‘ಕಥುವಾ ಮೆ ಬಚ್ಚೀಸೆ ನಹೀಂ ಹುವಾ ಥಾ ದುಷ್ಕರ್ಮ್’ (ಕಥುವಾದಲ್ಲಿ ಬಾಲೆಯ ಮೇಲೆ ಅತ್ಯಾಚಾರ ನಡೆದಿರಲಿಲ್ಲ) ಎಂಬ ಶೀರ್ಷಿಕೆಯಲ್ಲಿ ದೈನಿಕ್ ಜಾಗರಣ್ ಹಿಂದಿ ದಿನಪತ್ರಿಕೆಯು 2018 ಎಪ್ರಿಲ್ 20ರಂದು ಮುಖಪುಟದಲ್ಲಿ ಲೇಖನವೊಂದನ್ನು ಪ್ರಕಟಿಸಿತು. ಈ ಶೀರ್ಷಿಕೆಯ ಕೆಳಗಡೆ, ‘ಫಾರೆನ್ಸಿಕ್ ರಿಪೋರ್ಟ್ ಮೆ ಸಿರ್ಫ್ ಜಕ್‍ಮೋಂಕಿ ಬಾತ್: ಸವಾಲೋಂಕಿ ಧೇರೆ ಮೆ ಕ್ರೈಂ ಬ್ರಾಂಚ್ ಕಿ ಚಾರ್ಜ್‍ಶೀಟ್’ (ಫಾರೆನ್ಸಿಕ್ ವರದಿಯಲ್ಲಿ ಕೇವಲ ಗಾಯಗಳ ಪ್ರಸ್ತಾಪವಿದೆ. ಕ್ರೈಮ್ ಬ್ರಾಂಚ್‍ನ ಚಾರ್ಜ್‍ಶೀಟ್ ಪ್ರಶ್ನೆಗಳ ಸುಳಿಯಲ್ಲಿ) ಎಂಬುದಾಗಿಯೂ ಬರೆಯಿತು. ಕಥುವಾದ 8ರ ಹರೆಯದ ಬಾಲೆಯ ಮೇಲೆ ದೇಶದಾದ್ಯಂತ ವ್ಯಕ್ತವಾಗುತ್ತಿರುವ ಆಕ್ರೋಶದ ಸಂದರ್ಭದಲ್ಲೇ ಪ್ರಕಟವಾದ ಲೇಖನ ಇದು.
‘ಬಾಲೆಯ ತೊಡೆಯಲ್ಲಿ ಗೀರುಗಳಿವೆಯಾದರೂ ಅದು ಬಿದ್ದು ಮಾಡಿಕೊಂಡಿರುವ ಗಾಯಗಳಾಗಿರಬಹುದು’ ಎಂದು ಫಾರೆನ್ಸಿಕ್ ವರದಿ ಹೇಳಿರುವುದಾಗಿ ಲೇಖನದಲ್ಲಿ ಎತ್ತಿ ಹೇಳಲಾಗಿತ್ತಲ್ಲದೇ, ಬಾಲೆಯ ಯೋನಿ ಹರಿದಿರುವುದಕ್ಕೆ ಆಕೆ ಕುದುರೆ ಸವಾರಿ ಮಾಡಿರುವುದು, ಈಜು ಮತ್ತು ಸೈಕ್ಲಿಂಗ್ ಮಾಡಿರುವುದೂ ಕಾರಣವಾಗಿರಬಹುದು’ ಎಂದು ವರದಿಯಲ್ಲಿ ಅಭಿಪ್ರಾಯ ಪಟ್ಟಿರುವುದಾಗಿ ಲೇಖನದಲ್ಲಿ ವಿವರಿಸಲಾಗಿತ್ತು.
