Tuesday, December 24, 2013

ಕಣ್ಣೀರಾಗುವ ತಾಯಿಯ ಎದುರು ಯಾವ ಮಕ್ಕಳು ತಾನೇ ಕರಗುವುದಿಲ್ಲ?

   ಮೊನ್ನೆ ಆತ್ಮೀಯ ಗೆಳೆಯ ಎದುರು ಬಂದು ಕೂತಿದ್ದ..
ಹಾಗಂತ ಆತ ಹಾಗೆ ಬಂದು ಕೂರುವುದು ಅದು ಮೊದಲ ಸಲವೇನೂ ಅಲ್ಲ. ಪ್ರತಿದಿನವೂ ನಾವಿಬ್ಬರೂ ಹಾಗೆ ಎದುರು ಬದುರು ಕೂರುತ್ತೇವೆ. ಚರ್ಚಿಸುತ್ತೇವೆ. ಪತ್ರಿಕೆಯ ಬಗ್ಗೆ, ಅದರಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ, ಪುಟ ವಿನ್ಯಾಸ, ಪ್ರಸಾರದ ಬಗ್ಗೆ, ಲೇಖನಗಳ ವೈವಿಧ್ಯತೆಯ ಬಗ್ಗೆ... ಹೀಗೆ ಪ್ರತಿ ದಿನದ ಚರ್ಚೆಗೂ ಧಾರಾಳ ವಿಷಯಗಳಿರುತ್ತವೆ. ಪತ್ರಿಕೆಯನ್ನು ಹೇಗೆ ಭಿನ್ನವಾಗಿ ಕಟ್ಟಿಕೊಡಬಹುದು ಎಂಬ ಬಗ್ಗೆ ಚರ್ಚೆಗಳು ಸಾಗುತ್ತಿರುತ್ತದೆ. ಅಷ್ಟಕ್ಕೂ, ಪತ್ರಿಕೆಯ 16 ಪುಟಗಳನ್ನು ವಾರವೊಂದರಲ್ಲಿ ಹೇಗಾದರೂ ಮಾಡಿ ತುಂಬಿಸಿ ಬಿಡಬೇಕೆಂಬ ಗುರಿಯಷ್ಟೇ ಇರುವುದಾದರೆ, ಸಂಪಾದಕರಿಗೂ ಸಂಪಾದಕೀಯ ಬಳಗಕ್ಕೂ ಅಂಥ ಕಷ್ಟವೇನಿಲ್ಲ. ಆದರೆ ಪ್ರತಿ ಪುಟದಲ್ಲೂ ಪ್ರಬುದ್ಧ ಮತ್ತು ವಿಚಾರ ಪ್ರಚೋದಕ ಬರಹಗಳಿರಬೇಕು ಎಂಬ ಗುರಿ ಇದ್ದರೆ ಖಂಡಿತ ಇದು ಕಷ್ಟದ್ದು ಮತ್ತು ಸವಾಲಿನದ್ದೇ. ಆಗ ಪತ್ರಿಕೆಯ ಪ್ರತಿಯೊಂದು ಪುಟವೂ ಸಂಪಾದಕೀಯ ಬಳಗದ ಪಾಲಿಗೆ ಅಸಾಮಾನ್ಯದ್ದಾಗಿ ಬಿಡುತ್ತದೆ. ಒಂದು ವಾರದವರೆಗೆ ಓದುಗರನ್ನು ಹಿಡಿದಿಡಬಹುದಾದಷ್ಟು ತೂಕದ ಬರಹಗಳಿಗಾಗಿ ಪ್ರಯತ್ನ ನಡೆಯುತ್ತದೆ. ನಿಜವಾಗಿ, ವಾರಪತ್ರಿಕೆಯೆಂಬುದು ದೈನಿಕದಂತೆ ಅಲ್ಲ. ದೈನಿಕದ ಬಹುತೇಕ ಸುದ್ದಿಗಳು ಸಂಜೆಯಾಗುವಾಗ ಸತ್ತು ಹೋಗಿರುತ್ತದೆ. ಮರುದಿನ ಹೊಸ ಸುದ್ದಿ, ಹೊಸ ಸಾವು. ಮೊದಲ ದಿನದ ಸುದ್ದಿಗೆ ತದ್ವಿರುದ್ಧವಾದ ಸುದ್ದಿಗಳು ಮರುದಿನ ಪ್ರಕಟವಾಗಲೂಬಹುದು. ರಾಜಕಾರಣಿಗಳು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಆತ್ಮಹತ್ಯೆ, ಹಲ್ಲೆ, ವಂಚನೆ, ಅತ್ಯಾಚಾರ... ಇತ್ಯಾದಿ ಸುದ್ದಿಗಳ ಜೊತೆ ನಿತ್ಯ ಪ್ರಕಟವಾಗುವ ದೈನಿಕಗಳಿಗಿಂತ ಭಿನ್ನ ಸುದ್ದಿ-ವಿಶ್ಲೇಷಣೆಗಳಿಗಾಗಿ ಓದುಗರು ವಾರಪತ್ರಿಕೆಯನ್ನು ಕಾಯುತ್ತಾರೆ. ಆದ್ದರಿಂದ, ಸಂಜೆಯಾಗುವಾಗ ಸಾಯುವ ದೈನಿಕಗಳ ಸುದ್ದಿಗಳಿಗೆ ವಿಶ್ಲೇಷಣೆಯ ಮೂಲಕ ಜೀವ ಕೊಡುವುದು, ಅದರ ವಿವಿಧ ಮಗ್ಗುಲುಗಳನ್ನು ಚರ್ಚೆಗೆತ್ತಿಕೊಂಡು ಓದುಗರ ಮನ ತಟ್ಟುವುದನ್ನು ವಾರಪತ್ರಿಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ವಾರಪತ್ರಿಕೆಯ ಸಂಪಾದಕೀಯ ಬಳಗವು ದೈನಿಕದ ಸಂಪಾದಕೀಯ ಬಳಗಕ್ಕಿಂತ ಭಿನ್ನವಾಗಿ ಚಟುವಟಿಕೆಯಲ್ಲಿ ತೊಡಗಬೇಕಾಗುತ್ತದೆ. ಯಾವುದೇ ಒಂದು ಸುದ್ದಿಯನ್ನು ವಿಶ್ಲೇಷಿಸುವುದಕ್ಕೂ ಬರೇ ಆ ಸುದ್ದಿಯನ್ನು ಯಥಾ ಪ್ರಕಾರ ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸುದ್ದಿಯಲ್ಲಿ ಬರಹಗಾರನ ಅಭಿಪ್ರಾಯ ಇರುವುದಿಲ್ಲ. ಅದು ಬರೇ ಸುದ್ದಿ. ಒಂದೋ ಆ ಸುದ್ದಿ ಆ ದಿನ ಹೊತ್ತೇರುವಾಗಲೇ ಸಾಯ     ಬಹುದು ಅಥವಾ ಸಂಜೆಯವರೆಗೆ ಓದುಗರ ನಡುವೆ ಚರ್ಚೆಯಲ್ಲಿರಬಹುದು. ಕೆಲವೊಮ್ಮೆ ಈ ಚರ್ಚೆ ದಿನಗಳವರೆಗೂ ಮುಂದುವರಿಯಬಹುದು. ಆದರೆ ಸುದ್ದಿ ವಿಶ್ಲೇಷಣೆ ಮಾಡುವ ವಾರಪತ್ರಿಕೆಯೊಂದು ಅಂಥ ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಲು ಎತ್ತಿಕೊಳ್ಳುವಾಗ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುದ್ದಿಯನ್ನು ಜನ ಈಗಾಗಲೇ ಓದಿರುವುದರಿಂದ ಅದೇ ಸುದ್ದಿಯನ್ನು ಮತ್ತೆ ಕೊಡುವಂತಿಲ್ಲ. ಅದರ ಇನ್ನಿತರ ಮಗ್ಗುಲುಗಳನ್ನು ವಿಶ್ಲೇಷಿಸಬೇಕೆಂದರೆ ಮಾಹಿತಿಯ ಅಗತ್ಯ ಇರುತ್ತದೆ. ವಿಶ್ಲೇಷಣೆಯ ಹೆಚ್ಚು ತರ್ಕಬದ್ಧ ಮತ್ತು ತೂಕಬದ್ಧವಾಗ ಬೇಕಾದರೆ ಬೇರೆ ಸಾಹಿತ್ಯ ಕೃತಿಗಳ ಅಧ್ಯಯನ ನಡೆಸಿರಬೇಕಾಗುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಓದುಗರನ್ನು ಗಮನದಲ್ಲಿಟ್ಟುಕೊಳ್ಳಬೇಕು. ತನ್ನ ಬರಹ ಯಾವ ಬಗೆಯ, ಎಂಥ ವೈಚಾರಿಕ ಮಟ್ಟವನ್ನು ಬೆಳೆಸಿಕೊಂಡ ಓದುಗರನ್ನು ತಲುಪುತ್ತಿದೆ ಎಂಬ ಅರಿವು ಬರಹಗಾರನಲ್ಲಿ ಇರಬೇಕು. ಓದುಗರ ಭಾವನೆಗಳನ್ನು ಪರಿಗಣಿಸದೇ ಬರೆಯ ತೊಡಗಿದರೆ, ಬರಹ ಹೇಗೆಯೇ ಇದ್ದರೂ ಅದು ನಿರೀಕ್ಷಿತ ಪರಿಣಾಮ ಬೀರುವ ಸಾಧ್ಯತೆಗಳು ತೀರಾ ಕಡಿಮೆ...
ಸಾಮಾನ್ಯವಾಗಿ ಗೆಳೆಯ ಇಂಥ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ. ಆದರೆ ಇವತ್ತು ಆ ಬಗ್ಗೆ ಮಾತಾಡಲೇ ಇಲ್ಲ..
ಕಣ್ಣು ತುಂಬಿಕೊಂಡಿತ್ತು. ಗೆಳೆಯನ ತುಂಬಿದ ಕಣ್ಣನ್ನು ನಾನು ನೋಡಿದ್ದು ಇದೇ ಮೊದಲು. ನಾಲ್ಕು ಮಾತುಗಳನ್ನು ಆಡುತ್ತಿದ್ದಂತೆಯೇ ಕಣ್ಣೀರು ದರದರನೆ ಹರಿಯ ತೊಡಗಿತು. ಸಾಮಾನ್ಯವಾಗಿ ಪುರುಷರು ಇತರರೆದುರು ಕಣ್ಣೀರು ಹಾಕುವುದು ಕಡಿಮೆ. ಅಷ್ಟೊಂದು ಆಘಾತಕಾರಿ ಸಂಗತಿಗಳು ಎದುರಾದರೆ ಯಾರೂ ಕಾಣದ ಸ್ಥಳದಲ್ಲಿ ಪುರುಷರು ಕಣ್ಣೀರು ಹರಿಸಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಒಂದು ವೇಳೆ, ಪ್ರತಿ ಮನೆಯ ಸ್ನಾನಗೃಹದ ಗೋಡೆಗಳಿಗೆ ಬಾಯಿ ಬರುತ್ತಿದ್ದರೆ, ಅಸಂಖ್ಯಾತ ಪುರುಷರ ಕಣ್ಣೀರ ಕತೆಗಳನ್ನು ಅವು ಹೇಳುತ್ತಿದ್ದುವು. ಯಾಕೆಂದರೆ, ಪುರುಷರು ಸ್ನಾನ ಗೃಹದಲ್ಲಿ ಕಣ್ಣೀರು ಹರಿಸಿ, ಮುಖ ತೊಳೆದುಕೊಂಡು ತಮ್ಮ ಕಣ್ಣೀರನ್ನು ಅಡಗಿಸುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಎಲ್ಲರೆದುರೇ ಕಣ್ಣೀರು ಹರಿಸಿದರೆ ಎಲ್ಲಿ ಹೆಂಗರುಳಿನವನು ಎಂಬ ಅಡ್ಡ ಹೆಸರು ಬರುತ್ತೋ ಅನ್ನುವ ಅನುಮಾನ, ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ..
ಪತ್ನಿ, ಇಬ್ಬರು ಮಕ್ಕಳೊಂದಿಗೆ ಪರಂಪರೆಯ ಮನೆಯಲ್ಲಿ ವಾಸವಿರುವ ನನ್ನ ಗೆಳೆಯನಿಗೆ ಬೇರೊಂದು ಮನೆ ಮಾಡಿಕೊಳ್ಳ ಬೇಕೆಂಬ ಇರಾದೆ ವರ್ಷಗಳ ಮೊದಲೇ ಇತ್ತು. ಅದನ್ನು ಆತ ಆಗೊಮ್ಮೆ-ಈಗೊಮ್ಮೆ ಹೇಳಿಕೊಂಡದ್ದೂ ಇದೆ. ಮೂರ್ನಾಲ್ಕು ಮಂದಿ ತಮ್ಮಂದಿರಿರುವ ಒಂದು ದೊಡ್ಡ ಕುಟುಂಬದ ಮನೆಯಿಂದ ತಾನೊಬ್ಬ ಹೊರ ಹೋದರೆ ಅಂಥ ಸಮಸ್ಯೆ ಏನೂ ಉಂಟಾಗದು ಎಂಬ ದೃಢ ನಿಲುವು ಗೆಳೆಯನದ್ದಾಗಿತ್ತು. ವಿಧವೆ ತಾಯಿಯೊಂದಿಗೆ ಆಗಾಗ ತನ್ನ ಇರಾದೆಯನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಲೂ ಇದ್ದ. ತಮ್ಮಂದಿರಿಗೆ ಈಗಾಗಲೇ ವಿವಾಹವಾಗಿರುವುದರಿಂದ ತಾಯಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಏನೂ ವ್ಯತ್ಯಾಸ ಆಗದು ಎಂದೂ ನಂಬಿದ್ದ. ನಿಜವಾಗಿ, ಮನೆಯ ಹಿರಿಯ ಸದಸ್ಯನಾಗಿ ಮನೆ ಬಿಡುವುದೆಂದರೆ ಅದೊಂದು ದೊಡ್ಡ ಸವಾಲು. ಮನೆಯವರೆಲ್ಲರೂ ಹಿರಿಯವನನ್ನೇ ಅವಲಂಬಿಸಿರುತ್ತಾರೆ. ಅಣ್ಣ ಜವಾಬ್ದಾರಿ ನೋಡಿಕೊಳ್ಳುತ್ತಾನೆ ಎಂಬ ಧೈರ್ಯದಿಂದ ತಮ್ಮಂದಿರು ಬದುಕುತ್ತಿರುತ್ತಾರೆ. ತಾಯಿಯೂ ಹಿರಿಯ ಮಗನ ಮೇಲೆ ಇಟ್ಟಷ್ಟು ಭರವಸೆ ಇನ್ನಾರ ಮೇಲೂ ಇಟ್ಟಿರುವುದಿಲ್ಲ. ಮಾತ್ರವಲ್ಲ, ಕೆಲವೊಮ್ಮೆ ಮಗನಿಗಿಂತಲೂ ಮಗನ ಮಕ್ಕಳ ಜೊತೆಯೇ ತಾಯಿಯ ಸಂಬಂಧ ಹೆಚ್ಚಿರುವುದೂ ಇದೆ. ಯಾಕೆಂದರೆ, ಮಗ ಉದ್ಯೋಗ ನಿಮಿತ್ತ ಕಚೇರಿಗೆ ಹೋದರೆ ಬರುವಾಗ ಸಂಜೆಯಾಗಿರುತ್ತದೆ. ಬಳಿಕ ಸ್ನಾನ, ಅದೂ-ಇದೂ ಎಂದು ಸಮಯ ಬೇಗ ಬೇಗನೆ ಕಳೆದು ಹೋಗುತ್ತದೆ. ಈ ಮಧ್ಯೆ ತಾಯಿಯೊಂದಿಗೆ ಬೆರೆಯುವುದಕ್ಕೆಂದು ಎಷ್ಟೇ ಪ್ರಯತ್ನಿಸಿದರೂ ಅದಕ್ಕೊಂದು ಮಿತಿ ಇದೆ. ಆದರೆ ಮಗನ ಸಣ್ಣ ಮಕ್ಕಳು ಬೆಳಗಿನಿಂದ ಸಂಜೆಯವರೆಗೆ ಅಜ್ಜಿಯ ಜೊತೆಗಿರುತ್ತದೆ. ತಮ್ಮ ಮುದ್ದು ಮುದ್ದು ಮಾತುಗಳ ಮೂಲಕ ಅಪ್ಪ ಬಿಟ್ಟು ಹೋದ ಜಾಗವನ್ನು ಅವು ತುಂಬಿ ಬಿಡುತ್ತವೆ. ಆದ್ದರಿಂದಲೇ, ವಯಸ್ಸಾದ ತಾಯಿ ತನ್ನ ಸಂತಸವನ್ನು ಈ ಮಕ್ಕಳೊಂದಿಗೆ ಕಂಡುಕೊಳ್ಳುತ್ತಾಳೆ. ಆ ಮಕ್ಕಳ (ಮೊಮ್ಮಕ್ಕಳ) ಆಟದಲ್ಲಿ, ಖುಷಿಯಲ್ಲಿ, ತಂಟೆಯಲ್ಲಿ.. ತನ್ನ ಮಗನನ್ನು ಅನುಭವಿಸುತ್ತಾಳೆ. ಹೀಗಿರುವಾಗ ಮಗ ಬೇರೆ ಮನೆ ಮಾಡುವುದೆಂದರೆ, ಮಗನ ಜೊತೆ ಮೊಮ್ಮಕ್ಕಳನ್ನೂ ಕಳಕೊಂಡಂತೆ. ಬಹುಶಃ, ಕಚೇರಿಯಲ್ಲಿ ಬಿಝಿಯಾಗಿರುವ ಗಮನಕ್ಕೆ ಇವು ಬರಬೇಕೆಂದೇನೂ ಇಲ್ಲ. ಆದ್ದರಿಂದಲೇ, ಗೆಳೆಯ ಬೇರೊಂದು ಮನೆ ಮಾಡಿ ತಾಯಿಯನ್ನು ಹೊಸ ಮನೆಗೆ ಕರೆದಾಗ ಅವರು ಕಣ್ಣೀರಾದರು. ಹೊಸ ಮನೆಗೆ ಬಂದರೂ ನಿಲ್ಲಲೊಪ್ಪಲಿಲ್ಲ. ತಿರುಗಿ ಬಂದು ಮಗನನ್ನು ಮತ್ತು ಮೊಮ್ಮಗುವನ್ನು ಸ್ಮರಿಸಿ ಕಣ್ಣೀರು ಹರಿಸತೊಡಗಿದರು. ತಾನು ಬೇರೆ ಮನೆ ಮಾಡಿದ್ದು ತಾಯಿಗೆ ಇಷ್ಟವಿಲ್ಲ ಎಂದರಿತ ಗೆಳೆಯನಿಗೆ ಏನು ಮಾಡಬೇಕೆಂಬ ಗೊಂದಲ. ಅತ್ತ ತಾಯಿಯನ್ನು ಬಿಡುವಂತಿಲ್ಲ, ಇತ್ತ ಬಾಡಿಗೆ ಮನೆ ಮತ್ತು ಅದಕ್ಕಾಗಿ ಖರೀದಿಸಲಾದ ಹೊಸ ಹೊಸ ಗೃಹಪಯೋಗಿ ವಸ್ತುಗಳು ತಾಯಿಯ ಕಣ್ಣೀರಿಗೆ ಕಾರಣ ವಾದ, ಅಭಿಶಪ್ತ ಮಗ ನಾನಾಗಿ ಬಿಡುವೆನೋ ಎಂಬ ಭಯ. ತಾಯಿಗೆ ತಾನು ಅರ್ಥವಾಗಿಲ್ಲವೋ ಅಥವಾ ಅರ್ಥ ಮಾಡಿಸುವಲ್ಲಿ ತಾನು ವಿಫಲನಾಗಿರುವೆನೋ ಎಂಬ ಅನುಮಾನ. ಇನ್ನೊಂದು ಕಡೆ, ಪತ್ನಿಯಲ್ಲಿ ಸಹಜವಾಗಿರುವ ಹೊಸ ಮನೆಯ ಆಸೆ. ಒಂದು ಬಗೆಯ ಗೊಂದಲದೊಂದಿಗೆ ಗೆಳೆಯ ನನ್ನ ಮುಂದಿದ್ದ. ಹೊಸ ಮನೆ ಮತ್ತು ತಾಯಿ ಎಂಬ ಈ ಎರಡು ಆಯ್ಕೆಯ ನಡುವೆ ಆತ ಸಂಕಟಪಡುತ್ತಿದ್ದ..
   ‘If u can Survive, you must remember that I love you very much- ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು..’
   ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಸಂದೇಶ ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಅಸಂಖ್ಯ ಮಂದಿ ಈ ಸಂದೇಶವನ್ನು ಶೇರ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ.
ವರ್ಷಗಳ ಹಿಂದೆ ಜಪಾನಿನಲ್ಲಿ ನಡೆದ ಭೂಕಂಪವು ದೊಡ್ಡದೊಂದು ಅವಶೇಷಗಳ ರಾಶಿಯನ್ನೇ ಸೃಷ್ಟಿಸಿತ್ತು. ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು ಮನೆಯೊಂದರ ಅವಶೇಷ ಗಳಡಿಯಲ್ಲಿ ಕವುಚಿ ಮಲಗಿರುವ ಓರ್ವ ಯುವತಿಯನ್ನು ಕಂಡರು. ಮುಂದಕ್ಕೆ ಬಾಗಿ, ಹಣೆಯನ್ನು ನೆಲಕ್ಕೆ ಒತ್ತಿ, ಎರಡೂ ಕೈಗಳನ್ನು ನೆಲಕ್ಕೆ ಹರಡಿ ಏನನ್ನೋ ಅಡಗಿಸಿಟ್ಟ ರೀತಿಯಲ್ಲಿ ಆ ಯುವತಿ ಬಿದ್ದಿದ್ದಳು. ಓರ್ವ ಸೈನಿಕ ಆಕೆಯನ್ನು ಮುಟ್ಟಿ ನೋಡಿದ. ದೇಹ ತಣ್ಣಗಾಗಿತ್ತು. ಆಕೆಯ ತಲೆ ಮತ್ತು ಬೆನ್ನಿನ ಮೇಲೆ ಮನೆಯ ಅವಶೇಷ ಬಿದ್ದಿದ್ದುವು. ಸೈನಿಕ ಅಲ್ಲಿಂದ ತುಸು ಮುಂದಕ್ಕೆ ಹೋದನಾದರೂ ಯುವತಿ ಏನನ್ನೋ ಅಪ್ಪಿ ಹಿಡಿದಿದ್ದಾಳೆ ಎಂದು ಅನುಮಾನವಾಗಿ ಮರಳಿ ಬಂದು ಯುವತಿಯನ್ನು ಪರೀಕ್ಷಿಸಿದ. ಬಳಿಕ ಜೋರಾಗಿ ಕೂಗಿ ಹೇಳಿದ,
   ‘ಗೆಳೆಯರೇ, ಇಲ್ಲಿ ಬನ್ನಿ, ಇಲ್ಲೊಂದು ಮಗುವಿದೆ. ಪವಾಡ, ಪವಾಡ..’
ಅವಶೇಷಗಳನ್ನು ಸರಿಸಿ ಯುವತಿಯನ್ನು ಮೇಲೆತ್ತಿದಾಗ, ಕಂಬಳಿಯಲ್ಲಿ ಸುತ್ತಿ ಮಲಗಿಸಿದ್ದ 3 ತಿಂಗಳ ಶಿಶು ಬೆಚ್ಚಗೆ ನಿದ್ರಿಸುತ್ತಿತ್ತು. ಆ ಯುವತಿ ತನ್ನ ಜೀವವನ್ನು ಬಲಿ ನೀಡಿ ಆ ಮಗುವನ್ನು ರಕ್ಷಿಸಿದ್ದಳು. ಬೀಳುತ್ತಿದ್ದ ಮನೆಯ ಅವಶೇಷಗಳಿಗೆ ತನ್ನ ದೇಹವನ್ನು ಒಡ್ಡಿ, ಮಗುವನ್ನು ರಕ್ಷಿಸಿರುವುದು ಸೈನಿಕರನ್ನು ದಂಗು ಬಡಿಸಿತ್ತು. ಮಗುವನ್ನುಸುತ್ತಿದ್ದ ಕಂಬಳಿಯನ್ನು ವೈದ್ಯರು ಕಿತ್ತಾಗ ಅದರೊಳಗೆ ಮೊಬೈಲ್ ಪೋನ್ ಒಂದು ಪತ್ತೆಯಾಗಿತ್ತು. ಮಾತ್ರವಲ್ಲ, ಆ ಪೋನ್‍ನ ಸ್ಕ್ರೀನ್‍ನಲ್ಲಿ ಒಂದು ಸಂದೇಶವೂ ಇತ್ತು. ಬಹುಶಃ, ಮರಣಕ್ಕೆ ಮುಖಾಮುಖಿಯಾದಾಗ, ಒಂದು ವೇಳೆ ತನ್ನ ಮಗು ಬದುಕಿ ಉಳಿದರೆ.. ಎಂಬ ನಿರೀಕ್ಷೆಯೊಂದಿಗೆ ತನ್ನ ಮುದ್ದು ಕಂದನಿಗೆ ತಾಯಿ ಕೊನೆಯದಾಗಿ ನೀಡಿದ ಸಂದೇಶವಾಗಿತ್ತದು- ‘ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ತುಂಬ ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು.’ ಅಂದಹಾಗೆ, ತಾಯಿ ಪ್ರೀತಿಯನ್ನು ಅರಿತುಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಂದೇಶ ಇನ್ನಾವುದಿದೆ ಹೇಳಿ?
   ಮೊನ್ನೆ ಕಣ್ತುಂಬಿಕೊಂಡು ಎದುರು ಕೂತ ಗೆಳೆಯನನ್ನು ನೋಡುವಾಗ ಜಪಾನಿನ ಆ ತಾಯಿಯ ನೆನಪಾಯಿತು.

Monday, December 16, 2013

ಹತ್ಯಾಕಾಂಡದ ಭಾಷೆಗೆ ಏಟು ಕೊಟ್ಟವರನ್ನು 'ಉಚಿತಕ್ಕೆ' ಸೀಮಿತಗೊಳಿಸುವುದೇಕೆ?

ಪಾಟ್ನ ಸ್ಪೋಟ ಸಂತ್ರಸ್ತರೊಂದಿಗೆ ಮೋದಿ 
   No, never.We don't need to get into the system to fight. We want to pressure the government and assert our rights as citizens. Everyone who has a dream need not get into politics - ಇಲ್ಲ, ಎಂದಿಗೂ ಇಲ್ಲ. ವ್ಯವಸ್ಥೆಯನ್ನು ಬದಲಿಸುವ ಧ್ಯೇಯದೊಂದಿಗೆ ನಾವು ನಡೆಸುತ್ತಿರುವ ಹೋರಾಟಕ್ಕೆ ಅದರ ಅಗತ್ಯ ಇಲ್ಲ. ನಾವು ಸರಕಾರದ ಮೇಲೆ ಒತ್ತಡ ಹಾಕಲು ಬಯಸುತ್ತೇವೆ ಮತ್ತು ಪ್ರಜೆಗಳೆಂಬ ನೆಲೆಯಲ್ಲಿ ನಮ್ಮ ಹಕ್ಕುಗಳನ್ನು ಪ್ರತಿಪಾದಿಸಬಯಸುತ್ತೇವೆ. ವ್ಯವಸ್ಥೆಯನ್ನು ಬದಲಿಸಬೇಕೆಂಬ ಕನಸು ಹೊತ್ತ ಪ್ರತಿಯೋರ್ವರೂ ರಾಜಕೀಯ ಸೇರಬೇಕಾದ ಅಗತ್ಯ ಇಲ್ಲ..’
   ‘ರಾಜಕೀಯ ಸೇರುತ್ತೀರಾ..’ ಎಂಬ ದಿ ಹಿಂದೂ ಪತ್ರಿಕೆಯ ಪ್ರಶ್ನೆಗೆ 2011 ಆಗಸ್ಟ್ 31ರಂದು ಅರವಿಂದ್ ಕೇಜ್ರಿವಾಲ್ (ಇಟ್ ಈಸ್ ಎ ಲಾಂಗ್ ಜರ್ನಿ ಅಹೆಡ್) ಮೇಲಿನಂತೆ ಉತ್ತರಿಸಿದ್ದರು. ಆದರೆ 2012 ನವೆಂಬರ್ 26ರಂದು ಅವರು ಆಮ್ ಆದ್ಮಿಯನ್ನು ಹುಟ್ಟು ಹಾಕಿದರು. ಡಿಸೆಂಬರ್ 16ರಂದು ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯಿತು. ಹೊಸ ಕನಸು, ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಜನಸಾಮಾನ್ಯರಿಗೆ ತಟ್ಟುವ ಶೈಲಿಯಲ್ಲಿ ಮಂಡಿಸುತ್ತಿದ್ದ ಪಕ್ಷವೊಂದಕ್ಕೆ ಜನರನ್ನು ತಲುಪಲು ಇದಕ್ಕಿಂತ ಉತ್ತಮವಾದ ಇಶ್ಯೂ ಬೇರೊಂದಿರಲಿಲ್ಲ. ಹೀಗಿದ್ದೂ..
1. ಪ್ರತಿ ಕುಟುಂಬಕ್ಕೆ ಪ್ರತಿ ದಿನ 700 ಲೀಟರ್ ಉಚಿತ ನೀರು.
2. ಅಕ್ರಮ ಗುಡಿಸಲುಗಳ ಸಕ್ರಮ
3. ವಿದ್ಯುತ್ ದರದಲ್ಲಿ 50% ಕಡಿತ
4. ಅಗ್ಗದ ಜೆನೆರಿಕ್ ಔಷಧಗಳನ್ನು ಪ್ರತಿ ನಾಗರಿಕರಿಗೂ ಲಭ್ಯಗೊಳಿಸುವುದು.
5. ಶಾಲಾ-ಕಾಲೇಜುಗಳ ಶುಲ್ಕದಲ್ಲಿ ಇಳಿಕೆ
6. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ..
ಮುಂತಾದ ಅಗ್ಗದ ಘೋಷಣೆಗಳಿಂದಾಗಿಯೇ ಆಮ್ ಆದ್ಮಿ ದೆಹಲಿ ಚುನಾವಣೆಯಲ್ಲಿ 28 ಸ್ಥಾನ ಗಳಿಸಿದೆಯೆಂದು ವಾದಿಸುತ್ತಿರುವ ಬಿಜೆಪಿ ಬೆಂಬಲಿಗರ ವಿಶ್ಲೇಷಣೆ ಎಷ್ಟು ನಿಜ? ಅಗ್ಗದ ಘೋಷಣೆ ಗಳೇನು ಈ ದೇಶದ ನಾಗರಿಕರಿಗೆ ಹೊಸದೇ? ಕಾಂಗ್ರೆಸ್ ಮತ್ತು ಬಿಜೆಪಿ ಇಂಥ ಘೋಷಣೆಗಳನ್ನು ಎಷ್ಟು ಬಾರಿ ಬಳಸಿಲ್ಲ? ಅಲ್ಲದೇ ಇಂಥ ಘೋಷಣೆಗಳನ್ನು ಜನ ಇಷ್ಟ ಪಡುತ್ತಾರೆ ಎಂಬ ಬಗ್ಗೆ ಈ ಪಕ್ಷಗಳಿಗೆ ಭರವಸೆ ಇರುತ್ತಿದ್ದರೆ, ಅವೇನು ಬಿಡುತ್ತಿದ್ದುವೇ? 70 ಅಂಶಗಳನ್ನೊಳಗೊಂಡ ಕೇಜ್ರಿವಾಲರ ಚುನಾವಣಾ ಪ್ರಣಾಳಿಕೆಗೆ (ಮೆನಿಫೆಸ್ಟೋ) ವಿರುದ್ಧವಾಗಿ ಅವು 140 ಅಂಶಗಳ ಪ್ರಣಾಳಿಕೆಯನ್ನು ಹೊರ ತರುತ್ತಿರಲಿಲ್ಲವೇ? ದೇಶದ ರಾಜಕೀಯದಲ್ಲಿ ಅಗಾಧ ಅನುಭವವುಳ್ಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಉಚಿತ ವಿದ್ಯುತ್, ಉಚಿತ ಅಕ್ಕಿ, ನೀರು.. ಮುಂತಾದುವುಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ತಯಾರು ಗೊಳಿಸುವುದೇನು ಕಷ್ಟದ್ದಲ್ಲವಲ್ಲ? ಅಷ್ಟಕ್ಕೂ, ಆಮ್ ಆದ್ಮಿ ಎಂಬುದು ಆಗಷ್ಟೇ ಹುಟ್ಟಿದ ಕೂಸು. ಅದರ ಆಲೋಚನೆ, ಪ್ರಣಾಳಿಕೆಯೂ ಹೊಸದು. ಆದ್ದರಿಂದ, ಆ ಪಕ್ಷವನ್ನು ಒಪ್ಪಿ ಕೊಳ್ಳುವುದಕ್ಕಿಂತ ತಿರಸ್ಕರಿಸುವುದಕ್ಕೇ ಜನರಿಗೆ ಹೆಚ್ಚು ಕಾರಣಗಳಿದ್ದುವು. ಯಾಕೆಂದರೆ, ಯಾವುದೇ ಹೊಸ ಪಕ್ಷವು ಇತರ ಪ್ರಬಲ ಪಕ್ಷಗಳಿಗಿಂತ ಭಿನ್ನ ಮತ್ತು ಉಚಿತ ಅಂಶಗಳುಳ್ಳ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು ಈ ದೇಶದಲ್ಲಿ ಹೊಸತೇನೂ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಇಲ್ಲದ ಕೆಲವು ಅನುಕೂಲತೆಗಳು ಪ್ರಾದೇಶಿಕ ಪಕ್ಷಗಳಿಗೆ ಇರುತ್ತವೆ. ಅದರ ವ್ಯಾಪ್ತಿ ಸೀಮಿತವಾದದ್ದು. ಗುರಿಯೂ ಸೀಮಿತವೇ. ರಾಜಕೀಯವಾಗಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಅವು ಜನಪ್ರಿಯ ಘೋಷಣೆಗಳ ಮೊರೆ ಹೋಗಬೇಕಾಗುತ್ತದೆ ಎಂಬ ಅರಿವು ಜನರಲ್ಲೂ ಇರುತ್ತದೆ. ಆದ್ದರಿಂದಲೇ, ಜನರು ಅಂಥ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಲ್ಲದೇ, ಅಂಥ ಪಕ್ಷಗಳಿಗೆ ಓಟು ಹಾಕುವುದರಿಂದ ಮತ ಹಂಚಿ ಹೋಗಿ ಅಯೋಗ್ಯರು ಆರಿಸಿ ಬರುತ್ತಾರೆ ಎಂಬ ಭೀತಿ ಮತದಾರರಲ್ಲಿ ಯಾವಾಗಲೂ ಇರುತ್ತದೆ. ಹೀಗಿರುವಾಗ, ಆಮ್ ಆದ್ಮಿಯ ಗೆಲುವನ್ನು ಕೇವಲ ಜನಪ್ರಿಯ ಘೋಷಣೆಗಳ ಗೂಟಕ್ಕೆ ಕಟ್ಟಿ ಹಾಕಿ ವಿಶ್ಲೇಷಣೆ ನಡೆಸುವುದು ಆತ್ಮವಂಚನೆ ಆಗಲಾರದೇ? ದೆಹಲಿಯಂಥ ಶಿಕ್ಷಿತ, ವಿದ್ಯಾವಂತ ಮತ್ತು ‘ಉಚಿತ' ಕೊಡುಗೆಗಳನ್ನು ಸದಾ ದ್ವೇಷಿಸುವ ಕಾರ್ಪೋ ರೇಟ್ ವಲಯದ ಮಾಧ್ಯಮಗಳು ಗಿಜಿಗುಡುತ್ತಿರುವ ರಾಜ್ಯವೊಂದರ ಮಂದಿ ಉಚಿತವನ್ನೇ ಬಯಸುವಷ್ಟು ಸಿನಿಕರೇ, ಅಂಥ ಭರವಸೆಗಳನ್ನು ನಂಬುವಷ್ಟು ದಡ್ಡರೇ..
ಇಂಡಿಯನ್ ಮುಜಾಹಿದೀನ್
ಪಾಕಿಸ್ತಾನ
ಭ್ರಷ್ಟಾಚಾರ
ಹತ್ಯಾಕಾಂಡ
ಕೋಮುವಾದ
   ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವುದು ಬಹುತೇಕ ಇಂಥ ವಿಷಯಗಳಿಂದಲೇ. ಬಿಜೆಪಿಯ ಚುನಾವಣಾ ಭಾಷಣಗಳಲ್ಲಿ ಯಾವಾಗಲೂ ಪಾಕಿಸ್ತಾನದ ಪ್ರಸ್ತಾಪವಾಗುತ್ತದೆ. ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದೀನ್‍ಗಳ ಜಪ ನಡೆಯುತ್ತದೆ. ಹಾಗಂತ, ಕಳೆದ 60 ವರ್ಷಗಳಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಬಾಂಬು ಸ್ಫೋಟಗಳಿಂದ ಸಾವಿಗೀಡಾಗಿದ್ದಾರೆ ಮತ್ತು ಕೋಮು ಗಲಭೆಗಳಿಂದಾಗಿ ಸಾವಿಗೀಡಾದವರ ಸಂಖ್ಯೆಯ ಮುಂದೆ ಇವರು ಎಷ್ಟು ಶೇಕಡಾ ಎಂದು ಅದು ಹೇಳುವುದೇ ಇಲ್ಲ. ಬಾಂಬು ಸ್ಫೋಟಗಳಿಗೆ ಬಲಿಯಾದ ಕುಟುಂಬಗಳ ಕಣ್ಣೀರ ಕತೆಯನ್ನು ಬಿಜೆಪಿ ಅಸಂಖ್ಯ ವೇದಿಕೆಗಳಲ್ಲಿ ಹೇಳಿದೆ. ಅಂಥ ಕುಟುಂಬಗಳ ಮನೆಗೆ ತೆರಳಿ ಅದರ ನಾಯಕರು ಸಹಾಯ ಧನ ವಿತರಿಸಿದ್ದಾರೆ. ಇತ್ತೀಚೆಗೆ ನಡೆದ ಪಾಟ್ನಾ ಸ್ಫೋಟದಲ್ಲಿ ಸಂತ್ರಸ್ತರಾದ ಮಹಿಳೆಯೊಂದಿಗೆ ನರೇಂದ್ರ ಮೋದಿ ಮೊಬೈಲ್‍ನಲ್ಲಿ ಸಂಪರ್ಕಿಸಿ ಸಾಂತ್ವನ ಹೇಳಿದ್ದನ್ನು ಟಿ.ವಿ. ಚಾನೆಲ್‍ಗಳು ನೇರ ಪ್ರಸಾರ ಮಾಡಿದ್ದುವು. ಆದರೆ, ಕೋಮುಗಲಭೆಗಳ ಸಂತ್ರಸ್ತರ ಬಗ್ಗೆ ಬಿಜೆಪಿ ಮಾತಾಡುವುದೇ ಇಲ್ಲ. ಅವರ ಕಣ್ಣೀರ ಕತೆಗಳನ್ನು ಅದು ವೇದಿಕೆಗಳಲ್ಲಿ ಹಂಚಿಕೊಳ್ಳುವುದೂ ಇಲ್ಲ. ಪಾಟ್ನಾ ಸ್ಫೋಟದ ಬೆನ್ನಿಗೇ ಮುಝಫರ್ ನಗರದಲ್ಲಿ ಕೋಮು ಹತ್ಯಾಕಾಂಡ ನಡೆಯಿತು. ಮುಸ್ಲಿಮರನ್ನೇ ಗುರಿಯಾಗಿಸಿ ನಡೆದ ಈ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸಂತ್ರಸ್ತರಾದರು. ಪಾಟ್ನಾ ಪ್ರಕರಣದಂತೆ ಮೋದಿಯಾಗಲಿ, ಅವರ ಆಪ್ತ ಅಮಿತ್ ಷಾ ಆಗಲಿ ಈ ಸಂತ್ರಸ್ತರನ್ನು ಭೇಟಿಯಾದದ್ದಾಗಲಿ, ಮೊಬೈಲ್‍ನಲ್ಲಿ ಸಂಪರ್ಕಿಸಿದ್ದಾಗಲಿ ಯಾವುದೂ ನಡೆಯಲಿಲ್ಲ. ಕೋಮು ಗಲಭೆಯಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ, ಅವರಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎಂಬ ಮಾಹಿತಿಯನ್ನು ಅದು ಈ ವರೆಗೂ ಈ ದೇಶದ ನಾಗರಿಕರೊಂದಿಗೆ ಹಂಚಿಕೊಂಡಿಲ್ಲ. ಆದರೆ ಭಯೋತ್ಪಾದನಾ ಪ್ರಕರಣಗಳ ಬಗ್ಗೆ, ಅದು ನಡೆದ ದಿನಾಂಕ, ಪ್ರದೇಶ, ಸ್ಫೋಟಗಳಿಗೆ ಬಳಸಲಾದ ಉಪಕರಣಗಳು, ಆರೋಪಿಗಳ ಹೆಸರುಗಳನ್ನು ಅಸಂಖ್ಯ ಬಾರಿ ವಿವಿಧ ವೇದಿಕೆ, ಪತ್ರಿಕೆಗಳ ಮೂಲಕ ಅದು ಹೇಳುತ್ತಲೇ ಬಂದಿದೆ. ಬಾಬರಿ ಮಸೀದಿಯನ್ನು ಅದು ಚುನಾವಣೆಗಾಗಿ ಬಳಸಿಕೊಂಡಿತು. ಗುಜರಾತನ್ನು ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿತು. ಅದರ ಪ್ರಧಾನಿ ಅಭ್ಯರ್ಥಿ ಅಥವಾ ಪಕ್ಷದ ನೇತೃತ್ವ ಸ್ಥಾನದಲ್ಲಿ ಗುರುತಿಸುವವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹತ್ಯಾಕಾಂಡದ ಆರೋಪಿಗಳೇ. ಚುನಾವಣೆ ಹತ್ತಿರ ಬರುವಾಗಲೆಲ್ಲ ಅದರ ಪೋಷಕ ಸಂಘಟನೆಗಳು ರಾಮನಿಗೆ ಸಂಬಂಧಿಸಿ ಅಥವಾ ಹಿಂದೂ ಧರ್ಮಕ್ಕೆ ಸಂಬಂಧಿಸಿ ರಾಲಿಗಳನ್ನು ಹಮ್ಮಿಕೊಳ್ಳುತ್ತವೆ. ಸಭೆಗಳನ್ನು ಏರ್ಪಡಿಸುತ್ತವೆ. ಒಂದು ರೀತಿಯಲ್ಲಿ ಬಿಜೆಪಿ ಈ ದೇಶದಲ್ಲಿ ಉದ್ದಕ್ಕೂ ಚುನಾವಣೆಯನ್ನು ಎದುರಿಸಿದ್ದು, ಎದುರಿಸುತ್ತಿರುವುದು ಧರ್ಮ ಮತ್ತು ಕೋಮುವಾದದ ಆಧಾರದಲ್ಲೇ. ಹತ್ಯಾಕಾಂಡಗಳು ಮತ್ತು ಬಾಂಬ್ ಸ್ಫೋಟಗಳ ನೆರವನ್ನು ಪಡೆದುಕೊಂಡೇ ಅದು ಚುನಾವಣೆಯಲ್ಲಿ ಸೆಣಸಿದೆ, ಸೆಣಸುತ್ತಿದೆ. ಇನ್ನೊಂದು ಕಡೆ, ಕಾಂಗ್ರೆಸ್‍ನ ಚರಿತ್ರೆಯೂ ಭಿನ್ನವಾಗಿಲ್ಲ. ಭ್ರಷ್ಟಾಚಾರದ ಆರೋಪ ಪಟ್ಟಿಯನ್ನು ಕುತ್ತಿಗೆಗೆ ಕಟ್ಟಿಕೊಂಡೇ ಅದರ ಅಭ್ಯರ್ಥಿಗಳು ಚುನಾವಣೆಗಿಳಿಯುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಮಾತಾಡುತ್ತಾ ರಾಜ ದರ್ಬಾರು ನಡೆಸುತ್ತಾರೆ. ಹತ್ಯಾಕಾಂಡಗಳ ಕಳಂಕವೂ ಅದರ ಬೆನ್ನಿಗಿದೆ. ಕಲ್ಯಾಣ ರಾಷ್ಟ್ರದ ಬಗ್ಗೆ ಅದು ಪ್ರತಿ ಚುನಾವಣೆಯಲ್ಲೂ ಮಾತಾಡುತ್ತದೆ. ಜನಸಾಮಾನ್ಯರ ಸಂಕಟಗಳನ್ನೊಳಗೊಂಡ ಪ್ರಣಾಳಿಕೆಯನ್ನೂ ಬಿಡುಗಡೆಗೊಳಿಸುತ್ತದೆ. ಜೊತೆಗೇ ನ್ಯಾಯ ವಿತರಣೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶವನ್ನೀಯುವ ಕಾನೂನನ್ನೂ ರಚಿಸುತ್ತದೆ. ಇಂಥ ಸ್ಥಿತಿಯಲ್ಲಿ, ಇವ್ಯಾವುವೂ ಗೋಚರಿಸದ ಮತ್ತು ಅಚ್ಚ ಮನುಷ್ಯರ ಭಾಷೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಮಾತಾಡಿದ ಆಮ್ ಆದ್ಮಿಯನ್ನು ಜನರು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡರು ಎಂದು ನಾವೇಕೆ ಪರಿಗಣಿಸಬಾರದು? ಆಮ್ ಆದ್ಮಿಯ ಆಲೋಚನೆಗಳು ಹೊಸತು. ಸಾಮಾನ್ಯವಾಗಿ ವೇದಿಕೆಗಳಲ್ಲಿ ಮಂಡಿಸುವ, ಪತ್ರಿಕೆಗಳ ಕಾಲಂಗಳಲ್ಲಿ ಪ್ರತಿಪಾದಿಸುವ ಚಿಂತನೆಗಳನ್ನು ಕೇಜ್ರಿವಾಲ್ ಪ್ರಾಯೋಗಿಕಗೊಳಿಸುವ ಬಗ್ಗೆ ಮಾತಾಡಿದ್ದರು. ಅಂಥ ಚಿಂತನೆಗಳನ್ನು ಬುದ್ಧಿಜೀವಿಗಳ ಬಡಬಡಿಕೆ ಎಂದೇ ರಾಜಕೀಯ ಪಕ್ಷಗಳು ತಿರಸ್ಕರಿಸಿದ್ದುವು. ವೈದ್ಯರು, ಕವಿಗಳು, ಪತ್ರಕರ್ತರು, ವಕೀಲರು, ವಿದ್ಯಾರ್ಥಿಗಳು, ನೌಕರರು.. ಹೀಗೆ ಒಂದು ಹೊಸ ಬಗೆಯ ತಂಡವನ್ನು ಕೇಜ್ರಿವಾಲ್ ಕಟ್ಟಿದರು. ಬಾಂಬ್ ಸ್ಫೋಟದ, ಹತ್ಯಾಕಾಂಡದ ಭಾಷೆಯಲ್ಲಿ ಅವರು ಮಾತಾಡಲಿಲ್ಲ. ಧರ್ಮವನ್ನು ದುರುಪಯೋಗಿಸದೆಯೇ ಚುನಾವಣೆಯಲ್ಲಿ ಸೆಣಸಬಹುದು ಎಂಬ ವಾತಾವರಣವನ್ನು ಅವರು ಹುಟ್ಟು ಹಾಕಿದರು. ಬಹುಶಃ, ರಾಷ್ಟ್ರಮಟ್ಟದ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳ ಕೇಂದ್ರ ಕಚೇರಿಗಳಿರುವ ದೆಹಲಿಯಲ್ಲಿ ರಾಜಕಾರಣಿಯೇ ಅಲ್ಲದ ಓರ್ವ ವ್ಯಕ್ತಿ ಮತ್ತು ಆತನ ತಂಡವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವುದು ಸುಲಭದ ಮಾತಲ್ಲ. ಮಾಧ್ಯಮಗಳನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇರುವಂತೆಯೇ ಪ್ರಬಲ ರಾಜಕಾರಣಿಗಳನ್ನು ಎದುರಿಸುವುದಕ್ಕೆ ಬುದ್ಧಿವಂತಿಕೆಯ ಕಾರ್ಯತಂತ್ರ ರೂಪಿಸುವ ಅಗತ್ಯವೂ ಇರುತ್ತದೆ. ಆಮ್ ಆದ್ಮಿ ಇದನ್ನು ಮೆಟ್ಟಿ ನಿಂತಿದೆಯೆಂದರೆ ಇದು ಯಾವುದರ ಸೂಚನೆ?
   ನಿಜವಾಗಿ, ಧರ್ಮವನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ದುರುಪಯೋಗಪಡಿಸದೆಯೇ ಚುನಾವಣೆಯನ್ನು ಗೆಲ್ಲಬಹುದು ಎಂಬ ಒಳ್ಳೆಯ ಸಂದೇಶವನ್ನು ಆಮ್ ಆದ್ಮಿ ರವಾನಿಸಿದೆ. ಭವಿಷ್ಯದ ದೃಷ್ಟಿಯಿಂದ ಇದು ಶುಭ ಸೂಚನೆ. ಬಿಜೆಪಿಯ ಪ್ರಬಲ ಕೋಮುವಾದ ಮತ್ತು ಕಾಂಗ್ರೆಸ್‍ನ ಮೃದು ಕೋಮುವಾದದ ನಡುವೆ ಇವತ್ತು ನಡೆಯುತ್ತಿರುವ ಚುನಾವಣಾ ಹೋರಾಟವನ್ನು ಕೇಜ್ರಿವಾಲ್ ಆಮ್ ಆದ್ಮೀಕರಣಗೊಳಿಸಿದ್ದಾರೆ. ಅವರಿಗೆ ಎಷ್ಟು ಸ್ಥಾನ ಸಿಕ್ಕಿತು ಎಂಬುದು ಮುಖ್ಯ ಅಲ್ಲ. ವಿದ್ಯಾವಂತರು, ಶಿಕ್ಷಿತರಿರುವ ರಾಜ್ಯವೊಂದರಲ್ಲಿ ಕೇವಲ ಜನಪರ ವಿಷಯಗಳನ್ನೆತ್ತಿಕೊಂಡು ಚುನಾವಣೆಗಿಳಿದ ಆಮ್ ಆದ್ಮಿಯ ಯಶಸ್ಸನ್ನು ಕೋಮುವಾದಿ ರಾಜಕಾರಣದ ವಿರುದ್ಧದ ಯಶಸ್ಸೆಂದೇ ಪರಿಗಣಿಸಬೇಕು. ಭವಿಷ್ಯದಲ್ಲಿ, ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಭಾಷಣಗಳು ಕೋಮುವಾದಿ ರಹಿತವಾಗುವುದಕ್ಕೆ ಈ ಯಶಸ್ಸು ಪ್ರಚೋದಕವಾಗುವುದಕ್ಕೆ ಅವಕಾಶ ಇದೆ. ಮುಖ್ಯವಾಗಿ ಜನಪರ ಅಜೆಂಡಾದೊಂದಿಗೆ ತಳಮಟ್ಟದ ಜನರನ್ನು ತಲುಪಲು ಪ್ರಯತ್ನಿಸಿದರೆ ಅಂಥ ಪಕ್ಷ
ಗಳನ್ನು ಜನರು ಗೆಲ್ಲಿಸುತ್ತಾರೆ ಎಂಬುದಕ್ಕೆ ಆದ್ಮಿ ಒಂದು ಒಳ್ಳೆಯ ಉದಾಹರಣೆ.

