Thursday, October 6, 2016

ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ

        ಸಂಪೂರ್ಣ ಬೆತ್ತಲಾಗಿರುವ ಸ್ಥಿತಿಯಲ್ಲಿ ಗೋಡೆಗೆ ಅಂಟಿ ಕೂತು, ಭೀತಿಯಿಂದ ನಡುಗುತ್ತಿದ್ದ ಆ ಬಾಲಕನನ್ನು ಕಂಡು 7ನೇ ರೆಜಿಮೆಂಟ್‍ನ ಯೋಧರು ಅಕ್ಷರಶಃ ಕಲ್ಲಾಗಿದ್ದರು.
     /ಅದು 1950. ದ್ವಿತೀಯ ವಿಶ್ವ ಯುದ್ಧದ ಕರಾಳ ನೆನಪುಗಳು ಜಗತ್ತನ್ನು ಆಳುತ್ತಿದ್ದ ಸಮಯ. ಯುದ್ಧ ಎಷ್ಟು ಅಪಾಯಕಾರಿ ಎಂಬುದಕ್ಕೆ ಜಪಾನ್ ಮಾತ್ರ ಅಲ್ಲ, ಜಗತ್ತಿನ ಇತರ ಭಾಗಗಳೂ ಸಾಕ್ಷ್ಯ ಹೇಳುತ್ತಿದ್ದುವು. ಹಿರೋಶಿಮಾ ಮತ್ತು ನಾಗಸಾಕಿಯಂತೂ ಯುದ್ಧವಿರೋಧಿ ಘೋಷಣೆಗಳಿಗೆ ಅನ್ವರ್ಥವಾಗುವಂತೆ ಸತ್ತು ಮಲಗಿದ್ದುವು. ಸಾವಿರಾರು ವರ್ಷಗಳ ಹಿಂದಿನ ರಾಜರುಗಳ ನಡುವಿನ ಯುದ್ಧದ ವಿವರಗಳನ್ನು ಪಠ್ಯಪುಸ್ತಕಗಳಲ್ಲಿ ಓದುವುದಕ್ಕೂ ವಾಸ್ತವವಾಗಿ ಅನುಭವಿಸುವುದಕ್ಕೂ ನಡುವೆ ಇರುವ ಅಗಾಧ ಅಂತರವು ಜಗತ್ತನ್ನು ಬೆಚ್ಚಿ ಬೀಳಿಸಿತು. ಪಠ್ಯಪುಸ್ತಕಗಳಲ್ಲಿ ನಾವು ಓದುವ ಯುದ್ಧೋತಿಹಾಸದಲ್ಲಿ ಕಪ್ಪು ಮತ್ತು ಬಿಳುಪು ಎಂಬೆರಡು ಭಾಗಗಳಷ್ಟೇ ಇರುತ್ತವೆ. ಗೆದ್ದವರನ್ನು ಅಭಿಮಾನದಿಂದ ಮತ್ತು ಸೋತವರನ್ನು ಅನುಕಂಪದಿಂದ ನೋಡುವುದರ ಹೊರತು ಯುದ್ಧ ಸೃಷ್ಟಿ ಮಾಡಬಹುದಾದ ಆಘಾತಗಳ ಬಗ್ಗೆ ಅವಲೋಕನ ನಡೆಯುವುದು ಕಡಿಮೆ. ಅನಾಥ ಮಕ್ಕಳು, ವಿಧವೆಯರು, ವಿಧುರರು, ಅಂಗವಿಕಲರು, ನಾಶ-ನಷ್ಟಗಳು.. ಇವು ಯಾವುದೇ ಯುದ್ಧದ ಸಹಜ ಫಲಿತಾಂಶಗಳು. ಸೋತವರಲ್ಲೂ ಗೆದ್ದವರಲ್ಲೂ ತುಸು ವ್ಯತ್ಯಾಸದೊಂದಿಗೆ ಈ ಸಂಕಟಗಳು ಇದ್ದೇ ಇರುತ್ತವೆ. ರಾಜರುಗಳ ಕಾಲದ ಯುದ್ಧಕ್ಕೂ ಇಂದಿನ ತಂತ್ರಜ್ಞಾನಾಧಾರಿತ ಯುದ್ಧಕ್ಕೂ ನಡುವೆ ಇರುವ ದೊಡ್ಡ ವ್ಯತ್ಯಾಸ ಏನೆಂದರೆ, ತಂತ್ರಜ್ಞಾನಾಧಾರಿತ ಯುದ್ಧವು ಬಹುತೇಕ ಜನರನ್ನೇ ಗುರಿಪಡಿಸಿದರೆ ರಾಜರ ಕಾಲದ ಯುದ್ಧದಲ್ಲಿ ಸೈನಿಕರೇ ಗುರಿಯಾಗಿರುತ್ತಿದ್ದರು. ಇಲ್ಲಿ ಆಕಾಶ ಮಾರ್ಗ ಬಳಕೆಯಾಗುತ್ತಿರಲಿಲ್ಲ. ಆದ್ದರಿಂದ ಬಾಂಬೂ ಇರಲಿಲ್ಲ. ಏನಿದ್ದರೂ ನೆಲದ ಮೂಲಕವೇ ಕಾದಾಟ. ಈ ಕಾದಾಟ ಶೈಲಿಯು ನಾಗರಿಕರ ಪ್ರಾಣಕ್ಕೆ ಸಂಬಂಧಿಸಿ ಹೆಚ್ಚು ಸುರಕ್ಷಿತ ವಿಧಾನವಾಗಿತ್ತು. ಆದರೆ ತಂತ್ರಜ್ಞಾನ ಈ ಸುರಕ್ಷಿತ ಕಲ್ಪನೆಯನ್ನೇ ಉಡಾಯಿಸಿಬಿಟ್ಟಿತು. ನಾಗರಿಕರು ಮತ್ತು ಸೈನಿಕರು ಎಂಬ ವಿಭಜನೆಯೇ ಗೊತ್ತಿಲ್ಲದ ಬಾಂಬುಗಳು ನಾಶವನ್ನೇ ಗುರಿಯಾಗಿಸಿಕೊಂಡವು. ಹಿರೋಶಿಮಾ ಮತ್ತು ನಾಗಸಾಕಿ ಅದರ ಸಾರ್ವಕಾಲಿಕ ಸಂಕೇತವಾಗಿ ಜಗತ್ತಿನ ಎದುರು ನಿಂತವು. ಇಂಥ ಸ್ಥಿತಿಯಲ್ಲಿ, ಇನ್ನೊಂದು ವಿಶ್ವಯುದ್ಧವನ್ನು ತಾಳಿಕೊಳ್ಳುವ ಸಾಮರ್ಥ್ಯ ಯಾವ ರಾಷ್ಟ್ರಕ್ಕೂ ಇರಲಿಲ್ಲ. ಆದ್ದರಿಂದಲೇ, 1951ರಲ್ಲಿ ಪ್ರಾರಂಭವಾದ ಉತ್ತರ ಕೊರಿಯ ಮತ್ತು ದಕ್ಷಿಣ ಕೊರಿಯಗಳ ನಡುವಿನ ಕಾದಾಟವು ಅಮೇರಿಕ ಮತ್ತು ರಷ್ಯಾಗಳ ನಡುವಿನ ಪರೋಕ್ಷ  ಯುದ್ಧವಾಗಿದ್ದರೂ ಅದು ಆ ವಲಯವನ್ನು ಮೀರಿ ಜಾಗತಿಕ ಯುದ್ಧ ಸ್ವರೂಪವನ್ನು ಪಡೆದುಕೊಳ್ಳಲಿಲ್ಲ.
1945ರಲ್ಲಿ ದ್ವಿತೀಯ ವಿಶ್ವಯುದ್ಧ ಕೊನೆಗೊಂಡಾಗ ಜಪಾನ್‍ನ ವಸಾಹತು ಆಗಿದ್ದ ಕೊರಿಯವು ಉತ್ತರ ಮತ್ತು ದಕ್ಷಿಣ ಕೊರಿಯಗಳಾಗಿ ವಿಭಜನೆಗೊಂಡಿತ್ತು. ಜಪಾನ್ ಶರಣಾಗುವಾಗ ಕೊರಿಯದ ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ರಷ್ಯಾ ಮತ್ತು ಅಮೇರಿಕಗಳು ಪಾರಮ್ಯ ಸ್ಥಾಪಿಸಿದ್ದುವು. ಈ ಪಾರಮ್ಯವು ಕೊರಿಯವನ್ನು ಉತ್ತರ ಮತ್ತು ದಕ್ಷಿಣ ಕೊರಿಯವಾಗಿ ವಿಭಜಿಸಲು ಕಾರಣವಾಯಿತು. ಉತ್ತರ ಕೊರಿಯದಲ್ಲಿ ರಷ್ಯನ್ ಪ್ರಭಾವಿತ ಕಮ್ಯುನಿಸ್ಟ್ ಆಡಳಿತ ಸ್ಥಾಪನೆಯಾಯಿತು. ದಕ್ಷಿಣ ಕೊರಿಯವು ಅಮೇರಿಕನ್ ಪ್ರಭಾವಿತ ಆಡಳಿತ ಶೈಲಿಯನ್ನು ನೆಚ್ಚಿಕೊಂಡಿತು. ಆದರೆ ಈ ವಿಭಜನೆಯಾಗಿ ಆರೇ ವರ್ಷಗಳೊಳಗೆ ಅಂದರೆ 1950 ಜೂನ್ 25ರಂದು ಉತ್ತರ ಕೊರಿಯವು ದಿಢೀರ್ ಆಗಿ ದಕ್ಷಿಣ ಕೊರಿಯದ ವಿರುದ್ಧ ದಂಡೆತ್ತಿ ಹೋಯಿತು. ನಿಜವಾಗಿ, ಕೊರಿಯ ಎಂಬುದು ದ್ವಿತೀಯ ವಿಶ್ವಯುದ್ಧದ ವರೆಗೆ ಒಂದೇ ಆಗಿತ್ತು. ಅಲ್ಲಿ ವಿಭಜನೆ ಇರಲಿಲ್ಲ. ದ್ವಿತೀಯ ವಿಶ್ವಯುದ್ಧದ ಬಳಿಕ ವಿಭಜನೆ ನಡೆಯಿತಾದರೂ ಅದು ಶಾಶ್ವತ ಕ್ರಮವೆಂಬ ನೆಲೆಯಲ್ಲಿ ಆಗಿಯೂ ಇರಲಿಲ್ಲ. ಜರ್ಮನಿ ಹೇಗೆ ಪೂರ್ವ ಮತ್ತು ಪಶ್ಚಿಮ ಜರ್ಮನಿಯಾಗಿ ತಾತ್ಕಾಲಿಕವಾಗಿ ವಿಭಜನೆಗೊಂಡಿತ್ತೋ ಹಾಗೆ. ಆದರೆ, ರಾಜಕೀಯ ಉದ್ದೇಶಗಳಿಗಾಗಿ ಇವುಗಳ ನಡುವೆ ಪರಸ್ಪರ ಅನುಮಾನ, ದ್ವೇಷ, ಅಸೂಯೆ ವದಂತಿಗಳನ್ನು ಹುಟ್ಟು ಹಾಕಲಾಯಿತು. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವಿನ ಘರ್ಷಣೆಗೆ ಈ ಹಿನ್ನೆಲೆಯೂ ಇದೆ. ಉತ್ತರ ಕೊರಿಯದ ಸೇನೆಯು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್‍ಗೆ ಧಾವಿಸಿ ಬರುತ್ತಿರುವುದನ್ನು ಕಂಡು ಅಮೇರಿಕಕ್ಕೆ ಮಧ್ಯ ಪ್ರವೇಶಿಸಲೇಬೇಕಾದ ಅನಿವಾರ್ಯತೆ ಎದುರಾಯಿತು. ದಕ್ಷಿಣ ಕೊರಿಯಕ್ಕೆ ಸೇನಾ ನೆರವು ನೀಡುವ ಬಗ್ಗೆ ಅದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಮಸೂದೆಯೊಂದನ್ನು ಮಂಡಿಸಿತು. ವಿಶೇಷ ಏನೆಂದರೆ, ಈ ಮಸೂದೆಯನ್ನು ವೀಟೋ ಚಲಾಯಿಸುವ ಮೂಲಕ ತಡೆಯುವ ಎಲ್ಲ ಅವಕಾಶವೂ ರಶ್ಯಾಕ್ಕಿತ್ತು. ಆದರೆ ಭದ್ರತಾ ಸಮಿತಿಯ ಸಭೆಯನ್ನೇ ಬಹಿಷ್ಕರಿಸುವ ಮೂಲಕ ರಷ್ಯಾ ಈ ಅವಕಾಶವನ್ನು ಕೈಯಾರೆ ಕಳೆದುಕೊಂಡಿತು. ಅಮೇರಿಕದ ಅಧ್ಯಕ್ಷ ಹ್ಯಾರಿ ಟ್ರೂಮನ್ ಅವರು ಈ ಮಸೂದೆ ಯನ್ನು ಬಳಸಿಕೊಂಡು ಕೊರಿಯದ ನೆರವಿಗೆ ಭೂ, ಜಲ ಮತ್ತು ವಾಯು ಸೇನೆಯನ್ನು ತಕ್ಷಣ ರವಾನಿಸಿದರು. ಹೀಗೆ ಅಮೇರಿಕದ ನೇರ ಮಧ್ಯ ಪ್ರವೇಶದಿಂದಾಗಿ ವಲಯದ ಒಟ್ಟು ವಾತಾವರಣವೇ ಬದಲಾಯಿತು. ಉತ್ತರ ಕೊರಿಯವು ಸೇನೆಯನ್ನು ಹಿಂದಕ್ಕೆ ಕರೆಸಿ ಕೊಂಡಿತು. ಅಮೇರಿಕನ್ ನೇತೃತ್ವದ ಸೇನೆಯು ಉತ್ತರ ಕೊರಿಯದ ಒಳಗೂ ನುಗ್ಗಿತು. ಇದರಿಂದ ಅತ್ಯಂತ ಹೆಚ್ಚು ಆತಂಕಕ್ಕೆ ಒಳಗಾದದ್ದು ನೆರೆಯ ಕಮ್ಯುನಿಸ್ಟ್ ಚೀನಾ. ಅದೂ ಈ ಕಾದಾಟದಲ್ಲಿ ಮಧ್ಯಪ್ರವೇಶಿಸಿತು. ಹೀಗೆ 3 ವರ್ಷಗಳ ವರೆಗೆ ನಡೆದ ಈ ಯುದ್ಧವು ಕೊನೆಗೆ 1953ರಲ್ಲಿ ಅಮೇರಿಕ ಮತ್ತು ಉತ್ತರ ಕೊರಿಯಗಳ ನಡುವೆ ಒಪ್ಪಂದ ಏರ್ಪಟ್ಟು ಮುಕ್ತಾಯವನ್ನು ಕಂಡಿತು. ಈ ಮೂಲಕ ಎರಡೂ ಕೊರಿಯಗಳು ವೈರಿಗಳಂತೆ ಎರಡು ರಾಷ್ಟ್ರಗಳಾಗಿ ಶಾಶ್ವತ ವಿಭಜನೆಗೆ ಪಕ್ಕಾದವು. ಆದರೆ ಈ ಯುದ್ಧದಾಚೆಗೆ ಇಡೀ ಕೊರಿಯವನ್ನು ಮಾತ್ರವಲ್ಲ, ಜಗತ್ತನ್ನೇ ಕಾಡಿದ್ದು ಆ 5 ವರ್ಷದ ಬಾಲಕ ಕಾಂಗ್ ಕೂ ರಿ.
