Saturday, November 19, 2016

ಗೌಡ್ರು, ಶೆಟ್ರು, ಸಾಬರ ಅಂಗಡಿಗೆ ಬೀಗ ಹಾಕಿಸುವ ತಂತ್ರವೇ ನೋಟು ರದ್ಧತಿ?

      2005ರಲ್ಲಿ: ‘ಮಿಶನ್ ಇಂಡಿಯಾಸ್ ಇಕನಾಮಿಕ್ ರಿಜುವೆನೇಶನ್’ (ನಮ್ಮ ಗುರಿ ಭಾರತದ ಆರ್ಥಿಕ ಪುನರ್‍ಸ್ಥಾಪನೆ) ಎಂಬ ಹೆಸರಲ್ಲಿ  ಅರ್ಥಕ್ರಾಂತಿ ಎಂಬ ಕೃತಿ ಬಿಡುಗಡೆಗೊಳ್ಳುತ್ತದೆ. ‘ಅರ್ಥಕ್ರಾಂತಿ ಪ್ರತಿಷ್ಠಾನ್’ ಎಂಬ ಗುರುತಿನ ಅಡಿಯಲ್ಲಿ ಕೆಲವರು ಸೇರಿಕೊಂಡು ರಚಿಸಿದ ಕೃತಿ ಇದು. ಈ ಕೃತಿಯನ್ನು ಪ್ರಮುಖ ರಾಜಕೀಯ ಪಕ್ಷಗಳಿಗೆ, ಚಿಂತಕರಿಗೆ ಮತ್ತು ರಾಷ್ಟ್ರಪತಿಗಳಿಗೂ ಸಲ್ಲಿಸಲಾಗಿದೆ. ಅಗತ್ಯ ಬಿದ್ದರೆ ಸಂಪರ್ಕಿಸುವುದಕ್ಕೆಂದು ವಿವಿಧ ನಗರಗಳಲ್ಲಿರುವ ಅದರ ಪ್ರತಿನಿಧಿಗಳ ಹೆಸರು ಮತ್ತು ವಿಳಾಸವನ್ನು ಕೃತಿಯಲ್ಲಿ ನೀಡಲಾಗಿದೆ. ವರ್ಷದ ಹಿಂದೆ ಸನ್ಮಾರ್ಗ ಕಚೇರಿಗೂ ಈ ಕೃತಿಯನ್ನು ತಲುಪಿಸಲಾಗಿತ್ತು. ಈ ಕೃತಿ ಮುಖ್ಯವಾಗಿ ಅರ್ಥವ್ಯವಸ್ಥೆಗೆ ಹೊಸತನವನ್ನು ಕೊಡುವ ಬಗ್ಗೆ ಮಾತಾಡುತ್ತದೆ. ನಗದು ರಹಿತ ವ್ಯವಹಾರವನ್ನು ಪ್ರತಿಪಾದಿಸುತ್ತದೆ. ಎಲ್ಲ ವ್ಯವಹಾರಗಳೂ ಬ್ಯಾಂಕ್‍ನ ಮೂಲಕವೇ ನಡೆಯಬೇಕಾದ ಅಗತ್ಯತೆಯನ್ನೂ, ಅದರಿಂದಾಗಿ ಆಗಬಹುದಾದ ಬದಲಾವಣೆಯನ್ನೂ ಅದು ವಿಶ್ಲೇಷಿಸುತ್ತದೆ. ಅದರಲ್ಲಿ ಉಲ್ಲೇಖಿಸಲಾಗಿರುವ 2013-14ರ ವಿವರದಂತೆ, ‘ದೇಶದಲ್ಲಿ 1000 ರೂಪಾಯಿಯ 39% ನೋಟುಗಳು ಚಲಾವಣೆಯಲ್ಲಿವೆ. 