Wednesday, January 17, 2024

2023: ಒಂದು ತುದಿಯಲ್ಲಿ ಬಿದೂರಿ, ಇನ್ನೊಂದು ತುದಿಯಲ್ಲಿ ಗೌತಮ್ ಗಂಭೀರ್


1. ರಮೇಶ್ ಬಿದೂರಿ
2. ಗೌತಮ್ ಗಂಭೀರ್ 

2023ರಲ್ಲಿ ನಡೆದ ಮುಸ್ಲಿಮ್ ದ್ವೇಷದ ಘಟನಾವಳಿಗಳನ್ನು ಅವಲೋಕಿಸುವಾಗ ಥಟ್ಟನೆ ಎದುರು ಬಂದ ಎರಡು ಹೆಸರುಗಳಿವು.

ಸೆಪ್ಟೆಂಬರ್‌ನಲ್ಲಿ ನಡೆದ ಪಾರ್ಲಿಮೆಂಟ್ ಕಲಾಪದ ವೇಳೆ ಬಿಜೆಪಿ ಸಂಸದ ರಮೇಶ್ ಬಿದೂರಿ ಅತ್ಯಂತ ಅನಾಗರಿಕವಾಗಿ ವರ್ತಿಸಿದರು.  ಬಿ.ಎಸ್.ಪಿ. ಸಂಸದ ದಾನಿಶ್ ಅಲಿಯನ್ನು ಮುಲ್ಲಾ ಆತಂಕ್‌ವಾದಿ, ಉಗ್ರವಾದಿ, ಮುಂಜಿ ಮಾಡಿಕೊಂಡವ, ವೇಶ್ಯಾವಾಟಿಕೆ ನಡೆಸುವವ  ಎಂದೆಲ್ಲಾ ಅಷ್ಟೂ ಸದಸ್ಯರ ಮುಂದೆ ದೂಷಿಸಿದರು. ದಾನಿಶ್ ಅಲಿ ದಿಗ್ಭ್ರಾಂತರಾದರು. ಪಾರ್ಲಿಮೆಂಟ್ ಎತಿಕ್ಸ್ ಸಮಿತಿಯ  ಸದಸ್ಯರಾಗಿರುವ ತನ್ನನ್ನೇ ಆತಂಕ್‌ವಾದಿ, ಕಟುವಾ ಎಂದು ಪಾರ್ಲಿಮೆಂಟ್ ಒಳಗೆಯೇ ಸದಸ್ಯನೋರ್ವ ದೂಷಿಸುವುದಾದರೆ, ಪಾರ್ಲಿಮೆಂಟ್ ಹೊರಗಿನ ವಿಶಾಲ ಭಾರತದಲ್ಲಿ ಸಾಮಾನ್ಯ ಮುಸ್ಲಿಮರು ಎಂತೆಂಥ  ದೂಷಣೆಗಳನ್ನು ಎದುರಿಸುತ್ತಿರಬಹುದು ಎಂದು  ಆತಂಕಪಟ್ಟರು. ಎಲ್ಲೆಡೆ ವಿರೋಧ ವ್ಯಕ್ತವಾದಾಗ ಬಿಜೆಪಿ ಎಂದಿನ ತಂತ್ರವನ್ನು ಹೆಣೆಯಿತು. ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ  ನಡೆಸುವವರು ಹೇಗೆ ತಮ್ಮ ಮೇಲೆಯೂ ಹಲ್ಲೆಯಾಗಿದೆ ಎಂದು ಪ್ರತಿದೂರು ದಾಖಲಿಸಿ ಪ್ರಕರಣ ಇತ್ಯರ್ಥಪಡಿಸುವ ತಂತ್ರ  ಹೆಣೆಯುತ್ತಾರೋ ಅದೇ ವಿಧಾನವನ್ನು ಇಲ್ಲೂ ಬಳಸ
ಲಾಯಿತು. ‘ದಾನಿಶ್ ಅಲಿಯ ಪ್ರಚೋದನಕಾರಿ ಮಾತುಗಳಿಗೆ ಪ್ರತಿಯಾಗಿ ಬಿದೂರಿ ಈ ಪ್ರತಿಕ್ರಿಯೆ ನೀಡಿದ್ದು, ಅದೂ ವಿಚಾರಣೆಗೆ  ಒಳಗಾಗಬೇಕು’ ಎಂದು ಸ್ಪೀಕರ್ ಓಂ ಬಿರ್ಲಾರಿಗೆ ದೂರು ನೀಡಿತು. ಅಂದರೆ, ಯಾರಾದರೂ ಪ್ರಚೋದಿಸಿದರೆ, ಧರ್ಮದ್ವೇಷಿ ಪದಗಳ  ಮೂಲಕ ಪಾರ್ಲಿಮೆಂಟ್ ಒಳಗೆ ನಿಂದಿಸಬಹುದು ಎಂಬುದನ್ನು ಬಿಜೆಪಿ ಪರೋಕ್ಷವಾಗಿ ಸಮರ್ಥಿಸಿತು. ಹಾಗಂತ,

ಬಿದೂರಿಯ ಧರ್ಮದ್ವೇಷಿ ಬೈಗುಳವನ್ನು ಸೆರೆಹಿಡಿದ ಪಾರ್ಲಿಮೆಂಟ್ ಕ್ಯಾಮರಾವು ದಾನಿಶ್ ಅಲಿಯ ಪ್ರಚೋದನೆಯನ್ನು ಯಾಕೆ ಸೆರೆ  ಹಿಡಿದಿಲ್ಲ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಇದು ಪ್ರಕರಣದ ಗಂಭೀರತೆಯನ್ನು ತಣಿಸುವ ಮತ್ತು ಗಮನ ಬೇರೆಡೆಗೆ  ಸೆಳೆಯುವ ಬಿಜೆಪಿ ತಂತ್ರದ ಭಾಗವೇ ಹೊರತು ಇನ್ನೇನಲ್ಲ. ಈಗ ಈ ಪ್ರಕರಣ ಏನಾಯಿತೆಂದು ಯಾರಿಗೂ ಗೊತ್ತಿಲ್ಲ. ಇದೇವೇಳೆ,  ಇದೇ ಬಿದೂರಿಗೆ ರಾಜಸ್ತಾನದ ಅಸೆಂಬ್ಲಿ ಚುನಾವಣೆಯ ವೇಳೆ ಟೋಂಕ್ ಜಿಲ್ಲೆಯ ಪ್ರಚಾರ ಉಸ್ತುವಾರಿಯನ್ನು ಬಿಜೆಪಿ ವಹಿಸಿಕೊಟ್ಟಿತು.  ಇದು ಮುಸ್ಲಿಮರು ಹೆಚ್ಚಿರುವ ಜಿಲ್ಲೆ. ಮುಸ್ಲಿಮ್ ದ್ವೇಷದ ಮಾತುಗಳನ್ನು ಉದುರಿಸಿ ಧ್ರುವೀಕರಣ ನಡೆಸುವುದರ ಹೊರತಾಗಿ ಇದಕ್ಕೆ  ಬೇರೆ ಯಾವ ಉದ್ದೇಶ ಇರಬಹುದು? ಹಾಗಂತ,

ಮಾಜಿ ಕ್ರಿಕೆಟಿಗ ಮತ್ತು ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್‌ರದ್ದು ಇನ್ನೊಂದು ಬಗೆ. ಪಾಕ್ ಜೊತೆ ಕ್ರಿಕೆಟ್ ಸಂಬಂಧವನ್ನು  ಸಂಪೂರ್ಣ ರದ್ದುಗೊಳಿಸಬೇಕು ಎಂದು ಬಲವಾಗಿ ವಾದಿಸಿದ ವ್ಯಕ್ತಿ ಈ ಗಂಭೀರ್. ತನ್ನ ಈ ನಿಲುವನ್ನು ಅವರು ಅನೇಕ ಬಾರಿ  ಬಹಿರಂಗವಾಗಿ ಸಾರಿದ್ದಾರೆ. ಆದರೆ, ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳೆ ಇದೇ ಗಂಭೀರ್ ಪಾಕ್ ಕ್ರಿಕೆಟಿಗ ವಾಸಿಂ ಅಕ್ರಮ್ ಪಕ್ಕ  ಕೂತು ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು. ಒಂದುಕಡೆ ಪಾಕ್ ಜೊತೆ ಕ್ರಿಕೆಟ್ ಆಡಬಾರದು ಎನ್ನುತ್ತಾ ಇ ನ್ನೊಂದು ಕಡೆ ವೀಕ್ಷಕ ವಿವರಣೆ ನೀಡುವುದು ಇಬ್ಬಂದಿತನವಲ್ಲವೇ ಎಂಬ ಸೋಶಿಯಲ್ ಮೀಡಿಯಾ ಪ್ರಶ್ನೆಗೆ ಸಿಟ್ಟಾದರು. ಹಣದ  ಮುಂದೆ ಯಾವ ಸಿದ್ಧಾಂತವೂ ನಿಲ್ಲುವುದಿಲ್ಲ ಅನ್ನುವುದನ್ನು ಅವರು ಈ ಮೂಲಕ ತನ್ನ ಬೆಂಬಲಿಗರಿಗೆ ಸ್ಪಷ್ಟಪಡಿಸಿದರು.

