Tuesday, September 4, 2018

ಹುಲಿ-ಇಲಿಗಳ ನಡುವೆ...

  
         ಮೊನ್ನೆ ಫೇಸ್‍ಬುಕ್ ಗೆಳೆಯನೋರ್ವನನ್ನು ಭೇಟಿಯಾದೆ. ವಯಸ್ಸಿಗೆ ಹೋಲಿಸಿದರೆ ನನಗಿಂತ ಕಿರಿಯವ. ಫೇಸ್‍ಬುಕ್‍ನಲ್ಲಿ ಆತ ಹಾಕುತ್ತಿದ್ದ ಪೋಸ್ಟ್ ಮತ್ತು ಬೇರೆ ಬರಹಗಳಿಗೆ ವ್ಯಕ್ತಪಡಿಸುತ್ತಿದ್ದ ಪ್ರತಿಕ್ರಿಯೆಯ ಅರಿವಿದ್ದ ನನಗೆ ಆತ ಈತನೇನಾ ಅನ್ನುವಷ್ಟು ದಂಗಾಗಿ ಹೋದೆ. ಸಾಮಾಜಿಕ ಜಾಲತಾಣಗಳಲ್ಲಿ ಹುಲಿಯಂತೆ ಆರ್ಭಟಿಸುತ್ತಿದ್ದವ ಎದುರು ಸಿಕ್ಕಾಗ ಇಲಿಯಂತೆ ಗೋಚರಿಸಿದ. ಇದು ಈತನ ನಿಜರೂಪವೋ ಅಥವಾ ಸಾಂದರ್ಭಿಕ ಅಭಿವ್ಯಕ್ತವೋ ಅನ್ನುವ ಅನುಮಾನವೂ ಉಂಟಾಯಿತು. ಒಂದಷ್ಟು ಹೊತ್ತು ಮಾತುಕತೆಯೂ ನಡೆಯಿತು. ಜಾಲತಾಣಗಳಲ್ಲಿ ಕಂಡಂತೆ ಆತ ಇರಲಿಲ್ಲ. ಭಾಷೆಯೂ ಚೆನ್ನಾಗಿತ್ತು. ವಿಚಾರಗಳ ಅಭಿವ್ಯಕ್ತಿಯಲ್ಲಿ ಅಪ್ರಬುದ್ಧತೆಯೂ ಇತ್ತು. ಮುಖ್ಯವಾಗಿ, ಆವೇಶದ ಲವಲೇಷವೂ ಇರಲಿಲ್ಲ. ಇದು ಹೇಗೆ ಸಾಧ್ಯ ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡತೊಡಗಿತು.
   
 ಒಂದು ರೀತಿಯಲ್ಲಿ, ಸಾಮಾಜಿಕ ಜಾಲತಾಣವೆಂಬುದು ಸಂಪಾದಕ ಇಲ್ಲದ ಮಾಧ್ಯಮ. ಈ ಮಾಧ್ಯಮ ಇವತ್ತು ನಾಗರಿಕರಿಗೆ ಎಷ್ಟು ಅಪರಿಮಿತ ಸ್ವಾತಂತ್ರ್ಯ ಮತ್ತು ಅವಕಾಶವನ್ನು ನೀಡಿದೆಯೆಂದರೆ ಸ್ಥಾಪಿತ ಮಾಧ್ಯಮ ವ್ಯವಸ್ಥೆಯನ್ನೇ ಬೆದರಿಸುವಷ್ಟು. ಇವತ್ತು, ಕೆಲವು ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳ ಕೊನೆಯುಸಿರಿನಲ್ಲಿ ಸಾಮಾಜಿಕ ಜಾಲತಾಣಗಳಿಗೆ ಮುಖ್ಯ ಪಾತ್ರ ಇದೆ. ಈ ಹಿಂದೆ ಪ್ರತಿಯೊಂದೂ ಸಂಪಾದಕನ ಮರ್ಜಿಯನ್ನು ಅವಲಂಬಿಸಿತ್ತು. ಲೇಖನ, ಕಥೆ, ಕವನ, ಪ್ರಬಂಧ, ವರದಿ ಎಲ್ಲವೂ ಸಂಪಾದಕರ ಮೂಡ್ ಮತ್ತು ಮನಃಸ್ಥಿತಿಯನ್ನು ಅವಲಂಬಿಸಿ ಪುರಸ್ಕಾರ ಅಥವಾ ತಿರಸ್ಕಾರಕ್ಕೆ ಒಳಪಡುತ್ತಿತ್ತು. ಈ ಸ್ಥಿತಿಯನ್ನು ಬದಲಾಯಿಸಿದ್ದೇ  ಸಾಮಾಜಿಕ ಜಾಲತಾಣಗಳು. ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್, ಇನ್‍ಸ್ಟಾ ಗ್ರಾಂಗಳು ಮಾಧ್ಯಮ ಪ್ರಪಂಚವನ್ನೇ ಅಲುಗಾಡಿಸಿದುವು. ಸ್ಥಾವರದಂತಿದ್ದ ನೀತಿ-ನಿಯಮಗಳನ್ನು ಹರಿದು ಹಾಕಿದುವು. ಸಂಪಾದಕನ ಸುತ್ತ ಸೃಷ್ಟಿಯಾಗಿದ್ದ ಕೌತುಕ, ಕುತೂಹಲಗಳ ಮೊಟ್ಟೆ ಒಡೆದು ಹೋದುವು. ಪ್ರಶ್ನಾತೀತ ಎಂಬಂಥ ವಾತಾವರಣವೊಂದನ್ನು ತಮ್ಮ ಸುತ್ತ ನಿರ್ಮಿಸಿಕೊಂಡಿದ್ದ ಮಾಧ್ಯಮಗಳ ಜುಟ್ಟು ಹಿಡಿದು ಕಟಕಟೆಯಲ್ಲಿ ನಿಲ್ಲಿಸಿದ್ದು ಇವೇ ಜಾಲತಾಣ. ಬರೇ ಪತ್ರಿಕೆಗಳೇ ಮಾಧ್ಯಮವಾಗಿದ್ದ ಕಾಲದಲ್ಲಿ ಒಂದು ಪತ್ರಿಕೆ ಬರೆದಿದ್ದೇ  ಮಾತು. ಹೇಳಿದ್ದೇ  ವೇದವಾಕ್ಯ. ಒಂದು ಪತ್ರಿಕೆಯಲ್ಲಿ ಪ್ರಕಟವಾದ ವರದಿಯನ್ನು ಇನ್ನೊಂದು ಪತ್ರಿಕೆ ಪ್ರಶ್ನಿಸುವ ಸಾಧ್ಯತೆ ಶೂನ್ಯವಾಗಿತ್ತು. ಒಂದು ಪತ್ರಿಕೆಯಲ್ಲಿ ಪ್ರಕಟವಾದ ಲೇಖನ ತಪ್ಪಾದರೂ ಅದನ್ನು ಪ್ರಶ್ನಿಸುವ ಮತ್ತು ಸಮಾಜಕ್ಕೆ ಅದರ ತಪ್ಪುಗಳನ್ನು ಮನವರಿಕೆ ಮಾಡುವ ಪ್ರಯತ್ನ ವನ್ನು ಇನ್ನೊಂದು ಪತ್ರಿಕೆ ಮಾಡುವುದಕ್ಕೆ ದಾರಿಗಳೇ ಇರಲಿಲ್ಲ. ಒಂದು ಬಗೆಯ ಪರಮ ಪವಿತ್ರ ಮನಃಸ್ಥಿತಿ ಪತ್ರಿಕೆಗಳದ್ದಾಗಿತ್ತು ಅಥವಾ ಓದುಗರಿಗೆ ತಮ್ಮನ್ನು ಹಾಗೆ ಅವು ತೋರ್ಪಡಿಸಿಕೊಂಡಿದ್ದುವು. ಹಾಗಲ್ಲ, ಹೀಗೆ ಎಂದು ಹೇಳಲು ಉಳಿದ ಪತ್ರಿಕೆಗಳು ಪ್ರಯತ್ನಿಸದಿರುವುದರಿಂದ ಮತ್ತು ಜಾಲತಾಣಗಳು ಇನ್ನೂ ಉಗಮವಾಗದಿರುವುದರಿಂದ ಪತ್ರಿಕೆಗಳು ಕೊಟ್ಟದ್ದೇ  ಸುದ್ದಿ ಮತ್ತು ಅದರಾಚೆಗೆ ಏನೂ ಇಲ್ಲ ಅನ್ನುವ ಭಾವವೊಂದು ಸಾರ್ವಜನಿಕವಾಗಿ ನೆಲೆಗೊಂಡಿತ್ತು. ಪತ್ರಿಕೆಗಳು ಮತ್ತು ಟಿ.ವಿ. ಮಾಧ್ಯಮಗಳಿಗೆ ಸಂಬಂಧಿಸಿ ಇವತ್ತೂ ಇದು ಬದಲಾಗಿಲ್ಲ.

