Tuesday, September 18, 2018

ಆರೆಸ್ಸೆಸ್ ಆಹ್ವಾನಕ್ಕೆ ತಿರಸ್ಕಾರವೇ ಉತ್ತರವೇ?



ಅಸಹಿಷ್ಣು, ಅತಾರ್ಕಿಕ, ಅಪ್ರಾಯೋಗಿಕ ಮತ್ತು ಅಸಾಂವಿಧಾನಿಕವಾದ ಸಿದ್ಧಾಂತವನ್ನು ಆಶ್ರಯಿಸಿಕೊಂಡಿರುವ ಸಂಘಟನೆಯೊಂದರ ಆಹ್ವಾನವನ್ನು ಸ್ವೀಕರಿಸಬೇಕೇ ಬೇಡವೇ? ಅದು ಆಯೋಜಿಸುವ ಕಾರ್ಯಕ್ರಮದಲ್ಲಿ ಉಪನ್ಯಾಸಕನಾಗಿ ಭಾಗವಹಿಸುವುದು ಉಚಿತವೋ ಅನುಚಿತವೋ?

ಇತ್ತೀಚೆಗೆ ಈ ಬಗೆಯ ಚರ್ಚೆಯೊಂದನ್ನು ಹುಟ್ಟು ಹಾಕಿದವರು ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ. ರಾಷ್ಟ್ರೀಯ ಸ್ವಯಂ ಸೇವಕ (ಆರೆಸ್ಸೆಸ್) ಸಂಘವು ನಾಗಪುರದ ತನ್ನ ಕೇಂದ್ರ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಗೆ ಉಪನ್ಯಾಸಕರಾಗಿ ಮುಖರ್ಜಿ ಯನ್ನು ಆಹ್ವಾನಿಸಿದ್ದು ಮತ್ತು ಅವರು ಆ ಆಹ್ವಾನವನ್ನು ಸ್ವೀಕರಿಸಿದ್ದು ಚರ್ಚೆಯ ಹುಟ್ಟಿಗೆ ಕಾರಣವಾಗಿತ್ತು. ಜೂನ್ 7ರ ಆ ಸಭೆಯಲ್ಲಿ ಮುಖರ್ಜಿಯವರು ಭಾಗವಹಿಸಬಾರದು ಎಂದು ಕಾಂಗ್ರೆಸ್‍ನ ಹಲವು ಪ್ರಮುಖ ನಾಯಕರೇ ಅಭಿಪ್ರಾಯ ಪಟ್ಟರು. ಕೆಲವರು ಮೌನವಾದರು. ಹಲವರು ಬೆಂಬಲಿಸಿದರು. ಆರೆಸ್ಸೆಸ್, ಹಿಂದೂ ಮಹಾಸಭಾ ಮತ್ತು ಮುಸ್ಲಿಮ್ ಲೀಗ್‍ನ ಸದಸ್ಯರಾಗದಂತೆ  ‘ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿ’ (AICC) ಸದಸ್ಯರಾಗಿರುವವರಿಗೆ ನಿಷೇಧ ವಿಧಿಸಿ ಸ್ವಾತಂತ್ರ್ಯಪೂರ್ವದ 1934ರಲ್ಲೇ  (ಆಗಿನ್ನೂ ರಾಜಕೀಯ ಪಕ್ಷವಾಗಿರಲಿಲ್ಲ) ನಿಯಮ ಮಾಡಿರುವುದನ್ನು ಕೆಲವರು ನೆನಪಿಸಿದರು. ಇದೇವೇಳೆ, ಪ್ರಣವ್ ಮುಖರ್ಜಿಯವರ ಮಗಳು ಶರ್ಮಿಷ್ಟಾ ಮುಖರ್ಜಿಯವರು ಅಪ್ಪನ ನಿಲುವನ್ನು ಪ್ರಶ್ನಿಸಿ ಚರ್ಚೆಗೆ ಇನ್ನಷ್ಟು ಕಾವು ಕೊಟ್ಟರು. ಆರೆಸ್ಸೆಸ್‍ನ ಆಹ್ವಾನವನ್ನು ಅಪ್ಪ ತಿರಸ್ಕರಿಸಬೇಕು ಎಂದು ಅವರು ಒತ್ತಾಯಿಸಿದರು. ಒಂದುವೇಳೆ, ಅಪ್ಪ ಆ ಸಭೆಯಲ್ಲಿ ಭಾಗವಹಿಸಿದರೆ, ಅದು ಸುಳ್ಳು ಸುದ್ದಿಯನ್ನು ಹರಡಲು ಆರೆಸ್ಸೆಸ್ ಮತ್ತು ಬಿಜೆಪಿಗೆ ನೆರವಾಗಲಿದೆ ಎಂದು ಖಾರವಾಗಿಯೇ ಬರೆದರು. ಮಾತ್ರವಲ್ಲ, ಅಪ್ಪ ಅಲ್ಲಿ ಆಡುವ ಮಾತುಗಳು ಮುಂದಿನ ದಿನಗಳಲ್ಲಿ ಮರೆತು ಹೋಗಲಿದ್ದು, ಅವರು ಭಾಗವಹಿಸಿದ ಚಿತ್ರಗಳಷ್ಟೇ ಶಾಶ್ವತವಾಗಿ ಉಳಿದುಕೊಳ್ಳಲಿವೆ ಎಂದೂ ಹೇಳಿದರು. ವಿಶೇಷ ಏನೆಂದರೆ,

ಆರೆಸ್ಸೆಸ್‍ನ ಸಭೆಯಲ್ಲಿ ಭಾಗವಹಿಸಿದ ಪ್ರಣವ್ ಮುಖರ್ಜಿಯವರ ಚಿತ್ರಗಳನ್ನು ಮಾಧ್ಯಮಗಳು, ಬಿಜೆಪಿ ಮತ್ತು ಅದರ ಬೆಂಬಲಿಗರು ಆ ಬಳಿಕ ಧಾರಾಳವಾಗಿ ಬಳಸುತ್ತಿದ್ದಾರೆ. ಅದರ ಜೊತೆಗೇ, “ಭಾರತ ಮಾತೆಯ ಶ್ರೇಷ್ಠ ಪುತ್ರನಿಗೆ ಗೌರವ ಸಲ್ಲಿಸಲು ನಾನಿಲ್ಲಿಗೆ ಬಂದಿರುವೆ” ಎಂದು ವಿಸಿಟರ್ಸ್ ಪುಸ್ತಕದಲ್ಲಿ ಅವರು ಬರೆದಿರುವುದನ್ನೂ ಉಪಯೋಗಿಸುತ್ತಿದ್ದಾರೆ. ಆರೆಸ್ಸೆಸ್ ಸಂಸ್ಥಾಪಕ ಸರಸಂಘಚಾಲಕ ಕೇಶವ ಬಲಿರಾಂ ಹೆಡಗೇವಾರ್ ಅವರ ಜನ್ಮಸ್ಥಳಕ್ಕೆ ಭೇಟಿ ಕೊಡುವ ವೇಳೆ ಮುಖರ್ಜಿ ಹೀಗೆ ಬರೆದಿರುವುದನ್ನು ಆರೆಸ್ಸೆಸ್ ಮತ್ತು ಬಿಜೆಪಿ ಬೆಂಬಲಿಗರು ತಮಗೆ ಸಿಕ್ಕ ಮಾನ್ಯತೆಯೆಂಬಂತೆ ಇವತ್ತು ಬಿಂಬಿಸುತ್ತಿದ್ದಾರೆ. ಮುಖರ್ಜಿಯವರ ಭೇಟಿಯ ನಂತರದಲ್ಲಿ ಈ ಬೆಳವಣಿಗೆ ನಡೆದಿರುವುದರಿಂದ, ಆರೆಸ್ಸೆಸ್‍ನ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ ಎಂಬ ಚರ್ಚೆಗೆ ಇದು ಇನ್ನಷ್ಟು ಮಹತ್ವವನ್ನು ಒದಗಿಸಿದೆ.

ಇದಕ್ಕೆ ಹತ್ತಿರವಾಗಿರುವ ಇನ್ನೊಂದು ಘಟನೆಯನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು.

ಅಮೇರಿಕದ ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿಯನ್ನು ಪ್ರಥಮವಾಗಿ ಆಯೋಜಿಸಿದ್ದು ಅಧ್ಯಕ್ಷ ಬಿಲ್ ಕ್ಲಿಂಟನ್. ಅಮೇರಿಕ ದಲ್ಲಿರುವ ವಿವಿಧ ಮುಸ್ಲಿಮ್ ರಾಷ್ಟ್ರಗಳ ರಾಯಭಾರಿಗಳು, ಅಮೇರಿಕದ ಮುಸ್ಲಿಮ್ ವಿದ್ವಾಂಸರು, ಆ್ಯಕ್ಟಿವಿಸ್ಟ್‍ಗಳು, ಸಾಮಾಜಿಕ ಹೋರಾಟಗಾರರು ಮುಂತಾದವರನ್ನು ಈ ಇಫ್ತಾರ್ ಪಾರ್ಟಿಗೆ ಅವರು ಆಹ್ವಾನಿಸಿದ್ದರು. 1990ರಿಂದ ಆರಂಭವಾದ ಈ ಕಾರ್ಯ ಕ್ರಮವನ್ನು ಮುರಿದವರು ಈಗಿನ ಅಧ್ಯಕ್ಷ ಟ್ರಂಪ್. 2017ರಲ್ಲಿ ಶ್ವೇತಭವನವು ಇಫ್ತಾರ್ ಪಾರ್ಟಿ ಆಯೋಜಿಸದೇ ಸುಮ್ಮನಾಯಿತು. ಅದು ತೀವ್ರ ಚರ್ಚೆಗೂ ಕಾರಣವಾಯಿತು. ಟ್ರಂಪ್ ಅವರ ತೀವ್ರ ಬಲಪಂಥೀಯ ವಿಚಾರಧಾರೆಯ ಪ್ರತಿಬಿಂಬ ಇದು ಎಂಬ ಟೀಕೆಯೂ ವ್ಯಕ್ತವಾಯಿತು. ತನ್ನ ಚುನಾವಣಾ ಭಾಷಣಗಳಲ್ಲಿ ಮುಸ್ಲಿಮ್ ವಿರೋಧಿ ನಿಲುವನ್ನು ವ್ಯಕ್ತಪಡಿಸುವ ಮೂಲಕವೇ ಪ್ರಚಾರಕ್ಕೆ ಬಂದಿದ್ದ ಟ್ರಂಪ್‍ರ ಮೇಲೆ ಮತ್ತಷ್ಟು ಆರೋಪಗಳನ್ನು ಹೊರಿಸಲು ಇದು ಅವಕಾಶ ಒದಗಿಸಿತು. ಅದೇವೇಳೆ, ಅವರ ಬೆಂಬಲಿಗರು ಟ್ರಂಪ್‍ರ ನಿಲುವನ್ನು ಸಮರ್ಥಿಸಿಕೊಳ್ಳತೊಡಗಿದರು. ಆದರೆ, 2018ರಲ್ಲಿ ಇದೇ ಟ್ರಂಪ್ ಶ್ವೇತಭವನದಲ್ಲೇ  ಇಫ್ತಾರ್ ಪಾರ್ಟಿಯನ್ನು ಏರ್ಪಡಿಸಿದರು. ಮಾತ್ರವಲ್ಲ, ಬಿಲ್ ಕ್ಲಿಂಟನ್ ಅವರ ಇಫ್ತಾರ್ ಪಾರ್ಟಿ ಹೇಗಿತ್ತೋ ಅದೇ ಮಾದರಿಯನ್ನು ಈ ಪಾರ್ಟಿಗೂ ಅಳವಡಿಸಿಕೊಂಡರು. ಸೌದಿ ರಾಯಭಾರಿ ಖಾಲಿದ್ ಬಿನ್ ಸಲ್ಮಾನ್, ಜೋರ್ಡಾನ್ ರಾಯಭಾರಿ ರಿನಾ ಕವಾರ್ ಸೇರಿದಂತೆ ಇಂಡೋನೇಶಿಯಾ, ಯುಎಇ, ಟುನೀಷ್ಯಾ, ಕತಾರ್, ಬಹ್ರೈನ್, ಮೊರಾಕ್ಕೊ, ಅಲ್ಜೀರಿಯಾ, ಲಿಬಿಯಾ, ಕುವೈತ್, ಝಾಂಬಿಯಾ, ಇತಿಯೋಪಿಯಾ, ಇರಾಕ್, ಬೋಸ್ನಿಯಾ ಮುಂತಾದ ದೇಶಗಳ ರಾಯಭಾರಿಗಳು ಭಾಗವಹಿಸಿದ ಆ ಇಫ್ತಾರ್ ಪಾರ್ಟಿಯೂ ವಿವಾದಮುಕ್ತ ಆಗಿರಲಿಲ್ಲ. ಶ್ವೇತಭವನದಲ್ಲಿ ಇಫ್ತಾರ್ ಪಾರ್ಟಿ ನಡೆಯುತ್ತಿದ್ದರೆ ಹೊರಗೆ ಅಮೇರಿಕದ ಆ್ಯಕ್ಟಿವಿಸ್ಟ್‍ಗಳು, ನಾಗರಿಕ ಹಕ್ಕು ಹೋರಾಟಗಾರರು, ಪ್ರೊಫೆಸರ್‍ಗಳೂ ಸೇರಿದಂತೆ ಅನೇಕಾರು ಮಂದಿ ‘Not Trumps Iftar’  ಎಂಬ ಘೋಷಣೆಯೊಂದಿಗೆ ಪ್ರತಿಭಟಿಸುತ್ತಿದ್ದರು. ಸಿರಿಯಾದ ವಲಸೆಗಾರರನ್ನು ‘ಅಪಾಯಕಾರಿ ಹಾವು’ ಎಂದು ಅವರು ಚುನಾವಣಾ ಪ್ರಚಾರದ ವೇಳೆ ಹೇಳಿರುವುದನ್ನು ಮತ್ತು ಐದು ಮುಸ್ಲಿಮ್ ರಾಷ್ಟ್ರಗಳ ನಾಗರಿಕರಿಗೆ ಅವರು ಪ್ರವೇಶ ನಿಷೇಧಿಸಿರುವುದನ್ನು ಅವರು ಪ್ರಶ್ನಿಸುತ್ತಿದ್ದರು. ಹಾಗಂತ,
ಈ ನಡೆಯನ್ನು ಆರೆಸ್ಸೆಸ್‍ಗೆ ಹೋಲಿಸುತ್ತಿಲ್ಲ. ಟ್ರಂಪ್ ಜನ ಪ್ರತಿನಿಧಿ. ಆರೆಸ್ಸೆಸ್ ಒಂದು ಖಾಸಗಿ ಸಂಘಟನೆ. ಸಮಾನ ರೀತಿಯ ಎರಡು ಘಟನೆಗಳು ಎಂಬುದನ್ನು ಸೂಚಿಸುವುದಕ್ಕಷ್ಟೇ ಈ ಉಲ್ಲೇಖ.

ಸದ್ಯ ಆರೆಸ್ಸೆಸ್ ಮತ್ತೆ ಸುದ್ದಿಯಲ್ಲಿದೆ. ದೆಹಲಿಯಲ್ಲಿ ಅದು ಆಯೋಜಿಸಿರುವ ಮೂರು ದಿನಗಳ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಪರ-ವಿರೋಧಿಗಳೆಲ್ಲರನ್ನೂ ಅದು ಆಹ್ವಾನಿಸಿದೆ. ರಾಹುಲ್ ಗಾಂಧಿಯಿಂದ ಹಿಡಿದು ಕಮ್ಯುನಿಸ್ಟ್ ಸೀತಾರಾಂ ಯೆಚೂರಿಯ ವರೆಗೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಮತ್ತು ಮುಸ್ಲಿಮ್ ಸಮುದಾಯದ ಪ್ರಮುಖರು ಆಹ್ವಾನಿತರಾಗಿದ್ದಾರೆ. ಮತ್ತದೇ ಪ್ರಶ್ನೆ- ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಬೇಕೋ ಬೇಡವೋ? Will he dare to or will he not  ಎಂದು ರಾಹುಲ್ ಗಾಂಧಿಯನ್ನು ಪ್ರಚೋದಿಸುವ ರೀತಿಯಲ್ಲಿ ಮಾಧ್ಯಮಗಳು ಶೀರ್ಷಿಕೆ ಬರೆದಿವೆ. ಹಾಗಂತ,
ಲೋಕಸಭಾ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿಗೆ ನೆಲವನ್ನು ಹದಗೊಳಿಸಿ ಕೊಡುವುದು ಆರೆಸ್ಸೆಸ್‍ನ ಉದ್ದೇಶ ಎಂಬುದು ಸ್ಪಷ್ಟವೇ ಆಗಿದ್ದರೂ ಅಷ್ಟಕ್ಕೇ ಈ ಆಹ್ವಾನವನ್ನು ನಾವು ಸೀಮಿತಗೊಳಿಸಿ ನೋಡಬೇಕಿಲ್ಲ. ಈ ಆಹ್ವಾನದಲ್ಲಿ ಒಂದು ಜಾಣತನವಿದೆ. ತನ್ನ ಬಗ್ಗೆ ಅನುಕಂಪ ಭಾವವನ್ನು ಸಾಮಾಜಿಕವಾಗಿ ಸೃಷ್ಟಿಸುವುದೂ ಇದರಲ್ಲಿ ಒಂದು. ‘ತನ್ನ ವಿಚಾರಧಾರೆಯನ್ನು ಒಪ್ಪದವರೊಂದಿಗೆ ಮಾತಾಡಲು ಮತ್ತು  ಅವರ ಮಾತುಗಳನ್ನು ಕೇಳಿಸಿಕೊಳ್ಳಲು ತಾನು ಸಿದ್ಧನಿದ್ದೇನೆ, ಆದರೆ ಅವರೇ ಸಿದ್ಧರಿಲ್ಲ, ಸೈದ್ಧಾಂತಿಕವಾಗಿ ಅವರು ಪುಕ್ಕಲರು...’ ಎಂಬ ಸಂದೇಶವನ್ನು ಸಾರುವುದೂ ಈ ಆಹ್ವಾನದಲ್ಲಿ ಸೇರಿದೆ ಎಂದೇ ಅನಿಸುತ್ತದೆ. ಅಷ್ಟಕ್ಕೂ,

ಆರೆಸ್ಸೆಸ್ ಸಭೆಯಲ್ಲಿ ಭಾಗವಹಿಸುವುದರಿಂದ ಆರೆಸ್ಸೆಸ್‍ಗೆ ಮಾತ್ರ ಲಾಭ, ಭಾಗವಹಿಸಿದವರಿಗೆ ಯಾವ ಪ್ರಯೋಜನವೂ ಇಲ್ಲ ಎಂಬ ನಿಲುವು ಎಷ್ಟು ಸರಿ? ಈ ಬಗೆಯ ವಾದವನ್ನು ಒರೆಗೆ ಹಚ್ಚಿ ನೋಡಲಾಗಿದೆಯೇ? ಅಥವಾ ಬರಿದೇ ಭಯವೇ? ತನ್ನ ವಿಚಾರಧಾರೆಯಲ್ಲಿ ಸ್ಪಷ್ಟತೆ ಹೊಂದಿರುವ ಮತ್ತು ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಆರೆಸ್ಸೆಸ್ ಕಾರ್ಯಕ್ರಮಕ್ಕೆ ಹೋದರೂ ಮುಸ್ಲಿಮ್ ಲೀಗ್ ಸಭೆಗೆ ಹೋದರೂ ವಿಚಲಿತನಾಗಲಾರ. ರಾಹುಲ್ ಗಾಂಧಿಯವರು ಆರೆಸ್ಸೆಸ್ ಆಹ್ವಾನವನ್ನು ಸ್ವೀಕರಿಸಿ, ಅಲ್ಲಿ  ಸೇರಿರುವ 5 ಸಾವಿರ ಮಂದಿಯ ಎದುರು- ಭಾರತದ ಬಹುತ್ವ, ಸಂವಿಧಾನದ ಅಗತ್ಯ, ಜಾತ್ಯತೀತ ತತ್ವದ ಉಳಿವು, ಭಿನ್ನಾಭಿಪ್ರಾಯಕ್ಕೆ ಸಿಗಬೇಕಾದ ಮನ್ನಣೆ, ಆರೆಸ್ಸೆಸ್‍ನೊಂದಿಗೆ ತನಗಿರುವ ಭಿನ್ನಾಭಿಪ್ರಾಯ, ಅದಕ್ಕಿರುವ ಕಾರಣಗಳು, ಸಮರ್ಥನೆಗಳು, ದೇಶದ ಒಳಿತಿನ ದೃಷ್ಟಿಯಿಂದ ಆರೆಸ್ಸೆಸ್ ಕೈ ಬಿಡಬೇಕಾದ ಸಂಗತಿಗಳು... ಇತ್ಯಾದಿ ಇತ್ಯಾದಿಗಳ ಕುರಿತಂತೆ ಪ್ರಬುದ್ಧ ಭಾಷಣವನ್ನು ಮಾಡಿದರೆ ಅದು ಪರಿಣಾಮ ಬೀರದು ಎಂದು ನಾವೇಕೆ ಭಾವಿಸಬೇಕು? ಆರೆಸ್ಸೆಸ್ಸಿನಲ್ಲಿ ಒಂದು ಸಿದ್ಧಾಂತವಿದೆ. ರಾಹುಲ್ ಗಾಂಧಿಯವರಲ್ಲಿ ಅದಕ್ಕೆ ಪ್ರತಿ ಸಿದ್ಧಾಂತವಿದೆ. ಈ ಎರಡೂ ಸಿದ್ಧಾಂತಗಳು ಪರಸ್ಪರ ಮುಖಾಮುಖಿಯಾಗದೇ ತಪ್ಪಿಸಿಕೊಳ್ಳುತ್ತಾ ಎಲ್ಲಿಯ ವರೆಗೆ ಸಾಗಬಹುದು? ಅದರಿಂದ ಯಾರಿಗೆ ಲಾಭ? ಅಂದಹಾಗೆ,
ರಾಜಕೀಯ ಪಕ್ಷವಾಗಿ ಕಾಂಗ್ರೆಸ್‍ಗೂ ಖಾಸಗಿ ಸಂಘಟನೆಯಾದ ಆರೆಸ್ಸೆಸ್‍ಗೂ ನಡುವೆ ವ್ಯತ್ಯಾಸ ಇದೆ ಎಂಬುದು ನಿಜವೇ ಆಗಿದ್ದರೂ ಬಿಜೆಪಿ ಪ್ರತಿನಿಧಿಸುವುದೇ ಆರೆಸ್ಸೆಸ್‍ನ ಸಿದ್ಧಾಂತವನ್ನು ಎಂಬುದನ್ನೂ ನಾವಿಲ್ಲಿ ಗಮನದಲ್ಲಿಟ್ಟುಕೊಳ್ಳಬೇಕು. ಆದ್ದರಿಂದ ಆರೆಸ್ಸೆಸ್ ಸಭೆಯಲ್ಲಿ ಭಾಷಣ ಮಾಡುವುದೆಂದರೆ, ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಭಾಷಣ ಮಾಡುವುದೆಂದೇ ಅರ್ಥ. ಅಲ್ಲದೇ ಈ ದೇಶದ ಮಂದಿ ಅಂಥ ಭಾಷಣವನ್ನು ಗಮನವಿಟ್ಟು ಆಲಿಸುತ್ತಾರೆ. ಎರಡು ಸಿದ್ಧಾಂತಗಳ ನಡುವಿನ ಮುಖಾಮುಖಿ ಎಂಬ ನೆಲೆಯಲ್ಲಿ ಅಂಥ ಭಾಷಣಕ್ಕೆ ದೇಶದಾದ್ಯಂತ ಕುತೂಹಲವೂ ಇರುತ್ತದೆ. ಆದ್ದರಿಂದ, ಆರೆಸ್ಸೆಸ್‍ನ ಆಹ್ವಾನ ತಂತ್ರಕ್ಕೆ ರಾಹುಲ್ ಗಾಂಧಿಯು ಸ್ವೀಕಾರ ಎಂಬ ಪ್ರತಿತಂತ್ರವನ್ನು ಯಾಕೆ ಬಳಸಿಕೊಳ್ಳಬಾರದು? ಇದೊಂದು ಸವಾಲಿನ ನಡೆ ಎಂಬುದು ನಿಜ. ಆದರೆ ಈ ಸವಾಲನ್ನು ಸ್ವೀಕರಿಸುವ ಧೈರ್ಯ ತೋರಿದರೆ ಅದರಿಂದಾಗಿ ಬಿಜೆಪಿಯ ವರ್ಚಸ್ಸು ಕುಗ್ಗುವ ಸಾಧ್ಯತೆಯೂ ಇದೆ. ಕಾಂಗ್ರೆಸ್‍ಗೆ ಸೈದ್ಧಾಂತಿಕ ಸ್ಪಷ್ಟತೆ ಇದೆ ಮತ್ತು ಅದು ಪ್ರತಿಪಾದಿಸುವ ಸಿದ್ಧಾಂತವು ಬಿಜೆಪಿಯ ಸಿದ್ಧಾಂತಕ್ಕಿಂತ ಹೆಚ್ಚು ಪ್ರಾಯೋಗಿಕವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುವುದೂ ಇದರಿಂದ ಸಾಧ್ಯವಾಗಬಹುದು. ಅಂದಹಾಗೆ,

ಸಂವಾದ
ಸಂದೇಹ
ಭಿನ್ನಾಭಿಪ್ರಾಯ

ಇವು ಮೂರೂ ಅಪಾಯಕಾರಿಗಳಲ್ಲ. ಮಾತ್ರವಲ್ಲ, ಈ ಮೂರಕ್ಕೆ ಎಲ್ಲಿ ಅವಕಾಶಗಳಿರುವುದಿಲ್ಲವೋ ಅಂತಹ ವಾತಾವರಣ ಖಂಡಿತ ಅಪಾಯಕಾರಿ. ಈ ದೇಶದಲ್ಲಿ ಈ ಮೂರಕ್ಕೂ ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಇಂಥದ್ದೊಂದು ವಾತಾವರಣವನ್ನು ಕೆಡಿಸಲು ಪ್ರಯತ್ನಗಳು ನಡೆಯುತ್ತಿವೆಯಾದರೂ ಅದಕ್ಕೆ ಅದಕ್ಕಿಂತ ತೀವ್ರಮಟ್ಟದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಸಂವಾದ ಎಂಬುದು ಸಂದೇಹ ಮತ್ತು ಭಿನ್ನಾಭಿಪ್ರಾಯಗಳು ಇದ್ದಾಗಲಷ್ಟೇ ಸಾಧ್ಯ. ಶೂನ್ಯದಲ್ಲಿ ಸಂವಾದ ಹುಟ್ಟುವುದಿಲ್ಲ. ಆರೆಸ್ಸೆಸ್ ಇಂಥದ್ದೊಂದು  ಸಂವಾದಕ್ಕೆ ಸಿದ್ಧ ಎಂದು ಇವತ್ತು ತೋರಿಸಿಕೊಳ್ಳತೊಡಗಿದೆ. ಈ ತೋರಿಕೆಗೆ ತಿರಸ್ಕಾರವನ್ನೇ ಉತ್ತರವಾಗಿ ನೀಡುವಷ್ಟು ದಿನ ಅದರ ತೋರಿಕೆಯು ಬಲ ಪಡೆಯುತ್ತಲೇ ಹೋಗುತ್ತದೆ. ‘ತಾನು ಸದಾ ಮುಕ್ತವಾಗಿದ್ದೇನೆ’ ಎಂದು ಅದು ಪದೇ ಪದೇ ಹೇಳಿಕೊಳ್ಳುವ ಮೂಲಕ ತನ್ನ ವ್ಯಾಪ್ತಿಗೆ ಇನ್ನಷ್ಟು ಮಂದಿಯನ್ನು ಸೇರಿಸಿಕೊಳ್ಳುತ್ತಲೇ ಇರುತ್ತದೆ. ಯಾವಾಗ ಅದರ ಸಂವಾದ ಆಹ್ವಾನವನ್ನು ಸ್ವೀಕರಿಸಲಾಗುತ್ತದೋ ಆವಾಗ ಅದು ನಿಜವಾದ ಸವಾಲನ್ನು ಎದುರಿಸ ತೊಡಗುತ್ತದೆ. ಮಾತ್ರವಲ್ಲ, ಇದರಿಂದಾಗಿ ಕೆಲವೊಮ್ಮೆ ತನ್ನ ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಒಂದಷ್ಟು ಮಾರ್ಪಾಟು ಮಾಡಿಕೊಳ್ಳ ಬೇಕಾದ ಒತ್ತಡಕ್ಕೂ ಅದು ಒಳಗಾಗಬಹುದು. ಸಂವಾದ ಎಂಬುದು ಯಾವಾಗಲೂ ಹಾಗೆಯೇ. ಅದು ಎರಡು ಅಲಗಿನ ಕತ್ತಿ. ಸಂವಾದಕ್ಕೆ ಆಹ್ವಾನಿಸಿದವರೇ ಅದರಲ್ಲಿ ಮೇಲುಗೈ ಪಡೆಯ ಬೇಕೆಂದಿಲ್ಲ. ಅತಿಥಿಯೂ ಜನರ ಮನಸ್ಸನ್ನು ಗೆಲ್ಲಬಲ್ಲ.

ಭಿನ್ನಾಭಿಪ್ರಾಯವನ್ನು ದಮನಿಸುವ ಮನಃಸ್ಥಿತಿಯೊಂದು ದೇಶದ ಒಂದು ಯುವ ಗುಂಪಿನಲ್ಲಿ ಬಲಪಡೆಯುತ್ತಿರುವಾಗ ಆ ಗುಂಪಿನ ಬಲವನ್ನು ತಗ್ಗಿಸುವುದಕ್ಕೆ ಯಾವುದರಿಂದ ಸಾಧ್ಯ ಎಂಬ ಬಗ್ಗೆ ರಾಜಕೀಯವಾಗಿಯೂ ಸಾಮಾಜಿಕವಾಗಿಯೂ ಗಂಭೀರ ಚಿಂತನೆಯೊಂದು ನಡೆಯಬೇಕು. ಸಂವಾದ ಸ್ನೇಹಿ ವಾತಾವರಣವು ಸಂವಾದ ದ್ವೇಷಿ ವಾತಾವರಣಕ್ಕಿಂತ ಎಷ್ಟೋ ಉತ್ತಮ. ವೈರಿಯ ಜೊತೆಗೂ ಸಂವಾದ ಸಾಧ್ಯ ಎಂಬ ವಾತಾವರಣದ ನಿರ್ಮಾಣ ಇವತ್ತಿನ ಅಗತ್ಯ. ಅಷ್ಟಕ್ಕೂ, ಬಿಜೆಪಿಯಲ್ಲಿರುವವರೂ ಕಾಂಗ್ರೆಸ್‍ನಲ್ಲಿರುವವರೂ ಎಲ್ಲರೂ ಮನುಷ್ಯರೇ. ಸಂಘಟನೆಗಳಿಗೂ ಇದೇ ಮಾತು ಅನ್ವಯ. ರಾಜಕೀಯ ಅಧಿಕಾರ, ಸಾಮಾಜಿಕ ಮನ್ನಣೆ ಮತ್ತು ತಪ್ಪಾದ ಓದು ಇತ್ಯಾದಿಗಳು ಈ ಮನುಷ್ಯರಲ್ಲಿ ಹಲವರನ್ನು ಕ್ರೂರಿಗಳನ್ನಾಗಿಯೂ ಮನುಷ್ಯ ವಿರೋಧಿಗಳನ್ನಾಗಿಯೂ ಮಾಡಿಬಿಟ್ಟಿದೆ. ಇಂಥವರೊಂದಿಗೆ ಶಾಶ್ವತ ಗೋಡೆ ಕಟ್ಟಿಕೊಳ್ಳುವುದು ಸಮಸ್ಯೆಗೆ ಪರಿಹಾರವಲ್ಲ. ಗೋಡೆಯನ್ನು ಬೀಳಿಸಬೇಕು ಮತ್ತು ಸಂವಾದವನ್ನು ಸಾಧ್ಯವಾಗಿಸಬೇಕು- ಇದುವೇ ಸರಿಯಾದ ದಾರಿ. ಒಂದೊಮ್ಮೆ ಸಂವಾದವು ವೈರಿಯನ್ನೂ ಮಿತ್ರರನ್ನಾಗಿಸ ಬಹುದು. ಅದಲ್ಲದಿದ್ದರೆ ವೈರಿಯ ದ್ವೇಷದ ಮಟ್ಟವನ್ನು ತಗ್ಗಿಸಬಹುದು ಅಥವಾ ದ್ವೇಷವನ್ನೇ ಕಿತ್ತೊಗೆಯಬಹುದು. ಇವು ಏನಿದ್ದರೂ ಸ್ವಾಗತಾರ್ಹವೇ.ಅಂದಹಾಗೆ,

ಮನುಷ್ಯಪ್ರೇಮಿ ಸಿದ್ಧಾಂತವನ್ನು ಪ್ರತಿಪಾದಿಸುವ ಮತ್ತು ಸದಾ ಅದಕ್ಕೆ ಬದ್ಧನಾಗಿರುವ ವ್ಯಕ್ತಿ ಯಾವ ಸಭೆಯಲ್ಲಿ ಮಾತಾಡಿದರೂ ಆ ಮಾತುಗಳು ಸುದ್ದಿ ಮಾಡುತ್ತಲೇ ಇರುತ್ತದೆ, ಬರೇ ಚಿತ್ರಗಳಲ್ಲ.

ಏ ಕೆ ಕುಕ್ಕಿಲ

Tuesday, September 4, 2018

ಹುಲಿ-ಇಲಿಗಳ ನಡುವೆ...

  
         ಮೊನ್ನೆ ಫೇಸ್‍ಬುಕ್ ಗೆಳೆಯನೋರ್ವನನ್ನು ಭೇಟಿಯಾದೆ. ವಯಸ್ಸಿಗೆ ಹೋಲಿಸಿದರೆ ನನಗಿಂತ ಕಿರಿಯವ. ಫೇಸ್‍ಬುಕ್‍ನಲ್ಲಿ ಆತ ಹಾಕುತ್ತಿದ್ದ ಪೋಸ್ಟ್ ಮತ್ತು ಬೇರೆ ಬರಹಗಳಿಗೆ ವ್ಯಕ್ತಪಡಿಸುತ್ತಿದ್ದ ಪ್ರತಿಕ್ರಿಯೆಯ ಅರಿವಿದ್ದ ನನಗೆ ಆತ ಈತನೇನಾ ಅನ್ನುವಷ್ಟು ದಂಗಾಗಿ ಹೋದೆ. ಸಾಮಾಜಿಕ ಜಾಲತಾಣಗಳಲ್ಲಿ ಹುಲಿಯಂತೆ ಆರ್ಭಟಿಸುತ್ತಿದ್ದವ ಎದುರು ಸಿಕ್ಕಾಗ ಇಲಿಯಂತೆ ಗೋಚರಿಸಿದ. ಇದು ಈತನ ನಿಜರೂಪವೋ ಅಥವಾ ಸಾಂದರ್ಭಿಕ ಅಭಿವ್ಯಕ್ತವೋ ಅನ್ನುವ ಅನುಮಾನವೂ ಉಂಟಾಯಿತು. ಒಂದಷ್ಟು ಹೊತ್ತು ಮಾತುಕತೆಯೂ ನಡೆಯಿತು. ಜಾಲತಾಣಗಳಲ್ಲಿ ಕಂಡಂತೆ ಆತ ಇರಲಿಲ್ಲ. ಭಾಷೆಯೂ ಚೆನ್ನಾಗಿತ್ತು. ವಿಚಾರಗಳ ಅಭಿವ್ಯಕ್ತಿಯಲ್ಲಿ ಅಪ್ರಬುದ್ಧತೆಯೂ ಇತ್ತು. ಮುಖ್ಯವಾಗಿ, ಆವೇಶದ ಲವಲೇಷವೂ ಇರಲಿಲ್ಲ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗಿತು.
   
 ಒಂದು ರೀತಿಯಲ್ಲಿ, ಸಾಮಾಜಿಕ ಜಾಲತಾಣವೆಂಬುದು ಸಂಪಾದಕ ಇಲ್ಲದ ಮಾಧ್ಯಮ. ಈ ಮಾಧ್ಯಮ ಇವತ್ತು ನಾಗರಿಕರಿಗೆ ಎಷ್ಟು ಅಪರಿಮಿತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದೆಯೆಂದರೆ ಸ್ಥಾಪಿತ ಮಾಧ್ಯಮ ವ್ಯವಸ್ಥೆಯನ್ನೇ ಬೆದರಿಸುವಷ್ಟು. ಇವತ್ತು, ಕೆಲವು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಕೊನೆಯುಸಿರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಮುಖ್ಯ ಪಾತ್ರ ಇದೆ. ಈ ಹಿಂದೆ ಪ್ರತಿಯೊಂದೂ ಸಂಪಾದಕನ ಮರ್ಜಿಯನ್ನು ಅವಲಂಬಿಸಿತ್ತು. ಲೇಖನ, ಕಥೆ, ಕವನ, ಪ್ರಬಂಧ, ವರದಿ ಎಲ್ಲವೂ ಸಂಪಾದಕರ ಮೂಡ್ ಮತ್ತು ಮನಃಸ್ಥಿತಿಯನ್ನು ಅವಲಂಬಿಸಿ ಪುರಸ್ಕಾರ ಅಥವಾ ತಿರಸ್ಕಾರಕ್ಕೆ ಒಳಪಡುತ್ತಿತ್ತು. ಈ ಸ್ಥಿತಿಯನ್ನು ಬದಲಾಯಿಸಿದ್ದೇ  ಸಾಮಾಜಿಕ ಜಾಲತಾಣಗಳು. ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್, ಇನ್‍ಸ್ಟಾ ಗ್ರಾಂಗಳು ಮಾಧ್ಯಮ ಪ್ರಪಂಚವನ್ನೇ ಅಲುಗಾಡಿಸಿದುವು. ಸ್ಥಾವರದಂತಿದ್ದ ನೀತಿ-ನಿಯಮಗಳನ್ನು ಹರಿದು ಹಾಕಿದುವು. ಸಂಪಾದಕನ ಸುತ್ತ ಸೃಷ್ಟಿಯಾಗಿದ್ದ ಕೌತುಕ, ಕುತೂಹಲಗಳ ಮೊಟ್ಟೆ ಒಡೆದು ಹೋದುವು. ಪ್ರಶ್ನಾತೀತ ಎಂಬಂಥ ವಾತಾವರಣವೊಂದನ್ನು ತಮ್ಮ ಸುತ್ತ ನಿರ್ಮಿಸಿಕೊಂಡಿದ್ದ ಮಾಧ್ಯಮಗಳ ಜುಟ್ಟು ಹಿಡಿದು ಕಟಕಟೆಯಲ್ಲಿ ನಿಲ್ಲಿಸಿದ್ದು ಇವೇ ಜಾಲತಾಣ. ಬರೇ ಪತ್ರಿಕೆಗಳೇ ಮಾಧ್ಯಮವಾಗಿದ್ದ ಕಾಲದಲ್ಲಿ ಒಂದು ಪತ್ರಿಕೆ ಬರೆದಿದ್ದೇ  ಮಾತು. ಹೇಳಿದ್ದೇ  ವೇದವಾಕ್ಯ. ಒಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇನ್ನೊಂದು ಪತ್ರಿಕೆ ಪ್ರಶ್ನಿಸುವ ಸಾಧ್ಯತೆ ಶೂನ್ಯವಾಗಿತ್ತು. ಒಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ತಪ್ಪಾದರೂ ಅದನ್ನು ಪ್ರಶ್ನಿಸುವ ಮತ್ತು ಸಮಾಜಕ್ಕೆ ಅದರ ತಪ್ಪುಗಳನ್ನು ಮನವರಿಕೆ ಮಾಡುವ ಪ್ರಯತ್ನ ವನ್ನು ಇನ್ನೊಂದು ಪತ್ರಿಕೆ ಮಾಡುವುದಕ್ಕೆ ದಾರಿಗಳೇ ಇರಲಿಲ್ಲ. ಒಂದು ಬಗೆಯ ಪರಮ ಪವಿತ್ರ ಮನಃಸ್ಥಿತಿ ಪತ್ರಿಕೆಗಳದ್ದಾಗಿತ್ತು ಅಥವಾ ಓದುಗರಿಗೆ ತಮ್ಮನ್ನು ಹಾಗೆ ಅವು ತೋರ್ಪಡಿಸಿಕೊಂಡಿದ್ದುವು. ಹಾಗಲ್ಲ, ಹೀಗೆ ಎಂದು ಹೇಳಲು ಉಳಿದ ಪತ್ರಿಕೆಗಳು ಪ್ರಯತ್ನಿಸದಿರುವುದರಿಂದ ಮತ್ತು ಜಾಲತಾಣಗಳು ಇನ್ನೂ ಉಗಮವಾಗದಿರುವುದರಿಂದ ಪತ್ರಿಕೆಗಳು ಕೊಟ್ಟದ್ದೇ  ಸುದ್ದಿ ಮತ್ತು ಅದರಾಚೆಗೆ ಏನೂ ಇಲ್ಲ ಅನ್ನುವ ಭಾವವೊಂದು ಸಾರ್ವಜನಿಕವಾಗಿ ನೆಲೆಗೊಂಡಿತ್ತು. ಪತ್ರಿಕೆಗಳು ಮತ್ತು ಟಿ.ವಿ. ಮಾಧ್ಯಮಗಳಿಗೆ ಸಂಬಂಧಿಸಿ ಇವತ್ತೂ ಇದು ಬದಲಾಗಿಲ್ಲ.

