Wednesday, August 24, 2016

ಗೋವಿಗಾದರೂ ಬಾಯಿ ಬರುತ್ತಿದ್ದರೆ..

ಪ್ರವೀಣ್ ಪೂಜಾರಿಯ ಕುಟುಂಬ
        ಸಂಶೋಧಕ ಡಾ| ಎಂ. ಚಿದಾನಂದ ಮೂರ್ತಿ ಮತ್ತು ಖ್ಯಾತ ಇತಿಹಾಸಕಾರ ದ್ವಿಜೇಂದ್ರ ನಾರಾಯಣ್‍ರ ಅಭಿಪ್ರಾಯಗಳಲ್ಲಿ ಒಂದು ಸಮಾನ ಅಂಶ ಇದೆ. ಅದೇನೆಂದರೆ, ಪುರಾತನ ಕಾಲದಲ್ಲಿ ಗೋವು ಆಹಾರವಾಗಿ ಬಳಕೆಗೀಡಾಗಿರುವುದಕ್ಕೂ ಮತ್ತು ಹತ್ಯಾ ನಿಷೇಧಕ್ಕೆ ಒಳಗಾಗಿರುವುದಕ್ಕೂ ಧರ್ಮ ಸಂಬಂಧಿ ಕಾರಣಗಳು ಇಲ್ಲವೇ ಇಲ್ಲ. ಗೋವು ಸಂದರ್ಭಾನುಸಾರ ಹತ್ಯೆಗೂ ಒಳಗಾಗಿತ್ತು. ಹತ್ಯಾ ನಿಷೇಧಕ್ಕೂ ಈಡಾಗಿತ್ತು. ಚಿದಾನಂದ  ಮೂರ್ತಿಯವರ, ‘ಗೋವು: ಗೋಮಾತೆ: ಗೋಹತ್ಯಾ ನಿಷೇಧ ಕಾನೂನು..’ ಎಂಬ ಕೃತಿಯಲ್ಲಿ, ‘ಗೋವು: ಹಿಂದಿನ ಧರ್ಮ ಗ್ರಂಥಗಳಲ್ಲಿ..’ ಎಂಬ ಅಧ್ಯಾಯವೊಂದಿದೆ. ಅದರಲ್ಲಿ ಅವರು,
      “ಋಗ್ವೇದದಲ್ಲಿ ಗೋಮಾಂಸ ಭಕ್ಷಣೆ ಮತ್ತು ಗೋವನ್ನು ಬಲಿಯಾಗಿ ಅರ್ಪಿಸುವುದರ ಸೂಚನೆಗಳೇನೋ ಇವೆ” ಎಂದು ಹೇಳಿರುವರಲ್ಲದೇ, ಆ ಕಾಲದಲ್ಲಿ ಬಂಜೆ ಅಥವಾ ಗೊಡ್ಡು ಹಸುಗಳನ್ನು ಮಾತ್ರ ಕೊಲ್ಲಲಾಗುತ್ತಿತ್ತು’ ಎಂಬ ಡಾ. ಪಿ.ವಿ. ಕಾಣೆ ಯವರ ‘ಹಿಸ್ಟರಿ ಆಫ್ ಧರ್ಮಶಾಸ್ತ್ರ’ ಕೃತಿಯಲ್ಲಿನ ಉಲ್ಲೇಖಗಳನ್ನು ಸಮರ್ಥಿಸಿದ್ದಾರೆ. ಅಲ್ಲದೇ, ತೀರಾ ಎಚ್ಚರಿಕೆ ವಹಿಸಿ ಕಾಣೆಯವರು ಈ ಅಭಿಪ್ರಾಯಕ್ಕೆ ಬಂದಿದ್ದಾರೆ ಎಂಬ ಅಭಿಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಇದೇ ವೇಳೆ In Myth of Holy Cow ಎಂಬ ತಮ್ಮ ಪ್ರಮುಖ ಸಂಶೋಧನಾತ್ಮಕ ಕೃತಿಯಲ್ಲಿ ದ್ವಿಜೇಂದ್ರ ನಾರಾಯಣ್ ಅವರು, ಕ್ರಿಸ್ತ ಪೂರ್ವದ ವೇದಕಾಲವನ್ನು ಮತ್ತು ಕ್ರಿಸ್ತಶಕದ ಈ ಉಪಭೂಖಂಡವನ್ನು ಪರಸ್ಪರ ಮುಖಾಮುಖಿಯಾಗಿಸಿ ಜರಡಿ ಹಿಡಿದಿದ್ದಾರೆ. ಕ್ರಿಸ್ತಪೂರ್ವ (1000-5000 ವೇದಕಾಲ) ಕಾಲದಲ್ಲೇ ಗೋವು ಆಹಾರವಾಗಿ ಜನರ ನಡುವೆ ಚಲಾವಣೆಯಲ್ಲಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಈ ಉಪಭೂಖಂಡದಲ್ಲಿ ಜನರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡದ್ದೇ  ಕ್ರಿಸ್ತಪೂರ್ವ 500ನೇ ಇಸವಿಯಲ್ಲಿ. ಇದು ಎರಡು ಪ್ರಮುಖ ವಿಷಯಗಳನ್ನು ಮುನ್ನೆಲೆಗೆ ತಂದಿತು. ಅದರಲ್ಲಿ, ‘ವೆಜಿಟೇರಿಯನ್’ ಒಂದಾದರೆ ಇನ್ನೊಂದು ಗೋವು, ದನ, ಎಮ್ಮೆ ಮುಂತಾದ ಪ್ರಾಣಿಗಳು. ಕೃಷಿ ಚಟುವಟಿಕೆಗಳು ವೆಜಿಟೇರಿಯನಿಸಂ ಅನ್ನು ಬಯಸಿದುವು. ಕೃಷಿ ಚಟುವಟಿಕೆಯ ಬೆಳವಣಿಗೆಗೆ ಸಸ್ಯಾಹಾರದ ಪರ ವಾತಾವರಣ ಅಗತ್ಯವಾಗಿತ್ತು. ಜೊತೆಗೇ ಹಸು, ಎತ್ತು, ಎಮ್ಮೆ, ಕೋಣಗಳನ್ನು ಕೃಷಿಯು ಅವಲಂಬಿಸಿರುವುದರಿಂದ ಅವುಗಳ ಯಥೇಚ್ಛ ಲಭ್ಯತೆ ಅಗತ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಅಂಶಗಳು ಪ್ರಚಾರಕ್ಕೆ ಬಂದುವು. ಮಾಂಸಾಹಾರ ತಪ್ಪು ಎಂಬುದು ಅದರಲ್ಲಿ ಒಂದಾದರೆ ಇನ್ನೊಂದು, ಸಸ್ಯಾಹಾರ ಉತ್ತಮ ಎಂಬುದು. ಇದರ ಹೊರತಾಗಿ ಸಸ್ಯಾಹಾರಕ್ಕೂ ಮಾಂಸಾಹಾರ ನಿಷೇಧಕ್ಕೂ ಇನ್ನಾವ ಧಾರ್ಮಿಕ ಕಾರಣಗಳೂ ಇಲ್ಲ ಎಂದು ದ್ವಿಜೇಂದ್ರ ನಾರಾಯಣ್‍ರು ವಾದಿಸುತ್ತಾರೆ.
ಪ್ರವೀಣ್ ಪೂಜಾರಿ
       ನಿಜವಾಗಿ, ಮೊಘಲರ ಕಾಲದಲ್ಲಿ ಬಾಬರ್ ಚಕ್ರವರ್ತಿಯು ಗೋಹತ್ಯೆಯನ್ನು ನಿಷೇಧಿಸಿದ್ದ ಎಂದು ಹೇಳಲಾಗುತ್ತದೆ. ಅದೇ ವೇಳೆ, ಬಾಬರ್‍ನ ಸಮಕಾಲೀನರಾಗಿದ್ದ ಹಿಂದೂ ದೊರೆಗಳು ಗೋಹತ್ಯೆಗೆ ನಿಷೇಧ ಹೇರಿರಲಿಲ್ಲ ಎಂಬುದೂ ದೃಢಪಟ್ಟಿದೆ. ಇವೆಲ್ಲ ಹೇಳುವುದೇನನ್ನು? ಧರ್ಮಕ್ಕಿಂತ ಹೊರತಾದ ಸ್ಥಳೀಯ ಕಾರಣಗಳೇ ಈ ನಿಷೇಧ ಮತ್ತು ನಿಷೇಧ ರಹಿತ ಸ್ಥಿತಿಯ ಹಿಂದಿವೆ ಎಂಬುದನ್ನೇ ಅಲ್ಲವೇ? ಗೋವು ವೇದ ಕಾಲ ಅಥವಾ ಅದಕ್ಕಿಂತ ಪೂರ್ವ ಕಾಲದಲ್ಲೇ ಈ ಉಪಭೂಖಂಡದ ಅತ್ಯಂತ ಪರಿಚಿತ ಪ್ರಾಣಿಯಾಗಿತ್ತು. ನಾಗರಿಕತೆ ಬೆಳೆದು ಕೃಷಿ ಚಟುವಟಿಕೆಗಳು ಬಿರುಸು ಪಡಕೊಳ್ಳತೊಡಗಿದಂತೆಯೇ ಗೋವು ಸಹಿತ ಜಾನುವಾರು ಸಂತತಿಗಳ ಉಪಯುಕ್ತತೆಯು ಹೆಚ್ಚಾಯಿತು. ಆವರೆಗೆ ಗೋವು ಕೊಡುತ್ತಿದ್ದುದು (ಅಥವಾ ಬಳಕೆಯಾಗುತ್ತಿದ್ದುದು) ಹಾಲು ಮಾತ್ರ. ಆದರೆ ಕೃಷಿಯು ಗೋವನ್ನು ಬಹೂಪಯೋಗಿಗೊಳಿಸಿತು. ಅದರ ಶಾರೀರಿಕ ಸಾಮರ್ಥ್ಯವು ಗೋವನ್ನು ಅತ್ಯಮೂಲ್ಯ ಪ್ರಾಣಿಯಾಗಿ ಮಾರ್ಪಡಿಸಿತು. ಸೆಗಣಿಗೂ ಮಹತ್ವ ಲಭ್ಯವಾಯಿತು. ಹೀಗೆ ಕ್ರಿಸ್ತಪೂರ್ವದ ವೇದಕಾಲದಲ್ಲಿ ಹಾಲು ಮಾತ್ರ ಕೊಡುತ್ತಿದ್ದ ಗೋವು ಕ್ರಿಸ್ತಶಕದಲ್ಲಿ ಹಾಲಿನ ಜೊತೆಗೇ ಕೃಷಿ ಚಟುವಟಿಕೆಯ ಆಧಾರಸ್ತಂಭವೂ ಆಗಿ ಬದಲಾಯಿತು. ಒಂದು ರೀತಿಯಲ್ಲಿ, ಕ್ರಿಸ್ತಶಕ ನಂತರದ ಗೋವು ಕ್ರಿಸ್ತಪೂರ್ವದ ವೇದಕಾಲದ ಗೋವು ಆಗಿರಲಿಲ್ಲ. ಆದ್ದರಿಂದ, ವೇದಕಾಲದ ನಿಲುವನ್ನು ಈ ಕ್ರಿಸ್ತಶಕ ನಂತರದ ಕಾಲದಲ್ಲೂ ಮುಂದುವರಿಸಿಕೊಂಡು ಹೋಗುವುದಕ್ಕೆ ಅರ್ಥವೂ ಇರಲಿಲ್ಲ. ವೇದಕಾಲದಲ್ಲಿ ಗೋಹತ್ಯೆ ಅನುವದನೀಯವಾಗಿರುವುದಕ್ಕೂ ಕೃಷಿ ಚಟುವಟಿಕೆ ಪ್ರಾರಂಭವಾದ ಕ್ರಿಸ್ತಶಕ 500ರ ಇಸವಿಯಲ್ಲಿ ಗೋಹತ್ಯೆಯು ನಿಷೇಧಕ್ಕೆ ಒಳಗಾಗಿರುವುದಕ್ಕೂ ಈ ನೆಲಸಂಬಂಧೀ ಹಿನ್ನೆಲೆ ಇದೆ. ಸಂದರ್ಭಕ್ಕೆ ತಕ್ಕಂತೆ ಗೋಹತ್ಯೆ ಸರಿ ಮತ್ತು ತಪ್ಪಾಗುತ್ತಾ ಬಂದಿದೆ. ಚೀನಾದಲ್ಲಿ ಇವತ್ತು ನಾಯಿ ಆಹಾರದ ಪ್ರಾಣಿ. ನಾಯಿ ಮಾಂಸ ಚೀನಾದಲ್ಲಿ ಜನ ಪ್ರಿಯ. ಅದರ ಚರ್ಮವೂ ತುಂಬಾ ಬೆಲೆ ಬಾಳುತ್ತದೆ. ಅದೇ ವೇಳೆ ಅಮೇರಿಕದಲ್ಲಿ ನಾಯಿ ಸಾಕು ಪ್ರಾಣಿ. ಅದನ್ನು ಮನೆ ಯೊಳಗೇ ಸಾಕುತ್ತಾರೆ. ಅದನ್ನು ಹತ್ಯೆ ಮಾಡುವುದಿಲ್ಲ. ಅಮೇರಿಕ ಮತ್ತು ಚೀನಾದಲ್ಲಿರುವ ನಾಯಿ, ನಾಯಿಯೇ ಆಗಿದ್ದರೂ ಭಿನ್ನ ಸಂಸ್ಕ್ರತಿ, ವಾತಾವರಣ ಮತ್ತು ಅಭಿರುಚಿಗಳಿಗೆ ತಕ್ಕಂತೆ ಅದು ಗುರುತಿಗೀಡಾಗಿದೆ. ವೇದಕಾಲದಿಂದ ಈ ಕಾಲದ ವರೆಗೆ ಗೋವು ಪರಿಗಣಿಸಲ್ಪಡುತ್ತಾ ಬಂದಿರುವುದೂ ಇದೇ ರೀತಿಯಲ್ಲಿ. ಒಂದು ಪ್ರದೇಶದ ಜನರು ಗೋಮಾಂಸವನ್ನು ಸೇವಿಸುತ್ತಾ ಮತ್ತು ಇನ್ನೊಂದು ಪ್ರದೇಶದ ಜನರು ಈ ಆಹಾರ ಕ್ರಮವನ್ನು ವಿರೋಧಿಸುತ್ತಾ ಬಂದಿರುವುದರ ಹಿನ್ನೆಲೆಯೂ ಇದುವೇ. ಆಯಾ ಪ್ರದೇಶದ ಪರಿಸ್ಥಿತಿ ಮತ್ತು ಜೀವನ ಕ್ರಮವು ಈ ವಿರುದ್ಧ ನಿಲುವಿಗೆ ಕಾರಣವಾಗಿತ್ತೇ ಹೊರತು ವೇದಗ್ರಂಥಗಳೋ ಅಥವಾ ಹಿಂದೂ ಧಾರ್ಮಿಕ ಭಾವನೆಗಳೋ ಅಲ್ಲ. ಒಂದು ವೇಳೆ, ಹಿಂದೂ ಧರ್ಮಗ್ರಂಥಗಳೇ ಗೋಹತ್ಯಾ ವಿರೋಧಕ್ಕೆ ಕಾರಣ ಆಗಿರುತ್ತಿದ್ದರೆ ವೇದಕಾಲದಲ್ಲಿ ಸಹ್ಯವೂ ವೇದಾನಂತರದ ಕಾಲದಲ್ಲಿ ವರ್ಜ್ಯವೂ ಆಗಿರುವುದಕ್ಕೆ ಸಾಧ್ಯವಿತ್ತೇ? ಧರ್ಮವೊಂದರ ಆಶಯಗಳು ವೇದಕಾಲದಲ್ಲೂ ಆಧುನಿಕ ಕಾಲದಲ್ಲೂ ಬೇರೆ ಬೇರೆಯಾಗುತ್ತದೆಯೇ? ಈ ಉಪಭೂಖಂಡದ ನಾಗರೀಕತೆಯ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ಅಧ್ಯಯನಕ್ಕೆ ಒಳಪಡಿಸುವ ಯಾರಿಗೇ ಆಗಲಿ, ಗೋವು, ಗೋಮಾಂಸ, ಗೋಹತ್ಯೆ.. ಮುಂತಾದುವು ಧಾರ್ಮಿಕ ಇಶ್ಯೂ ಆಗಿ ಕಾಣಿಸುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲಿನ ನಾಗರೀಕತೆಯ ಪಾಲಿಗೆ ಗೋವು ಒಂದು ಧರ್ಮಾತೀತ ಪ್ರಾಣಿ. ಅದರ ಸಾಧುತನ ಮತ್ತು ಬಹುಪಯೋಗದ ಕಾರಣಕ್ಕಾಗಿ ಅದನ್ನು ಜನರು ವಿವಿಧ ರೀತಿಯಲ್ಲಿ ಪರಿಗಣಿಸಿದರು. ಅದಕ್ಕೆ ಧಾರ್ಮಿಕವಾಗಿ ಯಾವ ಮಹತ್ವವೂ ಇಲ್ಲದಿದ್ದುದರಿಂದಲೇ ಅದನ್ನು ಮಾಂಸವಾಗಿ ಬಳಸಿದವರೂ ಬಳಸದವರೂ ಜಗಳವಿಲ್ಲದೆಯೇ ಬದುಕಿದರು. ಅಷ್ಟಕ್ಕೂ, ಇವತ್ತು ಗೋಸಾಗಾಟದ ಹೆಸರಲ್ಲಿ ದಾಂಧಲೆ ನಡೆಸುವವರಿಗೆ ಇವೆಲ್ಲ ಗೊತ್ತಿದೆಯೋ ಇಲ್ಲವೋ. ಗೊತ್ತಿದ್ದರೂ ಇಲ್ಲ ದಿದ್ದರೂ ಈ ಯುವಕರಿಗೆ ಅದೊಂದು ಫ್ಯಾಶನ್. ಹಾಗಂತ, ಈ ದೇಶದ ಬಚ್ಚಲು ಮನೆಗಳು, ಕಪಾಟುಗಳು, ಅಡುಗೆ ಕೋಣೆ ಗಳೆಲ್ಲ ಎಷ್ಟಂಶ ಹಸು ಮತ್ತು ದನಗಳಿಂದ ತುಂಬಿಹೋಗಿವೆ ಎಂಬ ಬಗ್ಗೆ ಈ ಮಂದಿ ಜಿಜ್ಞಾಸೆಗೆ ಹೊರಟರೆ ಅವರು ಉಡುಪಿ ಜಿಲ್ಲೆಯ ಕೆಂಜೂರಿನ ಪ್ರವೀಣ್ ಪೂಜಾರಿ, ದಾದ್ರಿಯ ಅಖ್ಲಾಕ್, ಶಿವಮೊಗ್ಗ ಮತ್ತು ಉನಾದ ದಲಿತರ ಕಾಲು ಹಿಡಿದು ಕ್ಷಮೆ ಯಾಚಿಸಬಹುದು ಎಂದೆನ್ನಿಸುತ್ತದೆ. ಈ ದಾಂಧಲೆಕೋರರು ಹೆಚ್ಚು ತಲೆ ಕೆಡಿಸಿಕೊಳ್ಳದ ಫ್ಯಾಟ್ ಪ್ರೊಸೆಸಿಂಗ್ ಇಂಡಸ್ಟ್ರೀ ಎಂಬೊಂದು ಉದ್ಯಮ ನಮ್ಮ ದೇಶದಲ್ಲಿದೆ. ಇದರ ಕೆಲಸ ಏನೆಂದರೆ, ದೇಶಾದ್ಯಂತ ಇರುವ ಸ್ನಾನ ಮತ್ತು ಸೌಂದರ್ಯ ಕೇಂದ್ರಿತ ಉತ್ಪನ್ನಗಳ ಕಂಪೆನಿಗಳಿಗೆ ಬೇಕಾದ ಎಣ್ಣೆ ಮತ್ತಿತರ ಅಗತ್ಯ ಪದಾರ್ಥಗಳನ್ನು ಪೂರೈಸುವುದು. ಹಸು, ಎತ್ತು, ಎಮ್ಮೆ ಮುಂತಾದುವುಗಳ ವಿವಿಧ ಅಂಗಾಂಗಗಳನ್ನು ಬೃಹತ್ ಪಾತ್ರೆಯಲ್ಲಿಟ್ಟು ಬೇಯಿಸುವ ಮತ್ತು ಅದರಿಂದ ಹೊರಬರುವ ಜಿಡ್ಡನ್ನು ಬೃಹತ್ ಕಂಪೆನಿಗಳಿಗೆ ರವಾನಿಸುವ ಕೆಲಸ ದಿನಾ ಸದ್ದಿಲ್ಲದೇ ಮತ್ತು ತಡೆಯಿಲ್ಲದೇ ನಡೆಯುತ್ತಿದೆ. ದನಗಳ ಕೊಂಬು, ಗೊರಸು, ಕೂದಲು, ಚರ್ಮ, ಮೂಳೆಗಳನ್ನು ಕುದಿಸಿ ಸಿಗುವ ಎಣ್ಣೆಯಿಂದ ತಯಾರಿಸಲಾದ ಉತ್ಪನ್ನಗಳನ್ನೇ ನಾವು ದಿನಾ ಸ್ನಾನಗೃಹದಲ್ಲಿ ಬಳಸುತ್ತಿದ್ದೇವೆ. ಕಾಸ್ಮೆಟಿಕ್ ವಸ್ತುಗಳು, ಟೂತ್‍ಪೇಸ್ಟ್, ಶಾಂಪುಗಳು, ಜೆಲ್‍ಗಳು, ಮೇಣದ ಬತ್ತಿ ಸಹಿತ ಒಂದು ಬೃಹತ್ ಗಾತ್ರದ ಉದ್ಯಮವು ಜಾನುವಾರುಗಳನ್ನು ಆಶ್ರಯಿಸಿಕೊಂಡಿದೆ. ಗೋವಿನ ಹೆಸರಲ್ಲಿ ದಾಂಧಲೆ ನಡೆಸುವವರೆಲ್ಲ ರಾತ್ರಿಯೋ ಹಗಲೋ ಗೋವಿನ ಎಣ್ಣೆಯನ್ನು ಬಳಸಿದ ಸಾಬೂನಿನಿಂದಲೇ ಸ್ನಾನ ಮಾಡಿರುತ್ತಾರೆ. ಹಲ್ಲುಜ್ಜಿರುತ್ತಾರೆ. ಗೋವಿನ ಚರ್ಮದ ಸೊಂಟಪಟ್ಟಿ ಕಟ್ಟಿಕೊಂಡಿರುತ್ತಾರೆ. ಶೂ ಧರಿಸಿರುತ್ತಾರೆ. ಬಾಡಿ ಲೋಶನ್‍ಗಳು, ಫೇಷಿಯಲ್ ಕ್ರೀಮ್‍ಗಳು, ತೈಲಗಳು.. ಎಲ್ಲದರಲ್ಲೂ ದನ ಅಥವಾ ಎತ್ತುಗಳಿವೆ. ಹೀಗೆ ಈ ದೇಶದ ಬಹುತೇಕ ಎಲ್ಲ ಮನೆಗಳಲ್ಲೂ ದನಕೇಂದ್ರಿತ ವಸ್ತುಗಳು ತುಂಬಿ ಹೋಗಿವೆ. ಅಂದಹಾಗೆ, ಇದಕ್ಕೆ ಮೂರು ಗಂಡು ಕರುಗಳನ್ನು ಹೊತ್ತೊಯ್ಯುತ್ತಿದ್ದ ಪ್ರವೀಣ್ ಪೂಜಾರಿಯೋ, ಹಾಜಬ್ಬ-ಹಸನಬ್ಬರೋ, ಸತ್ತ ದನವೊಂದರ ಚರ್ಮ ಸುಲಿದ ಉನಾದ ದಲಿತರೋ ಖಂಡಿತ ಕಾರಣ ಅಲ್ಲ. ಅವರ ಜುಜುಬಿ ಎತ್ತು ಮತ್ತು ದನಗಳಿಗೆ ಈ ಫ್ಯಾಟ್ ಪ್ರೊಸೆಸಿಂಗ್ ಇಂಡಸ್ಟ್ರಿಯ ಬೃಹತ್ ಹೊಟ್ಟೆಯನ್ನು ತುಂಬಿಸಲು ಸಾಧ್ಯವೂ ಇಲ್ಲ. ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸುವ ಕಾಸ್ಮೆಟಿಕ್ ಉದ್ಯಮಕ್ಕೆ ಸಾವಿರಾರು ಲೀಟರ್‍ಗಳಷ್ಟು ದನಕೇಂದ್ರಿತ ಆಯಿಲ್‍ಗಳು ಬೇಕು. ಅದನ್ನು ಒದಗಿಸುವ ಸಾಮರ್ಥ್ಯ ಬೃಹತ್ ಮಾಂಸೋದ್ಯಮ ಕಂಪೆನಿಗಳಿಗಿವೆಯೇ ಹೊರತು ಸ್ಥಳೀಯ ಜುಜುಬಿ ಕಸಾಯಿಖಾನೆಗಳಿಗಲ್ಲ. ಸದ್ಯ ಈ ದೇಶ ಮಾಂಸ ರಫ್ತಿನಲ್ಲಿ ಜಾಗತಿಕವಾಗಿಯೇ ಮೊದಲ ಸ್ಥಾನದಲ್ಲಿದೆ. 2015ರಲ್ಲಿ ಭಾರತ ಒಟ್ಟು 2 ಮಿಲಿಯನ್ ಟನ್ ಮಾಂಸವನ್ನು ರಫ್ತು ಮಾಡುವ ಮೂಲಕ ಬ್ರೆಝಿಲ್ ಅನ್ನು ಹಿಂದಿಕ್ಕಿದೆ. ವಿಶ್ವದ ಒಟ್ಟು ಮಾಂಸ ರಫ್ತಿನಲ್ಲಿ (2015ರಲ್ಲಿ) ಭಾರತದ ಪಾಲು 23.5%. 2014ಕ್ಕೆ ಹೋಲಿಸಿದರೆ ಈ ದೇಶದ ಗೋಮಾಂಸ ರಫ್ತಿನಲ್ಲಿ 20% ಏರಿಕೆಯಾಗಿದೆ. 2015ರಲ್ಲಿ ಈ ದೇಶದ ಮಾಂಸದ ರಫ್ತಿನಲ್ಲಿ ಯಾವ ಬಗೆಯ ಏರಿಕೆಯಾಗಿದೆಯೆಂದರೆ ಮೊತ್ತಮೊದಲ ಬಾರಿ ಬಾಸ್ಮತಿ ಅಕ್ಕಿಯು ರಫ್ತಿನಲ್ಲಿ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
          ನಿಜವಾಗಿ, ರಫ್ತು ವಹಿವಾಟಿನಲ್ಲಿ ಮಾಂಸವು ಮೊದಲ ಸ್ಥಾನಕ್ಕೇರುವುದು, ಅಕ್ಕಿ ದ್ವಿತೀಯ ಸ್ಥಾನಕ್ಕೆ ಕುಸಿಯುವುದು ಅಥವಾ ಇನ್ನಾವುದೋ ಮೂರನೇ ಉತ್ಪನ್ನವೊಂದು ಇವೆಲ್ಲವನ್ನೂ ಹೊರ ಹಾಕಿ ರಫ್ತಿನಲ್ಲಿ ಮೊದಲ ಸ್ಥಾನದಲ್ಲಿ ಕೂರುವುದೆಲ್ಲ ಸಹಜ ಬೆಳವಣಿಗೆಗಳೇ ಹೊರತು ಅದರಲ್ಲಿ ಹುಬ್ಬೇರಿಸುವಂಥದ್ದೇನೂ ಇಲ್ಲ. ಆದರೆ, 2014ರ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿಯವರು ಈ ಬೆಳವಣಿಗೆಯನ್ನು ಅತ್ಯಂತ ಅಪಾಯಕಾರಿಯೆಂಬಂತೆ ಬಿಂಬಿಸಿದ್ದರು. ಪಿಂಕ್ ರೆವೊಲ್ಯೂಶನ್ (ಗುಲಾಬಿ - ಗೋಮಾಂಸ - ಕ್ರಾಂತಿ) ಎಂದು ಕಾಂಗ್ರೆಸ್‍ನ ಮಾಂಸ ರಫ್ತು ನೀತಿಯನ್ನು ತಮಾಷೆ ಮಾಡಿದ್ದರು. ಈ ದೇಶದ ನಿರ್ದಿಷ್ಟ ವರ್ಗವನ್ನು (ಮುಸ್ಲಿಮ್) ಸಂಪ್ರೀತಗೊಳಿಸುವುದಕ್ಕಾಗಿ ಮಾಂಸೋದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದೂ ಹೇಳಿದ್ದರು. ‘ಗೋಮಾತೆ’ಯ ಹತ್ಯೆಗಾಗಿ ಬಿಹಾರದಲ್ಲಿ ದುಃಖಿಸಿದ್ದರು. ಆ ನರೇಂದ್ರ ಮೋದಿಯವರು ಪ್ರಧಾನಿಯಾಗಿ ಸದ್ಯ 2 ವರ್ಷಗಳೇ ಕಳೆದಿವೆ. ಈ ಎರಡು ವರ್ಷಗಳಲ್ಲಿ ಅವರು ಪಿಂಕ್ ರೆವೊಲ್ಯೂಶನ್‍ಗೆ ಯಾವ ಮಟ್ಟದ ಉತ್ತೇಜನ ನೀಡುತ್ತಿದ್ದಾರೆಂದರೆ, ಮನಮೋಹನ್ ಸಿಂಗ್‍ರಿಂದಲೂ ಸಾಧಿಸಲಾಗದ್ದನ್ನು ಅವರು ಸಾಧಿಸುತ್ತಿದ್ದಾರೆ. ಬಾಸ್ಮತಿ ಅಕ್ಕಿಯ ರಫ್ತನ್ನೇ ದ್ವಿತೀಯ ಸ್ಥಾನಕ್ಕಿಳಿಸಿ ಪಿಂಕ್ ರೆವೊಲ್ಯೂಶನ್ ಅನ್ನು ಮೊದಲ ಸ್ಥಾನಕ್ಕೆ ತಂದಿರಿಸಿದ್ದಾರೆ. ಮೂರು ಗಂಡು ಕರುಗಳನ್ನು ಸಾಗಾಟ ಮಾಡಿದುದಕ್ಕಾಗಿ ಅವರ ಬೆಂಬಲಿಗರು ಪ್ರವೀಣ್ ಪೂಜಾರಿಯಂಥ ಬಡಪಾಯಿಗಳನ್ನು ರಸ್ತೆಯಲ್ಲೇ ಥಳಿಸಿ ಹತ್ಯೆ ನಡೆಸುವಾಗ, ನರೇಂದ್ರ ಮೋದಿಯವರ ಅನುಮತಿಯೊಂದಿಗೇ ಅಸಂಖ್ಯ ದನಗಳು ದಿನಾ ಹತ್ಯೆಯಾಗುತ್ತಿವೆ. ಮಾಂಸವಾಗಿ ವಿದೇಶಗಳಿಗೆ ರಫ್ತಾಗುತ್ತಿವೆ. ಬಾಣಲೆಯಲ್ಲಿ ಕುದಿದು, ಎಣ್ಣೆಯಾಗಿ ಬೃಹತ್ ಕಂಪೆನಿಗಳಿಗೆ ಮಾರಾಟವಾಗುತ್ತಿವೆ. ಜೊತೆಗೇ ಮತ್ತೆ ನಮ್ಮ ನಮ್ಮ ಸ್ನಾನಗೃಹ, ಕನ್ನಡಿಯ ಡ್ರಾವರ್ ಮತ್ತಿತರೆಡೆ ನಿತ್ಯ ಬಳಕೆಯ ವಸ್ತುವಾಗಿ ಕಾಣಿಸಿಕೊಳ್ಳುತ್ತಿವೆ. ಆದರೆ ಪಿಂಕ್ ರೆವೊಲ್ಯೂಶನ್ ಎಂದು ತಮಾಷೆ ಮಾಡಿದ ಮೋದಿಯವರಾಗಲಿ, ಅವರ ಪಕ್ಷದವರಾಗಲಿ, ತಳಮಟ್ಟದ ಕಾರ್ಯಕರ್ತರಾಗಲಿ ಯಾರು ಯಾರು ಯಾರೂ ಮಾತಾಡುತ್ತಿಲ್ಲ.
