ಬಹುಶಃ 2010 ಎಪ್ರಿಲ್ ಇರಬೇಕು. ಪಶ್ಚಿಮ ಬಂಗಾಳದ ಪ್ರಥಮ ಮುಸ್ಲಿಮ್ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದ್ದ
ಆಲಿಯಾ (Aliah) ಯುನಿವರ್ಸಿಟಿಯಲ್ಲಿ ವಿವಾದವೊಂದು ತಲೆ ದೋರಿತು. ಕಾಲೇಜಿಗೆ ಅತಿಥಿ ಉಪನ್ಯಾಸಕಿಯಾಗಿ ಸೇರ್ಪಡೆಗೊಂಡು ಒಂದು ತಿಂಗಳಷ್ಟೇ ಆಗಿದ್ದ ಶಿರೀನ್ ಮಿದಿಯಾರ ವಿರುದ್ಧ ಕಾಲೇಜು ವಿದ್ಯಾರ್ಥಿ ಸಂಘದ ನಾಯಕರು ಘೇರಾವ್ ಹಾಕಿದರು. ಬುರ್ಖಾ ಹಾಕದೇ ಉಪನ್ಯಾಸ ಮಾಡಲು ಬಿಡೆವು ಎಂದು ಬೆದರಿಸಿದರು. ಶಿರೀನ್ ಒಪ್ಪಲಿಲ್ಲ. ಜಾಧವ್‍ಪುರ ವಿಶ್ವವಿದ್ಯಾಲಯದಲ್ಲಿ ಬಂಗಾಳಿ ಭಾಷೆಯಲ್ಲಿ ಎಂ.ಎ. ಮಾಡಿದ್ದ ಅವರನ್ನು ಆ ವಿದ್ಯಾರ್ಥಿ ನಾಯಕರು ತಡೆದರು. ವಿಶೇಷ ಏನೆಂದರೆ, 1781ರಿಂದಲೂ ಮದ್ರಸವಾಗಿದ್ದ ಆ ಶಿಕ್ಷಣ ಸಂಸ್ಥೆಯನ್ನು 2008ರಲ್ಲಿ ವಿಶ್ವ ವಿದ್ಯಾಲಯವಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಮಾತ್ರವಲ್ಲ, ಇಲ್ಲಿ ಇಸ್ಲಾಮೀ ತರಗತಿಗಳೂ ನಡೆಯುತ್ತಿದ್ದುವು. ಆದರೆ, ಕಾಲೇಜು ಆಡಳಿತ ಮಂಡಳಿ ಶಿರೀನ್ ಪರ ನಿಂತಿತು. ‘ವಿಶ್ವವಿದ್ಯಾಲಯವು ಉಪನ್ಯಾಸಕರಿಗೆ ಸಮವಸ್ತ್ರವನ್ನು ನಿರ್ಣಯಿಸಿಲ್ಲ ಮತ್ತು ಯಾರಾದರೂ ಅದಕ್ಕೆ ಒತ್ತಾಯಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು...’ ಎಂದು ಎಚ್ಚರಿಸಿತು. ನಿಜವಾಗಿ, ಮದ್ರಸ ವಾತಾವರಣದಿಂದ ವಿಶ್ವ ವಿದ್ಯಾನಿಲಯದ ವಾತಾವರಣಕ್ಕೆ ಹೊಂದಿಕೊಳ್ಳಲು ತುಸು ಸಮಯ ಬೇಕೇ ಬೇಕು. ಆದ್ದರಿಂದ, 'ಮುಸ್ಲಿಮ್ ವಿದ್ಯಾರ್ಥಿಗಳ ಬುರ್ಖಾದ ಬೇಡಿಕೆಯನ್ನು ಮನ್ನಿಸಬೇಕು..' ಎಂದು ಆಡಳಿತ ಮಂಡಳಿಯು ಶಿರಿನ್‍ರಲ್ಲಿ ಕೋರಿಕೊಂಡಿರುತ್ತಿದ್ದರೆ ಅದು ಅಕ್ಷಮ್ಯ ಅಪರಾಧವಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಖಂಡಿತ ಇರಲಿಲ್ಲ. ಹೊಸತೇ ಆದ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಯಾವುದೇ ಸಂಸ್ಥೆಗಾದರೂ ಸಮಯ ಬೇಕಾಗುತ್ತದೆ. ವ್ಯಕ್ತಿಗೂ ಇದು ಅನ್ವಯ. ದಶಕಗಳಿಂದ ಚಾಲ್ತಿಯಲ್ಲಿದ್ದ ತೆರಿಗೆ ಪದ್ಧತಿಯಿಂದ ಜಿಎಸ್‍ಟಿಗೆ ಹೊಂದಿಕೊಳ್ಳಲು ಈ ದೇಶದಲ್ಲಿ ಒಂದಷ್ಟು ಸಮಯಾವಕಾಶವನ್ನು ನೀಡಲಾಗಿರುವುದು ಇದೇ ಕಾರಣಕ್ಕೆ. ಆದರೆ, ಆಲಿಯಾ ವಿಶ್ವವಿದ್ಯಾಲಯ ಈ ಅವಕಾಶವನ್ನೂ ಬಳಸಿಕೊಳ್ಳಲಿಲ್ಲ. ಉಪನ್ಯಾಸಕಿಯರ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು. ಅದನ್ನು ಪ್ರಶ್ನಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಯಿತು. ನಿಜವಾಗಿ, ಮಂಗಳೂರಿನ ಆ್ಯಗ್ನೆಸ್ ಕಾಲೇಜು ಮುಖಾಮುಖಿಯಾಗಬೇಕಾದದ್ದು ಇಲ್ಲಿ. ಈ ಕಾಲೇಜಿಗೆ ಹಲವು ದಶಕಗಳ ಇತಿಹಾಸ ಇದೆ. ಕಲ್ಕತ್ತಾದ ಆಲಿಯಾ ವಿಶ್ವವಿದ್ಯಾಲಯದಂತೆ ಇದು ದಿಢೀರ್ ಆಗಿ ಕಾಲೇಜಾದದ್ದಲ್ಲ. ಇಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತ ಧರ್ಮಕ್ಕೆ ಸೇರಿದ ಸಾವಿರಾರು ವಿದ್ಯಾರ್ಥಿಗಳು ತಂತಮ್ಮ ಧಾರ್ಮಿಕ ಐಡೆಂಟಿಟಿಯನ್ನು ಪ್ರದರ್ಶಿಸಿಯೇ ಈ ಹಿಂದೆ ಸೇರ್ಪಡೆಗೊಂಡಿದ್ದಾರೆ. ಪಾರಂಗತರಾಗಿದ್ದಾರೆ ಮತ್ತು ಈ ಸಂಸ್ಥೆಗೆ ಕೀರ್ತಿಯನ್ನೂ ತಂದಿದ್ದಾರೆ. ಹೀಗಿರುವಾಗ, ಸಮವಸ್ತ್ರದ ಹೆಸರಲ್ಲಿ ಸ್ಕಾರ್ಫ್ ನಿಷೇಧವನ್ನು ಏಕಾಏಕಿ ಕಡ್ಡಾಯವಾಗಿ ಜಾರಿಗೊಳಿಸಲು ಹೊರಡುವುದೆಂದರೆ, ಅದನ್ನು ಸಮಾಜ ಚಪ್ಪಾಳೆ ತಟ್ಟಿ ಸ್ವಾಗತಿಸಬೇಕು ಎಂದು ನಿರೀಕ್ಷಿಸುವುದು ಖಂಡಿತ ತಪ್ಪು. ಭಿನ್ನ ಪ್ರತಿಕ್ರಿಯೆ ಸಹಜವಾದುದು ಮತ್ತು ಅದನ್ನು ಆಲಿಸುವ ಮತ್ತು ಗೌರವಿಸುವ ಪ್ರಬುದ್ಧತೆಯನ್ನು ಆ ಸಂಸ್ಥೆ ಪ್ರದರ್ಶಿಸಬೇಕಾಗುತ್ತದೆ. ಸ್ಕಾರ್ಫ್ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಮುಸ್ಲಿಮ್ ಮುಖಂಡರು ಸೇರಿಕೊಂಡು ಮುಸ್ಲಿಮ್ ಮಹಿಳೆಯರ ಮೇಲೆ ಹೇರಿದ ಒಂದು ವಸ್ತ್ರ ಸಂಹಿತೆಯಲ್ಲ. ಹಾಗಿರುತ್ತಿದ್ದರೆ ಅದನ್ನು ನಿಷೇಧಿಸುವಂತೆ ಮುಸ್ಲಿಮರೇ ಬೀದಿಗಿಳಿದು ಒತ್ತಾಯಿಸುತ್ತಿದ್ದರು. ಸ್ಕಾರ್ಫ್‍ಗೆ ಒಂದು ಚಾರಿತ್ರಿಕ ಹಿನ್ನೆಲೆಯಿದೆ ಮತ್ತು ಆ ಹಿನ್ನೆಲೆಯನ್ನು ಈ ದೇಶದ ಇತರೆಲ್ಲ ಧರ್ಮೀಯರಿಗಿಂತ ಚೆನ್ನಾಗಿ ಬಲ್ಲವರು ಕ್ರೈಸ್ತರೇ ಆಗಿದ್ದಾರೆ. ಬಹುಶಃ ಮುಸ್ಲಿಮ್ ವಿದ್ಯಾರ್ಥಿನಿಯರು ಬಹುದೊಡ್ಡ ಸಂಖ್ಯೆಯಲ್ಲಿ ಆ್ಯಗ್ನೆಸ್ ಕಾಲೇಜಿಗೆ ಸೇರ್ಪಡೆಗೊಳ್ಳುವುದಕ್ಕೆ ಈ ಒಂದು ಅಂಶವೂ ಕಾರಣ ವಾಗಿರಬಹುದು. ಆ್ಯಗ್ನೆಸ್ಸೂ ಸೇರಿದಂತೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಉಪನ್ಯಾಸಕರಾಗಿರುವ ನನ್‍ಗಳು ಭುಜವನ್ನು ಮರೆಸುವ ಸ್ಕಾರ್ಫ್ ಧರಿಸುತ್ತಾರೆ. ನನ್ ವಿದ್ಯಾರ್ಥಿನಿಯರೂ ಸ್ಕಾರ್ಫ್ ಧರಿಸುತ್ತಾರೆ. ಸ್ಕಾರ್ಫ್ ನಿಷೇಧ ವಿಧಿಸಲಾಗಿರುವ ಆ್ಯಗ್ನೆಸ್ ಕಾಲೇಜಿನಲ್ಲೂ ನನ್ ವಿದ್ಯಾರ್ಥಿನಿಯರಿಗೆ ಈ ನಿಷೇಧದಿಂದ ವಿನಾಯಿತಿ ಇದೆ. ಸ್ಕಾರ್ಫ್‍ಗೆ ಅವಕಾಶ ಇರಬೇಕು ಎಂದು ಒತ್ತಾಯಿಸುವವರ ಆಕ್ಷೇಪಗಳಲ್ಲಿ ಇದೂ ಒಂದು. ನನ್ ಗಳು ಧರಿಸುವ ಸ್ಕಾರ್ಫ್‍ಗೂ ಮುಸ್ಲಿಮ್ ಹೆಣ್ಮಕ್ಕಳು ಧರಿಸುವ ಸ್ಕಾರ್ಫ್‍ಗೂ ಆಧಾರವಾಗಿರುವುದು ಧರ್ಮವೇ. ಆದರೂ ಒಂದು ಸ್ವೀಕಾರಾರ್ಹ ಮತ್ತು ಇನ್ನೊಂದು ತಿರಸ್ಕಾರಾರ್ಹ ಆಗುವುದು ಹೇಗೆ ಮತ್ತು ಏಕೆ? ಸ್ಕಾರ್ಫ್ ಹಾಕಿದ ವಿದ್ಯಾರ್ಥಿನಿಯರು ಅದನ್ನು ದುರುಪಯೋಗಿಸುತ್ತಿದ್ದಾರೆ ಅನ್ನುವುದು ಈ ತಿರಸ್ಕಾರಕ್ಕೆ ನಿಜವಾದ ಕಾರಣವೇ ಅಥವಾ ಪೂರ್ವಗ್ರಹ ಮತ್ತು ಇಸ್ಲಾಮೋ ಫೋಬಿಯಾ ಇಂಥದ್ದೊಂದು ತೀರ್ಮಾನದ ಹಿಂದಿದೆಯೇ? ಜಗತ್ತಿನ 50ರಷ್ಟು ಮುಸ್ಲಿಮ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಮತ್ತು ಇರಾನ್‍ಗಳು ಶಿರವಸ್ತ್ರವನ್ನು ಕಡ್ಡಾಯಗೊಳಿಸಿವೆ. ಹಾಗಂತ, ಈ ರಾಷ್ಟ್ರಗಳು ಇಸ್ಲಾಮಿನ ನಿಜ ಮಾದರಿಗಳು ಎಂದಲ್ಲ. ಶಿರವಸ್ತ್ರಕ್ಕೆ ಬಲವಾದ ಧಾರ್ಮಿಕ ಹಿನ್ನೆಲೆ ಇದೆ ಅನ್ನುವುದನ್ನು ಸೂಚಿಸುವುದಕ್ಕಷ್ಟೇ ಈ ಉಲ್ಲೇಖ. ಸಾಮಾಜಿಕ ಸಂಶೋಧನೆಗಾಗಿರುವ ಅಮೇರಿಕದ ಮಿಚಿಗನ್ ವಿಶ್ವವಿದ್ಯಾಲಯವು 2014 ಆಗಸ್ಟ್ ನಲ್ಲಿ What style of dress in appropriate for women in public (ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ತಕ್ಕುದಾದ ಉಡುಪು ಯಾವುದು) ಎಂಬ ಪ್ರಶ್ನೆಯೊಂದಿಗೆ ಸಮೀಕ್ಷೆಯೊಂದನ್ನು ನಡೆಸಿತ್ತು. 7 ಮುಸ್ಲಿಮ್ ರಾಷ್ಟ್ರಗಳನ್ನು ಈ ಸಮೀಕ್ಷೆಗೆ ಆಯ್ಕೆ ಮಾಡಲಾಗಿತ್ತು. ವಿಶೇಷ ಏನೆಂದರೆ, ಅತ್ಯಂತ ಜಾತ್ಯತೀತವಾಗಿ ಗುರುತಿಸಿಕೊಂಡಿರುವ ಮತ್ತು ಕಾನೂನು ಸಂಹಿತೆಗಳೆಲ್ಲವೂ ಯುರೋಪಿಯನ್ ರಾಷ್ಟ್ರಗಳಿಗಿಂತಲೂ ಉದಾರಿಯಾಗಿರುವ ಟ್ಯುನೀಷಿಯಾದ 57% ಮುಸ್ಲಿಮ್ ಮಹಿಳೆಯರು ತಲೆ ಮುಚ್ಚಿರುವ ಮತ್ತು ಮುಖ ತೆರೆದಿರುವ ಹಿಜಾಬನ್ನು ಆಯ್ಕೆಯಾಗಿ ಪರಿಗಣಿಸಿದ್ದರು. ಜಾತ್ಯತೀತ ರಾಷ್ಟ್ರಗಳ ಸಾಲಿನಲ್ಲಿ ಸೇರ್ಪಡೆಗೊಂಡಿರುವ ಈಜಿಪ್ಟ್, ಟರ್ಕಿ ಮತ್ತು ಲೆಬನಾನ್‍ನ ಅರ್ಧಕ್ಕರ್ಧ ಮಹಿಳೆಯರು ತಲೆ ಮುಚ್ಚಿರುವ ಮತ್ತು ಮುಖ ತೆರೆದಿರುವ ಹಿಜಾಬ್‍ನ ಪರ ಬೆಂಬಲ ಸೂಚಿಸಿದ್ದರು. ಶಿರವಸ್ತ್ರ ರಹಿತ ಉಡುಪನ್ನು ಬೆಂಬಲಿಸಿದವರ ಸಂಖ್ಯೆ ಟ್ಯುನೀಷಿಯಾದಲ್ಲಿ 15% ಇದ್ದರೆ, ಈಜಿಪ್ಟ್ ನಲ್ಲಿ 4%, ಟರ್ಕಿಯಲ್ಲಿ 32% ಮತ್ತು ಲೆಬನಾನ್ ನಲ್ಲಿ 49% ಇತ್ತು. ಒಂದು ವೇಳೆ ಇದೇ ಬಗೆಯ ಸಮೀಕ್ಷೆಯನ್ನು ಕ್ರೈಸ್ತರೇ ಅಧಿಕ ಇರುವ ಯುರೋಪಿಯನ್ ರಾಷ್ಟ್ರಗಳಲ್ಲಿ ಕೈಗೊಂಡರೆ ಫಲಿತಾಂಶ ಏನಿದ್ದೀತು? ಕನ್ಯೆ ಮೇರಿ ಶಿರವಸ್ತ್ರ ಧರಿಸಿದ್ದರು ಮತ್ತು ಒಂದಾನೊಂದು ಕಾಲದಲ್ಲಿ ಆ ಶಿರವಸ್ತ್ರದ ಅನುಸರಣೆ ಕ್ರೈಸ್ತರಲ್ಲಿ ತೀವ್ರವಾಗಿಯೇ ಇತ್ತು. ರಷ್ಯನ್ ಕ್ರಾಂತಿಗಿಂತ ಮೊದಲಿನ ಕ್ರೈಸ್ತ ಇತಿಹಾಸದಲ್ಲಿ ಶಿರವಸ್ತ್ರಕ್ಕೆ ಮುಖ್ಯ ಪಾತ್ರ ಇದೆ. ಮದುವೆಯಾದ ಮಹಿಳೆಯರು ತಮ್ಮ ಕೂದಲನ್ನು ಮರೆಮಾಚುವ ಶಿರವಸ್ತ್ರ ಧರಿಸಬೇಕೆಂಬ ನಂಬಿಕೆ ಆ ಕಾಲದಲ್ಲಿ ಇತ್ತು. ಶಿರವಸ್ತ್ರ ಧರಿಸುವುದು ಒಂದು ಬಗೆಯ Symbol of Integrity ಆಗಿತ್ತು. ತಲೆ ತೆರೆದು ನಡೆಯುವುದು ಅಶಿಸ್ತು ಆಗಿತ್ತು. ಓರ್ವ ಮಹಿಳೆಯನ್ನು ಅವಮಾನಿಸುವುದಕ್ಕೆ ಬೈಗುಳ ಬೇಕಿರಲಿಲ್ಲ. ಆಕೆಯ ಶಿರವಸ್ತ್ರವನ್ನು ಕಿತ್ತು ಹಾಕಿದರೆ ಅದನ್ನು ಬಹುದೊಡ್ಡ ಅವಮಾನವಾಗಿ ಕಾಣಲಾಗುತ್ತಿತ್ತು. ನಿನ್ನ ತಲೆ ಬೆತ್ತಲೆ ಮಾಡುವೆ ಎಂಬ ಮಾತು ಈಗಲೂ ರಷ್ಯಾದಲ್ಲಿ ಚಾಲ್ತಿಯಲ್ಲಿದೆಯಂತೆ. ಅದೊಂದು ನಿರಾಕರಣೆ, ಅಸಂತೋಷ ವ್ಯಕ್ತಪಡಿಸುವ ಪದ. ಉಕ್ರೈನ್, ಬೆಲಾರಸ್ ಮತ್ತು ಸ್ಲಾವಿಕ್ ರಾಷ್ಟ್ರಗಳಲ್ಲಿ ಇವತ್ತೂ ಹಿರಿಯ ಕ್ರೈಸ್ತ ಮಹಿಳೆಯರು ಸಾಂಪ್ರದಾಯಿಕ ಶಿರವಸ್ತ್ರವನ್ನು ಧರಿಸುತ್ತಾರೆ ಎಂಬ ವಿವರಗಳಿವೆ. ಒಂದು ಕಾಲದಲ್ಲಿ ಕ್ರೈಸ್ತ ಮಹಿಳೆಯರ ಧಾರ್ಮಿಕ ಉಡುಪಾಗಿದ್ದ ಶಿರವಸ್ತ್ರವು ಬರಬರುತ್ತಾ ಅದನ್ನು ನನ್‍ಗಳ ತಲೆಗೆ ಹೊರಿಸಿ ಸಮಾಜ ಅದರಿಂದ ಮುಕ್ತವಾಯಿತು ಅನ್ನುವುದು ನಿಜ ಇತಿಹಾಸ. ಇವತ್ತು ಮಿಚಿಗನ್ ವಿಶ್ವವಿದ್ಯಾಲಯ ಸಮೀಕ್ಷೆಯನ್ನು ನಡೆಸಿದರೆ ಶಿರವಸ್ತ್ರದ ಪರ ನಿಲ್ಲುವ ಕ್ರೈಸ್ತ ಮಹಿಳೆಯರ ಸಂಖ್ಯೆ ತೀರಾ ತೀರಾ ನಗಣ್ಯ ಇದ್ದೀತು. ಆದರೆ ಮುಸ್ಲಿಮರಲ್ಲಿ ಈ ಸಂಖ್ಯೆ ಅತ್ಯಧಿಕ ಇದೆ. ಹೀಗಿದ್ದೂ, ಒಂದು ಆಗ್ನೆಸ್ ಶಿಕ್ಷಣ ಸಂಸ್ಥೆಯು ನನ್‍ಗಳ ಶಿರವಸ್ತ್ರವನ್ನು ಧಾರ್ಮಿಕ ನೆಲೆಯಲ್ಲಿ ಸಮರ್ಥಿಸುತ್ತಾ ಮುಸ್ಲಿಮರ ಶಿರವಸ್ತ್ರಕ್ಕೆ ಅದೇ ಮಾನ್ಯತೆಯನ್ನು ಕೊಡದಿರುವುದು ಮತ್ತು ತಿರಸ್ಕರಿಸುವುದನ್ನು ಸಹಜವೆಂದು ಹೇಗೆ ಪರಿಗಣಿಸುವುದು? ಧರ್ಮದ ಹಿನ್ನೆಲೆಯಲ್ಲಿ ಮತ್ತು ಪಾಲನೆಯ ಆಧಾರದಲ್ಲಿ ಶಿರವಸ್ತ್ರಕ್ಕೆ ಅನುಮತಿ ಕೊಡುವುದಾದರೆ ಅದಕ್ಕೆ ಮೊದಲ ಪ್ರಾಶಸ್ತ್ಯ ಮುಸ್ಲಿಮರಿಗೇ ಸಲ್ಲಬೇಕು. ಧಾರ್ಮಿಕ ಕಾರ್ಯಕ್ಕಾಗಿ ಶಿರವಸ್ತ್ರ ಧರಿಸುವವರಲ್ಲಿ ಹೆಚ್ಚಿನವರು ಮುಸ್ಲಿಮ್ ಮಹಿಳೆಯರೇ ಆಗಿದ್ದಾರೆ. ಕ್ರೈಸ್ತರಲ್ಲಿ ಅದು ನನ್‍ಗಳಿಗೇ ಸೀಮಿತವಾಗಿ ಬಿಟ್ಟಿದೆ. ಆದ್ದರಿಂದ ಕ್ರೈಸ್ತ ಶಿಕ್ಪಣ ಸಂಸ್ಥೆಯೊಂದು ಶಿರವಸ್ತ್ರವನ್ನು ನಿಷೇಧಿಸುತ್ತದೆಂದರೆ ಅದಕ್ಕೆ ಬೇರೆಯದೇ ಕಾರಣಗಳನ್ನು ಹುಡುಕಬೇಕಾಗುತ್ತದೆ. ವಿದ್ಯಾರ್ಥಿನಿಯರು ಶಿರವಸ್ತ್ರವನ್ನು ದುರುಪಯೋಗಿಸುತ್ತಿದ್ದಾರೆ ಎಂಬುದು ಶಿರವಸ್ತ್ರ ನಿಷೇಧಕ್ಕೆ ಸೂಕ್ತ ಸಮರ್ಥನೆ ಆಗುವುದಿಲ್ಲ. ನೆಗಡಿಯಾಯಿತೆಂದು ಮೂಗನ್ನೇ ಕೊಯ್ಯುವುದು ಪರಿಹಾರ ಆಗಲಾರದಲ್ಲವೇ? ವಿದ್ಯಾರ್ಥಿಗಳು ಮೊಬೈಲ್ ಇಟ್ಟುಕೊಳ್ಳುತ್ತಾರೆಂದು ಬ್ಯಾಗನ್ನೇ ನಿಷೇಧಿಸಲಾದೀತೇ? ಒಂದು ರೀತಿಯಲ್ಲಿ, ಮುಸ್ಲಿಮ್ ಐಡೆಂಟಿಟಿಯನ್ನು ಅಪಾಯಕಾರಿಯಾಗಿ ಕಾಣುವ ಮತ್ತು ಮುಸ್ಲಿಮ ರೊಂದಿಗೆ ಅಂತರವಿಟ್ಟುಕೊಂಡು ಬದುಕಲು ಪ್ರೇರೇಪಿಸುವ ವಿಚಾರಧಾರೆಯೊಂದರ ಪ್ರಭಾವದ ಫಲಿತಾಂಶ ಇದಾಗಿರಬಹುದೇ ಅನ್ನುವ ಅನುಮಾನ ನನ್ನದು. ಈ ವಿಚಾಧಾರೆಯ ಪ್ರಸವ ಭಾರತದಲ್ಲಾಗಿಲ್ಲ. ಯುರೋಪಿಯನ್ ರಾಷ್ಟ್ರಗಳಿಂದ ಆಮದಾದ ಸರಕು ಇದು. 2017 ಆಗಸ್ಟ್ ನಲ್ಲಿ ಆಸ್ಟ್ರೇಲಿಯದ ಸಂಸದೆ ಪೌಲ್ ಹ್ಯಾನ್ಸನ್ ಎಂಬವರು ಮುಖ ಮುಚ್ಚಿದ ಬುರ್ಖಾದೊಂದಿಗೆ ಪಾರ್ಲಿಮೆಂಟಿಗೆ ಆಗಮಿಸಿದರು. ಎಲ್ಲರೆದುರೇ ಅದನ್ನು ಕಳಚಿ ಹಿಜಾಬ್ ನಿಷೇಧಕ್ಕೆ ಆಗ್ರಹಿಸಿದರು. ಈ ವಿನೂತನ ರೀತಿಯ ಪ್ರತಿಭಟನೆಗೆ ಪಾರ್ಲಿಮೆಂಟ್‍ನ ಇತರ ಸದಸ್ಯರೇ ಆಕ್ಷೇಪ ವ್ಯಕ್ತಪಡಿಸಿದರಾದರೂ ಈ ವಿಚಾರಧಾರೆಗೆ ಜಾಗತಿಕವಾಗಿ ಅದು ಅನುಕಂಪ ಗಿಟ್ಟಿಸಿಕೊಟ್ಟಿತು. ಈ ಪ್ರಕರಣಕ್ಕಿಂತ ಮೊದಲೇ ಯುರೋಪಿನ ಅನೇಕ ರಾಷ್ಟ್ರಗಳು ಬುರ್ಖಾ, ಶಿರವಸ್ತ್ರ, ನಮಾಝ, ಉಪವಾಸಗಳ ಸುತ್ತ ಚರ್ಚೆಯೊಂದನ್ನು ದೊಡ್ಡ ಮಟ್ಟದಲ್ಲಿಯೇ ಆರಂಭಿಸಿದ್ದುವು. ಅತ್ಯಂತ ಭೀತಿಯುಕ್ತವಾದ ಅಂಕಿ-ಅಂಶಗಳನ್ನು ಹರಡಿಕೊಂಡು ಗುಣಾಕಾರ-ಭಾಗಾಕಾರದಲ್ಲಿ ತೊಡಗಿದ್ದುವು. 