      ಆಗ ಯುದ್ಧ ಪ್ರಾರಂಭವಾಗಿ ಒಂದು ವರ್ಷವಷ್ಟೇ ಆಗಿತ್ತು. ಅದು 1951. ಧ್ವಂಸಗೊಂಡ ಕಟ್ಟಡಗಳು ಮತ್ತು ಮನೆಗಳ ಸಂಖ್ಯೆ ದಿನೇ ದಿನೇ ವೃದ್ಧಿಸುತ್ತಿತ್ತು. ಇಂಥ ಸನ್ನಿವೇಶದಲ್ಲಿ ರಕ್ಷಣಾ ಕಾರ್ಯಗಳು ಅಲ್ಲಲ್ಲಿ ನಡೆಯುತ್ತಿರುವುದು ವಾಡಿಕೆ. ದಕ್ಷಿಣ ಕೊರಿಯದ ರಾಜಧಾನಿ ಸಿಯೋಲ್‍ನ ಉತ್ತರ ಭಾಗದಲ್ಲಿ ಅಮೇರಿಕನ್ ಸೇನೆಯ 7ನೇ ರೆಜಿಮೆಂಟ್‍ನ ಯೋಧರು ಇಂಥದ್ದೊಂದು ಕಾರ್ಯಾಚರಣೆಯಲ್ಲಿ ತೊಡಗಿದ್ದರು. ಈ ಪ್ರದೇಶದಲ್ಲಿ ಚೀನಾ ಬೆಂಬಲಿತ ಸೇನೆ ಮತ್ತು ಅಮೇರಿಕನ್ ಸೇನೆಯ ಮಧ್ಯೆ ಅದಾಗಲೇ ಕಾದಾಟ ನಡೆದಿತ್ತು. ಹೀಗೆ ಬದುಕುಳಿದವರನ್ನು ಹುಡುಕುತ್ತಾ ಯೋಧರು ಸಾಗುವಾಗ ಒಂದು ಮನೆಯಿಂದ ಅಸಾಧ್ಯ ಗಬ್ಬುವಾಸನೆ ಎದುರಾಯಿತು. ಆ ವಾಸನೆಯು ಎಷ್ಟು ಅಸಹ್ಯವಾಗಿತ್ತೆಂದರೆ ಆ ಮನೆಯಲ್ಲಿ ಹುಡುಕಾಟ ನಡೆಸುವುದಕ್ಕೆ ಎಲ್ಲ ಯೋಧರೂ ಬಹುತೇಕ ಹಿಂದಡಿಯಿಟ್ಟರು. ಹೀಗೆ ಅಲ್ಲಿಂದ ಹೊರಟು ಹೋಗಲು ಸಿದ್ಧರಾದವರಲ್ಲಿ ಓರ್ವ ಯೋಧ ಮನಸು ಬದಲಾಯಿಸಿ ಆ ಮನೆ ಪ್ರವೇಶಿಸಲು ಮುಂದಾದರು. ಆಗ ಕಂಡದ್ದೇ 5ರ ಹರೆಯದ ಕಾಂಗ್ ಕೂ ರಿ. ಆತನ ಪಕ್ಕ ಕೊಳೆತು ಹೋದ ತಾಯಿಯ ಶವ ಇತ್ತು. ಯೋಧನನ್ನು ಕಂಡದ್ದೇ ತಡ ಆ ಬಾಲಕನ ಕಣ್ಣಿನಿಂದ ದರದರನೆ ಕಣ್ಣೀರು ಹರಿಯಿತು. ಹಸಿವಿನಿಂದ ಕಂಗಾಲಾಗಿದ್ದ ಕಾಂಗ್ ಕೂ ರಿ ಬರೇ ನೋಡುತ್ತಿದ್ದ. ಮಾತಾಡುತ್ತಿರಲಿಲ್ಲ. ಆತನನ್ನು ರಕ್ಷಿಸಿದ ಯೋಧರು ಬಟ್ಟೆ ತೊಡಿಸಿದರು. ಮಕ್ಕಳ ಅನಾಥಾಶ್ರಮಕ್ಕೆ ಸೇರಿಸಿದರು. ವಿಶೇಷ ಏನೆಂದರೆ, ತಿಂಗಳುಗಳು ಉರುಳಿದರೂ ಆತನಲ್ಲಿ ಯಾವ ಬದಲಾವಣೆಯೂ ಕಾಣಿಸಲಿಲ್ಲ. ಬರೇ ಮೌನ. ಮಾತೂ ಇಲ್ಲ. ಇಡೀ ಅನಾಥಾಶ್ರಮದಲ್ಲಿ ಕಾಂಗ್ ಕೂ ರಿ ಒಂದು ಒಗಟಾಗಿದ್ದ. ಒಂಟಿಯಾಗಿ ಕೂರುವ ಆ ಬಾಲಕನ ಬಗ್ಗೆ ಎಲ್ಲರಲ್ಲೂ ಆತಂಕ ಮತ್ತು ಅನುಕಂಪ ಇತ್ತು. ಈ ಬಾಲಕನ ಬಗ್ಗೆ ಅತ್ಯಂತ ಆಸಕ್ತಿ ತಳೆದವರು ಅಮೇರಿಕದ ಲೈಫ್ ಮ್ಯಾಗಸಿನ್‍ನ ಛಾಯಾಗ್ರಾಹಕ ಮೈಕೆಲ್ ರೋಜರ್ ಎಂಬವರು. ಅವರು ಆಗಾಗ ಈ ಅನಾಥಾಶ್ರಮಕ್ಕೆ ಭೇಟಿ ಕೊಡುತ್ತಿದ್ದರು. ಕಾಂಗ್ ಕೂ ರಿಯ ಚಲನ-ವಲನಗಳ ಬಗ್ಗೆ ಗಮನವಿಟ್ಟಿದ್ದರು. ತಿಂಗಳುಗಳ ಬಳಿಕ ಒಂದು ದಿನ ಇಡೀ ಅನಾಥಾಶ್ರಮದಲ್ಲಿ ಸಂತಸದ ಕಳೆ ಮೂಡಿತು. ಅದಕ್ಕೆ ಕಾರಣ ಏನೆಂದರೆ, ಕಾಂಗ್ ಕೂ ರಿ
ಮಾತಾಡಿದ್ದು. ಅನಾಥಾಶ್ರಮದ ಶಿನ್‍ಸಂಗ್ ಎಂಬ ಹುಡುಗಿ ಆತನನ್ನು ಮಾತಾಡಿಸುವಲ್ಲಿ ಯಶಸ್ವಿಯಾಗಿದ್ದಳು. ‘ಈ ಜಗತ್ತಿನಲ್ಲಿ ನೀನು ಏನನ್ನು ಹೆಚ್ಚು ಇಷ್ಟಪಡುತ್ತೀ..’ ಎಂದು ಆಕೆ ಕೇಳಿದಳು. ತುಸು ಹೊತ್ತು ಮೌನವನ್ನೇ ಪಾಲಿಸಿದ ಕಾಂಗ್ ಕೂ ರಿ ಬಳಿಕ ‘ಜೀಪ್‍ನಲ್ಲಿ ಆಡುವ ಮತ್ತು ಅದನ್ನು ಚಲಾಯಿಸುವ ಆಸೆ ಇದೆ’ ಎಂದು ಮೊದಲ ಬಾರಿ ಬಾಯಿ ತೆರೆದಿದ್ದ. ‘ಅದನ್ನು ನಿನಗೆ ಒದಗಿಸೋಣ. ಆದರೆ ಅದಕ್ಕಿಂತ ಮೊದಲು ನೀನು ಒಮ್ಮೆ ನಗಬೇಕು...'ಎಂದು ಆಕೆ ಷರತ್ತು ಹಾಕಿದಳು. ಆಗ ಕಾಂಗ್ ಕೂ ರಿ ಸಣ್ಣಗೆ ನಗು ಸೂಸಿದ. ಯೋಧರ ಕೈಗೆ ಸಿಕ್ಕ ಬಳಿಕ ಆತ ನಕ್ಕದ್ದು ಅದೇ ಮೊದಲು. ಆ ಕ್ಷಣವನ್ನು ಮೈಕೆಲ್ ರೋಜರ್ ತನ್ನ ಕ್ಯಾಮರಾದಲ್ಲಿ ಚಿತ್ರೀಕರಿಸಿಕೊಂಡರು. ಮಾತ್ರವಲ್ಲ, 1951 ಜುಲೈಯಲ್ಲಿ ‘The Little boy who wouldn't smile’ ಎಂಬ ಶೀರ್ಷಿಕೆಯಲ್ಲಿ ಲೈಫ್ ಮ್ಯಾಗಸಿನ್‍ನಲ್ಲಿ ಚಿತ್ರ ಸಮೇತ ಲೇಖವೊಂದನ್ನು ಬರೆದರು. ಆ ಚಿತ್ರ ಮತ್ತು ಲೇಖನ ಜಾಗತಿಕ ಸಂಚಲನಕ್ಕೆ ಕಾರಣವಾಯಿತು. ಯುದ್ಧವು ಮಕ್ಕಳ ಮೇಲೆ ಬೀರುವ ಆಘಾತಗಳ ಬಗ್ಗೆ ಚರ್ಚೆಯೊಂದನ್ನು ಹುಟ್ಟುಹಾಕಿತು.       