      ಗೋವಿಗಾದರೂ ಬಾಯಿ ಬರುತ್ತಿದ್ದರೆ.... ಪ್ರವೀಣ್ ಪೂಜಾರಿಯ ಕುಟುಂಬ



Thursday, August 11, 2016

ಯುನಿಫಾರ್ಮ್ ಸಿವಿಲ್ ಕೋಡ್ ಅಂದರೆ ಎಲ್ಲರಿಗೂ ಒಂದೇ ಕಾನೂನು ಎಂದರ್ಥವೇ?

         ‘ಒಂದು ದೇಶ ಒಂದೇ ಕಾನೂನು..’ ಎಂಬ ಪರಿಕಲ್ಪನೆಗೂ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ (Directive Principle of state Policy) ಹೇಳಲಾಗಿರುವ ಸಮಾನ ನಾಗರಿಕ ಸಂಹಿತೆಗೂ (Uniform civil code) ನಡುವೆ ಇರುವ ಸಂಬಂಧ ಏನು? ಇವೆರಡೂ ಒಂದೆಯೇ ಅಥವಾ ಬೇರೆ ಬೇರೆಯೇ? ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಸ್ಪಷ್ಟವಾಗಿ ‘ಯೂನಿಫಾರ್ಮ್’ ಎಂದು ಎತ್ತಿ ಹೇಳಲಾಗಿದೆಯೇ ಹೊರತು ಈಗ ಹೇಳಲಾಗುತ್ತಿರುವಂತೆ ಕಾಮನ್ ಸಿವಿಲ್ ಕೋಡ್ ಎಂದು ಹೇಳಲಾಗಿಲ್ಲ. ಯೂನಿಫಾರ್ಮ್ ಎಂಬ ಪದ ಧ್ವನಿಸುವ ಸಮಾನ ಎಂಬ ಪರಿಕಲ್ಪನೆಗೂ ಈಗ ದೇಶದಲ್ಲಿ ಚರ್ಚಿಸಲಾಗುತ್ತಿರುವ ಎಲ್ಲರಿಗೂ ಒಂದೇ ಕಾನೂನು ಎಂಬ ಆಗ್ರಹ ಧ್ವನಿಸುವ ಅರ್ಥಕ್ಕೂ ವ್ಯತ್ಯಾಸ ಇಲ್ಲವೇ? ಯೂನಿಫಾರ್ಮ್ ಎಂಬುದು ಈ ದೇಶದ ಪಾಲಿಗೆ ಅತ್ಯಂತ ಪರಿಚಿತ ಪದ - ಶಾಲೆ, ಪೊಲೀಸ್ ಇಲಾಖೆ, ಸೇನೆ, ಕಂಪೆನಿಗಳು.. ಹೀಗೆ ಪ್ರತಿಯೊಂದರಲ್ಲೂ ‘ಯೂನಿಫಾರ್ಮ್’ ವ್ಯವಸ್ಥೆ ಇದೆ. ಸಾಮಾನ್ಯವಾಗಿ ಸಮವಸ್ತ್ರಕ್ಕೆ ಸಂಬಂಧಿಸಿ ಹೇಳುವುದಾದರೆ, ಎಲ್.ಕೆ.ಜಿ. ವಿದ್ಯಾರ್ಥಿಗಳ ಯೂನಿಫಾರ್ಮ್‍ನಂತೆ ಒಂದನೇ ತರಗತಿಯ ಮಕ್ಕಳ ಯೂನಿಫಾರ್ಮ್ ಇರುವುದಿಲ್ಲ. ಹಾಗೆಯೇ ಪ್ರೌಢಶಾಲೆಯ ವಿದ್ಯಾರ್ಥಿಗಳ ಯೂನಿಫಾರ್ಮ್‍ನಂತೆ ಪದವಿ ವಿದ್ಯಾರ್ಥಿಗಳ ಯೂನಿಫಾರ್ಮ್ ಇರುವುದಿಲ್ಲ. ಬಣ್ಣ-ಆಕಾರದಲ್ಲಿ ವ್ಯತ್ಯಾಸಗಳು ಇರುತ್ತವೆ. ಎಲ್.ಕೆ.ಜಿ.ಯಿಂದ ಡಿಗ್ರಿವರೆಗಿನ ವಿದ್ಯಾರ್ಥಿಗಳು ಯೂನಿಫಾರ್ಮ್ ಪದ್ಧತಿಯನ್ನು ಪಾಲಿಸಬೇಕು ಎಂದ ತಕ್ಷಣ ಅವರೆಲ್ಲ ಒಂದೇ ಬಣ್ಣದ, ಒಂದೇ ಆಕಾರದ, ಒಂದೇ ಗಾತ್ರದ ಸಮವಸ್ತ್ರವನ್ನು ಪಾಲಿಸಬೇಕಾಗುತ್ತದೆ ಎಂದು ಯಾರೂ ಅರ್ಥೈಸುವುದಿಲ್ಲ. ಪೊಲೀಸ್ ಇಲಾಖೆಗೂ ಯೂನಿಫಾರ್ಮ್ ಇದೆ. ಆದರೆ ಪೊಲೀಸ್ ಇಲಾಖೆಯ ಯೂನಿಫಾರ್ಮ್‍ನ ಬಣ್ಣ ಮತ್ತು ಆಕಾರ ಸೇನೆಯದ್ದಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಉದ್ಯೋಗಿಗಳಿಗೂ ಯೂನಿಫಾರ್ಮ್‍ನ ನಿಯಮ ಇದೆ. ಆದರೆ ಅದು ಸೇನೆ, ಪೊಲೀಸ್ ಇಲಾಖೆ ಅಥವಾ ಶಾಲಾ-ಕಾಲೇಜುಗಳಂಥಲ್ಲ. ಆದ್ದರಿಂದಲೇ, ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ಹೇಳಲಾಗಿರುವ Uniform civil code ಎಂಬುದು ನಾವು ಇವತ್ತು ಚರ್ಚಿಸುವ ಮಾದರಿಯ ನಿಯಮ ಸಂಹಿತೆಯಾಗಿದೆಯೇ ಎಂಬ ವಿಶ್ಲೇಷಣೆಗೆ ಮಹತ್ವ ಇದೆ. ಸಮಾನತೆ (Uniform) ಎಂಬುದು ಎಲ್.ಕೆ.ಜಿ. ಯಿಂದ ಕಂಪೆನಿಗಳ ವರೆಗೆ ಏಕರೂಪತೆಯನ್ನು ಜಾರಿಗೊಳಿಸುವುದರ ಹೆಸರೋ ಅಥವಾ ಇವತ್ತು ಸೇನೆ, ಪೊಲೀಸ್ ಇಲಾಖೆ, ಶಾಲೆಗಳಲ್ಲಿ ಜಾರಿಯಲ್ಲಿರುವ ಮಾದರಿಯ ಏಕರೂಪತೆಯ ಹೆಸರೋ? ವಿವಿಧ ಧರ್ಮ, ಬುಡಕಟ್ಟುಗಳಿರುವ ದೇಶವೊಂದಕ್ಕೆ ಸಮಾನ ನಾಗರಿಕ ಸಂಹಿತೆ ಬೇಕೆಂದು ಸಂವಿಧಾನ ರಚನಾಕಾರರು ಬಯಸಲು ಕಾರಣವೇನು? ಸುಮಾರು 70 ವರ್ಷಗಳ ಹಿಂದೆ ಅವರು ನಿರೀಕ್ಷಿಸಿರಬಹುದಾದ ಸಮಾನತೆಯ ಸಂಹಿತೆ ಯಾವುದು?
      ನಿಜವಾಗಿ, ಸಂವಿಧಾನ ರಚನೆಗಿಂತ ಮೊದಲೇ ಈ ದೇಶದಲ್ಲಿ ಮುಸ್ಲಿಮ್ ಪರ್ಸನಲ್ ಲಾ ಮತ್ತು ಕ್ರೈಸ್ತ ಸಿವಿಲ್ ಕೋಡ್ ಎರಡೂ ಅಸ್ತಿತ್ವದಲ್ಲಿದ್ದುವು. ಮುಸ್ಲಿಮ್ ಪರ್ಸನಲ್ ಲಾ ಅಂತೂ 1937 ರಿಂದಲೇ ಅಸ್ತಿತ್ವಕ್ಕೆ ಬಂದಿತ್ತು. ಅದಕ್ಕೂ ಒಂದು ಹಿನ್ನೆಲೆ ಇದೆ.
