Thursday, September 8, 2022

ನನ್ನ ಮೂವರು ಗುರುಗಳೂ ಪೆನ್ನು ಕೆಳಗಿಟ್ಟರು
ಇಬ್ರಾಹೀಮ್ ಸಈದ್
ನೂರ್ ಮುಹಮ್ಮದ್
ಎಂ. ಸಾದುಲ್ಲಾ 
ಈ ತ್ರಿಮೂರ್ತಿಗಳು ಸನ್ಮಾರ್ಗದ ಆರಂಭ ಕಾಲದಿಂದಲೇ ಜೊತೆಯಾದವರು. ಬಹುತೇಕ ಸಮಪ್ರಾಯದವರೂ ಹೌದು. ಕಾಲಚಕ್ರದ  ಬೇರೆ ಬೇರೆ ತಿರುವಿನಲ್ಲಿ ಇವರೆಲ್ಲ ಒಂಟಿ ಒಂಟಿಯಾಗಿ ಇಳಿದು ಹೋದರು. ಸನ್ಮಾರ್ಗಕ್ಕೆ 29 (ಮೇ 27, 2007) ವರ್ಷಗಳಾದಾಗ  ‘ಇನ್ನು ಸಾಕು’ ಎಂಬಂತೆ ಇಬ್ರಾಹೀಮ್ ಸಈದ್ ಮೊದಲಿಗರಾಗಿ ಪೆನ್ನು ಕೆಳಗಿಟ್ಟರು. ಆ ಬಳಿಕ ನೂರ್ ಮುಹಮ್ಮದ್ ಸಾಬ್‌ರ ಸರದಿ.  ಸನ್ಮಾರ್ಗಕ್ಕೆ 36 ವರ್ಷಗಳಾದಾಗ (ಆಗಸ್ಟ್ 19, 2014) ಅವರೂ ಪೆನ್ನು ಕೆಳಗಿಟ್ಟರು. ಅದರಲ್ಲೂ ನೂರ್ ಮುಹಮ್ಮದ್ ಅವರ  ವಿದಾಯವಂತೂ ದಿಢೀರ್ ಆಗಿತ್ತು. ಮಸೀದಿಯಲ್ಲಿ ಇಶಾ ನಮಾಝನ್ನು ಮುಗಿಸಿ ತನ್ನ ದ್ವಿಚಕ್ರದಲ್ಲಿ ಮನೆಯತ್ತ ಮರಳುತ್ತಿದ್ದಾಗ ಅಜ್ಞಾತ  ವಾಹನವೊಂದು ಅವರನ್ನು ನೆಲಕ್ಕೆ ಕೆಡವಿ ಪರಾರಿಯಾಗಿತ್ತು. ಅವರು ಪೆನ್ನು ಕೆಳಗಿಡುವುದಕ್ಕೆ ಭೌತಿಕ ಕಾರಣವಾಗಿ ನಮ್ಮಲ್ಲಿರುವುದು  ಇದೊಂದೇ. ಈ ಮೂಲಕ ಇಬ್ರಾಹೀಮ್ ಸಈದ್ ಬಿಟ್ಟು ಹೋದ ನಿರ್ವಾತ ವನ್ನು ತುಂಬಲು ಶಕ್ತಿಮೀರಿ ಶ್ರಮಿಸುತ್ತಿದ್ದ ಇನ್ನೊಂದು ಪೆ ನ್ನೂ ನಿಶ್ಚಲವಾಯಿತು. ಬಹುಶಃ, ತನ್ನಿಬ್ಬರು ಸಂಗಾತಿಗಳು ತನ್ನ ಕಣ್ಣೆದುರೇ ಮರಳಿ ಮಣ್ಣು ಸೇರಿದುದನ್ನು ಸಾದುಲ್ಲಾ  ಸಾಬ್ ಹೇಗೆ  ಸ್ವೀಕರಿಸಿರಬಹುದು ಮತ್ತು ಅವರ ಮೇಲೆ ಅದು ಬೀರಿರ ಬಹುದಾದ ಒತ್ತಡಗಳೇನಿರಬಹುದು ಎಂದು, ಮೊನ್ನೆ ಸಾದುಲ್ಲಾರನ್ನು ಮರಳಿ  ಮಣ್ಣಿಗೆ ಸೇರಿಸಿ ನೇರ ಕಚೇರಿಗೆ ಬಂದು ಅವರು ಸದಾ ಕುಳಿತುಕೊಳ್ಳುತ್ತಿದ್ದ ಕುರ್ಚಿ ಮತ್ತು ಮೇಜಿನ ಫೋಟೋ ಕ್ಲಿಕ್ಕಿಸುತ್ತಾ  ಆಲೋಚಿಸಿದೆ. ಇನ್ನು ನನ್ನ ಪಾಲಿಗೆ ಚೈತನ್ಯವಾಗಿ ಉಳಿದಿರುವುದು ಈ ಫೋಟೋ ಮಾತ್ರ. ಅಂದಹಾಗೆ,

ತನ್ನಿಬ್ಬರು ಜೊತೆಗಾರರು ವಿದಾಯ ಕೋರಿದಾಗಲೂ ಸಾದುಲ್ಲಾ  ಸಾಬ್ ಅಧೀರರಾದುದನ್ನೋ ಶೂನ್ಯವಾಗಿ ಕುಳಿತುದನ್ನೋ ನಾನು  ಕಂಡಿಲ್ಲ. ಇದರರ್ಥ ಆ ಇಬ್ಬರ ವಿದಾಯ ಅವರ ಮೇಲೆ ಪರಿಣಾಮ ಬೀರಿಲ್ಲ ಎಂದಲ್ಲ. ಅವರಿದ್ದುದೇ ಹಾಗೆ. ತನ್ನೊಳಗೆ  ಮಹಾಭಾರತವೇ ನಡೆಯುತ್ತಿದ್ದರೂ (ಯುದ್ಧ ಎಂಬರ್ಥದಲ್ಲಿ ತೆಗೆದುಕೊಳ್ಳಿ) ಅವರು ಬಾಹ್ಯವಾಗಿ ಅದನ್ನು ಪ್ರಕಟಿಸುತ್ತಿರಲಿಲ್ಲ. ನಿಷ್ಪಾಪಿ  ಮುಗುಳ್ನಗೆಯನ್ನು ತುಟಿಯಲ್ಲಿಟ್ಟುಕೊಂಡೇ ಅವರು ತಿರುಗುತ್ತಿದ್ದರು. ಅವರನ್ನು ಭೇಟಿಯಾಗುವ ಯಾರೇ ಆಗಲಿ, ಅವರಿಗಿರಬಹುದಾದ  ಕಾರ್ಯಭಾರ, ತುರ್ತು, ವೈಯಕ್ತಿಕ ಸಮಸ್ಯೆಗಳನ್ನು ಗುರುತಿಸಲಾಗದಷ್ಟು ಅವರು ಸಹಜವಾಗಿರುತ್ತಿದ್ದರು.

ನಾನು ಫೆಬ್ರವರಿ 14, 2000ನೇ ಇಸವಿಯಲ್ಲಿ ಸನ್ಮಾರ್ಗ ಸೇರಿಕೊಂಡೆ. ನನ್ನ ಇಂಟರ್‌ವ್ಯೂವ್ ನಡೆಸಿದ್ದು ಸಂಪಾದಕರಾದ ಇಬ್ರಾಹೀಮ್  ಸಈದ್. ಬಹುಶಃ ಐದಾರು ನಿಮಿಷಗಳಲ್ಲೇ  ನನ್ನ ಇಂಟರ್‌ವ್ಯೂವ್ ಮುಗಿದಿತ್ತು. ‘ಜಾತ್ಯತೀತ ಎಂದು ಬರೆಯಬಲ್ಲಿರಾ?’ ಎಂದು ಅವರು  ಪ್ರಶ್ನಿಸಿದ್ದರು. ಬರೆದು ತೋರಿಸಿದ್ದೆ. ನಾನು ಬರೆದುದೇ ತಪ್ಪಾಗಿತ್ತು. ಇಬ್ರಾಹೀಮ್ ಸಈದ್ ಮುಗುಳ್ನಕ್ಕರು ಮತ್ತು ನಾಳೆಯಿಂದ ನೀವು  ಸಂಪಾದಕೀಯ ಬಳಗದ ಸದಸ್ಯರಾಗಿ ಸೇರಿಕೊಳ್ಳಿ ಎಂದು ಹೇಳಿದ್ದರು. ಸಂಪಾದಕರ ಕೊಠಡಿಯಿಂದ ಹೊರಬರುವಾಗ ಕುರ್ಚಿಯ  ಮುಂದೆ ಟೇಬಲನ್ನು ಹರಡಿಕೊಂಡು ಕುಳಿತಿದ್ದ ಸಣ್ಣ ದೇಹಾಕೃತಿ ಮತ್ತು ಬಿಳಿ ಶರ್ಟು ಧರಿಸಿದ್ದ ವ್ಯಕ್ತಿ ನನ್ನನ್ನು ಹತ್ತಿರ ಕರೆದು  ಕೂರಿಸಿದರು. ಸನ್ಮಾರ್ಗ ಕಚೇರಿಗೆ ಅದು ನನ್ನ ಮೊದಲ ಭೇಟಿಯಾದುದರಿಂದ ಅವರು ಸಾದುಲ್ಲಾ ಎಂದು ನನಗೆ ಗೊತ್ತಿರಲಿಲ್ಲ. ‘ನಿನ್ನ  ಸಮ್ಮಂಧವನ್ನು ಕಟ್ ಮಾಡಿ ಮಾಡಿ ನನಗೆ ಸಾಕಾಗಿ ಹೋಯ್ತು...’ ಎಂದು ಅವರು ನಕ್ಕರು. ನಾನು ಅರ್ಥವಾಗದೇ ಅವರ ಮುಖವ ನ್ನೇ ನೋಡಿದ್ದೆ. ಮೊದಲೇ ಹೊಸ ಮುಖ. ಕಚೇರಿಯೂ ಹೊಸತೇ. ಈ ನಡುವೆ ಇವರ ಜೋಕು ಬೇರೆ. ವಿಷಯ ಏನೆಂದರೆ, ನನ್ನ  ಹಲವು ಕತೆಗಳು ಸನ್ಮಾರ್ಗದಲ್ಲಿ ಆ ಮೊದಲೇ ಪ್ರಕಟವಾಗಿದ್ದುವು. ಸನ್ಮಾರ್ಗ ಏರ್ಪಡಿಸಿದ್ದ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನೂ  ಪಡೆದಿದ್ದೆ. ಆದರೆ ನಾನು ‘ಸಂಬಂಧ’ ಎಂಬ ಪದವನ್ನು ಸಮ್ಮಂಧ ಎಂದೇ ಬರೆಯುತ್ತಿದ್ದೆ. ಈ ತಪ್ಪನ್ನೇ ಅವರು ಜೋಕ್ ಮೂಲಕ ನನ್ನ  ಗಮನಕ್ಕೆ ತರುವ ಪ್ರಯತ್ನ ಮಾಡಿದ್ದರು. ಅಷ್ಟಕ್ಕೂ,

ತಪ್ಪಾಗಿ ಬರೆದವನನ್ನೇ ಇಬ್ರಾಹೀಮ್ ಸಈದ್ ಸಂಪಾದ ಕೀಯ ಬಳಗಕ್ಕೆ ಆಯ್ಕೆ ಮಾಡಿದರೆ, ನನ್ನ ತಪ್ಪನ್ನು ಹಾಸ್ಯದ ಮೂಲಕ  ಸಾದುಲ್ಲಾ ಸಾಬ್ ಎಂಬ ಆ ಅಪರಿಚಿತ ಮಹಾನು ಭಾವ ತಿದ್ದಿದ್ದರು.

ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹೋಲಿಸಿದರೆ ಇಬ್ರಾಹೀಮ್ ಸಈದ್‌ರೊಂದಿಗೆ ನನ್ನ ಒಡನಾಟ ಕಡಿಮೆ. ಸನ್ಮಾರ್ಗಕ್ಕೆ  ಸೇರಿದ ಆರಂಭದಲ್ಲಿ ನನ್ನಲ್ಲಿ ಸಹಜ ಅಳುಕು ಮತ್ತು ಭಯ ಮಿಶ್ರಿತ ಆದರಭಾವವು ಅವರ ಜೊತೆ ಸಹಜವಾಗಿ ಬೆರೆಯುವುದಕ್ಕೆ ಅಡ್ಡಿ ಪಡಿಸಿದರೆ, ಆ ಬಳಿಕ ಅವರು ಜಮಾಅತ್‌ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ಬೆಂಗಳೂರು ಸೇರಿ ಕೊಂಡುದೂ ಇದಕ್ಕೆ ಕಾರಣ.  ಆದ್ದರಿಂದ, ನಾನು ಸಂಪಾದಕೀಯ ಬಳಗದಲ್ಲಿ ಹಿರಿಯರಾಗಿದ್ದ ನೂರ್ ಮುಹಮ್ಮದ್ ಮತ್ತು ಸಾದುಲ್ಲಾ ಸಾಬ್‌ರಿಗೆ ಹತ್ತಿರವಾದೆ.  ಇವರಿಬ್ಬರದ್ದೂ ತದ್ವಿರುದ್ಧ ಗುಣಸ್ವಭಾವ. ನೂರ್ ಮುಹಮ್ಮದ್ ಸಾಬ್ ಖಡಕ್ ನಿಷ್ಠುರಿ. ಶಿಸ್ತಿನ ಸಿಪಾಯಿ. ಸರಿ ಕಾಣದ್ದನ್ನು ತಕ್ಷಣವೇ  ಹಿಂದು-ಮುಂದು  ನೋಡದೇ ಹೇಳಿ ಬಿಡುವುದು ಅವರ ಅಭ್ಯಾಸ. ಸದಾ ಗಂಭೀರ. ಆದರೆ ಸಾದುಲ್ಲಾ ಸಾಬ್ ಇದಕ್ಕೆ ತೀರಾ ಭಿನ್ನ.  ಅವರು ಸಹನಾಮಯಿ. ಸಿಟ್ಟು ಕಡಿಮೆ. ಹೇಳಬೇಕಾದುದನ್ನು ಅಳೆದೂ ತೂಗಿ ಹೇಳುವಷ್ಟು ಮತ್ತು ನಗುತ್ತಲೇ ಹೇಳುವಷ್ಟು ಭಿನ್ನ ವ್ಯಕ್ತಿ.  ವಿಶೇಷ ಏನೆಂದರೆ,

ಇವರಿಬ್ಬರೂ ಸಂಪಾದಕೀಯ ಬಳಗದಲ್ಲಿ ಅಕ್ಕ-ಪಕ್ಕವೇ ಕುಳಿತಿರುತ್ತಿದ್ದರು. ಸಾದುಲ್ಲಾ ಸಾಬ್‌ಗೆ ಜೋಕ್ ಹೇಳುವ ಅಭ್ಯಾಸ ಹೆಚ್ಚು. ಅನುವಾದಿಸುತ್ತಲೋ ಲೇಖನಗಳನ್ನು ತಿದ್ದುತ್ತಲೋ ಸಾದುಲ್ಲಾ ಸಾಬ್ ಹಾಸ್ಯ ಚಟಾಕಿ ಹಾರಿಸಿದರೆ, ಬಿಳಿ ಹಲ್ಲು ಕಾಣುವಂತೆ ನೂರ್  ಮುಹಮ್ಮದ್ ಬರೆಯುತ್ತಲೇ ನಗುತ್ತಿದ್ದರು. ಅವರಿಬ್ಬರ ಗುಣಸ್ವಭಾವಗಳು ಭಿನ್ನವಾಗಿದ್ದರೂ ಅವರಿಬ್ಬರ ನಡುವೆ ಮಾತಿಗೆ ಮಾತು  ಬೆಳೆದದ್ದನ್ನೋ ಸಿಟ್ಟು ಮಾಡಿಕೊಂಡದ್ದನ್ನೋ ನಾನು ಕಂಡಿಲ್ಲ. ನೂರ್ ಮುಹಮ್ಮದ್ ಸಾಬ್ ವಾರ ದಲ್ಲಿ ಎರಡು ಬಾರಿ ಕಚೇರಿಗೆ  ಬರುತ್ತಿದ್ದರೆ, ಸಾದುಲ್ಲಾ  ಸಾಬ್ ಕಚೇರಿಯನ್ನೇ ಮನೆ ಮಾಡಿಕೊಂಡಿದ್ದರು. ಯಾರು ಯಾವ ಸಮಯದಲ್ಲೇ  ಕಚೇರಿಗೆ ಬಂದರೂ  ಅವರನ್ನು ಸ್ವಾಗತಿಸಲು ಸಾದುಲ್ಲಾ  ಸಾಬ್ ಇರುತ್ತಿದ್ದರು ಎಂಬುದೇ ಅವರ ನಿಸ್ವಾರ್ಥತೆ ಮತ್ತು ತ್ಯಾಗ ಜೀವನಕ್ಕೆ ಬಲುದೊಡ್ಡ ಪುರಾವೆ.  ನಿಜವಾಗಿ,

ಇವರಿಬ್ಬರೂ ಜೊತೆ ಸೇರಿ ನನ್ನನ್ನು ಬೆಳೆಸಿದರು.

