Saturday, February 27, 2021

ನಮಸ್ಕಾರ, ಅಸ್ಸಲಾಮು ಅಲೈಕುಂ ಮತ್ತು ಮನದೊಳಗಿನ ನೂರು ಭಾವಗಳು...
 ಏ.ಕೆ. ಕುಕ್ಕಿಲ
ಈ ಘಟನೆಗೆ ಒಂದು ತಿಂಗಳ ಪ್ರಾಯವೂ ಆಗಿಲ್ಲ.
ನನ್ನ ಸಂಬಂಧಿಯೋರ್ವರ ಮಗಳಿಗೆ ಇತ್ತೀಚೆಗೆ ಮದುವೆ ನಡೆಯಿತು. ಅವರು ಮುಸ್ಲಿಮ್. ಕಳೆದ ಎರಡು ದಶಕಗಳಿಂದಲೂ  ಅವರು ಬ್ರಾಹ್ಮಣ ಮಾಲಕತ್ವದ ಕಂಪೆನಿಯೊಂದಕ್ಕೆ ಕಚ್ಚಾ ಮಾಲು ಗಳನ್ನು ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದಾರೆ. ಸ್ವಂತದ್ದೊಂದು  ಲಾರಿಯಲ್ಲಿ ಕಂಪೆನಿಗೆ ಬೇಕಾದ ಕಚ್ಚಾ ಮಾಲುಗಳನ್ನು ಸರಬರಾಜು ಮಾಡುತ್ತಾ ಎರಡು ದಶಕಗಳನ್ನು ಕಳೆದಿದ್ದಾರೆ.  ಇವರದ್ದೂ ಮತ್ತು ಆ ಬ್ರಾಹ್ಮಣರದ್ದೂ ಒಂದೇ ಊರು. ಗ್ರಾಮೀಣ ಪ್ರದೇಶ. ಮದುವೆಗಿಂತ ವಾರ ಮೊದಲು ಆ ಬ್ರಾಹ್ಮಣರು ಇವರ  ಮನೆಗೆ ಬರುತ್ತಾರೆ. ಇವರ ಕೈಗೆ ಆರೂವರೆ ಲಕ್ಷ ರೂಪಾಯಿಯನ್ನು ಇಡುತ್ತಾರೆ. ನನ್ನ ಸಂಬಂಧಿಗೆ ಆಶ್ಚರ್ಯ. ಅದು ಅನಿರೀಕ್ಷಿತ  ವಿದ್ಯಮಾನ. ಹಣ ಪಡಕೊಂಡರೂ ಆ ಬಗ್ಗೆ ಇರುವ ಅನುಮಾನ ಅವರಿಂದ ದೂರವಾಗಿರಲಿಲ್ಲ. ಹಣವನ್ನು ಸಾಲವಾಗಿ ಕೊಟ್ಟರೋ  ದಾನವಾಗಿ ಕೊಟ್ಟರೋ? ಒಂದುವೇಳೆ ಸಾಲ ಎಂದಾದರೆ ಇದನ್ನು ಹಿಂತಿರುಗಿಸುವ ಬಗೆ ಹೇಗೆ ಎಂಬ ಪ್ರಶ್ನೆಯೊಂದು ಅವರೊಳಗೆ  ಸುಳಿದು ಸೂಚ್ಯವಾಗಿ ವ್ಯಕ್ತವೂ ಆಯಿತು. ಅದನ್ನು ಆ ಬ್ರಾಹ್ಮಣ ಮಾಲಕ ಗ್ರಹಿಸಿದರು. ಮಾತ್ರವಲ್ಲ, ಈ ಹಣ ನನ್ನ ವತಿಯಿಂದ ನಿಮ್ಮ  ಮದುವೆಗೆ ಉಡುಗೊರೆ ಎಂದರು. ಇನ್ನೇನಾದರೂ ಬೇಕಿದ್ದರೆ ಮುಲಾಜಿಲ್ಲದೇ ಹೇಳು, ನಾನು ಕೊಡುತ್ತೇನೆ ಎಂದು ಭರವಸೆ  ನೀಡಿದರು. ಮಾತ್ರವಲ್ಲ, ಮದುವೆ ದಿನದಂದು ಕುಟುಂಬ ಸಹಿತ ಸಂಭ್ರಮದಲ್ಲಿ ಭಾಗಿಯಾದರು. ಅಷ್ಟಕ್ಕೂ,
ಇಂಥ ಮಾನವೀಯ ಘಟನೆಗಳು ಸಮಾಜದಲ್ಲಿ ದಿನನಿತ್ಯ ನಡೆಯುತ್ತಿರುತ್ತವೆ. ಹಿಂದೂಗಳಿಗೆ ಮುಸ್ಲಿಮರು ಮತ್ತು ಮುಸ್ಲಿಮರಿಗೆ  ಹಿಂದೂಗಳು ಪರಸ್ಪರ ನೆರವಾಗುತ್ತಾ, ಸಾಂತ್ವನ ನೀಡುತ್ತಾ ಬದುಕುತ್ತಲೂ ಇದ್ದಾರೆ. ಹೀಗೆ ನೆರವಾಗುವಾಗ ಆತ ಮುಸ್ಲಿಮ್, ಆತ  ಬ್ರಾಹ್ಮಣ, ಆತ ಶೂದ್ರ, ಆತ ಲಿಂಗಾಯಿತ, ಒಕ್ಕಲಿಗ ಎಂಬೆಲ್ಲ ಗುರುತುಗಳು ಅಡ್ಡ ಬರುವುದೂ ಇಲ್ಲ. ದುರಂತ ಏನೆಂದರೆ,
ಇಂಥ ಪಾಸಿಟಿವ್ ಘಟನೆಗಳು ನೆಗೆಟಿವ್ ಘಟನೆಗಳಷ್ಟು ವಿಫಲವಾಗಿ ಹಂಚಿಕೆಯಾಗುತ್ತಿಲ್ಲ ಎಂಬುದು. ಇವತ್ತಿನ ಸಮಾಜದಲ್ಲಿ  ನೆಗೆಟಿವ್ ಸುದ್ದಿಗಳಿಗೆ ದೊಡ್ಡ ಮಾರ್ಕೆಟ್ ಇದೆ. ಓರ್ವರು ನಮಸ್ಕಾರ ಎಂದು ಮುಗುಳ್ನಕ್ಕು ಹೇಳಿದರೆ ಅದನ್ನು  ಸ್ವೀಕರಿಸಬೇಕಾದವರಲ್ಲಿ ನೂರು ಭಾವಗಳು ಇನ್ನೋರ್ವರಲ್ಲಿ ಸೃಷ್ಟಿಯಾಗುತ್ತವೆ. ಇಬ್ಬರು ಮುಖಾಮುಖಿಯಾದಾಗ ಮಾತಿನ  ಆರಂಭವೆಂಬಂತೆ ನಮಸ್ಕಾರ ಹೇಳುವುದು ರೂಢಿ. ಮುಸ್ಲಿಮರು ಈ ಮುಖಾಮುಖಿಯನ್ನು ಪ್ರಾರ್ಥನೆಯ ಮೂಲಕ  ಆರಂಭಿಸುತ್ತಾರೆ. ಅಸ್ಸಲಾಮು ಅಲೈಕುಮ್ ಎಂದರೆ ನಿಮ್ಮನ್ನು ದೇವನು ಚೆನ್ನಾಗಿಟ್ಟಿರಲಿ ಎಂದಷ್ಟೇ ಅರ್ಥ. ಇಬ್ಬರ  