        ತಂದೆಯ ಆಸ್ತಿಯಲ್ಲಿ ಹಕ್ಕು ಕೊಡಬೇಕೆಂದು ವಾದಿಸಿ 1930ರಲ್ಲಿ ಪಂಜಾಬ್‍ನ ಓರ್ವ ಮುಸ್ಲಿಮ್ ಮಹಿಳೆ ಕೋರ್ಟ್ ಮೆಟ್ಟಿಲೇರಿದಳು. ಆಕೆಯ ತಂದೆ ತೀರಿಕೊಂಡ ಬಳಿಕ ಸಂಪೂರ್ಣ ಆಸ್ತಿಯನ್ನು ಆಕೆಯ ಏಕೈಕ ಸಹೋದರ ತನ್ನ ಸುಪರ್ದಿಗೆ ಪಡೆದುಕೊಂಡಿದ್ದ. ಆಗ ಈ ದೇಶದಲ್ಲಿದ್ದುದು ಬ್ರಿಟಿಷ್ ಸರಕಾರ. ಮಾತ್ರವಲ್ಲ, ಈಗಿನ ಬಾಂಗ್ಲಾ ಮತ್ತು ಪಾಕಿಸ್ತಾನಗಳು ಈ ದೇಶದ ಭಾಗವೇ ಆಗಿದ್ದುವು. ಹೀಗೆ ಒಂದು ದೊಡ್ಡ ಮುಸ್ಲಿಮ್ ಜನ ಸಂಖ್ಯೆಯ ಪ್ರತಿನಿಧಿಯೋರ್ವಳು ಕೋರ್ಟ್ ಕಟಕಟೆಯಲ್ಲಿ ನಿಂತಿರುವುದು ಮುಸ್ಲಿಮ್ ಸಮುದಾಯದಲ್ಲಿ ಕುತೂಹಲವನ್ನು ಹುಟ್ಟು ಹಾಕಿತ್ತು. ಸಮುದಾಯದೊಳಗೆ ವಿವಿಧ ಬಗೆಯ ಚರ್ಚೆಗೆ ಈ ವಿವಾದ ಕಾರಣವೂ ಆಯಿತು. ಅದೇ ವೇಳೆ ಅಂದಿನ ಬ್ರಿಟಿಷ್ ಕೋರ್ಟ್ (ಪ್ರಿ ಕೌನ್ಸಿಲ್) ಆಕೆಯ ವಾದವನ್ನು ತಿರಸ್ಕರಿಸಿತು. ತಂದೆಯ ಆಸ್ತಿಯಲ್ಲಿ ಹೆಣ್ಣಿಗೆ ಹಕ್ಕಿಲ್ಲ ಎಂದು ತೀರ್ಪು ನೀಡಿತು. ಇದನ್ನು ಆಕೆ ಪ್ರಬಲವಾಗಿ ವಿರೋಧಿಸಿದಳು. ಶರೀಅತ್ (ಕುರ್‍ಆನ್)ನಲ್ಲಿ ಹೆಣ್ಣಿಗೂ ಗಂಡಿಗೂ ಆಸ್ತಿಯಲ್ಲಿ ಹಕ್ಕು ಇರುವುದರಿಂದ ಈ ತೀರ್ಪು ಶರೀಅತ್ ವಿರೋಧಿಯಾಗಿದೆ ಎಂದು ಆಕೆ ವಾದಿಸಿದಳು. ಮುಸ್ಲಿಮ್ ವಿದ್ವಾಂಸರೂ ಬ್ರಿಟಿಷ್ ನ್ಯಾಯ ಪದ್ಧತಿಯನ್ನು ಖಂಡಿಸಿದರು. ಹೀಗೆ ಈ ಆಸ್ತಿ ಹಂಚಿಕೆ ವಿವಾದವು ಗಂಭೀರ ಸ್ವರೂಪ ಪಡೆಯುವುದನ್ನು ಮನಗಂಡ ಬ್ರಿಟಿಷರು ಈ ಕುರಿತಂತೆ ಕಾನೂನು ರಚನೆಯಲ್ಲಿ ತೊಡಗಿದರು. 1937ರಲ್ಲಿ ಮುಸ್ಲಿಮ್ ಪರ್ಸನಲ್ ಲಾ (ಶರೀಅತ್) ಎಂಬ ಹೆಸರಿನಲ್ಲಿ ಕಾನೂನೊಂದನ್ನು ಜಾರಿಗೊಳಿಸಿದರು. ಜೊತೆಗೇ ಆವರಣದಲ್ಲಿ ಶರೀಅತ್ ಎಂದೂ ಸೇರಿಸಿದರು. ಈ ಕಾನೂನು ಮುಖ್ಯವಾಗಿ, 1. ಉತ್ತರಾಧಿಕಾರ, 2. ವಿವಾಹ, 3. ವಿವಾಹ ವಿಚ್ಛೇದನ, 4. ದತ್ತು ಸ್ವೀಕಾರ, 5. ನಿರ್ವಹಣಾ ವೆಚ್ಚ, 6. ಉಡುಗೊರೆ ಮತ್ತು 7. ವಕ್ಫ್ ಹೀಗೆ 7 ವಿಷಯಗಳಿಗೆ ಮಾತ್ರ ಸಂಬಂಧಿಸಿತ್ತು. ಈ ವಿಷಯಗಳಿಗೆ ಸಂಬಂಧಿಸಿದ ವಿವಾದವನ್ನು ಮುಸ್ಲಿಮ್ ಪರ್ಸನಲ್ ಲಾದ ಆಧಾರದಲ್ಲಿ ಬಗೆಹರಿಸಬೇಕೆಂದು ಈ ಕಾನೂನಿನಲ್ಲಿ ಹೇಳಲಾಯಿತು. ಉಳಿದಂತೆ, ಮುಸ್ಲಿಮರಿಗೆ ಸಂಬಂಧಿಸಿದ ಎಲ್ಲ ವಿವಾದಗಳನ್ನು ದೇಶದಲ್ಲಿ ಚಾಲ್ತಿಯಲ್ಲಿರುವ ಸಾಮಾನ್ಯ ನಿಯಮಗಳ ಆಧಾರದಲ್ಲಿಯೇ ಬಗೆಹರಿಸಬೇಕಾಗಿತ್ತು. ಹೀಗೆ ಕ್ರೈಸ್ತ ಮತ್ತು ಮುಸ್ಲಿಮ್ ವೈಯಕ್ತಿಕ ಸಂಹಿತೆಗಳು ಸಂವಿಧಾನ ರಚನೆಗಿಂತ ಮೊದಲೇ ಅಸ್ತಿತ್ವದಲ್ಲಿದ್ದುದರಿಂದ ಆ ಬಗ್ಗೆ ಮರು ಅವಲೋಕಿಸುವ ಅಗತ್ಯ ಸಂವಿಧಾನ ರಚನಾ ಮಂಡಳಿಗೆ ಎದುರಾಗಲಿಲ್ಲ. ಅಲ್ಲದೇ ಮುಸ್ಲಿಮ್ ಪರ್ಸನಲ್ ಲಾವನ್ನು ಬ್ರಿಟಿಷರು ರಚಿಸುವ ಸಂದರ್ಭದಲ್ಲಿ ಈ ದೇಶದಲ್ಲಿದ್ದ ದೊಡ್ಡದೊಂದು ಮುಸ್ಲಿಮ್ ಜನಸಂಖ್ಯೆ ಸ್ವಾತಂತ್ರ್ಯಾ ನಂತರ ಪಾಕಿಸ್ತಾನದ ಪಾಲಾಗಿತ್ತು. ಸಂವಿಧಾನ ರಚನೆಯ ವೇಳೆ ಈ ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಇದ್ದುದು ಹೆಚ್ಚೆಂದರೆ 13% ಮಾತ್ರವೇ. ಆದರೆ ಉಳಿದ 85% ಜನಸಂಖ್ಯೆಗೆ (ಕ್ರೈಸ್ತರನ್ನು ಬಿಟ್ಟು) ಅವರದ್ದೇ ಆದ ಹಿಂದೂ ಕೋಡ್ ಎಂಬುದಿರಲಿಲ್ಲ. ವಿವಿಧ ಜಾತಿ-ಬುಡಕಟ್ಟುಗಳು ತಂತಮ್ಮಲ್ಲಿ ಚಾಲ್ತಿಯಲ್ಲಿರುವ ನ್ಯಾಯ ಸಂಹಿತೆಯಂತೆ ವೈಯಕ್ತಿಕ ವಿವಾದಗಳನ್ನು ಬಗೆಹರಿಸುತ್ತಿದ್ದುವು. ಅಲ್ಲೊಂದು  Uniformity  (ಸಮಾನತೆ) ಇರಲಿಲ್ಲ. ಮುಸ್ಲಿಮರ ವಿವಾಹ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ ಮುಂತಾದುವುಗಳಿಗೆ ಏಕರೂಪ ಸಂಹಿತೆ(Uniform) ಇರುವಂತೆ ಹಿಂದೂಗಳಲ್ಲಿ ಇಂಥದ್ದೊಂದು ಏಕರೂಪತೆ ಇರಲಿಲ್ಲ. ಹಿಂದೂ ಮಹಿಳೆಯರಿಗೆ ಉತ್ತರಾಧಿಕಾರದ ಯಾವ ಹಕ್ಕೂ ಇರಲಿಲ್ಲ. ವಿಧವೆ ಹೆಣ್ಣಿಗೆ ಇನ್ನೊಂದು ಮದುವೆಯಾಗುವ ಅವಕಾಶ ಇರಲಿಲ್ಲ. ಅದೇ ವೇಳೆ, ಗಂಡಿಗೆ ಯಾವ ನಿರ್ಬಂಧವೂ ಇರಲಿಲ್ಲ. ಇಂಥ ಸಮಸ್ಯೆಯನ್ನು ಪರಿಹರಿಸುವುದಕ್ಕಾಗಿ 1956ರಲ್ಲಿ ಕೇಂದ್ರ ಸರಕಾರವು ಹಿಂದೂ ಸಿವಿಲ್ ಕೋಡ್ ಅನ್ನು ಜಾರಿಗೆ ತಂದಿತು. ಹೀಗೆ 1956ರ ಹೊತ್ತಿಗೆ ಮೂರೂ ಸಿವಿಲ್ ಕೋಡ್‍ಗಳು ಜಾರಿಗೆ ಬಂದುವು. ವಿವಾಹ, ವಿವಾಹ ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ನಿರ್ವಹಣಾ ವೆಚ್ಚ ಮುಂತಾದುವು ಗಳಿಗೆ ಸಂಬಂಧಿಸಿ ಮುಸ್ಲಿಮ್, ಕ್ರೈಸ್ತ, ಹಿಂದೂಗಳು ಅವರವರ ವೈಯಕ್ತಿಕ ನಿಯಮದಂತೆ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಏರ್ಪಾಟು ಮಾಡಲಾಯಿತು. ಅಷ್ಟಕ್ಕೂ, ಈ ದೇಶದ ಎಲ್ಲ ನಾಗರಿಕರ ಎಲ್ಲ ಬಗೆಯ ವಿವಾದವನ್ನೂ ಒಂದೇ ಕಾನೂನಿನ ಅಡಿಯಲ್ಲಿ ಬಗೆಹರಿಸಬೇಕೆಂಬುದು ಸಂವಿಧಾನ ತಜ್ಞರ ಆಶಯವೇ ಆಗಿರುತ್ತಿದ್ದರೆ, ಸಂವಿಧಾನದ 25(1)ರ ಪರಿಚ್ಛೇದದಲ್ಲಿ ಧರ್ಮವನ್ನು ಅನುಸರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಲ್ಲಿ ಅವರು ಸೇರಿಸುತ್ತಿದ್ದರೆ? ಸಂವಿಧಾನದಲ್ಲಿ 5 ಮೂಲಭೂತ ಹಕ್ಕುಗಳನ್ನು ಪಟ್ಟಿ ಮಾಡಲಾಗಿದೆ. ಈ 5 ಹಕ್ಕುಗಳು ಎಷ್ಟು ಮಹತ್ವ ಮತ್ತು ಪಾವಿತ್ರ್ಯತೆಯಿಂದ ಕೂಡಿದೆಯೆಂದರೆ, ಇವನ್ನು ಪಾರ್ಲಿಮೆಂಟ್‍ನ ಮೂಲಕವೋ ಅಥವಾ ಸುಪ್ರೀಮ್ ಕೋರ್ಟ್‍ನ ಮೂಲಕವೋ ರದ್ದುಪಡಿಸಲೂ ಅವಕಾಶವಿಲ್ಲ. ಇಷ್ಟೊಂದು ಪ್ರಾಮುಖ್ಯತೆ ಇರುವ ಪರಿಚ್ಛೇದವನ್ನು ಸಂವಿಧಾನದಲ್ಲಿ ಸೇರಿಸಿರುವ ಸಂವಿಧಾನ ತಜ್ಞರು ಸಂವಿಧಾನದ ನಿರ್ದೇಶಕ ತತ್ವಗಳ ಪಟ್ಟಿಯಲ್ಲಷ್ಟೇ ಯುನಿಫಾರ್ಮ್ (ಸಮಾನ) ಸಿವಿಲ್ ಕೋಡ್‍ನ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. ನಿಜವಾಗಿ, ಈ ಆಶಯವನ್ನು ವ್ಯಕ್ತಪಡಿಸುವಾಗ ಹಿಂದೂ ಸಿವಿಲ್ ಕೋಡ್ ರೂಪು ಪಡೆದಿರಲಿಲ್ಲ. ಜಾರಿಯೂ ಆಗಿರಲಿಲ್ಲ. ಸಂವಿಧಾನದ ರಚನಾ ಕಾರ್ಯ 1949 ಸೆಪ್ಟೆಂಬರ್‍ನಲ್ಲಿ ಸಂಪೂರ್ಣಗೊಂಡಿತ್ತು. 1950 ಜನವರಿ 26ರಂದು ಭಾರತದ ಪಾರ್ಲಿಮೆಂಟ್ ಸಂವಿಧಾನವನ್ನು ಅಂಗೀಕರಿಸಿತು. 1956ರಲ್ಲಿ ಹಿಂದೂ ಸಿವಿಲ್ ಕೋಡ್ ಅನ್ನು ಭಾರತದ ಪಾರ್ಲಿಮೆಂಟ್ ಅಂಗೀಕರಿಸಿತು. ಒಂದು ರೀತಿಯಲ್ಲಿ, ಈ ದೇಶದ ಪ್ರಮುಖ ಮೂರು ಧರ್ಮಾನುಯಾಯಿಗಳು ತಮ್ಮ ವಿವಾಹ, ವಿವಾಹ ವಿಚ್ಛೇದನ, ಉತ್ತರಾಧಿಕಾರ ಮುಂತಾದ ವೈಯಕ್ತಿಕ ವಿವಾದಗಳನ್ನು ತಮ್ಮ ಧರ್ಮಾಧಾರಿತ ಸಮಾನ (Uniform) ನಿಯಮ ಸಂಹಿತೆಗಳ ಅಡಿಯಲ್ಲೇ ಬಗೆಹರಿಸಿಕೊಳ್ಳಬೇಕೆಂಬ ಆಶಯದಲ್ಲಿ ಮಾಡಲಾದ ವ್ಯವಸ್ಥೆ ಇದು. ಕರ್ನಾಟಕದ ಮುಸ್ಲಿಮ್, ಗುಜರಾತ್‍ನ ಮುಸ್ಲಿಮ್ ಅಥವಾ ಕಾಶ್ಮೀರದ ಮುಸ್ಲಿಮನಿಗೆ ವಿವಾಹ, ವಿಚ್ಛೇದನ.. ಮುಂತಾದುವುಗಳಲ್ಲಿ ಬೇರೆ ಬೇರೆ ನಿಯಮಗಳಿಲ್ಲ. ಅಲ್ಲೊಂದು Uniformity ಇದೆ. ಹಾಗೆಯೇ, ಉತ್ತರ ಪ್ರದೇಶದ ಹಿಂದೂ, ತಮಿಳ್ನಾಡಿನ ಹಿಂದೂ, ಕೇರಳ, ಅಸ್ಸಾಮ್‍ನ ಹಿಂದೂವಿಗೂ ಸಮಾನವಾದ ನಿಯಮ ಸಂಹಿತೆ ಇದೆ. ಕ್ರೈಸ್ತರಿಗೂ ಹಾಗೆಯೇ. ಹಿಂದೂ ಧರ್ಮದ ಅಡಿಯಲ್ಲಿ ಗುರುತಿಸಿಕೊಳ್ಳುವ ವ್ಯಕ್ತಿಯೋರ್ವವ್ಯಕ್ತಿ  ಇಂಥ ವೈಯಕ್ತಿಕ ವಿವಾದಗಳ ಸಂದರ್ಭದಲ್ಲಿ ಸ್ಥಳೀಯ ಅಥವಾ ತನ್ನ ಪಾರಂಪರಿಕ ನಿಯಮವನ್ನು ಅನುಸರಿಸುವಂತಿಲ್ಲ. ತಾನು ಇಂತಿಂಥ ಬುಡಕಟ್ಟಿನವ, ತನ್ನ ಹಳ್ಳಿಯಲ್ಲಿ ವಿವಾಹಕ್ಕೆ ಬೇರೆಯದೇ ಆದ ನಿಯಮವಿದೆ ಎಂದು ಸಮರ್ಥಿಸುವಂತಿಲ್ಲ. ಅಲ್ಲೊಂದು  ಸಮಾನ (Uniformity) ನಿಯಮ ಇದೆ. ಅದರ ಆಧಾರದಲ್ಲೇ ಎಲ್ಲ ಹಿಂದೂಗಳ ಇಂಥ ವಿವಾದವನ್ನು ಬಗೆಹರಿಸಲಾಗುತ್ತದೆ. ಹಿಂದೂಗಳು ಎಂದು ಗುರುತಿಸಿಕೊಳ್ಳುವ ಎಲ್ಲರಿಗೂ ಈ ನಿಯಮ ಸಮಾನವಾಗಿ ಅನ್ವಯಿಸುತ್ತದೆ. ಇನ್ನು, ಮುಸ್ಲಿಮ್ ಎಂದು ಗುರುತಿಸಿಕೊಳ್ಳುವ ಪ್ರತಿಯೊಬ್ಬರಿಗೂ ಇಂಥ ವಿವಾದಗಳ ಸಂದರ್ಭದಲ್ಲಿ ಹಿಂದೂ ಕೋಡ್‍ನ ಮೊರೆ ಹೋಗುವಂತಿಲ್ಲ. ಅವರು ಮುಸ್ಲಿಮ್ ಪರ್ಸನಲ್ ಲಾದಂತೆ ವಿವಾದವನ್ನು ಬಗೆಹರಿಸಿಕೊಳ್ಳಬೇಕು. ಅಲ್ಲಿ ಎಲ್ಲರಿಗೂ ಸಮಾನವಾದ (Uniform) ಸಂಹಿತೆಯಿದೆ. ಕ್ರೈಸ್ತರು ತಮ್ಮ ವೈಯಕ್ತಿಕ ವಿವಾದವನ್ನು ಕ್ರೈಸ್ತ ಸಿವಿಲ್ ಕೋಡ್‍ನ ಮೂಲಕವೇ ಪರಿಹರಿಸಿಕೊಳ್ಳಬೇಕು. ಬಹುಶಃ ಸಂವಿಧಾನದ ನಿರ್ದೇಶಕ ತತ್ವಗಳಲ್ಲಿ ವ್ಯಕ್ತಪಡಿಸಲಾಗಿರುವ ಆಶಯದ ಮೂಲ ಉದ್ದೇಶ ಇದುವೇ ಆಗಿದೆಯೇನೋ ಎಂದೆನಿಸುತ್ತದೆ.    
        ಒಂದು ವೇಳೆ, ಸಮಾನ (Uniform) ನಾಗರಿಕ ಸಂಹಿತೆಯ ಅರ್ಥ ಇದು ಅಲ್ಲ ಎಂದಾದರೆ, ಈ ಸಂಹಿತೆಯ ಸ್ವರೂಪ ಹೇಗೆ? ಈ ಸಂಹಿತೆಯ ರಚನೆಗೆ ಆಧಾರ ಯಾವುದು? ಈಗಿರುವ ಹಿಂದೂ ಸಿವಿಲ್ ಕೋಡ್‍ನ ಪ್ರಕಾರ, ಪತ್ನಿ ಮತ್ತು ಮಕ್ಕಳಿರುವ ಓರ್ವ ವ್ಯಕ್ತಿ ಮೃತಪಟ್ಟರೆ ಆತನ ಆಸ್ತಿಯಲ್ಲಿ ಆತನ ತಂದೆಗೆ ಯಾವ ಪಾಲೂ ಇಲ್ಲ. ತಾಯಿಗೆ ಮಾತ್ರ ಇದೆ. ಕ್ರೈಸ್ತ ಸಿವಿಲ್ ಕೋಡ್‍ನ ಪ್ರಕಾರ ತಂದೆ-ತಾಯಿ ಇಬ್ಬರಿಗೂ ನಯಾ ಪೈಸೆ ಲಭ್ಯವಾಗುವುದಿಲ್ಲ. ಪತ್ನಿ ಮತ್ತು ಮಕ್ಕಳಿಗೆ 3ರಲ್ಲಿ ಒಂದಂಶವಷ್ಟೇ ಸಿಗುತ್ತದೆ. ಮುಸ್ಲಿಮ್ ಪರ್ಸನಲ್ ಲಾದ ಪ್ರಕಾರ ತಂದೆಗೆ ಆರರಲ್ಲಿ ಒಂದು, ತಾಯಿಗೆ ಆರರಲ್ಲಿ ಒಂದು, ಪತ್ನಿಗೆ 8ರಲ್ಲಿ ಒಂದು ಪಾಲು ಸಿಗುತ್ತದೆ. ಮೃತನ ಹೆಣ್ಣು ಮತ್ತು ಗಂಡು ಮಕ್ಕಳಿಗೂ ಪಾಲು ಇದೆ. ಹೀಗಿರುವಾಗ ಸಮಾನ ನಾಗರಿಕ ಸಂಹಿತೆ ಈ ಮೂರರಲ್ಲಿ ಯಾವುದನ್ನು ನಿಯಮವಾಗಿ ಆಯ್ದುಕೊಳ್ಳಬೇಕು? ಕ್ರೈಸ್ತ ನಿಯಮದ ಪ್ರಕಾರ, ಓರ್ವ ತಂದೆ ತನ್ನ 10 ಮಕ್ಕಳ ಪೈಕಿ ಓರ್ವನಿಗೆ ತನ್ನೆಲ್ಲ ಆಸ್ತಿಯನ್ನು ಉಯಿಲು ಬರೆದುಕೊಟ್ಟರೆ ಅದು ಕಾನೂನುಬದ್ಧ. ಹಿಂದೂ ಸಂಹಿತೆಯೂ ಬಹುತೇಕ ಇದನ್ನೇ ಹೋಲುತ್ತದೆ. ಆದರೆ ಮುಸ್ಲಿಮ್ ಪರ್ಸನಲ್ ಲಾದಲ್ಲಿ ಇದು ಕಾನೂನುಬಾಹಿರ. ಮೃತಪಟ್ಟ ವ್ಯಕ್ತಿಯ ಆಸ್ತಿಯನ್ನು ಪಾಲು ಮಾಡಬೇಕಾದದ್ದು ಆತನ ಉಯಿಲಿನಂತೆ ಅಲ್ಲ, ದೇವನ ಕಾನೂನಿನಂತೆ ಎಂಬುದು ಶರೀಅತ್‍ನ ನಿಲುವು. ಇಲ್ಲಿ ಪಕ್ಷಪಾತಕ್ಕೆ ಅವಕಾಶ ಇಲ್ಲ. ಓರ್ವ ಮಗನನ್ನು ಕುಬೇರನನ್ನಾಗಿಸಿ ಉಳಿದವರನ್ನು ಪಾಪರ್ ಆಗಿಸುವುದನ್ನು ಶರೀಅತ್ ಅಂಗೀಕರಿಸುವುದಿಲ್ಲ. ಇವಲ್ಲದೇ ವಿವಾಹ ಮತ್ತು ವಿಚ್ಛೇದನಗಳಲ್ಲೂ ಈ ಮೂರು ಸಂಹಿತೆಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಶರೀಅತ್ ಪ್ರಕಾರ ಮದುವೆಯ ಸಂದರ್ಭದಲ್ಲಿ ವರ ಕಡ್ಡಾಯವಾಗಿ ಮಹರ್ (ವಿವಾಹ ಧನ) ಪಾವತಿಸಬೇಕಾಗುತ್ತದೆ. ಅದೆಷ್ಟು ಅಂದರೆ, ಆಕೆ ಕೇಳಿದಷ್ಟು. ಅದೇ ಕಾರಣಕ್ಕಾಗಿ ಆಕೆ ಮದುವೆಗೆ ನಿರಾಕರಿಸಬಹುದು. ಮಾತ್ರವಲ್ಲ, ಅದರ ಸಂಪೂರ್ಣ ಒಡೆತನ ಆಕೆಯದ್ದೇ. ವಿವಾಹ ವಿಚ್ಛೇದನವೂ ತಲಾಕ್ ತಲಾಕ್ ತಲಾಕ್ ನಿಂದ ಕೊನೆಗೊಳ್ಳುವುದಿಲ್ಲ. ತಲಾಕ್‍ನ ಕನಿಷ್ಠ ಅವಧಿ 3 ತಿಂಗಳು. ವಿವಿಧ ಹಂತಗಳನ್ನು ದಾಟಿದ ಬಳಿಕ ವಿಚ್ಛೇದನ ನಡೆಯುತ್ತದೆ. ಹಿಂದೂ ಮತ್ತು ಕ್ರೈಸ್ತ ಸಂಹಿತೆಗಳು ಇದಕ್ಕೆ ಯಾವ ನೆಲೆಯಲ್ಲೂ ಹೋಲದಷ್ಟು ಭಿನ್ನವಾಗಿವೆ. ಅಲ್ಲಿ ಮದುವೆಯನ್ನು ಜನ್ಮಾಂತರದ ಸಂಬಂಧವಾಗಿ ಕಾಣಲಾಗುತ್ತದೆ. ವಿಚ್ಛೇದನ ಪ್ರಕರಣವು ದಶಕಗಳ ಕಾಲ ಮುಂದುವರಿಯುವುದೂ ಇದೆ. ಇಂಥ ವ್ಯತ್ಯಾಸಗಳಿರುವಾಗ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯ ಸ್ವರೂಪ ಹೇಗಿರಬಹುದು? ಅದು ಆಯ್ಕೆ ಮಾಡುವ ನಿಯಮಗಳು ಯಾವುದಾಗಿರಬಹುದು? ಈ ಮೂರು ಧರ್ಮಗಳಲ್ಲಿ ಉತ್ತಮವಾಗಿರುವ ನಿಯಮಗಳನ್ನು ಅದು ಆಯ್ದುಕೊಳ್ಳುತ್ತದೋ ಅಥವಾ ಹೊರಗಿನಿಂದ ಆಮದು ಮಾಡುತ್ತದೋ? ಅಷ್ಟಕ್ಕೂ,
       ಮೊದಲು ಈ ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯ  ಕರಡು ಪ್ರತಿಯನ್ನು ಸರಕಾರ ಬಿಡುಗಡೆಗೊಳಿಸಲಿ. ಹಾಗಾದರೆ, ಸರಕಾರದ ಉದ್ದೇಶವೇನು ಎಂಬುದನ್ನು ಆ ಕರಡು ಪ್ರತಿಯೇ ನಿರ್ಧರಿಸಬಲ್ಲುದು.



Wednesday, August 3, 2016

ಇಸ್ಲಾಮ್ ಮತ್ತು ಶಾಂತಿ: ಕಾಡುವ ಪ್ರಶ್ನೆಗಳ ಜೊತೆ..

          ಕೆಲವು ಆರೋಪಗಳಿವೆ
1. ಇಸ್ಲಾಮ್ ಎಂಬುದು ಪರಮಾಧಿಕಾರವನ್ನು ಪ್ರತಿಪಾದಿಸುವ ಧರ್ಮ. ರಾಜಕೀಯ, ಆರ್ಥಿಕ, ಸಾಮಾಜಿಕ, ಸೈನಿಕ ಸಹಿತ ಪ್ರತಿಯೊಂದನ್ನೂ ಧರ್ಮದ ಚೌಕಟ್ಟಿನೊಳಗೆ ತಂದು ವಿಶ್ಲೇಷಿಸುವ ಅಂಧ ಮನಸ್ಥಿತಿಯನ್ನು ಅದು ಪ್ರತಿಪಾದಿಸುತ್ತದೆ.
2. ಇಸ್ಲಾಮ್ ಇತರೆಲ್ಲ ಧರ್ಮಗಳನ್ನು ಮತ್ತು ಸಿದ್ಧಾಂತಗಳನ್ನು ಅಧಮ(ಕೀಳು)ವಾಗಿ ಕಾಣುತ್ತದೆ. ಅದು ಒಮ್ಮೆ ಒಂದು ದೇಶದ ಮೇಲೆ ಪ್ರಾಬಲ್ಯ ಸ್ಥಾಪಿಸಿದರೆ ಬಳಿಕ ತನ್ನ ಸಿದ್ಧಾಂತವನ್ನು ಒಪ್ಪದ ಯಾರನ್ನೂ ಅದು ಸಹಿಸುವುದಿಲ್ಲ.
3. ಮುಸ್ಲಿಮೇತರರಿಗೆ ಹೋಲಿಸಿದರೆ ಮುಸ್ಲಿಮರ ಜನಸಂಖ್ಯೆ ಹಲವು ಪಟ್ಟು ವೇಗದಲ್ಲಿ ಹೆಚ್ಚಳಗೊಳ್ಳುತ್ತಿದೆ.
4. ಇಸ್ಲಾಮಿನ ವಿರುದ್ಧದ ಟೀಕೆ, ವಿಮರ್ಶೆ, ವ್ಯಂಗ್ಯ, ವ್ಯಂಗ್ಯಚಿತ್ರ ಇತ್ಯಾದಿಗಳನ್ನು ಮುಸ್ಲಿಮರು ಅಪರಾಧವಾಗಿ ಕಾಣುತ್ತಾರೆ ಮತ್ತು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಇಸ್ಲಾಮಿನಲ್ಲಿ ವಾಕ್‍ಸ್ವಾತಂತ್ರ್ಯವಿಲ್ಲ.
5. ಇಸ್ಲಾಮ್ ಈಗ ಚಾಲ್ತಿಯಲ್ಲಿರುವ ಸಾಮಾನ್ಯ ಕಾನೂನಿನ ಬದಲು ಶರಿಯಾ ಕಾನೂನನ್ನು ಜಾರಿಗೆ ತರಲು ಕರೆ ಕೊಡುತ್ತದೆ. ಅದಾದರೋ ಅತ್ಯಂತ ಕ್ರೂರಿ, ಅಪ್ರಜಾತಾಂತ್ರಿಕ, ಫ್ಯಾಸಿಸ್ಟ್.
6. ಇಸ್ಲಾಮ್ ಅಸ್ತಿತ್ವಕ್ಕೆ ಬಂದಿರುವುದು ಶಾಂತಿಯುತ ಪ್ರಚಾರದಿಂದ ಅಲ್ಲ, ಬದಲು ವಂಚನೆ, ಬೆದರಿಕೆ, ಬಲವಂತ, ಹಿಂಸೆ ಮತ್ತು ಭಯೋತ್ಪಾದನೆಗಳ ಮೂಲಕ.
