Tuesday, September 4, 2018

ತಯಾರಿಸಬೇಕಿರುವುದು ಅಣುಬಾಂಬ್ ಅಲ್ಲ..


1. ಅಹ್ಮದ್ ಹಸ್ಸನ್ ಝವಾಯಿಲ್
2. ಅಝೀಝï ಸಾಂಕರ್
3. ಮುಹಮ್ಮದ್ ಅಬ್ದುಸ್ಸಲಾಮ್
ವೈಜ್ಞಾನಿಕ ಸಂಶೋಧನೆಗಾಗಿ ಈ ವರೆಗೆ ನೀಡಲಾದ ಒಟ್ಟು ನೋಬೆಲ್ ಪ್ರಶಸ್ತಿಗಳಲ್ಲಿ ಮುಸ್ಲಿಮರನ್ನು ಹುಡುಕಿದಾಗ ಸಿಕ್ಕ ಹೆಸರುಗಳಿವು. ಈ ಗೋಲದಲ್ಲಿ ಸುಮಾರು 52 ಮುಸ್ಲಿಮ್ ರಾಷ್ಟ್ರಗಳಿವೆ. ಅಲ್ಲದೇ ಈ ರಾಷ್ಟ್ರಗಳ ಹೊರಗಡೆಯೂ ಧಾರಾಳ ಮುಸ್ಲಿಮರಿದ್ದಾರೆ. ಬಹುತೇಕ ಜಗತ್ತಿನ ಎಲ್ಲ ರಾಷ್ಟ್ರಗಳಲ್ಲೂ ಮುಸ್ಲಿಮ್ ಜನಸಂಖ್ಯೆಯಿದೆ. ಇಷ್ಟೆಲ್ಲ ಇದ್ದೂ ನೋಬೆಲ್ ಪುರ ಸ್ಕøತರ ಪಟ್ಟಿಯಲ್ಲಿ ಮುಸ್ಲಿಮ್ ಹೆಸರು ಶೂನ್ಯ ಅನ್ನುವಷ್ಟು ಕಡಿಮೆ ಇರುವುದು ಏಕೆ? ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಅಹ್ಮದ್ ಹಸ್ಸನ್ ಝವಾಯಿಲ್‍ರು 1991ರಲ್ಲಿ ನೋಬೆಲ್ ಪುರಸ್ಕøತ ರಾದರು. ಭೌತಶಾಸ್ತ್ರಕ್ಕೆ ಸಂಬಂಧಿಸಿ ಅವರು ನಡೆಸಿದ ವೈಜ್ಞಾನಿಕ ಸಂಶೋಧನೆಗಾಗಿ ಸಿಕ್ಕ ಪುರಸ್ಕಾರ ಇದು. ವಿಷಾದ ಏನೆಂದರೆ, ಭೌತಶಾಸ್ತ್ರ ವಿಭಾಗದಲ್ಲಿ ಈವರೆಗೆ ನೋಬೆಲ್ ಪುರಸ್ಕಾರ ಪಡೆದ ಏಕೈಕ ಮುಸ್ಲಿಮ್ ವ್ಯಕ್ತಿ ಇವರು. ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಅಝೀಝï ಸಾಂಕರ್ ಅವರು ರಸಾಯನಶಾಸ್ತ್ರ ವಿಭಾಗದ ಸಾಧನೆಗಾಗಿ 2015ರಲ್ಲಿ ನೋಬೆಲ್ ಪುರಸ್ಕಾರವನ್ನು ಇನ್ನಿಬ್ಬರು ವಿಜ್ಞಾನಿಗಳೊಂದಿಗೆ ಹಂಚಿಕೊಂಡರು. ಟರ್ಕಿ ಮೂಲದ ಮುಹಮ್ಮದ್ ಅಬ್ದುಸ್ಸಲಾಮ್ ಅವರೂ ರಸಾಯನಶಾಸ್ತ್ರ ವಿಭಾಗದಲ್ಲಿ ಮಾಡಿದ ಸಾಧನೆಗಾಗಿ 1979ರಲ್ಲಿ ನೋಬೆಲ್ ಪಾರಿತೋಷಕ ಪಡೆದುಕೊಂಡರು. ಇಷ್ಟೇ. ಇಲ್ಲಿಗೆ ಈ ಪಟ್ಟಿ ಮುಗಿಯುತ್ತದೆ. ಯಾಕೆ ಹೀಗೆ? ಎಡವಟ್ಟು ಸಂಭವಿಸಿದ್ದು ಎಲ್ಲಿ? ಮುಸ್ಲಿಮ್ ಸಮುದಾಯ ಆಗಾಗ ಇತಿಹಾಸವನ್ನು ಸ್ಮರಿಸಿಕೊಳ್ಳುವುದಿದೆ. ಇತಿಹಾಸದಲ್ಲಿ ಆಗಿ ಹೋದ ಮುಸ್ಲಿಮ್ ವಿಜ್ಞಾನಿಗಳನ್ನು ಸ್ಮರಿಸಿಕೊಂಡು ಹೆಮ್ಮೆ ಪಡುವುದೂ ಇದೆ. ಒಪ್ಪೋಣ. ಆದರೆ ಇತಿಹಾಸವೆಂಬುದು ಅಮಲು ಆಗಬಾರ ದಲ್ಲ. ‘ಫಾದರ್ ಆಫ್ ಇಂಡೋಲಜಿ’ ಎಂದೇ ಗುರುತಿಸಿಕೊಂಡಿದ್ದ ಅಲ್ ಬರೂನಿ, ಪ್ಲೇಟೋ-ಅರಿಸ್ಟಾಟಲ್‍ರ ಸಂಶೋಧನೆಯನ್ನು ಇನ್ನಷ್ಟು ವಿಸ್ತರಿಸಿ ಹೊಸ ಹೊಳಹನ್ನು ತೆರೆದಿಟ್ಟ ಅಬುಲ್ ನಸ್ರ್ ಅಲ್ ಫರಾಬಿ, ಅಲ್ ಕಿಂದಿ, ಅಲ್ ಬತಾನಿ, ತತ್ವಶಾಸ್ತ್ರ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ ಇಬ್ನುಸೀನಾ, ಇಬ್ನು ಬತೂನ್, ಇಬ್ನು ರುಶ್ದ್, ಇಬ್ನು ಹೈತಂ, ಅಲ್ ಬೈತಾರ್, ಉಮರ್ ಖಯ್ಯೂಂ.. ಮುಂತಾದ ಅನೇಕ ಮುಸ್ಲಿಮ್ ವಿಜ್ಞಾನಿಗಳು ಇವತ್ತು ಚಾರಿತ್ರಿಕ ಗುರುತನ್ನು ಬಿಟ್ಟು ಹೋಗಿದ್ದಾರೆ. ತತ್ವಶಾಸ್ತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ಕೊಟ್ಟವರ ಹೆಸರೂ ಇವತ್ತು ಸ್ಮರಣೆಗೆ ಒಳಗಾಗುತ್ತಿದೆ. ಒಂದು ವೇಳೆ, ಈ ವಿಜ್ಞಾನಿಗಳ ಕಾಲದಲ್ಲಿ ನೋಬೆಲ್ ಪಾರಿತೋಷಕ ಇದ್ದಿದ್ದರೆ, ಇವರಲ್ಲಿ ಹಲವರು ನೋಬೆಲ್ ಪುರಸ್ಕಾರಕ್ಕೆ ಒಳಗಾಗುತ್ತಿದ್ದರು ಎಂದೇ ಅನಿಸುತ್ತದೆ. ಆದರೆ ಇತಿಹಾಸವೆಂಬುದು ಇತಿಹಾಸವೇ. ಅದು ವರ್ತಮಾನವಾಗುವುದಿಲ್ಲ. ಇತಿಹಾಸದ ಸಾಧನೆಗಳನ್ನು ವರ್ತಮಾನದ ವಾಸ್ತವವಾಗಿ ಪರಿವರ್ತಿಸಬೇಕಾದರೆ ಅದಕ್ಕೆ ಕೆಲವು ಯೋಜನೆಗಳನ್ನು ಸಿದ್ಧಪಡಿಸಬೇಕಾಗುತ್ತದೆ. ಚಿಂತನ-ಮಂಥನದ ಅಗತ್ಯವಿರುತ್ತದೆ. ಬಂಡವಾಳ ಹೂಡಿಕೆಗೆ ತಯಾರಾಗ ಬೇಕಾಗುತ್ತದೆ. ಇದು ಅಸಾಧ್ಯದ ಮಾತಲ್ಲ. ವಿಜ್ಞಾನಿಗಳು ಮತ್ತು ಸಂಶೋಧಕರನ್ನು ತಯಾರುಗೊಳಿಸುವುದು ಒಂದು ಸವಾಲೇ ಹೊರತು ನೆವರ್ ಎಂದು ಹೇಳಿಬಿಡಬಹುದಾದ ಒಂದಲ್ಲ. ಒಂದು ವೇಳೆ, ವಿಜ್ಞಾನಿಗಳನ್ನು ತಯಾರಿಸುವುದು ಅಸಾಧ್ಯ ಎಂದಾಗಿರುತ್ತಿದ್ದರೆ ಜಗತ್ತಿನ ಜನಸಂಖ್ಯೆಯಲ್ಲಿ ಕೇವಲ 0.2% ಇರುವ ಯಹೂದಿ ಸಮುದಾಯಕ್ಕೆ ಅದು ಅಸಾಧ್ಯವಾಗಬೇಕಿತ್ತು. ಐತಿಹಾಸಿಕ ದಾಖಲೆಗಳ ಆಧಾರದಲ್ಲಿ ಹೇಳುವುದಾದರೆ, ಅತ್ಯಂತ ಹೆಚ್ಚು ದೌರ್ಜನ್ಯಗಳನ್ನು ಅನುಭವಿಸಿದ ಸಮುದಾಯ ಅದು. ದ್ವಿತೀಯ ವಿಶ್ವಯುದ್ಧದ ಸಂದರ್ಭದಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯವನ್ನು ಕಳಕೊಂಡು ಜೀವಭಯ ದಿಂದ ಬದುಕಿದ ಸಮುದಾಯವಾಗಿ ಅದು ಗುರುತಿಸಿಕೊಳ್ಳುತ್ತದೆ. ಯಹೂದಿ ಎಂಬ ಐಡೆಂಟಿಟಿಯೇ ಅಪರಾಧವಾಗಿ ಮತ್ತು ಆ ಕಾರಣಕ್ಕಾಗಿಯೇ ಹತ್ಯೆಗೀಡಾದ ಲಕ್ಷಾಂತರ ಮಂದಿಯ ಬಗ್ಗೆ ಈಗಲೂ ಜಗತ್ತು ಸ್ಮರಿಸುತ್ತದೆ. ಇಂಥದ್ದೊಂದು ಹಿನ್ನಡೆ ಯನ್ನು ಅನುಭವಿಸಿದ ಹೊರತಾಗಿಯೂ ಇವತ್ತು ಯಹೂದಿ ಸಮು ದಾಯ ಎಲ್ಲಿದೆ ಎಂದು ನೋಡಿದರೆ ಅಚ್ಚರಿ ಯಾಗುತ್ತದೆ. ಈವರೆಗೆ ನೀಡಲಾಗಿರುವ ಒಟ್ಟು 892 ನೋಬೆಲ್ ಬಹುಮಾನ ಗಳಲ್ಲಿ 201 ಬಹುಮಾನವನ್ನು ಯಹೂದಿಯರೇ ಪಡೆದುಕೊಂಡಿದ್ದಾರೆ. ವಿಶ್ವದ ಜನಸಂಖ್ಯೆಯಲ್ಲಿ ಯಹೂದಿ ಸಮುದಾಯದ ಪಾಲು ಬರೇ 0.2% ಇದ್ದರೂ ನೋಬೆಲ್ ಪಡಕೊಳ್ಳುವಲ್ಲಿ ಅವರ ಪಾಲು 23 ಶೇಕಡ. ಇದು ಹೇಗೆ ಸಾಧ್ಯವಾಯಿತು? 2013, 14, 15, 16, 17.. ಈ ಎಲ್ಲ ವರ್ಷಗಳಲ್ಲೂ ನೋಬೆಲ್ ಪುರಸ್ಕಾರ ಪಡೆದವರಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಯಹೂದಿಯರು ಇದ್ದರು. ಪ್ರತಿವರ್ಷ ಸುಮಾರು 10ರಷ್ಟು ನೋಬೆಲ್ ಬಹುಮಾನವನ್ನು ನೀಡಲಾಗುತ್ತದೆ. ಸಾಹಿತ್ಯ, ಶಾಂತಿ, ವೈದ್ಯಕೀಯ, ಖಗೋಳ, ರಸಾಯನ ಶಾಸ್ತ್ರ, ಭೌತ, ಜೀವಶಾಸ್ತ್ರ.. ಇತ್ಯಾದಿ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದವರನ್ನು ನೋಬೆಲ್‍ನ ಮೂಲಕ ಗೌರವಿಸಲಾಗುತ್ತದೆ. 201 ನೋಬೆಲ್ ಬಹುಮಾನವನ್ನು ಪಡೆದುಕೊಂಡಿರುವ ಯಹೂದಿ ಸಮುದಾಯಕ್ಕೆ ಹೋಲಿಸಿ ದರೆ ಮುಸ್ಲಿಮ್ ಸಮುದಾಯ ಪಡೆದು ಕೊಂಡಿರುವ ಒಟ್ಟು ನೋಬೆಲ್‍ಗಳ ಸಂಖ್ಯೆ ಬರೇ 12. ಇದರಲ್ಲಿ 7 ನೋಬೆಲ್ ಶಾಂತಿ ಪುರಸ್ಕಾರವಾದರೆ, 2 ಸಾಹಿತ್ಯ ಪುರಸ್ಕಾರ. ವೈಜ್ಞಾನಿಕ ಸಂಶೋಧನೆಗಾಗಿ 3. ಇವು ಸಾಕೇ? ಒಂದು ಕಾಲದಲ್ಲಿ ವಿಜ್ಞಾನಿಗಳ ಪಡೆ ಯನ್ನೇ ಜಗತ್ತಿಗೆ ಕೊಟ್ಟ ಸಮುದಾಯ ವೊಂದು ಇವತ್ತು ವಿಜ್ಞಾನಿಗಳ ಬರ ವನ್ನು ಅನುಭವಿಸುತ್ತಿರುವು ದಕ್ಕೆ ಏನು ಕಾರಣ? ಮುಸ್ಲಿಮ್ ಸಮುದಾಯದಲ್ಲಿ ದಿಢೀರನೇ ಈ ಕೊರತೆ ಕಾಣಿಸಿ ಕೊಂಡದ್ದು ಯಾಕಾಗಿ? ಸದ್ಯ ಜೋರ್ಡಾನ್ ಮೂಲದ ಅಮೇರಿಕನ್ ವಿಜ್ಞಾನಿ ಉಮರ್ ಯಾಗ್ನಿ, ಇರಾನ್ ಮೂಲದ ಅಮೇರಿಕನ್ ಸಂಶೋಧಕ ಮೆಹ್ರಾನ್ ಕರ್‍ದಾರ್, ಕ್ವಾಂಟಂ ಫಿಸಿಕ್ಸ್ ಮತ್ತು ಸ್ಟೆತೋಸ್ಕೋಪಿ ಕ್ಷೇತ್ರದಲ್ಲಿ ವಿಶೇಷ ಸಂಶೋಧನೆ ನಡೆಸಿರುವ ಹಾಗೂ 1959ರಲ್ಲಿ ಗ್ಯಾಸ್ ಲೇಸರ್ ಅನ್ನು ಸಂಶೋಧಿಸಿರುವ ಇರಾನ್-ಅಮೇರಿಕನ್ ಸಂಶೋಧಕ ಅಲಿ ಜವಾನ್, ರಸಾಯನಶಾಸ್ತ್ರ ತಜ್ಞರಾಗಿ ರುವ ಈಜಿಪ್ಟ್ ಮೂಲದ ಅಮೇರಿಕನ್ ಪ್ರಜೆ ಮುಸ್ತಫಾ ಅಲ್ ಸಈದ್ ಮತ್ತು ಪಾಕಿಸ್ತಾನದ ಅಣು ವಿಜ್ಞಾನಿ ಎ.