ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಮಂಗಳೂರು ಸಮೀಪದ ತರುಣನೋರ್ವ ಕಳೆದವಾರ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ. ವಿಮಾನ ನಿಲ್ದಾಣದಿಂದ ನೇರವಾಗಿ ಆತನನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಅಧಿಕಾರಿಗಳು ಕರೆ ತಂದಿದ್ದರು. ಆತನಲ್ಲಿ ಜ್ವರದ ಲಕ್ಷಣ ಕಾಣಿಸಿಕೊಂಡದ್ದು ಇದಕ್ಕೆ ಕಾರಣ. ಆಸ್ಪತ್ರೆಯ ಒಂಟಿ ಕೋಣೆಯಲ್ಲಿ ಆತನನ್ನು ಇರಿಸಲಾಯಿತು. ಸುತ್ತಮುತ್ತ ಮಾಸ್ಕ್, ಗ್ಲೌಸ್ ಧರಿಸಿಕೊಂಡು ಓಡಾಡುವ ವೈದ್ಯರು ಮತ್ತು ದಾದಿಯರು. ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡ. ಇದು ರಾಜ್ಯಮಟ್ಟದಲ್ಲಿ ಗಮನ ಸೆಳೆಯಿತು. ಆತನನ್ನು ಪತ್ತೆ ಹಚ್ಚುವುದಕ್ಕೆ ತಂಡ ರಚ ನೆಯಾಯಿತು. ಗಲ್ಲುಶಿಕ್ಷೆಗೀಡಾದ ಕ್ರಿಮಿನಲ್ ಓರ್ವ ಜೈಲಿನಿಂದ ತಪ್ಪಿಸಿಕೊಂಡರೆ ಪರಿಸ್ಥಿತಿ ಹೇಗಿರುತ್ತದೋ ಅಂಥದ್ದೊಂದು ವಾತಾವರಣ ಸೃಷ್ಟಿಯಾಯಿತು. ಕೊನೆಗೆ ಮಂಗಳೂರಿನಿಂದ 40 ಕಿಲೋಮೀಟರ್ ದೂರದಿಂದ ಆತನನ್ನು ಪತ್ತೆ ಹಚ್ಚಿ ಬಲವಂತದಿಂದ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಯಿತು.
ಟೀಕೆ, ತಮಾಷೆ ಮತ್ತು ವ್ಯಂಗ್ಯಕ್ಕೆ ಬಳಕೆಯಾದ ಈ ಘಟನೆಯ ಹಿಂದೆ ಕೊರೋನಾದ ಭಯವಿದೆ. ನಿರ್ಲಕ್ಷಿಸಿದಷ್ಟೂ ಅಪಾಯ ಜಾಸ್ತಿ ಎಂಬುದನ್ನು ಮನಗಂಡು ಜಗತ್ತು ಯುದ್ಧೋಪಾದಿಯಲ್ಲಿ ಕೊರೋ ನಾದ ವಿರುದ್ಧ ಹೋರಾಟ ಕ್ಕಿಳಿದಿದೆ. ಕೊರೋನಾವನ್ನು ಚೀನಾ ಆರಂಭದಲ್ಲಿ ಅಡಗಿಸಿಟ್ಟಿದ್ದರಿಂದಲೇ ಇವತ್ತು ಇಷ್ಟು ದೊಡ್ಡಮಟ್ಟದ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. 