           ಇವು ಕೆಲವು ಉದಾಹರಣೆಗಳಷ್ಟೇ. ಆರೋಪಗಳ ಪಟ್ಟಿ ಇನ್ನೂ ಉದ್ದವಿದೆ. ಹಾಗಂತ, ಈ ಆರೋಪಗಳನ್ನೆಲ್ಲ ಸಾರಾಸಗಟಾಗಿ ತಿರಸ್ಕರಿಸುವುದು ತೀರಾ ಸುಲಭ. ಮಾತ್ರವಲ್ಲ, ಕರ್ಮಠ ವಿದ್ವಾಂಸರು ಮತ್ತು ಸಾಮಾನ್ಯ ಮುಸ್ಲಿಮರು ಹೀಗೆ ತಿರಸ್ಕರಿಸುವುದನ್ನೇ ಇಂಥ ಆರೋಪಗಳಿಗೆ ತಕ್ಕ ಉತ್ತರವೆಂದು ನಂಬಿಕೊಂಡು ಬಂದದ್ದೂ ಇದೆ. ಆದರೆ ಹೀಗೆ ತಿರಸ್ಕರಿಸುವಾಗಲೂ ಕೆಲವೊಮ್ಮೆ ತಿರಸ್ಕರಿಸುವವರಲ್ಲೇ ಕೆಲವೊಂದು ಪ್ರಶ್ನೆಗಳು ಮನದೊಳಗೆ ಮೂಡುವುದಿದೆ. ಇಂಥ ಆರೋಪಗಳು ಹುಟ್ಟಿಕೊಂಡದ್ದು ಹೇಗೆ ಮತ್ತು ಯಾಕೆ? ಎಲ್ಲಕ್ಕೂ ಇಸ್ಲಾಮ್ ವಿರೋಧಿ ಪೂರ್ವಗ್ರಹ ಕಾರಣವೇ? ಅಷ್ಟಕ್ಕೂ, ಇಸ್ಲಾಮನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಮಾನದಂಡ ಯಾವುದು- ಕುರ್‍ಆನ್ ಮತ್ತು ಹದೀಸ್ ಮಾತ್ರವೇ? ಅದರ ಅನುಯಾಯಿಗಳು ಅದರ ಮಾನದಂಡವಾಗುವುದಿಲ್ಲವೇ? ಅನುಯಾಯಿಗಳನ್ನು ನೋಡಿಕೊಂಡು ಯಾರಾದರೂ ಇಸ್ಲಾಮನ್ನು ವಿಶ್ಲೇಷಿಸಲು ಹೊರಡುವಾಗ, ‘ನೀವು ಅವರನ್ನು ನೋಡಬೇಡಿ, ಕುರ್‍ಆನನ್ನು ನೋಡಿ..' ಎಂದು ಹೇಳುವುದು ಎಷ್ಟರ ವರೆಗೆ ಸಮರ್ಥನೀಯ? ಇಂಥ ಸಮರ್ಥನೆ ಜನರನ್ನು ಎಲ್ಲಿಯ ವರೆಗೆ ಸಮಾಧಾನಪಡಿಸೀತು? ಹೀಗೆ ಮಾನದಂಡವಾಗದ ಅಥವಾ ಕುರ್‍ಆನ್ ವಿರೋಧಿಯಾದ ಅನುಯಾಯಿಗಳು ಕುರ್‍ಆನ್‍ಗೆ ಹೇಗೆ ಹುಟ್ಟಿಕೊಂಡರು? ಅವರೇಕೆ ಇನ್ನೂ ಕುರ್‍ಆನಿನ ಅನುಯಾಯಿಗಳಾಗಿಯೇ ಗುರುತಿಸಿಕೊಳ್ಳುತ್ತಿದ್ದಾರೆ?... ಇಂಥ ಪ್ರಶ್ನೆಗಳು ಕೂಡ ಉದ್ಭವವಾಗುವುದು ಸಹಜ.
        ಇಸ್ಲಾಮ್ ಅಂದರೆ ಶಾಂತಿ ಎಂದರ್ಥ ಎಂದು ವಾದಿಸುವ ಮೂಲಕ ಇಸ್ಲಾಮ್ ಆಮೂಲಾಗ್ರ ಶಾಂತಿಯುತವಾಗಿದೆ ಎಂದು ಸಮರ್ಥಿಸುವುದು ತೀರಾ ಬಾಲಿಶವಾಗುತ್ತದೆ. ಹೆಸರೊಂದು ಯಾವ ಧರ್ಮವನ್ನೂ ಶಾಂತಿಯುತಗೊಳಿಸುವುದಿಲ್ಲ. ಹೆಸರಿಗೆ ಪೂರಕವಾಗಿ ಅದರ ಸಿದ್ಧಾಂತ, ನೀತಿ-ನಿಲುವುಗಳೂ ಇರಬೇಕು. ಆ ಸಿದ್ಧಾಂತದಂತೆ ಶಾಂತಿಯುತ ಸಮಾಜವನ್ನು ಕಟ್ಟಿ ಬೆಳೆಸಿದ ಒಂದು ಕುರುಹೂ ಇರಬೇಕು. ಇಸ್ಲಾಮಿನ ಮಟ್ಟಿಗೆ ಅಂಥದ್ದೊಂದು ಶಾಂತಿಯುತ ಸಮಾಜವನ್ನು ನಿರ್ಮಿಸಿ ತೋರಿಸಲು ಸಾಧ್ಯವಾಗಿದೆ ಎಂಬುದೇ ಅದರ ಮೇಲಿನ ಆರೋಪವನ್ನು ತಿರಸ್ಕರಿಸುವುದಕ್ಕೆ ನಮ್ಮಲ್ಲಿರುವ ಆಧಾರ. ಇಸ್ಲಾಮ್ 2015ರಲ್ಲಿ ಇರಾಕ್‍ನಲ್ಲೋ, ಸಿರಿಯಾದಲ್ಲೋ, ಅಫಘಾನ್, ಪಾಕ್, ನೈಜೀರಿಯಾ, ಲಿಬಿಯಾದಲ್ಲೋ ಉದ್ಭವವಾದದ್ದಲ್ಲ. ಅದಕ್ಕೊಂದು ದೀರ್ಘ ಇತಿಹಾಸವಿದೆ. ಈ ಇತಿಹಾಸದಲ್ಲಿ ಪ್ರವಾದಿ ಆ್ಯಡಮ್ (ಆದಮ್) ಬರುತ್ತಾರೆ. ನೋಹಾ (ನೂಹ್), ಅಬ್ರಹಾಮ್ (ಇಬ್ರಾಹೀಮ್), ಮೋಸೆಸ್ (ಮೂಸಾ), ಯೇಸು (ಈಸಾ) ಮತ್ತು ಪ್ರವಾದಿ ಮುಹಮ್ಮದ್ ಇರುತ್ತಾರೆ. ಈ ಇತಿಹಾಸದ ಪುರಾತನ ಭಾಗವನ್ನು ಪಕ್ಕಕ್ಕಿಟ್ಟು ಪ್ರವಾದಿ ಮುಹಮ್ಮದ್‍ರಿಂದ ಅವಲೋಕನಕ್ಕೆ ಇಳಿದರೂ ಒಂದು ಶಾಂತಿಯುತ ಮತ್ತು ಅತ್ಯಂತ ಮಾದರಿಯೋಗ್ಯ ಸಮಾಜವೊಂದರ ದರ್ಶನವಾಗುವುದು ಖಂಡಿತ. ಪ್ರವಾದಿ ಮುಹಮ್ಮದ್‍ರ ನೇತೃತ್ವದಲ್ಲಿ ಮದೀನಾದಲ್ಲಿ ಒಂದು ಸರಕಾರ ರಚನೆಯಾಗುತ್ತದೆ. ಆ ಸರಕಾರದ ಸಂವಿಧಾನ ಎಷ್ಟು ಮಾದರೀಯೋಗ್ಯವಾಗಿತ್ತೆಂದರೆ,
1. ಧರ್ಮ, ವರ್ಣ, ಭಾಷೆಯ ಹಂಗಿಲ್ಲದೇ ಎಲ್ಲರೂ ಶಾಂತಿಯಿಂದ ಜೀವನ ಸಾಗಿಸಬೇಕು.
2. ಪ್ರತಿಯೊಬ್ಬರಿಗೂ ಅವರ ನಂಬಿಕೆ ಹಾಗೂ ಆಚರಣೆಗಳಂತೆ ನಡಕೊಳ್ಳುವ ಸ್ವಾತಂತ್ರ್ಯ ಇರುತ್ತದೆ.
3. ಹಿಂಸೆಯ ಸರ್ವ ಬಾಗಿಲುಗಳನ್ನೂ ಮುಚ್ಚಲಾಗುತ್ತದೆ.
4. ಹೊರಗಿನಿಂದ ನಮ್ಮ ಮೇಲೆ ಯಾರಾದರೂ ಆಕ್ರಮಣ ನಡೆಸಿದರೆ ಅದನ್ನು ಒಗ್ಗಟ್ಟಾಗಿ ಎದುರಿಸಲಾಗುತ್ತದೆ..
       ಎಂಬೆಲ್ಲಾ ಜಾತ್ಯತೀತ ಮತ್ತು ಪರಮ ಸಹಿಷ್ಣುತೆಯಿಂದ ಕೂಡಿದ ಪರಿಚ್ಛೇದಗಳನ್ನು ಅದು ಒಳಗೊಂಡಿತ್ತು. ಇಸ್ಲಾಮ್ ಶಾಂತಿಯ ವಿರೋಧಿ ಮತ್ತು ಪರಮ ಅಸಹಿಷ್ಣುವಾಗಿರುತ್ತಿದ್ದರೆ ಇಂಥದ್ದೊಂದು ಸಂವಿಧಾನವನ್ನು ಪ್ರವಾದಿ ಮುಹಮ್ಮದ್ ಮಂಡಿಸಲು ಸಾಧ್ಯವೇ ಇರಲಿಲ್ಲ. ಪವಿತ್ರ ಕುರ್‍ಆನ್ ಒಂದಕ್ಕಿಂತ ಹೆಚ್ಚು ಕಡೆ ಬಹುಸಂಸ್ಕøತಿಯನ್ನು ಒಪ್ಪಿಕೊಳ್ಳುವ ಮತ್ತು ಅದನ್ನು ಪ್ರಕೃತಿ ಸಹಜವೆಂದು ಸ್ವೀಕರಿಸುವ ವಚನಗಳನ್ನು ಪ್ರಸ್ತಾಪಿಸಿದೆ.
1. ನನ್ನ ಧರ್ಮ ನನಗೆ, ನಿಮ್ಮ ಧರ್ಮ ನಿಮಗೆ (109: 1-6)
2. ಧರ್ಮದಲ್ಲಿ ಯಾವುದೇ ಬಲಾತ್ಕಾರವಿಲ್ಲ (2: 256)
3. ಓ ಮುಸಲ್ಮಾನರೇ, ಅಲ್ಲಾಹನ ಹೊರತು ಇತರರನ್ನು ಪ್ರಾರ್ಥಿಸುತ್ತಿರುವವರನ್ನು ತೆಗಳಬೇಡಿ. (6: 107)
4. ಮುಹಮ್ಮದರೇ, ನೀವು ಉಪದೇಶ ಮಾಡುತ್ತಾ ಸಾಗಿ. ನೀವು ಕೇವಲ ಉಪದೇಶಕರು. ನಿಮ್ಮ ಉಪದೇಶವನ್ನು ಒಪ್ಪದವರ ಮೇಲೆ ನೀವು ಬಲಾತ್ಕಾರ ಮಾಡುವವರಲ್ಲ. (88: 21, 22)
5. ಪ್ರವಾದಿಯವರೇ, ನಿಮ್ಮ ಮೇಲಂತೂ ವಿಷಯವನ್ನು ತಲುಪಿಸಿ ಬಿಡುವ ಹೊಣೆಗಾರಿಕೆ ಮಾತ್ರ ಇದೆ. (42: 48)
6. ದೇವನು ಸೌಜನ್ಯ ನೀತಿಯನ್ನನುಸರಿಸುವವರ ಜೊತೆಗಿದ್ದಾನೆ. (16: 128)
7. ಪೈಗಂಬರರೇ, ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಕಳುಹಿಸಿಕೊಟ್ಟಿದ್ದೇನೆ. (3: 85)
8. ಒಬ್ಬ ಮಾನವನ ಕೊಲೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣಕ್ಕಾಗಿ ಹೊರತು ಯಾರಾದರೂ ಒಬ್ಬ ಮನುಷ್ಯನನ್ನು ಕೊಂದರೆ ಅವನು ಸಕಲ ಮಾನವ ಕೋಟಿಯನ್ನೇ ವಧಿಸಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಸಕಲ ಮಾನವ ಕೋಟಿಗೆ ಜೀವದಾನ ಮಾಡಿದಂತೆ. (5: 32)
9. ಮಾನವರೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು (49: 13)
10. ಅಲ್ಲಾಹನು ನ್ಯಾಯ ಪರಿಪಾಲಕರನ್ನು ಪ್ರೀತಿಸುತ್ತಾನೆ. (49: 9-10)
11. ಸತ್ಯವಿಶ್ವಾಸಿಗಳೇ, ನೀವು ನ್ಯಾಯದ ಧ್ವಜವಾಹಕರಾಗಿರಿ. ನಿಮ್ಮ ನ್ಯಾಯ ಮತ್ತು ಸಾಕ್ಷ್ಯವು ಸ್ವತಃ ನಿಮ್ಮ ಅಥವಾ ನಿಮ್ಮ ಮಾತಾಪಿತರ ಮತ್ತು ನಿಮ್ಮ ಸಂಬಂಧಿಕರ ವಿರುದ್ಧವಾಗಿದ್ದರೂ ಸರಿಯೇ. (4: 135)
       ಇಂಥ ಇನ್ನೂ ಹತ್ತು-ಹಲವು ಸಹಿಷ್ಣುತೆಯ ಮತ್ತು ಶಾಂತಿ ಪ್ರೇರಕ ವಚನಗಳ ಉದಾಹರಣೆಗಳನ್ನು ಕೊಡಬಹುದು. ಕೆಡುಕುಗಳಿಗೆ ಅತ್ಯುತ್ತಮ ಒಳಿತಿನಿಂದ ಪ್ರತಿಕ್ರಿಯಿಸಿ ಎಂದು ಹೇಳಿ ಕೊಟ್ಟವರು ಪ್ರವಾದಿ ಮುಹಮ್ಮದ್. ಅವರೊಂದು ಪ್ರಾರ್ಥನೆಯನ್ನು ಕಲಿಸಿದ್ದಾರೆ,
       ‘ಅಲ್ಲಾಹನೇ, ನೀನು ಶಾಂತಿಯ ಸಂಕೇತ ಮತ್ತು ಶಾಂತಿಯನ್ನು ದಯಪಾಲಿಸುವವ. ಆದ್ದರಿಂದ ನನಗೆ ಶಾಂತಿಯುತ ಬದುಕನ್ನು ನೀಡು.’ (ಅಲ್ಲಾಹುಮ್ಮ ಅಂತಸ್ಸಲಾಮ್ ವ ಮಿಂಕಸ್ಸಲಾಮ್ ತಬಾರಕ್ತ ಯಾದಲ್ ಜಲಾಲಿ ವಲ್ ಇಕ್ರಾಮ್)
