1. ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML)
2. ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ (AIMIM)
3. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF)
4. ನ್ಯಾಶನಲ್ ಕಾನ್ಫರೆನ್ಸ್ (NC)
5. ಪೀಪಲ್ಸ್ ಡೆಮಾಕ್ರಾಟಿಕ್ ಪಾರ್ಟಿ (PDP)
6. ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI)
7. ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI)
ಮುಸ್ಲಿಮ್ ನಾಯಕತ್ವದ ಮತ್ತು ಮುಸ್ಲಿಮ್ ವ್ಯಕ್ತಿಗಳೇ ಸ್ಥಾಪಿಸಿರುವ ಈ ಯಾವ ರಾಜಕೀಯ ಪಕ್ಷಗಳಿಗೂ ಮುಸ್ಲಿಮರು ಇಸ್ಲಾಮನ್ನು ಒತ್ತೆ ಇಟ್ಟಿಲ್ಲ. ಇವು ಎಂದಲ್ಲ, ಇವುಗಳ ಹೊರತಾಗಿ ಸಣ್ಣ-ಪುಟ್ಟ ಮುಸ್ಲಿಮ್ ನೇತೃತ್ವದ ಅನೇಕ ರಾಜಕೀಯ ಪಕ್ಷಗಳು ಈ ದೇಶದಲ್ಲಿವೆ. ಈ ರಾಜಕೀಯ ಪಕ್ಷಗಳನ್ನು ಅಥವಾ ಇವುಗಳಲ್ಲಿ ಯಾವುದಾದರೂ ಒಂದನ್ನು ಇಸ್ಲಾಮಿನ ನಿಜವಾದ ರಕ್ಷಕ ಎಂದು ಷರಾ ಬರೆದು ಮುಸ್ಲಿಮರು ಸಾಮೂಹಿಕವಾಗಿ ಅದನ್ನು ಬೆಂಬಲಿಸಿಲ್ಲ. ಮುಸ್ಲಿಮರು ಈ ಎಲ್ಲ ಪಕ್ಷಗಳನ್ನೂ ಬರೇ ರಾಜಕೀಯ ಪಕ್ಷಗಳಾಗಿಯಷ್ಟೇ ನೋಡಿದ್ದಾರೆಯೇ ಹೊರತು ಇಸ್ಲಾಮಿನ ಅಭ್ಯುದಯಕ್ಕಾಗಿ ಸ್ಥಾಪಿಸಲ್ಪಟ್ಟ ಪಕ್ಷ ಎಂದು ಘೋಷಿಸಿದ್ದೋ ಕರೆ ಕೊಟ್ಟದ್ದೋ ಇಲ್ಲವೇ ಇಲ್ಲ. ಈ ಎಲ್ಲ ರಾಜಕೀಯ ಪಕ್ಷಗಳಿದ್ದೂ ಮುಸ್ಲಿಮರು ಇವುಗಳಿಗೆ ಹೊರತಾದ ಮತ್ತು ಹಿಂದೂಗಳೇ ಸ್ಥಾಪಿಸಿರುವ ಹಾಗೂ ಹಿಂದೂಗಳ ನಾಯಕತ್ವದಲ್ಲೇ ಇರುವ ರಾಜಕೀಯ ಪಕ್ಷಗಳಿಗೆ ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳಾಗಿಯೇ ನೋಡುವ ಮತ್ತು ಧಾರ್ಮಿಕ ಮಾರ್ಗದರ್ಶನಕ್ಕೆ ಖಾಝಿಗಳನ್ನು (ನಿರ್ದಿಷ್ಟ ಧರ್ಮಗುರುಗಳು) ಅವಲಂಬಿಸುವ ವಿವೇಕವನ್ನು ಮುಸ್ಲಿಮರು ಈವರೆಗೂ ಪ್ರದರ್ಶಿಸುತ್ತಾ ಬಂದಿದ್ದಾರೆ. ಹಾಗೆ ನೋಡಿದರೆ,
