Tuesday, September 4, 2018

ಕ್ಷಮಿಸಿ, ನಮ್ಮಿಂದ ತಪ್ಪಾಗಿದೆ..

  
  1960 ಮಾರ್ಚ್ 2ರಂದು ದಕ್ಷಿಣ ಆಫ್ರಿಕಾದ ಶಾರ್ಪ್‍ವಿಲ್ಲೆ  ಪಟ್ಟಣದಲ್ಲಿ ಪ್ರತಿಭಟನೆಯೊಂದು ನಡೆಯುತ್ತಿತ್ತು. ಆಗಿನ್ನೂ ದಕ್ಷಿಣ ಆಫ್ರಿಕಾವು ವರ್ಣಭೇದ ನೀತಿಯಿಂದ ಹೊರಬಂದಿರಲಿಲ್ಲ. ಬಿಳಿಯರು ಶ್ರೇಷ್ಠರಾಗಿಯೂ ಕರಿಯರು ಕನಿಷ್ಠರಾಗಿಯೂ ಪರಿ ಗಣಿತವಾಗಿದ್ದ ಕಾಲ. ಶಾರ್ಪ್ ವಿಲ್ಲೆಯಲ್ಲಿ ಸುಮಾರು 7 ಸಾವಿರ ಕರಿಯರು ಸೇರಿಕೊಂಡಿದ್ದರು. ಬಿಳಿಯ ಸರಕಾರ  ಜಾರಿಗೊಳಿಸಿದ್ದ ‘ಪಾಸ್’ ನಿಯಮವನ್ನು ವಿರೋಧಿಸುವುದು ಪ್ರತಿಭಟನೆಯ ಉದ್ದೇಶವಾಗಿತ್ತು. ಬಿಳಿಯರಲ್ಲದ ಕಾರ್ಮಿಕರನ್ನು ಮತ್ತು ವಲಸಿಗರನ್ನು ಪ್ರತ್ಯೇಕವಾಗಿ ಗುರುತಿಸುವುದಕ್ಕಾಗಿ ಸರಕಾರ ಪಾಸ್ ನಿಯಮವನ್ನು ಜಾರಿಗೊಳಿಸಿತ್ತು. ಕರಿಯರನ್ನು ದ್ವಿತೀಯ ದರ್ಜೆಯ ನಾಗರಿಕರಂತೆ ಕಾಣುವ ಈ ಪಾಸ್ ನಿಯಮದ ವಿರುದ್ಧ ಶಾರ್ಪ್‍ವಿಲ್ಲೆಯ ಪೊಲೀಸು ಠಾಣೆಯ ಎದುರು ಕರಿಯರು ಪ್ರತಿಭಟಿಸುತ್ತಿದ್ದರು. ಪೊಲೀಸರು ಗೋಲಿಬಾರು ನಡೆಸಿದರು. 69 ಮಂದಿ ಸಾವಿಗೀಡಾದರು. ಓಡುತ್ತಿದ್ದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ ಅನ್ನುವುದಕ್ಕೆ ಸಾವಿಗೀಡಾದವರ ಬೆನ್ನಿನಲ್ಲಿದ್ದ ಗುರುತುಗಳೇ ಪುರಾವೆಯಾಗಿದ್ದುವು. ವಿಶೇಷ ಏನೆಂದರೆ, 1888ರಲ್ಲಿ ಪ್ರಾರಂಭಗೊಂಡ ಮತ್ತು ಜಾಗತಿಕವಾಗಿಯೇ ಅತ್ಯಂತ ಗೌರವಿಸಲ್ಪಡುವ ಅಮೇರಿಕದ ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯು ಈ ಘಟನೆಯ ಬಗ್ಗೆ ಬರೆದದ್ದು 1962ರಲ್ಲಿ. ಮಾತ್ರವಲ್ಲ, ಪ್ರಕಟವಾದ ಬರಹದಲ್ಲೂ ಜನಾಂಗೀಯ ತಾರತಮ್ಯದ ಕಟು ವಾಸನೆಯಿತ್ತು. ಶಾರ್ಪ್‍ವಿಲ್ಲೆ ಘಟನೆಯನ್ನು ಕೇವಲವಾಗಿ ಪರಿಗಣಿಸಿದ ರೀತಿಯಲ್ಲಿ ವರದಿಯನ್ನು ತಯಾರಿಸಲಾಗಿತ್ತಲ್ಲದೇ, ಕರಿಯರು ಗುಲಾಮರಂತೆ ದುಡಿಯುವ ಮತ್ತು ನರ್ತಿಸುವ ಫೋಟೋಗಳನ್ನು ಪ್ರಕಟಿಸಲಾಗಿತ್ತು. ಕಪ್ಪು ವರ್ಣೀಯರ ಧ್ವನಿಗೆ ಯಾವ ಅವಕಾಶವನ್ನೂ ವರದಿಯಲ್ಲಿ ನೀಡಲಾಗಿರಲಿಲ್ಲ..
