Monday, March 23, 2020

ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಆ ತರುಣನಿಗೆ ಇವೆಲ್ಲ ಗೊತ್ತಿತ್ತೇ?ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಂಗಳೂರು ಸಮೀಪದ ತರುಣನೋರ್ವ ಕಳೆದವಾರ ರಾಜ್ಯಮಟ್ಟದಲ್ಲಿ  ಸುದ್ದಿಯಾಗಿದ್ದ. ವಿಮಾನ ನಿಲ್ದಾಣದಿಂದ ನೇರವಾಗಿ ಆತನನ್ನು  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಅಧಿಕಾರಿಗಳು ಕರೆ ತಂದಿದ್ದರು. ಆತನಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡದ್ದು ಇದಕ್ಕೆ ಕಾರಣ. ಆಸ್ಪತ್ರೆಯ ಒಂಟಿ ಕೋಣೆಯಲ್ಲಿ ಆತನನ್ನು ಇರಿಸಲಾಯಿತು. ಸುತ್ತಮುತ್ತ  ಮಾಸ್ಕ್, ಗ್ಲೌಸ್ ಧರಿಸಿಕೊಂಡು ಓಡಾಡುವ ವೈದ್ಯರು ಮತ್ತು ದಾದಿಯರು. ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡ. ಇದು ರಾಜ್ಯಮಟ್ಟದಲ್ಲಿ ಗಮನ ಸೆಳೆಯಿತು. ಆತನನ್ನು ಪತ್ತೆ ಹಚ್ಚುವುದಕ್ಕೆ ತಂಡ ರಚ ನೆಯಾಯಿತು. ಗಲ್ಲುಶಿಕ್ಷೆಗೀಡಾದ ಕ್ರಿಮಿನಲ್ ಓರ್ವ ಜೈಲಿನಿಂದ ತಪ್ಪಿಸಿಕೊಂಡರೆ ಪರಿಸ್ಥಿತಿ ಹೇಗಿರುತ್ತದೋ ಅಂಥದ್ದೊಂದು ವಾತಾವರಣ ಸೃಷ್ಟಿಯಾಯಿತು. ಕೊನೆಗೆ ಮಂಗಳೂರಿನಿಂದ 40  ಕಿಲೋಮೀಟರ್ ದೂರದಿಂದ ಆತನನ್ನು ಪತ್ತೆ ಹಚ್ಚಿ ಬಲವಂತದಿಂದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಯಿತು.
ಟೀಕೆ, ತಮಾಷೆ ಮತ್ತು ವ್ಯಂಗ್ಯಕ್ಕೆ ಬಳಕೆಯಾದ ಈ ಘಟನೆಯ ಹಿಂದೆ ಕೊರೋನಾದ ಭಯವಿದೆ. ನಿರ್ಲಕ್ಷಿಸಿದಷ್ಟೂ ಅಪಾಯ ಜಾಸ್ತಿ ಎಂಬುದನ್ನು ಮನಗಂಡು ಜಗತ್ತು ಯುದ್ಧೋಪಾದಿಯಲ್ಲಿ ಕೊರೋ ನಾದ ವಿರುದ್ಧ ಹೋರಾಟ ಕ್ಕಿಳಿದಿದೆ. ಕೊರೋನಾವನ್ನು ಚೀನಾ ಆರಂಭದಲ್ಲಿ ಅಡಗಿಸಿಟ್ಟಿದ್ದರಿಂದಲೇ ಇವತ್ತು ಇಷ್ಟು ದೊಡ್ಡಮಟ್ಟದ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 2019 ಡಿಸೆಂಬರ್  ಆರಂಭದಲ್ಲೇ  ಚೀನಾದ ವುಹಾನ್ ಪಟ್ಟಣದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಆದರೆ ಚೀನಾ ಅದನ್ನು ಮುಚ್ಚಿಟ್ಟಿತು. ವಿಶ್ವ ಆರೋಗ್ಯ ಸಂಸ್ಥೆಯನ್ನು ಮತ್ತು ಸಾರ್ವಜನಿಕರನ್ನು ಒಂದು ತಿಂಗಳ ಕಾಲ  ಕತ್ತಲೆಯಲ್ಲಿಟ್ಟದ್ದೇ  ಈಗಿನ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ವುಹಾನ್ ಎಂಬುದು ಚೀನಾದ ಪಾಲಿಗೆ ಒಂದು ವಿಶಿಷ್ಟ ಪಟ್ಟಣ. ಹುಬೆ ರಾಜ್ಯದ ರಾಜಧಾನಿ ಇದು. ಭಾರತದ ಮುಂಬೈಯ ಹಾಗೆ. ಈ ಪಟ್ಟಣವೊಂದರಲ್ಲೇ ಒಂದು ಕೋಟಿ ಜನಸಂಖ್ಯೆಯಿದೆ. ಇಲ್ಲಿಂದ   ಇಟಲಿ, ಇರಾನ್ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಿಗೆ ನೇರ ವಿಮಾನ ಸೌಲಭ್ಯವಿದೆ. ಆಹಾರಕ್ಕೆಂದೇ ಕಾಡು ಪ್ರಾಣಿಗಳನ್ನು ತಂದು ಸಾಕುವ ಮತ್ತು  ದೊಡ್ಡ ಮಟ್ಟದಲ್ಲಿ ಅವುಗಳನ್ನು ಹಂಚುವ ಪಟ್ಟಣ ಎಂಬ ಹೆಚ್ಚುಗಾರಿಕೆಯೂ  ವುಹಾನ್‍ಗೆ ಇದೆ. ಸಾಮಾನ್ಯವಾಗಿ ಚೀನೀಯರ ಆಹಾರ ಕ್ರಮವೂ ವಿಶಿಷ್ಟ. ಬಹುತೇಕ ರಾಷ್ಟ್ರಗಳಲ್ಲಿ ಆಹಾರ ವಸ್ತುಗಳಾಗಿ  ರೂಢಿಯಲ್ಲಿ ಇಲ್ಲದ ಪ್ರಾಣಿ, ಪಕ್ಷಿಗಳೆಲ್ಲ ಚೀನಿಯರ ಪಾಲಿಗೆ ರುಚಿರುಚಿಯಾದ ಭಕ್ಷ್ಯಗಳು. ನಾಯಿ, ಕರಡಿ, ಬಾವಲಿ, ಪುನುಗು ಬೆಕ್ಕು, ಇಲಿ, ಹೆಬ್ಬಾವು, ಹೆಗ್ಗಣ, ಬಾತುಕೋಳಿ, ಕೋಳಿ, ಪಾರಿವಾಳ ಮತ್ತೂ  ಅನೇಕ ಪ್ರಾಣಿ-ಪಕ್ಷಿಗಳು ಚೀನೀಯರ ಪಾಲಿಗೆ ರುಚಿಕರ ಆಹಾರ. ವುಹಾನ್ ಪಟ್ಟಣವಂತೂ ಇಂಥ ಪ್ರಾಣಿ-ಪಕ್ಷಿಗಳನ್ನು ಸಾಕಿ ಯಥೇಚ್ಛ ಸರಬರಾಜು ಮಾಡುವುದಕ್ಕೇ ಪ್ರಸಿದ್ಧ. ವಿಶೇಷ ಏನೆಂದರೆ,  ಕೊರೋನಾ ಹುಟ್ಟಿದ್ದೇ  ಇಲ್ಲಿ. ಇಲ್ಲಿಂದ ಮಾರಾಟವಾದ ಬಾವಲಿಯೊಂದರಲ್ಲಿ ಈ ವೈರಸ್ ಇತ್ತು ಎಂದು ಹೇಳಲಾಗುತ್ತದೆ. ಆ ವೈರಸ್ ಸಾಕು ಪ್ರಾಣಿಯೊಂದರ ದೇಹವನ್ನು ಸೇರಿಕೊಂಡಿತು. ಅದನ್ನು  ಮಾಂಸ ಮಾಡುವ ವೇಳೆ ವ್ಯಕ್ತಿಯ ಸಂಪರ್ಕಕ್ಕೆ ಬಂದ ವೈರಸ್ ಆತನ ಮೂಲಕ ಸರ್ವತ್ರ ಹರಡತೊಡಗಿತು ಎನ್ನಲಾಗುತ್ತದೆ. 
ಕೊರೋನಾ ಹರಡುವುದು ತೀರಾ ಸುಲಭ. ಕೊರೋನಾ ಸೋಂಕಿತ ವ್ಯಕ್ತಿ ತನ್ನ ಕಣ್ಣನ್ನೋ  ಬಾಯನ್ನೋ ಸವರಿದ ಕೈಯಲ್ಲಿ ಇನ್ನಾವುದೋ ವಸ್ತುವನ್ನು ಮುಟ್ಟಿದರೆ ಆತನ ಸೋಂಕು ಆ ವಸ್ತುವಿಗೆ ವರ್ಗಾವಣೆಯಾಗುತ್ತದೆ. ಆ ಬಳಿಕ ಆ ವಸ್ತುವನ್ನು ಇನ್ನಾರೇ ಮುಟ್ಟಿದರೂ ಅವರಿಗೆ ಆ ಸೋಂಕು  ತಗಲುತ್ತದೆ. ಮಾನವರ ಪಾಲಿಗೆ ಕೈ ಎಂಬುದು ಭಾರೀ ಚಟುವಟಿಕೆಯಲ್ಲಿರುವ ಅಂಗ. ನಿದ್ರೆಯ ಹೊರತಾಗಿ ಅನುಕ್ಷಣವೂ ಕೈ ಚಟುವಟಿಕೆಯಲ್ಲಿರುತ್ತದೆ. ಬಯಸಿದರೂ ಬಯಸದಿದ್ದರೂ ಕಣ್ಣು, ಬಾಯಿ  ಸಹಿತ ದೇಹದ ವಿವಿಧ ಭಾಗಗಳನ್ನು ಕೈ ಸ್ಪರ್ಶಿಸುತ್ತಲೂ ಇರುತ್ತದೆ. ಬರೆಯುವಾಗ, ಆಲೋಚಿಸುವಾಗ, ಚಿಂತೆಯಲ್ಲಿರುವಾಗ, ಕುತೂಹಲ, ಬೇಸರ, ಕಣ್ಣೀರು ಇತ್ಯಾದಿ ಇತ್ಯಾದಿ ಎಲ್ಲ ಸ್ಥಿತಿಗಳಲ್ಲೂ  ಗೊತ್ತಿಲ್ಲದೆಯೇ ಕೈ ಬೆರಳನ್ನು ಬಾಯಿಗೆ, ಕಣ್ಣಿಗೆ, ತುಟಿಗೆ ತಾಗಿಸಿ ಇಡುವುದು ಇದೆ. ಪರೀಕ್ಷೆ ಬರೆಯುವಾಗ ಮಕ್ಕಳು ಬೆರಳನ್ನು ಬಾಯಿಗಿಡುವ ದೃಶ್ಯ ಸಾಮಾನ್ಯ. ಕೊರೋನಾ ವಕ್ಕರಿಸುವುದೇ ಹೀಗೆ.  ಮನುಷ್ಯನ ದೇಹವನ್ನು ಪ್ರವೇಶಿಸಿದ ಬಳಿಕ ತನ್ನ ಸಂಖ್ಯೆಯನ್ನು ಅದು ವೃದ್ಧಿಸಿಕೊಳ್ಳಲು ಪ್ರಾರಂಭಿಸುತ್ತದಲ್ಲದೇ, ದೇಹದ ಪ್ರಮುಖ ಅಂಗಗಳಾದ ಶ್ವಾಸಕೋಶ, ಮೆದುಳು ಸಹಿತ ವಿವಿಧ ಅವಯವಗಳಲ್ಲಿ  ಠಿಕಾಣಿ ಹೂಡುತ್ತದೆ. ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವ ವ್ಯಕ್ತಿ ಇದರ ಜೊತೆ ಧೈರ್ಯದಿಂದಲೇ ಹೋರಾಡುತ್ತಾನೆ. ಯಶಸ್ವಿಯೂ ಆಗುತ್ತಾನೆ.
1997ರಲ್ಲಿ ಮೊದಲಾಗಿ ಬರ್ಡ್ ಫ್ಲೂ (HA) ಕಾಣಿಸಿ ಕೊಂಡದ್ದೂ ಚೀನಾದಲ್ಲೇ. ಹಾಂಕಾಂಗ್‍ಗೂ ಚೀನಾಕ್ಕೂ ನಡುವೆ ಸಂಬಂಧ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹಾಂಕಾಂಗ್ ಅನ್ನು ಸ್ವತಂತ್ರ ದೇಶವೆಂದು ಚೀನಾ ಈವರೆಗೂ ಒಪ್ಪಿಲ್ಲ. 1997ರಲ್ಲಿ ಈ ಬರ್ಡ್ ಫ್ಲೂ ಹಾಂಕಾಂಗ್‍ನಲ್ಲಿ ಕಾಣಿಸಿಕೊಂಡಾಗ ಅದನ್ನು ಚೀನಾದ ಪಿತೂರಿ ಎಂದು ಅದು ಆರೋಪಿಸಿತ್ತು. ಹಾಂಕಾಂಗ್‍ನ ಮಾಂಸೋದ್ಯಮ  ಅವಲಂಬಿಸಿರುವುದೇ ಚೀನಾದ ಮಾರುಕಟ್ಟೆಯನ್ನು. 80% ಕೋಳಿಗಳು ಆಮದಾಗುವುದೇ ಚೀನಾದಿಂದ. ಬರ್ಡ್ ಫ್ಲೂನ ಕಾರಣದಿಂದ ಹಾಂಕಾಂಗ್ ಅಂದು ಸುಮಾರು 1.3 ಮಿಲಿಯನ್ ಕೋಳಿ,  ಬಾತುಕೋಳಿ, ಪಾರಿವಾಳ ಮತ್ತು ಇನ್ನಿತರ ಪಕ್ಷಿಗಳ ಮಾರಣ ಹೋಮ ನಡೆಸಿತ್ತು. ಆಧುನಿಕ ಜಗತ್ತಿನಲ್ಲಿ ಕಾಯಿಲೆಯೂ ಸಂಚಿನ ಭಾಗವಾಗಿರುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ಉದಾಹರಣೆ ಇದು.  ಕೊರೋನಾ ವೈರಸನ್ನು ಅಮೇರಿಕವೇ ತಯಾರಿಸಿ ಚೀನಾದಲ್ಲಿ ಹರಡಿದೆ ಎಂಬ ಆರೋಪವನ್ನು ಚೀನಾದ ವಿದೇಶಾಂಗ ಕಚೇರಿಯ ಅಧಿಕಾರಿಯೇ ಹೇಳಿದ್ದಾರೆ. ಏಡ್ಸ್ ನ ಕುರಿತೂ ಇಂಥದ್ದೇ  ಆರೋಪ  ಇದೆ. ಈ ಹಿಂದೆ ಗುಜರಾತ್‍ನಲ್ಲಿ ಕಾಣಿಸಿಕೊಂಡ ಪ್ಲೇಗ್‍ನ ಕುರಿತೂ ಇಂಥದ್ದೇ  ಅನುಮಾನವನ್ನು ವ್ಯಕ್ತಪಡಿಸಲಾಗಿತ್ತು. ಶ್ರೀಮಂತ ರಾಷ್ಟ್ರಗಳು ತಮ್ಮ ಪ್ರಯೋಗಾಲಯದಲ್ಲಿ ವೈರಸನ್ನು ಸೃಷ್ಟಿಸಿ ಬಡ  ರಾಷ್ಟ್ರಗಳ ಮೇಲೆ ಅದನ್ನು ಪ್ರಯೋಗಿಸಿ ನೋಡುತ್ತವೆ ಎಂಬ ಶಂಕೆಗೆ ಬಲವಾದ ಆಧಾರ ಇಲ್ಲದೇ ಇದ್ದರೂ ಆ ಬಗೆಗಿನ ಅನುಮಾನ ಇನ್ನೂ ಹೊರಟು ಹೋಗಿಲ್ಲ. ಕುತೂಹಲಕಾರಿ ಸಂಗತಿ ಏನೆಂದರೆ, 