ಮುಖಾಮುಖಿಯಲ್ಲಿ ಹೇಳ ಲಾಗುವ ಈ ಅಸ್ಸಲಾಮು ಅಲೈಕುಮ್ ಅಥವಾ ಈ ನಮಸ್ಕಾರವನ್ನು ಇನ್ನೊಬ್ಬರು ಅದೇ ಭಾವದಲ್ಲಿ  ಮತ್ತು ಅದೇ ಸ್ಫೂರ್ತಿಯಲ್ಲಿ ಸ್ವೀಕರಿಸಬೇಕೆಂದಿಲ್ಲ. ಈತ ನನಗೆ ಯಾಕೆ ನಮಸ್ಕಾರ ಹೇಳಿದ ಎಂಬ ಪ್ರಶ್ನೆಯೊಂದಿಗೆ ಅದನ್ನು  ಸ್ವೀಕರಿಸಬಹುದು. ಈತನ ಅಸ್ಸಲಾಮು ಅಲೈಕುಮ್‌ನ ಹಿಂದೆ ಬೇರೆ ಉದ್ದೇಶಗಳಿರಬಹುದೇ ಎಂಬ ಪ್ರಶ್ನೆಯೊಂದಿಗೂ ಅದನ್ನು  ಸ್ವೀಕರಿಸಬಹುದು. ಇಂಥ ಸಾಧ್ಯತೆಯನ್ನು ನಿರಾಕರಿಸುವಂತಿಲ್ಲ. ಆದರೆ, ಈ ಬಗೆಯ ಪ್ರಶ್ನೆಗಳೊಂದಿಗೆ ಇಂಥ ನಮಸ್ಕಾರ ಅಥವಾ  ಅಸ್ಸಲಾಮು ಅಲೈಕುಮನ್ನು ಸ್ವೀಕರಿಸುವ ಮಂದಿ ಎಷ್ಟಿರಬಹುದು? ಈ ಪ್ರಶ್ನೆ ಬಹಳ ಮಹತ್ವದ್ದು. ಯಾಕೆಂದರೆ,
ಇಂಥವರ ಸಂಖ್ಯೆ ಜುಜುಬಿಯಲ್ಲಿ ಜುಜುಬಿ ಎಂಬುದು ಸ್ಪಷ್ಟ. ಬಹಳ ಬಹಳ ಪುಟ್ಟ ಗುಂಪೊಂದು ಇಂಥ ಪ್ರಶ್ನೆಗಳೊಂದಿಗೆ  ನಮಸ್ಕಾರವನ್ನೋ ಅಸ್ಸಲಾಮು ಅಲೈಕುಮನ್ನೋ ಸ್ವೀಕರಿಸುತ್ತಿರ ಬಹುದು. ಉಳಿದ ಪರ್ವತದಷ್ಟು ದೊಡ್ಡ ಗುಂಪು ಇವನ್ನು ಯಾವ  ಪ್ರಶ್ನೆಗಳ ಗೊಂದಲವೂ ಇಲ್ಲದೇ ಸಹಜವಾಗಿ ಸ್ವೀಕರಿಸು ತ್ತಾರೆ. ಮರು ಉತ್ತರಿಸುತ್ತಾರೆ. ಹಾಗಿದ್ದರೂ ಇವರು ಸಾರ್ವಜನಿಕ ಚರ್ಚೆಗೆ  ಒಳಗಾಗುವುದು ಕಡಿಮೆ. ಅದರ ಬದಲು ಯಾರೋ ಒಬ್ಬರು ನಮಸ್ಕಾರವನ್ನು ವಿವಿಧ ಪ್ರಶ್ನೆಗಳ ಭಾವದೊಂದಿಗೆ ಸ್ವೀಕರಿಸುವುದು  ದೊಡ್ಡ ಸುದ್ದಿಯಾಗುತ್ತದೆ. ಬದಲಾವಣೆ ಆಗಬೇಕಾದದ್ದೂ ಇಲ್ಲೇ.
ಸದ್ಯದ ಸಮಸ್ಯೆ ಏನೆಂದರೆ,
ಸುದ್ದಿಗಳ ಸಂತೆಯಲ್ಲಿ ಇರುವ ಪಾಸಿಟಿವ್ ಸುದ್ದಿಗಳ ಕೊರತೆ. ನಾವು ಸುದ್ದಿ ಎಂದು ಏನನ್ನು ಓದುತ್ತೇವೋ ಮತ್ತು ವೀಕ್ಷಿಸುತ್ತೇವೋ
ಅಲ್ಲೆಲ್ಲಾ ನಕಾರಾತ್ಮಕ ಸುದ್ದಿಗಳೇ ವಿಜೃಂಭಿಸುತ್ತಿರುತ್ತವೆ. ನಿಜವಾಗಿ,
ಯಾವುದೇ ಸುದ್ದಿಗೂ ಒಂದು ಮೂಲ ಇರುತ್ತದೆ. ಆರಂಭ ದಲ್ಲಿ ಉಲ್ಲೇಖಿಸಲಾದ ಘಟನೆಗೂ ಒಂದು ಮೂಲ ಇದೆ. ಆ  ಮೂಲದಿಂದ ಸುದ್ದಿಯನ್ನು ಹೆಕ್ಕಿಕೊಂಡು ಅದನ್ನು ಸಾರ್ವಜನಿಕರ ಅವಗಾಹನೆಗೆ ತರುವಲ್ಲಿ ವರೆಗೆ ಆ ಸುದ್ದಿ ಆ ಮೂಲ ವ್ಯಕ್ತಿಗೆ  ಮಾತ್ರ ಗೊತ್ತಿರುತ್ತದೆ. ಅದನ್ನು ಆ ವ್ಯಕ್ತಿಯಿಂದ ಪಡೆದು, ಪರಿಶೀಲಿಸಿ ಸಾರ್ವಜನಿಕರಿಗೆ ಗೊತ್ತುಪಡಿಸುವ ಪ್ರಕ್ರಿಯೆಯೊಂದು  ನಡೆಯದೇ ಹೋದರೆ, ಅಷ್ಟರ ಮಟ್ಟಿಗೆ ಸಾರ್ವಜನಿಕರು ಆ ಪಾಸಿಟಿವ್ ಸುದ್ದಿಯೊಂದರಿಂದ ವಂಚಿತರಾದಂತೆ. ಇಲ್ಲಿ ಇನ್ನೊಂದು  ಪ್ರಶ್ನೆಯೂ ಇದೆ. ಆರಂಭದಲ್ಲಿ ಉಲ್ಲೇಖಿಸಲಾದ ಘಟನೆಯ ಕೇಂದ್ರೀಯ ವ್ಯಕ್ತಿಯ ಮನಸ್ಥಿತಿಯೂ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.  ಇಂಥ ವಿಷಯ ಸಾರ್ವಜನಿಕ ಅವಗಾಹನೆಗೆ ಬರುವ ಮತ್ತು ಬರದೇ ಇರುವುದಕ್ಕೂ ಅವರ ಮನಸ್ಥಿತಿಗೂ ಸಂಬಂಧ ಇರುತ್ತದೆ. ಆ  ವ್ಯಕ್ತಿ ಇಂಥ ಘಟನೆಯನ್ನು ಹೇಗೆ ನೋಡುತ್ತಾನೆ ಎಂಬುದೂ ಇಲ್ಲಿ ಮುಖ್ಯವಾಗುತ್ತದೆ. ತನಗೆ ನೆರವು ನೀಡಿದ ಘಟನೆ ತೀರಾ  ಖಾಸಗಿಯಾದದ್ದು, ಅದನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದು ತರವಲ್ಲ ಎಂದು ಆತ ನಿರ್ಧರಿಸಿದರೆ ಇಂಥದ್ದೊಂದು ಅ ಪೂರ್ವ ಅಂತರ್ಧರ್ಮೀಯ ಮಾನವೀಯ ಘಟನೆ ಅವರಿಬ್ಬರೊಳಗೆಯೇ ಸತ್ತು ಹೋಗುತ್ತದೆ. ಹಾಗಂತ,