2023 ಜನವರಿಯಲ್ಲಿ ದೆಹಲಿ ಮತ್ತು ಉತ್ತರ ಪ್ರದೇಶದ ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳ ಮುಖಪುಟದಲ್ಲಿ ಪ್ರಕಟವಾದ  ಜಾಹೀರಾತೊಂದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ಈ ಜಾಹೀರಾತಿನಲ್ಲಿ ಎರಡು ಚಿತ್ರಗಳಿದ್ದುವು. 2017ಕ್ಕಿಂತ ಮೊದಲು ಮತ್ತು  2017ರ ನಂತರ ಎಂದು ಈ ಎರಡೂ ಚಿತ್ರಗಳಿಗೆ ಒಕ್ಕಣೆ ನೀಡಲಾಗಿತ್ತು. ಕುತ್ತಿಗೆಗೆ ಶಾಲು ಹಾಕಿಕೊಂಡ ಯುವಕ ಕೈಯಲ್ಲಿರುವ  ಪೆಟ್ರೋಲ್ ಬಾಂಬ್ ಎಸೆಯುವ ಚಿತ್ರ 2017ಕ್ಕಿಂತ ಮೊದಲಿನದ್ದಾದರೆ ಅದೇ ಯುವಕ ಕೈ ಮುಗಿದು ಕ್ಷಮೆ ಯಾಚಿಸುವ ಚಿತ್ರ 2017ರ  ನಂತರದ್ದು. ಉತ್ತರ ಪ್ರದೇಶದ ಮುಸ್ಲಿಮರು ಸಾಮಾನ್ಯವಾಗಿ ಕುತ್ತಿಗೆಗೆ ಶಾಲು ಸುತ್ತುವುದು ರೂಢಿ. ಅದನ್ನೇ ಅನ್ವರ್ಥವಾಗಿ ಈ ಚಿತ್ರದಲ್ಲಿ  ಬಳಸಲಾಗಿದೆ. 2017ರಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ದಮನಿಸಿದ್ದಾರೆ ಎಂದು ಪರೋಕ್ಷ  ಸಂದೇಶ ಸಾರುವ ಈ ಜಾಹೀರಾತನ್ನು ಬಿಜೆಪಿ ಸಮರ್ಥಿಸಿಕೊಂಡಿತು. ಅದರಲ್ಲಿ ಮುಸ್ಲಿಮ್ ಅಂತ ಎಲ್ಲಿದೆ ಎಂಬುದು ಬಿಜೆಪಿಯ ಪ್ರ ಶ್ನೆಯಾಗಿತ್ತು. ಆದರೆ ಈ ಜಾಹೀರಾತಿನ ಒಳಾರ್ಥ ಏನು ಮತ್ತು ಜಾಹೀರಾತು ಯಾರ ಕುರಿತಾಗಿದೆ ಎಂಬುದು ಜನಸಾಮಾನ್ಯರಿಗೂ  ಅರ್ಥವಾಗುವಂತಿತ್ತು. ‘ಕ್ರಿಮಿನಲ್‌ಗಳನ್ನು ಅವರು ಧರಿಸಿರುವ ಬಟ್ಟೆಯಿಂದ ಗುರುತಿಸಬಹುದು’ ಎಂದು ಪ್ರಧಾನಿ ಮೋದಿಯವರು ಈ  ಹಿಂದೆ ಎನ್.ಆರ್.ಸಿ. ಪ್ರತಿಭಟನೆಯ ಸಂದರ್ಭದಲ್ಲಿ ಹೇಳಿದ್ದರು. ಹಾಗಂತ, ಕ್ರಿಮಿನಲ್‌ಗಳಿಗೆ ಯಾವ ಧರ್ಮವನ್ನೂ ಜೋಡಿಸಿಲ್ಲವಾದರೂ ಪ್ರಧಾನಿಯ ಗುರಿ ಯಾರು ಅನ್ನುವುದಕ್ಕೆ ವಿಶೇಷ ವಿವರಣೆಯ ಅಗತ್ಯವಿರಲಿಲ್ಲ. ಮುಸ್ಲಿಮರು ಎಂದು ಹೇಳದೇ ಮುಸ್ಲಿಮರ ನ್ನು ಅಪರಾಧಿಗಳಂತೆ ನಡೆಸಿಕೊಳ್ಳುವ ವಿಧಾನ ಇದು. ಮುಸ್ಲಿಮರು ಕ್ರಿಮಿನಲ್, ದಂಗೆಕೋರರು ಎಂಬೆಲ್ಲಾ ಸಂದೇಶವನ್ನು  ಪರೋಕ್ಷವಾಗಿ ಸಾರುತ್ತಾ ಮುಸ್ಲಿಮ್ ದ್ವೇಷವನ್ನು ಸಾರ್ವತ್ರಿಕವಾಗಿ ಬಿತ್ತುವ ಅಪಾಯಕಾರಿ ತಂತ್ರ ಇದು.

2023 ಜೂನ್‌ನಲ್ಲಿ ಒಡಿಸ್ಸಾದ ಬಾಲಸೋರ್‌ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿತು. ತಕ್ಷಣ ಈ ರೈಲು ಅಪಘಾತಕ್ಕೆ ಮುಸ್ಲಿಮ್  ವ್ಯಕ್ತಿ ಕಾರಣ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಸೃಷ್ಟಿಸಿ ಹಂಚಲಾಯಿತು. ಅಪಘಾತ ನಡೆದ ಸ್ಥಳದ ರೈಲ್ವೇ ಸ್ಟೇಷನ್ ಅಧಿಕಾರಿ ಮುಸ್ಲಿಮ್ ಎಂದು ಈ ಸುದ್ದಿಯಲ್ಲಿ ಹೇಳಲಾಯಿತು. ಭಾರೀ ಸಂಖ್ಯೆಯಲ್ಲಿ ಈ ಸುಳ್ಳು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೆಯಾಯಿತಲ್ಲದೇ, ಕರ್ನಾಟಕದ ಹಳ್ಳಿ ಮೂಲೆಯ ವಾಟ್ಸಾಪ್‌ನಲ್ಲೂ ಪ್ರತ್ಯಕ್ಷವಾಯಿತು. ಆ ಬಳಿಕ ಇನ್ನೊಂದು ಸುಳ್ಳು ಸುದ್ದಿಯನ್ನು  ತೇಲಿಬಿಡಲಾಯಿತು. ಅಪಘಾತ ನಡೆದ ಸ್ಥಳದಲ್ಲಿರುವ ಬಿಳಿ ಕಟ್ಟಡವೊಂದನ್ನು ತೋರಿಸಿ ಇದು ಮಸೀದಿಯಾಗಿದ್ದು, ಇಲ್ಲಿ ನಡೆಸಲಾದ  ಸಂಚಿನಿಂದಲೇ   ಈ ಅಪಘಾತ ನಡೆದಿದೆ ಎಂದು ಹೇಳಲಾಯಿತು. ಮಾತ್ರವಲ್ಲ, ಶುಕ್ರವಾರ ಅಪಘಾತ ನಡೆದಿರುವುದನ್ನೂ ವಿಶೇಷವಾಗಿ  ಉಲ್ಲೇಖಿಸಲಾಯಿತು. ಮಸೀದಿಯಲ್ಲಿ ಶುಕ್ರವಾರ ಸೇರಿದ ಮುಸ್ಲಿಮರು ಈ ರೈಲು ಅಪಘಾತವಾಗುವಂತೆ ಕುತಂತ್ರ ಹೆಣೆದರು ಎಂದು  ಸೂಚಿಸುವುದಕ್ಕಾಗಿಯೇ ಶುಕ್ರವಾರವನ್ನು ವಿಶೇಷವಾಗಿ ಉಲ್ಲೇಖಿಸಲಾಗಿತ್ತು. ಈ ಸುದ್ದಿ ಕೂಡಾ ಭಾರೀ ಪ್ರಮಾಣದಲ್ಲಿ ಸೋಶಿಯಲ್  ಮೀಡಿಯಾದಲ್ಲಿ
ಹಂಚಿಕೆಯಾಯಿತು. ಆ ಬಳಿಕ, ಈ ಬಿಳಿ ಕಟ್ಟಡವು ಹರೇಕಷ್ಣ ಪಂಥದ ಮಂದಿರ ಎಂದು ಬಹಿರಂಗವಾಯಿತು. ಮುಸ್ಲಿಮ್ ದ್ವೇಷ ಈ  ಮಣ್ಣಿನಲ್ಲಿ ಹೇಗೆ ಬೆಳೆಯುತ್ತಿದೆ ಮತ್ತು ಮುಸ್ಲಿಮ್ ಭೀತಿಯನ್ನು ಹೇಗೆಲ್ಲ ಹರಡಲಾಗುತ್ತಿದೆ ಅನ್ನುವುದನ್ನು ಇದು ಸ್ಪಷ್ಟಪಡಿಸುತ್ತದೆ.

ಝೀ ನ್ಯೂಸ್ ಚಾನೆಲ್‌ನಲ್ಲಿ ಸುಧೀರ್ ಚೌಧರಿ ನಡೆಸಿಕೊಡುವ ಬ್ಲ್ಯಾಕ್ ಆಂಡ್ ವೈಟ್ ಪ್ರೈಮ್ ಟೈಮ್ ಶೋನಲ್ಲಿ ಮುಸ್ಲಿಮ್  ತುಷ್ಠೀಕರಣದ ವಿಷಯವನ್ನು ಎತ್ತಿಕೊಂಡರು. ‘ಮುಸ್ಲಿಮರು ವಾಹನ ಖರೀದಿಸಲು ಕರ್ನಾಟಕ ಸರಕಾರವು 50% ಧನಸಹಾಯ ಮತ್ತು  3 ಲಕ್ಷ ರೂಪಾಯಿ ಸಬ್ಸಿಡಿಯನ್ನು ನೀಡುತ್ತಿದೆ’ ಎಂದು ಹೇಳಿದ ಚೌಧರಿ, ಹಿಂದೂಗಳಿಗೆ ಏನೇನೂ ಇಲ್ಲ ಎಂದರು. ಹೇಗೆ ಸಿದ್ದರಾಮಯ್ಯ ಸರಕಾರವು ಮುಸ್ಲಿಮ್ ಓಲೈಕೆಯಲ್ಲಿ ತೊಡಗಿದೆ ಮತ್ತು ಹಿಂದೂ ವಿರೋಧಿಯಾಗಿ ನಡಕೊಳ್ಳುತ್ತಿದೆ ಎಂದು  ಭಾಷಣವನ್ನು ಬಿಗಿದರು. ನಿಜವಾಗಿ, ಇದು ತಿರುಚಿದ ಸತ್ಯವಾಗಿತ್ತು. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆ.ಎಂ.ಡಿ.ಸಿ.)ವು  ಮುಸ್ಲಿಮರೂ ಸೇರಿದಂತೆ ಕ್ರೈಸ್ತರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರಿಗೆ ಈ ಸೌಲಭ್ಯವನ್ನು ಘೋಷಿಸಿದ್ದು ನಿಜ. ಆದರೆ ಈ  ಸೌಲಭ್ಯ ಅಲ್ಪಸಂಖ್ಯಾತರಿಗೆ ಮಾತ್ರ ಇರುವುದಲ್ಲ. ಇದೇ ರೀತಿಯ ಸೌಲಭ್ಯವನ್ನು ಕರ್ನಾಟಕ ಹಿಂದುಳಿದ ವರ್ಗಗಳ ಕಲ್ಯಾಣ  ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಡಾ| ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಹಿಂದೂಗಳಿಗೂ ನೀಡಲಾಗುತ್ತಿದೆ.  ಆದರೆ, ಸುಧೀರ್ ಚೌಧರಿ ಈ ಸತ್ಯ ಅಡಗಿಸಿಟ್ಟು ಮುಸ್ಲಿಮ್ ದ್ವೇಷವನ್ನು ಬಿತ್ತುವುದಕ್ಕೆ ಪ್ರಯತ್ನಿಸಿದರು. ಇವರ ವಿರುದ್ಧ ಇಲಾಖೆಯ ಶಿವ  ಕುಮಾರ್ ಅವರು ದೂರು ದಾಖಲಿಸಿದರು.