ಈ ಮಣ್ಣಿನಲ್ಲಿ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಿಗೆ ಭವ್ಯ ಇತಿಹಾಸವಿದೆ. ಭಾರತ ವಿಭಜನೆಯಾದ ಬಳಿಕ ಮುಹಮ್ಮದ್ ಇಸ್ಮಾಈಲ್ ಎಂಬವರ ನೇತೃತ್ವದಲ್ಲಿ 1948 ಮಾರ್ಚ್ 10ರಂದು ಆಲ್ ಇಂಡಿಯಾ ಮುಸ್ಲಿಮ್ ಲೀಗ್‌ನ ಮೊದಲ ಸಭೆ ಮದ್ರಾಸ್‌ನಲ್ಲಿ ನಡೆಯಿತು. 1951 ಸೆ. 1ರಂದು ಇದರ ಹೆಸರನ್ನು ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (IUML) ಎಂದು ಮರು ನಾಮಕರಣ ಮಾಡಲಾಯಿತು. 2004ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಮುಸ್ಲಿಮ್ ಲೀಗ್ ಸ್ಥಾನವನ್ನೂ ಪಡೆಯಿತು. ಈಗ ಮುಹಮ್ಮದ್ ಬಶೀರ್, ಅಬ್ದುಸ್ಸಮದ್ ಸಮದಾನಿ ಮತ್ತು ನವಾಜ್ ಎಂಬವರು ಲೋಕಸಭಾ ಸದಸ್ಯರಾಗಿ ಈ ಪಕ್ಷವನ್ನು ಪ್ರತಿನಿಧಿಸುತ್ತಿದ್ದರೆ ರಾಜ್ಯಸಭೆಯನ್ನು ಅಬ್ದುಲ್ ವಾಹಿದ್ ಪ್ರತಿ ನಿಧಿಸುತ್ತಿದ್ದಾರೆ. ಅಲ್ಲದೇ,
ಮುಹಮ್ಮದ್ ಇಸ್ಮಾಈಲ್ ಸಾಹಿಬ್ ಮತ್ತು ಮುಹಮ್ಮದ್ ಅಲಿ ಶಿಬಾಹ್ ತಂಙಳ್ ಅವರ ಹೆಸರಲ್ಲಿ ಅಂಚೆ ಚೀಟಿಯೂ ಬಿಡುಗಡೆಯಾಗಿದೆ. ಪ್ರವಾದಿ ಕುಟುಂಬ ಪರಂಪರೆಯ ಸೈಯದ್ ಬಾಫಾಖಿ ತಂಙಳ್, ಸಾದಿಕ್ ಅಲಿ ಶಿಹಾಬ್ ತಂಙಳ್, ಹೈದರಲಿ ಶಿಹಾಬ್ ತಂಙಳ್ ಸಹಿತ ಪಾಣಕ್ಕಾಡ್ ಕುಟುಂಬವೇ ಈ ಪಕ್ಷದ ಜೊತೆ ಇದ್ದರೂ ಮುಸ್ಲಿಮರು ಈ ಪಕ್ಷವನ್ನು ಇಸ್ಲಾಮ್‌ನ ರಕ್ಷಕನಂತೆ ಅಥವಾ ಇಸ್ಲಾಮಿನ ಪ್ರತಿನಿಧಿಯಂತೆ ಕಂಡಿಲ್ಲ. ಕೇರಳದಲ್ಲಿ ಮುಸ್ಲಿಮರು ಈ ಪಕ್ಷಕ್ಕೆ ಮತ ಚಲಾಯಿಸಿದ್ದಕ್ಕಿಂತ ಹೆಚ್ಚು ಮತಗಳನ್ನು ಹಿಂದೂ ನೇತೃತ್ವದ ಪಕ್ಷಗಳಿಗೆ ನೀಡಿದ್ದೂ ಇದೆ. ಇಸ್ಲಾಮಿನ ಹೆಸರಲ್ಲಿ ಈ ಪಕ್ಷ ಮತವನ್ನು ಕೇಳಿದ್ದೂ ಇಲ್ಲ. ಒಂದು ಕಡೆ ಪ್ರವಾದಿ ಕುಟುಂಬ ಪರಂಪರೆಯವರ ಬೆಂಬಲ ಮತ್ತು ಇನ್ನೊಂದು ಕಡೆ ಮುಸ್ಲಿಮ್ ಲೀಗ್ ಎಂಬ ಹೆಸರಿನ ಹೊರತಾಗಿಯೂ ಮುಸ್ಲಿಮರು ಈ ಪಕ್ಷವನ್ನು ಧರ್ಮದ ನೊಗ ಹೊತ್ತುಕೊಂಡ ಪಕ್ಷವಾಗಿ ಪರಿಗಣಿಸಿಲ್ಲ ಮತ್ತು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿ ಖಾಝಿಗಳ ಹೊರತಾಗಿ ಇತರರನ್ನು ಅವಲಂಬಿಸುತ್ತಲೂ ಇಲ್ಲ. ಆದ್ದರಿಂದಲೇ, ಮುಸ್ಲಿಮ್ ನೇತೃತ್ವದ ಯಾವುದೇ ಪಕ್ಷಕ್ಕೆ ಧಾರ್ಮಿಕ ಭಾವನೆಗಳನ್ನು ಕೆದಕಿ ಮತ ಪಡೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬ ಸ್ಥಿತಿಯಿದೆ.