ಪ್ರವಾದಿ ಮುಹಮ್ಮದರು ಮದೀನಾ ಮತ್ತು ಮಕ್ಕಾದಲ್ಲಿ ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸಿದ ಬಳಿಕ ಒಂದು ಘಟನೆ ನಡೆಯುತ್ತದೆ. ಸಿಬಿರಿಕ್ಕಾನ್ ಬಿನ್ ಬದ್‍ರ್ ಎಂಬ ಕವಿ ಪ್ರವಾದಿಯವರನ್ನು ನಿಂದಿಸಿ ಪದ್ಯ ರಚಿಸುತ್ತಾರೆ ಮತ್ತು ಬಹಿರಂಗ ವೇದಿಕೆಯಲ್ಲಿ ಅದನ್ನು ಹಾಡುತ್ತಾರೆ. ಆದರೆ ಪ್ರವಾದಿಯವರು ಅದಕ್ಕೆ ಪ್ರತಿಯಾಗಿ ಖಡ್ಗ ಎತ್ತುವುದಿಲ್ಲ. ಹಸ್ಸಾನ್ ಬಿನ್ ಸಾಬಿತ್ ಎಂಬ ತನ್ನ ಆಪ್ತ ಕವಿಯ ಮೂಲಕ ಆ ಪದ್ಯಕ್ಕೆ ಪ್ರತಿ ಪದ್ಯವನ್ನು ರಚಿಸಿ ಹಾಡಿಸುತ್ತಾರೆ. ಪ್ರವಾದಿಯವರನ್ನು ನಿತ್ಯ ನಿಂದಿಸುತ್ತಿದ್ದ ಅರೇಬಿಯಾದ ಪ್ರಮುಖ ಭಾಷಣಕಾರ ಸುಹೈಲ್ ಬಿನ್ ಅಮ್ರ್ ರ ವಿರುದ್ಧ ಯಾವ ಕ್ರಮವನ್ನೂ ಅವರು ಕೈಗೊಳ್ಳುವುದಿಲ್ಲ. ತನ್ನ ಮೇಲೆ ನಿತ್ಯ ಕಸ ಎಸೆಯುತ್ತಿದ್ದವರ ವಿರುದ್ಧ ಪ್ರವಾದಿ ಏನನ್ನೂ ಮಾಡುವುದಿಲ್ಲ. ಪ್ರವಾದಿಯವರ ಜೀವನದ ಉದ್ದಕ್ಕೂ ತನ್ನ ವಿರೋಧಿಗಳನ್ನು ಕ್ಷಮಿಸಿದ ಮತ್ತು ಟೀಕೆಯನ್ನು ಬದುಕಿನ ಭಾಗವಾಗಿ ಪರಿಗಣಿಸಿದ ಹತ್ತಾರು ನಿದರ್ಶನಗಳಿವೆ. ಅವರು ವೈಚಾರಿಕ ಭಿನ್ನಾಭಿಪ್ರಾಯವನ್ನು ಗೌರವಿಸಿದರೇ ಹೊರತು ದಮನಿಸಲಿಲ್ಲ. ವಾಕ್‍ಸ್ವಾತಂತ್ರ್ಯವನ್ನು ಅವರು ಇಸ್ಲಾಮ್ ವಿರೋಧಿ ಎಂದು ಅಂದುಕೊಂಡಿರಲೂ ಇಲ್ಲ. ಪವಿತ್ರ ಕುರ್‍ಆನ್ ಅಂತೂ ಪ್ರತೀಕಾರಕ್ಕಿಂತ ಕ್ಷಮೆ ಉತ್ತಮವೆಂದು ಪ್ರಬಲವಾಗಿ ಪ್ರತಿಪಾದಿಸುತ್ತದೆ (6:128). ಬಹುಶಃ ಪ್ರವಾದಿಯವರ ಈ ಮಾದರಿಯಿಂದಾಗಿಯೇ ಕೇವಲ ಒಂದು ಶತಮಾನಕ್ಕಿಂತಲೂ ಕಡಿಮೆ ಅವಧಿಯಲ್ಲಿ ಫ್ರಾನ್ಸ್ ನ ಗಡಿಯಿಂದ ಚೀನಾದ ಗಡಿಯವರೆಗೆ ವರ್ಚಸ್ಸು ಬೆಳೆಸಿಕೊಳ್ಳಲು ಇಸ್ಲಾಮ್‍ಗೆ ನೆರವಾದದ್ದು. ಜನರನ್ನು ಸಮಾನತೆಯ ಆಧಾರದಲ್ಲಿ- ಬಣ್ಣ, ಧರ್ಮ ಮತ್ತು ರಾಷ್ಟ್ರೀಯತೆಯ ಹಂಗಿಲ್ಲದೆಯೇ ಜೋಡಿಸಲು ಪ್ರವಾದಿ ಮುಹಮ್ಮದ್ ಯಶಸ್ವಿಯಾಗಿದ್ದರು. ಅವರು ರಾಜಕೀಯ ಮತ್ತು ಜೈವಿಕ ಗಡಿಗಳನ್ನು ಕಿತ್ತೆಸೆದು ಅಪ್ಪಟ ಸಮಾನ ನ್ಯಾಯದ ಸಮಾಜವೊಂದನ್ನು ಕಟ್ಟಿ ತೋರಿಸಿದ್ದರು.
        ಇಸ್ಲಾಮ್ ಒಂದು ಶಾಂತಿಯುತ ಸಮಾಜದ ಭರವಸೆಯನ್ನು ಕೊಡುತ್ತದೆ. ಆ ಭರವಸೆಗೆ ಅದು ಮೂಲ ಆಧಾರವಾಗಿ ಪರಿಗಣಿಸಿರುವುದು ಸಮಾನ ನ್ಯಾಯ ವ್ಯವಸ್ಥೆಯನ್ನು. ಒಂದು ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣಗೊಳ್ಳುವುದು ಅಥವಾ ಎಲ್ಲೆಡೆ ಅತೃಪ್ತಿ ಕಾಣಿಸುವುದು ಆ ಸಮಾಜದಲ್ಲಿ ನ್ಯಾಯವು ತೂಗುಯ್ಯಾಲೆಯಲ್ಲಿದ್ದಾಗ. ನ್ಯಾಯವು ಉಳ್ಳವರು, ಬಲಾಢ್ಯರು, ಅಧಿಕಾರಸ್ಥರು ಇತ್ಯಾದಿ ಇತ್ಯಾದಿಗಳ ಕೈಯಲ್ಲಿ ಸವಕಲು ಆದಾಗ. ನ್ಯಾಯ ಸಮರ್ಪಕವಾಗಿಲ್ಲದ ಕಡೆ ಪ್ರತಿಭಟನೆ, ದಂಗೆ, ಭಯೋತ್ಪಾದನೆ ಕಾಣಿಸಿಕೊಂಡಿರುವುದು ಇತಿಹಾಸದುದ್ದಕ್ಕೂ ಕಾಣಸಿಗುತ್ತದೆ. ಪ್ರತೀ ಕ್ರಾಂತಿಗಳ ಹಿಂದೆಯೂ ನ್ಯಾಯ ನಿರಾಕರಣೆಯ ಇತಿಹಾಸವಿದೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹಿಂದೆ ಕೆಲಸ ಮಾಡಿರುವುದೂ ಇದುವೇ. ಮೇಲ್ವರ್ಗದ ಮೇಲೆ ದಲಿತರ ಬಂಡಾಯಕ್ಕೆ ಕಾರಣವೂ ಇದುವೇ. ದೇವನೂರು ಮಹಾದೇವರ ‘ಎದೆಗೆ ಬಿದ್ದ ಅಕ್ಷರ’ಗಳಿಗೆ, ಸಿದ್ಧಲಿಂಗಯ್ಯನವರ ‘ಇಕ್ರಲಾ ಒದಿರ್ಲಾ’ ಹಾಡಿಗೆ, ನಾರಾಯಣಗುರು, ರಾಜಾರಾಂ ಮೋಹನ್ ರಾಯ್, ಅಂಬೇಡ್ಕರ್‍ರ ಪ್ರತಿ ಚಳವಳಿಗಳಿಗೆ ಹಿನ್ನೆಲೆಯಾಗಿರುವುದೂ ಇದುವೇ. ಮೂರು ವರ್ಷಗಳ ಹಿಂದೆ ಅರಬ್ ಜಗತ್ತನ್ನು ತಲ್ಲಣಗೊಳಿಸಿದ ಅರಬ್ ಕ್ರಾಂತಿಯ ಹಿಂದಿರುವುದೂ ಇದುವೇ. ಹೆಚ್ಚೇಕೆ, ಪ್ರವಾದಿ ಮುಹಮ್ಮದ್‍ರನ್ನು ಆ ಸಮಾಜವು ಒಂದು ಭರವಸೆಯಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೂ ನ್ಯಾಯ ನಿರಾಕರಣೆಯೇ. ಆದ್ದರಿಂದಲೇ, ಪ್ರವಾದಿ ಮುಹಮ್ಮದ್‍ರು ಬದುಕಿನುದ್ದಕ್ಕೂ ನ್ಯಾಯದ ವಿಷಯದಲ್ಲಿ ನಿಷ್ಠುರ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಪವಿತ್ರ ಕುರ್‍ಆನ್ ಅಂತೂ ನ್ಯಾಯದ ಪರ ಎಷ್ಟು ಪ್ರಬಲವಾಗಿ ಮಾತಾಡುತ್ತದೆಂದರೆ, ‘ನ್ಯಾಯ ನಿಮ್ಮ ಹೆತ್ತವರ ವಿರುದ್ಧ ಇದ್ದರೆ ನೀವು ನ್ಯಾಯದ ಪರ ನಿಲ್ಲಬೇಕೇ ಹೊರತು ಹೆತ್ತವರ ಪರ ಅಲ್ಲ' (4: 135) ಎಂದು ತಾಕೀತು ಮಾಡುತ್ತದೆ. ಪ್ರವಾದಿ ಬದುಕಿನಲ್ಲಿ ಈ ನಿಷ್ಠುರ ನ್ಯಾಯಕ್ಕೆ ಸಾಕಷ್ಟು ಉದಾಹರಣೆಗಳಿವೆ.
        ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮ್ ವ್ಯಕ್ತಿ ಓರ್ವ ಮುಸ್ಲಿಮನ ಯುದ್ಧ ಕವಚವನ್ನು ಕದ್ದು ಅದನ್ನು ಯಹೂದಿಯ ಬಳಿ ಅಡವು ಇಡುತ್ತಾನೆ. ಕವಚದ ಮಾಲಿಕ ಹುಡುಕತೊಡಗುತ್ತಾನೆ. ಕೊನೆಗೆ ಆ ಕವಚ ಯಹೂದಿಯ ಬಳಿ ಸಿಗುತ್ತದೆ. ಪ್ರವಾದಿಯವರ ಬಳಿ ದೂರು ಹೋಗುತ್ತದೆ. ಬಶೀರ್ ಬಿನ್ ಉಬೈರಿಕ್ ತಾನು ಕದ್ದಿಲ್ಲ ಅನ್ನುತ್ತಾನೆ. ಯಹೂದಿಯಂತೂ ಬಶೀರ್ ಬಿನ್ ಉಬೈರಿಕ್ ತನ್ನ ಬಳಿ ಅಡವು ಇಟ್ಟ ನಿಜ ಸಂಗತಿಯನ್ನು ಹೇಳುತ್ತಾನೆ. ಆದರೆ ಬಶೀರ್‍ನನ್ನು ಮುಸ್ಲಿಮರ ಒಂದು ದೊಡ್ಡ ಗುಂಪು ಬೆಂಬಲಿಸುತ್ತದೆ. ಅಲ್ಲದೇ ಯಹೂದಿಯ ಪರ ತೀರ್ಪು ಕೊಟ್ಟರೆ ಮುಸ್ಲಿಮರ ಬಗ್ಗೆ ಭರವಸೆ ಕಡಿಮೆಯಾಗಿ ಜನರು ಯಹೂದಿ ಧರ್ಮದ ಬಗ್ಗೆ ಆಕರ್ಷಿತರಾದಾರೆಂದು ಪ್ರವಾದಿಯವರ ಮೇಲೆ ಒತ್ತಡ ಹೇರುತ್ತದೆ. ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸುವಾಗ ಪ್ರವಾದಿಯವರಿಗೆ ಬಶೀರ್‍ನದ್ದೇ ನಿಜ ಇರಬಹುದೆಂದು ಅನಿಸುತ್ತದೆ. ಹಾಗೆ ಈತನ ಪರ ತೀರ್ಪು ಕೊಡುವ ಯೋಚನೆಯಲ್ಲಿದ್ದಾಗ ಪ್ರವಾದಿಯವರಿಗೆ ಪವಿತ್ರ ಕುರ್‍ಆನ್ ಅವತೀರ್ಣವಾಗುತ್ತದೆ ಮತ್ತು ಯಹೂದಿಯ ಪರ ನಿಂತು ಅದು ಮಾತಾಡುತ್ತದೆ. (4: 105-112) ಇನ್ನೊಂದು ಪ್ರಮುಖ ಘಟನೆಯೂ ಇದೆ.
        ಪ್ರವಾದಿಯವರ ಬಳಿಗೆ ಕಳ್ಳತನದ ದೂರೊಂದು ಬರುತ್ತದೆ. ಕದ್ದವಳು ಓರ್ವ ಉನ್ನತ ಜನಾಂಗದ ಮಹಿಳೆ. ಸಹಜವಾಗಿಯೇ ಅದು ಆ ಜನಾಂಗದಲ್ಲಿ ಚರ್ಚೆಗೀಡಾಗುತ್ತದೆ. ಕೊನೆಗೆ ಪ್ರವಾದಿಯವರಲ್ಲಿ ಆ ಮಹಿಳೆಯ ಪರ influence  ಮಾಡುವುದೆಂದೂ ಅದಕ್ಕಾಗಿ ಪ್ರವಾದಿಯವರ ಬಳಿ ಅವರ ಪರಿಚಯಸ್ಥರಾದ ಓರ್ವರನ್ನು ಕಳುಹಿಸಿಕೊಡುವುದೆಂದೂ ನಿರ್ಧಾರವಾಗುತ್ತದೆ. ಪ್ರವಾದಿ ಆ influence  ಪ್ರಯತ್ನವನ್ನು ತೀವ್ರವಾಗಿ ಖಂಡಿಸುತ್ತಾರೆ. ‘ಸಮಾಜದಲ್ಲಿ ಅಶಾಂತಿ, ಕ್ರೌರ್ಯಕ್ಕೆ ಮೂಲ ಕಾರಣವೇ ನ್ಯಾಯ ನಿರಾಕರಣೆ. ಹಿಂದಿನ ಕಾಲದಲ್ಲಿ ತಪ್ಪಿತಸ್ಥರು ಪ್ರಭಾವಿಗಳಾದರೆ ಬಿಟ್ಟುಬಿಡಲಾಗುತ್ತಿತ್ತು ಮತ್ತು ಬಡವರಾದರೆ ಉಗ್ರವಾಗಿ ಶಿಕ್ಷಿಸಲಾಗುತ್ತಿತ್ತು’ ಎಂದು ಅವರು ಹೇಳುತ್ತಾರಲ್ಲದೇ, ‘ತನ್ನ ಮಗಳು ಫಾತಿಮಾ ಕದ್ದರೂ ತಾನು ಕಠಿಣ ಶಿಕ್ಷೆ ನೀಡುವೆ’ನೆಂದು ಸಾರುತ್ತಾರೆ. ಆ ಮೂಲಕ ನ್ಯಾಯ ಎಲ್ಲರಿಗೂ ಸಮಾನ - ಅದರಲ್ಲಿ ಶ್ರೀಮಂತ, ಬಡವ, ಯಹೂದಿ, ಮುಸ್ಲಿಮ್ ಎಂಬೀ ಬೇಧವಿಲ್ಲ ಎಂಬ ಪ್ರಬಲ ಸಂದೇಶ ರವಾನಿಸುತ್ತಾರೆ.