    ಒಂದು ಪತ್ರಿಕೆ ಪರಮ ಪ್ರಚೋದಕ ಲೇಖನವನ್ನೋ ಕತೆ, ವರದಿಯನ್ನೋ ಪ್ರಕಟಿಸಿದರೆ ಅದನ್ನು ಪ್ರಶ್ನಿಸಿ ಇನ್ನೊಂದು ಪತ್ರಿಕೆ ಬರೆಯುವ ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ. ಅರ್ನಾಬ್ ಗೋಸ್ವಾಮಿಯ ಸರಿ-ತಪ್ಪುಗಳನ್ನು ರಾಜ್‍ದೀಪ್ ಸರ್ದೇಸಾಯಿ  ತನ್ನ ಇಂಡಿಯಾ ಟುಡೇ ಟಿವಿಯಲ್ಲಿ ಚರ್ಚಿಸುವುದಿಲ್ಲ. ಎನ್‍ಡಿಟಿವಿಯಲ್ಲಿ ರವೀಶ್ ಕುಮಾರ್ ಮಾಡುವ ಚರ್ಚೆ ಮತ್ತು ವಿಶ್ಲೇಷಣೆಯನ್ನು ಮೆಚ್ಚಿಕೊಂಡೋ ತೆಗಳಿಕೊಂಡೋ ಟೈಮ್ಸ್ ನೌನಲ್ಲಿ ಕಾರ್ಯಕ್ರಮ ಪ್ರಸಾರವಾಗುವುದಿಲ್ಲ. ಕನ್ನಡದ ಚಾನೆಲ್‍ಗಳಿಗೆ ಸಂಬಂಧಿಸಿಯೂ ಇವೇ ಮಾತನ್ನು ಹೇಳಬಹುದು. ಲಿಖಿತವೋ ಅಲಿಖಿತವೋ ಆದ ಅಸ್ಪೃಶ್ಯ ನೀತಿಯೊಂದು ಮಾಧ್ಯಮ ಜಗತ್ತಿನಲ್ಲಿ ನೆಲೆ ನಿಂತಿದೆ. ಇದಕ್ಕೆ ಅಪವಾದದಂತೆ ಪ್ರಸಾರವಾಗುತ್ತಿರುವುದು ಮೀಡಿಯಾ ವನ್ ಎಂಬ ಮಲಯಾಳಂ ಟಿ.ವಿ. ಚಾನೆಲ್. ಅದು ವಾರಕ್ಕೊಮ್ಮೆ ‘ಮೀಡಿಯಾ ಸ್ಕ್ಯಾನ್’ ಎಂಬ ಅರ್ಧಗಂಟೆಯ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಒಂದು ವಾರದವರೆಗೆ ವಿವಿಧ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪ್ರಕಟವಾದ ಸುದ್ದಿಗಳ ಮೇಲೆ ಕಣ್ಣಿಟ್ಟು ವಿಶ್ಲೇಷಿಸುವುದು ಈ ಕಾರ್ಯಕ್ರಮದ ವೈಶಿಷ್ಟ್ಯ. ಅಂತೂ ಮಾಧ್ಯಮ ಜಗತ್ತಿನ ಸ್ಥಾಪಿತ ನಿಲುವುಗಳ ಮೇಲೆ ಮೊದಲ ಬಾರಿ ನಿಷ್ಠುರ ಸವಾರಿ ಮಾಡಿದ್ದು ಸಾಮಾಜಿಕ ಜಾಲತಾಣಗಳು. ಸಂಪಾದಕ ರಹಿತ ಈ ಮಾಧ್ಯಮ ಕ್ಷೇತ್ರವನ್ನು ಜನರು ಹೇಗೆ ಬಳಸಿಕೊಂಡರೆಂದರೆ, ಯಾವ ಸಂಪಾದಕನೂ ಯಾವ ಪತ್ರಿಕೆಯೂ ಯಾವ ಟಿ.ವಿ.ಯೂ ಅವರ ಪ್ರಹಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ತಮಗೆ ಇಷ್ಟವಾದದ್ದನ್ನು ತಡೆರಹಿತವಾಗಿ ಬರೆದರು. ಇಷ್ಟವಾಗದ್ದನ್ನು ಮುಲಾಜಿಲ್ಲದೇ ಹೇಳಿಕೊಂಡರು. ರಾಜಕಾರಣಿ, ಮೌಲಾನಾ, ಸ್ವಾಮೀಜಿ, ಶಿಕ್ಪಕ, ಪತ್ರಕರ್ತ, ಉದ್ಯಮಿ, ವೈದ್ಯ, ಯೋಧ, ಅಧಿಕಾರಿ.. ಎಲ್ಲರನ್ನೂ ಕಟಕಟೆಯಲ್ಲಿ ನಿಲ್ಲಿಸಿದರು. ಸರಿ-ತಪ್ಪುಗಳನ್ನು ಚರ್ಚಿಸಿದರು. ಇಷ್ಟೇ ಅಲ್ಲ,
  
 ಚುನಾವಣೆಯ ಸಮಯದಲ್ಲಿ ಮಾತ್ರ ರಾಜಕೀಯದ ಬಗ್ಗೆ ಮಾತಾಡುತ್ತಿದ್ದ ಸಮಾಜವನ್ನು 24 ಗಟೆಯೂ ರಾಜಕೀಯ ಚರ್ಚಾಪಟುವಾಗಿ ಪರಿವರ್ತಿಸಿದ್ದೂ ಇವೇ ಜಾಲತಾಣ. ಸದ್ಯ ಅತಿದೊಡ್ಡ ಸಮಸ್ಯೆಯಾಗಿ ಕಾಡುತ್ತಿರುವುದೂ ಇದುವೇ. ರಾಜಕೀಯವೆಂಬುದು ಚರ್ಚಿಸಿದಷ್ಟೂ ಮುಗಿಯದ ಗೋದಾಮು. ಧಾರ್ಮಿಕ ಕ್ಷೇತ್ರಗಳಿಗಿಂತ ಹೆಚ್ಚಿನ ಅಂಧ ಭಕ್ತರನ್ನು ಮತ್ತು ಅನು ಯಾಯಿಗಳನ್ನು ದಕ್ಕಿಸಿಕೊಂಡಿರುವ ಕ್ಷೇತ್ರ ಇದು. ಅಲ್ಲದೇ, ರಾಜಕೀಯ ಕ್ಷೇತ್ರದಲ್ಲಿ ಜಿಂಕೆ, ದನ, ಮೇಕೆ ಇತ್ಯಾದಿ ಸಾಧು ಪ್ರಾಣಿಗಳಿಂದ ಹಿಡಿದು ಹುಲಿ, ಸಿಂಹ, ತೋಳ, ನರಿ ಇತ್ಯಾದಿ ಅಸಾಧು ಪ್ರಾಣಿಗಳೂ ಇವೆ. ಅವು ನಿಮಿಷಕ್ಕೊಂದರಂತೆ ಸುದ್ದಿ ಗಳನ್ನು ಸೃಷ್ಟಿಸುತ್ತಲೂ ಇವೆ. ಈ ರಾಜಕೀಯ ಕ್ಷೇತ್ರ ಹೇಗೆಯೋ ಅದರ ಭಕ್ತರಲ್ಲಿ ಹೆಚ್ಚಿನವರೂ ಹಾಗೆಯೇ. ಸಾಮಾಜಿಕ ಜಾಲತಾಣಗಳ ಆವಿಷ್ಕಾರಕ್ಕಿಂತ ಮುಂಚೆ ರಾಜಕೀಯ ಪಕ್ಪಗಳಿಗೆ ಈ ಬಗೆಯ ಭಕ್ತರು ಇದ್ದಿದ್ದರಾದರೂ ಅವರ ಅಭಿಪ್ರಾಯಗಳು ಒಂದು ಸೀಮಿತ ವಲಯಕ್ಕೆ ಸೀಮಿತವಾಗಿದ್ದುವು. ಆದರೆ, ಜಾಲ ತಾಣಗಳು ಈ ಸ್ಥಿತಿಯನ್ನು ದೊಡ್ಡಮಟ್ಟದಲ್ಲಿ ಬದಲಿಸಿದುವು. ಅಸಂಖ್ಯ ಜನರು ನಿರ್ದಿಷ್ಟ ಪಕ್ಪ, ವಿಚಾರ, ಧೋರಣೆಗಳ ಪರ-ವಿರುದ್ಧ ನಿಂತು ಅಭಿಪ್ರಾಯ ಮಂಡಿಸುವ ವಾತಾವರಣಕ್ಕೆ ವೇದಿಕೆ ಒದಗಿಸಿದುವು. ಸದ್ಯ ಫೇಸ್‍ಬುಕ್, ಟ್ವಿಟರ್, ವಾಟ್ಸ್‍ಆ್ಯಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಾವುದೇ ಬರಹಗಳನ್ನೊಮ್ಮೆ ಗಂಭೀರವಾಗಿ ಪರಿಶೀಲಿಸಿ ನೋಡಿ. 95% ಬರಹಗಳೂ ನೇರ ವಾಗಿಯೋ ಪರೋಕ್ಪವಾಗಿಯೋ ರಾಜಕೀಯಕ್ಕೆ ಸಂಬಂಧಿಸಿದವೇ ಆಗಿರುತ್ತದೆ. ಪ್ರಕರಣ ಯಾವುದೇ ಇರಲಿ, ಅದಕ್ಕೊಂದು ರಾಜಕೀಯ ಆಯಾಮವನ್ನು ಕಲ್ಪಿಸಿ ಚರ್ಚೆ ನಡೆಸುವುದು ಸಹಜ ನೀತಿಯಾಗಿ ಬಿಟ್ಟಿದೆ. ಯಾವಾಗ ರಾಜಕೀಯ ಚರ್ಚೆಯೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ಕೇಂದ್ರೀಯ ವಿಷಯವಾಗಿ ಪರಿಗಣಿತವಾಯಿತೋ ಬಳಕೆದಾರರ ಭಾಷೆಗಳೂ ಬದಲಾದುವು. ಬಳಸಲು ಸಂಕೋಚಪಡುತ್ತಿದ್ದ ಪದಗಳು ಎಗ್ಗಿಲ್ಲದೇ ಮತ್ತು ಮಡಿವಂತಿಕೆಯಿಲ್ಲದೇ ಬಳಕೆಗೆ ಬಂದುವು. ಅನಿಸಿದ್ದನ್ನು ಬರೆಯುವುದು ಅನ್ನುವುದೇ ಜಾಲತಾಣದ ನಿಯಮವಾಗಿಬಿಟ್ಟಿತು.
