Tuesday, September 4, 2018

ಜುನೈದ್‍, ದೀಪಕ್ ನಿಂದ ಹಿಡಿದು ಬಷೀರ್, ಹುಸೇನಬ್ಬರ ವರೆಗೆ...

   

ದೆಹಲಿಯ ನಿಝಾಮುದ್ದೀನ್ ರೈಲ್ವೇ ನಿಲ್ದಾಣ

ಮುಂಜಾನೆ. ರಮಝಾನ್ ತಿಂಗಳ ಉಪವಾಸ ಬೇರೆ. ಹರ್ಯಾಣದ ಬಲ್ಲಬ್‍ಘಢಕ್ಕೆ ತೆರಳಲು ರೈಲು ಸಿದ್ಧವಾಗಿ ನಿಂತಿತ್ತು. ನಾನು ಹತ್ತಿದೆ. ನನ್ನ ಪ್ರಯಾಣಕ್ಕೆ ನಿರ್ದಿಷ್ಟ ಗುರಿ ಇತ್ತು. ಆ 16ರ ಹರೆಯದ ಹಾಫಿಝ್ (ಕುರ್‍ಆನ್ ಕಂಠಪಾಠ ಮಾಡಿದವ) ಹುಡುಗನ ಮನೆಯವರನ್ನು ಕಂಡು ಮಾತಾಡಿಸಬೇಕಿತ್ತು. ಆ ಹುಡುಗ ಬೆಳೆದ ಖಡ್ಡೌಲಿ ಗ್ರಾಮಸ್ಥರೊಂದಿಗೆ ತುಸು ಹೊತ್ತು ಕಳೆಯಬೇಕಿತ್ತು. ಕಳೆದ ವರ್ಷ ಈದ್ ಹಬ್ಬಕ್ಕಿಂತ ವಾರ ಮೊದಲು ಆ ಹುಡುಗ ನನ್ನಂತೆಯೇ ನಿಝಾಮುದ್ದೀನ್ ರೈಲ್ವೆ ನಿಲ್ದಾಣದಿಂದ ಮಧ್ಯಪ್ರದೇಶದ ಮಥುರಾಕ್ಕೆ ಹೋಗುವ ರೈಲನ್ನು ಸಂಜೆಯ ವೇಳೆಗೆ ಹತ್ತಿಕೊಂಡಿದ್ದ. ಖಡ್ಡೌಲಿಯಲ್ಲಿ ಇಳಿಯುವುದು ಅವನ ಉದ್ದೇಶವಾಗಿತ್ತು. ಜೊತೆಗೆ ಅಣ್ಣನೂ ಇದ್ದ. ಇಬ್ಬರು ಕಸಿನ್‍ಗಳೂ ಇದ್ದರು. ಕೈಯಲ್ಲಿ ಚೀಲ. ಚೀಲದೊಳಗೆ ಹಬ್ಬದ ಉಡುಪು. ಆ ನಾಲ್ವರ ತಲೆಯಲ್ಲೂ ಟೊಪ್ಪಿ ಇತ್ತು. ಅವರು ಕುರ್ತಾ-ಪೈಜಾಮ ಧರಿಸಿದ್ದರು. ಆ ಹುಡುಗ ಹೀಗೆ ಹಿಂತಿರುಗುವುದಕ್ಕಿಂತ ಮೊದಲು ದೆಹಲಿಯ ಜಾಮಾ ಮಸಿದೀಗೆ ತೆರಳಿ ಪೋಟೋ ಕ್ಲಿಕ್ಕಿಸಿಕೊಂಡಿದ್ದ. ಆ ಪೋಟೋ ತಾನು ಕ್ಲಿಕ್ಕಿಸುವ ಕೊನೆಯ ಪೋಟೋವಾಗುತ್ತದೆಂಬುದು ಆತನಿಗೆ ಗೊತ್ತಿರಲಿಲ್ಲ. ತನ್ನ ಚೀಲದಲ್ಲಿರುವ ಉಡುಪನ್ನು ಧರಿಸಲು ತನ್ನಿಂದ ಸಾಧ್ಯವಾಗದು ಅನ್ನುವುದೂ ಆತನಿಗೆ ಗೊತ್ತಿರಲಿಲ್ಲ. ಉತ್ತರ ಪ್ರದೇಶದ ಮೇವಾತ್‍ನಲ್ಲಿರುವ ಧಾರ್ಮಿಕ ಶಿಕ್ಷಣ ಸಂಸ್ಥೆಯಿಂದ ಹರ್ಯಾಣದ ಖಡ್ಡೌಲಿಯಲ್ಲಿರುವ ತನ್ನ ಮನೆಗೆ ಆತ ಹಿಂತಿರುಗಿದ್ದೇ ರಮಝಾನ್‍ನಲ್ಲಿ. ಹಾಗೆ ಹಿಂತಿರುಗುವಾಗ, ಆತನೊಳಗೆ ಪುಳಕ, ಅಭಿಮಾನ, ಸಂತೋಷ ಎಲ್ಲವೂ ಇತ್ತು. ತಾನು ಹಾಫಿಝ್ ಆಗಿದ್ದೇನೆ ಅನ್ನುವ ಖುಷಿ. ಕಳೆದ ಮೂರು ವರ್ಷಗಳಿಂದ ಶ್ರಮಪಟ್ಟು ಓದಿದ್ದು ಸಾರ್ಥಕ ವಾಯಿತು ಅನ್ನುವ ಹೆಮ್ಮೆ. ಪವಿತ್ರ ಕುರ್‍ಆನಿನ 114 ಅಧ್ಯಾಯಗಳನ್ನು ಕಂಠಪಾಠ ಮಾಡುವುದೆಂದರೆ ಸುಲಭ ಅಲ್ಲ. ಅದೊಂದು ಧ್ಯಾನ. ಛಲ. ನಿರಂತರ ಶ್ರಮ. ಪವಿತ್ರ ಕುರ್‍ಆನ್ ಇರುವುದು ಅರಬಿ ಭಾಷೆಯಲ್ಲಿ. ಈ ಹುಡುಗನ ಭಾಷೆಯಾದರೋ ಉರ್ದು. ತನ್ನದಲ್ಲದ ಭಾಷೆಯಲ್ಲಿರುವ ಪದಗಳನ್ನು, ವಾಕ್ಯಗಳನ್ನು ಅದರಲ್ಲೂ ಆರು ಸಾವಿರದ ಆರುನೂರಕ್ಕಿಂತಲೂ ಅಧಿಕ ಪದಗುಚ್ಛಗಳನ್ನು ನೆನಪಿಟ್ಟುಕೊಳ್ಳುವುದೇ ಒಂದು ದೊಡ್ಡ ಸವಾಲು. ಪವಿತ್ರ ಕುರ್‍ಆನಿನ 114 ಅಧ್ಯಾಯಗಳಲ್ಲಿ ಅಸಂಖ್ಯ ಬಾರಿ ಈ ಪದಗಳು ಪುನರು ಬಂದಿರುತ್ತವೆ. ಒಂದು ವಾಕ್ಯವನ್ನು ಹೋಲುವಂಥ ವಾಕ್ಯ ಇನ್ನೊಂದು ಕಡೆ ಇರುತ್ತದೆ. ಅದರ ಉಚ್ಚರಣೆಯ ಶೈಲಿ ಬೇರೆ. ಮಂಡನೆಯ ವಿಧಾನ ಬೇರೆ. ಆದ್ದರಿಂದಲೇ, ಹಾಫಿಝ್‍ಗೆ ಸಮಾಜದಲ್ಲಿ ವಿಶೇಷ ಆದರ, ಮನ್ನಣೆ ಇರುತ್ತದೆ. ಮೇವಾತ್‍ನಿಂದ ಹಿಂತಿರುಗಿದ ಆ ಹುಡುಗನಿಗೂ ತನ್ನ ಮನೆಯಲ್ಲಿ ಭರ್ಜರಿ ಸ್ವಾಗತ ಸಿಕ್ಕಿತ್ತು. ಅಮ್ಮ ಸಾಯಿರಾ ಬಾನು ಆತನನ್ನು ಬಿಗಿದಪ್ಪಿ ಕೊಂಡಿದ್ದರು. ಅಪ್ಪ ಆಲಂಗಿಸಿದ್ದರು. ಸಹೋದರರೂ ಆತನ ಬೆನ್ನು ತಟ್ಟಿದ್ದರು. ಈ ಖುಷಿಯಲ್ಲೇ ಅಮ್ಮ ಆತನಿಗೆ 1500 ರೂಪಾಯಿಯನ್ನು ನೀಡಿದ್ದರು. ಈದ್‍ಗೆ ಬಟ್ಟೆ ಬರೆ ಖರೀದಿಸು ಎಂದು ಪ್ರೀತಿಸಿದ್ದರು. ಹಾಗೆ ಉಡುಪು ಖರೀದಿಸಿ ಹಿಂತಿರುಗುತ್ತಿದ್ದ ವೇಳೆ ಆ ಕ್ರೌರ್ಯ ನಡೆದಿತ್ತು. ಹರ್ಯಾಣದ ಓಕ್ಲಾ ನಿಲ್ದಾಣದಲ್ಲಿ ರೈಲು ಹತ್ತಿದ ಸುಮಾರು 15 ರಿಂದ 20 ರಷ್ಟಿದ್ದ ಗುಂಪು ಇವರೊಂದಿಗೆ ಸೀಟಿನ ವಿಚಾರದಲ್ಲಿ ತಗಾದೆ ತೆಗೆಯಿತು. ಸೀಟು ಖಾಲಿ ಮಾಡುವಂತೆ ಆದೇಶಿಸಿತು. ಇವರ ಟೊಪ್ಪಿಯನ್ನು ಕಿತ್ತು ಹೊರಕ್ಕೆಸೆಯಿತು. ದೇಶದ್ರೋಹಿಗಳು ಎಂದು ಹೀಗಳೆಯಿತು. ಗೋಮಾಂಸ ಸೇವಕರು ಎಂದು ನಿಂದಿಸಿತು. ಚೀಲದಲ್ಲಿ ಬೀಫ್ ಕೊಂಡೊಯ್ಯುತ್ತಿದ್ದಾರೆ ಎಂದು ಸುಳ್ಳು ಸುಳ್ಳೇ ಘೋಷಿಸಿ ಅವರ ಮೇಲೆ ಕೈಹಾಕಿತು. ನೋಡು ನೋಡುತ್ತಿದ್ದಂತೆಯೇ ಆ ಗುಂಪು ಆ ಹುಡುಗನಿಗೆ ಚೂರಿಯಿಂದ ಇರಿಯಿತು. ಉಳಿದವರ ಮೇಲೂ ಹಲ್ಲೆ ನಡೆಸಿತು. ಆತ ತುಸು ಹೊತ್ತಿನಲ್ಲೇ ಸಾವಿಗೀಡಾದ...
