ಪ್ರಕರಣವೊಂದು ಧರ್ಮವಿರೋಧಿ, ಸಮಾಜ ವಿರೋಧಿಯಾಗಿ ಗುರುತಿಸಿಕೊಳ್ಳುವುದಕ್ಕೆ ಯಾವುದು
ಮಾನದಂಡವಾಗಬೇಕು? ಪ್ರಕರಣದಲ್ಲಿ ಭಾಗಿಯಾದವರ ಧರ್ಮವೇ, ಜಾತಿಯೇ, ವೇಷ ಭೂಷಣಗಳೇ? ಒಂದು
ಪ್ರಕರಣವು ಅಭಿನಂದನಾರ್ಹ ಎನಿಸಿಕೊಳ್ಳುವುದು ಅಥವಾ ಖಂಡನೆಗೆ ಒಳಪಡಬೇಕಾದದ್ದೆಲ್ಲ
ಯಾವುದರ ಆಧಾರದಲ್ಲಿ? ಹಿಂದೂ ಯುವತಿ ಮುಸ್ಲಿಮ್ ಯುವಕನೊಂದಿಗೆ ಗೆಳೆತನ
ಇಟ್ಟುಕೊಳ್ಳುವುದನ್ನು ತಪ್ಪೆನ್ನುವವರು ಮತ್ತು ಅದನ್ನು ಬಲವಂತದಿಂದ, ಹಲ್ಲೆ
ನಡೆಸಿಯಾದರೂ ತಡೆಯಬೇಕಾದದ್ದು ತಮ್ಮ ಧಾರ್ಮಿಕ ಕರ್ತವ್ಯ ಎಂದು ವಾದಿಸುವವರು; ಹಿಂದೂ
ಯುವಕ ಮುಸ್ಲಿಮ್ ಯುವತಿಯೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನೂ ತಪ್ಪೆನ್ನಬೇಕಲ್ಲವೇ?
ಅಂಥ ಸಂಬಂಧವನ್ನು ಬಲವಂತದಿಂದ, ಹಲ್ಲೆ ನಡೆಸಿಯಾದರೂ ತಡೆಯುವುದು ತಮ್ಮ ಧಾರ್ಮಿಕ
ಕರ್ತವ್ಯ ಎಂದು ವಾದಿಸಬೇಕಲ್ಲವೇ? ನ್ಯಾಯ ಅಂದರೆ ಇದುವೇ ಅಲ್ಲವೇ? ಹಾಗೆಯೇ, ಮುಸ್ಲಿಮ್
ಯುವತಿ ಹಿಂದೂ ಯುವಕನೊಂದಿಗೆ ಗೆಳೆತನ ಬೆಳೆಸಿಕೊಳ್ಳುವುದನ್ನು ಬಲವಂತದಿಂದ ತಡೆಯಬೇಕೆಂದು
ವಾದಿಸುವವರಿಗೂ ಇದೇ ಪ್ರಶ್ನೆ ಅನ್ವಯವಾಗುತ್ತದೆ. ಆದರೆ, ಈ ಎಲ್ಲ ಸಂದರ್ಭಗಳಲ್ಲಿ ಇವರ
ನಿಲುವಿನಲ್ಲಿ ದ್ವಂದ್ವಗಳೇಕೆ ಕಾಣಿಸುತ್ತವೆ? ಹಿಂದೂ ಹುಡುಗ ಮುಸ್ಲಿಮ್ ಹುಡುಗಿಯೊಂದಿಗೆ
ಗೆಳೆತನ ಬೆಳೆಸಿದರೆ ಅಭಿನಂದನೆ ಸಲ್ಲಿಸುತ್ತಲೇ ಹಿಂದೂ ಯುವತಿ ಮುಸ್ಲಿಮ್
ಹುಡುಗನೊಂದಿಗೆ ಗೆಳೆತನ ಬೆಳೆಸಿದಾಗ ದಾಳಿ ನಡೆಸುವುದೇಕೆ? ಪ್ರತಿಭಟನೆ
ಹಮ್ಮಿಕೊಳ್ಳುವುದೇಕೆ?