ಇಂಥದ್ದೊಂದು ವಿಮರ್ಶೆ ಪ್ರಕಟವಾಗಿರುವುದು ಈ ಬಾರಿಯ ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯಲ್ಲಿ. ಎಪ್ರಿಲ್ 2018ರ ಇಡೀ ಸಂಚಿಕೆಯನ್ನು ಅದು ಸ್ವ ಅವಲೋಕನಕ್ಕೆ ಮೀಸಲಿಟ್ಟಿದೆ. ಬಹುಶಃ ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯ ಹೊರತಾಗಿ ಇನ್ನಾವ ಪತ್ರಿಕೆಯೂ ಈ ಬಗೆಯ ಧೈರ್ಯ ತೋರುವ ಸಾಧ್ಯತೆ ಬಹಳ ಬಹಳ ಕಡಿಮೆ. 1888ರಲ್ಲಿ ಪತ್ರಿಕೆ ಪ್ರಾರಂಭಗೊಂಡಂದಿನಿಂದ ಈ 2018ರ ನಡುವೆ ಸುಮಾರು 130 ವರ್ಷಗಳೇ ಕಳೆದುಹೋಗಿವೆ. ಇವತ್ತು ಈ ಪತ್ರಿಕೆ 172 ರಾಷ್ಟ್ರ ಗಳಲ್ಲಿ ಲಭ್ಯ ಇದೆ. 42 ಭಾಷೆಗಳಲ್ಲಿ ಪ್ರಕಟವಾಗುತ್ತಿದೆ. ಪ್ರತಿ ತಿಂಗಳು ಇದರ 30 ಮಿಲಿಯನ್ ಪ್ರತಿಗಳು ಮಾರಾಟವಾಗುತ್ತಿವೆ. ಫೋಟೋಗಳನ್ನು ಬಣ್ಣದಲ್ಲಿ ಪ್ರಕಟಿಸಿದ ಮೊದಲ ಪತ್ರಿಕೆ ನ್ಯಾಶನಲ್ ಜಿಯಾಗ್ರಫಿ. ಇತ್ತೀಚೆಗೆ ಪತ್ರಿಕೆಯ ಸಂಪಾದಕಿಯಾಗಿ ನೇಮಕಗೊಂಡ ಸುಸಾನ್ ಗೋಲ್ಡ್ ಬರ್ಗ್ ಅವರು ಕಳೆದ 130 ವರ್ಷಗಳಲ್ಲಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ, ವರದಿ, ಫೋಟೋ ಇತ್ಯಾದಿಗಳೆಲ್ಲವನ್ನೂ ಮರುಪರಿಶೀಲನೆಗೆ ಒಳಪಡಿಸುವ ಅಭೂತಪೂರ್ವ ನಿರ್ಧಾರವನ್ನು ಕೈಗೊಂಡರು. ವಿವಿಧ ಭಾಷೆ, ವರ್ಣ, ವರ್ಗ, ದೇಶಗಳ ಮೇಲೆ ಮತ್ತು ಅಲ್ಲಿನ ಬೆಳವಣಿಗೆಗಳ ಸುತ್ತ ಅಧ್ಯಯನಾತ್ಮಕ ಬರಹವನ್ನು ಪ್ರಕಟಿಸುವ ಈ ಪತ್ರಿಕೆಯು, ಈ ಎಲ್ಲ ಸಂದರ್ಭಗಳಲ್ಲಿ ಸಮಚಿತ್ತವನ್ನು ಕಾಪಾಡಿಕೊಂಡಿದೆಯೇ ಅನ್ನುವ ಪರಿಶೀಲನೆಗೆ ಮುಂದಾದರು. ಅದಕ್ಕಾಗಿ ವರ್ಜೀನಿಯ ವಿಶ್ವವಿದ್ಯಾನಿಲಯದಲ್ಲಿ ಫೋಟೋಗ್ರಫಿ ಮತ್ತು ಆಫ್ರಿಕನ್ ಇತಿಹಾಸದ ಪ್ರೊಫೆಸರ್ ಆಗಿರುವ ಜಾನ್ ಎಡ್ವಿನ್ ಮಾಸನ್ ಅವರನ್ನು ನೇಮಿಸಿದರು. ಅವರು ಹಳೇ ಸಂಚಿಕೆಗಳನ್ನು ತಿರುವುತ್ತಾ ತಿರುವುತ್ತಾ ಆಘಾತಕಾರಿ ಅಂಶಗಳನ್ನು ಪತ್ತೆ ಹಚ್ಚಿದರು. ಸಂಪಾದಕೀಯ ಮಂಡಳಿಯ ಮುಂದಿಟ್ಟರು. ಅವರು ಪತ್ತೆಹಚ್ಚಿದ ತಪ್ಪುಗಳು ಎಷ್ಟು ಪ್ರಬಲವಾಗಿತ್ತೆಂದರೆ, 2018ರ ಎಪ್ರಿಲ್ ಸಂಚಿಕೆಯನ್ನು ಬರೇ ಕ್ಷಮಾಪಣೆಗಾಗಿಯೇ ಪತ್ರಿಕೆ ಮೀಸಲಿಟ್ಟಿತು. THE RACE ISSUE- APRIL 2018 – (ಜನಾಂಗೀಯತೆಯ ಬಗೆಗಿನ ಸಂಚಿಕೆ) ಎಂಬ ಶೀರ್ಷಿಕೆಯಲ್ಲಿ ಹೊರಬಂದ ಈ ಸಂಚಿಕೆಯಲ್ಲಿ ಹಳೆ ಪ್ರಮಾದಗಳ ಇಂಚಿಂಚು ವಿವರಗಳಿವೆ. ಅಲ್ಲದೇ, ಹಳೆ ಪ್ರಮಾದಗಳನ್ನು ಈ ವರ್ಷದ ಉದ್ದಕ್ಕೂ ಸರಣಿ ರೂಪದಲ್ಲಿ ಪ್ರಕಟಿಸಿ ಪಶ್ಚಾತ್ತಾಪ ಪಡುವುದಾಗಿ ಪತ್ರಿಕೆ ಘೋಷಿಸಿಕೊಂಡಿದೆ. ಮುಸ್ಲಿಮರು, ಲ್ಯಾಟಿನ್ ಅಮೇರಿಕನ್ನರು, ಏಶಿಯನ್ನರು ಮತ್ತು ಅಮೇರಿಕನ್ ಮೂಲ ನಿವಾಸಿಗಳ ಬಗ್ಗೆ ಪತ್ರಿಕೆಯಲ್ಲಿ ಈ ಹಿಂದೆ ಪ್ರಕಟವಾದ ಲೇಖನಗಳನ್ನು ಮರುಪರಿಶೀಲನೆಗೆ ಒಳಪಡಿಸುವುದಾಗಿ ಪತ್ರಿಕೆ ಹೇಳಿಕೊಂಡಿದೆ. ‘For Decades, Our Coverage Was Facist. To Rise Above Our Past, We Must Acknowledge It’ (ನಮ್ಮ ಬರಹಗಳು ಜನಾಂಗೀಯ ತಾರತಮ್ಯದಿಂದ ಕೂಡಿದ್ದುವು. ದಶಕಗಳಿಂದ ಆದ ಈ ತಪ್ಪುಗಳಿಂದ ಹೊರಬರಬೇಕಾದರೆ, ತಪ್ಪನ್ನು ಒಪ್ಪಿಕೊಳ್ಳಲೇಬೇಕಾಗಿದೆ) ಎಂಬ ಶೀರ್ಷಿಕೆಯಲ್ಲಿ ಈ ತಿಂಗಳ ಸಂಚಿಕೆಯಲ್ಲಿ ಸಂಪಾದಕಿ ಸೂಸನ್ ಗೋಲ್ಡ್ ಬರ್ಗ್ ಅವರು ಕಣ್ಣು ತೆರೆಸುವ ಸಂಪಾದಕೀಯ ಬರೆದಿದ್ದಾರೆ.
ಒಂದು ಘಟನೆ
      ಹೈಲೆ ಸೆಲಾಸ್ಸಿಯವರು ಇತಿಯೋಪಿಯಾದ ಚಕ್ರವರ್ತಿಯಾಗಿ ಅಧಿಕಾರ ಸ್ವೀಕರಿಸುವ ಸಮಾರಂಭ 1930 ನವೆಂಬರ್ 2ರಂದು ಏರ್ಪಾಡಾಗುತ್ತದೆ. ಇತಿಯೋಪಿಯಾ ಎಂಬುದು ಕರಿಯರೇ ಇರುವ ದೇಶ. ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯು ತನ್ನ ವರದಿಗಾರ ಮತ್ತು ಫೋಟೋಗ್ರಾಫರ್ ರನ್ನು ಇತಿಯೋಪಿಯಾಕ್ಕೆ ಕಳುಹಿಸಿಕೊಡುತ್ತದೆ. ಹೈಲೆ ಸೆಲಾಸ್ಸಿಯವರ ಪದಗ್ರಹಣವನ್ನು ಚಿತ್ರೀಕರಿಸುವುದು ಈ ಪತ್ರಕರ್ತರ ಹೊಣೆಗಾರಿಕೆಯಾಗಿತ್ತು. ಜುದಾ ಎಂಬ ಬುಡಕಟ್ಟಿಗೆ ಸೇರಿದ್ದ ಹೈಲೆ ಸೆಲಾಸ್ಸಿಯವರು ಸಿಂಹ ಎಂದೇ ತನ್ನ ಬುಡಕಟ್ಟಿನವರಲ್ಲಿ ಗುರುತಿಸಿಕೊಂಡವರಾಗಿದ್ದರು. ಇತಿಯೋಪಿಯನ್ ಬುಡಕಟ್ಟು ಜನಾಂಗದ ಸಂಪ್ರದಾಯದಂತೆ ಪದಗ್ರಹಣ ನಡೆಯಿತು. ಪದಗ್ರಹಣದ ವೇಳೆ ಪುರೋಹಿತರು ಇದ್ದರು. ಡೋಲು, ವಾದ್ಯಗಳು ವಿಶೇಷ ಆಕರ್ಷಣೆಯಾಗಿತ್ತು. ಜಿಯಾಗ್ರಫಿ ಪತ್ರಿಕೆಯ ಫೋಟೋಗ್ರಾಫರ್ ಎಲ್ಲವನ್ನೂ ಸೆರೆ ಹಿಡಿದರು. ಹೈಲೆ ಸೆಲಾಸ್ಸಿಗೆ ಸಂಬಂಧಿಸಿ ಸುಮಾರು 83 ಫೋಟೋಗಳು ಮತ್ತು 14000 ಪದಗಳುಳ್ಳ ಲೇಖನವು ಪತ್ರಿಕೆಯಲ್ಲಿ ಪ್ರಕಟವಾದುವು. ಪ್ರಶ್ನೆ ಏನೆಂದರೆ, ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯು ಆಫ್ರಿಕನ್ ರಾಷ್ಟ್ರವೊಂದರ ಕರಿಯ ವ್ಯಕ್ತಿಯ ಪದಗ್ರಹಣದ ಮೇಲೆ ಇಷ್ಟೊಂದು ಆಸಕ್ತಿ ತಾಳಿದುದು ಯಾಕಾಗಿ ಎಂಬುದು? ಒಂದು ವೇಳೆ, 1930ರ ಆ ಕಾಲದಲ್ಲಿ ಕರಿಯರ ಸಂತೋಷದ ಸಮಾರಂಭವು ಇತಿಯೋಪಿಯಾದ ಬದಲು ಅಮೇರಿಕದಲ್ಲಿ ನಡೆದಿರುತ್ತಿದ್ದರೆ ಅದು ವರದಿಯಾಗುತ್ತಿತ್ತೇ ಅನ್ನುವ ಪ್ರಶ್ನೆಯೂ ಜಾನ್ ಎಡ್ವಿನ್ ಮಾಸನ್ ಅವರನ್ನು ತೀವ್ರವಾಗಿಯೇ ಕಾಡಿತು. ನಿಜವಾಗಿ, 1930ರ ಕಾಲದಲ್ಲಿ ಕರಿಯರನ್ನು ಅಮೇರಿಕದಲ್ಲಿ ತುಚ್ಛವಾಗಿ ಕಾಣಲಾಗುತ್ತಿತ್ತು. ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯ ಸದಸ್ಯರಾಗುವುದಕ್ಕೆ ಕರಿಯ ಅಮೇರಿಕನ್ನರಿಗೆ 1940ರ ವರೆಗೆ ನಿಷೇಧವಿತ್ತು ಎಂದು  ‘Explorers House: National Geographic and the World it Made’ ಎಂಬ ಕೃತಿಯಲ್ಲಿ ರಾಬರ್ಟ್ ಎಂ. ಪೂಲೆಯವರು ಬರೆದಿರುವುದನ್ನು ಮಾಸನ್ ನೆನಪಿಸಿಕೊಂಡರು. ಹೈಲೆಯವರು ಅಮೇರಿಕದಲ್ಲಿ ವಾಸಿಸಿರುತ್ತಿದ್ದರೆ ವಾಷಿಂಗ್ಟನ್ ಡಿಸಿಗೆ ಪ್ರವೇಶವೇ ಸಿಗುತ್ತಿರಲಿಲ್ಲ ಎಂಬುದು ರಾಬರ್ಟ್ ಪೂಲೆಯವರ ಬರಹದಿಂದ ಸ್ಪಷ್ಟವಾಗುತ್ತಿತ್ತು. ಇಷ್ಟಿದ್ದೂ, ಪತ್ರಿಕೆಗೆ ಹೈಲೆ ಸೆಲಾಸ್ಸಿಯವರ ಪದಗ್ರಹಣದ ಮೇಲೆ ಯಾಕೆ ಆಸಕ್ತಿ ಮೂಡಿತು ಅನ್ನುವುದು ಖಂಡಿತ ಕುತೂಹಲಕರ. ಮಾಸನ್ ಕಂಡು ಕೊಂಡ ಸತ್ಯ ಏನೆಂದರೆ, ವರದಿಗಾರರನ್ನು ಕಳುಹಿಸಿಕೊಟ್ಟಿರುವುದರ ಹಿಂದಿನ ಉದ್ದೇಶ- ಕರಿಯರನ್ನು ರಸವತ್ತಾಗಿ ಬಿಳಿ ಓದುಗರಿಗೆ ಉಣ ಬಡಿಸುವುದಾಗಿತ್ತು. ಅವರ ಸಂಸ್ಕೃತಿ, ಸಂಪ್ರದಾಯ, ನರ್ತನಗಳನ್ನು ಕೇವಲವಾಗಿ ಮತ್ತು