ನವಾಬ್ ಮುಹಮ್ಮದ್ ನವಾಜ್ ಖಾನ್ ಖಿಲೇದಾರ್ ಎಂಬವರು 1927ರಲ್ಲಿ ಹೈದರಾಬಾದ್‌ನಲ್ಲಿ ಸ್ಥಾಪಿಸಿದ ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ (AIMIM) ಎಂಬ ರಾಜಕೀಯ ಪಕ್ಷಕ್ಕೂ ಈ ಮಣ್ಣಿನಲ್ಲಿ ದೊಡ್ಡ ಹೆಸರಿದೆ. 1958ರಲ್ಲಿ ಅಬ್ದುಲ್ ವಾಹಿದ್ ಓವೈಸಿ ಅಧ್ಯಕ್ಷರಾಗುವ ಮೂಲಕ ಓವೈಸಿ ಕುಟುಂಬದ ಪಾರಮ್ಯಕ್ಕೆ ಒಳಗಾದ ಈ ಪಕ್ಷವು ಇಂದಿನ ತೆಲಂಗಾಣದ ಹೊರತಾಗಿ ಮಹಾರಾಷ್ಟ್ರ ಮತ್ತು ಬಿಹಾರ ಅಸೆಂಬ್ಲಿಯಲ್ಲೂ ಜನಪ್ರತಿನಿಧಿಯನ್ನು ಹೊಂದಿದೆ. ಅಸದುದ್ದೀನ್ ಓವೈಸಿ ಸತತ ನಾಲ್ಕನೇ ಬಾರಿ ಲೋಕಸಭಾ ಸದಸ್ಯರಾಗಿ ಈ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಈಗಿನ ತೆಲಂಗಾಣ ವಿಧಾನಸಭೆಯಲ್ಲಿ ಈ ಪಕ್ಷದ 7 ಮಂದಿ ಸದಸ್ಯರಿದ್ದಾರೆ. ಅಷ್ಟಕ್ಕೂ, ಆಲ್ ಇಂಡಿಯಾ ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಎಂದರೆ ‘ಮುಸ್ಲಿಮರ ಐಕ್ಯತೆಗಾಗಿರುವ ಅಖಿಲ ಭಾರತ ಕೌನ್ಸಿಲ್’ ಎಂದು ಅರ್ಥ. ಹೀಗೆ ಮುಸ್ಲಿಮರ ಐಕ್ಯತೆಯನ್ನು ಬಯಸುವ ಪಕ್ಷ ಎಂಬ ಹಣೆಪಟ್ಟಿ ಈ ಪಕ್ಷಕ್ಕಿದ್ದರೂ ಮುಸ್ಲಿಮರು ಈ ಪಕ್ಷಕ್ಕೆ ‘ಧರ್ಮರಕ್ಷಕ’ ಎಂಬ ಬಿರುದನ್ನು ಕೊಟ್ಟಿಲ್ಲ. ಅದನ್ನೊಂದು ರಾಜಕೀಯ ಪಕ್ಷವಾಗಿ ಪರಿಗಣಿಸಿದ್ದಾರೆಯೇ ಹೊರತು ಓವೈಸಿ ಪಕ್ಷಕ್ಕೆ ಮತ ಚಲಾಯಿಸದವರು ಇಸ್ಲಾಮ್ ವಿರೋಧಿಗಳು ಎಂದು ಎಲ್ಲೂ ಹೇಳಿಲ್ಲ. ಓವೈಸಿ ಪಕ್ಷದ ಮುಸ್ಲಿಮ್ ಅಭ್ಯರ್ಥಿಯ ಬದಲು ಹಿಂದೂ ನೇತೃತ್ವ ಪಕ್ಷದ ಹಿಂದೂ ಅಭ್ಯರ್ಥಿಗೆ ಮುಸ್ಲಿಮರು ಅತ್ಯಧಿಕ ಮತ ಚಲಾಯಿಸಿದ್ದಾರೆ. ರಾಜಕೀಯ ಅಧಿಕಾರಕ್ಕಾಗಿ ಧರ್ಮವನ್ನು ದುರುಪಯೋಗಿಸುವುದಕ್ಕೆ ಯಾವ ರಾಜಕೀಯ ಪಕ್ಷಕ್ಕೂ ಮುಸ್ಲಿಮರು ಅನುಮತಿಯನ್ನು ನೀಡುತ್ತಿಲ್ಲ.
ಅಸ್ಸಾಮ್ ಯುನೈಟೆಡ್ ಡೆಮಾಕ್ರಾಟಿಕ್ ಪಾರ್ಟಿಯನ್ನು 2005ರಲ್ಲಿ ಸ್ಥಾಪಿಸಿದ ಉದ್ಯಮಿ ಮತ್ತು ಇಸ್ಲಾಮೀ ವಿದ್ವಾಂಸ ಬದ್ರುದ್ದೀನ್ ಅಜ್ಮಲ್‌ರು 2013ರಲ್ಲಿ ಇದಕ್ಕೆ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ (AIUDF) ಎಂದು ಮರುನಾಮಕರಣ ಮಾಡಿದರು. ಇವರು ಜಮೀಯತೆ ಉಲೆಮಾಯೆ ಹಿಂದ್ ಎಂಬ ಧಾರ್ಮಿಕ ಸಂಘಟನೆಯ ಅಸ್ಸಾಮ್ ಘಟಕದ ಅಧ್ಯಕ್ಷರೂ ಆಗಿದ್ದಾರೆ. 2005ರಲ್ಲಿ ಅಸ್ಸಾಮ್ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಇವರ ಪಕ್ಷ 10 ಸ್ಥಾನಗಳನ್ನು ಗೆದ್ದಿತ್ತು. 2011ರ ಅಸೆಂಬ್ಲಿ ಚುನಾವಣೆಯಲ್ಲಿ 18 ಸ್ಥಾನಗಳನ್ನು ಪಡೆಯುವ ಮೂಲಕ ಪ್ರಮುಖ ವಿರೋಧ ಪಕ್ಷವಾಗಿಯೂ ಗುರುತಿಸಿಕೊಂಡಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ 3 ಸ್ಥಾನಗಳನ್ನು ಗೆದ್ದು ಕೊಂಡ AIUDF, 2016ರ ಅಸ್ಸಾಮ್ ಅಸೆಂಬ್ಲಿ ಚುನಾವಣೆಯಲ್ಲಿ 13 ಸ್ಥಾನಕ್ಕೆ ಕುಸಿಯಿತು. ಮಾತ್ರವಲ್ಲ, ಮತದಾರರು ಬದ್ರುದ್ದೀನ್ ಅಜ್ಮಲ್‌ರನ್ನೇ ಸೋಲಿಸಿದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಅವರೊಬ್ಬರೇ ಆರಿಸಿ ಬಂದಿದ್ದಾರೆ. ಅಂದಹಾಗೆ,
25 ಶಿಕ್ಷಣ ಸಂಸ್ಥೆ ಮತ್ತು ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳನ್ನು ನಡೆಸುತ್ತಿರುವ ಇವರಿಗೆ ಧಾರ್ಮಿಕ ವಿದ್ವಾಂಸ ಎಂಬ ಹಣೆಪಟ್ಟಿ ಇದ್ದರೂ ಇವರ ಪಕ್ಷಕ್ಕೆ ಮತ ಚಲಾಯಿಸದವರನ್ನು ‘ಇಸ್ಲಾಮ್ ವಿರೋಧಿ’ಗಳು ಎಂದು ಎಲ್ಲೂ ಯಾರೂ ಘೋಷಿಸಿಯೇ ಇಲ್ಲ. ಸ್ವತಃ ಅಜ್ಮಲ್ ಅವರನ್ನೇ ಸಲ್ಮಾರ ಕ್ಷೇತ್ರದ ಮತದಾರರು 2016 ರಲ್ಲಿ ಸೋಲಿಸಿದ್ದಾರೆ. ಒಂದುವೇಳೆ, ಅಜ್ಮಲ್ ಪಕ್ಷಕ್ಕೆ ಓಟು ಹಾಕುವುದೆಂದರೆ ಇಸ್ಲಾಮಿನ ರಕ್ಷಣೆಗೆ ಓಟು ಹಾಕಿದಂತೆ ಎಂಬ ಭಾವ ಮುಸ್ಲಿಮರಲ್ಲಿ ಇದ್ದಿದ್ದೇ ಆಗಿದ್ದರೆ 2014ರಲ್ಲಿ ಗೆದ್ದಿದ್ದ ಮೂರು ಲೋಕಸಭಾ ಸೀಟುಗಳು 2019ಕ್ಕಾಗುವಾಗ ಒಂದು ಸೀಟಾಗಿ ಕುಸಿಯುತ್ತಿರಲಿಲ್ಲ ಅಥವಾ 2011ರಲ್ಲಿ 18 ಅಸೆಂಬ್ಲಿ ಸೀಟುಗಳನ್ನು ಗೆದ್ದವರು 2016ರಲ್ಲಿ 13 ಸೀಟುಗಳಿಗೆ ತೃಪ್ತಿ ಪಡಬೇಕಾಗಿರಲಿಲ್ಲ. ಇದೇವೇಳೆ,
ಇ ಅಬೂಬಕರ್ ನೇತೃತ್ವದಲ್ಲಿ 2009 ಜೂನ್ 21ರಂದು ಸ್ಥಾಪನೆಯಾದ ಸೋಶಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮತ್ತು 2011 ಎಪ್ರಿಲ್ 18ರಂದು ಮುಜ್ತಬಾ ಫಾರೂಖಿ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (WPI) ಪಕ್ಷಗಳು ಈವರೆಗೆ ಲೋಕಸಭೆ ಅಥವಾ ವಿಧಾನಸಭೆಗಳಿಗೆ ತಮ್ಮ ಪ್ರತಿನಿಧಿಗಳನ್ನು ಕಳುಹಿಸುವುದಕ್ಕೇ ಶಕ್ತವಾಗಿಲ್ಲ. ಈ ಎರಡೂ ಪಕ್ಷಗಳ ಕೇಂದ್ರ ನವದೆಹಲಿಯಲ್ಲಿದೆ. 2014ರ ಪಾರ್ಲಿಮೆಂಟ್ ಚುನಾವಣೆಯ ವೇಳೆ SDPI 29 ಕಡೆ ಸ್ಪರ್ಧಿಸಿತ್ತು. 2019ರಲ್ಲಿ 15 ಕಡೆ ಸ್ಪರ್ಧಿಸಿತ್ತು. 2013ರ ಕರ್ನಾಟಕ ಅಸೆಂಬ್ಲಿ ಚುನಾವಣೆಯ ವೇಳೆ 24 ಕಡೆ ಸ್ಪರ್ಧಿಸಿದ್ದರೆ, 2016ರ ತಮಿಳುನಾಡು ಅಸೆಂಬ್ಲಿ ಚುನಾವಣೆಯ ವೇಳೆ 30 ಕಡೆ ಸ್ಪರ್ಧಿಸಿತ್ತು. ಇದೇ ಅವಧಿಯಲ್ಲಿ ನಡೆದ ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ 89 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಹಾಗೆಯೇ, 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ 16 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಇದೇವೇಳೆ, WPI ಪಕ್ಷವು ಒಂದು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನು ನಿಲ್ಲಿಸಿತ್ತು. ಆದರೆ, ಬಹುಸಂಖ್ಯೆಯ ಮುಸ್ಲಿಮರು ಈ ಎರಡೂ ಪಕ್ಷಗಳ ಬದಲು ಹಿಂದೂ ನೇತೃತ್ವ ಪಕ್ಷದ ಹಿಂದೂ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಮಾತ್ರ ವಲ್ಲ, ಹೀಗೆ ಮತ ಚಲಾಯಿಸಿದ ಮುಸ್ಲಿಮರನ್ನು ‘ಇಸ್ಲಾಮ್ ವಿರೋಧಿಗಳು’ ಎಂದು ಸ್ವತಃ ಈ ಪಕ್ಷಗಳಾಗಲಿ ಅಥವಾ ಅದರ ಬೆಂಬಲಿಗರಾಗಲಿ ಎಲ್ಲೂ ಹೇಳಲೇ ಇಲ್ಲ. ಇದರ ಹೊರತಾಗಿ,
ಮಾಜಿ ಗೃಹಸಚಿವ ಮುಫ್ತಿ ಮುಹಮ್ಮದ್ ಸಈದ್ 1999ರಲ್ಲಿ ಸ್ಥಾಪಿಸಿದ PDP ಮತ್ತು 1932ರಲ್ಲಿ ಶೈಕ್ ಅಬ್ದುಲ್ಲಾರಿಂದ ಸ್ಥಾಪಿತವಾದ NC ಪಕ್ಷಗಳನ್ನು ಜಮ್ಮು-ಕಾಶ್ಮೀರದ ಮಂದಿ ಗೆಲ್ಲಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಪಕ್ಷವನ್ನೂ ಗೆಲ್ಲಿಸಿದ್ದಾರೆ. ಮುಸ್ಲಿಮರೇ ಹೆಚ್ಚಿರುವ ಕಾಶ್ಮೀರದಲ್ಲಿ ಈ ಮೂರು ಪಕ್ಷಗಳ ಹೊರತಾಗಿ ಬೇರೆ ಪಕ್ಷಗಳಲ್ಲಿ ಅಷ್ಟು ಬಲ ಇದ್ದಿಲ್ಲವಾದ್ದರಿಂದ ಈ ಮೂರರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಅಲ್ಲಿನ ಮುಸ್ಲಿಮರಿಗಿದೆ. ಈ ಆಯ್ಕೆಯೂ ಧರ್ಮಾಧಾರಿತವಾಗಿಲ್ಲ ಅನ್ನುವುದೂ ಸ್ಪಷ್ಟ. ಫಾರೂಖ್ ಅಬ್ದುಲ್ಲಾರನ್ನು ಮುಖ್ಯಮಂತ್ರಿಯಾಗಿಸಿದ ಅದೇ ಜನತೆ ಮುಫ್ತಿ ಮುಹಮ್ಮದ್ ರನ್ನೂ ಮುಖ್ಯಮಂತ್ರಿಯಾಗಿಸಿದೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಮೆಹಬೂಬಾ ಮುಫ್ತಿ ಕೂಡಾ ಮುಖ್ಯಮಂತ್ರಿಯಾಗಿದ್ದಾರೆ. ನಿಜವಾಗಿ,