ನೂರ್ ಮುಹಮ್ಮದ್ ಸಾಬ್‌ರಿಗೆ ನಾನು ಬೆಳೆಯಬೇಕು ಮತ್ತು ಹೀಗೆಯೇ  ಬೆಳೆಯಬೇಕು ಎಂಬ ನಿರ್ದಿಷ್ಟ ಗುರಿ ಹಾಗೂ ಕಾಳಜಿಯಿತ್ತು.  ಆದ್ದರಿಂದಲೋ ಏನೋ ಇಬ್ರಾಹೀಮ್ ಸಈದ್ ಮತ್ತು ಸಾದುಲ್ಲಾ  ಸಾಬ್‌ರು 25ರ ತರುಣನಾದ ನನ್ನನ್ನು ‘ನೀವು’ ಎಂದು ಬಹುವಚ ನದಲ್ಲಿ ಸಂಬೋಧಿಸುತ್ತಿದ್ದಾಗ ನೂರ್ ಮುಹಮ್ಮದ್ ಸಾಬ್‌ರು ‘ನೀನು’ ಎಂದೇ ಸಂಬೋಧಿಸಿದರು. ಅವರು ನನ್ನನ್ನು ಮಗನಂತೆ  ನಡೆಸಿಕೊಂಡರು. ಪ್ರೀತಿಸಿದರು. ತಪ್ಪಾದಾಗ ಗದರಿದರು. ಅವರಿಗೆ ಸನ್ಮಾರ್ಗ ಎಂಬುದು ಆಮ್ಲಜನಕದಂತೆ ಇತ್ತು. ‘ಪತ್ರಿಕೆಯಲ್ಲಿ ಒಂದು  ತಪ್ಪೂ ಬರ‍್ಬಾರ್ದು, ಅನಗತ್ಯ ಅನ್ನಬಹುದಾದ ಒಂದು ಬರಹ ಬಿಡಿ, ಒಂದು ಗೆರೆ ವಾಕ್ಯ ಕೂಡಾ ಬರ‍್ಬಾರ್ದು, ಎಡಿಟಿಂಗ್‌ನಲ್ಲಿ  ನಿಷ್ಠುರವಾಗಿರಬೇಕು..’ ಎಂಬಿತ್ಯಾದಿ ಬಿಗು ನಿಲುವು ಅವರದಾಗಿತ್ತು. ಒಂದು ವಾಕ್ಯದಲ್ಲಿ ಒಂದೇ ಒಂದು ಶಬ್ದ ಹೆಚ್ಚುವರಿಯಾಗಿ  ಕಾಣಿಸಿದರೂ ಅದನ್ನು ಮುಲಾಜಿಲ್ಲದೇ ಕಿತ್ತು ಹಾಕಬೇಕು ಎಂಬುದು ಅವರ ಎಡಿಟಿಂಗ್ ಶೈಲಿಯಾಗಿತ್ತು.

ಒಂದು ಬಾರಿ ಹೀಗೂ ನಡೆಯಿತು.

ಮಲಯಾಳಂ ಪತ್ರಿಕೆಯ ಲೇಖನವೊಂದನ್ನು ಮುಂದಿಟ್ಟ ಅವರು ಅನುವಾದಿಸುವಂತೆ ನನ್ನಲ್ಲಿ ಹೇಳಿದರು. ಕತೆ ಬರೆದು ಗೊತ್ತಿದ್ದ ನನಗೆ  ಅನುವಾದ ಹೊಸತು. ನನ್ನ ಕಿಸೆಯಿಂದ ಸಾಕಷ್ಟು ಪದಗಳನ್ನು ಹಾಕಿ ಅನುವಾದಿಸಿ ಕೊಟ್ಟಿದ್ದೆ. ಅವರು ನನ್ನ ಅನುವಾದದಲ್ಲಿರುವ ತ ಪ್ಪುಗಳನ್ನು ಎತ್ತಿ ತೋರಿಸಿದರು. ಬಳಿಕ ನನ್ನೆದುರೇ ಯಾವ ಮುಲಾಜೂ ಇಲ್ಲದೇ ಹರಿದು ಬುಟ್ಟಿಗೆ ಹಾಕಿದರು. ಬಹುಶಃ ಸಾದುಲ್ಲಾ  ಸಾಬ್‌ರಿಗೆ ಅದನ್ನೇ ನಾನು ಕೊಡುತ್ತಿದ್ದರೆ ಸರಿಪಡಿಸಿ ಬಳಸಿಕೊಳ್ಳುತ್ತಿದ್ದರೋ ಏನೋ? ಆದರೆ, ನೂರ್ ಮುಹಮ್ಮದ್ ಹಾಗಲ್ಲ. ಅವರು  ಖಡಕ್. ಎಡಿಟಿಂಗ್‌ನ ವೇಳೆ ನನ್ನಲ್ಲಿ ಮುಲಾಜುತನ ಇರಬಾರದು ಎಂಬ ಪಾಠವನ್ನು ಅವರು ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ  ಸದಾ ರವಾನಿಸುತ್ತಲೇ ಇದ್ದರು. ನಾನೂ ಅವರ ಪ್ರತಿ ನಿಷ್ಠುರ ನಡೆಯನ್ನೂ ಸಕಾರಾತ್ಮಕವಾಗಿ ಸ್ವೀಕರಿಸುತ್ತಾ ಹೋದೆ. ಅಂದಹಾಗೆ, ಸದಾ  ಗಂಭೀರವಾಗಿರುತ್ತಿದ್ದ ಅವರು ಬರೆಯುತ್ತಲೇ ಅಪರೂಪ ಕ್ಕೊಮ್ಮೆ ಜೋಕ್ ಹೇಳುವುದೂ ಇತ್ತು. ಹಾಗೇ ಜೋಕ್ ಹೇಳುವಾಗಲೂ  ಅವರ ಮುಖ ಗಂಭೀರವಾಗಿಯೇ ಇರುತ್ತಿತ್ತು. ಅವರು ನಗುತ್ತಾರೋ ಎಂದು ನೋಡಿ, ಅವರು ನಕ್ಕ ಮೇಲೆ ನಾನು ನಗುವುದೂ ಇತ್ತು.

ನನ್ನ ಬರಹಕ್ಕೆ ಶಿಸ್ತಿನ ಚೌಕಟ್ಟನ್ನು ತಂದುಕೊಟ್ಟವರೇ  ನೂರ್ ಮುಹಮ್ಮದ್ ಸಾಬ್. ಎಡಿಟಿಂಗ್ ಪಾಠವನ್ನು ನಾನು ಅವರಿಂದಲೇ ಕಲಿತೆ.  ಕತೆ ಮತ್ತು ಲೇಖನಗಳ ನಡುವೆ ಇರುವ ವ್ಯತ್ಯಾಸವನ್ನೂ ಲೇಖನ ಬರೆಯುವಾಗ ಇರಬೇಕಾದ ಎಚ್ಚರಿಕೆಯನ್ನೂ ನಾನು ಕ ಲಿತುಕೊಂಡದ್ದು ನೂರ್ ಮುಹಮ್ಮದ್ ಸಾಬ್‌ರಿಂದ. ‘ನೀನು ತುಂಬಾ ಚೆನ್ನಾಗಿ ಎಡಿಟಿಂಗ್ ಮಾಡುತ್ತೀ...’ ಎಂದು ಒಂದು ಬಾರಿ  ಸಾದುಲ್ಲಾ ಸಾಬ್ ನನ್ನಲ್ಲಿ ಹೇಳಿದ್ದೂ ಇದೆ.

ಸಾದುಲ್ಲಾ  ಸಾಬ್ ನನ್ನಲ್ಲಿ ಮಾತಾಡುವಾಗಲೆಲ್ಲ ಅವರು ನನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದಾರೆ ಎಂಬ ಭಾವ ನನ್ನೊಳಗೆ ಯಾವಾಗಲೂ  ಉಂಟಾಗುತ್ತಿತ್ತು. ಅವರು ನನ್ನನ್ನು ಗದರಿಸಿದ್ದು ಇಲ್ಲವೇ ಇಲ್ಲ. ಹಾಗಂತ, ನಾನು ತಪ್ಪು ಮಾಡಿಲ್ಲ ಎಂದಲ್ಲ. ನನ್ನ ಮುಲಾಜುರಹಿತ  ಎಡಿಟಿಂಗ್‌ನ ಬಗ್ಗೆ ನನ್ನ ಸಹೋದ್ಯೋಗಿಯೇ ಒಮ್ಮೆ ಆಕ್ಷೇಪ ಎತ್ತಿದ್ದರು. ಆ ಪ್ರಕರಣ ಸಾದುಲ್ಲಾ ಸಾಬ್‌ರ ಬಳಿಗೂ ಹೋಗಿತ್ತು. ನನ್ನ  ಸಹೋದ್ಯೋಗಿಯ ಆಕ್ಷೇಪದಲ್ಲಿ ಹುರುಳಿತ್ತಾದರೂ ಮತ್ತು ನನ್ನ ಸಮರ್ಥನೆ ಅಸಮಂಜಸವಾಗಿ ತ್ತಾದರೂ ಸಾದುಲ್ಲಾ ಸಾಬ್ ಆ  ಸಂದರ್ಭದಲ್ಲಿ ನನ್ನನ್ನು ತರಾಟೆಗೆ ಎತ್ತಿಕೊಂಡಿರಲಿಲ್ಲ. ಆ ಬಳಿಕ ನನ್ನನ್ನು ಕರೆದೋ ಅಥವಾ ಹತ್ತಿರ ಬಂದೋ ತಿಳಿ ಹೇಳಿದ್ದರು.  ನಿಜವಾಗಿ,

ಎರಡು ರೀತಿಯ ಸಾದುಲ್ಲಾ  ಸಾಬ್‌ರನ್ನು ನನ್ನ ಬದುಕಿನಲ್ಲಿ ಕಂಡಿದ್ದೇನೆ. ಒಂದು- ನಾನು ಸಂಪಾದಕನಾಗುವ ಮೊದಲಿನ ಸಾದುಲ್ಲಾ  ಸಾಬ್. ಇನ್ನೊಂದು- ಸಂಪಾದಕನಾದ ಬಳಿಕದ ಸಾದುಲ್ಲಾ ಸಾಬ್. ಅವರು ಕಚೇರಿಗೆ ಪ್ರವೇಶಿಸಿದ ಕೂಡಲೇ ಪ್ರತಿಯೊಬ್ಬರ ಬಳಿಗೂ  ತೆರಳಿ ಪ್ರತ್ಯಪ್ರತ್ಯೇಕವಾಗಿ ಸಲಾಂ ಹೇಳುತ್ತಾ, ಹಸ್ತಲಾಘವ ಮಾಡುವುದು ರೂಢಿ. ಇದನ್ನು ಅತ್ಯಂತ ನಿಷ್ಠೆಯಿಂದ ಬದುಕಿನ ಕೊ ನೆಯವರೆಗೂ ಅವರು ಪಾಲಿಸುತ್ತಾ ಬಂದಿದ್ದರು. ಅಂದಹಾಗೆ,

ನಾನು ಉಪಸಂಪಾದಕನಾಗಿದ್ದಾಗ, ನನ್ನ ಬರಹವನ್ನು ಅವರಿದ್ದಲ್ಲಿಗೆ ಕೊಂಡು ಹೋಗಿ ಕೊಡುತ್ತಿದ್ದೆ. ನೂರ್ ಮುಹಮ್ಮದ್ ಸಾಬ್  ವಾರದಲ್ಲಿ ಎರಡು ಬಾರಿ ಮಾತ್ರ ಕಚೇರಿಗೆ ಬರುತ್ತಿದ್ದುದರಿಂದ ನನ್ನ ಬರಹದ ಪರಿಶೀಲನೆ ಬಹುತೇಕ ಸಾದುಲ್ಲಾ  ಸಾಬ್‌ರದ್ದೇ  ಆಗಿತ್ತು. ಯಾವಾಗ ನಾನು ಸಂಪಾದಕನಾಗಿ ಆಯ್ಕೆಯಾದೆನೋ ಸಾದುಲ್ಲಾ  ಸಾಬ್‌ರ ವರ್ತನೆಯಲ್ಲೂ ಬದಲಾವಣೆಯಾಯಿತು. ನಾನು ಸಂಪಾದಕರ ಕುರ್ಚಿಯಲ್ಲಿ ಕುಳಿತಿದ್ದರೆ ಅವರು ನನ್ನೆದುರಿನ ಕುರ್ಚಿಯಲ್ಲಿ ಸಾಮಾನ್ಯರಂತೆ ಕುಳಿತುಕೊಳ್ಳುತ್ತಿದ್ದರು. ಆರಂಭದಲ್ಲಿ ನಾನು ಎದ್ದು ನಿಲ್ಲುತ್ತಿದ್ದೆ. ಯಾಕೆಂದರೆ, ಅವರ ಕಣ್ಣೆದುರಲ್ಲೇ  ಬೆಳೆದ ವ್ಯಕ್ತಿ ನಾನು. ನಾನು ಸನ್ಮಾರ್ಗಕ್ಕೆ ಸೇರ್ಪಡೆಗೊಳ್ಳುವಾಗಲೇ ಅವರು ಸಂಪಾದಕೀಯ ಬಳಗದ ಸದಸ್ಯರಾಗಿ ಮತ್ತು ಪತ್ರಿಕೆಯ ಪ್ರಕಾಶಕರಾಗಿ ಹೊಣೆ ನಿಭಾ ಯಿಸುತ್ತಿದ್ದರು. ನಾನು ಅವರೆದುರು ತೀರಾ ಎಳೆಯ ವ್ಯಕ್ತಿ. ಆದರೆ, ನಾನು ಎದ್ದು ನಿಲ್ಲುವುದು ಅವರಿಗೆ ಇಷ್ಟವಿರಲಿಲ್ಲ. ಈ ಮೊದಲು ನಾನು ಅವರಿದ್ದಲ್ಲಿಗೆ ನನ್ನ ಬರಹವನ್ನು ಮುಟ್ಟಿಸುತ್ತಿದ್ದರೆ ಈಗ ಅವರೇ ಅವರ ಬರಹವನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಮಾತ್ರವಲ್ಲ, ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ (ಕಸದ ಬುಟ್ಟಿ) ಹಾಕು’ ಎಂದು ಮುಗುಳ್ನಗೆ ಯೊಂದಿಗೆ ಹೇಳುತ್ತಿದ್ದರು. ಎಲ್ಲಿಯ ವರೆಗೆಂದರೆ,

ಸನ್ಮಾರ್ಗದ ಬಹು ಜನಪ್ರಿಯ ಕಾಲಂ ಆದ ‘ಕೇಳಿದಿರಾ ಕೇಳಿ’ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದುದು ಅವರೇ ಆಗಿದ್ದರೂ ಎಲ್ಲೂ ಅವರು ತನ್ನ ಹೆಸರನ್ನು ಹಾಕಿಕೊಂಡೇ ಇರಲಿಲ್ಲ. ಮುಜೀಬ್ (ಉತ್ತರಿಸುವವ) ಎಂಬ ಹೆಸರಿನಲ್ಲಿ ಅವರು ನೀಡುತ್ತಿದ್ದ ಉತ್ತರಗಳು ಅಸಂಖ್ಯ ಮಂದಿಯ ಬಾಳಿಗೆ ಬೆಳಕಾಗಿದ್ದುವು. ಹಾಗಂತ, ಈ ಕಾಲಂ ಅನ್ನು ನಿಭಾಯಿಸುವುದು ಸುಲಭ ವಾಗಿರಲಿಲ್ಲ. ಪ್ರತಿ ಪ್ರಶ್ನೆಗೂ ಕುರ್‌ಆನ್, ಹದೀಸ್ ಮತ್ತು ಸಹಾಬಿಗಳ ಬದುಕನ್ನು ಉದಾಹರಿಸಿ ಉತ್ತರಿಸಬೇಕಿತ್ತು. ಅಲ್ಲದೇ, ಆಧುನಿಕ ವಿದ್ವಾಂಸರ ಫತ್ವಗಳ ಬಗ್ಗೆ ಅರಿವಿರಬೇಕಿತ್ತು. ಕೆಲವೊಮ್ಮೆ ಕುರ್‌ಆನ್-ಹದೀಸ್‌ನ ಆಧಾರದಲ್ಲಿ ಚಿಂತನ-ಮಂಥನ ನಡೆಸಿ ತನ್ನ ಜ್ಞಾನದಾಧಾರದಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯೂ ಎದುರಾಗುತ್ತಿತ್ತು. ಇದು ಅತ್ಯಂತ ಸೂಕ್ಷ್ಮ  ಕಾಲಂ. ತುಸು ಎಡವಟ್ಟಾದರೂ ಮುಸ್ಲಿಮ್ ಸಮುದಾಯವೇ ಸನ್ಮಾರ್ಗವನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದ ಇಕ್ಕಟ್ಟಿನ ಕಾಲಂ. ಆದ್ದರಿಂದಲೇ, ಸಾದುಲ್ಲಾ  ಸಾಬ್ ಮೈಯೆಲ್ಲಾ  ಕಣ್ಣಾಗಿದ್ದುಕೊಂಡು ಮತ್ತು ಅಪಾರ ತಾಳ್ಮೆ ಹಾಗೂ ಅಧ್ಯಯನದ ಆಧಾರದಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಿತ್ತು. ಒಂದು ಪುಟದ ಉತ್ತರಕ್ಕಾಗಿ ಗಂಟೆಗಟ್ಟಲೆ ಅಧ್ಯಯನ ನಡೆಸಬೇಕಿತ್ತು. ಒಂದು ಗೆರೆಯ ಪ್ರಶ್ನೆಗೆ ಪುಟಗಟ್ಟಲೆ ಉತ್ತರಿಸಬೇಕಾದ ಸನ್ನಿವೇಶವೂ ಎದುರಾಗುತ್ತಿತ್ತು. ಆದರೆ ಇಷ್ಟೆಲ್ಲಾ  ಶ್ರಮವಹಿಸಿ ಬರೆದಾದ ಬಳಿಕ ಅವರು ಉತ್ತರದ ಪ್ರತಿಯನ್ನು ನನ್ನ ಬಳಿಗೆ ತಂದು ಕೊಡುತ್ತಿದ್ದರು. ಬಳಿಕ ಅದೇ ಡಯಲಾಗ್- ‘ಇಷ್ಟವಾಗದಿದ್ದರೆ ಹತ್ತಿರದಲ್ಲಿರುವ ‘ಕಸಬು’ಗೆ ಹಾಕು’. ಆಗೆಲ್ಲ ನಾನು ಮುಜುಗರದಿಂದ ಹಿಡಿ ಯಷ್ಟಾಗುತ್ತಿದ್ದೆ. ನನ್ನ ಸ್ಥಾನಕ್ಕೆ ಅವರು ನೀಡುತ್ತಿದ್ದ ಗೌರವ ವನ್ನು ಕಂಡು ಒಳಗೊಳಗೇ ಅಳುತ್ತಿದ್ದೆ. ಇಂಥ ಸಾವಿರಾರು ಉತ್ತರಗಳನ್ನು ಅವರು ‘ಕೇಳಿದಿರಾ ಕೇಳಿ’ ವಿಭಾಗದಲ್ಲಿ ಪ್ರಕಟಿಸಿದ್ದಾರೆ. ನಿಜವಾಗಿ, ಅಲ್ಲಾಹನು ಅವರನ್ನು ಪ್ರೀತಿಸುವುದಕ್ಕೆ ಈ ಉತ್ತರಗಳೇ ಧಾರಾಳ ಸಾಕು. ಅಂದಹಾಗೆ,

ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅಪಾರ ಪಾಂಡಿತ್ಯವಿದ್ದ ಅವರು ನನ್ನ ಪಾಲಿಗೆ ಅಮೂಲ್ಯ ಆಸ್ತಿಯಾಗಿದ್ದರು. ಲೇಖನ ಬರೆಯುತ್ತಾ ಬರೆ ಯುತ್ತಾ ಕೆಲವೊಮ್ಮೆ ನನಗೆ ಕುರ್‌ಆನ್‌ನ ವಚನಗಳ ಕನ್ನಡಾನುವಾದ ನೆನಪಾಗುವುದಿದೆ. ಅದರ ಅರೇಬಿಕ್ ರೂಪ ಏನು ಅನ್ನುವುದೂ ಗೊತ್ತಿರುವುದಿಲ್ಲ. ನಾನು ನೇರ ಸಾದುಲ್ಲಾ  ಸಾಬ್‌ರ ಬಳಿಗೆ ಹೋಗಿ ನನಗೆ ಗೊತ್ತಿರುವ ಕನ್ನಡ ವಚನವನ್ನು ಅರ್ಧಂಬರ್ಧ ಹೇಳುತ್ತಿದ್ದೆ. ಇದು ಯಾವ ಅಧ್ಯಾಯದ, ಯಾವ ವಚನ ಎಂಬುದು ನನ್ನ ಪ್ರಶ್ನೆಯಾಗಿರುತ್ತಿತ್ತು. ಆದರೆ ಬಹುತೇಕ ಬಾರಿ ಅದು ಇಷ್ಟನೇ ಅಧ್ಯಾಯದ ಇಷ್ಟನೇ ವಚನ ಎಂದು ತಕ್ಷಣವೇ ಅವರು ಹೇಳಿ ಬಿಡುತ್ತಿದ್ದರು. ಕುರ್‌ಆನ್‌ಗೆ ಸಂಬಂಧಿಸಿ ಅವರು ನಡೆದಾಡುವ ಡಿಕ್ಷನರಿ. ಕೆಲವೊಮ್ಮೆ ನಾನು ಹದೀಸನ್ನು ಕುರ್‌ಆನ್ ವಚನವೆಂದು ತಪ್ಪಾಗಿ ತಿಳಿದುಕೊಂಡು, ಆ ವಚನ ಎಲ್ಲಿದೆ ಎಂದು ಕೇಳಿದ್ದೂ ಇದೆ. ಅವರಿಗೆ ಕುರ್‌ಆನ್ ಮತ್ತು ಹದೀಸ್‌ನ ಬಗ್ಗೆ ಅತ್ಯಂತ ಸ್ಪಷ್ಟ ಜ್ಞಾನವಿತ್ತು. ಬಹುಶಃ ಕೇಳಿದಿರಾ ಕೇಳಿ ವಿಭಾಗದ ಪ್ರಶ್ನೆಗಳಿಗೆ ಉತ್ತರಿಸುವುದಕ್ಕಾಗಿ ಅವರು ನಡೆಸಿರಬಹುದಾದ ಅಧ್ಯಯನವೇ ಅವರನ್ನು ಕುರ್‌ಆನ್ ಮತ್ತು ಹದೀಸ್‌ನ ಮೇಲೆ ಅಪಾರ ಪಾಂಡಿತ್ಯವನ್ನು ಹೊಂದುವುದಕ್ಕೆ ನೆರವಾಗಿರಬಹುದು ಎಂದೇ ಅನಿಸುತ್ತದೆ.

ನೂರ್ ಮುಹಮ್ಮದ್ ಸಾಬ್ ನನ್ನ ಪಾಲಿಗೆ ಓರ್ವ ಶಾಲಾ ಅಧ್ಯಾಪಕರಾದರೆ ಸಾದುಲ್ಲಾ  ಸಾಬ್ ಓರ್ವ ಆಪ್ತ ಗುರು. ನೂರ್ ಮುಹಮ್ಮದ್ ಸಾಬ್ ಶಿಸ್ತು ಮತ್ತು ನಿಷ್ಠುರತೆಯ ಪ್ರತೀಕವಾದರೆ, ಸಾದುಲ್ಲಾ ಸಾಬ್ ಸಹನೆ ಮತ್ತು ಸೌಜನ್ಯದ ಪ್ರತೀಕ. ಅವರಿಬ್ಬರ ಮಿತಿಯಿಲ್ಲದ ಪ್ರೀತಿ ಮತ್ತು ಬೆಂಬಲವನ್ನು ಪಡೆದುಕೊಂಡೇ ನಾನು ಬೆಳೆದೆ. ಇವರಿಬ್ಬರೂ ಬಿಟ್ಟು ಹೋದ ಬಲುದೊಡ್ಡ ಪಾಠ ಏನೆಂದರೆ, ಜನರೊಂದಿಗೆ ಅಂತರವಿಟ್ಟುಕೊಳ್ಳದೇ ಬೆರೆಯಬೇಕು ಎಂಬುದು. ನಿಮ್ಮ ಹುದ್ದೆಯು ಜನರೊಂದಿಗೆ ಬೆರೆಯುವುದಕ್ಕೆ ತಡೆಯಾಗಬಾರದು ಎಂಬುದು. ಇಬ್ರಾಹೀಮ್ ಸಈದ್, ನೂರ್ ಮತ್ತು ಸಾದುಲ್ಲಾ ಸಾಬ್- ಈ ಮೂವರೂ ಇದೇ ರೀತಿಯಲ್ಲಿ ಬದುಕಿದರು. ಒಂದು ರೀತಿ ಯಲ್ಲಿ ಬರಹವನ್ನೇ ಬದುಕಿದರು. ಬದುಕಿದ್ದನ್ನೇ ಬರೆದರು. ಇವರ ವಿಚಾರಧಾರೆಯನ್ನು ಒಪ್ಪದವರು ಕೂಡ ಅವರ ಪ್ರಾಮಾಣಿಕತೆ, ಪಾರದರ್ಶಕತೆ, ಪಾಂಡಿತ್ಯ ಮತ್ತು ಆರಾಧನಾ ನಿಷ್ಠೆಯನ್ನು ಕೊಂಡಾ ಡುವಂತೆ ಬದುಕಿದರು. ಎಲ್ಲಿಯ ವರೆಗೆಂದರೆ,

ಖ್ಯಾತ ಸಾಹಿತಿ ಬೊಳುವಾರು ಮುಹಮ್ಮದ್ ಕುಂಞಯವರು ತಮ್ಮ ಆತ್ಮಕತೆ ‘ಮೋನುಸ್ಮೃತಿ’ ಯನ್ನು ಬರೆಯುತ್ತಿದ್ದ ವೇಳೆ ನನಗೆ ಕರೆ ಮಾಡಿದ್ದರು. ಇಬ್ರಾಹೀಮ್ ಸಈದ್‌ರ ಕುಟುಂಬದ ವಿವರ ಅವರಿಗೆ ಬೇಕಾಗಿತ್ತು. ಅವರು ಕಾರ್ಕಳದಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ವೇಳೆ ಬ್ಯಾಂಕ್‌ಗೆ ತೆರಳಿ ಇದೇ ಇಬ್ರಾಹೀಮ್ ಸಈದ್ ಕುರ್‌ಆನ್‌ನ ಕನ್ನಡಾನುವಾದ ನೀಡಿದ್ದರಂತೆ. ಮಾತಾಡುತ್ತಾ ಅವರು ನನ್ನೊಂದಿಗೆ ಹೇಳಿದ್ದು ಹೀಗೆ: 

‘ಇಬ್ರಾಹೀಮ್ ಸಈದ್ ತನ್ನ ಬರಹ ಮತ್ತು ಭಾಷಣದಂತೆಯೇ ಬದುಕಿದರು. ಅದು ಅಷ್ಟು ಸುಲಭ ಅಲ್ಲ.’

ಪೆನ್ನು ಕೆಳಗಿಟ್ಟು ಹೋದ ಈ ಮೂವರನ್ನು ಅಲ್ಲಾಹನು ಪ್ರೀತಿಸಲಿ.

Tuesday, July 19, 2022

ಟಿ.ವಿ. ಸಂವಾದ: ಮುಸ್ಲಿಮರು ಎದುರಿಸಲೇಬೇಕಾದ ಕೆಲವು ಪ್ರಶ್ನೆಗಳು
ಭಾಗ- 1

ಮುಸ್ಲಿಮರು ಭಾಗವಹಿಸುವ ಯಾವುದೇ ಟಿ.ವಿ. ಸಂವಾದ ಅಥವಾ ಡಿಬೇಟ್‌ಗಳು ಈ ಕೆಳಗಿನ ಮೂರು ಪ್ರಶ್ನೆಗಳ ಹೊರತಾಗಿ  ಮುಕ್ತಾಯ ಗೊಳ್ಳುವುದು ಕಡಿಮೆ.

1. ಬಹುದೇವ ವಿಶ್ವಾಸಿಗಳನ್ನು ಕೊಲ್ಲಿರಿ ಎಂದು ಕುರ್‌ಆನ್‌ನಲ್ಲಿ (9ನೇ ಅಧ್ಯಾಯದ 5ನೇ ವಚನವನ್ನು ಉ¯್ಲೆÃಖಿಸುತ್ತಾ) ಆದೇಶಿಸಿರು  ವುದು ಸರಿಯೇ? ಇದು ಹಿಂದೂಗಳ ವಿರುದ್ಧ ಹತ್ಯೆಗೆ ಕರೆ ಕೊಟ್ಟಂತಲ್ಲವೇ?

2. ಮುಸ್ಲಿಮರು ಮತ್ತು ಮುಸ್ಲಿಮ್ ವಿದ್ವಾಂಸರೇಕೆ ಹಿಂದೂಗಳ ಹತ್ಯೆಯನ್ನು ಖಂಡಿ ಸುವುದಿಲ್ಲ? ಅವರೇಕೆ ಫತ್ವಾ ಹೊರಡಿಸುವುದಿಲ್ಲ?

3. ಮುಸ್ಲಿಮರು ಮೂಲತಃ ಅಸಹಿಷ್ಣುಗಳು. ಅವರು ಹಿಂಸಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಾರೆ. ಪ್ರತಿಭಟನೆಗಿಳಿದರೆ ಕಲ್ಲನ್ನೆತ್ತಿಕೊಳ್ಳುವುದು  ಮತ್ತು ಬೆಂಕಿ ಹಚ್ಚೋದು ಸಾಮಾನ್ಯ. ಅಂದಹಾಗೆ,

ಈ ಪ್ರಶ್ನೆಗಳಲ್ಲಿ ಯಾವುದೇ ಕಿಡಿಗೇಡಿತನವಿಲ್ಲ ಮತ್ತು ತೀರಾ ಮುಗ್ಧವಾಗಿಯೇ ಇವನ್ನು ಕೇಳಲಾಗಿದೆ ಎಂದು ಅಂದುಕೊAಡೇ ಈ ಪ್ರ ಶ್ನೆiಗಳ ಒಳಾರ್ಥವನ್ನು ಬಿಡಿಸೋಣ.

ಪವಿತ್ರ ಕುರ್‌ಆನ್, ಭಗವದ್ಗೀತೆ, ಬೈಬಲ್, ತೋರಾ, ತ್ರಿಪಿಟಿಕ, ಗುರುಗ್ರಂಥ ಸಾಹೇಬ್ ಅಥವಾ ಇನ್ನಾವುದೇ ಧಾರ್ಮಿಕ ಗ್ರಂಥಗಳನ್ನು  ಓದುವುದಕ್ಕೂ ಕಾದಂಬರಿ, ಕಥಾ ಸಂಕಲನ, ಲಲಿತ ಪ್ರಬಂಧ ಓದುವುದಕ್ಕೂ ವ್ಯತ್ಯಾಸವಿದೆ. ಕಾದಂಬರಿ ಓದಿದಂತೆ ಪವಿತ್ರ ಕುರ್‌ಆನನ್ನು  ಓದಲಾಗದು. ಕುರ್‌ಆನನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದು ಪ್ರವಾದಿ ಮುಹಮ್ಮದರಿಗೆ(ಸ) ದೇವನಿಂದ ಅವತೀರ್ಣವಾದ ಕಾಲ,  ಸನ್ನಿವೇಶ ಮತ್ತು ಉದ್ದೇಶಗಳನ್ನು ತಿಳಿದುಕೊಳ್ಳಬೇಕಾಗುತ್ತದೆ.
ಪ್ರವಾದಿ ಮುಹಮ್ಮದರು ಮಕ್ಕಾದಲ್ಲಿ ದಿಢೀರ್ ಆಗಿ ಉದ್ಭವ ಆದವರಲ್ಲ. ಇದೇ ಮಣ್ಣಿನ ಬಸವಣ್ಣ ಮತ್ತು ಬುದ್ಧ ಹೇಗೆ ಇಲ್ಲಿಯ ಜನರೊಂದಿಗೆ ಇದ್ದುಕೊಂಡು ಅವರ ನಡುವೆಯೇ ಬೆಳೆದರೋ ಹಾಗೆಯೇ ಪ್ರವಾದಿ ಮುಹಮ್ಮದರೂ ಮಕ್ಕಾದಲ್ಲಿಯೇ ಹುಟ್ಟಿ ಅಲ್ಲಿಯೇ  ಬೆಳೆದರು. ತನ್ನ ಸುತ್ತಮುತ್ತಲಿನ ಪ್ರತಿ ಬೆಳವಣಿಗೆಯನ್ನೂ ಸತ್ಯ-ಮಿಥ್ಯಕ್ಕೆ ಮುಖಾಮುಖಿಗೊಳಿಸಿ ವಿಮರ್ಶಿಸತೊಡಗಿದರು. ಕೆಡುಕಿನಿಂದ  ದೂರ ನಿಂತರು. ಒಳಿತಿನಲ್ಲಿ ಮಾತ್ರ ಭಾಗಿಯಾದರು. ಸತ್ಯವನ್ನು ಮಾತ್ರ ಹೇಳುವ ಅಭ್ಯಾಸ ರೂಢಿಸಿಕೊಂಡರು. ಹೀಗೆ ಜನರ  ಜೊತೆಗಿದ್ದೂ ಅವರಂತಾಗದೇ ಬೆಳೆದ ಪ್ರವಾದಿಯವರು, ಏಕದೇವ ಮತ್ತು ಬಹುದೇವ ವಿಶ್ವಾಸಗಳ ಸುತ್ತ ಚರ್ಚೆಯೊಂದನ್ನು ಹುಟ್ಟು  ಹಾಕಿದರು. ಮಾತ್ರವಲ್ಲ, 

ಏಕದೇವ ವಿಶ್ವಾಸವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಮದ್ಯ, ಬಡ್ಡಿ, ಹೆಣ್ಣು ಶಿಶು ಹತ್ಯೆ, ಗುಲಾಮ ಪದ್ಧತಿ, ನಗ್ನ  ನೃತ್ಯ, ಉಳ್ಳವರ ಪರವಾದ ನ್ಯಾಯ ವ್ಯವಸ್ಥೆ, ಬುಡಕಟ್ಟುಗಳ ನಡುವಿನ ಸಂಘರ್ಷ, ಅಸಮಾನತೆ, ಮೂರ್ತಿ ಪೂಜೆ... ಇತ್ಯಾದಿಗಳಿಗೆ  ಒಗ್ಗಿಕೊಂಡಿದ್ದ ಸಮಾಜವೊಂದಕ್ಕೆ ಪ್ರವಾದಿ ಮುಹಮ್ಮದರ ಏಕದೇವ ಪ್ರತಿಪಾದನೆಯು ಆಘಾತವಷ್ಟೇ ಅಲ್ಲ, ಬುಡಕಟ್ಟು ಪ್ರತಿಷ್ಠೆಗೂ  ಸವಾಲಾಗಿತ್ತು. ಪ್ರವಾದಿ ಮುಹಮ್ಮದರ ಏಕದೇವ ಪ್ರತಿಪಾದನೆಯನ್ನು ಒಪ್ಪಿಕೊಳ್ಳುವುದೆಂದರೆ, ಮಕ್ಕಾದ ಮಂದಿ ಆವರೆಗಿನ ರೂಢಿಗತ  ಅಭ್ಯಾಸಗಳನ್ನೆಲ್ಲ ತಿರಸ್ಕರಿಸಬೇಕು ಎಂದರ್ಥ. ನಮ್ಮ ನಡುವೆಯೇ ಬೆಳೆದ ವ್ಯಕ್ತಿಯ ಪ್ರತಿಪಾದನೆಯನ್ನು ನಾವೇಕೆ ಗಂಭೀರವಾಗಿ  ಪರಿಗಣಿಸಬೇಕು ಎಂಬ ಪ್ರಶ್ನೆಯ ಜೊತೆಗೇ ರೂಢಿಗತ ಅಭ್ಯಾಸಗಳನ್ನು ತಿರಸ್ಕರಿಸಿ ಬದುಕುವುದುಂಟೇ ಎಂಬ ಪ್ರಶ್ನೆ ಇನ್ನೊಂದು ಕಡೆ.  ಈ ಪ್ರಶ್ನೆಗಳ ತಿಕ್ಕಾಟ ಮಕ್ಕಾದ ಪ್ರತಿ ಮನೆಯಲ್ಲೂ ನಡೆಯಿತು. ಪ್ರತಿಯೊಬ್ಬರ ಮಾತುಕತೆಯಲ್ಲೂ ಪ್ರವಾದಿ ಮುಹಮ್ಮದರ ಪ್ರತಿಪಾದನೆ  ಮತ್ತು ಪರಿಣಾಮಗಳು ಚರ್ಚೆಗೊಳಗಾದವು. ಪ್ರತಿಯೊಬ್ಬರೂ ಸಮಾನರು ಎಂದು ಒಪ್ಪಿ ಕೊಳ್ಳುವುದೆಂದರೆ, ತಮ್ಮ ಪ್ರತಿಷ್ಠೆಯನ್ನೇ  ಮಣ್ಣುಪಾಲು ಮಾಡಿ ಕೊಂಡಂತೆ. ಮದ್ಯಪಾನವನ್ನು ಕೈಬಿಟ್ಟು, ಬಡ್ಡಿಯನ್ನು ತಿರಸ್ಕರಿಸಿ, ಗುಲಾಮ ಪದ್ಧತಿಗೆ ತಿಲಾಂಜಲಿಯಿಟ್ಟು, ಅಸಮಾನ  ನ್ಯಾಯ ಪದ್ಧತಿಗೆ ವಿದಾಯ ಹೇಳುವುದೆಂದರೆ ಆ ಬಳಿಕ ಉಳಿಯುವುದೇನು? ಆಫ್ರಿಕಾದಿಂದ ಖರೀದಿಸಿ ತಂದ ನೀಗ್ರೋ ಗುಲಾಮ  ಮತ್ತು ಮಕ್ಕಾವನ್ನೇ ಖರೀದಿಸುವ ಸಾಮರ್ಥ್ಯವಿರುವ ತಾನು- ಇಬ್ಬರೂ ಸಮಾನರೆಂದರೆ ಏನರ್ಥ? ಬಡವರಿಗೂ ಶ್ರೀಮಂತರಿಗೂ  ಸಮಾನ ನ್ಯಾಯ ಅಂದರೆ ಹೇಗೆ?... ಇಂಥ ಚರ್ಚೆಗಳು ಶ್ರೀಮಂತರು ಮತ್ತು ಬುಡಕಟ್ಟು ಪ್ರಮುಖರ ನಡುವೆ ನಡೆದರೆ ಇನ್ನೊಂದು ಕಡೆ  ಬಡವರು ಮತ್ತು ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ನಡುವೆ, ಇದಕ್ಕೆ ವಿರುದ್ಧವಾದ ಚರ್ಚೆಗಳು ನಡೆದುವು. ಅವರು ಪ್ರವಾದಿಯವರ  ಈ ಪ್ರತಿಪಾದನೆಯಲ್ಲಿ ತಮ್ಮ ವಿಮೋಚನೆಯ ಬೆಳಕನ್ನು ಕಂಡರು. ಆದ್ದರಿಂದಲೇ,

ಆರಂಭಿಕ ಕಾಲದಲ್ಲಿ ಪ್ರವಾದಿ ಮುಹಮ್ಮದರ ಅನುಯಾಯಿಗಳಾದವರಲ್ಲಿ ಬಡವರು ಮತ್ತು ತುಳಿತಕ್ಕೊಳಗಾದವರೇ ಹೆಚ್ಚಿದ್ದರು. ಪ್ರವಾದಿಯವರ ಚಿಕ್ಕಪ್ಪಂದಿರೂ ಸಹಿತ ಧನಿಕರು ಮತ್ತು ಬುಡಕಟ್ಟು ಪ್ರಮುಖರು ಪ್ರವಾದಿಯ ವಿರುದ್ಧ ನಿಂತರು. ಅಂದಹಾಗೆ, ಪ್ರವಾದಿ  ಮುಹಮ್ಮದರು ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ ವಿಚಾರಧಾರೆಯನ್ನು ಪ್ರತಿಪಾದಿಸಿದರು. ಈ ಅವಧಿಯಲ್ಲಿ ಅವರು ಸಾಕಷ್ಟು  ಹಿಂಸೆಗಳನ್ನೂ ಅನುಭವಿಸಿದರು. ಅವರನ್ನು ಕಲ್ಲೆಸೆದು ಗಾಯಗೊಳಿಸಿದ್ದೂ ನಡೆಯಿತು. ಅವರ ಪ್ರಾರ್ಥನೆಗೆ ಹಲವು ರೀತಿಯಲ್ಲಿ ಅಡ್ಡಿ ಪಡಿಸಲಾಯಿತು. ಹಾಗಂತ,

ಹೀಗೆ ಹಿಂಸಾತ್ಮಕವಾಗಿ ಪೀಡಿಸಿದವರಾರೂ ಅವರಿಗೆ ಅಪರಿಚಿತರಾಗಿರಲಿಲ್ಲ. ಕೇವಲ ಪ್ರವಾದಿಯನ್ನು ಮಾತ್ರ ಅಲ್ಲ, ಅವರ ಅನುಯಾಯಿಗಳ ಮೇಲೂ ತೀವ್ರತರದ ಹಿಂಸೆಗಳು ನಡೆದುವು. ಕೆಲವರನ್ನು ಹತ್ಯೆಗೈದದ್ದೂ ನಡೆಯಿತು. ಕೊನೆಗೆ ಈ ಹಿಂಸೆಯನ್ನು  ತಾಳಲಾರದೇ ಪ್ರವಾದಿ ಮುಹಮ್ಮದರು ಮದೀನಕ್ಕೆ ಹೊರಟು ಹೋದರು. ಹೀಗೆ ಅವರು ಮದೀನಕ್ಕೆ ಹೊರಟು ಹೋಗುವುದಕ್ಕಿಂತ  ಮೊದಲೇ ಅವರ ಅನುಯಾಯಿಗಳಲ್ಲಿ ಅನೇಕರು ಬೇರೆ ರಾಷ್ಟ್ರಕ್ಕೆ ಪಲಾಯನಗೈದು ಆಶ್ರಯ ಕೋರಿದ್ದರು. ಈ ಪಲಾಯನಕ್ಕೂ  ಹಿಂಸೆಯೇ ಕಾರಣ. ಪ್ರವಾದಿಯವರು ಮದೀನಕ್ಕೆ ಹೊರಟು ಹೋದ ಬಳಿಕ ಅವರ ಅನುಯಾಯಿಗಳಲ್ಲಿ ಒಬ್ಬೊಬ್ಬರೇ ಮದೀನಾಕ್ಕೆ  ಹೋಗತೊಡಗಿದರು. ಹೀಗೆ ಮದೀನದಲ್ಲಿ ಪುಟ್ಟ ತಂಡವೇ ನಿರ್ಮಾಣವಾಗತೊಡಗಿತು. ಪ್ರವಾದಿಯವರು ಮದೀನಕ್ಕೆ ತಲುಪಿದ ಬಳಿಕ  ಮಾಡಿದ ಮೊದಲ ಕೆಲಸವೇನೆಂದರೆ, ಅಲ್ಲಿನ ಬಹುಸಂಖ್ಯಾತ ಯಹೂದಿ ಸಮುದಾಯ ಮತ್ತು ಬಹುದೇವ ವಿಶ್ವಾಸಿಗಳೊಂದಿಗೆ  ಶಾಂತಿಯುತ ಬದುಕಿನ ಒಪ್ಪಂದ ಮಾಡಿಕೊಂಡದ್ದು. ಲಿಖಿತ ಸಂವಿಧಾನ ರಚಿಸಿದ್ದು. ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಪಾ ಲಿಸುವ ಮತ್ತು ಯಾರ ಮೇಲೂ ಯಾರ ಧರ್ಮವನ್ನೂ ಬಲಾತ್ಕಾರವಾಗಿ ಹೇರದಿರುವ ಕಲಂಗಳೂ ಸೇರಿದಂತೆ ಇವತ್ತಿನ ಆಧುನಿಕ  ಜಗತ್ತಿನ ಸಂವಿಧಾನ ಪರಿಚ್ಛೇದಗಳು ಏನಿವೆಯೋ ಬಹುತೇಕ ಅವನ್ನೇ ಹೋಲುವ ಉದಾರವಾದಿ ಸಂವಿಧಾನಕ್ಕೆ ಪ್ರವಾದಿ ರೂಪಕೊಟ್ಟರು. ಮದೀನದ ಮೇಲೆ ಯಾರಾದರೂ ದಂಡೆತ್ತಿ ಬಂದರೆ ಜೊತೆಯಾಗಿ ಹೋರಾಡುವುದು ಮತ್ತು ನ್ಯಾಯ ವಿತರಣೆಯಲ್ಲಿ  ತಾರತಮ್ಯ ಮಾಡದಿರುವುದೂ ಈ ಲಿಖಿತ ಸಂವಿಧಾನದ ಭಾಗವಾಗಿತ್ತು. ಈ ಸಂವಿಧಾನ ರಚಿಸುವಾಗ ಮದೀನದ ಒಟ್ಟು ಜನಸಂಖ್ಯೆ  5000ದಷ್ಟಿತ್ತು ಎಂದು ಹೇಳಲಾಗುತ್ತದೆ. ಪ್ರವಾದಿ ಅನುಯಾಯಿಗಳ ಸಂಖ್ಯೆ ಬರೇ 500ರಷ್ಟಿತ್ತು. ಹಾಗಿದ್ದೂ,

ಪ್ರವಾದಿ ಮುಹಮ್ಮದರನ್ನೇ ಮದೀನಾದ ಆಡಳಿತಾತ್ಮಕ ಮುಖ್ಯಸ್ಥರಾಗಿ ಅಲ್ಲಿನ ಮಂದಿ ನೇಮಿಸಿದರು. ಹೀಗೆ ಮದೀನಾ ಶಾಂತಿ ಮತ್ತು  ಐಕ್ಯಭಾವದ ಕಾರಣಕ್ಕಾಗಿ ಸುದ್ದಿಯಲ್ಲಿರುವಾಗ ಇತ್ತ ಮಕ್ಕಾ ಇದಕ್ಕೆ ವಿರುದ್ಧವಾದ ಕಾರಣಕ್ಕಾಗಿ ಸುದ್ದಿಯಲ್ಲಿತ್ತು. ಮಕ್ಕಾದ ಪ್ರತಿ ಮನೆಯೂ  ಬೂದಿ ಮುಚ್ಚಿದ ಕೆಂಡದಂತಿತ್ತು. ಅಪ್ಪ ಮತ್ತು ಮಗನ ನಡುವೆ, ತಾಯಿ ಮತ್ತು ಮಗಳ ನಡುವೆ, ಸಹೋದರಿ ಮತ್ತು ಸಹೋದರನ  ನಡುವೆ, ಪತ್ನಿ ಮತ್ತು ಪತಿಯ ನಡುವೆ... ಹೀಗೆ ಪ್ರತಿ ಮನೆಯೊಳಗೂ ವೈಚಾರಿಕ ತಿಕ್ಕಾಟಗಳು ಸ್ಫೋಟಗೊಂಡವು. ಗುಲಾಮರು ಮತ್ತು  ಬಡವರಲ್ಲಿ ವಿಮೋಚನೆಯ ಕನಸು ತಿರುಗತೊಡಗಿದರೆ, ಪ್ರತಿಷ್ಠರಲ್ಲಿ ಅಸ್ತಿತ್ವದ ಭಯ ಮೂಡತೊಡಗಿತ್ತು. ಇತ್ತ ತಮ್ಮ ಜೊತೆಗಿದ್ದವರಲ್ಲಿ  ಒಬ್ಬೊಬ್ಬರೇ ಕಾಣೆಯಾಗುತ್ತಿರುವುದೂ ಮತ್ತು ಅವರೆಲ್ಲ ಮದೀನಾ ಸೇರಿಕೊಳ್ಳುತ್ತಿರುವುದೂ ಪ್ರತಿಷ್ಠಿತರನ್ನು ಕಳವಳಕ್ಕೀಡು  ಮಾಡತೊಡಗಿತ್ತು. ತಾವು ಪ್ರವಾದಿ ಮುಹಮ್ಮದರಿಗೆ ಕೊಟ್ಟ ಕಿರುಕುಳ ಅತಿಯಾಯಿತೋ ಎಂಬ ಭಾವ ಒಂದು ಕಡೆಯಾದರೆ, ಮದೀನದಲ್ಲಿ ನೆಲೆ ಕಂಡುಕೊಂಡವರ ಮೇಲಿನ ಅಸೂಯೆ ಇನ್ನೊಂದು ಕಡೆ.

ಮಕ್ಕಾದಲ್ಲಿ ಪ್ರವಾದಿ ಮುಹಮ್ಮದ್ ಸತತ 13 ವರ್ಷಗಳ ಕಾಲ ತನ್ನನ್ನು ಸಮಾಜ ಸುಧಾರಣಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.  40ನೇ ವರ್ಷದಲ್ಲಿ ಈ ಸುಧಾರಣಾ ಅಭಿಯಾನ ಆರಂಭವಾಗಿತ್ತು. ಆವರೆಗೆ ಮಕ್ಕಾದ ಅತ್ಯಂತ ಸತ್ಯವಂತ ಮತ್ತು ಸರ್ವಮಾನ್ಯ  ವ್ಯಕ್ತಿಯಾಗಿದ್ದ ಪ್ರವಾದಿಯವರು, ಯಾವಾಗ ಏಕದೇವಾರಾಧನೆಯ ಪರ ಮತ್ತು ಸಾಮಾಜಿಕ ಕೆಡುಕುಗಳ ವಿರುದ್ಧ  ಮಾತಾಡತೊಡಗಿದರೋ ಪ್ರತಿಷ್ಠಿತರ ವೈರಿಯಾಗಿ ಮಾರ್ಪಟ್ಟರು. ಅವರ ಮೇಲೆ ಮಕ್ಕಾದ ಪ್ರತಿಷ್ಠಿತರು ಮತ್ತು ಶ್ರೀಮಂತರು ತಿರುಗಿ  ಬಿದ್ದುದು 40ನೇ ವರ್ಷದ ಬಳಿಕದಿಂದ. ಅವರ ಕುಟುಂಬಿಕರೇ ಈ ವಿರೋಧದ ಮುಂಚೂಣಿ ಯಲ್ಲಿದ್ದರು. ಹೀಗೆ ನಿರಂತರ 13  ವರ್ಷಗಳ ಕಾಲ ಕಿರುಕುಳ ಮತ್ತು ಆರ್ಥಿಕ ಬಹಿಷ್ಕಾರವನ್ನು ಎದುರಿಸಿದ ಪ್ರವಾದಿ ಮುಹಮ್ಮದರು ಬಳಿಕ ತನ್ನ 53ನೇ ವರ್ಷ  ಪ್ರಾಯದಲ್ಲಿ ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋದರು. ಹಾಗಂತ,

