Friday, January 13, 2017

ಗಾಂಧೀಜಿಯ ‘ಬಟ್ಟೆ’ಯಿಂದ ಇಂದಿನ ‘ಮನಸ್ಥಿತಿ’ ವರೆಗೆ

1. ಮದ್ಯ
2. ಬಟ್ಟೆ
3. ಮನಸ್ಥಿತಿ
        ಹೊಸ ವರ್ಷಾಚರಣೆಯ ವೇಳೆ ಮಹಿಳೆಯರ ಮೇಲೆ ಬೆಂಗಳೂರಿನಲ್ಲಿ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ನಡೆದ ಚರ್ಚೆಗಳಲ್ಲಿ ಈ ಮೇಲಿನ ಮೂರು ಕಾರಣಗಳು ಪ್ರಮುಖವಾಗಿ ಪ್ರಸ್ತಾಪವಾಗಿವೆ. ಈ ಮೂರು ಕಾರಣಗಳ ವಿಶೇಷತೆ ಏನೆಂದರೆ, ‘ಪುರುಷ ಮನಸ್ಥಿತಿ’ಯನ್ನೇ ಪ್ರಮುಖ ಮತ್ತು ಏಕೈಕ ಕಾರಣವಾಗಿ ಮಂಡಿಸುವವರು ‘ಮದ್ಯ’ವನ್ನು ಕಾರಣವಾಗಿ ಒಪ್ಪುತ್ತಿಲ್ಲ. ಮದ್ಯವನ್ನು ಕಾರಣವಾಗಿ ಕಂಡುಕೊಂಡವರು ‘ಪುರುಷ ಮನಸ್ಥಿತಿ’ಗೆ ನಗಣ್ಯ ಮಹತ್ವವನ್ನಷ್ಟೇ ಕೊಡುತ್ತಾರೆ. ಆದರೆ, ಈ ಎರಡೂ ನಿಲುವಿನ ಮಂದಿ ಮಹಿಳಾ ದೌರ್ಜನ್ಯಕ್ಕೆ ‘ಬಟ್ಟೆ’ಯನ್ನು ಕಾರಣವಾಗಿ ಬಹುತೇಕ ಬಾರಿ ಒಪ್ಪುತ್ತಿಲ್ಲ. ಮಾತ್ರವಲ್ಲ, ಆ ವಾದವನ್ನು ಖಂಡಿಸುತ್ತಾರೆ. ಅದೇ ವೇಳೆ, ಬಟ್ಟೆಯನ್ನು ಕಾರಣವಾಗಿ ಪ್ರಸ್ತುತ ಪಡಿಸುವವರು, ಉಳಿದ ಎರಡೂ ಕಾರಣಗಳನ್ನು ಸಮ್ಮತಿಸುತ್ತಾರೆ. ಬಹುಶಃ, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಈ ಎಲ್ಲ ಆಯಾಮಗಳಿರುವುದರಿಂದಲೋ ಏನೋ ಹೆಣ್ಣು ಒಂದೊಮ್ಮೆ ಆ ಘಟನೆಯನ್ನು ಮರೆತರೂ (ಸುಲಭ ಅಲ್ಲ) ಪುರುಷ ವಲಯದಲ್ಲಿ ಅದು ಧಾರಾವಾಹಿಯಂತೆ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ನಿಜಕ್ಕೂ, ಲೈಂಗಿಕ ದೌರ್ಜನ್ಯಕ್ಕೆ ಇದಮಿತ್ಥಂ ಅನ್ನುವ ಕಾರಣ ಇರಲೇಬೇಕೇ? ಒಂದಕ್ಕಿಂತ ಹೆಚ್ಚು ಕಾರಣಗಳು ಇರಬಾರದೇ? ‘ಇಷ್ಟೇ ಕಾರಣಗಳು’ ಎಂದು ನಾವು ಪಟ್ಟಿ ಮಾಡಿದ ಬಳಿಕವೂ ನಮ್ಮ ಪಟ್ಟಿಯೊಳಗೆ ಸಿಗದೇ ಇರುವ ಕಾರಣಗಳೂ ಇರಬಹುದಲ್ಲವೇ? 