Monday, May 18, 2020

ಕೈ ಬಾಯಿ ಅಶುದ್ಧಾವಸ್ಥೆಯಲ್ಲಿಟ್ಟುಕೊಂಡು ಕೈ ತೊಳೆಯುತ್ತಾ..



ಇವತ್ತು ಹಸ್ತಕ್ಕೆ ಅಪಾರವಾದ ಮಹತ್ವ ಲಭ್ಯವಾಗಿದೆ. ಇದನ್ನು ಕರುಣಿಸಿದ್ದು ಕೊರೋನಾ. ಹಸ್ತ ಎಂಬುದು ಈ ದೇಶದ ಪಾಲಿಗೆ ವ್ಯಕ್ತಿ ಸಂಬಂಧಿತ ಅಂಗ ಮಾತ್ರ ಅಲ್ಲ, ಅದಕ್ಕೆ ರಾಜಕೀಯ ಮಗ್ಗುಲೂ  ಇದೆ. ಹಸ್ತದ ಮಹಿಮೆ ಏನು ಅನ್ನುವುದನ್ನು ಈ ದೇಶಕ್ಕೆ ಮನವರಿಕೆ ಮಾಡಿಸಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕಿದೆ. ಮುಖ್ಯವಾಗಿ ಮೂರ್ನಾಲ್ಕು ದಶಕಗಳ ಹಿಂದೆ ಕಾಂಗ್ರೆಸ್‍ನ ಚುನಾವಣಾ ಹೋರಾಟವು  ಹಸ್ತದ ಪ್ರಾಮುಖ್ಯತೆಯನ್ನೇ ಅವಲಂಬಿಸಿತ್ತು. ಶಿಕ್ಷಿತರಲ್ಲದ ಮತ್ತು ರೈತ-ಕೂಲಿಕಾರ್ಮಿಕರೇ ಅಧಿಕವಿದ್ದ ಭಾರತೀಯ ಮತದಾರರನ್ನು ಆಕರ್ಷಿಸುವುದಕ್ಕೆ ಹಸ್ತದ ಮಹತ್ವವನ್ನು ಸಾರುವುದೇ ಪರಿಣಾಮಕಾರಿ ಎಂದು ಅಂದು ಕಾಂಗ್ರೆಸ್ ತೀರ್ಮಾನಿಸಿತ್ತು. ಈಗಿನಂತೆ ವರ್ಷದಲ್ಲಿ ಇಷ್ಟು ಕೋಟಿ ಉದ್ಯೋಗ, ಇಷ್ಟು ಐಟಿ ನಗರಗಳ ಸ್ಥಾಪನೆ, ಸ್ಮಾರ್ಟ್ ಸಿಟಿಗಳ ನಿರ್ಮಾಣ, ಚಂದ್ರಯಾನ, ಸ್ಟಾರ್ಟ್ ಅಪ್‍ಗಳು,  ಆಯುಷ್ಮಾನ್, ಮೇಕ್ ಇನ್ ಇಂಡಿಯಾ ಇತ್ಯಾದಿ ಇತ್ಯಾದಿ ಘೋಷಣೆಗಳನ್ನು ಸ್ವೀಕರಿಸುವುದಕ್ಕೆ ಮೂರ್ನಾಲ್ಕು ದಶಕಗಳ ಹಿಂದಿನ ಭಾರತೀಯರು ಸಜ್ಜಾಗಿರಲಿಲ್ಲ. ಅವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ  ಆಹಾರ ಮತ್ತು ಉಳಕೊಳ್ಳುವುದಕ್ಕೆ ಮನೆ- ಇವೆರಡೇ ಆದ್ಯತೆಯ ವಿಷಯಗಳಾಗಿದ್ದುವು. ಈಗಿನಂತೆ ತಂತ್ರಜ್ಞಾನಗಳು ಬೆಳೆದಿಲ್ಲದ ಮತ್ತು ಸಾಮಾಜಿಕ ಜಾಲತಾಣಗಳ ಭರಾಟೆಯಿಲ್ಲದ ಆ ಕಾಲದಲ್ಲಿ  ರಾಜಕೀಯ ಎಂಬುದು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಕಾಣಿಸಿಕೊಳ್ಳುವ ಮಳೆ ನೀರೇ ಹೊರತು ಈಗಿನಂತೆ ವರ್ಷದ 365 ದಿನಗಳು ಮತ್ತು 24 ಗಂಟೆಯೂ ಸದಾ ಸುರಿಯುತ್ತಿರುವ ಜಡಿಮಳೆ  ಆಗಿರಲಿಲ್ಲ. ಆದ್ದರಿಂದಲೇ, 