ಈ ಲೇಖನ ಪ್ರಕಟವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಬೆಂಬಲಿಗರು ಚುರುಕಾದರು. ಬಲಪಂಥೀಯ ವಿಚಾರಧಾರೆಯನ್ನು ಒರೆಗೆ ಹಚ್ಚುವ ಮತ್ತು ಕಥುವಾ ಕ್ರೌರ್ಯದ ವಿವಿಧ ಮಗ್ಗುಲುಗಳನ್ನು ಜನರ ಬಳಿಗೆ ತಲುಪಿಸಿದ ದಿ ಕ್ವಿಂಟ್, ಲಾಜಿಕಲ್ ಇಂಡಿಯನ್ಸ್, ಆಲ್ಟ್ ನ್ಯೂಸ್ ಇತ್ಯಾದಿ ವೆಬ್ ಪತ್ರಿಕೆಗಳನ್ನು ಅವರು ತರಾಟೆಗೆ ತೆಗೆದುಕೊಂಡರು. ಇವರೆಲ್ಲ ಕ್ಪಮೆ ಕೇಳಿ ಜರ್ನಲಿಸಂಗೆ ನಿವೃತ್ತಿ ಹೇಳಲಿ ಎಂದು ಆಗ್ರಹಿಸಿದರು. ಕಥುವಾದ ಬಾಲೆಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಮತ್ತು ಹಿಂದೂಗಳನ್ನು ಅವಮಾನಿಸುವ ಉದ್ದೇಶಶದಿಂದ ಹೆಣೆಯಲಾದ ಷಡ್ಯಂತ್ರ ಇದು ಎಂದು ಅವರು ಆಕ್ರೋಶಿಸಿದರು. 25 ಮಿಲಿಯನ್ ಬಳಕೆದಾರರಿರುವ ಐ ಸಪೋರ್ಟ್ ನರೇಂದ್ರ ಮೋದಿ ಎಂಬ ಫೇಸ್‍ಬುಕ್ ಪುಟದಲ್ಲಿ ಈ ಲೇಖನವು ‘The whole conspiracy to defame Hindus is exposed’ ಎಂಬ ಶೀರ್ಷಿಕೆಯಲ್ಲಿ ಕಾಣಿಸಿಕೊಂಡಿತಲ್ಲದೇ, 34 ಸಾವಿರ ಮಂದಿ ಇದನ್ನು ಹಂಚಿ(ಶೇರ್)ಕೊಂಡರು. ಅಲ್ಲದೇ, we support Hindutva ಎಂಬ ಫೇಸ್‍ಬುಕ್ ಪುಟದಲ್ಲೂ ಕಾಣಿಸಿಕೊಂಡ ಈ ಲೇಖನವನ್ನು ಕ್ರಮವಾಗಿ 5600 ಮತ್ತು 6000 ಮಂದಿ ಇದನ್ನು ಹಂಚಿ(ಶೇರ್)ಕೊಂಡರು. ನಿಜ ಏನೆಂದರೆ, ಪೋಸ್ಟ್ ಮಾರ್ಟಂ ವರದಿಯ ಬಹುಮುಖ್ಯ ಅಂಶಗಳನ್ನು ದೈನಿಕ ಜಾಗರಣ್ ಓದುಗರಿಂದ ಅಡಗಿಸಿಟ್ಟಿತ್ತು. ವರದಿಯ ಸಮಗ್ರ ವಿವರಗಳನ್ನು ಓದುಗರ ಮುಂದಿಡುವ ಬದಲು, ‘ಅತ್ಯಾಚಾರ ನಡೆದಿಲ್ಲ ಎಂದು ಸಾಬೀತುಪಡಿಸುವುದಕ್ಕೆ ಸಿಗಬಹುದಾದ ಅಂಶಗಳನ್ನಷ್ಟೇ ಹುಡುಕಿ’ ಅದು ಪ್ರಕಟಿಸುವ ಭ್ರಷ್ಟತನಕ್ಕೆ ಇಳಿಯಿತು. ಬಾಲೆಯ ಮೇಲೆ ಅತ್ಯಾಚಾರ ನಡೆದಿರುವುದಕ್ಕೆ ಪುರಾವೆಯಾಗಿ ಪೋಸ್ಟ್ ಮಾರ್ಟಂ ವರದಿಯಲ್ಲಿ ಹಲವು ಸಾಕ್ಷ್ಯಗಳಿದ್ದುವು. ತೊಡೆ ಮತ್ತು ತುಟಿಯಲ್ಲಿದ್ದ ರಕ್ತ, ಯೋನಿಯಲ್ಲಿ ರಕ್ತ ಹರಿದಿರುವುದನ್ನು ಅತ್ಯಾಚಾರಕ್ಕೆ ಸಾಕ್ಷ್ಯವಾಗಿ ಬೊಟ್ಟು ಮಾಡಲಾಗಿತ್ತು. ಅಲ್ಲದೇ, ಕಥುವಾದ ಜಿಲ್ಲಾ ವೈದ್ಯರ ಸಂಘದ ಮೂಲಕ ಪೊಲೀಸರು ತರಿಸಿಕೊಂಡ ವರದಿಯಲ್ಲೂ ಅತ್ಯಾಚಾರದ ಸ್ಪಷ್ಟ ಉಲ್ಲೇಖಗಳಿದ್ದುವು. ಬಾಲೆಯ ಮೇಲಿರುವ ಗಾಯಗಳು ಅತ್ಯಾಚಾರದಿಂದಾಗಿಯೇ ಸಂಭವಿಸಿವೆ ಎಂದು ವೈದ್ಯರು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಇವು ಮತ್ತು ಇಂಥ ಅನೇಕಾರು ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಿದ ದೈನಿಕ್ ಜಾಗರಣ್ ಪತ್ರಿಕೆಯು ತನ್ನ ದೆಹಲಿ, ಆಗ್ರಾ, ಅಹ್ಮದಾಬಾದ್, ಅಮೃತ್‍ಸರ್, ಅಲೀಘರ್, ಕಥುವಾ, ಜಮ್ಮು ಮತ್ತು ಇತರ ಕೇಂದ್ರಗಳಿಂದ ಪ್ರಕಟವಾದ ಆವೃತ್ತಿಗಳಲ್ಲಿ ‘ಕಥುವಾ ಮೆ ಬಚ್ಚೀಸೆ ನಹೀಂ ಹುವಾ ದುಷ್ಕರ್ಮ್’ ಎಂದು ಮುಖಪುಟದಲ್ಲೇ ಲೇಖನ ಬರೆಯಿತು.
ವಿಷಾದ ಏನೆಂದರೆ, ಹಿಂದಿ ಭಾಷಾ ರಾಜ್ಯಗಳಲ್ಲಿ ಪ್ರಾಬಲ್ಯವನ್ನು ಹೊಂದಿರುವ ಮತ್ತು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುವ ಮುಖ್ಯವಾಹಿನಿಯ ಪತ್ರಿಕೆಯೇ ಈ ಮಟ್ಟದಲ್ಲಿ ದಾರಿ ತಪ್ಪಿಸುವ ಲೇಖನವನ್ನು ಪ್ರಕಟಿಸುವುದಾದರೆ, ಇನ್ನು ಪ್ರಾದೇಶಿಕ ಪತ್ರಿಕೆಗಳ ಸ್ಥಿತಿ ಹೇಗಿರಬಹುದು? ಅಂದಹಾಗೆ, ದೈನಿಕ್ ಜಾಗರಣ್ ಪತ್ರಿಕೆಯ ಈ ಲೇಖನದ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಬೇಕೆಂದುAlt News ಎಂಬ ಅಂತರ್ಜಾಲ ಪತ್ರಿಕೆಯು ಹೊರಡದೇ ಇರುತ್ತಿದ್ದರೆ ಸತ್ಯ ಬಹಿರಂಗವಾಗಲು ಇನ್ನೆಷ್ಟು ತಡವಾಗುತ್ತಿತ್ತೋ ಏನೋ? ಅದು ಪೋಸ್ಟ್ ಮಾರ್ಟಂ ವರದಿಯನ್ನು ತಜ್ಞ ವೈದ್ಯರ ಮೂಲಕ ಪರಿಶೀಲನೆಗೆ ಒಡ್ಡಿತು. ಆ ಮೂಲಕ ದೈನಿಕ್ ಜಾಗರಣ್ ಪತ್ರಿಕೆ ಎಲ್ಲಿ ಎಡವಿದೆ ಎಂಬುದನ್ನು Post Mortem report of Kathua Victim contradicts Dainik Jagaran’s Front page splash ಎಂಬ ಶೀರ್ಷಿಕೆಯಲ್ಲಿ ವಿಸ್ತೃತ ಲೇಖನವನ್ನು ಪ್ರಕಟಿಸಿತು. ಈ ಲೇಖನವನ್ನು ಸುಮಾರು 12 ಸಾವಿರ ಮಂದಿ ಹಂಚಿಕೊಂಡರು ಎಂಬುದು ಸಮಾಧಾನ ತರುವ ವಿಷಯವಾದರೂ ಈಗಾಗಲೇ ಆಗಿರುವ ಅನಾಹುತಕ್ಕೆ ಏನು ಪರಿಹಾರ ಅನ್ನುವ ಪ್ರಶ್ನೆ ಹಾಗೆಯೇ ಉಳಿಯುತ್ತದೆ. ಓದುಗರಿಗೆ ತಪ್ಪು ಮಾಹಿತಿ ನೀಡಿದ ದೈನಿಕ್ ಜಾಗರಣ್‍ನ ಮೇಲೆ ಯಾವ ಕ್ರಮವನ್ನು ಕೈಗೊಳ್ಳಲಾಗಿದೆ ಅನ್ನುವ ಸಹಜ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಈವರೆಗೂ ಲಭ್ಯವಾಗಿಲ್ಲ. ಬಲಾಢ್ಯ ಪತ್ರಿಕಾ ಸಂಸ್ಥೆಯೊಂದು ಏನು ಬರೆದರೂ, ಹೇಗೆ ನಡಕೊಂಡರೂ ದಕ್ಕುತ್ತದೆಯೇ; ಸುಳ್ಳು ಸುದ್ದಿಯನ್ನು ತಯಾರಿಸುವ ಮತ್ತು ಹಂಚುವವರ ಮೇಲೆ ಕ್ರಮ ಕೈಗೊಳ್ಳದೇ ಇದ್ದರೆ ಅದು ಇನ್ನಷ್ಟು ಅನಾಹುತಗಳಿಗೆ ಕಾರಣವಾಗದೇ ಅನ್ನುವ ಭಯ ಸಹಜವಾಗಿಯೇ ಕಾಡುತ್ತದೆ. ಈ ಭಯಕ್ಕೆ ಆಧಾರವಾಗಿ ಇನ್ನೊಂದು ವೀಡಿಯೋ ವನ್ನೂ ಇಲ್ಲಿ ಉಲ್ಲೇಖಿಸಬಹುದು.
‘ಕೈಗೆ ಬೇಡಿ ತೊಟ್ಟುಕೊಂಡಿರುವ ಯುವಕ ಪೊಲೀಸ್ ಬೆಂಗಾವಲಿನಲ್ಲಿ ನಡೆಯುತ್ತಿರುತ್ತಾನೆ. ಆಗ ಅಲ್ಲಿಗೆ ಆಗಮಿಸುವ ಮಹಿಳೆಯರು ಆತನ ಮುಖಕ್ಕೆ ಮಸಿ ಬಳಿಯುತ್ತಾರೆ. ಕೆನ್ನೆಗೆ ಬಾರಿಸುತ್ತಾರೆ’.
