Tuesday, December 24, 2013

ಕಣ್ಣೀರಾಗುವ ತಾಯಿಯ ಎದುರು ಯಾವ ಮಕ್ಕಳು ತಾನೇ ಕರಗುವುದಿಲ್ಲ?

   ಮೊನ್ನೆ ಆತ್ಮೀಯ ಗೆಳೆಯ ಎದುರು ಬಂದು ಕೂತಿದ್ದ..
ಹಾಗಂತ ಆತ ಹಾಗೆ ಬಂದು ಕೂರುವುದು ಅದು ಮೊದಲ ಸಲವೇನೂ ಅಲ್ಲ. ಪ್ರತಿದಿನವೂ ನಾವಿಬ್ಬರೂ ಹಾಗೆ ಎದುರು ಬದುರು ಕೂರುತ್ತೇವೆ. ಚರ್ಚಿಸುತ್ತೇವೆ. ಪತ್ರಿಕೆಯ ಬಗ್ಗೆ, ಅದರಲ್ಲಿ ತರಬಹುದಾದ ಬದಲಾವಣೆಗಳ ಬಗ್ಗೆ, ಪುಟ ವಿನ್ಯಾಸ, ಪ್ರಸಾರದ ಬಗ್ಗೆ, ಲೇಖನಗಳ ವೈವಿಧ್ಯತೆಯ ಬಗ್ಗೆ... ಹೀಗೆ ಪ್ರತಿ ದಿನದ ಚರ್ಚೆಗೂ ಧಾರಾಳ ವಿಷಯಗಳಿರುತ್ತವೆ. ಪತ್ರಿಕೆಯನ್ನು ಹೇಗೆ ಭಿನ್ನವಾಗಿ ಕಟ್ಟಿಕೊಡಬಹುದು ಎಂಬ ಬಗ್ಗೆ ಚರ್ಚೆಗಳು ಸಾಗುತ್ತಿರುತ್ತದೆ. ಅಷ್ಟಕ್ಕೂ, ಪತ್ರಿಕೆಯ 16 ಪುಟಗಳನ್ನು ವಾರವೊಂದರಲ್ಲಿ ಹೇಗಾದರೂ ಮಾಡಿ ತುಂಬಿಸಿ ಬಿಡಬೇಕೆಂಬ ಗುರಿಯಷ್ಟೇ ಇರುವುದಾದರೆ, ಸಂಪಾದಕರಿಗೂ ಸಂಪಾದಕೀಯ ಬಳಗಕ್ಕೂ ಅಂಥ ಕಷ್ಟವೇನಿಲ್ಲ. ಆದರೆ ಪ್ರತಿ ಪುಟದಲ್ಲೂ ಪ್ರಬುದ್ಧ ಮತ್ತು ವಿಚಾರ ಪ್ರಚೋದಕ ಬರಹಗಳಿರಬೇಕು ಎಂಬ ಗುರಿ ಇದ್ದರೆ ಖಂಡಿತ ಇದು ಕಷ್ಟದ್ದು ಮತ್ತು ಸವಾಲಿನದ್ದೇ. ಆಗ ಪತ್ರಿಕೆಯ ಪ್ರತಿಯೊಂದು ಪುಟವೂ ಸಂಪಾದಕೀಯ ಬಳಗದ ಪಾಲಿಗೆ ಅಸಾಮಾನ್ಯದ್ದಾಗಿ ಬಿಡುತ್ತದೆ. ಒಂದು ವಾರದವರೆಗೆ ಓದುಗರನ್ನು ಹಿಡಿದಿಡಬಹುದಾದಷ್ಟು ತೂಕದ ಬರಹಗಳಿಗಾಗಿ ಪ್ರಯತ್ನ ನಡೆಯುತ್ತದೆ. ನಿಜವಾಗಿ, ವಾರಪತ್ರಿಕೆಯೆಂಬುದು ದೈನಿಕದಂತೆ ಅಲ್ಲ. ದೈನಿಕದ ಬಹುತೇಕ ಸುದ್ದಿಗಳು ಸಂಜೆಯಾಗುವಾಗ ಸತ್ತು ಹೋಗಿರುತ್ತದೆ. ಮರುದಿನ ಹೊಸ ಸುದ್ದಿ, ಹೊಸ ಸಾವು. ಮೊದಲ ದಿನದ ಸುದ್ದಿಗೆ ತದ್ವಿರುದ್ಧವಾದ ಸುದ್ದಿಗಳು ಮರುದಿನ ಪ್ರಕಟವಾಗಲೂಬಹುದು. ರಾಜಕಾರಣಿಗಳು, ಕ್ರೀಡಾಪಟುಗಳು, ಸೆಲೆಬ್ರಿಟಿಗಳು, ಆತ್ಮಹತ್ಯೆ, ಹಲ್ಲೆ, ವಂಚನೆ, ಅತ್ಯಾಚಾರ... ಇತ್ಯಾದಿ ಸುದ್ದಿಗಳ ಜೊತೆ ನಿತ್ಯ ಪ್ರಕಟವಾಗುವ ದೈನಿಕಗಳಿಗಿಂತ ಭಿನ್ನ ಸುದ್ದಿ-ವಿಶ್ಲೇಷಣೆಗಳಿಗಾಗಿ ಓದುಗರು ವಾರಪತ್ರಿಕೆಯನ್ನು ಕಾಯುತ್ತಾರೆ. ಆದ್ದರಿಂದ, ಸಂಜೆಯಾಗುವಾಗ ಸಾಯುವ ದೈನಿಕಗಳ ಸುದ್ದಿಗಳಿಗೆ ವಿಶ್ಲೇಷಣೆಯ ಮೂಲಕ ಜೀವ ಕೊಡುವುದು, ಅದರ ವಿವಿಧ ಮಗ್ಗುಲುಗಳನ್ನು ಚರ್ಚೆಗೆತ್ತಿಕೊಂಡು ಓದುಗರ ಮನ ತಟ್ಟುವುದನ್ನು ವಾರಪತ್ರಿಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ವಾರಪತ್ರಿಕೆಯ ಸಂಪಾದಕೀಯ ಬಳಗವು ದೈನಿಕದ ಸಂಪಾದಕೀಯ ಬಳಗಕ್ಕಿಂತ ಭಿನ್ನವಾಗಿ ಚಟುವಟಿಕೆಯಲ್ಲಿ ತೊಡಗಬೇಕಾಗುತ್ತದೆ. ಯಾವುದೇ ಒಂದು ಸುದ್ದಿಯನ್ನು ವಿಶ್ಲೇಷಿಸುವುದಕ್ಕೂ ಬರೇ ಆ ಸುದ್ದಿಯನ್ನು ಯಥಾ ಪ್ರಕಾರ ಪ್ರಕಟಿಸುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಸುದ್ದಿಯಲ್ಲಿ ಬರಹಗಾರನ ಅಭಿಪ್ರಾಯ ಇರುವುದಿಲ್ಲ. ಅದು ಬರೇ ಸುದ್ದಿ. ಒಂದೋ ಆ ಸುದ್ದಿ ಆ ದಿನ ಹೊತ್ತೇರುವಾಗಲೇ ಸಾಯ     ಬಹುದು ಅಥವಾ ಸಂಜೆಯವರೆಗೆ ಓದುಗರ ನಡುವೆ ಚರ್ಚೆಯಲ್ಲಿರಬಹುದು. ಕೆಲವೊಮ್ಮೆ ಈ ಚರ್ಚೆ ದಿನಗಳವರೆಗೂ ಮುಂದುವರಿಯಬಹುದು. ಆದರೆ ಸುದ್ದಿ ವಿಶ್ಲೇಷಣೆ ಮಾಡುವ ವಾರಪತ್ರಿಕೆಯೊಂದು ಅಂಥ ಸುದ್ದಿಯನ್ನು ವಿಶ್ಲೇಷಣೆಗೆ ಒಳಪಡಿಸಲು ಎತ್ತಿಕೊಳ್ಳುವಾಗ ಕೆಲವು ಕಠಿಣ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸುದ್ದಿಯನ್ನು ಜನ ಈಗಾಗಲೇ ಓದಿರುವುದರಿಂದ ಅದೇ ಸುದ್ದಿಯನ್ನು ಮತ್ತೆ ಕೊಡುವಂತಿಲ್ಲ. ಅದರ ಇನ್ನಿತರ ಮಗ್ಗುಲುಗಳನ್ನು ವಿಶ್ಲೇಷಿಸಬೇಕೆಂದರೆ ಮಾಹಿತಿಯ ಅಗತ್ಯ ಇರುತ್ತದೆ. ವಿಶ್ಲೇಷಣೆಯ ಹೆಚ್ಚು ತರ್ಕಬದ್ಧ ಮತ್ತು ತೂಕಬದ್ಧವಾಗ ಬೇಕಾದರೆ ಬೇರೆ ಸಾಹಿತ್ಯ ಕೃತಿಗಳ ಅಧ್ಯಯನ ನಡೆಸಿರಬೇಕಾಗುತ್ತದೆ. ಅದನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವ ಜಾಣ್ಮೆಯನ್ನೂ ಪ್ರದರ್ಶಿಸಬೇಕಾಗುತ್ತದೆ. ಇವೆಲ್ಲದರ ಮಧ್ಯೆ ಓದುಗರನ್ನು ಗಮನದಲ್ಲಿಟ್ಟುಕೊಳ್ಳಬೇಕು. ತನ್ನ ಬರಹ ಯಾವ ಬಗೆಯ, ಎಂಥ ವೈಚಾರಿಕ ಮಟ್ಟವನ್ನು ಬೆಳೆಸಿಕೊಂಡ ಓದುಗರನ್ನು ತಲುಪುತ್ತಿದೆ ಎಂಬ ಅರಿವು ಬರಹಗಾರನಲ್ಲಿ ಇರಬೇಕು. ಓದುಗರ ಭಾವನೆಗಳನ್ನು ಪರಿಗಣಿಸದೇ ಬರೆಯ ತೊಡಗಿದರೆ, ಬರಹ ಹೇಗೆಯೇ ಇದ್ದರೂ ಅದು ನಿರೀಕ್ಷಿತ ಪರಿಣಾಮ ಬೀರುವ ಸಾಧ್ಯತೆಗಳು ತೀರಾ ಕಡಿಮೆ...
ಸಾಮಾನ್ಯವಾಗಿ ಗೆಳೆಯ ಇಂಥ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ. ಆದರೆ ಇವತ್ತು ಆ ಬಗ್ಗೆ ಮಾತಾಡಲೇ ಇಲ್ಲ..
ಕಣ್ಣು ತುಂಬಿಕೊಂಡಿತ್ತು. ಗೆಳೆಯನ ತುಂಬಿದ ಕಣ್ಣನ್ನು ನಾನು ನೋಡಿದ್ದು ಇದೇ ಮೊದಲು. ನಾಲ್ಕು ಮಾತುಗಳನ್ನು ಆಡುತ್ತಿದ್ದಂತೆಯೇ ಕಣ್ಣೀರು ದರದರನೆ ಹರಿಯ ತೊಡಗಿತು. ಸಾಮಾನ್ಯವಾಗಿ ಪುರುಷರು ಇತರರೆದುರು ಕಣ್ಣೀರು ಹಾಕುವುದು ಕಡಿಮೆ. ಅಷ್ಟೊಂದು ಆಘಾತಕಾರಿ ಸಂಗತಿಗಳು ಎದುರಾದರೆ ಯಾರೂ ಕಾಣದ ಸ್ಥಳದಲ್ಲಿ ಪುರುಷರು ಕಣ್ಣೀರು ಹರಿಸಿಕೊಂಡು ಸುಮ್ಮನಾಗಿ ಬಿಡುತ್ತಾರೆ. ಒಂದು ವೇಳೆ, ಪ್ರತಿ ಮನೆಯ ಸ್ನಾನಗೃಹದ ಗೋಡೆಗಳಿಗೆ ಬಾಯಿ ಬರುತ್ತಿದ್ದರೆ, ಅಸಂಖ್ಯಾತ ಪುರುಷರ ಕಣ್ಣೀರ ಕತೆಗಳನ್ನು ಅವು ಹೇಳುತ್ತಿದ್ದುವು. ಯಾಕೆಂದರೆ, ಪುರುಷರು ಸ್ನಾನ ಗೃಹದಲ್ಲಿ ಕಣ್ಣೀರು ಹರಿಸಿ, ಮುಖ ತೊಳೆದುಕೊಂಡು ತಮ್ಮ ಕಣ್ಣೀರನ್ನು ಅಡಗಿಸುವುದನ್ನೇ ಹೆಚ್ಚು ಇಷ್ಟಪಡುತ್ತಾರೆ. ಎಲ್ಲರೆದುರೇ ಕಣ್ಣೀರು ಹರಿಸಿದರೆ ಎಲ್ಲಿ ಹೆಂಗರುಳಿನವನು ಎಂಬ ಅಡ್ಡ ಹೆಸರು ಬರುತ್ತೋ ಅನ್ನುವ ಅನುಮಾನ, ಆತಂಕ ಅವರನ್ನು ಸದಾ ಕಾಡುತ್ತಿರುತ್ತದೆ..