ದೇರಳಕಟ್ಟೆಯಲ್ಲಿ ನಡೆದ ಪ್ರಕರಣವು ಜಿಲ್ಲೆಯಲ್ಲಿ ನೈತಿಕತೆ, ಅನೈತಿಕತೆ, ನ್ಯಾಯ, ಧರ್ಮ, ಕೋಮು ರಾಜಕೀಯ.. ಮುಂತಾದುವುಗಳ ಸುತ್ತ ಮತ್ತೊಮ್ಮೆ ಚರ್ಚೆಗೆ ವೇದಿಕೆ ಒದಗಿಸಿದೆ. ದೇರಳಕಟ್ಟೆಯಲ್ಲಿ ಏನು ನಡೆದಿದೆಯೋ ಅದು ತೀವ್ರವಾದ ಖಂಡನೆಗೆ ಅರ್ಹವಾದದ್ದು. ಅದರಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೋ ಅವರನ್ನು ಉಗ್ರ ಶಿಕ್ಷೆಗೆ ಒಳಪಡಿಸಬೇಕಾದದ್ದು ಅತ್ಯಂತ ಅಗತ್ಯ. ಅದರಲ್ಲಿ ಯಾವ ರಾಜಿಯನ್ನೂ ಮಾಡಿಕೊಳ್ಳಬಾರದು. ಅದೇವೇಳೆ, ಅದರಲ್ಲಿ ಭಾಗಿಯಾದ ಆರೋಪಿಗಳ ಹೆಸರನ್ನು ನೋಡಿಕೊಂಡು ಆ ಇಡೀ ಪ್ರಕರಣವನ್ನು ಒಂದು ಧರ್ಮಕ್ಕೆ ಜೋಡಿಸುವುದನ್ನೂ ಅಷ್ಟೇ ಪ್ರಬಲವಾಗಿ ಖಂಡಿಸಬೇಕಾಗುತ್ತದೆ. ಯಾಕೆಂದರೆ, ಹಾಗೆ ಮಾಡುವುದು ಸೈನೈಡ್ ಕಿಲ್ಲರ್ ಮೋಹನ್ ಕುಮಾರನಿಗೆ ಧರ್ಮವನ್ನು ಜೋಡಿಸಿದಂತೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಕೊಲ್ಲುವುದಕ್ಕಿಂತ ಮೊದಲು ಮೋಹನನು ಅತ್ಯಾಚಾರವಷ್ಟೇ ಮಾಡುತ್ತಿದ್ದುದಲ್ಲ, ಮನೆಯಲ್ಲಿರುವ ಹಣ, ಬಂಗಾರವನ್ನೆಲ್ಲಾ ತಮ್ಮೊಂದಿಗೆ ತರುವಂತೆ ಆ ಹೆಣ್ಣು ಮಕ್ಕಳಲ್ಲಿ ಹೇಳುತ್ತಿದ್ದ. ಮದುವೆಯ ಕನಸು ಕಟ್ಟಿಕೊಂಡು ಬರುವ ಆ ಮುಗ್ಧ ಹೆಣ್ಣು ಮಕ್ಕಳಿಗೆ ಬಳಿಕ ಸಯನೈಡ್ ನೀಡಿ ಕೊಲ್ಲುತ್ತಿದ್ದ. ಮಾಡಿದ ಅತ್ಯಾಚಾರವನ್ನು ಚಿತ್ರೀಕರಿಸುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ, ಆತ ಎಸಗಿದ ಕೃತ್ಯಗಳಂತೂ ದೇರಳಕಟ್ಟೆ ಪ್ರಕರಣಕ್ಕಿಂತಲೂ ಘೋರವಾದದ್ದು. ಯಾಕೆಂದರೆ, ಮದುವೆ ಎಂಬುದು ಪ್ರತಿ ಹೆಣ್ಣು ಮಕ್ಕಳ ದೊಡ್ಡದೊಂದು ಕನಸು. ಆ ಕನಸನ್ನು ದುರುಪಯೋಗಿಸಿಕೊಂಡು ಅತ್ಯಾಚಾರಕ್ಕೆ ಒಳಪಡಿಸಿ ಕೊಲ್ಲುವುದಿದೆಯಲ್ಲ, ಅದಕ್ಕೆ ಯಾವ ಬ್ಲಾಕ್‍ಮೇಲೂ ಸಮಾನವಲ್ಲ. ಅಂದಹಾಗೆ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದವರೆಲ್ಲ ಕ್ರಿಮಿನಲ್ ಹಿನ್ನೆಲೆಯುಳ್ಳವರು. ರೌಡಿಗಳ ಪಟ್ಟಿಯಲ್ಲಿ ಹೆಸರು ದಾಖಲಿಸಿಕೊಂಡವರು. ಆದ್ದರಿಂದ, ಸಮಾಜದಲ್ಲಿ ಅವರಿಗೆ ಯಾವ ಸ್ಥಾನ-ಮಾನವೂ ಇರುವುದಿಲ್ಲ. ಬೆಂಬಲಿಗರೂ ಇರುವುದಿಲ್ಲ. ಆದರೆ, ಮೋಹನ್ ಕುಮಾರ್ ಹಾಗಲ್ಲ. ಆತ ಸಮಾಜದಲ್ಲಿ ಕ್ರಿಮಿನಲ್ ಆಗಿ ಗುರುತಿಸಿರಲಿಲ್ಲ. ಬ್ಲಾಕ್‍ಮೇಲ್ ಮಾಡುವ ತಂಡದ ಸದಸ್ಯನೆಂಬ ಹಣೆಪಟ್ಟಿಯೂ ಇರಲಿಲ್ಲ. ಶಿಕ್ಷಕನ ಗುರುತಿನೊಂದಿಗೆ ಬದುಕುತ್ತಿದ್ದ ಆತನಿಗೂ ಪಕ್ಕಾ ಕ್ರಿಮಿನಲ್‍ಗಳಾಗಿ ಗುರುತಿಸಿಕೊಂಡಿದ್ದ ದೇರಳಕಟ್ಟೆ ಆರೋಪಿಗಳಿಗೂ ಹೋಲಿಸಿ ನೋಡಿದರೆ ಮೋಹನ್ ಕುಮಾರನ ಅಪರಾಧವೇ ಹೆಚ್ಚು ಅಪಾಯಕಾರಿಯಾಗಿ ಕಾಣಿಸುತ್ತದೆ. ಆದರೂ, ಈಗ ಪ್ರತಿಭಟನೆಯಲ್ಲಿ ತೊಡಗಿರುವ ಎಷ್ಟು ಮಂದಿ ಆತನ ವಿರುದ್ಧ ಪ್ರತಿಭಟಿಸಿದ್ದಾರೆ? ಆತನ ಕ್ರೌರ್ಯವನ್ನು ಆತ ಪ್ರತಿನಿಧಿಸುವ ಧರ್ಮಕ್ಕೆ ಜೋಡಿಸಿದ್ದಾರೆ? ಆತನ ಮೇಲೆ ಇಂತಿಂಥ ಕಾಯ್ದೆಗಳನ್ನು ಹಾಕಿ ಎಂದು ಆಗ್ರಹಿಸಿದ್ದಾರೆ? ಹೀಗಿರುವಾಗ, ಇಲ್ಲೆಲ್ಲಾ ಕೇಳದ ಘೋಷಣೆ, ಮಾಡದ ಪ್ರತಿಭಟನೆಗಳು ದೇರಳಕಟ್ಟೆ ಪ್ರಕರಣದಲ್ಲಿ ಮಾತ್ರ ಕಾಣಿಸಿಕೊಂಡಿರುವುದಕ್ಕೆ ಏನು ಕಾರಣ? ಒಂದು ವೇಳೆ ದೇರಳಕಟ್ಟೆ ಆರೋಪಿಗಳ ಹೆಸರು