  
  ನಿಜವಾಗಿ, ಆರೋಗ್ಯಕರ ಸಂವಾದಕ್ಕೆ ಪಾಂಡಿತ್ಯ ಮತ್ತು ಬರಹ ಸಾಮರ್ಥ್ಯವಷ್ಟೇ ಮುಖ್ಯವಲ್ಲ. ಮುಖಾಮುಖಿ ಪರಿಚಯವೂ ಬಹಳ ಮುಖ್ಯ. ಸಾಮಾಜಿಕ ಜಾಲತಾಣಗಳ ಬಹುಮುಖ್ಯ ಕೊರತೆಗಳಲ್ಲಿ ಇದು ಒಂದು. ಇದೊಂದು ಬಗೆಯ ವೈಫಲ್ಯ. ಗಾಢ ವೈಫಲ್ಯ. ನನ್ನ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವ ವ್ಯಕ್ತಿಗೆ ನಾನು ಯಾರು, ಹಿನ್ನೆಲೆ ಏನು, ವಯಸ್ಸು ಎಷ್ಟು. ವಿಚಾರಧಾರೆ ಯಾವುದು, ಕೆಲಸ ಏನು.. ಇತ್ಯಾದಿ ಇತ್ಯಾದಿಗಳ ಬಗ್ಗೆ ಸ್ಪಷ್ಟ ಅರಿವು ಇರುವುದಿಲ್ಲ. ಫೇಸ್‍ಬುಕ್‍ನಲ್ಲಿ ಇದನ್ನು ತಿಳಿದುಕೊಳ್ಳುವ ಅವಕಾಶ ಇದೆಯಾದರೂ ಅಲ್ಲಿರುವುದು ಎಷ್ಟು ನಿಜ ಅನ್ನುವ ಪ್ರಶ್ನೆಯೂ ಇದೆ. ವಾಟ್ಸ್‍ಆ್ಯಪ್‍ನಲ್ಲಂತೂ ಇದಕ್ಕೆ ಅವಕಾಶವೇ ಇಲ್ಲ. ಹೀಗೆ ಎಲ್ಲೋ  ಕುಳಿತ ವ್ಯಕ್ತಿಯೋರ್ವ ಇನ್ನೆಲ್ಲೋ  ಕುಳಿತ ವ್ಯಕ್ತಿಯೊಂದಿಗೆ ಸ್ಪಷ್ಟತೆಯ ಕೊರತೆಯೊಂದಿಗೆ ಸಂವಾದಕ್ಕಿಳಿಯುತ್ತಾನೆ. ಪ್ರತಿಕ್ರಿಯೆಗಳ ವಿನಿಮಯ ನಡೆಯ ತೊಡಗುತ್ತದೆ. ಈ ಸಂವಾದಕ್ಕೆ ಇನ್ನೆಲ್ಲೋ ಕುಳಿತ ಇನ್ನೆಷ್ಟೋ ಮಂದಿ ಸೇರಿಕೊಳ್ಳುತ್ತಾರೆ. ಈ ಎಲ್ಲರ ಹಿನ್ನೆಲೆ, ಓದು, ವಿಚಾರಧಾರೆ, ಹವ್ಯಾಸ, ವಯಸ್ಸುಗಳನ್ನೆಲ್ಲಾ  ಸ್ಪಷ್ಟ ಪಡಿಸಿಕೊಳ್ಳುವ ವ್ಯವಧಾನ ಹೆಚ್ಚಿನವರಲ್ಲಿ ಇರುವುದೂ ಇಲ್ಲ. ಒಂದು ಪ್ರತಿಕ್ರಿಯೆಗೆ ಇನ್ನೊಂದು ಪ್ರತಿಕ್ರಿಯೆ. ಆರಂಭದ ಪ್ರತಿಕ್ರಿಯೆಯ ಭಾಷೆಯು ಬಳಿಕದ ಪ್ರತಿಕ್ರಿಯೆಯಲ್ಲಿ ಬದಲಾಗುತ್ತದೆ. ಮುಂದಕ್ಕೆ ಭಾಷೆ ಹಳಿ ತಪ್ಪುತ್ತದೆ. ಬೈಗುಳವೇ ಪ್ರತಿಕ್ರಿಯೆಯಾಗುತ್ತದೆ. ಕೊನೆಗೆ ಯಾವ ಬರಹದ ಮೇಲೆ ಈ ಚರ್ಚೆ ಆರಂಭವಾಗಿತ್ತೋ ಆ ಮೂಲ ಬರಹವೇ ನಗಣ್ಯವಾಗಿ ಇನ್ನಾವುದೋ ವಿಷಯವು ಚರ್ಚೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಗುತ್ತದೆ. ಇಲ್ಲಿ ಕಲಿಯುವುದಕ್ಕಾಗಿ ಚರ್ಚಿಸುವವರು ತೀರಾ ತೀರಾ ಕಡಿಮೆ. ಎಲ್ಲರೂ ಕಲಿಸುವವರೇ. ಎಲ್ಲರೂ ಸರಿಯೇ.