500 ರೂಪಾಯಿಯ 45% ನೋಟುಗಳು ಚಲಾವಣೆಯಲ್ಲಿವೆ. ರೂಪಾಯಿ 100ರ ನೋಟಿನ ಚಲಾವಣೆ ಬರೇ 11%. ಒಟ್ಟಿನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್... ಮುಂತಾದುವುಗಳನ್ನು ಬಳಕೆ ಮಾಡದೆ ನಗದು ರೂಪದಲ್ಲಿ ಹಣ ಚಲಾವಣೆಯಲ್ಲಿರುವುದೇ ದೇಶದ ಅರ್ಥವ್ಯವಸ್ಥೆ ಕುಸಿದಿರುವುದಕ್ಕೆ ಮೂಲ ಕಾರಣ ಎಂಬುದಾಗಿ ಅದು ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುತ್ತದೆ. ಈ ಕೃತಿ ರಚನೆಯ ತಂಡದಲ್ಲಿದ್ದವರಲ್ಲಿ ಓರ್ವರೇ ಅನಿಲ್ ಬೋಕಿಲ್. ಹಳೆ ನೋಟುಗಳ ಚಲಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ಹಿಂತೆಗೆದುಕೊಂಡುದುದರ ಹಿಂದೆ ಇವರ ಸಲಹೆ ಇದೆ ಎಂದು ಹೇಳಲಾಗುತ್ತಿದೆ. ತಿಂಗಳುಗಳ ಹಿಂದೆ ಪ್ರಧಾನಿಯವರು ಇವರನ್ನು ಕರೆಸಿಕೊಂಡು ಸುದೀರ್ಘವಾಗಿ ಚರ್ಚಿಸಿದ್ದರು ಎಂದೂ ಹೇಳಲಾಗುತ್ತದೆ. ಆದ್ದರಿಂದಲೇ, ಪ್ರಧಾನಿಯವರ ಈ ದಿಢೀರ್ ಕ್ರಮವು ನಕಲಿ ನೋಟು, ಕಪ್ಪು ಹಣ, ಭಯೋತ್ಪಾದಕರ ಹುಟ್ಟಡಗಿಸುವ ಪಣ.. ಮುಂತಾದ ಘೋಷಿತ ಉದ್ದೇಶಗಳ ಪ್ರಾಮಾಣಿಕತೆಯನ್ನು ಪ್ರಶ್ನಾರ್ಹಗೊಳಿಸುತ್ತದೆ. ನಿಜಕ್ಕೂ, ಹಳೆ ನೋಟುಗಳನ್ನು ರದ್ದುಪಡಿಸುವುದರ ಹಿಂದೆ ಇರುವ ಉದ್ದೇಶ ಕಪ್ಪು ಹಣದ ನಿಯಂತ್ರಣವೇ, ನಕಲಿ ನೋಟುಗಳ ನಿರ್ಮೂಲನವೇ ಅಥವಾ ನಗದು ರಹಿತ ವ್ಯವಸ್ಥೆಯೊಂದನ್ನು ಹುಟ್ಟು ಹಾಕುವ ಮೂಲಕ ಕಾರ್ಪೋರೇಟ್ ಕುಳಗಳಿಗೆ ಅನುಕೂಲ ಮಾಡಿಕೊಡುವುದೇ? ಯಾಕೆಂದರೆ, ಕಪ್ಪು ಹಣವನ್ನು ತಡೆಯುವ ಕಾರಣಕ್ಕಾಗಿ ಜಗತ್ತಿನ ಯಾವ ರಾಷ್ಟ್ರಗಳೂ ಹಳೆ ನೋಟುಗಳನ್ನು ರದ್ದುಗೊಳಿಸಿದ್ದಿಲ್ಲ. ನೋಟುಗಳ ಆಧುನಿಕೀಕರಣ ಮತ್ತು ಹಣದುಬ್ಬರವನ್ನು ತಡೆಯುವ ಉದ್ದೇಶದಿಂದಲೇ ನೋಟು ರದ್ದತಿಗಳು ನಡೆದಿವೆ. ಇದಕ್ಕಿರುವ ಕಾರಣವೇನೆಂದರೆ, ಕಪ್ಪು ಹಣ ಎಂಬುದು ನೋಟಿನ ರೂಪದಲ್ಲಿ ಮಾತ್ರ ಇರುವುದಲ್ಲ ಅಥವಾ ನೋಟಿನ ರೂಪದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾತ್ರ ಚಲಾವಣೆಯಲ್ಲಿರುತ್ತದೆ. ಹೆಚ್ಚಿನ ಬೇನಾಮಿ ದುಡ್ಡುಗಳೆಲ್ಲ ಬಂಗಾರ, ಜಮೀನು ಮತ್ತಿತರ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡೇ ಅಸ್ತಿತ್ವದಲ್ಲಿರುತ್ತದೆ. ಸ್ಟಾಕ್ ಎಕ್ಸ್ ಚೇಂಜ್‍ನಲ್ಲೂ ಅದು ಚಲಾವಣೆಯಲ್ಲಿರುತ್ತದೆ. ಒಂದು ರೀತಿಯಲ್ಲಿ, ಕಪ್ಪು ಹಣವನ್ನು ನಿಖರವಾಗಿ ಅಂದಾಜಿಸುವುದಕ್ಕೆ ಯಾವುದೇ ವೈಜ್ಞಾನಿಕ ವ್ಯವಸ್ಥೆಯಿಲ್ಲ. 2009ರಲ್ಲಿ ಲೋಕಸಭಾ ಚುನಾವಣೆಯ ವೇಳೆ ಅಡ್ವಾಣಿಯವರು ಮತ್ತು 2014ರಲ್ಲಿ ನರೇಂದ್ರ ಮೋದಿಯವರು ನೀಡಿರುವ ಹೇಳಿಕೆಗಳೇ ಇದಕ್ಕೆ ಅತ್ಯುತ್ತಮ ಉದಾಹರಣೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣವನ್ನು ತಾನು ಭಾರತಕ್ಕೆ ತರುತ್ತೇನೆಂದು ಅಡ್ವಾಣಿಯವರು ಹೇಳಿದ್ದರು. ಭಾರತದ ಒಟ್ಟು 6 ಲಕ್ಷದಷ್ಟು ಗ್ರಾಮಗಳಲ್ಲಿ ಪ್ರತಿ ಗ್ರಾಮವೂ 4 ಕೋಟಿಯಷ್ಟು ಹಣವನ್ನು ಪಡೆಯಲಿದೆ ಎಂದೂ ಅವರು ಘೋಷಿಸಿದ್ದರು. 2014ರಲ್ಲಿ ನರೇಂದ್ರ ಮೋದಿಯವರೂ ಸ್ವಿಸ್ ಬ್ಯಾಂಕ್‍ನ ಕಪ್ಪು ಹಣವನ್ನು ಚುನಾವಣಾ ಭಾಷಣದಲ್ಲಿ ಉಲ್ಲೇಖಿಸಿದ್ದರು. ತಾನು ಪ್ರಧಾನಿಯಾದರೆ 100 ದಿನಗಳಲ್ಲಿ ಪ್ರತಿ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿಯನ್ನು ಜಮಾ ಮಾಡುವುದಾಗಿಯೂ ಘೋಷಿಸಿದ್ದರು. ಅವರ ಹೇಳಿಕೆಯ ಪ್ರಕಾರವೇ ಲೆಕ್ಕ ಹಾಕುವುದಾದರೆ, ಸ್ವಿಸ್ ಬ್ಯಾಂಕ್‍ನಲ್ಲಿ 1800 ಲಕ್ಷ ಕೋಟಿ ರೂಪಾಯಿ ಇರಬೇಕಾಗುತ್ತದೆ. ಇದು ದೇಶದ ಜಿಡಿಪಿಯ 