2019 ಡಿಸೆಂಬರ್ ಆರಂಭದಲ್ಲೇ ಚೀನಾದ ವುಹಾನ್ ಪಟ್ಟಣದಲ್ಲಿ ಕೊರೋನಾ ಕಾಣಿಸಿಕೊಂಡಿತ್ತು. ಆದರೆ ಚೀನಾ ಅದನ್ನು ಮುಚ್ಚಿಟ್ಟಿತು. ವಿಶ್ವ ಆರೋಗ್ಯ ಸಂಸ್ಥೆಯನ್ನು ಮತ್ತು ಸಾರ್ವಜನಿಕರನ್ನು ಒಂದು ತಿಂಗಳ ಕಾಲ ಕತ್ತಲೆಯಲ್ಲಿಟ್ಟದ್ದೇ ಈಗಿನ ಸ್ಥಿತಿಗೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ. ವುಹಾನ್ ಎಂಬುದು ಚೀನಾದ ಪಾಲಿಗೆ ಒಂದು ವಿಶಿಷ್ಟ ಪಟ್ಟಣ. ಹುಬೆ ರಾಜ್ಯದ ರಾಜಧಾನಿ ಇದು. ಭಾರತದ ಮುಂಬೈಯ ಹಾಗೆ. ಈ ಪಟ್ಟಣವೊಂದರಲ್ಲೇ ಒಂದು ಕೋಟಿ ಜನಸಂಖ್ಯೆಯಿದೆ. ಇಲ್ಲಿಂದ ಇಟಲಿ, ಇರಾನ್ ಸೇರಿದಂತೆ ಜಗತ್ತಿನ ಹಲವಾರು ರಾಷ್ಟ್ರಗಳಿಗೆ ನೇರ ವಿಮಾನ ಸೌಲಭ್ಯವಿದೆ. ಆಹಾರಕ್ಕೆಂದೇ ಕಾಡು ಪ್ರಾಣಿಗಳನ್ನು ತಂದು ಸಾಕುವ ಮತ್ತು ದೊಡ್ಡ ಮಟ್ಟದಲ್ಲಿ ಅವುಗಳನ್ನು ಹಂಚುವ ಪಟ್ಟಣ ಎಂಬ ಹೆಚ್ಚುಗಾರಿಕೆಯೂ ವುಹಾನ್‍ಗೆ ಇದೆ. ಸಾಮಾನ್ಯವಾಗಿ ಚೀನೀಯರ ಆಹಾರ ಕ್ರಮವೂ ವಿಶಿಷ್ಟ. ಬಹುತೇಕ ರಾಷ್ಟ್ರಗಳಲ್ಲಿ ಆಹಾರ ವಸ್ತುಗಳಾಗಿ ರೂಢಿಯಲ್ಲಿ ಇಲ್ಲದ ಪ್ರಾಣಿ, ಪಕ್ಷಿಗಳೆಲ್ಲ ಚೀನಿಯರ ಪಾಲಿಗೆ ರುಚಿರುಚಿಯಾದ ಭಕ್ಷ್ಯಗಳು. ನಾಯಿ, ಕರಡಿ, ಬಾವಲಿ, ಪುನುಗು ಬೆಕ್ಕು, ಇಲಿ, ಹೆಬ್ಬಾವು, ಹೆಗ್ಗಣ, ಬಾತುಕೋಳಿ, ಕೋಳಿ, ಪಾರಿವಾಳ ಮತ್ತೂ ಅನೇಕ ಪ್ರಾಣಿ-ಪಕ್ಷಿಗಳು ಚೀನೀಯರ ಪಾಲಿಗೆ ರುಚಿಕರ ಆಹಾರ. ವುಹಾನ್ ಪಟ್ಟಣವಂತೂ ಇಂಥ ಪ್ರಾಣಿ-ಪಕ್ಷಿಗಳನ್ನು ಸಾಕಿ ಯಥೇಚ್ಛ ಸರಬರಾಜು ಮಾಡುವುದಕ್ಕೇ ಪ್ರಸಿದ್ಧ. ವಿಶೇಷ ಏನೆಂದರೆ, ಕೊರೋನಾ ಹುಟ್ಟಿದ್ದೇ ಇಲ್ಲಿ. ಇಲ್ಲಿಂದ ಮಾರಾಟವಾದ ಬಾವಲಿಯೊಂದರಲ್ಲಿ ಈ ವೈರಸ್ ಇತ್ತು ಎಂದು ಹೇಳಲಾಗುತ್ತದೆ. ಆ ವೈರಸ್ ಸಾಕು ಪ್ರಾಣಿಯೊಂದರ ದೇಹವನ್ನು ಸೇರಿಕೊಂಡಿತು. ಅದನ್ನು ಮಾಂಸ ಮಾಡುವ ವೇಳೆ ವ್ಯಕ್ತಿಯ ಸಂಪರ್ಕಕ್ಕೆ ಬಂದ ವೈರಸ್ ಆತನ ಮೂಲಕ ಸರ್ವತ್ರ ಹರಡತೊಡಗಿತು ಎನ್ನಲಾಗುತ್ತದೆ.
