ಕಾರ್ಲ್‍ಮಾರ್ಕ್ಸ್ ನ ‘ದಾಸ್ ಕ್ಯಾಪಿಟಲ್’ ಕೃತಿಯನ್ನು ತೀವ್ರವಾಗಿ ಹಚ್ಚಿಕೊಂಡಿದ್ದರೂ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದ, ರಷ್ಯಾದಲ್ಲಿ ಕಮ್ಯುನಿಸ್ಟ್ ಪ್ರಭುತ್ವವು ಜಾರಿಗೆ ತಂದ ‘ಬಲವಂತದ ಉತ್ಪಾದನೆ’ಯನ್ನು ತಪ್ಪು ಅನ್ನುತ್ತಿದ್ದ ಮತ್ತು ಹಾಗಿದ್ದೂ ಇಟಲಿಯಲ್ಲಿ ಕಮ್ಯುನಿಸ್ಟ್ ಪಾರ್ಟಿಯನ್ನೇ ಸ್ಥಾಪಿಸಿದ್ದ 35ರ ಹರೆಯದ ತರುಣ ರಾಜಕಾರಣಿ ಮತ್ತು ತತ್ವಜ್ಞಾನಿ ಆ್ಯಂಟನಿಯೋ ಗ್ರಾಮ್ಸ್ ಸ್ಕಿಯನ್ನು ಇಟಲಿಯ ಮುಸೋಲಿನಿ ಪ್ರಭುತ್ವವು 1926 ನವೆಂಬರ್ 9ರಂದು ಬಂಧಿಸಿತು. ಆ ತರುಣ ಪ್ರಾಯದಲ್ಲೇ ಇಟಲಿಯಲ್ಲೂ ಹೊರಗೂ ಗ್ರಾಮ್ಸ್ ಸ್ಕಿ ಪ್ರಸಿದ್ಧಿಯನ್ನು ಪಡೆದಿದ್ದ. ಬ್ಲ್ಯಾಕ್ ಶರ್ಟ್ಸ್ ಎಂಬ ಹೆಸರಿನ ಮುಸೋಲಿನಿಯ ಅಂಧಭಕ್ತ ಪಟಾಲಂನ ವಿರುದ್ಧ ಜನ ಚಳವಳಿಯನ್ನು ಹುಟ್ಟುಹಾಕಿದ್ದ. ಮುಸೋಲಿನಿ ಪ್ರಣೀತ ಫ್ಯಾಸಿಸಂನ ಅಪಾಯವನ್ನು ಎತ್ತಿ ಹೇಳುತ್ತಲೇ ಮಾರ್ಕ್ಸ್ ಸಿದ್ಧಾಂತದ ಸುಧಾರಿತ ಮುಖವಾಗಿ ಜನರಿಗೆ ಹತ್ತಿರವಾಗುತ್ತಿದ್ದ. ಈ ಭಿನ್ನ ಧ್ವನಿಯನ್ನು ಹತ್ತಿಕ್ಕದಿದ್ದರೆ ತನ್ನ ಪ್ರಭುತ್ವಕ್ಕೆ ಅಪಾಯವಿದೆ ಎಂದರಿತ ಮುಸೋಲಿನಿ ಅದಕ್ಕಾಗಿ ತಂತ್ರವೊಂದನ್ನು ಹೆಣೆದ. ‘ಮುಸೋಲಿನಿಯ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ’ ಎಂಬ ಪುಕಾರನ್ನು ಹಬ್ಬಿಸಲಾಯಿತಲ್ಲದೇ ಅದನ್ನು ಮಟ್ಟ ಹಾಕುವುದಕ್ಕೆಂದು ಕೆಲವು ತುರ್ತು ಕಾನೂನುಗಳನ್ನು ಜಾರಿ ಮಾಡಲಾಯಿತು. ಆ ಕಾನೂನಿನ ಆಧಾರದಲ್ಲಿಯೇ ಗ್ರಾಮ್ಸ್ ಸ್ಕಿಯನ್ನು ಬಂಧಿಸಲಾಯಿತು. ಗ್ರಾಮ್ಸ್ ಸ್ಕಿಯನ್ನು ಕೋರ್ಟಿಗೆ ಹಾಜರುಪಡಿಸಿದಾಗ ನ್ಯಾಯಾಧೀಶರೊಂದಿಗೆ ಸರಕಾರಿ ಪ್ರಾಸಿಕ್ಯೂಟರ್ ಹೀಗೆ ಹೇಳಿದ್ದರು,
“ಈ ಮೆದುಳು ಮುಂದಿನ 20 ವರ್ಷಗಳ ವರೆಗೆ ಕೆಲಸ ಮಾಡದಂತೆ ನಾವು ತಡೆಯಲೇಬೇಕು.”