ಅದರಿಂದ ಅವರಿಬ್ಬರಿಗೆ ನಷ್ಟವೇನೂ ಇಲ್ಲದಿರಬಹುದು. ಆದರೆ, ಸಂಘರ್ಷದ ಸ್ಥಿತಿ ಇರುವ ಇಂದಿನ ಸಾಮಾಜಿಕ ಸ್ಥಿತಿಯಲ್ಲಿ  ಅವರಿಬ್ಬರ ಲಾಭ-ನಷ್ಟವಷ್ಟೇ ಮುಖ್ಯವಾಗುವುದಿಲ್ಲ. ಒಟ್ಟು ಸಮಾಜದ ಲಾಭ-ನಷ್ಟವನ್ನೂ ಪರಿಗಣಿಸಬೇಕಾಗುತ್ತದೆ. ಅಂಥ ಸ್ಥಿತಿಯಲ್ಲಿ  ಅವರಿಬ್ಬರ ಲಾಭ-ನಷ್ಟವನ್ನು ನಿರ್ಲಕ್ಷಿಸಿ ಇಂಥ ಘಟನೆಗಳನ್ನು ಸುದ್ದಿಯಾಗಿಸಿ ಸಮಾಜದ ಮುಂದಿಟ್ಟು ಪಾಸಿಟಿವ್ ಶಕ್ತಿಯನ್ನು ಜ ನರಲ್ಲಿ ಹಂಚಬೇಕಾದ ಅಗತ್ಯ ಇದೆ. ಆದರೆ,
ನಕಾರಾತ್ಮಕ ಸುದ್ದಿಗಳು ಹೀಗಲ್ಲ. ಸುದ್ದಿಗಳ ಸಂತೆಯಲ್ಲಿ ಇವು ಗಳದೇ ಕಾರುಬಾರು ಇದೆ. ಯಾಕೆಂದರೆ, ನಕಾರಾತ್ಮಕ ಸುದ್ದಿ ಯನ್ನು  ಯಾರೂ ಪ್ರಚಾರ ಮಾಡಬೇಕಿಲ್ಲ. ಅದು ಸಹಜವಾಗಿಯೇ ಪ್ರಚಾರಕ್ಕೆ ಬರುತ್ತದೆ. ಹಿಂದೂ-ಮುಸ್ಲಿಮರ ನಡುವೆ ಪುಟ್ಟ ಮಾತಿನ  ಸಮರ, ಬಳಿಕ ಹೊಡೆದಾಟ, ಬಳಿಕ ಘರ್ಷಣೆ.. ಹೀಗೆ ಏನೇ ನಡೆದರೂ ಅದು ಇಬ್ಬರ ನಡುವಿನ ಘಟನೆಯಾಗಿಯಷ್ಟೇ ಉಳಿ ದಿರುವುದಿಲ್ಲ. ಅದಕ್ಕೆ ಹತ್ತು ಮಂದಿ ನೋಡುಗರು ಇರು ತ್ತಾರೆ. ಬಾಯಿಂದ ಬಾಯಿಗೆ, ಕಣ್ಣಿಂದ ಕಣ್ಣಿಗೆ ಮತ್ತು ಕಿವಿಯಿಂದ ಕಿವಿಗೆ  ಅದು ರವಾನೆಯಾಗುತ್ತಲೇ ಹೋಗಿ ಸುದ್ದಿಯ ಸ್ವರೂಪವನ್ನು ಪಡೆದಿರುತ್ತದೆ. ಹೆಚ್ಚಿನ ಯಾವುದೇ ನಕಾರಾತ್ಮಕ ಸುದ್ದಿಗೂ ಹಲವು  ಜೋಡಿ ಕಣ್ಣು, ಕಿವಿ, ಮೂಗು, ಬಾಯಿ, ಕಾಲು, ಕೈಗಳು ಸಾಕ್ಷ್ಯಗಳಾಗಿರುವುದೇ ಹೆಚ್ಚು. ಆದ್ದರಿಂದ ಅವು ಸಹಜ ವಾಗಿಯೇ ಸು ದ್ದಿಗೀಡಾಗುತ್ತವೆ. ಆದರೆ, ಸಕಾರಾತ್ಮಕ ಸುದ್ದಿಗಳು ಹಾಗಲ್ಲ. ಅವು ಶಾಂತಿಯುತ ಸ್ಥಿತಿಯಲ್ಲಿ ಜನ್ಮ ಪಡೆಯುತ್ತದೆ. ಶಾಂತಿಯ  ವಾತಾವರಣವನ್ನು ಇನ್ನಷ್ಟು ವಿಸ್ತರಿಸುತ್ತದೆ. ಶಾಂತಿಯಲ್ಲಿ ರೋಷ, ತಾಪ, ದ್ವೇಷ, ಹಗೆತನಗಳು ಇಲ್ಲವಾದ್ದರಿಂದ ಅದು ಅಲ್ಲಿಯೇ  ಕೊನೆಗೊಳ್ಳುತ್ತದೆ. ಅಂದಹಾಗೆ,
ಕೊರೋನಾ ಕಾಲದಲ್ಲಿ ಬೆಳಕಿಗೆ ಬಂದಷ್ಟು ಮಾನವೀಯ ಘಟನೆಗಳು ಕೊರೋನಾ ಪೂರ್ವ ಕಾಲದಲ್ಲಿ ಬೆಳಕಿಗೆ ಬಂದದ್ದೋ  ಚರ್ಚಿತವಾದದ್ದೋ  ಬಹಳ ಕಡಿಮೆ ಎಂದೇ ಹೇಳಬಹುದು. ಯಾಕೆ ಹೀಗೆ ಎಂದರೆ, ಕೊರೋನಾದ ಉಚ್ಚ್ರಾಯ ಕಾಲವು ಒಂದು  ದುರಿತ ಕಾಲವಾಗಿ ಸಾರ್ವತ್ರಿಕವಾಗಿ ಗುರುತಿಗೀಡಾಯಿತು. ಕೊರೋನಾಕ್ಕೆ ಧರ್ಮ ಇರಲಿಲ್ಲ. ರಾಜಕಾರಣಿಗಳು ಅದಕ್ಕೆ ಧರ್ಮವನ್ನು  ಅಂಟಿಸಲೆತ್ನಿಸಿದರೂ ಅದು ಯಶಸ್ವಿಯಾಗಲಿಲ್ಲ. ಕೊರೋನಾ ಯಾವಾಗ ಸರ್ವರನ್ನೂ ಭೀತಿಯಲ್ಲಿ ಕೆಡವತೊಡಗಿತೋ ಮಾನವರ ನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಪ್ರಯತ್ನಿಸಿದವರು ಮರೆಗೆ ಸರಿಯುವುದು ಅನಿವಾರ್ಯವಾಯಿತು. ನಾಗರಿಕರು  ಪರಸ್ಪರ ಸಹಕಾರವಿಲ್ಲದೇ ಬದುಕುವುದು ಅಸಾಧ್ಯ ಎಂಬ ವಾತಾವರಣ ಸೃಷ್ಟಿಯಾಗುವುದೆಂದರೆ, ವಿಭಜನೆಯ ಷಡ್ಯಂತ್ರ ಹೊತ್ತು  ತಿರುಗುವವರು ಸೋಲೊಪ್ಪಿಕೊಳ್ಳುವುದು ಎಂದೇ ಅರ್ಥ. ಅನಾಹುತಗಳು, ಪ್ರಕೃತಿ ವಿಕೋಪಗಳೆಲ್ಲ ಇಂಥ ಸನ್ನಿವೇಶಗಳನ್ನು ಹುಟ್ಟು  ಹಾಕುತ್ತಲೇ ಇರುತ್ತವೆ. ವಲಸೆ ಹೋಗುತ್ತಿರುವ ಕಾರ್ಮಿಕರಿಗೆ ಹಿಂದೂಗಳು-ಮುಸ್ಲಿಮರು ಎಂಬ ಬೇಧ ನೋಡದೆಯೇ  ನೆರವಾದರು. ಆಹಾರ ಪೊಟ್ಟಣಗಳು, ನೀರು, ಚಪ್ಪಲಿ, ತಂಗಲು ವ್ಯವಸ್ಥೆ ಇತ್ಯಾದಿಗಳನ್ನು ಒದಗಿಸುವ ಲಕ್ಷಾಂತರ ಮಂದಿಯಲ್ಲಿ  ಯಾರು ಹಿಂದೂ, ಯಾರು ಮುಸ್ಲಿಮ್ ಎಂಬುದು ಮುಖ್ಯವಾಗಲೇ ಇಲ್ಲ. ಕೊರೋನಾದ ಆರಂಭದಲ್ಲಿ ಹರಡಲಾದ ನಕಾರಾತ್ಮಕ  ಸುದ್ದಿಗಳನ್ನು ಆ ಬಳಿಕದ ಸಕಾರಾತ್ಮಕ ಸುದ್ದಿಗಳು ಗುಡಿಸಿ ಹಾಕಿದುವು. ಸುದ್ದಿಗಳ ಸಂತೆಯಲ್ಲಿ ಸಕಾರಾತ್ಮಕ ಸುದ್ದಿಗಳದೇ ಸಾಮ್ರಾಜ್ಯ.  ಮಾಧ್ಯಮಗಳಲ್ಲೂ ಸಕಾರಾತ್ಮಕ ಸುದ್ದಿಗಳದೇ ಪ್ರಾಬಲ್ಯವಿತ್ತು. ಹೀಗೇಕಾಯಿತೆಂದರೆ,
ಕೊರೋನಾ ಎಲ್ಲರ ಪಾಲಿಗೂ ಅಪಾಯಕಾರಿಯಾಗಿತ್ತು. ಭೂಕಂಪ, ಪ್ರವಾಹ, ಭೀಕರ ಅಪಘಾತದಂತಹ ಸಂದರ್ಭಗಳಲ್ಲಿ ಇಂಥ  ಅನ್ಯೋನ್ಯ ಮತ್ತು ಸಹಕಾರ ಭಾವವನ್ನು ನಾವು ಕಾಣುತ್ತಲೇ ಇರುತ್ತೇವೆ. ಇಂಥ ಸಂದರ್ಭಗಳಲ್ಲಿ ವಿಭಜನೆಯ ಸಿದ್ಧಾಂತಗಳಿಗೆ ನೆಲೆ  ಸಿಗುವುದಿಲ್ಲ. ಅಪಾಯವೊಂದು ಎಲ್ಲರ ಪಾಲಿಗೂ ಸಮಾನ ಭೀತಿಯನ್ನು ಮೂಡಿಸಿರುವಾಗ ಅಲ್ಲಿ ಸಹಕಾರ ಭಾವವೇ ಜಯ  ಗಳಿಸುತ್ತದೆ. ಅದು ಉಳಿವಿಗಾಗಿನ ಹೋರಾಟ. ಇಂಥ ಸಂದರ್ಭದಲ್ಲಿ ನಾವು-ಅವರು ಎಂಬುದಕ್ಕೆ ಮಾರುಕಟ್ಟೆ ಇರುವುದಿಲ್ಲ.  ಹೇಗಾದರೂ ಮಾಡಿ ಬದುಕುಳಿಯುವುದೇ ಮುಖ್ಯ. ಇಂಥ ಸ್ಥಿತಿಯಲ್ಲಿ ನಕಾರಾತ್ಮಕ ಭಾವಗಳು ದೂರವಾಗಿ ಪರಸ್ಪರ ಸಹಕಾರ,  ಪ್ರೀತಿ, ಸೌಹಾರ್ದ ಭಾವಗಳು ಗಟ್ಟಿಗೊಳ್ಳುತ್ತವೆ. ಕೊರೋನಾದ ಆರಂಭ ಮತ್ತು ಬಳಿಕದ ಸ್ಥಿತಿ-ಗತಿಗಳಲ್ಲಿ ಉಂಟಾದ ಭಾರೀ  ವ್ಯತ್ಯಾಸದ ಹಿಂದೆ ಇಂಥ ಭಾವಗಳು ಕೆಲಸ ಮಾಡಿವೆ.
ಸದ್ಯದ ಅಗತ್ಯ ಏನೆಂದರೆ,
ಸಕಾರಾತ್ಮಕ ಸುದ್ದಿಗಳನ್ನು ಎಷ್ಟು ಸಾಧ್ಯವೋ ಅಷ್ಟು ಬೆಳಕಿಗೆ ತರುವುದು. ಆ ಮೂಲಕ ನಕಾರಾತ್ಮಕ ಸುದ್ದಿಗಳ ಅಶ್ವಮೇಧ  ಯಾತ್ರೆಯನ್ನು ಅಡ್ಡಗಟ್ಟಿ ನಿಲ್ಲಿಸುವುದು. ಸಕಾರಾತ್ಮಕ ಸುದ್ದಿಗಳು ಸಾರ್ವಜನಿಕವಾಗಿ ಲಭ್ಯಗೊಂಡಷ್ಟೂ ನಕಾರಾತ್ಮಕ ಸುದ್ದಿಗಳ ಪ್ರಭಾವ  ಇಳಿಯುತ್ತಾ ಹೋಗುತ್ತದೆ. ಹಿಂದೂ-ಮುಸ್ಲಿಮರನ್ನು ವಿಭಜಿಸುವಲ್ಲಿ, ಒಳಗೊಳಗೇ ದ್ವೇಷ ಹೆಚ್ಚಿಸುವಲ್ಲಿ ಸಕಾರಾತ್ಮಕ ಸುದ್ದಿಗಳ  ಅಭಾವಕ್ಕೂ ಪಾತ್ರ ಇದೆ. ನಕಾರಾತ್ಮಕ ಸುದ್ದಿಗಳನ್ನು ಪದೇ ಪದೇ ಓದುತ್ತಾ, ಆಲಿಸುತ್ತಾ ಮತ್ತು ವೀಕ್ಷಿಸುತ್ತಾ ಸಾರ್ವಜನಿಕ ಮನಸ್ಸು  ಖುದಿಗೊಂಡಿರುತ್ತದೆ. ಅದನ್ನು ತಣಿಸುವುದಕ್ಕೆ ಸಕಾರಾತ್ಮಕ ಸುದ್ದಿಗಳಿಂದಷ್ಟೇ ಸಾಧ್ಯ. ನಮ್ಮ ಗಮನಕ್ಕೆ ಬರುವ ಸಕಾರಾತ್ಮಕ ಸುದ್ದಿಗಳ ನ್ನೆಲ್ಲಾ ಹೆಕ್ಕಿ ಹೆಕ್ಕಿ ಸಾರ್ವಜನಿಕರ ಅವಗಾಹ ನೆಗೆ ತರುತ್ತಾ ಹೋದರೆ ನಕಾರಾತ್ಮಕ ಸುದ್ದಿಗಳು ಬಾಲ ಮಡಚಿ ಅಡಗಿಕೊಳ್ಳಲು  ಪ್ರಾರಂಭಿಸುತ್ತವೆ. ಇವತ್ತಿನ ಜರೂರತ್ತು ಇದು.