ಕಿರುಕುಳ ನೀಡಿದವರೆಲ್ಲ ಈ ವಲಸೆಯನ್ನು ಬಯಸಿದ್ದರು ಎಂದಲ್ಲ. ಪ್ರವಾದಿ ಮುಹಮ್ಮದರು ವಲಸೆ ಹೊರಟಿದ್ದಾರೆ ಎಂಬುದು  ಗೊತ್ತಾದ ಕೂಡಲೇ ಅವರು ಅವರನ್ನು ತಡೆಯುವುದಕ್ಕೆ ಇನ್ನಿಲ್ಲದ ಶ್ರಮ ವಹಿಸಿದರು. ಪ್ರವಾದಿಯನ್ನು ಹುಡುಕಿ ತರುವವರಿಗೆ  ಬಹುಮಾನವನ್ನು ಘೋಷಿಸಿದರು. ಒಂದುವೇಳೆ, ಪಕ್ಕದ ಮದೀನಾಕ್ಕೆ ವಲಸೆ ಹೋಗಿ ಪ್ರವಾದಿ ಮುಹಮ್ಮದ್ ಅಲ್ಲಿ ಬೆಳೆದರೆ, ಅದು  ತಮ್ಮ ಅಸ್ತಿತ್ವಕ್ಕೆ ಸಂಚಕಾರ ತಂದೀತು ಎಂಬ ಭಯವೂ ಇದಕ್ಕೆ ಕಾರಣ ಇದ್ದೀತು. ಆದ್ದರಿಂದಲೇ,
ಪ್ರವಾದಿ ಮದೀನಾಕ್ಕೆ ಹೋದ ನಂತರದಲ್ಲಿ ಮಕ್ಕಾದ ಪ್ರತಿ ಮನೆಗಳಲ್ಲಿ ನಡೆದಿರಬಹುದಾದ ಚರ್ಚೆಗಳು ಅತ್ಯಂತ ಆಸಕ್ತಿಕರ ವಾಗಿರುವ  ಸಾಧ್ಯತೆ ಇದೆ. ತಮ್ಮ ನಡುವೆ 53 ವರ್ಷಗಳ ಕಾಲ ಬದುಕಿ ಕೊನೆಗೆ ಕಿರುಕುಳವನ್ನು ತಾಳಲಾರದೇ ಊರನ್ನೇ ಬಿಟ್ಟು ಹೋಗುವುದೆಂದರೆ  ಅದು ಊರಿಗೇ ಕಳಂಕ. ಒಂಟಿ ವ್ಯಕ್ತಿಯನ್ನು ಹಿಂಸಿಸಿ ಊರಿನಿಂದ ಹೊರಕ್ಕಟ್ಟುವುದು ಹೆಮ್ಮೆಯ ಸಂಗತಿಯಾಗುವುದಿಲ್ಲ. ಪ್ರವಾದಿ ತನ್ನ  53 ವರ್ಷಗಳಲ್ಲಿ ಒಮ್ಮೆಯೂ ಯಾರ ವಿರುದ್ಧವೂ ಕೈಯೆತ್ತಿಲ್ಲ. ಯಾರನ್ನೂ ನೋಯಿಸಿಲ್ಲ. ಕೆಟ್ಟ ಮಾತನ್ನಾಡಿಲ್ಲ. ಮದ್ಯ ಸೇವಿಸಿಲ್ಲ, ಬಡ್ಡಿ  ಪಡೆದಿಲ್ಲ, ಅಸಮಾನತೆಯನ್ನು ಪಾಲಿಸಿಲ್ಲ, ಕುಟುಂಬ ಸಂಬಂಧವನ್ನು ಎಂದೂ ಕೆಡಿಸಿಲ್ಲ. ಅಲ್ಲದೆ, 25 ವರ್ಷದ ಯುವಕನಾಗಿದ್ದಾಗಲೇ  ಮೂರು ಮಕ್ಕಳ ತಾಯಿಯಾಗಿದ್ದ 40 ವರ್ಷದ ವಿಧವೆಯನ್ನು ಮದುವೆಯಾಗಿ ಆದರ್ಶವೊಂದಕ್ಕೆ ಬೀಜ ಬಿತ್ತಿದವರು. ಅಲ್ಲದೆ, ತನ್ನ ಈ  53 ವರ್ಷಗಳ ಬದುಕಿನಲ್ಲಿ ಅವರು ಹಿಂಸೆಯನ್ನು ಪ್ರತಿಪಾದಿಸಿಲ್ಲ, ಸೇನೆ ಕಟ್ಟಿಲ್ಲ, ತನ್ನ ಮತ್ತು ಅನುಯಾಯಿಗಳ ಮೇಲೆ ಕ್ರೌರ್ಯವೆಸಗಿದವರ ವಿರುದ್ಧ ಪ್ರತೀಕಾರವನ್ನೂ ಘೋಷಿಸಿಲ್ಲ. ತಾಯಿಫ್ ಎಂಬ ಊರಿನವರು ಅವರ ವಿರುದ್ಧ ಕಲ್ಲೆಸೆದು ರಕ್ತ ಸೋರುವಂತೆ  ಗಾಯಗೊಳಿಸಿದ ನಂತರವೂ ಅವರು ಸಹಜವಾಗಿಯೇ ಇದ್ದರು. ಇಂಥ ಓರ್ವ ವ್ಯಕ್ತಿಯ ಮೇಲೆ ವಲಸೆ ಅನಿವಾರ್ಯವಾಗು ವಷ್ಟು  ಹಿಂಸಿಸುವುದೆಂದರೆ, ಅದು ಮಕ್ಕಾದ ಬಲಾಢ್ಯ ಬುಡಕಟ್ಟುಗಳ ಪ್ರತಿಷ್ಠೆಯ ಪಾಲಿಗೆ ಅವಮಾನಕರವೇ ಹೊರತು ಹೆಮ್ಮೆಯಾಗುವ ಸಾಧ್ಯತೆ  ಕಡಿಮೆ. ಮಕ್ಕಾದ ಪ್ರತಿ ಮನೆಯೂ ಇವುಗಳನ್ನು ಚರ್ಚಿಸಿರುವ ಸಾಧ್ಯತೆ ಇದೆ. ಇವುಗಳಲ್ಲಿ ಶ್ರೀಮಂತ ಮನೆಗಳ ಚರ್ಚೆ ಒಂದು  ರೀತಿಯಲ್ಲಿದ್ದರೆ, ಬಡವರ ಮನೆಗಳ ಚರ್ಚೆ ಇನ್ನೊಂದು ರೀತಿಯಲ್ಲಿರುವುದಕ್ಕೂ ಅವಕಾಶ ಇದೆ. ಯಾಕೆಂದರೆ,

ಪ್ರವಾದಿ ಯಾವ ವಿಚಾರಧಾರೆಯನ್ನು ಪ್ರತಿಪಾದಿಸಿದ್ದರೋ ಅದರ ವಿರೋಧಿಗಳಲ್ಲಿ ಶ್ರೀಮಂತರು ಹೆಚ್ಚಿದ್ದರೇ ಹೊರತು ಬಡವರು  ಕಡಿಮೆ. ಯಾವುದನ್ನೆಲ್ಲ ಕೆಡುಕು ಎಂದು ಪ್ರವಾದಿ ಪಟ್ಟಿ ಮಾಡಿದ್ದರೋ ಅದು ಅತ್ಯಂತ ಹೆಚ್ಚು ಪಾಲನೆಯಲ್ಲಿದ್ದುದೂ ಶ್ರೀಮಂತರ  ನಡುವೆಯೇ. ಮಕ್ಕಾದ ಇಡೀ ಸಮಾಜ ಶ್ರೀಮಂತರು ಮತ್ತು ಬುಡಕಟ್ಟು ಪ್ರಮುಖರ ಹಿಡಿತದಲ್ಲಿತ್ತು. ಸಮಾಜ ನಡೆಯುತ್ತಿದ್ದುದೇ  ಬಡ್ಡಿಯಾಧಾರಿತ ವ್ಯವಸ್ಥೆಯಲ್ಲಿ. ಪಾನಗೋಷ್ಠಿಗಳು ಮತ್ತು ಯುವತಿಯರ ನೃತ್ಯಗಳು ಅವರ ಬದುಕಿನ ಭಾಗವಾಗಿತ್ತು. ಬಡವರ ಮೇಲೆ  ಕಠಿಣವಾಗಿ ಎರಗುತ್ತಿದ್ದ ನ್ಯಾಯವೆಂಬ ಚೂರಿಯು ಶ್ರೀಮಂತರನ್ನು ಸುಮ್ಮನೆ ಬಿಟ್ಟು ಬಿಡುತ್ತಿತ್ತು. ಆ ಕಾಲದಲ್ಲಿ ಗುಲಾಮ ಪದ್ಧತಿ ಇತ್ತು  ಎಂದು ಮಾತ್ರವಲ್ಲ, ಅವರನ್ನು ನಡೆಸಿ ಕೊಳ್ಳುತ್ತಿದ್ದ ರೀತಿಯುಂತೂ ಅತ್ಯಂತ ಕುಪ್ರಸಿದ್ಧವಾಗಿದೆ. ಗುಲಾಮರನ್ನು ಮಾರುಕಟ್ಟೆಯಿಂದ  ಖರೀದಿಸಲಾಗುತ್ತಿತ್ತು. ಆಫ್ರಿಕಾ ಅಥವಾ ಇನ್ನಿತರ ಬಡ ದೇಶಗಳಿಂದ ಜನರನ್ನು ತಂದು ಮಾರುಕಟ್ಟೆಯಲ್ಲಿ ಮಾರುವುದು ಮತ್ತು  ಶ್ರೀಮಂತರು ಅವರನ್ನು ಖರೀದಿಸಿ ತಮಗೆ ಬೇಕಾದಂತೆ ದುಡಿಸಿಕೊಳ್ಳುವುದು ಎಷ್ಟು ಸಾಮಾನ್ಯವಾಗಿತ್ತೆಂದರೆ, ಈ ಖರೀದಿ ಮತ್ತು  ಮಾರಾಟಗಳು ಪ್ರಾಣಿಗಳ ವ್ಯವಹಾರದಂತೆ ನಡೆಯುತ್ತಿತ್ತು. ಮಾನವ ಹಕ್ಕುಗಳ ಲವಲೇಶವೂ ಈ ಮನುಷ್ಯ ರೆಂಬ ಪ್ರಾಣಿಗಳಿಗೆ  ಲಭ್ಯವಾಗುತ್ತಿರಲಿಲ್ಲ. ಇಂಥ ಗುಲಾಮರಲ್ಲಿ ಒಬ್ಬರಾದ ನೀಗ್ರೋ ಬಿಲಾಲ್‌ರನ್ನೇ ಪ್ರವಾದಿ ಮುಹಮ್ಮದರು ಅಪ್ಪಿಕೊಂಡರು. ಆ ಅಪ್ಪಿಕೊಳ್ಳುವಿಕೆಯು  ಆ ಕಾಲದ  ಅದ್ಭುತವಾಗಿ ಪರಿಗಣಿತವಾಯಿತು ಮತ್ತು ಅದು ಆ ಬಳಿಕ ಮಕ್ಕಾದಲ್ಲಿ ಬಹುದೊಡ್ಡ ಸಂಚಲನೆಗೆ ಕಾರಣವಾದದ್ದು ಇತಿಹಾಸ.        (ಮುಂದುವರಿಯುವುದು) 

Friday, April 29, 2022

ಲಂಕಾ ಪತನಕ್ಕೆ ಏನು ಕಾರಣ?


2009ರಲ್ಲಿ ಎಲ್‌ಟಿಟಿಇಯನ್ನು ಮಣಿಸುವ ಮೂಲಕ ದೀರ್ಘ ರಕ್ತಸಿಕ್ತ ಹೋರಾಟಕ್ಕೆ ಶ್ರೀಲಂಕಾದ ಅಧ್ಯಕ್ಷ  ಮಹೀಂದ್ರ ರಾಜಪಕ್ಸೆ ಅಂತಿಮ ಪರದೆ ಎಳೆದರು. ಶ್ರೀಲಂಕಾದ ಒಟ್ಟು ಜನಸಂಖ್ಯೆಯಲ್ಲಿ 70%ರಷ್ಟಿರುವ ಸಿಂಹಳೀಯರು ಈ ಗೆಲುವನ್ನು ಅಭಿಮಾನದಿಂದ ಆಚರಿಸಿದರು. ರಾಜಪಕ್ಸೆ ಲಂಕಾದ ಹೀರೋ ಆದರು. ಆದರೆ ಈ ಹೋರಾಟಕ್ಕೆ ಶ್ರೀಲಂಕಾ ಅಪಾರ ಪ್ರಮಾ ಣದ ಹಣ ವ್ಯಯ ಮಾಡಿತ್ತು. ಅಭಿವೃದ್ಧಿಯ ಕಡೆಗೆ ಗಮನ ಕೊಡುವುದಕ್ಕಿಂತ ಹೆಚ್ಚು ದೇಶ ಸುರಕ್ಷತೆಯನ್ನು  ಮುಂಚೂಣಿ ವಿಷಯವಾಗಿ ಪರಿಗಣಿಸಿತ್ತು. ದೇಶದ ಒಟ್ಟು ಆದಾಯದ ಬಹುದೊಡ್ಡ ಭಾಗವನ್ನು ಶಸ್ತ್ರಾಸ್ತ್ರಕ್ಕೆ  ಖರ್ಚು ಮಾಡಬೇಕಿತ್ತು. ಶ್ರೀಲಂಕಾವು ಪ್ರತಿಯೊಂದು ಶಸ್ತಾಸ್ತ್ರಕ್ಕೂ ವಿದೇಶವನ್ನೇ ಅವಲಂಬಿಸಿರುವುದರಿಂದ ಆಮದಿಗಾಗಿ ಅಪಾರ ಹಣ ಮೀಸಲಿಡುವುದು ಅನಿವಾರ್ಯವೂ ಆಗಿತ್ತು. ಆದರೆ ಎಲ್‌ಟಿಟಿಇ ಪರಾಜಯಗೊಳ್ಳುವುದರೊಂದಿಗೆ ಜನರ ಗಮನ ಮೊದಲ ಬಾರಿ ದೇಶದ ಅಭಿವೃದ್ಧಿ, ಮೂಲ ಸೌಲಭ್ಯಗಳು, ಶಿಕ್ಷಣ, ಉದ್ಯೋಗಗಳ ಕಡೆಗೆ ಸಹಜವಾಗಿಯೇ ಹರಿಯ ತೊಡಗಿತು.
ಇದೇ ವೇಳೆ,

ಎಲ್‌ಟಿಟಿಇ ವಿರುದ್ಧದ ಹೋರಾಟದ ವೇಳೆ ಲಂಕಾ ಸೇನೆ ಯಿಂದ ಗಂಭೀರ ಯುದ್ಧಾಪರಾಧಗಳು ನಡೆದಿವೆ ಎಂಬ ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಂಭೀರವಾಗಿಯೇ ಕೇಳಿಸತೊಡಗಿತು. ವಿಶ್ವಸಂಸ್ಥೆಯೇ ಈ ಬಗ್ಗೆ ತನಿಖೆಗೂ ಮುಂದಾಯಿತು. ಒಂದುಕಡೆ, ಜನರ ಗಮನ ಎಲ್‌ಟಿಟಿಇಯಿಂದ ಅಭಿವೃದ್ಧಿ ಕಡೆಗೆ ಹೊರಳಿದರೆ, ಇನ್ನೊಂದೆಡೆ ಅಂತಾರಾಷ್ಟ್ರೀಯ ಸಮೂಹಗಳ ಗಮನವು ಲಂಕಾದ ಯುದ್ಧಾಪರಾಧಗಳ ಕಡೆಗೆ ಹರಿದುದು ಅಧ್ಯಕ್ಷ  ರಾಜಪಕ್ಸೆಯನ್ನು ಆತಂಕಕ್ಕೆ ತಳ್ಳಿತು. ಹೀರೋ ರಾಜಪಕ್ಸೆ ನಿಧಾನಕ್ಕೆ ದೇಶದಲ್ಲಿ ಪ್ರಶ್ನೆಗೆ ಒಳಗಾಗತೊಡಗಿದರು. ಇದು ರಾಜಪಕ್ಸೆಯನ್ನು ಒತ್ತಡಕ್ಕೆ ಸಿಲುಕಿಸತೊಡಗಿತು. ಇಂಥ ಹೊತ್ತಿನಲ್ಲೇ  ಬೋದು ಬಾಲ ಸೇನಾ (ಬಿಬಿಎಸ್) ಅಥವಾ ಬೌದ್ಧ ಸೇನೆ ಎಂಬ ಬೌದ್ಧ ಸನ್ಯಾಸಿಗಳ ಸಂಘಟನೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿತು. ತೀವ್ರ ರಾಷ್ಟ್ರವಾದ ಮತ್ತು ತೀವ್ರ ಮುಸ್ಲಿಮ್ ವಿರೋಧಿ ಪ್ರಚಾರಗಳೇ ಅದರ ಮುಖ್ಯ ಅಜೆಂಡಾವಾಗಿತ್ತು. ಹಾಗಂತ,

ಈ ಬಿಬಿಎಸ್ ಅನ್ನು ಮುಂಚೂಣಿಗೆ ತಂದುದು ರಾಜಪಕ್ಸೆ ಹೌದೋ ಅಲ್ಲವೋ, ಆದರೆ ಆ ಬೌದ್ಧ ಸನ್ಯಾಸಿ ಸಂಘಟನೆಯ ಪ್ರಚಾರ ವೈಖರಿಯು ರಾಜಪಕ್ಸೆಯ ಪಾಲಿಗೆ ಊರುಗೋಲಾದುದು ನಿಜ. ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕೆ ಈ ಸಂಘಟನೆಯ ಮುಸ್ಲಿಮ್ ವಿರೋಧಿ ದ್ವೇಷ ಭಾಷಣಗಳು ಪ್ರಯೋಜನಕ್ಕೆ ಬಂದುವು. 2005ರಿಂದ 2015ರ ವರೆಗಿನ ತಮ್ಮ ಅಧಿಕಾರಾವಧಿಯಲ್ಲಿ ಮುಸ್ಲಿಮ್ ವಿರೋಧಿ ದ್ವೇಷವನ್ನು ಈ ರಾಜಪಕ್ಸೆ ಪುಷ್ಕಳವಾಗಿ ಬಳಸಿದ್ದಾರೆ ಎಂಬ ಆರೋಪ ಬಲ ವಾಗಿಯೇ ಇದೆ. 2013 ಜನವರಿಯಲ್ಲಿ ತೀವ್ರವಾದಿ ಬೌದ್ಧ ಸನ್ಯಾಸಿಗಳ ಗುಂಪು ಲಂಕಾದ ಕಾನೂನು ಕಾಲೇಜಿಗೆ ನುಗ್ಗಿತ್ತಲ್ಲದೇ ಪರೀಕ್ಷಾ ಫಲಿತಾಂಶವನ್ನು ಮುಸ್ಲಿಮರ ಪರವಾಗಿ ತಿರುಚಲಾಗಿದೆ ಎಂದು ರಂಪಾಟ ನಡೆಸಿತ್ತು. ಇದೇ ಅವಧಿಯಲ್ಲಿ ಕೊಲಂಬೋದ ಕಸಾಯಿಖಾನೆಗೆ ನುಗ್ಗಿ, ಇಲ್ಲಿ ಕರುಗಳನ್ನು ವಧಿಸಲಾಗುತ್ತಿದೆ ಎಂದು ಹೇಳಿ ಹಾನಿ ಮಾಡಿತ್ತು. ಆದರೆ ಈ ಎರಡೂ ಆರೋಪ ಗಳು ಸುಳ್ಳು ಎಂಬುದು ಆ ಬಳಿಕ ಸ್ಪಷ್ಟವಾಯಿತು ಎಂದು 2013 ಮಾರ್ಚ್ 25ರಂದು ಬಿಬಿಸಿ ಪ್ರಕಟಿಸಿದ ‘ಹಾರ್ಡ್ಲೈನ್ ಬುದ್ದಿಸ್ಟ್ಸ್ ಟಾರ್ಗೆಟಿಂಗ್ ಶ್ರೀಲಂಕನ್ ಮುಸ್ಲಿಮ್ಸ್’ ಎಂಬ ಬರಹದಲ್ಲಿ ಹೇಳಲಾಗಿದೆ. ನಿಜವಾಗಿ,

