ಏ.ಕೆ. ಕುಕ್ಕಿಲ
ಮರುದಿನವೇ ಪೋಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸುತ್ತಾರೆ.
ಆ ಬಳಿಕ ಕರ್ನಿಸೇನಾದಂಥ ಅನೇಕಾರು ಸಂಘಟನೆಗಳು ಈ ಘಟನೆಯನ್ನು ಎತ್ತಿಕೊಂಡು ಪ್ರತಿಭಟನೆ ನಡೆಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಲವ್‍ಜಿಹಾದ್ ಕೋನದಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಸರ್ವ ಬಿರಾದಾರಿ ಸಂಘಟನ್‍ನ ನೇತೃತ್ವದಲ್ಲಿ ನವೆಂಬರ್ 1ರಂದು ಹರ್ಯಾಣದ ದುಸ್ಸೆಹ್ರಾ ಮೈದಾನದಲ್ಲಿ ಪ್ರತಿಭಟನೆ ನಡೆದಿದೆ. ಸಾವಿರಕ್ಕಿಂತ ಅಧಿಕ ಮಂದಿ ಅದರಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆ ಹಿಂಸಾತ್ಮಕ ರೂಪ ಪಡಕೊಂಡಿತಲ್ಲದೇ 11 ಪೊಲೀಸರಿಗೂ ಗಾಯವಾಯಿತು. ಆಗ್ರಾದಿಂದ ನವದೆಹಲಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 44ಕ್ಕೆ ತಡೆಯೊಡ್ಡಲು ಪ್ರತಿಭಟನಾಕಾರರು ಶ್ರಮಿಸಿದರು. ಅಂಗಡಿಗಳಿಗೆ ಕಲ್ಲೆಸೆತ ನಡೆಯಿತು. 32 ಮಂದಿಯ ಬಂಧನವೂ ನಡೆಯಿತು. ಬಳಿಕ ನಿಖಿತಾಳ ತಂದೆ ಮೂಲಚಂದ್ ತೋಮರ್ ಅವರ ಮನೆಗೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಶೆಲ್ಜಾ ಭೇಟಿ ನೀಡಿದ ವೇಳೆ ಅವರ ಮೇಲೆ ಹಲ್ಲೆ ನಡೆಯಿತು. ಆ ಬಗ್ಗೆ ಎಫ್‍ಐಆರ್ ಕೂಡ ದಾಖಲಾಯಿತು. ಹಾಗಂತ,
ಇದು ಎರಡು ಧರ್ಮಗಳ ನಡುವಿನ ವಿಷಯ ಅಲ್ಲ ಎಂದು ನಿಖಿತಾಳ ತಂದೆ ತೋಮರ್ ಅವರೇ ಹೇಳಿದ್ದಾರೆ. ಆದರೆ ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿರುವ ತೋಮರ್ ಅವರಲ್ಲಿ ಇನ್ನೊಂದು ಸಂಕಟವೂ ಇದೆ. ‘ನೋ’ ಎಂದ ಕಾರಣಕ್ಕೆ ಕೊಲ್ಲುವುದನ್ನು ಹೇಗೆ ಸಹಿಸಿಕೊಳ್ಳುವುದು?
2018ರಲ್ಲಿ ನಿಖಿತಾಳನ್ನು ಇದೇ ತೌಸೀಫ್ ಅಪಹರಣಗೊಳಿಸಿದ ಬಗ್ಗೆ ಬಲ್ಲಾಬ್‍ಘರ್ ನ ಪೊಲೀಸ್ ಠಾಣೆಯಲ್ಲಿ ತೋಮರ್ ಕೇಸು ದಾಖಲಿಸಿದ್ದರು. ಎಫ್‍ಐಆರ್ ದಾಖಲಾಗಿತ್ತು. ಎಫ್‍ಐಆರ್‍ನ ಪ್ರಕಾರ, ನಿಖಿತಾ ತನ್ನ ಅಪಹರಣವಾಗಿರುವ ಬಗ್ಗೆ ಗೆಳೆಯ ಅಭಿಷೇಕ್‍ಗೆ ತಿಳಿಸಿದ್ದಳು. ಆತ ತೋಮರ್ ಗೆ ತಿಳಿಸಿದ್ದ. ಭಾರತೀಯ ದಂಡಸಂಹಿತೆ 365ರ ಪ್ರಕಾರ ಕೇಸೂ ದಾಖಲಾಗಿತ್ತು. ಆದರೆ, ಆ ಬಳಿಕ ಎರಡೂ ಕುಟುಂಬಗಳು ಮಾತುಕತೆ ನಡೆಸಿ ಸಮಸ್ಯೆಯನ್ನು ರಾಜಿಯಲ್ಲಿ ಪರಿಹರಿಸಿಕೊಂಡಿದ್ದುವು. ಆದರೆ ತೌಸೀಫ್‍ನ ತಾಯಿ ಇದನ್ನು ನಿರಾಕರಿಸುತ್ತಾರೆ. ತೌಸೀಫ್‍ನ ಜೊತೆ ನಿಖಿತಾಳೇ ಹೊರಟು ಬಂದಿದ್ದಳು ಮತ್ತು ಆಕೆಯ ಅಂಕಲ್‍ನ ಜೊತೆ ಬಳಿಕ ಕಳುಹಿಸಿಕೊಡಲಾಯಿತು ಎಂದು ಅವರು ಹೇಳುತ್ತಾರೆ. ಎಫ್‍ಐಆರ್ ಅನ್ನು ಆ ಬಳಿಕ ರದ್ದುಗೊಳಿಸಲಾಗಿತ್ತು.
ಫರೀದಾಬಾದ್‍ನ ರವಾಲ್ ಇಂಟರ್‍ನ್ಯಾಶನಲ್ ಸ್ಕೂಲ್‍ನಲ್ಲಿ ಕಲಿಯುತ್ತಿದ್ದಾಗ ನಿಖಿತಾ ಮತ್ತು ತೌಸೀಫ್ ಭೇಟಿಯಾಗಿದ್ದರು ಎಂದು ತೋಮರ್ ಹೇಳುತ್ತಾರೆ. ಆತ ಆಗ ಹಾಸ್ಟೆಲ್‍ನಲ್ಲಿದ್ದು ಕಲಿಯುತ್ತಿದ್ದ. ತೌಸೀಫ್‍ನ ತಾಯಿಯ ಪ್ರಕಾರ ಆತ ಕಲಿಕೆಯಲ್ಲಿ ಮುಂದು. ಬೆಂಗಳೂರಿನ ಮೆಡಿಕಲ್ ಕಾಲೇಜಿನಲ್ಲಿ ಆತನಿಗೆ ಈ ಬಾರಿ ಎಂಬಿಬಿಎಸ್ ಸೀಟು ಸಿಕ್ಕಿತ್ತು. ದೂರ ಎಂಬ ಕಾರಣಕ್ಕಾಗಿ ಎಂಬಿಬಿಎಸ್ ಕಲಿಕೆಯನ್ನು ಕೈ ಬಿಡಲಾಗಿತ್ತು. ಹಾಗೆಯೇ, ನಿಖಿತಾಳ ಅಪಹರಣ ಪ್ರಕರಣ ನಡೆದ ಬಳಿಕ ಮನೆಯವರು ಆಕೆಯ ಜೊತೆ ಸದಾ ಇರುತ್ತಿದ್ದರು. ಒಂಟಿಯಾಗಿ ಕಾಲೇಜಿಗೆ ಹೋಗುವುದಾಗಲಿ ಮತ್ತು ಹಿಂತಿರುಗುವುದಾಗಲಿ ಮಾಡುತ್ತಿರಲಿಲ್ಲ. ಅಮ್ಮ ಮತ್ತು ಸಹೋದರ ಸದಾ ಬೆಂಗಾವಲಾಗಿ ನಿಲ್ಲುತ್ತಿದ್ದರು. ಘಟನೆ ನಡೆದ ದಿನದಂದೂ ಆಕೆ ಸಹೋದರನಿಗಾಗಿ ಕಾಯುತ್ತಿದ್ದಳು. ಈ ಎರಡು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಆಕೆಯನ್ನು ತೌಸೀಫ್ ಭೇಟಿಯಾಗಿದ್ದನ್ನು ತಾನು ಕಂಡಿಲ್ಲ ಎಂದು ತೋಮರ್ ಹೇಳುತ್ತಾರೆ. ಪೊಲೀಸರು ಹೇಳುವುದೇನೆಂದರೆ, ‘ಒಂದೋ ಆಕೆ ನನಗೆ ಸಿಗಬೇಕು, ಇಲ್ಲದಿದ್ದರೆ ಯಾರಿಗೂ ಸಿಗಬಾರದು’ ಎಂಬ ಮನಸ್ಥಿತಿ ತೌಸೀಫ್‍ನದ್ದು. ನಿಜವಾಗಿ,
ಅಕ್ಟೋಬರ್ 26ರ ಆ ಘಟನೆಯನ್ನು ಇಲ್ಲಿ ಇಷ್ಟುದ್ದ ವಿವರಿಸಬೇಕಾದ ಅಗತ್ಯ ಇರಲಿಲ್ಲ. ಮತ್ತೂ ಯಾಕೆ ಇಲ್ಲಿ ಇಷ್ಟು ವಿಸ್ತೃತವಾಗಿ ವಿವರಿಸಿದ್ದೇಕೆಂದರೆ, ಭಾರತದ ಯಾವುದೇ ಮೂಲೆಯಲ್ಲಿ ನಡೆಯಬಹುದಾದ ಕ್ರೌರ್ಯಕ್ಕಿಂತ ಈ ಕ್ರೌರ್ಯ ಯಾವ ರೀತಿಯಲ್ಲೂ ಭಿನ್ನ ಅಲ್ಲ ಎಂಬುದಕ್ಕಾಗಿ. ಇದು ಅಪರೂಪದಲ್ಲಿ ಅಪರೂಪದ ಘಟನೆ ಅಲ್ಲ. ಇಂಥ ಕ್ರೌರ್ಯಗಳು ದೇಶದಲ್ಲಿ ಈ ಮೊದಲೂ ನಡೆದಿವೆ. ‘ನನಗೆ ಸಿಗದವಳು ಯಾರಿಗೂ ಸಿಗಬಾರದು’ ಎಂಬ ಸ್ವಾರ್ಥವು ಅನೇಕ ಹೆಣ್ಮಕ್ಕಳನ್ನು ಬಲಿ ಪಡೆದಿದೆ. ಅಂಥ ಹೆಣ್ಮಕ್ಕಳಲ್ಲಿ ಹಿಂದುವೂ ಇದ್ದಾರೆ. ಮುಸ್ಲಿಮೂ ಇದ್ದಾರೆ. ಕ್ರೂರಿ ಗಂಡು ಮಕ್ಕಳಲ್ಲಿ ಹಿಂದುವೂ ಇದ್ದಾರೆ, ಮುಸ್ಲಿಮೂ ಇದ್ದಾರೆ. ಸಮಾಜ ಮಾತ್ರ ತನ್ನ ಮನಸ್ಥಿತಿಗೋ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿಯೋ ಕೆಲವೊಂದನ್ನು ಲವ್ ಜಿಹಾದ್ ಎಂದೋ ಇನ್ನು ಹಲವನ್ನು ಪ್ರೇಮ ಪ್ರಕರಣ ವೆಂದೋ ವಿಭಜಿಸಿ ಆಡಿಕೊಳ್ಳುತ್ತದೆ. ಸದ್ಯದ ಅಗತ್ಯ ಏನೆಂದರೆ,
ನಿಖಿತಾಳಂತಹ ಕೋಟ್ಯಂತರ ಹೆಣ್ಮಕ್ಕಳ ಬದುಕು ಅ ಪಾಯಕ್ಕೆ ತುತ್ತಾಗದಂತೆ ನೋಡಿಕೊಳ್ಳುವುದು. ನಿಖಿತಾ ಎಂಬುದು ಒಂದು ಸಂಕೇತ ಮಾತ್ರ. ಧರ್ಮ ಯಾವುದೇ ಆಗಿದ್ದರೂ ಹೆಣ್ಣು ಹೆಣ್ಣೇ. ಇಂಥ ಪ್ರಕರಣಗಳು ಅಂತಿಮವಾಗಿ ಪರಿಣಾಮ ಬೀರುವುದೂ ಹೆಣ್ಣಿನ ಮೇಲೆಯೇ. ಹೆಣ್ಮಕ್ಕಳ ಓದಿಗೆ ಇಂಥವು ತಡೆ ಒಡ್ಡುತ್ತವೆ. ದೂರದೂರಿಗೆ ಕಲಿಕೆಗೆ ಕಳುಹಿಸಿ ಕೊಡಲು ಹೆತ್ತವರು ಭಯ ಪಡುತ್ತಾರೆ. ಮುಂದೆ ಏನಾಗುವುದೋ ಎಂಬ ಭೀತಿಯಿಂದ ಮನೆಯಲ್ಲೇ ಹೆಣ್ಮಕ್ಕಳನ್ನು ಹೆತ್ತವರು ಉಳಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಥ ಭಯ ಇರುವ ಕಾರಣದಿಂದಲೇ ಹೆಣ್ಮಕ್ಕಳು ಮ ನೆಯವರಲ್ಲಿ ಏನನ್ನೂ ಹಂಚಿಕೊಳ್ಳುವುದಿಲ್ಲ. ಪುಂಡರ ಚುಡಾಯಿಸುವಿಕೆಯಾಗಲಿ ಏಕಮುಖ ಪ್ರೇಮಿಯ ಕುರಿತಾಗಲಿ ಮನೆಯಲ್ಲಿ ಏನನ್ನೂ ಹೇಳಿ ಕೊಳ್ಳದೇ ಮುಚ್ಚಿಡುತ್ತಾರೆ. ಹೇಳಿಬಿಟ್ಟರೆ ಎಲ್ಲಿ ಕಲಿಕೆಗೆ ಕುತ್ತಾಗು ವುದೋ ಎಂಬ ಭೀತಿ. ಕೆಲವೊಮ್ಮೆ ಹೆಣ್ಮಕ್ಕಳು ಹೇಳಿಕೊಂಡರೂ ಮರ್ಯಾದೆಗೆ ಅಂಜಿ ಹೆತ್ತವರು ಸುಮ್ಮನಾಗುವುದಿದೆ. ಅದು ಆರೋಪಿಗಳಲ್ಲಿ ಧೈರ್ಯವನ್ನು ಒದಗಿಸುತ್ತದೆ.