    ಒಂದು ಪತ್ರಿಕೆ ಪರಮ ಪ್ರಚೋದಕ ಲೇಖನವನ್ನೋ ಕತೆ, ವರದಿಯನ್ನೋ ಪ್ರಕಟಿಸಿದರೆ ಅದನ್ನು ಪ್ರಶ್ನಿಸಿ ಇನ್ನೊಂದು ಪತ್ರಿಕೆ ಬರೆಯುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಅರ್ನಾಬ್ ಗೋಸ್ವಾಮಿಯ ಸರಿ-ತಪ್ಪುಗಳನ್ನು ರಾಜ್‍ದೀಪ್ ಸರ್ದೇಸಾಯಿ  ತನ್ನ ಇಂಡಿಯಾ ಟುಡೇ ಟಿವಿಯಲ್ಲಿ ಚರ್ಚಿಸುವುದಿಲ್ಲ. ಎನ್‍ಡಿಟಿವಿಯಲ್ಲಿ ರವೀಶ್ ಕುಮಾರ್ ಮಾಡುವ ಚರ್ಚೆ ಮತ್ತು ವಿಶ್ಲೇಷಣೆಯನ್ನು ಮೆಚ್ಚಿಕೊಂಡೋ ತೆಗಳಿಕೊಂಡೋ ಟೈಮ್ಸ್ ನೌನಲ್ಲಿ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ. ಕನ್ನಡದ ಚಾನೆಲ್‍ಗಳಿಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಲಿಖಿತವೋ ಅಲಿಖಿತವೋ ಆದ ಅಸ್ಪೃಶ್ಯ ನೀತಿಯೊಂದು ಮಾಧ್ಯಮ ಜಗತ್ತಿನಲ್ಲಿ ನೆಲೆ ನಿಂತಿದೆ. ಇದಕ್ಕೆ ಅಪವಾದದಂತೆ ಪ್ರಸಾರವಾಗುತ್ತಿರುವುದು ಮೀಡಿಯಾ ವನ್ ಎಂಬ ಮಲಯಾಳಂ ಟಿ.ವಿ. ಚಾನೆಲ್. ಅದು ವಾರಕ್ಕೊಮ್ಮೆ ‘ಮೀಡಿಯಾ ಸ್ಕ್ಯಾನ್’ ಎಂಬ ಅರ್ಧಗಂಟೆಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಒಂದು ವಾರದವರೆಗೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣಿಟ್ಟು ವಿಶ್ಲೇಷಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. ಅಂತೂ ಮಾಧ್ಯಮ ಜಗತ್ತಿನ ಸ್ಥಾಪಿತ ನಿಲುವುಗಳ ಮೇಲೆ ಮೊದಲ ಬಾರಿ ನಿಷ್ಠುರ ಸವಾರಿ ಮಾಡಿದ್ದು ಸಾಮಾಜಿಕ ಜಾಲತಾಣಗಳು. ಸಂಪಾದಕ ರಹಿತ ಈ ಮಾಧ್ಯಮ ಕ್ಷೇತ್ರವನ್ನು ಜನರು ಹೇಗೆ ಬಳಸಿಕೊಂಡರೆಂದರೆ, ಯಾವ ಸಂಪಾದಕನೂ ಯಾವ ಪತ್ರಿಕೆಯೂ ಯಾವ ಟಿ.ವಿ.ಯೂ ಅವರ ಪ್ರಹಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮಗೆ ಇಷ್ಟವಾದದ್ದನ್ನು ತಡೆರಹಿತವಾಗಿ ಬರೆದರು. ಇಷ್ಟವಾಗದ್ದನ್ನು ಮುಲಾಜಿಲ್ಲದೇ ಹೇಳಿಕೊಂಡರು. ರಾಜಕಾರಣಿ, ಮೌಲಾನಾ, ಸ್ವಾಮೀಜಿ, ಶಿಕ್ಪಕ, ಪತ್ರಕರ್ತ, ಉದ್ಯಮಿ, ವೈದ್ಯ, ಯೋಧ, ಅಧಿಕಾರಿ.. ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸಿದರು. ಸರಿ-ತಪ್ಪುಗಳನ್ನು ಚರ್ಚಿಸಿದರು. ಇಷ್ಟೇ ಅಲ್ಲ,
  
 ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯದ ಬಗ್ಗೆ ಮಾತಾಡುತ್ತಿದ್ದ ಸಮಾಜವನ್ನು 24 ಗಟೆಯೂ ರಾಜಕೀಯ ಚರ್ಚಾಪಟುವಾಗಿ ಪರಿವರ್ತಿಸಿದ್ದೂ ಇವೇ ಜಾಲತಾಣ. ಸದ್ಯ ಅತಿದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದೂ ಇದುವೇ. ರಾಜಕೀಯವೆಂಬುದು ಚರ್ಚಿಸಿದಷ್ಟೂ ಮುಗಿಯದ ಗೋದಾಮು. ಧಾರ್ಮಿಕ ಕ್ಷೇತ್ರಗಳಿಗಿಂತ ಹೆಚ್ಚಿನ ಅಂಧ ಭಕ್ತರನ್ನು ಮತ್ತು ಅನು ಯಾಯಿಗಳನ್ನು ದಕ್ಕಿಸಿಕೊಂಡಿರುವ ಕ್ಷೇತ್ರ ಇದು. ಅಲ್ಲದೇ, ರಾಜಕೀಯ ಕ್ಷೇತ್ರದಲ್ಲಿ ಜಿಂಕೆ, ದನ, ಮೇಕೆ ಇತ್ಯಾದಿ ಸಾಧು ಪ್ರಾಣಿಗಳಿಂದ ಹಿಡಿದು ಹುಲಿ, ಸಿಂಹ, ತೋಳ, ನರಿ ಇತ್ಯಾದಿ ಅಸಾಧು ಪ್ರಾಣಿಗಳೂ ಇವೆ. ಅವು ನಿಮಿಷಕ್ಕೊಂದರಂತೆ ಸುದ್ದಿ ಗಳನ್ನು ಸೃಷ್ಟಿಸುತ್ತಲೂ ಇವೆ. ಈ ರಾಜಕೀಯ ಕ್ಷೇತ್ರ ಹೇಗೆಯೋ ಅದರ ಭಕ್ತರಲ್ಲಿ ಹೆಚ್ಚಿನವರೂ ಹಾಗೆಯೇ. ಸಾಮಾಜಿಕ ಜಾಲತಾಣಗಳ ಆವಿಷ್ಕಾರಕ್ಕಿಂತ ಮುಂಚೆ ರಾಜಕೀಯ ಪಕ್ಪಗಳಿಗೆ ಈ ಬಗೆಯ ಭಕ್ತರು ಇದ್ದಿದ್ದರಾದರೂ ಅವರ ಅಭಿಪ್ರಾಯಗಳು ಒಂದು ಸೀಮಿತ ವಲಯಕ್ಕೆ ಸೀಮಿತವಾಗಿದ್ದುವು. ಆದರೆ, ಜಾಲ ತಾಣಗಳು ಈ ಸ್ಥಿತಿಯನ್ನು ದೊಡ್ಡಮಟ್ಟದಲ್ಲಿ ಬದಲಿಸಿದುವು. ಅಸಂಖ್ಯ ಜನರು ನಿರ್ದಿಷ್ಟ ಪಕ್ಪ, ವಿಚಾರ, ಧೋರಣೆಗಳ ಪರ-ವಿರುದ್ಧ ನಿಂತು ಅಭಿಪ್ರಾಯ ಮಂಡಿಸುವ ವಾತಾವರಣಕ್ಕೆ ವೇದಿಕೆ ಒದಗಿಸಿದುವು. ಸದ್ಯ ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಾವುದೇ ಬರಹಗಳನ್ನೊಮ್ಮೆ ಗಂಭೀರವಾಗಿ ಪರಿಶೀಲಿಸಿ ನೋಡಿ. 95% ಬರಹಗಳೂ ನೇರ ವಾಗಿಯೋ ಪರೋಕ್ಪವಾಗಿಯೋ ರಾಜಕೀಯಕ್ಕೆ ಸಂಬಂಧಿಸಿದವೇ ಆಗಿರುತ್ತದೆ. ಪ್ರಕರಣ ಯಾವುದೇ ಇರಲಿ, ಅದಕ್ಕೊಂದು ರಾಜಕೀಯ ಆಯಾಮವನ್ನು ಕಲ್ಪಿಸಿ ಚರ್ಚೆ ನಡೆಸುವುದು ಸಹಜ ನೀತಿಯಾಗಿ ಬಿಟ್ಟಿದೆ. ಯಾವಾಗ ರಾಜಕೀಯ ಚರ್ಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರೀಯ ವಿಷಯವಾಗಿ ಪರಿಗಣಿತವಾಯಿತೋ ಬಳಕೆದಾರರ ಭಾಷೆಗಳೂ ಬದಲಾದುವು. ಬಳಸಲು ಸಂಕೋಚಪಡುತ್ತಿದ್ದ ಪದಗಳು ಎಗ್ಗಿಲ್ಲದೇ ಮತ್ತು ಮಡಿವಂತಿಕೆಯಿಲ್ಲದೇ ಬಳಕೆಗೆ ಬಂದುವು. ಅನಿಸಿದ್ದನ್ನು ಬರೆಯುವುದು ಅನ್ನುವುದೇ ಜಾಲತಾಣದ ನಿಯಮವಾಗಿಬಿಟ್ಟಿತು.
  
  ನಿಜವಾಗಿ, ಆರೋಗ್ಯಕರ ಸಂವಾದಕ್ಕೆ ಪಾಂಡಿತ್ಯ ಮತ್ತು ಬರಹ ಸಾಮರ್ಥ್ಯವಷ್ಟೇ ಮುಖ್ಯವಲ್ಲ. ಮುಖಾಮುಖಿ ಪರಿಚಯವೂ ಬಹಳ ಮುಖ್ಯ. ಸಾಮಾಜಿಕ ಜಾಲತಾಣಗಳ ಬಹುಮುಖ್ಯ ಕೊರತೆಗಳಲ್ಲಿ ಇದು ಒಂದು. ಇದೊಂದು ಬಗೆಯ ವೈಫಲ್ಯ. ಗಾಢ ವೈಫಲ್ಯ. ನನ್ನ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವ ವ್ಯಕ್ತಿಗೆ ನಾನು ಯಾರು, ಹಿನ್ನೆಲೆ ಏನು, ವಯಸ್ಸು ಎಷ್ಟು. ವಿಚಾರಧಾರೆ ಯಾವುದು, ಕೆಲಸ ಏನು.. ಇತ್ಯಾದಿ ಇತ್ಯಾದಿಗಳ ಬಗ್ಗೆ ಸ್ಪಷ್ಟ ಅರಿವು ಇರುವುದಿಲ್ಲ. ಫೇಸ್‍ಬುಕ್‍ನಲ್ಲಿ ಇದನ್ನು ತಿಳಿದುಕೊಳ್ಳುವ ಅವಕಾಶ ಇದೆಯಾದರೂ ಅಲ್ಲಿರುವುದು ಎಷ್ಟು ನಿಜ ಅನ್ನುವ ಪ್ರಶ್ನೆಯೂ ಇದೆ. ವಾಟ್ಸ್‍ಆ್ಯಪ್‍ನಲ್ಲಂತೂ ಇದಕ್ಕೆ ಅವಕಾಶವೇ ಇಲ್ಲ. ಹೀಗೆ ಎಲ್ಲೋ  ಕುಳಿತ ವ್ಯಕ್ತಿಯೋರ್ವ ಇನ್ನೆಲ್ಲೋ  ಕುಳಿತ ವ್ಯಕ್ತಿಯೊಂದಿಗೆ ಸ್ಪಷ್ಟತೆಯ ಕೊರತೆಯೊಂದಿಗೆ ಸಂವಾದಕ್ಕಿಳಿಯುತ್ತಾನೆ. ಪ್ರತಿಕ್ರಿಯೆಗಳ ವಿನಿಮಯ ನಡೆಯ ತೊಡಗುತ್ತದೆ. ಈ ಸಂವಾದಕ್ಕೆ ಇನ್ನೆಲ್ಲೋ ಕುಳಿತ ಇನ್ನೆಷ್ಟೋ ಮಂದಿ ಸೇರಿಕೊಳ್ಳುತ್ತಾರೆ. ಈ ಎಲ್ಲರ ಹಿನ್ನೆಲೆ, ಓದು, ವಿಚಾರಧಾರೆ, ಹವ್ಯಾಸ, ವಯಸ್ಸುಗಳನ್ನೆಲ್ಲಾ  ಸ್ಪಷ್ಟ ಪಡಿಸಿಕೊಳ್ಳುವ ವ್ಯವಧಾನ ಹೆಚ್ಚಿನವರಲ್ಲಿ ಇರುವುದೂ ಇಲ್ಲ. ಒಂದು ಪ್ರತಿಕ್ರಿಯೆಗೆ ಇನ್ನೊಂದು ಪ್ರತಿಕ್ರಿಯೆ. ಆರಂಭದ ಪ್ರತಿಕ್ರಿಯೆಯ ಭಾಷೆಯು ಬಳಿಕದ ಪ್ರತಿಕ್ರಿಯೆಯಲ್ಲಿ ಬದಲಾಗುತ್ತದೆ. ಮುಂದಕ್ಕೆ ಭಾಷೆ ಹಳಿ ತಪ್ಪುತ್ತದೆ. ಬೈಗುಳವೇ ಪ್ರತಿಕ್ರಿಯೆಯಾಗುತ್ತದೆ. ಕೊನೆಗೆ ಯಾವ ಬರಹದ ಮೇಲೆ ಈ ಚರ್ಚೆ ಆರಂಭವಾಗಿತ್ತೋ ಆ ಮೂಲ ಬರಹವೇ ನಗಣ್ಯವಾಗಿ ಇನ್ನಾವುದೋ ವಿಷಯವು ಚರ್ಚೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ಕಲಿಯುವುದಕ್ಕಾಗಿ ಚರ್ಚಿಸುವವರು ತೀರಾ ತೀರಾ ಕಡಿಮೆ. ಎಲ್ಲರೂ ಕಲಿಸುವವರೇ. ಎಲ್ಲರೂ ಸರಿಯೇ.

    ನಿಜವಾಗಿ, ಇನ್ನೊಬ್ಬರೂ ಸರಿಯಾಗಿರಬಹುದು ಅನ್ನುವ ಭಾವಕ್ಕೆ ಜಾಗ ಇರುವಲ್ಲಿ ಮಾತ್ರ ಆರೋಗ್ಯಕರ ಸಂವಾದ ಸಾಧ್ಯ. ಸಾಮಾಜಿಕ ಜಾಲತಾಣಗಳು ಈ ಜಾಗವನ್ನೇ ಬಹುತೇಕ ಇವತ್ತು ಮುಚ್ಚಿಬಿಟ್ಟಿವೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ಅಳೆದು ಚರ್ಚಿಸುವ ಅನಾರೋಗ್ಯಕರ ಸ್ಥಿತಿಗೆ ತಲುಪಿಬಿಟ್ಟಿದೆ. ಇಲ್ಲಿ ಎಲ್ಲರೂ ಫ್ರೆಂಡ್‍ಗಳೇ. ಫೇಸ್‍ಬುಕ್ ಫ್ರೆಂಡ್. ವಾಟ್ಸ್‍ಆ್ಯಪ್  ಗ್ರೂಪ್ ಮೆಂಬರ್, ಟ್ವಿಟರ್ ಫಾಲೋವರ್. ಆದರೆ ಮೌಖಿಕ ಪರಿಚಯ ಹೆಚ್ಚಿನವರಿಗೆ ಇರುವುದೇ ಇಲ್ಲ. ಫೇಸ್‍ಬುಕ್‍ನಲ್ಲಿ ಐದು ಸಾವಿರ ಗೆಳೆಯರನ್ನು ಹೊಂದಿರುವ ವ್ಯಕ್ತಿ, ಇವರಲ್ಲಿ ಮುಖತಃ 50 ಮಂದಿಯನ್ನು ಭೇಟಿಯಾಗಿರುವುದೂ ಇಲ್ಲ. ಗೆಳೆತನದಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಮೌಖಿಕ ಪರಿಚಯ. ಸಾಮಾಜಿಕ ಜಾಲತಾಣಗಳಿಗಿಂತ ಹಿಂದೆ, ಗೆಳೆಯರೆಂದರೆ ಮುಖತಃ ಭೇಟಿಯಾದವರೆಂದೇ ಅರ್ಥ. ಭೇಟಿಯು ಅವರನ್ನು ಗೆಳೆಯರಾಗಿಸುತ್ತದೆ. ವಿಚಾರಗಳ ವಿನಿಮಯಕ್ಕೆ ಅವಕಾಶ ಒದಗಿಸಿಕೊಡುತ್ತದೆ. ದೂರವಾಣಿ ಸಂಖ್ಯೆಗಳ ವಿನಿಮಯ ನಡೆಯುತ್ತದೆ. ಮೊದಲು ಮೌಖಿಕ ಭೇಟಿ. ಆ ಬಳಿಕ ಗೆಳೆತನ. ಹೀಗೆ ಬೆಳೆದ ಗೆಳೆತನದಲ್ಲಿ ಅಪರಿಚಿತತೆ ಇರುವುದಿಲ್ಲ. ಗೆಳೆಯನ ವಿಚಾರದ ಬಗ್ಗೆ ಇನ್ನೊಬ್ಬರಲ್ಲಿ ಮಾತನಾಡುವಾಗ ಗೆಳೆಯನ ಮುಖ ಮತ್ತು ಆತನ ಜೊತೆ ಈ ಹಿಂದೆ ಆದ ಭೇಟಿಯ ನೆನಪುಗಳು ಕಣ್ಣೆದುರು ಬರುತ್ತದೆ. ಆ ಸಂದರ್ಭದಲ್ಲಾದ ಸಂವಾದ ಮತ್ತು ಕ್ರಿಯೆ-ಪ್ರತಿಕ್ರಿಯೆಗಳು ನೆನಪಾಗುತ್ತದೆ. ಇವು ಗೆಳೆಯನ ಬಗ್ಗೆ ಆಡುವ ಮಾತಿನ ಮೇಲೆ ನಿಯಂತ್ರಣವನ್ನು ಹೇರುತ್ತದೆ. ಆದರೆ ಇಂದಿನ ಸ್ಥಿತಿ ಏನೆಂದರೆ,
  
  ಮೊದಲು ಗೆಳೆತನ. ಆ ಬಳಿಕ ಮೌಖಿಕ ಭೇಟಿ. ಅಲ್ಲದೇ, ಈ ಭೇಟಿ ಕೈಗೂಡುವ ಸಾಧ್ಯತೆ ಬಹಳ ಕಡಿಮೆ. ಜಾಲತಾಣಗಳ ಮಿತಿ ಇದು. ಅಲ್ಲಿ ನಡೆಯುವ ಚರ್ಚೆಗಳ ಮಿತಿಯೂ ಹೌದು. ಮುಖತಃ ಭೇಟಿಯ ಮೂಲಕ ಉಂಟಾಗುವ ಗೆಳೆತನಕ್ಕೆ ಹೋಲಿಸಿದರೆ, ಸಾಮಾಜಿಕ ಜಾಲ ತಾಣಗಳ ಮೂಲಕ ಉಂಟಾಗುವ ಗೆಳೆತನಕ್ಕೆ ಅನೇಕ ದೌರ್ಬಲ್ಯಗಳಿವೆ. ಈ ದೌರ್ಬಲ್ಯಗಳ ಫಲಿತಾಂಶವೇ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವುದು. ಅಲ್ಲಿಯ ಭಾಷೆ, ಅಭಿಪ್ರಾಯ ಮಂಡನೆ, ಅಸಹನೆ, ಅಂಧಾಭಿಮಾನ, ಕ್ರೌರ್ಯ ಪ್ರಚೋದನೆ.. ಎಲ್ಲವೂ ಈ ಗೆಳೆತನದ ಪರಿಮಿತಿಯನ್ನು ಹೇಳುತ್ತದೆ. ಮುಖತಃ ಭೇಟಿಯಾಗಿ ಗೆಳೆತನ ಕುದುರಿಸಿಕೊಂಡ ಯಾವ ಗೆಳೆಯನೂ ವೈಚಾರಿಕ ಭಿನ್ನಮತಕ್ಕಾಗಿ ತನ್ನ ಗೆಳೆಯನನ್ನು ಜಾಲತಾಣಗಳ ಭಾಷೆಯಲ್ಲಿ ನಿಂದಿಸಲಾರ. ಬೈಯಲಾರ. ಅಪಹಾಸ್ಯ ಮಾಡಲಾರ. ಗೆಳೆತನ ಕಡಿದುಕೊಳ್ಳಲಾರ. ಅಂದಹಾಗೆ,
  
  ಫೇಸ್‍ಬುಕ್ ಗೆಳೆಯನನ್ನು ಭೇಟಿಯಾದ ಬಳಿಕ ಮನನ ಮಾಡಿಕೊಂಡ ಪಾಠ ಇದು.


ಲಿಂಚಿಂಗ್ ಮೂಲ ಹುಡುಕುತ್ತಾ ಹೋದರೆ ತಲುಪುವುದು ಟಿವಿ ಸ್ಟುಡಿಯೋದೊಳಗೆ!

   
 
        ಗುಂಪು ಹತ್ಯೆ(Mob lynching)ಯ ಮನೋಸ್ಥಿತಿ ಇರುವುದು ಬರೇ ಬೀದಿಯಲ್ಲಿ ಮಾತ್ರವೇ? ಚಪ್ಪಲಿ ಧರಿಸಿದ, ಮಾಸಿದ ಶರ್ಟು, ಪ್ಯಾಂಟು ಅಥವಾ ಟೀ ಶರ್ಟು ಧರಿಸಿದ ಸಾಮಾನ್ಯ ಜನರಿಗೆ ಮಾತ್ರ ಈ ಮನೋಸ್ಥಿತಿಯನ್ನು ಸೀಮಿತಗೊಳಿಸಿ ನೋಡುವುದು ಎಲ್ಲಿಯವರೆಗೆ ಸರಿ? ಈ ಮನೋಸ್ಥಿತಿಯನ್ನು ಉತ್ಪಾದಿಸಿದ ಲ್ಯಾಬ್ ಯಾವುದು? ಅದು ಎಲ್ಲಿದೆ? ನಮ್ಮ ಟಿವಿ ಸ್ಟುಡಿಯೋಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಸುದ್ದಿ-ವಿವರಣೆಗಳ ಸ್ವರೂಪ ಹೇಗಿದೆ? ಅವು ಗುಂಪುಹತ್ಯೆ ಮನಸ್ಥಿತಿಗಿಂತ ಭಿನ್ನವಾಗಿದೆಯೇ? ನಿರೂಪಕನ ದೇಹ ಭಾಷೆ ಮತ್ತು ಚರ್ಚಾಪಟುಗಳ ಆವೇಶದಲ್ಲಿ ನಿಜಕ್ಕೂ ವೀಕ್ಷಕರಿಗೆ ತಲುಪುವ ಸಂದೇಶ ಯಾವ ಬಗೆಯದು? ಕಳೆದ ಐದಾರು ವರ್ಷಗಳಿಂದ ಹೆಚ್ಚಿನ ಟಿವಿ ಚಾನೆಲ್‍ಗಳು ವಾರಕ್ಕೊಮ್ಮೆಯಾದರೂ ಇಸ್ಲಾಮ್, ಮುಸ್ಲಿಮ್ ಅಥವಾ ಪಾಕಿಸ್ತಾನದ ಸುತ್ತ ಚರ್ಚೆಯನ್ನು ಅಯೋಜಿಸುತ್ತಿರುವುದರ ಉದ್ದೇಶ ಏನು? ಇದು ಸಹಜ ಬೆಳವಣಿಗೆಯೇ? ದಿಢೀರ್ ಆಗಿ ಇಂಥದ್ದೊಂದು ಬೆಳವಣಿಗೆ ಹುಟ್ಟಿಕೊಳ್ಳಲು ಕಾರಣವೇನು? ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ ನಡೆಯುವ ಚರ್ಚೆಯನ್ನು ನೀವು ಗಮನಿಸಿದ್ದೀರಾ? ತ್ರಿವಳಿ ತಲಾಕ್, ಬಹು ಪತ್ನಿತ್ವ, ಜಿಹಾದ್, ಜನಸಂಖ್ಯೆ, ಪಾಕಿಸ್ತಾನ, ಗೋಹತ್ಯೆ, ಗೋ ಸಾಗಾಟ, ಭಯೋತ್ಪಾದನೆ, ಮಹಿಳಾ ಸಮಾನತೆ, ನಮಾಝ್, ಅದಾನ್, ಮದ್ರಸ, ಗಡ್ಡ, ಬುರ್ಖಾ, ಸ್ಕಾರ್ಫ್ ಮತ್ತಿತರ ಹಲವು ವಿಷಯಗಳ ಮೇಲೆ ಟಿವಿ ಚಾನೆಲ್ ಗಳು ಹಮ್ಮಿಕೊಳ್ಳುವ ಚರ್ಚೆಯು ಹೇಗಿರು ತ್ತದೆ? ಚರ್ಚಾಪಟುಗಳು ಯಾರಿರುತ್ತಾರೆ? ಚರ್ಚೆ ಗಳಲ್ಲಿ ಭಾಗವಹಿಸುವ 6 ಮಂದಿಯಲ್ಲಿ ಒಬ್ಬ ವೌಲವಿ. ಉಳಿದ 5 ಮಂದಿಯಲ್ಲಿ ನಾಲ್ಕು ಮಂದಿ ಮೌಲವಿಯನ್ನು ವಿರೋಧಿಸುವವರು. ನಿರೂಪಕನೂ ಅವರದೇ ಗುಂಪು. ಉಳಿದ ಓರ್ವ ತಟಸ್ಥ. ಇಂಥ ಸ್ಥಿತಿಯಲ್ಲಿ, ಒಂದೋ ಮೌಲವಿ ಸೋಲಬೇಕು ಅಥವಾ ಅರಚಬೇಕು ಅಥವಾ ತನ್ನ ಮೇಲಾಗುವ ನಿರಂತರ ಶಬ್ದ ಮಾಲಿನ್ಯದಿಂದ ಕುದಿದು ಎದ್ದು ಹೋಗಬೇಕು ಇಲ್ಲವೇ ಇವರ ವಿರುದ್ಧ ಕೈ ಎತ್ತಬೇಕು. ಸದ್ಯ ನಡೆಯುತ್ತಿರುವ ಟಿವಿ ಚರ್ಚೆಗಳ ಸ್ವರೂಪ ಇದು. ಹೀಗಿರುತ್ತಾ, ಗುಂಪು ಹತ್ಯೆಯಲ್ಲಿ ತೊಡಗಿರುವ ಜನಸಮೂಹವನ್ನು ಒಂದು ನಿರ್ವಾತ ಸ್ಥಿತಿಯಲ್ಲಿ ಹುಟ್ಟಿಕೊಂಡ ಅನಾಗರಿಕ ಗುಂಪು ಎಂದು ಅಂದುಕೊಳ್ಳುವುದು ಎಷ್ಟು ಸರಿ? ಈ ಗುಂಪಿನ ಆಕ್ರೋಶದ ಹಿಂದೆ ಕಳೆದ ಐದಾರು ವರ್ಷಗಳಿಂದ ಟಿವಿ ಚಾನೆಲ್‍ಗಳು ಆಯೋಜಿಸುತ್ತಿರುವ ಚರ್ಚೆಗೆ ಪಾತ್ರವಿಲ್ಲವೇ? ಬಿತ್ತರಿಸಿದ ಸುದ್ದಿಯ ಬೆಂಬಲವಿಲ್ಲವೇ? ಮೌಲವಿಯನ್ನು ಸ್ಟುಡಿಯೋ ದೊಳಗೆ ಕೂರಿಸಿ ನಿರೂಪಕನೂ ಸೇರಿದಂತೆ ಎಲ್ಲ ಚರ್ಚಾಪಟುಗಳು ನಿರಂತರ ಮಾತಿನ ಬಾಣ ಎಸೆದು, ಬಾಯಿ ಮುಚ್ಚಿಸಿ ಅಪರಾಧಿಯಂತೆ ಕೊಠಡಿಯಿಂದ ಹೊರ ಕಳುಹಿಸಿದುದರ ಫಲಿತಾಂಶವೇ ಇವತ್ತು ಬೀದಿಯಲ್ಲಿ ಗುಂಪು ಹತ್ಯೆಯ ಮೂಲಕ ವ್ಯಕ್ತವಾಗುತ್ತಿದೆ ಎಂದು ಯಾಕೆ ಹೇಳಬಾರದು? ಟಿವಿ ಎಂಬುದು ಸಾರ್ವಜನಿಕವಾಗಿ ಅಭಿಪ್ರಾಯವನ್ನು ರೂಪಿಸುವ ಕೇಂದ್ರ. ಅಲ್ಲಿ ನಡೆಯುವ ಚರ್ಚೆ, ವರದಿ, ಸುದ್ದಿ ಮತ್ತು ನಿರೂಪಣೆಯ ಧಾಟಿ ವೀಕ್ಷಕರ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಈ ಪರಿಣಾಮವು ಒಬ್ಬರಿಗಿಂತ ಒಬ್ಬರಲ್ಲಿ ಭಿನ್ನವೂ ಆಗಿರುತ್ತದೆ. ಮೌಲವಿ ಅಥವಾ ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ವ್ಯಕ್ತಿಯ ಮೇಲೆ ಉಳಿದ ಚರ್ಚಾಪಟುಗಳೆಲ್ಲ ವಾಗ್ದಾಳಿ ಮಾಡುವುದನ್ನು ಆ ನಾಲ್ವರ ಗೆಲುವಾಗಿಯೇ ಸಾಮಾನ್ಯ ವೀಕ್ಷಕನೊಬ್ಬ ಪರಿಗಣಿಸಬಲ್ಲ. ನಿರೂಪಕನೂ ಕೊನೆಗೆ ಆ ನಾಲ್ವರ ಪರವೇ ಅಭಿಪ್ರಾಯ ಮಂಡಿಸಿ ಚರ್ಚೆಗೆ ವಿರಾಮ ಹಾಕುವಾಗ ಈ ನಂಬಿಕೆಗೆ ಇನ್ನಷ್ಟು ಬಲ ಬರುತ್ತದೆ. ಇದು ನಿರಂತರವಾಗಿ ನಡೆಯ ತೊಡಗಿದಾಗ, ಅದು ಸಮಾಜದಲ್ಲಿ ಒಂದು ಬಗೆಯ ಸ್ಟೀರಿಯೋಟೈಡ್ಡ್ ಅಭಿಪ್ರಾಯವನ್ನು ರೂಪಿಸಿ ಬಿಡುವುದಕ್ಕೆ ಅವಕಾಶ ಇದೆ. ಮುಸ್ಲಿಮರೆಂದರೆ ಹೀಗೆಯೇ; ಅವರು ಅತ್ಯಾಚಾರಿಗಳು, ಗೋ ಕಳ್ಳರು, ನಾಲ್ಕು-ನಾಲ್ಕು ಮದುವೆಯಾಗು ವವರು, ನಿರಂತರವಾಗಿ ಮಕ್ಕಳನ್ನು ಹುಟ್ಟಿಸಿ ಜನಸಂಖ್ಯೆ ಹೆಚ್ಚಿಸುವವರು, ಒಂದೇ ಉಸಿರಿಗೆ ತಲಾಕ್ ಹೇಳಿ ಹೆಣ್ಣನ್ನು ಬೀದಿಗಟ್ಟು ವವರು, ಅವರ ನಿಷ್ಠೆ ಪಾಕಿಸ್ತಾನಕ್ಕೆ, ಪಾಕಿಸ್ತಾನ ಭಾರತದ ಶತ್ರು, ಅವರು ಹಿಂದೂಗಳ ವಿರೋಧಿ, ಅವರ ಕೆಲಸ ಗೋ ಹತ್ಯೆ ಮಾಡುವುದು, ಜನಸಂಖ್ಯೆ ಹೆಚ್ಚಿಸುವ ಮೂಲಕ ಹಿಂದೂಗಳನ್ನು ಅಲ್ಪಸಂಖ್ಯಾತರಾಗಿಸುವ ಷಡ್ಯಂತ್ರ ನಡೆಸುತ್ತಿದ್ದಾರೆ, ಅವರು ಅನ್ಯ, ಅವರ ಧರ್ಮಗ್ರಂಥ ಅನ್ಯ, ಅವರ ಉಡುಪು ಅನ್ಯ... ಹೀಗೆ ಮುಸ್ಲಿಮರ ಬಗ್ಗೆ ಅಸಹ್ಯ ಪಡುವ ವಾತಾವರಣವೊಂದನ್ನು ಅದು ನಿರ್ಮಿಸಿ ಬಿಡಬಲ್ಲದು. ಅಲ್ಲದೇ, ಬಲಪಂಥೀಯ ರಾಜಕಾರಣಿಗಳು ಕಳೆದ ಎರಡು ದಶಕಗಳಲ್ಲಿ ಆಡಿದ ಮಾತುಗಳನ್ನು ಇದರ ಜೊತೆ ಸೇರಿಸಿ ನೋಡಿದರೆ, ಗುಂಪು ಹತ್ಯೆಗೆ ಸ್ಪಷ್ಟವಾದ ಚೌಕಟ್ಟೊಂದು ಲಭ್ಯವಾಗುತ್ತದೆ. ಉದಾಹರಣೆಗೆ,
 
  `ನ್ಯೂಸ್ 24' ಎಂಬ ಹಿಂದಿ ಚಾನೆಲ್ ಜುಲೈ ಎರಡನೇ ವಾರದಲ್ಲಿ 45 ನಿಮಿಷಗಳ ಚರ್ಚೆಯೊಂದನ್ನು ಏರ್ಪಡಿಸಿತ್ತು. `2019ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆದ್ದು ಮೋದಿ ಮತ್ತೆ ಪ್ರಧಾನಿಯಾದರೆ, ಭಾರತವು ಹಿಂದೂ ಪಾಕಿಸ್ತಾನವಾಗಲಿದೆ’ ಎಂಬ ಶಶಿ ತರೂರ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ಚರ್ಚೆಯನ್ನು ಹಮ್ಮಿಕೊಳ್ಳಲಾಗಿತ್ತು. ಚರ್ಚೆಯ ವಿಷಯ: `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ?" ಎಂಬುದು. ಇದರಲ್ಲಿ ಭಾಗವಹಿಸಿದವರು,
1. ಸಂಬಿತ್ ಪಾತ್ರ - ಬಿಜೆಪಿ ವಕ್ತಾರ
2. ಪ್ರೊ. ಕಪಿಲ್ ಕುಮಾರ್ - ಸ್ವತಂತ್ರ ಚರ್ಚಾಪಟು
3. ಪ್ರೇಮ್‍ಚಂದ್ ಮಿಶ್ರ - ಕಾಂಗ್ರೆಸ್ ಪ್ರತಿನಿಧಿ
4. ಶಮ್ಸುಲ್ ಇಸ್ಲಾಮ್ - ದೆಹಲಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೊಫೆಸರ್.
  
 ನೇರ ಪ್ರಸಾರದ ಈ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆಯೇ ಈ ಚರ್ಚಾ ವಿಷಯವನ್ನು ಬದಲಿಸಬೇಕೆಂದು ಪ್ರೊ. ಕಪಿಲ್ ಕುಮಾರ್ ಆಗ್ರಹಿಸಿದರು. ಮುಸ್ಲಿಮರಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ಬಗ್ಗೆ ಚರ್ಚೆ ನಡೆಯಬೇಕು ಎಂದು ದೊಡ್ಡ ದನಿಯಲ್ಲಿ ಒತ್ತಾಯಿಸಿದರು. ನಿಜವಾಗಿ, ಈ ಮೂರೂ ವಿಷಯಗಳು ಇಸ್ಲಾಮಿಗೆ ಅನ್ಯವಾದುದು. ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯನ್ನು? ಈ ಮೂರಕ್ಕೂ ಎಲ್ಲೂ ಆಧಾರವಿಲ್ಲ. ಆದರೆ ಪ್ರೊ. ಕಪಿಲ್ ಕುಮಾರ್ ಅವರ ವಾದ ಮತ್ತು ದೇಹ ಭಾಷೆ ಎಷ್ಟು ಕೆಟ್ಟದಾಗಿತ್ತೆಂದರೆ, ಇಡೀ ಇಸ್ಲಾಮ್ ಈ ಮೂರರಿಂದ  ತುಂಬಿ ಹೋಗಿದೆ ಎಂದೇ ನಂಬುವಂತಿತ್ತು. ಮುಸ್ಲಿಮರೆಲ್ಲ ಈ ಮೂರನ್ನು ಪರಮ ಪವಿತ್ರ ಕಡ್ಡಾಯ ನಿಯಮವಾಗಿ ತಮ್ಮ ಮೇಲೆ ವಿಧಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ರೀತಿಯಲ್ಲಿ ಅವರು ವಾದಿಸುತ್ತಿದ್ದರು. ಅದೇವೇಳೆ, `ಸಂಬಿತ್ ಪಾತ್ರ ಅವರ ಜೊತೆಗೂಡಿದರು. ಹಿಂದೂ ಮತ್ತು ಹಿಂದೂಸ್ತಾನ್ ಎರಡೂ ಸಮಾನಾಂತರ ಪರ್ಯಾಯ ಪದಗಳು' ಎಂದವರು ವಾದಿಸಿದರು. ಅದರ ಮೇಲೆ ಚರ್ಚೆಯ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಮಾತಾಡಿದರು. ಮುಸ್ಲಿಮರಿಂದ ಈ ದೇಶದ ಹಿಂದುಗಳು ಈ ಹಿಂದೆ ಅನುಭವಿಸಿದ ಹಿಂಸೆ-ಅನ್ಯಾಯಗಳತ್ತ ಅವರ ಮಾತು ಹೊರಳಿತು. ತಮಾಷೆ ಏನೆಂದರೆ, ಚರ್ಚೆ ನಡೆಯಬೇಕಾಗಿದ್ದುದು ಶಶಿ ತರೂರ್ ಹೇಳಿಕೆಯ ಮೇಲೆ. ಆದರೆ, ನಡೆಯುತ್ತಿರುವುದು ಇಸ್ಲಾಮ್ ಮತ್ತು ಮುಸ್ಲಿಮರ ಸುತ್ತ. ಪ್ರೊ. ಶಮ್ಸುಲ್ ಇಸ್ಲಾಮ್ ಅವರು ಈ ಬಗ್ಗೆ ತಕರಾರು ಎತ್ತಿದರು. `ಇಲ್ಲೇನು ನಡೆಯುತ್ತಿದೆ' ಎಂದು ನಿರೂಪಕರನ್ನು ಪ್ರಶ್ನಿಸಿದರು. ಆದರೆ ನಿರೂಪಕನಿಂದ ಅವರಿಬ್ಬರ ಮಾತಿನ ಓಘವನ್ನು ತಡೆಯುವ ಪ್ರಬಲ ಪ್ರಯತ್ನವೇನೂ ನಡೆಯಲಿಲ್ಲ. ಮುಸ್ಲಿಮರು ಅದೆಷ್ಟು ಕ್ರೂರಿಗಳು ಅನ್ನುವುದನ್ನು ಪೈಪೋಟಿಯಿಂದ ಅವರಿಬ್ಬರೂ ಹೇಳುತ್ತಲೇ ಇದ್ದರು. ಇದು ಶಮ್ಸುಲ್ ಇಸ್ಲಾಮ್‍ರನ್ನು ಕೆರಳಿಸಿತು. ಭಾರತೀಯ ನಾಗರಿಕತೆಯ 5 ಸಾವಿರದಷ್ಟು ದೀರ್ಘ ಇತಿಹಾಸದಿಂದ ಕೇವಲ ಮುಸ್ಲಿಮ್ ಅಳ್ವಿಕೆಯ ಇತಿಹಾಸವನ್ನಷ್ಟೇ ಆಯ್ಕೆ ಮಾಡಿ ಯಾಕೆ ಚರ್ಚಿಸುತ್ತೀರಿ ಎಂದವರು ಪ್ರಶ್ನಿಸಿದರಲ್ಲದೇ, ಈ ಸೆಲೆಕ್ಟಿವ್ ವಾದವನ್ನು ಖಂಡಿಸಿದರು. ಒಂದು ವೇಳೆ, ಮುಸ್ಲಿಮ್ ರಾಜರ ಅನ್ಯಾಯಕ್ಕೆ ಭಾರತೀಯ ಮುಸ್ಲಿಮರು ಹೊಣೆಗಾರರೆಂದಾದರೆ, ಸೀತಾ ಮಾತೆಯ ಅಪಹರಣಕ್ಕೆ ಮತ್ತು ದ್ರೌಪದಿಯ ಮಾನಹರಣಕ್ಕೆ ಯಾರನ್ನು ಕಟಕಟೆಯಲ್ಲಿ ನಿಲ್ಲಿಸುತ್ತೀರಿ ಎಂದು ಪ್ರಶ್ನಿಸಿದರು. ಭಾರತದ ದೀರ್ಘ ಇತಿಹಾಸದಲ್ಲಿ ನಡೆದಿರುವ ಹಿಂಸೆ, ಅನ್ಯಾಯ, ಅತ್ಯಾಚಾರ, ಹತ್ಯೆ, ಲೂಟಿ, ಕ್ರೌರ್ಯಗಳಾವುದನ್ನೂ ಪ್ರಸ್ತಾಪಿಸದೆ ಮತ್ತು ಅದರ ಹೊಣೆಯನ್ನು ಯಾರ ಮೇಲೂ ಹೊರಿಸದೆ  ಬರೇ ಮುಸ್ಲಿಮ್ ಆಳ್ವಿಕೆಯನ್ನು ಮಾತ್ರ ಪ್ರಸ್ತಾಪಿಸಿ ಇಂದಿನ ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವ ಪ್ರಯತ್ನ ತಪ್ಪು ಎಂದು ವಾದಿಸಿದರು. ಇದರಿಂದಾಗಿ ಪ್ರೊ. ಕಪಿಲ್ ಕುಮಾರ್ ಮತ್ತು ಸಂಬಿತ್ ಪಾತ್ರ ಅವರ ಧ್ವನಿಯ ಮಟ್ಟ ಏರಿತು. ಆವೇಶ ಹೆಚ್ಚಾಯಿತು. ಪ್ರೊ. ಶಮ್ಸುಲ್ ಇಸ್ಲಾಮ್‍ರನ್ನು ಅತ್ಯಾಚಾರಿ, ಐಸಿಸ್ ಏಜೆಂಟ್, ಪಾಕಿಸ್ತಾನಿ ಬೆಂಬಲಿಗ ಮತ್ತು ಕಾಂಗ್ರೆಸಿಗ ಎಂದು ಜರೆದರು. ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು 5 ಮದುವೆಯ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರಿಂದ ಪ್ರತಿಕ್ರಿಯೆಯನ್ನು ಪಡೆಯದ ಹೊರತು ತಾನು ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪ್ರೊ. ಕಪಿಲ್ ಕುಮಾರ್ ನಿರೂಪಕನಿಗೆ ಬೆದರಿಕೆ ಹಾಕಿ ದರು. ಚರ್ಚೆ ಮುಂದುವರಿಯಿತು. ಕಪಿಲ್ ಕುಮಾರ್ ಮೌನವಾಗಿಯೇ ಇದ್ದರು. ಕೊನೆಗೆ ಚರ್ಚೆಯನ್ನು ಮುಗಿಸುವ ಹಂತಕ್ಕೆ ಬರುವಾಗ, ನಿರೂಪಕ ಇಡೀ ಚರ್ಚೆಯ ಉದ್ದೇಶವನ್ನೇ ಪ್ರಶ್ನಿಸುವ ರೀತಿಯಲ್ಲಿ ವರ್ತಿಸಿದರು. ಚರ್ಚೆಯನ್ನು ಮುಗಿಸಬೇಕಾದುದು `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ರಾಷ್ಟ್ರವೋ’ ಎಂಬುದರ ಮೇಲೆ. ಆದರೆ, ಆತ ನಿಕಾಹ್ ಹಲಾಲ, ತಿವ್ರಳಿ ತಲಾಕ್‍ಗಳ ವಿಷಯದಲ್ಲಿ ಶಮ್ಸುಲ್ ಇಸ್ಲಾಮ್‍ರನ್ನು ಉದ್ದೇಶಿಸಿ ಹೀಗೆ ಪ್ರಶ್ನಿಸಿದರು-

   `ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ಮುಸ್ಲಿಮರು ಯಾಕೆ ನಿರಾಕರಿಸುತ್ತಾರೆ? ಮುಸ್ಲಿಮರು ತ್ರಿವಳಿ ತಲಾಕ್, ನಿಕಾಹ್ ಹಲಾಲ ಮತ್ತು ಬಹುಪತ್ನಿತ್ವವನ್ನು ಒಪ್ಪುವುದು ಮತ್ತು ಒಂದೇ ದೇಶ ಮತ್ತು ಒಂದೇ ಕಾನೂನನ್ನು ತಿರಸ್ಕರಿಸುವುದು ಯಾಕೆ? ಶಮ್ಸುಲ್ ಇಸ್ಲಾಮ್ ಅವರೆ, ಈ ವಿಷಯದಲ್ಲಿ ನಿಮ್ಮಿಂದ ಉತ್ತರ ಪಡೆಯು ವೆನೆಂದು ನಾನು ಕಪಿಲ್ ಕುಮಾರ್ ಗೆ ಮಾತು ಕೊಟ್ಟಿರುವೆ. ಪ್ರತಿಕ್ರಿಯೆ ವ್ಯಕ್ತಪಡಿಸಿ’ ಎಂದರು.