ಕಾಂಗ್ರೆಸ್ ಆ ಕಾಲದಲ್ಲಿ ತನ್ನ ಪಕ್ಷದ ಚಿಹ್ನೆಯನ್ನೇ ಚುನಾವಣಾ ಪ್ರಣಾಳಿಕೆಯಾಗಿ ಬಿಂಬಿಸುವ ತಂತ್ರ ಹೆಣೆದಿತ್ತು. ಹಸ್ತ ಇಲ್ಲದಿದ್ದರೆ ಹೇಗೆ ಕೆಲಸ ಮಾಡುವಿರಿ, ಉಣ್ಣುವಿರಿ, ದೈ ನಂದಿನ ಚಟುವಟಿಕೆಗಳನ್ನು ಹೇಗೆ ಮಾಡುವಿರಿ ಎಂದೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮತದಾರ ರೊಂದಿಗೆ ಪ್ರಶ್ನಿಸುತ್ತಿದ್ದರು. ಹಸ್ತವಿದ್ದರೆ ದುಡಿಮೆ, ಹಸ್ತವಿದ್ದರೆ ಅನ್ನ ಅನ್ನುವ ರೀತಿಯ ಸಂವಾದಗಳು  ಸಾಮಾನ್ಯ ಜನರ ನಡುವೆ ನಡೆಯುತ್ತಲೂ ಇದ್ದುವು. ಇದೀಗ ಹಸ್ತ ಮತ್ತೊಮ್ಮೆ ಗಂಭೀರ ಚರ್ಚೆಗೆ ಒಳಗಾಗಿದೆ. ನಿನ್ನೆ-ಮೊನ್ನೆ ನಮಗೆ ಹಸ್ತ ಲಾಘವ ಮಾಡುತ್ತಿದ್ದವ ಇವತ್ತು ಮಾಡುತ್ತಿಲ್ಲ. ಆಲಿಂಗಿಸುತ್ತಿದ್ದವ  ಆಲಿಂಗಿಸುತ್ತಿಲ್ಲ. ಒಂದುವೇಳೆ, 