ಹೆಣ್ಣು-ಗಂಡಿನ ನಡುವೆ ಆಕರ್ಷಣೆ ಪ್ರಕೃತಿ ಸಹಜ. ಮಾನವ ಜನಾಂಗ ಇರುವವರೆಗೆ ಈ ಆಕರ್ಷಣೆ ಇದ್ದೇ ಇರುತ್ತದೆ. ಮಾತ್ರವಲ್ಲ, ಈ ಆಕರ್ಷಣೆಗೆ ಧರ್ಮವೂ ಇರುವುದಿಲ್ಲ. ಹೆಣ್ಣು ಮತ್ತು ಗಂಡು ಎಂಬ ಪ್ರಕೃತಿ ಧರ್ಮವಷ್ಟೇ ಇರುತ್ತದೆ. ಸಮಾಜ ಮಾತ್ರ ಹೆಣ್ಣಿಗೊಂದು ಮತ್ತು ಗಂಡಿಗೊಂದು ಧರ್ಮವನ್ನು ಕೊಟ್ಟು ಆ ಆಕರ್ಷಣೆಯಲ್ಲಿ ಸಂಚನ್ನೋ ಸಹಜತೆಯನ್ನೋ ಕಾಮವನ್ನೋ ಹುಡುಕುತ್ತದೆ. ಲವ್ ಜಿಹಾದ್ ಎಂಬುದಕ್ಕೆ ಇದರಾಚೆಗಿನ ಮಹತ್ವ ಇಲ್ಲ ಎಂದೇ ನನ್ನ ಭಾವನೆ. ಬಹು ಧರ್ಮೀಯ ಭಾರತದಲ್ಲಂತೂ ಹೆಣ್ಣು ಹಿಂದೂ ಆಗಿರುವುದು ಮತ್ತು ಗಂಡು ಮುಸ್ಲಿಮ್ ಆಗಿರುವುದು ಅಥವಾ ಇವು ತಿರುವು-ಮುರುವು ಆಗಿರುವುದು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮ್ ಮತ್ತು ಹಿಂದೂಗಳ ಜನಸಂಖ್ಯೆಯಲ್ಲಿ ಏರಿಳಿತ ಇರುವುದರಿಂದ ಪ್ರೇಮ ಪ್ರಕರಣಗಳ ಅನುಪಾತದಲ್ಲೂ ಈ ಏರಿಳಿತ ಇದೆ. ಹಿಂದೂ ಯುವಕ ಮತ್ತು ಮುಸ್ಲಿಮ್ ಯುವತಿಯ ನಡುವಿನ ಪ್ರೇಮ ಪ್ರಕರಣಕ್ಕಿಂತ ಮುಸ್ಲಿಮ್ ಯುವಕ ಮತ್ತು ಹಿಂದೂ ಯುವತಿಯ ನಡುವಿನ ಪ್ರೇಮ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದರೆ ಅದಕ್ಕೆ ಈ ಜ ನಸಂಖ್ಯೆಯ ಪ್ರಮಾಣ ಕಾರಣವಾಗಿರುವುದರ ಹೊರತಾಗಿ ಇನ್ನಾವುದೂ ಕಾಣಿಸುತ್ತಿಲ್ಲ. ಸದ್ಯ ಸಮಾಜದ ಅಗತ್ಯ ಏನೆಂದರೆ,
ಯುವ ಸಮೂಹವನ್ನು ಪ್ರೇಮದ ವಿಷಯದಲ್ಲಿ ಶಿಕ್ಷಿತರನ್ನಾಗಿ ಮಾಡುವುದು. ಪ್ರೇಮ ಸಹಜ ಸತ್ಯ ಎಂಬುದನ್ನು ಅರ್ಥ ಮಾಡಿಕೊಂಡ ಯಾವುದೇ ಸಮಾಜ ತನ್ನ ಯುವ ಪೀಳಿಗೆಗೆ ಪ್ರೇಮವನ್ನು ವಿವರಿಸಿಕೊಡುವ ಜವಾಬ್ದಾರಿಯನ್ನೂ ವಹಿಸಿಕೊಳ್ಳಬೇಕಿದೆ. ಲವ್ ಜಿಹಾದ್ ಸುಳ್ಳು ನಿಜ. ಆದರೆ ಲವ್ ಸುಳ್ಳಲ್ಲ. ಸುಳ್ಳಲ್ಲದ ಲವ್ ಅನ್ನು ಸುಳ್ಳು ಸುಳ್ಳೇ ಎದೆಯೊಳಗೆ ಬಚ್ಚಿಟ್ಟುಕೊಂಡು ಸಂಕಟಪಡುತ್ತಾ ಹೊರಗಡೆ ನಗುವ ಮತ್ತು ಅಮಾಯಕರಂತೆ ಬದುಕುವ ಯುವಕ-ಯುವತಿಯರಿಗೆ ಅದರ ಸರಿ-ತಪ್ಪುಗಳನ್ನು ವಿವರಿಸಿಕೊಡುವ ವ್ಯವಸ್ಥೆಯಾಗಬೇಕು. ಹೀಗಾಗ ಬೇಕಾದರೆ ಮೊದಲು ಅವರು ತಮ್ಮ ಪ್ರೇಮವನ್ನು ಹೆತ್ತವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳುವ ವಾತಾವರಣ ನಿರ್ಮಾಣವಾಗಬೇಕು. ನಿಜವಾಗಿ ಇವತ್ತಿನ ದಿನಗಳ ಅತೀ ಜರೂರು ಇದು. ಮಕ್ಕಳ ಪಾಲಿಗೆ ಮನೆಯ ವಾತಾವರಣ ಎಲ್ಲವನ್ನೂ ಹಂಚಿಕೊಳ್ಳುವಷ್ಟು ಹಿತಕರವಾಗಿರಬೇಕು. ತಮ್ಮ ಉದ್ದೇಶ, ಗುರಿ, ಹವ್ಯಾಸ, ಅಭ್ಯಾಸ, ಗೆಳೆಯರು, ಕಲಿಕೆ, ಪ್ರೇಮ.. ಏನೇ ಇರಲಿ ಎಲ್ಲವನ್ನೂ ಹೆತ್ತವರೊಂದಿಗೆ ಹಂಚಿಕೊಂಡು ಸಲಹೆ ಪಡಕೊಳ್ಳುವ ಮುಕ್ತ ವಾತಾವರಣ ಮನೆಯದ್ದಾಗಿರಬೇಕು. ಹೆಣ್ಣಿಗೂ ಗಂಡಿಗೂ ಈ ವಾತಾವರಣ ಪ್ರತಿ ಮನೆಯಲ್ಲೂ ಸೃಷ್ಟಿಯಾಗಬೇಕು. ಅದರಿಂದ ಎರಡು ಲಾಭ ಇದೆ-
1. ಯುವಕ ಅಥವಾ ಯುವತಿಗೆ ಅದರಿಂದ ಮಾನಸಿಕ ಬಲ ಲಭ್ಯವಾಗುತ್ತದೆ. ಭಾರ ಇಳಿಸಿಕೊಂಡ ನೆಮ್ಮದಿ ಒಂದೆಡೆ ಯಾದರೆ, ಹೆತ್ತವರಿಂದ ಸಲಹೆ-ಸೂಚನೆ ಪಡಕೊಳ್ಳುವ ಮೂಲಕ ತಾನು ಒಂಟಿಯಲ್ಲ ಎಂಬ ಭಾವನೆ ಅವರಲ್ಲಿ ಬೆಳೆಯುತ್ತದೆ.
2. ತನ್ನ ಮಗ ಅಥವಾ ಮಗಳು ಎಂಥ ಸ್ಥಿತಿಯಲ್ಲಿದ್ದಾಳೆ/ನೆ ಎಂಬುದನ್ನು ಹೆತ್ತವರಿಗೆ ಅರಿತುಕೊಳ್ಳಲು ಸುಲಭವಾಗುತ್ತದೆ. ತನ್ನ ಮಕ್ಕಳ ಸ್ಥಿತಿ ಸಂದಿಗ್ಧವೋ ಭವಿಷ್ಯದಲ್ಲಿ ಅಪಾಯ ಎದುರಾದೀತೋ, ಕೌನ್ಸೆಲಿಂಗ್ ನಡೆಸಬೇಕಾದೀತೋ ಇತ್ಯಾದಿಗಳ ಬಗ್ಗೆ ವಿಶ್ಲೇಷಿಸುವುದಕ್ಕೆ ಹೆತ್ತವರಿಗೆ ಅವಕಾಶ ಸಿಗುತ್ತದೆ.
ಇಂಥ ವಾತಾವರಣವನ್ನು ಮನೆಯೊಳಗಡೆ ಉಂಟು ಮಾಡಿದರೆ ನಿಖಿತಾಳಂತಹ ಅಸಂಖ್ಯ ಹೆಣ್ಮಕ್ಕಳನ್ನು ಅಪಾಯದಿಂದ ಪಾರು ಮಾಡುವುದಕ್ಕೆ ಅವಕಾಶ ಸಿಗಬಹುದು. ಹಾಗೆಯೇ ತೌಸೀಫ್‍ನಂಥ ಮಕ್ಕಳು ನಿರ್ಮಾಣವಾಗದಂತೆ ತಡೆಯುವುದಕ್ಕೂ ಸಾಧ್ಯವಾಗಬಹುದು. ‘ತನಗೆ ಸಿಗದವರು ಇನ್ನಾರಿಗೂ ಸಿಗಬಾರದು’ ಎಂಬ ಭಾವ ತೀವ್ರವತೆಯು ಹೆಚ್ಚಿನ ದುರಂತ ಪ್ರೇಮ ಪ್ರಕರಣ ಗಳ ಒಳರಹಸ್ಯವೆಂಬುದು ಸತ್ಯ. ಏಕಮುಖ ಪ್ರೇಮದ ಕೊನೆಯೂ ಹೀಗೆಯೇ. ಪ್ರೇಮದ ಬಗ್ಗೆ ಮುಕ್ತವಾಗಿ ಮಾತಾಡಿಕೊಳ್ಳದ ಸಾಮಾಜಿಕ ವಾತಾವರಣದಲ್ಲಿ ಇಂಥ ದುರಂತಗಳು ತಪ್ಪಿದ್ದಲ್ಲ. ಇವನ್ನು ಕಾನೂನೊಂದೇ ತಡೆಯದು. ಆ ಕ್ಷಣದಲ್ಲಿ ವ್ಯಕ್ತಿಯ ಮೆದುಳು ಸಕಾರಾತ್ಮಕವಾಗಿ ಯೋಚಿಸುವುದನ್ನು ನಿಲ್ಲಿಸಿರುತ್ತದೆ. ಕಾನೂನು ಕಟ್ಟಳೆಗಳು ಆ ಸಮಯದಲ್ಲಿ ಭಯ ಉಂಟು ಮಾಡುವುದೂ ಇಲ್ಲ. ಅದೊಂದು ಭ್ರಾಮಕ ಸ್ಥಿತಿ. ಆ ಸ್ಥಿತಿಗೆ ತಲುಪದಂತೆ ಯುವ ಸಮೂಹವನ್ನು ತಡೆಯಬೇಕಾದರೆ ಅವರು ತಮ್ಮನ್ನು ಮುಕ್ತವಾಗಿ ಮನೆಯವರೊಂದಿಗೆ ತೆರೆದಿಡುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ. ಪ್ರೇಮದ ಉತ್ಕಟ ಭಾವತೀವ್ರತೆಯ ಅಮಲಿನಿಂದ ಹೆಣ್ಣು ಅಥವಾ ಗಂಡನ್ನು ಹೊರತರಲು ಒಂದು ಮನೆಯಿಂದ ಸಾಧ್ಯ. ಅದು ಬಿಟ್ಟು ಪ್ರೇಮ ಪ್ರಕರಣವನ್ನು ಲವ್‍ಜಿಹಾದ್ ಎಂದೋ ಮತಾಂತರದ ಸಂಚು ಎಂದೋ ಹುಯಿಲೆಬ್ಬಿಸುವುದು ಕಾಲಹರಣ ಅಷ್ಟೇ.
ಇನ್ನು, ಇಸ್ಲಾಮ್‍ಗೆ ಮತಾಂತರವಾದವರ ಸಂಖ್ಯೆ ಮತ್ತು ಹಿಂದೂ ಧರ್ಮಕ್ಕೆ ಮತಾಂತರವಾದವರ ಸಂಖ್ಯೆಯನ್ನು ಇಟ್ಟುಕೊಂಡು ಚರ್ಚಿಸುವಿರಾದರೆ, ನಿಮ್ಮಿಷ್ಟ.
No comments:
Post a Comment