ಸಫ್ವಾನ್, ಸಂಶುದ್ದೀನ್, ಸವಿೂರ್, ನಿಸಾರ್... ಎಂದಾಗಿರದೇ, ವಿನಯ, ರಮೇಶ್, ಉದಯ, ಚಂದ್ರ.. ಎಂದಾಗಿರುತ್ತಿದ್ದರೆ ಈ ಇಡೀ ಪ್ರಕರಣ ಯಾವ ತಿರುವನ್ನು ಪಡಕೊಳ್ಳುತ್ತಿತ್ತು? ಅದು ನೈತಿಕ ಪೊಲೀಸ್‍ಗಿರಿಯಾಗಿ ಸಮರ್ಥನೆಗೆ ಒಳಗಾಗುತ್ತಿರಲಿಲ್ಲವೇ? ಅಷ್ಟಕ್ಕೂ, ಹೋಮ್ ಸ್ಟೇ ದಾಳಿಯ ಸಂದರ್ಭದಲ್ಲಿ ಹೆಣ್ಣು ಮಕ್ಕಳೇನೂ ಸುರಕ್ಷಿತ ಆಗಿರಲಿಲ್ಲವಲ್ಲ. ಸುಮಾರು 50 ರಷ್ಟಿದ್ದ ಯುವಕರ ಮಧ್ಯೆ ಆ ಹೆಣ್ಣು ಮಕ್ಕಳು ಅನುಭವಿಸಿದ ಹಿಂಸೆಯ ಬಗ್ಗೆ ಹೈಕೋರ್ಟೇ ದಿಗ್ಭ್ರಮೆ ವ್ಯಕ್ತಪಡಿಸಿತ್ತು. ದೇಶಾದ್ಯಂತ ಖಂಡನೆ ವ್ಯಕ್ತವಾಗಿತ್ತು. ಆದರೂ, ಇವತ್ತು ಪ್ರತಿಭಟನೆಯಲ್ಲಿ ತೊಡಗಿರುವರು ಅಂದು ಆ ಪ್ರಕರಣವನ್ನು ಯಾವೆಲ್ಲ ರೀತಿಯಲ್ಲಿ ಸಮರ್ಥಿಸಿಲ್ಲ? ಆರೋಪಿಗಳ ಬಿಡುಗಡೆಗಾಗಿ ಒತ್ತಾಯಿಸಿದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲವೇ? ಹೆಣ್ಣಿನ ಮಾನ, ಘನತೆ, ಗೌರವವನ್ನು ಕಾಪಾಡುವುದು ಪ್ರತಿಭಟನಾಕಾರರ ಉದ್ದೇಶ ಎಂದಾಗಿದ್ದರೆ, ಅದು ದೇರಳಕಟ್ಟೆಯಾದರೇನು, ಹೋಮ್ ಸ್ಟೇ ಆದರೇನು ಅಥವಾ ಸೌಜನ್ಯ ಆದರೇನು.. ಎಲ್ಲವೂ ಒಂದೇ ಅಲ್ಲವೇ? ಹೋಮ್ ಸ್ಟೇಯ ಹೆಣ್ಣು ಮಕ್ಕಳ ಮಾನವನ್ನು ಹರಾಜುಗೊಳಿಸಿ ದೇರಳಕಟ್ಟೆ ಪ್ರಕರಣಕ್ಕಾಗಿ ಖಂಡನೆ ವ್ಯಕ್ತಪಡಿಸುವುದಕ್ಕೆ ಏನು ಅರ್ಥವಿದೆ? ಅಲ್ಲದೇ, ಈಗ ಪ್ರತಿಭಟಿಸುವವರಲ್ಲಿ ಎಷ್ಟು ಮಂದಿ ಸೌಜನ್ಯ ಪ್ರಕರಣದ ಬಗ್ಗೆ ಮಾತಾಡಿದ್ದಾರೆ? ನ್ಯಾಯಯುತ ತನಿಖೆಗೆ ಒತ್ತಾಯಿಸಿ ಪ್ರತಿಭಟಿಸಿದ್ದಾರೆ? ಭಾಷಣ ಮಾಡಿದ್ದಾರೆ? ದೇರಳಕಟ್ಟೆಯ ವಿದ್ಯಾರ್ಥಿನಿಯಂತೆ ಸೌಜನ್ಯಳ ಮಾನ, ಪ್ರಾಣವೂ ಗೌರವಾರ್ಹವೇ ಅಲ್ಲವೇ?