ಅಭ್ಯಾಸ ಬಲದಿಂದ ಹಸ್ತಲಾಘವ ಮಾಡಿದರೂ ತಕ್ಷಣ ಕೈ ತೊಳೆದುಕೊಳ್ಳುವ ಧಾವಂತಕ್ಕೆ ಬೀಳುತ್ತಾರೆ. ಅಂದರೆ, ನಮ್ಮ ಹಸ್ತ ಈಗ ನಮ್ಮದಷ್ಟೇ ಆಗಿ ಉಳಿದಿಲ್ಲ. ಅದು ಇ ನ್ನೊಬ್ಬರ ಆರೋಗ್ಯ-ಅನಾರೋಗ್ಯವನ್ನು ನಿರ್ಧರಿಸುವ ಅಂಗವೂ ಆಗಿಬಿಟ್ಟಿದೆ. ನಾಲ್ಕು ದಶಕಗಳ ಹಿಂದೆ ನಮ್ಮ ಹಿರಿಯರ ಪಾಲಿಗೆ ಹಸ್ತವು ಅನ್ನ ನೀಡುವ ಅಂಗವಷ್ಟೇ ಆಗಿತ್ತು. ಅವರದನ್ನು  ಪ್ರೀತಿಸುತ್ತಿದ್ದರು. ಹಸ್ತದ ಚಿಹ್ನೆಗೆ ಮತ ಹಾಕಿ ತಮ್ಮ ಹಸ್ತಪ್ರೇಮವನ್ನು ಮೆರೆಯುತ್ತಿದ್ದರು. ಈಗ ಹಸ್ತ ಎಂಬುದು ಶಂಕಿತ ಭಯೋತ್ಪಾದಕನಂತಾಗಿ ಬಿಟ್ಟಿದೆ. ನನ್ನದೇ ಹಸ್ತದ ಮೇಲೆ ನನಗೇ ನಂಬಿಕೆಯಿಲ್ಲ.  ಕ್ಷಣಕ್ಷಣಕ್ಕೂ ಹಸ್ತವನ್ನು ತೊಳೆಯುತ್ತಿದ್ದೇವೆ. ಎಲ್ಲಿ ಮಲಿನವಾಗಿದೆಯೋ ಎಂಬ ಆತಂಕದಲ್ಲಿದ್ದೇವೆ. ಇನ್ನೊಬ್ಬರಿಗೆ ಹಸ್ತಲಾಘವ ಮಾಡುವುದಕ್ಕೂ ಕೈ ಮುಂದೆ ಬರುತ್ತಿಲ್ಲ. ಒಂದು ವೇಳೆ ಕೈ ಮುಂದೆ  ಮಾಡಿದರೂ ಎದುರಿನವರಿಗೆ ನಮ್ಮ ಹಸ್ತದ ಮೇಲೆ ನಂಬಿಕೆಯಿಲ್ಲ. ನಮ್ಮದೇ ದೇಹದ ಅಂಗವೊಂದು ನಮ್ಮೊಳಗಡೆಯೇ ಅಸ್ಪೃಶ್ಯವಾಗಿರುವ ಸ್ಥಿತಿ ಇದು. ದೇಹಕ್ಕೆ ಹಸ್ತ ಅನಿವಾರ್ಯ ಎಂಬುದು ಒಂದು  ಕಡೆಯಾದರೆ, ಈ ಹಸ್ತವೇ ತನ್ನ ಅಂತ್ಯಕ್ಕೆ ಕಾರಣವಾಗುತ್ತದೋ ಎಂಬ ಭೀತಿ ಇನ್ನೊಂದು ಕಡೆ. ಇದೊಂದು ವಿಚಿತ್ರ ಸ್ಥಿತಿ. ನಮ್ಮ ದೇಹದ ಒಂದು ಪ್ರಮುಖ ಅಂಗವೇ ನಮ್ಮ ಪಾಲಿನ ವಿಲನ್ ಆಗುವ  ಸಾಧ್ಯತೆಯನ್ನು ನಾವು ಕೊರೋನಾಕ್ಕಿಂತ ಮೊದಲು ಎಷ್ಟು ಬಾರಿ ಚರ್ಚಿಸಿದ್ದೇವೆ? ಆ ಬಗ್ಗೆ ಗಂಭೀರವಾಗಿ ನಾವೆಷ್ಟು ಬಾರಿ ಚಿಂತಿಸಿದ್ದೇವೆ? 

ಪವಿತ್ರ ಕುರ್‍ಆನ್‍ನಲ್ಲಿ ಮರಣಾನಂತರದಲ್ಲಿ ನಡೆಯುವ  ವಿಚಾರಣೆಯ ಒಂದು ದೃಶ್ಯಕಲ್ಪನೆಯಿದೆ. ಜನರು ಮೃತಪಟ್ಟ ಬಳಿಕ ಮತ್ತೊಮ್ಮೆ ಎಬ್ಬಿಸಲ್ಪಡುತ್ತಾರೆ ಮತ್ತು ಜೀವಂತ ಇದ್ದಾಗ ಅವರು ಮಾಡಿದ ಕೃತ್ಯಗಳ ವಿಚಾರಣೆಯೊಂದು ನಡೆಯಲಿದೆ. ಆಗ ಆತ ನ/ಕೆಯ ನಾಲಗೆಯ ಬದಲು ದೇಹದ ಅಂಗಾಂಗಗಳು ಮಾತಾಡುವ ಸನ್ನಿವೇಶ ಇದೆ.

‘ಅವರೆಲ್ಲರೂ ಅಲ್ಲಿಗೆ ತಲುಪಿದಾಗ ಅವರ ಕಿವಿಗಳೂ ಕಣ್ಣುಗಳೂ ಅವರ ದೇಹದ ಚರ್ಮಗಳೂ ಅವರು ಭೂಲೋಕದಲ್ಲಿ ಏನು ಮಾಡುತ್ತಿದ್ದರೆಂಬ ಬಗ್ಗೆ ಸಾಕ್ಷ್ಯ  ಹೇಳುವುವು. ಆಗ ಅವರು ತಮ್ಮ  ಚರ್ಮದೊಡನೆ- ನೀವು ನಮ್ಮ ವಿರುದ್ಧ ಸಾಕ್ಷ್ಯ ಹೇಳಿದ್ದೇಕೆ ಎಂದು ಪ್ರಶ್ನಿಸುವರು’ ಎಂದು ಹೇಳುವ ಪವಿತ್ರ ಕುರ್ ಆನ್  (ಅಧ್ಯಾಯ 41, ವಚನ 20-21) ಆ ಬಳಿಕ ಇನ್ನೊಂದು ಮುಖ್ಯ ಅಂಶವನ್ನೂ  ಹೇಳುತ್ತದೆ-

ನೀವು ಭೂಲೋಕದಲ್ಲಿ ಅಡಗಿಕೊಂಡು ಅಪರಾಧವೆಸಗುತ್ತಿದ್ದಾಗ ನಿಮ್ಮ ಕಿವಿಗಳು, ನಿಮ್ಮ ಕಣ್ಣುಗಳು ಮತ್ತು ಚರ್ಮಗಳು ನಿಮ್ಮ ವಿರುದ್ಧ ಸಾಕ್ಷ್ಯ  ಹೇಳಲಿವೆ ಎಂಬ ಯೋಚನೆಯೇ ನಿಮಗಿರಲಿಲ್ಲ (ಅಧ್ಯಾಯ  41, ವಚನ 22).