Tuesday, December 10, 2013

ಲಜ್ಜೆಯನ್ನು ಕಸಿದುಕೊಂಡವರೇ, ಈ ದೌರ್ಜನ್ಯದ ಪಾಪವನ್ನೇಕೆ ಹೊತ್ತುಕೊಳ್ಳುತ್ತಿಲ್ಲ?

ರಾಧಿಕಾ ಆಪ್ಟೆ, ಅರಣ್ಯ ಕೌರ್, ಗೀತಾಂಜಲಿ ಥಾಪಾ ಮತ್ತು ಸಂಧ್ಯಾ ಮೃದುಲ್ ಅಭಿನಯಿಸಿರುವ 22 ನಿಮಿಷಗಳ ಕಿರು ಚಿತ್ರವೊಂದು ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಅಸಂಖ್ಯ ಮಂದಿ ಈಗಾಗಲೇ ಇದನ್ನು ವೀಕ್ಷಿಸಿದ್ದಾರೆ. ಲೈಂಗಿಕ ದೌರ್ಜನ್ಯವು ಎಗ್ಗಿಲ್ಲದೇ ನಡೆಯುತ್ತಿರುವ ದೇಶವೊಂದರಲ್ಲಿ ಹೆಣ್ಣು ಏನು ಮಾಡಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಯಾವೆಲ್ಲ ತಯಾರಿಗಳನ್ನು ಮಾಡಿಕೊಳ್ಳಬೇಕು.. ಎಂಬುದರ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ಸಾಕಷ್ಟು ಮಂದಿ ಈ ಚಿತ್ರದ ಸರಿ-ತಪ್ಪುಗಳ ಬಗ್ಗೆ ಚರ್ಚಿಸಿದ್ದಾರೆ. ವೀಕ್ಷಕರ ಪ್ರತಿಕ್ರಿಯೆಗಳು ಎಷ್ಟು ಜೋರಾಗಿತ್ತೆಂದರೆ, ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್‍ರೇ ಸ್ವತಃ ಸ್ಪಷ್ಟನೆ ಕೊಡುವಷ್ಟು. ಈ ದೇಶ ಸದ್ಯ ಎದುರಿಸುತ್ತಿರುವ ಅತಿ ದೊಡ್ಡ ಸಮಸ್ಯೆಯೊಂದಕ್ಕೆ 22 ನಿಮಿಷಗಳಲ್ಲಿ ಪರಿಹಾರವೊಂದನ್ನು ಕಟ್ಟಿ ಕೊಟ್ಟ ಅನುರಾಗ್ ಕಶ್ಯಪ್‍ರನ್ನು ಮೃದುವಾಗಿ ಚುಚ್ಚಿದ, ತರಾಟೆಗೆತ್ತಿಕೊಂಡವರು ಒಂದು ಕಡೆಯಾದರೆ, ಅವರನ್ನು ಬೆಂಬಲಿಸಿ, ಆ ಪರಿಹಾರವನ್ನು ಮೆಚ್ಚಿ ಕೊಂಡವರು ಇನ್ನೊಂದು ಕಡೆ. ಈ ಪರಿಹಾರದಂತೆ ನಮ್ಮನ್ನು ನಾವು ತಯಾರುಗೊಳಿಸುತ್ತೇವೆ ಅಂತ ಹೇಳಿಕೊಂಡ ಯುವತಿಯರು ಅನೇಕ. ಹಾಗಂತ,
   ‘ದಾಟ್  ಡೇ ಆಫ್ಟರ್ ಎವರಿ ಡೇ..' ಎಂಬ ಈ ಕಿರುಚಿತ್ರದಲ್ಲಿ ಸೂಚಿಸಲಾಗಿರುವ ಪರಿಹಾರವನ್ನು ಒಂದೊಮ್ಮೆ ನೀವೂ ಆಲೋಚಿಸಿರಬಹುದು.
ಮೂವರು ಮಹಿಳಾ ಉದ್ಯೋಗಿಗಳು. ಮನೆಯ ಒಳಗಿನ ಅಡುಗೆ ಮತ್ತಿತರ ಕೆಲಸಗಳನ್ನು ಮಾಡುತ್ತಲೇ ಮನೆಯ ಹೊರಗೂ ದುಡಿಯಬೇಕಾದ ಒತ್ತಡದಲ್ಲಿ ಇವರ ಬದುಕು ಸಾಗುತ್ತಿರುತ್ತದೆ. ಓರ್ವಳು ಅಡುಗೆ ಮನೆಯಲ್ಲಿ ಚಹಾ ತಯಾರಿಸುತ್ತಿರುತ್ತಾಳೆ. ಹೊರಗೆ ಮನೆಯ ಯಜಮಾನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೈಂಗಿಕ ದೌರ್ಜನ್ಯಗಳ ಸಾಲು ಸಾಲು ಸುದ್ದಿಗಳನ್ನು ಇವಳಿಗೆ ಕೇಳಿಸುವಂತೆ ಓದುತ್ತಿರುತ್ತಾನೆ. ಮನೆಯ ಹೊರಗಿನ ವಾತಾವರಣ ಹೆಣ್ಣಿಗೆ ಎಷ್ಟು ಅಪಾಯಕಾರಿಯಾಗಿದೆ ಎಂಬ ಸೂಚನೆಯನ್ನು ಆಕೆಗೆ ರವಾನಿಸುವ ವಿಧಾನ ಇದು. ಇನ್ನೊಂದು ಮನೆಯಲ್ಲೂ ಇದೇ ಪರಿಸ್ಥಿತಿ. ಆ ಮನೆಯ ಮಹಿಳೆ ಕೆಲಸಕ್ಕೆ ಹೊರಡುವಾಗ 5 ವರ್ಷದ ಬಾಲೆಯ ಮೇಲೆ ಅತ್ಯಾಚಾರವಾದ ಸುದ್ದಿ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುತ್ತದೆ. ವೀಕ್ಷಿಸುತ್ತಿರುವ ಅತ್ತೆಗೆ ಸೊಸೆಯ ಸುರಕ್ಷಿತತೆಯ ಬಗ್ಗೆ ದಿಗಿಲಾಗುತ್ತದೆ. ಹೀಗೆ ಬೇರೆ ಬೇರೆ ಮನೆಗಳಲ್ಲಿ ವಾಸಿಸುವ ಮೂವರು ಮಹಿಳೆಯರೂ ನಿಗದಿತ ಸಮಯದಲ್ಲಿ ಒಂದೇ ಕಡೆ ಸೇರಿ ಒಟ್ಟಾಗಿ ಕೆಲಸಕ್ಕೆ ಹೋಗುತ್ತಾರೆ. ಕಟ್ಟಡದ ಮೇಲಿನಿಂದ ಪೋಲಿಗಳು ಅವರ ವೀಡಿಯೋ ತೆಗೆಯುತ್ತಾರೆ. ತುಸು ದೂರ ಹೋದಾಗ ಕಟ್ಟುಮಸ್ತಾದ ಯುವಕರು ಚುಡಾವಣೆಗಿಳಿಯುತ್ತಾರೆ. ಕೊನೆಗೆ ಓರ್ವಳನ್ನು ಅಟ್ಟಿಸಿಕೊಂಡು ಹೋಗುತ್ತಾರೆ. ಒಂದು ಕಡೆ ಅಸಹಾಯಕತೆ, ಇನ್ನೊಂದು ಕಡೆ ಕೆಲಸದ ಅನಿವಾರ್ಯತೆ.. ಓರ್ವಳಲ್ಲಿ ಕಣ್ಣೀರು ಹರಿಯುತ್ತದೆ. ಹೀಗಿರುವಾಗ, ಈ ದೌರ್ಜನ್ಯವನ್ನು ಎದುರಿಸುವ ಬಗ್ಗೆ ಉಳಿದಿಬ್ಬರು ಆಕೆಯಲ್ಲಿ ಧೈರ್ಯ ತುಂಬುತ್ತಾರೆ. ಸ್ವರಕ್ಷಣೆಯ ಪಾಠ ಹೇಳಿಕೊಡುತ್ತಾರೆ. ಅದರಂತೆ ಈಕೆ ಅವರ ಜೊತೆ ಸ್ವರಕ್ಷಣೆಯ ಕಲೆಗಳನ್ನು ಕರಗತ ಮಾಡಿಕೊಳ್ಳುತ್ತಾಳೆ. ವ್ಯಾಯಾಮ, ತರಬೇತಿಗಳು ನಡೆಯುತ್ತವೆ. ಅಂತಿಮವಾಗಿ, ಒಂದು ದಿನ ಯುವಕರು ಲೈಂಗಿಕ ದೌರ್ಜನ್ಯಕ್ಕೆ ಮುಂದಾದಾಗ, ಮೂವರೂ ತಮ್ಮ ಮುಷ್ಠಿ ಹೊಡೆತಗಳ ಮೂಲಕ ಎದುರಿಸುತ್ತಾರೆ. ಹೆಣ್ಣನ್ನು ಅಬಲೆ ಅಂದುಕೊಂಡಿದ್ದ ಪುಂಡರು ಈ ಮಹಿಳೆಯರ ಪ್ರತಿರೋಧವನ್ನು ಎದುರಿಸಲಾಗದೇ ನೆಲಕ್ಕುರುಳುತ್ತಾರೆ..’
   ಮಹಿಳಾ ಬ್ಯಾಂಕು
   ಮಹಿಳಾ ಟ್ಯಾಕ್ಸಿಗಳು
ಮಹಿಳೆಯರನ್ನು ಸುರಕ್ಷಿತಗೊಳಿಸುವುದಕ್ಕಾಗಿ ಜಾರಿಗೊಳ್ಳುತ್ತಿರುವ ಹಲವು ಯೋಜನೆಗಳಲ್ಲಿ ಇವು ಕೇವಲ ಎರಡು ಮಾತ್ರ. ದೆಹಲಿಯಲ್ಲಿ ಈಗಾಗಲೇ ಮಹಿಳಾ ಬ್ಯಾಂಕು ಆರಂಭಗೊಂಡಿದೆ. ಮಹಿಳೆಯರೇ ಚಲಾಯಿಸುವ ಟ್ಯಾಕ್ಸಿಗಳು ಕೇರಳದಲ್ಲಿ ರಸ್ತೆಗಿಳಿದಿವೆ. ಇದರ ಜೊತೆಗೇ, ಹೆಣ್ಣನ್ನು ಪುರುಷರಿಂದ ಪ್ರತ್ಯೇಕಗೊಳಿಸುವ ವಿಧಾನವನ್ನು ಅನಾಗರಿಕವೆಂದು ಖಂಡಿಸಲಾಗುತ್ತಿದೆ! ಹೆಣ್ಣಿನ ಉಡುಪು, ಸ್ವಚ್ಛಂದ ಸಂಸ್ಕøತಿ, ಮದ್ಯ.. ಮುಂತಾದುವುಗಳನ್ನು ಲೈಂಗಿಕ ದೌರ್ಜನ್ಯಕ್ಕೆ ಕಾರಣ ಎಂದು ಹೇಳುವವರು ಮತ್ತು ಅದನ್ನು ಅಲ್ಲಗಳೆಯುವವರು ಸಮಾಜದಲ್ಲಿ ಧಾರಾಳ ಇದ್ದಾರೆ. ನಿಜವಾಗಿ, ಹೆಣ್ಣು ಈ 21ನೇ ಶತಮಾನದ ಅಂತ್ಯದಲ್ಲಿ ಭೂಮಿಗೆ ದಿಢೀರ್ ಆಗಿ ಇಳಿದು ಬಂದ ಹೊಸ ಜೀವಿಯೇನೂ ಅಲ್ಲ. ಗಂಡಿನ ಜೊತೆಜೊತೆಗೇ ಹೆಣ್ಣೂ ಇದ್ದಾಳೆ.  ಆದರೂ ಈ ಹಿಂದೆಂದೂ ಆಗದಷ್ಟು ಅಥವಾ ಸುದ್ದಿಗೆ ಬರದಷ್ಟು ಲೈಂಗಿಕ ದೌರ್ಜನ್ಯ ಪ್ರಕರಣಗಳು ಇವತ್ತು ಕೇಳಿ ಬರುತ್ತಿರುವುದೇಕೆ? ಇಂಗ್ಲೆಂಡಿನಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಇತ್ತೀಚೆಗಷ್ಟೇ ವರದಿಯನ್ನು ಸಲ್ಲಿಸಲಾಯಿತು. ಮಾತ್ರವಲ್ಲ, ಆ ವರದಿಯನ್ನು ಓದಿ ಆ ದೇಶ ತೀವ್ರ ಆಘಾತವನ್ನು ವ್ಯಕ್ತಪಡಿಸಿತು. (ದಿ ಹಿಂದೂ ನ. 28, 2013) ಫ್ರಾನ್ಸ್ ನಲ್ಲೂ ಇದೇ ಸ್ಥಿತಿಯಿದೆ. ಈ ನೆಲ ಹೆಣ್ಣಿಗೆ ಸುರಕ್ಷಿತವಾಗಿಲ್ಲ ಎಂದು ಘೋಷಿಸಿ ಬಿಡುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ಏನು ಕಾರಣ, ಯಾರು ಕಾರಣ? ಕರಾಟೆಯ ಪಟ್ಟುಗಳನ್ನು ಕಲಿತುಕೊಳ್ಳುವುದರಿಂದ ಹೆಣ್ಣು ಸುರಕ್ಷಿತಳಾಗಬಲ್ಲಳೇ? ಅವಳಿಂದ ಪೆಟ್ಟು ತಿಂದ ದೌರ್ಜನ್ಯಕೋರರು ಹಗೆ ತೀರಿಸುವುದಕ್ಕೆ ಮುಂದಾಗಲಾರರೆಂದು ಹೇಗೆ ಹೇಳುವುದು? ಸ್ವರಕ್ಷಣೆಯ ಪಟ್ಟುಗಳನ್ನು ಕಲಿತುಕೊಂಡ ಒಂಟಿ ಹೆಣ್ಣಿಗೆ ಪುಂಡರ ಗುಂಪು ಎದುರಾದರೆ ಏನಾಗಬಹುದು? ಏಟಿಗೆ-ಪ್ರತಿಯೇಟು ಎಂಬುದು ಎಷ್ಟರ ಮಟ್ಟಿಗೆ ಪ್ರಾಯೋಗಿಕ ಅನ್ನಿಸಬಹುದು? ‘ನಿನ್ನನ್ನು ನೀನೇ ರಕ್ಷಿಸಿಕೊ, ನೀನೇ ಸಜ್ಜುಗೊಳ್ಳು, ತೋಳು ಗಟ್ಟಿಗೊಳಿಸು.. ಎಂದೆಲ್ಲ ಹೆಣ್ಣಿಗೆ ಬೋಧಿಸುವುದು ಎಷ್ಟು ಸರಿ? ಆಕೆಯಲ್ಲಿ ಸುರಕ್ಷಿತತೆಯನ್ನು ಖಾತರಿಗೊಳಿಸುವ ಹೊಣೆಯಾರದು.. ಇಂಥ ಹತ್ತಾರು ಪ್ರಶ್ನೆಗಳನ್ನು That  Day After Every Day  ಕಿರುಚಿತ್ರ ಹುಟ್ಟು ಹಾಕುತ್ತದಾದರೂ ತೀರಾ ಅಸಹಾಯಕ ಸ್ಥಿತಿಯಲ್ಲಿ ಕರಾಟೆಯ ಪಟ್ಟುಗಳು ಹೆಣ್ಣಿಗೆ ಮಾನಸಿಕ ಬಲವನ್ನು ತಂದುಕೊಡಬಲ್ಲುದು ಅನ್ನುವುದನ್ನೂ ಒಪ್ಪಬೇಕಾಗುತ್ತದೆ. ಇದೇ ವೇಳೆ, ಪ್ರತಿ ಮೂವರಲ್ಲಿ ಇಬ್ಬರು ಪತ್ರಕರ್ತೆಯರು ಲೈಂಗಿಕ ದೌರ್ಜನ್ಯದ ಅನುಭವ ಪಡೆದಿರುತ್ತಾರೆ ಎಂದು ಕಳೆದವಾರ ಪ್ರಕಟವಾದ ಸಮೀಕ್ಷೆಯೊಂದು (ದಿ ಹಿಂದೂ ಡಿ. 4, 2013) ಬಹಿರಂಗಪಡಿಸಿದೆ. ಸಮೀಕ್ಷೆಗೆ ಒಳಪಡಿಸಿದ 822 ಪತ್ರಕರ್ತೆಯರಲ್ಲಿ 530 ಪತ್ರಕರ್ತೆಯರು ಸಂದರ್ಶಕರಿಂದ, ಬಾಸ್‍ನಿಂದ ಮತ್ತು ಕೆಲಸದ ಸಮಯದಲ್ಲಿ ದೌರ್ಜನ್ಯಕ್ಕೆ ಒಳಗಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಅತ್ಯಂತ ತಿಳುವಳಿಕೆಯಿರುವ, ಹೆಣ್ಣನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರಿರುವ ಕ್ಷೇತ್ರದಲ್ಲೇ ಇಷ್ಟು ವ್ಯಾಪಕ ಪ್ರಮಾಣದಲ್ಲಿ ದೌರ್ಜನ್ಯ ನಡೆಯುತ್ತಿದೆಯೆಂದಾದರೆ, ಅದಕ್ಕೆ ಕರಾಟೆ ಕಲಿಕೆಯು ಪರಿಹಾರವಾಗುವುದಕ್ಕೆ ಸಾಧ್ಯವೇ?
   ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ 50 ವರ್ಷಗಳ ಹಿಂದೆ ಯಾವ ಬಗೆಯ ಸಂಬಂಧ, ಸಲುಗೆ ಇತ್ತೋ ಇವತ್ತು ಹಾಗಿಲ್ಲ. ಇಂದಿನ ಮತ್ತು ಹಿಂದಿನ ಸಿನಿಮಾಗಳೇ ಇದಕ್ಕೆ ಅತ್ಯುತ್ತಮ ಪುರಾವೆ. ಆದರೆ ಬರಬರುತ್ತಾ ಅಂತರ ಕಡಿಮೆಯಾಯಿತು. ಹೆಣ್ಣನ್ನು ವ್ಯಾಖ್ಯಾನಿಸುವ ರೀತಿಗಳು ಬದಲಾದುವು. ಈ ಹಿಂದೆ ಹೆಣ್ಣಿನ ಪಾತ್ರವನ್ನು ಪುರುಷನೇ ಮಾಡುತ್ತಿದ್ದ. ಶಾಲಾ ದಿನಗಳಲ್ಲಿ ಆಕಸ್ಮಿಕವಾಗಿ ಹೆಣ್ಣಿನ ಸ್ಪರ್ಶವಾದರೂ ಅದು ಆ ದಿನದ ಬ್ರೇಕಿಂಗ್ ನ್ಯೂಸ್. ಬಳಿಕ ಹೆಣ್ಣಿನ ಪಾತ್ರವನ್ನು ಹೆಣ್ಣೇ ಮಾಡತೊಡಗಿದಳು. ಹೆಣ್ಣಿನ ಕುರಿತಂತೆ ಹೊಸ ಹೊಸ ಪರಿಕಲ್ಪನೆಗಳು, ವ್ಯಾಖ್ಯಾನಗಳು ಬರತೊಡಗಿದುವು. ಮಾರುಕಟ್ಟೆ ಆಧಾರಿತ ಜೀವನ ಶೈಲಿ ಜನಪ್ರಿಯವಾಗತೊಡಗಿದಂತೆಯೇ ಹೆಣ್ಣು ಆಕರ್ಷಕ ಜೀವಿಯಾಗತೊಡಗಿದಳು. ಮಹಿಳಾ ಸ್ವಾತಂತ್ರ್ಯದ  ಹೆಸರಲ್ಲಿ ಹೆಣ್ಣಿನ ಪ್ರಾಕೃತಿಕ ಮಿತಿಗಳನ್ನು ಮೀರುವ ಪ್ರಯತ್ನಗಳು ನಡೆದುವು. ಪುರುಷರ ಜೊತೆಗೆ ಮುಕ್ತವಾಗಿ ಬೆರೆಯುವ ವಾತಾವರಣವನ್ನು ಸಮಾನತೆ, ಸ್ವಾತಂತ್ರ್ಯ ಎಂದೆಲ್ಲಾ ಹೇಳಲಾಯಿತು. ನಿಜವಾಗಿ, ಹೆಣ್ಣು ಅನಾದಿಕಾಲದ ನಾಲ್ಕು ಗೋಡೆಗಳೊಳಗಿನ ಜೀವಿಯಾಗಿಯೇ ಈ 21ನೇ ಶತಮಾನದಲ್ಲೂ ಇರಬೇಕು ಎಂಬುದು ಖಂಡಿತ ಇಲ್ಲಿನ ಉದ್ದೇಶವಲ್ಲ. ಹೆಣ್ಣಿನ ಪಾತ್ರವನ್ನು ಪುರುಷ ಮಾಡುತ್ತಿದ್ದ ಕಾಲವೇ ಹೆಣ್ಣಿಗೆ ಉತ್ತಮ ಎಂದೂ ಹೇಳುತ್ತಿಲ್ಲ. ಆದರೆ, ಹೆಣ್ಣನ್ನು ಈ ಪುರುಷ ಜಗತ್ತಿನಲ್ಲಿ ಮುಕ್ತವಾಗಿ ಬೆರೆಯಲು ಬಿಡುವಾಗ ಅವರನ್ನು ಅಷ್ಟೇ ಗೌರವಯುತವಾಗಿ ಸ್ವೀಕರಿಸಿಕೊಳ್ಳುವುದಕ್ಕೆ ಪುರುಷರನ್ನೂ ತರಬೇತುಗೊಳಿಸಬೇಕಿತ್ತಲ್ಲವೇ? ಸಂಪೂರ್ಣ ಉಡುಪು ಧರಿಸಿದ ಮತ್ತು ಧರಿಸದ, ಫ್ಯಾಷನೇಬಲ್ ಆಗಿರುವ ಮತ್ತು ಆಗಿರದ, ಸ್ಪರ್ಶಿಸುವ ಮತ್ತು ಸ್ಪರ್ಶಿಸದ.. ಹೀಗೆ ಜಗತ್ತಿನಲ್ಲಿ ಭಿನ್ನ ರೀತಿಯಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ಪುರುಷರೆಲ್ಲ ಒಂದೇ ರೀತಿಯ ಭಾವನೆ ಇಟ್ಟುಕೊಂಡಿರುತ್ತಾರೆಂದು  ಹೇಳುವಂತಿಲ್ಲ. ಅವರ ನಗು, ಮಾತು, ಆಂಗಿಕ ಹಾವಭಾವ, ನೋಟ.. ಎಲ್ಲದರ ಬಗ್ಗೆಯೂ ಎಲ್ಲ ಪುರುಷರೂ ಒಂದೇ ಅರ್ಥವನ್ನು ಕಂಡುಕೊಳ್ಳಬೇಕಿಲ್ಲ. ಒಬ್ಬಳ ನಗು ಓರ್ವ ಪುರುಷನಿಗೆ ಸಾಮಾನ್ಯವಾಗಿ ಕಂಡರೆ ಅದೇ ನಗು ಇನ್ನೊಬ್ಬನಿಗೆ ಇನ್ನೇನೋ ಆಗಿ ಕಾಣಿಸಬಹುದು. ಅದು ವ್ಯಕ್ತಿಯ ಮನಸ್ಥಿತಿ, ಅರ್ಥೈಸುವಿಕೆಯನ್ನು ಹೊಂದಿಕೊಂಡಿರುತ್ತದೆ. ಬಹುಶಃ; ಹೆಣ್ಣನ್ನು ಆಧುನಿಕಗೊಳಿಸುವ ಧಾವಂತದಲ್ಲಿ ಎಲ್ಲರೂ ಈ ಮೂಲಪಾಠಗಳನ್ನು ಮರೆತರೆಂದೇ ಹೇಳಬೇಕು. ಹೆಣ್ಣು ಮತ್ತು ಗಂಡು ಭಾವನಾತ್ಮಕವಾಗಿ ಬೇರೆ ಬೇರೆ. ಹೆಣ್ಣಿನಲ್ಲಿ ಕಣ್ಣೀರು ತರಿಸುವ ಸಂಗತಿಗಳು ಗಂಡಿನಲ್ಲಿ ಕಣ್ಣೀರು ತರಿಸಬೇಕೆಂದಿಲ್ಲ. ಗಂಡು ಕೋಪದಿಂದ ಸಿಡಿಮಿಡಿಗೊಳ್ಳುವಾಗ ಹೆಣ್ಣು ಕೂಲಾಗಿ ಇರಬಲ್ಲಳು. ಒಂದು ವಿಷಯದ ಕುರಿತಂತೆ ಗಂಡು ಮತ್ತು ಹೆಣ್ಣಿನ ತೀರ್ಮಾನಗಳು ಬೇರೆ ಬೇರೆಯಾಗಿರುತ್ತದೆ. ಆ ವಿಷಯವನ್ನು ವಿವರಿಸುವಾಗ ಅವರಿಬ್ಬರು ವ್ಯಕ್ತಪಡಿಸುವ ಹಾವ-ಭಾವಗಳೂ ಬೇರೆ ಬೇರೆಯಾಗಿರುತ್ತದೆ. ಹೀಗಿರುವಾಗ, ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಏಕಮುಖವಾಗಿ ವ್ಯಾಖ್ಯಾನಿಸುವುದೇಕೆ? ಆಕೆಯ ಹಾವ-ಭಾವಗಳನ್ನು ತಪ್ಪಾಗಿ ಅರ್ಥೈಸದಂಥ ವಾತಾವರಣವನ್ನೂ ನಿರ್ಮಿಸಬೇಕಾದ ಅಗತ್ಯದ ಬಗ್ಗೆಯೇಕೆ ಯಾರೂ ಮಾತಾಡುತ್ತಿಲ್ಲ? ಕುಡಿತದ ಅಮಲಿನಲ್ಲಿರುವ ಸಮಾಜವು ಈ ಹೆಣ್ಣನ್ನು ಸಕಲ ಗೌರವಾದರಗಳಿಂದ ಸ್ವೀಕರಿಸುತ್ತದೆಂಬ ಭ್ರಮೆಯಲ್ಲಿ ನಾವು ಇನ್ನೂ ನಂಬಿಕೆ ಇಟ್ಟಿರುವುದೇಕೆ? ಹೆಣ್ಣನ್ನು ‘ಲಜ್ಜೆ'ಯ ಪ್ರತೀಕವಾಗಿ ಕಂಡುಕೊಂಡಿದ್ದ ಪುರುಷ ಜಗತ್ತಿಗೆ ‘ಲಜ್ಜೆ' ರಹಿತ ಹೆಣ್ಣಿನ ಪರಿಕಲ್ಪನೆಯನ್ನು ಪರಿಚಯಗೊಳಿಸಿದ್ದೇ ಆಧುನಿಕ ಮಾರುಕಟ್ಟೆ ದೊರೆಗಳು. ಅದಕ್ಕೆ ಸಮಾನತೆ, ಸ್ವಾತಂತ್ರ್ಯ, ಸಬಲೀಕರಣ.. ಎಂಬೆಲ್ಲ ಹೆಸರನ್ನು ಕೊಟ್ಟದ್ದೂ ಅವರೇ. ಸಿನಿಮಾಗಳ ಮೂಲಕ ಇದನ್ನು ಪ್ರಚಾರಗೊಳಿಸಿದರು. ಹೆಣ್ಣನ್ನು ಆಕರ್ಷಣೆಯ ಪರ್ಯಾಯ ಪದವಾಗಿ ಬಳಸತೊಡಗಿದರು. ಆಕೆಯ ನಗು, ಕಣ್ಣು, ಮೂಗು, ದೇಹ ರಚನೆ, ಸೌಂದರ್ಯ, ತೂಕ.. ಎಲ್ಲವನ್ನೂ ಪುರುಷರ ಆರಾಧ್ಯ ಭಾಗವಾಗಿ ಪರಿಚಯಿಸಿದರು. ಅವುಗಳಿಗಾಗಿ ಪುರುಷರು ಆಸೆ ಪಡುವಂತಹ ವಾತಾವರಣವನ್ನು ವಿವಿಧ ಮಾಧ್ಯಮಗಳ ಮೂಲಕ ಪ್ರಚಾರಕ್ಕೆ ತಂದರು. ಒಂದು ವೇಳೆ, ಮಹಿಳಾ ಸಮಾನತೆ, ಸ್ವಾತಂತ್ರ್ಯದ ವ್ಯಾಖ್ಯಾನsವನ್ನು ‘ಲಜ್ಜೆ' ಸಹಿತವಾಗಿ ಮಾಡಿರುತ್ತಿದ್ದರೆ ಮತ್ತು ಆ ‘ಲಜ್ಜೆ'ಯ ವ್ಯಾಪ್ತಿಯಲ್ಲಿ ಇದ್ದುಕೊಂಡೇ ಪುರುಷನಿಗೆ ಸಮಾನವಾಗಿ ಎಲ್ಲ ಕ್ಷೇತ್ರ ಗಳಲ್ಲೂ ಆಕೆ ತೊಡಗಿಸಿಕೊಳ್ಳುವಂತಹ ವಾತಾವರಣವನ್ನು ಬೆಳೆಸಿರುತ್ತಿದ್ದರೆ ಇವತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಖಂಡಿತ ಈ ಮಟ್ಟದಲ್ಲಿ ಸುದ್ದಿ ಮಾಡುತ್ತಿರಲಿಲ್ಲ. ಆದ್ದರಿಂದಲೇ,
   ‘ನಿನ್ನನ್ನು ನೀನೇ ರಕ್ಷಿಸಿಕೋ..' ಎಂದು ಸಾರುವ ದಾಟ್  ಡೇ ಆಫ್ಟರ್ ಎವರಿ ಡೇ ಕಿರುಚಿತ್ರದ ಸಂದೇಶವು ಸಮಾಜವನ್ನು ವ್ಯಂಗ್ಯವಾಗಿ ಇರಿಯುವಂತೆ ಕಾಣುತ್ತದೆ. ಹೆಣ್ಣನ್ನು ಲಜ್ಜೆರಹಿತಳನ್ನಾಗಿ ಮಾಡಿ ಆಕೆಯನ್ನು ಸರ್ವ ಆಕ್ರಮಣಕ್ಕೂ ತೆರೆದಿಟ್ಟವರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವಂತೆ ತೋರುತ್ತದೆ.

Monday, December 2, 2013

ಕಳೆದು ಹೋದ ನೆಮ್ಮದಿಯನ್ನು ಮರಳಿಸಿ ಅಂದರೆ ಏನು ಮಾಡಬಲ್ಲೆವು?

