Monday, December 26, 2016

ನೀನಾರಿಗಾದೆ ಮಾನವಾ.. ನಿನಗಾರು ಇಲ್ಲಿ ಹೇಳೂ...

ಅಂದು ರಮಝಾನ್ ದಿನ
ಆಸ್ಪತ್ರೆ ಮಂಚದಲ್ಲಿದ್ದೆ
ಕೋಣೆ ತುಂಬಾ ಗದ್ದಲ
ತುಂಬಿದ್ದಾರೆ ಜನ
ಕಾಯುತ್ತಿದ್ದಾರೆ ನನ್ನಂತಿಮ ಕ್ಷಣ

ನಾನು ಸಂಪೂರ್ಣ ಕೃಶನಾಗಿದ್ದೆ
ಚಿತ್ರ-ವಿಚಿತ್ರ ಚಿಕಿತ್ಸೆಗೆ ಒಳಗಾಗಿದ್ದೆ
ನನ್ನ ಚೇತರಿಕೆ ಅಸಾಧ್ಯವೆಂಬ ಭಾವನೆ ವೈದ್ಯರಿಗೆ
ನನ್ನಾತ್ಮ ಗಟ್ಟಿಯಿತ್ತು ಬದುಕಿದೆ.

ಮರಣದ ಬಗ್ಗೆ ಭಯವಿರಲಿಲ್ಲ
ಪ್ರಿಯತಮೆಯೊಂದಿಗೆ ವಸಿಯ್ಯತ್ ಮಾಡಿದ್ದೆ
ಆಕೆಯ ಬದುಕು, ಮಕ್ಕಳ ಭವಿಷ್ಯ ಚಿತ್ರಿಸಿದ್ದೆ

ಮತ್ತೆ ವರುಷ ಉರುಳಿದೆ
ದಾಸನ ಕರುಣೆ ಮರಳಿದೆ
ಅಂತಿಮ ಸಂಕಲ್ಪ ದೇವ ವಿಧಿ
ಆರೋಗ್ಯವಲ್ಲವೇ ದಾಸನ ನಿಧಿ
       ಹೀಗೆ ತನ್ನಂತರಂಗವನ್ನು 2015ರ ಜುಲೈ 28 ರಂದು (ಸಂಪುಟ 38, ಸಂಚಿಕೆ 21) ಬಿಡುಗಡೆಗೊಂಡ ಸನ್ಮಾರ್ಗದಲ್ಲಿ ಬಿಚ್ಚಿಟ್ಟಿದ್ದ ಇಷ್ಟದ ಗೆಳೆಯ ಅಹ್ಮದ್ ಅನ್ವರ್ ಇದೀಗ ಇಹಲೋಕ ಜೀವನಕ್ಕೆ ವಿದಾಯ ಕೋರಿದ್ದಾರೆ. ಡಿ. 11 ರಂದು ಬೆಳಿಗ್ಗೆ ಅವರ ನಿಧನ ವಾರ್ತೆಯನ್ನು ಕೇಳಿ ನಾನು ತಳಮಳಗೊಂಡೆ. ಇದಕ್ಕಿಂತ ಎರಡು ದಿನಗಳ ಹಿಂದಷ್ಟೇ (ಡಿ. 9) ನನ್ನ ಮಾವ (ಪತ್ನಿಯ ತಂದೆ) ನಿಧನರಾಗಿದ್ದರು. ಎರಡು ದಿನಗಳ ಅಂತರದಲ್ಲಿ ನಡೆದ ಈ ಎರಡು ಘಟನೆಗಳು ನನ್ನನ್ನು ತೀವ್ರವಾಗಿಯೇ ಕಾಡಿದುವು. ನೋಯಿಸಿದುವು. ಸಾವಿಗೆ ವಿಶೇಷ ಸಾಮರ್ಥ್ಯವಿದೆ. ಅದು ಎಂಥ ಗಟ್ಟಿ ಗುಂಡಿಗೆಯನ್ನೂ ಕರಗಿಸಿ ಬಿಡುತ್ತದೆ. ಅನ್ವರ್ ಅವರ ಸಾವಿನ ಸುದ್ದಿಯನ್ನು ತಕ್ಷಣಕ್ಕೆ ಜೀರ್ಣಿಸಿಕೊಳ್ಳಲು ನನ್ನಿಂದ ಸಾಧ್ಯವಾಗಲಿಲ್ಲ. ಕುಟುಂಬ ವರ್ಗಕ್ಕೆ ಕರೆ ಮಾಡಿ ಖಚಿತಪಡಿಸಿಕೊಂಡೆ. ಹಾಗಂತ ಸಾವು ಅನಿರೀಕ್ಷಿತವಾಗಿತ್ತು ಎಂದಲ್ಲ. ಅನಿರೀಕ್ಷಿತ ಸಾವು ಎಂಬುದು ಇಲ್ಲವೇ ಇಲ್ಲ. ಸಾವು ಎಲ್ಲರಿಗೂ ನಿರೀಕ್ಷಿತ. ಆದರೆ ಕೆಲವೊಮ್ಮೆ ಅದು ಅಪ್ಪಳಿಸುವ ರೀತಿ ನಮ್ಮನ್ನು ಹಾಗೆ ಭ್ರಮಿಸಿಕೊಳ್ಳುವಂತೆ ಮಾಡುತ್ತದೆ. ಮರಣಕ್ಕೆ ಅನ್ವರ್ ಭಯಪಟ್ಟಿರಲಿಲ್ಲ. ಒಂದಕ್ಕಿಂತ ಹೆಚ್ಚು ಬಾರಿ ಸಾವು-ಬದುಕಿನ ಹೋರಾಟವನ್ನು ನಡೆಸಿದ ವ್ಯಕ್ತಿಯೋರ್ವ ಮರಣವನ್ನು ಭಯಾನಕವಾಗಿ ಪರಿಗಣಿಸುವುದಕ್ಕೆ ಸಾಧ್ಯವೂ ಇರಲಿಲ್ಲ. ಅನ್ವರ್ ಹಲವು ಬಾರಿ ಬದುಕು ಮತ್ತು ಶಾಶ್ವತ ಬದುಕಿನ ಬಗ್ಗೆ ನನ್ನೊಂದಿಗೆ ಮಾತಾಡಿದ್ದರು. ಮರಣದ ಬಗ್ಗೆ ಮಾತಾಡುತ್ತಲೇ ಬದುಕಿ ಉಳಿಯುವ ಬಗ್ಗೆ ಅತೀವ ಆತ್ಮವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದರು. ನಾನು ಪ್ರತಿ ಭೇಟಿಯ ಸಂದರ್ಭದಲ್ಲೂ, ‘ಹೇಗಿದ್ದೀರಿ’ ಎಂದು ಪ್ರಶ್ನಿಸುತ್ತಿದ್ದೆ. ನನಗೆ ಸಂಬಂಧಿಸಿ ಅದೊಂದು ಸಹಜ ಕ್ರಿಯೆ. ಮೊದಲು ಸಲಾಮ್ ಹೇಳುವುದು, ಬಳಿಕ ಹೇಗಿದ್ದೀರಿ ಎಂದು ಪ್ರಶ್ನಿಸುವುದು. ಆದರೆ ನನ್ನ ಸಲಾಮನ್ನು ಮತ್ತು ಬಳಿಕದ ಪ್ರಶ್ನೆಯನ್ನು ಸ್ವೀಕರಿಸಬೇಕಾದ ಅನ್ವರ್ ನನ್ನ ಪ್ರತಿ ಭೇಟಿಯ ಸಂದರ್ಭದಲ್ಲೂ ಭಿನ್ನ ಭಿನ್ನ ಆರೋಗ್ಯ ಸ್ಥಿತಿಯಲ್ಲಿರುತ್ತಿದ್ದರು. ಒಮ್ಮೆ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಇನ್ನೊಮ್ಮೆ ನಿತ್ರಾಣರಾಗಿರುತ್ತಿದ್ದರು. ಇನ್ನೊಮ್ಮೆ ವಾಂತಿಯಲ್ಲಿರುತ್ತಿದ್ದರು. ಆಸ್ಪತ್ರೆಯ ಮಂಚದಲ್ಲಿ ಗ್ಲುಕೋಸ್ ಮತ್ತಿತರವುಗಳನ್ನು ಚುಚ್ಚಿಸಿಕೊಂಡು ಮಾತೂ ಆಡದಷ್ಟು ಸಂಕಟದಲ್ಲಿರುತ್ತಿದ್ದರು. ಆದರೆ ಪ್ರತಿ ಸಂದರ್ಭದಲ್ಲೂ ಅವರು ನನಗೆ ಉತ್ತರಿಸುತ್ತಿದ್ದುದು ಸಕಾರಾತ್ಮಕವಾಗಿಯೇ. ಅಲ್ ಹಮ್ದುಲಿಲ್ಲಾಹ್ ಎಂಬ ಉತ್ತರವನ್ನು ಪಡೆಯದ ಒಂದೇ ಒಂದು ಭೇಟಿ ನನ್ನ ಮತ್ತು ಅವರ ನಡುವೆ ನಡೆದಿಲ್ಲ. ಆರೋಗ್ಯದ ಪ್ರತಿ ಏರುಪೇರನ್ನೂ ಅವರು ಸಕಾರಾತ್ಮಕವಾಗಿಯೇ ಸ್ವೀಕರಿಸಿದ್ದರು. ಹಾಗಂತ, ಕ್ಯಾನ್ಸರ್‍ನ ಜೊತೆ ಕಳೆದ 5 ವರ್ಷಗಳಿಂದ ಸೆಣಸುತ್ತಿರುವ ವ್ಯಕ್ತಿ ಎಂಬ ನೆಲೆಯಲ್ಲಿ, ಅವರಿಗೆ ಇದು ಸುಲಭ ಆಗಿರಲಿಲ್ಲ. ಇದನ್ನು ಅವರು ಹೇಳಿಕೊಂಡೂ ಇದ್ದರು. ಆದರೆ ಓರ್ವ ಸತ್ಯವಿಶ್ವಾಸಿಯು ಸಹನೆಗೆಡಬಾರದು ಎಂದೂ ಹೇಳುತ್ತಿದ್ದರು. ಜೊತೆಗೆ ಕಾನ್ಸರ್‍ನ ಯಾತನಾಮಯ ನೋವಿನ ಬಗೆಗೂ ಹೇಳಿಕೊಳ್ಳುತ್ತಿದ್ದರು. ನಾನು ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಪ್ರತಿವಾರ ಅವರನ್ನು ಭೇಟಿಯಾಗಿದ್ದೇನೆ. ಈ ಭೇಟಿ ಒಂದು ರೀತಿಯಲ್ಲಿ ನಮ್ಮಿಬ್ಬರಿಗೂ ಚಟದಂತೆ ಅಭ್ಯಾಸವಾಗಿತ್ತು. ನನ್ನ ದಿನಚರಿಯ ವೇಳಾಪಟ್ಟಿಯಲ್ಲಿ ಅದಕ್ಕೆಂದೇ ಸಮಯವನ್ನು ನಿಗದಿಪಡಿಸಿದ್ದೆ. ನಿಗದಿತ ದಿನ ಭೇಟಿಯಾಗದಿದ್ದರೆ ಅವರು ಕರೆ ಮಾಡುತ್ತಿದ್ದರು. ನಾನು ಕೊನೆಯದಾಗಿ ಭೇಟಿಯಾದದ್ದು ನಿಧನಕ್ಕಿಂತ ನಾಲ್ಕು ದಿನಗಳ ಮೊದಲು. ಇದೇ ಡಿ. 23ರಂದು ಬಿಡುಗಡೆ ಯಾಗಲಿರುವ `ಪಯಣಿಗನ ಪದ್ಯಗಳು' ಎಂಬ ಕವನ ಸಂಕಲನದ ಮುದ್ರಣ ತಯಾರಿ ಎಲ್ಲಿಯವರೆಗೆ ಮುಟ್ಟಿದೆಯೆಂದು ಆವತ್ತು ಅವರು ವಿಚಾರಿಸಿದ್ದರು. ಮಾತ್ರವಲ್ಲ, ತಾನು ಹಾಸಿಗೆಗೆ ಸೀಮಿತವಾಗಿರುವುದರಿಂದ ಬಿಡುಗಡೆಯ ಸಮಯದಲ್ಲಿ ತನ್ನ ಮಾತುಗಳನ್ನು ಓದಿ ಹೇಳಬೇಕೆಂದು ಹೇಳಿ ಬರೆದುಕೊಳ್ಳುವಂತೆ ನನ್ನಲ್ಲಿ ವಿನಂತಿಸಿದ್ದರು. ನಾನು ಈಗ ಬೇಡ ಎಂದಿದ್ದೆ. ಬಿಡುಗಡೆಗೆ ಇನ್ನೂ 15 ದಿನಗಳಿರುವುದರಿಂದ ಮುಂದಿನ ವಾರದ ಭೇಟಿಯ ಸಂದರ್ಭದಲ್ಲಿ ಬರೆಯೋಣ ಎಂದಿದ್ದೆ. ಆದರೆ ಅವರು ಈಗಲೇ ಬರೀಬೇಕು ಎಂದು ಒತ್ತಾಯಿಸಿ ಬರೆಸಿದ್ದರು. ಈ ಹೇಳಿಕೆಯ ಉದ್ದಕ್ಕೂ ಅವರು ಹೇಳಿಕೊಂಡದ್ದು ಕ್ಯಾನ್ಸರ್‍ನ ಬಗ್ಗೆ ಮತ್ತು ಅದರ ಯಾತನೆಯ ಬಗ್ಗೆ. ತನ್ನ ಪತ್ನಿಯ ಸೇವೆಯನ್ನು ಸ್ಮರಿಸುತ್ತಾ ಅವರು ಆ ಸಂದರ್ಭದಲ್ಲಿ ಕಣ್ಣೀರಾಗಿದ್ದರು. ಹಾಗಂತ ಈ ಕಣ್ಣೀರು ಅದು ಮೊದಲ ಬಾರಿಯೇನೂ ಅಲ್ಲ. ಪತ್ನಿಯ ಸೇವೆಯನ್ನು ನೆನಪಿಸಿಕೊಂಡು ಅವರು ಹಲವು ಬಾರಿ ನನ್ನೊಂದಿಗೆ ಕಣ್ಣೀರಿಳಿಸಿದ್ದಿದೆ. ಭಾವುಕರಾದದ್ದಿದೆ. ಪತ್ನಿಗಾಗಿ ಪ್ರಾರ್ಥಿಸಿದ್ದಿದೆ. ಇಂಥ ಪತ್ನಿಯನ್ನು ಪಡೆದುದು ತನ್ನ ಭಾಗ್ಯವೆಂದು ಹೇಳಿದ್ದೂ ಇದೆ. ಅನ್ವರ್ ಅವರು ಜಮಾಅತೆ ಇಸ್ಲಾಮೀ ಹಿಂದ್‍ನ ಮೇಲೆ ಅಪಾರ ಅಭಿಮಾನವನ್ನು ಹೊಂದಿದ್ದರು. ತಾನು ಚೇತರಿಕೆ ಹೊಂದಿದರೆ ಹೆಚ್ಚಿನ ಸಮಯವನ್ನು ಜಮಾಅತ್‍ಗಾಗಿ ಮೀಸಲಿಡುವು ದಾಗಿಯೂ ಹೇಳಿಕೊಂಡಿದ್ದರು. ಜಮಾಅತ್‍ನ ಯಾವುದೇ ಕಾರ್ಯಕ್ರಮಕ್ಕೂ ಛಾಯಾಚಿತ್ರ ಗ್ರಾಹಕರಾಗಿದ್ದವರು ಅವರೇ. ನಿಜವಾಗಿ, ಪೋಟೋಗ್ರಫಿಯಲ್ಲಿ ಮುಸ್ಲಿಮ್ ಸಮುದಾಯದ ಪ್ರಾತಿನಿಧ್ಯ ತೀರಾ ಶೂನ್ಯ ಅನ್ನುವ ಸಮಯದಲ್ಲಿ ಅನ್ವರ್ ಕ್ಯಾಮರಾವನ್ನು ಕೈಗೆತ್ತಿಕೊಂಡಿದ್ದರು. ಅವರ ವಿಶೇಷತೆ           ಏನೆಂದರೆ, ಅವರು ಬರೇ ಪೋಟೋಗ್ರಾಫರ್ ಆಗಿರಲಿಲ್ಲ. ಸಾಮಾಜಿಕ ಬದ್ಧತೆಯನ್ನು ಜರ್ನಲಿಸಂನೊಂದಿಗೆ ಬೆರೆಸಿ ಹಂಚಿದ ಪತ್ರಕರ್ತರವರು. ಕೋಮುಗಲಭೆಯ ಸಮಯದಲ್ಲಿ ಅವರು ಹಗಲಿರುಲು ಕ್ಯಾಮರಾದೊಂದಿಗೆ ಓಡಾಡಿದ್ದಿದೆ. ಪೋಟೋ ಕ್ಲಿಕ್ಕಿಸುವುದರ ಜೊತೆಗೆ ಸಂತ್ರಸ್ತರಿಗೆ ನೆರವಾಗುವುದನ್ನು ಅವರು ಬದುಕಿನ ಕರ್ತವ್ಯವಾಗಿ ಮಾಡುತ್ತಲೇ ಬಂದಿದ್ದಾರೆ. ಅವರೊಳಗೆ ಓರ್ವ ಸಮಾಜ ಪ್ರೇಮಿ ಮತ್ತು ಸಮುದಾಯ ಪ್ರೇಮಿ ಇದ್ದ. ಅವರಿಬ್ಬರನ್ನೂ ಜೊತೆ ಜೊತೆಯಾಗಿಸಿಕೊಂಡು ಅವರು ಬದುಕುತ್ತಿದ್ದರು.
      `ಜನರಿಗೆ ಮಾರ್ಗದರ್ಶನ ಮಾಡದ, ಮಂದಿರ ಏತಕೆ, ಮಸೀದಿ ಏತಕೆ, ಜಗದ್ಗುರುಗಳೇತಕೆ, ಧರ್ಮ ಬೀರುಗಳೇತಕೆ-'
ಎಂದವರು ಕವನವೊಂದರಲ್ಲಿ ಪ್ರಶ್ನಿಸಿದ್ದಿದೆ. ಅವರು ಸಬಲೀಕರಣಗೊಂಡ ಮುಸ್ಲಿಮ್ ಸಮುದಾಯದ ಬಗ್ಗೆ ಮತ್ತು ಸೌಹಾರ್ದ ಸಮಾಜದ ಬಗ್ಗೆ ಬಹು ನಿರೀಕ್ಷೆಯನ್ನು ಹೊಂದಿದ್ದರು. ಆ ಬಗ್ಗೆ ತಮ್ಮ ಕವನ ಮತ್ತು ಲೇಖನಗಳಲ್ಲಿ ಚರ್ಚಿಸುತ್ತಿದ್ದರು. ಕ್ಯಾನ್ಸರ್‍ಗೆ ತುತ್ತಾಗಿ ಹಾಸಿಗೆಗೆ ಸೀಮಿತವಾದ ಬಳಿಕವೂ ಅವರು ತಮ್ಮ ನಿರೀಕ್ಷೆ ಮತ್ತು ಆತ್ಮವಿಶ್ವಾಸವನ್ನು ಕಳಕೊಂಡಿರಲಿಲ್ಲ. ನನ್ನ ಪ್ರತಿವಾರದ ಭೇಟಿಯ ವೇಳೆ ಅವರು ಸನ್ಮಾರ್ಗದಲ್ಲಿ ಏನೇನು ವಿಷಯ ಚರ್ಚಿಸಲಾಗಿದೆ ಎಂದು ಪ್ರಶ್ನಿಸುತ್ತಿದ್ದರು. ನಾನು ಶೀರ್ಷಿಕೆಯನ್ನು ಓದಿ ಹೇಳುತ್ತಿದ್ದೆ. ದಿನದ ಬೆಳವಣಿಗೆಗಳ ಬಗ್ಗೆ ಅಪ್‍ಡೆಟ್ ಆಗಿರಲು ಯತ್ನಿಸುತ್ತಿದ್ದರು. ಸನ್ಮಾರ್ಗದ ವಿಶೇಷಾಂಕಕ್ಕಾಗಿ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ಕವನ ಹೇಳಿದ್ದಿದೆ. ನಾನು ಬರೆದು ಕೊಂಡದ್ದೂ ಇದ್ದೆ. ನಾವಿಬ್ಬರೂ ಪೆಂಗ್ ಶುಲಿನ್‍ನ ಬಗ್ಗೆ, ಲಿಸಾರೇ ಬಗ್ಗೆ, ಯುವರಾಜ್ ಸಿಂಗ್‍ರ ಬಗ್ಗೆ ಚರ್ಚಿಸಿದ್ದೇವೆ. ಕ್ಯಾನ್ಸರ್ ಅನ್ನು ಅವರು ಎದುರಿಸಿದ ಅನುಭವಗಳನ್ನು ಹಂಚಿ ಕೊಂಡಿದ್ದೇವೆ. ಅನ್ವರ್ ಅವರು ನಕಾರಾತ್ಮಕವಾಗಿ ಮಾತಾಡಿದ್ದು ತೀರಾ ತೀರಾ ಕಡಿಮೆ. ತನಗೆ ಗೊತ್ತಿರುವ ವ್ಯಕ್ತಿಯೊಬ್ಬರ ಬಗ್ಗೆ ಅವರು ನನ್ನೊಂದಿಗೆ ಹೇಳಿಕೊಂಡಿದ್ದರು. ರೋಗಪೀಡಿತರಾದ ಆ ವ್ಯಕ್ತಿ 80 ಕೆ.ಜಿ.ಯಿಂದ 13 ಕೆ.ಜಿ.ಗೆ ಕುಸಿದದ್ದು ಮತ್ತು ಹಾಸಿಗೆಗೆ ಸೀಮಿತವಾದದ್ದು, ಕೊನೆಗೆ ಫಿಸಿಯೋಥೆರಪಿಯಿಂದಾಗಿ ಗುಣಮುಖ ರಾಗಿ ಪುನಃ 50 ಕೆ.ಜಿ.ಗಿಂತ ಮೇಲೇರಿದ್ದನ್ನು ಸ್ಮರಿಸಿಕೊಂಡಿದ್ದರು. ಅವರಲ್ಲಿ ಕ್ಯಾನ್ಸರನ್ನು ಗೆಲ್ಲುವ ಆತ್ಮವಿಶ್ವಾಸವಿತ್ತು ಅಥವಾ ಆ ಆತ್ಮಾವಿಶ್ವಾಸವೇ ಅವರನ್ನು ಕಳೆದ 5 ವರ್ಷಗಳ ವರೆಗೆ ಜೀವಂತವಾಗಿರಿಸಿತ್ತು ಎಂದೂ ಹೇಳಬಹುದು. ಈ ಸ್ಥಿತಿಯಲ್ಲೂ ಅವರು ತನ್ನ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸುವ ಆಸಕ್ತಿ ತೋರಿದರು. ತನ್ನ ಕವನಗಳನ್ನು ಸಂಗ್ರಹಿಸಿ ಕೃತಿ ರೂಪದಲ್ಲಿ ತರುವುದಕ್ಕೆ ಮುಂದಾದರು. ಒಂದು ಕಡೆ ದೈಹಿಕ ಅಸಾಮರ್ಥ್ಯ, ಇನ್ನೊಂದು ಕಡೆ ಅಪಾರ ಜೀವನ ಪ್ರೇಮ.. ಇವೆರಡನ್ನೂ ಜೊತೆಯಾಗಿರಿಸಿಕೊಂಡು ಬದುಕಿದವರೇ ಅಹ್ಮದ್ ಅನ್ವರ್. ಸಾಮಾನ್ಯವಾಗಿ, ಕಾಯಿಲೆ ಎಂಬುದು ನಮ್ಮಿಂದ ಎಲ್ಲವನ್ನೂ ಕಸಿದುಕೊಳ್ಳುತ್ತದೆ. ಬದುಕಿನ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ತೀವ್ರ ನಿರಾಶರಾಗುವಂತೆ ಮಾಡುತ್ತದೆ. ಅದರಲ್ಲೂ ಕ್ಯಾನ್ಸರ್ ಎಂಬುದು ಅನೇಕ ಬಾರಿ ಸಾವನ್ನು ಖಚಿತಪಡಿಸಿಕೊಂಡು ಬರುವ ಅತಿಥಿ. ಆದ್ದರಿಂದಲೇ ಅನ್ವರ್ ಅವರ ಜೀವನ ಪ್ರೇಮ ಮುಖ್ಯವೆನಿಸುತ್ತದೆ. ಅವರಲ್ಲೊಂದು ಹವ್ಯಾಸವಿತ್ತು. ಅದು ಹಾಡುಗಾರಿಕೆ. ‘ಹೇ ದೇವಾ ನೀನೊಡೆಯನು, ಮಹಾ ಮಹಿಮನೂ..’ ಎಂಬ ಕವನವನ್ನು (ದಿ. ಅಬ್ದುಲ್ ಗಪ್ಫಾರ್ ಸುಳ್ಯ ವಿರಚಿತ) ಅವರು ಇಷ್ಟಪಟ್ಟು ಹಾಡುತ್ತಿದ್ದರು. ಕವಿಗೋಷ್ಠಿಗಿಂತ ಮೊದಲು ಸ್ತುತಿಗೀತೆ ಎಂಬ ನೆಲೆಯಲ್ಲಿ ಅವರು ಹಾಡುತ್ತಿದ್ದುದೇ ಈ ಕವನವನ್ನು. ನನ್ನ ಕಚೇರಿಗೆ ಬಂದರೆಂದರೆ ಅವರ ಗಝಲ್‍ಗಾರಿಕೆ ಆರಂಭವಾಗುತ್ತಿತ್ತು. ಅವರು ನನ್ನ ಕೊಠಡಿಗೆ ಬಂದು ಹಾಡಲು ತೊಡಗುತ್ತಿದ್ದರು. ಒಂದರ್ಧ ಗಂಟೆ ನಮ್ಮಿಬ್ಬರ ಗಾಯನಗೋಷ್ಠಿ ನಡೆಯುತ್ತಿತ್ತು. ಹಳೆ ಗಝಲ್‍ಗಳನ್ನು ಅವರು ಹಾಡಿ ನನಗೆ ಕೇಳಿಸುತ್ತಿದ್ದರು. ಅವರದೇ ಹೊಸ ಹಾಡುಗಳಿಗೆ ರಾಗ ಹಾಕಿ ಹಾಡುತ್ತಿದ್ದರು. `ನೀನಾರಿಗಾದೆ ಮಾನವಾ... ನಿನಗಾರು ಇಲ್ಲಿ ಹೇಳು...' ಎಂಬ ಜನಪ್ರಿಯ ಹಾಡು ಇವರದೇ. ಅವರು ಲೌಕಿಕ ಮತ್ತು ಆಧ್ಯಾತ್ಮಿಕವನ್ನು ಸರಿಸಮಾನರಾಗಿ ಅನುಭವಿಸಿ ಬದುಕಿದರು, ಬರೆದರು.
     ಈ ಐಹಿಕ ಜೀವನ / ಯಾರಿಗ್ಗೊತ್ತು ಎಷ್ಟು ದಿನ / ಲೋಕ ಗಳಿಸುವ ತವಕದಿ / ಎಷ್ಟೋ ಜನ ಮರೆತೇ ಬಿಟ್ಟಿದ್ದಾರೆ / ಮಹಾ ದೇವನ.
       ಹೀಗೆ ಹಾಡಿ ಹೊರಟುಹೋದ ಅಹ್ಮದ್ ಅನ್ವರ್ ಅವರನ್ನು ಆ ಮಹಾದೇವನು ಅನುಗ್ರಹಿಸಲಿ.

Monday, December 19, 2016

ನಮ್ಮ ನಡುವಿನ ಪೌಲ್ ಹಾರ್ನರ್‍ಗಳ ಬಗ್ಗೆ..

      ಡೊನಾಲ್ಡ್ ಟ್ರಂಪ್ ಅಮೇರಿಕದ ಅಧ್ಯಕ್ಷರಾಗಿ ಚುನಾಯಿತರಾದ ಸಂದರ್ಭ. ಫಲಿತಾಂಶವನ್ನು ಜೀರ್ಣಿಸಿಕೊಳ್ಳಲಾಗದೇ ಹಿಲರಿ ಅವಾಕ್ಕಾಗಿದ್ದರು. ಟ್ರಂಪ್ ಕೂಡಾ ಅಚ್ಚರಿಯಲ್ಲಿದ್ದರು. ಪ್ರಮುಖ ಪತ್ರಿಕೆಗಳಂತೂ ಟ್ರಂಪ್ ಗೆಲುವನ್ನು ಹೇಳಲು ಸೂಕ್ತ ಪದಗಳ ತಲಾಶೆಯಲ್ಲಿದ್ದುವು. ಇದೇ ವೇಳೆ ಅಮೇರಿಕದ ವಿವಿಧ ಕಡೆ ಪ್ರತಿಭಟನೆಗಳು ಎದ್ದುವು. ಒಂದು ರೀತಿಯಲ್ಲಿ ಟ್ರಂಪ್ ಗೆಲುವು ಎಷ್ಟು ಅನಿರೀಕ್ಷಿತವೋ ಪ್ರತಿಭಟನೆಗಳೂ ಅಷ್ಟೇ ಅನಿರೀಕ್ಷಿತ. ಇದೇ ವೇಳೆ, ಪ್ರತಿಭಟನಾಕಾರರು ಬಾಡಿಗೆ ಜನರೆಂದೂ ಅವರಿಗೆ ಅಮೇರಿಕದ ಕೋಟ್ಯಾಧಿಪತಿ ಜಾರ್ಜ್ ಸೊರೊಸಾನ್ ಹಣ ಒದಗಿಸಿದ್ದಾರೆಂದೂ ಸುದ್ದಿ ಪ್ರಕಟವಾಯಿತು. ಒಂದು ಬಗೆಯ ಅನುಮಾನ ಸಾರ್ವಜನಿಕರಲ್ಲೂ ಮೂಡಿತು. ಪ್ರತಿಯೊಬ್ಬರಿಗೂ 3500 ಡಾಲರ್ ಪಾವತಿಸಲಾಗುತ್ತಿದೆ ಎಂದೂ ಆ ಸುದ್ದಿಯಲ್ಲಿತ್ತು. ನವೆಂಬರ್ 9ರಂದು ಎರಿಕ್ ಟಕ್ಕರ್ ಎಂಬವರು ತಮ್ಮ ಟ್ವೀಟರ್ ಅಕೌಂಟ್‍ನಲ್ಲಿ ಒಂದೆರಡು ಫೋಟೋ ಪ್ರಕಟಿಸಿದರು. ಒಕ್ಕಣೆಯನ್ನೂ ಬರೆದರು. ಟೆಕ್ಸಾಸ್‍ನ ಓಸ್ಟನ್‍ನಲ್ಲಿ ಸಾಗುತ್ತಿರುವ ಬಸ್ಸುಗಳ ಫೋಟೋ ಅದು. ಬಸ್ಸುಗಳ ತುಂಬಾ ಜನರೂ ಇದ್ದರು. ಟ್ರಂಪ್ ವಿರೋಧಿ ಪ್ರತಿಭಟನೆಗೆ ಬಾಡಿಗೆ ಜನರನ್ನು ಬಸ್ಸುಗಳಲ್ಲಿ ತುಂಬಿಸಿ ಕರೆತರಲಾಗುತ್ತಿದೆ ಎಂಬ ಒಕ್ಕಣೆಯನ್ನೂ ಬರೆದರು.
      ಅಂದಹಾಗೆ, ಓಸ್ಟನ್‍ನಲ್ಲಿ ಟ್ರಂಪ್ ವಿರೋಧಿ ಪ್ರತಿಭಟನೆಯಾದದ್ದು ನಿಜ. ಆದರೆ ಆ ಬಸ್ಸಿಗೂ ಆ ಪ್ರತಿಭಟನೆಗೂ ಯಾವ ಸಂಬಂಧವೂ ಇರಲಿಲ್ಲ. ಒಂದು ಸಾಫ್ಟ್ ವೇರ್ ಕಂಪೆನಿಯ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಬರುತ್ತಿರುವ ಪ್ರತಿನಿಧಿಗಳಾಗಿದ್ದರು ಅವರು. ಟ್ವೀಟರ್‍ನಲ್ಲಿ ಟಕ್ಕರ್ ಅವರನ್ನು ಫಾಲೋ ಮಾಡುತ್ತಿರುವವರಲ್ಲಿ ಓರ್ವ ಆ ಫೋಟೋ ಮತ್ತು ಒಕ್ಕಣೆಯನ್ನು ರೆಡಿಟ್ ಜಾಲತಾಣದಲ್ಲಿ ಹಾಗೆಯೇ ಫೋಸ್ಟ್ ಮಾಡಿದ. ಜೊತೆಗೇ ‘ಬಾಡಿಗೆ ಪ್ರತಿಭಟನಾಕಾರರನ್ನು ಸಾಗಿಸುತ್ತಿರುವ ಬಸ್ಸುಗಳು..’ ಎಂಬ ಪ್ರತಿಕ್ರಿಯೆಯನ್ನೂ ದಾಖಲಿಸಿದ. ಇದು ಫೇಸ್ ಬುಕ್‍ಗೆ ವರ್ಗಾವಣೆಯಾಯಿತು. ನವೆಂಬರ್ 10ರಂದು ಆನ್‍ಲೈನ್ ಮಾಧ್ಯಮಗಳು ಅದನ್ನು ಅದೇ ರೀತಿಯಲ್ಲಿ ಪ್ರಕಟಿಸಿದುವು. ಈ ಸುದ್ದಿಯ ಪ್ರಸಾರ ಎಷ್ಟು ತ್ವರಿತಗತಿಯಲ್ಲಿ ಸಾಗಿತೆಂದರೆ ಫೇಸ್ ಬುಕ್‍ನ ಕೇವಲ ಒಂದೇ ಒಂದು ಅಕೌಂಟ್‍ನಲ್ಲಿ 3 ಲಕ್ಷಕ್ಕಿಂತ ಅಧಿಕ ಮಂದಿ ಶೇರ್ ಮಾಡಿಕೊಂಡರು. ತಕ್ಷಣ ಟ್ರಂಪ್ ಚುರುಕಾದರು. ಅವರ ಅಕೌಂಟ್‍ನ ಮೂಲಕ 1.60 ಕೋಟಿ ಮಂದಿಗೆ ತಲುಪಿತು. ಅದನ್ನು ಅಸಂಖ್ಯ ಮಂದಿ ಮತ್ತೆ ಶೇರ್ ಮಾಡಿಕೊಂಡರು. ಹೀಗೆ, ಟಕ್ಕರ್ ಅವರ ಸುಳ್ಳು ಸುದ್ದಿಯು ಎರಡೇ ಎರಡು ದಿನಗಳಲ್ಲಿ ಒಂದೂವರೆ ಕೋಟಿಗಿಂತಲೂ ಅಧಿಕ ಮಂದಿಗೆ ವಿಶ್ವಾಸಾರ್ಹ ಸುದ್ದಿಯಾಗಿ ರವಾನೆಯಾಯಿತು.
Post Truth
ಅಂದಹಾಗೆ, ಇತ್ತೀಚೆಗೆ ಆಕ್ಸ್ ಫರ್ಡ್ ಡಿಕ್ಷನರಿಯು Post Truth (ಸತ್ಯಾನಂತರ)ನ್ನು 2016ರ ಹೊಸ ಪದವಾಗಿ ಸ್ವೀಕರಿಸಿ ಕೊಂಡಿರುವುದರ ಹಿಂದೆ ಅಮೇರಿಕದ ಅಧ್ಯಕ್ಷೀಯ ಚುನಾವಣೆಗೆ ದೊಡ್ಡ ಪಾತ್ರ ಇದೆ. ಅಮೇರಿಕದ ಚುನಾವಣೆಯಲ್ಲಿ ಟ್ರಂಪ್ ಜಯ ಸಾಧಿಸುತ್ತಾರೆಂದು ಮುಖ್ಯವಾಹಿನಿಯ ಯಾವ ಮಾಧ್ಯಮಗಳೂ ಕಣಿ ಹೇಳಿರಲಿಲ್ಲ. ಎಲ್ಲರ ಚುನಾವಣಾ ಪೂರ್ವ ಸಮೀಕ್ಷೆ ಗಳೂ ಹಿಲರಿಯನ್ನೇ ಗೆಲ್ಲಿಸಿದ್ದುವು. ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ನಂತಹ ಪ್ರಮುಖ ಪತ್ರಿಕೆಗಳೂ ಹಿಲರಿ ಪರ ಬಹಿರಂಗ ಪ್ರಚಾರದಲ್ಲಿ ತೊಡಗಿದ್ದುವು. ಅದರಲ್ಲೂ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಂತೂ ಒಂದೇ ತಿಂಗಳೊಳಗೆ ಟ್ರಂಪ್ ವಿರುದ್ಧ 7 ಸಂಪಾದಕೀಯಗಳನ್ನು ಬರೆದಿತ್ತು. ಇಷ್ಟಿದ್ದೂ ಟ್ರಂಪ್ ವಿಜಯಿಯಾದದ್ದು ಹೇಗೆ? ಈ ಪ್ರಶ್ನೆ ಜಾಗತಿಕ ಮಟ್ಟದಲ್ಲಿ ಅಸಂಖ್ಯ ಬಾರಿ ಪ್ರತಿಧ್ವನಿಸಿದೆ. ಅಮೇರಿಕದ ಬಸ್‍ಫೀಡ್ ಎಂಬ ಸಂಸ್ಥೆ ಈ ಕುರಿತಂತೆ ಅನ್ವೇಷಣೆ ನಡೆಸಿತು. ಅಮೇರಿಕದಲ್ಲಿ ಮತದಾನ ನಡೆದ ದಿನದ ವರೆಗೆ ಪ್ರಕಟವಾದ ಸುದ್ದಿಗಳು ಮತ್ತು ಲೇಖನಗಳ ಬಗ್ಗೆ ಅದು ಸತ್ಯಾನ್ವೇಷಣೆಗೆ ಮುಂದಾಯಿತು. ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾದ ಸರಿ ಸುದ್ದಿಗಳಲ್ಲಿ 20 ಸುದ್ದಿಗಳನ್ನು ಮತ್ತು ಸುಳ್ಳು ಸುದ್ದಿಗಳೆಂದು ಸ್ಪಷ್ಟವಾದವುಗಳಲ್ಲಿ 20 ಸುದ್ದಿಗಳನ್ನು ಅದು ಪರಿಶೀಲನೆಗೆ ಆಯ್ಕೆ ಮಾಡಿಕೊಂಡಿತು. ಈ 40 ಸುದ್ದಿಗಳಿಗೆ ಫೇಸ್‍ಬುಕ್‍ನಂಥ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಪ್ರತಿಕ್ರಿಯೆ ಲಭ್ಯವಾಗಿದೆ ಎಂಬುದನ್ನೂ ವಿಶ್ಲೇಷಿಸಿತು. ವಿಶೇಷ ಏನೆಂದರೆ, 20 ಸರಿ ಸುದ್ದಿಗಳಿಗೆ ಸಿಕ್ಕ ಲೈಕ್, ಕಾಮೆಂಟ್ ಮತ್ತು  ಶೇರ್‍ಗಳಿಗೆ ಹೋಲಿಸಿದರೆ 20 ಸುಳ್ಳು ಸುದ್ದಿಗಳಿಗೆ ಎಷ್ಟೋ ಪಟ್ಟು ಅಧಿಕ ಲೈಕು, ಕಾಮೆಂಟು ಮತ್ತು ಶೇರ್‍ಗಳು ಲಭ್ಯವಾಗಿದ್ದುವು.
1. ಚುನಾವಣಾ ಫಲಿತಾಂಶವನ್ನು ಬರಾಕ್ ಒಬಾಮ ಅಸಿಂಧುಗೊಳಿಸಲಿದ್ದಾರೆ.
2. ಕ್ರೀಡಾ ಸ್ಪರ್ಧೆಗಳಲ್ಲಿ ರಾಷ್ಟ್ರೀಯ ಹಾಡನ್ನು ನಿಷೇಧಿಸಲಾಗುತ್ತದೆ.
3. ಅಮೇರಿಕವು ಎರಡೂವರೆ ಲಕ್ಷ ಸಿರಿಯನ್ ನಿರಾಶ್ರಿತರನ್ನು ಸ್ವಾಗತಿಸಲು ತೀರ್ಮಾನಿಸಿದೆ.
4. ಹಿಲರಿ ಕ್ಲಿಂಟನ್ ವಿರುದ್ಧ ಈ-ಮೇಲ್‍ಗೆ ಸಂಬಂಧಿಸಿದಂತೆ ಕೇಳಿಬಂದ ಆರೋಪಗಳ ತನಿಖೆ ನಡೆಸುತ್ತಿದ್ದ FBIಯ ಅಧಿಕಾರಿಯ ಹತ್ಯೆ ನಡೆಸಲಾಗಿದೆ..
ಸುಳ್ಳು ಸುದ್ದಿಗಳ ಕೆಲವು ಸ್ಯಾಂಪಲ್‍ಗಳಿವು. ವಿಚಿತ್ರ ಏನೆಂದರೆ, ಇಂಥ ಸುದ್ದಿಗಳು ಪ್ರಕಟವಾಗಿರುವುದು ಫೇಸ್‍ಬುಕ್, ಟ್ವೀಟರ್‍ಗಳಂಥ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವೇ ಅಲ್ಲ. ವಾಷಿಂಗ್ಟನ್ ಪೋಸ್ಟ್ ನಂಥ ಪ್ರಮುಖ ಪತ್ರಿಕೆಗಳೂ ಈ ಖೆಡ್ಡಾದೊಳಕ್ಕೆ ಬಿದ್ದುವು. ಮಾತ್ರವಲ್ಲ, ಬಳಿಕ ಅವು ಈ ಸುದ್ದಿಗಳ ಮೂಲವನ್ನು ಮತ್ತು ಅದರ ಉದ್ದೇಶವನ್ನು ಪತ್ತೆ ಹಚ್ಚಬೇಕಾದ ಒತ್ತಡಕ್ಕೂ ಒಳಗಾದುವು. ಕಳೆದ ನವೆಂಬರ್ 17ರಂದು, Facebook fake news writer: I think Donald Trump is in the  White House because of me’. (ಟ್ರಂಪ್ ಅಧ್ಯಕ್ಷರಾಗಿರುವುದು ನನ್ನಿಂದಾಗಿ ಎಂದ ಸುಳ್ಳುಸುದ್ದಿ ಬರಹಗಾರ) ಎಂಬ ಶೀರ್ಷಿಕೆಯಲ್ಲಿ ಅದು ಪೌಲ್ ಹಾರ್ನರ್ ಎಂಬ 38 ವರ್ಷದ ವ್ಯಕ್ತಿಯ ಸಂದರ್ಶನವನ್ನು ಪ್ರಕಟಿಸಿತು. ಹೆಚ್ಚಿನ ಸುಳ್ಸುದ್ದಿಗಳ ಜನಕ ಈತನಾಗಿದ್ದರೂ ಈತ ಟ್ರಂಪ್‍ರ ಬೆಂಬಲಿಗನೇನೂ ಆಗಿರಲಿಲ್ಲ. ‘ಟ್ರಂಪ್ ವಿರೋಧಿ ಪ್ರತಿಭಟನಾಕಾರರಲ್ಲಿ ಪ್ರತಿಯೋರ್ವರಿಗೆ 3500 ಡಾಲರ್ ಪಾವತಿಸಲಾಗುತ್ತಿದೆ’ ಎಂಬ ಸುಳ್ಳನ್ನು ಪ್ರಕಟಿಸಿದ ಬಳಿಕ ಆತ ಅದೇ ಪ್ರತಿಭಟನೆಯಲ್ಲಿ ಭಾಗವಹಿಸಿಯೂ ಇದ್ದ. ಆದರೂ ಆತ ಟ್ರಂಪ್ ರನ್ನೇ ಯಾಕೆ ಆಯ್ಕೆ ಮಾಡಿಕೊಂಡನೆಂದರೆ, ಅವರ ವಿಲಕ್ಷಣ ವ್ಯಕ್ತಿತ್ವಕ್ಕಾಗಿ. ಟ್ರಂಪ್ ಹೇಳಿರುವುದರಲ್ಲಿ 70% ಹೇಳಿಕೆಗಳೂ ಸುಳ್ಳು ಎಂಬುದಾಗಿ Politifact ಎಂಬ ಸಂಸ್ಥೆ ಸತ್ಯಾನ್ವೇಷಣೆ ನಡೆಸಿ ಬಹಿರಂಗಪಡಿಸಿತು. ಸಾರ್ವಜನಿಕವಾಗಿ ಟ್ರಂಪ್‍ರ ಬಗ್ಗೆ ಕುತೂಹಲವಿದೆ ಎಂಬುದನ್ನು ಪೌಲ್ ಹಾರ್ನರ್ ಅರಿತುಕೊಂಡಿದ್ದ. ಸುದ್ದಿ ತಯಾರಿಸಿ ಪ್ರಸಾರ ಮಾಡುವುದರಿಂದ ದುಡ್ಡು ಸಂಪಾದಿಸಿಕೊಳ್ಳಬಹುದು ಎಂಬುದನ್ನೂ ಖಾತರಿಪಡಿಸಿಕೊಂಡಿದ್ದ. ಹಾಗಂತ, ಸುಳ್ಸುದ್ದಿ ಸೃಷ್ಟಿಸುವವರಲ್ಲಿ ಪೌಲ್ ಹಾರ್ನರ್ ಒಂಟಿಯಲ್ಲ. ನವೆಂಬರ್ 25ರಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ‘Inside a fake news sausage factory: This is all about income’ (ನಕಲಿ ಸುದ್ದಿ: ಎಲ್ಲವೂ ಆದಾಯಕ್ಕಾಗಿ) ಎಂಬ ಶೀರ್ಷಿಕೆಯಲ್ಲಿ ಸಂದರ್ಶನಾಧಾರಿತ ಬರಹವನ್ನು ಪ್ರಕಟಿಸಿತು. ಜಾರ್ಜಿಯನ್ ಮೂಲದ ಬೆಕಾ ಲ್ಯಾಡ್ಸಾಬಿಡ್ಸ್ ಎಂಬ ವ್ಯಕ್ತಿ ಇದರ ಮುಖ್ಯ ಪಾತ್ರಧಾರಿಯಾಗಿದ್ದ. ಒಂದು ಆಕರ್ಷಕ ಸುದ್ದಿಯನ್ನು ತನ್ನ ವೆಬ್‍ಸೈಟ್‍ನಲ್ಲಿ ಹಾಕಿದಾಗ ಜನರು ಕುತೂಹಲಗೊಳ್ಳುತ್ತಾರೆ. ಹಾಗೆ ಸುದ್ದಿಯನ್ನು ಓದುತ್ತಾ ಓದುಗರು ಒಂದೋ ಅದರಲ್ಲಿರುವ ಜಾಹೀರಾತನ್ನು ನೋಡುತ್ತಾರೆ ಅಥವಾ ಕ್ಲಿಕ್ ಮಾಡುತ್ತಾರೆ. ಅದು ಆದಾಯವನ್ನು ತಂದುಕೊಡುತ್ತದೆ. ಬೆಕಾನಿಗೆ ಇತ್ತೀಚೆಗೆ ಹೆಚ್ಚು ಆದಾಯವನ್ನು ತಂದು ಕೊಟ್ಟ ಸುಳ್ಳು ಲೇಖನ ಯಾವುದೆಂದರೆ ‘ಮೆಕ್ಸಿಕೋದ ಗಡಿಯನ್ನು ಅಮೇರಿಕ ಮುಚ್ಚುತ್ತದೆ’ ಎಂಬುದು. ಗೂಗಲ್ ನಿಂದ ಹೆಚ್ಚಿನ ವರಮಾನ ಬರುತ್ತದೆ ಎಂದೂ ಬೇಕಾ ಹೇಳಿದ. ಹಾಗಂತ, ಎಲ್ಲರೂ ಬೆಕಾ ಅಲ್ಲ. ಕೆಲವರಿಗೆ ಅದೊಂದು ತಮಾಷೆ. ಇನ್ನೂ ಕೆಲವರಿಗೆ ತಮ್ಮ ನಾಯಕರ ಮೇಲಿರುವ ಅಪಾರ ಪ್ರೀತಿ-ಭಕ್ತಿ. ನರೇಂದ್ರ ಮೋದಿಯವರ ಸುತ್ತ ಅವರ ಬೆಂಬಲಿಗ ಗಣ ಹುಟ್ಟು ಹಾಕುತ್ತಿರುವ ಭ್ರಮೆಗಳನ್ನೊಮ್ಮೆ ಊಹಿಸಿ. ನೋಟು ಅಮಾನ್ಯತೆಗಾಗಿ ಸಂಭ್ರಮಿಸಿದ್ದನ್ನು ಎತ್ತಿಕೊಳ್ಳಿ. ನರೇಂದ್ರ ಮೋದಿಯವರ ಪ್ರತಿ ವೈಫಲ್ಯವನ್ನೂ ಸಾಧನೆಯೆಂಬಂತೆ ಜೋರು ದನಿಯಲ್ಲಿ ಆಚರಿಸುತ್ತಿರುವುದನ್ನು ವಿಶ್ಲೇಷಿಸಿ. ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ಈ ಮಂದಿ ಹಬ್ಬಿಸಿದ ಸುಳ್ಸುದ್ದಿ ಎಂತಹದ್ದು? ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯ ಹತ್ಯೆಯ ಹಿನ್ನೆಲೆಯಲ್ಲಿ ಹುಟ್ಟು ಹಾಕಲಾದ ಸುಳ್ಸುದ್ದಿ ಹೇಗಿತ್ತು? ಮುಝಫ್ಫರ್ ನಗರ್ ಹಿಂಸಾಚಾರಕ್ಕಿಂತ ಮೊದಲು ಬಿಜೆಪಿ ಶಾಸಕ ಸಂಗೀತ್ ಸೋಮ್ ತೇಲಿ ಬಿಟ್ಟ ನಕಲಿ ವೀಡಿಯೋದ ಅಸಲಿಯತ್ತು ಏನಾಗಿತ್ತು? ಅಷ್ಟಕ್ಕೂ, ಚುನಾವಣಾ ಪ್ರಚಾರದ ವೇಳೆ ನರೇಂದ್ರ ಮೋದಿಯವರು ಹೇಳುತ್ತಿದ್ದ ಮಾತುಗಳು ಹೇಗಿದ್ದುವು? ಅವರು ಪಾಕಿಸ್ತಾನವನ್ನು ಗುರಿಯಾಗಿಸಿದ್ದರೆ ಟ್ರಂಪ್ ಚೀನಾವನ್ನು ಗುರಿಯಾಗಿಸಿದರು. ವಿದೇಶದಲ್ಲಿರುವ ಕಪ್ಪು ಹಣವನ್ನು 100 ದಿನಗಳೊಳಗಾಗಿ ತರುವೆನೆಂದು ಮೋದಿಯವರು ಘೋಷಿಸಿದರೆ ಟ್ರಂಪ್ ವಿದೇಶಿಗರ ಪಾಲಾಗಿರುವ ಉದ್ಯೋಗಗಳನ್ನು ಕಸಿದು ದೇಶೀಯರಿಗೆ ಒದಗಿಸುವುದಾಗಿ ಘೋಷಿಸಿದರು. ಟ್ರಂಪ್ ಮತ್ತು ಮೋದಿ ಇಬ್ಬರ ಗುರಿಯೂ ನೇರವಾಗಿಯೋ ಪರೋಕ್ಷವಾಗಿಯೋ ಮುಸ್ಲಿಮರೇ. ‘ಏಕ್ ಭಾರತ್ ಶ್ರೇಷ್ಠ್ ಭಾರತ್’ ಎಂಬ ಡಯಲಾಗನ್ನು ನರೇಂದ್ರ ಮೋದಿಯವರು ಹೊಡೆದರೆ, ‘ಮೇಕ್ ಅಮೇರಿಕ ಗ್ರೇಟ್ ಅಗೈನ್’ ಎಂದು ಟ್ರಂಪ್ ಘೋಷಿಸಿದರು. ಟ್ರಂಪ್‍ರ ಈ ಘೋಷಣೆಯು ಆಕ್ಸ್ ಫರ್ಡ್ ಡಿಕ್ಷನರಿಯಲ್ಲಿ ‘ವರ್ಡ್ ಆಫ್ ದಿ ಇಯರ್ 2016’ (ವರ್ಷದ ಘೋಷಣೆ) ಆಗಿ ಆಯ್ಕೆಯಾಯಿತು. ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದದ್ದೂ ಅನಿರೀಕ್ಷಿತವಾಗಿ. ನರೇಂದ್ರ ಮೋದಿಯವರು ನೋಟು ರದ್ದತಿಗೊಳಿಸಿದ್ದೂ ಅನಿರೀಕ್ಷಿತವಾಗಿ. ಇಬ್ಬರ ಹಾವಭಾವ-ವಿಚಾರಧಾರೆ-ಮಾತಿನ ಧಾಟಿಯಲ್ಲಿ ಸಾಕಷ್ಟು ಸಾಮ್ಯತೆಯಿದೆ. ಇಬ್ಬರ ಗೆಲುವಿನಲ್ಲೂ ನಕಲಿ ಸುದ್ದಿ ಮತ್ತು ಭ್ರಮೆಗಳಿಗೆ ಪಾತ್ರವಿದೆ. ಪೌಲ್ ಹಾರ್ನರ್ ನಂಥ ನೂರಾರು ಮಂದಿ ಇವತ್ತು ನರೇಂದ್ರ ಮೋದಿಯವರನ್ನು ಬಿಲ್ಡಪ್ ಮಾಡುವುದರಲ್ಲಿ ನಿರತರಾಗಿದ್ದಾರೆ. ಪತ್ರಿಕೆ, ಸೋಶಿಯಲ್ ಮೀಡಿಯಾಗಳು ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ಈ ಮಂದಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅಮೇರಿಕದ ಪ್ರಮುಖ ಮಾಧ್ಯಮಗಳೂ ಯಾಮಾರಿದಂತೆಯೇ ಭಾರತೀಯ ಮಾಧ್ಯಮಗಳೂ ಸುಳ್ಸುದ್ದಿಯ ಖೆಡ್ಡಾಕ್ಕೆ ಬೀಳುತ್ತಿವೆ. ಸುದ್ದಿಯ ಮೂಲವನ್ನು ಪತ್ತೆಹಚ್ಚಿ, ನಿಕಷಕ್ಕೆ ಒಡ್ಡಿ ಪ್ರಕಟಿಸುವಷ್ಟು ಸಹನೆಯನ್ನು ಅನೇಕ ಬಾರಿ ಅವು ಪ್ರದರ್ಶಿಸುತ್ತಲೇ ಇಲ್ಲ. ಪೌಲ್ ಹಾರ್ನರ್ ಅಂಥವರು ಮೇಲುಗೈ ಪಡೆಯುವುದೇ ಇಂಥ ಸನ್ನಿವೇಶದಲ್ಲಿ. ಆತ ತಾನು ಸೃಷ್ಟಿಸಿದ ಸುಳ್ಸುದ್ದಿಯನ್ನು ಹೇಗೆ ಪ್ರಸಾರ ಮಾಡು ತ್ತಿದ್ದ ಅಂದರೆ, ಪ್ರಮುಖ ಮಾಧ್ಯಮಗಳ ಇಂಟರ್‍ನೆಟ್ ವಿಳಾಸದಂತೆ ತೋರಬಹುದಾದ ವಿಳಾಸವನ್ನು (URL) ಬಳಸುತ್ತಿದ್ದ. ಬಳಿಕ ಫೇಸ್‍ಬುಕ್‍ಗೆ ಪೋಸ್ಟ್ ಮಾಡುತ್ತಿದ್ದ. ಟ್ರಂಪ್ ಬೆಂಬಲಿಗರಂತೂ ಹಿಂದು-ಮುಂದು ನೋಡದೇ ಅದನ್ನು ಶೇರ್ ಮಾಡುತ್ತಿದ್ದರು. ‘ಎರಡೂವರೆ ಲಕ್ಷ ಸಿರಿಯನ್ ನಿರಾಶ್ರಿತರಿಗೆ ಅಮೇರಿಕದಲ್ಲಿ ನೆಲೆ ಒದಗಿಸಲಾಗುತ್ತಿದೆ..’ ಎಂಬ ಸುಳ್ಸುದ್ದಿಯು ಫಾಕ್ಸ್ ನ್ಯೂಸ್ ಚಾನೆಲ್‍ನಲ್ಲಿ ಪ್ರಮುಖ ಸುದ್ದಿಯಾಗಿ ಪ್ರಸಾರವಾಗಿತ್ತು. ಆ ಬಗ್ಗೆ ಅದು ಸಂವಾದವನ್ನೂ ಏರ್ಪಡಿಸಿತ್ತು. ಟ್ರಂಪ್ ವಿರೋಧಿ ಪ್ರತಿಭಟನಾಕಾರರಿಗೆ 3500 ಡಾಲರ್ ನೀಡಲಾಗುತ್ತದೆ ಎಂಬ ಪೌಲ್‍ರ ಸುಳ್ಸುದ್ದಿಯನ್ನು ಟ್ರಂಪ್‍ರ ಮಗ ಎರಿಕ್ ಮತ್ತು ಪ್ರಚಾರ ಮ್ಯಾನೇಜರ್ ಅವರೇ ಶೇರ್ ಮಾಡಿದ್ದರು. ಅಷ್ಟಕ್ಕೂ,
    ಭಾರತದಲ್ಲಿ ಎಷ್ಟು ಪೌಲ್ ಹಾರ್ನರ್‍ಗಳಿದ್ದಾರೋ..Tuesday, December 13, 2016

ಪ್ರಧಾನಿಯವರೇ, ರೂ. 2000 ದ ನೋಟನ್ನೇಕೆ ಮುದ್ರಿಸಿದಿರಿ?

       ಪ್ರಧಾನಿ ನರೇಂದ್ರ ಮೋದಿಯವರು ನೋಟು ರದ್ಧತಿ ಮಾಡುವುದಕ್ಕಿಂತ ಮೊದಲು ಈ ದೇಶದಲ್ಲಿ 500 ಮತ್ತು 1000 ಮುಖಬೆಲೆಯ 2100 ಕೋಟಿ ರೂಪಾಯಿ ನೋಟುಗಳಿದ್ದುವು. ಅದೇ ವೇಳೆ, ಈ ದೇಶದಲ್ಲಿರುವ ಒಟ್ಟು ನೋಟು ಮುದ್ರಣಾಲಯ ಗಳು ತಿಂಗಳಿಗೆ ಗರಿಷ್ಠ 300 ಕೋಟಿ ರೂಪಾಯಿಯನ್ನಷ್ಟೇ ಮುದ್ರಣ ಮಾಡಬಹುದಾಗಿತ್ತು. ಈ ಲೆಕ್ಕಾಚಾರದಂತೆ, ಅಮಾನ್ಯ ಗೊಳ್ಳುವ 2100 ಕೋಟಿ ರೂಪಾಯಿಯಷ್ಟು ಹೊಸ ನೋಟುಗಳನ್ನು ಮುದ್ರಣ ಮಾಡಬೇಕಾದರೆ ಕನಿಷ್ಠ 7 ತಿಂಗಳುಗಳಾದರೂ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಮುಂದೆ ಎರಡು ಆಯ್ಕೆಗಳಿದ್ದುವು. ಒಂದು- ಹಳೆ ನೋಟುಗಳ ಬದಲಿಗೆ ಹೊಸ ಮಾದರಿಯ ಅಷ್ಟೇ ನೋಟುಗಳನ್ನು ಮುದ್ರಿಸುವುದು. ಈ ನೋಟುಗಳ ಮುದ್ರಣ ಪೂರ್ಣವಾಗುವವರೆಗೆ ಅಂದರೆ 7 ತಿಂಗಳ ವರೆಗೆ ಸಕಲ ಗೌಪ್ಯತೆಯನ್ನೂ ಕಾಪಾಡುವುದು. ಇನ್ನೊಂದು- ಸಾವಿರ ಮುಖಬೆಲೆಯ ನೋಟಿನ ಬದಲು ದುಪ್ಪಟ್ಟು ಮುಖಬೆಲೆಯ ನೋಟುಗಳನ್ನು ಮುದ್ರಿಸುವುದು. ಉದಾಹರಣೆ 2000 ಮುಖಬೆಲೆಯ ನೋಟುಗಳು. ಹೀಗೆ ಮಾಡುವುದರಿಂದ ನೋಟು ಮುದ್ರಣಕ್ಕಿರುವ ಅವಧಿಯು ಕಡಿಮೆಯಾಗುತ್ತದೆ. ಆದರೆ ಇದು ಕೊಡುವ ಸಂದೇಶ ಏನೆಂದರೆ, ಸರಕಾರ ಯಾವುದೋ ತುರ್ತಿನಲ್ಲಿದೆ ಎಂಬುದನ್ನು. ಆ ತುರ್ತು ಯಾವುದು? ಮೂಲ ನೋಟುಗಳಷ್ಟೇ ಹೊಸ ನೋಟುಗಳನ್ನು ಮುದ್ರಿಸಲೂ ಸಮಯವಿಲ್ಲದಷ್ಟು ದಿಢೀರ್ ತುರ್ತುಸ್ಥಿತಿ ನಿರ್ಮಾಣವಾಗಿರುವುದು ಹೇಗೆ, ಯಾಕೆ ಮತ್ತು ಎಲ್ಲಿ? ಇದೇ ವೇಳೆ, ಮೂಲ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಮುದ್ರಿಸುವುದಕ್ಕಿರುವ ಕಾರಣಗಳೂ ಇಲ್ಲಿ ಮುಖ್ಯವಾಗುತ್ತವೆ. ಹೊಸ ನೋಟುಗಳ ಮುದ್ರಣಕ್ಕೆ ಕೇಂದ್ರ ಸರಕಾರ ಕೊಟ್ಟಿರುವ ಎರಡು ಪ್ರಮುಖ ಕಾರಣಗಳಲ್ಲಿ ಒಂದು ನಕಲಿ ನೋಟು. ಪಾಕಿಸ್ತಾನದಲ್ಲಿ ನಕಲಿ ನೋಟು ಮುದ್ರಣ ಕೇಂದ್ರಗಳಿವೆ ಮತ್ತು ಆ ನೋಟುಗಳನ್ನು ಭಾರತದಲ್ಲಿ ಭಯೋತ್ಪಾದನೆಯನ್ನು ಸೃಷ್ಟಿಸಲು ಬಳಸಲಾಗುತ್ತಿದೆ ಎಂಬುದು ಸರಕಾರದ ಸಮರ್ಥನೆಯಾಗಿತ್ತು. ಹಾಗಾದರೆ ರೂ. 2000 ಮುಖಬೆಲೆಯ ನೋಟುಗಳನ್ನು ಯಾಕೆ ಚಲಾವಣೆಗೆ ತರಲಾಯಿತು? ನೋಟುಗಳ ಮುಖಬೆಲೆ ಹೆಚ್ಚಾದಷ್ಟೂ ನಕಲಿ ನೋಟು ತಯಾರಕರಿಗೆ ಲಾಭವಾಗುತ್ತದೆ. ರೂ. 1000 ಮುಖಬೆಲೆಯ ಎರಡು ನೋಟು ಮುದ್ರಣ ಮಾಡುವಲ್ಲಿ ಅವರು ರೂ. 2000 ಮುಖಬೆಲೆಯ ಒಂದೇ ನೋಟನ್ನು ಮುದ್ರಣ ಮಾಡಿದರೆ ಸಾಕಾಗುತ್ತದೆ. ಇದು ಎಲ್ಲರಿಗೂ ಗೊತ್ತು. ಹೀಗಿರುವಾಗ, ಕೇಂದ್ರ ಸರಕಾರ ಒಂದು ಕಡೆ ನಕಲಿ ನೋಟಿನ ಹಾವಳಿಯನ್ನು ತಡೆಯುತ್ತೇನೆಂದು ಹೇಳುತ್ತಾ ಇನ್ನೊಂದು ಕಡೆ ಪಾಕಿಸ್ತಾನದ ನಕಲಿ ನೋಟು ತಯಾರಕರಿಗೆ ಲಾಭವಾಗಬಹುದಾದ ನಿರ್ಧಾರವನ್ನು ಕೈಗೊಂಡದ್ದೇಕೆ? ನಿಜವಾಗಿ, ಕೇಂದ್ರ ಸರಕಾರದ ಉದ್ದೇಶ ಶುದ್ಧಿ ಪ್ರಶ್ನೆಗೀಡಾಗುವುದೇ ಇಲ್ಲಿ. ಅದು ನೋಟು ರದ್ಧತಿಗೆ ಕೊಟ್ಟಿರುವ ಕಾರಣಗಳನ್ನು ರೂ. 2000 ನೋಟುಗಳು ಖಂಡಿತ ಸಂದೇಹಾಸ್ಪದವಾಗಿಸುತ್ತವೆ. ಬಹುಶಃ, ನರೇಂದ್ರ ಮೋದಿಯವರು ನಿಜಕ್ಕೂ ಕಾಳಧನ ಮತ್ತು ನಕಲಿ ನೋಟಿನ ಹಾವಳಿಯನ್ನು ತಡೆಯುವ ಏಕೈಕ ಸದುದ್ದೇಶದಿಂದಲೇ ನೋಟು ರದ್ಧತಿ ನಿರ್ಧಾರ ಕೈಗೊಳ್ಳುವುದಾದರೆ, ಅದಕ್ಕೆ ನಿಖರವಾದ ಪೂರ್ವ ತಯಾರಿಯನ್ನು ಖಂಡಿತ ಮಾಡಿಕೊಳ್ಳುತ್ತಿದ್ದರು. ಬೇಕಾದರೆ ರೂ. 1000 ಮುಖ ಬೆಲೆಯ ನೋಟನ್ನು ರದ್ದುಗೊಳಿಸುವುದು ಕೂಡ ನಕಲಿ ನೋಟಿನ ಹಾವಳಿಯನ್ನು ತಡೆಯುವುದಕ್ಕೆ ಪೂರಕವಾಗುತ್ತಿತ್ತು. ನೋಟಿನ ಮುಖಬೆಲೆ ಕಡಿಮೆಯಾದಷ್ಟೂ ನಕಲಿ ನೋಟು ತಯಾರಕರಿಗೆ ಸಮಸ್ಯೆ ಜಾಸ್ತಿಯಾಗುತ್ತದೆ. ಮೋದಿಯವರ ಉದ್ದೇಶ ನಿಜವೇ ಆಗಿರುತ್ತಿದ್ದರೆ, ಈಗ ಚಲಾವಣೆಯಲ್ಲಿರುವ ಎಲ್ಲಾ ನೋಟುಗಳಿಗೆ ಬದಲಿಯಾಗಿ ಹೊಸ ನೋಟುಗಳನ್ನು ಸಂಪೂರ್ಣವಾಗಿ ಮುದ್ರಿಸುವವರೆಗೆ ಕಾಯಬೇಕಿತ್ತು. ನೋಟು ರದ್ಧತಿ ಜಾರಿಗೊಂಡ ಕೂಡಲೇ ಪರ್ಯಾಯ ನೋಟುಗಳನ್ನು ಜನರಿಗೆ ಒದಗಿಸುವುದಕ್ಕೆ ಸಾಕಾಗುವಷ್ಟು ನೋಟುಗಳ ಮುದ್ರಣ ನಡೆದಿರಬೇಕಿತ್ತು. ಎಟಿಎಂ ವ್ಯವಸ್ಥೆಯನ್ನು ಸಜ್ಜುಗೊಳಿಸಿ ಇಡಬಹುದಿತ್ತು ಅಥವಾ ಹೀಗೆ ಮಾಡುವುದು ಗೌಪ್ಯತೆಯ ದೃಷ್ಟಿಯಿಂದ ಅಪಾಯಕಾರಿ ಎಂದಾದರೆ ನೋಟು ರದ್ಧತಿಗೊಂಡ ಮರುದಿನವೇ ದೇಶದಾದ್ಯಂತ ಎಟಿಎಂಗಳ ಮರು ಜೋಡಣೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತು. ಇಲ್ಲಿರುವ ಇನ್ನೊಂದು ಪ್ರಶ್ನೆಯೇನೆಂದರೆ, ನವೆಂಬರ್ ತಿಂಗಳಲ್ಲೇ ನೋಟು ರದ್ಧತಿ ಮಾಡಬೇಕೆಂಬ ನಿಯಮವೇನೂ ಇತ್ತೇ? ಎಲ್ಲ ತಯಾರಿ ಮತ್ತು ಗೌಪ್ಯತೆಯೊಂದಿಗೆ ಮುಂದಿನ ವರ್ಷವೂ ನೋಟು ರದ್ಧತಿಯನ್ನು ಮಾಡಬಹುದಿತ್ತಲ್ಲ. ನಿಜವಾಗಿ, ಅಸಲು ವಿಷಯ ಬಹಿರಂಗವಾಗುವುದೇ ಇಲ್ಲಿ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಳಧನ ಮತ್ತು ನಕಲಿ ನೋಟಿಗಿಂತ 2017ರ ಆರಂಭದಲ್ಲಿ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ ರಾಜ್ಯಗಳು ಮುಖ್ಯವಾಗಿದ್ದುವು. ವಿಶೇಷವಾಗಿ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯನ್ನು ಗೆಲ್ಲಲೇ ಬೇಕಾದ ಒತ್ತಡವೊಂದು ಅವರ ಎದುರಿತ್ತು. ಹಾಗಂತ, ಸಾಧನೆಯನ್ನೇ ಎದುರಿಟ್ಟುಕೊಂಡು ಚುನಾವಣೆಯನ್ನು ಎದುರಿಸುವ ಎಂದರೆ, ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಹೇಳಿಕೊಳ್ಳಬಹುದಾದ ಸಾಧನೆಯೇನೂ ಅವರ ಜೊತೆಯಿರಲಿಲ್ಲ. ಕಳೆದ ಚುನಾವಣಾ ಪ್ರಣಾಳಿಕೆಯ ಪ್ರಮುಖ ಭರವಸೆಗಳಲ್ಲಿ ರಾಮಮಂದಿರವೂ ಒಂದಾಗಿತ್ತು. ರಾಮಮಂದಿರ ನಿರ್ಮಾಣಕ್ಕಾಗಿ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಇಟ್ಟಿಗೆಗಳನ್ನು ತಂದಿರಿಸಿ ಎರಡೂವರೆ ದಶಕಗಳೇ ಕಳೆದಿವೆ. ರಾಮಮಂದಿರವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿದ ಬಳಿಕ ಬಿಜೆಪಿ ನೇತೃತ್ವದ ಎನ್‍ಡಿಎ ಈ ಮೊದಲೂ ಅಧಿಕಾರಕ್ಕೆ ಬಂದಿತ್ತು. ಆದರೆ ಭರವಸೆಯನ್ನು ಈಡೇರಿಸಿರಲಿಲ್ಲ. ಹಾಗಂತ, ಆಗ ಬಹುಮತವಿರಲಿಲ್ಲ ಎಂಬ ಸಬೂಬಾದರೂ ಇತ್ತು. ಈಗ ಅಂಥ ಸಬೂಬನ್ನೂ ಕೊಡುವಂತಿಲ್ಲ. ಪಾರ್ಲಿಮೆಂಟ್‍ನಲ್ಲಿ ವಿಶೇಷ ಮಸೂದೆಯೊಂದನ್ನು ಪಾಸು ಮಾಡಿಕೊಂಡು ಮಂದಿರ ನಿರ್ಮಿಸಬಹುದಲ್ಲವೇ ಎಂದು ಬಿಜೆಪಿಯ ಬೆಂಬಲಿಗರು ಪ್ರಶ್ನಿಸುತ್ತಿರುವುದನ್ನು ನರೇಂದ್ರ ಮೋದಿ ಬಲ್ಲರು. ಎರಡನೆಯದಾಗಿ, ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಪ್ರತಿಯೋರ್ವನ ಖಾತೆಗೆ 15 ಲಕ್ಷ ರೂಪಾಯಿ ಜಮಾ ಮಾಡುವೆನೆಂದು ಮೋದಿಯವರು ಎರಡೂವರೆ ವರ್ಷಗಳ ಹಿಂದೆ ಭಾರತೀಯರಿಗೆ ಭರವಸೆ ನೀಡಿದ್ದರು. ಕಳೆದ ಚುನಾವಣೆಯಲ್ಲಿ ಪಾರ್ಲಿಮೆಂಟ್‍ನಲ್ಲಿ ಬಹುಮತ ಪಡೆದಿರುವುದಕ್ಕೆ ಕಾಳಧನದ ಬಗ್ಗೆ ಅವರು ನೀಡಿದ ಭರವಸೆಯೂ ಒಂದು ಕಾರಣವಾಗಿತ್ತು. ಆದರೆ, ನರೇಂದ್ರ ಮೋದಿಯವರಿಗೆ ಕೊಟ್ಟ ಮಾತನ್ನು ಉಳಿಸಲಾಗಲಿಲ್ಲ ಎಂದು ಮಾತ್ರವಲ್ಲ ದೊಡ್ಡ ದೊಡ್ಡ ಕಾಳಧನಿಕರನ್ನು ಕನಿಷ್ಠ ಭಾರತದಿಂದ ಹೊರಹೋಗದಂತೆ ತಡೆಯಲೂ ಸಾಧ್ಯವಾಗಲಿಲ್ಲ. ಲಲಿತ್ ಮೋದಿ, ವಿಜಯ್ ಮಲ್ಯರು ಈ ಸರಕಾರದ ಮುಂದಿನಿಂದಲೇ ಹೊರದೇಶಕ್ಕೆ ಎದ್ದು ಹೋದರು. ಈ ಮಧ್ಯೆ ಸ್ವಿಸ್ ಬ್ಯಾಂಕ್, ಮಾರಿಷಸ್, ಸಿಂಗಾಪುರ್ ಸಹಿತ ವಿವಿಧ ಬ್ಯಾಂಕ್‍ಗಳಲ್ಲಿರುವ ಕಪ್ಪು ಹಣದ ವಿವರಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವೂ ಆದುವು. ಪನಾಮಾ ಪೇಪರ್ ಮೂಲಕವೂ ಕಾಳಧನಿಕರು ಬಹಿರಂಗಕ್ಕೆ ಬಂದರು. ಆದರೆ ಹದಿನೈದು ಲಕ್ಷ ಬಿಡಿ, ಹದಿನೈದು ಪೈಸೆಯನ್ನು ಕೂಡ ವಿದೇಶದಿಂದ ಭಾರತಕ್ಕೆ ತರಲು ಅವರಿಂದ ಸಾಧ್ಯವಾಗಲಿಲ್ಲ. ಇದರ ಬದಲು ಕಾಳಧನಿಕರು ಎಂಬ ಅಪವಾದವನ್ನು ಹೊತ್ತಿರುವ ಅಂಬಾನಿ, ಅದಾನಿಗಳೊಂದಿಗೆ ಸಲುಗೆಯ ಸಂಬಂಧವನ್ನಿರಿಸಿಕೊಂಡು ವೈಯಕ್ತಿಕ ವರ್ಚಸ್ಸಿಗೂ ಧಕ್ಕೆ ತಂದುಕೊಂಡರು. ಚುನಾವಣೆಗೆ ಮೊದಲು ಪಾಕಿಸ್ತಾನದ ಬಗ್ಗೆ ನರೇಂದ್ರ ಮೋದಿಯವರ ಮಾತುಗಳು ಎಷ್ಟು ಕಠಿಣವಾಗಿತ್ತೋ ಪ್ರಧಾನಿಯಾದ ಬಳಿಕ ಅವು ತೀರಾ ಮೃದುವಾದಂತೆ ಕಂಡವು. ಪಾಕ್‍ಗೆ ದಿಢೀರ್ ಭೇಟಿ ಕೊಟ್ಟು ನವಾಝï ಶರೀಫ್‍ರನ್ನು ಸಂದರ್ಶಿಸಿದ್ದು, ಅವರ ತಾಯಿಗೆ ಉಡುಗೊರೆ ಕೊಟ್ಟದ್ದು.. ಒಂದು ಹಂತದ ವರೆಗೆ ಅವರ ಕಠಿಣ ವರ್ಚಸ್ಸನ್ನು ತೆಳ್ಳಗಾಗಿಸಿದುವು. ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆ ತರುವ ಬಗ್ಗೆ ಹುಟ್ಟಿಸಿದ್ದ ಭರವಸೆಗಳೂ ಹುಸಿಯಾದುವು. ಕಳೆದ ಎರಡೂವರೆ ವರ್ಷಗಳಲ್ಲಿ ವಿದೇಶ ಯಾತ್ರೆಯ ಹೊರತಾಗಿ ಸಾಧನೆಯ ಕಾರಣಕ್ಕಾಗಿ ನರೇಂದ್ರ ಮೋದಿಯವರು ಗುರುತಿಸಿಕೊಂಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಮಾತಿನಲ್ಲಿ ಅರಮನೆಯನ್ನು ಕಟ್ಟಿದರೇ ಹೊರತು ನಿರ್ಮಾಣಾತ್ಮಕ ಸಾಧನೆಯ ದೃಷ್ಟಿಯಿಂದ ಅವರು ವಿಫಲ ಪ್ರಧಾನಿ. ಈ ಮಧ್ಯೆ ದಲಿತರ ಮೇಲಿನ ಹಲ್ಲೆ ಮತ್ತು ದೌರ್ಜನ್ಯಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾದುವು. ‘ಉನಾ ಚಳವಳಿ’ ನಡೆಯಿತು. ಮುಸ್ಲಿಮರ ಮೇಲಿನ ದೌರ್ಜನ್ಯಗಳಲ್ಲೂ ಹೆಚ್ಚಳವಾಯಿತು. ಪಟೇಲ್ ಮೀಸಲಾತಿ ಹೋರಾಟ, ಜಾಟ್ ಮೀಸಲಾತಿ ಹೋರಾಟ, ಮರಾಠಾ ಚಳವಳಿ.. ಹೀಗೆ ಒಂದೊಂದು ಸಮುದಾಯವೇ ಬೀದಿಗೆ ಇಳಿದು ಭಾರೀ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದೂ ನಡೆಯಿತು. ಆದ್ದರಿಂದ ಬಿಜೆಪಿಯು ಈಗಿರುವ ಮುಖವನ್ನೇ ಹೊತ್ತುಕೊಂಡು ಉತ್ತರ ಪ್ರದೇಶಕ್ಕೆ ಹೋಗುವುದು ಒಂದು ರೀತಿಯಲ್ಲಿ ಜೂಜೇ ಆಗುತ್ತಿತ್ತು. ಅಲ್ಲದೇ ಉತ್ತರ ಪ್ರದೇಶದಲ್ಲಿ ದಲಿತ-ಹಿಂದುಳಿದ ಮತಗಳೇ ನಿರ್ಣಾಯಕ. ಉನಾ ಘಟನೆಯು ದಲಿತ ಮತ್ತು ಹಿಂದುಳಿದ ವರ್ಗದಲ್ಲಿ ತೀವ್ರ ಅಸಂತೃಪ್ತಿಯನ್ನು ಹುಟ್ಟಿಸಿತ್ತು. ದಲಿತರ ಮೇಲೆ ದೌರ್ಜನ್ಯ ಎಸಗುವವರು ಬಿಜೆಪಿ ಬೆಂಬಲಿಗರು ಎಂಬ ಭಾವನೆ ಬಹುತೇಕ ಸಾಮಾನ್ಯವಾಗಿತ್ತು. ಇವು ಮತ್ತು ಇಂಥ ಬಿಜೆಪಿ ವಿರೋಧಿ ವಾತಾವರಣದ ಹಿನ್ನೆಲೆಯಲ್ಲಿ ದಿಢೀರ್ ಆದ ಏನಾದರೊಂದು ಕ್ರಮವನ್ನು ನರೇಂದ್ರ ಮೋದಿಯವರು ಕೈಗೊಳ್ಳಲೇಬೇಕಿತ್ತು. ಈಗಿನ ರೀತಿಯಲ್ಲೇ ಉತ್ತರ ಪ್ರದೇಶಕ್ಕೆ ಹೋದರೆ ಮಾಯಾವತಿ, ಮುಲಾಯಂ ಸಿಂಗ್, ಕಾಂಗ್ರೆಸ್ ಮತ್ತು ಲಾಲೂ, ನಿತೀಶ್ ಮತ್ತಿತರರ ಎದುರು ಪರಾಭವ ಹೊಂದುವ ಎಲ್ಲ ಸಾಧ್ಯತೆಗಳೂ ಇದ್ದವು. ಈ ಕಾರಣದಿಂದಲೇ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟು ರದ್ಧತಿಯನ್ನು ಘೋಷಿಸಿದ್ದಾರೆ. ಈ ದಿಢೀರ್ ಘೋಷಣೆಯಿಂದಾಗಿ ಆಗಬಹುದಾದ ಹಣದ ಕೊರತೆಯನ್ನು ನಿಭಾಯಿಸುವುದಕ್ಕಾಗಿ ರೂ. 2000 ಮುಖಬೆಲೆಯ ನೋಟಿನ ಮುದ್ರಣಕ್ಕೆ ಕೈ ಹಾಕಿದ್ದಾರೆ. ಹೀಗೆ ಮಾಡುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಗಂಭೀರ ವಿಶ್ಲೇಷಣೆ ನಡೆಸದಷ್ಟೂ ಪರಿಸ್ಥಿತಿ ಅವರನ್ನು ಒತ್ತಡಕ್ಕೆ ಸಿಲುಕಿಸಿದೆ. ಒಂದು ವೇಳೆ, ಸಮಸ್ಯೆ ಎದುರಾದರೆ ಅದನ್ನು ಕಪ್ಪು ಹಣದ ವಿರುದ್ಧದ ಸಮರದ ಹೆಸರಲ್ಲಿ ಮತ್ತು ದೇಶಪ್ರೇಮದ ಹೆಸರಲ್ಲಿ ಸಮರ್ಥಿಸಿಕೊಳ್ಳಬಹುದೆಂದು ಅವರು ತೀರ್ಮಾನಿಸಿರಬೇಕು. ಆದ್ದ ರಿಂದಲೇ “ನನ್ನನ್ನು ಸುಟ್ಟರೂ ನಾನು ಹಿಂದಡಿ ಇಡಲಾರೆ..” ಎಂಬ ಭಾವನಾತ್ಮಕ ಮಾತುಗಳ ಮೊರೆ ಹೋಗಿರುವುದು. ಅಷ್ಟಕ್ಕೂ, ಪಾರ್ಲಿಮೆಂಟ್‍ನಲ್ಲಿ ಬಹುಮತ ಇರುವ ಪಕ್ಷದ ನಾಯಕರಾಗಿ ಮತ್ತು ಪಕ್ಷಕ್ಕಿಂತ ಮಿಗಿಲಾದ ವರ್ಚಸ್ಸನ್ನು ಹೊಂದಿರುವ ವ್ಯಕ್ತಿಯಾಗಿ ಮೋದಿಯವರನ್ನು ಸುಡುವವರು ಯಾರು? ಬಿರುಬಿಸಿಲಿಗೆ ಅನ್ನ ನೀರಿಲ್ಲದೆ ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ಕಾಯುತ್ತಿರುವ ಬಡವರೇ? ಕೂಲಿ ಕಾರ್ಮಿಕರೇ? ಪ್ಲಂಬರ್, ಪೈಂಟರ್, ಕಸ ಗುಡಿಸುವವರು, ಬೀದಿ ಬದಿ ವ್ಯಾಪಾರಿಗಳೇ? ನಿಜವಾಗಿ,
       ಮೋದಿಯವರ ರಾಜಕೀಯ ಉದ್ದೇಶದ ತೀರ್ಮಾನವು ಇವರೆಲ್ಲರನ್ನೂ ಸುಡುತ್ತಿದೆ.

Sunday, December 4, 2016

ಒಂದೇ ವೇದಿಕೆಯಲ್ಲಿ ಒಟ್ಟಾದವರು ಇಳಿದು ಹೋದ ಬಳಿಕ..

