನುಗಟ್ಟಲೆ ಮೀನು ತಂದು ತೀರಕ್ಕೆ ತಲುಪಿದ ಬಳಿಕವೂ ಇವರ ಬದುಕು ಅಸುರಕ್ಷಿತವೇ. ಒಂದು ರೀತಿಯಲ್ಲಿ ಇವರೆಲ್ಲ ಅಸುರಕ್ಷಿತ ಕಾರ್ಮಿಕರು. ಹೊಟ್ಟೆಯ ಹಸಿವೇ ಇವರನ್ನು ಈ ಅಸುರಕ್ಷಿತ ಸನ್ನಿವೇಶಕ್ಕೆ ಒಗ್ಗಿಕೊಳ್ಳುವಂತೆ ಮಾಡಿದೆ. ಒಂದು ಕಾಳರಾತ್ರಿಯಲ್ಲಿ ಹೊಟ್ಟೆಗೇನನ್ನೋ ತುಂಬಿಸಿ ಕೊಂಡು ತೀರ ಬಿಡುವ ಇಂಥ ಛಲಗಾರ ಮೀನುಗಾರರು ಕಡಲ ಮಧ್ಯೆ ರಾತ್ರಿ-ಹಗಲನ್ನು ಕಳೆದು ತೀರಕ್ಕೆ ಬಂದರೆ, ಜುಜುಬಿ ಅನ್ನುವ ವೇತನವಷ್ಟೇ ಸಿಗುತ್ತದೆ. ಅವರ ಸಾಹಸ, ಸಮಯ, ಕೆಲಸ ಮತ್ತು ಅಪಾಯಕಾರಿ ಸನ್ನಿವೇಶಕ್ಕೆ ಹೋಲಿಸಿದರೆ ಇವರು ಪಡೆಯುವ ವೇತನ ಬಹಳ ಚಿಕ್ಕದು. ಇದರ ಜೊತೆಗೇ ಇವರು ತಮ್ಮ ಆರೋಗ್ಯವನ್ನೂ ಕೆಡಿಸಿಕೊಂಡಿರುತ್ತಾರೆ. ಸರಿಯಾದ ಸಮಯಕ್ಕೆ ಸರಿಯಾದ ಆಹಾರವನ್ನು ತೆಗೆದು ಕೆಲಸ ಮಾಡುವುದಕ್ಕೆ ಇದು ಸೂಟು-ಬೂಟಿನ ಉದ್ಯೋಗ ಅಲ್ಲವಲ್ಲ. ಹೊಟ್ಟೆಪಾಡಿನ ಅನಿವಾರ್ಯತೆ ಇಲ್ಲದಿದ್ದರೆ ಈ ಮೀನುಗಳು ಸಮುದ್ರಕ್ಕೆ ಇಳಿಯುವ ಸಾಧ್ಯತೆಯೂ ಇಲ್ಲ.
ನನ್ನೆದುರು ಕುಳಿತು ಮಾತಿಗೆ ನಿಂತ ಈ ಮೀನುಗಳನ್ನು ಆಲಿಸುತ್ತಾ ಹೋದಂತೆ ಮೂರು ಪ್ರಮುಖ ಅಂಶಗಳು ಗೋಚರಿಸಿದುವು.
1. ತಮ್ಮವರನ್ನು ಕಳಕೊಂಡ ದುಃಖಭಾವ
2. ಜೀವನ ಅಭದ್ರತೆ
3. ಅಸಂಘಟಿತ ಕಾರ್ಮಿಕರಲ್ಲಿರುವ ಸಹಜ ತಲ್ಲಣಗಳು
ಈ ಯುವಕರ ಸಾಹಸವನ್ನು ಮೆಚ್ಚಿಕೊಳ್ಳುವ ಮತ್ತು ಸನ್ಮಾನ ಮಾಡುವುದರ ಜೊತೆಜೊತೆಗೇ ಇವರ ಮಾತುಗಳ ಆಳದಲ್ಲಿರುವ ಶೂನ್ಯ ಸ್ಥಿತಿಯನ್ನೂ ತುಂಬಬೇಕಾದ ಅಗತ್ಯ ಇದೆ. ಬಗೆಬಗೆಯ ಮೀನುಗಳ ರುಚಿಯನ್ನು ಸವಿದು ಅನುಭವವಿರುವ ಹೆಚ್ಚಿನವರಿಗೆ ಈ ಮೀನುಗಳ ಹಿಂದಿನ ಕರುಣ ಕತೆ ಗೊತ್ತಿರುವುದಿಲ್ಲ. ಮೀನು ಗಳಲ್ಲಿ ಯಾವ ವಿಧದ ಜಾತಿ, ಪ್ರಬೇಧಗಳಿವೆ, ಇವುಗಳಲ್ಲಿ ಬರೇ ಮುಳ್ಳು ಹೆಚ್ಚಿರುವ ಮೀನುಗಳಾವುವು, ಮಾಂಸವೇ ಹೆಚ್ಚಿರುವ ಮೀನುಗಳು ಯಾವುವು, ಇವುಗಳಲ್ಲಿ ಸ್ವಾದಭರಿತ ಯಾವುವು, ಭಿನ್ನ ರುಚಿ ಯಾವುದಕ್ಕಿದೆ, ಯಾವ ಮೀನು ಎಷ್ಟು ಮೊಟ್ಟೆ ಯಿಡುತ್ತವೆ, ಯಾವ ಮೀನಿಗೆ ಎಷ್ಟು ಜಾಡೆ ಹಲ್ಲಿದೆ, ಯಾವ ಮೀನು ಫ್ರೈಗೆ ಹೆಚ್ಚು ಸೂಕ್ತ, ಪಲ್ಯಕ್ಕೆ ಸಹಜವಾಗಿ ಹೊಂದುವ ಮೀನು ಯಾವುದು, ಮೀನಿನಲ್ಲಿರುವ ವಿಟಮಿನ್‍ಗಳು ಯಾವುವು, ಮಕ್ಕಳಿಗೆ ಯಾವ ಮೀನನ್ನು ಕೊಡಬೇಕು, ಗರ್ಭಿಣಿಯರು ಯಾವ ಮೀನನ್ನು ತಿನ್ನಬಾರದು, ನಂಜು ಏರಿಸುವ ಮೀನು ಯಾವುದು.. ಇತ್ಯಾದಿಗಳ ಬಗ್ಗೆ ನಮ್ಮಲ್ಲಿರುವಷ್ಟು ಮಾಹಿತಿ ಅನೇಕ ಬಾರಿ ಈ ಮೀನುಗಳನ್ನು ಕಡಲಾಳದಿಂದ ಹಿಡಿದು ತರುವ ಬಡ ಮೀನುಗಾರರ ಬಗ್ಗೆ ಇರುವುದಿಲ್ಲ. ಹಾಗಂತ,
ಮೀನುಗಳಷ್ಟೇ ಮೀನುಗಾರರ ಬಗ್ಗೆಯೂ ಮಾಹಿತಿ ಇದ್ದರೆ ಮಾತ್ರ ಅವರು ಪರಿಪೂರ್ಣರು ಎಂದೂ ಅಲ್ಲ. ಇದೊಂದು ಸಹಜ ಸ್ಥಿತಿ. ನಾವೊಂದು ಮನೆ ಕಟ್ಟುವಾಗ ಅಥವಾ ಕಟ್ಟಿದ ಮನೆಯಲ್ಲಿ ಬಾಡಿಗೆದಾರರಾಗಿ ವಾಸ ಮಾಡಲು ಹೊರಟಾಗ, ಆ ಮನೆಗೆ ಕಲ್ಲು ಕೆತ್ತಿದವರು, ಸಿಮೆಂಟ್ ತಯಾರಿಸಿದ ಕಾರ್ಮಿಕರು, ಗಾರೆ ಕೆಲಸ ಮಾಡಿದವರು, ಕಾಂಕ್ರೀಟು ಕೆಲಸ ಮಾಡಿದವರು, ಜಲ್ಲಿ ಕಲ್ಲು ಕಾರ್ಮಿಕರು ಮುಂತಾದವರ ಬಗ್ಗೆ ಮಾಹಿತಿ ಕಲೆ ಹಾಕಿಕೊಂಡಿರುವುದು ಶೂನ್ಯ ಅನ್ನುವಷ್ಟು ಕಡಿಮೆ. ನಮಗೆ ಹೆಚ್ಚೆಂದರೆ ಮನೆ ಮಾಲಿಕ ಗೊತ್ತಿರುತ್ತಾನೆ. ಅಥವಾ ಮನೆ ಕಟ್ಟಲು ಹೊರಟೆವೆಂದರೆ ನಕಾಶೆ ತಯಾರಿಸಿದವ, ಇಂಜಿನಿ ಯರ್, ಕಾಂಟ್ರಾಕ್ಟರ್ ಮುಂತಾದವರ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತದೆ. ಮೀನುಗಾರರ ಬಗ್ಗೆಯೂ ಕಡಲಿನ ಹೊರಗಡೆಯಿರುವ ಜನರ ಸ್ಥಿತಿ ಇದುವೇ. ಆದರೆ,
