Monday, November 18, 2013

ಆಯಿಶಾಳ ಮೂಲಕ ಮತ್ತೊಮ್ಮೆ ಪ್ರಶ್ನಾರ್ಹಗೊಂಡ ಮಾಧ್ಯಮ ನಿಲುವು

    ಗೋಪಾಲ
    ವಿಕಾಸ್
 ಪವನ್
 ಗಣೇಶ್
  ಮಂಗಳೂರಿನಲ್ಲಿ ಆಯಿಷಾ ಮತ್ತು ಝುಬೇರ್ ದಂಪತಿಗಳನ್ನು ಬಂಧಿಸುವುದಕ್ಕಿಂತ ಮೊದಲು ಈ ಮೇಲಿನ ನಾಲ್ವರನ್ನೂ ಬಿಹಾರದಲ್ಲಿ ಪೊಲೀಸರು ಬಂಧಿಸಿದ್ದರು. ಅವರಿಗೆ ಪಾಕಿಸ್ತಾನದ ಐ.ಎಸ್.ಐ.ಯೊಂದಿಗೆ ನಂಟು ಕಲ್ಪಿಸಿದ್ದರು. ಅಲ್ಲದೇ, ಆಯಿಷಾಳ ಹೆಸರನ್ನು ಹೇಳಿದ್ದು ಈ ಆರೋಪಿಗಳೇ ಎಂದೂ ವರದಿಯಾಗಿತ್ತು. ಇಷ್ಟಿದ್ದೂ, ಇವರಾರೂ ದಿನ ಪತ್ರಿಕೆಗಳ ಮುಖಪುಟದಲ್ಲಿ ದಪ್ಪಕ್ಷರಗಳಲ್ಲಿ ಕಾಣಿಸಿಕೊಂಡಿಲ್ಲವಲ್ಲ, ಯಾಕೆ? ಆಯಿಷಾ ಮತ್ತು ಝುಬೇರ್‍ನನ್ನು ಹೆಚ್ಚಿನೆಲ್ಲಾ ಪತ್ರಿಕೆಗಳು ಮುಖಪುಟದಲ್ಲಿಟ್ಟು ‘ಗೌರವಿಸಿವೆ’. ಅವರ ಪೋಟೋ, ಮನೆ, ಉದ್ಯೋಗ, ವ್ಯವಹಾರ... ಎಲ್ಲವುಗಳನ್ನೂ ವಿವರವಾಗಿ ಅವು ಪ್ರಕಟಿಸಿವೆ. ಆಶಾ- ಆಯಿಷಾ ಆಗಿದ್ದೂ, ಝುಬೇರ್ ಇಬ್ಬರು ಪತ್ನಿಯರ ಪತಿ ಆಗಿದ್ದೂ, ಅವರ ಕೋಟ್ಯಂತರ ರೂಪಾಯಿಗಳ ವ್ಯವಹಾರ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್‍ಗಳು... ಎಲ್ಲವನ್ನೂ ಪತ್ರಿಕೆಗಳು ಅತೀವ ಆಸಕ್ತಿಯಿಂದ ವರದಿ ಮಾಡಿವೆ. ಇದು ತಪ್ಪು ಅನ್ನುತ್ತಿಲ್ಲ. ಒಂದು ಪ್ರಕರಣವನ್ನು ಕೂಲಂಕಷವಾಗಿ ಅಧ್ಯಯನ ನಡೆಸುವುದು ಒಂದು ಪತ್ರಿಕೆಯ ಜವಾಬ್ದಾರಿ. ಭಯೋತ್ಪಾದನೆಯಂಥ ದೇಶ ವಿರೋಧಿ ಚಟುವಟಿಕೆಗಳಲ್ಲಿ ಯಾರೇ ತೊಡಗಿಸಿಕೊಂಡಿದ್ದರೂ ಮತ್ತು ಅವರ ಧರ್ಮ, ಭಾಷೆ, ಹೆಸರು ಏನೇ ಆಗಿದ್ದರೂ ಅವರನ್ನು ಸಮಾಜದ ಮುಂದಿಡಬೇಕಾದದ್ದು ಒಂದು ಪತ್ರಿಕೆಯ ಜವಾಬ್ದಾರಿ ಮಾತ್ರವೇ ಅಲ್ಲ, ಸರ್ವ ನಾಗರಿಕರ ಹೊಣೆಗಾರಿಕೆ ಕೂಡ. ಆದರೆ, ಆರೋಪಿಗಳನ್ನು ಧರ್ಮ, ಜಾತಿ, ಭಾಷೆಯ ಆಧಾರದಲ್ಲಿ ವಿಭಜಿಸಿ, ಪ್ರಕರಣವನ್ನು ಭೀಕರ ಅಥವಾ ಸಾಮಾನ್ಯ ಎಂದು ವಿಂಗಡಿಸುವುದು ನ್ಯಾಯವೇ? ಆಯಿಷಾಳಿಗಿಂತ ವಾರ ಮೊದಲೇ ಗೋಪಾಲ್, ವಿಕಾಸ್, ಪವನ್, ಗಣೇಶ್‍ರನ್ನು ಬಿಹಾರದಲ್ಲಿ ಬಂಧಿಸಲಾಗಿತ್ತಲ್ಲ, ಅದೇಕೆ ಪತ್ರಿಕೆಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಲಿಲ್ಲ? ಯಾಕೆ, ಅದನ್ನೂ ಮುಖಪುಟದ ಪ್ರಕರಣವಾಗಿ ಪರಿಗಣಿಸಲಿಲ್ಲ? ನಿಜವಾಗಿ, ಆಯಿಷಾಳ ಮೇಲೆ ಸದ್ಯ ಇರುವ ಆರೋಪಕ್ಕಿಂತ ಹೆಚ್ಚು ಪ್ರಬಲವಾದ ಆರೋಪ ಈ ನಾಲ್ವರ ಮೇಲಿದೆ. ಆದರೂ, ಅವರಾರನ್ನೂ ಆಯಿಷಾಳಂತೆ ಮುಖಪುಟದ ವಸ್ತುವಾಗಿಸದೇ ಇದ್ದದ್ದು ಯಾವ ಕಾರಣದಿಂದ? ಅವರ ಹೆಸರೇ, ಧರ್ಮವೇ...?
 ನಿಜವಾಗಿ, ಗೋಪಾಲ್, ವಿಕಾಸ್, ಪವನ್, ಗಣೇಶ್ ಎಂಬ ಈ ನಾಲ್ವರನ್ನು ಬಂಧಿಸಲಾಗಿದೆ ಎಂಬುದು ಹೆಚ್ಚಿನ ಓದುಗರಿಗೆ ಗೊತ್ತಾದದ್ದೇ ಆಯಿಷಾಳ ಬಂಧನದ ಬಳಿಕ. ಅಯಿಷಾ ಪ್ರಕರಣವನ್ನು ವಿವರಿಸುವಾಗ ಅನಿವಾರ್ಯವಾಗಿ ಪತ್ರಿಕೆಗಳು ಇವರ ಹೆಸರನ್ನು ಉಲ್ಲೇಖಿಸಿದ್ದುವು. ಆದರೆ, ಅವರ ಹೆಸರನ್ನು ಬಿಟ್ಟರೆ ಉಳಿದಂತೆ ಯಾವ ವಿವರವನ್ನೂ ಅವು ಓದುಗರ ಮುಂದಿಟ್ಟಿಲ್ಲ. ಆದ್ದರಿಂದಲೇ, ಮಾಧ್ಯಮ ಧೋರಣೆಗಳ ಬಗ್ಗೆ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸುವುದು. ಕೆಲವು ತಿಂಗಳ ಹಿಂದೆ ಭಯೋತ್ಪಾದನೆಯ ಹೆಸರಲ್ಲಿ ಬೆಂಗಳೂರಿನಲ್ಲಿ ಕೆಲವು ಯುವಕರನ್ನು ಬಂಧಿಸಲಾಗಿತ್ತು. ಅವರಲ್ಲಿ ಮುತೀಉರ್ರಹ್ಮಾನ್ ಎಂಬ ಪತ್ರಕರ್ತನೂ ಇದ್ದ. ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಕಲ್ಪಿತ ವರದಿಗಳು ಪ್ರಕಟವಾದದ್ದು ಈತನ ಬಗ್ಗೆಯೇ. ಈತನನ್ನು ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಮಾಧ್ಯಮಗಳು ಬಣ್ಣಿಸಿದ್ದವು. ಜಿಹಾದಿ ಪತ್ರಕರ್ತ ಅಂದುವು. ಆತನನ್ನು ಬಂಧಿಸದೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಏನೆಲ್ಲ ಅನಾಹುತಗಳಾಗುತ್ತಿದ್ದುವು ಎಂಬುದನ್ನೆಲ್ಲಾ ಪಟ್ಟಿ ಮಾಡಿದುವು. ಆದ್ದರಿಂದಲೇ, ಬಂಧನದ 6 ತಿಂಗಳ ಬಳಿಕ ತನಿಖಾ ಸಂಸ್ಥೆಗಳು ಆತನನ್ನು ನಿರಪರಾಧಿ ಎಂದು ಬಿಟ್ಟು ಬಿಟ್ಟಾಗ ಮಾಧ್ಯಮಗಳು ತೀವ್ರ ಟೀಕೆಗೆ ಗುರಿಯಾದುವು. ಮಾಧ್ಯಮ ನಿಲುವನ್ನು ಪ್ರಶ್ನಿಸುವ ಸಂಕೇತವಾಗಿ ಆತ ಸಮಾಜದ ಮುಂದಿದ್ದ. ಹಾಗೆಯೇ, 2012ರ ಅಕ್ಟೋಬರ್ 11ರಂದು ಭಟ್ಕಳದಲ್ಲಿ ಬಂದ್ ಆಚರಿಸಲಾಗಿತ್ತು. ಭಟ್ಕಳದ ಕುರಿತಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಸುಳ್ಳು ಸುದ್ದಿಗಳನ್ನು ಖಂಡಿಸಿ ಈ ಬಂದ್‍ಗೆ ಕರೆ ಕೊಡಲಾಗಿತ್ತು. ಆ ಬಂದ್‍ಗೆ ಸಾರ್ವಜನಿಕರು ಎಷ್ಟರ ಮಟ್ಟಿಗೆ ಸ್ಪಂದಿಸಿದರೆಂದರೆ, ಅಕ್ಟೋಬರ್ 11ರಂದು ಇಡೀ ದಿನ ಭಟ್ಕಳದಲ್ಲಿ ಅಂಗಡಿ-ಮುಂಗಟ್ಟುಗಳು ತೆರಯಲಿಲ್ಲ. ವಾಹನಗಳು ಓಡಾಡಲಿಲ್ಲ.
 ಹಾಗಂತ, ಮಾಧ್ಯಮಗಳಲ್ಲಿ ಇರುವವರೇನೂ ಅನ್ಯಗ್ರಹ ಜೀವಿಗಳು ಎಂದು ನಾನು ಹೇಳುತ್ತಿಲ್ಲ. ಸುಳ್ಳು, ಮೋಸ, ವಂಚನೆ, ಪಕ್ಷಪಾತ, ದರೋಡೆ.. ಮುಂತಾದ ಪದಗಳಿಗೆಲ್ಲ ಪತ್ರಕರ್ತರ ಡಿಕ್ಷನರಿಯಲ್ಲಿ `ಗೌರವಾರ್ಹ' ಪದಗಳು ಎಂಬ ಅರ್ಥವೂ ಇಲ್ಲ.  