ಇಂಥ ಮುಸ್ಲಿಮ್ ವಿರೋಧಿ ಪ್ರಕ್ರಿಯೆಗಳನ್ನು ಅಲ್ಲಲ್ಲಿ ಆಗಾಗ ಸೃಷ್ಟಿಸುತ್ತಾ ಬರುವ ಮೂಲಕ ಮುಸ್ಲಿಮ್ ವಿರೋಧಿ ದಂಗೆಗೆ ಬೋದು ಬಾಲ ಸೇನೆ ನೆಲವನ್ನು ಹಸನುಗೊಳಿಸುತ್ತಲೇ ಹೋಗುತ್ತಿತ್ತು. ಇದರ ಫಸಲು 2014ರಲ್ಲಿ ಸಿಕ್ಕಿತು. 1990ರಲ್ಲಿ ಉತ್ತರ ಶ್ರೀಲಂಕಾದಿಂದ  ಭಾರೀ ಸಂಖ್ಯೆಯಲ್ಲಿ ಮುಸ್ಲಿಮರನ್ನು ವಲಸೆ ಹೋಗುವಂತೆ ನಿರ್ಬಂಧಿಸಲಾದ ಘಟನೆಯ ಬಳಿಕ, ಮುಸ್ಲಿಮರು ದೊಡ್ಡ ಮಟ್ಟದಲ್ಲಿ ಮೊದಲ ಬಾರಿ ಹಿಂಸಾಚಾರಕ್ಕೆ ಗುರಿಯಾದರು. 1990ರ ವಲಸೆಗೆ ಎಲ್‌ಟಿಟಿಇಯ ನಿರ್ದೇಶನ ಕಾರಣವಾಗಿತ್ತು. ಮುಸ್ಲಿಮರೆಲ್ಲ ಇಲ್ಲಿಂದ ತಕ್ಷಣ ತೆರವುಗೊಳ್ಳಬೇಕು ಎಂದು ಎಲ್‌ಟಿಟಿಇ ಮುಸ್ಲಿಮರಿಗೆ ಆದೇಶ ನೀಡಿತ್ತಲ್ಲದೇ ಈ ತೆರವಿಗೆ ತೀರಾ ಸಣ್ಣ ಅವಧಿಯನ್ನಷ್ಟೇ ನೀಡಿತ್ತು. ಆ ಅವಧಿಯಲ್ಲಿ ತಮ್ಮ ಬಟ್ಟೆಬರೆಗಳ ಹೊರತು ಇನ್ನೇನೂ ಕೊಂಡೊಯ್ಯಲಾಗದ ಹತಾಶ ಸ್ಥಿತಿ ಮುಸ್ಲಿಮರಿಗೆ ಬಂದೊದಗಿತ್ತು. ಆ ಬಳಿಕ 2014ರಲ್ಲಿ ಮುಸ್ಲಿಮರು ಪುನಃ ಹಿಂಸೆಗೆ ಗುರಿಯಾದರು. ಮುಸ್ಲಿಮರ ವಿರುದ್ಧ ತೀವ್ರ ಅಪಪ್ರಚಾರಗಳು ನಡೆದುವು. ಹೀಗಿದ್ದೂ 2015ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಪಕ್ಸೆ ಸೋತರು. ಸಿರಿಸೇನಾ ಅಧಿಕಾರಕ್ಕೆ ಬಂದರು. ರಾಜಪಕ್ಸೆಗೆ ಹೋಲಿಸಿದರೆ ಸಿರಿಸೇನಾ ಹೆಚ್ಚು ಸೆಕ್ಯುಲರ್ ಎಂದು ಗುರುತಿಗೀಡಾದವರು. ಅಭಿವೃದ್ಧಿ ರಾಜಕಾರಣವನ್ನು ಮುಂದಿಟ್ಟುಕೊಂಡು  ಚುನಾವಣೆಯನ್ನು ಎದುರಿಸಿದವರು. ಆದರೆ, ಬೋದು ಬಾಲ ಸೇನಾ ಮತ್ತು ಸಿಂಹಳ ಇಕೋದಂಥ ತೀವ್ರವಾದಿ ಬೌದ್ಧ ಸಂಘಟನೆಗಳು ತಮ್ಮ ಮುಸ್ಲಿಮ್ ವಿರೋಧಿ ಅಭಿಯಾನವನ್ನು ತೀವ್ರಗೊಳಿಸಿದುವೇ ಹೊರತು ತಗ್ಗಿಸಲಿಲ್ಲ. ಇದರ ಪರಿಣಾಮವೆಂಬಂತೆ  2018 ಮತ್ತು 2019ರಲ್ಲಿ ಎರಡು ಮುಸ್ಲಿಮ್ ವಿರೋಧಿ ದಂಗೆಗಳು ನಡೆದುವು. 

2018ರಲ್ಲಿ ಮೂರು ದಿನಗಳ ಕಾಲ ನಡೆದ ಮುಸ್ಲಿಮ್ ವಿರೋಧಿ ದಂಗೆಯಲ್ಲಿ ಮುಸ್ಲಿಮರ ಮನೆ, ಮಸೀದಿ, ವ್ಯಾಪಾರ ಮಳಿಗೆಗಳಿಗೆ ಅಪಾರ ನಾಶ ನಷ್ಟ ಸಂಭವಿಸಿತು. 2018 ಫೆಬ್ರವರಿ 22ರಂದು ಬೌದ್ಧ ಟ್ರಕ್ ಡ್ರೈವರ್ ಮತ್ತು ಮುಸ್ಲಿಮ್ ಯುವಕರ ನಡುವೆ ನಡೆದ ಘರ್ಷಣೆಯಲ್ಲಿ ಕುಮಾರ ಸಿಂಹಳೆ ಎಂಬ ಆ ಡ್ರೈವರ್ ಆಸ್ಪತ್ರೆಯಲ್ಲಿ ಸಾವಿಗೀಡಾದ. ಟ್ರಾಫಿಕ್ ವಿಚಾರಕ್ಕೆ ಸಂಬಂಧಿಸಿ ನಡೆದ ಘರ್ಷಣೆ ಇದಾಗಿತ್ತು. ರಾಜಪಕ್ಸೆ ಅವರ, ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ) ಪಕ್ಷವು ಈ ಹಿಂಸಾಚಾರದಲ್ಲಿ ಭಾಗಿಯಾಗಿತ್ತು ಎಂಬ ಆರೋಪವೂ ಕೇಳಿಬಂತು. ಶ್ರೀಲಂಕನ್ ಸೆಕ್ರಟರಿಯೇಟ್ ಫಾರ್ ಮುಸ್ಲಿಮ್ಸ್ ಎಂಬ ನಾಗರಿಕ ಗುಂಪಿನ ಪ್ರಕಾರ, 2013ರಿಂದ 18ರ ನಡುವೆ ಮುಸ್ಲಿಮರ ವಿರುದ್ಧ 600ಕ್ಕಿಂತಲೂ ಅಧಿಕ ಕೋಮುದ್ವೇಷಿ ದಾಳಿಗಳು ನಡೆದಿವೆ. ಇದರ ಹಿಂದೆ ಬೋದು ಬಾಲ ಸೇನಾದ ಮುಖ್ಯಸ್ಥ ಬೌದ್ಧ ಸನ್ಯಾಸಿ ಗಲಗಂಡ ಜ್ಞಾನರಸ ಮತ್ತು ಅವರ ಸಂಘಟನೆಯ ದ್ವೇಷ ಪ್ರಚಾರಕ್ಕೆ ಪ್ರಮುಖ ಪಾತ್ರವಿದೆ ಎಂಬುದು ಸ್ಪಷ್ಟ. ಈ ಹಿಂಸಾಚಾರದ ಕುರಿತಂತೆ, ‘ಪೊಲೀಸ್, ಪೊಲಿಟೀಶಿಯನ್ಸ್ ಅಕ್ಯುಸ್‌ಡ್ ಆಫ್ ಜಾಯಿನಿಂಗ್ ಶ್ರೀಲಂಕಾಸ್ ಆಂಟಿ ಮುಸ್ಲಿಮ್ ರಯಟ್ಸ್’ ಎಂಬ ಶೀರ್ಷಿಕೆಯಲ್ಲಿ ರಾಯಿಟರ್ಸ್ ಸುದ್ದಿಸಂಸ್ಥೆ 2018 ಮಾರ್ಚ್ 24ರಂದು ವಿಸ್ತೃತ  ತನಿಖಾ ಬರಹವನ್ನು ಪ್ರಕಟಿಸಿದೆ. 

ಬೌದ್ಧ ಸನ್ಯಾಸಿ ಜ್ಞಾನರಸ ಮೇಲೆ ಹಿಂಸಾಚಾರ ಮತ್ತು ಕೋರ್ಟು ನಿಂದೆಗೆ ಸಂಬಂಧಿಸಿ ನ್ಯಾಯ ಪ್ರಕ್ರಿಯೆ ನಡೆಯಿತಲ್ಲದೇ 2018ರಲ್ಲಿ ನ್ಯಾಯಾಲಯವು 6 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತು. ಈ ಸಂದರ್ಭದಲ್ಲಿ ಸಿರಿಸೇನಾ ಲಂಕಾದ ಅಧ್ಯಕ್ಷರಾಗಿದ್ದರು. 2019 ಎಪ್ರಿಲ್‌ನಲ್ಲಿ ಶ್ರೀಲಂಕಾವನ್ನೇ ಬೆಚ್ಚಿಬೀಳಿಸಿದ ಬಾಂಬ್ ಸ್ಫೋಟ ನಡೆಯಿತು. ಮೇಯಲ್ಲಿ ಮುಸ್ಲಿಮ್ ವಿರೋಧಿ ಹಿಂಸಾಚಾರ ಭುಗಿಲೆದ್ದಿತು. ನೆಗಾಂಬೋ ಎಂಬಲ್ಲಿ 1000 ಮುಸ್ಲಿಮರನ್ನು ಅವರಿರುವ ಬಾಡಿಗೆ ಮನೆಗಳಿಂದ ಒಕ್ಕಲೆಬ್ಬಿಸಲಾಯಿತು. ‘ನೀವಿದ್ದರೆ ತಮ್ಮ ಆಸ್ತಿ-ಪಾಸ್ತಿಗಳ ಮೇಲೆ ದಂಗೆಕೋರರು ದಾಳಿ ಮಾಡುವರೆಂದು’ ಹೇಳಿ ಮನೆ ಮಾಲಿಕ ಮುಸ್ಲಿಮರನ್ನು ಒಕ್ಕಲೆಬ್ಬಿಸಿದ್ದ. 4 ಬಿಲಿಯನ್ ಬೆಲೆಬಾಳುವ ಮುಸ್ಲಿಮ್ ಮಾಲಕತ್ವದ, ರೋಝಾ ಫಾಸ್ಟಾ ಫ್ಯಾಕ್ಟರಿಯನ್ನು ಬೆಂಕಿ ಹಚ್ಚಿ ಧ್ವಂಸ ಮಾಡಲಾಯಿತು. ಇದು ಲಂಕಾದ ಅತಿದೊಡ್ಡ ಪಾಸ್ಟಾ ಫ್ಯಾಕ್ಟರಿಯಾಗಿದ್ದು, 500 ಮಂದಿ ದುಷ್ಕರ್ಮಿಗಳು ಈ ಕಾರ್ಖಾನೆಗೆ ಪ್ರವೇಶಿಸಿ ಬೆಂಕಿ ಹಚ್ಚಿದ್ದರು. ಈ ಹಿಂಸಾಚಾರದಲ್ಲಿ 100ರಷ್ಟು ವಾಹನಗಳು ಧ್ವಂಸವಾದುವು. 540ರಷ್ಟು ಮುಸ್ಲಿಮ್ ಮನೆಗಳು ಧ್ವಂಸಗೊಂಡವು. ಅಧ್ಯಕ್ಷ ಸಿರಿಸೇನಾ ಅವರು ಬಾಂಬ್ ಸ್ಫೋಟ ಮತ್ತು ಕೋಮು ಹಿಂಸಾಚಾರದಿಂದಾಗಿ ತೀವ್ರವಾಗಿ ಕಳೆಗುಂದಿದರು ಮತ್ತು ಇದರ ಲಾಭವನ್ನು ರಾಜಪಕ್ಸೆ ಪಡೆದುಕೊಂಡರು. ಸಿರಿ ಸೇನಾ ಅವರ ಮೇಲೆ ಬೋದು ಬಾಲ ಸೇನಾ ಮತ್ತು ಸಾರ್ವಜನಿಕರ ಒತ್ತಡ ಎಷ್ಟು ಬಲವಾಗಿತ್ತೆಂದರೆ, ತಾನು ನಿರ್ಗಮಿಸುವುದಕ್ಕಿಂತ ಒಂದು ತಿಂಗಳು ಮೊದಲು ಜೈಲಲ್ಲಿದ್ದ ಜ್ಞಾನರಸ ಅವರಿಗೆ ತಮ್ಮ ವಿಶೇಷಾಧಿಕಾರ ಬಳಸಿ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಿದರು. ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಿರಿಸೇನಾ ಪರಾಜಯಗೊಂಡರಲ್ಲದೇ ರಾಜಪಕ್ಸೆ ಭರ್ಜರಿ ಜಯ ದಾಖಲಿಸಿದರು. ಈ ಜಯದ ಹಿಂದೆ ಬೋದು ಬಾಲ ಸೇನಾ ಸಂಘಟನೆಯ ದೊಡ್ಡ ಪಾತ್ರವಿತ್ತು ಮತ್ತು ಈ ಸಂಘಟನೆಯು ವಿರತ್ತು ಎಂಬ ಮ್ಯಾನ್ಮಾರ್‌ನ ತೀವ್ರವಾದಿ ಬೌದ್ಧ ಸಂಘಟನೆಯೊಂದಿಗೆ ಬಲವಾದ ಸಂಬಂಧವನ್ನೂ ಹೊಂದಿದೆ. ಮ್ಯಾನ್ಮಾರ್‌ನಲ್ಲಿ 7 ಲಕ್ಷ ಮುಸ್ಲಿಮರ ಪಲಾಯನ  ಮತ್ತು ಅನೇಕ ಮಂದಿಯ ಸಾವಿನ ಹಿಂದೆ ಈ ಸಂಘಟನೆಯ ಪ್ರಚೋದನೆ ಮತ್ತು ದ್ವೇಷ ಪ್ರಚಾರಕ್ಕೆ ಮಹತ್ವದ ಪಾತ್ರ ಇದೆ. ವಿಶೇಷ ಏನೆಂದರೆ,

ಭಾರತೀಯ ಮುಸ್ಲಿಮರ ವಿರುದ್ಧ ಇಲ್ಲಿನ ಬಲಪಂಥೀಯ ಗುಂಪು ಹೇಗೆ ಅಪಪ್ರಚಾರ ಮಾಡುತ್ತಿದೆಯೋ ಅದೇ ರೀತಿಯ ಅಪಪ್ರಚಾರವನ್ನು ಶ್ರೀಲಂಕನ್ ಮುಸ್ಲಿಮರ ವಿರುದ್ಧವೂ ಮಾಡಲಾಗುತ್ತಿದೆ. ಒಂದು ರೀತಿಯಲ್ಲಿ ಭಾರತದ್ದೇ ಕಾಪಿ ಪೇಸ್ಟ್. ಕೆಲವು ಉದಾಹರಣೆಗಳು ಹೀಗಿವೆ:

1. ಮುಸ್ಲಿಮರು ದೇಶನಿಷ್ಠರಲ್ಲ.

2. ಮುಸ್ಲಿಮರು ಹೆಚ್ಚೆಚ್ಚು ಮಕ್ಕಳನ್ನು ಹುಟ್ಟಿಸುತ್ತಾರೆ.

3. 2050ಕ್ಕಾಗುವಾಗ ಸಿಂಹಳೀಯರು ಅಲ್ಪಸಂಖ್ಯಾತರಾಗಲಿದ್ದು, ಮುಸ್ಲಿಮರು ಬಹುಸಂಖ್ಯಾತರಾಗುತ್ತಾರೆ.

4. ತಮ್ಮ ಉತ್ಪನ್ನಗಳಲ್ಲಿ ರಾಸಾಯನಿಕ ವಸ್ತುಗಳನ್ನು ಸೇರಿಸಿ ಸಿಂಹಳ ಮಹಿಳೆಯರು ಬಂಜೆಯಾಗುವAತೆ ಸಂಚು ರೂಪಿಸಿದ್ದಾರೆ.

5. ಹಲಾಲ್ ಆಹಾರ ಮಾರಾಟದ ಮೂಲಕ ಲಂಕಾವನ್ನು ಇಸ್ಲಾಮೀಕರಣ ಮಾಡುತ್ತಾರೆ.

6. ಮುಸ್ಲಿಮರು ಲಂಕಾದ ವ್ಯಾಪಾರವನ್ನು ನಿಯಂತ್ರಿಸುತ್ತಿದ್ದಾರೆ.

7. ಶರಿಯಾ ಕಾನೂನು ಪಾಲಿಸುತ್ತಾರೆ.

8. ಮುಸ್ಲಿಮರು ವಾಣಿಜ್ಯ ಉದ್ದೇಶಕ್ಕಾಗಿ ಭೂಮಿ ಖರೀ ದಿಸುವುದರ ಹಿಂದೆ ಸಂಚಿದೆ.

9. ಮುಸ್ಲಿಮರು ಡ್ರಗ್ಸ್ ಸರಬರಾಜಿನಲ್ಲಿ ಭಾಗಿಯಾಗಿದ್ದಾರೆ.