    ಶಮ್ಸುಲ್ ಇಸ್ಲಾಮ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರೇನೂ ಅದರ ಬೆಂಬಲಿಗರಾಗಿರಲಿಲ್ಲ. ಭಾರತೀಯ ಸಂವಿಧಾನಕ್ಕೆ ಭಾರತೀಯ ಮುಸ್ಲಿಮರು ಬದ್ಧರಾಗಿರುತ್ತಾರೆ ಎಂದರು. ತಕ್ಷಣ ನಿರೂಪಕ ಹೇಳಿದ:
‘ಕಪಿಲ್ ಸರ್, ನೀವು ಖುಷಿ ಪಡಲೇಬೇಕು. ನಾನು ಶಮ್ಸುಲ್ ಇಸ್ಲಾಮ್‍ರಿಂದ ನಿಮ್ಮ ಪ್ರಶ್ನೆಗೆ ಉತ್ತರವನ್ನು ಪಡೆದಿದ್ದೇನೆ.’
ಹೀಗೆ, `ಯಾವುದು ಅಗತ್ಯ: ಹಿಂದೂ ರಾಷ್ಟ್ರವೋ ಸೆಕ್ಯುಲರ್ ಭಾರತವೋ' ಎಂಬ ಚರ್ಚೆ ಮುಕ್ತಾಯಗೊಂಡಿತು ಎಂದು A TV debate with hindu nation with a muslim name ಎಂಬ ಲೇಖನದಲ್ಲಿ ಶಮ್ಸುಲ್ ಇಸ್ಲಾಮ್ ಇತ್ತೀಚೆಗೆ ಬರೆದುಕೊಂಡಿದ್ದರು.
  
 ಅಂದಹಾಗೆ, ಚರ್ಚೆ ಮುಗಿಯಬೇಕಾದ ರೀತಿಯೇ ಇದು? ಯಾವ ವಿಷಯದ ಮೇಲೆ ಚೆರ್ಚ ನಡೆಯಬೇಕೆಂದು ತೀರ್ಮಾನಿಸ ಬೇಕಾದುದು ಟಿವಿ ಸಂಸ್ಥೆಗಳು. ಒಮ್ಮೆ ಈ ವಿಷಯ ನಿರ್ಧಾರವಾದ ಮೇಲೆ ಚರ್ಚಾಪಟುವೊಬ್ಬ ಬಂದು ಅದನ್ನು ಬದಲಿಸುವುದಕ್ಕೆ ಅವಕಾಶವೇ ಇಲ್ಲ. ಅತಿಥಿಗಳನ್ನು ಚರ್ಚೆಗೆ ಆಹ್ವಾನಿಸುವಾಗ ಅವರಲ್ಲಿ ಚರ್ಚಾ ವಿಷಯವನ್ನು ಹೇಳಲಾಗುತ್ತದೆ. ಆತ ಆ ವಿಷಯದ ಮೇಲೆ ಚರ್ಚಿಸುವುದಕ್ಕಾಗಿಯೇ ಸಿದ್ಧತೆಯೊಂದಿಗೆ ಬರುತ್ತಾನೆ. ಇದು ನಿರೂಪಕನಿಗೂ ಗೊತ್ತಿದೆ. ಚರ್ಚೆಯಲ್ಲಿ ಭಾಗವಹಿಸುವವರಿಗೂ ಗೊತ್ತಿದೆ. ಹೀಗಿದ್ದೂ, ಕಪಿಲ್ ಕುಮಾರ್‍ ರ  ಬೇಡಿಕೆಯನ್ನು ನಿರೂಪಕ ಒಪ್ಪಿಕೊಂಡದ್ದು ಹೇಗೆ ಮತ್ತು ಯಾಕೆ? ನಿಗದಿತ ವಿಷಯದ ಮೇಲೆ ಚರ್ಚೆಯನ್ನು ಹಿಡಿದು ನಿಲ್ಲಿಸದೆ ಮತ್ತು ಅದರ ಮೇಲೆಯೇ ಚರ್ಚೆಯನ್ನು ಕೊನೆಗೊಳಿಸದೆ ಕಪಿಲ್ ಕುಮಾರ್ ರನ್ನು ತೃಪ್ತಿಪಡಿಸುವ ಪ್ರಯತ್ನ ನಡೆದದ್ದು ಹೇಗೆ? ಈ ಬಗೆಯ ಬೆಳ ವಣಿಗೆಗಳು ವೀಕ್ಷಕರಲ್ಲಿ ಯಾವ ಅಭಿಪ್ರಾಯವನ್ನು ಹುಟ್ಟು ಹಾಕಿಯಾವು! ಈ ದೇಶದ ಅತೀ ದೊಡ್ಡ ಸಮಸ್ಯೆ ಎಂದರೆ, ಅದು ತ್ರಿವಳಿ ತಲಾಕ್, ನಿಕಾಹ್ ಹಲಾಲ, ಬಹುಪತ್ನಿತ್ವ ಎಂದು ಅವರು ಅಂದುಕೊಳ್ಳಲಾರರೇ? ಹಾಗಂತ ಇದು, ಒಂಟಿ ಪ್ರಕರಣ ಅಲ್ಲ. ಚರ್ಚೆ ಯಾವ ವಿಷಯದ ಮೇಲೆಯೇ ನಡೆಯಲಿ, ಮುಸ್ಲಿಮ್ ಪ್ರತಿನಿಧಿ ಬಾಯಿ ತೆರೆದ ಕೂಡಲೇ ಭಯೋತ್ಪಾದನೆ, ಪಾಕಿಸ್ತಾನ, ಬಹುಪತ್ನಿತ್ವ ಇತ್ಯಾದಿ ವಿಷಯಗಳನ್ನು ಎತ್ತಿ ಬಾಯಿ ಮುಚ್ಚಿಸುವ ಶ್ರಮ ಬಹುತೇಕ ಟಿವಿ ಚರ್ಚೆಗಳಲ್ಲಿ ನಡೆಯುತ್ತಿದೆ. ಮಾತ್ರವಲ್ಲ, ಈ ಎಲ್ಲ ಸಂದರ್ಭಗಳಲ್ಲಿ ನಿರೂಪಕನ ಮುಖದಲ್ಲಿ ಮಂದಹಾಸ ಇರುತ್ತದೆ. ನಿಜವಾಗಿ ಇದುವೇ ಲಿಂಚಿಂಗ್. ಲಕ್ಷಣವಾಗಿ ನಗಲೂ, ಮಾತಾಡಲೂ ಬರುವ ಮತ್ತು ಸೂಟು-ಬೂಟು ಧರಿಸಿರುವ ಮಂದಿ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಹೀಗೆ ಗುಂಪು ದಾಳಿ ನಡೆಸುವುದನ್ನೇ ಬೀದಿಯಲ್ಲಿರುವ ಮಂದಿ ತುಸು ಕ್ರೂರವಾಗಿ ನಡೆಸುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರಲ್ಲೂ ಮಂದಹಾಸವೇ ಇರುತ್ತದೆ. ಅಂದಹಾಗೆ,
  
  ಝೀ ಹಿಂದೂಸ್ತಾನ್ ಎಂಬ ಟಿವಿ ಚಾನೆಲ್ ಇತ್ತೀಚೆಗೆ ಏರ್ಪಡಿಸಿದ ಚರ್ಚೆಯಲ್ಲಿ ನ್ಯಾಯವಾದಿ ಫರಾ ಫೈಝ್ ಮತ್ತು ಮುಫ್ತಿ ಏಜಾಝ್ ಅರ್ಶದ್ ಖಾಸ್ಮಿ ಎಂಬಿಬ್ಬರು ಪರಸ್ಪರ ಬಾರಿಸಿಕೊಂಡದ್ದನ್ನು ನೀವು ನೋಡಿರಬಹುದು. ಇದು ಸ್ಯಾಂಪಲ್. ಮುಂದೊಂದು ದಿನ ಟಿವಿ ಸ್ಟುಡಿಯೋದಲ್ಲೇ ಗುಂಪು ಹತ್ಯೆಯೂ ನಡೆದೀತು.

ಅದು ಡೈನೋಸಾರ್ ಅಲ್ಲ, ಉಗುರು-ಹಲ್ಲಿಲ್ಲದ ಸಾಧು ಪ್ರಾಣಿ



ಪ್ರಕರಣ ಒಂದು:

ಉತ್ತರ ಪ್ರದೇಶದ ಸಹರಾಣ್‍ಪುರ ನಿವಾಸಿಯಾಗಿದ್ದ ರೆಹೆನುಮಾ ಎಂಬ 30ರ ಹರೆಯದ ಮುಸ್ಲಿಮ್ ಮಹಿಳೆಯು ಪತಿಯಿಂದ ವಿಚ್ಛೇದನವನ್ನು ಕೋರಿ ಕುಟುಂಬ ನ್ಯಾಯಾಲಯದ ಮೊರೆ ಹೋದರು. ಆಕೆ ಗುರ್‍ಗಾಂವ್‍ನಲ್ಲಿ ವೃತ್ತಿಯಲ್ಲಿದ್ದರು. ಅಲ್ಲಿ ಒಬ್ಬರನ್ನು ಪ್ರೀತಿಸುತ್ತಲೂ ಇದ್ದರು. ವಿಚ್ಛೇದನ ಪಡೆಯದೇ ಆತನನ್ನು ಮದುವೆಯಾಗುವಂತಿಲ್ಲ. ಆ ಕಾರಣದಿಂದಾಗಿ ಮದುವೆಯನ್ನು ಮುಂದೂಡುತ್ತಲೇ ಹೋಗಬೇಕಾಯಿತು. ಎರಡು ವರ್ಷ ಕಾದರೂ ಕುಟುಂಬ ನ್ಯಾಯಾಲಯದಲ್ಲಿ ದೂರು ಇತ್ಯರ್ಥವಾಗುವ ಯಾವ ಸೂಚನೆಯೂ ಕಾಣಿಸಲಿಲ್ಲ. ಆಕೆ ಸಹರಾಣ್‍ಪುರದ ದಾರುಲ್ ಕಝಾದ (ಶರಿಯತ್‍ನ ಆಧಾರದಲ್ಲಿ ವಿವಾದ ಇತ್ಯರ್ಥಪಡಿಸುವ ಸಂಸ್ಥೆ) ಬಾಗಿಲು ತಟ್ಟಿದರು. ತ್ವರಿತಗತಿಯಲ್ಲಿ ಆಕೆ ವಿಚ್ಛೇದನವನ್ನೂ ಪಡೆದುಕೊಂಡರು.
ಪ್ರಕರಣ ಎರಡು:

ಉತ್ತರ ಪ್ರದೇಶದ ಬದುವಾನ್‍ನಲ್ಲಿ ಒಂದು ದಾರುಲ್ ಕಝಾ ಇದೆ. ಅದರ ಮುಖ್ಯಸ್ಥರು 80ರ ಹರೆಯದ ಅಬ್ದುಲ್ ಹಮೀದ್ ಮುಹಮ್ಮದ್ ಸಲೀಮುಲ್ ಕಾದ್ರಿ ಎಂಬವರು. ಮುಸ್ಲಿಮ್ ಮಹಿಳೆ ಮತ್ತು ಪುರುಷರು ಸಾಮಾನ್ಯವಾಗಿ ಇಲ್ಲಿ ದೂರು ಸಲ್ಲಿಸುವುದು ವಾಡಿಕೆ. ಒಮ್ಮೆ ಹಿಂದೂ ವ್ಯಾಪಾರಿಯೋರ್ವರು ಈ ದಾರುಲ್ ಕಝಾಗೆ ದೂರು ಕೊಟ್ಟರು. ಮುಸ್ಲಿಮರೆಂದು ಶಂಕಿಸಲಾದ ವ್ಯಕ್ತಿಗಳು ತನ್ನ ವ್ಯಾಪಾರ ಮಳಿಗೆಯನ್ನು ಸುಟ್ಟು ಹಾಕಿz್ದÁರೆ ಎಂದು ಆರೋಪಿಸಿ ದರು. ಈ ಪ್ರಕರಣವು ಆ ಪ್ರದೇಶದಲ್ಲಿ ಉದ್ವಿಘ್ನ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿತ್ತು. ಸಂಭಾವ್ಯ ಕೋಮುಗಲಭೆಯ ಆತಂಕವೂ ಎದುರಾಗಿತ್ತು. ಕಾಝಿಯವರು ಮುಸ್ಲಿಮ್ ಸಮು ದಾಯದ ಪರವಾಗಿ ಪರಿಹಾರದ ಕೊಡುಗೆಯನ್ನು ನೀಡಿದರು ಮತ್ತು ಕ್ಷಮಿಸುವಂತೆ ಕೋರಿಕೊಂಡರು. ಆ ಹಿಂದೂ ವ್ಯಾಪಾರಿ ಭಾವುಕರಾದರು. ಮಾತ್ರವಲ್ಲ, ಪರಿಹಾರ ಪಡೆದುಕೊಳ್ಳದೇ ಹಿಂತಿರುಗಿದರು. ಕಾಝಿಯವರ ಆ ತೀರ್ಪು ಆ ಪ್ರದೇಶದ ಉದ್ವಿಘ್ನತೆಯ ಶಮನದಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿತು.
‘ಭಾರತದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ದಾರುಲ್ ಕಝಾ ವನ್ನು ಸ್ಥಾಪಿಸಲಾಗುತ್ತದೆ’ ಎಂದು ಮೊನ್ನೆ ಜುಲೈ 15ರಂದು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಘೋಷಿಸಿದ ಬಳಿಕ ಉಂಟಾದ ವಾದ-ವಿವಾದ, ಆರೋಪ, ನಿಂದನೆ, ವದಂತಿಗಳ ಹಿನ್ನೆಲೆಯಲ್ಲಿ ಈ ಮೇಲಿನ ಎರಡು ಘಟನೆಗಳನ್ನು ಇಲ್ಲಿ ಉಲ್ಲೇಖಿಸಿದ್ದೇನೆ. ಈ ಎರಡೂ ಪ್ರಕರಣಗಳು ಅಧಿಕೃತವಾದವು ಮತ್ತು ಸ್ಕ್ರಾಲ್ ಡಾಟ್ ಇನ್ ಎಂಬ ಆನ್‍ಲೈನ್ ಮಾಧ್ಯಮದಲ್ಲಿ ಪ್ರಕಟವಾದವು. ದಾರುಲ್ ಕಝಾ ಸ್ಥಾಪನೆಯ ಕುರಿತು ಪರ್ಸನಲ್ ಲಾ ಬೋರ್ಡ್ ಹೇಳಿಕೆ ನೀಡಿದ್ದೇ  ತಡ, ಬಿಜೆಪಿಯು ಅದನ್ನು ಬಲವಾಗಿ ಖಂಡಿಸಿತು. ಭಾರತವನ್ನು ಇಸ್ಲಾಮಿಕ್ ರಿಪಬ್ಲಿಕ್ ಆಗಲು ಬಿಡೆವು ಎಂದು ಆಕ್ರೋಶಿಸಿತು. ಭಾರತೀಯ ನ್ಯಾಯಾಂಗಕ್ಕೆ ಸಡ್ಡು ಹೊಡೆಯುವ ‘ಸಮಾನಾಂತರ ನ್ಯಾಯಾಂಗವಾಗಿ’ ದಾರುಲ್ ಕಝಾವನ್ನು ಅದು ವ್ಯಾಖ್ಯಾನಿಸಿತು. ಭಾರತದ ಸಂವಿಧಾನದಲ್ಲಿ ಇದಕ್ಕೆ ಅವಕಾಶವೇ ಇಲ್ಲ ಎಂದೂ ವಾದಿಸಿತು. ಮುಖ್ಯವಾಹಿನಿಯ ಟಿವಿಗಳಲ್ಲಂತೂ ಅತ್ಯಂತ ಏಕಮುಖ ವಾದ ಮತ್ತು ಏಕಪಕ್ಷೀಯವಾದ ಚರ್ಚೆಗಳು ನಡೆದುವು. ಐಸಿಸ್, ಬೋಕೋ ಹರಾಮ್, ತಾಲಿಬಾನ್ ಇತ್ಯಾದಿ ಇತ್ಯಾದಿಗಳು ನಡೆಸಿವೆಯೆಂದು ಹೇಳಲಾಗುತ್ತಿರುವ ಸರ್ವ ಕ್ರೌರ್ಯಗಳನ್ನೂ ಶರೀಅತ್‍ನ ಮೇಲೆ ಹೊರಿಸಿ ಭಾರತದಲ್ಲೂ ಇದನ್ನು ಜಾರಿ ಮಾಡಲು ಹೊರಟಿದ್ದೀರಾ ಎಂಬಂತಹ ಮೂರ್ಖತನದ ಪ್ರಶ್ನೆ ಗಳನ್ನೂ ಎತ್ತಲಾಯಿತು. ಇದರ ನಡುವೆ ಫೇಸ್‍ಬುಕ್, ಟ್ವಿಟರ್, ವಾಟ್ಸಾಪ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಂತೂ ಭರಪೂರ ವದಂತಿಗಳು ಹರಡಿದುವು. ಅದರಲ್ಲಿ ಒಂದು ಹೀಗಿದೆ:

‘ಹಮೇ ಶರಿಯಾ ಅದಾಲತ್ ನಹೀಂ ದಿಯಾ ಜಾ ಸಕ್ತಾ ತೊ ಮುಸಲ್ಮಾನೋಂಕೆಲಿಯೆ ಅಲಗ್ ದೇಶ್ ದಿಯಾ ಜಾಯೆ’
ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯರಾದ ಮೌಲಾನಾ ಖಲೀಲುರ್ರಹ್ಮಾನ್ ಸಜ್ಜಾದ್ ನೂಮಾನಿ, ಖಾಲಿದ್ ಸೈಫುಲ್ಲಾ ರಹ್ಮಾನಿ ಮತ್ತು ಮೌಲಾನಾ ಉವೈಸ್ ಮಹ್‍ಫೂಝ ರಹ್ಮಾನಿ...  ಈ ಮೂವರೂ ಜೊತೆಗಿರುವ ಮತ್ತು ಅದರಲ್ಲಿ ಓರ್ವರು ಮೈಕ್ ಹಿಡಿದಿರುವ ಫೋಟೋ. ಅದರ ಕೆಳಗಡೆ ‘ಪರ್ಸನಲ್ ಲಾ ಬೋರ್ಡ್ ಮತ್ತೊಮ್ಮೆ ದೇಶ ವಿಭಜನೆಗೆ ಕರೆ ಕೊಟ್ಟಿದೆ’ ಎಂಬ ಈ ಮೇಲಿನ ಹಿಂದಿ ಶೀರ್ಷಿಕೆಯ ಒಕ್ಕಣೆ. ಬಲಪಂಥೀಯ ಫೇಸ್‍ಬುಕ್ ಬಳಕೆದಾರನೋರ್ವನ ಪುಟದಲ್ಲಿ ಕಾಣಿಸಿಕೊಂಡ ಈ ಪೋಸ್ಟನ್ನು ಒಂದೇ ದಿನದಲ್ಲಿ 7 ಸಾವಿರ ಮಂದಿ ಹಂಚಿಕೊಂಡ(ಶೇರ್)ರು. 800ಕ್ಕಿಂತಲೂ ಅಧಿಕ ಪ್ರತಿಕ್ರಿಯೆಗಳು ಲಭಿಸಿದುವು. ಅಂತರ್ಜಾಲದಲ್ಲಿ ಸಂಚಲನವನ್ನು ಸೃಷ್ಟಿಸಿದ ಈ ಪೋಸ್ಟ್ ನ ಬಗ್ಗೆ ಇಂಡಿಯಾ ಟುಡೇ ಗ್ರೂಪ್‍ನ ವೈರಲ್ ಟೆಸ್ಟ್ ತಂಡವು ಸತ್ಯಶೋಧನೆಗೆ ಇಳಿಯಿತು. ನಿಜವಾಗಿ ಅಂಥದ್ದೊಂದು ಹೇಳಿಕೆಯನ್ನು ಪರ್ಸನಲ್ ಲಾ ಬೋರ್ಡ್‍ನ ಯಾವ ಸದಸ್ಯರೂ ಕೊಟ್ಟಿರಲೇ ಇಲ್ಲ. ಆ ಫೋಟೋಗೂ ಆ ಹೇಳಿಕೆಗೂ ಸಂಬಂಧವೇ ಇರಲಿಲ್ಲ. ಯಾವುದೋ ಸಂದರ್ಭದ ಫೋಟೋಗೆ ತಮ್ಮದೇ ಬರಹವನ್ನು ಜೋಡಿಸಿ ಪರ್ಸನಲ್ ಲಾ ಬೋರ್ಡ್‍ನ ತೇಜೋವಧೆಗೆ ಪ್ರಯತ್ನಿಸಲಾಗಿತ್ತು. ಅಷ್ಟಕ್ಕೂ,
    
ದಾರುಲ್ ಕಝಾ ಅಥವಾ ಶರಿಯಾ ಕೋರ್ಟ್‍ಗಳ ಕುರಿ ತಂತೆ ಈ ದೇಶದಲ್ಲಿ ಕೆಲವು ಸುಳ್ಳುಗಳು ಚಾಲ್ತಿಯಲ್ಲಿವೆ. ಈ ಸುಳ್ಳುಗಳಲ್ಲಿ ಕೆಲವನ್ನು ಉದ್ದೇಶಪೂರ್ವಕವಾಗಿಯೇ ಚಾಲ್ತಿಗೆ ತರಲಾಗಿದ್ದರೆ ಇನ್ನೂ ಹಲವು ಸುಳ್ಳುಗಳು ದೈನಂದಿನ ಬೆಳವಣಿಗೆಗಳ ಕಾರಣದಿಂದಾಗಿ ಜನ್ಮ ತಳೆದವುಗಳಾಗಿವೆ. ಮತ್ತೊಂದಿಷ್ಟು ಸುಳ್ಳುಗಳಿಗೆ ಮುಸ್ಲಿಮರೇ ಕಾರಣಕರ್ತರಾಗಿದ್ದಾರೆ. ಚಪಾತಿ ಕರಟಿದ್ದಕ್ಕೆ ತಲಾಕ್, ವಾಟ್ಸಾಪ್‍ನಲ್ಲಿ ತಲಾಕ್, ಅಂಚೆ ಪತ್ರದ ಮೂಲಕ ತಲಾಕ್, ಅತ್ಯಾಚಾರಗೈದ ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ನಿರ್ದೇಶನ, ಕೈ ಕಡಿಯುವುದು, ಕಲ್ಲೆಸೆದು ಕೊಲ್ಲುವುದು, ಹೆಣ್ಮಕ್ಕಳನ್ನು ಗುಲಾಮರಂತೆ ಬಳಸಿಕೊಳ್ಳುವುದು ಇತ್ಯಾದಿ ಇತ್ಯಾದಿ ತರಹೇವಾರಿ ಸುದ್ದಿಗಳು ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗುವುದು ಮತ್ತು ಹೀಗಾಗುವುದಕ್ಕೆ ಶರೀಅತ್ತೇ ಕಾರಣ ಎಂಬ ಭಾವದಲ್ಲಿ ಮಾಧ್ಯಮಗಳು ಸುದ್ದಿಗಳನ್ನು ಹೆಣೆಯುವುದು ಭಾರತೀಯ ಸಮಾಜದ ಮೇಲೆ ಇವತ್ತು ಬಹುದೊಡ್ಡ ಅಡ್ಡ ಪರಿಣಾಮವನ್ನು ಬೀರಿದೆ. ಇಂಥ ಸುದ್ದಿಗಳನ್ನು ಜನರು ಬರೇ ಸುದ್ದಿಗಳಾಗಿಯಷ್ಟೇ ಪರಿಗಣಿಸುವುದಿಲ್ಲ. ಅದು ಸಮುದಾಯವನ್ನು ಅಳೆಯುವ ಮಾಪನವೂ ಆಗುತ್ತದೆ. ಇಂಥ ಸುದ್ದಿಗಳನ್ನು ಎದುರಿಟ್ಟುಕೊಂಡು ಜನರು ಮುಸ್ಲಿಮರನ್ನು ಮತ್ತು ಶರೀಅತನ್ನು ಅಂದಾಜಿಸತೊಡಗುತ್ತಾರೆ. ಅತ್ಯಂತ ಕಠೋರವಾದ, ಸಾಮಾನ್ಯ ಬುದ್ಧಿಮತ್ತೆಗೆ ನಿಲುಕದ ಮತ್ತು ಪುರಾತನವಾದ ಕಾನೂನೊಂದು ಮುಸ್ಲಿಮರ ನಡುವೆ ಚಾಲ್ತಿಯಲ್ಲಿದೆ ಮತ್ತು ಅದನ್ನು ಶರೀಅತ್ ಅನ್ನುತ್ತಾರೆ ಎಂಬ ನಂಬಿಕೆಯೊಂದನ್ನು ಸಾಮಾನ್ಯ ಜನರಲ್ಲಿ ಬಿತ್ತಲು ಇಂಥ ಸುದ್ದಿ ಗಳು ಯಶಸ್ವಿಯಾಗುತ್ತವೆ. ನಿಜವಾಗಿ, ದಾರುಲ್ ಕಝಾಗಳೆಂಬುದು ಕ್ರೂರವೂ ಅಲ್ಲ, ಭಾರತೀಯ ನ್ಯಾಯಾಲಯಗಳಿಗೆ ಸಮಾನಾಂತರ ವಾದ ನ್ಯಾಯಾಲಯವೂ ಇಲ್ಲ. ಹಲ್ಲು-ಉಗುರುಗಳಿಲ್ಲದ ಪರಮ ಸಾಧು ಪ್ರಾಣಿಗಿಂತ ಹೆಚ್ಚಿನ ಯಾವ ಸಾಮರ್ಥ್ಯವೂ ಇದಕ್ಕಿಲ್ಲ. ಅಲ್ಲದೇ ಚಪಾತಿ ಕರಟಿದ್ದಕ್ಕಾಗಿ ವಿಚ್ಛೇದನ, ಮಾವನನ್ನೇ ಮದುವೆಯಾಗುವಂತೆ ಸೊಸೆಗೆ ಹೇಳಲಾದ ಪ್ರಕರಣ, ಅಂಚೆಯಲ್ಲಿ ತಲಾಕ್ ಇತ್ಯಾದಿಗಳೆಲ್ಲ ದಾರುಲ್ ಕಝಾದ ನಿರ್ಣಯಗಳೂ ಅಲ್ಲ. ಅವುಗಳಿಗೂ ಶರೀಅತ್‍ಗೂ ಸಂಬಂಧವೂ ಇಲ್ಲ. ದುರಂತ ಏನೆಂದರೆ, ಮಾಧ್ಯಮ ರಂಗದಲ್ಲಿರುವ 98%ಕ್ಕಿಂತಲೂ ಅಧಿಕ ಮಂದಿಗೆ ಶರೀಅತ್ ಎಂಬ ನಾಲ್ಕಕ್ಷರದ ಪರಿ ಚಯವಿದೆಯೇ ಹೊರತು ಅದರ ಕಾರ್ಯ ವಿಧಾನದ ಬಗ್ಗೆ ಏನೇನೂ ಗೊತ್ತಿಲ್ಲ. ಗೊತ್ತಿರುವುದೆಲ್ಲವೂ ವದಂತಿಗಳು, ಭ್ರಮೆಗಳು ಮತ್ತು ಅಲ್ಲಿ-ಇಲ್ಲಿಂದ ಓದಿಕೊಂಡ ಸುದ್ದಿಗಳ ಮೇಲೆ ಕಟ್ಟಿಕೊಂಡ ಅಭಿಪ್ರಾಯಗಳು ಮಾತ್ರ. ಇವರೇ ಮಾಧ್ಯಮವನ್ನು ಆಳುತ್ತಾರೆ. ಸುದ್ದಿಗಳನ್ನು ತಯಾರಿಸು ತ್ತಾರೆ. ಅಂಕಣಗಳನ್ನು ಬರೆಯುತ್ತಾರೆ. ಚರ್ಚೆಗಳನ್ನು ನಡೆಸಿ ಕೊಡು ತ್ತಾರೆ. ಅಂದಹಾಗೆ,
   
ವಿವಾಹ, ವಿಚ್ಛೇದನ, ವಾರೀಸು ಸೊತ್ತು, ದತ್ತು ಸ್ವೀಕಾರ ಇತ್ಯಾದಿಗಳನ್ನು ಧಾರ್ಮಿಕ ವಿಧಿಯಂತೆ ಪರಿಹರಿಸಿಕೊಳ್ಳುವ ಅವಕಾಶ ಈ ದೇಶದಲ್ಲಿ ಮುಸ್ಲಿಮರಿಗೆ ಮಾತ್ರ ಇರುವುದಲ್ಲ. 1957ರಲ್ಲಿ ರಚನೆಯಾದ The Muslim Personal Law (Shariat) Application Act ಮುಸ್ಲಿಮರಿಗೆ ಈ ಅವಕಾಶವನ್ನು ನೀಡಿದ್ದರೆ 1936ರಲ್ಲಿThe Parsi Marriage and divorce Act ನ ಮೂಲಕ ಪಾರ್ಸಿ ಸಮುದಾಯಕ್ಕೂ ಈ ಅವಕಾಶ ಲಭ್ಯ ವಾಗಿತ್ತು. 1955ರಲ್ಲಿ The Hindu Marriage Act ನ ಮೂಲಕ ಹಿಂದೂ ಸಮುದಾಯಕ್ಕೂ ಈ ಅವಕಾಶವನ್ನು ನೀಡಲಾಯಿತು. 1956ರಲ್ಲಿ ರಚಿಸಲಾದHindu Succession Act ನ ಮೂಲಕ ಹಿಂದೂ, ಸಿಕ್ಖ್, ಬೌದ್ಧ ಮತ್ತು ಜೈನ ಸಮುದಾಯಗಳೂ ತಮ್ಮೊಳಗಿನ ಆಸ್ತಿ ಮತ್ತು ವಾರೀಸು ಸೊತ್ತುಗಳ ವಿತರಣೆಯನ್ನು ಧಾರ್ಮಿಕ ವಿಧಿಯನ್ವಯ ಮಾಡಿಕೊಳ್ಳಲು ಅನುಮತಿ ನೀಡ ಲಾಯಿತು. ಮಾತ್ರವಲ್ಲ, ಸಂವಿಧಾನವು ತನ್ನ ಮೂಲಭೂತ ಹಕ್ಕುಗಳಡಿಯಲ್ಲಿ ಈ ಅವಕಾಶವನ್ನು ಇವತ್ತಿಗೂ ಭದ್ರವಾಗಿ ಕಾಪಾಡಿಕೊಂಡೂ ಬಂದಿದೆ. ಆದ್ದರಿಂದಲೇ,
    
ನ್ಯಾಯವಾದಿ ವಿಶ್ವಲೋಚನ್ ಮದನ್ ಅವರ ಅರ್ಜಿಯನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿರುವುದು. ಶರಿಯಾ ಕೋರ್ಟ್‍ಗಳ ಸಂವಿಧಾನ ಬದ್ಧತೆಯನ್ನು ಅವರು ಪ್ರಶ್ನಿಸಿದ್ದರು ಮತ್ತು ಅವು ಸಮಾನಾಂತರ ನ್ಯಾಯಾಲಯಗಳಂತೆ ಕಾರ್ಯನಿರ್ವಹಿಸುತ್ತಿವೆ ಎಂದೂ ಆರೋಪಿಸಿದ್ದರು. ‘ಮುಸ್ಲಿಮರ ಮೂಲಭೂತ ಹಕ್ಕುಗಳ ಮೇಲೆ ಮುಸ್ಲಿಮ್ ಸಂಘಟನೆಗಳು ಆಯ್ಕೆ ಮಾಡಿದ ಕಾಝಿ, ಮುಫ್ತಿಗಳು ಫತ್ವಾಗಳ ಮೂಲಕ ನಿಯಂತ್ರಣ ಹೇರಬಾರದು’ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ಸುಪ್ರೀಮ್ ಕೋರ್ಟ್ ತಳ್ಳಿ ಹಾಕಿತ್ತು. ನ್ಯಾಯಮೂರ್ತಿ ಸಿ.ಕೆ. ಪ್ರಸಾದ್‍ರನ್ನೊಳ ಗೊಂಡ ಇಬ್ಬರು ನ್ಯಾಯಾಧೀಶರ ನ್ಯಾಯಪೀಠವು ಬಹುಶಃ 2014ರಲ್ಲಿ ನೀಡಿದ ತೀರ್ಪಿನಲ್ಲಿ ದಾರುಲ್ ಕಝಾಗಳನ್ನು ನ್ಯಾಯ ಬಾಹಿರವೆಂದು ಕರೆಯಲು ಮತ್ತು ಅದು ಕೊಡುವ ತೀರ್ಪು(ಫತ್ವಾ) ಗಳ ಮೇಲೆ ನಿಷೇಧ ಹೇರಲು ನಿರಾಕರಿಸಿತ್ತು. ಅದರ ಜೊತೆಗೇ
‘ದಾರುಲ್ ಕಝಾಗಳಿಗೆ ನ್ಯಾಯಾಂಗೀಯ ಅಧಿಕಾರ ಇಲ್ಲ. ಅದರ ಫತ್ವಾಗಳನ್ನು ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು ಮತ್ತು ಅದನ್ನು ಯಾರ ಮೇಲೂ ಹೇರಲಾಗದು’ ಎಂದೂ ಅಭಿಪ್ರಾಯಪಟ್ಟಿತು. 2018 ಫೆಬ್ರವರಿ 25ರಂದು ಸುಪ್ರೀಮ್ ಕೋರ್ಟ್ ಮತ್ತೊಮ್ಮೆ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿತು. ನಿಜವಾಗಿ,
   
 ಶರೀಅತ್ ಎಂಬುದು ಕುರ್‍ಆನ್ ಮತ್ತು ಪ್ರವಾದಿಯವರ ನಡೆ-ನುಡಿಯನ್ನು ಆಧರಿಸಿಕೊಂಡು ರಚಿಸಲಾದ ನಿಯಮ ಸಂಹಿತೆಗಳು. ಅದು ಸ್ಥಾವರವಲ್ಲ, ಜಂಗಮ. ಜಗತ್ತಿನಲ್ಲಿ ಹೊಸ ಹೊಸ ಆವಿಷ್ಕಾರಗಳು ಹೇಗೆ ಸತ್ಯವೋ ಮತ್ತು ನಿರೀಕ್ಷಿತವೋ ಈ ನಿಯಮಗಳ ಮೇಲೆ ಹೊಸ ಹೊಸ ವ್ಯಾಖ್ಯಾನಗಳೂ ವಿವರಣೆಗಳೂ ಅಷ್ಟೇ ಸತ್ಯ ಮತ್ತು ನಿರೀಕ್ಷಿತ. ಅದು ಪುರಾತವೂ ಅಲ್ಲ, ಕಾಲಾತೀತವೂ ಅಲ್ಲ. ಕಾಲದ ಪ್ರತಿ ಪ್ರಶ್ನೆಗಳನ್ನೂ ಪರಿಹರಿಸಿಕೊಳ್ಳುವುದಕ್ಕೆ ಆ ನಿಯಮ ಸಂಹಿತೆಯನ್ನು ಆಧಾರವಾಗಿ ಬಳಸಿಕೊಳ್ಳಲಾಗುತ್ತದೆ. ಅದರ ಆಧಾರದಲ್ಲಿ ಸಮಸ್ಯೆಯ ವಿವಿಧ ಮಗ್ಗುಲುಗಳನ್ನೂ ಮತ್ತು ಅದು ತೆರೆದಿಡಬಹುದಾದ ವಿವಿಧ ಸಾಧ್ಯತೆಗಳನ್ನೂ ಅಂದಾಜಿಸಲಾಗುತ್ತದೆ. ಶರೀಅತ್ ಎಂಬುದು ಒಂದು ಸಮಸ್ಯೆಯ ಪರಿಹಾರಕ್ಕೆ ಆಧಾರವಾಗಿ ಬಳಕೆ ಮಾಡಲಾಗುವ ನಿಯಮ ಸಂಹಿತೆಯೇ ಹೊರತು ಬೇರೇನಲ್ಲ. ಅದನ್ನು ಸ್ಥಾವರವೆಂಬಂತೆ ಬಿಂಬಿಸಬೇಕಾದ ಅಗತ್ಯವೂ ಇಲ್ಲ. ದಾರುಲ್ ಕಝಾಗಳು ಈ ಸಂಹಿತೆಯನ್ನು ಆಧಾರವಾಗಿಸಿಕೊಂಡು ವಿವಾದ ವನ್ನು ಬಗೆಹರಿಸಲು ಶ್ರಮಿಸುತ್ತವೆ. ಭಾರತದಲ್ಲಿರುವ ದಾರುಲ್ ಕಝಾಗಳು ಎಷ್ಟು ದುರ್ಬಲವೆಂದರೆ, ಅದಕ್ಕೆ ತನ್ನ ಅಭಿಪ್ರಾಯವನ್ನು ಜಾರಿ ಮಾಡುವ ಯಾವ ಅಧಿಕಾರವೂ ಇಲ್ಲ. ಸಾಮಾನ್ಯವಾಗಿ, ಓರ್ವ ಹೆಣ್ಣು ಅಥವಾ ಗಂಡು ದೂರಿನೊಂದಿಗೆ ದಾರುಲ್ ಕಝಾವನ್ನು ಸಂಪರ್ಕಿಸುತ್ತಾರೆ. ಅದಕ್ಕಾಗಿ ಅವರು ಲಿಖಿತ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ವಾದಿ ಮತ್ತು ಪ್ರತಿವಾದಿಗಳು ವಿಚಾರಣೆಗೆ ಒಪ್ಪಿಕೊಂಡರೆ ನೋಟೀಸು ಜಾರಿಯಾಗುತ್ತದೆ. ಶರೀಅತ್ ನಿಯಮ ಸಂಹಿತೆಯ ಆಧಾರದಲ್ಲಿ ಖಾಝಿ ಅಥವಾ ಮುಖ್ಯಸ್ಥರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಅದನ್ನು ಒಪ್ಪುವ ಮತ್ತು ಬಿಡುವ ಸ್ವಾತಂತ್ರ್ಯ ಎರಡೂ ಪP್ಷÀಗಳಿಗೂ ಸಮಾನವಾಗಿ ಇರುತ್ತವೆ. ಯಾರಿಗೆ ಒಪ್ಪಿತವಲ್ಲವೋ ಅವರು ನ್ಯಾಯಾಲಯದ ಮೊರೆ ಹೋಗಬಹುದು. ಅವರನ್ನು ಹಾಗೆ ಮಾಡದಂತೆ ನಿರ್ಬಂಧಿಸುವ ಮತ್ತು ಖಾಝಿಯ ಅಭಿಪ್ರಾಯವನ್ನೇ ಹೇರುವ ಯಾವ ಅಧಿಕಾರವೂ ಯಾವ ದಾರುಲ್ ಕಝಾಗಳಿಗೂ ಇಲ್ಲ. ಇದು ನ್ಯಾಯಾಲಯವೂ ಅಲ್ಲ, ಖಾಝಿಗಳು ನ್ಯಾಯಾ ಧೀಶರೂ ಅಲ್ಲ. ದಾರುಲ್ ಕಝಾಗಳ ಈ ಅಸಹಾಯಕ ಸ್ಥಿತಿಯು ಸುಪ್ರೀಮ್ ಕೋರ್ಟ್‍ಗೆ ಚೆನ್ನಾಗಿ ಮನವರಿಕೆ ಆಗಿರುವು ದರಿಂದಲೇ ಈ ದೇಶದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ 50ಕ್ಕಿಂತಲೂ ಅಧಿಕ ದಾರುಲ್ ಕಝಾಗಳನ್ನು ನ್ಯಾಯಬಾಹಿರವೆಂದು ಕರೆಯಲು ನಿರಾಕರಿಸಿರುವುದು. ಕೇವಲ ಉತ್ತರ ಪ್ರದೇಶವೊಂದರಲ್ಲೇ  40ರಷ್ಟು ದಾರುಲ್ ಕಝಾಗಳಿವೆ. ದಾರುಲ್ ಕಝಾಗಳನ್ನು ಸಮಾನಾಂತರ ನ್ಯಾಯಾಲಯ ಎಂದು ಕರೆದ ಮತ್ತು ಭಾರತದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಘೋಷಿಸಿದ ಬಿಜೆಪಿಗೆ ಇದು ಗೊತ್ತಿಲ್ಲ ಎಂದಲ್ಲ. ಅದೊಂದು ರಾಜಕೀಯ ಹೇಳಿಕೆ. ಗೋರಕ್ಷಣೆಯ ಮಾತಾಡುತ್ತಲೇ ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಅಪಾಯಕಾರಿ ದ್ವಂದ್ವ ನೀತಿಯ ಮುಂದುವರಿಕೆ ಇದು. ಆದರೂ,

ಮುಸ್ಲಿಮ್ ಲಾ ಬೋರ್ಡ್ ತುಸು ಬುದ್ಧಿವಂತಿಕೆಯನ್ನು ಪ್ರದರ್ಶಿಸಬಹುದಿತ್ತು. ದಾರುಲ್ ಕಝಾ ಎಂಬ ಪದ ಪ್ರಯೋಗದ ಬದಲು ಕೌನ್ಸಿಲಿಂಗ್ ಸೆಂಟರ್ ಎಂದು ಹೇಳಬಹುದಿತ್ತು. 

ರೊಸಾನ್ನೆ ಮತ್ತು ಉಣ್ಣಿ: ಸೋಶಿಯಲ್ ಮೀಡಿಯಾದ ಸಾಧ್ಯತೆಗಳು ಮತ್ತು ಅಪಾಯಗಳು

    
ಅಮೆರಿಕದ ಪ್ರಸಿದ್ಧ ಹಾಸ್ಯ ನಟಿ ರೊಸಾನ್ನೆ ಬಾರ್ ಅವರು ನಡೆಸಿಕೊಡುವ ಟಿವಿ ಕಾರ್ಯಕ್ರಮವನ್ನು ಕಳೆದ ಮೇ ತಿಂಗಳಿನಲ್ಲಿ ಎಬಿಸಿ ನೆಟ್‍ವರ್ಕ್ ಸಂಸ್ಥೆಯು ದಿಢೀರ್ ಆಗಿ ರದ್ದುಪಡಿಸಿತು. ಅದಕ್ಕೆ ಕಾರಣ ಏನೆಂದರೆ, ರೊಸಾನ್ನೆ ಮಾಡಿದ ಒಂದು ಟ್ವೀಟ್.
"Muslim brotherhood & planet of the apes had a baby=vj"
`ಮುಸ್ಲಿಮ್ ಬ್ರದರ್‍ಹುಡ್ ಮತ್ತು ಬಾಲ ಇಲ್ಲದ ಕೋತಿಗಳ ಕೂಡಿಕೆಗೆ ಹುಟ್ಟಿದ ಮಗು ವಿಜೆ.’
ಈ ಟ್ವೀಟ್‍ನ ಹಿನ್ನೆಲೆ ಹೀಗಿದೆ:
"ಫ್ರಾನ್ಸ್ ನ ಅಧ್ಯಕ್ಷೀಯ ಹುದ್ದೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಮೇಲೆ ಅಮೇರಿಕದ ಅಧ್ಯಕ್ಷ ಒಬಾಮ ಅವರು ಬೇಹುಗಾರಿಕೆ ನಡೆಸಿದ್ದರು ಮತ್ತು ಈ ಬೇಹುಗಾರಿಕೆಯ ರಹಸ್ಯವನ್ನು ಕಾಪಾಡಿಕೊಳ್ಳುವಲ್ಲಿ ಅವರ ಆಪ್ತ ಸಲಹೆಗಾರ್ತಿ ವೆಲರಿ ಜಾರೆಟ್ಟ್ ((Valerie Jarrett-vj)) ಸಹಕಾರ ನೀಡಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದ್ದ ಅಭಿಪ್ರಾಯಕ್ಕೆ ಪ್ರತಿಕ್ರಿಯೆಯಾಗಿ ರೊಸಾನ್ನೇ ಈ ರೀತಿ ಟ್ವೀಟ್ ಮಾಡಿದ್ದರು.

ವೆಲರಿ ಜಾರೆಟ್ಟ್ ಅವರು ಹುಟ್ಟಿದ್ದು ಇರಾನ್‍ನಲ್ಲಿ. ಅವರಿಗೆ 7 ವರ್ಷವಾದಾಗ ಹೆತ್ತವರು ಅಮೇರಿಕಕ್ಕೆ ವಲಸೆ ಬಂದಿದ್ದರು. ಜನಾಂಗೀಯವಾಗಿ ಅವರು ಕರಿವರ್ಣದಲ್ಲಿ ಗುರುತಿಸಿಕೊಂಡವರು. ರೊಸಾನ್ನೆಯಾದರೋ ಅತ್ಯಂತ ಜನಪ್ರಿಯ ನಟಿ. ಆಕೆಯ ಶೋವನ್ನು ಪ್ರತಿವಾರ ಜಾಗತಿಕವಾಗಿ 18 ಮಿಲಿಯ ಮಂದಿ ವೀಕ್ಷಿಸುತ್ತಿದ್ದಾರೆ. ಎಬಿಸಿ ನೆಟ್‍ವರ್ಕ್‍ಗೆ ಸಿಗುವ ಜಾಹೀರಾತಿನಿಂದಲೇ ಆಕೆ ವಾರ್ಷಿಕವಾಗಿ 60 ಮಿಲಿಯನ್ ಡಾಲರ್ ಆದಾಯ ಗಳಿಸುತ್ತಿದ್ದರು. ಆದರೆ ರೊಸಾನ್ನೆಯವರ ಈ ಟ್ವೀಟನ್ನು ಜನರು ಇಷ್ಟಪಡಲಿಲ್ಲ. ತೀವ್ರ ಜನಾಂಗೀಯ ವಾದದಿಂದ ಕೂಡಿದ ಟ್ವೀಟ್ ಎಂಬುದಾಗಿ ಅದು ಕರೆಯಿಸಿಕೊಂಡಿತು. ರೊಸಾನ್ನೆ ತಕ್ಷಣ ಆ ಟ್ವೀಟ್‍ನ್ನು ಅಳಿಸಿ ಹಾಕಿದರು. ತಪ್ಪಾಯಿತು ಎಂದು ಕ್ಷಮೆ ಕೋರಿದರು. ಹಾಗಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ತಣಿಯಲಿಲ್ಲ.ಎಬಿಸಿ ನೆಟ್‍ವರ್ಕ್ ಆಕೆಯ ಕಾರ್ಯಕ್ರಮವನ್ನು ರದ್ದುಗೊಳಿಸಿತು. ಅದರ ಬೆನ್ನಿಗೇ ಆಸ್ಟ್ರೇಲಿಯಾದ ಟೆನ್ ಟಿವಿ ನೆಟ್‍ವರ್ಕ್ ಕೂಡ ರೋಸಾನ್ನೆ ಕಾರ್ಯಕ್ರಮಕ್ಕೆ ಬಾಗಿಲು ಮುಚ್ಚಿತು.
ಅತುಲ್ ಕೊಚ್ಚಾರ್
ಅಭಿಷೇಕ್ ಮಿಶ್ರ
ಪೂಜಾ ಸಿಂಗ್
ತನ್ವಿಸೇಥ್ ಮತ್ತು ಮುಹಮ್ಮದ್ ಅನಸ್ ಸಿದ್ದೀಕಿ
ಹೆಸರುಗಳು ಅನೇಕ ಇವೆ. ಸಾಮಾಜಿಕ ಜಾಲತಾಣಗಳ ದೆಸೆಯಿಂದಾಗಿ ಇವತ್ತು ಯಾವುದೋ ಹಳ್ಳಿಯ ಅನಾಮಿಕ ವ್ಯಕ್ತಿಯೊಬ್ಬ ರಾತ್ರೋರಾತ್ರಿ ಸೆಲೆಬ್ರಿಟಿಯಾಗಿ ಬಿಡುತ್ತಾನೆ/ಳೆ. ಕಳೆದವಾರ ಸಿನಿಮಾ ನಟ ಕಮಲ್ ಹಾಸನ್ ಅವರು ಕೇರಳದ ಅಲಪ್ಪುಝದಲ್ಲಿ ರುವ ರಾಕೇಶ್ ಉಣ್ಣಿ ಎಂಬವನನ್ನು ಹುಡುಕಿಕೊಂಡು ಹೋದರು. ರಬ್ಬರ್ ಮರದಿಂದ ಹಾಲು ಸಂಗ್ರಹಿಸುವ ಕೂಲಿ ಕಾರ್ಮಿಕ ರಾಕೇಶ್. ಕೆಲಸದ ವಿರಾಮದ ನಡುವೆ ಆತ ಮತ್ತು ಗೆಳೆಯ ರಬ್ಬರ್ ಮರದ ಬುಡದಲ್ಲಿ ಕುಳಿತರು. ಉಣ್ಣಿ ಹಾಡಿದ. ಗೆಳೆಯ ಅದನ್ನು ಮೊಬೈಲ್‍ನಲ್ಲಿ ಚಿತ್ರೀಕರಿಸಿದ. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ. ಆ ಹಾಡು ಕಮಲ್ ಹಾಸನ್ ನಟಿಸಿದ `ವಿಶ್ವರೂಪಂ’ ಸಿನಿಮಾದಲ್ಲಿ ಬಳಕೆಯಾಗಿತ್ತು. `ಉಣ್ಣೈ ಕಾನಧು’ ಎಂಬ ಹೆಸರಲ್ಲಿ ಆ ಹಾಡು ಒಬ್ಬರಿಂದ ಒಬ್ಬರಿಗೆ ದಾಟಿ ಪ್ರಸಿದ್ಧ ಗಾಯಕ ಶಂಕರ್ ಮಹಾದೇವನ್ ಅವರಿಗೆ ತಲುಪಿತು. ಅವರು ಆ ವೀಡಿಯೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡರು. ಹೀಗೆ, ರಬ್ಬರ್ ಮರದ ತೋಟದಲ್ಲಿ ಆಯಾಸ ಕಳೆಯಲು ಹಾಡುತ್ತಿದ್ದ ರಾಕೇಶ್ ಎಂಬ ಕೂಲಿ ಕಾರ್ಮಿಕ ದಿನ ಬೆಳಗಾಗುವುದರಲ್ಲಿ ಸೆಲೆಬ್ರಿಟಿಯಾಗಿ ಬಿಟ್ಟ. ಸಾಮಾಜಿಕ ಜಾಲತಾಣಗಳ ಸಾಮಥ್ರ್ಯ ಇದು. ಅದು ಯಾರನ್ನೂ ಎತ್ತರಕ್ಕೆ ಕೊಂಡೊಯ್ಯ ಬಹುದು. ಯಾರನ್ನೂ ಪಾತಾಳಕ್ಕೂ ತಳ್ಳಬಹುದು.

ಅಮೇರಿಕದಲ್ಲಿ ಪ್ರಸಾರವಾಗುತ್ತಿರುವ ಟಿವಿ ಧಾರಾವಾಹಿಗಳಲ್ಲಿ ಕ್ವಾಂಟಿಕೋ ಎಂಬ ಹೆಸರಿನ ಧಾರಾವಾಹಿ ಕೂಡ ಒಂದು. ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಇದರಲ್ಲಿ ನಟಿಸುತ್ತಿದ್ದಾರೆ. ಭಾರತ-ಪಾಕ್‍ಗಳ ನಡುವೆ ನ್ಯೂಯಾರ್ಕ್‍ನಲ್ಲಿ ಶೃಂಗ ಸಭೆ ನಡೆಯುತ್ತಿದ್ದ ವೇಳೆ ಅಮೇರಿಕದ ಮ್ಯಾನ್‍ಹಾಟ್‍ನಲ್ಲಿ ಪರಮಾಣು ದಾಳಿಗೆ ಸಂಚು ರೂಪಿಸಲಾಗಿತ್ತು ಎಂಬ ಕತೆಯ ಎಳೆಯೊಂದು ಈ ಧಾರಾವಾಹಿಯಲ್ಲಿದೆ. ಇದರಲ್ಲಿ ಪ್ರಿಯಂಕಾ ಚೋಪ್ರಾರು ಅಮೇರಿಕದ ಗುಪ್ತಚರ ಸಂಸ್ಥೆ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(FBI)ನ ಏಜೆಂಟ್ ಅಲೆಕ್ಸ್ ಪ್ಯಾರಿಶ್ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಪರಮಾಣು ದಾಳಿಯ ಸಂಚು ರೂಪಿಸಿರುವುದು ಪಾಕಿಸ್ತಾನದ ವಿದ್ಯಾರ್ಥಿಗಳು ಎಂದು ಆರಂಭದಲ್ಲಿ ಶಂಕಿಸಲಾಗುತ್ತದೆ. ಆದರೆ ಒಬ್ಬ ಉಗ್ರನ ಬಳಿ ರುದ್ರಾಕ್ಷಿ ಇರುವುದನ್ನು ಪ್ಯಾರಿಶ್ ಪತ್ತೆ ಹಚ್ಚುತ್ತಾಳೆ. ಹೀಗಾಗಿ, ಈ ದಾಳಿಗೆಯ ಸಂಚು ರೂಪಿಸಿರುವುದು ಭಾರತೀಯರು ಮತ್ತು ಪಾಕಿಸ್ತಾನಿನ ಮೇಲೆ ಅನುಮಾನ ಬರುವಂತೆ ಸಂಚು ಹೆಣೆಯಲಾಗಿತ್ತು ಎಂಬುದಾಗಿ ಪ್ಯಾರಿಸ್ ತೀರ್ಮಾನಿಸುತ್ತಾಳೆ...
ಜೂನ್‍ನಲ್ಲಿ ಪ್ರಸಾರವಾದ ಧಾರಾವಾಹಿಯ ಈ ದೃಶ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗುತ್ತದೆ. ಭಾರತವನ್ನು ಸಂಚುಕೋರನ ಸ್ಥಾನದಲ್ಲಿ ಕೂರಿಸಲು ಪ್ರಿಯಾಂಕಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆಯೊಂದಿಗೆ ಆರಂಭವಾದ ಟೀಕೆ-ಟಿಪ್ಪಣಿ, ಪ್ರತಿಕ್ರಿಯೆಗಳು, ಅಂತಿಮವಾಗಿ ಆಕೆಯನ್ನು ದೇಶ ವಿರೋಧಿ, ನಕಲಿ ಸೆಕ್ಯುಲರ್ ಎಂಬಿತ್ಯಾದಿಯಾಗಿ ನಿಂದಿಸುವ ಹಂತಕ್ಕೆ ತಲುಪುತ್ತದೆ. ಈ ಟೀಕೆಯ ಅಬ್ಬರಕ್ಕೆ ಂಃಅ ನೆಟ್‍ವರ್ಕ್ ಮಣಿಯುತ್ತದೆ. ಕ್ಷಮೆ ಯಾಚಿಸುತ್ತದೆ. ಪ್ರಿಯಂಕಾಳೂ ಕ್ಷಮೆ ಯಾಚಿಸುತ್ತಾರೆ. ಇದೇ ವೇಳೆ,
ರಾಕೇಶ್ ಉಣ್ಣಿ

It's sad to see that you have not respected the sentiments of Hindus who have been terrorized by Islam over 2000 years. Shame on you..
"2000 ವರ್ಷಗಳಿಂದೀಚೆಗೂ ಇಸ್ಲಾಮ್‍ನಿಂದ ಭಯೋತ್ಪಾದನೆಗೆ ಒಳಗಾಗಿರುವ ಹಿಂದೂಗಳ ಭಾವನೆಗಳನ್ನು ನೀವು ಗೌರವಿಸದೇ ಹೋದುದು ವಿಷಾದಕರ. ನಿಮಗೆ ನಾಚಿಕೆಯಾಗಬೇಕು..."
ಎಂದು ಪ್ರಿಯಾಂಕ ಚೋಪ್ರಾರನ್ನು ಉದ್ದೇಶಿಸಿ ಟ್ವೀಟ್ ಒಂದು ಕಾಣಿಸಿಕೊಳ್ಳುತ್ತದೆ. ಟ್ವೀಟಿಸಿದಾತ ಅತುಲ್ ಕೊಚ್ಚಾರ್ ಎಂಬ ಬಾಣಸಿಗ. ದುಬೈಯ M.J. Marriott Marquis Hotelನಲ್ಲಿ ರಂಗ್ ಮಹಲ್ ರೆಸ್ಟೋರೆಂಟನ್ನು ಅವರು ನಡೆಸುತ್ತಿದ್ದಾರೆ. ಇವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸಿರುವ ಮೆಕ್ಲಿನ್ ಸ್ಟಾರ್ ಬಹುಮಾನ ಪಡೆದಿರುವ ಸೆಲೆಬ್ರಿಟಿ ಬಾಣಸಿಗ. ಅಮೇರಿಕ ಮತ್ತು ಬ್ರಿಟನ್‍ನಲ್ಲಿಯೂ ರಂಗ್ ಮಹಲ್ ರೆಸ್ಟೋರೆಂಟ್ ಶಾಖೆಗಳನ್ನು ಹೊಂದಿದೆ. ಕೊಚ್ಚಾರ್‍ ರ  ಈ ಟ್ವೀಟ್‍ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. FBI  ಏಜೆಂಟ್ ಪಾತ್ರವಾಗಿ ಪ್ರಿಯಾಂಕ ನೀಡಿದ ಅಭಿನಯಕ್ಕೂ ಇಸ್ಲಾಮ್‍ಗೂ ನಡುವೆ ತಳಕು ಹಾಕಿದ ಕೊಚ್ಚಾರ್‍ ರ  ಮನಸ್ಥಿತಿಯನ್ನು ಧಾರಾಳ ಜನರು ಖಂಡಿಸಿದರು. ರಂಗ್ ಮಹಲ್ ರೆಸ್ಟೋರೆಂಟ್‍ಗೆ ಬಾಯ್ಕಾಟ್ ಘೋಷಿಸಿದರು. ಇನ್ನೊಮ್ಮೆ ನಾವು ಅಲ್ಲಿಗೆ ಗ್ರಾಹಕರಾಗಿ ತೆರಳಲಾರೆವು ಎಂದರು. ಕೊಚ್ಚಾರ್ ಕ್ಷಮೆ ಯಾಚಿಸಿದರು. ಟ್ವೀಟ್ ಮಾಡಿದ ಕೇವಲ 48 ಗಂಟೆಗಳೊಳಗೆ ಕ್ಷಮೆಯಾಚನೆಯ 2 ಟ್ವೀಟ್‍ಗಳನ್ನು ಪ್ರಕಟಿಸಿದರು. ತನ್ನ ಟ್ವೀಟನ್ನು ಅಳಸಿ ಹಾಕಿದರು. ಆದರೂ M.J. Marriott Marquis Hotel ಆ ಟ್ವೀಟನ್ನು ಅತಿ ಗಂಭೀರವಾಗಿ ಪರಿಗಣಿಸಿತು. ಅದರಲ್ಲಿ ಇಸ್ಲಾಮೋಫೋಬಿಯಾ ಮತ್ತು ಪ್ರಚೋದನಾಭಾವವನ್ನು ಕಂಡುಕೊಂಡಿತು. ಮಾತ್ರವಲ್ಲ, ರಂಗ್ ಮಹಲ್‍ನೊಂದಿಗೆ ತನ್ನ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡು ತಮಗೂ ಕೊಚ್ಚಾರ್‍ ಗೂ  ಯಾವ ಸಂಬಂಧವೂ ಇಲ್ಲ ಎಂದು ಘೋಷಿಸಿತು. ಇದರ ಜೊತೆಗೇ ರಂಗ್ ಮಹಲ್ ರೆಸ್ಟೋರೆಂಟನ್ನು ಸಂಪರ್ಕಿಸುವ ಆ್ಯಪನ್ನು ತನ್ನ ಪಟ್ಟಿಯಿಂದ ಹಲಾಲ್ ಜೆಮ್ಸ್ ಕಿತ್ತು ಹಾಕಿತು. ಹೀಗೆ ಕೇವಲ ಒಂದೇ ಒಂದು ಟ್ವೀಟ್ ಕೊಚ್ಚಾರ್ ಎಂಬ ಅಂತಾರಾಷ್ಟ್ರೀಯ ಮನ್ನಣೆ ಪಡೆದ ಬಾಣಸಿಗನನ್ನು 48 ಗಂಟೆಗಳೊಳಗೆ ವಿಲನ್ ಆಗಿ ಮಾರ್ಪಡಿಸಿ ಬಿಟ್ಟಿತು. ಇದು ಸದ್ಯದ ಜಗತ್ತು. ಎಲ್ಲವನ್ನೂ ಸಾಮಾಜಿಕ ತಾಣಗಳೇ ನಿರ್ಧರಿಸಿ ಬಿಡುವಂಥ ಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ. ಈ ಹಿಂದೆ, ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಜನಸಾಮಾನ್ಯರಿಗೆ ಅವಕಾಶಗಳು ಇರಲಿಲ್ಲ. ಸೆಲೆಬ್ರಿಟಿಗಳು, ರಾಜಕಾರಣಿಗಳು ಮುಂತಾದ ಮೇಲ್‍ಸ್ತರದವರ ಭಾವನೆಗಳನ್ನು ಮಾತ್ರ ಮುದ್ರಣ ಮಾಧ್ಯಮಗಳು ಅಚ್ಚು ಹಾಕುತ್ತಿದ್ದುವು. ಅವು ಜನಸಾಮಾನ್ಯರ ಬರಹಗಳಿಗೆ ಸ್ಪೇಸ್ ಅನ್ನೂ ಕೊಡುತ್ತಿರಲಿಲ್ಲ. ಮೇಲ್‍ಸ್ತರದವರ ಅಭಿಪ್ರಾಯವನ್ನು ಓದಿಕೊಂಡು ಸುಮ್ಮನಿರಬೇಕಾದ ವಾತಾವರಣ ವೊಂದು ಹಿಂದೆ ಅಸ್ತಿತ್ವದಲ್ಲಿತ್ತು. ಇದನ್ನು ಒಡೆದು ಹಾಕಿದ್ದೇ ಸಾಮಾಜಿಕ ಜಾಲತಾಣಗಳು. ಜನಸಾಮಾನ್ಯರನ್ನು ಮುಖ್ಯವಾಹಿನಿಗೆ ತರುವಲ್ಲಿ ಇದರ ಪಾತ್ರ ಬಹಳ ನಿರ್ಣಾಯಕವಾದುದು. ಈ ದಿಢೀರ್ ಅವಕಾಶವು ಬಳಕೆದಾರರಲ್ಲಿ ರೋಮಾಂಚನವನ್ನು ಉಂಟುಮಾಡಿತು. ಏನು ಬರೆದರೂ ದಕ್ಕುತ್ತದೆ ಎಂಬ ನಿರಾಳ ಭಾವವೊಂದು ಅವರೊಳಗೆ ಸೃಷ್ಟಿಯಾಯಿತು. ದಿಢೀರ್ ಪ್ರಚಾರ ಬೇಕೆಂದರೆ, ಒಂದು ವಿವಾದಾತ್ಮಕ ಟ್ವೀಟ್ ಮಾಡಿದರೆ ಸಾಕಾಗುತ್ತದೆ. ತಕ್ಷಣ ಕಿಡಿ ಹೊತ್ತಿಕೊಳ್ಳುತ್ತದೆ. ಅಭಿಷೇಕ್ ಮಿಶ್ರ ಇಂಥದ್ದೇ ಒಂದು ತಳಿ. ಲಕ್ನೋದಲ್ಲಿ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿ ಯಾಗಿರುವ ಆತ ತಿಂಗಳುಗಳ ಹಿಂದೆ ಸುದ್ದಿಯಲ್ಲಿದ್ದ. ಅದಕ್ಕೆ ಕಾರಣ ಆತ ಟ್ವೀಟರ್‍ನಲ್ಲಿ ಹಾಕಿದ ಸ್ಕ್ರೀನ್ ಶಾಟ್ ಮತ್ತು ಒಂದು ಟ್ವೀಟ್. ಓಲಾ ಕ್ಯಾಬ್ ಅನ್ನು ಬುಕ್ಕಿಂಗ್ ಮಾಡಿದ ಆತ ಬಳಿಕ ರದ್ದು ಮಾಡಿದ. ಕಾರಣ ಏನೆಂದರೆ, ಓಲಾದ ಡ್ರೈವರ್ ಮಸೂದ್ ಆಲಂ ಎನ್ನುವ ಮುಸ್ಲಿಮ್. `ತಾನು ಜಿಹಾದಿಗೆ ಹಣ ನೀಡಲಾರೆ’ ಎಂದು ಆತ ತನ್ನ ರದ್ದತಿಗೆ ಸಮರ್ಥನೆಯನ್ನು ಕೊಟ್ಟಿದ್ದ. ಬುಕ್ಕಿಂಗ್ ರದ್ದು ಮಾಡಿದುದನ್ನು ಸ್ಕ್ರೀನ್ ಶಾಟ್ ತೆಗೆದು ಟ್ವೀಟ್ ಮಾಡಿದ್ದ. ಈ ಬೆಳವಣಿಗೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾಯಿತು. `ಭಾರತ ಪೆಟ್ರೋಲ್ ಅಮದು ಮಾಡುತ್ತಿರುವುದು ಮುಸ್ಲಿಮ್ ರಾಷ್ಟ್ರಗಳಿಂದ. ಆದ್ದರಿಂದ ನೀನು ಎತ್ತಿನ ಗಾಡಿಯಲ್ಲಿ ಪ್ರಯಾಣಿಸು’ ಎಂದು ಹಲವರು ಅಭಿಷೇಕ್‍ನನ್ನು ತಿವಿದರು. ನಿಜಕ್ಕೂ, ಇಂಥ ಟೀಕೆಯಿಂದ ಆತ ಪಾಠ ಕಲಿತನೋ ಅಥವಾ ಇಂಥದ್ದೊಂದು ಪ್ರಚಾರವನ್ನು ಬಯಸಿಯೇ ಆತ ಹಾಗೆ ಟ್ವೀಟ್ ಮಾಡಿದನೋ ಯಾರಿಗೂ ಗೊತ್ತಿಲ್ಲ. ಲಕ್ನೋದ ಐಟಿ ಕಂಪೆನಿಯ ನಾಲ್ಕು ಗೋಡೆಯೊಳಗೆ ಸವೆದು ಹೋಗುತ್ತಿದ್ದ ಅಭಿಷೇಕ್ ಎಂಬ ಯುವಕ ಒಂದೇ ಒಂದು ಟ್ವೀಟ್ ಮೂಲಕ ರಾಷ್ಟ್ರ ಮಟ್ಟದ ವ್ಯಕ್ತಿಯಾದ. ಯಾವ ಶ್ರಮವನ್ನೂ ಹಾಕದೇ ದಕ್ಕಿದ ಪ್ರಚಾರ ಇದು. ಪೂಜಾ ಸಿಂಗ್ ಮಾಡಿದ್ದೂ ಇದನ್ನೇ. ಮೊಬೈಲ್ ಕಂಪೆನಿ ಏರ್‍ಟೆಲ್‍ನೊಂದಿಗೆ ಹೇಳಿಕೊಳ್ಳುವುದಕ್ಕೆ ಆಕೆ ಯಲ್ಲಿ ದೂರುಗಳಿತ್ತು. ಆ ಬಗ್ಗೆ ಆಕೆ ಟ್ವೀಟ್ ಮಾಡಿದಳು. ಅದಕ್ಕೆ ಉತ್ತರಿಸಲು ಶುಹೈಬ್ ಎಂಬವನನ್ನು ಏರ್ ಟೆಲ್ ನಿಯೋಜಿಸಿತು. ಆಕೆ ಆತನೊಂದಿಗೆ ಮಾತನಾಡಲು ನಿರಾಕರಿಸಿ ಟ್ವೀಟ್ ಮಾಡಿದಳು. ಮುಸ್ಲಿಮನೊಂದಿಗೆ ಮಾತಾಡಲಾರೆ ಎಂದಳು. ಬಳಿಕ ಗಗನ್ ಜೋತ್ ಎಂಬವನನ್ನು ಬದಲಿಯಾಗಿ ನೀಡಲಾಯಿತು. ಟ್ವೀಟರ್ ಮೂಲಕ ನಡೆದ ಈ ಇಡೀ ಪ್ರಸಂಗವು ವೈಯಕ್ತಿಕ ಸ್ವಾತಂತ್ರ್ಯ, ಧಾರ್ಮಿಕ ಅಸಹನೆ, ಏರ್ ಟೆಲ್ ಕಂಪೆನಿಯ ಸರಿ-ತಪ್ಪುಗಳು
ವೆಲೆರಿ

ಇತ್ಯಾದಿಗಳ ಸುತ್ತ ಚರ್ಚೆಗೆ ವೇದಿಕೆಯೊಂದನ್ನು ಒದಗಿಸಿತು. ತನ್ವಿ ಸೇಥ್‍ಳ ಪಾಸ್ ಪೋರ್ಟ್ ಪ್ರಕರಣವೂ ಇದ ಕ್ಕಿಂತ ಹೊರತಲ್ಲ. ಮುಹಮ್ಮದ್ ಅನಸ್ ಸಿದ್ದೀಕಿ ಎಂಬ ಮುಸ್ಲಿಮ್ ಆಕೆಯ ಪತಿ. ಹಿಂದೂ ಧರ್ಮಕ್ಕೆ ಮತಾಂತರವಾಗಿ ಹೆಸರು, ವಿಳಾಸ ಬದಲಿಸಿಕೊಳ್ಳದಿದ್ದರೆ ಪಾಸ್‍ ಪೋರ್ಟ್ ನೀಡುವುದಿಲ್ಲ ಎಂದು ಸಿದ್ದೀಕಿಗೆ ಉತ್ತರ ಪ್ರದೇಶದ ಪಾಸ್‍ ಪೋರ್ಟ್ ಕಂಪೆನಿಯೊಂದರ ಮುಖ್ಯ ನಿರ್ವಹಣಾಧಿಕಾರಿ ವಿಕಾಸ್ ಮಿಶ್ರಾ ಧಮಕಿ ಹಾಕುತ್ತಾನೆ. ತಕ್ಷಣ ಆ ದಂಪತಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರಿಗೆ ಟ್ವೀಟ್ ಮಾಡುತ್ತಾರೆ. ಮಿಶ್ರಾಗೆ ವರ್ಗಾವಣೆಯಾಗುತ್ತದೆ. ದಂಪತಿಗೆ ಪಾಸ್‍ ಪೋರ್ಟ್ ಲಭ್ಯವಾಗುತ್ತದೆ. ವಿಷಯ ಇದರಾಚೆಗಿನದು. ಸಾಮಾಜಿಕ ಜಾಲತಾಣಗಳು ಇರದೇ ಇದ್ದ 2 ದಶಕಗಳ ಹಿಂದೆ ಇಂಥ ಘಟನೆಗಳು ನಡೆದಿರಲಾರದೇ? ರಾಕೇಶ್ ಉಣ್ಣಿಯಂಥ ಶ್ರಮಿಕ ಹುಡುಗ ಯಾವುದೋ ಗೇರು ಮರದ ಅಡಿಯಲ್ಲಿ ಕೂತು ಹಾಡಿರಲಾರನೇ? ಮುಸ್ಲಿಮ್ ಡ್ರೈವರನ್ನು ದ್ವೇಷಿಸಿದ ಅಭಿಷೇಕ್‍ನಂಥವ, ಪೂಜಾಳಂಥವರು ಆಗ ಇದ್ದಿರಲಾರರೇ? ಆಗಿನ ಸನ್ನಿವೇಶ ಹೇಗಿರಬಹುದು?
     ವ್ಯಕ್ತಿಯನ್ನು ದಿನ ಬೆಳಗಾಗುವುದರೊಳಗೆ ಯಾವ ಸ್ಥಿತಿಗೂ ತಳ್ಳಬಲ್ಲ ಸಾಮಾಜಿಕ ಜಾಲತಾಣಗಳ ಬಗ್ಗೆ ಎಚ್ಚರ ಅಗತ್ಯ. ತಪ್ಪಿದರೆ ಜನರು ಥಳಿಸಿಕೊಲ್ಲಲೂ ಬಹುದು.

ಎರಡು ಸ್ಕಾರ್ಫ್‍ಗಳ ಮುಖಾಮುಖಿ...

   

