Saturday, February 11, 2017

ಸಕಾರಾತ್ಮಕತೆ, ಆಶಾವಾದ ಮತ್ತು ಅವರು..

ನಂದಿತಾ ವೆಂಕಟೇಶನ್
ಪೌಲ್ ಕಲಾನಿಧಿ
ಇವರಿಬ್ಬರೂ ಪ್ರಸಿದ್ಧರಲ್ಲ. ಮಹಾನ್ ಸಾಧಕರಲ್ಲ. ತಂತಮ್ಮ ಗೆಳೆಯರು, ಕುಟುಂಬಿಕರು ಮತ್ತು ಪರಿಚಿತರ ಜಗತ್ತನ್ನು ದಾಟಿ ಬಹುದೂರ ಕೀರ್ತಿ ಪತಾಕೆಯನ್ನು ಹಾರಿಸಿದ ವ್ಯಕ್ತಿಗಳೂ ಇವರಲ್ಲ. ಆದರೆ ಇವರಿಬ್ಬರನ್ನೂ ಓದುತ್ತಾ ಹೋದಂತೆ ಇವರು ಸಣ್ಣವರಲ್ಲ ಎಂದು ಅನಿಸಿತು. ಪೌಲ್ ಕಲಾನಿಧಿಯ ‘When Breath Becomes air’ ಎಂಬ ಕೃತಿಯ ಒಂದು ಭಾಗವನ್ನು ಓದುತ್ತಾ ಹೋದಂತೆ ನನ್ನೊಳಗೆ ಅನೇಕಾರು ಭಾವಗಳು ಮೂಡಿದುವು. ವಿಷಾದ, ಆತ್ಮವಿಶ್ವಾಸ, ನಿರ್ಲಿಪ್ತತೆಯನ್ನು ನಮ್ಮೊಳಗೆ ಉತ್ಪಾದಿಸಿ ಪರಸ್ಪರ ಢಿಕ್ಕಿ ಹೊಡೆಸುವ ವಾಸ್ತವವಾದಿ ಪೌಲ್ ಕಲಾನಿಧಿ. ಬದುಕಿದ್ದು ಬರೇ 37 ವರ್ಷ. ನರತಜ್ಞ. ಪತ್ನಿ ಇದ್ದಾಳೆ. 2 ವರ್ಷದ ಮಗು ಇದೆ. ಇನ್ನೇನು ನರತಜ್ಞನಾಗಿ ಸಾಧನೆಗಳನ್ನು ಮಾಡಬೇಕು ಮತ್ತು ಸುಂದರ ಬದುಕನ್ನು ಸವೆಸಬೇಕು ಎಂದು ಅಂದುಕೊಳ್ಳುವಾಗಲೇ ಸಾವು ಎದುರು ಬಂದು ನಿಲ್ಲುತ್ತದೆ. ಈ ಪೌಲ್‍ಗೆ ಹೋಲಿಸಿದರೆ ನಂದಿತಾ ವೆಂಕಟೇಶನ್‍ಳ ಜೀವನಗಾಥೆ ಭಿನ್ನ. ಆದರೆ ಸಾವು ಎಂಬ ಎರಡಕ್ಷರಕ್ಕೆ ಸಂಬಂಧಿಸಿ ತೀರಾ ತೀರಾ ಹತ್ತಿರ. ಪಿಯು ತರಗತಿಯಲ್ಲಿ ಓದುತ್ತಿರುವಾಗಲೇ ನಂದಿತಾಳಿಗೆ ಸಾವು ಮತ್ತು ಬದುಕಿನ ಬಗ್ಗೆ ಆಲೋಚಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಸಾವನ್ನು ನೆನಪಿಸುವ ಪ್ರಕ್ರಿಯೆಗಳು ಅನುಭವಕ್ಕೆ ಬರುತ್ತವೆ. ನಂದಿತಾ ಬದುಕುವ ಛಲ ತೊಡುತ್ತಾಳೆ.
       2013 ನವೆಂಬರ್‍ನ ಕೊನೆಯ ವಾರ. ಮಧ್ಯಾಹ್ನದ ಬಳಿಕ ನಂದಿತಾ ಅತ್ತಿತ್ತ ನೋಡುತ್ತಾಳೆ. ಅಮ್ಮ, ಅಣ್ಣ ಮತ್ತಿತರರು ಆಕೆಯ ಸುತ್ತು-ಮುತ್ತಲಿದ್ದಾರೆ. ಏನೋ ಮಾತಾಡುತ್ತಿದ್ದಾರೆ. ಆಸ್ಪತ್ರೆಯ ಮಂಚದಲ್ಲಿ ಮಲಗಿರುವ ನಂದಿತಾಳಿಗೆ ಅಮ್ಮ ಮತ್ತು ಅಣ್ಣ ತನಗೇನನ್ನೋ ಹೇಳುತ್ತಿದ್ದಾರೆ, ಆತ್ಮವಿಶ್ವಾಸವನ್ನು ತುಂಬು ತ್ತಿದ್ದಾರೆ ಎಂದನಿಸಿತು. ಆದರೆ ಒಂದೂ ಅರ್ಥವಾಗುತ್ತಿಲ್ಲ. ಕೇವಲ ಶಬ್ದ ಮಾತ್ರ ಕೇಳಿದಂತಾಗುತ್ತಿತ್ತು. ಯಾಕೆ ಹೀಗೆ, ಏನಾಯ್ತು ಎಂದು ನಂದಿತಾ ಸ್ವತಃ ತಳಮಳಗೊಳ್ಳುತ್ತಾಳೆ. ಇವರಿಷ್ಟು ಮೆದುಸ್ವರದಲ್ಲಿ ಯಾಕೆ ಮಾತಾಡ್ತಿದ್ದಾರೆ ಎಂದು ಸಿಟ್ಟಾಗುತ್ತಾಳೆ. ಆದರೆ, ಸಮಸ್ಯೆ ಅವಳೊಳಗೇ ಇತ್ತು. TB (ಟ್ಯುಬರ್‍ಕ್ಯುಲೋಸಿಸ್) ರೋಗಕ್ಕೆ ನೀಡಿದ ಔಷಧದ ಅಡ್ಡ ಪರಿಣಾಮದಿಂದಾಗಿ ಆಕೆ ಬಹುತೇಕ ಕಿವುಡಿಯಾಗಿದ್ದಳು. ನಿಜವಾಗಿ, ಆಕೆ TB ತುತ್ತಾಗಿರುವುದು 2007ರಲ್ಲೇ  ಪತ್ತೆಯಾಗಿತ್ತು. ಆಗ ಆಕೆ ಕಾಲೇಜು ವಿದ್ಯಾರ್ಥಿನಿ. ಆಗಿನಿಂದ ಔಷಧ ಸೇವನೆ ಆರಂಭವಾಗಿತ್ತು. ಮಾತ್ರವಲ್ಲ, TB ಗುಣವಾಯಿತೆಂದೇ ಆಕೆಯೂ ಮನೆಯವರೂ ಭಾವಿಸಿದ್ದರು. ಆದರೆ, 2013ರಲ್ಲಿ ಅದು ಮರುಕಳಿಸಿತು. ಈ ಬಾರಿ ಅದು ಎಷ್ಟು ಪ್ರಬಲವಾಗಿ ಮರಳಿತ್ತೆಂದರೆ, ಹಿಂದಿನ ಯಾವ ಔಷಧಿಗೂ ಬಗ್ಗದಷ್ಟು. ಈ ಬಾರಿ ಕರುಳಿನ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಏನನ್ನೂ ತಿನ್ನಲಾಗದ ಸ್ಥಿತಿ. ತಿಂದ ಕೂಡಲೇ ಅದೇ ಸ್ಥಿತಿಯಲ್ಲಿ ವಾಂತಿಯಾಗಿ ಹೊರ ಹೋಗುತ್ತಿತ್ತು. ವಿವಿಧ ಬಗೆಯ ಇಂಜಕ್ಷನ್‍ಗೆ ನಂದಿತಾ ತನ್ನ ದೇಹವನ್ನು ಒಪ್ಪಿಸಬೇಕಾಯಿತು. ಅಪಾರ ನೋವು ಜೊತೆಗೇ ಸೋಂಕು ತಾಗಿದ ಕರುಳಿನ ಭಾಗವನ್ನೇ ಕಿತ್ತು ಹಾಕಬೇಕಾದ ಅನಿವಾರ್ಯತೆ. ನಂದಿತಾ ಇನ್ನೂ ತರುಣಿಯಾದುದರಿಂದ ಒಂದು ಕಡೆ ಭಯ ಮತ್ತು ಇನ್ನೊಂದು ಕಡೆ ಬದುಕುವ ಆಸೆಯಿರುವುದು ಸಹಜವಾಗಿತ್ತು. ಅಲ್ಲದೇ TBಯ ಬಗ್ಗೆ ಅಂಥ ತಿಳುವಳಿಕೆಯೇನೂ ಆಕೆಗಿರಲಿಲ್ಲ. ಏನೇ ಆಗಲಿ, ಒಮ್ಮೆ ಈ ನೋವಿನಿಂದ ಹೊರಬರಲೇಬೇಕು ಎಂಬ ನಿಲುವಿನೊಂದಿಗೆ ಆಕೆ ಸರ್ಜರಿಯೊಂದಕ್ಕೆ ಸಿದ್ಧಳಾದಳು. ಸೋಂಕು ಇರುವ ಕರುಳಿನ ಭಾಗವನ್ನು ಕಿತ್ತು ಹಾಕಿದರೆ ತಾನು ಮೊದಲಿನಂತಾಗಬಹುದಲ್ಲವೇ ಎಂಬ ನಿರೀಕ್ಷೆ ಆಕೆಯದು. ಹೆತ್ತವರ ಮುಂದೆ ಬೇರೆ ಆಯ್ಕೆಯಿರಲಿಲ್ಲ. ಮಗಳು ಮತ್ತೆ ಮೊದಲಿನಂತಾಗಬೇಕು ಎಂಬುದಷ್ಟೇ ಅವರ ಆಸೆಯಾಗಿತ್ತು. ನಂದಿತಾ ಸರ್ಜರಿಗೆ ಸಿದ್ಧವಾದಳು. ‘ಒಂದೇ ಒಂದು ಸರ್ಜರಿ ತಾನೇ, ಆಗಲಿ ಅಮ್ಮ’ ಎಂದು ಹೊರಟಳು. ಆಪರೇಶನ್ ಕೊಠಡಿಗೆ ವೀಲ್‍ಚೇರ್‍ನಲ್ಲಿ ಹೋಗುವಾಗ ಆಕೆಯೊಳಗೆ ತಳಮಳ ಇದ್ದಿರಲಿಲ್ಲ ಎಂದಲ್ಲ. ಇತ್ತು. ಜೊತೆಗೇ ಈ ಕಿರು ಅವಧಿಯ ನೋವನ್ನು ಅನುಭವಿಸಿದರೆ ನೋವಿಗೆ ಶಾಶ್ವತ ವಿದಾಯವನ್ನು ಹೇಳಬಹುದಲ್ಲವೇ ಎಂಬ ಆಶಾವಾದವೂ ಇತ್ತು. ತಾನು ಹಿಂದಿನಂತೆ ರಸ್ತೆಯಲ್ಲಿ ಸಂಚರಿಸುವೆ, ನಾಟ್ಯ ಮಾಡುವೆ, ಗೆಳತಿಯರೊಂದಿಗೆ ಖುಷಿ ಪಡುವೆ.. ಎಂದೆಲ್ಲಾ ಆಕೆ ಆಪರೇಶನ್ ಕೊಠಡಿಯಲ್ಲಿ ಮಲಗಿ ಗ್ರಹಿಸತೊಡಗಿದಳು. ಆದರೆ, ಆ ಒಂದು ಆಪರೇಶನ್ ಮುಂದಿನ ಮೂರು ಆಪರೇಶನ್‍ಗಳಿಗೆ ದಾರಿ ತೆರೆದುಕೊಡುತ್ತದೆ ಎಂದು ಆಕೆಗಾಗಲಿ ಆಕೆಯ ವೈದ್ಯರಿಗಾಗಲಿ ಗೊತ್ತಿರಲಿಲ್ಲ. ಮೊದಲ ಸರ್ಜರಿ ನಡೆದ ಒಂದು ವಾರದ ಬಳಿಕ ನಂದಿತಾ ತೀವ್ರ ಅಸೌಖ್ಯಕ್ಕೆ ತುತ್ತಾದಳು. ದೊಡ್ಡ ಆಸ್ಪತ್ರೆಗೆ ರವಾನೆಯಾದಳು. ಅತ್ಯಂತ ಅಪಾಯಕಾರಿ ಸ್ಥಿತಿಗೆ ಜಾರಿದಳು. ದಿನಗಳು ತಿಂಗಳುಗಳಾದುವು. TBಯ ಸೋಂಕು ದೇಹದ ಇತರ ಅಂಗಗಳಿಗೂ ಹರಡತೊಡಗಿದುವು. ಹೀಗೆ ಒಂದು ಸರ್ಜರಿಗೆಂದು ಆಸ್ಪತ್ರೆಗೆ ದಾಖಲಾದ ನಂದಿತಾ ಮತ್ತೆ ಮೂರು ಸರ್ಜರಿಗೆ ದೇಹವನ್ನು ಒಪ್ಪಿಸಲೇಬೇಕಾದ ಅನಿವಾರ್ಯತೆಗೆ ತುತ್ತಾದಳು. ತಾನು ಬದುಕುಳಿಯುವೆನೇ ಎಂದು ನಂದಿತಾ ಅಸಂಖ್ಯ ಬಾರಿ ಆಲೋಚಿಸಿದಳು. TB ಸೋಂಕು ನಿಂತಲ್ಲೇ ನಿಲ್ಲುತ್ತಿಲ್ಲ. ದೇಹವನ್ನು ಅದು ಮೈದಾನವೆಂಬಂತೆ ಪರಿಗಣಿಸಿದೆ. ಇತರ ಅಂಗಗಳ ಮೇಲೂ ಅದು ಸವಾರಿ ಮಾಡತೊಡಗಿದೆ. ಒಂದು ಕಡೆ ಸರ್ಜರಿ ಮತ್ತು ಇನ್ನೊಂದು ಕಡೆ ಔಷಧದ ಪರಿಣಾಮ.. ಇವೆರಡರ ಮಧ್ಯೆ ನಂದಿತಾ ಅಕ್ಷರಶಃ ಅಪ್ಪಚ್ಚಿಯಾದಳು. ಔಷಧದ ಪರಿಣಾಮ ಎಷ್ಟು ತೀವ್ರವಾಗಿತ್ತೆಂದರೆ, ಆಕೆ ಆಲಿಸುವ ಸಾಮರ್ಥ್ಯವನ್ನೇ ಕಳಕೊಳ್ಳತೊಡಗಿದಳು. ಅಣ್ಣ ಮತ್ತು ಅಮ್ಮ ಆಸ್ಪತ್ರೆಯಲ್ಲಿ ಮಾತಾಡಿದಾಗ ಆಕೆಗೆ ಕೇಳಿಸದೇ ಹೋದುದು ಈ ಕಾರಣದಿಂದ. ಆರಂಭದಲ್ಲಿ ಎಡಕಿವಿಗೆ 80% ಮತ್ತು ಬಲಕಿವಿಗೆ 60% ಕಿವುಡುತನ ಬಾಧಿಸಿತಾದರೂ ಕ್ರಮೇಣ ಎರಡೂ ಕಿವಿಗಳೂ 90%ಕ್ಕಿಂತ ಹೆಚ್ಚು ಕಿವುಡುತನಕ್ಕೆ ತುತ್ತಾದುವು. ಪಟಾಕಿ ಸಿಡಿತದಂಥ ಶಬ್ದಗಳನ್ನು ಬಿಟ್ಟರೆ ಇನ್ನಾವುದೂ ಕೇಳಿಸದಷ್ಟು ನಂದಿತಾ ಕಿವುಡಿಯಾದಳು. ಇಷ್ಟೇ ಅಲ್ಲ, ಕುಳಿತುಕೊಳ್ಳುವುದಕ್ಕೂ ಆಕೆಗೆ ಸಾಧ್ಯವಾಗುತ್ತಿರಲಿಲ್ಲ. ಕಡಿಮೆ ರಕ್ತದೊತ್ತಡ, ಮಧುಮೇಹದಂಥ ಸಮಸ್ಯೆಗಳನ್ನೂ ಎದುರಿಸಿದಳು. ಪ್ರತಿ ಗಂಟೆಯ ಬಳಿಕ ಸ್ವಲ್ಪ ನೀರನ್ನು ಬಿಟ್ಟರೆ ಇನ್ನಾವುದನ್ನೂ ಸೇವಿಸದಂಥ ಸ್ಥಿತಿಗೆ ತಲುಪಿದಳು. ಸುಮಾರು 23 ಕಿಲೋ ತೂಕವನ್ನು ಕಳೆದುಕೊಂಡಳು. ತಿಂಗಳ ಬಳಿಕ ಆಸ್ಪತ್ರೆಯಲ್ಲಿ ನಂದಿತಾ ಅತ್ತಿತ್ತ ಕಷ್ಟಪಟ್ಟು ನಡೆಯಲು ಆರಂಭಿಸಿದಾಗ ಆಕೆಗೇ ಅಚ್ಚರಿಯಾಗುತ್ತಿತ್ತಂತೆ. ನಡೆದಾಡುವ ಅಸ್ತಿಪಂಜರದಂತೆ ಸ್ವತಃ ಅಂದುಕೊಳ್ಳುತ್ತಿದ್ದಳಂತೆ. ಆಸ್ಪತ್ರೆಯ ಕಿಟಕಿಗೆ ಅಳವಡಿಸಲಾಗಿದ್ದ ಬಾಗಿಲಿನ ಕನ್ನಡಿಯಲ್ಲಿ ತನ್ನ ಪ್ರತಿ ಬಿಂಬವನ್ನು ಕಂಡು ನಂದಿತಾ ಅಚ್ಚರಿಪಟ್ಟಿದ್ದಳಂತೆ.
ನಂದಿತಾ

     ಕ್ರಮೇಣ ನಂದಿತಾ ಈ ವಿಷಾದ ಸ್ಥಿತಿಯಿಂದ ಹೊರಬರಬೇಕೆಂದು ತೀರ್ಮಾನಿಸಿದಳು. ನಾಲ್ಕು ಗೋಡೆಯ ಒಳಗೆ ಕೂರುವುದಕ್ಕಿಂತ ತನ್ನನ್ನು ಹೊರಗೆ ತೋರಿಸಿಕೊಳ್ಳುವುದರಲ್ಲಿ ಆತ್ಮವಿಶ್ವಾಸ ಹೆಚ್ಚಬಹುದೆಂದು ಅಂದುಕೊಂಡಳು. ತಾನಿನ್ನು ತನ್ನ ಸ್ಥಿತಿಯ ಬಗ್ಗೆ ವಿಷಾದ ಪಡಲ್ಲ ಎಂದು ಪ್ರತಿಜ್ಞೆ ಮಾಡಿಕೊಂಡ ನಂದಿತಾ, ಮನೆಯಿಂದ ಹೊರಬಂದಳು. ತನ್ನ ಹಳೆಯ ನಾಟ್ಯ ಜಗತ್ತಿಗೆ ಮರಳಿದಳು. ವಿಶೇಷ ಏನೆಂದರೆ, ನಾಟ್ಯವು ಸಂಗೀತವನ್ನು ಅವಲಂಬಿಸಿಕೊಂಡಿರುತ್ತದೆ. ಸಪ್ತಸ್ವರಕ್ಕೆ ತಕ್ಕುದಾಗಿ ಹೆಜ್ಜೆಯಿಡಬೇಕಾದ ಕ್ಷೇತ್ರ ಅದು. ಆದರೆ, ನಂದಿತಾ ಆ ಸಾಮರ್ಥ್ಯವನ್ನೇ ಕಳಕೊಂಡಿದ್ದಾಳೆ. ಈ ಹಿಂದೆ ತೈ..ತಕಕಿತ.. ಪದಗಳನ್ನು ಆಲಿಸಿ ಅದಕ್ಕೆ ತಕ್ಕಂತೆ ಹೆಜ್ಜೆ ಇಡುತ್ತಿದ್ದ ನಂದಿತಾ ಈಗ ಆ ಪದಗಳನ್ನು ಆಲಿಸದೆಯೇ ಹೇಗೆ ನಾಟ್ಯ ಮಾಡಬಲ್ಲಳು? ನಂದಿತಾ ಇದನ್ನೂ ಮೀರುವ ತೀರ್ಮಾನ ಕೈಗೊಳ್ಳುತ್ತಾಳೆ. ತೈ..ತಕಕಿತ ಎಂಬ ಪದಕ್ಕೆ ಬದಲಾಗಿ 1..1234 ಎಂಬ ಅಂಕಿಯನ್ನು ಬಳಸಿಕೊಂಡು ಹೆಜ್ಜೆ ಇಡಲು ಪ್ರಯತ್ನಿಸುತ್ತಾಳೆ. ಹಳೆಯ ನಾಟ್ಯವನ್ನು ಹೊಸ ರೀತಿಯಲ್ಲಿ ಗ್ರಹಿಸಿಕೊಳ್ಳುತ್ತಾಳೆ. ಲಿಪ್‍ರೀಡ್ ಮಾಡತೊಡಗುತ್ತಾಳೆ. Sign language ಅನ್ನು ಕಲಿಯಲು ಪ್ರಾರಂಭಿಸುತ್ತಾಳೆ. ಒಂದು ಸಂದರ್ಭದಲ್ಲಿ, ವಿಷಾದಭಾವದಲ್ಲಿ ಕಳೆದು ಹೋದಂತಿದ್ದ ನಂದಿತಾ ಪಕ್ಕನೆ ಎಚ್ಚರಗೊಂಡಾಗ ಆದ ಬದಲಾವಣೆ ಇದು. ಆಕೆಯ ಸಕಾರಾತ್ಮಕ ಚಿಂತನೆಯು ಆಕೆಯನ್ನು ಅಪಾರ ಆತ್ಮವಿಶ್ವಾಸದ ಗಣಿಯಂತೆ ಮಾಡುತ್ತದೆ. ಕಳೆದ ವರ್ಷದ ಎಪ್ರಿಲ್‍ನಿಂದ ಆಕೆ ಫೈನಾನ್ಶಿಯಲ್ ನ್ಯೂಸ್ ಪೇಪರ್‍ನಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾಳೆ. ಇದರ ಜೊತೆಗೇ ಅಲ್ಲಲ್ಲಿ TB ಜಾಗೃತಿ ಕಾರ್ಯಕ್ರಮವನ್ನು ನೀಡುತ್ತಿದ್ದಾಳೆ. ಕಳೆದ ಜನವರಿಯಲ್ಲಿ ಬರ್ಲಿನ್‍ನಲ್ಲಿ ನಡೆದ ಇಂಟರ್‍ನ್ಯಾಶನಲ್ ಗ್ರೂಪ್ ಆಫ್ ಆ್ಯಕ್ಷನ್ ಆರ್ಗ್‍ನ TB ಜಾಗೃತಿ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾಳೆ. ಸದ್ಯ ಪಿಹೆಚ್‍ಡಿ ಮಾಡುತ್ತಲೂ ಇದ್ದಾಳೆ. ಅಂದಹಾಗೆ,
     ನಂದಿತಾಳಂತೆ ಬದುಕಿ ಬಾಳುವ ಭಾಗ್ಯ ಸಿಗಲಿಲ್ಲ ಎಂಬುದನ್ನು ಬಿಟ್ಟರೆ, ಉಳಿದಂತೆ ಪೌಲ್ ಕಲಾನಿಧಿ ಓರ್ವ ಆಶಾವಾದಿ. ನರಶಾಸ್ತ್ರದಲ್ಲಿ ಪರಿಣತಿಯನ್ನು ಪಡೆದುಕೊಂಡ ಬಳಿಕ ಕಲಾನಿಧಿಯಲ್ಲಿ ಹೊಸ ಹುಮ್ಮಸ್ಸೊಂದು ಉದ್ಭವವಾಗಿತ್ತು. ಪಾಸ್ಟರ್ ಆಗಬೇಕೆಂದು ಬಯಸಿದ್ದ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಆಸಕ್ತಿಯುಳ್ಳವನಾಗಿ ಬೆಳೆದ ಪೌಲ್, ಕೊನೆಗೆ ಆರಿಸಿಕೊಂಡದ್ದು ವೈದ್ಯಕೀಯ ಕ್ಷೇತ್ರವನ್ನು. ಪರಿಣತ ನರತಜ್ಞನೆಂದು ಗುರುತಿಗೀಡಾಗುತ್ತಿದ್ದ ವೇಳೆಯಲ್ಲೇ ಆತ ಕ್ಯಾನ್ಸರ್‍ಗೆ ತುತ್ತಾಗಿರುವುದು ಪತ್ತೆಯಾಗುತ್ತದೆ. ಇದಾಗಿ ಕೇವಲ ಒಂದೇ ವರ್ಷದೊಳಗೆ ಪೌಲ್ ಕೊನೆಯುಸಿರೆಳೆಯುತ್ತಾನೆ. ರೋಗಿಯ ಸುತ್ತ ವೈದ್ಯರು ಮತ್ತು ದಾದಿಯರು ನೆರೆಯುವುದು ಮತ್ತು ರೋಗಿ ಬಿಟ್ಟಗಣ್ಣಿನಿಂದ ಅವರೆಲ್ಲರನ್ನೂ ವೀಕ್ಷಿಸುವ ಸನ್ನಿವೇಶಕ್ಕೆ ಅಸಂಖ್ಯ ಬಾರಿ ಸಾಕ್ಷಿಯಾಗಿದ್ದ ಪೌಲ್, ತಾನೇ ಆ ರೋಗಿಯಾಗುವೆ ಮತ್ತು ತನ್ನ ಜೊತೆಗಾರ ವೈದ್ಯರೇ ತನ್ನ ಸುತ್ತ ನೆರೆಯುತ್ತಾರೆ ಎಂಬುದನ್ನು ಊಹಿಸಿರಲಿಲ್ಲ ಎಂದು ತನ್ನ When Breath Becomes air ಕೃತಿಯಲ್ಲಿ ಹೇಳಿಕೊಳ್ಳುತ್ತಾನೆ. ಊಟ ಮಾಡಲಾಗದ, ಎದ್ದೇಳಲಾಗದ, ಶೌಚಕ್ಕೆ ತೆರಳಲಾಗದ.. ಸ್ಥಿತಿಯು ಎಷ್ಟು ಯಾತನಾಮಯ ಎಂಬುದನ್ನು ಆತ ವಿವರಿಸುತ್ತಾನೆ. ಮೊದಲೆಲ್ಲ ಆತ ಗೆಳೆಯರ ಜೊತೆ ನಡೆಯುತ್ತಾ ಮಾತಾಡುತ್ತಿದ್ದ. ಆ ರೋಗಿ, ಈ ರೋಗಿ ಎಂದು ಅವಸರ ಪಟ್ಟು ಬದುಕುತ್ತಿದ್ದ. ಧರ್ಮ-ಕರ್ಮಗಳ ಬಗ್ಗೆ ಜೊತೆಗಾರರೊಂದಿಗೆ ಚರ್ಚಿಸುತ್ತಿದ್ದ. ಆದರೆ ಈಗ ಗೆಳೆಯರು ಹತ್ತಿರ ಬಂದರೆ ಮಾತ್ರ ಮಾತುಕತೆ. ಇಲ್ಲದಿದ್ದರೆ ಏಕಾಂತತೆ. ಪೌಲ್ ಸ್ವತಃ ವೈದ್ಯ ಆಗಿದ್ದುದರಿಂದ ತನ್ನ ಕಾಯಿಲೆ ಯಾವ ಹಂತದಲ್ಲಿದೆ ಎಂಬುದನ್ನು ಸ್ಪಷ್ಟವಾಗಿ ತಿಳಿದುಕೊಂಡಿದ್ದ. ಸಾವನ್ನು ಸಕಾರಾತ್ಮಕವಾಗಿಯೇ ಬರಮಾಡಿಕೊಳ್ಳಬೇಕು ಎಂಬುದು ಆತನ ನಿಲುವಾಗಿತ್ತು. ಆತ ತನ್ನ ಕ್ಯಾನ್ಸರ್ ಬದುಕು ಮತ್ತು ಭಾವನೆ ಗಳನ್ನು ಅಕ್ಷರ ರೂಪಕ್ಕಿಳಿಸಬೇಕೆಂದು ತೀರ್ಮಾನಿಸಿದ. ಯಾವುದೂ ಶಾಶ್ವತವಲ್ಲ ಎಂಬುದು ಆತನ ನಿಲುವಾಗಿತ್ತು. ಆ ಸಕಾರಾತ್ಮಕತೆಯ ಫಲಿತಾಂಶವೇ When Breath Becomes air .