  
 ರೈಲು ಬಲ್ಲಬ್‍ಘಢಕ್ಕೆ ಧಾವಿಸುತ್ತಿತ್ತು. ನನ್ನ ಮನಸ್ಸನ್ನಿಡೀ ಆ ಹುಡುಗನೇ ತುಂಬಿಕೊಂಡಿದ್ದ. ರೈಲು ಹಳಿಯ ಇಕ್ಕೆಲಗಳಲ್ಲಿ ಗಾಢ ಮೌನವೊಂದು ಆವರಿಸಿತ್ತು. ನಾನು ಬಲ್ಲಬ್‍ಘಢ್‍ನಲ್ಲಿ ಇಳಿದು ಆ ಹುಡುಗನ ಮನೆ ತಲುಪಿದೆ. ಆ ಹುಡುಗನ ತಂದೆ ಜಲಾಲುದ್ದೀನ್ ಮನೆಯಲ್ಲಿರಲಿಲ್ಲ. ರಮಝಾನ್‍ನ ಆರಂಭದಿಂದಲೇ ಅವರು ಹೆಚ್ಚಿನ ಸಮಯವನ್ನು ಮಸೀದಿಯಲ್ಲೇ ಕಳೆಯುತ್ತಿದ್ದಾರೆ. ಇತ್ತೀಚೆಗೆ ಅವರಿಗೆ ಹೃದಯಾಘಾತವಾಗಿತ್ತು. ಇದೀಗ ಆ ಆಘಾತ ದಿಂದ ಚೇತರಿಸಿಕೊಂಡಿರುವರಾದರೂ ಕೆಲಸಕ್ಕೆ ಹೋಗುವಷ್ಟು ಆರೋಗ್ಯ ಅವರಲ್ಲಿಲ್ಲ. ಮಗನ ಸಾವು ಮತ್ತು ಆ ಬಳಿಕದ ಬೆಳವಣಿಗೆಗಳು ಅವರ ಹೃದಯವನ್ನು ದುರ್ಬಲಗೊಳಿಸಿತೋ ಅನ್ನುವ ಅನುಮಾನ ದೊಡ್ಡ ಮಗ ಹಾಶಿಮ್‍ನದ್ದು. ಮನೆಯ ಪಕ್ಕದಲ್ಲೇ ಆಟೋ ರಿಕ್ಷಾವೊಂದು ಅನಾಥ ಭಾವದಲ್ಲಿ ನಿಂತಿದೆ. ಮಗನ ಹತ್ಯೆಯ ಬಳಿಕ ಹಿತೈಷಿಗಳು ಈ ಆಟೋ ರಿಕ್ಷಾವನ್ನು ಜಲಾಲುದ್ದೀನ್‍ಗೆ ನೀಡಿದ್ದರು. ಮಗನ ಹತ್ಯೆಗೆ ಸಂಬಂಧಿಸಿ ಚಂಡೀಗಢ ಮತ್ತಿತರ ಕಡೆ ಪ್ರಯಾಣಿಸುವುದಕ್ಕಾಗಿ ಮಾತ್ರ ಈ ಆಟೋರಿಕ್ಷಾ ಈಗ ಬಳಕೆಯಾಗುತ್ತಿದೆ. ಅಲ್ಲದೆ, ಒಂದು ಬಗೆಯ ಅಸುರಕ್ಷಿತತೆಯ ಭಾವವೂ ಆ ಕುಟುಂಬದಲ್ಲಿದೆ. ಮಗನ ಹತ್ಯೆಯ ಪ್ರಧಾನ ಆರೋಪಿಗಳಲ್ಲಿ ಒಬ್ಬನಾದ ನರೇಶ್ ಕುಮಾರ್‍ಗೆ ಫರೀದಾಬಾದ್‍ನ ಜಿಲ್ಲಾ ನ್ಯಾಯಾಲಯವು ಕಳೆದ ವಾರ ಜಾಮೀನು ನಿರಾಕರಿಸಿದ್ದರೂ ಉಳಿದ ಎಲ್ಲ ಆರೋಪಿಗಳೂ ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಬೆಳವಣಿಗೆಯು ಆ ಕುಟುಂಬದಲ್ಲಿ ಆತಂಕವನ್ನು ಮೂಡಿಸಿದೆ. ಆದ್ದರಿಂದ ಪ್ರಯಾಣಕ್ಕೆ ಇತರ ವಾಹನಗಳನ್ನು ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಬಳಸಲು ಆ ಕುಟುಂಬ ತೀರ್ಮಾನಿಸಿದೆ. ವಿಶೇಷ ಏನೆಂದರೆ, ಆ ಹುಡುಗನೂ ಸೇರಿದಂತೆ ಈ ಕುಟುಂಬದ 7 ಮಂದಿ ಗಂಡು ಮಕ್ಕಳೂ ಹಾಫಿಝ್‍ಗಳು. ದೊಡ್ಡವ ಹಾಶಿಮ್ ಪಕ್ಕದ ಮಸೀದಿಯಲ್ಲಿ ಇಮಾಮ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಅಪರಾಧಿಗಳಿಗೆ ಶಿಕ್ಷೆಯಾಗುತ್ತದೆ ಎಂಬ ಅಚಲ ವಿಶ್ವಾಸ ಈ ಕುಟುಂಬದ್ದು.