ಸಕಾರಾತ್ಮಕವಾಗಿ ಆಲೋಚಿಸೋಣ. ಸಕಾರಾತ್ಮಕವಾದುದನ್ನು ಹೆಚ್ಚು ಹೆಚ್ಚಾಗಿ ಹಂಚೋಣ.  

Friday, February 12, 2021

ಕಿರುಕುಳಕ್ಕಿಂತ ಕಿರುಕುಳ ಪೋಸ್ಟ್ ಗೆ ಸಿಕ್ಕ ಲೈಕ್‌ಗಳೇ ಮುಖ್ಯವಾಗುವ ಕಾಲ
ಇತ್ತೀಚೆಗೆ ಮಂಗಳೂರಿನ ತರುಣಿಯೋರ್ವಳು ಇನ್‌ಸ್ಟಾ ಗ್ರಾಮ್‌ನಲ್ಲಿ ತನಗಾದ ಅನುಭವವೊಂದನ್ನು ಹಂಚಿಕೊಂಡಿದ್ದಳು. ನಗರದ  ಸಿಟಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಧ್ಯ ವಯಸ್ಕ ವ್ಯಕ್ತಿ ನೀಡಿದ ಕಿರುಕುಳವನ್ನು ಆತನ ಫೋಟೋ ಸಹಿತ ಹಂಚಿಕೊಂಡಿದ್ದಳು.  ‘ನಿನ್ನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವೆ’ ಎಂದು ಬೆದರಿಸಿದಾಗ ಆತ ಮಾಸ್ಕ್ ಸರಿಸಿ ಲಕ್ಷಣವಾಗಿ  ಪೋಸು ಕೊಟ್ಟ ಎಂದೂ ಹೇಳಿದ್ದಳು. ಮಾತ್ರವಲ್ಲ, ಇನ್ನೊಂದು ಗಂಭೀರ ಪ್ರಶ್ನೆಯೂ ಆಕೆಯ ಪೋಸ್ಟ್ ನಲ್ಲಿತ್ತು. ಆತನ ಕಿರುಕುಳವನ್ನು  ವಿರೋಧಿಸಿ ತಾನು ದೊಡ್ಡ ದನಿಯಲ್ಲಿ ಪ್ರತಿಭಟಿಸಿದರೂ ಬಸ್‌ನಲ್ಲಿರುವವರಾಗಲಿ, ಚಾಲಕ, ನಿರ್ವಾಹಕರಾಗಲಿ ಗಂಭೀರವಾಗಿ  ಪರಿಗಣಿಸಲೇ ಇಲ್ಲ ಎಂದೂ ಹೇಳಿಕೊಂಡಿದ್ದಳು. ನಿಜವಾಗಿ,
ಆಕೆಯ ಪೋಸ್ಟ್ ನಲ್ಲಿದ್ದ ಮೊದಲ ಭಾಗಕ್ಕಿಂತ ಆಘಾತಕಾರಿಯಾಗಿರುವುದು ಆ ಪೋಸ್ಟ್ ನ  ಈ ಎರಡನೇ ಭಾಗ. ಈಕೆ ಜೋರು ದನಿಯಲ್ಲಿ ಪ್ರತಿಭಟಿಸಿದ ಹೊರತಾಗಿಯೂ ಬಸ್ ನಲ್ಲಿದ್ದವರಿಂದ ಸಿಗಬೇಕಾದ ಬೆಂಬಲ ಏಕೆ ಸಿಗಲಿಲ್ಲ? ಚಾಲಕ, ನಿರ್ವಾಹಕರು ತಕ್ಷಣ  ಆ ತರುಣಿಯ ಬೆಂಬಲಕ್ಕೆ ಏಕೆ ನಿಲ್ಲಲಿಲ್ಲ?
ಇಲ್ಲಿ ಇನ್ನೊಂದು ಘಟನೆಯನ್ನೂ ಪ್ರಸ್ತಾಪಿಸಬಹುದು.

ಜನವರಿ 3ರಂದು ನಡೆದ ಘಟನೆ ಇದು. ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಕ್ಯಾವಾಲಿ ಗ್ರಾಮದ ಅಂಗನವಾಡಿ  ಕಾರ್ಯಕರ್ತೆಯನ್ನು ದೇವಾಲಯದ ಅರ್ಚಕ ಸತ್ಯನಾರಾಯಣ ಮತ್ತು ಇಬ್ಬರು ಗೆಳೆಯರು ಸೇರಿಕೊಂಡು ಬರ್ಬರವಾಗಿ  ಅತ್ಯಾಚಾರ ಮಾಡುತ್ತಾರೆ ಮತ್ತು ಆ ರಾತ್ರಿ ಆಕೆಯನ್ನು ಆಕೆಯ ಮನೆಯ ಹತ್ತಿರ ಎಸೆದು ಹೋಗುತ್ತಾರೆ. ಕ್ಯಾವಾಲಿ ಗ್ರಾಮದ  ಹತ್ತಿರದ ಮೇವ್ಲಿ ಗ್ರಾಮದಲ್ಲಿರುವ ತಾಕೂರ್ಜಿ ದೇವಾಲಯಕ್ಕೆ ಈ ಮಧ್ಯವಯಸ್ಕ ಮಹಿಳೆ ಹೋಗಿದ್ದರು. ಸಂಜೆಯ ಹೊತ್ತು. ಈ  ಮಹಿಳೆಯ ತಾಯಿಯ ಗ್ರಾಮವೂ ಅದುವೇ. 5 ಮಕ್ಕಳ ತಾಯಿಯಾದ ಆಕೆಗೆ ಆ ದೇವಾಲಯ ಹೊಸತೂ ಆಗಿರಲಿಲ್ಲ. ಊರಿನ  ಮಂದಿ ಆ ದೇವಾಲಯಕ್ಕೆ ಹೋಗಿ ಆಶೀರ್ವಾದ ಪಡಕೊಂಡು ಬರುವುದು ಸಾಮಾನ್ಯವಾಗಿತ್ತು. ಮಕ್ಕಳು ಮತ್ತು ದಂಪತಿಗಳು  ದೇವಾಲಯಕ್ಕೆ ನಡಕೊಳ್ಳುವವರ ಪೈಕಿ ಹೆಚ್ಚಿದ್ದರು. ವಿಷಾದ ಏನೆಂದರೆ,
ಈ ಘಟನೆಗೆ ಊರವರು ಮತ್ತು ಪೊಲೀಸರಿಂದ ವ್ಯಕ್ತವಾದ ಪ್ರತಿಕ್ರಿಯೆ. ಈ ಮಹಿಳೆಯ ಗುಪ್ತಾಂಗವನ್ನು ಘಾಸಿಗೊಳಿಸಲಾಗಿತ್ತು.  ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಳು. ಆದರೆ, ಅರ್ಚಕ ಒಂದು ಕತೆ ಕಟ್ಟಿದ. ಆಕೆ ದೇವಾಲಯದ ಸಮೀಪದ ಬಾವಿಗೆ ಬಿದ್ದ  ಕಾರಣದಿಂದಾಗಿ ಹೀಗಾಗಿದೆ ಎಂದು ವೀಡಿಯೋ ಮೂಲಕ ಹೇಳಿದ. ಊರವರು ನಂಬಿದರು. ಪೊಲೀಸರೂ ನಂಬಿದರು. ಎಲ್ಲಿಯ  ವರೆಗೆಂದರೆ, ಮೃತದೇಹದ ಪೋಸ್ಟ್ ಮಾರ್ಟಂ ನಡೆದಿದ್ದೇ  ಜನವರಿ 5ರಂದು. ಅದನ್ನು ವೀಡಿಯೋ ಕೂಡ ಮಾಡಲಾಗಿಲ್ಲ.  ಆರಂಭದಲ್ಲಿ ಕೇಸು ದಾಖಲಿಸುವುದಕ್ಕೂ ಪೊಲೀಸರು ಮುಂದಾಗಲಿಲ್ಲ. 48 ಗಂಟೆಗಳ ಬಳಿಕ ಪೊಲೀಸರು ಅತ್ಯಾಚಾರ ಕೇಸು  ದಾಖಲಿಸಿದರು. ಮಾತ್ರವಲ್ಲ, ಅರ್ಚಕನನ್ನು ಗ್ರಾಮದ ಪ್ರಧಾನರೇ ಪೊಲೀಸರಿಂದ ಅಡಗಿಸಿಟ್ಟಿದ್ದರು ಎಂಬ ಆರೋಪ ಇದೆ. ಆತ  ಅದೇ ಊರಲ್ಲಿದ್ದರೂ ಪೊಲೀಸರು ಪಕ್ಕದ ಜಿಲ್ಲೆಯಲ್ಲಿ ಆತನ ಪತ್ತೆಗಾಗಿ ಹುಡುಕಾಡುತ್ತಿದ್ದರು. 3 ದಿನಗಳ ಬಳಿಕ ಆತನ ಬಂಧನವಾಯಿತು.
ಒಂದುವೇಳೆ, ಜೀವಂತ ಇರುತ್ತಿದ್ದರೆ ಇವತ್ತು ಆಕೆ ಕೊರೋನಾ ವ್ಯಾಕ್ಸಿನ್ ಅಭಿಯಾನದ ಭಾಗವಾಗಿರುತ್ತಿದ್ದಳು.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಯುವತಿ ಎತ್ತಿರುವ ಪ್ರಶ್ನೆ ಮತ್ತು ಬದೌನ್‌ನಲ್ಲಿ ನಾಗರಿಕರು ತೋರಿರುವ ಪ್ರತಿಕ್ರಿಯೆಯು  ಕೆಲವು ಬಹುಮುಖ್ಯ ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ.
1. ಹೆಣ್ಣಿನ ಮೇಲೆ ದಾಳಿಯಾಗುತ್ತಿದ್ದರೂ ನಾಗರಿಕ ಪ್ರಜ್ಞೆಯನ್ನು ಅದು ಬಡಿದೆಬ್ಬಿಸದೇ ಇರುವುದಕ್ಕೆ ಕಾರಣ ಏನು?
2. ಕಿರುಕುಳ ನೀಡುವವರಲ್ಲಿರುವ ಭಂಡ ಧೈರ್ಯಕ್ಕೂ ನಾಗರಿಕರ ಈ ಮೌನ ವೀಕ್ಷಣೆಗೂ ಸಂಬಂಧ ಇದೆಯೇ?
3. ಹೆಣ್ಣಿನ ಕುರಿತಾದ ಅಸಡ್ಡೆ ಭಾವ ಪುರುಷರ ಈ ನಿರ್ಲಕ್ಷ್ಯ  ಧೋರಣೆಗೆ ಕಾರಣವೇ?
4. ಇಂಥ ಸ್ಥಿತಿಯನ್ನು ಬದಲಿಸುವುದಕ್ಕೆ ಕಾನೂನುಗಳಿಂದ ಸಾಧ್ಯವೇ?
ಇಂಥ ಪ್ರಶ್ನೆಗಳು ಇನ್ನೂ ಇವೆ.
ಮಂಗಳೂರಿನ ತರುಣಿಯಾಗಲಿ, ಬದೌನ್‌ನ ಮಹಿಳೆಯಾಗಲಿ ಇಬ್ಬರೂ ಒಂದು ಮನಸ್ಥಿತಿಯ ಬಲಿಪಶುಗಳು. ಮಂಗಳೂರಿನಲ್ಲಿ  ಆತ ತರುಣಿಗೆ ಕಿರುಕುಳ ಕೊಟ್ಟಿರುವುದಷ್ಟೇ ಅಲ್ಲ, ಆತನಲ್ಲಿ ಆ ಬಗ್ಗೆ ಯಾವ ಭಯವೂ ಇರಲಿಲ್ಲ. ಪಶ್ಚಾತ್ತಾಪವೂ ಇರಲಿಲ್ಲ. ಆ  ಕಾರಣದಿಂದಲೇ ಆತ ನಿರ್ಲಜ್ಜೆಯಿಂದ ಫೋಟೋಕ್ಕೆ ಪೋಸು ಕೊಟ್ಟಿದ್ದ. ತಾನು ಮಾಡುತ್ತಿರುವುದು ತಪ್ಪು ಎಂಬ ಭಾವ ಓರ್ವನ ಲ್ಲಿದ್ದರೆ ಕನಿಷ್ಠ ಅದಕ್ಕಾಗಿ ಆತ ಹೆಮ್ಮೆ ಪಡುವುದಕ್ಕೋ ಅಥವಾ ಅದನ್ನು ಸಮರ್ಥಿಸಿಕೊಳ್ಳುವ ಭಾವದಲ್ಲಿ ವರ್ತಿಸುವುದಕ್ಕೋ  ಸಾಧ್ಯವಿಲ್ಲ. ಇಲ್ಲಿ ಆ ವ್ಯಕ್ತಿಯಲ್ಲಿ ಆ ಭಾವ ವ್ಯಕ್ತವಾಗಿಲ್ಲ. ಇದಕ್ಕೆ ಎರಡು ಕಾರಣಗಳಿರಬಹುದು.
1. ಒಂದೋ ಆತ ಇಂಥ ಕಿರುಕುಳದಲ್ಲಿ ಪಳಗಿದ್ದಾನೆ. ಈ ಮೊದಲೂ ಇಂಥ ಎಷ್ಟೋ ಕಿರುಕುಳವನ್ನು ನೀಡಿದ್ದಾನೆ.