2015ರಲ್ಲಿ ಪುಟ್ಟ ರಾಷ್ಟ್ರವಾದ ಚಾದ್‍ನಲ್ಲಿ ಎರಡು ಬಾಂಬ್ ಸ್ಫೋಟಗಳು ನಡೆದುವು. ಮುಖ ಮುಚ್ಚುವ ಪರ್ದಾವನ್ನು ಧರಿಸಿದವರು ಈ ಕೃತ್ಯ ಎಸಗಿದ್ದಾರೆಂದು ಶಂಕಿಸಲಾಯಿತು. ಈ ಸ್ಫೋಟದ ಎರಡೇ ವಾರಗಳಲ್ಲಿ ಅಂಥ ಪರ್ದಾಕ್ಕೆ ಚಾದ್‍ನಲ್ಲಿ ನಿಷೇಧ ಬಿತ್ತು. ಇದಾದ ಒಂದು ತಿಂಗಳ ಬಳಿಕ ಈ ಸ್ಫೋಟಗಳನ್ನೇ ಕಾರಣವಾಗಿ ಕೊಟ್ಟ ಕ್ಯಾಮರೂನ್, ನೈಜರ್, ಕಾಂಗೋ, ಕೊಸೊವೋ, ಅಝರ್‍ಬೈಜಾನ್‍ಗಳಲ್ಲೂ ನಿಷೇಧ ಹೇರಲಾಯಿತು. 2016ರಿಂದ ಸ್ವಿಝರ್‍ಲ್ಯಾಂಡ್‍ನ ಟೆಸ್ಸಾನ್ ಪ್ರದೇಶದಲ್ಲಿ ಮುಖಮುಚ್ಚುವ ಪರ್ದಾಕ್ಕೆ ನಿಷೇಧ ವಿಧಿಸಲಾಯಿತು. 2018ರಿಂದ ಡೆನ್ಮಾರ್ಕ್‍ನಲ್ಲಿ ಈ ನಿಷೇಧ ಜಾರಿಯಾಯಿತು. 2015ರಲ್ಲಿ ನೆದರ್‍ಲ್ಯಾಂಡ್‍ನಲ್ಲಿ ಈ ನಿಷೇಧ ಜಾರಿಗೆ ಬಂತು. 2011ರಲ್ಲಿ ಬೆಲ್ಜಿಯಂ, ಫ್ರಾನ್ಸ್ ಮತ್ತು ಸ್ಪೈನ್‍ನಲ್ಲೂ ಮುಖಮುಚ್ಚುವ ಪರ್ದಾವನ್ನು ತಿರಸ್ಕರಿಸುವ ಆದೇಶವನ್ನು ಹೊರಡಿಸಲಾಯಿತು. ಮಾನವ ಹಕ್ಕುಗಳಿಗಾಗಿರುವ ಯುರೋಪಿಯನ್ ನ್ಯಾಯಾಲಯವು (ECHR) 2014ರಲ್ಲಿ ಈ ಬಗ್ಗೆ ನೀಡಿರುವ ತೀರ್ಪನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ‘ಮುಖಪರದೆಯನ್ನು ನಿಷೇಧಿಸುವುದು ಮಾನವ ಹಕ್ಕುಗಳ ಉಲ್ಲಂಘನೆಯ ವ್ಯಾಪ್ತಿಗೆ ಸೇರುವುದಿಲ್ಲ.’
ಅಶ್ಲೀಲತೆಯು ನೋಡುವವರ ಕಣ್ಣಿನಲ್ಲಿದೆಯೇ ಹೊರತು ಧರಿಸುವ ಬಟ್ಟೆಯಲ್ಲಿಲ್ಲ ಎಂದು ಬಲವಾಗಿ ವಾದಿಸುವ ಜಗತ್ತೇ, ಸ್ಕಾರ್ಫ್‍ನಲ್ಲಿ, ಗಡ್ಡ, ಬುರ್ಖಾ, ಪೈಜಾಮ, ಟೋಪಿಯಲ್ಲಿ ಮೂಲಭೂತವಾದವಿದೆ ಎಂದು ಹೇಳುತ್ತಿದೆ. ನಿಜವಾಗಿ, ಇದು ಪರಮ ದ್ವಂದ್ವ. ಅಶ್ಲೀಲತೆಯು ಕಣ್ಣಿನಲ್ಲಿದೆಯೆಂದಾದರೆ ಮೂಲಭೂತವಾದವೂ ಯಾಕೆ ಕಣ್ಣಿನಲ್ಲಿರಬಾರದು? ಸ್ಕಾರ್ಫ್ ಒಂದು ಸಹಜ ಉಡುಪು ಕ್ರಮ. ಗಡ್ಡವೂ, ಪರ್ದಾವೂ ಅಷ್ಟೇ. ಇದೇಕೆ ಮೂಲಭೂತವಾದವಾಗಿ ಕಾಣಬೇಕು? ಜಾಗತಿಕವಾಗಿಯೇ ಇರುವ ಹಂತಕ ಮನಸ್ಥಿತಿಗೆ ಮುಸ್ಲಿಮ್ ಎಂಬೊಂದು ನಾಮಕರಣ ಮಾಡಿ ಅದನ್ನು ಮತ್ತು ಅದು