ಒಂದು ರೀತಿಯಲ್ಲಿ, ನಮ್ಮದೇ ದೇಹದ ಅಂಗವೊಂದನ್ನು ಶಂಕಿತವಾಗಿ ನಡೆಸಿಕೊಳ್ಳುವ ಹೊಸ ಬಗೆಯ ಜೀವನ ಕ್ರಮವೊಂದನ್ನು ಕೊರೋನಾ ನಮಗೆ ಕಲಿಸಿಕೊಡುತ್ತಿದೆ. ಸಾಮಾನ್ಯವಾಗಿ ಶುದ್ಧ ಹಸ್ತ  ಮತ್ತು ಕೈ-ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಎಂಬ ರೀತಿಯ ಮಾತುಗಳನ್ನು ನಾವು ಬಳಸುವುದಿದೆ. ಶುದ್ಧ ಹಸ್ತ ಅಂದರೆ, ಕೈಯನ್ನು ಸದಾ ಸಾಬೂನು ಬಳಸಿ ತೊಳೆಯುವುದು ಎಂದು ಅರ್ಥ ಅಲ್ಲ.  ಕೈ ಬಾಯಿ ಶುದ್ಧವಾಗಿಟ್ಟುಕೊಳ್ಳುವುದು ಅಂದರೂ ಅಷ್ಟೇ- ಕೈಗೂ ಬಾಯಿಗೂ ಸೋಪ್ ವಾಟರ್ ಹಾಕಿ ತೊಳೆಯುವುದೆಂದಲ್ಲ. ಇವೆರಡೂ ವ್ಯಕ್ತಿಯಲ್ಲಿ ಚಾರಿತ್ರ್ಯ, ಪ್ರಾಮಾಣಿಕತೆಯನ್ನು ತುಂಬಿಸುವ  ಪದಗಳು. ಕೈ ಶುದ್ಧವಾಗಿರಬೇಕು ಎಂದರೆ ಕೈಯಿಂದ ಮಾಡುವ ಪ್ರತಿಯೊಂದೂ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಬೇಕು ಎಂದು ಅರ್ಥ. ಬರೆಯುವ ಬರಹ, ಮಾಡುವ ಕೆಲಸ ಎಲ್ಲವೂ. ಕೈಯನ್ನು  ಉಪಯೋಗಿಸಿ ಏನೆಲ್ಲವನ್ನು ಮಾಡಲು ಸಾಧ್ಯವೋ ಮತ್ತು ಏನೆಲ್ಲವನ್ನು ಮಾಡಲಾಗುತ್ತದೋ ಅವೆಲ್ಲವೂ ಕಲ್ಮಶ ರಹಿತ ಆಗಿರಬೇಕು ಅನ್ನುವ ಆಶಯ ಇದರದು. ಹೀಗಾದರೆ ಬಾಯಿಯೂ ಶುದ್ಧ  ವಾಗುತ್ತದೆ. ಪ್ರಾಮಾಣಿಕ ದುಡಿಮೆಯಿಂದ ಗಳಿಸಿದ ಸಂಪತ್ತು ಬಾಯಿಗೆ ಶುದ್ಧವಾದುದನ್ನೇ ತಲುಪಿಸುತ್ತದೆ. ಆ ಮೂಲಕ ನಾಲಗೆಯೂ ಶುದ್ಧವಾದುದನ್ನು ಮತ್ತು ಪ್ರಾಮಾಣಿಕತೆಯನ್ನೇ ಆಡುತ್ತದೆ.  ಇದೊಂದು ಬಗೆಯ ಸರಪಳಿಯಂತೆ. ಶುದ್ಧವಾದ ಕೈ ಇಡೀ ದೇಹವನ್ನೇ ಶುದ್ಧವಾಗಿಟ್ಟುಕೊಳ್ಳುವ ಕ್ರಿಯೆಯ ಉಗಮ ಸ್ಥಾನ ಎನ್ನಬಹುದು. ಆದರೆ,

ಸದ್ಯದ ಪರಿಸ್ಥಿತಿ ಹಾಗಿಲ್ಲ. ಕೈ ಮತ್ತು ಬಾಯಿಯನ್ನು ಅತ್ಯಂತ ಅಶುದ್ಧಾವಸ್ಥೆಯಲ್ಲಿಟ್ಟುಕೊಂಡು ನಡೆದಾಡುತ್ತಿರುವ ಮಾನವ ಜನಾಂಗವೊಂದು ಈ ಭೂಮಿಯ ಮೇಲೆ ಬದುಕುತ್ತಿದೆ. ಮಾನವನ ಕೈಯಿಂದ  ಹಿಡಿದು ಬಾಯಿಯವರೆಗೆ ಪ್ರತಿ ಅಂಗಗಳೂ ಇವತ್ತು ಶಂಕಿತ ಸ್ಥಿತಿಯಲ್ಲಿದೆ. ರಂಜನ್ ಗೊಗೋಯಿ ಅವರಿಂದ ಹಿಡಿದು ಐದು ವರ್ಷಕ್ಕೊಮ್ಮೆ ಮತ ಚಲಾಯಿಸಲು ಮತಗಟ್ಟೆಗೆ ಬರುವ ಕಟ್ಟಕಡೆಯ ಜ ನಸಾಮಾನ್ಯರವರೆಗೆ. ಪ್ರಧಾನಿ ಯಿಂದ ಹಿಡಿದು ಪಂಚಾಯತ್‍ನ ಸಾಮಾನ್ಯ ಜನಪ್ರತಿನಿಧಿಯ ವರೆಗೆ. ಉನ್ನತ ಪೊಲೀಸ್ ಅಧಿಕಾರಿಯಿಂದ ತೊಡಗಿ ಸಾಮಾನ್ಯ ಪೇದೆಯವರೆಗೆ. ಮಧ್ಯಪ್ರದೇಶದ ಒಂದಷ್ಟು  ಜನಪ್ರತಿನಿಧಿಗಳು ಇವತ್ತು ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಅವರಿಂದಾಗಿ ಒಂದು ಸರಕಾರ ಉರುಳಿ ಇನ್ನೊಂದು ಅಸ್ತಿತ್ವಕ್ಕೆ ಬಂದಿದೆ. ಈ ಇಡೀ ಪ್ರಕ್ರಿಯೆಯಲ್ಲಿ ಯಾರೂ ಪ್ರಾಮಾಣಿಕತೆಯನ್ನು  ದರ್ಶಿಸುತ್ತಿಲ್ಲ. ಇವರು ಕೈ ಮತ್ತು ಬಾಯಿಯನ್ನು ಹೊಲಸು ಮಾಡಿಕೊಂಡಿದ್ದಾರೆ ಎಂಬ ಮಾತನ್ನು ಕಟ್ಟಕಡೆಯ ಜನ ಸಾಮಾನ್ಯರು ಹೇಳುತ್ತಿದ್ದಾರೆ. ಇದೊಂದು ಉದಾಹರಣೆ ಅಷ್ಟೇ. ಎಲ್ಲೆಡೆಯೂ ಅ ಪ್ರಾಮಾಣಿಕತೆಯೆಂಬ ಕೈ-ಬಾಯಿ ಅಶುದ್ಧತೆಯು ಕಣ್ಣಿಗೆ ರಾಚುವಂತಿದೆ. ಇಲ್ಲಿ ಬಹುತೇಕ ಎಲ್ಲರೂ ಶಂಕಿತರೇ. ಎಲ್ಲಿಯ ವರೆಗೆಂದರೆ, ಕೊರೋನಾವನ್ನು ತಡೆಯುವುದಕ್ಕಾಗಿ ವಿತರಿಸಲಾಗುತ್ತಿರುವ  ಮಾಸ್ಕ್‍ಗಳನ್ನೂ ದುಪ್ಪಟ್ಟು    ಬೆಲೆಗೆ ಮಾರಲಾಗುತ್ತದೆ. ಸ್ಯಾನಿಟೈಸರ್ ಗಳ ಸ್ಥಿತಿಯೂ ಇದುವೇ. ನಿಜವಾಗಿ,