ಬಂಧನದಲ್ಲಿದ್ದ ಗ್ರಾಮ್ಸ್ ಸ್ಕಿಯೊಂದಿಗೆ ಮುಸೋಲಿನಿ ಹೀಗೆ ಪ್ರಶ್ನಿಸಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ,
“ಕಾರ್ಲ್ ಮಾರ್ಕ್ಸ್ ಹೇಳಿರುವಂತೆ, ಪಶ್ಚಿಮದ ಬಂಡವಾಳಶಾಹಿ ಜಗತ್ತಿನಲ್ಲಿ ಯಾಕೆ ಕ್ರಾಂತಿ ಸಂಭವಿಸಲಿಲ್ಲ ಮತ್ತು ಅರೆಫ್ಯೂಡಲ್ (ಊಳಿಗಮಾನ್ಯ) ವ್ಯವಸ್ಥೆಯಿದ್ದ ರಷ್ಯಾದಲ್ಲಿ ಆ ಕ್ರಾಂತಿ ಯಾವ ಕಾರಣಕ್ಕಾಗಿ ಸಂಭವಿಸಿತು?”
ಗ್ರಾಮ್ಸ್ ಸ್ಕಿ ಹೀಗೆ ಉತ್ತರ ಕೊಟ್ಟಿದ್ದ,
“ಪ್ರಭುತ್ವವೊಂದು ನೇರವಾಗಿ ಮತ್ತು ನಿರ್ಲಜ್ಜವಾಗಿ ಜನರ ಮೇಲೆ ಶಕ್ತಿ ಪ್ರಯೋಗಿಸಿದಾಗ ಕ್ರಾಂತಿ ಸಂಭವಿಸುತ್ತದೆ. ರಷ್ಯಾದ ಕಮ್ಯುನಿಸ್ಟ್ ಕ್ರಾಂತಿಗೆ ಪ್ರಭುತ್ವದ ಈ ನೀತಿಯೇ ಕಾರಣ. ಆದರೆ, ಜನರ ಮೇಲೆ ಇಂಥ ನೇರ ಶಕ್ತಿ ಪ್ರಯೋಗವು ನಾಗರಿಕ ಆಡಳಿತವಿರುವ ಪಶ್ಚಿಮದ ರಾಷ್ಟ್ರಗಳಲ್ಲಿ ನಡೆದಿಲ್ಲ. ಇಲ್ಲಿ ಪ್ರತಿಭಟನೆಗೆ ಅವಕಾಶ ಇರುವುದೇ ಕ್ರಾಂತಿಯನ್ನು ತಡೆದವು. ಪ್ರತಿಭಟನೆಗಳು ಕ್ರಾಂತಿಯ ಅಗತ್ಯವಿಲ್ಲದಂತೆ ಮಾಡಿದುವು.”
ನಿಜವಾಗಿ, ಆಗಸ್ಟ್ 28ರಂದು ಈ ದೇಶದಲ್ಲಿ ಏನು ನಡೆಯಿತೋ ಅದು ಹೆಚ್ಚೂ ಕಡಿಮೆ ಮುಸೋಲಿನಿ ಕಾಲದ ಕಾರ್ಬನ್ ಕಾಪಿಯಂತೆಯೇ ಇದೆ. ಮುಸೋಲಿನಿಯ ಹತ್ಯಾಯತ್ನದ ಆರೋಪವನ್ನು ಹೊರಿಸಿ ಗ್ರಾಮ್ಸ್ ಸ್ಕಿಯನ್ನು ಬಂಧಿಸಿದಂತೆಯೇ ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ಹೆಣೆದಿರುವರೆಂಬ ಆರೋಪದಲ್ಲಿ ಮಾನವ ಹಕ್ಕು ಹೋರಾಟಗಾರರಾದ ಸುಧಾ ಭಾರದ್ವಾಜ್, ವರವರ ರಾವ್, ವರ್ನನ್ ಗೋನ್ಸಾಲ್ವೆಸ್, ಅರುಣ್ ಫೆರೇರಾ ಮತ್ತು ಗೌತಮ್ ನವ್ಲಾಖಾರನ್ನು ಆಗಸ್ಟ್ 28ರಂದು ಬಂಧಿಸಲಾಗಿದೆ. ಆದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಕ್ಕೆ ಇನ್ನೂ ಬೆಲೆ ಇರುವುದರಿಂದ ಗ್ರಾಮ್ಸ್‍ಸ್ಕಿಯಂತೆ ಇವರನ್ನು ಜೈಲಿಗಟ್ಟಲು ಪ್ರಭುತ್ವಕ್ಕೆ ಸಾಧ್ಯವಾಗಿಲ್ಲ. ಮಾತ್ರವಲ್ಲ, ಈ ಹೋರಾಟಗಾರರ ಬಗ್ಗೆ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಗಾಂಧಿಯವರು ಕೇವಲವಾಗಿ ಮಾತಾಡಿದಾಗ ಸುಪ್ರೀಮ್ ಕೋರ್ಟು ತಡೆಯಿತು. ತರಾಟೆಗೆತ್ತಿಕೊಂಡಿತು. ಎಲ್ಲಿಯ ವರೆಗೆಂದರೆ ತುಷಾರ್ ಗಾಂಧಿ ಎಲ್ಲರ ಮುಂದೆಯೇ ಕ್ಷಮೆ ಯಾಚಿಸಿದರು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಯಸುವ ಮತ್ತು ಅದನ್ನು ಮಾರಕವಾಗಿ ಕಾಣುವ ಪ್ರಭುತ್ವಕ್ಕೂ ಕೋರ್ಟು ಚುಚ್ಚಿತು. ಮುಸೋಲಿನಿಯ ಪ್ರಭುತ್ವಕ್ಕೂ ನರೇಂದ್ರ ಮೋದಿಯವರ ಆಡಳಿತಕ್ಕೂ ನಡುವೆ ಇರುವ ವ್ಯತ್ಯಾಸ ಇದು. ಮುಸೋಲಿನಿಯ ಕಾಲದಲ್ಲಿ ಇಡೀ ವ್ಯವಸ್ಥೆ ಎಷ್ಟು ಭ್ರಷ್ಟವಾಗಿತ್ತೆಂದರೆ, ಆ ಪ್ರಭುತ್ವ ಹೇಳುವುದನ್ನೇ ನ್ಯಾಯಾಂಗವೂ ಹೇಳುತ್ತಿತ್ತು. ಮುಸೋಲಿನಿಯ ಪ್ರಾಸಿಕ್ಯೂಟರ್ ಬಯಸಿದಂತೆಯೇ ಗ್ರಾಮ್ಸ್ ಸ್ಕಿಗೆ 20 ವರ್ಷಗಳ ಶಿಕ್ಷೆಯಾಯಿತು. ಇನ್ನೂ ತರುಣರಾಗಿದ್ದರೂ ಹಲವು ಬಗೆಯ ರೋಗಗಳಿಗೆ ತುತ್ತಾಗಿ ಆತ ಜೈಲಿನಲ್ಲೇ ಮೃತಪಟ್ಟ. ಆದರೆ, ಭಾರತದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಇನ್ನೂ ಸಾಧ್ಯವಾಗಿಲ್ಲವಾದುದರಿಂದ ಇಲ್ಲಿನ ಪ್ರಭುತ್ವ ಬಯಸಿದಂತೆ ಎಲ್ಲವೂ ನಡೆಯುತ್ತಿಲ್ಲ. ಹಾಗಂತ,
ಮಾನವ ಹಕ್ಕು ಸಂಘಟನೆಗಳು, ಜನ ಚಳವಳಿಗಳು ಮತ್ತು ನಾಗರಿಕ ಹಕ್ಕು ಹೋರಾಟಗಾರರೆಲ್ಲ ಈ 2014ರ ಬಳಿಕ ದಿಢೀರ್ ಆಗಿ ಪ್ರತ್ಯಕ್ಷಗೊಂಡವರೇನಲ್ಲ. ಇಂದಿರಾಗಾಂಧಿಯವರು 1975ರಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದ ಬಳಿಕದ ಬೆಳವಣಿಗೆ ಇದು. ಮಾನವ ಹಕ್ಕುಗಳಿಗೆ ಯಾವ ಬೆಲೆಯನ್ನೂ ಕೊಡದೇ ಇಂದಿರಾ ಸರಕಾರ ಜನರನ್ನು ಬಂಧಿಸಲು ತೊಡಗಿದಾಗ ಹಕ್ಕು ಸಂರಕ್ಷಣೆಯ ಅನಿವಾರ್ಯತೆ ತಲೆದೋರಿತು. ಸಾಂವಿಧಾನಿಕವಾಗಿ ಪಡೆದುಕೊಂಡ ಹಕ್ಕುಗಳನ್ನು ಪ್ರಭುತ್ವವೊಂದು ಕಾಲ ಕಸವಾಗಿಸಿದುದಕ್ಕೆ ಪ್ರತಿಭಟನೆಯಾಗಿ ಹುಟ್ಟಿಕೊಂಡದ್ದೇ ಮಾನವ ಹಕ್ಕು ಸಂಘಟನೆಗಳು ಮತ್ತು ಹೋರಾಟಗಾರರು. ಅಂದಹಾಗೆ, ಮಾನವ ಹಕ್ಕು ಸಂಘಟನೆಗಳೇ ಇಲ್ಲದ ಮತ್ತು ಹಕ್ಕುಗಳ ಬಗ್ಗೆ ಮಾತಾಡುವವರೇ ನಾಸ್ತಿಯಾಗಿರುವ ನಿರ್ವಾತ ಸ್ಥಿತಿಯಲ್ಲಿ ನಿಮ್ಮನ್ನು ನೀವು ಕಲ್ಪಿಸಿಕೊಂಡು ಒಂದು ಕ್ಷಣ ಇದ್ದು ನೋಡಿ. ಸಿಕ್ಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡ, ಸಾವಿರಾರು ಎನ್‍ಕೌಂಟರ್ ಗಳು, ಕಸ್ಟಡಿ ಸಾವು, ಲಿಂಚಿಂಗ್ ಇತ್ಯಾದಿ ಇತ್ಯಾದಿಗಳ ಕತೆ ಏನಾಗುತ್ತಿತ್ತು? ಈಶಾನ್ಯ ಭಾರತದಲ್ಲಿ ಸೇನೆ ನಡೆಸಿರುವ ಎನ್‍ಕೌಂಟರ್ ಗಳ ಬಗ್ಗೆ ತನಿಖೆ ನಡೆಸುವಂತೆ ಮತ್ತು ಎಫ್‍ಐಆರ್ ದಾಖಲಿಸುವಂತೆ ಸುಪ್ರೀಮ್ ಕೋರ್ಟು ಆದೇಶಿಸಿರುವುದಕ್ಕೆ ಮೂಲ ಕಾರಣವಾಗಿರುವುದು