ಮನೋರಂಜನೆಯ ಧಾಟಿಯಲ್ಲಿ ಕಟ್ಟಿಕೊಡುವುದೇ ಅವರಿಗೆ ಮುಖ್ಯವಾಗಿತ್ತು. ಒಂದು ರೀತಿಯಲ್ಲಿ, ನ್ಯಾಶನಲ್ ಜಿಯಾಗ್ರಫಿ ಪತ್ರಿಕೆಯು 1970ರ ವರೆಗೆ ಕಪ್ಪು ಜನರನ್ನು ತೀವ್ರವಾಗಿ ನಿರ್ಲಕ್ಷಿಸಿತು. ಅಮೇರಿಕದ ಬಿಳಿಯರ ಕಣ್ಣಿನಿಂದ ಕರಿಯರನ್ನು ವೀಕ್ಷಿಸಿತು. ಅದರಲ್ಲಿ ಪ್ರಕಟವಾಗುತ್ತಿದ್ದ ಫೋಟೋಗಳು ಬಿಳಿಯರ ಮೇಲ್ಮೆಯನ್ನು ಸಾರುವ ಮತ್ತು ಕರಿಯರನ್ನು ಅನಾಗರಿಕರಂತೆ ಬಿಂಬಿಸುವ ರೀತಿಯಲ್ಲಿದ್ದುವು. 1916ರಲ್ಲಿ ಪ್ರಕಟವಾದ ಒಂದು ಸಂಚಿಕೆಯಲ್ಲಿ ಆಸ್ಟ್ರೇಲಿಯನ್ ಆದಿವಾಸಿಗಳ ಕುರಿತಂತೆ ಬರೆಯಲಾಗಿತ್ತು. ಆದಿವಾಸಿಗಳಾದ ಇಬ್ಬರು ಹೆಣ್ಣು ಮತ್ತು ಗಂಡಿನ ಅರೆನಗ್ನ ಫೋಟೋವನ್ನು ಮುದ್ರಿಸಿ ಅದರ ಕೆಳಗೆ ಹೀಗೆ ಶೀರ್ಷಿಕೆಯನ್ನು ಕೊಡಲಾಗಿತ್ತು,
  
  ‘ದಕ್ಷಿಣ ಆಸ್ಟ್ರೇಲಿಯಾದ ಕಪ್ಪು ಸಂಗಾತಿಗಳು: ಈ ಅಸಂಸ್ಕೃತರ ಬೌದ್ಧಿಕ ಮಟ್ಟ ಎಲ್ಲ ಮಾನವರ ಪೈಕಿ ಅತ್ಯಂತ ಕನಿಷ್ಠ’ (South Australian Black Fellows: These Savages Rank Lowest in Intelligence of all Human Beings ). ಸಾಮಾನ್ಯವಾಗಿ ಕರಿಯರು ಕನಿಷ್ಠ ಬಟ್ಟೆಯಲ್ಲಿ ಮತ್ತು ಅರೆನಗ್ನರಾಗಿ ಪತ್ರಿಕೆಯಲ್ಲಿ ಕಾಣಿಸಿಕೊಂಡದ್ದೇ ಹೆಚ್ಚು. ಅದೇವೇಳೆ, ಅಮೇರಿಕದ ಬಿಳಿ ಮಹಿಳೆ ಮತ್ತು ಪುರುಷರನ್ನು ಪೂರ್ಣ ಉಡುಗೆಯಲ್ಲಿ ಆಕರ್ಷಕವಾಗಿ ಮುದ್ರಿಸಲಾಗುತ್ತಿತ್ತು.Beautiful Pacific Island Women ಎಂಬ ಶೀರ್ಷಿಕೆಯಲ್ಲಿ ಮುದ್ರಿಸಲಾದ ಅಮೇರಿಕನ್ ಬಿಳಿ ಮಹಿಳೆಯ ಫೋಟೋದ ಪಕ್ಕವೇ ಅರೆ ತೆರೆದ ಕಪ್ಪು ವರ್ಣೀಯ ಮಹಿಳೆಯ ಫೋಟೋ ವನ್ನು ಪ್ರಕಟಿಸಲಾಗಿತ್ತು. 