   “..ಆರುಷಿ ತಲ್ವಾರ್ ಮತ್ತು ಶಂಕರರಾಮನ್ ಹತ್ಯಾ ಪ್ರಕರಣಗಳ ಕುರಿತಂತೆ ಈ ವಾರ ಎರಡು ತೀರ್ಪುಗಳು ಹೊರಬಿದ್ದುವು. ಆರುಷಿ ತಲ್ವಾರ್ ಪ್ರಕರಣದಲ್ಲಿ, ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಗಳನ್ನು ಪರಿಗಣಿಸಿ ಆರುಷಿಯ ಹೆತ್ತವರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಿತು. ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ  ನೀಡಿದುದರಿಂದ ಆರೋಪಿ ಗಳನ್ನು ಖುಲಾಸೆಗೊಳಿಸಲಾಯಿತು. ಆರುಷಿಯ ಕೊಲೆಯು ಮನೆಯೊಳಗೆ ನಡೆದಿದ್ದರೆ ಶಂಕರರಾಮನ್‍ರ ಹತ್ಯೆಯು ಪ್ರಸಿದ್ಧ ಕಾಂಚಿ ಪುರಮ್ ದೇವಾಲಯದ ಆವರಣದಲ್ಲಿ ನಡೆದಿತ್ತು. ಬಹುಶಃ, ಕೋರ್ಟು ಕಲಾಪದಲ್ಲಿ ಹಣ ಬಲ ಮತ್ತು ವ್ಯಕ್ತಿ ಪ್ರಭಾವವು ಪರಿಣಾಮ ಬೀರಬಲ್ಲುದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ..”
   ಚೆನ್ನೈನ ಪಾರ್ಥಸಾರಥಿ ಎಂಬವರು ದಿ ಹಿಂದೂ ಪತ್ರಿಕೆಯಲ್ಲಿ ನ. 30ರಂದು ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದಿರುವವರು ಖಂಡಿತ ಇದ್ದಾರೆ. ‘ಸತ್ಯ ಗೆದ್ದಿದೆ, ಧರ್ಮ ಜಯಶಾಲಿಯಾಗಿದೆ..' ಎಂದು ನ. 28ರ ಪತ್ರಿಕೆಗಳಲ್ಲಿ ಪ್ರಕಟವಾದ ಒಂದು ಪುಟದ ಜಾಹೀರಾತಿನಲ್ಲಿ ಜಯೇಂದ್ರ ಸರಸ್ವತಿಯವರು ಹೇಳಿಕೊಂಡಾಗ, ‘ಸತ್ಯಕ್ಕೆ ಸೋಲಾಗಿದೆ' ಎಂದು ತಲ್ವಾರ್ ದಂಪತಿಗಳು ಘೋಷಿಸಿದರು. ಒಂದು ಕಡೆ ಸಿಹಿ ಹಂಚಿಕೆ ನಡೆಯಿತು. ಇನ್ನೊಂದು ಕಡೆ ಕಣ್ಣೀರು ಹರಿಯಿತು. ‘ಮಧ್ಯ ವಯಸ್ಸನ್ನು ದಾಟಿದ ಮತ್ತು ಬಿಳಿಗಡ್ಡದ ರಾಜೇಶ್ ತಲ್ವಾರ್‍ರಲ್ಲಿ ಇಬ್ಬರನ್ನು ಒಂದೇ ಏಟಿಗೆ ಕೊಲ್ಲುವ ಸಾಮಥ್ರ್ಯ ಇದೆಯೇ? ಹೇಮರಾಜ್‍ನನ್ನು ಕೊಲ್ಲುವಾಗ ಅಥವಾ ಆರುಷಿಯನ್ನು ಕೊಲ್ಲುವಾಗ ಅವರಿಬ್ಬರಿಂದ ಯಾವ ಪ್ರತಿರೋಧಗಳೂ ಎದುರಾಗಿಲ್ಲವೇ? ಒಬ್ಬರನ್ನು ಕೊಲ್ಲುವಾಗ ಇನ್ನೊಬ್ಬರು ತಮ್ಮ ಸರದಿಗಾಗಿ ಕಾಯುತ್ತಾ ನಿಂತರೇ..’ ಎಂಬ ಪ್ರಶ್ನೆಗಳಿಂದ ಹಿಡಿದು ಹತ್ತು-ಹಲವು ಬಗೆಯ ಅನುಮಾನಗಳು ಮಾಧ್ಯಮಗಳಲ್ಲೂ ಸಾರ್ವಜನಿಕರಲ್ಲೂ ಕಾಣಿಸಿಕೊಂಡವು. ಕೇವಲ ಊಹೆಗಳ ಆಧಾರದಲ್ಲಿ ಅಥವಾ ಸಾಂದರ್ಭಿಕ ಪುರಾವೆಗಳನ್ನು ಮುಂದಿಟ್ಟುಕೊಂಡು ಶಿಕ್ಷೆ ಕೊಡುವ ಕ್ರಮ ತಪ್ಪು ಅನ್ನಲಾಯಿತು. ಅದೇ ವೇಳೆ, ‘ಜಯೇಂದ್ರ ಸರಸ್ವತಿ ಸಹಿತ ಎಲ್ಲ 23 ಆರೋಪಿಗಳೂ ನಿರಪರಾಧಿಗಳು ಎಂದಾದರೆ, ಶಂಕರರಾಮನ್‍ರನ್ನು ಕೊಂದವರು ಯಾರು..’ ಎಂಬ ಪ್ರಶ್ನೆಯನ್ನು ಮಾಧ್ಯಮಗಳಲ್ಲಿ ಅನೇಕರು ಎತ್ತಿದರು. ದೃಕ್‍ಸಾಕ್ಷ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳ ತಪ್ಪು-ಒಪ್ಪುಗಳು ಚರ್ಚೆಗೀಡಾದುವು. ಪ್ರಕರಣವೊಂದನ್ನು ಬೇರೆ ಬೇರೆ ನ್ಯಾಯಾಧೀಶರುಗಳು ನೋಡುವ ವಿಧಾನ, ದೃಕ್‍ಸಾಕ್ಷ್ಯಗಳನ್ನು ಬಲವಾಗಿ ನೆಚ್ಚಿಕೊಳ್ಳುವವರು ಮತ್ತು ಸನ್ನಿವೇಶವನ್ನು ನೋಡಿಕೊಂಡು ತೀರ್ಮಾನಿಸುವವರು, ಅದರ ಸಾಧಕ-ಬಾಧಕಗಳು.. ಎಲ್ಲವೂ ಚರ್ಚೆಗೆ ಬಂದುವು.
ಶಂಕರರಾಮನ್
ಆರುಷಿ
   ಈ ಎರಡೂ ಹೆಸರುಗಳು ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೆ ಒಳಗಾಗಿದೆ. ತಮಿಳುನಾಡಿನ ಕಾಂಚಿಪುರದ ಶ್ರೀ ವರದ ರಾಜ ದೇವಸ್ಥಾನದ ವ್ಯವಸ್ಥಾಪಕ ಶಂಕರರಾಮನ್‍ರು 2004 ಸೆ. 3ರಂದು ದೇವಾಲಯದ ಆವರಣದಲ್ಲಿ ಕೊಲೆಯಾಗಿ ಪತ್ತೆಯಾಗುವುದಕ್ಕಿಂತ ಮೊದಲೇ ಅವರು ಕಾಂಚಿ ಶ್ರೀಗಳ ವಿರುದ್ಧ ಹಣಕಾಸು ಅವ್ಯವಹಾರದ ಆರೋಪ ಹೊರಿಸಿದ್ದರು. ರಾಮನ್‍ರ ಪತ್ನಿ ಪದ್ಮ ಮತ್ತು ಮಗ ಆನಂದ ಶರ್ಮಾ ಸೇರಿದಂತೆ ಕುಟುಂಬ ಸದಸ್ಯರು ಕೊಲೆ ಆರೋಪವನ್ನು  ಕಂಚಿಶ್ರೀಗಳ ಮೇಲೆ  ಹೊರಿಸಿದರು. 2004 ನ. 11ರಂದು ಹಿರಿಯ ಶ್ರೀಗಳಾದ ಜಯೇಂದ್ರ ಸರಸ್ವತಿ ಮತ್ತು 2005 ಜನವರಿ 10ರಂದು ಕಿರಿಯ ಶ್ರೀಗಳನ್ನು ಬಂಧಿಸಲಾಯಿತು. ಜಯಲಲಿತಾರ ಅಧಿಕಾರಾವಧಿಯಲ್ಲಿ ನಡೆದ ಈ ಬಂಧನ ಕ್ರಮವು ದೇಶದಾದ್ಯಂತ ಕುತೂಹಲಕ್ಕೆ ಕಾರಣವಾಗಿತ್ತು. 8 ವರ್ಷಗಳಲ್ಲಿ ಮೂವರು ನ್ಯಾಯಾಧೀಶರು ಈ ಪ್ರಕರಣದ ವಿಚಾರಣೆ ನಡೆಸಿದರು. ಶಂಕರರಾಮನ್‍ರ ಪತ್ನಿ, ಮಗ ಸಹಿತ 189 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಯಿತು. ಆದರೆ ವಿಚಾರಣೆಯ ವೇಳೆ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದರು. ಈ ಮೊದಲು ಪೆರೇಡ್‍ನಲ್ಲಿ ಆರೋಪಿಗಳನ್ನು ಗುರುತಿಸಿದ್ದ ಸಾಕ್ಷಿಗಳೇ ಕೋರ್ಟ್‍ನಲ್ಲಿ ನ್ಯಾಯಾಧೀಶರ ಎದುರು ಅವರನ್ನು ಗುರುತಿಸಲು ವಿಫಲರಾದರು. ಇದನ್ನೇ ನೆಪವಾಗಿಸಿ ಕೋರ್ಟು ಎಲ್ಲ ಆರೋಪಿಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಆರುಷಿ ಪ್ರಕರಣ ಹಾಗಲ್ಲ. 2008 ಮೇ 16ರಂದು ಹತ್ಯೆಗೀಡಾದ ದಿನದಿಂದಲೂ ಈ ಹುಡುಗಿ ಮಾಧ್ಯಮಗಳಲ್ಲಿ ಧಾರಾಳ ಚರ್ಚೆಗೊಳಗಾಗಿದ್ದಾಳೆ. ಮಾಧ್ಯಮಗಳು ಹತ್ತು-ಹಲವು ಕತೆಗಳನ್ನು ಈ ಹುಡುಗಿಯ ಸುತ್ತ ಹೆಣೆದಿವೆ. ನ್ಯಾಯ ಮೂರ್ತಿ ಅಲ್ತಮಶ್ ಕಬೀರ್ ಮತ್ತು ಮಾರ್ಕಾಂಡೇಯ ಕಾಟ್ಜು ಅವರನ್ನೊಳಗೊಂಡ ನ್ಯಾಯಾಂಗ ಪೀಠವು 2008 ಜುಲೈ 22ರಂದು ಈ ಬಗ್ಗೆ ಮಾಧ್ಯಮಗಳನ್ನು ತರಾಟೆಗೂ ತೆಗೆದುಕೊಂಡಿದ್ದರು. ತಲ್ವಾರ್ ಕುಟುಂಬದ ವಿರುದ್ಧ ನಿರಾಧಾರ ಕತೆಗಳನ್ನು ಹೆಣೆಯಬೇಡಿ ಎಂದಿದ್ದರು. ಬಾಲಾಜಿ ಟೆಲಿಫಿಲ್ಮ್ ಸಂಸ್ಥೆಯು 2008ರಲ್ಲಿ ಆರುಷಿಯ ಸುತ್ತ ಚಿತ್ರ ನಿರ್ಮಾಣ ಮಾಡಲು ಮುಂದಾದಾಗ, ಮಕ್ಕಳ ರಕ್ಷಣೆಗಿರುವ ರಾಷ್ಟ್ರೀಯ ಆಯೋಗಕ್ಕೆ  ನೂಪುರ್ ತಲ್ವಾರ್ ದೂರು ಕೊಟ್ಟಿದ್ದರು. ಟೆಲಿಫಿಲ್ಮ್ ಮಾಡದಂತೆ ತಡೆಯಬೇಕೆಂದು ಕೋರಿದ್ದರು. 2012ರಲ್ಲಿ ಜೈಲಿ ನಲ್ಲಿದ್ದಾಗ, ‘ಅರುಷಿ ಹತ್ಯೆಯ ಹಿಂದಿನ ರಹಸ್ಯ: ದುರದೃಷ್ಟವಂತ ತಾಯಿಯೋರ್ವಳ ಕತೆ..' ಎಂಬ ಹೆಸರಲ್ಲಿ ನೂಪುರ್ ತಲ್ವಾರ್ ಪುಸ್ತಕ ಬರೆಯಲು ಮುಂದಾದಾಗ ಪೊಲೀಸರು ಅವರನ್ನು ತಡೆದಿದ್ದರು. ಅವರ ಜೈಲು ಕೊಠಡಿಯಿಂದ 17 ಪುಟಗಳ ಬರಹವನ್ನು ವಶಪಡಿಸಿಕೊಂಡಿದ್ದರು. ವಿಚಾರಣೆಯ ಹಂತದಲ್ಲಿರುವ ಪ್ರಕರಣದ ಬಗ್ಗೆ ಬರೆಯುವ ಮೊದಲು ನ್ಯಾಯಾಲಯದ ಅನುಮತಿ ಪಡೆಯಬೇಕಾಗುತ್ತದೆ ಎಂಬುದು ಪೊಲೀಸರ ವಾದವಾಗಿತ್ತು. ಇದಲ್ಲದೇ, ರಾಜೇಶ್ ತಲ್ವಾರ್‍ರ ಸಹೋದರಿ ವಂದನಾ ತಲ್ವಾರ್ ಮತ್ತು ಗೆಳೆಯರು, ತಲ್ವಾರ್ ದಂಪತಿಗಳ ಪರ ಆನ್‍ಲೈನ್ ಅಭಿಯಾನವನ್ನೇ ಆರಂಭಿಸಿದ್ದರು. ವೆಬ್‍ಸೈಟ್, ಫೇಸ್‍ಬುಕ್ ಮತ್ತು ಟ್ವಿಟರ್ ಅಕೌಂಟ್‍ಗಳನ್ನು ಆರಂಭಿಸಿ, ತಲ್ವಾರ್ ದಂಪತಿಗಳ ಮುಗ್ಧತನವನ್ನು ಪ್ರಚಾರ ಮಾಡುತ್ತಿದ್ದರು.
   ಆದ್ದರಿಂದಲೇ, ಒಂದು ಪ್ರಕರಣದ ಬಗ್ಗೆ ತೀರ್ಪು ಕೊಡುವುದ ಕ್ಕಿಂತ ಮೊದಲು ನ್ಯಾಯಾಧೀಶರು ಯಾವೆಲ್ಲ ಎಚ್ಚರಿಕೆಗಳನ್ನು ಕೈಗೊಳ್ಳಬೇಕು, ಸಾಂದರ್ಭಿಕ ಸಾಕ್ಷ್ಯ ಮತ್ತು ದೃಕ್‍ಸಾಕ್ಷ್ಯಗಳಲ್ಲಿ ಯಾವುದಕ್ಕೆ ಮಹತ್ವ ಕೊಡಬೇಕು, ಒಂದು ವೇಳೆ ದೃಕ್‍ಸಾಕ್ಷ್ಯಗಳಗಳ ಅನುಪಸ್ಥಿತಿಯಲ್ಲಿ ಸಾಂದರ್ಭಿಕ ಸಾಕ್ಷ್ಯಗಳನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಬಹುದು.. ಎಂಬೆಲ್ಲ ಚರ್ಚೆಗಳಿಗೆ ಶಂಕರರಾಮನ್ ಮತ್ತು ಆರುಷಿ ಪ್ರಕರಣಗಳು ಇವತ್ತು ಕಾರಣವಾಗಿವೆ.
   ಅಂದಹಾಗೆ, ಬಲವಾದ ಪುರಾವೆಗಳಿಲ್ಲದೇ ತಲ್ವಾರ್ ದಂಪತಿ ಗಳನ್ನು ಶಿಕ್ಷಿಸಲು ಸಾಧ್ಯವೆಂದಾದರೆ, ಶಂಕರರಾಮನ್ ಪ್ರಕರಣದಲ್ಲಿ ಪ್ರಮುಖ 20 ಸಾಕ್ಷಿಗಳು ತಿರುಗಿ ಬಿದ್ದದ್ದನ್ನೂ ಗಂಭೀರವಾಗಿ ಪರಿಗಣಿಸಬಹುದಲ್ಲವೇ? ಪ್ರಕರಣದ ಆರಂಭದಲ್ಲಿ ಈ ಎಲ್ಲ ಸಾಕ್ಷಿಗಳು ಶ್ರೀಗಳ ವಿರುದ್ಧ ಸಾಕ್ಷಿ ನುಡಿದಿದ್ದರು. ಪೊಲೀಸರ ಸಮ್ಮುಖದಲ್ಲಿ ಆರೋಪಿಗಳ ಗುರುತು ಹಿಡಿದಿದ್ದರು. ಆ ಬಳಿಕ 8 ವರ್ಷಗಳ ದೀರ್ಘ ಅವಧಿ ವರೆಗೆ ವಿಚಾರಣೆ ಮುಂದುವರಿಯಿತು. ಬಳಿಕ ಸಾಕ್ಷಿಗಳು ತಮ್ಮ ಈ ಹಿಂದಿನ ಸಾಕ್ಷ್ಯವನ್ನೇ ಅಲ್ಲಗಳೆದರು. ಆರೋಪಿಗಳ ಪರಿಚಯವಿಲ್ಲ ಅಂದರು. ನಿಜವಾಗಿ, ಈ ಸಾಕ್ಷಿಗಳು ಈ ಮೊದಲು ಏನು ಹೇಳಿದ್ದರು ಎಂಬುದು ನ್ಯಾಯಾಧೀಶರಿಗೆ ಗೊತ್ತಿಲ್ಲ ಎಂದಲ್ಲ. ಆದರೂ ಅವರು ಈ ನಿಲುವನ್ನು ಪುರಾವೆಯಾಗಿ ಪರಿಗಣಿಸಿ ಆರೋಪಿಗಳನ್ನು ಬಿಡುಗಡೆಗೊಳಿಸಿದರು. ಆದರೆ, ಇದೇ ಉದಾರ ನಿಲುವು ಅರುಷಿ ಪ್ರಕರಣದಲ್ಲಿ ಕಾಣಿಸಿಯೇ ಇಲ್ಲ. ಅಲ್ಲಿನ ತೀರ್ಪಿಗೆ ಆಧಾರವಾಗಿರುವುದು ಸಾಂದರ್ಭಿಕ ಸಾಕ್ಷ್ಯಗಳು. ‘ಈ ದಂಪತಿಗಳಲ್ಲದೇ ಇನ್ನಾರೂ ಕೊಲೆ ಮಾಡಲು ಸಾಧ್ಯವಿಲ್ಲ..' ಎಂಬ ಊಹೆ ಆಧಾರಿತ ನಿಲುವುಗಳು. ತಿರುಗಿಬಿದ್ದ ಸಾಕ್ಷ್ಯಗಳನ್ನು ಪುರಸ್ಕರಿಸುವ ನ್ಯಾಯಾಲಯ ಒಂದು ಕಡೆಯಾದರೆ, ಸಾಂದರ್ಭಿಕ ಸಾಕ್ಷ್ಯವನ್ನೇ ನೆಚ್ಚಿಕೊಂಡು ಜೀವಾವಧಿ ಶಿಕ್ಷೆ ವಿಧಿಸುವ ನ್ಯಾಯಾಲಯ ಇನ್ನೊಂದು ಕಡೆ. ವಿಕಿಪೀಡಿಯಾದಲ್ಲಿ ಆರುಷಿ ಪ್ರಕರಣದ ಬಗ್ಗೆ ಸಾಕಷ್ಟು ಮಾಹಿತಿಗಳಿವೆ. ಮನೆಯ ನಕ್ಷೆಯನ್ನು ತೋರಿಸಿ ಒಟ್ಟು ಪ್ರಕರಣ ಹೇಗೆ ನಡೆದಿರಬಹುದು ಎಂದೆಲ್ಲಾ ವಿವರಿಸುವ ಪ್ರಯತ್ನಗಳು ಅಲ್ಲಿ ನಡೆದಿವೆ. ರಾಜೇಶ್ ತಲ್ವಾರ್‍ರು ಗಾಲ್ಫ್ ಸ್ಟಿಕ್‍ನಿಂದ ಹೇಮರಾಜ್‍ಗೆ ಮೊದಲು ಏಟು ಕೊಟ್ಟು ಎರಡನೇ ಬಾರಿಯ ಏಟನ್ನು ಆತ ತಪ್ಪಿಸುವಾಗ ಆ ಏಟು ಆರುಷಿಗೆ ಬಿದ್ದಿರಬಹುದು ಎಂದೆಲ್ಲಾ ಊಹಿಸಲಾಗಿದೆ. ಹೇಮ್‍ರಾಜ್‍ರ ಮೊಬೈಲ್ ಫೋನ್ ಈ ವರೆಗೂ ಪತ್ತೆಯಾಗಿಲ್ಲ. ಆರುಷಿಯ ಮೊಬೈಲ್ ಪತ್ತೆಯಾಗಿದ್ದರೂ ಅದರಿಂದ ಹೆಚ್ಚಿನ ಪ್ರಯೋಜನವಾಗಿಲ್ಲ. ಅಷ್ಟಕ್ಕೂ, ಅತ್ಯಂತ ಬುದ್ಧಿವಂತಿಕೆಯಿಂದ ಈ ಕೊಲೆಯನ್ನು ಮಾಡಲಾಗಿದೆ ಎಂಬ ಕಾರಣಕ್ಕಾಗಿ ಆ ಕೊಲೆಯ ಹೊಣೆಯನ್ನು ಹೆತ್ತವರ ಮೇಲೆಯೇ ಹೊರಿಸಬೇಕೆಂದಿಲ್ಲವಲ್ಲ. ಅಪರಾಧವು ಸಂಶಯಾತೀತವಾಗಿ ಸಾಬೀತಾಗದೇ ಶಿಕ್ಷಿಸುವ ಕ್ರಮ ರೂಢಿಗೆ ಬಂದರೆ ಏನಾದೀತು? ನಿರಪರಾಧಿಗಳು ಶಿಕ್ಷೆಗೆ ಒಳಗಾಗದಂತೆ ಗರಿಷ್ಠ ಪ್ರಯತ್ನಿಸಬೇಕಾದುದು ನ್ಯಾಯಾಲಯಗಳ ಹೊಣೆಗಾರಿಕೆಯಲ್ಲವೇ? ಕಂಚಿಶ್ರೀಗಳ ಪ್ರಕರಣದಲ್ಲಿ ನ್ಯಾಯಾಲಯ ತೋರಿದ ವಿಶಾಲತೆಯನ್ನು ಆರುಷಿ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೋರದಿರುವುದನ್ನು ಹೇಗೆ ವಿಶ್ಲೇಷಿಸಬಹುದು?
   ಕೊಲೆ ಆರೋಪವನ್ನು ಹೊತ್ತು ಕೊಳ್ಳುವುದು ಸಣ್ಣ ಸಂಗತಿಯಲ್ಲ. ಅದರಲ್ಲೂ ತನ್ನ ಮಗಳನ್ನೇ ಕೊಂದ ಆರೋಪವನ್ನು ಹೊತ್ತು ಕೊಂಡು ಜೈಲು ಸೇರುವ ಸಂದರ್ಭ ಅತ್ಯಂತ ದಯನೀಯವಾದದ್ದು. ಒಂದು ಕಡೆ, ತಲ್ವಾರ್ ದಂಪತಿಗಳಿಗೆ ಇರುವ ಏಕೈಕ ಮಗಳೇ ಕಳೆದು ಹೋಗಿದ್ದಾಳೆ. ಇನ್ನೊಂದು ಕಡೆ, ಕೊಲೆಗಾರರು ಎಂಬ ಹಣೆಪಟ್ಟಿ ಸಿಕ್ಕಿದೆ. ಆ ಮೂಲಕ ಇರುವ ಘನತೆ, ಗೌರವಗಳೂ ಮಣ್ಣು ಪಾಲಾಗಿವೆ. ಇದು ಕೇವಲ ತಲ್ವಾರ್ ದಂಪತಿಯೋರ್ವರ ಸಮಸ್ಯೆಯಲ್ಲ. ಆರೇಳು ತಿಂಗಳುಗಳ ವರೆಗೆ ಜೈಲಲ್ಲಿ ಕಳೆದ ಕಂಚಿಶ್ರೀಗಳಿಗೂ ಇದು ಅನ್ವಯವಾಗುತ್ತದೆ. ಅವರು ತಪ್ಪೇ ಮಾಡಿಲ್ಲವೆಂದ ಮೇಲೆ ಅವರು ಬಂಧನದ ಸಂದರ್ಭದಲ್ಲಿ ಅನುಭವಿಸಿದ ಮಾನಸಿಕ ನೋವು, ಅವಮಾನಗಳಿಗೆ ಯಾರು ಹೊಣೆ? ಈಗಿನ ತೀರ್ಪಿನಿಂದ ಅದನ್ನು ಅವರಿಗೆ ಮರಳಿಸಲು ಸಾಧ್ಯವೇ?
   ‘ಸತ್ಯಕ್ಕೆ ಸೋಲಾಗಿದೆ..’ ಎನ್ನುತ್ತಾ ಜೈಲಿನೊಳಗೆ ಹೋದ ತಲ್ವಾರ್ ದಂಪತಿಗಳು ಮತ್ತು ‘ಸತ್ಯ ಗೆದ್ದಿದೆ’ ಅನ್ನುವ ಜಾಹೀ ರಾತು ಕೊಟ್ಟ ಕಂಚಿಶ್ರೀಗಳನ್ನು ನೋಡುವಾಗ ಮನಸು ಗೊಂದಲಕ್ಕೆ ಒಳಗಾಗುತ್ತದೆ. ಸತ್ಯಕ್ಕೆ ಸೋಲಾಗದಿರಲಿ ಅನ್ನಿಸುತ್ತದೆ.

Tuesday, November 26, 2013

ಆರೋಪಿಗಳನ್ನು ಸನ್ಮಾನಿಸುವ ಮೊದಲು 'ಲೀಲಾ'ರನ್ನು ನೆನಪಿಸಿಕೊಳ್ಳಿ ಮೋದಿಯವರೇ

    "..ನರೇಂದ್ರ ಮೋದಿಯವರ ಮೇಲೆ ಭರವಸೆ ಇಟ್ಟಿರುವ ಅನೇಕರಲ್ಲಿ ನಾನೂ ಒಬ್ಬ. ಅವರ ನೇತೃತ್ವದಲ್ಲಿ ಈ ದೇಶ ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಕಾಣಲಿ ಎಂದು ಪ್ರಾಮಾಣಿಕವಾಗಿ ಆಶಿಸಿದವನು ನಾನು. ಆದರೆ ಅವರ ‘ನಮೋ ಬೆಂಬಲಿಗರು’ ತಾಲಿ ಬಾನಿಗಳಂತೆ ವರ್ತಿಸುತ್ತಿದ್ದಾರೆ. ಕ್ರಿಮಿನಲ್‍ಗಳನ್ನು ಬೆಂಬಲಿಸುತ್ತಿದ್ದಾರೆ. ಇದು ನನ್ನನ್ನು ತೀವ್ರ ಆಘಾತಕ್ಕೆ ಒಳಪಡಿಸಿದೆ. ಮಾತ್ರವಲ್ಲ, ನನ್ನ ನಿಲುವನ್ನು ಮತ್ತೊಮ್ಮೆ ಪರಾಮರ್ಶಿಸುವಂತೆ ಮಾಡಿದೆ. ಅನ್ಯಾಯವನ್ನು ಬೆಂಬಲಿಸುವ ಮತ್ತು ವೈಭವೀಕರಿಸುವ ಧೋರಣೆಯನ್ನು ನಾನೆಂದೂ ಸಹಿಸಲಾರೆ..
ಲೀಲಾ
        ರೋಮೋ ಪಿಂಟೋ  ಮಂಗಳೂರು
 ಹೋಮ್‍ಸ್ಟೇ ಮೇಲಿನ ದಾಳಿಯ ಆರೋಪದಲ್ಲಿ ಬಂಧಿತರಾದವರನ್ನು ಸನ್ಮಾನಿಸುವುದೇ? ಇದು ಹೇಗೆಂದರೆ, ಕಸಬ್ ಮತ್ತು ಉಸಾಮಾಗೆ ನೋಬೆಲ್ ಕೊಟ್ಟಂತೆ. ಆರೋಪಿಗಳನ್ನು ಸನ್ಮಾನಿಸುವ ಇಂಥ ನಾಯಕರು ನಮ್ಮಲ್ಲಿರುವಾಗ, ಪಾಕಿಸ್ತಾನದ ಭಯೋತ್ಪಾದಕರಿಗೆ ಕೆಲಸವಾದರೂ ಏನಿದೆ? ಅವರು ತಮ್ಮ ತಮ್ಮ ಹೊಣೆಗಾರಿಕೆಗಳಿಗೆ ರಾಜೀನಾಮೆ ನೀಡಬಹುದು. ಯಾಕೆಂದರೆ, ಇವರಿರುವಾಗ ಭಾರತವನ್ನು ಧ್ವಂಸ ಮಾಡುವುದಕ್ಕೆ ಅವರ ಅಗತ್ಯವೇ ಇಲ್ಲ. ಭಾರತದ ರಾಜಕೀಯ ನಾಯಕರು; ಭ್ರಷ್ಟಾ ಚಾರ, ಹತ್ಯಾಕಾಂಡ ಮತ್ತು ಇಂಥ ಕೃತ್ಯಗಳ ಮೂಲಕ ದೇಶವನ್ನು ಈಗಾಗಲೇ ಧ್ವಂಸ ಮಾಡುತ್ತಿದ್ದಾರೆ..
        ದೀಪಕ್ ಕುಮಾರ್       
 ನಮೋ ಭಾರತ್- ಸಮಾಜದ ಪಾಲಿಗೆ ಎಷ್ಟೊಂದು ಅಪಾಯಕಾರಿ ಎಂಬುದು ಈ ಸನ್ಮಾನ ಹೇಳಿಕೆಯಿಂದ ಸ್ಪಷ್ಟವಾಗುತ್ತದೆ. ಹೀಗಿರುವಾಗ, ಇವರ ನಾಯಕ ಮೋದಿ ಪ್ರಧಾನಿಯಾದರೆ ಏನಾದೀತು? ಅವರು ಯಾವ ರೀತಿಯ ಆಡಳಿತವನ್ನು ನೀಡಬಲ್ಲರು? ನಮೋ ಭಾರತ್‍ಗೆ ಕೃತಜ್ಞತೆಗಳು. ಯಾಕೆಂದರೆ, ನೀವೇ ನಿಮ್ಮ ಮುಖವನ್ನು ಅನಾವರಣಗೊಳಿಸಿದ್ದೀರಿ.
        ವಿನ್ಸೆಂಟ್ ರಾಡ್ರಿಗಸ್ ಬೆಂಗಳೂರು
 2013 ಅಕ್ಟೋಬರ್ 22ರಂದು ದಾಯ್ಜಿ ವರ್ಲ್ಡ್  ಡಾಟ್ ಕಾಮ್‍ನಲ್ಲಿ ಪ್ರಕಟವಾದ ಸುದ್ದಿಯೊಂದಕ್ಕೆ ಹರಿದು ಬಂದ ನೂರಾರು ಪ್ರತಿಕ್ರಿಯೆಗಳಲ್ಲಿ ಮೂರಷ್ಟೇ ಇಲ್ಲಿವೆ. ಆ ಸುದ್ದಿ ಹೀಗಿತ್ತು:
    ‘.. ಹೋಮ್‍ಸ್ಟೇ ದಾಳಿ ಪ್ರಕರಣದ ಆರೋಪಿಗಳನ್ನು 2013ರ ನವೆಂಬರ್ ಮೊದಲ ವಾರದಲ್ಲಿ ಸನ್ಮಾನಿಸಲಾಗುವುದೆಂದು ನಮೋ ಭಾರತ್‍ನ ಮುಖ್ಯಸ್ಥ ಡಾ| ಪ್ರಸಾದ್ ಭಂಡಾರಿ ಹೇಳಿದ್ದಾರೆ..
   ಏನು ಹೇಳುತ್ತೀರಿ ಈ ಮನಸ್ಥಿತಿಗೆ? ಸನ್ಮಾನ ಎಂಬ ಪದಕ್ಕೆ ಡಿಕ್ಷ್ ನರಿಯಲ್ಲಿ ‘ವಿಶೇಷವಾದ ಗೌರವ', ಪುರಸ್ಕಾರ.. ಎಂಬಿತ್ಯಾದಿ ಅರ್ಥಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಹೋಮ್ ಸ್ಟೇಯ ಮೇಲೆ 2012ರ ಜುಲೈಯಲ್ಲಿ ನಡೆದ ದಾಳಿಯನ್ನು ‘ಗೌರವಾರ್ಹ' ಎಂದು ನಮೋ ಭಾರತ್ ಪರಿಗಣಿಸಿರುವುದು ಯಾವುದರ ಆಧಾರದಲ್ಲಿ? ಯಾವುದೇ ಒಂದು ಪ್ರಕರಣವನ್ನು ಗೌರವಾರ್ಹ ಅಥವಾ ಖಂಡನಾರ್ಹ ಎಂದು ವಿಭಜಿಸುವುದಕ್ಕೆ ಮಾನದಂಡಗಳು ಇರಬೇಕಲ್ಲ, ಅವು ಯಾವುವು? ಹೆಣ್ಣು ಮಕ್ಕಳ ಮೇಲೆ ಕೈ ಮಾಡುವುದೇ? ಅವರನ್ನು ನಗ್ನಗೊಳಿಸುವುದೇ? ಇಡೀ ದೇಶವೇ ಖಂಡಿಸಿದ, ಛೀ, ಥೂ.. ಅಂದ ದಾಳಿಕೋರರನ್ನು ನಮೋ ಭಾರತ್ ಗೌರವಾರ್ಹರು ಎನ್ನುವುದಾದರೆ, ಈ ಭಾರತದಲ್ಲಿ ಹೆಣ್ಣು ಮಕ್ಕಳ ಗತಿಯೇನು? ಸಂಸ್ಕøತಿಯ ವ್ಯಾಖ್ಯಾನವೇನು? ಒಂದು ವರ್ಷಕ್ಕಿಂತ ಅಧಿಕ ಸಮಯ ಜೈಲಲ್ಲಿದ್ದ ಆರೋಪಿಗಳನ್ನು ಸನ್ಮಾನಿಸ ಬೇಕೆಂದು ಬಯಸುತ್ತಾರಲ್ಲ, ಅವರು ಎಂಥ ದೇಶವನ್ನು ಕಟ್ಟಬಲ್ಲರು?
    ಇಷ್ಟಕ್ಕೂ, ಇವೆಲ್ಲವನ್ನೂ ನೆನಪಿಸಿಕೊಳ್ಳುವುದಕ್ಕೆ ಕಾರಣವಿದೆ.
ಸಂಗೀತ್ ಸೋಮ್
ಸುರೇಶ್ ರಾಣಾ
   ಉತ್ತರ ಪ್ರದೇಶದ ಆಗ್ರಾದಲ್ಲಿ ಕಳೆದ ವಾರ ನ. 21ರಂದು ನಡೆದ ಮೋದಿ ರಾಲಿಯಲ್ಲಿ ಈ ಇಬ್ಬರು ಶಾಸಕರನ್ನು ಬಿಜೆಪಿ ಸನ್ಮಾನಿಸಿದೆ. ಸನ್ಮಾನದ ಸಂದರ್ಭದಲ್ಲಿ ಇವರಿಬ್ಬರ ಪಕ್ಕದಲ್ಲಿ ಬಿಜೆಪಿ ರಾಷ್ಟ್ರೀಯ ಮುಖಂಡ ಕಲ್‍ರಾಜ್ ಮಿಶ್ರಾ ಕೂತಿದ್ದರು. ‘ಕಭೀ ಕಭೀ ಕ್ರಿಯಾ 1 ಕಿಲೋ ಗ್ರಾಂ ಹೋತೋ ಪ್ರತಿಕ್ರಿಯಾ 1 ಕ್ವಿಂಟಾಲ್ ತಕ್ ಹೋಜಾತೀಹೆ - ಎಂದು ಮುಝಫರ್ ನಗರ ಗಲಭೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಕಲ್ಯಾಣ್ ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಏನಿವೆಲ್ಲ? 60ರಷ್ಟು ಮಂದಿಯ ಸಾವಿಗೆ ಮತ್ತು ಸಾವಿರಾರು ಮಂದಿಯ ನಿರಾಶ್ರಿತ ಬದುಕಿಗೆ ಕಾರಣವಾದ ಮುಜಫ್ಫರ್ ನಗರ್ ಗಲಭೆಯ ಆರೋಪಿಗಳಿಬ್ಬರನ್ನು ಬಿಜೆಪಿ ಯಾವ ಕಾರಣಕ್ಕಾಗಿ ಸನ್ಮಾನಿಸಿದೆ? ಕೋಮುಗಲಭೆಯ ಆರೋಪ ಹೊತ್ತು ಜೈಲಿಗೆ ಹೋಗುವುದು ಸನ್ಮಾನಕ್ಕೆ ಅರ್ಹವಾಗುವಂಥ ಸಂಗತಿಯೇ? ಸಂಗೀತ್ ಸೋಮ್‍ರಂತೂ ಇಡೀ ಗಲಭೆಯ ರೂವಾರಿ ಎಂಬ ಆರೋಪ ಹೊತ್ತು ಕೊಂಡಿದ್ದಾರೆ. ಪಾಕಿಸ್ತಾನದ ಸಿಯಾಲ್ ಕೋಟ್‍ನಲ್ಲಿ ಕಳ್ಳರಿಬ್ಬರನ್ನು ಸಾರ್ವಜನಿಕರು ಥಳಿಸಿ ಕೊಂದ ವೀಡಿಯೋವನ್ನು ತನ್ನ ಫೇಸ್‍ಬುಕ್‍ಗೆ ಅಪ್‍ಲೋಡ್ ಮಾಡಿ, ‘ಇದು ಮುಝಫರ್ ನಗರದಲ್ಲಿ ಮುಸ್ಲಿಮರು ಹಿಂದೂ ಯುವಕರನ್ನು ಕೊಂದ ವೀಡಿಯೋ..' ಎಂಬಂತೆ ಬಿಂಬಿಸಿದ್ದಾರೆ. ಓರ್ವ ಜನಪ್ರತಿನಿಧಿ ಈ ಮಟ್ಟಕ್ಕೆ ಇಳಿಯುತ್ತಾರೆಂದರೆ ಅದು ಅರ್ಹವಾಗಬೇಕಾದದ್ದು ಸನ್ಮಾನಕ್ಕೋ ಖಂಡನೆಗೋ? ಯಾಕೆ ಮೋದಿ ಈ ಬಗ್ಗೆ ಮಾತಾಡಿಲ್ಲ? ಮನ ಮೋಹನ್ ಸಿಂಗ್‍ರನ್ನು ‘ಮೌನ' ಮೋಹನ ಎಂದು ಟೀಕಿಸುವ ಮೋದಿ, ತನ್ನದೇ ವೇದಿಕೆಯಲ್ಲಿ ನಡೆದ ಈ ಸನ್ಮಾನದ ಬಗ್ಗೆ ಯಾಕೆ ಮೌನ ವಹಿಸಿದರು? ಈ ಸನ್ಮಾನದ ಬಗ್ಗೆ ಅವರ ನಿಲುವೇನು? ಹಾಗಂತ, ಈ ಸನ್ಮಾನ ಕಾರ್ಯಕ್ರಮ ದಿಢೀರ್ ಬೆಳವಣಿಗೆ ಎಂದೂ ಹೇಳುವಂತಿಲ್ಲ. ಮೋದಿ ರಾಲಿಗಿಂತ ಒಂದೆರಡು ದಿನಗಳ ಮೊದಲೇ ಈ ಬಗ್ಗೆ ಅಧಿಕೃತ ಹೇಳಿಕೆಗಳನ್ನು ನೀಡಲಾಗಿತ್ತು. ಕಾರ್ಯಕ್ರಮ ಪಟ್ಟಿಯಲ್ಲಿಯೂ ಈ ಸನ್ಮಾನವು ನಮೂದಾಗಿತ್ತು. ಪ್ರಾಮಾಣಿಕತೆ, ಪಾರದರ್ಶಕತೆಯ ಬಗ್ಗೆ ಹೋದಲ್ಲೆಲ್ಲಾ ಮಾತಾಡುವ ಮೋದಿ, ತನ್ನದೇ ಪಕ್ಷದ ಸನ್ಮಾನದ ಬಗ್ಗೆ ಏನೊಂದೂ ಮಾತಾಡದಿರುವುದು ಏನನ್ನು ಸೂಚಿಸುತ್ತದೆ? ಈ ಸನ್ಮಾನ ಕಾರ್ಯಕ್ರಮ ಅವರ ಸಮ್ಮತಿಯಿಂದಲೇ ಜರುಗಿದ್ದೇ? ಅವರನ್ನು ಸನ್ಮಾನಿಸಲೇ ಬೇಕೆಂಬ ಹಠ ಬಿಜೆಪಿಗೆ ಇದ್ದದ್ದೇ  ಆಗಿದ್ದರೆ, ತನಿಖೆ ಮುಗಿಯುವ ವರೆಗೆ ಸನ್ಮಾನವನ್ನು ಮುಂದೂಡಬಹುದಿತ್ತಲ್ಲವೇ? ದೇಶದ ಪ್ರಧಾನಮಂತ್ರಿ ಅಭ್ಯರ್ಥಿಗೆ ಇಂಥದ್ದೊಂದು ಎಚ್ಚರವನ್ನು ಪಾಲಿಸಲು ಸಾಧ್ಯ ವಾಗುತ್ತಿಲ್ಲವೆಂದ ಮೇಲೆ ಮೋದಿಗೂ ನಮೋ ಭಾರತ್‍ನ ಪ್ರಸಾದ್ ಭಂಡಾರಿಗೂ ಏನು ವ್ಯತ್ಯಾಸವಿದೆ?
ಅನಂತಮೂರ್ತಿ
ಚೇತನ ಭಗತ್
ಗಿರೀಶ್ ಕಾರ್ನಾಡ್
ಅರುಂಧತಿ ರಾಯ್
   ಮುಂತಾದವರನ್ನು ಬಿಜೆಪಿ ಉಲ್ಲೇಖಿಸುವುದೇ ಸ್ಯೂಡೋ ಸೆಕ್ಯುಲರಿಸ್ಟಗಳೆಂದು (ನಕಲಿ ಜಾತ್ಯತೀತರು). ಜಾತ್ಯತೀತತೆಗೆ ಅನಂತ ಮೂರ್ತಿಯವರು ಕೊಡುವ ವ್ಯಾಖ್ಯಾನವನ್ನು ಬಿಜೆಪಿ ಮತ್ತು ಅದರ ಬೆಂಬಲಿಗರು ಅಪಹಾಸ್ಯಕ್ಕೆ ಒಳಗಾಗಿಸುತ್ತಲೇ ಬಂದಿದ್ದಾರೆ. ಅವರನ್ನು ಬಿಟ್ಟು ಬಿಡೋಣ. ಬಿಜೆಪಿ ಪ್ರತಿಪಾದಿಸುವ ಸೆಕ್ಯುಲರಿಸಮ್ ಯಾವ ಬಗೆಯದು? ಒಂದು ಕಡೆ, ‘ತನ್ನ ಕಾರಿನಡಿಗೆ ನಾಯಿ ಮರಿ ಬಿದ್ದರೂ ನೋವಾಗುತ್ತದೆ’ ಅನ್ನುವ ಮೋದಿ; ಇನ್ನೊಂದು ಕಡೆ, ಮನುಷ್ಯರನ್ನೇ ಕೊಂದ ಆರೋಪಿಗಳನ್ನು ಸನ್ಮಾನಿಸುವ ಅವರ ಪಕ್ಷ - ಇದು ಬಿಜೆಪಿಯ ಸೆಕ್ಯುಲರಿಸಮ್ಮೇ? ಅನಂತಮೂರ್ತಿಯವರ ಸೆಕ್ಯುಲರಿಸಮ್‍ಗಿಂತ ಈ ಸೆಕ್ಯುಲರಿಸಮ್ ಹೆಚ್ಚು ಉನ್ನತವಾದದ್ದು ಎಂದು ಅದು ಪ್ರತಿಪಾದಿಸುತ್ತದೆಯೇ? ಓರ್ವ ವ್ಯಕ್ತಿ ಪ್ರಧಾನಿ ಸ್ಥಾನಕ್ಕೆ ಅರ್ಹರೋ ಅಲ್ಲವೋ ಎಂದು ತೀಮಾನಿಸ ಬೇಕಾದದ್ದು ಅವರ ಗಡ್ಡ, ಭಾಷಣ ಕಲೆ, ಹಾವ-ಭಾವಗಳನ್ನು ನೋಡಿಯಲ್ಲ. ಗಡ್ಡ ಇರುವ ಮತ್ತು ಇಲ್ಲದ, ಭಾಷಣ ಕಲೆ ಗೊತ್ತಿರುವ ಮತ್ತು ಗೊತ್ತಿಲ್ಲದ, ತನ್ನ ಅಭಿಪ್ರಾಯವನ್ನು ಮೆಚ್ಚುವ ಮತ್ತು ವಿರೋಧಿಸುವ, ತನ್ನ ಧರ್ಮವನ್ನು ಅನುಸರಿಸುವ ಮತ್ತು ಅನುಸರಿ ಸದ.. ಮಂದಿಯ ಬಗ್ಗೆ ಆ ವ್ಯಕ್ತಿಯ ನಿಲುವು ಏನು ಎಂಬುದೇ ಅರ್ಹತೆಯ ಮಾನದಂಡ. ಇಂಥದ್ದೊಂದು ಮಾನದಂಡವನ್ನಿಟ್ಟು ಕೊಂಡು ಮೋದಿಯನ್ನು ಅಳೆಯಲು ಹೋದರೆ, ಉದ್ದಕ್ಕೂ ಅನರ್ಹತೆಯೇ ಎದುರಾಗುತ್ತದೆ. ಕಾಂಗ್ರೆಸ್‍ನ ಭ್ರಷ್ಟಾಚಾರದ ವಿರುದ್ಧ ಮೋದಿ ಈಗಾಗಲೇ ಗಂಟೆಗಟ್ಟಲೆ ಮಾತಾಡಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಅನ್ನು ಗೇಲಿ ಮಾಡಿದ್ದಾರೆ. ಆದರೆ ಇದೇ ಮೋದಿ ಮೊನ್ನೆ ಬೆಂಗಳೂರಿಗೆ ಬಂದಾಗ, ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಾದ ಭ್ರಷ್ಟಾಚಾರದ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡಲಿಲ್ಲ. ಪಾರದರ್ಶಕತೆ ಅಂದರೆ ಇದೇ ಏನು? ಮೋದಿಯವರ ಸೆಕ್ಯುಲರಿಸಮ್‍ನಲ್ಲಿ ಭ್ರಷ್ಟಾಚಾರವನ್ನೂ ವಿಭಜಿಸಲಾಗಿದೆಯೇ? ಬಿಜೆಪಿಯ ಭ್ರಷ್ಟಾಚಾರ ಸಹ್ಯ, ಕಾಂಗ್ರೆಸ್‍ನದ್ದು ಮಾತ್ರ ಅಸಹ್ಯ ಎಂಬುದು ಮೋದಿ ಸೆಕ್ಯುಲರಿಸಮ್‍ನ ವಿಶೇಷತೆಯೇ?
   “.. ಓರ್ವ ಮಹಿಳೆಯ ಬದುಕಿನಲ್ಲಿ ಅತ್ಯಂತ ಹೆಚ್ಚು ಸಂತಸ ಪಡುವ ಸಂದರ್ಭ ಯಾವುದು ಗೊತ್ತೇ? ತಾಯಿಯಾಗುವ ಕ್ಷಣ. ತಾಯಿಯ ಬದುಕಿನಲ್ಲಿ ಮಕ್ಕಳು ಬಲು ದೊಡ್ಡ ಕನಸು. ಮನೆಯಲ್ಲಿ ಏನಿಲ್ಲದಿದ್ದರೂ ಮಕ್ಕಳನ್ನು ನೆನೆಸಿಕೊಂಡು ತಾಯಿ ಬದುಕಬಲ್ಲಳು. ಅಂಥದ್ದೊಂದು ಕನಸಾಗಿದ್ದ ನನ್ನ ಮಗ. ನನ್ನ ಕನಸಿನ ರಾಜಕುಮಾರನಾಗಿ ಅವನು ಬೆಳೆದ. ಆದರೆ ನಾನವನನ್ನು ಕಳಕೊಂಡೆ. ನನ್ನ ಬದುಕಿನ ಅತ್ಯಂತ ದುಃಖದ ಸಂದರ್ಭ ಕೂಡ ಇದುವೇ. ಮಗ ಇಲ್ಲವಾಗುವ ಮೂಲಕ ನಾನೆಲ್ಲವನ್ನೂ ಕಳಕೊಂಡೆ. ನನಗೆ ನನ್ನ ಜಗತ್ತು ಇಲ್ಲದಾಯಿತು. ಅವನನ್ನು ಸ್ಮರಿಸಿ ಕಣ್ಣೀರಾಗದ ಒಂದೇ ಒಂದು ದಿನವನ್ನೂ ನಾನು ಕಳೆದಿಲ್ಲ. ಅವನು ನನ್ನ ಹೃದಯದಲ್ಲಿದ್ದಾನೆ. ಆದರೇನು ಮಾಡಲಿ, ಕಣ್ಣೀರಾಗದೆ ನನಗೆ ಬೇರೆ ಯಾವ ದಾರಿಯಿದೆ? ಅವರು ಅವನನ್ನು ಕೊಂದರು. ಅವನನ್ನು ಯಾರು ಕೊಂದಿರುವರೋ ಅವರ ಮೇಲೆ ನನ್ನ ಕಣ್ಣೀರು ತೊಟ್ಟಿಕ್ಕುತ್ತಿದೆ. ರೋಗಿಯಾಗಿರುವ ನಾನು ಶೀಘ್ರದಲ್ಲೇ ಸಾಯಬಹುದು. ಆದರೆ ಈ ಕಣ್ಣೀರು ಅವರನ್ನು ಖಂಡಿತ ತಟ್ಟಲಿದೆ. ಬದುಕಿನಲ್ಲಿ ಯಾವ ನ್ಯಾಯವೂ ಲಭಿಸದ, ಅಸಹಾಯಕ ತಾಯಿಯೋರ್ವಳ ಕಣ್ಣೀರಿದು. ಕಣ್ಣೀರಿನೊಂದಿಗೆ ನಾನಿದನ್ನು ಬರೆಯುತ್ತಿದ್ದೇನೆ. ನೀವು ನ್ಯಾಯಾಲಯವನ್ನೂ ಪೊಲೀಸರನ್ನೂ ಖರೀದಿಸಬಹುದು. ಆದರೆ ಆಕಾಶದಿಂದ ಇವೆಲ್ಲವನ್ನೂ ನೋಡುತ್ತಿರುವ ಒಂದು ಪ್ರಬಲ ಶಕ್ತಿಯಿದೆ. ಆ ಶಕ್ತಿಯ ಪ್ರಹಾರವು ನಿಮ್ಮನ್ನು ಕಾಡಿಯೇ ಕಾಡುತ್ತದೆ- ನೀವು ಕಣ್ಣೀರಾಗಲಿದ್ದೀರಿ..”
   2006 ಮಾರ್ಚ್ ನಲ್ಲಿ ಸಾವಿಗೀಡಾದ ಲೀಲಾ ಎಂಬ ಕೇರಳದ ತಾಯಿಯೋರ್ವರು ಬರೆದ ಆತ್ಮಕಥೆಯಿಂದ ಹೆಕ್ಕಿದ ತುಣುಕಿದು. ಆರ್‍ಟಿಓ ಅಧಿಕಾರಿಯಾಗಿದ್ದ ಅವರ ಏಕೈಕ ಮಗನನ್ನು ಮಾಫಿಯಾ ಬಲಿ ಪಡೆದಿತ್ತು. ನಿಜವಾಗಿ, ಲೀಲಾ ಎಂಬ ಪದವನ್ನು ನಾವು ಒಂದು ನಿರ್ದಿಷ್ಟ ಧರ್ಮದ ಹೆಸರಾಗಿ ಪರಿಗಣಿಸಬೇಕಿಲ್ಲ. ಇಂಥ ತಾಯಂದಿರು ಇವತ್ತು ಗುಜರಾತ್‍ನಲ್ಲಿ, ಮುಝಫರ್ ನಗರದಲ್ಲಿ, ಹೋಮ್ ಸ್ಟೇಯ ಮಂಗಳೂರಿನಲ್ಲಿ ಅಸಂಖ್ಯ ಇದ್ದಾರೆ. ಅವರ ಹೆಸರು ಆಯಿಷಾ, ಸೆಲೆನಾ, ದಮಯಂತಿ.. ಏನೇ ಆಗಿರಬಹುದು. ಅವರೆಲ್ಲರ ಕಣ್ಣೀರು ಒಂದೇ. ಆ ಕಣ್ಣೀರೇ ನಿಜವಾದ ಸೆಕ್ಯುಲರಿಸಮ್. ಸಂಗೀತ್ ಸೋಮ್ ಮತ್ತು ಸುರೇಶ್ ರಾಣಾರನ್ನು ವೇದಿಕೆಯಲ್ಲಿ ಕೂರಿಸಿ ಸನ್ಮಾನಿಸಿದ ಬಿಜೆಪಿ ಮತ್ತು ಹೋಮ್‍ಸ್ಟೇ ಆರೋಪಿಗಳನ್ನು ಸನ್ಮಾನಿಸುವ ಹೇಳಿಕೆ ನೀಡಿದ ನಮೋ ಭಾರತ್‍ಗೆ ಇದು ಅರ್ಥವಾಗಲಿ ಬಿಡಲಿ. ಅಂದಹಾಗೆ,
   2010ರಲ್ಲಿ ಉತ್ತರ ಪ್ರದೇಶದ ಬರೇಲ್ವಿಯಲ್ಲಿ ನಡೆದ ಕೋಮು ಗಲಭೆಯ ಆರೋಪಿ ತೌಕೀರ್ ರಝಾ ಖಾನ್‍ರನ್ನು ಮೊನ್ನೆ ವೇದಿಕೆಯಲ್ಲಿ ಕೂರಿಸಿದ ಸಮಾಜವಾದಿ ಪಕ್ಷದ ನಿಲುವನ್ನು ಖಂಡಿಸು ತ್ತಲೇ ನಾವು ಮೋದಿ ಸೆಕ್ಯುಲರಿಸಮನ್ನು ಪ್ರಶ್ನಿಸಬೇಕಾಗಿದೆ.