  ಬಹುಶಃ ಆ ಇಡೀ ಮನೆಯ ಅಂತರ್ ಪ್ರೇರಣೆ ತಾಯಿ ಸಾಯಿರಾ ಬಾನು ಅಂತ ನನನಗನಿಸಿತು. ಅವರ ಮಾತುಗಳೇ ಅವರನ್ನು ಗೌರವಾರ್ಹಗೊಳಿಸುತ್ತಿತ್ತು. ತನ್ನ 7 ಮಕ್ಕಳನ್ನು ಹಾಫಿಝ್ ಮಾಡಲು ಸಾಧ್ಯವಾಗಿರುವುದಕ್ಕೆ ಅವರು ಹೆಮ್ಮೆಪಟ್ಟರು. ಅವರು ಪ್ರಬಲ ದೇವಭಕ್ತೆ ಅನ್ನುವುದನ್ನು ಅವರ ಪ್ರತಿ ಮಾತುಗಳೂ ಸಾರಿ ಹೇಳುತ್ತಿದ್ದುವು. ಹತ್ಯೆಗೀಡಾದ ಮಗನ ಬಗ್ಗೆ ಹೇಳುವಾಗ ಅವರು ಕಾಪಾಡಿಕೊಂಡ ಸಮಚಿತ್ತತೆ ಮತ್ತು ಸಹನೆ ನನ್ನನ್ನು ತೀವ್ರವಾಗಿ ನಾಟಿತು. ಅವರಿಗೆ ಮಗನ ಬಗ್ಗೆ ಹೇಳಿಕೊಳ್ಳುವುದಕ್ಕೆ ನೂರು ನಾಲಗೆಗಳಿದ್ದುವು. ಮಗ ಹಾಫಿಝ್ ಆದ ಖುಷಿಯಲ್ಲಿ ತಾನು ಅವನಿಗೆ ಹಣಕೊಟ್ಟು ದೆಹಲಿಗೆ ಕಳುಹಿಸಿಕೊಟ್ಟಿದ್ದು, ಸಂಜೆಯೊಳಗೆ ಹಿಂತಿರುಗುವೆ ಎಂದು ಮಾತುಕೊಟ್ಟ್ಟು ಮಗ ಅತೀವ ಲವಲವಿಕೆಯಿಂದ ಹೊರಟು ಹೋದದ್ದು ಮತ್ತು ಶವವಾಗಿ ಮಗ ತನಗೆ ಸಿಕ್ಕಿದ್ದನ್ನು ಆಕೆ ವಿವರಿಸುವಾಗ ಸಮಚಿತ್ತವನ್ನು ಎಂದೂ ಕಳಕೊಳ್ಳಲಿಲ್ಲ. ಕುರ್‍ಆನ್ ಪಠಣದಲ್ಲಿ ಮಗನಿಗೆ ಅಪಾರ ಆಸಕ್ತಿಯಿತ್ತು ಎಂದು ಆ ತಾಯಿ ಹೇಳಿಕೊಂಡರು. ಎಲ್ಲಿಯವರೆಗೆಂದರೆ ಒಂದೇ ಒಂದು ಬಾರಿ ಕೂಡ ಅವನ ಶಿಕ್ಷಕರಿಂದ ದೂರುಗಳು ಬಂದಿಲ್ಲ ಎಂಬ ಹೆಮ್ಮೆ ಅವರದು. ಯಾರ ಮೇಲೂ ಏರಿ ಹೋಗದ ಮತ್ತು ಯಾವ ಜಗಳದಲ್ಲೂ ಭಾಗಿಯಾಗದ ಮಗನ ಮೇಲೆ ಯಾಕೆ ಅವರು ಹಾಗೆ ಮಾಡಿದರು ಎಂದು ಪ್ರಶ್ನಿಸುವಾಗ ಅವರ ಕಪಾಲಗಳು ಒದ್ದೆಯಾದುವು. `ನನ್ನ ಮಗ ಒಳ್ಳೆಯವ. ಆದ್ದರಿಂದಲೇ ನಿಮ್ಮಂಥವರು ಇಲ್ಲಿವರೆಗೂ ಬಂದು ಆತನ ಬಗ್ಗೆ ಕೇಳುತ್ತೀರಿ. ಊರವರೂ ಈಗಲೂ ಆತನನ್ನು ನೆನಪಿಸಿಕೊಳ್ಳುತ್ತಾರೆ...' ಎಂದು ಹೇಳುತ್ತಾ ಅವರು ಹನಿಗಣ್ಣಾದರು. ಕಳೆದ ವರ್ಷ ಅವರ ಮನೆ ಮಾತ್ರವಲ್ಲ, ಅವರ ಗ್ರಾಮವೇ ಮೌನಕ್ಕೆ ಶರಣಾಗಿತ್ತು. ಗ್ರಾಮದಲ್ಲಿ ಯಾರೂ ಈದ್ ಆಚರಿಸಿರಲಿಲ್ಲ. ಈ ವರ್ಷ ಹಾಗಿಲ್ಲ. ಮಗನ ಅನುಪಸ್ಥಿತಿಯು ಈದ್ ಆಚರಣೆಗೆ ತಡೆ ಆಗಬಾರದೆಂಬುದು ಆ ತಾಯಿಯ ಬಯಕೆ. ತನ್ನ ಮಗ ಶಹೀದ್ (ಹುತಾತ್ಮ) ಆಗಿರುವನೆಂಬ ಮಾತನ್ನು ಆ ತಾಯಿ ದೃಢವಾಗಿ ಹೇಳುತ್ತಾರೆ. ಮಾತ್ರವಲ್ಲ, ತನ್ನ ಮಗನ ಹೆಸರಿನಲ್ಲಿ ಮದ್ರಸವೊಂದನ್ನು ಸ್ಥಾಪಿಸುವ ಗುರಿಯೊಂದಿಗೆ ರಂಗಕ್ಕಿಳಿದಿದ್ದಾರೆ. ಹೆಣ್ಮಕ್ಕಳಿಗೆ ಕುರ್‍ಆನ್ ಕಲಿಸುವುದಕ್ಕೆ ಆ ಮದ್ರಸವನ್ನು ಮೀಸಲಾಗಿರಿಸುವುದು ಅವರ ಆಸೆ. ಅದಕ್ಕಾಗಿ ಜಾಗವನ್ನೂ ಖರೀದಿಸಿದ್ದಾರೆ. ದಾನಿಗಳಿಂದ ಸಂಗ್ರಹಿಸಲಾದ ಮೊತ್ತವು ಸಾಕಾಗದೇ ತಮ್ಮ ಹೆಸರಲ್ಲಿರುವ ಜಾಗವನ್ನು ಮಾರಿ ಬಂದ ಹಣ ಮದ್ರಸಕ್ಕಾಗಿ ವ್ಯಯಿಸುತ್ತಿದ್ದಾರೆ.