80 ವರ್ಷದ ಅಜ್ಜಿಯ ಗುದದ್ವಾರಕ್ಕೆ ಬಾಟಲಿಯನ್ನು ತುರುಕಿ (ಕಳೆದ ವಾರ ಗುಜರಾತ್‍ನಲ್ಲಿ ನಡೆದದ್ದು) ಅತ್ಯಾಚಾರ ನಡೆಸಿದವರ ಮನಸ್ಥಿತಿ ಯಾವುದು? ಇದು ಪುರುಷ ಮನಸ್ಥಿತಿಯೇ, ಮೃಗೀಯ ಮನಸ್ಥಿತಿಯೇ, ವಿಕ್ಷಿಪ್ತವೇ, ವಿಕೃತವೇ? ಹಾಗಂತ, ಮಹಿಳೆಯರಲ್ಲಿ ಈ ಮನಸ್ಥಿತಿಯೇ ಇಲ್ಲವೇ? ಪ್ರೇಮಿಗಾಗಿ ತನ್ನ ಪತಿಯನ್ನೇ ಕೊಲ್ಲುವ ಅಥವಾ ಕೊಲ್ಲಿಸುವ (ಉದಾ: ಉಡುಪಿ ಶೆಟ್ಟಿ ಹತ್ಯೆ ಪ್ರಕರಣ) ಕ್ರೌರ್ಯಕ್ಕೆ ಏನೆಂದು ನಾಮಕರಣ ಮಾಡಬಹುದು? ಮಹಿಳಾ ಮನಸ್ಥಿತಿ ಎಂದೇ? ಈ ಮನಸ್ಥಿತಿಗಳ ಹುಟ್ಟು ಎಲ್ಲಿ? ಪೋಷಕರು ಯಾರು? ಈ ಮನಸ್ಥಿತಿಗೆ ಧೈರ್ಯವನ್ನು ತುಂಬುವುದು ಯಾವುದು? ಪ್ರಚೋದನೆ ಎಲ್ಲಿಂದ ಸಿಗುತ್ತದೆ?
         ಇಲ್ಲಿ ಎರಡು ಸಂಗತಿಗಳನ್ನು ಉದಾಹರಿಸಬಹುದು. ಒಂದು,
1939 ಜನವರಿಯಲ್ಲಿ ಕೋಲ್ಕತ್ತಾದ 11 ಹೆಣ್ಣು ಮಕ್ಕಳು ಮಹಾತ್ಮಾ ಗಾಂಧೀಜಿಯವರನ್ನು ತರಾಟೆಗೆತ್ತಿಕೊಂಡು ಬರೆದ ಪತ್ರ. ಅದನ್ನು ಖ್ಯಾತ ಬರಹಗಾರ ರಾಮಚಂದ್ರ ಗುಹಾ ಅವರು ಕಳೆದವಾರ ಉಲ್ಲೇಖಿಸಿದ್ದರು. ತನಗೆ ಮತ್ತು ಗೆಳತಿಯರಿಗೆ ಆಗುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಪಂಜಾಬ್‍ನ ಓರ್ವ ಕಾಲೇಜು ವಿದ್ಯಾರ್ಥಿನಿ ಗಾಂಧೀಜಿಯವರಲ್ಲಿ ಪತ್ರದ ಮೂಲಕ ದೂರಿಕೊಂಡಿದ್ದಳು. ಮಾತ್ರವಲ್ಲ, ‘ನಿಮ್ಮ ಅಹಿಂಸಾ ತತ್ವದ ಮೂಲಕ ಇದನ್ನು ಎದುರಿಸುವುದು ಹೇಗೆ ಮತ್ತು ಸ್ವಯಂ ರಕ್ಷಿಸಿ ಕೊಳ್ಳುವುದು ಹೇಗೆ’ ಎಂದೂ ಪ್ರಶ್ನಿಸಿದ್ದಳು. ಅದಕ್ಕೆ ಗಾಂಧೀಜಿಯವರು ತಮ್ಮ ಹರಿಜನ ಪತ್ರಿಕೆಯ 1938 ಡಿ. 31ರ ಸಂಚಿಕೆ ಯಲ್ಲಿ ಹೀಗೆ ಉತ್ತರ ಕೊಟ್ಟಿದ್ದರು- ‘ಗಂಡಸರು ಮಾಡುವ ಎಲ್ಲ ಅಸಭ್ಯ ವರ್ತನೆಗೆ ಅರ್ಧ ಡಜನ್‍ನಷ್ಟು ರೋಮಿಯೋಗಳಿಗೆ ಜೂಲಿಯಟ್ ಆಗಲು ಆಧುನಿಕ ಹುಡುಗಿ ಬಯಸಿರುವುದು ಕಾರಣ ಎಂಬ ಭೀತಿ ನನ್ನಲ್ಲಿದೆ.. ಆಧುನಿಕ ಹುಡುಗಿಯ ದಿರಿಸು ಆಕೆಯನ್ನು ಗಾಳಿ, ಮಳೆ ಮತ್ತು ಬಿಸಿಲಿನಿಂದ ರಕ್ಷಿಸುವುದಿಲ್ಲ. ಆದರೆ ಇತರರ ಗಮನ ಆಕೆಯೆಡೆಗೆ ಹರಿಯುವಂತೆ ಮಾಡುತ್ತದೆ. ತನ್ನನ್ನು ಅಸಾಮಾನ್ಯ ಎಂದು ಬಿಂಬಿಸುವ ಮತ್ತು ಹಾಗೆ ಕಾಣಿಸಿಕೊಳ್ಳುವ ಮೂಲಕ ನಿಸರ್ಗವನ್ನು ಮೀರಲು ಆಕೆ ಯತ್ನಿಸುತ್ತಾಳೆ. ಅಹಿಂಸೆಯ ದಾರಿ ಇಂತಹ ಹುಡುಗಿಯರಿಗಲ್ಲ..’