ಇತ್ತೀಚಿನ ಎರಡು ದಶಕ ಗಳಲ್ಲಿ ಕಾಣಿಸಿಕೊಂಡ ಮಹಾಮಾರಿ ವೈರಸ್‍ಗಳಾದ ಬರ್ಡ್ ಫ್ಲೂ, ಸಾರ್ಸ್, ಮರ್ಸ್ ಮತ್ತು ಕೊರೋನಾ ಇವೆಲ್ಲವುಗಳ ಜನ್ಮಸ್ಥಳ ಚೀನಾ  ಎಂಬುದು. ಮಾತ್ರವಲ್ಲ, ಈ ಎಲ್ಲ ವೈರಸ್ ಗಳೂ ಪ್ರಾಣಿಗಳ ದೇಹದಲ್ಲಿ ವಾಸಿಸುವವುಗಳು ಎಂಬುದು. 1917ರಲ್ಲಿ ಕಾಣಿಸಿಕೊಂಡ ಸ್ಪಾನಿಶ್ ಫ್ಲೂನ ಹುಟ್ಟೂರೂ ಚೀನಾವೇ. ಚೀನಾದ ಉತ್ತರ ಭಾಗದಲ್ಲಿ  ಹುಟ್ಟಿಕೊಂಡ ಈ ಕಾಯಿಲೆಯು ಆ ಬಳಿಕ ಬ್ರಿಟನ್ ಮತ್ತು ಫ್ರಾನ್ಸ್ ಗೆ ತಲುಪಿ ಅಲ್ಲಿಂದ ಶೀಘ್ರಗತಿಯಲ್ಲಿ ಯುರೋಪಿನಾದ್ಯಂತ ಹರಡಿಕೊಂಡಿತು. ಸುಮಾರು 10 ಕೋಟಿ ಮಂದಿ ಈ ಕಾಯಿಲೆಗೆ ಬಲಿಯಾದರು. 1918ರಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸರಕಾರಗಳು ಚೀನಾದಿಂದ ಸಾವಿರಾರು ಸಂಖ್ಯೆಯಲ್ಲಿ ಕೂಲಿಕಾರ್ಮಿಕರನ್ನು ತಮ್ಮೂರಿಗೆ ಕರೆಸಿಕೊಂಡವು. ಈ ಕೂಲಿ ಕಾರ್ಮಿಕರ ಮೂಲಕ ಸ್ಪಾನಿಶ್ ಫ್ಲೂ  ಯುರೋಪನ್ನು ಪ್ರವೇಶಿಸಿತು. ಈ ಫ್ಲೂ ಬಾಧಿತ ವ್ಯಕ್ತಿ ಸೀನಿದರೆ ಮತ್ತು ಕೆಮ್ಮಿದರೆ ಒಮ್ಮೆಗೇ ಅರ್ಧ ಮಿಲಿಯನ್ ವೈರಾಣುಗಳು ಸುತ್ತಲೂ ಹರಡುತ್ತವೆ. ಅಂತಿಮವಾಗಿ 1919ರ ಬೇಸಿಗೆಯಲ್ಲಿ ನಿಧಾನಕ್ಕೆ  ಈ ಫ್ಲೂ ನಿಯಂತ್ರಣಕ್ಕೆ ಬಂತು ಮತ್ತು ಜಗತ್ತು ನಿಟ್ಟುಸಿರಿಟ್ಟಿತು. 1980ರಲ್ಲಿ ಆಫ್ರಿಕನ್ ರಾಷ್ಟ್ರಗಳಲ್ಲಿ ಕಾಣಿಸಿ ಕೊಂಡ HIV ಇನ್ನೊಂದು ಪ್ರಾಣಿಜನ್ಯ ವೈರಸ್. ಕ್ಯಾಮರೂನ್, ಈಕ್ವಿಡಾರ್, ಕಾಂಗೋ, ಗಿನಿ,  ಸೆನೆಗಲ್ ಇತ್ಯಾದಿ ರಾಷ್ಟ್ರಗಳಲ್ಲಿ HIVಯ ಹುಟ್ಟು ಇದೆ ಎಂದು ಹೇಳಲಾಗುತ್ತದೆ. HIVಯು ಮಂಗನಿಂದ ಅಥವಾ ಚಿಂಪಾಂಜಿಯಿಂದ ಮಾನವರಿಗೆ ಹರಡಿದೆ ಎಂಬುದಾಗಿ 1999ರಲ್ಲಿ  ಬಿಡುಗಡೆಗೊಳಿಸಲಾದ ಸಂಶೋಧನಾ ವರದಿಗಳು ಹೇಳುತ್ತವೆ. ಮುಖ್ಯವಾಗಿ, ಈ ವೈರಸ್ ಮನುಷ್ಯನ ದೇಹ ಪ್ರವೇಶಿಸಿದ್ದು ಬೇಟೆಗಾರರಿಂದಾಗಿ. ಮಂಗ ಇಲ್ಲವೇ ಚಿಂಪಾಂಜಿಯನ್ನು ಬೇಟೆಯಾಡಿದ ಮನುಷ್ಯ ಅದನ್ನು ಸೇವಿಸಿದ್ದಾನೆ ಅಥವಾ ಈ ಪ್ರಾಣಿಯ ರಕ್ತ ಬೇಟೆಗಾರನ ದೇಹ ಪ್ರವೇಶಿಸಿದೆ. ಈ ಮೂಲಕ HIV  ಮಾನವನ ಸಂಪರ್ಕಕ್ಕೆ ಬಂದಿದೆ ಎಂದು ಕಂಡುಕೊಳ್ಳಲಾಗಿದೆ. ನಿಜವಾಗಿ,
ಪ್ರಾಣಿಗಳ ದೇಹದಲ್ಲಿರುವ ವೈರಸ್‍ಗಳು ಮನುಷ್ಯನ ದೇಹವನ್ನು ಪ್ರವೇಶಿಸಿ ಮರಣ ಮೃದಂಗ ಬಾರಿಸುವ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇವೆ. ನಿಯಂತ್ರಣಕ್ಕೆ ಬಂತೆಂದು ಜಗತ್ತು  ನಿಟ್ಟುಸಿರು ಬಿಡು ವಾಗ ಮತ್ತೊಮ್ಮೆ ಇನ್ನಷ್ಟು ಪ್ರಬಲವಾಗಿ ಅವು ಮಾನವ ಜಗತ್ತನ್ನು ಕಾಡುತ್ತವೆ. 1976ರಲ್ಲಿ ಸುಡಾನ್ ಮತ್ತು ಕಾಂಗೋ ಗಣರಾಜ್ಯಗಳಲ್ಲಿ ಕಾಣಿಸಿಕೊಂಡ ಎಬೋಲಾವು ಆ ಬಳಿಕ  2014ರಲ್ಲಿ ಮತ್ತೊಮ್ಮೆ ರಂಗ ಪ್ರವೇಶಿಸಿತು. ಇದಕ್ಕಿಂತ ಮೊದಲು 1967ರಲ್ಲಿ ಮರ್‍ಬರ್ಗ್ ವೈರಸ್ ಕಾಣಿಸಿಕೊಂಡಿತ್ತು. ಮರ್‍ಬರ್ಗ್ ಮತ್ತು ಎಬೋಲಾ ಇವೆರಡೂ ಒಂದೇ ರೀತಿಯ ವೈರಸ್‍ಗಳು.  ಎಬೋಲಾ ವೈರಸ್ ಕೋತಿ, ಚಿಂಪಾಂಜಿ, ಗೊರಿಲ್ಲಾ, ಬಾವಲಿ ಇತ್ಯಾದಿಗಳಲ್ಲಿ ಬದುಕುತ್ತವೆ. ಎಬೋಲಾ ಎಂಬುದು ಕಾಂಗೋದಲ್ಲಿರುವ ನದಿಯ ಹೆಸರು. ಇದರ ಸುಧಾರಿತ ರೂಪವೇ ಮರ್‍ಬರ್ಗ್  ವೈರಸ್. 1980ರಲ್ಲಿ ಕೋತಿ ಅಥವಾ ಚಿಂಪಾಂಜಿಯ ದೇಹದಿಂದ ಮಾನವ ದೇಹಕ್ಕೆ HIV ಜಿಗಿಯಿತು. 2002ರಲ್ಲಿ ಚೀನಾವು ಜಗತ್ತಿಗೆ ಸಾರ್ಸ್ ವೈರಸನ್ನು ಸರಬರಾಜು ಮಾಡಿತು. ಬಾವಲಿಯ  ದೇಹದಲ್ಲಿದ್ದ ಮರ್ಸ್ ವೈರಸ್ 2012ರಲ್ಲಿ ಮಾನವನ ದೇಹ ಸೇರಿತು. 2015ರಲ್ಲಿ ಮತ್ತೆ ಅದು ಮಾನವನನ್ನು ಬೇಟೆಯಾಡಿ ಭಯ ಮೂಡಿಸಿತು. ಇದೀಗ ಕೊರೋನಾ. ಈ ಎಲ್ಲವುಗಳ ಮೂಲ  ಪ್ರಾಣಿಗಳು. ಐದಾರು ವರ್ಷಗಳಿಗೊಮ್ಮೆ ಇವು ತಮ್ಮ ಹೆಸರನ್ನು ಬದಲಿಸಿಕೊಂಡು ಮತ್ತು ಒಂದಷ್ಟು ಬಲದೊಂದಿಗೆ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇವೆ. ಆದರೆ, 1917ರ ಸ್ಪಾನಿಶ್ ಫ್ಲೂನಿಂದ ಹಿಡಿದು  ಈಗಿನ ಕೊರೋನಾದ ವರೆಗೆ ಹೆಚ್ಚಿನ ವೈರಸ್‍ಗಳ ಉಗಮ ಸ್ಥಾನ ಚೀನಾ ಎಂಬುದನ್ನು ಗಮನಿಸುವಾಗ ಮತ್ತು ಅಲ್ಲಿನ ಆಹಾರ ಕ್ರಮವನ್ನು ಪರಿಶೀಲಿಸುವಾಗ ಕೆಲವು ಪ್ರಶ್ನೆಗಳು ಸಹಜವಾಗಿಯೇ  ಉದ್ಭವಿಸುತ್ತವೆ. ನಾಯಿ ಮತ್ತು ಬಾವಲಿಯೂ ಸೇರಿದಂತೆ ಬಹುತೇಕ ಪ್ರಾಣಿ ಮತ್ತು ಪಕ್ಷಿಗಳನ್ನು ಆಹಾರವಾಗಿ ಸೇವಿಸುವ ಕ್ರಮವೊಂದು ಚೀನಾದಲ್ಲಿದೆ. ಒಂದು ರೀತಿಯಲ್ಲಿ ಜಗತ್ತಿನ ಆಹಾರ  ಕ್ರಮಗಳಿಗಿಂತ ತೀರಾ ಭಿನ್ನವಾದ ಆಹಾರ ಕ್ರಮ ಚೀನೀಯರದ್ದು. ಇಂಥ ಆಹಾರ ಕ್ರಮವೇ ರೋಗಗಳ ಉತ್ಪತ್ತಿಗೆ ಕಾರಣವಾದುವೇ? ಕಾಡು ಮನುಷ್ಯರಲ್ಲೂ ಮಾಂಸಾಹಾರದ ಕುರಿತಂತೆ ನಿರ್ದಿಷ್ಟ  ಪರಿಮಿತಿಗಳಿವೆ ಎಂದು ಹೇಳಲಾಗುತ್ತದೆ. ಸಿಕ್ಕ ಸಿಕ್ಕ ಪ್ರಾಣಿಗಳನ್ನೆಲ್ಲ ಕೊಂದು ತಿನ್ನುವ ಆಹಾರ ಕ್ರಮ ಮನುಷ್ಯನ ಪಾಲಿಗೆ ಅನ್ಯ ಎಂಬ ವಾದ ಇದೆ. ಪ್ರಾಕೃತಿಕ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ  ಚೀನಾದಲ್ಲಿ ಮತ್ತೆ ಮತ್ತೆ ಪ್ರಾಣಿಜನ್ಯ ವೈರಸ್‍ಗಳು ಮಾನವನ ಮೇಲೆ ದಾಳಿ ಮಾಡುತ್ತಿವೆಯೇ? ಚೀನಿಯರು ಆಹಾರವಾಗಿ ಉಪಯೋಗಿಸದ ಪ್ರಾಣಿಗಳಿಲ್ಲ. ಹಾವು, ಹಲ್ಲಿ, ಓತಿ, ಉಡ, ಕಡವೆ, ಪುನುಗು  ಬೆಕ್ಕು, ನರಿ ಹೀಗೆ ಎಲ್ಲವೂ ಅವರ ಖಾದ್ಯ ಪದಾರ್ಥಗಳೇ. ಕೊರೋನಾ ಸಾವಿನ ನರ್ತನ ಮಾಡತೊಡಗಿದಾಗ ಚೀನಾ ಆಡಳಿತವು ವುಹಾನ್ ಪಟ್ಟಣದ್ದೂ ಸೇರಿದಂತೆ ದೇಶದಾದ್ಯಂತವಿರುವ ಇಂಥ 20  ಸಾವಿರಕ್ಕೂ ಮಿಕ್ಕಿ ಮಾಂಸದ ಮಾರುಕಟ್ಟೆಗಳನ್ನು ಮುಚ್ಚಿ ಬಿಟ್ಟಿರುವುದೂ ಗಮನಾರ್ಹ. ಆದ್ದರಿಂದಲೇ, ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಮರು ಅವಲೋಕನಕ್ಕೆ ಒಳಗಾಗಬೇಕಾಗಿದೆ. ಹಾಗೆಯೇ, ವುಹಾನ್ ಪಟ್ಟಣದಲ್ಲೇ ವೈರಸನ್ನು ಸಂಶೋಧಿಸುವ ವಿರೊಲೊಜಿ ಸಂಸ್ಥೆಯೂ ಇದೆ. ಅಲ್ಲಿ ಜೈವಿಕ ಅಸ್ತ್ರವನ್ನು ಸಂಶೋಧಿಸಲಾಗುತ್ತಿತ್ತೆ? ಅಲ್ಲಿ ಪ್ರಯೋಗಕ್ಕೆ ಒಳಗಾಗಿದ್ದ ಪ್ರಾಣಿಯೊಂದು ತಪ್ಪಿಸಿಕೊಂಡು ಹೋಗಿದ್ದು, ಅದರಲ್ಲಿದ್ದ ಕೋರೋನಾ  ವೈರಸ್ ಈ ಅನಾಹುತಕ್ಕೆ ಕಾರಣವಾಯಿತೆ? ಗೊತ್ತಿಲ್ಲ. ಅಂದಹಾಗೆ,
ಮನೆಯವರನ್ನು ಭೇಟಿಯಾಗುವ ಉತ್ಸಾಹದಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದವನನ್ನು ಕ್ರಿಮಿನಲ್‍ನಂತೆ ನಡೆಸಿ ಕೊಂಡಿರುವುದರ ಹಿಂದೆ ಇಂಥದ್ದೊಂದು  ಕತೆ ಇದೆ ಎಂಬುದು ಆ ತರುಣನಿಗೆ ಗೊತ್ತಿದೆಯೋ ಇಲ್ಲವೋ?

Tuesday, March 17, 2020

ಪರಸ್ಪರ ವೈರತ್ವವನ್ನೇ ಹೊಂದಿರದ ಅವರೇಕೆ ಹಂತಕರಾಗುತ್ತಾರೆ?ದೆಹಲಿಯ ಭಾಗೀರಥಿ ವಿಹಾರ್,
ಮುಸ್ತಫಾಬಾದ್‍ನ ಸಮೀಪವಿರುವ ಈ ಕಾಲನಿಯಲ್ಲಿ ನನ್ನ ಮತ್ತು ಸಹೋದರನ ಮನೆಯನ್ನು ಬಿಟ್ಟರೆ ಉಳಿದೆಲ್ಲ ಮನೆಗಳೂ ಹಿಂದೂಗಳದ್ದು. ನಾವು ಈ ಭಾಗೀರಥಿ ವಿಹಾರ್ ನಲ್ಲಿ ಕಳೆದ 10-12 ವರ್ಷಗಳಿಂದಲೂ ವಾಸವಾಗಿದ್ದೇವೆ. ನೆರೆಯ ಹಿಂದೂಗಳ ಜೊತೆಗಿನ ನಮ್ಮ ಸಂಬಂಧವೂ ಅತ್ಯುತ್ತಮವಾಗಿದೆ. ರಾತ್ರಿಯ ಸುಮಾರು 7 ಗಂಟೆ. ಹೊರಗಡೆ ಭಾರೀ ಗಲಾಟೆಯ ಸದ್ದು. ಏನೆಂದು ನೋಡಿದೆ. ಒಂದು ದೊಡ್ಡ ಗುಂಪು ನಮ್ಮ ಮನೆಯತ್ತ ಬರುತ್ತಿರುವುದು ಕಾಣಿಸಿತು. ಆ ಗುಂಪು ನಮ್ಮ ಮನೆಯ ಬಾಗಿಲ ಬಳಿ ಬಂದು ನಿಂತಿತು. ನನ್ನ ಮಕ್ಕಳು ಅಳತೊಡಗಿದರು. ‘ಅಮ್ಮ ಅವರು ನಮ್ಮನ್ನು ಏನಾದ್ರೂ ಮಾಡಿಯಾರೋ’ ಎಂದು ಮಕ್ಕಳು ಅಳುತ್ತಾ ಪ್ರಶ್ನಿಸತೊಡಗಿದರು. ನಾನು ಅವರನ್ನು ಬಲವಾಗಿ ಅಪ್ಪಿ ಹಿಡಿದು ಅಳುವಿನ ದನಿ ಹೊರಗೆ ಕೇಳಿಸದಿರಲಿ ಎಂದು ತಡೆದೆ. ನಮ್ಮ ಮನೆಯಲ್ಲಿ ನಾನು, ಗಂಡ, ನನ್ನಿಬ್ಬರು ಮಕ್ಕಳು, ನನ್ನ ಸಹೋದರಿ, ಸಹೋದರ ಮತ್ತು ಅಮ್ಮ ಸೇರಿದಂತೆ ತುಂಬು ಕುಟುಂಬ ವಾಸವಿತ್ತು. ಮೇಲೆ ಮತ್ತು ಕೆಳಗಿನ ಅಂತಸ್ತಿನಲ್ಲಿ ನಮ್ಮ ಬದುಕು ಸಾಗುತ್ತಿತ್ತು. ಮೇಲಿನಂತಸ್ತಿನಲ್ಲಿದ್ದ ಗಂಡ ಹೊರಗೆ ಬಂದರು. 50ರಷ್ಟಿದ್ದ ಗುಂಪು ಅವರನ್ನು ಎಳೆದುಕೊಂಡು ಹೋಯಿತು. ಗುಂಪಿನ ದಾಳಿಗೆ ಬೆದರಿ ನನ್ನ ಸಹೋದರ ಮಂಚದ ಕೆಳಗೆ ಅವಿತು ಕೂತಿದ್ದ. ಆತನನ್ನು ಗುಂಪು ಎಳೆದು ಎತ್ತಿಕೊಂಡು ಹೋಯಿತು. ಥಳಿಸ್ಬೇಡಿ, ನಾನು ನಿಮ್ಮ ಸಹೋದರ ಎಂದಾತ ಪದೇಪದೇ ಬೇಡಿಕೊಳ್ಳುತ್ತಿದ್ದ. ‘ಕೂಲಿ ಕೆಲಸ ಮಾಡಿ ಕುಟುಂಬ ಸಾಗಿಸುತ್ತಿದ್ದೇನೆ’ ಎಂದು ಹೇಳಿದರೂ ಗುಂಪು ಹೊಡೆಯುವುದನ್ನು ನಿಲ್ಲಿಸದೇ ಕೆಳಗೆ ಎಳೆದುಕೊಂಡು ಹೋಯಿತು. ನಾನು ಬಾಗಿಲು ಹಾಕಿಕೊಂಡೆ. ಗುಂಪು ಬಾಗಿಲಿಗೆ ಬಡಿಯತೊಡ ಗಿತು. ಬಾಗಿಲು ತೆರೆಯದಿದ್ದರೆ ಬೆಂಕಿ ಕೊಡುವುದಾಗಿ ಬೆದರಿಕೆ ಹಾಕಿತು. ಬಾಗಿಲು ತೆರೆಯುವೆ, ದಯವಿಟ್ಟು ಬೆಂಕಿ ಕೊಡಬೇಡಿ ಎಂದು ಒಳಗಿನಿಂದಲೇ ಅಂಗಲಾಚಿದೆ. ಈ ನಡುವೆ ಅವರು ವಿದ್ಯುತ್ ಸಂಪರ್ಕ ತಪ್ಪಿಸಿದರು. ಒಳಗೆಲ್ಲಾ ಕತ್ತಲೆ. ನಾನು ಬಾಗಿಲು ತೆಗೆಯಲೆಂದು ಕೀ ಹಾಕಲು ಪ್ರಯತ್ನಿಸಿದರೂ ಕೈ ನಡುಗುತ್ತಿರುವ ಕಾರಣ ಸಾಧ್ಯವಾಗಲಿಲ್ಲ. ನಡುಕ ಎಷ್ಟಿತ್ತೆಂದರೆ ಕೀ ಒಂದು ಬಾರಿ ಕೆಳಗೆ ಬಿತ್ತು. ಹೊರಗಿನಿಂದ ಫರೀನ್, ಫರೀನ್ ಎಂಬ ಕೂಗು ಕೇಳಿಸತೊಡಗಿದಾಗ ಬಾಗಿಲು ತೆರೆದೆ. ನಜ್ಜುಗುಜ್ಜಾಗಿದ್ದ ಗಂಡ ಎದುರಿದ್ದ. ಸಹೋದರ ಎಲ್ಲಿದ್ದಾನೆ ಎಂದು ಪ್ರಶ್ನಿಸಿದ. ನನಗಾದರೂ ಹೇಗೆ ಗೊತ್ತು? ಆತನನ್ನು ಅವರು ಎತ್ತಿಕೊಂಡು ಹೋಗಿದ್ದರಲ್ಲವೇ? ಸಹೋದರನನ್ನು ಹುಡುಕುವುದಕ್ಕಾಗಿ ನಾವೆಲ್ಲರೂ ಮನೆಯಿಂದ ಹೊರಗಿಳಿದೆವು. ನಮಗೆ ಬೇರೆ ದಾರಿಯಿರಲಿಲ್ಲ. ಆತ ಏನಾಗಿದ್ದಾನೆ, ಎಲ್ಲಿದ್ದಾನೆ ಎಂಬುದು ಗೊತ್ತಿರಲಿಲ್ಲ. ಈ ನಡುವೆ ಆ ಗುಂಪು ಆತನನ್ನು ಎತ್ತಿಕೊಂಡು ಹೋಗಿ ಹತ್ಯೆ ಮಾಡಿರುವುದಾಗಿ ನೆರೆಯವರು ತಿಳಿಸಿದರು.
ನಮಗಲ್ಲಿ ನಿಲ್ಲಲಾಗಲಿಲ್ಲ. ಸುರಕ್ಷಿತತೆಯ ದೃಷ್ಟಿಯಿಂದ ನಾವಲ್ಲಿಂದ ತೆರಳಲೇಬೇಕಿತ್ತು. ನೆರೆಯವರಲ್ಲಿ ನಮ್ಮ ತೀರ್ಮಾನವನ್ನು ತಿಳಿಸಿದೆವು. ಆದರೆ ಅವರು ಸುತಾರಾಂ ಒಪ್ಪಲಿಲ್ಲ. ನೀವು ಈಗ ಹೋಗಬೇಡಿ, ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದರು. ನಿಮಗೆ ಹೀಗೆ ಒಂಟಿಯಾಗಿ ಹೋಗುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದರು. ಧೈರ್ಯದ ಪ್ರಶ್ನೆಯಲ್ಲ, ನಮಗೆ ಬೇರೆ ದಾರಿಯಿಲ್ಲ ಎಂದಾಗ ಅವರು ಹೋಗಬೇಡಿ ಎಂದು ಕಣ್ಣೀರು ಹಾಕಿದರು. ಕೊನೆಗೆ ನೀವು ಹೋಗುವುದಾದರೂ ಮುಸ್ಲಿಮ್ ವೇಷದೊಂದಿಗೆ ಹೋಗಬೇಡಿ ಎಂದು ವಿನಂತಿಸಿದರು. ನೀವು ಮುಸ್ಲಿಮರೆಂದು ಗೊತ್ತಾದರೆ ದಾರಿಯಲ್ಲಿ ನೀವು ಆಕ್ರಮಣಕ್ಕೆ ಒಳಗಾಗಬಹುದು ಎಂದರಲ್ಲದೇ ಒಳಗೆ ಹೋಗಿ ಸಿಂಧೂರ ಮತ್ತು ಲಿಪ್‍ಸ್ಟಿಕ್ ತಂದು ನಮಗೆ ಹಚ್ಚಿದರು. ಬುರ್ಖಾವನ್ನು ತೆಗೆದಿಟ್ಟು ತಾತ್ಕಾಲಿಕವಾಗಿ ಹಿಂದೂ ಮಹಿಳೆಯರ ವೇಷ ತೊಡಿ ಎಂದು ವಿನಂತಿಸಿದರು. ಸುರಕ್ಷತೆಯ ದೃಷ್ಟಿಯಿಂದ ನಮಗದು ಅನಿವಾರ್ಯವಾಗಿತ್ತು. ನಾವು ಹಿಂದೂಗಳಾಗಿ ಹೊರಟೆವು. ನಮ್ಮ ಮನೆಯ ಜವಾಬ್ದಾರಿಯನ್ನು ಅವರಿಗೆ ವಹಿಸಿ ಕೊಟ್ಟೆವು. ಜೊತೆಗೆ ಅವರೂ ನಮ್ಮ ಜೊತೆ ಬಂದರು. ತುಸು ದೂರ ಸಾಗಿದ ಕೂಡಲೇ ದೊಡ್ಡದೊಂದು ಗುಂಪು ಕಂಡಿತು. ನನ್ನ ಗಂಡ ನಮ್ಮ ಜೊತೆ ಇರುವುದು ಅಪಾಯವೆಂದರಿತು ನೆರೆಯವರ ಜೊತೆ ಹಿಂದಕ್ಕೆ ಕಳುಹಿಸಿ ನಾವು ಹೊರಟೆವು.  ನಿರೀಕ್ಷೆಯಂತೆ ಗುಂಪು ನಮ್ಮನ್ನು ತಡೆದು ಪ್ರಶ್ನಿಸತೊಡಗಿತು. ನಾವು ಹಿಂದೂಗಳು ಎಂದು ನೆರೆಯಾಕೆ ಹೇಳಿದರೂ ಗುಂಪಿಗೆ ನಂಬಿಕೆ ಬರಲಿಲ್ಲ. ಹಿಂದೂವಾಗಿದ್ದರೆ ನೀವೇಕೆ ಮನೆ ಬಿಟ್ಟು ಹೋಗುತ್ತಿರುವಿರಿ ಎಂದು ಪ್ರಶ್ನಿಸಿತು. ಅನಿವಾರ್ಯತೆ ಇದೆ ಎಂದು ಹೇಳಿದಾಗ ಗುಂಪಿನಲ್ಲಿದ್ದ ಮಹಿಳೆ ಸಂಶಯ ವ್ಯಕ್ತಪಡಿಸಿತು. ಸ್ಪಷ್ಟವಾಗಿ ಹೇಳಿ ಎಂದು ಬೆದರಿಸಿತು. ಹಿಂದೂ ಎಂದು ಹೇಳಿರುವುದು ಸುಳ್ಳೆಂದಾದರೆ ನಿಮ್ಮೆಲ್ಲರನ್ನೂ ಇಲ್ಲೇ  ಬೆಂಕಿ ಕೊಟ್ಟು ಸುಡುವುದಾಗಿ ಭಯ ಹುಟ್ಟಿಸಿತು. ನನ್ನ ತೋಳಿನಲ್ಲಿದ್ದ ಪುಟ್ಟ ಗಂಡು ಮಗುವಿನ ಪ್ಯಾಂಟು ಬಿಚ್ಚಿ ನೀವು ಸ್ಪಷ್ಟಪಡಿಸಿಕೊಳ್ಳಬಹುದೆಂದು ನಾವು ಹೇಳಿದೆವು. ಪುಟ್ಟ ಮಗುವಾಗಿರುವ ಕಾರಣ ನಾವು ಸುನ್ನತಿ (ಮುಂಜಿ) ಮಾಡಿರಲಿಲ್ಲ. ಅವರು ಮಗುವಿನ ಪ್ಯಾಂಟು ಬಿಚ್ಚಿ ಪರೀಕ್ಷಿಸಿದರು. ಆ ಬಳಿಕ ಗುಂಪಿನ ವರ್ತನೆಯಲ್ಲಿ ಬದಲಾವಣೆ ಉಂಟಾಯಿತು. ಈ ಸಂದರ್ಭದಲ್ಲಿ ಹೋಗದಿರುವುದೇ ಉತ್ತಮ, ಆ ಕಡೆ ಪಾಕಿಸ್ತಾನವಿದೆ ಎಂದು ಗುಂಪು ಕಾಳಜಿ ತೋರಿತು. ನಾವು ಹೋಗಲು ಮುಂದಾದಾಗ, ನಮಗೆ ಬೆಂಗಾವಲಾಗಿ ಓರ್ವ ವ್ಯಕ್ತಿಯನ್ನು ಗುಂಪು ಭಾಗೀರಥಿ ಗಡಿಯ ಕೊನೆಯ ವರೆಗೆ ಕಳುಹಿಸಿಕೊಟ್ಟಿತು. ಕೊನೆಗೆ ನಾವು ಸೀಲಂಪುರಕ್ಕೆ ತಲುಪಿದಾಗ ರಾತ್ರಿ 12 ಗಂಟೆ...
ಹಸನುಲ್ ಬನ್ನಾ ಅನ್ನುವ ಮಲಯಾಳಂ ಪತ್ರಿಕೆಯ ಪತ್ರಕರ್ತನ ಜೊತೆ  ಫರೀನ್ ಹೀಗೆ ಹೇಳುತ್ತಾ ಹೋಗುತ್ತಾರೆ.
ದೆಹಲಿಯ ಕರುಳು ಹಿಂಡುವ ನೂರಾರು ಕತೆಗಳಲ್ಲಿ ಇದೂ ಒಂದು. ಫರೀನ್ ಕುಟುಂಬಕ್ಕೂ ಅವರ ಮೇಲೆ ಕ್ರೂರವಾಗಿ ದಾಳಿಗೈದವರಿಗೂ ಯಾವ ಪರಿಚಯವೂ ಇಲ್ಲ. ದಾರಿಮಧ್ಯೆ ಅವರನ್ನು ತಡೆದು ನಿಲ್ಲಿಸಿ ಧರ್ಮ ಪರೀಕ್ಷೆ ನಡೆಸಿದವರಲ್ಲಿ ಇವರ ಪರಿಚಿತರು ಒಬ್ಬರೂ ಇಲ್ಲ. ಕನಿಷ್ಠ ನೆರೆಮನೆಯವರ ಪರಿಚಿತರೂ ಇಲ್ಲ. ಹಾಗಿದ್ದರೆ ಇಂಥದ್ದೊಂದು ಗುಂಪು ದಿಢೀರ್ ಆಗಿ ತಯಾರಾಗುವುದು ಹೇಗೆ? ಅವರಿಗೆ ಮುಸ್ಲಿಮ್ ಮನೆಗಳ ವಿಳಾಸ ಸಿಗುವುದು ಎಲ್ಲಿಂದ? ಭಾಗೀರಥಿ ವಿಹಾರ್ ನಲ್ಲಿ ಇರುವ ಅಷ್ಟೂ ಮನೆಗಳ ಮಧ್ಯೆ ಎರಡೇ ಎರಡು ಮುಸ್ಲಿಮ್ ಮನೆಗಳನ್ನು ಪತ್ತೆ ಹಚ್ಚುವುದಕ್ಕೆ ಆ ಗುಂಪಿಗೆ ಹೇಗೆ ಸಾಧ್ಯವಾಯಿತು? ಅವರೇಕೆ ತಮಗೆ ಸಂಬಂಧವೇ ಇಲ್ಲದ ಮತ್ತು ವೈರತ್ವವನ್ನೇ ಹೊಂದಿರದ ನಿಷ್ಪಾಪಿ ಮನುಷ್ಯರನ್ನು ಕೊಲ್ಲುತ್ತಾರೆ? ಅದಕ್ಕೆ ಧರ್ಮ ಕಾರಣವೇ?
ದೆಹಲಿಯಲ್ಲಿರುವ ಗೆಳೆಯ ರಘುವಿಗೆ ಕರೆ ಮಾಡಿದೆ. ಬಾಲ್ಯದ ದಿನಗಳನ್ನು ನಾವಿಬ್ಬರೂ ಮೆಲುಕು ಹಾಕಿಕೊಂಡೆವು. ಒಟ್ಟಿಗೆ ಆಟ ಆಡಿದ ವರ್ಷಗಳೆಷ್ಟೋ ಗೊತ್ತಿಲ್ಲ. ಹಬ್ಬ-ಹರಿದಿನಗಳಷ್ಟೇ ಅಲ್ಲ, ಉಳಿದ ದಿನಗಳಲ್ಲೂ ಪರಸ್ಪರರ ಮನೆಗೆ ತೆರಳಿ ಊಟ ಮಾಡಿ, ದಣಿವಾರಿಸಿಕೊಂಡು ಬರುತ್ತಿದ್ದ ದಿನಗಳನ್ನು ಗೆಳೆಯ ನೆನಪಿಸಿಕೊಂಡ. ಆತನಲ್ಲೂ ಆತಂಕವಿತ್ತು. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ವ್ಯಕ್ತಪಡಿಸಿದ. ನಿಜವಾಗಿ,
ಇದು ಕೇವಲ ಓರ್ವ ಗೆಳೆಯನ ಚಿಂತೆಯಲ್ಲ. ದೆಹಲಿ ಹಿಂಸಾಚಾರವನ್ನು ವೀಕ್ಷಿಸಿದ ಮತ್ತು ಅಲ್ಲಿನ ಕರುಣಾಜನಕ ಕತೆಗಳನ್ನು ಆಲಿಸಿದ ಮನುಷ್ಯರಾದ ಪ್ರತಿಯೊಬ್ಬರಲ್ಲೂ ಇಂಥ ಆತಂಕವಿದೆ. ಹಾಗಂತ, ದೆಹಲಿ ಎಂಬುದು ಸಾಮಾನ್ಯ ನಗರ ಅಲ್ಲ. ದೇಶದ ಬೇರೆ ಬೇರೆ ಕಡೆಯಿಂದ ವಲಸೆ ಹೋಗಿರುವವರೇ ತುಂಬಿರುವ ನಗರ ಅದು. ಅಲ್ಲಿ ವಿದ್ಯಾವಂತರೇ ಹೆಚ್ಚು. ಓದಿಕೊಂಡಿರೋರು, ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ತಮ್ಮ ಪಾಡಿಗೆ ತಾವು ಎಂಬಂತೆ ಇರೋರೇ ಅಧಿಕವಿರುವುದರಿಂದ ಈ ಹಿಂಸಾಚಾರದ ಬಗ್ಗೆ ಅಚ್ಚರಿಯಾಗುತ್ತದೆ. ವಿದ್ಯಾವಂತರು, ಬುದ್ಧಿವಂತರು ಮತ್ತು ಉತ್ತಮ ನೌಕರಿಯಲ್ಲಿರುವವರು ಬಹಳ ಸಂಖ್ಯೆಯಲ್ಲಿರುವ ನಗರದಲ್ಲಿ ಕೋಮು ಹಿಂಸಾಚಾರ ಉಂಟಾಗಲು ಕಾರಣವೇನು? 1984ರಲ್ಲಿ ಸಿಕ್ಖ್ ವಿರೋಧಿ ಜನಾಂಗೀಯ ಹತ್ಯಾಕಾಂಡ ನಡೆದಿರುವುದೂ ದೆಹಲಿಯಲ್ಲೇ. ಇದಕ್ಕೆ ಎರಡು ಕಾರಣಗಳನ್ನು ಕಂಡುಕೊಳ್ಳಬಹುದು.
1. ಈ ವಿದ್ಯಾವಂತರಾದ ಮಂದಿ  ತಮ್ಮ ಪಾಡಿಗೆ ತಾವಿರುತ್ತಾರೆ. ಧರ್ಮ ಮತ್ತು ಜನಾಂಗದ ಹೆಸರಲ್ಲಿ ನಡೆಯುತ್ತಿರುವ ಧ್ರುವೀಕರಣವನ್ನಾಗಲಿ ಪ್ರಚೋದನಕಾರಿ ಭಾಷಣ ಮತ್ತು ಬರಹಗಳನ್ನಾಗಲಿ ಇವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ತಮ್ಮ ಸುರಕ್ಷಿತತೆಗಷ್ಟೇ ಅವರು ಆದ್ಯತೆ ನೀಡುತ್ತಾರೆ.
ಅಥವಾ
2. ಈ ವಿದ್ಯಾವಂತ ಬಹಳ ಬೇಗ ಧರ್ಮಾಂಧರಾಗುತ್ತಾರೆ. ಉನ್ನತ ಶಿಕ್ಷಣ ಮತ್ತು ಉತ್ತಮ ಉದ್ಯೋಗವನ್ನು ಪಡಕೊಂಡವರಲ್ಲಿ ಸಾಮಾಜಿಕ ಮನ್ನಣೆಯ ತುಡಿತವೊಂದಿರುತ್ತದೆ. ಸಮಾಜವು ತಮ್ಮನ್ನು ಗುರುತಿಸಬೇಕು ಅನ್ನುವ ಅಭಿಲಾಷೆ ಇರುತ್ತದೆ. ಧರ್ಮಾಂಧತೆಯನ್ನು ಮೈಗೂಡಿಸಿಕೊಂಡ ಗುಂಪುಗಳು ಇಂಥವರನ್ನು ಸುಲಭವಾಗಿ ಕೈವಶ ಮಾಡಿಕೊಳ್ಳುತ್ತವೆ. ಕ್ರಮೇಣ ಇವರು ಧರ್ಮದ ಅತ್ಯಂತ ಅಪಾಯಕಾರಿ ವ್ಯಾಖ್ಯಾನಕ್ಕೆ ಇಳಿಯುತ್ತಾರೆ. ತನ್ನ ಪಕ್ಕದಲ್ಲಿ ವಾಸಿಸುವ ಆದರೆ ತನ್ನ ಧರ್ಮದವನಲ್ಲದ ವ್ಯಕ್ತಿಯು ಎಷ್ಟೇ ಉತ್ತಮನಾಗಿದ್ದರೂ ಇವರಿಗೆ ಆತನ ಧರ್ಮ ಕಾಣಿಸುತ್ತದೆಯೇ ಹೊರತು ಗುಣಗಳಲ್ಲ. ಇದೊಂದು ಬಗೆಯ ಗೀಳು.
ಸದ್ಯ ಧರ್ಮದ ಹೆಸರಲ್ಲಿ ನಡೆಯುತ್ತಿರುವ ಎಲ್ಲ ದ್ವೇಷಗಳಿಗೂ ಇಂಥದ್ದೊಂದು ಗೀಳು ಕಾರಣ. ತನ್ನ ಧರ್ಮ ಇಲ್ಲವೇ ಜಾತಿಯಲ್ಲಿ ಸೇರಿರದ ವ್ಯಕ್ತಿಯನ್ನು ಇನ್ನೋರ್ವ ದ್ವೇಷಿಸುವುದಕ್ಕೆ ಆ ವ್ಯಕ್ತಿ ಕೆಟ್ಟವ ಎಂಬುದು ಕಾರಣ ಅಲ್ಲ, ಆತ ತನ್ನ ಧರ್ಮ ಅಥವಾ ಜಾತಿಗೆ ಸೇರಿಲ್ಲ ಅನ್ನುವುದೇ ಮುಖ್ಯ ಕಾರಣ. ಇಂತಿಂಥ ಧರ್ಮದವರು ಇಷ್ಟಿಷ್ಟು ಅಪಾಯಕಾರಿಗಳು, ಅವರ ಜನಸಂಖ್ಯೆ ಈಗ ಎಷ್ಟಿದೆ, ಮುಂದೆ 50 ವರ್ಷ ಆಗುವಾಗ ಎಷ್ಟಾಗುತ್ತೆ ಮತ್ತು ಮುಂದೆ ಏನಾಗಬಹುದು ಎಂದೆಲ್ಲಾ ಲೆಕ್ಕ ಹಾಕುತ್ತಾ ಬರಿದೇ ಭಯ ಬಿತ್ತುವುದು ಇದರ ಭಾಗ. ಭಾರತವೆಂಬ ಈಗಿನ ಚೌಕಟ್ಟು ಇಲ್ಲದ ಮತ್ತು ಪ್ರಜಾತಂತ್ರವಿಲ್ಲದ ದೇಶವನ್ನು ಮುಸ್ಲಿಮ್ ರಾಜರು 800 ವರ್ಷ ಆಳಿದ್ದಾರೆ. 200 ವರ್ಷಗಳ ಕಾಲ ಬ್ರಿಟಿಷರು ಆಳಿದ್ದಾರೆ. ಸ್ವತಂತ್ರ ಭಾರತದಲ್ಲಿ ನಮ್ಮನ್ನು ನಾವೇ ಆಳುವುದಕ್ಕೆ ಪ್ರಾರಂಭಿಸಿ 70 ವರ್ಷಗಳಾಗಿವೆ. ಹಾಗಿದ್ದೂ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಬರೇ 15% ಅಷ್ಟೇ ಇದೆ. ಸುಮಾರು 1000 ವರ್ಷಗಳ ಪೈಕಿ 800 ವರ್ಷಗಳಷ್ಟು ದೀರ್ಘ ಅವಧಿವರೆಗೆ ಮುಸ್ಲಿಮ್ ರಾಜರೇ ಆಳಿದ ದೇಶದ ಸ್ಥಿತಿ ಇದು. ಹೀಗಿರುವಾಗ ಜನಸಂಖ್ಯೆಯ ಹೆಸರಲ್ಲೋ  ಧರ್ಮದ ಹೆಸರಲ್ಲೋ  ಮುಸ್ಲಿಮರನ್ನು ಗುಮ್ಮನಂತೆ ತೋರಿಸುವುದಕ್ಕೆ ಏನರ್ಥವಿದೆ? 800 ವರ್ಷಗಳ ರಾಜರ ಆಡಳಿತದಲ್ಲೇ  ಸಂಖ್ಯೆ ವೃದ್ಧಿಸಿಕೊಳ್ಳದ ಮುಸ್ಲಿಮರು ಪ್ರಜಾತಂತ್ರ ರಾಷ್ಟ್ರದಲ್ಲಿ ಹೇಗೆ ಸಂಖ್ಯೆ ವೃದ್ಧಿಸಿಕೊಳ್ಳುತ್ತಾರೆ? ಹೇಗೆ ಇನ್ನೊಂದು ಧರ್ಮಕ್ಕೆ ಅಪಾಯಕಾರಿಗಳಾಗುತ್ತಾರೆ? ತೀರಾ ಜುಜುಬಿ ಸಂಖ್ಯೆಯಲ್ಲಿರುವ ಸಮುದಾಯವೊಂದನ್ನು ಬೃಹದಾಕಾರವಾಗಿರುವ ಸಮುದಾಯದ ಪಾಲಿಗೆ ಬೆದರಿಕೆಯಾಗಿ ಬಿಂಬಿಸುವುದರ ಹಿನ್ನೆಲೆಯಾದರೂ ಏನು? ನಿಜವಾಗಿ,
ಯಾವುದೇ ಒಂದು ಧರ್ಮ ಇನ್ನೊಂದು ಧರ್ಮದ ಪಾಲಿಗೆ ಎಂದೂ ಅಪಾಯಕಾರಿಯಾಗಿ ಇರುವುದೇ ಇಲ್ಲ. ಆದರೆ, ಯಾರು ಧರ್ಮದ ಮಾನವೀಯ ಮೌಲ್ಯವನ್ನು ಪಾಲಿಸುವುದಿಲ್ಲವೋ ಅವರು ಧರ್ಮಕ್ಕೂ ಸಮಾಜಕ್ಕೂ ಅಪಾಯಕಾರಿಗಳಾಗಿರುತ್ತಾರೆ. ದುರಂತ ಏನೆಂದರೆ, ಅವರೇ ಧರ್ಮ, ಸಂಸ್ಕೃತಿ ಇತ್ಯಾದಿಗಳನ್ನು ಕಾಪಾಡುವ ಗುತ್ತಿಗೆಯನ್ನು ಪಡೆದುಕೊಳ್ಳುತ್ತಿರುವುದು. ಅವರಿಂದಲೇ ಧರ್ಮ, ಸಂಸ್ಕೃತಿ, ಸೌಹಾರ್ದಕ್ಕೆ ಅಪಾಯವಿದ್ದರೂ ಅನ್ಯ ಧರ್ಮವನ್ನೇ ಅವರು ಆ ಅಪಾಯದ ಪಟ್ಟಿಯಲ್ಲಿಟ್ಟು ಹಂಚಿಕೊಳ್ಳುತ್ತಿರುತ್ತಾರೆ. ಸಮಾಜ ಅದನ್ನೇ ನಂಬುತ್ತದೆ. ಎಲ್ಲಿಯ ವರೆಗೆಂದರೆ, ಆ ಅನ್ಯ ಧರ್ಮದವರ ಹತ್ಯಾಕಾಂಡವನ್ನೂ ನಿರ್ಭಾವುಕತೆಯಿಂದ ಅದು ಸಹಿಸಿಕೊಳ್ಳುತ್ತದೆ. ನಿಜವಾಗಿ,
ಫರೀನಳ ಸಂಕಟ ಮತ್ತು ಗೆಳೆಯನ ಆತಂಕವೇ ಸದ್ಯದ ಭಾರತ.

Monday, March 2, 2020

ಆ ಆಮೆಗೆ ಹುಟ್ಟಿದೂರಿಗೆ ದಾರಿ ತೋರುವವನಾರೋ?ಜಗತ್ತು ಎಷ್ಟು ಅದ್ಭುತ ಅನಿಸ್ತು.
ಮೊನ್ನೆ ಯೂಟ್ಯೂಬ್ ವೀಡಿಯೋಗಳ ಮೇಲೆ ಕಣ್ಣಾಡಿಸ್ತಾ ಇದ್ದಾಗ ಆ ಆಮೆ ಕಾಣಿಸಿಕೊಂಡ್ತು. ಆಮೆಯ ಬಗ್ಗೆ ವಿಪರೀತ ಕುತೂಹಲವೇನೂ ನನ್ನಲ್ಲಿ ಇರಲಿಲ್ಲ. ಆಮೆಗಳು ಸುಮಾರು 80 ವರ್ಷಗಳ  ವರೆಗೆ ಬದುಕ್ತವೆ ಎಂಬ ಮಾಹಿತಿಯನ್ನು ಹೊರತುಪಡಿಸಿ ಹೆಚ್ಚಿನ ವಿವರಗಳೂ ನನ್ನಲ್ಲಿರಲಿಲ್ಲ. ಕುತೂಹಲಕ್ಕೆಂದು ಆ ವೀಡಿಯೋವನ್ನು ವೀಕ್ಷಿಸುತ್ತಾ ಹೋದಂತೆ, ಕುತೂಹಲ ಇಮ್ಮಡಿ ಗೊಳ್ಳುತ್ತಾ  ಹೋಯಿತು. ಅತ್ಯಂತ ನಿಧಾನಗತಿಯಿಂದ ಚಲಿಸುವ ಮತ್ತು ಒಂದು ರೀತಿಯಲ್ಲಿ ಅತ್ಯಂತ ಉದಾಸೀನ ಪ್ರಾಣಿಯಂತೆ ಕಾಣುವ ಆಮೆಯು ತನ್ನ ಒಡಲಲ್ಲಿ ಇಷ್ಟೊಂದು ಒಳರಹಸ್ಯಗಳನ್ನು  ಹುದುಗಿಸಿಟ್ಟಿದೆಯೇ ಎಂದು ಆಶ್ಚರ್ಯವಾಯಿತು. ವೀಡಿಯೋ ವೀಕ್ಷಿಸುವುದನ್ನು ನಿಲ್ಲಿಸಿ ಆ ಆಮೆಯ ಬಗ್ಗೆ ಮಾಹಿತಿಗಳನ್ನು ಹುಡುಕತೊಡಗಿದೆ. ಆಶ್ಚರ್ಯ, ಅಚ್ಚರಿ, ಕುತೂಹಲಗಳ ಜೊತೆಜೊತೆಗೇ ಆಳ  ಚಿಂತನೆಗೆ ಹಚ್ಚುವ ವಿಶಿಷ್ಟ ಜೀವಿಯಾಗಿ ಆಮೆ ನನ್ನೊಳಗನ್ನು ಸೇರಿಕೊಂಡಿತು. ಚಿಂತನೆಗೆ ಹಚ್ಚಿತು. ನಾನು ವೀಕ್ಷಿಸಿದ ಆಮೆ ಒಮಾನ್ ದೇಶದ್ದು. ಅಲ್ಲಿನ ಅಲ್ ಜಿನ್ಝ್ ಎಂಬ ಪ್ರದೇಶದ ಬೀಚ್‍ನಲ್ಲಿ  ಕಾಣಿಸಿಕೊಳ್ಳುವ ಆಮೆ.
ಈ ಆಮೆಗಳ ಬದುಕೇ ಬಲು ವಿಚಿತ್ರ.
ತಡರಾತ್ರಿಯಾದ ಕೂಡಲೇ ಅಲ್ ಜಿನ್ಝ್ ಪ್ರದೇಶದ ಸಮುದ್ರ ದಿಂದ ಗರ್ಭಿಣಿ ಆಮೆಗಳು ತೀರ ಪ್ರದೇಶಕ್ಕೆ ತೆವಳಿಕೊಂಡಂತೆ ಬರುತ್ತವೆ. ಅದರ ಹೊಟ್ಟೆಯಲ್ಲಿ ಸುಮಾರು 100ರಷ್ಟು ಮೊಟ್ಟೆ ಗಳಿರುತ್ತವೆ.  ಆದ್ದರಿಂದಲೇ, ಗರ್ಭ ಧರಿಸಿರುವ ಮತ್ತು ಧರಿಸಿಲ್ಲದ ಆಮೆಗಳ ಗಾತ್ರದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಾಣಿಸುತ್ತವೆ. ಹೀಗೆ ತೆವಳಿಕೊಂಡಂತೆ ಬರುವ ಆಮೆ ದಾರಿಯುದ್ದಕ್ಕೂ ಕಣ್ಣನ್ನು ಅತ್ತಿತ್ತ ತಿರುಗಿಸುತ್ತಲೇ  ಇರುತ್ತದೆ. ಕೊನೆಗೆ ಅದು ಒಂದು ಸ್ಥಳದಲ್ಲಿ ನಿಲ್ಲುತ್ತದೆ. ಅತ್ತಿತ್ತ ನೋಡಿ ಮರಳನ್ನು ಅಗೆಯಲು ಪ್ರಾರಂಭಿಸುತ್ತದೆ. ಅನುಮಾನ ಬಂದಾಗಲೆಲ್ಲ ಅದು ಅಗೆಯುವುನ್ನು ನಿಲ್ಲಿಸಿ ಕಣ್ಣನ್ನು ಅತ್ತಿತ್ತ ಹೊರಳಿಸಿ  ಪರಿಶೀಲನೆ ನಡೆಸುವುದಿದೆ. ಹೀಗೆ ಪರಿಶೀಲಿಸುತ್ತಾ ಅಗೆಯುತ್ತಾ ಆಳ ಗುಂಡಿಯೊಂದು ನಿರ್ಮಾಣವಾದ ಬಳಿಕ ಮೊಟ್ಟೆಗಳನ್ನಿಡುತ್ತವೆ ಮತ್ತು ಅಗೆಯುವು ದಕ್ಕಿಂತ ಮೊದಲು ಆ ಸ್ಥಳ ಹೇಗಿತ್ತೋ ಅದೇ  ರೀತಿಯಲ್ಲಿ ಗುಂಡಿಯನ್ನು ಮರಳಿನಿಂದ ಮುಚ್ಚಿಬಿಡುತ್ತದೆ. ಆದರೆ, ಅಲ್ಲಿಗೇ ಅದರ ಕರ್ತವ್ಯ ಮುಗಿಯುವುದಿಲ್ಲ. ಇಲ್ಲೇ  ಇರುವುದು ಕುತೂಹಲ. ಅದು ಆ ಗುಂಡಿಯಿಂದ ತುಸು ದೂರದಲ್ಲಿ ಇಂಥದ್ದೇ   ಇನ್ನೊಂದು ಗುಂಡಿಯನ್ನು ತೋಡುತ್ತದೆ. ಅಷ್ಟಕ್ಕೂ, ಪುಟ್ಟ ಪುಟ್ಟ ಕಾಲುಗಳಿರುವ ಮತ್ತು ಭಾರ ದೇಹದ ಆಮೆಗೆ ಗುಂಡಿ ತೋಡುವುದು ಸುಲಭ ಅಲ್ಲ. ಮರಳನ್ನು ಸರಿಸಿ ಗುಂಡಿ ತೋಡುತ್ತಾ  ಹೋದಂತೆಲ್ಲಾ  ಸರಿಸಿದ ಮರಳು ಮತ್ತೆ ಮತ್ತೆ ಗುಂಡಿಯೊಳಗೆ ಜಾರಿ ಬೀಳುತ್ತಲೂ ಇರುತ್ತದೆ. ಅವನ್ನು ಸಹಿಸಿಕೊಳ್ಳುತ್ತಾ, ಹೊರ ಹಾಕುತ್ತಾ ಗುಂಡಿ ತೋಡಬೇಕು. ಗುಂಡಿ ಆಳವಾಗುತ್ತಾ ಹೋದಷ್ಟೂ  ಈ ಸಮಸ್ಯೆಯ ಪ್ರಮಾಣ ಹಿಗ್ಗುತ್ತಾ ಹೋಗುತ್ತದೆ. ಹೀಗೆ ಸೆಣಸಾಡಿ ಸೆಣಸಾಡಿ ಇನ್ನೊಂದು ಗುಂಡಿಯನ್ನು ಅದು ಸಿದ್ಧಪಡಿಸುತ್ತದೆ. ಆದರೆ ಈ ಗುಂಡಿಯನ್ನು ಅದು ಮೊದಲಿನ ಗುಂಡಿಯಂತೆ ಮರಳಿ ನಿಂದ ಮುಚ್ಚುವುದಿಲ್ಲ. ಬಾಹ್ಯದೃಷ್ಟಿಗೆ ಗೋಚರವಾಗುವಂತೆ ಆ ಗುಂಡಿಯನ್ನು ಹಾಗೆಯೇ ಇರಗೊಟ್ಟು ಸೂರ್ಯೋದಯಕ್ಕಿಂತ ಮೊದಲೇ ಅದು ಸಮುದ್ರ ಸೇರಿಕೊಳ್ಳುತ್ತದೆ.
ಇದೊಂದು ತಂತ್ರ
ಮೊಟ್ಟೆಯಿಟ್ಟ ಗುಂಡಿಯನ್ನು ಮುಚ್ಚಿ ಮೊಟ್ಟೆಯಿಡದ ಗುಂಡಿ ಯನ್ನು ಮುಚ್ಚದೇ ಬಿಟ್ಟು ಬಿಡುವುದರ ಹಿಂದೆ ತನ್ನ ಸಂತಾನ ವನ್ನು ಕಾಪಾಡುವ ಅಪಾರ ಕಾಳಜಿಯ ಕತೆಯಿದೆ. ಆಮೆಯ ಮೊಟ್ಟೆಯನ್ನು ತಿನ್ನುವುದಕ್ಕೆಂದೇ ನರಿ, ಸಮುದ್ರ ಹಕ್ಕಿ ಮತ್ತು ಏಡಿಗಳು ಕಾಯುತ್ತಿರುತ್ತವೆ. ಮರಳನ್ನು ಅಗೆದು ಗುಂಡಿ ತೋಡಿ ಆಮೆ ಮೊಟ್ಟೆ ಇಡುತ್ತದೆ ಎಂಬುದೂ ಅವಕ್ಕೆ ಗೊತ್ತಿದೆ. ಅದನ್ನು ಕಬಳಿಸುವುದಕ್ಕೆ ಅವು  ಕಾಯುತ್ತಲೂ ಇರುತ್ತವೆ. ಆದ್ದರಿಂದ ಅವನ್ನು ವಂಚಿಸುವುದಕ್ಕಾಗಿ ಆಮೆ ಕಂಡುಕೊಂಡ ಉಪಾಯವೇ ಈ ನಕಲಿ ಗುಂಡಿ. ಅವು ಈ ಗುಂಡಿಯಲ್ಲಿ ಮೊಟ್ಟೆಯನ್ನು ಹುಡುಕಿ ಹೊರಟು ಹೋಗಬೇಕೆಂಬುದು  ಆಮೆಯ ಬಯಕೆ. ವಿಶೇಷ ಏನೆಂದರೆ, ಇಡೀ ಪ್ರಕ್ರಿಯೆಯಲ್ಲಿ ಗಂಡು ಆಮೆಯ ಯಾವ ಪಾತ್ರವೂ ಇರುವುದಿಲ್ಲ. ಗರ್ಭಿಣಿ ಆಮೆ ತಡರಾತ್ರಿ ಸಮುದ್ರದಿಂದ ಹೊರಬಂದು ತೀರ ಪ್ರದೇಶಕ್ಕೆ ಸಾಗುವಾಗ  ಅದು ಕಾವಲು ನಿಲ್ಲುವುದೂ ಇಲ್ಲ. ಮೊಟ್ಟೆ ಇಡುವುದಕ್ಕೆಂದು ಗುಂಡಿ ಅಗೆಯುವಾಗ ನೆರವು ನೀಡುವುದೂ ಇಲ್ಲ. ಒಂಟಿಯಾಗಿಯೇ ಸಮುದ್ರದಿಂದ ಹೊರಬಂದು ತನ್ನ ಸಂತಾನವನ್ನು ಬೆಳೆಸುವ  ಪ್ರಕ್ರಿಯೆಯಲ್ಲಿ ಒಂಟಿಯಾಗಿಯೇ ತೊಡಗಿಸಿಕೊಂಡು ಕೊನೆಗೆ ಒಂಟಿಯಾಗಿಯೇ ಮರಳಿ ಸಮುದ್ರ ಸೇರುವ ಈ ಹೆಣ್ಣು ಆಮೆಗಳು ಪ್ರಕೃತಿಯ ಒಂದು ವಿಶಿಷ್ಟ ಜೀವಿ. ಹೆಣ್ಣಿನ ಸಾಮರ್ಥ್ಯ, ಬುದ್ಧಿವಂತಿಕೆ  ಮತ್ತು ಸಂತಾನದ ಕುರಿತಾದ ಕಾಳಜಿಗೆ ಅನ್ವರ್ಥ ಈ ಆಮೆ. ಆಮೆ ಎಂಬ ಒಂದಿಡೀ ಸಂತತಿಯ ಸಂತಾನವನ್ನು ಉಳಿಸಿ ಬೆಳೆಸುವ, ಕಾಪಾಡುವ ದೊಡ್ಡದೊಂದು ಹೊಣೆಗಾರಿಕೆಯನ್ನು ಅದು  ಒಂಟಿಯಾಗಿಯೇ ನಿರ್ವಹಿಸುತ್ತದೆ. ವೈರಿಗಳಿಂದ ತಪ್ಪಿಸಿ ಕೊಳ್ಳುವ ಚಾತುರ್ಯವೂ ಅದಕ್ಕಿದೆ. ಮೊಟ್ಟೆಗಳನ್ನು ಹೇಗೆ ಶತ್ರು ಗಳಿಂದ ರಕ್ಷಿಸಿಕೊಳ್ಳಬೇಕು ಎಂಬ ಸೂಕ್ಷ್ಮತೆಯೂ ಅದಕ್ಕೆ ಗೊತ್ತಿದೆ. ನಿಧಾನವಾಗಿ ಚಲಿಸುವ ತಾನು ಸಮುದ್ರದಿಂದ ಯಾವಾಗ ತೀರಕ್ಕೆ ಬರಬೇಕು ಮತ್ತು ಯಾವಾಗ ಸಮುದ್ರ ಸೇರಿಕೊಳ್ಳಬೇಕು ಎಂಬ ಸಮಯ ಪ್ರಜ್ಞೆಯೂ ಅದಕ್ಕಿದೆ. ಆದರೂ,
ಅದರಾಚೆಗಿನ ಮಹತ್ವದ ಜವಾಬ್ದಾರಿಯೊಂದನ್ನು ಅದು ನಿಭಾಯಿಸುವುದೇ ಇಲ್ಲ.