         ಶಾಬಾನು
         ಶಾಯರಾ ಬಾನು
        ಭಾರತೀಯ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳನ್ನು ಮೊಟ್ಟ ಮೊದಲು ಒಂದೇ ವೇದಿಕೆಗೆ ಸೇರಿಸಿದ್ದು ಬಹುಶಃ ಶಾಬಾನು ಎಂಬ ಮಹಿಳೆ. ಆಕೆಯ ಪತಿ ಮುಹಮ್ಮದ್ ಅಹ್ಮದ್ ಖಾನ್ ಎಂಬವರು ಮಧ್ಯಪ್ರದೇಶದಲ್ಲಿ ನ್ಯಾಯ ವಾದಿಯಾಗಿದ್ದರು. ಅವರು ಇನ್ನೊಂದು ಮದುವೆಯೂ ಆದರು. ಇಬ್ಬರು ಪತ್ನಿಯರೊಂದಿಗೆ ವರ್ಷಗಳ ವರೆಗೆ ಸಂಸಾರವನ್ನೂ ನಡೆಸಿದರು. ಆದರೆ, 1978ರಲ್ಲಿ ಶಾಬಾನುಗೆ ತಲಾಕ್ ಹೇಳಿದರು. ಹೀಗೆ ತಲಾಕ್ ಹೇಳುವಾಗ ಪ್ರತಿ ತಿಂಗಳು 200 ರೂಪಾಯಿ ಮಾಸಾಶನ ನೀಡುವುದಾಗಿಯೂ ಭರವಸೆ ನೀಡಿದ್ದರು. ಆದರೆ ಮಾತಿಗೆ ತಪ್ಪಿದರು. ಇದನ್ನು ಪ್ರಶ್ನಿಸಿ ಶಾಬಾನು ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟ್‍ನ ತೀರ್ಪು ಮುಸ್ಲಿಮ್ ಸಮುದಾಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಯಿತು. ಮುಸ್ಲಿಮರ ವೈಯಕ್ತಿಕ ನಿಯಮದಲ್ಲಿ ಸುಪ್ರೀಮ್ ಕೋರ್ಟ್ ಮಧ್ಯ ಪ್ರವೇಶಿಸಿದ್ದು ತಪ್ಪು ಎಂಬ ಅಭಿಪ್ರಾಯ ಬಲವಾಗಿ ಕೇಳಿ ಬಂತು. ಈ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವಿವಿಧ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಸೇರಿಕೊಂಡು ಪ್ರತಿಭಟಿಸಲು ತೀರ್ಮಾನಿಸಿದುವು. ಅದರ ಬಳಿಕ ಮುಸ್ಲಿಮ್ ಸಮುದಾಯದ ಬೇರೆ ಬೇರೆ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಈ 2016ರ ಕೊನೆಯಲ್ಲಿ. ಅದಕ್ಕೆ ಕಾರಣ ಛತ್ತೀಸ್‍ಗಢದ ಶಾಯರಾ ಬಾನು ಮತ್ತು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ. ಶಾಯರಾ ಬಾನು ತನಗೆ ನೀಡಲಾದ ವಿಚ್ಛೇದನವನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಕೋರ್ಟು ಕೇಂದ್ರ ಸರಕಾರದ ಅಭಿಪ್ರಾಯವನ್ನು ಕೋರಿ ನೋಟೀಸನ್ನೂ ಜಾರಿ ಮಾಡಿತು. ಸಮಾನ ನಾಗರಿಕ ಸಂಹಿತೆಯ ಕುರಿತು ಚರ್ಚೆಯನ್ನೂ ಹುಟ್ಟು ಹಾಕಿತು. ಕೇಂದ್ರ ಸರಕಾರದ ಕಾನೂನು ಆಯೋಗವು ಈ ಕುರಿತಾಗಿ 16 ಪ್ರಶ್ನೆಗಳನ್ನೂ ಬಿಡುಗಡೆಗೊಳಿಸಿತು. ಈ ಎಲ್ಲ ಚಟುವಟಿಕೆಗಳು ಮುಸ್ಲಿಮ್ ಸಮುದಾಯದಲ್ಲಿ ಮತ್ತೆ ತಲ್ಲಣವನ್ನು ಸೃಷ್ಟಿಸಿದೆ. ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಿದ್ದ ಸಂಘಟನೆಗಳೆಲ್ಲ ಒಟ್ಟಾಗಿವೆ. ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಕಳೆದವಾರ (ನ. 22) ಬೃಹತ್ ಶರೀಯತ್ ಸಂರಕ್ಷಣಾ ಸಭೆ ನಡೆಯಿತು. ಸಾವಿರಾರು ಮಂದಿ ಭಾಗವಹಿಸಿದರು. 30ಕ್ಕಿಂತಲೂ ಅಧಿಕ ಸಂಘಟನೆಗಳ ನಾಯಕರು ವೇದಿಕೆಯಲ್ಲಿ ಒಟ್ಟಾದರು. ವಿಶೇಷ ಏನೆಂದರೆ, ಸಭಿಕರಿಂದ ಅತ್ಯಂತ ಹೆಚ್ಚು ಬಾರಿ ಅಲ್ಲಾಹು ಅಕ್ಬರ್ ಎಂಬ ಘೋಷವಾಕ್ಯ ಕೇಳಿಬಂದದ್ದು ಮತ್ತು ಭಾವುಕವಾಗಿ ಪ್ರತಿಕ್ರಿಯಿಸಿದ್ದು ವೇದಿಕೆಯಿಂದ ಐಕ್ಯತೆಯ ಮಾತುಗಳು ಮೊಳಗುತ್ತಿದ್ದಾಗ. ವೇದಿಕೆಯಲ್ಲಿರುವ ನಾಯಕರು ಐಕ್ಯತೆಯ ಅಗತ್ಯದ ಬಗ್ಗೆ ಹೇಳಿದಾಗಲೆಲ್ಲ ಸಭಿಕರು ಅಪಾರ ಹರ್ಷದಿಂದ ಸ್ವಾಗತಿಸಿದರು. ಇಲ್ಲಿರುವ ಪ್ರಶ್ನೆ ಏನೆಂದರೆ, ಸಭಿಕರ ಈ ಪ್ರತಿಕ್ರಿಯೆಯಲ್ಲಿರುವ ಒಳಾರ್ಥವನ್ನು ವೇದಿಕೆಯಲ್ಲಿರುವ ನಾಯಕರು ಎಷ್ಟಂಶ ಅರ್ಥ ಮಾಡಿಕೊಂಡಿದ್ದಾರೆ  ಮತ್ತು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎಂಬುದು. ಮಂಗಳೂರಿನ ಕಾರ್ಯಕ್ರಮ ಮುಗಿದಿದೆ. ವೇದಿಕೆಯಲ್ಲಿದ್ದ ನಾಯಕರೆಲ್ಲ ವೇದಿಕೆಯಿಂದಿಳಿದು ತಂತಮ್ಮ ಸಂಘಟನೆ ಗಳಿಗೆ ಮರಳಿದ್ದಾರೆ. ನಿಜವಾಗಿ, ವೇದಿಕೆಯಲ್ಲಿ ಒಟ್ಟಾದುದಕ್ಕಿಂತಲೂ ಹೆಚ್ಚಿನ ಜವಾಬ್ದಾರಿ ಇರುವುದು ಮುಂದಿನ ದಿನಗಳಲ್ಲಿ. ಈ ಐಕ್ಯತೆಗೆ ಭಂಗ ಬರದಂತೆ ನೋಡಿ ಕೊಳ್ಳುವುದು ಹೇಗೆ? ಈ ಒಗ್ಗಟ್ಟನ್ನು ಕಾಪಾಡಿಕೊಳ್ಳುವುದು ಹೇಗೆ? ಒಗ್ಗಟ್ಟು ಮುರಿಯದಂಥ ಯಾವೆಲ್ಲ ಧೋರಣೆಗಳನ್ನು ಸಂಘಟನೆಗಳು ಕೈಗೊಳ್ಳಬಹುದು? ಒಗ್ಗಟ್ಟು ಮುರಿಯಬಹುದಾದಂಥ ವಿಷಯಗಳು ಯಾವುವು? ಅವುಗಳ ಬಗ್ಗೆ ಇನ್ನು ಮುಂದಕ್ಕೆ ಯಾವ ನೀತಿಯನ್ನು ಅಳವಡಿಸಿಕೊಳ್ಳಬಹುದು?
     ವೇದಿಕೆಯಿಂದ ಕೆಳಗಿಳಿದ ಸಂಘಟನೆಗಳ ನಾಯಕರು ಆತ್ಮಾವ ಲೋಕನ ನಡೆಸಬೇಕಾದ ಸಂದರ್ಭವಿದು.
        ಮುಸ್ಲಿಮ್ ಸಮುದಾಯಕ್ಕೆ ಸಂಘಟನೆಗಳಿಂದ ತೊಂದರೆ ಆಗಿಲ್ಲ. ಆದರೆ ಅವುಗಳು ತಮ್ಮ ವಿಚಾರವನ್ನು ವ್ಯಕ್ತಪಡಿಸುವ ರೀತಿಯಿಂದ ಸಾಕಷ್ಟು ತೊಂದರೆಗಳಾಗಿವೆ. ಅಂದಹಾಗೆ, ಎಲ್ಲ ಸಂಘಟನೆಗಳಲ್ಲೂ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಮುಸ್ಲಿಮ್ ಸಮುದಾಯವನ್ನು ಧಾರ್ಮಿಕವಾಗಿ ಹೆಚ್ಚು ಪ್ರಜ್ಞಾವಂತಗೊಳಿಸುವುದು. ಒಂದಕ್ಕಿಂತ ಹೆಚ್ಚು ಸಂಘಟನೆಗಳು ಕೇವಲ ಈ ಏಕ ಅಜೆಂಡಾವನ್ನೇ ಪ್ರಮುಖ ಗುರಿಯಾಗಿಸಿಕೊಂಡು ಕಾರ್ಯಪ್ರವೃತ್ತವಾಗಿವೆ. ಅದರ ಜೊತೆಗೇ ಸಮುದಾಯವನ್ನು ಶೈಕ್ಷಣಿಕವಾಗಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿಯೂ ಅಭಿವೃದ್ಧಿಯತ್ತ ಸಾಗಿಸುವ ಮತ್ತು ಸಮಾಜದಲ್ಲಿ ಸೌಹಾರ್ದ ವಾತಾವರಣವನ್ನು ಉಳಿಸುವ ಉದ್ದೇಶದೊಂದಿಗೆ ಕಾರ್ಯ ಪ್ರವೃತ್ತವಾದ ಸಂಘಟನೆಯೂ ಇದೆ. ಇನ್ನು, ಯಾವುದಾದರೊಂದು ನಿಶ್ಚಿತ ಕ್ಷೇತ್ರಕ್ಕೆ ಮಾತ್ರ ಗಮನವನ್ನು ಕೇಂದ್ರೀಕರಿಸಿಕೊಂಡು ಚಟುವಟಿಕೆಯಲ್ಲಿರುವ ಸಂಘಟನೆಗಳೂ ಇವೆ. ಉದಾ: ಶಿಕ್ಷಣ, ಆರೋಗ್ಯ, ಸೇವೆ ಇತ್ಯಾದಿ ಇತ್ಯಾದಿ. ಅಂತೂ ಎಲ್ಲ ಸಂಘಟನೆಗಳ ಮುಖ್ಯ ಗುರಿ ಸಮುದಾಯ, ಸಮುದಾಯದ ಅಭಿವೃದ್ಧಿ ಮತ್ತು ದೇಶದ ಜನರಿಗೆ ಇಸ್ಲಾಮಿನ ನಿಜವಾದ ಮುಖವನ್ನು ಪರಿಚಯಿಸುವುದು ಮತ್ತು ಶಾಂತಿಪೂರ್ಣ ಭಾರತವನ್ನು ಕಟ್ಟುವುದೇ ಆಗಿದೆ. ಪ್ರಶ್ನೆ ಇರುವುದೂ ಇಲ್ಲೇ. ಉತ್ತರ-ದಕ್ಷಿಣ ಎಂದು ಮುಖ ತಿರುಗಿಸಬಹು ದಾದಂತಹ ಮೂಲಭೂತ ವ್ಯತ್ಯಾಸಗಳು ಸಂಘಟನೆಗಳ ನಡುವೆ ಇಲ್ಲದೇ ಇರುವಾಗ ಕನಿಷ್ಠ ತಂತಮ್ಮ ಸಂಘಟನೆಗಳಲ್ಲಿ ಇದ್ದುಕೊಂಡೇ ಮತ್ತು ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಂಡೇ ಸಮುದಾಯದ ಅಭಿವೃದ್ಧಿಗಾಗಿ ಒಂದೇ ವೇದಿಕೆ  ಯಲ್ಲಿ ಒಟ್ಟು ಸೇರುವುದಕ್ಕೆ ಯಾಕೆ ಕಷ್ಟವಾಗುತ್ತಿದೆ? 1985ರ ಬಳಿಕ ಮುಸ್ಲಿಮ್ ಸಮುದಾಯದ ಸಂಘಟನೆಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡದ್ದು ಮತ್ತು ಒಂದೇ ದನಿಯಲ್ಲಿ ಮಾತಾಡಿದ್ದು ಬಹುಶಃ ಇದೇ ಮೊದಲು. ಹಾಗಂತ, ಕಳೆದ 31 ವರ್ಷಗಳಲ್ಲಿ ಇಂಥ ಒಟ್ಟು ಸೇರುವಿಕೆಯನ್ನು ಅನಿವಾರ್ಯಗೊಳಿಸುವ ಯಾವ ಸಮಸ್ಯೆಗಳೂ ಇರಲಿಲ್ಲವಾ ಅಥವಾ ವೈಚಾರಿಕ ಭಿನ್ನಾಭಿಪ್ರಾಯಗಳು ಸಮುದಾಯದ ಅಗತ್ಯವನ್ನೂ ತಳ್ಳಿ ಹಾಕುವಷ್ಟು ಪ್ರಾಮುಖ್ಯತೆಯನ್ನು ಪಡೆದುವಾ? 1985ರ ಬಳಿಕ ಈ 31 ವರ್ಷಗಳಲ್ಲಿ ಮುಸ್ಲಿಮ್ ಸಮುದಾಯದ ಆಂತರಿಕ ಅಭಿವೃದ್ಧಿ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಏನೆಲ್ಲ ಮತ್ತು ಎಷ್ಟೆಲ್ಲ ಬದಲಾವಣೆಗಳಾಗಿವೆ? ತಲಾಕನ್ನೇ ಎತ್ತಿಕೊಳ್ಳಿ. ಇವತ್ತು ಶಾಯರಾ ಬಾನು ಸುಪ್ರೀಮ್ ಕೋರ್ಟ್‍ಗೆ ಹೋಗಿದ್ದೂ ಇದನ್ನೇ ಎತ್ತಿಕೊಂಡು. ಸಮಾನ ನಾಗರಿಕ ಸಂಹಿತೆಯ ಬಗ್ಗೆ ಚರ್ಚೆಗೆ ಕಾರಣವಾಗಿದ್ದೂ ಇದೇ ತಲಾಕ್. 1985ರಲ್ಲಿ ಶಾಬಾನುಗೆ ಮಾಸಾಶನ ನೀಡುವ ಬಗ್ಗೆ ಕೋರ್ಟ್‍ನ ನಿಲುವನ್ನು ಪ್ರತಿಭಟಿಸಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳು ಆ ಬಳಿಕ ತಂತಮ್ಮ ವಲಯದಲ್ಲಿ ಈ ಕುರಿತಂತೆ ಯಾವ ರೀತಿಯ ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ? ಸಮುದಾಯದಲ್ಲಿ ಹೇಗೆ ಜಾಗೃತಿಯನ್ನು ಮೂಡಿಸಿವೆ? ನಿಜವಾಗಿ, ಸಮುದಾಯದ
ದೊಡ್ಡ ಆಸ್ತಿಯೆಂದರೆ ಮಸೀದಿಗಳು. ಮಸೀದಿಗಳಿಗೆ ದೊಡ್ಡದೊಂದು ಗೌರವವನ್ನು ಈ ಸಮುದಾಯ ಕೊಟ್ಟಿದೆ. ಒಂದು ಮಸೀದಿಯ ವ್ಯಾಪ್ತಿಯೊಳಗೆ ಬೇರೆ ಬೇರೆ ಸಂಘಟನೆಗಳ ಚಟುವಟಿಕೆಗಳು ನಡೆಯುತ್ತಿರಬಹುದು. ಹಾಗೆಯೇ ಮಸೀದಿ ಆಡಳಿತ ಕಮಿಟಿಯಲ್ಲಿ ಯಾವುದಾದರೊಂದು ಸಂಘಟನೆಗೆ ಪ್ರಾಬಲ್ಯವೂ ಇರಬಹುದು. ಇದು ತಪ್ಪು ಎಂದಲ್ಲ. ಆದರೆ ತನ್ನ ವ್ಯಾಪ್ತಿಯಲ್ಲಿ ಚಟುವಟಿಕೆಯಲ್ಲಿರುವ ವಿವಿಧ ಸಂಘಟನೆಗಳನ್ನು ಒಂದೇ ವೇದಿಕೆಗೆ ಕರೆತಂದು ಅವುಗಳಿಂದ ಸಮುದಾಯದ ಆಮೂಲಾಗ್ರ ಸುಧಾರಣೆಗಾಗಿ ಕೊಡುಗೆಯನ್ನು ನೀಡುವಂತೆ ಮಾಡಲು ಸಾಧ್ಯವಿದೆಯಲ್ಲವೇ? ಒಂದೊಂದು ಸಂಘಟನೆಗೆ ಒಂದೊಂದು ಕ್ಷೇತ್ರದ ಹೊಣೆಗಾರಿಕೆಯನ್ನು ಕೊಟ್ಟು ಅಭಿವೃದ್ಧಿಯ ನೀಲನಕ್ಷೆಯನ್ನು ತಯಾರಿಸುವುದು ಅಸಾಧ್ಯವೇ? ಇವತ್ತು ಸಮುದಾಯ ಆರ್ಥಿಕವಾಗಿ ಮಾತ್ರ ಅಭಿವೃದ್ಧಿ ಹೊಂದಬೇಕಾದುದಲ್ಲ. ವೈಚಾರಿಕವಾಗಿಯೂ ಧಾರ್ಮಿಕವಾಗಿಯೂ ಅಭಿವೃದ್ಧಿಯನ್ನು ಕಾಣಬೇಕಾಗಿದೆ. ಉದಾಹರಣೆಗೆ ಈಗಿನ ಬಹುಚರ್ಚಿತ ತಲಾಕನ್ನೇ ಎತ್ತಿಕೊಳ್ಳಿ. ಇದಕ್ಕೆ ಸುವ್ಯವಸ್ಥಿತವಾದ ಮತ್ತು ಸರ್ವಸಮ್ಮತ ನೀತಿಯೊಂದನ್ನು ಅಳವಡಿಸಿಕೊಳ್ಳಲು ಸಮುದಾಯಕ್ಕೆ ಸಾಧ್ಯ ವಿಲ್ಲವೇ? ನಿಕಾಹ್ ನಡೆಯುವುದು ಎಲ್ಲರ ಎದುರು. ಅದು ಮಸೀದಿಯಲ್ಲಾಗಿರಬಹುದು ಅಥವಾ ಹಾಲ್, ಮನೆ.. ಇತ್ಯಾದಿಗಳಲ್ಲಾಗಿರಬಹುದು. ನಿಕಾಹ್‍ಗೆ ಅನೇಕ ಮಂದಿ ಸಾಕ್ಷ್ಯ ವಹಿಸುತ್ತಾರೆ. ತಲಾಕ್‍ಗೂ ಇಂಥದ್ದೊಂದು ಸುವ್ಯವಸ್ಥಿತ ವಾತಾವರಣ ನಿರ್ಮಿಸಿದರೆ ಹೇಗೆ? ತಲಾಕ್‍ನ ದುರುಪಯೋಗವನ್ನು ತಡೆಯುವುದಕ್ಕಾಗಿ ‘ತಲಾಕ್ ಮಸೀದಿಯಲ್ಲೇ ಆಗಬೇಕು’ ಎಂಬ ನಿಯಮವನ್ನು ಜಾರಿಗೊಳಿಸಬಹುದಲ್ಲವೇ? ಮುಖ್ಯವಾಗಿ ಯಾವ ಪ್ರದೇಶದಲ್ಲಿ ತಲಾಕ್‍ನ ದುರುಪಯೋಗ ಹೆಚ್ಚಿರುತ್ತದೋ ಆಯಾ ಪ್ರದೇಶದ ಮಸೀದಿ ವ್ಯಾಪ್ತಿಯಲ್ಲಿ ಇಂಥದ್ದೊಂದು ನೀತಿಯನ್ನು ಜಾರಿಗೊಳಿಸುವ ಶ್ರಮ ನಡೆಯುತ್ತಿದ್ದರೆ ಸಮುದಾಯವು ಪ್ರಶ್ನಾರ್ಹವಾಗುವುದರಿಂದ ತಡೆಯಬಹುದಿತ್ತಲ್ಲವೇ?
    ಹಾಗಂತ, ತಲಾಕ್ ಒಂದೇ ಮುಸ್ಲಿಮ್ ಸಮುದಾಯದೊಳಗೆ ದುರುಪಯೋಗಗೊಳ್ಳುತ್ತಿರುವುದಲ್ಲ. ಸಮುದಾಯದ ಯೌವನವೂ ದುರುಪಯೋಗವಾಗುತ್ತಿದೆ. ಯುವಕರು ತಪ್ಪು ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ವರದಕ್ಷಿಣೆಯಿದೆ. ಬಹುಪತ್ನಿತ್ವದ ದುರುಪಯೋಗವೂ ನಡೆಯುತ್ತಿದೆ. ಮದುವೆಗೆ ಸಂಬಂಧಿಸಿ ಹೆಣ್ಣು ಮತ್ತು ಗಂಡಿನ ಆಯ್ಕೆ ಪ್ರಕ್ರಿಯೆಯಲ್ಲಿ ಶರೀಅತ್‍ಗೆ ವಿರುದ್ಧವಾದ ಧೋರಣೆಗಳು ಚಾಲ್ತಿಯಲ್ಲಿವೆ. ಝಕಾತ್‍ಗೆ ಸಂಬಂಧಿಸಿ ಶರೀಅತನ್ನು ಅನುಸರಿಸುವವರ ಸಂಖ್ಯೆ ಬಹಳ ಕಡಿಮೆ. ಸಮುದಾಯದ ವ್ಯಾಪಾರ ಎಷ್ಟು ಧಾರ್ಮಿಕವಾಗಿದೆ ಎಂದು ಪ್ರಶ್ನಿಸಿದರೆ, ತೃಪ್ತಿದಾಯಕ ಉತ್ತರ ಲಭ್ಯವಾಗುತ್ತಿಲ್ಲ. ಶರೀಅತ್ ಅನ್ನು ಖಂಡಿಸುವ ಅನೇಕಾರು ಕಾರ್ಯಚಟುವಟಿಕೆಗಳಲ್ಲಿ ಸಮುದಾಯದ ಮಂದಿ ಬಹಿರಂಗವಾಗಿಯೇ ಭಾಗಿಯಾಗಿದ್ದಾರೆ. ಒಂದು ರೀತಿಯಲ್ಲಿ, ಶರೀಅತನ್ನು ಪ್ರಶ್ನಿಸುತ್ತಿರುವುದು ಸುಪ್ರೀಮ್ ಕೋರ್ಟೋ, ನರೇಂದ್ರ ಮೋದಿಯವರೋ ಮಾತ್ರ ಅಲ್ಲ; ಇಸ್ಲಾಮ್‍ನಲ್ಲಿ ಭಾರೀ ನಿಷ್ಠೆಯನ್ನು ಸಂದರ್ಭಾನುಸಾರ ವ್ಯಕ್ತಪಡಿಸುವ ಮುಸ್ಲಿಮ್ ಸಮುದಾಯದ ಪ್ರತಿನಿಧಿಗಳೇ ತಮ್ಮ ವರ್ತನೆಗಳ ಮೂಲಕ ಶರೀಅತನ್ನು ಆಗಾಗ ಪ್ರಶ್ನಿಸುತ್ತಿದ್ದಾರೆ. ಅವರ ನಡೆ, ನುಡಿ, ಮದುವೆ, ವ್ಯವಹಾರ, ಜೀವನ ಕ್ರಮ, ಗಳಿಕೆ, ಉಳಿಕೆ, ಖರ್ಚು.. ಎಲ್ಲದರಲ್ಲೂ ಶರೀಅತ್‍ಗೆ ವಿರುದ್ಧವಾದ ಸಾಕಷ್ಟು ಅಂಶಗಳಿವೆ. ಇದನ್ನು ಸರಿಪಡಿಸುವ ಬಗ್ಗೆ ಕಾಳಜಿ ತೋರದೆ, ಬರೇ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದರಿಂದ ಭವಿಷ್ಯವೇನೂ ಉಜ್ವಲವಾಗಲ್ಲ. ನಾಳೆ ಮುಸ್ಲಿಮ್ ಸಮುದಾಯದ ಇನ್ನಾರೋ ವ್ಯಕ್ತಿ ಇನ್ನಾವುದೋ ಕಾರಣವನ್ನು ಮುಂದಿಟ್ಟುಕೊಂಡು ಕೋರ್ಟ್ ಬಾಗಿಲನ್ನು ತಟ್ಟಬಹುದು. ತನ್ನ ಈ ಸಮಸ್ಯೆಗೆ ಶರೀಅತ್ತೇ ಕಾರಣ ಎಂದೂ ಹೇಳಬಹುದು. ಆದ್ದರಿಂದ, ಒಂದೇ ವೇದಿಕೆಯಲ್ಲಿ ಒಟ್ಟು ಸೇರುವುದರಿಂದ ಸಮುದಾಯದ ಸಂಘಟನೆಗಳ ಹೊಣೆಗಾರಿಕೆ ಮುಗಿಯುವುದಿಲ್ಲ. ನಿಜವಾಗಿ, ಹೊಣೆಗಾರಿಕೆ ಆರಂಭವಾಗುವುದೇ ಇಲ್ಲಿಂದ. ವೇದಿಕೆಯಿಂದ ಇಳಿದು ಹೋದ ಬಳಿಕ ತಂತಮ್ಮ ಮಸೀದಿಯಲ್ಲಿ ಹೀಗೆ ಭಿನ್ನ ಸಂಘಟನೆಗಳಲ್ಲಿದ್ದುಕೊಂಡೇ ಒಟ್ಟು ಸೇರಲು ಮತ್ತು ಮಸೀದಿ ವ್ಯಾಪ್ತಿಯಲ್ಲಿರುವ ಸಮಸ್ಯೆಗಳ ಪಟ್ಟಿ ಮಾಡಲು ಇದು ಪ್ರೇರಣೆಯನ್ನು ಒದಗಿಸಬೇಕು. ಸಂಘಟನಾ ಭಿನ್ನಾಭಿಪ್ರಾಯವನ್ನು ಮರೆತು ಸಮುದಾಯದ ಆಮೂಲಾಗ್ರ ಸುಧಾರಣೆಯ ದೃಷ್ಟಿಯಿಂದ ಕಾರ್ಯಪ್ರವೃತ್ತವಾಗಲು ಮುಂದಾಗಬೇಕು. ಯಾವ್ಯಾವ ಸಂಘಟನೆಯಿಂದ ಯಾವ್ಯಾವ ಕೊಡುಗೆಯನ್ನು ನೀಡಲು ಸಾಧ್ಯವೋ ಅವೆಲ್ಲವನ್ನೂ ಪಡಕೊಳ್ಳುವಂತಹ ಚಾತುರ್ಯವನ್ನು ಎಲ್ಲರೂ ಪ್ರದರ್ಶಿಸಬೇಕು. ಅಗತ್ಯ ಬಿದ್ದರೆ ವಿವಿಧ ಸಂಘಟನೆಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ವೇದಿಕೆಯನ್ನು ರಚಿಸಿ ಆ ಮೂಲಕ ಕಾರ್ಯಪ್ರವೃತ್ತವಾದರೂ ಆಗಬಹುದು. ಹೀಗೆ ಪ್ರತಿ ಮಸೀದಿಯ ವ್ಯಾಪ್ತಿಯಲ್ಲಿರುವ ಎಲ್ಲ ಮನೆಗಳ ಸಮಸ್ಯೆಗೂ ಕಿವಿಯಾಗುವಂತಹ ಮತ್ತು ಶರೀಅತ್ ಪ್ರಕಾರವೇ ಪ್ರತಿ ಸಮಸ್ಯೆಗಳಿಗೂ ಪರಿಹಾರವನ್ನು ಕಂಡುಕೊಳ್ಳುವಂತಹ ವಾತಾವರಣ ನಿರ್ಮಾಣವಾಗಬೇಕು. ತಲಾಕ್ ಆಗಲಿ, ಖುಲಾ, ಬಹುಪತ್ನಿತ್ವವೇ ಆಗಲಿ ಯಾವುದೂ ಕದ್ದು ಮುಚ್ಚಿ ನಡೆಯದಂತೆ ನೋಡಿಕೊಳ್ಳುವ ವ್ಯವಸ್ಥೆ ಮಸೀದಿಯ ವತಿಯಿಂದಲೇ ನಡೆಯಬೇಕು. ಮಾನವ ಹಕ್ಕುಗಳು ಮತ್ತು ಮಹಿಳಾ ಹಕ್ಕುಗಳು ಬಹು ಚರ್ಚಿತವಾಗಿರುವ ಇಂದಿನ ದಿನಗಳಲ್ಲಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕಾದುದು ಅತೀ ಅಗತ್ಯ. ಮುಖ್ಯವಾಗಿ ಧಾರ್ಮಿಕ ವಿಷಯದಲ್ಲಿ ಈ ಎಚ್ಚರ ಇನ್ನೂ ಅಗತ್ಯ. ಶರೀಅತ್ ತನ್ನ ನಿಜವಾದ ಅರ್ಥದಲ್ಲಿ, ನಿಜ ಸ್ಫೂರ್ತಿಯೊಂದಿಗೆ ಪಾಲನೆಯಾಗುವುದಾದರೆ ಯಾವ ಹೆಣ್ಣೂ ಗಂಡೂ ಕೋರ್ಟು ಮೆಟ್ಟಲು ಹತ್ತಲಾರರು. ಇವತ್ತು ಇದಕ್ಕೆ ವ್ಯತಿರಿಕ್ತವಾದುದು ನಡೆಯುತ್ತಿದ್ದರೆ, ಅದರಲ್ಲಿ ಮಸೀದಿ ಹೊಣೆಗಾರರ ಮತ್ತು ಸಂಘಟನೆಗಳ ಪಾತ್ರ ಖಂಡಿತ ಇದೆ. ವೇದಿಕೆಯಲ್ಲಿ ಒಟ್ಟು ಸೇರುವುದು ಮಾತ್ರ ಇದಕ್ಕೆ ಪರಿಹಾರ ಅಲ್ಲ. ವೇದಿಕೆಯಿಂದ ಇಳಿದ ಬಳಿಕದ ನಿಲುವು ಮತ್ತು ಕಾರ್ಯ ಚಟುವಟಿಕೆಗಳೇ ಇದರಲ್ಲಿ ನಿರ್ಣಾಯಕ. ಕಳೆದ 31 ವರ್ಷಗಳ ಬಳಿಕ ಇದೇ ಮೊದಲ ಬಾರಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಸಂಘಟನೆಗಳೆಲ್ಲ ತಮ್ಮ ಐಕ್ಯವನ್ನು ಸಮುದಾಯದ ಸುಧಾರಣೆಯಲ್ಲೂ ಮುಂದುವರಿಸಿದರೆ ಮತ್ತು ಸಮುದಾಯ ಸುಧಾರಣೆಯೆಂಬ ಬಹುಮುಖ್ಯ ಹೊಣೆಗಾರಿಕೆಯ ಮುಂದೆ ಭಿನ್ನಾಭಿಪ್ರಾಯಗಳನ್ನು ತೃಣವಾಗಿ ಕಾಣುವುದಾದರೆ ಇದು ಅಸಾಧ್ಯವಲ್ಲ. ಅಂದಹಾಗೆ,
       ಶಾಬಾನು ಮತ್ತು ಶಾಯರಾ ಬಾನುರನ್ನು ವಿಮರ್ಶಿಸುವುದೇ ಸಮುದಾಯದ ಸಮಸ್ಯೆಗೆ ಪರಿಹಾರ ಆಗುವುದಿಲ್ಲ. ಆಗಬಾರದು ಕೂಡಾ.
Saturday, November 19, 2016

ಗೌಡ್ರು, ಶೆಟ್ರು, ಸಾಬರ ಅಂಗಡಿಗೆ ಬೀಗ ಹಾಕಿಸುವ ತಂತ್ರವೇ ನೋಟು ರದ್ಧತಿ?

      2005ರಲ್ಲಿ: ‘ಮಿಶನ್ ಇಂಡಿಯಾಸ್ ಇಕನಾಮಿಕ್ ರಿಜುವೆನೇಶನ್’ (ನಮ್ಮ ಗುರಿ ಭಾರತದ ಆರ್ಥಿಕ ಪುನರ್‍ಸ್ಥಾಪನೆ) ಎಂಬ ಹೆಸರಲ್ಲಿ  ಅರ್ಥಕ್ರಾಂತಿ ಎಂಬ ಕೃತಿ ಬಿಡುಗಡೆಗೊಳ್ಳುತ್ತದೆ. ‘ಅರ್ಥಕ್ರಾಂತಿ ಪ್ರತಿಷ್ಠಾನ್’ ಎಂಬ ಗುರುತಿನ ಅಡಿಯಲ್ಲಿ ಕೆಲವರು ಸೇರಿಕೊಂಡು ರಚಿಸಿದ ಕೃತಿ ಇದು. ಈ ಕೃತಿಯನ್ನು ಪ್ರಮುಖ ರಾಜಕೀಯ ಪಕ್ಷಗಳಿಗೆ, ಚಿಂತಕರಿಗೆ ಮತ್ತು ರಾಷ್ಟ್ರಪತಿಗಳಿಗೂ ಸಲ್ಲಿಸಲಾಗಿದೆ. ಅಗತ್ಯ ಬಿದ್ದರೆ ಸಂಪರ್ಕಿಸುವುದಕ್ಕೆಂದು ವಿವಿಧ ನಗರಗಳಲ್ಲಿರುವ ಅದರ ಪ್ರತಿನಿಧಿಗಳ ಹೆಸರು ಮತ್ತು ವಿಳಾಸವನ್ನು ಕೃತಿಯಲ್ಲಿ ನೀಡಲಾಗಿದೆ. ವರ್ಷದ ಹಿಂದೆ ಸನ್ಮಾರ್ಗ ಕಚೇರಿಗೂ ಈ ಕೃತಿಯನ್ನು ತಲುಪಿಸಲಾಗಿತ್ತು. ಈ ಕೃತಿ ಮುಖ್ಯವಾಗಿ ಅರ್ಥವ್ಯವಸ್ಥೆಗೆ ಹೊಸತನವನ್ನು ಕೊಡುವ ಬಗ್ಗೆ ಮಾತಾಡುತ್ತದೆ. ನಗದು ರಹಿತ ವ್ಯವಹಾರವನ್ನು ಪ್ರತಿಪಾದಿಸುತ್ತದೆ. ಎಲ್ಲ ವ್ಯವಹಾರಗಳೂ ಬ್ಯಾಂಕ್‍ನ ಮೂಲಕವೇ ನಡೆಯಬೇಕಾದ ಅಗತ್ಯತೆಯನ್ನೂ, ಅದರಿಂದಾಗಿ ಆಗಬಹುದಾದ ಬದಲಾವಣೆಯನ್ನೂ ಅದು ವಿಶ್ಲೇಷಿಸುತ್ತದೆ. ಅದರಲ್ಲಿ ಉಲ್ಲೇಖಿಸಲಾಗಿರುವ 2013-14ರ ವಿವರದಂತೆ, ‘ದೇಶದಲ್ಲಿ 1000 ರೂಪಾಯಿಯ 39% ನೋಟುಗಳು ಚಲಾವಣೆಯಲ್ಲಿವೆ. 500 ರೂಪಾಯಿಯ 45% ನೋಟುಗಳು ಚಲಾವಣೆಯಲ್ಲಿವೆ. ರೂಪಾಯಿ 100ರ ನೋಟಿನ ಚಲಾವಣೆ ಬರೇ 11%. ಒಟ್ಟಿನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್... ಮುಂತಾದುವುಗಳನ್ನು ಬಳಕೆ ಮಾಡದೆ ನಗದು ರೂಪದಲ್ಲಿ ಹಣ ಚಲಾವಣೆಯಲ್ಲಿರುವುದೇ ದೇಶದ ಅರ್ಥವ್ಯವಸ್ಥೆ ಕುಸಿದಿರುವುದಕ್ಕೆ ಮೂಲ ಕಾರಣ ಎಂಬುದಾಗಿ ಅದು ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುತ್ತದೆ. ಈ ಕೃತಿ ರಚನೆಯ ತಂಡದಲ್ಲಿದ್ದವರಲ್ಲಿ ಓರ್ವರೇ ಅನಿಲ್ ಬೋಕಿಲ್. ಹಳೆ ನೋಟುಗಳ ಚಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ಹಿಂತೆಗೆದುಕೊಂಡುದುದರ ಹಿಂದೆ ಇವರ ಸಲಹೆ ಇದೆ ಎಂದು ಹೇಳಲಾಗುತ್ತಿದೆ. ತಿಂಗಳುಗಳ ಹಿಂದೆ ಪ್ರಧಾನಿಯವರು ಇವರನ್ನು ಕರೆಸಿಕೊಂಡು ಸುದೀರ್ಘವಾಗಿ ಚರ್ಚಿಸಿದ್ದರು ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ, ಪ್ರಧಾನಿಯವರ ಈ ದಿಢೀರ್ ಕ್ರಮವು ನಕಲಿ ನೋಟು, ಕಪ್ಪು ಹಣ, ಭಯೋತ್ಪಾದಕರ ಹುಟ್ಟಡಗಿಸುವ ಪಣ.. ಮುಂತಾದ ಘೋಷಿತ ಉದ್ದೇಶಗಳ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುತ್ತದೆ. ನಿಜಕ್ಕೂ, ಹಳೆ ನೋಟುಗಳನ್ನು ರದ್ದುಪಡಿಸುವುದರ ಹಿಂದೆ ಇರುವ ಉದ್ದೇಶ ಕಪ್ಪು ಹಣದ ನಿಯಂತ್ರಣವೇ, ನಕಲಿ ನೋಟುಗಳ ನಿರ್ಮೂಲನವೇ ಅಥವಾ ನಗದು ರಹಿತ ವ್ಯವಸ್ಥೆಯೊಂದನ್ನು ಹುಟ್ಟು ಹಾಕುವ ಮೂಲಕ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವುದೇ? ಯಾಕೆಂದರೆ, ಕಪ್ಪು ಹಣವನ್ನು ತಡೆಯುವ ಕಾರಣಕ್ಕಾಗಿ ಜಗತ್ತಿನ ಯಾವ ರಾಷ್ಟ್ರಗಳೂ ಹಳೆ ನೋಟುಗಳನ್ನು ರದ್ದುಗೊಳಿಸಿದ್ದಿಲ್ಲ. ನೋಟುಗಳ ಆಧುನಿಕೀಕರಣ ಮತ್ತು ಹಣದುಬ್ಬರವನ್ನು ತಡೆಯುವ ಉದ್ದೇಶದಿಂದಲೇ ನೋಟು ರದ್ದತಿಗಳು ನಡೆದಿವೆ. ಇದಕ್ಕಿರುವ ಕಾರಣವೇನೆಂದರೆ, ಕಪ್ಪು ಹಣ ಎಂಬುದು ನೋಟಿನ ರೂಪದಲ್ಲಿ ಮಾತ್ರ ಇರುವುದಲ್ಲ ಅಥವಾ ನೋಟಿನ ರೂಪದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಲಾವಣೆಯಲ್ಲಿರುತ್ತದೆ. ಹೆಚ್ಚಿನ ಬೇನಾಮಿ ದುಡ್ಡುಗಳೆಲ್ಲ ಬಂಗಾರ, ಜಮೀನು ಮತ್ತಿತರ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡೇ ಅಸ್ತಿತ್ವದಲ್ಲಿರುತ್ತದೆ. ಸ್ಟಾಕ್ ಎಕ್ಸ್ ಚೇಂಜ್‍ನಲ್ಲೂ ಅದು ಚಲಾವಣೆಯಲ್ಲಿರುತ್ತದೆ. ಒಂದು ರೀತಿಯಲ್ಲಿ, ಕಪ್ಪು ಹಣವನ್ನು ನಿಖರವಾಗಿ ಅಂದಾಜಿಸುವುದಕ್ಕೆ ಯಾವುದೇ ವೈಜ್ಞಾನಿಕ ವ್ಯವಸ್ಥೆಯಿಲ್ಲ. 2009ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಅಡ್ವಾಣಿಯವರು ಮತ್ತು 2014ರಲ್ಲಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಗಳೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ತಾನು ಭಾರತಕ್ಕೆ ತರುತ್ತೇನೆಂದು ಅಡ್ವಾಣಿಯವರು ಹೇಳಿದ್ದರು. ಭಾರತದ ಒಟ್ಟು 6 ಲಕ್ಷದಷ್ಟು ಗ್ರಾಮಗಳಲ್ಲಿ ಪ್ರತಿ ಗ್ರಾಮವೂ 4 ಕೋಟಿಯಷ್ಟು ಹಣವನ್ನು ಪಡೆಯಲಿದೆ ಎಂದೂ ಅವರು ಘೋಷಿಸಿದ್ದರು. 2014ರಲ್ಲಿ ನರೇಂದ್ರ ಮೋದಿಯವರೂ ಸ್ವಿಸ್ ಬ್ಯಾಂಕ್‍ನ ಕಪ್ಪು ಹಣವನ್ನು ಚುನಾವಣಾ ಭಾಷಣದಲ್ಲಿ ಉಲ್ಲೇಖಿಸಿದ್ದರು. ತಾನು ಪ್ರಧಾನಿಯಾದರೆ 100 ದಿನಗಳಲ್ಲಿ ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಯನ್ನು ಜಮಾ ಮಾಡುವುದಾಗಿಯೂ ಘೋಷಿಸಿದ್ದರು. ಅವರ ಹೇಳಿಕೆಯ ಪ್ರಕಾರವೇ ಲೆಕ್ಕ ಹಾಕುವುದಾದರೆ, ಸ್ವಿಸ್ ಬ್ಯಾಂಕ್‍ನಲ್ಲಿ 1800 ಲಕ್ಷ ಕೋಟಿ ರೂಪಾಯಿ ಇರಬೇಕಾಗುತ್ತದೆ. ಇದು ದೇಶದ ಜಿಡಿಪಿಯ 150% ಆಗುತ್ತದೆ. ಅದೇ ವೇಳೆ, 2006-07ರಿಂದ 2011-12ರ ವರೆಗೆ ದೇಶದ ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯ ವಿವರಗಳನ್ನು ವಿಶ್ಲೇಷಿಸಿದರೆ, ಕಪ್ಪು ಹಣದಲ್ಲಿ ನೋಟಿನ ಪ್ರಮಾಣ ಎಷ್ಟು ನಗಣ್ಯ ಎಂಬುದೂ ಗೊತ್ತಾಗುತ್ತದೆ. ಆದಾಯ ಇಲಾಖೆ ವಶಪಡಿಸಿಕೊಂಡ ಒಟ್ಟು ಮೊತ್ತದಲ್ಲಿ ನೋಟಿನ ರೂಪದಲ್ಲಿದ್ದ ಕಪ್ಪು ಹಣ ಬರೇ 5%. ಉಳಿದೆಲ್ಲವೂ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡವುಗಳೇ ಆಗಿದ್ದುವು. ಹೀಗಿರುತ್ತಾ, ನಕಲಿ ನೋಟು ಮತ್ತು ಕಪ್ಪು ಹಣದ ಕಾರಣವನ್ನು ಕೊಟ್ಟು ಕೇಂದ್ರ ಸರಕಾರ ಹಳೆ ನೋಟುಗಳನ್ನು ರದ್ದುಗೊಳಿಸಿರುವುದನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಎಂದು ಕರೆಯಬಹುದು? ಸರಕಾರದ ಅಧಿಕೃತ ವರದಿಯ ಪ್ರಕಾರವೇ, ಒಟ್ಟು 500 ರೂಪಾಯಿ ನೋಟುಗಳಲ್ಲಿ 0.00025% ನೋಟುಗಳಷ್ಟೇ ನಕಲಿಯಾಗಿವೆ. ಈ ಅಲ್ಪ ಪ್ರಮಾಣದ ನಕಲಿತನವನ್ನು ತಡೆಗಟ್ಟುವುದಕ್ಕೆ 120 ಕೋಟಿ ಜನರನ್ನು ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಿಸಬೇಕೇ? ಅಲ್ಲದೆ, ಈಗ ಬಿಡುಗಡೆಗೊಳಿಸಿರುವ ರೂ. 2000 ಮತ್ತು 500 ರೂಪಾಯಿಗಳನ್ನು ನಕಲಿ ಮಾಡಲು ಅವಕಾಶ ಇದ್ದೇ ಇದೆಯಲ್ಲವೇ? ಇದಕ್ಕಿಂತ, ಸ್ವಿಸ್ ಬ್ಯಾಂಕ್‍ನಲ್ಲಿರುವ 1800 ಲಕ್ಷ ಕೋಟಿ ರೂಪಾಯಿಯನ್ನು ಭಾರತಕ್ಕೆ ತರುವುದು ಉತ್ತಮವಾಗಿತ್ತಲ್ಲವೇ? 100 ದಿನಗಳ ವಾಯಿದೆ ಕಳೆದು 100 ವಾರಗಳಾದ ಬಳಿಕವೂ ಪ್ರಧಾನಿಯವರು ತನ್ನ ವಾಗ್ದಾನವನ್ನು ಈಡೇರಿಸದೇ ಇರುವುದರ ಹಿನ್ನೆಲೆಯೇನು? ಅವರೇಕೆ ಆ ಬಗ್ಗೆ ಮಾತಾಡುತ್ತಿಲ್ಲ?    
ಅನಿಲ್ ಬೋಕಿಲ್
      ನಿಜವಾಗಿ, ನೋಟು ರದ್ಧತಿಯ ಹಿನ್ನೆಲೆಯನ್ನು ತಪಾಸಿಸಿಕೊಂಡು ಹೋದರೆ ಅನಿಲ್ ಬೋಕಿಲ್ ಅವರ ‘ನಗದು ರಹಿತ’ ಸಿದ್ಧಾಂತವನ್ನು ಜಾರಿಗೊಳಿಸುವುದೇ ಇದರ ಪರಮ ಗುರಿ ಎಂದೇ ಅನಿಸುತ್ತದೆ. ಸರಕಾರ ಈಗಾಗಲೇ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆಗೆ (FDI) ಅನುಮತಿಯನ್ನು ನೀಡಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಈ ದೇಶದಲ್ಲಿ ಬಹುತೇಕ ವ್ಯಾಪಾರ-ವಹಿವಾಟುಗಳು ನಗದು ರೂಪದಲ್ಲಿಯೇ ನಡೆಯುತ್ತವೆ. ಶೆಟ್ರು, ಭಟ್ರು, ಸಾಬ್ರು...ಗಳ ಅಂಗಡಿಗಳಿಗೇ ಇಲ್ಲಿ ಗ್ರಾಹಕರು ಹೆಚ್ಚು. ಸಣ್ಣ ವ್ಯಾಪಾರ, ಬೀದಿಬದಿ ವ್ಯಾಪಾರಗಳೇ ಇವತ್ತಿಗೂ ಈ ದೇಶದಲ್ಲಿ ಪ್ರಾಬಲ್ಯವನ್ನು ಪಡೆದುಕೊಂಡಿವೆ. ಈ ಪ್ರಾಬಲ್ಯವನ್ನು ಹತ್ತಿಕ್ಕದಿದ್ದರೆ ವಿದೇಶಿ ನೇರ ಹೂಡಿಕೆಯಿಂದ ತಲೆಯೆತ್ತಲಿರುವ ಬೃಹತ್ ಮಳಿಗೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ಶೆಟ್ರ ಅಂಗಡಿಯಿಂದ ರಿಲಯನ್ಸ್ ಫ್ರೆಶ್‍ಗೆ, ಸಾಬರ ಭಂಡಸಾಲೆಯಿಂದ ವಾಲ್‍ಮಾರ್ಟ್‍ಗೆ ಅಥವಾ ಬಿಗ್‍ಬಝಾರ್‍ಗೆ ಗ್ರಾಹಕರನ್ನು ತಿರುಗಿಸಬೇಕಾಗುತ್ತದೆ. ಹಾಗಂತ, ತೀರಾ ಕಾರಣವಿಲ್ಲದೇ ಸಾಮಾನ್ಯ ಗ್ರಾಹಕ ಬಿಗ್ ಬಝಾರ್‍ನ ಮೆಟ್ಟಿಲು ಹತ್ತುತ್ತಾನೆ/ಳೆ ಎಂದು ಹೇಳಲು ಸಾಧ್ಯವಿಲ್ಲ. ರಿಲಯನ್ಸ್ ಫ್ರೆಶ್‍ಗೂ, ಭಟ್ರು, ಸಾಬರ  ಕಿರಾಣಿ ಅಂಗಡಿಗೂ ಅನೇಕ ವಿಷಯಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಕಾರ್ಪೊರೇಟ್ ಸಂಸ್ಥೆಗಳ ಬೃಹತ್ ಮಳಿಗೆಗಳು ಗಾತ್ರದಲ್ಲಿ ದೊಡ್ಡದಿರುತ್ತದೆ. ಶಿಸ್ತು ಇರುತ್ತದೆ. ಆಯ್ಕೆಯಲ್ಲಿ ಅಪರಿಮಿತ ಅವಕಾಶ ಇರುತ್ತದೆ. ಶೆಟ್ರ ಅಂಗಡಿಯಲ್ಲಾದರೆ, ಶಿಸ್ತು ಕಡಿಮೆ. ಗಾತ್ರ ಚಿಕ್ಕದು. ವಸ್ತುಗಳ ಪ್ರದರ್ಶನವೂ ನಡೆಯುವುದಿಲ್ಲ. ಆದರೆ ಅಲ್ಲಿ ಮನುಷ್ಯನ ಬಹುಮುಖ್ಯ ಬೇಡಿಕೆಯಾದ `ಮಾತು’ ಇರುತ್ತದೆ. ಸಾಲದ ವ್ಯವಹಾರ ಇರುತ್ತದೆ. ಜೇಬು ಖಾಲಿ ಇದ್ದರೂ ಮನೆಗೆ ಅಕ್ಕಿ ಒಯ್ಯುವ ಭರವಸೆ ಇರುತ್ತದೆ. ಬೃಹತ್ ಮಳಿಗೆಗಳಲ್ಲಿ ಇವೆರಡೂ ಶೂನ್ಯ. ಅಲ್ಲಿ ಮಾತುಕತೆಯೂ ಇಲ್ಲ. ಸಾಲದ ವಹಿವಾಟೂ ಇಲ್ಲ. ನಗದು ರೂಪದ ವ್ಯವಹಾರಕ್ಕಿಂತ ಕಾರ್ಡ್ ರೂಪದ ವ್ಯವಹಾರಕ್ಕೇ ಆದ್ಯತೆ. ಭಾರತದ ಬಹುಸಂಖ್ಯಾತ ಗ್ರಾಹಕರು ಈ ರೂಪದ ವ್ಯವಹಾರಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಆದ್ದರಿಂದ ನೋಟು ರದ್ಧತಿ ಎಂಬುದು ಸಾಮಾನ್ಯ ಭಾರತೀಯರನ್ನು ಕಾರ್ಪೋರೇಟ್ ಮಳಿಗೆಗಳ ಗ್ರಾಹಕರಾಗಿ ಬದಲಿಸಿ ಬಿಡುವುದಕ್ಕೆ ನರೇಂದ್ರ ಮೋದಿಯವರು ಹೆಣೆದ ತಂತ್ರದಂತೆ ಕಾಣಿಸುತ್ತದೆ. ಮೊದಲು ಭಾರತೀಯರನ್ನು ನಗದುರಹಿತಗೊಳಿಸಬೇಕು. ಪ್ರತಿಯೊಬ್ಬರನ್ನೂ ಬ್ಯಾಂಕ್ ಅವಲಂಬಿತರನ್ನಾಗಿ ಮಾಡಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂಬ ಪದಗಳು ಅವರ ಬಾಯಲ್ಲಿ ಸಾಮಾನ್ಯವಾಗಿಸಬೇಕು. ಜೇಬಲ್ಲಿ ದುಡ್ಡಿನ ಬದಲು ಕಾರ್ಡ್‍ಗಳನ್ನು ಇಟ್ಟುಕೊಂಡು ಮನೆಯಿಂದ ಹೊರಡುವ ಸಂಪ್ರದಾಯವನ್ನು ಬೆಳೆಸಬೇಕು. ಹೀಗಾದರೆ, ಶೆಟ್ರ ಅಂಗಡಿಯ ಗ್ರಾಹಕ ಅಂಬಾನಿಯ ಗ್ರಾಹಕನಾಗಿ ಬದಲಾಗುತ್ತಾನೆ/ಳೆ. ಊರಿನ ಕಿರಾಣಿ ಅಂಗಡಿಯಿಂದ ಬಿಗ್‍ಬಝಾರ್‍ಗೆ ಗ್ರಾಹಕ ತನ್ನ ನಿಷ್ಠೆ ಬದಲಿಸುತ್ತಾನೆ/ಳೆ. ಈ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡೇ ನೋಟು ರದ್ಧತಿ ಎಂಬ ಜೂಜಿಗೆ ಸರಕಾರ ಪ್ರಯತ್ನಿಸಿದಂತಿದೆ. ಅನಿಲ್ ಬೋಕಿಲ್ ಅವರ ಅರ್ಥಕ್ರಾಂತಿಯ ಆಂತರಿಕ ಉದ್ದೇಶವೂ ಇದುವೇ. ಎಲ್ಲವೂ ಬ್ಯಾಂಕ್ ಮೂಲಕವೇ ನಡೆಯಬೇಕು. ಹಾಗೆ ಆಗಬೇಕೆಂದಾದರೆ, ಜನರನ್ನು ಬ್ಯಾಂಕ್‍ನತ್ತ ಆಹ್ವಾನಿಸಬೇಕು. ಅದಕ್ಕಾಗಿ ಬ್ಯಾಂಕ್ ಖಾತೆ ಇಲ್ಲದೆಯೇ ಅರಾಮವಾಗಿ ಬದುಕುವ ಮತ್ತು ಬ್ಯಾಂಕ್ ಖಾತೆ ಇದ್ದೂ ನಗದಿನಲ್ಲೇ ವ್ಯವಹಾರ ನಡೆಸುವ ಬಹುಸಂಖ್ಯಾತ ಜನರ ಮೇಲೆ ಒತ್ತಡ ಹೇರಬೇಕು. ನೋಟು ರದ್ಧತಿಯೊಂದೇ ಅದಕ್ಕಿರುವ ಪರಿಹಾರ. ಇದರಿಂದಾಗಿ ಪ್ರತಿಯೋರ್ವ ಭಾರತೀಯ ಬ್ಯಾಂಕ್ ಖಾತೆ ತೆರೆಯಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ/ಳೆ. ಇದೇ ವೇಳೆ, ಇದರಿಂದಾಗುವ ತೊಂದರೆಯಿಂದಾಗಿ ಆತ/ಕೆ, ಸರಕಾರದ ಟೀಕಾಕಾರನಾಗಿ  ಬದಲಾಗುವುದಕ್ಕೂ ಅವಕಾಶ ಇದೆ. ಇದನ್ನು ತಪ್ಪಿಸಬೇಕಾದರೆ, ನವಿರಾದ ಸುಳ್ಳೊಂದನ್ನು ಇದರೊಂದಿಗೆ ಸೇರಿಸಿ ಬಿಡಬೇಕಾಗುತ್ತದೆ. ಅದರ ಭಾಗವೇ ಕಪ್ಪು ಹಣದ ಮಾತು ಮತ್ತು ಪಾಕಿಸ್ತಾನದಲ್ಲಿ  ನಕಲಿ ನೋಟು ತಯಾರಾಗುತ್ತಿದೆ ಎಂಬ ಸಮರ್ಥನೆ. ಈ ಕಾರಣದಲ್ಲಿ ದೇಶಪ್ರೇಮವೂ ಇದೆ, ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಸರಕಾರದ ಬದ್ಧತೆಯೂ ಇದೆ. ಹೀಗೆ ಹೇಳಿದರೆ, ನೋಟು ಬದಲಾವಣೆಗಾಗಿ ಬ್ಯಾಂಕ್‍ನ ಎದುರು ಕಾದು ಕಾದು ಬಿಸಿಲಿಗೆ ಬಾಡುವ ಬಡ ಭಾರತೀಯನೂ, ‘ತಾನೆಲ್ಲಿ ದೇಶದ್ರೋಹಿಯಾಗುವೆನೋ’ ಎಂದು ನಗುನಗುತ್ತಲೇ ಎಲ್ಲವನ್ನೂ ಸಹಿಸುತ್ತಾನೆ. ‘ಯೋಧರು ದೇಶಕ್ಕಾಗಿ ಗಡಿಯಲ್ಲಿ ಜೀವವನ್ನೇ ಕೊಡುವಾಗ, ಈ ಕಷ್ಟವೇನು ಮಹಾ..’ ಎಂಬ ನಕಲಿ ದೇಶ ಪ್ರೇಮವನ್ನೂ ಪ್ರದರ್ಶಿಸುತ್ತಾನೆ.     
        ಸದ್ಯ ಆಗಿರುವುದೂ ಇದುವೇ...