  
 ಆ ಗ್ರಾಮದ ಎಲ್ಲ ಮಕ್ಕಳಿಗೂ ಆ ಹುಡುಗನ ಬಗ್ಗೆ ಗೊತ್ತು. ಮೇವಾತ್‍ನಿಂದ ಊರಿಗೆ ಬಂದಾಗಲೆಲ್ಲ ಆತ ಗೆಳೆಯರೊಂದಿಗೆ ಸೇರಿ ಕ್ರಿಕೆಟ್ ಆಡುತ್ತಿದ್ದ. ಪರಿಸರದ ಮನೆಯವರಿಗೆ ಆತ ಮನೆಯ ಸದಸ್ಯನಷ್ಟು ಪರಿಚಿತ. ಅವನ ಬಗ್ಗೆ ಅವರಲ್ಲಿ ದೂರುಗಳಿಲ್ಲ. ಪ್ರಾಯ ಮೀರಿದ ಪಕ್ವತೆ ಮತ್ತು ಉತ್ತಮ ಸ್ವಭಾವವು ಪರಿಸರದವರ ಇಷ್ಟದ ಹುಡುಗನಾಗಿ ಆತನನ್ನು ಪರಿವರ್ತಿಸಿತ್ತು. ಆಟದ ನಡುವೆಯೇ ಆತ ನಮಾಝ್‍ನ ಬಗ್ಗೆ ಎಚ್ಚರಿಕೆ ವಹಿಸುತ್ತಿದ್ದುದು ಮತ್ತು ಗೆಳೆಯರನ್ನು ಜೊತೆ ಸೇರಿಸಿಕೊಂಡು ಮಸೀದಿಗೆ ತೆರಳುತ್ತಿದ್ದುದನ್ನು ಗೆಳೆಯರು ಸ್ಮರಿಸಿಕೊಂಡರು.
   
ನಾನು ಆ ಮನೆಯಿಂದ ಹೊರಡಲು ಸಿದ್ಧನಾದೆ. ಇಫ್ತಾರ್ ಮುಗಿಸಿಯೇ ಹೋಗಬೇಕೆಂದು ಆ ತಾಯಿ ನನ್ನನ್ನು ಒತ್ತಾಯಿಸಿದರು. ನನ್ನಲ್ಲಿ ಅದಕ್ಕೆ ಬೇಕಾದ ಸಮಯವಿರಲಿಲ್ಲ. ಆ ಉಮ್ಮನ ಕೋರಿಕೆಯನ್ನು ನಯವಾಗಿ ತಿರಸ್ಕರಿಸಿ ಹಾಶಿಮ್‍ನ ಜೊತೆ ಆ ಹುಡುಗನನ್ನು ದಫನ ಮಾಡಿದ ಕಬರ್ ಸ್ಥಾನಕ್ಕೆ ಹೋದೆ. ಪ್ರಾರ್ಥಿಸಿದೆ. ವಿಶೇಷ ಏನೆಂದರೆ, ಆ ಹುಡುಗನ ಕಬರ್ ಇದುವೇ ಎಂದು ಪತ್ತೆ ಹಚ್ಚುವ ಯಾವೊಂದು ಕುರುಹೂ ಆ ಕಬರಸ್ತಾನದಲ್ಲಿರಲಿಲ್ಲ. ಶಹೀದ್‍ಗಳ ಕಬರ್ ಹೀಗಾಗುತ್ತದೆಂದು ಹಾಶಿಂ ಹೇಳಿದ. ಆ ಕುಟುಂಬದಲ್ಲಿ ಆ ಹುಡುಗನ ಬಗ್ಗೆ ಅತೀವ ಕಳಕಳಿಯಿದೆ. ಭಾವುಕತೆಯಿದೆ. ಆ ಹುಡುಗ ಇನ್ನಿಲ್ಲ ಎಂಬ ನೋವು ಒಂದೆಡೆಯಾದರೆ, ಮಗ ಶಹೀದ್ ಆಗಿರುವನೆಂಬ ಬಲವಾದ ವಿಶ್ವಾಸ ಇನ್ನೊಂದೆಡೆ. ಅಮ್ಮನಲ್ಲೂ ಅದೇ ಭಾವ. ಅಣ್ಣನಲ್ಲೂ ಅದೇ ವಿಶ್ವಾಸ. ಅಪ್ಪನೂ ಅದನ್ನೇ ಹೇಳುತ್ತಾರೆ. 7 ಮಂದಿ ಗಂಡು ಮಕ್ಕಳ ಪೈಕಿ 6 ಮಕ್ಕಳ ಉಪಸ್ಥಿತಿಯಿದ್ದೂ ಇಲ್ಲದ ಓರ್ವನಿಗಾಗಿ ಆ ಮನೆಮಂದಿಯಲ್ಲಿ ವ್ಯಕ್ತವಾಗುತ್ತಿರುವ ನೋವು, ಸಂಕಟವು ಅಪೂರ್ವವಾದದ್ದು. ಬಹುಶಃ ಆ ಹುಡುಗ ಆ ಮನೆಯನ್ನು ಅಷ್ಟು ತೀವ್ರವಾಗಿ ಪ್ರಭಾವಿಸಿದ್ದ. ಮನೆಯವರ ವಿಶೇಷ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದ. ಮಗ ಇಲ್ಲವಾಗಿ ವರ್ಷವಾದರೂ ಆತ ಈಗಲೂ ಆ ಮನೆಯ ನಿತ್ಯದ ಸ್ಮರಣೆಯಾಗಿದ್ದಾನೆ. ಹಾಗಂತ, ಇದು ಆ ಮನೆಗೆ ಮಾತ್ರ ಸೀಮಿತವಲ್ಲ. ನಾನು ಆ ಹುಡುಗನ ಕಬರ್‍ಗೆ ಭೇಟಿ ನೀಡಿ ಹಿಂತಿರುಗುವಾಗ ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬರೂ ಆತನ ಗುಣಗಾನ ಮಾಡಿದರು...
 

      2017 ಜುಲೈಯಲ್ಲಿ ಹತ್ಯೆಗೀಡಾದ ಜುನೈದ್ ಎಂಬ 16ರ ಹರೆಯದ ಹುಡುಗನ ಬಗ್ಗೆ ಅಫ್ಝಲ್ ರಹ್ಮಾನ್ ಎಂಬವರು ಬರೆದ ಬರಹದ ಸಾರಾಂಶಗಳಿವು. ಮೊನ್ನೆ ಈದ್ ಹಬ್ಬದ  ಎರಡು ದಿನಗಳ ಬಳಿಕ ನಾನು ಈ ಬರಹವನ್ನು ಓದಿದೆ. ಓದುತ್ತಾ ಹೋದಂತೆ ನನ್ನ ಕಣ್ಣ ಮುಂದೆ ಹಲವು ಚಿತ್ರಗಳು ತೇಲಿ ಹೋದವು. ಜುನೈದ್‍ನಿಂದ ಹಿಡಿದು ಮಂಗಳೂರಿನ ದೀಪಕ್, ಪಶ್ಚಿಮ ಬಂಗಾಳದ ಮೌಲ್ವಿ ಇಮ್ದಾದುಲ್ಲಾರ 16ರ ಹರೆಯದ ಮಗ ಸಿಬ್ಗತುಲ್ಲಾನವರೆಗೆ, ಮಂಗಳೂರಿನ ಬಶೀರ್‍ ರಿಂದ  ಹಿಡಿದ ಇದೇ ಜಿಲ್ಲೆಯ ಕಾಟಿಪಳ್ಳದ ಹುಸೇನಬ್ಬರವರೆಗೆ... ಒಂದೊಂದು ಚಿತ್ರವೂ ಒಂದೊಂದು ಕತೆಯಾಗಿ ನನ್ನೆದುರು ಬಂದು ನಿಂತವು. ಮನಸು ಭಾರವಾಯಿತು.
    ಕೊಲ್ಲುವವರಿಗೆ ಇದು ಎಂದು ಅರ್ಥವಾಗುತ್ತೋ...



No comments:

Post a Comment