ಪತ್ರಕರ್ತರೂ ಸಮಾಜ ಜೀವಿಗಳೇ. ಸಂಪಾದಕರಾಗಲಿ, ಪತ್ರಿಕೆಯನ್ನು ಮನೆ ಮನೆಗೆ ಮುಟ್ಟಿಸುವ ಕಾರ್ಮಿಕರಾಗಲಿ, ಓದುಗರಾಗಲಿ.. ಎಲ್ಲರೂ ಸಮಾಜದ ಒಂದು ಭಾಗವೇ. ಸಮಾಜದ ಪ್ರತಿ ಆಗು-ಹೋಗುಗಳೊಂದಿಗೂ ಅವರಿಗೆ ಸಂಬಂಧ ಇರುತ್ತದೆ. ಒಂದು ರೀತಿಯಲ್ಲಿ, ಓದುಗರಿಗಿಂತ ಹೆಚ್ಚಿನ ಹೊಣೆಗಾರಿಕೆ ಇರುವುದು ಮಾಧ್ಯಮದವರ ಮೇಲೆಯೇ. ಪತ್ರಿಕೆಯ ಮುಖಪುಟ ಬಿಡಿ, ಒಳಪುಟದಲ್ಲಿ ಪ್ರಕಟವಾಗುವ ಸಣ್ಣದೊಂದು ಸುದ್ದಿಗೂ ಊರನ್ನೇ ಹೊತ್ತಿಸಿಬಿಡುವ ಸಾಮಥ್ರ್ಯ ಇರುತ್ತದೆ. ಹೀಗಿರುವಾಗ ಮಾಧ್ಯಮಗಳ ವಹಿಸಬೇಕಾದ ಎಚ್ಚರ ಕಡಿಮೆಯದಲ್ಲ. ಅಂದಹಾಗೆ, ಓದುಗರಂತೆ ಪತ್ರಿಕೆಗಳಿಗಿಂತಲೂ ಕೆಲವು ಜವಾಬ್ದಾರಿಗಳಿವೆ. ಪ್ರತಿದಿನ ಹದಿನಾಲ್ಕೊ ಇಪ್ಪತ್ತೋ ಪುಟಗಳನ್ನು ತಯಾರಿಸುವ ಸಂಪಾದಕೀಯ ಬಳಗಕ್ಕೂ ಕೆಲವು ಹೊಣೆಗಾರಿಕೆಗಳಿವೆ. ಪುಟಗಳನ್ನು ಅಕ್ಷರಗಳಿಂದ ತುಂಬಿಸುವುದಷ್ಟೇ ಪತ್ರಿಕೋದ್ಯಮ ಅಲ್ಲ. ಆ ಪ್ರತಿ ಅಕ್ಷರಗಳೂ ಸಮಾಜದ ಆರೋಗ್ಯವನ್ನು ಕಾಪಾಡುವುಷ್ಟು ಸತ್ಯ, ನ್ಯಾಯನಿಷ್ಠವೂ ಆಗಿರಬೇಕಾಗುತ್ತದೆ. ಎಲ್ಲೋ ಕಂಪ್ಯೂಟರ್‍ನ ಮುಂದೆ ಕೂತು ಎಲೆಕ್ಟ್ರಿಕ್ ವಯರುಗಳನ್ನು ಜಿಲೆಟಿನ್ ಕಡ್ಡಿಗಳೆಂದೂ ಪಟಾಕಿಯನ್ನು ಬಾಂಬ್ ಎಂದೂ ಬರೆಯುವುದು ಸುಲಭ. ‘ಮೂಲಗಳು ತಿಳಿಸಿವೆ...’ ಎಂಬ 8 ಅಕ್ಷರಗಳನ್ನು ಬಳಸಿ ಭಯೋತ್ಪಾದನೆಯ ಸ್ಕ್ರಿಪ್ಟ್ ರಚಿಸುವುದೇನೂ ಕಷ್ಟವಲ್ಲ. ಅದಕ್ಕೆ ಪೆನ್ನು ಮತ್ತು ಕಾಗದ ಇದ್ದರಷ್ಟೇ ಸಾಕು. ಆದರೆ, ಆ ಸುದ್ದಿ ಮಾಡುವ ಪರಿಣಾಮ ಸಣ್ಣದಲ್ಲವಲ್ಲ. ಆದ್ದರಿಂದ, ಮಾಧ್ಯಮಗಳು ಜಾಗರೂಕತೆ ಪಾಲಿಸಬೇಕಾಗಿದೆ. ಅದರಲ್ಲೂ ಭಯೋತ್ಪಾದನೆಯಂಥ ಪ್ರಕರಣಗಳನ್ನು ವರದಿ ಮಾಡುವಾಗ, ‘ಕಣ್ಣಲ್ಲಿ ಕಂಡರೂ ಪರಾಂಬರಿಸಿ ನೋಡು..’ ಎಂಬ ತತ್ವಕ್ಕೆ ಭದ್ರವಾಗಿ ಅಂಟಿಕೊಳ್ಳಬೇಕಾಗಿದೆ. ಪ್ರಕರಣದಲ್ಲಿ ಆಯಿಷಾ ಇರಲಿ, ಗಣೇಶನೇ ಇರಲಿ ಇಬ್ಬರನ್ನೂ ವ್ಯಕ್ತಿಗಳಾಗಿ ನೋಡಬೇಕೇ ಹೊರತು ಎರಡು ಧರ್ಮಗಳ ಪ್ರತಿನಿಧಿಗಳಾಗಿ ಅಲ್ಲ. ಹೆಸರು ಗಣೇಶ್ ಎಂದು ಇದ್ದ ಮಾತ್ರಕ್ಕೇ ಆತ ಅಪ್ಪಟ ಹಿಂದೂ ಆಗುವುದು ಮತ್ತು ಆಯಿಷಾ ಎಂದು ಇದ್ದ ಮಾತ್ರಕ್ಕೇ ಆಕೆ ಅಪ್ಪಟ್ಟ ಮುಸ್ಲಿಮ್ ಆಗುವುದೆಲ್ಲ ನಮ್ಮ ನಮ್ಮ ಭ್ರಮೆ. ನಾವು ಇಂತಹ ಭ್ರಮೆಗಳಿಂದ ಹೊರ ಬರಬೇಕಾಗಿದೆ. ತಪ್ಪಿತಸ್ಥರನ್ನು ಅವರ ಧರ್ಮ, ಜಾತಿ, ಸಂಘಟನೆಗಳ ಹಂಗಿಲ್ಲದೆ ಖಂಡಿಸಬೇಕಾದ ಮತ್ತು ಅವರನ್ನು ಸಮಾಜದಿಂದ ಬೇರ್ಪಡಿಸಿ ನೋಡಬೇಕಾದ ಹೊಣೆಗಾರಿಕೆ ಸಮಾಜದಂತೆಯೇ ಪತ್ರಿಕೆಗಳ ಮೇಲೂ ಇದೆ.
 ಏನೇ ಆಗಲಿ, ತಾನು ಬಂಧನಕ್ಕೆ ಒಳಗಾಗುವ ಮೂಲಕ ಮಾಧ್ಯಮಗಳ ಧೋರಣೆಯನ್ನು ಆಯಿಷಾ ಮತ್ತೊಮ್ಮೆ ಪ್ರಶ್ನೆಗೆ ಒಳಪಡಿಸಿದ್ದಾಳೆ. ಗೋಪಾಲ್, ವಿಕಾಸ್, ಪವನ್, ಗಣೇಶ್‍ರಿಗಿಲ್ಲದ ಮಹತ್ವ ತನ್ನ ಪ್ರಕರಣಕ್ಕೇಕೆ ಎಂಬುದೇ ಆ ಪ್ರಶ್ನೆ. ಅವರು ಮುಖಪುಟಕ್ಕೆ ಅನರ್ಹರೆಂದಾದರೆ ತಾನೇಕೆ ಅರ್ಹವಾದೆ ಎಂದೇ ಅವಳ ಪ್ರಶ್ನೆ. ಈ ಪ್ರಶ್ನೆಗಳನ್ನು ಮಾಧ್ಯಮಗಳು ಗಂಭೀರವಾಗಿ ಸ್ವೀಕರಿಸಿ, ಆತ್ಮಾವಲೋಕನ ನಡೆಸಬೇಕಾಗಿದೆ. ತಪ್ಪನ್ನು ತಿದ್ದಿಕೊಳ್ಳುತ್ತಾ, ‘ನ್ಯಾಯ ಎಲ್ಲರಿಗೂ ಒಂದೇ..’ ಎಂಬ ಧೋರಣೆಯೆಡೆಗೆ ಮರಳಬೇಕಾಗಿದೆ.

1 comment:

  1. Nijja yelidiri kaanunu yelarigu onde maadyamadavarige avara hesaru bareyalu bayava ?

    ReplyDelete