1. ಹಿಜಾಬ್
2. ಕೇಸರಿ ಶಾಲು
3. ಧರ್ಮ
ನಿಜಕ್ಕೂ ಹಿಜಾಬ್‌ಗೆ ಕೇಸರಿ ಶಾಲು ಪರ್ಯಾಯವೇ, ಸಮಾನವೇ ಅಥವಾ ಉತ್ತರವೇ? 2022 ಫೆಬ್ರವರಿ 5ರಂದು ಮುಖ್ಯಮಂತ್ರಿ ಬೊಮ್ಮಾಯಿ ಘೋಷಿಸಿದ್ದ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳಲು ಸೂಚಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸೆಂಬರ್ 22, 2023ರಂದು ಘೋಷಿಸಿದ ಬಳಿಕ ಹಿಜಾಬ್ ಮತ್ತು ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಅನೇಕರು ಚರ್ಚಿಸುತ್ತಿದ್ದಾರೆ. ಹಿಜಾಬ್ ಧರಿಸಿ ಕಾಲೇಜಿಗೆ ಹೋಗಬಹುದೆಂದಾದರೆ, ಕೇಸರಿ ಶಾಲು ಧರಿಸಿಯೂ ಕಾಲೇಜಿಗೆ ಹೋಗಬಹುದು ಎಂಬುದು ಈ ವಾದದ ಮುಖ್ಯ ಅಂಶ. ಅಷ್ಟಕ್ಕೂ,
ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿ ಮಾಡಿ ಚರ್ಚಿಸುವುದು ಸೂಕ್ತವೇ? ಇಸ್ಲಾಮ್‌ನಲ್ಲಿ ಹಿಜಾಬ್‌ಗಿರುವ ಧಾರ್ಮಿಕ ಮಹತ್ವವು ಹಿಂದೂಗಳಲ್ಲಿ ಕೇಸರಿ ಶಾಲ್‌ಗೂ ಇದೆಯೆಂದಾದರೆ, ಮತ್ತೇಕೆ ಹಿಜಾಬ್‌ನಂತೆ ಸಾರ್ವಜನಿಕವಾಗಿ ಹಿಂದೂಗಳು ಕೇಸರಿ ಶಾಲನ್ನು ಸದಾ ಧರಿಸುತ್ತಿಲ್ಲ? ಕಾಲೇಜು ಉಪನ್ಯಾಸಕರಿಂದ ಹಿಡಿದು ಐಟಿಬಿಟಿ ಉದ್ಯೋಗಿಗಳ ವರೆಗೆ, ಶಾಸಕರಿಂದ ಹಿಡಿದು ಸಂಸದರ ವರೆಗೆ, ರಾಜ್ಯಪಾಲರಿಂದ ಹಿಡಿದು ರಾಷ್ಟ್ರಪತಿವರೆಗೆ, ಮುಖ್ಯಮಂತ್ರಿಗಳಿಂದ ಹಿಡಿದು ಪ್ರಧಾನ ಮಂತ್ರಿಯವರೆಗೆ, ವಕೀಲರಿಂದ ಹಿಡಿದು ಮುಖ್ಯ ನ್ಯಾಯಾಧೀಶರವರೆಗೆ... ಎಲ್ಲೆಲ್ಲೂ ಕೇಸರಿ ಶಾಲು ಧರಿಸಿದ ಪುರುಷರು ಮತ್ತು ಮಹಿಳೆಯರೇ ತುಂಬಿರಬೇಕಿತ್ತಲ್ಲ? ರಿಕ್ಷಾ ಡ್ರೈವರ್, ಕಾರು, ಬಸ್ಸು ಚಾಲಕರು, ಪೈಲಟ್‌ಗಳು, ವೈದ್ಯರು, ದಾದಿಯರು, ಕೂಲಿ ಕಾರ್ಮಿಕರು, ಉದ್ಯಮಿಗಳು, ಅದಾನಿ-ಅಂಬಾನಿಗಳು.. ಎಲ್ಲರೂ ಕೇಸರಿ ಶಾಲನ್ನು ಧರಿಸಿಯೇ ಇರಬೇಕಿತ್ತಲ್ಲ? ಯಾಕಿಲ್ಲ? ಈ ದೇಶದ 99.99% ಹಿಂದೂಗಳು ಕೂಡಾ ಸಾರ್ವಜನಿಕ ಜೀವನದಲ್ಲಿ ಕೇಸರಿ ಶಾಲನ್ನು ಒಂದು ಅಭ್ಯಾಸವಾಗಿ ಧರಿಸುತ್ತಲೇ ಇಲ್ಲ. ಖಾಸಗಿ ಬದುಕಿನಲ್ಲೂ ಕೇಸರಿ ಶಾಲು ಅವಿಭಾಜ್ಯ ಅಂಗವಾಗಿಲ್ಲ. ನಿರ್ದಿಷ್ಟ ರಾಜಕೀಯ ಪಕ್ಷದ ಕಾರ್ಯಕ್ರಮಗಳಲ್ಲಿ ಮತ್ತು ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಅಲ್ಪಸ್ವಲ್ಪ ಕೇಸರಿ ಶಾಲು ಧರಿಸಿದವರನ್ನು ಕಾಣಬಹುದೇ ಹೊರತು ಸಾಮಾನ್ಯ ಸಂದರ್ಭಗಳಲ್ಲಿ ಕೇಸರಿ ಶಾಲು ರೂಢಿಯಾಗಿ ಬಳಕೆಯಾಗುತ್ತಿಲ್ಲ. ಆದರೆ,
ಹಿಜಾಬ್ ಅಥವಾ ಶಿರವಸ್ತ್ರ ಹಾಗಲ್ಲ. ಮುಸ್ಲಿಮ್ ಮಹಿಳೆಯರು ಮನೆಯಲ್ಲೂ ಶಿರವಸ್ತ್ರ ಧರಿಸುತ್ತಾರೆ. ಬಸ್, ರೈಲು, ವಿಮಾನ ಪ್ರಯಾಣದಲ್ಲೂ ಶಿರವಸ್ತ್ರ ಧರಿಸುತ್ತಾರೆ. ಸರಕಾರಿ ಕಚೇರಿಯಲ್ಲೂ, ಶಿಕ್ಷಣ ಸಂಸ್ಥೆಯಲ್ಲೂ, ಖಾಸಗಿ ಉದ್ಯೋಗ ಸ್ಥಳದಲ್ಲೂ, ಶಾಸನ ಸಭೆಯಲ್ಲೂ, ನ್ಯಾಯಾಧೀಶರಾಗಿರುವಾಗಲೂ, ವೈದ್ಯರು, ದಾದಿಯಾಗಿರುವಾಗಲೂ, ಮಾರುಕಟ್ಟೆಯಲ್ಲೂ.. ಹೀಗೆ ಎಲ್ಲೆಡೆಯೂ ಹಿಜಾಬ್ ಧರಿಸಿಯೇ ಕಾಣಸಿಗುತ್ತಾರೆ. ಅಂದ ಹಾಗೆ, ಬುರ್ಖಾ ಧರಿಸದ ಮುಸ್ಲಿಮ್ ಮಹಿಳೆಯರು ಧಾರಾಳ ಇದ್ದಾರೆ. ಆದರೆ ಹಿಜಾಬ್ ಧರಿಸದ ಮುಸ್ಲಿಮ್ ಮಹಿಳೆಯರು ಕಾಣಸಿಗುವುದು ಅಪರೂಪ. ಒಂದುವೇಳೆ, ಹಿಜಾಬ್‌ನಷ್ಟು ಕೇಸರಿ ಶಾಲ್‌ಗೂ ಹಿಂದೂ ಧರ್ಮದಲ್ಲಿ ಮಹತ್ವ ಇರುತ್ತಿದ್ದರೆ, ಸಾರ್ವಜನಿಕ ಬದುಕಿನಲ್ಲಿ ಅದು ಇಷ್ಟು ಅಪರೂಪ ಆಗಿರುವುದಕ್ಕೆ ಸಾಧ್ಯವೇ ಇರಲಿಲ್ಲ. ಅದು ಹಿಂದೂಗಳಲ್ಲಿ ರೂಢಿಯಾಗಿ ಬಳಕೆಯಲ್ಲಿರುತ್ತಿತ್ತು. ಹೇಗೆ ಬಿಂದಿ, ನಾಮ, ಕಾಲುಂಗುರ, ಕರಿಮಣಿ... ಇತ್ಯಾದಿಗಳು ಸಹಜವಾಗಿ ಬಳಕೆಯಲ್ಲಿವೆಯೋ ಹಾಗೆ. ಇವುಗಳಿಗೆ ಧಾರ್ಮಿಕ ಹಿನ್ನೆಲೆ ಇರುವುದರಿಂದ ಇವು ಮನೆಯಿಂದ ಹಿಡಿದು ಶಾಸನ ಸಭೆಯವರೆಗೆ ಮತ್ತು ಶಾಲಾ- ಕಾಲೇಜುಗಳಿಂದ ಹಿಡಿದು ಸರಕಾರಿ ಕಚೇರಿಗಳ ವರೆಗೆ ಎಲ್ಲೆಡೆಯೂ ಕಾಣಿಸಿಕೊಳ್ಳುತ್ತಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹಿಜಾಬ್ ನಿಷೇಧಿಸಿ 2022 ಫೆಬ್ರವರಿ 5ರಂದು ಬೊಮ್ಮಾಯಿ ಸರಕಾರ ಆದೇಶ ಹೊರಡಿಸುವಾಗಲೂ ಹಿಂದೂ ವಿದ್ಯಾರ್ಥಿಗಳು ಬಿಂದಿ, ನಾಮ, ಕೆಂಪು ದಾರವನ್ನು ಕಟ್ಟಿಕೊಂಡು ಕಾಲೇಜಿಗೆ ಬರುತ್ತಿದ್ದರು. ಯಾಕೆಂದರೆ, ಅದು ಅವರ ಬದುಕಿನ ಭಾಗ. ಧಾರ್ಮಿಕವಾಗಿ ಅವುಗಳಿಗಿರುವ ಮಹತ್ವವೇ ಅದನ್ನು ನಿತ್ಯ ರೂಢಿಯಾಗಿಸಿದೆ. ನಿಜವಾಗಿ,
ಹಿಜಾಬ್‌ಗೆ ಮುಖಾಮುಖಿಯಾಗಿಸಬೇಕಾದದ್ದು ಇವುಗಳನ್ನು. ಬಿಂದಿ, ಕಾಲುಂಗುರ, ನಾಮ, ಕರಿಮಣಿ... ಮುಂತಾದವುಗಳು ಸಂಪೂರ್ಣವಲ್ಲದಿದ್ದರೂ ಒಂದು ಹಂತದ ವರೆಗೆ ಹಿಜಾಬ್‌ಗೆ ತದ್ರೂಪವಾಗಿ ತೋರಿಸಬಹುದು. ಆದರೆ ಹಿಜಾಬ್ ವಿವಾದ ಆರಂಭವಾದ 2022 ಜನವರಿಯಿಂದ ಇವತ್ತಿನವರೆಗೆ ಅತಿ ಬುದ್ಧಿವಂತರು ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿಸಿ ಚರ್ಚಿಸುತ್ತಿದ್ದಾರೆ. ಅಲ್ಲದೇ, ಸಿಕ್ಖ್ ವಿದ್ಯಾರ್ಥಿಗಳು ಧರಿಸುವ ಪೇಟವನ್ನು ಎಲ್ಲೂ ಚರ್ಚೆಯ ವ್ಯಾಪ್ತಿಗೆ ತರುತ್ತಲೂ ಇಲ್ಲ. ಅಂದರೆ, ಇಲ್ಲಿರುವುದು ಮುಸ್ಲಿಮ್ ದ್ವೇಷವೇ ಹೊರತು ಇನ್ನೇನೂ ಅಲ್ಲ. 2022 ಜನವರಿಯಲ್ಲಿ ಹಿಜಾಬನ್ನು ಉಡುಪಿಯ ಸರಕಾರಿ ಹೆಣ್ಣು ಮಕ್ಕಳ ಕಾಲೇಜು ವಿವಾದವಾಗಿ ಮಾರ್ಪಡಿಸಿದ ಬಳಿಕ ಹಿಜಾಬ್‌ಧಾರಿ ವಿದ್ಯಾರ್ಥಿನಿಯರಿಗೆ ಕುಂದಾಪುರದ ಭಂಡಾರ್‌ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು ಪ್ರವೇಶ ನಿರಾಕರಿಸಿತು. ಆದರೆ, ಹಿಜಾಬ್‌ಗೆ ಅವಕಾಶ ಇದೆ ಎಂದು ಕಾಲೇಜು ರೂಲ್ ಬುಕ್‌ನಲ್ಲಿ ಇರುವುದನ್ನು ಈ ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು. ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜು ಕೂಡಾ ಫೆ. 5ರ ಸರಕಾರಿ ಆದೇಶದ ಬಳಿಕ ಹಿಜಾಬ್‌ಗೆ ನಿಷೇಧ ಹೇರಿತು. ಆದರೆ, ಈ ಮೊದಲು ಈ ಕಾಲೇಜಿನಲ್ಲಿ ಹಿಜಾಬ್‌ಗೆ ಯಾವ ನಿಷೇಧವೂ ಇರಲಿಲ್ಲ ಎಂದು ವಿದ್ಯಾರ್ಥಿನಿಯರು ಮಾಧ್ಯಮಗಳ ಮುಂದೆ ಹೇಳಿಕೊಂಡರು. ಕುಂದುಪಾರ ಕಾಲೇಜು ಕೂಡಾ ಹಿಜಾಬ್‌ಧಾರಿ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಿತು. ಪ್ರಶ್ನೆ ಇರುವುದೂ ಇಲ್ಲೇ. ಒಂದುವೇಳೆ, ಹಿಜಾಬ್ ನಷ್ಟು ಮಹತ್ವ ಕೇಸರಿ ಶಾಲ್‌ಗೂ ಇದೆಯೆಂದಾದರೆ, 2022ರ ಫೆಬ್ರವರಿಗಿಂತ ಮೊದಲೇ ಹಿಜಾಬ್‌ನಂತೆಯೇ ಕೇಸರಿ ಶಾಲ್ ಧರಿಸಲು ತಮಗೂ ಅನುಮತಿ ಕೊಡಿ ಎಂದು ಯಾವ ವಿದ್ಯಾರ್ಥಿಗಳೂ ಯಾಕೆ ಶಾಲಾಡಳಿತವನ್ನು ಕೋರಿಕೊಂಡಿಲ್ಲ ಅಥವಾ ಹಿಜಾಬ್ ಧರಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು ಬರುವಂತೆಯೇ ಸಹಜವಾಗಿ ಕೇಸರಿ ಶಾಲು ಧರಿಸಿಕೊಂಡು ಯಾಕೆ ಬರಲಿಲ್ಲ? ಉಡುಪಿಯ ವಿದ್ಯಾರ್ಥಿನಿಯರಿಗೆ ಹಿಜಾಬನ್ನು ನಿರಾಕರಿಸಲಾದ ಬಳಿಕವೇ ಏಕೆ ಕೇಸರಿ ಶಾಲು ಮುನ್ನೆಲೆಗೆ ಬಂತು? ಹಿಜಾಬ್‌ನಂತೆ ಇದು ಜೀವನರೂಢಿ ಆಗಿಲ್ಲ ಎಂಬುದನ್ನೇ ಇದು ಸೂಚಿಸುತ್ತದಲ್ಲವೇ? ನಿಜವಾಗಿ,
ಮುಸ್ಲಿಮ್ ವಿದ್ಯಾರ್ಥಿನಿಯರು ಸಮವಸ್ತ್ರದ್ದೇ ಭಾಗವಾದ ಶಾಲನ್ನು ತಲೆಗೆ ಹಾಕಿಕೊಳ್ಳಲು ಬಯಸಿದ್ದರೇ ಹೊರತು ಸಾರ್ವಜನಿಕವಾಗಿ ರೂಢಿಯಲ್ಲಿರುವ ಶಿರವಸ್ತ್ರದ ಮಾದರಿಯನ್ನಲ್ಲ. ಬಟ್ಟೆಯಿಂದ ಸದಾ ತಲೆ ಮುಚ್ಚಿರಬೇಕು ಅನ್ನುವುದು ಮುಸ್ಲಿಮರ ಧಾರ್ಮಿಕ ನಂಬಿಕೆ. ಸಮವಸ್ತ್ರವು ಯಾವ ಶಾಲನ್ನು ಕುತ್ತಿಗೆಗೆ ಹಾಕಿಕೊಳ್ಳಲು ಅನುಮತಿಸುತ್ತದೋ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುತ್ತೇವೆ ಎಂದಷ್ಟೇ ವಿದ್ಯಾರ್ಥಿನಿಯರು ಕೋರಿಕೊಂಡಿದ್ದರು. ಇದು ಸಂಪೂರ್ಣವಾಗಿ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ವಿಷಯ. ಸಮವಸ್ತ್ರದ ಜೊತೆ ಶಾಲು ಅನುಮತಿಸಿರುವುದು ವಿದ್ಯಾರ್ಥಿನಿಯರಿಗೆ ಮಾತ್ರ. ವಿದ್ಯಾರ್ಥಿ ಗಳ ಸಮವಸ್ತ್ರದಲ್ಲಿ ಶಾಲ್‌ಗೆ ಅವಕಾಶವಿಲ್ಲ. ಆದರೆ, ಹಿಜಾಬನ್ನು ನೆಪ ಮಾಡಿಕೊಂಡು ಗಂಡು ಮಕ್ಕಳು ಕೇಸರಿ ಶಾಲನ್ನು ಶಾಲೆಯೊಳಗೆ ತಂದರು. ಇದು ಪೂರ್ಣವಾಗಿ ದ್ವೇಷ ರಾಜಕೀಯ ಪಿತೂರಿಯಿಂದಾಗಿತ್ತೇ ಹೊರತು ಧರ್ಮ ಪ್ರೇಮದಿಂದ ಅಲ್ಲವೇ ಅಲ್ಲ. ಅಷ್ಟಕ್ಕೂ,
ಕಾಲೇಜು ಕುಸ್ತಿ ಅಖಾಡವೂ ಅಲ್ಲ, ಹಿಜಾಬ್ ಮತ್ತು ಕೇಸರಿ ಶಾಲು ಜಟ್ಟಿಗಳೂ ಅಲ್ಲ. ವಿದ್ಯಾರ್ಥಿಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಷಡ್ಯಂತ್ರವೊಂದರ ಭಾಗವಾಗಿಯೇ ಹಿಜಾಬ್‌ಗೆ ಕೇಸರಿ ಶಾಲನ್ನು ಮುಖಾಮುಖಿಯಾಗಿ ನಿಲ್ಲಿಸಲಾಗಿದೆ. ಹಿಜಾಬ್ ಎಂಬುದು ಕೇಸರಿ ವಿರೋಧಿ ಅಲ್ಲ. ಹಿಜಾಬ್‌ಗೆ ನಿರ್ದಿಷ್ಟ ಬಣ್ಣವೂ ಇಲ್ಲ. ಒಂದುವೇಳೆ ಯಾವುದೇ ಕಾಲೇಜು ಕೇಸರಿ ಬಣ್ಣವನ್ನು ಸಮವಸ್ತ್ರದ ಬಣ್ಣವಾಗಿ ಆಯ್ಕೆ ಮಾಡಿಕೊಂಡರೆ ಮತ್ತು ಕೇಸರಿ ಬಣ್ಣದ ಶಾಲನ್ನೇ ಧರಿಸಬೇಕೆಂದು ಹೇಳಿದರೆ ಮುಸ್ಲಿಮ್ ಹೆಣ್ಣು ಮಕ್ಕಳೂ ಅದೇ ಶಾಲನ್ನು ಕುತ್ತಿಗೆಯಿಂದ ತಲೆಗೆ ಹಾಕಿಕೊಳ್ಳುವ ಅವಕಾಶವನ್ನಷ್ಟೇ ಕೋರುತ್ತಾರೆಯೇ ಹೊರತು ಬೇರೆಯೇ ಬಣ್ಣದ ಹಿಜಾಬ್ ಧರಿಸುತ್ತೇವೆ ಎಂದು ಖಂಡಿತ ಹೇಳುವುದಿಲ್ಲ. ಯಾಕೆಂದರೆ, ಹಿಜಾಬ್ ಫ್ಯಾಶನ್ ಅಲ್ಲ, ಅದು ಬದುಕಿನ ಭಾಗ. ಅದಕ್ಕೆ ಬಣ್ಣ ಮುಖ್ಯ ಅಲ್ಲ, ತಲೆ ಮುಚ್ಚುವುದೇ ಅದರ ಗುರಿ. ಆದರೆ,
ಬೊಮ್ಮಾಯಿ ಸರಕಾರದ ಅವಧಿಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಇನ್ನಿಲ್ಲದ ಕಾಟವನ್ನು ಕೊಡಲಾಯಿತು. ಹಿಜಾಬ್ ಧರಿಸಿ ಬರುತ್ತಿದ್ದ ವಿದ್ಯಾರ್ಥಿನಿಯರನ್ನು ಗೇಟಿನ ಹೊರಗೆ ನಿಲ್ಲಿಸಲಾಯಿತು. ಹಿಜಾಬ್ ಧರಿಸುವುದನ್ನು ಮೂಲಭೂತ ವಾದವೆಂಬಂತೆ ಬಿಂಬಿಸಲಾಯಿತು. ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ರು ಅತ್ಯಂತ ಏಕಮುಖವಾಗಿ ನಡಕೊಂಡರು. ಯೂನಿ ಫಾರ್ಮ್ ನ ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕಿಕೊಳ್ಳುತ್ತೇವೆ ಎಂದ ವಿದ್ಯಾರ್ಥಿನಿಯರ ಬೇಡಿಕೆಯನ್ನು ತಿರಸ್ಕರಿಸಿದರು. ಅವರದೇ ಪಕ್ಷದ ಶಾಸಕರು ಮತ್ತು ನಾಯಕರು ಹಿಜಾಬ್‌ಗೆ ಪ್ರತಿಯಾಗಿ ಕೇಸರಿ ಶಾಲನ್ನು ಪ್ರಚೋದಿಸಿದರು. ಉಡುಪಿ ಜಿಲ್ಲೆಯಲ್ಲಿ ಉಚಿತವಾಗಿ ಕೇಸರಿ ಶಾಲನ್ನು ವಿತರಿಸಲಾದ ಘಟನೆಯೂ ನಡೆಯಿತು. ಈ ಸನ್ನಿವೇಶದಲ್ಲಿ ಸರಕಾರವೂ ಸೇರಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹಿಂದೂ-ಮುಸ್ಲಿಮ್ ಆದರೇ ಹೊರತು ಜವಾಬ್ದಾರಿಯುತವಾಗಿ ವರ್ತಿಸಲೇ ಇಲ್ಲ. ಸರಕಾರ ತಾನು 6 ಕೋಟಿ ಕನ್ನಡಿಗರಿಗೆ ಉತ್ತರದಾಯಿ ಎಂಬುದನ್ನೇ ಮರೆತು ಒಂದು ಗುಂಪಿನ ಪರ ಬಲವಾಗಿಯೇ ನಿಂತಿತು. ಒಂದು ಪುಟ್ಟ ಸುತ್ತೋಲೆಯಿಂದ ನಿಭಾಯಿಸಬಹುದಾಗಿದ್ದ ಪ್ರಕರಣವನ್ನು ಮೂರು ದಿನಗಳ ಕಾಲ ರಾಜ್ಯದಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಸಾರುವಂಥ ಗಂಭೀರ ಸ್ಥಿತಿಗೆ ತಳ್ಳಿತು. ಹೈಕೋರ್ಟ್ನಲ್ಲೂ ಹಿಜಾಬ್‌ನ ವಿರುದ್ಧ ವಾದಿಸಿತು. ಮಾತ್ರವಲ್ಲ, ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ತಿ, ನ್ಯಾಯಾಧೀಶರಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಝೈಬುನ್ನಿಸಾ ಎಂ. ಕಾಝಿ ಅವರಿದ್ದ ಪೀಠವು ಬೊಮ್ಮಾಯಿ ಸರಕಾರದ ಆದೇಶವನ್ನೇ ಎತ್ತಿ ಹಿಡಿಯಿತು. ಪ್ರಕರಣ ಈಗ ಸುಪ್ರೀಮ್ ಕೋರ್ಟ್ನಲ್ಲಿದೆ. ಈ ನಡುವೆಯೇ ಸಿದ್ದರಾಮಯ್ಯ ಹಿಜಾಬ್ ನಿಷೇಧ ಆದೇಶವನ್ನು ಹಿಂಪಡೆಯಲು ಹೇಳಿದ್ದೇನೆ ಎಂದು ಹೇಳಿದ್ದಾರೆ. ಅಷ್ಟಕ್ಕೂ,
ಸುಪ್ರೀಮ್ ಕೋರ್ಟ್ನಲ್ಲಿರುವ ಪ್ರಕರಣವೊಂದನ್ನು ಹಿಂಪಡೆಯಲು ಸಾಧ್ಯವೇ, ಅದಕ್ಕಿರುವ ದಾರಿಗಳೇನು, ಕಾನೂನು ಇತಿಮಿತಿಗಳು ಏನೆಲ್ಲ ಎಂಬ ಪ್ರಶ್ನೆಗಳಾಚೆಗೆ ಸಿದ್ದರಾಮಯ್ಯ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಲೋಕಸಭಾ ಚುನಾ ವಣೆ ಹತ್ತಿರವಿರುವಂತೆಯೇ ಇಂಥ ಹೇಳಿಕೆ ಕೊಡುವುದು ಸುಲಭ ಅಲ್ಲ. ಬಿಜೆಪಿ ಇದನ್ನು ಮುಸ್ಲಿಮ್ ಓಲೈಕೆ ಎಂದು ಹೇಳಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದ್ದೂ ಸಿದ್ದರಾಮಯ್ಯ ಇಂಥ ನಿಲುವು ಪ್ರದರ್ಶಿಸುತ್ತಾರೆಂದರೆ ಅದರ ಹಿಂದೆ ಅವರ ದಮನಿತ ಪರ ಕಾಳಜಿ ಸ್ಪಷ್ಟವಾಗುತ್ತದೆ. ಚುನಾವಣೆಯ ಲಾಭ-ನಷ್ಟಕ್ಕಿಂತ ನ್ಯಾಯದಾನವೇ ಮುಖ್ಯ ಎಂದು ಅವರು ಸಾರಿದ ಸಂದೇಶಕ್ಕೆ ಧನ್ಯವಾದ ಹೇಳಬೇಕಾಗುತ್ತದೆ.
No comments:
Post a Comment