Friday, November 4, 2016

ಬಹುಪತ್ನಿತ್ವ: ವಾದಗಳ ಆಚೆ..

        ಮಕ್ಕಾದ ವರ್ತಕರಾಗಿದ್ದ ಮುಹಮ್ಮದ್ ಎಂಬ ವ್ಯಕ್ತಿ ಪ್ರವಾದಿ ಮುಹಮ್ಮದ್(ಸ) ಆದದ್ದು 40ನೇ ಪ್ರಾಯದಲ್ಲಿ. ಆ ಬಳಿಕ ಅವರು ಬರೇ 23 ವರ್ಷಗಳ ಹೃಸ್ವ ಜೀವನವನ್ನಷ್ಟೇ ನಡೆಸುತ್ತಾರೆ. 63ನೇ ಪ್ರಾಯದಲ್ಲಿ ನಿಧನರಾಗುತ್ತಾರೆ. ಮುಹಮ್ಮದ್‍ರು ಪ್ರವಾದಿ ಮುಹಮ್ಮದ್(ಸ) ಆದ ಬಳಿಕ, ತವರು ನೆಲ ಮಕ್ಕಾದಲ್ಲಿ 13 ವರ್ಷಗಳ ವರೆಗೆ ಬದುಕುತ್ತಾರೆ. ಈ ಜೀವನದ ಉದ್ದಕ್ಕೂ ಅವರು ಜನರೊಂದಿಗೆ ಸಂವಹನದಲ್ಲಿ ನಿರತರಾಗುತ್ತಾರೆ. ತನ್ನ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ದೇವನಿಂದ ಪಡೆದುಕೊಳ್ಳುತ್ತಿದ್ದ ಸೂಚನೆಗಳನ್ನು ಅವರು ಜನರಿಗೆ ತಲುಪಿಸುತ್ತಾರೆ. ಹೀಗೆ 13 ವರ್ಷಗಳು ಕಳೆದ ಬಳಿಕ ಅವರು ಮಕ್ಕಾದಿಂದ ಸುಮಾರು 450 ಕಿ.ಮೀಟರ್ ದೂರದ ಮದೀನಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ಅವರು ಹತ್ತು ವರ್ಷಗಳ ಕಾಲ ಜೀವಿಸುತ್ತಾರೆ. ಹೀಗೆ 40ರಿಂದ 63ರ ವರೆಗಿನ ಈ 23 ವರ್ಷಗಳ ಪ್ರವಾದಿತ್ವದ ಅವಧಿಯಲ್ಲಿ ಅವರು ದೇವನಿಂದ ಏನೆಲ್ಲ ಸೂಚನೆಗಳನ್ನು ಪಡೆದರೋ ಅವುಗಳ ಸಂಗ್ರಹಿತ ಗ್ರಂಥ ರೂಪವೇ ಪವಿತ್ರ ಕುರ್‍ಆನ್. ಈ ಕುರ್‍ಆನ್‍ನಲ್ಲಿ 114 ಅಧ್ಯಾಯಗಳಿವೆ. ಈ ಅಧ್ಯಾಯಗಳ ಪೈಕಿ ಏಕೈಕ ಅಧ್ಯಾಯದಲ್ಲಿ ಏಕೈಕ ಬಾರಿ ಉಲ್ಲೇಖವಾಗಿರುವ ದೇವ ಸೂಕ್ತವೇ ಈಗ ತೀವ್ರ ಚರ್ಚೆಗೆ ಗುರಿಯಾಗಿರುವ ಬಹುಪತ್ನಿತ್ವಕ್ಕೆ ಸಂಬಂಧಿಸಿದ ಸೂಕ್ತ. ಆದರೆ ಈ ಸೂಕ್ತದಲ್ಲಿ ಮತ್ತು ಈ ಸೂಕ್ತದ ಮೊದಲು ಹಾಗೂ ನಂತರದ ಸೂಕ್ತಗಳಲ್ಲಿ ಬಹುಪತ್ನಿತ್ವಕ್ಕಿರುವ ಕಾರಣಗಳು, ಷರತ್ತುಗಳು ಮತ್ತು ಸನ್ನಿವೇಶಗಳನ್ನೂ ಹೇಳಲಾಗಿದೆ. ಬಹುಪತ್ನಿತ್ವದ ಸೂಕ್ತ ಹೀಗಿದೆ:
        “ಅನಾಥರೊಂದಿಗೆ ನ್ಯಾಯಯುತವಾಗಿ ನಡಕೊಳ್ಳಲು ಸಾಧ್ಯವಾಗದೆಂಬ ಆಶಂಕೆ ನಿಮಗೆ ಉಂಟಾದರೆ ಸ್ತ್ರೀಯರಲ್ಲಿ ಇಬ್ಬರನ್ನೋ ಮೂವರನ್ನೋ ನಾಲ್ವರನ್ನೋ ವಿವಾಹ ಮಾಡಿಕೊಳ್ಳಿರಿ. ಆದರೆ ಅವರೊಂದಿಗೆ ನ್ಯಾಯ ಪಾಲಿಸಲು ಅಸಾಧ್ಯ ಎಂಬ ಆಶಂಕೆ ನಿಮಗಿದ್ದರೆ ಓರ್ವ ಸ್ತ್ರೀಯನ್ನು ಮಾತ್ರ ವಿವಾಹವಾಗಿರಿ.” (ಅಧ್ಯಾಯ 4, ಸೂಕ್ತ 3)
 ಈ ಸೂಕ್ತಕ್ಕಿಂತ ಮೊದಲಿನ ಸೂಕ್ತ ಹೀಗಿದೆ:
       “ಅನಾಥರ ಸೊತ್ತುಗಳನ್ನು ಅವರಿಗೆ ಹಿಂತಿರುಗಿಸಿರಿ. ಒಳ್ಳೆಯ ಸೊತ್ತಿನ ಸ್ಥಾನದಲ್ಲಿ ಕೆಟ್ಟದ್ದನ್ನು ಬದಲಿಸಬೇಡಿರಿ. ಅವರ ಸೊತ್ತನ್ನು ನಿಮ್ಮದರೊಂದಿಗೆ ಸೇರಿಸಿ ಕಬಳಿಸಲೂ ಬೇಡಿರಿ. ಇದು ಅತ್ಯಂತ ಘೋರ ಪಾತಕ.” (ಅಧ್ಯಾಯ 4, ಸೂಕ್ತ 2)
ವಿಶೇಷ ಏನೆಂದರೆ, ಈ ಎರಡೂ ಸೂಕ್ತಗಳಲ್ಲಿ ಒತ್ತು ಕೊಡಲಾಗಿರುವುದು ಬಹುಪತ್ನಿತ್ವಕ್ಕೆ ಅಲ್ಲ. ಅನಾಥರ ಸಂರಕ್ಷಣೆಗೆ, ವಿಧವೆಯರ ಸಾಮಾಜಿಕ ಭದ್ರತೆಗೆ. ಅನಾಥರ ಸೊತ್ತನ್ನು ಕಬಳಿಸುವುದು ಮತ್ತು ಅವರ ದೌರ್ಬಲ್ಯವನ್ನು ಬಳಸಿಕೊಂಡು ವಂಚಿಸುವುದನ್ನು ಪ್ರಬಲವಾಗಿ ಈ ಸೂಕ್ತಗಳಲ್ಲಿ ವಿರೋಧಿಸಲಾಗಿದೆ. ಇವಲ್ಲದೇ ಇದೇ ಅಧ್ಯಾಯದ 127ನೇ ಸೂಕ್ತದಲ್ಲೂ ಅನಾಥರ ಜೊತೆ ನ್ಯಾಯಯುತವಾಗಿ ನಡಕೊಳ್ಳಬೇಕೆಂದು ಆಜ್ಞಾಪಿಸಲಾಗಿದೆ. ಅಂದಹಾಗೆ, ಈ ಮೂರೂ ಸೂಕ್ತಗಳಿಗೆ ಒಂದು ಕೇಂದ್ರಬಿಂದುವಿದೆ. ಅದುವೇ ಅನಾಥರು ಮತ್ತು ವಿಧವೆಯರು. ಇವರನ್ನು ಸಂರಕ್ಷಿಸುವ ವಿಧಾನ ಹೇಗೆ ಮತ್ತು ಆ ಸಂದರ್ಭದಲ್ಲಿ ಅನ್ಯಾಯವಾಗದಂತೆ ಪಾಲಿಸಬೇಕಾದ ಎಚ್ಚರಿಕೆಗಳು ಯಾವುವು ಎಂಬುದನ್ನು ಹೇಳುವುದೇ ಈ ಸೂಕ್ತಗಳ ಮುಖ್ಯ ಗುರಿ. ಅವರನ್ನು ನಿಮ್ಮ ಸಂರಕ್ಷಣೆಯ ವಲಯದೊಳಗೆ ಸೇರಿಸಿಕೊಳ್ಳಬೇಕು. ಅವರಿಗೆ ಸಾಮಾಜಿಕ, ಆರ್ಥಿಕ ಮತ್ತು ದೈಹಿಕ ಭದ್ರತೆಯನ್ನು ಒದಗಿಸಬೇಕು. ತಾವು ಸಮಾಜದಲ್ಲಿ ಸುರಕ್ಷಿತರು ಎಂಬ ಭಾವನೆ ಅವರಲ್ಲಿ ಉಂಟಾಗಬೇಕು. ಒಂದು ವೇಳೆ, ನಿಮ್ಮ ಸಂರಕ್ಷಣೆಯ ವೃತ್ತದೊಳಗೆ ಬರುವ ಅನಾಥರು ಮತ್ತು ಅವರ ವಿಧವೆ ತಾಯಂದಿರೊಂದಿಗೆ ‘ನ್ಯಾಯಯುತವಾಗಿ’ ನಡಕೊಳ್ಳಲು ಅಸಾಧ್ಯವೆಂದು ತೋರುವುದಾದರೆ, ಅವರನ್ನು ನಿಮ್ಮ ಕೌಟುಂಬಿಕ ಸದಸ್ಯರಾಗಿ ಸ್ವೀಕರಿಸಿಕೊಳ್ಳಬೇಕು. ಇಲ್ಲೊಂದು  ಡೆಫಿನೇಷನ್ನಿನ ಅಗತ್ಯ ಇದೆ.ನ್ಯಾಯ ಅಂದರೆ ಏನು, ಅದರ ಸ್ವರೂಪ ಹೇಗೆ, ಯಾವೆಲ್ಲ ವಿಷಯಗಳನ್ನು ನ್ಯಾಯ ಎಂಬ ಪದ ಒಳಗೊಂಡಿದೆ ಎಂಬುದನ್ನು ಓದುಗ ಸ್ವಯಂ ಸ್ಪಷ್ಟಪಡಿಸಿಕೊಳ್ಳಬೇಕಾಗಿದೆ. ನಿಜವಾಗಿ, ಪವಿತ್ರ ಕುರ್‍ಆನಿನ 114 ಅಧ್ಯಾಯಗಳಲ್ಲಿ ನೀವು ಯಾವ ಅಧ್ಯಾಯವನ್ನೇ ಎತ್ತಿಕೊಳ್ಳಿ. ವೈವಾಹಿಕ ಸಂಬಂಧವನ್ನು ಅತ್ಯಂತ ಪಾವನ, ಗೌರವಾರ್ಹ, ಅಮೂಲ್ಯವಾಗಿಯೇ ಅದು ಪರಿಗಣಿಸಿದ್ದನ್ನು ಕಂಡುಕೊಳ್ಳಬಹುದು. ಪತಿ ಮತ್ತು ಪತ್ನಿಗೆ ಅದು ಜೋಡಿ ಎಂಬ ಏಕವಚನವನ್ನು (7:189) ಪ್ರಯೋಗಿಸಿದೆ. ಅವರಿಬ್ಬರನ್ನೂ ಒಂದೇ ಜೀವದಿಂದ ಸೃಷ್ಟಿಸಲಾಗಿದೆ (7:189) ಎಂದೂ ಅದು ಅಭಿಮಾನ ವ್ಯಕ್ತಪಡಿಸಿದೆ. ಅವರಿಬ್ಬರೂ ‘ಜೋಡಿ’ಯಾಗುವುದರಿಂದಾಗಿ ಪರಸ್ಪರ ಮನಶ್ಯಾoತಿ ಮತ್ತು ನೆಮ್ಮದಿಯನ್ನು ಹೊಂದಬಲ್ಲರು (7:189) ಎಂದೂ ಹೇಳಿದೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡಿನ ಸ್ಥಾನಮಾನವನ್ನು ಸಮಾನ ನೆಲೆಯಲ್ಲಿ ಪ್ರಸ್ತುತಪಡಿಸುವ ಸೂಕ್ತ ಗಳಿವು. ದಂಪತಿಗಳನ್ನು ಪರಸ್ಪರರ ಪಾಲಿಗೆ ಪೋಷಾಕು ಎಂದು ಹೇಳಿದ್ದೂ ಪವಿತ್ರ ಕುರ್‍ಆನೇ. ಅದು ದಾಂಪತ್ಯ ಸಂಬಂಧವನ್ನು ಭಾವನಾತ್ಮಕ ಸಂಬಂಧವಾಗಿ ವ್ಯಾಖ್ಯಾನಿಸುತ್ತದೆ. ಪೋಷಾಕು ಎಂಬ ಪದ ಧ್ವನಿಸುವ ಅರ್ಥ ಎಷ್ಟು ಆತ್ಮೀಯ ನೆಲೆಗಟ್ಟಿನದ್ದು ಎಂಬುದೂ ಇಲ್ಲಿ ವಿಶ್ಲೇಷಣೆಗೆ ಅರ್ಹವಾದುದು. ಆದ್ದರಿಂದ, ಸಹಜ ಸಂದರ್ಭಗಳಲ್ಲಿ ಈ ಜೋಡಿ, ‘ಜೋಡಿಗಳು’ ಆಗುವುದಕ್ಕೆ ಸಾಧ್ಯವಿಲ್ಲ. ಅಸಹಜ ಸಂದರ್ಭಗಳನ್ನು ಗುರಿಯಾಗಿಟ್ಟುಕೊಂಡೇ ‘ಬಹುಪತ್ನಿತ್ವ’ವನ್ನು  ಉಲ್ಲೇಖಿಸಲಾಗಿದೆ.  ನಿಜವಾಗಿ, ಓರ್ವ ಹೆಣ್ಣು ತನಗೆ ಸವತಿಯಾಗಿ ಇನ್ನೋರ್ವಳು ಬರುವುದನ್ನು ಮುಕ್ತವಾಗಿ ಸ್ವಾಗತಿಸುವುದಕ್ಕೆ ಖಂಡಿತ ಸಾಧ್ಯವಿಲ್ಲ. ಪತಿಯು ಸಂಪೂರ್ಣವಾಗಿ ತನಗೋರ್ವಳಿಗೇ ಸೇರಬೇಕೆಂದು ಪತ್ನಿ ಬಯಸುತ್ತಾಳೆ. ಪತ್ನಿಯು ತನಗೋರ್ವನಿಗೇ ಸೇರಬೇಕೆಂದು ಪತಿಯೂ ಬಯಸುತ್ತಾನೆ. ಈ ಬಗೆಯ ಆತ್ಮೀಯತೆ ಅವರೊಳಗೆ ಇರುವಾಗಲೇ ಪರಸ್ಪರ ಪೋಷಾಕಿನಂಥ ಬದುಕು ಸಾಧ್ಯವಾಗುವುದು. ದಾಂಪತ್ಯದಲ್ಲಿ ಮನಶ್ಶಾಂತಿ ಲಭ್ಯವಾಗುವುದು. ಆದ್ದರಿಂದ, ಇಂಥ ದಾಂಪತ್ಯ ಸಂಬಂಧದಲ್ಲಿ ಬಿರುಕು ಮೂಡಿಸಬಹುದಾದ ಬಹುಪತ್ನಿತ್ವವನ್ನು ಸಹಜವಾಗಿ ಪ್ರಸ್ತುತಪಡಿಸುವುದು ಪವಿತ್ರ ಕುರ್‍ಆನಿನ ಉದ್ದೇಶವಾಗಿರಲು ಸಾಧ್ಯವೇ ಇಲ್ಲ. ಮದುವೆಯನ್ನು ಇಸ್ಲಾಮ್ ವಿಶ್ವಾಸದ ಅರ್ಧಭಾಗವಾಗಿ ಗುರುತಿಸಿದೆ. ಪತ್ನಿಯ ಪಾಲಿಗೆ ಯಾರು ಉತ್ತಮನೋ ಆತನೇ ಉತ್ತಮ ವ್ಯಕ್ತಿಯೆಂದೂ ಅದು ಘೋಷಿಸಿದೆ. ಮಾತ್ರವಲ್ಲ ಪತ್ನಿಯೊಂದಿಗೆ ಅತ್ಯಂತ ಮೃದುವಾಗಿ ವರ್ತಿಸಬೇಕೆಂದೂ ಅದು ನಿರ್ದೇಶಿಸಿದೆ. ಬಹುಶಃ ಬಹುಪತ್ನಿತ್ವ ಎಂಬುದು ಒಂದು ರೀತಿಯಲ್ಲಿ ಈ ಎಲ್ಲಕ್ಕೂ ಸವಾಲೆಸೆಯುವಂಥದ್ದು. ಆದ್ದರಿಂದಲೇ ಅತ್ಯಂತ ಅಸಹಜವಾಗಿರುವ ಸಂದರ್ಭಕ್ಕಷ್ಟೇ ಪವಿತ್ರ ಕುರ್ ಆನಿನ ಆ ಸೂಕ್ತ ಹೊಂದಿಕೊಳ್ಳುತ್ತದೆ. ಯುದ್ಧ,  ಹಿಂಸೆ ಅಥವಾ ಇನ್ನಿತರ ಕಾರಣಗಳಿಂದಾಗಿ  ವಿಧವೆಯರು ಮತ್ತು ಅನಾಥರು ಸೃಷ್ಟಿಯಾದಾಗ ಒಂದು ಆಯ್ಕೆಯಾಗಿ ಬಹುಪತ್ನಿತ್ವ ಪ್ರಸ್ತುತವಾಗುತ್ತದೇ ಹೊರತು ಬಹುಪತ್ನಿ ವಲ್ಲಭರ ನಿರ್ಮಾಣಕ್ಕಾಗಿ ಅಲ್ಲ. ಇಂಥ  ಬಹುಪತ್ನಿತ್ವದಲ್ಲಿ ಆಶ್ರಯ ಮತ್ತು ಜೀವನ ಭದ್ರತೆಯೇ ಮುಖ್ಯವಾಗಿರುತ್ತದೆ. ಲೈಂಗಿಕತೆ ಅಲ್ಲ. ಈ ಸನ್ನಿವೇಶಕ್ಕಿಂತ ಹೊರತಾದ ಪ್ರತಿ ಬಹುಪತ್ನಿತ್ವವೂ ಖಂಡಿತ ಪ್ರಶ್ನಾರ್ಹ.          
          ಅಷ್ಟಕ್ಕೂ, ಪ್ರವಾದಿ ಮುಹಮ್ಮದರು(ಸ) ಮಕ್ಕಾದಿಂದ ಮದೀನಕ್ಕೆ ತೆರಳಿ 5 ವರ್ಷಗಳಾದ ಬಳಿಕ ಈ ಬಹುಪತ್ನಿತ್ವದ ದೇವವಾಣಿ ಅವತೀರ್ಣವಾಗಿದೆ. ಅಂದರೆ ಪ್ರವಾದಿತ್ವದ 18 ವರ್ಷಗಳು ಕಳೆದ ಬಳಿಕ. ಈ ನಡುವೆ ಬದ್ರ್ ಮತ್ತು ಉಹುದ್ ಎಂಬ ಪ್ರದೇಶಗಳಲ್ಲಿ ಪ್ರವಾದಿ(ಸ) ಮತ್ತು ಅವರ ವಿರೋಧಿಗಳ ನಡುವೆ ಹೋರಾಟಗಳು ನಡೆದಿವೆ. ಸಾವು-ನೋವುಗಳಾಗಿವೆ. ಅನೇಕ ವಿಧವೆಯರು ಮತ್ತು ಮಕ್ಕಳ ಸೃಷ್ಟಿಯಾಗಿದೆ. ಒಂದು ವೇಳೆ, ಇಸ್ಲಾಮ್‍ನಲ್ಲಿ ಬಹುಪತ್ನಿತ್ವವು ಸಹಜ ಮತ್ತು ಸಾಮಾನ್ಯವಾಗಿರು ತ್ತಿದ್ದರೆ, ಆ ಬಹುಪತ್ನಿತ್ವವನ್ನು ಹೇಳುವುದಕ್ಕಾಗಿ 18 ವರ್ಷಗಳಷ್ಟು ದೀರ್ಘ ಅವಧಿಯನ್ನು ಕಾಯಬೇಕಿತ್ತೇ? ಅಂದರೆ, ಅಸಹಜ ಸನ್ನಿವೇಶ ನಿರ್ಮಾಣವಾದಾಗ ಸಾಮಾಜಿಕ ಸಮತೋಲನವನ್ನು ಕಾಪಾಡುವುದಕ್ಕಾಗಿ ಪ್ರಸ್ತುತಪಡಿಸಲಾದ ಆಯ್ಕೆ ಇದು. ಅದು ಬೇಕಾಬಿಟ್ಟಿ ಮದುವೆಯಾಗುವುದಕ್ಕಿರುವ ಪರವಾನಿಗೆ ಅಲ್ಲ. ಒಂದು ವೇಳೆ, ಬಹುಪತ್ನಿತ್ವವು ಮುಸ್ಲಿಮ್ ಸಮಾಜದಲ್ಲಿ ಮುಕ್ತ ಆಯ್ಕೆಯಾಗಿರುತ್ತಿದ್ದರೆ ಮತ್ತು ಷರತ್ತುಗಳು ಅನ್ವಯಗೊಳ್ಳದಿರುತ್ತಿದ್ದರೆ, ಇವತ್ತಿನ ಸಾಮಾಜಿಕ ಪರಿಸ್ಥಿತಿ ಹೇಗಿರಬೇಕಿತ್ತು? ಮುಸ್ಲಿಮರಲ್ಲಿ ಬಹುಪತ್ನಿವಲ್ಲಭರು ಎಷ್ಟಿರುತ್ತಿದ್ದರು? ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯು 2006ರಲ್ಲಿ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಹಿಂದೂಗಳಲ್ಲಿ ಬಹುಪತ್ನಿತ್ವವು ಶೇ. 1.77 ಇದ್ದರೆ ಮುಸ್ಲಿಮರಲ್ಲಿ ಶೇ. 2.55ರಷ್ಟು ಇದೆ. 1974ರಲ್ಲಿ ಕೇಂದ್ರ ಸರಕಾರ ಬಿಡುಗಡೆಗೊಳಿಸಿದ ವರದಿಯ ಪ್ರಕಾರ, ಮುಸ್ಲಿಮರಲ್ಲಿ 5.6% ಬಹುಪತ್ನಿತ್ವ ರೂಢಿಯಲ್ಲಿದ್ದರೆ, ಹಿಂದೂಗಳಲ್ಲಿ 5.8% ಇದೆ. 2011ರಲ್ಲಿ ಬಿಡುಗಡೆಗೊಳಿಸಲಾದ ಜನಗಣತಿ ವರದಿಯ ಚಾರ್ಟ್ ಅ-3ರ ವಿವರವಂತೂ ಇನ್ನಷ್ಟು ಕುತೂಹಲಕಾರಿ. ಹಿಂದೂಗಳಲ್ಲಿ ವಿವಾಹಿತ ಮಹಿಳೆಯರ ಸಂಖ್ಯೆ ವಿವಾಹಿತ ಪುರುಷರಿಗಿಂತ ಹೆಚ್ಚು ಎಂಬುದೇ ಆ ವಿವರವಾಗಿತ್ತು. ನಿಖರವಾಗಿ ಹೇಳಬೇಕೆಂದರೆ, ಒಟ್ಟು 47,13,97,900 ಮಂದಿ ವಿವಾಹಿತರಲ್ಲಿ 23,35,20,803 ಪುರುಷರಿದ್ದರೆ, 23,78,77,097 ಮಹಿಳೆಯರಿದ್ದಾರೆ. ಅಂದರೆ ವಿವಾಹಿತ ಪುರುಷರಿಗಿಂತ 43,36,294 ಮಂದಿ ವಿವಾಹಿತ ಮಹಿಳೆಯರು ಹೆಚ್ಚಿದ್ದಾರೆ. ಇದನ್ನು ಹಿಂದೂ ಸಮುದಾಯದಲ್ಲಿರುವ ಬಹುಪತ್ನಿತ್ವದ ಭಾಗವಾಗಿ ನೋಡಲಾಗಿದೆ. ಹಾಗಂತ, ಹಿಂದೂ ಮ್ಯಾರೇಜ್ ಆ್ಯಕ್ಟ್ ನ ಪ್ರಕಾರ ಬಹುಪತ್ನಿತ್ವವು ಶಿಕ್ಷಾರ್ಹ ಅಪರಾಧ. ಎರಡನೇ ಪತ್ನಿಗೆ ಕಾನೂನು ಪ್ರಕಾರ ಯಾವ ಅಧಿಕೃತತೆಯೂ ಇಲ್ಲ. ಮೊದಲ ಪತ್ನಿ ದೂರು ಕೊಟ್ಟರೆ ಪತಿ ಶಿಕ್ಷೆಗೆ ಗುರಿಯಾಗುವುದಕ್ಕೂ ಅವಕಾಶ ಇದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಯಾವುದೇ ದೂರು ದಾಖಲಾಗುವುದಿಲ್ಲ. ಆದ್ದರಿಂದ, ಬಹುಪತ್ನಿತ್ವವು ಸರಕಾರಿ ವರದಿಗಳಲ್ಲಿ ನಮೂದಾಗು ವುದಿಲ್ಲ. ಹೀಗೆ ವಿವಾಹವಾದ ಮಹಿಳೆ ವಿವಾಹಿತೆ ಎಂದು ಗುರುತಿಸುತ್ತಾಳೆಯೇ ಹೊರತು ಇಂಥವರನ್ನು ವಿವಾಹವಾಗಿದ್ದೇನೆ ಎಂಬುದನ್ನು ಗೌಪ್ಯವಾಗಿಡುತ್ತಾಳೆ. ಮುಸ್ಲಿಮರಿಗೆ ಸಂಬಂಧಿಸಿ ಹೇಳುವುದಾದರೆ, ಮುಸ್ಲಿಮ್ ಪರ್ಸನಲ್ ಲಾದ ಪ್ರಕಾರ ಬಹು ಪತ್ನಿತ್ವಕ್ಕೆ ಅಧಿಕೃತವಾಗಿಯೇ ಅನುಮತಿ ಇದೆ. ಆದರೂ ಬಹುಪತ್ನಿತ್ವಕ್ಕೆ ನಿಷೇಧ ಇರುವ ಹಿಂದೂಗಳಿಗೆ ಹೋಲಿಸಿದರೆ ಮುಸ್ಲಿಮರಲ್ಲಿ ಬಹುಪತ್ನಿತ್ವ ಅತ್ಯಂತ ಕಡಿಮೆ ಎಂದೇ ಹೇಳಬಹುದು.
       After Nearly Years of War: Too Many Widows ಎಂಬ ಹೆಸರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು 2011 ನವೆಂಬರ್ 24ರಂದು ವರದಿಯೊಂದನ್ನು ಪ್ರಕಟಿಸಿತ್ತು. ಇರಾಕ್‍ಗೆ ಸಂಬಂಧಿಸಿ ಅಲ್ಲಿನ ಯೋಜನಾ ಆಯೋಗವು ಬಿಡುಗಡೆಗೊಳಿಸಿದ ವರದಿಯಾಗಿತ್ತದು. ಆ ವರದಿಯ ಪ್ರಕಾರ, ಇರಾಕ್‍ನಲ್ಲಿ ಸುಮಾರು 10 ಲಕ್ಷ  ವಿಧವೆಯರಿದ್ದಾರೆ. ಅಷ್ಟೇ ಸಂಖ್ಯೆಯಲ್ಲಿ ಅಥವಾ ಅದಕ್ಕಿಂತಲೂ ತುಸು ಹೆಚ್ಚೇ ಅನಾಥ ಮಕ್ಕಳಿದ್ದಾರೆ. ಈ ಸುದ್ದಿಯ ಮೇಲೆ ಆ್ಯಂಡ್ರ್ಯೂ ಕ್ರಾಮರ್ ಎಂಬ ಪತ್ರಕರ್ತ ವಿಸ್ತೃತ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ ನಲ್ಲಿ ನೀಡಿದ್ದರು. ಅವರು ಅನೇಕ ವಿಧವೆಯರನ್ನು ಭೇಟಿಯಾಗಿದ್ದರು. ಈ ವಿಧವೆಯರು ಇನ್ನೊಂದು ಮದುವೆಯಾಗುವ ಇಚ್ಛೆಯನ್ನೂ ವ್ಯಕ್ತಪಡಿಸಿದ್ದರು. ಅನಾಥ ಮಕ್ಕಳಿಗೆ ಸಂರಕ್ಷಕರ ಅಗತ್ಯವನ್ನು ಹೇಳಿಕೊಂಡಿದ್ದರು. 2008ರಲ್ಲಿ ಅಮೇರಿಕದ ಅಧ್ಯಕ್ಷ ಜಾರ್ಜ್ ಬುಶ್‍ರಿಗೆ ಶೂ ಎಸೆದ ಇರಾಕಿ ಪತ್ರಕರ್ತ ಮುಂತಝಿರ್ ಝೈದಿ ಕೂಡ ಇದೇ ಸಮಸ್ಯೆಯನ್ನು ಹೇಳಿಕೊಂಡಿದ್ದರು. ವಿಧವೆಯರು ಮತ್ತು ಅನಾಥ ಮಕ್ಕಳ ಅಸಹಾಯಕ ಸ್ಥಿತಿಯು ತನ್ನನ್ನು ಈ ಕೃತ್ಯಕ್ಕೆ ಪ್ರೇರೇಪಿಸಿತು ಎಂದೂ ಅವರು ಕೂಗಿ ಹೇಳಿದ್ದರು. ವಿಶ್ವಸಂಸ್ಥೆಯು 2006ರಲ್ಲಿ ಬಿಡುಗಡೆಗೊಳಿಸಿದ ವರದಿಯನ್ನು ಒಪ್ಪುವುದಾದರೆ ಇರಾಕ್‍ನಲ್ಲಿ ಪ್ರತಿದಿನ 100 ಮಂದಿ ಮಹಿಳೆಯರು ವಿಧವೆಯಾಗುತ್ತಿದ್ದರು. ಹಿಂಸೆ ತನ್ನ ಚರಮ ಸೀಮೆಗೆ ತಲುಪಿದ್ದ ಸಂದರ್ಭ ಅದು. ಅಲ್ಲದೇ 1980ರಲ್ಲಿ ಇರಾನ್‍ನೊಂದಿಗೆ ನಡೆದ ಯುದ್ಧದಿಂದಾಗಿಯೂ ಇರಾಕ್‍ನಲ್ಲಿ ದೊಡ್ಡದೊಂದು ವಿಧವಾ ಗುಂಪು ನಿರ್ಮಾಣವಾಗಿತ್ತು. ನಿಜವಾಗಿ, ಯುದ್ಧ-ಹಿಂಸೆ ಮುಂತಾದುವುಗಳಲ್ಲಿ ಹೆಚ್ಚಿನ ಜೀವಹಾನಿಯಾಗುವುದು ಯುವಕರು ಮತ್ತು ಮಧ್ಯ ವಯಸ್ಕರಿಗೆ. ಆದ್ದರಿಂದಲೇ, ವಿಧವೆಯರಲ್ಲಿ ಬಹುಸಂಖ್ಯಾತರೂ ಯೌವನ ದಾಟದ ಯುವತಿಯರೇ ಆಗಿರುತ್ತಾರೆ. ಅವರು ಜೀವನ ಭದ್ರತೆಗಾಗಿ ಇನ್ನೊಂದು ಮದುವೆಗೆ ಮುಂದಾಗುತ್ತಾರೆ. ನ್ಯೂಯಾರ್ಕ್ ಟೈಮ್ಸ್ ನ ವರದಿ ಹೇಳಿದ್ದೂ ಇದನ್ನೇ. ಆದರೆ, ಇಂದಿನ ಭಾರತೀಯ ಪರಿಸ್ಥಿತಿಯಲ್ಲಿ ಇಂಥ ವಿಧವೆಯರನ್ನು ಮತ್ತು ಅವರು ಎದುರಿಸುವ ಸಾಮಾಜಿಕ ಅಭದ್ರತೆಯ ತೀವ್ರತೆಯನ್ನು ಗ್ರಹಿಸುವುದು ಅಷ್ಟು ಸುಲಭ ಅಲ್ಲ. ಆದ್ದರಿಂದಲೇ, ಬಹುಪತ್ನಿತ್ವವನ್ನು ಮಹಿಳಾ ವಿರೋಧಿಯಂತೆ ಮತ್ತು ಅನಾಗರಿಕವೆಂಬಂತೆ ಇಲ್ಲಿ ಚಿತ್ರಿಸಲಾಗುತ್ತದೆ. ಅದರ ಸಾರಾಸಗಟು ನಿಷೇಧಕ್ಕೆ ಒತ್ತಾಯಿಸಲಾಗುತ್ತದೆ. ಹಾಗಂತ, ಬಹುಪತ್ನಿತ್ವವು ಮುಸ್ಲಿಮರಲ್ಲಿ ದುರುಪಯೋಗಕ್ಕೆ ಒಳಗಾಗಿಲ್ಲ ಎಂದಲ್ಲ. ಆಗಿದೆ. ಜೊತೆಗೇ ಸದುಪಯೋಗವೂ ಆಗಿದೆ. ವಿಧವೆಯರು ಮತ್ತು ವಿಚ್ಛೇದಿತೆಯರಿಗೆ ಹೊಸ ಬದುಕು ಕೊಡುವುದಕ್ಕೂ ಬಳಕೆಯಾಗಿದೆ. . ಹೀಗಿರುತ್ತಾ,  ದುರುಪಯೋಗವನ್ನು ತಡೆಯುವುದಕ್ಕೆ ಬಹುಪತ್ನಿತ್ವವನ್ನೇ ರದ್ದುಗೊಳಿಸುವುದು ಯಾಕೆ  ಪರಿಹಾರ ಆಗಬೇಕು? ಅಷ್ಟಕ್ಕೂ,
         ಬಹುಪತ್ನಿತ್ವವು ಮಹಿಳಾ ವಿರೋಧಿಯೇ ಎಂದು ಇರಾಕ್, ಸಿರಿಯ, ಯಮನ್‍ನ ವಿಧವೆಯರಲ್ಲಿ ಅಥವಾ ಮರು ಮದುವೆಯನ್ನು ನಿರೀಕ್ಷಿಸುತ್ತಾ ಕಾಯುತ್ತಿರುವ ನಮ್ಮ ಸಮಾಜದ  ವಿಧವೆಯರಲ್ಲಿ ಪ್ರಶ್ನಿಸಿದರೆ ಅವರ ಉತ್ತರ ಏನಾಗಿರಬಹುದು?

Friday, October 28, 2016

ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಯಾಕಾಗಲಾರ?

         ಸೇನೆಯು ದೇಶದ ಇತರೆಲ್ಲವುಗಳಿಗಿಂತ ಮಿಗಿಲೇ? ಅದು ಪ್ರಶ್ನಾತೀತವೇ? ಸೇನೆಯ ಕಾರ್ಯ ನಿರ್ವಹಣೆಯ ಮೇಲೆ ಪ್ರಶ್ನೆಗಳನ್ನೆತ್ತುವುದು ದೇಶದ್ರೋಹವಾಗುವುದೇ? ಹುತಾತ್ಮತೆ ಎಂಬ ಗೌರವಕ್ಕೆ ಯಾರೆಲ್ಲ ಅರ್ಹರಾಗಬೇಕು? ಅದು ಸೇನಾ ಯೋಧರಿಗೆ ಮಾತ್ರ ಲಭ್ಯವಾಗುವ ಗೌರವವೇ? ಚರಂಡಿ ಸ್ವಚ್ಛಗೊಳಿಸುವ ಕಾರ್ಮಿಕರು, ಸತ್ತ ಪ್ರಾಣಿಯನ್ನು ವಿಲೇವಾರಿ ಮಾಡುವವರೆಲ್ಲ ಈ ಗೌರವಕ್ಕೆ ಅನರ್ಹರೇ?
     ಸರ್ಜಿಕಲ್ ಸ್ಟ್ರೈಕ್‍ನ ಹವಾ ತಣ್ಣಗಾಗಿರುವ ಈ ಹೊತ್ತಿನಲ್ಲಿ ನಮ್ಮ ಪ್ರಜಾತಂತ್ರ ಮತ್ತು ಅದರ ಭಾಗವಾಗಿರುವ ಮಿಲಿಟರಿ ವ್ಯವಸ್ಥೆಯನ್ನು ವಿಮರ್ಶೆಗೊಳಪಡಿಸುವುದು ಅತ್ಯಂತ ಸೂಕ್ತ ಅನ್ನಿಸುತ್ತದೆ. ಉರಿ ದಾಳಿ ಮತ್ತು ಅದಕ್ಕೆ ಉತ್ತರವಾಗಿ ನಡೆಸ ಲಾದ ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ಇಂಥದ್ದೊಂದು ವಿಮರ್ಶೆಗೆ ಇದ್ದ ಸ್ಪೇಸ್ ತೀರಾ ಸಣ್ಣದಾಗಿತ್ತು. ಅಲ್ಲೊಂದು ಭಾವೋದ್ವೇಗವಿತ್ತು. ದೇಶದಾದ್ಯಂತ ಯುದ್ಧೋನ್ಮಾದದ ವಾತಾವರಣ ವನ್ನು ಹುಟ್ಟು ಹಾಕಲಾಗಿತ್ತು. ಇಂಡಿಯಾ ಟಿ.ವಿ.ಯ ನಿರೂಪಕ ಸ್ವತಃ ಯೋಧರ ಉಡುಪನ್ನು ಧರಿಸಿ ನಿರೂಪಣೆ ಮಾಡಿದ್ದರು. ನ್ಯೂಸ್ ಎಕ್ಸ್ ಚಾನೆಲ್ ಅಂತೂ, ‘ತಾನಿನ್ನು ಪಾಕಿಸ್ತಾನವನ್ನು ಪಾಕಿಸ್ತಾನ ಎಂಬ ಭಯೋತ್ಪಾದಕ ರಾಷ್ಟ್ರ’ ಎಂದು ಕರೆಯುವುದಾಗಿ ಘೋಷಿಸಿತು. ಪಾಕ್ ಕಲಾವಿದರು ದೇಶ ಬಿಟ್ಟು ಹೊರ ಹೋಗಬೇಕೆಂದು ಟೈಮ್ಸ್ ನೌ ಆಗ್ರಹಿಸಿತು. ಎಲ್ಲಿಯ ವರೆಗೆಂದರೆ, ಕೇಂದ್ರದ ಮಾಜಿ ಗೃಹಸಚಿವ ಪಿ. ಚಿದಂಬರಂ ಅವರ ಜೊತೆ ಬರ್ಖಾದತ್ ನಡೆಸಿದ ಸಂದರ್ಶನವನ್ನು ಪ್ರಸಾರ ಮಾಡದೇ ಇರಲು ಎನ್‍ಡಿಟಿವಿ ನಿರ್ಧರಿಸಿತು. ‘ಯೋಧರ ರಕ್ತದಿಂದ ಲಾಭ ಎತ್ತಲು ಪ್ರಧಾನಿ ನರೇಂದ್ರ ಮೋದಿಯವರು ಶ್ರಮಿಸುತ್ತಿದ್ದಾರೆ..’ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೂ ಅದು ಕತ್ತರಿ ಪ್ರಯೋಗಿಸಿತು. ಒಂದು ರೀತಿಯಲ್ಲಿ, ಸರಕಾರ ಮತ್ತು ಮಾಧ್ಯಮ ಒಟ್ಟು ಸೇರಿ ದೇಶದಲ್ಲಿ ಸಮೂಹ ಸನ್ನಿಯೊಂದನ್ನು ನಿರ್ಮಿಸಿದ್ದುವು. ಪಾಕಿಸ್ತಾನಿಯರನ್ನು ತೆಗಳುವುದು ಮತ್ತು ಭಾರತೀಯ ಮಿಲಿಟರಿ ಯನ್ನು ಹೊಗಳುವುದು - ಇದರಾಚೆಗೆ ಮೂರನೇ ಧ್ವನಿಯೊಂದಕ್ಕೆ ಆಸ್ಪದವೇ ಇಲ್ಲವೆಂಬ ದಾಷ್ಟ್ರ್ಯವನ್ನು ಪ್ರದರ್ಶಿಸಿದುವು. ಚಿತ್ರನಟಿ ರಮ್ಯ, ಕರಣ್ ಜೋಹರ್, ಕೇಜ್ರಿವಾಲ್, ಅರುಣ್ ಶೌರಿ..ಗಳೆಲ್ಲ ದೇಶದ್ರೋಹಿಗಳಂತೆ ಚಿತ್ರಿತವಾದದ್ದು ಈ ಕಾರಣದಿಂದಲೇ. ಹಾಗಂತ, ಸೇನೆಯ ತ್ಯಾಗ ಮತ್ತು ಪರಿಶ್ರಮಗಳನ್ನು ಕೀಳಂದಾಜಿಸು ವುದು ಇಲ್ಲಿನ ಉದ್ದೇಶವಲ್ಲ. ಯೋಧರು ಗೌರವಾರ್ಹರು. ಅಪಾಯಕಾರಿ ಸಂದರ್ಭಗಳಿಗೆ ಸದಾ ಮುಖಾಮುಖಿಯಾಗಿದ್ದು ಕೊಂಡು ಬದುಕುವವರು. ಆದರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೇನೆಯ ಸ್ಥಾನ-ಮಾನ ಏನು? ಸೇನಾ ಕಾರ್ಯಾಚರಣೆಯನ್ನು ‘ಪ್ರಶ್ನಾತೀತ’ವೆಂಬ ಭಾಷೆಯಲ್ಲಿ ವ್ಯಾಖ್ಯಾನಿಸುವುದರಿಂದ ಆಗುವ ತೊಂದರೆಗಳೇನು? ಇದಕ್ಕೆ ಅತ್ಯಂತ ಉತ್ತಮ ಉದಾಹರಣೆ ಪಾಕಿಸ್ತಾನ. ಇವತ್ತು ಅಲ್ಲಿನ ಸೇನೆ ಪ್ರಜಾತಂತ್ರಕ್ಕೆ ಪರ್ಯಾಯವಾಗಿ ಗುರುತಿಸಿಕೊಂಡಿದೆ. ಅಲ್ಲಿ ಮಿಲಿಟರಿ ಹೇಳಿಯೇ ಕೊನೆಯ ಮಾತು. ಪ್ರಜಾತಂತ್ರದ ದನಿ ಎಷ್ಟು ದುರ್ಬಲ ಎಂಬುದನ್ನು ಪಾಕಿಸ್ತಾನ ಅನೇಕ ಬಾರಿ ಜಗತ್ತಿಗೆ ಮನದಟ್ಟು ಮಾಡಿಕೊಟ್ಟಿದೆ. ಕಾರ್ಗಿಲ್ ಪ್ರಕರಣ ಅದಕ್ಕೆ ಇತ್ತೀಚಿನ ಉದಾಹರಣೆ. ಸೇನೆಯನ್ನು ಪ್ರಶ್ನಾತೀತವಾಗಿ ಮತ್ತು ಅದರ ಕಾರ್ಯಾಚರಣೆಯನ್ನು ವೈಭವೀಕೃತವಾಗಿ ಬಿಂಬಿಸುವುದರಿಂದ ಸಮಾಜದ ದೇಹಭಾಷೆಯಲ್ಲಿ ಇದಮಿತ್ಥಂ ಎಂಬ ನಿಲುವು ರೂಪು ಪಡೆಯುವುದಕ್ಕೆ ಅವಕಾಶ ವಿರುತ್ತದೆ. ಸಮಾಜವೊಂದು ಮಿಲಿಟರೀಕರಣಗೊಳ್ಳುವುದೆಂದರೆ ಹೀಗೆ. ನಿಧಾನಕ್ಕೆ ಜನರು ಮಿಲಿಟರಿ ಭಾಷೆಯಲ್ಲಿ ಮಾತಾಡುತ್ತಾರೆ. ಯೋಧರ ತ್ಯಾಗ-ಬಲಿದಾನಗಳು ಅಗತ್ಯಕ್ಕಿಂತ ಹೆಚ್ಚು ಚರ್ಚೆಗೊಳ ಗಾಗುತ್ತವೆ. ಸೇನೆಯಿಂದಲೇ ನಾವು ಎಂಬ ಹವಾ ಎಲ್ಲೆಡೆ ಧ್ವನಿಸತೊಡಗುತ್ತದೆ. ನಿಜವಾಗಿ, ಉರಿ ಮತ್ತು ಸರ್ಜಿಕಲ್ ಸ್ಟ್ರೈಕ್‍ನ ಸಂದರ್ಭದಲ್ಲಿ ದೇಶದ ಹೆಚ್ಚಿನ ಮಾಧ್ಯಮಗಳ ವರ್ತನೆ ಬಹುತೇಕ ಈ ಧಾಟಿಯಲ್ಲೇ ಇದ್ದುವು. ಹುತಾತ್ಮ ಯೋಧರ ಹೆತ್ತವರನ್ನು ಸ್ಟುಡಿಯೋದಲ್ಲಿ ಕೂರಿಸಿ ಅವು ಚರ್ಚಿಸಿದುವು. ಕಲಾವಿದರನ್ನು ಹೊಣೆಗೇಡಿಗಳಾಗಿ ತೋರಿಸಿದುವು. ಕುಕ್ಕರುಗಾಲಿನಲ್ಲೋ ತೆವಳಿ ಕೊಂಡೋ ಕರ್ತವ್ಯನಿರತರಾದ ಯೋಧರನ್ನು ತೋರಿಸುತ್ತಾ, ಭಿನ್ನ ಧ್ವನಿಗಳ ದೇಶನಿಷ್ಠೆಯನ್ನು ಪ್ರಶ್ನಿಸಿದುವು. ಅಷ್ಟಕ್ಕೂ, ದೇಶ ಸೇವೆ, ದೇಶ ರಕ್ಷಣೆ ಎಂಬ ಗೌರವಗಳೆಲ್ಲ ಕೇವಲ ಯೋಧರಿಗೆ ಮಾತ್ರ ಮೀಸಲಾದುದೇ? ಯೋಧರು ದೇಶರಕ್ಷಣೆಯಲ್ಲಿ ನಿರತರಾಗಿರುವಾಗ ದೇಶ ಸ್ವಚ್ಛತೆಯಲ್ಲಿ ಕೋಟ್ಯಂತರ ಕಾರ್ಮಿಕರು ನಿರತರಾಗಿರುವರಲ್ಲ, ಅವರಿಗೇಕೆ ಈ ಗೌರವಾದರಗಳನ್ನು ನಾವು ಅರ್ಪಿಸುತ್ತಿಲ್ಲ? ಕೇವಲ ದೆಹಲಿಯೊಂದರಲ್ಲೇ ಒಂದೂವರೆ ಲಕ್ಷ ಮ್ಯಾನ್‍ಹೋಲ್‍ಗಳಿವೆ. ಈ ಮ್ಯಾನ್‍ಹೋಲ್‍ಗಳಿಗೆ ಇಳಿದು ಮಲ-ಮೂತ್ರವನ್ನು ಮೈಪೂರ್ತಿ ಅಂಟಿಸಿಕೊಂಡು ಚರಂಡಿ ಸ್ವಚ್ಛ ಮಾಡುವವರು ಬಹುತೇಕ ದಲಿತ-ದಮನಿತ ವರ್ಗದವರು. ಗಡಿಯಲ್ಲಿ ಯೋಧರು ನಿದ್ದೆಗೆಟ್ಟು ಕಾಯುವುದರಿಂದ ನಾವು ಆರಾಮವಾಗಿ ನಿದ್ದೆ ಮಾಡುತ್ತೇವೆ... ಎಂದೆಲ್ಲ ಭಾವುಕಗೊಳಿಸುವವರು ಯಾಕೆ ದಲಿತರು ಮಲ ಎತ್ತುವುದರಿಂದಾಗಿ ನಾವು ಆರಾಮವಾಗಿ ಬದುಕುತ್ತಿದ್ದೇವೆ... ಎಂದು ಹೆಮ್ಮೆಪಟ್ಟುಕೊಳ್ಳುವುದಿಲ್ಲ? ಈ ದೇಶದಲ್ಲಿ ಪ್ರತಿದಿನ 2ರಿಂದ 3 ಮಂದಿ ಮ್ಯಾನ್‍ಹೋಲ್‍ನೊಳಗೆ ಉಸಿರುಗಟ್ಟಿ ಸಾಯುತ್ತಿದ್ದಾರೆ ಎಂದು ಅಧಿಕೃತ ವರದಿಗಳೇ ಹೇಳುತ್ತವೆ. ಮಲ ಎತ್ತುವವರಲ್ಲಿ ಪ್ರತಿ ವರ್ಷ 22,327 ಮಂದಿ ಸಾಯುತ್ತಾರೆ ಎಂದು ದಿ ಹಿಂದೂ ಪತ್ರಿಕೆ (2014 ಎಪ್ರಿಲ್) ವರದಿ ಮಾಡಿದೆ. ಯಾಕೆ ಈ ಸಾವನ್ನು ಹುತಾತ್ಮಗೊಳಿಸಲು ನಮ್ಮ ಮಾಧ್ಯಮಗಳಿಗೆ ಸಾಧ್ಯವಾಗುವುದಿಲ್ಲ? ದೇಶ ಕಾಯುವವ ಹುತಾತ್ಮನಾಗುವುದಾದರೆ ದೇಶ ಸ್ವಚ್ಛಗೊಳಿಸುವವ ಏನು? ಆತನೇಕೆ ಹುತಾತ್ಮನಲ್ಲ? ಅದರಲ್ಲೂ ಯೋಧರಿಗೆ ಹೋಲಿಸಿದರೆ ಈ ಬಡಪಾಯಿಗಳ ಬದುಕು ಅತ್ಯಂತ ಘೋರ. ಈ ಕೆಲಸದಲ್ಲಿ ಸುರಕ್ಷತತೆಗೆ ಅತ್ಯಂತ ಕನಿಷ್ಠ ಗಮನವನ್ನು ಕೊಡಲಾಗುತ್ತದೆ. ಕಾರ್ಮಿಕರು ವಿವಿಧ ರೋಗಗಳನ್ನು ತಗುಲಿಸಿಕೊಂಡು ಒದ್ದಾಡುತ್ತಾರೆ. ಸಾಮಾಜಿಕ ಮಾನ್ಯತೆಯಿಂದಲೂ ಅವರು ವಂಚಿತರಾಗುತ್ತಾರೆ. ದೇಶವನ್ನು ವಾಸಯೋಗ್ಯಗೊಳಿಸುವಲ್ಲಿ ತಮ್ಮ ಬದುಕನ್ನೇ ತೇಯುವ ಈ ವರ್ಗದ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಮಾತಾಡದೇ ಇರುವುದಕ್ಕೆ ಕಾರಣವೇನು? ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ ಸಾವಿಗೀಡಾಗುವ ಕಾರ್ಮಿಕನ ಶವವನ್ನು ಮೆರವಣಿಗೆಯಲ್ಲಿ ಸಾಗಿಸಿದ ಒಂದೇ ಒಂದು ಉದಾಹರಣೆಯಾದರೂ ಈ ದೇಶ ದಲ್ಲಿದೆಯೇ? ಅಂಥ ಕಾರ್ಮಿಕನ ಹೆತ್ತವರನ್ನು ಟಿ.ವಿ. ಸ್ಟುಡಿಯೋದಲ್ಲಿ ಕೂರಿಸಿ ಚರ್ಚಿಸಲಾಗಿದೆಯೇ? ಈ ಕಾರ್ಮಿಕರ ವೇಷದಂತೆ ಯಾವುದಾದರೂ ಟಿ.ವಿ. ನಿರೂಪಕ ತನ್ನ ಉಡುಪನ್ನು ಬದಲಿಸಿ ಕೊಂಡದ್ದಿದೆಯೇ? ಅವರನ್ನು ಹುತಾತ್ಮರೆಂದು ಕರೆದದ್ದಿದೆಯೇ? ತೆವಳಿಕೊಂಡು ಸಾಗುವ ಯೋಧನಂತೆಯೇ ಮ್ಯಾನ್‍ಹೋಲ್‍ನಿಂದ ದುರ್ನಾತ ಬೀರುತ್ತಾ ಹೊರಬರುವ ಕಾರ್ಮಿಕನನ್ನು ತೋರಿಸಿ ‘ಇವರಿಗೆ ನಮ್ಮ ಸಲಾಂ’ ಎಂದು ಹೇಳಿದ್ದಿದೆಯೇ?
       1999ರಲ್ಲಿ ಕಾರ್ಗಿಲ್ ಯುದ್ಧ ನಡೆಯಿತು. ಸುಮಾರು 527 ಮಂದಿ ಭಾರತೀಯ ಯೋಧರು ಸಾವಿಗೀಡಾದರು. ಇಷ್ಟು ಯೋಧರ ಸಾವಿಗೆ ಮಿಲಿಟರೀಕರಣಗೊಂಡ ಪಾಕಿಸ್ತಾನ ಕಾರಣ ಎಂಬುದು ಸ್ಪಷ್ಟ. ಸೇನೆಯು ಪ್ರಶ್ನಾತೀತ ಸ್ಥಾನಕ್ಕೆ ತಲುಪಿಬಿಟ್ಟಾಗ ಆಗಬಹುದಾದ ಅಪಾಯ ಇದು. ಆಗ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಝ ಶರೀಫ್‍ರಿಗೆ ಈ ಕಾರ್ಯಾಚರಣೆಯ ಸುಳಿವೇ ಇರಲಿಲ್ಲ ಎಂದು ಹೇಳಲಾಗುತ್ತದೆ. ಸೇನೆಯ ಮುಖ್ಯಸ್ಥರಾಗಿದ್ದ ಮುಶರ್ರಫ್‍ರವರೇ ಇಡೀ ಕಾರ್ಯಾಚರಣೆಯ ಸ್ವರೂಪವನ್ನು ನಿರ್ಧರಿಸಿದ್ದರು. ನಿಜವಾಗಿ, ಪಾಕ್ ಸೇನೆಯ ಈ ಅನಗತ್ಯ ಯುದ್ಧವನ್ನು ಅಲ್ಲಿನ ಜನರು ಪ್ರಶ್ನಿಸಿರಲಿಲ್ಲ. ಯಾಕೆಂದರೆ, ಒಂದು ಹಂತದ ವರೆಗೆ ಪಾಕ್ ಸಮಾಜ ಮಿಲಿಟರೀಕರಣಗೊಂಡಿದೆ. ಅಲ್ಲಿ ಮಿಲಿಟರಿಯ ಬಗ್ಗೆ ಅನಗತ್ಯ ಉನ್ಮಾದ ಮತ್ತು ಭ್ರಮೆಗಳಿವೆ. ಒಂದು ವೇಳೆ, ಅಮೇರಿಕ ಮತ್ತು ಬ್ರಿಟನ್‍ಗಳಲ್ಲಿ ಸೇನೆಯ ಬಗ್ಗೆ ಇಂಥz್ದÉೂಂದು ಪ್ರಶ್ನಾತೀತ ಮನೋಭಾವ ಇರುತ್ತಿದ್ದರೆ ನಮಗೆ ಇರಾಕ್‍ನ ಅಬೂಗುರೈಬ್ ಜೈಲಿನಲ್ಲಾದ ಕ್ರೌರ್ಯ ಮತ್ತು ಲೈಂಗಿಕ ಹಿಂಸೆಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿತ್ತೇ? ಗ್ವಾಂಟನಾಮೋದ ಶಿಕ್ಷೆ ಹೊರಜಗತ್ತಿಗೆ ತಿಳಿಯುತ್ತಿತ್ತೇ? ನಿಜವಾಗಿ, ಅಬೂಗುರೈಬ್‍ನಲ್ಲಿ ಅಥವಾ ಗ್ವಾಂಟನಾಮೋದಲ್ಲಿ ಹಿಂಸಿಸಿದವರು ಸರ್ವಾಧಿಕಾರಿ ರಾಷ್ಟ್ರದ ಅನಾಗರಿಕ ಯೋಧರಾಗಿರಲಿಲ್ಲ. ಮಾನವ ಹಕ್ಕುಗಳಿಗೆ ಅತೀ ಹೆಚ್ಚು ಗೌರವವನ್ನು ಕೊಡುವ ರಾಷ್ಟ್ರಗಳ ಯೋಧರಾಗಿದ್ದರು. ಆದರೂ ಇಂಥ ರಾಷ್ಟ್ರಗಳ ಯೋಧರಿಂದ ಅತೀ ಹೀನ ಮಾನವ ಹಕ್ಕು ದೌರ್ಜನ್ಯಗಳು ನಡೆದುವು ಮತ್ತು ಅವು ಪ್ರಶ್ನೆಗೂ ಒಳಪಟ್ಟುವು. ಅಮೇರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ತಮ್ಮ ಯೋಧರನ್ನು ಪ್ರಶ್ನಾತೀತ ದೇಶರಕ್ಷಕರು ಎಂದು ಸಮರ್ಥಿಸುತ್ತಿದ್ದರೆ ಇವೆಲ್ಲ ಬೆಳಕಿಗೆ ಬರುತ್ತಿತ್ತೇ? ಅವರಿಗೆ ಶಿಕ್ಷೆಯಾಗುತ್ತಿತ್ತೇ? ಆದ್ದರಿಂದಲೇ, ಪ್ರಜಾತಂತ್ರ ರಾಷ್ಟ್ರದಲ್ಲಿ ಯಾರೂ ಪ್ರಶ್ನಾತೀತರಾಗಬಾರದು ಎಂದು ಒತ್ತಾಯಿಸುವುದು. ಕಾರ್ಗಿಲ್ ಸಮರದಲ್ಲಿ ಸಾವಿಗೀಡಾದ ಯೋಧರನ್ನು ಹುತಾತ್ಮರಾಗಿ ಇಲ್ಲಿ ಗೌರವಿಸಲಾಯಿತು. ಅವರ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ತರಲಾಯಿತು. ಆದರೆ, ಇದಾಗಿ ಎರಡು ವರ್ಷಗಳ ಬಳಿಕ ನಡೆದ ಆಪರೇಶನ್ ಪರಾಕ್ರಮ್‍ನಲ್ಲಿ 798 ಮಂದಿ ಯೋಧರು ಸಾವಿ ಗೀಡಾದರು. ಈ ಸಾವು ಯುದ್ಧದಿಂದ ಸಂಭವಿಸಿದ್ದಲ್ಲ. ಪಾರ್ಲಿ ಮೆಂಟ್‍ನ ಮೇಲೆ ನಡೆದ ಆಕ್ರಮಣದ ಬಳಿಕ ವಾಜಪೇಯಿ ನೇತೃತ್ವದ ಸರಕಾರವು ಭಾರತ-ಪಾಕ್ ಗಡಿಯುದ್ದಕ್ಕೂ ಆಪರೇಶನ್ ಪರಾಕ್ರಮ್ ಎಂಬ ಹೆಸರಲ್ಲಿ ಸೇನೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿತು. ಅದನ್ನು ಅತ್ಯಂತ ಕಠಿಣ ಮತ್ತು ತಪ್ಪಾದ ಕಾರ್ಯಾಚರಣೆ ಎಂದು ಹೇಳಲಾಗುತ್ತದೆ. ವರ್ಷದ ವರೆಗೆ ನಡೆದ ಈ ಕಾರ್ಯಾ ಚರಣೆಯಲ್ಲಿ ಯೋಧರು ಅಪಘಾತ, ಮದ್ದುಗುಂಡುಗಳನ್ನು ಹುದು ಗಿಸಿಡುವಲ್ಲಿ ಆದ ವೈಫಲ್ಯ, ದುರ್ಬಲ ಶಸ್ತ್ರಾಸ್ತ್ರಗಳು ಇತ್ಯಾದಿ ಇತ್ಯಾದಿಗಳಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಮೃತಪಟ್ಟರು. ಆದರೆ ಈ ಯೋಧರಿಗೆ ಹುತಾತ್ಮತೆಯ ಪಟ್ಟ ಸಿಗಲಿಲ್ಲ. ಮೆರವಣಿಗೆಯ ಭಾಗ್ಯವೂ ಸಿಗಲಿಲ್ಲ. ಯುದ್ಧವಲ್ಲದ ಈ ಕಾರ್ಯಾಚರಣೆಯಲ್ಲಿ ಕಾರ್ಗಿಲ್ ಯುದ್ಧಕ್ಕಿಂತ ಹೆಚ್ಚು ಯೋಧರು ಸಾವಿಗೀಡಾದರೂ ಕಾರ್ಗಿಲ್ ಯಾಕೆ ವೈಭವೀಕರಣಗೊಂಡಿತು? ಆಪರೇಶನ್ ಪರಾ ಕ್ರಮ್‍ನ ಯೋಧರು ಯಾಕೆ ಅವಗಣನೆಗೆ ಗುರಿಯಾದರು? ವ್ಯವಸ್ಥೆಯ ತಪ್ಪುಗಳು ಬಹಿರಂಗಕ್ಕೆ ಬರಬಾರದೆಂಬ ನೆಲೆಯಲ್ಲಿ  ಆಪರೇಶನ್ ಪರಾಕ್ರಮ್‍ನ ಸಾವುಗಳನ್ನು ಮುಚ್ಚಿಡಲಾಯಿತೇ? ಅಂದರೆ, ಯೋಧರನ್ನು ಹುತಾತ್ಮಗೊಳಿಸುವುದೂ ಗೊಳಿಸದಿರುವುದೂ ಎರಡೂ ವ್ಯವಸ್ಥೆಯ ಅಣತಿಯಂತೆ ನಡೆಯುತ್ತಿದೆ ಎಂದೇ ಇದರರ್ಥವಲ್ಲವೇ? ಮಾಧ್ಯಮಗಳೇಕೆ ಈ ಬಗ್ಗೆ ಧ್ವನಿ ಎತ್ತಲಿಲ್ಲ? ಬಹುಶಃ, ಸೇನೆಯು ಪ್ರಶ್ನಾತೀತ ಎಂಬ ಮನೋಭಾವ ಹೀಗೆ ಮಾಡಿರಬಹುದೇ? ಈ ನಿಲುವನ್ನೇ ವ್ಯವಸ್ಥೆ ದುರುಪಯೋಗಪಡಿಸಿಕೊಂಡಿತೇ?
       ಅಂದಹಾಗೆ, ದೇಶ ಕಾಯುವುದೊಂದೇ ದೇಶಸೇವೆಯ ಕೆಲಸವಲ್ಲ ಅಥವಾ ಚರಂಡಿ ಸ್ವಚ್ಛ ಮಾಡುವುದೇ ಸರ್ವೋಚ್ಚವಲ್ಲ. ಯಾವ ಕೆಲಸವನ್ನೂ ಶ್ರೇಷ್ಠ-ಕನಿಷ್ಠ ಎಂದು ವಿಭಜಿಸಬೇಕಾಗಿಲ್ಲ. ಎಲ್ಲವೂ ಆಯಾ ಕ್ಷೇತ್ರದಲ್ಲಿ ಶ್ರೇಷ್ಠವೇ. ಎಲ್ಲ ಕರ್ತವ್ಯನಿರತ ಸಾವುಗಳೂ ಆಯಾ ಕ್ಷೇತ್ರಕ್ಕೆ ಸಂಬಂಧಿಸಿ ಪ್ರಾಮುಖ್ಯವೇ. ಯೋಧರು ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲಿ ಕರ್ತವ್ಯನಿರತ ರಾಗುತ್ತಾರೆ ಎಂಬ ಕಾರಣಕ್ಕಾಗಿ ಅವರು ಪ್ರಶ್ನಾತೀತರಾಗಬಾರದು. ಬರಿದೇ ವೈಭವೀಕರಣಕ್ಕೂ ಒಳಗಾಗಬಾರದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲರೂ ಪ್ರಶ್ನಾರ್ಹರು ಮತ್ತು ಎಲ್ಲರೂ ಸಮಾನರು. ಇಲ್ಲದಿದ್ದರೆ ಭಾರತವೂ ಪಾಕಿಸ್ತಾನವಾದೀತು.

Friday, October 21, 2016

ಮುಸ್ಲಿಮರನ್ನೇ ಪ್ರಣಾಳಿಕೆಯಾಗಿ ಮಾಡಿಕೊಂಡಿರುವವರ ಬಗ್ಗೆ..

         ಭಾರತೀಯ ಜನತಾ ಪಕ್ಷವು 2014ರಲ್ಲಿ ಬಿಡುಗಡೆಗೊಳಿಸಿದ ಚುನಾವಣಾ ಪ್ರಣಾಳಿಕೆಯ ಕೆಲವು ಮುಖ್ಯ ಅಂಶಗಳು ಹೀಗಿವೆ.
1.    ಕಪ್ಪು ಹಣವನ್ನು ಮರಳಿ ತರುವುದು.
2.    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಎಲ್ಲ ಪ್ರಯತ್ನಗಳನ್ನು ನಡೆಸುವುದು.
3.    ಪರಿಚ್ಛೇದ 370ನ್ನು ರದ್ದುಪಡಿಸುವುದು.
4.    ಬೆಲೆ ಸ್ಥಿರತೆಗೆ ಫಂಡ್ ತಯಾರಿಸುವುದು.
5.    ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ6.    ರೈತ ಪರ ಯೋಜನೆ
7.    ಸ್ವಉದ್ಯೋಗಕ್ಕೆ ಉತ್ತೇಜನ
8.    ಭ್ರಷ್ಟಾಚಾರಕ್ಕೆ ತಡೆ
ಇವು ಮತ್ತು ಇಂಥ ಇನ್ನಷ್ಟು ಭರವಸೆಗಳುಳ್ಳ ಪ್ರಣಾಳಿಕೆಯನ್ನು ಮುಂದಿಟ್ಟು ಬಿಜೆಪಿ 2014ರ ಲೋಕಸಭಾ ಚುನಾವಣೆಯನ್ನು ಎದುರಿಸಿತು. ಗೆಲುವು ದಾಖಲಿಸಿತು. ಮಾತ್ರವಲ್ಲ, ಇವತ್ತು ಆ ಗೆಲುವಿಗೆ ಸುಮಾರು ಎರಡೂವರೆ ವರ್ಷಗಳು ಸಂದುವು. ಈ ಎರಡೂವರೆ ವರ್ಷಗಳಲ್ಲಿ ಅದರ ಪ್ರಣಾಳಿಕೆಯ ವಿಷಯಗಳು ಎಷ್ಟಂಶ ಚರ್ಚೆಗೆ ಒಳಗಾಗಿವೆ? ಟಿ.ವಿ. ಚಾನೆಲ್‍ಗಳ ಪ್ರೈಮ್ ಟೈಮ್‍ನಲ್ಲಿ ಮತ್ತು ಪತ್ರಿಕೆಗಳ ಸಂಪಾದಕೀಯ ಪುಟದಲ್ಲಿ ಕಪ್ಪು ಹಣದ ಚರ್ಚೆ ಹೇಗೆ ನಡೆದಿದೆ? 100 ದಿನಗಳಲ್ಲಿ ಕಪ್ಪು ಹಣವನ್ನು ಮರಳಿಸುತ್ತೇನೆ ಅಂದ ಪ್ರಧಾನಿಯವರ ಮಾತಿಗೆ 1000 ದಿನಗಳು ತುಂಬುತ್ತಿದ್ದರೂ ಅದೊಂದು ಗಂಭೀರ ಇಶ್ಯೂ ಆಗುವ ಸಾಮರ್ಥ್ಯವನ್ನು ಈವರೆಗೂ ಪಡಕೊಂಡಿಲ್ಲವಲ್ಲ, ಏಕೆ? ರಾಮಮಂದಿರ ನಿರ್ಮಾಣದ ವಿಷಯ ಎಲ್ಲಿಯ ವರೆಗೆ ಮುಟ್ಟಿದೆ? ಚುನಾವಣೆಯಲ್ಲಿ ಗೆಲುವು ದಾಖಲಿಸಿದ ಬಳಿಕ ಬಿಜೆಪಿಯ ಯಾವೊಬ್ಬ ಹೊಣೆಗಾರ ವ್ಯಕ್ತಿಯೂ ರಾಮಮಂದಿರ ಎಂಬ ಪದವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದೇ ಇರುವುದರ ಹಿನ್ನೆಲೆ ಏನು? ಆಹಾರ ವಸ್ತುಗಳ ಬೆಲೆಯಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಫಂಡ್ ತಯಾರಿಸುತ್ತೇವೆಂದು ಹೇಳಿ ಎರಡೂವರೆ ವರ್ಷಗಳಾದುವಲ್ಲ, ಏನಾಯ್ತು ಸ್ವಾಮಿ ಎಂದು ಯಾಕೆ ಯಾರೂ ಪ್ರಶ್ನಿಸುತ್ತಿಲ್ಲ? ಎಲ್ಲಿದೆ ಫಂಡ್, ಎಲ್ಲಿದೆ ಸ್ಥಿರತೆ ಎಂದು ಪ್ರಶ್ನಿಸಬಹುದಲ್ಲ? ಯಾಕೆ ಸುಳ್ಳು ಭರವಸೆಯನ್ನು ಕೊಡುತ್ತೀರಿ ಎಂದು ತಕರಾರು ತೆಗೆಯಬಹುದಲ್ಲ? ರಾಷ್ಟ್ರೀಯ ಏಕ ಕೃಷಿ ಮಾರುಕಟ್ಟೆ ಎಂಬುದು ಯಾವ ದೇಶದಲ್ಲಿ ಜಾರಿಯಾಗಿದೆ ಎಂದು ಹೇಳುವಿರಾ? ಕೃಷಿ ಭೂಮಿಯನ್ನು ಕಾರ್ಪೋರೇಟ್ ಸಂಸ್ಥೆಗಳಿಗೆ ಮಾರುತ್ತಿರುವ ನೀತಿಯನ್ನೇ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ರೈತಪರ ಯೋಜನೆ ಎಂದು ಹೇಳಿರಬಹುದೇ? ಅಲ್ಲ ಎಂದಾದರೆ, ಈ ಎರಡೂವರೆ ವರ್ಷಗಳಲ್ಲಿ ಜಾರಿಗೊಂಡ ರೈತಪರ ಯೋಜನೆಗಳು ಏನೆಲ್ಲ? ಸ್ಕಿಲ್ ಇಂಡಿಯಾ ಎಂಬ ಘೋಷಣೆಯ ಹೊರತಾಗಿ ಉದ್ಯೋಗ ರಂಗದಲ್ಲಿ ಆಗಿರುವ ಬದಲಾವಣೆಗಳು ಏನೇನು? ಸ್ವ ಉದ್ಯೋಗ ಕ್ಷೇತ್ರ 2014ಕ್ಕಿಂತ ಹಿಂದೆ ಮತ್ತು ಈಗ ಹೇಗಿದೆ?
        ಪ್ರಶ್ನೆಗಳು ಇನ್ನೂ ಇವೆ. ಅದೇ ವೇಳೆ, ಈ ಎರಡೂವರೆ ವರ್ಷ ಗಳ ಅವಧಿಯಲ್ಲಿ ಗಂಭೀರ ಚರ್ಚೆಗೆ ಒಳಗಾದ ವಿಷಯಗಳನ್ನೊಮ್ಮೆ ಅವಲೋಕಿಸಿ. ಗೋವು, ಪಾಕಿಸ್ತಾನ, ಝಾಕಿರ್ ನಾೈಕ್, ಮತಾಂತರ, ಬಿರಿಯಾಣಿ, ಸೂರ್ಯ ನಮಸ್ಕಾರ, ಭಯೋತ್ಪಾದನೆ, ಕಾಶ್ಮೀರ, ಯೋಗ, ವಿದೇಶ ಪ್ರವಾಸ, ಬುರ್ಖಾ, ತಲಾಕ್, ಕೋಮುಗಲಭೆ, ತೈಲ ಬೆಲೆ, ಸರ್ಜಿಕಲ್ ಸ್ಟ್ರೈಕ್ .. ಇತ್ಯಾದಿ ಇತ್ಯಾದಿ.
     ಆದ್ದರಿಂದಲೇ ಕೆಲವು ಅನುಮಾನಗಳೂ ಹುಟ್ಟಿಕೊಳ್ಳುತ್ತವೆ. ಪ್ರಣಾಳಿಕೆಯ ವಿಷಯಗಳ ಮೇಲೆ ಜನರ ಗಮನ ಹರಿಯದಂತೆ ತಡೆಯುವ ಹುನ್ನಾರವೊಂದು ನಡೆದಿದೆಯೇ? ಅದರ ಭಾಗವೇ ಈ ಚರ್ಚೆಗಳೆಲ್ಲ? ಬಿಜೆಪಿಯ ಪ್ರಣಾಳಿಕೆಯ ಆದ್ಯತಾ ಪಟ್ಟಿಯಲ್ಲಿ ಗೋವು ಇಲ್ಲದಿದ್ದರೂ ಸರಿಸುಮಾರು ಈ ಎರಡೂವರೆ ವರ್ಷಗಳುದ್ದಕ್ಕೂ ಗೋವು ಸದಾ ಚರ್ಚಾ ವಸ್ತುವಾದುದಕ್ಕೆ ಕಾರಣ ಏನು? ವಿದೇಶಕ್ಕೆ ಗೋಮಾಂಸವನ್ನು ರಫ್ತು ಮಾಡುತ್ತಲೇ ಮತ್ತು ರಫ್ತಿನ ಪ್ರಮಾಣವನ್ನು ಏರಿಸುತ್ತಲೇ ದೇಶದೊಳಗೆ ಮಾಂಸ ಸೇವನೆ ಮತ್ತು ಸಾಗಾಟದ ಹೆಸರಲ್ಲಿ ಭಾವೋದ್ರೇಕದ ಹೇಳಿಕೆಗಳು, ಹಲ್ಲೆಗಳು, ಹತ್ಯೆಗಳು ನಡೆಯುತ್ತಿರುವುದರ ಹಿನ್ನೆಲೆ ಯಾವುದು? ಇವೆಲ್ಲ ಅನಿರೀಕ್ಷಿತ ಮತ್ತು ಅನಿರ್ಧರಿತ ವಿದ್ಯಮಾನಗಳೋ ಅಥವಾ ಪೂರ್ವನಿರ್ಧರಿತ ತಂತ್ರಗಳೋ? ಈ ಎರಡೂವರೆ ವರ್ಷಗಳ ಬಹುತೇಕ ಅವಧಿ ಕಳೆದುಹೋಗಿರುವುದೇ ಮುಸ್ಲಿಮ್ ಸಂಬಂಧಿ ಇಶ್ಯೂಗಳ ಮೇಲೆ. ಇದೀಗ ತಲಾಕ್ ಮತ್ತು ಸಮಾನ ನಾಗರಿಕ ಸಂಹಿತೆಗಳು ಚರ್ಚಾ ವ್ಯಾಪ್ತಿಗೆ ಬಂದಿವೆ. ತಲಾಕ್‍ನ ಬಗ್ಗೆ ಚರ್ಚೆ ಮಾಡುವಾಗಲೆಲ್ಲ 2011ರ ಜನಗಣತಿಯ ವರದಿಯನ್ನು ಚರ್ಚಾಪಟುಗಳು ಪುರಾವೆಯಾಗಿ ಮುಂದಿಡುವುದಿದೆ. ಅದೂ ಅದರ ಅರ್ಧ ಭಾಗವನ್ನು ಮಾತ್ರ. 2011ರ ಜನಗಣತಿ ವರದಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 2015ರ ಆಗಸ್ಟ್ ನಲ್ಲಿ ಬಿಡುಗಡೆಗೊಳಿಸಿತು. ಇದಾದ ಒಂದು ವಾರದ ಬಳಿಕ ಉತ್ತರ ಪ್ರದೇಶದ ಸಾಯಿರಾ ಬಾನು ಎಂಬ ಮಹಿಳೆ ತ್ರಿವಳಿ ತಲಾಕನ್ನು ಪ್ರಶ್ನಿಸಿ ಸುಪ್ರೀಮ್ ಕೋರ್ಟ್‍ಗೆ ಹೋದರು. ಇದು ತಲಾಕ್ ಪದ್ಧತಿಯನ್ನು ಮಹಿಳಾ ವಿರೋಧಿ ಎಂಬಂತೆ ವ್ಯಾಖ್ಯಾನಿಸುವುದಕ್ಕೆ ಕಾರಣವೂ ಆಯಿತು. ಈ ವ್ಯಾಖ್ಯಾನಕ್ಕೆ ಪೂರಕವಾಗಿ ಅನೇಕರು 2011ರ ಜನಗಣತಿ ವರದಿಯ ಅರ್ಧ ಭಾಗವನ್ನು ಉಲ್ಲೇಖಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ, ಪ್ರತಿ ಸಾವಿರ ಮುಸ್ಲಿಮ್ ಮಹಿಳೆಯರಲ್ಲಿ 5.63 ಮಂದಿ ವಿಚ್ಛೇದಿತೆಯರಾಗಿದ್ದಾರೆ. 2001ರಲ್ಲಿ ಈ ಅನುಪಾತ ಸಾವಿರಕ್ಕೆ 5.3 ಇತ್ತು. ಅದೇವೇಳೆ, 2011ರ ಜನಗಣತಿಯಂತೆ ಹಿಂದೂಗಳಲ್ಲಿ ಪ್ರತೀ ಸಾವಿರಕ್ಕೆ 1.8 ಮಂದಿ ಮಹಿಳೆಯರು ವಿಚ್ಛೇದನ ಪಡೆದು ಕೊಂಡಿದ್ದಾರೆ. ಈ ಅಂಕಿ-ಸಂಖ್ಯೆಗಳನ್ನು ಪರಸ್ಪರ ಹೋಲಿಸಿದರೆ (5.63 ಮತ್ತು 1.8) ಮುಸ್ಲಿಮರಲ್ಲಿ ವಿಚ್ಛೇದನ ಪ್ರಮಾಣ ಹೆಚ್ಚು ಇದೆ ಎಂದು ವಾದಿಸುವುದಕ್ಕೆ ಕಷ್ಟವೇನೂ ಇಲ್ಲ. ನಿಜ ಏನೆಂದರೆ, ಹಿಂದೂ ಸಮುದಾಯದಲ್ಲಿ ವಿಚ್ಛೇದನದ ಅನುಪಾತ 1.8 ಇರುವಾಗ ಪತಿಯಿಂದ ಪ್ರತ್ಯೇಕವಾಗಿ ಬದುಕುವ ಮಹಿಳೆಯರ ಸಂಖ್ಯೆ ಸಾವಿರಕ್ಕೆ 5.5ರಷ್ಟು ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪತ್ನಿ ಜಶೋದಾ ಬೆನ್ ಅವರೇ ಇದಕ್ಕೆ ಅತ್ಯುತ್ತಮ ಉದಾಹರಣೆ. ನರೇಂದ್ರ ಮೋದಿಯವರ ಪತ್ನಿಯಾಗಿದ್ದರೂ ಜಶೋದಾ ಬೆನ್ ಇವತ್ತು ಒಂಟಿ. ಅವರ ನಡುವೆ ಯಾವ ಸಂಬಂಧವೂ ಇಲ್ಲ. ಪತಿ ಮತ್ತು ಪತ್ನಿ ಎಂಬ ನೆಲೆಯಲ್ಲಿ ಇರಬೇಕಾದ ಯಾವ ಸಂಬಂಧವೂ ಹೀಗೆ ಪ್ರತ್ಯೇಕವಾಗಿ ಬದುಕುವವರ ನಡುವೆ ಇರುವುದಿಲ್ಲ. ಮತ್ತೇಕೆ ಅವರು ವಿಚ್ಛೇದನ ತೆಗೆದುಕೊಳ್ಳುತ್ತಿಲ್ಲ ಎಂದರೆ, ಕುಟುಂಬ ನ್ಯಾಯಾಲಯಗಳಲ್ಲಿ ಪ್ರಕರಣ ನಿರೀಕ್ಷೆಗೆ ತಕ್ಕಂತೆ ಇತ್ಯರ್ಥವಾಗುತ್ತಿಲ್ಲ. ಅಸಂಖ್ಯ ವಿಚ್ಛೇದನ ಕೇಸುಗಳು ಇವತ್ತು ಕುಟುಂಬ ನ್ಯಾಯಾಲಯಗಳಲ್ಲಿ ಧೂಳು ಹಿಡಿದು ಕೂತಿವೆ. ಬೆಂಗಳೂರು, ದೆಹಲಿ, ಮುಂಬೈ, ಕೊಲ್ಕತ್ತಾ, ಲಕ್ನೋ ಮುಂತಾದ ನಗರಗಳಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದವರ ಸಂಖ್ಯೆ ಎಷ್ಟಿದೆಯೆಂದರೆ, ಅರ್ಜಿ ಸಲ್ಲಿಸಿದವರ ಯೌವನ ಕಳೆದು ಮುಪ್ಪಾದರೂ ಇತ್ಯರ್ಥವಾಗದು ಅನ್ನುವಷ್ಟು. ಕಳೆದ 5 ವರ್ಷಗಳಲ್ಲಿ ವಿಚ್ಛೇದನಕ್ಕಾಗಿ ಸಲ್ಲಿಸಲಾದ ಅರ್ಜಿಗಳಲ್ಲಿ ಎರಡು ಪಟ್ಟು ಹೆಚ್ಚಳವಾಗಿದೆ. 5 ವರ್ಷಗಳ ಹಿಂದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದವರ ಪ್ರಾಯ ಮತ್ತು ಈಗ ಸಲ್ಲಿಸುವವರ ಪ್ರಾಯಗಳ ನಡುವಿನ ಅಂತರವೂ ಕುಸಿಯುತ್ತಿದೆ. 5 ವರ್ಷಗಳ ಹಿಂದೆ 25ರಿಂದ 35 ವರ್ಷಗಳ ಒಳಗಿನ 70% ಮಹಿಳೆಯರು ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದರು. ಇದೀಗ 85% ಮಹಿಳೆಯರು ಮದುವೆಯಾಗಿ ಕೇವಲ 3 ವರ್ಷಗಳೊಳಗೇ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ವಿಶೇಷ ಏನೆಂದರೆ, ತಲಾಕನ್ನು ಪ್ರಶ್ನಿಸುವವರು, ವಿಚ್ಛೇದನಕ್ಕೆ ಅರ್ಜಿ ಹಾಕದೇ ಜಶೋದಾ ಬೆನ್‍ರಂತೆ ಪ್ರತ್ಯೇಕವಾಗಿ ಬದುಕುವವರನ್ನು ವಿಚ್ಛೇದಿತರ ಸಂಖ್ಯೆಯೊಂದಿಗೆ ಸೇರಿಸುವುದನ್ನು ಜಾಣತನದಿಂದ ತಪ್ಪಿಸಿಕೊಳ್ಳುತ್ತಾರೆ. ನಿಜವಾಗಿ, ವಿಚ್ಛೇದನ ಪ್ರಕ್ರಿಯೆ ದೀರ್ಘವಾಗಿರುವುದರಿಂದಾಗಿ ಪ್ರತ್ಯೇಕ ವಾಸವನ್ನು ಮಹಿಳೆಯರು ಆಯ್ದುಕೊಂಡಿರುವರೇ ಹೊರತು ದಾಂಪತ್ಯ ಸಂಬಂಧವನ್ನು ಉಳಿಸಿಕೊಂಡು ಹೋಗುವುದಕ್ಕಲ್ಲ. ಆದ್ದರಿಂದ ಹಿಂದೂ ಸಮುದಾಯದಲ್ಲಿರುವ ವಿಚ್ಛೇದಿತೆಯರು ಮತ್ತು ಪ್ರತ್ಯೇಕವಾಗಿ ವಾಸಿಸುವವರ ಸಂಖ್ಯೆಯನ್ನು ಒಟ್ಟು ಸೇರಿಸಬೇಕಾಗುತ್ತದೆ. ಅದು ಒಟ್ಟು ಸೇರಿದರೆ 1.8+5.5=7.3 ಆಗುತ್ತದೆ. 2001ರಲ್ಲಿ ಹೀಗೆ ಪ್ರತ್ಯೇಕವಾಗಿ ಬದುಕುವುದನ್ನು ಆಯ್ಕೆ ಮಾಡಿಕೊಂಡ ಹಿಂದೂ ಮಹಿಳೆಯರ ಅನುಪಾತ ಸಾವಿರಕ್ಕೆ 4.7 ಇದ್ದರೆ 2011ಕ್ಕಾಗುವಾಗ ಇದು 5.5ಕ್ಕೆ ಹೆಚ್ಚಳವಾಯಿತೆಂಬುದನ್ನೂ ಇಲ್ಲಿ ಗಮನಿಸಬೇಕು. ಇನ್ನು, ಈ ಅಂಕಿ-ಸಂಖ್ಯೆಗಳು ಸರಕಾರದ ಜನಗಣತಿ ಲೆಕ್ಕಕ್ಕೆ ಸಿಕ್ಕಂತವು. ಸಿಗದೇ ಇರುವ ಇಂಥ ಪ್ರಕರಣಗಳನ್ನೂ ಸೇರಿಸಿದರೆ ಇಂಥ ಅಂಕಿ-ಸಂಖ್ಯೆಗಳಲ್ಲಿ ದೊಡ್ಡ ವ್ಯತ್ಯಾಸ ಉಂಟಾಗಬಹುದು. ಅಲ್ಲದೇ, ಪ್ರತ್ಯೇಕವಾಗಿ ಬದುಕುವುದನ್ನು ಹೆಚ್ಚಿನ ಮಹಿಳೆಯರು ಬಹಿರಂಗಪಡಿಸುವುದೂ ಇಲ್ಲ. ನಿಜವಾಗಿ, ತ್ರಿವಳಿ ತಲಾಕ್ ವ್ಯಾಪಕ ಮಟ್ಟದಲ್ಲಿ ಜಾರಿಯಲ್ಲಿದೆಯೆಂದು ಬಿಂಬಿಸುವವರನ್ನು ಪ್ರಶ್ನಿಸುವ ವಿವರಗಳಿವು. ಒಂದು ವೇಳೆ, ತ್ರಿವಳಿ ತಲಾಕ್‍ನಿಂದ ಮುಸ್ಲಿಮ್ ಸಮುದಾಯದಲ್ಲಿ ಭಾರೀ ವಿಚ್ಛೇದನ ಪ್ರಕರಣಗಳಾಗುತ್ತಿವೆ ಎಂಬ ವಾದ ನಿಜ ಎಂದಾಗಿರುತ್ತಿದ್ದರೆ, ವಿಚ್ಛೇದನ ಪ್ರಕರಣಗಳಲ್ಲಿ ಹಿಂದೂ ಸಮುದಾಯವನ್ನು ಮೀರಿಸುವ ರೀತಿಯಲ್ಲಿ ಏರಿಕೆ ಕಾಣಬೇಕಿತ್ತು. ಅದಾಗಿಲ್ಲ ಎಂಬುದೇ ಅದರ ಪಾಲನೆ ತೀರಾ ತೀರಾ ಕಡಿಮೆ ಪ್ರಮಾಣದಲ್ಲಿದೆ  ಎಂಬುದಕ್ಕೆ ಪುರಾವೆಯಾಗಿದೆ. ಹಾಗಂತ, ತ್ರಿವಳಿ ತಲಾಕ್ ಬೇಕು ಅಥವಾ ಅದುವೇ ಸರಿ ಎಂಬುದು ಇಲ್ಲಿನ ವಾದವಲ್ಲ. ಒಂದೇ ಉಸಿರಿಗೆ ತಕ್ಷಣದ ಪ್ರತಿಕ್ರಿಯೆಯಾಗಿ ಹೇಳಿಬಿಡುವ ತ್ರಿವಳಿ ತಲಾಕ್ ಅನ್ನು ಪವಿತ್ರ ಕುರ್‍ಆನ್ ಪ್ರಸ್ತುತಪಡಿಸಿಲ್ಲ. ತಲಾಕ್ ಎಂಬುದು ಒಂದು ಪ್ರಕ್ರಿಯೆಯ ಭಾಗ. ಅದರಲ್ಲಿ ವಿಚಾರಣೆ, ಆಪ್ತ ಸಮಾಲೋಚನೆ, ಸಮಯಾವಕಾಶ ಎಲ್ಲವೂ ಇದೆ. ಮುಸ್ಲಿಮ್ ಸಮುದಾಯದಲ್ಲಿ ಈ ವಿಧಾನವನ್ನು ಬಿಟ್ಟು ತ್ರಿವಳಿ ತಲಾಕ್ ಹೇಳುವ ಪ್ರಕರಣಗಳು ಹತ್ತು ವರ್ಷಗಳ ಹಿಂದಕ್ಕೆ ಹೋಲಿಸಿದರೆ ಇವತ್ತು ಇಲ್ಲ ಅನ್ನುವಷ್ಟು ಕಡಿಮೆ. ಹೀಗಿದ್ದೂ, ತಲಾಕ್ ದೇಶದ ಮುಖ್ಯ ಇಶ್ಯೂ ಆಗುವುದರ ಹಿನ್ನೆಲೆ ಏನು? ಅಲ್ಲದೇ, ಇಸ್ರೇಲ್, ಫಿಲಿಪ್ಪೀನ್ಸ್, ಮಲೇಶ್ಯಾ, ಸಿಂಗಾಪುರ, ಶ್ರೀಲಂಕಾ, ಬ್ರಿಟನ್‍ಗಳಲ್ಲಿ ವೈಯಕ್ತಿಕ ನಿಯಮಗಳಿಗೆ ಅನುಮತಿ ಇರುವಾಗ, ಕೇಂದ್ರ ಸರಕಾರವು (ಕಾನೂನು ಆಯೋಗವು) ಸಮಾನ ನಾಗರಿಕ ಸಂಹಿತೆಯ ಕುರಿತು ಪ್ರಶ್ನಾವಳಿಯನ್ನು ಬಿಡುಗಡೆಗೊಳಿಸಿರುವುದರ ಉದ್ದೇಶ ಏನು? ತಲಾಕ್, ಸಮಾನ ನಾಗರಿಕ ಸಂಹಿತೆಯಂತಹ  ಚರ್ಚೆಯನ್ನು ಒಂದಷ್ಟು ಸಮಯ ಚಾಲ್ತಿಯಲ್ಲಿರಿಸಿ ಪ್ರಣಾಳಿಕೆಯತ್ತ ಜನರ ಗಮನಹರಿಯದಂತೆ ತಡೆಯುವುದಕ್ಕಾಗಿಯೇ? ಮುಸ್ಲಿಮರನ್ನು ಗುರಿಯಾಗಿಸಿದಷ್ಟೂ ಹಿಂದೂ ಧ್ರುವೀ ಕರಣ ನಡೆಯುತ್ತದೆ. ಈ ಹಿಂದೆ ಕಾಂಗ್ರೆಸ್ ಸರಕಾರವು ಸಾಚಾರ್ ಆಯೋಗ, ರಂಗನಾಥ್ ಆಯೋಗ, ಆ ಆಯೋಗ, ಈ ಆಯೋಗ ಎಂದು ಮುಸ್ಲಿಮರನ್ನು ಆಟವಾಡಿಸಿತು. ಇದೀಗ ಬಿಜೆಪಿಯು ಅದೇ ಆಟವನ್ನು ಇನ್ನೊಂದು ರೀತಿಯಲ್ಲಿ ಹೆಚ್ಚು ಕ್ರೂರವಾಗಿ ಆಡುತ್ತಿದೆ. ಈ ಆಟಕ್ಕೆ ಎರಡೂ ಪಕ್ಷಗಳು ನೀಡಿರುವ ಹೆಸರು ಮುಸ್ಲಿಮ್ ಸಬಲೀಕರಣ. ಆದರೆ ನಿಜಕ್ಕೂ ಇದು ಸಬಲೀಕರಣವೇ? ಅಲ್ಲ, ದುರ್ಬಲೀಕರಣ ಮತ್ತು ಯೋಜಿತ ದಮನವೇ?
        ಸಾಯಿರಾ ಬಾನು ಪ್ರಕರಣದ ನೆಪದಲ್ಲಿ ತ್ರಿವಳಿ ತಲಾಕನ್ನು ಜಜ್ಜಿ ಜಜ್ಜಿ ವಿರೂಪಗೊಳಿಸಿರುವವರಿಗೆ, ಅತ್ತ ತಲಾಕನ್ನೂ ಪಡೆಯದೇ ಇತ್ತ ಪತಿಯ ಸ್ವೀಕಾರಕ್ಕೂ ಒಳಗಾಗದೇ ಗುಜರಾತ್‍ನ ಎಲ್ಲೋ ಮೂಲೆಯಲ್ಲಿ ನಿಟ್ಟುಸಿರು ಬಿಡುತ್ತಿರುವ ಜಶೋದಾ ಬೆನ್ ಕಾಣುತ್ತಿಲ್ಲವಲ್ಲ, ಅವರನ್ನು ಕ್ರೌರ್ಯಮುಕ್ತಗೊಳಿಸಲು ಕಾನೂನು ರಚಿಸಬೇಕೆಂದು ವಾದಿಸುತ್ತಿಲ್ಲವಲ್ಲ, ಇದುವೇ ಅರ್ಥವಾಗುತ್ತಿಲ್ಲ!