         ಕೋಲ್ಕತ್ತಾದ 11 ಯುವತಿಯರು ಗಾಂಧೀಜಿಯವರನ್ನು ತರಾಟೆಗೆತ್ತಿಕೊಂಡದ್ದು ಈ ಉತ್ತರಕ್ಕಾಗಿಯೇ. ಇನ್ನೊಂದು ಸಂಗತಿ ಏನೆಂದರೆ,
       2014 ಮಾರ್ಚ್ 5ರಂದು ಬಿಬಿಸಿ ನ್ಯೂಸ್ ವೆಬ್‍ನಲ್ಲಿ ಬೆಥನಿ ಬೆಲ್ ಎಂಬವರು ಹಂಚಿಕೊಂಡ ಸರ್ವೇ ಒಂದರ ವಿವರ. ಯುರೋಪಿಯನ್ ಯೂನಿಯನ್‍ನ ರಾಷ್ಟ್ರಗಳಲ್ಲಿ ಲೈಂಗಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ತುತ್ತಾದ ಮಹಿಳೆಯರ ಸುತ್ತ ನಡೆಸಲಾದ ಸರ್ವೇ ಇದು. ಈವರೆಗೆ ನಡೆಸಲಾದ ಸರ್ವೇಗಳಲ್ಲೇ  ಅತಿ ದೊಡ್ಡ ಸರ್ವೇ ಎಂದೂ ಇದನ್ನು ಹೇಳಲಾಗುತ್ತಿದೆ. 42 ಸಾವಿರ ಮಹಿಳೆಯರನ್ನು ಈ ಸರ್ವೇಗಾಗಿ ಸಂದರ್ಶನ ನಡೆಸಲಾಗಿದೆ. ಸುಮಾರು 62 ಮಿಲಿಯನ್ ಮಹಿಳೆಯರನ್ನು ಪ್ರತಿನಿಧಿ ಸುವ ಸರ್ವೇ ಆಗಿಯೂ ಇದು ಗುರುತಿಗೀಡಾಗಿದೆ. ‘ಮೂಲಭೂತ ಹಕ್ಕಿಗಾಗಿರುವ ಯುರೋಪಿಯನ್ ಯೂನಿಯನ್ ಏಜೆನ್ಸಿ’ ಎಂಬ ಸಂಸ್ಥೆಯ ಮೂಲಕ ನಡೆಸಲಾದ ಸರ್ವೇಯ ಪ್ರಕಾರ 15ರ ಹರೆಯದ ಬಳಿಕ ಪ್ರತಿ ಮೂವರಲ್ಲಿ ಓರ್ವ ಹೆಣ್ಣು ಲೈಂಗಿಕ ಅಥವಾ ದೈಹಿಕ ದೌರ್ಜನ್ಯಕ್ಕೆ ತುತ್ತಾಗಿದ್ದಾಳೆ. ಇದೇ ಪ್ರಾಯದ ಪ್ರತಿ 10ರಲ್ಲಿ ಓರ್ವ ಹೆಣ್ಣು ನೇರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಪ್ರತಿ 20ರಲ್ಲಿ ಓರ್ವಳು ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಈ ಪಟ್ಟಿಯಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ರಾಷ್ಟ್ರವೆಂದರೆ ಡೆನ್ಮಾಕ್ -52%. ಬಳಿಕ ಫಿನ್‍ಲ್ಯಾಂಡ್ - 47%. ಸ್ವೀಡನ್‍ನಲ್ಲಿ 46% ಮತ್ತು ಬ್ರಿಟನ್ ಹಾಗೂ ಫ್ರಾನ್ಸ್ ನಲ್ಲಿ 44%ದಷ್ಟು