ಇಸ್ಲಾಮಿನ ನೊಗ ಖಾಝಿಗಳ ಕೈಯಲ್ಲಿದೆಯೇ ಹೊರತು ಯಾವುದೇ ಮುಸ್ಲಿಮ್ ನೇತೃತ್ವದ ರಾಜಕೀಯ ಪಕ್ಷಗಳಲ್ಲಿಲ್ಲ. ರಾಜಕೀಯ ಪಕ್ಷದ ನಾಯಕ ಎಷ್ಟೇ ಧರ್ಮಿಷ್ಠನಾಗಿರಲಿ ಮುಸ್ಲಿಮರು ತಮ್ಮ ಧರ್ಮದ ವ್ಯಾಖ್ಯಾನಕ್ಕಾಗಿ ಮತ್ತು ಸಾಂದರ್ಭಿಕ ಅಭಿಪ್ರಾಯಗಳಿಗಾಗಿ ಖಾಝಿಗಳನ್ನೇ ಸಂಪರ್ಕಿಸುತ್ತಾರೆ. ಖಾಝಿಗಳಿಗೆ ಮುಸ್ಲಿಮರಲ್ಲಿ ವಿಶೇಷ ಸ್ಥಾನಮಾನವಿದೆ. ಅವರು ಸಾಮಾನ್ಯ ಮಸೀದಿಯ ಧರ್ಮಗುರುಗಳಂಥಲ್ಲ. ಅವರು ಪಕ್ಷ-ಸಂಘಟನೆಯ ಮುಲಾಜಿಗೆ ಬೀಳದೇ ಧರ್ಮ ತತ್ವವನ್ನು ಹೇಳಬಲ್ಲವರು. ನಿಜವಾಗಿ, ಇಸ್ಲಾಮಿನ ವರ್ಚಸ್ಸು ಉಳಿದಿರುವುದೇ ಮುಸ್ಲಿಮರೊಳಗಿನ ಈ ಬಗೆಯ ವ್ಯವಸ್ಥೆಯಿಂದ. ರಾಜಕೀಯ ಪಕ್ಷಗಳನ್ನು ಬರೇ ಪಕ್ಷಗಳಾಗಿ ಮತ್ತು ಅವುಗಳ ಚಟುವಟಿಕೆಗಳನ್ನು ರಾಜಕೀಯಕ್ಕೆ ಸೀಮಿತವಾಗಿ ನೋಡುವುದಕ್ಕೆ ಮುಸ್ಲಿಮರಿಗೆ ಸಾಧ್ಯವಾಗಿರುವುದು ಖಾಝಿ ಸಿಸ್ಟಮ್‌ನಿಂದ. ಮುಸ್ಲಿಮರಿಗೆ ಮಾರ್ಗದರ್ಶನ ಮಾಡುವ ಮತ್ತು ಯಾವುದು ಇಸ್ಲಾಮ್ ಮತ್ತು ಯಾವುದಲ್ಲ ಎಂದು ಹೇಳುವ ಹೊಣೆಗಾರಿಕೆ ಬಹುತೇಕ ಇವರ ಹೆಗಲ ಮೇಲಿದೆ. ಮುಸ್ಲಿಮರಲ್ಲಿರುವ ವಿವಿಧ ಸಂಘಟನೆಗಳೂ ಖಾಝಿಗಳ ಮಾತುಗಳಿಗೆ ಕಿವಿಯಾಗುತ್ತವೆ. ಸಂಘಟನಾ ರಹಿತ ಮತ್ತು ಪಕ್ಷರಹಿತವಾಗಿ ವರ್ತಿಸುವ ಜವಾಬ್ದಾರಿಯೂ ಖಾಝಿಗಳ ಮೇಲಿರುತ್ತದೆ. ಒಂದುವೇಳೆ, ಈ ಖಾಝಿ ಸಿಸ್ಟಮ್ ಇಲ್ಲದೇ ಇರುತ್ತಿದ್ದರೆ ರಾಜಕೀಯ ಪಕ್ಷಗಳು ಆ ಶೂನ್ಯವನ್ನು ದುರುಪ ಯೋಗಿಸುತ್ತಿದ್ದುವೋ ಏನೋ? ಅಂದಹಾಗೆ,
ಬಿಜೆಪಿ ಎಂಬ ರಾಜಕೀಯ ಪಕ್ಷವನ್ನು ಹಿಂದೂ ಧರ್ಮ ರಕ್ಷಕನಂತೆ ಮತ್ತು ಅದಕ್ಕೆ ಮತ ಚಲಾಯಿಸದವರನ್ನು ಹಿಂದೂ ವಿರೋಧಿಗಳಂತೆ ಬಿಂಬಿಸಲಾಗುತ್ತಿರುವುದನ್ನು ಕಂಡು ಇವೆಲ್ಲ ನೆನಪಾಯಿತು. ಹಾಗಂತ, ಧರ್ಮವನ್ನು ರಾಜಕೀಯ ಪಕ್ಷದ ವಶಕ್ಕೆ ಒಪ್ಪಿಸುವುದು ಅತ್ಯಂತ ಅಪಾಯಕಾರಿ.
No comments:
Post a Comment