ಮರಳನ್ನು ಮೊಟ್ಟೆಯಲ್ಲಿ ಅಡಗಿಸಿಟ್ಟು ಹೊರಟು ಹೋಗುವ ಆಮೆ ಮರಳಿ ಮೊಟ್ಟೆಯನ್ನು ಪರಿಶೀಲಿಸುವುದಕ್ಕೋ ಅಥವಾ ಮರಿಗಳನ್ನು ಕರೆದುಕೊಂಡು ಹೋಗುವುದಕ್ಕೋ ಎಂದೂ ಬರುವುದೇ ಇಲ್ಲ.  ಅದರ ಕೆಲಸ ಗುಂಡಿ ತೋಡಿ ಮೊಟ್ಟೆ ಇಟ್ಟು ಮರಳಿ ಸಮುದ್ರ ಸೇರಿಕೊಳ್ಳುವಲ್ಲಿಗೆ ಮುಗಿದು ಹೋಗುತ್ತದೆ. ಆ ಬಳಿಕ ಬದುಕುಳಿಯುವ ಕೆಲಸವನ್ನು ಮೊಟ್ಟೆ ಮತ್ತು ಅದರಿಂದ ಹೊರಬರುವ ಮರಿಗಳು  ಸ್ವಯಂ ಹೊತ್ತುಕೊಳ್ಳಬೇಕು. ಸುಮಾರು 55 ದಿನಗಳ ವರೆಗೆ ಎಲ್ಲವೂ ಸಹಜವಾಗಿಯೇ ಇರುತ್ತದೆ. ಆದರೆ, 55 ದಿನಗಳ ಬಳಿಕ ಮೊಟ್ಟೆ ಇರುವ ಗುಂಡಿಯಲ್ಲಿ ಚಲನೆ ಕಾಣಿಸಿಕೊಳ್ಳುತ್ತದೆ. ಕ್ಪಣಮಾತ್ರದಲ್ಲಿ  ಒಂದೊಂದೇ ಮರಿ ಆಮೆಗಳು ಭೂಮಿಯೊಳಗಿನಿಂದ ಹೊರಬರಲು ಪ್ರಾರಂಭಿಸುತ್ತವೆ. ಹಾಗಂತ, ಈ ಮರಿಗಳಿಗೆ ಸಮುದ್ರದ ದಾರಿಯನ್ನು ತೋರಿಸುವುದಕ್ಕೆ ಅಮ್ಮ ಇಲ್ಲ. ಒಂದುವೇಳೆ ಸಮುದ್ರ  ಸೇರಿಕೊಳ್ಳದಿದ್ದರೆ ಅದು ಜೀವಂತ ಉಳಿಯುವುದಕ್ಕೆ ಸಾಧ್ಯವೂ ಇಲ್ಲ. ಅದನ್ನು ತಿನ್ನುವುದ ಕ್ಕೆಂದೇ ಶತ್ರುಗಳು ಹುಡುಕುತ್ತಾ ತಿರುಗುತ್ತಿರುವುದರಿಂದ ಅಪಾಯ ಬೆನ್ನ ಹಿಂದೆಯೇ ಇರುತ್ತದೆ. ನಿಜವಾಗಿ, ಇದು  ಅತ್ಯಂತ ಅಪಾಯಕಾರಿ ಸ್ಥಿತಿ. ಭೂಮಿಯೊಳಗಿನಿಂದ ಒಂಟಿಯಾಗಿಯೇ ಬಾಹ್ಯ ಜಗತ್ತನ್ನು ಪ್ರವೇಶಿಸುವ ಪುಟ್ಟ ಪುಟ್ಟ ಆಮೆಗಳು ಆ ಕ್ಷಣದಲ್ಲೇ  ಶತ್ರುಗಳಿಂದ ರಕ್ಷಿಸಿಕೊಳ್ಳುವ ಕಲೆಯನ್ನೂ ಕಲಿತುಕೊಳ್ಳಬೇಕು. ತಮ್ಮ ಸುರಕ್ಷಿತ ಜಾಗವನ್ನು ಆ ಶೈಶವಾವಸ್ಥೆಯಲ್ಲೇ  ಸ್ವತಃ ಕಷ್ಟಪಟ್ಟು ಕಂಡುಕೊಳ್ಳಬೇಕು. ವಿಸ್ಮಯ ಏನೆಂದರೆ, ಈ ಮರಿಗಳು ಭೂಮಿಯೊಳಗಿನಿಂದ ಹೊರಬರುವುದು ಸೂರ್ಯ ಮುಳುಗುವ  ಸಮಯದಲ್ಲಿ. ಪ್ರಕೃತಿಯ ವೈಶಿಷ್ಟ್ಯ ನೋಡಿ. ಸೂರ್ಯ ಮುಳುಗಿ ಚಂದ್ರನ ಪ್ರವೇಶವಾಗುತ್ತದೆ. ಚಂದ್ರನ ಬೆಳಕು ಸಮುದ್ರದ ಮೇಲೆ ಬಿದ್ದು ಆ ಬೆಳಕು ಮರಳಿನ ಮೇಲೆ ಪ್ರತಿಫಲನಗೊಳ್ಳತೊಡಗಿದಾಗ ಈ  ಮರಿಗಳು ಚುರುಕಾಗುತ್ತವೆ. ಸಮುದ್ರ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಆ ಮೂಲಕ ಅದು ಕಂಡುಕೊಳ್ಳುತ್ತವೆ. ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಅವು ಸಾಲುಸಾಲಾಗಿ ಸಮುದ್ರದೆಡೆಗೆ ಧಾವಿಸುತ್ತವೆ. ಆದರೂ  ಅವು ಸಂಪೂರ್ಣ ಸುರಕ್ಷಿತವೆಂದೇನೂ ಅಲ್ಲ, ಈ ಎಚ್ಚರಿಕೆಯ ನಡೆಯ ನಡುವೆಯೂ ಈ ಮರಿಗಳು ಶತ್ರುಗಳ ದಾಳಿಗೆ ತುತ್ತಾಗುವುದಿದೆ. ಸಮುದ್ರ ಸೇರುವುದರ ಮಧ್ಯೆ ಶತ್ರುಗಳ ಆಹಾರವಾಗುವುದೂ  ಇದೆ. ಕುತೂ ಹಲದ ಸಂಗತಿ ಏನೆಂದರೆ, ಹೀಗೆ ಸಮುದ್ರ ಸೇರುವ ಮರಿಗಳು ಆ ಬಳಿಕ ದೀರ್ಘ ವಲಸೆಯೊಂದಕ್ಕೆ ಸಿದ್ಧವಾಗುತ್ತವೆ. ಈ ಆಮೆಗಳ 5 ಮುಖ್ಯ ಪ್ರಬೇಧಗಳಲ್ಲಿ ಕೆಲವು ಈಜಿಪ್ಟ್ ಗೆ ವಲಸೆ  ಹೋದರೆ ಇನ್ನು ಕೆಲವು ಮಾಲ್ದೀವ್ಸ್ ಗೆ ವಲಸೆ ಹೋಗುತ್ತವೆ. ಈ ಆಮೆಗಳು ಪ್ರೌಢಾವಸ್ಥೆಗೆ ಬರುವುದೇ 18ರಿಂದ 35 ವರ್ಷಗಳ ನಡುವೆ. ಆ ಬಳಿಕ ಅವು ತಾವು ಹುಟ್ಟಿದ ಅದೇ ಸ್ಥಳಕ್ಕೆ ಮರಳಿ  ಯಾತ್ರೆಯನ್ನು ಕೈಗೊಳ್ಳುತ್ತವೆ. ಅಲ್ಲಿ ಗಂಡು ಆಮೆಗಳೊಂದಿಗೆ ಸೇರಿಕೊಂಡು ಗರ್ಭ ಧರಿಸುತ್ತವೆ. ಜೊತೆಗೇ ಮೊಟ್ಟೆಯಿಡುವ ಪ್ರಕ್ರಿಯೆಗೆ ತನ್ನನ್ನು ಸಜ್ಜುಗೊಳಿಸತೊಡಗುತ್ತದೆ. ಪ್ರತಿ ಋತುವಿನಲ್ಲಿ ಏಳೆಂಟು  ಬಾರಿ ಅದು ಸಮುದ್ರ ತೀರಕ್ಕೆ ಬಂದು ಮರಳಲ್ಲಿ ಗುಂಡಿ ತೋಡುವ ಅಭ್ಯಾಸ ಮಾಡಿ ಮರಳಿ ಸಮುದ್ರಕ್ಕೆ ಹೋಗುತ್ತಿರುತ್ತದೆ. ಹೀಗೆ ಮೊಟ್ಟೆ ಇಡುವುದಕ್ಕೆ ಪೂರ್ವದಲ್ಲೇ  ಅದು ಅದಕ್ಕೆ ಬೇಕಾದ  ತಯಾರಿಯನ್ನು ಮಾಡಿಕೊಂಡಿರುತ್ತದೆ. ಸಾಮಾನ್ಯ ವಾಗಿ ಪ್ರತಿವರ್ಷ ಓಮಾನ್ ಸಮುದ್ರ ತೀರಕ್ಕೆ ಸುಮಾರು 20 ಸಾವಿರ ಭಿನ್ನ ಭಿನ್ನ ಜಾತಿಯ ಆಮೆಗಳು ಬರುತ್ತವೆ ಎಂದು ಹೇಳಲಾಗುತ್ತದೆ. ಇವು ಏ ನಿಲ್ಲವೆಂದರೂ ಸುಮಾರು 50ರಿಂದ 60 ಸಾವಿರ ಮೊಟ್ಟೆಗಳನ್ನಿಡುತ್ತವೆ... ಅಂದಹಾಗೆ,
ಆಮೆಯ ಈ ಅದ್ಭುತ ಜೀವನಗಾಥೆಯನ್ನು ಓದುತ್ತಾ ಹೋದಂತೆ ಜಗತ್ತು ಎಷ್ಟು ವೈಶಿಷ್ಟ್ಯಪೂರ್ಣ ಎಂದು ಅನಿಸಿತು. ಮಾತ್ರವಲ್ಲ, ಈ ಜಗತ್ತಿನಲ್ಲಿ ಮನುಷ್ಯ ಎಷ್ಟು ದುರ್ಬಲ ಎಂದೂ ತೋಚಿತು. ಮಾ ನವನ ಸಂತಾನ ಪ್ರಕ್ರಿಯೆಯೇ ಒಂದು ಸೋಜಿಗ. ಹೆಣ್ಣು ಗರ್ಭ ಧರಿಸುವಲ್ಲಿಂದಲೇ ಮಗುವಿನ ಸ್ವಾಗತಕ್ಕೆ ಸಿದ್ಧತೆ ನಡೆಯುತ್ತದೆ. ಗರ್ಭಿಣಿಯ ಆರೋಗ್ಯದ ಮೇಲೆ ದಿನವಹಿ ನಿಗಾ ಇಡಲಾಗುತ್ತದೆ.  ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ, ವಿವಿಧ ಬಗೆಯ ಔಷಧಗಳು, ವಿಶೇಷ ಆಹಾರಗಳು, ಕೌನ್ಸಿಲಿಂಗ್‍ಗಳು ಇತ್ಯಾದಿ ಇತ್ಯಾದಿ ಹೆರಿಗೆಯವರೆಗೂ ನಡೆಯುತ್ತದೆ. ಆ ಬಳಿಕ ಬಾಣಂತಿ ಮತ್ತು ಮಗು  ಇಬ್ಬರಿಗೂ ಆರೈಕೆಯ ಅಗತ್ಯ ಬೀಳು ತ್ತದೆ. ಬಾಣಂತಿ ಕೆಲವು ಸಮಯದಲ್ಲೇ  ಸಹಜ ಸ್ಥಿತಿಗೆ ಮರಳಿದರೂ ಮಗು ದೀರ್ಘಕಾಲದ ಆರೈಕೆಯನ್ನು ಬಯಸುತ್ತದೆ. ಹುಟ್ಟಿದ ತಕ್ಷಣ ಅಳುವುದನ್ನು ಬಿಟ್ಟರೆ  ಮಗುವಿಗೆ ಬೇರೇನೂ ಮಾಡುವ ಸಾಮರ್ಥ್ಯ ಇರುವುದಿಲ್ಲ. ಸ್ವರಕ್ಷಣೆ ಗೊತ್ತಿಲ್ಲ. ಆಹಾರವನ್ನು ಸ್ವತಃ ಪಡೆಯುವುದು ಗೊತ್ತಿಲ್ಲ. ತನ್ನ ಅಗತ್ಯಗಳನ್ನು ತಾನೇ ಮಾಡಿಕೊಳ್ಳುವ ಸಾಮರ್ಥ್ಯ ಇಲ್ಲ. ಇದೊಂದು  ಉದ್ದದ ಪಟ್ಟಿ. ಪ್ರೌಢಾವಸ್ಥೆಗೆ ಬರುವವರೆಗೆ ಮಗು ಇತರರನ್ನು ಅವಲಂಬಿಸಿಯೇ ಬದುಕುತ್ತಿರುತ್ತದೆ. ಆದರೆ, ಆಮೆ ಇದಕ್ಕೆ ತದ್ವಿರುದ್ಧ. ಬಹುಶಃ, ಈ ಜಗತ್ತಿನ ಅಸಂಖ್ಯ ವೈಶಿಷ್ಟ್ಯಗಳಲ್ಲಿ ಆಮೆ ಒಂದು ತುದಿ  ಮಾತ್ರ. ಒಂದುವೇಳೆ, ಅದರ ಇನ್ನೊಂದು ತುದಿಯವರೆಗೆ ಮನುಷ್ಯ ಸಂಚರಿಸಿ ಬಿಟ್ಟರೆ ಈ ಪ್ರಕೃತಿಯ ಮುಂದೆ ತಾನೆಷ್ಟು ಅಲ್ಪ ಅನ್ನುವುದು ಆತನಿಗೆ ಮನದಟ್ಟಾಗಬಹುದು. ಈ ಜಗತ್ತಿನಲ್ಲಿ ಕೋಟ್ಯಂತರ  ಜೀವಜಾಲಗಳಿವೆ. ಪ್ರತಿಯೊಂದರ ಹುಟ್ಟೂ ಭಿನ್ನ ಭಿನ್ನ. ಬದುಕೂ ಹಾಗೆಯೇ. ಹಾಗಿದ್ದರೆ ಈ ಪ್ರಕೃತಿಯನ್ನು ಸೃಷ್ಟಿಸಿದವ ಎಷ್ಟು ದೊಡ್ಡ ಕಲಾಕಾರನಾಗಿರಬಹುದು? ಅಷ್ಟಕ್ಕೂ,
ಮನುಷ್ಯ ಒಳ್ಳೆಯವನಾಗುವುದಕ್ಕೆ, ಪ್ರಾಕೃತಿಕ ಸತ್ಯಗಳಿಗೆ ಶರಣಾಗಿ ಬದುಕುವುದಕ್ಕೆ, ಬದುಕನ್ನು ಮೌಲ್ಯಯುತಗೊಳಿಸುವುದಕ್ಕೆ ಮತ್ತು ಅಹಂ, ಸ್ವಾರ್ಥ, ಅಸೂಯೆ, ಜಂಭ ಇತ್ಯಾದಿ ಇತ್ಯಾದಿಗಳಿಂದ  ಕಳಚಿಕೊಂಡು ಜೀವಿಸುವುದಕ್ಕೆ ಪುಸ್ತಕಗಳ ರಾಶಿಯ ಮೇಲೆ ಕುಳಿತು ಗಾಢ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕೆಂದೇನೂ ಇಲ್ಲ. ಪ್ರಕೃತಿಯೆಡೆಗೆ ಬೆರಗಿನಿಂದ ನೋಡಿದರೂ ಸಾಕು, ಒಳಗಣ್ಣು ತೆರೆಯುತ್ತಲೇ  ಹೋಗುತ್ತದೆ. 
‘ನೀವು ಭೂಮಿಯಲ್ಲಿ ಸಂಚರಿಸಿ ಮತ್ತು ಅಲ್ಲಾಹನು ಯಾವ ರೀತಿ ಸೃಷ್ಟಿ ಕಾರ್ಯವನ್ನು ಆರಂಭಿಸುತ್ತಾನೆ ಎಂಬುದನ್ನು ನೋಡಿ’ (ಅಧ್ಯಾಯ 29: 20) ಎಂಬ ಪವಿತ್ರ ಕುರ್ ಆನಿನ ವಚನದ  ತಾತ್ಪರ್ಯವೂ ಇದುವೇ. ಅಂದಹಾಗೆ,
ವಲಸೆ ಹೋದ ಆಮೆಗೆ ದಶಕಗಳ ಬಳಿಕ ಮರಳಿ ಹುಟ್ಟಿದೂರಿಗೆ ದಾರಿ ತೋರುವವನಾರೋ?

ಅದುಮಿಟ್ಟ ಅತೃಪ್ತಿಯನ್ನು ಸ್ಫೋಟಿಸುವುದಕ್ಕೆ ಆ ಅಝೀಝ್ ನೆಪವಷ್ಟೇ ಆಗಿದ್ದಚುನಾಯಿತ ಸರಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಜನರು ಬೀದಿಗಿಳಿಯುವುದು 2019 ಡಿಸೆಂಬರ್ ನಲ್ಲಿ ದಿಢೀರನೇ ಪ್ರತ್ಯಕ್ಷವಾದ ಹೊಸ ಪ್ರಾಕಾರ ಏನಲ್ಲ. ಪ್ರಭುತ್ವದ ಆದೇಶಗಳನ್ನು  ಉಲ್ಲಂಘಿಸುವಂತೆ ಕರೆ ಕೊಡುವುದೂ ಹೊಸತಲ್ಲ. 1975 ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಈ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಮೊದಲಿನ ವಾತಾವರಣ  ಸರಿಸುಮಾರು ಈಗಿನ ವಾತಾವರಣದಂತೆಯೇ ಇತ್ತು. 1974ರಲ್ಲಿ ಪ್ರಭುತ್ವ ವಿರೋಧಿ ಕಿಡಿಯೊಂದು ಗುಜರಾತ್‍ನಲ್ಲಿ ಹುಟ್ಟಿಕೊಂಡಿತು. ವಿದ್ಯಾರ್ಥಿಗಳು ಇದಕ್ಕೆ ನೇತೃತ್ವ ನೀಡಿದ್ದರು. ಆ ಕಿಡಿ ಗುರಿಯಿರಿಸಿ  ಕೊಂಡಿದ್ದು ಆಗಿನ ಗುಜರಾತ್‍ನಲ್ಲಿದ್ದ ಕಾಂಗ್ರೆಸ್ ಸರಕಾರವನ್ನು. ಸರಕಾರ ಈ ಕಿಡಿಯನ್ನು ದಮನಿಸಲು ನೋಡಿತು. ಆಗ ಆ ಕಿಡಿ ಬಿಹಾರಕ್ಕೂ ವ್ಯಾಪಿಸಿತು. ನೋಡನೋಡುತ್ತಲೇ ಪ್ರತಿಭಟನೆಯು  ಸಂಘರ್ಷ, ಬೆಂಕಿ ಹಚ್ಚುವಿಕೆಯ ಹಂತಕ್ಕೆ ತಲುಪಿತು. ಪ್ರಾಣಾಹುತಿಯಾಯಿತು. ಈ ಹಂತದಲ್ಲಿ ಜಯಪ್ರಕಾಶ್ ನಾರಾಯಣ್ ಅವರು ಜನ ಚಳವಳಿಯ ನೇತೃತ್ವವನ್ನು ವಹಿಸಿಕೊಂಡರು. ನೇತೃತ್ವ  ಅವರದ್ದಾಗಿದ್ದರೂ ಅವರ ಜೊತೆಗಿದ್ದುದು ವಿದ್ಯಾರ್ಥಿಗಳು. ಪ್ರತಿಭಟನಾಕಾರರ ಬೇಡಿಕೆಗಳ ಪಟ್ಟಿ ಉದ್ದವಾಯಿತು. ‘ನಿಮಗೆ ಸರಿ ಕಾಣದ ಪ್ರಭುತ್ವದ ಆದೇಶಗಳನ್ನು ಉಲ್ಲಂಘಿಸಿ ಬಿಡಿ’ ಎಂದು ಜೆ.ಪಿ.ಯವರು ಆ  ಸಂದರ್ಭದಲ್ಲಿ ಭಾರತೀಯರಿಗೆ ಕರೆ ಕೊಟ್ಟರು. ಆದ್ದರಿಂದ,

2019 ಡಿಸೆಂಬರ್ ಮಧ್ಯಭಾಗದಿಂದ ಹಿಡಿದು ಈವರೆಗೆ ಭಾರತೀಯರು ಬೀದಿಯಲ್ಲಿರುವುದಾದರೆ ಮತ್ತು ಪ್ರಭುತ್ವವನ್ನು ಪ್ರಶ್ನಿಸಿ ಪ್ರತಿದಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದಾದರೆ ಅದಕ್ಕೆ  ಹುಬ್ಬೇರಿಸಬೇಕಿಲ್ಲ. ‘ಕೇಂದ್ರ ಸರಕಾರದ ಎನ್‍ಪಿಆರ್ ನೀತಿಯನ್ನು ಬಹಿಷ್ಕರಿಸಿ’ ಎಂಬ ನಾಗರಿಕ ಧ್ವನಿಯನ್ನು ದೇಶದ್ರೋಹಿಯಾಗಿ ಕಾಣಬೇಕಾಗಿಯೂ ಇಲ್ಲ. ಅಂದಹಾಗೆ, 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರದ ವಿರುದ್ಧ ದೇಶದಲ್ಲಿ ಹುಟ್ಟಿಕೊಂಡಿರುವ ಚಳವಳಿ ಸ್ವರೂಪದ ಪ್ರತಿಭಟನೆಗಳಿಗೆ ಸಿಎಎ ಒಂದೇ ಕಾರಣ ಅಲ್ಲ. ಸಿಡಿಯಲು ಸಿದ್ಧವಾಗಿದ್ದ ನಾಗರಿಕರ  ಅತೃಪ್ತಿಗೆ ಅದೊಂದು ದಾಳವಾಗಿ ಬಳಕೆಯಾಗಿದೆ ಅಷ್ಟೇ. ನಿಜವಾಗಿ,

2010 ಡಿಸೆಂಬರ್ 17ರಂದು ಮುಹಮ್ಮದ್ ಅಜೀಜ್ ಅನ್ನುವ 26 ವರ್ಷದ ಯುವಕ ನಗರ ಪಾಲಿಕೆಯ ಎದುರು ಆತ್ಮಾಹುತಿಗೆ ಶ್ರಮಿಸಿದ್ದೇ  ಟುನೀಶ್ಯನ್ ಕ್ರಾಂತಿಗೆ ಮತ್ತು ಅಧ್ಯಕ್ಷ ಝೈನುಲ್ ಆಬಿದೀನ್ ಬಿನ್ ಅಲಿಯವರ ಪದತ್ಯಾಗಕ್ಕೆ ಏಕೈಕ ಕಾರಣ ಆಗಿರಲಿಲ್ಲ. ಪ್ರಭುತ್ವದ ವಿರುದ್ಧ ತಮ್ಮ ಅತೃಪ್ತಿಯನ್ನು ಸೂಚಿಸುವುದಕ್ಕೆ ನಾಗರಿಕರಿಗೆ ಒದಗಿದ ಸೂಕ್ತ ಟೂಲ್ ಅದಾಗಿತ್ತು. ಟುನೀಶ್ಯಾದ ನಿರುದ್ಯೋಗದ  ಪ್ರಮಾಣ ತೀವ್ರ ಮಟ್ಟದಲ್ಲಿ ಏರಿಕೆಯಾಗಿತ್ತು. ಬೆಲೆ ಏರಿಕೆ, ಭ್ರಷ್ಟಾಚಾರ ಮತ್ತು ಬಡತನದ ಪ್ರಮಾಣವೂ ದಿನನಿತ್ಯ ಏರುಗತಿಯಲ್ಲೇ  ಸಾಗುತ್ತಿತ್ತು. ಜನರು ಅತೃಪ್ತಿಯಿಂದ ಕುದಿಯುತ್ತಿದ್ದರು. ಇಂಥ  ಸಂದರ್ಭದಲ್ಲಿ ಮುಹಮ್ಮದ್ ಅಝೀಝ್ ನ ಆತ್ಮಾಹುತಿ ಯತ್ನ ಅವರನ್ನು ಪ್ರಚೋದಿಸಿತು. ಪದವಿ ಶಿಕ್ಷಣ ಪಡೆದೂ ಕಲಿಕೆಗೆ ತಕ್ಕ ಉದ್ಯೋಗ ಲಭಿಸದೇ ತಳ್ಳುಗಾಡಿಯಲ್ಲಿ ಹಣ್ಣು-ಹಂಪಲು ಮಾರುತ್ತಿದ್ದ  ಅಝೀಝನಿಗೆ ಅದರಲ್ಲೂ ಸುಖವಿರಲಿಲ್ಲ. ಲಂಚಕ್ಕಾಗಿ ಅಧಿಕಾರಿಗಳು ನಿರಂತರ ಪೀಡಿಸುತ್ತಿದ್ದರು. ಇದರಿಂದ ಬೇಸತ್ತು ಆತ ಆತ್ಮಾಹುತಿಗೆ ಯತ್ನಿಸಿದ್ದು ಟುನೀಶ್ಯನ್ ನಾಗರಿಕರನ್ನು ಕೆರಳಿಸಿತು. ನಿರಂತರ  28 ದಿನಗಳ ಕಾಲ ಟುನೀಶ್ಯಾದಾದ್ಯಂತ ಪ್ರತಿಭಟನೆಗಳು ನಡೆದುವು. ನಿಜವಾಗಿ,

ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ವ್ಯಕ್ತವಾಗುತ್ತಿರುವುದೂ ಇದುವೇ. 2012ರ ನಿರ್ಭಯ ಪ್ರಕರಣ ಮತ್ತು ಅಣ್ಣಾ ಹಜಾರೆ ನೇತೃತ್ವದಲ್ಲಿ 2013ರಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳವಳಿಗಳು ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರದ ವರ್ಚಸ್ಸಿಗೆ ಭಾರೀ ಹೊಡೆತ ನೀಡಿದ್ದುವು. ಕಾಮನ್‍ವೆಲ್ತ್ ಹಗರಣ, ಕಲ್ಲಿದ್ದಲು ಹಗರಣ ಮತ್ತು ಟೆಲಿಕಾಂ ಹಗರಣಗಳು ಮನ್‍ಮೋಹನ್ ಸಿಂಗ್  ಸರಕಾರವನ್ನು ಇನ್ನಿಲ್ಲದಂತೆ ಕಾಡಿದ್ದುವು. ಆಗ ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಜನರು ಸಹಜವಾಗಿ ಕನಸು ಕಂಡರು. ಗುಜರಾತ್ ಮಾಡೆಲ್ ಮುನ್ನೆಲೆಗೆ ಬಂದದ್ದೂ ಆ ಸಂದರ್ಭದಲ್ಲೇ. ಗುಜರಾತ್  ಎಂಬುದು ದೇಶದಲ್ಲೇ  ಅತ್ಯಂತ ಹೆಚ್ಚು ಅಭಿವೃದ್ಧಿ ಹೊಂದಿದ ಮತ್ತು ಭ್ರಷ್ಟಾಚಾರ ರಹಿತವಾದ ರಾಜ್ಯ ಎಂಬ ರೀತಿಯಲ್ಲಿ ಪ್ರಚಾರ ಪಡೆಯಿತು. ನರೇಂದ್ರ ಮೋದಿಯವರು ಸಹಜವಾಗಿ ಪರ್ಯಾಯ  ನಾಯಕರಾಗಿ ಬೆಳೆದು ಬಂದರು. 2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರವನ್ನು ಜನರು ಚುನಾಯಿಸಿದ್ದರೆ, ಅದರ ಹಿಂದೆ ಜನಪರ ಆಡಳಿತದ ಬಯಕೆ ಇತ್ತೇ ಹೊರತು ಇನ್ನೇನೂ ಅಲ್ಲ. ಆದ್ದರಿಂದಲೇ, 2016ರ ಒಂದು ಮಧ್ಯರಾತ್ರಿಯಂದು ಅವರು ನೋಟು ನಿಷೇಧ ಮಾಡಿದಾಗಲೂ ಜನರು ದೊಡ್ಡ ಮಟ್ಟದಲ್ಲಿ ಬೀದಿಗಿಳಿಯಲಿಲ್ಲ. ಬ್ಯಾಂಕ್‍ನ ಮುಂದೆ ಸರತಿಯಲ್ಲಿ ನಿಂತು ನೂರಕ್ಕಿಂತಲೂ ಅಧಿಕ ಮಂದಿ ಪ್ರಾಣ ತೆತ್ತಾಗಲೂ ಜನರು ಅದಕ್ಕೊಂದು ಚಳವಳಿಯ ಸ್ವರೂಪ ಕೊಡಲು ಮುಂದಾಗಲಿಲ್ಲ. ಪ್ರಧಾನಿಯವರು ತನ್ನ ತಾಯಿಯನ್ನೇ ಸರತಿಯಲ್ಲಿ ನಿಲ್ಲಿಸಿ ತಾನು ಎಷ್ಟು ಪ್ರಾಮಾಣಿಕ ಎಂಬುದನ್ನು ಒಪ್ಪಿಸಲು ಯತ್ನಿಸಿದರು. ದೇಶದ ಅರ್ಥವ್ಯವಸ್ಥೆಗೆ ಅನುಕೂಲ ಆಗುವುದಾದರೆ ಸಹನೆ ವಹಿಸೋಣ ಅನ್ನುವ ಭಾವದಲ್ಲಿ ನಾಗರಿಕರು ಅನನುಕೂಲತೆಯನ್ನು ಸಹಿಸಿಕೊಂಡರು. ಆ ಬಳಿಕ ಜಿಎಸ್‍ಟಿ ಜಾರಿಯಾಯಿತು. ಅದು ಉದ್ಯಮ ವಲಯದ ಮೇಲೆ ಕಡು ಕೆಟ್ಟ ಪರಿಣಾಮವನ್ನು ಬೀರಿತು. ಅಲ್ಲಲ್ಲಿ ಅಸಹನೆ ವ್ಯಕ್ತವಾದರೂ ಜನ ಸಹಿಸಿಕೊಂಡರು. ಸರಕಾರಕ್ಕೆ  ಇನ್ನಷ್ಟು ಕಾಲಾವಕಾಶದ ಅಗತ್ಯ ಇದೆ ಎಂದು ಸುಮ್ಮನಾದರು. ಇವೆರಡನ್ನೂ ಪ್ರಧಾನಿಯವರ ಬೆಂಬಲಿಗರು ಪೊಲಿಟಿಕಲ್ ಮಾಸ್ಟರ್ ಸ್ಟ್ರೋಕ್ ಎಂದು ಸಮರ್ಥಿಸಿಕೊಂಡರು. ಆದರೆ,

2019ರಲ್ಲಿ ಮರಳಿ ಬಹುಮತವನ್ನು ಪಡೆದುಕೊಂಡ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ತೆಗೆದುಕೊಂಡ ತುರ್ತು ನಿರ್ಧಾರಗಳು ಅವರ ಮೇಲಿನ ಎಲ್ಲ ಭರವಸೆಗೂ ಮಂಕು ಕವಿಯುವಂತೆ  ಮಾಡಿತು. ಅಂದಹಾಗೆ, 2014ರಿಂದ 2019ರ ನಡುವಿನ ಈ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರು ಮಾತುಗಾರಿಕೆಯಲ್ಲಿ ಮಿಂಚಿದ್ದರೇ ಹೊರತು ಆಡಳಿತಾತ್ಮಕ ನೀತಿಯ ಮಟ್ಟಿಗೆ  ದಯನೀಯ ವೈಫಲ್ಯವನ್ನು ಕಂಡಿದ್ದರು. ಏರುತ್ತಿರುವ ನಿರುದ್ಯೋಗಿಗಳ ಸಂಖ್ಯೆಗೆ ಅವರಲ್ಲಿ ಉತ್ತರ ಇರಲಿಲ್ಲ. ಕುಸಿಯುತ್ತಿರುವ ಜಿಡಿಪಿಯನ್ನು ಮೇಲೆತ್ತುವುದಕ್ಕೆ ಅವರಲ್ಲಿ ಯೋಜನೆಗಳಿರಲಿಲ್ಲ.  ರೈತರಂತೂ ದೆಹಲಿಗೆ ಬಂದು ತಿಂಗಳುಗಟ್ಟಲೆ ಚಪ್ಪರ ಹಾಕಿ ಕುಳಿತರು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರಗಳೆರಡಕ್ಕೂ ಜೊಂಪು ಹತ್ತಿತು. ಅಗತ್ಯ ವಸ್ತುಗಳು ಮತ್ತು ತೈಲದ ಬೆಲೆ ಏರಿಕೆಯನ್ನು ನಿಯಂತ್ರಿಸುವ  ಯಾವ ತಂತ್ರವೂ ಅವರಲ್ಲಿರಲಿಲ್ಲ. ಲೋಕಸಭಾ ಚುನಾವಣೆಗಿಂತ ತುಸು ಮೊದಲು ಪುಲ್ವಾಮಾ ಘಟನೆ ನಡೆಯದೇ ಇರುತ್ತಿದ್ದರೆ ಮೋದಿಯವರು ಮರಳಿ ಅಧಿಕಾರಕ್ಕೇರುವ ಸಾಧ್ಯತೆ ಕಡಿಮೆ ಇತ್ತು ಎಂಬ  ವಿಶ್ಲೇಷಣೆಗೆ ಕಾರಣ ಈ ಸಮಸ್ಯೆಗಳೇ. ಆದ್ದರಿಂದಲೇ, 

2019 ಮೇ ಬಳಿಕದ ನರೇಂದ್ರ ಮೋದಿಯನ್ನು ಜನರು ಭಿನ್ನವಾಗಿ ನೋಡಬಯಸಿದ್ದರು. 2014ರಿಂದ 19ರ ವರೆಗಿನ ಮೋದಿಯಲ್ಲಿ ಅವರು  ನಿರೀಕ್ಷಿಸಿದ್ದೇನೂ ಸಿಕ್ಕಿರಲಿಲ್ಲ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಬಲಿಷ್ಠ ಭಾರತವನ್ನು ನಿರ್ಮಿಸುವ ಮೋದಿ ಭಾರತೀಯರಿಗೆ ಬೇಕಾಗಿತ್ತು. ಉದ್ಯೋಗ, ವಿದೇಶಿ ಹೂಡಿಕೆ, ರೈತರ ಸಮಸ್ಯೆಗೆ ಪರಿಹಾರ,  ಕೈಗಾರಿಕೆಗಳ ಅಭಿವೃದ್ಧಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಭ್ರಷ್ಟಾಚಾರವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವುದು ಇತ್ಯಾದಿಗಳೇ ಗುಜರಾತ್ ಮಾಡೆಲ್‍ನ ಮಾದರಿಗಳಾಗಿದ್ದುದರಿಂದ ಅದನ್ನು  ಪ್ರಧಾನಿ ಮೋದಿಯಲ್ಲೂ ಅವರು ನಿರೀಕ್ಷಿಸಿದ್ದರು. ಆದರೆ, ಮರಳಿ ಅಧಿಕಾರಕ್ಕೆ ಬಂದ ಆರೇ ತಿಂಗಳೊಳಗೆ ಅವರು ತೆಗೆದುಕೊಂಡ ಮೂರ್ನಾಲ್ಕು ನಿರ್ಧಾರಗಳು ನಾಗರಿಕರ ನಿರೀಕ್ಷೆಯನ್ನು ಸಂಪೂರ್ಣವಾಗಿ ಧರಾಶಾಹಿ ಮಾಡಿಬಿಟ್ಟಿತು. ಆರಂಭದಲ್ಲಿ ಅವರು ತ್ರಿವಳಿ ತಲಾಕನ್ನು ಕ್ರಿಮಿನಲ್ ಕೃತ್ಯವಾಗಿ ಪರಿಗಣಿಸುವ ಕಾನೂನನ್ನು ಜಾರಿಗೆ ತಂದರು. ನಿಜವಾಗಿ, ಇದು ಸುಪ್ರೀಮ್ ಕೋರ್ಟ್‍ನ ಬೇಡಿಕೆ  ಆಗಿರಲಿಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ಕೋರ್ಟು ಅಸಿಂಧುಗೊಳಿಸಿತ್ತೇ ಹೊರತು ಅದನ್ನು ಕ್ರಿಮಿನಲ್ ಕೃತ್ಯವೆಂದು ಸಾರಿ 3 ವರ್ಷಗಳ ತನಕ ಜೈಲು ಶಿಕ್ಷೆಗೆ ಅರ್ಹಗೊಳಿಸುವ ಅಪರಾಧವಾಗಿ ವ್ಯಾಖ್ಯಾನಿಸಿರಲಿಲ್ಲ. ಅದರ ಬಳಿಕ ಮೋದಿಯು  ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿದರು. ಬಳಿಕ ದೇಶದಾದ್ಯಂತ ಎನ್‍ಆರ್ ಸಿ ಮಾಡುವುದಾಗಿಯೂ ಅದಕ್ಕಿಂತ ಮೊದಲು ಎನ್‍ಪಿಆರ್ ಕೈಗೊಳ್ಳುವುದಾಗಿಯೂ ಘೋಷಿಸಿದರು. ಅಲ್ಲದೇ,  ತರಾತುರಿಯಿಂದ ಸಿಎಎಯನ್ನೂ ಕಾನೂನಾಗಿ ಜಾರಿಗೊಳಿಸಿದರು. ತಕ್ಷಣ ಜನರು ಬೀದಿಗಿಳಿದರು. ಒಂದು ರೀತಿಯಲ್ಲಿ,

