1. ಲಂಚ್ (ಮಧ್ಯಾಹ್ನದೂಟ) ಮತ್ತು ಡಿನ್ನರ್ (ರಾತ್ರಿಯೂಟ) ಅನ್ನು ನಿಮ್ಮ ಮನೆಯ ಪುರುಷರೊಂದಿಗೆ ಜೊತೆಯಾಗಿ ಸೇವಿಸುತ್ತೀರಾ, ಅಥವಾ
2. ಪುರುಷರಿಗಿಂತ ಮೊದಲು ನೀವು ಸೇವಿಸುತ್ತೀರಾ, ಅಥವಾ
3. ‘ಪುರುಷರು ಮೊದಲು ಆ ಬಳಿಕ ನಾವು’ ಎಂಬ ನೀತಿಯನ್ನು ಪಾಲಿಸುತ್ತಿದ್ದೀರಾ..
SARI – (Social Attitudes Research for India) ಎಂಬ ಸಂಸ್ಥೆಯು ಈ ಮೂರು ಪ್ರಶ್ನೆಗಳೊಂದಿಗೆ ದೆಹಲಿ ಮತ್ತು ಉತ್ತರ ಪ್ರದೇಶದ ಮಹಿಳೆಯರನ್ನು ಇತ್ತೀಚೆಗೆ ಸಂಪರ್ಕಿಸಿತ್ತು. ದೆಹಲಿಯ 1,270 ವಯಸ್ಕ ಮಹಿಳೆಯರು ಮತ್ತು ಉತ್ತರ ಪ್ರದೇಶದ 1,470 ವಯಸ್ಕ ಮಹಿಳೆಯರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಫಲಿತಾಂಶದಲ್ಲಿ ಅನಿರೀಕ್ಷಿತವಾದುದೇನೂ ಇರಲಿಲ್ಲ. ಉತ್ತರ ಪ್ರದೇಶದ ಪ್ರತಿ 10ರಲ್ಲಿ 6 ಮಹಿಳೆಯರೂ ಮತ್ತು ದೆಹಲಿಯ ಪ್ರತಿ ಮೂವರಲ್ಲಿ ಓರ್ವ ಮಹಿಳೆಯೂ ತಾವು ಪುರುಷರ ಬಳಿಕ ಆಹಾರ ಸೇವಿಸುವುದಾಗಿ ಹೇಳಿಕೊಂಡರು. ತಮ್ಮ ಮನೆಯಲ್ಲಿ ಪುರುಷ ಮತ್ತು ಮಹಿಳೆಯರು ಜೊತೆಯಾಗಿ ಆಹಾರ ಸೇವಿಸುವ ಸಂಸ್ಕೃತಿ ಇಲ್ಲ ಎಂದರು. 2008 ಆಗಸ್ಟ್ 5ರಂದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯು ‘Women are eat last ..’ ಎಂಬ ಶೀರ್ಷಿಕೆಯಲ್ಲಿ ಲಿಸಾ ಕೇಯ್ಸ್ ಅವರ ಲೇಖನವೊಂದನ್ನು ಪ್ರಕಟಿಸಿತ್ತು. ಅದು ಆಫ್ರಿಕಾಕ್ಕೆ ಸಂಬಂಧಿಸಿದ್ದು. ಆಫ್ರಿಕಾದ ಆಹಾರ ಸಂಸ್ಕೃತಿಯ ಒಳ-ಹೊರಗನ್ನು ವಿಶ್ಲೇಷಿಸುವ ಆ ಬರಹದಲ್ಲಿ ಲಿಸಾ ಅವರು ಅಲ್ಲಿಯ ಮಹಿಳೆಯರನ್ನು ಕೇಂದ್ರೀಕರಿಸಿ ಇಂಥದ್ದೇ ಪ್ರಶ್ನೆಗೆ ಉತ್ತರವನ್ನು