ಈ ವೀಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಮುಹಮ್ಮದ್ ಇಲ್ಯಾಸ್ ಎಂಬ ಹೆಸರಿನ ಈತ ಕಥುವಾದ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಎಂದು ವೀಡಿಯೋದ ಜತೆಗೆ ಅಡಿ ಟಿಪ್ಪಣಿಯನ್ನೂ ನೀಡಲಾಗಿತ್ತು. ಈ ದೇಶದ ಹೆಚ್ಚಿನ ಮೊಬೈಲ್ ಗ್ರಾಹಕರ ಮೊಬೈಲ್ ಗ್ಯಾಲರಿಯಲ್ಲಿ ಇವತ್ತು ಈ ವೀಡಿಯೋ ಇದ್ದಿರಬಹುದಾದ ಸಾಧ್ಯತೆಯೇ ಹೆಚ್ಚು. ಅಷ್ಟು ವೇಗವಾಗಿ ಈ ವೀಡಿಯೋ ಜನಪ್ರಿಯಗೊಂಡಿತ್ತು. 16 ಲಕ್ಪ ಸದಸ್ಯರಿರುವ ರಜಪೂತ್ ಫೇಸ್‍ಬುಕ್ ಪೇಜ್‍ಗೆ ಈ ವೀಡಿಯೋ ವನ್ನು ಪೋಸ್ಟ್ ಮಾಡಲಾಯಿತಲ್ಲದೇ 20 ಸಾವಿರ ಮಂದಿ ಇದನ್ನು ಶೇರ್ ಮಾಡಿಕೊಂಡರು. ಗೋವಿಂದ ದಾಸ್ ಎಂಬ ವ್ಯಕ್ತಿಯ ಫೇಸ್‍ಬುಕ್ ಪುಟವೊಂದರಿಂದಲೇ 19 ಸಾವಿರ ಮಂದಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ನಿಜವಾಗಿ, ಈ ವೀಡಿಯೋವನ್ನು ಎಪ್ರಿಲ್ 5ರಂದು ನ್ಯೂ ನೇಶನ್ ಎಂಬ ಅಂತರ್ಜಾಲ ಪತ್ರಿಕೆಯು ಪ್ರಕಟಿಸಿತ್ತು. 13 ವರ್ಷದ ಬಾಲೆಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಮೇಲೆ ಸಾರ್ವಜನಿಕ ರಿಂದ ಹಲ್ಲೆ ಎಂಬ ರೀತಿಯಲ್ಲಿ ಅದು ಈ ವೀಡಿಯೋಗೆ ವಿವರಣೆಯನ್ನು ಕೊಟ್ಟಿತು. ಮಾತ್ರವಲ್ಲ, ಇದು ಉತ್ತರ ಪ್ರದೇಶದಲ್ಲಿ ನಡೆದ ಘಟನೆ ಎಂದೂ ಹೇಳಿಕೊಂಡಿತ್ತು. ಎಪ್ರಿಲ್ 6ರಂದು ‘ಈ ನಾಡು ಇಂಡಿಯಾ ಡಾಟ್ ಕಾಂ’ ಎಂಬ ವೆಬ್‍ಪತ್ರಿಕೆಯು ಇದೇ ವೀಡಿಯೋವನ್ನು ಓದುಗರ ಮುಂದಿಟ್ಟಿತು. ಎಪ್ರಿಲ್ 20ರಂದು ಪ್ರಕಟವಾದ ದೈನಿಕ್ ಭಾಸ್ಕರ್ ಎಂಬ ಬಹು ಪ್ರಭಾವಿ ಪತ್ರಿಕೆಯಂತೂ Rape Accused’s face blackened: beaten with slippers video viral ಎಂಬ ಶೀರ್ಷಿಕೆಯಲ್ಲಿ ಒಂದು ಲೇಖನವನ್ನೇ ಪ್ರಕಟಿಸಿತು.