ಮಹಿಳಾ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಈ ದೌರ್ಜನ್ಯಗಳ ಹಿಂದೆ ಮದ್ಯಪಾನಕ್ಕೆ ಮುಂಚೂಣಿ ಪಾತ್ರ ಇದೆ ಎಂದು ಸರ್ವೇ ಕಂಡುಕೊಂಡಿದೆ. ವಿಶೇಷ ಏನೆಂದರೆ, ಈ ರಾಷ್ಟ್ರಗಳು ಪ್ರಗತಿಪರ ಮತ್ತು ಮುಂದುವರಿದ ನಾಗರಿಕ ಸಮಾಜವಾಗಿ ಗುರುತಿಸಿಕೊಂಡಿವೆ. ಆದ್ದರಿಂದಲೇ, ಒಂದಷ್ಟು ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ. ಮಹಿಳಾ ಹಕ್ಕು, ಸಮಾನತೆ, ಸ್ವಾತಂತ್ರ್ಯ ಮುಂತಾದುವುಗಳ ಬಗ್ಗೆ ಅತ್ಯಂತ ಆಧುನಿಕ ದೃಷ್ಟಿಕೋನಗಳನ್ನು ಹೊಂದಿರುವ ಈ ರಾಷ್ಟ್ರಗಳಲ್ಲೂ ಮಹಿಳೆ ಯಾಕೆ ಸುರಕ್ಷಿತಳಲ್ಲ? ಇದಕ್ಕೆ ಯಾರು ಕಾರಣ, ಏನು ಕಾರಣ? ಪುರುಷ ಮನಸ್ಥಿತಿಯೇ? ಅತ್ಯಂತ ಆಧುನಿಕ ರಾಷ್ಟ್ರಗಳಲ್ಲೂ ಭಾರೀ ಪ್ರಮಾಣದಲ್ಲಿ ಈ ಮನಸ್ಥಿತಿ ಇದೆಯೇ? ಪ್ರಗತಿಪರ ನಿಲುವುಗಳಿಗೆ ಈ ಹೆಣ್ಣು ವಿರೋಧಿ ಮನಸ್ಥಿತಿಯನ್ನು ಬದಲಿಸಲು ಸಾಧ್ಯವಾಗುತ್ತಿಲ್ಲವೇ ಅಥವಾ ಈ ದೃಷ್ಟಿಕೋನಗಳೇ ಹೆಣ್ಣು ವಿರೋಧಿ ಮನಸ್ಥಿತಿಯನ್ನು ಪೋಷಿಸುತ್ತಿವೆಯೇ? ಮುಂದುವರಿದ ನಾಗರಿಕ ಸಮಾಜವಾಗಿದ್ದೂ ಮಹಿಳೆಯರಿಗೆ ಸಂಬಂಧಿಸಿ ಇದೇ ಸಮಾಜ ಅತ್ಯಂತ ಅನಾಗರಿಕವಾಗುವುದನ್ನು ಹೇಗೆ ವಿಶ್ಲೇಷಿಸಬಹುದು? ಪ್ರಗತಿಪರ ದೃಷ್ಟಿಕೋನಗಳ ವೈಫಲ್ಯವೆಂದೋ? ಅದು ಅಪ್ರಾಯೋಗಿಕವೆಂದೋ ಅಥವಾ ವಾಸ್ತವ ವಿರೋಧಿಯೆಂದೋ? ಹೆಣ್ಣಿನ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಗಾಂಧೀಜಿಯವರು ಬಟ್ಟೆಯನ್ನು ಬೊಟ್ಟು ಮಾಡಿದ್ದರು. ಆದರೆ ಮದ್ಯವನ್ನು ಉಲ್ಲೇಖಿಸಿರಲಿಲ್ಲ. ಯುರೋಪಿಯನ್ ಯೂನಿಯನ್‍ನಲ್ಲಿ ನಡೆದ ಸರ್ವೇಯಲ್ಲಿ ಮದ್ಯವನ್ನೇ ಪ್ರಮುಖ ಕಾರಣವಾಗಿ ಕಂಡುಕೊಳ್ಳಲಾಗಿದೆ. ಗಾಂಧೀಜಿಯವರ ಬಟ್ಟೆಯಿಂದ ಈ 2017ರ ಬೆಂಗಳೂರು ಘಟನೆಯ ಮಧ್ಯೆ ಸುಮಾರು 80 ವರ್ಷಗಳೇ ಕಳೆದುಹೋಗಿವೆ. ಈ ಮಧ್ಯೆ ನಾಗರಿಕ ಮತ್ತು ಅನಾಗರಿಕತೆಯ ಮೇಲೆ ಹಲವು ಪ್ರೌಢ ಚರ್ಚೆಗಳು ನಡೆದಿವೆ. ಅಸಂಖ್ಯ ಪ್ರಬಂಧಗಳು ಮಂಡನೆಯಾಗಿವೆ. ಅನಾಗರಿಕವೆಂದು ಹೇಳಿಕೊಂಡು ಅನೇಕಾರು ಆಚರಣೆ ಗಳನ್ನು ಕೈಬಿಡಲಾಗಿದೆ. ಗಾಂಧೀಜಿಯವರ ಕಾಲದಲ್ಲಿ ಸಿನಿಮಾ-ಧಾರಾವಾಹಿಗಳ ಪ್ರಭಾವ ತೀರಾ ತೀರಾ ಕಮ್ಮಿಯಿತ್ತು. ಹೆಣ್ಣನ್ನು ಭೋಗದ
     .
ವಸ್ತುವಿನಂತೆ ಬಿಂಬಿಸುವ ಸರಕುಗಳು ವಿರಳಾತಿ ವಿರಳವಾಗಿದ್ದುವು. ಆದರೂ ಓರ್ವ ಹೆಣ್ಣು ಮಗಳು ತಾನು ಅಸುರಕ್ಷಿತ ಎಂದು ಗಾಂಧೀಜಿಯವರಿಗೆ ಪತ್ರ ಬರೆದಳು. ಆ ಪತ್ರದ 80ನೇ ವಾರ್ಷಿಕವನ್ನು ಆಚರಿಸಬೇಕಾದ ಇಂದಿನ ಸಮಾಜವಂತೂ ಅತ್ಯಂತ ಮುಂದುವರಿದಿದೆ. ಹೆಣ್ಣನ್ನು ಹೇಗೆ ಗೌರವಿಸಬೇಕು, ಆಕೆಯ ಸಾಮರ್ಥ್ಯ ಯಾಕೆ ಗಂಡಿಗಿಂತ ಕಿರಿದಲ್ಲ ಎಂಬುದರಿಂದ ಹಿಡಿದು ಆಕೆಯ ಪ್ರತಿಭೆ, ಆಕೆಯ ಬಗೆಗಿರಬೇಕಾದ ಧೋರಣೆ, ಆಕೆಯ ಸ್ವಾತಂತ್ರ್ಯ ಎಲ್ಲವುಗಳ ಬಗ್ಗೆ ಕ್ಷಣಕ್ಷಣಕ್ಕೂ ಮಾಹಿತಿಗಳು ಹರಿದು ಬರುತ್ತಿರುವ ಕಾಲ ಇದು. ಗಾಂಧೀಜಿಯವರ ಕಾಲಕ್ಕೆ ಹೋಲಿಸಿ ಹೇಳುವುದಾದರೆ ಹೆಣ್ಣು ಈ ಕಾಲದಲ್ಲಿ ಅತ್ಯಂತ ಸುರಕ್ಷಿತಳು ಆಗಿರಬೇಕಿತ್ತು. ಆದರೆ, ವರ್ಷ ಕಳೆದಂತೆ ಹೆಣ್ಣು ಹೆಚ್ಚೆಚ್ಚು ಅಸುರಕ್ಷಿತ ಆಗುತ್ತಿದ್ದಾಳೆ. ನಾಗರಿಕವಾಗಿ ಅತ್ಯಂತ ಮುಂದುವರಿದ ರಾಷ್ಟ್ರಗಳಲ್ಲೇ ಹೆಣ್ಣು ಹೆಚ್ಚು ಹೆಚ್ಚು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾಳೆ. ಮಾತ್ರವಲ್ಲ, ಇದಕ್ಕಿರುವ ಕಾರಣಗಳಲ್ಲೂ ಅಭೂತಪೂರ್ವವೆನ್ನಬಹುದಾದ ವ್ಯತ್ಯಾಸಗಳೂ ಕಾಣಿಸುತ್ತಿಲ್ಲ. ಬಟ್ಟೆ, ಮದ್ಯ, ಮನಸ್ಥಿತಿ.. ಇತ್ಯಾದಿ ಇತ್ಯಾದಿಗಳ ಸುತ್ತವೇ ಅವು ಈಗಲೂ ಗಿರಕಿ ಹೊಡೆಯುತ್ತಿವೆ. ಗಾಂಧೀಜಿಯ ಕಾಲದಿಂದ ಹಿಡಿದು ಇಂದಿನ ವರೆಗೆ ಈ 80 ವರ್ಷಗಳಲ್ಲಿ ಹೆಣ್ಣಿನ ಅಸುರಕ್ಷಿತತೆಯಲ್ಲಿ ವೃದ್ಧಿಯಾಗುತ್ತಾ ಹೋಗಲು ಏನೇನು ಕಾರಣಗಳಿವೆ? ಕಾರಣಗಳನ್ನು ಪತ್ತೆ ಹಚ್ಚುವಲ್ಲಿ ನಾವು ವಿಫಲವಾದವೇ ಅಥವಾ ನಮ್ಮ ಪೂರ್ವಗ್ರಹ ಅಥವಾ ಹಿಪಾಕ್ರಸಿ ಅಂಥದ್ದೊಂದು ತಪ್ಪನ್ನು ನಮ್ಮಿಂದ ಮಾಡಿಸಿತೇ? ಎಂತೆಂಥ ರೋಗಗಳಿಗೆ ಮದ್ದು ಕಂಡುಹಿಡಿದಿರುವ ಜಗತ್ತು ಈ ಕಾಯಿಲೆಗೆ ಮದ್ದು ಹುಡುಕಲು ವಿಫಲವಾದದ್ದೇಕೆ?
       ಬಹುಶಃ, ನಮ್ಮ ದೃಷ್ಟಿಕೋನಗಳ ಒಂದಷ್ಟು ಹಠಗಳು ಹೆಣ್ಣನ್ನು ಅಸುರಕ್ಷಿತಗೊಳಿಸುವಲ್ಲಿ ತನ್ನ ಕೊಡುಗೆಯನ್ನು ನೀಡಿವೆ ಯೇನೋ ಎಂದೆನಿಸುತ್ತದೆ. ನಿಜವಾಗಿ, ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ‘ಇದುವೇ ಅಂತಿಮ ಕಾರಣ’ ಎಂಬ ರೀತಿಯಲ್ಲಿ ಷರಾ ಬರೆದು ಬಿಡುವ ಹಾಗಿಲ್ಲ. ಸಂದರ್ಭ, ಸನ್ನಿವೇಶ, ವಾತಾವರಣ, ಪ್ರದೇಶ.. ಇತ್ಯಾದಿಗಳಿಗೆ ಸಂಬಂಧಿಸಿ ಕಾರಣಗಳು ತರಹೇವಾರಿ ಇರಬಹುದು. ಒಂದು ಕಡೆ ಮದ್ಯ ಆಗಿರಬಹುದು. ಒಂದು ಕಡೆ ಬಟ್ಟೆಯೂ ಆಗಿರಬಹುದು. ಒಂದು ಕಡೆ ಮನ ಸ್ಥಿತಿಯೂ ಆಗಿರಬಹುದು ಅಥವಾ ಈ ಮೂರನ್ನೂ ಹೊರತು ಪಡಿಸಿದ ಇತರ ಕಾರಣಗಳೂ ಇರಬಹುದು. ದೌರ್ಜನ್ಯ ನಡೆಸುವ ವ್ಯಕ್ತಿ ಯಾವ ಪರಿಸರದಲ್ಲಿ, ಯಾವ ಮನೆತನದಲ್ಲಿ, ಯಾವ ಸಾಂಸ್ಕೃತಿಕ ಹಿನ್ನೆಲೆಯಲ್ಲಿ, ಯಾವ ವಿಚಾರಧಾರೆಯಲ್ಲಿ.. ಬೆಳೆದಿದ್ದಾನೆ ಎಂಬುದೇ ಇಲ್ಲಿ ಮುಖ್ಯವಾಗುತ್ತದೆ. ಒಂದು ಸಿನಿಮಾವನ್ನು ವೀಕ್ಷಿಸುವ ನೂರು