    ಬಹುಶಃ 2010 ಎಪ್ರಿಲ್ ಇರಬೇಕು. ಪಶ್ಚಿಮ ಬಂಗಾಳದ ಪ್ರಥಮ ಮುಸ್ಲಿಮ್ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದ್ದ
ಆಲಿಯಾ (Aliah) ಯುನಿವರ್ಸಿಟಿಯಲ್ಲಿ ವಿವಾದವೊಂದು ತಲೆ ದೋರಿತು. ಕಾಲೇಜಿಗೆ ಅತಿಥಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡು ಒಂದು ತಿಂಗಳಷ್ಟೇ ಆಗಿದ್ದ ಶಿರೀನ್ ಮಿದಿಯಾರ ವಿರುದ್ಧ ಕಾಲೇಜು ವಿದ್ಯಾರ್ಥಿ ಸಂಘದ ನಾಯಕರು ಘೇರಾವ್ ಹಾಕಿದರು. ಬುರ್ಖಾ ಹಾಕದೇ ಉಪನ್ಯಾಸ ಮಾಡಲು ಬಿಡೆವು ಎಂದು ಬೆದರಿಸಿದರು. ಶಿರೀನ್ ಒಪ್ಪಲಿಲ್ಲ. ಜಾಧವ್‍ಪುರ ವಿಶ್ವವಿದ್ಯಾಲಯದಲ್ಲಿ ಬಂಗಾಳಿ ಭಾಷೆಯಲ್ಲಿ ಎಂ.ಎ. ಮಾಡಿದ್ದ ಅವರನ್ನು ಆ ವಿದ್ಯಾರ್ಥಿ ನಾಯಕರು ತಡೆದರು. ವಿಶೇಷ ಏನೆಂದರೆ, 1781ರಿಂದಲೂ ಮದ್ರಸವಾಗಿದ್ದ ಆ ಶಿಕ್ಷಣ ಸಂಸ್ಥೆಯನ್ನು 2008ರಲ್ಲಿ ವಿಶ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಮಾತ್ರವಲ್ಲ, ಇಲ್ಲಿ ಇಸ್ಲಾಮೀ ತರಗತಿಗಳೂ ನಡೆಯುತ್ತಿದ್ದುವು. ಆದರೆ, ಕಾಲೇಜು ಆಡಳಿತ ಮಂಡಳಿ ಶಿರೀನ್ ಪರ ನಿಂತಿತು. ‘ವಿಶ್ವವಿದ್ಯಾಲಯವು ಉಪನ್ಯಾಸಕರಿಗೆ ಸಮವಸ್ತ್ರವನ್ನು ನಿರ್ಣಯಿಸಿಲ್ಲ ಮತ್ತು ಯಾರಾದರೂ ಅದಕ್ಕೆ ಒತ್ತಾಯಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು...’ ಎಂದು ಎಚ್ಚರಿಸಿತು. ನಿಜವಾಗಿ, ಮದ್ರಸ ವಾತಾವರಣದಿಂದ ವಿಶ್ವ ವಿದ್ಯಾನಿಲಯದ ವಾತಾವರಣಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕೇ ಬೇಕು. ಆದ್ದರಿಂದ, 'ಮುಸ್ಲಿಮ್ ವಿದ್ಯಾರ್ಥಿಗಳ ಬುರ್ಖಾದ ಬೇಡಿಕೆಯನ್ನು ಮನ್ನಿಸಬೇಕು..' ಎಂದು ಆಡಳಿತ ಮಂಡಳಿಯು ಶಿರಿನ್‍ರಲ್ಲಿ ಕೋರಿಕೊಂಡಿರುತ್ತಿದ್ದರೆ ಅದು ಅಕ್ಷಮ್ಯ ಅಪರಾಧವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಖಂಡಿತ ಇರಲಿಲ್ಲ. ಹೊಸತೇ ಆದ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಯಾವುದೇ ಸಂಸ್ಥೆಗಾದರೂ ಸಮಯ ಬೇಕಾಗುತ್ತದೆ. ವ್ಯಕ್ತಿಗೂ ಇದು ಅನ್ವಯ. ದಶಕಗಳಿಂದ ಚಾಲ್ತಿಯಲ್ಲಿದ್ದ ತೆರಿಗೆ ಪದ್ಧತಿಯಿಂದ ಜಿಎಸ್‍ಟಿಗೆ ಹೊಂದಿಕೊಳ್ಳಲು ಈ ದೇಶದಲ್ಲಿ ಒಂದಷ್ಟು ಸಮಯಾವಕಾಶವನ್ನು ನೀಡಲಾಗಿರುವುದು ಇದೇ ಕಾರಣಕ್ಕೆ. ಆದರೆ, ಆಲಿಯಾ ವಿಶ್ವವಿದ್ಯಾಲಯ ಈ ಅವಕಾಶವನ್ನೂ ಬಳಸಿಕೊಳ್ಳಲಿಲ್ಲ. ಉಪನ್ಯಾಸಕಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು. ಅದನ್ನು ಪ್ರಶ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಯಿತು. ನಿಜವಾಗಿ, ಮಂಗಳೂರಿನ ಆ್ಯಗ್ನೆಸ್ ಕಾಲೇಜು ಮುಖಾಮುಖಿಯಾಗಬೇಕಾದದ್ದು ಇಲ್ಲಿ. ಈ ಕಾಲೇಜಿಗೆ ಹಲವು ದಶಕಗಳ ಇತಿಹಾಸ ಇದೆ. ಕಲ್ಕತ್ತಾದ ಆಲಿಯಾ ವಿಶ್ವವಿದ್ಯಾಲಯದಂತೆ ಇದು ದಿಢೀರ್ ಆಗಿ ಕಾಲೇಜಾದದ್ದಲ್ಲ. ಇಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಕ್ಕೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ತಂತಮ್ಮ ಧಾರ್ಮಿಕ ಐಡೆಂಟಿಟಿಯನ್ನು ಪ್ರದರ್ಶಿಸಿಯೇ ಈ ಹಿಂದೆ ಸೇರ್ಪಡೆಗೊಂಡಿದ್ದಾರೆ. ಪಾರಂಗತರಾಗಿದ್ದಾರೆ ಮತ್ತು ಈ ಸಂಸ್ಥೆಗೆ ಕೀರ್ತಿಯನ್ನೂ ತಂದಿದ್ದಾರೆ. ಹೀಗಿರುವಾಗ, ಸಮವಸ್ತ್ರದ ಹೆಸರಲ್ಲಿ ಸ್ಕಾರ್ಫ್ ನಿಷೇಧವನ್ನು ಏಕಾಏಕಿ ಕಡ್ಡಾಯವಾಗಿ ಜಾರಿಗೊಳಿಸಲು ಹೊರಡುವುದೆಂದರೆ, ಅದನ್ನು ಸಮಾಜ ಚಪ್ಪಾಳೆ ತಟ್ಟಿ ಸ್ವಾಗತಿಸಬೇಕು ಎಂದು ನಿರೀಕ್ಷಿಸುವುದು ಖಂಡಿತ ತಪ್ಪು. ಭಿನ್ನ ಪ್ರತಿಕ್ರಿಯೆ ಸಹಜವಾದುದು ಮತ್ತು ಅದನ್ನು ಆಲಿಸುವ ಮತ್ತು ಗೌರವಿಸುವ ಪ್ರಬುದ್ಧತೆಯನ್ನು ಆ ಸಂಸ್ಥೆ ಪ್ರದರ್ಶಿಸಬೇಕಾಗುತ್ತದೆ. ಸ್ಕಾರ್ಫ್ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಮುಸ್ಲಿಮ್ ಮುಖಂಡರು ಸೇರಿಕೊಂಡು ಮುಸ್ಲಿಮ್ ಮಹಿಳೆಯರ ಮೇಲೆ ಹೇರಿದ ಒಂದು ವಸ್ತ್ರ ಸಂಹಿತೆಯಲ್ಲ. ಹಾಗಿರುತ್ತಿದ್ದರೆ ಅದನ್ನು ನಿಷೇಧಿಸುವಂತೆ ಮುಸ್ಲಿಮರೇ ಬೀದಿಗಿಳಿದು ಒತ್ತಾಯಿಸುತ್ತಿದ್ದರು. ಸ್ಕಾರ್ಫ್‍ಗೆ ಒಂದು ಚಾರಿತ್ರಿಕ ಹಿನ್ನೆಲೆಯಿದೆ ಮತ್ತು ಆ ಹಿನ್ನೆಲೆಯನ್ನು ಈ ದೇಶದ ಇತರೆಲ್ಲ ಧರ್ಮೀಯರಿಗಿಂತ ಚೆನ್ನಾಗಿ ಬಲ್ಲವರು ಕ್ರೈಸ್ತರೇ ಆಗಿದ್ದಾರೆ. ಬಹುಶಃ ಮುಸ್ಲಿಮ್ ವಿದ್ಯಾರ್ಥಿನಿಯರು ಬಹುದೊಡ್ಡ ಸಂಖ್ಯೆಯಲ್ಲಿ ಆ್ಯಗ್ನೆಸ್ ಕಾಲೇಜಿಗೆ ಸೇರ್ಪಡೆಗೊಳ್ಳುವುದಕ್ಕೆ ಈ ಒಂದು ಅಂಶವೂ ಕಾರಣ ವಾಗಿರಬಹುದು. ಆ್ಯಗ್ನೆಸ್ಸೂ ಸೇರಿದಂತೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿರುವ ನನ್‍ಗಳು ಭುಜವನ್ನು ಮರೆಸುವ ಸ್ಕಾರ್ಫ್ ಧರಿಸುತ್ತಾರೆ. ನನ್ ವಿದ್ಯಾರ್ಥಿನಿಯರೂ ಸ್ಕಾರ್ಫ್ ಧರಿಸುತ್ತಾರೆ. ಸ್ಕಾರ್ಫ್ ನಿಷೇಧ ವಿಧಿಸಲಾಗಿರುವ ಆ್ಯಗ್ನೆಸ್ ಕಾಲೇಜಿನಲ್ಲೂ ನನ್ ವಿದ್ಯಾರ್ಥಿನಿಯರಿಗೆ ಈ ನಿಷೇಧದಿಂದ ವಿನಾಯಿತಿ ಇದೆ. ಸ್ಕಾರ್ಫ್‍ಗೆ ಅವಕಾಶ ಇರಬೇಕು ಎಂದು ಒತ್ತಾಯಿಸುವವರ ಆಕ್ಷೇಪಗಳಲ್ಲಿ ಇದೂ ಒಂದು. ನನ್ ಗಳು ಧರಿಸುವ ಸ್ಕಾರ್ಫ್‍ಗೂ ಮುಸ್ಲಿಮ್ ಹೆಣ್ಮಕ್ಕಳು ಧರಿಸುವ ಸ್ಕಾರ್ಫ್‍ಗೂ ಆಧಾರವಾಗಿರುವುದು ಧರ್ಮವೇ. ಆದರೂ ಒಂದು ಸ್ವೀಕಾರಾರ್ಹ ಮತ್ತು ಇನ್ನೊಂದು ತಿರಸ್ಕಾರಾರ್ಹ ಆಗುವುದು ಹೇಗೆ ಮತ್ತು ಏಕೆ? ಸ್ಕಾರ್ಫ್ ಹಾಕಿದ ವಿದ್ಯಾರ್ಥಿನಿಯರು ಅದನ್ನು ದುರುಪಯೋಗಿಸುತ್ತಿದ್ದಾರೆ ಅನ್ನುವುದು ಈ ತಿರಸ್ಕಾರಕ್ಕೆ ನಿಜವಾದ ಕಾರಣವೇ ಅಥವಾ ಪೂರ್ವಗ್ರಹ ಮತ್ತು ಇಸ್ಲಾಮೋ ಫೋಬಿಯಾ ಇಂಥದ್ದೊಂದು ತೀರ್ಮಾನದ ಹಿಂದಿದೆಯೇ? ಜಗತ್ತಿನ 50ರಷ್ಟು ಮುಸ್ಲಿಮ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್‍ಗಳು ಶಿರವಸ್ತ್ರವನ್ನು ಕಡ್ಡಾಯಗೊಳಿಸಿವೆ. ಹಾಗಂತ, ಈ ರಾಷ್ಟ್ರಗಳು ಇಸ್ಲಾಮಿನ ನಿಜ ಮಾದರಿಗಳು ಎಂದಲ್ಲ. ಶಿರವಸ್ತ್ರಕ್ಕೆ ಬಲವಾದ ಧಾರ್ಮಿಕ ಹಿನ್ನೆಲೆ ಇದೆ ಅನ್ನುವುದನ್ನು ಸೂಚಿಸುವುದಕ್ಕಷ್ಟೇ ಈ ಉಲ್ಲೇಖ. ಸಾಮಾಜಿಕ ಸಂಶೋಧನೆಗಾಗಿರುವ ಅಮೇರಿಕದ ಮಿಚಿಗನ್ ವಿಶ್ವವಿದ್ಯಾಲಯವು 2014 ಆಗಸ್ಟ್ ನಲ್ಲಿ What style of dress in appropriate for women in public  (ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಕ್ಕುದಾದ ಉಡುಪು ಯಾವುದು) ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆಯೊಂದನ್ನು ನಡೆಸಿತ್ತು. 7 ಮುಸ್ಲಿಮ್ ರಾಷ್ಟ್ರಗಳನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ವಿಶೇಷ ಏನೆಂದರೆ, ಅತ್ಯಂತ ಜಾತ್ಯತೀತವಾಗಿ ಗುರುತಿಸಿಕೊಂಡಿರುವ ಮತ್ತು ಕಾನೂನು ಸಂಹಿತೆಗಳೆಲ್ಲವೂ ಯುರೋಪಿಯನ್ ರಾಷ್ಟ್ರಗಳಿಗಿಂತಲೂ ಉದಾರಿಯಾಗಿರುವ ಟ್ಯುನೀಷಿಯಾದ 57% ಮುಸ್ಲಿಮ್ ಮಹಿಳೆಯರು ತಲೆ ಮುಚ್ಚಿರುವ ಮತ್ತು ಮುಖ ತೆರೆದಿರುವ ಹಿಜಾಬನ್ನು ಆಯ್ಕೆಯಾಗಿ ಪರಿಗಣಿಸಿದ್ದರು. ಜಾತ್ಯತೀತ ರಾಷ್ಟ್ರಗಳ ಸಾಲಿನಲ್ಲಿ ಸೇರ್ಪಡೆಗೊಂಡಿರುವ ಈಜಿಪ್ಟ್, ಟರ್ಕಿ ಮತ್ತು ಲೆಬನಾನ್‍ನ ಅರ್ಧಕ್ಕರ್ಧ ಮಹಿಳೆಯರು ತಲೆ ಮುಚ್ಚಿರುವ ಮತ್ತು ಮುಖ ತೆರೆದಿರುವ ಹಿಜಾಬ್‍ನ ಪರ ಬೆಂಬಲ ಸೂಚಿಸಿದ್ದರು. ಶಿರವಸ್ತ್ರ ರಹಿತ ಉಡುಪನ್ನು ಬೆಂಬಲಿಸಿದವರ ಸಂಖ್ಯೆ ಟ್ಯುನೀಷಿಯಾದಲ್ಲಿ 15% ಇದ್ದರೆ, ಈಜಿಪ್ಟ್ ನಲ್ಲಿ 4%, ಟರ್ಕಿಯಲ್ಲಿ 32% ಮತ್ತು ಲೆಬನಾನ್ ನಲ್ಲಿ 49% ಇತ್ತು. ಒಂದು ವೇಳೆ ಇದೇ ಬಗೆಯ ಸಮೀಕ್ಷೆಯನ್ನು ಕ್ರೈಸ್ತರೇ ಅಧಿಕ ಇರುವ ಯುರೋಪಿಯನ್ ರಾಷ್ಟ್ರಗಳಲ್ಲಿ ಕೈಗೊಂಡರೆ ಫಲಿತಾಂಶ ಏನಿದ್ದೀತು? ಕನ್ಯೆ ಮೇರಿ ಶಿರವಸ್ತ್ರ ಧರಿಸಿದ್ದರು ಮತ್ತು ಒಂದಾನೊಂದು ಕಾಲದಲ್ಲಿ ಆ ಶಿರವಸ್ತ್ರದ ಅನುಸರಣೆ ಕ್ರೈಸ್ತರಲ್ಲಿ ತೀವ್ರವಾಗಿಯೇ ಇತ್ತು. ರಷ್ಯನ್ ಕ್ರಾಂತಿಗಿಂತ ಮೊದಲಿನ ಕ್ರೈಸ್ತ ಇತಿಹಾಸದಲ್ಲಿ ಶಿರವಸ್ತ್ರಕ್ಕೆ ಮುಖ್ಯ ಪಾತ್ರ ಇದೆ. ಮದುವೆಯಾದ ಮಹಿಳೆಯರು ತಮ್ಮ ಕೂದಲನ್ನು ಮರೆಮಾಚುವ ಶಿರವಸ್ತ್ರ ಧರಿಸಬೇಕೆಂಬ ನಂಬಿಕೆ ಆ ಕಾಲದಲ್ಲಿ ಇತ್ತು. ಶಿರವಸ್ತ್ರ ಧರಿಸುವುದು ಒಂದು ಬಗೆಯ Symbol of Integrity ಆಗಿತ್ತು. ತಲೆ ತೆರೆದು ನಡೆಯುವುದು ಅಶಿಸ್ತು ಆಗಿತ್ತು. ಓರ್ವ ಮಹಿಳೆಯನ್ನು ಅವಮಾನಿಸುವುದಕ್ಕೆ ಬೈಗುಳ ಬೇಕಿರಲಿಲ್ಲ. ಆಕೆಯ ಶಿರವಸ್ತ್ರವನ್ನು ಕಿತ್ತು ಹಾಕಿದರೆ ಅದನ್ನು ಬಹುದೊಡ್ಡ ಅವಮಾನವಾಗಿ ಕಾಣಲಾಗುತ್ತಿತ್ತು. ನಿನ್ನ ತಲೆ ಬೆತ್ತಲೆ ಮಾಡುವೆ ಎಂಬ ಮಾತು ಈಗಲೂ ರಷ್ಯಾದಲ್ಲಿ ಚಾಲ್ತಿಯಲ್ಲಿದೆಯಂತೆ. ಅದೊಂದು ನಿರಾಕರಣೆ, ಅಸಂತೋಷ ವ್ಯಕ್ತಪಡಿಸುವ ಪದ. ಉಕ್ರೈನ್, ಬೆಲಾರಸ್ ಮತ್ತು ಸ್ಲಾವಿಕ್ ರಾಷ್ಟ್ರಗಳಲ್ಲಿ ಇವತ್ತೂ ಹಿರಿಯ ಕ್ರೈಸ್ತ ಮಹಿಳೆಯರು ಸಾಂಪ್ರದಾಯಿಕ ಶಿರವಸ್ತ್ರವನ್ನು ಧರಿಸುತ್ತಾರೆ ಎಂಬ ವಿವರಗಳಿವೆ. ಒಂದು ಕಾಲದಲ್ಲಿ ಕ್ರೈಸ್ತ ಮಹಿಳೆಯರ ಧಾರ್ಮಿಕ ಉಡುಪಾಗಿದ್ದ ಶಿರವಸ್ತ್ರವು ಬರಬರುತ್ತಾ ಅದನ್ನು ನನ್‍ಗಳ ತಲೆಗೆ ಹೊರಿಸಿ ಸಮಾಜ ಅದರಿಂದ ಮುಕ್ತವಾಯಿತು ಅನ್ನುವುದು ನಿಜ ಇತಿಹಾಸ. ಇವತ್ತು ಮಿಚಿಗನ್ ವಿಶ್ವವಿದ್ಯಾಲಯ ಸಮೀಕ್ಷೆಯನ್ನು ನಡೆಸಿದರೆ ಶಿರವಸ್ತ್ರದ ಪರ ನಿಲ್ಲುವ ಕ್ರೈಸ್ತ ಮಹಿಳೆಯರ ಸಂಖ್ಯೆ ತೀರಾ ತೀರಾ ನಗಣ್ಯ ಇದ್ದೀತು. ಆದರೆ ಮುಸ್ಲಿಮರಲ್ಲಿ ಈ ಸಂಖ್ಯೆ ಅತ್ಯಧಿಕ ಇದೆ. ಹೀಗಿದ್ದೂ, ಒಂದು ಆಗ್ನೆಸ್ ಶಿಕ್ಷಣ ಸಂಸ್ಥೆಯು  ನನ್‍ಗಳ ಶಿರವಸ್ತ್ರವನ್ನು ಧಾರ್ಮಿಕ ನೆಲೆಯಲ್ಲಿ ಸಮರ್ಥಿಸುತ್ತಾ ಮುಸ್ಲಿಮರ ಶಿರವಸ್ತ್ರಕ್ಕೆ ಅದೇ ಮಾನ್ಯತೆಯನ್ನು ಕೊಡದಿರುವುದು ಮತ್ತು ತಿರಸ್ಕರಿಸುವುದನ್ನು ಸಹಜವೆಂದು ಹೇಗೆ ಪರಿಗಣಿಸುವುದು? ಧರ್ಮದ ಹಿನ್ನೆಲೆಯಲ್ಲಿ ಮತ್ತು ಪಾಲನೆಯ ಆಧಾರದಲ್ಲಿ ಶಿರವಸ್ತ್ರಕ್ಕೆ ಅನುಮತಿ ಕೊಡುವುದಾದರೆ ಅದಕ್ಕೆ ಮೊದಲ ಪ್ರಾಶಸ್ತ್ಯ ಮುಸ್ಲಿಮರಿಗೇ ಸಲ್ಲಬೇಕು. ಧಾರ್ಮಿಕ ಕಾರ್ಯಕ್ಕಾಗಿ ಶಿರವಸ್ತ್ರ ಧರಿಸುವವರಲ್ಲಿ ಹೆಚ್ಚಿನವರು ಮುಸ್ಲಿಮ್ ಮಹಿಳೆಯರೇ ಆಗಿದ್ದಾರೆ. ಕ್ರೈಸ್ತರಲ್ಲಿ ಅದು ನನ್‍ಗಳಿಗೇ ಸೀಮಿತವಾಗಿ ಬಿಟ್ಟಿದೆ. ಆದ್ದರಿಂದ ಕ್ರೈಸ್ತ ಶಿಕ್ಪಣ ಸಂಸ್ಥೆಯೊಂದು ಶಿರವಸ್ತ್ರವನ್ನು ನಿಷೇಧಿಸುತ್ತದೆಂದರೆ ಅದಕ್ಕೆ ಬೇರೆಯದೇ ಕಾರಣಗಳನ್ನು ಹುಡುಕಬೇಕಾಗುತ್ತದೆ. ವಿದ್ಯಾರ್ಥಿನಿಯರು ಶಿರವಸ್ತ್ರವನ್ನು ದುರುಪಯೋಗಿಸುತ್ತಿದ್ದಾರೆ ಎಂಬುದು ಶಿರವಸ್ತ್ರ ನಿಷೇಧಕ್ಕೆ ಸೂಕ್ತ ಸಮರ್ಥನೆ ಆಗುವುದಿಲ್ಲ. ನೆಗಡಿಯಾಯಿತೆಂದು ಮೂಗನ್ನೇ ಕೊಯ್ಯುವುದು ಪರಿಹಾರ ಆಗಲಾರದಲ್ಲವೇ? ವಿದ್ಯಾರ್ಥಿಗಳು ಮೊಬೈಲ್ ಇಟ್ಟುಕೊಳ್ಳುತ್ತಾರೆಂದು ಬ್ಯಾಗನ್ನೇ ನಿಷೇಧಿಸಲಾದೀತೇ? ಒಂದು ರೀತಿಯಲ್ಲಿ, ಮುಸ್ಲಿಮ್ ಐಡೆಂಟಿಟಿಯನ್ನು ಅಪಾಯಕಾರಿಯಾಗಿ ಕಾಣುವ ಮತ್ತು ಮುಸ್ಲಿಮ ರೊಂದಿಗೆ ಅಂತರವಿಟ್ಟುಕೊಂಡು ಬದುಕಲು ಪ್ರೇರೇಪಿಸುವ ವಿಚಾರಧಾರೆಯೊಂದರ ಪ್ರಭಾವದ ಫಲಿತಾಂಶ ಇದಾಗಿರಬಹುದೇ ಅನ್ನುವ ಅನುಮಾನ ನನ್ನದು. ಈ ವಿಚಾಧಾರೆಯ ಪ್ರಸವ ಭಾರತದಲ್ಲಾಗಿಲ್ಲ. ಯುರೋಪಿಯನ್ ರಾಷ್ಟ್ರಗಳಿಂದ ಆಮದಾದ ಸರಕು ಇದು. 2017 ಆಗಸ್ಟ್ ನಲ್ಲಿ ಆಸ್ಟ್ರೇಲಿಯದ ಸಂಸದೆ ಪೌಲ್ ಹ್ಯಾನ್ಸನ್ ಎಂಬವರು ಮುಖ ಮುಚ್ಚಿದ ಬುರ್ಖಾದೊಂದಿಗೆ ಪಾರ್ಲಿಮೆಂಟಿಗೆ ಆಗಮಿಸಿದರು. ಎಲ್ಲರೆದುರೇ ಅದನ್ನು ಕಳಚಿ ಹಿಜಾಬ್ ನಿಷೇಧಕ್ಕೆ ಆಗ್ರಹಿಸಿದರು. ಈ ವಿನೂತನ ರೀತಿಯ ಪ್ರತಿಭಟನೆಗೆ ಪಾರ್ಲಿಮೆಂಟ್‍ನ ಇತರ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದರಾದರೂ ಈ ವಿಚಾರಧಾರೆಗೆ ಜಾಗತಿಕವಾಗಿ ಅದು ಅನುಕಂಪ ಗಿಟ್ಟಿಸಿಕೊಟ್ಟಿತು. ಈ ಪ್ರಕರಣಕ್ಕಿಂತ ಮೊದಲೇ ಯುರೋಪಿನ ಅನೇಕ ರಾಷ್ಟ್ರಗಳು ಬುರ್ಖಾ, ಶಿರವಸ್ತ್ರ, ನಮಾಝ, ಉಪವಾಸಗಳ ಸುತ್ತ ಚರ್ಚೆಯೊಂದನ್ನು ದೊಡ್ಡ ಮಟ್ಟದಲ್ಲಿಯೇ ಆರಂಭಿಸಿದ್ದುವು. ಅತ್ಯಂತ ಭೀತಿಯುಕ್ತವಾದ ಅಂಕಿ-ಅಂಶಗಳನ್ನು ಹರಡಿಕೊಂಡು ಗುಣಾಕಾರ-ಭಾಗಾಕಾರದಲ್ಲಿ ತೊಡಗಿದ್ದುವು. 2015ರಲ್ಲಿ ಪುಟ್ಟ ರಾಷ್ಟ್ರವಾದ ಚಾದ್‍ನಲ್ಲಿ ಎರಡು ಬಾಂಬ್ ಸ್ಫೋಟಗಳು ನಡೆದುವು. ಮುಖ ಮುಚ್ಚುವ ಪರ್ದಾವನ್ನು ಧರಿಸಿದವರು ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಯಿತು. ಈ ಸ್ಫೋಟದ ಎರಡೇ ವಾರಗಳಲ್ಲಿ ಅಂಥ ಪರ್ದಾಕ್ಕೆ ಚಾದ್‍ನಲ್ಲಿ ನಿಷೇಧ ಬಿತ್ತು. ಇದಾದ ಒಂದು ತಿಂಗಳ ಬಳಿಕ ಈ ಸ್ಫೋಟಗಳನ್ನೇ ಕಾರಣವಾಗಿ ಕೊಟ್ಟ ಕ್ಯಾಮರೂನ್, ನೈಜರ್, ಕಾಂಗೋ, ಕೊಸೊವೋ, ಅಝರ್‍ಬೈಜಾನ್‍ಗಳಲ್ಲೂ ನಿಷೇಧ ಹೇರಲಾಯಿತು. 2016ರಿಂದ ಸ್ವಿಝರ್‍ಲ್ಯಾಂಡ್‍ನ ಟೆಸ್ಸಾನ್ ಪ್ರದೇಶದಲ್ಲಿ ಮುಖಮುಚ್ಚುವ ಪರ್ದಾಕ್ಕೆ ನಿಷೇಧ ವಿಧಿಸಲಾಯಿತು. 2018ರಿಂದ ಡೆನ್ಮಾರ್ಕ್‍ನಲ್ಲಿ ಈ ನಿಷೇಧ ಜಾರಿಯಾಯಿತು. 2015ರಲ್ಲಿ ನೆದರ್‍ಲ್ಯಾಂಡ್‍ನಲ್ಲಿ ಈ ನಿಷೇಧ ಜಾರಿಗೆ ಬಂತು. 2011ರಲ್ಲಿ ಬೆಲ್ಜಿಯಂ, ಫ್ರಾನ್ಸ್ ಮತ್ತು ಸ್ಪೈನ್‍ನಲ್ಲೂ ಮುಖಮುಚ್ಚುವ ಪರ್ದಾವನ್ನು ತಿರಸ್ಕರಿಸುವ ಆದೇಶವನ್ನು ಹೊರಡಿಸಲಾಯಿತು. ಮಾನವ ಹಕ್ಕುಗಳಿಗಾಗಿರುವ ಯುರೋಪಿಯನ್ ನ್ಯಾಯಾಲಯವು (ECHR) 2014ರಲ್ಲಿ ಈ ಬಗ್ಗೆ ನೀಡಿರುವ ತೀರ್ಪನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ‘ಮುಖಪರದೆಯನ್ನು ನಿಷೇಧಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಗೆ ಸೇರುವುದಿಲ್ಲ.’

   ಅಶ್ಲೀಲತೆಯು ನೋಡುವವರ ಕಣ್ಣಿನಲ್ಲಿದೆಯೇ ಹೊರತು ಧರಿಸುವ ಬಟ್ಟೆಯಲ್ಲಿಲ್ಲ ಎಂದು ಬಲವಾಗಿ ವಾದಿಸುವ ಜಗತ್ತೇ, ಸ್ಕಾರ್ಫ್‍ನಲ್ಲಿ, ಗಡ್ಡ, ಬುರ್ಖಾ, ಪೈಜಾಮ, ಟೋಪಿಯಲ್ಲಿ ಮೂಲಭೂತವಾದವಿದೆ ಎಂದು ಹೇಳುತ್ತಿದೆ. ನಿಜವಾಗಿ, ಇದು ಪರಮ ದ್ವಂದ್ವ. ಅಶ್ಲೀಲತೆಯು ಕಣ್ಣಿನಲ್ಲಿದೆಯೆಂದಾದರೆ ಮೂಲಭೂತವಾದವೂ ಯಾಕೆ ಕಣ್ಣಿನಲ್ಲಿರಬಾರದು? ಸ್ಕಾರ್ಫ್ ಒಂದು ಸಹಜ ಉಡುಪು ಕ್ರಮ. ಗಡ್ಡವೂ, ಪರ್ದಾವೂ ಅಷ್ಟೇ. ಇದೇಕೆ ಮೂಲಭೂತವಾದವಾಗಿ ಕಾಣಬೇಕು? ಜಾಗತಿಕವಾಗಿಯೇ ಇರುವ ಹಂತಕ ಮನಸ್ಥಿತಿಗೆ ಮುಸ್ಲಿಮ್ ಎಂಬೊಂದು ನಾಮಕರಣ ಮಾಡಿ ಅದನ್ನು ಮತ್ತು ಅದು ಸಂಕೇತಿಸುವ ಚಿಹ್ನೆಗಳನ್ನೆಲ್ಲ ಡೈನೋಸಾರ್ ನಂತೆ ಬಿಂಬಿಸುವ ಪ್ರಯತ್ನಗಳು ಇವು. ಇವು ವಿದೇಶಕ್ಕಷ್ಟೇ ಸೀಮಿತವಲ್ಲ. ಭಾರತದಲ್ಲೂ ಇದೆ. ಹಾಗಂತ, ಮುಸ್ಲಿಮರು ಪರಮ ಪಾವನರು ಎಂದಲ್ಲ. ಅವರಲ್ಲಿ ಹಂತಕರಿದ್ದಾರೆ. ಭಯೋತ್ಪಾದಕರಿದ್ದಾರೆ. ಸಮಾಜದಲ್ಲಿ ಯಾವೆಲ್ಲ ಕೆಡುಕುಗಳಿವೆಯೋ ಅವುಗಳಲ್ಲಿ ಭಾಗಶಃವಾದರೂ ಅವರ ಪಾಲು ಇದ್ದೇ  ಇದೆ. ಆದರೆ, ಇವರಿಗೆ ಹೋಲಿಸಿದರೆ ನೂರು ಪಟ್ಟು ಅಧಿಕ ಹಂತಕ ಮನಸ್ಥಿತಿಯವರು ಇನ್ನೊಂದು ಕಡೆ ಇದ್ದಾರೆ. ಆದರೆ ಅವರೆಲ್ಲ ಜಗತ್ತಿನ ರಕ್ಷಣೆಯ ಸುಂದರ ಹೆಸರನ್ನು ತಮಗೆ ತಾವೇ ಕೊಟ್ಟುಕೊಂಡು ಬದುಕುತ್ತಿರುತ್ತಾರೆ. ಯಾವುದು ಸರಿ ಮತ್ತು ಯಾವುದು ತಪ್ಪು ಅನ್ನುವುದನ್ನು ಅವರೇ ನಿರ್ಧರಿಸಿ ಜಗತ್ತಿಗೆ ವಿವರಿಸುತ್ತಿದ್ದಾರೆ. ಅದನ್ನು ಭಾರತವೂ ಆಮದು ಮಾಡಿಕೊಂಡಿದೆ. ಭಾರತದಲ್ಲೂ ಮುಸ್ಲಿಮರೊಂದಿಗೆ ಅಂತರವಿಟ್ಟುಕೊಂಡು ಬದುಕುವ ಮತ್ತು ಮುಸ್ಲಿಮರ ಧಾರ್ಮಿಕ ಐಡೆಂಟಿಟಿಯ ಬಗ್ಗೆ ತಿರಸ್ಕಾರ ಭಾವ ಪ್ರದರ್ಶಿಸುವ ಮನಸ್ಥಿತಿಯೊಂದು ಬಲ ಪಡೆಯತೊಡಗಿದೆ. ಗೊತ್ತಿದ್ದೋ  ಗೊತ್ತಿಲ್ಲದೆಯೋ ಶಾಲಾ-ಕಾಲೇಜುಗಳ ಮೇಲೆ ಇದು ಪ್ರಭಾವ ಬೀರತೊಡಗಿದೆ. ಇಲ್ಲದಿದ್ದರೆ, 28% ಮುಸ್ಲಿಮ್ ಹೆಣ್ಮಕ್ಕಳು ಕಲಿಯುತ್ತಿರುವ ಕಾಲೇಜೊಂದು ಏಕಾಏಕಿ ಸ್ಕಾರ್ಫ್ ನಿಷೇಧಕ್ಕೆ ಮುಂದಾಗುತ್ತದೆಂದರೆ ಏನರ್ಥ? ಆದರೂ,
  
  ಆವೇಶದ ಪ್ರತಿಕ್ರಿಯೆಯೇ ಇದಕ್ಕೆ ಉತ್ತರ ಅಲ್ಲ. ಜಗತ್ತು ಇವತ್ತು ಇತರೆಲ್ಲ ಸಮುದಾಯಗಳಿಗಿಂತ ಹೆಚ್ಚು ಪ್ರಬುದ್ಧ ಪ್ರತಿಕ್ರಿಯೆಯನ್ನು ಮುಸ್ಲಿಮರಿಂದ ನಿರೀಕ್ಷಿಸುತ್ತಿದೆ. ಆರೋಪಗಳ ಪಟ್ಟಿಯನ್ನು ತಯಾರಿಸಿಟ್ಟು ತೂಗು ಹಾಕಲು ಮುಸ್ಲಿಮ್ ಕೊರಳುಗಳಿಗಾಗಿ ಕಾಯುತ್ತಿದೆ. ಆ ಕೊರಳುಗಳನ್ನು ತಯಾರಿಸಿಕೊಡುವ ರೀತಿಯಲ್ಲಿ ನಮ್ಮ ಪ್ರತಿಕ್ರಿಯೆ ಇರಬಾರದು, ಅಷ್ಟೇ.





ಜುನೈದ್‍, ದೀಪಕ್ ನಿಂದ ಹಿಡಿದು ಬಷೀರ್, ಹುಸೇನಬ್ಬರ ವರೆಗೆ...

   

ದೆಹಲಿಯ ನಿಝಾಮುದ್ದೀನ್ ರೈಲ್ವೇ ನಿಲ್ದಾಣ

ಮುಂಜಾನೆ. ರಮಝಾನ್ ತಿಂಗಳ ಉಪವಾಸ ಬೇರೆ. ಹರ್ಯಾಣದ ಬಲ್ಲಬ್‍ಘಢಕ್ಕೆ ತೆರಳಲು ರೈಲು ಸಿದ್ಧವಾಗಿ ನಿಂತಿತ್ತು. ನಾನು ಹತ್ತಿದೆ. ನನ್ನ ಪ್ರಯಾಣಕ್ಕೆ ನಿರ್ದಿಷ್ಟ ಗುರಿ ಇತ್ತು. ಆ 16ರ ಹರೆಯದ ಹಾಫಿಝ್ (ಕುರ್‍ಆನ್ ಕಂಠಪಾಠ ಮಾಡಿದವ) ಹುಡುಗನ ಮನೆಯವರನ್ನು ಕಂಡು ಮಾತಾಡಿಸಬೇಕಿತ್ತು. ಆ ಹುಡುಗ ಬೆಳೆದ ಖಡ್ಡೌಲಿ ಗ್ರಾಮಸ್ಥರೊಂದಿಗೆ ತುಸು ಹೊತ್ತು ಕಳೆಯಬೇಕಿತ್ತು. ಕಳೆದ ವರ್ಷ ಈದ್ ಹಬ್ಬಕ್ಕಿಂತ ವಾರ ಮೊದಲು ಆ ಹುಡುಗ ನನ್ನಂತೆಯೇ ನಿಝಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಮಧ್ಯಪ್ರದೇಶದ ಮಥುರಾಕ್ಕೆ ಹೋಗುವ ರೈಲನ್ನು ಸಂಜೆಯ ವೇಳೆಗೆ ಹತ್ತಿಕೊಂಡಿದ್ದ. ಖಡ್ಡೌಲಿಯಲ್ಲಿ ಇಳಿಯುವುದು ಅವನ ಉದ್ದೇಶವಾಗಿತ್ತು. ಜೊತೆಗೆ ಅಣ್ಣನೂ ಇದ್ದ. ಇಬ್ಬರು ಕಸಿನ್‍ಗಳೂ ಇದ್ದರು. ಕೈಯಲ್ಲಿ ಚೀಲ. ಚೀಲದೊಳಗೆ ಹಬ್ಬದ ಉಡುಪು. ಆ ನಾಲ್ವರ ತಲೆಯಲ್ಲೂ ಟೊಪ್ಪಿ ಇತ್ತು. ಅವರು ಕುರ್ತಾ-ಪೈಜಾಮ ಧರಿಸಿದ್ದರು. ಆ ಹುಡುಗ ಹೀಗೆ ಹಿಂತಿರುಗುವುದಕ್ಕಿಂತ ಮೊದಲು ದೆಹಲಿಯ ಜಾಮಾ ಮಸಿದೀಗೆ ತೆರಳಿ ಪೋಟೋ ಕ್ಲಿಕ್ಕಿಸಿಕೊಂಡಿದ್ದ. ಆ ಪೋಟೋ ತಾನು ಕ್ಲಿಕ್ಕಿಸುವ ಕೊನೆಯ ಪೋಟೋವಾಗುತ್ತದೆಂಬುದು ಆತನಿಗೆ ಗೊತ್ತಿರಲಿಲ್ಲ. ತನ್ನ ಚೀಲದಲ್ಲಿರುವ ಉಡುಪನ್ನು ಧರಿಸಲು ತನ್ನಿಂದ ಸಾಧ್ಯವಾಗದು ಅನ್ನುವುದೂ ಆತನಿಗೆ ಗೊತ್ತಿರಲಿಲ್ಲ. ಉತ್ತರ ಪ್ರದೇಶದ ಮೇವಾತ್‍ನಲ್ಲಿರುವ ಧಾರ್ಮಿಕ ಶಿಕ್ಷಣ ಸಂಸ್ಥೆಯಿಂದ ಹರ್ಯಾಣದ ಖಡ್ಡೌಲಿಯಲ್ಲಿರುವ ತನ್ನ ಮನೆಗೆ ಆತ ಹಿಂತಿರುಗಿದ್ದೇ ರಮಝಾನ್‍ನಲ್ಲಿ. ಹಾಗೆ ಹಿಂತಿರುಗುವಾಗ, ಆತನೊಳಗೆ ಪುಳಕ, ಅಭಿಮಾನ, ಸಂತೋಷ ಎಲ್ಲವೂ ಇತ್ತು. ತಾನು ಹಾಫಿಝ್ ಆಗಿದ್ದೇನೆ ಅನ್ನುವ ಖುಷಿ. ಕಳೆದ ಮೂರು ವರ್ಷಗಳಿಂದ ಶ್ರಮಪಟ್ಟು ಓದಿದ್ದು ಸಾರ್ಥಕ ವಾಯಿತು ಅನ್ನುವ ಹೆಮ್ಮೆ. ಪವಿತ್ರ ಕುರ್‍ಆನಿನ 114 ಅಧ್ಯಾಯಗಳನ್ನು ಕಂಠಪಾಠ ಮಾಡುವುದೆಂದರೆ ಸುಲಭ ಅಲ್ಲ. ಅದೊಂದು ಧ್ಯಾನ. ಛಲ. ನಿರಂತರ ಶ್ರಮ. ಪವಿತ್ರ ಕುರ್‍ಆನ್ ಇರುವುದು ಅರಬಿ ಭಾಷೆಯಲ್ಲಿ. ಈ ಹುಡುಗನ ಭಾಷೆಯಾದರೋ ಉರ್ದು. ತನ್ನದಲ್ಲದ ಭಾಷೆಯಲ್ಲಿರುವ ಪದಗಳನ್ನು, ವಾಕ್ಯಗಳನ್ನು ಅದರಲ್ಲೂ ಆರು ಸಾವಿರದ ಆರುನೂರಕ್ಕಿಂತಲೂ ಅಧಿಕ ಪದಗುಚ್ಛಗಳನ್ನು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲು. ಪವಿತ್ರ ಕುರ್‍ಆನಿನ 114 ಅಧ್ಯಾಯಗಳಲ್ಲಿ ಅಸಂಖ್ಯ ಬಾರಿ ಈ ಪದಗಳು ಪುನರು ಬಂದಿರುತ್ತವೆ. ಒಂದು ವಾಕ್ಯವನ್ನು ಹೋಲುವಂಥ ವಾಕ್ಯ ಇನ್ನೊಂದು ಕಡೆ ಇರುತ್ತದೆ. ಅದರ ಉಚ್ಚರಣೆಯ ಶೈಲಿ ಬೇರೆ. ಮಂಡನೆಯ ವಿಧಾನ ಬೇರೆ. ಆದ್ದರಿಂದಲೇ, ಹಾಫಿಝ್‍ಗೆ ಸಮಾಜದಲ್ಲಿ ವಿಶೇಷ ಆದರ, ಮನ್ನಣೆ ಇರುತ್ತದೆ. ಮೇವಾತ್‍ನಿಂದ ಹಿಂತಿರುಗಿದ ಆ ಹುಡುಗನಿಗೂ ತನ್ನ ಮನೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಅಮ್ಮ ಸಾಯಿರಾ ಬಾನು ಆತನನ್ನು ಬಿಗಿದಪ್ಪಿ ಕೊಂಡಿದ್ದರು. ಅಪ್ಪ ಆಲಂಗಿಸಿದ್ದರು. ಸಹೋದರರೂ ಆತನ ಬೆನ್ನು ತಟ್ಟಿದ್ದರು. ಈ ಖುಷಿಯಲ್ಲೇ ಅಮ್ಮ ಆತನಿಗೆ 1500 ರೂಪಾಯಿಯನ್ನು ನೀಡಿದ್ದರು. ಈದ್‍ಗೆ ಬಟ್ಟೆ ಬರೆ ಖರೀದಿಸು ಎಂದು ಪ್ರೀತಿಸಿದ್ದರು. ಹಾಗೆ ಉಡುಪು ಖರೀದಿಸಿ ಹಿಂತಿರುಗುತ್ತಿದ್ದ ವೇಳೆ ಆ ಕ್ರೌರ್ಯ ನಡೆದಿತ್ತು. ಹರ್ಯಾಣದ ಓಕ್ಲಾ ನಿಲ್ದಾಣದಲ್ಲಿ ರೈಲು ಹತ್ತಿದ ಸುಮಾರು 15 ರಿಂದ 20 ರಷ್ಟಿದ್ದ ಗುಂಪು ಇವರೊಂದಿಗೆ ಸೀಟಿನ ವಿಚಾರದಲ್ಲಿ ತಗಾದೆ ತೆಗೆಯಿತು. ಸೀಟು ಖಾಲಿ ಮಾಡುವಂತೆ ಆದೇಶಿಸಿತು. ಇವರ ಟೊಪ್ಪಿಯನ್ನು ಕಿತ್ತು ಹೊರಕ್ಕೆಸೆಯಿತು. ದೇಶದ್ರೋಹಿಗಳು ಎಂದು ಹೀಗಳೆಯಿತು. ಗೋಮಾಂಸ ಸೇವಕರು ಎಂದು ನಿಂದಿಸಿತು. ಚೀಲದಲ್ಲಿ ಬೀಫ್ ಕೊಂಡೊಯ್ಯುತ್ತಿದ್ದಾರೆ ಎಂದು ಸುಳ್ಳು ಸುಳ್ಳೇ ಘೋಷಿಸಿ ಅವರ ಮೇಲೆ ಕೈಹಾಕಿತು. ನೋಡು ನೋಡುತ್ತಿದ್ದಂತೆಯೇ ಆ ಗುಂಪು ಆ ಹುಡುಗನಿಗೆ ಚೂರಿಯಿಂದ ಇರಿಯಿತು. ಉಳಿದವರ ಮೇಲೂ ಹಲ್ಲೆ ನಡೆಸಿತು. ಆತ ತುಸು ಹೊತ್ತಿನಲ್ಲೇ ಸಾವಿಗೀಡಾದ...
  
 ರೈಲು ಬಲ್ಲಬ್‍ಘಢಕ್ಕೆ ಧಾವಿಸುತ್ತಿತ್ತು. ನನ್ನ ಮನಸ್ಸನ್ನಿಡೀ ಆ ಹುಡುಗನೇ ತುಂಬಿಕೊಂಡಿದ್ದ. ರೈಲು ಹಳಿಯ ಇಕ್ಕೆಲಗಳಲ್ಲಿ ಗಾಢ ಮೌನವೊಂದು ಆವರಿಸಿತ್ತು. ನಾನು ಬಲ್ಲಬ್‍ಘಢ್‍ನಲ್ಲಿ ಇಳಿದು ಆ ಹುಡುಗನ ಮನೆ ತಲುಪಿದೆ. ಆ ಹುಡುಗನ ತಂದೆ ಜಲಾಲುದ್ದೀನ್ ಮನೆಯಲ್ಲಿರಲಿಲ್ಲ. ರಮಝಾನ್‍ನ ಆರಂಭದಿಂದಲೇ ಅವರು ಹೆಚ್ಚಿನ ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಹೃದಯಾಘಾತವಾಗಿತ್ತು. ಇದೀಗ ಆ ಆಘಾತ ದಿಂದ ಚೇತರಿಸಿಕೊಂಡಿರುವರಾದರೂ ಕೆಲಸಕ್ಕೆ ಹೋಗುವಷ್ಟು ಆರೋಗ್ಯ ಅವರಲ್ಲಿಲ್ಲ. ಮಗನ ಸಾವು ಮತ್ತು ಆ ಬಳಿಕದ ಬೆಳವಣಿಗೆಗಳು ಅವರ ಹೃದಯವನ್ನು ದುರ್ಬಲಗೊಳಿಸಿತೋ ಅನ್ನುವ ಅನುಮಾನ ದೊಡ್ಡ ಮಗ ಹಾಶಿಮ್‍ನದ್ದು. ಮನೆಯ ಪಕ್ಕದಲ್ಲೇ ಆಟೋ ರಿಕ್ಷಾವೊಂದು ಅನಾಥ ಭಾವದಲ್ಲಿ ನಿಂತಿದೆ. ಮಗನ ಹತ್ಯೆಯ ಬಳಿಕ ಹಿತೈಷಿಗಳು ಈ ಆಟೋ ರಿಕ್ಷಾವನ್ನು ಜಲಾಲುದ್ದೀನ್‍ಗೆ ನೀಡಿದ್ದರು. ಮಗನ ಹತ್ಯೆಗೆ ಸಂಬಂಧಿಸಿ ಚಂಡೀಗಢ ಮತ್ತಿತರ ಕಡೆ ಪ್ರಯಾಣಿಸುವುದಕ್ಕಾಗಿ ಮಾತ್ರ ಈ ಆಟೋರಿಕ್ಷಾ ಈಗ ಬಳಕೆಯಾಗುತ್ತಿದೆ. ಅಲ್ಲದೆ, ಒಂದು ಬಗೆಯ ಅಸುರಕ್ಷಿತತೆಯ ಭಾವವೂ ಆ ಕುಟುಂಬದಲ್ಲಿದೆ. ಮಗನ ಹತ್ಯೆಯ ಪ್ರಧಾನ ಆರೋಪಿಗಳಲ್ಲಿ ಒಬ್ಬನಾದ ನರೇಶ್ ಕುಮಾರ್‍ಗೆ ಫರೀದಾಬಾದ್‍ನ ಜಿಲ್ಲಾ ನ್ಯಾಯಾಲಯವು ಕಳೆದ ವಾರ ಜಾಮೀನು ನಿರಾಕರಿಸಿದ್ದರೂ ಉಳಿದ ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಬೆಳವಣಿಗೆಯು ಆ ಕುಟುಂಬದಲ್ಲಿ ಆತಂಕವನ್ನು ಮೂಡಿಸಿದೆ. ಆದ್ದರಿಂದ ಪ್ರಯಾಣಕ್ಕೆ ಇತರ ವಾಹನಗಳನ್ನು ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಲು ಆ ಕುಟುಂಬ ತೀರ್ಮಾನಿಸಿದೆ. ವಿಶೇಷ ಏನೆಂದರೆ, ಆ ಹುಡುಗನೂ ಸೇರಿದಂತೆ ಈ ಕುಟುಂಬದ 7 ಮಂದಿ ಗಂಡು ಮಕ್ಕಳೂ ಹಾಫಿಝ್‍ಗಳು. ದೊಡ್ಡವ ಹಾಶಿಮ್ ಪಕ್ಕದ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ಅಚಲ ವಿಶ್ವಾಸ ಈ ಕುಟುಂಬದ್ದು.

  ಬಹುಶಃ ಆ ಇಡೀ ಮನೆಯ ಅಂತರ್ ಪ್ರೇರಣೆ ತಾಯಿ ಸಾಯಿರಾ ಬಾನು ಅಂತ ನನನಗನಿಸಿತು. ಅವರ ಮಾತುಗಳೇ ಅವರನ್ನು ಗೌರವಾರ್ಹಗೊಳಿಸುತ್ತಿತ್ತು. ತನ್ನ 7 ಮಕ್ಕಳನ್ನು ಹಾಫಿಝ್ ಮಾಡಲು ಸಾಧ್ಯವಾಗಿರುವುದಕ್ಕೆ ಅವರು ಹೆಮ್ಮೆಪಟ್ಟರು. ಅವರು ಪ್ರಬಲ ದೇವಭಕ್ತೆ ಅನ್ನುವುದನ್ನು ಅವರ ಪ್ರತಿ ಮಾತುಗಳೂ ಸಾರಿ ಹೇಳುತ್ತಿದ್ದುವು. ಹತ್ಯೆಗೀಡಾದ ಮಗನ ಬಗ್ಗೆ ಹೇಳುವಾಗ ಅವರು ಕಾಪಾಡಿಕೊಂಡ ಸಮಚಿತ್ತತೆ ಮತ್ತು ಸಹನೆ ನನ್ನನ್ನು ತೀವ್ರವಾಗಿ ನಾಟಿತು. ಅವರಿಗೆ ಮಗನ ಬಗ್ಗೆ ಹೇಳಿಕೊಳ್ಳುವುದಕ್ಕೆ ನೂರು ನಾಲಗೆಗಳಿದ್ದುವು. ಮಗ ಹಾಫಿಝ್ ಆದ ಖುಷಿಯಲ್ಲಿ ತಾನು ಅವನಿಗೆ ಹಣಕೊಟ್ಟು ದೆಹಲಿಗೆ ಕಳುಹಿಸಿಕೊಟ್ಟಿದ್ದು, ಸಂಜೆಯೊಳಗೆ ಹಿಂತಿರುಗುವೆ ಎಂದು ಮಾತುಕೊಟ್ಟ್ಟು ಮಗ ಅತೀವ ಲವಲವಿಕೆಯಿಂದ ಹೊರಟು ಹೋದದ್ದು ಮತ್ತು ಶವವಾಗಿ ಮಗ ತನಗೆ ಸಿಕ್ಕಿದ್ದನ್ನು ಆಕೆ ವಿವರಿಸುವಾಗ ಸಮಚಿತ್ತವನ್ನು ಎಂದೂ ಕಳಕೊಳ್ಳಲಿಲ್ಲ. ಕುರ್‍ಆನ್ ಪಠಣದಲ್ಲಿ ಮಗನಿಗೆ ಅಪಾರ ಆಸಕ್ತಿಯಿತ್ತು ಎಂದು ಆ ತಾಯಿ ಹೇಳಿಕೊಂಡರು. ಎಲ್ಲಿಯವರೆಗೆಂದರೆ ಒಂದೇ ಒಂದು ಬಾರಿ ಕೂಡ ಅವನ ಶಿಕ್ಷಕರಿಂದ ದೂರುಗಳು ಬಂದಿಲ್ಲ ಎಂಬ ಹೆಮ್ಮೆ ಅವರದು. ಯಾರ ಮೇಲೂ ಏರಿ ಹೋಗದ ಮತ್ತು ಯಾವ ಜಗಳದಲ್ಲೂ ಭಾಗಿಯಾಗದ ಮಗನ ಮೇಲೆ ಯಾಕೆ ಅವರು ಹಾಗೆ ಮಾಡಿದರು ಎಂದು ಪ್ರಶ್ನಿಸುವಾಗ ಅವರ ಕಪಾಲಗಳು ಒದ್ದೆಯಾದುವು. `ನನ್ನ ಮಗ ಒಳ್ಳೆಯವ. ಆದ್ದರಿಂದಲೇ ನಿಮ್ಮಂಥವರು ಇಲ್ಲಿವರೆಗೂ ಬಂದು ಆತನ ಬಗ್ಗೆ ಕೇಳುತ್ತೀರಿ. ಊರವರೂ ಈಗಲೂ ಆತನನ್ನು ನೆನಪಿಸಿಕೊಳ್ಳುತ್ತಾರೆ...' ಎಂದು ಹೇಳುತ್ತಾ ಅವರು ಹನಿಗಣ್ಣಾದರು. ಕಳೆದ ವರ್ಷ ಅವರ ಮನೆ ಮಾತ್ರವಲ್ಲ, ಅವರ ಗ್ರಾಮವೇ ಮೌನಕ್ಕೆ ಶರಣಾಗಿತ್ತು. ಗ್ರಾಮದಲ್ಲಿ ಯಾರೂ ಈದ್ ಆಚರಿಸಿರಲಿಲ್ಲ. ಈ ವರ್ಷ ಹಾಗಿಲ್ಲ. ಮಗನ ಅನುಪಸ್ಥಿತಿಯು ಈದ್ ಆಚರಣೆಗೆ ತಡೆ ಆಗಬಾರದೆಂಬುದು ಆ ತಾಯಿಯ ಬಯಕೆ. ತನ್ನ ಮಗ ಶಹೀದ್ (ಹುತಾತ್ಮ) ಆಗಿರುವನೆಂಬ ಮಾತನ್ನು ಆ ತಾಯಿ ದೃಢವಾಗಿ ಹೇಳುತ್ತಾರೆ. ಮಾತ್ರವಲ್ಲ, ತನ್ನ ಮಗನ ಹೆಸರಿನಲ್ಲಿ ಮದ್ರಸವೊಂದನ್ನು ಸ್ಥಾಪಿಸುವ ಗುರಿಯೊಂದಿಗೆ ರಂಗಕ್ಕಿಳಿದಿದ್ದಾರೆ. ಹೆಣ್ಮಕ್ಕಳಿಗೆ ಕುರ್‍ಆನ್ ಕಲಿಸುವುದಕ್ಕೆ ಆ ಮದ್ರಸವನ್ನು ಮೀಸಲಾಗಿರಿಸುವುದು ಅವರ ಆಸೆ. ಅದಕ್ಕಾಗಿ ಜಾಗವನ್ನೂ ಖರೀದಿಸಿದ್ದಾರೆ. ದಾನಿಗಳಿಂದ ಸಂಗ್ರಹಿಸಲಾದ ಮೊತ್ತವು ಸಾಕಾಗದೇ ತಮ್ಮ ಹೆಸರಲ್ಲಿರುವ ಜಾಗವನ್ನು ಮಾರಿ ಬಂದ ಹಣ ಮದ್ರಸಕ್ಕಾಗಿ ವ್ಯಯಿಸುತ್ತಿದ್ದಾರೆ.
  