ನಿಜವಾಗಿ, ಆ ವೀಡಿಯೋಗೂ ಕಥುವಾಗೂ ಯಾವ ಸಂಬಂಧವೂ ಇರಲಿಲ್ಲ. ಮಾತ್ರವಲ್ಲ, ಉತ್ತರ ಪ್ರದೇಶದಲ್ಲೋ ಚಂಡೀಗಢದಲ್ಲೋ ನಡೆದ ಘಟನೆಯೂ ಅದಾಗಿರಲಿಲ್ಲ. ವೀಡಿಯೋದಲ್ಲಿ ಮಸಿ ಬಳಿಸಿಕೊಳ್ಳುವ ವ್ಯಕ್ತಿ ಅತ್ಯಾಚಾರವೆಸಗಿದ ಆರೋಪಿ ನಿಜ. ಆದರೆ ಅದು ನಡೆದಿರುವುದು ಮಧ್ಯಪ್ರದೇಶದ ಹನುಮಗಂಜ್ ಎಂಬಲ್ಲಿ. ಆತನನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವಾಗ ಜನರು ಆತನಿಗೆ ಚಪ್ಪಲಿಯಿಂದ ಬಾರಿಸಿದ್ದರು. ಇದನ್ನು ಹನುಮಗಂಜ್‍ನ ಪೊಲೀಸ್ ಇನ್ಸ್‍ಪೆಕ್ಟರ್ ಸುದೇಶ್ ತಿವಾರಿಯವರು ಮಾಧ್ಯಮದೊಂದಿಗೆ ಹೇಳಿಕೊಂಡರು. ಅಷ್ಟಕ್ಕೂ, ಆ ವೀಡಿಯೋವನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಬರಹಕ್ಕೆ ಹೊರಟದ್ದುಆಲ್ಟ್ ನ್ಯೂಸ್ ಎಂಬ ಅಂತರ್ಜಾಲ ಪತ್ರಿಕೆ. ಅದು ವೀಡಿಯೋವನ್ನು ಸೂಕ್ಷ್ಮ ಪರಿಶೀಲನೆಗೆ ಒಡ್ಡಿತು. ವೀಡಿಯೋದಲ್ಲಿ ಕಾಣಿಸುವ ಪೊಲೀಸ್ ಪೇದೆಯ ಅಂಗಿಯಲ್ಲಿರುವ ಗುರುತು ಚೀಟಿ ಮತ್ತು ವೀಡಿಯೋದಲ್ಲಿ ಅಸ್ಪಷ್ಟವಾಗಿ ಕಾಣಿಸುವ ನಾಮಫಲಕವನ್ನು ಎತ್ತಿಕೊಂಡು ಪತ್ತೆ ಕಾರ್ಯದಲ್ಲಿ ನಿರತವಾಯಿತು. ಅವೆರಡೂ ಗುರುತುಗಳೊಂದಿಗೆ ಅದು ಫೇಸ್‍ಬುಕ್ ಪುಟದಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿ ಪತ್ತೆ ಕಾರ್ಯಕ್ಕೆ ನೆರವಾಗುವಂತೆ ಕೋರಿಕೊಂಡಿತು. ಅಂತಿಮವಾಗಿ Viral video claims one Mohammed Ilyas arrested for Kathua incident: What is the truth? ಎಂಬ ಶೀರ್ಷಿಕೆಯಲ್ಲಿ ತನಿಖಾ ಬರಹವನ್ನು ಪ್ರಕಟಿಸಿತು. ಅದನ್ನು 2 ಸಾವಿರಕ್ಕಿಂತಲೂ ಅಧಿಕ ಮಂದಿ ಶೇರ್ ಮಾಡಿಕೊಂಡರು. ವಿಶೇಷ ಏನೆಂದರೆ, ತಪ್ಪು ಶೀರ್ಷಿಕೆಯೊಂದಿಗೆ ಆರಂಭದಲ್ಲಿ ಪ್ರಸಾರವಾದ ವೀಡಿಯೋ ಶೇರ್ ಆದ ಸಂಖ್ಯೆಯನ್ನು ಪರಿಗಣಿಸಿದರೆ, ಆ ಬಳಿಕದ ಈ ಸತ್ಯಶೋಧನಾ ವರದಿಯನ್ನು ಶೇರ್ ಮಾಡಿದವರ ಸಂಖ್ಯೆ ತೀರಾ ಕಡಿಮೆ. ಸುಳ್ಳು ಮತ್ತು ಸತ್ಯದ ನಡುವಿನ ಈ ಸಂಘರ್ಷದಲ್ಲಿ ಸುಳ್ಳು ಮೇಲುಗೈ ಪಡೆಯುತ್ತಿದೆಯೇನೋ ಎಂದು ಆತಂಕವಾಗುವುದು ಈ ಕಾರಣದಿಂದಲೇ. ದೈನಿಕ್ ಜಾಗರಣ್ ಪತ್ರಿಕೆಯು ಕಥುವಾದ ಬಾಲೆಯ ಕುರಿತಂತೆ ಪ್ರಕಟಿಸಿದ ತಪ್ಪಾದ ವರದಿಗೆ ಸಿಕ್ಕ ವ್ಯಾಪಕ ಪ್ರತಿಕ್ರಿಯೆಗೆ ಹೋಲಿಸಿದರೆ,ಆಲ್ಟ್ ನ್ಯೂಸ್ ಬಳಿಕ ಪ್ರಕಟಿಸಿದ ಸತ್ಯಶೋಧನಾ ವರದಿಗೆ ಸಿಕ್ಕ ಪ್ರತಿಕ್ರಿಯೆ ಕಡಿಮೆ. ಇದಕ್ಕೆ ಇರುವ ಒಂದು ಪ್ರಮುಖ ಕಾರಣ ಏನೆಂದರೆ, ದೈನಿಕ್ ಜಾಗರಣ್ ಎಂಬುದು ಪತ್ರಿಕೆಯಾದರೆ ಆಲ್ಟ್ ನ್ಯೂಸ್ ಎಂಬುದು ಅಂತರ್ಜಾಲ ಪತ್ರಿಕೆ. ಅಂತರ್ಜಾಲದಲ್ಲಿ ಪರಿಣತಿ ಪಡೆದಿರುವವರು, ಮೊಬೈಲ್‍ಗೆ ಇಂಟರ್ ನೆಟ್ ಸಂಪರ್ಕ ಹೊಂದಿರುವವರು ಮತ್ತು ಆಲ್ಟ್ ನ್ಯೂಸ್‍ನ ಬಗ್ಗೆ ಅರಿವಿರುವವರು ಮಾತ್ರ ಅದನ್ನು ಓದುತ್ತಾರೆ. ಆದರೆ, ದೈನಿಕ್ ಜಾಗರಣ್ ಪತ್ರಿಕೆ ಹಾಗಲ್ಲ. ಅದು ಜನರ ಬಳಿಗೆ ಸುಲಭವಾಗಿ ತಲುಪುವುದರಿಂದ ಅದು ಬೇಗನೇ ಜನರನ್ನು ಸೆಳೆಯುತ್ತದೆ. ಇಲ್ಲಿನ ಇನ್ನೊಂದು ಮುಖ್ಯ ಸಮಸ್ಯೆ ಏನೆಂದರೆ, ಮುಖ್ಯವಾಹಿನಿಯ ಪತ್ರಿಕೆಯೊಂದರ ತಪ್ಪನ್ನು ಮುಖ್ಯವಾಹಿನಿಯ ಇನ್ನೊಂದು ಪತ್ರಿಕೆ ಪ್ರಶ್ನಿಸುವುದಿಲ್ಲ ಎಂಬುದು.