ನಿಜವಾಗಿ, ದೇರಳಕಟ್ಟೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಿಡುಗಡೆಗೊಳಿಸುವುದಕ್ಕೋ, ಪ್ರಕರಣವನ್ನು ದುರ್ಬಲಗೊಳಿಸುವುದಕ್ಕೋ ಮುಸ್ಲಿಮ್ ಸಮುದಾಯ ಎಂದೂ ಪ್ರಯತ್ನಿಸಿಲ್ಲ. ಅವರನ್ನು ಬಿಡುಗಡೆಗೊಳಿಸಿ ಎಂದು ಹೇಳಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿಲ್ಲ. ಆರೋಪಿಗಳ ಕೃತ್ಯವನ್ನು ಧಾರ್ಮಿಕವಾಗಿಯೋ, ವೈಯಕ್ತಿಕವಾಗಿಯೋ ಯಾವ ವಿದ್ವಾಂಸರೂ, ನಾಯಕರೂ ಸಮರ್ಥಿಸಿಕೊಂಡಿಲ್ಲ. ಹೀಗೆಲ್ಲ ಇದ್ದೂ ಆ ಇಡೀ ಪ್ರಕರಣವನ್ನು ಮುಸ್ಲಿಮರ ಅಪರಾಧವಾಗಿ ಬಿಂಬಿಸುತ್ತಿರುವುದಕ್ಕೆ ಏನೆನ್ನಬೇಕು? ಮುಸ್ಲಿಮರ ಧಾರ್ಮಿಕ ವಿಧಿಯನ್ನು ಅವಹೇಳನಗೊಳಿಸುತ್ತಾ, ಅವರ ಆಚಾರ-ಆರಾಧನಾ ಕ್ರಮವನ್ನು ತೆಗಳುತ್ತಾ ನಡೆಯುವವರನ್ನು ಏನೆಂದು ಕರೆಯಬೇಕು? ನಿಜವಾಗಿ, ಒಂದು ಧರ್ಮವನ್ನು ಇತರರು ಪ್ರೀತಿಸುವುದು, ಗೌರವಿಸುವುದು ಆ ಧರ್ಮದ ನಾಯಕರ ವರ್ತನೆಯನ್ನು ನೋಡಿಕೊಂಡು. ದೇರಳಕಟ್ಟೆ ಪ್ರಕರಣದ ಬಳಿಕ ಏರ್ಪಡಿಸಲಾದ ಪ್ರತಿಭಟನೆಗಳು ಮತ್ತು ಕೇಳಿಬಂದ ಭಾಷಣಗಳನ್ನು ಆಲಿಸುವಾಗ ಆಘಾತವಾಗುತ್ತದೆ. ಪ್ರತಿಭಟನಾಕಾರರು ಮತ್ತು ಭಾಷಣಗಾರರ ಧಾರ್ಮಿಕ ನಿಷ್ಠೆಯ ಬಗ್ಗೆಯೇ ಅನುಮಾನ ಮೂಡುತ್ತದೆ. ಇನ್ನೊಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಸಾರಾಸಗಟು ಅವಮಾನಿಸುವವರು ಹೇಗೆ ಧಾರ್ಮಿಕ ನಾಯಕರಾಗಬಲ್ಲರು? ಅಂಥ ನಾಯಕರಿಂದ ಎಂಥ ಧರ್ಮ ಜಾಗೃತಿ ಉಂಟಾದೀತು? ಅವರು ಕಟ್ಟುವ ಸಮಾಜದ ಸ್ವರೂಪವಾದರೂ ಹೇಗಿದ್ದೀತು?