Wednesday, November 20, 2013

ಪೇಟೆಯ ಪುಣ್ಯ ಕೋಟಿಗೆ ಮತ್ತೆ ಮತ್ತೆ ತಲೆ ಕೊಡುವ ಕಾಡಿನ ಹುಲಿ

ಗರೋಡಿ
ರಾಜೇಶ್
   '‘1932. ಹಿಟ್ಲರ್ ಅಧಿಕಾರಕ್ಕೆ ಬಂದ ಕಾಲವಾಗಿತ್ತದು. ನನ್ನ ಪ್ರಾಯವಾದರೋ 20. ಅಲ್ಲದೇ ಹಿಟ್ಲರ್ ಜರ್ಮನಿಯಲ್ಲಿದ್ದರೆ ನಾನು ಫ್ರಾನ್ಸ್ ನಲ್ಲಿದೆ. ಯೌವನವಲ್ಲವೇ, ಫ್ರಾನ್ಸ್ ನಲ್ಲಿದ್ದರೂ ನನ್ನ ಮನಸ್ಸು ಜಗತ್ತಿನ ಎಲ್ಲ ಸುದ್ದಿಗಳ ಬಗ್ಗೆಯೂ, ಆ ಸುದ್ದಿಗಳು ಕಟ್ಟಿಕೊಡುವ ನೋವುಗಳ ಸುತ್ತಲೂ ಹೆಜ್ಜೆ ಹಾಕುತ್ತಿತ್ತು. ಫ್ಯಾಸಿಸಮ್‍ನ ವಿವಿಧ ಕ್ರೌರ್ಯಗಳನ್ನು ಓದುವಾಗ ಮನಸ್ಸು ಏನೇನೋ ಆಲೋಚಿಸುತ್ತಿತ್ತು. ಆ ದಿನಗಳಲ್ಲಿ ಅಮೇರಿಕಾವನ್ನು ಆರ್ಥಿಕ ಸಂಕಷ್ಟವು ವಿಪರೀತ ಮಟ್ಟದಲ್ಲಿ ಬಾಧಿಸಿತ್ತು. 70 ಲಕ್ಷ ಮಂದಿ ಉದ್ಯೋಗ ಕಳಕೊಂಡು ಬೀದಿಗೆ ಬಿದ್ದಿದ್ದರು. ಎದೆಹಾಲು ಬತ್ತಿ ಹೋದ ತಾಯಂದಿರು. ಒಂದು ತುಂಡು ರೊಟ್ಟಿಗಾಗಿ ಪರಸ್ಪರ ಜಗಳ ಕಾಯುವ ಮಂದಿ ಅಮೆರಿಕದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಮಧ್ಯೆ, ಮುಸೋಲಿನಿ ಇಥಿಯೋಪಿಯಾ ವನ್ನು ಆಕ್ರಮಿಸಿದ. ಹಿಟ್ಲರ್ ಮತ್ತು ಮುಸೋಲಿನಿಯ ಸಹಕಾರದಿಂದ ಫ್ರಾಂಕೋ ಸ್ಪೈನನ್ನು ವಶಪಡಿಸಿಕೊಂಡ. ಆ ಕಾಲದಲ್ಲಿ ನಾನು ಮತ್ತು ನನ್ನಂಥ ಯುವಕರು ಕೆಲವೊಮ್ಮೆ ಎಷ್ಟು ನಿರಾಶೆಯಿಂದ ಮಾತಾಡುತ್ತಿದ್ದೆವೆಂದರೆ,
ಜಗತ್ತು ಕೊನೆಗೊಳ್ಳುವ ಸಮಯ ಸಮೀಪಿಸಿದೆ. ಬಹುಶಃ ನಾವು ಅದರ ಕೊನೆಯ ಪೀಳಿಗೆ ಆಗಿರಬಹುದು..' ಎಂದೆಲ್ಲಾ ಹೇಳುತ್ತಿದ್ದೆವು. ಇಷ್ಟಿದ್ದೂ,
  ನಾನು ತುಂಬಾ ಆಶಾವಾದಿಯಾಗಿದ್ದೆ. ಸದ್ಯದ ಸವಾಲುಗಳನ್ನು ಎದುರಿಸುವುದಕ್ಕೆ ನಾನು ಎರಡು ವಿಷಯಗಳಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ನಿಜವಾಗಿ, ನನ್ನ ಹೆತ್ತವರು ಯಾವ ಧರ್ಮದ ವಿಶ್ವಾಸಿಯೂ ಆಗಿರಲಿಲ್ಲ. ಅಲ್ಲದೆ, ಯಾವ ಚಳವಳಿ, ಇಸಂಗಳ ಜೊತೆಯೂ ಗುರುತಿಸಿಕೊಂಡಿರಲಿಲ್ಲ. ಆದರೆ, ನನಗೆ ಅವೆರಡರ ಅಗತ್ಯ ಬಹಳ ಇದೆ ಎಂದು ಅನ್ನಿಸಿತು. ಅದ್ದರಿಂದ, ನಾನು ಕ್ರೈಸ್ತ ಧರ್ಮವನ್ನು ಆಯ್ಕೆ ಮಾಡಿಕೊಂಡೆ. ಇದಾದ ಬಳಿಕ ಕಮ್ಯೂನಿಸಮ್ ಅನ್ನು ಸೇರಿ ಕೊಂಡೆ. ಹೀಗೆ 25 ವರ್ಷಗಳ ಕಾಲ ಕ್ರೈಸ್ತ ಧರ್ಮ ಮತ್ತು ಕಮ್ಯೂನಿಸ್ಟ್ ಸಿದ್ಧಾಂತಗಳ ನಡುವೆ ಸಂವಾದ ನಡೆಸುತ್ತಾ ಬೆಳೆದೆ. ಪ್ರತಿಯೊಂದನ್ನೂ ಪ್ರಶ್ನಿಸಿದೆ. ಫ್ರಾನ್ಸನ್ನು  ಹಿಟ್ಲರ್ ಅಕ್ರಮಿಸಿದಾಗ ಬಂಡಾಯ ಸೇನೆ ಕಟ್ಟಿ ಪ್ರತಿಭಟಿಸಿದೆ. ನಾಝಿ ಸೇನೆಯು ನನ್ನನ್ನು ಬಂಧಿಸಿ 2 ವರ್ಷಗಳ ಕಾಲ ಬಂಧನದಲ್ಲಿರಿಸಿತು. ಬಿಡುಗಡೆ ಗೊಂಡ ಬಳಿಕ ಮತ್ತೆ ಚಳವಳಿಗಳಲ್ಲಿ ಸಕ್ರಿಯನಾದೆ. ಬಂಡವಾಳಶಾಹಿತ್ವದ ವಿರುದ್ಧ ಕಮ್ಯುನಿಸ್ಟ್ ಗೆಳೆಯ ರನ್ನು ಸೇರಿಸಿ ಪ್ರತಿಭಟಿಸಿದೆ. ಫ್ಯಾಸಿಸಮ್‍ಗೆ ವಿರುದ್ಧವಾಗಿ ಜನಜಾಗೃತಿ ಮೂಡಿಸಲು ಯತ್ನಿಸಿದೆ. ನನ್ನ ಪಾಲಿಗೆ ಕ್ರೈಸ್ತ ಧರ್ಮ ಮತ್ತು ಕಮ್ಯುನಿಸಮ್ ಎರಡೂ ಕಾಲದ ವೈರುಧ್ಯಗಳನ್ನು ವ್ಯಾಖ್ಯಾನಿಸುವುದ ಕ್ಕಿರುವ ಎರಡು ಮೆಟ್ಟಲುಗಳಾಗಿತ್ತು. ಬರಬರುತ್ತಾ ಆ ಮೆಟ್ಟಿಲುಗಳಲ್ಲೇ ನಾನಾ ವೈರುಧ್ಯಗಳನ್ನು ಕಾಣತೊಡಗಿದೆ. ವಿಯೆಟ್ನಾಂನ ವಿರುದ್ಧ ಅಮೇರಿಕನ್ ಸಾಮ್ರಾಜ್ಯತ್ವವು ನಡೆಸಿದ ಅತಿಕ್ರಮಣದ ವಿರುದ್ಧ ನಾನು ಪ್ರತಿಭಟಿಸಿದಾಗ ಕಮ್ಯೂನಿಸಮ್ ನನ್ನ ಬೆನ್ನಿಗಿತ್ತು. ಆದರೆ, ದಮನಿತರ ಹಕ್ಕುಗಳ ಬಗ್ಗೆ, ಅವರ ಮೇಲಿನ ಕೌರ್ಯಗಳ ಬಗ್ಗೆ ಪ್ರಬಲ ಧ್ವನಿಯಲ್ಲಿ ಮಾತನಾಡುತ್ತಿದ್ದ ಕಮ್ಯುನಿಸಮ್, ಕೊನೆಗೆ ಅದೇ ತಪ್ಪುಗಳನ್ನೆಸಗಲು ಪ್ರಾರಂಭಿಸಿದಾಗ ಮತ್ತು ನಾನು ಪ್ರತಿಭಟನೆ ಸಲ್ಲಿಸಿದಾಗ, ನನ್ನನ್ನೇ ತಪ್ಪಿತಸ್ಥನಂತೆ ನೋಡಲಾಯಿತು. ಕಮ್ಯೂನಿಸ್ಟ್ ಪಾರ್ಟಿಯ 20ನೇ ಅಧಿವೇಶನದಲ್ಲಿ ರಷ್ಯಾದ ಸ್ಟಾಲಿನ್‍ರ ಜನವಿರೋಧಿ ನಿಲುವುಗಳು, ಸರ್ವಾಧಿಕಾರಗಳ ವಿರುದ್ಧ ಮಾತಾಡಿದಾಗ ನನ್ನನ್ನೇ ಪಕ್ಷದಿಂದ ಹೊರ ಹಾಕಲಾಯಿತು. ಅಮೇರಿಕವು ವಿಯೆಟ್ನಾ ಮೇಲೆ ಅತಿಕ್ರಮಣ ನಡೆಸಿದಾಗ ಪ್ರತಿಭಟಿಸಿದ ನಾನು ಸ್ಟಾಲಿನ್‍ರ ರಷ್ಯಾವು ಜೆಕೊಸ್ಲ್ಲೊವಾಕಿಯನ್ನು ವಶಪಡಿಸಿಕೊಂಡಾಗ ಸುಮ್ಮನಿರುವುದಕ್ಕೆ ಸಾಧ್ಯವಿರಲಿಲ್ಲವಲ್ಲ. ಪ್ರತಿಭಟಿಸಿದೆ. ಆದರೆ ವಿಯೆಟ್ನಾಮ್ ಅತಿಕ್ರಮಣವನ್ನು ಖಂಡಿಸಿದ ನನ್ನ ಗೆಳೆಯರೇ ಸ್ಟಾಲಿನ್‍ರನ್ನು ಬೆಂಬಲಿಸಿದರು. ನನ್ನಲ್ಲಿ ಭ್ರಮನಿರಸನವಾಗತೊಡಗಿತು...'
   1. ದಿ ಫೌಂಡಿಂಗ್ ಮಿಥ್ಸ್ ಆಫ್ ಮಾಡರ್ನ್ ಇಸ್ರೇಲ್
   2. ಕೇಸ್ ಆಫ್ ಇಸ್ರೇಲ್: ಎ ಸ್ಟಡಿ ಆಫ್ ಪೊಲಿಟಿಕಲ್ ಝಿಯೋನಿಸಮ್
   3. ದಿ ಕ್ರೈಸಿಸ್ ಇನ್ ಕಮ್ಯೂನಿಸಮ್
   4. ದಿ ಟರ್ನಿಂಗ್ ಪಾಯಿಂಟ್ ಆಫ್ ಸೋಷಿಯಲಿಸಮ್
   5. ಕಾರ್ಲ್‍ಮಾಕ್ಸ್: ದಿ ಇವೊಲ್ಯೂಶನ್ ಆಫ್ ಹಿಸ್ ಥಾಟ್...
ಹೀಗೆ 50ಕ್ಕಿಂತಲೂ ಅಧಿಕ ಕೃತಿಗಳನ್ನು ಬರೆದ ಪ್ರಸಿದ್ಧ ಸಾಹಿತಿ ರಝಾ ಗರೋಡಿಯವರು, ಯುರೋಪಿನಾದ್ಯಂತ ಅತ್ಯಂತ ಚಲನಶೀಲ ಸಾಹಿತಿಯಾಗಿ ಗುರುತಿಸಿಕೊಂಡವರು. ಕ್ರೈಸ್ತ ಧರ್ಮವನ್ನು ಬಿಟ್ಟು 1982ರಲ್ಲಿ ಇಸ್ಲಾಮನ್ನು ಸ್ವೀಕರಿಸಿದರು. ‘ಹಾಲೋಕಾಸ್ಟ್ ಎಂಬುದು ಬಲುದೊಡ್ಡ ಸುಳ್ಳು..’ ಎಂಬ ವಿವರ ಇರುವ The Founding Myths of Modern Isrel  ಎಂಬ ಕೃತಿಯನ್ನು 1996ರಲ್ಲಿ ಅವರು ಬರೆದಾಗ, ಇಸ್ರೇಲ್ ಮಾತ್ರವಲ್ಲ, ಫ್ರಾನ್ಸೂ ಸಿಟ್ಟಿಗೆದ್ದಿತು. ಫ್ರಾನ್ಸ್ ಆ ಪುಸ್ತಕವನ್ನು ನಿಷೇಧಿಸಿತು. 240,000 ಪೌಂಡ್ ದಂಡ ವಿಧಿಸಿತಲ್ಲದೇ, ತಪ್ಪಿದಲ್ಲಿ ಜೈಲು ಶಿಕ್ಷೆಯನ್ನೂ ಘೋಷಿಸಿತು. ಆದರೆ ಗರೋಡಿ ಜಗ್ಗಲಿಲ್ಲ. ಹಾಲೋಕಾಸ್ಟ್ ಅನ್ನು ಮುಂದಿಟ್ಟುಕೊಂಡು ಇಸ್ರೇಲ್ ತನ್ನ ಕ್ರೌರ್ಯವನ್ನು ಅಡಗಿಸುತ್ತಿದೆ ಎಂದು ಅವರು ಮತ್ತೆ ಮತ್ತೆ ಸಾರಿದರು. ಚರ್ಚಿಲ್, ಎಸ್‍ನೋವರ್ ಮತ್ತು ಡಿ ಗುಲ್ಲೆಯೆಂಬ ನಾಯಕರೇ ಹಾಲೋ ಕಾಸ್ಟ್ ನ ಸೂತ್ರದಾರರು ಎಂದು ದಿಟ್ಟವಾಗಿ ಘೋಷಿಸಿದರು. 2001ರಲ್ಲಿ ಅಮೇರಿಕಾದ ಅವಳಿ ಕಟ್ಟಡಗಳ ಮೇಲೆ ನಡೆದ ದಾಳಿಯು ಅಮೆರಿಕನ್ ಪ್ರಾಯೋಜಿತವೆಂದು ಧೈರ್ಯದಿಂದ ಹೇಳಿದರು. ಒಂದು ರೀತಿಯಲ್ಲಿ ಸಾಹಿತಿ ಹೇಗಿರಬೇಕೆಂದು ತೋರಿಸಿಕೊಟ್ಟದ್ದೇ ರಝಾ ಗರೋಡಿ. ಪ್ರಚಲಿತ ಸಮಾಜದ ತಲ್ಲ್ಲಣಗಳಿಗೂ ತಮಗೂ ಸಂಬಂಧವೇ ಇಲ್ಲ ಎಂಬಂತಿದ್ದ ಸಾಹಿತ್ಯ ಜಗತ್ತನ್ನೇ ಅವರು ಹಿಡಿದು ಅಲುಗಾಡಿಸಿದರು. ಸರಿ ಕಾಣದ್ದನ್ನು ಪ್ರಶ್ನಿಸಿದರು. ಹಾಗೇ ಪ್ರಶ್ನಿಸುವಾಗ, ಅದು ತನ್ನ ದೇಶ, ತನ್ನ ಭಾಷೆ, ತನ್ನ ಜನ.. ಎಂಬ ಮುಲಾಜನ್ನೂ ಅವರು ಇಟ್ಟುಕೊಳ್ಳಲಿಲ್ಲ. ಆದ್ದರಿಂದಲೇ, ಗಡಿ, ಭಾಷೆ, ಧರ್ಮವನ್ನು ಮೀರಿ ಜನರು ಗರೋಡಿಯವರನ್ನು ಪ್ರೀತಿಸಲು ಕಾರಣವಾದದ್ದು. ಮಾತ್ರವಲ್ಲ, ಪ್ರಚಲಿತ ಸಾಹಿತ್ಯ ಜಗತ್ತು ಗರೋಡಿಯವರನ್ನು ಮುಂದಿಟ್ಟುಕೊಂಡು ಚರ್ಚಿಸಬೇಕು ಎಂದು ಅನ್ನಿಸುವುದು.
   ಹಾಗಂತ, ಸಮಕಾಲೀನ ಸಾಹಿತಿಗಳು ಸಮಾಜದ ತಲ್ಲಣಗಳಿಗೆ ಸ್ಪಂದಿಸಿಲ್ಲ ಅಂತ ಹೇಳುತ್ತಿಲ್ಲ..
ಆದರೆ ಸ್ಪಂದನೆಯ ಪ್ರಮಾಣ ಎಷ್ಟರ ಮಟ್ಟಿಗಿದೆ? ಎಷ್ಟಂಶ ಅವು ಪ್ರಭಾವಶಾಲಿಯಾಗಿವೆ? ನಿಜವಾಗಿ, ಸಾಹಿತಿಗಳು ಬರಹಗಳ ಮೂಲಕ ಸ್ಪಂದಿಸಲೇಬೇಕಾದ ಹತ್ತಾರು ಸಮಸ್ಯೆಗಳು ಸಮಾಜದಲ್ಲಿವೆ. ಆದರೆ, ಗರೋಡಿಯವರಂತೆ ಅಂಥ ಸಮಸ್ಯೆಗಳನ್ನು ಎತ್ತಿಕೊಳ್ಳುವ ಮತ್ತು ಸಮಾಜದ ಆತ್ಮಕ್ಕೆ ಚುಚ್ಚುವ ಪ್ರಯತ್ನಗಳು ಆಗುತ್ತಲೇ ಇಲ್ಲ. ಇಲ್ಲಿ ಪ್ರತಿದಿನ ‘ಧರಣಿ ಮಂಡಲ ಮಧ್ಯದೊಳಗೆ..’ ಹಾಡಿನ ಘಟನೆಗಳು ನಡೆಯುತ್ತಲೇ ಇವೆ. ಕಾಡೆಂಬುದು ಹುಲಿಯ ಮನೆ. ಅದರ ಆಹಾರ, ವಿಶ್ರಾಂತಿ, ನಿದ್ದೆ ಎಲ್ಲವೂ ಅಲ್ಲೇ. ತನ್ನ ಪ್ರದೇಶದಲ್ಲಿ ಸುತ್ತಾಡಿ ಅದು ಹೊಟ್ಟೆ ತುಂಬಿಸಿಕೊಳ್ಳುತ್ತದೆ. ಹೀಗಿರುವಾಗ, ಪುಣ್ಯಕೋಟಿಯು ಹುಲಿಯ ಈ ಮನೆಗೆ ಅಕ್ರಮ ಪ್ರವೇಶಗೈಯುತ್ತದೆ. ಮಾತ್ರವಲ್ಲ, ತನ್ನ ಅಕ್ರಮ ಪ್ರವೇಶವೇ ಸಕ್ರಮ ಎಂಬ ರೀತಿಯಲ್ಲಿ ಭಾವನಾತ್ಮಕ ಬ್ಲ್ಯಾಕ್‍ಮೇಲ್ ನಡೆಸುತ್ತದೆ. ಅದು ಹುಲಿಯೊಂದಿಗೆ ನಡೆಸುವ ಸಂವಾದವನ್ನು ಹೇಗೆ ಕಟ್ಟಿ ಕೊಡಲಾಗಿದೆಯೆಂದರೆ, ಹುಲಿಯನ್ನು ಖಳನಾಯಕನಾಗಿ ಮತ್ತು ಪುಣ್ಯ ಕೋಟಿಯನ್ನು ಅಪಾರ ಸತ್ಯವಂತವಾಗಿ ಬಿಂಬಿಸಲಾಗಿದೆ. ಒಂದು ರೀತಿಯಲ್ಲಿ, ಪುಣ್ಯ ಕೋಟಿಯು ಹುಲಿಯ ಸಹಜ ಆಹಾರ. ತಪ್ಪು ಪುಣ್ಯಕೋಟಿಯದ್ದೇ ಹೊರತು ಹುಲಿಯದ್ದಲ್ಲ. ಆದರೆ, ಕೊನೆಗೆ ತನ್ನದಲ್ಲದ ತಪ್ಪಿಗೆ ಹುಲಿ ಪ್ರಾಣತ್ಯಾಗ ಮಾಡುವ ಮತ್ತು ಹಾಗೆ ತ್ಯಾಗ ಮಾಡಿದ ಬಳಿಕವೂ ಪುಣ್ಯ ಕೋಟಿಯೇ ಮಹಾ ತ್ಯಾಗಿಯಾಗಿ ಮನದಲ್ಲುಳಿಯುವ ರೀತಿಯಲ್ಲಿ ದರಣಿ ಮಂಡಲ ಹಾಡನ್ನು ಕಟ್ಟಿಕೊಡಲಾಗಿದೆ. ಇಷ್ಟಕ್ಕೂ, ಹುಲಿ ಮತ್ತು ಪುಣ್ಯ ಕೋಟಿಯ ನಡುವೆ ನಡೆಯುವ ಈ ಮಾತುಕತೆಯು ಕಾಲ್ಪನಿಕವಾದದ್ದೇ ಹೊರತು ವಾಸ್ತವವಲ್ಲ ಎಂಬುದು ಎಲ್ಲರಿಗೂ ಗೊತ್ತು. ನಿಜವಾಗಿ, ಇಲ್ಲಿ ಹುಲಿಯು- ಕಾಡನ್ನು ಮನೆ ಮಾಡಿಕೊಂಡಿರುವ ಗೊಲ್ಲರು, ಕೊರಗರು, ಗಿರಿಜನರು, ದಲಿತರ ಸಂಕೇತ. ಪುಣ್ಯ ಕೋಟಿಯು ಮೇಲ್ವರ್ಗದವರ ಸಂಕೇತ. ಮೇಲ್ವರ್ಗದವರಲ್ಲಿ ನ್ಯಾಯದ ಮಾತಾಡುವುದು ಸಾವಿಗೆ ಕಾರಣವಾಗುತ್ತದೆ ಅನ್ನುವ ಸೂಕ್ಷ್ಮ ಸಂದೇಶವನ್ನು ಈ ಹಾಡು ಗುಪ್ತವಾಗಿ ರವಾನೆ ಮಾಡುತ್ತದೆ. ಈ ಹಾಡಿನ ಆಧುನಿಕ ರೂಪವೇ ನಟ ರಾಜೇಶ್. ‘ಹಳ್ಳಿ ಹೈದ ಪೇಟೆಗ್ ಬಂದ’ ಎಂಬ ರಿಯಾಲಿಟಿ ಶೋಗಾಗಿ ಈ ಗಿರಿಜನ ಯುವಕನನ್ನು ಪೇಟೆಗೆ ಕರೆ ತರಲಾಗುತ್ತದೆ. ಆತನ ಮುಗ್ಧತೆಗೆ ಮಾರುಕಟ್ಟೆ ಇದೆ ಎಂದು ಅರಿವಾದದ್ದೇ ತಡ, ಪೇಟೆಯ ಮಂದಿ ಆತನನ್ನು ಎರ್ರಾಬಿರ್ರಿಯಾಗಿ ಬಳಸಿಕೊಳ್ಳುತ್ತಾರೆ. ಇದರ ಜೊತೆಗೆ ಆತನ ಹಠ ಸ್ವಭಾವ, ಒರಟುತನ, ಖಿನ್ನತೆಯ.. ಸುದ್ದಿಗಳೂ ಆಗಾಗ ಮಾಧ್ಯಮಗಳ ಮೂಲಕ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಕೊನೆಗೊಂದು ದಿನ ಆತ ಪ್ರಾಣತ್ಯಾಗ ಮಾಡಿದಾಗ, ಆತನನ್ನು ಕಾಡಿನ ಹುಲಿಯಾಗಿಯೂ ಕೊಂದವರು ಪುಣ್ಯ ಕೋಟಿಯಾಗಿಯೂ ಪೋಸು ಕೊಡುತ್ತಾರೆ.
   ಇವತ್ತಿನ ಸಾಹಿತ್ಯ ಕ್ಷೇತ್ರದಲ್ಲಿ ಕಾಣಿಸುತ್ತಿರುವ ದೊಡ್ಡ ಕೊರತೆಯೂ ಇದುವೇ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಹೊಸ ಹೊಸ ಕಾದಂಬರಿ, ಕವಿತೆಗಳು ಪ್ರವೇಶಗೈಯ್ಯುತ್ತಿದ್ದರೂ ಅವುಗಳಲ್ಲಿ ಸಾಹಿತ್ಯಿಕ ಒಳನೋಟ ಉಳ್ಳವು ಎಷ್ಟಿವೆ  ಎಂದು ಹುಡುಕಾಡುವಾಗ ನಿರಾಶೆಯಾಗುತ್ತದೆ. ಸಮಾಜದ ಪ್ರಚಲಿತ ಸಮಸ್ಯೆಗಳನ್ನು ಎತ್ತಿಕೊಂಡು ಓದುಗರ ಹೃದಯ ತಟ್ಟುವ ಬರಹಗಳು ಅಪರೂಪವಾಗುತ್ತಿವೆ. ಇವತ್ತಿನ ಬರಹ ಶೈಲಿಗಳಲ್ಲಿ `ಹೇಗೆ' ಎಂಬುದು ಮುಖ್ಯವಾಗುತ್ತಿದೆಯೇ ಹೊರತು `ಯಾಕೆ' ಎಂಬುದಲ್ಲ. ಹೇಗೆ ಬಾಂಬ್ ಸ್ಫೋಟಿಸಬಹುದು, ಹೇಗೆ ಕೋಮುಗಲಭೆ ಎಬ್ಬಿಸಬಹುದು, ಹೇಗೆ ಮೋದಿಯನ್ನು ಗೆಲ್ಲಿಸಬಹುದು, ಹೇಗೆ ಸರಕಾರಿ ಶಾಲೆಗಳನ್ನು ಮುಚ್ಚಬಹುದು.. ಹೀಗೆ. ಇದಕ್ಕೆ ಬದಲು, ಯಾಕೆ ಸ್ಫೋಟಿಸಬೇಕು, ಯಾಕೆ ಮೋದಿಯನ್ನು ಗೆಲ್ಲಿಸಬೇಕು, ಯಾಕೆ ಕೋಮುಗಲಭೆ ಎಬ್ಬಿಸಬೇಕು.. ಎಂಬಿತ್ಯಾದಿಯಾಗಿ ಪ್ರಶ್ನಿಸುವ ಬರಹಗಳು ಅಪರೂಪವಾಗುತ್ತಿವೆ. ಬಹುಶಃ, ಪ್ರಚಲಿತ ವಾತಾವರಣವು ಈ ಮಟ್ಟದಲ್ಲಿ ಕೆಟ್ಟಿರುವುದಕ್ಕೆ ಇಂಥ ಬರಹಗಳ ಕೊರತೆಯ ಪಾತ್ರ ಖಂಡಿತ ಇದೆ ಎಂದು ಅನಿಸುತ್ತದೆ. ಒಂದು ವೇಳೆ,
    2012ರಲ್ಲಿ ತನ್ನ 98ನೇ ಪ್ರಾಯದಲ್ಲಿ ಸಾವಿಗೀಡಾದ ರಝಾ ಗರೋಡಿಯವರು ಈ ನೆಲದಲ್ಲಿ ಇದ್ದಿದ್ದರೆ, ಸಾಹಿತ್ಯ ಕ್ಷೇತ್ರಕ್ಕೆ ತಟ್ಟಿರುವ ಈ ಕಾಯಿಲೆಯ ವಿರುದ್ಧ ಬರೆಯುತ್ತಿದ್ದರೇನೋ...

Monday, November 18, 2013

ಆಯಿಶಾಳ ಮೂಲಕ ಮತ್ತೊಮ್ಮೆ ಪ್ರಶ್ನಾರ್ಹಗೊಂಡ ಮಾಧ್ಯಮ ನಿಲುವು

    ಗೋಪಾಲ
    ವಿಕಾಸ್
 ಪವನ್
 ಗಣೇಶ್
  ಮಂಗಳೂರಿನಲ್ಲಿ ಆಯಿಷಾ ಮತ್ತು ಝುಬೇರ್ ದಂಪತಿಗಳನ್ನು ಬಂಧಿಸುವುದಕ್ಕಿಂತ ಮೊದಲು ಈ ಮೇಲಿನ ನಾಲ್ವರನ್ನೂ ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದರು. ಅವರಿಗೆ ಪಾಕಿಸ್ತಾನದ ಐ.ಎಸ್.ಐ.ಯೊಂದಿಗೆ ನಂಟು ಕಲ್ಪಿಸಿದ್ದರು. ಅಲ್ಲದೇ, ಆಯಿಷಾಳ ಹೆಸರನ್ನು ಹೇಳಿದ್ದು ಈ ಆರೋಪಿಗಳೇ ಎಂದೂ ವರದಿಯಾಗಿತ್ತು. ಇಷ್ಟಿದ್ದೂ, ಇವರಾರೂ ದಿನ ಪತ್ರಿಕೆಗಳ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಕಾಣಿಸಿಕೊಂಡಿಲ್ಲವಲ್ಲ, ಯಾಕೆ? ಆಯಿಷಾ ಮತ್ತು ಝುಬೇರ್‍ನನ್ನು ಹೆಚ್ಚಿನೆಲ್ಲಾ ಪತ್ರಿಕೆಗಳು ಮುಖಪುಟದಲ್ಲಿಟ್ಟು ‘ಗೌರವಿಸಿವೆ’. ಅವರ ಪೋಟೋ, ಮನೆ, ಉದ್ಯೋಗ, ವ್ಯವಹಾರ... ಎಲ್ಲವುಗಳನ್ನೂ ವಿವರವಾಗಿ ಅವು ಪ್ರಕಟಿಸಿವೆ. ಆಶಾ- ಆಯಿಷಾ ಆಗಿದ್ದೂ, ಝುಬೇರ್ ಇಬ್ಬರು ಪತ್ನಿಯರ ಪತಿ ಆಗಿದ್ದೂ, ಅವರ ಕೋಟ್ಯಂತರ ರೂಪಾಯಿಗಳ ವ್ಯವಹಾರ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್‍ಗಳು... ಎಲ್ಲವನ್ನೂ ಪತ್ರಿಕೆಗಳು ಅತೀವ ಆಸಕ್ತಿಯಿಂದ ವರದಿ ಮಾಡಿವೆ. ಇದು ತಪ್ಪು ಅನ್ನುತ್ತಿಲ್ಲ. ಒಂದು ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸುವುದು ಒಂದು ಪತ್ರಿಕೆಯ ಜವಾಬ್ದಾರಿ. ಭಯೋತ್ಪಾದನೆಯಂಥ ದೇಶ ವಿರೋಧಿ ಚಟುವಟಿಕೆಗಳಲ್ಲಿ ಯಾರೇ ತೊಡಗಿಸಿಕೊಂಡಿದ್ದರೂ ಮತ್ತು ಅವರ ಧರ್ಮ, ಭಾಷೆ, ಹೆಸರು ಏನೇ ಆಗಿದ್ದರೂ ಅವರನ್ನು ಸಮಾಜದ ಮುಂದಿಡಬೇಕಾದದ್ದು ಒಂದು ಪತ್ರಿಕೆಯ ಜವಾಬ್ದಾರಿ ಮಾತ್ರವೇ ಅಲ್ಲ, ಸರ್ವ ನಾಗರಿಕರ ಹೊಣೆಗಾರಿಕೆ ಕೂಡ. ಆದರೆ, ಆರೋಪಿಗಳನ್ನು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜಿಸಿ, ಪ್ರಕರಣವನ್ನು ಭೀಕರ ಅಥವಾ ಸಾಮಾನ್ಯ ಎಂದು ವಿಂಗಡಿಸುವುದು ನ್ಯಾಯವೇ? ಆಯಿಷಾಳಿಗಿಂತ ವಾರ ಮೊದಲೇ ಗೋಪಾಲ್, ವಿಕಾಸ್, ಪವನ್, ಗಣೇಶ್‍ರನ್ನು ಬಿಹಾರದಲ್ಲಿ ಬಂಧಿಸಲಾಗಿತ್ತಲ್ಲ, ಅದೇಕೆ ಪತ್ರಿಕೆಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ? ಯಾಕೆ, ಅದನ್ನೂ ಮುಖಪುಟದ ಪ್ರಕರಣವಾಗಿ ಪರಿಗಣಿಸಲಿಲ್ಲ? ನಿಜವಾಗಿ, ಆಯಿಷಾಳ ಮೇಲೆ ಸದ್ಯ ಇರುವ ಆರೋಪಕ್ಕಿಂತ ಹೆಚ್ಚು ಪ್ರಬಲವಾದ ಆರೋಪ ಈ ನಾಲ್ವರ ಮೇಲಿದೆ. ಆದರೂ, ಅವರಾರನ್ನೂ ಆಯಿಷಾಳಂತೆ ಮುಖಪುಟದ ವಸ್ತುವಾಗಿಸದೇ ಇದ್ದದ್ದು ಯಾವ ಕಾರಣದಿಂದ? ಅವರ ಹೆಸರೇ, ಧರ್ಮವೇ...?
 ನಿಜವಾಗಿ, ಗೋಪಾಲ್, ವಿಕಾಸ್, ಪವನ್, ಗಣೇಶ್ ಎಂಬ ಈ ನಾಲ್ವರನ್ನು ಬಂಧಿಸಲಾಗಿದೆ ಎಂಬುದು ಹೆಚ್ಚಿನ ಓದುಗರಿಗೆ ಗೊತ್ತಾದದ್ದೇ ಆಯಿಷಾಳ ಬಂಧನದ ಬಳಿಕ. ಅಯಿಷಾ ಪ್ರಕರಣವನ್ನು ವಿವರಿಸುವಾಗ ಅನಿವಾರ್ಯವಾಗಿ ಪತ್ರಿಕೆಗಳು ಇವರ ಹೆಸರನ್ನು ಉಲ್ಲೇಖಿಸಿದ್ದುವು. ಆದರೆ, ಅವರ ಹೆಸರನ್ನು ಬಿಟ್ಟರೆ ಉಳಿದಂತೆ ಯಾವ ವಿವರವನ್ನೂ ಅವು ಓದುಗರ ಮುಂದಿಟ್ಟಿಲ್ಲ. ಆದ್ದರಿಂದಲೇ, ಮಾಧ್ಯಮ ಧೋರಣೆಗಳ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವುದು. ಕೆಲವು ತಿಂಗಳ ಹಿಂದೆ ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಕೆಲವು ಯುವಕರನ್ನು ಬಂಧಿಸಲಾಗಿತ್ತು. ಅವರಲ್ಲಿ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನೂ ಇದ್ದ. ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕಲ್ಪಿತ ವರದಿಗಳು ಪ್ರಕಟವಾದದ್ದು ಈತನ ಬಗ್ಗೆಯೇ. ಈತನನ್ನು ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಜಿಹಾದಿ ಪತ್ರಕರ್ತ ಅಂದುವು. ಆತನನ್ನು ಬಂಧಿಸದೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಏನೆಲ್ಲ ಅನಾಹುತಗಳಾಗುತ್ತಿದ್ದುವು ಎಂಬುದನ್ನೆಲ್ಲಾ ಪಟ್ಟಿ ಮಾಡಿದುವು. ಆದ್ದರಿಂದಲೇ, ಬಂಧನದ 6 ತಿಂಗಳ ಬಳಿಕ ತನಿಖಾ ಸಂಸ್ಥೆಗಳು ಆತನನ್ನು ನಿರಪರಾಧಿ ಎಂದು ಬಿಟ್ಟು ಬಿಟ್ಟಾಗ ಮಾಧ್ಯಮಗಳು ತೀವ್ರ ಟೀಕೆಗೆ ಗುರಿಯಾದುವು. ಮಾಧ್ಯಮ ನಿಲುವನ್ನು ಪ್ರಶ್ನಿಸುವ ಸಂಕೇತವಾಗಿ ಆತ ಸಮಾಜದ ಮುಂದಿದ್ದ. ಹಾಗೆಯೇ, 2012ರ ಅಕ್ಟೋಬರ್ 11ರಂದು ಭಟ್ಕಳದಲ್ಲಿ ಬಂದ್ ಆಚರಿಸಲಾಗಿತ್ತು. ಭಟ್ಕಳದ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುಳ್ಳು ಸುದ್ದಿಗಳನ್ನು ಖಂಡಿಸಿ ಈ ಬಂದ್‍ಗೆ ಕರೆ ಕೊಡಲಾಗಿತ್ತು. ಆ ಬಂದ್‍ಗೆ ಸಾರ್ವಜನಿಕರು ಎಷ್ಟರ ಮಟ್ಟಿಗೆ ಸ್ಪಂದಿಸಿದರೆಂದರೆ, ಅಕ್ಟೋಬರ್ 11ರಂದು ಇಡೀ ದಿನ ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರಯಲಿಲ್ಲ. ವಾಹನಗಳು ಓಡಾಡಲಿಲ್ಲ.
 ಹಾಗಂತ, ಮಾಧ್ಯಮಗಳಲ್ಲಿ ಇರುವವರೇನೂ ಅನ್ಯಗ್ರಹ ಜೀವಿಗಳು ಎಂದು ನಾನು ಹೇಳುತ್ತಿಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲ ಪತ್ರಕರ್ತರ ಡಿಕ್ಷನರಿಯಲ್ಲಿ `ಗೌರವಾರ್ಹ' ಪದಗಳು ಎಂಬ ಅರ್ಥವೂ ಇಲ್ಲ.  ಪತ್ರಕರ್ತರೂ ಸಮಾಜ ಜೀವಿಗಳೇ. ಸಂಪಾದಕರಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕರಾಗಲಿ, ಓದುಗರಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೂ ಅವರಿಗೆ ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ, ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆಯೇ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಊರನ್ನೇ ಹೊತ್ತಿಸಿಬಿಡುವ ಸಾಮಥ್ರ್ಯ ಇರುತ್ತದೆ. ಹೀಗಿರುವಾಗ ಮಾಧ್ಯಮಗಳ ವಹಿಸಬೇಕಾದ ಎಚ್ಚರ ಕಡಿಮೆಯದಲ್ಲ. ಅಂದಹಾಗೆ, ಓದುಗರಂತೆ ಪತ್ರಿಕೆಗಳಿಗಿಂತಲೂ ಕೆಲವು ಜವಾಬ್ದಾರಿಗಳಿವೆ. ಪ್ರತಿದಿನ ಹದಿನಾಲ್ಕೊ ಇಪ್ಪತ್ತೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಹೊಣೆಗಾರಿಕೆಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರಗಳೂ ಸಮಾಜದ ಆರೋಗ್ಯವನ್ನು ಕಾಪಾಡುವುಷ್ಟು ಸತ್ಯ, ನ್ಯಾಯನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರ್‍ನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬ್ ಎಂದೂ ಬರೆಯುವುದು ಸುಲಭ. ‘ಮೂಲಗಳು ತಿಳಿಸಿವೆ...’ ಎಂಬ 8 ಅಕ್ಷರಗಳನ್ನು ಬಳಸಿ ಭಯೋತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ. ಅದಕ್ಕೆ ಪೆನ್ನು ಮತ್ತು ಕಾಗದ ಇದ್ದರಷ್ಟೇ ಸಾಕು. ಆದರೆ, ಆ ಸುದ್ದಿ ಮಾಡುವ ಪರಿಣಾಮ ಸಣ್ಣದಲ್ಲವಲ್ಲ. ಆದ್ದರಿಂದ, ಮಾಧ್ಯಮಗಳು ಜಾಗರೂಕತೆ ಪಾಲಿಸಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯಂಥ ಪ್ರಕರಣಗಳನ್ನು ವರದಿ ಮಾಡುವಾಗ, ‘ಕಣ್ಣಲ್ಲಿ ಕಂಡರೂ ಪರಾಂಬರಿಸಿ ನೋಡು..’ ಎಂಬ ತತ್ವಕ್ಕೆ ಭದ್ರವಾಗಿ ಅಂಟಿಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ಆಯಿಷಾ ಇರಲಿ, ಗಣೇಶನೇ ಇರಲಿ ಇಬ್ಬರನ್ನೂ ವ್ಯಕ್ತಿಗಳಾಗಿ ನೋಡಬೇಕೇ ಹೊರತು ಎರಡು ಧರ್ಮಗಳ ಪ್ರತಿನಿಧಿಗಳಾಗಿ ಅಲ್ಲ. ಹೆಸರು ಗಣೇಶ್ ಎಂದು ಇದ್ದ ಮಾತ್ರಕ್ಕೇ ಆತ ಅಪ್ಪಟ ಹಿಂದೂ ಆಗುವುದು ಮತ್ತು ಆಯಿಷಾ ಎಂದು ಇದ್ದ ಮಾತ್ರಕ್ಕೇ ಆಕೆ ಅಪ್ಪಟ್ಟ ಮುಸ್ಲಿಮ್ ಆಗುವುದೆಲ್ಲ ನಮ್ಮ ನಮ್ಮ ಭ್ರಮೆ. ನಾವು ಇಂತಹ ಭ್ರಮೆಗಳಿಂದ ಹೊರ ಬರಬೇಕಾಗಿದೆ. ತಪ್ಪಿತಸ್ಥರನ್ನು ಅವರ ಧರ್ಮ, ಜಾತಿ, ಸಂಘಟನೆಗಳ ಹಂಗಿಲ್ಲದೆ ಖಂಡಿಸಬೇಕಾದ ಮತ್ತು ಅವರನ್ನು ಸಮಾಜದಿಂದ ಬೇರ್ಪಡಿಸಿ ನೋಡಬೇಕಾದ ಹೊಣೆಗಾರಿಕೆ ಸಮಾಜದಂತೆಯೇ ಪತ್ರಿಕೆಗಳ ಮೇಲೂ ಇದೆ.
 ಏನೇ ಆಗಲಿ, ತಾನು ಬಂಧನಕ್ಕೆ ಒಳಗಾಗುವ ಮೂಲಕ ಮಾಧ್ಯಮಗಳ ಧೋರಣೆಯನ್ನು ಆಯಿಷಾ ಮತ್ತೊಮ್ಮೆ ಪ್ರಶ್ನೆಗೆ ಒಳಪಡಿಸಿದ್ದಾಳೆ. ಗೋಪಾಲ್, ವಿಕಾಸ್, ಪವನ್, ಗಣೇಶ್‍ರಿಗಿಲ್ಲದ ಮಹತ್ವ ತನ್ನ ಪ್ರಕರಣಕ್ಕೇಕೆ ಎಂಬುದೇ ಆ ಪ್ರಶ್ನೆ. ಅವರು ಮುಖಪುಟಕ್ಕೆ ಅನರ್ಹರೆಂದಾದರೆ ತಾನೇಕೆ ಅರ್ಹವಾದೆ ಎಂದೇ ಅವಳ ಪ್ರಶ್ನೆ. ಈ ಪ್ರಶ್ನೆಗಳನ್ನು ಮಾಧ್ಯಮಗಳು ಗಂಭೀರವಾಗಿ ಸ್ವೀಕರಿಸಿ, ಆತ್ಮಾವಲೋಕನ ನಡೆಸಬೇಕಾಗಿದೆ. ತಪ್ಪನ್ನು ತಿದ್ದಿಕೊಳ್ಳುತ್ತಾ, ‘ನ್ಯಾಯ ಎಲ್ಲರಿಗೂ ಒಂದೇ..’ ಎಂಬ ಧೋರಣೆಯೆಡೆಗೆ ಮರಳಬೇಕಾಗಿದೆ.

Wednesday, November 6, 2013

ವಿದ್ವಾಂಸರೇ, ನಿಮಗೆ ಸಮುದಾಯದ ಮಾನ, ಕಣ್ಣೀರಿಗಿಂತ ಭಿನ್ನಾಭಿಪ್ರಾಯಗಳೇ ದೊಡ್ಡದಾಯಿತೇ?


  ವರದಕ್ಷಿಣೆ
  ಬಡತನ
  ನಿರುದ್ಯೋಗ
  ಶೈಕ್ಷಣಿಕ ಹಿಂದುಳಿಯುವಿಕೆ
  ಅಪರಾಧ ಪ್ರವೃತ್ತಿಗಳು..
  ಇವು ಮತ್ತು ಇಂಥ ಇನ್ನೂ ಅನೇಕ ಸಮಸ್ಯೆಗಳನ್ನು ಹೊತ್ತು ತಿರುಗುತ್ತಿರುವ ಮುಸ್ಲಿಮ್ ಸಮುದಾಯ ಯಾವ ಕಾರಣಕ್ಕಾಗಿ ಸುದ್ದಿಯಲ್ಲಿರಬೇಕು? ಅದರ ಆದ್ಯತೆಗಳು ಏನಾಗಿರಬೇಕು? ಒಂದು ಕಡೆ ಅನಕ್ಷರಸ್ಥರಾಗಿರುವ ಹಾಜಬ್ಬ ಎಂಬ ಬ್ಯಾರಿ ರಾಜ್ಯೋತ್ಸವ ಪ್ರಶಸ್ತಿ ಪಡಕೊಳ್ಳುವಾಗ ಇನ್ನೊಂದು ಕಡೆ ಈ ಸಂಭ್ರಮದ ಕ್ಷಣವನ್ನು ಅನುಭವಿಸದಂಥ ವಾತಾವರಣವನ್ನು ಅಕ್ಷರಸ್ಥರು, ಜ್ಞಾನಿಗಳು, ವಿದ್ವಾಂಸರೆನಿಸಿಕೊಂಡವರು ನಿರ್ಮಿಸಿರುವರೇಕೆ? ಹಾಜಬ್ಬರ ಹರೇಕಳಕ್ಕೂ ಶುಕ್ರವಾರದ ಜುಮಾ ನಮಾಝನ್ನು ಬೀದಿ ಜಗಳವಾಗಿಸಿದ ಉಳ್ಳಾಲಕ್ಕೂ ಕೂಗಳತೆಯ ಅಂತರ. ಒಂದು ಕಡೆ ಅನಕ್ಷರಸ್ಥ. ಇನ್ನೊಂದು ಕಡೆ ಅಕ್ಷರಸ್ಥರು. ಒಂದು ಕಡೆ ಕಿತ್ತಳೆ ಹಣ್ಣನ್ನು ಮಾರುವ ಸಾಮಾನ್ಯ ಶ್ರಮಿಕ. ಇನ್ನೊಂದು ಕಡೆ ಸಮುದಾಯದ ಆದರ, ಗೌರವಕ್ಕೆ ಪಾತ್ರರಾದ ಮಂದಿ. 51 ನಂಬರ್‍ನ ಬಸ್ಸಲ್ಲಿ ಹರೇಕಳದಿಂದ ಮಂಗಳೂರಿನವರೆಗೆ ಬಂದು, ಬುಟ್ಟಿಯಲ್ಲಿ ಕಿತ್ತಳೆ ಹಣ್ಣನು ತುಂಬಿಸಿ ಗಿರಾಕಿಗಳನ್ನು ಹುಡುಕುತ್ತಾ ತಿರುಗುವ ಹಾಜಬ್ಬರಿಂದ ಒಂದು ಸರಕಾರವೇ ಗೌರವಿಸುವಂಥ ಕ್ರಾಂತಿಯನ್ನು ಮಾಡಲು ಸಾಧ್ಯವೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವ ವಿದ್ವಾಂಸರಿಗೆ ಸಾಮುದಾಯಿಕ ಕ್ರಾಂತಿಯೊಂದಕ್ಕೆ ಮುನ್ನಡಿ ಬರೆಯುವುದು ಖಂಡಿತ ಅಸಾಧ್ಯ ಅಲ್ಲ. ಸಮುದಾಯದಲ್ಲಿ ಬವಣೆಯ ಕತೆಗಳು ನೂರಾರು ಇವೆ. ಇವುಗಳಲ್ಲಿ ಹೆಚ್ಚಿನವು ಕಣ್ಣೀರಿನೊಂದಿಗೆ ಆರಂಭವಾಗಿ ಕಣ್ಣೀರಿನೊಂದಿಗೆ ಕೊನೆಗೊಳ್ಳುವಂಥವು. ಹಾಗಂತ, ಈ ಎಲ್ಲ ಕಣ್ಣೀರ ಕತೆಗಳಿಗೂ ವಿದ್ವಾಂಸರೇ ಕಾರಣವೆಂದು ಹೇಳುತ್ತಿಲ್ಲ. ಎಲ್ಲ ಸಮಸ್ಯೆಗಳನ್ನೂ ಕ್ಷಣ ಮಾತ್ರದಲ್ಲಿ ಇಲ್ಲವಾಗಿಸುವ ಮಂತ್ರ ದಂಡವೂ ಅವರಲ್ಲ. ಆದರೂ, ಅವರು ಮನಸ್ಸು ಮಾಡಿದರೆ, ಈ ಕಣ್ಣೀರ ಕತೆಗಳಲ್ಲಿ ದೊಡ್ಡದೊಂದು ಭಾಗವನ್ನು ಪನ್ನೀರ ಕತೆಗಳಿಗಾಗಿ ಮಾರ್ಪಡಿಸುವುದಕ್ಕೆ ನಿಜಕ್ಕೂ ಸಾಧ್ಯವಿದೆ. ಯಾಕೆಂದರೆ, ವಿದ್ವಾಂಸರೆಂದರೆ ಹಾಜಬ್ಬರಂತೆ ಅಲ್ಲ. ಅವರ ಮಾತು, ಆದೇಶಗಳನ್ನು ಸಮುದಾಯ ಅಪಾರ ಗೌರವದಿಂದ ಕಾಣುತ್ತದೆ. ಜನಪ್ರತಿನಿಧಿಗಳ ಹೇಳಿಕೆಗಳಂತೆ ವಿದ್ವಾಂಸರ ಅಭಿಪ್ರಾಯಗಳನ್ನು ಸಮುದಾಯ ಎಂದೂ ಪರಿಗಣಿಸುವುದಿಲ್ಲ. ಅವರೊಂದು ಪರೋಕ್ಷ ನ್ಯಾಯಾಲಯ. ಆ ನ್ಯಾಯಾಲಯದ ತೀರ್ಪನ್ನು ಸಮುದಾಯ ಅತೀ ಗೌರವದಿಂದ ಸ್ವೀಕರಿಸಿ ಪಾಲಿಸುವಷ್ಟು ಅವರ ಪ್ರಭಾವ ಹರಡಿಕೊಂಡಿದೆ. ಇಂಥ ಸ್ಥಿತಿಯಲ್ಲಿ, ವಿದ್ವಾಂಸ ವಲಯವು ಸಮುದಾಯದಲ್ಲಿ ನಿರ್ವಹಿಸಬೇಕಾದ ಪಾತ್ರ ಏನಾಗಿತ್ತು? ಅದರ ಸ್ವರೂಪ ಹೇಗಿರಬೇಕಿತ್ತು? ಸದ್ಯ ಅದು ಯಾವ ಪಾತ್ರವನ್ನು ನಿರ್ವಹಿಸುತ್ತಿದೆ? ಇಷ್ಟಕ್ಕೂ, ಯಾವುದಾದರೊಂದು ಒಂಟಿ ಪ್ರಕರಣವನ್ನು ಎತ್ತಿಕೊಂಡು ಹೀಗೆ ಪ್ರಶ್ನಿಸುತ್ತಿಲ್ಲ. ಇಂಥ ಪ್ರಶ್ನೆಗಳಿಗೆ ಪ್ರಚೋದಕವಾಗುವ ಅನೇಕಾರು ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ನಡೆದಿವೆ, ನಡೆಯುತ್ತಿವೆ. ಇಂಥ ನಕಾರಾತ್ಮಕ ಪ್ರಕರಣಗಳಿಂದಾಗಿ ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಗೀಡಾಗುವುದಕ್ಕಿಂತ ಸಕಾರಾತ್ಮಕ ಪ್ರಕರಣಗಳಿಗಾಗಿ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುವಂಥ ಸುದ್ದಿಗಳನ್ನು ಸೃಷ್ಟಿಸುವುದಕ್ಕೆ ವಿದ್ವಾಂಸರಿಗೆ ಸಾಧ್ಯವಿಲ್ಲವೇ?
  ಭಿನ್ನಾಭಿಪ್ರಾಯವೆಂಬುದು ಮೊನ್ನೆ ಉಳ್ಳಾಲದ ಜುಮಾ ಪ್ರಕರಣದಿಂದ ದಿಢೀರಾಗಿ ಉದ್ಭವಿಸಿದ ಹೊಸ ಜೀವಿಯೇನೂ ಅಲ್ಲ. ಭಿನ್ನಾಭಿಪ್ರಾಯಕ್ಕೆ ಮನುಷ್ಯನ ಉಸಿರಿನಷ್ಟೇ ಆಪ್ತವಾದ ಮತ್ತು ಸಹಜವಾದ ಸಂಬಂಧ ಇದೆ. ಆದ್ದರಿಂದ ಭಿನ್ನಾಭಿಪ್ರಾಯವನ್ನೇ ಮಟ್ಟ ಹಾಕುವುದು ಅಥವಾ ಭಿನ್ನಾಭಿಪ್ರಾಯವಿಲ್ಲದ ಒಂದು ಸಮೂಹವನ್ನು ಕಟ್ಟುವುದು ಯಾರಿಂದಲೂ ಸಾಧ್ಯವಿಲ್ಲ. ಸಮುದಾಯದಲ್ಲಿ ಅನೇಕಾರು ಸಂಘಟನೆಗಳಿವೆ. ಈ ಸಂಘಟನೆಗಳಿಗೆ ಅವುಗಳದ್ದೇ ಆದ ಭಿನ್ನಧೋರಣೆ ಗುರಿ, ಹಿತಾಸಕ್ತಿಗಳಿವೆ. ಇವು ಏನೇ ಇದ್ದರೂ ಈ ಸಂಘಟನೆಗಳಲ್ಲಿ ಇರುವವರೆಲ್ಲ ಒಂದೇ ದೇವ, ಒಂದೇ ಗ್ರಂಥ, ಒಂದೇ ಪ್ರವಾದಿ, ಒಂದೇ ಕಿಬ್ಲಾ(ನಮಾಝಿಗೆ ಮುಖ ಮಾಡುವ ಸ್ಥಳ)ವನ್ನು ಒಪ್ಪಿಕೊಂಡವರು. ‘ಉಮ್ಮತ್’ (ಸಮುದಾಯ) ಎಂಬ ಪರಿಕಲ್ಪನೆಯಲ್ಲಿ ಗುರುತಿಸಿಕೊಂಡವರು. ಹೀಗಿರುವಾಗ, ಸಂಘಟನೆಗಳ ಮಧ್ಯೆ ಒಂದು ನವಿರಾದ ಸಂಬಂಧವನ್ನು ಬೆಳೆಸಿಕೊಳ್ಳಲು ಸಮುದಾಯಕ್ಕೆ ಸಾಧ್ಯವಿಲ್ಲವೇ? ಒಂದು ಸಮುದಾಯದಲ್ಲಿ ಒಂದಕ್ಕಿಂತ ಹೆಚ್ಚು ಸಂಘಟನೆಗಳಿರುವುದು ವರವಾಗಬೇಕೆ ಹೊರತು ಶಾಪ ಅಲ್ಲವಲ್ಲ. ಒಂದು ಸಂಘಟನೆಯು ಸಮುದಾಯ ಎದುರಿಸುತ್ತಿರುವ ಸಕಲ ಸಮಸ್ಯೆಗಳನ್ನೂ ಪ್ರತಿನಿಧಿಸುವಷ್ಟು, ಅವುಗಳ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗುವಷ್ಟು ಸಮರ್ಥ ಆಗಿರಬೇಕಿಲ್ಲ. ಅಷ್ಟೊಂದು ಬಂಡವಾಳ, ಯೋಗ್ಯ ಕಾರ್ಯಕರ್ತರು, ವಿಶಾಲ ನೆಟ್‍ವರ್ಕ್ ಇರುವ ಅವಕಾಶಗಳೂ ಕಡಿಮೆ. ಆದ್ದರಿಂದ ಸಂಘಟನೆಗಳು ಒಂದಕ್ಕಿಂತ ಹೆಚ್ಚಿರುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವು ತಮ್ಮನ್ನು ತೊಡಗಿಸಿಕೊಳ್ಳುವುದು ಸ್ವಾಗತಾರ್ಹವೇ. ಒಂದು ಸಂಘಟನೆ ಶಿಕ್ಷಣವನ್ನು ಕೇಂದ್ರೀಕರಿಸಿದರೆ ಇನ್ನೊಂದು ವರದಕ್ಷಿಣೆಯನ್ನು ಎತ್ತಿಕೊಳ್ಳಬಹುದು. ಇನ್ನೊಂದು, ಹಸಿವು ಮುಕ್ತ ಸಮಾಜದ ಬಗ್ಗೆ, ಮತ್ತೊಂದು ಮಹಿಳಾ ಸಬಲೀಕರಣದ ಬಗ್ಗೆ.. ಹೀಗೆ ವಿವಿಧ ಕ್ಷೇತ್ರಗಳನ್ನು ಹಂಚಿಕೊಳ್ಳುವುದರಿಂದ ಸಮುದಾಯದ ಸಬಲೀಕರಣಕ್ಕೆ ಹೆಚ್ಚು ಸುಲಭ ಮತ್ತು ವೇಗ ಒದಗುತ್ತದೆ. ಹಾಗಂತ, ಇವೆಲ್ಲವನ್ನೂ ಇಲ್ಲಿ ವಿಸ್ತøತವಾಗಿ ಹೇಳಿಕೊಳ್ಳಬೇಕೆಂದೇನೂ ಇಲ್ಲ. ವಿದ್ವಾಂಸ ವಲಯಕ್ಕೆ ಇವು ಚೆನ್ನಾಗಿಯೇ ಗೊತ್ತಿದೆ. ಇಷ್ಟಿದ್ದೂ, ಭಿನ್ನಾಭಿಪ್ರಾಯಗಳೇಕೆ ಬೀದಿ ಜಗಳವಾಗಿ ಗುರುತಿಸಿಕೊಳ್ಳುತ್ತಿದೆ? ತೀರಾ ನಾಲ್ಕು ಗೋಡೆಗಳೊಳಗೆ ಬಗೆಹರಿಸಿಕೊಳ್ಳಬಹುದಾದಂಥ ಸಮಸ್ಯೆಗಳೆಲ್ಲ ಪತ್ರಿಕೆಗಳು ಮತ್ತು ಟಿ.ವಿ. ಚಾನೆಲ್‍ಗಳಿಗೆ ಆಹಾರವಾಗುವಷ್ಟು ಬೃಹದಾಕಾರ ಪಡೆಯುತ್ತಿರುವುದೇಕೆ? ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯದ ಮಾನ, ಗೌರವ, ಅಭಿವೃದ್ಧಿಗಿಂತಲೂ ದೊಡ್ಡದೇ? ಸಮುದಾಯವು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗಿಂತಲೂ ಸದ್ಯ ಸಂಘಟನೆಗಳು ಬೀದಿ ಜಗಳವಾಗಿಸುತ್ತಿರುವ ವಿಷಯ ಅತಿ ಪ್ರಾಮುಖ್ಯದ್ದೇ? ದಯವಿಟ್ಟು; ಬೀಡಿ ಸುರುಟುವ, ಬಾರದ ಗಂಡನನ್ನು ನಿರೀಕ್ಷಿಸುತ್ತಾ ನಿಟ್ಟುಸಿರು ಬಿಡುವ, ಸೂಕ್ತ ವರರನ್ನು ಖರೀದಿಸುವ ಸಾಮಥ್ರ್ಯವಿಲ್ಲದೇ ಅಂಡಲೆಯುವ, ವರದಕ್ಷಿಣೆಯ ಕಾರಣದಿಂದ ದೂರದ ಘಟ್ಟಪ್ರದೇಶಕ್ಕೆ ಮಗಳನ್ನು ಮದುವೆ ಮಾಡಿಕೊಟ್ಟು ಆತಂಕದಿಂದಲೇ ಬದುಕುತ್ತಿರುವ, ಮೂರು ಹೊತ್ತು ಹೊಟ್ಟೆ ತುಂಬ ಊಟ ಮಾಡುವವರನ್ನು ಕಂಡು ಉಗುಳು ನುಂಗಿಕೊಳ್ಳುವ.. ಒಂದು ಸಮುದಾಯವನ್ನು ಎದುರಿಟ್ಟುಕೊಂಡು ಹೃದಯಕ್ಕೆ ಕೈಯಿಟ್ಟು ಪ್ರಶ್ನಿಸಿಕೊಳ್ಳಿ. ನಮ್ಮ ಆದ್ಯತೆ ಏನಾಗಿರಬೇಕು? ಯಾವುದರತ್ತ ನಾವು ಗಮನ ಹರಿಸಬೇಕು? ಕಿತ್ತಳೆ ಹಣ್ಣನ್ನು ಮಾರಿ ಓರ್ವ ಸಾಮಾನ್ಯ ಹಾಜಬ್ಬರಿಗೆ ಒಂದು ಊರನ್ನೇ ಬೆಳಗಿಸುವ ಸಾಮಥ್ರ್ಯ ಇದೆಯೆಂದಾದರೆ, ಸಮುದಾಯದ ನೇತೃತ್ವ ಸ್ಥಾನದಲ್ಲಿರುವವರಿಗೆ ಎಷ್ಟು ಸಾಮಥ್ರ್ಯ ಇರಬೇಡ? ಆ ಸಾಮಥ್ರ್ಯವು ಸರಿಯಾದ ರೂಪದಲ್ಲಿ ವಿನಿಯೋಗವಾಗಿಬಿಟ್ಟರೆ ಎಂಥ ಬದಲಾವಣೆಗಳಾಗಬಹುದು?
  ನಿಜವಾಗಿ, ಇಡೀ ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಸಂಘಟಿತವಾಗಿರುವುದು ಮುಸ್ಲಿಮ್ ಸಮುದಾಯವೇ. ಮುಸ್ಲಿಮರು ವಾರಕ್ಕೊಮ್ಮೆಯಾದರೂ ಕಡ್ಡಾಯವಾಗಿ ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ಅಲ್ಲಿ ವಿದ್ವಾಂಸರಿಂದ ಧಾರ್ಮಿಕ ಹಿತವಚನಗಳನ್ನು ಆಲಿಸುತ್ತಾರೆ. ಮಸೀದಿಗೆ ತಿಂಗಳು ತಿಂಗಳು ವಂತಿಗೆ ಕೊಡುತ್ತಾರೆ. ಅಲ್ಲದೇ, ಒಂದು ಮಸೀದಿಯ ವ್ಯಾಪ್ತಿಯೊಳಗೆ ಬರುವವರ ಹೆಸರು, ಮನೆಯ ಸದಸ್ಯರ ಸಂಖ್ಯೆ, ಗಂಡು-ಹೆಣ್ಣಿನ ವಿವರ.. ಎಲ್ಲವೂ ಆಯಾ ಮಸೀದಿಯಲ್ಲಿ ಬಹುತೇಕ ನಮೂದಾಗಿರುತ್ತದೆ. ಯಾವ ಮನೆಯಲ್ಲಿ ಮದುವೆ ಪ್ರಾಯದ ಎಷ್ಟು ಯುವತಿಯರಿದ್ದಾರೆ, ಎಷ್ಟು ವಿಧವೆಯರಿದ್ದಾರೆ, ರೋಗಿಗಳೆಷ್ಟು, ದುಡಿಯುವವರೆಷ್ಟು, ಮಕ್ಕಳೆಷ್ಟು.. ಎಂಬುದೆಲ್ಲ ಒಂದು ಮಸೀದಿಗೆ ಒಳಪಟ್ಟವರಲ್ಲಿ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆ ಮಸೀದಿಯ ಆಡಳಿತ ಮಂಡಳಿ ಮತ್ತು ಧಾರ್ಮಿಕ ಗುರುಗಳು ತುಸು ಜಾಗೃತವಾದರೂ ಸಾಕು, ಅವಕಾಶಗಳ ದೊಡ್ಡದೊಂದು ಬಾಗಿಲೇ ತೆರೆದು ಬಿಡಬಹುದು. ಇವತ್ತು ಸಮುದಾಯದಲ್ಲಿ ದಾನಿಗಳಿಗೆ ಕೊರತೆಯೇನೂ ಇಲ್ಲ. ಕೊರತೆ ಇರುವುದು ಇಚ್ಛಾಶಕ್ತಿಯದ್ದು ಮಾತ್ರ. ನಿಜವಾಗಿ, ಪ್ರತಿ ಮಸೀದಿಯ ಜಮಾಅತ್‍ನಲ್ಲೂ ಶ್ರೀಮಂತರು ಮತ್ತು ವಿದೇಶಗಳಲ್ಲಿ ಉದ್ಯೋಗದಲ್ಲಿ ಇರುವವರು ಖಂಡಿತ ಇರುತ್ತಾರೆ. ಹಾಗಂತ, ತಮ್ಮ ಮಸೀದಿಯಲ್ಲಿರುವ ಬಡವರ ಕುರಿತಂತೆ ಅವರಿಗೆ ಅಷ್ಟಾಗಿ ಮಾಹಿತಿ ಇರಬೇಕೆಂದೇನೂ ಇಲ್ಲ. ಒಂದು ವೇಳೆ ಇದ್ದರೂ, ನೆರವು ನೀಡಬೇಕಾದುದು ತನ್ನ ಧಾರ್ಮಿಕ ಕರ್ತವ್ಯ ಎಂಬ ಪ್ರಜ್ಞೆ ಅವರನ್ನು ಇಲ್ಲದೇ ಇರಲೂಬಹುದು. ಆದ್ದರಿಂದ, ಆಯಾ ಪ್ರದೇಶದ ಮಸೀದಿ ವಿದ್ವಾಂಸರು ತಮ್ಮ ವ್ಯಾಪ್ತಿಯ ಬಡವರ ಪಟ್ಟಿಯನ್ನು ಹಿಡಿದು ಈ ಶ್ರೀಮಂತರನ್ನು ಮುಖತಃ ಭೇಟಿಯಾದರೆ ಎಷ್ಟೇ ಜಿಪುಣನಾದರೂ ಖಂಡಿತ ನೆರವು ನೀಡುವ ಸಾಧ್ಯತೆಯಿದೆ. ಅಲ್ಲದೆ, ಸಮುದಾಯದಲ್ಲಿ ದೊಡ್ಡದೊಂದು ಯುವ ಪಡೆಯಿದೆ. ಇವತ್ತು ಈ ಯುವ ಪಡೆಯ ಮೇಲಿರುವ ದೊಡ್ಡ ಆರೋಪ ಏನೆಂದರೆ, ಸಮಾಜ ಬಾಹಿರ ಕೃತ್ಯಗಳಲ್ಲಿ ಇವರ ಹೆಸರೇ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು. ಹೀಗಿರುವಾಗ ಮಸೀದಿ ಉಸ್ತಾದರೂ ಸಕ್ರಿಯರಾದರೆ ಸಮುದಾಯದ ಯುವಕರನ್ನು ಸಂಪನ್ಮೂಲವಾಗಿ ಬದಲಿಸಲು ಖಂಡಿತ ಸಾಧ್ಯವಿದೆ. ಯುವಕರು ಎಷ್ಟೇ ಕೆಟ್ಟವರಾಗಿದ್ದರೂ ವಿದ್ವಾಂಸರನ್ನು (ಉಸ್ತಾದರನ್ನು) ಗೌರವಿಸುತ್ತಾರೆ. ಆದ್ದರಿಂದ ಯುವಕರೊಂದಿಗೆ ಸಲುಗೆ ಬೆಳೆಸಿ ಅವರನ್ನು ಮಸೀದಿಯಲ್ಲಿ ಒಟ್ಟುಗೂಡಿಸಿ, ಮಸೀದಿಯ ವ್ಯಾಪ್ತಿಗೊಳಪಟ್ಟ ಪ್ರತಿ ಮನೆಗಳ ಸರ್ವೇ ನಡೆಸುವುದಕ್ಕೆ ಒಂದು ತಂಡ; ರೋಗಿಗಳು, ವಿಧವೆಯರು, ಯುವತಿಯರ ಪಟ್ಟಿ ತಯಾರಿಸುವುದಕ್ಕೆ ಒಂದು ತಂಡ; ಪಟ್ಟಣಗಳಲ್ಲಿರುವ ದಾನಿಗಳು ಮತ್ತು ಸಮಾಜಸೇವಾ ಸಂಘಟನೆಗಳನ್ನು ಸಂಪರ್ಕಿಸುವುದಕ್ಕೆ ಒಂದು ತಂಡ.. ಹೀಗೆ ಮೂರ್ನಾಲ್ಕು ಯುವಕರ ಬೇರೆ ಬೇರೆ ತಂಡಗಳನ್ನು ರಚಿಸಿ ಆಯಾ ತಂಡಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟರೆ ಮತ್ತು ಉಸ್ತಾದರು ಸಕ್ರಿಯವಾಗಿ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡರೆ ದೊಡ್ಡದೊಂದು ಬದಲಾವಣೆ ಸಾಧ್ಯವಾದೀತು.
  ಏನೇ ಆಗಲಿ, ಸಂಘಟನಾತ್ಮಕ ಭಿನ್ನಾಭಿಪ್ರಾಯಗಳು ಸಮುದಾಯವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳಿಗಿಂತ ದೊಡ್ಡದೋ ಪ್ರಾಮುಖ್ಯದೋ ಆಗಬಾರದು. ಭಿನ್ನಾಭಿಪ್ರಾಯಗಳ ಮಧ್ಯೆಯೂ ಪರಸ್ಪರ ಜೋಕ್ ವಿನಿಮಯ ಮಾಡಿಕೊಳ್ಳುವಷ್ಟು, ಒಟ್ಟಿಗೆ ಕೂತು ಉಣ್ಣುವಷ್ಟು, ಸಲಾಮ್ ಹೇಳುವಷ್ಟು, ಪರಸ್ಪರರ ಮನೆ, ಮದುವೆ, ಔತಣಗಳಲ್ಲಿ ಭಾಗವಹಿಸುವಷ್ಟು ಹೃದ್ಯ ಸಂಬಂಧವು ವಿದ್ವಾಂಸ ವಲಯದಲ್ಲಿ ಇರಬೇಕು. ಯಾಕೆಂದರೆ, ವಿದ್ವಾಂಸ ವಲಯವು ಒಡೆದರೆ ಸಮುದಾಯವೂ ಒಡೆಯುತ್ತದೆ. ಅವು ಮುಖ ಗಂಟಿಕ್ಕಿಕೊಂಡು ನಡೆದಾಡಿದರೆ, ಸಮುದಾಯದಲ್ಲಿ ಸಲಾಮ್‍ಗಳೇ ನಿಂತು ಹೋಗುತ್ತದೆ. ಈ ಹಿನ್ನೆಲೆಯಲ್ಲಿ, ಭಿನ್ನಾಭಿಪ್ರಾಯಗಳು ಹೇಗಿರಬೇಕು ಮತ್ತು ಅದನ್ನು ಎಷ್ಟರ ಮಟ್ಟಿಗೆ ಬೆಳೆಸಿಕೊಂಡು ಹೋಗಬೇಕು ಎಂಬ ಬಗ್ಗೆ ವಿದ್ವಾಂಸರು ಗಂಭೀರವಾಗಿ ಆಲೋಚಿಸಬೇಕು. ಅನಕ್ಷರಸ್ಥ ಹಾಜಬ್ಬರು ಅಕ್ಷರಸ್ಥರೇ ತಲೆಬಾಗುವಂಥ ಸಾಧನೆಯೊಂದನ್ನು ಮಾಡಿ ಸರ್ವತ್ರ ಶ್ಲಾಘನೆಗೆ ಒಳಗಾಗಿರುವಾಗ, ವಿದ್ವಾಂಸ ವಲಯವು ಸರ್ವತ್ರ ಟೀಕೆಗೆ ಗುರಿಯಾಗಬಹುದಾದ ರೀತಿಯಲ್ಲಿ ನಡಕೊಳ್ಳಬಾರದು. ಹಾಜಬ್ಬರನ್ನು  ಅಭಿನಂದಿಸೋಣ. ಅವರ ಕಿತ್ತಲೆ ಹಣ್ಣಿನ ಬುಟ್ಟಿಯಲ್ಲಿ ಇನ್ನಷ್ಟು ಕ್ರಾಂತಿಕಾರಿ ಆಲೋಚನೆಗಳು ಹುಟ್ಟು ಪಡೆಯಲಿ. ಹಾಗೆಯೇ, ವಿದ್ವಾಂಸ ವಲಯವು ಸರ್ವತ್ರ ಶ್ಲಾಘನೆಗೆ ಪಾತ್ರವಾಗುವ ಕ್ರಾಂತಿಕಾರಿ ನಿಲುವಿಗೆ ಮುನ್ನುಡಿ ಬರೆಯಲಿ. ಹಾಜಬ್ಬರ ಬುಟ್ಟಿ ಮತ್ತು ವಿದ್ವಾಂಸ ವಲಯದ ಜ್ಞಾನವು ಮುಂದಿನ ದಿನಗಳಲ್ಲಿ ಸಮುದಾಯಕ್ಕೆ ಕಿತ್ತಳೆ ಹಣ್ಣಿನಷ್ಟೇ ರುಚಿಕರ ಮತ್ತು ಸ್ವಾದಭರಿತ ಸುದ್ದಿಗಳನ್ನು ರವಾನಿಸಲಿ.

Thursday, October 24, 2013

ನಿರ್ಭಯಳಿಗೆ ಸಾಧ್ಯವಾದದ್ದು ಸೌಜನ್ಯಳಿಗೆ ಅಸಾಧ್ಯವಾಗಬೇಕೆಂದೇನೂ ಇಲ್ಲವಲ್ಲ

ಸೌಜನ್ಯ
   ಈ ಹೆಣ್ಣು ಮಗಳು ಇವತ್ತು ರಾಜ್ಯದಾದ್ಯಂತ ಸುದ್ದಿಯಲ್ಲಿದ್ದಾಳೆ. ಧರ್ಮಸ್ಥಳದಿಂದ ಹಿಡಿದು ಬೆಂಗಳೂರಿನ ವರೆಗೆ ಈಕೆಯ ಹೆಸರಲ್ಲಿ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಪರ ವಿರುದ್ಧ ಚರ್ಚೆಗಳಾಗುತ್ತಿವೆ. ವೀರೇಂದ್ರ ಹೆಗ್ಗಡೆಯವರ ವಿರುದ್ಧ ಬೆರಳು ತೋರಿಸುವ ಪ್ರಯತ್ನಗಳೂ ಅವರಿಂದ ನಿರಾಕರಣೆಯ ಹೇಳಿಕೆಗಳೂ ಮಾಧ್ಯಮಗಳಲ್ಲಿ ದಪ್ಪಕ್ಷರಗಳಲ್ಲಿ ಪ್ರಕಟವಾಗುತ್ತಿವೆ. ಹೀಗೆ ಒಂದು ಬಗೆಯ ಅನುಮಾನ ಸಮಾಜದಲ್ಲಿ ಸಹಜವಾಗಿ ಸೃಷ್ಟಿಯಾಗಿದೆ. ಹಾಗಂತ, ನಿತ್ಯಾನಂದ ಸ್ವಾಮಿ ಮತ್ತು ಅಸಾರಾಮ್ ಬಾಪುರ ಪಟ್ಟಿಯಲ್ಲಿಟ್ಟು ವೀರೇಂದ್ರ ಹೆಗ್ಗಡೆಯವರನ್ನು ಯಾರೂ ನೋಡುತ್ತಿಲ್ಲ, ನೋಡಬಾರದು ಕೂಡ. ಅವರಿಬ್ಬರ ಮೇಲಿನ ಆರೋಪಕ್ಕೂ ಈ ಪ್ರಕರಣಕ್ಕೂ ನಡುವೆ ಖಂಡಿತ ವ್ಯತ್ಯಾಸ ಇದೆ. ಹಾಗಿದ್ದರೂ, ಸೌಜನ್ಯಳನ್ನು ಕೇಂದ್ರೀಕರಿಸಿ ಇವತ್ತು ಹುಟ್ಟಿಕೊಂಡಿರುವ ಚರ್ಚೆಯು ಕೆಲವೊಂದು ಮೂಲಭೂತ ಪ್ರಶ್ನೆಗಳನ್ನು ಎತ್ತುವಲ್ಲಿ ವಿಫಲವಾಗಿದೆsಯೇನೋ ಅನ್ನಿಸುತ್ತದೆ. ಯಾಕೆ ಹೆಣ್ಣೇ ಮತ್ತೆ ಮತ್ತೆ ಶೋಷಣೆಗೆ ಒಳಗಾಗುತ್ತಿದ್ದಾಳೆ? ಧರ್ಮಸ್ಥಳವನ್ನು ಹೊರಗಿಟ್ಟು ನೋಡಿದರೂ, ದೇಶದಲ್ಲಿ ಅನೇಕ ದೇವಮಾನವರು ಮತ್ತು ಆಧ್ಯಾತ್ಮಿಕ ಕೇಂದ್ರಗಳು ಹೆಸರು ಕೆಡಿಸಿಕೊಂಡಿರುವುದು ಹೆಣ್ಣಿನ ಕಾರಣದಿಂದಲೇ. ಆಧ್ಯಾತ್ಮಿಕ ಕೇಂದ್ರಗಳಿಗೆ ಸಮಾಜದಲ್ಲಿ ಅದರದ್ದೇ ಆದ ಗೌರವವಿದೆ. ದೇವಮಾನವರು, ಬಾಬಾಗಳೆಲ್ಲ ಈ ಗೌರವದ ಪಾಲನ್ನು ಪಡಕೊಳ್ಳುತ್ತಲೂ ಇದ್ದಾರೆ. ಒಂದು ರೀತಿಯಲ್ಲಿ, ಆಧ್ಯಾತ್ಮಿಕ ಕೇಂದ್ರಗಳೆಂಬುದು ನಮ್ಮ ಹೆಣ್ಣು ಮಕ್ಕಳ ಪಾಲಿಗೆ ಅತ್ಯಂತ ಸುರಕ್ಷಿತ ತಾಣಗಳಾಗಿ ಗುರುತಿಸಿಕೊಳ್ಳಬೇಕಿತ್ತು. ಅಲ್ಲಿರುವ ದೇವ ಮಾನವರೋ ಬಾಬಾಗಳೋ ಈ ಸುರಕ್ಷಿತತೆಯನ್ನು ಒದಗಿಸುವಲ್ಲಿ ಮುತುವರ್ಜಿ ತೋರಬೇಕಿತ್ತು. ಯಾಕೆಂದರೆ, ಧರ್ಮದ ಮೌಲ್ಯಗಳು ಅತ್ಯಂತ ಹೆಚ್ಚು ಜಾರಿಯಲ್ಲಿರುವುದು ಅಲ್ಲಿಯೇ. ಆದರೆ ಹೆಣ್ಣಿಗೆ ಅಂಥ ಸ್ಥಳಗಳೂ ಸುರಕ್ಷಿತ ಅಲ್ಲ ಎಂದರೆ, ಹೆಣ್ಣು ಆಧ್ಯಾತ್ಮಿಕತೆಗೆ ಏನೆಂದು ಅರ್ಥಕೊಟ್ಟಾಳು?
ಊರ್ವಶಿ
ಮೇನಕೆ
ರಂಭೆ
ತಿಲೋತ್ತಮೆ
   ದೇವಲೋಕದ ಈ ಅಪ್ಸರೆಯರ ಬಗ್ಗೆ ಪುರಾಣಗಳಲ್ಲಿ ಧಾರಾಳ ಉಲ್ಲೇಖಗಳಿವೆ. ಋಷಿಗಳ ತಪಸ್ಸನ್ನು ಭಂಗಗೊಳಿಸಲಿಕ್ಕಾಗಿ ದೇವರುಗಳು ಇವರನ್ನು ಆಶ್ರಯಿಸಿದ್ದು, ಇವರನ್ನು ಒಲಿಸುವುದಕ್ಕಾಗಿ ದೇವರುಗಳ ಮಧ್ಯೆಯೇ ಸಂಘರ್ಷ ನಡೆಯುತ್ತಿದ್ದುದು, ಘೋರ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರನನ್ನು ಚಿತ್ತ ಚಾಂಚಲ್ಯಗೊಳಿಸಲು ಮೇನಕೆ ಭೂಮಿಗೆ ಇಳಿದು ಬಂದದ್ದು ಮತ್ತು ಅವರಿಬ್ಬರ ಮಗುವಾಗಿ ಶಕುಂತಳ ಜನಿಸಿದ್ದು.., ಹೀಗೆ ಪುರಾಣಗಳ ತುಂಬ ಅಪ್ಸರೆಯರ ನೃತ್ಯ, ಹಾಡುಗಳ ಧಾರಾಳ ಸನ್ನಿವೇಶಗಳಿವೆ. ಅದರ ಸುಧಾರಿತ ಮುಖವೇ ದೇವದಾಸಿ ಪದ್ಧತಿ ಎಂದು ಹೇಳಲಾಗುತ್ತದೆ. ದೇವದಾಸಿಯರನ್ನು ಸಮಾಜದ ಉನ್ನತ ವರ್ಗವು ಲೈಂಗಿಕವಾಗಿ ಬಳಸಿಕೊಳ್ಳುತ್ತಿತ್ತು. ಅವರು ನೃತ್ಯ, ಹಾಡು, ಸಂಗೀತಗಳ ಮೂಲಕ ಉನ್ನತ ವರ್ಗದ ಮನ ತಣಿಸುವ ಕೆಲಸ ಮಾಡುತ್ತಿದ್ದರು. ಬಹುಶಃ ನಾಗರಿಕತೆ ಅಷ್ಟಾಗಿ ಬೆಳೆದಿಲ್ಲದ ಕಾಲದಲ್ಲಿ ಚಲಾವಣೆಯಲ್ಲಿದ್ದ ಈ ದೇವದಾಸಿ ಪದ್ಧತಿಯು ಕ್ರಮೇಣ ಅಳಿಯುತ್ತಾ ಹೋಯಿತಾದರೂ ಪುರುಷರಲ್ಲಿರುವ ಆ ಮನಸ್ಥಿತಿ ಸಂಪೂರ್ಣ ಹೊರಟು ಹೋಗಿಲ್ಲ ಅನ್ನುವುದಕ್ಕೆ ಇವತ್ತು ಆಧ್ಯಾತ್ಮಿಕ ಕೇಂದ್ರಗಳಿಂದ ಕೇಳಿ ಬರುತ್ತಿರುವ ಲೈಂಗಿಕ ಶೋಷಣೆಗಳ ಸುದ್ದಿಗಳೇ ಪುರಾವೆ. ಹೆಣ್ಣನ್ನು ಈ ಹಿಂದೆ ನೋಡುತ್ತಿದ್ದುದೂ ಲೈಂಗಿಕ ವಸ್ತುವಾಗಿಯೇ. ಇವತ್ತೂ ಹಾಗೆಯೇ. ಒಂದು ಕಡೆ, ವಿಧವೆಯರನ್ನು ಅರ್ಚಕಿಯರನ್ನಾಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹೆಣ್ಣು ಮಕ್ಕಳು ಕಲಿಕೆಯಲ್ಲಿ ಗಂಡು ಮಕ್ಕಳನ್ನು ವಿೂರಿಸುತ್ತಿರುವ ಬಗ್ಗೆ, ಪುರುಷರಿಗೆ ಸರಿ ಸಮಾನವಾಗಿ ಮಹಿಳೆಯರೂ ಬೆಳೆಯುತ್ತಿರುವ ಬಗ್ಗೆ ಕೊಂಡಾಡಲಾಗುತ್ತಿದೆ. ಈ ದೇಶವನ್ನು ಅಳುತ್ತಿರುವ ಪ್ರಮುಖ ಪಕ್ಷವೊಂದರ ನಾಯಕಿಯೇ ಮಹಿಳೆ. ಇನ್ನೊಂದು ಕಡೆ, ಆಧ್ಯಾತ್ಮಿಕ ನಾಯಕರು ಆಕೆಯನ್ನು ದೇವದಾಸಿ ಇಮೇಜಿನಿಂದ ಹೊರತಂದು ನೋಡಲು ವಿಫಲರಾಗುತ್ತಿದ್ದಾರೆ. ಹೀಗಿರುವಾಗ, ಆಧ್ಯಾತ್ಮಿ ಕತೆಯ ಮೇಲೆ ಹೆಣ್ಣು ನಂಬುಗೆ ಕಳಕೊಂಡರೆ, ಅವುಗಳ ವಿರುದ್ಧವೇ ತಿರುಗಿ ಬಿದ್ದರೆ ಯಾರನ್ನು ದೂರಬೇಕು?
   ಇದನ್ನು ನೀವೂ ನೋಡಿರುತ್ತೀರಿ..
ಮುಂಬೈಯ ಚೋರ್ ಬಝಾರ್. ಕಾಂಜಿಲಾಲ್ ಮೆಹ್ತಾಗೆ ಇಲ್ಲೊಂದು ಅಂಗಡಿಯಿದೆ. ಪಕ್ಕಾ ನಾಸ್ತಿಕನಾಗಿದ್ದರೂ ಆತ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿರುವುದು ವಿಗ್ರಹಗಳನ್ನು ಮತ್ತು ಪ್ರಾಚೀನ ವಸ್ತುಗಳನ್ನು. ಹೀಗಿರುತ್ತಾ ಒಂದು ದಿನ ಭೂಕಂಪ ಅಪ್ಪಳಿಸಿ ಆತನ ಅಂಗಡಿ ಧ್ವಂಸವಾಗುತ್ತದೆ. ನೆರೆ ಮನೆಯ ಮಹಾದೇವನನ್ನು ಸೇರಿಸಿಕೊಂಡು ಆತ ನೇರ ಇನ್ಶೂರೆನ್ಸ್ ಕಂಪೆನಿಗೆ ಹೋಗುತ್ತಾನೆ. ತನಗಾದ ನಷ್ಟಕ್ಕೆ ಪರಿಹಾರ ಹೇಗೆ ಪಡಕೊಳ್ಳಬೇಕೆಂದು ಪ್ರಶ್ನಿಸುತ್ತಾನೆ. ಪ್ರಾಕೃತಿಕ ವಿಕೋಪಗಳು ದೇವ ಕಾಯ್ದೆ (Act of God)ಯಡಿಯಲ್ಲಿ ಬರುತ್ತದೆ, ಅದಕ್ಕೆ ಇನ್ಶೂರೆನ್ಸ್ ಸಿಗಲ್ಲ ಅನ್ನುತ್ತದೆ ಕಂಪೆನಿ. ಆತನ ಮುಂದೆ ಬೇರೆ ಆಯ್ಕೆಗಳಿರುವುದಿಲ್ಲ. ದೇವನ ವಿರುದ್ಧವೇ ಕೋರ್ಟಿನಲ್ಲಿ ಮೊಕದ್ದಮೆ ಹೂಡುತ್ತಾನೆ. ಪ್ರಕರಣ ಸಾರ್ವಜನಿಕರ ಗಮನವನ್ನು ಸೆಳೆಯಲು ಪ್ರಾರಂಭಿಸುತ್ತದೆ. ಭೂಮಿಯಲ್ಲಿ ದೇವನನ್ನು ಪ್ರತಿನಿಧಿಸುವವರೆಂದರೆ ಧಾರ್ಮಿಕ ಪುರೋಹಿತರು. ಆದ್ದರಿಂದ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಬೇಕಾದ ಅನಿವಾರ್ಯತೆ ತಲೆದೋರುತ್ತದೆ. ಆ ಕಾರಣದಿಂದಲೇ ನ್ಯಾಯಾಲಯವು ಧಾರ್ಮಿಕ ಪುರೋಹಿತರಾದ ಸಿದ್ದೇಶ್ವರ್ ಮಹಾರಾಜ್, ಗೋಪಿ ಮಯ್ಯ ಮತ್ತು ಲೀಲಾಧಾರ್ ಸ್ವಾಮಿ ಯವರಲ್ಲಿ ಕೋರ್ಟಿಗೆ ಹಾಜರಾಗುವಂತೆ ಸಮನ್ಸ್ ಕಳುಹಿಸುತ್ತದೆ.
   ಕಾಂಜಿ ಕೋರ್ಟಿನಲ್ಲಿ ಸ್ವಯಂ ವಾದಿಸುತ್ತಾನೆ. ಮೊಕದ್ದಮೆಯನ್ನು ವಜಾಗೊಳಿಸಿ ಎಂದು ವಿರೋಧಿ ವಕೀಲ ಸರ್ದೇಸಾೈ ವಾದಿಸುವಾಗ, ಕಾಂಜಿ ಪ್ರತಿಭಟಿಸುತ್ತಾನೆ. ಭೂಮಿಯಲ್ಲಿ ದೇವನ ಪ್ರತಿನಿಧಿಗಳು ನಾವು ಎಂದು ಧಾರ್ಮಿಕ ಗುಂಪುಗಳು ವಾದಿಸುತ್ತಿವೆ. ಅವು ದೇವನ ಪರವಹಿಸಿ ಮಾತನಾಡುತ್ತವೆ. ಆದ್ದರಿಂದ ಭೂಕಂಪಕ್ಕೆ ಉತ್ತರಿಸಬೇಕಾದವರು ಮತ್ತು ಹೊಣೆ ಹೊತ್ತುಕೊಳ್ಳಬೇಕಾದವರು ಇವರೇ..’ ಎಂಬ ಕಾಂಜಿಯ ವಾದವನ್ನು ಒಪ್ಪಿಕೊಳ್ಳುವ ನ್ಯಾಯಾಧೀಶರು ಮೊಕದ್ದಮೆಯನ್ನು ಸ್ವೀಕರಿಸುತ್ತಾರಲ್ಲದೆ ವಿಚಾರಣೆಯನ್ನು ಮುಂದುವರಿಸುತ್ತಾರೆ. ಈ ಪ್ರಕರಣದಿಂದ ಮಾಧ್ಯಮಗಳು ಕಾಂಜಿಯ ಸಂದರ್ಶನಕ್ಕಾಗಿ ಮುಗಿ ಬೀಳುತ್ತವೆ. ಆತ ಪ್ರಸಿದ್ಧಿ ಪಡೆಯುತ್ತಾನೆ. ಸಾರ್ವಜನಿಕರು ಕಾಂಜಿಯ ಪರ ನಿಲ್ಲುತ್ತಾರೆ.  ಅಂತಿಮವಾಗಿ ಕೋರ್ಟು ಆತನ ಪರ ತೀರ್ಪು ನೀಡುತ್ತದೆ. ಆತನಿಗೆ ಪರಿಹಾರ ಒದಗಿಸುವಂತೆ ಧಾರ್ಮಿಕ ಗುಂಪುಗಳಿಗೆ ಅದು ಆದೇಶಿಸುತ್ತದೆ. ವಿಚಿತ್ರ ಏನೆಂದರೆ, ವಿಗ್ರಹಗಳನ್ನು ಆರಾಧಿಸುವುದು ಬಿಡಿ, ಆಧ್ಯಾತ್ಮಿಕತೆಯನ್ನೇ ಒಪ್ಪದ ಕಾಂಜಿಯನ್ನೇ ಜನರು ಆ ಬಳಿಕ ದೇವನೆಂದು ಪೂಜಿಸತೊಡಗುವುದು. ಲೀಲಾಧರ್, ಗೋಪಿ ಮತ್ತು ಸಿದ್ದೇಶ್ವರ ಸ್ವಾಮಿಗಳು ಕಾಂಜಿಯ ಹೆಸರಲ್ಲೇ ದೇವಾಲಯ ಆರಂಭಿಸುವುದು ಮತ್ತು ಅದಕ್ಕಾಗಿ ಮಿಲಿಯನ್‍ಗಟ್ಟಲೆ ಡೊನೇಶನ್ ಸಂಗ್ರಹಿಸುವುದು.. ಹೀಗೆ ‘ಓ ಮೈ ಗಾಡ್’ ಎಂಬ ಚಿತ್ರದ ಕತೆ ಕೊನೆಗೊಳ್ಳುತ್ತದಾದರೂ ಅಲ್ಲಿಂದಲೇ ನಮ್ಮೊಳಗೆ ಪ್ರಶ್ನೆಗಳು ಆರಂಭಗೊಳ್ಳುತ್ತವೆ.
   ನಿಜವಾಗಿ, ಧರ್ಮವು ಸಮಾಜವನ್ನು ಶೋಷಣೆ ಮುಕ್ತಗೊಳಿಸಲು ಬಂದಿದೆ ಎಂದು ನಾವೆಷ್ಟೇ ಹೇಳಿದರೂ, ಆ ಮುಕ್ತತೆಯ ಅನುಭವವನ್ನು ಪಡೆಯುವಲ್ಲಿ ಸಮಾಜ ಮತ್ತೆ ಮತ್ತೆ ವಿಫಲವಾಗುತ್ತಲೇ ಇದೆ. ಅಂಥದ್ದೊಂದು ವಾತಾವರಣವನ್ನು ನಿರ್ಮಿಸಲು ಆಧ್ಯಾತ್ಮಿಕ ಕೇಂದ್ರಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಅದರ ಬದಲು ಈ ಕೇಂದ್ರಗಳಲ್ಲಿರುವವರನ್ನೇ ದೇವತ್ವಕ್ಕೆ ಏರಿಸಲಾಗುತ್ತದೆ. ಮನುಷ್ಯ ದೇವನಾಗುವುದು ಸಾಧ್ಯವೆ, ಯಕಃಶ್ಚಿತ್ ಮಾನವನಲ್ಲಿ ಅಂಥದ್ದೊಂದು ನಿರೀಕ್ಷೆ ಇಟ್ಟುಕೊಳ್ಳುವುದು ಸಾಧುವೇ.. ಎಂಬೆಲ್ಲ ಪ್ರಶ್ನೆಗಳಾಚೆ ಅಂಥವರು ಇಮೇಜು ಬೆಳೆಸಿಕೊಂಡು ಬಿಟ್ಟಿರುತ್ತಾರೆ. ಅವರ ಸುತ್ತ ಸಾಮ್ರಾಜ್ಯವೊಂದು ಬೆಳೆಯುತ್ತದೆ. ಇಂಥ ಹೊತ್ತಲ್ಲಿ ಧರ್ಮದ ನಿಜ ರುಚಿ ಬದಿಗೆ ಸರಿದು ದೇವಮಾನವರು ಏನು ಹೇಳುತ್ತಾರೋ ಅದುವೇ ಧರ್ಮವಾಗಿ ಬಿಡುತ್ತದೆ. ಇಂಥ ಸ್ಥಿತಿಯಲ್ಲಿ ಅತ್ಯಂತ ಹೆಚ್ಚು ಶೋಷಣೆಗೆ ಒಳಗಾಗುವುದು ಹೆಣ್ಣೇ. ಯಾಕೆಂದರೆ, ಆಕೆ ಗಂಡಿನಂಥಲ್ಲ. ನಾಚಿಕೆ, ಮುಜುಗರ, ಮುಚ್ಚುಮರೆಗಳೆಲ್ಲ ಆಕೆಯಲ್ಲೇ ಹೆಚ್ಚು. ಆದ್ದರಿಂದ ದೇವದಾಸಿತನವನ್ನು, ವೈಧವ್ಯದ ಬದುಕನ್ನು ಆಕೆ ಪ್ರಶ್ನಿಸದೇ ಒಪ್ಪಿಕೊಂಡದ್ದು. ತಾನೇಕೆ ಸತಿ ಹೋಗಬೇಕು, ಪುರುಷನೂ ಹೋಗಬಹುದಲ್ವೇ..’ ಎಂದು ಪ್ರಶ್ನಿಸದೇ ಇದ್ದದ್ದು. ಹೆಣ್ಣಿನ ಇಂಥ ದೌರ್ಬಲ್ಯಗಳನ್ನು ಸಮಾಜದ ಒಂದು ವರ್ಗ ಆವತ್ತೂ ಇವತ್ತೂ ದುರುಪಯೋಗಿಸುತ್ತಲೇ ಇದೆ.
   1990ರಲ್ಲಿ ಕುವೈಟ್‍ನ ಮೇಲೆ ದಾಳಿ ಮಾಡಿದ ಸದ್ದಾಂ ಹುಸೇನರು, ಕುವೈಟಿಗರನ್ನು ಬೆದರಿಸುವುದಕ್ಕಾಗಿ ಇರಾಕ್‍ನ ಬೀದಿ, ಮನೆಗಳಿಂದ ಜನರನ್ನು ಎತ್ತಿಕೊಂಡು ಬಂದು ಕುವೈಟ್‍ಗೆ ಹಾಕಿದ್ದರು. ಹಾಗೆ ಮಾಡುವುದಕ್ಕಿಂತ ಮೊದಲು ಬಳಕೆಗೆ ಬಾರದ ಆಟಿಕೆ ಬಂದೂಕು ಮತ್ತು ಅರೆಬರೆ ಸೇನಾ ಉಡುಪುಗಳನ್ನು ಈ ಜನರಿಗೆ ಅವರು ತೊಡಿಸಿದ್ದರು. ಆ ಬಡಪಾಯಿಗಳು ಕುವೈಟ್‍ನ ಬೀದಿಯಲ್ಲಿ ನೀರು, ಅನ್ನ ಇಲ್ಲದೇ ತಮ್ಮ ಸೈನಿಕ ಉಡುಪನ್ನೂ ಮರೆತು ಭಿಕ್ಷೆ ಬೇಡಿದ್ದನ್ನು ಕುವೈಟ್‍ನಿಂದ ವಾಪಸಾದವರು ಹೇಳಿಕೊಂಡಿದ್ದರು. ನಿಜವಾಗಿ, ನಮ್ಮ ನಡುವೆ ಹೀಗೆ ಧಾರ್ಮಿಕ ಪೋಶಾಕು ತೊಟ್ಟ ಆದರೆ, ಅಂತರಿಕವಾಗಿ ಧಾರ್ಮಿಕತ್ವವಿಲ್ಲದ ಧಾರಾಳ ಮಂದಿಯಿದ್ದಾರೆ. ಹೆಣ್ಣಿನ ಬಗ್ಗೆ ಅವರು ಎಷ್ಟೇ ಗೌರವಾರ್ಹ ಪದಗಳನ್ನು ಬಳಸಲಿ, ಸಂದರ್ಭ ಸಿಕ್ಕಾಗ ಆಕೆಯನ್ನು ಅವರು ಪರಿಗಣಿಸುವುದು ದೇವದಾಸಿಯಾಗಿಯೇ. ಆದ್ದರಿಂದಲೇ,
   ಅತ್ಯಾಚಾರದ ವಿರುದ್ಧ ಕಠಿಣ ಕಾನೂನು ರೂಪಿಸಲು ‘ನಿರ್ಭಯ’ ಪ್ರಕರಣವು ಕಾರಣವಾದಂತೆಯೇ ಧಾರ್ಮಿಕ ಕ್ಷೇತ್ರಗಳನ್ನು ಸ್ವಚ್ಛಗೊಳಿಸುವ ಚಳವಳಿಗೆ ಸೌಜನ್ಯ ಪ್ರೇರಕವಾಗಲಿ.

Monday, September 30, 2013

ನೈನಾರನ್ನು ಸದಾ ಅಸ್ಪ್ರಶ್ಯಗೊಳಿಸುವ ಈ ಮಾದರಿಯೇಕೆ ಇಷ್ಟವಾಗಬೇಕು?


ಮಿಸ್ ಮುಸ್ಲಿಮಾ
ಮಿಸ್ ಅಮೇರಿಕ
   ಕಳೆದ ವಾರ ಎರಡು ಸೌಂದರ್ಯ ಸ್ಪರ್ಧೆಗಳು ನಡೆದುವು. ಇಂಡೋನೇಶ್ಯಾದ ಜಕಾರ್ತದಲ್ಲಿ ನಡೆದ ಮಿಸ್ ಮುಸ್ಲಿಮಾ ಸ್ಪರ್ಧೆಯಲ್ಲಿ ನೈಜೀರಿಯದ ಕಪ್ಪು ಸುಂದರಿ ಆಯಿಷಾ ವಿಜಯಿಯಾದರೆ ಭಾರತ ಮೂಲದ ತಿಳಿಗಪ್ಪು ಸುಂದರಿ ನೈನಾ  ದಲೂರಿ ಮಿಸ್ ಅಮೇರಿಕನ್ ಆಗಿ ಆಯ್ಕೆಯಾದಳು. ಇದರ ಬೆನ್ನಿಗೇ ಅಸಂಖ್ಯೆ ಪ್ರತಿಕ್ರಿಯೆಗಳು ನೈನಾಳನ್ನು ಹುಡುಕಿಕೊಂಡು ಬಂದುವು. ಅಮೇರಿಕದ 49 ರಾಜ್ಯಗಳ ಸ್ಪರ್ಧಿಗಳನ್ನು ಸೋಲಿಸಿ ವಿಜಯಿಯಾದ ಆಕೆಯನ್ನು ಅನೇಕರು ಟೆರರಿಸ್ಟ್ ಎಂದರು. ಕಪ್ಪು ಮೈ ಬಣ್ಣಕ್ಕಾಗಿ ಟೀಕಿಸಿದರು. ಇಂಟರ್‍ನೆಟ್ ತುಂಬ ಆಕೆಯನ್ನು ನಿಂದಿಸುವ, ಮೈ ಬಣ್ಣವನ್ನು ಅಪಹಾಸ್ಯಗೊಳಿಸುವ, ಬಿಳಿ ಯೇತರಳಾದ ಆಕೆಯ ಯೋಗ್ಯತೆಯನ್ನು ಪ್ರಶ್ನಿಸುವ ಟ್ವೀಟ್‍ಗಳು ಧಾರಾಳ ಕಾಣಿಸಿಕೊಂಡವು. ಒಂದು ಹಂತದಲ್ಲಿ ನೈನಾ ವಿಚಲಿತಳಾದಳು. ಟಿ.ವಿ. ಸಂದರ್ಶನದಲ್ಲಿ ತನ್ನ ನೋವನ್ನೂ ಪ್ರಕಟಿಸಿದಳು. ಆದರೂ, 'ಸಾವಿರಾರು ಹೊಗಳಿಕೆಯ ಮಾತುಗಳ ಮಧ್ಯೆ ನೂರಾರು ನಿಂದನೆಗಳು ದೊಡ್ಡದಲ್ಲ' ಅಂದಳು. ಮಾಧ್ಯಮಗಳೂ ನೈನಾಳ ಬಗ್ಗೆ ಬರೆದುವು.
   ‘ಅಮೇರಿಕವನ್ನು ನಾವೆಲ್ಲ ಅಭಿವೃದ್ಧಿ ಹೊಂದಿದ ಮತ್ತು ಆಧುನಿಕ ರಾಷ್ಟ್ರವಾಗಿ ನೋಡುತ್ತಿದ್ದೇವೆ. ಅಲ್ಲಿನದು ಪ್ರಗತಿಪರ ಚಿಂತನೆ, ತೆರೆದ ಮನಸ್ಸು ಎಂದೆಲ್ಲಾ ಹೇಳುತ್ತಿರುತ್ತೇವೆ. ಆದರೆ ಇದೇ ಅಮೇರಿಕವು, ನಾವು ಅಂದುಕೊಂಡಷ್ಟು ಮಾದರಿ ಅಲ್ಲ ಎಂಬುದು ಗೊತ್ತಾಗಿ ಅಚ್ಚರಿ ಮತ್ತು ಆಘಾತವಾಯಿತು. ಅಮೇರಿಕದಿಂದ ಜನಾಂಗೀಯವಾದ ಇನ್ನೂ ತೊಲಗಿಲ್ಲದಿರುವುದಕ್ಕೆ ವಿಷಾದವಿದೆ’.. ಎಂದು ದಿ ಹಿಂದೂ ಪತ್ರಿಕೆಯಲ್ಲಿ ಗುರ್ಗಾಂವ್‍ನ ರೇನು ದಿಲ್ಲಾನ್ ಬರೆದರೆ, ಬೆಂಗಳೂರಿನ ಗೋಪಾಲ್ ಸುತಾರ್ ಎಂಬವರು,
   ‘ನೈನಾಳನ್ನು ಅರಬ್ ಮೂಲದವಳು ಎಂದು ತಪ್ಪಾಗಿ ಭಾವಿಸಿ ಟೆರರಿಸ್ಟ್ ಎಂದು ಟೀಕಿಸಿದ್ದಾಗಿರಬಹುದು ಎಂದು ಈಗ ಹೇಳಲಾಗುತ್ತಿದೆ. ನಾನು ಸೌದಿಯಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದೇನೆ. ಅಲ್ಲಿನ ಅರಬರೂ ನನಗೆ ಗೊತ್ತು. ಅವರೇನೂ  ಟೆರರಿಸ್ಟ್ ಗಳಲ್ಲ. ನಿಜವಾಗಿ, ಅಮೇರಿಕನ್ನರ ಬಿಳಿ ಹೆಮ್ಮೆಗೆ ನೈನಾ ಬಾಂಬ್ ಹಾಕಿದ್ದಾಳೆ..’ ಎಂದು ಬರೆದರು. ಅಲ್ಲದೇ,
   ಇಂಥದ್ದೊಂದು 'ಜನಾಂಗೀಯವಾದಿ' ಕೂಗು ಎಬ್ಬಿಸಿದ್ದೇ ಟಿ.ವಿ. ಮಾಧ್ಯಮಗಳು. ಅವು ನೈನಾಳನ್ನು ಎತ್ತಿಕೊಂಡು ಸರಿ-ತಪ್ಪುಗಳನ್ನು ಚರ್ಚಿಸಿವೆ. ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೆಂಟ್ ಜನಾಂಗೀಯ ವಾದವಿದೆ, ಕರಿಯರ ವಿರುದ್ಧ ಯಾವೆಲ್ಲ ಬಗೆಯ ತಾರತಮ್ಯ ನಡೆಯುತ್ತಿದೆ, ಇದರ ವಿರುದ್ಧ ಯಾವ ಬಗೆಯ ಹೋರಾಟ ನಡೆಯಬೇಕು.. ಎಂದೆಲ್ಲಾ ವಾದಿಸುತ್ತಾ ಪುಕ್ಕಟೆ ಸಲಹೆಗಳನ್ನೂ ಕೊಡುತ್ತಿವೆ. ಆದರೆ, ಹೀಗೆ ಅಬ್ಬರಿಸುವ ಟಿ.ವಿ. ಚಾನೆಲ್‍ಗಳ ಆ್ಯಂಕರ್‍ಗಳಲ್ಲಿ ಎಷ್ಟು ಮಂದಿ ಹೆಣ್ಣು ಮಕ್ಕಳು ಕಪ್ಪು ಚರ್ಮದವರಿದ್ದಾರೆ? ಯಾಕೆ ಅವು ತಮ್ಮ ‘ಮನೆಯಿಂದಲೇ’ ಜನಾಂಗೀಯ ವಿರೋಧಿ ಹೋರಾಟವನ್ನು ಪ್ರಾರಂಭಿಸುತ್ತಿಲ್ಲ? ತ್ವಚೆಯನ್ನು ಆಕರ್ಷಕಗೊಳಿಸುವ (ಬಿಳಿ) ಜಾಹೀರಾತು ಅತ್ಯಂತ ಹೆಚ್ಚು ಪ್ರಸಾರವಾಗುವುದೇ ಟಿ.ವಿ. ಚಾನೆಲ್‍ಗಳಲ್ಲಿ. ಈ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟವಾಗುವುದೂ ಪ್ರಸಾದನ ಸಾಮಗ್ರಿಗಳೇ. ಬಿಳಿ ಚರ್ಮವನ್ನು ಆಕರ್ಷಕ ಮತ್ತು ಗೌರವಾರ್ಹ ಎಂದು ಬಿಂಬಿಸುವ ವರ್ತನೆಗಳು, ಜಾಹೀರಾತುಗಳು ಟಿ.ವಿ.ಗಳಲ್ಲಿ ಧಾರಾಳ ಪ್ರಸಾರವಾಗುತ್ತಿವೆ. ಇವನ್ನೆಲ್ಲ ಹಾಗೆಯೇ ಇರಗೊಟ್ಟು, ಅಮೇರಿಕನ್ ಜನಾಂಗೀಯತೆಯ ಬಗ್ಗೆ ಮಾತಾಡುತ್ತವಲ್ಲ, ಏನೆನ್ನಬೇಕು? ಹಿಪಾಕ್ರಸಿ, ದ್ವಂದ್ವ, ಆತ್ಮವಂಚನೆ.. ಎಂಬೆಲ್ಲ ಪದಗಳ ಬಳಕೆಗೆ ಇವು ಯೋಗ್ಯವಲ್ಲವೇ..' ಎಂದೆಲ್ಲಾ ಓದುಗರು ಸಿಟ್ಟು ತೋಡಿಕೊಂಡರು.
   ನಿಜವಾಗಿ ಅಭಿವೃದ್ಧಿ ಮತ್ತು ಸಮಾನತೆ ಒಂದೇ ಅಲ್ಲ. ಅಭಿವೃದ್ಧಿ ಬೇರೆ, ಸಮಾನತೆಯ ಪ್ರಜ್ಞೆ ಬೇರೆ. ಅಮೇರಿಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಿರಬಹುದು. ಆದರೆ ಆ ಅಭಿವೃದ್ಧಿಯು ಅವರನ್ನು ಜನಾಂಗೀಯ ಪ್ರಜ್ಞೆಯಿಂದ ಸಂಪೂರ್ಣ ಮುಕ್ತಗೊಳಿಸುತ್ತದೆ ಎಂದು ಭಾವಿಸುವುದು ಸರಿಯಲ್ಲ. ಯಾಕೆಂದರೆ, ಜನಾಂಗೀಯತೆ ಎಂಬುದು ಮಾನಸಿಕವಾದದ್ದು. ಆರ್ಥಿಕ ಅಭಿ ವೃದ್ಧಿಯಾದರೋ ಬಾಹ್ಯವಾದದ್ದು. ಬಾಹ್ಯ ಆಡಂಬರಗಳು ಮಾನಸಿಕ ಕೊಳೆಯನ್ನು ತೊಳೆದು ಬಿಡಬಲ್ಲುದು ಎಂಬುದಕ್ಕೆ ಐತಿಹಾಸಿಕವಾಗಿ ಯಾವ ಉದಾಹರಣೆಗಳೂ ಇಲ್ಲ. ಒಂದು ವೇಳೆ, ಅಂಥದ್ದೊಂದು ಪವಾಡ ಸಾಧ್ಯವಾಗುತ್ತಿದ್ದರೆ, ಅಮೇರಿಕದಲ್ಲಿ ಎಂದಲ್ಲ, ಈ ದೇಶದಲ್ಲೂ ಅದು ಕೊನೆಗೊಂಡಿರಬೇಕಿತ್ತಲ್ಲವೇ? ಇವತ್ತೂ ಈ ದೇಶದಲ್ಲಿ ಶ್ರೇಷ್ಠ-ಕನಿಷ್ಠ ತತ್ವವನ್ನು ಪಾಲಿಸಿಕೊಂಡು ಬರುತ್ತಿರುವವರೇನು ಬಡವರಲ್ಲವಲ್ಲ? ಶ್ರೇಣೀಕೃತ ಪುರಾತನ ಭಾರತದಲ್ಲೂ ಮತ್ತು ಆಧುನಿಕ ಭಾರತದಲ್ಲೂ ಅದು ಚಾಲ್ತಿಯಲ್ಲಿರುವುದು ದುಡ್ಡಿದ್ದವರಿಂದಲೇ ಎಂಬುದು ಯಾರಿಗೆ ತಾನೇ ಗೊತ್ತಿಲ್ಲ? ಈ ಹಿಂದೆ ಜವಿೂನು, ದುಡ್ಡು, ವಿದ್ಯಾಭ್ಯಾಸ ಇದ್ದ ಮಂದಿಯೇ 'ಅಸ್ಪೃಶ್ಯತೆ'ಯನ್ನು ಪಾಲಿಸಿಕೊಂಡು ಬಂದಿದ್ದರು. ಇವತ್ತೂ ಅವರೇ ಇದನ್ನು ಮುಂದುವರಿಸಿ ಕೊಂಡು ಬರುತ್ತಿದ್ದಾರೆ. ಹೀಗಿರುವಾಗ, ಆರ್ಥಿಕ ಅಭಿವೃದ್ಧಿಯು ಅಸ್ಪೃಶ್ಯತೆ ಅಥವಾ ಜನಾಂಗೀಯತೆಯನ್ನು ನಿರ್ಮೂಲನಗೊಳಿಸಿಬಿಡಬಲ್ಲುದು ಎಂದು ನಂಬುವುದಕ್ಕೆ ಏನು ಆಧಾರವಿದೆ? ಬಹುಶಃ, ಈ ಹಿಂದಿನಂತೆ ಇವತ್ತು ಗೆರಟೆಯಲ್ಲಿ ನೀರು ಕೊಡದೇ ಇರಬಹುದು. ಸ್ಪೃಶ್ಯ ಸಾಗುವ ಹಾದಿಯಲ್ಲಿ 'ಅಸ್ಪೃಶ್ಯ' ಮಾರು ದೂರ ಹೋಗಿ ನಿಲ್ಲದೇ ಇರಬಹುದು. ಇಂಥ ಸೂಕ್ಷ್ಮ  ಬದಲಾವಣೆಗಳು ಸಮಾಜದಲ್ಲಿ ಖಂಡಿತ ಆಗಿವೆ. ಆದರೆ, 'ಅಸ್ಪೃಶ್ಯತೆ ಕೊನೆಗೊಳ್ಳುತ್ತಿದೆ' ಎಂಬುದಕ್ಕೆ ಇಂಥ ಸೂಕ್ಷ್ಮ  ಬದಲಾವಣೆ ಗಳನ್ನು ಪುರಾವೆಯಾಗಿ ಎತ್ತಿಕೊಳ್ಳುವುದು ದೊಡ್ಡ ಪ್ರಮಾದವಾಗಬಹುದು. ಯಾಕೆಂದರೆ, ನೂರೋ ಇನ್ನೂರೋ ವರ್ಷಗಳ ಹಿಂದೆ ಅಸ್ಪೃಶ್ಯತೆಯ ಆಚರಣೆಯು ಯಾವ ರೂಪದಲ್ಲಿತ್ತೋ ಅದೇ ರೀತಿಯಲ್ಲಿ ಈ ಆಧುನಿಕ ಕಾಲದಲ್ಲೂ ಆಚರಣೆಯಲ್ಲಿರುತ್ತದೆ ಎಂದು ಭಾವಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಇವತ್ತು ಕಾನೂನು ಬದಲಾಗಿದೆ. ಪ್ರಜಾತಂತ್ರ ಬಂದಿದೆ. ಹಳ್ಳಿ ಮೂಲೆಯೊಂದರ ಸಣ್ಣ ಪ್ರಕರಣವೂ ಜಾಗತಿಕ ಇಶ್ಯೂವಾಗುವಂತಹ ತಂತ್ರ ಜ್ಞಾನಗಳು ಆವಿಷ್ಕಾರಗೊಂಡಿವೆ. ಹೀಗಿರುವಾಗ, ಅಸ್ಪೃಶ್ಯತೆಯಲ್ಲಿ ಬಲವಾಗಿ ನಂಬಿಕೆ ಇಟ್ಟಿರುವ ವ್ಯಕ್ತಿ ಕೂಡ ಹಿಂದಿನ ಕಾಲದ ಒರಟುತನವನ್ನು ಮುಂದುವರಿಸಲಾರ. ಜಗತ್ತು ಆಧುನಿಕಗೊಂಡಿರುವಾಗ ಆಚರಣೆಯಲ್ಲೂ ಆಧುನಿಕತೆಯನ್ನು ತರುವುದಕ್ಕೆ ಆತ ಖಂಡಿತ ಕಲಿತಿರುತ್ತಾನೆ. ನಿಜವಾಗಿ, ಬದಲಾವಣೆಯೆಂಬುದು ಆಂತರಿಕವಾಗಿ ಆಗಬೇಕಾದದ್ದು. ಓರ್ವನು,  ಅಸ್ಪೃಶ್ಯತೆಯನ್ನು ಆಚರಿಸುವುದಕ್ಕೆ ಧಾರ್ಮಿಕ ಬೋಧನೆಗಳು ಅಥವಾ ಪರಂಪರಾಗತ ನಂಬಿಕೆಗಳೇ ಕಾರಣ ಎಂದಾದರೆ ಆತನನ್ನು ತಿದ್ದುವುದಕ್ಕೆ ಬಾಹ್ಯ ಕಾನೂನುಗಳು ಸಂಪೂರ್ಣ ಯಶಸ್ವಿಯಾಗಲು ಸಾಧ್ಯವಿಲ್ಲ. ಕಾನೂನಿಗೆ ಹೆದರಿ ಬಾಹ್ಯವಾಗಿ ಆತ ಸಮಾನತೆಯನ್ನು ಪ್ರತಿಪಾದಿಸಿದರೂ ಆಂತರಿಕವಾಗಿ ಆತ ಸ್ಪೃಶ್ಯನೇ ಆಗಿರುತ್ತಾನೆ. ಸಮಯ, ಸಂದರ್ಭ ನೋಡಿ ಅದನ್ನು ಪ್ರತಿಪಾದಿಸುತ್ತಲೂ, ಆಚರಿಸುತ್ತಲೂ ಇರುತ್ತಾನೆ. ನೈನಾ ದಲೂರಿ ಪ್ರಕರಣ ಹೇಳುತ್ತಿರುವುದೇ ಇದನ್ನು.
   2011ರಲ್ಲಿ ಅಮೇರಿಕದಲ್ಲಿ ಬಿಡುಗಡೆಯಾದ ಡಾರ್ಕ್ ಗರ್ಲ್ ಎಂಬ ಡಾಕ್ಯುಮೆಂಟರಿಯಲ್ಲಿ ಒಂದು ದೃಶ್ಯವಿದೆ.
5 ವರ್ಷದ ಕಪ್ಪು ಮಗು. ಅದರ ಎದುರು ಕಪ್ಪು ಮತ್ತು ಬಿಳಿ ಬಣ್ಣದ ಕೆಲವಾರು ಗೊಂಬೆಗಳನ್ನು ಇಡಲಾಗಿದೆ. ಈ ಗೊಂಬೆಗಳಲ್ಲಿ ಅತ್ಯಂತ ಬುದ್ಧಿವಂತ ಗೊಂಬೆಯೊಂದನ್ನು ಆಯ್ದುಕೋ ಎಂದು ಮಗುವಿಗೆ ಹೇಳಲಾಗುತ್ತದೆ. ಮಗು ಬಿಳಿ ಗೊಂಬೆಯನ್ನು ಆಯ್ದುಕೊಳ್ಳುತ್ತದೆ. ಇನ್ನು, 'ಕೆಟ್ಟ ಮತ್ತು ಜಗಳಗಂಟಿ ಗೊಂಬೆಯನ್ನು ಆಯ್ದುಕೋ' ಎಂದು ಹೇಳಿದಾಗ, ಅದು ಕಪ್ಪು ಗೊಂಬೆಯನ್ನು ಆಯ್ಕೆ ಮಾಡುತ್ತದೆ.
   ಒಂದು ರೀತಿಯಲ್ಲಿ ತುಳಿತಕ್ಕೊಳಗಾದವರ ಮನಸ್ಥಿತಿ ಇದು. ತಮ್ಮ ಬಗ್ಗೆಯೇ ಕೀಳರಿಮೆ ಬೆಳೆಸಿಕೊಳ್ಳುತ್ತಾ, ತುಳಿಯುವವರನ್ನೇ ಶ್ರೇಷ್ಠರೆಂದು ಭಾವಿಸುತ್ತಾ ಬದುಕುವುದನ್ನು ಅವರು ರೂಢಿಸಿಕೊಳ್ಳು ತ್ತಾರೆ. ಖ್ಯಾತ ಗಾಯಕ ಬಿಯಾನ್ಸ್, ಮೈಕಲ್ ಜಾಕ್ಸನ್, ನಟ ಗೆಬೊರಿ ಸಿಡಿಬಿ, ಕೆರಿಬಿಯನ್ ದ್ವೀಪದ ಡ್ಯಾನ್ಸರ್ ವೇಬ್ಸ್ ಕಾರ್ಟೆಲ್, ನಟಿ ಮಾರಿಯಾ ಕ್ಯಾರಿ.. ಮುಂತಾದ ಸೆಲೆಬ್ರಿಟಿಗಳೆಲ್ಲ ತಮ್ಮ ಚರ್ಮವನ್ನು ದ್ವೇಷಿಸಿದ್ದು, ಬಿಳಿಯಾಗಿಸಿದ್ದೆಲ್ಲ ಇದೇ ಕೀಳರಿಮೆಯಿಂದ. ‘ ಸ್ನಾನದ ನೀರಿಗೆ ಬ್ಲೀಚಿಂಗ್ ಪೌಡರ್ ಹಾಕು, ನನಗೆ ಬಿಳಿಯಾಗಬೇಕು ಅಮ್ಮ,..’ ಎಂದು ಡಾರ್ಕ್ ಗರ್ಲ್‍ನಲ್ಲಿ ಓರ್ವ ಯುವತಿ ಅಂಗಲಾಚುವ ದೃಶ್ಯವಿದೆ. ಜನಾಂಗೀಯ ಬರ್ಬರತೆಗೆ ಹಿಡಿದ ಕನ್ನಡಿ ಇದು. ‘ಕರಿಯ ವ್ಯಕ್ತಿಯಾಗಿ ತಾನು ಮತ್ತು ತಂಗಿ ಅಮೇರಿಕದಲ್ಲಿ ಅನುಭವಿಸಿದ ಸತ್ಯಗಳೇ ಈ ಡಾಕ್ಯುಮೆಂಟರಿ..’ ಎಂದು ಖ್ಯಾತ ನಟ ಮತ್ತು ಡಾಕ್ಯುಮೆಂಟರಿ ನಿರ್ದೇಶಕ ಬಿಲ್ ಡ್ಯುಕ್ ಹೇಳಿರುವುದು ಆಧುನಿಕ ಅಮೇರಿಕದ ಮನಸ್ಥಿತಿಯನ್ನು ಚೆನ್ನಾಗಿ ಬಿಂಬಿಸುತ್ತದೆ.
   ಬ್ಲ್ಯಾಕ್ ಲೈಕ್ ಮಿ
ಜಾನ್ ಹಾವರ್ಡ್ ಗ್ರಿಫಿನ್ ಎಂಬ ಅಮೇರಿಕದ ಮಾಜಿ ಯೋಧರೋರ್ವರು 1959ರಲ್ಲಿ ವಿಶಿಷ್ಟ ಪ್ರಯೋಗವೊಂದಕ್ಕೆ ಮುಂದಾಗುತ್ತಾರೆ. ಆ ಕಾಲದಲ್ಲಿ ಅಮೇರಿಕದ ಲೂಸಿಯಾನ, ಮಿಸಿಸಿಪ್ಪಿ, ಅಲಬಾಮಾ ಮತ್ತು ಜಾರ್ಜಿಯಾ ರಾಜ್ಯಗಳಲ್ಲಿ ವರ್ಣಬೇಧ ನೀತಿಯನ್ನು ಶಿಸ್ತಿನಿಂದ ಆಚರಿಸಲಾಗುತ್ತಿತ್ತು. ಬಿಳಿಯರಾದ ಗ್ರಿಫಿನ್ ಅದನ್ನು ತೀವ್ರವಾಗಿ ವಿರೋಧಿಸುತ್ತಿದ್ದರು. ಆದ್ದರಿಂದ ಅವರು ತಮ್ಮ ಬಿಳಿ ಚರ್ಮವನ್ನು ಕಪ್ಪು ಬಣ್ಣಕ್ಕೆ ಬದಲಾಯಿಸಿ ಕಪ್ಪು ವರ್ಣೀಯರ ಅನುಭವಗಳನ್ನು ಸ್ವಯಂ ಪಡಕೊಳ್ಳಬೇಕೆಂದು ತೀರ್ಮಾನಿಸಿದರು. ಅದರಂತೆ ಲೂಸಿಯಾನದ ತನ್ನ ಗೆಳೆಯನ ಮನೆಯಲ್ಲಿ ಉಳಿದುಕೊಂಡು, ಚರ್ಮವನ್ನು ಕಪ್ಪುಗೊಳಿಸುವ methoxsalen ಔಷಧವನ್ನು ತೆಗೆದುಕೊಳ್ಳತೊಡಗಿದರು. ದಿನದಲ್ಲಿ 15 ಗಂಟೆಗಳ ಕಾಲ ಬಿಸಿಲಿಗೆ ಒಡ್ಡಿ ಮೈ ಬಣ್ಣದ ಬದಲಾವಣೆಗೆ ಶ್ರಮಿಸಿದರು. ಕೊನೆಗೆ ಈ ಔಷಧ ಮತ್ತು ದೇಹವಿಡೀ ಬಳಿದುಕೊಂಡ ಕಪ್ಪು ಬಣ್ಣದಿಂದಾಗಿ (ಡೈ) ಗ್ರಿಫಿನ್ ಒಂದು ಹಂತದ ವರೆಗೆ ತೆಳು ಕಪ್ಪು ವ್ಯಕ್ತಿಯಾಗಿ ಕಾಣಿಸತೊಡಗಿದರು. ಅದೇ ವೇಷದಲ್ಲಿ ಅವರು ಬಸ್ಸಿನ ಮೂಲಕ ಲೂಸಿಯಾನ ಸಹಿತ ನಾಲ್ಕು ರಾಜ್ಯಗಳಲ್ಲಿ ಉದ್ದಕ್ಕೂ ಸಂಚರಿಸಿದರು. ಅವರು ಈ ಹಿಂದೆ ಊಟ ಮಾಡುತ್ತಿದ್ದ ಹೊಟೇಲೇ ಅವರನ್ನು ಹೊರದಬ್ಬಿತು. ಬಸ್ಸಿನಲ್ಲಿ ಅವಮಾನಿಸಲಾಯಿತು. ಕ್ಷಣಕ್ಷಣಕ್ಕೂ ನಿಂದನೆ, ಒದೆತ, ಅವಮಾನಗಳು ಎದುರಾದವು. ಹೀಗೆ 6 ವಾರಗಳ ವರೆಗೆ ಅವರು ಕರಿಯನಾಗಿ ನಾನಾ ಅನುಭವವನ್ನು ಪಡೆದುಕೊಂಡರು. ಬರೆದಿಟ್ಟರು. 1961ರಲ್ಲಿ 'ಬ್ಲ್ಯಾಕ್ ಲೈಕ್ ಮಿ' ಎಂಬ ಕೃತಿ ಹೊರಬಂದಾಗ ಅಮೇರಿಕ ಮಾತ್ರವಲ್ಲ, ಆಸುಪಾಸಿನಲ್ಲೂ ಅದು ಸಾಕಷ್ಟು ಸುದ್ದಿ ಮಾಡಿತು. ಕೃತಿಯನ್ನು ಹಿಂತೆಗೆದುಕೊಳ್ಳಿ ಎಂಬ ಬೆದರಿಕೆಗಳು ಬಂದುವು. 1964ರಲ್ಲಿ ಅವರ ಮೇಲೆ ಆದ ಮಾರಣಾಂತಿಕ ಹಲ್ಲೆಯಿಂದ ಚೇತರಿಸಿಕೊಳ್ಳಲು 5 ತಿಂಗಳುಗಳೇ ಬೇಕಾದುವು..
   ನಿಜವಾಗಿ, ಅಮೇರಿಕದ ಬಾಹ್ಯ ಅಭಿವೃದ್ಧಿಯನ್ನು ಮತ್ತು ಆಂತರಿಕ ಬಡತನವನ್ನು ನೈನಾ ದಲೂರಿ ಚೆನ್ನಾಗಿ ತೆರೆದಿಟ್ಟಿದ್ದಾಳೆ. ಜಗತ್ತಿನ ವಿವಿಧ ದೇಶ ಮತ್ತು ಜನಾಂಗಗಳ ಮೇಲೆ ಅಮೇರಿಕ ತೋರುತ್ತಿರುವ ಪಕ್ಷಪಾತ, ಕ್ರೌರ್ಯಗಳಿಗೆ ಬಹುಶಃ ಈ ಆಂತರಿಕ ಬಡತನವೇ ಕಾರಣವಿರಬೇಕು. ಅಷ್ಟಕ್ಕೂ, ಒಂದು ಕಡೆ ಆಧುನಿಕ ಅಮೇರಿಕದ ಪ್ರತಿನಿಧಿಯಾದ ನೈನಾ ದಲೂರಿ, ಇನ್ನೊಂದು ಕಡೆ ಬಡ ನೈಜೀರಿಯಾದ ಆಯಿಷಾ, ಇವರಿಬ್ಬರಲ್ಲಿ ನೀಗ್ರೋ ಆಯಿಷಾ ಸರ್ವ ಗೌರವಕ್ಕೂ ಪಾತ್ರವಾಗುವುದು ಮತ್ತು ನೈನಾ ನಿಂದನೆಗೆ ಒಳಗಾಗುವುದೆಲ್ಲ ಏನನ್ನು ಸೂಚಿಸುತ್ತದೆ? ಅಮೇರಿಕ ಎಡವಿರುವುದು ಎಲ್ಲಿ? ಅದರ ಅಭಿವೃದ್ಧಿ ಮಾದರಿಯಲ್ಲಿ ಎಲ್ಲೆಲ್ಲಿ ತೂತುಗಳಿವೆ? ಯಾಕೆ ‘ನೈನಾ ದಲೂರಿಗಳು’ ಈ ‘ಅಭಿವೃದ್ಧಿ’ಯಲ್ಲಿ ಸದಾ ಅಸ್ಪೃಶ್ಯ ರಾಗುತ್ತಾರೆ? ಆದ್ದರಿಂದಲೇ,   
ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಮತ್ತು ಸಹೋದರರು (ಪವಿತ್ರ ಕುರ್‍ಆನ್: 49: 13) ಎಂದು ಸಾರಿದ, ಅರಬರಿಗೂ ಅರಬೇತರರಿಗೂ ಚಾರಿತ್ರ್ಯದ ಹೊರತು ಯಾವ ವ್ಯತ್ಯಾಸವೂ ಇಲ್ಲ ಎಂದ, ತನ್ನ ಕಾಲದ ಎಲ್ಲ ಜಾತಿಗಳೊಂದಿಗೂ ವೈವಾಹಿಕ ಸಂಬಂಧವನ್ನು ಬೆಳೆಸಿ ಜಾತಿರಹಿತ ಸಮಾಜವನ್ನು ಕಟ್ಟಿದ, ಬಿಲಾಲ್ ಎಂಬ ನೀಗ್ರೋ ವ್ಯಕ್ತಿಯಲ್ಲಿ ಮೊಟ್ಟಮೊದಲ ಅದಾನ್ (ಬಾಂಗ್) ಕೊಡಿಸಿದ ಮತ್ತು ನಮಾಝ್‍ನ ಮೂಲಕ ಅತಿ ಶ್ರೀಮಂತರನ್ನೂ ಕಡು ಬಡವರನ್ನೂ ಒಂದೇ ಸಾಲಿನಲ್ಲಿ ಭುಜಕ್ಕೆ ಭುಜ ತಾಗಿಸಿ ನಿಲ್ಲಿಸಿದ.. ಪ್ರವಾದಿ ಮುಹಮ್ಮದ್(ಸ) ಇಷ್ಟ ಆಗುವುದು.

