ಪಾಟ್ನ ಸ್ಪೋಟ ಸಂತ್ರಸ್ತರೊಂದಿಗೆ ಮೋದಿ |
‘ರಾಜಕೀಯ ಸೇರುತ್ತೀರಾ..’ ಎಂಬ ದಿ ಹಿಂದೂ ಪತ್ರಿಕೆಯ ಪ್ರಶ್ನೆಗೆ 2011 ಆಗಸ್ಟ್ 31ರಂದು ಅರವಿಂದ್ ಕೇಜ್ರಿವಾಲ್ (ಇಟ್ ಈಸ್ ಎ ಲಾಂಗ್ ಜರ್ನಿ ಅಹೆಡ್) ಮೇಲಿನಂತೆ ಉತ್ತರಿಸಿದ್ದರು. ಆದರೆ 2012 ನವೆಂಬರ್ 26ರಂದು ಅವರು ಆಮ್ ಆದ್ಮಿಯನ್ನು ಹುಟ್ಟು ಹಾಕಿದರು. ಡಿಸೆಂಬರ್ 16ರಂದು ದೆಹಲಿಯಲ್ಲಿ ಗ್ಯಾಂಗ್ ರೇಪ್ ನಡೆಯಿತು. ಹೊಸ ಕನಸು, ವಿಚಾರಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಮತ್ತು ಜನಸಾಮಾನ್ಯರಿಗೆ ತಟ್ಟುವ ಶೈಲಿಯಲ್ಲಿ ಮಂಡಿಸುತ್ತಿದ್ದ ಪಕ್ಷವೊಂದಕ್ಕೆ ಜನರನ್ನು ತಲುಪಲು ಇದಕ್ಕಿಂತ ಉತ್ತಮವಾದ ಇಶ್ಯೂ ಬೇರೊಂದಿರಲಿಲ್ಲ. ಹೀಗಿದ್ದೂ..
1. ಪ್ರತಿ ಕುಟುಂಬಕ್ಕೆ ಪ್ರತಿ ದಿನ 700 ಲೀಟರ್ ಉಚಿತ ನೀರು.
2. ಅಕ್ರಮ ಗುಡಿಸಲುಗಳ ಸಕ್ರಮ
3. ವಿದ್ಯುತ್ ದರದಲ್ಲಿ 50% ಕಡಿತ
4. ಅಗ್ಗದ ಜೆನೆರಿಕ್ ಔಷಧಗಳನ್ನು ಪ್ರತಿ ನಾಗರಿಕರಿಗೂ ಲಭ್ಯಗೊಳಿಸುವುದು.
5. ಶಾಲಾ-ಕಾಲೇಜುಗಳ ಶುಲ್ಕದಲ್ಲಿ ಇಳಿಕೆ
6. ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ..
ಮುಂತಾದ ಅಗ್ಗದ ಘೋಷಣೆಗಳಿಂದಾಗಿಯೇ ಆಮ್ ಆದ್ಮಿ ದೆಹಲಿ ಚುನಾವಣೆಯಲ್ಲಿ 28 ಸ್ಥಾನ ಗಳಿಸಿದೆಯೆಂದು ವಾದಿಸುತ್ತಿರುವ ಬಿಜೆಪಿ ಬೆಂಬಲಿಗರ ವಿಶ್ಲೇಷಣೆ ಎಷ್ಟು ನಿಜ? ಅಗ್ಗದ ಘೋಷಣೆ ಗಳೇನು ಈ ದೇಶದ ನಾಗರಿಕರಿಗೆ ಹೊಸದೇ? ಕಾಂಗ್ರೆಸ್ ಮತ್ತು ಬಿಜೆಪಿ ಇಂಥ ಘೋಷಣೆಗಳನ್ನು ಎಷ್ಟು ಬಾರಿ ಬಳಸಿಲ್ಲ? ಅಲ್ಲದೇ ಇಂಥ ಘೋಷಣೆಗಳನ್ನು ಜನ ಇಷ್ಟ ಪಡುತ್ತಾರೆ ಎಂಬ ಬಗ್ಗೆ ಈ ಪಕ್ಷಗಳಿಗೆ ಭರವಸೆ ಇರುತ್ತಿದ್ದರೆ, ಅವೇನು ಬಿಡುತ್ತಿದ್ದುವೇ? 70 ಅಂಶಗಳನ್ನೊಳಗೊಂಡ ಕೇಜ್ರಿವಾಲರ ಚುನಾವಣಾ ಪ್ರಣಾಳಿಕೆಗೆ (ಮೆನಿಫೆಸ್ಟೋ) ವಿರುದ್ಧವಾಗಿ ಅವು 140 ಅಂಶಗಳ ಪ್ರಣಾಳಿಕೆಯನ್ನು ಹೊರ ತರುತ್ತಿರಲಿಲ್ಲವೇ? ದೇಶದ ರಾಜಕೀಯದಲ್ಲಿ ಅಗಾಧ ಅನುಭವವುಳ್ಳ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಉಚಿತ ವಿದ್ಯುತ್, ಉಚಿತ ಅಕ್ಕಿ, ನೀರು.. ಮುಂತಾದುವುಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ತಯಾರು ಗೊಳಿಸುವುದೇನು ಕಷ್ಟದ್ದಲ್ಲವಲ್ಲ? ಅಷ್ಟಕ್ಕೂ, ಆಮ್ ಆದ್ಮಿ ಎಂಬುದು ಆಗಷ್ಟೇ ಹುಟ್ಟಿದ ಕೂಸು. ಅದರ ಆಲೋಚನೆ, ಪ್ರಣಾಳಿಕೆಯೂ ಹೊಸದು. ಆದ್ದರಿಂದ, ಆ ಪಕ್ಷವನ್ನು ಒಪ್ಪಿ ಕೊಳ್ಳುವುದಕ್ಕಿಂತ ತಿರಸ್ಕರಿಸುವುದಕ್ಕೇ ಜನರಿಗೆ ಹೆಚ್ಚು ಕಾರಣಗಳಿದ್ದುವು. ಯಾಕೆಂದರೆ, ಯಾವುದೇ ಹೊಸ ಪಕ್ಷವು ಇತರ ಪ್ರಬಲ ಪಕ್ಷಗಳಿಗಿಂತ ಭಿನ್ನ ಮತ್ತು ಉಚಿತ ಅಂಶಗಳುಳ್ಳ ಪ್ರಣಾಳಿಕೆಗಳನ್ನು ಸಿದ್ಧಪಡಿಸುವುದು ಈ ದೇಶದಲ್ಲಿ ಹೊಸತೇನೂ ಅಲ್ಲ. ರಾಷ್ಟ್ರೀಯ ಪಕ್ಷಗಳಿಗೆ ಇಲ್ಲದ ಕೆಲವು ಅನುಕೂಲತೆಗಳು ಪ್ರಾದೇಶಿಕ ಪಕ್ಷಗಳಿಗೆ ಇರುತ್ತವೆ. ಅದರ ವ್ಯಾಪ್ತಿ ಸೀಮಿತವಾದದ್ದು. ಗುರಿಯೂ ಸೀಮಿತವೇ. ರಾಜಕೀಯವಾಗಿ ನೆಲೆಯನ್ನು ಕಂಡುಕೊಳ್ಳುವುದಕ್ಕೆ ಅವು ಜನಪ್ರಿಯ ಘೋಷಣೆಗಳ ಮೊರೆ ಹೋಗಬೇಕಾಗುತ್ತದೆ ಎಂಬ ಅರಿವು ಜನರಲ್ಲೂ ಇರುತ್ತದೆ. ಆದ್ದರಿಂದಲೇ, ಜನರು ಅಂಥ ಘೋಷಣೆಗಳನ್ನು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ಅಲ್ಲದೇ, ಅಂಥ ಪಕ್ಷಗಳಿಗೆ ಓಟು ಹಾಕುವುದರಿಂದ ಮತ ಹಂಚಿ ಹೋಗಿ ಅಯೋಗ್ಯರು ಆರಿಸಿ ಬರುತ್ತಾರೆ ಎಂಬ ಭೀತಿ ಮತದಾರರಲ್ಲಿ ಯಾವಾಗಲೂ ಇರುತ್ತದೆ. ಹೀಗಿರುವಾಗ, ಆಮ್ ಆದ್ಮಿಯ ಗೆಲುವನ್ನು ಕೇವಲ ಜನಪ್ರಿಯ ಘೋಷಣೆಗಳ ಗೂಟಕ್ಕೆ ಕಟ್ಟಿ ಹಾಕಿ ವಿಶ್ಲೇಷಣೆ ನಡೆಸುವುದು ಆತ್ಮವಂಚನೆ ಆಗಲಾರದೇ? ದೆಹಲಿಯಂಥ ಶಿಕ್ಷಿತ, ವಿದ್ಯಾವಂತ ಮತ್ತು ‘ಉಚಿತ' ಕೊಡುಗೆಗಳನ್ನು ಸದಾ ದ್ವೇಷಿಸುವ ಕಾರ್ಪೋ ರೇಟ್ ವಲಯದ ಮಾಧ್ಯಮಗಳು ಗಿಜಿಗುಡುತ್ತಿರುವ ರಾಜ್ಯವೊಂದರ ಮಂದಿ ಉಚಿತವನ್ನೇ ಬಯಸುವಷ್ಟು ಸಿನಿಕರೇ, ಅಂಥ ಭರವಸೆಗಳನ್ನು ನಂಬುವಷ್ಟು ದಡ್ಡರೇ..
ಇಂಡಿಯನ್ ಮುಜಾಹಿದೀನ್
ಪಾಕಿಸ್ತಾನ
ಭ್ರಷ್ಟಾಚಾರ
ಹತ್ಯಾಕಾಂಡ
ಕೋಮುವಾದ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಈ ದೇಶದಲ್ಲಿ ಚುನಾವಣೆಯನ್ನು ಎದುರಿಸುತ್ತಿರುವುದು ಬಹುತೇಕ ಇಂಥ ವಿಷಯಗಳಿಂದಲೇ. ಬಿಜೆಪಿಯ ಚುನಾವಣಾ ಭಾಷಣಗಳಲ್ಲಿ ಯಾವಾಗಲೂ ಪಾಕಿಸ್ತಾನದ ಪ್ರಸ್ತಾಪವಾಗುತ್ತದೆ. ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದೀನ್‍ಗಳ ಜಪ ನಡೆಯುತ್ತದೆ. ಹಾಗಂತ, ಕಳೆದ 60 ವರ್ಷಗಳಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಬಾಂಬು ಸ್ಫೋಟಗಳಿಂದ ಸಾವಿಗೀಡಾಗಿದ್ದಾರೆ ಮತ್ತು ಕೋಮು ಗಲಭೆಗಳಿಂದಾಗಿ ಸಾವಿಗೀಡಾದವರ ಸಂಖ್ಯೆಯ ಮುಂದೆ ಇವರು ಎಷ್ಟು ಶೇಕಡಾ ಎಂದು ಅದು ಹೇಳುವುದೇ ಇಲ್ಲ. ಬಾಂಬು ಸ್ಫೋಟಗಳಿಗೆ ಬಲಿಯಾದ ಕುಟುಂಬಗಳ ಕಣ್ಣೀರ ಕತೆಯನ್ನು ಬಿಜೆಪಿ ಅಸಂಖ್ಯ ವೇದಿಕೆಗಳಲ್ಲಿ ಹೇಳಿದೆ. ಅಂಥ ಕುಟುಂಬಗಳ ಮನೆಗೆ ತೆರಳಿ ಅದರ ನಾಯಕರು ಸಹಾಯ ಧನ ವಿತರಿಸಿದ್ದಾರೆ. ಇತ್ತೀಚೆಗೆ ನಡೆದ ಪಾಟ್ನಾ ಸ್ಫೋಟದಲ್ಲಿ ಸಂತ್ರಸ್ತರಾದ ಮಹಿಳೆಯೊಂದಿಗೆ ನರೇಂದ್ರ ಮೋದಿ ಮೊಬೈಲ್‍ನಲ್ಲಿ ಸಂಪರ್ಕಿಸಿ ಸಾಂತ್ವನ ಹೇಳಿದ್ದನ್ನು ಟಿ.ವಿ. ಚಾನೆಲ್‍ಗಳು ನೇರ ಪ್ರಸಾರ ಮಾಡಿದ್ದುವು. ಆದರೆ, ಕೋಮುಗಲಭೆಗಳ ಸಂತ್ರಸ್ತರ ಬಗ್ಗೆ ಬಿಜೆಪಿ ಮಾತಾಡುವುದೇ ಇಲ್ಲ. ಅವರ ಕಣ್ಣೀರ ಕತೆಗಳನ್ನು ಅದು ವೇದಿಕೆಗಳಲ್ಲಿ ಹಂಚಿಕೊಳ್ಳುವುದೂ ಇಲ್ಲ. ಪಾಟ್ನಾ ಸ್ಫೋಟದ ಬೆನ್ನಿಗೇ ಮುಝಫರ್ ನಗರದಲ್ಲಿ ಕೋಮು ಹತ್ಯಾಕಾಂಡ ನಡೆಯಿತು. ಮುಸ್ಲಿಮರನ್ನೇ ಗುರಿಯಾಗಿಸಿ ನಡೆದ ಈ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಸಂತ್ರಸ್ತರಾದರು. ಪಾಟ್ನಾ ಪ್ರಕರಣದಂತೆ ಮೋದಿಯಾಗಲಿ, ಅವರ ಆಪ್ತ ಅಮಿತ್ ಷಾ ಆಗಲಿ ಈ ಸಂತ್ರಸ್ತರನ್ನು ಭೇಟಿಯಾದದ್ದಾಗಲಿ, ಮೊಬೈಲ್‍ನಲ್ಲಿ ಸಂಪರ್ಕಿಸಿದ್ದಾಗಲಿ ಯಾವುದೂ ನಡೆಯಲಿಲ್ಲ. ಕೋಮು ಗಲಭೆಯಲ್ಲಿ ಈ ದೇಶದಲ್ಲಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ, ಅವರಲ್ಲಿ ಹಿಂದೂಗಳೆಷ್ಟು, ಮುಸ್ಲಿಮರೆಷ್ಟು ಎಂಬ ಮಾಹಿತಿಯನ್ನು ಅದು ಈ ವರೆಗೂ ಈ ದೇಶದ ನಾಗರಿಕರೊಂದಿಗೆ ಹಂಚಿಕೊಂಡಿಲ್ಲ. ಆದರೆ ಭಯೋತ್ಪಾದನಾ ಪ್ರಕರಣಗಳ ಬಗ್ಗೆ, ಅದು ನಡೆದ ದಿನಾಂಕ, ಪ್ರದೇಶ, ಸ್ಫೋಟಗಳಿಗೆ ಬಳಸಲಾದ ಉಪಕರಣಗಳು, ಆರೋಪಿಗಳ ಹೆಸರುಗಳನ್ನು ಅಸಂಖ್ಯ ಬಾರಿ ವಿವಿಧ ವೇದಿಕೆ, ಪತ್ರಿಕೆಗಳ ಮೂಲಕ ಅದು ಹೇಳುತ್ತಲೇ ಬಂದಿದೆ. ಬಾಬರಿ ಮಸೀದಿಯನ್ನು ಅದು ಚುನಾವಣೆಗಾಗಿ ಬಳಸಿಕೊಂಡಿತು. ಗುಜರಾತನ್ನು ಅಧಿಕಾರಕ್ಕಾಗಿ ಉಪಯೋಗಿಸಿಕೊಂಡಿತು. ಅದರ ಪ್ರಧಾನಿ ಅಭ್ಯರ್ಥಿ ಅಥವಾ ಪಕ್ಷದ ನೇತೃತ್ವ ಸ್ಥಾನದಲ್ಲಿ ಗುರುತಿಸುವವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಹತ್ಯಾಕಾಂಡದ ಆರೋಪಿಗಳೇ. ಚುನಾವಣೆ ಹತ್ತಿರ ಬರುವಾಗಲೆಲ್ಲ ಅದರ ಪೋಷಕ ಸಂಘಟನೆಗಳು ರಾಮನಿಗೆ ಸಂಬಂಧಿಸಿ ಅಥವಾ ಹಿಂದೂ ಧರ್ಮಕ್ಕೆ ಸಂಬಂಧಿಸಿ ರಾಲಿಗಳನ್ನು ಹಮ್ಮಿಕೊಳ್ಳುತ್ತವೆ. ಸಭೆಗಳನ್ನು ಏರ್ಪಡಿಸುತ್ತವೆ. ಒಂದು ರೀತಿಯಲ್ಲಿ ಬಿಜೆಪಿ ಈ ದೇಶದಲ್ಲಿ ಉದ್ದಕ್ಕೂ ಚುನಾವಣೆಯನ್ನು ಎದುರಿಸಿದ್ದು, ಎದುರಿಸುತ್ತಿರುವುದು ಧರ್ಮ ಮತ್ತು ಕೋಮುವಾದದ ಆಧಾರದಲ್ಲೇ. ಹತ್ಯಾಕಾಂಡಗಳು ಮತ್ತು ಬಾಂಬ್ ಸ್ಫೋಟಗಳ ನೆರವನ್ನು ಪಡೆದುಕೊಂಡೇ ಅದು ಚುನಾವಣೆಯಲ್ಲಿ ಸೆಣಸಿದೆ, ಸೆಣಸುತ್ತಿದೆ. ಇನ್ನೊಂದು ಕಡೆ, ಕಾಂಗ್ರೆಸ್‍ನ ಚರಿತ್ರೆಯೂ ಭಿನ್ನವಾಗಿಲ್ಲ. ಭ್ರಷ್ಟಾಚಾರದ ಆರೋಪ ಪಟ್ಟಿಯನ್ನು ಕುತ್ತಿಗೆಗೆ ಕಟ್ಟಿಕೊಂಡೇ ಅದರ ಅಭ್ಯರ್ಥಿಗಳು ಚುನಾವಣೆಗಿಳಿಯುತ್ತಾರೆ. ಜನಸಾಮಾನ್ಯರ ಭಾಷೆಯಲ್ಲಿ ಮಾತಾಡುತ್ತಾ ರಾಜ ದರ್ಬಾರು ನಡೆಸುತ್ತಾರೆ. ಹತ್ಯಾಕಾಂಡಗಳ ಕಳಂಕವೂ ಅದರ ಬೆನ್ನಿಗಿದೆ. ಕಲ್ಯಾಣ ರಾಷ್ಟ್ರದ ಬಗ್ಗೆ ಅದು ಪ್ರತಿ ಚುನಾವಣೆಯಲ್ಲೂ ಮಾತಾಡುತ್ತದೆ. ಜನಸಾಮಾನ್ಯರ ಸಂಕಟಗಳನ್ನೊಳಗೊಂಡ ಪ್ರಣಾಳಿಕೆಯನ್ನೂ ಬಿಡುಗಡೆಗೊಳಿಸುತ್ತದೆ. ಜೊತೆಗೇ ನ್ಯಾಯ ವಿತರಣೆಯಲ್ಲಿ ಧಾರ್ಮಿಕ ತಾರತಮ್ಯಕ್ಕೆ ಅವಕಾಶವನ್ನೀಯುವ ಕಾನೂನನ್ನೂ ರಚಿಸುತ್ತದೆ. ಇಂಥ ಸ್ಥಿತಿಯಲ್ಲಿ, ಇವ್ಯಾವುವೂ ಗೋಚರಿಸದ ಮತ್ತು ಅಚ್ಚ ಮನುಷ್ಯರ ಭಾಷೆಯಲ್ಲಿ ಅವರ ಸಮಸ್ಯೆಗಳ ಬಗ್ಗೆ ಮಾತಾಡಿದ ಆಮ್ ಆದ್ಮಿಯನ್ನು ಜನರು ಪರ್ಯಾಯವಾಗಿ ಆಯ್ಕೆ ಮಾಡಿಕೊಂಡರು ಎಂದು ನಾವೇಕೆ ಪರಿಗಣಿಸಬಾರದು? ಆಮ್ ಆದ್ಮಿಯ ಆಲೋಚನೆಗಳು ಹೊಸತು. ಸಾಮಾನ್ಯವಾಗಿ ವೇದಿಕೆಗಳಲ್ಲಿ ಮಂಡಿಸುವ, ಪತ್ರಿಕೆಗಳ ಕಾಲಂಗಳಲ್ಲಿ ಪ್ರತಿಪಾದಿಸುವ ಚಿಂತನೆಗಳನ್ನು ಕೇಜ್ರಿವಾಲ್ ಪ್ರಾಯೋಗಿಕಗೊಳಿಸುವ ಬಗ್ಗೆ ಮಾತಾಡಿದ್ದರು. ಅಂಥ ಚಿಂತನೆಗಳನ್ನು ಬುದ್ಧಿಜೀವಿಗಳ ಬಡಬಡಿಕೆ ಎಂದೇ ರಾಜಕೀಯ ಪಕ್ಷಗಳು ತಿರಸ್ಕರಿಸಿದ್ದುವು. ವೈದ್ಯರು, ಕವಿಗಳು, ಪತ್ರಕರ್ತರು, ವಕೀಲರು, ವಿದ್ಯಾರ್ಥಿಗಳು, ನೌಕರರು.. ಹೀಗೆ ಒಂದು ಹೊಸ ಬಗೆಯ ತಂಡವನ್ನು ಕೇಜ್ರಿವಾಲ್ ಕಟ್ಟಿದರು. ಬಾಂಬ್ ಸ್ಫೋಟದ, ಹತ್ಯಾಕಾಂಡದ ಭಾಷೆಯಲ್ಲಿ ಅವರು ಮಾತಾಡಲಿಲ್ಲ. ಧರ್ಮವನ್ನು ದುರುಪಯೋಗಿಸದೆಯೇ ಚುನಾವಣೆಯಲ್ಲಿ ಸೆಣಸಬಹುದು ಎಂಬ ವಾತಾವರಣವನ್ನು ಅವರು ಹುಟ್ಟು ಹಾಕಿದರು. ಬಹುಶಃ, ರಾಷ್ಟ್ರಮಟ್ಟದ ಟಿ.ವಿ. ಚಾನೆಲ್‍ಗಳು ಮತ್ತು ಪತ್ರಿಕೆಗಳ ಕೇಂದ್ರ ಕಚೇರಿಗಳಿರುವ ದೆಹಲಿಯಲ್ಲಿ ರಾಜಕಾರಣಿಯೇ ಅಲ್ಲದ ಓರ್ವ ವ್ಯಕ್ತಿ ಮತ್ತು ಆತನ ತಂಡವು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಗುರುತಿಗೀಡಾಗುವುದು ಸುಲಭದ ಮಾತಲ್ಲ. ಮಾಧ್ಯಮಗಳನ್ನು ಮೆಚ್ಚಿಸಬೇಕಾದ ಅನಿವಾರ್ಯತೆ ಇರುವಂತೆಯೇ ಪ್ರಬಲ ರಾಜಕಾರಣಿಗಳನ್ನು ಎದುರಿಸುವುದಕ್ಕೆ ಬುದ್ಧಿವಂತಿಕೆಯ ಕಾರ್ಯತಂತ್ರ ರೂಪಿಸುವ ಅಗತ್ಯವೂ ಇರುತ್ತದೆ. ಆಮ್ ಆದ್ಮಿ ಇದನ್ನು ಮೆಟ್ಟಿ ನಿಂತಿದೆಯೆಂದರೆ ಇದು ಯಾವುದರ ಸೂಚನೆ?