 ಆ ಗ್ರಾಮದ ಎಲ್ಲ ಮಕ್ಕಳಿಗೂ ಆ ಹುಡುಗನ ಬಗ್ಗೆ ಗೊತ್ತು. ಮೇವಾತ್‍ನಿಂದ ಊರಿಗೆ ಬಂದಾಗಲೆಲ್ಲ ಆತ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಿದ್ದ. ಪರಿಸರದ ಮನೆಯವರಿಗೆ ಆತ ಮನೆಯ ಸದಸ್ಯನಷ್ಟು ಪರಿಚಿತ. ಅವನ ಬಗ್ಗೆ ಅವರಲ್ಲಿ ದೂರುಗಳಿಲ್ಲ. ಪ್ರಾಯ ಮೀರಿದ ಪಕ್ವತೆ ಮತ್ತು ಉತ್ತಮ ಸ್ವಭಾವವು ಪರಿಸರದವರ ಇಷ್ಟದ ಹುಡುಗನಾಗಿ ಆತನನ್ನು ಪರಿವರ್ತಿಸಿತ್ತು. ಆಟದ ನಡುವೆಯೇ ಆತ ನಮಾಝ್‍ನ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದುದು ಮತ್ತು ಗೆಳೆಯರನ್ನು ಜೊತೆ ಸೇರಿಸಿಕೊಂಡು ಮಸೀದಿಗೆ ತೆರಳುತ್ತಿದ್ದುದನ್ನು ಗೆಳೆಯರು ಸ್ಮರಿಸಿಕೊಂಡರು.
   
ನಾನು ಆ ಮನೆಯಿಂದ ಹೊರಡಲು ಸಿದ್ಧನಾದೆ. ಇಫ್ತಾರ್ ಮುಗಿಸಿಯೇ ಹೋಗಬೇಕೆಂದು ಆ ತಾಯಿ ನನ್ನನ್ನು ಒತ್ತಾಯಿಸಿದರು. ನನ್ನಲ್ಲಿ ಅದಕ್ಕೆ ಬೇಕಾದ ಸಮಯವಿರಲಿಲ್ಲ. ಆ ಉಮ್ಮನ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿ ಹಾಶಿಮ್‍ನ ಜೊತೆ ಆ ಹುಡುಗನನ್ನು ದಫನ ಮಾಡಿದ ಕಬರ್ ಸ್ಥಾನಕ್ಕೆ ಹೋದೆ. ಪ್ರಾರ್ಥಿಸಿದೆ. ವಿಶೇಷ ಏನೆಂದರೆ, ಆ ಹುಡುಗನ ಕಬರ್ ಇದುವೇ ಎಂದು ಪತ್ತೆ ಹಚ್ಚುವ ಯಾವೊಂದು ಕುರುಹೂ ಆ ಕಬರಸ್ತಾನದಲ್ಲಿರಲಿಲ್ಲ. ಶಹೀದ್‍ಗಳ ಕಬರ್ ಹೀಗಾಗುತ್ತದೆಂದು ಹಾಶಿಂ ಹೇಳಿದ. ಆ ಕುಟುಂಬದಲ್ಲಿ ಆ ಹುಡುಗನ ಬಗ್ಗೆ ಅತೀವ ಕಳಕಳಿಯಿದೆ. ಭಾವುಕತೆಯಿದೆ. ಆ ಹುಡುಗ ಇನ್ನಿಲ್ಲ ಎಂಬ ನೋವು ಒಂದೆಡೆಯಾದರೆ, ಮಗ ಶಹೀದ್ ಆಗಿರುವನೆಂಬ ಬಲವಾದ ವಿಶ್ವಾಸ ಇನ್ನೊಂದೆಡೆ. ಅಮ್ಮನಲ್ಲೂ ಅದೇ ಭಾವ. ಅಣ್ಣನಲ್ಲೂ ಅದೇ ವಿಶ್ವಾಸ. ಅಪ್ಪನೂ ಅದನ್ನೇ ಹೇಳುತ್ತಾರೆ. 7 ಮಂದಿ ಗಂಡು ಮಕ್ಕಳ ಪೈಕಿ 6 ಮಕ್ಕಳ ಉಪಸ್ಥಿತಿಯಿದ್ದೂ ಇಲ್ಲದ ಓರ್ವನಿಗಾಗಿ ಆ ಮನೆಮಂದಿಯಲ್ಲಿ ವ್ಯಕ್ತವಾಗುತ್ತಿರುವ ನೋವು, ಸಂಕಟವು ಅಪೂರ್ವವಾದದ್ದು. ಬಹುಶಃ ಆ ಹುಡುಗ ಆ ಮನೆಯನ್ನು ಅಷ್ಟು ತೀವ್ರವಾಗಿ ಪ್ರಭಾವಿಸಿದ್ದ. ಮನೆಯವರ ವಿಶೇಷ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದ. ಮಗ ಇಲ್ಲವಾಗಿ ವರ್ಷವಾದರೂ ಆತ ಈಗಲೂ ಆ ಮನೆಯ ನಿತ್ಯದ ಸ್ಮರಣೆಯಾಗಿದ್ದಾನೆ. ಹಾಗಂತ, ಇದು ಆ ಮನೆಗೆ ಮಾತ್ರ ಸೀಮಿತವಲ್ಲ. ನಾನು ಆ ಹುಡುಗನ ಕಬರ್‍ಗೆ ಭೇಟಿ ನೀಡಿ ಹಿಂತಿರುಗುವಾಗ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬರೂ ಆತನ ಗುಣಗಾನ ಮಾಡಿದರು...
 

      2017 ಜುಲೈಯಲ್ಲಿ ಹತ್ಯೆಗೀಡಾದ ಜುನೈದ್ ಎಂಬ 16ರ ಹರೆಯದ ಹುಡುಗನ ಬಗ್ಗೆ ಅಫ್ಝಲ್ ರಹ್ಮಾನ್ ಎಂಬವರು ಬರೆದ ಬರಹದ ಸಾರಾಂಶಗಳಿವು. ಮೊನ್ನೆ ಈದ್ ಹಬ್ಬದ  ಎರಡು ದಿನಗಳ ಬಳಿಕ ನಾನು ಈ ಬರಹವನ್ನು ಓದಿದೆ. ಓದುತ್ತಾ ಹೋದಂತೆ ನನ್ನ ಕಣ್ಣ ಮುಂದೆ ಹಲವು ಚಿತ್ರಗಳು ತೇಲಿ ಹೋದವು. ಜುನೈದ್‍ನಿಂದ ಹಿಡಿದು ಮಂಗಳೂರಿನ ದೀಪಕ್, ಪಶ್ಚಿಮ ಬಂಗಾಳದ ಮೌಲ್ವಿ ಇಮ್ದಾದುಲ್ಲಾರ 16ರ ಹರೆಯದ ಮಗ ಸಿಬ್ಗತುಲ್ಲಾನವರೆಗೆ, ಮಂಗಳೂರಿನ ಬಶೀರ್‍ ರಿಂದ  ಹಿಡಿದ ಇದೇ ಜಿಲ್ಲೆಯ ಕಾಟಿಪಳ್ಳದ ಹುಸೇನಬ್ಬರವರೆಗೆ... ಒಂದೊಂದು ಚಿತ್ರವೂ ಒಂದೊಂದು ಕತೆಯಾಗಿ ನನ್ನೆದುರು ಬಂದು ನಿಂತವು. ಮನಸು ಭಾರವಾಯಿತು.
    ಕೊಲ್ಲುವವರಿಗೆ ಇದು ಎಂದು ಅರ್ಥವಾಗುತ್ತೋ...



‘ಈದ್’ಗಳ ನಡುವೆ ಈದ್..

    
 ‘ನಾವೇಕೆ ಹಬ್ಬ ಆಚರಿಸಬೇಕು..’ ಎಂಬ ಪ್ರಶ್ನೆಯನ್ನು ಈ ಹಿಂದೆ ‘ಯಾಹೂ’ವಿನಲ್ಲಿ ಕೇಳಲಾಗಿತ್ತು. ಸುಮಾರು 420 ಮಂದಿ ಈ ಬಗ್ಗೆ  ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ವಿಶೇಷ ಏನೆಂದರೆ, ಬಹುತೇಕ ಹೆಚ್ಚಿನೆಲ್ಲ ಅಭಿಪ್ರಾಯಗಳ ಆಶಯದಲ್ಲಿ ವಿಪರೀತ ಅನ್ನಬ ಹುದಾದ ವ್ಯತ್ಯಾಸ ಇರಲಿಲ್ಲ.
1. ನಮ್ಮಿಂದ ದೂರ ಇರುವ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಹಬ್ಬಗಳು ಅವಕಾಶ ಮಾಡಿಕೊಡುತ್ತವೆ.
2. ವೈರಿಗಳಿಗೂ ಕೂಡ ವಿಶ್ ಮಾಡುವ ಸಂದರ್ಭವನ್ನು ಹಬ್ಬಗಳು ಒದಗಿಸಿಕೊಡುತ್ತವೆ.
3. ಸಾಕಷ್ಟು ಪ್ರೀತಿ-ಪ್ರೇಮಗಳು ಚಿಗುರೊಡೆಯುವುದೇ ಹಬ್ಬಗಳಿಂದ.
4. ನಾವು ಹಬ್ಬಗಳಿಗಾಗಿ ಎಷ್ಟು ಹಣ ವ್ಯಯ ಮಾಡುತ್ತೇವೋ ಅದಕ್ಕಿಂತಲೂ ಅಧಿಕ ಸಂತಸವನ್ನು ಹಬ್ಬಗಳಿಂದ ಪಡೆಯುತ್ತೇವೆ..
ಎಂಬುದೇ ಒಟ್ಟು ಉತ್ತರಗಳ ಸಾರಾಂಶವಾಗಿತ್ತು. ಆದರೆ, ಇದೇ ವೇಳೆ ‘ನಾವೇಕೆ ಹಬ್ಬ ಆಚರಿಸಬಾರದು..’ ಎಂಬುದಕ್ಕೂ ಅನೇಕರು  ಕಾರಣಗಳನ್ನು ಕೊಟ್ಟಿದ್ದರು. ಸಂಗೀತಗಳ ಅಬ್ಬರದಿಂದ ಕಿವಿ ತೂತಾಗುತ್ತೆ, ಯತೇಚ್ಛ ಮದ್ಯಪಾನದಿಂದಾಗಿ ಘರ್ಷಣೆಗಳಾಗುತ್ತೆ, ನೀರು  ಮಲಿನವಾಗುತ್ತೆ; ತಿಂಡಿ-ತಿನಿಸುಗಳ ಪೊಟ್ಟಣಗಳಿಂದ ರಸ್ತೆ, ಪರಿಸರ ಗಲೀಜಾಗುತ್ತೆ, ಮೆರವಣಿಗೆ ಮುಂತಾದುವುಗಳಿಂದ ರಸ್ತೆ ಸಂಚಾರ ಅಸ್ತ ವ್ಯಸ್ತವಾಗುತ್ತೆ..’ ಎಂದೆಲ್ಲ ಅವರು ದೂರಿಕೊಂಡಿದ್ದರು.
  
 ನಿಜವಾಗಿ, ಈ ಮೇಲಿನ ಎರಡೂ ಅಭಿಪ್ರಾಯಗಳು ವಾಸ್ತವಕ್ಕೆ ಅತೀ ಹತ್ತಿರವಾದವು. ಕ್ರೈಸ್ತ, ಇಸ್ಲಾಮ್, ಹಿಂದೂ, ಬೌದ್ಧ, ಸಿಕ್ಖ್, ಜೈನ್,  ಯಹೂದಿ.. ಮುಂತಾದ ಎಲ್ಲ ಧರ್ಮ ಗಳಲ್ಲೂ ಹಬ್ಬಗಳಿಗೆಂದೇ ನಿಗದಿತ ದಿನಗಳಿವೆ. ಒಂದಕ್ಕಿಂತ ಹೆಚ್ಚು ದಿನಗಳ ವರೆಗೆ ಚಾಚಿಕೊಂಡ  ಹಬ್ಬಗಳೂ ಇವೆ. ಹೋಲಿಕಾ ಎಂಬ ಪಿಶಾಚಿಯಿಂದ ಪ್ರಹ್ಲಾದನು ಪವಾಡ ಸದೃಶವಾಗಿ ಪಾರಾದ ಘಟನೆಯನ್ನು ಸ್ಮರಿಸುವ ‘ಹೋಲಿ’ ಹಬ್ಬವನ್ನು 16 ದಿನಗಳ ವರೆಗೆ ಆಚರಿಸಲಾಗುತ್ತದೆ. ಈ ಘಟನೆಯಲ್ಲಿ ಪ್ರಹ್ಲಾದನ ಬದಲು ಪಿಶಾಚಿಯೇ ಸುಟ್ಟು ಹೋಗುತ್ತದೆ. ಭಗವಾನ್  ವಿಷ್ಣುವಿನ ಭಕ್ತನಾದ ಪ್ರಹ್ಲಾದನನ್ನು ಬೆಂಕಿಯಲ್ಲಿ ಹಾಕಿ ಸುಟ್ಟು ಹಾಕಬೇಕೆಂಬ ಉದ್ದೇಶದಿಂದ ಕರೆತಂದ ಹೋಲಿಕಾ ಕೊನೆಗೆ ತಾನೇ ಸುಟ್ಟು  ಹೋಗುತ್ತದೆ. ಇನ್ನು, ಶ್ರೀಲಂಕಾದಲ್ಲಿ ಎಸ್ನಾಲ ಪೆರಹೆಲಾ ಎಂಬ ಕಲರ್‍ಫುಲ್ ಹಬ್ಬ ಇದೆ. ಲಂಕಾದ ಅತಿದೊಡ್ಡ ಹಬ್ಬವಾಗಿ ಇದು  ಗುರುತಿಸಿಕೊಂಡಿದೆ. 10 ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪವಿತ್ರ ಹಲ್ಲನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ‘ದಲದ ಮಲಗವ’ ಎಂಬ ದೇವಾಲಯದಲ್ಲಿ ಈ ಹಲ್ಲನ್ನು ಸಂರಕ್ಷಿಸಿಡಲಾಗಿದ್ದು, ಹಬ್ಬದ ಸಂದರ್ಭದಲ್ಲಿ ಈ ಹಲ್ಲನ್ನು  ಮೆರವಣಿಗೆಯಲ್ಲಿ ಕೊಂಡೊಯ್ಯುವ ಸಂಪ್ರದಾಯ ಇದೆ. ಬೌದ್ಧರೇ ಹೆಚ್ಚಿರುವ ಬರ್ಮಾದಲ್ಲಿ ಪಾವುಂಗ್ ಡಾಡೊ ಪಗೋಡ ಎಂಬ ಪ್ರಸಿದ್ಧ  ಹಬ್ಬ ಇದೆ. ಬರ್ಮಾದ ಮಟ್ಟಿಗೆ ಇದು ಅತಿ ದೊಡ್ಡ ಹಬ್ಬ. ಈ ಹಬ್ಬದ ಆಯುಷ್ಯ 20 ದಿನಗಳು. ಇದರ ವಿಶೇಷತೆ ಏನೆಂದರೆ, ಚಂದ್ರನನ್ನು  ಆಧರಿಸಿದ ಹಬ್ಬ ಇದು. ಚಂದ್ರನ ಉದಯದೊಂದಿಗೆ ಈ ಹಬ್ಬ ಆರಂಭಗೊಳ್ಳುತ್ತದೆ. ಸಾಮಾನ್ಯವಾಗಿ ಸೆಪ್ಟೆಂಬರ್-ಅಕ್ಟೋಬರ್‍ನಲ್ಲಿ  ನಡೆಯುವ ಈ ಹಬ್ಬದಲ್ಲಿ ಗೌತಮ ಬುದ್ಧನ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಖುಷಿಪಡಲಾಗುತ್ತದೆ. ಥಾಯ್ಲೆಂಡ್‍ನಲ್ಲಿ ¸ ಸಾಂಕ್ರಣ್ ಎಂಬ ಹೆಸರಿನ ಹಬ್ಬ ಇದೆ. ಇದನ್ನು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ಈ ಮೂರೂ ದಿನ ಸರಕಾರ ಸಾರ್ವತ್ರಿಕ  ರಜೆಯನ್ನು ಘೋಷಿಸಿದೆ. ಈ ಹಬ್ಬ ಥಾಯ್ಲೆಂಡ್‍ನ ಹೊಸ ವರ್ಷದ ಆರಂಭವಾಗಿಯೂ ಗುರುತಿಸಿಕೊಂಡಿದೆ. ಅತಿ ಬಿಸಿಲಿನ ಸಮಯದಲ್ಲಿ  ಆಚರಿಸಲ್ಪಡುವ ಈ ಹಬ್ಬದಲ್ಲಿ ಪರಸ್ಪರ ನೀರನ್ನು ಚೆಲ್ಲುವ ಸಂಪ್ರದಾಯವಿದೆ. ರಸ್ತೆ ಮತ್ತಿತರ ಕಡೆ ನಡೆದಾಡುವವರ ಮೇಲೆ ನೀರು ಚೆಲ್ಲಿ  ಖುಷಿಪಡಲಾಗುತ್ತದೆ. ಕಾಂಬೋಡಿಯಾ, ಲಾವೋಸ್ ಮತ್ತು ಬರ್ಮಾಗಳಲ್ಲೂ ಬೇರೆ ಬೇರೆ ಹೆಸರುಗಳಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ.
ಅಷ್ಟಕ್ಕೂ, ಹಬ್ಬಗಳ ಮುಖ್ಯ ಉದ್ದೇಶ ಏನು, ಸಂತಸ ಪಡುವುದೇ? ಇವತ್ತಿನ ದಿನಗಳಲ್ಲಿ ಸಂತಸಪಡುವುದಕ್ಕೆ ಪ್ರತ್ಯೇಕ ದಿನಗಳ  ಅಗತ್ಯವಿದೆಯೇ? ಟಿ.ವಿ. ರೇಡಿಯೋ, ಮೊಬೈಲ್, ಕಂಪ್ಯೂಟರ್, ಸಿನಿಮಾ.. ಮುಂತಾದುವುಗಳಿಲ್ಲದ ಒಂದಾನೊಂದು ಕಾಲ ಇವತ್ತಿನದ್ದಲ್ಲ.  ಇವತ್ತು ಎಲ್ಲವನ್ನೂ ತಂತ್ರಜ್ಞಾನ ಅಗ್ಗವಾಗಿಸಿದೆ. ಸಂತಸ ಬೆರಳ ತುದಿಯಲ್ಲಿದೆ. ನಿಮಗೆ ಇಷ್ಟವಾದ ಹಾಡನ್ನು ಯಾವಾಗ ಬೇಕಾದರೂ  ಆಲಿಸಬಹುದು. ಎಷ್ಟು ಬೇಕಾದರೂ ಆಲಿಸಬಹುದು. ಅದಕ್ಕಾಗಿಯೇ ಪ್ರತ್ಯೇಕ ಸಭೆಗಳನ್ನೋ ದಿನಗಳನ್ನೋ ಸಂದರ್ಭಗಳನ್ನೋ ಹುಟ್ಟು  ಹಾಕಬೇಕಿಲ್ಲ. ಮಾತಾಡಬೇಕೆಂದು ಅನಿಸಿದಾಗಲೆಲ್ಲ ಮಾತಾಡಬಹುದಾದ ವ್ಯವಸ್ಥೆ ಈಗಿನದು. ವಾಟ್ಸ್ಯಾಪ್, ಫೇಸ್‍ಬುಕ್, ಟ್ವೀಟರ್‍ಗಳು  ಮಾತನ್ನು ಅಗ್ಗಗೊಳಿಸಿವೆ. ಹಿಂದಿನ ಕಾಲದಂತೆ ಸಂಬಂಧಿಕರನ್ನು ಭೇಟಿಯಾಗುವುದಕ್ಕೆ ಮತ್ತು ಕುಶಲ ವಿಚಾರಿಸುವುದಕ್ಕೆ ಹಬ್ಬಗಳನ್ನು  ಕಾಯಬೇಕಿಲ್ಲ. ಮೊಬೈಲ್ ಇದೆ. ವೀಡಿಯೋ ಮಾತುಕತೆಗೂ ಅದರಲ್ಲಿ ಅವಕಾಶ ಇದೆ. ಆಧುನಿಕ ತಂತ್ರಜ್ಞಾನಗಳು ಮನುಷ್ಯರನ್ನು ಪರಸ್ಪರ  ಅಡುಗೆ ಕೋಣೆ ಮತ್ತು ಬೆಡ್‍ರೂಮಿನಷ್ಟೇ ಹತ್ತಿರಗೊಳಿಸಿರುವ ಈ ದಿನಗಳಲ್ಲಿ ಶಬ್ದಮಾಲಿನ್ಯ, ನೀರು ಮಾಲಿನ್ಯ ಸಹಿತ ಕೆಲವಾರು ಮಾಲಿನ್ಯ  ಮತ್ತು ಅಪಾಯಗಳಿಗೆ ಅವಕಾಶ ಕೊಡಬಹುದಾದ ಹಬ್ಬಗಳ ಆಚರಣೆ ಪ್ರಸ್ತುತವೇ ಎಂಬ ಪ್ರಶ್ನೆ ತೀರಾ ಬಾಲಿಶವಲ್ಲ.
ಮೆಕ್ಸಿಕೋದಲ್ಲಿ ಸಾವಿನ ದಿನ ಎಂಬೊಂದು ಸಂಪ್ರದಾಯವಿದೆ. ಇದನ್ನು ಅಲ್ಲಿ ಹಬ್ಬದಂತೆ ಆಚರಿಸಲಾಗುತ್ತದೆ. ಸಾವಿಗೀಡಾದವರ ಆತ್ಮಕ್ಕೆ ಶಾಂತಿ ಕೋರಲು ಮೀಸಲಾಗಿರುವ ಈ ಹಬ್ಬಕ್ಕೆ ತಿಂಗಳ ಮೊದಲೇ ಸಿದ್ಧತೆಗಳು ನಡೆಯುತ್ತವೆ. ರೊಟ್ಟಿಗಳು ಮತ್ತು ಕ್ಯಾಂಡಲ್ ಗಳನ್ನು ಈ  ಹಬ್ಬದಲ್ಲಿ ಧಾರಾಳ ಬಳಸುತ್ತಾರೆ. ಮನುಷ್ಯನ ಅಸ್ಥಿಪಂಜರದ ಆಕಾರದಲ್ಲಿ ಕೇಕ್‍ಗಳನ್ನು ತಯಾರಿಸುತ್ತಾರೆ. ದೇಹದ ಆಂತರಿಕ ಭಾಗಗಳ  ಆಕಾರದಲ್ಲೂ ಕೇಕ್‍ಗಳನ್ನು ತಯಾರಿಸಿ, ಮೃತರಾದ ತಮ್ಮವರ ಗೋರಿಗಳ ಬಳಿ ನಿಗದಿತ ದಿನ ಎಲ್ಲರೂ ಒಟ್ಟು ಸೇರುತ್ತಾರೆ. ಅಲ್ಲಿ ¸ ಸ್ವಚ್ಛಗೊಳಿಸುವ ಕೆಲಸ ನಡೆಯುತ್ತದೆ. ಅಲ್ಲಿ ಕ್ಯಾಂಡಲ್ ಹೊತ್ತಿಸುತ್ತಾರೆ. ಹೂ ಇಡುತ್ತಾರೆ. ಮೃತಪಟ್ಟವರ ಗುಣಗಾನ ಮಾಡುತ್ತಾರೆ.  ಮೃತಪಟ್ಟವರ ಇಷ್ಟದ ಆಹಾರ ಮತ್ತು ಮದ್ಯದೊಂದಿಗೆ ರಾತ್ರಿಪೂರ್ತಿ ಸ್ಮಶಾನದಲ್ಲಿ ಪಾರ್ಟಿ ಮಾಡುತ್ತಾರೆ. ಬ್ರೆಝಿಲ್‍ನಲ್ಲೂ ತುಸು ಬದಲಾವಣೆಯೊಂದಿಗೆ ಇದನ್ನೇ ಹೋಲುವ ಆಚರಣೆಯಿದೆ. ಜಪಾನ್‍ನಲ್ಲಂತೂ ಬಹಳ ಪುರಾತನ ಕಾಲದಿಂದಲೇ ಪ್ರತಿ ವರ್ಷ ಆಚರಿಸುತ್ತಾ ಬಂದಿರುವ ಹಡಕ ಮತ್ಸುರಿ ಎಂಬ ಆಚರಣೆಯೊಂದಿದೆ. ಅದಕ್ಕೆ ‘ಶಿಂಟೋ ನಗ್ನ ಹಬ್ಬ’ ಎಂಬ ಹೆಸರೂ ಇದೆ. ಇದರ ವಿಶೇಷತೆ ಏನೆಂದರೆ, 

ಈ ಹಬ್ಬದಲ್ಲಿ ಭಾಗವಹಿಸುವುದು ಪುರುಷರು ಮಾತ್ರ. ಈ ಹಬ್ಬ ಅರೆನಗ್ನವಾಗಿ ನಡೆಯುತ್ತದೆ. ಈ ಹಬ್ಬದ ಆಚರಣೆ ಹೇಗೆಂದರೆ, ಓರ್ವ  ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ. ಆತ ಆ ಹಬ್ಬದ ನಗ್ನ ಪಾತ್ರಧಾರಿ ಅಥವಾ ಶಿನ್ ಓಟೊಕ್. ಆತ ರಸ್ತೆಯುದ್ದಕ್ಕೂ ನಗ್ನವಾಗಿಯೇ  ಓಡಬೇಕು. ಆ ಸಮಯದಲ್ಲಿ ರಸ್ತೆಯುದ್ದಕ್ಕೂ ನಿಂತಿರುವ ಪುರುಷರು ಆತನನ್ನು ಸ್ಪರ್ಶಿಸಲು ಯತ್ನಿಸುತ್ತಾರೆ. ಆತನನ್ನು ಸ್ಪರ್ಶಿಸಿದರೆ ಅದೃಷ್ಟ  ಖುಲಾಯಿಸುತ್ತದೆ ಎಂಬುದು ಅವರ ನಂಬಿಕೆ. ಬೊವಿಲಿಯದಲ್ಲೊಂದು ವಿಶಿಷ್ಟ ಹಬ್ಬವಿದೆ. ಪ್ರತಿ ವಾರ ಕಾರು, ಟ್ಯಾಕ್ಸಿ, ಬಸ್ ಮುಂತಾದ  ವಾಹನಗಳ ಮಾಲಕರು ತಮ್ಮ ವಾಹನಗಳನ್ನು ಶೃಂಗರಿಸುತ್ತಾರೆ. ಭಾರತದಲ್ಲಿ ವರ್ಷಕ್ಕೊಮ್ಮೆ ನಡೆಯುವ ಆಯುಧ ಪೂಜೆಯನ್ನೇ  ಹೋಲುವ ಈ ಆಚರಣೆಗೆ ಲಾ ಬೆಂಡಿಶನ್ ಡೆ ಮೊವಿಲಿಡೇಡ್ಸ್ (ವಾಹನ ಹರಸುವ ದಿನ) ಎಂದು ಹೆಸರು. ಧರ್ಮಗುರುಗಳು ವಾಹನಗಳನ್ನು ಹರಸಿದ ಬಳಿಕ ಪಟಾಕಿ ಸಿಡಿಸಲಾಗುತ್ತದೆ. ಶಾಂಪೇನ್ ಅನ್ನು ಬಳಸಲಾಗುತ್ತದೆ. ಅಂದಹಾಗೆ, ಭಾರತದಲ್ಲಂತೂ ಹಬ್ಬಗಳ ರಾಶಿಯೇ  ಇದೆ. ಮಹಾ ಶಿವರಾತ್ರಿ, ಗಣೇಶ ಚತುರ್ಥಿ, ಕೃಷ್ಣಾಷ್ಟಮಿ, ಓಣಂ, ದೀಪಾವಳಿ, ನವರಾತ್ರಿ ಉತ್ಸವ, ರಾಮನವಮಿ.. ಮುಂತಾದ ಅನೇಕಾರು  ಹಬ್ಬಗಳಿವೆ. ಮಾತ್ರವಲ್ಲ, ಈ ಹಬ್ಬಗಳ ಆಚರಣಾ ವಿಧಾನದ ಕುರಿತಂತೆ ಸಾರ್ವಜನಿಕರಲ್ಲಿ ದೂರುಗಳೂ ಇವೆ. ಮಾಧ್ಯಮಗಳು ವಿಶೇಷವಾಗಿ  ಪ್ರತಿ ವರ್ಷ ದೀಪಾವಳಿ, ಗಣೇಶ ಚತುರ್ಥಿ, ಜನ್ಮಾಷ್ಟಮಿಯ ಸಂದರ್ಭದಲ್ಲಿ ಜನಜಾಗೃತಿ ಅಭಿಯಾನ ವನ್ನೇ ಹಮ್ಮಿಕೊಳ್ಳುವುದಿದೆ. ಕಣ್ಣಿನ  ಬಗ್ಗೆ, ನೀರು ಮತ್ತು ಶಬ್ದ ಮಾಲಿನ್ಯಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸರಕಾರಗಳೇ ಜಾಹೀ ರಾತನ್ನು ಹೊರಡಿಸುತ್ತವೆ. ಒಂದು ರೀತಿಯಲ್ಲಿ,  ಹಬ್ಬಗಳು ಅನು ಭವಿಸುವುದಕ್ಕಿಂತ ಸಹಿಸಿಕೊಳ್ಳಬೇಕಾದ ಹೊರೆಗಳಾಗಿ ಬದಲಾಗುತ್ತಿವೆಯೇನೋ ಎಂದು ಅಂದುಕೊಳ್ಳುವ ಹಂತಕ್ಕೆ  ತಲುಪಿಬಿಟ್ಟಿದೆ. ದೀಪಾವಳಿ ಬಂತೆಂದರೆ ತಮ್ಮ ಮಕ್ಕಳ ಕಣ್ಣಿನ ಬಗ್ಗೆ ಹೆತ್ತವರು ವಿಶೇಷ ನಿಗಾ ಇಡಬೇಕಾಗುತ್ತದೆ. ಸಾರ್ವಜನಿಕರು ರಸ್ತೆಯಲ್ಲಿ  ಗಂಟೆಗಟ್ಟಲೆ ಸಿಲುಕಿಕೊಳ್ಳುತ್ತಾರೆ. ಸಂಗೀತಗಳ ಅಬ್ಬರವೂ ಕಡಿಮೆಯೇನಿಲ್ಲ. ಹಬ್ಬಗಳೆಂದರೆ ‘ಭಯ’ ಉಂಟು ಮಾಡುವುದರ ಹೆಸರೇ?  ಪ್ರೀತಿ-ಪ್ರೇಮವನ್ನು ಚಿಗುರೊಡೆಯಿಸುವ ಸಂದರ್ಭವೇ? ಹಬ್ಬಗಳ ನಿಜ ಉದ್ದೇಶ ಏನು? ಹೊಸ ಬಟ್ಟೆ, ಮೋಜು-ಮಸ್ತಿ ಇವುಗಳಾಚೆಗೆ  ಹಬ್ಬ ಏನು? ಹಬ್ಬವನ್ನು ಆಚರಿಸಿದ ವ್ಯಕ್ತಿ ಪ್ರಾಯೋಗಿಕವಾಗಿ ಏನನ್ನು ಗಿಟ್ಟಿಸಿಕೊಳ್ಳುತ್ತಾನೆ? ಬರೇ ಮೋಜು-ಮಸ್ತಿಯೇ ಹಬ್ಬದ ಪರಮ  ಗುರಿ ಮತ್ತು ಹಬ್ಬದಿಂದ ಕಲಿಯುವ ಪಾಠಗಳು ಏನೇನೂ ಇಲ್ಲ ಅನ್ನುವ ರೀತಿಯಲ್ಲಿ ಹಬ್ಬಗಳು ಬದಲಾಗಿವೆಯೇ ಅಥವಾ ಹಬ್ಬಗಳೇ  ಹಾಗೆಯೇ?
  
  ನಿಜವಾಗಿ, ಮುಸ್ಲಿಮರ ಈದ್ (ಹಬ್ಬ) ವಿಶ್ಲೇಷಣೆಗೆ ಒಳಗಾಗ ಬೇಕಾದದ್ದು ಈ ಎಲ್ಲ ಕಾರಣಗಳಿಗಾಗಿ. ಅದು ಸಂತಸಕ್ಕಾಗಿ ಮಾತ್ರ ಇರುವ  ಹಬ್ಬ ಅಲ್ಲ. 30 ದಿನಗಳ ಉಪವಾಸ ಮತ್ತು ಆ ಬಳಿಕ ಒಂದು ಹಬ್ಬ. ಈ ಹಬ್ಬದಲ್ಲಿ ಅತ್ಯಂತ ಕಡ್ಡಾಯ ವಾಗಿರುವುದು ಏನು ಅಂದರೆ,  ಅತ್ಯಂತ ಬಡವರ ಮನೆಯ ಬಾಗಿಲನ್ನು ತಟ್ಟುವುದು. ಅವರಿಗೆ ನÉೈತಿಕ ಬೆಂಬಲ ಸಾರುವುದು. ಅವರ ಆ ದಿನದ ಅಗತ್ಯಗಳಿಗೆ ಕಡ್ಡಾಯವಾಗಿ  ತನ್ನ ಪಾಲನ್ನು ನೀಡುವುದು. 30 ದಿನಗಳ ಉಪವಾಸವನ್ನು ಅತ್ಯಂತ ಶ್ರದ್ಧೆಯಿಂದ ಆಚರಿಸಿದ ವ್ಯಕ್ತಿ, ಬಡವರಿಗೆ ಸಂಬಂಧಿಸಿ ಈ  ಹೊಣೆಯಿಂದ ಜಾರಿಕೊಂಡರೆ ಆತ/ಕೆ ಅಪರಾಧಿಯಾಗುತ್ತಾನೆ. ಇಲ್ಲಿ ಹಬ್ಬದ ಉದ್ದೇಶ ಅತ್ಯಂತ ಸ್ಪಷ್ಟವಿದೆ. ಬರೇ ಸಂತಸ ಅದರ ಪ್ರಥಮ  ಆದ್ಯತೆ ಆಗಿರುತ್ತಿದ್ದರೆ ಹಬ್ಬದ ದಿನದಂದು ಹೊಸಬಟ್ಟೆ ಧರಿಸಿ, ಪಫ್ರ್ಯೂಮ್ ಪೂಸಿ, ಮಸೀದಿಗೆ ಹೋಗುವುದು, ನಮಾಝï ಮತ್ತು ಪರಸ್ಪರ  ಆಲಿಂಗನದೊಂದಿಗೆ ಮನಸೋ ಇಚ್ಛೆ ಖುಷಿ ಪಡುವುದು ಕಡ್ಡಾಯವಾಗಬೇಕಿತ್ತು. ಅಥವಾ ಇವಿಲ್ಲದಿದ್ದರೆ ಹಬ್ಬ ಸಂಪೂರ್ಣ ಆಗುವುದಿಲ್ಲ  ಎಂಬ ಖಡಾಖಂಡಿತ ಶರತ್ತು ಇರ ಬೇಕಿತ್ತು. ಆದರೆ ಹೊಸಬಟ್ಟೆ, ನಮಾಜು, ಮಸೀದಿ.. ಮುಂತಾದು ವುಗಳು ಈದ್‍ಗೆ ಕಡ್ಡಾಯ ಶರ್ತಗಳೇ ಅಲ್ಲ. ಅವಿಲ್ಲದೆಯೇ ಈದ್ ಇದೆ. ಆದರೆ ಬಡವರ ಬಾಗಿಲು ತಟ್ಟಲು ಅಸಹ್ಯಪಡುವವನಿಗೆ ಈದ್ ಇಲ್ಲ. ಆದ್ದರಿಂದಲೇ ಈದ್ ಎಂಬುದು  ಜವಾಬ್ದಾರಿಯುತ ಸಂತಸವನ್ನು ಪರಿಚಯಿಸುತ್ತದೆ. ಇಲ್ಲಿ ಮದ್ಯದ ವಾಸನೆಯಿಲ್ಲ. ಡಿಜೆಗಳ ಅಬ್ಬರವಿಲ್ಲ. ಮೆರವಣಿಗೆ ಇಲ್ಲ. ಪಟಾಕಿಗಳಿಲ್ಲ.  ಮಾಲಿನ್ಯ ಕಾರಕವಾದ ಯಾವುದೂ ಆಚರಣೆಯ ಭಾಗವಾಗಿಲ್ಲ. ನಗ್ನವಾಗಿ ಓಡುವವರೂ ಇಲ್ಲ, ಅಸ್ಥಿಪಂಜರದ ಕೇಕ್ ತಯಾರಿಸುವವರೂ  ಇಲ್ಲ. ಈದ್ ಎಂಬುದು ಉಳ್ಳವರು ಮತ್ತು ಇಲ್ಲದವರ ನಡುವೆ ಸೇತುವೆಯೊಂದನ್ನು ನಿರ್ಮಿಸುವ ಘಳಿಗೆ. ಅದು ಸಮಾಜದ ಸಬಲಿ ೀಕರಣದ ಕಡೆಗೆ ಉಳ್ಳವರನ್ನು ಕರೆದೊಯ್ಯುತ್ತವೆ. ಇಷ್ಟಿಷ್ಟು ಬಾಗಿಲುಗಳು ನಿಮ್ಮ ನಿರೀಕ್ಷೆಯಲ್ಲಿವೆ ಎಂದು ಉಳ್ಳವರನ್ನು ಎಚ್ಚರಿಸುತ್ತದೆ. ಈ  ಜವಾಬ್ದಾರಿಯನ್ನು ಕಡ್ಡಾಯ ಕರ್ಮವಾಗಿ ಸ್ವೀಕರಿಸಿದವರಿಗೆ ಮಾತ್ರ ನಿಜವಾದ ಈದ್ ಇದೆ. ಸಮಾಜಕ್ಕೂ ತನಗೂ ಸಂಬಂಧವೇ ಇಲ್ಲ  ಅನ್ನುವವರಿಗೂ ಈದ್‍ಗೂ ಸಂಬಂಧವೇ ಇರುವುದಿಲ್ಲ. ಅವರ ಹೊಸಬಟ್ಟೆ, ಆಲಿಂಗನ, ನಮಾಜ್ ಗೆ ಆ ಕ್ಪಣದ ಪುಳಕಕ್ಕಿಂತ ಹೆಚ್ಚಿನ  ಮಾನ್ಯತೆಯೂ ಲಭ್ಯವಾಗುವುದಿಲ್ಲ.             ಆದ್ದರಿಂದಲೇ,
    
 ಈದ್, ಅನೇಕಾರು ಹಬ್ಬಗಳಲ್ಲಿ ಒಂದು ಆಗುವುದಿಲ್ಲ, ಆಗಬಾರದು ಕೂಡ.

ಆ ನಡುರಾತ್ರಿಯಲ್ಲಿ ಸಿದ್ಧಾರ್ಥನನ್ನು ತ್ಯಜಿಸಿ ಯಶೋಧರೆ ಎದ್ದು ಹೋಗಿರುತ್ತಿದ್ದರೆ...

ದೀಪ್ತಿ
ಗಾಯತ್ರಿ
ಕವಿತಾ
ಕಳೆದ ಎಪ್ರಿಲ್ ಒಂದೇ ತಿಂಗಳಲ್ಲಿ ಬಿಡುಗಡೆಯಾದ ಮೂರು ಕಾದಂಬರಿಗಳ ಮುಖ್ಯ ಪಾತ್ರಧಾರಿಗಳು ಇವರು. ಹೆಣ್ಣು ಕೇಂದ್ರಿತ ಈ ಮೂರೂ ಕಾದಂಬರಿಗಳ ವಿಶೇಷತೆ ಏನೆಂದರೆ, ಕೆ.ಆರ್. ಮೀರಾ ಅವರ ‘ಅನ್‍ಸೀನ್ ಐಡಲ್ ಆಫ್ ಲೈಟ್’ ಕಾದಂಬರಿಯ ನಾಯಕಿ ದೀಪ್ತಿ ಮತ್ತು ಸುಮನಾ ರಾಯ್ ಅವರ ‘ಮಿಸ್ಸಿಂಗ್’ ಕಾದಂಬರಿಯ ನಾಯಕಿ ಕವಿತಾ ಕಾದಂಬರಿಯಲ್ಲಿ ನಾಪತ್ತೆಯಾಗುತ್ತಾರೆ. ಇನ್ನು, ಅನುರಾಧ ರಾಯ್ ಅವರ, ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ನಾಯಕಿ ಗಾಯತ್ರಿ ತನ್ನ ಗಂಡನನ್ನು ತೊರೆದು ಹೊರಟು ಹೋಗುತ್ತಾಳೆ. ಒಂದು ರೀತಿಯಲ್ಲಿ, ಈ ಮೂರೂ ಕಾದಂಬರಿಗಳ ನಡುವೆಯೂ ಕಾಕತಾಳೀಯವಾದ ಒಂದು ಪೋಣಿಕೆ ಇದೆ. ಈ ಮೂರೂ ಕಾದಂಬರಿಗಳನ್ನು ಬರೆದಿರುವುದು ಮಹಿಳೆಯರೇ ಎಂಬುದು ಒಂದು ಮುಖ್ಯ ಅಂಶವಾದರೆ, ಇನ್ನೊಂದು, ಮೂರೂ ಕಾದಂಬರಿಗಳ ಮುಖ್ಯ ಪಾತ್ರವಾಗಿ ಮಹಿಳೆಯರೇ ಇರುವುದು. ಅದರಲ್ಲೂ ಈ ಪಾತ್ರಧಾರಿಗಳ ನಡುವೆ ಮೂರೂ ಕಾದಂಬರಿಗಳಲ್ಲಿ ಸಾಮ್ಯತೆ ಇರುವುದು. ಇದು ಯಾಕಾಯಿತು? ಹೇಗೆ ಸಾಧ್ಯವಾಯಿತು? ಗರ್ಭಿಣಿ ಪತ್ನಿ ದೀಪ್ತಿ ಕಾಣೆಯಾದ ಬಳಿಕ ಆಕೆಯ ಗಂಡ ಕುರುಡನಾಗಿ ಬದುಕು ಸಾಗಿಸುವ ಕತೆ ಮೀರಾ ಅವರ ‘ಅನ್‍ಸೀನ್ ಐಡಲ್ ಆಫ್ ಲೈಟ್’ ಕಾದಂಬರಿಯದ್ದು. ಸುಮನಾ ರಾಯ್ ಅವರ ‘ಮಿಸ್ಸಿಂಗ್’ ಕಾದಂಬರಿಯ ನಾಯಕಿ ಕವಿತಾಳ ಗಂಡನೂ ಕುರುಡನೇ. ಕವಿತಾ ನಾಪತ್ತೆಯಾದ ಬಳಿಕ 7 ದಿನಗಳ ಕಾಲ ಕುರುಡನಾಗಿ ಬದುಕುವ ಗಂಡನ ಕತೆಯನ್ನು ಹೇಳುವ ಕಾದಂಬರಿ ಇದು. ಅನುರಾಧಾ ರಾಯ್ ಅವರ ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ಗಾಯತ್ರಿ ನಾಪತ್ತೆ ಯಾಗುವುದಿಲ್ಲ ಮತ್ತು ಗಂಡ ಕುರುಡನಾಗುವುದಿಲ್ಲ ಅನ್ನುವುದನ್ನು ಬಿಟ್ಟರೆ ಕಾದಂಬರಿಯ ಒಟ್ಟು ಹೂರಣ ಉಳಿದೆರಡು ಕಾದಂಬರಿಗಳಿಗಿಂತ ಭಾರೀ ಭಿನ್ನವೇನೂ ಅಲ್ಲ. ಗಾಯತ್ರಿ ತನ್ನ ಕಲಾ ಪ್ರತಿಭೆಯನ್ನು ಹೆಚ್ಚು ಚುರುಕುಗೊಳಿಸುವ ಉದ್ದೇಶದಿಂದ ಗಂಡ ಮತ್ತು ಮಗುವನ್ನು ಭಾರತದಲ್ಲೇ  ಬಿಟ್ಟು ಬಾಲಿಗೆ ತೆರಳುತ್ತಾಳೆ. ಗಂಡನಾದರೋ ಬೌದ್ಧ ಬಿಕ್ಷುವಾಗುವ ಉದ್ದೇಶದಿಂದ ಹೊರಟುಹೋಗಿ  ಕೊನೆಗೆ ಇನ್ನೊಂದು ಮದುವೆಯಾಗಿ ಹಿಂತಿರುಗಿ ಬರುತ್ತಾನೆ.
  