1970ರ ವರೆಗೆ ಪತ್ರಿಕೆಯು ಪ್ರಕಟಿಸಿದ ಕರಿಯರ ಫೋಟೋಗಳು ಅತ್ಯಂತ ತಾರತಮ್ಯದಿಂದ ಕೂಡಿತ್ತು. ರೈಲು, ವಾಹನ ಅಥವಾ ಫ್ಯಾಕ್ಟರಿಗಳಲ್ಲಿ ಅವರು ಇರುವ ಫೋಟೋವನ್ನು ಪತ್ರಿಕೆ ಪ್ರಕಟಿಸಿಯೇ ಇಲ್ಲ. ನಗರಗಳಲ್ಲಿ ಅವರ ಉಪಸ್ಥಿತಿಯನ್ನು ಹೇಳುವ ಒಂದೇ ಒಂದು ಫೋಟೋ ಪ್ರಕಟ ವಾಗಿಲ್ಲ. ಅದರ ಬದಲು ನೂರಾರು ವರ್ಷಗಳ ಹಿಂದೆ ತಮ್ಮ ಪೂರ್ವಜರು ಬದುಕುತ್ತಿದ್ದ ಅದೇ ಜಾಗದಲ್ಲಿ ಮತ್ತು ಅದೇ ರೀತಿಯಲ್ಲಿ ಹಳಬರಂತೆ ಬದುಕುತ್ತಿರುವ ಫೋಟೋಗಳು ಪ್ರಕಟ ವಾಗಿವೆ. 1962ರ ಒಂದು ಸಂಚಿಕೆಯಲ್ಲಿ ತೈಮೂರ್ ದ್ವೀಪದ ಮೂಲ ನಿವಾಸಿಗಳು ಪತ್ರಿಕೆಯ ಫೋಟೋಗ್ರಾಫರ್ ಫ್ರಾಂಕ್ ಸ್ಟ್ರೇಡರ್‍ರ ಸುತ್ತ ನೆರೆದಿರುವ ಫೋಟೋವೊಂದು ಪ್ರಕಟವಾಗಿದೆ. ಆತ ಕ್ಯಾಮರಾವನ್ನು ಆ ಜನರಿಗೆ ತೋರಿಸಿ ವಿವರಿಸುವ ಫೋಟೋ. ಆ ಆದಿವಾಸಿಗಳು ಭಾರೀ ಕುತೂಹಲದಿಂದ ಅದನ್ನು ವೀಕ್ಷಿಸುತ್ತಿದ್ದರು. ಪಾಶ್ಚಿಮಾತ್ಯ ನಾಗರಿಕ ಜಗತ್ತು ಅನಾಗರಿಕ ಆದಿ ವಾಸಿಗಳಿಗೆ ತಂತ್ರಜ್ಞಾನವನ್ನು ಪರಿಚಯಿಸುವ ರೀತಿಯಲ್ಲಿ ಅದನ್ನು ಪತ್ರಿಕೆಯಲ್ಲಿ ಬಿಂಬಿಸಲಾಗಿತ್ತು. ಪಾಶ್ಚಿಮಾತ್ಯರು ತುಂಬಾ ಮುಂದು ವರಿದವರೆಂಬ ಭಾವವನ್ನು ಪ್ರತಿ ಲೇಖನ ಮತ್ತು ಫೋಟೋಗಳು ಸಾರುವ ರೀತಿಯಲ್ಲಿದ್ದುವು. ಅದೇ ವೇಳೆ, ಕರಿಯರ ಜಗತ್ತನ್ನು ಬದಲಾಗದ ಮತ್ತು ಹಿಂದುಳಿದ ಪ್ರದೇಶವಾಗಿ ಬಿಂಬಿಸುವುದೂ ಪದೇ ಪದೇ ನಡೆಯುತ್ತಿದ್ದುವು. ಕರಿಯರನ್ನು