ಜಾಗತಿಕ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ ಆದ ಬಳಿಕ  ಮಾಧ್ಯಮದವರು ಅವರ ತಾಯಿಯನ್ನು ಸಂದರ್ಶಿಸಿದ ಘಟನೆ ನಡೆಯಿತು. ನೀರಜ್ ಅವರ ಆತ್ಮೀಯ ಗೆಳೆಯ ಪಾಕಿಸ್ತಾನದ ಅರ್ಶದ್  ನದೀಮ್ ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದರು. ‘ನಿಮ್ಮ ಮಗ ಪಾಕಿಸ್ತಾನಿಯನ್ನು ಸೋಲಿಸಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು’  ಎಂದು ಪತ್ರಕರ್ತನೋರ್ವ ಆ ತಾಯಿಯಲ್ಲಿ ಪ್ರಶ್ನಿಸಿದರು. ನಿಜವಾಗಿ ಈ ಪ್ರಶ್ನೆಯು ಕುಚೋದ್ಯವಾಗಿತ್ತು. ಪಾಕಿಸ್ತಾನವನ್ನು ದೂಷಿಸುವ  ಮೂಲಕ ಭಾರತೀಯ ಮುಸ್ಲಿಮರನ್ನು ಪರೋಕ್ಷವಾಗಿ ಕಟಕಟೆಯಲ್ಲಿ ನಿಲ್ಲಿಸುವುದು ಇಲ್ಲಿನ ಮಾಧ್ಯಮ ನೀತಿ. ಬಿಜೆಪಿಯೂ ಇದನ್ನೇ  ಮಾಡುತ್ತಿದೆ. ಪಾಕಿಸ್ತಾನವನ್ನು ದೂಷಿಸುವ ಉತ್ತರವೊಂದನ್ನು ನಿರೀಕ್ಷಿಸಿಯೇ ಈ ಪತ್ರಕರ್ತ ಈ ಪ್ರಶ್ನೆ ಕೇಳಿರಬೇಕು ಎಂದೇ ಅನಿಸುತ್ತದೆ.  ಆದರೆ ಆ ತಾಯಿ ಕೊಟ್ಟ ಉತ್ತರವಂತೂ ಜೀವನದಲ್ಲಿ ಇನ್ನೆಂದೂ ಇಂಥ ಪ್ರಶ್ನೆಯನ್ನು ಆ ಪತ್ರಕರ್ತ ಕೇಳಬಾರದೆಂಬಷ್ಟು  ಮಾರ್ಮಿಕವಾಗಿತ್ತು. ಆ ತಾಯಿ ಹೇಳಿದ್ದು ಹೀಗೆ;
“ಆಟಗಾರ ಕೇವಲ ಆಟಗಾರ ಮಾತ್ರ, ಆತ ಯಾವ ದೇಶದವ ಎಂಬುದು ಮುಖ್ಯ ಆಗುವುದಿಲ್ಲ. ಒಂದುವೇಳೆ, ಅರ್ಶದ್ ನದೀಮ್ ಈ  ಚಾಂಪಿಯನ್‌ಶಿಪನ್ನು ಜಯಿಸುತ್ತಿದ್ದರೂ ನಾನು ಸಂತೋಷಪಡುತ್ತಿದ್ದೆ.”

ಇವಲ್ಲದೇ ಇನ್ನೂ ಕೆಲವು ಮುಸ್ಲಿಮ್ ದ್ವೇಷಿ ಘಟನೆಗಳೂ 2023ರಲ್ಲಿ ನಡೆದಿವೆ. ಭಾರತ ಮತ್ತು ಪಾಕ್‌ಗಳ ನಡುವೆ ಕ್ರಿಕೆಟ್ ಪಂದ್ಯಾಟ  ನಡೆಯುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪಾಕಿಸ್ತಾನಿಯರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಬಾರದು ಎಂದು ಪೊಲೀಸ್‌ನೋರ್ವ  ತಡೆದದ್ದು ಇದರಲ್ಲಿ ಒಂದು. ಚೇತನ್ ಸಿಂಗ್ ಎಂಬ ರೈಲ್ವೇ ಕಾನ್‌ಸ್ಟೇಬಲ್ ಮೂವರು ಮುಸ್ಲಿಮರನ್ನು ಹುಡುಕಿ ಕೊಂದದ್ದು ಮತ್ತು  ಬಳಿಕ ಜೈ ಮೋದಿ, ಜೈ ಯೋಗಿ ಎಂದು ಘೋಷಿಸಿದ್ದೂ ಇದರಲ್ಲಿ ಒಂದು. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನಲ್ಲಿ ತೃಪ್ತ ತ್ಯಾಗಿ  ಎಂಬ ಟೀಚರ್ 7 ವರ್ಷದ ಮುಸ್ಲಿಮ್ ವಿದ್ಯಾರ್ಥಿಯ ಕೆನ್ನೆಗೆ ಹಿಂದೂ ವಿದ್ಯಾರ್ಥಿಗಳಿಂದ ಬಾರಿಸಿದ್ದೂ ಇದರಲ್ಲಿ ಒಂದು. ಭಾರತೀಯ  ಕಿಸಾನ್ ಯೂನಿಯನ್ ಮುಖಂಡ ನರೇಶ್ ಟಿಕಾಯಿತ್ ಅಂತೂ ತೃಪ್ತ ತ್ಯಾಗಿ ವಿರುದ್ಧದ ಕೇಸ್ ಹಿಂಪಡೆದುಕೊಳ್ಳುವಂತೆ  ಮುಸ್ಲಿಮ್  ವಿದ್ಯಾರ್ಥಿಯ ಹೆತ್ತವರ ಮೇಲೆ ಒತ್ತಡವನ್ನೂ ತಂದರು. ಗುಜರಾತ್‌ನ ಮೆಹ್ಸಾನಾದಲ್ಲಿ ಇನ್ನೂ ಒಂದು ಆಘಾತಕಾರಿ ಘಟನೆ ನಡೆಯಿತು.  10ನೇ ತರಗತಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಅರ್ಸಾನ್ ಬಾನುಳನ್ನು ಸನ್ಮಾನಿಸದೇ ದ್ವಿತೀಯ ಸ್ಥಾನಿಯಾದ ಹಿಂದೂ ವಿದ್ಯಾರ್ಥಿ ನಿಯನ್ನು ಕರೆದು ಸನ್ಮಾನಿಸಿತು. ಚಂದ್ರಯಾನ ಯಶಸ್ವಿಯಾದ ಬೆನ್ನಿಗೇ ದೆಹಲಿಯ ಕೈಲಾಶ್ ನಗರದ ಹೇಮಾ ಗುಲಾಠಿ ಎಂಬ ಟೀಚರ್  ವಿವಾದಕ್ಕೆ ಗುರಿಯಾದರು. ‘ದೇಶಭಕ್ತಿ ಪಠ್ಯ’ವನ್ನು ಬೋಧಿಸುತ್ತಿದ್ದ ವೇಳೆ ಮುಸ್ಲಿಮ್ ವಿದ್ಯಾರ್ಥಿಗಳನ್ನುದ್ದೇಶಿಸಿ, ನೀವು ದೇಶದ ಸ್ವಾತಂತ್ರ‍್ಯ  ಹೋರಾಟಕ್ಕೆ ಯಾವ ಕೊಡುಗೆಯನ್ನೂ ನೀಡಿಲ್ಲ, ನಿಮಗೆ ಭಾರತದಲ್ಲಿರಲು ಅವಕಾಶವಿಲ್ಲ, ಪಾಕಿಸ್ತಾನಕ್ಕೆ ಹೋಗಿ, ಪ್ರಾಣಿ ಕೊಯ್ದು ತಿನ್ನುವವರು ನೀವು.. ಎಂದೆಲ್ಲಾ ನಿಂದಿಸಿದ್ದು ನಡೆಯಿತು. ಆ ಬಳಿಕ ಅವರ ಮೇಲೆ ಕ್ರಮ ಕೈಗೊಳ್ಳಲಾಯಿತು.

ಇವು 2023ರಲ್ಲಿ ಈ ದೇಶದಲ್ಲಿ ನಡೆದ ಮುಸ್ಲಿಮ್ ದ್ವೇಷದ ಕೆಲವು ಸ್ಯಾಂಪಲ್‌ಗಳಿವು. ಈ ದೇಶದಲ್ಲಿ ಅಧಿಕಾರದಲ್ಲಿರುವವರು ಮತ್ತು  ಮಾಧ್ಯಮಗಳು ಮುಸ್ಲಿಮ್ ದ್ವೇಷವನ್ನು ಉತ್ಪಾದಿಸಿ ಹಂಚುತ್ತಿದೆ ಮತ್ತು ಇದಕ್ಕೆ ವ್ಯಾಪಕ ಮಾರುಕಟ್ಟೆ ಒದಗುವಂತೆಯೂ  ನೋಡಿಕೊಳ್ಳುತ್ತಿದೆ. ನಿಜಕ್ಕೂ ಇದು ವಿಷಾದಕರ.