ಸಂಕೇತಿಸುವ ಚಿಹ್ನೆಗಳನ್ನೆಲ್ಲ ಡೈನೋಸಾರ್ ನಂತೆ ಬಿಂಬಿಸುವ ಪ್ರಯತ್ನಗಳು ಇವು. ಇವು ವಿದೇಶಕ್ಕಷ್ಟೇ ಸೀಮಿತವಲ್ಲ. ಭಾರತದಲ್ಲೂ ಇದೆ. ಹಾಗಂತ, ಮುಸ್ಲಿಮರು ಪರಮ ಪಾವನರು ಎಂದಲ್ಲ. ಅವರಲ್ಲಿ ಹಂತಕರಿದ್ದಾರೆ. ಭಯೋತ್ಪಾದಕರಿದ್ದಾರೆ. ಸಮಾಜದಲ್ಲಿ ಯಾವೆಲ್ಲ ಕೆಡುಕುಗಳಿವೆಯೋ ಅವುಗಳಲ್ಲಿ ಭಾಗಶಃವಾದರೂ ಅವರ ಪಾಲು ಇದ್ದೇ ಇದೆ. ಆದರೆ, ಇವರಿಗೆ ಹೋಲಿಸಿದರೆ ನೂರು ಪಟ್ಟು ಅಧಿಕ ಹಂತಕ ಮನಸ್ಥಿತಿಯವರು ಇನ್ನೊಂದು ಕಡೆ ಇದ್ದಾರೆ. ಆದರೆ ಅವರೆಲ್ಲ ಜಗತ್ತಿನ ರಕ್ಷಣೆಯ ಸುಂದರ ಹೆಸರನ್ನು ತಮಗೆ ತಾವೇ ಕೊಟ್ಟುಕೊಂಡು ಬದುಕುತ್ತಿರುತ್ತಾರೆ. ಯಾವುದು ಸರಿ ಮತ್ತು ಯಾವುದು ತಪ್ಪು ಅನ್ನುವುದನ್ನು ಅವರೇ ನಿರ್ಧರಿಸಿ ಜಗತ್ತಿಗೆ ವಿವರಿಸುತ್ತಿದ್ದಾರೆ. ಅದನ್ನು ಭಾರತವೂ ಆಮದು ಮಾಡಿಕೊಂಡಿದೆ. ಭಾರತದಲ್ಲೂ ಮುಸ್ಲಿಮರೊಂದಿಗೆ ಅಂತರವಿಟ್ಟುಕೊಂಡು ಬದುಕುವ ಮತ್ತು ಮುಸ್ಲಿಮರ ಧಾರ್ಮಿಕ ಐಡೆಂಟಿಟಿಯ ಬಗ್ಗೆ ತಿರಸ್ಕಾರ ಭಾವ ಪ್ರದರ್ಶಿಸುವ ಮನಸ್ಥಿತಿಯೊಂದು ಬಲ ಪಡೆಯತೊಡಗಿದೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಶಾಲಾ-ಕಾಲೇಜುಗಳ ಮೇಲೆ ಇದು ಪ್ರಭಾವ ಬೀರತೊಡಗಿದೆ. ಇಲ್ಲದಿದ್ದರೆ, 28% ಮುಸ್ಲಿಮ್ ಹೆಣ್ಮಕ್ಕಳು ಕಲಿಯುತ್ತಿರುವ ಕಾಲೇಜೊಂದು ಏಕಾಏಕಿ ಸ್ಕಾರ್ಫ್ ನಿಷೇಧಕ್ಕೆ ಮುಂದಾಗುತ್ತದೆಂದರೆ ಏನರ್ಥ? ಆದರೂ,
ಆವೇಶದ ಪ್ರತಿಕ್ರಿಯೆಯೇ ಇದಕ್ಕೆ ಉತ್ತರ ಅಲ್ಲ. ಜಗತ್ತು ಇವತ್ತು ಇತರೆಲ್ಲ ಸಮುದಾಯಗಳಿಗಿಂತ ಹೆಚ್ಚು ಪ್ರಬುದ್ಧ ಪ್ರತಿಕ್ರಿಯೆಯನ್ನು ಮುಸ್ಲಿಮರಿಂದ ನಿರೀಕ್ಷಿಸುತ್ತಿದೆ. ಆರೋಪಗಳ ಪಟ್ಟಿಯನ್ನು ತಯಾರಿಸಿಟ್ಟು ತೂಗು ಹಾಕಲು ಮುಸ್ಲಿಮ್ ಕೊರಳುಗಳಿಗಾಗಿ ಕಾಯುತ್ತಿದೆ. ಆ ಕೊರಳುಗಳನ್ನು ತಯಾರಿಸಿಕೊಡುವ ರೀತಿಯಲ್ಲಿ ನಮ್ಮ ಪ್ರತಿಕ್ರಿಯೆ ಇರಬಾರದು, ಅಷ್ಟೇ.
No comments:
Post a Comment