ಈಗ ಆರಂಭವಾಗಿರುವ ಕೈ ತೊಳೆಯುವ ಆಂದೋಲನವು ಬರೇ ಕೊರೋನಾವನ್ನು ದೃಷ್ಟಿ ಯಲ್ಲಿಟ್ಟುಕೊಂಡು ಮಾತ್ರ ನಡೆಯಬೇಕಾದುದಲ್ಲ. ಈ ಕೈ ತೊಳೆಯುವ ಪ್ರಕ್ರಿಯೆಯ ಜೊತೆಜೊತೆಗೇ  ಅವಲೋಕನವೊಂದೂ ನಡೆಯಬೇಕಾಗಿದೆ. ನಾವು ಈ ಕೊರೋನಾಕ್ಕಿಂತ ಮೊದಲು ಕೈ ತೊಳೆಯುತ್ತಿದ್ದೆವು. ಅದಕ್ಕೂ ಒಂದು ಉದ್ದೇಶ ಇತ್ತು. ಕೈಯ ಕೊಳೆ ಯನ್ನು ನೀಗಿಸುವುದು ಮತ್ತು ಕೈಯನ್ನು  ಶುದ್ಧ ವಾಗಿಟ್ಟುಕೊಳ್ಳುವುದು. ಹಾಗೆಯೇ ಕೊರೋನಾದ ಬಳಿಕದ ಕೈ ತೊಳೆಯುವಿಕೆಯ ಮುಖ್ಯ ಗುರಿ ಏನೆಂದರೆ, ಕೊರೋನಾ ವೈರಸನ್ನು ಕೈಯಿಂದ ನೀಗಿಸುವುದು ಮತ್ತು ನಮ್ಮ ದೇಹಕ್ಕೆ ಸೇರದಂತೆ  ತಡೆಯುವುದು. ಆದರೆ ಈ ಎರಡೂ ಕೈ ತೊಳೆಯುವಿಕೆಯೂ ಬಾಹ್ಯ ದೃಷ್ಟಿಯಿಂದ ಪರಿ ಪೂರ್ಣವೇ ಹೊರತು ಮನುಷ್ಯನ ಆಂತರಿಕ ದೃಷ್ಟಿಯಿಂದ ಪರಿಪೂರ್ಣವಲ್ಲ. ಕೊಳೆ ಎಂಬುದು ಒಂದು ಮಾಲಿನ್ಯ  ಸ್ಥಿತಿ. ಬಾಹ್ಯ ಕೊಳೆ ಹೇಗೆಯೋ ಆಂತರಿಕವಾಗಿಯೂ ಅಂಥದ್ದೊಂದು ಕೊಳೆಯ ಸ್ಥಿತಿ ಇರುತ್ತದೆ. ಕೈಯಲ್ಲಾಗಿರುವ ಕೊಳೆ ಬಾಹ್ಯವಾಗಿದ್ದರೆ, ನಂಜು, ಅಪ್ರಾಮಾಣಿಕತೆ, ಭ್ರಷ್ಟತೆ, ಕೋಮುವಾದ, ದ್ವೇಷ  ಇತ್ಯಾದಿ ಇತ್ಯಾದಿಗಳು ಈ ಕೊಳೆಯ ಆಂತರಿಕ ಸ್ಥಿತಿ. ಒಂದು ವೇಳೆ, 

ಬಾಹ್ಯದಲ್ಲಿರುವ ಕೊಳೆಯನ್ನು ನೀಗಿಸುವುದೇ ಕೈ ತೊಳೆ ಯುವ ಉದ್ದೇಶವಾದಾಗ ಅದು ಆ ವ್ಯಕ್ತಿಯನ್ನು ಆಂತರಿಕ ಪರಿ ಶುದ್ಧತೆಯೆಡೆಗೆ ಕೊಂಡೊಯ್ಯಲು ವಿಫಲವಾಗುತ್ತದೆ. ಕೊಳೆಯಿಂದ ಶುದ್ಧವಾದ ಅದೇ ಕೈಯಿಂದ ಆತ/ಕೆ ಅಶುದ್ಧವಾದ ಲಂಚ ಪಡಕೊಳ್ಳಬಲ್ಲ, ಸುಳ್ಳು ಬರೆಯಬಲ್ಲ. ವಂಚನೆ ಮಾಡಬಲ್ಲ. ಹಾಗೆ ದುಡಿದ  ಸಂಪತ್ತಿನಿಂದ ಹೊಟ್ಟೆ ತಣಿಸುವುದೆಂದರೆ ಆ ಕೊಳೆ ದೇಹಕ್ಕೂ ಅಂಟಿಕೊಳ್ಳುವುದೆಂದರ್ಥ. ಇವತ್ತು ಈ ದೈಹಿಕ ಕೊಳೆ ಸಾಂಕ್ರಾಮಿಕವಾಗಿ ಬಿಟ್ಟಿದೆ. ಕೈ ತೊಳೆದುಕೊಳ್ಳುವುದಕ್ಕೂ ಆಂತರಿಕ ವಾಗಿ ಪರಿ ಶುದ್ಧವಾಗುವುದಕ್ಕೂ ಸಂಬಂಧವೇ ಇಲ್ಲದಂತಹ ವಾತಾವರಣ ನಿರ್ಮಾಣವಾಗಿಬಿಟ್ಟಿದೆ. ಈ ಸಂಕ್ರಮಣ ಕಾಲದಲ್ಲೇ  ಕೊರೋನಾ ಬಂದಿದೆ. ದಿನದಲ್ಲಿ ಐದೋ, ಹತ್ತೋ, ಇಪ್ಪತ್ತೋ ಬಾರಿ ಕೈ  ತೊಳೆದುಕೊಳ್ಳುತ್ತಿದ್ದವರು ಈಗ ಅಸಂಖ್ಯ ಬಾರಿ ಕೈ ತೊಳೆಯತೊಡಗಿದ್ದಾರೆ. ಜೊತೆಗೇ ಸಾಬೂನನ್ನೂ ಕಡ್ಡಾಯವಾಗಿ ಉಪಯೋಗಿಸುತ್ತಿದ್ದಾರೆ. ಎಲ್ಲಿ ಈ ಕೊಳೆ ದೇಹವನ್ನು ಸೇರುತ್ತೋ ಅನ್ನುವ ಭಯ.  ಒಂದುವೇಳೆ, ದೇಹ ಸೇರಿಕೊಂಡರೆ ಜೀವವನ್ನೇ ಕಸಿದುಕೊಂಡೀತೋ ಅನ್ನುವ ಆತಂಕ. ಬಹುಶಃ,