       ಇಸ್ಲಾಮನ್ನು ಪವಿತ್ರ ಕುರ್‍ಆನ್ ಮತ್ತು ಪ್ರವಾದಿಯವರ ಜೀವನದ ಮೂಲಕ ಅಳೆಯುವುದಾದರೆ, ಅಲ್ಲೊಂದು ಶಾಂತಿಯ ಅನುಭವ ಸಿಗುತ್ತದೆ. ಅಲ್ಲೊಂದು ಆಕರ್ಷಣೆಯಿದೆ. ಸದಾ ಜಗಳವಾಡುತ್ತಿದ್ದ ಮತ್ತು ಯುದ್ಧದಲ್ಲಿ ನಿರತರಾಗುತ್ತಿದ್ದ ಸಮಾಜವನ್ನು ಪ್ರವಾದಿ ಬದಲಾಯಿಸಿದ್ದು ಖಡ್ಗದ ಮೂಲಕವೂ ಅಲ್ಲ, ಹಿಪ್ನೋಟಿಸಂನ ಮೂಲಕವೂ ಅಲ್ಲ, ಅದು ಕೇವಲ ನ್ಯಾಯ ಪ್ರತಿಪಾದನೆಯ ಮೂಲಕ. ಇವತ್ತಿಗೂ ಅದರ ಸೂಚನೆಯನ್ನು ಮುಸ್ಲಿಮರಲ್ಲಿ ಕಾಣಬಹುದು. ಅನ್ಯಾಯವನ್ನು ಸಹಿಸದ ಮನಸ್ಥಿತಿ ಅದು. ತೀರಾ ಬಡವನು ಕೂಡ ಅನ್ಯಾಯವನ್ನು ಪ್ರಶ್ನಿಸುವ, ಪ್ರತಿಭಟಿಸುವ ಛಾತಿಯನ್ನು ತೋರಿಸುತ್ತಾನೆ. ಅರಬ್ ರಾಷ್ಟ್ರಗಳಲ್ಲಿ ಇವತ್ತು ಅಶಾಂತಿಯಿದ್ದರೆ ಅದರ ಹಿಂದೆ ನ್ಯಾಯ ನಿರಾಕರಣೆಯ ಉದ್ದದ ಪಟ್ಟಿಯೇ ಇದೆ. ಅಮೇರಿಕ, ಇಸ್ರೇಲ್, ನ್ಯಾಟೋ, ವಿಶ್ವಸಂಸ್ಥೆ.. ಹೀಗೆ ನ್ಯಾಯ ನಿರಾಕರಿಸಿದವರ ದೊಡ್ಡದೊಂದು ಪಟ್ಟಿಯೊಂದಿಗೆ ಅಲ್ಲಿನ ಮಂದಿ ತಿರುಗಾಡುತ್ತಿದ್ದಾರೆ. ತಮ್ಮನ್ನಾಳುವ ಸರ್ವಾಧಿಕಾರಿಗಳ ಮೇಲೂ ಅವರು ಆರೋಪ ಹೊರಿಸುತ್ತಿದ್ದಾರೆ. ಇದರ ಜೊತೆಗೇ ಇತರ ಕಾರಣಗಳೂ ಸೇರಿಕೊಂಡು ಅರಬ್ ವಲಯ ಅಶಾಂತಿಯಲ್ಲಿದೆ. ನಿಜವಾಗಿ, ಆ ಅಶಾಂತಿಗೆ ಇಸ್ಲಾಮ್ ಕಾರಣ ಖಂಡಿತ ಅಲ್ಲ. ಅದಕ್ಕೆ ಸ್ಥಳೀಯವಾದ ಮತ್ತು ಅಂತಾರಾಷ್ಟ್ರೀಯವಾದ ಹತ್ತಾರು ಕಾರಣಗಳಿವೆ. ಇವತ್ತು ಅರಬ್ ರಾಷ್ಟ್ರಗಳಲ್ಲಿ ರಕ್ತಪಾತವಾಗುತ್ತಿದ್ದರೆ ಅದರ ರಿಮೋಟ್ ಕಂಟ್ರೋಲ್ ಯಾವುದೋ ಶಾಂತಿಯುತ ರಾಷ್ಟ್ರದಲ್ಲಿದೆ. ಹೊರನೋಟಕ್ಕೆ ಮುಸ್ಲಿಮರು ಯುದ್ಧದಾಹಿಗಳಂತೆ ಕಾಣಿಸುತ್ತಿರಬಹುದು. ಆದರೆ ಈ ಯುದ್ಧದಾಹಿಗಳನ್ನು ನಾಚಿಸುವಷ್ಟು ಮತ್ತು ಪರಮ ಕ್ರೂರಿಗಳೆಂದು ಬಣ್ಣಿಸಿದರೂ ಸಾಕಾಗದಷ್ಟು ರಕ್ತದಾಹಿಗಳು ಬೇರೆಡೆ ಶಾಂತಿಯ ಮುಖವಾಡ ತೊಟ್ಟು ಇವರನ್ನು ಆಡಿಸುತ್ತಿದ್ದಾರೆ. ಹೀಗಿದ್ದರೂ,
ಒಂದು ಧರ್ಮವನ್ನು ಅಳೆಯುವ ಮಾಪಕ ಅದರ ಅನುಯಾಯಿಗಳಾಗಿದ್ದಾರೆ ಎಂಬುದನ್ನು ತಿರಸ್ಕರಿಸುವುದು ಖಂಡಿತ ತಪ್ಪು. ಸಾಮಾನ್ಯ ಜನರು ಧರ್ಮವನ್ನು ಓದುವುದಿಲ್ಲ. ಅದರ ಅನುಯಾಯಿಗಳನ್ನಷ್ಟೇ ನೋಡುತ್ತಾರೆ. ಅವರು ವಂಚಕರು, ಪತ್ನಿ ಪೀಡಕರು, ಗಲಭೆಕೋರರು, ಸಮಾಜ ಕಂಟಕರು ಇತ್ಯಾದಿಗಳೆಲ್ಲ ಆಗಿದ್ದರೆ ಅದನ್ನೇ ಅವರ ಧರ್ಮವೆಂದು ನಂಬುತ್ತಾರೆ. ಅವರ ಆಧಾರದಲ್ಲೇ ಅವರ ಧರ್ಮವನ್ನು ವ್ಯಾಖ್ಯಾನಿಸುತ್ತಾರೆ. ಇದು ತಪ್ಪು ನಿಜ. ಆದರೆ ಈ ತಪ್ಪನ್ನು ತಪ್ಪು ಎಂದು ಹೇಳುವುದರಿಂದ ತಿದ್ದಲು ಸಾಧ್ಯವಿಲ್ಲ. ಕುರ್‍ಆನ್‍ನಂತೆ ಬದುಕುವ ಅನುಯಾಯಿಗಳ ತಯಾರಿಯೇ ಇದಕ್ಕಿರುವ ಅತ್ಯುತ್ತಮ ಪರಿಹಾರ. ನಿಜವಾಗಿ, ಇಸ್ಲಾಮ್ ಜಾಗತಿಕವಾಗಿಯೇ ಶಾಂತಿಯುತ ಸಮಾಜವನ್ನು ಕಟ್ಟಲು ಸಕಲ ಸಾಮಥ್ರ್ಯವಿರುವ ಒಂದು ನ್ಯಾಯ ನಿಷ್ಠ ಸಿದ್ಧಾಂತ. ಅದು ಅಸಹಿಷ್ಣುವಲ್ಲ, ಭಯೋತ್ಪಾದಕವೂ ಅಲ್ಲ. ಪ್ರವಾದಿಯವರ 63 ವರ್ಷಗಳ ಬದುಕು ಮತ್ತು ಅವರ ನೇತೃತ್ವದಲ್ಲಿ ರಚನೆಯಾದ ಸರಕಾರದ ಸಾಧನೆಗಳು ಇದನ್ನು ಸ್ಪಷ್ಟಪಡಿಸುತ್ತವೆ. ಹಾಗಂತ, ಶಾಂತಿ ಎಂಬುದಕ್ಕೆ ಸಕಲ ಅನ್ಯಾಯವನ್ನೂ ಸಹಿಸಿಕೊಂಡು, ಗುಲಾಮರಂತೆ ಬದುಕುವುದು ಎಂಬ ಅರ್ಥ ಇಲ್ಲವಲ್ಲ. ಹಾಗಿರುತ್ತಿದ್ದರೆ ಇಲ್ಲಿನ ದಲಿತ ಚಳವಳಿಯನ್ನೇ ಅಶಾಂತಿಯದ್ದೆಂದು ಹೇಳಬೇಕಾಗುತ್ತದೆ. ಈ ಚಳವಳಿಯನ್ನು ಎಲ್ಲ ರೀತಿಯಲ್ಲೂ ದಮನಿಸಿದ ಮತ್ತು ಇವತ್ತಿಗೂ ದಮನಿಸಲು ಯತ್ನಿಸುತ್ತಿರುವವರ ನೀತಿಯನ್ನೇ ಶಾಂತಿಯದ್ದೆಂದು ಸಾರಬೇಕಾಗುತ್ತದೆ. ಶಾಂತಿ ಎಂಬುದು ಸಮಾನ ನ್ಯಾಯ, ಸಮಾನ ಸ್ವಾತಂತ್ರ್ಯ, ಪರಧರ್ಮ ಸಹಿಷ್ಣುತೆ, ಸಮಾನತೆ, ವಾಕ್‍ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ ಮೌಲ್ಯಗಳು ಬಲವಾಗಿ ಬೇರೂರಿರುವ ಮತ್ತು ಪಾಲನೆಯಲ್ಲಿರುವ ಒಂದು ಸಾಮಾಜಿಕ ಸ್ಥಿತಿಯ ಹೆಸರು. ಈ ಹಿನ್ನೆಲೆಯಲ್ಲಿ ಆಲೋಚಿಸಿದರೆ, ಇಸ್ಲಾಮ್ ಈ ಶಾಂತಿಯ ಪ್ರಮುಖ ದಾವೇದಾರ. ಅದು ಒಂದು ಶಾಂತಿಯುತ ಜಗತ್ತನ್ನು ಕಟ್ಟಬಯಸುತ್ತದೆ. ಅದರ ಸಿದ್ಧಾಂತ ಜಾಗತಿಕ ಶಾಂತಿಗೆ ಎಷ್ಟು ಪೂರಕವಾಗಿದೆಯೆಂದರೆ, ಅದರ ಹೊರತಾದ ಇನ್ನಾವ ಸಿದ್ಧಾಂತಗಳೂ ಒಂದು ಹಂತದ ವರೆಗೆ ಮಾತ್ರ ಪರಿಪೂರ್ಣವೆಂದು ತೋರುತ್ತದೆ. ಆದರೆ, ಇದನ್ನು ಜಗತ್ತಿಗೆ ಮನದಟ್ಟು ಮಾಡುವಲ್ಲಿ ಅದರ ಅನುಯಾಯಿಗಳು ಪದೇ ಪದೇ ವಿಫಲರಾಗುತ್ತಿದ್ದಾರೆಂಬುದು ಖಂಡಿತ ನಿಜ. ಈ ವೈಫಲ್ಯಕ್ಕೆ ಇಸ್ಲಾಮ್ ಹೊಣೆ ಅಲ್ಲದೇ ಇರಬಹುದು. ಆದರೆ, ಹೀಗೆ ಹೇಳುವುದು ಸಮರ್ಪಕ ಉತ್ತರ ಆಗುವುದಿಲ್ಲ. 1500 ವರ್ಷಗಳಿಂದ ತಮ್ಮ ಬಳಿ ಒಂದು ‘ಜಾಗತಿಕ ಶಾಂತಿ'ಯ ಸಿದ್ಧಾಂತವನ್ನು ಇಟ್ಟುಕೊಂಡಿದ್ದರೂ ಅದನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಅವರು ವಿಫಲರಾಗುತ್ತಿದ್ದಾರೆಂಬುದು ಏನನ್ನು ಸೂಚಿಸುತ್ತದೆ? ಈ ವೈಫಲ್ಯವನ್ನು ಇಸ್ಲಾಮಿನ ವೈಫಲ್ಯವೆಂದು ಜನರು ತಿಳಿದುಕೊಳ್ಳಬಾರದೆಂದು ಮುಸ್ಲಿಮರು ವಿನಂತಿಸುವುದು ಎಷ್ಟು ಪರಿಣಾಮಕಾರಿ? ಇದು ಎಷ್ಟರ ಮಟ್ಟಿಗೆ ಜನರನ್ನು ತೃಪ್ತಿಪಡಿಸಬಲ್ಲುದು? ಅಂದಹಾಗೆ,
        ಜಗತ್ತು ಇವತ್ತು ವಿಫಲಗೊಂಡಿರುವುದೇ ಸಿದ್ಧಾಂತಗಳ ಜಾರಿಯಲ್ಲಿ. ಸಮಾಜವಾದ ಮತ್ತು ಬಂಡವಾಳಶಾಹಿತ್ವ ಎರಡೂ ಇವತ್ತು ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಮಾತ್ರವಲ್ಲ, ಒಂದು ಅಸುರಕ್ಷಿತ, ಅಸಮಾನ, ಕುದಿಯುವ ಮನಸ್ಸಿನ ಸಮಾಜವನ್ನು ನಿರ್ಮಿಸಿಬಿಟ್ಟಿದೆ. ನಿಜವಾಗಿ, ಇದನ್ನು ವಿೂರಿ ನಿಲ್ಲುವ ಸಾಮರ್ಥ್ಯ ಇಸ್ಲಾಮ್‍ಗಿದೆ. ಸದ್ಯ ಹೇಳಬಹುದಾದದ್ದು ಇಷ್ಟೇ