Thursday, October 13, 2016

ಸರ್ಜಿಕಲ್ ಸ್ಟ್ರೈಕ್ ಹೇಳಿಕೊಟ್ಟ ಜರ್ನಲಿಸಂ ಪಾಠ

       ಟೈಮ್ಸ್ ನೌ ಚಾನೆಲ್‍ನಲ್ಲಿ ಅಕ್ಟೋಬರ್ 3ರಂದು ಪ್ರಸಾರವಾದ ನ್ಯೂಸ್ ಹವರ್ (News Hour) ಕಾರ್ಯಕ್ರಮದಿಂದ ಹಿಂದಿ ಸಿನಿಮಾ ನಟಿ ಮಿತಾ ವಶಿಷ್ಟ್ ಮಧ್ಯದಲ್ಲೇ ಎದ್ದು ಹೋದರು. ‘ಪಾಕ್ ಕಲಾವಿದರನ್ನು ಬಹಿಷ್ಕರಿಸಬೇಕು #PakArtistBanned’.. ಎಂಬ ಆಗ್ರಹದೊಂದಿಗೆ ನಡೆದ ಕಾರ್ಯಕ್ರಮ ಅದು. ತನ್ನ ವಾದವನ್ನು ಸಮರ್ಥಿಸುವುದಕ್ಕಾಗಿ ನಿರೂಪಕ ಅರ್ನಾಬ್ ಗೋಸ್ವಾಮಿ ಸಕಲ ಕೌಶಲ್ಯವನ್ನೂ ಪ್ರಯೋಗಿಸುತ್ತಿದ್ದರು. ಅರ್ನಾಬ್ ವಾದವನ್ನು ಮಿತಾ ವಶಿಷ್ಟ್ ತಿರಸ್ಕರಿಸಿದರು. ಪಾಕ್ ಕಲಾವಿದರನ್ನು ಬಹಿಷ್ಕರಿಸುವುದಕ್ಕೆ ತನ್ನ ವಿರೋಧವನ್ನು ವ್ಯಕ್ತಪಡಿಸಿದರು. ಕಲಾವಿದರು ಟೆರರಿಸ್ಟ್ ಗಳಲ್ಲ ಎಂದು ವಾದಿಸಿದರು. ಅವರ ಮಾತುಗಳು ಪ್ರಬುದ್ಧವಾಗಿದ್ದುವು. ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ಅವರು ಕಾರ್ಗಿಲ್ ಅನ್ನು ಉಲ್ಲೇಖಿಸಿದರು. ಹುತಾತ್ಮ ಯೋಧ ಬಾತ್ರಾರನ್ನು ಪ್ರಸ್ತಾಪಿಸಿದರು. ಅವರ ಮಾತು ಎಷ್ಟು ನಿರರ್ಗಳವಾಗಿತ್ತು ಅಂದರೆ, ಅರ್ನಾಬ್ ಮಧ್ಯದಲ್ಲೇ ಅವರ ಮಾತನ್ನು ತುಂಡರಿಸಿದರು. ಇದನ್ನು ಪ್ರತಿಭಟಿಸಿ ಆಕೆ ಸ್ಟುಡಿಯೋ ದಿಂದ ಎದ್ದು ಹೊರ ನಡೆದರು. ಇಂಥದ್ದೇ ಇನ್ನೊಂದು ಪ್ರಕರಣ ಸೆ. 30ರಂದು ಜನಶ್ರೀ ಚಾನೆಲ್‍ನಲ್ಲಿ ನಡೆಯಿತು. ಹಿರಿಯ ಬಹುಭಾಷಾ ನಟ ಪ್ರಕಾಶ್ ರೈ ಅವರ ‘ಇದೊಳ್ಳೆ ರಾಮಾಯಣ’ ಎಂಬ ಹೊಸ ಸಿನಿಮಾದ ಬಗ್ಗೆ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿ ನಿರೂಪಕಿ ತುಸು ವಿಷಯಾಂತರ ಮಾಡಿ, ‘ಕಾವೇರಿ ವಿವಾದದ ಕುರಿತಂತೆ ಅವರ ಅಭಿಪ್ರಾಯವನ್ನು ಕೇಳಿದರು. `ಕಾವೇರಿ ಜಲಯುದ್ಧದ ಬಗ್ಗೆ ಏನು ಹೇಳುತ್ತೀರಿ? ಸುಪ್ರೀಮ್ ಕೋರ್ಟ್‍ನ ಆದೇಶ ತಪ್ಪಾ? ಕರ್ನಾಟಕ ಮತ್ತು ತಮಿಳ್ನಾಡುಗಳಲ್ಲಿ ಯಾವ ರಾಜ್ಯ ಹಠಮಾರಿಯಂತೆ ಕಾಣಿಸುತ್ತೆ...' ಎಂದೆಲ್ಲ ನಿರೂಪಕಿ ಪ್ರಶ್ನಿಸಿದರು. ಪ್ರಕಾಶ್ ರೈ ಈ ವಿಷಯಾಂತರವನ್ನು ಬಲವಾಗಿ ಖಂಡಿಸಿದರು. ಕಾಂಟ್ರವರ್ಸಿ ಬೇಕಾ ನಿಮ್ಗೆ ಎಂದು ಸಿಟ್ಟಾದರು. ಕಾಮನ್‍ಸೆನ್ಸ್ ಇಲ್ಲದೇ ಪ್ರಶ್ನಿಸ್ಬಾರ್ದು ಎಂದು ಆಕ್ರೋಶ ವ್ಯಕ್ತಪಡಿಸಿ ಮಧ್ಯದಲ್ಲೇ ಎದ್ದು ಹೋದರು.
      ಈ ಎರಡೂ ಘಟನೆಗಳು ಬಹುಮುಖ್ಯವಾದ ಪ್ರಶ್ನೆಯೊಂದನ್ನು ನಮ್ಮ ಮುಂದಿಡುತ್ತದೆ. ಮಾಧ್ಯಮಗಳ ಬಗ್ಗೆ ಕೇವಲತನ ಅಥವಾ ನಿರ್ಲಕ್ಷ್ಯಭಾವದ ನಿಲುವುಗಳು ಬಲ ಪಡೆಯುತ್ತಿವೆಯೇ? `ಟಿವಿ ಚಾನೆಲ್‍ಗಳೆಂದರೆ ಇಷ್ಟೇ..' ಎಂಬ ಉಡಾಫೆತನ ಹೆಚ್ಚಾಗುತ್ತಿವೆಯೇ? ಚಾನೆಲ್‍ಗಳನ್ನು, ಅವುಗಳ ಸುದ್ದಿ ಸ್ಫೋಟವನ್ನು ಮತ್ತು ಅವು ಏರ್ಪಡಿಸುವ ಚರ್ಚೆಯನ್ನು ಅಪ್ರಾಮುಖ್ಯಗೊಳಿಸುವಂತಹ ಮಾತುಗಳು ಸಮಾಜವನ್ನು ಪ್ರಭಾವಿತಗೊಳಿಸುತ್ತಿವೆಯೇ? ಹಾಗಂತ ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಪ್ರಕರಣ ಕೇವಲ ವಾರಗಳ ಹಿಂದಿನ ಎರಡು ಉದಾಹರಣೆಗಳು ಮಾತ್ರ. ಇವೆರಡರ ಹಿಂದೆ ಇಂಥ ಹತ್ತಾರು ಘಟನೆಗಳು ನಡೆದಿವೆ. ಇತ್ತಿತ್ತಲಾಗಿ ಇವುಗಳ ಸಂಖ್ಯೆ ಹೆಚ್ಚಾಗುತ್ತಲೂ ಇವೆ. ಇದಕ್ಕೆ ಏನು ಕಾರಣ? ಯಾರು ಕಾರಣ? ನಿರೂಪಕರೇ, ಅತಿಥಿಗಳೇ ಅಥವಾ ಟಿವಿ ಚಾನೆಲ್‍ಗಳ ಮೇಲಿನ ವಿಶ್ವಾಸದ ಕುಸಿತವೇ? ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್, ವಾಟ್ಸ್ ಅಪ್‍ಗಳು ಈ ಪ್ರಕ್ರಿಯೆಯಲ್ಲಿ ಯಾವ ಪಾತ್ರ ವಹಿಸಿವೆ? ಅಷ್ಟಕ್ಕೂ,
        ಈ ಎರಡು ಘಟನೆಗಳನ್ನು ಉಲ್ಲೇಖಿಸುವುದಕ್ಕೆ ಇನ್ನೊಂದು ಕಾರಣವೂ ಇದೆ.
       ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಸರ್ಜಿಕಲ್ (ಸೀಮಿತ) ದಾಳಿ ನಡೆಸಿದ್ದು ಈ ಕಾರಣಗಳಲ್ಲಿ ಒಂದಾದರೆ ಇನ್ನೊಂದು ತಮಿಳ್ನಾಡು ಮುಖ್ಯಮಂತ್ರಿ ಜಯಲಲಿತಾರ ಅನಾರೋಗ್ಯ. ಮಾಧ್ಯಮಗಳು ಈ ಎರಡೂ ಸಂದರ್ಭಗಳನ್ನು ಹೇಗೆ ನಿಭಾಯಿಸಿದುವು? ಈ ಎರಡರಲ್ಲೂ ಸೂಕ್ಷ್ಮವಾದ ಹಲವಾರು ಅಂಶಗಳಿವೆ. ವದಂತಿಗಳು ಮತ್ತು ಊಹೆಗಳು ಅತೀ ಹೆಚ್ಚು ಕಾರುಬಾರು ನಡೆಸುವ ಸಂದರ್ಭ ಇದು. ಓರ್ವ ಪತ್ರಕರ್ತನಿ/ಳಿ/ಗೆ ಮತ್ತು ಪತ್ರಿಕೆಯ ನಿರ್ಣಾಯಕ ಸ್ಥಾನದಲ್ಲಿರುವವರಿಗೆ ಅತ್ಯಂತ ಸವಾಲಿನ ಸಮಯವೂ  ಹೌದು. ಯಾವುದೇ ಸುದ್ದಿಯು ಪುರಾವೆಯನ್ನು ಬಯಸುತ್ತದೆ. ಮೂಲ ಎಷ್ಟೇ ವಿಶ್ವಾಸಾರ್ಹ ಆಗಿದ್ದರೂ ಖಚಿತವಾಗಿ ಹೇಳುವುದಕ್ಕೆ ಪುರಾವೆಯ ಅಗತ್ಯ ಇದ್ದೇ ಇದೆ. ಸರ್ಜಿಕಲ್ ದಾಳಿ ಮತ್ತು ಜಯಲಲಿತಾರ ಆರೋಗ್ಯಕ್ಕೆ ಸಂಬಂಧಿಸಿ ಸುದ್ದಿ ತಯಾರಿಯ ವೇಳೆ ಈ ಬೇಡಿಕೆಯನ್ನು ಪೂರೈಸಲಾಗಿದೆಯೇ? ನಿಜವಾಗಿ, ಸರ್ಜಿಕಲ್ ದಾಳಿಯ ಬಗ್ಗೆ ಕನ್ನಡದ ವಿವಿಧ ಪತ್ರಿಕೆಗಳು, ‘ಸಿಡಿದೆದ್ದ ಭಾರತ’, ‘ಉರಿದೆದ್ದ ಭಾರತ ಪ್ರತಿಘಾತ’, ‘ಭಾರತದ ಎದಿರೇಟಿಗೆ ಉರಿದ ಪಾಕ್’, ‘ಪಾಕ್‍ಗೆ ನುಗ್ಗಿ ದಾಳಿ: ಸೇನೆ’, ‘ಪಾಕ್‍ಗೆ ನುಗ್ಗಿ ಉಗ್ರ ಸಂಹಾರ’.. ಎಂಬೆಲ್ಲ ಶೀರ್ಷಿಕೆಗಳೊಂದಿಗೆ ಸೆ. 30ರಂದು ಸುದ್ದಿ ಬರೆದಿವೆ. ಉರಿ ಘಟನೆಯ ನೋವು ದೇಶದಲ್ಲಿ ಹಸಿರಾಗಿದ್ದುದರಿಂದ ಇಂಥ ಶೀರ್ಷಿಕೆಗಳ ಔಚಿತ್ಯವನ್ನು ಒಂದು ಹಂತದ ವರೆಗೆ ಒಪ್ಪಿಕೊಳ್ಳೋಣ. ಆದರೆ ಈ ಶೀರ್ಷಿಕೆಗಳ ಕೆಳಗಡೆ ಕೊಟ್ಟಿರುವ ಉಪಶೀರ್ಷಿಕೆಗಳು ಮತ್ತು ಸಂಪಾದಕೀಯಗಳಲ್ಲಿ ಬಳಸಲಾದ ಪದಗಳಲ್ಲೆಲ್ಲ ಎಷ್ಟಂಶ ಎಚ್ಚರಿಕೆಯನ್ನು ಪಾಲಿಸಲಾಗಿದೆ? ‘ಸರ್ಜಿಕಲ್ ಸ್ಟ್ರೈಕ್’ ಎಂಬುದು ಯಾವ ಪತ್ರಕರ್ತರ ಪಾಲಿಗೂ ಪುರಾವೆ ಸಮೇತ ಸಾಬೀತಾದ ವಿಷಯ ಅಲ್ಲ. ಅದು ಸೇನೆ ಮತ್ತು ಸರಕಾರದ ಹೇಳಿಕೆ. ಹಾಗಂತ, ಸರ್ಜಿಕಲ್ ದಾಳಿ ನಡೆದಿಲ್ಲ ಎಂಬುದು ಇಲ್ಲಿನ ವಾದ ಅಲ್ಲ. ಸೇನೆಯ ಮೇಲೆ ಶಂಕೆಯೇ ಎಂಬ ಪ್ರಶ್ನೆಯನ್ನು ಎತ್ತಬೇಕಾಗಿಯೂ ಇಲ್ಲ. ಇಲ್ಲಿ, ‘ಸರ್ಜಿಕಲ್ ದಾಳಿ ನಡೆದಿದೆ ಮತ್ತು ಅದಕ್ಕೆ ಸುಮಾರು 40ರಷ್ಟು ಉಗ್ರರು ಬಲಿಯಾಗಿದ್ದಾರೆ’ ಎಂದು ಓರ್ವ ಪತ್ರಕರ್ತನಿಗೆ ಅಥವಾ ಸುದ್ದಿಮನೆಗೆ ಒಪ್ಪಿಕೊಳ್ಳಲು ಇರುವ ಏಕೈಕ ಮೂಲ ಸೇನೆ ಮತ್ತು ಸರಕಾರ ಮಾತ್ರ. ಆದ್ದರಿಂದ ಅದು ದೃಢೀಕರಣಗೊಳ್ಳುವ ವರೆಗೆ ಅದು ಒಂದು ಹೇಳಿಕೆಯಾಗಿ ಪರಿಗಣಿತವಾಗಬೇಕೇ ಹೊರತು ಪುರಾವೆ ಸಮೇತ ಸಾಬೀತಾದ ಸುದ್ದಿಯ ರೂಪದಲ್ಲಿ ಅಲ್ಲ. ಪುರಾವೆ ಎಲ್ಲಿಯ ವರೆಗೆ ಲಭ್ಯವಾಗುವುದಿಲ್ಲವೋ ಅಲ್ಲಿಯ ವರೆಗೆ ಅದು ಹೇಳಿಕೆ. ಆ ಹೇಳಿಕೆಯನ್ನು ಒಪ್ಪುವ, ಒಪ್ಪದಿರುವ, ಅನುಮಾನಿಸುವ ಮತ್ತು ಅನುಮಾನಿಸದಿರುವ ಅವಕಾಶ ಎಲ್ಲರಿಗೂ ಇದೆ. ಸಾಮಾನ್ಯವಾಗಿ, ಒಂದು ಹೇಳಿಕೆಯ ದೌರ್ಬಲ್ಯ ಏನೆಂದರೆ, ಇವತ್ತಿನ ಹೇಳಿಕೆ ನಾಳೆಯ ದಿನ ಅದೇ ತಾಜಾತನವನ್ನು ಉಳಿಸಿ ಕೊಳ್ಳಬೇಕೆಂದಿಲ್ಲ. ಆ ಹೇಳಿಕೆಗೆ ನಾಳೆ ಒಂದಷ್ಟು ಸೇರ್ಪಡೆ ಆಗಬಹುದು ಅಥವಾ ಹೇಳಿಕೆಯ ಒಂದಷ್ಟು ಭಾಗ ನಿರಾಕರಣೆಗೂ ಒಳಪಡಬಹುದು. ಸಂಪೂರ್ಣ ನಿರಾಕರಣೆಗೆ ಒಳಗಾಗುವ ಹೇಳಿಕೆಗಳೂ ಧಾರಾಳ ಇವೆ. ಸೇನೆಯ ವತಿಯಿಂದಲೇ ಇಂಥ ಎಡವಟ್ಟುಗಳು ನಡೆದ ಸಂದರ್ಭಗಳೂ ಇವೆ. ಕಾಶ್ಮೀರದಲ್ಲಿ, ಮಣಿಪುರ, ನಾಗಾಲ್ಯಾಂಡ್‍ಗಳಲ್ಲಿ ಸೇನೆಯೇ ಕಟಕಟೆಯಲ್ಲಿ ನಿಂತಿ ರುವುದಕ್ಕೆ ಅನೇಕಾರು ಉದಾಹರಣೆಗಳಿವೆ. ಹಾಗಂತ, ಸರ್ಜಿಕಲ್ ದಾಳಿ ಸುಳ್ಳು ಎಂಬುದು ಇದರರ್ಥವಲ್ಲ. ಸೇನೆ ಸತ್ಯವನ್ನೇ ಹೇಳಿರಬಹುದು. ಆದರೆ ಪುರಾವೆ ಸಿಗುವವರೆಗೆ ಓರ್ವ ಪತ್ರಕರ್ತ ಆ ಹೇಳಿಕೆಯ ಮೇಲೆ ಶಂಕೆಯ ಒಂದು ಕಣ್ಣಿಟ್ಟಿರಲೇಬೇಕಾದ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ. ಭಾರತೀಯ ಸೇನೆ, ದೇಶಪ್ರೇಮ, ಪಾಪಿ ಪಾಕಿಸ್ತಾನ, ರಾಷ್ಟ್ರೀಯ ಹಿತಾಸಕ್ತಿ, ದೇಶ ರಕ್ಷಣೆ.. ಮುಂತಾದುವುಗಳು ಸುದ್ದಿ ತಯಾರಿ ಮತ್ತು ವಿಶ್ಲೇಷಣೆಯ ಮೇಲೆ ಅಡ್ಡ ಪರಿಣಾಮ ಬೀರುವಂತಿಲ್ಲ. ಪುರಾವೆ ಸಿಗುವವರೆಗೆ ಅಥವಾ ಕನಿಷ್ಠ ಹೇಳಿಕೆಯನ್ನು ಸಾಬೀತುಪಡಿಸುವಂತಹ ವಾತಾವರಣ ಸೃಷ್ಟಿಯಾಗುವ ವರೆಗೆ ಸುದ್ದಿಮನೆಯಲ್ಲ್ಲೂ ಪತ್ರಕರ್ತರಲ್ಲೂ ಶಂಕೆ ಇರಬೇಕಾದುದು ಜರ್ನಲಿಸಂನ ಅತೀ ಪ್ರಬಲ ಬೇಡಿಕೆ. ಹಾಗಂತ, ಈ ಶಂಕೆಯನ್ನು ಕೇವಲ ಸೆ. 29ರಂದು ನಡೆದ ಸರ್ಜಿಕಲ್ ದಾಳಿಗೆ ಸಂಬಂಧಿಸಿ ಮಾತ್ರ ಹೇಳುತ್ತಿಲ್ಲ. ಭಯೋತ್ಪಾದನೆ ಮತ್ತಿತರ ಆರೋಪದಲ್ಲಿ ಬಂಧನಕ್ಕೀಡಾಗುವವರ ಕುರಿತೂ ಇದೇ ಮಾತನ್ನು ಹೇಳಬೇಕಾಗುತ್ತದೆ. ಬಂಧಿಸಿದವರ ಹೇಳಿಕೆಗಳೇ ಪುರಾವೆ ಆಗಿರುತ್ತಿದ್ದರೆ ಈ ದೇಶದಲ್ಲಿ ಒಬ್ಬನೇ ಒಬ್ಬ ವ್ಯಕ್ತಿ ಜೈಲಿನಿಂದ ಹೊರಬರುವುದಕ್ಕೆ ಸಾಧ್ಯವಿರಲಿಲ್ಲ. ದುರಂತ ಏನೆಂದರೆ, ಹೆಚ್ಚಿನ ಬಾರಿ ಹೇಳಿಕೆಗಳು ಪುರಾವೆಗಳನ್ನು ಒದಗಿಸುವುದಿಲ್ಲ. ಕೆಲವೊಮ್ಮೆ ಪುರಾವೆಗಳು ಹೇಳಿಕೆಗಳನ್ನೇ ದೃಢೀಕರಿಸುವುದಿಲ್ಲ. ಆದರೆ ಇವತ್ತು ಸುದ್ದಿ ಮಾಧ್ಯಮಗಳು ಪೈಪೋಟಿಯ ಸಮಸ್ಯೆಯನ್ನು ಎದುರಿಸುತ್ತಿವೆ. ಮುದ್ರಣ ಮಾಧ್ಯಮಕ್ಕಿಂತಲೂ ದೃಶ್ಯ ಮಾಧ್ಯಮದಲ್ಲಿ ಈ ಪೈಪೋಟಿ ಮಿತಿ ಮೀರಿದೆ. ಸೆನ್ಸೇಷನಲ್ ಸುದ್ದಿಯನ್ನು ತಯಾರಿಸಲೇಬೇಕಾದ ಒತ್ತಡವನ್ನು ಪ್ರತಿ ಚಾನೆಲೂ ಎದುರಿಸುತ್ತಿದೆ. ಒಂದು ಹೇಳಿಕೆ, ಒಂದು ಬಂಧನ, ಒಂದು ಪ್ರೀತಿ, ಒಂದು ನಗು, ಒಂದು ಅಫೇರ್, ಒಂದು ವದಂತಿ.. ಎಲ್ಲವೂ ಸ್ಟೋರಿ ಗಳಾಗಬೇಕಾದ ಅನಿವಾರ್ಯತೆಯೊಂದಿಗೆ ಚಾನೆಲ್‍ಗಳು ದಿನದೂಡುತ್ತಿವೆ. ಪುರಾವೆಗಳ ವರೆಗೆ ಕಾದು ಸ್ಟೋರಿ ಮಾಡಬಹುದಾದ ಸಹನೆ ಬಹುತೇಕ ಯಾವ ಸುದ್ದಿಮನೆಗೂ ಇಲ್ಲ.
      ಸೆ. 30ರಂದು ಎಲ್ಲ ಪತ್ರಿಕೆಗಳೂ ಸರ್ಜಿಕಲ್ ದಾಳಿಯ ಬಗ್ಗೆ ಮುಖಪುಟದಲ್ಲಿ ಸುದ್ದಿಯನ್ನೂ ಒಳಪುಟದಲ್ಲಿ ಸಂಪಾದಕೀಯ ವನ್ನೂ ಬರೆದುವು. ಮುಖಪುಟದ ಸುದ್ದಿಯ ಕೊನೆಯಲ್ಲಿ ‘ಸೇನೆ ಹೇಳಿದೆ’ ಎಂಬ ವಾಕ್ಯ ಇದ್ದರೂ ಸಂಪಾದಕೀಯದಲ್ಲಿ ಆ ಎಚ್ಚರಿಕೆ ಬಹುತೇಕ ಯಾವ ಪತ್ರಿಕೆಯಲ್ಲೂ ಕಾಣಿಸಲಿಲ್ಲ. ಸರ್ಜಿಕಲ್ ಸ್ಟ್ರೈಕ್ ಎಂಬುದು ಸ್ಪಷ್ಟವಾಗಿ ಸೇನೆಯ ಹೇಳಿಕೆಯಾಗಿರುವುದರಿಂದ ಆ ಪದವನ್ನು ಸಂಪಾದಕೀಯದಲ್ಲಿ ಬಳಸುವಾಗ ಹೇಳಿಕೆಯೆಂಬ ನೆಲೆಯಲ್ಲಿ ಉದ್ಧರಣಾ ಚಿಹ್ನೆ (“”) ಹಾಕುವುದು ಪ್ರಾಯೋಗಿಕವಾಗಿ ಹೆಚ್ಚು ಸರಿ. ಯಾಕೆಂದರೆ, ಸಂಪಾದಕೀಯ ಬರೆಯುವಾಗ ಸಂಪಾದಕ ಅದನ್ನು ಪುರಾವೆ ಸಮೇತ ಖಚಿತ ಪಡಿಸಿಕೊಂಡಿರಲಿಲ್ಲ. ಒಂದು ಹೇಳಿಕೆಯಾಚೆಗೆ ಆ ದಾಳಿ ಸೀಮಿತವೋ ಅಸೀಮಿತವೋ ಎಂಬುದು ಸ್ಪಷ್ಟವಿರಲಿಲ್ಲ. ಆದರೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳೆಲ್ಲ ಬಹುತೇಕ ವಾಚಾಳಿಯಾದುವು. ದೇಶದ ಹಿತಾಸಕ್ತಿ, ದೇಶರಕ್ಷಣೆ, ಭಯೋತ್ಪಾದನಾ ವಿರೋಧಿ ಆಕ್ರಮಣ, ಸೇನೆಯ ಸಾಮರ್ಥ್ಯ.. ಇತ್ಯಾದಿ ಭಾವನಾತ್ಮಕ ಪದ ಪ್ರಯೋಗಗಳ ಮೂಲಕ ಇಂಥ ಮೌಲಿಕ ಪ್ರಶ್ನೆಗಳನ್ನು ಅವು ತಡೆದು ನಿಲ್ಲಿಸಿದುವು. ಸೆ. 30ರಿಂದ ಈ ವರೆಗೆ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಪ್ರಕಟವಾದ ಮತ್ತು ಪ್ರಸಾರವಾದ ಸರ್ಜಿಕಲ್ ಸ್ಟ್ರೈಕ್ ಸಂಬಂಧಿ ವಿಷಯಗಳನ್ನು ವಿಶ್ಲೇಷಣೆಗೆ ಒಳ ಪಡಿಸಿದರೆ ಯಾವುದು ಜರ್ನಲಿಸಂ ಮತ್ತು ಯಾವುದು ಅಲ್ಲ ಎಂದು ವಿಶ್ಲೇಷಿಸುವುದಕ್ಕೆ ಧಾರಾಳ ಸರಕುಗಳು ಸಿಕ್ಕೀತು. ಬೇಕಿದ್ದರೆ ಜಯಲಲಿತಾರ ಅನಾರೋಗ್ಯವನ್ನೂ ಈ ವಿಶ್ಲೇಷಣೆಯ ಪಟ್ಟಿಗೆ ಸೇರಿಸಿಕೊಳ್ಳಬಹುದು. ಅವರ ಕಾಯಿಲೆಯ ಕುರಿತಂತೆ ಮಾಧ್ಯಮ ಗಳಲ್ಲಿ ಹರಿದಾಡಿದ ಸುದ್ದಿಗಳಿಗೆ ಲೆಕ್ಕ ಮಿತಿಯಿಲ್ಲ. ಟಿ.ವಿ. ಚಾನೆಲ್‍ಗಳಲ್ಲಂತೂ ವದಂತಿಗಳು ಮತ್ತು ಊಹೆಗಳನ್ನೇ ಮೂಟೆಯಾಗಿಸಿ ‘ಅಮ್ಮ’ನನ್ನು ವೀಕ್ಷಕರ ಮುಂದಿಡಲಾಯಿತು. ಬಹುಶಃ, ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ಅವರು ಸ್ಟುಡಿಯೋದಿಂದ ಎದ್ದು ಹೋದುದರ ಹಿಂದೆ ಜರ್ನಲಿಸಂನ ಮೂಲಭೂತ ಬೇಡಿಕೆಗಳನ್ನು ಹೀಗೆ ನಿರ್ಲಕ್ಷಿಸಿರುವುದಕ್ಕೂ ಪಾತ್ರ ಇರಬಹುದು. ಮಾಧ್ಯಮಗಳು ಪುರಾವೆಗಳನ್ನು ಕಡೆಗಣಿಸಿದಷ್ಟೂ ಮತ್ತು ವೀಕ್ಷಕರು ಹಾಗೂ ಓದುಗರ ತಕ್ಷಣದ ಭಾವನೆಯನ್ನು ಎನ್‍ಕ್ಯಾಶ್ ಮಾಡುವ ಮಟ್ಟಕ್ಕೆ ಇಳಿದಷ್ಟೂ ಮಾಧ್ಯಮ ವಿಶ್ವಾಸಾರ್ಹತೆಯ ಮಟ್ಟದಲ್ಲೂ
ಇಳಿಮುಖವಾಗುತ್ತಲೇ ಹೋಗುತ್ತದೆ. ಟಿ.ವಿ. ಚಾನೆಲ್‍ಗಳನ್ನು ಸದ್ಯ ಕಾಡುತ್ತಿರುವ ಕಾಯಿಲೆ ಇದು. ವಿಶ್ವಾಸಾರ್ಹತೆಯ ಮಟ್ಟ ಕುಸಿಯು ವುದೆಂದರೆ, ವೀಕ್ಷಕರ ಪಾಲಿಗೆ ಕೇವಲವಾಗುವುದು ಎಂದರ್ಥ. ‘ಟಿ.ಆರ್.ಪಿ.ಗಾಗಿ ಯಾವ ಮಟ್ಟಕ್ಕೂ ಇಳಿಯುತ್ತಾರೆ..’ ಎಂಬ ಮಾತು ಜನಪ್ರಿಯವಾದಷ್ಟೂ ಟಿ.ವಿ. ಚಾನೆಲ್‍ಗಳ ವಿಶ್ವಾಸಾರ್ಹತೆ ಕುಸಿಯುತ್ತಾ ಹೋಗುತ್ತದೆ. ಅದರ ಪರಿಣಾಮವಾಗಿ ಉಡಾಫೆ, ನಿರ್ಲಕ್ಷ್ಯತನದ ಮಾತುಗಳು ಮೇಲುಗೈ ಪಡೆಯುತ್ತವೆ. ಬಹುಶಃ,
       ಪ್ರಕಾಶ್ ರೈ ಮತ್ತು ಮಿತಾ ವಶಿಷ್ಟ್ ರು ಮಾಧ್ಯಮ ಗಮನವನ್ನು ಆ ಕಡೆ ಸೆಳೆದಿದ್ದಾರೆ ಎಂದೇ ಅನಿಸುತ್ತದೆ.