ಮುಸ್ಲಿಮ್ ಲೀಗ್, SDPI ಗೆ ಓಟು ಹಾಕದ ಮುಸ್ಲಿಮರು ಇಸ್ಲಾಮ್ ವಿರೋಧಿಗಳೇ?
1. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML)
2. ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ (AIMIM)
3. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)
4. ನ್ಯಾಶನಲ್ ಕಾನ್ಫರೆನ್ಸ್ (NC)
5. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PDP)
6. ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
7. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI)

ಮುಸ್ಲಿಮ್ ನಾಯಕತ್ವದ ಮತ್ತು ಮುಸ್ಲಿಮ್ ವ್ಯಕ್ತಿಗಳೇ ಸ್ಥಾಪಿಸಿರುವ ಈ ಯಾವ ರಾಜಕೀಯ ಪಕ್ಷಗಳಿಗೂ ಮುಸ್ಲಿಮರು ಇಸ್ಲಾಮನ್ನು  ಒತ್ತೆ ಇಟ್ಟಿಲ್ಲ. ಇವು ಎಂದಲ್ಲ, ಇವುಗಳ ಹೊರತಾಗಿ ಸಣ್ಣ-ಪುಟ್ಟ ಮುಸ್ಲಿಮ್ ನೇತೃತ್ವದ ಅನೇಕ ರಾಜಕೀಯ ಪಕ್ಷಗಳು ಈ ದೇಶದಲ್ಲಿವೆ.  ಈ ರಾಜಕೀಯ ಪಕ್ಷಗಳನ್ನು ಅಥವಾ ಇವುಗಳಲ್ಲಿ ಯಾವುದಾದರೂ ಒಂದನ್ನು ಇಸ್ಲಾಮಿನ ನಿಜವಾದ ರಕ್ಷಕ ಎಂದು ಷರಾ ಬರೆದು  ಮುಸ್ಲಿಮರು ಸಾಮೂಹಿಕವಾಗಿ ಅದನ್ನು ಬೆಂಬಲಿಸಿಲ್ಲ. ಮುಸ್ಲಿಮರು ಈ ಎಲ್ಲ ಪಕ್ಷಗಳನ್ನೂ ಬರೇ ರಾಜಕೀಯ ಪಕ್ಷಗಳಾಗಿಯಷ್ಟೇ  ನೋಡಿದ್ದಾರೆಯೇ ಹೊರತು ಇಸ್ಲಾಮಿನ ಅಭ್ಯುದಯಕ್ಕಾಗಿ ಸ್ಥಾಪಿಸಲ್ಪಟ್ಟ ಪಕ್ಷ ಎಂದು ಘೋಷಿಸಿದ್ದೋ  ಕರೆ ಕೊಟ್ಟದ್ದೋ  ಇಲ್ಲವೇ ಇಲ್ಲ.  ಈ ಎಲ್ಲ ರಾಜಕೀಯ ಪಕ್ಷಗಳಿದ್ದೂ ಮುಸ್ಲಿಮರು ಇವುಗಳಿಗೆ ಹೊರತಾದ ಮತ್ತು ಹಿಂದೂಗಳೇ ಸ್ಥಾಪಿಸಿರುವ ಹಾಗೂ ಹಿಂದೂಗಳ  ನಾಯಕತ್ವದಲ್ಲೇ  ಇರುವ ರಾಜಕೀಯ ಪಕ್ಷಗಳಿಗೆ ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳಾಗಿಯೇ  ನೋಡುವ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕೆ ಖಾಝಿಗಳನ್ನು (ನಿರ್ದಿಷ್ಟ ಧರ್ಮಗುರುಗಳು) ಅವಲಂಬಿಸುವ ವಿವೇಕವನ್ನು  ಮುಸ್ಲಿಮರು ಈವರೆಗೂ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ,

ಈ ಮಣ್ಣಿನಲ್ಲಿ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಿಗೆ ಭವ್ಯ ಇತಿಹಾಸವಿದೆ. ಭಾರತ ವಿಭಜನೆಯಾದ ಬಳಿಕ ಮುಹಮ್ಮದ್  ಇಸ್ಮಾಈಲ್ ಎಂಬವರ ನೇತೃತ್ವದಲ್ಲಿ 1948 ಮಾರ್ಚ್ 10ರಂದು ಆಲ್ ಇಂಡಿಯಾ ಮುಸ್ಲಿಮ್ ಲೀಗ್‌ನ ಮೊದಲ ಸಭೆ ಮದ್ರಾಸ್‌ನಲ್ಲಿ  ನಡೆಯಿತು. 1951 ಸೆ. 1ರಂದು ಇದರ ಹೆಸರನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML) ಎಂದು ಮರು ನಾಮಕರಣ ಮಾಡಲಾಯಿತು. 2004ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಮ್ ಲೀಗ್ ಸ್ಥಾನವನ್ನೂ ಪಡೆಯಿತು. ಈಗ ಮುಹಮ್ಮದ್  ಬಶೀರ್, ಅಬ್ದುಸ್ಸಮದ್ ಸಮದಾನಿ ಮತ್ತು ನವಾಜ್  ಎಂಬವರು ಲೋಕಸಭಾ ಸದಸ್ಯರಾಗಿ ಈ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ  ರಾಜ್ಯಸಭೆಯನ್ನು ಅಬ್ದುಲ್ ವಾಹಿದ್ ಪ್ರತಿ ನಿಧಿಸುತ್ತಿದ್ದಾರೆ. ಅಲ್ಲದೇ,
ಮುಹಮ್ಮದ್ ಇಸ್ಮಾಈಲ್ ಸಾಹಿಬ್ ಮತ್ತು ಮುಹಮ್ಮದ್ ಅಲಿ ಶಿಬಾಹ್ ತಂಙಳ್ ಅವರ ಹೆಸರಲ್ಲಿ ಅಂಚೆ ಚೀಟಿಯೂ  ಬಿಡುಗಡೆಯಾಗಿದೆ. ಪ್ರವಾದಿ ಕುಟುಂಬ ಪರಂಪರೆಯ ಸೈಯದ್ ಬಾಫಾಖಿ ತಂಙಳ್, ಸಾದಿಕ್ ಅಲಿ ಶಿಹಾಬ್ ತಂಙಳ್, ಹೈದರಲಿ  ಶಿಹಾಬ್ ತಂಙಳ್ ಸಹಿತ ಪಾಣಕ್ಕಾಡ್ ಕುಟುಂಬವೇ ಈ ಪಕ್ಷದ ಜೊತೆ ಇದ್ದರೂ ಮುಸ್ಲಿಮರು ಈ ಪಕ್ಷವನ್ನು ಇಸ್ಲಾಮ್‌ನ ರಕ್ಷಕನಂತೆ  ಅಥವಾ ಇಸ್ಲಾಮಿನ ಪ್ರತಿನಿಧಿಯಂತೆ ಕಂಡಿಲ್ಲ. ಕೇರಳದಲ್ಲಿ ಮುಸ್ಲಿಮರು ಈ ಪಕ್ಷಕ್ಕೆ ಮತ ಚಲಾಯಿಸಿದ್ದಕ್ಕಿಂತ ಹೆಚ್ಚು ಮತಗಳನ್ನು  ಹಿಂದೂ ನೇತೃತ್ವದ ಪಕ್ಷಗಳಿಗೆ ನೀಡಿದ್ದೂ ಇದೆ. ಇಸ್ಲಾಮಿನ ಹೆಸರಲ್ಲಿ ಈ ಪಕ್ಷ ಮತವನ್ನು ಕೇಳಿದ್ದೂ ಇಲ್ಲ. ಒಂದು ಕಡೆ ಪ್ರವಾದಿ  ಕುಟುಂಬ ಪರಂಪರೆಯವರ ಬೆಂಬಲ ಮತ್ತು ಇನ್ನೊಂದು ಕಡೆ ಮುಸ್ಲಿಮ್ ಲೀಗ್ ಎಂಬ ಹೆಸರಿನ ಹೊರತಾಗಿಯೂ ಮುಸ್ಲಿಮರು ಈ  ಪಕ್ಷವನ್ನು ಧರ್ಮದ ನೊಗ ಹೊತ್ತುಕೊಂಡ ಪಕ್ಷವಾಗಿ ಪರಿಗಣಿಸಿಲ್ಲ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಖಾಝಿಗಳ  ಹೊರತಾಗಿ ಇತರರನ್ನು ಅವಲಂಬಿಸುತ್ತಲೂ ಇಲ್ಲ. ಆದ್ದರಿಂದಲೇ, ಮುಸ್ಲಿಮ್ ನೇತೃತ್ವದ ಯಾವುದೇ ಪಕ್ಷಕ್ಕೆ ಧಾರ್ಮಿಕ ಭಾವನೆಗಳನ್ನು  ಕೆದಕಿ ಮತ ಪಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ.