ಅಂದಹಾಗೆ,

2019ರಲ್ಲಿ ಲಂಕಾವನ್ನು ಬಾಂಬ್ ಸ್ಫೋಟ ನಡುಗಿಸಿದರೆ, 2020ರಲ್ಲಿ ಕೊರೋನಾ ಅಲುಗಾಡಿಸಿತು. 2021 ಎಪ್ರಿಲ್ 12 ರಂದು ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿತು. 1000 ಮದ್ರಸಗಳನ್ನು ಮತ್ತು ಬುರ್ಖಾವನ್ನು ಸರ್ಕಾರ ನಿಷೇಧಿಸಿದೆ ಎಂದು ಸಾರ್ವಜನಿಕ ಸುರಕ್ಷಾ ಸಚಿವ ಶರತ್ ವೀರಸೇಕರ  ಘೋಷಿಸಿದರು. ಬುರ್ಖಾವು ಧಾರ್ಮಿಕ ಉಗ್ರವಾದದ ಸಂಕೇತ ಮತ್ತು ದೇಶದ ಸುರಕ್ಷತತೆಗೆ ಅಪಾಯಕಾರಿ ಎಂದವರು ವ್ಯಾಖ್ಯಾನಿಸಿದರು. ಆದರೆ ಈ ಬಗ್ಗೆ ಅಂತಾರಾಷ್ಟ್ರೀಯವಾಗಿ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ, ಈ ಬಗ್ಗೆ ಪರಾಮರ್ಶೆ ನಡೆಯುತ್ತಿದೆ ಎಂದು ಸರ್ಕಾರ ವಿವರಣೆ ನೀಡಿತು. ಇದೇವೇಳೆ, ವಿದೇಶದಿಂದ ಅಮದು ಮಾಡಲಾಗುವ ಎಲ್ಲಾ ಇಸ್ಲಾಮೀ ಪುಸ್ತಕಗಳೂ ರಕ್ಷಣಾ ಸಚಿವಾಲಯದ ಅನುಮತಿಯನ್ನು ಪಡೆದಿರಲೇಬೇಕು ಎಂದು 2021 ಮಾರ್ಚ್ ಆರಂಭದಲ್ಲಿ ಆದೇಶ ನೀಡಲಾಯಿತು. 2020ರ ಕೊರೋನಾದ ಸಮಯದಲ್ಲಿ ಮುಸ್ಲಿಮರು ಸಹಿತ ಎಲ್ಲ ಶವಗಳನ್ನೂ ಸುಡಲು ಸರ್ಕಾರ ಆದೇಶ ಹೊರಡಿಸಿತು. ಇದು ವಿಶ್ವಸಂಸ್ಥೆಯೂ ಸೇರಿದಂತೆ ಎಲ್ಲೆಡೆಯ ಆಕ್ರೋಶಕ್ಕೆ ಒಳಗಾಯಿತು. ಕೊನೆಗೆ 2021ರ ಕೊನೆಯಲ್ಲಿ ಈ ಆದೇಶವನ್ನು ಹಿಂಪಡೆದು ಶವ ದಫನಕ್ಕೂ ಸರ್ಕಾರ ಅವಕಾಶ ಕಲ್ಪಿಸಿತು. ಅಂದಹಾಗೆ,

2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಪಕ್ಸೆ ಅವರ ಪಕ್ಷದ ಘೋಷಣೆ- ‘ಒಂದು ದೇಶ ಒಂದೇ ಕಾನೂನು’ ಎಂಬುದಾಗಿತ್ತು. ಇದರ ಕಾನೂನು ನಿರ್ಮಾಣ ಸಮಿತಿಯ ಅಧ್ಯಕ್ಷರನ್ನಾಗಿ ಜ್ಞಾನರಸ ಅವರನ್ನೇ ಆಯ್ಕೆ ಮಾಡಿರುವುದೇ ಆ ನೀತಿಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ.  ಹಲಾಲ್ ಆಹಾರದ ವಿರುದ್ಧವೂ ಅಲ್ಲಿ ಅಭಿಯಾನ ನಡೆಯಿತು. ಒಂದು ರೀತಿಯಲ್ಲಿ,

ಶ್ರೀಲಂಕಾದ ಇಂದಿನ ಆರ್ಥಿಕ ದುಃಸ್ಥಿತಿಗೆ ಬಾಂಬ್ ಸ್ಫೋಟ ಮತ್ತು ಕೊರೋನಾದಿಂದಾಗಿ ನೆಲ ಕಚ್ಚಿದ ಪ್ರವಾಸೋದ್ಯಮ, 3.87 ಲಕ್ಷ ಕೋಟಿಯಷ್ಟು ಭಾರೀ ಸಾಲದಲ್ಲಿ ಮುಳುಗಿರುವುದು, ತೆರಿಗೆ ನೀತಿಯನ್ನು ಬದಲಾಯಿಸಿದ್ದು, ಹಠಾತ್ತಾಗಿ ಜಾರಿಗೆ ತಂದ ಸಾವಯವ ಕೃಷಿ ನೀತಿ... ಇತ್ಯಾದಿಗಳು ಕಾರಣ ಎಂದು ಹೇಳುವಾಗಲೂ, ಅದು ದಶಕಗಳಿಂದ ಪೋಷಿಸುತ್ತಾ ಬಂದ ಧರ್ಮ ರಾಜಕಾರಣವನ್ನೂ ಕಾರಣಗಳ ಪಟ್ಟಿಯಿಂದ ಹೊರಗಿಟ್ಟು ನೋಡುವ ಹಾಗಿಲ್ಲ. ಇದರಿಂದಾಗಿ ಲಂಕಾಕ್ಕೆ ಬರುವ ಪ್ರವಾಸಿಗರಲ್ಲಿ ತೀವ್ರ ಕೊರತೆ ಉಂಟಾಯಿತು. 

ತನ್ನದೇ ಜನರನ್ನು ದ್ವೇಷಿಸುತ್ತಾ ಸಾಗುವ ಯಾವ ದೇಶವೂ ಅಭಿವೃದ್ಧಿಯತ್ತ ಮುಖ ಮಾಡಲು ಸಾಧ್ಯವಿಲ್ಲ. ಒಂದು ಜನಾಂಗವನ್ನು ಭೀತಿಯಲ್ಲಿ ಕೆಡುಹುವುದರಿಂದ ಅಧಿಕಾರವೇನೋ ಸಿಗಬಹುದು, ಅದರ ಜೊತೆಗೇ ದೇಶ ವಿನಾಶದತ್ತಲೂ ಸಾಗಬಹುದು ಎಂಬುದಕ್ಕೆ ಲಂಕಾ ಒಂದು ಉತ್ತಮ ಉದಾಹರಣೆ.

Monday, April 11, 2022

2016ರ ಚಿಪ್ಪು, 2021ರ ಬ್ರೋಕರ್

1. 2000 ನೋಟಿನಲ್ಲಿ ಚಿಪ್ಪು
2. ಬ್ರೋಕರ್

1990ರಲ್ಲಿ ಈ ದೇಶ ಜಾಗತೀಕರಣಕ್ಕೆ ತೆರೆದುಕೊಂಡ ಬಳಿಕ, ಅದರ ಸಮರ್ಥಕರು ಅಭಿವೃದ್ಧಿಯ ಮರೆಯಲ್ಲಿ ಕೆಲವು ಪದ ಪುಂಜಗಳ ನ್ನು ಠಂಕಿಸಿ ಬಿಡುಗಡೆಗೊಳಿಸತೊಡಗಿದರು. ಮುಖ್ಯವಾಗಿ ಆರ್ಥಿಕ ಕ್ಷೇತ್ರದಲ್ಲಿ ಉದಾರೀಕರಣದ ಹವಾ ಬಹಳ ದೊಡ್ಡದು.

1960ರಲ್ಲಿ ಭಾರತೀಯ ಕೃಷಿ ಕ್ಷೇತ್ರ ಬಹುದೊಡ್ಡ ತಿರುವನ್ನು ಪಡೆದುಕೊಂಡಿತು. ಆವರೆಗೆ ಇದ್ದ ಸಾಂಪ್ರದಾಯಿಕ ಕೃಷಿ ಪದ್ಧತಿ ಯನ್ನು  ಭಿನ್ನ ದಾರಿಯಲ್ಲಿ ಕೊಂಡೊಯ್ದ ಶ್ರೇಯ 1960 ದಶಕಗಳಿಗೆ ಸಲ್ಲುತ್ತದೆ. ಆವರೆಗೆ ಕೃಷಿ ಕ್ಷೇತ್ರಕ್ಕೆ ಸರ್ಕಾರಿ ಬೆಂಬಲವು ಒಂದು ಹಂತದ  ವರೆಗೆ ಮಾತ್ರ ಇತ್ತು ಮತ್ತು ಒಂದು ವ್ಯವಸ್ಥಿತ ರೂಪದಲ್ಲಿ ಅದಿರಲಿಲ್ಲ. ಆದರೆ 1960ರ ಬಳಿಕದ ಕೃಷಿ ವಲ ಯವು ಹಾಗಲ್ಲ. ಬೆಳೆಗೆ  ಬೆಂಬಲ ಬೆಲೆ, ಸಬ್ಸಿಡಿ, ಮಾರ್ಕೆಟಿಂಗ್, ಕ್ರೆಡಿಟಿಂಗ್ ಸಿಸ್ಟಂ, ಸಂಶೋಧನೆ ಇತ್ಯಾದಿಗಳ ಭರಪೂರ ಕೊಡುಗೆಯನ್ನು ಸರ್ಕಾರ ಕೃಷಿಗೆ  ಒದಗಿಸುವುದರೊಂದಿಗೆ 1960ರಿಂದ 80ರ ದಶಕದಲ್ಲಿ ಭಾರತ ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಪಡೆಯಿತು. ಈ ಸ ನ್ನಿವೇಶಕ್ಕೆ ತಡೆ ಒಡ್ಡಿದ್ದು 1990ರ ಉದಾರೀಕರಣ ನೀತಿ. ಉದಾರೀಕರಣವೆಂದರೆ, ಖಾಸಗಿಗಳ ಕೈಗೆ ನಿಧಾನಕ್ಕೆ ಪ್ರತಿಯೊಂದನ್ನೂ  ಒಪ್ಪಿಸುತ್ತಾ ಬರುವುದು ಅಥವಾ ಎಲ್ಲ ನೀತಿಗಳಲ್ಲೂ ಉದಾರವಾಗುವುದು. ಸದ್ಯ ಈ ನೀತಿಯ ಪರಾಕಾಷ್ಠೆಯನ್ನು ನಾವು  ನೋಡುತ್ತಿದ್ದೇವೆ. ರೈಲ್ವೆ, ಇನ್ಶೂರೆನ್ಸ್, ವಿಮಾನ ನಿರ್ವಹಣೆ, ಬ್ಯಾಂಕಿ೦ಗ್ ಇತ್ಯಾದಿ ಎಲ್ಲವನ್ನೂ ಒಂದೊಂದಾಗಿ ಖಾಸಗಿ ಕುಳಗಳ ಕೈಗೆ  ಒಪ್ಪಿಸಲಾಗುತ್ತಿದೆ. ರಕ್ಷಣಾ ಕ್ಷೇತ್ರದಲ್ಲೂ ವಿದೇಶಿ ಖಾಸಗಿ ಕಂಪೆನಿಗಳು ಪಾಲುದಾರರಾಗುವಲ್ಲಿ ವರೆಗೆ ನೀತಿಗಳು ಉದಾರವಾಗುತ್ತಿವೆ.  ವಿಶೇಷ ಏನೆಂದರೆ,

1990ರಲ್ಲಿ ನರಸಿಂಹರಾವ್ ಪ್ರಧಾನಿ ಆಗಿದ್ದ ಕಾಲದಲ್ಲಿ ಮತ್ತು ಮನ್‌ಮೋಹನ್ ಸಿಂಗ್ ವಿತ್ತ ಸಚಿವರಾಗಿದ್ದ ವೇಳೆ ಪರಿಚಯಿಸಲಾದ  ಉದಾರೀಕರಣವನ್ನು ಈ ದೇಶದ ನಾಗರಿಕರು ಸಹಜವಾಗಿ ಸ್ವೀಕರಿಸುವಂತಹ ವಾತಾವರಣ ಇತ್ತೇ ಎಂಬ ಪ್ರಶ್ನೆಯಿದೆ. ಈ ದೇಶದ  ಬಹುಸಂಖ್ಯಾತ ಮಂದಿಗೆ ಉದಾರೀಕರಣ, ಜಾಗತೀಕರಣ ಇತ್ಯಾದಿಗಳ ಪೂರ್ಣ ಪರಿಚಯ ಆ ಸಂದರ್ಭದಲ್ಲಿ ಇದ್ದಿರುವ ಸಾಧ್ಯತೆಯೇ  ಇಲ್ಲ. ಕೇಂದ್ರ ಸರ್ಕಾರ ಹೇಗೂ ಅದನ್ನು ಸಮರ್ಥಿಸಿಕೊಂಡು ಹೇಳಿಕೆಗಳನ್ನು ಕೊಟ್ಟಿರಬಹುದು. ಆದರೆ ಜನಸಾಮಾನ್ಯರನ್ನು  ನಂಬಿಸುವುದಕ್ಕೆ ಪ್ರಧಾನಿ, ವಿತ್ತ ಸಚಿವರು ಅಥವಾ ಅವರ ಮಂತ್ರಿಮಂಡಲದ ಸದಸ್ಯರ ಹೇಳಿಕೆಗಳಿಂದಷ್ಟೇ ಸಾಧ್ಯವಿಲ್ಲ. ಸರ್ಕಾರ ಏನೇ  ಹೇಳಿದರೂ ಅದನ್ನು ತಕ್ಷಣಕ್ಕೆ ಜನರು ಒಪ್ಪುವುದು ಕಡಿಮೆ. ಅನುಮಾನಿಸುತ್ತಾರೆ. ರಾಜಕೀಯ ಉದ್ದೇಶ ಇದ್ದೀತೇ, ಇದು ಸಂಚೇ  ಎಂದೆಲ್ಲಾ ಸಂದೇಹ ಪಡುತ್ತಾರೆ. ಇದನ್ನು ಅತ್ಯಂತ ಚೆನ್ನಾಗಿ ಅರಿತವರೇ ಖಾಸಗೀಕರಣದ ರೂವಾರಿಗಳು. ಈ ದಣಿಗಳು ಏನು  ಮಾಡುತ್ತಾರೆಂದರೆ, ಮಾಧ್ಯಮಗಳ ಮೇಲೆ ಪ್ರಭಾವ ಬೀರುತ್ತಾರೆ. ಎಕನಾಮಿಸ್ಟ್ ಗಳು, ಚಿಂತಕರನ್ನು ತಮ್ಮತ್ತ ಸೆಳೆಯುತ್ತಾರೆ. ತಮ್ಮ  ವಿಚಾರಗಳನ್ನು ಅವರ ಬಾಯಿಯಲ್ಲಿ ಹೇಳಿಸುವ ಶ್ರಮ ನಡೆಸುತ್ತಾರೆ. ಜನರು ಪತ್ರಿಕೆಗಳ ವಿಶ್ಲೇಷಣೆಯ ಮೇಲೆ ನಂಬಿಕೆಯಿಡುವಷ್ಟು  ರಾಜಕಾರಣಿಗಳ ಹೇಳಿಕೆಯಲ್ಲಿ ನಂಬಿಕೆ ಇಡುವುದಿಲ್ಲ. ಎಕನಾಮಿಸ್ಟ್ ರ  ಒಂದು ವಿಶ್ಲೇಷಣೆಗೆ ಮಾರು ಹೋಗುವಷ್ಟು ವಿತ್ತಸಚಿವರ  ಹೇಳಿಕೆಗೆ ತಲೆ ಬಾಗುವುದಿಲ್ಲ. ಆದ್ದರಿಂದ,

 ಉದಾರೀಕರಣದ ರೂವಾರಿಗಳು ಮತ್ತು ಸಮರ್ಥಕರು ತಮ್ಮ ನೀತಿಯನ್ನು ಜನಪ್ರಿಯಗೊಳಿಸುವುದಕ್ಕೆ ಈ ಬಳಸು ದಾರಿಯನ್ನು ಆಯ್ಕೆ ಮಾಡಿಕೊಂಡರು. 1990ರ ಬಳಿಕದ ಭಾರತವನ್ನು ಇಡಿಯಾಗಿ ವಿಶ್ಲೇಷಿಸಿದರೆ  ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಇತ್ತೀಚಿನ ಉದಾಹರಣೆಗಳಾಗಿ ನಾವು 2016ರಲ್ಲಿ ಅನಿರೀಕ್ಷಿತವಾಗಿ ಜಾರಿಗೊಳಿಸಲಾದ  ನೋಟ್‌ಬ್ಯಾನ್ ಮತ್ತು 2021ರ ಕೊನೆಯಲ್ಲಿ ಜಾರಿಗೆ ತರಲಾದ ಕೃಷಿ ಕಾಯ್ದೆಯನ್ನು ಎತ್ತಿಕೊಳ್ಳಬಹುದು.

ನೋಟ್ ಬ್ಯಾನ್‌ನ ಬೆನ್ನಿಗೇ ಈ ದೇಶದ ಮಾಧ್ಯಮದ ಮಂದಿ ಮತ್ತು ಎಕನಾಮಿಸ್ಟ್ ಗಳ  ಒಂದು ಗುಂಪು ಯಾವ ಬಗೆಯ ಪ್ರಚಾರ  ಯುದ್ಧವನ್ನು ಕೈಗೊಂಡಿತು, ಪರಿಶೀಲಿಸಿ. ಕನ್ನಡದಲ್ಲಂತೂ ಪಬ್ಲಿಕ್ ಟಿ.ವಿ.ಯ ರಂಗನಾಥ್ ಅವರ ಕಾರ್ಯಕ್ರಮ ಬಹಳ  ಪ್ರಸಿದ್ಧವಾದುದು. ಹೊಸ 2000 ರೂಪಾಯಿ ನೋಟಿನಲ್ಲಿ ರಹಸ್ಯ ಚಿಪ್ಪು ಇದೆ ಮತ್ತು ಅದು ಉಪಗ್ರಹದ ಕಣ್ಗಾವಲಿನಲ್ಲಿದೆ ಎಂದು  ಅವರು ಇಬ್ಬರು ಎಕನಾಮಿಸ್ಟ್ ಗಳ  ಬಾಯಿಯಲ್ಲಿ ಹೇಳಿಸಿದರು. ನೋಟ್ ಬ್ಯಾನ್‌ನಿಂದಾಗಿ ಜನರು ಕ್ಯೂನಲ್ಲಿ ನಿಂತು ಸಾಯುತ್ತಿದ್ದಾಗ  ಮತ್ತು ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳು ಒಂದೊಂದಾಗಿ ಬಾಗಿಲು ಮುಚ್ಚತೊಡಗಿದಾಗ, ಬಿಜೆಪಿ ಬೆಂಬಲಿಗರು ಕೇಂದ್ರ ಸರ್ಕಾರದ  ಪರ ನಿಲ್ಲುವುದಕ್ಕೆ ಈ ಕಾರ್ಯಕ್ರಮದ ಪಾಲು ಬಲು ದೊಡ್ಡದು. 2000 ರೂಪಾಯಿಯ ಕಪ್ಪು ಹಣ ಎಲ್ಲಿ ಬಚ್ಚಿಟ್ಟರೂ ಉಪಗ್ರಹ ಪತ್ತೆ  ಹಚ್ಚುತ್ತದೆ ಮತ್ತು ಇದೊಂದು ಅಭೂತಪೂರ್ವ ನೋಟು ಎಂದು ಕೊಂಡಾಡಿದ್ದೇ  ಕೊಂಡಾಡಿದ್ದು. ದೇಶದಲ್ಲಿರುವ ಕಪ್ಪು ಹಣವನ್ನು  ನಿರ್ಮೂಲನಗೊಳಿಸುವುದಕ್ಕೆ ಈ ನೋಟ್ ಬ್ಯಾನ್ ಪರಿಣಾಮಕಾರಿ ಎಂದೆಲ್ಲಾ ಸರ್ಕಾರ ಹೇಳುವಾಗ ಅದಕ್ಕೆ ರಂಗನಾಥ್‌ರ ‘ಚಿಪ್ಪು’  ಕಾರ್ಯಕ್ರಮ ಸಾಕಷ್ಟು ನೆರವನ್ನು ನೀಡಿತ್ತು. ಆ ಸನ್ನಿವೇಶದಲ್ಲಿ ನಿಜಕ್ಕೂ ಅದೊಂದು ಭಿನ್ನ ಕಾರ್ಯಕ್ರಮ. ನೋಟ್‌ಬ್ಯಾನನ್ನು  ಸಮರ್ಥಿಸುವ ದಿಸೆಯಲ್ಲಿ ಯಶಸ್ವೀ ಕಾರ್ಯಕ್ರಮ. ತಕ್ಷಣಕ್ಕೆ ಯಾರಿಗೂ ಆ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನು ಮತ್ತು  ವಾದವನ್ನು ತಳ್ಳಿ ಹಾಕುವುದಕ್ಕೆ ಬರುವುದಿಲ್ಲ. ಓಹ್, ಪ್ರಧಾನಿ ಮೋದಿ ಏನೋ ಅದ್ಭುತವನ್ನು ಸೃಷ್ಟಿಸಿದ್ದಾರೆ ಎಂದೇ ಜನರಾಡತೊಡಗುತ್ತಾರೆ. ಪ್ರಭುತ್ವವನ್ನು ನಂಬುತ್ತಾರೆ ಮತ್ತು ಪ್ರಭುತ್ವದ ಪರ ವಾದ ಮಾಡುತ್ತಾರೆ. ಹಾಗಂತ,

ನಿಜ ಏನು ಎಂಬುದು ಗೊತ್ತಾಗುವಾಗ ತಡವಾಗಿರುತ್ತದೆ ಮತ್ತು ಆಗಬೇಕಾದ ಅನಾಹುತ ಅದಾಗಲೇ ಆಗಿ ಬಿಟ್ಟಿರುತ್ತದೆ. ಚಿಪ್ ಪ್ರಕರಣದ  ಹಿಂದಿನ ಕತೆಯೂ ಇಷ್ಟೇ.

‘ನಿಜವಾಗಿ, 2000 ರೂಪಾಯಿ ನೋಟಿನಲ್ಲಿ ಚಿಪ್ ಹುಟ್ಟಿ ಕೊಂಡದ್ದು ರಾಜಕೀಯ ಪಕ್ಷದ ವಾಟ್ಸಪ್ ಗ್ರೂಪ್‌ನಲ್ಲಿ. ಅದರಲ್ಲಿ ಬಿಜೆಪಿ ಸಂಸದರು,  ಹಿರಿಯ ಪತ್ರಕರ್ತರು ಎಲ್ಲರೂ ಇದ್ದರು. ಬಿಜೆಪಿಯ ಸಂಸದ ರಾಜೀವ್ ಚಂದ್ರಶಾಖರ್ ಈ ಚಿಪ್ ವಿಷಯವನ್ನು ಆ ಗ್ರೂಪಲ್ಲಿ  ಮೊದಲು ಪ್ರಸ್ತಾಪ ಮಾಡಿದರು. ಬಳಿಕ ವಿಶ್ವವಾಣಿ ಪತ್ರಿಕೆಯ ಸಂಪಾದಕರಾದ ವಿಶ್ವೇಶ್ವರ ಭಟ್ ಇದನ್ನು ಪುಷ್ಠೀಕರಿಸಿ ಮಾತಾಡಿದರು. ಈ  ಚಿಪ್ ಸಂಗತಿಯನ್ನು ಸಮರ್ಥಿಸಿ ರಾಷ್ಟ್ರೀಯ ವಾಹಿನಿಯಲ್ಲಿ  ಕಾರ್ಯಕ್ರಮ ಪ್ರಸಾರ ಮಾಡಲಾಗಿದೆ ಎಂದರು. ಮೊದಲು ಈ ಚಿಪ್  ಸಂಗತಿಯನ್ನು ಸುವರ್ಣ ನ್ಯೂಸ್ ಚಾನೆಲ್‌ನ ಅಜಿತ್ ಹೇಳಲಿ ಎಂದು ಆ ಗ್ರೂಪ್‌ನಲ್ಲಿ ಚರ್ಚೆ ನಡೆಯಿತು. ಆದರೆ, ಈ ಚರ್ಚೆ  ನಡೆಯುವಾಗ ಅವರ ಕಾರ್ಯಕ್ರಮದ ಎಡಿಟಿಂಗ್ ಮುಗಿದಿತ್ತು. ಹಾಗಾಗಿ ಈ ಚಿಪ್ ಸಂಗತಿಯನ್ನು ಸ್ಫೋಟಿಸುವುದಕ್ಕೆ ರಂಗನಾಥ್‌ರಿಗೆ  ಜವಾಬ್ದಾರಿ ವಹಿಸಿಕೊಡಲಾಯಿತು. ಆಡಳಿತ ಪಕ್ಷದ ನಂಬಲರ್ಹ ಮೂಲಗಳಿಂದ ಸುದ್ದಿ ಬಂದಿರುವುದರಿಂದ  ರಂಗನಾಥ್‌ರು ಸುದ್ದಿಯ  ಆಳಕ್ಕೆ ಹೋಗದೇ ಎಡವಟ್ಟು ಮಾಡಿಕೊಂಡರು...’

ಹೀಗೆ ಟ್ವೀಟ್ ಮಾಡಿರುವುದು ಬೇರಾರೂ ಅಲ್ಲ, ರಂಗನಾಥ್‌ರ ಸಹೋದ್ಯೋಗಿ ಅರುಣ್ ಸಿ. ಬಡಿಗೇರ.

ವಿಶೇಷ ಏನೆಂದರೆ, ಈ ಸ್ಪಷ್ಟೀಕರಣ ಬಂದಿರುವುದು 2021ರ ಕೊನೆಯಲ್ಲಿ. ಅಥವಾ ನೋಟ್ ಬ್ಯಾನ್‌ಗೆ ಐದು  ವರ್ಷಗಳು ಸಂದ  ವೇಳೆಯಲ್ಲಿ. ಇದೇ ರೀತಿಯಲ್ಲಿ ರೈತ ಪ್ರತಿಭಟನೆಗೆ ಸಂಬಂಧಿಸಿದ ಸುದ್ದಿಗಳನ್ನೂ ವಿಶ್ಲೇಷಿಸಬಹುದು. ರೈತ ಪ್ರತಿಭಟನೆಯನ್ನು  ಮೂಲದಲ್ಲೇ  ಚಿವುಟುವುದಕ್ಕೆ ನಡೆಸಲಾದ ಪ್ರಯತ್ನ ಅಷ್ಟಿಷ್ಟಲ್ಲ. ಅದು ವಿಫಲವಾದಾಗ ರೈತರ ವಿರುದ್ಧ ಮಾತಿನ ಯುದ್ಧವನ್ನು  ಸಾರಲಾಯಿತು. ದೇಶದ್ರೋಹಿ, ಆಂದೋಲನ್ ಜೀವಿ, ಮಾವೋಯಿಸ್ಟ್ ಎಂದೆಲ್ಲಾ ಕರೆಯಲಾಯಿತು. ಗಾಯಕಿ ರಿಹಾನ್ನಾ ಸಹಜ ಟ್ವೀಟ್  ಮಾಡಿದಾಗ ಮತ್ತು ಗ್ರೇಟಾ ಥನ್‌ಬರ್ಗ್ ಕೂಡಾ ಧ್ವನಿಯೆತ್ತಿದಾಗ ಪ್ರಭುತ್ವ ಮತ್ತು ಅದರ ಕಾಲಾಳುಗಳು ಅವರಿಬ್ಬರ ಮೇಲೆ ಮುಗಿಬಿದ್ದ  ರೀತಿ ಅಭೂತಪೂರ್ವ. ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮೂಲಕ ಪ್ರತಿಭಟನೆ ಸೂಚಿಸುವಲ್ಲಿ ವರೆಗೆ ಮತ್ತು  ಭಾರತದ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವಲ್ಲಿ ವರೆಗೆ ರೈತಪರ ಧ್ವನಿಗಳನ್ನು ಅಡಗಿಸುವುದಕ್ಕೆ ಇನ್ನಿಲ್ಲದ ಶ್ರಮ ನಡೆಯಿತು. ಅಷ್ಟಕ್ಕೂ,  

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕೃಷಿ ಕಾಯ್ದೆಗಳು ಏನೇನು ಎಂಬುದನ್ನು ಜನರಿಗೆ ಸ್ಪಷ್ಟಪಡಿಸುವುದಕ್ಕೆ  ಕೇಂದ್ರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಕಾಯ್ದೆ 1ರ ಪ್ರಕಾರ, 

ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಥವಾ  ಎಪಿಎಂಸಿಯ ಹೊರಗೆ ಮಾರಬಹುದು. ಈ ಹಿಂದಿನ ಎಲ್ಲಾ ಎಪಿಎಂಸಿ ಕಾಯ್ದೆಗಳನ್ನು ಈ ಹೊಸ ಕಾಯ್ದೆ ಅನೂರ್ಜಿತ ಗೊಳಿಸುತ್ತದೆ.  ಎರಡನೇ ಕಾಯ್ದೆಯು, 

ರೈತರಿಗೆ ಗುತ್ತಿಗೆ ಕೃಷಿ ಮಾಡಲು ಹಾಗೂ ನಿಗದಿತ ಬೆಲೆಗೆ ತಮ್ಮ ಉತ್ಪನ್ನಗಳ ಮಾರಾಟ ಮಾಡುವ ಬಗ್ಗೆ ಭಿತ್ತನೆ  ಅವಧಿಗೆ ಮುನ್ನವೇ ಖಾಸಗಿ ಖರೀದಿದಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಆದರೆ ಇದರಲ್ಲಿರುವ  ದೊಡ್ಡದೊಂದು ದೋಷ ಏನೆಂದರೆ, ಖರೀದಿದಾರರು ನೀಡುವ ಕನಿಷ್ಠ ಬೆಲೆ ಬಗ್ಗೆ ಯಾವ ಪ್ರಸ್ತಾಪವೂ ಇಲ್ಲ. 3ನೇ ಕಾಯ್ದೆಯು,  

ಆಹಾರ ಉತ್ಪನ್ನಗಳ ದಾಸ್ತಾನಿನ ಮೇಲೆ ಮಿತಿ ಹೇರುವ ಕೇಂದ್ರದ ಅಧಿಕಾರವನ್ನು ರದ್ದುಗೊಳಿಸುತ್ತದೆ. ಅಂದರೆ ಖಾಸಗಿ ಖರೀ ದಿದಾರರು ಎಷ್ಟೇ ಉತ್ಪನ್ನಗಳನ್ನು ದಾಸ್ತಾನು ಮಾಡಿಟ್ಟುಕೊಳ್ಳಬಹುದು ಮತ್ತು ಇಂಥ ಅವಕಾಶವು ಮುಂದೊಂದು  ದಿನ ಆಹಾರ ಉತ್ಪನ್ನಗಳ ಕೃತಕ ಅಭಾವವನ್ನು ಸೃಷ್ಟಿಸಿ ಈ ಕಂಪೆನಿಗಳಿಗೆ ಬೆಲೆ ಏರಿಕೆಯನ್ನು ಸಾಧ್ಯವಾಗಿಸಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆ,

ಈಗಿನ ಮಂಡಿ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವುದೇ ಎಪಿಎಂಸಿ. ಈ ಮೂರು ಕಾಯ್ದೆಗಳು ನೇರವಾಗಿ ಮಂಡಿ ವ್ಯವಸ್ಥೆಯ  ಮೇಲೆಯೇ ಗದಾಪ್ರಹಾರ ಮಾಡುತ್ತದೆ. ಸದ್ಯದ ಸ್ಥಿತಿ ಹೇಗೆಂದರೆ, ಯಾವುದೇ ಖಾಸಗಿ ಖರೀದಿದಾರರು ಎಪಿಎಂಸಿ ಮೂಲಕವೇ ರೈತರ  ಬೆಳೆಯನ್ನು ಖರೀದಿಸಬೇಕೇ ಹೊರತು ರೈತರನ್ನು ನೇರವಾಗಿ ಸಂಪರ್ಕಿಸಿ ಖರೀದಿಸುವಂತಿಲ್ಲ. ಮಂಡಿಯು ಬೆಳೆಗಳಿಗೆ ಟ್ಯಾಕ್ಸ್  ವಿಧಿಸುತ್ತದೆ ಮತ್ತು ಇದು ರಾಜ್ಯ ಸರ್ಕಾರಗಳಿಗೆ ಸೇರುತ್ತದೆ. ಈ ಟ್ಯಾಕ್ಸನ್ನು ಗ್ರಾಮೀಣ ಭಾಗದ ಮೂಲ ಸೌಲಭ್ಯವನ್ನು ಅಭಿವೃದ್ಧಿ ಪಡಿಸುವುದಕ್ಕೆ ಬಳಸಲಾಗುತ್ತಿದೆ. ಎಪಿಎಂಸಿ ಪೂರ್ಣವಾಗಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯ. ಇದರಲ್ಲಿ ತಿದ್ದುಪಡಿ ತರಬೇಕಾಗಿರುವುದು  ಕೂಡ ರಾಜ್ಯಗಳೇ. ಬಿಹಾರವು 2006ರಲ್ಲೇ  ಎಪಿಎಂಸಿ ಕಾಯ್ದೆಯನ್ನು ರದ್ದುಗೊಳಿಸಿದೆ. ಕೇರಳದಲ್ಲಿ ಈ ಎಪಿಎಂಸಿಯೇ ಇಲ್ಲ.  ಎಪಿಎಂಸಿಯನ್ನು ರದ್ದುಗೊಳಿಸಿರುವ ಬಿಹಾರವು ಇವತ್ತು ಅದರ ಅಡ್ಡಪರಿಣಾಮವನ್ನು ಎದುರಿಸುತ್ತಿದೆ ಎಂದು ವರದಿಗಳಿವೆ. ಅಲ್ಲಿನ  ರೈತರು ತಮ್ಮ ಬೆಳೆಯನ್ನು ಪಂಜಾಬ್‌ಗೆ ಕಳುಹಿಸಿ ಹೆಚ್ಚಿನ ಬೆಲೆಯನ್ನು ಪಡೆಯುತ್ತಿದ್ದಾರೆ. ಪಂಜಾಬ್‌ನಲ್ಲಿ ಎಪಿಎಂಸಿ ಇದೆ. ಸದ್ಯದ  ಕೇಂದ್ರದ ಮೂರು  ಕೃಷಿ ಕಾಯ್ದೆಗಳು ಎಪಿಎಂಸಿಯನ್ನೇ ಅನೂರ್ಜಿತಗೊಳಿಸುತ್ತದೆ ಅಥವಾ ನಿಧಾನಕ್ಕೆ ಅವುಗಳು ಅನೂರ್ಜಿತಗೊಳ್ಳುವಂತೆ  ಮಾಡುತ್ತದೆ. ರೈತರಿಗೆ ಇರುವ ಭಯವೂ ಇದುವೇ. ನಿಧಾನಕ್ಕೆ ಖಾಸಗಿಗಳ ಕೈಯಲ್ಲಿ ರೈತರು ಬೊಂಬೆಗಳಾಗಿ ಪರಿವರ್ತಿತರಾದಾರು  ಎಂಬ ಭಯ ಪ್ರತಿಭಟನಾನಿರತ ರೈತರದ್ದು. ಆದರೆ,

ಕೇಂದ್ರ ಸರ್ಕಾರ ಹಠಮಾರಿ ಧೋರಣೆ ತಳೆಯಿತು. ತನ್ನ ಗುರಿಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ವಿವಿಧ ಪದಗಳನ್ನು ಠಂಕಿಸಿತು ಮತ್ತು  ಕತೆಗಳನ್ನು ಕಟ್ಟಿತು. ಅದರಲ್ಲಿ ಒಂದು, 2016ರ ಚಿಪ್ಪಾದರೆ ಇನ್ನೊಂದು 2020ರ ಬ್ರೋಕರ್, ಖಾಲಿಸ್ತಾನಿ.

ಇಷ್ಟೇ.