2. ಈತ ಈ ಹಿಂದೆ ಇಂಥ ಕಿರುಕುಳವನ್ನು ಕೊಟ್ಟಾಗಲೂ ಬಸ್‌ನಲ್ಲಿದ್ದ ಪ್ರಯಾಣಿಕರು ಪ್ರತಿಭಟಿಸಿಲ್ಲ. ಇದುವೇ ಆತನನ್ನು  ಇಂಥದ್ದೊಂದು ಧೈರ್ಯಕ್ಕೆ ಪ್ರೇರೇಪಿಸಿದೆ.
ಈ ಎರಡೂ ಕಾರಣಗಳಲ್ಲಿ ಯಾವುದಿದ್ದರೂ ಅವು ಗಂಭೀರವೇ. ಹಾಗಂತ,
ಇಂಥ  ಮನಸ್ಥಿತಿ ಬರೇ ಒಂದು ಪ್ರದೇಶಕ್ಕೋ ಒಂದು ರಾಜ್ಯಕ್ಕೋ ಸೀಮಿತವಾಗಿಲ್ಲ ಎಂಬುದನ್ನು ಬದೌನ್ ಘಟನೆ ಸಾಬೀತು ಪಡಿಸುತ್ತಿದೆ. ಅಲ್ಲೂ ನಾಗರಿಕ ಪ್ರಜ್ಞೆಗೆ ಏನೂ ಆಗಿಲ್ಲ. ಆರೋಪಿಗಳನ್ನೇ ರಕ್ಷಿಸುವ ಮಟ್ಟಿಗೆ ಆ ಪ್ರಜ್ಞೆ ಸತ್ತು ಹೋಗಿದೆ. ಸದ್ಯ ದುರಸ್ತಿ  ಕಾರ್ಯ ನಡೆಯಬೇಕಿರುವುದು ಇಲ್ಲೇ.
ಮಹಿಳೆಯರ ಸುರಕ್ಷಿತತೆಯ ದೃಷ್ಟಿಯಿಂದ ರಚನೆಯಾದ ಕಾನೂನುಗಳನ್ನು ಪಟ್ಟಿ ಮಾಡಲು ಕುಳಿತರೆ ಕೈಯೇ ಸೋಲಬಹುದು.  ಕಾನೂನುಗಳ ಕೊರತೆಯೇನೂ ಈ ದೇಶದಲ್ಲಿಲ್ಲ. 2012ರ ನಿರ್ಭಯ ಘಟನೆಯ ಬಳಿಕವಂತೂ ಹೆಣ್ಣಿನ ಸುರಕ್ಷಿತತೆಯ ಬಗ್ಗೆ ಟನ್ನುಗಟ್ಟಲೆ ಬರಹಗಳು, ಭಾಷಣ, ವೀಡಿಯೋಗಳೂ ಪ್ರಸಾರ ವಾದುವು. ಟಿ.ವಿ. ಚಾನೆಲ್‌ಗಳಲ್ಲಿ ಅಸಂಖ್ಯ ಡಿಬೇಟ್‌ಗಳು ನಡೆದುವು.  ಕಾನೂನಿನ ಹಲ್ಲುಗಳಿಗೆ ಮತ್ತಷ್ಟು ತೀವ್ರತೆಯನ್ನು ತುಂಬಲಾಯಿತು. ಮಾತ್ರವಲ್ಲ, ನಿರ್ಭಯ ಪ್ರಕರಣದ ಆರೋಪಿಗಳನ್ನು ಗ ಲ್ಲಿಗೇರಿಸಿದ್ದೂ ನಡೆಯಿತು. ಇಷ್ಟೆಲ್ಲಾ ಆಗಿಯೂ ಈ ದೇಶದಲ್ಲಿ ಹೆಣ್ಣು ಸುರಕ್ಷಿತಳೇ ಎಂದು ಪ್ರಶ್ನಿಸಿದರೆ, ನಿರಾಸೆಯ ಉತ್ತರವನ್ನಲ್ಲದೇ  ಹೌದು, ಸುರಕ್ಷಿತೆ ಎಂದು ಹೇಳುವ ಯಾವ ವಾತಾವರಣವೂ ಇಲ್ಲ. ಹೆಣ್ಣು ರಾತ್ರಿ ಹೊರ ಹೋಗುವುದು ಸುರಕ್ಷಿತವಲ್ಲ ಎಂದು  ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯೇ ಹೇಳುವಷ್ಟು ಹೆಣ್ಣು ಅಸುರಕ್ಷಿತೆ. ಅಂದಹಾಗೆ,
ಈ ಅಸುರಕ್ಷಿತತೆಗೆ ಕಾಡುಪ್ರಾಣಿಗಳೋ ಪ್ರಕೃತಿ ಮುನಿಸುವಿಕೆಯೋ ಕಾರಣ ಅಲ್ಲ. ಹೆಣ್ಣು ಮನೆಯಿಂದ ಹೊರಗಿಳಿದರೆ ಪ್ರಕೃತಿ  ಆಕೆಯನ್ನು ಅಟ್ಟಾಡಿಸಿ ಮಳೆ ಸುರಿಸುವುದಿಲ್ಲ. ಸಿಡಿಲು ಸಿಡಿಯುವುದಿಲ್ಲ. ಆಕೆಯನ್ನೇ ಗುರಿಯಾಗಿಸಿಕೊಂಡು ಪ್ರಕೃತಿ ವಿಕೋಪಗಳು  ನಡೆಯುವುದೂ ಇಲ್ಲ. ಅಲ್ಲದೇ, ಕಾಡಿನಿಂದ ಪ್ರಾಣಿಗಳು ಬಂದು ಹೆಣ್ಣಿನ ಮೇಲೆ ದಾಳಿ ಮಾಡುವುದೂ ಇಲ್ಲ. ಆಕೆಯ ಅಸುರಕ್ಷಿತತೆಗೆ  ಶಾರೀರಿಕ ರೂಪದಲ್ಲಿ ತುಸು ಭಿನ್ನವಾಗಿರುವ ಆಕೆಯಂಥ ಜೀವಿಯೇ ಕಾರಣ. ಮಾತ್ರವಲ್ಲ,
ಇದನ್ನು ತಡೆಗಟ್ಟುವುದಕ್ಕೆ ಬರೇ ಕಾನೂನುಗಳಿಂದ ಮಾತ್ರ ಸಾಧ್ಯವಾಗದು ಎಂಬುದಕ್ಕೆ ಈವರೆಗಿನ ಘಟನಾವಳಿಗಳೇ ಸಾಕ್ಷಿ. ಕಾನೂ ನು ಎಷ್ಟೇ ಬಲವಾಗಿದ್ದರೂ ಅದಕ್ಕೊಂದು ಮಿತಿಯಿದೆ. ಆ ಮಿತಿಯಾಚೆ ಅದು ಕೆಲಸ ಮಾಡಲಾರದು. ತಪ್ಪೆಸಗಿದವನಿಗೆ ಶಿಕ್ಷೆಯನ್ನಷ್ಟೇ  ಅದು ಕೊಡಬಲ್ಲುದು. ತಪ್ಪೆಸಗಿದರೂ ತಪ್ಪಿಸಿ ಕೊಳ್ಳುವುದಕ್ಕೆ ಕೆಲವೊಮ್ಮೆ ಅದರದ್ದೇ  ಆದ ನಿಯಮಗಳು ಅವಕಾಶ  ಮಾಡಿಕೊಡುವುದೂ ಇದೆ. ಆದ್ದರಿಂದ ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಕಾನೂನಿನ ಮೊರೆ ಹೋಗುವುದೊಂದೇ ಪರಿಹಾರ ಅಲ್ಲ.  