ಇಲ್ಲಿನ ಮಾನವ ಹಕ್ಕು ಸಂಘಟನೆಗಳು. ಯೋಗಿ ಆದಿತ್ಯನಾಥ್‍ರ ಉತ್ತರ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್ ಗಳ ಸತ್ಯಾಸತ್ಯತೆಯನ್ನು ಮಾನವ ಹಕ್ಕು ಸಂಘಟನೆಗಳು ಸಂಶೋಧನೆಗೆ ಒಳಪಡಿಸಿ ಇತ್ತೀಚೆಗಷ್ಟೇ ವರದಿಯನ್ನು ಬಿಡುಗಡೆಗೊಳಿಸಿದುವು. ಉನ್ನಾವೋದ ಅತ್ಯಾಚಾರ ಪ್ರಕರಣವಾಗಲಿ, ಉನಾ ದೌರ್ಜನ್ಯ ಅಥವಾ ಕಥುವಾ ಪ್ರಕರಣವಾಗಲಿ - ಪ್ರಭುತ್ವದ ಶಾಮೀಲಾತಿ ಇರುವ ಇಂಥ ಸಾವಿರಾರು ಘಟನೆಗಳು ಈ ದೇಶದ ಗಮನ ಸೆಳೆದಿದ್ದರೆ ಮತ್ತು ಪ್ರಭುತ್ವಕ್ಕೇ ಮುಖಭಂಗವಾಗುವಂಥ ಸತ್ಯಗಳು ಬಹಿರಂಗಗೊಂಡಿದ್ದರೆ ಅದರ ಹಿಂದೆ ಮಾನವ ಹಕ್ಕು ಸಂಘಟನೆಗಳು ಮತ್ತು ಹೋರಾಟಗಾರರ ಬೆವರಿದೆ. ಧ್ವನಿಯಿದೆ. ಇವರ ಹೊರತು ಗುಜರಾತ್ ಹತ್ಯಾಕಾಂಡವನ್ನು ಗ್ರಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಒಂದುವೇಳೆ, ಗುಜರಾತ್ ಹತ್ಯಾಕಾಂಡದ ವೇಳೆ ಮಾನವ ಹಕ್ಕು ಸಂಘಟನೆಗಳು ಮತ್ತು ಜನಪರ ಚಿಂತಕರು ನಿಷ್ಕ್ರಿಯರಾಗಿರುತ್ತಿದ್ದರೆ ಕ್ರೌರ್ಯವೊಂದು ಖಂಡಿತಕ್ಕೂ ಸಂಪೂರ್ಣವಾಗಿ ಮುಚ್ಚಿ ಹೋಗುತ್ತಿತ್ತು. ಅಷ್ಟಕ್ಕೂ,
10 ವರ್ಷಗಳ ಹಿಂದೆ ಪ್ರಥಮ ಯು.ಪಿ.ಎ. ಆಡಳಿತದ ಅವಧಿ ಯಲ್ಲಿ ಈ ದೇಶದಲ್ಲಿ ನಡೆಯುತ್ತಿದ್ದ ಚರ್ಚೆಗಳನ್ನೊಮ್ಮೆ ಗಮನಿಸಿ.
1. ಆಹಾರದ ಹಕ್ಕು
2. ಉದ್ಯೋಗದ ಹಕ್ಕು
3. ಶಿP್ಷÀಣದ ಹಕ್ಕು
4. ಮಾಹಿತಿ ಹಕ್ಕು
5. ಭೂ ಒಡೆತನ ಹಕ್ಕು
ಇತ್ಯಾದಿ ಇತ್ಯಾದಿಗಳು. ಇವತ್ತೂ ಅದೇ ಸಂವಿಧಾನವಿದೆ. ಅದೇ ನ್ಯಾಯಾಂಗವಿದೆ. ಅದೇ ರಾಷ್ಟ್ರಧ್ವಜ, ಅದೇ ರಾಷ್ಟ್ರಗೀತೆ, ಅದೇ ಭಾರತ, ಅದೇ ಪ್ರಜಾತಂತ್ರ, ಅದೇ ಇತಿಹಾಸ, ಅವೇ ಸ್ಮಾರಕಗಳು, ಅವೇ ವಿಶ್ವವಿದ್ಯಾಲಯಗಳು, ಅವೇ ಕಾಡುಗಳು, ಅವೇ ನದಿಗಳು. ಆದರೆ ಇವತ್ತಿನ ಚರ್ಚಾ ವಿಷಯಗಳೇ ಬೇರೆ. ಲಿಂಚಿಂಗ್ ಹಕ್ಕು, ಭಾರತೀಯ ಮುಸ್ಲಿಮರಲ್ಲಿ ಇರಬೇಕಾದ ಅರ್ಹತೆಗಳು, ಪ್ರವಾಹಕ್ಕೆ ಗೋಮಾಂಸ ಸೇವನೆ ಎಷ್ಟು ಶೇಕಡಾ ಕಾರಣ, ವಿಶ್ವವಿದ್ಯಾಲಯದಲ್ಲಿ ನಕ್ಸಲ್‍ವಾದಿಗಳು, ಕಾಶ್ಮೀರದ ಪ್ರತ್ಯೇಕ ಸ್ಥಾನಮಾನ, ಪ್ರಬಲ ನಾಯಕರಾರು- ನೆಹರೋ ಪಟೇಲರೋ, ರಾಷ್ಟ್ರವಾದ.. ಮತ್ತು ಇಂಥ ಇನ್ನೂ ಅನೇಕ ವಿಷಯಗಳೇ ಪುನರಾವರ್ತನೆಗೊಂಡು ಮತ್ತೆ ಮತ್ತೆ ಚರ್ಚೆಯ ಮುನ್ನೆಲೆಗೆ ಬರುತ್ತಿದೆ. ಹಾಗಂತ, 10 ವರ್ಷಗಳ ಹಿಂದೆ ಯಾವುದೆಲ್ಲ ಚರ್ಚೆಯಲ್ಲಿದ್ದುವೋ ಅವೇ ಇವತ್ತೂ ಚರ್ಚೆಯಲ್ಲಿರಬೇಕು ಎಂದಲ್ಲ. ಇರಬಾರದು ಎಂದೂ ಅಲ್ಲ. ಆ ಸಮಸ್ಯೆಗಳು 10 ವರ್ಷಗಳ ಬಳಿಕವೂ ಹಾಗೆಯೇ ಉಳಿದುಕೊಂಡಿದ್ದರೆ ಅದು ಸಹಜ ಆಯ್ಕೆ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಳ್ಳುವ ಸಕಲ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದೆ. ಆದರೆ, ಈಗಿನ ಪ್ರಭುತ್ವ ಅವುಗಳ ಮೇಲೆ ಅಥವಾ ಅಂಥ ಗಂಭೀರ ವಿಷಯಗಳ ಮೇಲೆ ಚರ್ಚೆ ನಡೆಸುವುದನ್ನೇ ಇಷ್ಟಪಡುತ್ತಿಲ್ಲ. ಮಾತ್ರವಲ್ಲ, ಚರ್ಚೆಗೆ ಅಂಥದ್ದೊಂದು ವೇದಿಕೆ ನಿರ್ಮಾಣವಾಗದಂತೆ ತಡೆಯಲು ಸಕಲವನ್ನೂ ಮಾಡುತ್ತಿದೆ. ಬಡವರಲ್ಲಿ ಆಹಾರದ ಭದ್ರತೆಯನ್ನು ಒದಗಿಸಿದ ನರೇಗಾವನ್ನು ಈಗಿನ ಪ್ರಭುತ್ವ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಮತ್ತು ಆಧಾರ್ ಕಾರ್ಡ್‍ನ ವಿಷಯದಲ್ಲಿ ತೆಗೆದುಕೊಂಡಿರುವ ಗೊಂದಲಪೂರ್ಣ ನಿಲುವಿನಿಂದಾಗಿ ಪಡಿತರವೂ ದಕ್ಕದಂತಾಗಿದೆ. ಉದ್ಯೋಗ ಕ್ಷೇತ್ರ ವಂತೂ ನೋಟು ಅಮಾನ್ಯೀಕರಣದ ಹೊಡೆತದಿಂದ ಇನ್ನೂ ಮೇಲೆದ್ದಿಲ್ಲ. ಮಾಹಿತಿ ಹಕ್ಕಿನಡಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪದೇ ಪದೇ ತಿರಸ್ಕರಿಸಲಾಗುತ್ತಿದೆ. ಅಭಿಪ್ರಾಯ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ಆದರೆ ಇವು ಯಾವುವೂ ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅಗಂಭೀರವಾದ ವಿಷಯಗಳನ್ನು ತೇಲಿ ಬಿಡಲಾಗುತ್ತಿದೆ. ಬಹುಶಃ ಉದ್ದೇಶಪೂರ್ವಕವಾಗಿ ಹುಟ್ಟು ಹಾಕಲಾಗು ತ್ತಿದೆಯೋ ಎಂಬ ಅನುಮಾನವೂ ಕಾಡುತ್ತಿದೆ. ಈ ದೇಶದ ಶೇ. 90ರಷ್ಟು ಮಂದಿಯ ಪಾಲಿಗೆ ಇಶ್ಯೂವೇ ಅಲ್ಲದ ಮತ್ತು ಅವರ ಸಮಸ್ಯೆಗಳಿಗೆ ಯಾವ ರೀತಿಯಲ್ಲೂ ಸಂಬಂಧಿಸದ ವಿಷಯಗಳು ಗಂಭೀರ ವಿಷಯಗಳೆಂಬಂತೆ ಚರ್ಚೆಗೊಳಗಾಗುತ್ತಿದೆ. ಪ್ರಭುತ್ವವನ್ನು ಪ್ರತಿನಿಧಿಸುವ ವಿವಿಧ ಮುಖಂಡರು ಇಂಥ ವಿಷಯಗಳ ಮೇಲೆ ಪ್ರತಿಕ್ರಿಯೆ ನೀಡುತ್ತಾರೆ. ಟಿ.ವಿ. ಡಿಬೆಟ್‍ಗಳೂ ನಡೆಯುತ್ತವೆ. ಮೋದಿಯವರ ಹತ್ಯಾ ಸಂಚು ಕೂಡಾ ಇದರಲ್ಲಿ ಒಂದು. ಗಂಭೀರ ಸಮಸ್ಯೆಗಳು ಚರ್ಚೆಯಾಗದಂತೆ ತಡೆಯುವುದಕ್ಕಾಗಿ ಆಕರ್ಷಕ ಸುದ್ದಿಗಳನ್ನು ಸೃಷ್ಟಿಸಲಾಗುತ್ತಿದೆಯೇ? ಅರ್ಬನ್ ನಕ್ಸಲ್ ಅನ್ನುವ ಪದಪುಂಜವೂ ಇವರದೇ ಲ್ಯಾಬ್‍ನಲ್ಲಿ ಹುಟ್ಟಿಕೊಂಡ ಪದವೇ? ಈ ಮೊದಲೆಂದೂ ಬಳಕೆಗೆ ಬಾರದ ಈ ಪದಪುಂಜ ಹೇಗೆ ಸೃಷ್ಟಿಯಾಯಿತು?
ಪ್ರಭುತ್ವವನ್ನು ಪ್ರಶ್ನಿಸುವುದಕ್ಕೆ ಅವಕಾಶ ಇಲ್ಲದ ಕಡೆ ಕ್ರಾಂತಿ ಸಂಭವಿಸುತ್ತದೆ ಎಂದು ಮುಸೋಲಿನಿಗೆ ಆಂಟನಿಯೋ ಗ್ರಾಮ್ಸ್ ಸ್ಕಿ ವಿವರಿಸಿದ್ದ. 1975ರಲ್ಲಿ ಇಂದಿರಾ ಗಾಂಧಿಯವರು ಪ್ರಶ್ನೆಯ ದಮನಕ್ಕೆ ಮುಂದಾಗಿ ಆ ಬಳಿಕ ಅದರ ಪರಿಣಾಮವನ್ನು ಅನುಭವಿಸಿದ್ದರು. ಇದೀಗ ಕೇಂದ್ರ ಸರಕಾರ ಪ್ರಶ್ನೆಯ ವಿರುದ್ಧ ಸಮರ ಸಾರಿದೆ. ಬಹುಶಃ ಮುಂದಿನ ಲೋಕಸಭಾ ಚುನಾವಣೆ ಇದಕ್ಕೆ ಉತ್ತರ ಹೇಳುತ್ತೋ ಏನೋ?
ಗ್ರಾಮ್‍ಸ್ಕಿಯ ಮಾತು ನಿಜವಾಗುತ್ತೋ ಏನೋ?
No comments:
Post a Comment