ಹುಡುಕಿದ್ದರು. ಪುರುಷರ ಬಳಿಕ ಆಹಾರ ಸೇವನೆ ಎಂಬುದು ಆಫ್ರಿಕಾದಲ್ಲಿ ಒಂದು ಸಂಸ್ಕೃತಿಯಾಗಿ ಗುರುತಿಸಿಕೊಂಡಿತ್ತು. ಮೊದಲು ಮನೆಯ ಪುರುಷರು, ಬಳಿಕ ಮಕ್ಕಳು, ಬಳಿಕ ಮಹಿಳೆಯರು.. ಇದು ಅಲ್ಲಿನ ಸಂಸ್ಕೃತಿಯಾಗಿತ್ತು. ಹಾಗಂತ, ಸಂಸ್ಕೃತಿ ಅಂದ ತಕ್ಷಣ ಈ ಇಡೀ ಪ್ರಕ್ರಿಯೆ ಸಮರ್ಥನೀಯ ಆಗಬೇಕಿಲ್ಲವಲ್ಲ. ‘ಅಡುಗೆ ಕೋಣೆ’ಗೆ ಹೆಣ್ಣು ಎಂಬೊಂದು ಅನ್ವರ್ಥ ನಾಮ ಗೊತ್ತಿದ್ದೋ ಗೊತ್ತಿಲ್ಲದೆಯೋ ಇವತ್ತು ತಗುಲಿಕೊಂಡಿದೆ. ಹೆಣ್ಣನ್ನು ಅಡುಗೆ ಕೋಣೆಯಲ್ಲಿಟ್ಟೇ ನಮ್ಮ ಚಟುವಟಿಕೆಗಳು ನಡೆಯುತ್ತವೆ. ಒಂದು ಗ್ಲಾಸ್ ಕಾಫಿ ತಾ ಎಂದು ಮನೆಯ ಪುರುಷ ಇನ್ನೋರ್ವ ಪುರುಷನಲ್ಲಿ ಹೇಳುವುದಿಲ್ಲ. ‘ಕಾಫಿ ತಾ’ ಅಂದ ತಕ್ಷಣ ಹೆಣ್ಣು ಜಾಗೃತವಾಗುತ್ತಾಳೆ. ಅದು ತನ್ನ ಜವಾಬ್ದಾರಿ ಎಂದು ಸಹಜವಾಗಿಯೇ ಭಾವಿಸುತ್ತಾಳೆ. ಒಂದು ಮನೆಯಲ್ಲಿ 5 ಮಂದಿ ಇದ್ದಾರೆಂದಿಟ್ಟುಕೊಳ್ಳಿ. ಪತಿ-ಪತ್ನಿ, ಹರೆಯದ ಇಬ್ಬರು ಗಂಡು ಮಕ್ಕಳು ಮತ್ತು ಹರೆಯದ ಓರ್ವ ಹೆಣ್ಣು ಮಗಳು. ಎಲ್ಲರೂ ತಂತಮ್ಮ ಕೆಲಸದಲ್ಲೋ ಹವ್ಯಾಸದಲ್ಲೋ ಮಗ್ನರಾಗಿರುತ್ತಾರೆ ಎಂದೂ ಭಾವಿಸಿ. ಅಥವಾ ಎಲ್ಲರೂ ಒಟ್ಟಾಗಿ ಟಿ.ವಿ. ವೀಕ್ಷಿಸುತ್ತಿದ್ದಾರೆ ಎಂದಿಟ್ಟುಕೊಳ್ಳಿ. ಒಂದು ಗ್ಲಾಸು ಕಾಫಿ ತರುವಂತೆ ತಂದೆ ಹೇಳುತ್ತಾರೆ. ಹಾಗಂತ, ಆತ ಯಾರನ್ನೂ ಗುರಿಯಾಗಿಸಿ ಹೇಳುವುದಿಲ್ಲ. ಇದನ್ನು ಉಳಿದ ನಾಲ್ಕು ಮಂದಿಯೂ ಏಕ ಪ್ರಕಾರವಾಗಿ ಆಲಿಸುತ್ತಾರೆ. ಆದರೂ ಅದಕ್ಕೆ ಸ್ಪಂದಿಸುವವರು ಯಾರು? ಒಂದೋ ಪತ್ನಿ ಅಥವಾ ಮಗಳು ಇವರಿಬ್ಬರ ಹೊರತು ಗಂಡು ಮಕ್ಕಳು ಇಂಥದ್ದೊಂದು ಕೋರಿಕೆಗೆ ಸ್ಪಂದಿಸುವ ಉದಾಹರಣೆಗಳು ಎಷ್ಟು ಶೇಕಡಾ ಇವೆ? ಒಂದು ವೇಳೆ ಪತ್ನಿ ಅಥವಾ ಮಗಳು ಕುಳಿತಲ್ಲಿಂದ ಕದಲದೇ ಇದ್ದರೆ ತಂದೆ ಯಾರನ್ನು ತರಾಟೆಗೆ ತೆಗೆದುಕೊಳ್ಳಬಹುದು, ಗಂಡು ಮಕ್ಕಳನ್ನೋ ಅಥವಾ ಮಗಳು ಮತ್ತು ಪತ್ನಿಯನ್ನೋ? ನಿಜವಾಗಿ, ಇಲ್ಲಿ ಮೂರು ಅವಕಾಶಗಳೂ ಮುಕ್ತವಾಗಿರುತ್ತವೆ. 1. ಕಾಫಿ ಯಾರಿಗೆ ಬೇಕೋ ಅವರೇ ಅಡುಗೆ ಕೋಣೆಗೆ ತೆರಳಿ ಕಾಫಿ ತಯಾರಿಸಿ ಕುಡಿಯುವುದು. 2. ತಂದೆಯ ಮಾತನ್ನು ಪರಿಗಣಿಸಿ ಇಬ್ಬರು ಗಂಡು ಮಕ್ಕಳಲ್ಲಿ ಒಬ್ಬರು ಕಾಫಿ ತಯಾರಿಸುವುದು. 3. ಮಗಳು ಅಥವಾ ತಾಯಿಯಲ್ಲಿ ಒಬ್ಬರು ಸ್ಪಂದಿಸುವುದು. ಆದರೆ ಸಂಖ್ಯೆ 1 ಮತ್ತು 2 ಇವತ್ತು ಕಾಫಿ ತಯಾರಿಸುವ ಸಾಧ್ಯತೆಯಾಗಿ ಉಳಿದಿಲ್ಲ ಮತ್ತು ಬಹುತೇಕ ಚರ್ಚೆಯಲ್ಲೂ ಇಲ್ಲ. ಬದಲು ಸಂಖ್ಯೆ 3ರ ಕರ್ತವ್ಯವಾಗಿಯಷ್ಟೇ ಅದು ಪರಿಚಿತವಾಗಿದೆ.
ಮಹಾಭಾರತದಲ್ಲೊಂದು ಸನ್ನಿವೇಶ ಇದೆ.
ಪಂಚಪಾಂಡವರು ಮತ್ತು ಅವರ ಪತ್ನಿ ದ್ರೌಪದಿ ಅಡವಿಯಲ್ಲಿ ದಾರಿ ತಪ್ಪಿ ಅಲೆಯುತ್ತಿರುತ್ತಾರೆ. ಅಪರಿಚಿತ ಪ್ರದೇಶವಾದುದರಿಂದ ಆಹಾರಕ್ಕೂ ತತ್ವಾರ. ದ್ರೌಪದಿಯನ್ನು ಇದು ಬಹಳವೇ ಕಾಡುತ್ತದೆ. ತಾನೂ ತಿನ್ನಬೇಕು, ಪಾಂಡವರಿಗೂ ಕೊಡಬೇಕು, ತಮ್ಮ ಅತಿಥಿಗಳಿಗೂ ಉಣಿಸಬೇಕು. ಆದರೆ ಹೇಗೆ.. ಎಂಬ ಸಂಧಿಗ್ದತೆಯಲ್ಲಿ ಆಕೆ ತೊಳಲಾಡುತ್ತಾಳೆ. ಕೊನೆಗೆ ದೇವನು ಆಕೆಯ ಬೇಡಿಕೆಗೆ ಮಣಿಯುತ್ತಾನೆ. ಅಕ್ಷಯ ಪಾತ್ರೆಯನ್ನು ನೀಡುತ್ತಾನೆ. ಅದರ ವಿಶೇಷತೆ ಏನೆಂದರೆ, ಆ ಪಾತ್ರೆ ಯಾವಾಗಲೂ ಆಹಾರದಿಂದ ತುಂಬಿಕೊಂಡೇ ಇರುತ್ತದೆ. ಆದರೆ, ಯಾವಾಗ ದ್ರೌಪದಿ ಅದರಿಂದ ಆಹಾರ ಸೇವಿಸುತ್ತಾಳೋ ತಕ್ಷಣ ಅದು ಖಾಲಿಯಾಗುತ್ತದೆ. ಬಳಿಕ ಅದು ತುಂಬುವುದು ಮರುದಿನ. ಆದ್ದರಿಂದ ಆಕೆ ಮೊದಲು ಪಂಚ ಪಾಂಡವರಿಗೆ ಉಣಿಸಬೇಕಾಗುತ್ತದೆ. ಬಳಿಕ ಅತಿಥಿಗಳಿಗೆ, ಕೊನೆಗೆ ತಾನುಣ್ಣುವ ಅನಿವಾರ್ಯತೆಗೆ ಸಿಲುಕುತ್ತಾಳೆ. ಅಷ್ಟಕ್ಕೂ,