ಕೊರೋನಾ ಹರಡುವುದು ತೀರಾ ಸುಲಭ. ಕೊರೋನಾ ಸೋಂಕಿತ ವ್ಯಕ್ತಿ ತನ್ನ ಕಣ್ಣನ್ನೋ ಬಾಯನ್ನೋ ಸವರಿದ ಕೈಯಲ್ಲಿ ಇನ್ನಾವುದೋ ವಸ್ತುವನ್ನು ಮುಟ್ಟಿದರೆ ಆತನ ಸೋಂಕು ಆ ವಸ್ತುವಿಗೆ ವರ್ಗಾವಣೆಯಾಗುತ್ತದೆ. ಆ ಬಳಿಕ ಆ ವಸ್ತುವನ್ನು ಇನ್ನಾರೇ ಮುಟ್ಟಿದರೂ ಅವರಿಗೆ ಆ ಸೋಂಕು ತಗಲುತ್ತದೆ. ಮಾನವರ ಪಾಲಿಗೆ ಕೈ ಎಂಬುದು ಭಾರೀ ಚಟುವಟಿಕೆಯಲ್ಲಿರುವ ಅಂಗ. ನಿದ್ರೆಯ ಹೊರತಾಗಿ ಅನುಕ್ಷಣವೂ ಕೈ ಚಟುವಟಿಕೆಯಲ್ಲಿರುತ್ತದೆ. ಬಯಸಿದರೂ ಬಯಸದಿದ್ದರೂ ಕಣ್ಣು, ಬಾಯಿ ಸಹಿತ ದೇಹದ ವಿವಿಧ ಭಾಗಗಳನ್ನು ಕೈ ಸ್ಪರ್ಶಿಸುತ್ತಲೂ ಇರುತ್ತದೆ. ಬರೆಯುವಾಗ, ಆಲೋಚಿಸುವಾಗ, ಚಿಂತೆಯಲ್ಲಿರುವಾಗ, ಕುತೂಹಲ, ಬೇಸರ, ಕಣ್ಣೀರು ಇತ್ಯಾದಿ ಇತ್ಯಾದಿ ಎಲ್ಲ ಸ್ಥಿತಿಗಳಲ್ಲೂ ಗೊತ್ತಿಲ್ಲದೆಯೇ ಕೈ ಬೆರಳನ್ನು ಬಾಯಿಗೆ, ಕಣ್ಣಿಗೆ, ತುಟಿಗೆ ತಾಗಿಸಿ ಇಡುವುದು ಇದೆ. ಪರೀಕ್ಷೆ ಬರೆಯುವಾಗ ಮಕ್ಕಳು ಬೆರಳನ್ನು ಬಾಯಿಗಿಡುವ ದೃಶ್ಯ ಸಾಮಾನ್ಯ. ಕೊರೋನಾ ವಕ್ಕರಿಸುವುದೇ ಹೀಗೆ. ಮನುಷ್ಯನ ದೇಹವನ್ನು ಪ್ರವೇಶಿಸಿದ ಬಳಿಕ ತನ್ನ ಸಂಖ್ಯೆಯನ್ನು ಅದು ವೃದ್ಧಿಸಿಕೊಳ್ಳಲು ಪ್ರಾರಂಭಿಸುತ್ತದಲ್ಲದೇ, ದೇಹದ ಪ್ರಮುಖ ಅಂಗಗಳಾದ ಶ್ವಾಸಕೋಶ, ಮೆದುಳು ಸಹಿತ ವಿವಿಧ ಅವಯವಗಳಲ್ಲಿ ಠಿಕಾಣಿ ಹೂಡುತ್ತದೆ. ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವ ವ್ಯಕ್ತಿ ಇದರ ಜೊತೆ ಧೈರ್ಯದಿಂದಲೇ ಹೋರಾಡುತ್ತಾನೆ. ಯಶಸ್ವಿಯೂ ಆಗುತ್ತಾನೆ.
1997ರಲ್ಲಿ ಮೊದಲಾಗಿ ಬರ್ಡ್ ಫ್ಲೂ (HA) ಕಾಣಿಸಿ ಕೊಂಡದ್ದೂ ಚೀನಾದಲ್ಲೇ. ಹಾಂಕಾಂಗ್‍ಗೂ ಚೀನಾಕ್ಕೂ ನಡುವೆ ಸಂಬಂಧ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹಾಂಕಾಂಗ್ ಅನ್ನು ಸ್ವತಂತ್ರ ದೇಶವೆಂದು ಚೀನಾ ಈವರೆಗೂ ಒಪ್ಪಿಲ್ಲ. 1997ರಲ್ಲಿ ಈ ಬರ್ಡ್ ಫ್ಲೂ ಹಾಂಕಾಂಗ್‍ನಲ್ಲಿ ಕಾಣಿಸಿಕೊಂಡಾಗ ಅದನ್ನು ಚೀನಾದ ಪಿತೂರಿ ಎಂದು ಅದು ಆರೋಪಿಸಿತ್ತು. ಹಾಂಕಾಂಗ್‍ನ ಮಾಂಸೋದ್ಯಮ ಅವಲಂಬಿಸಿರುವುದೇ ಚೀನಾದ ಮಾರುಕಟ್ಟೆಯನ್ನು. 80% ಕೋಳಿಗಳು ಆಮದಾಗುವುದೇ ಚೀನಾದಿಂದ. ಬರ್ಡ್ ಫ್ಲೂನ ಕಾರಣದಿಂದ ಹಾಂಕಾಂಗ್ ಅಂದು ಸುಮಾರು 1.3 ಮಿಲಿಯನ್ ಕೋಳಿ, ಬಾತುಕೋಳಿ, ಪಾರಿವಾಳ ಮತ್ತು ಇನ್ನಿತರ ಪಕ್ಷಿಗಳ ಮಾರಣ ಹೋಮ ನಡೆಸಿತ್ತು. ಆಧುನಿಕ ಜಗತ್ತಿನಲ್ಲಿ ಕಾಯಿಲೆಯೂ ಸಂಚಿನ ಭಾಗವಾಗಿರುವ ಸಾಧ್ಯತೆ ಇರುತ್ತದೆ ಎಂಬುದಕ್ಕೆ ಉದಾಹರಣೆ ಇದು. ಕೊರೋನಾ ವೈರಸನ್ನು ಅಮೇರಿಕವೇ ತಯಾರಿಸಿ ಚೀನಾದಲ್ಲಿ ಹರಡಿದೆ ಎಂಬ ಆರೋಪವನ್ನು ಚೀನಾದ ವಿದೇಶಾಂಗ ಕಚೇರಿಯ ಅಧಿಕಾರಿಯೇ ಹೇಳಿದ್ದಾರೆ. ಏಡ್ಸ್ ನ ಕುರಿತೂ ಇಂಥದ್ದೇ ಆರೋಪ ಇದೆ. ಈ ಹಿಂದೆ ಗುಜರಾತ್‍ನಲ್ಲಿ ಕಾಣಿಸಿಕೊಂಡ ಪ್ಲೇಗ್‍ನ ಕುರಿತೂ ಇಂಥದ್ದೇ ಅನುಮಾನವನ್ನು ವ್ಯಕ್ತಪಡಿಸಲಾಗಿತ್ತು. ಶ್ರೀಮಂತ ರಾಷ್ಟ್ರಗಳು ತಮ್ಮ ಪ್ರಯೋಗಾಲಯದಲ್ಲಿ ವೈರಸನ್ನು ಸೃಷ್ಟಿಸಿ ಬಡ ರಾಷ್ಟ್ರಗಳ ಮೇಲೆ ಅದನ್ನು ಪ್ರಯೋಗಿಸಿ ನೋಡುತ್ತವೆ ಎಂಬ ಶಂಕೆಗೆ ಬಲವಾದ ಆಧಾರ ಇಲ್ಲದೇ ಇದ್ದರೂ ಆ ಬಗೆಗಿನ ಅನುಮಾನ ಇನ್ನೂ ಹೊರಟು ಹೋಗಿಲ್ಲ. ಕುತೂಹಲಕಾರಿ ಸಂಗತಿ ಏನೆಂದರೆ,