        ಪೌಲ್ ಮತ್ತು ನಂದಿತಾ ಇಬ್ಬರಲ್ಲೂ ಅಪಾರ ಆತ್ಮವಿಶ್ವಾಸವಿತ್ತು. ಸಕಾರಾತ್ಮಕವಾಗಿರಿ (be positive ) ಎಂಬುದು ಅವರ ಧ್ಯೇಯವಾಗಿತ್ತು. ಆದ್ದರಿಂದಲೇ ಕಿವುಡಿಯಾಗಿದ್ದೂ ನಂದಿತಾ ಕಿವುಡುತನವನ್ನು ಮೀರಿದಳು. ಸಾವು ಎದುರಿದ್ದೂ ಪೌಲ್ ಸಾವಿಗೆ ಅಕ್ಷರ ಮಾಲೆ ಪೋಣಿಸಿದನು. ಬಹುಶಃ,
      ‘ಜಗತ್ತು ನಾಳೆ ನಾಶವಾಗುತ್ತದೆ ಎಂದು ನಿಮಗೆ ಖಚಿತವಿದ್ದರೂ ಕೈಯಲ್ಲಿರುವ ಗಿಡವನ್ನು ನೆಡಿ’ ಎಂಬ ಪ್ರವಾದಿ ಮುಹಮ್ಮದ್‍ರ(ಸ) ಮಾತಿನ ತೂಕ ಅರ್ಥವಾಗುವುದು ಇಲ್ಲೇ.

Friday, February 3, 2017

ಕಟ್ಟಕಡೆಗೆ ಉಣ್ಣುವ ಹೆಣ್ಣು

      1. ಲಂಚ್ (ಮಧ್ಯಾಹ್ನದೂಟ) ಮತ್ತು ಡಿನ್ನರ್ (ರಾತ್ರಿಯೂಟ) ಅನ್ನು ನಿಮ್ಮ ಮನೆಯ ಪುರುಷರೊಂದಿಗೆ ಜೊತೆಯಾಗಿ ಸೇವಿಸುತ್ತೀರಾ, ಅಥವಾ
      2. ಪುರುಷರಿಗಿಂತ ಮೊದಲು ನೀವು ಸೇವಿಸುತ್ತೀರಾ, ಅಥವಾ
      3. ‘ಪುರುಷರು ಮೊದಲು ಆ ಬಳಿಕ ನಾವು’ ಎಂಬ ನೀತಿಯನ್ನು ಪಾಲಿಸುತ್ತಿದ್ದೀರಾ..
SARI – (Social Attitudes Research for India) ಎಂಬ ಸಂಸ್ಥೆಯು ಈ ಮೂರು ಪ್ರಶ್ನೆಗಳೊಂದಿಗೆ ದೆಹಲಿ ಮತ್ತು ಉತ್ತರ ಪ್ರದೇಶದ ಮಹಿಳೆಯರನ್ನು ಇತ್ತೀಚೆಗೆ ಸಂಪರ್ಕಿಸಿತ್ತು. ದೆಹಲಿಯ 1,270 ವಯಸ್ಕ ಮಹಿಳೆಯರು ಮತ್ತು ಉತ್ತರ ಪ್ರದೇಶದ 1,470 ವಯಸ್ಕ ಮಹಿಳೆಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಫಲಿತಾಂಶದಲ್ಲಿ ಅನಿರೀಕ್ಷಿತವಾದುದೇನೂ ಇರಲಿಲ್ಲ. ಉತ್ತರ ಪ್ರದೇಶದ ಪ್ರತಿ 10ರಲ್ಲಿ 6 ಮಹಿಳೆಯರೂ ಮತ್ತು ದೆಹಲಿಯ ಪ್ರತಿ ಮೂವರಲ್ಲಿ ಓರ್ವ ಮಹಿಳೆಯೂ ತಾವು ಪುರುಷರ ಬಳಿಕ ಆಹಾರ ಸೇವಿಸುವುದಾಗಿ ಹೇಳಿಕೊಂಡರು. ತಮ್ಮ ಮನೆಯಲ್ಲಿ ಪುರುಷ ಮತ್ತು ಮಹಿಳೆಯರು ಜೊತೆಯಾಗಿ ಆಹಾರ ಸೇವಿಸುವ ಸಂಸ್ಕೃತಿ ಇಲ್ಲ ಎಂದರು. 2008 ಆಗಸ್ಟ್ 5ರಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ‘Women are eat  last ..’ ಎಂಬ ಶೀರ್ಷಿಕೆಯಲ್ಲಿ ಲಿಸಾ ಕೇಯ್ಸ್ ಅವರ ಲೇಖನವೊಂದನ್ನು ಪ್ರಕಟಿಸಿತ್ತು. ಅದು ಆಫ್ರಿಕಾಕ್ಕೆ ಸಂಬಂಧಿಸಿದ್ದು. ಆಫ್ರಿಕಾದ ಆಹಾರ ಸಂಸ್ಕೃತಿಯ ಒಳ-ಹೊರಗನ್ನು ವಿಶ್ಲೇಷಿಸುವ ಆ ಬರಹದಲ್ಲಿ ಲಿಸಾ ಅವರು ಅಲ್ಲಿಯ ಮಹಿಳೆಯರನ್ನು ಕೇಂದ್ರೀಕರಿಸಿ ಇಂಥದ್ದೇ ಪ್ರಶ್ನೆಗೆ ಉತ್ತರವನ್ನು ಹುಡುಕಿದ್ದರು. ಪುರುಷರ ಬಳಿಕ ಆಹಾರ ಸೇವನೆ ಎಂಬುದು ಆಫ್ರಿಕಾದಲ್ಲಿ ಒಂದು ಸಂಸ್ಕೃತಿಯಾಗಿ ಗುರುತಿಸಿಕೊಂಡಿತ್ತು. ಮೊದಲು ಮನೆಯ ಪುರುಷರು, ಬಳಿಕ ಮಕ್ಕಳು, ಬಳಿಕ ಮಹಿಳೆಯರು.. ಇದು ಅಲ್ಲಿನ ಸಂಸ್ಕೃತಿಯಾಗಿತ್ತು. ಹಾಗಂತ, ಸಂಸ್ಕೃತಿ ಅಂದ ತಕ್ಷಣ ಈ ಇಡೀ ಪ್ರಕ್ರಿಯೆ ಸಮರ್ಥನೀಯ ಆಗಬೇಕಿಲ್ಲವಲ್ಲ. ‘ಅಡುಗೆ ಕೋಣೆ’ಗೆ ಹೆಣ್ಣು ಎಂಬೊಂದು ಅನ್ವರ್ಥ ನಾಮ ಗೊತ್ತಿದ್ದೋ ಗೊತ್ತಿಲ್ಲದೆಯೋ ಇವತ್ತು ತಗುಲಿಕೊಂಡಿದೆ. ಹೆಣ್ಣನ್ನು ಅಡುಗೆ ಕೋಣೆಯಲ್ಲಿಟ್ಟೇ ನಮ್ಮ ಚಟುವಟಿಕೆಗಳು ನಡೆಯುತ್ತವೆ. ಒಂದು ಗ್ಲಾಸ್ ಕಾಫಿ ತಾ ಎಂದು ಮನೆಯ ಪುರುಷ ಇನ್ನೋರ್ವ ಪುರುಷನಲ್ಲಿ ಹೇಳುವುದಿಲ್ಲ. ‘ಕಾಫಿ ತಾ’ ಅಂದ ತಕ್ಷಣ ಹೆಣ್ಣು ಜಾಗೃತವಾಗುತ್ತಾಳೆ. ಅದು ತನ್ನ ಜವಾಬ್ದಾರಿ ಎಂದು ಸಹಜವಾಗಿಯೇ ಭಾವಿಸುತ್ತಾಳೆ. ಒಂದು ಮನೆಯಲ್ಲಿ 5 ಮಂದಿ ಇದ್ದಾರೆಂದಿಟ್ಟುಕೊಳ್ಳಿ. ಪತಿ-ಪತ್ನಿ, ಹರೆಯದ ಇಬ್ಬರು ಗಂಡು ಮಕ್ಕಳು ಮತ್ತು ಹರೆಯದ ಓರ್ವ ಹೆಣ್ಣು ಮಗಳು. ಎಲ್ಲರೂ ತಂತಮ್ಮ ಕೆಲಸದಲ್ಲೋ   ಹವ್ಯಾಸದಲ್ಲೋ ಮಗ್ನರಾಗಿರುತ್ತಾರೆ ಎಂದೂ ಭಾವಿಸಿ. ಅಥವಾ ಎಲ್ಲರೂ ಒಟ್ಟಾಗಿ ಟಿ.