ನಮ್ಮೊಳಗಿನ ಮಾಲಿನ್ಯವನ್ನು ನಮಗೆ ಗೊತ್ತುಪಡಿಸುವುದಕ್ಕೆ ಈ ಕೊರೋನಾ ಬಂದಿದೆಯೇನೋ ಎಂದು ಅನಿಸುತ್ತದೆ. ಅಪ್ರಾಮಾ ಣಿಕತೆಯು ದೇಹಾರೋಗ್ಯವನ್ನು ಕೆಡಿಸಬಲ್ಲುದು ಎಂಬುದನ್ನು ಕೊರೋ ನಾ ನೇರವಾಗಿ ಸಾರಿ ಸಾರಿ ಹೇಳುತ್ತಿರುವಂತಿದೆ. ನಮ್ಮದೇ ದೇಹದ ಅಂಗವೊಂದನ್ನು ಶಂಕಿತ ಸ್ಥಿತಿಯಲ್ಲಿಟ್ಟು ಕೊರೋನಾ ಇವತ್ತು ಪದೇ ಪದೇ ಪಾಠ ಮಾಡುತ್ತಿದೆ. ನಾವು ಕೈ ತೊಳೆದುಕೊಳ್ಳುತ್ತಿದ್ದೇವೆ.  ಪುಟ್ಟ ಹಸ್ತದಲ್ಲಿ ಆಗುವ ಕೊಳೆಗೆ ದೇಹವನ್ನೇ ಆಪೋಶನ ಪಡಕೊಳ್ಳುವ ಸಾಮಥ್ರ್ಯ ಇದೆಯೆಂಬುದೇ ನಮ್ಮೊಳಗನ್ನು ಅಲುಗಾಡಿಸಲು ಧಾರಾಳ ಸಾಕು. ಕೈ ತೊಳೆಯುವುದೆಂದರೆ, ಕೊಳೆ ನೀಗಿಸುವುದಷ್ಟೇ  ಅಲ್ಲ, ಬಾಹ್ಯದಿಂದ ತೊಡಗಿ ಆಂತರಿಕದ ವರೆಗೆ ಪರಿಶುದ್ಧವಾಗಿರುವುದು. ಪ್ರಾಮಾಣಿಕವಾಗಿರುವುದು.

ಕೈ ತೊಳೆಯುವುದೆಂದರೆ ಇದುವೇ.

No comments:

Post a Comment