ಇತ್ತೀಚಿನ ಎರಡು ದಶಕ ಗಳಲ್ಲಿ ಕಾಣಿಸಿಕೊಂಡ ಮಹಾಮಾರಿ ವೈರಸ್‍ಗಳಾದ ಬರ್ಡ್ ಫ್ಲೂ, ಸಾರ್ಸ್, ಮರ್ಸ್ ಮತ್ತು ಕೊರೋನಾ ಇವೆಲ್ಲವುಗಳ ಜನ್ಮಸ್ಥಳ ಚೀನಾ ಎಂಬುದು. ಮಾತ್ರವಲ್ಲ, ಈ ಎಲ್ಲ ವೈರಸ್ ಗಳೂ ಪ್ರಾಣಿಗಳ ದೇಹದಲ್ಲಿ ವಾಸಿಸುವವುಗಳು ಎಂಬುದು. 1917ರಲ್ಲಿ ಕಾಣಿಸಿಕೊಂಡ ಸ್ಪಾನಿಶ್ ಫ್ಲೂನ ಹುಟ್ಟೂರೂ ಚೀನಾವೇ. ಚೀನಾದ ಉತ್ತರ ಭಾಗದಲ್ಲಿ ಹುಟ್ಟಿಕೊಂಡ ಈ ಕಾಯಿಲೆಯು ಆ ಬಳಿಕ ಬ್ರಿಟನ್ ಮತ್ತು ಫ್ರಾನ್ಸ್ ಗೆ ತಲುಪಿ ಅಲ್ಲಿಂದ ಶೀಘ್ರಗತಿಯಲ್ಲಿ ಯುರೋಪಿನಾದ್ಯಂತ ಹರಡಿಕೊಂಡಿತು. ಸುಮಾರು 10 ಕೋಟಿ ಮಂದಿ ಈ ಕಾಯಿಲೆಗೆ ಬಲಿಯಾದರು. 1918ರಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಸರಕಾರಗಳು ಚೀನಾದಿಂದ ಸಾವಿರಾರು ಸಂಖ್ಯೆಯಲ್ಲಿ ಕೂಲಿಕಾರ್ಮಿಕರನ್ನು ತಮ್ಮೂರಿಗೆ ಕರೆಸಿಕೊಂಡವು. ಈ ಕೂಲಿ ಕಾರ್ಮಿಕರ ಮೂಲಕ ಸ್ಪಾನಿಶ್ ಫ್ಲೂ ಯುರೋಪನ್ನು ಪ್ರವೇಶಿಸಿತು. ಈ ಫ್ಲೂ ಬಾಧಿತ ವ್ಯಕ್ತಿ ಸೀನಿದರೆ ಮತ್ತು ಕೆಮ್ಮಿದರೆ ಒಮ್ಮೆಗೇ ಅರ್ಧ ಮಿಲಿಯನ್ ವೈರಾಣುಗಳು ಸುತ್ತಲೂ ಹರಡುತ್ತವೆ. ಅಂತಿಮವಾಗಿ 1919ರ ಬೇಸಿಗೆಯಲ್ಲಿ ನಿಧಾನಕ್ಕೆ ಈ ಫ್ಲೂ ನಿಯಂತ್ರಣಕ್ಕೆ ಬಂತು ಮತ್ತು ಜಗತ್ತು ನಿಟ್ಟುಸಿರಿಟ್ಟಿತು. 