ನವಾಬ್ ಮುಹಮ್ಮದ್ ನವಾಜ್  ಖಾನ್ ಖಿಲೇದಾರ್ ಎಂಬವರು 1927ರಲ್ಲಿ ಹೈದರಾಬಾದ್‌ನಲ್ಲಿ ಸ್ಥಾಪಿಸಿದ ಆಲ್ ಇಂಡಿಯಾ  ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಎಂಬ ರಾಜಕೀಯ ಪಕ್ಷಕ್ಕೂ ಈ ಮಣ್ಣಿನಲ್ಲಿ ದೊಡ್ಡ ಹೆಸರಿದೆ. 1958ರಲ್ಲಿ ಅಬ್ದುಲ್  ವಾಹಿದ್ ಓವೈಸಿ ಅಧ್ಯಕ್ಷರಾಗುವ ಮೂಲಕ ಓವೈಸಿ ಕುಟುಂಬದ ಪಾರಮ್ಯಕ್ಕೆ ಒಳಗಾದ ಈ ಪಕ್ಷವು ಇಂದಿನ ತೆಲಂಗಾಣದ ಹೊರತಾಗಿ  ಮಹಾರಾಷ್ಟ್ರ  ಮತ್ತು ಬಿಹಾರ ಅಸೆಂಬ್ಲಿಯಲ್ಲೂ ಜನಪ್ರತಿನಿಧಿಯನ್ನು ಹೊಂದಿದೆ. ಅಸದುದ್ದೀನ್ ಓವೈಸಿ ಸತತ ನಾಲ್ಕನೇ ಬಾರಿ  ಲೋಕಸಭಾ ಸದಸ್ಯರಾಗಿ ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈಗಿನ ತೆಲಂಗಾಣ ವಿಧಾನಸಭೆಯಲ್ಲಿ ಈ ಪಕ್ಷದ 7 ಮಂದಿ ಸದಸ್ಯರಿದ್ದಾರೆ. ಅಷ್ಟಕ್ಕೂ,  ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಎಂದರೆ ‘ಮುಸ್ಲಿಮರ ಐಕ್ಯತೆಗಾಗಿರುವ ಅಖಿಲ ಭಾರತ ಕೌನ್ಸಿಲ್’ ಎಂದು  ಅರ್ಥ. ಹೀಗೆ ಮುಸ್ಲಿಮರ ಐಕ್ಯತೆಯನ್ನು ಬಯಸುವ ಪಕ್ಷ ಎಂಬ ಹಣೆಪಟ್ಟಿ ಈ ಪಕ್ಷಕ್ಕಿದ್ದರೂ ಮುಸ್ಲಿಮರು ಈ ಪಕ್ಷಕ್ಕೆ ‘ಧರ್ಮರಕ್ಷಕ’  ಎಂಬ ಬಿರುದನ್ನು ಕೊಟ್ಟಿಲ್ಲ. ಅದನ್ನೊಂದು ರಾಜಕೀಯ ಪಕ್ಷವಾಗಿ ಪರಿಗಣಿಸಿದ್ದಾರೆಯೇ ಹೊರತು ಓವೈಸಿ ಪಕ್ಷಕ್ಕೆ ಮತ ಚಲಾಯಿಸದವರು ಇಸ್ಲಾಮ್ ವಿರೋಧಿಗಳು ಎಂದು ಎಲ್ಲೂ ಹೇಳಿಲ್ಲ. ಓವೈಸಿ ಪಕ್ಷದ ಮುಸ್ಲಿಮ್ ಅಭ್ಯರ್ಥಿಯ ಬದಲು ಹಿಂದೂ ನೇತೃತ್ವ ಪಕ್ಷದ  ಹಿಂದೂ ಅಭ್ಯರ್ಥಿಗೆ ಮುಸ್ಲಿಮರು ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಧರ್ಮವನ್ನು ದುರುಪಯೋಗಿಸುವುದಕ್ಕೆ  ಯಾವ ರಾಜಕೀಯ ಪಕ್ಷಕ್ಕೂ ಮುಸ್ಲಿಮರು ಅನುಮತಿಯನ್ನು ನೀಡುತ್ತಿಲ್ಲ.

ಅಸ್ಸಾಮ್ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು 2005ರಲ್ಲಿ ಸ್ಥಾಪಿಸಿದ ಉದ್ಯಮಿ ಮತ್ತು ಇಸ್ಲಾಮೀ ವಿದ್ವಾಂಸ ಬದ್ರುದ್ದೀನ್  ಅಜ್ಮಲ್‌ರು 2013ರಲ್ಲಿ ಇದಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF) ಎಂದು ಮರುನಾಮಕರಣ  ಮಾಡಿದರು. ಇವರು ಜಮೀಯತೆ ಉಲೆಮಾಯೆ ಹಿಂದ್ ಎಂಬ ಧಾರ್ಮಿಕ ಸಂಘಟನೆಯ ಅಸ್ಸಾಮ್ ಘಟಕದ ಅಧ್ಯಕ್ಷರೂ ಆಗಿದ್ದಾರೆ.  2005ರಲ್ಲಿ ಅಸ್ಸಾಮ್ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಇವರ ಪಕ್ಷ 10 ಸ್ಥಾನಗಳನ್ನು ಗೆದ್ದಿತ್ತು. 2011ರ ಅಸೆಂಬ್ಲಿ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿಯೂ ಗುರುತಿಸಿಕೊಂಡಿತ್ತು. 2014ರ ಲೋಕಸಭಾ  ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದು ಕೊಂಡ AIUDF, 2016ರ ಅಸ್ಸಾಮ್ ಅಸೆಂಬ್ಲಿ ಚುನಾವಣೆಯಲ್ಲಿ 13 ಸ್ಥಾನಕ್ಕೆ ಕುಸಿಯಿತು.  ಮಾತ್ರವಲ್ಲ, ಮತದಾರರು ಬದ್ರುದ್ದೀನ್ ಅಜ್ಮಲ್‌ರನ್ನೇ ಸೋಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಅವರೊಬ್ಬರೇ  ಆರಿಸಿ ಬಂದಿದ್ದಾರೆ. ಅಂದಹಾಗೆ,

25 ಶಿಕ್ಷಣ ಸಂಸ್ಥೆ ಮತ್ತು ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳನ್ನು ನಡೆಸುತ್ತಿರುವ ಇವರಿಗೆ ಧಾರ್ಮಿಕ ವಿದ್ವಾಂಸ ಎಂಬ ಹಣೆಪಟ್ಟಿ ಇದ್ದರೂ  ಇವರ ಪಕ್ಷಕ್ಕೆ ಮತ ಚಲಾಯಿಸದವರನ್ನು ‘ಇಸ್ಲಾಮ್ ವಿರೋಧಿ’ಗಳು ಎಂದು ಎಲ್ಲೂ ಯಾರೂ ಘೋಷಿಸಿಯೇ ಇಲ್ಲ. ಸ್ವತಃ ಅಜ್ಮಲ್  ಅವರನ್ನೇ ಸಲ್ಮಾರ ಕ್ಷೇತ್ರದ ಮತದಾರರು 2016 ರಲ್ಲಿ ಸೋಲಿಸಿದ್ದಾರೆ. ಒಂದುವೇಳೆ, ಅಜ್ಮಲ್ ಪಕ್ಷಕ್ಕೆ ಓಟು ಹಾಕುವುದೆಂದರೆ ಇಸ್ಲಾಮಿನ  ರಕ್ಷಣೆಗೆ ಓಟು ಹಾಕಿದಂತೆ ಎಂಬ ಭಾವ ಮುಸ್ಲಿಮರಲ್ಲಿ ಇದ್ದಿದ್ದೇ  ಆಗಿದ್ದರೆ 2014ರಲ್ಲಿ ಗೆದ್ದಿದ್ದ ಮೂರು ಲೋಕಸಭಾ ಸೀಟುಗಳು  2019ಕ್ಕಾಗುವಾಗ ಒಂದು ಸೀಟಾಗಿ ಕುಸಿಯುತ್ತಿರಲಿಲ್ಲ ಅಥವಾ 2011ರಲ್ಲಿ 18 ಅಸೆಂಬ್ಲಿ ಸೀಟುಗಳನ್ನು ಗೆದ್ದವರು 2016ರಲ್ಲಿ 13  ಸೀಟುಗಳಿಗೆ ತೃಪ್ತಿ ಪಡಬೇಕಾಗಿರಲಿಲ್ಲ. ಇದೇವೇಳೆ,

ಇ ಅಬೂಬಕರ್ ನೇತೃತ್ವದಲ್ಲಿ 2009 ಜೂನ್ 21ರಂದು ಸ್ಥಾಪನೆಯಾದ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)  ಮತ್ತು 2011 ಎಪ್ರಿಲ್ 18ರಂದು ಮುಜ್ತಬಾ  ಫಾರೂಖಿ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ಪಕ್ಷಗಳು ಈವರೆಗೆ ಲೋಕಸಭೆ ಅಥವಾ ವಿಧಾನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು  ಕಳುಹಿಸುವುದಕ್ಕೇ ಶಕ್ತವಾಗಿಲ್ಲ. ಈ ಎರಡೂ ಪಕ್ಷಗಳ ಕೇಂದ್ರ ನವದೆಹಲಿಯಲ್ಲಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆ  SDPI 29 ಕಡೆ ಸ್ಪರ್ಧಿಸಿತ್ತು. 2019ರಲ್ಲಿ 15 ಕಡೆ ಸ್ಪರ್ಧಿಸಿತ್ತು. 2013ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ 24 ಕಡೆ ಸ್ಪರ್ಧಿಸಿದ್ದರೆ, 2016ರ ತಮಿಳುನಾಡು ಅಸೆಂಬ್ಲಿ ಚುನಾವಣೆಯ ವೇಳೆ 30 ಕಡೆ ಸ್ಪರ್ಧಿಸಿತ್ತು. ಇದೇ ಅವಧಿಯಲ್ಲಿ ನಡೆದ ಕೇರಳ ಅಸೆಂಬ್ಲಿ  ಚುನಾವಣೆಯಲ್ಲಿ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೆಯೇ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು.  ಇದೇವೇಳೆ, WPI ಪಕ್ಷವು ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಈ ಎರಡೂ  ಪಕ್ಷಗಳ ಬದಲು ಹಿಂದೂ ನೇತೃತ್ವ ಪಕ್ಷದ ಹಿಂದೂ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮಾತ್ರ ವಲ್ಲ, ಹೀಗೆ ಮತ ಚಲಾಯಿಸಿದ  ಮುಸ್ಲಿಮರನ್ನು ‘ಇಸ್ಲಾಮ್ ವಿರೋಧಿಗಳು’ ಎಂದು ಸ್ವತಃ ಈ ಪಕ್ಷಗಳಾಗಲಿ ಅಥವಾ ಅದರ ಬೆಂಬಲಿಗರಾಗಲಿ ಎಲ್ಲೂ ಹೇಳಲೇ ಇಲ್ಲ.  ಇದರ ಹೊರತಾಗಿ,