ಅಪಘಾತವೋ ಅನಾಹುತವೋ ಸಂಭವಿಸಿದಾಗ ಈ ಮೇಲು ಮೇಲಿನ ಪರದೆ ಸರಿದು ಪರದೆಯ ಆಚೆಗಿರುವ ಜನರ ದ ರ್ಶನವಾಗುತ್ತದೆ. ಕಟ್ಟಡ ಉರುಳಿದಾಗ ಅದರ ಅಡಿಯಲ್ಲಿ ಸಿಲುಕಿಕೊಂಡ ಅಸಹಾಯಕ ಕಾರ್ಮಿಕ ನಮ್ಮ ಹೃದಯವನ್ನು ಕಲಕುತ್ತಾನೆ. ಅವರ ಕುಟುಂಬ, ಮಕ್ಕಳು, ಬಡತನ ಇತ್ಯಾದಿಗಳು ನಮ್ಮ ಕಣ್ಣನ್ನು ತೇವಗೊಳಿಸುತ್ತದೆ. ಇಂಥ ಸಂದರ್ಭದಲ್ಲಿ ಕಟ್ಟಡದ ಮಾಲಿಕ ಸಾರ್ವಜನಿಕ ಪರೀಕ್ಷೆಗೆ ಒಳ ಗಾಗುತ್ತಾನೆ. ಜನರ ಹೃದಯ ತಟ್ಟುವ ಕಾರ್ಮಿಕನಂತೆಯೇ ಆ ಸಂದರ್ಭದಲ್ಲಿ ಮಾಲಿಕನೂ ತಟ್ಟಬೇಕಾದರೆ ಆತನ ವಿಶೇಷ ಸ್ಪಂದನೆ ಬೇಕಾಗುತ್ತದೆ. ಕಾರ್ಮಿಕರನ್ನು ಆತ ಆವರೆಗೆ ನಡೆಸಿಕೊಂಡ ರೀತಿ ಮೆಚ್ಚುವಂತಿರಬೇಕಾಗುತ್ತದೆ. ಇಲ್ಲದಿದ್ದರೆ ಆ ಸಂದರ್ಭದಲ್ಲಿ ಮಾಲಿಕ ಖಳನಾಗುತ್ತಾನೆ. ಕಾರ್ಮಿಕ ಹೀರೋ ಆಗುತ್ತಾನೆ...
ಈ ಮೀನುಗಾರ ಯುವಕರ ಜೊತೆ ಮಾತನಾಡುತ್ತಾ ಹೋದಾಗ ನನ್ನೊಳಗನ್ನು ಹೀಗೆಲ್ಲ ಕಾಡಿದುವು. ಇವರಿಗೆ ಈಗ ಬೇಕಿರುವುದು ಸನ್ಮಾನ ಅಲ್ಲ. ಮೆಚ್ಚುಗೆಯ ಜೊತೆಜೊತೆಗೇ ಇವರ ವೃತ್ತಿಗೊಂದು ಭದ್ರತೆ. ಇನ್ನೂ ಬೆಳಕು ಮೂಡುವ ಮೊದಲೇ ಮೀನು ಬೇಟೆಯ ಬೋಟಿಗಿಳಿಯುವಾಗ ಕನಿಷ್ಠ ಲೈಫ್ ಜಾಕೆಟ್ ಎಂಬ ಆಪತ್ಕಾಲೀನ ವ್ಯವಸ್ಥೆ. ಮೀನು ತಂದು ತೀರದಲ್ಲಿಳಿದಾಗ ಗೌರವ ಮತ್ತು ವೃತ್ತಿಗೆ ತಕ್ಕ ವೇತನ. ಇಷ್ಟು ಅಪಾಯಕಾರಿ ಕೆಲಸ ಮಾಡಿಯೂ ಒಂದು ದಿನ ದುಡಿಯ ದಿದ್ದರೆ ಅನ್ನವಿಲ್ಲ ಎಂಬ ಅಭದ್ರತೆಯಿಂದ ಮುಕ್ತಿ. ಅನಾರೋಗ್ಯ, ಮಕ್ಕಳ ಶಾಲಾ ಫೀಸು ಮುಂತಾದ ಸಂದರ್ಭಗಳಲ್ಲಿ ಕಾಡುವ ಅಸಹಾಯಕತೆಯಿಂದ ಮುಕ್ತಿ. ಮೀನುಗಾರರಿಗೆ ಜೀವನ ಭದ್ರತೆಗೆ ಪೂರಕವಾದ ಯೋಜನೆ.
ಬೃಹತ್ ಬೋಟಿನ ಮಾಲಿಕರು ಮನಸ್ಸು ಮಾಡಿದರೆ ಮತ್ತು ಜಿಲ್ಲಾ
ಧಿಕಾರಿಯವರು ಮುತುವರ್ಜಿ ತೋರಿದರೆ ಇದು ಖಂಡಿತ ಅಸಾಧ್ಯ ಅಲ್ಲ.
ನನ್ನೆದುರು ಕುಳಿತ ಕಡಲ ಮೀನುಗಳಾದ ಶರಾಫತ್, ನಿಝಾಮ್, ಶಿಹಾಬ್, ಇಜಾಝï ಮತ್ತು ರುಬಾನ್‍ರಿಗೆ ಅಭಿನಂದನೆಗಳು.
No comments:
Post a Comment