 ನಿಜವಾಗಿ, ‘ಮಿಸ್ಸಿಂಗ್’, ‘ಅನ್‍ಸೀನ್ ಐಡಲ್ ಆಫ್ ಲೈಟ್’ ಮತ್ತು ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಎಂಬ ಈ ಮೂರು ಕಾದಂಬರಿಗಳಿಂದ ದೀಪ್ತಿ, ಕವಿತಾ ಮತ್ತು ಗಾಯತ್ರಿಯರನ್ನು ಪ್ರತ್ಯೇಕಿಸಿಟ್ಟು ನೋಡುವಾಗ, ಈ ಪಾತ್ರಗಳು ನಮ್ಮೊಳಗಿನ ಪ್ರಶ್ನೆಗಳ ಪ್ರತಿರೂಪಗಳಾಗಿಯೇ ಕಾಣಿಸುತ್ತವೆ. ಇದಕ್ಕೆ ಕಾರಣ ಏನೆಂದರೆ, ಒಂದು- ದೆಹಲಿಯ ನಿರ್ಭಯ ಪ್ರಕರಣ. ಇನ್ನೊಂದು, ಐತಿಹಾಸಿಕ ಪಾತ್ರಗಳನ್ನು ನಾವು ಓದಿಕೊಂಡು ಮತ್ತು ಅನುಭವಿಸಿಕೊಂಡು ಬಂದಿರುವ ರೀತಿ. ಸಿದ್ಧಾರ್ಥನು ಬುದ್ಧನಾಗುವ ಮೊದಲು ಒಂದು ಮಧ್ಯರಾತ್ರಿ ಪತ್ನಿ ಯಶೋಧರೆ ಮತ್ತು ಮಗುವನ್ನು ಬಿಟ್ಟು ಹೊರಟು ಹೋಗುತ್ತಾನೆ. ಆ ಬಳಿಕ ಬುದ್ಧನಾಗುತ್ತಾನೆ ಮತ್ತು ಬೌದ್ಧ ಧರ್ಮದ ಚಿಂತನೆಗಳ ಮೂಲ ಕರ್ತೃವಾಗುತ್ತಾನೆ. ಈ ಬಿಂದುವಿನಲ್ಲಿ ನಿಂತು ಯಶೋಧರೆ ಮತ್ತು ಆ ಮಗುವನ್ನೊಮ್ಮೆ ಕಲ್ಪಿಸಿಕೊಳ್ಳಿ. ಆಕೆಯ ಅಭಿಪ್ರಾಯಗಳು ಏನಿರಬಹುದು? ಮಗುವನ್ನು ಅಪ್ಪಿಕೊಂಡು ಆಕೆ ಏನೇನು ಹೇಳಿರಬಹುದು? ಅಪ್ಪನ ಬಗ್ಗೆ, ಆತ ಮಿಸ್ಸಿಂಗ್ ಆಗಿರುವ ಬಗ್ಗೆ, ಆತನ ಬರುವಿಕೆಯ ಬಗ್ಗೆ ಮತ್ತು ಮಗುವೆಂಬ ನೆಲೆಯಲ್ಲಿ ಆ ಮಗು ಕೇಳುವ ಎಲ್ಲ ಬಗೆಯ ಪ್ರಶ್ನೆಗಳಿಗೆ ಯಶೋಧರೆ ಉತ್ತರ ಕೊಡುವಾಗ ಯಾವೆಲ್ಲ ತಲ್ಲಣಗಳನ್ನು ಅನುಭವಿಸಿರಬಹುದು? ತನ್ನ ಮಗುವಿಗೆ ಅಪ್ಪನ ಮೇಲೆ ದ್ವೇಷ ಹುಟ್ಟದಂತೆ ಆಕೆ ಮಾತಾಡಿರಬಹುದೇ ಅಥವಾ ಅಪ್ಪನ ಗುರುತೇ ಇರಲಾರದಂಥ ಮಗುವನ್ನು ತಯಾರಿಸಲು ಆಕೆ ಮನಸ್ಸು ಮಾಡಿರಬಹುದೇ? ಬುದ್ಧನ ಬಗ್ಗೆ ಓದುವಾಗ ಯಶೋಧರೆ ಮಿಸ್ಸಿಂಗ್ ಆಗುತ್ತಾಳೆ. ಆಕೆಯ ಭಾವನೆ, ತೊಳಲಾಟ, ಕಣ್ಣೀರು, ವಿರಹ ವೇದನೆ ಎಲ್ಲವೂ ಬುದ್ಧನ ವರ್ಚಸ್ಸಿನ ಮುಂದೆ ಗೌಣವಾಗುತ್ತದೆ. ಬುದ್ಧನು ಪತ್ನಿಯನ್ನು ತ್ಯಜಿಸಿ ಹೋದುದನ್ನು  ಪತ್ನಿಗೆ ಮಾಡಲಾದ ವಂಚನೆಯ ದೃಷ್ಟಿಯಲ್ಲಿ ಇವತ್ತು ಯಾರೂ ನೋಡುವುದಿಲ್ಲ. ಆಧ್ಯಾತ್ಮಿಕ ಸಾಧನೆಯ ಮಾರ್ಗದಲ್ಲಿ ಮಾಡಲಾದ ತ್ಯಾಗ ಎಂಬ ನವಿರಾದ ಮತ್ತು ಸುಂದರವಾದ ಪೊರೆಯೊಂದು ಆ ತ್ಯಜಿಸುವಿಕೆಯ ಸುತ್ತ ಕವಿದುಕೊಂಡಿದೆ. ನಿಜಕ್ಕೂ, ಆಧ್ಯಾತ್ಮಿಕ ಸಾಧನೆಗೆ ಪತ್ನಿ ಅಡ್ಡಿಯೇ, ಮಗು ತೊಡಕೇ? ಇವರಿಬ್ಬರು ಇದ್ದೂ ಸಿದ್ಧಾರ್ಥನಿಗೆ ಬುದ್ಧನಾಗಲು ಸಾಧ್ಯವಿರಲಿಲ್ಲವೇ? ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿಯೂ ಈ ಪ್ರಶ್ನೆಯನ್ನು ಕೇಳಬಹುದು. ಪತ್ನಿ ಜಶೋದಾ ಬೆನ್‍ರನ್ನು ತ್ಯಜಿಸಿದ್ದು ಮತ್ತು ಇದು ದೇಶಕ್ಕಾಗಿ ಮಾಡಲಾದ ತ್ಯಾಗ ಎಂದು ಅವರ ಬೆಂಬಲಿಗರು ಆ ಘಟನೆಯನ್ನು ಸಮರ್ಥಿಸುತ್ತಿರುವುದು ಎಷ್ಟರ ವರೆಗೆ ಸರಿ? ನಂಬಿದವರನ್ನೇ ಕೈ ಬಿಡಬೇಕಾದ ಸ್ಥಿತಿ ದೇಶಕ್ಕೆ ಬಂದೊದಗಿದೆಯೇ? ಪತ್ನಿಯನ್ನು ತ್ಯಜಿಸದೇ ದೇಶಸೇವೆ ಮಾಡಲಾಗದೇ? ಹಾಗೆ ತ್ಯಜಿಸುವ ಗಂಡುಗಳ ಬಗ್ಗೆ ಪತ್ನಿಯರ ನಿಲುವು ಏನು? ಅವರ ಭಾವನೆಗಳು ಏನಿದ್ದೀತು? ಒಂದು ವೇಳೆ, ದೇಶಕ್ಕಾಗಿ ಪತಿಯನ್ನು ತ್ಯಜಿಸುವ ನಿರ್ಧಾರಕ್ಕೆ ಪತ್ನಿ ಬಂದರೆ ಅದು ಹೇಗೆ ಗುರುತಿಸಿಕೊಂಡೀತು? ಸಿದ್ಧಾರ್ಥನನ್ನು ತೊರೆದು ಯಶೋಧರೆ ಹೊರಟು ಹೋಗಿರುತ್ತಿದ್ದರೆ ಮತ್ತು ಈ ತ್ಯಜಿಸುವಿಕೆಗೆ ಆಧ್ಯಾತ್ಮಿಕ ಹುಡುಕಾಟ ಕಾರಣ ಎಂದು ಆಕೆ ಹೇಳಿರುತ್ತಿದ್ದರೆ ಅದಕ್ಕೆ ಲಭ್ಯವಾಗಬಹುದಾದ ಪ್ರತಿಕ್ರಿಯೆಗಳು ಏನಿದ್ದೀತು? ಬುದ್ಧನಿಗೆ ಸಿಕ್ಕ ಗೌರವಗಳು ಯಶೋಧರೆಗೂ ಸಿಗುತ್ತಿದ್ದುವೇ? ಜಶೋದಾ ಬೆನ್‍ಗೆ ಸಂಬಂಧಿಸಿಯೂ ಈ ಪ್ರಶ್ನೆ ಯನ್ನು ಕೇಳಬಹುದು. ಪತಿ ನರೇಂದ್ರ ಮೋದಿಯನ್ನು ತೊರೆದು ಜಶೋದಾ ಬೆನ್ ದೇಶಸೇವೆಯ ಹೆಸರಲ್ಲಿ ಮನೆ ಬಿಡುತ್ತಿದ್ದರೆ ಇವತ್ತು ಆಕೆಗೆ ಸಿಗುವ ಬಿರುದುಗಳು ಏನಿರುತ್ತಿದ್ದುವು? ಅನುರಾಧಾ ರಾಯ್ ಅವರ ‘ಆಲ್ ದಿ ಲೈವ್ಸ್ ವಿ ನೆವರ್ ಲೈವ್ಡ್’ ಕಾದಂಬರಿಯ ಗಾಯತ್ರಿ ಈ ಎಲ್ಲ ಪ್ರಶ್ನೆಗಳಿಗೆ ಒಂದೊಳ್ಳೆಯ ಉತ್ತರದಂತೆ ಕಾಣುತ್ತಾಳೆ. ತನ್ನ ಕಲಾ ಪ್ರತಿಭೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವುದಕ್ಕಾಗಿ ಪತಿ ಮತ್ತು ಮಗುವನ್ನು ತ್ಯಜಿಸಿ ಹೋಗುವ ಗಾಯತ್ರಿಯನ್ನು ಆ ಸಮಾಜ ಗೌರವಿಸುವುದಿಲ್ಲ. ಅಷ್ಟು ಮಾತ್ರವಲ್ಲ, ಆಕೆಗೆ ವೇಶ್ಯೆ, ಅಹಂಕಾರಿ, ಅವಿಧೇಯೆ ಇತ್ಯಾದಿ ಗುರುತುಗಳನ್ನು ಆ ಸಮಾಜ ಉಚಿತವಾಗಿ ನೀಡುತ್ತದೆ.
        
  ಬಹುಶಃ, ಅನುರಾಧ ರಾಯ್, ಸುಮನಾ ರಾಯ್ ಮತ್ತು ಕೆ.ಆರ್. ಮೀರಾ ಅವರ ಕಾದಂಬರಿಗಳಲ್ಲಿ ಹೆಣ್ಣು ಮಿಸ್ಸಿಂಗ್ ಆಗುವ ಪಾತ್ರವಾಗಿ ಗುರುತಿಸಿಕೊಂಡಿರುವುದಕ್ಕೆ ಈ ದೇಶದ ಪೌರಾಣಿಕ ಕತೆಗಳ ಪ್ರಭಾವ ಬಹುಮುಖ್ಯವಾಗಿರಬಹುದು ಎಂದು ಅನಿಸುತ್ತದೆ. ಆಧ್ಯಾತ್ಮಿಕ ಸಾಧನೆಗೆ ಸಾಂಸಾರಿಕ ಬದುಕು ಅಡ್ಡಿ ಎನ್ನುವ ನೀತಿ ವಾಕ್ಯಗಳು ಸಹಜವೆಂಬಂಥ ರೀತಿಯಲ್ಲಿ ಇಲ್ಲಿನ ಪೌರಾಣಿಕ ಕತೆಗಳಲ್ಲಿ ಹಾಸು ಹೊಕ್ಕಾಗಿವೆ. ಗಂಡಿನ ಸಾಧನೆಗೆ ಹೆಣ್ಣು ತೊಡಕು ಎಂಬ ಭಾವನೆ ಈ ಹಿಂದಿನಿಂದಲೇ ಈ ದೇಶದಲ್ಲಿ ಬೆಳೆದು ಬಂದಿದೆ. ಅದನ್ನು ಪ್ರಶ್ನಿಸದೆಯೇ ಒಪ್ಪಿಕೊಂಡ ರೀತಿಯಲ್ಲಿ ಈ ದೇಶದ ಸಾಂಸ್ಕೃತಿಕ ವಾತಾವರಣವಿದೆ. ಈ ದೇಶವು ಐತಿಹಾಸಿಕ ಘಟನೆಗಳ ಮೇಲೆ ನಿಂತಿರುವುದಕ್ಕಿಂತ ಹೆಚ್ಚು ದೃಢವಾಗಿ ಪೌರಾಣಿಕ ಕತೆಗಳ ಮೇಲೆ ನಿಂತಿದೆ. ಅವುಗಳನ್ನು ಹೆಚ್ಚು ವಿಶ್ವಾಸದಿಂದ ನಂಬುತ್ತಲೂ ಬಂದಿದೆ. ಸೀತೆ ಪ್ರಣಾಳ ಶಿಶುವಾಗಿದ್ದಳು ಎಂದು ಹೇಳಲು ಓರ್ವ ಜನ ಪ್ರತಿನಿಧಿಗೆ ಸಾಧ್ಯವಾಗುವುದು ಈ ಕಾರಣದಿಂದಲೇ. ‘ಮಹಾಭಾರತದ ಕಾಲದಲ್ಲೇ  ಪತ್ರಿಕೋದ್ಯಮ ಇತ್ತು’ ಎಂದೋ ‘ಪ್ರಾಚೀನ ಕಾಲದಲ್ಲೇ ಗೂಗಲ್ ತಂತ್ರಜ್ಞಾನವಿತ್ತು’ ಎಂದೋ ಒಂದು ರಾಜ್ಯದ ಉಪಮುಖ್ಯಮಂತ್ರಿ ಸ್ಥಾನದಲ್ಲಿರುವ ವ್ಯಕ್ತಿಯೇ ಈ 21ನೇ ಶತಮಾನದಲ್ಲಿ ಹೇಳುವ ಧೈರ್ಯ ತೋರಿಸಬಲ್ಲರೆಂದರೆ ಮತ್ತು ನಾರದ ಮುನಿಯನ್ನೂ ಸಂಜಯ ಮತ್ತು ಧೃತರಾಷ್ಟ್ರರನ್ನೂ ಅದಕ್ಕೆ ಉದಾಹರಣೆಯಾಗಿ ನೀಡಬಲ್ಲರೆಂದರೆ ಅವರು ಪೌರಾಣಿಕ ಕತೆಗಳ ಮೇಲೆ ಇಟ್ಟಿರುವ ವಿಶ್ವಾಸವಾದರೂ ಎಂಥವು? ಪೌರಾಣಿಕ ಕಥಾ ಪಾತ್ರಗಳನ್ನು ಆಧುನಿಕ ತಂತ್ರಜ್ಞಾನಗಳಿಗೆ ತಳಕು ಹಾಕಿ ಸಮರ್ಥಿಸುವಾಗ ಆಗಬೇಕಾದ ಮುಜುಗರದ ಯಾವ ಲವಲೇಶವೂ ಅವರಲ್ಲಿ ವ್ಯಕ್ತವಾಗುತ್ತಿಲ್ಲವೆಂದರೆ ಅದಕ್ಕೆ ಏನೆನ್ನಬೇಕು? ಆದ್ದರಿಂದಲೇ ದೀಪ್ತಿ, ಗಾಯತ್ರಿ ಮತ್ತು ಕವಿತಾ ಮಿಸ್ಸಿಂಗ್ ಆಗುವುದನ್ನು ಈ ಪೌರಾಣಿಕ ಕಥಾ ಪಾತ್ರಗಳಿಗೆ ನೀಡುವ ಎದಿರೇಟು ಆಗಿರಬಹುದೋ ಅನ್ನುವ ಅನುಮಾನ ಕಾಡುತ್ತದೆ. ಹೆಣ್ಣನ್ನು ತ್ಯಜಿಸಿ ಹೋಗುವ ಪುರುಷನಿಗೆ ಪ್ರತಿಯಾಗಿ ಈ ಮೂವರು ಮಹಿಳೆಯರನ್ನು ಈ ಕಾದಂಬರಿಗಾರ್ತಿಯರು ಹುಟ್ಟುಹಾಕಿರುವರೋ ಎಂದು ಅನುಮಾನಿಸಬೇಕಾಗುತ್ತದೆ. ಇಲ್ಲಿ ಕಾಡುವ ಇನ್ನೊಂದು ಸಂದೇಹ ಏನೆಂದರೆ, ನಿರ್ಭಯ ಪ್ರಕರಣ. ಈ ದೇಶದಲ್ಲಿ ಹೆಣ್ಣು ಬಹು ಮುಖ್ಯ ಚರ್ಚಾವಸ್ತುವಾಗಿ ತೆರೆದುಕೊಂಡದ್ದು 2012ರಲ್ಲಿ. ಇದೊಂದು ಬಹುಮುಖ್ಯವಾದ ಘಟ್ಟ. ಈ ಹಿಂದೆಯೂ ಇಂಥ ಸಂದರ್ಭಗಳು ಸೃಷ್ಟಿಯಾಗಿರಬಹುದು. ಆದರೆ, ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿರುವ ಕಾಲದ ಬಹುಮುಖ್ಯ ಚರ್ಚೆಯಾಗಿ ಎದುರು ಬಂದದ್ದು ನಿರ್ಭಯಾ. ಆಕೆ ನಮ್ಮ ನಡುವಿನಿಂದ ಶಾಶ್ವತವಾಗಿ ಮಿಸ್ಸಿಂಗ್ ಆದಳು. ಈ ಕಾಣೆಯಾಗುವಿಕೆಯು ಈ ದೇಶದಲ್ಲಿ ದೊಡ್ಡದೊಂದು ಸಂಚಲನವನ್ನು ಸೃಷ್ಟಿಸಿತು. ಆ ಹೆಣ್ಮಗಳು ಮಿಸ್ಸ್ ಆಗದಂತೆ ನೋಡಿಕೊಳ್ಳುವುದಕ್ಕೆ ಇಡೀ ದೇಶವೇ ಒಂದಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆ ಬಳಿಕ ಈ ದೇಶದಲ್ಲಿ ಹೆಣ್ಮಕ್ಕಳ ಬಗ್ಗೆ ಮಾಧ್ಯಮಗಳು ದೊಡ್ಡಮಟ್ಟದಲ್ಲಿ ಆಂದೋಲನವನ್ನೇ ನಡೆಸಿದುವು. ಒಂದು ಕಡೆ ಅತ್ಯಾಚಾರದ ಸುದ್ದಿಗಳಾದರೆ ಇನ್ನೊಂದು ಕಡೆ ಹೆಣ್ಣು ಮತ್ತು ಹೆಣ್ಮಕ್ಕಳು ನಾಪತ್ತೆಯೂ ಆಗುತ್ತಿದ್ದರು. ಹಾಗೆ ನಾಪತ್ತೆಯಾದವರು ಕೆಲವು ದಿನಗಳ ಬಳಿಕ ಪೊದೆಯಲ್ಲೋ  ಕಾಡಿನಲ್ಲೋ ನದಿಯಲ್ಲೋ  ಜೀವಚ್ಛವವಾಗಿ ಪತ್ತೆಯಾಗುತ್ತಿದ್ದರು. ಇದರ ಹೊರತಾಗಿ ಆಸ್ಪತ್ರೆಯೆಂಬ ನಾಲ್ಕು ಗೋಡೆಯ ಒಳಗೆ ನಾಪತ್ತೆಯಾಗುವ ಹೆಣ್ಣು ಶಿಶುಗಳ ಲೆಕ್ಕವಂತೂ ಯಾರಿಗೂ ಗೊತ್ತಿಲ್ಲ. ‘ಮಿಸ್ಸಿಂಗ್ ಡಾಟರ್ಸ್’ ಎಂಬ ಸಾಕ್ಷ್ಯ ಚಿತ್ರದ ಪ್ರಕಾರ, ಈ ಸಂಖ್ಯೆ 10 ಮಿಲಿಯನ್. ಇದು ಹೆಣ್ಣು ಮತ್ತು ಗಂಡು ಜೊತೆ ಸೇರಿ ಮಾಡುವ ಹತ್ಯೆ. ಅಲ್ಲದೇ, ಈ ಮಿಸ್ಸಿಂಗ್‍ಗೆ ಇನ್ನೊಂದು ಮುಖವೂ ಇದೆ. ಅದೇನೆಂದರೆ, ಹೆಣ್ಣು ದೈಹಿಕವಾಗಿ ಜೀವಂತವಿದ್ದರೂ ಒಂದು ಸಂಪನ್ಮೂಲವಾಗಿ ಸತ್ತು ಹೋಗಿರುವುದು. ಈ ಸ್ಥಿತಿಯಲ್ಲಿರುವ ಮಹಿಳೆಯರೂ ಈ ದೇಶದಲ್ಲಿ ಅಸಂಖ್ಯ ಇದ್ದಾರೆ. ಅವರ ಸ್ಥಿತಿ ಹೇಗೆಂದರೆ, ಗಂಡು ಹೇಳಿದಷ್ಟೇ ಮಾಡಬೇಕು. ಇರು ಅಂದರೆ ಇರಬೇಕು. ಹೋಗು ಅಂದರೆ ಹೋಗಬೇಕು. ಮಲಗು ಅಂದರೆ ಮಲಗಬೇಕು. ಈ ಗೊಂಬೆಯ ಪಾತ್ರಕ್ಕಿಂತ ಹೊರತಾದ ಯಾವ ಮಹತ್ವವನ್ನೂ ಹೊಂದಿಲ್ಲದ ಮಹಿಳೆಯರು ಒಂದು ರೀತಿಯಲ್ಲಿ ಮಿಸ್ಸಿಂಗ್‍ಗಳೇ. ಅವರ ಭಾವನೆ, ಯೋಚನೆ, ಯೋಜನೆ, ಚಿಂತನೆ ಗಳಿಗೆ ಯಾವ ಮಹತ್ವವೂ ಲಭ್ಯವಿಲ್ಲವೆಂದ ಮೇಲೆ ಅವರು ಜೀವಂತ ಇರುವುದಕ್ಕೆ ಕುರುಹಾದರೂ ಏನಿದೆ? ಈ ಹಿನ್ನೆಲೆಯಲ್ಲಿ ಯೋಚಿಸುವಾಗ ನಾಪತ್ತೆ ಎಂಬುದು ದೈಹಿಕ ಮಿಸ್ಸಿಂಗ್‍ಗೆ ಮಾತ್ರ ಸಂಬಂಧಿಸಿ ಹೇಳಬೇಕಾದ ಪದವಾಗಿ ಕಾಣುವುದಿಲ್ಲ. ನಾಪತ್ತೆ ಎಂಬ ಪದವು ಧ್ವನ್ಯಾರ್ಥಕ್ಕಿಂತ ಆಚೆಗಿನ ವಿಷಯಗಳನ್ನು ಧ್ವನಿಸುತ್ತದೆ. ದೈಹಿಕವಾಗಿ ನಾಪತ್ತೆಯಾಗುವುದು ಅದರ ಕೇಂದ್ರಬಿಂದುವೇ ಹೊರತು ಅದುವೇ ಎಲ್ಲವೂ ಅಲ್ಲ. ಅಂದಹಾಗೆ, ಅನುರಾಧ ರಾಯ್, ಸುಮನಾ ರಾಯ್ ಮತ್ತು ಮೀರಾ ಅವರು ತಮ್ಮ ಕಾದಂಬರಿಗಳಲ್ಲಿ ಮಹಿಳೆಯರನ್ನು ನಾಪತ್ತೆ ಮಾಡಿರುವುದಕ್ಕೆ ಭಾರತೀಯ ಪೌರಾಣಿಕ ಕತೆಗಳ ಪ್ರಭಾವ ಇದೆಯೋ ಇಲ್ಲವೋ, ಆದರೆ ಭಾರತೀಯ ಸಾಮಾಜಿಕ ಪರಿಸ್ಥಿತಿಯ ಪ್ರಭಾವವಂತೂ ಇದ್ದೇ ಇದೆ. ಅಂದಹಾಗೆ,
    
ನರೇಂದ್ರ ಮೋದಿಯವರು ಸದ್ಯ ಪಡೆದುಕೊಂಡಿರುವ ವರ್ಚಸ್ಸೆ ಅದಕ್ಕೊಂದು ಉತ್ತಮ ಉದಾಹರಣೆ.





ಒಂದು ಅಸಾಧು ನಡೆ

ಬಿಜೆಪಿ - 104
ಕಾಂಗ್ರೆಸ್ - 78
ಜೆಡಿಎಸ್ - 38
ಪಕ್ಷೇತರರು - 2
ಇದು ಜನಮತ. ಇದನ್ನು ತಿದ್ದುವ ಅಧಿಕಾರ ಯಾವ ರಾಜಕೀಯ ಪಕ್ಷಕ್ಕೂ  ಇಲ್ಲ. 104 ಸ್ಥಾನವನ್ನು ಗಳಿಸಿರುವ ಬಿಜೆಪಿಯು ಇನ್ನೊಂದಿಷ್ಟು ಸ್ಥಾನವನ್ನು ಸ್ವಯಂ ಚುನಾಯಿಸಿಕೊಂಡು ಬಹುಮತ ಪಡೆದುಕೊಳ್ಳುವುದಕ್ಕೆ ಭಾರತೀಯ ಪ್ರಜಾತಂತ್ರದಲ್ಲಿ ಅವಕಾಶ ಇಲ್ಲ. ಈ ನಿಯಮ ಕಾಂಗ್ರೆಸ್‍ಗೂ ಜೆಡಿಎಸ್‍ಗೂ ಮತ್ತು ಈ ದೇಶದಲ್ಲಿರುವ ಸರ್ವ ರಾಜಕೀಯ ಪಕ್ಪಗಳಿಗೂ ಸಮಾನವಾಗಿ ಅನ್ವಯ. ಆದ್ದರಿಂದ, ಸರಕಾರ ರಚಿಸುವುದಕ್ಕೆ ಸಿದ್ಧವಾಗುವ ಯಾವುದೇ ಪಕ್ಪವು ವಿಧಾನಸಭೆಯ ಒಟ್ಟು ಸ್ಥಾನ ಗಳಿಗಿಂತ ಕನಿಷ್ಠ ಒಂದು ಸ್ಥಾನವನ್ನಾದರೂ ಅಧಿಕ ಪಡೆದಿರಲೇಬೇಕು. ಅದೂ ಜನಮತದ ಮೂಲಕವೇ. ಇದು ನಿಯಮ. ಕರ್ನಾಟಕದ ವಿಧಾನಸಭೆಗೆ ಸಂಬಂಧಿಸಿ ಹೇಳುವುದಾದರೆ, ಮೇಲಿನ ಮೂರು ಪಕ್ಪಗಳು ಸ್ಪಷ್ಟ ಜನಾದೇಶವನ್ನು ಪಡೆದುಕೊಳ್ಳಲು ವಿಫಲವಾಗಿವೆ. ಈ ಸ್ಥಿತಿಯಲ್ಲಿ, ಈ ಮೂರೂ ಪಕ್ಪಗಳ ಮುಂದೆ ಎರಡು ಆಯ್ಕೆಗಳಷ್ಟೇ ಇದ್ದುವು.
1. ಬಹುಮತ ಇಲ್ಲದೇ ಇರುವುದನ್ನು ಪರಿಗಣಿಸಿ ತಟಸ್ಥವಾಗಿ ಉಳಿಯುವುದು.
2. ಪರಸ್ಪರ ಮೈತ್ರಿ ಮಾಡಿಕೊಳ್ಳುವ ಮೂಲಕ ಬಹುಮತ ಲಭ್ಯವಾಗುವಂತೆ ನೋಡಿಕೊಳ್ಳುವುದು.
    ಈ ಅವಕಾಶ ಮೇಲಿನ ಮೂರು ಪಕ್ಪಗಳಿಗೂ ಇದ್ದುವು. ಆದರೆ ಬಿಜೆಪಿ ಮೈತ್ರಿ ಕುದುರಿಸಿಕೊಳ್ಳುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಮೈತ್ರಿ ಮಾಡಿಕೊಂಡವು. ಅಚ್ಚರಿಯ ಸಂಗತಿ ಏನೆಂದರೆ, ಗೋವಾ, ಮಣಿಪುರ, ಮೇಘಾಲಯ, ಜಮ್ಮು-ಕಾಶ್ಮೀರ ಇತ್ಯಾದಿ ರಾಜ್ಯಗಳಲ್ಲಿ ಇತರ ಪಕ್ಪಗಳ ಜೊತೆ ಸೇರಿ ಸರಕಾರ ರಚಿಸಲು ಯಶಸ್ವಿಯಾಗಿದ್ದ ಬಿಜೆಪಿ ಕರ್ನಾಟಕದಲ್ಲಿ ಯಾಕೆ ವಿಫಲವಾಯಿತು ಅನ್ನುವುದು. ಮೇಘಾಲಯ, ಮಣಿಪುರ, ಗೋವಾಗಳಲ್ಲಿ ಕಾಂಗ್ರೆಸ್ ಏಕೈಕ ದೊಡ್ಡ ಪಕ್ಪವಾಗಿದ್ದೂ ಸರಕಾರ ರಚಿಸಲು ವಿಫಲವಾದುದಕ್ಕೆ ಬಹುಮುಖ್ಯ ಕಾರಣ ಬಿಜೆಪಿಯ ಬುದ್ಧಿವಂತಿಕೆ, ಚಾಣಾಕ್ಪತೆ ಮತ್ತು ಅಧಿಕಾರ ಬಲ. ಆದರೆ ಕರ್ನಾಟಕದಲ್ಲಿ ಯಾಕೆ ಇವು ಯಾವುವೂ ಬಿಜೆಪಿಯ ಪಾಲಿಗೆ ಪ್ರಯೋಜನಕ್ಕೆ ಬರಲಿಲ್ಲ ಅಥವಾ ಅಲ್ಲಿ ತೋರಿಸಿದ ಇಚ್ಛಾಶಕ್ತಿಯನ್ನು ಬಿಜೆಪಿ ಇಲ್ಲೇಕೆ ತೋರ್ಪಡಿಸಲಿಲ್ಲ? ಕಾಂಗ್ರೆಸ್ ಮುಕ್ತ ಭಾರತವನ್ನು ನಿರ್ಮಿಸಲು ಹೊರಟಿರುವ ಬಿಜೆಪಿಯು ಕರ್ನಾಟಕದಲ್ಲಿ ಆ ಬಗ್ಗೆ ಗಂಭೀರ ಪ್ರಯತ್ನ ನಡೆಸದೇ ಇದ್ದುದು ಏಕೆ? ಕಾಂಗ್ರೆಸ್ ಮುಕ್ತ ಭಾರತವೇ ಬಿಜೆಪಿಯ ಬಹುಮುಖ್ಯ ಗುರಿ ಎಂದಾದರೆ, ಮುಖ್ಯ ಮಂತ್ರಿ ಯಾರಾಗಬೇಕು ಎಂಬುದು ಗೌಣವಾಗುತ್ತದೆ. ಸರಕಾರ ಕಾಂಗ್ರೆಸ್‍ನದ್ದಾಗಿರಬಾರದು ಅನ್ನುವುದೇ ಮುಖ್ಯವಾಗುತ್ತದೆ. ಆದರೆ ಕರ್ನಾಟಕಕ್ಕೆ ಸಂಬಂಧಿಸಿ ಹಾಗಾಗಿಲ್ಲ. ಯಾಕೆ ಇದು? ಇತರ ರಾಜ್ಯಗಳಲ್ಲಿ ಫಲಿತಾಂಶಕ್ಕಿಂತ ಮೊದಲೇ ಕಾಂಗ್ರೆಸ್ಸೇತರ ಪಕ್ಪಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಗಂಭೀರ ಸಿದ್ಧತೆ ನಡೆಸಿದ್ದ ಬಿಜೆಪಿ ಕರ್ನಾಟಕದಲ್ಲಿ ಮಾತ್ರ ಆ ಚುರುಕುತನವನ್ನು ತೋರ್ಪಡಿಸದಿದ್ದುದು ಯಾಕಾಗಿ? ಅಂದಹಾಗೆ, ರಾಜ್ಯದ ಚುನಾವಣಾ ಫಲಿತಾಂಶ ಏನಾಗಬಹುದು ಎಂಬುದನ್ನು ಫಲಿತಾಂಶ ಪ್ರಕಟಣೆಗಿಂತ ಮೂರು ದಿನಗಳ ಮೊದಲೇ -ಮೇ 12ರಂದೇ- ವಿವಿಧ ಸಮೀಕ್ಷೆಗಳು ಸ್ಪಷ್ಟಪಡಿಸಿದ್ದುವು. ಸಮೀಕ್ಷೆಗಳ ಒಟ್ಟು ಸಾರಾಂಶ ಅತಂತ್ರದತ್ತ ಬೊಟ್ಟು ಮಾಡುತ್ತಿದ್ದುವೇ ಹೊರತು ಯಾವುದೇ ಪಕ್ಪವನ್ನು ಆರಾಮ ಸ್ಥಿತಿಗೆ ತಳ್ಳಿರಲಿಲ್ಲ. ಕಾಂಗ್ರೆಸ್ ಮೇ 12ರಂದೇ ಮೈತ್ರಿಯ ಬಗ್ಗೆ ಚಿಂತನ-ಮಂಥನ ನಡೆಸಿದೆ ಅನ್ನುವುದು ಈಗಾಗಲೇ ಬಹಿರಂಗವಾಗಿದೆ. ಆದರೆ ಬಿಜೆಪಿ ಪಾಳಯದಲ್ಲಿ ಈ ಚುರುಕುತನ ಕಾಣಿಸಿಕೊಳ್ಳದೇ ಇದ್ದುದಕ್ಕೆ ಕಾರಣ ಏನು? ಬಿಜೆಪಿ ತನ್ನ ಆಂತರಿಕ ಸಮೀಕ್ಷೆಯ ಮೇಲೆಯೇ ಬಲವಾದ ನಂಬಿಕೆ ಇಟ್ಟಿತೇ? ಆ ಸಮೀಕ್ಷೆಯು ಬಿಜೆಪಿಗೆ ಬಹುಮತವನ್ನು ಖಚಿತಪಡಿಸಿತ್ತೇ ಅಥವಾ ಯಡಿಯೂರಪ್ಪರನ್ನು ರಾಜಕೀಯವಾಗಿ ನಿವೃತ್ತಿಯಾಗುವಂತೆ ನೋಡಿಕೊಳ್ಳುವ ಒತ್ತಡ ಸ್ಥಿತಿಯೊಂದನ್ನು ನಿರ್ಮಿಸುವುದು ಅದರ ಉದ್ದೇಶವಾಗಿತ್ತೇ?
    ನಿಜವಾಗಿ, ಯಾವುದೇ ಒಂದು ರಾಜಕೀಯ ಪಕ್ಪದ ಉದ್ದೇಶವು ಇನ್ನೊಂದು ಪಕ್ಪದ ನಿರ್ನಾಮ ಆಗಿರಬಾರದು. ಹಾಗಂತ, ಇದು ಬಿಜೆಪಿಗೆ ಮಾತ್ರ ಅನ್ವಯವಾಗುವ ಮಾತಲ್ಲ. ತೃಣಮೂಲ ಮತ್ತು ಎಡಪಕ್ಷಗಳಿಗೂ ಇದು ಅನ್ವಯ. ಒಂದು ಪಕ್ಪದ ನಿರ್ನಾಮವೇ ಇನ್ನೊಂದು ಪಕ್ಪದ ಮುಖ್ಯ ಗುರಿಯಾಗುವಾಗ ಅಸಾಧು ಮಾರ್ಗಗಳೆಲ್ಲ ಸಾಧುವಾಗಿ ಬಿಡುತ್ತದೆ. ತಪ್ಪುಗಳೆಲ್ಲ ಸರಿಯಾಗಿ ಬಿಡುತ್ತದೆ. 55 ಗಂಟೆಗಳ ಕಾಲ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಈ ಬಹುಮತ ರಹಿತ ಸರಕಾರವನ್ನು ಸಮರ್ಥಿಸಿಕೊಳ್ಳುವುದಕ್ಕೆ ಬಿಜೆಪಿ ನಾಯಕರು ಕಂಡುಕೊಂಡ ದಾರಿ, ಬಳಸಿದ ಭಾಷೆ ಮತ್ತು ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ನೀಡಿದ ಹೇಳಿಕೆಗಳೆಲ್ಲ ಈ ಅಸಾಧುತನವನ್ನು ಸ್ಪಷ್ಟಪಡಿಸುತ್ತದೆ. ಒಂದು ರೀತಿಯಲ್ಲಿ ಚುನಾವಣೋತ್ತರ ಮೈತ್ರಿ ಅನ್ನುವುದೇ ಅನೈತಿಕ. ಅವಕಾಶವಾದ. ಮೈತ್ರಿ ಮಾಡಿಕೊಳ್ಳುವುದಿದ್ದರೆ ಚುನಾವಣಾ ಪೂರ್ವದಲ್ಲಿ ಮಾಡಿಕೊಳ್ಳಬೇಕೇ ಹೊರತು ಬಹುಮತ ಲಭ್ಯವಾಗದೇ ಹೋದಾಗ ಮೈತ್ರಿ ಮಾಡಿಕೊಳ್ಳುವುದಲ್ಲ. ರಾಜ್ಯದ ಚುನಾವಣೆಯಲ್ಲಿ ಜನರು ಯಾವುದೇ ಮೈತ್ರಿಕೂಟಕ್ಕೆ ಮತ ಚಲಾಯಿಸಿಲ್ಲ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಇತರ ಪಕ್ಪಗಳನ್ನು ಮತದಾರರು ಬಿಡಿ ಬಿಡಿ ಪಕ್ಪಗಳಾಗಿಯೇ ಪರಿಗಣಿಸಿದ್ದರು ಮತ್ತು ಚುನಾವಣಾ ಪ್ರಚಾರದ ವೇಳೆ ಯಾವ ಪಕ್ಪಗಳೂ ಮೈತ್ರಿ ಸರಕಾರದ ಆಶ್ವಾಸನೆ ನೀಡಿರಲಿಲ್ಲ. ಒಂದು ವೇಳೆ, ಇಂಥದ್ದೊಂದು ಆಶ್ವಾಸನೆಯ ಮೂಲಕ ಈ ಮೂರು ಪಕ್ಪಗಳು ಮತದಾರರನ್ನು ಸಮೀಪಿಸಿರುತ್ತಿದ್ದರೆ ಈಗಿನ ಫಲಿತಾಂಶ ಬರುವುದಕ್ಕೆ ಸಾಧ್ಯವಿತ್ತೇ ಅನ್ನುವುದು ಖಂಡಿತ ಚರ್ಚಾರ್ಹ. ಚುನಾವಣಾ ಪೂರ್ವದಲ್ಲಿ ಪರಸ್ಪರ ಸಹಕಾರ ಮನೋಭಾವ ಇಲ್ಲದ ಮತ್ತು ಪರಸ್ಪರ ಎದುರಾಳಿಗಳಂತೆ ಗುರುತಿಸಿಕೊಂಡ ಪಕ್ಪಗಳು ಚುನಾವಣೆಯ ಬಳಿಕ ಪರಸ್ಪರ ಮಿತ್ರರಾಗುವುದು ಮತ್ತು ಅಧಿಕಾರದಲ್ಲಿ ಪಾಲು ದಾರರಾಗುವುದನ್ನು ನೈತಿಕವಾಗಿ ಸಮರ್ಥಿಸಲು ಸಾಧ್ಯವಿಲ್ಲ. ಪ್ರಜಾತಂತ್ರದಲ್ಲಿ ಈ ಬಗೆಯ ಮೈತ್ರಿಗೆ ಅವಕಾಶ ಇದೆ ಅನ್ನುವ ಕಾರಣಕ್ಕಾಗಿ ಮಾತ್ರ ಇದನ್ನು ಒಪ್ಪಿಕೊಳ್ಳಬಹುದು. ಸದ್ಯ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಸ್ಥಾನ-ಮಾನ ಇದು. ಹಾಗಂತ, ಈ ವಾದ ಕೇವಲ ಕುಮಾರಸ್ವಾಮಿಗೆ ಸಂಬಂಧಿಸಿ ಮಾತ್ರ ಪ್ರಸ್ತುತವಾಗುವುದಲ್ಲ. ಬಿಜೆಪಿಗೂ ಅಷ್ಟೇ ಪ್ರಸ್ತುತ. ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಬಿಜೆಪಿಯು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾದರಿಯನ್ನೇ ಅನುಸರಿಸಿ ಸರಕಾರ ರಚಿಸಿದೆ. ಆದ್ದರಿಂದ ರಾಜಕೀಯ ಅವಕಾಶವಾದಿತನ ಎಂಬುದು ಯಾವುದಾದರೊಂದು ರಾಜಕೀಯ ಪಕ್ಪಕ್ಕೆ ಸೀಮಿತಗೊಳಿಸಿ ಹೇಳಬಹುದಾದ ಪದವಲ್ಲ. 1952ರಲ್ಲಿ ಈ ದೇಶದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾ ವಣೆಯಿಂದ ಹಿಡಿದು 1970ರ ವರೆಗೆ ಏಕಪಕ್ಪವೇ ಆಡಳಿತವನ್ನು ನಡೆಸಿತ್ತು. ಕಾಂಗ್ರೆಸ್‍ಗೆ ಸವಾಲು ಒಡ್ಡಬಲ್ಲ ಪರ್ಯಾಯ ಪಕ್ಪವೊಂದು ಇಲ್ಲದ ಶೂನ್ಯ ಕಾಲ ಅದು. ಒಂದು ರೀತಿಯಲ್ಲಿ, ವಿರೋಧ ಪಕ್ಪ ಮುಕ್ತ ಭಾರತದ ವಾತಾವರಣವನ್ನು ಕಾಂಗ್ರೆಸ್ ಆ ಸಮಯದಲ್ಲಿ ನಿರ್ಮಿಸಿತ್ತು. ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಇವತ್ತು ಬಿಜೆಪಿ ಘೋಷಿಸಿರುವಂತೆಯೇ ಆವತ್ತು ‘ವಿರೋಧ ಪಕ್ಪ ಮುಕ್ತ ಭಾರತ’ ಎಂದು ಕಾಂಗ್ರೆಸ್ ಘೋಷಿಸಿರದಿದ್ದರೂ ಪರಿಸ್ಥಿತಿ ಹಾಗೆಯೇ ಇತ್ತು. ಆದರೆ, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪಕ್ಪ ಎಂಬ ಬಹುಮಾನ್ಯತೆ ಗಿಟ್ಟಿಸಿಕೊಂಡಿದ್ದ ಪಕ್ಪದ ಪ್ರಾಬಲ್ಯವೂ ಹೆಚ್ಚು ಸಮಯ ಉಳಿಯಲಿಲ್ಲ. 70ರ ಬಳಿಕದ ರಾಜಕೀಯವು ಬಹು ಆಯಾಮವನ್ನು ಪಡೆದುಕೊಂಡಿತು. ಎರಡು ದಶಕಗಳ ಕಾಲ ಅಧಿಕಾರದ ರುಚಿ ಅನುಭವಿಸಿದ ಕಾಂಗ್ರೆಸ್‍ಗೆ ಪರ್ಯಾಯ ಪP್ಷÀಗಳು ಸವಾಲೊಡ್ಡುವಷ್ಟು ಬಲಿಷ್ಠ ವಾದುವು. ಆದರೆ ಈ ಸವಾಲನ್ನು ಜೀರ್ಣಿಸಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿರಲಿಲ್ಲ. ಆದ್ದರಿಂದಲೇ ತುರ್ತುಸ್ಥಿತಿಯ ಘೋಷಣೆಯೂ ಆಯಿತು. ಕಾಂಗ್ರೆಸನ್ನೇ ಜನರು ತಿರಸ್ಕರಿಸಿದರು. ಪರ್ಯಾಯ ಪಕ್ಪಗಳಿಗೆ ಬೆಂಬಲವನ್ನು ಸಾರಿದರು. ತನಗೆ ಸರಿಸಮಾನವಾಗಿ ಯಾರೂ ಬೆಳೆಯಬಾರದೆಂಬ ಮಾನಸಿಕತೆಗೆ ಜನರು ನೀಡಿದ ಉತ್ತರ ಇದು. ಇದೀಗ ಬಿಜೆಪಿಯು ಅದೇ ಪುರಾತನ ಮಾನಸಿ ಕತೆಯ ಮುಂದುವರಿದ ಭಾಗವನ್ನು ಪ್ರದರ್ಶಿಸುತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಅಂದರೆ, ರಾಷ್ಟ್ರೀಯವಾಗಿ ತನಗೆ ಸವಾಲೊಡ್ಡಬಲ್ಲ ಏಕೈಕ ದೊಡ್ಡ ಪಕ್ಪದ ಅಂತ್ಯ ಎಂದು ಅರ್ಥ. ಈ ಬಗೆಯ ಅಂತ್ಯ ಯಾಕಾಗಿ? ಯಾವ ಉದ್ದೇಶಕ್ಕಾಗಿ? ಭಾರತೀಯ ಪ್ರಜಾ ತಂತ್ರದ ಬಯಕೆಯೇ ಇದು? ಅಂದಹಾಗೆ, ಒಂದು ರಾಜಕೀಯ ಪಕ್ಪದ ಅಂತ್ಯಕ್ಕೂ ಒಂದು ವಿಚಾರಧಾರೆಯ ಅಂತ್ಯಕ್ಕೂ ವ್ಯತ್ಯಾಸ ಇದೆ. ಭಾರತೀಯ ಪ್ರಜಾತಂತ್ರಕ್ಕೆ ಯೋಗ್ಯವಲ್ಲದ ಮತ್ತು ಮನುಷ್ಯರ ಪಾಲಿಗೆ ಅಪಾಯಕಾರಿಯಾಗಿರುವ ವಿಚಾರಧಾರೆಯನ್ನು ಸಂವಿಧಾನಬದ್ಧ ಮಾರ್ಗಗಳ ಮೂಲಕ ಇಲ್ಲವಾಗಿಸುವುದು ತಪ್ಪಲ್ಲ. ಆದರೆ ಕಾಂಗ್ರೆಸ್‍ನ ಮೇಲೆ ಈ ದೇಶದ ಯಾವ ಸಾಂವಿಧಾನಿಕ ಸಂಸ್ಥೆಗಳೂ ಇಂಥದ್ದೊಂದು ಆರೋಪವನ್ನು ಹೊರಿಸಿಲ್ಲ. ಇನ್ನು, ಆ ಪಕ್ಪದ ಮೇಲೆ ಏನೆಲ್ಲ ಆರೋಪಗಳಿವೆಯೋ ಅವೆಲ್ಲವೂ ಬಿಜೆಪಿಯ ಮೇಲೂ ಇವೆ. ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಕ್ರಿಮಿನಲ್ ಕೇಸುಗಳು, ಅಧಿಕಾರ ದುರುಪಯೋಗ, ನಾಗರಿಕ ಹತ್ಯೆ.. ಇತ್ಯಾದಿ ಇತ್ಯಾದಿ ಎಲ್ಲದರಲ್ಲೂ ಎರಡೂ ಪಕ್ಪಗಳೂ ಹೆಸರು ಕೆಡಿಸಿಕೊಂಡಿವೆ. ಹೀಗಿರುವಾಗ, ರಾಜಕೀಯವಾಗಿ ಸ್ವಚ್ಛವಲ್ಲದ ಪಕ್ಪವೊಂದು ಇನ್ನೊಂದು ಅಸ್ವಚ್ಛ ಪಕ್ಪವನ್ನು ನಿರ್ನಾಮಗೊಳಿಸುವ ಮಾತಾಡುವುದು ಅತ್ಯಂತ ಅಪ್ರಬುದ್ಧವಾದ ನಡೆ. ಇನ್ನು, ಒಂದು ವೇಳೆ, ಬಿಜೆಪಿ ಬಯಸಿದಂತೆಯೇ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಯಿತು ಎಂದೇ ಇಟ್ಟು ಕೊಳ್ಳೋಣ. ಆಗ ಉಂಟಾಗಬಹುದಾದ ರಾಜಕೀಯ ನಿರ್ವಾತ ಸ್ಥಿತಿಯು ಹೇಗಿರಬಹುದು? ಕಾಂಗ್ರೆಸ್ ನಿರ್ನಾಮವಾದರೆ, ಆ ಬಳಿಕ ಉಳಿದುಕೊಳ್ಳುವುದು ಸಣ್ಣ-ಪುಟ್ಟ ಪ್ರಾದೇಶಿಕ ಪಕ್ಪಗಳು ಮಾತ್ರ. ಅವುಗಳನ್ನು ಬಿಜೆಪಿ ಹೇಗೆ ನಡೆಸಿಕೊಳ್ಳಬಹುದು? ಏಕಪಕ್ಪದ ಆಡಳಿತಕ್ಕೆ ಈ ದೇಶ ಶರಣಾಗಬಹುದೇ? ಪ್ರಾದೇಶಿಕ ಪಕ್ಪಗಳನ್ನು ಒಂದೊಂದಾಗಿ ಆಪೋಶನ ಪಡಕೊಳ್ಳುತ್ತಾ ಅಂತಿಮವಾಗಿ ಏಕಪಕ್ಪ, ಏಕಭಾರತವೆಂಬ ಘೋಷಣೆ ಈ ದೇಶದ್ದಾಗಬಹುದೇ?
    ಭಾರತೀಯ ಪ್ರಜಾಸತ್ತೆಗೂ ಅಮೇರಿಕ, ಬ್ರಿಟನ್, ಜರ್ಮನಿ ಸಹಿತ ಯುರೋಪಿಯನ್ ರಾಷ್ಟ್ರಗಳ ಪ್ರಜಾಸತ್ತೆಗೂ ನಡುವೆ ಸಾಕಷ್ಟು ಅಂತರಗಳಿವೆ. ಅಮೇರಿಕದಲ್ಲಿ ರಿಪಬ್ಲಿಕನ್ ಮತ್ತು ಡೆಮಾಕ್ರಾಟ್ ಎಂಬ ಎರಡೇ ಪಕ್ಪಗಳಿವೆ. ಡೆಮಾಕ್ರಾಟ್ ಪಕ್ಪ ಇಷ್ಟವಾಗದಿದ್ದರೆ ಜನರು ರಿಪಬ್ಲಿಕನ್ ಪಕ್ಪದಲ್ಲಿ ತಮ್ಮಿಷ್ಟವನ್ನು ಕಾಣಬೇಕು. ಇದರ ಹೊರತಾಗಿ ಮೂರನೆಯದರಲ್ಲಿ ಸುಖ ಕಾಣುವ ಅವಕಾಶ ಅವರಿಗಿಲ್ಲ. ಬ್ರಿಟನ್‍ನಲ್ಲಿ ಕನ್ಸರ್ವೇಟಿವ್ ಪಾರ್ಟಿ ಮತ್ತು ಲೇಬರ್ ಪಾರ್ಟಿಗಳಿವೆ. ಜರ್ಮನಿಯಲ್ಲಿ ಕ್ರಿಶ್ಚಿಯನ್ ಡೆಮಾಕ್ರಾಟ್ ಮತ್ತು ಸೋಶಿಯಲ್ ಡೆಮಾಕ್ರಾಟ್. ಎಡ-ಬಲ-ಮಧ್ಯಮ ಸಹಿತ ಎಲ್ಲ ವಿಚಾರಧಾರೆಯನ್ನೂ ಜನರು ಈ ಎರಡು ಪಕ್ಪಗಳಲ್ಲೇ  ಕಂಡುಕೊಳ್ಳಬೇಕು. ಆದರೆ ಭಾರತೀಯ ಪ್ರಜಾತಂತ್ರ ಹಾಗಲ್ಲ. ಇಲ್ಲಿಯ ವ್ಯವಸ್ಥೆ 120 ಕೋಟಿ ಪಕ್ಪಗಳನ್ನೂ ತಾಳಿಕೊಳ್ಳುವಷ್ಟು ಉದಾರಿ. ಅಮೇರಿಕ, ಬ್ರಿಟನ್, ಜರ್ಮನಿ ಮತ್ತಿತರ ರಾಷ್ಟ್ರಗಳಲ್ಲಿ ಕರ್ನಾಟಕದಂಥ ರಾಜಕೀಯ ಅಸ್ಥಿರತೆ ಉಂಟಾಗದೇ ಇರುವುದಕ್ಕೂ ಭಾರತದಲ್ಲಿ ಪದೇ ಪದೇ ಅದು ನಿರ್ಮಾಣವಾಗುವುದಕ್ಕೂ ಈ ದ್ವಿಪಕ್ಪ ಮತ್ತು ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯೇ ಮುಖ್ಯ ಕಾರಣ. ಆದರೆ ಯುರೋಪಿಗೆ ನಮ್ಮನ್ನು ಹೋಲಿಸುವಂತಿಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಚಾಚಿರುವ ಭಾರತವೇ ಒಂದು ಸೋಜಿಗ. ವೈವಿಧ್ಯಮಯ ಅಸಂಖ್ಯ ಮಾದರಿಗಳು ಹೆಜ್ಜೆಹೆಜ್ಜೆಗೂ ಇಲ್ಲಿ ಸಿಗುತ್ತಲೇ ಇರುತ್ತವೆ. ಭಾರತದಲ್ಲಿರುವಷ್ಟು ಧರ್ಮ, ಭಾಷೆ, ಜಾತಿ, ಪಂಗಡಗಳು ದ್ವಿಪಕ್ಪ ಪ್ರಜಾಸತ್ತೆ ಯನ್ನು ಒಪ್ಪಿಕೊಂಡಿರುವ ರಾಷ್ಟ್ರಗಳಲ್ಲಿ ಇಲ್ಲವೇ ಇಲ್ಲ. ಆದ್ದರಿಂದ ಆ ಮಾದರಿ ಭಾರತೀಯ ವಾತಾವರಣಕ್ಕೆ ಒಗ್ಗಿಕೊಳ್ಳುವುದೇ ಅನ್ನುವ ಪ್ರಶ್ನೆಗೇ ಉತ್ತರ ಸರಳವೂ ಅಲ್ಲ. ಇವತ್ತು ಬಿಜೆಪಿ 21 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಮತ್ತು ನರೇಂದ್ರ ಮೋದಿಯವರು ಪ್ರಧಾನಿಯಾಗಿದ್ದರೆ ಅದಕ್ಕೆ ಭಾರತದ ಬಹುಪಕ್ಷೀಯ ವ್ಯವಸ್ಥೆಯೇ ಬಹುಮುಖ್ಯ ಕಾರಣ. 1952 ರಿಂದ 1970ರ ವರೆಗೆ ಪ್ರಾಬಲ್ಯ ಸ್ಥಾಪಿಸಿದ್ದ ಕಾಂಗ್ರೆಸ್ ಪಕ್ಪವು ಉಳಿದ ಪಕ್ಪಗಳ ನಿರ್ನಾಮಕ್ಕೆ ಪಣ ಅಂದು ತೊಟ್ಟಿದ್ದರೆ ಇವತ್ತು ಭಾರತೀಯ ಪ್ರಜಾತಂತ್ರದ ಸ್ಥಿತಿ ಹೇಗಿರುತ್ತಿತ್ತು? ಬಿಜೆಪಿ ಎಲ್ಲಿರುತ್ತಿತ್ತು? ಒಂದು ಪಕ್ಪ ಪ್ರಬಲವಾಗುವುದು ಮತ್ತು ಇನ್ನೊಂದು ಪಕ್ಪ ದುರ್ಬಲವಾಗುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಹಜ. ಆದರೆ ಪ್ರಬಲ ಪಕ್ಪವು ದುರ್ಬಲ ಪಕ್ಪದ ನಿರ್ನಾಮ ವನ್ನು ಬಯಸುವುದು ಅಸಹಜ ಮಾತ್ರವಲ್ಲ, ಅಸಾಂವಿಧಾನಿಕ.
     ಬಹುಮತ ಇಲ್ಲದೆಯೂ ಯಡಿಯೂರಪ್ಪರನ್ನು ಮುಖ್ಯಮಂತ್ರಿಯಾಗಿಸಿ ಕರ್ನಾಟಕವನ್ನು ‘ಕಾಂಗ್ರೆಸ್ ಮುಕ್ತವಾಗಿಸಲು’ ಬಿಜೆಪಿ ತೋರಿದ ಅವಸರದಲ್ಲಿ ವ್ಯಕ್ತವಾಗುವುದು ಈ ಅಸಾಧುತನವೇ.






