Saturday, January 21, 2017

ಇನ್ನಷ್ಟು ಖಾಝಿಗಳು, ಉಸ್ತಾದರು ವಿಶ್ವಾಸಾರ್ಹತೆಯನ್ನು ಕಳಕೊಳ್ಳುವ ಮೊದಲು...


1. ಬಿಳಿ ಟೊಪ್ಪಿಯನ್ನು ಧರಿಸಿರುವ, ಎದೆಯ ಎಡ ಮತ್ತು ಬಲಭಾಗಕ್ಕೆ ಭಾರತದ ಧ್ವಜವನ್ನು ಒತ್ತಿ ಇಟ್ಟಿರುವ ಮತ್ತು ತನ್ನೆರಡೂ ಕೆನ್ನೆಗಳಲ್ಲಿ ಭಾರತೀಯ ಧ್ವಜವನ್ನು ಅಚ್ಚು ಹಾಕಿಸಿಕೊಂಡು ಮುಗುಳುನಗುತ್ತಾ ನಿಂತಿರುವ ಮುಸ್ಲಿಮ್ ಹುಡುಗನ ಚಿತ್ರ.
2. ವಿವಿಧ ಸಿಹಿ ತಿನಿಸುಗಳನ್ನು ಒಂದೇ ಬಟ್ಟಲಲ್ಲಿಟ್ಟು ತೆಗೆದಿರುವ ಚಿತ್ರ.
3. ಹಲವು ಕೈಗಳುಳ್ಳ ಮತ್ತು ಆ ಕೈಗಳೆಲ್ಲವೂ ಭಾರತದ ಧ್ವಜವನ್ನು ಎತ್ತಿ ಹಿಡಿದಿರುವ ದುರ್ಗಾದೇವಿಯ ಪರಿಕಲ್ಪನೆಯ ನೃತ್ಯದ ಚಿತ್ರ.
4. ತಾಜ್‍ಮಹಲ್ 5. ಎರಡು ಹುಲಿಗಳು
6. ಮೆರವಣಿಗೆಯಲ್ಲಿ ಸಾಗುತ್ತಿರುವ ಭಾರೀ ಗಾತ್ರದ ಗಣೇಶ ವಿಗ್ರಹದ ಚಿತ್ರ.
7. ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸುತ್ತಿರುವ ಸೇನೆಯ ಚಿತ್ರ ಮತ್ತು
8. ಶ್ರೀಕೃಷ್ಣ ವೇಷಧಾರಿ ಮಗುವನ್ನು ಎತ್ತಿಕೊಂಡು ಸಾಗುವ ಹಿರಿಯ ವ್ಯಕ್ತಿಯ ಜೊತೆ ಆತನ ಮಗಳಂತೆ ಕಾಣುವ ಬುರ್ಖಾಧಾರಿ ಮಹಿಳೆ ನಡೆಯುತ್ತಿರುವ ಚಿತ್ರ..
         ಇದು ಮುಸ್ಲಿಮ್ ರಾಷ್ಟ್ರೀಯ ಮಂಚ್ (MRM) ಎಂಬ ಸಂಘಟನೆಯ ಫೇಸ್‍ಬುಕ್ ಪ್ರೊಫೈಲ್ ಚಿತ್ರ. ಈ ಮಂಚ್‍ಗೂ ಆರೆಸ್ಸೆಸ್‍ಗೂ ನಡುವೆ ಇರುವ ಸಂಬಂಧ ಯಾವ ಬಗೆಯದು ಎಂಬುದನ್ನು ಏಕ್ ನಯೀ ರಾಹ್ (ಒಂದು ಹೊಸ ದಾರಿ) ಎಂಬ ಹೆಸರಲ್ಲಿರುವ ಮಂಚ್‍ನ ವೆಬ್‍ಸೈಟೇ ಹೇಳುತ್ತದೆ. ರಾಷ್ಟ್ರೀಯವಾದಿ ಮುಸ್ಲಿಮರ ಒಂದು ಗುಂಪು ಮತ್ತು ಆರೆಸ್ಸೆಸ್‍ನ ನಾಯಕರು 2002 ಡಿಸೆಂಬರ್ 24ರಂದು ದೆಹಲಿಯಲ್ಲಿ ಒಟ್ಟು ಸೇರಿದರು. ಈದ್ ಮಿಲನ್‍ನ ಸಂದರ್ಭದಲ್ಲಿ ನಡೆದ ಈ ಸಭೆಯಲ್ಲಿ ಮುಸ್ಲಿಮ್ ರಾಷ್ಟ್ರೀಯ ಮಂಚ್ ಅನ್ನು ಸ್ಥಾಪಿಸಲಾಯಿತು ಎಂದು ಅದು ಹೇಳುತ್ತದೆ. ಇದನ್ನು ಇಲ್ಲಿ ಉಲ್ಲೇಖಿಸುವುದಕ್ಕೆ ಒಂದು ಕಾರಣ ಇದೆ.
       ಕಳೆದ ವಾರ ಜನವರಿ 9ರಂದು ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲಿನ ಸಭಾಂಗಣದಲ್ಲಿ ಅಂತರ್ ಧರ್ಮೀಯ ಬುದ್ಧಿಜೀವಿಗಳ ಸಭೆ (Inter Religion intellectuals meet) ನಡೆಯಿತು. ಈ ಸಭೆಯಲ್ಲಿ ದಕ್ಷಿಣ ಕನ್ನಡದ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಭಾಗವಹಿಸಿದರು. ಉಡುಪಿಯ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮತ್ತು ಬಿಷಪ್ ಅಲೋಶಿಯಸ್ ಪೌಲ್ ಡಿ’ಸೋಜ ಅವರೂ ಭಾಗವಹಿಸಿದರು. ಆರೆಸ್ಸೆಸ್‍ನ ಉನ್ನತ ನಾಯಕರಾದ ಇಂದ್ರೇಶ್ ಕುಮಾರ್ ಅವರು ದಿಕ್ಸೂಚಿ ಭಾಷಣ ಮಾಡಿದರು. ಈ ಸಭೆಯ ಆಯೋಜನೆಯನ್ನುRights, Awareness and Knowledge Society (RANKS) ಎಂಬುದು ವಹಿಸಿಕೊಂಡಿದ್ದು, ‘ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಒಗ್ಗಟ್ಟು ಸಭೆಯ ಉದ್ದೇಶವಾಗಿದೆ’ ಎಂದು ಬ್ಯಾನರ್‍ನಲ್ಲಿ ಹೇಳಲಾಗಿತ್ತು. ಸಭೆಗೆ ಸಂಬಂಧಿಸಿ ಮುದ್ರಿಸಲಾದ ಆಮಂತ್ರಣ ಪತ್ರಿಕೆಯಲ್ಲೂ ಇದನ್ನೇ ನಮೂದಿಸಲಾಗಿತ್ತು. ಅಲ್ಲದೇ, ಸಭೆಯಲ್ಲಿ ಭಾಗವಹಿಸುವ ಬುದ್ಧಿಜೀವಿ ಅತಿಥಿಗಳ ಭಾವಚಿತ್ರವನ್ನೂ ಆಮಂತ್ರಣ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಅದರಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಭಾವಚಿತ್ರವೂ ಇತ್ತು. ಆದರೆ ಈ ಭಾವಚಿತ್ರದ ಅಡಿಯಲ್ಲಿ ಶೇಖ್ ಅಬೂಬಕರ್ ಬಿನ್ ಅಹ್ಮದ್ ಎಂದು ಬರೆಯಲಾಗಿತ್ತು. ಬಹುಶಃ, ಮಂಗಳೂರಿಗೆ ಅಪರಿಚಿತವಾಗಿರುವ ಒಂದು ಸಂಸ್ಥೆಯು (RANKS) ಕಾರ್ಯಕ್ರಮವನ್ನು ಆಯೋಜಿಸಿದೆ ಎಂಬುದನ್ನು ಬಿಟ್ಟರೆ, ಉಳಿದಂತೆ ಈ ಸಭೆಯ ಬಗ್ಗೆ ಅನುಮಾನ ಪಡುವುದಕ್ಕೆ ಯಾವ ಬಾಹ್ಯ ಕುರುಹುಗಳೂ ಇರಲಿಲ್ಲ. ಅಲ್ಲದೇ, ಇಡೀ ಕಾರ್ಯಕ್ರಮದ ಹೊಣೆಯನ್ನು ಪೊಲೀಸ್ ಇಲಾಖೆಯೇ ವಹಿಸಿಕೊಂಡಂತೆ ಕಾಣುತ್ತಿತ್ತು. ಅತಿಥಿಗಳನ್ನು ಆಹ್ವಾನಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದು ಪೋಲೀಸ್ ಇಲಾಖೆಯೇ. ಕಮೀಷನರ್‍ರಿಂದ ಹಿಡಿದು ಇತರ ವಿವಿಧ ಉನ್ನತ ಪೋಲೀಸ್ ಅಧಿಕಾರಿಗಳು ಸ್ವತಃ ಈ ಸಭೆಯ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಅತಿಥಿಗಳನ್ನು ಖುದ್ದು ಆಹ್ವಾನಿಸಿದರು. ಒಂದು ರೀತಿಯಲ್ಲಿ, ಸಭೆಯ ಆಮಂತ್ರಣವನ್ನು ಸ್ವೀಕರಿಸುವುದಕ್ಕೆ ಮತ್ತು ಸಂಘಟಕರ ಹಿನ್ನೆಲೆಯನ್ನು ಕೆದಕದೇ ಒಪ್ಪಿಕೊಳ್ಳುವುದಕ್ಕೆ ಈ ಬೆಳವಣಿಗೆಗಳು ಧಾರಾಳ ಸಾಕು.