1974ರಲ್ಲಿ ವಿದ್ಯಾರ್ಥಿಗಳು ಹೇಗೆ ಪ್ರಭುತ್ವದ ವಿರುದ್ಧ ಬೀದಿಗಿಳಿದರೋ ಅದೇ ರೀತಿಯಲ್ಲಿ ವಿದ್ಯಾರ್ಥಿಗಳೇ ಈಗಿನ ಚಳವಳಿಯಲ್ಲೂ ಮುಂಚೂಣಿಯಲ್ಲಿದ್ದಾರೆ. ಅಲಿಗಢ ವಿಶ್ವವಿದ್ಯಾಲಯದಲ್ಲಿ  ಆರಂಭವಾದ ವಿದ್ಯಾರ್ಥಿ ಪ್ರತಿಭಟನೆಯು ಜಾಮಿಯ ಮಿಲ್ಲಿಯ ವಿವಿ ಘಟನೆಯ ಬಳಿಕ ದೇಶದಾದ್ಯಂತ ವಿಸ್ತರಿಸಿದೆ. ಪ್ರತಿಭಟನೆ, ರ್ಯಾಲಿ, ಧರಣಿ, ಮುಷ್ಕರ, ಭಾರತ್ ಬಂದ್ ಇತ್ಯಾದಿಗಳೊಂದಿಗೆ ಈ  ಚಳವಳಿ ಬೆಳೆಯುತ್ತಲೇ ಇದೆ. ನಾಟಕ, ಹಾಡು, ಭಾಷಣ, ಚಿತ್ರಕಲೆ, ಧರಣಿ.. ಹೀಗೆ ಭಿನ್ನ ರೀತಿಯಲ್ಲಿ ಇದು ಸಾಗುತ್ತಲೂ ಇದೆ. ದೆಹಲಿಯ ಶಾಹೀನ್‍ಬಾಗ್, ಕೊಲ್ಕತ್ತಾದ ಪಾರ್ಕ್ ಸರ್ಕಸ್,  ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ, ಬೆಂಗಳೂರಿನ ಟೌನ್‍ಹಾನ್ ಎಂದು ಮುಂತಾಗಿ ಎಲ್ಲೆಡೆಯೂ ಪ್ರತಿರೋಧದ ಕಾವು ಹೆಚ್ಚುತ್ತಿದೆ. ಸರ್ ಅಲ್ಲಾಮಾ ಇಕ್ಬಾಲ್‍ರ ಸಾರೇ ಜಹಾಂಸೆ ಅಚ್ಚಾ,  ಫೈಝ್ ಅಹ್ಮದ್ ಫೈಝ್ರ ಹಮ್ ದೇಖೇಂಗೆ, ರವೀಂದ್ರನಾಥ್ ಠಾಗೂರರ ಜನಗಣಮನ ಹಾಡುಗಳು ಮತ್ತು ಆಝಾದಿ ಕೂಗು, ಇಂಕ್ವಿಲಾಬ್ ಜಿಂದಾಬಾದ್, ಸ್ವರಾಜ್ ಘೋಷಣೆಗಳು ಪ್ರತಿ ಗಲ್ಲಿಗಲ್ಲಿಯಲ್ಲೂ ಕೇಳಿ ಬರತೊಡಗಿವೆ. ರಾಷ್ಟ್ರಗೀತೆ ಹಾಡುತ್ತಾ, ರಾಷ್ಟ್ರಧ್ವಜವನ್ನು ಹಾರಿಸುತ್ತಾ ಮತ್ತು ಸಂವಿಧಾನದ ಪ್ರಸ್ತಾವನೆಗಳನ್ನು ಓದುತ್ತಾ ಭಾರತೀಯರು ಬೀದಿಯಲ್ಲಿ ಸೇರುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್  ಭಾವಚಿತ್ರಗಳನ್ನು ಎದೆಗಪ್ಪಿ ಹಿಡಿದಿದ್ದಾರೆ. ಜನವರಿ 26ರ ಗಣರಾಜ್ಯೋತ್ಸವ ಮತ್ತು ಜನವರಿ 30ರ ಗಾಂಧಿ ಹುತಾತ್ಮ ದಿನವು ಈ ದೇಶದಲ್ಲಿ ಮೊದಲ ಬಾರಿ ಪ್ರಭುತ್ವವನ್ನು ವಿರೋಧಿಸುವ ದಿನವಾಗಿ  ಆಚರಣೆಗೆ ಒಳಗಾಗಿದೆ. ವಿಶೇಷ ಏನೆಂದರೆ, 

ಮುಸ್ಲಿಮ್ ಮಹಿಳೆಯರು ಬಹುಸಂಖ್ಯೆಯಲ್ಲಿ ಚಳವಳಿಯಲ್ಲಿ ತೊಡಗಿಸಿಕೊಂಡಿರುವುದು. ತ್ರಿವಳಿ ತಲಾಕ್ ಕಾನೂನನ್ನು ಜಾರಿಗೊಳಿಸಲಾದ ಸಂದರ್ಭದಲ್ಲೂ  ಇಷ್ಟು ವ್ಯಾಪಕ ಪ್ರಮಾಣದಲ್ಲಿ ಮುಸ್ಲಿಮ್ ಮಹಿಳೆಯರು ಅದಕ್ಕೆ ಪ್ರತಿರೋಧ ವ್ಯಕ್ತಪಡಿಸಿರಲಿಲ್ಲ. ಮಾತ್ರವಲ್ಲ, ಆ ಕಾನೂನಿನ ಪರ ಮತ್ತು ವಿರುದ್ಧ ಧ್ವನಿಗಳು ಮುಸ್ಲಿಮ್ ಮಹಿಳೆಯರ ಒಳಗಿನಿಂದಲೇ ಕೇಳಿ  ಬಂದಿತ್ತು. ಆದರೆ, ಈ ಬಾರಿ ಕೇಂದ್ರ ಸರಕಾರದ ಪರ ಧ್ವನಿಗಳೇ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಂತೂ ಡಿಸೆಂಬರ್ 10ರ ಬಳಿಕ ನಿರಂತರ ಸಿಎಎ ಸುತ್ತ ಚರ್ಚೆಯಾಗುತ್ತಲೇ ಇದೆ. ಪ್ರಭುತ್ವದ ವಿರುದ್ಧ  ಒಂದೇ ವಿಷಯದ ಮೇಲೆ ಇಷ್ಟು ದೀರ್ಘ ಅವಧಿ ವರೆಗೆ ಚರ್ಚೆಯಾಗುತ್ತಿರುವುದು ಬಹುಶಃ ಇದುವೇ ಮೊದಲು. ಅಲ್ಲದೇ, ಈ ಚಳವಳಿಯ ನೇತೃತ್ವವನ್ನು ಯಾವ ರಾಜಕೀಯ ಪಕ್ಷಕ್ಕೂ ಜನರು ಬಿಟ್ಟು  ಕೊಟ್ಟಿಲ್ಲ. ಪ್ರತಿಭಟನಾಕಾರರು ಕಾಂಗ್ರೆಸ್ಸನ್ನೂ ಲೆಕ್ಕಿಸುತ್ತಿಲ್ಲ. ಬಿಜೆಪಿಯನ್ನೂ ಬಿಡುತ್ತಿಲ್ಲ. ಸಣ್ಣ ಸಣ್ಣ ನಗರಗಳಲ್ಲಿ ಏರ್ಪಡುವ ಪ್ರತಿಭಟನಾ ಸಭೆಯಲ್ಲೂ ಸಾವಿರಾರು ಮಂದಿ ಭಾಗವಹಿಸುತ್ತಿದ್ದಾರೆ. ರಾಷ್ಟ್ರಧ್ವಜವ ನ್ನು ಹಾರಿಸುತ್ತಾರೆ. ರಾಷ್ಟ್ರಗೀತೆಯನ್ನು ಹಾಡುತ್ತಾರೆ. ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯ ಜಾಗದಲ್ಲಿ ಇನ್ನಾವ ಧ್ವಜವನ್ನೂ ಗೀತೆಯನ್ನೂ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದಾರೆ.  ನಿಜವಾಗಿ,
ಪ್ರಧಾನಿ ಮೋದಿಯು ತನ್ನ ಐದೂವರೆ ವರ್ಷಗಳ ಆಡಳಿತಾವಧಿಯಲ್ಲಿ ಎದುರಿಸಿದ ಅತಿದೊಡ್ಡ ಪ್ರತಿರೋಧ ಇದು. ಆದ್ದರಿಂದ,

1975 ಮರಳಿ ಬಂದರೂ ಆಶ್ಚರ್ಯವಿಲ್ಲ.

ಇಂದಿನ ‘ಶತ್ರು’ಗಳ ನಡುವೆ ಗಾಂಧಿ ಮತ್ತು ಅಂಬೇಡ್ಕರ್1. ಅವರಿಬ್ಬರೂ ಪ್ರಜಾತಂತ್ರ ಮತ್ತು ಸ್ವತಂತ್ರ ಭಾರತವನ್ನು ಬಯಸಿದ್ದರು.
2. ಬ್ರಿಟಿಷ್ ಆಡಳಿತದ ವಿರುದ್ಧ ಅವರಿಬ್ಬರೂ ಹೋರಾಡಿದ್ದರು. ಆದರೆ ರೀತಿ ಬೇರೆ ಬೇರೆಯಾಗಿತ್ತು.
3. ಇಬ್ಬರೂ ಉನ್ನತ ವಿದ್ಯಾಭ್ಯಾಸವನ್ನು ಪಡೆದವರು ಮತ್ತು ವಕೀಲರಾಗಿದ್ದರು.
4. ತಾವಿರುವ ಸಾಮಾಜಿಕ, ರಾಜಕೀಯ ಪರಿಸ್ಥಿತಿಯ ಬಗ್ಗೆ ಅತ್ಯುತ್ತಮ ಮಟ್ಟದ ತಿಳುವಳಿಕೆಯನ್ನು ಹೊಂದಿದ್ದರು.
5. ಭಾರತದ ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ.
6. ಬಂದೂಕಿನ ಮೂಲಕ ನಾವು ಬ್ರಿಟಿಷರಿಂದ ಸ್ವಾತಂತ್ರ್ಯ ಗಳಿಸಲಾರೆವು ಎಂಬ ಬಗ್ಗೆ ಅವರಿಬ್ಬರಲ್ಲಿ ಖಚಿತ ಅಭಿಪ್ರಾಯವಿತ್ತು.
7. ಧಾರ್ಮಿಕ ಮತ್ತು ಸಾಮಾಜಿಕ ವಿಷಯಗಳಲ್ಲಿ ಅವರಿಬ್ಬರ ನಡುವೆ ತೀವ್ರ ಭಿನ್ನಾಭಿಪ್ರಾಯ ಇತ್ತು. ಆದರೂ ಅವರು ಪರಸ್ಪರರನ್ನು ದ್ವೇಷಿಸುತ್ತಿರಲಿಲ್ಲ.

ಇವರೇ ಮಹಾತ್ಮ ಗಾಂಧೀಜಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್. 1947 ಆಗಸ್ಟ್ 29ರಿಂದ ತೊಡಗಿ 2 ವರ್ಷ, 11 ತಿಂಗಳು ಮತ್ತು 18 ದಿನಗಳ ಕಾಲ ತೀವ್ರ ಪರಿಶ್ರಮ ಪಟ್ಟು ವಿಶ್ವದಲ್ಲಿಯೇ ಅತೀ ಬೃಹತ್ತಾದ ಮತ್ತು ಅತ್ಯುತ್ತಮವಾದ ಸಂವಿಧಾನವನ್ನು ರಚಿಸಿಕೊಟ್ಟವರು ಅಂಬೇಡ್ಕರ್‍ರಾದರೆ, ಸತ್ಯಾಗ್ರಹವೆಂಬ ಹೊಸ ಪರಿಕಲ್ಪನೆಯ ಮೂಲಕ ಹೋರಾಟದ ಹೊಸ ಸಾಧ್ಯತೆಯನ್ನು ಆವಿಷ್ಕರಿಸಿಕೊಟ್ಟವರು ಗಾಂಧೀಜಿ. 1949 ನವೆಂಬರ್ 26 ರಂದು ಅಂಬೇಡ್ಕರ್ ನೇತೃತ್ವದ ಸಂವಿಧಾನ ರಚನಾ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ಒಪ್ಪಿಸುವ ಮೊದಲು ಮಾಡಿರುವ ಅಧ್ಯಯನ, ಸಂಶೋಧನೆ, ವ್ಯಯಿಸಿದ ಶ್ರಮ, ಬದ್ಧತೆ ಇತ್ಯಾದಿಗಳನ್ನು ಅಭ್ಯಸಿಸುವಾಗ ಅಚ್ಚರಿಯಾಗುತ್ತದೆ. ಅಸ್ಪೃಶ್ಯತೆ ಮತ್ತು ಅವಹೇಳನದ ಕಟು ಅನುಭವವನ್ನು ಹೊಂದಿರುವ ಅಂಬೇಡ್ಕರ್ ರಂತಹ ವ್ಯಕ್ತಿಯ ಹೊರತು ಬೇರೆ ಯಾರೇ ಆಗಿದ್ದರೂ ಇಂಥದ್ದೊಂದು ವಿಶಿಷ್ಟ ಸಂವಿಧಾನವನ್ನು ರಚಿಸಲು ಸಾಧ್ಯವಿರಲಿಲ್ಲವೇನೋ ಎಂದೇ ಅನಿಸುತ್ತದೆ. ಒಂದುವೇಳೆ, ಗಾಂಧೀಜಿಯ ನೇತೃತ್ವದಲ್ಲೇ ಇದು ನಡೆದಿರುತ್ತಿದ್ದರೂ ಇಂಥದ್ದೊಂದು ಸಂವಿಧಾನ ರಚನೆಯ ಸಾಧ್ಯತೆ ತೀರಾ ತೀರಾ ಕಡಿಮೆಯಿತ್ತು. ಯಾಕೆಂದರೆ, ಗಾಂಧೀಜಿ ಸ್ವತಃ ಅಸ್ಪೃಶ್ಯತೆಯನ್ನು ಅನುಭವಿಸಿರಲಿಲ್ಲ. ಕಂಡದ್ದು ಮತ್ತು ಕೇಳಿದ್ದೇ ಅವರ ಅನುಭವವಾಗಿತ್ತು. ಆದರೆ, ಗಾಂಧೀಜಿಯವರು ಕಂಡಿದ್ದ ಮತ್ತು ಕೇಳಿದ್ದ ಸಂಗತಿಯನ್ನು ಅಂಬೇಡ್ಕರ್ ಸ್ವತಃ ಅನುಭವಿಸಿದ್ದರು. ಮಾತ್ರವಲ್ಲ, ಗಾಂಧಿ ಕಂಡಿರದ ಮತ್ತು ಕೇಳಿರದ ಅಸ್ಪೃಶ್ಯತೆಯ ಅತಿ ಕ್ರೂರ ದೌರ್ಜನ್ಯಗಳನ್ನು ಅಂಬೇಡ್ಕರ್ ಸ್ವತಃ ಉಂಡಿದ್ದರು. ಆದ್ದರಿಂದಲೇ,

ಅಸ್ಪೃಶ್ಯತೆಯನ್ನು ನಿರ್ಮೂಲನ ಮಾಡುವ ವಿಷಯದಲ್ಲಿ ಅಂಬೇಡ್ಕರ್ ಅವರು ಅತಿ ಉಗ್ರತಮ ನಿಲುವನ್ನು ಪ್ರದರ್ಶಿಸುತ್ತಿದ್ದರು. ದಲಿತರಿಗೆ ಪ್ರತ್ಯೇಕ ಚುನಾವಣೆ ಬೇಕೆಂಬ ಅವರ ವಾದದಲ್ಲಿ ನಮಗೆ ಇದನ್ನು ದರ್ಶಿಸಬಹುದು. ಪೂನಾ ಒಪ್ಪಂದದ ಮೂಲಕ ಗಾಂಧಿಯವರು ಈ ಆಗ್ರಹಕ್ಕೆ ತಡೆ ನೀಡುವಲ್ಲಿ ಯಶಸ್ವಿಯಾದರೂ ಅಂಬೇಡ್ಕರ್ ಆಂತರಿಕವಾಗಿ ಈ ವಾದವನ್ನು ಬಿಟ್ಟು ಕೊಟ್ಟಿರಲಿಲ್ಲ. ಅಸ್ಪೃಶ್ಯತೆಯ ನಿವಾರಣೆಯ ಕುರಿತಂತೆ ಮಹಾತ್ಮಾ ಗಾಂಧಿಯವರ ನಿಲುವನ್ನು ಅವರು ಸೋಗಿನದೆಂಬಂತೆ ಕಂಡರು. ಗಾಂಧಿಯವರ ಸಹನೆ, ತಾಳ್ಮೆ ಮತ್ತು ಹೋರಾಟ ನೀತಿ ಅಂಬೇಡ್ಕರ್ ರಿಗೆ ಪಥ್ಯವಾಗಿರಲೇ ಇಲ್ಲ. ‘ಹರಿಜನ’ ಎಂಬ ಗಾಂಧಿ ಸಂಶೋಧಿತ ಪದಪುಂಜವನ್ನೇ ಅಂಬೇಡ್ಕರ್ ವಿರೋಧಿಸಿದರು. ಜಾತಿ ವ್ಯವಸ್ಥೆಯನ್ನು ಊರ್ಜಿತ ದಲ್ಲಿಡುವ ತಂತ್ರದ ಭಾಗವಾಗಿ ಅವರು ಈ ‘ಹರಿಜನ’ ಪದವನ್ನು ಪರಿಗಣಿಸಿದರು. ಇದಕ್ಕೆ ಕಾರಣವೂ ಇದೆ.

ಅಸ್ಪೃಶ್ಯತೆಯ ನಿರ್ಮೂಲನದ ವಿಷಯದಲ್ಲಿ ಗಾಂಧಿ ಮತ್ತು ಅಂಬೇಡ್ಕರ್‍ರ ನಡುವೆ ತೀವ್ರ ಭಿನ್ನಾಭಿಪ್ರಾಯವಿತ್ತು ಎಂಬುದು ಅವರಿಬ್ಬರ ಮಾತು-ಕೃತಿಗಳಿಂದ ಸ್ಪಷ್ಟವಾಗುತ್ತದೆ. ಹುಟ್ಟಿನಿಂದಲೇ ಅಸ್ಪೃಶ್ಯತೆಯ ಕರಾಳ ಅನುಭವಗಳನ್ನು ಪಡೆಯುತ್ತಲೇ ಬೆಳೆದ ಅಂಬೇಡ್ಕರ್ ರು, ಆ ಕಾರಣದಿಂದಲೋ ಏನೋ ಮಾತಿನಲ್ಲಿ ಖಂಡಿತವಾದಿಯಾಗಿದ್ದರು. ನೇರ ಮತ್ತು ನಿಖರ ಮಾತು ಅವರದಾಗಿತ್ತು. ಜಾತಿ ವ್ಯವಸ್ಥೆ ನಾಶವಾಗದೇ ಅಸ್ಪೃಶ್ಯತೆ ನಾಶವಾಗದು ಎಂಬುದು ಅವರ ಖಚಿತ ಧ್ವನಿಯಾದರೆ ಗಾಂಧಿ ಇಷ್ಟೊಂದು ಖಚಿತವಾಗಿ ಮಾತಾಡಿದ್ದು ಶೂನ್ಯ ಅನ್ನುವಷ್ಟು ಕಡಿಮೆ. ಅಸ್ಪೃಶ್ಯತೆಯನ್ನು ಅವರು ಪ್ರಬಲವಾಗಿ ವಿರೋಧಿಸುತ್ತಿದ್ದರು. ಆದರೆ, ಜಾತಿ ವ್ಯವಸ್ಥೆಯ ನಿರ್ಮೂಲನದ ಬಗ್ಗೆ ಅವೇ ನಿಲುವನ್ನು ಅವರು ಎಲ್ಲೂ ವ್ಯಕ್ತಪಡಿಸಲಿಲ್ಲ. ಹಿಂದೂ ಸಮುದಾಯವನ್ನು ಒಗ್ಗೂಡಿಸುವುದಕ್ಕೆ ಜಾತಿ ವ್ಯವಸ್ಥೆಯ ಅಗತ್ಯ ಇದೆ ಎಂದು ಅವರು ನಂಬಿದ್ದರು ಎಂಬ ಆರೋಪ ಇದೆ. ಅಸ್ಪೃಶ್ಯರ ಕೆಲಸ ಎಂದು ಸ್ಪೃಶ್ಯ ಸಮಾಜ ಯಾವುದನ್ನೆಲ್ಲ ವಿಂಗಡಿಸಿತ್ತೋ ಅವನ್ನು ಸ್ವತಃ ಮಾಡುವ ಮೂಲಕ ಸ್ಪೃಶ್ಯ ಮನಸ್ಥಿತಿಗೆ ಅವರು ಹೊಡೆತವನ್ನೂ ನೀಡಿದ್ದರು. ಶೌಚಾಲಯ ಶುಚಿಗೊಳಿಸುವ ಕೆಲಸವನ್ನು ಸ್ವತಃ ಗಾಂಧಿಯೇ ಮಾಡಿದರು. ಮಲ ಎತ್ತುವುದು ಅಸ್ಪೃಶ್ಯರ ಕೆಲಸ ಎಂದು ನಂಬಿದ್ದ ಜಾತಿ ಮೇಲ್ಮೆಯ ಮನಸ್ಥಿತಿಗೆ ಕೊಟ್ಟ ಏಟೆಂದು ಇದನ್ನು ವ್ಯಾಖ್ಯಾನಿಸಲಾಗುತ್ತದೆ. ಪ್ಲೇಗ್‍ನ ಸಮಯದಲ್ಲಿ ಅವರು ಮನೆ ಮನೆ ಸಂದರ್ಶಿಸಿದ್ದು ಮತ್ತು ಜಾತಿಯಲ್ಲಿ ಶ್ರೇಷ್ಠರಾಗಿದ್ದವರ ಮನೆಗಳು ದುರ್ವಾಸನೆಯಿಂದ ಕೂಡಿದ್ದುದನ್ನೂ ಅವರು ತಮ್ಮ ಆತ್ಮಕತೆಯಲ್ಲಿ ವಿವರಿಸಿದ್ದಾರೆ. ಗ್ರಾಮ ಸ್ವರಾಜ್ಯವೆಂಬ ಗಾಂಧಿಯವರ ಪರಿಕಲ್ಪನೆಗೆ ತೀರಾ ಭಿನ್ನವಾದ ಪರಿಕಲ್ಪನೆ ಅಂಬೇಡ್ಕರ್ ಗಿತ್ತು. ದಲಿತರು ಗ್ರಾಮ ದಲ್ಲೇ ಉಳಿದು ಆರ್ಥಿಕವಾಗಿ ಬಲಿಷ್ಠರಾಗುವ ಬಗ್ಗೆ ಗಾಂಧಿ ವಾದಿಸಿದರೆ, ದಲಿತರು ನಗರಕ್ಕೆ ವಲಸೆ ಬರಬೇಕು ಮತ್ತು ಉತ್ತಮ ಶಿಕ್ಷಣ ಪಡೆದು ಉದ್ಯೋಗ ಗಿಟ್ಟಿಸಿಕೊಂಡು ಸಬಲರಾಗಬೇಕು ಎಂಬುದು ಅಂಬೇಡ್ಕರ್ ವಾದವಾಗಿತ್ತು. ಸತ್ಯಾಗ್ರಹದಲ್ಲಿ ಬಲವಾದ ನಂಬಿಕೆಯನ್ನಿಟ್ಟಿದ್ದ ಗಾಂಧೀಜಿಯದ್ದು ಒಂದು ತುದಿಯಾದರೆ ಅಂಬೇಡ್ಕರ್ ರದ್ದು ಅದರ ಇನ್ನೊಂದು ತುದಿ. ಅಸ್ಪೃಶ್ಯತೆಯನ್ನು ಸತ್ಯಾಗ್ರಹದ ಮೂಲಕ ನಿಭಾಯಿಸಲು ಸಾಧ್ಯವಿಲ್ಲ ಎಂದವರು ಬಲವಾಗಿ ನಂಬಿದ್ದರು. ಆದರೆ,

ಮಂದಿರದ ಬಾಗಿಲನ್ನು ಅಸ್ಪೃಶ್ಯರಿಗೆ ತೆರೆದು ಕೊಡುವುದರಿಂದ ಬದಲಾವಣೆ ಸಾಧ್ಯ ಎಂದು ಗಾಂಧೀಜಿ ನಂಬಿದ್ದರು. ಮಾತ್ರವಲ್ಲ, ಹಿಂದೂ ಧರ್ಮದ ಮೇಲ್ಜಾತಿಯಿಂದ ಮಾತ್ರ ಅಸ್ಪೃಶ್ಯತೆ ನಿವಾರಣೆ ಸಾಧ್ಯ ಎಂದೂ ನಂಬಿದ್ದರು. ಆದರೆ, ದಲಿತರು ಶಿಕ್ಷಣ ಪಡೆಯುವುದೇ ಅಸ್ಪೃಶ್ಯತೆಗೆ ಔಷಧ ಎಂಬುದು ಅಂಬೇಡ್ಕರ್ ರ ವಾದವಾಗಿತ್ತು.

“ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು. ಶಿಕ್ಷಣ ಖಡ್ಗದಂತೆ. ಖಡ್ಗಕ್ಕೆ ಪ್ರತಿಯೊಬ್ಬರೂ ಹೆದರುತ್ತಾರೆ. ಇಂದು ನಾವು ಕೋರ್ಟು-ಕಚೇರಿಗೆ ಹೋದರೆ ನಿಮಗೆ ಕಾಣಿಸುವುದೇನು? ನ್ಯಾಯಾಧೀಶ ಬ್ರಾಹ್ಮಣ. ಗುಮಾಸ್ತ ಬ್ರಾಹ್ಮಣ. ಫೌಜಿದಾರ ಬ್ರಾಹ್ಮಣ. ಇಂಥ ಪರಿಸ್ಥಿತಿಯಲ್ಲಿ ನಮ್ಮ ಖಟ್ಲೆಯ ನ್ಯಾಯಕ್ಕಾಗಿ ಕೋರ್ಟು ಕಟ್ಟೆ ಏರಿದರೆ ನ್ಯಾಯ ಸಿಗಬಹುದೇ? ಎಷ್ಟೋ ಖಟ್ಲೆಯ ನಿರ್ಣಯದಲ್ಲಿ ನ್ಯಾಯಾಧೀಶರು ಮಹಾರರ (ಅಸ್ಪೃಶ್ಯ ಜಾತಿ) ಪರವಾಗಿ ಮಹಾರ ಸಾಕ್ಷಿದಾರನಾಗಿರುವುದರಿಂದ ಆ ಸಾಕ್ಷ್ಯವನ್ನು ನಂಬುವಂತಿಲ್ಲ ಎಂದು ತಿರಸ್ಕರಿಸಿದ್ದಾರೆ. ಆದರೆ ಸ್ಪೃಶ್ಯ (ಮೇಲ್ಜಾತಿ) ಜಾತಿಯ ಪರವಾಗಿ ಸ್ಪೃಶ್ಯ ಜಾತಿಯ ಸಾಕ್ಷಿದಾರನಿದ್ದರೆ ನ್ಯಾಯಾಧೀಶರು ಆಕ್ಷೇಪವೆತ್ತುವುದಿಲ್ಲ” ಎಂದು ಅವರು ಭಾಷಣದಲ್ಲಿ (ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಅಂಬೇಡ್ಕರ್ ಭಾಷಣ ಮತ್ತು ಬರಹಗಳ ಸಂಪುಟ) ಹೇಳಿದ್ದಿದೆ. ಹಾಗಂತ,

ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಪರಸ್ಪರ ವೈರಿಗಳಂತಿದ್ದರು ಎಂದು ಇದರರ್ಥವಲ್ಲ.

1953ರ ‘ಹಿಂದುಳಿದ ಜಾತಿ ಮತ್ತು ವರ್ಗಗಳ ಆಯುಕ್ತರ ವರದಿ’ಯ ಮೇಲೆ 1954 ಸೆಪ್ಟೆಂಬರ್ 6ರಂದು ರಾಜ್ಯಸಭೆಯಲ್ಲಿ ನಡೆದ ಚರ್ಚೆಯ ವೇಳೆ ಅಂಬೇಡ್ಕರ್ ಆಡಿರುವ ಮಾತು ಇದಕ್ಕೊಂದು ಉತ್ತಮ ಉದಾಹರಣೆ.

“ಗಾಂಧಿಯವರ ಸ್ಮರಣೆಗೋಸ್ಕರ ಈ ದೇಶದಲ್ಲಿ ಉಪ್ಪಿಗೆ ತೆರಿಗೆಯನ್ನು ನಿಷೇಧಿಸಲಾಗಿದೆ. ಗಾಂಧಿಯವರನ್ನು ನಾನು ಗೌರ ವಿಸುತ್ತೇನೆ. ಆದರೆ ನನ್ನ ನಿಲುವು ಏನೆಂದರೆ, ಸರಕಾರ ಉಪ್ಪಿಗೆ ತೆರಿಗೆ ವಿಧಿಸಬೇಕು ಮತ್ತು ತೆರಿಗೆಯಿಂದ ಸಂಗ್ರಹವಾದ ಮೊತ್ತ ವನ್ನು ಗಾಂಧಿಯ ಹೆಸರಲ್ಲಿ ಸ್ಥಾಪಿತವಾದ ನಿಧಿಗೆ ವರ್ಗಾಯಿಸಿ, ಅದನ್ನು ದಲಿತರ ಅಭಿವೃದ್ಧಿಗೆ ಬಳಸಬೇಕು” ಎಂದಿದ್ದರು. “ಇದು ಸ್ವರ್ಗದಲ್ಲಿರುವ ಗಾಂಧಿಗೆ ಅತ್ಯಂತ ಸಂತಸ ಕೊಡುವ ಕೆಲಸವಾಗ ಬಹುದು” ಎಂದೂ ಹೇಳಿದ್ದರು. ಇನ್ನೊಂದು ಸಂದರ್ಭದಲ್ಲಿ,

ಗಾಂಧಿಯ ಸತ್ಯ ಮತ್ತು ಅಹಿಂಸೆ ಎಂಬ ತತ್ವವನ್ನು ಲೇವಡಿಗೂ ಒಳಪಡಿಸಿದ್ದರು. 1955ರಲ್ಲಿ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಗಾಂಧಿಯನ್ನು ಇಬ್ಬಗೆ ಧೋರಣೆಯ ವ್ಯಕ್ತಿ ಎಂದು ಟೀಕಿಸಿದ್ದರು. ಇಂಗ್ಲಿಷ್ ಭಾಷೆಯ ಪತ್ರಿಕೆಗಳಲ್ಲಿ ಜಾತಿ ವ್ಯವಸ್ಥೆಗೆದುರಾಗಿ ಬರೆಯುವ ಗಾಂಧಿ, ಗುಜರಾತಿ ಭಾಷೆಯ ಪತ್ರಿಕೆಯಲ್ಲಿ ಜಾತಿ ವ್ಯವಸ್ಥೆಯನ್ನು ಬೆಂಬಲಿಸಿ ಬರೆಯುತ್ತಾರೆ ಎಂದೂ ದೂರಿದ್ದರು. ಆದರೆ,

ಈ ಭಿನ್ನಾಭಿಪ್ರಾಯಗಳ ಹೊರತಾಗಿಯೂ ದೇಶದ ಪ್ರಥಮ ಕಾನೂನು ಸಚಿವರಾಗುವಂತೆ ಅಂಬೇಡ್ಕರ್ ರನ್ನು ಆಹ್ವಾನಿಸಿದ್ದು ಇದೇ ಗಾಂಧೀಜಿಯ ಕಾಂಗ್ರೆಸ್. ಅಂಬೇಡ್ಕರ್ ರು ಕಾನೂನು ಸಚಿವರಾದುದು ಮತ್ತು ಬಳಿಕ ಸಂವಿಧಾನ ರಚನಾ ಸಮಿತಿಯ ನೇತೃತ್ವ ವಹಿಸಿಕೊಂಡದ್ದು ಇದೇ ಗಾಂಧಿಯ ಕಣ್ಣೆದುರಲ್ಲೇ. ಅಂಬೇಡ್ಕರ್ ಅವರು ಈ ಹೊಣೆಗಾರಿಕೆಯನ್ನು ಎಷ್ಟು ಬದ್ಧತೆಯಿಂದ ನಿರ್ವಹಿಸಿದರೆಂದರೆ, 395 ವಿಧಿಗಳು, 8 ಅನುಸೂಚಿಗಳು ಮತ್ತು 8 ಭಾಗಗಳನ್ನೊಳಗೊಂಡ ಸಂವಿಧಾನವೇ ಇದಕ್ಕೆ ಸಾಕ್ಷಿ. ಈ ಸಂವಿಧಾನವನ್ನು ರಚಿಸುವುದಕ್ಕಾಗಿ ಅವರು ಮತ್ತು ತಂಡವು ಬ್ರಿಟನ್, ಅಮೇರಿಕ, ಐರ್ಲೆಂಡ್, ಫ್ರಾನ್ಸ್, ಕೆನಡ, ಆಸ್ಟ್ರೇಲಿಯಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳ ಸಂವಿಧಾನವನ್ನು ಅಭ್ಯಸಿಸಿತು. ವಿದೇಶಗಳಿಗೆ ತೆರಳಿ ಅಲ್ಲಿನ ತಜ್ಞರೊಂದಿಗೆ ಸಮಾಲೋಚನೆ ನಡೆಸಿತು. ಸಂವಿಧಾನ ತಜ್ಞರಿಂದ ಸಲಹೆಗಳನ್ನು ಪಡೆಯಿತು. ಮುಖ್ಯವಾಗಿ ಜಪಾನ್‍ನ ಸಂವಿಧಾನದ ಪ್ರೇರಣೆಯಿಂದ ಸುಪ್ರೀಮ್ ಕೋರ್ಟಿನ ಕಾರ್ಯಕಲಾಪಗಳ ವಿಧಾನವನ್ನು ರಚಿಸಲಾಯಿತು. ಪಂಚವಾರ್ಷಿಕ ಯೋಜನೆ ರೂಪು ತಳೆದದ್ದು ರಷ್ಯಾದ ಪ್ರೇರಣೆಯಿಂದ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಪರಿಕಲ್ಪನೆಯನ್ನು ಫ್ರಾನ್ಸ್ ನಿಂದ ಹೆಕ್ಕಿಕೊಳ್ಳಲಾಯಿತು. ಹೀಗೆ ದೀರ್ಘ ಅಧ್ಯಯನದ ಬಳಿಕ ತಯಾರಿಸಲಾದ ಕರಡು ಪ್ರತಿಯನ್ನು 1949 ನವೆಂಬರ್ 26ರಂದು ಸಲ್ಲಿಸಲಾಯಿತು. 1950 ಜನವರಿ 26ರಂದು ಇದನ್ನು ಅಂಗೀಕರಿಸಿ ಮಾನ್ಯ ಮಾಡಲಾಯಿತು. ನಿಜವಾಗಿ,

ಸ್ವತಂತ್ರ ಭಾರತದ ಎರಡು ವಿಶಿಷ್ಯ ಚೇತನಗಳಾಗಿ ನಾವು ಗಾಂಧಿ ಮತ್ತು ಅಂಬೇಡ್ಕರ್ ರನ್ನು ಗುರುತಿಸಬಹುದು. ತಾವು ಬೆಳೆದು ಬಂದ ರೀತಿ, ಹಿನ್ನೆಲೆ, ಆಗಿನ ಸಾಮಾಜಿಕ ಪರಿಸ್ಥಿತಿ...  ಇತ್ಯಾದಿಗಳ ಪಡಿಯಚ್ಚಾಗಿ ಅವರಿಬ್ಬರೂ ಮಾತಾಡಿದರು. ಬದುಕಿದರು. ಗಾಂಧಿ ಬೆಳೆದ ರೀತಿಯೇ ಬೇರೆ. ಅಂಬೇಡ್ಕರ್ ಬೆಳೆದ ರೀತಿಯೇ ಬೇರೆ. ಆದ್ದರಿಂದ ಸಮಸ್ಯೆಯೊಂದರ ಬಗ್ಗೆ ಅವರಿಬ್ಬರ ನಿಲುವುಗಳಲ್ಲಿ ವ್ಯತ್ಯಾಸ ಇರುವುದು ಅಸಹಜವೂ ಅಲ್ಲ, ಅನುಮಾನಾಸ್ಪದವೂ ಅಲ್ಲ. ಸದ್ಯದ ಭಾರತದಲ್ಲಿ ಇವರಿಬ್ಬರೂ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಲಾರದ ಮತ್ತು ಅಭಿಪ್ರಾಯಗಳನ್ನು ದೇಶದ ಪರ ಇಲ್ಲವೇ ವಿರುದ್ಧ ಎಂಬ ಎರಡೇ ಎರಡು ವಿಭಾಗಗಳಾಗಿ ವಿಭಜಿಸಿ ದಮನಿಸುವ ರೀತಿಯ ವಾತಾವರಣದ ಮಧ್ಯೆ ಗಾಂಧಿ ಮತ್ತು ಅಂಬೇಡ್ಕರ್ ರನ್ನು ಮುಖಾಮುಖಿಗೊಳಿಸಿ ಸಾರ್ವಜನಿಕ ಚರ್ಚೆಗೆ ಒಳಗಾಗಿಸಬೇಕಾಗಿದೆ. ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯ ಶತ್ರುತ್ವಕ್ಕೆ ಕಾರಣವಾಗಿರಲಿಲ್ಲ. ಗಾಂಧಿಯನ್ನು ಕಂಡರಾಗದು ಅನ್ನುವ ಸ್ಥಿತಿ ಅಂಬೇಡ್ಕರ್ ರದ್ದಾ ಗಿರಲಿಲ್ಲ. ಗಾಂಧಿಯ ವಿಚಾರಧಾರೆಗಳ ಜೊತೆಗೆ ಅವರಿಗೆ ತಕರಾರಿತ್ತೇ ಹೊರತು ಗಾಂಧಿಯ ಜೊತೆಗಲ್ಲ. ಭಿನ್ನಾಭಿಪ್ರಾಯವನ್ನು ಮೀರಿದ ಸ್ನೇಹ ಸಂವಾದ ಅವರಿಂದ ಸಾಧ್ಯವಾಗಿತ್ತು.

ಸಂವಿಧಾನವನ್ನು ಒಪ್ಪಿಕೊಂಡು 70 ವರ್ಷಗಳಾಗಿರುವ ಮತ್ತು ಎಲ್ಲೆಲ್ಲೂ "ಶತ್ರು"ಗಳೇ ತುಂಬಿ ಹೋಗಿರುವ ಈ ಹೊತ್ತಿನಲ್ಲಿ ಈ ದೇಶದ ನಾಗರಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದರ್ಭ ಇದು.