ಒಂದು ವೀಡಿಯೋ, ಒಂದು ವರದಿ ಮತ್ತು ಸಾವಿರಾರು ಶೇರ್ ಗಳು



‘ಕಥುವಾ ಮೆ ಬಚ್ಚೀಸೆ ನಹೀಂ ಹುವಾ ಥಾ ದುಷ್ಕರ್ಮ್’ (ಕಥುವಾದಲ್ಲಿ ಬಾಲೆಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ) ಎಂಬ ಶೀರ್ಷಿಕೆಯಲ್ಲಿ ದೈನಿಕ್ ಜಾಗರಣ್ ಹಿಂದಿ ದಿನಪತ್ರಿಕೆಯು 2018 ಎಪ್ರಿಲ್ 20ರಂದು ಮುಖಪುಟದಲ್ಲಿ ಲೇಖನವೊಂದನ್ನು ಪ್ರಕಟಿಸಿತು. ಈ ಶೀರ್ಷಿಕೆಯ ಕೆಳಗಡೆ, ‘ಫಾರೆನ್ಸಿಕ್ ರಿಪೋರ್ಟ್ ಮೆ ಸಿರ್ಫ್ ಜಕ್‍ಮೋಂಕಿ ಬಾತ್: ಸವಾಲೋಂಕಿ ಧೇರೆ ಮೆ ಕ್ರೈಂ ಬ್ರಾಂಚ್ ಕಿ ಚಾರ್ಜ್‍ಶೀಟ್’ (ಫಾರೆನ್ಸಿಕ್ ವರದಿಯಲ್ಲಿ ಕೇವಲ ಗಾಯಗಳ ಪ್ರಸ್ತಾಪವಿದೆ. ಕ್ರೈಮ್ ಬ್ರಾಂಚ್‍ನ ಚಾರ್ಜ್‍ಶೀಟ್ ಪ್ರಶ್ನೆಗಳ ಸುಳಿಯಲ್ಲಿ) ಎಂಬುದಾಗಿಯೂ ಬರೆಯಿತು. ಕಥುವಾದ 8ರ ಹರೆಯದ ಬಾಲೆಯ ಮೇಲೆ ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದ ಸಂದರ್ಭದಲ್ಲೇ ಪ್ರಕಟವಾದ ಲೇಖನ ಇದು.
 ‘ಬಾಲೆಯ ತೊಡೆಯಲ್ಲಿ ಗೀರುಗಳಿವೆಯಾದರೂ ಅದು ಬಿದ್ದು ಮಾಡಿಕೊಂಡಿರುವ ಗಾಯಗಳಾಗಿರಬಹುದು’ ಎಂದು ಫಾರೆನ್ಸಿಕ್ ವರದಿ ಹೇಳಿರುವುದಾಗಿ ಲೇಖನದಲ್ಲಿ ಎತ್ತಿ ಹೇಳಲಾಗಿತ್ತಲ್ಲದೇ, ಬಾಲೆಯ ಯೋನಿ ಹರಿದಿರುವುದಕ್ಕೆ ಆಕೆ ಕುದುರೆ ಸವಾರಿ ಮಾಡಿರುವುದು, ಈಜು ಮತ್ತು ಸೈಕ್ಲಿಂಗ್ ಮಾಡಿರುವುದೂ ಕಾರಣವಾಗಿರಬಹುದು’ ಎಂದು ವರದಿಯಲ್ಲಿ ಅಭಿಪ್ರಾಯ ಪಟ್ಟಿರುವುದಾಗಿ ಲೇಖನದಲ್ಲಿ ವಿವರಿಸಲಾಗಿತ್ತು.
  
 ಈ ಲೇಖನ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ಚುರುಕಾದರು. ಬಲಪಂಥೀಯ ವಿಚಾರಧಾರೆಯನ್ನು ಒರೆಗೆ ಹಚ್ಚುವ ಮತ್ತು ಕಥುವಾ ಕ್ರೌರ್ಯದ ವಿವಿಧ ಮಗ್ಗುಲುಗಳನ್ನು ಜನರ ಬಳಿಗೆ ತಲುಪಿಸಿದ ದಿ ಕ್ವಿಂಟ್, ಲಾಜಿಕಲ್ ಇಂಡಿಯನ್ಸ್, ಆಲ್ಟ್ ನ್ಯೂಸ್ ಇತ್ಯಾದಿ ವೆಬ್ ಪತ್ರಿಕೆಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಇವರೆಲ್ಲ ಕ್ಪಮೆ ಕೇಳಿ ಜರ್ನಲಿಸಂಗೆ ನಿವೃತ್ತಿ ಹೇಳಲಿ ಎಂದು ಆಗ್ರಹಿಸಿದರು. ಕಥುವಾದ ಬಾಲೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಮತ್ತು ಹಿಂದೂಗಳನ್ನು ಅವಮಾನಿಸುವ ಉದ್ದೇಶಶದಿಂದ ಹೆಣೆಯಲಾದ ಷಡ್ಯಂತ್ರ ಇದು ಎಂದು ಅವರು ಆಕ್ರೋಶಿಸಿದರು. 25 ಮಿಲಿಯನ್ ಬಳಕೆದಾರರಿರುವ ಐ ಸಪೋರ್ಟ್ ನರೇಂದ್ರ ಮೋದಿ ಎಂಬ ಫೇಸ್‍ಬುಕ್ ಪುಟದಲ್ಲಿ ಈ ಲೇಖನವು ‘The whole conspiracy to defame Hindus is exposed’ ಎಂಬ ಶೀರ್ಷಿಕೆಯಲ್ಲಿ ಕಾಣಿಸಿಕೊಂಡಿತಲ್ಲದೇ, 34 ಸಾವಿರ ಮಂದಿ ಇದನ್ನು ಹಂಚಿ(ಶೇರ್)ಕೊಂಡರು. ಅಲ್ಲದೇ, we support Hindutva  ಎಂಬ ಫೇಸ್‍ಬುಕ್ ಪುಟದಲ್ಲೂ ಕಾಣಿಸಿಕೊಂಡ ಈ ಲೇಖನವನ್ನು ಕ್ರಮವಾಗಿ 5600 ಮತ್ತು 6000 ಮಂದಿ ಇದನ್ನು ಹಂಚಿ(ಶೇರ್)ಕೊಂಡರು. ನಿಜ ಏನೆಂದರೆ, ಪೋಸ್ಟ್ ಮಾರ್ಟಂ ವರದಿಯ ಬಹುಮುಖ್ಯ ಅಂಶಗಳನ್ನು ದೈನಿಕ ಜಾಗರಣ್ ಓದುಗರಿಂದ ಅಡಗಿಸಿಟ್ಟಿತ್ತು. ವರದಿಯ ಸಮಗ್ರ ವಿವರಗಳನ್ನು ಓದುಗರ ಮುಂದಿಡುವ ಬದಲು, ‘ಅತ್ಯಾಚಾರ ನಡೆದಿಲ್ಲ ಎಂದು ಸಾಬೀತುಪಡಿಸುವುದಕ್ಕೆ ಸಿಗಬಹುದಾದ ಅಂಶಗಳನ್ನಷ್ಟೇ ಹುಡುಕಿ’ ಅದು ಪ್ರಕಟಿಸುವ ಭ್ರಷ್ಟತನಕ್ಕೆ ಇಳಿಯಿತು. ಬಾಲೆಯ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಪುರಾವೆಯಾಗಿ ಪೋಸ್ಟ್ ಮಾರ್ಟಂ ವರದಿಯಲ್ಲಿ ಹಲವು ಸಾಕ್ಷ್ಯಗಳಿದ್ದುವು. ತೊಡೆ ಮತ್ತು ತುಟಿಯಲ್ಲಿದ್ದ ರಕ್ತ, ಯೋನಿಯಲ್ಲಿ ರಕ್ತ ಹರಿದಿರುವುದನ್ನು ಅತ್ಯಾಚಾರಕ್ಕೆ ಸಾಕ್ಷ್ಯವಾಗಿ ಬೊಟ್ಟು ಮಾಡಲಾಗಿತ್ತು. ಅಲ್ಲದೇ, ಕಥುವಾದ ಜಿಲ್ಲಾ ವೈದ್ಯರ ಸಂಘದ ಮೂಲಕ ಪೊಲೀಸರು ತರಿಸಿಕೊಂಡ ವರದಿಯಲ್ಲೂ ಅತ್ಯಾಚಾರದ ಸ್ಪಷ್ಟ ಉಲ್ಲೇಖಗಳಿದ್ದುವು. ಬಾಲೆಯ ಮೇಲಿರುವ ಗಾಯಗಳು ಅತ್ಯಾಚಾರದಿಂದಾಗಿಯೇ ಸಂಭವಿಸಿವೆ ಎಂದು ವೈದ್ಯರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಇವು ಮತ್ತು ಇಂಥ ಅನೇಕಾರು ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ ದೈನಿಕ್ ಜಾಗರಣ್ ಪತ್ರಿಕೆಯು ತನ್ನ ದೆಹಲಿ, ಆಗ್ರಾ, ಅಹ್ಮದಾಬಾದ್, ಅಮೃತ್‍ಸರ್, ಅಲೀಘರ್, ಕಥುವಾ, ಜಮ್ಮು ಮತ್ತು ಇತರ ಕೇಂದ್ರಗಳಿಂದ ಪ್ರಕಟವಾದ ಆವೃತ್ತಿಗಳಲ್ಲಿ ‘ಕಥುವಾ ಮೆ ಬಚ್ಚೀಸೆ ನಹೀಂ ಹುವಾ ದುಷ್ಕರ್ಮ್’ ಎಂದು ಮುಖಪುಟದಲ್ಲೇ  ಲೇಖನ ಬರೆಯಿತು.


ವಿಷಾದ ಏನೆಂದರೆ, ಹಿಂದಿ ಭಾಷಾ ರಾಜ್ಯಗಳಲ್ಲಿ ಪ್ರಾಬಲ್ಯವನ್ನು ಹೊಂದಿರುವ ಮತ್ತು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುವ ಮುಖ್ಯವಾಹಿನಿಯ ಪತ್ರಿಕೆಯೇ ಈ ಮಟ್ಟದಲ್ಲಿ ದಾರಿ ತಪ್ಪಿಸುವ ಲೇಖನವನ್ನು ಪ್ರಕಟಿಸುವುದಾದರೆ, ಇನ್ನು ಪ್ರಾದೇಶಿಕ ಪತ್ರಿಕೆಗಳ ಸ್ಥಿತಿ ಹೇಗಿರಬಹುದು? ಅಂದಹಾಗೆ, ದೈನಿಕ್ ಜಾಗರಣ್ ಪತ್ರಿಕೆಯ ಈ ಲೇಖನದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಬೇಕೆಂದುAlt News  ಎಂಬ ಅಂತರ್ಜಾಲ ಪತ್ರಿಕೆಯು ಹೊರಡದೇ ಇರುತ್ತಿದ್ದರೆ ಸತ್ಯ ಬಹಿರಂಗವಾಗಲು ಇನ್ನೆಷ್ಟು ತಡವಾಗುತ್ತಿತ್ತೋ ಏನೋ? ಅದು ಪೋಸ್ಟ್ ಮಾರ್ಟಂ ವರದಿಯನ್ನು ತಜ್ಞ ವೈದ್ಯರ ಮೂಲಕ ಪರಿಶೀಲನೆಗೆ ಒಡ್ಡಿತು. ಆ ಮೂಲಕ ದೈನಿಕ್ ಜಾಗರಣ್ ಪತ್ರಿಕೆ ಎಲ್ಲಿ ಎಡವಿದೆ ಎಂಬುದನ್ನು Post Mortem report of Kathua Victim contradicts Dainik Jagaran’s Front page splash ಎಂಬ ಶೀರ್ಷಿಕೆಯಲ್ಲಿ ವಿಸ್ತೃತ ಲೇಖನವನ್ನು ಪ್ರಕಟಿಸಿತು. ಈ ಲೇಖನವನ್ನು ಸುಮಾರು 12 ಸಾವಿರ ಮಂದಿ ಹಂಚಿಕೊಂಡರು ಎಂಬುದು ಸಮಾಧಾನ ತರುವ ವಿಷಯವಾದರೂ ಈಗಾಗಲೇ ಆಗಿರುವ ಅನಾಹುತಕ್ಕೆ ಏನು ಪರಿಹಾರ ಅನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಓದುಗರಿಗೆ ತಪ್ಪು ಮಾಹಿತಿ ನೀಡಿದ ದೈನಿಕ್ ಜಾಗರಣ್‍ನ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಅನ್ನುವ ಸಹಜ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಈವರೆಗೂ ಲಭ್ಯವಾಗಿಲ್ಲ. ಬಲಾಢ್ಯ ಪತ್ರಿಕಾ ಸಂಸ್ಥೆಯೊಂದು ಏನು ಬರೆದರೂ, ಹೇಗೆ ನಡಕೊಂಡರೂ ದಕ್ಕುತ್ತದೆಯೇ; ಸುಳ್ಳು ಸುದ್ದಿಯನ್ನು ತಯಾರಿಸುವ ಮತ್ತು ಹಂಚುವವರ ಮೇಲೆ ಕ್ರಮ ಕೈಗೊಳ್ಳದೇ ಇದ್ದರೆ ಅದು ಇನ್ನಷ್ಟು ಅನಾಹುತಗಳಿಗೆ ಕಾರಣವಾಗದೇ ಅನ್ನುವ ಭಯ ಸಹಜವಾಗಿಯೇ ಕಾಡುತ್ತದೆ. ಈ ಭಯಕ್ಕೆ ಆಧಾರವಾಗಿ ಇನ್ನೊಂದು ವೀಡಿಯೋ ವನ್ನೂ ಇಲ್ಲಿ ಉಲ್ಲೇಖಿಸಬಹುದು.
   ‘ಕೈಗೆ ಬೇಡಿ ತೊಟ್ಟುಕೊಂಡಿರುವ ಯುವಕ ಪೊಲೀಸ್ ಬೆಂಗಾವಲಿನಲ್ಲಿ ನಡೆಯುತ್ತಿರುತ್ತಾನೆ. ಆಗ ಅಲ್ಲಿಗೆ ಆಗಮಿಸುವ ಮಹಿಳೆಯರು ಆತನ ಮುಖಕ್ಕೆ ಮಸಿ ಬಳಿಯುತ್ತಾರೆ. ಕೆನ್ನೆಗೆ ಬಾರಿಸುತ್ತಾರೆ’.

  ಈ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಮುಹಮ್ಮದ್ ಇಲ್ಯಾಸ್ ಎಂಬ ಹೆಸರಿನ ಈತ ಕಥುವಾದ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಎಂದು ವೀಡಿಯೋದ ಜತೆಗೆ ಅಡಿ ಟಿಪ್ಪಣಿಯನ್ನೂ ನೀಡಲಾಗಿತ್ತು. ಈ ದೇಶದ ಹೆಚ್ಚಿನ ಮೊಬೈಲ್ ಗ್ರಾಹಕರ ಮೊಬೈಲ್ ಗ್ಯಾಲರಿಯಲ್ಲಿ ಇವತ್ತು ಈ ವೀಡಿಯೋ ಇದ್ದಿರಬಹುದಾದ ಸಾಧ್ಯತೆಯೇ ಹೆಚ್ಚು. ಅಷ್ಟು ವೇಗವಾಗಿ ಈ ವೀಡಿಯೋ ಜನಪ್ರಿಯಗೊಂಡಿತ್ತು. 16 ಲಕ್ಪ ಸದಸ್ಯರಿರುವ ರಜಪೂತ್ ಫೇಸ್‍ಬುಕ್ ಪೇಜ್‍ಗೆ ಈ ವೀಡಿಯೋ ವನ್ನು ಪೋಸ್ಟ್ ಮಾಡಲಾಯಿತಲ್ಲದೇ 20 ಸಾವಿರ ಮಂದಿ ಇದನ್ನು ಶೇರ್ ಮಾಡಿಕೊಂಡರು. ಗೋವಿಂದ ದಾಸ್ ಎಂಬ ವ್ಯಕ್ತಿಯ ಫೇಸ್‍ಬುಕ್ ಪುಟವೊಂದರಿಂದಲೇ 19 ಸಾವಿರ ಮಂದಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ನಿಜವಾಗಿ, ಈ ವೀಡಿಯೋವನ್ನು ಎಪ್ರಿಲ್ 5ರಂದು ನ್ಯೂ ನೇಶನ್ ಎಂಬ ಅಂತರ್ಜಾಲ ಪತ್ರಿಕೆಯು ಪ್ರಕಟಿಸಿತ್ತು. 13 ವರ್ಷದ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಮೇಲೆ ಸಾರ್ವಜನಿಕ ರಿಂದ ಹಲ್ಲೆ ಎಂಬ ರೀತಿಯಲ್ಲಿ ಅದು ಈ ವೀಡಿಯೋಗೆ ವಿವರಣೆಯನ್ನು ಕೊಟ್ಟಿತು. ಮಾತ್ರವಲ್ಲ, ಇದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಎಂದೂ ಹೇಳಿಕೊಂಡಿತ್ತು. ಎಪ್ರಿಲ್ 6ರಂದು ‘ಈ ನಾಡು ಇಂಡಿಯಾ ಡಾಟ್ ಕಾಂ’ ಎಂಬ ವೆಬ್‍ಪತ್ರಿಕೆಯು ಇದೇ ವೀಡಿಯೋವನ್ನು ಓದುಗರ ಮುಂದಿಟ್ಟಿತು. ಎಪ್ರಿಲ್ 20ರಂದು ಪ್ರಕಟವಾದ ದೈನಿಕ್ ಭಾಸ್ಕರ್ ಎಂಬ ಬಹು ಪ್ರಭಾವಿ ಪತ್ರಿಕೆಯಂತೂ Rape Accused’s face blackened: beaten with slippers video viral ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನವನ್ನೇ ಪ್ರಕಟಿಸಿತು.


ನಿಜವಾಗಿ, ಆ ವೀಡಿಯೋಗೂ ಕಥುವಾಗೂ ಯಾವ ಸಂಬಂಧವೂ ಇರಲಿಲ್ಲ. ಮಾತ್ರವಲ್ಲ, ಉತ್ತರ ಪ್ರದೇಶದಲ್ಲೋ  ಚಂಡೀಗಢದಲ್ಲೋ  ನಡೆದ ಘಟನೆಯೂ ಅದಾಗಿರಲಿಲ್ಲ. ವೀಡಿಯೋದಲ್ಲಿ ಮಸಿ ಬಳಿಸಿಕೊಳ್ಳುವ ವ್ಯಕ್ತಿ ಅತ್ಯಾಚಾರವೆಸಗಿದ ಆರೋಪಿ ನಿಜ. ಆದರೆ ಅದು ನಡೆದಿರುವುದು ಮಧ್ಯಪ್ರದೇಶದ ಹನುಮಗಂಜ್ ಎಂಬಲ್ಲಿ. ಆತನನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವಾಗ ಜನರು ಆತನಿಗೆ ಚಪ್ಪಲಿಯಿಂದ ಬಾರಿಸಿದ್ದರು. ಇದನ್ನು ಹನುಮಗಂಜ್‍ನ ಪೊಲೀಸ್ ಇನ್ಸ್‍ಪೆಕ್ಟರ್ ಸುದೇಶ್ ತಿವಾರಿಯವರು ಮಾಧ್ಯಮದೊಂದಿಗೆ ಹೇಳಿಕೊಂಡರು. ಅಷ್ಟಕ್ಕೂ, ಆ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಬರಹಕ್ಕೆ ಹೊರಟದ್ದುಆಲ್ಟ್ ನ್ಯೂಸ್ ಎಂಬ ಅಂತರ್ಜಾಲ ಪತ್ರಿಕೆ. ಅದು ವೀಡಿಯೋವನ್ನು ಸೂಕ್ಷ್ಮ ಪರಿಶೀಲನೆಗೆ ಒಡ್ಡಿತು. ವೀಡಿಯೋದಲ್ಲಿ ಕಾಣಿಸುವ ಪೊಲೀಸ್ ಪೇದೆಯ ಅಂಗಿಯಲ್ಲಿರುವ ಗುರುತು ಚೀಟಿ ಮತ್ತು ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣಿಸುವ ನಾಮಫಲಕವನ್ನು ಎತ್ತಿಕೊಂಡು ಪತ್ತೆ ಕಾರ್ಯದಲ್ಲಿ ನಿರತವಾಯಿತು. ಅವೆರಡೂ ಗುರುತುಗಳೊಂದಿಗೆ ಅದು ಫೇಸ್‍ಬುಕ್ ಪುಟದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿ ಪತ್ತೆ ಕಾರ್ಯಕ್ಕೆ ನೆರವಾಗುವಂತೆ ಕೋರಿಕೊಂಡಿತು. ಅಂತಿಮವಾಗಿ Viral video claims one Mohammed Ilyas arrested for Kathua incident: What is the truth? ಎಂಬ ಶೀರ್ಷಿಕೆಯಲ್ಲಿ ತನಿಖಾ ಬರಹವನ್ನು ಪ್ರಕಟಿಸಿತು. ಅದನ್ನು 2 ಸಾವಿರಕ್ಕಿಂತಲೂ ಅಧಿಕ ಮಂದಿ ಶೇರ್ ಮಾಡಿಕೊಂಡರು. ವಿಶೇಷ ಏನೆಂದರೆ, ತಪ್ಪು ಶೀರ್ಷಿಕೆಯೊಂದಿಗೆ ಆರಂಭದಲ್ಲಿ ಪ್ರಸಾರವಾದ ವೀಡಿಯೋ ಶೇರ್ ಆದ ಸಂಖ್ಯೆಯನ್ನು ಪರಿಗಣಿಸಿದರೆ, ಆ ಬಳಿಕದ ಈ ಸತ್ಯಶೋಧನಾ ವರದಿಯನ್ನು ಶೇರ್ ಮಾಡಿದವರ ಸಂಖ್ಯೆ ತೀರಾ ಕಡಿಮೆ. ಸುಳ್ಳು ಮತ್ತು ಸತ್ಯದ ನಡುವಿನ ಈ ಸಂಘರ್ಷದಲ್ಲಿ ಸುಳ್ಳು ಮೇಲುಗೈ ಪಡೆಯುತ್ತಿದೆಯೇನೋ ಎಂದು ಆತಂಕವಾಗುವುದು ಈ ಕಾರಣದಿಂದಲೇ. ದೈನಿಕ್ ಜಾಗರಣ್ ಪತ್ರಿಕೆಯು ಕಥುವಾದ ಬಾಲೆಯ ಕುರಿತಂತೆ ಪ್ರಕಟಿಸಿದ ತಪ್ಪಾದ ವರದಿಗೆ ಸಿಕ್ಕ ವ್ಯಾಪಕ ಪ್ರತಿಕ್ರಿಯೆಗೆ ಹೋಲಿಸಿದರೆ,ಆಲ್ಟ್ ನ್ಯೂಸ್  ಬಳಿಕ ಪ್ರಕಟಿಸಿದ ಸತ್ಯಶೋಧನಾ ವರದಿಗೆ ಸಿಕ್ಕ ಪ್ರತಿಕ್ರಿಯೆ ಕಡಿಮೆ. ಇದಕ್ಕೆ ಇರುವ ಒಂದು ಪ್ರಮುಖ ಕಾರಣ ಏನೆಂದರೆ, ದೈನಿಕ್ ಜಾಗರಣ್ ಎಂಬುದು ಪತ್ರಿಕೆಯಾದರೆ ಆಲ್ಟ್  ನ್ಯೂಸ್ ಎಂಬುದು ಅಂತರ್ಜಾಲ ಪತ್ರಿಕೆ. ಅಂತರ್ಜಾಲದಲ್ಲಿ ಪರಿಣತಿ ಪಡೆದಿರುವವರು, ಮೊಬೈಲ್‍ಗೆ ಇಂಟರ್ ನೆಟ್ ಸಂಪರ್ಕ ಹೊಂದಿರುವವರು ಮತ್ತು ಆಲ್ಟ್  ನ್ಯೂಸ್‍ನ ಬಗ್ಗೆ ಅರಿವಿರುವವರು ಮಾತ್ರ ಅದನ್ನು ಓದುತ್ತಾರೆ. ಆದರೆ, ದೈನಿಕ್ ಜಾಗರಣ್ ಪತ್ರಿಕೆ ಹಾಗಲ್ಲ. ಅದು ಜನರ ಬಳಿಗೆ ಸುಲಭವಾಗಿ ತಲುಪುವುದರಿಂದ ಅದು ಬೇಗನೇ ಜನರನ್ನು ಸೆಳೆಯುತ್ತದೆ. ಇಲ್ಲಿನ ಇನ್ನೊಂದು ಮುಖ್ಯ ಸಮಸ್ಯೆ ಏನೆಂದರೆ, ಮುಖ್ಯವಾಹಿನಿಯ ಪತ್ರಿಕೆಯೊಂದರ ತಪ್ಪನ್ನು ಮುಖ್ಯವಾಹಿನಿಯ ಇನ್ನೊಂದು ಪತ್ರಿಕೆ ಪ್ರಶ್ನಿಸುವುದಿಲ್ಲ ಎಂಬುದು.

ಇದು ಓದುಗರ ಮೇಲೆ ಸಾಕಷ್ಟು ಅಡ್ಡ ಪರಿಣಾಮವನ್ನು ಬೀರುತ್ತದೆ. ದೈನಿಕ್ ಜಾಗರಣ್‍ನ ತಪ್ಪಾದ ವರದಿಯನ್ನೇ ನಿಜ ಎಂದು ನಂಬಿಕೊಂಡವರು ಈಗಲೂ ಇರಬಹುದು. ಕಥುವಾದ ಆರೋಪಿಗಳ ಪರ ರಾಲಿ ನಡೆಸಿದವರಲ್ಲಿ, ಅವರನ್ನು ಸಮರ್ಥಿಸಿ ವಾದಿಸುತ್ತಿರುವವರಲ್ಲಿ ಮತ್ತು ‘ಹಿಂದೂಗಳ ವಿರುದ್ಧ ಹೆಣೆಯಲಾದ ಷಡ್ಯಂತ್ರ ಈ ಆರೋಪ’ ಎಂದು ಹೇಳುತ್ತಿರುವವರಲ್ಲಿ ಇಂಥವರೂ ಸೇರಿಕೊಂಡಿರಬಹುದು. ಮುಹಮ್ಮದ್ ಇಲ್ಯಾಸ್‍ನ ಹೆಸರಲ್ಲಿ ಪ್ರಸಾರವಾದ ವೀಡಿಯೋವನ್ನು ಕಥುವಾದ ಬಾಲೆಗೆ ಸಂಬಂಧಿಸಿ ನೋಡುವವರು ಈಗ ಇದ್ದಿರಲಾರರು ಎಂದು ಹೇಳಲು ಸಾಧ್ಯವಿಲ್ಲ. ಆ ವೀಡಿಯೋದ ಆಧಾರದಲ್ಲಿ ಕಥುವಾದ ಆರೋಪಿಗಳ ಪರ ಮತ್ತು ಮುಸ್ಲಿಮರ ವಿರುದ್ಧ ಮಾತಾಡುವವರು ಇರಲೂ ಬಹುದು. ಯಾಕೆಂದರೆ, ಅದನ್ನು ಸುಳ್ಳು ಎಂದು ಸಾಬೀತುಪಡಿಸುವ ಪರ್ಯಾಯ ಸುದ್ದಿ ಮೂಲಗಳು ಅವರಿಗೆ ಲಭ್ಯವಾಗುವವರೆಗೆ ಅವರಲ್ಲಿ ಏನಿದೆಯೋ ಅದುವೇ ಸತ್ಯ. ಅವರ ನಿಲುವನ್ನು ಸುಳ್ಳು ಎಂದು ಒಪ್ಪಿಸುವುದು ಅಷ್ಟು ಸುಲಭವಲ್ಲ. ಕಥುವಾದ ಆರೋಪಿಗಳ ಪರ ನಡೆದ ಪ್ರತಿಭಟನೆ, ವಾದ ಮತ್ತು ಸಮರ್ಥನೆಗಳಲ್ಲಿ ಬಹುಶಃ ದೈನಿಕ್ ಜಾಗರಣ್‍ನ ವರದಿ ಮತ್ತು ಮಸಿ ಬಳಿಸಿಕೊಳ್ಳುತ್ತಿರುವ ಆ ವೀಡಿಯೋದ ಪಾತ್ರ ಖಂಡಿತ ಇರಬಹುದು. ಆದ್ದರಿಂದಲೇ,
  
 ಸುಳ್ಳು ಸುದ್ದಿ ಎಂಬುದು ನಕ್ಕು ನಿರ್ಲಕ್ಷಿಸುವಂಥದ್ದಲ್ಲ.