150% ಆಗುತ್ತದೆ. ಅದೇ ವೇಳೆ, 2006-07ರಿಂದ 2011-12ರ ವರೆಗೆ ದೇಶದ ಆದಾಯ ತೆರಿಗೆ ಇಲಾಖೆಯು ನಡೆಸಿದ ದಾಳಿಯ ವಿವರಗಳನ್ನು ವಿಶ್ಲೇಷಿಸಿದರೆ, ಕಪ್ಪು ಹಣದಲ್ಲಿ ನೋಟಿನ ಪ್ರಮಾಣ ಎಷ್ಟು ನಗಣ್ಯ ಎಂಬುದೂ ಗೊತ್ತಾಗುತ್ತದೆ. ಆದಾಯ ಇಲಾಖೆ ವಶಪಡಿಸಿಕೊಂಡ ಒಟ್ಟು ಮೊತ್ತದಲ್ಲಿ ನೋಟಿನ ರೂಪದಲ್ಲಿದ್ದ ಕಪ್ಪು ಹಣ ಬರೇ 5%. ಉಳಿದೆಲ್ಲವೂ ಸಂಪತ್ತಿನ ರೂಪಕ್ಕೆ ಪರಿವರ್ತನೆಗೊಂಡವುಗಳೇ ಆಗಿದ್ದುವು. ಹೀಗಿರುತ್ತಾ, ನಕಲಿ ನೋಟು ಮತ್ತು ಕಪ್ಪು ಹಣದ ಕಾರಣವನ್ನು ಕೊಟ್ಟು ಕೇಂದ್ರ ಸರಕಾರ ಹಳೆ ನೋಟುಗಳನ್ನು ರದ್ದುಗೊಳಿಸಿರುವುದನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕ ಎಂದು ಕರೆಯಬಹುದು? ಸರಕಾರದ ಅಧಿಕೃತ ವರದಿಯ ಪ್ರಕಾರವೇ, ಒಟ್ಟು 500 ರೂಪಾಯಿ ನೋಟುಗಳಲ್ಲಿ 0.00025% ನೋಟುಗಳಷ್ಟೇ ನಕಲಿಯಾಗಿವೆ. ಈ ಅಲ್ಪ ಪ್ರಮಾಣದ ನಕಲಿತನವನ್ನು ತಡೆಗಟ್ಟುವುದಕ್ಕೆ 120 ಕೋಟಿ ಜನರನ್ನು ಬ್ಯಾಂಕ್‍ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲಿಸಬೇಕೇ? ಅಲ್ಲದೆ, ಈಗ ಬಿಡುಗಡೆಗೊಳಿಸಿರುವ ರೂ. 2000 ಮತ್ತು 500 ರೂಪಾಯಿಗಳನ್ನು ನಕಲಿ ಮಾಡಲು ಅವಕಾಶ ಇದ್ದೇ ಇದೆಯಲ್ಲವೇ? ಇದಕ್ಕಿಂತ, ಸ್ವಿಸ್ ಬ್ಯಾಂಕ್‍ನಲ್ಲಿರುವ 1800 ಲಕ್ಷ ಕೋಟಿ ರೂಪಾಯಿಯನ್ನು ಭಾರತಕ್ಕೆ ತರುವುದು ಉತ್ತಮವಾಗಿತ್ತಲ್ಲವೇ? 100 ದಿನಗಳ ವಾಯಿದೆ ಕಳೆದು 100 ವಾರಗಳಾದ ಬಳಿಕವೂ ಪ್ರಧಾನಿಯವರು ತನ್ನ ವಾಗ್ದಾನವನ್ನು ಈಡೇರಿಸದೇ ಇರುವುದರ ಹಿನ್ನೆಲೆಯೇನು? ಅವರೇಕೆ ಆ ಬಗ್ಗೆ ಮಾತಾಡುತ್ತಿಲ್ಲ?    
ಅನಿಲ್ ಬೋಕಿಲ್
      ನಿಜವಾಗಿ, ನೋಟು ರದ್ಧತಿಯ ಹಿನ್ನೆಲೆಯನ್ನು ತಪಾಸಿಸಿಕೊಂಡು ಹೋದರೆ ಅನಿಲ್ ಬೋಕಿಲ್ ಅವರ ‘ನಗದು ರಹಿತ’ ಸಿದ್ಧಾಂತವನ್ನು ಜಾರಿಗೊಳಿಸುವುದೇ ಇದರ ಪರಮ ಗುರಿ ಎಂದೇ ಅನಿಸುತ್ತದೆ. ಸರಕಾರ ಈಗಾಗಲೇ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 100% ವಿದೇಶಿ ನೇರ ಹೂಡಿಕೆಗೆ (FDI) ಅನುಮತಿಯನ್ನು ನೀಡಿದೆ. ಇಲ್ಲಿನ ಸಮಸ್ಯೆ ಏನೆಂದರೆ, ಈ ದೇಶದಲ್ಲಿ ಬಹುತೇಕ ವ್ಯಾಪಾರ-ವಹಿವಾಟುಗಳು ನಗದು ರೂಪದಲ್ಲಿಯೇ ನಡೆಯುತ್ತವೆ. ಶೆಟ್ರು, ಭಟ್ರು, ಸಾಬ್ರು...ಗಳ ಅಂಗಡಿಗಳಿಗೇ ಇಲ್ಲಿ ಗ್ರಾಹಕರು ಹೆಚ್ಚು. ಸಣ್ಣ ವ್ಯಾಪಾರ, ಬೀದಿಬದಿ ವ್ಯಾಪಾರಗಳೇ ಇವತ್ತಿಗೂ ಈ ದೇಶದಲ್ಲಿ ಪ್ರಾಬಲ್ಯವನ್ನು ಪಡೆದುಕೊಂಡಿವೆ. ಈ ಪ್ರಾಬಲ್ಯವನ್ನು ಹತ್ತಿಕ್ಕದಿದ್ದರೆ ವಿದೇಶಿ ನೇರ ಹೂಡಿಕೆಯಿಂದ ತಲೆಯೆತ್ತಲಿರುವ ಬೃಹತ್ ಮಳಿಗೆಗಳು ಬಾಗಿಲು ಮುಚ್ಚಬೇಕಾಗುತ್ತದೆ. ಶೆಟ್ರ ಅಂಗಡಿಯಿಂದ ರಿಲಯನ್ಸ್ ಫ್ರೆಶ್‍ಗೆ, ಸಾಬರ ಭಂಡಸಾಲೆಯಿಂದ ವಾಲ್‍ಮಾರ್ಟ್‍ಗೆ ಅಥವಾ ಬಿಗ್‍ಬಝಾರ್‍ಗೆ ಗ್ರಾಹಕರನ್ನು ತಿರುಗಿಸಬೇಕಾಗುತ್ತದೆ. ಹಾಗಂತ, ತೀರಾ ಕಾರಣವಿಲ್ಲದೇ ಸಾಮಾನ್ಯ ಗ್ರಾಹಕ ಬಿಗ್ ಬಝಾರ್‍ನ ಮೆಟ್ಟಿಲು ಹತ್ತುತ್ತಾನೆ/ಳೆ ಎಂದು ಹೇಳಲು ಸಾಧ್ಯವಿಲ್ಲ. ರಿಲಯನ್ಸ್ ಫ್ರೆಶ್‍ಗೂ, ಭಟ್ರು, ಸಾಬರ  ಕಿರಾಣಿ ಅಂಗಡಿಗೂ ಅನೇಕ ವಿಷಯಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಕಾರ್ಪೊರೇಟ್ ಸಂಸ್ಥೆಗಳ ಬೃಹತ್ ಮಳಿಗೆಗಳು ಗಾತ್ರದಲ್ಲಿ ದೊಡ್ಡದಿರುತ್ತದೆ. ಶಿಸ್ತು ಇರುತ್ತದೆ. ಆಯ್ಕೆಯಲ್ಲಿ ಅಪರಿಮಿತ ಅವಕಾಶ ಇರುತ್ತದೆ. ಶೆಟ್ರ ಅಂಗಡಿಯಲ್ಲಾದರೆ, ಶಿಸ್ತು ಕಡಿಮೆ. ಗಾತ್ರ ಚಿಕ್ಕದು. ವಸ್ತುಗಳ ಪ್ರದರ್ಶನವೂ ನಡೆಯುವುದಿಲ್ಲ. ಆದರೆ ಅಲ್ಲಿ ಮನುಷ್ಯನ ಬಹುಮುಖ್ಯ ಬೇಡಿಕೆಯಾದ `ಮಾತು’ ಇರುತ್ತದೆ. ಸಾಲದ ವ್ಯವಹಾರ ಇರುತ್ತದೆ. ಜೇಬು ಖಾಲಿ ಇದ್ದರೂ ಮನೆಗೆ ಅಕ್ಕಿ ಒಯ್ಯುವ ಭರವಸೆ ಇರುತ್ತದೆ. ಬೃಹತ್ ಮಳಿಗೆಗಳಲ್ಲಿ ಇವೆರಡೂ ಶೂನ್ಯ. ಅಲ್ಲಿ ಮಾತುಕತೆಯೂ ಇಲ್ಲ. ಸಾಲದ ವಹಿವಾಟೂ ಇಲ್ಲ. ನಗದು ರೂಪದ ವ್ಯವಹಾರಕ್ಕಿಂತ ಕಾರ್ಡ್ ರೂಪದ ವ್ಯವಹಾರಕ್ಕೇ ಆದ್ಯತೆ. ಭಾರತದ ಬಹುಸಂಖ್ಯಾತ ಗ್ರಾಹಕರು ಈ ರೂಪದ ವ್ಯವಹಾರಕ್ಕೆ ಇನ್ನೂ ಒಗ್ಗಿಕೊಂಡಿಲ್ಲ. ಆದ್ದರಿಂದ ನೋಟು ರದ್ಧತಿ ಎಂಬುದು ಸಾಮಾನ್ಯ ಭಾರತೀಯರನ್ನು ಕಾರ್ಪೋರೇಟ್ ಮಳಿಗೆಗಳ ಗ್ರಾಹಕರಾಗಿ ಬದಲಿಸಿ ಬಿಡುವುದಕ್ಕೆ ನರೇಂದ್ರ ಮೋದಿಯವರು ಹೆಣೆದ ತಂತ್ರದಂತೆ ಕಾಣಿಸುತ್ತದೆ. ಮೊದಲು ಭಾರತೀಯರನ್ನು ನಗದುರಹಿತಗೊಳಿಸಬೇಕು. ಪ್ರತಿಯೊಬ್ಬರನ್ನೂ ಬ್ಯಾಂಕ್ ಅವಲಂಬಿತರನ್ನಾಗಿ ಮಾಡಬೇಕು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಎಂಬ ಪದಗಳು ಅವರ ಬಾಯಲ್ಲಿ ಸಾಮಾನ್ಯವಾಗಿಸಬೇಕು. ಜೇಬಲ್ಲಿ ದುಡ್ಡಿನ ಬದಲು ಕಾರ್ಡ್‍ಗಳನ್ನು ಇಟ್ಟುಕೊಂಡು ಮನೆಯಿಂದ ಹೊರಡುವ ಸಂಪ್ರದಾಯವನ್ನು ಬೆಳೆಸಬೇಕು. ಹೀಗಾದರೆ, ಶೆಟ್ರ ಅಂಗಡಿಯ ಗ್ರಾಹಕ ಅಂಬಾನಿಯ ಗ್ರಾಹಕನಾಗಿ ಬದಲಾಗುತ್ತಾನೆ/ಳೆ. ಊರಿನ ಕಿರಾಣಿ ಅಂಗಡಿಯಿಂದ ಬಿಗ್‍ಬಝಾರ್‍ಗೆ ಗ್ರಾಹಕ ತನ್ನ ನಿಷ್ಠೆ ಬದಲಿಸುತ್ತಾನೆ/ಳೆ. ಈ ದೂರಗಾಮಿ ಉದ್ದೇಶವನ್ನು ಇಟ್ಟುಕೊಂಡೇ ನೋಟು ರದ್ಧತಿ ಎಂಬ ಜೂಜಿಗೆ ಸರಕಾರ ಪ್ರಯತ್ನಿಸಿದಂತಿದೆ. ಅನಿಲ್ ಬೋಕಿಲ್ ಅವರ ಅರ್ಥಕ್ರಾಂತಿಯ ಆಂತರಿಕ ಉದ್ದೇಶವೂ ಇದುವೇ. ಎಲ್ಲವೂ ಬ್ಯಾಂಕ್ ಮೂಲಕವೇ ನಡೆಯಬೇಕು. ಹಾಗೆ ಆಗಬೇಕೆಂದಾದರೆ, ಜನರನ್ನು ಬ್ಯಾಂಕ್‍ನತ್ತ ಆಹ್ವಾನಿಸಬೇಕು. ಅದಕ್ಕಾಗಿ ಬ್ಯಾಂಕ್ ಖಾತೆ ಇಲ್ಲದೆಯೇ ಅರಾಮವಾಗಿ ಬದುಕುವ ಮತ್ತು ಬ್ಯಾಂಕ್ ಖಾತೆ ಇದ್ದೂ ನಗದಿನಲ್ಲೇ ವ್ಯವಹಾರ ನಡೆಸುವ ಬಹುಸಂಖ್ಯಾತ ಜನರ ಮೇಲೆ ಒತ್ತಡ ಹೇರಬೇಕು. ನೋಟು ರದ್ಧತಿಯೊಂದೇ ಅದಕ್ಕಿರುವ ಪರಿಹಾರ. ಇದರಿಂದಾಗಿ ಪ್ರತಿಯೋರ್ವ ಭಾರತೀಯ ಬ್ಯಾಂಕ್ ಖಾತೆ ತೆರೆಯಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾನೆ/ಳೆ. ಇದೇ ವೇಳೆ, ಇದರಿಂದಾಗುವ ತೊಂದರೆಯಿಂದಾಗಿ ಆತ/ಕೆ, ಸರಕಾರದ ಟೀಕಾಕಾರನಾಗಿ  ಬದಲಾಗುವುದಕ್ಕೂ ಅವಕಾಶ ಇದೆ. ಇದನ್ನು ತಪ್ಪಿಸಬೇಕಾದರೆ, ನವಿರಾದ ಸುಳ್ಳೊಂದನ್ನು ಇದರೊಂದಿಗೆ ಸೇರಿಸಿ ಬಿಡಬೇಕಾಗುತ್ತದೆ. ಅದರ ಭಾಗವೇ ಕಪ್ಪು ಹಣದ ಮಾತು ಮತ್ತು ಪಾಕಿಸ್ತಾನದಲ್ಲಿ  ನಕಲಿ ನೋಟು ತಯಾರಾಗುತ್ತಿದೆ ಎಂಬ ಸಮರ್ಥನೆ. ಈ ಕಾರಣದಲ್ಲಿ ದೇಶಪ್ರೇಮವೂ ಇದೆ, ಕಪ್ಪು ಹಣದ ನಿರ್ಮೂಲನೆಯ ಬಗ್ಗೆ ಸರಕಾರದ ಬದ್ಧತೆಯೂ ಇದೆ. ಹೀಗೆ ಹೇಳಿದರೆ, ನೋಟು ಬದಲಾವಣೆಗಾಗಿ ಬ್ಯಾಂಕ್‍ನ ಎದುರು ಕಾದು ಕಾದು ಬಿಸಿಲಿಗೆ ಬಾಡುವ ಬಡ ಭಾರತೀಯನೂ, ‘ತಾನೆಲ್ಲಿ ದೇಶದ್ರೋಹಿಯಾಗುವೆನೋ’ ಎಂದು ನಗುನಗುತ್ತಲೇ ಎಲ್ಲವನ್ನೂ ಸಹಿಸುತ್ತಾನೆ. ‘ಯೋಧರು ದೇಶಕ್ಕಾಗಿ ಗಡಿಯಲ್ಲಿ ಜೀವವನ್ನೇ ಕೊಡುವಾಗ, ಈ ಕಷ್ಟವೇನು ಮಹಾ..’ ಎಂಬ ನಕಲಿ ದೇಶ ಪ್ರೇಮವನ್ನೂ ಪ್ರದರ್ಶಿಸುತ್ತಾನೆ.     
        ಸದ್ಯ ಆಗಿರುವುದೂ ಇದುವೇ...

No comments:

Post a Comment