1980ರಲ್ಲಿ ಆಫ್ರಿಕನ್ ರಾಷ್ಟ್ರಗಳಲ್ಲಿ ಕಾಣಿಸಿ ಕೊಂಡ HIV ಇನ್ನೊಂದು ಪ್ರಾಣಿಜನ್ಯ ವೈರಸ್. ಕ್ಯಾಮರೂನ್, ಈಕ್ವಿಡಾರ್, ಕಾಂಗೋ, ಗಿನಿ, ಸೆನೆಗಲ್ ಇತ್ಯಾದಿ ರಾಷ್ಟ್ರಗಳಲ್ಲಿ HIVಯ ಹುಟ್ಟು ಇದೆ ಎಂದು ಹೇಳಲಾಗುತ್ತದೆ. HIVಯು ಮಂಗನಿಂದ ಅಥವಾ ಚಿಂಪಾಂಜಿಯಿಂದ ಮಾನವರಿಗೆ ಹರಡಿದೆ ಎಂಬುದಾಗಿ 1999ರಲ್ಲಿ ಬಿಡುಗಡೆಗೊಳಿಸಲಾದ ಸಂಶೋಧನಾ ವರದಿಗಳು ಹೇಳುತ್ತವೆ. ಮುಖ್ಯವಾಗಿ, ಈ ವೈರಸ್ ಮನುಷ್ಯನ ದೇಹ ಪ್ರವೇಶಿಸಿದ್ದು ಬೇಟೆಗಾರರಿಂದಾಗಿ. ಮಂಗ ಇಲ್ಲವೇ ಚಿಂಪಾಂಜಿಯನ್ನು ಬೇಟೆಯಾಡಿದ ಮನುಷ್ಯ ಅದನ್ನು ಸೇವಿಸಿದ್ದಾನೆ ಅಥವಾ ಈ ಪ್ರಾಣಿಯ ರಕ್ತ ಬೇಟೆಗಾರನ ದೇಹ ಪ್ರವೇಶಿಸಿದೆ. ಈ ಮೂಲಕ HIV ಮಾನವನ ಸಂಪರ್ಕಕ್ಕೆ ಬಂದಿದೆ ಎಂದು ಕಂಡುಕೊಳ್ಳಲಾಗಿದೆ. ನಿಜವಾಗಿ,
ಪ್ರಾಣಿಗಳ ದೇಹದಲ್ಲಿರುವ ವೈರಸ್‍ಗಳು ಮನುಷ್ಯನ ದೇಹವನ್ನು ಪ್ರವೇಶಿಸಿ ಮರಣ ಮೃದಂಗ ಬಾರಿಸುವ ಘಟನೆಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಲೇ ಇವೆ. ನಿಯಂತ್ರಣಕ್ಕೆ ಬಂತೆಂದು ಜಗತ್ತು ನಿಟ್ಟುಸಿರು ಬಿಡು ವಾಗ ಮತ್ತೊಮ್ಮೆ ಇನ್ನಷ್ಟು ಪ್ರಬಲವಾಗಿ ಅವು ಮಾನವ ಜಗತ್ತನ್ನು ಕಾಡುತ್ತವೆ. 1976ರಲ್ಲಿ ಸುಡಾನ್ ಮತ್ತು ಕಾಂಗೋ ಗಣರಾಜ್ಯಗಳಲ್ಲಿ ಕಾಣಿಸಿಕೊಂಡ ಎಬೋಲಾವು ಆ ಬಳಿಕ 2014ರಲ್ಲಿ ಮತ್ತೊಮ್ಮೆ ರಂಗ ಪ್ರವೇಶಿಸಿತು. ಇದಕ್ಕಿಂತ ಮೊದಲು 1967ರಲ್ಲಿ ಮರ್‍ಬರ್ಗ್ ವೈರಸ್ ಕಾಣಿಸಿಕೊಂಡಿತ್ತು. ಮರ್‍ಬರ್ಗ್ ಮತ್ತು ಎಬೋಲಾ ಇವೆರಡೂ ಒಂದೇ ರೀತಿಯ ವೈರಸ್‍ಗಳು. ಎಬೋಲಾ ವೈರಸ್ ಕೋತಿ, ಚಿಂಪಾಂಜಿ, ಗೊರಿಲ್ಲಾ, ಬಾವಲಿ ಇತ್ಯಾದಿಗಳಲ್ಲಿ ಬದುಕುತ್ತವೆ. ಎಬೋಲಾ ಎಂಬುದು ಕಾಂಗೋದಲ್ಲಿರುವ ನದಿಯ ಹೆಸರು. ಇದರ ಸುಧಾರಿತ ರೂಪವೇ ಮರ್‍ಬರ್ಗ್ ವೈರಸ್. 