    ನಿಜವಾಗಿ, ಇನ್ನೊಬ್ಬರೂ ಸರಿಯಾಗಿರಬಹುದು ಅನ್ನುವ ಭಾವಕ್ಕೆ ಜಾಗ ಇರುವಲ್ಲಿ ಮಾತ್ರ ಆರೋಗ್ಯಕರ ಸಂವಾದ ಸಾಧ್ಯ. ಸಾಮಾಜಿಕ ಜಾಲತಾಣಗಳು ಈ ಜಾಗವನ್ನೇ ಬಹುತೇಕ ಇವತ್ತು ಮುಚ್ಚಿಬಿಟ್ಟಿವೆ. ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ಅಳೆದು ಚರ್ಚಿಸುವ ಅನಾರೋಗ್ಯಕರ ಸ್ಥಿತಿಗೆ ತಲುಪಿಬಿಟ್ಟಿದೆ. ಇಲ್ಲಿ ಎಲ್ಲರೂ ಫ್ರೆಂಡ್‍ಗಳೇ. ಫೇಸ್‍ಬುಕ್ ಫ್ರೆಂಡ್. ವಾಟ್ಸ್‍ಆ್ಯಪ್  ಗ್ರೂಪ್ ಮೆಂಬರ್, ಟ್ವಿಟರ್ ಫಾಲೋವರ್. ಆದರೆ ಮೌಖಿಕ ಪರಿಚಯ ಹೆಚ್ಚಿನವರಿಗೆ ಇರುವುದೇ ಇಲ್ಲ. ಫೇಸ್‍ಬುಕ್‍ನಲ್ಲಿ ಐದು ಸಾವಿರ ಗೆಳೆಯರನ್ನು ಹೊಂದಿರುವ ವ್ಯಕ್ತಿ, ಇವರಲ್ಲಿ ಮುಖತಃ 50 ಮಂದಿಯನ್ನು ಭೇಟಿಯಾಗಿರುವುದೂ ಇಲ್ಲ. ಗೆಳೆತನದಲ್ಲಿ ಬಹು ಮುಖ್ಯ ಪಾತ್ರ ವಹಿಸುವುದು ಮೌಖಿಕ ಪರಿಚಯ. ಸಾಮಾಜಿಕ ಜಾಲತಾಣಗಳಿಗಿಂತ ಹಿಂದೆ, ಗೆಳೆಯರೆಂದರೆ ಮುಖತಃ ಭೇಟಿಯಾದವರೆಂದೇ ಅರ್ಥ. ಭೇಟಿಯು ಅವರನ್ನು ಗೆಳೆಯರಾಗಿಸುತ್ತದೆ. ವಿಚಾರಗಳ ವಿನಿಮಯಕ್ಕೆ ಅವಕಾಶ ಒದಗಿಸಿಕೊಡುತ್ತದೆ. ದೂರವಾಣಿ ಸಂಖ್ಯೆಗಳ ವಿನಿಮಯ ನಡೆಯುತ್ತದೆ. ಮೊದಲು ಮೌಖಿಕ ಭೇಟಿ. ಆ ಬಳಿಕ ಗೆಳೆತನ. ಹೀಗೆ ಬೆಳೆದ ಗೆಳೆತನದಲ್ಲಿ ಅಪರಿಚಿತತೆ ಇರುವುದಿಲ್ಲ. ಗೆಳೆಯನ ವಿಚಾರದ ಬಗ್ಗೆ ಇನ್ನೊಬ್ಬರಲ್ಲಿ ಮಾತನಾಡುವಾಗ ಗೆಳೆಯನ ಮುಖ ಮತ್ತು ಆತನ ಜೊತೆ ಈ ಹಿಂದೆ ಆದ ಭೇಟಿಯ ನೆನಪುಗಳು ಕಣ್ಣೆದುರು ಬರುತ್ತದೆ. ಆ ಸಂದರ್ಭದಲ್ಲಾದ ಸಂವಾದ ಮತ್ತು ಕ್ರಿಯೆ-ಪ್ರತಿಕ್ರಿಯೆಗಳು ನೆನಪಾಗುತ್ತದೆ. ಇವು ಗೆಳೆಯನ ಬಗ್ಗೆ ಆಡುವ ಮಾತಿನ ಮೇಲೆ ನಿಯಂತ್ರಣವನ್ನು ಹೇರುತ್ತದೆ. ಆದರೆ ಇಂದಿನ ಸ್ಥಿತಿ ಏನೆಂದರೆ,
  
  ಮೊದಲು ಗೆಳೆತನ. ಆ ಬಳಿಕ ಮೌಖಿಕ ಭೇಟಿ. ಅಲ್ಲದೇ, ಈ ಭೇಟಿ ಕೈಗೂಡುವ ಸಾಧ್ಯತೆ ಬಹಳ ಕಡಿಮೆ. ಜಾಲತಾಣಗಳ ಮಿತಿ ಇದು. ಅಲ್ಲಿ ನಡೆಯುವ ಚರ್ಚೆಗಳ ಮಿತಿಯೂ ಹೌದು. ಮುಖತಃ ಭೇಟಿಯ ಮೂಲಕ ಉಂಟಾಗುವ ಗೆಳೆತನಕ್ಕೆ ಹೋಲಿಸಿದರೆ, ಸಾಮಾಜಿಕ ಜಾಲ ತಾಣಗಳ ಮೂಲಕ ಉಂಟಾಗುವ ಗೆಳೆತನಕ್ಕೆ ಅನೇಕ ದೌರ್ಬಲ್ಯಗಳಿವೆ. ಈ ದೌರ್ಬಲ್ಯಗಳ ಫಲಿತಾಂಶವೇ ಇವತ್ತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವುದು. ಅಲ್ಲಿಯ ಭಾಷೆ, ಅಭಿಪ್ರಾಯ ಮಂಡನೆ, ಅಸಹನೆ, ಅಂಧಾಭಿಮಾನ, ಕ್ರೌರ್ಯ ಪ್ರಚೋದನೆ.. ಎಲ್ಲವೂ ಈ ಗೆಳೆತನದ ಪರಿಮಿತಿಯನ್ನು ಹೇಳುತ್ತದೆ. ಮುಖತಃ ಭೇಟಿಯಾಗಿ ಗೆಳೆತನ ಕುದುರಿಸಿಕೊಂಡ ಯಾವ ಗೆಳೆಯನೂ ವೈಚಾರಿಕ ಭಿನ್ನಮತಕ್ಕಾಗಿ ತನ್ನ ಗೆಳೆಯನನ್ನು ಜಾಲತಾಣಗಳ ಭಾಷೆಯಲ್ಲಿ ನಿಂದಿಸಲಾರ. ಬೈಯಲಾರ. ಅಪಹಾಸ್ಯ ಮಾಡಲಾರ. ಗೆಳೆತನ ಕಡಿದುಕೊಳ್ಳಲಾರ. ಅಂದಹಾಗೆ,
  
  ಫೇಸ್‍ಬುಕ್ ಗೆಳೆಯನನ್ನು ಭೇಟಿಯಾದ ಬಳಿಕ ಮನನ ಮಾಡಿಕೊಂಡ ಪಾಠ ಇದು.


No comments:

Post a Comment