Monday, September 23, 2013

ಅಂಥ ವಿಚಾರಧಾರೆ ಹಿಟ್ಲರ್ ನ ಜರ್ಮನಿಯನ್ನಲ್ಲದೆ ಗಾಂಧೀಜಿಯ ಭಾರತವನ್ನು ನಿರ್ಮಿಸಬಲ್ಲುದೆ?

ಜರ್ಮನಿ
ಇಟಲಿ
   ಫ್ಯಾಸಿಝಮ್‍ನ ವಿಶ್ಲೇಷಣೆಗೆ ಜಗತ್ತು ಯಾವಾಗಲೂ ಉದಾಹರಣೆಯಾಗಿ ಎತ್ತಿಕೊಳ್ಳುವುದು ಈ ಎರಡು ದೇಶಗಳನ್ನು. ಹಿಟ್ಲರ್ ಜರ್ಮನಿಯಲ್ಲಿದ್ದ. ಮುಸೊಲಿನಿ ಇಟಲಿಯನ್ನು ಆಳಿದ. ಇವರಿಬ್ಬರ ಮನಸ್ಥಿತಿ, ವಿಚಾರಧಾರೆ ಎಷ್ಟು ಅಪಾಯಕಾರಿಯಾಗಿ ತ್ತೆಂದರೆ, ಎರಡನೇ ವಿಶ್ವಯುದ್ಧದ ಕೇಂದ್ರ ಬಿಂದು ಇವರೇ. ಹಿಟ್ಲರ್ ಜರ್ಮನಿಯಲ್ಲಿ ಆರ್ಯನ್ ಜನಾಂಗವಾದವನ್ನು ಪ್ರತಿಪಾದಿಸಿದ. ತಾನು ಸಸ್ಯಾಹಾರಿಯಾಗಿರುವುದನ್ನು ಎಲ್ಲರಿಗೂ ಗೊತ್ತುಪಡಿಸಿದ. ತನ್ನ ಜನಾಂಗಕ್ಕಾಗಿ ಹೆಮ್ಮೆಪಟ್ಟ. ಜರ್ಮನಿಯ ಮಂದಿ ನಿಧಾನವಾಗಿ ಹಿಟ್ಲರ್‍ನನ್ನು ತಮ್ಮ ಜನಾಂಗದ ವ್ಯಕ್ತಿಯಾಗಿ ಮತ್ತು ಆ ಕಾರಣದಿಂದಲೇ ತಾವು ಸುರಕ್ಷಿತರು ಎಂದು ಅಂದುಕೊಳ್ಳುವುದಕ್ಕೆ ತೊಡಗಿದರು. ಅವರು ಸಹಜವಾಗಿ ಆರ್ಯನ್ ಜನಾಂಗವಾದದಲ್ಲಿ ಧ್ರುವೀಕರಣಗೊಂಡರು. ಜೊತೆಜೊತೆಗೇ ಅನಾರ್ಯರ ಬಗ್ಗೆ ಒಂದು ರೀತಿಯ ದ್ವೇಷವೂ ಇಂಜೆಕ್ಟ್ ಆಗತೊಡಗಿತು. ಅದು ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸಿತು. ಈ ದೇಶದ ಪ್ರತಿ ಸಮಸ್ಯೆಗೂ ಅನಾರ್ಯರು ಕಾರಣ ಎಂಬ ಬೀಜ ಮೊಳಕೆಯೊಡೆದು ಮರವಾಗಿ ಹೂ ಬಿಡಲು ಪ್ರಾರಂಭಿಸಿದ ಬಳಿಕ ಜರ್ಮನಿ ಪೂರ್ಣ ಪ್ರಮಾಣದಲ್ಲಿ ಹಿಟ್ಲರ್‍ನದ್ದಾಯಿತು. ಆ ಬಳಿಕ ಹಿಟ್ಲರ್ ತನ್ನನ್ನು ವಿರೋಧಿಸಿದ ಆರ್ಯನ್ ಕಮ್ಯುನಿಸ್ಟರನ್ನು ಹಿಂಸಿಸಿದಾಗಲೂ ಜನರು ಮಾತಾಡಲಿಲ್ಲ. ಎಲ್ಲಿಯವರೆಗೆಂದರೆ, ಹಿಟ್ಲರ್‍ನಿಂದ ಸಾಮೂಹಿಕ ಹತ್ಯಾಕಾಂಡ ನಡೆಯುತ್ತಿದ್ದರೂ ಅವರು ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಲಿಲ್ಲ. ನಿಜವಾಗಿ, ಫ್ಯಾಸಿಝಮ್‍ನ ಕಾರ್ಯ ಚಟುವಟಿಕೆಯೇ ಹೀಗೆ. ಅದು, ‘ಹತ್ಯಾಕಾಂಡಗಳಲ್ಲಿ ಪಾಲುಗೊಳ್ಳಿ’ ಎಂದು ಜನರಿಗೆ ನೇರವಾಗಿ ಕರೆ ಕೊಡುವುದಿಲ್ಲ. ಆದರೆ ಸಮಾಜವನ್ನು ಧರ್ಮದ ಆಧಾರದಲ್ಲಿ ಧ್ರುವೀಕರಣಗೊಳಿಸಿ, ಜನರು ಹತ್ಯಾಕಾಂಡದಲ್ಲಿ ಭಾಗವಹಿಸುವುದಕ್ಕೆ ಪ್ರೇರಕವಾಗುವ ಯೋಗ್ಯ ವಾತಾವರಣವನ್ನು ನಿರ್ಮಿಸುತ್ತದೆ. ಮೋದಿ ಮತ್ತು ಬಳಗವು ಈ ದೇಶದಲ್ಲಿ ಸದ್ಯ ನಿರ್ವಹಿಸುತ್ತಿರುವ ಪಾತ್ರ ಇದುವೇ. 20%ಕ್ಕಿಂತ ಕಡಿಮೆ ಇರುವ ಮುಸ್ಲಿಮರ ವಿರುದ್ಧ 80%ದಷ್ಟಿರುವ ಬೃಹತ್ ವರ್ಗವನ್ನು ಧ್ರುವೀಕರಣಗೊಳಿಸುವ ಕನಸಿನೊಂದಿಗೆ ಈ ಬಳಗವು ಅಖಾಡಕ್ಕೆ ಇಳಿದಿದೆ. ಗುಜರಾತ್‍ನಲ್ಲಿ ಯಶಸ್ವಿಯಾಗಿರುವ ಈ ತಂತ್ರವನ್ನು ಅಲ್ಲಿಂದ ಹೊರಗೂ ಪ್ರಯೋಗಿಸಿ ನೋಡುವ ಪ್ರಯತ್ನಗಳು ಈಗಾಗಲೇ ನಡೆದಿವೆ. ‘2002 ಫೆ. 27ರಂದು ಗೋಧ್ರಾದಲ್ಲಿ ಸಬರ್ಮತಿ ರೈಲಿಗೆ ಬೆಂಕಿ ಹತ್ತಿಕೊಳ್ಳುವ 5 ದಿನಗಳ ಮೊದಲೇ ಗೋಧ್ರಾ ರೈಲು ನಿಲ್ದಾಣದಲ್ಲಿ ಮುಸ್ಲಿಮರಿಗೆ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಬೆಳಗ್ಗೆ 3ರ ಬಳಿಕ ಗಡ್ಡದಾರಿ ಮುಸ್ಲಿಮರು ಕಾಣಿಸಿ ಕೊಳ್ಳದಂತೆ ವ್ಯವಸ್ಥೆ ಮಾಡಲಾಗಿತ್ತು.’ ಯಾಕೆಂದರೆ ಅಯೋಧ್ಯೆಯಿಂದ ಹಿಂತಿರುಗುವ ಕರಸೇವಕರು ಗಡ್ಡವನ್ನು ಕಂಡು ಉರಿದು ಬಿಟ್ಟಾರೆಂಬ ಅಂಜಿಕೆ. ‘ಆದ್ದರಿಂದಲೇ ಕರಸೇವಕರು ಇದ್ದ ಸಬರ್ಮತಿ ರೈಲಿಗೆ ಫೈಜಾಬಾದ್‍ನಲ್ಲಿ ಬುರ್ಖಾಧಾರಿ ಮಹಿಳೆಯೋರ್ವರು ಹತ್ತಿದಾಗ ಬುರ್ಖಾ ಕಳಚುವಂತೆ ಒತ್ತಡ ಹೇರಲಾಗಿತ್ತು’ (ದಿ ಹಿಂದೂ 2013 ಸೆ. 19). ಅಷ್ಟಕ್ಕೂ,
   ದಾಡಿಯನ್ನು ಕಂಡರೆ ಕರಸೇವಕರಿಗೆ ಸಿಟ್ಟಾದರೂ ಯಾಕೆ ಬರುತ್ತದೆ? ಅಯೋಧ್ಯೆಯಲ್ಲಿ ತಮ್ಮ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿ ಹಿಂತಿರುಗುವ ಕರಸೇವಕರಲ್ಲಿ ಮುಸ್ಲಿಮರನ್ನು ದ್ವೇಷಿಸುವಷ್ಟು ಅಸಹನೆಯಿರುತ್ತದೆ ಎಂದು ಒಂದು ವ್ಯವಸ್ಥೆ ನಂಬಬೇಕಾದರೆ, ಅದಕ್ಕೆ ಕಾರಣಗಳು ಏನು? ಯಾವ ಆಧಾರದಲ್ಲಿ? ‘ಎಲ್ಲ ಸಮಸ್ಯೆಗಳ ಮೂಲ ಮುಸ್ಲಿಮರೇ’ ಎಂಬ ಫ್ಯಾಸಿಸ್ಟ್ ವಿಚಾರಧಾರೆಯನ್ನು ಕರಸೇವಕರ ಸಹಿತ ಗುಜರಾತ್‍ನಾದ್ಯಂತ ಯಶಸ್ವಿಯಾಗಿ ಬಿತ್ತಲಾಗಿದೆ ಎಂಬುದರ ಸೂಚನೆಯಲ್ಲವೇ ಇದು? ಗಡ್ಡ, ಟೋಪಿ, ಬುರ್ಖಾಗಳೆಲ್ಲ ಒಂದು ಸಮುದಾಯದ ಐಡೆಂಟಿಟಿ. ಅದನ್ನು ಸಹಿಸಿಕೊಳ್ಳುವ ವಾತಾವರಣ ಒಂದು ರಾಜ್ಯದಲ್ಲಿ ಇಲ್ಲ ಎಂದರೆ ಆ ರಾಜ್ಯದಲ್ಲಿರುವ ವಿಚಾರಧಾರೆಯಾದರೂ ಯಾವುದು? ಹಾಗಂತ ಕರಸೇವಕರೇನೂ ಜರ್ಮನಿ, ಇಟಲಿಯಿಂದ ಬರುವುದಲ್ಲವಲ್ಲ. ಒಂದೇ ರಾಜ್ಯದ ಜನರ ಮಧ್ಯೆ ಈ ಮಟ್ಟದ ವಿಭಜನೆಯನ್ನು ಮಾಡಿಟ್ಟದ್ದು ಯಾವ ವಿಚಾರಧಾರೆ? ಬಾಬರಿ ಮಸೀದಿಯನ್ನು ಧ್ವಂಸಗೊಳಿಸುವ ಸಂಘ ಪರಿವಾರದ ಪ್ರಯತ್ನವನ್ನು 1990ರಲ್ಲಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್‍ರು ವಿಫಲಗೊಳಿಸಿದಾಗ, ಮುಲಾಯಂರನ್ನು ಇದೇ ಬಿಜೆಪಿ, ‘ಮೌಲಾನಾ ಸಿಂಗ್’ ಎಂದು ಹಂಗಿಸಿತ್ತು. ಗುಜರಾತ್‍ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಸದ್ಭಾವನಾ ಯಾತ್ರೆಯಲ್ಲಿ ಮೌಲಾನರು ಕೊಟ್ಟ ಟೋಪಿ ಧರಿಸಲು ಮೋದಿ ನಿರಾಕರಿಸಿದ್ದರು. ಗಡ್ಡ, ಟೋಪಿ, ಮೌಲಾನರನ್ನೆಲ್ಲ ಮೋದಿ ಮತ್ತು ಬಳಗ ಧಾರಾಳ ಕುಚೇಷ್ಟೆಗೆ ಬಳಸಿಕೊಂಡಿದೆ. ವ್ಯಂಗ್ಯವಾಗಿ ಇರಿದಿದೆ. ಭಯೋತ್ಪಾದನೆಯ ಸಂಕೇತವಾಗಿ ಪ್ರತಿಬಿಂಬಿಸಿದೆ. ಭಾರತೀಯ ಮುಸ್ಲಿಮರು ಇಲ್ಲಿನ ಸಂಸ್ಕøತಿ, ಹೆಸರು, ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಭಾರತೀಯತೆ ಮೆರೆಯಬೇಕೆಂದು ಸಂಘಪರಿವಾರ ಆಗಾಗ ಆಗ್ರಹಿಸುತ್ತಲೇ ಬಂದಿದೆ. ನಿಮ್ಮ ಪೂರ್ವಜರು ಹಿಂದೂಗಳು ಎಂದೂ ಅದು ನೆನಪಿಸುತ್ತಿದೆ. ಆದರೆ ಇದೇ ಪರಿವಾರದ ಕಣ್ಮಣಿ ಮೋದಿಯು, ತನ್ನ ರಾಲಿಗಳಲ್ಲಿ ಟೋಪಿ, ಗಡ್ಡ, ಬುರ್ಖಾ ಧರಿಸಿದ ಮುಸ್ಲಿಮ್ ಸ್ತ್ರೀ-ಪುರುಷರನ್ನು ಕರೆತಂದು ಸಭೆಯ ಮುಂಭಾಗದಲ್ಲಿ ಕೂರಿಸುತ್ತಿದ್ದಾರೆ. ಇಷ್ಟಿದ್ದೂ, ಸಂಸ್ಕøತಿಯ ಬಗ್ಗೆ ಮಾತಾಡುವ ಸಂಘಪರಿವಾರ ಮೌನವಾಗಿದೆಯಲ್ಲ, ಯಾಕೆ? ‘ಬುರ್ಖಾ ಸೆಕ್ಯುಲರಿಸಮ್’ ಎಂದು ವ್ಯಂಗ್ಯವಾಡಿದ್ದ ಮೋದಿ ಇದೀಗ ಅದೇ ಬುರ್ಖಾವನ್ನು ನೆಚ್ಚಿಕೊಂಡಿರುವುದನ್ನು ಯಾಕೆ ಮೋದಿ ಬೆಂಬಲಿಗರು ಪ್ರಶ್ನಿಸುತ್ತಿಲ್ಲ? ಇಫ್ತಾರ್ ಪಾರ್ಟಿಯಲ್ಲಿ ಭಾಗವಹಿಸುವ ಮುಲಾಯಂರನ್ನು, ಟೋಪಿ ಹಾಕಿಕೊಳ್ಳುವ ನಿತೀಶ್‍ರನ್ನು ‘ಸೋಗಲಾಡಿ ಸೆಕ್ಯುಲರಿಸ್ಟ್ ಗಳು’ ಎಂದೆಲ್ಲಾ ಮೂದಲಿಸುವ ಮೋದಿ ಬ್ರಿಗೇಡ್‍ಗಳು ಸುಮ್ಮನಿರುವುದೇಕೆ? ಒಂದು ವೇಳೆ, ‘ಬುರ್ಖಾ, ಗಡ್ಡ, ಟೋಪಿಯೊಂದಿಗೆ ರಾಲಿಗೆ ಬನ್ನಿ..’ ಎಂಬ ಕರೆಯನ್ನು ಮೋದಿಯ ಬದಲು ರಾಹುಲ್ ಗಾಂಧಿಯೋ ಸೋನಿಯಾರೋ ನೀಡುತ್ತಿದ್ದರೆ ಮೋದಿ ಅದನ್ನು ಹೇಗೆ ವ್ಯಾಖ್ಯಾ ನಿಸುತ್ತಿದ್ದರು? ಅವರ ಅಭಿಮಾನಿಗಳು ಫೇಸ್‍ಬುಕ್, ಟ್ವೀಟರ್‍ಗಳಲ್ಲಿ ಅಬ್ಬರಿಸುವ ರೀತಿ ಹೇಗಿರುತ್ತಿತ್ತು? ಮೋದಿ ಹೇಳಿದರೆ ಸಹ್ಯ ಅನ್ನಿಸುವುದೂ ಅದನ್ನೇ ರಾಹುಲ್ ಹೇಳಿದರೆ ಅಸಹ್ಯ ಅನ್ನಿಸುವುದೆಲ್ಲ ಯಾವ ಮನಸ್ಥಿತಿಯ ಪ್ರತಿಬಿಂಬ? ನಿಜವಾಗಿ, ಮೋದಿಗೆ ಬಹು ಸಂಖ್ಯಾತರನ್ನು ಬಿಟ್ಟು ಉಳಿದವರೊಂದಿಗೆ ಹೇಗೆ ಬೆರೆಯಬೇಕು ಎಂಬ ಬಗ್ಗೆಯೇ ಗೊಂದಲವಿದೆ. ಗಡ್ಡ, ಟೋಪಿ, ಪೈಜಾಮದ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಂದರ್ಭ ಎದುರಾದರೆ ಹೇಗೆ ವಂದಿಸಬೇಕು, ಎಷ್ಟು ಅಂತರ ಕಾಯ್ದುಕೊಳ್ಳಬೇಕು, ಯಾವ ಭಾಷೆಯಲ್ಲಿ ಮಾತಾಡಬೇಕು, ಎಷ್ಟು ಪರ್ಸೆಂಟ್ ನಗಬೇಕು, ಯಾವ ಭಂಗಿಯಲ್ಲಿ ಕ್ಯಾಮರಾಕ್ಕೆ ಫೋಸು ಕೊಡಬೇಕು.. ಎಂಬಿತ್ಯಾದಿಗಳು ಅವರನ್ನು ತೀವ್ರವಾಗಿ ಕಾಡುತ್ತಿರುವಂತೆ ಕಾಣುತ್ತಿದೆ. ಯಾಕೆಂದರೆ ಅವರ ವರ್ಚಸ್ಸು ಅಡಗಿರುವುದೇ ಮುಸ್ಲಿಮರೊಂದಿಗೆ ಹೇಗೆ ವ್ಯವಹರಿಸುತ್ತಾರೆ ಎಂಬ ಆಧಾರದಲ್ಲಿ. ‘ಬುರ್ಖಾ ಸೆಕ್ಯುಲರಿಸಮ್’, ‘ನಾಯಿಕುನ್ನಿ’, ‘ಕ್ರಿಯೆ-ಪ್ರತಿಕ್ರಿಯೆ’..ಗಳೇ ನಿಜವಾದ ಮೋದಿ. ಅದರ ಹೊರತಾದ ಮೋದಿಯನ್ನು ಅವರ ಅಭಿಮಾನಿಗಳು ಇಷ್ಟಪಡುವ ಸಾಧ್ಯತೆ ಇಲ್ಲ. ಇದು ಮೋದಿಗೂ ಗೊತ್ತು. ಆದ್ದರಿಂದ, ಮುಖ್ಯ ಮಂತ್ರಿ ಮೋದಿಯು ಪ್ರಧಾನಮಂತ್ರಿ ಮೋದಿಯಾಗಿ ಬದಲಾದರೂ ಅವರ ಮನಃಸ್ಥಿತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ತೀರಾ ಕಡಿಮೆ. ಅಗತ್ಯ ಕಂಡು ಬಂದಾಗ ಕಾರಿನಡಿಗೆ 'ನಾಯಿಕುನ್ನಿ'ಯನ್ನು ಬೀಳಿಸಿ ಸಾಯಿಸಲು ಅವರು ಶ್ರಮಿಸಿಯಾರೇ ಹೊರತು ರಕ್ಷಿಸಲಲ್ಲ. ಅವರಲ್ಲಿ ತನ್ನದೇ ರಾಷ್ಟ್ರದ ಮನುಷ್ಯರ ಬಗ್ಗೆಯೇ ಗೊಂದಲಪೂರಿತ ನಿಲುವು ಇದೆ. ಅಲ್ಲದೇ ಇವರ ಅಭಿಮಾನಿಗಳೆನಿಸಿಕೊಂಡವರ ಭಾಷೆ, ಬರಹ, ಆವೇಶವನ್ನು ನೋಡಿದರಂತೂ ದಿಗಿಲಾಗುತ್ತದೆ. ಇವರನ್ನು ಮುಂದಿಟ್ಟುಕೊಂಡು ಮೋದಿಯನ್ನು ತೂಗಿದರಂತೂ, ಮೋದಿಯ ಕೈಯಲ್ಲಿ ಭಾರತವು ಹಿಟ್ಲರ್‍ನ ಜರ್ಮನಿಯಲ್ಲದೇ ಗಾಂಧೀಜಿಯ ಭಾರತವಂತೂ ಆಗಲಾರದು ಅನ್ನಿಸುತ್ತದೆ.
   ಇತ್ತೀಚೆಗೆ ಫೇಸ್‍ಬುಕ್ ಗೆಳೆಯರೊಬ್ಬರು ಒಂದು ಘಟನೆಯನ್ನು ಹೀಗೆ ಹಂಚಿಕೊಂಡಿದ್ದರು:
ನಾನು ನನ್ನ ನವಿಲು ಪತ್ರಿಕೆಯ ಬಿಡುಗಡೆ ಸಮಾರಂಭಕ್ಕೆ ಫ್ಲೆಕ್ಸ್  ಪ್ರಿಂಟ್ ಹಾಕಿಸುತ್ತಿದ್ದೆ. ಒಂದಿಬ್ಬರು ಕಾಲೇಜು ಹುಡುಗರು ಮೋದಿಯ ಹುಟ್ಟು ಹಬ್ಬಕ್ಕೆ ಫ್ಲೆಕ್ಸ್  ಮಾಡಿಸುತ್ತಿದ್ದರು. ಮೋದಿಯ ಜೊತೆಗೆ ಗಾಂಧೀಜಿಯ ಫೋಟೋವನ್ನೂ ಹಾಕಿಸುತ್ತಿದ್ದರು. ನಾನು ಕೇಳಿದೆ, ‘ಗಾಂಧಿ ಯಾರು ಗೊತ್ತಾ?’ ‘ಓಹ್ ಸಾರ್, ನಮ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟೋರು’ ಎಂದು ಖುಷಿಯಾಗಿ ಹೇಳಿದ ಒಬ್ಬ. ‘ಸರಿ, ಮೋದಿ ಯಾರು ಗೊತ್ತಾ’ ಅಂದೆ. ‘ಆ ಕಿತಾಪತಿ ಮಾಡ್ತಿರೋ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕೆಂತಲೇ ಹುಟ್ಟಿರೋ ಮಹಾನ್ ವ್ಯಕ್ತಿ’ ಎಂದ. ದಂಗಾದ ನಾನು, 'ಅದು ಹೇಗೆ ಬುದ್ಧಿ ಕಲಿಸ್ತಾರಪ್ಪ ನಿಮ್ಮ ಮೋದಿ' ಅಂದರೆ, 'ನೋಡಿ ಸರ್, ಗೆದ್ದ ತಕ್ಷಣ ಯುದ್ಧ ಮಾಡೇ ಮಾಡ್ತಾರೆ..' ಅಂದ.
   ಮೋದಿಯ ಬಗ್ಗೆ ಜನರಲ್ಲಿ ಒಂದು ಬಗೆಯ ಭ್ರಮೆ, ಕುತೂಹಲ ಇದೆ. ಅವರು ಪಾಲ್ಗೊಳ್ಳುವ ಸಣ್ಣ ಸಭೆಯನ್ನೂ ಲೈವ್ ಆಗಿ ತೋರಿಸುವ ಮಾಧ್ಯಮಗಳೇ ಈ ಭ್ರಮೆ ಹರಡುವಲ್ಲಿ ಪ್ರಮುಖ ಪಾತ್ರಧಾರಿಗಳು. ಅವರನ್ನು ರಾಂಬೋ ಆಗಿ ಹೊತ್ತುಕೊಂಡು ತಿರುಗಾಡುವ ಅಭಿಮಾನಿಗಳಿಗೆ ಅವರ ಬಾಂಬೂ ಕ್ರೇಜೇ. ಹತ್ಯಾಕಾಂಡವೂ ಕ್ರೇಜೇ. ಅಷ್ಟಕ್ಕೂ, ಈ ದೇಶದಲ್ಲಿರುವುದು ಅಮೇರಿಕನ್ ಮಾದರಿಯ ಅಧ್ಯಕ್ಷೀಯ ಪದ್ಧತಿಯಲ್ಲವಲ್ಲ. ಮೋದಿ v/s ರಾಹುಲ್ ಗಾಂಧಿ ಎಂಬ ಮಾಧ್ಯಮ ಹುಟ್ಟು ಹಾಕಿರುವ ಚರ್ಚೆಯು ಅಮೇರಿಕಕ್ಕೆ ಸೂಕ್ತವೇ ಹೊರತು ಭಾರತಕ್ಕಲ್ಲ. ಆದರೆ ಮೋದಿಯನ್ನು ಪ್ರಧಾನಿ ಮಾಡಿಯೇ ಸಿದ್ಧ ಎಂದು ಹಠ ತೊಟ್ಟಿರುವ ಕಾರ್ಪೊರೇಟ್ ವಲಯವು ಪ ಕ್ಷ  ಆಧಾರಿತವಾಗಿ ಆಗಬೇಕಾಗಿದ್ದ ಚರ್ಚೆಯನ್ನು ವ್ಯಕ್ತಿ ಆಧಾರಿತವಾಗಿ ಮಾರ್ಪಡಿಸಿಬಿಟ್ಟಿವೆ. ಹಾಗಂತ, ಓರ್ವ ಪ್ರಧಾನಿಗೆ ಇರಬೇಕಾದ ಅರ್ಹತೆಗಳೇನು ಎಂದು ಚರ್ಚಿಸುವುದು ತಪ್ಪು ಎಂದಲ್ಲ. ಹಾಗೇನಾದರೂ ಗಂಭೀರ ಚರ್ಚೆಯೊಂದು ನಡೆದರೆ ಅಲ್ಲಿ ಮೋದಿಗಿಂತ ರಾಹುಲ್ ಗಾಂಧಿಯೇ ಸೂಕ್ತ ಎಂದು ವ್ಯಕ್ತವಾಗಬಹುದು. ಯಾಕೆಂದರೆ, ಪ್ರಧಾನಿಗಿರುವ ಅರ್ಹತೆ ಬಾಂಬ್ ಹಾಕುವುದು, ಹತ್ಯಾಕಾಂಡ ನಡೆಸುವುದು, ಟಾಟಾ-ಅದಾನಿಗಳಿಗೆ ಭೂಮಿ ಬಿಟ್ಟು ಕೊಡುವುದೇ ಅಲ್ಲವಲ್ಲ. ರಾಜ್ಯಗಳ ಸಮಗ್ರ ಅಭಿವೃದ್ಧಿಯ ಪಟ್ಟಿಯಲ್ಲಿ ಗುಜರಾತ್‍ಗೆ 5ಕ್ಕಿಂತ ಕೆಳಗಿನ ಸ್ಥಾನವಿದೆಯೆಂಬುದು ಈಗ ಎಲ್ಲರಿಗೂ ಗೊತ್ತು. ಆದರೆ ಮೊದಲ 5 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇಲ್ಲದ ಜನಪ್ರಿಯತೆಯನ್ನು ಮೋದಿ ಮಾಧ್ಯಮಗಳ ಮುಖಾಂತರ ಪಡಕೊಂಡಿದ್ದಾರೆ. ಈ ಮಾಧ್ಯಮ ತಂತ್ರವನ್ನು ಮೋದಿ ಬಳಸಿಕೊಳ್ಳದೇ ಇರುತ್ತಿದ್ದರೆ ಇವತ್ತು ನಿತೀಶ್, ಚೌಹಾನ್, ಮಾಣಿಕ್ ಸರ್ಕಾರ್‍ಗಳೆಲ್ಲ ಮುಂಚೂಣಿ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದರು. ಅಂದಹಾಗೆ, ಕೇವಲ ಜನಪ್ರಿಯತೆಯೊಂದೇ ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗುವುದಕ್ಕೆ ಅರ್ಹತೆ ಎಂದಾದರೆ ಅಮಿತಾಬ್ ಬಚ್ಚನ್, ತೆಂಡುಲ್ಕರ್‍ಗಳೆಲ್ಲ ಅಭ್ಯರ್ಥಿಗಳಾಗುತ್ತಿದ್ದರಲ್ಲವೇ? ಜನಪ್ರಿಯತೆಗಿಂತ ಆಚೆ ಕೆಲವು ಮಾನವೀಯ ಗುಣಗಳು ಓರ್ವ ಅಭ್ಯರ್ಥಿಯಲ್ಲಿರ
ಹಿಟ್ಲರ್
ಬೇಕಾದುದು ಅತೀ ಅಗತ್ಯ. ಮೋದಿ ಈ ನಿಟ್ಟಿನಲ್ಲಿ ತೀವ್ರ ವೈಫಲ್ಯ ಅನುಭವಿಸಿದ್ದಾರೆ. ಗುಜರಾತ್‍ನ ರಸ್ತೆ, ವಿದ್ಯುತ್ ಅಥವಾ ಅವರ ಮಾತುಗಾರಿಕೆಯನ್ನು ತೋರಿಸಿ ಮೋದಿಯನ್ನು ‘ಪರಿಹಾರ’ ಎಂದು ಬಿಂಬಿಸುವವರಿಗೆ ನಾವು ಗೋಧ್ರಾವನ್ನು ತೋರಿಸಬೇಕಾಗಿದೆ. ಪಶ್ಚಾತ್ತಾಪ ಪಡದ ಅವರ ಮನಸ್ಥಿತಿಯನ್ನು ಬಿಂಬಿಸಬೇಕಾಗಿದೆ. ಮುಸ್ಲಿಮರ ಕುರಿತಂತೆ ಅವರು ವ್ಯಕ್ತಪಡಿಸಿರುವ ಅಸಹ್ಯ ಪದ ಪ್ರಯೋಗಗಳತ್ತ ಗಮನ ಹರಿಸಬೇಕಾಗಿದೆ. ಯಾಕೆಂದರೆ, ಓರ್ವ ವ್ಯಕ್ತಿ 'ಪರಿಹಾರ' ಆಗುವುದು ಮತ್ತು ಆಗಬೇಕಾದದ್ದು ಆತನ ಮನುಷ್ಯ ಪರ ನಿಲುವಿಗಾಗಿ. ಮನುಷ್ಯರನ್ನು ಧರ್ಮದ ಆಧಾರದಲ್ಲಿ ಒಡೆಯುವ ಮತ್ತು ಒಂದು ವರ್ಗವನ್ನು ಮಾತ್ರ ಗೌರವಿಸುವ ವ್ಯಕ್ತಿ ಎಷ್ಟೇ ಜನಪ್ರಿಯರಾಗಿದ್ದರೂ ಆತ ‘ಪರಿಹಾರ’ ಆಗಲಾರ, ಆಗಬಾರದು.

Monday, September 16, 2013

ಇನ್ನಷ್ಟು ಠಾಕೂರ್ ಗಳ ಸೃಷ್ಟಿಗೆ ಚಿತ್ರಕತೆ ರಚಿಸುತ್ತಿದ್ದಾರಲ್ಲ, ಅವರನ್ನೇಕೆ ನಾವು ಪ್ರಶ್ನಿಸುತ್ತಿಲ್ಲ?