1980ರಲ್ಲಿ ಕೋತಿ ಅಥವಾ ಚಿಂಪಾಂಜಿಯ ದೇಹದಿಂದ ಮಾನವ ದೇಹಕ್ಕೆ HIV ಜಿಗಿಯಿತು. 2002ರಲ್ಲಿ ಚೀನಾವು ಜಗತ್ತಿಗೆ ಸಾರ್ಸ್ ವೈರಸನ್ನು ಸರಬರಾಜು ಮಾಡಿತು. ಬಾವಲಿಯ ದೇಹದಲ್ಲಿದ್ದ ಮರ್ಸ್ ವೈರಸ್ 2012ರಲ್ಲಿ ಮಾನವನ ದೇಹ ಸೇರಿತು. 2015ರಲ್ಲಿ ಮತ್ತೆ ಅದು ಮಾನವನನ್ನು ಬೇಟೆಯಾಡಿ ಭಯ ಮೂಡಿಸಿತು. ಇದೀಗ ಕೊರೋನಾ. ಈ ಎಲ್ಲವುಗಳ ಮೂಲ ಪ್ರಾಣಿಗಳು. ಐದಾರು ವರ್ಷಗಳಿಗೊಮ್ಮೆ ಇವು ತಮ್ಮ ಹೆಸರನ್ನು ಬದಲಿಸಿಕೊಂಡು ಮತ್ತು ಒಂದಷ್ಟು ಬಲದೊಂದಿಗೆ ಮತ್ತೆ ಮತ್ತೆ ದಾಳಿ ಮಾಡುತ್ತಲೇ ಇವೆ. ಆದರೆ, 1917ರ ಸ್ಪಾನಿಶ್ ಫ್ಲೂನಿಂದ ಹಿಡಿದು ಈಗಿನ ಕೊರೋನಾದ ವರೆಗೆ ಹೆಚ್ಚಿನ ವೈರಸ್‍ಗಳ ಉಗಮ ಸ್ಥಾನ ಚೀನಾ ಎಂಬುದನ್ನು ಗಮನಿಸುವಾಗ ಮತ್ತು ಅಲ್ಲಿನ ಆಹಾರ ಕ್ರಮವನ್ನು ಪರಿಶೀಲಿಸುವಾಗ ಕೆಲವು ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ನಾಯಿ ಮತ್ತು ಬಾವಲಿಯೂ ಸೇರಿದಂತೆ ಬಹುತೇಕ ಪ್ರಾಣಿ ಮತ್ತು ಪಕ್ಷಿಗಳನ್ನು ಆಹಾರವಾಗಿ ಸೇವಿಸುವ ಕ್ರಮವೊಂದು ಚೀನಾದಲ್ಲಿದೆ. ಒಂದು ರೀತಿಯಲ್ಲಿ ಜಗತ್ತಿನ ಆಹಾರ ಕ್ರಮಗಳಿಗಿಂತ ತೀರಾ ಭಿನ್ನವಾದ ಆಹಾರ ಕ್ರಮ ಚೀನೀಯರದ್ದು. ಇಂಥ ಆಹಾರ ಕ್ರಮವೇ ರೋಗಗಳ ಉತ್ಪತ್ತಿಗೆ ಕಾರಣವಾದುವೇ? ಕಾಡು ಮನುಷ್ಯರಲ್ಲೂ ಮಾಂಸಾಹಾರದ ಕುರಿತಂತೆ ನಿರ್ದಿಷ್ಟ ಪರಿಮಿತಿಗಳಿವೆ ಎಂದು ಹೇಳಲಾಗುತ್ತದೆ. ಸಿಕ್ಕ ಸಿಕ್ಕ ಪ್ರಾಣಿಗಳನ್ನೆಲ್ಲ ಕೊಂದು ತಿನ್ನುವ ಆಹಾರ ಕ್ರಮ ಮನುಷ್ಯನ ಪಾಲಿಗೆ ಅನ್ಯ ಎಂಬ ವಾದ ಇದೆ. ಪ್ರಾಕೃತಿಕ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಚೀನಾದಲ್ಲಿ ಮತ್ತೆ ಮತ್ತೆ ಪ್ರಾಣಿಜನ್ಯ ವೈರಸ್‍ಗಳು ಮಾನವನ ಮೇಲೆ ದಾಳಿ ಮಾಡುತ್ತಿವೆಯೇ? ಚೀನಿಯರು ಆಹಾರವಾಗಿ ಉಪಯೋಗಿಸದ ಪ್ರಾಣಿಗಳಿಲ್ಲ. ಹಾವು, ಹಲ್ಲಿ, ಓತಿ, ಉಡ, ಕಡವೆ, ಪುನುಗು ಬೆಕ್ಕು, ನರಿ ಹೀಗೆ ಎಲ್ಲವೂ ಅವರ ಖಾದ್ಯ ಪದಾರ್ಥಗಳೇ. ಕೊರೋನಾ ಸಾವಿನ ನರ್ತನ ಮಾಡತೊಡಗಿದಾಗ ಚೀನಾ ಆಡಳಿತವು ವುಹಾನ್ ಪಟ್ಟಣದ್ದೂ ಸೇರಿದಂತೆ ದೇಶದಾದ್ಯಂತವಿರುವ ಇಂಥ 20 ಸಾವಿರಕ್ಕೂ ಮಿಕ್ಕಿ ಮಾಂಸದ ಮಾರುಕಟ್ಟೆಗಳನ್ನು ಮುಚ್ಚಿ ಬಿಟ್ಟಿರುವುದೂ ಗಮನಾರ್ಹ. ಆದ್ದರಿಂದಲೇ, ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಮರು ಅವಲೋಕನಕ್ಕೆ ಒಳಗಾಗಬೇಕಾಗಿದೆ. ಹಾಗೆಯೇ, ವುಹಾನ್ ಪಟ್ಟಣದಲ್ಲೇ ವೈರಸನ್ನು ಸಂಶೋಧಿಸುವ ವಿರೊಲೊಜಿ ಸಂಸ್ಥೆಯೂ ಇದೆ. ಅಲ್ಲಿ ಜೈವಿಕ ಅಸ್ತ್ರವನ್ನು ಸಂಶೋಧಿಸಲಾಗುತ್ತಿತ್ತೆ? ಅಲ್ಲಿ ಪ್ರಯೋಗಕ್ಕೆ ಒಳಗಾಗಿದ್ದ ಪ್ರಾಣಿಯೊಂದು ತಪ್ಪಿಸಿಕೊಂಡು ಹೋಗಿದ್ದು, ಅದರಲ್ಲಿದ್ದ ಕೋರೋನಾ ವೈರಸ್ ಈ ಅನಾಹುತಕ್ಕೆ ಕಾರಣವಾಯಿತೆ? ಗೊತ್ತಿಲ್ಲ. ಅಂದಹಾಗೆ,
ಮನೆಯವರನ್ನು ಭೇಟಿಯಾಗುವ ಉತ್ಸಾಹದಲ್ಲಿ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿದವನನ್ನು ಕ್ರಿಮಿನಲ್‍ನಂತೆ ನಡೆಸಿ ಕೊಂಡಿರುವುದರ ಹಿಂದೆ ಇಂಥದ್ದೊಂದು ಕತೆ ಇದೆ ಎಂಬುದು ಆ ತರುಣನಿಗೆ ಗೊತ್ತಿದೆಯೋ ಇಲ್ಲವೋ?
No comments:
Post a Comment