ಸಾಮಾನ್ಯವಾಗಿ ಹೆಣ್ಣು ಎಲ್ಲರಿಗಿಂತ ಮೊದಲು ಏಳುತ್ತಾಳೆ ಅಥವಾ ಏಳಬೇಕು. ಇನ್ನು, ರಾತ್ರಿ ಮಲಗುವುದಾದರೋ ಎಲ್ಲರಿ ಗಿಂತ ಕೊನೆಗೆ ಅಥವಾ ಕೊನೆಗೇ ಮಲಗಬೇಕು. ಇದು ದೇವ ನಿಯಮದಂತೆ ಹೆಚ್ಚಿನ ಮನೆಗಳಲ್ಲಿ ಆಚರಣೆಯಲ್ಲಿದೆ. ಹೆಣ್ಣು ಎಲ್ಲರಿಗಿಂತ ಮೊದಲು ಯಾಕೆ ಏಳುವುದೆಂದರೆ, ಅಡುಗೆ ತಯಾರಾಗಬೇಕು. ಪತಿ ಕೆಲಸಕ್ಕೆ ಹೊರಡುವ ಸಮಯಕ್ಕೆ ಸರಿಯಾಗಿ ಇಷ್ಟದ ಬ್ರೇಕ್‍ಫಾಸ್ಟ್ ತಯಾರಿಸಬೇಕು. ಅದಕ್ಕಿಂತ ಮುಂಚೆ ಮಕ್ಕಳನ್ನು ಶಾಲೆಗೆ ಸಿದ್ಧಪಡಿಸಬೇಕು. ಅವರ ಟಿಫಿನ್ ಬಾಕ್ಸ್ ಗೆ ಏನಾದ್ರೂ ಹೊಸತನ್ನು ತುಂಬಬೇಕು. ಹೀಗೆ ಪತಿಯ ಬ್ರೇಕ್‍ಫಾಸ್ಟ್ ನ ಬಳಿಕ ಮತ್ತು ಮಕ್ಕಳು ಶಾಲೆಗೆ ಹೊರಟು ಹೋದ ಬಳಿಕ ಆಕೆ ತಾನು ಮಾಡಿದ ಆಹಾರವನ್ನು ಹೊಟ್ಟೆಗೆ ಸೇರಿಸುತ್ತಾಳೆ. ಬೆಳಗ್ಗಿನದ್ದು ಹೀಗಾದರೆ ರಾತ್ರಿಯದ್ದಂತೂ ಇದಕ್ಕಿಂತಲೂ ಘೋರ. ಎಲ್ಲವನ್ನೂ ತಯಾರಿಸಿದ ಬಳಿಕ ಆಕೆ ತನ್ನ ಮತ್ತು ತನ್ನಂತೆ ಇರುವ ಮಹಿಳೆಯರ ಹೊರತು ಪುರುಷ ಜಾತಿಯ ಎಲ್ಲರಿಗೂ ಬಡಿಸುತ್ತಾಳೆ. ಅವರ ಮಾತುಗಳಿಗೆ ಕಿವಿಯಾಗುತ್ತಾಳೆ. ಅಡುಗೆಯ ಕುರಿತಂತೆ ಅವರು ಎತ್ತಬಹುದಾದ ನಕಾರಾತ್ಮಕ ಮತ್ತು ಸಕಾರಾತ್ಮಕ ಅಭಿಪ್ರಾಯಕ್ಕೆ ಮೌನವಾಗುತ್ತಾಳೆ. ಅವರು ಊಟ ಮಾಡಲು ಕುಳಿತಲ್ಲಿಂದ ಹಿಡಿದು ಏಳುವ ವರೆಗೆ ಪ್ರತಿ ಬೇಕು-ಬೇಡಗಳಿಗೆ ಸ್ಪಂದಿಸುತ್ತಾಳೆ. ಮಧ್ಯೆ ಮಧ್ಯೆ ನೀರು ತರಬೇಕಾಗುತ್ತದೆ. ಸಾರೋ, ಸಾಂಬಾರೋ ಖಾಲಿಯಾಗಿರುತ್ತದೆ. ಅನ್ನ ಮುಗಿದಿರುತ್ತದೆ. ಇವೆಲ್ಲವೂ ಆದ ಬಳಿಕ ತಾನು ಉಣ್ಣ ಬೇಕು. ಈ ಸಂದರ್ಭದಲ್ಲಿ ಆಕೆಗೆ ಬಡಿಸುವವರು ಬಹುತೇಕ ಯಾರೂ ಇರುವುದಿಲ್ಲ. ಆಕೆ ಮೊದಲೇ ನೀರು ಸಿದ್ಧಪಡಿಸಿಟ್ಟು ಕೊಳ್ಳಬೇಕು. ಹೆಚ್ಚುವರಿ ಅನ್ನವನ್ನು ಹತ್ತಿರ ತಂದಿಟ್ಟುಕೊಳ್ಳಬೇಕು. ಸಾಂಬಾರು, ಉಪ್ಪಿನಕಾಯಿ, ಪಲ್ಯ ಯಾವುದನ್ನೂ ಆಕೆಯ ಬಳಿಗೆ ತಂದೊಪ್ಪಿಸುವವರು ಬಹಳ ಸಂದರ್ಭಗಳಲ್ಲಿ ಕಡಿಮೆ. ಮಧ್ಯಮ ವರ್ಗದ ಸ್ಥಿತಿ ಇದಾದರೆ ಗ್ರಾಮೀಣ ಬಡ ಭಾರತದಲ್ಲಂತೂ ಇದಕ್ಕೆ ಇನ್ನೊಂದು ಮುಖವೂ ಇದೆ. ಅದೇನೆಂದರೆ, ಉಳಿಕೆ ಆಹಾರ ಎಂಬುದು. ಅನುಕೂಲಸ್ಥವಲ್ಲದ ಮನೆಯ ಮಹಿಳೆಯರು ಕಟ್ಟಕಡೆಗೆ ಊಟ ಮಾಡಲೇಬೇಕಾದ ಅನಿವಾರ್ಯತೆಯೊಂದು ಇಲ್ಲಿ ಇರುತ್ತದೆ. ಪುರುಷರು ಉಂಡು ಆದ ಬಳಿಕ ಉಳಿಯುವ ಆಹಾರವನ್ನೇ ಅವರು ಅವಲಂಬಿಸಿಕೊಂಡಿರುತ್ತಾರೆ. ಕೆಲವೊಮ್ಮೆ ಉಳಿಕೆ ಎಂಬುದು ಪುಟ್ಟ ಮಗುವಿಗೆ ಸಾಕಾಗುವಷ್ಟೇ ಇರುತ್ತದೆ. ಕೆಲವೊಮ್ಮೆ ಅದೂ ಇರುವುದಿಲ್ಲ. ‘ಪುರುಷರು ದುಡಿದು ತರುತ್ತಾರಲ್ಲ, ಅವರು ಹೊಟ್ಟೆ ತುಂಬಾ ಉಣ್ಣದಿದ್ದರೆ ಕೆಲಸ ಮಾಡುವುದು ಹೇಗೆ..’ ಎಂಬ ಕಳಕಳಿ ಮಹಿಳೆಯರದ್ದು. ನಿಜವಾಗಿ, ಇದು ಮಹಿಳೆಯರ ಮೇಲೆ ತೀವ್ರ ಪರಿಣಾಮವನ್ನು ಬೀರುತ್ತದೆ. ಗರ್ಭಿಣಿ ಮಹಿಳೆಯರಂತೂ ಪೌಷ್ಠಿಕಾಂಶ ಕೊರತೆಯಿಂದ ಬಳಲಬೇಕಾಗುತ್ತದೆ. ಹುಟ್ಟುವ ಮಕ್ಕಳ ಮೇಲೂ ಅದು ಪರಿಣಾಮ ಬೀರುತ್ತದೆ. ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳುವುದಕ್ಕೆ, ಕಡಿಮೆ ಭಾರದ ಮಕ್ಕಳು ಜನಿಸುವುದಕ್ಕೆ ಪ್ರಮುಖ ಕಾರಣಗಳಲ್ಲಿ ಈ ‘ಉಳಿಕೆ’ ಸೇವನೆಗೆ ಪ್ರಮುಖ ಪಾತ್ರವಿದೆ ಎಂದು ಸಮೀಕ್ಷೆಗಳೇ ಹೇಳುತ್ತವೆ. ಮೊದಲ ಎರಡು ವರ್ಷಗಳಲ್ಲಿ ಮಕ್ಕಳು ತಾಯಿಯನ್ನು ವಿಪರೀತ ಅವಲಂಬಿಸಿರುತ್ತಾರೆ. ಎದೆಹಾಲು ಈ ಸಂದರ್ಭದಲ್ಲಿ ಬಹುಮುಖ್ಯ ಆಹಾರ. ಆದರೆ, ಕಟ್ಟಕಡೆಗೆ ಉಣ್ಣುವ ‘ಸಂಸ್ಕೃತಿ’ಯು ತಾಯಿಯ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ. ನಿಜವಾಗಿ,
ಬ್ರೇಕ್‍ಫಾಸ್ಟ್, ಲಂಚ್, ಡಿನ್ನರ್.. ಇವೆಲ್ಲ ಹೊಟ್ಟೆ ತುಂಬಿಸುವುದರ ಹೆಸರುಗಳಷ್ಟೇ ಅಲ್ಲ, ಸಂಬಂಧವನ್ನು ಗಟ್ಟಿಗೊಳಿಸುವ ಸಂದರ್ಭಗಳೂ ಹೌದು. ತಂದೆ-ತಾಯಿ ಮಕ್ಕಳು, ಸೊಸೆಯಂದಿರು ಇರುವ ಮನೆಯೊಂದರಲ್ಲಿ ಎಲ್ಲರೂ ಒಂದೇ ಟೇಬಲಲ್ಲಿ ಒಟ್ಟಾಗಿ ಆಹಾರ ಸೇವಿಸುವ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆ ಮನೆ ಬಡವರದ್ದೂ ಆಗಿರಬಹುದು, ಮಧ್ಯಮ ವರ್ಗದ್ದೂ ಆಗಿರಬಹುದು. ಶ್ರೀಮಂತ ರದ್ದೂ ಆಗಿರಬಹುದು. ಎಲ್ಲರೂ ಒಟ್ಟಾಗಿ ಉಣ್ಣುವುದಕ್ಕೆ ಆ ಮನೆಯ ಸ್ಥಿತಿ-ಗತಿ ಮುಖ್ಯವಾಗುವುದಿಲ್ಲ. ಇದ್ದದ್ದನ್ನು ಎಲ್ಲರೂ ಒಟ್ಟಾಗಿ ಹಂಚಿ ತಿನ್ನುವುದಕ್ಕೂ ಕೆಲವರು ಹೊಟ್ಟೆ ತುಂಬಾ ತಿಂದು ಇನ್ನು ಕೆಲವರು ಅರೆ ಹೊಟ್ಟೆಯಲ್ಲೋ ಖಾಲಿ ಹೊಟ್ಟೆಯಲ್ಲೋ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸಾಮಾನ್ಯವಾಗಿ ಸೊಸೆಯಂದಿರಿರುವ ಮನೆಗಳಲ್ಲಿ ಪರಸ್ಪರರಲ್ಲಿ ಒಂದಷ್ಟು ಸಂವಹನದ ಕೊರತೆ, ಬೇಜಾರು ಇದ್ದೇ ಇರುತ್ತದೆ. ಅಣ್ಣ-ತಮ್ಮಂದಿರ ನಡುವೆಯೂ ತಪ್ಪು ಗ್ರಹಿಕೆಗಳಿರುತ್ತವೆ. ಬಾಯಿ ತುಂಬಾ ಮಾತಾಡಿಕೊಳ್ಳುವುದೇ ಇಂಥವುಗಳನ್ನು ಪರಿಹರಿಸಿಕೊಳ್ಳುವುದಕ್ಕಿರುವ ಉತ್ತಮ ದಾರಿ. ಕೆಲವೊಮ್ಮೆ ಇಂಥ ತಪ್ಪುಗ್ರಹಿಕೆಗಳು ಮನೆಯನ್ನೇ ಹೋಳಾಗಿಸುವುದಕ್ಕೂ ಕಾರಣವಾಗುವುದಿದೆ. ಒಂದು ವೇಳೆ, ಮನೆಯ ಸದಸ್ಯರೆಲ್ಲರೂ ಕನಿಷ್ಠ ದಿನದಲ್ಲಿ ಒಂದು ಹೊತ್ತಿನ ಆಹಾರವನ್ನಾದರೂ ಒಟ್ಟಾಗಿ ಸೇವಿಸುವ ವಾತಾವರಣ ಉಂಟಾದರೆ ಅಲ್ಲೊಂದು ವಿಶ್ವಾಸದ ವಾತಾವರಣ ಸೃಷ್ಟಿಯಾಗುವುದಕ್ಕೆ ಸಾಧ್ಯವಿದೆ. ಅಣ್ಣ-ತಮ್ಮಂದಿರ ನಡುವೆ ಸಹಜವಾಗಿಯೇ ಅಲ್ಲಿ ಮಾತುಕತೆ ಗಳಾಗುತ್ತವೆ. ತಂದೆ ಮಕ್ಕಳ ನಡುವೆ ಅಭಿಪ್ರಾಯ ವಿನಿಮಯಗಳು ನಡೆಯುತ್ತವೆ. ಸೊಸೆಯಂದಿರೂ ಅದರಲ್ಲಿ ಕೂಡಿಕೊಳ್ಳಲೇಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ದಿನದಲ್ಲಿ ಒಮ್ಮೆಯಾದರೂ ಇಂಥ ಸಂದರ್ಭಗಳು ಸೃಷ್ಟಿಯಾಗುತ್ತಲೇ ಇರುವುದು ಪರಸ್ಪರರನ್ನು ಹತ್ತಿರಗೊಳಿಸುವುದಕ್ಕೆ ನಿಮಿತ್ತವಾಗಬಹುದು.
ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ನಿಲುವು ಅಧರ್ಮ ಮತ್ತು ಅಪ್ರಾಕೃತಿಕ. ಎಲ್ಲರಿಗಿಂತಲೂ ಮೊದಲು ಎದ್ದು ಎಲ್ಲರಿ ಗಿಂತಲೂ ಕೊನೆಯಲ್ಲಿ ಮಲಗುವುದೆಂಬುದು ಹೆಣ್ಣಿನ ಮೇಲೆ ನಮ್ಮ ಗೌರವವನ್ನು ಹೆಚ್ಚಿಸುವುದಕ್ಕೆ ಕಾರಣವಾಗಬೇಕೇ ಹೊರತು ನಿರ್ಲಕ್ಷ್ಯಕ್ಕಲ್ಲ. ಅಡುಗೆ ಮಾಡುವ, ಮಕ್ಕಳ ಆರೈಕೆ ಮಾಡುವ, ಪತಿಯ ಬೇಕು-ಬೇಡಗಳಿಗೆ ಸ್ಪಂದಿಸುವ, ಮನೆ-ಮನಗಳನ್ನು ಸ್ವಚ್ಛವಾಗಿಡುವ.. ಹೆಣ್ಣು ‘ಕೊನೆ’ಯಲ್ಲಿ ನಿಲ್ಲಬೇಕಾದವಳಲ್ಲ. ಮನೆಯ ಪುರುಷರ ಜೊತೆಜೊತೆಗೇ ಆಹಾರವನ್ನು ಸೇವಿಸ ಬೇಕಾದವಳು. ಮಾತುಕತೆಯಲ್ಲಿ ಪಾಲ್ಗೊಳ್ಳಬೇಕಾದವಳು. ಖುಷಿಯನ್ನು ಹಂಚಿಕೊಳ್ಳಬೇಕಾದವಳು.
ಆಹಾರ ಎಷ್ಟೇ ಇರಲಿ, ಅದನ್ನು ಆಕೆಯೊಂದಿಗೆ ಹಂಚಿಕೊಂಡು ಜೊತೆಯಾಗಿ ತಿನ್ನುವ ಸಂಸ್ಕೃತಿ ಎಲ್ಲರದ್ದಾಗಲಿ.

No comments:
Post a Comment