ಮಾಜಿ ಗೃಹಸಚಿವ ಮುಫ್ತಿ ಮುಹಮ್ಮದ್ ಸಈದ್ 1999ರಲ್ಲಿ ಸ್ಥಾಪಿಸಿದ PDP ಮತ್ತು 1932ರಲ್ಲಿ ಶೈಕ್ ಅಬ್ದುಲ್ಲಾರಿಂದ ಸ್ಥಾಪಿತವಾದ  NC ಪಕ್ಷಗಳನ್ನು ಜಮ್ಮು-ಕಾಶ್ಮೀರದ ಮಂದಿ ಗೆಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷವನ್ನೂ ಗೆಲ್ಲಿಸಿದ್ದಾರೆ. ಮುಸ್ಲಿಮರೇ ಹೆಚ್ಚಿರುವ  ಕಾಶ್ಮೀರದಲ್ಲಿ ಈ ಮೂರು ಪಕ್ಷಗಳ ಹೊರತಾಗಿ ಬೇರೆ ಪಕ್ಷಗಳಲ್ಲಿ ಅಷ್ಟು ಬಲ ಇದ್ದಿಲ್ಲವಾದ್ದರಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ  ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಅಲ್ಲಿನ ಮುಸ್ಲಿಮರಿಗಿದೆ. ಈ ಆಯ್ಕೆಯೂ ಧರ್ಮಾಧಾರಿತವಾಗಿಲ್ಲ ಅನ್ನುವುದೂ ಸ್ಪಷ್ಟ.  ಫಾರೂಖ್ ಅಬ್ದುಲ್ಲಾರನ್ನು ಮುಖ್ಯಮಂತ್ರಿಯಾಗಿಸಿದ ಅದೇ ಜನತೆ ಮುಫ್ತಿ ಮುಹಮ್ಮದ್ ರನ್ನೂ  ಮುಖ್ಯಮಂತ್ರಿಯಾಗಿಸಿದೆ  ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೆಹಬೂಬಾ ಮುಫ್ತಿ ಕೂಡಾ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾಗಿ,

ಇಸ್ಲಾಮಿನ ನೊಗ ಖಾಝಿಗಳ ಕೈಯಲ್ಲಿದೆಯೇ ಹೊರತು ಯಾವುದೇ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಲ್ಲಿಲ್ಲ. ರಾಜಕೀಯ  ಪಕ್ಷದ ನಾಯಕ ಎಷ್ಟೇ ಧರ್ಮಿಷ್ಠನಾಗಿರಲಿ ಮುಸ್ಲಿಮರು ತಮ್ಮ ಧರ್ಮದ ವ್ಯಾಖ್ಯಾನಕ್ಕಾಗಿ ಮತ್ತು ಸಾಂದರ್ಭಿಕ ಅಭಿಪ್ರಾಯಗಳಿಗಾಗಿ  ಖಾಝಿಗಳನ್ನೇ ಸಂಪರ್ಕಿಸುತ್ತಾರೆ. ಖಾಝಿಗಳಿಗೆ ಮುಸ್ಲಿಮರಲ್ಲಿ ವಿಶೇಷ ಸ್ಥಾನಮಾನವಿದೆ. ಅವರು ಸಾಮಾನ್ಯ ಮಸೀದಿಯ  ಧರ್ಮಗುರುಗಳಂಥಲ್ಲ. ಅವರು ಪಕ್ಷ-ಸಂಘಟನೆಯ ಮುಲಾಜಿಗೆ ಬೀಳದೇ ಧರ್ಮ ತತ್ವವನ್ನು ಹೇಳಬಲ್ಲವರು. ನಿಜವಾಗಿ, ಇಸ್ಲಾಮಿನ  ವರ್ಚಸ್ಸು ಉಳಿದಿರುವುದೇ ಮುಸ್ಲಿಮರೊಳಗಿನ ಈ ಬಗೆಯ ವ್ಯವಸ್ಥೆಯಿಂದ. ರಾಜಕೀಯ ಪಕ್ಷಗಳನ್ನು ಬರೇ ಪಕ್ಷಗಳಾಗಿ ಮತ್ತು  ಅವುಗಳ ಚಟುವಟಿಕೆಗಳನ್ನು ರಾಜಕೀಯಕ್ಕೆ ಸೀಮಿತವಾಗಿ ನೋಡುವುದಕ್ಕೆ ಮುಸ್ಲಿಮರಿಗೆ ಸಾಧ್ಯವಾಗಿರುವುದು ಖಾಝಿ ಸಿಸ್ಟಮ್‌ನಿಂದ.  ಮುಸ್ಲಿಮರಿಗೆ ಮಾರ್ಗದರ್ಶನ ಮಾಡುವ ಮತ್ತು ಯಾವುದು ಇಸ್ಲಾಮ್ ಮತ್ತು ಯಾವುದಲ್ಲ ಎಂದು ಹೇಳುವ ಹೊಣೆಗಾರಿಕೆ ಬಹುತೇಕ  ಇವರ ಹೆಗಲ ಮೇಲಿದೆ. ಮುಸ್ಲಿಮರಲ್ಲಿರುವ ವಿವಿಧ ಸಂಘಟನೆಗಳೂ ಖಾಝಿಗಳ ಮಾತುಗಳಿಗೆ ಕಿವಿಯಾಗುತ್ತವೆ. ಸಂಘಟನಾ ರಹಿತ  ಮತ್ತು ಪಕ್ಷರಹಿತವಾಗಿ ವರ್ತಿಸುವ ಜವಾಬ್ದಾರಿಯೂ ಖಾಝಿಗಳ ಮೇಲಿರುತ್ತದೆ. ಒಂದುವೇಳೆ, ಈ ಖಾಝಿ ಸಿಸ್ಟಮ್ ಇಲ್ಲದೇ  ಇರುತ್ತಿದ್ದರೆ ರಾಜಕೀಯ ಪಕ್ಷಗಳು ಆ ಶೂನ್ಯವನ್ನು ದುರುಪ ಯೋಗಿಸುತ್ತಿದ್ದುವೋ ಏನೋ? ಅಂದಹಾಗೆ,

ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು ಹಿಂದೂ ಧರ್ಮ ರಕ್ಷಕನಂತೆ ಮತ್ತು ಅದಕ್ಕೆ ಮತ ಚಲಾಯಿಸದವರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸಲಾಗುತ್ತಿರುವುದನ್ನು ಕಂಡು ಇವೆಲ್ಲ ನೆನಪಾಯಿತು. ಹಾಗಂತ, ಧರ್ಮವನ್ನು ರಾಜಕೀಯ ಪಕ್ಷದ ವಶಕ್ಕೆ ಒಪ್ಪಿಸುವುದು  ಅತ್ಯಂತ ಅಪಾಯಕಾರಿ.

Tuesday, January 16, 2024

ಹಿಜಾಬ್‌ಗೆ ಕೇಸರಿ ಶಾಲು ಉತ್ತರವೇ?
1. ಹಿಜಾಬ್
2. ಕೇಸರಿ ಶಾಲು
3. ಧರ್ಮ

ನಿಜಕ್ಕೂ ಹಿಜಾಬ್‌ಗೆ ಕೇಸರಿ ಶಾಲು ಪರ್ಯಾಯವೇ, ಸಮಾನವೇ ಅಥವಾ ಉತ್ತರವೇ? 2022 ಫೆಬ್ರವರಿ 5ರಂದು ಮುಖ್ಯಮಂತ್ರಿ  ಬೊಮ್ಮಾಯಿ ಘೋಷಿಸಿದ್ದ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ  ಡಿಸೆಂಬರ್ 22, 2023ರಂದು ಘೋಷಿಸಿದ ಬಳಿಕ ಹಿಜಾಬ್ ಮತ್ತು ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಅನೇಕರು  ಚರ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬಹುದೆಂದಾದರೆ, ಕೇಸರಿ ಶಾಲು ಧರಿಸಿಯೂ ಕಾಲೇಜಿಗೆ ಹೋಗಬಹುದು  ಎಂಬುದು ಈ ವಾದದ ಮುಖ್ಯ ಅಂಶ. ಅಷ್ಟಕ್ಕೂ,

ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿ ಮಾಡಿ ಚರ್ಚಿಸುವುದು ಸೂಕ್ತವೇ? ಇಸ್ಲಾಮ್‌ನಲ್ಲಿ ಹಿಜಾಬ್‌ಗಿರುವ ಧಾರ್ಮಿಕ ಮಹತ್ವವು  ಹಿಂದೂಗಳಲ್ಲಿ ಕೇಸರಿ ಶಾಲ್‌ಗೂ ಇದೆಯೆಂದಾದರೆ, ಮತ್ತೇಕೆ ಹಿಜಾಬ್‌ನಂತೆ ಸಾರ್ವಜನಿಕವಾಗಿ ಹಿಂದೂಗಳು ಕೇಸರಿ ಶಾಲನ್ನು ಸದಾ  ಧರಿಸುತ್ತಿಲ್ಲ? ಕಾಲೇಜು ಉಪನ್ಯಾಸಕರಿಂದ ಹಿಡಿದು ಐಟಿಬಿಟಿ ಉದ್ಯೋಗಿಗಳ ವರೆಗೆ, ಶಾಸಕರಿಂದ ಹಿಡಿದು ಸಂಸದರ ವರೆಗೆ, ರಾಜ್ಯಪಾಲರಿಂದ ಹಿಡಿದು ರಾಷ್ಟ್ರಪತಿವರೆಗೆ, ಮುಖ್ಯಮಂತ್ರಿಗಳಿಂದ  ಹಿಡಿದು ಪ್ರಧಾನ ಮಂತ್ರಿಯವರೆಗೆ, ವಕೀಲರಿಂದ ಹಿಡಿದು ಮುಖ್ಯ  ನ್ಯಾಯಾಧೀಶರವರೆಗೆ... ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಪುರುಷರು ಮತ್ತು ಮಹಿಳೆಯರೇ ತುಂಬಿರಬೇಕಿತ್ತಲ್ಲ? ರಿಕ್ಷಾ ಡ್ರೈವರ್,  ಕಾರು, ಬಸ್ಸು ಚಾಲಕರು, ಪೈಲಟ್‌ಗಳು, ವೈದ್ಯರು, ದಾದಿಯರು, ಕೂಲಿ ಕಾರ್ಮಿಕರು, ಉದ್ಯಮಿಗಳು, ಅದಾನಿ-ಅಂಬಾನಿಗಳು.. ಎಲ್ಲರೂ  ಕೇಸರಿ ಶಾಲನ್ನು ಧರಿಸಿಯೇ ಇರಬೇಕಿತ್ತಲ್ಲ? ಯಾಕಿಲ್ಲ? ಈ ದೇಶದ 99.99% ಹಿಂದೂಗಳು ಕೂಡಾ ಸಾರ್ವಜನಿಕ ಜೀವನದಲ್ಲಿ ಕೇಸರಿ  ಶಾಲನ್ನು ಒಂದು ಅಭ್ಯಾಸವಾಗಿ ಧರಿಸುತ್ತಲೇ ಇಲ್ಲ. ಖಾಸಗಿ ಬದುಕಿನಲ್ಲೂ ಕೇಸರಿ ಶಾಲು ಅವಿಭಾಜ್ಯ ಅಂಗವಾಗಿಲ್ಲ. ನಿರ್ದಿಷ್ಟ  ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಲ್ಪಸ್ವಲ್ಪ ಕೇಸರಿ ಶಾಲು ಧರಿಸಿದವರನ್ನು  ಕಾಣಬಹುದೇ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಕೇಸರಿ ಶಾಲು ರೂಢಿಯಾಗಿ ಬಳಕೆಯಾಗುತ್ತಿಲ್ಲ. ಆದರೆ,