  ಆದರೆ, RANKS ಎಂಬ ಅಪರಿಚಿತ ಹೆಸರಿನಲ್ಲಿ ಈ ಕಾರ್ಯ ಕ್ರಮವನ್ನು ನಿಜಕ್ಕೂ ಆಯೋಜಿಸಿದ್ದು ಮುಸ್ಲಿಮ್ ರಾಷ್ಟ್ರೀಯ ಮಂಚ್ ಎಂಬ RSS ಅಂಗಸಂಸ್ಥೆ ಎಂಬುದಾಗಿ ಅತಿಥಿ ಭಾಷಣ ದಲ್ಲಿ ಆಲ್ ಇಂಡಿಯಾ ಇಮಾಮ್ ಆರ್ಗನೈಝೇಶನ್‍ನ ಮುಖ್ಯಸ್ಥರಾದ ಡಾ| ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೆಮ್ಮೆಯಿಂದ ಘೋಷಿಸಿದರು. ಇವರು ಮಂಚ್‍ನ ಕಾರ್ಯಕ್ರಮಗಳಲ್ಲಿ ಈ ಹಿಂದೆಯೂ ಭಾಗವಹಿಸಿದವರಾಗಿದ್ದರು. ಅಲ್ಲಿಗೆ ಎಲ್ಲ ರಹಸ್ಯಗಳೂ ಬಯಲಾದುವು. ಮುಸ್ಲಿಮ್ ರಾಷ್ಟ್ರೀಯ ಮಂಚ್ ಅನ್ನು ಸ್ಥಾಪಿಸಿದ್ದು ಆರೆಸ್ಸೆಸ್‍ನ ಸರ್‍ಸಂಘ ಚಾಲಕರಾಗಿದ್ದ ಕೆ.ಎಸ್. ಸುದರ್ಶನ್. ಅದರ ಮಾರ್ಗದರ್ಶಕರಾಗಿ ಕಾರ್ಯನಿರ್ವ ಹಿಸುತ್ತಿರುವುದು ಆರೆಸ್ಸೆಸ್‍ನ ಉನ್ನತ ನಾಯಕರಾದ ಇಂದ್ರೇಶ್ ಕುಮಾರ್. ಈ ಮಂಚ್‍ನ ರಾಷ್ಟ್ರೀಯ ಸಂಚಾಲಕರಾಗಿರುವವರು ಮುಹಮ್ಮದ್ ಅಫ್ಝಲ್ ಎಂಬ ವ್ಯಕ್ತಿ. ಸಹಜವಾಗಿ, ಈ ಸಭೆಯು ಮುಸ್ಲಿಮ್ ಸಮುದಾಯದೊಳಗೆ ಪರ-ವಿರುದ್ಧ ಚರ್ಚೆಗೆ ವೇದಿಕೆ ಯನ್ನು ಒದಗಿಸಿದುವು. ಮಂಗಳೂರಿನ ಖಾಝಿಯವರು ಸಭೆಯಲ್ಲಿ ಭಾಗವಹಿಸಿದ್ದು, ಒತ್ತಾಯಪೂರ್ವಕವಾಗಿ ಅವರ ಕೈಯಲ್ಲಿ ದೀಪ ಹೊತ್ತಿಸಿದ್ದು ಮತ್ತು ಅವರು ಭಾಷಣ ಮಾಡಿದ್ದು.. ಎಲ್ಲವೂ ತೀವ್ರ ಚರ್ಚೆಗೆ ಒಳಗಾದುವು. ಖಾಝಿಯವರ ಅನುಯಾಯಿಗಳಲ್ಲೇ ಭಿನ್ನಾಭಿಪ್ರಾಯ ಮೂಡಿದುವು. ಖಾಝಿಯವರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವ ಸಂದರ್ಭಗಳೂ ಎದುರಾದುವು. ಹಾಗಂತ, ಇಂಥ ಸನ್ನಿವೇಶ ಸೃಷ್ಟಿಯಾದುದು ಇದು ಮೊದಲ ಸಲವೇನೂ ಅಲ್ಲ. ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಸಂಘಟನೆಯು ಮದ್ರಸದ ಕುರಿತಂತೆ ಮಂಗಳೂರಿನ ಪುರಭವನದಲ್ಲಿ ವರ್ಷದ ಹಿಂದೆ ಆಯೋಜಿಸಿದ್ದ ಸಭೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು ಮತ್ತು ಅಪದ್ಧ ಮಾತುಗಳನ್ನಾಡಿದ್ದೂ ಸಮುದಾಯದೊಳಗೆ ಚರ್ಚೆಗೆ ಒಳಗಾಗಿತ್ತು. ಅನುಯಾಯಿಗಳ ನಡುವೆ ಆಗಲೂ ಭಿನ್ನಾಭಿಪ್ರಾಯಗಳು ಮೂಡಿದ್ದುವು. ನಾಯಕತ್ವದ ವಿಶ್ವಾಸಾರ್ಹತೆಯೂ ಪ್ರಶ್ನೆಗೀಡಾಗಿದ್ದುವು. ಹಾಗೆಯೇ ಬಿಜೆಪಿ ಪ್ರಾಯೋಜಿತ ಸೂಫಿ ಸಮ್ಮೇಳನದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರು ಭಾಗವಹಿಸಿದಾಗಲೂ ಸಮುದಾಯ ಬಹುತೇಕ ಎರಡು ಪಂಗಡಗಳಾಗಿ ವಿಭಜಿಸಿದ್ದುವು. ಈ ಎಲ್ಲ ಸಂದರ್ಭದಲ್ಲೂ ಅತ್ಯಂತ ಹೆಚ್ಚು ಹಾನಿಯಾದುದು ನಾಯಕತ್ವದ ವಿಶ್ವಾಸಾರ್ಹತೆಯ ಮೇಲೆ. ಅನುಯಾಯಿಗಳ ಪರಸ್ಪರ ಸಂಬಂಧ ಮತ್ತು ಒಗ್ಗಟ್ಟಿನ ಮೇಲೆ. ಅಂದಹಾಗೆ,
      ಸಾಹಿತಿ ಗಿರೀಶ್ ಕಾರ್ನಾಡ್‍ರ ತುಘಲಕ್ ನಾಟಕದಲ್ಲಿ ಒಂದು ಸನ್ನಿವೇಶ ಇದೆ.