ಪತ್ನಿ, ಇಬ್ಬರು ಮಕ್ಕಳೊಂದಿಗೆ ಪರಂಪರೆಯ ಮನೆಯಲ್ಲಿ ವಾಸವಿರುವ ನನ್ನ ಗೆಳೆಯನಿಗೆ ಬೇರೊಂದು ಮನೆ ಮಾಡಿಕೊಳ್ಳ ಬೇಕೆಂಬ ಇರಾದೆ ವರ್ಷಗಳ ಮೊದಲೇ ಇತ್ತು. ಅದನ್ನು ಆತ ಆಗೊಮ್ಮೆ-ಈಗೊಮ್ಮೆ ಹೇಳಿಕೊಂಡದ್ದೂ ಇದೆ. ಮೂರ್ನಾಲ್ಕು ಮಂದಿ ತಮ್ಮಂದಿರಿರುವ ಒಂದು ದೊಡ್ಡ ಕುಟುಂಬದ ಮನೆಯಿಂದ ತಾನೊಬ್ಬ ಹೊರ ಹೋದರೆ ಅಂಥ ಸಮಸ್ಯೆ ಏನೂ ಉಂಟಾಗದು ಎಂಬ ದೃಢ ನಿಲುವು ಗೆಳೆಯನದ್ದಾಗಿತ್ತು. ವಿಧವೆ ತಾಯಿಯೊಂದಿಗೆ ಆಗಾಗ ತನ್ನ ಇರಾದೆಯನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಲೂ ಇದ್ದ. ತಮ್ಮಂದಿರಿಗೆ ಈಗಾಗಲೇ ವಿವಾಹವಾಗಿರುವುದರಿಂದ ತಾಯಿಯನ್ನು ನೋಡಿಕೊಳ್ಳುವ ವಿಷಯದಲ್ಲಿ ಏನೂ ವ್ಯತ್ಯಾಸ ಆಗದು ಎಂದೂ ನಂಬಿದ್ದ. ನಿಜವಾಗಿ, ಮನೆಯ ಹಿರಿಯ ಸದಸ್ಯನಾಗಿ ಮನೆ ಬಿಡುವುದೆಂದರೆ ಅದೊಂದು ದೊಡ್ಡ ಸವಾಲು. ಮನೆಯವರೆಲ್ಲರೂ ಹಿರಿಯವನನ್ನೇ ಅವಲಂಬಿಸಿರುತ್ತಾರೆ. ಅಣ್ಣ ಜವಾಬ್ದಾರಿ ನೋಡಿಕೊಳ್ಳುತ್ತಾನೆ ಎಂಬ ಧೈರ್ಯದಿಂದ ತಮ್ಮಂದಿರು ಬದುಕುತ್ತಿರುತ್ತಾರೆ. ತಾಯಿಯೂ ಹಿರಿಯ ಮಗನ ಮೇಲೆ ಇಟ್ಟಷ್ಟು ಭರವಸೆ ಇನ್ನಾರ ಮೇಲೂ ಇಟ್ಟಿರುವುದಿಲ್ಲ. ಮಾತ್ರವಲ್ಲ, ಕೆಲವೊಮ್ಮೆ ಮಗನಿಗಿಂತಲೂ ಮಗನ ಮಕ್ಕಳ ಜೊತೆಯೇ ತಾಯಿಯ ಸಂಬಂಧ ಹೆಚ್ಚಿರುವುದೂ ಇದೆ. ಯಾಕೆಂದರೆ, ಮಗ ಉದ್ಯೋಗ ನಿಮಿತ್ತ ಕಚೇರಿಗೆ ಹೋದರೆ ಬರುವಾಗ ಸಂಜೆಯಾಗಿರುತ್ತದೆ. ಬಳಿಕ ಸ್ನಾನ, ಅದೂ-ಇದೂ ಎಂದು ಸಮಯ ಬೇಗ ಬೇಗನೆ ಕಳೆದು ಹೋಗುತ್ತದೆ. ಈ ಮಧ್ಯೆ ತಾಯಿಯೊಂದಿಗೆ ಬೆರೆಯುವುದಕ್ಕೆಂದು ಎಷ್ಟೇ ಪ್ರಯತ್ನಿಸಿದರೂ ಅದಕ್ಕೊಂದು ಮಿತಿ ಇದೆ. ಆದರೆ ಮಗನ ಸಣ್ಣ ಮಕ್ಕಳು ಬೆಳಗಿನಿಂದ ಸಂಜೆಯವರೆಗೆ ಅಜ್ಜಿಯ ಜೊತೆಗಿರುತ್ತದೆ. ತಮ್ಮ ಮುದ್ದು ಮುದ್ದು ಮಾತುಗಳ ಮೂಲಕ ಅಪ್ಪ ಬಿಟ್ಟು ಹೋದ ಜಾಗವನ್ನು ಅವು ತುಂಬಿ ಬಿಡುತ್ತವೆ. ಆದ್ದರಿಂದಲೇ, ವಯಸ್ಸಾದ ತಾಯಿ ತನ್ನ ಸಂತಸವನ್ನು ಈ ಮಕ್ಕಳೊಂದಿಗೆ ಕಂಡುಕೊಳ್ಳುತ್ತಾಳೆ. ಆ ಮಕ್ಕಳ (ಮೊಮ್ಮಕ್ಕಳ) ಆಟದಲ್ಲಿ, ಖುಷಿಯಲ್ಲಿ, ತಂಟೆಯಲ್ಲಿ.. ತನ್ನ ಮಗನನ್ನು ಅನುಭವಿಸುತ್ತಾಳೆ. ಹೀಗಿರುವಾಗ ಮಗ ಬೇರೆ ಮನೆ ಮಾಡುವುದೆಂದರೆ, ಮಗನ ಜೊತೆ ಮೊಮ್ಮಕ್ಕಳನ್ನೂ ಕಳಕೊಂಡಂತೆ. ಬಹುಶಃ, ಕಚೇರಿಯಲ್ಲಿ ಬಿಝಿಯಾಗಿರುವ ಗಮನಕ್ಕೆ ಇವು ಬರಬೇಕೆಂದೇನೂ ಇಲ್ಲ. ಆದ್ದರಿಂದಲೇ, ಗೆಳೆಯ ಬೇರೊಂದು ಮನೆ ಮಾಡಿ ತಾಯಿಯನ್ನು ಹೊಸ ಮನೆಗೆ ಕರೆದಾಗ ಅವರು ಕಣ್ಣೀರಾದರು. ಹೊಸ ಮನೆಗೆ ಬಂದರೂ ನಿಲ್ಲಲೊಪ್ಪಲಿಲ್ಲ. ತಿರುಗಿ ಬಂದು ಮಗನನ್ನು ಮತ್ತು ಮೊಮ್ಮಗುವನ್ನು ಸ್ಮರಿಸಿ ಕಣ್ಣೀರು ಹರಿಸತೊಡಗಿದರು. ತಾನು ಬೇರೆ ಮನೆ ಮಾಡಿದ್ದು ತಾಯಿಗೆ ಇಷ್ಟವಿಲ್ಲ ಎಂದರಿತ ಗೆಳೆಯನಿಗೆ ಏನು ಮಾಡಬೇಕೆಂಬ ಗೊಂದಲ. ಅತ್ತ ತಾಯಿಯನ್ನು ಬಿಡುವಂತಿಲ್ಲ, ಇತ್ತ ಬಾಡಿಗೆ ಮನೆ ಮತ್ತು ಅದಕ್ಕಾಗಿ ಖರೀದಿಸಲಾದ ಹೊಸ ಹೊಸ ಗೃಹಪಯೋಗಿ ವಸ್ತುಗಳು ತಾಯಿಯ ಕಣ್ಣೀರಿಗೆ ಕಾರಣ ವಾದ, ಅಭಿಶಪ್ತ ಮಗ ನಾನಾಗಿ ಬಿಡುವೆನೋ ಎಂಬ ಭಯ. ತಾಯಿಗೆ ತಾನು ಅರ್ಥವಾಗಿಲ್ಲವೋ ಅಥವಾ ಅರ್ಥ ಮಾಡಿಸುವಲ್ಲಿ ತಾನು ವಿಫಲನಾಗಿರುವೆನೋ ಎಂಬ ಅನುಮಾನ. ಇನ್ನೊಂದು ಕಡೆ, ಪತ್ನಿಯಲ್ಲಿ ಸಹಜವಾಗಿರುವ ಹೊಸ ಮನೆಯ ಆಸೆ. ಒಂದು ಬಗೆಯ ಗೊಂದಲದೊಂದಿಗೆ ಗೆಳೆಯ ನನ್ನ ಮುಂದಿದ್ದ. ಹೊಸ ಮನೆ ಮತ್ತು ತಾಯಿ ಎಂಬ ಈ ಎರಡು ಆಯ್ಕೆಯ ನಡುವೆ ಆತ ಸಂಕಟಪಡುತ್ತಿದ್ದ..
   ‘If u can Survive, you must remember that I love you very much- ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ಎಷ್ಟು ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು..’
   ಕೆಲವು ವರ್ಷಗಳ ಹಿಂದೆ ಇಂಥದ್ದೊಂದು ಸಂದೇಶ ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದ್ದುದು ಸಾಮಾನ್ಯವಾಗಿತ್ತು. ಅಸಂಖ್ಯ ಮಂದಿ ಈ ಸಂದೇಶವನ್ನು ಶೇರ್ ಮಾಡಿದ್ದರು. ಇದಕ್ಕೆ ಕಾರಣವೂ ಇದೆ.
ವರ್ಷಗಳ ಹಿಂದೆ ಜಪಾನಿನಲ್ಲಿ ನಡೆದ ಭೂಕಂಪವು ದೊಡ್ಡದೊಂದು ಅವಶೇಷಗಳ ರಾಶಿಯನ್ನೇ ಸೃಷ್ಟಿಸಿತ್ತು. ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದ ಸೈನಿಕರು ಮನೆಯೊಂದರ ಅವಶೇಷ ಗಳಡಿಯಲ್ಲಿ ಕವುಚಿ ಮಲಗಿರುವ ಓರ್ವ ಯುವತಿಯನ್ನು ಕಂಡರು. ಮುಂದಕ್ಕೆ ಬಾಗಿ, ಹಣೆಯನ್ನು ನೆಲಕ್ಕೆ ಒತ್ತಿ, ಎರಡೂ ಕೈಗಳನ್ನು ನೆಲಕ್ಕೆ ಹರಡಿ ಏನನ್ನೋ ಅಡಗಿಸಿಟ್ಟ ರೀತಿಯಲ್ಲಿ ಆ ಯುವತಿ ಬಿದ್ದಿದ್ದಳು. ಓರ್ವ ಸೈನಿಕ ಆಕೆಯನ್ನು ಮುಟ್ಟಿ ನೋಡಿದ. ದೇಹ ತಣ್ಣಗಾಗಿತ್ತು. ಆಕೆಯ ತಲೆ ಮತ್ತು ಬೆನ್ನಿನ ಮೇಲೆ ಮನೆಯ ಅವಶೇಷ ಬಿದ್ದಿದ್ದುವು. ಸೈನಿಕ ಅಲ್ಲಿಂದ ತುಸು ಮುಂದಕ್ಕೆ ಹೋದನಾದರೂ ಯುವತಿ ಏನನ್ನೋ ಅಪ್ಪಿ ಹಿಡಿದಿದ್ದಾಳೆ ಎಂದು ಅನುಮಾನವಾಗಿ ಮರಳಿ ಬಂದು ಯುವತಿಯನ್ನು ಪರೀಕ್ಷಿಸಿದ. ಬಳಿಕ ಜೋರಾಗಿ ಕೂಗಿ ಹೇಳಿದ,
   ‘ಗೆಳೆಯರೇ, ಇಲ್ಲಿ ಬನ್ನಿ, ಇಲ್ಲೊಂದು ಮಗುವಿದೆ. ಪವಾಡ, ಪವಾಡ..’