ಮಂದಿಯ ಮೇಲೆ ಅದು ನೂರು ರೀತಿಯಲ್ಲಿ ಪರಿಣಾಮವನ್ನು ಬೀರಬಲ್ಲುದು. ವ್ಯಕ್ತಿಯ ಮನಸ್ಥಿತಿ ತನ್ನಷ್ಟಕ್ಕೇ ರೂಪು ಪಡೆಯುವುದಿಲ್ಲ. ಓದು, ವೀಕ್ಷಣೆ, ಚರ್ಚೆ, ಮಾತುಕತೆ, ಹವ್ಯಾಸ.. ಇತ್ಯಾದಿಗಳ ಒಂದು ಸಂಗ್ರಹ ರೂಪ ಅದು. ಕೆಟ್ಟ ಸಾಹಿತ್ಯವನ್ನು ಓದಿದರೆ ಅಥವಾ ಕೆಟ್ಟ ಬೈಗುಳವನ್ನೇ ದಿನಾ ಆಲಿಸುವ ಪರಿಸರದಲ್ಲಿ ಓರ್ವ ಬೆಳೆದಿದ್ದರೆ, ಅದು ಆತ/ಕೆ/ಯ ಮನಸ್ಥಿತಿಯಾಗಿ ಬೆಳೆಯತೊಡಗುತ್ತದೆ. ಈ ಮನಸ್ಥಿತಿ ಸಾಮಾನ್ಯ ಸಂದರ್ಭದಲ್ಲಿ ಸಂಪೂರ್ಣವಾಗಿ ಗೋಚರಿಸಬೇಕೆಂದಿಲ್ಲ. ಅದಕ್ಕೆ ಧೈರ್ಯದ ಬೆಂಬಲ ಬೇಕಾಗುತ್ತದೆ. ಬಹುತೇಕ ಬಾರಿ ಇಂಥ ಧೈರ್ಯವನ್ನು ಕೊಡುವುದು ಮದ್ಯ. ಅದು ಚಿತ್ತ ಚಾಂಚಲ್ಯಕ್ಕೆ ಒಳಪಡಿಸುತ್ತದೆ. ಯುರೋಪಿಯನ್ ಯೂನಿಯನ್‍ನಲ್ಲಿ ನಡೆಸಲಾದ ಸರ್ವೇಯ ಫಲಿತಾಂಶ ಹೇಳುವುದೂ ಇದನ್ನೇ. ‘ತಾನು ಮದ್ಯದ ಪ್ರಭಾವದಿಂದಾಗಿ ಹೆಜ್ಜೆ ತಪ್ಪಿದೆ’ ಎಂದು ತೆಹಲ್ಕಾದ ತರುಣ್ ತೇಜ್‍ಪಾಲ್ ಹೇಳಿರುವುದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ನಿರ್ಭಯ ಪ್ರಕರಣದಲ್ಲೂ ಇದು ಸಾಬೀತಾಗಿದೆ. ಹಾಗಂತ, ಮದ್ಯವೊಂದೇ ಮಹಿಳಾ ದೌರ್ಜನ್ಯಕ್ಕೆ ಕಾರಣ ಎಂದಲ್ಲ. ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಕಾರಣಗಳ ಪಟ್ಟಿ ಬೇರೆ ಬೇರೆ ಇರಬಹುದು. ಸಮಾಜದ ತೀರಾ ಮೇಲುಸ್ತರದಲ್ಲಿ ಒಂದು ಜೀವನ ಕ್ರಮ ಇದೆ. ಅದು ಸಾಮಾನ್ಯವಾಗಿ ಟಿ.