ಕ್ಯೂ. ಖಾನ್ ಮುಂತಾದವರು ಇವತ್ತು ವೈಜ್ಞಾನಿಕ ಕ್ಷೇತ್ರದಲ್ಲಿ ಮುಸ್ಲಿಮ್ ಪ್ರತಿನಿಧಿಗಳಾಗಿ ಗುರುತಿಸಿಕೊಂಡಿದ್ದಾರೆ. ಹಾಗಂತ, ನೋಬೆಲ್ ಪಡೆದವರು ಮಾತ್ರ ಶ್ರೇಷ್ಠ ವಿಜ್ಞಾನಿಗಳು ಎಂದಲ್ಲ. ನೋಬೆಲ್ ಒಂದೇ ವಿಜ್ಞಾನಿಗಳ ಸಾಮರ್ಥ್ಯವನ್ನು ಅಳೆಯುವ ಮಾನ ದಂಡವೂ ಅಲ್ಲ. ಕಳೆದವಾರ ನಿಧನ ರಾದ ಶ್ರೇಷ್ಠ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಅವರಿಗೇ ನೋಬೆಲ್ ಸಿಕ್ಕಿಲ್ಲ. ಆದರೂ ನೋಬೆಲ್ ಪುರಸ್ಕಾರ ವೆಂಬುದು ಅತಿದೊಡ್ಡ ಗೌರವ. ನೋಬೆಲ್ ಪುರಸ್ಕಾರದ ಆಯ್ಕೆಗೆ ಅದರದ್ದೇ  ಆದ ಮಾನದಂಡಗಳಿವೆ. ಸ್ಟೀಫನ್ ಹಾಕಿಂಗ್‍ರಿಗೆ ಸಿಕ್ಕಿಲ್ಲ ಅನ್ನುವುದೇ ಅಲ್ಲಿಯ ಆಯ್ಕೆ ಪ್ರಕ್ರಿಯೆ ಎಷ್ಟು ಕಠಿಣವಾಗಿದೆ ಎಂಬುದನ್ನು ಸೂಚಿಸುತ್ತದೆ.
     ವಿಜ್ಞಾನಿಗಳ ವಿಶೇಷತೆ ಏನೆಂದರೆ, ಅವರ ಕೊಡುಗೆ ಒಂದು ಸಮುದಾ ಯಕ್ಕೆ ಸೀಮಿತವಾಗಿರುವುದಿಲ್ಲ ಎಂಬುದು. ವಿಜ್ಞಾನಿಯೋರ್ವರು ಯಾವ ಸಮುದಾಯದೊಂದಿಗೆ ಗುರುತಿಸಿಕೊಂಡಿರಲಿ, ಆದರೆ ಅವರ ಸಂಶೋಧನೆಯ ಫಲವನ್ನು ಇಡೀ ಮಾನವಕುಲವೇ ಅನುಭವಿಸುತ್ತದೆ. ವಿಮಾನವನ್ನು ಮೊಟ್ಟಮೊದಲು ಕಂಡು ಹುಡು ಕಿದ್ದು ಕ್ರೈಸ್ತ ಸಮುದಾಯದ ರೈಟ್ ಸಹೋದರರು. ಆದರೆ ಇವತ್ತು ವಿಮಾನದ ಪ್ರಯೋಜನವನ್ನು ಎಲ್ಲ ಸಮುದಾಯದವರೂ ಪಡೆಯುತ್ತಿದ್ದಾರೆ. ಅದು ಇವತ್ತು ಜಗತ್ತಿನ ಅನಿವಾರ್ಯ ಸಂಪರ್ಕ ಸಾಧನವಾಗಿ ಗುರುತಿಸಿ ಕೊಂಡಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಆಗಿರುವ ಅಪೂರ್ವ ಸಂಶೋಧನಗೆಳು ಇವತ್ತು ಜಗತ್ತಿನ ಎಲ್ಲ ಸಮುದಾಯಗಳನ್ನು ನೆಮ್ಮದಿಯಿಂದ ಇಟ್ಟಿವೆ. ನಿಜವಾಗಿ, ಆರ್ಥಿಕವಾಗಿ ಎಷ್ಟೇ ಬಲಾಢ್ಯ ವಾಗಿದ್ದರೂ ವೈಜ್ಞಾನಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿರದಿದ್ದರೆ ಇವತ್ತಿನ ಜಗತ್ತಿ ನಲ್ಲಿ ಸ್ವಾಭಿಮಾನದಿಂದ ಬದುಕುವುದಕ್ಕೆ ಸಾಧ್ಯವೇ ಇಲ್ಲ. ಇಸ್ರೇಲ್ ಜಗತ್ತಿನ ಅತೀ ಸಣ್ಣ ರಾಷ್ಟ್ರಗಳಲ್ಲಿ ಒಂದು. ಅತೀ ಕಡಿಮೆ ಜನಸಂಖ್ಯೆಯಿರುವ ಸಮುದಾಯ ಯಹೂದಿಯರದು. ಆದರೂ ಇಸ್ರೇಲ್‍ನ ಬಳಿ ಅಣ್ವಸ್ತ್ರ ಇದೆ. ಭಾರತದಂತಹ ಬೃಹತ್ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುವಷ್ಟು ತಾಂತ್ರಿಕ ಪ್ರಗತಿಯನ್ನು ಹೊಂದಿದೆ. ಕೃಷಿ ಕ್ಷೇತ್ರದಲ್ಲಿ ವಿನೂತನ ಪ್ರಯೋಗಗಳನ್ನು ಜಗತ್ತಿಗೆ ಪರಿಚಯಿಸುತ್ತಿದೆ. ಸಣ್ಣ ಸಮುದಾಯವೊಂದು ವೈಜ್ಞಾನಿಕ ವಾಗಿ ಪ್ರಗತಿಯನ್ನು ಹೊಂದಿದರೆ ಎಷ್ಟೇ ದೊಡ್ಡ ರಾಷ್ಟ್ರಗಳ ಮೇಲೆ ಮತ್ತು ಸಮು ದಾಯಗಳ ಮೇಲೆ ಪ್ರಾಬಲ್ಯ ಸ್ಥಾಪಿಸಬಹುದು ಎನ್ನುವುದಕ್ಕೆ ಉದಾಹರಣೆ ಇದು. ಅಂದಹಾಗೆ, ಇಸ್ರೇಲ್‍ನ ಪಾಲಿಗೆ ಇಂಥದ್ದೊಂದು ಸಾಧನೆ ಸುಲಭವಾಗಿ ರಾತ್ರಿ-ಹಗಲಾಗು ವಾಗ ದಕ್ಕಿದೆಯೆಂದು ನಾವು ಭಾವಿಸ ಬೇಕಿಲ್ಲ. ಅದೊಂದು ದೀರ್ಘ ದೃಷ್ಟಿಯ ಫಲಿತಾಂಶ. ಆ ಸಮುದಾಯದ ದೂರ ದೃಷ್ಟಿಯ ಯೋಜನೆಗಳು ಅದರ ಸ್ಥಾನವನ್ನು ಇವತ್ತು ಈ ಮಟ್ಟದಲ್ಲಿ ತಂದು ನಿಲ್ಲಿಸಿದೆ. ಅದು ತನಗೆ ಬಿದ್ದ ಏಟನ್ನೂ ರಚನಾತ್ಮಕ ನೆಲೆಯಲ್ಲಿ ಸ್ವೀಕರಿಸಿತು. ಏಟಿಗೆ ತಕ್ಪಣ ಪ್ರತಿ ಏಟನ್ನು ನೀಡುವ ಬದಲು ಅದು ದೀರ್ಘಕಾಲೀನ ಯೋಜನೆಯನ್ನು ಸಿದ್ಧಪಡಿಸಿತು. ಇವತ್ತು ಅದರಲ್ಲಿ ಅದು ಯಶಸ್ಸನ್ನೂ ಕಾಣುತ್ತಿದೆ. ಅದಕ್ಕಾಗಿ ಅದನ್ನು ಅಭಿನಂದಿಸಲೇಬೇಕು. ಜೊತೆ ಜೊತೆಗೇ ಇವತ್ತು ಮುಸ್ಲಿಮ್ ಜಗತ್ತು ಅಂಥದ್ದೊಂದು ಯಶಸ್ಸನ್ನು ತನ್ನದಾಗಿಸಿಕೊಳ್ಳಲು ಯೋಜನೆಗಳನ್ನು ಹಾಕಿ ಕೊಳ್ಳಲೇಬೇಕು. ಮುಸ್ಲಿಮ್ ಜಗತ್ತು ಬಹಳ ವಿಶಾಲವಾದುದು. ಈ ಜಗತ್ತಿನ ಕೆಲವು ರಾಷ್ಟ್ರಗಳು ಎಷ್ಟು ಸಿರಿವಂತಿಕೆ ಯನ್ನು ಹೊಂದಿವೆಯೆಂದರೆ, ಇಸ್ರೇಲ್ ನಂಥ ರಾಷ್ಟ್ರವನ್ನೇ ಖರೀದಿಸುವಷ್ಟು ಹಣವಂತವಾಗಿದೆ. ಸದ್ಯ ಈ ಶ್ರೀಮಂತಿಕೆಯು ವೈಜ್ಞಾನಿಕ ಕ್ಷೇತ್ರದ ಬಂಡವಾಳ ಹೂಡಿಕೆಯಾಗಿ ಮಾರ್ಪಾಟುಗೊಳ್ಳಬೇಕು. ಸಂಶೋಧನಾ ಮೆದುಳನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ, ಅವರನ್ನು ಪೋಷಿಸುವ ಕೆಲಸ ನಡೆಯಬೇಕು. ಮುಸ್ಲಿಮ್ ಸಮುದಾಯ ದಾನ ನೀಡುವುದರಲ್ಲಿ ಬಹಳ ಮುಂದು. ಮಾತ್ರವಲ್ಲ, ಮಸೀದಿ, ಅನಾಥಾಶ್ರಮ, ಸಾಮಾಜಿಕ ಕಲ್ಯಾಣಗಳಿಗಾಗಿ ಈ ಮೊತ್ತದ ಒಂದು ಬಹುಮುಖ್ಯ ಭಾಗವನ್ನು ಖರ್ಚು ಮಾಡಲಾಗುತ್ತಿದೆ. ಸದ್ಯ ಈ ಮೊತ್ತದ ಒಂದು ಬಹು ಮುಖ್ಯ ಭಾಗವನ್ನು ವೈಜ್ಞಾನಿಕ ಮನೋ ಭಾವವುಳ್ಳ ಯುವ ಪೀಳಿಗೆಯನ್ನು ಪತ್ತೆಹಚ್ಚಲು ಮತ್ತು ಅವರ ಮೇಲೆ ಖರ್ಚು ಮಾಡಲು ತೆಗೆದಿಡಬೇಕು. ಅದಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದಲ್ಲಾದರೂ ಸುಸಜ್ಜಿತ ಲೈಬ್ರರಿಯನ್ನು ಸ್ಥಾಪಿಸುವತ್ತ ಗಮನ ಹರಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳ ಸಹಿತ ಎಲ್ಲವೂ ಅಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಯುವ ತಲೆಮಾರಿಗೆ ಸ್ಟೀಫನ್ ಹಾಕಿಂಗ್ ರಂಥ ಶ್ರೇಷ್ಠ ವಿಜ್ಞಾನಿಗಳ ಪುಸ್ತಕಗಳ ಮೇಲೆ ಆಸಕ್ತಿ ಹುಟ್ಟಿಸಬೇಕು. ಒಂದು ಕಾಲದಲ್ಲಿ ಮುಸ್ಲಿಮ್ ಸಮುದಾಯ ಶೈಕ್ಪಣಿಕವಾಗಿ ತೀರಾ ಹಿಂದುಳಿದಿತ್ತು. ಇವತ್ತು ಸ್ಥಿತಿ ಬದಲಾಗುತ್ತಿದೆ. ಇದೀಗ ಮುಸ್ಲಿಮ್ ಸಮುದಾಯ ಇನ್ನೊಂದು ಹೆಜ್ಜೆ ಮುಂದಿಡಬೇಕು. ಅದು ವಿಜ್ಞಾನಿಗಳ ತಯಾರಿಗಾಗಿ. ಇದು ಅಸಾಧ್ಯವೇನೂ ಅಲ್ಲ.
     ಮಾನವ ಕುಲವನ್ನು ನಾಶ ಮಾಡುವ ಅಣುಬಾಂಬ್ ತಯಾರಿಗಿಂತ ಸ್ಟೀಫನ್ ಹಾಕಿಂಗ್‍ರನ್ನು ತಯಾರಿಸುವ ಅಗತ್ಯ ಮುಸ್ಲಿಮ್ ಜಗತ್ತಿಗೆ ಬಹಳ ಇದೆ.

No comments:

Post a Comment