ಇದು ಓದುಗರ ಮೇಲೆ ಸಾಕಷ್ಟು ಅಡ್ಡ ಪರಿಣಾಮವನ್ನು ಬೀರುತ್ತದೆ. ದೈನಿಕ್ ಜಾಗರಣ್‍ನ ತಪ್ಪಾದ ವರದಿಯನ್ನೇ ನಿಜ ಎಂದು ನಂಬಿಕೊಂಡವರು ಈಗಲೂ ಇರಬಹುದು. ಕಥುವಾದ ಆರೋಪಿಗಳ ಪರ ರಾಲಿ ನಡೆಸಿದವರಲ್ಲಿ, ಅವರನ್ನು ಸಮರ್ಥಿಸಿ ವಾದಿಸುತ್ತಿರುವವರಲ್ಲಿ ಮತ್ತು ‘ಹಿಂದೂಗಳ ವಿರುದ್ಧ ಹೆಣೆಯಲಾದ ಷಡ್ಯಂತ್ರ ಈ ಆರೋಪ’ ಎಂದು ಹೇಳುತ್ತಿರುವವರಲ್ಲಿ ಇಂಥವರೂ ಸೇರಿಕೊಂಡಿರಬಹುದು. ಮುಹಮ್ಮದ್ ಇಲ್ಯಾಸ್‍ನ ಹೆಸರಲ್ಲಿ ಪ್ರಸಾರವಾದ ವೀಡಿಯೋವನ್ನು ಕಥುವಾದ ಬಾಲೆಗೆ ಸಂಬಂಧಿಸಿ ನೋಡುವವರು ಈಗ ಇದ್ದಿರಲಾರರು ಎಂದು ಹೇಳಲು ಸಾಧ್ಯವಿಲ್ಲ. ಆ ವೀಡಿಯೋದ ಆಧಾರದಲ್ಲಿ ಕಥುವಾದ ಆರೋಪಿಗಳ ಪರ ಮತ್ತು ಮುಸ್ಲಿಮರ ವಿರುದ್ಧ ಮಾತಾಡುವವರು ಇರಲೂ ಬಹುದು. ಯಾಕೆಂದರೆ, ಅದನ್ನು ಸುಳ್ಳು ಎಂದು ಸಾಬೀತುಪಡಿಸುವ ಪರ್ಯಾಯ ಸುದ್ದಿ ಮೂಲಗಳು ಅವರಿಗೆ ಲಭ್ಯವಾಗುವವರೆಗೆ ಅವರಲ್ಲಿ ಏನಿದೆಯೋ ಅದುವೇ ಸತ್ಯ. ಅವರ ನಿಲುವನ್ನು ಸುಳ್ಳು ಎಂದು ಒಪ್ಪಿಸುವುದು ಅಷ್ಟು ಸುಲಭವಲ್ಲ. ಕಥುವಾದ ಆರೋಪಿಗಳ ಪರ ನಡೆದ ಪ್ರತಿಭಟನೆ, ವಾದ ಮತ್ತು ಸಮರ್ಥನೆಗಳಲ್ಲಿ ಬಹುಶಃ ದೈನಿಕ್ ಜಾಗರಣ್‍ನ ವರದಿ ಮತ್ತು ಮಸಿ ಬಳಿಸಿಕೊಳ್ಳುತ್ತಿರುವ ಆ ವೀಡಿಯೋದ ಪಾತ್ರ ಖಂಡಿತ ಇರಬಹುದು. ಆದ್ದರಿಂದಲೇ,
ಸುಳ್ಳು ಸುದ್ದಿ ಎಂಬುದು ನಕ್ಕು ನಿರ್ಲಕ್ಷಿಸುವಂಥದ್ದಲ್ಲ.
No comments:
Post a Comment