ಅವಶೇಷಗಳನ್ನು ಸರಿಸಿ ಯುವತಿಯನ್ನು ಮೇಲೆತ್ತಿದಾಗ, ಕಂಬಳಿಯಲ್ಲಿ ಸುತ್ತಿ ಮಲಗಿಸಿದ್ದ 3 ತಿಂಗಳ ಶಿಶು ಬೆಚ್ಚಗೆ ನಿದ್ರಿಸುತ್ತಿತ್ತು. ಆ ಯುವತಿ ತನ್ನ ಜೀವವನ್ನು ಬಲಿ ನೀಡಿ ಆ ಮಗುವನ್ನು ರಕ್ಷಿಸಿದ್ದಳು. ಬೀಳುತ್ತಿದ್ದ ಮನೆಯ ಅವಶೇಷಗಳಿಗೆ ತನ್ನ ದೇಹವನ್ನು ಒಡ್ಡಿ, ಮಗುವನ್ನು ರಕ್ಷಿಸಿರುವುದು ಸೈನಿಕರನ್ನು ದಂಗು ಬಡಿಸಿತ್ತು. ಮಗುವನ್ನುಸುತ್ತಿದ್ದ ಕಂಬಳಿಯನ್ನು ವೈದ್ಯರು ಕಿತ್ತಾಗ ಅದರೊಳಗೆ ಮೊಬೈಲ್ ಪೋನ್ ಒಂದು ಪತ್ತೆಯಾಗಿತ್ತು. ಮಾತ್ರವಲ್ಲ, ಆ ಪೋನ್‍ನ ಸ್ಕ್ರೀನ್‍ನಲ್ಲಿ ಒಂದು ಸಂದೇಶವೂ ಇತ್ತು. ಬಹುಶಃ, ಮರಣಕ್ಕೆ ಮುಖಾಮುಖಿಯಾದಾಗ, ಒಂದು ವೇಳೆ ತನ್ನ ಮಗು ಬದುಕಿ ಉಳಿದರೆ.. ಎಂಬ ನಿರೀಕ್ಷೆಯೊಂದಿಗೆ ತನ್ನ ಮುದ್ದು ಕಂದನಿಗೆ ತಾಯಿ ಕೊನೆಯದಾಗಿ ನೀಡಿದ ಸಂದೇಶವಾಗಿತ್ತದು- ‘ಒಂದು ವೇಳೆ ನೀನು ಬದುಕಿ ಉಳಿದರೆ ನಾನು ನಿನ್ನನ್ನು ತುಂಬ ಪ್ರೀತಿಸುತ್ತಿದ್ದೆ ಎಂಬುದನ್ನು ನೆನಪಿಸಿಕೊಳ್ಳಬೇಕು.’ ಅಂದಹಾಗೆ, ತಾಯಿ ಪ್ರೀತಿಯನ್ನು ಅರಿತುಕೊಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಂದೇಶ ಇನ್ನಾವುದಿದೆ ಹೇಳಿ?
   ಮೊನ್ನೆ ಕಣ್ತುಂಬಿಕೊಂಡು ಎದುರು ಕೂತ ಗೆಳೆಯನನ್ನು ನೋಡುವಾಗ ಜಪಾನಿನ ಆ ತಾಯಿಯ ನೆನಪಾಯಿತು.

No comments:

Post a Comment