 ಜೇಮ್ಸ್ ಡೋಹರ್ಟಿ
ಜಾಯ್ ಡಿಮ್ಯಾಗಿಯೋ
ಅರ್ಥರ್ ಮಿಲ್ಲರ್
   ಈ ಮೂವರನ್ನು ನಟಿ ಮರ್ಲಿನ್ ಮೆನ್ರೋ ಮದುವೆಯಾದರು. ಎಲ್ಲರಿಂದಲೂ ವಿಚ್ಛೇದನ ಪಡಕೊಂಡರು. ರಾತ್ರಿ ಮಲಗುವಾಗ ಹೊಟ್ಟೆಯನ್ನು ಸವರುತ್ತಾ ಗರ್ಭದ ಕೃತಕ ಸುಖ ಅನುಭವಿಸುವಷ್ಟು ಮಗುವಿಗಾಗಿ ಹಂಬಲಿಸಿದರು. ತನ್ನನ್ನು ಅರ್ಥ ಮಾಡುವ ಪುರುಷನಿಗಾಗಿ ಆಕೆ ಹುಡುಕಾಡುವಾಗ, ಆಕೆಯ ಸೌಂದರ್ಯವನ್ನು ಆಸ್ವಾದಿಸುವುದಕ್ಕಾಗಿ ಜಗತ್ತು ಸಾಲುಗಟ್ಟಿತು. ಮೆನ್ರೋ ಒಂದು ಹಂತದ ವರೆಗೆ ಇವನ್ನೆಲ್ಲಾ ಅಸಹ್ಯಪಟ್ಟಳು. ತನ್ನ ಹಿಂದೆ ಬರುವ ಈ ಜಗತ್ತಿನ ಉದ್ದೇಶ, ಬಾಯಾರಿಕೆ ಏನೆಂಬುದು ಆಕೆಗೆ ಚೆನ್ನಾಗಿ ಅರ್ಥವಾಗತೊಡಗಿತ್ತು. ನಯಾಗರ, ಜೆಂಟಲ್‍ಮ್ಯಾನ್, ರಿವರ್ ಆಫ್ ನೋ ರಿಟರ್ನ್, ಸಮ್ ಲೈಕ್ ಇಟ್ ಹಾಟ್.. ಮುಂತಾದ ಸಿನಿಮಾಗಳಲ್ಲಿ ಆಕೆಯ ಅಭಿನಯವನ್ನು ಕಂಡು ಅಮೇರಿಕ ಅಭಿಮಾನ ಪಡುವಾಗ ಆಕೆ ಒಳಗೊಳಗೇ ಕರುಬುತ್ತಿದ್ದಳು. ವಿಶ್ವಾಸಾರ್ಹ ಸಂಗಾತಿ, ಪುಟ್ಟದೊಂದು ಮಗು, ನೆಮ್ಮದಿಯ ಬದುಕಿಗಾಗಿ ಆಕೆ ತವಕಪಡುತ್ತಿದ್ದಳು. ಒಂದು ಕಡೆ ಪ್ರಸಿದ್ಧಿಯಿದ್ದರೆ ಇನ್ನೊಂದು ಕಡೆ ಕತ್ತಲೆಯಿತ್ತು. ಅಮೇರಿಕ ಅಧ್ಯಕ್ಷ  ಕೆನಡಿಯನ್ನು ಪ್ರೀತಿಸಿದಳು. ಮದುವೆಯಾಗುವಂತೆ ಒತ್ತಾಯಿಸಿದಳು. ಅದೂ ಕೈಗೂಡದಾಗ, ಜಗತ್ತಿನ ಮನಸ್ಥಿತಿಯ ಬಗ್ಗೆಯೇ ಜಿಗುಪ್ಸೆಗೊಂಡಳು. ಈ ಜಗತ್ತು ಪ್ರೀತಿಸುವುದು ತನ್ನನ್ನಲ್ಲ, ತನ್ನ ಸೌಂದರ್ಯವನ್ನು ಎಂದು ಖಚಿತಪಡಿಸಿಕೊಂಡಳು. ಕಣ್ಣೀರಿಟ್ಟಳು.
   “..ದಯವಿಟ್ಟು ನನ್ನನ್ನು ತಮಾಷೆಯ ವಸ್ತುವಾಗಿ ನೋಡಬೇಡಿ. ನಾನು ಈ ಜಗತ್ತನ್ನು ಮತ್ತು ಬದುಕನ್ನು ಅಪಾರವಾಗಿ ಪ್ರೀತಿಸುತ್ತೇನೆ. ಆದರೆ ನನ್ನ ಬದಲು ನನ್ನ ಸೌಂದರ್ಯವನ್ನು ಮಾತ್ರ ಈ ಜಗತ್ತು ಪ್ರೀತಿಸುವುದನ್ನು ನೋಡುವಾಗ ಅಸಹ್ಯವಾಗುತ್ತದೆ. ಜನರು ನನ್ನನ್ನು ನೋಡುತ್ತಿಲ್ಲ. ನನ್ನ ದೇಹವನ್ನಷ್ಟೇ ನೋಡುತ್ತಿದ್ದಾರೆ..” ಎಂದೆಲ್ಲಾ ಹೇಳಿಕೊಂಡಳು. ಕೇವಲ ಸೆಕ್ಸ್ ಸಿಂಬಲ್ ಆಗಿ ಮಾತ್ರವೇ ಗುರುತಿಗೀಡಾಗುವುದನ್ನು ವಿರೋಧಿಸುತ್ತಲೇ ತನ್ನ 36ನೇ ವರ್ಷದಲ್ಲೇ ಆತ್ಮಹತ್ಯೆ ಮಾಡಿ ಕೊಂಡಳು. ವಿಪರ್ಯಾಸ ಏನೆಂದರೆ,
Merlyn Menro was an actress, model and ಸಿಂಗರ್, who became ಅ major sex symbol - ‘ಪ್ರಮುಖ ಸೆಕ್ಸ್ ಸಿಂಬಲ್ ಆಗಿರುವ ಮರ್ಲಿನ್ ಮೆನ್ರೋರು ಓರ್ವ ನಟಿ, ಮಾಡೆಲ್ ಮತ್ತು ಗಾಯಕಿ ಕೂಡ ಆಗಿದ್ದರು’ ಎಂದೇ ಜಗತ್ತು ಇವತ್ತು ಆಕೆಯನ್ನು ಗುರುತಿಸುತ್ತದೆ. (ವಿಕಿಪೀಡಿಯಾ).
   ಮಹಿಳೆ ಇವತ್ತು  ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಭಾಗವಾಗಿದ್ದಾಳೆ. ದೆಹಲಿ ಅತ್ಯಾಚಾರ ಪ್ರಕರಣದಲ್ಲಿ ಕೋರ್ಟು ನೀಡಿದ ತೀರ್ಪು- ಹೆಣ್ಣು ಮತ್ತು ಗಂಡಿನ ಮನಸ್ಥಿತಿಯ ಸುತ್ತ ಮತ್ತೊಂದು ಸುತ್ತಿನ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ‘ವಿವಾಹೇತರ ಲೈಂಗಿಕ ಸಂಬಂಧವನ್ನು ಅಪರಾಧವಾಗಿ ಪರಿಗಣಿಸಬೇಕಿಲ್ಲ..’ ಎಂದು ಸುಪ್ರೀಮ್ ಕೋರ್ಟು ಇದೇ ಸಂದರ್ಭದಲ್ಲಿ ಹೇಳಿರುವುದನ್ನು ಇದರ ಜೊತೆಗಿಟ್ಟು ನೋಡಿದರೆ ಚರ್ಚೆಯ ವ್ಯಾಪ್ತಿ ಇನ್ನಷ್ಟು ವಿಸ್ತಾರ ಮತ್ತು ಗಟ್ಟಿಗೊಳ್ಳುತ್ತದೆ. ಅತ್ಯಾಚಾರಕ್ಕೆ ಕೇವಲ ಅತ್ಯಾಚಾರಿಯಷ್ಟೇ ಕಾರಣವೇ? ಕಾಲಕಾಲಕ್ಕೆ ಬದಲಾಗುತ್ತಿರುವ ಕಾನೂನುಗಳು, ಜೀವನ ಕ್ರಮದ ವ್ಯಾಖ್ಯಾನಗಳಿಗೆ ಇದರಲ್ಲಿ ಯಾವ ಪಾತ್ರವೂ ಇಲ್ಲವೇ? ಹೆಣ್ಣನ್ನು ನಾವು ಇವತ್ತು ಬಿಂಬಿಸುತ್ತಿರುವ ರೀತಿ ಹೇಗಿದೆ? ಸಿನಿಮಾ ಸಹಿತ ಮಾಧ್ಯಮ ಕ್ಷೇತ್ರವು ಯಾಕಾಗಿ ಹೆಣ್ಣನ್ನು ಇಷ್ಟಪಡುತ್ತವೆ? ಇವೆಲ್ಲ ಹೆಣ್ಣನ್ನು ಮೆಚ್ಚಿಕೊಳ್ಳುವುದು ಬರೇ ಪ್ರತಿಭೆಗಾಗಿಯೋ ಅಥವಾ ಸೌಂದರ್ಯಕ್ಕಾಗಿಯೋ? ಅಪಾರ ಪ್ರತಿಭೆಯಿದ್ದೂ ಮರ್ಲಿನ್ ಮೆನ್ರೋ ಗುರುತಿಗೀಡಾದದ್ದು ಸೌಂದರ್ಯಕ್ಕಾಗಿ. ಹಾಗಂತ ಪ್ರತಿಭೆ ಚರ್ಚೆಗೆ ಒಳಗಾಗಿಲ್ಲ ಎಂದಲ್ಲ. ಆಗಿದೆ. ಆದರೆ ಮರ್ಲಿನ್ ಮೆನ್ರೊ ಅಂದರೆ ಮೊದಲು ನೆನಪಿಗೆ ಬರುವುದು ಸೌಂದರ್ಯವೇ. ಬಳಿಕ ಅಭಿನಯ. ನಟಿಯರಿಗೆ ಸಂಬಂಧಿಸಿ ಜಗತ್ತಿನ ನಿಲುವು ಬಹುತೇಕ ಇದುವೇ. ಡ್ಯಾನ್ಸು, ಡ್ರೆಸ್ಸು, ಸೌಂದರ್ಯದ ಕಾರಣಕ್ಕಾಗಿಯೇ ಓರ್ವ ನಟಿ ಚಿತ್ರದುದ್ದಕ್ಕೂ ವೀಕ್ಷಕರನ್ನು ಸೆಳೆಯುತ್ತಿರುತ್ತಾಳೆ. ಸೌಂದರ್ಯ ಪ್ರದರ್ಶನ ಮತ್ತು ಸೆಕ್ಸ್ ಅಪೀಲ್ ಇಲ್ಲದ ಪಾತ್ರಗಳು ಇರುವುದು ತೀರಾ ಕಡಿಮೆ. ಇವರಿಗೆ ಹೋಲಿಸಿದರೆ, ನಟರು ತೀರಾ ಭಿನ್ನ. ಡಯಲಾಗು, ಸಾಹಸ, ಮ್ಯಾನರಿಸಂನ ಕಾರಣಕ್ಕಾಗಿಯೇ ಪ್ರಥಮತಃ ಅವರು ನೆನಪಿಗೆ ಬರುತ್ತಾರೆ. ಹಾಗಂತ, ಹೆಣ್ಣು ಸೌಂದರ್ಯದ ವಸ್ತುವಾಗಿ ಗುರುತಿಗೀಡಾಗಿರುವುದಕ್ಕೆ ಆಕೆಯೊಬ್ಬಳೇ ಕಾರಣ ಎಂದು ಹೇಳುತ್ತಿಲ್ಲ. ಸಿನಿಮಾ ರಂಗ, ಮಾಡಲಿಂಗ್ ಅಥವಾ ಮಾಧ್ಯಮ.. ಯಾವುದೇ ಕ್ಷೇತ್ರವಿರಲಿ, ಅಲ್ಲೆಲ್ಲಾ ನಿರ್ದೇಶಕ, ನಿರ್ಮಾಪಕರು, ಬಹುತೇಕ ಪುರುಷರೇ. ಹೆಣ್ಣಿನ ಮತ್ತು ಗಂಡಿನ ಪಾತ್ರವನ್ನು ರಚಿಸುವುದೂ ಅವರೇ. ಹೆಣ್ಣು ಹೇಗಿದ್ದರೆ, ಹೇಗೆ ಅಭಿನಯಿಸಿದರೆ, ಎಷ್ಟು ಪ್ರಮಾಣದಲ್ಲಿ ಬಟ್ಟೆ ತೊಟ್ಟರೆ, ಯಾವ ಹಾಡಿಗೆ ಹೇಗೆ ಕುಣಿದರೆ ಚೆನ್ನ.. ಎಂದೆಲ್ಲಾ ತೀರ್ಮಾನಿಸುವುದೂ ಬಹುತೇಕ ಪುರುಷರೇ. ಒಂದು ರೀತಿಯಲ್ಲಿ, ಹೆಣ್ಣು ಇವತ್ತು ತನ್ನತನಕ್ಕಿಂತ ತನ್ನ ಸೌಂದರ್ಯದ ಕಾರಣಕ್ಕಾಗಿ ಸುದ್ದಿಯಲ್ಲಿದ್ದರೆ, ಅದು ಸಂಪೂರ್ಣ ಆಕೆಯ ಬಯಕೆಯೆಂದು ಹೇಳುವಂತಿಲ್ಲ. ಮರ್ಲಿನ್ ಮೆನ್ರೊ ಹೇಗೆ ತನ್ನ ದೇಹ ಪ್ರದರ್ಶನವನ್ನು ಅಸಹ್ಯ ಪಟ್ಟುಕೊಂಡೂ ಆ ಕ್ಷೇತ್ರದಲ್ಲಿ ಮುಂದುವರಿದಳೋ ಅದೇ ರೀತಿಯಲ್ಲಿ ಗೊಂದಲದಲ್ಲಿರುವ ಹೆಣ್ಣು ಮಕ್ಕಳು ಖಂಡಿತ ಇವತ್ತೂ ಇರಬಹುದು. ಆದರೆ, ಅವರ ನಿಯಂತ್ರಣ ಅವರ ಕೈಯಲ್ಲಿಲ್ಲ. ಅವರು ಯಾವ ಕ್ಷೇತ್ರವನ್ನು ತನ್ನ ಪ್ರತಿಭೆ, ಕೆರಿಯರ್‍ನ ಬೆಳವಣಿಗೆಗೆ ಉತ್ತಮ ಎಂದು ಭಾವಿಸಿರುವರೋ ಆ ಕ್ಷೇತ್ರದ ತುಂಬಾ ವ್ಯಾಪಾರಿಗಳೇ ತುಂಬಿದ್ದಾರೆ. ಸೌಂದರ್ಯ ಪ್ರದರ್ಶನದ ಹೊರತು ಹೆಣ್ಣಿಗೆ ವ್ಯಕ್ತಿತ್ವವಿಲ್ಲ ಎಂದವರು ಸಾರುತ್ತಿ ದ್ದಾರೆ. ನಿಜವಾಗಿ, ಹೆಣ್ಣನ್ನು ಶೋಷಿಸುತ್ತಿರುವ ಸಿನಿಮಾ ಸಹಿತ ಎಲ್ಲ ರಂಗಗಳ ವಿರುದ್ಧವೂ ನಮ್ಮ ಮಧ್ಯೆ ಪ್ರತಿಭಟನೆಗಳು ಕಾಣಿಸಿಕೊಳ್ಳಬೇಕಿತ್ತು. ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯ ಎಂದೆಲ್ಲಾ ಹೋರಾಟಕ್ಕಿಳಿಯುವವರು ಪುರುಷ ಶೋಷಣೆಯ ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಳ್ಳಬೇಕಿತ್ತು. ಪುರುಷ ಸಾಮ್ರಾಜ್ಯದ ಈ ಶೋಷಣೆಗೆ ಪರ್ಯಾಯವಾಗಿ ಇನ್ನೊಂದು ರಂಗವೊಂದನ್ನು ತಯಾರಿಸಬೇಕಿತ್ತು. ಆದರೆ ಕಲೆ, ಸಂಸ್ಕøತಿ, ಮನರಂಜನೆಯನ್ನು ಪುರುಷ ಏನೆಂದು ವ್ಯಾಖ್ಯಾನಿಸುತ್ತಾನೋ ಅದನ್ನೇ ಮಹಿಳಾ ಜಗತ್ತೂ ಇವತ್ತು ಒಪ್ಪಿಕೊಳ್ಳುತ್ತಿದೆ. ಸೌಂದರ್ಯ ಪ್ರದರ್ಶನಕ್ಕೆ ಹೊರತಾದ ವ್ಯಕ್ತಿತ್ವವೊಂದು ಹೆಣ್ಣಿಗಿದೆ ಎಂಬುದನ್ನು ಸಾಬೀತುಪಡಿಸುವ ಸವಾಲನ್ನು ಸ್ವೀಕರಿಸುವುದಕ್ಕೆ ಅದು ಮುಂದಾಗುತ್ತಲೂ ಇಲ್ಲ. ಅಂದಹಾಗೆ,
   ಫೆಲಿಸಿಟೆ ಎದುರಿಸಿದ್ದೂ ಇದೇ ಸವಾಲನ್ನು.
ಫೆಲಿಸಿಟೆ ಓರ್ವ ಸಾಮಾನ್ಯ ಹೆಣ್ಣು ಮಗಳು. ಬದುಕನ್ನು ಅಪಾರವಾಗಿ ಪ್ರೀತಿಸುವ ಅವಳಿಗೆ ಸುಂದರ ಜಗತ್ತಿನ ಕನಸಿತ್ತು. ತಾನು, ತನ್ನ ಮಗು, ಪತಿ, ಮನೆ.. ಮುಂತಾದ ಚಿಕ್ಕದೊಂದು ಕನಸು ಕಟ್ಟಿಕೊಂಡು ಬದುಕಲು ಹೊರಟ  ಫೆಲಿಸಿಟೆಳ ಬದುಕಿನಲ್ಲಿ ಒಬ್ಬರ ನಂತರ ಒಬ್ಬರಂತೆ ಮೂವರು ಬಂದು ಹೋದರು. ಆದರೆ ಯಾರೂ ಆಕೆಗೆ ಕನಸಿನ ಬದುಕನ್ನು ಒದಗಿಸಲೇ ಇಲ್ಲ. ಕೊನೆಗೆ ಆಕೆ ಓರ್ವ ವಿಧವೆಯ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಳು. ಪಾತ್ರೆ ತೊಳೆಯುವುದು, ಮಕ್ಕಳನ್ನು ನೋಡಿಕೊಳ್ಳುವುದು, ಹೂದೋಟಕ್ಕೆ ನೀರುಣಿಸುವುದು.. ಹೀಗೆ ಬದುಕನ್ನು ಆನಂದಿಸಲು ಆರಂಭಿಸಿದಳು. ಸಂಬಳವನ್ನು ಆಕೆ ಎಣಿಸಿಯೇ ಇರಲಿಲ್ಲ. ಹೀಗಿರುತ್ತಾ, ಆ ವಿಧವೆಗೆ ಒಂದು ಪಕ್ಷಿ ಸಿಗುತ್ತದೆ. ಹೆಸರು ಲುಲು. ಆಕೆ ಅದನ್ನು  ಫೆಲಿಸಿಟೆಗೆ ಕೊಡುತ್ತಾಳೆ. ಲುಲು ಅಂದರೆ ಪ್ರೀತಿ, ತನ್ನತನ ಎಂದರ್ಥ. ಲುಲುವಿನಲ್ಲಿ  ಫೆಲಿಸಿಟೆ ತನ್ನತನವನ್ನು ಕಾಣತೊಡಗುತ್ತಾಳೆ. ಅದರೊಂದಿಗೆ ತನ್ನ ವ್ಯಕ್ತಿತ್ವ, ಹೆಣ್ಣಿನ ಭಾವನೆ, ಲಜ್ಜೆ, ಆಸೆ.. ಎಲ್ಲವನ್ನೂ ಹೇಳಿಕೊಳ್ಳುತ್ತಾ ಬದುಕತೊಡಗುತ್ತಾಳೆ. ಪತಿಯಂದಿರು ಕೊಡದ ಬದುಕನ್ನು ಲುಲುವಿನಲ್ಲಿ ಆಕೆ ಪಡೆಯತೊಡಗುತ್ತಾಳೆ..’
   ‘ಸಿಂಪಲ್ ಹಾರ್ಟ್’ ಎಂಬ ತಮ್ಮ ಕತೆಯೊಂದರಲ್ಲಿ ಫ್ರಾನ್ಸಿನ ಖ್ಯಾತ ಬರಹಗಾರ ಫ್ಲೋಬರ್ಟ್‍ರು ಹೆಣ್ಣನ್ನು ಹೀಗೆ
ಚಿತ್ರಿಸಿದ್ದಾರೆ. ನಿಜವಾಗಿ, ಫ್ಲೋಬರ್ಟ್ ಹೇಳಿದರೂ ಹೇಳದಿದ್ದರೂ ಹೆಣ್ಣು ಯಾವಾಗಲೂ ಭಾವುಕ ಜೀವಿ. ಲಜ್ಜೆ ಆಕೆಯ ಸೌಂದರ್ಯ. ಪುರುಷ ಜಗತ್ತಿನಿಂದ ಆಕೆ ಬಯಸುವುದು ತನ್ನ ಸೌಂದರ್ಯದ ದುರ್ಬಳಕೆಯನ್ನಲ್ಲ, ಸಂರಕ್ಷಣೆಯನ್ನು. ಆದರೆ, ಅತ್ಯಾಚಾರದ ಸುತ್ತ ಇವತ್ತು ಆಗುತ್ತಿರುವ ಚರ್ಚೆಗಳಲ್ಲಿ, ಆಧುನಿಕತೆಯ ಹೆಸರಲ್ಲಿ ಹೆಣ್ಣನ್ನು ದುರುಪಯೋಗಿಸುತ್ತಿರುವ ಪುರುಷ ಜಗತ್ತಿನ ಬಗ್ಗೆ ಯಾರೂ ಮಾತಾಡುವುದಿಲ್ಲ. ಅತ್ಯಾಚಾರವೆಂಬುದು ಕ್ರೂರ, ಅಮಾನವೀಯ, ಗಲ್ಲು ಶಿಕ್ಷೆಗೆ ಅರ್ಹ.. ಎಲ್ಲವೂ ಹೌದು. ಆದರೆ ಹೆಣ್ಣಿನ ಬಗ್ಗೆ ನಮ್ಮ ದೃಷ್ಟಿಕೋನವಾದರೂ ಹೇಗಿದೆ? ಸಿನಿಮಾ, ಮಾಡೆಲಿಂಗ್‍ನ ಹೆಸರಲ್ಲಿ ಹೆಣ್ಣು ಬೆತ್ತಲೆಗೊಳ್ಳುತ್ತಾಳಲ್ಲ, ಯಾರಿಂದ? ಹೆಣ್ಣು ಇವತ್ತು ಪ್ರವೇಶಿಸದ ಕ್ಷೇತ್ರವೇ ಇಲ್ಲ ಎಂದು ಅಭಿಮಾನ ಪಡುವಾಗಲೆಲ್ಲ, ಅವಳನ್ನು ಈ ಕ್ಷೇತ್ರಗಳು ಸುಖವಾಗಿಟ್ಟಿವೆ ಎಂದು ಎಷ್ಟರ ಮಟ್ಟಿಗೆ ಹೇಳಬಹುದು? ಆಕೆಗೆ ಪ್ರವೇಶ ಕೊಟ್ಟವರು ಅವರಿಂದ ಏನನ್ನೆಲ್ಲಾ ಕಸಿದುಕೊಂಡಿದ್ದಾರೆ? ಅವಳ ವ್ಯಕ್ತಿತ್ವವನ್ನು ಪ್ರದರ್ಶಿಸುವುದಕ್ಕೆ ಎಷ್ಟಂಶ ಅವಕಾಶ ಮಾಡಿಕೊಟ್ಟಿದ್ದಾರೆ?
   ‘ಅತ್ಯಾಚಾರಿಗಳಿಗೆ ಮರಣ ದಂಡನೆಯಾಗಲಿ’ ಎಂದು ಒತ್ತಾಯಿಸುವವರಲ್ಲಿ ಅತ್ಯಾಚಾರಕ್ಕೆ ಪ್ರಚೋದನೆ ಕೊಡುವವರೂ ಇದ್ದಾರೆ ಅನ್ನುವುದೇ ಅತಿದೊಡ್ಡ ವ್ಯಂಗ್ಯ. ತಮ್ಮ ವ್ಯಾಪಾರವನ್ನು, ಬ್ಯಾಂಕ್ ಬ್ಯಾಲೆನ್ಸನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಒಂದಲ್ಲ ಒಂದು ರೀತಿಯಲ್ಲಿ ಅವರೆಲ್ಲ ಅತ್ಯಾಚಾರದಲ್ಲಿ ಪಾಲ್ಗೊಂಡೇ ಇರುತ್ತಾರೆ. ಆದರೆ ಅದಕ್ಕೆ ಅತ್ಯಾಚಾರ ಎಂಬ ಪದ ಬಳಕೆ ಆಗುತ್ತಿಲ್ಲ ಎಂಬುದಷ್ಟೇ ವ್ಯತ್ಯಾಸ. ಹೆಣ್ಣಿಗೆ ತನ್ನ ಸೌಂದರ್ಯವನ್ನೇ ವ್ಯಕ್ತಿತ್ವ ಎಂದು ಹೇಳಿಕೊಟ್ಟು, ಅದರ ಪ್ರದರ್ಶನವೇ ವ್ಯಕ್ತಿತ್ವ ಪ್ರದರ್ಶನ ಎಂದು ನಂಬಿಸಿದ್ದು ಗಲ್ಲು ಶಿಕ್ಷೆಗೊಳಗಾಗಿರುವ ಅಕ್ಷಯ್ ಠಾಕೂರ್, ವಿನಯ್, ಮುಖೇಶ್, ಪವನ್ ಖಂಡಿತ ಅಲ್ಲ. ಯುವತಿಯ ಮೇಲೆ ಕ್ರೂರವಾಗಿ ಎರಗಲು ಧೈರ್ಯ ಕೊಟ್ಟ ಮದ್ಯದ ತಯಾರಕರು ಅಥವಾ ವಿತರಕರೂ ಇವರಲ್ಲ. ಹೆಣ್ಣನ್ನು ಭೋಗದ ವಸ್ತುವಾಗಿ ಪ್ರಚಾರ ಮಾಡುತ್ತಿರುವ ಯಾವ ಮಾಧ್ಯಮದ ನಿರ್ದೇಶಕರೂ ಇವರಲ್ಲ. ಶ್ರೀಮಂತರಿಗೆ ಹೆಣ್ಣು, ಮದ್ಯ, ಲವರ್ಸ್.. ಎಂದು ಬೇಕಾದ್ದೆಲ್ಲವೂ ಸಿಗುವಂತಹ ಈ ವ್ಯವಸ್ಥೆಯ ನಿರ್ಮಾತೃಗಳೂ ಇವರಲ್ಲ. ಹಾಗಂತ ಇದರರ್ಥ ಇವರಿಗೆಲ್ಲ ಮರಣ ದಂಡನೆಯಾಗಬಾರದು ಎಂದಲ್ಲ. ಅವರೆಸಗಿದ ಕ್ರೌರ್ಯಕ್ಕೆ ಇದೂ ಕಡಿಮೆಯೇ. ಆದರೆ ಅವರನ್ನು ಖಂಡಿಸುವಾಗಲೆಲ್ಲ, ಆ ಕ್ರೌರ್ಯದಲ್ಲಿ ಅವರು ಮಾತ್ರ ಪಾಲುದಾರರಲ್ಲ ಎಂಬ ಅರಿವು ನಮ್ಮಲ್ಲಿರಬೇಕು. ಅವರನ್ನು ಆ ಅಪರಾಧಕ್ಕೆ ದೂಡಿದವರು ಆರಾಮವಾಗಿದ್ದಾರೆ. ಇನ್ನಷ್ಟು ಮುಖೇಶ್, ಪವನ್, ವಿನಯ್, ಠಾಕೂರ್‍ಗಳನ್ನು ಸೃಷ್ಟಿಸುವುದಕ್ಕೆ ಚಿತ್ರಕತೆ ರಚಿಸುತ್ತಿದ್ದಾರೆ. ಆದ್ದರಿಂದ ನಮ್ಮ ಅತ್ಯಾಚಾರದ ಚರ್ಚೆಯಲ್ಲಿ 'ಅವರ ಪಾತ್ರ' ಪ್ರಸ್ತಾಪವಾಗದ ಹೊರತು ಚರ್ಚೆ ಖಂಡಿತ ಪೂರ್ಣವಾಗಲಾರದು. ಒಪ್ಪಿ, ಬಿಡಿ.Friday, September 13, 2013

ಹಾಲೋಕಾಸ್ಟ್ ಗೆ ಕಣ್ಣೀರಿಳಿಸುವವರೇ, ಈ ಹತ್ಯಾಕಾಂಡದ ಕುರಿತೇಕೆ ಮಾತಾಡುತ್ತಿಲ್ಲ?

ಮುಗೇನಿ
2003 ಡಿಸೆಂಬರ್ 16ರಂದು ಉಗಾಂಡದ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಡಾ| ಪೀಟರ್ ಮುಗೇನಿಯವರನ್ನು ಪೊಲೀಸರು ಬಂಧಿಸಿದರು. ಹಾಗಂತ, ಅವರೇನೂ ಕ್ರಿಮಿನಲ್ಲೋ ಮಾದಕ ವಸ್ತುಗಳ ಕಳ್ಳಸಾಗಾಟಗಾರರೋ ಆಗಿರಲಿಲ್ಲ. ಉಗಾಂಡದ ಪ್ರತಿ ಮನೆಗೂ ಮುಗೇನಿ ಎಂದರೆ ಯಾರೆಂದು ಗೊತ್ತಿತ್ತು. ಅಧ್ಯಕ್ಷ  ಯೋವರಿ ಮುಸೆವೆನಿ ಜೊತೆ ಸೇರಿ ಏಡ್ಸ್ ನ ಬಗ್ಗೆ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿರುವುದು, ಉಗಾಂಡದಿಂದ ಏಡ್ಸನ್ನು ನಿರ್ಮೂಲನಗೊಳಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಬಡರಾಷ್ಟ್ರಗಳ ವಿರುದ್ಧ ಪಾಶ್ಚಾತ್ಯ ಔಷಧ ಕಂಪೆನಿಗಳು ಮಾಡುತ್ತಿರುವ ಸವಾರಿಯನ್ನು ಪ್ರಶ್ನಿಸುತ್ತಿರುವುದು.. ಎಲ್ಲವೂ ಮುಗೇನಿಯವರನ್ನು ಉಗಾಂಡದ ಹೀರೋವನ್ನಾಗಿ ಮಾರ್ಪಡಿಸಿದ್ದುವು. ಉಗಾಂಡದ ಅಧ್ಯಕ್ಷ  ಮುಸೆವೆನಿಯ ಮಾತಿಗಿಂತಲೂ ಹೆಚ್ಚು ಗೌರವ ಮತ್ತು ಬೆಲೆ ಸಿಗುತ್ತಿದ್ದುದು ಮುಗೇನಿಯ ಅಭಿಪ್ರಾಯಗಳಿಗೆ. ಜಾಗತಿಕವಾಗಿಯೂ ಅವರು ಏಡ್ಸ್ ತಜ್ಞರಾಗಿ ಗುರುತಿಸಿಕೊಂಡಿದ್ದರು. ಆದ್ದರಿಂದಲೇ, ಅವರ ಬಂಧನವು ಉಗಾಂಡದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯವಾಗಿಯೇ ಚರ್ಚೆಗೊಳಪಟ್ಟಿತು. ಉಗಾಂಡ ಸರಕಾರವು ತುರ್ತು ಸಂಪುಟ ಸಭೆಯನ್ನು ಕರೆಯಿತಲ್ಲದೇ ಮುಗೇನಿಯವರಲ್ಲಿ ವಿವರಣೆಯನ್ನು ಕೋರಿತು. ಅವರು ಹೇಳಿದರು,
   'ನಾನು ಕಾನೂನು ಉಲ್ಲಂಘಿಸಿದ್ದೇನೆಂದು ನೀವು ವಾದಿಸುವುದಾದರೆ ಹಾಗೆ ವಾದಿಸಿಕೊಳ್ಳಿ. ಆದರೆ, ಈ ಉಲ್ಲಂಘನೆಯು ನನಗಾಗಿ ಅಲ್ಲ ಎಂಬುದು ನಿಮಗೆ ಚೆನ್ನಾಗಿಯೇ ಗೊತ್ತು. ನನ್ನ ಜನರು ದುಬಾರಿ ಔಷಧವನ್ನು ಖರೀದಿಸಲಾಗದೇ ಪ್ರತಿ ದಿನ ಸಾಯುತ್ತಿದ್ದಾರೆ. ಅವರಲ್ಲಿ ನಿಮ್ಮ ಗೆಳೆಯರಿರಬಹುದು, ಸಂಬಂಧಿಕರು, ಇತರರಿರಬಹುದು. ಅವರನ್ನು ರಕ್ಷಿಸುವ ಪ್ರಯತ್ನವನ್ನಷ್ಟೇ ನಾನು ಮಾಡಿದ್ದೇನೆ. ನಾನು ಭಾರತ ದಿಂದ ತಂದ ಜೆನೆರಿಕ್ ಔಷಧಗಳು ವಿಮಾನ ನಿಲ್ದಾಣದಲ್ಲಿವೆ. ಇನ್ನು ನೀವು ಏನನ್ನು ಮಾಡುತ್ತೀರೋ ಹಾಗೆ ಮಾಡಿಕೊಳ್ಳಿ. ನನ್ನ ಜನರ ಜೀವವನ್ನು ಉಳಿಸುವುದಕ್ಕೆ ಅವನ್ನು ಬಳಸುತ್ತೀರೋ ಅಥವಾ ಔಷಧ ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುವುದಕ್ಕಾಗಿ ಅವನ್ನು ನಾಶಪಡಿಸ್ತೀರೋ... ನಿಮಗೇ ಬಿಟ್ಟದ್ದು. ನಾನು ಮಾತ್ರ ಆ ಔಷಧವನ್ನು ಕಳಕೊಳ್ಳುವುದಕ್ಕಿಂತ ಬಂಧನವನ್ನು ಇಷ್ಟಪಡುತ್ತೇನೆ.'
   ನಿಜವಾಗಿ, ಆಫ್ರಿಕಾ ಖಂಡವನ್ನು ಕಾಡುತ್ತಿರುವ ಏಡ್ಸ್ ನ ಬಗ್ಗೆ ಮತ್ತು ಪಾಶ್ಚಾತ್ಯ ರಾಷ್ಟ್ರಗಳ ಹಿಪಾಕ್ರಸಿಯ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಆರಂಭಗೊಂಡದ್ದೇ ಆಗ.
ಗ್ಲಾಕ್ಸೋಸ್ಮಿತ್ ಕ್ಲೈನ್
ರೋಚೆ
ನೊವರ್ಟೀಸ್
ಎಲಿ ಲಿಲ್ಲಿ
ಅಬ್ಬೋಟ್
   ಮುಂತಾದ ಬೃಹತ್ ಕಂಪೆನಿಗಳೇ ಇವತ್ತು ಔಷಧಗಳನ್ನು ತಯಾರಿಸುತ್ತಿರುವುದು. ಅಮೇರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮುಂತಾದ ಕೆಲವೇ ಕೆಲವು ರಾಷ್ಟ್ರಗಳಿಗೆ ಸೇರಿದ ಈ ಕಂಪೆನಿಗಳು ತಮ್ಮ ಔಷಧಗಳಿಗೆ ಯಾವ ಬೆಲೆಯನ್ನು ನಿಗದಿಪಡಿಸುತ್ತದೋ ಅದನ್ನು ಪ್ರಶ್ನಿಸದೇ ತೆರಬೇಕಾದ ಅನಿವಾರ್ಯತೆ ಇವತ್ತು ಎಲ್ಲರ ಮುಂದೆಯೂ ಇದೆ. ಒಂದು ಔಷಧವನ್ನು ತಯಾರಿಸುವುದಕ್ಕೆ ತಗಲುವ ಖರ್ಚೆಷ್ಟು, ಯಾವ ಮಾನದಂಡದಲ್ಲಿ ಬೆಲೆ ನಿಗದಿ ಪಡಿಸುತ್ತೀರಿ ಎಂಬೆಲ್ಲ ಪ್ರಶ್ನೆಗಳನ್ನು ನಾವು ಎತ್ತುವಂತಿಲ್ಲ. ಎತ್ತಿದರೂ ಪೇಟೆಂಟ್ ಕಾನೂನನ್ನು ಮುಂದು ಮಾಡಿ ಈ ಕಂಪೆನಿಗಳು ಜಾರಿಕೊಳ್ಳುತ್ತವೆ. ಒಂದು ವಸ್ತುವಿನ ಪೇಟೆಂಟನ್ನು ಒಂದು ಔಷಧ ಕಂಪೆನಿಯು ಪಡೆದುಕೊಂಡರೆ, ಆ ಬಳಿಕ ಆ ವಸ್ತುವಿನ ಬೆಲೆಯನ್ನು ನಿಗದಿಪಡಿಸುವ ಸಂಪೂರ್ಣ ಸ್ವಾತಂತ್ರ್ಯ ಆ ಕಂಪೆನಿಗಿದೆ. ಅಲ್ಲದೇ, ಆ ವಸ್ತುವನ್ನು ಇನ್ನಾವುದೇ ಕಂಪೆನಿ ತಯಾರಿಸುವುದಕ್ಕೂ ಸಾಧ್ಯವಿಲ್ಲ. ಇಷ್ಟಕ್ಕೂ, ಔಷಧವೆಂಬುದು ಗ್ರೈಂಡರ್, ಫ್ರಿಡ್ಜು, ಟಿ.ವಿ., ಕಂಪ್ಯೂಟರ್‍ಗಳಂತೆ ಅಲ್ಲವಲ್ಲ. ಒಂದು ಕಂಪೆನಿಯ ಟಿ.ವಿ. ಇಷ್ಟವಿಲ್ಲದಿದ್ದರೆ ಇನ್ನೊಂದು ಕಂಪೆನಿಯ ಟಿ.ವಿ.ಯನ್ನು ಖರೀದಿಸಬಹುದು ಅಥವಾ ಖರೀದಿಸದೆಯೂ ಇರಬಹುದು. ಹಾಗಂತ ಔಷಧ ಖರೀದಿಸದೇ ಇರಲು ಸಾಧ್ಯವಿಲ್ಲವಲ್ಲ. ಮುಗೇನಿ ಪ್ರಶ್ನಿಸಿದ್ದೇ ಈ ಅನ್ಯಾಯವನ್ನು.
   1980ರಲ್ಲಿ ಏಡ್ಸನ್ನು ಮೊತ್ತಮೊದಲ ಬಾರಿ ಗುರುತಿಸಿದಾಗ, ಆಫ್ರಿಕಾ ಖಂಡ ಬೆಚ್ಚಿಬಿದ್ದಿತ್ತು. ಯಾಕೆಂದರೆ, ಅವರ ಪಾಲಿಗೆ ಏಡ್ಸ್ ಎಂಬುದು ಮರಣ ದಂಡನೆಯಾಗಿತ್ತು. ಮದ್ದಿಲ್ಲ. ಏಡ್ಸನ್ನು ಗುಣಪಡಿಸುವ ಅಥವಾ ರೋಗದ ತೀವ್ರತೆಯನ್ನು ಕಡಿಮೆಗೊಳಿಸುವ ಔಷಧವು 1996ರಲ್ಲಿ ತಯಾರಾಗುವುದರ ಮಧ್ಯೆ ಸಾವಿರಾರು ಮಂದಿ ಏಡ್ಸ್ ಗೆ ಬಲಿಯಾದರು. ಆದರೆ ಆ ಬಳಿಕವೂ ಏಡ್ಸ್ ನಿವಾರಕ ಔಷಧಗಳು ಆಫ್ರಿಕದ ಬಡರೋಗಿಗಳಿಗೆ ತಲುಪಲೇ ಇಲ್ಲ. ಯಾಕೆಂದರೆ, ಒಂದು ವರ್ಷದ ಚಿಕಿತ್ಸೆಗೆ 5 ಲಕ್ಷದಷ್ಟು ಮೊತ್ತವನ್ನು ಭರಿಸುವ ಸಾಮರ್ಥ್ಯ ವಾದರೂ ಅವರಲ್ಲಿ ಎಲ್ಲಿರುತ್ತದೆ? ಪ್ರತಿದಿನ ಆಫ್ರಿಕನ್ ಖಂಡದಲ್ಲಿ 60ರಷ್ಟು ಮಂದಿ ಸಾವಿಗೀಡಾಗುತ್ತಿದ್ದರೂ ಅಮೇರಿಕದ ಫಿಝರ್ ಕಂಪೆನಿ ಔಷಧದ ಬೆಲೆಯನ್ನು ಕಡಿಮೆಗೊಳಿಸಲು ಒಪ್ಪಲಿಲ್ಲ. ಮಾತ್ರವಲ್ಲ, ವಿಶ್ವ ವ್ಯಾಪಾರ ಸಂಸ್ಥೆಯ TIPS ಒಪ್ಪಂದವನ್ನು ಮುಂದಿಟ್ಟುಕೊಂಡು ಅಗ್ಗದ ಜೆನೆರಿಕ್ ಔಷಧಗಳನ್ನು ಆಮದು ಮಾಡಿ ಕೊಳ್ಳದಂತೆಯೂ ಅವು ತಡೆದುವು. 1999ರಲ್ಲಿ ದ. ಆಫ್ರಿಕಾದ ಸರಕಾರವು ಕಡಿಮೆ ಬೆಲೆಯ ಜೆನೆರಿಕ್ ಔಷಧಗಳನ್ನು ಆಮದು ಮಾಡಿಕೊಳ್ಳಲು ಮುಂದಾದಾಗ ಔಷಧ ಕಂಪೆನಿಗಳು ಮೊಕದ್ದಮೆ ಹೂಡಿದುವು. ಅಮೇರಿಕದ ಉಪಾಧ್ಯಕ್ಷ  ಅಲ್ ಗೋರೆಯವರು ಆರ್ಥಿಕ ನಿಷೇಧ ವಿಧಿಸುವ ಬೆದರಿಕೆ ಹಾಕಿದರು. ನಿಜವಾಗಿ ಈ ಸಂದರ್ಭದಲ್ಲಿ ಭಾರತದ ಡಾ| ಯೂಸುಫ್ ಹವಿೂದ್ ಅವರ ಸಿಪ್ಲಾ ಎಂಬ ಔಷಧ ಕಂಪೆನಿಯು ಏಡ್ಸ್ ನಿವಾರಕ ಜೆನೆರಿಕ್ ಔಷಧವನ್ನು ತಯಾರಿಸಿತ್ತು. ಬೃಹತ್ ಕಂಪೆನಿಗಳು ಸಿಪ್ಲಾದ ವಿರುದ್ಧ ಒತ್ತಡ ಹಾಕಿದುವು. ಆದರೆ ಭಾರತದಲ್ಲಿ ಜೆನೆರಿಕ್ ಔಷಧಗಳ ತಯಾರಿ ಮತ್ತು ಮಾರಾಟಕ್ಕೆ ಅವಕಾಶ ಇರುವುದರಿಂದ ಅವುಗಳ ಪ್ರಯತ್ನ ಫಲ ನೀಡಲಿಲ್ಲ. ಆದರೆ, ಭಾರತದಿಂದ ಈ ಜೆನೆರಿಕ್ ಔಷಧಗಳನ್ನು ಖರೀದಿಸದಂತೆ ಆಫ್ರಿಕಾವನ್ನು ಅವು ನಿರ್ಬಂಧಿಸಿದುವು. ಅಮೇರಿಕದ ಬೆದರಿಕೆ ಮತ್ತು ಕಂಪೆನಿಗಳ ಒತ್ತಡದಿಂದ ಬೆದರಿದ ಆಫ್ರಿಕಾದ ತಾಬೊ ಎಂಬೆಕಿ ಸರಕಾರವು, ಏಡ್ಸ್ ನಿವಾರಕ ಔಷಧವು ನಿರುಪಯುಕ್ತವಾಗಿದ್ದು ಅದರ ಸೇವನೆಯೇ ಅಪಾಯಕಾರಿ ಎಂದು ಘೋಷಿಸಿದರು. ಇದು ಆಫ್ರಿಕಾದಲ್ಲಿ ತೀವ್ರ ಚರ್ಚೆಗೆ, ಪ್ರತಿಭಟನೆಗೆ ಕಾರಣವಾಯಿತು. ಏಡ್ಸ್ ರೋಗಿಗಳ ಪರವಾಗಿ ರಚನೆಯಾಗಿದ್ದ ಟ್ರೀಟ್‍ಮೆಂಟ್ ಆ್ಯಕ್ಷನ್ ಕ್ಯಾಂಪೇನ್ ಎಂಬ ಸಂಘಟನೆಯು ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಂಡಿತು. HIV  ಪೀಡಿತರಾಗಿದ್ದ ಅದರ ನಾಯಕ ಝಾಕಿ ಅಚ್‍ಮಾಟ್‍ರು, ಎಲ್ಲರಿಗೂ ಅಗ್ಗದ ದರದಲ್ಲಿ ಔಷಧ ಸಿಗುವವರೆಗೆ ತಾನು ಚಿಕಿತ್ಸೆಯನ್ನೇ ಪಡಕೊಳ್ಳುವುದಿಲ್ಲ ಎಂದು ಘೋಷಿಸಿದರು. ಬ್ರೆಝಿಲ್ ಮತ್ತು ಥಾೈಲೆಂಡ್‍ಗಳಲ್ಲಿ ಸರಕಾರವೇ ಅಗ್ಗದ ಜೆನೆರಿಕ್ ಔಷಧಗಳನ್ನು ತಯಾರಿಸುತ್ತಿವೆ. ಪಾಶ್ಚಾತ್ಯ ಔಷಧ ಕಂಪೆನಿಗಳು 5 ಲಕ್ಷಕ್ಕೆ ವಿತರಿಸುವ ಅದೇ ಏಡ್ಸ್ ಔಷಧವನ್ನು ಸಿಪ್ಲಾವು 20 ಸಾವಿರ ರೂಪಾಯಿಯಲ್ಲಿ ನೀಡುತ್ತಿದೆ. ಒಂದು ವೇಳೆ ಆಫ್ರಿಕಾ ಖಂಡದಲ್ಲಿರುವವರು ಬಿಳಿಯರಾಗಿರುತ್ತಿದ್ದರೆ ಪಾಶ್ಚಾತ್ಯ ರಾಷ್ಟ್ರಗಳ ಧೋರಣೆ ಹೀಗಿರುತ್ತಿತ್ತೇ.. ಎಂದವರು ಪ್ರಶ್ನಿಸಿದರು.
   ಬಹುಶಃ ಔಷಧ ಕಂಪೆನಿಗಳ ಹಣದಾಹದ ಬಗ್ಗೆ ಚರ್ಚೆಯೊಂದು ನಡೆದದ್ದೇ ಝಾಕಿಯವರ ಈ ನಿಲುವಿನಿಂದಾಗಿ.
   ಹಾಗಂತ, ಔಷಧ ಕಂಪೆನಿಗಳು ಇವತ್ತು ಜಗತ್ತಿನ ಮುಂದೆ ಏನನ್ನು ಹೇಳುತ್ತಿವೆಯೋ ಅವೆಲ್ಲ ನಿಜವಲ್ಲ. ಔಷಧದ ಸಂಶೋಧನೆ ಮತ್ತು ಅಭಿವೃದ್ಧಿಗೆ ತಗಲುವ ಖರ್ಚಿನಿಂದಾಗಿ ಬೆಲೆಗಳು ದುಬಾರಿಯಾಗುತ್ತಿವೆ ಎಂದು ಅವು ನಂಬಿಸಲು ಯತ್ನಿಸುತ್ತಿವೆ. ನಿಜ ಏನೆಂದರೆ, ಔಷಧ ಕ್ಷೇತ್ರದಲ್ಲಿ ಇವತ್ತು ಆಗುತ್ತಿರುವ 90% ಸಂಶೋಧನೆಗಳೂ ಹಳೆಯ ಸಂಶೋಧನೆಗಳ ಆಧಾರದಲ್ಲೇ ನಡೆಯುವಂಥವು. ಅವೇನೂ ಸಂಪೂರ್ಣ ಹೊಸತಲ್ಲ. ಆದರೆ ಕಂಪೆನಿಗಳು ಇವನ್ನು ಬಚ್ಚಿಟ್ಟು ಸಂಶೋಧನೆಯ ಖರ್ಚನ್ನು ಮುಂದು ಮಾಡಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿವೆ. ಅಷ್ಟಕ್ಕೂ, ಸಂಶೋಧನೆಗೆ ಕಂಪೆನಿಗಳು ಖರ್ಚು ಮಾಡುವ ಮೊತ್ತ ಬರೇ 12%. ಉಳಿದ 88% ಮೊತ್ತವನ್ನು ಸಾರ್ವಜನಿಕ ವಲಯದಿಂದ ಬಳಸಿಕೊಳ್ಳಲಾಗುತ್ತದೆ. ಈ ಕಾರಣದಿಂದಲೇ, ‘ಏಡ್ಸ್ ನಿವಾರಣೆಗೆ ಬಳಸುವ ಪ್ಲುಕೋನಝೋಲ್ ಎಂಬ ಔಷಧಿಯ ಬೆಲೆಯನ್ನು 50% ಇಳಿಸಿ ಅಥವಾ ಜೆನೆರಿಕ್ ಔಷಧದ ಆಮದಿಗೆ ಒಪ್ಪಿಕೊಳ್ಳಿ..’ ಎಂದು ಝಾಕಿ ಅಚ್‍ಮ್ಯಾಟ್‍ರು ಫಿಝರ್ ಕಂಪೆನಿಯನ್ನು ಆಗ್ರಹಿ ಸಿದ್ದು. ಅಂದಹಾಗೆ, ಜನರ ಖರೀದಿ ಸಾಮಥ್ರ್ಯಕ್ಕೆ ಪೂರಕವಾಗಿ ಔಷಧಗಳ ಬೆಲೆಗಳಿರಬೇಕು ಎಂದು ಆಗ್ರಹಿಸುವುದು ಯಾಕೆ ತಪ್ಪು ಅನ್ನಿಸಿಕೊಳ್ಳಬೇಕು? ಔಷಧವೊಂದರ ಸಂಶೋಧನೆಗೆ ಸಾಕಷ್ಟು ಶ್ರಮ, ದುಡ್ಡಿನ ಅಗತ್ಯವಿದೆಯೆಂಬುದು ನಿಜ. ಹಾಗಂತ, ಆ ಔಷಧವನ್ನು ಖರೀದಿಸುವುದಕ್ಕೆ ರೋಗಿಗಳಿಗೆ ಸಾಧ್ಯವಾಗುವುದಿಲ್ಲವೆಂದಾದರೆ ಅವು ಇದ್ದೂ ಏನು ಪ್ರಯೋಜನ? ಪೇಟೆಂಟ್ ಕಾಯ್ದೆಯನ್ನು ಬಳಸಿಕೊಂಡು ಔಷಧ ಕಂಪೆನಿಗಳು ಕುಬೇರವಾಗುವಂತೆ ನೋಡಿಕೊಳ್ಳುವ WTO, ಯಾರ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದೆ? ಜನರ ದುಡ್ಡಿನಿಂದ ಕೈಗೊಳ್ಳುವ ಸಂಶೋಧನೆಗಳು ಜನರ ಬದಲು ಕಂಪೆನಿಗಳ ಹಿತಾಸಕ್ತಿಯನ್ನು ಕಾಪಾಡುತ್ತದೆಂದರೆ ಏನೆನ್ನಬೇಕು? 2004ರಲ್ಲಿ ಪ್ರಕಟಗೊಂಡ, ದಿ ಇಕನಾಮಿಸ್ಟ್ ಪತ್ರಿಕೆಯಲ್ಲಿ, ಪಾಶ್ಚಾತ್ಯ ಔಷಧ ಕಂಪೆನಿಗಳ ಕ್ರೂರ ಮುಖವನ್ನು ಬಯಲಿಗೆಳೆಯಲಾಗಿತ್ತು. ಆಫ್ರಿಕಾ ಮತ್ತು ಇತರ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಏಡ್ಸ್ ಔಷಧಿಯನ್ನು ಅವು ಹೇಗೆ ನಿರ್ಬಂಧಿಸಿವೆ ಎಂಬ ಬಗ್ಗೆ ಅದರಲ್ಲಿ ಬೆಳಕು ಚೆಲ್ಲಲಾಗಿತ್ತು. ಬಹುಶಃ, ಅಚ್‍ಮ್ಯಾಟ್ ಮತ್ತು ಮುಗೇನಿಯವರ ಛಲ ಬಿಡದ ಹೋರಾಟದಿಂದಾಗಿ ಯೂಸುಫ್ ಹವಿೂದ್‍ರ ಸಿಪ್ಲಾ ಕಂಪೆನಿಯು ಜಾಗತಿಕವಾಗಿಯೇ ಚರ್ಚೆಗೊಳಗಾಯಿತು. ಅತ್ಯಂತ ಅಗ್ಗದ ದರದಲ್ಲಿ ಏಡ್ಸ್ ಔಷಧವನ್ನು ತಯಾರಿಸಲು ಸಾಧ್ಯ ಎಂದವರು ಪ್ರಾಯೋ ಗಿಕವಾಗಿಯೇ ತೋರಿಸಿಕೊಟ್ಟರು. ಭಾರತ ಸರಕಾರವು 2005ರಲ್ಲಿ ಅವರಿಗೆ ಪದ್ಮಭೂಷಣವನ್ನು ಕೊಟ್ಟು ಗೌರವಿಸಿದಾಗ ಅತ್ತ ನೆಲ್ಸನ್ ಮಂಡೇಲಾ ಸಹಿತ ಹಲವಾರು ನಾಯಕರು ಅಚ್‍ಮ್ಯಾಟ್‍ರನ್ನು ಭೇಟಿಯಾದರು. ಅಚ್‍ಮ್ಯಾಟ್ ಆಫ್ರಿಕಾದ ಹೀರೋ ಅಂದರು ಮಂಡೇಲಾ. ಬಿಲ್‍ಕ್ಲಿಂಟನ್, ಫಿಝರ್ ಕಂಪೆನಿಯ ಮಾಜಿ ಉಪಾಧ್ಯಕ್ಷ  ಡಾ| ಪೀಟರ್ ಫ್ರೋಸ್ಟ್, ಡೆಸ್ಮಂಡ್ ಟುಟು ಮುಂತಾದವರೆಲ್ಲ ಔಷಧ ಕಂಪೆನಿಗಳ ಸ್ವಹಿತಾಸಕ್ತಿಯನ್ನು ಮತ್ತು ಅವು ಕರಿಯರ ಮೇಲೆ ತೋರುತ್ತಿರುವ ಅನಾದರವನ್ನು ಪ್ರಶ್ನಿಸಿದರು. ಆದರೂ,
   ಈ ಜಗತ್ತಿನಲ್ಲಿ ಹಿಟ್ಲರನ ಹಾಲೋಕಾಸ್ಟನ್ನು ವಿವರಿಸುವ ಡಾಕ್ಯುಮೆಂಟರಿ, ಸಿನಿಮಾಗಳು, ಪುಸ್ತಕಗಳು.. ಧಾರಾಳ ಇವೆ. ಅಸಂಖ್ಯ ವೇದಿಕೆಗಳಲ್ಲಿ ಆ ಬಗ್ಗೆ ಚರ್ಚಿಸಲಾಗಿದೆ. ಹಾಲೋಕಾಸ್ಟನ್ನು ನಿರಾಕರಿಸಿ ಮಾತಾಡುವುದು ಹಲವು ಯುರೋಪಿಯನ್ ರಾಷ್ಟ್ರಗಳಲ್ಲಿ ಶಿಕ್ಷಾರ್ಹ ಅಪರಾಧವೆಂದು ಘೋಷಿಸಲಾಗಿದೆ. ನಿಜವಾಗಿ, ಪಾಶ್ಚಾತ್ಯ ಔಷಧ ಕಂಪೆನಿಗಳು ಆಫ್ರಿಕಾದಲ್ಲಿ ನಡೆಸಿರುವ ಈ ಹತ್ಯಾಕಾಂಡಕ್ಕೆ ಹೋಲಿಸಿದರೆ ಹಾಲೋಕಾಸ್ಟ್ ಏನೇನೂ ಅಲ್ಲ. ಔಷಧ ನೀಡದೆ ಲಕ್ಷಾಂತರ ಮಂದಿಯನ್ನು ಅವು ಕೊಂದರೂ ಆ ಬಗ್ಗೆ ಯಾರೂ ಮಾತಾಡುತ್ತಿಲ್ಲ. ‘ಜೆನೋಸೈಡ್ ಬೈ ಡಿನೈಯಲ್: ಹೌ ಪ್ರೊಫಿಟೀರಿಂಗ್ ಫ್ರಮ್ HIV/ HIDS ಕಿಲ್ಲ್ಡ್ಡ್ ಮಿಲಿಯನ್ಸ್..’ ಎಂಬ ಮುಗೇನಿಯವರ ಪುಸ್ತಕವನ್ನು ಬಿಟ್ಟರೆ ಅದರ ಬಗ್ಗೆ ಬಹುತೇಕ ಯಾರೂ ಬರೆದಿಲ್ಲ. ಸಿನಿಮಾ ತಯಾರಾಗಿಲ್ಲ. ಒಂದು ವೇಳೆ ಇವೆಲ್ಲ ಬಿಳಿಯರ ನಾಡಲ್ಲಿ ನಡೆಯುತ್ತಿದ್ದರೆ..
  

ಭಾರತದ ಮೂಲದ ಮೋಹನ್ ಗ್ರೇ ಅವರ, ‘ಫೈರ್ ಇನ್ ದ ಬ್ಲಡ್’ (ರಕ್ತದಲ್ಲಿ ಬೆಂಕಿ) ಎಂಬ 84 ನಿಮಿಷಗಳ ಡಾಕ್ಯು ಮೆಂಟರಿಯನ್ನು ವೀಕ್ಷಿಸುತ್ತಾ ಇವೆಲ್ಲವನ್ನೂ ಹಂಚಿಕೊಳ್ಳ ಬೇಕೆನಿಸಿತು.