         “ನೀವು ಯುದ್ಧ ಸುದ್ದಿಗಳನ್ನು ನಿಮ್ಮ ಪಾನೀಯಗಳ ಮಧ್ಯೆಯೋ ಗೆಳೆಯರ ನಡುವೆ ಕುಶಲೋಪರಿಯ ನಡುವೆಯೋ ಪ್ರಸ್ತಾಪಿಸಿ ಏನೂ ಆಗಿಲ್ಲವೆಂಬಂತೆ ಸಹಜವಾಗಿಯೇ ಬೇರೆ ವಿಷಯಗಳೆಡೆಗೆ ಹೊರಳಬಲ್ಲಿರಿ. ನಿಮಗದರ ತೀವ್ರತೆ ತಟ್ಟುವ ಸಾಧ್ಯತೆ ಕಡಿಮೆ. ಆದರೆ ಯುದ್ಧ ಹಾಗಲ್ಲ. ಯುದ್ಧದಿಂದ ಸೃಷ್ಟಿಯಾದ ಈ ಅನಾಥ ಮಕ್ಕಳಿಗೆ ಯುದ್ಧದ ಹೊರತು ಇನ್ನಾವುದರ ನೆನಪೂ ಇಲ್ಲ. ತಮ್ಮ ಕಣ್ಣೆದುರೇ ತಂದೆ, ತಾಯಿ, ಅಕ್ಕ-ತಂಗಿಯರ ಸಾವನ್ನು ಕಂಡು ಅವು ಮಾತಾಡಲಾರದಷ್ಟು ಮತ್ತು ಆಹಾರವನ್ನೂ ಸೇವಿಸಲಾರದಷ್ಟು ದಿಗ್ಮೂಢವಾಗಿವೆ. ಆ ದೃಶ್ಯ ಮಕ್ಕಳನ್ನು ಪ್ರತಿಕ್ಷಣ ಕುಕ್ಕಿ ಕುಕ್ಕಿ ಅಧೀರಗೊಳಿಸುತ್ತಿವೆ. ಪ್ಲೀಸ್ ಮಕ್ಕಳಿಗೇನಾದರೂ ಸಹಾಯ ಮಾಡಿ..” ಎಂದು ಮೈಕೆಲ್ ರೋಜರ್ ಪತ್ರಿಕೆಯ ಮೂಲಕ ಕೇಳಿಕೊಂಡರು. ತಮ್ಮ ಗೆಳೆಯರು, ಸಂಪರ್ಕದಲ್ಲಿರುವವರೊಂದಿಗೆ ವಿನಂತಿಸಿದರು. ಒಂದು ರೀತಿಯಲ್ಲಿ, ಕೊರಿಯನ್ ಯುದ್ಧದ ಇನ್ನೊಂದು ಮುಖ ಕಾಂಗ್ ಕೂ ರಿ. 3 ವರ್ಷಗಳ ತನಕ ನಡೆದ ಯುದ್ಧವನ್ನು 3 ಸಾವಿರ ವರ್ಷ ಕಳೆದರೂ ನೆನಪಿಸುವ ಮುಖ. ಯುದ್ಧ ಯಾಕೆ ಬೇಡ ಎಂಬುದನ್ನು ಮತ್ತೆ ಮತ್ತೆ ಒತ್ತಿ ಹೇಳುವ ಮುಖ.
     ಪ್ರಧಾನಿ ನರೇಂದ್ರ ಮೋದಿಯವರು ಪಾಕ್ ವಿರುದ್ಧ ನಡೆಸಿದ ಸರ್ಜಿಕಲ್ ಕಾರ್ಯಾಚರಣೆಯ ಬಳಿಕ ಅವರ ಬೆಂಬಲಿಗರು ಹಾಗೂ ಮಾಧ್ಯಮದ ಒಂದು ವರ್ಗದಲ್ಲಿ ಕಾಣಿಸುತ್ತಿರುವ ಯುದ್ಧೋನ್ಮಾದ ಮತ್ತು ರಣೋತ್ಸವವನ್ನು ನೋಡುವಾಗ ಇವೆಲ್ಲವನ್ನೂ ಹಂಚಿಕೊಳ್ಳಬೇಕೆನಿಸಿತು.

No comments:

Post a Comment