Thursday, October 6, 2016

ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ

        ಸಂಪೂರ್ಣ ಬೆತ್ತಲಾಗಿರುವ ಸ್ಥಿತಿಯಲ್ಲಿ ಗೋಡೆಗೆ ಅಂಟಿ ಕೂತು, ಭೀತಿಯಿಂದ ನಡುಗುತ್ತಿದ್ದ ಆ ಬಾಲಕನನ್ನು ಕಂಡು 7ನೇ ರೆಜಿಮೆಂಟ್‍ನ ಯೋಧರು ಅಕ್ಷರಶಃ ಕಲ್ಲಾಗಿದ್ದರು.
     /ಅದು 1950. ದ್ವಿತೀಯ ವಿಶ್ವ ಯುದ್ಧದ ಕರಾಳ ನೆನಪುಗಳು ಜಗತ್ತನ್ನು ಆಳುತ್ತಿದ್ದ ಸಮಯ. ಯುದ್ಧ ಎಷ್ಟು ಅಪಾಯಕಾರಿ ಎಂಬುದಕ್ಕೆ ಜಪಾನ್ ಮಾತ್ರ ಅಲ್ಲ, ಜಗತ್ತಿನ ಇತರ ಭಾಗಗಳೂ ಸಾಕ್ಷ್ಯ ಹೇಳುತ್ತಿದ್ದುವು. ಹಿರೋಶಿಮಾ ಮತ್ತು ನಾಗಸಾಕಿಯಂತೂ ಯುದ್ಧವಿರೋಧಿ ಘೋಷಣೆಗಳಿಗೆ ಅನ್ವರ್ಥವಾಗುವಂತೆ ಸತ್ತು ಮಲಗಿದ್ದುವು. ಸಾವಿರಾರು ವರ್ಷಗಳ ಹಿಂದಿನ ರಾಜರುಗಳ ನಡುವಿನ ಯುದ್ಧದ ವಿವರಗಳನ್ನು ಪಠ್ಯಪುಸ್ತಕಗಳಲ್ಲಿ ಓದುವುದಕ್ಕೂ ವಾಸ್ತವವಾಗಿ ಅನುಭವಿಸುವುದಕ್ಕೂ ನಡುವೆ ಇರುವ ಅಗಾಧ ಅಂತರವು ಜಗತ್ತನ್ನು ಬೆಚ್ಚಿ ಬೀಳಿಸಿತು. ಪಠ್ಯಪುಸ್ತಕಗಳಲ್ಲಿ ನಾವು ಓದುವ ಯುದ್ಧೋತಿಹಾಸದಲ್ಲಿ ಕಪ್ಪು ಮತ್ತು ಬಿಳುಪು ಎಂಬೆರಡು ಭಾಗಗಳಷ್ಟೇ ಇರುತ್ತವೆ. ಗೆದ್ದವರನ್ನು ಅಭಿಮಾನದಿಂದ ಮತ್ತು ಸೋತವರನ್ನು ಅನುಕಂಪದಿಂದ ನೋಡುವುದರ ಹೊರತು ಯುದ್ಧ ಸೃಷ್ಟಿ ಮಾಡಬಹುದಾದ ಆಘಾತಗಳ ಬಗ್ಗೆ ಅವಲೋಕನ ನಡೆಯುವುದು ಕಡಿಮೆ. ಅನಾಥ ಮಕ್ಕಳು, ವಿಧವೆಯರು, ವಿಧುರರು, ಅಂಗವಿಕಲರು, ನಾಶ-ನಷ್ಟಗಳು.. ಇವು ಯಾವುದೇ ಯುದ್ಧದ ಸಹಜ ಫಲಿತಾಂಶಗಳು. ಸೋತವರಲ್ಲೂ ಗೆದ್ದವರಲ್ಲೂ ತುಸು ವ್ಯತ್ಯಾಸದೊಂದಿಗೆ ಈ ಸಂಕಟಗಳು ಇದ್ದೇ ಇರುತ್ತವೆ. ರಾಜರುಗಳ ಕಾಲದ ಯುದ್ಧಕ್ಕೂ ಇಂದಿನ ತಂತ್ರಜ್ಞಾನಾಧಾರಿತ ಯುದ್ಧಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಏನೆಂದರೆ, ತಂತ್ರಜ್ಞಾನಾಧಾರಿತ ಯುದ್ಧವು ಬಹುತೇಕ ಜನರನ್ನೇ ಗುರಿಪಡಿಸಿದರೆ ರಾಜರ ಕಾಲದ ಯುದ್ಧದಲ್ಲಿ ಸೈನಿಕರೇ ಗುರಿಯಾಗಿರುತ್ತಿದ್ದರು. ಇಲ್ಲಿ ಆಕಾಶ ಮಾರ್ಗ ಬಳಕೆಯಾಗುತ್ತಿರಲಿಲ್ಲ. ಆದ್ದರಿಂದ ಬಾಂಬೂ ಇರಲಿಲ್ಲ. ಏನಿದ್ದರೂ ನೆಲದ ಮೂಲಕವೇ ಕಾದಾಟ. ಈ ಕಾದಾಟ ಶೈಲಿಯು ನಾಗರಿಕರ ಪ್ರಾಣಕ್ಕೆ ಸಂಬಂಧಿಸಿ ಹೆಚ್ಚು ಸುರಕ್ಷಿತ ವಿಧಾನವಾಗಿತ್ತು. ಆದರೆ ತಂತ್ರಜ್ಞಾನ ಈ ಸುರಕ್ಷಿತ ಕಲ್ಪನೆಯನ್ನೇ ಉಡಾಯಿಸಿಬಿಟ್ಟಿತು. ನಾಗರಿಕರು ಮತ್ತು ಸೈನಿಕರು ಎಂಬ ವಿಭಜನೆಯೇ ಗೊತ್ತಿಲ್ಲದ ಬಾಂಬುಗಳು ನಾಶವನ್ನೇ ಗುರಿಯಾಗಿಸಿಕೊಂಡವು. ಹಿರೋಶಿಮಾ ಮತ್ತು ನಾಗಸಾಕಿ ಅದರ ಸಾರ್ವಕಾಲಿಕ ಸಂಕೇತವಾಗಿ ಜಗತ್ತಿನ ಎದುರು ನಿಂತವು. ಇಂಥ ಸ್ಥಿತಿಯಲ್ಲಿ, ಇನ್ನೊಂದು ವಿಶ್ವಯುದ್ಧವನ್ನು ತಾಳಿಕೊಳ್ಳುವ ಸಾಮರ್ಥ್ಯ ಯಾವ ರಾಷ್ಟ್ರಕ್ಕೂ ಇರಲಿಲ್ಲ. ಆದ್ದರಿಂದಲೇ, 1951ರಲ್ಲಿ ಪ್ರಾರಂಭವಾದ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಗಳ ನಡುವಿನ ಕಾದಾಟವು ಅಮೇರಿಕ ಮತ್ತು ರಷ್ಯಾಗಳ ನಡುವಿನ ಪರೋಕ್ಷ  ಯುದ್ಧವಾಗಿದ್ದರೂ ಅದು ಆ ವಲಯವನ್ನು ಮೀರಿ ಜಾಗತಿಕ ಯುದ್ಧ ಸ್ವರೂಪವನ್ನು ಪಡೆದುಕೊಳ್ಳಲಿಲ್ಲ.
1945ರಲ್ಲಿ ದ್ವಿತೀಯ ವಿಶ್ವಯುದ್ಧ ಕೊನೆಗೊಂಡಾಗ ಜಪಾನ್‍ನ ವಸಾಹತು ಆಗಿದ್ದ ಕೊರಿಯವು ಉತ್ತರ ಮತ್ತು ದಕ್ಷಿಣ ಕೊರಿಯಗಳಾಗಿ ವಿಭಜನೆಗೊಂಡಿತ್ತು. ಜಪಾನ್ ಶರಣಾಗುವಾಗ ಕೊರಿಯದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ರಷ್ಯಾ ಮತ್ತು ಅಮೇರಿಕಗಳು ಪಾರಮ್ಯ ಸ್ಥಾಪಿಸಿದ್ದುವು. ಈ ಪಾರಮ್ಯವು ಕೊರಿಯವನ್ನು ಉತ್ತರ ಮತ್ತು ದಕ್ಷಿಣ ಕೊರಿಯವಾಗಿ ವಿಭಜಿಸಲು ಕಾರಣವಾಯಿತು. ಉತ್ತರ ಕೊರಿಯದಲ್ಲಿ ರಷ್ಯನ್ ಪ್ರಭಾವಿತ ಕಮ್ಯುನಿಸ್ಟ್ ಆಡಳಿತ ಸ್ಥಾಪನೆಯಾಯಿತು. ದಕ್ಷಿಣ ಕೊರಿಯವು ಅಮೇರಿಕನ್ ಪ್ರಭಾವಿತ ಆಡಳಿತ ಶೈಲಿಯನ್ನು ನೆಚ್ಚಿಕೊಂಡಿತು. ಆದರೆ ಈ ವಿಭಜನೆಯಾಗಿ ಆರೇ ವರ್ಷಗಳೊಳಗೆ ಅಂದರೆ 1950 ಜೂನ್ 25ರಂದು ಉತ್ತರ ಕೊರಿಯವು ದಿಢೀರ್ ಆಗಿ ದಕ್ಷಿಣ ಕೊರಿಯದ ವಿರುದ್ಧ ದಂಡೆತ್ತಿ ಹೋಯಿತು. ನಿಜವಾಗಿ, ಕೊರಿಯ ಎಂಬುದು ದ್ವಿತೀಯ ವಿಶ್ವಯುದ್ಧದ ವರೆಗೆ ಒಂದೇ ಆಗಿತ್ತು. ಅಲ್ಲಿ ವಿಭಜನೆ ಇರಲಿಲ್ಲ. ದ್ವಿತೀಯ ವಿಶ್ವಯುದ್ಧದ ಬಳಿಕ ವಿಭಜನೆ ನಡೆಯಿತಾದರೂ ಅದು ಶಾಶ್ವತ ಕ್ರಮವೆಂಬ ನೆಲೆಯಲ್ಲಿ ಆಗಿಯೂ ಇರಲಿಲ್ಲ. ಜರ್ಮನಿ ಹೇಗೆ ಪೂರ್ವ ಮತ್ತು ಪಶ್ಚಿಮ ಜರ್ಮನಿಯಾಗಿ ತಾತ್ಕಾಲಿಕವಾಗಿ ವಿಭಜನೆಗೊಂಡಿತ್ತೋ ಹಾಗೆ. ಆದರೆ, ರಾಜಕೀಯ ಉದ್ದೇಶಗಳಿಗಾಗಿ ಇವುಗಳ ನಡುವೆ ಪರಸ್ಪರ ಅನುಮಾನ, ದ್ವೇಷ, ಅಸೂಯೆ ವದಂತಿಗಳನ್ನು ಹುಟ್ಟು ಹಾಕಲಾಯಿತು. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಘರ್ಷಣೆಗೆ ಈ ಹಿನ್ನೆಲೆಯೂ ಇದೆ. ಉತ್ತರ ಕೊರಿಯದ ಸೇನೆಯು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ಗೆ ಧಾವಿಸಿ ಬರುತ್ತಿರುವುದನ್ನು ಕಂಡು ಅಮೇರಿಕಕ್ಕೆ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಎದುರಾಯಿತು. ದಕ್ಷಿಣ ಕೊರಿಯಕ್ಕೆ ಸೇನಾ ನೆರವು ನೀಡುವ ಬಗ್ಗೆ ಅದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಸೂದೆಯೊಂದನ್ನು ಮಂಡಿಸಿತು. ವಿಶೇಷ ಏನೆಂದರೆ, ಈ ಮಸೂದೆಯನ್ನು ವೀಟೋ ಚಲಾಯಿಸುವ ಮೂಲಕ ತಡೆಯುವ ಎಲ್ಲ ಅವಕಾಶವೂ ರಶ್ಯಾಕ್ಕಿತ್ತು. ಆದರೆ ಭದ್ರತಾ ಸಮಿತಿಯ ಸಭೆಯನ್ನೇ ಬಹಿಷ್ಕರಿಸುವ ಮೂಲಕ ರಷ್ಯಾ ಈ ಅವಕಾಶವನ್ನು ಕೈಯಾರೆ ಕಳೆದುಕೊಂಡಿತು. ಅಮೇರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಈ ಮಸೂದೆ ಯನ್ನು ಬಳಸಿಕೊಂಡು ಕೊರಿಯದ ನೆರವಿಗೆ ಭೂ, ಜಲ ಮತ್ತು ವಾಯು ಸೇನೆಯನ್ನು ತಕ್ಷಣ ರವಾನಿಸಿದರು. ಹೀಗೆ ಅಮೇರಿಕದ ನೇರ ಮಧ್ಯ ಪ್ರವೇಶದಿಂದಾಗಿ ವಲಯದ ಒಟ್ಟು ವಾತಾವರಣವೇ ಬದಲಾಯಿತು. ಉತ್ತರ ಕೊರಿಯವು ಸೇನೆಯನ್ನು ಹಿಂದಕ್ಕೆ ಕರೆಸಿ ಕೊಂಡಿತು. ಅಮೇರಿಕನ್ ನೇತೃತ್ವದ ಸೇನೆಯು ಉತ್ತರ ಕೊರಿಯದ ಒಳಗೂ ನುಗ್ಗಿತು. ಇದರಿಂದ ಅತ್ಯಂತ ಹೆಚ್ಚು ಆತಂಕಕ್ಕೆ ಒಳಗಾದದ್ದು ನೆರೆಯ ಕಮ್ಯುನಿಸ್ಟ್ ಚೀನಾ. ಅದೂ ಈ ಕಾದಾಟದಲ್ಲಿ ಮಧ್ಯಪ್ರವೇಶಿಸಿತು. ಹೀಗೆ 3 ವರ್ಷಗಳ ವರೆಗೆ ನಡೆದ ಈ ಯುದ್ಧವು ಕೊನೆಗೆ 1953ರಲ್ಲಿ ಅಮೇರಿಕ ಮತ್ತು ಉತ್ತರ ಕೊರಿಯಗಳ ನಡುವೆ ಒಪ್ಪಂದ ಏರ್ಪಟ್ಟು ಮುಕ್ತಾಯವನ್ನು ಕಂಡಿತು. ಈ ಮೂಲಕ ಎರಡೂ ಕೊರಿಯಗಳು ವೈರಿಗಳಂತೆ ಎರಡು ರಾಷ್ಟ್ರಗಳಾಗಿ ಶಾಶ್ವತ ವಿಭಜನೆಗೆ ಪಕ್ಕಾದವು. ಆದರೆ ಈ ಯುದ್ಧದಾಚೆಗೆ ಇಡೀ ಕೊರಿಯವನ್ನು ಮಾತ್ರವಲ್ಲ, ಜಗತ್ತನ್ನೇ ಕಾಡಿದ್ದು ಆ 5 ವರ್ಷದ ಬಾಲಕ ಕಾಂಗ್ ಕೂ ರಿ.
      ಆಗ ಯುದ್ಧ ಪ್ರಾರಂಭವಾಗಿ ಒಂದು ವರ್ಷವಷ್ಟೇ ಆಗಿತ್ತು. ಅದು 1951. ಧ್ವಂಸಗೊಂಡ ಕಟ್ಟಡಗಳು ಮತ್ತು ಮನೆಗಳ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿತ್ತು. ಇಂಥ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿರುವುದು ವಾಡಿಕೆ. ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್‍ನ ಉತ್ತರ ಭಾಗದಲ್ಲಿ ಅಮೇರಿಕನ್ ಸೇನೆಯ 7ನೇ ರೆಜಿಮೆಂಟ್‍ನ ಯೋಧರು ಇಂಥದ್ದೊಂದು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಪ್ರದೇಶದಲ್ಲಿ ಚೀನಾ ಬೆಂಬಲಿತ ಸೇನೆ ಮತ್ತು ಅಮೇರಿಕನ್ ಸೇನೆಯ ಮಧ್ಯೆ ಅದಾಗಲೇ ಕಾದಾಟ ನಡೆದಿತ್ತು. ಹೀಗೆ ಬದುಕುಳಿದವರನ್ನು ಹುಡುಕುತ್ತಾ ಯೋಧರು ಸಾಗುವಾಗ ಒಂದು ಮನೆಯಿಂದ ಅಸಾಧ್ಯ ಗಬ್ಬುವಾಸನೆ ಎದುರಾಯಿತು. ಆ ವಾಸನೆಯು ಎಷ್ಟು ಅಸಹ್ಯವಾಗಿತ್ತೆಂದರೆ ಆ ಮನೆಯಲ್ಲಿ ಹುಡುಕಾಟ ನಡೆಸುವುದಕ್ಕೆ ಎಲ್ಲ ಯೋಧರೂ ಬಹುತೇಕ ಹಿಂದಡಿಯಿಟ್ಟರು. ಹೀಗೆ ಅಲ್ಲಿಂದ ಹೊರಟು ಹೋಗಲು ಸಿದ್ಧರಾದವರಲ್ಲಿ ಓರ್ವ ಯೋಧ ಮನಸು ಬದಲಾಯಿಸಿ ಆ ಮನೆ ಪ್ರವೇಶಿಸಲು ಮುಂದಾದರು. ಆಗ ಕಂಡದ್ದೇ 5ರ ಹರೆಯದ ಕಾಂಗ್ ಕೂ ರಿ. ಆತನ ಪಕ್ಕ ಕೊಳೆತು ಹೋದ ತಾಯಿಯ ಶವ ಇತ್ತು. ಯೋಧನನ್ನು ಕಂಡದ್ದೇ ತಡ ಆ ಬಾಲಕನ ಕಣ್ಣಿನಿಂದ ದರದರನೆ ಕಣ್ಣೀರು ಹರಿಯಿತು. ಹಸಿವಿನಿಂದ ಕಂಗಾಲಾಗಿದ್ದ ಕಾಂಗ್ ಕೂ ರಿ ಬರೇ ನೋಡುತ್ತಿದ್ದ. ಮಾತಾಡುತ್ತಿರಲಿಲ್ಲ. ಆತನನ್ನು ರಕ್ಷಿಸಿದ ಯೋಧರು ಬಟ್ಟೆ ತೊಡಿಸಿದರು. ಮಕ್ಕಳ ಅನಾಥಾಶ್ರಮಕ್ಕೆ ಸೇರಿಸಿದರು. ವಿಶೇಷ ಏನೆಂದರೆ, ತಿಂಗಳುಗಳು ಉರುಳಿದರೂ ಆತನಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಬರೇ ಮೌನ. ಮಾತೂ ಇಲ್ಲ. ಇಡೀ ಅನಾಥಾಶ್ರಮದಲ್ಲಿ ಕಾಂಗ್ ಕೂ ರಿ ಒಂದು ಒಗಟಾಗಿದ್ದ. ಒಂಟಿಯಾಗಿ ಕೂರುವ ಆ ಬಾಲಕನ ಬಗ್ಗೆ ಎಲ್ಲರಲ್ಲೂ ಆತಂಕ ಮತ್ತು ಅನುಕಂಪ ಇತ್ತು. ಈ ಬಾಲಕನ ಬಗ್ಗೆ ಅತ್ಯಂತ ಆಸಕ್ತಿ ತಳೆದವರು ಅಮೇರಿಕದ ಲೈಫ್ ಮ್ಯಾಗಸಿನ್‍ನ ಛಾಯಾಗ್ರಾಹಕ ಮೈಕೆಲ್ ರೋಜರ್ ಎಂಬವರು. ಅವರು ಆಗಾಗ ಈ ಅನಾಥಾಶ್ರಮಕ್ಕೆ ಭೇಟಿ ಕೊಡುತ್ತಿದ್ದರು. ಕಾಂಗ್ ಕೂ ರಿಯ ಚಲನ-ವಲನಗಳ ಬಗ್ಗೆ ಗಮನವಿಟ್ಟಿದ್ದರು. ತಿಂಗಳುಗಳ ಬಳಿಕ ಒಂದು ದಿನ ಇಡೀ ಅನಾಥಾಶ್ರಮದಲ್ಲಿ ಸಂತಸದ ಕಳೆ ಮೂಡಿತು. ಅದಕ್ಕೆ ಕಾರಣ ಏನೆಂದರೆ, ಕಾಂಗ್ ಕೂ ರಿ
ಮಾತಾಡಿದ್ದು. ಅನಾಥಾಶ್ರಮದ ಶಿನ್‍ಸಂಗ್ ಎಂಬ ಹುಡುಗಿ ಆತನನ್ನು ಮಾತಾಡಿಸುವಲ್ಲಿ ಯಶಸ್ವಿಯಾಗಿದ್ದಳು. ‘ಈ ಜಗತ್ತಿನಲ್ಲಿ ನೀನು ಏನನ್ನು ಹೆಚ್ಚು ಇಷ್ಟಪಡುತ್ತೀ..’ ಎಂದು ಆಕೆ ಕೇಳಿದಳು. ತುಸು ಹೊತ್ತು ಮೌನವನ್ನೇ ಪಾಲಿಸಿದ ಕಾಂಗ್ ಕೂ ರಿ ಬಳಿಕ ‘ಜೀಪ್‍ನಲ್ಲಿ ಆಡುವ ಮತ್ತು ಅದನ್ನು ಚಲಾಯಿಸುವ ಆಸೆ ಇದೆ’ ಎಂದು ಮೊದಲ ಬಾರಿ ಬಾಯಿ ತೆರೆದಿದ್ದ. ‘ಅದನ್ನು ನಿನಗೆ ಒದಗಿಸೋಣ. ಆದರೆ ಅದಕ್ಕಿಂತ ಮೊದಲು ನೀನು ಒಮ್ಮೆ ನಗಬೇಕು...'ಎಂದು ಆಕೆ ಷರತ್ತು ಹಾಕಿದಳು. ಆಗ ಕಾಂಗ್ ಕೂ ರಿ ಸಣ್ಣಗೆ ನಗು ಸೂಸಿದ. ಯೋಧರ ಕೈಗೆ ಸಿಕ್ಕ ಬಳಿಕ ಆತ ನಕ್ಕದ್ದು ಅದೇ ಮೊದಲು. ಆ ಕ್ಷಣವನ್ನು ಮೈಕೆಲ್ ರೋಜರ್ ತನ್ನ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡರು. ಮಾತ್ರವಲ್ಲ, 1951 ಜುಲೈಯಲ್ಲಿ ‘The Little boy who wouldn't smile’ ಎಂಬ ಶೀರ್ಷಿಕೆಯಲ್ಲಿ ಲೈಫ್ ಮ್ಯಾಗಸಿನ್‍ನಲ್ಲಿ ಚಿತ್ರ ಸಮೇತ ಲೇಖವೊಂದನ್ನು ಬರೆದರು. ಆ ಚಿತ್ರ ಮತ್ತು ಲೇಖನ ಜಾಗತಿಕ ಸಂಚಲನಕ್ಕೆ ಕಾರಣವಾಯಿತು. ಯುದ್ಧವು ಮಕ್ಕಳ ಮೇಲೆ ಬೀರುವ ಆಘಾತಗಳ ಬಗ್ಗೆ ಚರ್ಚೆಯೊಂದನ್ನು ಹುಟ್ಟುಹಾಕಿತು.       
         “ನೀವು ಯುದ್ಧ ಸುದ್ದಿಗಳನ್ನು ನಿಮ್ಮ ಪಾನೀಯಗಳ ಮಧ್ಯೆಯೋ ಗೆಳೆಯರ ನಡುವೆ ಕುಶಲೋಪರಿಯ ನಡುವೆಯೋ ಪ್ರಸ್ತಾಪಿಸಿ ಏನೂ ಆಗಿಲ್ಲವೆಂಬಂತೆ ಸಹಜವಾಗಿಯೇ ಬೇರೆ ವಿಷಯಗಳೆಡೆಗೆ ಹೊರಳಬಲ್ಲಿರಿ. ನಿಮಗದರ ತೀವ್ರತೆ ತಟ್ಟುವ ಸಾಧ್ಯತೆ ಕಡಿಮೆ. ಆದರೆ ಯುದ್ಧ ಹಾಗಲ್ಲ. ಯುದ್ಧದಿಂದ ಸೃಷ್ಟಿಯಾದ ಈ ಅನಾಥ ಮಕ್ಕಳಿಗೆ ಯುದ್ಧದ ಹೊರತು ಇನ್ನಾವುದರ ನೆನಪೂ ಇಲ್ಲ. ತಮ್ಮ ಕಣ್ಣೆದುರೇ ತಂದೆ, ತಾಯಿ, ಅಕ್ಕ-ತಂಗಿಯರ ಸಾವನ್ನು ಕಂಡು ಅವು ಮಾತಾಡಲಾರದಷ್ಟು ಮತ್ತು ಆಹಾರವನ್ನೂ ಸೇವಿಸಲಾರದಷ್ಟು ದಿಗ್ಮೂಢವಾಗಿವೆ. ಆ ದೃಶ್ಯ ಮಕ್ಕಳನ್ನು ಪ್ರತಿಕ್ಷಣ ಕುಕ್ಕಿ ಕುಕ್ಕಿ ಅಧೀರಗೊಳಿಸುತ್ತಿವೆ. ಪ್ಲೀಸ್ ಮಕ್ಕಳಿಗೇನಾದರೂ ಸಹಾಯ ಮಾಡಿ..” ಎಂದು ಮೈಕೆಲ್ ರೋಜರ್ ಪತ್ರಿಕೆಯ ಮೂಲಕ ಕೇಳಿಕೊಂಡರು. ತಮ್ಮ ಗೆಳೆಯರು, ಸಂಪರ್ಕದಲ್ಲಿರುವವರೊಂದಿಗೆ ವಿನಂತಿಸಿದರು. ಒಂದು ರೀತಿಯಲ್ಲಿ, ಕೊರಿಯನ್ ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ. 3 ವರ್ಷಗಳ ತನಕ ನಡೆದ ಯುದ್ಧವನ್ನು 3 ಸಾವಿರ ವರ್ಷ ಕಳೆದರೂ ನೆನಪಿಸುವ ಮುಖ. ಯುದ್ಧ ಯಾಕೆ ಬೇಡ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಮುಖ.
     ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಿರುದ್ಧ ನಡೆಸಿದ ಸರ್ಜಿಕಲ್ ಕಾರ್ಯಾಚರಣೆಯ ಬಳಿಕ ಅವರ ಬೆಂಬಲಿಗರು ಹಾಗೂ ಮಾಧ್ಯಮದ ಒಂದು ವರ್ಗದಲ್ಲಿ ಕಾಣಿಸುತ್ತಿರುವ ಯುದ್ಧೋನ್ಮಾದ ಮತ್ತು ರಣೋತ್ಸವವನ್ನು ನೋಡುವಾಗ ಇವೆಲ್ಲವನ್ನೂ ಹಂಚಿಕೊಳ್ಳಬೇಕೆನಿಸಿತು.

Wednesday, September 21, 2016

ಉನಾದಿಂದ ಚಲೋ ಉಡುಪಿವರೆಗೆ..

        ಗುಜರಾತ್‍ನ ಗಿರ್ ಸೋಮನಾಥ ಜಿಲ್ಲೆಯ ಉನಾ ಎಂಬ ಪ್ರದೇಶಕ್ಕೂ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಬ್ರಿ ಎಂಬ ಗ್ರಾಮಕ್ಕೂ ನಡುವೆ ನೂರಾರು ಕಿಲೋ ಮೀಟರ್‍ಗಳಷ್ಟು ಅಂತರವಿದೆ. ಉನಾದಲ್ಲಿ ನಾಲ್ವರು ದಲಿತ ಯುವಕರನ್ನು ಕಾರ್‍ಗೆ ಕಟ್ಟಿಹಾಕಿ ಥಳಿಸಲಾದ ಘಟನೆ ಜುಲೈ 11ರಂದು ನಡೆದಿದ್ದರೆ ಹೆಬ್ರಿಯಲ್ಲಿ ಪ್ರವೀಣ್ ಪೂಜಾರಿಯನ್ನು ಥಳಿಸಿ ಕೊಲ್ಲಲಾದ ಘಟನೆ ನಡೆದದ್ದು ಆಗಸ್ಟ್ 17 ರಂದು. ಇವೆರಡರ ನಡುವೆಯೂ ಸುಮಾರು 36 ದಿವಸಗಳ ವ್ಯತ್ಯಾಸ ಇದೆ. ಆದರೆ, ಈ ವ್ಯತ್ಯಾಸಗಳನ್ನು ಹೊರತು ಪಡಿಸಿದರೆ ಉಳಿದಂತೆ ಈ ಎರಡೂ ಘಟನೆಗಳಲ್ಲಿ ಪರಸ್ಪರ ಹೋಲಿಕೆಗೆ ಸಿಗುವ ಒಂದಕ್ಕಿಂತ ಹೆಚ್ಚು ಅಂಶಗಳಿವೆ.
 1. ಎರಡೂ ಕಡೆ ಥಳಿತಕ್ಕೆ ಒಳಗಾದವರು ದಲಿತ ಮತ್ತು ಹಿಂದುಳಿದ ಜಾತಿಗೆ ಸೇರಿದವರು.
2. ಥಳಿಸಿದವರು ಕೂಡ ಅವೇ ಜಾತಿಗಳನ್ನು ಪ್ರತಿನಿಧಿಸುವವರು.
3. ಎರಡೂ ಘಟನೆಗಳಲ್ಲಿ ಸುಮಾರು 50 ರಷ್ಟು ಮಂದಿ ಜೈಲು ಪಾಲಾಗಿದ್ದಾರೆ.
4. ಆದರೆ ಗೋ ರಕ್ಷಣೆ ಎಂಬ ಅಮಲುಭರಿತ ಹೆಸರಿನಲ್ಲಿ ಒಟ್ಟುಗೂಡಿಸಿ ಇವರನ್ನು ಛೂ ಬಿಟ್ಟವರಲ್ಲಿ ಯಾರೂ ಇವರನ್ನು ಸಮರ್ಥಿಸಿ ಚಳವಳಿ ನಡೆಸಿಲ್ಲ. ಪ್ರತಿಭಟನೆಯನ್ನೂ ಏರ್ಪಡಿಸಿಲ್ಲ. ಆದರೆ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋರಕ್ಷಕರು ಮುಹಮ್ಮದ್ ಅಖ್ಲಾಕ್ ಎಂಬವರನ್ನು ಹತ್ಯೆ ನಡೆಸಿದ್ದನ್ನು ಬೆಂಬಲಿಸಲು ಮತ್ತು ಸಮರ್ಥಿಸಿಕೊಳ್ಳಲು ಬಿಜೆಪಿಯ ಸಂಸದರೇ ಮುಂದೆ ಬಂದಿದ್ದರು. ಉನಾ ಮತ್ತು ಹೆಬ್ರಿ ಈ ಎರಡೂ ಘಟನೆಗಳಿಗೆ ಗೋವೇ ಕೇಂದ್ರೀಯ ವಿಷಯ ಆಗಿದ್ದರೂ ಬಿಜೆಪಿಯ ಯಾವೊಬ್ಬ ಸಂಸದನೂ ಶಾಸಕನೂ ಗೋರಕ್ಷಕರನ್ನು ಬೆಂಬಲಿಸಿ ಹೇಳಿಕೆ ಕೊಡಲಿಲ್ಲ. ಈ ಮಂದಿಯ ಮನೆಗಳಿಗೆ ಬಹಿರಂಗವಾಗಿ ಭೇಟಿಕೊಡಲಿಲ್ಲ. ಎಲ್ಲೂ ಯಾವ ವೇದಿಕೆಯಲ್ಲೂ ಈ ಮಂದಿಗೆ ಸಾಂತ್ವನವನ್ನು ವ್ಯಕ್ತಪಡಿಸಲಿಲ್ಲ. ಒಂದು ರೀತಿಯಲ್ಲಿ, ಈ ಎರಡೂ ಘಟನೆಗಳಲ್ಲಿ ಜೈಲು ಪಾಲಾದ 50 ರಷ್ಟು ಹಿಂದುಳಿದ- ದಲಿತ ಜನಾಂಗದ ಯುವಕರನ್ನು ಅಸ್ಪೃಶ್ಯಗೊಳಿಸಲಾಗಿದೆ. ಎಲ್ಲಿಯವರೆಗೆ ಅವರು ಸಮಾಜದಿಂದ ತಿರಸ್ಕ್ರತಗೊಂಡರೆಂದರೆ, ಅವರನ್ನು ಈ ಕೃತ್ಯಕ್ಕೆ ದೂಡಿದವರೇ ಬಹಿರಂಗವಾಗಿ ಅವರ ಬೆಂಬಲಕ್ಕೆ ನಿಲ್ಲಲಾರದಷ್ಟು. ಹಾಗಂತ, ಈ ಯುವಕರ ಮನೆ-ಮಂದಿಯೆಲ್ಲಾ ಅವರ ಚಟುವಟಿಕೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಹೇಳುವಂತಿಲ್ಲ. ಗೋವಿನ ಹೆಸರಲ್ಲಿ ಅವರನ್ನು ದುಷ್ಕರ್ಮಕ್ಕೆ ಬಳಸಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಸಂಘಟನೆಗಳ ಬಗ್ಗೆ ಅವರಲ್ಲಿ ದೂರುಗಳಿರಬಹುದು. ತಮ್ಮ ಮಗ ಕ್ರಿಮಿನಲ್ ಆರೋಪದೊಂದಿಗೆ ಜೈಲಿನಲ್ಲೋ ತಲೆಮರೆಸಿಕೊಂಡೋ ಬದುಕುವುದು ಮತ್ತು ಆತನನ್ನು ಅದಕ್ಕೆ ಪ್ರೇರೇಪಿಸಿದವರ ಮಕ್ಕಳು ಪ್ರೊಫೆಸರ್, ಡಾಕ್ಟರ್, ಇಂಜಿನಿಯರ್, ಐಟಿ ತಜ್ಞರಾಗಿ ಎಲ್ಲೋ ದೂರದಲ್ಲಿ ಸುರಕ್ಷಿತವಾಗಿ ಪತ್ನಿ-ಮಕ್ಕಳು-ಕುಟುಂಬ ಎಂದೆಲ್ಲಾ ಆರಾಮವಾಗಿ ಬದುಕುವುದು ಅವರೊಳಗನ್ನು ಕಾಡುತ್ತಿರಬಹುದು. ‘ಗೋರಕ್ಷಣೆಗೆ ತಮ್ಮ ಮಕ್ಕಳೇ ಯಾಕೆ ಬೇಕು..’ ಎಂಬ ಪ್ರಶ್ನೆ ಅವರಲ್ಲೂ ಇರಬಹುದು. ಮಾಧ್ಯಮ ಕ್ಯಾಮರಾದ ಕಣ್ಣಿಗೆ ಸಿಕ್ಕದಂತೆ ಕದ್ದು ಮುಚ್ಚಿ ಅವರ ಮನೆಗೆ ಭೇಟಿ ಕೊಟ್ಟಿರಬಹುದಾದ ನಾಯಕರಲ್ಲಿ ಹೆತ್ತವರು ಈ ಪ್ರಶ್ನೆಯನ್ನು ಕೇಳಿರಲೂಬಹುದು. ಸದ್ಯದ ಸವಾಲು ಏನೆಂದರೆ, ಈ ದಮನಿತರನ್ನು ನಾವು ಒಂದೇ ಬಿಂದುವಿನೊಳಗೆ ಕರೆತರುವುದು ಹೇಗೆ? ಜಾಗತೀಕರಣದ ಯೂಸ್ ಆಂಡ್ ಥ್ರೋ ನೀತಿಯನ್ನು ಅತ್ಯಂತ ಸಮರ್ಪಕವಾಗಿ ತಮ್ಮ ಮೇಲೆ ಪ್ರಯೋಗಿಸಲಾಗುತ್ತಿದೆ ಎಂಬುದನ್ನು ಅವರಿಗೆ ಅರ್ಥಮಾಡಿಸುವುದು ಹೇಗೆ? ಈ ಹಿಂದೆ ಹುಟ್ಟಿನ ಆಧಾರದಲ್ಲಿ ಯಾರು ಅಧಿಕಾರಯುತವಾಗಿ ದಮನಿಸುತ್ತಿದ್ದರೋ ಅವರೇ ಇವತ್ತು ಗೋವಿನ ನೆಪದಲ್ಲಿ ಅದೇ ದಮನ ಕಾರ್ಯವನ್ನು ಚಾಲ್ತಿಯಲ್ಲಿರಿಸಿದ್ದಾರೆ ಎಂಬ ಅರಿವನ್ನು ಮೂಡಿಸು ವುದು ಹೇಗೆ? ಅಷ್ಟಕ್ಕೂ,
       ಉನಾ ಘಟನೆಯನ್ನು ಖಂಡಿಸಿ ಗುಜರಾತ್‍ನಲ್ಲಿ ಜಿಗ್ನೇಶ್ ಮೇವಾನಿ ಆಯೋಜಿಸಿದ ಪ್ರತಿಭಟನಾ ಚಳವಳಿಯ ಯಶಸ್ಸಿನ ಹಿಂದೆ ಅಲ್ಲಿಯದ್ದೇ ಆದ ಸಮಸ್ಯೆಗಳ ಪಾಲು ಖಂಡಿತ ಇದೆ. ಭಾರತದ ಒಟ್ಟು ಜನಸಂಖ್ಯೆಯ 2.33% ಮಂದಿ ದಲಿತರು ಮಾತ್ರವೇ ಗುಜರಾತ್‍ನಲ್ಲಿದ್ದರೂ ದೇಶದಲ್ಲಿಯೇ ಅತ್ಯಂತ ಹೆಚ್ಚು ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿರುವುದು ಅಲ್ಲಿಯೇ ಎಂಬುದೂ ಈ ಕಾರಣಗಳಲ್ಲಿ ಒಂದು ಆಗಿರಬಹುದು. ಗುಜರಾತ್‍ನಲ್ಲಿ ಇವತ್ತಿಗೂ ಶೇ. 90 ರಷ್ಟು ದೇವಸ್ಥಾನಗಳಲ್ಲಿ ದಲಿತರಿಗೆ ಪ್ರವೇಶ ಇಲ್ಲ. 54% ಸರಕಾರಿ ಶಾಲೆಗಳಲ್ಲಿ ದಲಿತ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳುವುದಕ್ಕೆ ಪ್ರತ್ಯೇಕ ಸ್ಥಳಗಳಿವೆ. 2010ರಲ್ಲಿ ಅಹ್ಮದಾಬಾದ್‍ನಲ್ಲಿ ನಡೆದ ಸಭೆಯೊಂದರಲ್ಲಿ ಬಹಿರಂಗಪಡಿಸಲಾದ ಮಾಹಿತಿಯೊಂದು ಇದಕ್ಕಿಂತಲೂ ಭಯಾನಕ. ಸೌರಾಷ್ಟ್ರದ ಸುಮಾರು 1500 ದಲಿತ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಲಾಗಿತ್ತು. ದಲಿತರಿಗೆಂದೇ ಮೀಸಲಿರಿಸಲಾಗಿದ್ದ ಭೂಮಿಯಲ್ಲಿ ಬಹುತೇಕವೂ ಮಿಕ್ಕವರ ಪಾಲಾಗಿದೆ. ಗೋಮಾಳಗಳು ಒತ್ತುವರಿಯಾಗಿವೆ. ಕನಿಷ್ಠ ವೇತನವಾಗಿ ನಿಗದಿಗೊಳಿಸಲಾಗಿರುವ 175 ರೂಪಾಯಿಯ ಬದಲು ದಲಿತರು 50-60 ರೂಪಾಯಿಯನ್ನಷ್ಟೇ ಕೂಲಿಯಾಗಿ ಪಡೆಯುತ್ತಲೂ ಇದ್ದಾರೆ...' ಇವು ಮತ್ತು ಇಂಥ ಇನ್ನಿತರ ತಳ ಮಟ್ಟದ ಕಾರಣಗಳು ಜಿಗ್ನೇಶ್ ಚಳುವಳಿಯನ್ನು ಯಶಸ್ವಿಯಾಗಿಸಿರಬಹುದು. ಹಾಗಂತ, ಕರ್ನಾಟಕವು ಗುಜರಾತ್‍ನ ತದ್ರೂಪವೇನೂ ಅಲ್ಲವಲ್ಲ. ಇಲ್ಲಿ ದಲಿತರು ಮತ್ತು ದಮನಿತರು ಸುಮಾರು ಎರಡು ಕೋಟಿಯಷ್ಟಿದ್ದಾರೆ ಎಂಬುದು ನಿಜ. ಆದರೆ ಈ ಬೃಹತ್ ಜನಸಂಖ್ಯೆಯ ವೃತ್ತಿ ಮತ್ತು ಪ್ರವೃತ್ತಿಗಳಲ್ಲಿ ಗುಜರಾತ್‍ಗೆ ಹೋಲಿಸಿದರೆ ವ್ಯತ್ಯಾಸಗಳಿವೆ. ಪ್ರವೀಣ್ ಪೂಜಾರಿಯನ್ನು ಹತ್ಯೆ ಮಾಡಲಾದ ಉಡುಪಿ ಜಿಲ್ಲೆ ಮತ್ತು ಅದರ ಪಕ್ಕದ ದ.ಕ. ಜಿಲ್ಲೆಗಳನ್ನೇ ಎತ್ತಿಕೊಳ್ಳಿ. ಸತ್ತ ದನದ ಚರ್ಮ ಸುಲಿಯುವ ದಲಿತರು ಈ ಎರಡು ಜಿಲ್ಲೆಗಳಲ್ಲಿ ಕಾಣಸಿಗುವುದು ಶೂನ್ಯ ಅನ್ನುವಷ್ಟು ಕಡಿಮೆ. ‘ತಾನು ಕೋಳಿ ಪದಾರ್ಥವನ್ನು ಸೇವಿಸುತ್ತೇನೆ.. ’ ಅನ್ನುವಷ್ಟೇ ಸಹಜವಾಗಿ ‘ತಾನು ದನದ ಮಾಂಸದ ಪದಾರ್ಥವನ್ನು ಸೇವಿಸುತ್ತೇನೆ.. ’ ಎಂದು ಹೇಳುವ ದಲಿತರು ಅಪರೂಪವಾಗುತ್ತಿದ್ದಾರೆ. ಹಾಗಂತ, ಅವರು ಅದನ್ನು ಸೇವಿಸುತ್ತಿಲ್ಲ ಎಂದಲ್ಲ. ಆದರೆ ಹೇಳುವುದಕ್ಕೆ ಎಲ್ಲೋ ಏನೋ ಮುಜುಗರ. ಒಂದು ಬಗೆಯ ಅಪರಾಧಿ ಭಾವ. ಅದೇವೇಳೆ, ಈ ದಮನಿತ ಸಮುದಾಯ ಪರಂಪರಾಗತವಾಗಿ ನಡಕೊಂಡು ಬರುತ್ತಿರುವ ದೈವಗಳು, ಭೂತಗಳು ಇವತ್ತು ಈ ಹಿಂದಿಗಿಂತಲೂ ಅದ್ದೂರಿಯಾಗಿ ಆಚರಣೆಗೆ ಒಳಗಾಗುತ್ತಿವೆ. ಭೂತ ಕೋಲಗಳು  ವಿಜೃಂಭಣೆಯಿಂದ ನಡೆಯುತ್ತಿವೆ. ಆದರೆ ಅದರ ಸ್ವರೂಪ ಬದಲಾಗಿದೆ. ಪರಂಪರೆಯ ಯಾವ ಸಂಬಂಧವೂ ಇಲ್ಲದೇ ಅವೆಲ್ಲ ಇನ್ನಾವುದೋ ಆಚರಣೆಯ ಪ್ರಭಾವಕ್ಕೆ ಒಳಗಾಗಿ ಬಿಟ್ಟಿವೆ. ದಲಿತ ಮತ್ತು ದಮನಿತ ಸಮುದಾಯದ ಒಂದೊಂದೇ ಆಚರಣೆ ಮತ್ತು ಸಾಂಸ್ಕೃತಿಕ ವೈಶಿಷ್ಟ್ಯಗಳು ತನ್ನ ಹುಟ್ಟು ಸತ್ಯದಿಂದ ಕಳಚಿಕೊಂಡು ದಮನಿಸಿದವರ ಪ್ರಭಾ ವಲಯದೊಳಕ್ಕೆ ಸೇರಿಕೊಳ್ಳುತ್ತಿದೆ. ಅಲ್ಲಿಂದ ಕಡ ತಂದೋ ಅಥವಾ ಅವರ ನಿರ್ದೇಶನದ ಪ್ರಕಾರವೋ ಅಥವಾ ಅವರದೇ ನಾಯಕತ್ವದಲ್ಲೋ ಒಟ್ಟು ಕಾರ್ಯಕ್ರಮಗಳು ನಡೆಯತೊಡಗಿವೆ. ಒಂದು ಕಾಲದಲ್ಲಿ ದನದ ಮಾಂಸ ತಮ್ಮ ಮೆನುವಿನಲ್ಲಿ ಸಹಜವಾಗಿದ್ದರೂ ಇವತ್ತು ಅದನ್ನು ಮೆನುವಿನ ಭಾಗವೆಂದು ಹೇಳಲು ಹಿಂಜರಿಕೆ ಕಾಣಿಸುತ್ತಿರುವುದರ ಹಿಂದೆ ಈ ಪಲ್ಲಟದ ಹಿನ್ನೆಲೆಯಿದೆ. ಆದರೆ ಈ ಸಮುದಾಯದ ಮಲ ಎತ್ತುವ ಪರಂಪರಾಗತ ವೃತ್ತಿಯನ್ನು ಅಧಮ ಎಂದು ಸಾರಲೋ ಅಥವಾ ಅವರನ್ನು ಸಬಲೀಕರಣಗೊಳಿಸಲೋ ಇವತ್ತಿಗೂ ಈ ಬಳಸಿಕೊಳ್ಳುತ್ತಿರುವವರು ಮುಂದಾಗಿಲ್ಲ. ದನದ ಬಗ್ಗೆ ಪವಿತ್ರತೆಯ ಪ್ರಶ್ನೆಯನ್ನು ಬೆಳೆಸಿದಂತೆಯೇ ಮಲ ಎತ್ತುವ ವೃತ್ತಿಗೆ ಬಹಿಷ್ಕಾರ ಹಾಕುವಂತೆ ಅವರು ಹೋರಾಟ ನಡೆಸಿದ ಉದಾಹರಣೆಯಿಲ್ಲ. ದಲಿತ ಸಮುದಾಯದ ಮಕ್ಕಳು ಇವತ್ತಿಗೂ ದೊಡ್ಡ ಸಂಖ್ಯೆಯಲ್ಲಿ ಸರಕಾರಿ ಶಾಲೆಗಳನ್ನೇ ಆಶ್ರಯಿಸಿ ಕೊಂಡಿದ್ದಾರೆ. ಅದೇವೇಳೆ, ಇವರನ್ನು ದೇಶಪ್ರೇಮ ಮತ್ತು ಗೋಪ್ರೇಮದ ಹೋರಾಟಕ್ಕೆ ತಯಾರುಗೊಳಿಸುವವರ ಮಕ್ಕಳು ಖಾಸಗಿ ಶಾಲೆಗೆ ಟೈ-ಕೋಟು, ಬೂಟುಗಳನ್ನು ಏರಿಸಿಕೊಂಡು ಹೋಗುತ್ತಲಿದ್ದಾರೆ. ಸರಕಾರದ ಉನ್ನತ ಹುದ್ದೆಗಳಲ್ಲಿ, ಐಟಿ-ಬಿಟಿ ಉದ್ಯೋಗಿಗಳಲ್ಲಿ ಎಷ್ಟು ಮಂದಿ ದಮನಿತರು ಇದ್ದಾರೆ ಎಂಬ ಬಗ್ಗೆ ನಡೆಸಲಾದ ಅನೇಕಾರು ಸರ್ವೇಗಳು ಹೇಳಿರುವ ಫಲಿತಾಂಶ ಒಂದೇ- ಆ ಉದ್ಯೋಗಗಳೆಲ್ಲ ದಮನಿತರಿಗೆ ದಕ್ಕುತ್ತಲೇ ಇಲ್ಲ.’ ಇವತ್ತು ಕಾಲೇಜಿಗೆ ಹೋಗುವ ದಮನಿತ ಸಮುದಾಯದ ಮಕ್ಕಳ ಮೇಲೂ ಕ್ರಿಮಿನಲ್ ಕೇಸುಗಳಿವೆ. ಶಾಲೆಯಿಂದ ಹೊರಬಂದವರ ಮೇಲೂ ಇದೆ. ಕೆಲವರು ಜೈಲಲ್ಲಿದ್ದಾರೆ. ಅವರನ್ನೇ ನಂಬಿಕೊಂಡ ಮನೆಯವರು ಅತ್ತ ಜೈಲಿಗೂ ಇತ್ತ ಕೋರ್ಟಿಗೂ ನಡೆದು ಚಪ್ಪಲಿ ಸವೆಸುತ್ತಿದ್ದಾರೆ. ಈ ದೇಶದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾದರೂ ದಲಿತರಿದ್ದಾರೋ ಎಂದು ಹುಡುಕಿದರೆ ಸಿಗಬಹುದಾದ ಫಲಿತಾಂಶ ಏನು? ಭೂಮಾಲಕರಲ್ಲಿ ಎಷ್ಟು ಮಂದಿ ದಲಿತರಿದ್ದಾರೆ? ಕಾಫಿ ತೋಟ, ರಬ್ಬರ್ ಪ್ಲಾಂಟ್, ಗದ್ದೆ, ಅಡಿಕೆ, ತೆಂಗು, ಕಬ್ಬು, ಆಲೂಗಡ್ಡೆ, ನೀರುಳ್ಳಿ... ಮುಂತಾಗಿ ವಿಶಾಲ ಕೃಷಿ ಭೂಮಿಯ ಒಡೆಯರಲ್ಲಿ ಎಷ್ಟು ಮಂದಿ ದಲಿತರು ಮತ್ತು ದಮನಿತರಿದ್ದಾರೆ? ಎಷ್ಟು ಮಂದಿ ದಲಿತ ಉದ್ಯಮಿಗಳಿದ್ದಾರೆ? ಬಿಲ್ಡರ್‍ಗಳಿದ್ದಾರೆ? ಭೂತಗನ್ನಡಿ ಹಿಡಿದು ಹುಡುಕಿದರೂ ದಲಿತರು ನಡೆಸುವ ಹೊಟೇಲ್‍ಗಳೇಕೆ ಕಾಣಿಸುತ್ತಿಲ್ಲ? ದಲಿತರ ಎಷ್ಟು ಕ್ಲಿನಿಕ್‍ಗಳಿವೆ, ಆಸ್ಪತ್ರೆಗಳಿವೆ, ಶಾಲೆಗಳಿವೆ?
      ಬಹುಶಃ ಕರ್ನಾಟಕದಲ್ಲಿ ಅದರಲ್ಲೂ ಗೋರಕ್ಷಣೆಯ ಹೆಸರಲ್ಲಿ ಅತ್ಯಂತ ಹೆಚ್ಚು ಥಳಿತ ಘಟನೆಗಳು ನಡೆಯುತ್ತಿರುವ ದ.ಕ., ಉಡುಪಿ ಜಿಲ್ಲೆಗಳಲ್ಲಿ ದಲಿತ ಮತ್ತು ದಮನಿತ ಸಮುದಾಯಗಳೊಳಗೆ ಒಂದು ಬಗೆಯ ಶ್ಮಶಾನ ಮೌನವಿದೆ. ಈ ಹಿಂದೆ ಇವರನ್ನು ಯಾರು ದಮನಿಸುತ್ತಿದ್ದರೋ ಅವರೇ ಇವತ್ತೂ ಈ ಹಿಂದಿಗಿಂತಲೂ ಚೆನ್ನಾಗಿ ಶೋಷಿಸುತ್ತಿದ್ದಾರೆ. ಅದೇವೇಳೆ, ಬದಲಾದ ಕಾಲಕ್ಕೆ ತಕ್ಕಂತೆ ತಮ್ಮ ದಮನ ಕಾರ್ಯದಲ್ಲಿ ಅವರು ಕೆಲವು ರಾಜಿಗಳನ್ನೂ ಮಾಡಿಕೊಂಡಿದ್ದಾರೆ. ಈ ಜಿಲ್ಲೆಗಳಲ್ಲಿ ಅಸ್ಪೃಶ್ಯತೆ ಸುದ್ದಿಯಾಗುವುದಿಲ್ಲ. `ದೇವಸ್ಥಾನ ಪ್ರವೇಶಕ್ಕೆ ತಡೆ...' ಎಂಬ ಶೀರ್ಷಿಕೆಯಲ್ಲಿ ಸುದ್ದಿಗಳು ಪ್ರಕಟವಾಗುವುದಿಲ್ಲ. ನಿಜವಾಗಿ, ಮನುಷ್ಯ ಬಯಸುವ ಮೂಲಭೂತ ಸ್ವಾತಂತ್ರ್ಯ ಇದು. ಪ್ರತಿಯೋರ್ವ ವ್ಯಕ್ತಿಯೂ ತನ್ನನ್ನು ಪ್ರೀತಿಸುತ್ತಾನೆ. ಇತರರಿಂದ ಪ್ರೀತಿ ಮತ್ತು ಗೌರವವನ್ನು ಬಯಸುತ್ತಾನೆ. ಸದ್ಯ ದಮನಿತ ಸಮೂಹಕ್ಕೆ ಅವನ್ನು ಈ ಎರಡೂ ಜಿಲ್ಲೆಗಳಲ್ಲಿ ಬಹುತೇಕ ಒದಗಿಸಿಕೊಡಲಾಗಿದೆ. ಆದರೆ, ಅದರ ಬದಲಾಗಿ ಅವರಿಂದ ಗೌರವಾರ್ಹ ಬದುಕಿನ ಸ್ವಾತಂತ್ರ್ಯವನ್ನೇ ಕಸಿದುಕೊಳ್ಳಲಾಗುತ್ತಿದೆ. ಅವರ ಶಿಕ್ಷಣ, ಉದ್ಯೋಗ, ಸಬಲೀಕರಣ... ಎಲ್ಲವೂ ಒಂದು ಬಗೆಯಲ್ಲಿ ಇವಕ್ಕೆ ಅಡವು ಇಟ್ಟಂಥ ಸ್ಥಿತಿ ಇದೆ. ಈ ಹಿಂದೆ ಅವರು ಗೆರಟೆಯಲ್ಲಿ ನೀರನ್ನೋ ಚಾವನ್ನೋ ಕುಡಿಯಬೇಕಾಗಿತ್ತು. ಇವತ್ತಿನ ಹೊಸ ತಲೆಮಾರಿಗೆ ಜೈಲಿನ ಅಲ್ಯೂಮಿನಿಯಂ ತಟ್ಟೆಯನ್ನು ಗೆರಟೆಗೆ  ಪರ್ಯಾಯವಾಗಿ ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಅಂದೂ ಹಿಂದೆ, ಇಂದೂ ಹಿಂದೆ. ಅಂದು ರಸ್ತೆಯಲ್ಲಿ ಸರಿದು ನಿಲ್ಲಬೇಕಾದ ಒತ್ತಡ ಇದ್ದಿದ್ದರೆ ಇವತ್ತು ದಮನಿತ ಸಮೂಹದ ಅನೇಕ ಯುವ ತಲೆಮಾರಿಗೆ ಪೊಲೀಸರಿಂದ ತಲೆ ತಪ್ಪಿಸಿಕೊಂಡು ಬದುಕಬೇಕಾದ ಸ್ಥಿತಿ ಇದೆ. ಗೋರಕ್ಷಣೆಗೆ ಇವರನ್ನು ಬಳಸಿಕೊಳ್ಳುತ್ತಿರುವವರಲ್ಲಿ ಯಾರೂ ಕೂಡ ಈ ಯುವಕರ ತಂಗಿಯನ್ನೋ ಅಕ್ಕಳನ್ನೋ ತಮ್ಮ ಮನೆಯ ಸೊಸೆಯಾಗಿಸಿಕೊಂಡ ಯಾವ ಉದಾಹರಣೆಯೂ ಕಾಣಿಸುತ್ತಿಲ್ಲ..
       ಸದ್ಯ ಕರ್ನಾಟಕದಲ್ಲಿ ಈ ಕುರಿತಂತೆ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ದಲಿತ ಮತ್ತು ದಮನಿತ ಸಮುದಾಯದ ಪ್ರತಿ ಮನೆ ಮನೆಯಲ್ಲೂ ಇಂಥದ್ದೊಂದು ಚರ್ಚೆ ಹುಟ್ಟು ಹಾಕುವ ಜನ ಚಳವಳಿ ರೂಪು ಪಡೆಯಬೇಕಾಗಿದೆ. ‘ದುಷ್ಕೃತ್ಯಗಳಿಗೆ ನಮ್ಮ ಮನೆಯ ಮಕ್ಕಳಿಲ್ಲ..’ ಎಂಬ ಬೋರ್ಡು ದಮನಿತ ಸಮುದಾಯದ ಪ್ರತಿ ಮನೆಯಲ್ಲೂ ತೂಗುವಂತಹ ವಾತಾವರಣ ನಿರ್ಮಾಣವಾಗಬೇಕಾಗಿದೆ.
        ಅಕ್ಟೋಬರ್ 4 ರಂದು ಬೆಂಗಳೂರಿನಿಂದ ಹೊರಡುವ ಮತ್ತು ಪ್ರವೀಣ್ ಪೂಜಾರಿಯನ್ನು ಹತ್ಯೆ ನಡೆಸಲಾದ ಉಡುಪಿಯಲ್ಲಿ ಅಕ್ಟೋಬರ್ 9  ರಂದು ಒಟ್ಟುಸೇರಲಿರುವ ‘ಚಲೋ ಉಡುಪಿ ಜಾಥಾ’ವು ದಮನಿತರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂಬ ಹಾರೈಕೆ.