ವಿ. ವೀಕ್ಷಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಒಂದು ಗ್ಲಾಸು ಕಾಫಿ ತರುವಂತೆ ತಂದೆ ಹೇಳುತ್ತಾರೆ. ಹಾಗಂತ, ಆತ ಯಾರನ್ನೂ ಗುರಿಯಾಗಿಸಿ ಹೇಳುವುದಿಲ್ಲ. ಇದನ್ನು ಉಳಿದ ನಾಲ್ಕು ಮಂದಿಯೂ ಏಕ ಪ್ರಕಾರವಾಗಿ ಆಲಿಸುತ್ತಾರೆ. ಆದರೂ ಅದಕ್ಕೆ ಸ್ಪಂದಿಸುವವರು ಯಾರು? ಒಂದೋ ಪತ್ನಿ ಅಥವಾ ಮಗಳು ಇವರಿಬ್ಬರ ಹೊರತು ಗಂಡು ಮಕ್ಕಳು ಇಂಥದ್ದೊಂದು ಕೋರಿಕೆಗೆ ಸ್ಪಂದಿಸುವ ಉದಾಹರಣೆಗಳು ಎಷ್ಟು ಶೇಕಡಾ ಇವೆ? ಒಂದು ವೇಳೆ ಪತ್ನಿ ಅಥವಾ ಮಗಳು ಕುಳಿತಲ್ಲಿಂದ ಕದಲದೇ ಇದ್ದರೆ ತಂದೆ ಯಾರನ್ನು ತರಾಟೆಗೆ ತೆಗೆದುಕೊಳ್ಳಬಹುದು, ಗಂಡು ಮಕ್ಕಳನ್ನೋ ಅಥವಾ ಮಗಳು ಮತ್ತು ಪತ್ನಿಯನ್ನೋ? ನಿಜವಾಗಿ, ಇಲ್ಲಿ ಮೂರು ಅವಕಾಶಗಳೂ ಮುಕ್ತವಾಗಿರುತ್ತವೆ. 1. ಕಾಫಿ ಯಾರಿಗೆ ಬೇಕೋ ಅವರೇ ಅಡುಗೆ ಕೋಣೆಗೆ ತೆರಳಿ ಕಾಫಿ ತಯಾರಿಸಿ ಕುಡಿಯುವುದು. 2. ತಂದೆಯ ಮಾತನ್ನು ಪರಿಗಣಿಸಿ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಕಾಫಿ ತಯಾರಿಸುವುದು. 3. ಮಗಳು ಅಥವಾ ತಾಯಿಯಲ್ಲಿ ಒಬ್ಬರು ಸ್ಪಂದಿಸುವುದು. ಆದರೆ ಸಂಖ್ಯೆ 1 ಮತ್ತು 2 ಇವತ್ತು ಕಾಫಿ ತಯಾರಿಸುವ ಸಾಧ್ಯತೆಯಾಗಿ ಉಳಿದಿಲ್ಲ ಮತ್ತು ಬಹುತೇಕ ಚರ್ಚೆಯಲ್ಲೂ ಇಲ್ಲ. ಬದಲು ಸಂಖ್ಯೆ 3ರ ಕರ್ತವ್ಯವಾಗಿಯಷ್ಟೇ ಅದು ಪರಿಚಿತವಾಗಿದೆ.
ಮಹಾಭಾರತದಲ್ಲೊಂದು  ಸನ್ನಿವೇಶ ಇದೆ.
ಪಂಚಪಾಂಡವರು ಮತ್ತು ಅವರ ಪತ್ನಿ ದ್ರೌಪದಿ ಅಡವಿಯಲ್ಲಿ ದಾರಿ ತಪ್ಪಿ ಅಲೆಯುತ್ತಿರುತ್ತಾರೆ. ಅಪರಿಚಿತ ಪ್ರದೇಶವಾದುದರಿಂದ ಆಹಾರಕ್ಕೂ ತತ್ವಾರ. ದ್ರೌಪದಿಯನ್ನು ಇದು ಬಹಳವೇ ಕಾಡುತ್ತದೆ. ತಾನೂ ತಿನ್ನಬೇಕು, ಪಾಂಡವರಿಗೂ ಕೊಡಬೇಕು, ತಮ್ಮ ಅತಿಥಿಗಳಿಗೂ ಉಣಿಸಬೇಕು. ಆದರೆ ಹೇಗೆ.. ಎಂಬ ಸಂಧಿಗ್ದತೆಯಲ್ಲಿ ಆಕೆ ತೊಳಲಾಡುತ್ತಾಳೆ. ಕೊನೆಗೆ ದೇವನು ಆಕೆಯ ಬೇಡಿಕೆಗೆ ಮಣಿಯುತ್ತಾನೆ. ಅಕ್ಷಯ ಪಾತ್ರೆಯನ್ನು ನೀಡುತ್ತಾನೆ. ಅದರ ವಿಶೇಷತೆ ಏನೆಂದರೆ, ಆ ಪಾತ್ರೆ ಯಾವಾಗಲೂ ಆಹಾರದಿಂದ ತುಂಬಿಕೊಂಡೇ ಇರುತ್ತದೆ. ಆದರೆ, ಯಾವಾಗ ದ್ರೌಪದಿ ಅದರಿಂದ ಆಹಾರ ಸೇವಿಸುತ್ತಾಳೋ ತಕ್ಷಣ ಅದು ಖಾಲಿಯಾಗುತ್ತದೆ. ಬಳಿಕ ಅದು ತುಂಬುವುದು ಮರುದಿನ. ಆದ್ದರಿಂದ ಆಕೆ ಮೊದಲು ಪಂಚ ಪಾಂಡವರಿಗೆ ಉಣಿಸಬೇಕಾಗುತ್ತದೆ. ಬಳಿಕ ಅತಿಥಿಗಳಿಗೆ, ಕೊನೆಗೆ ತಾನುಣ್ಣುವ ಅನಿವಾರ್ಯತೆಗೆ ಸಿಲುಕುತ್ತಾಳೆ. ಅಷ್ಟಕ್ಕೂ,
ಸಾಮಾನ್ಯವಾಗಿ ಹೆಣ್ಣು ಎಲ್ಲರಿಗಿಂತ ಮೊದಲು ಏಳುತ್ತಾಳೆ ಅಥವಾ ಏಳಬೇಕು. ಇನ್ನು, ರಾತ್ರಿ ಮಲಗುವುದಾದರೋ ಎಲ್ಲರಿ ಗಿಂತ ಕೊನೆಗೆ ಅಥವಾ ಕೊನೆಗೇ ಮಲಗಬೇಕು. ಇದು ದೇವ ನಿಯಮದಂತೆ ಹೆಚ್ಚಿನ ಮನೆಗಳಲ್ಲಿ ಆಚರಣೆಯಲ್ಲಿದೆ. ಹೆಣ್ಣು ಎಲ್ಲರಿಗಿಂತ ಮೊದಲು ಯಾಕೆ ಏಳುವುದೆಂದರೆ, ಅಡುಗೆ ತಯಾರಾಗಬೇಕು. ಪತಿ ಕೆಲಸಕ್ಕೆ ಹೊರಡುವ ಸಮಯಕ್ಕೆ ಸರಿಯಾಗಿ ಇಷ್ಟದ ಬ್ರೇಕ್‍ಫಾಸ್ಟ್ ತಯಾರಿಸಬೇಕು. ಅದಕ್ಕಿಂತ ಮುಂಚೆ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಬೇಕು. ಅವರ ಟಿಫಿನ್ ಬಾಕ್ಸ್ ಗೆ ಏನಾದ್ರೂ ಹೊಸತನ್ನು ತುಂಬಬೇಕು. ಹೀಗೆ ಪತಿಯ ಬ್ರೇಕ್‍ಫಾಸ್ಟ್ ನ ಬಳಿಕ ಮತ್ತು ಮಕ್ಕಳು ಶಾಲೆಗೆ ಹೊರಟು ಹೋದ ಬಳಿಕ ಆಕೆ ತಾನು ಮಾಡಿದ ಆಹಾರವನ್ನು ಹೊಟ್ಟೆಗೆ ಸೇರಿಸುತ್ತಾಳೆ. ಬೆಳಗ್ಗಿನದ್ದು ಹೀಗಾದರೆ ರಾತ್ರಿಯದ್ದಂತೂ ಇದಕ್ಕಿಂತಲೂ ಘೋರ. ಎಲ್ಲವನ್ನೂ ತಯಾರಿಸಿದ ಬಳಿಕ ಆಕೆ ತನ್ನ ಮತ್ತು ತನ್ನಂತೆ ಇರುವ ಮಹಿಳೆಯರ ಹೊರತು ಪುರುಷ ಜಾತಿಯ ಎಲ್ಲರಿಗೂ ಬಡಿಸುತ್ತಾಳೆ. ಅವರ ಮಾತುಗಳಿಗೆ ಕಿವಿಯಾಗುತ್ತಾಳೆ. ಅಡುಗೆಯ ಕುರಿತಂತೆ ಅವರು ಎತ್ತಬಹುದಾದ ನಕಾರಾತ್ಮಕ ಮತ್ತು ಸಕಾರಾತ್ಮಕ ಅಭಿಪ್ರಾಯಕ್ಕೆ ಮೌನವಾಗುತ್ತಾಳೆ. ಅವರು ಊಟ ಮಾಡಲು ಕುಳಿತಲ್ಲಿಂದ ಹಿಡಿದು ಏಳುವ ವರೆಗೆ ಪ್ರತಿ ಬೇಕು-ಬೇಡಗಳಿಗೆ ಸ್ಪಂದಿಸುತ್ತಾಳೆ. ಮಧ್ಯೆ ಮಧ್ಯೆ ನೀರು ತರಬೇಕಾಗುತ್ತದೆ. ಸಾರೋ, ಸಾಂಬಾರೋ ಖಾಲಿಯಾಗಿರುತ್ತದೆ. ಅನ್ನ ಮುಗಿದಿರುತ್ತದೆ. ಇವೆಲ್ಲವೂ ಆದ ಬಳಿಕ ತಾನು ಉಣ್ಣ ಬೇಕು. ಈ ಸಂದರ್ಭದಲ್ಲಿ ಆಕೆಗೆ ಬಡಿಸುವವರು ಬಹುತೇಕ ಯಾರೂ ಇರುವುದಿಲ್ಲ. ಆಕೆ ಮೊದಲೇ ನೀರು ಸಿದ್ಧಪಡಿಸಿಟ್ಟು ಕೊಳ್ಳಬೇಕು. ಹೆಚ್ಚುವರಿ ಅನ್ನವನ್ನು ಹತ್ತಿರ ತಂದಿಟ್ಟುಕೊಳ್ಳಬೇಕು. ಸಾಂಬಾರು, ಉಪ್ಪಿನಕಾಯಿ, ಪಲ್ಯ ಯಾವುದನ್ನೂ ಆಕೆಯ ಬಳಿಗೆ ತಂದೊಪ್ಪಿಸುವವರು ಬಹಳ ಸಂದರ್ಭಗಳಲ್ಲಿ ಕಡಿಮೆ. ಮಧ್ಯಮ ವರ್ಗದ ಸ್ಥಿತಿ ಇದಾದರೆ ಗ್ರಾಮೀಣ ಬಡ ಭಾರತದಲ್ಲಂತೂ ಇದಕ್ಕೆ ಇನ್ನೊಂದು ಮುಖವೂ ಇದೆ. ಅದೇನೆಂದರೆ, ಉಳಿಕೆ ಆಹಾರ ಎಂಬುದು. ಅನುಕೂಲಸ್ಥವಲ್ಲದ ಮನೆಯ ಮಹಿಳೆಯರು ಕಟ್ಟಕಡೆಗೆ ಊಟ ಮಾಡಲೇಬೇಕಾದ ಅನಿವಾರ್ಯತೆಯೊಂದು ಇಲ್ಲಿ ಇರುತ್ತದೆ. ಪುರುಷರು ಉಂಡು ಆದ ಬಳಿಕ ಉಳಿಯುವ ಆಹಾರವನ್ನೇ ಅವರು ಅವಲಂಬಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಉಳಿಕೆ ಎಂಬುದು ಪುಟ್ಟ ಮಗುವಿಗೆ ಸಾಕಾಗುವಷ್ಟೇ ಇರುತ್ತದೆ. ಕೆಲವೊಮ್ಮೆ ಅದೂ ಇರುವುದಿಲ್ಲ. ‘ಪುರುಷರು ದುಡಿದು ತರುತ್ತಾರಲ್ಲ, ಅವರು ಹೊಟ್ಟೆ ತುಂಬಾ ಉಣ್ಣದಿದ್ದರೆ ಕೆಲಸ ಮಾಡುವುದು ಹೇಗೆ..’ ಎಂಬ ಕಳಕಳಿ ಮಹಿಳೆಯರದ್ದು. ನಿಜವಾಗಿ, ಇದು ಮಹಿಳೆಯರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಗರ್ಭಿಣಿ ಮಹಿಳೆಯರಂತೂ ಪೌಷ್ಠಿಕಾಂಶ ಕೊರತೆಯಿಂದ ಬಳಲಬೇಕಾಗುತ್ತದೆ. ಹುಟ್ಟುವ ಮಕ್ಕಳ ಮೇಲೂ ಅದು ಪರಿಣಾಮ ಬೀರುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದಕ್ಕೆ, ಕಡಿಮೆ ಭಾರದ ಮಕ್ಕಳು ಜನಿಸುವುದಕ್ಕೆ ಪ್ರಮುಖ ಕಾರಣಗಳಲ್ಲಿ ಈ ‘ಉಳಿಕೆ’ ಸೇವನೆಗೆ ಪ್ರಮುಖ ಪಾತ್ರವಿದೆ ಎಂದು ಸಮೀಕ್ಷೆಗಳೇ ಹೇಳುತ್ತವೆ. ಮೊದಲ ಎರಡು ವರ್ಷಗಳಲ್ಲಿ ಮಕ್ಕಳು ತಾಯಿಯನ್ನು ವಿಪರೀತ ಅವಲಂಬಿಸಿರುತ್ತಾರೆ. ಎದೆಹಾಲು ಈ ಸಂದರ್ಭದಲ್ಲಿ ಬಹುಮುಖ್ಯ ಆಹಾರ. ಆದರೆ, ಕಟ್ಟಕಡೆಗೆ ಉಣ್ಣುವ ‘ಸಂಸ್ಕೃತಿ’ಯು ತಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ನಿಜವಾಗಿ,
ಬ್ರೇಕ್‍ಫಾಸ್ಟ್, ಲಂಚ್, ಡಿನ್ನರ್.. ಇವೆಲ್ಲ ಹೊಟ್ಟೆ ತುಂಬಿಸುವುದರ ಹೆಸರುಗಳಷ್ಟೇ ಅಲ್ಲ, ಸಂಬಂಧವನ್ನು ಗಟ್ಟಿಗೊಳಿಸುವ ಸಂದರ್ಭಗಳೂ ಹೌದು. ತಂದೆ-ತಾಯಿ ಮಕ್ಕಳು, ಸೊಸೆಯಂದಿರು ಇರುವ ಮನೆಯೊಂದರಲ್ಲಿ ಎಲ್ಲರೂ ಒಂದೇ ಟೇಬಲಲ್ಲಿ ಒಟ್ಟಾಗಿ ಆಹಾರ ಸೇವಿಸುವ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ಮನೆ ಬಡವರದ್ದೂ ಆಗಿರಬಹುದು, ಮಧ್ಯಮ ವರ್ಗದ್ದೂ ಆಗಿರಬಹುದು. ಶ್ರೀಮಂತ ರದ್ದೂ ಆಗಿರಬಹುದು. ಎಲ್ಲರೂ ಒಟ್ಟಾಗಿ ಉಣ್ಣುವುದಕ್ಕೆ ಆ ಮನೆಯ ಸ್ಥಿತಿ-ಗತಿ ಮುಖ್ಯವಾಗುವುದಿಲ್ಲ. ಇದ್ದದ್ದನ್ನು ಎಲ್ಲರೂ ಒಟ್ಟಾಗಿ ಹಂಚಿ ತಿನ್ನುವುದಕ್ಕೂ ಕೆಲವರು ಹೊಟ್ಟೆ ತುಂಬಾ ತಿಂದು ಇನ್ನು ಕೆಲವರು ಅರೆ ಹೊಟ್ಟೆಯಲ್ಲೋ  ಖಾಲಿ ಹೊಟ್ಟೆಯಲ್ಲೋ  ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ ಸೊಸೆಯಂದಿರಿರುವ ಮನೆಗಳಲ್ಲಿ ಪರಸ್ಪರರಲ್ಲಿ ಒಂದಷ್ಟು ಸಂವಹನದ ಕೊರತೆ, ಬೇಜಾರು ಇದ್ದೇ ಇರುತ್ತದೆ. ಅಣ್ಣ-ತಮ್ಮಂದಿರ ನಡುವೆಯೂ ತಪ್ಪು ಗ್ರಹಿಕೆಗಳಿರುತ್ತವೆ. ಬಾಯಿ ತುಂಬಾ ಮಾತಾಡಿಕೊಳ್ಳುವುದೇ ಇಂಥವುಗಳನ್ನು ಪರಿಹರಿಸಿಕೊಳ್ಳುವುದಕ್ಕಿರುವ ಉತ್ತಮ ದಾರಿ. ಕೆಲವೊಮ್ಮೆ ಇಂಥ ತಪ್ಪುಗ್ರಹಿಕೆಗಳು ಮನೆಯನ್ನೇ ಹೋಳಾಗಿಸುವುದಕ್ಕೂ ಕಾರಣವಾಗುವುದಿದೆ. ಒಂದು ವೇಳೆ, ಮನೆಯ ಸದಸ್ಯರೆಲ್ಲರೂ ಕನಿಷ್ಠ ದಿನದಲ್ಲಿ ಒಂದು ಹೊತ್ತಿನ ಆಹಾರವನ್ನಾದರೂ ಒಟ್ಟಾಗಿ ಸೇವಿಸುವ ವಾತಾವರಣ ಉಂಟಾದರೆ ಅಲ್ಲೊಂದು ವಿಶ್ವಾಸದ ವಾತಾವರಣ ಸೃಷ್ಟಿಯಾಗುವುದಕ್ಕೆ ಸಾಧ್ಯವಿದೆ. ಅಣ್ಣ-ತಮ್ಮಂದಿರ ನಡುವೆ ಸಹಜವಾಗಿಯೇ ಅಲ್ಲಿ ಮಾತುಕತೆ ಗಳಾಗುತ್ತವೆ. ತಂದೆ ಮಕ್ಕಳ ನಡುವೆ ಅಭಿಪ್ರಾಯ ವಿನಿಮಯಗಳು ನಡೆಯುತ್ತವೆ. ಸೊಸೆಯಂದಿರೂ ಅದರಲ್ಲಿ ಕೂಡಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ದಿನದಲ್ಲಿ ಒಮ್ಮೆಯಾದರೂ ಇಂಥ ಸಂದರ್ಭಗಳು ಸೃಷ್ಟಿಯಾಗುತ್ತಲೇ ಇರುವುದು ಪರಸ್ಪರರನ್ನು ಹತ್ತಿರಗೊಳಿಸುವುದಕ್ಕೆ ನಿಮಿತ್ತವಾಗಬಹುದು.
      ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ನಿಲುವು ಅಧರ್ಮ ಮತ್ತು ಅಪ್ರಾಕೃತಿಕ. ಎಲ್ಲರಿಗಿಂತಲೂ ಮೊದಲು ಎದ್ದು ಎಲ್ಲರಿ ಗಿಂತಲೂ ಕೊನೆಯಲ್ಲಿ ಮಲಗುವುದೆಂಬುದು ಹೆಣ್ಣಿನ ಮೇಲೆ ನಮ್ಮ ಗೌರವವನ್ನು ಹೆಚ್ಚಿಸುವುದಕ್ಕೆ ಕಾರಣವಾಗಬೇಕೇ ಹೊರತು ನಿರ್ಲಕ್ಷ್ಯಕ್ಕಲ್ಲ. ಅಡುಗೆ ಮಾಡುವ, ಮಕ್ಕಳ ಆರೈಕೆ ಮಾಡುವ, ಪತಿಯ ಬೇಕು-ಬೇಡಗಳಿಗೆ ಸ್ಪಂದಿಸುವ, ಮನೆ-ಮನಗಳನ್ನು ಸ್ವಚ್ಛವಾಗಿಡುವ.. ಹೆಣ್ಣು ‘ಕೊನೆ’ಯಲ್ಲಿ ನಿಲ್ಲಬೇಕಾದವಳಲ್ಲ. ಮನೆಯ ಪುರುಷರ ಜೊತೆಜೊತೆಗೇ ಆಹಾರವನ್ನು ಸೇವಿಸ ಬೇಕಾದವಳು. ಮಾತುಕತೆಯಲ್ಲಿ ಪಾಲ್ಗೊಳ್ಳಬೇಕಾದವಳು. ಖುಷಿಯನ್ನು ಹಂಚಿಕೊಳ್ಳಬೇಕಾದವಳು.
      ಆಹಾರ ಎಷ್ಟೇ ಇರಲಿ, ಅದನ್ನು ಆಕೆಯೊಂದಿಗೆ ಹಂಚಿಕೊಂಡು ಜೊತೆಯಾಗಿ ತಿನ್ನುವ ಸಂಸ್ಕೃತಿ ಎಲ್ಲರದ್ದಾಗಲಿ.