ಅರೆನಗ್ನರಾಗಿ, ಅನಾಗರಿಕರನ್ನಾಗಿ ಮತ್ತು ಬೇಟೆಗಾರರನ್ನಾಗಿ ತೋರಿಸುವ ಫೋಟೋಗಳು ಪತ್ರಿಕೆಯಲ್ಲಿ ರಾಶಿ ರಾಶಿಯಾಗಿ ಪ್ರಕಟವಾದುವು. ಹೀಗೆ, ಬಿಳಿಯರ ಶ್ರೇಷ್ಠತೆ ಮತ್ತು ಕರಿಯರ ಕನಿಷ್ಠತೆಯನ್ನು ಪತ್ರಿಕೆಯು ಸುಮಾರು 90 ವರ್ಷಗಳ ವರೆಗೆ ಒಂದು ಧೋರಣೆ ಯಾಗಿ ಸ್ವೀಕರಿಸಿ ಪ್ರದರ್ಶಿಸುತ್ತಾ ಬಂದಿದೆ ಎಂಬುದನ್ನು ನ್ಯಾಶನಲ್ ಜಿಯಾಗ್ರಫಿಯ ಸಂಪಾದಕಿ ಸೂಸನ್ ಗೋಲ್ಡ್ ಬರ್ಗ್ 2018ರ ಎಪ್ರಿಲ್ ಸಂಚಿಕೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ವಿಷಾದಿಸಿದ್ದಾರೆ. ಗತಕಾಲದಲ್ಲಿ ಮಾಡಿರಬಹುದಾದ ತನ್ನದೇ ತಪ್ಪುಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಬಹಿರಂಗಪಡಿಸುತ್ತಾ  ಸುಧಾರಣೆಗೆ ಪಣ ತೊಡುವ ಸೂಚನೆ ನೀಡಿದ್ದಾರೆ. ಬಹುಶಃ, ಪತ್ರಿಕಾ ಜಗತ್ತಿನಲ್ಲಿಯೇ ಇದೊಂದು ಅಪೂರ್ವ ಬೆಳವಣಿಗೆ. ಸ್ವ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಹೇಳುತ್ತಾ ಪಶ್ಚಾತ್ತಾಪ ಪಡುವುದು ಪತ್ರಿಕೆಯೊಂದರ ಮಟ್ಟಿಗೆ ಅತ್ಯಂತ ಸವಾಲಿನದ್ದು. ಆದ್ದರಿಂದಲೇ ಸಂಪಾದಕಿ ಸೂಸನ್ ಗೋಲ್ಡ್ ಬರ್ಗ್‍ರ ಬಗ್ಗೆ ಹೆಮ್ಮೆಯೆನಿಸುತ್ತದೆ. ಅಂದಹಾಗೆ,
  
   ನೀಗ್ರೋ ಗುಲಾಮರಾಗಿದ್ದ ಬಿಲಾಲ್ ಎಂಬವರನ್ನು ತನ್ನ ಭುಜದಲ್ಲಿ ನಿಲ್ಲಿಸಿ ಪ್ರಥಮ ಅದಾನ್(ಬಾಂಗ್) ಕೊಡಿಸಿದ್ದ 7ನೇ ಶತಮಾನದ ಪ್ರವಾದಿ ಮುಹಮ್ಮದ್(ಸ) ಯಾಕೋ ಈ ಸಂದರ್ಭದಲ್ಲಿ ನೆನಪಾದರು.






No comments:

Post a Comment