Friday, September 2, 2016

ಕಾಶ್ಮೀರದ ಕಲ್ಲು, ಮಾಧ್ಯಮ ಮತ್ತು ಒಂದು ವಿಡಿಯೋ

   
      ಜುಲೈ 11ರಂದು ನ್ಯೂಸ್‍ಲಾಂಡ್ರಿ ಎಂಬ ಪ್ರಮುಖ ಅಂತರ್ಜಾಲ ಮಾಧ್ಯಮದಲ್ಲಿ, Kashmir Unrest: What Delhi and
Kashmiri media saw (ಕಾಶ್ಮೀರದ ಅಶಾಂತಿ: ದೆಹಲಿ ಮತ್ತು ಕಾಶ್ಮೀರಿ ಮಾಧ್ಯಮದಲ್ಲಿ ಕಾಣಿಸಿದ ವ್ಯತ್ಯಾಸ) ಎಂಬ ಶೀರ್ಷಿಕೆಯಲ್ಲಿ ಮನೀಶ್ ಪಾಂಡೆಯವರ ಲೇಖನ ಪ್ರಕಟವಾಯಿತು. ‘ಸ್ಥಳೀಯ ಮಾಧ್ಯಮವಿಲ್ಲದೆ ಹಿಂಸೆಯ ಇನ್ನೊಂದು ಭಾಗ ನಿಮಗೆ ಗೊತ್ತಾಗದು..’ ಎಂಬ ಅಡಿಬರಹವನ್ನೂ ಮನೀಶ್ ಪಾಂಡೆ ಆ ಲೇಖನಕ್ಕೆ ಕೊಟ್ಟಿದ್ದರು. ಜುಲೈ 14ರಂದು ಇಂಡಿಯಾ ಟುಡೇ ಟಿ.ವಿ. ಚಾನೆಲ್‍ನಲ್ಲಿ ಕಾಶ್ಮೀರದ ಬಗ್ಗೆ ವಿಶೇಷ ವರದಿಯೊಂದು ಪ್ರಸಾರವಾಯಿತು. ‘ಕಾಶ್ಮೀರಿ ಕಣಿವೆಯನ್ನು ಪ್ರಕ್ಷುಬ್ಧಗೊಳಿಸುವುದಕ್ಕೆ ಪಾಕ್‍ನಿಂದ 100 ಕೋಟಿ ರೂಪಾಯಿ ಯೋಜನೆ..’ ಎಂಬರ್ಥ ಬರುವ ಶೀರ್ಷಿಕೆಯಲ್ಲಿ ಪ್ರಸಾರವಾದ ಈ 20 ನಿಮಿಷದ ವರದಿಯನ್ನು ತಯಾರಿಸಿದ್ದು ಚಾನೆಲ್‍ನ ಸಂಪಾದಕ ಗೌರವ್ ಸಾವಂತ್. ಇದಾಗಿ ಒಂದು ತಿಂಗಳಾದ ಬಳಿಕ ಆಗಸ್ಟ್ 19ರ ಆವೃತ್ತಿಯಲ್ಲಿ ಫ್ರಂಟ್‍ಲೈನ್ ಪತ್ರಿಕೆಯು ‘ಕಾಶ್ಮೀರದ ಕ್ರೋಧ’ (Wrath of Kashmir) ಎಂಬ ಹೆಡ್‍ಲೈನ್‍ನೊಂದಿಗೆ ಮುಖ್ಯ ಲೇಖನವನ್ನು ಪ್ರಕಟಿಸಿತು.   ಒಂದು ತಿಂಗಳ ಅವಧಿಯೊಳಗೆ ಪ್ರಕಟವಾದ ಈ ಎರಡು ಲೇಖನಗಳು ಮತ್ತು ಒಂದು ಟಿ.ವಿ. ವರದಿಯನ್ನು ಇಲ್ಲಿ ಉಲ್ಲೇಖಿಸಲು ಮುಖ್ಯ ಕಾರಣ ಏನೆಂದರೆ, ಮಾಧ್ಯಮಗಳ ಮೇಲೆ ಈಗಾಗಲೇ ಇರುವ ಪಕ್ಷಪಾತದ ಆರೋಪ, ಶಂಕೆ, ಟಿ.ಆರ್.ಪಿ. ತೆವಲಿನ ಚರ್ಚೆಯನ್ನು ಒಂದಷ್ಟು ಮುಂದಕ್ಕೆ ಕೊಂಡೊಯ್ಯುವುದಕ್ಕೆ. ಜುಲೈ 14ರ ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಕಾಶ್ಮೀರದ ಪ್ರಕ್ಷುಬ್ಧ ಸ್ಥಿತಿಗೆ ಎರಡು ಮುಖ್ಯ ಅಂಶಗಳನ್ನು ಕಾರಣವಾಗಿ ಕೊಡಲಾಯಿತು.

 1. ಪಾಕಿಸ್ತಾನದ ಕೈವಾಡ         
 2. ನಿರುದ್ಯೋಗ.
        ಇದೇ ವರದಿಯ ಆಧಾರದಲ್ಲಿ ಇನ್ನೆರಡು ಕಾರ್ಯಕ್ರಮಗಳೂ ಪ್ರಸಾರವಾದುವು. ಒಂದು, ಇದೇ ಚಾನೆಲ್‍ನಲ್ಲಿ ರಾಹುಲ್ ಕನ್ವಲ್ ನಡೆಸಿ ಕೊಡುವ ‘ನ್ಯೂಸ್‍ರೂಂ’ ಕಾರ್ಯ ಕ್ರಮವಾದರೆ ಇನ್ನೊಂದು, ಆಜ್‍ತಕ್ ಚಾನೆಲ್ ಈ ಕುರಿತಂತೆ ಚರ್ಚೆಯನ್ನು ಏರ್ಪಡಿಸಿತು. ಈ ಮೂರಕ್ಕೂ ಇವು ಪುರಾವೆಯಾಗಿ ತೋರಿಸಿದ್ದು ಒಂದು ವೀಡಿಯೋ. ಬನಿಯನ್ ಧರಿಸಿರುವ ಓರ್ವ ಹದಿಹರೆಯದ ಯುವಕ ಕ್ಯಾಮರಾದ ಮುಂದೆ ಕಾಣಿಸಿಕೊಳ್ಳುತ್ತಾನೆ. ಮುಖದಲ್ಲಿ ಭಯವೋ ಆತಂಕವೋ ಏನೋ ಮಡುಗಟ್ಟಿರುವಂತೆ ಕಾಣಿಸುತ್ತದೆ. ಸೈನಿಕರ ವಿರುದ್ಧ ಕಲ್ಲೆಸೆಯುವುದಕ್ಕೆ ತನಗೆ ಹಣ ನೀಡಲಾಗಿದೆ ಎಂದು ಆತ ಹೇಳುತ್ತಾನೆ. ಯಾರು ಎಂಬ ಪ್ರಶ್ನೆಗೆ, ಸಯ್ಯದ್ ಅಲೀ ಶಾ ಗೀಲಾನಿ ಎನ್ನುತ್ತಾನೆ. ತಲಾ 500 ರೂಪಾಯಿಯಂತೆ ಕೊಟ್ಟು ಅವರು ಕಲ್ಲೆಸೆತಕ್ಕೆ ನಿಯೋಜಿಸಿದ್ದಾರೆ ಎಂದು ಆತ ಹೇಳುತ್ತಾನೆ.
    ಇಲ್ಲಿಗೇ ಮುಗಿಯುವುದಿಲ್ಲ.
ಆ ಪುಟ್ಟ ವೀಡಿಯೋದ ಬಗ್ಗೆ ಅನುಮಾನಗೊಂಡ ಮನೀಶ್ ಪಾಂಡೆ ಮತ್ತು ಸುಹೈಲ್ ಶಾ ಎಂಬ ನ್ಯೂಸ್‍ಲಾಂಡ್ರಿ ಅಂತರ್ಜಾಲ ಪತ್ರಿಕೆಯ ಪತ್ರಕರ್ತರಿಬ್ಬರು ಸತ್ಯಶೋಧನೆಗೆ ಮುಂದಾಗುತ್ತಾರೆ. ಆ ವೀಡಿಯೋ ಪ್ರಸಾರದ ಮೊದಲು ಇಂಡಿಯಾ ಟುಡೇ ಚಾನೆಲ್ ಪರಿಶೀಲನೆ ನಡೆಸಿದೆಯೇ, ವೀಡಿಯೋದ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಿಕೊಂಡಿದೆಯೇ ಎಂದು ಅನ್ವೇಷಣೆ ನಡೆಸುತ್ತಾರೆ. ಸಿಆರ್‍ಪಿಎಫ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ಯಾದವ್‍ರನ್ನು ಭೇಟಿಯಾಗುತ್ತಾರೆ. ಪಟ್ಟು ಬಿಡದ ಸತ್ಯಶೋಧನೆಯಿಂದ ಅವರು ಕಂಡುಕೊಂಡ ಸತ್ಯ ಇಷ್ಟು -
1.    ಆ ವೀಡಿಯೋ ತುಂಬಾ ಹಳೆಯದು. 8 ವರ್ಷಗಳಷ್ಟು ಹಳೆಯದು.
2.    ಆ ವೀಡಿಯೋದಲ್ಲಿರುವ ಹೇಳಿಕೆ ಕೂಡ ನಕಲಿ. ಆ ಹದಿಹರೆಯದ ಯುವಕ ಹೇಳಿಕೆ ಕೊಟ್ಟದ್ದು ಸ್ವಇಚ್ಛೆಯಿಂದಲ್ಲ. ಪೊಲೀಸರ ಹಿಂಸೆಯನ್ನು ತಾಳಲಾರದೇ ಬಲವಂತದಿಂದ ಆ ಹೇಳಿಕೆಯನ್ನು ಕೊಟ್ಟಿದ್ದ.
       ನಿಜವಾಗಿ, ಆ ವೀಡಿಯೋದಲ್ಲಿ ಕಾಣಿಸಿಕೊಂಡ ಯುವಕನ ಹೆಸರು ಬಿಲಾಲ್ ಅಹ್ಮದ್ ಡರ್. ಶ್ರೀನಗರದ ಪರ್‍ಪೋರಾ ಎಂಬ ಊರಿನ ಈ ಯುವಕನಲ್ಲಿ ಮನಮಿಡಿಯುವ ನೆನಪೊಂದಿದೆ. 2008ರಲ್ಲಿ (ಆಗ ಈತನಿಗೆ 19 ವರ್ಷ) ಅಮರನಾಥ ದೇವಾಲಯದ ಭೂಮಿಯ ಕುರಿತು ವಿವಾದವೊಂದು ತಲೆದೋರಿತ್ತು. ಪ್ರತಿಭಟನೆ ಏರ್ಪಟ್ಟಿತ್ತು. ಆವತ್ತು ಬಿಲಾಲ್ ಔಷಧ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ. ಪ್ರತಿಭಟನೆಯ ಕಾರಣದಿಂದಾಗಿ ರಿಸರ್ವ್ ಪೊಲೀಸ್ ತುಕಡಿಗಳು ಅಲ್ಲಲ್ಲಿ ಜಮಾವಣೆಯಾಗಿತ್ತು. ಬಿಲಾಲ್ ತನ್ನ ಗೆಳೆಯನ ಬೈಕ್‍ನಲ್ಲಿ ಹಿಂಬದಿ ಸವಾರನಾಗಿ ಮನೆಗೆ ಹೊರಟಿದ್ದ. ಪ್ರತಿಭಟನಾಕಾರರ ಗುಂಪನ್ನು ಕಂಡು ಗೆಳೆಯ ಬೈಕ್ ನಿಧಾನಿಸಿದ. ಪೊಲೀಸರು ಹತ್ತಿರ ಬರುವುದನ್ನು ಕಂಡು ಹೆದರಿದ ಆತ ಬೈಕ್ ಬಿಟ್ಟು ಓಡಿದ. ಓಡಲಾಗದ ಬಿಲಾಲ್‍ನ ಮೇಲೆ ಓರ್ವ ಪೊಲೀಸ್ ಲಾಠಿ ಬೀಸಿದ. ಕೈ ಮುರಿಯಿತು. ಬಿಲಾಲ್‍ನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯಿತಲ್ಲದೇ, ಸುಮಾರು ಮೂರೂವರೆ ಗಂಟೆಗಳ ಕಾಲ ತೀವ್ರ ಹಿಂಸೆ, ದೌರ್ಜನ್ಯ ಎಸಗಲಾಯಿತು. ಬಳಿಕ ಆತನ ಶರ್ಟ್ ಹರಿದು ಮುರಿದ ಕೈಯನ್ನು ಪೊಲೀಸರು ಎತ್ತಿ ಕಟ್ಟಿದರು. ಆತನ ಎದುರಿಗೆ ವೀಡಿಯೋ ಕ್ಯಾಮರಾ ತಂದರು. ಪೊಲೀಸರು ಹೇಳಿಕೊಟ್ಟಂತೆಯೇ ಕ್ಯಾಮರಾದ ಮುಂದೆ ಹೇಳಬೇಕೆಂದು ಬಲವಂತಪಡಿಸಿದರು. ಒಪ್ಪದಿದ್ದಾಗ ದೌರ್ಜನ್ಯ ನಡೆಸಿದರು. ಆ ಹಿಂಸೆಯಿಂದ ಪಾರಾಗುವುದಕ್ಕಾಗಿ ವೀಡಿಯೋದ ಮುಂದೆ ಅವರು ಹೇಳಿ ಕೊಟ್ಟ ವಿಷಯಗಳನ್ನು ಆತ ಹೇಳಿದ್ದ. ಅಲೀಷಾ ಗೀಲಾನಿಯವರು ಪೊಲೀಸರ ವಿರುದ್ಧ ಕಲ್ಲೆಸೆಯಲು ಹಣ ನೀಡಿದ್ದಾರೆ.. ಎಂದೆಲ್ಲಾ ಹೇಳಿದ್ದು ಹೀಗೆ.
ಶ್ರೀನಗರದ ಲಾಲ್‍ಚೌಕ್‍ನಲ್ಲಿರುವ ಕೆಳಕೋರ್ಟ್‍ನಲ್ಲಿ ಒಂದೂ ವರೆ ವರ್ಷಗಳ ಕಾಲ ಪ್ರಕರಣದ ವಿಚಾರಣೆ ನಡೆಯಿತು. ಕೊನೆಗೆ ಕೋರ್ಟ್ ಬಿಲಾಲ್‍ನನ್ನು ದೋಷಮುಕ್ತಗೊಳಿಸಿತು. ಆದರೆ ಕಾಶ್ಮೀರ ಪ್ರಕ್ಷುಬ್ಧಗೊಂಡಾಗಲೆಲ್ಲ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ಯುತ್ತಾರೆ. ವಿಚಾರಣೆ ನಡೆಸುತ್ತಾರೆ. ಇಂಡಿಯಾ ಟುಡೇಯಂಥ ಚಾನೆಲ್‍ಗಳು ತಮ್ಮ ಟಿ.ಆರ್.ಪಿ.ಯ ಉ ದ್ದೇಶ ದಿಂದಲೋ ಅಥವಾ ಇನ್ನಾವ ಕಾರಣದಿಂದಲೋ ಪ್ರಸಾರ ಮಾಡಿ ಕೈತೊಳೆದುಕೊಳ್ಳುವಾಗ ಬಿಲಾಲ್‍ನಂಥವರಿಗೆ ಅದನ್ನು ಜೀರ್ಣಿಸಿಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ. ಅಷ್ಟಕ್ಕೂ,

       ಮಾಧ್ಯಮ ಹೊಣೆಗಾರಿಕೆ ಅಂದರೇನು? ತನಗೆ ಸಿಕ್ಕ ವೀಡಿಯೋವನ್ನು ವರದಿಗೆ ಪೂರಕವಾಗಿ ಬಳಸಿಕೊಳ್ಳುವಾಗ ವಹಿಸಿಕೊಳ್ಳಬೇಕಾದ ಎಚ್ಚರಿಕೆಗಳು ಮುಖ್ಯವಾಹನಿಯಲ್ಲಿ ಗುರುತಿಸಿ ಕೊಂಡಿರುವ ಇಂಡಿಯಾ ಟುಡೇಗೆ ಗೊತ್ತಿಲ್ಲವೇ? ವೀಡಿಯೋದ ಮೂಲವನ್ನು ಸ್ಪಷ್ಟಪಡಿಸಿಕೊಳ್ಳದೆಯೇ ವರದಿಗೆ ಆಧಾರವಾಗಿ ಬಳಸಿಕೊಳ್ಳುವುದು ಯಾವ ಬಗೆಯ ನೈತಿಕತೆ? ಈ ಪ್ರಶ್ನೆ ಚಾನೆಲ್ ನಿರೂಪಕಿ ಪದ್ಮಜ ಜೋಶಿಯವರಿಗೂ ಎದುರಾಯಿತು. ವೀಡಿಯೋದ ಅಸಲಿತನವನ್ನು ಖಚಿತಪಡಿಸಿಕೊಳ್ಳಲು ತಮಗೆ ಸಾಧ್ಯವಾಗಿಲ್ಲ ಎಂದವರು ಒಪ್ಪಿಕೊಂಡರು. ನಿಜ ಏನೆಂದರೆ, ಆ ವೀಡಿಯೋವನ್ನು ಒದಗಿಸಿದ್ದೇ ವ್ಯವಸ್ಥೆ. ಕಾಶ್ಮೀರದಲ್ಲಿ ಪ್ರತಿಭಟನೆ ತೀವ್ರತೆಯನ್ನು ಪಡೆಯುತ್ತಿರುವುದನ್ನು ಕಂಡು 8 ವರ್ಷಗಳ ಹಿಂದಿನ ನಕಲಿ ವೀಡಿಯೋವನ್ನು ಸದ್ದಿಲ್ಲದೇ ಬಿಡುಗಡೆಗೊಳಿಸುವ ಏರ್ಪಾಟು ನಡೆಯಿತು. ಜವಾಬ್ದಾರಿ ಮರೆತ ಮಾಧ್ಯಮಗಳು ಸಮಾಜವನ್ನು ಹೇಗೆ ದಿಕ್ಕು ತಪ್ಪಿಸಬಹುದು ಎಂಬುದಕ್ಕೆ ಪುರಾವೆ ಇದು. ನ್ಯೂಸ್‍ಲಾಂಡ್ರಿ ಅಂತರ್ಜಾಲ ತಾಣವು ಇದನ್ನುIndia Today and the curious case of the stone pelters confession (ಇಂಡಿಯಾ ಟುಡೇ ಮತ್ತು ಕಲ್ಲೆಸೆತಗಾರರ ಕುತೂಹಲಕಾರಿ ತಪ್ಪೊಪ್ಪಿಗೆ) ಎಂಬ ಶೀರ್ಷಿಕೆಯಲ್ಲಿ ವಿಸ್ತೃತವಾಗಿ ವಿವರಿಸಿತು. ಒಂದು ರೀತಿಯಲ್ಲಿ, ಸುಮಾರು ಎರಡು ತಿಂಗಳಿನಿಂದ ಕರ್ಫ್ಯೂ ವಿಧಿಸಿಕೊಂಡು ಜರ್ಝರಿತವಾಗಿರುವ ಕಾಶ್ಮೀರವನ್ನು ಮುಖ್ಯವಾಹಿನಿಯ ಮಾಧ್ಯಮಗಳು ನೋಡಿದ್ದು ಬಹುತೇಕ ಸರಕಾರಿ ಕಣ್ಣಲ್ಲೇ. ಕಾಶ್ಮೀರದ ಸ್ಥಳೀಯ ಪತ್ರಿಕೆ ಮತ್ತು ದೆಹಲಿ ಕೇಂದ್ರಿತ ಮುಖ್ಯವಾಹಿನಿ ಪತ್ರಿಕೆಗಳ ಸುದ್ದಿ ಮತ್ತು ವರದಿಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಶುಜಾಅತ್ ಬುಖಾರಿಯವರು ಫ್ರಂಟ್‍ಲೈನ್ ಪತ್ರಿಕೆಯಲ್ಲಿ ಕಾಶ್ಮೀರದ ಕ್ರೋಧ (Wrath of Kashmir) ಎಂಬ ಹೆಸರಲ್ಲಿ ಬರೆದ ಲೇಖನದಲ್ಲಿ ಕಾಶ್ಮೀರದ ಈಗಿನ ಅಶಾಂತಿಗೆ ಕೊಡುವ ಕಾರಣ ಒಂದೇ- ಗೌರವಾರ್ಹವಾಗಿ ಬದುಕಲು ಬಿಡಿ ಎಂಬುದು. ಇಂಡಿಯಾ ಟುಡೇಯ ಗೌರವ್ ಸಾವಂತ್ ಪಟ್ಟಿ ಮಾಡಿರುವ - ಪಾಕ್ ಕೈವಾಡ ಮತ್ತು ನಿರುದ್ಯೋಗ ಎಂಬೆರಡು ಕಾರಣಗಳಿಗೆ ಇದನ್ನು ಹೋಲಿಸಿದರೆ, ಶುಜಾಅತ್ ನಿಲುವು ಸಂಪೂರ್ಣ ವಿರುದ್ಧ. ಸಾವಂತ್ ದೆಹಲಿ ಕೇಂದ್ರಿತ ಪತ್ರಕರ್ತರಾದರೆ ಶುಜಾಅತ್ ಕಾಶ್ಮೀರಿ ಪತ್ರಕರ್ತ. ‘ರೈಸಿಂಗ್ ಕಾಶ್ಮೀರ್’ ಪತ್ರಿಕೆಯ ಸಂಪಾದಕ. ಸಾವಂತ್‍ಗಿಂತ ಹೆಚ್ಚು ಶುಜಾಅತ್‍ಗೆ ಕಾಶ್ಮೀರ ಗೊತ್ತಿದೆ. ಅಲ್ಲಿನ ಜನರು, ಜೀವನದ ಅನುಭವವಿದೆ. ಮುಖ್ಯ ವಾಹಿನಿಯ ಮಾಧ್ಯಮಗಳ ಸಮಸ್ಯೆ ಏನೆಂದರೆ, ಅವು ಕಾಶ್ಮೀರದಿಂದ ಬರುವ ಸುದ್ದಿಯನ್ನು ಅಷ್ಟೇ ತೀವ್ರತೆಯೊಂದಿಗೆ ಪರಿಗಣಿಸುವ ಸಂದರ್ಭಗಳು ಕಡಿಮೆ ಇರುತ್ತವೆ. ದೆಹಲಿಯ ರಾಜಕೀಯ ಹಿತಾಸಕ್ತಿಗಳು ಸುದ್ದಿಯ ಮೇಲೆ ಕೈಯಾಡಿಸುವಂತೆ ಒತ್ತಾಯಿಸುತ್ತವೆ. ಸೇನೆಯ ಪೆಲೆಟ್ ದಾಳಿಗಿಂತಲೂ ಜನರ ಕಲ್ಲೆಸೆತವನ್ನೇ ಪ್ರಮುಖ ಸುದ್ದಿಯಾಗಿಸುವುದರಲ್ಲಿ ರಾಜಕೀಯ ಮತ್ತು ಆರ್ಥಿಕ ಸುಖವೂ ಸಿಗುತ್ತದೆ. ಕಾಶ್ಮೀರ ಮತ್ತು ದೆಹಲಿಯ ನಡುವೆ ಎಷ್ಟು ಅಂತರ ಇದೆಯೋ ಅಷ್ಟೇ ಅಂತರವು ಸುದ್ದಿಗಳಿಗೆ ಸಿಗುವ ಪ್ರಾಮುಖ್ಯತೆಯಲ್ಲೂ ಕಾಣಿಸುತ್ತದೆ. ಆದರೆ, ಸ್ಥಳೀಯ ಪತ್ರಿಕೆಗಳ ಮಟ್ಟಿಗೆ ಈ ಸಮಸ್ಯೆಯಿರುವುದಿಲ್ಲ. ಅವು ಸ್ಥಳೀಯವೇ ಆಗಿರುವುದರಿಂದ ಕಲ್ಲು ಮತ್ತು ಪೆಲೆಟ್‍ಗಳ ಸಾಮರ್ಥ್ಯವನ್ನು ಅವು ಚೆನ್ನಾಗಿಯೇ ತಿಳಿದಿರುತ್ತವೆ. ಅವುಗಳ ಮೇಲೆ ರಾಷ್ಟ್ರೀಯ ಮಾಧ್ಯಮ ಎಂಬ ಕೊಂಬೂ ಇರುವುದಿಲ್ಲ. ಕಾಶ್ಮೀರದ ಪ್ರಕ್ಷುಬ್ಧತೆಯನ್ನು ಮುಖ್ಯವಾಹಿನಿಯ ಮಾಧ್ಯಮಗಳಿಗಿಂತ ಹೆಚ್ಚು ಅವು ಅನುಭವಿಸಿರುವುದರಿಂದಾಗಿ ಮುಖಪುಟದಲ್ಲಿ ಕಲ್ಲೆಸೆತದ ಸುದ್ದಿ ಬರಬೇಕೋ ಅಥವಾ ಪೆಲೆಟ್‍ನಿಂದ ಕಣ್ಣು ಕಳಕೊಂಡವರ ಸುದ್ದಿ ಬರಬೇಕೋ ಎಂಬ ಸಂದಿಗ್ಧ ಎದುರಾಗುವುದಿಲ್ಲ. ಕಾಶ್ಮೀರದ, `ಗ್ರೇಟರ್ ಕಾಶ್ಮೀರ್', `ರೈಸಿಂಗ್ ಕಾಶ್ಮೀರ್', `ಕಾಶ್ಮೀರ್ ಒಬ್ಸರ್ವರ್' ಮುಂತಾದ ಸ್ಥಳೀಯ ಪತ್ರಿಕೆಗಳನ್ನು
ಬಿಲಾಲ್ ಅಹ್ಮದ್ ಡರ್
ಮುಖ್ಯವಾಹಿನಿಯ ಪತ್ರಿಕೆಗಳಾದ ದಿ ಹಿಂದೂ, ಇಂಡಿಯನ್ ಎಕ್ಸ್ ಪ್ರೆಸ್, ಟೈಮ್ಸ್ ಆಫ್ ಇಂಡಿಯಾ ಜೊತೆ ಇಟ್ಟು ನೋಡುವಾಗ ವ್ಯಕ್ತವಾಗುವ ಅನುಭವ ಇದು. `ಕಾಶ್ಮೀರ್ ಬ್ಲೀಡ್ಸ್' (ಕಾಶ್ಮೀರ ರಕ್ತ ಸುರಿಸುತ್ತಿದೆ) ಎಂಬ ಯಾರನ್ನೂ ನೋಯಿಸದ ಆದರೆ ಅತ್ಯಂತ ಭಾವುಕಗೊಳಿಸುವ ಶೀರ್ಷಿಕೆಯನ್ನು ಸ್ಥಳೀಯ ಗ್ರೇಟರ್ ಕಾಶ್ಮೀರ್‍ನಂಥ ಪತ್ರಿಕೆಗಳಿಂದ ನಿರೀಕ್ಷಿಸಬಹುದೇ ಹೊರತು, Fresh Violence: 5 Dead (ಹಿಂಸೆ: 5 ಸಾವು) ಎಂಬ ನಿರ್ಭಾವುಕ ಮತ್ತು ಜನರನ್ನೇ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಿಸುವ ರಾಷ್ಟ್ರೀಯ ಪತ್ರಿಕೆಗಳಿಂದಲ್ಲ. ನಿಜವಾಗಿ, ಕಾಶ್ಮೀರವನ್ನು ಕಾಶ್ಮೀರದ ಹೊರಗಿನ ಭಾರತವು ಇವತ್ತಿಗೂ ಅಸೂಯೆ ಮತ್ತು ದ್ವೇಷದಿಂದ ನೋಡುವಂಥ ವಾತಾವರಣ ಇದೆ. ಕಾಶ್ಮೀರದಿಂದ ಹೊರಗಿನವರಿಗೆ ಕಾಶ್ಮೀರದಲ್ಲಿ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ ಎಂದು ದೂರುವುದಿದೆ. ಹೀಗೆ ದೂರುವಾಗಲೂ ಇಂಥದ್ದೇ ನಿಯಮ ಅಂಡಮಾನ್- ನಿಕೋಬಾರ್, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್‍ಗಳಲ್ಲೂ ಇವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ಇಲ್ಲೂ ಹೊರಗಿನವರಿಗೆ ಭೂಮಿ ಖರೀದಿಸುವುದಕ್ಕೆ ಅವಕಾಶ ಇಲ್ಲ. 370ನೇ ವಿಧಿಯನ್ನು ರದ್ದುಪಡಿಸುವುದರಿಂದ ಈ ಸಮಸ್ಯೆ ಪರಿಹಾರವಾಗುತ್ತದೆ ಎಂದು ವಾದಿಸುವವರೂ ಇದ್ದಾರೆ. ನಿಜವಾಗಿ, 370ನೇ ವಿಧಿಗೂ ಈ ಭೂಮಿ ಖರೀದಿಗೂ ಯಾವ ಸಂಬಂಧವೂ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲೇ ಈ ನಿಯಮ ಕಾಶ್ಮೀರದಲ್ಲಿ ಜಾರಿಯಲ್ಲಿತ್ತು. ತನ್ನ ಪ್ರತ್ಯೇಕತೆಯನ್ನು ಹಾಗೆಯೇ ಉಳಿಸಿಕೊಂಡು ಭಾರತದೊಂದಿಗೆ ಸೇರ್ಪಡೆಗೊಳ್ಳುವ ಷರತ್ತಿನ ಒಪ್ಪಂದವೇ 370ನೇ ವಿಧಿ. ಅದು ಭೂಮಿ ಖರೀದಿ ಒಪ್ಪಂದ ಅಲ್ಲ. ಈ ವಿಧಿಯನ್ನು ರದ್ದುಗೊಳಿಸುವುದೆಂದರೆ ಭಾರತದೊಂದಿಗೆ ಸೇರ್ಪಡೆಗೊಂಡುದನ್ನೇ ರದ್ದುಗೊಳಿಸಿದಂತೆ. ಆದರೆ, ಕಾಶ್ಮೀರಕ್ಕೆ ಸಂಬಂಧಿಸಿ ಕಾಶ್ಮೀರಿಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಸುದ್ದಿಗಳೇ ಪ್ರಾಬಲ್ಯ ಪಡೆಯುತ್ತಿವೆ.
         ಇಂಡಿಯಾ ಟುಡೆ ಪ್ರಸಾರ ಮಾಡಿದ ವೀಡಿಯೋ ಅದಕ್ಕೊಂದು ಉದಾಹರಣೆ ಅಷ್ಟೇ.