ವಿ., ಸಿನೆಮಾಗಳಲ್ಲಿ ವ್ಯಕ್ತವಾಗುತ್ತಿರುತ್ತವೆ. ಅಲ್ಲಿ ಎಲ್ಲವೂ ಮುಕ್ತ ಮುಕ್ತ. ಅಲ್ಲಿ ಪ್ರೇಮ ಅಂಕುರಿಸುತ್ತದೆ. ಒಪ್ಪಿತ ಸಂಬಂಧ ಇರುತ್ತದೆ. ಗಂಡು-ಹೆಣ್ಣು ಕಟ್ಟುಪಾಡುಗಳ ಹಂಗಿಲ್ಲದೇ ಬದುಕುತ್ತಿರುತ್ತಾರೆ. ಅದೇ ವೇಳೆ, ಸಮಾಜದ ತೀರಾ ತಳಸ್ತರದ ಮಂದಿಯ ಮಟ್ಟಿಗೆ ಅದು ಕೈಗೆಟುಕದ ಬದುಕು. ಪ್ರೇಮಿಸುವುದಕ್ಕೆ ಗಂಡಿಗೆ ಹೆಣ್ಣು ಮತ್ತು ಹೆಣ್ಣಿಗೆ ಗಂಡು ಸಿಗದಷ್ಟು ಬಂಜರು ಪ್ರದೇಶ. ಮೇಲುಸ್ತರದ ಮಂದಿಯಷ್ಟು ಚೆನ್ನಾಗಿ ಮಾತನಾಡಲಾಗದ, ಡ್ರೆಸ್ ಧರಿಸಲಾಗದ, ಪಾಶ್ ಆಗಿರಲಾಗದ ಜನವರ್ಗ ಇದು. ಇವರಲ್ಲಿ ಎಲ್ಲರೂ ಮೇಲುಸ್ತರದ ಈ ಮಂದಿಯ ಜೀವನಕ್ರಮವನ್ನು ಸಕಾರಾತ್ಮಕವಾಗಿ ಪರಿಗಣಿಸುತ್ತಾರೆಂದು ಹೇಳಲಾಗದು. ಅದು ನಕಾರಾತ್ಮಕ ಮನಸ್ಥಿತಿಯ ಕಡೆಗೆ ದೂಡುವುದಕ್ಕೂ ಅವಕಾಶ ಇದೆ. ಮೇಲುಸ್ತರದವರ ಜೀವನಸೌಖ್ಯ ತಮಗೆ ಸಹಜವಾಗಿ ಲಭ್ಯವಾಗದಿರುವುದು ಅದನ್ನು ಬಲವಂತದಿಂದ ತಮ್ಮದಾಗಿಸಿಕೊಳ್ಳಲು ಪ್ರಚೋದನೆ ನೀಡುವುದಕ್ಕೂ ಅವಕಾಶ ಇದೆ. ಇಂಥ ಸಂದರ್ಭದಲ್ಲಿ ಅವರಿಗೆ ಮದ್ಯ ನೆರವಾಗಬಹುದು. ಅದೇ ವೇಳೆ, ಪಿಂಕ್ ಸಿನಿಮಾದಂತೆ ಹೆಣ್ಣಿನ ನಗು ವನ್ನೇ ‘ಆಹ್ವಾನ’ ಎಂದು ಅಂದುಕೊಳ್ಳುವವರಿರಬಹುದು. ಆಕೆಯ ಹಾವ-ಭಾವ, ಮಾತು, ಬಟ್ಟೆ.. ಎಲ್ಲದರಲ್ಲೂ ಲೈಂಗಿಕ ಆಹ್ವಾನವನ್ನು ಕಾಣುವವರಿರಬಹುದು. ಹಾಗಂತ, ಇವೆಲ್ಲವನ್ನೂ ಹೆಣ್ಣಿನಿಂದ ರದ್ದುಗೊಳಿಸುವುದು ಇದಕ್ಕೆ ಪರಿಹಾರ ಖಂಡಿತ ಅಲ್ಲ, ಆಗಬಾರದು ಕೂಡ.
     ಲೈಂಗಿಕ ದೌರ್ಜನ್ಯದ ಮನಸ್ಥಿತಿ ಪುರುಷರಲ್ಲಿ ಎಲ್ಲಿ, ಹೇಗೆ, ಯಾವ ಮೂಲದಿಂದ ಹುಟ್ಟಿಕೊಳ್ಳುತ್ತದೆ ಮತ್ತು ಹೇಗೆ ಕಾರ್ಯ ರೂಪಕ್ಕೆ ಬರುತ್ತದೆ ಎಂಬುದನ್ನು ಯಾವುದೇ ಪೂರ್ವಗ್ರಹಕ್ಕೆ ಒಳಗಾಗದೇ ವಿಶ್ಲೇಷಿಸುವುದಕ್ಕೆ ಮುಂದಾದರೆ ಹೆಣ್ಣು ಈಗಿನ ಸ್ಥಿತಿಗಿಂತ ಮುಂದೆ ಖಂಡಿತ ಹೆಚ್ಚು ಸುರಕ್ಷಿತ ಆಗಬಲ್ಲಳು.
   

No comments:

Post a Comment