ನಿಜವಾಗಿ, ಧರ್ಮವನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ದುರುಪಯೋಗಪಡಿಸದೆಯೇ ಚುನಾವಣೆಯನ್ನು ಗೆಲ್ಲಬಹುದು ಎಂಬ ಒಳ್ಳೆಯ ಸಂದೇಶವನ್ನು ಆಮ್ ಆದ್ಮಿ ರವಾನಿಸಿದೆ. ಭವಿಷ್ಯದ ದೃಷ್ಟಿಯಿಂದ ಇದು ಶುಭ ಸೂಚನೆ. ಬಿಜೆಪಿಯ ಪ್ರಬಲ ಕೋಮುವಾದ ಮತ್ತು ಕಾಂಗ್ರೆಸ್‍ನ ಮೃದು ಕೋಮುವಾದದ ನಡುವೆ ಇವತ್ತು ನಡೆಯುತ್ತಿರುವ ಚುನಾವಣಾ ಹೋರಾಟವನ್ನು ಕೇಜ್ರಿವಾಲ್ ಆಮ್ ಆದ್ಮೀಕರಣಗೊಳಿಸಿದ್ದಾರೆ. ಅವರಿಗೆ ಎಷ್ಟು ಸ್ಥಾನ ಸಿಕ್ಕಿತು ಎಂಬುದು ಮುಖ್ಯ ಅಲ್ಲ. ವಿದ್ಯಾವಂತರು, ಶಿಕ್ಷಿತರಿರುವ ರಾಜ್ಯವೊಂದರಲ್ಲಿ ಕೇವಲ ಜನಪರ ವಿಷಯಗಳನ್ನೆತ್ತಿಕೊಂಡು ಚುನಾವಣೆಗಿಳಿದ ಆಮ್ ಆದ್ಮಿಯ ಯಶಸ್ಸನ್ನು ಕೋಮುವಾದಿ ರಾಜಕಾರಣದ ವಿರುದ್ಧದ ಯಶಸ್ಸೆಂದೇ ಪರಿಗಣಿಸಬೇಕು. ಭವಿಷ್ಯದಲ್ಲಿ, ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆ, ಭಾಷಣಗಳು ಕೋಮುವಾದಿ ರಹಿತವಾಗುವುದಕ್ಕೆ ಈ ಯಶಸ್ಸು ಪ್ರಚೋದಕವಾಗುವುದಕ್ಕೆ ಅವಕಾಶ ಇದೆ. ಮುಖ್ಯವಾಗಿ ಜನಪರ ಅಜೆಂಡಾದೊಂದಿಗೆ ತಳಮಟ್ಟದ ಜನರನ್ನು ತಲುಪಲು ಪ್ರಯತ್ನಿಸಿದರೆ ಅಂಥ ಪಕ್ಷ
ಗಳನ್ನು ಜನರು ಗೆಲ್ಲಿಸುತ್ತಾರೆ ಎಂಬುದಕ್ಕೆ ಆದ್ಮಿ ಒಂದು ಒಳ್ಳೆಯ ಉದಾಹರಣೆ.
Sorry to say that even so called intellectuals do not speak the heart of a communal riot victim being Hindu. In your whole article I am not able to find anything written about eve teasing victims of Muzaffarnagar. Do you support it? If not answer me in a popper and straight way. Hope you are not a Jnanapeeth Aspirant.
ReplyDelete