ಹಿಜಾಬ್ ಅಥವಾ ಶಿರವಸ್ತ್ರ ಹಾಗಲ್ಲ. ಮುಸ್ಲಿಮ್ ಮಹಿಳೆಯರು ಮನೆಯಲ್ಲೂ ಶಿರವಸ್ತ್ರ ಧರಿಸುತ್ತಾರೆ. ಬಸ್, ರೈಲು, ವಿಮಾನ  ಪ್ರಯಾಣದಲ್ಲೂ ಶಿರವಸ್ತ್ರ ಧರಿಸುತ್ತಾರೆ. ಸರಕಾರಿ ಕಚೇರಿಯಲ್ಲೂ, ಶಿಕ್ಷಣ ಸಂಸ್ಥೆಯಲ್ಲೂ, ಖಾಸಗಿ ಉದ್ಯೋಗ ಸ್ಥಳದಲ್ಲೂ, ಶಾಸನ  ಸಭೆಯಲ್ಲೂ, ನ್ಯಾಯಾಧೀಶರಾಗಿರುವಾಗಲೂ, ವೈದ್ಯರು, ದಾದಿಯಾಗಿರುವಾಗಲೂ, ಮಾರುಕಟ್ಟೆಯಲ್ಲೂ.. ಹೀಗೆ ಎಲ್ಲೆಡೆಯೂ ಹಿಜಾಬ್  ಧರಿಸಿಯೇ ಕಾಣಸಿಗುತ್ತಾರೆ. ಅಂದ ಹಾಗೆ, ಬುರ್ಖಾ ಧರಿಸದ ಮುಸ್ಲಿಮ್ ಮಹಿಳೆಯರು ಧಾರಾಳ ಇದ್ದಾರೆ. ಆದರೆ ಹಿಜಾಬ್ ಧರಿಸದ  ಮುಸ್ಲಿಮ್ ಮಹಿಳೆಯರು ಕಾಣಸಿಗುವುದು ಅಪರೂಪ. ಒಂದುವೇಳೆ, ಹಿಜಾಬ್‌ನಷ್ಟು ಕೇಸರಿ ಶಾಲ್‌ಗೂ ಹಿಂದೂ ಧರ್ಮದಲ್ಲಿ  ಮಹತ್ವ ಇರುತ್ತಿದ್ದರೆ, ಸಾರ್ವಜನಿಕ ಬದುಕಿನಲ್ಲಿ ಅದು ಇಷ್ಟು ಅಪರೂಪ ಆಗಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ಹಿಂದೂಗಳಲ್ಲಿ  ರೂಢಿಯಾಗಿ ಬಳಕೆಯಲ್ಲಿರುತ್ತಿತ್ತು. ಹೇಗೆ ಬಿಂದಿ, ನಾಮ, ಕಾಲುಂಗುರ, ಕರಿಮಣಿ... ಇತ್ಯಾದಿಗಳು ಸಹಜವಾಗಿ ಬಳಕೆಯಲ್ಲಿವೆಯೋ  ಹಾಗೆ. ಇವುಗಳಿಗೆ ಧಾರ್ಮಿಕ ಹಿನ್ನೆಲೆ ಇರುವುದರಿಂದ ಇವು ಮನೆಯಿಂದ ಹಿಡಿದು ಶಾಸನ ಸಭೆಯವರೆಗೆ ಮತ್ತು ಶಾಲಾ- ಕಾಲೇಜುಗಳಿಂದ ಹಿಡಿದು ಸರಕಾರಿ ಕಚೇರಿಗಳ ವರೆಗೆ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧಿಸಿ  2022 ಫೆಬ್ರವರಿ 5ರಂದು ಬೊಮ್ಮಾಯಿ ಸರಕಾರ ಆದೇಶ ಹೊರಡಿಸುವಾಗಲೂ ಹಿಂದೂ ವಿದ್ಯಾರ್ಥಿಗಳು ಬಿಂದಿ, ನಾಮ, ಕೆಂಪು  ದಾರವನ್ನು ಕಟ್ಟಿಕೊಂಡು ಕಾಲೇಜಿಗೆ ಬರುತ್ತಿದ್ದರು. ಯಾಕೆಂದರೆ, ಅದು ಅವರ ಬದುಕಿನ ಭಾಗ. ಧಾರ್ಮಿಕವಾಗಿ ಅವುಗಳಿಗಿರುವ  ಮಹತ್ವವೇ ಅದನ್ನು ನಿತ್ಯ ರೂಢಿಯಾಗಿಸಿದೆ. ನಿಜವಾಗಿ,

ಹಿಜಾಬ್‌ಗೆ ಮುಖಾಮುಖಿಯಾಗಿಸಬೇಕಾದದ್ದು ಇವುಗಳನ್ನು. ಬಿಂದಿ, ಕಾಲುಂಗುರ, ನಾಮ, ಕರಿಮಣಿ... ಮುಂತಾದವುಗಳು ಸಂಪೂರ್ಣವಲ್ಲದಿದ್ದರೂ ಒಂದು ಹಂತದ ವರೆಗೆ ಹಿಜಾಬ್‌ಗೆ ತದ್ರೂಪವಾಗಿ ತೋರಿಸಬಹುದು. ಆದರೆ ಹಿಜಾಬ್ ವಿವಾದ ಆರಂಭವಾದ  2022 ಜನವರಿಯಿಂದ ಇವತ್ತಿನವರೆಗೆ ಅತಿ ಬುದ್ಧಿವಂತರು ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಚರ್ಚಿಸುತ್ತಿದ್ದಾರೆ.  ಅಲ್ಲದೇ, ಸಿಕ್ಖ್ ವಿದ್ಯಾರ್ಥಿಗಳು ಧರಿಸುವ ಪೇಟವನ್ನು ಎಲ್ಲೂ ಚರ್ಚೆಯ ವ್ಯಾಪ್ತಿಗೆ ತರುತ್ತಲೂ ಇಲ್ಲ. ಅಂದರೆ, ಇಲ್ಲಿರುವುದು  ಮುಸ್ಲಿಮ್ ದ್ವೇಷವೇ ಹೊರತು ಇನ್ನೇನೂ ಅಲ್ಲ. 2022 ಜನವರಿಯಲ್ಲಿ ಹಿಜಾಬನ್ನು ಉಡುಪಿಯ ಸರಕಾರಿ ಹೆಣ್ಣು ಮಕ್ಕಳ ಕಾಲೇಜು  ವಿವಾದವಾಗಿ ಮಾರ್ಪಡಿಸಿದ ಬಳಿಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಕುಂದಾಪುರದ ಭಂಡಾರ್‌ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್  ಕಾಲೇಜು ಪ್ರವೇಶ ನಿರಾಕರಿಸಿತು. ಆದರೆ, ಹಿಜಾಬ್‌ಗೆ ಅವಕಾಶ ಇದೆ ಎಂದು ಕಾಲೇಜು ರೂಲ್ ಬುಕ್‌ನಲ್ಲಿ ಇರುವುದನ್ನು ಈ  ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಕೂಡಾ ಫೆ.  5ರ ಸರಕಾರಿ ಆದೇಶದ ಬಳಿಕ ಹಿಜಾಬ್‌ಗೆ ನಿಷೇಧ ಹೇರಿತು. ಆದರೆ, ಈ ಮೊದಲು ಈ ಕಾಲೇಜಿನಲ್ಲಿ ಹಿಜಾಬ್‌ಗೆ ಯಾವ ನಿಷೇಧವೂ  ಇರಲಿಲ್ಲ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಕುಂದುಪಾರ ಕಾಲೇಜು ಕೂಡಾ ಹಿಜಾಬ್‌ಧಾರಿ  ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಿತು. ಪ್ರಶ್ನೆ ಇರುವುದೂ ಇಲ್ಲೇ. ಒಂದುವೇಳೆ, ಹಿಜಾಬ್ ನಷ್ಟು ಮಹತ್ವ ಕೇಸರಿ ಶಾಲ್‌ಗೂ  ಇದೆಯೆಂದಾದರೆ, 2022ರ ಫೆಬ್ರವರಿಗಿಂತ ಮೊದಲೇ ಹಿಜಾಬ್‌ನಂತೆಯೇ ಕೇಸರಿ ಶಾಲ್ ಧರಿಸಲು ತಮಗೂ ಅನುಮತಿ ಕೊಡಿ  ಎಂದು ಯಾವ ವಿದ್ಯಾರ್ಥಿಗಳೂ ಯಾಕೆ ಶಾಲಾಡಳಿತವನ್ನು ಕೋರಿಕೊಂಡಿಲ್ಲ ಅಥವಾ ಹಿಜಾಬ್ ಧರಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು  ಬರುವಂತೆಯೇ ಸಹಜವಾಗಿ ಕೇಸರಿ ಶಾಲು ಧರಿಸಿಕೊಂಡು ಯಾಕೆ ಬರಲಿಲ್ಲ? ಉಡುಪಿಯ ವಿದ್ಯಾರ್ಥಿನಿಯರಿಗೆ ಹಿಜಾಬನ್ನು ನಿರಾಕರಿಸಲಾದ  ಬಳಿಕವೇ ಏಕೆ ಕೇಸರಿ ಶಾಲು ಮುನ್ನೆಲೆಗೆ ಬಂತು? ಹಿಜಾಬ್‌ನಂತೆ ಇದು ಜೀವನರೂಢಿ ಆಗಿಲ್ಲ ಎಂಬುದನ್ನೇ ಇದು  ಸೂಚಿಸುತ್ತದಲ್ಲವೇ? ನಿಜವಾಗಿ,

ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ್ತ್ರದ್ದೇ ಭಾಗವಾದ ಶಾಲನ್ನು ತಲೆಗೆ ಹಾಕಿಕೊಳ್ಳಲು ಬಯಸಿದ್ದರೇ ಹೊರತು ಸಾರ್ವಜನಿಕವಾಗಿ  ರೂಢಿಯಲ್ಲಿರುವ ಶಿರವಸ್ತ್ರದ ಮಾದರಿಯನ್ನಲ್ಲ. ಬಟ್ಟೆಯಿಂದ ಸದಾ ತಲೆ ಮುಚ್ಚಿರಬೇಕು ಅನ್ನುವುದು ಮುಸ್ಲಿಮರ ಧಾರ್ಮಿಕ ನಂಬಿಕೆ.  ಸಮವಸ್ತ್ರವು ಯಾವ ಶಾಲನ್ನು ಕುತ್ತಿಗೆಗೆ ಹಾಕಿಕೊಳ್ಳಲು ಅನುಮತಿಸುತ್ತದೋ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುತ್ತೇವೆ  ಎಂದಷ್ಟೇ ವಿದ್ಯಾರ್ಥಿನಿಯರು ಕೋರಿಕೊಂಡಿದ್ದರು. ಇದು ಸಂಪೂರ್ಣವಾಗಿ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯ. ಸಮವಸ್ತ್ರದ  ಜೊತೆ ಶಾಲು ಅನುಮತಿಸಿರುವುದು ವಿದ್ಯಾರ್ಥಿನಿಯರಿಗೆ ಮಾತ್ರ. ವಿದ್ಯಾರ್ಥಿ ಗಳ ಸಮವಸ್ತ್ರದಲ್ಲಿ ಶಾಲ್‌ಗೆ ಅವಕಾಶವಿಲ್ಲ. ಆದರೆ,  ಹಿಜಾಬನ್ನು ನೆಪ ಮಾಡಿಕೊಂಡು ಗಂಡು ಮಕ್ಕಳು ಕೇಸರಿ ಶಾಲನ್ನು ಶಾಲೆಯೊಳಗೆ ತಂದರು. ಇದು ಪೂರ್ಣವಾಗಿ ದ್ವೇಷ ರಾಜಕೀಯ  ಪಿತೂರಿಯಿಂದಾಗಿತ್ತೇ ಹೊರತು ಧರ್ಮ ಪ್ರೇಮದಿಂದ ಅಲ್ಲವೇ ಅಲ್ಲ. ಅಷ್ಟಕ್ಕೂ,

ಕಾಲೇಜು ಕುಸ್ತಿ ಅಖಾಡವೂ ಅಲ್ಲ, ಹಿಜಾಬ್ ಮತ್ತು ಕೇಸರಿ ಶಾಲು ಜಟ್ಟಿಗಳೂ ಅಲ್ಲ. ವಿದ್ಯಾರ್ಥಿಗಳನ್ನು ಹಿಂದೂ-ಮುಸ್ಲಿಮ್ ಆಗಿ  ವಿಭಜಿಸುವ ಷಡ್ಯಂತ್ರವೊಂದರ ಭಾಗವಾಗಿಯೇ ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಹಿಜಾಬ್ ಎಂಬುದು  ಕೇಸರಿ ವಿರೋಧಿ ಅಲ್ಲ. ಹಿಜಾಬ್‌ಗೆ ನಿರ್ದಿಷ್ಟ ಬಣ್ಣವೂ ಇಲ್ಲ. ಒಂದುವೇಳೆ ಯಾವುದೇ ಕಾಲೇಜು ಕೇಸರಿ ಬಣ್ಣವನ್ನು ಸಮವಸ್ತ್ರದ  ಬಣ್ಣವಾಗಿ ಆಯ್ಕೆ ಮಾಡಿಕೊಂಡರೆ ಮತ್ತು ಕೇಸರಿ ಬಣ್ಣದ ಶಾಲನ್ನೇ ಧರಿಸಬೇಕೆಂದು ಹೇಳಿದರೆ ಮುಸ್ಲಿಮ್ ಹೆಣ್ಣು ಮಕ್ಕಳೂ ಅದೇ  ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುವ ಅವಕಾಶವನ್ನಷ್ಟೇ ಕೋರುತ್ತಾರೆಯೇ ಹೊರತು ಬೇರೆಯೇ ಬಣ್ಣದ ಹಿಜಾಬ್ ಧರಿಸುತ್ತೇವೆ  ಎಂದು ಖಂಡಿತ ಹೇಳುವುದಿಲ್ಲ. ಯಾಕೆಂದರೆ, ಹಿಜಾಬ್ ಫ್ಯಾಶನ್ ಅಲ್ಲ, ಅದು ಬದುಕಿನ ಭಾಗ. ಅದಕ್ಕೆ ಬಣ್ಣ ಮುಖ್ಯ ಅಲ್ಲ, ತಲೆ  ಮುಚ್ಚುವುದೇ ಅದರ ಗುರಿ. ಆದರೆ,

ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಇನ್ನಿಲ್ಲದ ಕಾಟವನ್ನು ಕೊಡಲಾಯಿತು. ಹಿಜಾಬ್  ಧರಿಸಿ  ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಲಾಯಿತು. ಹಿಜಾಬ್ ಧರಿಸುವುದನ್ನು ಮೂಲಭೂತ ವಾದವೆಂಬಂತೆ  ಬಿಂಬಿಸಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರು ಅತ್ಯಂತ ಏಕಮುಖವಾಗಿ ನಡಕೊಂಡರು. ಯೂನಿ ಫಾರ್ಮ್ ನ  ಭಾಗವಾಗಿ  ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂದ ವಿದ್ಯಾರ್ಥಿನಿಯರ ಬೇಡಿಕೆಯನ್ನು ತಿರಸ್ಕರಿಸಿದರು. ಅವರದೇ ಪಕ್ಷದ  ಶಾಸಕರು ಮತ್ತು ನಾಯಕರು ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲನ್ನು ಪ್ರಚೋದಿಸಿದರು. ಉಡುಪಿ ಜಿಲ್ಲೆಯಲ್ಲಿ ಉಚಿತವಾಗಿ ಕೇಸರಿ  ಶಾಲನ್ನು ವಿತರಿಸಲಾದ ಘಟನೆಯೂ ನಡೆಯಿತು. ಈ ಸನ್ನಿವೇಶದಲ್ಲಿ ಸರಕಾರವೂ ಸೇರಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು  ಹಿಂದೂ-ಮುಸ್ಲಿಮ್ ಆದರೇ ಹೊರತು ಜವಾಬ್ದಾರಿಯುತವಾಗಿ ವರ್ತಿಸಲೇ ಇಲ್ಲ. ಸರಕಾರ ತಾನು 6 ಕೋಟಿ ಕನ್ನಡಿಗರಿಗೆ  ಉತ್ತರದಾಯಿ ಎಂಬುದನ್ನೇ ಮರೆತು ಒಂದು ಗುಂಪಿನ ಪರ ಬಲವಾಗಿಯೇ ನಿಂತಿತು. ಒಂದು ಪುಟ್ಟ ಸುತ್ತೋಲೆಯಿಂದ  ನಿಭಾಯಿಸಬಹುದಾಗಿದ್ದ ಪ್ರಕರಣವನ್ನು ಮೂರು ದಿನಗಳ ಕಾಲ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಸಾರುವಂಥ ಗಂಭೀರ  ಸ್ಥಿತಿಗೆ ತಳ್ಳಿತು. ಹೈಕೋರ್ಟ್ನಲ್ಲೂ ಹಿಜಾಬ್‌ನ ವಿರುದ್ಧ ವಾದಿಸಿತು. ಮಾತ್ರವಲ್ಲ, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ತಿ,  ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಝೈಬುನ್ನಿಸಾ ಎಂ. ಕಾಝಿ ಅವರಿದ್ದ ಪೀಠವು ಬೊಮ್ಮಾಯಿ ಸರಕಾರದ ಆದೇಶವನ್ನೇ  ಎತ್ತಿ ಹಿಡಿಯಿತು. ಪ್ರಕರಣ ಈಗ ಸುಪ್ರೀಮ್ ಕೋರ್ಟ್ನಲ್ಲಿದೆ. ಈ ನಡುವೆಯೇ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ,

ಸುಪ್ರೀಮ್ ಕೋರ್ಟ್ನಲ್ಲಿರುವ ಪ್ರಕರಣವೊಂದನ್ನು ಹಿಂಪಡೆಯಲು ಸಾಧ್ಯವೇ, ಅದಕ್ಕಿರುವ ದಾರಿಗಳೇನು, ಕಾನೂನು ಇತಿಮಿತಿಗಳು  ಏನೆಲ್ಲ ಎಂಬ ಪ್ರಶ್ನೆಗಳಾಚೆಗೆ ಸಿದ್ದರಾಮಯ್ಯ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಲೋಕಸಭಾ ಚುನಾ ವಣೆ ಹತ್ತಿರವಿರುವಂತೆಯೇ  ಇಂಥ ಹೇಳಿಕೆ ಕೊಡುವುದು ಸುಲಭ ಅಲ್ಲ. ಬಿಜೆಪಿ ಇದನ್ನು ಮುಸ್ಲಿಮ್ ಓಲೈಕೆ ಎಂದು ಹೇಳಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ  ಇದ್ದೂ ಸಿದ್ದರಾಮಯ್ಯ ಇಂಥ ನಿಲುವು ಪ್ರದರ್ಶಿಸುತ್ತಾರೆಂದರೆ ಅದರ ಹಿಂದೆ ಅವರ ದಮನಿತ ಪರ ಕಾಳಜಿ ಸ್ಪಷ್ಟವಾಗುತ್ತದೆ. ಚುನಾವಣೆಯ ಲಾಭ-ನಷ್ಟಕ್ಕಿಂತ ನ್ಯಾಯದಾನವೇ ಮುಖ್ಯ ಎಂದು ಅವರು ಸಾರಿದ ಸಂದೇಶಕ್ಕೆ ಧನ್ಯವಾದ ಹೇಳಬೇಕಾಗುತ್ತದೆ.