ಅಂದಹಾಗೆ, ಅಪರಾಧ ಕೃತ್ಯಕ್ಕೂ ಧರ್ಮಕ್ಕೂ ಯಾವ ಸಂಬಂಧವೂ ಇರುವುದಿಲ್ಲ, ಇರಬಾರದು. ಅಪರಾಧಿಗಳು ಕೇವಲ ಅಪರಾಧಿಗಳೇ ಹೊರತು ಅಪರಾಧಿಗಳನ್ನು ಮುಸ್ಲಿಮ್ ಅಪರಾಧಿ ಅಥವಾ ಹಿಂದೂ ಅಪರಾಧಿ ಎಂದು ವಿಭಜಿಸುವುದು ಅತ್ಯಂತ ಅಮಾನವೀಯವಾದದ್ದು. ಮುಂದಿನ ಎರಡ್ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇಶ್ಯೂ ಬೇಕೆಂದಾದರೆ ಈ ಜಿಲ್ಲೆಯಲ್ಲಿ ಧಾರಾಳ ಇವೆ. ಅದಕ್ಕಾಗಿ ದೇರಳಕಟ್ಟೆ ಪ್ರಕರಣವನ್ನು ಬಳಸಿಕೊಳ್ಳುವ ಪ್ರಯತ್ನವನ್ನು ಯಾರೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಯೂ ಆಧಾರದಲ್ಲಿ ನಡೆಯಬೇಕೆ ಹೊರತು ಭಾವನೆಗಳ ಆಧಾರದಲ್ಲಿ ಅಲ್ಲ. ಹೋಮ್ ಸ್ಟೇ, ದೇರಳಕಟ್ಟೆ, ಪಬ್‍ದಾಳಿ, ಮೋಹನ್ ಕುಮಾರ್.. ಇವೆಲ್ಲ ಪಕ್ಕಾ ಕಾನೂನು ಬಾಹಿರ ಕೃತ್ಯಗಳು. ಅವನ್ನು ಕಾನೂನು ನೋಡಿಕೊಳ್ಳಲಿ. ಅದರ ನೆಪದಲ್ಲಿ ಧರ್ಮವನ್ನೋ ಅದರ ಆಚಾರಗಳನ್ನೋ ನಿಂದಿಸುವುದೆಂದರೆ, ಅದುಅವರ ಯೋಗ್ಯತೆಯನ್ನಷ್ಟೇ ಬಿಂಬಿಸುತ್ತದೆ. ಯಾವ ಆರೋಪಿಗಳೂ ಮೌಲವಿಗಳಲ್ಲೋ, ಪುರೋಹಿತರಲ್ಲೋ ಕೇಳಿಕೊಂಡು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ ಅಥವಾ ಮೌಲವಿ, ಪುರೋಹಿತರು ಅಪರಾಧ ಕೃತ್ಯಕ್ಕೆ ಪ್ರಚೋದಿಸಿದರೂ ಅದಕ್ಕೆ ಧರ್ಮ ಹೊಣೆಯಾಗುವುದೂ ಇಲ್ಲ. ಅದು ಅವರ ಕಸುಬು. ಆದ್ದರಿಂದ, ಆರೋಪಿಗಳನ್ನು ಆರೋಪಿಗಳಾಗಿಯೇ ನೋಡೋಣ. ಅವರೆಂದೂ ಸಮಾಜದ ಹೀರೋಗಳು ಆಗದಿರಲಿ. ಅವರನ್ನು ಹೀರೋಗಳಾಗಿಸುವವರಿಗೆ ನಮ್ಮ ಬೆಂಬಲವೂ ಸಿಗದಿರಲಿ.
No comments:
Post a Comment