ಹೆಣ್ಣು ಅಸುರಕ್ಷಿತವಾಗಿದ್ದರೆ ಅದು ಗಂಡಿನಿಂದ. ಈ ಹಿನ್ನೆಲೆಯಲ್ಲಿ ಗಂಡಿನ ಮನಸ್ಥಿತಿಯನ್ನು ಬದಲಿಸುವ ಕ್ರಮಗಳು ಅಭಿಯಾನ  ರೂಪದಲ್ಲಿ ನಡೆಯಬೇಕು. ಮನೆಯಿಂದ ಪ್ರಾರಂಭವಾಗಬೇಕಾದ ಈ ಅಭಿಯಾನ ಮಸೀದಿ, ಮಂದಿರ, ಚರ್ಚ್, ಸ್ತೂಪಗಳ ಮೂಲಕ  ದೇಶದ ಮೂಲೆಮೂಲೆಗೂ ತಲುಪಬೇಕು. ಹೆಣ್ಣು ಮತ್ತು ಗಂಡಿನ ಮೊದಲ ತರಬೇತಿ ಸ್ಥಳವೇ ಮನೆ. ಮೊದಲ ಗುರುವೇ  ಹೆತ್ತವರು. ಈ ಮನೆಯಲ್ಲಿ ಹೆಣ್ಣು ಯಾವ ರೀತಿಯ ವ್ಯಾಖ್ಯಾನಕ್ಕೆ ಒಳಗಾಗುತ್ತಾಳೆ ಎಂಬುದ ರಿಂದ ಆಕೆ ಸುರಕ್ಷಿತಳೋ ಅಲ್ಲವೋ  ಎಂಬುದು ನಿರ್ಧಾರ ವಾಗುತ್ತದೆ. ಗಂಡಿನ ಗುಲಾಮೆ ಹೆಣ್ಣು ಎಂದೋ ಆಕೆ ಗಂಡಿನ ಆಜ್ಞೆಯಂತೆ ಮತ್ತು ಆತನಿಗೆ ತಗ್ಗಿ-ಬಗ್ಗಿ  ನಡೆಯಬೇಕು ಎಂದೋ ಕಲಿಸುವ ವಾತಾವರಣ ಮನೆಯಲ್ಲಿದ್ದರೆ, ಅಲ್ಲಿಂದ ಹೊರ ಬರುವ ಪ್ರತಿ ಗಂಡೂ, ಹೆಣ್ಣಿನ ಬಗ್ಗೆ ತಾತ್ಸಾರ  ಭಾವವನ್ನು ಹೊಂದಿರಬಲ್ಲ. ಹಾಗೆಯೇ ಆ ಮನೆಯ ಹೆಣ್ಣು ಮಗಳಲ್ಲಿ ಕಿರುಕುಳವನ್ನು ಸಹಿಸುವ ಮತ್ತು ಪ್ರತಿ ಆಡದಿರುವ ಭಾವವು  ಸಹಜವಾಗಿಯೇ ಇರಬಲ್ಲುದು.
ಅಷ್ಟೇ ಅಲ್ಲ,
ಒಂದುವೇಳೆ, ಮನೆಯಲ್ಲಿ ಹೆಣ್ಣು ಮತ್ತು ಗಂಡಿನ ನಡುವೆ ಬೇಧ ಭಾವ ನಡೆಯುತ್ತಿದ್ದರೂ ಶಾಲೆಯಲ್ಲಿ ಸೂಕ್ತ ತರಬೇತಿ  ಸಿಗುವಂತಿದ್ದರೆ ಅದೂ ಉತ್ತಮ ಸಮಾಜವನ್ನು ಕಟ್ಟುವುದಕ್ಕೆ ಕಾರಣವಾಗಬಹುದು. ಹೆಣ್ಣನ್ನು ಸುರಕ್ಷಿತಗೊಳಿಸುವುದಕ್ಕೆ ಶಾಲೆಯ  ಪಾತ್ರವೂ ಸಣ್ಣದಲ್ಲ. ಆದರೆ, ಶಾಲೆಯಲ್ಲಿ ಹೇಳಲಾಗುವ ಇತಿಹಾಸದ ಕತೆಗಳಲ್ಲಿ ಪುರುಷ ಪಾತ್ರ ಹೇಗಿದೆ ಮತ್ತು ಸ್ತ್ರೀ ಪಾತ್ರ  ಹೇಗಿರುತ್ತದೆ ಎಂಬುದು ಮುಖ್ಯ. ಕೆಲವೊಮ್ಮೆ ಶಿಕ್ಷಕರು ಗ್ರಹಿಸದ ಪಾಠವನ್ನು ಇತಿಹಾಸದ ಕತೆಗಳಿಂದ ಮಕ್ಕಳು ಗ್ರಹಿಸುವ ಸಾಧ್ಯತೆ  ಇರುತ್ತದೆ. ಹಾಗೆ ಅವರು ಗ್ರಹಿಸುವಾಗ ಗಂಡು ವಿಜೃಂಭಿಸಬಲ್ಲ. ಹೆಣ್ಣು ಅಬಲೆಯಂತೆ ಕಾಣಿಸಬಲ್ಲಳು. ಆದ್ದರಿಂದ ಶಾಲೆಯಲ್ಲಿ  ಸಿಗುವ ಪಾಠವು ವಿದ್ಯಾರ್ಥಿಗಳ ಗ್ರಹಿಸುವಿಕೆಯ ಸಾಮರ್ಥ್ಯವನ್ನು ಹೊಂದಿಕೊಂಡೂ ಇರುತ್ತದೆ. ಕೆಲವೊಮ್ಮೆ ಶಿಕ್ಷಕರ ಪಾಠವನ್ನು  ಬೇರೆ ಬೇರೆ ವಿದ್ಯಾರ್ಥಿಗಳು ಬೇರೆ ಬೇರೆ ರೂಪದಲ್ಲಿ ಅರ್ಥ ಮಾಡಿಕೊಳ್ಳುವುದಕ್ಕೂ ಸಾಧ್ಯವಿದೆ. ಮನೆಯಲ್ಲಿ ಯಾವ ವಾತಾವರಣ  ಇದೆಯೋ ಅದಕ್ಕೆ ಪೂರಕವಾಗಿ ಅವರು ಅದನ್ನು ಓದಿಕೊಳ್ಳುವುದಕ್ಕೂ ಅವಕಾಶ ಇದೆ. ಸದ್ಯ ತುರ್ತಾಗಿ ಇಲ್ಲೆಲ್ಲೋ ಗಮನ  ಹರಿಸಬೇಕಾದ ಅಗತ್ಯವಿದೆ. ಇಲ್ಲದಿದ್ದರೆ,
ಕಿರುಕುಳ ಪೋಸ್ಟ್ಗೆ ಎಷ್ಟು ಲೈಕ್‌ಗಳು ಬಿದ್ದವು, ಎಷ್ಟು ಶೇರ್ ಆದುವು ಎಂಬುದು ಕಿರುಕುಳಕ್ಕಿಂತ ಮುಖ್ಯ ಸುದ್ದಿಯಾಗಿಬಿಟ್ಟೀತು.