ತುಘಲಕ್‍ನ ಆಡಳಿತವನ್ನು ಓರ್ವ ಮೌಲಾನಾ ಪ್ರಶ್ನಿಸತೊಡಗುತ್ತಾರೆ. ತುಘಲಕ್‍ನ ಅಸಾಮರ್ಥ್ಯ ಮತ್ತು ಜನವಿರೋಧಿ ನಿಲು ವನ್ನು ಮೌಲಾನಾ ಒಂದೊಂದಾಗಿ ಸಾರ್ವಜನಿಕರ ಮುಂದಿಡುತ್ತಾರೆ. ಜನರು ಮೌಲಾನಾರತ್ತ ಆಕರ್ಷಿತರಾಗುತ್ತಾರೆ. ಅವರ ಭಾಷಣವನ್ನು ಆಲಿಸಲು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರತೊಡಗುತ್ತಾರೆ. ತುಘಲಕ್‍ನಿಗೆ ಭಯವಾಗತೊಡಗುತ್ತದೆ. ಮೌಲಾನಾ ತನ್ನನ್ನು ಎಲ್ಲಿ ಉಚ್ಛಾಟಿಸಿ ಬಿಡುತ್ತಾರೋ ಎಂಬ ಭಯ ಆತನನ್ನು ಕಾಡ ತೊಡಗುತ್ತದೆ. ಅಲ್ಲದೇ, ಆತನ ಭಾಷಣಕ್ಕೆ ನರಪಿಳ್ಳೆಯೂ ಸೇರದಂಥ ವಾತಾವರಣ ಸೃಷ್ಟಿಯಾಗತೊಡಗುತ್ತದೆ. ಆಗ ತುಘಲಕ್ ಒಂದು ಉಪಾಯ ಹೂಡುತ್ತಾನೆ. ತನ್ನ ವತಿಯಿಂದಲೇ ಮೌಲಾನಾರ ಭಾಷಣವನ್ನು ಏರ್ಪಡಿಸುತ್ತಾನೆ. ಭಾಷಣ ಮೌಲಾನರದ್ದು. ಪ್ರಾಯೋಜಕತ್ವ ತುಘಲಕ್‍ನದ್ದು. ಈ ಭಾಷಣ ಕಾರ್ಯಕ್ರಮದ ಬಗ್ಗೆ ತುಘಲಕ್‍ನ ವತಿಯಿಂದಲೇ ಪ್ರಚಾರ ನಡೆಯುತ್ತದೆ. ಜನರು ಗೊಂದಲಕ್ಕೆ ಸಿಲುಕುತ್ತಾರೆ. ಆವರೆಗೆ ಮೌಲಾನರ ಮೇಲೆ ಅಪಾರ ವಿಶ್ವಾಸವನ್ನು ತಾಳಿದ್ದ ಜನರೇ ಅವರ ಮೇಲೆ ಅನುಮಾನ ಪಡತೊಡಗುತ್ತಾರೆ. ತನ್ನ ಪ್ರಬಲ ಟೀಕಾಕಾರನನ್ನೇ ತುಘಲಕ್ ಭಾಷಣಕ್ಕೆ ಆಹ್ವಾನಿಸುವುದೆಂದರೆ, ಅವರಿಬ್ಬರ ನಡುವೆ ಏನೋ ಒಳ ಒಪ್ಪಂದಗಳು ನಡೆದಿರಬೇಕು ಎಂದು ಆಡಿಕೊಳ್ಳತೊಡಗುತ್ತಾರೆ. ಮಾತ್ರವಲ್ಲ, ಮೌಲಾನರ ಆ ವರೆಗಿನ ಭಾಷಣದ ಪ್ರಾಮಾಣಿಕತೆಯನ್ನೇ ಅನುಮಾನಿಸತೊಡಗುತ್ತಾರೆ. ಕೊನೆಗೆ ನಿಗದಿತ ದಿನದಂದು ಮೌಲಾನಾ ಸಭೆಗೆ ತೆರಳುತ್ತಾರೆ. ತುಘಲಕ್‍ನ ಸಭೆಯಲ್ಲೇ ತುಘಲಕ್‍ನನ್ನು ಮತ್ತು ಈತನ ಜನವಿರೋಧಿ ನೀತಿಯನ್ನು ಖಂಡಿಸುವ ಉಮೇದಿನಿಂದ ವೇದಿಕೆ ಹತ್ತುತ್ತಾರೆ. ಆದರೆ ಸಭೆಯಲ್ಲಿ ಒಂದೇ ಒಂದು ನರಪಿಳ್ಳೆಯೂ ಇರುವುದಿಲ್ಲ. ಹೀಗೆ ಮೌಲಾನರ ವಿಶ್ವಾಸಾರ್ಹತೆಯನ್ನು ಅತ್ಯಂತ ಜಾಣತನದಿಂದ ತುಘಲಕ್ ಮುಗಿಸಿಬಿಟ್ಟಿರುತ್ತಾನೆ.

     ಬಹುಶಃ, ಮುಸ್ಲಿಮ್ ಸಮುದಾಯದ ನಾಯಕರ ವಿಶ್ವಾಸಾರ್ಹತೆಯನ್ನು ಪ್ರಶ್ನೆಗೀಡು ಮಾಡುವುದು, ಅನುಯಾಯಿಗಳ ನಡುವೆ ಗೊಂದಲವನ್ನು ಸೃಷ್ಟಿಸುವುದು ಮತ್ತು ರೋಸಿ ಹೋದ ಗುಂಪುಗಳನ್ನು ಹುಟ್ಟು ಹಾಕಿ ತನ್ನತ್ತ ಸೆಳೆದುಕೊಳ್ಳುವುದು ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಸಂಚು ಆಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.
      2016 ಮಾರ್ಚ್ 12ರಂದು ನಾಗ್ಪುರದಲ್ಲಿ ಒಂದು ಪತ್ರಿಕಾಗೋಷ್ಠಿ ನಡೆಯಿತು. ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ನಾಗಪುರದ ಸಂಚಾಲಕ ರಿಯಾಝ್ ಖಾನ್ ಮತ್ತು ಮುಸ್ಲಿಮ್ ರಾಷ್ಟ್ರೀಯ ಮಹಿಳಾ ಮಂಚ್‍ನ ನಾಗಪುರದ ಅಧ್ಯಕ್ಷೆ ಇಕ್ರಾ ಖಾನ್ ಜಂಟಿಯಾಗಿ ಈ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ತಾವು ಮತ್ತು ಸುಮಾರು 200ರಷ್ಟು ಮುಸ್ಲಿಮ್ ಕಾರ್ಯಕರ್ತರು ಮಂಚ್‍ನಿಂದ ಹೊರಬಂದಿರುವುದಾಗಿ ಘೋಷಿಸಿದರು. ಮುಸ್ಲಿಮ್ ಸಮುದಾಯದ ಅಭಿವೃದ್ಧಿಯ ಭರವಸೆಯನ್ನಿತ್ತು ತಮ್ಮನ್ನು ಸೇರಿಸಿಕೊಂಡ ಮಂಚ್, ತನ್ನ ಭರವಸೆಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು. ಮುಸ್ಲಿಮ್ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುವಂತೆ ಕಳೆದ ಎರಡು ವರ್ಷಗಳಲ್ಲಿ ತಮ್ಮನ್ನು ಹಲವು ಬಾರಿ ಬಲವಂತಪಡಿಸಲಾಯಿತೆಂದೂ ಅವರು ಹೇಳಿಕೊಂಡರು. ರಾಮನವಮಿಯಂದು ರಾಮನನ್ನು ಪೂಜಿಸುವಂತೆ, ಗೋವನ್ನು ಗೋಮಾತಾ ಎಂದು ಸಂಬೋಧಿಸುವಂತೆ ಮತ್ತು ಸೂರ್ಯ ನಮಸ್ಕಾರ ಮಾಡುವಂತೆ ನಮಗೆ ಆದೇಶಿಸಲಾಯಿತು ಎಂದವರು ಆರೋಪಿಸಿದರು. ಅಷ್ಟಕ್ಕೂ,
       ಅಮರನಾಥ ಯಾತ್ರಾರ್ಥಿಗಳಿಗೆ ಭೂಮಿ ನೀಡುವಂತೆ ಒತ್ತಾ ಯಿಸಿ 2008 ಆಗಸ್ಟ್ ನಲ್ಲಿ ಪೈಗಾಮ್ ಎ ಅಮನ್ (ಶಾಂತಿಯ ಸಂದೇಶ) ಎಂಬ ಹೆಸರಲ್ಲಿ ದೆಹಲಿಯ ಕೆಂಪು ಕೋಟೆಯಿಂದ ಕಾಶ್ಮೀರಕ್ಕೆ ಯಾತ್ರೆ ಸಂಘಟಿಸಿದ್ದು ಇದೇ ಮುಸ್ಲಿಮ್ ರಾಷ್ಟ್ರೀಯ ಮಂಚ್. ಈ ಯಾತ್ರೆಗೆ ನೇತೃತ್ವ ನೀಡಿದ್ದು ಜಾರ್ಖಂಡ್‍ನ ಶಾಹಿ ಇಮಾಮ್ ಮೌಲಾನಾ ಹಿಝ್ಬ್ ರಹ್ಮಾನ್ ಮೇಥಿ. ಈ ಯಾತ್ರಾ ತಂಡವು ಅಮರನಾಥ ಸಂಘರ್ಷ್ ಸಮಿತಿಯ ಜೊತೆ ಜಮ್ಮುವಿನಲ್ಲಿ ಸಭೆ ನಡೆಸಿತು. ಭಯೋತ್ಪಾದನೆಯನ್ನು ಖಂಡಿಸಿ 2009 ನವೆಂಬರ್‍ನಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ತಿರಂಗಾ ಯಾತ್ರೆ ಕೈಗೊಂಡಿತು. ಕಾಶ್ಮೀರಕ್ಕೆ ನೀಡಲಾಗಿರುವ 370ನೇ ವಿಶೇಷಾಧಿಕಾರವನ್ನು ರದ್ದುಗೊಳಿಸುವಂತೆ ಒತ್ತಾಯಿಸಿ 2012 ಸಪ್ಟೆಂಬರ್‍ನಲ್ಲಿ ಮಂಚ್ ಸಹಿ ಸಂಗ್ರಹವನ್ನು ಆಯೋಜಿಸಿತು. 2014ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರ ಪರ ವ್ಯಾಪಕ ಪ್ರಚಾರದಲ್ಲಿ ಪಾಲುಗೊಂಡಿತು. ಚುನಾವಣೆಗೆ ಮೊದಲು 50 ಮಿಲಿಯನ್ ಮುಸ್ಲಿಮರನ್ನು ತಲುಪುವ ಗುರಿಯೊಂದಿಗೆ ಅದು ಸಕ್ರಿಯವಾಯಿತು. 2015ರಲ್ಲಿ ‘ಯೋಗ ಮತ್ತು ಇಸ್ಲಾಮ್’ ಎಂಬ ಕೃತಿಯನ್ನು ಮುಸ್ಲಿಮ್ ರಾಷ್ಟ್ರೀಯ ಮಂಚ್ ಬಿಡುಗಡೆಗೊಳಿಸಿತು. ‘ನಮಾಝ್ ಯೋಗದ ಒಂದು ಭಾಗವಾಗಿದೆ’ ಎಂದೂ ಅದು ಹೇಳಿಕೊಂಡಿತು. ಬಹುಸಂಖ್ಯಾತ ಮುಸ್ಲಿಮರು ವಾಸವಿರುವ ಸ್ಥಳಗಳಲ್ಲಿ ಹಂಚಲಿಕ್ಕೆಂದೇ ‘ಗಾಯ್ ಔರ್ ಇಸ್ಲಾಮ್’ ಎಂಬ ಕೃತಿಯನ್ನು ಹೊರತಂದಿತು. ಗೋಹತ್ಯೆಯ ವಿರುದ್ಧ ಮುಸ್ಲಿಮ್ ವಿದ್ವಾಂಸರಿಂದ ಬರೆಸಲಾದ ಲೇಖನಗಳ ಸಂಗ್ರಹ ಇದು. 2015 ಸಪ್ಟೆಂಬರ್ 12ರಂದು ಹರ್ಯಾಣದ ಮೇವಾತ್‍ನಲ್ಲಿ ಪ್ರಥಮ ಮುಸ್ಲಿಮ್ ಗೋಪಾಲಕ್ ಸಮ್ಮೇಳನವನ್ನು ಆಯೋಜಿಸಿತು. ಮುಖ್ಯಮಂತ್ರಿ ಮನೋಹರ್‍ಲಾಲ್ ಖಟ್ಟರ್ ಈ ಸಭೆಯಲ್ಲಿ ಭಾಗವಹಿಸಿದರು. ಗೋಪಾಲನೆ ಮಾಡಿದ 74 ಮುಸ್ಲಿಮರನ್ನು ಈ ಸಭೆಯಲ್ಲಿ ಗೌರವಿಸಲಾಯಿತು. ಕಳೆದ ಈದ್ ನ ಸಮಯದಲ್ಲಿ (2016 ಸಪ್ಟೆಂಬರ್) ಅದು ಒಂದು ವಿಶಿಷ್ಟ ಬಲಿದಾನ ಕ್ರಮವನ್ನು ಸಮಾಜಕ್ಕೆ ಪರಿಚಯಿಸಿತು. ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದ ಈ ಬಲಿದಾನ ಕಾರ್ಯಕ್ರಮದಲ್ಲಿ ಆಡಿನ ಚಿತ್ರವಿರುವ 25 ಕಿಲೋ ಭಾರದ ಕೇಕ್ ಅನ್ನು ಕತ್ತರಿಸಲಾಯಿತು. ಇದನ್ನು ನಿರ್ವಹಿಸಿದ್ದು ಮುಸ್ಲಿಂ ರಾಷ್ಟ್ರೀಯ ಮಂಚ್ ಸದಸ್ಯ ಸಯ್ಯದ್ ಹಸನ್ ಕೌಸರ್. ಮಂಚ್ ನ ವಲಯ ಸಂಚಾಲಕ ರಯೀಸ್ ಖಾನ್ ಉಪಸ್ಥಿತರಿದ್ದರು. ಪ್ರಾಣಿಹಿಂಸೆಯನ್ನು ತಡೆಯುವುದಕ್ಕೆ ಈ ಕ್ರಮ ಅತ್ಯಂತ ಯೋಗ್ಯವಾದುದು ಎಂದು ಅವರು ಸಮರ್ಥಿಸಿಕೊಂಡರು. ಅದೇವೇಳೆ, ದಾರುಲ್ ಉಲೂಮ್ ದೇವ್ ಬಂದ್ ಈ ಬಲಿದಾನ ಕ್ರಮವನ್ನು ಖಂಡಿಸಿತು. ಅದನ್ನು ಅನಿಸ್ಲಾಮಿಕ ಎಂದು ಕರೆಯಿತು. ಒಂದೇ ದೇಶ, ಒಂದೇ ಕಾನೂನು ಎಂಬ ಚಳವಳಿಯನ್ನು ಹಮ್ಮಿಕೊಳ್ಳುವುದಾಗಿ 2016 ಡಿಸೆಂಬರ್‍ನಲ್ಲಿ ಮಂಚ್ ಘೋಷಿಸಿತು. ತ್ರಿವಳಿ ತಲಾಕನ್ನು ವಿರೋಧಿಸಿ ರಾಷ್ಟ್ರಾದ್ಯಂತ ಚಳವಳಿ ಹಮ್ಮಿಕೊಳ್ಳುವುದಾಗಿಯೂ ಆರೆಸ್ಸೆಸ್ ನ ಇಂದ್ರೇಶ್ ಕುಮಾರ್ ಅವರು ಮುಖ್ಯ ಮಾರ್ಗದರ್ಶಕರಾಗಿ ಚಳವಳಿ ಉದ್ದಕ್ಕೂ ಭಾಗವಹಿಸುವುದಾಗಿಯೂ ಅದು 2016 ಡಿಸಂಬರ್ ನಲ್ಲಿ ಘೋಷಿಸಿತು. ಒಂದು ರೀತಿಯಲ್ಲಿ, ಮುಸ್ಲಿಮ್ ರಾಷ್ಟ್ರೀಯ ಮಂಚ್ ಎಂಬುದು ಆರೆಸ್ಸೆಸ್‍ಗೆ ಅತೀವ ನಿಷ್ಠೆಯನ್ನು ಮತ್ತು ಅತೀವ ಶರಣು ನೀತಿಯನ್ನು ತೋರ್ಪಡಿಸುವ ಸಂಘಟನೆ. ಅದಕ್ಕೆ ತನ್ನದೇ ಆದ ನಿಲುವು ಇಲ್ಲ. ಧ್ವನಿಯೂ ಇಲ್ಲ. ಆರೆಸ್ಸೆಸ್ ಏನನ್ನು ಆಕ್ಷೇಪಿಸುತ್ತದೋ ಅದನ್ನು ಮಾತ್ರ ಅದು ಕಾರ್ಯರೂಪಕ್ಕೆ ತರುತ್ತದೆ. ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ಕಾರ್ಯವೈಖರಿಯನ್ನು ಪ್ರಶ್ನಿಸುವ ಯಾವ ಚಟುವಟಿಕೆಯನ್ನೂ ಅದು ಕೈಗೊಳ್ಳುವುದಿಲ್ಲ. ಗುಜರಾತ್ ಹತ್ಯಾಕಾಂಡದ ಬಗ್ಗೆ ಅದರ ನಿಲುವು ಮೌನ. ಮಕ್ಕಾ ಮಸ್ಜಿದ್, ಅಜ್ಮೀರ್, ಮಾಲೆಗಾಂವ್, ನಾಂದೇಡ್ ಸ್ಫೋಟದಲ್ಲಿ ಸಂಘಪರಿವಾರದ ಪಾತ್ರದ ಬಗ್ಗೆ ಅದು ಮಾತಾಡುವುದಿಲ್ಲ. ಮುಸ್ಲಿಮ್ ಯುವಕರು ತಪ್ಪಾಗಿ ಜೈಲು ಪಾಲಾದುದಕ್ಕೆ ಅದು ವಿಷಾದ ವ್ಯಕ್ತಪಡಿಸುತ್ತಿಲ್ಲ ಮತ್ತು ಪರಿಹಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸುತ್ತಿಲ್ಲ. ಮುಸ್ಲಿಮರಿಗೆ ಉದ್ಯೋಗ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸುವ ಆರೆಸ್ಸೆಸ್ ನೀತಿಯನ್ನು ಅದು ಪ್ರಶ್ನಿಸುತ್ತಿಲ್ಲ. ಅಲ್ಪಸಂಖ್ಯಾತರಿಗೆ ಮೀಸಲಾತಿ ಇರುವ ಪ್ರದೇಶಗಳ ಹೊರಗೆ ಮುಸ್ಲಿಮರಿಗೆ ಬಿಜೆಪಿಯು ಚುನಾವಣಾ ಟಿಕೆಟ್ ನೀಡ ಬೇಕೆಂದು ಅದು ಒತ್ತಾಯಿಸುತ್ತಿಲ್ಲ. ಅದರ ಕಾರ್ಯಕ್ರಮ, ಹೇಳಿಕೆ ಗಳು ಮತ್ತು ಯೋಜನೆಗಳು ಆರೆಸ್ಸೆಸ್ ಹಿತಾಸಕ್ತಿಗೆ ಪೂರಕವೇ ಹೊರತು ಮುಸ್ಲಿಮ್ ಹಿತಾಸಕ್ತಿಗೆ ಖಂಡಿತ ಅಲ್ಲ. ಅಖಂಡ ಭಾರತ ಆರೆಸ್ಸೆಸ್‍ನ ಗುರಿ. ಮಂಚ್‍ನದ್ದೂ ಅದೇ ಗುರಿ. ಗೋರಕ್ಷಣೆ ಆರೆಸ್ಸೆಸ್‍ನ ಕಾರ್ಯನೀತಿ. ಮಂಚ್‍ನದ್ದೂ ಅದುವೇ. ಆರೆಸ್ಸೆಸ್ ಯೋಗದ ಪರ. ಮಂಚೂ ಅದರ ಪರ. 370ನೇ ವಿಧಿಯನ್ನು ರದ್ದುಪಡಿಸಬೇಕೆಂಬುದು ಆರಸ್ಸೆಸ್‍ನ ಒತ್ತಾಯ. ಮಂಚ್‍ನ ಬೇಡಿಕೆಯೂ ಅದುವೇ. ಮೀಸಲಾತಿಯನ್ನು ಆರೆಸ್ಸೆಸ್ ಬೆಂಬಲಿಸುತ್ತಿಲ್ಲ. ಮಂಚೂ ಬೆಂಬಲಿಸುತ್ತಿಲ್ಲ ಅಥವಾ ಆರೆಸ್ಸೆಸ್‍ನ ಕಾರ್ಯಯೋಜನೆ ಏನಿದೆಯೋ ಅದನ್ನು ಮುಸ್ಲಿಮರಿಗೆ ಒಪ್ಪಿಸಿ ಬೆಂಬಲಿಸುವಂತೆ ನೋಡಿ ಕೊಳ್ಳುವ ಹೊಣೆಗಾರಿಕೆಯಷ್ಟೇ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಮೇಲಿದೆ. ಆದ್ದರಿಂದಲೇ ಅದು ಆಯೋಜಿಸುವ ಸಭೆಯು ಮುಸ್ಲಿಮ ರೊಳಗೆ ಬಿಕ್ಕಟ್ಟು ಸೃಷ್ಟಿಸುತ್ತಿದೆ. ಮುಸ್ಲಿಮ್ ನಾಯಕತ್ವದ ವಿಶ್ವಾ ಸಾರ್ಹತೆಯನ್ನು ಪ್ರಶ್ನೆಗೀಡು ಮಾಡುತ್ತಿದೆ. ಅಷ್ಟಕ್ಕೂ,       
       ಖಾಝಿಯವರು ದೀಪ ಹೊತ್ತಿಸಿದ್ದು ಸರಿಯೇ, ಅಬೂಬಕರ್ ಮುಸ್ಲಿಯಾರರು ಸೂಫಿ ಸಮ್ಮೇಳನದಲ್ಲಿ ಭಾಗವಹಿಸಿದ್ದು ಸರಿಯೇ.. ಎಂಬ ಚರ್ಚೆ ನಡೆಯುತ್ತಿರುವಷ್ಟು ದಿನ ಮುಸ್ಲಿಮ್ ರಾಷ್ಟ್ರೀಯ ಮಂಚ್‍ನ ಉದ್ದೇಶ ಈಡೇರುತ್ತಿದೆಯೆಂದೇ ಅರ್ಥ. ಯಾವಾಗ ಈ ಚರ್ಚೆಯಿಂದ ಮುಸ್ಲಿಮ್ ಸಮುದಾಯ ಹೊರಬರುತ್ತದೋ ಮತ್ತು ಮಂಚ್‍ನ ಉದ್ದೇಶ, ಬೇನಾಮಿ ಹೆಸರಲ್ಲಿ ಅದು ಏರ್ಪಡಿಸುವ ಕಾರ್ಯಕ್ರಮಗಳ ಬಗ್ಗೆ ಎಚ್ಚರ ಮತ್ತು ಸಮುದಾಯದಲ್ಲಿ ಮಂಚ್‍ನ ನಿಜರೂಪವನ್ನು ಪ್ರಸ್ತುತಪಡಿಸುವ ಜಾಗೃತಿ ಕಾರ್ಯಕ್ರಮಗಳನ್ನು ಯಾವಾಗ ಹಮ್ಮಿಕೊಳ್ಳುತ್ತದೋ ಅಂದಿನಿಂದ ಅದರ ಸೋಲು ಪ್ರಾರಂಭವಾಗುತ್ತದೆ. ಇಲ್ಲದಿದ್ದರೆ, ವಿಶ್ವಾಸಾರ್ಹತೆ ಯನ್ನು ಕಳಕೊಳ್ಳುವ ಇನ್ನಷ್ಟು ಖಾಝಿಗಳು, ಉಲೆಮಾಗಳು, ನಾಯಕರ ದಂಡಷ್ಟೇ ಸೃಷ್ಟಿಯಾಗಬಹುದು.


1 comment: